Dec 31, 2008

ಮನುಷ್ಯ ಉಳಿಯಬೇಕಾದರೆ ಸಸ್ಯಾಹಾರದತ್ತ ತಿರುಗಬೇಕು...

ಈಗ ಓದುತ್ತಿರುವ ಗಾಂಧಿಯ ಪುಸ್ತಕದಲ್ಲಿ ಸಸ್ಯಾಹಾರದ ಬಗ್ಗೆ ಗಾಂಧಿ ಮಾಡಿದ ಕೆಲವು ಪ್ರಯೋಗಗಳು ಮತ್ತು ಅವರು ಲಂಡನ್ನಿನಲ್ಲಿ ಓದುತ್ತಿರುವಾಗ ಸಸ್ಯಾಹಾರಿ ರೆಸ್ಟಾರೆಂಟ್‌ಗಳನ್ನು ಹುಡುಕಿಕೊಂಡು ಮೈಲುಗಟ್ಟಲೆ ನಡೆದೇ ಹೋಗುತ್ತಿದ್ದ ಚಿತ್ರಣವಿದೆ. ದೊಡ್ಡವನಾದ ಮೇಲೆ ಚೆನ್ನಾಗಿ ಮಾಂಸ ತಿನ್ನಬೇಕು; ಮಾಂಸ ತಿಂದು ಗಟ್ಟಿಯಾದರಷ್ಟೆ ಬ್ರಿಟಿಷರನ್ನು ದೇಶದಿಂದ ಹೊರಗಟ್ಟಲು ಸಾಧ್ಯ, ಎನ್ನುವ ಕಲ್ಪನೆಯೊಂದು ಗಾಂಧಿಯ ತಲೆ ಹೊಕ್ಕಿತ್ತು (ಹೇಳಬೇಕೆಂದರೆ, ಹೊಕ್ಕಿಸಲ್ಪಟ್ಟಿತ್ತು, ಅವರ ಬಾಲ್ಯ ಸ್ನೇಹಿತನೊಬ್ಬನಿಂದ). ಆದರೆ ತನ್ನ ತಾಯಿಗೆ (ಒತ್ತಾಯಪೂರ್ವಕವಾಗಿ) ಕೊಟ್ಟಿದ್ದ ವಚನದಿಂದಾಗಿ ಲಂಡನ್ನಿನಲ್ಲಿ ಸಸ್ಯಾಹಾರಿಯಾಗಿಯೇ ಕಾಲತಳ್ಳಬೇಕಿದ್ದ ಅಗತ್ಯ ಅಥವ ದರ್ದು ಗಾಂಧಿಗಿತ್ತು. ಆದರೆ ಗಾಂಧಿಯ ಮನಸ್ಸು ಅಲ್ಲಿ ವೈಚಾರಿಕ ಕಾರಣಗಳಿಗಾಗಿ ಬದಲಾಯಿತು. ಅಲ್ಲಿಯ ಬಿಳಿಯ ಸಸ್ಯಾಹಾರಿಗಳ ಜೊತೆ ಸೇರಿ, ಪುಸ್ತಕಗಳನ್ನು ಓದಿ, ಸಸ್ಯಾಹಾರವನ್ನು ಮನಃಪೂರ್ವಕವಾಗಿ ಜೀವನಪರ್ಯಂತ ಸ್ವೀಕರಿಸಿದರು. ಆದರೆ ಆ ವೈಚಾರಿಕ ಕಾರಣಗಳು ಮತ್ತು ಮಾಂಸಾಹಾರ ಮುಂದೆಂದೂ ಸೇವಿಸದಂತೆ ಗಾಂಧಿ ಮನಸ್ಸು ಬದಲಾಯಿಸಲು ಕಾರಣಗಳೇನಾಗಿದ್ದವು ಎನ್ನುವುದು ಮೊಮ್ಮಗನ ಪುಸ್ತಕದಲ್ಲಿ ದಾಖಲಾಗಿಲ್ಲ.

ಈಗ ಒಂದೆರಡು ವರ್ಷದಿಂದ ಗ್ಲೋಬಲ್ ವಾರ್ಮಿಂಗ್ ಮತ್ತು ಹವಾಮಾನ ವೈಪರೀತ್ಯಗಳ ಬಗ್ಗೆ ಓದಿ, ನೋಡಿ, ಕೇಳಿ, ನನಗೆ ನಿಜಕ್ಕೂ ಮನುಷ್ಯ ಅಥವ ಜೀವಸಂಕುಲದ ಉಳಿವಿನ ಬಗ್ಗೆಯೇ ಸಂದೇಹ ಬರುತ್ತಿದೆ. ಮನುಷ್ಯ ಪ್ರಕೃತಿಯನ್ನು ನಡೆಸಿಕೊಳ್ಳುತ್ತಿರುವ ರೀತಿ ಅದು ಮನುಷ್ಯನಿಗೆ ಕರುಣೆ ತೋರಿಸುವ ಯಾವೊಂದು ಅವಕಾಶಗಳನ್ನೂ ಉಳಿಸುತ್ತಿಲ್ಲ. ಇದರ ಬಗ್ಗೆ ಯೋಚಿಸಿದಾಗೆಲ್ಲ ನನಗೆ ಮನುಷ್ಯ ತನ್ನ ಆಹಾರಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು ಮತ್ತು ಮಾಂಸಾಹಾರದ ಮೇಲಿನ ಅವಲಂಬನೆ ಕಮ್ಮಿ ಮಾಡಿಕೊಳ್ಳಬೇಕು ಎನ್ನಿಸುತ್ತದೆ.

ಇದರ ಬಗ್ಗೆ ಒಂದು ಲೇಖನ ಬರೆಯಬೇಕು ಎಂದು ನನಗೆ ಆರೇಳು ತಿಂಗಳಿನಿಂದ ಅನ್ನಿಸುತ್ತಿತ್ತು. ಆಗಲಿಲ್ಲ. ಕನಿಷ್ಠ ಈಗಲಾದರೂ ನನ್ನ ಆಲೋಚನೆಗಳನ್ನು ದಾಖಲಿಸೋಣ, ಆಮೇಲೆ ವಿಸ್ತೃತವಾಗಿ, ಬೇರೆಬೇರೆ ಕೋನಗಳಿಂದ ಅವಲೋಕಿಸಿ ಬರೆಯೋಣ ಎಂದುಕೊಂಡು ಇಲ್ಲಿ ಸದ್ಯಕ್ಕೆ ಕೆಲವನ್ನು ನೋಟ್ ಮಾಡುತ್ತಿದ್ದೇನೆ.

ಬಾಲ್ಯದಲ್ಲಿ ಕೆಲವೊಂದು ಹಬ್ಬಕ್ಕೊ, ಇಲ್ಲಾ ತಿಂಗಳಿಗೊ, ಇಲ್ಲಾ ನೆಂಟರು ಬಂದಾಗಲೊ ಅಥವ ನೆಂಟರ ಮನೆಗೆ ಹೋದಾಗಲೊ ಅಷ್ಟೇ ಮಾಂಸ ತಿನ್ನುವ ಅವಕಾಶ ಸಿಗುತ್ತಿದ್ದದ್ದು. ಆದರೆ ಕಾಲೇಜಿನ ದಿನಗಳಲ್ಲಿ ವಾರಕ್ಕೊಮ್ಮೆಯಾದರೂ ತಿನ್ನುತ್ತಿದೆ. ಅಂತಹುದೇ ದಿನಗಳಲ್ಲಿ ನನ್ನಪ್ಪ ಅಂದ ಮಾತಿನಿಂದಾಗಿ ಆಗಾಗ ಕೋಳಿಸಾರು ತಿನ್ನಬೇಕು ಎನ್ನುವ ಚಪಲವನ್ನು ನನ್ನ ವೀಕ್‌ನೆಸ್‌ಗೆ ಸಮೀಕರಿಸಿಕೊಂಡು ಸುಮಾರು ಎರಡೂವರೆ ವರ್ಷಗಳ ಕಾಲ ಪಕ್ಕಾ ಸಸ್ಯಾಹಾರಿಯಾಗಿ ಕಳೆದಿದ್ದೆ. ಕೇಕ್ ಸಹ ತಿಂದಿರಲಿಲ್ಲ. ಎಂದೂ ಅದರ ಬಗ್ಗೆ ವಿಷಾದವಾಗಲಿಲ್ಲ. ಬದಲಿಗೆ ನನಗೆ ನನ್ನ ಇಚ್ಚಾಶಕ್ತಿಯ ಬಗ್ಗೆ ಹೆಮ್ಮೆ ಆಗುತ್ತಿತ್ತು. ಆದರೆ ಮತ್ತೊಂದು ಸಂದರ್ಭದಲ್ಲಿ ಆ ಚಪಲ ಇನ್ನು ವೀಕ್‌ನೆಸ್ ಆಗಿ ಉಳಿದಿಲ್ಲ ಅನ್ನಿಸಿದ ಮೇಲೆ, ಹಾಗು ನಾನೆ ದುಡಿದು ತಿನ್ನಲಾರಂಭಿಸಿದ ಮೇಲೆ ಮತ್ತೆ ಮಾಂಸಾಹಾರಿಯಾದೆ. ವಿಸ್ಕಾನ್ಸಿನ್‌ನಲ್ಲಿ ಇದ್ದ ಆರಂಭದ ಸಂದರ್ಭದಲ್ಲಿ ಕಾರಿಲ್ಲದ್ದರಿಂದ ಮತ್ತು ಗುಜರಾತಿಯೊಬ್ಬರ ಊರ ಹೊರಗಿನ ಮೋಟೆಲ್ ಒಂದರಲ್ಲಿ ಇದ್ದ ಕಾರಣದಿಂದಾಗಿ ಸುಮಾರು ಮೂರು ತಿಂಗಳ ಕಾಲ ಪಕ್ಕದ ಪೆಟ್ರೋಲ್ ಬಂಕಿನ ಡೆಲಿಯಲ್ಲಿ ಕೇವಲ ಕರಿದ ಚಿಕನ್ ಮತ್ತು ಇತರ ಮಾಂಸವನ್ನೆ ತಿಂದು ಕಾಲ ಹಾಕಿದ್ದೆ. ಈಗ ಮತ್ತೆ ನಾಲಿಗೆ ರುಚಿ ಬೇಡುತ್ತಿದೆ.

ಇನ್ನು ಊರಿನಲ್ಲಿ ಮಾಂಸ ತಿನ್ನಲಾರದೆ ಇರಲು ಕೆಲವು ಆಪ್ತ ಕಾರಣಗಳೂ ಇವೆ. ನಾನು ಪಕ್ಕಾ ಸಸ್ಯಾಹಾರಿಯಾದರೆ ಕೆಲವೊಂದು ಪ್ರೀತಿಯ ನೆಂಟರ ಮತ್ತು ಸ್ನೇಹಿತರ ಜೊತೆ ಕುಳಿತು ಊಟವನ್ನು ಎಂಜಾಯ್ ಮಾಡುವ ಅವಕಾಶವನ್ನೆ ಕಳೆದುಕೊಳ್ಳುತ್ತೇನೆ. ಕೆಲವೊಮ್ಮೆ ನನ್ನವರ ಪರಂಪರೆಯ ಮುಂದುವರಿಕೆಗಾದರೂ ಮಾಂಸಾಹಾರಿಯಾಗಿ ಮುಂದುವರೆಯಬೇಕು ಎನ್ನಿಸುತ್ತದೆ.

ಆದರೆ, ಮಾಂಸಾಹಾರಕ್ಕಾಗಿ ಮನುಷ್ಯ ಉಪಯೋಗಿಸುತ್ತಿರುವ ಶಕ್ತಿಮೂಲಗಳ ಮತ್ತು ಸಂಪನ್ಮೂಲಗಳ ಬಗ್ಗೆ ಯೋಚಿಸುತ್ತಿರುವ ಇತ್ತೀಚಿನ ದಿನಗಳಲ್ಲಿ ನಾನು ನನ್ನ ಕಡೆಯಿಂದ ನನ್ನ ಈಗಿನ ಆಹಾರ ಪದ್ದತಿಯನ್ನೆ ಬದಲಾಯಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎನ್ನಿಸುತ್ತದೆ. ಸುಮ್ಮನೆ ಕೆಲವೊಂದು ಪಾಯಿಂಟ್‌ಗಳನ್ನು ಇಲ್ಲಿ ಹೆಸರಿಸಿ ಇವತ್ತಿಗೆ ಇದನ್ನು ಮುಗಿಸುತ್ತೇನೆ. ಆದಾಗಲೆಲ್ಲ ಈ ಬ್ಲಾಗ್ ಪೋಸ್ಟನ್ನು ಅಪ್‌ಡೇಟ್ ಮಾಡಿಕೊಂಡರಾಯಿತು.

 • ಅದು ಇರುವ ಮನೆಗಳಲ್ಲಿ ೨೪ ಗಂಟೆಯೂ ವಿದ್ಯುತ್ ಬಳಸುವ ಉಪಕರಣ ಅಂದರೆ ರೆಫ್ರಿಜರೇಟರ್. ಅದರಲ್ಲಿ ಬಳಸುವ ರಾಸಾಯನಿಕಗಳಿಂದ ಪರಿಸರಕ್ಕೂ ಹಾನಿ. ಹಾಗಾಗಿ ಮನೆಗಳಲ್ಲಿ ರೆಫ್ರಿಜರೇಟರ್ ಇಟ್ಟುಕೊಳ್ಳುವುದನ್ನು discourage ಮಾಡಬೇಕು.
 • ಮನುಷ್ಯ ಆದಷ್ಟು ತನ್ನ ಸುತ್ತಮುತ್ತಲ ಪರಿಸರದಲ್ಲಿ ಬೆಳೆದದ್ದನ್ನೆ ತಿನ್ನಬೇಕು - ಸಸ್ಯಾಹಾರವಾಗಲಿ, ಮಾಂಸಾಹಾರವಾಗಲಿ.
 • ಆದಷ್ಟು ತಾಜಾ ತರಕಾರಿಗಳನ್ನು ಮತ್ತು ದೀರ್ಘಕಾಲ ರೂಮ್ ವಾತಾಂಶದಲ್ಲಿ ಶೇಖರಿಸಬಹುದಾದ ಧವಸ ಧಾನ್ಯಗಳನ್ನೆ ತಿನ್ನಬೇಕು
 • ಆಹಾರ ಪದಾರ್ಥಗಳ ರಫ್ತನ್ನು ನಿಷೇಧಿಸಬೇಕು. ಒಂದು ಸುತ್ತಳತೆಯ ಮಟ್ಟದಲ್ಲಿಯೇ ಧವಸಧಾನ್ಯಗಳ ವ್ಯಾಪಾರವಾಗಬೇಕು. ಎಲ್ಲಿ ಪ್ರತಿಕೂಲ ಹವಾಮಾನಗಳಿಂದಾಗಿ ಬೆಳೆ ಬೆಳೆಯಲು ಸಾಧ್ಯವಿಲ್ಲವೊ ಅಲ್ಲಿಗೆ ಮಾತ್ರ ರಫ್ತಿನ ಅವಕಾಶ ಇರಬೇಕು. ಬೇರೆ ಕಡೆಗಳಿಂದ ಬರುವ ಆಹಾರ ಸಾಮಗ್ರಿಗಳಿಗೆ ಜಾಸ್ತಿಯೆ ಎನ್ನಿಸುವಷ್ಟು ತೆರಿಗೆ ಹಾಕಬೇಕು. ಇದು ಆಹಾರ ಪದಾರ್ಥಗಳ ಸಾರಿಗೆ ಮತ್ತು ಅದರಿಂದ ಖರ್ಚಾಗುವ ತೈಲ ಮತ್ತು ಎಮಿಷನ್ ಅನ್ನು ತಡೆಯುತ್ತದಷ್ಟೆ ಅಲ್ಲದೆ ಎಲ್ಲಾ ದೇಶಗಳೂ ಆಹಾರದ ವಿಚಾರದಲ್ಲಿ ಸ್ವಾವಲಂಬಿಯಾಗುವಂತೆ ಮಾಡುತ್ತವೆ. ರೈತನಿಗೂ ತನ್ನ ಬೆಳೆಗೆ ಎಷ್ಟು ಮಾರುಕಟ್ಟೆ ಇರುತ್ತದೆ ಎನ್ನುವ ಒಂದು ಪಕ್ಕಾ ತಿಳಿವೂ ಆಗ ಇರುತ್ತದೆ.
 • ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವ ಜನರು ಅಲ್ಲಿಯ ಸ್ಥಳೀಯ ಆಹಾರವನ್ನು ತೆಗೆದುಕೊಳ್ಳುವ ಮನೋಭಾವ ಮತ್ತು ಅದೇ ನೈತಿಕವಾದದ್ದು ಎನ್ನುವ ನಂಬಿಕೆ ಬೆಳೆಸಬೇಕು.
 • ಮಾಂಸಾಹಾರಕ್ಕಾಗಿ ಉದ್ದಿಮೆಯ ಮಟ್ಟದಲ್ಲಿ ಪ್ರಾಣಿಗಳನ್ನು ಸಾಕುವುದು ನಿಲ್ಲಬೇಕು.
 • ಮಾಂಸವನ್ನು ತಾಜಾ ಆಗಿಯೆ ಶೇಖರಿಸಿಡಲು ರೇಫ್ರಿಜರೇಟರ್‌ನ ಅವಶ್ಯಕತೆ ಇರುವುದರಿಂದ ಅಂತಹ ಆಹಾರಸೇವನೆಯನ್ನು ತ್ಯಜಿಸಬೇಕು, ಇಲ್ಲವೆ ವಿಶೇಷ ಸಂದರ್ಭಕ್ಕೆ ಮಾತ್ರ ಇಟ್ಟುಕೊಳ್ಳಬೇಕು. ಆಗಾಲೂ ಅಂಗಡಿಗೆ ಹೋಗಿ ಅಂದು ಕಡಿದ ಮಾಂಸವನ್ನೆ ತರಬೇಕು.
 • ಸಮುದ್ರದಲ್ಲಿ ಮಾಡಿದ ಮೀನುಗಾರಿಕೆಯೂ ಕರಾವಳಿಯಲ್ಲಿಯೇ ಮಾರುವಂತಿರಬೇಕು. ಅದರ ರಪ್ತನ್ನೂ, ಐಸ್‌ನಲ್ಲಿ ಹಾಕಿ ಒಳಊರುಗಳಿಗೆ ಸಾಗಿಸುವುದನ್ನೂ ನಿಲ್ಲಿಸಬೇಕು. ಇವೆಲ್ಲವನ್ನೂ ಒಂದು ಉದ್ದಿಮೆಯಾಗಿ ಪ್ರೋತ್ಸಾಹಿಸಬಾರದು.
 • ...
 • ...(ಬೆಳೆಯುತ್ತದೆ)


ಗಾಂಧಿ ಯಾಕೆ ಸಸ್ಯಾಹಾರದ ಪರ ಇದ್ದರು ಎನ್ನುವುದಾಗಲಿ, ಅಥವ ಮಾಂಸಾಹಾರಿಗಳು ಹಾಗೆಹೀಗೆ ಎನ್ನುವ ವಾದಗಳಾಗಲಿ ನನಗೆ ಅನಗತ್ಯ. ಆದರೆ ಈ ಪರಿ ಜನಸಂಖ್ಯೆ ಇರುವ ಇವತ್ತಿನ ಸಂದರ್ಭಕ್ಕೆ ಪ್ರತಿಯೊಬ್ಬ ಮನುಷ್ಯನು ತನ್ನ ಜೀವನಪದ್ಧತಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳದಿದ್ದರೆ, ಅವನು ಪ್ರಕೃತಿಗೆ ಮಾಡುತ್ತಿರುವ ಅಪಚಾರ ಇಡೀ ಜೀವಸಂಕುಲಕ್ಕೆ ನೋವಿನ ದಿನಗಳನ್ನು ತರಲಿದೆ ಎಂದು ನನಗೆ ಅನ್ನಿಸುತ್ತಿರುವುದರಿಂದ, ಅದಕ್ಕೆ ನಾನೇನು ಮಾಡಬೇಕು ಎಂದು ಪ್ರಶ್ನೆ ಹಾಕಿಕೊಂಡಿರುವುದರಿಂದ, ಬರಲಿರುವ ದಿನಗಳಲ್ಲಿ ನನ್ನ ಜೀವನಪದ್ಧತಿ ಮತ್ತು ಆಹಾರ ಪದ್ಧತಿಗಳೂ ಬದಲಾಗಲಿವೆ. ಇಲ್ಲದಿದ್ದರೆ, I will be feeling sorry all the time. ನಾನು ಮತ್ತೊಮ್ಮೆ ಸಸ್ಯಾಹಾರಿಯಾಗಬೇಕಿದೆ ಮತ್ತು ಸ್ಥಳೀಯವಾದದ್ದನ್ನೆ ತಿನ್ನುವ ಅಥವ ಬೆಳೆದುಕೊಳ್ಳುವ ಬಗ್ಗೆ ಯೋಚಿಸಬೇಕಿದೆ.

ಇದರ ಜೊತೆಗೆ, ಇದನ್ನು ಯಾಕೆ ಮತ್ತು ಹೇಗೆ ಸಮುದಾಯಕ್ಕೆ ತೆಗೆದುಕೊಂಡು ಹೋಗಬೇಕು ಮತ್ತು ಈಗಾಗಲೆ ತೆಗೆದುಕೊಂಡು ಹೋಗಿರುವವರು ಬಳಸುತ್ತಿರುವ ಮಾರ್ಗಗಳು ಏನು, ಅವುಗಳ ಪರಿಣಾಮ ಏನು ಎನ್ನುವುದು ನನ್ನ ಮುಂದಿನ ದಿನಗಳ ಒಂದು ಪಾಲು ಸಮಯವನ್ನು ತೆಗೆದುಕೊಳ್ಳುತ್ತದೆ.

ಇದನ್ನು ಓದುವ ಓದುಗರು, ತಮ್ಮ ತಿಳುವಳಿಕೆ, ಅಭಿಪ್ರಾಯ, ಪರವಿರೋಧಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ಎಲ್ಲವನ್ನೂ ಓದುತ್ತೇನೆ. ಅಗತ್ಯವಾದಲ್ಲಿ ನನ್ನ ಪ್ರತಿಕ್ರಿಯೆ ಬರೆಯುತ್ತೇನೆ.

Dec 30, 2008

ನಿಮ್ಮಗಳ ನಿಷ್ಠೆಯೂ ಭಾರತಕ್ಕಿಲ್ಲ

(ಗುಜರಾತಿನ ಧೇಡ್ ಜಾತಿಗೆ ಸೇರಿದ) ದಲಿತ ಕುಟುಂಬವೊಂದು ಮೊದಲ ಬಾರಿಗೆ ಸತ್ಯಾಗ್ರಹ ಆಶ್ರಮದಲ್ಲಿ ಇರಲು ಬಂದಾಗ ಅದನ್ನು ಕಸ್ತೂರಬಾ ಸಹ ಒಪ್ಪಿಕೊಂಡಿರಲಿಲ್ಲ. ಆಫ್ರಿಕಾದಲ್ಲಿದ್ದಾಗ ಇಂತಹುದಕ್ಕೆ ಅಷ್ಟೇನೂ ವಿರೋಧ ತೋರಿಸದಿದ್ದ ಕಸ್ತೂರಬಾಗೆ ಇಲ್ಲಿ ಸರೀಕರ ಮುಂದೆ ದಲಿತರನ್ನು ಮುಟ್ಟಿಕೊಳ್ಳುವುದು ಅಥವ ಅವರನ್ನು ಪಕ್ಕದಲ್ಲಿಟ್ಟುಕೊಳ್ಳುವುದು ಬಹಳ ಕಷ್ಟವಾಗಿರಬೇಕು. ಆದರೆ ಯಾವಾಗ ಗಾಂಧಿ ‘ನಿನಗೆ ಅದು ಅಸಾಧ್ಯವಾದರೆ ನನ್ನನ್ನು ಬಿಟ್ಟು ಹೋಗಬಹುದು. ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿ ಬೇರೆಯಾಗೋಣ,’ ಎಂದರೊ ಕಸ್ತೂರಬಾ ಅದಕ್ಕೆ ಮಣಿದರು. ಆದರೆ, ಅವರಿಗೆ ತುಂಬ ಹತ್ತಿರವಾಗಿದ್ದ ಮಗನ್‍ಲಾಲ್ (ಗಾಂಧಿಯ ದೊಡ್ಡಪ್ಪನ ಮೊಮ್ಮಗ) ಮತ್ತು ಆತನ ಹೆಂಡತಿ ಗಾಂಧಿಯನ್ನು ತೊರೆದು ಆಶ್ರಮದಿಂದ ಹೊರಟೇಬಿಟ್ಟರು. (ಮತ್ತೆ ಅವರು ಮನಸ್ಸು ಶುದ್ಧೀಕರಿಸಿಕೊಂಡು ವಾಪಸಾಗುತ್ತಾರೆ!)

ಹೀಗೆ ಅಸ್ಪೃಶ್ಯತೆ ಮತ್ತು ಜಾತಿಶ್ರೇಷ್ಠತೆ ಅಸಾಮಾನ್ಯವಾಗಿದ್ದ ಆ ಸಮಯದಲ್ಲಿ ಬ್ರಿಟಿಷರಿಂದ ಸ್ವರಾಜ್ಯವನ್ನು ಕೇಳುತ್ತಿದ್ದ ಹಿಂದುಗಳಲ್ಲಿ ಹೆಚ್ಚಿನ ಪಾಲು ಫ್ಯೂಡಲ್ ಮನೋಭಾವದ ಮೇಲ್ಜಾತಿಯವರೆ ಆಗಿದ್ದರು. ಇದನ್ನೆಲ್ಲ ಗಮನಿಸಿಯೆ ಗಾಂಧಿ ಅನೇಕ ಸಲ ‘ಅಸ್ಪೃಶ್ಯತೆಯನ್ನು ಪಾಲಿಸುವವರು ಸ್ವರಾಜ್ಯವನ್ನು ಕೇಳಲು ಅರ್ಹರಲ್ಲ.’ ಎಂದು ಹೇಳುತ್ತಿದ್ದರು. ‘ಮೊದಲಿಗೆ ಸಾಧಿಸಿಬೊಡೋಣ, ಮಿಕ್ಕದ್ದನ್ನು ಆಮೇಲೆ ನೋಡಿಕೊಳ್ಳೋಣ,’ ಎನ್ನುವ ಸಾಮಾನ್ಯ ಜನರ ಮತ್ತು ಸಾಮಾನ್ಯ ನಾಯಕರ ಮನೋಭಾವಕ್ಕೆ ಇದನ್ನು ಹೋಲಿಸಿದರೆ, ಗಾಂಧಿ ಕೇವಲ ಅಸ್ಪೃಶ್ಯತೆಯ ವಿಚಾರಕ್ಕೆ ಸ್ವರಾಜ್ಯವನ್ನೂ ಪಣಕ್ಕೆ ಒಡ್ಡಿದ್ದರು ಎನ್ನಿಸುತ್ತದೆ. ಈಗಲೂ ಕೆಲವರಿಗೆ ಹಾಗೆಯೆ ಅನ್ನಿಸುತ್ತದೆ. ಆದರೆ ಅದು ಗಾಂಧಿಯ ನೈತಿಕತೆಯ ಮಟ್ಟ. ಜೊತೆಗೆ ಹಿಂದೂ ಸಮಾಜವನ್ನೂ ಮಾನಸಿಕವಾಗಿ ಶುಚಿ ಮಾಡುವ ಕ್ರಿಯೆಯ ಭಾಗ. ಗಾಂಧಿ ಪದೆಪದೆ ಪ್ರತಿಪಾದಿಸುತ್ತಿದ್ದದ್ದು ಸ್ವರಾಜ್ಯಕ್ಕೆ ಭಾರತೀಯರು ಮೊದಲು ಅರ್ಹರಾಗಬೇಕು. ಗಾಂಧಿಯ ಗಮನ ಇದ್ದದ್ದು ಸ್ವರಾಜ್ಯ ಪಡೆದುಕೊಂಡ ಮೇಲೆ ನಾವು ಅದನ್ನು ಹೇಗೆ ನಿಭಾಯಿಸುತ್ತೇವೆ ಮತ್ತು ಉಳಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ. ಭಾರತ ದಾಸ್ಯಕ್ಕೆ ಯಾಕೆ ಒಳಗಾಯಿತು ಎನ್ನುವುದಕ್ಕೆ ಟಾಲ್ಸ್‌ಟಾಯ್ ಹೇಳಿದ್ದ ಮಾತೂ ಬಹುಶಃ ಇದಕ್ಕೆ ಪೂರಕವಾಗಿತ್ತು. (ಗಾಂಧಿ ಮತ್ತು ಟಾಲ್ಸ್‌ಟಾಯ್ ನಡುವಿನ ಪತ್ರವ್ಯವಹಾರ ಮತ್ತು ಗಾಂಧಿಯ ಮೇಲೆ ಟಾಲ್ಸ್‌ಟಾಯ್‍ ಪ್ರಭಾವವನ್ನು ಇನ್ನೊಂದರಲ್ಲಿ ಬರೆಯುತ್ತೇನೆ.)

ಇದನ್ನೆಲ್ಲ ಓದುತ್ತಿರುವಾಗ ನನಗೆ ಇವತ್ತಿನ ಭಾರತ ಮತ್ತು ಅದರ ಈಗಿನ ಸವಾಲುಗಳ ಬಗ್ಗೆ ಯೋಚನೆ ಮಾಡುವುದರಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ. ಗಾಂಧಿಯ ಕಾಲದಲ್ಲಿ ಅಸ್ಪೃಶ್ಯತೆ ಮತ್ತು ಜಾತಿವಾದದ ಪರ ಇದ್ದ ಮನೋಭಾವದ ಜನರ ಇಂದಿನ ಪೀಳಿಗೆಯ ಸಂತಾನ ಜಾತೀಯತೆಯನ್ನು ಬೇರೊಂದು ತರದಲ್ಲಿ ಮುಂದುವರೆಸುತ್ತಿದ್ದಾರೆ. ಅದೇ ರೀತಿ ನಿಜವಾದ ಭಾರತೀಯರು ಇಲ್ಲಿಯ ಹಿಂದೂಗಳು ಮಾತ್ರವೆ ಎನ್ನುವುದನ್ನೂ ಘೋಷಿಸುತ್ತಿದ್ದಾರೆ. ಅವರಿಗೆ ಗಾಂಧಿ ಆಗ ಪ್ರತಿಪಾದಿಸಿದ ಅರ್ಹತೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಇವತ್ತಿನ ನೈಜ ಜಾತ್ಯತೀತ ಭಾರತೀಯ ಒಂದನ್ನು ಹೇಳಬೇಕಿದೆ; ಒಂದು ಸಮುದಾಯ ಅಥವ ಕೋಮಿನ ಜನರನ್ನು ನಿಜವಾದ ದೇಶವಾಸಿಗಳಲ್ಲ, ಅವರ ನಿಷ್ಠೆ ಭಾರತಕ್ಕಿಲ್ಲ ಎನ್ನುವ ನಿಮ್ಮಗಳ ನಿಷ್ಠೆಯೂ ಭಾರತಕ್ಕಿಲ್ಲ. ಭಾರತದಲ್ಲಿ ಹುಟ್ಟಿರುವವರನ್ನೆ ಒಂದು ಕೃತ್ರಿಮ ಸಿದ್ಧಾಂತದ ಆಧಾರದ ಮೇಲೆ ಭಾರತೀಯರಲ್ಲ ಎನ್ನುವವರು ಭಾರತೀಯರಾಗಲು ಅರ್ಹತೆ ಸಂಪಾದಿಸಬೇಕಿದೆ.

ಈ ಅರ್ಹತೆ ಸಂಪಾದಿಸಿಲ್ಲದ ಜನ ದೇಶದಲ್ಲಿ ಅಂತಃಕಲಹ ಹೆಚ್ಚಿಸಿ ಜನಾಂಗನಾಶಕ್ಕೆ ಮುಂದಾಗುವ ಮುನ್ನವೆ ದೇಶದ ಜಾತ್ಯತೀತ ನಾಯಕತ್ವ ಎಚ್ಚರವಾಗಬೇಕಿದೆ. ಆದರೆ. ಕೇವಲ ಲೌಕಿಕ ಅಭಿವೃದ್ಧಿಯ ಕಡೆಗೆ ಗಮನ ಕೊಟ್ಟು ಜನತೆಯ ಸಾಮಾಜಿಕ-ಸಾಂಸ್ಕೃತಿಕ-ಅಧ್ಯಾತ್ಮಿಕ ಶುದ್ಧಿಗೆ ಮತ್ತು ಅಭಿವೃದ್ಧಿಗೆ ಗಮನ ಕೊಡದ ಈಗಿನ ಸರ್ಕಾರಗಳ ಸಂದರ್ಭದಲ್ಲಿ ಮೂಲಭೂತವಾದಿಗಳನ್ನು ಮತ್ತು ಹಣದ ಹೆಚ್ಚುಗಾರಿಕೆಯನ್ನು ಎದುರುಗೊಳ್ಳಲು ಗಾಂಧಿ ಪ್ರತಿಪಾದಿಸಿದ ಸರಳ ಬದುಕು, ದೈಹಿಕ ದುಡಿಮೆಯ ಶ್ರೇಷ್ಠತೆ, ಮತ್ತು ವೈಯಕ್ತಿಕ ಸುಖದ ತ್ಯಾಗದಂತಹ ಅಸ್ತ್ರಗಳನ್ನು ಬಳಸಿಕೊಳ್ಳಬೇಕಿದೆ.

Dec 28, 2008

ಗಾಂಧಿ, ಸಾವರ್ಕರ್, ಪ್ರಚೋದಕರು...

ಈಗ ಓದುತ್ತಿರುವ "Gandhi - The Man, His People, and the Empire" ನಲ್ಲಿ ಲೇಖಕ ರಾಜ್‌ಮೋಹನ್ ಗಾಂಧಿ, ಸಾವರ್ಕರ್ ಮತ್ತು ಮೋಹನ್‌ದಾಸ್ ಗಾಂಧಿಯ ನಡುವಿನ ಎರಡು ಭೇಟಿಗಳ ಬಗ್ಗೆ ಬರೆಯುತ್ತಾರೆ. ಆ ಭಾಗಗಳನ್ನು ಓದುವ ಒಂದೆರಡು ದಿನಗಳ ಹಿಂದೆಯಷ್ಟೆ ನಾನು ಇಲ್ಲಿ ಒಬ್ಬ ಮಂಡ್ಯದ ಯುವಕನನ್ನು ಭೇಟಿಯಾಗಿದ್ದೆ. ಬುದ್ಧಿವಂತ. ಸಂಸ್ಕೃತ, ಕನ್ನಡ, ಇಂಗ್ಲಿಷ್ ಎಲ್ಲಾ ಓದುತ್ತಾನೆ. ಅಲ್ಲಿ ಹತ್ತಾರು ವರ್ಷಗಳ ಕಾಲ ಸಾವರ್ಕರ್ ಪ್ರಣೀತ ಹಿಂದೂ ಮತೀಯವಾದಿಗಳ ಅಂಗಳದಲ್ಲೂ ಓಡಾಡಿದ್ದಾನೆ. ಆತನ ಜೊತೆ ಮಾತನಾಡುತ್ತಿದ್ದಾಗ ಅಚಾನಕ್ಕಾಗಿ ಗಾಂಧಿ ವಿಷಯ ಬಂತು. ನಾನೆಂದೆ, 'ಅಲ್ರಿ, ಈ ಹಿಂದೂ ಮತೀಯವಾದಿಗಳಿಗೆ ಗಾಂಧೀಜಿ ಅಂದ್ರೆ ಯಾಕಿಷ್ಟು ಕೋಪ? ಅದು ಯಾಕೆ ಗಾಂಧಿಯನ್ನು ಈ ಪರಿ ದ್ವೇಷಿಸುತ್ತಾರೆ?'

ಆ ಯುವಕನ ಉತ್ತರ ನನ್ನ ಬುದ್ಧಿ ಮತ್ತು ವಿವೇಚನಾ ಶಕ್ತಿಯನ್ನೆ ಅಣಕಿಸಿತು. ಜನರ ದುಷ್ಟತನ ಅಥವ ಪಿತೂರಿಗಳನ್ನು ಅರ್ಥ ಮಾಡಿಕೊಳ್ಳುವ ನನ್ನ ಅಸಾಮರ್ಥ್ಯವನ್ನೂ ನನಗೆ ಎತ್ತಿ ತೋರಿಸಿತು. ಆತ ಹೇಳಿದ್ದು, 'ನೀವು ಚೆನ್ನಾಗಿ ಹೇಳ್ತೀರ, ಗಾಂಧೀನ ಕಂಡೆಮ್ ಮಾಡದೇ ಇದ್ದರೆ ಸಾವರ್ಕರ್ ಗ್ರೇಟು ಅಂತ ತೋರಿಸೋದು ಹೇಗೆ? ಸಾವರ್ಕರ್‌ನ ಮುಂದಕ್ಕೆ ತರಬೇಕು ಅಂದರೆ ಗಾಂಧೀನ ಬೈಯ್ಯಲೇಬೇಕು.' ಇದು ಮತೀಯವಾದಿಗಳ ಪಡಸಾಲೆಯಲ್ಲಿ ಓಡಾಡಿ ಎದ್ದುಬಂದವನ ಮಾತು. ಆತನ ಮಾತನ್ನು ಒಪ್ಪಿಕೊಳ್ಳದೆ ಇರಲು ನನಗೆ ಯಾವ ಕಾರಣಗಳೂ ಕಾಣುತ್ತಿಲ್ಲ.

ಈಗ ಗಾಂಧಿ ಓದುವಾಗ ಆ ಯುವಕನ ಮಾತುಗಳು ಪದೇಪದೆ ನೆನಪಾಗುತ್ತವೆ.

ಸಾವರ್ಕರ್‌ರ ಗುರು ಕೃಷ್ಣವರ್ಮ ಎಂಬಾತ ಲಂಡನ್ನಿನಲ್ಲಿ Indian Socialogist ಎನ್ನುವ ಪತ್ರಿಕೆ ನಡೆಸುತ್ತಿದ್ದ. ಆತನ ಸಿದ್ಧಾಂತ ಬ್ರಿಟಿಷರ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಾಗಿತ್ತು. ಅದಕ್ಕೆ ತರಬೇತಿಯೂ ಕೊಡಲಾಗುತ್ತಿತ್ತು. ಗಾಂಧಿ ಬ್ರಿಟಿಷರ ಜೊತೆ ದಕ್ಷಿಣ ಆಫ್ರಿಕಾದ ಭಾರತೀಯರ ಸಮಸ್ಯೆಗಳನ್ನು ಚರ್ಚಿಸಲು 1905 ರಲ್ಲಿ ಲಂಡನ್ನಿಗೆ ಬಂದಿದ್ದಾಗ ಅವರ ಅಹಿಂಸಾತ್ಮಕ ಹೋರಾಟವನ್ನು ಟೀಕಿಸಿದ್ದ ಕೃಷ್ಣವರ್ಮನನ್ನೂ ಭೇಟಿ ಆಗುತ್ತಾರೆ. ಆಗಿನ ಕೆಲ ಭಾರತೀಯರಲ್ಲಿ ತೀವ್ರವಾಗಿ ತುಡಿಯುತ್ತಿದ್ದ ಹಿಂಸಾತ್ಮಕ ವಿರೋಧವನ್ನು ಕಂಡ ಗಾಂಧಿ ಕೃಷ್ಣವರ್ಮನ ಗುಂಪಿನ ಜೊತೆ ಎರಡು ದಿನ ಕಳೆಯುತ್ತಾರೆ. ಅವರ ಸಿದ್ಧಾಂತದ ಬಗ್ಗೆ ಕಳವಳಗೊಂಡಿದ್ದ ಗಾಂಧಿ ಅವರನ್ನು ಮಾತುಕತೆಯ ಮೂಲಕ, ಚರ್ಚೆಯ ಮೂಲಕ ಎಂಗೇಜ್ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಹಿಂಸೆಗೆ ಪರ್ಯಾಯವಾಗಿ ಅವರಿಗೆ ಶಾಂತಿಯುತ ಅಸಹಕಾರವನ್ನು ಅಪ್ಪಿಕೊಳ್ಳಲು ಹೇಳುತ್ತಾರೆ. ಅಲ್ಲಿಯೇ 23 ವರ್ಷದ ಸಾವರ್ಕರ್ 36 ವರ್ಷದ ಗಾಂಧಿಯನ್ನು ಮೊದಲ ಸಲ ಭೇಟಿ ಆಗಿದ್ದು.

ಗಾಂಧಿ 1909 ರಲ್ಲಿ ಮತ್ತೊಮ್ಮೆ ದಕ್ಷಿಣ ಆಫ್ರಿಕಾದಿಂದ ಲಂಡನ್ನಿಗೆ ಬರುತ್ತಾರೆ. ಅವರು ಬರುವುದಕ್ಕೆ ಎಂಟು ದಿನಗಳ ಹಿಂದೆಯಷ್ಟೆ ಕೃಷ್ಣವರ್ಮ ಮತ್ತು ಸಾವರ್ಕರ್‌ರಿಂದ ಪ್ರಚೋದನೆಗೊಂಡ ಮದನ್‍ಲಾಲ್ ಧಿಂಗ್ರಾ ಎಂಬ ಯುವಕ ಕರ್ಜನ್ ವಿಲ್ಲಿ ಎಂಬಾತನನ್ನು ಕೊಂದಿರುತ್ತಾನೆ. (ಕರ್ಜನ್ ವಿಲ್ಲಿ ಆಗಿನ ಇಂಗ್ಲೆಂಡ್ ಸರ್ಕಾರದಲ್ಲಿ ಭಾರತದ ಉಸ್ತುವಾರಿ ನೋಡಿಕೊಳ್ಳುತ್ತಿದ ವಿದೇಶಾಂಗ ಸಚಿವನ ರಾಜಕೀಯ ಸಹಾಯಕ.) ಇದೇ ಹಿನ್ನೆಲೆಯಲ್ಲಿ ಗಾಂಧಿ ಮತ್ತೊಮ್ಮೆ ಉಗ್ರವಾದಿ ವಿದ್ಯಾರ್ಥಿಗಳ ಜೊತೆ ಒಂದು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಅದು ಅವರಿಂದಲೆ ಬಂದಿದ್ದ ಆಹ್ವಾನ. ಆ ಸಭೆಯಲ್ಲಿ ಗಾಂಧಿ ಧಿಂಗ್ರಾನನ್ನು ಕೊಲೆ ಮಾಡಲು ಪ್ರಚೋದಿಸಿದವರು ಧಿಂಗ್ರಾಗಿಂತ ದೊಡ್ಡ ಅಪರಾಧಿಗಳು ಎನ್ನುತ್ತಾರೆ. ಅಲ್ಲಿ ಸಾವರ್ಕರ್ ಇನ್ನೊಬ್ಬ ಭಾಷಣಕಾರ. ಆತ ಏನು ಹೇಳಿದ ಎಂದು ಈ ಪುಸ್ತಕದಲ್ಲಿ ಹೇಳಿಲ್ಲ. ಆ ಸಮಯದಲ್ಲಿ ಕರ್ಜನ್‌ನ ಕೊಲೆಯಲ್ಲಿಯ ಸಾವರ್ಕರ್ ಪಾತ್ರ ಇನ್ನೂ ಬಹಿರಂಗವಾಗಿರಲಿಲ್ಲ.

ಆದರೆ ತದನಂತರದ ದಿನಗಳಲ್ಲಿ ಆ ಕೊಲೆಯಲ್ಲಿ ಸಾವರ್ಕರ್‌ರ ಪ್ರಚೋದನೆ ಮತ್ತು ಸಮರ್ಥನೆ ನಿರೂಪಿತವಾಗಿ, ಸಾವರ್ಕರ್‌ಗೆ ಜೈಲುಶಿಕ್ಷೆಯಾಗಿ ಅಂಡಮಾನಿಗೆ ಕಳಿಸಲಾಗುತ್ತದೆ.

ಈ ಮೇಲಿನ ಪ್ರಸಂಗದ ಬಗ್ಗೆ ರಾಜ್‌ಮೋಹನ್ ಬರೆಯುತ್ತಾರೆ: "ನಂತರದ ದಿನಗಳಲ್ಲಿ ಸಾವರ್ಕರ್ ಗಾಂಧಿಯ ಬಗ್ಗೆ ತೋರಿಸುವ ದ್ವೇಷ ಬಹುಶಃ ಯಾವಾಗ ಗಾಂಧಿ ಕರ್ಜನ್ ವಿಲ್ಲಿಯನ್ನು ಕೊಲೆ ಮಾಡಲು ಪ್ರಚೋದಿಸಿದವರು ಧಿಂಗ್ರಾಗಿಂತ ದೊಡ್ಡ ಅಪರಾಧಿಗಳು ಎಂದರೊ ಆಗ ಹುಟ್ಟಿದ್ದಾಗಿರಬೇಕು."

ಈ ಪ್ರವಾಸದ ನಂತರದ ಹಡಗು ಪ್ರಯಾಣದಲ್ಲೆ ಗಾಂಧಿ "ಹಿಂದ್ ಸ್ವರಾಜ್" ಬರೆದದ್ದು.

(ಇದೇ ಸಮಯದಲ್ಲಿ, ತಾವು ಮಾಡುತ್ತಿರುವುದೇ ಸರಿಯಾದ ಹೋರಾಟ, ಅದಕ್ಕೆ ಸಶಸ್ತ್ರ ಹೋರಾಟವೆ ಸರಿ ಎಂದು ಸಮರ್ಥಿಸಿಕೊಳ್ಳುವ ನಕ್ಸಲ್‌ವಾದಿಗಳೂ ನೆನಪಾಗುತ್ತಾರೆ. ತಮ್ಮ ಲೌಕಿಕ ಸುಖಗಳನ್ನು ತ್ಯಾಗ ಮಾಡಿ ಹೋರಾಟ ಮಾಡಿದಾಕ್ಷಣಕ್ಕೆ ಯಾರೊಬ್ಬರ ಹಿಂಸಾತ್ಮಕ ಹೋರಾಟವೂ ಆದರ್ಶಪ್ರಾಯವಲ್ಲ ಮತ್ತು ಪ್ರಶಂಸನೀಯವಲ್ಲ. ಅದು ದೇಶಪ್ರೇಮಿ ಉಗ್ರವಾದಿಗಳಿಗೂ, ಮೂಲಭೂತವಾದಿಗಳಿಗೂ, ಅಸಮಾನತಾ ವಿರೋಧಿ ನಕ್ಸಲ್‌ವಾದಿಗಳಿಗೂ ಸಮಾನವಾಗಿ ಅನ್ವಯಿಸುತ್ತದೆ.)

Dec 27, 2008

ಶತಮಾನದ ಹಿಂದೆ ಗಾಂಧಿ ಹೇಳಿದ್ದು...

ವಿಚಾರ ಮಂಟಪದ basic ಕೆಲಸ ಮುಗಿದ ತಕ್ಷಣ, ಈ ಒಂದು ಮೂರು ದಿನದಿಂದ ಗಾಂಧಿಯ ಮೊಮ್ಮಗ ರಾಜ್‌ಮೋಹನ್ ಗಾಂಧಿ ಬರೆದಿರುವ "Gandhi - The Man, His People, and the Empire" ಹಿಡಿದುಕೊಂಡು ಕುಳಿತಿದ್ದೇನೆ.

ನನಗೆ ನಾನೆ ಮನನ ಮಾಡಿಕೊಳ್ಳುವುದು, ಗುರುತು ಮಾಡಿಕೊಳ್ಳುವುದು ಬಹಳಷ್ಟು ಇದೆ. ಲೈಬ್ರರಿ ಕಾಪಿ ಎಂದು ಸುಮ್ಮನಾಗುತ್ತೇನೆ. ಸಾಧ್ಯವಾದಾಗ ಇಲ್ಲಿಯೇ ಬರೆದುಕೊಳ್ಳಬೇಕು ಎನ್ನಿಸುತ್ತದೆ. ಈಗ ಅಂತಹುದೊಂದು.

ಸರಿಯಾಗಿ 100 ವರ್ಷದ ಹಿಂದೆ ಗಾಂಧಿ ಮೊದಲ ಬಾರಿಗೆ ಜೈಲಿಗೆ ಹೋಗಿದ್ದು (1908 ರ ಆರಂಭದಲ್ಲಿ). ಸತ್ಯಾಗ್ರಹದ ಆರಂಭ ಕಾಲ ಅದು. 1908 ರ ಅಂತ್ಯದಲ್ಲಿ, ಗಾಂಧಿ ಜೈಲಿನಿಂದ ಹೊರಗೆ ಇರುವಾಗ, ಗಾಂಧಿಯ ಸತ್ಯಾಗ್ರಹದಲ್ಲಿ ಪಾಲ್ಗೊಂಡ ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರು ಅಲ್ಲಿನ ಭಾರತೀಯರ ವಿರುದ್ಧದ ಕಾನೂನುಗಳನ್ನು ಉಲ್ಲಂಘಿಸಿ ಜೈಲಿಗೆ ಹೋಗುತ್ತಾರೆ. ಆದರೆ ಕೆಲವು ಭಾರತೀಯರು ಜೈಲಿಗೂ ತಮ್ಮ ಜಾತಿಶ್ರೇಷ್ಠತೆಯನ್ನು ಒಯ್ಯುತ್ತಾರೆ. ದಲಿತನ ಪಕ್ಕ ಮಲಗಲು ಕೆಲವರು ಒಪ್ಪುವುದಿಲ್ಲ. ಅದನ್ನು ಕೇಳಿ, ಕ್ರುದ್ಧ ಗಾಂಧಿ ಬರೆಯುತ್ತಾರೆ:

"ಈ ಆಷಾಢಭೂತಿತನದ ಮೇಲು ಕೀಳು ಭೇದಗಳಿಂದಾಗಿ ಮತ್ತು ಚಾಲ್ತಿಯಲ್ಲಿರುವ ಜಾತಿ ದಬ್ಬಾಳಿಕೆಯಿಂದಾಗಿ ನಾವು ಸತ್ಯಕ್ಕೆ ಬೆನ್ನು ತೋರಿಸಿ ಅಸತ್ಯವನ್ನು ಅಪ್ಪಿಕೊಂಡಿದ್ದೇವೆ. ಈ ಚಳವಳಿಯಲ್ಲಿ ಪಾಲ್ಗೊಂಡಿರುವ ಭಾರತೀಯರು ಈ ದುಷ್ಟತನ ಎಲ್ಲೆಲ್ಲಿ ಕಾಣಿಸುತ್ತದೊ ಅಲ್ಲೆಲ್ಲವೂ, ತಮ್ಮ ಜಾತಿಯ ವಿರುದ್ಧವೂ, ಕುಟುಂಬದ ವಿರುದ್ಧವೂ ಸತ್ಯಾಗ್ರಹ ಮಾಡಲು ಮುಂದಾಗಲಿ ಎಂದು ಬಯಸುತ್ತೇನೆ. " (ಜನವರಿ 30, 1909 ರಂದು Indian Opinion ನಲ್ಲಿ)

ಈಗಲೂ ಭಾರತದಲ್ಲಿ ಒಂದಲ್ಲ ಒಂದು ರೂಪದಲ್ಲಿ ಬಲಿಷ್ಠವಾಗಿಯೇ ಮುಂದುವರೆಯುತ್ತಿರುವ ಜಾತೀಯತೆ, ಕೋಮುದ್ವೇಷ, ಮೂಲಭೂತವಾದಿತನಗಳ ಹಿನ್ನೆಲೆಯಲ್ಲಿ ಹೇಳಬೇಕೆಂದರೆ, ನಾವು ಸುಧಾರಿಸಿಯೇ ಇಲ್ಲ. ಇಲ್ಲಿಯತನಕದ ಸುಧಾರಣೆ ಸುಧಾರಣೆಯೇ ಅಲ್ಲ. ಬಹುಸಂಖ್ಯಾತರಿಗೆ ಗಾಂಧಿಯ ಸರಳ ಕಾನ್ಸೆಪ್ಟ್‌ಗಳಾಗಲಿ, ಸಮಾನತೆ, ಸರ್ವೋದಯ, ಸಹಬಾಳ್ವೆಯ ವಿಷಯಗಳಾಗಲಿ ಇನ್ನೂ ತಲುಪಿಯೇ ಇಲ್ಲ. ಇದರಲ್ಲಿ ಅಕ್ಷರ ಕಲಿತವರೂ, ಸಮಾಜದಲ್ಲಿ ಗಣ್ಯರಾಗಿರುವವರೂ, ಬರಹಗಾರರೂ ಇದ್ದಾರೆ ಎನ್ನುವುದು ಇನ್ನೂ ಶೋಚನೀಯವಾದ ವಿಷಯ. ಒಂದು ಮುಂದಡಿ ಇಟ್ಟು ಎರಡು ಹಿಂದಡಿ ಇಡುತ್ತಿರುವ ಸಮಾಜವೆ ನಮ್ಮದು?

Dec 20, 2008

"ವಿಚಾರ ಮಂಟಪ"ಕ್ಕೆ ಸಹಾಯ ಬೇಕಿದೆ...

ವಿಚಾರ ಮಂಟಪ ವನ್ನು ಯೂನಿಕೋಡ್‌ಗೆ ಬದಲಾಯಿಸಿ ಹೊಸರೂಪ ನೀಡಬೇಕೆಂದುಕೊಂಡಿದ್ದ ಕೆಲಸ ಅಂದುಕೊಂಡದ್ದಕ್ಕಿಂತ ನಿಧಾನವಾಗುತ್ತಿದೆ. ಈಗಾಗಲೆ ಅರ್ಧ ಕೆಲಸ ಮಾಡಿದ್ದೇನೆ. ಅದಕ್ಕೆ Drupal ವ್ಯವಸ್ಥೆ ಏರಿಸಿ ಆಗಿದೆ. ಹಾಗೆಯೆ "ವಚನಗಳು" ಮತ್ತು "ಕುವೆಂಪು" ವಿಭಾಗವನ್ನೂ ಪೂರ್ಣಗೊಳಿಸಿದ್ದೇನೆ.

http://www.vicharamantapa.net/drupal

ಇನ್ನೂ ಡಾ. ಹೆಚ್. ನರಸಿಂಹಯ್ಯನವರ 'ಹೋರಾಟ ಹಾದಿ"ಯ ಲೇಖನಗಳು, ಬಿ.ವಿ. ವೀರಭದ್ರಪ್ಪನವರ "ವೇದಾಂತ ರೆಜಿಮೆಂಟ್" ಲೇಖನಗಳು, ಸಿದ್ದಲಿಂಗಯ್ಯನವರ "ಆಯ್ದ ಪದ್ಯಗಳು" ಅನ್ನು ಬದಲಿಸಬೇಕಿದೆ. ಇತ್ತೀಚಿನ ವ್ಯಸ್ತ ವೇಳೆಯಿಂದಾಗಿ ಅದಕ್ಕೆ ಬೇಕಾದ ದಿನಂಪ್ರತಿ ಒಂದೆರಡು ಗಂಟೆಗಳ ಸಮಯ ಸಿಗುತ್ತಿಲ್ಲ. ಸಿಕ್ಕರೂ ಮನಸ್ಥಿತಿ ಹೊಂದುತ್ತಿಲ್ಲ. ಹಾಗಾಗಿ, ಈ ಮನವಿ.

ಇನ್ನೂ ಬಾಕಿಯಿರುವ ಲೇಖನ/ಪದ್ಯಗಳನ್ನು ಬರಹ-ANSI ಯಿಂದ ಯೂನಿಕೋಡ್‌ಗೆ ಕನ್ವರ್ಟ್ ಮಾಡಿ ವೆಬ್‍ಸೈಟ್‌ಗೆ ಏರಿಸಲು ಸುಮಾರು ಐದಾರು+ ಗಂಟೆಗಳ ಸಹಾಯ ಬೇಕಾಗಬಹುದು. ಯಾರಾದರೂ ಈ ಕೆಲಸದಲ್ಲಿ ಪಾಲ್ಗೊಳ್ಳಲು ಮುಂದೆ ಬಂದರೆ ನಿಜಕ್ಕೂ ಸಹಾಯವಾಗುತ್ತದೆ.

ಇದು ತುಂಬ ಸುಲಭದ ಕೆಲಸ. ಬ್ಲಾಗ್ ಪೋಸ್ಟ್ ಮಾಡುವುದಕ್ಕೂ ಇದಕ್ಕೂ ಯಾವುದೆ ವ್ಯತ್ಯಾಸವಿಲ್ಲ. ಅದೇ interface. ನಾನು ಒಂದು ಯೂಸರ್ ಐಡಿಗೆ content ಏರಿಸುವ ಅನುಮತಿ ನೀಡಬೇಕಷ್ಟೆ. ನಂತರ ನೀವು ಬ್ಲಾಗ್‍ಗೆ ಲೇಖನ ಪೋಸ್ಟ್ ಮಾಡುವ ಹಾಗೆ ಇಲ್ಲಿಯೂ ಲೇಖನವನ್ನು ಪೋಸ್ಟ್ ಮಾಡಬೇಕು. ಮೂಲಲೇಖನ vicharamantapa.net ನಲ್ಲಿ ಇದೆ. ಅದನ್ನು "Baraha Convert" ಬಳಸಿ ಕಾಪಿ-ಪೇಸ್ಟ್ ಮಾಡಬೇಕಷ್ಟೆ. (ಅಪ್‍ಲೋಡ್ ಆದ ಲೇಖನಕ್ಕೆ ಮೆನು ಕೂಡಿಸುವುದನ್ನು ನಾನು ಮಾಡುತ್ತೇನೆ.)

ಈ ಹಿಂದೆ ಹಲವಾರು ಜನ ಈ ತರಹದ ಸಹಾಯ ಮಾಡುತ್ತೇವೆ ಎಂದು ಮುಂದೆ ಬಂದಿದ್ದರು. ಆದರೆ ಆಗ ಏನು ಕೇಳುವುದು ಎಂದು ಗೊತ್ತಿರಲಿಲ್ಲ. ಈಗ ಎಲ್ಲವೂ ಸ್ವತಂತ್ರವಾಗಿ ಮಾಡುವ ಸಾಧ್ಯತೆ ಇರುವುದರಿಂದ ಅವರಿಗೂ ಪತ್ರ ಬರೆಯುತ್ತೇನೆ. ಬ್ಲಾಗಿನಲ್ಲಿ ಓದಿ ಯಾರಾದರೂ ಸ್ಪಂದಿಸಬಹುದು ಎಂದು ಇಲ್ಲಿಯೂ ಬರೆದಿದ್ದೇನೆ. ನೀವು ಈ ಸಹಾಯ ಮಾಡಬಲ್ಲಿರಾದರೆ ದಯವಿಟ್ಟು vicharamantapa@vicharamantapa.net ಗೆ ಮೇಯ್ಲ್ ಮಾಡಿ. ಯೂಸರ್ ಐಡಿ ವಿವರಗಳನ್ನು ಕಳುಹಿಸುತ್ತೇನೆ.

(ಎಲ್ಲವನ್ನೂ ಕನ್ವರ್ಟ್ ಮಾಡಿದ ಬಳಿಕ Drupal ನಲ್ಲಿರುವ ಮುಖಪುಟವೆ Default ಮುಖಪುಟವಾಗುತ್ತದೆ.)

Dec 7, 2008

ಗಾಂಧಿ ಜಯಂತಿ ಕಥಾಸ್ಪರ್ಧೆ ಫಲಿತಾಂಶ

ನಾನು "ವಿಕ್ರಾಂತ ಕರ್ನಾಟಕ"ದ ಮೂಲಕ ಪ್ರಾಯೋಜಿಸಿದ್ದ "ಗಾಂಧಿ ಜಯಂತಿ ಕಥಾಸ್ಪರ್ಧೆ"ಯ ಫಲಿತಾಂಶ ಪತ್ರಿಕೆಯ ಈ ವಾರದ ಸಂಚಿಕೆಯಲ್ಲಿ ಪ್ರಕಟವಾಗಿದೆ. ಲೇಖಕ ಡಿ.ಎಸ್. ನಾಗಭೂಷಣ್, ಕಾದಂಬರಿಗಾರ್ತಿ ಡಾ. ಎಚ್. ನಾಗವೇಣಿ, ಮತ್ತು ಕವಿ ಸವಿತಾ ನಾಗಭೂಷಣ್‍ರವರು ತೀರ್ಪುಗಾರರಾಗಿ ಕತೆಗಳನ್ನು ಪರಿಶೀಲಿಸಿ, ಫಲಿತಾಂಶ ಮತ್ತು ತಮ್ಮ ಅಭಿಪ್ರಾಯವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ. ಈ ಹಿರಿಯ ಮಿತ್ರರಿಗೆ ನನ್ನ ಧನ್ಯವಾದಗಳನ್ನು ತಿಳಿಸುತ್ತೇನೆ. ಹಾಗೆಯೆ, ಈ ಕಥಾಸ್ಪರ್ಧೆ ಆಯೋಜಿಸಲು ಸಹಕರಿಸಿದ ಮತ್ತು ನಡೆಸಿಕೊಟ್ಟ "ವಿಕ್ರಾಂತ ಕರ್ನಾಟಕ"ದ ಸಂಪಾದಕೀಯ ಮಂಡಳಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕಥಾಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ಕತೆಗಾರ ಮಿತ್ರರಿಗೂ ನನ್ನ ಧನ್ಯವಾದಗಳು. ವಿಜೇತರಿಗೆ ಅಭಿನಂದನೆಗಳು.

ರವಿ...


"ವಿಕ್ರಾಂತ ಕರ್ನಾಟಕ"ದ ಮೂಲಸಂಸ್ಥಾಪಕರಾಗಿದ್ದ ರವಿ ಕೃಷ್ಣಾ ರೆಡ್ಡಿಯವರು ಪ್ರಾಯೋಜಿಸಿರುವ "ಗಾಂಧಿ ಜಯಂತಿ ಕಥಾಸ್ಪರ್ಧೆ"ಗೆ ಬಂದ ಕಥೆಗಳಲ್ಲಿ ತೀರ್ಪುಗಾರರಾದ ನಮ್ಮ ಬಳಿ ಬಂದವು ಒಟ್ಟು 24 ಕಥೆಗಳು. ಕಥೆಗಳು ಗಾಂಧಿವಾದದ ಮೌಲ್ಯಗಳನ್ನಾಧರಿಸಿರಬೇಕೆಂಬುದು ಸ್ಪರ್ಧೆಯ ಮುಖ್ಯ ಆಶಯ. ಈ ಆಶಯವೇನೋ ಇಂದಿನ ರಾಜಕೀಯ ಸಂದರ್ಭದಲ್ಲಿ ಅಮೂಲ್ಯವೆನಿಸುವುದಾದರೂ, ಯಾವುದೇ ನಿರ್ದಿಷ್ಟ ತಾತ್ವಿಕ ಚೌಕಟ್ಟನ್ನು ಕಥೆ ಕಟ್ಟಲು ನೀಡುವುದು ಒಳ್ಳೆಯ ಕಥೆಗಳ ಸೃಷ್ಟಿಯನ್ನು ಪ್ರೋತ್ಸಾಹಿಸುವ ಅತ್ಯುತ್ತಮ ಮಾರ್ಗವೇನೂ ಅಲ್ಲ ಎಂಬುದು ಈ ತೀರ್ಪುಗಾರರ ಅಭಿಮತ. ಹಾಗೇ ಗಾಂಧೀ ಮೌಲ್ಯಗಳನ್ನು ಸಾಕಷ್ಟು ವಿಸ್ತರಿಸಿ ನಿರೂಪಿಸಿರುವ ಸ್ಪರ್ಧೆ; ಕಥೆ ವರದಿಯಂತಿರಬಾರದು, ಸಮಾಜಶಾಸ್ತ್ರೀಯ ಸೃಜನಶೀಲ ದಾಖಲೆಯ ಮಟ್ಟದಲ್ಲಿರಬೇಕು. ಕಲಾತ್ಮಕವಾಗಿರಬೇಕು ಎಂದು ಸೂಚಿಸುವ ಮೂಲಕ ವ್ಯಕ್ತಪಡಿಸಿರುವ ನಿರೀಕ್ಷೆಗಳು ಕಥೆಗಾರರಿಗೆ ರಚನಾತ್ಮಕ ಸವಾಲುಗಳಿಗಿಂತ ಹೆಚ್ಚಾಗಿ ಅವರ ಮೇಲೆ ಸಾಕಷ್ಟು ಒತ್ತಡಗಳನ್ನು ಹಾಕಿರುವುದು ಸ್ಪರ್ಧೆಗೆ ಬಂದ ಕಥೆಗಳನ್ನು ಓದಿದಾಗ ನಮ್ಮ ಗಮನಕ್ಕೆ ಬಂತು.

ಬಹಳಷ್ಟು ಕಥೆಗಳು ಸಮಕಾಲೀನ ರಾಷ್ಟ್ರೀಯ ಸಂಕಟವೆನಿಸಿರುವ ಕೋಮುವಾದಿ ರಾಜಕಾರಣದ ಸುತ್ತಲೇ ಗಿರಕಿ ಹೊಡೆದಿವೆ. ಹಾಗೇ ಕೆಲವು ಕಥೆಗಳು ಭ್ರಷ್ಟಾಚಾರದ ವಸ್ತುವಿನ ಸುತ್ತ ತಿರುಗುತ್ತಾ, ಇಂದಿನ ರಾಜಕೀಯ ಅವನತಿಗೆ ಸಾರ್ವಜನಿಕ ಜೀವನದಲ್ಲಿ ಗಾಂಧಿ ಮೌಲ್ಯಗಳು ಕಣ್ಮರೆಯಾಗಿರುವುದೇ ಕಾರಣವಾಗಿದೆ ಎಂದು ಸೂಚಿಸುವ ಪ್ರಯತ್ನ ಮಾಡಿವೆ. ಆದರೆ ಇವೆಲ್ಲವೂ ಸಮಕಾಲೀನ ಪರಿಸ್ಥಿತಿಯ ಸಂಕೀರ್ಣತೆಗಳನ್ನು, ಜಟಿಲತೆಗಳನ್ನು ಅರಿಯುವ ಪ್ರಯತ್ನ ಮಾಡದೆ, ಗಾಂಧಿವಾದದ ಸರಳ ಗ್ರಹಿಕೆಯ ರೂಪದಲ್ಲಿ ಮೂಡಿ, ಕಥೆಗಳನ್ನು ಜಾಳುಜಾಳುಗೊಳಿಸಿವೆ. ಇನ್ನು ಕೆಲವು ಕಥೆಗಳು ದಟ್ಟ ಸಾಮಾಜಿಕ ವರ್ಣನೆಗಳನ್ನು ಒಳಗೊಂಡು ವಿಶ್ವಾಸ ಹುಟ್ಟಿಸುವುವಾದರೂ, ಆ ವರ್ಣನೆಗಳು ಅಂತಿಮವಾಗಿ ಹುಸಿ ಭಾವನಾತ್ಮಕ ಅಂತ್ಯಗಳನ್ನು ಕಟ್ಟಿ ಕೊಡುವುದರಲ್ಲಿ ವ್ಯರ್ಥವಾಗಿವೆಯಷ್ಟೆ.

ಕಥಾ ಸ್ಪರ್ಧೆಯ ಆಶಯ, ಉದ್ದೇಶ ಮತ್ತು ಸೂಚನೆಗಳನ್ನು ಸರಿಸಿ ನಾವು ಬಹುಮಾನಗಳಿಗೆ ಅರ್ಹವಾದ ಕಥೆಗಳನ್ನು ಹುಡುಕತೊಡಗಿದಾಗ ನಮಗೆ ನಿರಾಶೆಯಾಯಿತೆಂದೇ ಹೇಳಬೇಕು. ಹೀಗಾಗಿ ಈ ಆಶಯ, ಉದ್ದೇಶ, ಸೂಚನೆಗಳನ್ನು ಹಿನ್ನೆಲೆಯ ಸರಿಸಿ; ಗಾಂಧಿವಾದದ ನೇರ ಹಾಗೂ ಸ್ಪಷ್ಟ ಚಹರೆಗಳನ್ನು ಒಳಮೌಲ್ಯವಿದ್ದರೂ, ಕಥೆ ಸೃಷ್ಟಿಸುವ ಒಟ್ಟು ಭಾವನೆಯ ಮಟ್ಟದಲ್ಲಿ ಸ್ಥೂಲವಾಗಿಯಾದರೂ ಗಾಂಧಿ ಮೌಲ್ಯಗಳನ್ನು ಧ್ವನಿಸುವಂತಹ ಕಥೆಗಳನ್ನು ಗುರುತಿಸುವ ಪ್ರಯತ್ನ ಮಾಡಿದಾಗ ದೊರಕಿದ್ದು ಆರು ಕಥೆಗಳು. ಇವುಗಳಲ್ಲಿ ಪ್ರತಿಯೊಂದು ಕಥೆಯೂ ಕಥೆಗಾರಿಕೆಯ ಬೇರೆ ಬೇರೆ ಆಯಾಮಗಳಲ್ಲಿ ಪ್ರಕಟಪಡಿಸಿರುವ ಬೇರೆ ಬೇರೆ ಮಟ್ಟದ ಸಾಧನೆಗಳನ್ನು ಒಟ್ಟು ಮಾಡಿ ನೋಡಿದಾಗ, ಅವೆಲ್ಲವೂ ಹೆಚ್ಚೂಕಡಿಮೆ ಒಂದೇ ಮಟ್ಟದವು ಎನ್ನಿಸಿದವು. ಹಾಗಾಗಿ ನಾವು ಬಹುಮಾನಗಳನ್ನು ಪ್ರಥಮ, ದ್ವಿತೀಯ, ತೃತೀಯ ಎಂದು ವಿಂಗಡಿಸುವುದು ಉಚಿತವೆನ್ನಿಸದೆ, ಈ ಆರೂ ಕಥೆಗಳಿಗೂ ತಲಾ ಎರಡು ಸಾವಿರ ರೂಪಾಯಿಗಳ ಬಹುಮಾನ ನೀಡುವಂತೆ ಶಿಫಾರಸು ಮಾಡಿದ್ದೇವೆ:

 1. ಪುನರಪಿ- ಚಲಂ, ಹಾಸನ
 2. ಉತ್ತರಾಧಿಕಾರ- ದೀಪಾ ಹಿರೇಗುತ್ತಿ, ಕೊಪ್ಪ
 3. ಪಾಲು- ವೆಂಕಟ್ ಮೋಂಟಡ್ಕ, ಬೆಂಗಳೂರು
 4. ಮಬ್ಬು ಕವಿದ ಹಾದಿ- ಮಾರ್ನಮಿಕಟ್ಟೆ ನಾಗರಾಜ, ಬೆಂಗಳೂರು
 5. ಮೊಹರಂ ಹಬ್ಬದ ಕಡೆಯ ದಿನ- ಹನುಮಂತ ಹಾಲಿಗೇರಿ, ಬೆಂಗಳೂರು
 6. ಆವರ್ತ- ಡಾ.ಟಿ.ಎಸ್.ವಿವೇಕಾನಂದ, ಬೆಂಗಳೂರು.

"ಪುನರಪಿ" ಅವಿಚಲವಾದ ನ್ಯಾಯ ಪ್ರಜ್ಞೆ, ಬದ್ಧತೆ, ಕ್ಷಮೆ, ಪ್ರೀತಿ ಮತ್ತು ನಿರ್ಮೋಹಗಳ ಶಕ್ತಿಯನ್ನು ನಿರೂಪಿಸುವ ತನ್ನ ನಿರಾಭರಣ ಮತ್ತು ಸರಳ ಶೈಲಿಯಿಂದಾಗಿ ಗಮನ ಸೆಳೆಯುತ್ತದೆ. "ಉತ್ತರಾಧಿಕಾರ", ಓರ್ವ ಸಮಕಾಲೀನ ರಾಜಕಾರಣಿಯ ಮಾನಸಿಕ ತೊಳಲಾಟವನ್ನು Flash basis ತಂತ್ರದ ಮೂಲಕ ಸ್ವಲ್ಪ 'ನವ್ಯ' ಶೈಲಿಯಲ್ಲಿ ನಿರೂಪಿಸುತ್ತಾ, ಗಾಂಧಿ ನಮ್ಮನ್ನು ಒಂದು 'ಪಾಪಪ್ರಜ್ಞೆ'ಯಾಗಿ ಕಾಡುತ್ತಿರುವ ಪರಿಯನ್ನು ಸೂಕ್ಷ್ಮವಾಗಿ ಹಿಡಿದಿಡುತ್ತದೆ. "ಪಾಲು" ದಟ್ಟ ಪ್ರಾಕೃತಿಕ ವಿವರಗಳ ಹಿನ್ನೆಲೆಯಲ್ಲಿ, ಲೋಭ ತಂದೊಡ್ಡುವ ಆತ್ಯಂತಿಕ ದುರಂತವನ್ನು ಸಾಂಕೇತಿಕ ನೆಲೆಯಲ್ಲಿ ಒಪ್ಪಿಸುವ ಪ್ರಯತ್ನ ಮಾಡುತ್ತದೆ. "ಮಬ್ಬು ಕವಿದ ಹಾದಿ", ಗಾಂಧಿ ಯುಗದ ಆದರ್ಶಗಳನ್ನು ಥಣ್ಣಗೆ ಇಂದಿನ ನೈತಿಕ ಅವನತಿಯ ದಿನಗಳ ಸಂದರ್ಭದಲ್ಲಿಟ್ಟು ಹುಟ್ಟಿಸುವ ವಿಷಾದದಿಂದ ಗಮನ ಸೆಳೆಯುತ್ತದೆ. "ಮೊಹರಂ ಹಬ್ಬದ ಕಡೆಯ ದಿನ", ಊರ ಹಬ್ಬವಾಗಿದ್ದ ಮೊಹರಂ ಆಚರಣೆ ಈ ಜನಗಳ ಕೋಮುವಾದಿ ರಾಜಕಾರಣ ಪರಿಣಾಮವಾಗಿ ಊರಕೆರೆಯನ್ನು ಒಣಗಿಸುವ ದೈವಶಾಪದ ಸಂಕೇತವಾಗುವ ದುರಂತವನ್ನು ಸೂಚ್ಯವಾಗಿ ಹೇಳುತ್ತದೆ. "ಆವರ್ತ", ರಚನಾತ್ಮಕ ಕೆಲಸಗಳು ಎಲ್ಲ ಅಡೆತಡೆಗಳನ್ನೂ ಮೆಟ್ಟಿನಿಲ್ಲಬಲ್ಲವು ಎಂಬುದನ್ನು ಸೂಚಿಸುತ್ತಿರುವಂತೆಯೇ ಇಂದಿನ ರಾಜಕಾರಣ ಅದನ್ನು ವ್ಯಂಗ್ಯಕ್ಕೊಡ್ಡುವ ಪರಿಯನ್ನು ಕುತೂಹಲಕಾರಿ ಕಥನ ಶೈಲಿ ಮತ್ತು ಅನಿರೀಕ್ಷಿತ ಅಂತ್ಯದೊಂದಿಗೆ ನಿರೂಪಿಸುತ್ತದೆ.

ಹಾಗೆ ನೋಡಿದರೆ, ಈ ಸ್ಪರ್ಧೆ ತನ್ನ ವಸ್ತು ನಿರ್ಬಂಧದಿಂದಾಗಿ ಕನ್ನಡದ ಅತ್ಯುತ್ತಮ ಕಥನ ಪ್ರತಿಭೆಗಳನ್ನು ಆಕರ್ಷಿಸದೆ ಬಹುಮಾನಗಳಿಗೆ ಅರ್ಹವಾದ ಕಥೆಗಳು ಬರದಂತಾಗಿದೆ ಎಂದೂ ಹೇಳುವಂತಿಲ್ಲ. ಏಕೆಂದರೆ ಸರಿಸುಮಾರು ಇದೇ ಸಂದರ್ಭದಲ್ಲಿ ನಾಡಿನ ಪ್ರತಿಷ್ಠಿತ ಪತ್ರಿಕೆಗಳ ದೀಪಾವಳಿ ಕಥಾಸ್ಪರ್ಧೆಗಳು ಬಹುಮಾನಿತ ಕಥೆಗಳೂ ಈ ಕಥೆಗಳಿಗಿಂತ ತುಂಬಾ ಉತ್ತಮವಾಗೇನೂ ಇಲ್ಲ! ಹೀಗಾಗಿ, ಅವಕಾಶಗಳು ಹೆಚ್ಚಾಗಿಯೋ, ಪ್ರೋತ್ಸಾಹ ಅತಿಯಾಗಿಯೋ, ಬಹುಮಾನಗಳ ಮೊತ್ತ ವಿಪರೀತವಾದುದರ ಕಾರಣವೋ ಕನ್ನಡ ಕಥೆಗಾರಿಕೆ ಸದ್ಯಕ್ಕಂತೂ ತನ್ನ ಮಹತ್ವಾಕಾಂಕ್ಷೆಯನ್ನು ಕಳೆದುಕೊಂಡಂತಿದೆ. ವೈಯಕ್ತಿಕ ಸ್ತರದಲ್ಲಾಗಲೀ, ಸಾಮುದಾಯಕ ಪ್ರಜ್ಞೆಯ ಸ್ತರದಲ್ಲಾಗಲೀ ತಮ್ಮನ್ನು ಅಲ್ಲಾಡಿಸುವಂತಹ ಕಥೆಗಾಗಿ ಈಗ ಕುತೂಹಲದಿಂದ ಕಾಯುವಂತಾಗಿದೆ.

ಡಿ.ಎಸ್.ನಾಗಭೂಷಣ
ಡಾ.ಎಚ್.ನಾಗವೇಣಿ
ಸವಿತಾ ನಾಗಭೂಷಣ
ಗಾಂಧಿ ಜಯಂತಿ ಕಥಾಸ್ಪರ್ಧೆಯನ್ನು ಆಯೋಜಿಸಿದಾಗ ನಾನು ಬರೆದುಕೊಂಡಿದ್ದ ಕಾರಣ ಮತ್ತು ಹಿನ್ನೆಲೆಗಳ ಬ್ಲಾಗ್ ಲೇಖನ ಇದು.

Dec 3, 2008

ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ವಾರಕ್ಕೆರಡು ದಿನ ಧಾರಾವಾಹಿಯಾಗಿ

ಪ್ರಾಮಾಣಿಕರಾದವರಿಗೂ, ಕ್ರಿಯಾಶೀಲರಾದವರಿಗೂ, ಸ್ವಾರ್ಥವಿಲ್ಲದ ಪರೋಪಕಾರಿ ಗುಣ ಇರುವವರಿಗೂ ಎಲ್ಲಾ ಸಮಯದಲ್ಲೂ ಆಶಾವಾದವನ್ನು ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲು. ಎಷ್ಟೋ ಬಾರಿ ಈ ಒಳ್ಳೆಯವರು ಸಿನಿಕತನಕ್ಕೆ ಒಳಗಾಗಿ ಎಲ್ಲವನ್ನೂ Negative ಆಗಿ ನೋಡಲು ಆರಂಭಿಸಿಬಿಡುತ್ತಾರೆ. ಅವರಿಗೆ ಹೀಗಾಗುವುದು ಅವರ ಯೋಜನೆಗಳ ವೈಫಲ್ಯದಿಂದ ಅನ್ನುವುದಕ್ಕಿಂತ ಅವರ ಯೋಜನೆ ಅಥವ ಯೋಚನೆ ಅಥವ ಕೆಲಸಗಳನ್ನು ಇತರರು ನೋಡುವ ಮತ್ತು ಮಾತನಾಡುವ ರೀತಿಯಿಂದಾಗಿ. ಬಹಳ ಸೂಕ್ಷ್ಮ ಮನಸ್ಸಿನವರಂತೂ ಒಂದೆರಡು ಸಲಕ್ಕೆಯೇ ತಮ್ಮ ಚಿಪ್ಪು ಸೇರಿಕೊಂಡುಬಿಡುತ್ತಾರೆ.

ಆಶಾವಾದವನ್ನೂ, Positive Thinking ಅನ್ನೂ, ರಚನಾತ್ಮಕವಾದ ಆಲೋಚನೆಯನ್ನೂ ಜನರು ಉಳಿಸಿಕೊಳ್ಳುವಂತೆ ಪ್ರೇರೇಪಿಸುವ ಪುಸ್ತಕ Do It Anyway. ಇದನ್ನು ನಾನು ಕಳೆದ ವರ್ಷವೆ ಕನ್ನಡಕ್ಕೆ ಅನುವಾದಿಸಿದ್ದೆ. "ವಿಕ್ರಾಂತ ಕರ್ನಾಟಕ"ದಲ್ಲಿ 14 ವಾರಗಳ ಕಾಲ ಧಾರಾವಾಹಿಯಾಗಿ ಪ್ರಕಟಿಸಿದ್ದೆ. ಈ ವರ್ಷ ಇದನ್ನು ಪುಸ್ತಕ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಇನ್ನೂ ಆಗಿಲ್ಲ. ಬಹುಶಃ ಇನ್ನು ನಾಲ್ಕೈದು ತಿಂಗಳುಗಳಲ್ಲಿ ಮಾಡುತ್ತೇನೆ.

ಹೀಗಿರುವಾಗ, ಇದನ್ನು ಯಾಕೆ ನನ್ನ ವೆಬ್‌‍ಸೈಟ್‌ನಲ್ಲಿ ಪ್ರಕಟಿಸಬಾರದು ಎಂದುಕೊಂಡು ಈಗ ಅಲ್ಲಿ ಪ್ರಕಟಿಸುತ್ತಿದ್ದೇನೆ. ಅದಕ್ಕೆ Wordpress ನ ಬ್ಲಾಗ್ ಟೆಂಪ್ಲೆಟ್ ಬಳಸಿಕೊಂಡಿದ್ದೇನೆ. ಈ ಮೂಲಕ ಅದನ್ನು ಪ್ರಕಟಿಸುವ ಕೆಲಸ ಸುಲಭವಾಗುವುದಷ್ಟೇ ಅಲ್ಲದೆ ಓದುಗರು ಕಾಮೆಂಟ್ ಬಿಡಲು ಮತ್ತು ಬ್ಲಾಗ್‌ಗಳಲ್ಲಿರುವ ಕೆಲವು ಸೌಕರ್ಯಗಳನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಇದು, ಈ ಕನ್ನಡ ಅನುವಾದದ ವಿಳಾಸ:
http://www.ravikrishnareddy.com/anyway-kannada/

ಸಬ್‍ಸ್ಕ್ರೈಬ್/RSS feed ನ URL ಇದು:
http://www.ravikrishnareddy.com/anyway-kannada/?feed=rss2

ಒಟ್ಟು 13 ಭಾಗಗಳ "ಏನೇ ಆಗಲಿ, ಒಳ್ಳೆಯದನ್ನೇ ಮಾಡಿ" ಅನ್ನು ವಾರಕ್ಕೆರಡು ಭಾಗಗಳಂತೆ (ಪ್ರತಿ ಸೋಮವಾರ ಮತ್ತು ಗುರುವಾರ) ಈ ವೆಬ್‍ಸೈಟ್‌ನಲ್ಲಿ ಏರಿಸುತ್ತ ಹೋಗುತ್ತೇನೆ. ಎಲ್ಲವೂ ಆದಬಳಿಕ ಒಟ್ಟು ಸ್ವರೂಪದಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡುತ್ತೇನೆ. ಸಲಹೆ-ಸೂಚನೆ-ಪ್ರತಿಕ್ರಿಯೆಗಳನ್ನು ಓದುಗರು ಕಾಮೆಂಟ್‌ಗಳ ಮೂಲಕ ಕೊಡಬಹುದು. ಹಾಗೆಯೆ, ತಮಗನ್ನಿಸಿದ್ದನ್ನು ಚರ್ಚೆ ಕೂಡ ಮಾಡಬಹುದು. ಎಂದಿನಂತೆ ನಾನು ಯಾವುದೆ ಕಾಮೆಂಟ್‌ಗಳ ತಂಟೆಗೆ ಹೋಗುವುದಿಲ್ಲ. ಯಾವುದನ್ನೂ ತೆಗೆಯುವುದಿಲ್ಲ.

ಇದೇ ಸಮಯದಲ್ಲಿ ವಿಚಾರ ಮಂಟಪ ವೆಬ್‌ಸೈಟ್ ಅನ್ನೂ Drupal ಬಳಸಿ ಅಪ್‌ಡೇಟ್ ಮಾಡಬೇಕು ಎಂದುಕೊಳ್ಳುತ್ತಿದ್ದೇನೆ. ಸುಮಾರು ನಾಲ್ಕೂವರೆ ವರ್ಷದಿಂದ ಅದರ ಸ್ವರೂಪ ಬದಲಾಯಿಸಲು ಹೋಗಿಲ್ಲ. ಆಗೆಲ್ಲ ಬಹಳಷ್ಟು ಕನ್ನಡ ಅಂತರ್ಜಾಲಿಗರು ವಿಂಡೋಸ್ 2000/98 ಬಳಸುತ್ತಿದ್ದುದ್ದರಿಂದ ಆ ವೆಬ್‍ಸೈಟಿನಲ್ಲಿ ಬರಹ ಫಾಂಟುಗಳನ್ನು ಡೈನಾಮಿಕ ಫಾಂಟ್ ಆಗಿ ಬಳಸಿದ್ದೆ. ಆದರೆ ಈಗ ಶೇ. 90 ಕ್ಕೂ ಹೆಚ್ಚಿನ ಇಂಟರ್ನೆಟ್ ಬಳಕೆದಾರರು ಯೂನಿಕೋಡ್ ಮೂಲಸೌಲಭ್ಯ ಇರುವ OS ಗಳನ್ನು ಬಳಸುತ್ತಿರುವುದರಿಂದ ಈಗ ಯೂನಿಕೋಡ್ ಬಳಸುವುದೆ ಸರಿಯಾದ ಕೆಲಸ. ಹಾಗಾಗಿ, ಯಾರಾದರೂ ಈ ಮುಂಚೆ Drupal ಬಳಸಿದ್ದರೆ ಅಥವ ವಿಚಾರ ಮಂಟಪಕ್ಕೆ ಸರಿ ಹೊಂದುವ Theme ಒಂದನ್ನು ಸೂಚಿಸಿದರೆ ಸ್ವಲ್ಪ ಅನುಕೂಲವಾಗುತ್ತದೆ. ತನ್ನದೆ ಮೂಲಗುಣವನ್ನು ಹೊಂದಿರುವ ವೆಬ್‌ಸೈಟ್ ಒಂದಕ್ಕೆ ಎಲ್ಲಾ ರೀತಿಯಿಂದಲೂ ಸರಿಹೊಂದುವ Theme ಅನ್ನು ನೂರಾರು Theme ಗಳ ನಡುವೆ ಆರಿಸಿಕೊಳ್ಳುವುದೇ ಕಷ್ಟದ ಕೆಲಸ. ನಿಮಗೆ ಗೊತ್ತಿದ್ದರೆ/ಗೊತ್ತಾದರೆ ದಯವಿಟ್ಟು ಇ-ಮೇಯ್ಲ್ ಮಾಡಿ.

Dec 2, 2008

ಕುವೆಂಪು ವಿರುದ್ಧ ದೇವುಡು "ಪಿತೂರಿ" ಮತ್ತು ಅಂತರ್ಜಾತಿ ವಿವಾಹ

ಡಾ. ಪ್ರಭುಶಂಕರರ "ಹೀಗಿದ್ದರು ಕುವೆಂಪು" ಲೇಖನದಲ್ಲಿನ ಈ ಕೆಳಗಿನ ಸಂದರ್ಭಕ್ಕೆ ಪೀಠಿಕೆ ಅಥವ ವಿವರಣೆ ಬೇಕಾಗಿಲ್ಲ, ಅಲ್ಲವೆ?

1967 ರ ಅಕ್ಟೋಬರ್. ಆ ವೇಳೆಗೆ ನಾನು ಕುವೆಂಪುರವರ ಮನೆಯವರಲ್ಲಿ ಒಬ್ಬನಾಗಿದ್ದೆ. ಒಂದು ಸಂಜೆ ನಾನು, ಕೆಲವೇ ವಾರಗಳಲ್ಲಿ ನನ್ನ ಪತ್ನಿಯಾಗಲಿದ್ದ ಡಾ. ಶಾಂತಾ ಅವರೊಡನೆ ಕುವೆಂಪು ಅವರ ಮನೆಗೆ ಹೋದೆ. ಶಾಂತಿಯು ಕುವೆಂಪು ಅವರ ಮಿತ್ರರಾಗಿದ್ದ ಶ್ರೀ. ಡಿ.ಆರ್. ಚನ್ನೇಗೌಡರ ಮಗಳು. ಮಗುವಾಗಿದ್ದಾಗಿನಿಂದ ಕುವೆಂಪು ದಂಪತಿ ಆಕೆಯನ್ನು ಬಲ್ಲರು. ನಾನು ಶಾಂತಿ ಕುವೆಂಪು ಅವರ ಕಾಲಿಗೆ ನಮಸ್ಕರಿಸಿ "ನಾವಿಬ್ಬರೂ ಮದುವೆ ಮಾಡಿಕೊಳ್ಳುತ್ತೇವೆ" ಎಂದೆವು. ಇಬ್ಬರದ್ದೂ ಸಾಮಾಜಿಕ ದೃಷ್ಟಿಯಿಂದ ಬೇರೆ ಬೇರೆ ಜಾತಿ. ಕುವೆಂಪು ಒಳಮನೆ ಕಡೆ ತಿರುಗಿ, ಅತ್ಯಂತ ಉತ್ತೇಜಿತರಾಗಿ ತಮ್ಮ ಶ್ರೀಮತಿಯವರನ್ನು ಕರದರು. ಶ್ರೀಮತಿ ಹೇಮಾವತಿ ತಾಯಿಯವರು, ಏನಾಯಿತೋ ಏನೋ ಎಂದು ಓಡುತ್ತಾ ಬಂದರು. ಆಗ ಕುವೆಂಪು ಉತ್ಸಾಹಿತರಾಗಿ ಎತ್ತರದ ದನಿಯಲ್ಲಿ ಹೇಳಿದರು: "ಪ್ರಭುಶಂಕರ-ಶಾಂತಿ ಮದುವೆಯಾಗುತ್ತಾರಂತೆ, ಪ್ರಭುಶಂಕರ-ಶಾಂತಿ ಮದುವೆಯಾಗುತ್ತಾರಂತೆ! ಜೈ ಗುರುದೇವ-ನಮಗೆ ತುಂಬ ಸಂತೋಷವಾಗಿದೆ." ಹೀಗೆ ಹೇಳುತ್ತಾ ಚಪ್ಪಾಳೆ ತಟ್ಟುತ್ತಾ ತಟ್ಟುತ್ತಾ ಬಹಳ ಹೊತ್ತು ಕಳೆದರು. ಹೇಮಾವತಿ ತಾಯಿಯವರು ತಮ್ಮದೇ ರೀತಿಯಲ್ಲಿ-ಮುಗುಳು ನಗೆ ನಕ್ಕು-ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಲೇ ಹೋದರು. ನಾವಿಬ್ಬರೂ ಅವರಿಗೆ ತುಂಬ ಗೊತ್ತಿದ್ದವರು, ತುಂಬ ಬೇಕಾದವರು ಎಂಬುದು ಮಾತ್ರವೇ ಅವರ ಸಂತೋಷಕ್ಕೆ ಕಾರಣವಾಗಿರಲಿಲ್ಲ. ನಾವಿಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರು ಎಂಬುದೂ ಅದಕ್ಕೆ ಕಾರಣವಾಗಿತ್ತು. ಕುವೆಂಪು ಜಾತಿ ಪದ್ಧತಿಯ ವಿರುದ್ಧ ಕೆಂಡ ಕಾರುತ್ತಿದ್ದರು. ನಾವು ಅದನ್ನು ಆಚರಿಸಿ ತೋರಿಸಿದೆವು. ("ನಮನ" - ಪುಟ 49-50)
ಈ ಕೆಳಗಿನ ಸಂದರ್ಭವಂತೂ (ದೇವುಡು ಮತ್ತು ಕುವೆಂಪು) ಕರ್ನಾಟಕದ ಕಳೆದ ಶತಮಾನದ ಪ್ರಮುಖ ಸಾಂಸ್ಕೃತಿಕ ಘಟನೆಗಳಲ್ಲಿ ಒಂದು. ನಾಡಿನ ಎಚ್ಚರವನ್ನು ಕಾಪಾಡಿಕೊಂಡ ಸಂದರ್ಭ. ಈ ವಿಷಯದಲ್ಲಿ ಟಿ.ಎಸ್. ವೆಂಕಣ್ಣಯ್ಯನವರ ಹಿರಿತನ ಮತ್ತು ಅವರು ಬಳಸಿರುವ ಭಾಷೆ ಮತ್ತು ಅದರಲ್ಲಿ ಧ್ವನಿಸಿರುವ ಕುವೆಂಪುರವರ ಸ್ಪಷ್ಟತೆ ಗಮನಿಸಿ. (ಇಲ್ಲಿ ದೇವುಡುರವರ ಬಗ್ಗೆ ಅಥವ ಈಗಲೂ ಮುಂದುವರೆದಿರುವ ಅಂತಹ ಮನಸ್ಥಿತಿಯ ಬಗ್ಗೆ ನನ್ನ ಕಟು ಅಭಿಪ್ರಾಯ ಬರೆಯಬೇಕೆಂದು ಅನ್ನಿಸುತ್ತದೆ. ಆದರೆ, ಈ ಉಲ್ಲೇಖ-ಸರಣಿಯ ಒಟ್ಟಂದಕ್ಕೆ ಅದು ಅಪಚಾರ ಮಾಡುತ್ತದೆ ಎಂದು ಸುಮ್ಮನಾಗುತ್ತೇನೆ. ಈ ಅಭಿಪ್ರಾಯವೂ ಬೇಕಾಗಿರಲಿಲ್ಲವೇನೊ? ಆದರೂ ಕೆಲವು ವಿಚಾರ ಮತ್ತು ವ್ಯಕ್ತಿಗಳೊಂದಿಗಿನ ನನ್ನ Displeasure ವ್ಯಕ್ತಪಡಿಸಲೇಬೇಕೆಂಬ ಉದ್ದೇಶಕ್ಕೆ ಬರೆದಿದ್ದೇನೆ.)
... ಕುವೆಂಪು ಒಂದು ದಿನ ನನ್ನನ್ನು ಕೇಳಿದರು: "ಕನ್ನಡ ಅಧ್ಯಾಪಕರ ಹುದ್ದೆಯೊಂದು ಖಾಲಿ ಇದೆ, ಅರ್ಹತೆ ಉಳ್ಳವರು ಅರ್ಜಿ ಹಾಕಬಹುದು ಎಂದು ಜಾಹೀರಾತು ಪ್ರಕಟವಾಗಿದೆ, ನೋಡಿದ್ದೀರಾ?" ನಾನು ನೋಡಿರಲಿಲ್ಲ. ಆದುದರಿಂದ ಕೇಳಿದೆ: "ಇಲ್ಲ. ಅದು ಎಲ್ಲಿ ಪ್ರಕಟವಾಗಿದೆ?" "ಸರ್ಕಾರದ ಗೆಜೆಟ್‍ನಲ್ಲಿ." ಆ ಕಾಲದಲ್ಲಿ ಇಂತಹ ಜಾಹೀರಾತುಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರಲಿಲ್ಲ. ಸರ್ಕಾರದ ಗೆಜೆಟ್‍ನಲ್ಲಿ ಮಾತ್ರ ಪ್ರಕಟವಾಗುತ್ತಿದ್ದವು. ನನಗೆ ಆಗ ಗೆಜೆಟ್ ಎಂಬುದೊಂದು ಇದೆ ಎಂಬುದೇ ಗೊತ್ತಿರಲಿಲ್ಲವಾಗಿ ನಾನು ಅದನ್ನು ನೋಡುವ ಸಂಭವವೇ ಇರಲಿಲ್ಲ. ಕುವೆಂಪು ಇನ್ನೂ ಏನೋ ಹೇಳಲಿದ್ದಾರೆ ಎಂದು ನಾನು ಸುಮ್ಮನೆ ನಿಂತೇ ಇದ್ದೆ. ಅವರು ಮಾತು ಮುಂದುವರೆಸಿದರು: "ನೋಡಿ, ನೀವು ಆ ಹುದ್ದೆಗೆ ಅರ್ಜಿ ಹಾಕಬೇಡಿ." ನನಗೆ ಆಶ್ಚರ್ಯವಾಯಿತು. ನಾನು ಏಕೆ ಅರ್ಜಿ ಹಾಕಕೂಡದು ಎಂದು ತಿಳಿಯಲಿಲ್ಲ. ಅವರನ್ನೇ ಕೇಳಿದೆ. ಅವರು ವಿವರಿಸಿದರು:

"ನೋಡಿ, ಈಗ ಸರ್ಕಾರಿ ಹುದ್ದೆಗಳಲ್ಲಿ (ಆಗ ಮೈಸೂರು ವಿಶ್ವವಿದ್ಯಾನಿಲಯವು ಸರ್ಕಾರದ ಒಂದು ಇಲಾಖೆಯಾಗಿತ್ತು) ಎ ವೇಕೆನ್ಸಿ, ಬಿ ವೇಕೆನ್ಸಿ ಎಂದು ಎರಡು ಭಾಗಗಳಿವೆ. ಎ ವೇಕೆನ್ಸಿಗೆ ಯಾರು ಬೇಕಾದರೂ ಅರ್ಜಿ ಹಾಕಬಹುದು. ಬಿ ವೇಕೆನ್ಸಿಗೆ ಬ್ರಾಹ್ಮಣೇತರರು ಮಾತ್ರ ಅರ್ಜಿ ಹಾಕಬಹುದು. ಒಂದು ಎ ವೇಕೆನ್ಸಿ ಭರ್ತಿಯಾದರೆ ಮುಂದೆ ಮೂರು ಹುದ್ದೆಗಳನ್ನು ಬಿ ವೇಕೆನ್ಸಿ ಎಂದು ಜಾಹೀರಾತು ಮಾಡುತ್ತಾರೆ. ಎಂದರೆ ಒಬ್ಬರು ಬ್ರಾಹ್ಮಣರಿಗೆ ಕೆಲಸ ಸಿಕ್ಕಿದರೆ ಮುಂದಿನ ಮೂರು ಬ್ರಾಹ್ಮಣೇತರರಿಗೆ ಮೀಸಲಾಗಿರುತ್ತದೆ. ಎ ವೇಕೆನ್ಸಿಗೂ ಬ್ರಾಹ್ಮಣೇತರರು ಅರ್ಜಿ ಹಾಕಬಹುದು. ಅಂಥ ಸಂದರ್ಭದಲ್ಲಿ ಬ್ರಾಹ್ಮಣ ಅಭ್ಯರ್ಥಿಗಿಂತ ಬ್ರಾಹ್ಮಣೇತರ ಅಭ್ಯರ್ಥಿ ಹೆಚ್ಚು ಪ್ರತಿಭಾಶಾಲಿಯಾಗಿದ್ದರೆ ಅವನಿಗೇ ಆ ಹುದ್ದೆ ಸಿಕ್ಕುತ್ತದೆ. ಬ್ರಾಹ್ಮಣ ಅಭ್ಯರ್ಥಿಯು ಮತ್ತೆ ಅನೇಕ ವರ್ಷಗಳ ಕಾಲ ಕಾಯಬೇಕಾಗುತ್ತದೆ." ಈ ಎ ವೇಕೆನ್ಸಿ, ಬಿ ವೇಕೆನ್ಸಿ, ಬ್ರಾಹ್ಮಣ, ಬ್ರಾಹ್ಮಣೇತರ ಯಾವ ಜಟಿಲತೆಗಳೂ ನನ್ನ ತಲೆಯನ್ನು ಪ್ರವೇಶಿಸಿರಲಿಲ್ಲ. ಇಷ್ಟಕ್ಕೂ ನನ್ನ ಗುರುಗಳು ಇದನ್ನೆಲ್ಲ ನನಗೆ ಏತಕ್ಕೆ ಹೇಳುತ್ತಿದ್ದಾರೆ ಎಂಬುದೇ ನನಗೆ ಹೊಳೆಯಲಿಲ್ಲ. ನನ್ನ ಮುಖದಲ್ಲಿ ಆ ಗೊಂದಲ ಎದ್ದು ಕಾಣುತ್ತಿತ್ತೆಂದು ತೋರುತ್ತದೆ. ಆದುದರಿಂದ ಅವರು ಮತ್ತೂ ಮುಂದುವರಿದು ಹೇಳಿದರು:

"ಶ್ರೀ ದೇ.ನ. ರಾಮು (ದೇವುಡು ನರಸಿಂಹ ಶಾಸ್ತ್ರಿಗಳ ಮಗ) ನಿಮ್ಮ ಮೇಷ್ಟ್ರು. ಅವರು 5-6 ವರ್ಷಗಳಿಂದಲೂ ಲೋಕಲ್ ಕ್ಯಾಂಡಿಡೇಟ್ (ಹಂಗಾಮಿ ಅಧ್ಯಾಪಕರು) ಆಗಿ ಕೆಲಸ ಮಾಡುತ್ತಿದ್ದಾರೆ. ಈಗ ಜಾಹೀರಾತಾಗಿರುವುದು ’ಎ’ ವೇಕೆನ್ಸಿ. ನೀವು ಅರ್ಜಿ ಹಾಕಿದರೆ, ಪ್ರತಿಭೆಯನ್ನು ಗಮನಿಸಿ ನಿಮಗೇ ಈ ಕೆಲಸ ಸಿಕ್ಕಿಬಿಡುತ್ತದೆ. ಶ್ರೀ ರಾಮು ಅವರಿಗೆ ತಪ್ಪಿಹೋಗುತ್ತದೆ. ಅವರು ಇನ್ನು ಎಷ್ಟು ವರ್ಷಗಳು ಕಾಯಂ ಹುದ್ದೆಗಾಗಿ ಕಾಯಬೇಕೋ ಗೊತ್ತಿಲ್ಲ. ಆದುದರಿಂದ ನೀವು ಅರ್ಜಿ ಹಾಕಬೇಡಿ. ಮುಂದೆ ನಿಮಗೆ ಬೇಕಾದಷ್ಟು ಅವಕಾಶಗಳು ಸಿಕ್ಕುತ್ತವೆ."

ವಿಷಯ ಅರ್ಥವಾದ ಕೂಡಲೇ ನನ್ನ ಹೃದಯ ತುಂಬಿ ಬಂತು. "ಇಲ್ಲ, ನಾನು ಅರ್ಜಿ ಹಾಕುವುದಿಲ್ಲ" ಎಂದು ಹೇಳಿ ಅವರ ಕೊಠಡಿಯಿಂದ ಹೊರಬಂದೆ. ಆ ವೇಳೆಗಾಗಲೇ ಅವರು ನನ್ನ ಆರಾಧ್ಯ ಮೂರ್ತಿಯಾಗಿದ್ದರು. ಈಗಂತೂ ಅವರ ಜಾತ್ಯತೀತ ಮನೋಭಾವವನ್ನೂ, ನ್ಯಾಯಪಕ್ಷಪಾತ ಬುದ್ಧಿಯನ್ನೂ ಕಂಡು ಅವರಲ್ಲಿ ನನಗಿದ್ದ ಗೌರವಕ್ಕೆ ಆಕಾಶವೂ ಕೂಡ ಮೇರೆ ಅಲ್ಲ ಎನ್ನಿಸಿತು. ಅದಕ್ಕೆ ಪೂರಕವಾದ ಮತ್ತೊಂದು ಸಂಗತಿಯನ್ನು ಹೇಳಿದರೆ ಈ ಸಂಗತಿ ಕೇವಲ ನನಗೆ ಸೀಮಿತವಾದುದಲ್ಲ ಎಂದು ತಿಳಿಯುವುದು ಮಾತ್ರವಲ್ಲದೆ ಕುವೆಂಪು ಏಕೆ ಸರ್ವತ್ರ ಪೂಜಿತರು ಎಂಬುದು ಅರ್ಥವಾಗುತ್ತದೆ.

ಕುವೆಂಪು ಅವರು ಒಮ್ಮೆ ಶ್ರೀರಂಗಪಟ್ಟಣದಲ್ಲಿ ಯುವಜನ ಸಮ್ಮೇಳನ ಸಂದರ್ಭದಲ್ಲಿ "ಯುವಕರು ನಿರಂಕುಶ ಮತಿಗಳಾಗಬೇಕು" ಎಂಬ ವಿಷಯವಾಗಿ ಭಾಷಣ ಮಾಡಿದರು. ಅಂದಿನ ಸಭೆಗೆ ಅಧ್ಯಕ್ಷರು ಪುಟ್ಟಪ್ಪನವರನ್ನು ಅತ್ಯಂತ ಆತ್ಮೀಯವಾಗಿ ನಡೆಸಿಕೊಳ್ಳುತ್ತಲೇ ಬಂದಿದ್ದ ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು. ಬಾಲ್ಯದಿಂದಲೇ ವೈಚಾರಿಕತೆಯ ಆರಾಧಕರಾಗಿದ್ದ ಕುವೆಂಪು ಅಂದಿನ ಉಪನ್ಯಾಸದಲ್ಲಿ, ಸಹಜವಾಗಿಯೇ, ಸಮಾಜದಲ್ಲಿ ಪ್ರಚುರವಾಗಿರುವ ಮೂಢ ನಂಬಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿದ್ದರು. ಮುಂದಾದುದನ್ನು ಕುವೆಂಪು ಅವರ ಮಾತುಗಳಲ್ಲಿಯೇ ಕೇಳಬಹುದು:

"ಪತ್ರಿಕೆಗಳಲ್ಲಿ ಕ್ರೋಧಯುಕ್ತವಾದ ಅನೇಕ ಟೀಕೆಗಳು ಬಂದು ಕೋಲಾಹಲವೆದ್ದಿತು. ದೂರು ವಿಶ್ವವಿದ್ಯಾಲಯಕ್ಕೂ ಹೋಯಿತು. ವಿಶ್ವವಿದ್ಯಾನಿಲಯ ತನಿಖೆ ನಡೆಸಲು ಇಲಾಖೆಯ ಮುಖ್ಯಸ್ಥರೂ ಪ್ರೊಫೆಸರರೂ ಆಗಿದ್ದ ವೆಂಕಣ್ಣಯ್ಯನವರನ್ನು ನೇಮಿಸಿತು. ಅವರು ಆ ಭಾಷಣದ ಪ್ರತಿ ತರಿಸಿಕೊಂಡು ಓದಿ ವಿಶ್ವವಿದ್ಯಾನಿಲಯಕ್ಕೆ ಬರೆದರಂತೆ: "ನನ್ನ ಮಗನಿಗೆ ಬುದ್ಧಿ ಹೇಳಬೇಕಾದರೆ ಇದಕ್ಕಿಂತಲೂ ಉತ್ತಮವಾಗಿ ಮತ್ತು ಸಮರ್ಥವಾಗಿ ನಾನು ಏನನ್ನೂ ಹೇಳಲಾರೆ."

ಶ್ರೀ ದೇವುಡು ನರಸಿಂಹ ಶಾಸ್ತ್ರಿಗಳ ಮಗ ದೇ.ನ. ರಾಮು ಅವರಿಗೆ, ನಾನು ಅರ್ಜಿ ಹಾಕುವುದನ್ನು ತಪ್ಪಿಸಿ ಹುದ್ದೆಯನ್ನು ಕಾಯಂ ಮಾಡಿಸಲು ಹೊರಟಿದ್ದ ಹೊತ್ತಿಗೆ ಕುವೆಂಪು ಅವರಿಗೆ, ಶ್ರೀರಂಗಪಟ್ಟಣದ ತಮ್ಮ ಭಾಷಣದ ವಿರುದ್ಧ ಕೋಲಾಹಲ ಎಬ್ಬಿಸಿ ಪತ್ರಿಕೆಗಳಿಗೂ ವಿಶ್ವವಿದ್ಯಾನಿಲಯಕ್ಕೂ ಬರೆದವರು ಸ್ವಯಂ ಶ್ರೀ ದೇವುಡು ನರಸಿಂಹ ಶಾಸ್ತ್ರಿಗಳು ಎಂಬುದು ಗೊತ್ತಿತ್ತು! ಹೀಗಾಗಿಯೂ ನ್ಯಾಯವಾದುದನ್ನು ಮಾಡಲು ಅವರು ಹಿಂಜರಿಯಲಿಲ್ಲ. ಶಾಸ್ತ್ರಿಗಳ ವಿಷಯದಲ್ಲಾಗಲೀ, ಅವರ ಮಗನ ವಿಷಯದಲ್ಲಾಗಲಿ ಅವರಿಗೆ ಕಿಂಚಿತ್ತೂ ಪೂರ್ವಗ್ರಹ ಉಳಿದಿರಲಿಲ್ಲ!

(ಕೃಪೆ: ಡಾ. ಪ್ರಭುಶಂಕರ, "ನಮನ" - ಪುಟ 43-45)ಪ್ರಶ್ನೆ: ಇದೆಲ್ಲ (ಈ ಬರಹ) ಈಗೇಕೆ?
ಉತ್ತರ: ತಲ್ಲಣದ ಸಮಯದಲ್ಲಿ ಸಜ್ಜನಿಕೆ ಮತ್ತು ಪ್ರೀತಿಯನ್ನು ಹುಡುಕುತ್ತಾ...

ಸರಣಿಯ ಎರಡನೆಯ ಲೇಖನ: ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...

ಮೂರನೆಯ ಲೇಖನ: ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು

Dec 1, 2008

ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು

ಡಾ. ಪ್ರಭುಶಂಕರ ಒಳ್ಳೆಯ ಹಾಸ್ಯಪ್ರಜ್ಞೆಯ ಲೇಖಕರು. ಇವರ ಹಾಸ್ಯಪ್ರೀತಿ ಎಷ್ಟಿದೆಯೆಂದರೆ, "ಪ್ರಭು ಜೋಕ್ಸ್" ಎಂಬ ಸಣ್ಣ ಜೋಕು ಪುಸ್ತಕವನ್ನೂ ಪ್ರಕಟಿಸಿದ್ದಾರೆ. ಇವರ ಹಿಂದಿನ ತಲೆಮಾರಿನ ಲೇಖಕರಲ್ಲಿ ನಾ. ಕಸ್ತೂರಿ ಅಪಾರ ಹಾಸ್ಯಪ್ರಜ್ಞೆಯ, ಅನಾರ್ಥಕೋಶದ ಲೇಖಕರು. ಅವರ ಬಗ್ಗೆ ಪ್ರಭುಶಂಕರರು "ನಾ. ಕಸ್ತೂರಿಯವರು" ಲೇಖನದಲ್ಲಿ ಹೀಗೆ ಹೇಳುತ್ತಾರೆ:

"(ನಾ. ಕಸ್ತೂರಿ) ಅವರ ಸಹಸ್ರಾರು ಶಿಷ್ಯರಲ್ಲಿ ನಾನು ಒಬ್ಬ; ಅವರ ಇತಿಹಾಸ ಬೋಧನೆಯ ಸವಿಯನ್ನು ಎರಡು ವರ್ಷಗಳ ಕಾಲ ಉಂಡವನು; ಅವರಿಂದ ಹಾಸ್ಯದ ದೀಕ್ಷೆ ಪಡೆದವನು; ನಕ್ಕು ನಲಿಸುವುದು ಸಾರ್ಥಕ ಕಾಯಕ ಎಂದು ನಂಬಿ ಅದರಂತೆ ಬಾಳುತ್ತಿರುವವನು."
("ನಮನ"- ಪುಟ 16)
ಈ ಕೆಳಗಿನ ಸಂದರ್ಭ ನಮ್ಮನ್ನು ನಗಿಸಿದರೂ, ಗಾಂಧಿಯನ್ನು ಭೇಟಿ ಮಾಡಿಸಲು ತನ್ನ ಶಿಷ್ಯರನ್ನು ನೂರಾರು ಮೈಲಿ ದೂರ ಕರೆದುಕೊಂಡು ಹೋಗಿದ್ದ ಆಗಿನ ಕಾಲದ ಗುರುಗಳ ಬದ್ಧತೆಯನ್ನೂ ತೋರಿಸುತ್ತದೆ.
"1946 ನೆಯ ಇಸವಿಯ ಮೊದಲಲ್ಲಿ ಮಹಾತ್ಮಾ ಗಾಂಧಿಯವರು ಮದರಾಸಿಗೆ ಬಂದಿದ್ದರು. ನಾನು ಆಗ ಮೊದಲ ವರ್ಷದ ಇಂಟರ್ಮೀಡಿಯೆಟ್ ವಿದ್ಯಾರ್ಥಿ. ನಮ್ಮ ಅಚ್ಚು ಮೆಚ್ಚಿನ ಮೇಷ್ಟ್ರಾದ ನಾ. ಕಸ್ತೂರಿಯವರು ನಮ್ಮಲ್ಲಿ ಹದಿನೈದು ಇಪ್ಪತ್ತು ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕೆ ಎಂದು ಮದರಾಸಿಗೆ ಕರೆದುಕೊಂಡು ಹೋದರು. ಗಾಂಧೀಜಿಯವರ ದರ್ಶನ, ಭಾಷಣಗಳ ಲಾಭ ನಮಗೆ ದೊರೆಯಲಿ ಎಂಬುದೂ ಅವರ ಉದ್ದೇಶವಾಗಿತ್ತು. ತ್ಯಾಗರಾಜನಗರದ ದೊಡ್ಡ ಬಯಲಿನಲ್ಲಿ ಮಹಾತ್ಮರ ಉಪನ್ಯಾಸ ಸಂಜೆ ಐದಕ್ಕೆ. ಕಸ್ತೂರಿಯವರು ಮಧ್ಯಾಹ್ನ ಎರಡು ಘಂಟೆಗೇ ನಮ್ಮನ್ನೆಲ್ಲ ವೇದಿಕೆಗೆ ತೀರ ಸಮೀಪದಲ್ಲಿ ಕೂರಿಸಿ ಬಿಟ್ಟರು. ಸುಡುಬಿಸಿಲು, ದಾಹ. ಮೇಷ್ಟ್ರಿಗೆ ವಿದ್ಯಾರ್ಥಿಗಳ ವಿಷಯದಲ್ಲಿ ಕನಿಕರ. ನೀರು ಸಿಕ್ಕುತ್ತಿಲ್ಲ. ಅಷ್ಟರಲ್ಲಿ ಐಸ್ ಕ್ರೀಂ ಮಾರುವವನು ಬಂದ. ನಮಗೆಲ್ಲ ಐಸ್ ಕ್ರೀಂ ಕೊಡಿಸಿ ತಾವೂ ಒಂದನ್ನು ತಿನ್ನುತ್ತಾ ಕುಳಿತರು. ನಾನು ತಿಂದು ಮುಗಿಸಿ ಕೈ ಒರೆಸುವುದು ಯಾವುದಕ್ಕೆ ಎಂದು ಪೇಚಾಡುತ್ತಿದ್ದೆ. ಮೇಷ್ಟ್ರು ನನ್ನ ಹಿಂದೆಯೇ ಕುಳಿತಿದ್ದವರು "ಯಾಕೋ ಪೇಚಾಡ್ತೀಯ, ನಿನ್ನ ಮುಂದೆ ಕುಳಿತಿದ್ದಾನಲ್ಲ ಅವನ ಷರ್ಟಿಗೆ ಒರಸು" ಎಂದರು. ನನಗೆ ಸಂಕೋಚವಾಯಿತು. ಮುಂದೆ ಕುಳಿತಿದ್ದವನು ನನ್ನ ಸಹಪಾಠಿ. ಮದರಾಸಿನ ವಿಷಯ ತಿಳಿಯದೆ ಮಹಾತ್ಮರ ದರ್ಶನಕ್ಕೆ ಎಂದು ಸಿಲ್ಕ್ ಷರ್ಟ್ ಧರಿಸಿ ಬಂದಿದ್ದ. ನಾನು ಹಿಂದೆ ಮುಂದೆ ನೋಡುವುದನ್ನು ಗಮನಿಸಿ ಮೇಷ್ಟ್ರು "ಒರಸೋ ಪರವಾಗಿಲ್ಲ. ಒರಸಪ್ಪ. ಈಗ ನೋಡು ನಾನು ನಿನ್ನ ಷರ್ಟಿಗೆ ಒರಸಿಲ್ಲವೆ?" ಎಂದರು. ಇದು ಕಸ್ತೂರಿಯವರ ಆಶು ಹಾಸ್ಯದ ರೀತಿ. ಆ ಸಂದರ್ಭದಲ್ಲಿ ಸೃಷ್ಟಿಯಾಗಿ, ತಕ್ಷಣ ಹಾಸ್ಯದ ಹೊಳೆ ಹರಿಸಿ, ಕೇಳುಗರು ಅದರಲ್ಲಿ ಮಿಂದು, ತಮ್ಮ ಸ್ವಂತದ ದುಃಖ ಮ್ಲಾನತೆಗಳಿದ್ದರೆ ಅವನ್ನು ತೊಳೆದುಕೊಂಡು ಮತ್ತೆ ಹೊಸಬರಾಗಿ ಮೈ ಒರಸಿಕೊಳ್ಳುತ್ತಾ ನಿಂತಿರುವುದನ್ನು ನೋಡುವುದು ಎಂದರೆ ಕಸ್ತೂರಿಯವರಿಗೆ ಖುಷಿಯೋ ಖುಷಿ." ("ನಮನ"- ಪುಟ 16-17)
ಇನ್ನೊಂದು ಘಟನೆ:
"ನನಗಿರಲಿ, ನನ್ನ ಗುರುಗಳಾಗಿದ್ದ ಶ್ರೀ. ಜಿ.ಪಿ. ರಾಜರತ್ನಂ ಅವರನ್ನೂ ಶ್ರೀ ಕಸ್ತೂರಿ ಸತಾಯಿಸದೆ ಬಿಡಲಿಲ್ಲ. "ಲೋ, ರಾಜರತ್ನ, ಪದ್ಯ ಬರೆದು ನನಗೆ ಅವಮಾನ ಮಾಡಿದ್ದೀಯಲ್ಲೋ" ಎಂದು ತರಾಟೆಗೆ ತೆಗೆದುಕೊಂಡರು. ರಾಜರತ್ನಂ ಕಕ್ಕಾಬಿಕ್ಕಿಯಾದರು. "ಇಲ್ಲವಲ್ಲ ಸಾರ್" ಎಂದರು. "ಯಾಕೋ ಇಲ್ಲ, ಬರೆದಿದ್ದೀಯ:
ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ.
ಅಂತ ಬರೆದಿಲ್ವೇನಯ್ಯ. ಅಲ್ಲದೆ ಕೊನೇಲಿ 'ಜಂಬದ ಕೋಳಿಗೆ ಗೋಳಾಯ್ತು' ಅಂತ ಬೇರೆ ಹೇಳಿದೀಯ. ಹೇಳು, ನಾನು ಜಂಬದ ಕೋಳಿನೇನೋ?"" ("ನಮನ"- ಪುಟ 18)
ಈ ಕೆಳಗಿನ ಘಟನೆಯಂತೂ ಆಗಿನ ಸಜ್ಜನರ ನಿರ್ಮಲತೆಯನ್ನೂ, ಸರಳತೆಯನ್ನೂ, ತಮ್ಮ ಸಮಕಾಲೀನರ ಪ್ರತಿಭೆ ಮತ್ತು ಯಶಸ್ಸನ್ನು ಸಂಭ್ರಮಿಸುವುದನ್ನೂ ತೋರಿಸುತ್ತದೆ:
"... ಕಸ್ತೂರಿಯವರು ಒಂದು ದಿನ ಹೇಳಿದರು: "ಪ್ರಭು, ನಾನು ಅಮರನಾಗಿಬಿಟ್ಟೆ ಕಣಯ್ಯ." ಅದಕ್ಕೆ ನಾನು ಹೇಳಿದೆ: "ಹೌದು, ಎಷ್ಟೆಲ್ಲ ಒಳ್ಳೆಯ ಪುಸ್ತಕಗಳನ್ನು ಬರೆದಿದ್ದೀರಿ. ಕನ್ನಡ ಸಾಹಿತ್ಯದಲ್ಲಿ ನಿಮ್ಮದು ಅಮರವಾದ ಸ್ಥಾನವೇ." ಅವರು ನಕ್ಕರು: "ಆ ಭ್ರಾಂತಿ ನನಗಿಲ್ಲ ಕಣಯ್ಯ. ಪುಟ್ಟಪ್ಪ ತನ್ನ "ಕೃತ್ತಿಕೆ" ಕವನ ಸಂಕಲನದಲ್ಲಿ 'ಕವಿಯ ತೃಪ್ತಿ' ಅಂತ ಒಂದು ಸಾನೆಟ್ ಬರೆದಿದ್ದಾನೆ. ಅದರಲ್ಲಿ ಮೊದಲ ಪಂಕ್ತಿಯಲ್ಲೇ ನನ್ನ ಹೆಸರು ಸೇರಿಸಿದ್ದಾನೆ. ಆ ಪದ್ಯ ಓದಿದ್ದೀಯಾ?" "ಓದಿದ್ದೇನೆ. ಬಾಯಲ್ಲೂ ಬರುತ್ತೆ" ಎಂದೆ. "ಹಾಗಾದರೆ ಹೇಳು" ಎಂದರು. ಹೇಳಿದೆ:
ಬಳಿಯಿರುವ ವೆಂಕಯ್ಯ, ಕಂಠಯ್ಯ, ಕಸ್ತೂರಿ
ಶ್ರೀನಿವಾಸರು ಮೆಚ್ಚಿದರೆ ಸಾಕೆನಗೆ ತೃಪ್ತಿ;
ನನ್ನ ಕನ್ನಡ ಕವನಗಳ ಯಶಸ್ಸಿನ ವ್ಯಾಪ್ತಿ.
ಲಂಡನ್ನಿನೊಳಗೂದ ಬೇಕಿಲ್ಲ ತುತ್ತೂರಿ!
ಕಸ್ತೂರಿ ಮುಂದುವರಿದು ಹೇಳಿದರು:

"ನೋಡಿದೆಯೇನಯ್ಯ! ಪ್ರಭು, ನಾನು ಯಾರು ಎಂದು ಈಗ ಕೆಲವರಿಗಾದರೂ ಗೊತ್ತು. ಮುಂದೆ, ಹತ್ತಾರು ವರ್ಷಗಳು ಕಳೆದ ಮೇಲೆ ಯಾರಿಗೂ ಗೊತ್ತಿರುವುದಿಲ್ಲ. ಕುವೆಂಪು ಜಗದ್ವಿಖ್ಯಾತರಾಗಿರುತ್ತಾರೆ. ಅವರ ಈ ಕವನವನ್ನು ಓದಿದವರು ನನ್ನ ಹೆಸರಿನ ಕೆಳಗೆ ಗೆರೆ ಎಳೆದು ಪಕ್ಕದ ಮಾರ್ಜಿನ್‌ನಲ್ಲಿ ಯಾರಿವನು ಎಂದು ಪ್ರಶ್ನಾರ್ಥಕ ಚಿಹ್ನೆ ಹಾಕುತ್ತಾರೆ. ಅಷ್ಟು ಸಾಕು ಕಣೋ. ಅದಕ್ಕಿಂತ ಅಮರತ್ವ ಇನ್ನು ಯಾವುದಿದೆಯೋ?" ("ನಮನ"- ಪುಟ 20)


ಪ್ರಶ್ನೆ: ಇದೆಲ್ಲ (ಈ ಬರಹ) ಈಗೇಕೆ?
ಉತ್ತರ: ತಲ್ಲಣದ ಸಮಯದಲ್ಲಿ ಸಜ್ಜನಿಕೆ ಮತ್ತು ಪ್ರೀತಿಯನ್ನು ಹುಡುಕುತ್ತಾ...

ಈ ಸರಣಿಯ ಎರಡನೆಯ ಲೇಖನ: ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...

ಮೂರನೆಯ ಲೇಖನ: ಈಗ ನೀವು ಓದಿದ್ದು (?).

ನಾಲ್ಕನೆಯ ಲೇಖನ: ಕುವೆಂಪು ವಿರುದ್ಧ ದೇವುಡು ಪಿತೂರಿ ಮತ್ತು ಅಂತರ್ಜಾತಿ ವಿವಾಹ

Nov 30, 2008

ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...

ಕುವೆಂಪು ಮೂಢನಂಬಿಕೆಗಳ, ಜಾತೀಯತೆಯ, ಪುರೋಹಿತಶಾಯಿಯ ಕಡುವಿರೋಧಿಯಾಗಿದ್ದವರು; ಕರ್ನಾಟಕ ಕಂಡ ಮಹಾನ್ ದಾರ್ಶನಿಕರು. ನಮ್ಮಲ್ಲಿ ಯಾರಾದರೂ ಇಂತಹ ವಿಷಯಗಳ ಬಗೆಗೆ ತಮ್ಮ ವಿರೋಧ ವ್ಯಕ್ತಪಡಿಸಿದರೆ ತಕ್ಷಣವೆ ಆತ ಹಿಂದೂವಿರೋಧಿ ಅಥವ ಬ್ರಾಹ್ಮಣವಿರೋಧಿ ಎಂದು ಬ್ರ್ಯಾಂಡ್ ಮಾಡುವ ದುಷ್ಟಪರಂಪರೆ ಒಂದಿದೆ. ಕುವೆಂಪುರವರ ಬಗ್ಗೆಯೂ ಬ್ರಾಹ್ಮಣವಿರೋಧಿ ಎಂಬ ಆರೋಪವಿತ್ತು. ಈ ವಿಚಾರದಲ್ಲಿ ಕುವೆಂಪುರವರ ಅಭಿಪ್ರಾಯ ಏನಿತ್ತು ಎನ್ನುವುದಕ್ಕೆ ನೀವು ವಿಚಾರಮಂಟಪ.ನೆಟ್‌ ನಲ್ಲಿರುವ ಅವರ "ವಿಚಾರ ಕ್ರಾಂತಿಗೆ ಆಹ್ವಾನ"ದ ಲೇಖನಗಳನ್ನು ನೋಡಬಹುದು. ಅದರಲ್ಲಿ ತಾವು ಪೂಜಿಸುವ ಮತ್ತು ಗೌರವಿಸುವ ಇಬ್ಬರು ಮಹಾನ್ ವ್ಯಕ್ತಿಗಳು ಬ್ರಾಹ್ಮಣರಾಗಿದ್ದ ರಾಮಕೃಷ್ಣ ಪರಮಹಂಸರು ಮತ್ತು ಟಿ.ಎಸ್. ವೆಂಕಣ್ಣಯ್ಯನವರು ಎಂದು ಕುವೆಂಪು ಹೇಳುತ್ತಾರೆ.

ಟಿ.ಎಸ್. ವೆಂಕಣ್ಣಯ್ಯನವರು ಒಮ್ಮೆ ತಮ್ಮನಿಗೆ (ತ.ಸು. ಶಾಮರಾಯರಿಗೆ) ಹೇಳುತ್ತಾರಂತೆ:

"ಯಾರು ಪುಟ್ಟಪ್ಪನನ್ನು ಹಳಿಯುತ್ತಾರೋ ಅವರೆಲ್ಲ ಒಂದಲ್ಲ ಒಂದು ದಿನ ಅವರ ಸೇವಕರಾಗುತ್ತಾರೆ. ಪುಟ್ಟಪ್ಪ ಬಹುದೊಡ್ಡ ಕವಿ ಮಾತ್ರವೇ ಅಲ್ಲ, ಪ್ರಾಚ್ಯ, ಪಾಶ್ಚಾತ್ಯ ಮಹಾಗ್ರಂಥಗಳೆಲ್ಲವನ್ನೂ ಅರಗಿಸಿಕೊಡಿರುವ ಪ್ರತಿಭಾಶಾಲಿ. ಆತನ ಮುಂದೆ ಉಳಿದವರೆಲ್ಲರನ್ನು ಪುಟಕ್ಕೆ ಹಾಕಬೇಕು. Puttappa at his best excells all the other Kannada poets, whether ancient or modern." - ("ನಮನ"-ಪುಟ 110)
ತಮ್ಮ ಇಂತಹ ಗುರುಗಳ ಬಗ್ಗೆ ಕುವೆಂಪುರವರಿಗೆ ಇದ್ದ ಭಕ್ತಿ ಮತ್ತು ಗೌರವಗಳನ್ನು ಪ್ರಭುಶಂಕರರು "ಹೀಗಿದ್ದರು ಕುವೆಂಪು" ಲೇಖನದಲ್ಲಿ ಹೀಗೆ ವರ್ಣಿಸುತ್ತಾರೆ:
"(ಕುವೆಂಪು) ಅವರಿಗೆ ಅತ್ಯಂತ ಪ್ರಿಯರಾಗಿದ್ದವರು, ಗೌರವಕ್ಕೆ ಪಾತ್ರರಾಗಿದ್ದವರು, ಅವರನ್ನು ಆಳವಾಗಿ ಪ್ರೀತಿಸಿ, ಅವರಿಂದ ಭಕ್ತಿ ರೂಪದ ಪ್ರೀತಿಯನ್ನು ಪಡೆದಿದ್ದವರು ಅವರ ಗುರುಗಳಾದ ದಿವಂಗತ ಟಿ.ಎಸ್. ವೆಂಕಣ್ಣಯ್ಯನವರು. ತಮ್ಮ ಮಹಾಕಾವ್ಯವಾದ "ಶ್ರೀ ರಾಮಾಯಣ ದರ್ಶನಂ" ಕೃತಿಯನ್ನು ಕುವೆಂಪು ಆ ಗುರುವಿಗೆ ಅರ್ಪಿಸಿದ್ದಾರೆ. ನಾವು ಯಾವಾಗಲೇ ಆಗಲಿ ವೆಂಕಣ್ಣಯ್ಯನವರ ವಿಷಯ ಪ್ರಸ್ತಾಪಿಸಿದರೆ ಕುವೆಂಪು ತಮ್ಮ ಗುರುಗಳ ಗುಣಗಾನ ಮಡುತ್ತಿದ್ದರು. ಮಾತನಾಡುತ್ತ ಆಡುತ್ತ ಅವರ ಧ್ವನಿ ಭಾರವಾಗುತ್ತಿತ್ತು. ಗಂಟಲು ಕಟ್ಟುತ್ತಿತ್ತು. ಅನಂತರ ಕಣ್ಣು ನೀರಾಡುತ್ತಿತ್ತು. ಕಂಬನಿಗಳು ಉರುಳುತ್ತಿದ್ದುದೂ ಉಂಟು. ಮುಂದೆ ಮಾತು ನಿಂತು ಹೋಗುತ್ತಿತ್ತು. ಬಹಳ ಕಾಲ ಮೌನ. ತಮ್ಮ ಗುರುಗಳೊಡನೆ ಕಳೆದ ಕಾಲವನ್ನು ಮನಸ್ಸಿನಲ್ಲಿ ಮತ್ತೆ ಬಾಳುತ್ತಿದ್ದರೇನೋ." ("ನಮನ"-ಪುಟ 56)
ಟಿ.ಎಸ್. ವೆಂಕಣ್ಣಯ್ಯನವರು ಕುವೆಂಪುರವರ ಗುರುಗಳಾದರೆ ವೆಂಕಣ್ಣಯ್ಯನವರ ತಮ್ಮ ಟಿ.ಎಸ್. ಶಾಮರಾಯರಿಗೆ ಕುವೆಂಪು ಗುರುಗಳಾಗಿದ್ದವರು. ಹೆಚ್ಚುಕಮ್ಮಿ ಕುವೆಂಪುರವರ ವಯಸ್ಸಿನವರೇ ಆಗಿದ್ದ ತ.ಸು. ಶಾಮರಾಯರು ಮನೆಯಲ್ಲಿನ ಬಡತನದ ಕಾರಣವಾಗಿ ಒಂದಷ್ಟು ದಿನ ವಿದ್ಯಾಭ್ಯಾಸ, ಮತ್ತೊಂದಷ್ಟು ವರ್ಷ ದುಡಿಮೆ, ಮತ್ತೆ ವಿದ್ಯಾಭ್ಯಾಸ ಮುಂದುವರಿಕೆ, ಹೀಗೆ ಮಾಡಿದವರು. ಈ ರೀತಿಯಲ್ಲಿ ಪದವಿ ಓದುವಾಗ ಕುವೆಂಪುರವರ ಶಿಷ್ಯರಾದವರು. ಡಾ. ಪ್ರಭುಶಂಕರರು ಕುವೆಂಪುರವರಿಗೆ ಹತ್ತಿರವಾಗಿದ್ದಂತೆ ಶಾಮರಾಯರಿಗೂ ಹತ್ತಿರವಾಗಿದ್ದರು. ಅವರು ಶಾಮರಾಯರ ಬಗ್ಗೆ ಬರೆದಿರುವ "ಗುರುಬಂಧು ತ.ಸು. ಶಾಮರಾಯರು" ಲೇಖನದಲ್ಲಿ ತಳುಕಿನ ಅಣ್ಣತಮ್ಮಂದಿರ ಜಾತ್ಯತೀತತೆಯ ಬಗ್ಗೆ ಹೀಗೆ ಬರೆಯುತ್ತಾರೆ:
"ಮುಂದೆ ಅನೇಕ ವರ್ಷಗಳ ಕಾಲ ನಾನು ಶಾಮರಾಯರ ನಿಕಟವರ್ತಿಯಾಗಿದ್ದೆ. ಆದ್ದರಿಂದ ಅವರ ಒಂದು ಸಿದ್ಧಿಯನ್ನು ನಾನು ನಿರ್ಭಯವಾಗಿ ಘೋಷಿಸಬಲ್ಲೆ. ಅವರು ಹದಿನಾರಾಣೆ ಅಥವಾ ನೂರಕ್ಕೆ ನೂರು ಜಾತ್ಯತೀತ ವ್ಯಕ್ತಿ. ಶಾಮರಾಯರು ದೇವರ ಪೂಜೆ, ಪಾರಾಯಣ ಮುಂತಾದವುಗಳನ್ನೆಲ್ಲ ಕ್ರಮಬದ್ಧವಾಗಿ, ಮನಃಪೂರ್ವಕವಾಗಿಯೇ ಆಚರಿಸುತ್ತಿದ್ದರು. ಅಂತಹ ಹಿನ್ನೆಲೆಯಿದ್ದವರು ಹೀಗೆ ಜಾತಿ ಭಾವನೆಯಿಂದ ಮುಕ್ತರಾದದ್ದು ಹೇಗೆ ಎಂಬುದನ್ನು ಕುರಿತು ಯೋಚಿಸುತ್ತಾ ಅವರ ಅಣ್ಣಂದಿರಾದ ತಳುಕಿನ ವೆಂಕಣ್ಣಯ್ಯನವರ ಪ್ರಭಾವ ಇದಕ್ಕೆ ಕಾರಣವಾಗಿರಲೂ ಬಹುದು ಎಂದುಕೊಂಡಿದ್ದೆ. ಒಂದು ದಿನ ಶಾಮರಾಯರೊಡನೆ ಬೇರೆ ಯಾರದ್ದೋ ವಿಷಯ ಮಾತನಾಡುತ್ತಿರಬೇಕಾದರೆ ಶಾಮರಾಯರು ವೆಂಕಣ್ಣಯ್ಯನವರ ಜೀವನದ ಒಂದು ಘಟನೆಯನ್ನು ನಿರೂಪಿಸಿದರು.

ಒಂದು ದಿನ ವೆಂಕಣ್ಣಯ್ಯನವರು ದೇವರ ಪೂಜೆ ಮಡುತ್ತಿದ್ದರು. ಹಾಗೆ ಮಾಡುವಾಗ ಎಂದಿನಂತೆ ಮುಗುಟ ಉಟ್ಟುಕೊಂಡಿದ್ದರು. ಅಷ್ಟರಲ್ಲಿ ಉಪಾಧ್ಯಾಯರೊಬ್ಬರು ಅವರನ್ನು ಕಾಣಲು ಬಂದರು. ಆಗ ಅಲ್ಲಿ ಶಾಮರಾಯರೂ ಅವರ ತಮ್ಮ ಹನುಮಂತರಾಯರೂ ಇದ್ದರು. ಶಾಮರಾಯರು ದೇವರ ಮನೆಗೆ ಹೋಗಿ ವೆಂಕಣ್ಣಯ್ಯನವರಿಗೆ ಯಾರೋ ಬಂದಿದ್ದಾರೆ ಎಂದು ತಿಳಿಸಿದರು. ವೆಂಕಣ್ಣಯ್ಯನವರು ಹೊರಕ್ಕೆ ಬಂದರು. ಬಂದವರು ಒಬ್ಬ ಮೇಷ್ಟ್ರು. ಅವರು ವೆಂಕಣ್ಣಯ್ಯನವರಿಗೆ ಕೈಮುಗಿದು ತಮ್ಮ ಅಹವಾಲನ್ನು ಹೇಳಿಕೊಂಡರು. ಅದರ ಸಾರಾಂಶ ಇಷ್ಟು: ಬಂದವರು ಬಡವರು, ಬಹುಶಃ ಮಿಡ್ಲ್ ಸ್ಕೂಲ್ ಅಧ್ಯಾಪಕರು. ತುಂಬ ಕಷ್ಟದಲ್ಲಿದ್ದಾರೆ. ಒಂದು ಪುಸ್ತಕ ಬರೆದಿದ್ದಾರೆ. ಅದನ್ನು ಪಠ್ಯ ಮಾಡಿಸಿದರೆ ತುಂಬ ತುಂಬ ಸಹಾಯವಾಗುತ್ತದೆ. ವೆಂಕಣ್ಣಯ್ಯನವರು ಬಂದವರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡರು. ಕೊನೆಗೆ ಹೇಳಿದರು: "ಆಯಿತು, ಇಷ್ಟೆಲ್ಲ ಹೇಳಿದ್ದೀರಿ. ನಾನು ಖಂಡಿತವಾಗಿಯೂ ನಿಮಗೆ ಪ್ರಯೋಜನವಾಗುವಂತೆ ಮಾಡಲು ಪ್ರಯತ್ನಿಸುತ್ತೇನೆ. ಧೈರ್ಯವಾಗಿರಿ. ಬದುಕಿನಲ್ಲಿ ಕಷ್ಟಗಳು ಬರುತ್ತವೆ. ಅವನ್ನು ಎದುರಿಸದೆ ಬೇರೆ ಏನಿದೆ ದಾರಿ?" ಹೀಗೆ ಹೇಳಿ ಅವರ ಬೆನ್ನ ಮೇಲೆ ಕೈಯಾಡಿಸಿ ಕಳುಹಿಸಿಕೊಟ್ಟರು. ಹೊರಟವರ ಮುಖದಲ್ಲಿ ಧನ್ಯತಾಭಾವ ಮನೆಮಾಡಿತ್ತು.

ವೆಂಕಣ್ಣಯ್ಯನವರು ಇನ್ಣೇನು ಮತ್ತೆ ದೇವರ ಮನೆಯೊಳಕ್ಕೆ ಕಾಲಿಡಬೇಕು, ಅಷ್ಟರಲ್ಲಿ ಶಾಮರಾಯರು ಅಣ್ಣನನ್ನು ತಡೆದರು. ವೆಂಕಣ್ಣಯ್ಯನವರು 'ಏನು?' ಎಂಬರ್ಥದಲ್ಲಿ ತಮ್ಮನ ಕಡೆ ದೃಷ್ಟಿ ಹಾಯಿಸಿದರು. ಶಾಮರಾಯರು ಹೇಳಿದರು: 'ಈಗ ಬಂದುಹೋದರಲ್ಲ ಅವರು ಅಸ್ಪೃಶ್ಯರು'. ವೆಂಕಣ್ಣಯ್ಯನವರು ಕೇಳಿದರು, "ಆದರೇನಾಯಿತು?" 'ಅಲ್ಲ, ಅವರನ್ನು ಮುಟ್ಟಿ ದೇವರಪೂಜೆಗೆ ಹೋಗುತ್ತಿದ್ದೀರಲ್ಲ?' ವೆಂಕಣ್ಣಯ್ಯನವರು ತುಂಬ ಎತ್ತರದ ಆಳು. ಅವರದೇ ವಿಶಿಷ್ಟವಾದ ಶೈಲಿಯಲ್ಲಿ ನಿಂತು ಕತ್ತುಕೊಂಕಿಸಿ ತಮ್ಮ ತಮ್ಮಂದಿರ ಮೇಲೆ ಅನುಕಂಪೆಯ ದೃಷ್ಟಿ ಬೀರಿ ಹೇಳಿದ್ದು ಇಷ್ಟೇ: "ಅಜ್ಞಾನಿಗಳು, ಆಜ್ಞಾನಿಗಳು." ಇನ್ನೊಂದು ಮಾತನ್ನೂ ಆಡದೆ ದೇವರ ಮನೆಯನ್ನು ಹೊಕ್ಕು ಅವರು ಪೂಜೆಯನ್ನು ಮುಂದುವರೆಸಿದರು." ("ನಮನ" -ಪುಟ 102)
ಶಾಮರಾಯರ ಹೃದಯವೈಶಾಲ್ಯ ಮತ್ತು ಶಿಷ್ಯರನ್ನು ಎಲ್ಲಾ ರೀತಿಯಿಂದಲೂ Mentor ಮಾಡುತ್ತಿದ್ದ ರೀತಿಯನ್ನು ನಾವು ಅದೇ ಲೇಖನದ ಇನ್ನೊಂದು ಕಡೆ ನೋಡಬಹುದು.
"ಶಾಮರಾಯರ ಅಚ್ಚುಮೆಚ್ಚಿನ ಶಿಷ್ಯ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು. ಶಾಮರಾಯರು ಅವರನ್ನು ಗುರುತಿಸಿದ್ದು ಒಂದು ಸಂಕಟದ ಸಮಯದಲ್ಲೇ. ಬಡತನದಿಂದ ಈತ ಬೆಂಡಾಗಿದ್ದಾನೆ, ಊಟಕ್ಕೂ ತೊಂದರೆಯಾಗಿದೆ ಎಂಬುದನ್ನು ಗುರುಗಳು ತಮ್ಮ ಸೂಕ್ಷ್ಮ ಸಂವೇದನಾ ಶಕ್ತಿಯಿಂದ ಕಂಡುಹಿಡಿದುಕೊಂಡರು. ಮೊದಲು ತಾತ್ಕಾಲಿಕ ಪರಿಹಾರ, ಮುಂದಿನದು ಆಮೇಲೆ. ಮನೆಗೆ ಕರೆದುಕೊಂಡು ಹೋಗಿ ಊಟ ಹಾಕಿದರು. ಅನಂತರ ಇವರಿಗೆ ಮೊದಲೇ ಪರಿಚಿತರಾಗಿದ್ದ ಸುತ್ತೂರು ಜಗದ್ಗುರುಗಳಾದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಬಳಿ ಶಿಷ್ಯನನ್ನು ಕರೆದುಕೊಂಡು ಹೋದರು. ಶಿವರುದ್ರಪ್ಪನವರು ವಿಷಯವನ್ನು ವಿವರಿಸಿದರು. ಸ್ವಾಮೀಜಿಯವರು ತಮಾಷೆಗೆ ಹೇಳಿದರು. "ಏನು ಶಾಮರಾಯರೇ, ನೀವು ಬ್ರಾಹ್ಮಣರು. ಒಬ್ಬ ಲಿಂಗಾಯತ ಹುಡುಗನ ಬಗ್ಗೆ ಶಿಫಾರಸ್ಸು ಮಾಡಲು ಬಂದಿದ್ದೀರಲ್ಲ!" ಮೇಷ್ಟ್ರು ಅಷ್ಟಕ್ಕೆ ಕೆರಳಿದರು: "ಎಲ್ಲ ವಿದ್ಯಾರ್ಥಿಗಳೂ ನನ್ನ ಮಕ್ಕಳು. ಅವರಿಗೆ ಜಾತಿ ಗೀತಿ ಇಲ್ಲ." ಸ್ವಾಮಿಗಳು ನಕ್ಕು ಮೇಷ್ಟ್ರನ್ನು ಸಮಾಧಾನ ಪಡಿಸಿದರು. ಶಿವರುದ್ರಪ್ಪನವರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ಕೊಟ್ಟರು.

ಈ ಘಟನೆ ನಡೆದದ್ದು ಅರವತ್ತು ವರ್ಷಗಳ ಹಿಂದೆ, ಜಾತಿನೀತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಕಾಲದಲ್ಲಿ. ಆಗಲೇ ಶಾಮರಾಯರು ನಮ್ಮ ಕಣ್ಣಲ್ಲಿ ನೀತಿಗೊಮ್ಮಟರಾಗಿ ಕಾಣುತ್ತಿದ್ದುದ್ದಕ್ಕೆ ಕಾರಣ ಅವರು ಜಾತೀಯತೆಯನ್ನು ಮೀರಿ ನಿಂತದ್ದು." ("ನಮನ" -ಪುಟ 99)
ಇದೇ ಶಾಮರಾರು ತಮ್ಮ "ಜಾತಿಯಲ್ಲದ" ಶಿಷ್ಯ ಪ್ರಭುಶಂಕರರನ್ನು ಒಮ್ಮೆ ನಡೆಸಿಕೊಂಡ ರೀತಿ ನೋಡಿ:
"ಅರವತ್ತು ವರ್ಷಗಳ ಅನಂತರವೂ ನೆನೆದರೆ ಭಯವನ್ನೂ, ರೋಮಾಂಚನವನ್ನೂ, ಆಶ್ಚರ್ಯವನ್ನೂ ಉಂಟುಮಾಡುವ ಸಂಗತಿಯೊಂದು ನಡೆಯಿತು. 1947 ರ ಒಂದು ಸಂಜೆ ಶಾಮರಾಯರು ಮರುದಿನ ಬೆಳಗ್ಗೆ ಎಂಟು ಗಂಟೆಗೆ ಅವರ ಮನೆಗೆ, ಏನೂ ಆಹಾರ ಸ್ವೀಕರಿಸದೆ, ಬರುವಂತೆ ನನಗೆ ಅಪ್ಪಣೆ ಮಾಡಿದರು. ನಾನು ಹಾಗೆಯೇ ಮರುದಿನ ಬೆಳಗ್ಗೆ ಸಮಯಕ್ಕೆ ಸರಿಯಾಗಿ ಅವರ ಮನೆಗೆ ಹೋದೆ. ಅಲ್ಲಿ ನನಗೆ ಆಶ್ಚರ್ಯಕರವಾದ ದೃಶ್ಯವೊಂದು ಕಾದಿತ್ತು. ಒಂದು ಮಣೆ ಹಾಕಿ, ಅದರ ಮುಂದೆ ರಂಗೋಲಿ ಬಿಟ್ಟು, ದೀಪ ಹಚ್ಚಿಟ್ಟಿದ್ದರು. ಆ ಮಣೆಯ ಮೇಲೆ ಕೂರುವಂತೆ ಗುರುಗಳು ಹೇಳಿದರು. ಅದರ ಮುಂದೆ ಎಲೆ ಹಾಕಿ ಊಟ ಬಡಿಸಿದ್ದಾರೆ. ನಾನು ನಿಜವಾಗಿ ಮೂಕನಾದೆ. ಮುಂದಿನದನ್ನು ಬರೆಯಲು ಹನಿದುಂಬಿದ ಕಣ್ಣುಗಳು ಅವಕಾಶ ಕೊಡುತ್ತಿಲ್ಲ. ಗುರುಗಳು "ಇವತ್ತು ಸುಬ್ರಾಯನ ಷಷ್ಠಿ. ಬ್ರಾಹ್ಮಣ ವಟುವಿಗೆ ಊಟ ಹಾಕಬೇಕು ಅಂತ ಇವತ್ತಿನ ಶಾಸ್ತ್ರ. ಅದಕ್ಕೇ ನಿನ್ನನ್ನು ಕರೆದೆ, ಕೂತ್ಕೋ" ಎಂದರು. ನಾನು ತಕ್ಷಣ "ನಾನು ಬ್ರಾಹ್ಮಣ ಅಲ್ಲ" ಎಂದು ಹೇಳಿಬಿಟ್ಟೆ. ಅವರು "ನೀನು ನನ್ನ ವಿದ್ಯಾರ್ಥಿ. ಅಂದರೆ ನನ್ನ ಮಗ. ನೀನು ಬ್ರಾಹ್ಮಣ ಅಲ್ಲದಿದ್ದರೆ ಇನ್ನು ಯಾರು ಬ್ರಾಹ್ಮಣರು? ಸುಮ್ನೆ ಕುತ್ಕೋ" ಎಂದರು. ಅದು ಮುಖ್ಯವಲ್ಲ. ಅವರು ಬ್ರಾಹ್ಮಣ ಎಂದದ್ದರಿಂದ ನಾನು ಹೆಮ್ಮೆ ಪಡಲಿಲ್ಲ. ಆದರೆ ಅವರು, ಮಗುಟ ಉಟ್ಟು ಪೂಜೆಯ ವೇಷದಲ್ಲಿದ್ದವರು, ನನ್ನ ಕೈಹಿಡಿದು ಬಲವಂತವಾಗಿಯೇ ಎಂಬಂತೆ ಆ ಮಣೆಯ ಮೇಲೆ ನನ್ನನ್ನು ಕುಳ್ಳಿರಿಸಿದರು. ವಟುಪೂಜೆ ನಡೆಯಿತು. ಅಷ್ಟು ಬೆಳಗ್ಗೆ ಬೆಳಗ್ಗೆಯೇ ಅದೇ ಮಣೆಯ ಮೇಲೆ ನಾನು ಕುಳಿತಿದ್ದಂತೆಯೇ ಊಟಕ್ಕೂ ಬಡಿಸಿದರು. ಗುರುವಿನಿಂದ ಪೂಜಿತನಾದ ಶಿಷ್ಯ ನಾನಾದೆ! "ಎಲ್ಲಿಯ ಜಾತಿ, ಏನು ಕಥೆ" ಎಂದು ಅವರು ತಮ್ಮ ಅಣ್ಣ ವೆಂಕಣ್ಣಯ್ಯನವರಂತೆ ಎಷ್ಟೋ ಸಲ ಹೇಳುತ್ತಿದ್ದರು. ನುಡಿದಂತೆ ನಡೆದ ಮಹಾಂತರು ಅವರು." (ಡಾ. ಪ್ರಭುಶಂಕರರ "ನಮನ" -ಪುಟ 101)


ಪ್ರಶ್ನೆ: ಇದೆಲ್ಲ (ಈ ಬರಹ) ಈಗೇಕೆ?
ಉತ್ತರ: ತಲ್ಲಣದ ಸಮಯದಲ್ಲಿ ಸಜ್ಜನಿಕೆ ಮತ್ತು ಪ್ರೀತಿಯನ್ನು ಹುಡುಕುತ್ತಾ...

ಈ ಸರಣಿಯ ಎರಡನೆಯ ಲೇಖನ: ಈಗ ನೀವು ಓದಿದ್ದು .(?)

ಮೂರನೆಯದು: ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು

ನಾಲ್ಕನೆಯದು: ಕುವೆಂಪು ವಿರುದ್ಧ ದೇವುಡು ಪಿತೂರಿ ಮತ್ತು ಅಂತರ್ಜಾತಿ ವಿವಾಹ

Nov 29, 2008

ತಲ್ಲಣದ ಸಮಯದಲ್ಲಿ ಸಜ್ಜನಿಕೆ ಮತ್ತು ಪ್ರೀತಿಯನ್ನು ಹುಡುಕುತ್ತಾ...

2001, ಸೆಪ್ಟೆಂಬರ್ 11 ರ ದಾಳಿ ಆದನಂತರ ಇಲ್ಲಿಯವರೆಗೆ ಅಮೆರಿಕದ ನೆಲದಲ್ಲಿ ಯಾವೊಂದು ಭಯೋತ್ಪಾದಕ ದಾಳಿಗಳೂ ಆಗಿಲ್ಲ. ಈ ಮಧ್ಯೆ ಅಮೆರಿಕ ನ್ಯಾಯಯುತವಾಗಿಯೆ ಅಫ್ಘಾನಿಸ್ತಾನಕ್ಕೆ ನುಗ್ಗಿದ್ದಷ್ಟೆ ಅಲ್ಲದೆ ಅಪಾರ ವಿರೋಧದ ನಡುವೆ ಇರಾಕಿಗೂ ನುಗ್ಗಿತು. ಇದು ಇಸ್ಲಾಮಿಕ್ ಮೂಲಭೂತವಾದಿ ಭಯೋತ್ಪಾದಕರಲ್ಲಿ ದ್ವೇಷವನ್ನು ಮತ್ತಷ್ಟು ಹೆಚ್ಚಿಸಿತು. ಆದರೂ ಅಮೆರಿಕದ ನೆಲದ ಮೇಲೆ ಮತ್ತೆ ದಾಳಿ ಮಾಡಲು ಅವರ ಕೈಯ್ಯಲ್ಲಿ ಸಾಧ್ಯವಾಗಿಲ್ಲ. ಅಂದರೆ ಅವರು ಪ್ರಯತ್ನಿಸಲಿಲ್ಲ ಅಂತಲ್ಲ. ಅವರು ಪ್ರಯತ್ನಪಟ್ಟರೆ ಎನ್ನುವುದೂ ತಿಳಿಯದಷ್ಟು ಸೂಕ್ಷ್ಮವಾಗಿ ಅಮೆರಿಕದ ಭದ್ರತಾ ದಳಗಳ Intelligence ವಿಭಾಗಗಳು ಕಾರ್ಯನಿರ್ವಹಿಸಿವೆ. ಭಯೋತ್ಪಾದನೆಯನ್ನು ಸಂಪೂರ್ಣವಾಗಿ Law & Order ವಿಷಯವನ್ನಾಗಿಯೆ ನೋಡಿ ಅವರು ಈ ಜಯ ಸಾಧಿಸಿದ್ದಾರೆ.

ಕಳೆದ ವಾರ ಮುಂಬಯಿಯಲ್ಲಿ ಮತ್ತೆ ಅದೆಷ್ಟನೆಯದೊ ಬಾರಿ ಸಂಕುಚಿತ ಕೋಮುವಾದಿಗಳು ದಾಳಿ ಮಾಡಿದ್ದಾರೆ. ಅಪಾರವಾದ ಅಂತರರಾಷ್ಟ್ರೀಯ ಆಯಾಮ ಗಳಿಸಿಕೊಂಡ ಈ ದಾಳಿ ಮೂರ್ನಾಲ್ಕು ದಿನಗಳ ಹೋರಾಟದ ಬಳಿಕ ಅಂತ್ಯವಾಗಿದೆ. ಕರ್ತವ್ಯಪಾಲಕರ, ಅಮಾಯಕರ, ವಿದೇಶಿಗಳ, ಪ್ರವಾಸಿಗಳ, ಬಡವರ, ಶ್ರೀಮಂತರ, ಒಟ್ಟಿನಲ್ಲಿ ಮನುಷ್ಯರ ಹತ್ಯೆಯಾಗಿದೆ. ದೇಶದ ಒಂದೆರಡು ರಾಜ್ಯಗಳ ಚುನಾವಣೆಯೂ ಈ ಘಟನೆಯಿಂದ ನಿರ್ಧಾರಿತವಾಗಿ ಹೋಗಿದೆ. ಉತ್ತರದ ರಾಜ್ಯಗಳಲ್ಲಿ ಒಂದು ಮಟ್ಟದ ಸಾಮಾಜಿಕ ನ್ಯಾಯಕ್ಕೆ ಕಾರಣನಾದ ಮಾಜಿ ಪ್ರಧಾನಿಯೊಬ್ಬನ ಸಾವು ಸುದ್ದಿಯೆ ಅಲ್ಲದಷ್ಟು ರೀತಿಯಲ್ಲಿ ನಗಣ್ಯವಾಗಿ ಹೋಗಿದೆ.

ಹಾಗೆಯೆ, ರಕ್ತಹರಿಸಿದ ಇದೇ ದುಷ್ಟರ ದುಷ್ಟ ದಾಯಾದಿಗಳು ನವೋಲ್ಲಾಸದಿಂದ ಜಿಗಿದೆದ್ದಿದ್ದಾರೆ.

ಮುಂಬಯಿಯ ಘಟನೆಗಳ ಮೂಲ ನಮ್ಮ ದೇಶದ failed Law & Order ನಲ್ಲಿ ಇದೆ. ನನ್ನ ಕಳೆದ ಪೋಸ್ಟಿನಲ್ಲಿ ಬರೆದಿದ್ದ ಮದ್ರಾಸಿನ ಪೋಲಿಸರ ಕರ್ತವ್ಯದ್ರೋಹ, ಮಾಲೆಗಾಂವ್ ವಿಚಾರದಲ್ಲಿಯ ಮತಪ್ರೇಮಿಗಳ ಆತ್ಮದ್ರೋಹ, ಪ್ರತಿದಿನವೂ ಒಂದಲ್ಲ ಒಂದು ಕಡೆ ನಿರಾಕರಿಸಲ್ಪಡುವ ನ್ಯಾಯ, ಇಂತಹುದರಲ್ಲಿದೆ. ಇಂತಹುದಗಳ ಬಗ್ಗೆ ಯೋಚನೆ ಮಾಡದ, ಪೋಲಿಸರ ನಿಷ್ಕ್ರಿಯತೆ, ಆ ವಿಭಾಗದಲ್ಲಿನ ಅಸಮರ್ಥತೆ, ನಮ್ಮ Intelligence Failure, ಅಲ್ಲಿ ನಡೆಯುವ ರಾಜಕಾರಣಿಗಳ ಹಸ್ತಕ್ಷೇಪ, ಮತೀಯವಾದಿ ಮನಸ್ಥಿತಿಯ Infiltration, ಮುಂತಾದವುಗಳ ಪರಿವೆಯೇ ಇಲ್ಲದ "ಮತಪ್ರೇಮಿಗಳು" ಮುಂಬಯಿಯ ಘಟನೆಯಾದ ಕೂಡಲೆ ಮತ್ತೆ "ದೇಶಪ್ರೇಮದ" ಧ್ವಜ ಕೈಗೆತ್ತಿಕೊಂಡಿದ್ದಾರೆ. ನಮ್ಮ ದೇಶದಲ್ಲಿ ಯಾಕೆ ಅಮೆರಿಕದ ರೀತಿ ಭಯೋತ್ಪಾದಕ ಕೃತ್ಯಗಳನ್ನು ಅವು ಘಟಿಸುವುದಕ್ಕಿಂತ ಮೊದಲೆ ತಡೆಯಲು ಆಗುತ್ತಿಲ್ಲ ಎನ್ನುವುದನ್ನು ಕೇಳಿಕೊಳ್ಳದ ಅಪ್ರಬುದ್ಧರು ಮತ್ತದೆ ಪಲಾಯನವಾದಿ ಆರೋಪ ಸೂತ್ರ ಪಠಿಸುತ್ತಿದ್ದಾರೆ. ತಮ್ಮ ಜವಾಬ್ದಾರಿ ಮತ್ತು ಪ್ರಬುದ್ಧತೆಯನ್ನು ಜನ ಮರೆಯುತ್ತಿರುವ, ಅವರಲ್ಲಿ ಸಂಶಯ ಮತ್ತು ಅಪನಂಬಿಕೆಗಳು ತುಳುಕಾಡುತ್ತಿರುವ ತಲ್ಲಣದ ಸಮಯ ಇದು.ಈ ಹಿನ್ನೆಲೆಯಲ್ಲಿ ಮಾನವೀಯತೆ, ಸಹಿಷ್ಣುತೆ, ಸಜ್ಜನಿಕೆ, ಸಹಮಾನವ ಕಕ್ಕುಲತೆ ಮುಂತಾದವುಗಳ ಬಗ್ಗೆ ಯೋಚಿಸುತ್ತ ನಾನು ಇವತ್ತು ಓದುತ್ತಿರುವ ಪುಸ್ತಕಕ್ಕೆ ಬರುತ್ತೇನೆ. ಕನ್ನಡದ ಹಿರಿಯ ಲೇಖಕರಲ್ಲೊಬ್ಬರಾದ ಡಾ. ಪ್ರಭುಶಂಕರರು ಇಲ್ಲಿ ಮಗಳ ಮನೆಗೆ ಬಂದಿದ್ದಾರೆ. ಮೊನ್ನೆಯ ಗುರುವಾರ ಇಲ್ಲಿ Thanksgiving Day. ಅವತ್ತು ಪ್ರಭುಶಂಕರರನ್ನು ಮನೆಗೆ ಊಟಕ್ಕೆ ಕರೆದುಕೊಂಡು ಬಂದಿದ್ದೆ. ಆಗ ಅವರು ತಮ್ಮ ಇತ್ತೀಚಿನ ಪುಸ್ತಕ "ನಮನ"ವನ್ನು ನನಗೆ ಓದಲು ಕೊಟ್ಟರು. ಅದೊಂದು ವ್ಯಕ್ತಿಚಿತ್ರಗಳ ಲೇಖನಸಂಗ್ರಹ.

ಅದರಲ್ಲಿ ನಾನು ಈ ಹಿಂದೆಯೆ ಒಂದೆರಡು ಬಾರಿ ಓದಿದ್ದ "ಹೀಗಿದ್ದರು ಕುವೆಂಪು" ಲೇಖನದ ಜೊತೆಗೆ ಇತರ ಏಳೆಂಟು ಲೇಖನಗಳಿವೆ. ಇವತ್ತು ಬೆಳಿಗ್ಗೆ ಅದರಲ್ಲಿದ್ದ "ತೀಕ್ಷ್ಣಮತಿ ಪು.ತಿ.ನ. ಅವರು" ಲೇಖನ ಓದುತ್ತಿದ್ದೆ. ಕವಿ ಪು.ತಿ.ನ.ರ ಜೊತೆಗಿನ ತಮ್ಮ ಒಡನಾಟವನ್ನೂ, ಅವರ ಕಾವ್ಯದ ಬಗ್ಗೆ ತಮಗಿದ್ದ ಆಸಕ್ತಿಯನ್ನೂ ಬರೆಯುತ್ತ, ಕೊನೆಕೊನೆಗೆ ತಮಗೆ ಪು.ತಿ.ನ.ರ ಕಾವ್ಯದ ಬಗೆಗೆ ಕಮ್ಮಿಯಾದ ಕುತೂಹಲ ಮತ್ತು ನಿರುತ್ಸಾಹದ ಬಗ್ಗೆ ಪ್ರಭುಶಂಕರ ಹೇಳುತ್ತಾರೆ. ತಾವು ಪು.ತಿ.ನ.ರಿಗೆ "ನಿಮ್ಮ ಭಾಷೆ ಯಾರಿಗೆ ಅರ್ಥವಾಗುತ್ತೆ ಹೋಗಿ ಸಾರ್. ಸಂಸ್ಕೃತದವರು ಇದನ್ನು ಓದುವುದಿಲ್ಲ, ಕನ್ನಡಿಗರಿಗೆ ಅರ್ಥವಾಗುವುದಿಲ್ಲ... ನೀವು ತಿಳಿಗನ್ನಡದಲ್ಲಿ ಬರೆಯಬಲ್ಲಿರಿ. ಬರೆಯಿರಿ." ಎಂದು ಹೇಳುತ್ತಿದ್ದುದ್ದಾಗಿ ಬರೆಯುತ್ತ, ಇದೇ ಹಿನ್ನೆಲೆಯಲ್ಲಿ ಪು.ತಿ.ನ. ರವರು ಇವರಿಗೆ ಬರೆದಿದ್ದ ಪತ್ರವನ್ನು ಉಲ್ಲೇಖಿಸುತ್ತಾರೆ. ಆ ಪತ್ರದ ಕೊನೆಯಲ್ಲಿ ಪು.ತಿ.ನ. ಹೀಗೆ ಬರೆದಿದ್ದಾರೆ:
"... ಅಷ್ಟಕ್ಕೂ ನನ್ನ ಈ ಕಾವ್ಯದಲ್ಲಿ ನೀವು ನಾನು ಬಯಸುವಷ್ಟು ಕುತೂಹಲ ತೋರಿಸಲಿಲ್ಲ. ಇನ್ನೂ ತುಂಬ ಸ್ವಾರಸ್ಯವಾದ ಸರಕುಗಳಿವೆ ಅಲ್ಲಿ. ಓದುತ್ತೇನೆ ಎಂಬ ಹೆದರಿಕೆಯಿಂದ ಮನೆಗೆ ಬಾರದೆ ಇರಬೇಡಿ. ನಾನು ಆ ಪುಸ್ತಕದ ತಂಟೆಗೇ ಹೋಗುವುದಿಲ್ಲ. ಕಿವಿ ನಿಮಗೆ ಮೀಸಲು."

ನನಗೆ ಒಟ್ಟಾರೆಯಾಗಿ ಆ ಲೇಖನ ಮಾಡಿಕೊಟ್ಟ ಆಗಿನ ದೇಶ-ಕಾಲದ ಪರಿಚಯ ಮತ್ತು ವಿಶೇಷವಾಗಿ ಈ ಪತ್ರದ ಧಾಟಿ, ಅಲ್ಲಿದ್ದ ಸಜ್ಜನಿಕೆ, ಆತ್ಮೀಯತೆ, ಮತ್ತು ಆ ಸರಳತೆ, ಒಂದು ರೀತಿಯ ಭಾವಾವೇಶಕ್ಕೆ ಒಳಗಾಗುವಂತೆ ಮಾಡಿತು. ಇವತ್ತಿನ ಸಂದರ್ಭಕ್ಕೆ ತೀರಾ ಅಪರಿಚಿತವಾದ ನಡವಳಿಕೆ ಇದು. ಪಕ್ಕದಲ್ಲಿ ಗೆಳೆಯ ಪ್ರೊ. ಪೃಥ್ವಿ ಇದ್ದರು. ಅವರಿಗೆ ಈ ಕೊನೆಯ ಮೂರು ಸಾಲುಗಳನ್ನು ಓದಿ, "ಇಂತಹ ಪತ್ರವನ್ನು ಇವತ್ತು ಯಾರು ಯಾರಿಗಾದರೂ ಬರೆಯಲು ಸಾಧ್ಯವೆ? ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ. ಈ ಸಜ್ಜನಿಕೆಯ ಮಟ್ಟ ನೋಡಿ," ಎಂದೆ. ಅದಕ್ಕವರು, "ನವೋದಯದವರ ಕಾಲದ Civility, ವಿಶಿಷ್ಟವಾದದ್ದು. ಅದು ಈಗ ಇಲ್ಲ." ಎಂದರು.

ಅದಾದ ಮೇಲೆ "ನಮನ"ದ ಇನ್ನೂ ಹಲವು ವ್ಯಕ್ತಿಚಿತ್ರಗಳ ಓದು ಮುಂದುವರೆಸಿದೆ. ಕಳೆದ ಶತಮಾನದ ಸಾಹಿತಿ ಜನರ Civilityಯ ಅನೇಕ ರೂಪಗಳನ್ನೆ ನಾನಲ್ಲಿ ಕಾಣುತ್ತ ಹೋದೆ. ಈಗ ಹೀಗೆ ತೀರ್ಮಾನಿಸಿದ್ದೇನೆ. ಈ ಪುಸ್ತಕದಲ್ಲಿರುವ ಇಂತಹ ಅಪರೂಪದ ಪ್ರಸ್ತಾಪಗಳನ್ನು ಈ ಬ್ಲಾಗ್‌ನಲ್ಲಿ ಇನ್ನು ಮೂರ್ನಾಲ್ಕು ದಿನಗಳ ಕಾಲ ಪರಿಚಯಿಸಬೇಕು. ಒಳ್ಳೆಯ ಮನುಷ್ಯನೊಬ್ಬನಿಗೆ ಇರಬೇಕಾದ ಕನಿಷ್ಠ ಜವಾಬ್ದಾರಿ ಮತ್ತು ಸಜ್ಜನಿಕೆಯ ಎಚ್ಚರಿಕೆಗೆ, Introspectionಗೆ, ಇದು ಸಹಕಾರಿ ಎಂದು ನನಗನ್ನಿಸಿದೆ. ನಮ್ಮ ದೇಶದ ಸಜ್ಜನಿಕೆಯ ನಿಜಗುಣ (ಕಾಲಕಾಲಕ್ಕೆ ಹತವಾಗಿ, ಗತವಾಗಿ, ಭ್ರಷ್ಟವಾಗಿದ್ದರೂ) ಈ ಘಟನೆಗಳಲ್ಲಿದೆ ಎಂದು ನನಗನ್ನಿಸಿದೆ. ಹಳೆಯ ಉತ್ತಮೋತ್ತಮ ಆದರ್ಶ ಘಟನೆಗಳನ್ನು Nostalgic ಆಗದೆಯೂ ನಾವು ಜ್ಞಾಪಿಸಿಕೊಳ್ಳುವಂತಾಗಬೇಕು. ರೂಢಿಸಿಕೊಳ್ಳುವಂತಾಗಬೇಕು.

ಮುಂಬಯಿಯ ಘಟನೆಯ ಹಸಿಬಿಸಿ ಸಮಯ ಇದು. These are communally charged times. ಅದಕ್ಕಾಗಿ ಮೊದಲಿಗೆ ಪ್ರಭುಶಂಕರರು ಬರೆದಿರುವ "ಗುರುಬಂಧು ತ.ಸು. ಶಾಮರಾಯರು" ಲೇಖನದ ಒಂದೆರಡು ಘಟನೆ ಪ್ರಸ್ತಾಪಿಸುತ್ತೇನೆ. ಕುವೆಂಪುರವರು ತಮ್ಮ "ಶ್ರೀರಾಮಾಯಣ ದರ್ಶನಂ" ಕಾವ್ಯವನ್ನು ಅರ್ಪಿಸಿದ್ದು ತಮ್ಮ ಗುರುಗಳಾದ ಕನ್ನಡದ ಚೇತನ ತಳುಕಿನ ವೆಂಕಣ್ಣಯ್ಯನವರಿಗೆ. ವೆಂಕಣ್ಣಯ್ಯನವರ ತಮ್ಮ ಶಾಮರಾಯರು. ರಾಷ್ಟ್ರಕವಿ ಕುವೆಂಪುರವರ ನಿಷ್ಠುರ ಮತ್ತು ಪ್ರೀತಿಪಾತ್ರ ಸ್ನೇಹಿತರಾಗಿದ್ದ ಸಾಹಿತಿ. ಮೈಸೂರಿನಲ್ಲಿ "ರಾಷ್ಟ್ರಕವಿ" ಜಿ.ಎಸ್.ಶಿವರುದ್ರಪ್ಪ, ಡಾ. ಪ್ರಭುಶಂಕರರಂತಹ ಸಾಹಿತಿಗಳ ಗುರುಗಳಾಗಿದ್ದವರು. ಹಾಗೆಯೆ ನಜೀರ್(ನೀರ್)ಸಾಬ್ ಮತ್ತು ಬಂಗಾರಪ್ಪನಂತಹವರಿಗೂ ಗುರುಗಳಾಗಿದ್ದವರು.

ಕರ್ನಾಟಕದ ಮುಖ್ಯಮಂತ್ರಿಯಾಗುವ ಅರ್ಹತೆ, ಚಿಂತನೆ, ಮತ್ತು ಅವಕಾಶಗಳು ಇದ್ದರೂ, ರಾಜಕೀಯ ಅಸಂಗತಗಳಿಂದಾಗಿ ಆಗದೆ ಹೋದ, ಆದರೂ ಕೇವಲ ಗ್ರಾಮೀಣಾಭಿವೃದ್ಧಿ ಸಚಿವರಾಗಿಯೆ ಅಪಾರವಾದ ನಾಡಸೇವೆ ಮಾಡಿದ ಚೇತನ ನಜೀರ್ ಸಾಬ್. ಅವರ ಮತ್ತು ತ.ಸು. ಶಾಮರಾಯರ ನಡುವೆ ನಡೆದ ಘಟನೆ "ನಮನ"ದಲ್ಲಿ ಹೀಗೆ ಉಲ್ಲೇಖವಾಗಿದೆ:
(ಪುಟ 105)
ಸಾಮಾನ್ಯ ಜನರಿಗೆ ನೀರನ್ನು ಒದಗಿಸಲು ಶ್ರಮಿಸಿ, ಬಹುತೇಕ ಆ ಕಾಯಕದಲ್ಲಿ ಯಶಗಳಿಸಿ ನೀರ್‌ಸಾಬ್ ಎಂದೇ ಪ್ರಖ್ಯಾತರಾಗಿದ್ದ ಶ್ರೀ ಅಬ್ದುಲ್ ನಜೀರ್‌‍ಸಾಬರು, ಶ್ರೀ ರಾಮಕೃಷ್ಣ ಹೆಗ್ಗಡೆಯವರ ಮಂತ್ರಿಮಂಡಲದಲ್ಲಿ ಒಬ್ಬರು ಮಂತ್ರಿ. ಅವರು ಶಾಮರಾಯರ ಪರಮಭಕ್ತರಲ್ಲೊಬ್ಬರು. ಅವರು ಮಂತ್ರಿಯಾದ ಬಳಿಕ ನಡೆದ ಘಟನಾವಳಿಯನ್ನು ಶ್ರೀ. ನ. ಸುಬ್ರಹ್ಮಣ್ಯ ಅವರು ಹೀಗೆ ವರ್ಣಿಸಿದ್ದಾರೆ:

"ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ತಮ್ಮ ಗುರುವಿನ ಆಶೀರ್ವಾದ ಪಡೆಯಲು ಅವರು (ಶ್ರೀ ನಜೀರ್‍ಸಾಬ್) ಚಡಪಡಿಸಿದರು. ಶಾಮರಾಯರು ಆಗ ಗುಬ್ಬಿಯಲ್ಲಿ ಚಿದಂಬರಾಶ್ರಮದಲ್ಲಿದ್ದರು. ಮಾರನೆಯ ದಿನ ಅವರು ಬೆಂಗಳೂರಿಗೆ ಬರುತ್ತಾರೆಂದೂ ಮಿತ್ರರೊಬ್ಬರ ಮನೆಯಲ್ಲಿ ಉಳಿದುಕೊಳ್ಳುತ್ತಾರೆಂದೂ ನಜೀರ್ ಸಾಬರಿಗೆ ತಿಳಿಯಿತು. ಬಂದಕೂಡಲೆ ತಮಗೆ ತಿಳಿಸಬೇಕೆಂದು ಆ ಅತಿಥೇಯರಿಗೆ ನಜೀರ್‌ಸಾಬ್ ಸೂಚನೆ ಕೊಟ್ಟರು. ಮಾರನೆಯ ದಿನ ಬೆಂಗಳೂರಿಗೆ ಬಂದ ಶಾಮರಾಯರು ನಜೀರ್‌ಸಾಬ್ ಸೂಚನೆ ತಿಳಿದೊಡನೆ ಸ್ವಯಂ ನಜೀರ್‍ಸಾಬರಿಗೆ ಫೋನ್ ಮಾಡಿ ಅಭಿನಂದನೆ ತಿಳಿಸಿದರು. ಯಾವುದೋ ಮೀಟಿಂಗ್ ನಡೆಸುತ್ತಿದ್ದ ನಜೀರ್‌ಸಾಬರು ಅದನ್ನು ಅಷ್ಟಕ್ಕೆ ಮುಕ್ತಾಯಗೊಳಿಸಿ ಓಡಿಬಂದರು. ಗೇಟಿನ ಬಳಿ ಶಿಷ್ಯನನ್ನು ಸ್ವಾಗತಿಸಲು ನಿಂತಿದ್ದ ತ.ಸು. ಶಾಮರಾಯರನ್ನು ಕಂಡೊಡನೆ ಕಾರಿಳಿದು ಧಾವಿಸಿ ಬಂದು ಕಾಲಿಗೆರಗಿದರು. ಸಂತೋಷದ ಅಮಲಿನಲ್ಲಿ ಗುರುವನ್ನು ಗಟ್ಟಿಯಾಗಿ ಅಪ್ಪಿಕೊಂಡರು. ಕಾರಿನಲ್ಲಿದ್ದ ಸಿಬ್ಬಂದಿ, ರಸ್ತೆಯಲ್ಲಿ ನೋಡುತ್ತಿದ್ದ ಜನ ಯಾರೂ ಅವರಿಬ್ಬರ ಪ್ರೀತಿ ವಿಶ್ವಾಸಗಳಿಗೆ ಅಡ್ಡಿ ಬರುವಂತಿರಲಿಲ್ಲ.

"ಮನೆಯೊಳಕ್ಕೆ ಹೋದಮೇಲೂ ನಜೀರ್‌ಸಾಬರ ಭಾವಾವೇಶ ಕಡಮೆಯಾಗಿರಲಿಲ್ಲ. ಸಾರ್, ತಮ್ಮ ಆಶೀರ್ವಾದದಿಂದ ನಾನು ಮಂತ್ರಿಯಾದೆ. ನನ್ನಿಂದ ತಮಗೆ ಏನಾಗಬೇಕು, ತಿಳಿಸಿ ಸಾರ್. ನಾನು ತಮಗೆ ಏನು ಕೊಡಲಿ?"

"ಆನಂದಾಶ್ರು ತುಂಬಿದ ಗುರು, 'ನಾನು ಕೇಳಿದುದನ್ನು ಕೊಡುತ್ತೀಯಾ?'"

"ಹೂಂ - ಕೊಟ್ಟೆ"

"ಹಾಗಾದರೆ ನಿನಗೆ ಅಧಿಕಾರ ಇರುವಾಗ ನಾಲ್ಕು ಜನಕ್ಕೆ ಒಳ್ಳೆಯದನ್ನು ಮಾಡುವೆನೆಂದು ನನಗೆ ಮಾತು ಕೊಡು."

ತಕ್ಷಣ ನಜೀರ್‌ಸಾಬ್ ತ.ಸು. ಶಾಮರಾಯರ ಬಲಗೈಯೆತ್ತಿ ತಮ್ಮ ತಲೆಯ ಮೇಲಿಟ್ಟುಕೊಂಡು "ಹಾಗೇ ಮಾಡ್ತೀನಿ ಸಾರ್, ಆಶೀರ್ವಾದ ಮಾಡಿ" ಎಂದರು. "ನಿನಗೆ ಆಶೀರ್ವಾದ ಮಾಡಬೇಕೇನೋ ಮಗು, ನನ್ನ ಆಶೀರ್ವಾದ ನಿನಗೆ ಸದಾ ಇದ್ದೇ ಇದೆ" ಎಂದರು ಗುರು.

"ಅನಂತರ ನಜೀರ್‌ಸಾಬ್ ಕರ್ನಾಟಕದ ಜನರ ಬತ್ತಿದ ಗಂಟಲನ್ನು ತಣಿಸಿ ಹೇಗೆ ನುಡಿದಂತೆ ನಡೆದರೆಂಬುದನ್ನು ನಾಡಜನರೇ ಬಲ್ಲರು."

ನ. ಸುಬ್ರಹ್ಮಣ್ಯ ಅವರೇ ಮತ್ತೊಂದು ಘಟನೆಯನ್ನು ದಾಖಲು ಮಾಡಿದ್ದಾರೆ:

"ಇತ್ತೀಚೆಗೆ ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವುದಕ್ಕೆ ಪೂರ್ವಭಾವಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅಲ್ಲಿನ ಟೌನ್ ಹಾಲಿನಲ್ಲಿ ಸಭೆಯೊಂದನ್ನು ನಡೆಸಿತು. ತ.ಸು. ಶಾಮರಾಯರು ಆಹ್ವಾನಿತರಾಗಿ ಬಂದು ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದರು. ಸಭೆಗೆ ಬಂದಿದ್ದ ಹಲವು ಶಿಷ್ಯರು ಅವರ ಬಳಿ ಬಂದು ಯೋಗಕ್ಷೇಮ ವಿಚಾರಿಸಿ ಹೋದರು. ಆಗ ಎಡಬದಿಯಿಂದ ಒಬ್ಬರು ಬಂದು ಕಾಲುಮುಟ್ಟಿ ನಮಸ್ಕರಿಸಿದರು. ದೃಷ್ಟಿ ಪಾಟವನ್ನು ಕಳೆದುಕೊಂಡಿದ್ದ ತ.ಸು. ಶಾಮರಾಯರು 'ಯಾರೋ ನೀನು?' ಎಂದರು.

(ಶಿಷ್ಯರನ್ನು ಏಕವಚನದಲ್ಲಿ ಸಂಬೋಧಿಸುವುದೇ ಅವರ ಅಭ್ಯಾಸ. ಅದು ಅವರ ಆತ್ಮೀಯತೆಯ ದ್ಯೋತಕ. ಆ ಆತ್ಮೀಯತೆಗೆ ಪಾತ್ರರಾದವರು ತಮ್ಮನ್ನು ಧನ್ಯರೆಂದು ತಿಳಿಯುತ್ತಿದ್ದರು. ಏಕವಚನದ ಆತ್ಮೀಯತೆ ದೊರೆಯದವರು ತಮ್ಮನ್ನು ನತದೃಷ್ಟರೆಂದು ಕೊಳ್ಳುತ್ತಿದ್ದರು.)

ನಮಸ್ಕರಿಸಿದ ವ್ಯಕ್ತಿ 'ನಾನು ಸಾರ್. ತಮ್ಮ ಶಿಷ್ಯ ಬಂಗಾರಪ್ಪ' ಎಂದರು. ತ.ಸು.ಶಾ. ತುಂಬ ಅಭಿಮಾನದಿಂದ "ನನ್ನ ವಿದ್ಯಾರ್ಥಿಗಳು ನಾನಾ ಸ್ಥಾನಗಳಲ್ಲಿದ್ದಾರೆ. ಆದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಯಾರೂ ಇರಲಿಲ್ಲ. ನೀನೇ ಮೊದಲಿಗ" ಎಂದರು.

"ಮುಖ್ಯಮಂತ್ರಿ ಸ್ಥಾನ ಏನು ಸಾರ್ ಮೂರು ದಿನದ್ದು. ಗುರುಗಳ ಬಾಂಧವ್ಯ ನಿರಂತರವಾದದ್ದು" ಎಂದರು.

ಅದಾದ ನಂತರ ಒಂದು ದಿನ ತ.ಸು.ಶಾ. ಅವರ ಮನೆಗೆ ಒಬ್ಬ ಪೋಲೀಸ್ ಅಧಿಕಾರಿ ಬಂದರು. ಅವರು 'ಈ ದಿನ ನಾಲ್ಕು ಗಂಟೆ ವೇಳೆಗೆ ಮುಖ್ಯಮಂತ್ರಿಯವರು ತಮ್ಮ ಮನೆಗೆ ಬರುವುದಾಗಿ ತಿಳಿಸುವಂತೆ ಹೇಳಿದ್ದಾರೆ' ಎಂದರು.

ಮುಖ್ಯಮಂತ್ರಿ ಬಂದರು. ಅವರನ್ನು ಒಳಕ್ಕೆ ಕರೆದೊಯ್ದು ತ.ಸು.ಶಾ. ಒಂದು ಪೀಠವನ್ನು ತೋರಿಸಿ "ಕುಳಿತುಕೊಳ್ಳಿ ಸಾರ್" ಎಂದರು.

ಕೂಡಲೇ ಮುಖ್ಯಮಂತ್ರಿ ಹೌಹಾರಿ "ಕೂತುಕೋ ಬಂಗಾರಪ್ಪ ಅನ್ನಿ ಸಾರ್, ಈ ಕುರ್ಚಿ ತಮ್ಮ ಪೀಠ, ತಾವು ಇಲ್ಲಿ ಕುಳಿತುಕೊಳ್ಳಬೇಕಾದದ್ದು. ನಾನು ಬೇರೆ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇನೆ" ಎಂದರು.

ಬಂಗಾರಪ್ಪ ತಮ್ಮ ಸಿಬ್ಬಂದಿಯತ್ತ ಕೈನೀಡಿ ಶಾಲು ಪಡೆದು ಗುರುಗಳಿಗೆ ಹೊದಿಸಿ, ದೊಡ್ಡ ಹರಿವಾಣದಲ್ಲಿ ಜೋಡಿಸಿದ ಹಣ್ಣುಗಳನ್ನರ್ಪಿಸಿ ಕಾಲಿಗೆ ನಮಸ್ಕರಿಸಿದರು. ಅನಂತರ ಗುರುಪತ್ನಿಗೆ ಒಂದು ರೇಷ್ಮೆಯ ಸೀರೆ, ಕುಪ್ಪಸ ಅರ್ಪಿಸಿ ಕಾಲಿಗೆರಗಿದರು."

ಇಷ್ಟನ್ನು ನಿರೂಪಿಸಿ ಸುಬ್ರಹ್ಮಣ್ಯ ಕೇಳುತ್ಟಾರೆ: "ಈ ಬಗೆಯ ಗುರುಶಿಷ್ಯಬಾಂಧವ್ಯ ಈ ಕಾಲದಲ್ಲಿ ಎಲ್ಲಿ ದೊರಕೀತು?"

ಕೃಪೆ:
"ನಮನ" - ಡಾ. ಪ್ರಭುಶಂಕರ
ಪ್ರಕಾಶಕರು: ವಿ.ಸೀ.ಸಂಪದ - ಬೆಂಗಳೂರುಸರಣಿಯ ಎರಡನೆಯ ಲೇಖನ: ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...

ಮೂರನೆಯದು: ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು

ನಾಲ್ಕನೆಯದು: ಕುವೆಂಪು ವಿರುದ್ಧ ದೇವುಡು ಪಿತೂರಿ ಮತ್ತು ಅಂತರ್ಜಾತಿ ವಿವಾಹ

Nov 21, 2008

ಅಯ್ಯೋ..ನನ್ನ ದೇಶವೇ...

ಕಳೆದ ರಾತ್ರಿ ಸ್ನೇಹಿತರೊಬ್ಬರು "Chennai Law College" ಎಂಬ ವಿಷಯ ಇದ್ದ ಇಮೇಯ್ಲ್ ಕಳುಹಿಸಿದ್ದರು. ಒಳಗೆ ಒಂದು ಪದವೂ ಇರಲಿಲ್ಲ, ಸುಮಾರು 6 MB ಯ ವಿಡಿಯೊ ಫೈಲ್ ಮಾತ್ರ ಅಟ್ಯಾಚ್ ಮಾಡಲಾಗಿತ್ತು. ಏನಿದು, ಏನಾದರೂ ಸ್ಪ್ಯಾಮ್ ಇರಬಹುದೆ ಎನ್ನಿಸಿತು. ನೋಡೋಣ ಎಂದು ಅದನ್ನು ತೆರೆದೆ.

ಆಗ ರೂಮಿನಲ್ಲಿ ಲೈಟ್ ಆರಿಸಿತ್ತು. ಮಗಳನ್ನು ನನ್ನ ಹೆಂಡತಿ ಕತೆ ಹೇಳುತ್ತ ಮಲಗಿಸುತ್ತಿದ್ದಳು. ಮಲಗುತ್ತಿರುವ ಮಗುವಿಗೆ ಡಿಸ್ಟರ್ಬ್ ಆಗಬಾರದೆಂದು ಸ್ಪೀಕರ್ ಆನ್ ಮಾಡದೆ, ಕೇವಲ ಮೂಕಿ ವಿಡಿಯೊ ನೋಡಿದೆ. ಮೌನದಲ್ಲಿ, ಕತ್ತಲಲ್ಲಿ ಕಂಡ ವಿಡಿಯೊ ಕ್ಷಣಕ್ಷಣಕ್ಕೂ ಹಿಂಸಿಸುತ್ತಿತ್ತು.

ಒಂದರ್ಧ ನಿಮಿಷ ನೋಡಿದ ಮೇಲೆ ಸಾಕು ನಿಲ್ಲಿಸಿಬಿಡೋಣ ಅನ್ನಿಸಿತು. ಮತ್ತೆ ಇನ್ನೂ ಎರಡು ಮೂರು ಸಲ ಹಾಗೆ ಅನ್ನಿಸಿತು. ಆದರೆ, ಇರಲಿ ನೋಡೇ ಬಿಡೋಣ, ಕೊನೆಯ ತನಕ ನಿಲ್ಲಿಸಬಾರದು ಎಂದು ತೀರ್ಮಾನಿಸಿ ಎರಡೂವರೆ ನಿಮಿಷ ಅದನ್ನು ನೋಡಿದೆ.

ನಂತರ ಈ ವಿಷಯದ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು ಗೂಗಲ್ ಮಾಡಿ ನೋಡಿದೆ. ವಾರದ ಹಿಂದೆ ಚೆನ್ನೈನಲ್ಲಿ ನಡೆದ ಜಾತಿ ಗಲಾಟೆಗಳು. ಜನಾಂಗೀಯ ದ್ವೇಷ ಮತ್ತು ಅಸಹನೆಯ ಕತೆ.

ಆ ಇಡೀ ವಿಡಿಯೋದಲ್ಲಿ ನನ್ನನ್ನು ತೀವ್ರವಾಗಿ ಬಾಧಿಸಿದ್ದು, ಎಲ್ಲವನ್ನೂ ನೋಡಿಕೊಂಡು ಸುಮ್ಮನೆ ಆರಾಮಾಗಿ ನಿಂತುಕೊಂಡಿದ್ದ ಪೋಲಿಸರು! ಈ ಘಟನೆ ನಡೆದಿರುವುದು ಯಾವುದೊ ಹಳ್ಳಿಗಾಡಿನಲ್ಲಾಗಲಿ ಅಥವ ಒಳಪ್ರದೇಶಗಳಲ್ಲಾಗಲಿ ಅಲ್ಲ. ಭಾರತದ ನಾಲ್ಕನೆ ದೊಡ್ಡ ನಗರದಲ್ಲಿ. ಟಿವಿ ಕ್ಯಾಮೆರಾಗಳ ಎದುರು. ಪೋಲಿಸರ ಉಪಸ್ಥಿತಿಯಲ್ಲಿ.

ನಾನು ನೋಡಿದ ವಿಡಿಯೊ ಇಲ್ಲಿದೆ.
http://www.ravikrishnareddy.com/misc/ChennaiLawCollege.wmv

ಯೂಟ್ಯೂಬ್‍ನಲ್ಲಿ ಇದ್ದುದರಲ್ಲಿ ಸ್ಪಷ್ಟವಾಗಿ ಕಾಣುವ ವಿಡಿಯೊ ಇಲ್ಲಿದೆ.
ಇದನ್ನು ನೋಡಬೇಕೆಂದರೆ ಲಾಗಿನ್ ಆಗಬೇಕು. ಯೂಟ್ಯೂಬ್ ಯೂಸರ್ ಐಡಿ ಇಲ್ಲದಿರುವವರು ಮೇಲಿನದನ್ನು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು.


...

ಕಳೆದ ವರ್ಷ ಬಂಗಾಳದ ನಂದಿಗ್ರಾಮದಲ್ಲಾದ ಹಿಂಸೆಯ ಚಿತ್ರಗಳನ್ನು ನಾನು ನೋಡಿಲ್ಲ. ಆದರೆ, ನನ್ನಣ್ಣ ಯಾವುದೊ ಮಾತಿಗೆ ಒಂದೆರಡು ಸಲ ಅವರು ಟಿವಿಯಲ್ಲಿ ನೋಡಿದ್ದನ್ನು ಹೇಳಿದ್ದರು. ಕುಯ್ದ ಹೊಟ್ಟೆಯಿಂದ ಈಚೆಗೆ ಬಂದ ಕರುಳನ್ನು ಆಕೆ (ಹೆಂಗಸೆಂದು ಹೇಳಿದ ನೆನಪು) ಒಳಗೆ ತಳ್ಳಿಕೊಳ್ಳುತ್ತಿದ್ದಳಂತೆ.

ಆ ಘಟನೆಗೂ ಇದನ್ನು ಹೋಲಿಸಿಕೊಂಡು ಯಾವುದು ಹೆಚ್ಚು ತೀವ್ರ ಎಂದು ಯೊಚಿಸುತ್ತಿದ್ದೇನೆ. ಅಂತಹ ಆಯ್ಕೆಯೇ ಅಮಾನವೀಯ ಮತ್ತು ಸಂಕುಚಿತ ದೃಷ್ಟಿಕೋನದ್ದು ಎಂದುಕೊಂಡು ಸುಮ್ಮನಾಗುತ್ತೇನೆ.

ಕಳೆದ ಆರೇಳು ವರ್ಷಗಳಿಂದ ಈ ತರಹದ ಯಾವೊಂದು ಹಿಂಸಾತ್ಮಕ ಘಟನೆಗಳನ್ನು ನಾನು ನೇರವಾಗಿ ನೋಡಿಲ್ಲ. ಊರಲ್ಲಿದ್ದಾಗ ಆಗಾಗ ಹೊಡೆದಾಟಗಳನ್ನು ನೋಡುತ್ತಿದ್ದೆ. ಇಷ್ಟೊಂದು ದೀರ್ಘಾವಧಿಯ ನಂತರ ಈಗಲೆ ಮತ್ತೆ ಇಂತಹುದನ್ನು ನೋಡಿದ್ದು. ಈ ದಿನಗಳಲ್ಲಿ ಅನೇಕಾನೇಕ ಭೀಕರ ಘಟನೆಗಳನ್ನು ಭಾರತದಲ್ಲಿ ಜನ ಟಿವಿಯಲ್ಲಿ ನೋಡಿದ್ದಾರೆ. ನಾನು ಓದಿದ್ದೆ, ಕೇಳಿದ್ದೆ. ಆದರೆ ನೋಡಿರಲಿಲ್ಲ. ಅದರ ತೀವ್ರತೆಯೇ ಬೇರೆ.

...

ಈ ವಿಷಯದ ಬಗ್ಗೆ ಇನ್ನೂ ಬರೆಯಲು ಮನಸ್ಸಾಗುತ್ತದೆ. ಆದರೆ, ನಾವು ಕ್ರಮಿಸಬೇಕಾದ ದಾರಿ ಬಹಳ ಉದ್ದವಿದೆ ಮತ್ತು ಕಷ್ಟದ್ದಾಗಿದೆ ಎಂದುಕೊಂಡು ಇನ್ನೊಂದು ಪ್ಯಾರಾ ಬರೆದು ನಿಲ್ಲಿಸುತ್ತೇನೆ.

ಮೇಲೆ ಹೇಳಿದ ಇಮೇಯ್ಲ್ ಕಳುಹಿಸಿದವರು ಇಲ್ಲಿ ನನಗೆ ಯಾವುದೆ ಸಣ್ಣಪುಟ್ಟ ವೈಯಕ್ತಿಕ ಸಹಾಯ ಬೇಕಾದರೂ ನಾನು ಮೊದಲು ಕರೆ ಮಾಡುವ ವ್ಯಕ್ತಿ. ರಾತ್ರಿ ಈ ವಿಡಿಯೊ ನೋಡಿ ಮಲಗಿಕೊಂಡೆ. ಬೆಳಿಗ್ಗೆ ಐದರ ಸಮಯದಲ್ಲಿ ದುಸ್ವಪ್ನದಿಂದಾಗಿ ಬೆಚ್ಚಿಬಿದ್ದು ಎದ್ದೆ. ಆ ದುಸ್ವಪ್ನದಲ್ಲಿ ಈ ನನ್ನ ಸ್ನೇಹಿತರು ನನ್ನನ್ನು ಕಷ್ಟಕ್ಕೆ ಮತ್ತು ಭೀತಿಗೆ ಸಿಲುಕಿಸುವ ಬೇಜವಾಬ್ದಾರಿ ಘಟನೆಯೊಂದಕ್ಕೆ ಪ್ರೋತ್ಸಾಹ ನೀಡುತ್ತಿದ್ದರಷ್ಟೇ ಅಲ್ಲದೆ, ಅದರಲ್ಲಿ ಪಾಲುದಾರರೂ ಆಗಿದ್ದರು. ಸಹಮಾನವರೇ ಸಹಮಾನವರನ್ನು ಕೊಲ್ಲುವ ವಿಡಿಯೊ ತೋರಿಸಿದ ನನಗೆ ಬೇಕಾದ ಈ ಸ್ನೇಹಿತರು ನನ್ನ ಕನಸಿನಲ್ಲಿ ಬೇಜವಾಬ್ದಾರಿಯ, ಪರಿಣಾಮಗಳ ಬಗ್ಗೆ ಪರಿವೆಯೇ ಇಲ್ಲದ, ಕೆಟ್ಟಸ್ನೇಹಿತರಾಗಿ ಬದಲಾಗಿದ್ದರು. ಈ ಕನಸಿಗೆ ಒಂದು ಅರ್ಥವಿದೆ.

Nov 14, 2008

ಮೊಬೈಲ್‍ನಿಂದ ಪಂಪ್‌ಸೆಟ್ ನಿಯಂತ್ರಣ ಮತ್ತು ಜನಾರ್ಧನ ಸ್ವಾಮಿ

ಹವ್ಯಾಸಿ ವ್ಯಂಗ್ಯಚಿತ್ರಕಾರರೂ, ಉತ್ತಮ ಗ್ರಾಫಿಕ್ ವಿನ್ಯಾಸಕಾರರೂ, ಮತ್ತು ಚಿಪ್ ಡಿಸೈನಿಂಗ್‌ ಕ್ಷೇತ್ರದಲ್ಲಿ ಒಂದು ಪ್ಯಾಟೆಂಟ್ ಪಡೆದಿರುವವರೂ ಆದ ಗೆಳೆಯ ಜನಾರ್ಧನ ಸ್ವಾಮಿ ನನಗೆ ಮೊದಲು ಪರಿಚಯವಾದದ್ದು 2004 ರಲ್ಲಿ; ನಾನು ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಕಾರ್ಯದರ್ಶಿಯಾಗಿದ್ದಾಗ. ಅಲ್ಲಿಂದೀಚೆಗೆ ಕನಿಷ್ಠ ಹತ್ತಿಪ್ಪತ್ತು ಬಾರಿಯಾದರೂ (ಅಕ್ಷರಶಃ!) ಸ್ವಾಮಿ ಮೊಬೈಲ್ ಫೋನಿನಿಂದ ಅಥವ ಅಂತಹುದೇ ವೈರ್‌ಲೆಸ್ ಉಪಕರಣದಿಂದ ಬೋರ್‌ವೆಲ್ ಮೋಟಾರುಗಳನ್ನು ನಿಯಂತ್ರಿಸುವ ಬಗ್ಗೆ ಹೇಳುತ್ತಲೇ ಬಂದಿದ್ದಾರೆ.

ಹಳ್ಳಿಗಳಲ್ಲಿ ಬೋರ್‌‍‌ವೆಲ್ ಇಟ್ಟುಕೊಂಡು ಕೃಷಿ ಮಾಡುತ್ತಿರುವವರು ಕರೆಂಟ್ ಹೋಗಿಬಂದಾಗಲೆಲ್ಲ ತಮ್ಮ ಪಂಪ್‌‍ಸೆಟ್ ಇಟ್ಟಿರುವ ಜಾಗಕ್ಕೆ ತೀರ್ಥಯಾತ್ರೆ ಮಾಡುವ ಅನಿವಾರ್ಯ ಕೆಲಸ ಒಂದಿದೆ. ಕರ್ನಾಟಕದ ಬಯಲುಸೀಮೆಯಲ್ಲಿ ಕೃಷಿ ಮಾಡುವವರು, ವಿಶೇಷವಾಗಿ ತೋಟಗಾರಿಕೆ ಮಾಡುವವರು, ತಮ್ಮ ಬೋರ್‌ವೆಲ್‌ನಲ್ಲಿ ಸಾಕಷ್ಟು ರಭಸವಾಗಿ ಬರುವ ನೀರು ಇಲ್ಲದೆ ಇದ್ದರೆ ಒಂದು ಸುಮಾರಾದ ಮಣ್ಣಿನ ಅಥವ ಸಿಮೆಂಟಿನ ಟ್ಯಾಂಕ್ ಕಾಟ್ಟಿಕೊಂಡಿರುತ್ತಾರೆ. ಕರೆಂಟ್ ಇರುವಾಗಲೆಲ್ಲ ಆ ಟ್ಯಾಂಕಿಗೆ ನೀರು ತುಂಬಿಸಿ, ನಂತರ ಅದರಿಂದ ರಭಸವಾಗಿ ಹರಿಯುವ ನೀರನ್ನು ಪಾತಿಗಳಿಗೆ ಹರಿಸುತ್ತ ಹೋಗುತ್ತಾರೆ. ಇದನ್ನು ನೀರು ಕಟ್ಟುವುದು ಎಂತಲೂ ಅನ್ನುತ್ತಾರೆ. ಇಲ್ಲಿ ಮೊದಲಿಗೆ ಟ್ಯಾಂಕ್ ತುಂಬಿಸುವ ಕೆಲಸ ಇದೆಯಲ್ಲಾ, ಅದೆ ದೊಡ್ಡ ಸಮಸ್ಯೆ. ದಿನವೂ ಹತ್ತಾರು ಗಂಟೆಗಳ ಕಾಲ ತುಂಬಿಸಬೇಕು. ಕರೆಂಟ್ ಬಂದು ಹೋಗುವ ಲೋಡ್-ಶೆಡ್ಡಿಂಗ್ ಸಮಯದಲ್ಲಂತೂ ಆಫ್ ಆದ ಬೋರ್‍ವೆಲ್ಲನ್ನು ಮತ್ತೆ ಚಾಲೂ ಮಾಡಲು ಮನೆಯಿಂದ ತೋಟಕ್ಕೆ ಓಡಬೇಕು. ಕೆಲವೊಂದು ಕಡೆ ಓಡಿದರೂ ನಿಧಾನವಾಗಿ ಬಿಡುತ್ತದೆ. ಕರೆಂಟ್ ಬಂದ ತಕ್ಷಣ ಸೈಕಲ್‌ಗಳಲ್ಲಿ ಅಥವ್ ಬೈಕ್‌ಗಳಲ್ಲಿ ತಮ್ಮ ತೋಟದತ್ತ ದೌಡಾಯಿಸುವ ಜನರನ್ನು ನಾನು ಏಳೆಂಟು ವರ್ಷಗಳ ಹಿಂದೆ ಸ್ವತಃ ಕಂಡಿದ್ದೆ. ಅವರು ಹಾಗೆ ಓಡಲು ಮುಖ್ಯ ಕಾರಣ ಅಕ್ಕಪಕ್ಕದ ತೋಟದವರು ಈಗಾಗಲೆ ತಮ್ಮ ಪಂಪ್‍ಸೆಟ್‍ಗಳನ್ನು ಆನ್ ಮಾಡಿಬಿಟ್ಟಿದ್ದರೆ ಇವರ ಪಂಪ್‌ಸೆಟ್‌ ಆನ್ ಆಗಲು ಇರಬೇಕಾದ ವೋಲ್ಟೇಜ್ ಇರುವುದಿಲ್ಲ. ಎಷ್ಟೋ ಸಲ ಒಂದು ಬೆಳೆಯ ಭವಿಷ್ಯ ಒಂದೆರಡು ದಿನದ ನೀರು ಹರಿಸುವಿಕೆಯ ಮೇಲೆ ಅವಲಂಭಿಸಿರುತ್ತದೆ.

ಹೀಗೆ ಕರೆಂಟ್ ಬಂದತಕ್ಷಣ ಮನುಷ್ಯರೇ ಹೋಗಿ ಮೋಟಾರ್ ಆನ್ ಮಾಡುವುದಕ್ಕಿಂತ ಸ್ವಯಂಚಾಲಿತವಾಗಿ ಆನ್ ಆಗುವ ಒಂದು ಪ್ಯಾನೆಲ್ ಬೋರ್ಡ್ ವ್ಯವಸ್ಥೆ ಬಹಳ ವರ್ಷಗಳಿಂದಲೂ ಇದೆ. ಆದರೆ, ಎಲ್ಲಾ ಸಮಯದಲ್ಲೂ ಇದು ಸರಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವೊಮ್ಮೆ ಸಿಂಗಲ್ ಫೇಸ್ ಇರುವಾಗಲೂ ಮೋಟರ್ ಅನ್ನು ಬಲವಂತವಾಗಿ ಆನ್ ಮಾಡಿಬಿಟ್ಟರೆ, ಅದೃಷ್ಟ ಸ್ವಲ್ಪ ಕೆಟ್ಟಿದ್ದರೆ ಪ್ಯಾನೆಲ್ ಬೋರ್ಡ್ ಸುಡುತ್ತದೆ. ಅದೃಷ್ಟ ಪೂರ್ತಿ ಕೆಟ್ಟಿದ್ದರೆ ಮೋಟಾರ್ ಸುಡುತ್ತದೆ. ಏಳೆಂಟು ವರ್ಷದ ಹಿಂದೆ ಪ್ಯಾನೆಲ್ ಬೋರ್ಡ್ ರಿಪೇರಿಗೆ ಸುಮಾರು ಸಾವಿರ ರೂಪಾಯಿಯ ತನಕ ಖರ್ಚು ಬೀಳುತ್ತಿತ್ತು. ಮೋಟಾರ್ ಸುಟ್ಟಿದ್ದರೆ ಅದರ ಕಾಯಿಲ್ ಕಟ್ಟಲು ಸುಮಾರು ಮೂರು ಸಾವಿರ ತನಕ ಬೇಕಾಗಿತ್ತು. ಅದರ ಜೊತೆಗೆ ಬೋರ್‍ವೆಲ್‌ನಿಂದ ಮೋಟಾರ್ ಅನ್ನು ಮೇಲಕ್ಕೆತ್ತುವ, ಇಳಿಸುವ ಸಮಯ ಮತ್ತು ಖರ್ಚು ಬೇರೆಯದೇ ಇತ್ತು. ಈಗ ಇವಕ್ಕೆಲ್ಲ ಎಷ್ಟು ಖರ್ಚಾಗುತ್ತದೆ ಎಂದು ನನಗೆ ಗೊತ್ತಿಲ್ಲ. (ಇದನ್ನು ಓದುತ್ತಿರುವ ಯಾರಿಗಾದರೂ ಗೊತ್ತಿದೆಯೆ?)

ಈ ವಿಷಯಗಳು ನನಗೂ ಮತ್ತು ಸ್ವಾಮಿಗೆ ಗೊತ್ತಿದ್ದಿದ್ದರಿಂದಲೆ, ಸ್ವಾಮಿ ಈ ವಿಚಾರ ಹೇಳುವಾಗಲೆಲ್ಲ ನಾನು ಅದರ ಸಾಧಕಬಾಧಕಗಳ ಕುರಿತು ಯೊಚಿಸುತ್ತಿದ್ದೆ. ಆದರೆ ಸ್ವಾಮಿ ಇಲ್ಲಿ ಅಮೆರಿಕದಲ್ಲಿ ಇದ್ದಿದ್ದರಿಂದ ಅವರಿಗೆ ಮೊಬೈಲ್‌ನಿಂದ ಅಥವ ವೈರ್‌ಲೆಸ್ ಉಪಕರಣದಿಂದ ಮೋಟಾರ್‌ಗಳನ್ನು ಆನ್/ಆಫ್ ಮಾಡುವ ಉಪಕರಣದ Prototype ಮಾಡಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ತಾನೆ ಬೆಂಗಳೂರಿಗೆ ವಾಪಸ್ಸಾದ ಸ್ವಾಮಿಗೆ ಈಗಲೂ ಇದರ ಬಗ್ಗೆ ಯೋಚಿಸಲು ಮತ್ತು ಕೆಲಸ ಮಾಡಲು ಬಿಡುವಾಗಿರಲಿಲ್ಲ ಎನ್ನಿಸುತ್ತದೆ.

ಕಳೆದ ಒಂದೆರಡು ವಾರಗಳಿಂದ ಇಂಟರ್ನೆಟ್ಟಿನ ಯಾವುದೆ ಕನ್ನಡ ಪತ್ರಿಕೆಗಳನ್ನು ನೋಡಿದರೂ ಈ ವಿದ್ಯುತ್ ಕ್ಷಾಮ ಮತ್ತು ಲೊಡ್-ಶೆಡ್ಡಿಂಗ್‍ನದೇ ಸುದ್ದಿ. ಆಗೆಲ್ಲ ಸ್ವಾಮಿ ಹೇಳುತ್ತಿದ್ದ ಈ ಉಪಕರಣದ ವಿಷಯ ನೆನಪಿಗೆ ಬರುತ್ತಿತ್ತು. ಇವತ್ತು ಪ್ರಜಾವಾಣಿ ಅಂತರ್ಜಾಲ ಅಪ್‌ಡೇಟ್ ಆದ ಸ್ವಲ್ಪ ಹೊತ್ತಿಗೆ ಅವರ ಸೈಟಿಗೆ ಹೋಗಿ ನೊಡಿದರೆ ಮೊದಲಿಗೇ ನನ್ನನ್ನು ಸೆಳೆದ ವಿಷಯ "ಫೋನ್ ಕರೆ, ಎಸ್‌‍ಎಂಎಸ್‌‍ನಿಂದ ಪಂಪ್‌‍ಸೆಟ್ ನಿಯಂತ್ರಣ." ಇದು ಸ್ವಾಮಿ‍ಯವರು ಮಾಡಿರುವ ಉಪಕರಣವೆ? ಇದರ ಬಗ್ಗೆ ಅವರು ಏನೂ ತಿಳಿಸೇ ಇಲ್ಲವಲ್ಲ ಎಂದುಕೊಂಡು ಆ ಪುಟವನ್ನು ಕ್ಲಿಕ್ ಮಾಡಿದೆ. ಆದರೆ, ಇದು ಸ್ವಾಮಿ ಹೇಳುತ್ತಿದ್ದ ರೀತಿಯದೆ. ಇದನ್ನು ಅಭಿವೃದ್ಧಿ ಪಡಿಸಿದ್ದವರು ಮಾತ್ರ ಬೆಳಗಾವಿ ಮೂಲದ ರಾಜೇಶ್ ಕುಲಕರ್ಣಿ. ಇದನ್ನು ಅಭಿವೃದ್ಧಿ ಪಡಿಸಲು ಅವರು ಐದು ವರ್ಷ ಕೆಲಸ ಮಾಡಿದ್ದಾರೆ. ಈಗಾಗಲೆ ಸುಮಾರು 2000 ಉಪಕರಣಗಳನ್ನು ಮಹಾರಾಷ್ಟ್ರದಲ್ಲಿ ಅಳವಡಿಸಿದ್ದಾರಂತೆ.

ನನಗೆ ಈ ಸುದ್ದಿ ಓದಿ ಬಹಳ ಖುಷಿಯಾಯಿತು. ತಂತ್ರಜ್ಞಾನವನ್ನು ನಮ್ಮ ಸ್ಥಳೀಯ ಅವಶ್ಯಕತೆಗಳಿಗೆ ಅಳವಡಿಸಿಕೊಳ್ಳುವ ರೀತಿ ಇದು. ಆದರೆ, ಇಲ್ಲಿ ಈ ಉಪಕರಣದ improvement ಗೆ ಇನ್ನೂ ಬಹಳ scope ಇದೆ. ಇದರ ಒಂದು ಮಾದರಿಯ ಬೆಲೆ 8500 ರೂಪಾಯಿ ಆದರೆ, ಮತ್ತೊಂದು ಮಾದರಿಗೆ 12,500 ರೂಪಾಯಿ ತಗಲುತ್ತಿದೆ. ಕಳೆದ ಐದಾರು ವರ್ಷಗಳಲ್ಲಿ ಬದಲಾಗಿರುವ ತಂತ್ರಜ್ಞಾನ ಮತ್ತು ಮೊಬೈಲ್ ಕ್ರಾಂತಿಯಿಂದಾಗಿ ಇದನ್ನು ಇನ್ನೂ ಕಡಿಮೆ ದರದಲ್ಲಿ, 2-3 ಸಾವಿರ ರೂಪಾಯಿಗೆಲ್ಲ ಸಿಗುವಂತೆ ಮಾಡಬಹುದು. ವಿಶೇಷವಾಗಿ ಬೆಂಗಳೂರಿನ ಹಾರ್ಡ್‍ವೇರ್-ಎಂಬೆಡ್ಡೆಡ್ ಸಿಸ್ಟಮ್ಸ್‌‌ನಲ್ಲಿ ಕೆಲಸ ಮಾಡುವ ಹುಡುಗರಿಗೆ ಇದನ್ನು ಪರಿಷ್ಕರಿಸಲು ಅಷ್ಟೇನೂ ಕಷ್ಟವಾಗುವುದಿಲ್ಲ. ಭಾರತದಲ್ಲಿ ಮೊಬೈಲ್ ಮಾರಾಟ ಮಾಡುತ್ತಿರುವ ರಿಲೈಯನ್ಸ್‌ನಂತಹ ಕಂಪನಿಗಳೂ (ಅಥವ ಹಾರ್ಡ್‍‍ವೇರ್‌ನಲ್ಲೂ ತೊಡಗಿಸಿಕೊಂಡಿರುವ ವಿಪ್ರೊ) ಇದಕ್ಕೆ ಕೈ ಹಾಕಿದರೆ ನಿಜಕ್ಕೂ ಒಂದೆರಡು ಸಾವಿರ ರೂಪಾಯಿಗೆ ಇದನ್ನು ಮಾರಬಹುದು. ಕರೆಂಟ್ ಕ್ಷಾಮದ ಈ ಸಮಯದಲ್ಲಂತೂ ಇಂತಹ ಉಪಕರಣಕ್ಕೆ ದೇಶದಾದ್ಯಂತ ಲಕ್ಷದ ತನ ಬೇಡಿಕೆ ಬರಬಹುದು. ಕನಿಷ್ಠವೆಂದರೂ ಹತ್ತಿಪ್ಪತ್ತು ಕೋಟಿ ರೂಪಾಯಿಗಳ ಉದ್ದಿಮೆ ಇದು.


ಪೂರಕ ಓದಿಗೆ:
ಸ್ವಾಮಿ ಮತ್ತು ಮಹಮ್ಮದ್ ಹಾಗೂ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳು
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಜೂನ್ 29, 2007 ರ ಸಂಚಿಕೆಯಲ್ಲಿನ ಲೇಖನ)

ಕಳೆದ ಮೂರು ವರ್ಷಗಳಿಂದ ಆತ್ಮೀಯ ಸ್ನೇಹಿತರಲ್ಲೊಬ್ಬರಾಗಿದ್ದ, ಕನ್ನಡ, ಕರ್ನಾಟಕದ ಸ್ಥಿತಿಗತಿಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದ, ತಂತ್ರಜ್ಞಾನ ಕ್ಷೇತ್ರದಲ್ಲಿ ಪೇಟೆಂಟ್‌ಗಳನ್ನೂ ಗಳಿಸಿ ನಮ್ಮ ನಡುವೆಯ ಮೇಧಾವಿ ಎನಿಸಿದ್ದ ಆಪ್ತ ಸ್ನೇಹಿತ ಸ್ವಾಮಿ ಇದೇ ತಿಂಗಳು ಭಾರತಕ್ಕೆ ಹಿಂದಿರುಗುತ್ತಿದ್ದಾರೆ.

ಜನಾರ್ಧನ ಸ್ವಾಮಿ ನನ್ನ ಹಾಗೆಯೆ ಹಳ್ಳಿಯಿಂದ ಬಂದವರು. ದಾವಣಗೆರೆಯ ಹತ್ತಿರದ ಹಳ್ಳಿ ಅವರದು. ಹತ್ತನೆ ತರಗತಿಯ ತನಕ ಓದಿದ್ದೆಲ್ಲ ಹಳ್ಳಿಯಲ್ಲಿಯೆ. ದಾವಣಗೆರೆಯ BDT ಯಲ್ಲಿ B.E. ಮಾಡಿ, ಬೆಂಗಳೂರಿನ IISc ಯಲ್ಲಿ MTech ಮಾಡಿ, ಸುಮಾರು ಹತ್ತು ವರ್ಷಗಳ ಹಿಂದೆ ಅಮೇರಿಕಕ್ಕೆ ಬಂದು Sun Microsystems ನಲ್ಲಿ cutting-edge technology ಯ ಮೇಲೆ ಇಲ್ಲಿಯ ತನಕ ಕೆಲಸ ಮಾಡುತ್ತಿದ್ದವರು. ನಾಲ್ಕೈದು ವರ್ಷಗಳ ಹಿಂದೆ ಚಿಪ್ ಡಿಸೈನ್‌ನಲ್ಲಿ ಪೇಟೆಂಟ್ ಸಹ ಪಡೆದಿದ್ದಾರೆ. ಇಂತಹ ಸ್ವಾಮಿ ಕನ್ನಡ ಮೀಡಿಯಮ್ SSLC ಯಲ್ಲಿ ಪಾಸಾಗಿದ್ದು ಮಾತ್ರ ಸೆಕೆಂಡ್ ಕ್ಲಾಸ್‌ನಲ್ಲಿ ಎಂದರೆ ಯಾರಿಗೇ ಆಗಲಿ ಆಶ್ಚರ್ಯವಾಗದೇ ಇರದು! ಇನ್ನೂ ಆಶ್ಚರ್ಯವೆಂದರೆ, ಆ ಹಳ್ಳಿಯ ಶಾಲೆಯಲ್ಲಿ ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾದ ಇವರೇ ಟಾಪ್ ಸ್ಕೋರರ್!

ಇಲ್ಲಿನ ಸಿಲಿಕಾನ್ ಕಾಣಿವೆಯಲ್ಲಿ ಸ್ವಾಮಿಯವರ ತರಹವೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಧಾವಿಗಳಾಗಿರುವ ಅನೇಕ ಭಾರತೀಯರಿದ್ದಾರೆ. ಅದೇನೂ ಅಂತಹ ದೊಡ್ಡ ವಿಷಯವಲ್ಲ. ಆದರೆ ಸ್ವಾಮಿಯಂತಹ ಒಬ್ಬ ಉತ್ತಮ ವ್ಯಂಗಚಿತ್ರಕಾರ, ಅಷ್ಟೇ ಉತ್ತಮ ಕಂಪ್ಯೂಟರ್ ಗ್ರಾಫಿಕ್ ಡಿಸೈನರ್, ರೈತರಿಗೆ ಯಾವ ಯಾವ ಸಾಧನ-ಸಲಕರಣೆ ಮಾಡಿದರೆ ಅವರ ದೈನಂದಿನ ಜೀವನ ಉತ್ತಮಗೊಳ್ಳುತ್ತದೆ, ಅವರ ಪ್ರೊಡಕ್ಟಿವಿಟಿ ಹೆಚ್ಚುತ್ತದೆ ಎಂದು ಆಲೋಚಿಸುವ ಕನ್ನಡ ಇಂಜಿನಿಯರ್ ವಿರಳಾತಿ ವಿರಳ. ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಗಲೆ ಅಲ್ಲಿನ ಸ್ಥಳೀಯ ಕನ್ನಡ ಪತ್ರಿಕೆಗಳಿಗೆ ಸ್ವಾಮಿ ಕಾರ್ಟೂನ್ ಬರೆಯುತ್ತಿದ್ದರು. ಅದೇ ಸಮಯದಲ್ಲಿ "Electronics For You" ಯಂತಹ ಟೆಕ್ನಾಲಜಿ ಸಂಬಂಧಿತ ಮ್ಯಾಗಜೀನ್‌ಗಳಿಗೂ ಇಂಗ್ಲಿಷ್‌ನಲ್ಲಿ ಕಾರ್ಟೂನ್ ಬರೆಯುತ್ತಿದ್ದರು. ಅವರೇ ಹೇಳುವ ಪ್ರಕಾರ, ಒಮ್ಮೊಮ್ಮೆ ಅವರ ಇಂಜಿನಿಯರಿಂಗ್ ಕಾಲೇಜಿನ ಲೆಕ್ಚರರ್‌ಗಳು ಗಳಿಸುತ್ತಿದ್ದಕ್ಕಿಂತ ಹೆಚ್ಚಿನ ದುಡ್ಡು ಈ ಕಾರ್ಟೂನ್ ಬರೆಯುವುದರಿಂದಲೆ ಇವರಿಗೆ ಬರುತ್ತಿತ್ತಂತೆ. ಈ ಮಧ್ಯೆ ಅವರ ವ್ಯಂಗ್ಯಚಿತ್ರ ಬರವಣಿಗೆ ಕಮ್ಮಿಯಾಗಿದೆಯಾದರೂ, ಪೂರ್ಣವಾಗಿ ನಿಂತಿಲ್ಲ. ಅವರ ವೆಬ್‌ಸೈಟ್ www.jswamy.com ನಲ್ಲಿ ಅವರ ನೂರಾರು ಕನ್ನಡ ಮತ್ತು ಇಂಗ್ಲಿಷ್ ಕಾರ್ಟೂನ್‌ಗಳಿವೆ.

ಈ ಸ್ವಾಮಿಯ ಜೊತೆಗೂಡಿ ಒಂದು ವರ್ಷಪೂರ್ತಿ ಕೆಲಸ ಮಾಡಿದ ಹೆಮ್ಮೆ ನನ್ನದು. ಅಮೇರಿಕಾದಲ್ಲಿಯ ದೊಡ್ಡ ಕನ್ನಡ ಕೂಟಗಳಲ್ಲಿ ಒಂದಾದ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟಕ್ಕೆ 2005 ರಲ್ಲಿ ನಾನು ಅಧ್ಯಕ್ಷನಾಗಿದ್ದೆ. ಸ್ವಾಮಿ ಉಪಾಧ್ಯಕ್ಷರಾಗಿದ್ದರು. ಅದರ ಜೊತೆಗೆ ಸಂಘದ ಆ ವರ್ಷದ ಸಾಹಿತ್ಯಕ ಸಂಚಿಕೆಯ ಮುಖ್ಯಸಂಪಾದಕರೂ ಅವರೆ. ಅವರ ಸಂಪಾದಕತ್ವದ ಸಮಿತಿಯಲ್ಲಿ ನಾನು ಉಪಸಂಪಾದಕ. ಆ ಸಮಯದಲ್ಲಿ ನಾನು ಅವರಿಂದ ಕಲಿತದ್ದು ಅಪಾರ. ಇಲ್ಲಿಯ ಕನ್ನಡದ ಕೆಲಸಕ್ಕೆ ಅನೇಕ ಹಗಲು-ರಾತ್ರಿಗಳನ್ನು ಅವರು ಕಂಪ್ಯೂಟರ್ ಮುಂದೆ ಕಳೆದಿದ್ದಾರೆ. ಅದೇ ರೀತಿ, ಅಕ್ಕ ವಿಶ್ವಕನ್ನಡ ಸಮ್ಮೇಳನದ ಬಹುಪಾಲು ಸ್ಮರಣ ಸಂಚಿಕೆಗಳ ಮುಖಪುಟ ವಿನ್ಯಾಸವೂ ಸ್ವಾಮಿಯವರದೆ.

ಎಮ್ಮೆ ಮೇಯಿಸುತ್ತ ಹಳ್ಳಿಯಲ್ಲಿ ಬೆಳೆದ ಸ್ವಾಮಿಯವರು ಕಳೆದ ವರ್ಷ ಬೆಂಗಳೂರಿಗೆ ಬಂದಿದ್ದಾಗ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಹೇಗೆ ಎಂಬ ವಿಷಯಕ್ಕೆ ಯಡಿಯೂರಪ್ಪನವರ ಜೊತೆಯೆಲ್ಲ ಮಾತನಾಡಿದರು. ಆದರೆ ಶಕ್ತಿರಾಜಕಾರಣದಲ್ಲಿ ಮುಳುಗಿ ಹೋದ ನಮ್ಮ ಸ್ವಾರ್ಥಿ ರಾಜಕಾರಣಿಗಳಿಗೆ ಇವರ ಭಾಷೆ ಅರ್ಥವಾಗುತ್ತದೆಯೆ ಎನ್ನುವ ಸಂಶಯ ನನ್ನದು. ಊರಿನಿಂದ ಇಷ್ಟು ದಿನ ದೂರವಿದ್ದ ಸ್ವಾಮಿ ಅಲ್ಲಿ ಏನೇನು ಮಾಡಬಹುದು ಎನ್ನುವ ಥಿಯರಿ ಪ್ರಪಂಚದಲ್ಲಿ ಮುಳುಗಿ ಬಿಟ್ಟಿದ್ದರು. ಈಗ ಅವರ ಥಿಯರಿಗಳನ್ನೆಲ್ಲ ಪ್ರಾಕ್ಟಿಕಲ್ಸ್‌ಗೆ ಪರಿವರ್ತಿಸುವ ಸಮಯ ಬಂದಿದೆ. ಅವರ ಪ್ರಾಕ್ಟಿಕಲ್ಸ್ ಯಶಸ್ವಿಯಾಗಲಿ ಎಂದು ಹಾರೈಸೋಣ. ಯಾಕೆಂದರೆ, ಅವರ ಸಾಧನೆಯಲ್ಲಿ ಸಮಾಜದ ಹಿತವೂ ಇರುತ್ತದೆ ಎನ್ನುವ ನಂಬಿಕೆ ನನ್ನದು.

ಭಾರತದ ಕಾರ್ಟೂನಿಸ್ಟ್‌ಗಳಲ್ಲಿ ಸ್ವಾಮಿಯವರಿಗೆ ಅತಿ ಹೆಚ್ಚು ಇಷ್ಟವಾದವರು ಆರ್.ಕೆ. ಲಕ್ಷಣ್ ಎಂದು ಹೇಳಲು ಅಷ್ಟೇನೂ ಊಹಿಸಬೇಕಿಲ್ಲ. ಕನ್ನಡದ ಕಾರ್ಟೂನಿಸ್ಟ್‌ಗಳಲ್ಲಿ ಅವರಿಗೆ ಹೆಚ್ಚು ಇಷ್ಟವಾದವರು ಪ್ರಜಾವಾಣಿಯ ಪಿ. ಮಹಮ್ಮದ್. ಸ್ವಾಮಿಯವರಿಗೇ ಏನು, ಬಹುಶಃ ಇವತ್ತು ಕರ್ನಾಟಕದ ಪ್ರಜ್ಞಾವಂತರ ಮೆಚ್ಚಿನ ಕಾರ್ಟೂನಿಸ್ಟ್ ಪಿ.ಮಹಮ್ಮದ್ದೆ. ಪತ್ರಿಕೆಯ ಕೆಲಸದಲ್ಲಿ ತೊಡಗಿಕೊಂಡಾಗಿನಿಂದ 'ಮಹಮ್ಮದ್‌ರ ಇವತ್ತಿನ ಕಾರ್ಟೂನ್ ನೋಡಿದಿರ?' ಎಂದು ಅನೇಕರು ಅನೇಕ ಸಲ ನನಗೆ ಕೇಳಿದ್ದಾರೆ, ಅನೇಕ ಸಲ ನಾನೆ ಇತರರನ್ನು ಕೇಳಿದ್ದೇನೆ. ಪ್ರಸ್ತುತ ವಿಷಯಗಳ ಬಗ್ಗೆ ಅಷ್ಟು ಪರಿಣಾಮಕಾರಿಯಾಗಿ, ಕಲಾತ್ಮಕತೆಯಿಂದ, ಜನಪರವಾಗಿ ಬರೆಯುವ ಮತ್ತೊಬ್ಬ ವ್ಯಂಗ್ಯಚಿತ್ರಕಾರ ಇವತ್ತು ಕರ್ನಾಟಕದಲ್ಲಿಲ್ಲ. ಆ ವಿಷಯಕ್ಕೆ ಬಂದರೆ, ಸ್ಟಾರ್ ವ್ಯಾಲ್ಯೂ ಇರುವ ಮೊದಲ ಕನ್ನಡ ವ್ಯಂಗ್ಯಚಿತ್ರಕಾರ ಪಿ. ಮಹಮ್ಮದ್.

ಪಿ. ಮಹಮ್ಮದ್ ಪ್ರಜಾವಾಣಿ ಬಿಟ್ಟು ಕನ್ನಡದ ಇನ್ಯಾವ ಪತ್ರಿಕೆಗೆ ಬರೆದಿದ್ದರೂ ನನಗೆ ಅವರ ಬಗ್ಗೆ ಇಷ್ಟು ಹೆಮ್ಮೆ ಅನ್ನಿಸುತ್ತಿರಲಿಲ್ಲ ಎನ್ನಿಸುತ್ತದೆ. ಬೇರೆ ಇನ್ಯಾವ ಪತ್ರಿಕೆಗೆ ಅವರು ಬರೆದರೂ ಆ ಪತ್ರಿಕೆಗಳ ಧ್ಯೇಯಧೋರಣೆಗಳೆ ಬೇರೆ ಇರುವುದರಿಂದ ಅವರು ಇಷ್ಟು ಮುಕ್ತವಾಗಿ, ಪರಿಣಾಮಕಾರಿಯಾಗಿ ಬರೆಯಲೂ ಸಾಧ್ಯವಿಲ್ಲ ಎನ್ನಿಸುತ್ತದೆ. ಇವತ್ತಿನ ಕನ್ನಡ ದಿನಪತ್ರಿಕೆಗಳಲ್ಲಿ ಬಹುಜನರ ಹಿತ ಬಯಸುವ ಪತ್ರಿಕೆ ಅಂದರೆ ಅದು ಪ್ರಜಾವಾಣಿಯೆ. ಯಾವುದೆ ಒಂದು ವಿಷಯದ ಬಗ್ಗೆ ಎರಡೂ ಕಡೆಯವರಿಗೂ ತಮ್ಮ ವಾದ ಮಂಡಿಸಲು ವೇದಿಕೆ ನಿಡುತ್ತಿರುವ ಪತ್ರಿಕೆಯೂ ಅದೆ. ಮಿಕ್ಕವು ಟ್ಯಾಬ್ಲಾಯ್ಡ್ ಹೆಡ್ಡಿಂಗುಗಳ, ಹಿಂಸಾವಿನೋದಿ, ಪಿತೂರಿಕೋರ, ಸೀಮಿತವರ್ಗವನ್ನು ಓಲೈಸುತ್ತ, ಅವರ ಅಹಂ ಅನ್ನು ತಣಿಸುತ್ತಿರುವ ಪತ್ರಿಕೆಗಳು.

ಇದೇ ಸಂಚಿಕೆಯಲ್ಲಿನ ತಮ್ಮ ಅಂಕಣದಲ್ಲಿ (ಪುಟ 21) ಅರವಿಂದ ಚೊಕ್ಕಾಡಿಯವರು ಹೀಗೆ ಬರೆಯುತ್ತಾರೆ:
"ನಮ್ಮ ಪತ್ರಿಕಾರಂಗ ಮೂರು ಅತಿರೇಕಗಳಲ್ಲಿದೆ. ಒಂದು ವರ್ಗ ಮತಾಂಧತೆಯನ್ನು ಪ್ರಚಾರ ಮಾಡುವುದನ್ನೇ ಪತ್ರಿಕೆಗಳ ಪವಿತ್ರ ಕರ್ತವ್ಯವನ್ನಾಗಿ ಮಾಡಿಕೊಂಡಿದೆ. ಇನ್ನೊಂದು ವರ್ಗ ಇನ್ಫೋಸಿಸ್ ನಾರಾಯಣ ಮೂರ್ತಿ, ಬಯೋಕಾನ್ ಕಿರಣ್ ಮಜುಮ್‌ದಾರ್‌ಗಳನ್ನು ರಾಮದಾಸ್‌ರಂತವರ ಸ್ಥಾನಕ್ಕೆ ತಂದು ಕೂರಿಸುವ ಪವಿತ್ರ ಕಾರ್ಯದಲ್ಲಿ ನಿರತವಾಗಿದೆ. ಮತ್ತೊಂದು ವರ್ಗಕ್ಕೆ ಸೆಕ್ಸ್-ಕ್ರೈಂ ವಿಜೃಂಭಣೆ ಮತ್ತು ಗಂಭೀರವಾದದ್ದನ್ನೆಲ್ಲ ಲಘುವಾಗಿ ಮಾಡುವುದೇ ಪತ್ರಕರ್ತನ ಕಾರ್ಯವಾಗಿದೆ. ಒಂದು ಪತ್ರಿಕೆ ಒಬ್ಬ ಸಾಹಿತಿಯ ತೇಜೋವಧೆ ಮಾಡುವ ಏಕೈಕ ಉದ್ದೇಶದಿಂದ ಕಾರ್ಯಪ್ರವೃತ್ತವಾಗುವ ನೀಚತನವನ್ನು ಪ್ರದರ್ಶಿಸುವ ಸಂದರ್ಭದಲ್ಲೇ..."
ಇಂತಹ ಸಂದರ್ಭದಲ್ಲಿ ದಿನಪತ್ರಿಕೆಗಳ ವಲಯದಲ್ಲಿ ಉಳಿದಿರುವ ಏಕೈಕ ಆಶಾಕಿರಣ ಎಂದರೆ ಅದು ಪ್ರಜಾವಾಣಿಯೆ.

ನಮ್ಮ ಪತ್ರಿಕೆ ಪ್ರಾರಂಭವಾಗುವುದಕ್ಕಿಂತ ಮುಂಚೆ ನಮ್ಮ ಪ್ರಕಾಶನದಿಂದ ಬೆಂಗಳೂರಿನಲ್ಲಿ ಒಂದು ಸಂವಾದ ಏರ್ಪಡಿಸಿದ್ದೆವು. ಅಂದಿನ ಸಂವಾದದಲ್ಲಿ ಕನ್ನಡಪ್ರಭದ ಸತ್ಯನಾರಾಯಣ, ಉದಯವಾಣಿಯ ಆರ್. ಪೂರ್ಣಿಮ, ಉಷಾಕಿರಣದ ವೆಂಕಟನಾರಾಯಣ, ಪ್ರಜಾವಾಣಿಯ ಪದ್ಮರಾಜ ದಂಡಾವತಿಯವರು "ಸಮಕಾಲೀನ ರಾಜಕೀಯ ಮತ್ತು ಕನ್ನಡ ಪತ್ರಿಕೋದ್ಯಮದ" ಬಗ್ಗೆ ಮಾತನಾಡಿದ್ದರು. ಆ ಸಂವಾದಕ್ಕೆ ಪ್ರಜಾವಾಣಿಯ ಅಂದಿನ ಸಂಪಾದಕರಾದ ಕೆ.ಎನ್. ಶಾಂತಕುಮಾರ್‌ರವರನ್ನು ಆಹ್ವಾನಿಸಲು ಹಿರಿಯ ಪತ್ರಕರ್ತ ಜಯರಾಮ ಅಡಿಗರೊಂದಿಗೆ ಹೋಗಿದ್ದೆ. ಕರ್ನಾಟಕದ ಪ್ರಜೆಯಾಗಿ, ಒಬ್ಬ ಓದುಗನಾಗಿ ಅವರನ್ನು ಅಂದು ನಾನು ಕೇಳಿಕೊಂಡದ್ದು ಇಷ್ಟೆ: "ಸಾರ್, ದಯವಿಟ್ಟು ಯಾವುದೇ ಕಾರಣಕ್ಕೂ ಪ್ರಜಾವಾಣಿಯ ಪ್ರಭಾವ ಕ್ಷೀಣಿಸದಂತೆ ನೋಡಿಕೊಳ್ಳಿ. ಇವತ್ತಿನ ದಿನ ಕರ್ನಾಟಕದ ಸಾಮಾಜಿಕ ಸಾಮರಸ್ಯಕ್ಕೆ, ಬಹುಜನರ ಹಿತಕ್ಕೆ ಪ್ರಜಾವಾಣಿ ಎಲ್ಲರಿಗಿಂತಲೂ ಮೇಲಿರಬೇಕು; ಅದು ಎಂದಿಗೂ ಸೋಲಬಾರದು." ಬಹುಶಃ ಅದು ನನ್ನೊಬ್ಬನದೆ ಆಗ್ರಹವಲ್ಲ, ಕನ್ನಡದ ಬಹುಪಾಲು ಪ್ರಜ್ಞಾವಂತರದೂ ಹೌದು.

ಕಳೆದ ಐದಾರು ತಿಂಗಳುಗಳಿಂದ ಎಸ್.ಎಲ್. ಭೈರಪ್ಪನವರ "ಆವರಣ" ಕಾದಂಬರಿಯ ಪರವಾಗಿ ಕೆಲವು ಕನ್ನಡ ಪತ್ರಿಕೆಗಳು ಮಾಡುತ್ತಿರುವ ಪ್ರಚೋದನೆಗಳು, ಪಿತೂರಿಗಳು, ಬಡಿದೆಬ್ಬಿಸುತ್ತಿರುವ ಭೂತಗಳು ಸುಸ್ಪಷ್ಟವಾಗಿದೆ. ಆವರಣ ಬಿಡುಗಡೆಯಾದ ತಕ್ಷಣ ಬ್ಯಾನ್ ಮಾಡಿಬಿಡುತ್ತಾರೆ, ಎಂಬಂತಹ ಸುದ್ದಿಗಳಿಂದ ಆರಂಭಿಸಿ, ಮೊದಲಿನಿಂದಲೂ ಬಹಳ ಪ್ರಜ್ಞಾಪೂರ್ವಕವಾಗಿ, ವ್ಯವಸ್ಥಿತವಾಗಿ, ಲೆಕ್ಕಾಚಾರವಾಗಿ ಮಾಡುತ್ತ ಬಂದಿದ್ದಾರೆ. ಉದಾರವಾದಿ, ಜನತಾಂತ್ರಿಕ ಮೌಲ್ಯಗಳನ್ನು ಗೌರವಿಸುವ, ಆಧುನಿಕ ಮನೋಭಾವದ ಕನ್ನಡಿಗರೇ ಇಲ್ಲ, ಎಲ್ಲರೂ ತಮ್ಮಂತೆಯೆ ಕೋಮುವಾದಿಗಳು ಎನ್ನುವಂತೆ ಬಿಂಬಿಸುತ್ತಿದ್ದಾರೆ. ಕಾಲಕ್ರಮೇಣ ತಮ್ಮೆಲ್ಲ ಭವಿಷ್ಯ, ಜ್ಯೋತಿಷ್ಯಗಳು ಸುಳ್ಳಾಗುತ್ತಿದ್ದಂತೆ ಹುತಾತ್ಮರಾಗಬೇಕೆಂದು ಬಯಸಿದ್ದ ಈ ಜನರು ಹತಾಶರಾಗಿ ಓಡಾಡುತ್ತಿದ್ದಾಗ ಕೆಲವು ಹಿರಿಯರು ವ್ಯವಸ್ಥಿತ ಪಿತೂರಿಗೆ ಬಲಿಯಾಗಿಬಿಟ್ಟು, ಇತ್ತೀಚೆಗೆ ತಾನೆ ಆ ಪುಣ್ಯಾತ್ಮರಿಗೆ ಒಂದಷ್ಟು ಗಂಗಾಜಲ ಕರುಣಿಸಿಬಿಟ್ಟರು.

ಅಂದ ಹಾಗೆ, ಈ ಸ್ವಘೋಷಿತ ಸತ್ಯ ಮತ್ತು ಸೌಂದರ್ಯೋಪಾಸಕರು ಭಾರತದ ಇತಿಹಾಸ ಪುಸ್ತಕಗಳು ಸುಳ್ಳು ಹೇಳುತ್ತವೆ ಎಂದು ಘೋಷಿಸುತ್ತಿದ್ದಾರಲ್ಲ, ಹೌದೆ? ನಾನು ಏಳನೆ ತರಗತಿಯ ತನಕ ಓದಿದ್ದು ನನ್ನ ಹಳ್ಳಿಯ ಸರ್ಕಾರಿ ಶಾಲೆಯ ಕನ್ನಡ ಮೀಡಿಯಮ್‌ನಲ್ಲಿ. ಹೈಸ್ಕೂಲ್‌ನಲ್ಲಿ ಓದಿದ್ದೂ ಕರ್ನಾಟಕ ಸರ್ಕಾರ ಸಿದ್ದಪಡಿಸಿದ್ದ ಸಿಲಬಸ್ ಅನ್ನೆ. ನಾನು ಓದಿದ ಯಾವುದೆ ಸಮಾಜ ಶಾಸ್ತ್ರದ ಪುಸ್ತಕದಲ್ಲಿ ಔರಂಗಜೇಬ ಪರಮತ ಸಹಿಷ್ಣು ಎಂದು ಇರಲಿಲ್ಲ. ಒಳ್ಳೆಯ ರಾಜ ಎಂದೂ ಇರಲಿಲ್ಲ. ಅವನ ಆಳ್ವಿಕೆಯಲ್ಲಿ ಹಿಂದೂಗಳಿಗೆ ಜೆಸ್ಸಿಯಾ ಅಂದರೆ ತಲೆಗಂದಾಯ ಇರಲಿಲ್ಲ ಎಂದೂ ಇರಲಿಲ್ಲ. ಖಿಲ್ಜಿಯ ದಂಡಯಾತ್ರೆಗಳ ಬಗ್ಗೆಯಾಗಲಿ, ವಿಗ್ರಹಾರಾಧನೆ ಕೂಡದೆಂದು ಮಲ್ಲಿಕ್ ಕಾಫರ್ ಮತ್ತು ಇತರ ಕೆಲವು ಮುಸ್ಲಿಮ್ ರಾಜರು ದೇವಾಲಯಗಳಲ್ಲಿ ವಿಗ್ರಹಗಳನ್ನು ಭಗ್ನಗೊಳಿಸಿದ ಬಗ್ಗೆಯಾಗಲಿ, ತುಘಲಕ್‌ನ ತಿಕ್ಕಲುತನಗಳಾಗಲಿ, ಮುಸ್ಲಿಮ್ ಅರಸರ ಆಟಾಟೋಪಕ್ಕೆ ವಿರುದ್ಧವಾಗಿಯೆ ಮೇಲೆದ್ದ ವಿಜಯನಗರ ಸಾಮ್ರಾಜ್ಯ, ಮರಾಠರ ಶಿವಾಜಿಯ ಬಗ್ಗೆಯಾಗಲಿ ಎಲ್ಲೂ ಮುಚ್ಚಿಟ್ಟಿರಲಿಲ್ಲ. ಇವನ್ನೆಲ್ಲ ಮುಚ್ಚಿಟ್ಟಿದ್ದಾರೆ ಎಂದು ಈ ನವಸತ್ಯಾಗ್ರಹಿಗಳು ಹುಯಿಲಿಡುತ್ತಿದ್ದಾರಲ್ಲ, ಯಾವ ದೇಶದ ಪಠ್ಯಪುಸ್ತಕದಲ್ಲಿ, ಸ್ವಾಮಿ?

ನನ್ನ ಮತವೇ ಶ್ರೇಷ್ಠ, ಎಲ್ಲಾ ಪರಮತಗಳೂ ಕೆಟ್ಟವು ಎನ್ನುವ ಮತಾಂಧರು ಜಾತಿವಾದಿಗಳೂ ಆಗಿರುತ್ತಾರೆ ಎನ್ನಲು ಈಗ ಚಲಾವಣೆಯಲ್ಲಿರುವ ಕೆಲವು ಸಾಹಿತಿಗಳೆ ಉದಾಹರಣೆ. ಮೂರು ತಿಂಗಳ ಹಿಂದೆ ಮೈಸೂರಿನಲ್ಲಿದ್ದಾಗ ಅಲ್ಲಿನ ಪರಿಚಿತರೊಬ್ಬರು ಒಂದು ವಿಷಯ ಹೇಳಿದರು. "ಹಿಂದೂಗಳೆಲ್ಲ ತಮ್ಮ ತಪ್ಪುಗಳನ್ನು ತಿದ್ದಿಕೊಂಡುಬಿಟ್ಟಿದ್ದಾರೆ, ಮುಸ್ಲಿಮರು ತಿದ್ದಿಕೊಳ್ಳುತ್ತಿಲ್ಲ, ಅವರನ್ನು ತಿದ್ದಬೇಕು," ಎಂದು ಹೇಳುತ್ತಿರುವ ಸಾಹಿತಿಯೊಬ್ಬರು ಅವರ ಜಾತಿಯ ಸಂಘದಲ್ಲಿ ಬಹಳ ಸಕ್ರಿಯವಾಗಿ ಇದ್ದಾರಂತೆ. ಕ್ಷಮಿಸಿ, ಜಾತಿಯದೂ ಅಲ್ಲ, ಜಾತಿಯಲ್ಲಿನ ಒಳಪಂಗಡದ ಸಂಸ್ಥೆ ಅದು. ಕರ್ನಾಟಕದ ಜಾತಿ ವ್ಯವಸ್ಥೆ ಗೊತ್ತಿರುವವರಿಗೆ ಜಾತಿಗಳಲ್ಲಿನ ಒಳಪಂಗಡಗಳ ಬಗ್ಗೆಯೂ ಗೊತ್ತಿರುತ್ತದೆ. ಲಿಂಗಾಯತರಲ್ಲಿ ಸಾದರ, ಬಣಜಿಗ, ಪಂಚಮಸಾಲಿ ಎಂದು ಇತ್ಯಾದಿ ಒಳಪಂಗಡಗಳಿದ್ದರೆ, ಕರ್ನಾಟಕದ ಬ್ರಾಹ್ಮಣರಲ್ಲಿ ಸ್ಮಾರ್ಥ, ಮಾಧ್ವ, ಶ್ರೀವೈಷ್ಣವ ಪಂಗಡಗಳಿವೆ. ಹಾಗೆಯೆ ಒಕ್ಕಲಿಗರಲ್ಲಿ ಕುಂಚಟಿಗ, ನಾಮಧಾರಿ, ದಾಸ, ಮರಸು, ಇತ್ಯಾದಿ. ಎಷ್ಟೋ ಸಲ ಈ ಒಳಪಂಗಡಗಳಲ್ಲಿ ಒಳಪಂಗಡಗಳಿವೆ. ಉದಾಹರಣೆಗೆ ಕರ್ನಾಟಕದ ಸ್ಮಾರ್ಥರಲ್ಲಿ ಹವ್ಯಕ, ಹೊಯ್ಸಳ ಕರ್ನಾಟಕ, ಬಬ್ಬೂರು ಕಮ್ಮೆ, ಸಂಕೇತಿ, ಕೋಟ, ಇತ್ಯಾದಿಯಾಗಿ ಮತ್ತೊಂದಷ್ಟಿವೆ. ಇಂತಹ ಒಳಪಂಗಡದಲ್ಲೊಂದು ಒಳಪಂಗಡದ ಜಾತಿ ಸಂಘದಲ್ಲಿ ಈ ಮಾನ್ಯರು ಕ್ರಿಯಾಶೀಲರಾಗಿದ್ದಾರಂತೆ. ಹಿಂದೂ ಒಂದು ಎಂದು ದೇಶಕ್ಕೆಲ್ಲ ಉಪದೇಶ ಬೋಧಿಸುವ ಇಂತಹವರು ಸಮಾಜವಿಭೇದದ ಮೂಲರೂಪವಾದ ಜಾತಿ ಸಂಘಗಳಲ್ಲಿ ಅದು ಹೇಗೆ ಕ್ರಿಯಾಶೀಲರಾಗಿರುತ್ತಾರೆ, ಅವರಿಗೆ ಕನಿಷ್ಠ ಸಂಕೋಚವೂ ಇಲ್ಲವೆ ಎನ್ನುವುದು ಇಲ್ಲಿಯ ಪ್ರಶ್ನೆ.

ಈ ಧರೆಗೆ ದೊಡ್ಡವರ ಮಕ್ಕಳು ತಮ್ಮ ಕಾಲೇಜು ದಿನಗಳಲ್ಲಿ "ರೌಡಿ" ಗಳಂತಿದ್ದರು ಎಂದು ಅವರ ಕಟ್ಟರ್ ಅಭಿಮಾನಿಯೊಬ್ಬರು ಗುಪ್ತನಾಮವೊಂದರಲ್ಲಿ ಗುಪ್ತಗುಪ್ತವಾಗಿ ಇತ್ತೀಚೆಗೆ ಬ್ಲಾಗೊಂದರಲ್ಲಿ ಬರೆದಿದ್ದಾರೆ. ಆ ಅಭಿಮಾನಿ ಹಾಗೆ ಬರೆಯಲು ನಮಗೆ ಮೈಸೂರಿನ ಪರಿಚಿತರು ಹೇಳಿದ ಘಟನೆಯೆ ಮೂಲಕಾರಣ ಎಂದು ನನ್ನ ಅಂದಾಜು. ಅದೇನೆಂದರೆ, ಈ ಸಾಹಿತಿಗಳ ಮಗ ತಮ್ಮ ಒಳಪಂಗಡದ ಸಂಸ್ಥೆಯ ಬೆಲೆಬಾಳುವ ಕಟ್ಟಡವನ್ನು ತನ್ನ ಹೆಸರಿಗೆ ಗುತ್ತಿಗೆ ಪಡೆಯಲೊ, ತನ್ನ ಕೈವಶ ಮಾಡಿಕೊಳ್ಳಲೊ ಅಪ್ಪನ ಮುಖಾಂತರ ಸಂಘದ ಮೇಲೆ ಒತ್ತಡ ಹಾಕುತ್ತಿದ್ದಾರಂತೆ. ಅದನ್ನು ಸಂಘದ ಹಿರಿಯರು ವಿರೋಧಿಸಿದ್ದಾರೆ. ಅದಕ್ಕೆ ಆ ಮಗ ವಿದೇಶದಿಂದಲೆ ಆ ಹಿರಿಯರಿಗೆಲ್ಲ ಧಮಕಿ ಹಾಕುತ್ತಿದ್ದಾನಂತೆ. ಇದು ದೇಶಕ್ಕೆಲ್ಲ ಬುದ್ಧಿ ಹೇಳಲು, ಇತಿಹಾಸ ಸರಿಪಡಿಸಲು ಓಡಾಡುತ್ತಿರುವವರ ವರ್ತಮಾನ! ಹಿಂದೂ ಸಮಾಜದಲ್ಲಿನ ಅಸಮಾನತೆಯನ್ನು, ಅಮಾನವೀಯತೆಯನ್ನು ತೊಡೆದು ಹಾಕಬೇಕು, ಎಲ್ಲರೂ ಒಂದೆ, ಹಿಂದೂ ಒಂದು ಎನ್ನುವ ಜನ ತಾವು ಬೆಂಬಲಿಸುತ್ತಿರುವುದು ಜಾತಿವಾದಿಗಳನ್ನು ಎನ್ನುವುದನ್ನು ಮೊದಲು ಗಮನಿಸಬೇಕು. ಅವರ ಮಾತು ಕೇಳಿದರೆ ಹಿಂದೂ ಸಮಾಜ ಸುಧಾರಣೆಯಾಗುವುದಿಲ್ಲ ಎನ್ನುವುದನ್ನು ಈ ಉಗ್ರ ದೇಶಪ್ರೇಮಿಗಳು ಬೇಗ ಗಮನಿಸಿದಷ್ಟೂ ದೇಶಕ್ಕೆ ಒಳ್ಳೆಯದು.

ಈ ಮತಾಂಧ, ಜಾತಿವಾದಿ ಜಾತ್ಯಂಧರು ಹೇಳುತ್ತಿರುವುದು ಇತಿಹಾಸದಲ್ಲಿನ ಸತ್ಯವನ್ನು ಹೇಳುತ್ತಿದ್ದೇವೆ ಎಂದು. ಕರ್ನಾಟಕದ ಅತಿ ಪ್ರಸಿದ್ಧ ಲೇಖಕನ ಅತಿ ಪ್ರಸಿದ್ಧ ಅಭಿಮಾನಿ ಬಾಲಲೇಖಕರೊಬ್ಬರು ಒಬ್ಬ ಸಾಹಿತಿಯ ಬಗ್ಗೆ ಮಾತನಾಡುತ್ತ ಅವರೇನು ಗಾಂಧಿಯ ಚಡ್ಡಿದೋಸ್ತಾ, ಗಾಂಧಿ ಹೀಗೆ ಹೇಳುತ್ತಿದ್ದರು ಎಂದು ಹೇಳುತ್ತಾರೆ, ಎಂದು ಸಾರ್ವಜನಿಕವಾಗಿ ಪ್ರಶ್ನಿಸಿದ್ದರು. ನಿಜವಾದ ಮಾತು. ಇತಿಹಾಸ ನಾನು ಹೇಳುವ ಹಾಗೆಯೆ ಇದೆ ಎನ್ನುತ್ತಿರುವವರು ಈ ಯುವ ಲೇಖಕರ ಮಾತನ್ನು ಗಂಭೀರವಾಗಿ ತೆಗೆದುಕೊಂಡು ತಮಗೇ ಅನ್ವಯಿಸಿಕೊಳ್ಳಬೇಕು. ತಾವು ನೋಡುವ ಇತಿಹಾಸವೂ ತಮ್ಮದೆ ಪೂರ್ವಾಗ್ರಹಗಳಿಂದ ಕೂಡಿದ್ದು, ತಾವು ಪ್ರತ್ಯಕ್ಷವಾಗಿ ನೋಡಿಲ್ಲದ, ಕೇವಲ ಇತಿಹಾಸ ಗ್ರಂಥಗಳ ಆಧಾರದ ಮೇಲೆ ಬರೆಯುವ ತಮ್ಮದೂ ಒಂದು ಕಟ್ಟು ಕತೆ ಯಾಕಾಗಿರಬಾರದು ಎನ್ನುವ ವಿನಯ ಬೆಳೆಸಿಕೊಳ್ಳಬೇಕು.

ಅಷ್ಟೇ ಅಲ್ಲ, ಇತಿಹಾಸವನ್ನು ಪ್ರತೀಕಾರದ ಮೂಲಕ ಸರಿಪಡಿಸಿಕೊಳ್ಳಬೇಕು ಎನ್ನುವ ರೀತಿಯಲ್ಲಿ ಹೇಳುವವರು ಸಮಾಜ ದ್ರೋಹಿಗಳೂ ಆಗುತ್ತಾರೆ. ಯಾಕೆಂದರೆ, ಅವರ ಕತೆಗಳನ್ನು ಓದಿ, ಮಂದಿರಮಸೀದಿಗಳನ್ನು ಉರುಳಿಸಲು ರಾತ್ರೋರಾತ್ರಿ ಯಾರೂ ಎದ್ದು ಓಡದಿದ್ದರೂ, ಮನಸ್ಸನ್ನು ವಿಷ ಮಾಡಲು, ಅಸಹಿಷ್ಣುತೆ ಬೆಳೆಸಲು ಆ ಓದು ಕಾರಣವಾಗುತ್ತದೆ. ಮುಂದಿನ ಬೆಂಕಿಗೆ ಈಗಿನ ಕಾವು ಅದು. ಜರ್ಮನ್ನರು ಹೋಲೊಕಾಸ್ಟ್ ನ ಅಪಚಾರವನ್ನು ಒಪ್ಪಿಕೊಂಡು ಅದನ್ನು ನಿರಾಕರಿಸಿದಂತೆ ಮೌಲ್ಯವಂತ ಭಾರತೀಯ ಸಮಾಜ ಇಂತಹ ಬರವಣಿಗೆಯನ್ನು ಸುಮ್ಮನೆ ನಿರಾಕರಿಸುತ್ತ ಹೋಗಬೇಕು. ಯಾರು ಎಷ್ಟೇ ಪ್ರಚೋದಿಸಿದರೂ ಪ್ರಚೋದನೆಗೊಳಗಾಗದ ಮೂಲಕವಷ್ಟೆ ಇಂತಹ ದುಷ್ಟತನವನ್ನು ನಾವು ಸೋಲಿಸಬೇಕಾಗಿರುವುದು.

ಇವತ್ತಿನ ಭಾರತ ಯುವ ಭಾರತ. ಶೇ. 35 ಭಾರತೀಯರು 15 ವರ್ಷಕ್ಕಿಂತ ಚಿಕ್ಕವರು ಎನ್ನುತ್ತದೆ ಒಂದು ವರದಿ. 54% ರಷ್ಟು ಭಾರತೀಯರು 25 ವರ್ಷಕ್ಕಿಂತ ಚಿಕ್ಕ ವಯಸ್ಸಿನವರು ಎನ್ನುತ್ತದೆ ಇನ್ನೊಂದು ವರದಿ. ಸಾಮರಸ್ಯದ, ಜೀವಪರ ಭಾರತದ ಭವಿಷ್ಯ ನಿಂತಿರುವುದೆ ಇವರ ಮೇಲೆ. ಇವರು ಹೇಗೆ ರೂಪುಗೊಳ್ಳುತ್ತಾರೆ ಎನ್ನುವುದರ ಮೇಲೆ ಇಡೀ ಭಾರತದ ಭವಿಷ್ಯ ನಿಂತಿದೆ. ಇನ್ನೊಬ್ಬರಿಂದ ಅತಿ ಎನ್ನುವಷ್ಟು ಪ್ರಭಾವಿತಗೊಳ್ಳುವ ವಯಸ್ಸುಹದಿವಯಸ್ಸು. ರೋಲ್‌ಮಾಡೆಲ್‌ಗಳನ್ನು, ಅದರಲ್ಲೂ ಗೆಲ್ಲುವ ರೋಲ್‌ಮಾಡೆಲ್‌ಗಳನ್ನು ಬಯಸುವ ವಯಸ್ಸಿದು. ಹಾಗಾಗಿ, ಸಮಾಜದ ಹಿತಬಯಸುವ, ಮೌಢ್ಯಕ್ಕೆ, ದ್ವೇಷಕ್ಕೆ ತಳ್ಳದ, ಸ್ವಾರ್ಥಿಗಳಲ್ಲದ ಜನರ ಗೆಲುವು ಹಿಂದೆಂದಿಗಿಂತಲೂ ಇಂದು ಅಗತ್ಯ. ಈ ಯುವ ಭಾರತೀಯ ಮನಸ್ಸುಗಳು ಫ್ಯಾಸಿಸ್ಟ್‌ಗಳಾಗದಂತೆ ನೋಡಿಕೊಳ್ಳುವ ಜರೂರು ಇವತ್ತಿನ ಪ್ರಜ್ಞಾವಂತ ಹಿರಿಯರ ಮೇಲಿದೆ. ತಮ್ಮೆಲ್ಲ ವೈಯಕ್ತಿಕ ಸ್ವಾರ್ಥಗಳನ್ನು, ಸಣ್ಣತನಗಳನ್ನು ಬಿಟ್ಟು ಸಮಷ್ಠಿಯ ಹಿತವನ್ನಷ್ಟೆ ಬಯಸಬೇಕಾದ ಸಮಯ ಇದು. ಆದರೆ ಇದು ಎಷ್ಟೋ ಜನರಿಗೆ ಅರ್ಥವಾಗುತ್ತಿಲ್ಲ ಎನ್ನುವುದು ಮಾತ್ರ ಸದ್ಯಕ್ಕೆ ಕೂರ ವಾಸ್ತವದಂತೆ ಕಾಣಿಸುತ್ತಿದೆ.

Nov 5, 2008

ಈ ತಲೆಮಾರಿನ ಕನಸು ಮತ್ತು ಆದರ್ಶದ ಗಳಿಗೆ...

[ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇನ್ನೂ ಎರಡು ದಿನ ಇರುವಾಗ, ವಿಕ್ರಾಂತ ಕರ್ನಾಟಕದ ನವೆಂಬರ್ 14, 2008 ರ ಸಂಚಿಕೆಗೆ ಬರೆದ ಲೇಖನ.]

"ಕರಿಯಗಂಡು, ಬಿಳಿಹೆಣ್ಣಿನ ಮಗನಾದ ಬರಾಕ್ ಹುಸೇನ್ ಒಬಾಮ ಎಂಬ ಸೆನೆಟರ್ ಮುಂದಿನ ಏಳೆಂಟು ವರ್ಷ ಅಂತಹ ದೊಡ್ಡ ತಪ್ಪುಗಳನ್ನು ಮಾಡದಿದ್ದರೆ ಈ ದೇಶದ ಅಧ್ಯಕ್ಷನೂ ಆಗಬಹುದು!" ಹಾಗೆಂದು ನಾನು ಬರೆದಿದ್ದು ವಿಕ್ರಾಂತ ಕರ್ನಾಟಕದ ಜುಲೈ 7, 2007 ರ ಸಂಚಿಕೆಯಲ್ಲಿ. ಕರ್ನಾಟಕದಲ್ಲಿ ಅಂತರ್ಜಾತಿ ವಿವಾಹಕ್ಕೆ ಅಪಾರ ಪ್ರೋತ್ಸಾಹ ಕೊಟ್ಟ ಮೈಸೂರಿನ ಚಿಂತಕ ರಾಮದಾಸರು ತೀರಿಕೊಂಡಾಗ ಬರೆದ ಲೇಖನದಲ್ಲಿ ನಾನು ಹಾಗೆ ಮೇಲಿನಂತೆ ಬರೆದದ್ದು. ಆ ಸಮಯದಲ್ಲಿ ಬಹುಪಾಲು ಜನರ ಊಹೆ ಇದ್ದದ್ದು, ಈ ಬಾರಿ ಹಿಲ್ಲರಿ ಕ್ಲಿಂಟನ್ ಅಮೆರಿಕದ ಅಧ್ಯಕ್ಷಳಾಗಲಿದ್ದಾಳೆ ಎಂದು. ಅದೇ ದಿಕ್ಕಿನಲ್ಲಿ ಯೋಚಿಸುತ್ತ, ಈ ಲೇಖನ ಬರೆಯುವುದಕ್ಕೆ ನಾಲ್ಕು ತಿಂಗಳಿನ ಮೊದಲು ಬರಾಕ್ ಒಬಾಮ ಅಮೆರಿಕದ ಸಿಲಿಕಾನ್ ಕಣಿವೆಯ ಬಳಿ ಆಯೋಜಿಸಿದ್ದ ಸಭೆಯೊಂದರಲ್ಲಿ ಆತನ ಭಾಷಣ ಕೇಳಿಕೊಂಡು ಬಂದಿದ್ದ ನಾನು, ಈ ಸಲ ಅಲ್ಲದಿದ್ದರೂ ಕ್ಲಿಂಟನ್‌ಳ ಅವಧಿ ಮುಗಿದ ನಂತರವಾದರೂ ಖಂಡಿತ ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷನಾಗುವುದು ಸಾಧ್ಯ ಎನ್ನುವ ತೀರ್ಮಾನಕ್ಕೆ ಬಂದಿದ್ದೆ. ಆದರೆ, ಅಮೆರಿಕದ ಜನ ನನ್ನಂತಹ ಕೋಟ್ಯಾಂತರ ಜನರ ಊಹೆಗಳನ್ನೆಲ್ಲ ಹುಸಿ ಮಾಡಿಬಿಟ್ಟಿದ್ದಾರೆ; ಕನಸಿದ್ದಕ್ಕಿಂತ ಹೆಚ್ಚಿನ ಮಟ್ಟದ್ದನ್ನು ಕೊಟ್ಟುಬಿಟ್ಟಿದ್ದಾರೆ. ಈ ಒಂದೇ ಕಾರಣಕ್ಕೆ ಅಮೆರಿಕದ ಜನತೆ ವಿಶ್ವದ ಅನೇಕ ಜನರ ಪ್ರೀತಿಯನ್ನು ಗಳಿಸಿಕೊಂಡು ಬಿಟ್ಟಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮುಗಿಯಲು ಇನ್ನೂ ಎರಡು ದಿನ ಇರುವಾಗ ನಾನು ಈ ಲೇಖನ ಬರೆಯುತ್ತಿದ್ದೇನೆ. ರಾತ್ರೋರಾತ್ರಿ ಈ ದೇಶದ ಬಹುಪಾಲು ಜನರ ನಿರ್ಧಾರ ಬದಲಾಗುವಂತಹ ಬೃಹತ್‌ಘಟನೆ ಒಂದು ಜರಗದಿದ್ದರೆ, ಒಬಾಮ ಅಮೆರಿಕದ ಅಧ್ಯಕ್ಷನಾಗುವುದನ್ನು ತಪ್ಪಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಈಗ ಇದೆ. ನೀವು ಈ ಲೇಖನ ಓದುವಷ್ಟರಲ್ಲಿ ಒಬಾಮ ಅಧ್ಯಕ್ಷನಾದನೆ ಅಥವ ಇಲ್ಲವೆ ಎಂದು ಅಧಿಕೃತವಾಗಿ ಗೊತ್ತಾಗಿಯೆ ಎರಡು-ಮೂರು ದಿನಗಳಾಗಿರುವುದರಿಂದ, ಒಬಾಮ ಅಧ್ಯಕ್ಷನಾಗಿ ಚುನಾಯಿತನಾಗಿದ್ದಾನೆ ಎಂದು ಭಾವಿಸಿಯೇ ನಾನು ಇದನ್ನು ಬರೆಯುತ್ತಿದ್ದೇನೆ.

ಸರಿಯಾಗಿ 41 ವರ್ಷಗಳ ಹಿಂದೆ, ಅಂದರೆ 1967 ರಲ್ಲಿ ಬಿಡುಗಡೆಯಾದ ಸಿನಿಮಾ "Guess Who’s Coming to Dinner. ಅದರಲ್ಲಿ ಕ್ಯಾಥರಿನ್ ಹೆಪ್‌ಬರ್ನ್, ಸ್ಪೆನ್ಸರ್ ಟ್ರೇಸಿ, ಮತ್ತು ಸಿಡ್ನಿ ಪಾಯಿಟೀರ್ ನಟಿಸಿದ್ದಾರೆ. ಒಬ್ಬ ಕರಿಯ, ಬುದ್ಧಿವಂತ, ಸಜ್ಜನ ಡಾಕ್ಟರ್ ಬಿಳಿ ಯುವತಿಯನ್ನು ಪ್ರೇಮಿಸಿ, ಆಕೆಯ ತಂದೆತಾಯಿಯರ ಒಪ್ಪಿಗೆ ಪಡೆದುಕೊಳ್ಳಲು ಅವರ ಮನೆಗೆ ಹೋಗುವ ಕತೆ ಅದು. ಎಲ್ಲವನ್ನೂ ತೂಗಿಅಳೆದ ಹುಡುಗಿಯ ಪೋಷಕರು ಕೊನೆಗೆ ಅವರಿಬ್ಬರ ಮದುವೆಗೆ ಒಪ್ಪಿಗೆ ನೀಡುತ್ತಾರೆ. ಆ ಸಮಯದಲ್ಲಿ ಕರಿಯ ಡಾಕ್ಟರ್ ತಮಗೆ ಹುಟ್ಟಲಿರುವ ಕರಿಯ ಮಕ್ಕಳ ಭವಿಷ್ಯದ ಬಗ್ಗೆ ಹೀಗೆ ಹೇಳುತ್ತಾನೆ: "ನಮಗೆ ಹುಟ್ಟುವ ಮಗು ಅಮೇರಿಕದ ಪ್ರೆಸಿಡೆಂಟ್ ಆಗಲಿ ಎಂದು ಬಯಸುತ್ತೇವಾದರೂ, ಕೊನೆಗೆ ವಿದೇಶಾಂಗ ಸಚಿವನಾದರೂ ಪರವಾಗಿಲ್ಲ." ಆ ಚಿತ್ರ ಬಂದಾಗ ಒಬ್ಬ ಕರಿಯ ಗಂಡು ಮತ್ತು ಬಿಳಿಯ ಹೆಣ್ಣಿಗೆ ಹುಟ್ಟಿದ್ದ ಒಬಾಮನಿಗೆ ಆರು ವರ್ಷ ವಯಸ್ಸು. ಇನ್ನು ಮೂರು ತಿಂಗಳಿಗೆ ಆತ ಅಮೆರಿಕದ ಅಧ್ಯಕ್ಷನಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾನೆ. ಕಳೆದ ಎಂಟು ವರ್ಷಗಳಿಂದ ಅಮೆರಿಕದ ವಿದೇಶಾಂಗ ಸಚಿವರಾಗಿ ಕರಿಯರೇ ಇದ್ದಾರೆ. ಈಗ ಇರುವವರಂತೂ ಒಬ್ಬ ಮಹಿಳೆ.

ಬುದ್ಧಿವಂತ ಒಬಾಮ ಮತ್ತು ಆದರ್ಶದ ಕನಸಲ್ಲಿ ಜನತೆ:

ಒಬಾಮನ ಇಲ್ಲಿಯ ತನಕದ ಪಯಣ ಒಬಾಮನ ಸುತ್ತ ಹಬ್ಬಿರುವ ಪ್ರಭೆಯಂತೆ ಸಂಪೂರ್ಣವಾಗಿ ಒಂದು ಆದರ್ಶದ, ಪ್ರಾಮಾಣಿಕತೆಯ ಪಯಣ ಎಂದುಕೊಳ್ಳುವುದು ಸ್ವಲ್ಪ ತಪ್ಪೆ. ಇಲ್ಲಿಯತನಕ ಆತ ಬಹಳ ಖಿಲಾಡಿತನದಿಂದಲೆ, ಹಾಕಬೇಕಾದ ಪಟ್ಟು ಮತ್ತು ತಂತ್ರಗಾರಿಕೆಯಿಂದಲೆ ತನ್ನ ನಡೆ ನಡೆಸಿದ್ದಾನೆ. ಜೊತೆಗೆ ಆತನಿಗೆ ಅನೇಕ ಕಡೆಗಳಿಂದ ಅಗತ್ಯಕ್ಕಿಂತ ಹೆಚ್ಚಿನ ಬೆಂಬಲ ದೊರಕಿದೆ. ಒಬಾಮ ಕೇವಲ ತನ್ನ ವೈಯಕ್ತಿಕ ಸಾಮರ್ಥ್ಯದಿಂದ ಚುನಾವಣೆ ಗೆದ್ದಿದ್ದಾನೆ ಎಂದುಕೊಳ್ಳುವುದಕ್ಕಿಂತ ಆತನ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯ ಜೊತೆಜೊತೆಗೆ ಸಾಮಾನ್ಯ ಜನರ, ಎಲ್ಲಾ ಕಪ್ಪುಜನರ, ಉದಾರವಾದಿಗಳ, ಹಾಗೂ ಇಲ್ಲಿಯ ಮೀಡಿಯಾದವರ ಬೆಂಬಲ ಮತ್ತು ಆಡಳಿತ ವಿರೋಧಿ ಅಲೆಯೂ ಸಹ ಕೆಲಸ ಮಾಡಿದೆ. ಮತ್ತು, ಅಷ್ಟೆ ಮುಖ್ಯವಾಗಿ, ಚುನಾವಣೆಯ ಕೊನೆಯ ದಿನಗಳಲ್ಲಿ ಆದ ಕೆಟ್ಟ ಆರ್ಥಿಕ ಬೆಳವಣಿಗೆಗಳು ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಿವೆ.

ಈ ದೇಶದಲ್ಲಿ ಮೊದಲಿನಿಂದಲೂ ಶ್ರೀಮಂತ ಕ್ಯಾಪಿಟಲಿಸ್ಟ್‌ಗಳ ಬೆಂಬಲ ಇರುವುದು ರಿಪಬ್ಲಿಕನ್ ಪಕ್ಷದವರಿಗೇ. ಹಾಗಾಗಿಯೆ ಚುನಾವಣೆಗೆ ಹಣ ಕೂಡಿಸಬಲ್ಲ ತಾಕತ್ತು ಡೆಮಾಕ್ರಾಟರಿಗಿಂತ ರಿಪಬ್ಲಿಕನ್ನರಿಗೇ ಜಾಸ್ತಿ. ಕಳೆದ ಎರಡು ಸಲವಂತೂ ಜಾರ್ಜ್ ಬುಷ್‌ನ ಚುನಾವಣೆ ಖರ್ಚಿಗೆಂದು ಅಪಾರ ಹಣ ಹರಿದು ಬಂದಿತ್ತು. ಇಂತಹ ಪರಿಸ್ಥಿತಿಯಿಂದಾಗಿಯೆ, ಹಣದ ಲೆಕ್ಕಾಚಾರದಲ್ಲಿ ಪ್ರಜಾಪ್ರಭುತ್ವದ ತಕ್ಕಡಿ ಏರುಪೇರಾಗದೆ ಇರಲಿ ಎಂದು ಅಧ್ಯಕ್ಷ ಚುನಾವಣೆಗೆ ಸರ್ಕಾರವೆ ದುಡ್ಡು ಕೊಡುವ ಕಾನೂನೊಂದು ಕೆಲವು ವರ್ಷಗಳ ಹಿಂದೆ ಜಾರಿಗೆ ಬಂದಿದೆ. ಅಭ್ಯರ್ಥಿಗಳ ಪ್ರಚಾರಕ್ಕೆಂದು ಸರ್ಕಾರ ಒಂದು ನಿರ್ದಿಷ್ಟ ಮೊತ್ತದ ಹಣ ಒದಗಿಸುವ ಮತ್ತು ಹಾಗೆ ಹಣ ಪಡೆದುಕೊಂಡ ಅಭ್ಯರ್ಥಿಗಳು ಖಾಸಗಿ ವ್ಯಕ್ತಿಗಳಿಂದ ಹಣ ಸಂಗ್ರಹಿಸಬಾರದ ವ್ಯವಸ್ಥೆ ಅದು. ಪ್ರಾಥಮಿಕ ಚುನಾವಣೆಯಲ್ಲಿ ಗೆಲ್ಲುವುದಕ್ಕಿಂತ ಮೊದಲು ಒಬಾಮ ತಾನು ಆ ಆದರ್ಶಯುತ ವ್ಯವಸ್ಥೆಯ ಪ್ರಕಾರವೆ ನಡೆದುಕೊಳ್ಳುತ್ತೇನೆ ಎಂದು ಹೇಳಿದ್ದ. ಆದರೆ, ಯಾವಾಗ ಆತನಿಗೆ ತಾನು ಜನರಿಂದಲೆ ಅಪಾರವಾದ ಹಣ ಸಂಗ್ರಹಿಸಬಹುದು ಮತ್ತು ಈ ಬಾರಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಿಂತ ಹೆಚ್ಚಿಗೆ ಸಂಗ್ರಹಿಸಬಹುದು ಎನ್ನುವುದು ಖಚಿತವಾಗಿ ಖಾತ್ರಿಯಾಯಿತೊ, ಆಗ ಆತ ಕಾನೂನಿನ ಪ್ರಕಾರ ತೆಗೆದುಕೊಳ್ಳಬಹುದಿದ್ದ ಸರ್ಕಾರದ ದುಡ್ಡು ಬೇಡ ಎಂದು ನಿರಾಕರಿಸಿಬಿಟ್ಟ. ಹೀಗೆ ತಾನೆ ಕೊಟ್ಟಿದ್ದ ವಾಗ್ದಾನವನ್ನು ತಾನೆ ಮುರಿದಿದ್ದ. ಹಾಗೆಯೆ, ಹಿಂದೆ ಯಾವೊಬ್ಬ ಅಭ್ಯರ್ಥಿಯೂ ಸಂಗ್ರಹಿಸದಷ್ಟು ಹಣವನ್ನು ಸಂಗ್ರಹಿಸಿದ. ಇದರಲ್ಲಿನ ಒಳ್ಳೆಯ ಅಂಶ ಏನೆಂದರೆ, ಹಾಗೆ ಹಣಕೊಟ್ಟವರಲ್ಲಿ ಅಮೆರಿಕದ ಸಾಮಾನ್ಯ ಜನರೆ ಹೆಚ್ಚು. ಇದೆಲ್ಲದರ ಪರಿಣಾಮವಾಗಿ, ಕಳೆದ ಚುನಾವಣೆಯಲ್ಲಿ ಬುಷ್ ಮತ್ತು ಕೆರ್ರಿ ಇಬ್ಬರೂ ಸೇರಿ ಖರ್ಚು ಮಾಡಿದಷ್ಟು ಹಣವನ್ನು ಈ ಬಾರಿ ಒಬಾಮ ಒಬ್ಬನೇ ಮಾಡಿದ್ದಾನೆ. ಹಾಗೆಯೆ, ತನ್ನ ವಿರೋಧಿ ಜಾನ್ ಮೆಕೈನ್‌ಗಿಂತ ಸುಮಾರು ಎರಡು ಪಟ್ಟು ಹಣವನ್ನು ಹೆಚ್ಚಿಗೆ ಖರ್ಚು ಮಾಡಿದ್ದಾನೆ. ಒಬಾಮನ ಹಣ ಸಂಗ್ರಹದ ಬಗ್ಗೆ ಒಂದು ಉದಾಹರಣೆ ಕೊಡಬೇಕೆಂದರೆ, ಸೆಪ್ಟೆಂಬರ್ ತಿಂಗಳೊಂದರಲ್ಲಿಯೆ ಆತ ಸಂಗ್ರಹಿಸಿದ ಹಣ ಸುಮಾರು 750 ಕೋಟಿ ರೂಪಾಯಿಗಳು! ಆತನ ಚುನಾವಣೆಯ ಒಟ್ಟು ಖರ್ಚು 3000 ಕೋಟಿ ರೂಪಾಯಿಗಳನ್ನು ದಾಟಲಿದೆ.

ಅಷ್ಟೇ ಅಲ್ಲ, ಆತನ ಇಲ್ಲಿಯ ತನಕದ ಚಾರಿತ್ರಿಕ ಪಯಣಕ್ಕೆ ಮೀಡಿಯಾದವರೂ ಸಾಕಷ್ಟು ಸಹಾಯ ಮಾಡಿದ್ದಾರೆ. ಕೋಮುವಾದಿ ರಿಪಬ್ಲಿಕನ್ನರ ಕೊನೆಗಳಿಗೆಯ ಕಾರ್ಯಾಚರಣೆಗಳನ್ನು ಹಾಗು ಸುಳ್ಳು ಮತ್ತು ಕಟ್ಟುಕತೆ ಹಬ್ಬಿಸುವ ಅವರ ಸಾಮರ್ಥ್ಯವನ್ನು ಕಳೆದ ಏಳೆಂಟು ವರ್ಷಗಳಿಂದ ನೋಡಿ ಬೇಸತ್ತಿದ್ದ ಇಲ್ಲಿನ ಉದಾರವಾದಿ ಮೀಡಿಯ ಈ ಬಾರಿ ಒಬಾಮಾಗೆ ಬಹಿರಂಗವಾಗಿಯೇ ಬೆಂಬಲಿಸಿದೆ. ಆತನಿಗೆ ಹಾನಿಯಾಗಬಹುದಾದ ಸುದ್ದಿಗಳಿಗೆ ಪ್ರಾಮುಖ್ಯ ಕೊಡದೆ, ಆತನನ್ನು ಆದಷ್ಟೂ ಕಷ್ಟಕ್ಕೆ ಸಿಲುಕಿಸದೆ, ಆತನ ವಿರೋಧಿ ಪಾಳೆಯವನ್ನು -ವಿಶೇಷವಾಗಿ ಸ್ಯಾರಾ ಪೇಲಿನ್‌ಳನ್ನು, ಇಬ್ಬಂದಿಗೆ ಮತ್ತು ನಗೆಪಾಟಲಿಗೆ ಸಿಲುಕಿಸಿ ಒಬಾಮಾನಿಗೆ ಅನುಕೂಲವಾಗಿ ವರ್ತಿಸಿದ್ದಾರೆ. ಇದಕ್ಕೆ ಒಂದೆ ಒಂದು ಅಪವಾದ ಫಾಕ್ಸ್ ನ್ಯೂಸ್‌ನವರು. ಆದರೆ ಎಷ್ಟೇ ಆದರೂ ಅದು ಅಪ್ಪಟ ಕ್ಯಾಪಿಟಲಿಸ್ಟ್‌ಗಳ, ಕ್ರೈಸ್ತ ಮೂಲಭೂತವಾದಿಗಳ, ಉಗ್ರರಾಷ್ಟ್ರೀಯವಾದಿ (Jingoist) ಆಂಕರ್‌ಗಳನ್ನು ಹೊಂದಿರುವ ಚಾನೆಲ್. ಕೋಮುವಾದಿಗಳಲ್ಲದ ಜನರಲ್ಲಿ ಅದರ ಪ್ರಭಾವ ಅಷ್ಟಕ್ಕಷ್ಟೆ. ಹಾಗಾಗಿ ಎಷ್ಟೇ ಪ್ರಯತ್ನ ಪಟ್ಟರೂ ಅದು ಒಬಾಮಾನ ಅವಕಾಶವನ್ನು ಹಾಳು ಮಾಡಲಾಗಲಿಲ್ಲ.

ಈ ಎಲ್ಲಾ ಬೆಳವಣಿಗೆಗಳು ಒಂದು ರೀತಿ ಒಳ್ಳೆಯದೆ. ಯಾಕೆಂದರೆ, ಒಬಾಮ ಕೇವಲ ರಾಜಕಾರಣಿಯಲ್ಲ. ತನಗೆ ಸಹಕರಿಸಿದ ಅಂಶಗಳನ್ನು ಗಮನಿಸಬಲ್ಲ ಬುದ್ಧಿಜೀವಿ ಚಿಂತಕ ಸಹ. ಇದು ಆತ ನೀಡಬೇಕಿರುವ ನಾಯಕತ್ವದ ಬಗ್ಗೆ ಮತ್ತು ಆತನ ಬಗ್ಗೆ ಜನ ಇಟ್ಟುಕೊಂಡಿರುವ ಆಶೋತ್ತರಗಳ ಬಗ್ಗೆ ಆತನಿಗೆ ಮನವರಿಕೆ ಮಾಡಿಕೊಟ್ಟಿದೆ ಎಂದು ನಾವು ಭಾವಿಸಬಹುದು. ಹಾಗೆ ಆಗಿದ್ದೆ ಆದರೆ, ಅಮೆರಿಕಕ್ಕೇ ಏನು, ವಿಶ್ವಕ್ಕೂ ಒಬ್ಬ ಒಳ್ಳೆಯ ನಾಯಕ ಹುಟ್ಟಿದ್ದಕ್ಕೆ ನಾವು ಸಾಕ್ಷಿ ಆಗುತ್ತಿದ್ದೇವೆ.

ಒಬಾಮಾನ ನಾಯಕತ್ವಕ್ಕೆ ಕಾಯುತ್ತಿರುವ ವಿಶ್ವ:

ಕಳೆದ ಹಲವಾರು ವರ್ಷಗಳಿಂದ ವಿಶ್ವದ ಏಕೈಕ ಸೂಪರ್‌ಪವರ್ ಆಗಿ ಉಳಿದಿದ್ದ ಅಮೆರಿಕದ ಅಹಂಕಾರಿ ಧೋರಣೆ ವಿಶ್ವದ ಅನೇಕ ಕಡೆ ಅಮೆರಿಕ-ವಿರೋಧಿ ಭಾವನೆಯನ್ನು ಹೆಚ್ಚಿಸಿದೆ. ಬುಷ್ ಕೇವಲ ಈ ದೇಶದಲ್ಲಿಯಷ್ಟೆ ಅಲ್ಲ, ವಿದೇಶಗಳಲ್ಲಿಯೂ ದ್ವೇಷಿಸಲ್ಪಡುವ ಮನುಷ್ಯ. ಇದರಿಂದಾಗಿ ವಿಶ್ವದ ಒಟ್ಟು ವ್ಯವಸ್ಥೆಯೆ ಅನಾಯಕತ್ವದತ್ತ ನಡೆಯುತ್ತಿರುವ ಸಮಯ ಇದು. ಅದರ ಜೊತೆಗೆ, ಭೂಮಿಯ ಮೇಲಿನ ಜೀವಸಂಕುಲಕ್ಕೆ ಅಪಾಯ ಒಡ್ಡುತ್ತಿರುವ ಜಾಗತಿಕ ತಾಪಮಾನದ ದಿನಗಳು ಇವು. ಹಾಗಾಗಿ, ಒಂದು ಸ್ಥಿರ, ಸುಭದ್ರ, ಪರಿಸರ ಸ್ನೇಹಿ ವಿಶ್ವವ್ಯವಸ್ಥೆಯನ್ನು ಬಯಸುವ ಜಾಗತಿಕ ನಾಗರಿಕರು ನೈತಿಕತೆಯ, ಸಹಿಷ್ಣುತೆಯ, ಗೌರವಯುತ ವಿಶ್ವನಾಯಕತ್ವವೊಂದರ ಹುಡುಕಾಟದಲ್ಲಿದ್ದರು. ಈಗ ಅವರೆಲ್ಲರ ಆಶೋತ್ತರಗಳ ಪ್ರತಿನಿಧಿಯಾಗಿ ಒಬಾಮ ಕಾಣಿಸುತ್ತಿದ್ದಾನೆ. ಅಷ್ಟು ಮಾತ್ರವಲ್ಲದೆ, ಸಾಮಾಜಿಕ ನ್ಯಾಯದ ಪರ ಇರುವ ಪ್ರಜಾಪ್ರಭುತ್ವವಾದಿ ಚಿಂತಕರಿಗೂ ಒಬಾಮ ಒಂದು ಸಂಕೇತವಾಗಿ ಬರುತ್ತಿದ್ದಾನೆ. ಈ ಸಂಕೇತಕ್ಕೆ ಅಪಾರವಾದ ಬಲ ಇದೆ. ಮೂಲಭೂತವಾದದ ಮುಷ್ಟಿಗೆ ಸಿಲುಕಿರುವ ದೇಶಗಳಲ್ಲಿನ ಜನರು ಉದಾರವಾದಿ ಚಿಂತನೆಯನ್ನು ರೂಢಿಸಿಕೊಳ್ಳಲು ಇದು ಪ್ರೇರೇಪಿಸಲಿದೆ. ಒಬಾಮಾನ ಅವಧಿಯಲ್ಲಿ ಕೆಲವು ಅರಬ್ ಅರಸೊತ್ತಿಗೆಗಳು ಕೊನೆಯಾಗಿ ಅಲ್ಲಿ ಪ್ರಜಾಪ್ರಭುತ್ವ ಮೊಳಕೆಯೊಡೆದರೆ ಆಶ್ಚರ್ಯ ಪಡಬೇಕಿಲ್ಲ. ಹಾಗೆಯೆ, ಭಾರತದ ಇಸ್ಲಾಮ್ ಭಯೋತ್ಪಾದಕರಿಗೆ ಬೆಂಬಲ ಕೊಡುವ ಪಾಕಿಸ್ತಾನವೂ ತನ್ನ ಹಾದಿ ತಿದ್ದಿಕೊಳ್ಳುವುದು ಅನಿವಾರ್ಯವಾಗಲಿದೆ. ಮತ್ತು, ಭಾರತಕ್ಕೆ ಒಬಾಮ ಒಬ್ಬ ಸಹಜ ಸ್ನೇಹಿತನಾಗಲಿದ್ದಾನೆ. ನಮ್ಮಲ್ಲಿಯ ಮೂಲಭೂತವಾದಿ ಫ್ಯಾಸಿಸ್ಟ್ ಹಿಂದುತ್ವವಾದಿಗಳು ಭಾರತದ ಅವಕಾಶವನ್ನು ಹಾಳು ಮಾಡದಿದ್ದರೆ ಭವಿಷ್ಯದಲ್ಲಿ ವಿಶ್ವಕ್ಕೆ ನೈತಿಕ ಮತ್ತು ಆರ್ಥಿಕ ನಾಯಕತ್ವ ನೀಡುವಲ್ಲಿ ಭಾರತ ಮತ್ತು ಅಮೆರಿಕ ಜೊತೆಯಾಗಲಿವೆ. ಬಹುಶ: ಇದು ಈ ತಲೆಮಾರಿನ ಕನಸು ಮತ್ತು ಆದರ್ಶದ ಗಳಿಗೆಯ ಆರಂಭ!

ಪೂರಕ ಓದಿಗೆ:
- ಭೈರಪ್ಪ, ಫ್ರೊ. ರಾಮದಾಸ್, ಮತ್ತು ಒಬಾಮ
- ಅಮೆರಿಕದಲ್ಲಿ ಕ್ರಿಶ್ಚಿಯನ್ ಮತೀಯ ರಾಜಕಾರಣ
- ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?
- ಬಾಬ್ಬಿ ಜಿಂದಾಲ್ - ಪಕ್ಕಾ ಕೆರಿಯರ್ ರಾಜಕಾರಣಿ
- ಕಾಲಕ್ಕಿಂತ ಮುಂದಿದ್ದ ದಾರ್ಶನಿಕರು...
- ಅನಾಯಕತ್ವ ಮತ್ತು ಮೂರನೇ ವಿಶ್ವಯುದ್ಧದ ಹಾದಿಯಲ್ಲಿ...

Nov 3, 2008

ಭೈರಪ್ಪ, ಫ್ರೊ. ರಾಮದಾಸ್, ಮತ್ತು ಒಬಾಮ.

ಅಮೆರಿಕದಲ್ಲಿನ ಅಧ್ಯಕ್ಷೀಯ ಚುನಾವಣೆಗೆ ಕೇವಲ ಒಂದು ದಿನ ಮಾತ್ರ ಬಾಕಿಯಿದೆ. ಒಬಾಮ ಅಧ್ಯಕ್ಷನಾಗಿ ಚುನಾಯಿತನಾಗುವುದು ಈಗ a foregone conclusion. ಈ ಸಮಯದಲ್ಲಿ ಒಬಾಮ ಗೆಲ್ಲದಿದ್ದರೆ ಅದು ಅಮೆರಿಕದ ರಾಜಕೀಯ ಚರಿತ್ರೆಯಲ್ಲಿ ಒಂದು ಅತಿದೊಡ್ಡ upset ಆಗಲಿದೆ. ಅದು ಆಗುವ ಸಂಭವ ಕಮ್ಮಿ. ಹಾಗಾಗಿಯೇ, ಬಹಳಷ್ಟು ಪತ್ರಕರ್ತರು ಈಗಾಗಲೆ ಒಬಾಮ ಗೆದ್ದಿದ್ದಾನೆ ಎಂದೇ ಭಾವಿಸಿಬಿಟ್ಟಿದ್ದಾರೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ಗೆಳೆಯ ಪ್ರೊ. ಪೃಥ್ವಿ ದತ್ತ ಚಂದ್ರ ಶೋಭಿ ಮತ್ತು ನಾನು ಓಕ್‌ಲ್ಯಾಂಡ್‌ನಲ್ಲಿ ಬರಾಕ್ ಒಬಾಮನ ಭಾಷಣ ಕೇಳಲು ಹೋಗಿದ್ದೆವು. ಅವನ ಮಾತು ಕೇಳಿಕೊಂಡು ಬಂದ ನಂತರ ನನಗಿದ್ದ ಒಂದು ಸಂಶಯ, "ಈ ದೇಶದ ಜನ ಒಬ್ಬ ಕಪ್ಪು ಮನುಷ್ಯನನ್ನು ಅಧ್ಯಕ್ಷನನ್ನಾಗಿ ಆರಿಸಲು ಸಿದ್ಧವಾಗಿದ್ದಾರೆಯೇ?" ಅಂತ. ಹಾಗಾಗಿಯೆ ನನಗೆ ಮೊದಲಿನಿಂದಲೂ ಒಬಾಮಾನ ಗೆಲ್ಲುವಿಕೆ ಬಗ್ಗೆ ಸ್ವಲ್ಪ ಸಂಶಯ ಇತ್ತು. ಏನೇ ಹೇಳಿ, ಸದ್ಯದ ಸವಾಲಿಗೆ ಸನ್ನದ್ಧವಾಗುವ ಈ ದೇಶದ ಜನರ ತಾಕತ್ತು ನಿಜಕ್ಕೂ ಬೆರಗು ಮೂಡಿಸುತ್ತದೆ. ಅಮೆರಿಕ ಯಾವ ಮಟ್ಟದಲ್ಲಿ Transform ಆಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಕೆಳಗಿನ ಲೇಖನ ಸಹಕಾರಿಯಾಗುತ್ತದೆ ಎಂದು ಭಾವಿಸುತ್ತೇನೆ.

ಹಾಗೆಯೆ, ನನ್ನ ಯುವಮಿತ್ರರು ಒಂದು ಆದರ್ಶದ ಕನಸನ್ನು ಧೈರ್ಯದಿಂದ ಕಾಣಲು, ತಮಗಿಷ್ಟವಾದ ಯುವಕ-ಯುವತಿಯನ್ನು ಭವಿಷ್ಯ ಮತ್ತು ಭೂತದ ಯಾವೊಂದು ಅಂಜಿಕೆ ಮತ್ತು ಭಯ ಇಲ್ಲದೆ ಉತ್ಕಟವಾಗಿ ಪ್ರೇಮಿಸಲು ಮತ್ತು ಮದುವೆಯಾಗಲು, ಜನಾಂಗೀಯ ದ್ವೇಷವನ್ನು ಪ್ರೇರೇಪಿಸುವ ಸಮಾಜದ್ರೋಹಿಗಳ ಚಿಂತನೆಗಳನ್ನು ಭಸ್ಮ ಮಾಡಲು, ಈ ಕೆಳಗಿನ ಲೇಖನ ಪ್ರೇರೇಪಿಸಲಿ ಎಂದು ಆಶಿಸುತ್ತೇನೆ. ಒಬಾಮಾನ ಯಶಸ್ಸು ಅಂತರ್ಜಾತಿ ವಿವಾಹಕ್ಕೆ ಸ್ಫೂರ್ತಿಯಾಗಲೆಂದೂ ಬಯಸುತ್ತೇನೆ.


ಕಾಲಕ್ಕಿಂತ ಮುಂದಿದ್ದ ದಾರ್ಶನಿಕರು...
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜುಲೈ 6 , 2007 ರ ಸಂಚಿಕೆಯಲ್ಲಿನ ಲೇಖನ. ಫ್ರೊ. ರಾಮದಾಸರು ತೀರಿಕೊಂಡಾಗ ಬರೆದದ್ದು.)

ಅವರನ್ನು ಭೇಟಿಯಾಗಿ, ಎರಡು-ಮೂರು ತಾಸು ಮಾತನಾಡಿ ಮೂರು ತಿಂಗಳೂ ಆಗಿರಲಿಲ್ಲ. ಅವತ್ತಿನ ಮಾತುಕತೆಯಲ್ಲಿ ಕರ್ನಾಟಕದಲ್ಲಿ ಇಲ್ಲವಾಗುತ್ತಿರುವ ಸಾಂಸ್ಕೃತಿಕ ನಾಯಕತ್ವದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ, ಸಾಮಾಜಿಕ ಸಾಮರಸ್ಯದ ಬಗ್ಗೆ ಮಾತನಾಡಿದ್ದೆವು. ತೇಜಸ್ವಿ, ಅನಂತಮೂರ್ತಿಯವರೆಲ್ಲ ಅಂದಿನ ಮಾತಿನಲ್ಲಿ ಬಂದಿದ್ದರು. ಅದಾದ ಒಂದು ವಾರಕ್ಕೆಲ್ಲ ತೇಜಸ್ವಿಯವರು ತೀರಿ ಹೋದರು. ಅನಂತಮೂರ್ತಿಯವರು ಒಂದು ರೀತಿಯಲ್ಲಿ Liability ಆಗುತ್ತ ಹೋಗುತ್ತಿದ್ದಾರೆ. ಈಗ ರಾಮದಾಸರೂ ಇಲ್ಲ.

ಫ್ರೊ. ರಾಮದಾಸರ ಬಗ್ಗೆ ಬರೆಯುವುದಕ್ಕಿಂತ ಅವರು ಯಾವುದಕ್ಕೆ ಹೋರಾಡಿದರು, ಅವರ ಹೋರಾಟದ ಮುಂದುವರಿಕೆಗೆ ಇರುವ ಸವಾಲುಗಳು ಏನು ಎಂದು ಯೋಚಿಸುವುದೆ ಅವರಿಗೆ ಅರ್ಥಪೂರ್ಣ ನಮನ ಎನ್ನಿಸುತ್ತದೆ. ಕೆಲವೊಮ್ಮೆ ಎಲ್ಲವೂ ಕಾಕತಾಳೀಯ ಎನ್ನಿಸುತ್ತದೆ. ಅನೇಕ ಅಂತರ್ಜಾತಿ ವಿವಾಹಗಳನ್ನು ಮಾಡಿದ್ದ, ಆ ಪ್ರಾಮಾಣಿಕ, ಹಠವಾದಿ, ನಿಷ್ಠುರ, ಹಾಗು ನಾಡಿನ ನೈತಿಕ ಬಲವಾಗಿದ್ದ ರಾಮದಾಸರು ಮೈಸೂರಿನಲ್ಲಿ ಸತ್ತ ಸಮಯದಲ್ಲಿ ನಾನು ಇಲ್ಲಿ ನಮ್ಮ ಅಂತರ್ಜಾತಿ ವಿವಾಹದ ಅಮೇರಿಕ ರೂಪವಾದ ಕಪ್ಪು-ಬಿಳಿಯರ ಮಧ್ಯೆಯ ವಿವಾಹದ ಬಗ್ಗೆ ಬಂದಿರುವ ಅತ್ಯಪೂರ್ಣ ಸಿನೆಮಾ "Guess Who's Coming to Dinner" ನೋಡುತ್ತ ಕುಳಿತಿದ್ದೆ.

ನಮ್ಮಲ್ಲಿ ಜಾತಿ ಎನ್ನುವುದು ನಮ್ಮ ಬೇರುಗಳನ್ನು ಹುಡುಕಿಕೊಳ್ಳುವ, ನೀತಿಮೌಲ್ಯಗಳ ಆದರ್ಶ ವ್ಯವಸ್ಥೆ ಎಂದಿದ್ದರೆ ಜಾತಿವಾದವನ್ನು ಇರಲಿ ಎನ್ನಬಹುದಿತ್ತು. ಆದರೆ ಈ ಜಾತಿ ವ್ಯವಸ್ಥೆ ಒಬ್ಬ ಮನುಷ್ಯನಿಂದ "ನಾನು ಮೇಲು, ನೀನು ಕೀಳು" ಎಂದು ಅಹಂಕಾರದಿಂದ ಹೇಳಿಸಿದರೆ, ಮತ್ತೊಬ್ಬನಿಂದ "ಅಯ್ಯ, ತಾವು ಮೇಲು, ನಾನು ಕೀಳು" ಎಂದು ದೈನ್ಯದಿಂದ ಹೇಳುವಂತೆ ಮಾಡುತ್ತದೆ. ಭಾರತ ಆಂತರಿಕವಾಗಿ ಗಟ್ಟಿಯಾಗಬೇಕಾದರೆ, ಸಮಗ್ರವಾಗಿ ಮುಂದುವರಿಯಬೇಕಾದರೆ ಹುಟ್ಟಿನಿಂದ ಬರುವ ಜಾತಿ ವ್ಯವಸ್ಥೆಯನ್ನು ನಿರ್ಮೂಲ ಮಾಡುವುದು ಅತ್ಯವಶ್ಯ. ಹನ್ನೆರಡನೆ ಶತಮಾನದಲ್ಲಿ ಬಸವಣ್ಣನಿಂದಲೂ, ಕಳೆದ ಶತಮಾನದಲ್ಲಿ ಗಾಂಧಿಯಿಂದಲೂ ಅಂತರ್ಜಾತಿ ವಿವಾಹಕ್ಕೆ ಬಹಿರಂಗ ಬೆಂಬಲ ಸಿಗುತ್ತ ಬಂದಿದೆ. ಜಾತಿ ವಿನಾಶದತ್ತ ಒಂದು ಪ್ರಾಯೋಗಿಕ ಹೆಜ್ಜೆ ಈ ಅಂತರ್ಜಾತಿ ವಿವಾಹ. ಅದಕ್ಕೆ ಜಿಡ್ಡುಗಟ್ಟಿದ, ಕಂದಾಚಾರದ, ಸಣ್ಣ ಮನುಷ್ಯರಿಂದ ನಮ್ಮಲ್ಲಿ ವಿರೋಧವಿತ್ತೆ ವಿನಹ ಕಾನೂನಿನ ವಿರೋಧ ಎಂದೂ ಇರಲಿಲ್ಲ.

ಅಮೇರಿಕದಲ್ಲಿನ ವರ್ಣಭೇದ ನಮ್ಮ ಜಾತಿವ್ಯವಸ್ಥೆಯ ಪ್ರತಿರೂಪ. ಇಲ್ಲಿ 1967 ರ ತನಕ ಅನೇಕ ರಾಜ್ಯಗಳಲ್ಲಿ ಅಂತರ್ವರ್ಣೀಯ ವಿವಾಹ ಕಾನೂನಿಗೆ ವಿರುದ್ಧವಾಗಿತ್ತು. ಅದೆ ವರ್ಷ ಬಂದ ಸಿನೆಮಾ "Guess Who's Coming to Dinner". ಹಾಲಿವುಡ್‌ನ ನಂಬರ್ 1 ಶ್ರೇಷ್ಠ ನಟಿ ಕ್ಯಾಥರಿನ್ ಹೆಪ್‌ಬರ್ನ್, ಮತ್ತೊಬ್ಬ ಶ್ರೇಷ್ಠ ನಟ ಹಾಗೂ ನಿಜಜೀವನದಲ್ಲೂ ಆಕೆಯ ಸಂಗಾತಿಯಾಗಿದ್ದ ಸ್ಪೆನ್ಸರ್ ಟ್ರೇಸಿ, ಉತ್ತಮ ನಟನೆಗೆ ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಕಪ್ಪು ನಟ ಸಿಡ್ನಿ ಪಾಯಿಟೀರ್ ನಟಿಸಿರುವ ಚಿತ್ರ ಇದು. ಇದರಲ್ಲಿ ಕರಿಯ ಯುವಕ ಮತ್ತು ಬಿಳಿ ಯುವತಿ ಪರಸ್ಪರರನ್ನು ಪ್ರೇಮಿಸಿ, ವಿವಾಹವಾಗ ಬಯಸುತ್ತಾರೆ. ಬಿಳಿ ಹುಡುಗಿಯ ಅಪ್ಪಅಮ್ಮ ಉದಾರವಾದಿಗಳು; ತಮ್ಮ ಜೀವನ ಪರ್ಯಂತ ಪ್ರಗತಿಪರ ಮೌಲ್ಯಗಳಿಗೆ ಬದ್ದರಾಗಿದ್ದವರು. ತಾವು ಹೇಳುತ್ತಿದ್ದ ಥಿಯರಿ ತಮ್ಮ ಮನೆಯಲ್ಲಿಯೇ ಪ್ರಾಯೋಗಿಕವಾಗಿ ಆಚರಿಸಬೇಕಾಗಿ ಬಂದಾಗ ಅವರೇನು ಮಾಡುತ್ತಾರೆ ಎನ್ನುವುದು ಚಿತ್ರದ ಕಥೆ.

ಚಿತ್ರದ ಕೊನೆಗೆ ಎಲ್ಲಾ ವಿರೋಧಗಳ ನಡುವೆ ಈ ಅಂತರ್ವರ್ಣೀಯ ಮದುವೆಗೆ ಒಪ್ಪಿಗೆ ಕೊಡುತ್ತ ಹುಡುಗಿಯ ಅಪ್ಪ ಸಂಬಂಧಪಟ್ಟವರನ್ನೆಲ್ಲ ಕೂರಿಸಿಕೊಂಡು, ಯುವಪ್ರೇಮಿಗಳಿಗೆ ಹೀಗೆ ಹೇಳುತ್ತಾನೆ:
"ಮದುವೆ ಆದ ಮೇಲೆ ನೀವು ಎದುರಿಸಲಿರುವ ಸಮಸ್ಯೆಗಳು ಕಲ್ಪನೆಗೂ ಮೀರಿದ್ದು. ಆದರೆ ನಿಮಗೆ ಎಂತೆಂತಹ ವಿರೋಧಗಳು ಬರಲಿವೆ ಎಂಬ ಅರಿವು ನಿಮಗಿದೆ ಎಂದು ನನಗೆ ಗೊತ್ತು. ಈ ಮದುವೆಯಿಂದ ಶಾಕ್ ಆಗುವ, ಕೋಪಗೊಳ್ಳುವ, ಗಾಬರಿಯಾಗುವ ಹತ್ತು ಕೋಟಿ ಜನ ಈ ದೇಶದಲ್ಲಿಯೆ ಇದ್ದಾರೆ. ನೀವು ನಿಮ್ಮ ಜೀವನದ ಕೊನೆಯತನಕವೂ ಪ್ರತಿದಿನವೂ ಇಂತಹ ವಿರೋಧವನ್ನು ಲೆಕ್ಕಿಸದೆ ಮುಂದಕ್ಕೆ ಸಾಗಬೇಕಷ್ಟೆ. ಈ ಜನರನ್ನು ನೀವು ನಿರ್ಲಕ್ಷಿಸಲು ಪ್ರಯತ್ನಿಸಬಹುದು ಇಲ್ಲವೆ ಅವರಿಗಾಗಿ ಹಾಗೂ ಅವರ ಪೂರ್ವಾಗ್ರಹಗಳಿಗಾಗಿ, ಅವರ ಮತಾಂಧತೆಗಾಗಿ, ಅವರ ಅಂಧ ದ್ವೇಷಕ್ಕಾಗಿ, ಅವರ ಮುಠ್ಠಾಳ ಭೀತಿಗಳಿಗಾಗಿ ನೀವು ವಿಷಾದ ತೋರಿಸಬಹುದು. ಈ ಮದುವೆಯ ವಿರುದ್ಧ ಯಾರು ಬೇಕಾದರೂ ಒಳ್ಳೆಯ ವಾದ ಮಂಡಿಸಬಹುದು, ಅದರಲ್ಲೂ ನಿರಾಕರಿಸಲು ಆಗದಂತಹ, ತಲೆಯ ಮೇಲೆ ಹೊಡೆದಂತಹ ವಾದ ಮಂಡಿಸಬಹುದು. ಯಾವನೋ ಒಬ್ಬ ಹಾದರಕ್ಕುಟ್ಟಿದವನು ನೀವು ಮದುವೆ ಮಾಡಿಕೊಳ್ಳುವುದು ಒಳ್ಳೆಯದಲ್ಲ ಎಂದು ವಾದ ಮಂಡಿಸಿದರೂ, ಒಳ್ಳೆಯವರಾದ, ಕಲ್ಮಶಗಳಿಲ್ಲದ, ಗಾಢವಾಗಿ ಪ್ಪರಸ್ಪರರನ್ನು ಪ್ರೀತಿಸುವ ನೀವು ಮದುವೆ ಆಗದಿರುವುದೇ ಅದೆಲ್ಲಕ್ಕಿಂತ ಕೆಟ್ಟದ್ದು. (No matter what kind of a case some bastard could make against your getting married, there would be only one thing worse, and that would be if - knowing what you two are and knowing what you two have and knowing what you two feel- you didn't get married.)"
ಇತ್ತೀಚೆಗೆ ಕನ್ನಡದ ಒಂದು ಇಂಟರ್ನೆಟ್ ಫೋರಮ್‌ನಲ್ಲಿ, ಅಂತರ್ಜಾತಿ ವಿವಾಹ ಮಾಡಿಕೊಳ್ಳಬಾರದು, ಅದರಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ, ಒಂದೊಂದು ಜಾತಿಯ ಆಚಾರ ವಿಚಾರಗಳು ಒಂದೊಂದು ತರಹ, ಯಾಕೆ ಬೇಕು ಅವೆಲ್ಲ, ಎನ್ನುವಂತಹುದನ್ನು ಒಂದು ಗುಂಪು ಸಾಧಿಸುತ್ತಿತ್ತು. ನನಗೆ ಅದಕ್ಕಿಂತ ಶಾಕ್ ಆಗಿದ್ದು ಯಾರೊ ಒಬ್ಬರು ಪುಣ್ಯಾತ್ಮರು ಅಂತರ್ಜಾತಿ ವಿವಾಹಗಳು ಯಶಸ್ವಿಯಾಗುವುದಿಲ್ಲ, ಯಾಕೆಂದರೆ ಅದರಲ್ಲಿ ಅನೇಕ ಸಮಸ್ಯೆಗಳಿವೆ, ಬೇಕಾದರೆ ಭೈರಪ್ಪನವರ "ದಾಟು" ಕಾದಂಬರಿ ಓದಿ ಎಂದಾಗ! ಈಗ ತಾನೆ ಮತ್ತೊಬ್ಬ ಭೈರಪ್ಪ ಭಕ್ತನ ಬ್ಲಾಗ್ ಒಂದರಲ್ಲಿ ನೋಡುತ್ತೇನೆ, "ಒಬ್ಬ ಬ್ರಾಹ್ಮಣ ಮತ್ತು ದಲಿತ ಹೆಣ್ಣುಮಕ್ಕಳಿಬ್ಬರ ಸ್ನೇಹ ಮುಂದುವರೆಯಲಿಲ್ಲ, ಏಕೆಂದರೆ ನಮ್ಮ ಆಚಾರ, ವಿಚಾರ, ಸಂಸ್ಕಾರಗಳೆ ಬೇರೆ," ಎಂಬ ಕತೆ! ಇದೆಲ್ಲ ಯಾರಿಂದ ಪ್ರೇರಿತವಾಗಿ ಬರುತ್ತಿದೆ ಎನ್ನುವುದಕ್ಕೆ ಭೂತಗನ್ನಡಿ ಬೇಕಿಲ್ಲ.

ಭೈರಪ್ಪನವರೇನೊ ಸಾಹಿತ್ಯದಿಂದ ಸಮಾಜ ಬದಲಾವಣೆ ಅಸಾಧ್ಯ ಎನ್ನುತ್ತಾರೆ. ಇದಕ್ಕಿಂತ ಬೇಜವಾಬ್ದಾರಿ ಮಾತನ್ನು ನಾನೆಲ್ಲೂ ಕೇಳಿಲ್ಲ. ಅಪ್ಪಟ ಜಾತಿವಾದಿಯಾದ ಭೈರಪ್ಪನವರಂತಹ ಚಾಣಾಕ್ಷರು ಮಾತ್ರ ಹಾಗೆ ಹೇಳಿ ದಾಟು, ಆವರಣದಂತಹ ಕಾದಂಬರಿ ರಚಿಸಿ, ಮುಗ್ಧ ಜನರಲ್ಲಿ ಕಂದಾಚಾರವೆ ಒಂದು ಉತ್ತಮ ಸಿದ್ದಾಂತ, ಜೀವನಪಥ ಎಂದೆಲ್ಲ ಹೇಳಿ, ಸಮಾಜದ ದಾರಿತಪ್ಪಿಸಿಯೂ ಬಚಾವಾಗಿ ಬಿಡುತ್ತಾರೆ. ಹಿಂದೂ ಸಮಾಜ ಸುಧಾರಣೆ ಆಗುವುದು ಸಮಾಜದ ಎಲ್ಲಾ ಸ್ತರದಲ್ಲಿ ಹೊಕ್ಕುಬಳಕೆ ಜಾಸ್ತಿಯಾದಾಗಲೆ ಹೊರತು ತಮ್ಮ ಜಾತಿ ದೊಡ್ಡದು ಎಂದು ಪರೋಕ್ಷವಾಗಿ ಸಾಧಿಸುವ, ತಮ್ಮ ಜಾತಿ ಸಂಘದಲ್ಲಿ ಪ್ರತ್ಯಕ್ಷವಾಗಿ ಕುಟುಂಬ ಪರಿವಾರ ಸಮೇತ ಭಾಗಿಯಾಗುವ ಭೈರಪ್ಪನಂತಹವರಿಂದ ಅಲ್ಲ. ಹೆತ್ತವರಿಗೆ ಬೇಸರವಾಗುತ್ತದೇನೋ ಎನ್ನುವ ಭಯ, ನೆಂಟರ ವಿರೋಧ, ಸ್ವಜಾತಿಯವರ ಧಾಂಧಲೆ, ಹೀಗೆ ಅನೇಕ ಕಾರಣಗಳು ಅಂತರ್ಜಾತಿ ವಿವಾಹಕ್ಕೆ ಅನುಕೂಲವಾಗಿಲ್ಲ. ಅವೆಲ್ಲವನ್ನೂ ಮೀರಿ ಭೈರಪ್ಪನಂತವರು ಹೇಳುವ, "ಅಯ್ಯೋ, ಜಾತಿಯನ್ನು ದಾಟಬೇಡ್ರಿ, ಅದರಿಂದ ಸಮಸ್ಯೆಗಳು ಬರುತ್ತವೆ ಕಣ್ರಿ," ಎಂಬ ಪ್ರೀತಿಯ ಅಂಶವೇ ಇಲ್ಲದ ಪಲಾಯನವಾದ ದೊಡ್ಡದಾಗಿ ಬಿಡಬಾರದು ಇಲ್ಲಿ.

40 ವರ್ಷಗಳ ಹಿಂದಿನ ಆ ಮೇಲಿನ ಸಿನೆಮಾದಲ್ಲಿ ತಮಾಷೆಯಾಗಿ ಒಂದು ಮಾತು ಬರುತ್ತದೆ. "ನಮಗೆ ಹುಟ್ಟುವ ಮಗು ಅಮೇರಿಕದ ಪ್ರೆಸಿಡೆಂಟ್ ಆಗಲಿ ಎಂದು ಬಯಸುತ್ತೇವಾದರೂ, ವಿದೇಶಾಂಗ ಸಚಿವನಾದರೂ ಪರವಾಗಿಲ್ಲ," ಎನ್ನುವ ಆಗಿನ ಕಾಲಕ್ಕೆ ಅವಾಸ್ತವ ಎನ್ನಿಸುವ ಮಾತನ್ನು ಹೇಳುತ್ತಾನೆ ಆ ಕರಿಯ ಪ್ರೇಮಿ. ಇವತ್ತು ನೋಡಿ, ಕಳೆದ ಆರು ವರ್ಷಗಳಿಂದ ಅಮೇರಿಕದ ವಿದೇಶಾಂಗ ಸಚಿವರಿಬ್ಬರೂ ಕರಿಯರೆ. ಈಗಿನವರಂತೂ ಕಪ್ಪುಮಹಿಳೆ. ಕರಿಯಗಂಡು, ಬಿಳಿಹೆಣ್ಣಿನ ಮಗನಾದ ಬರಾಕ್ ಹುಸೇನ್ ಒಬಾಮ ಎಂಬ ಸೆನೆಟರ್ ಮುಂದಿನ ಏಳೆಂಟು ವರ್ಷ ಅಂತಹ ದೊಡ್ಡ ತಪ್ಪುಗಳನ್ನು ಮಾಡದಿದ್ದರೆ ಈ ದೇಶದ ಅಧ್ಯಕ್ಷನೂ ಆಗಬಹುದು!

ಸುಂದರ ಭವಿಷ್ಯದ ಕನಸು ಕಂಡ ದಾರ್ಶನಿಕ ಫ್ರೊ. ರಾಮದಾಸರು ಬಿತ್ತಿದ ಬೀಜಗಳು, ನೆಟ್ಟ ಗಿಡಗಳು ಭೈರಪ್ಪನವರು ಬಿತ್ತಿರುವ ಕುಲಾಂತಕ ಪಾರ್ಥೇನಿಯಮ್ ಕಳೆಯ ಮಧ್ಯೆ ಈಗ ಸಬಲವಾಗಿ ಬೆಳೆಯಬೇಕಿದೆ.

Nov 2, 2008

ಸರ್ಕಾರಿ ದುಡ್ಡು ಮತ್ತು ಬೇಕಾಬಿಟ್ಟಿ ಖರ್ಚು...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ನವೆಂಬರ್ 7, 2008 ರ ಸಂಚಿಕೆಯಲ್ಲಿನ ಲೇಖನ.)

ಕ್ಯಾಲಿಫೋರ್ನಿಯ ಜನಸಂಖ್ಯೆಯ ದೃಷ್ಟಿಯಲ್ಲಿ ಅಮೆರಿಕದ ಅತಿದೊಡ್ಡ ರಾಜ್ಯ. ಹಾಗೆಯೆ, ಉದಾರವಾದಿ, ಪ್ರಭಾವಶಾಲಿ, ಶ್ರೀಮಂತ ರಾಜ್ಯ ಸಹ. ಸಾಫ್ಟ್‌ವೇರ್ ಮತ್ತು ಇಂಟರ್ನೆಟ್ ತಂತ್ರಜ್ಞಾನ ಉತ್ತುಂಗಕ್ಕೆ ಏರುತ್ತಿದ್ದ 1999 ರ ಕಾಲದಲ್ಲಿ ಸಿಲಿಕಾನ್ ಕಣಿವೆಯ ಈ ರಾಜ್ಯವನ್ನು ಒಂದು ಸ್ವತಂತ್ರ ದೇಶವಾಗಿ ಪರಿಗಣಿಸಿದ್ದರೆ ಅದು ಪ್ರಪಂಚದ ಆರನೆಯ ಅಥವ ಏಳನೆಯ ಅತಿದೊಡ್ಡ ಆರ್ಥಿಕ ಶಕ್ತಿಯಾಗುತ್ತಿತ್ತು. ಆಗ 125 ಕೋಟಿ ಜನಸಂಖ್ಯೆಯ ಚೀನಾಕ್ಕಿಂತ ಕೇವಲ 3 ಚಿಲ್ಲರೆ ಕೋಟಿ ಜನಸಂಖ್ಯೆಯ ಈ ರಾಜ್ಯವೆ ಆರ್ಥಿಕವಾಗಿ ದೊಡ್ಡದು! ಆ ದಿನಗಳಲ್ಲಿ ಕ್ಯಾಲಿಫೋರ್ನಿಯಾದ ಗವರ್ನರ್ ಆದವನು ಗ್ರೇ ಡೇವಿಸ್. ಆತ ಅಧಿಕಾರಕ್ಕೆ ಬಂದ ಸಮಯದಲ್ಲಿ ಖರ್ಚು ಮಾಡಲಾಗದಷ್ಟು ದುಡ್ಡು ರಾಜ್ಯದ ಬೊಕ್ಕಸಕ್ಕೆ ಬಂದು ಬೀಳುತ್ತಿತ್ತು. ಯಾವಾಗಲೂ ಉಳಿತಾಯದ ಬಜೆಟ್ಟೆ.

"ಆಹಾ! ಹಾಲು-ತುಪ್ಪದ ಹೊಳೆ ಎಲ್ಲೆಲ್ಲೂ!" ಎಂದು ಹಾಡುತ್ತ ಕುಣಿಯುತ್ತ ಇರುವಾಗಲೆ 2000 ದ ಕೊನೆಯಲ್ಲಿ ಡಾಟ್‌ಕಾಮ್ ಗುಳ್ಳೆ ಒಡೆಯಿತು. ಷೇರು ಮಾರುಕಟ್ಟೆ ಬಿತ್ತು. ಲಕ್ಷಾಂತರ ಜನ ತಮ್ಮ ಆತ್ಮವಿಶ್ವಾಸವನ್ನು ಮಾತ್ರವಲ್ಲದೆ ಕೆಲಸಗಳನ್ನೂ ಕಳೆದುಕೊಂಡರು. ಬೊಕ್ಕಸಕ್ಕೆ ತೆರಿಗೆಯ ರೂಪದಲ್ಲಿ ಹಣ ತುಂಬುತ್ತಿದ್ದ ಅನೇಕ ಕಂಪನಿಗಳು ಮುಚ್ಚಿಕೊಂಡವು. ಮಾಹಿತಿ ತಂತ್ರಜ್ಞಾನದ ಉದ್ದಿಮೆಯ ಮೇಲೆ ಪರೋಕ್ಷವಾಗಿ ಅವಲಂಬಿತವಾಗಿದ್ದವರ ಮೇಲೂ ಅದು ಕೆಟ್ಟ ಪರಿಣಾಮ ಬೀರಿತು. ನಿಧಾನಕ್ಕೆ ಒಂದಲ್ಲ ಒಂದು ಹೊಡೆತ ಬೀಳುತ್ತಲೆ ಹೋಯಿತು. ಅಷ್ಟೊತ್ತಿಗೆ ಕ್ಯಾಲಿಫೋರ್ನಿಯಾದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಿ ಒಳ್ಳೆಯ ಹೆಸರು ಪಡೆದುಕೊಂಡಿದ್ದ ಡೇವಿಸ್ ನಂತರದ ದಿನಗಳಲ್ಲಿ ಕೊರತೆ ಬಜೆಟ್‌ನಿಂದಾಗಿ ಮತ್ತು ಹಲವು ಮಿಸ್‌ಮ್ಯಾನೇಜ್‌ಮಿಂಟ್‌ಗಳಿಂದಾಗಿ ಜನಪ್ರಿಯತೆ ಕಳೆದುಕೊಳ್ಳುತ್ತಾ ಹೋದ. ವರ್ಷಕ್ಕೆ ಒಂದು ಬಾರಿಯೂ ಕರೆಂಟ್ ಹೋಗದ ದೇಶ ಇದು. ಹಾಗಿರುವಾಗ ಈತನ ಅವಧಿಯಲ್ಲಿ ಕ್ಯಾಲಿಫೋರ್ನಿಯ ಹಲವಾರು ಸಲ ಲೋಡ್-ಶೆಡ್ಡಿಂಗ್ ಕಂಡಿತು. ಅಷ್ಟಿದ್ದರೂ ಆತ 2002 ರ ಮರುಚುನಾವಣೆಯಲ್ಲಿ ಇನ್ನೊಂದು ಅವಧಿಗೆ ಗವರ್ನರ್ ಆಗಿ ಚುನಾಯಿತನಾದ.

ಅವನ ದುರಾದೃಷ್ಟ ಮತ್ತು ಆಲಸ್ಯ. ಹಾಗೆ ಮರುಚುನಾಯಿತನಾದ ಕೆಲವೇ ತಿಂಗಳುಗಳಿಗೆ ಆತನ ಪರಿಸ್ಥಿತಿ ತೀರಾ ಹದಗೆಟ್ಟಿತು. ಸರ್ಕಾರದ ಆದಾಯ ಕುಗ್ಗುತ್ತ ಅದರೆ ಖರ್ಚು ಬೆಳೆಯುತ್ತಾ ಹೋಯಿತು. ನೀಡಬೇಕಾದ ಸಮಯದಲ್ಲಿ ಆತ ಒಳ್ಳೆಯ ನಾಯಕತ್ವ ನೀಡಲಿಲ್ಲ. ಆತನ ಪಕ್ಷದಲ್ಲೂ ಆತನಿಗೆ ಒಳ್ಳೆಯ ಬೆಂಬಲ ಇರಲಿಲ್ಲ. ರಾಜ್ಯದ ಹದಗೆಟ್ಟ ಆರ್ಥಿಕ ಸ್ಥಿತಿಗೆ ಗ್ರೇ ಡೇವಿಸ್‌ನೇ ಜವಾಬ್ದಾರಿ ಎಂದು ಎಲ್ಲರೂ ಭಾವಿಸಿಬಿಟ್ಟರು. ಇದೇ ಸಮಯ ನೋಡುತ್ತಿದ್ದ ವಿರೋಧ ಪಕ್ಷದ ನಾಯಕನೊಬ್ಬ ತಾನು ಇದೇ ಸಮಯದಲ್ಲಿ ಗವರ್ನರ್ ಆಗಿಬಿಡಬಹುದು ಎಂದು ಗ್ರಹಿಸಿ ಗ್ರೇ ಡೇವಿಸ್‌ನನ್ನು ಗವರ್ನರ್ ಹುದ್ದೆಯಿಂದ ವಾಪಸು ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿಯೇ ಬಿಟ್ಟ. ಕೇಂದ್ರ ಮಟ್ಟದ ಚುನಾಯಿತ ಪ್ರತಿನಿಧಿಗಳನ್ನು ಬಿಟ್ಟು ಮಿಕ್ಕ ಯಾರನ್ನು ಬೇಕಾದರೂ ಅವರ ಅವಧಿ ಮುಗಿಯುವುದಕ್ಕಿಂತ ಮೊದಲೆ ವಾಪಸ್ ಮನೆಗೆ ಕಳುಹಿಸುವ ಅವಕಾಶ ಈ ದೇಶದಲ್ಲಿ ಇದೆ. ಗ್ರೇ ಡೇವಿಸ್‌ನನ್ನು ಕೆಳಗಿಳಿಸುವ Recall ಚುನಾವಣೆಗೆ ಅಗತ್ಯವಾಗಿ ಬೇಕಾದಷ್ಟು ಸಹಿ ಸಂಗ್ರಹಿಸಿ ಒಂದು ಗುಂಪಿನ ಜನ ಚುನಾವಣೆಯನ್ನು ಹೇರಿಯೇ ಬಿಟ್ಟರು. ನಂತರ ಅದಕ್ಕೆ ಜನಬೆಂಬಲವೂ ದೊರೆಯಿತು. ಆ ಚುನಾವಣೆಯಲ್ಲಿ ಶೇ. 54 ರಷ್ಟು ಮತದಾರರು ಡೇವಿಸ್‌ನನ್ನು ಅಧಿಕಾರದಿಂದ ಇಳಿ ಎಂದು ಇಳಿಸೇಬಿಟ್ಟರು. ಕೇವಲ ಹತ್ತು ತಿಂಗಳ ಹಿಂದೆಯಷ್ಟೆ ಆತನನ್ನು ನಾಲ್ಕು ವರ್ಷಗಳ ಅವಧಿಗೆ ಚುನಾಯಿಸಿದ್ದ ಜನ ಈಗ ವರ್ಷವಾಗುವುದಕ್ಕಿಂತ ಮೊದಲೆ ಇಳಿಸಿಯೂ ಬಿಟ್ಟರು. ಅದೇ ಚುನಾವಣೆಯಲ್ಲಿ ಅನಾಯಾಸವಾಗಿ ಕ್ಯಾಲಿಫೋರ್ನಿಯಾದ ಗವರ್ನರ್ ಆದವನು, ಆಸ್ಟ್ರಿಯಾ ದೇಶದಲ್ಲಿ ಹುಟ್ಟಿ, ಅಮೆರಿಕಾಕ್ಕೆ ಬಂದು, ದೊಡ್ಡ ಹಾಲಿವುಡ್ ಆಕ್ಷನ್ ಸ್ಟಾರ್ ಆಗಿ ಬೆಳೆದ ನಟ, ಆರ್ನಾಲ್ಡ್ ಶ್ವಾರ್ಜನೆಗ್ಗರ್.

ಹೊಸ ಗವರ್ನರ್ ಆರ್ನಾಲ್ಡ್‌ಗೆ ಪರಿಸ್ಥಿತಿ ಅಷ್ಟೇನೂ ಕೆಟ್ಟದಾಗಿರಲಿಲ್ಲ. ಮತ್ತೆ ಸಿಲಿಕಾನ್ ಕಣಿವೆಯಲ್ಲಿ ಉದ್ದಿಮೆಗಳು ಚಿಗಿತುಕೊಂಡವು. ಕೆಲವೊಮ್ಮೆ ಓಲೈಸಿಕೊಂಡು, ಮತ್ತೆ ಕೆಲವೊಮ್ಮೆ ತನ್ನ ಮಾತು ಕೇಳದಿದ್ದರೆ ಜನರ ಬಳಿಗೇ ನೇರವಾಗಿ ಹೋಗುತ್ತೇನೆಂದು ಜನಪ್ರತಿನಿಧಿಗಳನ್ನು ಹೆದರಿಸಿಕೊಂಡು, ಆಡಳಿತ ನಡೆಸುತ್ತ ಬಂದ. ಜನಪ್ರಿಯತೆಯನ್ನೂ ಉಳಿಸಿಕೊಂಡ. ಅದರಿಂದಾಗಿಯೆ ಎರಡು ವರ್ಷಗಳ ಹಿಂದಿನ ಮರುಚುನಾವಣೆಯಲ್ಲಿ ಈತನ ವಿರುದ್ಧ ಬಲವಾದ ಅಭ್ಯರ್ಥಿಯೇ ಇರಲಿಲ್ಲ. ಚುನಾವಣೆ ಇದೆ ಎನ್ನುವ ಸದ್ದೂ ಇಲ್ಲದಷ್ಟು ಪ್ರಶಾಂತವಾಗಿದ್ದ ಆ ಚುನಾವಣೆಯಲ್ಲಿ ಸುಲಭವಾಗಿ ಮರುಆಯ್ಕೆಯಾದ.

ಆದರೆ ಈ ವರ್ಷ ಆತನಿಗೂ ಕುತ್ತಿಗೆಗೆ ಬಂದಿದೆ. ಸುಮಾರು 75000 ಕೋಟಿ ರೂಪಾಯಿಗಳ ಕೊರತೆ ಬಜೆಟ್ ಇಟ್ಟುಕೊಂಡು ಆತ ಈಗ ಆಡಳಿತ ನಡೆಸಬೇಕಿದೆ. ಆತನ ಈ ಕೊರತೆ ಬಜೆಟ್‌ಗೆ ಈ ರಾಜ್ಯದ ಜನಪ್ರತಿನಿಧಿಗಳು ಯಾವ ಪರಿಯ ವಿರೋಧ ವ್ಯಕ್ತಪಡಿಸಿದರೆಂದರೆ ಸುಮಾರು ಮೂರು ತಿಂಗಳ ಕಾಲ ಆತನ ಬಜೆಟ್‌ಗೆ ಅನುಮೋದನೆಯನ್ನೇ ಕೊಡಲಿಲ್ಲ. ದೈತ್ಯದೇಹಿ ಆರ್ನಾಲ್ಡ್‌ನ ಯಾವ ಬೆದರಿಕೆಗಳೂ ಇಲ್ಲಿ ಕೆಲಸ ಮಾಡಲಿಲ್ಲ. ಹೊಸ ಯೋಜನೆಗಳನ್ನು ಸೇರಿಸುವುದರ ಮೂಲಕ ಅಗಾಧವಾದ ಬಜೆಟ್ ಕೊರತೆಯನ್ನು ಹೆಚ್ಚಿಸಬೇಡಿ ಎನ್ನುವುದು ಆತನ ವಾದ. ಆದರೆ ತಮ್ಮ ಇಷ್ಟದ ಯೋಜನೆಗಳಿಗೆ ಹಣ ಮಂಜೂರು ಮಾಡಿಸಿಕೊಳ್ಳಲು ಪಟ್ಟುಹಿಡಿದು ಕೂತ ಜನಪ್ರತಿನಿಧಿಗಳು ಆತನ ಯಾವ ಒತ್ತಡಗಳಿಗೂ ತಿಂಗಳುಗಳ ಕಾಲ ಜಗ್ಗಲಿಲ್ಲ.

ಈಗ, ಕೇವಲ ಮೂರು ವಾರದ ಹಿಂದೆಯಷ್ಟೆ ಆರ್ನಾಲ್ಡ್‌ನ ರಾಜ್ಯ ಸರ್ಕಾರ ಜಾರ್ಜ್ ಬುಷ್‌ನ ಕೇಂದ್ರ ಸರ್ಕಾರಕ್ಕೆ ತುರ್ತಾಗಿ 35000 ಕೋಟಿ ರೂಪಾಯಿಗಳ ತಾತ್ಕಾಲಿಕ ಸಾಲ ಬೇಕಾಗಿದೆ ಎಂದು ಮೊರೆ ಇಟ್ಟಿತ್ತು. ಖಜಾನೆಯಲ್ಲಿ ದುಡ್ಡಿಲ್ಲ, ಈಗ ಸಾಲ ಕೊಡದೆ ಇದ್ದರೆ ಸರ್ಕಾರಿ ?ಕರರಿಗೆ ಸಂಬಳ ಕೊಡುವುದೂ ಕಷ್ಟವಾಗುತ್ತದೆ, ನಿಮ್ಮ ಸಾಲವನ್ನು ಮುಂದಿನ ವರ್ಷದ ಆದಾಯ ತೆರಿಗೆ ಹಣ ಬಂದ ತಕ್ಷಣ ತೀರಿಸುತ್ತೇವೆ, ಎನ್ನುವುದೆ ಆ ಮೊರೆಯ ಸಾರಾಂಶ. ಈಗಲೂ ವಿಶ್ವದ ಏಳನೆಯದೊ ಎಂಟನೆಯದೊ ಅರ್ಥವ್ಯವಸ್ಥೆಯಾಗಿರುವ ಕ್ಯಾಲಿಫೋರ್ನಿಯಾದ ಕತೆ ಇದು. ಹಿಂದಿನ ಸರ್ಕಾರಗಳ ದುಂದುಗಾರಿಕೆ ಮತ್ತು ಮುಂದಾಲೋಚನೆಯಿಲ್ಲದ ಯೋಜನೆಗಳಿಗೆಲ್ಲ ಹಣ ನೀಡಬೇಕಾಗಿರುವುದರಿಂದ ಮತ್ತು ಇದರಲ್ಲಿ ಆರ್ನಾಲ್ಡ್‌ನ ತಪ್ಪು ಕನಿಷ್ಠವಾದ್ದರಿಂದ ಸದ್ಯ ಆಎನಾಲ್ಡ್‌ನನ್ನೂ ಹಿಂದಕ್ಕೆ ಕರೆಸಿಕೊಳ್ಳುವ ಮಾತನ್ನು ಯಾರೂ ಆಡುತ್ತಿಲ್ಲ!

ಈಗ ಸಿಲಿಕಾನ್ ಕಣಿವೆಯ ಕ್ಯಾಲಿಫೋರ್ನಿಯಾದಿಂದ ಸಿಲಿಕಾನ್ ಸಿಟಿಯ ಕರ್ನಾಟಕಕ್ಕೆ ಬರೋಣ. ನನಗೆ ಯಾಕೊ ಈ ಮೇಲಿನ ಸಂಗತಿ ಕರ್ನಾಟಕದ ಭವಿಷ್ಯದ ಮುನ್ಸೂಚನೆಯನ್ನೇ ನೀಡುತ್ತಿದೆ. 2004 ರಿಂದ ಕರ್ನಾಟಕವೂ ಉಳಿತಾಯದ ಬಜೆಟ್ ಕಾಣುತ್ತಿದೆ. ಏರುತ್ತ ಹೋದ ಐಟಿ-ಬಿಟಿ-ಬಿಪಿಒ ಉದ್ದಿಮೆಗಳು, ಅಭಿವೃದ್ಧಿಯ ಪಥದಲ್ಲಿ ಮುನ್ನಡೆದ ದೇಶ, ಏರಿದ ಷೇರು ಮಾರುಕಟ್ಟೆ, ಸ್ಥಳೀಯ ಶ್ರೀಮಂತರ ಜೊತೆಗೆ ಆಂಧ್ರದ ಮತ್ತು ಉತ್ತರ ಭಾರತದ ಶ್ರೀಮಂತರು ಹಾಗೂ ಎನ್ನಾರೈಗಳ ಹೂಡಿಕೆಯಿಂದ ಲಂಗುಲಗಾಮಿಲ್ಲದೆ ನಡೆದ ರಿಯಲ್ ಎಸ್ಟೇಟ್ ವ್ಯವಹಾರ, ಬಳ್ಳಾರಿ ಅದಿರು ಉತ್ಪಾದಿಸಿದ ಎಲ್ಲೆಯಿಲ್ಲದ ಶ್ರೀಮಂತಿಕೆ, ಹೀಗೆ ಅಣೇಕ ಕಾರಣಗಳಿಂದ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ಹಣ ಬಂದು ಬೀಳುತ್ತಲೆ ಹೋಯಿತು. ಇದೂ ಸಾಲದೆಂಬಂತೆ ಕುಮಾರಸ್ವಾಮಿ-ಯಡ್ಡ್‌ಯೂರಪ್ಪ ಸರ್ಕಾರ ಬೆಂಗಳೂರು ಸುತ್ತಮುತ್ತಲ ಸರ್ಕಾರಿ ಜಮೀನಿನ ಹರಾಜಿಗೂ ಇಳಿದುಬಿಟ್ಟರು. ದುಡ್ಡು. ದುಡ್ಡು. ದುಡ್ಡು. ಯಾವ ಮೂಲದಿಂದ ನೋಡಿದರೂ ದುಡ್ಡು.

ಇಷ್ಟೊಂದು ಉಳಿತಾಯದ ಬಜೆಟ್‌ನ ದುಡ್ಡನ್ನು ನೋಡಿ ನಮ್ಮ ಯಡ್ಡ್‌ಯೂರಪ್ಪನವರ ತಲೆತಿರುಗಿದ್ದು ಸಹಜವೆ. ಸಿಕ್ಕಸಿಕ್ಕಿದ್ದಕ್ಕೆಲ್ಲ, ಜಾತಿಸಂಘಗಳಿಗೆಲ್ಲ ಸರ್ಕಾರಿ ದುಡ್ಡು, ದಾನ-ದತ್ತಿ. ಈಗಾಗಲೆ ಸಾಕಷ್ಟು ಸ್ಥಿತಿವಂತವಾಗಿರುವ, ರಾಜ್ಯದಲ್ಲಿ ಸಂವಿಧಾನೇತರ ಶಕ್ತಿಗಳಾಗಿ ವಿಜೃಂಭಿಸುತ್ತಿರುವ ಮಠಗಳಿಗೂ ಸಹ ಯಾವುದೋ ರೂಪದಲ್ಲಿ ದುಡ್ಡು. ಜನರ ತೀರ್ಪನ್ನು ಕಾಲಕಸ ಮಾಡಿ ಕೇವಲ ಆರು ತಿಂಗಳಿನಲ್ಲಿಯೆ ಮರುಚುನಾವಣೆ ಹೇರಿದ ಅನೈತಿಕ ರಾಜಕಾರಣಿಗಳ ಕ್ಷೇತ್ರಾಭಿವೃದ್ಧಿಗೆಂದು ರಾತ್ರೋರಾತ್ರಿ ಹುಟ್ಟುಹಾಕಿದ ಯೋಜನೆಗಳಿಗೂ ದುಡ್ಡು. ಪ್ರತಿದಿನವೂ ಕೋಟಿಕೋಟಿ ರೂಪಾಯಿಗಳ ಯೋಜನೆಗಳ ಘೋಷಣೆ. ವಾವ್! ಹಾಲುತುಪ್ಪ ನದಿಯೋಪಾದಿಯಾಗಿ ಹರಿಯುತ್ತಿರುವ ಸುಭಿಕ್ಷ ನಾಡು ಈ ಕರ್ನಾಟಕ. ಬಡತನ, ಅಸಮಾನತೆ, ನಿರುದ್ಯೋಗಗಳನ್ನೆಲ್ಲ ಬುಡಮಟ್ಟ ಕಿತ್ತು ಬಿಸಾಕಿರುವ ರಾಮರಾಜ್ಯ! ಇನ್ನೇನು ಚಿದಾನಂದ ಮೂರ್ತಿಗಳು ಹಂಪಿಯಲ್ಲಿ ಮುತ್ತು-ರತ್ನ-ವಜ್ರ-ವೈಢೂರ್ಯಗಳನ್ನು ರಸ್ತೆಬದಿಯಲ್ಲಿ ಹರಡಿಕೊಂಡು ವ್ಯಾಪಾರ ಮಾಡುವುದೊಂದೇ ಬಾಕಿ!

Youtubeನಲ್ಲಿ ಈ ಲೇಖನದ ವಾಚನ

ಅರೆ. ಇದೇನಿದು? ಈ ಸಲದ ದೀಪಾವಳಿಗೆ ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಉತ್ಸಾಹವೆ ಇಲ್ಲವಂತಲ್ಲ? ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಅದೇನೊ ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಜಮೀನು-ಸೈಟು-ಫ್ಲಾಟುಗಳ ನೋಂದಾವಣೆಯೂ ಕಮ್ಮಿ ಆಗಿ, ಸರ್ಕಾರಕ್ಕೆ ಬರುತ್ತಿದ್ದ ಆದಾಯಕ್ಕೂ ಹೊಡೆತ ಬಿದ್ದುಬಿಟ್ಟಿದೆಯಂತಲ್ಲ? ಬಳ್ಳಾರಿ-ಕಾರವಾರದ ಮಾರ್ಗದಲ್ಲಿ ರಾತ್ರಿ-ಹಗಲು ಎಡಬಿಡದೆ ಹರಿದಾಡುತ್ತಿದ್ದ ಅದಿರು ಲಾರಿಗಳ ಭರಾಟೆಯೂ ನಿಂತು ಹೋಗಿದೆಯಂತಲ್ಲ? ಅದೇನೊ ಷೇರು ಮಾರುಕಟ್ಟೆ ಒಂದೇ ವರ್ಷದಲ್ಲಿ ಅರ್ಧ ಬೆಲೆ ಕಳೆದುಕೊಂಡಿದೆಯಂತಲ್ಲ? ಬೆಂಗಳೂರಿನಲ್ಲಿ ಸರ್ಕಾರವೆ ಖುದ್ದು ನಿಂತು ನಡೆಸಿಕೊಡುವ ಸರ್ಕಾರಿ ಜಮೀನು ಹರಾಜಿನಲ್ಲಿ ಹರಾಜು ಕೂಗುವವರೆ ಇಲ್ಲವಂತಲ್ಲ?

ಯಡ್ಡ್‌ಯೂರಪ್ಪನವರ ಮಧುಚಂದ್ರ ಅಂದುಕೊಂಡಿದ್ದಕ್ಕಿಂತ ಬೇಗನೆ ಮುಗಿಯುತ್ತಿದೆ. ರಾಜ್ಯದ ಆರ್ಥಿಕ ಸ್ಥಿತಿಯ ಅಭಿವೃದ್ಧಿಗೆ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ, ಮತ್ತು ನಮ್ಮದೇ ರಾಜ್ಯದ ಸ್ವಾವಲಂಬನೆಗೆ ಗಮನ ಕೊಡದೆ ಹುಚ್ಚುಚ್ಚು Populist ಯೋಜನೆಗಳನ್ನು ಹಮ್ಮಿಕೊಂಡು ಹೋಗುತ್ತಿರುವ ನಮ್ಮ ರಾಜ್ಯ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಹೊಸಹೊಸ ಪಾಠಗಳನ್ನು ಕಲಿಯುವುದು ಅನಿವಾರ್ಯವಾಗಲಿದೆ. ಐದಾರು ವರ್ಷಗಳ ಹಿಂದೆ ಮಾಡುತ್ತಿದ್ದಂತೆ ಕೇಂದ್ರದ ಅನುದಾನ ಕೇಳುವುದು ಮುಂದಿನ ವರ್ಷದಿಂದ ಹೆಚ್ಚಲಿದೆ. ಮುಂದಿನ ವರ್ಷವೂ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಥವ ಬಿಜೆಪಿಯೇತರ ಸರ್ಕಾರ ಇದ್ದಲ್ಲಿ "ಕೇಂದ್ರದ ಮಲತಾಯಿ ಧೋರಣೆ" ಪದೆಪದೆ ಕನ್ನಡಿಗರ ಕಿವಿಗೆ ಬೀಳುವುದೂ ಹೆಚ್ಚಾಗಲಿದೆ. ಪರಿಸ್ಥಿತಿ ಕೆಟ್ಟದಾಗಿಯೆ ಮುಂದುವರೆದರೆ ಸರ್ಕಾರಿ ನೌಕರರಿಗೆ ಸಂಬಳ ಕೊಟ್ಟ ಮೇಲೆ ಬೇರೆ ಏನಕ್ಕೂ ದುಡ್ಡೇ ಇಲ್ಲದ ಸ್ಥಿತಿ ಬರಲಿದೆ. ಅಧಿಕಾರ ವಹಿಸಿಕೊಂಡ ಮಾರನೆಯ ವರ್ಷವೆ ಯಡ್ಡ್‌ಯೂರಪ್ಪನವರು ಖೋತಾ ಬಜೆಟ್ ಮಂಡಿಸಲಿದ್ದಾರೆ. ಇತಿಹಾಸ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಪುನರಾವರ್ತನೆಯಾಗುತ್ತದೆ.

Oct 28, 2008

ಅನುವಾದಿತ ಸಣ್ಣ ಕತೆ: ಒಂದು ಜಾಹಿರಾತು

- ತೆಲುಗು ಮೂಲ: ಶಿವಂ
(ಕೃಪೆ: ದಟ್ಸ್‌ತೆಲುಗು.ಕಾಂ)

[ಮೊದಲು (ಜುಲೈ 25, 2003) ದಟ್ಸ್‌ಕನ್ನಡ.ಕಾಮ್‌ನಲ್ಲಿ ಪ್ರಕಟವಾಗಿತ್ತು. ಈಗ ಇಲ್ಲಿ.]


"ಎಲ್ಲಿ ಒಂದು ನಗು ನಗಿ!" ದಿನಪತ್ರಿಕೆಯಲ್ಲಿನ ಒಂದು ಟೂತ್‌ಪೇಸ್ಟ್ ಜಾಹೀರಾತು ಕೇಳುತ್ತಿದೆ.

ನಗು! ಎಷ್ಟು ದಿನಗಳಾದವು ಅವನು ನಕ್ಕು! ಬಹುಶಃ ಹದಿನೈದು ವರ್ಷವಾದರೂ ಆಗಿರಬೇಕು. ಹೌದು. ಹದಿನೈದು ವರ್ಷಗಳು.

ಅವನಿಗೆ ಹದಿನೇಳು ಇದ್ದಾಗ ಶಾಲಾಮಾಸ್ತರ ಬಾಳೆಹಣ್ಣಿನ ಸಿಪ್ಪೆಯ ಮೇಲೆ ಜಾರಿ ಬಿದ್ದು ಬಿಟ್ಟ. ವೆಂಕಟರಾವು ಇರಬಹುದು, ಪಂಡಿತರನ್ನು ಹಿಡಿದು ನಿಲ್ಲಿಸಲು ಹೋದ. ಮಾಸ್ತರರು ಕ್ರೋಧದಿಂದ ವೆಂಕಟರಾವಿನ ಬೆನ್ನಿನ ಮೇಲೆ ಬೆತ್ತವನ್ನು ಚೂರು ಚೂರು ಮಾಡಿದ್ದರು. ಎಲ್ಲರೂ ನಕ್ಕಿದ್ದರಾಗ. ಅವನೂ ನಕ್ಕಿದ್ದ ಎಲ್ಲರ ಜೊತೆಗೆ. ಅವನ ಕಣ್ಣಲ್ಲಿ ನೀರು ತುಳುಕಿತ್ತು ಆ ನಗುವಿಗೆ.

ಅದೇ ಕೊನೆಯ ಸಾರಿ ನಕ್ಕಿದ್ದು ಗುರುತಿರುವುದು. ಆಮೇಲೆ ಅವನಿಗೆ ಈ ಪ್ರಪಂಚದಲ್ಲಿ ಏನನ್ನು ನೋಡಿ ನಗಬೇಕೊ ತಿಳಿದಿದ್ದಿಲ್ಲ. ಕಾಂಗ್ರೆಸ್‌ನವರು ಲಾಠಿಛಾರ್ಜ್‌ಗಳನ್ನು ತಿನ್ನುವುದನ್ನು ನೋಡಿದ. ಹೆಂಡತಿ ಮಕ್ಕಳನ್ನು ಬಿಟ್ಟು ಜೈಲಿನಲ್ಲಿ ಕೊಳೆಯುವುದನ್ನು ನೋಡಿದ. ಅನಾರೋಗ್ಯದಿಂದ ತನ್ನ ತಂದೆ ವೈದ್ಯೋಪಚಾರಕ್ಕೆ ಸಹ ಗತಿಯಿಲ್ಲದೆ ಬಾಧೆ ಪಡುತ್ತಾ ಸಾಯುವುದನ್ನು ನೋಡಿದ. ಬಂಗಾಳ ಬರಗಾಲದಲ್ಲಿ ಜನರು ಎಲೆಗಳನ್ನು ಆಯುತ್ತ ತಿನ್ನುವುದನ್ನು ನೋಡಿದ.

ಯಾರೂ ಆತನನ್ನು ಆ ದಿನಗಳಲ್ಲಿ ನಗು ಎಂದು ಕೇಳದೆ ಹೋದರು. ಕೊನೆಗೆ ಟೂತ್‌ಪೇಸ್ಟ್ ಕಂಪನಿಯವರೂ ಕೂಡಾ.

"ಆತನು ಯಾವಾಗಲೂ ನಗುತ್ತಲೇ ಇರುತ್ತಾನೆ." ಎನ್ನುತ್ತಿತ್ತು, ಎನ್ನುತ್ತಿದೆ ಈ ಟೂತ್‌ಪೇಸ್ಟ್ ಜಾಹೀರಾತು.

ಜಾಹೀರಾತಿನಲ್ಲಿನ ಚಿತ್ರದ ಮುಖ ಅವನ ಮುಖದ ಹಾಗೆ ಇಲ್ಲ. ಥೇಟು ಅವನ ಆಫೀಸರ್ ಮುಖದ ರೀತಿ ಶುಭ್ರವಾಗಿ, ನುಣ್ಣಗೆ ಇದೆ. ಅವನ ಆಫೀಸರ್ ಮುಖದ ಹಾಗೆ ನಗುತ್ತಾ ಇದೆ.

ಅವನ ಆಫೀಸರ್‌ಗೆ ಏಳು ನೂರು ರೂಪಾಯಿಗಳ ಸಂಬಳ. ಆಫೀಸಿಗೆ ಕಾರಿನಲ್ಲಿ ಬರುತ್ತಾರೆ. ಕಲ್ಲು-ಮಣ್ಣು ಇಲ್ಲದ ಅಚ್ಚ ಬಿಳಿಯ ಮಲ್ಲಿಗೆ ಹೂವಿನಂತಹ ಅಕ್ಕಿ ರೇಷನಿಂಗ್ ದಿನಗಳಲ್ಲಿ ಸಹ ಚೀಲಗಳಲ್ಲಿ ಅವರ ಮನೆಗೆ ಬರುತ್ತದೆ. ಅವರಿಗೆ ಕಾಯಿಲೆ ಬಂದರೆ ಡಿ.ಎಂ.ಓ ಮನೆಗೆ ಬಂದು ಸ್ವಯಂ ಔಷಧ ಕೊಟ್ಟು ಹೋಗುತ್ತಾನೆ. ಅವರು ಯಾವಾಗಲೂ ನಗುತ್ತಿರುತ್ತಾರೆ ಮತ್ತೆ.

"ಒಳ್ಳೆಯ ದಂತಪಂಕ್ತಿಯಿಂದ ನಗುವ ಆ ನಗು ಆರೋಗ್ಯ." ಮತ್ತೇ ಜಾಹಿರಾತು. ಅವನದು ಒಳ್ಳೆಯ ಹಲ್ಲುವರಸೆ. ಅವನಿಗೆ ಆರೋಗ್ಯ ಎಂದರೆ ಬಹಳ ಇಷ್ಟ . ಹದಿನೈದು ವರ್ಷದ ಹಿಂದೆ ನಗುತ್ತಿದ್ದ. ಮತ್ತೆ ನಕ್ಕು ಆರೋಗ್ಯವಾಗಿ ಇರೋಣ ಎಂದು ಅವನ ಉದ್ದೇಶ. ಆದರೆ ಅವನಿಗೆ ನಗು ಬರುತ್ತಿಲ್ಲ . ಎರಡನೇ ಪ್ರಪಂಚ ಯುದ್ಧ ಮುಗಿದ ತಕ್ಷಣ ನಗೋಣ ಎನ್ನಿಸಿತ್ತು ಅವನಿಗೆ. ಯುದ್ಧದಲ್ಲಿ ಗಂಡಂದಿರನ್ನು, ತಂದೆಯರನ್ನು ಕಳೆದುಕೊಂಡ ಅಮಾಯಕ ಜನರು ಜ್ಞಾಪಕ ಬಂದರು ಅವನಿಗೆ. ಅವರ ಶೋಕಗಳು ಅವನ ಕಿವಿಯಲ್ಲಿ ಗಿಂಗುರುಗುಟ್ಟಿದವು. ನಗಲಾರದೆ ಹೋದನು ಅವನು.

ಭಾರತ ದೇಶ ಸ್ವತಂತ್ರ ದೇಶ ಆಗಲಿದೆ ಎಂದರು. ತುಟಿಗಳು ಬಿರಿದವು. ಆನಂದದಿಂದ ಪ್ರಪಂಚ ಪ್ರತಿಧ್ವನಿಸುವ ಹಾಗೆ ಗಹಗಹಿಸಿ ನಗಬೇಕೆಂದು ಅವನ ಉದ್ದೇಶ. ಭಾರತ ಮಾತೆ ಎರಡು ಭಾಗಗಳಾಗಿ ಕತ್ತರಿಸಲ್ಪಟ್ಟಳು. ಹಿಂದೂಗಳು ಮುಸಲ್ಮಾನರನ್ನು, ಮುಸಲ್ಮಾನರು ಹಿಂದೂಗಳನ್ನು ಕತ್ತರಿಸುತ್ತ ಸಾಗಿದರು. ರಕ್ತ ಪ್ರವಾಹದಂತೆ ಹರಿಯಿತು. ಅವನ ತುಟಿಗಳು ವಿಷಾದಕರವಾಗಿ ಕೊಂಕು ತಿರುಗಿ ಮುದುರಿಕೊಂಡವು.

ಪ್ರಜಾಪ್ರಭುತ್ವವೆಂದರು. ತಿನ್ನುವುದಕ್ಕೆ ತಿಂಡಿ, ಇರುವುದಕ್ಕೆ ಮನೆ ಇರುತ್ತದೆ ಎಂದುಕೊಂಡನು ಅವನು. ಹೊಟ್ಟೆ ತುಂಬಾ ತಿಂದು, ಖಾಲಿಯಿದ್ದಾಗಲೆಲ್ಲ ತಣ್ಣನೆಯ ಅಂಗಳದ ಚಪ್ಪರದ ಕೆಳಗೆ ಕುಳಿತುಕೊಂಡು ಹೊಟ್ಟೆ ಬಿರಿಯುವ ಹಾಗೆ ತಾವೆಲ್ಲ ನಗುವುದೇ ಇನ್ನು ಮುಂದೆ ಎಂದುಕೊಂಡನು. ಬಂದಿತು ಅವರ ಪ್ರಭುತ್ವ. ಕೆರೆಯ ಬಳಿ ಗುಡಿಸಲಲ್ಲಿ ಇದ್ದ ರೌಡಿ ಸುಬ್ಬಯ್ಯ ತಮ್ಮನ್ನು ಆಳುವವರ ಗುಂಪಿಗೇರಿದ; ಕಿರುನಗೆ ನಗುತ್ತ ಸಾಗಿದ. ಇವನು ಇಲ್ಲಿಯವರೆಗೆ ಹಾಗೆ ಸಂಬಳ-ಜೀತ ಎನ್ನುತ್ತಾ, ಆರೋಗ್ಯ ಅನ್ನುತ್ತಾ, ಮುಕ್ಕುತ್ತ ಮುಲುಗುತ್ತಲೆ ಇದ್ದಾನೆ.

"ನಿರ್ಮಲವಾದ, ಶುಭ್ರವಾದ ಆ ಕಿರುನಗೆ ಈಗಲೇ ನಿಮ್ಮದಾಗುತ್ತದೆ." ಮಾತುಗಳು, ಒಣಮಾತುಗಳು. ನಿರ್ಮಲವಾದವು, ಶುಭ್ರವಾದವು ಯಾವೂ ತಮ್ಮದಲ್ಲ. ಕಿರುನಗೆ ಮಾತ್ರ ತಮ್ಮದು ಹೇಗೆ ಆಗುತ್ತದೆ? ಶುಭ್ರವಾದದ್ದೇನಾದರು ತಮಗೆ ಉಳಿದಿದ್ದರೆ ಅದು ಖಂಡಿತ ಮನಸ್ಸು ಮಾತ್ರವೆ. ಅದೂ ಕೂಡ ಉಳಿಯದೆ ಹೋಗಿದ್ದರೆ, ಎಂದೋ ಅವನು ನಕ್ಕಿರಬಹುದಿತ್ತು. ಸತ್ಯಕ್ಕಾಗಿ, ನ್ಯಾಯಕ್ಕಾಗಿ ಹೃದಯಕ್ಕೆ ಇಷ್ಟು ಬಾಧೆ ಏತಕ್ಕೆ ಕೊಡಬೇಕು?

ನಿರ್ಮಲವೂ, ಶುಭ್ರವೂ? ಏನ್ ಮಾತವು? ಆ ಮಾತುಗಳಿಗೆ ಅಸಲು ಅರ್ಥವೇ ಹೋಗಿದೆ ಅವನಿಗೆ. ಅವರು ಬಳಸುವ ತುಪ್ಪವೇ ಶುದ್ಧವಾದದ್ದಲ್ಲ. ತಾವು ತಿನ್ನುವ ತಿಂಡಿಕಾಳು ಪುಷ್ಠಿಕರವಾದುವು ಅಲ್ಲ. ತಮ್ಮ ಮಕ್ಕಳು ಕುಡಿಯುವ ಹಾಲು, ಮಜ್ಜಿಗೆ ಶುದ್ಧವಾದದ್ದಲ್ಲ. ತಾವು ಉಸಿರಾಡುವ ಗಾಳಿ ಶುಭ್ರವೇ, ನಿರ್ಮಲವೆ?

ಮನೆಗಳ ಹತ್ತಿರ ಕಾರ್ಖಾನೆಗಳು ಇರಬಾರದಂತೆ. ಅವನ ಮನೆಯ ಪಕ್ಕವೇ ಒಂದು ಕಾರ್ಖಾನೆ. ರಾತ್ರಿಯೆಲ್ಲಾ ಭುಕ್, ಭುಕ್, ಭುಕ್, ಭುಕ್ ಎಂದು ಒಂದೇ ಕೂಗು. ಬೆಳಿಗ್ಗೆ ಏಳುವಷ್ಟರಲ್ಲಿ ಅವನ ಮನೆಯ ತುಂಬಾ ಫ್ಯಾಕ್ಟರಿಯ ಕೆಟ್ಟಗಾಳಿಗೆ ಆ ಧೂಳು ಯಾವಾಗಲೂ ಹಾರುತ್ತಲೇ ಇರುತ್ತವೆ. ಕಣ್ಣಿಗೆ ಕಾಣದ ಆ ಧೂಳನ್ನು ಅವರು ಯಾವಾಗಲೂ ಒಳಗೆ ಕರೆಯುತ್ತಲೆ ಇರುತ್ತಾರೆ. ತಮ್ಮ ಆರೋಗ್ಯ ಸರಿಯಾಗಿ ಇರುವುದಿಲ್ಲ. ತಾವೆಂದೂ ಕಿರುನಗೆ ನಗುವುದಿಲ್ಲ.

ಅಸಲಿಗೆ, ಪದಗಳಿಗೆ ಬೆಲೆಯೇ ಹೋಗಿದೆ. ‘ಶುಭ್ರವೂ’, ‘ನಿರ್ಮಲವೂ’ ಎಂಬ ಎರಡು ಪದಗಳಿಗೇ ಅಲ್ಲ. ಬಹಳ ಪದಗಳಿಗೆ. ‘ದಯೆ’, ‘ಸತ್ಯ’, ‘ನೀತಿ’, ‘ವಿಚಕ್ಷಣೆ’, ‘ವಿವೇಕ’, ‘ನ್ಯಾಯ’ ಮೊದಲಾದ ಪದಗಳು ಅಸಲಿಗೆ ಮುಗ್ಗು ಹಿಡಿದುಹೋಗಿವೆ. ರಾಜಕಾರಣಿಗಳು ಚುನಾವಣೆಗಳಿಗೆ ಮೊದಲು ಪ್ರಚಾರಕ್ಕೆ ಉಪಯೋಗಿಸುವ ಆಯುಧಗಳವು ವರ್ತಮಾನದಲ್ಲಿ. ಚುನಾವಣೆ ಮುಗಿದಾಕ್ಷಣವೆ ಈ ಪದಗಳು ಅವರ ಸ್ವಂತ ಆಸ್ತಿಗಳ ಹಾಗೆ ಭದ್ರವಾಗಿ ಮುಚ್ಚಿಡಲ್ಪಡುತ್ತವೆ. ಹೇಗೆ ನಗು ಬರುತ್ತದೆ ಅವನಿಗೆ? ಹೇಗೆ ಅವನದಾಗುತ್ತದೆ ಆ ನಗು?

"ಹೇಗೆ ಎನ್ನುವಿರಾ? ಇಂದೇ ಯಾವ ಅಂಗಡಿಯಲ್ಲಾದರೂ ಕೇಳಿ..."

ಬಹಳ ತಾಳ್ಮೆ ಈ ವಿದೇಶಿ ವ್ಯಾಪಾರಿಗಳಿಗೆ. ತಮ್ಮಂತಹ ಮೂಢರಿಗೆ ಅಪಾರವಾದ ವಿಜ್ಞಾನದಿಂದ ಕಿರುನಗೆಯನ್ನು ಕೊಳ್ಳುವುದನ್ನು ಕಲಿಸುತ್ತಾರೆ. "ನಮ್ಮ ಹೊಟ್ಟೆ ಸುಡುತ್ತಿವೆ. ನಮ್ಮ ದೇಶವನ್ನು ಗೆದ್ದಲುಹುಳುಗಳು ಹಿಂಡಿ ಹಿಪ್ಪೆ ಮಾಡುತ್ತಿವೆ. ನಿಮಗೇನಾದರು ತಿಳಿದರೆ ನಮ್ಮ ದೇಶದಿಂದ ಗೆದ್ದಲುಹುಳುಗಳನ್ನು ನಿವಾರಿಸುವುದನ್ನು ತಿಳಿಸಿಕೊಡಿ. ನಮ್ಮ ಹೊಟ್ಟೆ ಉರಿ ಆರುವ ಮಾರ್ಗ ಹೇಳಿ. ನಮ್ಮ ದೇಶವನ್ನು ಸಾರವಂತ ಮಾಡಿಕೊಳ್ಳುತ್ತೇವೆ." ಎಂದು ಕೇಳಿದರೆ ಒಂದು ಟೂತ್‌ಪೇಸ್ಟ್ ಕಿರುನಗೆಯನ್ನು ಬಿಡುತ್ತಾರೆ. "ನಿಮ್ಮ ದೇಶದ ಸಂಪತ್ತು ನಮಗೆ ಬೇಕು." ಅನ್ನರು. "ಆನಂದವೇ ಆರೋಗ್ಯ! ಆನಂದಕ್ಕೆ ಚಿಹ್ನೆ ಈ ಕಿರುನಗೆ. ಎಲ್ಲಿ, ಕೊಳ್ಳಿರಿ, ನಗುತ್ತಿರಿ." ಅಂತಾರೆ.

ಹೇಗೆ ಕೊಳ್ಳುವುದು ಆ ಟೂತ್‌ಪೇಸ್ಟು? ಹೇಗೆ ನಗುವುದು ಆ ನಗು? ಅವನ ಸಂಬಳ 72 ರೂಪಾಯಿಗಳು. ಅವನ ತಾಯಿಗೆ ಮುವ್ವತ್ತೆರಡು ಹಲ್ಲುಗಳು. ಅವನ ಹೆಂಡತಿ ಸೀರೆ ಉಡುತ್ತಾಳೆ. ಅವನ ತಮ್ಮ ಶಾಲೆಯಲ್ಲಿ ಫೀಸು ಕಟ್ಟುತ್ತಿದ್ದಾನೆ. ಅವನಾ? ಅವನು! ನಗಬೇಕಿನಿಸುತ್ತದೆ ಆದರೆ ಶಕ್ತಿಯಿಲ್ಲದೆ ಹೋಗಿದೆ.

"ಚಿಕ್ಕ ಟ್ಯೂಬು ಹದಿನೆಂಟಾಣೆ ಮಾತ್ರವೆ." ಕೈನಿಂದ ಜಾರಿಬಿದ್ದ ಪತ್ರಿಕೆಯಲ್ಲಿನ ಜಾಹಿರಾತು ಕೆಳಗೆ ಬಿದ್ದರೂ ಕೂಡ ಚೀರುತ್ತಿದೆ. ಹದಿನೆಂಟಾಣೆ ಮಾತ್ರವೆ! ಈ ‘ಮಾತ್ರವೆ’ ಎನ್ನುವ ಪದವೆ ಬಹಳ ಚೆನ್ನಾಗಿದೆ. ಎರಡು ವರ್ಷದಿಂದ ‘ಮಾತ್ರವೆ’ ಅವನು ಚಪ್ಪಲಿ ಸಹಾ ಇಲ್ಲದೆ ನಡೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ಹಿರೋಷಿಮಾ ನಾಗಸಾಕಿಗಳ ಮೇಲೆ ‘ಮಾತ್ರವೆ’ ಅಣುಬಾಂಬುಗಳನ್ನು ಸುರಿಯಲಾಗಿದೆ. ಕೊರಿಯಾದಲ್ಲಿ ಯುದ್ಧ 12 ತಿಂಗಳಿನಿಂದ ‘ಮಾತ್ರವೆ’ ಜರುಗುತ್ತಿದೆ. ಆಂಧ್ರದ ಜನರಿಗೆ ತಿಂಡಿಕಾಳಿನ ಬರ ಐದು ವರ್ಷದಿಂದ ‘ಮಾತ್ರವೆ’. ಭಾರತದೇಶದಲ್ಲಿ ಜೀವನ್ಮೃತರು ಹೊಸಾ ಲೆಕ್ಕದ ಪ್ರಕಾರ 37 ಕೋಟಿ ‘ಮಾತ್ರವೆ’.

ನಗಬಹುದಾದವರು ಇನ್ನು ನಗಬಹುದು!

ನಂಜನಗೂಡಿನಲ್ಲಿ ನಿಗೂಢ ರಾತ್ರಿ

(KKNC ಯ 2005 ರ ಸ್ವರ್ಣಸೇತುವಿಗೆ ಬರೆದಿದ್ದ ಲೇಖನ. ಬ್ಲಾಗ್‌ಗೆ ಏರಿಸುತ್ತಿದ್ದೇನೆ.)

ಮೊನ್ನೆ (2005 ರ) ಜೂನ್‌ನಲ್ಲಿ ಹೆಂಡತಿ ಮತ್ತು ಮಗುವಿನೊಂದಿಗೆ ಭಾರತದ ಪ್ರವಾಸ ಹೋಗಿದ್ದಾಗ ಸುಮಾರು ನಾಲ್ಕು ವಾರಗಳನ್ನು ನನ್ನದೇ ತರಲೆ ತಾಪತ್ರಯಗಳಲ್ಲಿ, ಬರಬಾರದ, ಬಯಸಬಾರದ ಅನುಭವ ಮತ್ತು ಕಷ್ಟಗಳಲ್ಲಿ ಕಳೆದೆ. ಒಳ್ಳೆಯ ಸಮಯ ಇರಲೇ ಇಲ್ಲ ಅಂತಲ್ಲ; ಬೆಲ್ಲಕ್ಕಿಂತ ಬೇವೇ ಹೆಚ್ಚಿತ್ತು. ಹಾಗಾಗಿ, ಉಳಿದ ಒಂದು ವಾರದಲ್ಲಾದರೂ ಒಂದೆರಡು ದಿನ ಮನೆಯವರೆಲ್ಲರ ಜೊತೆ ಎಲ್ಲಾದರೂ ಹೋಗಿಬರೋಣ ಎಂದು ಶನಿವಾರ ಮಧ್ಯಾಹ್ನ ನಮ್ಮ Scorpio ವ್ಯಾನಿನಲ್ಲಿ ಅಮ್ಮ, ಅಣ್ಣ, ಅತ್ತಿಗೆ, ಅಣ್ಣನ ಇಬ್ಬರು ಮಕ್ಕಳು, ನನ್ನ ಹೆಂಡತಿ ಮತ್ತು ನನ್ನ ಒಂಬತ್ತು ತಿಂಗಳ ಮಗುವಿನೊಂದಿಗೆ ಮೈಸೂರಿನತ್ತ ಹೊರಟೆವು; ಯಾವುದೇ ಪೂರ್ವಸಿದ್ದತೆಗಳಿಲ್ಲದೆ. ಬೆಂಗಳೂರು ಹೊಸೂರು ರಸ್ತೆಯಲ್ಲಿರುವ ನನ್ನ ಊರಾದ ಬೊಮ್ಮಸಂದ್ರದಿಂದ ಹೊರಟು ಬೆಂಗಳೂರಿನ ಟ್ರಾಫಿಕ್ ಅನ್ನು ಭೇದಿಸಿಕೊಂಡು ಮೈಸೂರು ರಸ್ತೆ ಸೇರುವಷ್ಟರಲ್ಲಿ ನಮಗೆಲ್ಲಾ ಸಾಕುಸಾಕಾಗಿತ್ತು. ಡಬಲ್ ರೋಡ್ ಆಗುತ್ತಿರುವ ಆ ರಸ್ತೆಯಲ್ಲಿ ವೇಗ ನಿಧಾನಗಳನ್ನು ಅರ್ಥಮಾಡಿಕೊಳ್ಳುತ್ತ ರಾಮನಗರ ದಾಟಿ, ನಾಗೇಗೌಡರ ಪ್ರಸಿದ್ಧ ಜಾನಪದ ಲೋಕದ ಬಳಿಯ ಕಾಮತ್ ಲೋಕರುಚಿಯಲ್ಲಿ ಊಟಕ್ಕೆ ನಿಲ್ಲಿಸಿದೆವು. ಶುಚಿರುಚಿಯ ಜೋಳದ ರೊಟ್ಟಿ ಊಟ. ಮೈತೂಕ ಒಂದೆರಡು ಕೇಜಿ ಹೆಚ್ಚಾಯಿತೇನೋ! ಭಾರವಾದ ಮೈಯಿಂದಲೇ ನಿಧಾನಕ್ಕೆ ಜಾನಪದ ಲೋಕ ಸಂದರ್ಶಿಸಿದೆವು. ನೆನ್ನೆ ಮೊನ್ನೆಯ ಜೀವನ ಶೈಲಿ, ದಿನಬಳಕೆಯ ವಸ್ತುಗಳು ವಸ್ತು ಸಂಗ್ರಹಾಲಯ ಸೇರುತ್ತಿರುವ ವೇಗ ಹಾಗೂ ಬದಲಾಗುತ್ತಿರುವ ಪ್ರಪಂಚದ ದೃಷ್ಟಾಂತ ಈ ಜಾನಪದ ಲೋಕ ಎನ್ನಿಸಿತು.

ಇಲ್ಲಿಂದ ಹೊರಟ ನಮ್ಮ ವಾಹನ ಮುಂದೆ ನಿಂತದ್ದು ಶ್ರೀರಂಗಪಟ್ಟಣದ ಶ್ರೀರಂಗನ ದೇವಸ್ಥಾನದ ಪಕ್ಕದಲ್ಲಿಯೇ ಟಿಪ್ಪು ಕಟ್ಟಿಸಿರುವ ಬಂದೀಖಾನೆಯ ಮುಂದೆ, ಕಾವೇರಿಯ ದಡದಲ್ಲಿ. ಅಲ್ಲಿಂದ ಕಾವೇರಿ ನದಿ, ಅದರ ಮೇಲೆ ಕಟ್ಟಿರುವ ಬಸ್ಸು ರೈಲುಗಳ ಸೇತುವೆಗಳು, ಬೆಂಗಳೂರಿನತ್ತ ಹೊರಟಿದ್ದ ಉದ್ದದ ರೈಲು ವೀಕ್ಷಿಸಿ, ಕೆಂಡದ ಮೇಲೆ ಸುಟ್ಟು, ನಿಂಬೆ ರಸ, ಉಪ್ಪುಮೆಣಸು ಸವರಿದ ಜೋಳವನ್ನು ಮೆಲ್ಲುತ್ತಾ ದೇವಸ್ಥಾನದ ಕಡೆ ಹೊರಟೆವು. ಅಲ್ಲಿ ಕಂಡದ್ದು ಈ "ರಾಮು", ದೈತ್ಯ ಕುದುರೆ. ಇಪ್ಪತ್ತು ರೂಪಾಯಿಗೆ ನೂರಿನ್ನೂರು ಮೀಟರ್ ಸವಾರಿ. ಸರಿ ಎಂದು ಹತ್ತಿ ಕುಳಿತೆ. ಸವಾರಿ ಯಾವಾಗ ಮುಗಿಯುತ್ತದೆಯೋ ಎನ್ನುವಷ್ಟು ಹಿಂಸೆ, ಭಯ ಆಯಿತು. ಲಾಭ ಏನೆಂದರೆ ಅದು ನಡೆಯುತ್ತಿದ್ದಾಗ ಮೇಲೆ ಕುಳಿತಿದ್ದ ನನ್ನ ದೇಹ ಎಗರಿ ಎಗರಿ ಹೊಟ್ಟೆಗೆ ತೀಕ್ಷ್ಣವಾದ ವ್ಯಾಯಾಮ ಮತ್ತು ನಾನೇನಾದರೂ ಕುದುರೆ ಸವಾರಿ ಕಲಿಯಬೇಕಾದರೆ ಬಹುಶಃ ಇತರರಿಗಿಂತ ಹೆಚ್ಚೇ ಶ್ರಮ, ಅಭ್ಯಾಸ ಬೇಕು ಎಂಬ ಜ್ಞಾನೋದಯ.

ವಿರಾಮವಾಗಿ ದೇವಸ್ಥಾನ ನೋಡಿಕೊಂಡು ಆಚೆ ಬರುವಷ್ಟರಲ್ಲಿ ಇನ್ನೊಂದರೆ ತಾಸಿನಲ್ಲಿ ಕತ್ತಲಾಗುವ ಹಾಗೆ ಕಾಣಿಸಿತು. ಆದ್ದರಿಂದ ಬೇಗ ಕನ್ನಂಬಾಡಿ ಸೇರಿಕೊಳ್ಳುವ ಧಾವಂತದಲ್ಲಿ ಹೊರಟು ಅಲ್ಲಿಗೆ ತಲುಪಿ, ಹೊಸದಾಗಿ ಅಣೆಕಟ್ಟೆಯ ಕೆಳಗೇ ಮಾಡಿರುವ ವಾಹನ ನಿಲ್ದಾಣದಲ್ಲಿ ಗಾಡಿ ನಿಲ್ಲಿಸಿ, ತುಂತುರು ಮಳೆಯಲ್ಲಿ ಸಂಗೀತ ಕಾರಂಜಿಯತ್ತ ಹೊರಟೆವು. ಸುಮಧುರ, ಲಾಲಿತ್ಯ ಪೂರ್ಣ, ರಭಸಮಯ ಸಂಗೀತ; ಅದಕ್ಕೆ ತಕ್ಕಂತೆ ಮೈನುಲಿಯುವ, ಬಣ್ಣ ಬಣ್ಣದ ನೀರ್‌ಕಾರಂಜಿ. ದೋಣಿಯಲ್ಲಿ ಕಾರಂಜಿಯ ದಡದಿಂದ ಬೃಂದಾವನದ ದಡಕ್ಕೆ ಬಂದು ಅರೆಬರೆ ವಿದ್ಯುತ್ ಬೆಳಕಿನಲ್ಲಿ ಬೃಂದಾವನ ವೀಕ್ಷಿಸಿದೆವು. ಏನೇ ಹೇಳಿ, ಹಗಲು ಹೊತ್ತಿನಲ್ಲಿ ಕಾಣುವ ಆ ಉದ್ಯಾನವನದ ಸೌಂದರ್ಯ, ಬೆಡಗು, ವೈಶಾಲ್ಯತೆ, ಹಸಿರುಹುಲ್ಲು, ಬಣ್ಣಬಣ್ಣದ ಹೂವುಗಳ ವೈಭವ ರಾತ್ರಿಯ ವಿದ್ಯುತ್ ಬುಡ್ಡಿ ದೀಪಗಳ ಬೆಳಕಿನಲ್ಲಿ ಕಾಣುವುದಿಲ್ಲ.

ಬೃಂದಾವನದಿಂದ ಪಾರ್ಕಿಂಗ್ ಲಾಟ್‌ನತ್ತ ಬರುತ್ತಿದ್ದಾಗ ಅಲ್ಲಿ ಕಾಣಿಸಿದ ಆತ; ಎಂಟು ಅಡಿಯ ಲಂಬೂಜಿ. ಜನ ಅವನ ಪಕ್ಕ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದರು. ನನಗಿಂತ ಎರಡಕ್ಕೂ ಹೆಚ್ಚು ಅಡಿ ಎತ್ತರದವನು. ಅವನ ಪಕ್ಕ ನಿಂತ ಎಲ್ಲರೂ ಕುಬ್ಜರಾಗೇ ಕಾಣಿಸುತ್ತಿದ್ದರು. ಬಹುಶಃ ಪ್ರವಾಸೋದ್ಯಮ ಇಲಾಖೆಯವರು ನಿಲ್ಲಿಸಿರಬಹುದು. ಕನ್ನಡದವನೇ. ನಾನೂ ಹೋಗಿ ಅವನ ಪಕ್ಕ ನಿಂತು, ತಬ್ಬಿಕೊಂಡು ಮಾತನಾಡಿಸಿ ಬಂದೆ. ತಕ್ಷಣಕ್ಕೆ ಜ್ಞಾಪಕಕ್ಕೆ ಬಂದಿದ್ದು ಅಂದಿಗೆ ಎರಡು ಮೂರು ದಿನದ ಹಿಂದೆಯಷ್ಟೇ ಪ್ರಜಾವಾಣಿಯಲ್ಲಿ ಬಂದಿದ್ದ ಒಂದು ಫೋಟೊ. ಆಂಧ್ರಪ್ರದೇಶದ ಮುಖ್ಯಮಂತ್ರಿ ಡಾ. ರಾಜಶೇಖರ ರೆಡ್ಡಿಯವರ ಜೊತೆ ನಿಂತು ಫೋಟೊ ತೆಗೆಸಿಕೊಂಡಿದ್ದ ಎಂಟೂವರೆ ಅಡಿಯ ಇನ್ನೊಬ್ಬ ಲಂಬೂಜಿಯ ಚಿತ್ರ; ಆಕಾಶ ನೋಡುವಂತೆ ತಲೆ ಎತ್ತಿದ್ದ ರೆಡ್ಡಿ, ಮಗುವನ್ನು ನೋಡುವಂತೆ ಕೆಳಗೆ ನೋಡುತ್ತಿದ್ದ ಲಂಬೂ.

ಅಲ್ಲಿಂದ ಒಂದೈವತ್ತು ಅಡಿಗಳ ದೂರದಲ್ಲಿ ಮತ್ಸ್ಯಾಲಯಕ್ಕೆ ಹೋಗುವ ದಾರಿಯ ಪಕ್ಕದಲ್ಲಿದ್ದ ಮೀನು ಕಬಾಬ್ ಹೋಟೆಲಿನ ಮುಂದೆ ನಾನು ಮತ್ತೆ ನನ್ನಣ್ಣ ಕುಳಿತು, ಮಕ್ಕಳು ಹೆಂಗಸರೆಲ್ಲಾ ಮತ್ಸ್ಯಾಲಯ ವೀಕ್ಷಿಸಲು ಹೋಗಿದ್ದರೆ, ಚೆನ್ನಾಗಿ ಉಪ್ಪುಖಾರ ಬೆರೆಸಿ ಕರಿದಿದ್ದ ಮೀನುಗಳ ಮುಳ್ಳನ್ನು ನಿಧಾನವಾಗಿ ಬಿಡಿಸುತ್ತ, ನಮ್ಮ ಜಠರದಲ್ಲಿ ಮತ್ಸ್ಯಗಳಿಗೆ ಆಲಯ ಮಾಡಿಕೊಡುತ್ತ, ಲಂಬೂಜಿಗಳ ಕಷ್ಟಸುಖ ಯೋಚಿಸುತ್ತ ಕುಳಿತೆವು. ಆರೂಕಾಲು ಅಡಿಯ ಬಸ್ಸುಗಳಲ್ಲಿ ಈ ಎಂಟು ಅಡಿಯ ಜನರು ನಿಲ್ಲುವ ಬಗೆ, ಕುಳಿತುಕೊಳ್ಳುವ ಕಷ್ಟ, ಕಾರು ಜೀಪುಗಳಲ್ಲಿ ಮುಂದಿನ ಸೀಟಿನಲ್ಲಿಯೇ ಕೂರಬೇಕಾದ, ಇಲ್ಲವೆ ಹಿಂದಿನ ಸೀಟಿನ ತುಂಬಾ ಒರಗಿ ಕೂರಬೇಕಾದ ಕಷ್ಟದ ಬಗ್ಗೆ, ಮತ್ತಿತರ ನಮಗೆ ಗೊತ್ತಿಲ್ಲದ, ಗೊತ್ತಾಗದ ವಿಚಾರಗಳ ಬಗ್ಗೆ ಲಂಬೂಜಿಯನ್ನು, ಆತನನ್ನು ಮಾತನಾಡಿಸುತ್ತಿದ್ದ ಜನರನ್ನು ಗಮನಿಸುತ್ತ ಮಾತನಾಡಿಕೊಂಡೆವು. ಜೀವನ ಎಷ್ಟು ವಿಸ್ಮಯ, ಅಲ್ಲವೇ?

ಅಷ್ಟೊತ್ತಿಗೆ ಒಂಬತ್ತರ ಮೇಲಾಗಿತ್ತು. ಆದಷ್ಟು ಬೇಗ ನಂಜನಗೂಡು ಸೇರಿಕೊಳ್ಳುವ ಧಾವಂತ. ಮೈಸೂರಿನ ಉತ್ತರಕ್ಕಿರುವ ಕನ್ನಂಬಾಡಿಯಿಂದ ದಕ್ಷಿಣಕ್ಕಿರುವ ನಂಜನಗೂಡಿನತ್ತ ರಾತ್ರಿಯ ಊಟ ಸಹ ಮಾಡದೆ, ಮೈಸೂರಿನ ಒಳಗೆ ದಾರಿ ಕೇಳುತ್ತಾ, ನಂಜನಗೂಡಿನ ದೇವಸ್ಥಾನ ಮುಟ್ಟುವಷ್ಟಕ್ಕೆ ಹತ್ತರ ಮೇಲಾಗಿತ್ತು. ದೇವಸ್ಥಾನದ ಪಕ್ಕದಲ್ಲಿದ್ದ ಛತ್ರದಲ್ಲಿ ಜನಜಂಗುಳಿ. ಯಾವುದೇ ಕೊಠಡಿಗಳನ್ನು ಮುಂಚೆಯೇ ಕಾದಿರಿಸದೇ ಭಂಡ ಧೈರ್ಯದಿಂದ ಹೆಂಗಸರು ಮತ್ತು 7, 4 ಮತ್ತು ಮುಕ್ಕಾಲು ವರ್ಷ ವಯಸ್ಸಿನ ಹೆಣ್ಣು ಮಕ್ಕಳೊಂದಿಗೆ ರೂಮು ವಿಚಾರಿಸಲು ಹೋದಾಗ "ನೋ ವೇಕೆನ್ಸಿ." ನಮಗೆ ನಂಜಿನ, ನಂಜುಂಡ ಅನುಭವ. ಮದುವೆ ಸೀಸನ್ ಬೇರೆ; ವಾರಾಂತ್ಯ ಬೇರೆ ಸಾಲದ್ದಕ್ಕೆ. ಪಟ್ಟಣದ ಒಳಗಿರುವ ಇತರ ನಿವಾಸ, ವಿಲಾಸಗಳಲ್ಲೆಲ್ಲ ಇದೇ ಉತ್ತರ. ಮೈಸೂರು ರಸ್ತೆಯಲ್ಲಿನ ಹೊಯ್ಸಳದಲ್ಲಿಯೂ ಅದೇ ಉತ್ತರ. ಹನ್ನೊಂದಾಗುತ್ತ ಬಂದಿತ್ತು. ಇನ್ನೇನು ಮೈಸೂರಿಗೇ ಹೋಗೋಣ ಎಂದು ಒಂದು ಲಾಡ್ಜಿನ ಮುಂದೆ ನಿಂತು ಯೋಚಿಸುತ್ತಾ ಇದ್ದಾಗ, "ಊಟಿ ಕಡೆಗೆ ಹೋಗುವ ರಸ್ತೆಯಲ್ಲಿ ಒಂದೆರಡು ಕಿಲೋಮೀಟರ್ ಹೋದರೆ ವಿದ್ಯಾನಗರದಲ್ಲಿ ಒಂದು ಲಾಡ್ಜ್ ಇದೆ. ಅಲ್ಲಿ ಪ್ರಯತ್ನಿಸಿ," ಅಂದರು ಒಬ್ಬರು. ಸರಿ, ಕೊನೆಯ ಪ್ರಯತ್ನ ಎಂದು ಹೊರಟೆವು.

ಅವರು ಹೇಳಿದ ಹೆಸರಿನ ಲಾಡ್ಜ್ ಹುಡುಕುತ್ತಾ ಹೊರಟ ನಮಗೆ ಸಿಕ್ಕಿದ್ದು ಇತ್ತೀಚಿಗೆ ತಾನೆ ಹೆಸರು ಬದಲಾಯಿಸಿಕೊಂಡ, ಹೊಸದಾಗಿ ಸುಣ್ಣ ಬಳಿಸಿಕೊಂಡಿದ್ದ ಲಾಡ್ಜ್. ನಮ್ಮ ಅದೃಷ್ಟಕ್ಕೆ ಅಲ್ಲಿ ಮೂರ್ನಾಲ್ಕು ರೂಮುಗಳಿದ್ದವು. ತಲಾ 150 ರೂ. ಊರಿನ ಹೊರಗಿದ್ದ, ಸುತ್ತಮುತ್ತ ಅಷ್ಟೇನೂ ಮನೆಗಳಿಲ್ಲದ, ಸ್ವಲ್ಪ ಭಯ ಹುಟ್ಟಿಸುವ ವಾತಾವರಣವಿದ್ದರೂ, ಬೇರೆ ಯೋಚಿಸದೆ ಮೂರು ರೂಮುಗಳನ್ನು ತೆಗೆದುಕೊಂಡೆವು. ಅಷ್ಟೊತ್ತಿಗೆ ನಮ್ಮಲ್ಲಿ ಒಂದಿಬ್ಬರಿಗೆ ಹಸಿವಿನ ಪರಿವೆ ಆಯಿತು. ಅಲ್ಲಿ ತಿಂಡಿಯ ಹೋಟೆಲ್ ಇಲ್ಲದ್ದರಿಂದ ರೂಮುಗಳನ್ನು ಸಹ ನೋಡದೆ ಮತ್ತೆ ನಂಜನಗೂಡಿಗೆ ಹೂರಟೆವು. ಬಾರುಗಳು ಮಾತ್ರ ತೆರೆದಿದ್ದವು. ಯಾವುದೋ ಒಂದು ಜಾಗದಲ್ಲಿ ಬೇಕರಿ ಮತ್ತು ಒಂದು ಸಣ್ಣ ಹೋಟೆಲ್ ಇನ್ನೇನು ಮುಚ್ಚುವ ಗಡಿಬಿಡಿಯಲ್ಲಿದ್ದವು. ಆದರೂ ಅದು ಹೇಗೋ ಇನ್ನೂ ಬಿಸಿಯಾಗಿದ್ದ ತಟ್ಟೆ ಇಡ್ಲಿ, ರುಚಿಯಾಗಿದ್ದ ಚಟ್ನಿ ಇನ್ನೂ ರುಚಿ ಎನ್ನಿಸಿದವು. ಚಿಕ್ಕ ಮಗುವಿಗೆ ಅಲ್ಲೇ ಸ್ವಲ್ಪ ಹಾಲು ಕಾಯಿಸಿಕೊಂಡು ಲಾಡ್ಜಿಗೆ ಹಿಂದಿರುಗಿದಾಗ ಮಧ್ಯರಾತ್ರಿ.

ಮೊದಲ ಸಲ ಹೋಗಿದ್ದಾಗ ಚೆನ್ನಾಗಿಯೇ ಇದ್ದ ಲಾಡ್ಜಿನ ಮ್ಯಾನೇಜರ್ ಗಿರಾಕಿ ಸಿಕ್ಕ ಖುಷಿಯಲ್ಲಿ ಅಷ್ಟೊತ್ತಿಗೆ ಸರ್ವರೋಗಗಳಿಗೆ ಮದ್ದಾದ ಸಾರಾಯಿ ಪರಮಾತ್ಮನನ್ನು ಹೊಟ್ಟೆಯಲ್ಲಿ ಭದ್ರಪಡಿಸಿಟ್ಟುಕೊಂಡದ್ದು ಗೊತ್ತಾಯಿತು. ಹಾಳಾಗಿ ಹೋಗಲಿ ಎಂದು ಒಂದು ರೂಮಿನಲ್ಲಿ ಅಣ್ಣ ಅತ್ತಿಗೆ, ಮತ್ತೊಂದರಲ್ಲಿ ನಮ್ಮಮ್ಮ, ಅಣ್ಣನ ಚಿಕ್ಕ ಮಕ್ಕಳು, ಮಗದೊಂದರಲ್ಲಿ ನಾನು, ನನ್ನಾಕೆ ಮತ್ತು ನಮ್ಮ ಒಂಬತ್ತು ತಿಂಗಳ ಮಗು ಮಲಗಲು ಸಿದ್ದತೆ ಮಾಡಿಕೊಂಡೆವು. ಆಗ ಬಂದ ಕುಡುಕ ಮ್ಯಾನೇಜರ್ ಹೊರಗೆ ನಿಲ್ಲಿಸಿದ್ದ ನಮ್ಮ ಸ್ಕಾರ್ಪಿಯೊ ವಾಹನವನ್ನು ಒಳಗೆ ನಿಲ್ಲಿಸಲು ಹೇಳಿದ. ಅಲ್ಲಿ ಇದ್ದದ್ದೆ ಏಳೆಂಟಡಿ ಅಗಲದ, ಆದರೆ ೨೦ ಅಡಿ ಉದ್ದದ ಜಾಗ. ಕಸರತ್ತು ಮಾಡಿ ಒಳಗೆ ತಂದು ನಿಲ್ಲಿಸಿದ ಗಾಡಿಯ ಅಕ್ಕಪಕ್ಕ ಮಿಕ್ಕಿದ್ದು ಒಂದೂವರೆ ಅಡಿ ಅಷ್ಟೇ. ಅದಾದ ಐದ್ಹತ್ತು ನಿಮಿಷಗಳಿಗೆ ಇನ್ನೊಂದು ಗಾಡಿ, ಟೊಯೋಟ ಕ್ವಾಲಿಸ್, ಅದೇ ತರಹ ಉಳಿದ ಜಾಗದಲ್ಲಿ ಬಂದು ನಿಂತಿತು. ಅದರಿಂದಲೂ ಸಹ ಇಬ್ಬರೇ ಇಬ್ಬರು ಗಂಡಸರು (ನರಪೇತಲಗಳು ಮತ್ತೂ ಇನ್ನೂ 20-25 ದಾಟದವರು), ಹಾಗೂ ನಾಲ್ಕೈದು ಹೆಂಗಸರು ಮಕ್ಕಳು ಇಳಿದರು. ಮ್ಯಾನೇಜರ್ ಒಳಗಿನಿಂದ ಕಬ್ಬಿಣದ ಷಟರ್‌ನಂತಿದ್ದ ಬಾಗಿಲನ್ನು ಭದ್ರವಾಗಿ ಮುಚ್ಚಿ, ಬೀಗ ಹಾಕಿ, ಹೊರಗಿನಿಂದ ಸೊಳ್ಳೆಯೂ ಬರದ ಹಾಗೆ ಮಾಡಿ ಲಾಡ್ಜ್ ಹೌಸ್‌ಫುಲ್ ಆದ ಖುಷಿಯಲ್ಲಿ ತನ್ನ ಆಫೀಸಿನತ್ತ ಹೊರಟ.

ಉಳಿದ ಐದಾರು ಗಂಟೆಗಳ ರಾತ್ರಿ ಕಳೆದರೆ ಸಾಕು ಎಂದು ಚಿಕ್ಕದಾಗಿದ್ದ ಮಂಚದಲ್ಲಿ ಮಗುವಿಗೆ ತೊಂದರೆಯಾಗದ ರೀತಿಯಲ್ಲಿ ಮಲಗಿದ್ದೇ, ನಿದ್ರಾದೇವಿ ಅಪ್ಪಿಕೊಂಡಳು. ಆ ಸುಖವಾದ ಅಪ್ಪುಗೆಯನ್ನು ಬಿಡಿಸಿದ್ದು ಕರ್ಕಶವಾಗಿ, ಭಯಂಕರ ಸದ್ದು ಮಾಡುತ್ತಾ ಕೇಳಿಸಿದ ಕಾಲಿಂಗ್ ಬೆಲ್‌ನ ಸಂಗೀತ. ಕಣ್ಣು ಬಿಟ್ಟು ನೋಡಿದರೆ ಎಲ್ಲೆಲ್ಲೂ ಕತ್ತಲೆ. ಮತ್ತೆ ಒಂದೆರಡು ಬಾರಿ ಒಂದೆರಡು ನಿಮಿಷಗಳ ಅಂತರದಲ್ಲಿ ಕರೆಗಂಟೆಯ ಕಿರಿಕಿರಿ ಪುನರಾವರ್ತನೆ. ನಿದ್ದೆಗೂ ಎಚ್ಚರಕ್ಕೂ ಮಧ್ಯೆ ಹೊಯ್ದಾಟ. ಆಚೆಯಿಂದ ಬಾಗಿಲು ತೆಗೆಯಿರಿ ಎಂದು ಒಂದಿಬ್ಬರು ಗಂಡಸರ ಹುಯ್ಲಾಟ. ಒಳಗಿನಿಂದ ಉತ್ತರಿಸುವವರೇ ಇಲ್ಲ. ಆಗ ಕೇಳಿಸಿದ್ದು "ಧಢುಂ" ಎಂದು ಕಬ್ಬಿಣದ ಬಾಗಿಲನ್ನು ಜೋರಾಗಿ ಒದ್ದ ಶಬ್ದ. ನಿದ್ದೆ ಪೂರ್ತಿ ಹಾರಿ ಹೋಯಿತು. ಸಮಯ ನೋಡಲು ಕತ್ತಲಿನಲ್ಲಿ ಮೊಬೈಲ್‌ಗೆ ತಡಕಾಡಿ ಅದರಲ್ಲಿ ಯಾವುದೋ ಕೀ ಒತ್ತಿ ನೋಡಿದರೆ ಆಗ ತಾನೇ ಒಂದು ಗಂಟೆಯಾಗಿತ್ತು. ಅಂದರೆ ನಾವು ನಿದ್ದೆಗೆ ಜಾರಿ ಒಂದು ಗಂಟೆಯೂ ಆಗಿಲ್ಲ!

ಆಗ ಶುರುವಾಯಿತು ಭಯ, ಅಧೈರ್ಯ. ಇಷ್ಟು ಸರಿರಾತ್ರಿಯಲ್ಲಿ ಲಾಡ್ಜಿನ ಒಳಗೆ ಹೀಗೆ ಬಲಾತ್ಕಾರದಿಂದ ಬೆದರಿಸಿ ಒಳಗೆ ಬರಲು ಪ್ರಯತ್ನಿಸುತ್ತಿರುವವರು ಯಾರೋ ಕೇಡಿಗಳೆ ಇರಬೇಕು ಎನ್ನಿಸಿತು. ಮತ್ತೆ ಈ ಸಾರಿ ಬಾಗಿಲನ್ನೇ ಹೊಡೆದು ಒಳಗೆ ಬರುವಷ್ಟು ಜೋರಿನಲ್ಲಿ ಬಾಗಿಲನ್ನು ಗುದ್ದಿದ ಶಬ್ದ. ಜೋರಾಗಿ ಬಾಗಿಲು ತೆಗೆಯಲು ಹೆದರಿಸುತ್ತಿದ್ದ ಮಾತು. ಪಕ್ಕದಲ್ಲಿದ್ದ ನನ್ನಾಕೆಗೂ ನಿದ್ದೆ ಹಾರಿಹೋಗಿ, ಭಯ ಹಾರಿಬಂದಿತ್ತು. ಮಗು ಮಾತ್ರ ಈ ಲೋಕ ವ್ಯಾಪಾರದ ಚಿಂತೆಯೇ ಇಲ್ಲದೆ ನಿದ್ದೆ ಮಾಡುತ್ತಿತ್ತು.

ಅಷ್ಟೊತ್ತಿಗೆ ಲಾಡ್ಜಿನ ಒಳಗೆ ಲೈಟ್ ಹಾಕಿ, ಬಹುಶಃ ರೂಮ್ ಬಾಯ್ ಇರಬಹುದು, ಮ್ಯಾನೇಜರ್‌ಗಾಗಿ ಹುಡುಕಲಾರಂಭಿಸಿದ. ಇದು ನಮಗೆ ಗೊತ್ತಾಗಲಿಲ್ಲ. ನಮ್ಮ ರೂಮಿನ ಬಾಗಿಲು ಬಡಿದು ಯಾವುದೋ ಹೆಸರು ಹಿಡಿದು ಕೂಗಿದ. ಭಯಪಟ್ಟವನ ಮೇಲೆ ಸತ್ತ ಸರ್ಪ ಹಾಕಿದ ಅನುಭವ. "ಇಲ್ಲಿ ಅವರ್ಯ್ಯಾರೂ ಇಲ್ಲಾರಿ," ಅಂದೆ ನಾನು, ಏಳದೇ, ಬಾಗಿಲು ತೆಗೆಯದೇ; ಆದರೆ ಪೂರ್ಣ ಎಚ್ಚರದ ಸ್ಥಿತಿಯಲ್ಲಿ. ಪಕ್ಕದ ರೂಮಿನಲ್ಲಿದ್ದ ನಮ್ಮವರ ಬಗ್ಗೆ ಅಷ್ಟೊತ್ತಿಗೆ ಯೋಚನೆ ಭಯಂಕರವಾಗಿ ಪ್ರಾರಂಭವಾಗಿತ್ತು. ಬಾಗಿಲು ತೆಗೆದು ಪಕ್ಕದ ರೂಮುಗಳಿಗೆ ಹೋಗಿ ಮಕ್ಕಳನ್ನು ನೋಡುವುದೇ, ಹೇಗೆ? ಇನ್ನೂ ಸ್ವಲ್ಪ ಹೊತ್ತು ನೋಡೋಣ, ಬಾಗಿಲು ತೆಗೆಯುವುದು ಬೇಡ ಎಂದು ನನ್ನಾಕೆಗೆ ಹೇಳಿದೆ. ಆಕೆ ಮುದುಡಿಕೊಂಡು ಒಂದು ರೀತಿಯ ಎಂದೂ ಇಲ್ಲದ ಭೀತಿಯಲ್ಲಿ ಮಲಗಿದ ಹಾಗೆ ಎನ್ನಿಸಿತು.

ಆಚೆಯಿಂದ ಜೋರು ಮಾಡುವುದು, ಬಾಗಿಲನ್ನು ಒದೆಯುವುದು ನಿರಾತಂಕವಾಗಿ ನಿಲ್ಲದೆ ನಡೆಯುತ್ತಿತ್ತು. ಸುಮಾರು ಹತ್ತು ನಿಮಿಷಗಳಿಂದ ನಡೆಯುತ್ತಿದ್ದರಿಂದ ಬಹುಶಃ ಒಳಗಿದ್ದವರಿಗೆಲ್ಲಾ ನಿದ್ದೆ ಹಾರಿ ಹೋಗಿರಬೇಕು. ನನ್ನ ಮನಸ್ಸು ವಿಪರೀತ ಲೆಕ್ಕಾಚಾರದಲ್ಲಿ ತೊಡಗಿತ್ತು. ನಾವು ಯಾರೋ ಗಂಡಸರೇ ಆಗಿದ್ದರೆ ಏನಾದರೂ ಆಗಲಿ ಅನ್ನಬಹುದಿತ್ತು. ಆದರೆ ಒಂಬತ್ತು ತಿಂಗಳ ಚಿಕ್ಕ ಮಗುವಿನಿಂದ ಹಿಡಿದು ಮುದುಕಿ ಎನ್ನಬಹುದಾದ ಹೆಂಗಸರೆಲ್ಲ ಇದ್ದಾರೆ. ಇದ್ಯಾವ ತರಲೆ ಹುಟ್ಟಿಕೊಳ್ತು ಮಾರಾಯಾ? ಕೇಡಿಗಳೇನಾದರೂ ಲಾಡ್ಜಿನ ಒಳಗೆ ಬಂದುಬಿಡುವ ಪರಿಸ್ಥಿತಿ ಬಂದರೆ ಹೇಗೆ? ಅವರ ಆಲೋಚನೆ ಏನಿದೆ? ಎಷ್ಟು ಜನ ಇದ್ದಾರೆ? ಅವರನ್ನು ನಾವೇ ಎದುರಿಸುವ ಬಗೆ ಹೇಗೆ? ಅವರು ಸ್ಥಳೀಯರೇ ಇರಬೇಕು. ನಾವು ಪರಸ್ಥಳದವರು. ಅವರಿಗಿರುವ ಕೆಲವೊಂದು ಅಡ್ವಾಂಟೇಜಸ್ ನಮಗಿರುವುದಿಲ್ಲ. ಸರಿ. ಎದುರಿಸಲೇಬೇಕಾದ ಪರಿಸ್ಥಿತಿ ಬಂದಾಗ ಆದಷ್ಟು ಬೇಗ ಹೆಂಗಸರು ಮಕ್ಕಳನ್ನೆಲ್ಲಾ ಒಂದು ರೂಮಿನಲ್ಲಿ ಸೇರಿಸಿ ನಾನು ಮತ್ತು ನನ್ನಣ್ಣ ಹೇಗೆ ಅವರನ್ನು ಎದುರಿಸಬೇಕು; ನಾವು ಸ್ಕಾರ್ಪಿಯೊದಲ್ಲಿ ಕುಳಿತು, ಇದ್ದ ಆ ಒಂದೆರಡು ಅಡಿ ಜಾಗದಲ್ಲಿಯೇ ಅವರನ್ನು ಅಟಕಾಯಿಸಿಕೊಳ್ಳಬೇಕು. ಒಳಗೆ ಇರುವ ಇತರರು ಏನಾದರೂ ಉಪಯೋಗಕ್ಕೆ ಬಂದಾರೇ? ಪೋಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿದರೆ ಹೇಗೆ? ಮೊಬೈಲ್ ಏನೋ ಇದೆ, ಒಂದೆರಡು ಸಿಗ್ನಲ್‌ಗಳೂ ಇವೆ, ಆದರೆ ನಂಬರ್? 100 ನಂಬರ್ ಕೆಲಸ ಮಾಡುತ್ತದೆಯೇ? ಅದು ಕೆಲಸ ಮಾಡದೇ ಇದ್ದಾಗ ಉರಿಗೆ ಕಾಲ್ ಮಾಡಿ ಅಲ್ಲಿಂದ ಇಲ್ಲಿಯ ಪೋಲಿಸ್ ಠಾಣೆಗೆ ಹೇಗಾದರೂ ಮಾಡಿ ಸುದ್ದಿ ಮುಟ್ಟಿಸುವ ಸಾಧ್ಯತೆ ಇದೆಯೇ? ಅವೆಲ್ಲಕ್ಕೂ ಸಮಯ ಇದೆಯೇ? ಶರವೇಗದ ಚಿಂತನೆ ಎಂದರೆ ಬಹುಶಃ ನಾನು ಯೋಚಿಸುತ್ತಿದ್ದ ವೇಗವೇ ಇರಬೇಕು!

"ಯಾವನೋ ಅವನು ಧಢ ಧಢ ಅಂತ ಬಾಗಿಲು ತಟ್ತಿರೋದು? ತಲೆಗಿಲೆ ಕೆಟ್ಟಿದೆಯಾ?" ನನ್ನ ಅಣ್ಣನ ಗಡಸು ಕಂಠ ನನ್ನ ಯೋಚನಾಲಹರಿಯನ್ನು ಕತ್ತರಿಸಿತು. ಅಯ್ಯೋ, ಇವರೇಕೆ ಕೋಣೆಯಿಂದ ಆಚೆಗೆ ಬಂದರು, ಎಂದುಕೊಂಡೆ. ನಿದ್ದೆ ಮಾಡುತ್ತಿರುವಾಗ ಯಾರಾದರೂ ಅನವಶ್ಯಕವಾಗಿ ಎಬ್ಬಿಸಿದರೆ, ಕೆರಳಿದ ಸಿಂಹ ಅವರು. ಮೊದಲೇ ತೊಂಬತ್ತೈದು ಕೇಜಿ ತೂಕದ ಬಲಶಾಲಿ ಆಸಾಮಿ. ಮನಸ್ಸು ಮಾಡಿದರೆ ಬಾಗಿಲು ತೆಗೆದು ಎದುರಿಸಲು ಸಿದ್ಧವಾಗುವವರು. ಅವರು ಹಾಗೆ ಇಂತಹದೇ ಪರಿಸ್ಥಿತಿಗಳಲ್ಲಿ ಈ ಮೊದಲು ಮಾಡಿದ್ದೂ ಉಂಟು. ನಾನೇನೋ ಒಳಗಿದ್ದುಕೊಂಡೇ ಇವರನ್ನು ಹೇಗೆ ಎದುರಿಸುವುದು ಎಂದು ಯೋಚಿಸುತ್ತಿದ್ದರೆ ಇವರು ಆಚೆ ಬಂದು ಬಿಟ್ಟಿದ್ದಾರಲ್ಲ? ಇನ್ನು ಯಾವುದು ಏನು ಆಗುತ್ತೋ, ಇವರೇನಾದರೂ ಕಬ್ಬಿಣದ ಬಾಗಿಲು ತೆಗೆದುಬಿಟ್ಟರೆ ನಮಗಿರುವ ಅಡ್ವಾಂಟೇಜ್ ಕಳೆದುಹೋಗಿಬಿಡುತ್ತದೆಯಲ್ಲ ಎಂದುಕೊಂಡು, ಇನ್ನು ಒಳಗಿರುವುದು ಸಲ್ಲ ಎಂದು ನಾನೂ ತಕ್ಷಣ ಬಾಗಿಲು ತೆಗೆದುಕೊಂಡು ಕೊಣೆಯಿಂದ ಹೊರಗೆ ಬಂದೆ.

"ಏಯ್, ಏನಯ್ಯ ನಿನ್ನ ಹೆಸರು?" ಅಣ್ಣ ಗಟ್ಟಿಯಾಗಿ ವಿಚಾರಿಸುತ್ತಿದ್ದರು ಈ ಮೊದಲು ಮ್ಯಾನೇಜರ್‌ನನ್ನು ಹುಡುಕುತ್ತಾ ನನ್ನ ರೂಮಿನ ಬಾಗಿಲು ತಟ್ಟಿದ್ದ, ಸುಮಾರು ಐವತ್ತು ವರ್ಷದ ರೂಮ್ ಬಾಯ್‌ನನ್ನು (ರೂಮ್ ಮ್ಯಾನ್?). ಆತ "ಸುಬ್ರ್ಯ" ಎನ್ನುವಂತೆ ಉತ್ತರಿಸಿದ. ನನಗೆ ಅರ್ಥವಾಗದೆ, ಏನು? ಅಂದೆ. ಮತ್ತೆ ಅದೇ "ಸುಬ್ರ್ಯ" ಎಂದ. ಮೊದಲೇ ಆಚೆ ಗಲಾಟೆ, ಮಧ್ಯೆ ಈತನ ಅರ್ಥವಾಗದ ಹೆಸರು. ರೇಗಿಹೋಯಿತು. "ಅದೇನೋ ಸ್ವಲ್ಪ ನಿಧಾನವಾಗಿ ಸರಿಯಾಗಿ ಹೇಳ್ರಿ," ಗದರಿದೆ. ಆಗ ನಿಧಾನವಾಗಿ "ಸುಬ್ಬರಾಯ" ಎಂದ.

ಅಷ್ಟೊತ್ತಿಗೆ ನಾವು ಮೂವರೂ ಒಳಗೆ ಜೋರಾಗಿ ಮಾತನಾಡುತ್ತಿದ್ದರಿಂದ ಆಚೆ ಬಾಗಿಲು ಒದೆಯುವುದು ನಿಂತಿತ್ತು. "ಆಚೆ ಇರೋರು ಯಾರು ಗೊತ್ತಾ ನಿನಗೆ?" ಎಂದು ಸುಬ್ಬರಾಯರನ್ನು ಅಣ್ಣ ಕೇಳಿದರು. ಆತ ಇಲ್ಲ ಅಂದ. ಮತ್ತೆ ಮ್ಯಾನೇಜರ್ ಎಲ್ಲಿ ಎಂದು ಕೇಳಲು, "ಆಗಲಿಂದ ಎಲ್ಲಾ ಕಡೆ ಹುಡುಕ್ತಿದ್ದೀನಿ. ಯಾವ್ ರೂಮ್‌ನಲ್ಲಿದ್ದಾರೋ ಗೊತ್ತಾಗ್ತಾ ಇಲ್ಲಾ," ಎಂದ. ತಾನು ಕೆಲಸ ಮಾಡುತ್ತಿರುವ ಲಾಡ್ಜಿನಲ್ಲೇ ಎಲ್ಲಿ ಏನಿದೆ, ಏನಾಗ್ತಾ ಇದೆ ಎಂದು ತಿಳಿಯದ ಮುಗ್ಧ. ಈ ಮುನ್ನ ಸಂತೃಪ್ತನಾಗಿದ್ದ ಮ್ಯಾನೇಜರ್‌ನನ್ನು ನೋಡಿದ್ದ ನಮಗೆ ಚೆನ್ನಾಗಿ ಕುಡಿದು ಚಿತ್ತಾಗಿರುವ ಆತ ಈಗ ಸಿಕ್ಕರೂ ಈ ಪ್ರಪಂಚದಲ್ಲಂತೂ ಇರುವುದಿಲ್ಲ ಎನ್ನಿಸಿತು. ಆಗಾಗಲೇ ನನ್ನಣ್ಣನಿಗಿರದ ಭಯ, ಚಳಿ ನೋಡಿ ಅವು ನನ್ನಿಂದಲೂ ದೂರವಾಗಿಬಿಟ್ಟವು.

ಹೊರಗೆ, ಒಳಗೆ ಇಷ್ಟೆಲ್ಲ ಗಲಾಟೆ ನಡೆಯುತ್ತಿದ್ದಾಗ ಅಲ್ಲಿ ಒಂದು ರೂಮಿನ ಬಾಗಿಲು ಸ್ವಲ್ಪ ತೆರೆದಿದ್ದು ಕಾಣಿಸಿತು. ಆದರೆ ಆ ರೂಮಿನಿಂದ ಯಾರೂ ಈಚೆಗೆ ಬಂದಿರಲಿಲ್ಲ. ಇಣುಕಿ ನೋಡಿದರೆ ಇಬ್ಬರು ಗಂಡಸರು ಗಾಢ ನಿದ್ರೆಯಲ್ಲಿದ್ದಾರೆ. ಹೊಸ್ತಿಲ ಪಕ್ಕ ಎರಡು ಮೂರು ಕೋಕ್, ಸೋಡಾ ಮತ್ತು ವ್ಹಿಸ್ಕೀ ಬಾಟಲಿಗಳನ್ನು ಬಿಸಾಕಿದ್ದಾರೆ. "ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ, ಮನೆಯೊಳಗೆ ಮನೆಯೊಡೆಯನಿಲ್ಲ, ಇಲ್ಲಾ, ಕೂಡಲಸಂಗಮದೇವ," ವಚನ ಜ್ಞಾಪಕಕ್ಕೆ ಬಂತು. ಮದಿರೆ ಇಷ್ಟೊಂದು ಮೈಮರೆಸುತ್ತಾಳಾ ಎನ್ನಿಸಿತು. ಮತ್ತೇ, ಕ್ವಾಲಿಸ್ ಗಾಡಿಯಲ್ಲಿ ಕಡೆಯದಾಗಿ ಬಂದ ಇನ್ನೊಂದು ಗುಂಪಿನವರೂ ಯಾರೂ ಆಚೆಗೆ ಬರಲಿಲ್ಲ. ಅವರಿಗೇನಾದರೂ ಹೀಗಾಗಬಹುದು ಎಂಬ ಸುಳಿವೇನಾದರೂ ಇತ್ತಾ?

"ಅವರೇನಾದರೂ ಇನ್ನೊಂದು ಸಲ ಬಾಗಿಲು ಬಡಿದರೆ ಪೋಲಿಸ್ ಸ್ಟೇಷನ್‌ಗೆ ಫೋನ್ ಮಾಡ್ರಿ. ಇಲ್ಲಾ ಅಂದ್ರೆ ನಮ್ಮ ಸೆಲ್ ಫೋನಿಂದ ನಾವೇ ಮಾಡ್ತೀವಿ. ಇಂಥ ಸರಿ ರಾತ್ರೀಲಿ ಬಂದು ಗಲಾಟೆ ಮಾಡಿ ನಿದ್ದೆ ಹಾಳ್ ಮಾಡ್ತಿದ್ದಾರೆ. ಒಳಗೆ ಬಿಡೋದಿಕ್ಕೆ ಈ ತರಹ ಜಬರಿಸ್ತಾ ಇದ್ದಾರೆ ಅಂದರೆ ಏನೋ ಮಾಡೊದಿಕ್ಕೆ ಬಂದಿರೋ ಪಾಕ್ಡಾಗಳೆ ಇರ್ಬೇಕು ಇವರು," ಎಂದೆ ನಾನು ಜೋರಾಗಿ, ಬಾಗಿಲ ಬಳಿ ನಿಂತು ಆಚೆಯೂ ಕೇಳಿಸುವ ಹಾಗೆ. ನಮ್ಮಣ್ಣನವರು, "ಸರಿಯಾಗಿರೋ ಒಂದೆರಡು ದೊಣ್ಣೆ ಸರಿ ಮಾಡಯ್ಯ. ಅವರೇನಾದರೂ ಬಂದು ಇನ್ನೊಂದು ಸಾರಿ ತೊಂದರೆ ಕೊಟ್ಟರೆ ಪೊಲಿಸ್‌ಗೆ ಕರೆಯೋದಷ್ಟೇ ಅಲ್ಲ, ನಾವೇ ನಾಲ್ಕು ಬಿಗಿಯೋಣ. ಯಾರೋ ಕಳ್‌ನನ್ಮಕ್ಕಳಿದ್ಧಾಗ್ ಇದ್ದಾರೆ. ಅವರಿಗೆ ಯಾಕೆ ನಾವು ಭಯ ಪಡಬೇಕು?" ಎಂದರು ಗಂಭೀರವಾಗಿ, ದೃಢಧ್ವನಿಯಲ್ಲಿ.

ಇದೇ ವಿಷಯವನ್ನೇ ಮತ್ತೆ ನಾಲ್ಕಾರು ಬಾರಿ ಪುನರಾವರ್ತಿಸಿ ಮಾತನಾಡುತ್ತ ಹತ್ತು ಹದಿನೈದು ನಿಮಿಷ ಕಳೆದೆವು. ಅಷ್ಟು ಕಾಲವೂ ಆಚೆಯಿಂದ ಯಾವುದೇ ಶಬ್ದ ಬರಲಿಲ್ಲ. ಮುಂದೆ ಏನಾದರೂ ಆದರೆ ಏನು ಮಾಡಬೇಕು ಎಂದು ನಿಶ್ಚಯಿಸಿದ್ದರಿಂದ ನಾವೆಲ್ಲ ಧೈರ್ಯವಾಗಿ ಮಲಗಲು ಹಿಂದಿರುಗಿದೆವು. ಆರಾಮವಾಗಿ ನಿದ್ರಿಸುತ್ತಿದ್ದ ಮಗುವನ್ನು ಬಿಟ್ಟು ಇನ್ನೂ ಭೀತಿಯ ಕಲ್ಪನೆಯಲ್ಲಿದ್ದ ನನ್ನಾಕೆ ನನ್ನತ್ತ ತಿರುಗಿ ಗಟ್ಟಿಯಾಗಿ ತಬ್ಬಿ ಮಲಗಿದಳು. ಉಸಿರಾಟ ಜೋರಾಗಿಯೇ ಕೇಳಿಸುತ್ತಿತ್ತು; ದೀಪ ಆರಿಸಿದ ಕತ್ತಲಿನಲ್ಲಿ. ಇದಾದ ಐದು ನಿಮಿಷಕ್ಕೆಲ್ಲಾ ಆಚೆ ಬೈಕ್ ಸ್ಟಾರ್ಟ್ ಮಾಡಿದ ಶಬ್ಧ ಕೇಳಿಸಿತು. ಪೀಡೆಗಳು ತೊಲಗಿದವು; ಯಾರೋ ಇಬ್ಬರೇ ಬಂದ ಹಾಗೆ ಇದ್ದಾರೆ ಎಂದುಕೊಂಡೆ. ಆದರೂ ನಿರೀಕ್ಷೆಯಲ್ಲಿ ಮುಂದಿನ ಹತ್ತು ಹದಿನೈದು ನಿಮಿಷ ನಿದ್ದೆ ಬರಲಿಲ್ಲ. ನನ್ನ ಹೆಂಡತಿಗೆ ಅಷ್ಟೊತ್ತಿಗೆ ನಿದ್ದೆ ಬಂದಿದ್ದು ಸಡಿಲವಾದ ಅಪ್ಪುಗೆಯಲ್ಲಿ, ತಹಬಂದಿಗೆ ಬಂದಿದ್ದ ಅವಳ ಉಸಿರಾಟದಲ್ಲಿ ಗೊತ್ತಾಗಿತ್ತು. ನನಗೆ ಮತ್ತೆ ಯಾವಾಗ ನಿದ್ದೆ ಬಂತೋ ಗೊತ್ತಾಗಲಿಲ್ಲ. ಎಚ್ಚರ ಆಗಿದ್ದು ಮಾತ್ರ ಮತ್ತೇ ಜೋರಾದ ಶಬ್ದದಿಂದ; ನಮ್ಮ ರೂಮಿನ ಮುಂದೆಯೇ ನಿಲ್ಲಿಸಿದ್ದ ಕ್ವಾಲಿಸ್ ಗಾಡಿ ಸ್ಟಾರ್ಟ್ ಮಾಡಿದ ಸದ್ದಿನಿಂದ. ಕಣ್ಣು ಬಿಟ್ಟು ನೋಡಲು ಇನ್ನೂ ಕಪ್ಪು ಕತ್ತಲೆ. ಎಲ್ಲೋ ಬೆಳಗಿನ ಜಾವ ನಾಲ್ಕೋ ಐದೋ ಇರಬಹುದು. ಬೆಳಗಿಗೆ ಇನ್ನೂ ಸಮಯವಿದ್ದರೂ, ಸ್ವಲ್ಪ ಧೈರ್ಯ ವಿಶ್ವಾಸ ಕುದುರಿದ್ದೇ ಅವರು ಜಾಗ ಖಾಲಿ ಮಾಡುತ್ತಿದ್ದಾರೆ ಎನ್ನಿಸಿತು. ಗಾಡಿ ಆಚೆಗೆ ಹೋದ ತಕ್ಷಣ ಮತ್ತೆ ನಿದ್ದೆ ಬಂತು.

ಮತ್ತೆ ನಾವೆಲ್ಲ ಎದ್ದದ್ದು ಬೆಳಗ್ಗೆ ಚೆನ್ನಾಗಿ ಬೆಳಕಾದ ನಂತರವೇ. ಐದಕ್ಕೇ ಎಬ್ಬಿಸುತ್ತೇನೆ ಎಂದಿದ್ದ ಮ್ಯಾನೇಜರ್ ಮುಖ ತೋರಿಸಿದ್ದು ಗಂಟೆ ಆರಾದ ಮೇಲೇಯೇ, ಅದೂ ಬಿಸಿ ನೀರು ಕಾಯಿಸಿಕೊಡಬೇಕಾ ಎಂದು ಕೇಳುತ್ತಾ. ನಾನು ನಮ್ಮಣ್ಣ ರಾತ್ರಿ ನಡೆದ ಘಟನೆಯನ್ನು, ಕ್ವಾಲಿಸ್ ಬಂದು-ಹೋದ ಸಮಯ ಮತ್ತು ರೀತಿ, ಅದರಲ್ಲಿದ್ದ ಹೆಂಗಸರು ಮತ್ತು ಮಕ್ಕಳು, ಇದ್ದ ಇಬ್ಬರೇ ನರಪೇತಲ ಗಂಡಸರು, ಅವರ ವಯಸ್ಸು, ಮುಂತಾದವನ್ನೆಲ್ಲಾ ಯೋಚಿಸಿಕೊಂಡು, "ರಾತ್ರಿ ಬಂದಿದ್ದವರು ಬಹುಶಃ ಲೋಕಲ್ ಗೂಂಡಾಗಳು. ಆ ಕ್ವಾಲಿಸ್‌ನವರನ್ನು ಎಲ್ಲೋ ನೋಡಿ ಹಿಂಬಾಲಿಸಿ ಬಂದಿದ್ದಾರೆ. ಊರಾಚೆಗೆ ಇರೋ ಈ ಲಾಡ್ಜಿನಲ್ಲಿ ಬಹುಶಃ ಕ್ವಾಲಿಸ್‌ನವರು ಮಾತ್ರ ಇದ್ದಾರೆ, ಬೇರೆ ಯಾರೂ ಇದ್ದ ಹಾಗೆ ಇಲ್ಲ ಅಂದುಕೊಂಡಿರಬೇಕು. ಒಳಗೆ ನುಗ್ಗಿ, ಗಲಭೆ ಎಬ್ಬಿಸಿ, ಕಳ್ಳತನವೋ, ಸುಲಿಗೆಯೋ, ಮತ್ತೆ ಎಂತಹುದೋ ಈ ರಾತ್ರಿಯಲ್ಲಿ ಮಾಡಬಹುದು ಅಂತ ಬಂದು ಆಚೆಯಿಂದ ಬಾಗಿಲು ತೆರೆಸುವುದಕ್ಕೆ ಪ್ರಯತ್ನಿಸಿದ್ದಾರೆ. ಯಾವಾಗ ಇಲ್ಲಿ ನಾವು ಒಳಗಿನಿಂದ ಜೋರಾಗಿ ಮಾತನಾಡಲು ಪ್ರಾರಂಭಿಸಿದೆವೋ ಆಗ ಇಲ್ಲಿ ಬೇರೆಯವರೂ ಇದ್ದ ಹಾಗೆ ಇದ್ದಾರೆ; ಪೋಲಿಸ್, ದೊಣ್ಣೆ ಎಲ್ಲಾ ಮಾತನಾಡುತ್ತಾ ಇದ್ದಾರೆ; ಸಲೀಸಾಗಿ ಏನೂ ಗಿಟ್ಟುವ ಹಾಗೆ ಇಲ್ಲ; ಅಪಾಯಕಾರಿ ಆಗುವ ಸಂಭವ ಇದೆ; ಸಮಯ ಸಂದರ್ಭ ನಮ್ಮ ಅನುಕೂಲಕ್ಕೆ ಇದ್ದ ಹಾಗೆ ಇಲ್ಲ ಎಂದುಕೊಂಡು ಇಲ್ಲಿಂದ ಕಳಚಿಕೊಂಡಿದ್ದಾರೆ." ಎಂಬ ಅಭಿಪ್ರಾಯಕ್ಕೆ ಬಂದು, ಸಧ್ಯ ಅಷ್ಟಕ್ಕೇ ಮುಗಿಯಿತಲ್ಲ ಎಂದು ನಿರಾಳವಾಯಿತು. ಆ ಸಂದರ್ಭವನ್ನು ಮತ್ತೆ ಮತ್ತೆ ಯೋಚಿಸಿ ಪರಾಮರ್ಶಿಸಿದಾಗಲೆಲ್ಲ ನಂಜನಗೂಡಿನ ಆ ರಾತ್ರಿಯ ನಿಗೂಢ ಅದೇ ಅನ್ನಿಸುತ್ತದೆ. ನೀವೇನಂತೀರಿ?