Dec 26, 2007

ಕಂದ ಎಂದೂ ನಗುತಿರು...

(ವಿಕ್ರಾಂತ ಕರ್ನಾಟಕ - ಜನವರಿ 04, 2008 ರ ಸಂಚಿಕೆಯಲ್ಲಿನ ಬರಹ)

ಓಹ್. ಎಂತಹ ಸುಂದರ ನಗು, ಆ ಮಗುವಿನದು. ಒಮ್ಮೊಮ್ಮೆ ತುಂಟನಂತೆ, ಒಮ್ಮೊಮ್ಮೆ ಮುಗ್ಧನಂತೆ ಕಾಣುತ್ತಾನೆ. ಇನ್ನೂ ಕೇವಲ ಐದು ವರ್ಷ ಅವನಿಗೆ. ಆಡುತ್ತಾ, ಪಾಡುತ್ತಾ ಬೆಳೆಯುತ್ತಿದ್ದಾನೆ. ತಾನು ಬೆಳೆದು ದೊಡ್ಡವನಾದ ಮೇಲೆ ಡಾಕ್ಟರಾಗುತ್ತೇನಮ್ಮ ಎಂದಿದ್ದಾನೆ ಅಮ್ಮನೊಂದಿಗೆ ಒಮ್ಮೆ. ಬಾಲವಾಡಿಗೆ (ಕಿಂಡರ್‌ಗಾರ್ಟನ್) ಹೋಗಲು ಏನೋ ಹುಮ್ಮಸ್ಸು ಅವನಿಗೆ. ಬೆಳಗ್ಗೆ ಅಮ್ಮನಿಗಿಂತ ಬೇಗ ಎದ್ದು ಅವಳನ್ನು ಎಬ್ಬಿಸಲು ಓಡುತ್ತಾನೆ. "ನಡಿಯಮ್ಮ, ಶಾಲೆಗೆ ಹೋಗೋಣ," ಎನ್ನುತ್ತಾನೆ.

ಸರಿಯಾಗಿ ವರ್ಷದ ಹಿಂದೆ; 2007 ರ ಜನವರಿ 15. ಬಾಗ್ದಾದಿನ ತನ್ನ ಮನೆಯ ಮುಂದೆ ಆಡುತ್ತಿದ್ದ ಆ ಮಗುವನ್ನು ಇದ್ದಕ್ಕಿದ್ದಂತೆ ಹಲವಾರು ಜನ ಸುತ್ತುವರಿದು ಹಿಡಿದುಕೊಂಡುಬಿಟ್ಟರು. ಆ ದುಷ್ಟಜಂತುಗಳು ಮುಖವಾಡಗಳನ್ನು ಧರಿಸಿದ್ದ ಕ್ಷುದ್ರ ಹೇಡಿಗಳೂ ಆಗಿದ್ದರು. ನಾನಾ ತರಹದ ಹಿಂಸೆಯಿಂದ ನರಳುತ್ತಿರುವ, ಪರದೇಶಿ ಸೈನಿಕರು, ಒಳಗಿನ ಕೋಮುವಾದಿ ಭಯೋತ್ಪಾದಕರು, ಹೊರಗಿನ ಕೋಮುವಾದಿ ಭಯೋತ್ಪಾದಕರು, ಒಂದು ಪಂಗಡವನ್ನು ಕಂಡರಾಗದ ಮತ್ತೊಂದು ಪಂಗಡದ ಜಾತ್ಯಂಧ ಮುಸಲ್ಮಾನರು, ಹೀಗೆ ಎಲ್ಲರೂ ಸೇಡು ತೀರಿಸಿಕೊಳ್ಳಲು, ರಕ್ತ ಹರಿಸಲು ಹಾತೊರೆಯುತ್ತಿರುವ ಇರಾಕಿನಂತಹ ಇರಾಕಿನಲ್ಲಿಯೆ ಅಪರೂಪವಾದ ಬರ್ಬರ ಕೃತ್ಯವೊಂದನ್ನು ಆ ಹೇಡಿಗಳು ಅಂದು ಎಸಗಿಬಿಟ್ಟರು. ಯೂಸ್ಸಿಫ್ ಎಂಬ ಆ ಐದು ವರ್ಷಗಳ, ನಗುಮುಖದ ಮಗುವನ್ನು ಹಿಡಿದುಕೊಂಡು, ಅವನ ಮೇಲೆ ಪೆಟ್ರೊಲ್ ಸುರಿದು, ಬೆಂಕಿ ಹಚ್ಚಿ, ಓಡಿ ಬಿಟ್ಟರು. ಬೀದಿಯಲ್ಲಿ ಆಡುತ್ತಿದ್ದ ಆ ಮಗುವಿಗೆ ಹೀಗೆ ಮಾಡಿದ ಆ ದುಷ್ಕರ್ಮಿಗಳು ಯಾರು, ಯಾಕೆ ಹೀಗೆ ಮಾಡಿದರು, ಅವರಿಗೆ ಯಾಕೆ ಈ ಪರಿಯ ಮಾನವದ್ವೇಷ, ಇವು ಯಾವುವೂ ಇವತ್ತಿಗೂ ಗೊತ್ತಾಗಿಲ್ಲ.

ಬೆಂಕಿಯಲ್ಲಿ ಉರಿದ ಮಗು ಇರಾಕಿನ ಆಸ್ಪತ್ರೆಯಲ್ಲಿ ಎರಡು ತಿಂಗಳು ಚಿಕಿತ್ಸೆ ಪಡೆಯಿತು. ಪ್ರಾಣಕ್ಕೇನೂ ಅಪಾಯವಾಗಲಿಲ್ಲ. ಆದರೆ, ಮುಖವೆಲ್ಲ ಸುಟ್ಟು ಹೋಗಿತ್ತು. ಸುಂದರ ನಗು ಮಾಸಿ ಹೋಗಿ ಅವನ ಮುಖ ದೊಡ್ಡವರೆ ನೋಡಿ ಬೆಚ್ಚುವಷ್ಟು ಕುರೂಪವಾಗಿಬಿಟ್ಟಿತು. ತುಟಿಗಳು ತೆರೆಯಲಾರದಷ್ಟು ಬಿಗಿದು ಹೋದವು. ಅನ್ನವನ್ನೂ ಸಹ ಕಷ್ಟಪಟ್ಟು ಬಾಯಿಗೆ ತುರುಕಿಕೊಂಡು ತಿನ್ನಬೇಕಾಯಿತು. ಮಾತು ಅಸ್ಪಷ್ಟವಾಗಿಬಿಟ್ಟವು. ಸ್ವರ ಕ್ಷೀಣವಾಗಿ ಕೇಳಿಸುತ್ತಿತ್ತು. ಅಪ್ಪಅಮ್ಮ ಸ್ವಲ್ಪವೇ ಸ್ವಲ್ಪ ಬೇಸರದ ಮಾತಾಡಿದರೂ ಅವನು ಅಳಲು ಆರಂಭಿಸಿ ಬಿಡುತ್ತಿದ್ದ. ತಾನು ಮುದ್ದಾಡುತ್ತಿದ್ದ ತನ್ನ ಪುಟ್ಟ ತಂಗಿಯನ್ನು ಸಹ ನೋಡಿ ಹೊಟ್ಟೆಕಿಚ್ಚು ಪಡುವಂತಾಗಿ ಬಿಟ್ಟ. ಯೂಸ್ಸಿಫ್‌ನ ಐದು ವರ್ಷದ ದೇಹ ಮತ್ತು ಮನಸ್ಸು ಎರಡೂ ಶಾಶ್ವತವಾಗಿ ಬದಲಾಗಿ ಬಿಟ್ಟವು.

ಪ್ರಾಥಮಿಕ ಚಿಕಿತ್ಸೆ ಕೊಟ್ಟು ಸುಟ್ಟ ಗಾಯಗಳನ್ನು ಒಣಗಿಸಿದ ನಂತರ ಬಾಗ್ದಾದಿನ ವೈದ್ಯರುಗಳು ತಮ್ಮ ಕೈಯಲ್ಲಿ ಇದಕ್ಕಿಂತ ಹೆಚ್ಚಿಗೆ ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಬಿಟ್ಟರು. ಯೂಸಿಫ್‌ನ ಅಪ್ಪ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಸಾಮಾನ್ಯ ಮನುಷ್ಯ. ಅವನಿಗೆ ಯೂಸಿಫ್‌ನನ್ನು ಇರಾಕಿನ ಹೊರಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವಷ್ಟು ಆರ್ಥಿಕ ತ್ರಾಣವಿರಲಿಲ್ಲ. ಹೋಗಲಿ, ಈ ವಿಷಯದ ಬಗ್ಗೆ ಟಿವಿ, ಪತ್ರಿಕೆಯವರೊಂದಿಗೆ ಮಾತನಾಡೋಣ ಎಂದರೆ ಅದು ಇರಾಕಿನಲ್ಲಿ ಭಾರೀ ಅಪಾಯಕಾರಿ ದುಸ್ಸಾಹಸ. ತನ್ನ ಜೀವದ ಮೇಲೆ ಮತ್ತು ಇಡೀ ಕುಟುಂಬದ ಮೇಲೆ ಮತ್ತೊಂದು ದಾಳಿಗೆ ಆಹ್ವಾನ ಕೊಟ್ಟಂತೆ ಅದು.

ಆದರೆ ಮಗನ ಸ್ಥಿತಿ ನೋಡಿ ಅಪ್ಪಅಮ್ಮ ಸುಮ್ಮನೆ ಕೂಡುವಂತಿರಲಿಲ್ಲ. ಕರುಳಿನ ಕುಡಿಯ ನಗುವನ್ನು ಮತ್ತೆ ಮೋಡಲು ಅಮ್ಮ ನಿರ್ಧರಿಸಿಬಿಟ್ಟಳು. ಮಗುವನ್ನು ಹೀಗೆ ನೋಡುವುದಕ್ಕಿಂತ ತಾನು ಸಾಯುವುದೆ ಮೇಲು ಎಂದುಕೊಂಡಳು. ನನ್ನ ಮಗು ಮೊದಲಿನಂತೆ ನಗುವುದನ್ನು ನೋಡವುದಷ್ಟೆ ತನಗೆ ಬೇಕಾಗಿರುವುದು, ಯಾರಾದರೂ ಸಹಾಯ ಮಾಡಲು ಸಾಧ್ಯವೆ ಎಂದು ಪತ್ರಕರ್ತರನ್ನು ಕೇಳಿಕೊಂಡಳು. ಸಿ.ಎನ್.ಎನ್. ರವರು ಟಿವಿಯವಲ್ಲಿ ಮತ್ತು CNN.com ನಲ್ಲಿ ಯೂಸ್ಸಿಫ್‌ನ ಕತೆಯನ್ನೂ, ಆ ತಾಯಿಯ ಮನವಿಯನ್ನೂ ಕಳೆದ ಆಗಸ್ಟ್ 22 ರಂದು ವರದಿ ಮಾಡಿದರು.

CNN.com ನಲ್ಲಿ ಪ್ರಕಟವಾದ ಯೂಸ್ಸಿಫ್‌ನ ಕತೆ ಮತ್ತು ಅವನ ಫೋಟೋಗಳು ಓದುಗರಲ್ಲಿ ಸಂಚಲನ ಉಂಟು ಮಾಡಿಬಿಟ್ಟವು. CNN.com ನ ಹನ್ನೆರಡು ವರ್ಷಗಳ ಇಂಟರ್ನೆಟ್ ಇತಿಹಾಸದಲ್ಲಿ ಓದುಗರು ಈ ವರದಿಗೆ ಸ್ಪಂದಿಸಿದಷ್ಟು ಇನ್ಯಾವ ವರದಿಗೂ ಸ್ಪಂದಿಸಿರಲಿಲ್ಲ. ಯೂಸ್ಸಿಫ್‌ನ ತಾಯಿಯ ಮನವಿಗೆ ಓಗೊಟ್ಟು ತಮ್ಮ ಕೈಲಾದ ಸಹಾಯ ಮಾಡಲು ಅನೇಕ ಓದುಗರು ಮುಂದೆ ಬಂದರು. ಅಮೆರಿಕದ್ದಷ್ಟೆ ಅಲ್ಲದೆ ವಿಶ್ವದ ಹತ್ತಾರು ಪ್ರಸಿದ್ಧ ಸೇವಾಸಂಸ್ಥೆಗಳು ಸಹಾಯಕ್ಕೆ ತಕ್ಷಣ ಮುಂದಾದರು.

ಇಷ್ಟೆಲ್ಲ ಸಹಾಯದ ಆಶ್ವಾಸನೆ ಬಂದ ಮೇಲೆ, ವೀಸಾ, ಭದ್ರತೆ ಮುಂತಾದ ಎಲ್ಲಾ ಎಡರುತೊಡರುಗಳನ್ನು ಎದುರಿಸಿ ಮಗುವನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದಕ್ಕೆ ಅಪ್ಪಅಮ್ಮ ತೀರ್ಮಾನಿಸಿದರು. ಚಿಲ್ಡ್ರನ್ಸ್ ಬರ್ನ್ ಫೌಂಡೇಷನ್ ಯೂಸ್ಸಿಫ್‌ನ ಕುಟುಂಬದ ಪ್ರಯಾಣದ ವೆಚ್ಚ ಮತ್ತು ಅಮೆರಿಕದಲ್ಲಿಯ ಆತನ ಚಿಕಿತ್ಸೆಗೆ ಬೇಕಾದ ಹಣವನ್ನು ಭರಿಸಲು ಒಪ್ಪಿಕೊಂಡಿತು. ಯೂಸ್ಸಿಫ್‌ನ ಚಿಕಿತ್ಸೆಗೆ ಸಾವಿರಾರು ಓದುಗರು ಚಿಲ್ಡ್ರನ್ಸ್ ಬರ್ನ್ ಫೌಂಡೇಷನ್‌ಗೆ ಧನಸಹಾಯ ಮಾಡಲು ಮುಂದಾದರು.

ಲೇಖನದ ವಿಡಿಯೊ ಪ್ರಸ್ತುತಿ

ಕಳೆದ ಸೆಪ್ಟೆಂಬರ್ 11 ರಂದು ಯೂಸ್ಸಿಫ್‌ ಕುಟುಂಬ ಸಮೇತನಾಗಿ ಅಮೆರಿಕದಲ್ಲಿ ಬಂದಿಳಿದ. ಹತ್ತೇ ದಿನಗಳ ಒಳಗೆ ವೈದ್ಯರ ತಂಡವೊಂದು ಮೊದಲ ಸರ್ಜರಿ ಮಾಡಿದರು. ಅಲ್ಲಿಂದೀಚೆಗೆ ವೈದ್ಯರು ಆಗಾಗ ಸರ್ಜರಿ ಮಾಡುತ್ತಲೆ ಬಂದರು. ಬಹಳ ಕಾಂಪ್ಲಿಕೇಟೆಡ್ ಆದ ಸರ್ಜರಿಗಳು ಇವು. ಸುಟ್ಟು ಒಣಗಿರುವ ಚರ್ಮದ ಮೇಲ್ಪದರವನ್ನು ತೆಗೆಯುವುದು; ಪಕ್ಕದಲ್ಲಿಯೆ ಇನ್ನೊಂದು ಒಳ್ಳೆಯ ಮಾಂಸ ಬೆಳೆಸುವುದು; ಅದನ್ನು ಬೇರೆಡೆಗೆ ಎಳೆದು ಕೂಡಿಸುವುದು; ಹೆಚ್ಚಿಗೆ ಬೆಳೆದ ಟಿಶ್ಯೂವನ್ನು ತೆಗೆಯುವುದು; ಸದ್ಯದ ಸರ್ಜರಿಯ ಗಾಯ ವಾಸಿಯಾದ ನಂತರ ಮತ್ತೊಂದಕ್ಕೆ ಸಿದ್ಧವಾಗುವುದು. ಮೂರು ತಿಂಗಳಲ್ಲಿ ಇಂತಹ ಹತ್ತು ಸರ್ಜರಿಗಳ ಅವಶ್ಯಕತೆಯಿರುವ, ಸುದೀರ್ಘ ಪಯಣ ಇದು. ಯೂಸ್ಸಿಫ್‌ಗಂತೂ ಮಾನಸಿಕ, ದೈಹಿಕ ವೇದನೆಯ ನೋವಿನ ಯಾತ್ರೆ.

ಇತ್ತೀಚಿನ ಸುದ್ದಿಯ ಪ್ರಕಾರ, ಕೇವಲ ಹತ್ತಾರು ದಿನಗಳ ಹಿಂದಷ್ಟೆ ಒಂದು ದೊಡ್ಡ ಸರ್ಜರಿ ಆಗಿದೆ. ಆಧುನಿಕ ವಿಜ್ಞಾನ ಮತ್ತು ವೈದ್ಯಶಾಸ್ತ್ರ ಯೂಸ್ಸಿಫ್‌ನ ನಗುವನ್ನು ಮತ್ತೆ ಹಿಂದಿರುಗಿಸುವ ಆಶಾಭಾವನೆ ಬಹಳಷ್ಟು ಜನರಲ್ಲಿ ಇದೆ. ವಿಶ್ವದಾದ್ಯಂತದ ಲಕ್ಷಾಂತರ ಜನ ಯೂಸ್ಸಿಫ್‌ನ ಸ್ನಿಗ್ಧ ನಗುವನ್ನು ಮತ್ತೆ ಕಾಣಲು ಆಶಿಸುತ್ತಿದ್ದಾರೆ. ಯೂಸ್ಸಿಫ್‌ನ ಚಿಕಿತ್ಸೆಯನ್ನು ನಿಯಮಿತವಾಗಿ ಫಾಲೊ ಮಡುತ್ತಿದ್ದಾರೆ.

ದೇಶದ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಪಂಗಡದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ, ಚರ್ಮದ ಬಣ್ಣದ ಹೆಸರಿನಲ್ಲಿ, ತಮಗಿಷ್ಟ ಬಂದ ಕ್ಷುಲ್ಲಕ ವಿಷಯದ ಹೆಸರಿನಲ್ಲಿ ಪ್ರಪಂಚದಾದ್ಯಂತ ಕೊಲೆಗಡುಕ ಮನಸ್ಸಿನ ಜನ ಹಿಂಸಾಚಾರ ಮಾಡುತ್ತಲೆ ಬಂದಿದ್ದಾರೆ. ಮನುಷ್ಯನ ಈ ಮೃಗೀಯ ಪ್ರವೃತ್ತಿ ಮೊದಲಿನಂದಲೂ ಇದ್ದದ್ದೆ. ಸಾವಿರಾರು ಮೈಲಿಗಳ ದೂರದಲ್ಲಿ ಯೂಸ್ಸಿಫ್‌‌ಗೆ ಆಗಿದ್ದು ನಮ್ಮ ನಡುವೆಯೂ ಆಗಾಗ ನಡೆಯುತ್ತಿರುತ್ತದೆ. ಏನೂ ತಪ್ಪು ಮಾಡಿರದ ದುರದೃಷ್ಟ ಜನ ಅನ್ಯಾಯಕ್ಕೊಳಗಾಗುತ್ತಾರೆ. ಆ ದುರದೃಷ್ಟವಂತರಲ್ಲಿ ಕೆಲವೆ ಕೆಲವರಿಗೆ ಮಾತ್ರ ಯೂಸ್ಸಿಫ್‌ಗೆ ದೊರಕಿದ ಸಹಾಯ ದೊರಕುತ್ತದೆ. ಎಷ್ಟೇ ಸಹಾಯ ಸಿಕ್ಕರೂ ಅದು ಈಗಾಗಲೆ ಆದ ಅನ್ಯಾಯವನ್ನು ಸರಿ ಮಾಡುವುದಿಲ್ಲ.

ಆದರೆ, ಇಂತಹ ಅನ್ಯಾಯಗಳು ಅನಾದಿ ಕಾಲದಿಂದ ಇದ್ದರೂ, ಶಿಕ್ಷೆಯ ಭಯವಿಲ್ಲದ ಒಂದು ಕೆಟ್ಟ ವ್ಯವಸ್ಥೆಯಲ್ಲಿ ಇಂತಹವು ಪದೆಪದೆ ಆಗುವ ಸಾಧ್ಯತೆಗಳಿರುತ್ತವೆ. ಅಪರಾಧಿಗಳನ್ನು ಹಿಡಿದು ಅವರು ಮಾಡಿದ ಅಪರಾಧವನ್ನು ಸಾಬೀತು ಮಾಡಿ ಅವರಿಗೆ ಶಿಕ್ಷೆ ವಿಧಿಸಲು ಅವಕಾಶವಿರುವ ಉತ್ತಮ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ಬಹಳ ಕಮ್ಮಿ ಸಲ ಮರುಕಳಿಸುತ್ತವೆ. ನಮ್ಮ ದೇಶದಲ್ಲಿಯೆ ಗಮನಿಸಿ. ಕೊಲೆ, ಸುಲಿಗೆ ಮಾಡಿಯೂ ಸಿಕ್ಕಿಹಾಕಿಕೊಳ್ಳದ ರಾಜ್ಯಗಳಲ್ಲಿ ಈಗಲೂ ಅಪರಾಧಗಳ ಪ್ರಮಾಣ ಜಾಸ್ತಿ. ಅದೆ ಕಾನೂನು ಮತ್ತು ಸುವ್ಯವಸ್ಥೆ ಸ್ವಲ್ಪಮಟ್ಟಿಗೆ ಉತ್ತಮವಾಗಿರುವ ರಾಜ್ಯಗಳಲ್ಲಿ ಅದು ಕಮ್ಮಿ. ಶಾಂತಿಯ ಸಮಯದಲ್ಲಿ ಅಪರಾಧ ಮಾಡಿದರೆ ಸಿಕ್ಕಿಹಾಕಿಕೊಂಡು ಬಿಡುತ್ತೇವೆ ಎಂದೆ ದುಷ್ಕರ್ಮಿಗಳು ಗಲಭೆಗಳೆದ್ದಾಗ ಆ ಸಮಯವನ್ನು ದುರುಪಯೋಗಪಡಿಸಿಕೊಳ್ಳಲು ಹಾತೊರೆಯುವುದು. ಮಿಕ್ಕ ಸಮಯದಲ್ಲಿ ಶಿಕ್ಷೆಯ ಭಯದಲ್ಲಿ ಬಾಲ ಮುದುರಿಕೊಂಡಿರುವ ದುಷ್ಟರು ತಮಗೆ ಅನುಕೂಲವಾದ ಪರಿಸ್ಥಿತಿ ಸೃಷ್ಟಿಸಿಕೊಳ್ಳಲು ಏನೋ ಒಂದು ಕಿತಾಪತಿ ಮಾಡುತ್ತಿರುತ್ತಾರೆ. ಎಲ್ಲಿಯವರೆಗೆ ನಮ್ಮಲ್ಲಿ ಗುಂಪಲ್ಲಿ ಹೊಡೆದು ಸಿಕ್ಕಿಹಾಕಿಕೊಳ್ಳದ ಪರಿಸ್ಥಿತಿ ಇರುತ್ತದೊ ಅಲ್ಲಿಯವರೆಗೂ ನಮ್ಮಲ್ಲಿ ಈ ಮಾಸ್‌ಮರ್ಡರ್‌ಗಳು, ಹಿಂಸಾಚಾರಗಳು ಜಾತಿಯ ಹೆಸರಿನಲ್ಲಿ, ಕೋಮುವಾದದ ಹೆಸರಿನಲ್ಲಿ, ಇನ್ನೆಂತಹುದೊ ಹೆಸರಿನಲ್ಲಿ ನಡೆಯುತ್ತಿರುತ್ತದೆ. ಅದು ಕಮ್ಮಿಯಾಗಲು ಇರುವ ಒಂದೆ ದಾರಿ ಎಂದರೆ, ಗುಂಪಿನ ಹಿಂಸಾಚಾರದಲ್ಲಿ ತೊಡಗಿಕೊಂಡವರಿಗೂ ಶೀಘ್ರ ಶಿಕ್ಷೆಯಾಗುವಂತಹ ವ್ಯವಸ್ಥೆಯನ್ನು ಸೃಷ್ಟಿಸಿಕೊಳ್ಳುವುದು. ಇಂತಹ ವ್ಯವಸ್ಥೆ ವೈಯಕ್ತಿಕ ಕಾರಣಕ್ಕೆ ಒಬ್ಬ ಇನ್ನೊಬ್ಬರನ್ನು ಕೊಲೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸದಿದ್ದರೂ ಆ ಪ್ರಮಾಣವನ್ನೂ ಸಹ ಕಮ್ಮಿ ಮಾಡುತ್ತದೆ.

ಯೂಸ್ಸಿಫ್‌ ಮತ್ತೊಮ್ಮೆ ನಗಲಿ. ಅದರ ಜೊತೆಗೆ ಅವನ ಹಳೆಯ ಮುಗ್ಧತೆಯೂ ಮತ್ತೊಮ್ಮೆ ಹಿಂದಿರುಗಲಿ. ಹಾಗೆಯೆ ಪ್ರಪಂಚದಾದ್ಯಂತ ಎಲ್ಲಾ ತರಹದ ಅಪರಾಧಿಗಳು ಸಿಕ್ಕಿಬೀಳುವ, ಅವರಿಗೆ ಶಿಕ್ಷೆಯಾಗುವ ವ್ಯವಸ್ಥೆಗಳು ಸ್ಥಾಪನೆಯಾಗಿ, ಮನುಷ್ಯನ ಮೃಗೀಯ ಪ್ರವೃತ್ತಿಗೆ ಮತ್ತು ದ್ವೇಷಕ್ಕೆ ಕನಿಷ್ಠ ಜೈಲುಶಿಕ್ಷೆಯ ಭಯದ ಕಡಿವಾಣವಾದರೂ ಇರಲಿ. ಅಲ್ಲವೆ?

Dec 19, 2007

ಕೆ.ಆರ್.ಎಸ್. ಡ್ಯಾಮ್ ಪ್ರೈವೇಟ್ ಲಿಮಿಟೆಡ್.

(ವಿಕ್ರಾಂತ ಕರ್ನಾಟಕ - ಡಿಸೆಂಬರ್ 28, 2007 ರ ಸಂಚಿಕೆಯಲ್ಲಿನ ಬರಹ)

ಬೊಲಿವಿಯ ಎನ್ನುವುದು ದಕ್ಷಿಣ ಅಮೆರಿಕ ಖಂಡದಲ್ಲಿನ ಐದನೆ ದೊಡ್ಡ ದೇಶ. ಭೂವಿಸ್ತೀರ್ಣದಲ್ಲಿ ಕರ್ನಾಟಕದ ಎಂಟರಷ್ಟು ದೊಡ್ಡದಾದ ಈ ದೇಶದ ಜನಸಂಖ್ಯೆ ಸುಮಾರು 90 ಲಕ್ಷ. ಕಳೆದ ಶತಮಾನದಲ್ಲಿ ಮಿಲಿಟರಿಯ ನಿರಂಕುಶ ಆಡಳಿತ, ಭ್ರಷ್ಟಾಚಾರ ಮತ್ತು ಸಾಮ್ರಾಜ್ಯಶಾಹಿ ಪರಕೀಯರು ಅವಕಾಶ ಸಿಕ್ಕಿದಾಗಲೆಲ್ಲ ದೋಚಿದ ಪರಿಣಾಮವಾಗಿ ಈ ದೇಶ ದಕ್ಷಿಣ ಅಮೆರಿಕದಲ್ಲಿನ ಅತಿ ಬಡರಾಷ್ಟ್ರಗಳಲ್ಲಿ ಒಂದು. ಕಳೆದೆರಡು ದಶಕಗಳಿಂದ ಪ್ರಜಾಪ್ರಭುತ್ವ ಇದ್ದರೂ ಈಗಲೂ ಭ್ರಷ್ಟಾಚಾರ, ಹಿಂಸೆ, ಅರಾಜಕತೆ ಮುಂದುವರೆದಿದೆ. ಚಿನ್ನ, ಕಬ್ಬಿಣ, ಮ್ಯಾಗ್ನೇಷಿಯಮ್, ನೈಸರ್ಗಿಕ ಅನಿಲಗಳನ್ನೊಳಗೊಂಡಂತೆ ಬೇಕಾದಷ್ಟು ನೈಸರ್ಗಿಕ ಸಂಪನ್ಮೂಲಗಳಿದ್ದರೂ ಬಡವಾಗಿಯೆ ಇರುವ ಈ ದೇಶವನ್ನು ಆ ಕಾರಣಕ್ಕಾಗಿಯೆ "ಚಿನ್ನದ ಗಣಿಯ ಮೇಲೆ ಕುಳಿತಿರುವ ಕತ್ತೆ" ಎಂದೂ ಅನ್ನುತ್ತಾರೆ.

1982 ರಲ್ಲಿ ಮತ್ತೆ ಪ್ರಜಾಪ್ರಭುತ್ವಕ್ಕೆ ಮರಳಿದ ಈ ದೇಶ ಅಲ್ಲಿಂದೀಚೆಗೆ ವಿಶ್ವಬ್ಯಾಂಕ್‌ನ ಸಲಹೆಗಳ ಪ್ರಕಾರ ಅನೇಕ ಆರ್ಥಿಕ ಸುಧಾರಣೆಗಳನ್ನು ತಂದಿತು. "ಬಡದೇಶಗಳಲ್ಲಿ ಭ್ರಷ್ಟಾಚಾರ ಜಾಸ್ತಿ; ಅದರ ಜೊತೆಗೆ ಒಳ್ಳೆಯ ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆ ಮಾಡಲು ಅವರ ಬಳಿ ಸಾಕಷ್ಟು ಸಂಪನ್ಮೂಲಗಳಾಗಲಿ, ಕೌಶಲವಾಗಲಿ ಇರುವುದಿಲ್ಲ. ಹಾಗಾಗಿ ನೀರು ಸರಬರಾಜನ್ನು ಖಾಸಗೀಕರಣ ಮಾಡಿದರೆ ಅದರಿಂದ ಬಂಡವಾಳವೂ, ಉಸ್ತುವಾರಿ ಕೌಶಲವೂ ಹರಿದುಬರುತ್ತದೆ," ಎಂಬ ತನ್ನ ನಂಬಿಕೆಯ ಆಧಾರದ ಮೇಲೆ ವಿಶ್ವಬ್ಯಾಂಕ್ 1999 ರಲ್ಲಿ ಬೊಲಿವಿಯ ಸರ್ಕಾರಕ್ಕೆ ಸುಮಾರು ಹತ್ತುಲಕ್ಷ ಜನಸಂಖ್ಯೆ ಇರುವ ಕೋಚಬಾಂಬ ನಗರದ ನೀರು ಸರಬರಾಜನ್ನು ಖಾಸಗೀಕರಣ ಮಡುವಂತೆ ಒತ್ತಾಯಿಸಿತು. ಮಾಡದೆ ಇದ್ದರೆ ಸುಮಾರು 100 ಕೋಟಿ ರೂಪಾಯಿಗಳ ಸಾಲವನ್ನು ನವೀಕರಿಸುವುದಿಲ್ಲ ಎಂದು ಹೇಳಿತು. ವಿದೇಶಿ ಸಹಾಯದ ಮೇಲೆಯೆ ಅವಲಂಬಿತವಾದ ಆ ದೇಶ ವಿಧಿಯಿಲ್ಲದೆ ಕೋಚಬಾಂಬ ನಗರದ ನೀರು ಸರಬರಾಜನ್ನು ಖಾಸಗೀಕರಣಗೊಳಿಸಿತು.

ಹಾಗೆ ಖಾಸಗೀಕರಣಗೊಂಡ ಆ ಜಲಯೋಜನೆ ಸಣ್ಣದೇನೂ ಅಗಿರಲಿಲ್ಲ. ಸುಮಾರು 10000 ಕೋಟಿ ರೂಪಾಯಿಗಳ ಆ ಯೋಜನೆಯನ್ನು ಇಂಗ್ಲೆಂಡ್-ಇಟಲಿ-ಅಮೆರಿಕ-ಸ್ಪೇನ್‌ಗಳ ನಾಲ್ಕು ಬೃಹತ್ ಬಹುರಾಷ್ಟ್ರೀಯ ಕಂಪನಿಗಳ ಒಕ್ಕೂಟವಾದ "ಅಂತರ್‌ರಾಷ್ಟ್ರೀಯ ಜಲ" ತನ್ನದಾಗಿಸಿಕೊಂಡಿತು. ಕೋಚಬಾಂಬ ನಗರಕ್ಕೆ ನೀರು ಸರಬರಾಜು ಮಾಡುವುದರ ಜೊತೆಗೆ ವಿದ್ಯುತ್ ಉತ್ಪಾದನೆ ಮತ್ತು ನೀರಾವರಿಗೂ ಆ ಯೋಜನೆ ವಿಸ್ತಾರಗೊಂಡಿತ್ತು.

ಖಾಸಗೀಕರಣಗೊಂಡದ್ದೆ, ಬಂತು ಆಪತ್ತು. ಆ ನಗರದಲ್ಲಿನ ಎಷ್ಟೋ ಬಡ ಜನರ ಮಾಸಿಕ ಆದಾಯವೆ 4-5 ಸಾವಿರ ರೂಪಾಯಿಯಾಗಿದ್ದರೆ, ಈಗವರು ತಿಂಗಳಿಗೆ ಕಟ್ಟಬೇಕಾದ ನೀರಿನ ಬಿಲ್ಲು ಸುಮಾರು ಸಾವಿರ ರೂಪಾಯಿಯ ತನಕ ಏರಿತು. ಬಡಜನರು ನೀರು ಅಥವ ಊಟದಲ್ಲಿ ಯಾವುದಾದರೂ ಒಂದನ್ನು ಮಾತ್ರ ಆರಿಸಿಕೊಳ್ಳುವ ಸ್ಥಿತಿಗೆ ಮುಟ್ಟಿಬಿಟ್ಟರು. ಈ ಬೆಲೆಏರಿಕೆ ತಾಳಲಾರದೆ ಕೆಲವೆ ತಿಂಗಳುಗಳಲ್ಲಿ ಜನಾಭಿಪ್ರಾಯ, "ಜೀವ ಮತ್ತು ಜಲ ಸಂರಕ್ಷಣಾ ಸಂಘಟನೆ" ಯಾಗಿ ರೂಪಪಡೆದು ಕೊಂಡಿತು. ಒಮ್ಮೆ ನಾಲ್ಕು ದಿನಗಳ ಕಾಲ ಆ ನಗರದಲ್ಲಿ ಸತತ ಬಂದ್ ನಡೆಯಿತು. ಇದಾದ ತಿಂಗಳಿನಲ್ಲಿಯೆ ಬೊಲಿವಿಯಾದ ಮೂಲೆಮೂಲೆಗಳಿಂದ ಲಕ್ಷಾಂತರ ಜನ ಕೋಚಬಾಂಬ ನಗರಕ್ಕೆ ಬಂದು ಮತ್ತೊಮ್ಮೆ ಹರತಾಳ ಮಾಡಿದರು. "ನೀರು ದೇವರ ಕೊಡುಗೆಯೆ ಹೊರತು ವ್ಯಾಪಾರದ ಸರಕಲ್ಲ", "ಜಲವೆ ಜೀವ" ಎಂಬ ಘೋಷಣೆಗಳೊಂದಿಗೆ ನಗರದ ಇಡೀ ಸಾರಿಗೆ ವ್ಯವಸ್ಥೆಯನ್ನು ನಿಲ್ಲಿಸಿ ಬಿಟ್ಟರು.

ಮಾತುಕತೆಗಳ ನಡುವೆ ಹರತಾಳ ಮುಂದುವರೆಯಿತು. ಬೆಲೆಏರಿಕೆ ಇಳಿಸುತ್ತೇವೆ ಎಂದ ಸರ್ಕಾರ ಜಲ ಖಾಸಗೀಕರಣದಿಂದಾಗಿ ಏನೂ ಮಾಡಲಾಗಲಿಲ್ಲ. ನಿಲ್ಲದ ಪ್ರತಿಭಟನೆಯ ಬೆನ್ನುಮೂಳೆ ಮುರಿಯಲು ಸರ್ಕಾರ ಕರ್ಫ್ಯೂ ವಿಧಿಸಿತು. ಒಂದಷ್ಟು ಪ್ರತಿಭಟನಾಕಾರರು ಬಂಧನಕ್ಕೊಳಗಾದರು. ಬೀದಿಗಳು ರಣರಂಗವಾಗಿ ಬದಲಾದವು. ಕೊನೆಕೊನೆಗೆ ಪೋಲಿಸರೂ ಸರ್ಕಾರದ ವಿರುದ್ಧ ಬಂಡೆದ್ದರು. ಒಮ್ಮೆ ಪೋಲಿಸರು ಪರಿಸ್ಥಿತಿಯನ್ನು ಹತೋಟಿಗೆ ತರಲೆಂದು ಬಂದಿದ್ದ ಸೈನಿಕರ ಮೇಲೆಯೆ ಅಶ್ರುವಾಯು ಪ್ರಯೋಗಿಸಿದರು. ಒಟ್ಟು ಐದು ಜನ ಹಿಂಸಾಚಾರಕ್ಕೆ ಬಲಿಯಾದರು. ಬೇರೆಬೇರೆ ಕಾರಣಕ್ಕೆ ಸರ್ಕಾರದ ನೀತಿಗಳ ವಿರುದ್ಧ ಇದ್ದವರೆಲ್ಲ ಒಂದಾದರು. "ಕೋಚಬಾಂಬ ಜಲ ಕದನ" ಶುರುವಾದ ನಾಲ್ಕೇ ತಿಂಗಳಿನಲ್ಲಿ ಸರ್ಕಾರ ಇಡೀ ಒಪ್ಪಂದವನ್ನು ರದ್ದುಗೊಳಿಸಬೇಕಾಯಿತು. ಕೊನೆಗೂ ದೇಶವಾಸಿಗಳ ಕೈಗೆ ಮತ್ತೊಮ್ಮೆ ನೀರಿನ ಹಕ್ಕು ಮತ್ತು ಹತೋಟಿ ಬಂದಿತು.

---x---

ನೀರ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುವ ನದಿ. ನಮ್ಮ ಕರ್ನಾಟಕದಲ್ಲಿಯೂ ಹರಿಯುವ ಭೀಮಾ ನದಿಯ ಉಪನದಿಗಳಲ್ಲಿ ಅದೂ ಒಂದು. ಭೀಮೆ ಕೃಷ್ಣೆಯ ಉಪನದಿ. "ಮಹಾರಾಷ್ಟ್ರ ಕೃಷ್ಣಾ ಕಣಿವೆ ಅಭಿವೃದ್ಧಿ ಮಂಡಳಿ" 1984 ರಲ್ಲಿ ನೀರಾ ನದಿಗೆ ದೇವಗಢ ಅಣೆಕಟ್ಟು ಕಟ್ಟಲು ಯೋಜನೆ ಹಾಕಿಕೊಂಡಿತು. ಶುರುವಿನಲ್ಲಿ ಕೇವಲ 62 ಕೋಟಿ ರೂಪಾಯಿಗಳ ಯೋಜನೆಯಾಗಿ ಪ್ರಾರಂಭವಾದ ಈ ಯೋಜನೆಗೆ ಇಲ್ಲಿಯ ತನಕ 450 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ಇನ್ನು ಕೇವಲ ಶೇ. 5 ರಷ್ಟು ಅಣೆಕಟ್ಟಿನ ಕೆಲಸ ಬಾಕಿ ಇದೆ. ಆದರೆ ಇನ್ನೂ ಮುಗಿಯಬೇಕಾದ ಎಡದಂಡೆ/ಬಲದಂಡೆ ಕಾಲುವೆಗಳ ಕಾಮಗಾರಿ ಸಾಕಷ್ಟಿದೆ. ಉಳಿದ ಡ್ಯಾಮ್‌ಗೆ ಮತ್ತು ಇತರೆ ಕಾಮಗಾರಿಗಳಿಗೆ 1000 ಕೋಟಿ ರೂಪಾಯಿಯ ಅವಶ್ಯಕತೆ ಇದೆ ಎನ್ನುತ್ತಾರೆ ಅಲ್ಲಿಯ ನೀರಾವರಿ ಸಚಿವ ರಾಮರಾಜೆ ನಿಂಬಾಳ್ಕರ್.

ಇತ್ತೀಚಿನ ಸುದ್ದಿ ಏನೆಂದರೆ, ಆ 1000 ಕೋಟಿ ರೂಪಾಯಿಯನ್ನು ಒಟ್ಟುಗೂಡಿಸಲು ಅಲ್ಲಿಯ ಸರ್ಕಾರದ ಕೈಯಲ್ಲಿ ಸಾಧ್ಯವಿಲ್ಲವಂತೆ. ಹಾಗಾಗಿ ಯಾರು ಸಾವಿರ ಕೋಟಿ ಹೂಡಲು ಸಿದ್ಧರಿದ್ದಾರೊ ಅವರಿಗೆ ಆ ಅಣೆಕಟ್ಟು ಮತ್ತು ನದಿಯ ನೀರಿನ ಯಜಮಾನಿಕೆ ವಹಿಸಿಕೊಡಲು ಮಹಾರಾಷ್ಟ್ರದ ಸರ್ಕಾರ ಇದೆ ಸೆಪ್ಟೆಂಬರ್‌ನಲ್ಲಿ ತೀರ್ಮಾನಿಸಿತು. ಆಸಕ್ತರು ಸರ್ಕಾರವನ್ನು ಸಂಪರ್ಕಿಸಬೇಕೆಂದು ಕೋರಿತು. ಈಗ ಐದು ಕಂಪನಿಗಳು ನದಿಯನ್ನು ಕೊಳ್ಳಲು ಆಸಕ್ತಿ ತೋರಿಸಿವೆಯೆಂದು ಇಂಗ್ಲಿಷಿನ "ಔಟ್‌ಲುಕ್" ವಾರಪತ್ರಿಕೆ ಇತ್ತೀಚೆಗೆ ತಾನೆ ವರದಿ ಮಾಡಿದೆ. ಈ ಆಸಕ್ತಿ ಅಂತಿಮವಾಗಿ ಮಾರಾಟದಲ್ಲಿ ಕೊನೆಗೊಂಡರೆ, ಒಂದು ದೊಡ್ಡ ಅಣೆಕಟ್ಟು, 229 ಕಿ.ಮಿ. ಉದ್ದದ ಬಲದಂಡೆ ಮತ್ತು ಎಡದಂಡೆ ಕಾಲುವೆಗಳ ಒಂದು ಲಕ್ಷ ಎಕರೆಗೂ ಮೀರಿದ ನೀರಾವರಿಯ ಉಸ್ತುವಾರಿ ಖಾಸಗಿ ಕಂಪನಿಯ ಕೈಗೆ ಹೋಗುತ್ತದೆ.

ಭಾರತದ ಮುಂದುವರೆದ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಒಂದು. ಅಲ್ಲಿಯ ಆರ್ಥಿಕ ಸುಧಾರಣೆಗಳಿಂದಾಗಿ ಅದು ಇತರೆ ರಾಜ್ಯಗಳಿಗಿಂತ ಹೆಚ್ಚಾಗಿ ಕೈಗಾರಿಕೀಕರಣವಾಗಿದೆ. ಹಾಗೆಯೆ ನಗರೀಕರಣವೂ ಆಗಿದೆ. ಮಹಾರಾಷ್ಟ್ರ ಸರ್ಕಾರ 2007-2008 ರ ಹಣಕಾಸಿನ ವರ್ಷದಲ್ಲಿ ಸುಮಾರು 68300 ಕೋಟಿ ರೂಪಾಯಿಗಳ ಆದಾಯ ನಿರೀಕ್ಷಿಸುತ್ತಿದ್ದು ಸುಮಾರು 510 ಕೋಟಿ ರೂಪಾಯಿಗಳ ಉಳಿತಾಯದ ಬಜೆಟ್ ಮಂಡಿಸಿದೆ. ಇಷ್ಟು ದೊಡ್ಡ ಸರ್ಕಾರದ ಬಳಿ ದೇವಗಢ್ ಅಣೆಕಟ್ಟೆಯ ಯೋಜನೆಗಾಗಿ 1000 ಕೋಟಿ ಎತ್ತಿಡಲಾಗುವುದಿಲ್ಲ ಎಂದರೆ ಆ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ, ಇಲ್ಲವೆ ಆ ಯೋಜನೆಯಲ್ಲಿ ನಂಬಿಕೆಯಿಲ್ಲ, ಎಂದಾಗುವುದಿಲ್ಲವೆ?

ಲೇಖನದ ವಿಡಿಯೊ ಪ್ರಸ್ತುತಿ

ಈ ಅಣೆಕಟ್ಟಿನ ಖಾಸಗೀಕರಣದ ವಿಚಾರ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿದ್ದರೂ ಅದರ ಪರಿಣಾಮ ಮತ್ತು ಪ್ರಭಾವ ಕ್ರಮೇಣ ಇಡೀ ದೇಶಕ್ಕೆ ವ್ಯಾಪಿಸುತ್ತದೆ. ಭಾರತದಂತಹ ಕೃಷಿಪ್ರಧಾನ, ಬಹುಸಂಖ್ಯಾತ ರೈತರ ದೇಶದಲ್ಲಿ ಒಂದು ನದಿಯನ್ನು, ಇಡೀ ಅಣೆಕಟ್ಟನ್ನು ಖಾಸಗೀಕರಣ ಮಾಡುವ ವಿಚಾರವೆ ಒಂದು ಕೆಟ್ಟ ಜೋಕು. ದಕ್ಷಿಣ ಅಮೆರಿಕದಲ್ಲಿಯೆ ಏನು ದಕ್ಷಿಣ ಭಾರತದಲ್ಲಿಯೂ ನೀರು ಜೀವನಾಧಾರವು ಹೌದು, ಭಾವನಾತ್ಮಕ ವಿಷಯವೂ ಹೌದು. ಕನ್ನಂಬಾಡಿಯಿಂದ ನೀರನ್ನು ಕಾವೇರಿ ನದಿಗೆ ಬಿಡಬೇಕೆ ಬೇಡವೆ ಎಂಬ ವಿಚಾರಕ್ಕೆ ಗದ್ದಲ ಎದ್ದರೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿನ ಸರ್ಕಾರಗಳೆ ಅದುರುತ್ತವೆ. ಆಂಧ್ರದ ರೈತರು ಅಲ್ಲಿಯ ಸರ್ಕಾರದ ಕಿವಿ ಹಿಂಡಿ ಪ್ರಶ್ನಿಸುತ್ತಿದ್ದರೆ ಇಲ್ಲಿ ಕರ್ನಾಟಕದ ಸರ್ಕಾರ ಆಲಮಟ್ಟಿಯ ಎತ್ತರದ ಬಗ್ಗೆ ಉತ್ತರ ಕೊಡುತ್ತಿರುತ್ತದೆ. ಇನ್ನು ಬೆಳೆದು ನಿಂತಿರುವ ಪೈರಿಗೆ ಸಮಯಕ್ಕೆ ಸರಿಯಾಗಿ ಡ್ಯಾಮಿನಿಂದ ನೀರು ಬಿಡದೆ ಇದ್ದರೆ ಈಗೀಗ ರೈತರು ಅದೇ ದಿನ ಡ್ಯಾಮಿಗೇ ದಾಳಿಯಿಡಲು ಪ್ರಾರಂಭಿಸಿ ಬಿಟ್ಟಿದ್ದಾರೆ. 2002 ರ ಸೆಪ್ಟೆಂಬರ್‌ನಲ್ಲಿ ಮೂರು ಸಾವಿರ ರೈತರು ಕನ್ನಂಬಾಡಿ ಅಣೆಕಟ್ಟೆಯ ಕಚೇರಿಗೆ ದಾಳಿ ಮಾಡಿ ಶಾಸಕರದೂ ಸೇರಿದಂತೆ ಏಳು ಸರ್ಕಾರಿ ಕಾರುಗಳನ್ನು ಜಖಂ ಗೊಳಿಸಿದ್ದರು. ಕೊನೆಗೆ ಪೋಲಿಸರು ಲಾಠಿಚಾರ್ಜ್ ಮಾಡಿ, ಅಶ್ರುವಾಯು ಪ್ರಯೋಗಿಸಿ ಪರಿಸ್ಥಿತಿಯನ್ನು ತಹಬಂದಿಗೆ ತರಬೇಕಾಯಿತು. ಕೇವಲ ಒಂದೂವರೆ ತಿಂಗಳಿನ ಹಿಂದೆ ಹಿರಾಕುಡ್ ಜಲಾಶಯದ ನೀರನ್ನು ಕೈಗಾರಿಕೆಗಳಿಗೆ ಬಿಡಬಾರದೆಂದು ಒರಿಸ್ಸಾದ ಸುಮಾರು ಹತ್ತು ಸಾವಿರ ರೈತರು ಆ ಜಲಾಶಯದ ಬಳಿ ಹೋಗಿ ಪ್ರತಿಭಟನೆ ನಡೆಸಿದ್ದರು.

ಖಾಸಗೀಕರಣ ಶಿಸ್ತನ್ನು ಮತ್ತು ಆರ್ಥಿಕ ಜವಾಬ್ದಾರಿಯನ್ನು (Fiscal Responsibility) ತರುತ್ತದೆ ಎನ್ನುವುದೇನೊ ನಿಜ. ಆದರೆ, ಕೆಲವೊಮ್ಮೆ ಲಾಭದ ಕಾರಣಕ್ಕಾಗಿ ಅದು ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಳ್ಳುವ ಅಪಾಯ ಇರುತ್ತದೆ. ಲಾಭದ ದೃಷ್ಟಿಯಿಂದ ಇನ್ನೊಬ್ಬರು ತನ್ನ ಬೆಳೆಗೆ ನೀರು ಬಿಡದೆ ಚೆಲ್ಲಾಟವಾಡುತ್ತಿದ್ದಾರೆ ಎನ್ನುವುದನ್ನು ರೈತ, ಅದರಲ್ಲೂ ಪ್ರಜಾಪ್ರಭುತ್ವದ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯವನ್ನು ಅನುಭವಿಸಿರುವ ಭಾರತದ ರೈತ ಸಹಿಸಿಕೊಳ್ಳುವುದು ಅಸಾಧ್ಯ. ಹಾಗೆಯೆ ಹರಿಯುತ್ತಿರುವ ನದಿಯಲ್ಲಿ ಈಜಾಡಲು ದುಡ್ಡು, ಗಾಳ ಹಾಕಿ ಮೀನು ಹಿಡಿಯಲು ದುಡ್ಡು, ಬಟ್ಟೆಯೊಗೆಯಲು ದುಡ್ಡು, ಕೊನೆಗೆ ಬೊಗಸೆ ನೀರು ಕುಡಿಯಲೂ ದುಡ್ಡು ಎಂಬ ವಿಚಿತ್ರ ಕಾನೂನುಗಳೇನಾದರೂ ಬಂದುಬಿಟ್ಟರೆ ಅದು ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತೆ.

ಒಳ್ಳೆಯ ಬೆಳೆ ಆಗಿಯೂ ಸೂಕ್ತ ಬೆಲೆ ಸಿಗದಿದ್ದರೆ ರೈತ ಸಹಿಸಿಕೊಳ್ಳಬಲ್ಲ. ಮಳೆಯಿಲ್ಲದೆ ಬೆಳೆ ಒಣಗಿ ಹೋದರೂ ರೈತ ಸಹಿಸಿಕೊಳ್ಳಬಲ್ಲ. ಆದರೆ, ಯಾವುದೊ ಕಾರಣಕ್ಕಾಗಿ ಇರುವ ನೀರನ್ನು ತನ್ನ ಗದ್ದೆಗೆ ಹನಿಸದೆ ಹೋದರೆ ರೈತ ಸಹಿಸಲಾರ. ಅಷ್ಟಕ್ಕೂ ಆತ ಏನೇ ಆಗಲಿ ಗೊಣಗಿಕೊಂಡೇ ಸುಮ್ಮನಾಗುವ, ಮನೆ ಬಿಟ್ಟು ಹೊರಬರದ ನಗರವಾಸಿ ಮಧ್ಯಮವರ್ಗದವನಲ್ಲ. ವಾತಾವರಣದಲ್ಲಿನ ಚಂಚಲತೆಯೆಂತೆ ಬದಲಾಗುವ ರೈತನ ಚಂಚಲ ಮನೋಭಾವದ, ಅಸ್ಥಿರ ಜೀವನದ, ಅವರ ಸಂಖ್ಯಾಬಲದ ಹಾಗೂ ಮನುಷ್ಯನ ಅಸಹಾಯಕತೆಯ ರೋಷದ ಪರಿಚಯ ಇಲ್ಲದ ಅವಿವೇಕಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಮಾತ್ರ ನದಿಯನ್ನು, ನೀರನ್ನು ಖಾಸಗೀಕರಣಗೊಳಿಸುತ್ತಾರೆ.

ಅವರಿಗಿಂತ ಅವಿವೇಕಿಗಳು, ಪ್ರಪಂಚದ ಇತರ ಕಡೆಗಳಲ್ಲಿ ನೀರಿನ ಸುದ್ದಿಗೆ ಹೋಗಿ ಕೈಸುಟ್ಟಕೊಂಡವರ ಕತೆಯ ಅರಿವಿಲ್ಲದ ತಿಳಿಗೇಡಿಗಳು ಮಾತ್ರ ಅಂತಹುದನ್ನು ಲಾಭದ ಆಸೆಯಲ್ಲಿ ಕೊಳ್ಳಲು ಮುಂದೆ ಬರುತ್ತಾರೆ.

ಮಹಾರಾಷ್ಟ್ರದಲ್ಲಿ ಆರಂಭವಾಗಿರುವ ಚಾಳಿ ಪಕ್ಕದ ರಾಜ್ಯಗಳಿಗೂ ಹಬ್ಬದೆ ಇರಲಿ ಎಂದು ಬಯಸೋಣ, ಅಲ್ಲವೆ? ಇಲ್ಲದಿದ್ದರೆ, ನಮ್ಮಲ್ಲಿಯ ಭ್ರಷ್ಟರು ಪೈಪೋಟಿಯ ಮೇಲೆ ಕೆ.ಆರ್.ಎಸ್. ಡ್ಯಾಮ್ ಪ್ರೈವೇಟ್ ಲಿಮಿಟೆಡ್, ಆಲಮಟ್ಟಿ ಡ್ಯಾಮ್ ಪ್ರೈವೇಟ್ ಲಿಮಿಟೆಡ್, ತುಂಗಭದ್ರ ಡ್ಯಾಮ್ ಪ್ರೈವೇಟ್ ಲಿಮಿಟೆಡ್‌ಗಳಿಗೆ ಅವೆಲ್ಲವನ್ನೂ ಮಾರಿಬಿಡುತ್ತಾರೆ; ಬೆಂಗಳೂರಿನ ಸುತ್ತಮುತ್ತಲ ಸರ್ಕಾರಿ ಜಮೀನನ್ನು ಹರಾಜು ಹಾಕಿದಂತೆ.

Dec 12, 2007

"ಏಯ್ ಬೋ.. ಮಗನೆ, ಭಾರತಕ್ಕೆ ಹಿಂದಿರುಗಿ ಹೋಗೊ..."

(ವಿಕ್ರಾಂತ ಕರ್ನಾಟಕ - ಡಿಸೆಂಬರ್ 21, 2007 ರ ಸಂಚಿಕೆಯಲ್ಲಿನ ಬರಹ)

ಆ ರಾಜ್ಯದ ನಗರವೊಂದರಲ್ಲಿ ಆತನದೊಂದು ಸಣ್ಣ ಫ್ಯಾಕ್ಟರಿ ಇರುತ್ತದೆ. ಖರ್ಚು ಹೆಚ್ಚಾಗಿ ಲಾಭಾಂಶ ಕಡಿಮೆ ಆಗುತ್ತಿದ್ದ ಸಮಯ ಅದು. ಬಹಳ ದಿನಗಳಿಂದ ಸ್ಥಳೀಯರೇ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಸಂಬಳಗಳೂ, ಖರ್ಚುಗಳೂ ಜಾಸ್ತಿ. ಆ ಸಮಯದಲ್ಲಿ ಮಾಲೀಕನಿಗೆ ದೂರದ ಊರಿನಲ್ಲಿ ಕಮ್ಮಿ ಬೆಲೆಗೆ ಕೂಲಿಯವರು ಸಿಗುತ್ತಾರೆ ಎಂದು ಯಾರೋ ಹೇಳುತ್ತಾರೆ. ಸರಿ. ಇವನು ಒಬ್ಬ ಮೇಸ್ತ್ರ್ರಿಗೆ ದುಡ್ಡು ಕೊಟ್ಟು ಆ ಊರಿನಿಂದ ಒಂದೈವತ್ತು ಜನರನ್ನು ಕರೆಸಿಕೊಳ್ಳುತ್ತಾನೆ. ಕೂಲಿಯವರು ಬಂದ ತಕ್ಷಣ ಅವರನ್ನು ಫ್ಯಾಕ್ಟರಿಯ ಶೆಡ್ ಒಂದರಲ್ಲಿ ಕೂಡಿ ಹಾಕುತ್ತಾನೆ. ಮೊದಲ ದಿನದಿಂದಲೇ ಕೆಲಸ ಶುರು. ಪ್ರತಿದಿನ 12-16 ಗಂಟೆ ಕೆಲಸ. ಕೆಲಸ ಮುಗಿಸಿ ಅವರು ಹೊಸ ಊರು ನೋಡಲೆಂದು ಹೊರಗೆ ಹೋಗುವಂತಿಲ್ಲ. ಕಾಂಪೌಂಡ್ ಗೇಟ್‌ಗೆ ಬೀಗ ಹಾಕಲಾಗಿರುತ್ತದೆ. ಈ ಪರದೇಶಿಗಳು ಕೆಲಸ ಮಾಡಲು ಆರಂಭಿಸಿದ ತಕ್ಷಣ ಮಾಲೀಕ ಸ್ಥಳೀಯರನ್ನೆಲ್ಲ ತೆಗೆದುಹಾಕಿ ಬಿಡುತ್ತಾನೆ. ಸ್ಥಳೀಯರಿಗೆ ಕೊಡುತ್ತಿದ್ದ ಕೂಲಿಯಲ್ಲಿಯ ಕಾಲು ಭಾಗಕ್ಕಿಂತ ಕಮ್ಮಿ ಸಂಬಳ ಇವರಿಗೆ. ಯಜಮಾನ ತಾನೆ ಖುದ್ದಾಗಿ ನಿಂತು ಒಂದುಮೊಟ್ಟೆಯ ಆಮ್ಲೆಟ್ ಅನ್ನು ಇಬ್ಬರು ಕೂಲಿಗಳಿಗೆ ಬ್ರೇಕ್‌ಫಾಸ್ಟ್ ಎಂದು ಹಂಚುತ್ತಾನೆ. ಒಂದು ಸೇಬನ್ನು ನಾಲ್ಕು ಭಾಗ ಮಾಡಿ ನಾಲ್ವರಿಗೆ ಕೊಡುತ್ತಾನೆ. ಸುಂದರ ಭವಿಷ್ಯದ ಕನಸು ಹೊತ್ತು ಬಂದ ಈ ಗಂಡಸರ ಅಪ್ಪಅಮ್ಮಂದಿರು, ಹೆಂಡತಿಮಕ್ಕಳು ಊರಿನಲ್ಲಿ. ಇಲ್ಲಿ ಅಪರಿಚಿತ ಸ್ಥಳದಲ್ಲಿ ಇವರು ಜೀತದಾಳುಗಳು. ಗುಲಾಮರು. ಕೆಲಸ ನಿಧಾನ ಆಯಿತೆಂದರೆ ಯಜಮಾನ ಬಂದು ಬಂದು ಕೆಟ್ಟ ಮಾತಿನಲ್ಲಿ ಬೈಯ್ಯುತ್ತಿದ್ದ: "ಬೋಳಿ ಮಗನೆ, ನೀನು ಭಾರತಕ್ಕೆ ಹಿಂದಿರುಗಿ ಹೋಗೊ...!!"

ಈ ಗುಲಾಮಗಿರಿಯ ಕತೆ ನಡೆದದ್ದು ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ. ನೂರಾರು ವರ್ಷಗಳ ಇಲ್ಲವೆ ಹತ್ತಾರು ವರ್ಷಗಳ ಹಿಂದೆಯಲ್ಲ; ಕೇವಲ 6 ವರ್ಷಗಳ ಹಿಂದೆ. ಹೌದು. ಆ ಕೂಲಿ ಆಳುಗಳು ಭಾರತದಿಂದ ಬಂದ 52 ಜನ ಫಿಟ್ಟರ್‌ಗಳು, ವೆಲ್ಡರ್‌ಗಳು. ಅವರಲ್ಲೊಬ್ಬ ಎಲೆಕ್ಟ್ರಿಕಲ್ ಇಂಜಿನಿಯರ್ ಸಹಾ ಇದ್ದ...

---x---

ಮೆಕ್ಸಿಕೋಗೆ ಹೊಂದಿಕೊಂಡಿರುವ ಕ್ಯಾಲಿಫೋರ್ನಿಯದಂತಹ ರಾಜ್ಯಗಳಲ್ಲಿ ಎಲ್ಲಾದರೂ ಕೃಷಿ ಕೆಲಸದಲ್ಲಿ ತೊಡಗಿರುವ ಒಂದು ಗುಂಪು ನಿಮಗೆ ಕಾಣಿಸಿದರೆ ಅದು ಖಂಡಿತವಾಗಿ ಮೆಕ್ಸಿಕೊ, ಇಲ್ಲವೆ ಮಧ್ಯಅಮೇರಿಕದ ರಾಷ್ಟ್ರಗಳಿಂದ ಇಲ್ಲಿಗೆ ಜೀವನ ಹುಡುಕಿಕೊಂಡು ಬಂದಿರುವ ಲ್ಯಾಟಿನೋಗಳದೇ ಆಗಿರುತ್ತದೆ. ಕಳೆದ ಮೂರು-ನಾಲ್ಕು ಶತಮಾನಗಳಿಂದ ಆಫ್ರಿಕನ್ ಮೂಲದ ಕಪ್ಪು ಜನರು ಎಂತೆಂತಹ ಕೆಲಸ ಮಾಡುತ್ತಿದ್ದರೊ ಅದನ್ನು ಇವತ್ತು ಈ ಲ್ಯಾಟಿನೋಗಳು ಮಾಡುತ್ತಿದ್ದಾರೆ. ಇವರಲ್ಲಿ ಎಷ್ಟೋ ಜನ ಅಮೇರಿಕದಲ್ಲಿ ಕೂಲಿ ಮಾಡಲು ಎಂತೆಂತಹುದೊ ಪಡಿಪಾಟಲುಗಳನ್ನು ಪಟ್ಟುಕೊಂಡು, ಕಳ್ಳತನದಲ್ಲಿ ಈ ದೇಶದೊಳಕ್ಕೆ ನುಸುಳಿ ಬಂದಿರುತ್ತಾರೆ. ಇವರಿಲ್ಲದಿದ್ದರೆ ಅಮೇರಿಕದ ಕೃಷಿಯೇ ನಿಂತುಹೋಗುತ್ತದೆ ಎನ್ನುವ ಸ್ಥಿತಿಗೆ ಈ ದೇಶ ಇಂದು ಬಂದು ಬಿಟ್ಟಿದೆ.

ತಮ್ಮ ಸ್ವಂತ ಊರಿನಲ್ಲಿನ ಜೀವನಕ್ಕಿಂತ ಹೆಚ್ಚು ಸಹನೀಯವಾದ ಜೀವನ ಹುಡುಕಿಕೊಂಡು ಮನುಷ್ಯ ಅಲೆಮಾರಿ ಆಗುತ್ತಲೇ ಇದ್ದಾನೆ. ಯಾವಯಾವ ದೇಶದಲ್ಲಿ ಬಡತನ ಹೆಚ್ಚಿದೆಯೊ, ನಿರುದ್ಯೋಗ ಹೆಚ್ಚಿದೆಯೊ ಅಲ್ಲಿಂದೆಲ್ಲ ಜನ ಗುಳೆ ಹೋಗುತ್ತಲೇ ಇರುತ್ತಾರೆ. ನೋಬೆಲ್ ಪುರಸ್ಕೃತ ಅಮೇರಿಕನ್ ಸಾಹಿತಿ ಜಾನ್ ಸ್ಟೈನ್‌ಬೇಕ್ ತನ್ನ "ದ ಗ್ರೇಪ್ಸ್ ಆಫ್ ವ್ರ್ಯಾಥ್" ಕಾದಂಬರಿಯಲ್ಲಿ ಕಳೆದ ಶತಮಾನದ ಉತ್ತರಾರ್ಧದಲ್ಲಿ ಹೇಗೆ ಅಮೇರಿಕದ ರೈತರು ಮಣ್ಣಿನ ವಾಸನೆ ಕಳೆದುಕೊಂಡರು, ಕೃಷಿ ಎನ್ನುವುದು ಹೇಗೆ ಉದ್ಯಮವಾಗಿಬಿಟ್ಟಿತು, ಹೇಗೆ ಆ ರೈತರು ಆಮದು ಮಾಡಿಕೊಂಡ ಪರದೇಶಿ ಕೂಲಿಗಳಿಂದ ಕೆಲಸ ಮಾಡಿಸುತ್ತ ನೆಲವನ್ನು, ಅದರ ವಾಸನೆಯನ್ನು, ಸ್ಪರ್ಶವನ್ನು ಮರೆತರು, ಮತ್ತು ಹೇಗೆ ಆ ಕೃಷಿಕಾರ್ಮಿಕರನ್ನು ದಂಡಿಸುತ್ತಿದ್ದರು ಎಂದು ಹೇಳುತ್ತ ಹೀಗೆ ಬರೆಯುತ್ತಾನೆ: "ಚೀನಾದಿಂದ, ಜಪಾನಿನಿಂದ, ಮೆಕ್ಸಿಕೋದಿಂದ, ಫಿಲಿಫ್ಫೀನ್ಸ್‌ನಿಂದ ಗುಲಾಮರನ್ನು ಆಮದು ಮಾಡಿಕೊಂಡರು. ಈಗ ಅವರನ್ನು ಗುಲಾಮರು ಎಂದೇನೂ ಕರೆಯುತ್ತಿರಲಿಲ್ಲ. ಅವರ ಬಗ್ಗೆ ಒಬ್ಬ ಬ್ಯುಸಿನೆಸ್‌ಮ್ಯಾನ್ ಹೀಗಂದ, ಅವರು ಕೇವಲ ಬೇಳೆ ಮತ್ತು ಅಕ್ಕಿಯಿಂದಲೆ ಜೀವನ ಮಾಡುತ್ತಾರೆ. ಅವರಿಗೆ ಒಳ್ಳೆಯ ಸಂಬಳ ತೆಗೆದುಕೊಂಡು ಏನು ಮಾಡಬೇಕು ಅಂತಲೆ ಗೊತ್ತಿಲ್ಲ. ಯಾಕೆ, ಅಂತೀರ? ನೋಡಿ. ಅವರು ಎಂತಹುದನ್ನು (ಅಗ್ಗವಾದದ್ದನ್ನು) ತಿನ್ನುತ್ತಾರೆ ನೋಡಿ. ಮತ್ತೆ, ಅವರೇನಾದರೂ ಸ್ವಲ್ಪ ತರಲೆ ಮಾಡಲು ಆರಂಭಿಸಿದರೆ ಸುಲಭವಾಗಿ ದೇಶದಿಂದ ಗಡಿಪಾರು ಮಾಡಬಹುದು...." ಇದನ್ನು ಸ್ಟೈನ್‌ಬೆಕ್ ಬರೆದದ್ದು 1939 ರಲ್ಲಿ.

ಟಲ್ಸ ಎನ್ನುವುದು ಓಕ್ಲಹೋಮ ಎನ್ನುವ ರಾಜ್ಯದಲ್ಲಿರುವ, ಸುಮಾರು ನಾಲ್ಕು ಲಕ್ಷ ಜನಸಂಖ್ಯೆಯ ಒಂದು ದೊಡ್ಡ ನಗರ. ಜಾನ್ ಪಿಕ್ಲ್ ಕಂಪನಿ ಎನ್ನುವುದು ತೈಲ ಉದ್ದಿಮೆಗಳಿಗೆ ಯಂತ್ರೋಪಕರಣಗಳನ್ನು ತಯಾರಿಸಿ ಕೊಡುವ ಅಲ್ಲಿಯ ಒಂದು ಕಂಪನಿ. ಜಾನ್ ಪಿಕ್ಲ್ ಎನ್ನುವವನು ಅದರ ಮಾಲೀಕ. ಸುಮಾರು 60 ಎಕರೆಗಳ ವಿಶಾಲ ಪ್ರದೇಶದಲ್ಲಿ ಹರಡಿದ್ದ ಫ್ಯಾಕ್ಟರಿ ಅದು. ಇಲ್ಲಿಯ ಲೆಕ್ಕಾಚಾರದಲ್ಲಿ ಆತ ಒಬ್ಬ ಸಣ್ಣ ಉದ್ದಿಮೆದಾರ. ಆರು ವರ್ಷಗಳ ಹಿಂದೆ, ಅಂದರೆ 2001 ರಲ್ಲಿ ಜಾನ್ ಪಿಕ್ಲ್ ಭಾರತಕ್ಕೆ ಹೋಗಿ ಅಲ್ಲಿಂದ ೫೨ ಜನ ಭಾರತೀಯರನ್ನು ಕರೆದುಕೊಂಡು ಬರುತ್ತಾನೆ. ವೆಲ್ಡರ್‌ಗಳು, ಎಲೆಕ್ಟ್ರಿಶಿಯನ್‌ಗಳು, ಲೇತ್ ಕೆಲಸ ಮಾಡುವ ಫಿಟ್ಟರ್‌ಗಳು ಅವರು. ಅವರಿಗೆ ಅಡಿಗೆ ಮಾಡಿಹಾಕಲು ಇಬ್ಬರು ಅಡಿಗೆಭಟ್ಟರೂ ಆ ಗುಂಪಿನಲ್ಲಿ ಇರುತ್ತಾರೆ. ಅವರಿಗೆಲ್ಲ ಎಚ್-1 ವೀಸಾದ ಸುಳ್ಳು ಆಶ್ವಾಸನೆ ನೀಡಿ, ಅದಕ್ಕಿಂತ ಕಡಿಮೆ ಹಕ್ಕುಗಳಿರುವ ಬಿ-1 ವೀಸಾದಲ್ಲಿ ಕರೆದುಕೊಂಡು ಬರುತ್ತಾನೆ, ಜಾನ್ ಪಿಕ್ಲ್. ಅದಕ್ಕೆ ಆ ಭಾರತೀಯರಿಂದಲೆ ಸುಮಾರು ಒಂದು ಲಕ್ಷ ರೂಪಾಯಿಗೂ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗಿರುತ್ತದೆ. ಅವರು ಟಲ್ಸದ ಕಾರ್ಖಾನೆಯಲ್ಲಿ ಬಂದಿಳಿದ ತಕ್ಷಣ ಜಾನ್ ಪಿಕ್ಲ್‌ನ ಹೆಂಡತಿ ಖುದ್ದಾಗಿ ಅವರಿಂದ ಪಾಸ್‌ಪೋರ್ಟ್‌ಗಳನ್ನು ಕಿತ್ತಿಟ್ಟುಕೊಳ್ಳುತ್ತಾಳೆ. 52 ಜನರನ್ನೂ ಹತ್ತಿಪ್ಪತ್ತು ಜನರ ವಾಸಕ್ಕಷ್ಟೇ ಯೋಗ್ಯವಾದ ಕಟ್ಟಡದಲ್ಲಿ ವಾಸ ಮಾಡಲು ಹೇಳುತ್ತಾರೆ. ವಾಸಕ್ಕಾಗಿ ಅಲ್ಪಸ್ವಲ್ಪ ಬದಲಾಯಿಸಿದ್ದ ಹಳೇ ಶೆಡ್ಡು ಅದು.
ಲೇಖನದ ವಿಡಿಯೊ ಪ್ರಸ್ತುತಿ

ಬಂದವರು ಬೇಗಬೇಗ ಕೆಲಸ ಕಲಿತ ಮೇಲೆ ಅಲ್ಲಿಯ ಹಳಬರನ್ನೆಲ್ಲ ಪಿಕ್ಲ್ ಕೆಲಸದಿಂದ ತೆಗೆದುಬಿಡುತ್ತಾನೆ. ಸ್ಥಳೀಯರಿಗೆ ಕೊಡುತ್ತಿದ್ದ ಸಂಬಳ 2-3 ಸಾವಿರ ಡಾಲರ್ ಆಗಿದ್ದರೆ ಇವರಿಗೆ ಕೇವಲ 500 ಡಾಲರ್ ಸಂಬಳ. ವಾರಕ್ಕೆ ಆರು ದಿನಗಳ ಕೆಲಸ. ದಿನಕ್ಕೆ 12-16ಗಂಟೆಗಳ ಕತ್ತೆ ದುಡಿತ. ಸ್ವಲ್ಪ ನಿಧಾನ ಮಾಡಿದರೆ ನೀವು ಭಾರತೀಯರು ಸೋಮಾರಿಗಳು, ಎಂಬ ಬೈಗಳು. ದಿನೇದಿನೆ ಪರಿಸ್ಥಿತಿ ಬಿಗಡಾಯಿಸುತ್ತ ಹೋಗುತ್ತದೆ. ಅಪ್ಪಣೆ ಇಲ್ಲದೆ ಫ್ಯಾಕ್ಟರಿಯಿಂದ ಹೊರಗೆ ಹೋದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಮತ್ತು ಭಾರತಕ್ಕೆ ಗಡಿಪಾರು ಮಾಡಲಾಗುತ್ತದೆ ಎಂಬ ಎಚ್ಚರಿಕೆ ಕೊಟ್ಟಿರಲಾಗುತ್ತದೆ. ಕೊನೆಗೆ ಮಾಲೀಕನೆ ಅವರಿಗೆ ಒದಗಿಸಲಾಗುವ ಊಟದ ಉಸ್ತುವಾರಿಯನ್ನು ನೋಡಿಕೊಳ್ಳಲು ಆರಂಭಿಸುತ್ತಾನೆ. "ನೀವು ಗತಿಯಿಲ್ಲದೆ ಇದ್ದವರು, ನೀವು ಭಾರತದಲ್ಲಿ ತಿನ್ನುವುದನ್ನು ನಾನು ನೋಡಿಲ್ಲವ, ನಿಮಗೆಲ್ಲ ಯಾಕಷ್ಟು ಊಟ?" ಎಂದು ಜಬರಿಸುತ್ತಾನೆ. ಮೂರು ದಿನಕ್ಕೊಮ್ಮೆ ಒಂದು ಲೋಟ ಹಾಲು. ಕಮ್ಮಿ ಬೆಲೆಯ ಅಕ್ಕಿ. ಮೆಕ್ಸಿಕನ್ನರು ತಿನ್ನುವ ಕಂದುಬಣ್ಣದ ಹಲಸಂದೆಯೆ ಮುಖ್ಯ ಆಹಾರ. ಭಾರತೀಯ ಸಾಂಬಾರುಮಸಾಲೆ ಸಾಮಗ್ರಿಗಳು ತುಟ್ಟಿ ಎಂದು ಅವಕ್ಕೂ ಕೊಕ್ಕೆ. ಕಬ್ಬಿಣದ ಕೆಲಸ ಮಾಡುವಾಗ ಏನಾದರೂ ಅಪಘಾತವಾಗಿ, ಯಾರಿಗಾದರೂ ಗಾಯವಾದರೆ ಏನೋ ಒಂದು ನೋವುನಿವಾರಕ ಮಾತ್ರೆ ತಂದುಕೊಡುತ್ತಿದ್ದರು. ಆಸ್ಪತೆಗೆ ಕರೆದುಕೊಂಡು ಹೋಗುವ ಮಾತೇ ಇಲ್ಲ. ಯಾರಾದರೂ ಕಾಯಿಲೆ ಬಿದ್ದರೆ, ಪಿಕ್ಲ್ "ನೀನು ವೈದ್ಯರ ಬಳಿಗೆ ಹೋಗಬೇಕ? ನಾನೆ ನಿನ್ನ ವೈದ್ಯ," ಎನ್ನುತ್ತಿದ್ದ.

ಆ ಭಾರತೀಯರಿಗೆ ಬದುಕು ಅಸಹನೀಯವಾಗಲಾರಂಭಿಸಿತು. ಇಸ್ಲಾಂ ಕೋಮುವಾದಿಗಳು ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ ಮಾಡಿ ಆಗ ಮೂರ್ನಾಲ್ಕು ತಿಂಗಳಾಗಿತ್ತಷ್ಟೆ. ಆದರೂ ಕೆಲವರು ದನಿಯೆತ್ತಲು ಆರಂಭಿಸಿದರು. ಆಗ ಪಿಕ್ಲ್ ಅವರಿಗೆ ಗಡಿಪಾರು ಮಾಡುವುದಾಗಿ ಹೆದರಿಸುತ್ತಿದ್ದ. ಒಮ್ಮೆ ರಜಾದಿನ ಕೆಲವರು ಹತ್ತಿರದಲ್ಲಿ ಇದ್ದ ಚರ್ಚಿಗೆ ಹೋಗಲು ಅಪ್ಪಣೆ ಕೇಳಿದರೆ "ಬೋಳಿ ಮಗನೆ, ನೀನು ಭಾರತಕ್ಕೆ ಹಿಂದಿರುಗಿ ಹೋಗು," ಎಂದು ಇನ್ನೂ ಏನೇನೊ ಕೆಟ್ಟ ಮಾತುಗಳನ್ನು ಬೈದ.

ಕೊನೆಗೆ ಸಹಾಯ ಚರ್ಚಿನ ಮೂಲಕವೇ ಬರುತ್ತದೆ. ಇವರ ಪರಿಸ್ಥಿತಿ ನೋಡಿದ ಮಾರ್ಕ್ ಎನ್ನುವ ಚರ್ಚಿನಲ್ಲಿ ಪರಿಚಯವಾದ ಸಜ್ಜನನೊಬ್ಬ ನಿಮಗೇನಾದರೂ ಸಹಾಯ ಬೇಕಾದರೆ ಹೇಳಿ ಎಂದಿರುತ್ತಾನೆ. ಕಾರ್ಖಾನೆಯ ಒಳಗೆ ಒಮ್ಮೆ ಪರಿಸ್ಥಿತಿ ಬಿಗಡಾಯಿಸಿ ಏಳು ಜನರನ್ನು ಮಾರನೆಯ ದಿನ ಗಡಿಪಾರು ಮಾಡಲು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಆ ಏಳೂ ಜನರು ಅಂದು ರಾತ್ರಿ ಕಾಂಪೌಂಡ್‌ನ ಕೆಳಗೆ ನುಸುಳಿ ಓಡಿ ಬಂದು ಬಿಡುತ್ತಾರೆ. ಮಾರ್ಕ್ ಅವರಿಗೆಲ್ಲ ಆಶ್ರಯ ಕೊಡುತ್ತಾನೆ. ಇದು ಕತೆಯ ಅರ್ಧ ಮಾತ್ರ. ಅವರು ಓಡಿ ಬಂದನಂತರ ಒಳಗೆ ರೈಫಲ್ ಹಿಡಿದ ಗಾರ್ಡ್ ಉಳಿದವರನ್ನು ಕಾವಲು ಕಾಯಲು ಪ್ರಾರಂಭಿಸುತ್ತಾನೆ. ಅಲ್ಲಿರುವ ಮಿಕ್ಕ 45 ಜನರೂ ಸಂಪೂರ್ಣವಾಗಿ ಈ ಆಧುನಿಕ ಗುಲಾಮಿತನದಿಂದ ಸಂಪೂರ್ಣವಾಗಿ ಬಿಡಿಸಿಕೊಳ್ಳಬೇಕಾದರೆ ತಿಂಗಳುಗಳು ಹಿಡಿಸುತ್ತವೆ. ಮಾರ್ಕ್, ಒಬ್ಬ ವಕೀಲ, ಮತ್ತು ಸ್ಥಳೀಯ ಚರ್ಚಿನ ಸಹಾಯದಿಂದ ಕೊನೆಗೂ ಎಲ್ಲರ ಬಿಡುಗಡೆ ಆಗುತ್ತದೆ. ಒಟ್ಟು ಐದು ತಿಂಗಳುಗಳ ಕಾಲ ಈ ನತದೃಷ್ಟ ಭಾರತೀಯರು ಅಮೇರಿಕದ ನೆಲದಲ್ಲಿ ಅಕ್ಷರಶಃ ಜೀತದಾಳುಗಳಾಗಿ ನರಕಸದೃಶ ಜೀವನ ನಡೆಸಿರುತ್ತಾರೆ. ಅದೂ, ಕೇವಲ ಆರು ವರ್ಷಗಳ ಇತ್ತೀಚೆಗೆ.

ಇದೇ ವಿಷಯದ ಮೇಲೆ ಈಗಲೂ ಕೋರ್ಟುಕಚೇರಿಗಳು ನಡೆಯುತ್ತಿವೆ. ಆದರೆ, ಇಲ್ಲಿ ನಮಗೆ ಮುಖ್ಯವಾಗಬೇಕಿರುವುದು ಇಂತಹುದಕ್ಕೆ ಇಲ್ಲಿಯ ಪ್ರಜ್ಞಾವಂತ ಸಮೂಹ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದು. ಜಾನ್ ಬೊವ್ ಎಂಬ ಯುವ ಪತ್ರಕರ್ತನೊಬ್ಬ ಇಂತಹುದೇ ಇನ್ನೆರಡು ಆಧುನಿಕ ಕಾಲದ ಗುಲಾಮರ ಘಟನೆಗಳನ್ನಿಟ್ಟುಕೊಂಡು ಇತ್ತೀಚೆಗೆ ತಾನೆ ಓoboಜies: “Nobodies: Modern American Slave Labor and the Dark Side of the Global Economy” ಎಂಬ ಪುಸ್ತಕ ಬರೆದಿದ್ದಾನೆ. ಇಂತಹುವುಗಳನ್ನು ತಡೆಯುವುದು ಹೇಗೆ ಎಂದು ಮಾತನಾಡುತ್ತಿದ್ದಾನೆ. ಪಾಲಿಸಿ ಮೇಕಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ಅವನಂತಹ ಪ್ರಜ್ಞಾವಂತ ಜನ ಈ ದೇಶದಲ್ಲಿ ಅಂತಹವು ಆಗದ ರೀತಿ ಏನು ಮಾಡಬೇಕೊ ಅಂತಹುದನ್ನು ಮಾಡಲು ಯತ್ನಿಸುತ್ತಿದ್ದಾರೆ.

ಆದರೆ, ನಮ್ಮಲ್ಲಿ?

ಕ್ರಿಯಾಶೀಲರಲ್ಲದ ಚಿಂತಕರು:
ಭಾರತದ ಮಟ್ಟದಲ್ಲಿ ಹೇಳಬೇಕೆಂದರೆ ಇಂದು ಅನೇಕ ಪ್ರಾಮಾಣಿಕ ಮನಸ್ಸುಗಳು ಪಾಲಿಸಿ ಮೇಕಿಂಗ್‌ನಲ್ಲಿ ತೊಡಗಿಸಿಕೊಳ್ಳುತ್ತಿವೆ. ಅರುಣಾ ರಾಯ್, ಅರವಿಂದ್ ಖೇಜ್ರಿವಾಲ, ಜಯಪ್ರಕಾಶ್ ನಾರಾಯಣ್ ಮುಂತಾದವರು ಕೇಂದ್ರ ಸರ್ಕಾರಕ್ಕೆ ಕೆಲವು ಕಾಯಿದೆಕಾನೂನು ಬದಲಾಯಿಸಲು, ಸುಧಾರಿಸಲು ಸಲಹೆಸೂಚನೆ ಕೊಡುತ್ತಿದ್ದಾರೆ. ಹೋರಾಡುತ್ತಿದ್ದಾರೆ. ಕರ್ನಾಟಕದಲ್ಲಿ? ನಮ್ಮಲ್ಲಿ ಕನ್ನಡದ ಚಿಂತಕರದೆಲ್ಲ ಅದು ಬೇಡ, ಇದು ಬೇಡ ಎನ್ನುವ ಭಾಷಣಗಳೆ. ಏನು ಸುಧಾರಣೆ ಮಾಡಬೇಕು, ಹೇಗೆ ಮಾಡಬೇಕು ಎನ್ನುವ ಸಲಹೆಗಳೇ ಇಲ್ಲ. ಸರ್ಕಾರಕ್ಕೆ ಪ್ರಗತಿಪರರು ಕೊಡಬಹುದಾದ ಮಾರ್ಗದರ್ಶನಗಳೆಲ್ಲ ಬಹುಶಃ ಲಂಕೇಶರ 1985 ರ ಸುಮಾರಿಗೇ ನಿಂತು ಹೋಯಿತು ಎನ್ನಿಸುತ್ತದೆ. ಜನ ನೆಲೆ ಕಳೆದುಕೊಳ್ಳುತ್ತಿರುವುದಾಗಲಿ, ಕೆಲಸ ಹುಡುಕುತ್ತ ಅಲೆಮಾರಿಗಳಾಗಿರುವುದಾಗಲಿ, ರೈತರ ಆತ್ಮಹತ್ಯೆಗಳಾಗಲಿ, ಕರ್ನಾಟಕದ ಇತರ ಜ್ವಲಂತ ಸಮಸ್ಯೆಗಳ ಬಗ್ಗೆಯಾಗಲಿ ಯಾವೊಬ್ಬ ಕನ್ನಡದ ಪತ್ರಕರ್ತರೂ ಪಿ. ಸಾಯಿನಾಥ್ ಬರೆದಂತಹ ಒಂದು ಪುಸ್ತಕ ಬರೆದದ್ದು ಕಾಣಿಸಲಿಲ್ಲ. ಚರ್ಚೆ ಮಾಡಿದ್ದು ಕಾಣಿಸಲಿಲ್ಲ. ಈಗೆಲ್ಲ ರೌಡಿಗಳ, ರಾಜಕಾರಣಿಗಳ, ವೇಶ್ಯೆಯರ, ಭ್ರಷ್ಟರ ಕಂತೆಪುರಾಣ ಬರೆಯುವವರು, ದುಡ್ಡು ಮಾಡುವುದು ಹೇಗೆ ಎಂದು ಹೇಳುವವರೆ ಧರೆಗೆ ದೊಡ್ಡವರು.

ಉತ್ತಮ ವ್ಯವಸ್ಥೆಯನ್ನು ಯಾರೂ ಬೆಳ್ಳಿ ತಟ್ಟೆಯಲ್ಲಿ ಕೊಡುವುದಿಲ್ಲ. ಅಧಿಕಾರಶಾಹಿಗೆ, ರಾಜಕಾರಣಿಗಳಿಗೆ ಸಮಾಜಚಿಂತಕರು ಮಾರ್ಗದರ್ಶನವಾಗಲಿ, ತಿಳುವಳಿಕೆಯಾಗಲಿ ಕೊಡದೆ ಇದ್ದರೆ ನಮ್ಮದೇ ಈ ವ್ಯವಸ್ಥೆ ಸುಧಾರಿಸೀತಾದರೂ ಹೇಗೆ? ಕ್ರಿಯಾಶೀಲತೆಯಿಲ್ಲದ ಪ್ರಾಮಾಣಿಕತೆ ಉಪಯೋಗಕ್ಕೆ ಬಾರದ್ದು. ನಮ್ಮಲ್ಲಿಯ ಈ ಚಿಂತಕರು ಈಗ ಕ್ರಿಯಾಶೀಲರಾಗಬೇಕಿದೆ; ಮಾರ್ಗದರ್ಶಕರಾಗಬೇಕಿದೆ. ಇಲ್ಲದಿದ್ದರೆ ಅವರ ಮಾತುಗಳು ಕೇವಲ ಬೌದ್ಧಿಕ ಕಸರತ್ತಿನ ಬೊಗಳೆಗಳಾಗಿಬಿಡುತ್ತವೆ.

ಈಗ ಆಗಿರುವಂತೆ...

Dec 5, 2007

e-ಕನ್ನಡದ ಹೆಮ್ಮೆ ourkarnataka.com

(ವಿಕ್ರಾಂತ ಕರ್ನಾಟಕ - ಡಿಸೆಂಬರ್ 14, 2007 ರ ಸಂಚಿಕೆಯಲ್ಲಿನ ಬರಹ)

1999. ಆಗಿನ್ನೂ ಕನ್ನಡ ಅಂತರ್ಜಾಲ ನಿಧಾನಕ್ಕೆ ಕಣ್ಣು ತೆರೆಯುತ್ತಿತ್ತು. ಇದ್ದದ್ದು ಬಹುಶಃ ಬೆರಳೆಣಿಕೆಯ ಕನ್ನಡ ವೆಬ್‌ಸೈಟುಗಳು. ಬರಹ ವಾಸುರವರು ಬರಹ ಕನ್ನಡ ಲಿಪಿ ತಂತ್ರಾಂಶವನ್ನು ಉಚಿತವಾಗಿ ಒದಗಿಸಲು ಆರಂಭಿಸಿದ್ದ ದಿನಗಳು ಅವು. ಅ ದಿನಗಳಲ್ಲಿ ದಕ್ಷಿಣಕನ್ನಡ ಮೂಲದ, ಕೊಂಕಣಿ ಮನೆಮಾತಿನ, ಮೈಸೂರಿನ ಯುವಕನೊಬ್ಬ ಜರ್ಮನಿಗೆ ಪ್ರಾಜೆಕ್ಟ್ ಒಂದಕ್ಕೆ ನಾಲ್ಕಾರು ತಿಂಗಳ ಕಾಲ ಹೋಗುತ್ತಾನೆ. ಅಲ್ಲಿ ಬಯಸಿದ್ದಕ್ಕಿಂತ ಹೆಚ್ಚಿನ ಬಿಡುವು. ಆ ಬಿಡುವಿನಲ್ಲಿ ಕನ್ನಡದ ವೆಬ್‌ಸೈಟು ಒಂದನ್ನು ಆರಂಭಿಸುವ ಯೋಚನೆ ಬರುತ್ತದೆ. ಸರಿ, ಜರ್ಮನಿಯಿಂದಲೆ ಆ ವೆಬ್‌ಸೈಟು ಶುರುವಾಯಿತು. ಮೊದಲಿಗೆ ಕನ್ನಡ ಚಲಚಿತ್ರಗೀತೆಗಳನ್ನು ಒದಗಿಸಲಾಗುತ್ತಿತ್ತು. ಆ ಯುವಕನ ತಮ್ಮ ಮೈಸೂರಿನಲ್ಲಿ ಇನ್ನೂ ಕಾಲೇಜು ಓದುತ್ತಿದ್ದ. ಆತ ಆಗಾಗ ಕನ್ನಡದಲ್ಲಿ ಬರೆಯುತ್ತಿದ್ದ. ಆತನ ಒಂದಷ್ಟು ಲೇಖನಗಳು ಪ್ರಕಟವಾದವು. ಇತರೆ ಸ್ನೇಹಿತರದು ಮತ್ತಷ್ಟು. ವೆಬ್‌ಸೈಟಿಗೆ ಭೇಟಿ ಕೊಟ್ಟ ಓದುಗರು ಬರೆದ ಲೇಖನಗಳು ಮಗದಷ್ಟು. ಆ ಮಧ್ಯೆ ಬರಹ ವಾಸು ಸೈಟನ್ನು ಮತ್ತಷ್ಟು ಸುಧಾರಿಸಲು ಕೆಲವು ಸಲಹೆ ಕೊಟ್ಟರು. ಓದುಗರು ಫಾಂಟ್ ಅನ್ನು ಇನ್ಸ್ಟಾಲ್ ಮಾಡುವ ಅಗತ್ಯವಿಲ್ಲದೆ ಪುಟ ನೋಡಬಹುದಾದ ವ್ಯವಸ್ಥೆ ಇರುವ ಡೈನಾಮಿಕ್ ಫಾಂಟ್ಸ್‌ನ ವ್ಯವಸ್ಥೆ ಮಾಡಿಕೊಟ್ಟರು. ಹೀಗೆ ವೆಬ್‌ಸೈಟು ಬೆಳೆಯುತ್ತಾ ಹೋಯಿತು. ಇವತ್ತು ಯಾವುದಾದರೂ ಒಂದು ಕನ್ನಡ ವೆಬ್‌ಸೈಟಿನಲ್ಲಿ ಎಲ್ಲಾ ತರಹದ ವಿಷಯ ಸಾಮಗ್ರಿ ಇದೆ ಅಂದರೆ, ಅದು ಆ ಯುವಕ ಜರ್ಮನಿಯಲ್ಲಿ ಪ್ರಾರಂಭಿಸಿದ ourkarnataka.com ದಲ್ಲಿ. ಆತ ಶೇಷಗಿರಿ ಶೆಣೈ.

ಇಲ್ಲಿ ನಾನು ಎಲ್ಲಾ ತರಹದ ಸಾಮಗ್ರಿ ಎಂದೆ. ಹೌದು, ಅದು ಕ್ಲೀಷೆಯಲ್ಲ. ಹೊಸದಿಗಂತ, ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಹಲವು ಅಂಕಣ ಲೇಖನಗಳು, ಮೈಸೂರಿನ ಸ್ಟಾರ್ ಆಫ್ ಮೈಸೂರ್ ಇಂಗ್ಲಿಷ್ ದಿನಪತ್ರಿಕೆಯ ಲೇಖನಗಳು, ಲಂಕೇಶ್ ಪತ್ರಿಕೆಯ ಹಲವಾರು ಲೇಖನಗಳು, ಗೌರಿ ಲಂಕೇಶ್ ಪತ್ರಿಕೆಯ ಲೇಖನಗಳು; ಇವೆಲ್ಲವೂ ಪ್ರಕಟವಾಗುವುದು ಅವರ್‌ಕರ್ನಾಟಕ.ಕಾಮ್‌ನಲ್ಲಿ. "ಮುಸ್ಲಿಮರನ್ನು ಭಾರತದಿಂದ ಓಡಿಸಬೇಕು, ಹಿಡಿಬಡಿಕೊಲ್ಲು," ಎನ್ನುವಂತಹ ಉಗ್ರ ಬಲಪಂಥೀಯ ಲೇಖನಗಳಿಂದ ಹಿಡಿದು, ಗೌರಿ ಲಂಕೇಶ್ ಮಲೆನಾಡಿನ ಅರಣ್ಯದಲ್ಲಿ ಸಾಕೇತ್ ರಾಜನ್ ಸಂದರ್ಶನ ಮಾಡಿದ ಉಗ್ರ ಎಡಪಂಥೀಯ ಲೇಖನಗಳೂ ಇವತ್ತು ಇದೊಂದೆ ವೇದಿಕೆಯಲ್ಲಿ ಸಮಾನವಾಗಿ ಸ್ಥಳ ಹಂಚಿಕೊಂಡಿವೆ. ಭಾರತದ ಪುರೋಹಿತಶಾಹಿಯನ್ನು ವಿಜೃಂಭಿಸುವ ಲೇಖನದ ಪಕ್ಕದಲ್ಲಿಯೇ, ಅವೆಲ್ಲವನ್ನೂ ನಿರಾಕರಿಸುವ, ತೆಗಳುವ, ಲೇವಡಿ ಮಾಡುವ, ತನ್ನದೇ ರೀತಿಯಲ್ಲಿ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಸಂಗತಿಗಳನ್ನು ವಿಶ್ಲೇಷಿಸುವ ಬಿ. ಚಂದ್ರೇಗೌಡರ "ಕಟ್ಟೇಪುರಾಣ" ಪ್ರಕಟಗೊಳ್ಳುತ್ತಿದೆ.

ಅವರ್‌ಕರ್ನಾಟಕ.ಕಾಮಿನಲ್ಲಿ ಇಂತಹ ವಿಷಯದ ಬಗ್ಗೆ ಲೇಖನ ಇಲ್ಲ ಎನ್ನುವಂತಿಲ್ಲ. "ಕಡ್ಡಾಯವಾಗಿ ತುಂಟರಿಗಾಗಿ ಮಾತ್ರ" ಎನ್ನುವ ಟ್ಯಾಗ್‌ಲೈನಿನೊಂದಿಗೆ ಸುಮಾರು ಮೂರುನೂರಕ್ಕೂ ಹೆಚ್ಚಿನ ಜೋಕುಗಳು "Fiಟ್ಟಿಂgu" ಕಾಲಮ್ಮಿನಲ್ಲಿ ನಿಮಗೆ ಸಿಗುತ್ತವೆ. ಇನ್ಯಾವ ಕನ್ನಡದ ವೆಬ್‌ಸೈಟಿನಲ್ಲೂ ನಿಮಗೆ ಇಷ್ಟೊಂದು ಜೋಕುಗಳು ಒಂದೇ ಕಡೆ ಸಿಗುವುದಿಲ್ಲ. ಸಮಾಜದ ಭ್ರಷ್ಟರ ಕುರಿತು ವಿವಿಧ ಪತ್ರಿಕೆಗಳಲ್ಲಿ ಬಂದ ಲೇಖನಗಳನ್ನು, ಈ ವೆಬ್‌ಸೈಟಿಗೆಂದೇ ಓದುಗರು ಬರೆದ ಲೇಖನಗಳನ್ನು ಒಂದೆಡೆ ಪ್ರಕಟಿಸಿರುವ "ಥೂ ನಿಮ್ಮ" ವಿಭಾಗವಂತೂ ಹಲವಾರು ಪಟ್ಟಭದ್ರರ ಮುಖವನ್ನು ವಿಶ್ವದಾದ್ಯಂತದ ಕನ್ನಡ ಓದುಗರಿಗೆ ಬೇಕೆಂದಾಗ ತೋರಿಸುತ್ತದೆ. ಜ್ಯೋತಿಷ್ಯವೂ ಇದೆ; ಅದರ ಜೊತೆಯಲ್ಲಿಯೇ, ಪವಾಡಗಳ, ಜ್ಯೋತಿಷ್ಯಗಳ ಟೊಳ್ಳುತನವನ್ನು ಬಯಲು ಮಾಡುವ ವಿಚಾರವಾದಿ ಡಾ. ನರೇಂದ್ರ ನಾಯಕರ ಅನೇಕ ಲೇಖನಗಳಿವೆ. ಹಳೆಯಕಾಲದ ಗಾದೆಗಳಿಂದ ಹಿಡಿದು ಆಧುನಿಕ ಕಾಲದ ಗಾದೆಗಳ ತನಕ 2000 ಕ್ಕೂ ಹೆಚ್ಚಿನ ಕನ್ನಡ ಗಾದೆಗಳಿವೆ. 1800 ಕ್ಕೂ ಮೀರಿದ ಕನ್ನಡದ ಒಗಟುಗಳಿವೆ. "ಇಲ್ಲಿಯವರೆಗೂ ಹತ್ತು ಸಾವಿರಕ್ಕೂ ಹೆಚ್ಚಿನ ಹಾವುಗಳನ್ನು ಹಿಡಿದಿದ್ದೇನೆ," ಎನ್ನುವ ಮೈಸೂರಿನ ಸ್ನೇಕ್‌ಶ್ಯಾಮ್‌ರ ಸರ್ಪಲೋಕವೂ ಇಲ್ಲಿದೆ. ಕೊತ್ವಾಲ್ ರಾಮಚಂದ್ರ, ಮುತ್ತಪ್ಪ ರೈ, ಹೆಸರು ಬದಲಾಯಿಸಿಕೊಂಡು ಇಂಗ್ಲಿಷಿನಲ್ಲಿ ತನ್ನ ಭೂಗತಲೋಕದ ಕತೆ ಬರೆದುಕೊಂಡಿರುವ ವ್ಯಕ್ತಿಯೊಬ್ಬನ ಕತೆಯೂ ಇಲ್ಲಿದೆ. ಭಗವದ್ಗೀತೆಯ ಹಲವಾರು ಅಧ್ಯಾಯಗಳ ಕನ್ನಡ ಅನುವಾದವಿದೆ; ಮುಸ್ಲಿಮ್ ಸಂಪ್ರದಾಯಗಳ ಲೇಖನಗಳೂ ಇವೆ. ಸಂಸ್ಕೃತ, ತುಳು, ಕೊಡವ, ಕೊಂಕಣಿ ಭಾಷೆಗಳನ್ನು ಕಲಿಯಲು ಆನ್‌ಲೈನ್ ಪಾಠಗಳೂ ಇವೆ.

ದಂಡಪಿಂಡಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ:

ನಿಮಗೆಲ್ಲ ಗೊತ್ತಿರುವಂತೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಎಂಬ ಅಪ್ಪಟ ದಂಡಪಿಂಡಗಳ, ಸೂಟುಬೂಟುಧಾರಿಗಳ ಸರ್ಕಾರಿ ಇಲಾಖೆ ಒಂದಿದೆ. ಈ ಇಲಾಖೆ ಬೇರೆಬೇರೆ ವೇದಿಕೆಗಳಲ್ಲಿ ಏನು ಮಾಡುತ್ತದೆ ಎನ್ನುವುದರ ಬಗ್ಗೆ ನನಗೆ ಅಜ್ಞಾನ ಇರುವುದು ನಿಜವಾದರೂ, ಇಲ್ಲಿಯವರೆಗೂ ಇವರು ಕೈಗೊಂಡಿರುವ ಇಂಟರ್ನೆಟ್ ಯೋಜನೆಗಳೆಲ್ಲಾ ದೊಡ್ಡ ಫ್ಲಾಪ್ ಶೋಗಳು. ಬೇಜವಾಬ್ದಾರಿಯವು. ಹೇಳಬೇಕೆಂದರೆ ಅಂತರ್ಜಾಲದಲ್ಲಿನ ಕನ್ನಡ ದ್ರೋಹಿಗಳು ಇವರು. ಆದಿಕವಿ ಪಂಪನ ಪಂಪಭಾರತದಿಂದ ಹಿಡಿದು ಡಿವಿಜಿಯವರ ಮಂಕುತಿಮ್ಮನ ಕಗ್ಗದ ತನಕ ಅನೇಕ ಕನ್ನಡ ಕಾವ್ಯಗಳನ್ನು ಇವರು ಕನ್ನುಡಿ.ಆರ್ಗ್ ಎಂಬ ವೆಬ್‌ಸೈಟಿನಲ್ಲಿ ಪ್ರಕಟಿಸಿದ್ದರು. ಅದು ಬದುಕಿದ್ದದ್ದೆ ಒಂದೆರಡು ವರ್ಷ. ಹತ್ತಾರು ಲಕ್ಷ ಖರ್ಚು ಮಾಡಿ, ಸಮಗ್ರ ದಾಸ ಸಾಹಿತ್ಯವನ್ನು www.dasasahitya.org ಎಂಬ ಹೆಸರಿನಲ್ಲಿ ಬಹುಶಃ ಎರಡು ವರ್ಷದ ಹಿಂದೆ ಇಂಟರ್ನೆಟ್‌ನಲ್ಲಿ ಪ್ರಕಟಿಸಿದರು. ಇವತ್ತು ಅದರ ಡೊಮೈನ್ ಎಕ್ಸ್‌ಪೈರ್ ಆಗಿದೆ. ಸಮಗ್ರ ವಚನ ಸಾಹಿತ್ಯವನ್ನೂ ಹೀಗೆಯೇ ಲಕ್ಷಾಂತರ ಹಣ ವೆಚ್ಚ ಮಾಡಿ, ಕೇವಲ ಏಳೆಂಟು ತಿಂಗಳ ಹಿಂದೆ www.vachanasahitya.org ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಇಂದು ಅದರ ಡೊಮೈನೂ ಎಕ್ಸ್‌ಪೈರ್ ಆಗಿದೆ. ನಿಮಗಿದು ಗೊತ್ತಿರಲಿ, ಒಂದು ಡೊಮೈನ್‌ಗೆ ಒಂದು ವರ್ಷಕ್ಕೆ ತಗಲುವ ಖರ್ಚು ಕೇವಲ 400 ರೂಪಾಯಿಗಳು. ಎಲ್ಲಾ ಕಂಟೆಂಟ್ ಸಿದ್ದಪಡಿಸಿ ಒಂದು ಸಲ ವೆಬ್‌ಸೈಟಿಗೆ ಅಪ್‌ಲೋಡ್ ಮಾಡಿಬಿಟ್ಟರೆ, ಅದಕ್ಕೆ ಇಡೀ ವರ್ಷಕ್ಕೆ ಕೊಡಬೇಕಾಗಿರುವ ಬಾಡಿಗೆ ಹಣ 4000 ರೂಪಾಯಿಗೂ ಕಮ್ಮಿ. ಹತ್ತಿಪ್ಪತ್ತು ಲಕ್ಷ ಖರ್ಚು ಮಾಡಿ, ಎಲ್ಲವನ್ನೂ ಸಿದ್ದಪಡಿಸಿ, ಕೇವಲ ವೆಬ್‌ಸೈಟ್ ಉದ್ಘಾಟನೆಗೆಂದೇ ಲಕ್ಷಾಂತರ ಹಣವನ್ನು ಖರ್ಚು ಮಾಡಿ, ಧಾಂಧೂಮ್ ಎಂದು ಆರಂಭಿಸುವ ಈ ಹೊಣೆಗೇಡಿಗಳು, ಕೇವಲ ಒಂದೇ ವರ್ಷದಲ್ಲಿ ನಾಲ್ಕೈದು ಸಾವಿರ ರೂಪಾಯಿಗಳ ಕೆಲಸವನ್ನೂ ಸಮಯಕ್ಕೆ ಸರಿಯಾಗಿ ಮಾಡಲಾಗದೆ, ಕನ್ನಡದ ಕೆಲಸಕ್ಕೆ ಹೀಗೆ ಎಳ್ಳುನೀರು ಬಿಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿಯೇ ನಮಗೆ ಅವರ್‌ಕರ್ನಾಟಕ.ಕಾಮ್, ಅಂತರ್ಜಾಲದಲ್ಲಿ ಹೆಚ್ಚುಹೆಚ್ಚು ಪ್ರಸ್ತುತವಾಗುತ್ತದೆ. ಕನ್ನಡ ಅಂತರ್ಜಾಲಕ್ಕೆ ಸಂಬಂಧಪಟ್ಟಂತೆ ಯಾವುದನ್ನು ಕನ್ನಡ ಸಂಸ್ಕೃತಿ ನಿರ್ದೇಶನಾಲಯ ಮಾಡಬೇಕಿದೆಯೊ ಅದನ್ನು ಅವರ್‌ಕರ್ನಾಟಕ.ಕಾಮ್ ಕಳೆದ ಏಳೆಂಟು ವರ್ಷಗಳಿಂದ ಮಾಡಿಕೊಂಡು ಬಂದಿದೆ. ಇವತ್ತು ಕನ್ನಡ ಜ್ಞಾನಪೀಠ ಪುರಸ್ಕೃತರ ಬಗ್ಗೆ ಅಧಿಕೃತ ಮಹಿತಿ ನೀಡುವ ಒಂದು ಪುಟವನ್ನೂ ಕನ್ನಡ ಸಂಸ್ಕೃತಿ ಇಲಾಖೆ ಹೊಂದಿಲ್ಲ. ಆದರೆ, ಅವರ್‌ಕರ್ನಾಟಕ.ಕಾಮಿನಲ್ಲಿ ಕುವೆಂಪುರವರಿಂದ ಹಿಡಿದು ಅನಂತಮೂರ್ತಿಯವರ ತನಕ ಅವರ ವ್ಯಕ್ತಿಚಿತ್ರ, ಕೃತಿಪರಿಚಯ, ವಿಮರ್ಶೆಗಳಿವೆ. ನವೋದಯ, ನವ್ಯ, ಬಂಡಾಯ, ಜನಪದ, ಹೀಗೆ ಹಲವಾರು ಸಾಹಿತ್ಯ ಘಟ್ಟಗಳ ಕುರಿತ ವಿಸ್ತೃತ ಲೇಖನಗಳಿವೆ. ಬಹುಶಃ ಇಲ್ಲಿರುವಷ್ಟು ಕನ್ನಡ ಸಾಹಿತ್ಯ ಸಂಬಂಧಿ ಲೇಖನಗಳು, ಸಾಹಿತ್ಯಕ್ಕೇ ಮೀಸಲಾದ ಇತರ ವೆಬ್‌ಸೈಟುಗಳಲ್ಲಿ ಕಾಣಸಿಗುವುದೂ ಅಪರೂಪವೆ. ಹಾಗಾಗಿಯೇ ಇದೊಂದು ಕನ್ನಡ ಆನ್‌ಲೈನ್ ಲೈಬ್ರರಿ.

ಲೇಖನದ ವಿಡಿಯೊ ಪ್ರಸ್ತುತಿ

ಶೇಷಗಿರಿ ಶೆಣೈರವರ ಮನೆತನದ ಹಿರಿಯರು ಸ್ವಾತಂತ್ರ್ಯ ಹೋರಾಟದಲ್ಲಿಯೂ, ತುರ್ತುಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿಯೂ ಪಾಲ್ಗೊಂಡಿದ್ದವರು. ಜನಸಂಘ ಮತ್ತು ಆರೆಸ್ಸೆಸ್ ವಿಚಾರಧಾರೆಯ ಹಿನ್ನೆಲೆ ಹೊಂದಿರುವ ಕುಟುಂಬ. ಶೇಷಗಿರಿ ಕಳೆದ ಆರೇಳು ವರ್ಷಗಳಿಂದ ಇಲ್ಲಿಯೇ ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಇದ್ದಾರೆ. ಪ್ರತಿಯೊಂದನ್ನೂ ಇಲ್ಲಿನಿಂದಲೇ ನೋಡಿಕೊಳ್ಳುತ್ತಾರೆ. ಈಗ ವೆಬ್‌ಸೈಟನ್ನು ಯೂನಿಕೋಡ್‌ಗೆ ಬದಲಾಯಿಸುವುದು ಮುಂದಿರುವ ಯೋಜನೆ. ಇಲ್ಲಿಯ ತನಕ ವೆಬ್‌ಸೈಟಿಗಾಗಿ ಯಾರಿಂದಲೂ ಒಂದು ಪೈಸೆ ತೆಗೆದುಕೊಳ್ಳದೆ, ಆಗಾಗ ಬೇರೆಯವರ ಲೇಖನಗಳನ್ನು ಸ್ವತಃ ತಾವೆ ಟೈಪ್ ಮಾಡುತ್ತ, ಎಲ್ಲವನ್ನೂ ತಾವೇ ಭರಿಸುತ್ತ, ವೆಬ್‌ಸೈಟ್ ಯಾವ ಕಾರಣಕ್ಕೂ ನಿಲ್ಲದಂತೆ ನೋಡಿಕೊಳ್ಳುತ್ತ, ಕನ್ನಡದ ಕೆಲಸ ಮಾಡುತ್ತಿದ್ದಾರೆ. ಶೇಷಗಿರಿಯವರ ತಮ್ಮ ಸಂದೀಪ್ ಶೆಣೈ ಮೈಸೂರಿನಲ್ಲಿ ಕಾನೂನು ಪದವೀಧರರು. ಅವರೂ ಆಗಾಗ ಬರೆಯುತ್ತಾರೆ; ಬರೆಸುತ್ತಾರೆ; ಪ್ರಕಟಣೆಗೆ ಲೇಖಕರ ಒಪ್ಪಿಗೆ ಪಡೆದುಕೊಳ್ಳುತ್ತಾರೆ. ಚುರುಕಿನ, ಕುತೂಹಲದ ವ್ಯಕ್ತಿ. ಕಳೆದ ಏಪ್ರಿಲ್‌ನಲ್ಲಿ ನಮ್ಮ ಪತ್ರಿಕಾ ಬಳಗದೊಡನೆ ಅವರನ್ನು ಮೈಸೂರಿನಲ್ಲಿ ಭೇಟಿಯಾಗಿದ್ದೆ. ಅವರ ಐಡಿಯಾಲಜಿ ಬಗ್ಗೆ ಕೇಳಿದ್ದಕ್ಕೆ ಸಂದೀಪ್ ಎಂದಿದ್ದು: "ಸೌತ್ ಕೆನರಾ ಅಂದ ಮೇಲೆ ಮತೀಯ ಬಲಪಂಥೀಯತೆ ರಕ್ತದಲ್ಲೇ ಬಂದುಬಿಡುತ್ತೆ. ಹೌದು ನಾನು ಬಲಪಂಥೀಯ. ಆದರೆ, ಇತ್ತೀಚೆಗೆ ಲಂಕೇಶ ಬಳಗದಲ್ಲಿರುವ ದೂರದ ಸಂಬಂಧಿ ಸದಾಶಿವ್ ಶೆಣೈ, ಶಶಿಧರ್ ಭಟ್, ಇಂತಹವರ ಸಂಪರ್ಕ ಬಂದ ಮೇಲೆ ನಿಲುವುಗಳು ಸ್ವಲ್ಪಸ್ವಲ್ಪ ಬದಲಾಗಿವೆ. ಅಂದ ಹಾಗೆ, ಅಮೇರಿಕದಲ್ಲಿದ್ದರೂ ಅದು ಹೇಗೆ ನೀವು 'ಸೆಕ್ಯುಲರ್' ಆದಿರಿ??"

ತಮ್ಮ ಒಲವುನಿಲುವುಗಳನ್ನು ಮೀರಿ, ಪ್ರತಿಫಲಾಪೇಕ್ಷೆಯಿಲ್ಲದೆ ಕನ್ನಡದ ಕೆಲಸಕ್ಕೆ ತೊಡಗಿಕೊಂಡ ಕುಟುಂಬ ಇವರದು.

ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ ಎಂದ ಸಂಕೇಶ್ವರ್:

ಈ ವೆಬ್‌ಸೈಟಿನಲ್ಲಿ ಯಾವೊಂದು ವಿಚಾರಕ್ಕೂ ಮಡಿಮೈಲಿಗೆ ಇಲ್ಲ. ಹಾಗೆಯೆ, ಒಂದು ಸಲ ವೆಬ್‌ಸೈಟಿನಲ್ಲಿ ಹಾಕಿದ್ದನ್ನೂ ಮತ್ತೆ ತೆಗೆಯುವ ಪ್ರಶ್ನೆಯೇ ಇಲ್ಲ. ಒಮ್ಮೆ ಹೀಗಾಯಿತು: 2003 ರಲ್ಲಿ ಒಂದು ವಿಜಯ್ ಸಂಕೇಶ್ವರ್‌ರ ವಿಆರ್‌ಎಲ್ ಬಸ್ಸಿನಲ್ಲಿ ಶ್ರೀಮತಿ ಭಟ್ ಎನ್ನುವವರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಆ ಹೈಟೆಕ್ ಬಸ್ಸಿನಲ್ಲಿನ ಸೇವೆ ಹೇಗಿತ್ತು ಎಂದರೆ, ಗಾಜು ಒಡೆದಿದ್ದ ಕಿಟಕಿಯ ಪಕ್ಕ ಆಕೆಯ ಸೀಟು! ಪ್ರತಿಭಟಿಸಿದ್ದಕ್ಕೆ ಪ್ಲಾಸ್ಟಿಕ್ ಪೇಪರ್‌ನಿಂದ ಕಿಟಕಿಯನ್ನು ಮುಚ್ಚಿದರಂತೆ. ಮಧ್ಯರಾತ್ರಿ ದೇಹಬಾಧೆಗೆ ನಿಲ್ಲಿಸಿದ ಜಾಗದಲ್ಲಿ ಟಾಯ್ಲೆಟ್ಟುಗಳೇ ಇಲ್ಲ. ದಾರಿಬದಿಯಲ್ಲಿ ಕತ್ತಲೆಯಲ್ಲಿ ಹೋಗಿ ಪೂರೈಸಿಕೊಂಡು ಬರಲು ಹೇಳಿದರಂತೆ. ಈ ಎಲ್ಲಾ ಅನುಭವವನ್ನೂ ಬರೆದು, ಆಕೆ ಕುಳಿತಿದ್ದ ಜಾಗದ ಫೋಟೋ ಸಮೇತವಾಗಿ ಆಕೆಯ ಗಂಡ ಅವರ್‍ಕರ್ನಾಟಕಕ್ಕೆ ಬರೆದರು. ಅದನ್ನು ಪ್ರಕಟಿಸಿದರು. ವಿಆರ್‌ಎಲ್ ನಿಂದ ಇದೇ ತರಹದ ಟ್ರೀಟ್‌ಮೆಂಟ್‌ಗೆ ಒಳಗಾಗಿದ್ದ ಅನೇಕರು ವೆಬ್‌ಸೈಟಿಗೆ ಪ್ರತಿಕ್ರಿಯಿಸಿ ಪತ್ರಬರೆದರು. ಇದು ವಿಆರ್‌ಎಲ್ ನವರ ಗಮನಕ್ಕೂ ಬಂತು. ಆ ಪುಟವನ್ನು ತೆಗೆದುಬಿಡಲು ಒತ್ತಡ ಹಾಕಿದರು. ಶೇಷಗಿರಿ ಒಪ್ಪಿಕೊಳ್ಳಲಿಲ್ಲ. ನಿಮ್ಮ ಅಭಿಪ್ರಾಯವನ್ನೊ, ಉತ್ತರವನ್ನೊ ಬರೆಯಿರಿ, ಅದನ್ನೂ ಪ್ರಕಟಿಸಿಸುತ್ತೇವೆ; ಆದರೆ ಒಂದು ಸಲ ಹಾಕಿದ್ದನ್ನು ತೆಗೆಯುವ ಪ್ರಶ್ನೆಯೇ ಇಲ್ಲ, ಎಂದರು. ಕೊನೆಗೆ ಸ್ವತಃ ವಿಜಯ್ ಸಂಕೇಶ್ವರರೇ, "ನಾನು ನನ್ನ ಹಣವನ್ನು ಇನ್ನೂ ಲಾಭದಾಯಕವಾದ ಉದ್ದಿಮೆಯಲ್ಲಿ ಬೇರೆಕಡೆ ತೊಡಗಿಸಬಹುದಿತ್ತು. ಅದರೆ ಈ ಕೆಲಸವನ್ನು ನಾನು ಸಮಾಜಕ್ಕಾಗಿ ಮಾಡುತ್ತಿದ್ದೇನೆ. ನಮ್ಮ ವಿ.ಅರ್.ಎಲ್. ಮಾತ್ರ ಅದು ಮಾಡುತ್ತಿದೆ, ಇದು ಮಾಡುತ್ತಿದೆ. ಭಾರತದಲ್ಲಿ ಯಾರೂ ಸರಿಯಾಗಿ ಬಸ್ಸುಗಳ ಬಾಡಿ ಬ್ಯುಲ್ಡ್ ಮಾಡುವುದಿಲ್ಲ. ಎಲ್ಲಾ ಭಾರತದಲ್ಲಿ ಸಿಗುವ (ಕಳಪೆ) ವಸ್ತುಗಳಿಂದಲೆ ಬಾಡಿ ಕಟ್ಟುತ್ತಾರೆ. ನಮ್ಮದು ಬೆಸ್ಟ್ ಅಂತ ಹೇಳುತ್ತಿಲ್ಲ. ಆದರೆ ನಾನು ನನ್ನ ಕೈಯಲ್ಲಿ ಎಷ್ಟು ಚೆನ್ನಾಗಿ ಮಾಡಬಹುದೊ ಅಷ್ಟು ಮಾಡುತ್ತಿದ್ದೇನೆ. ದಯವಿಟ್ಟು ಇನ್ನೊಮ್ಮೆ ಯೋಚಿಸಿ ಮತ್ತು ಈ ಪುಟವನ್ನು ತೆಗೆಯಿರಿ ಎಂದು ಕೇಳಿಕೊಳ್ಳುತ್ತೇನೆ." ಎಂದು ಬರೆದರು. ಅದನ್ನೂ ಪ್ರಕಟಿಸಿದರು. ಆದರೆ ಯಾವುದನ್ನೂ ತೆಗೆಯಲಿಲ್ಲ!
[http://www.ourkarnataka.com/issues/issues_vrl.htm]

Nov 28, 2007

ಪುನರ್ ಸ್ಥಾಪಿಸಬೇಕಿದೆ ಮೌಲ್ಯಗಳನ್ನು...

(ವಿಕ್ರಾಂತ ಕರ್ನಾಟಕ - ಡಿಸೆಂಬರ್ 07, 2007 ರ ಸಂಚಿಕೆಯಲ್ಲಿನ ಬರಹ)

ಇದೇ ನವೆಂಬರ್ 24-25 ರಂದು ಕರ್ನಾಟಕದ ದೂರದರ್ಶನಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಲೋಕಾಯುಕ್ತರು ಮಾಡಿದೊಂದು ದಾಳಿಯದೆ ಸುದ್ದಿ. "ಶ್ರೀನಿವಾಸ ರೆಡ್ಡಿ ಎಂಬ ಸರ್ಕಾರಿ ನೌಕರ ತನ್ನ ಆದಾಯಕ್ಕೂ ಮೀರಿದ ಆಸ್ತಿಯನ್ನು ಹೊಂದಿದ್ದಾರೆ," ಎಂದು ಲೋಕಾಯುಕ್ತರು ಬಹಿರಂಗ ಪಡಿಸಿದ ಆ ನೌಕರನ ಮತ್ತವರ ಹೆಂಡತಿಮಕ್ಕಳ ಆಸ್ತಿ ವಿವರ ಹೀಗಿದೆ:
. ಮನೆಯಲ್ಲೇ ಪತ್ತೆಯಾದ ನಗದು ಹಣ ರೂ 33.7 ಲಕ್ಷ
. ಬ್ಯಾಂಕ್ ಖಾತೆಗಳಲ್ಲಿರುವ ಹಣ 1 ಕೋಟಿ ಒಂಬತ್ತು ಲಕ್ಷ
. ಷೇರುಗಳ ಮೇಲೆ ಹೂಡಿಕೆ ರೂ 15 ಲಕ್ಷ
. ಕೊಟ್ಟಿರುವ ಮುಂಗಡ ರೂ 1.5 ಕೋಟಿ
. ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಮೂರು 40x60 ನಿವೇಶನಗಳು
. ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ 40x60 ಸೈಟುಗಳಲ್ಲಿರುವ 3 ಮನೆಗಳು
. ಆನೇಕಲ್ ತಾಲ್ಲೂಕಿನಲ್ಲಿ 14 ಎಕರೆ 33 ಗುಂಟೆ ಜಮೀನು
. ಹೆಗ್ಗಡದೇವನ ಕೋಟೆ ಯಲ್ಲಿ - 12 ಎಕರೆ ಕೃಷಿ ಜಮೀನು
. ಚಿನ್ನ 1.5 ಕೆ.ಜಿ.
. ಬೆಳ್ಳಿ 10 ಕೆ.ಜಿ.
. ಕಾರುಗಳು - 2
. ಇರುವ ಸಾಲ - 75 ಲಕ್ಷ
---

ಪ್ರಸಿದ್ಧ ನಾರಾಯಣ ಹೃದಯಾಲಯ, ಇತ್ತೀಚೆಗೆ ತಾನೆ ಲಕ್ಷ್ಮಿ ಎಂಬ ನಾಲ್ಕು ಕೈಗಳ ಪುಟ್ಟ ಮಗುವಿಗೆ ಸರ್ಜರಿ ಮಾಡಿ ಪ್ರಸಿದ್ಧಿಗೆ ಬಂದ ಸ್ಪರ್ಶ ಆಸ್ಪತ್ರೆ, ಎಂ.ಟಿ.ಆರ್.ರ ಉತ್ಪಾದನಾ ಘಟಕ, ರೇವಾ ಎಲೆಕ್ಟ್ರಿಕ್ ಕಾರಿನ ಫ್ಯಾಕ್ಟರಿ, ಮುಂತಾದ ಹತ್ತಾರು ವಿಶೇಷಗಳನ್ನು ತನ್ನ ನೂರಿನ್ನೂರು ಎಕರೆ ವಿಸ್ತೀರ್ಣದಲ್ಲಿ ಹಿಡಿದಿಟ್ಟಿಕೊಂಡಿರುವ ಊರು ನನ್ನೂರು, ಬೊಮ್ಮಸಂದ್ರ. ವಿಧಾನಸೌಧದಿಂದ ಕೇವಲ 22 ಕಿ.ಮೀ. ದೂರದಲ್ಲಿದೆ. ಇಪ್ಪತ್ತು ವರ್ಷಗಳ ಹಿಂದೆ ಇದೇ ಊರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾನು ಓದುತ್ತಿದ್ದಾಗ ನಮಗೆ ಮುಖ್ಯೋಪಾಧ್ಯಾಯರಾಗಿದ್ದವರು ರಾಮಚಂದ್ರಪ್ಪ ಎನ್ನುವವರು. ನಮ್ಮೂರಿಗಿಂತ ನಾಲ್ಕೈದು ಕಿ.ಮೀ. ದೂರದ ಊರು ಅವರದು. ಅಲ್ಲಿಂದ ಸೈಕಲ್‌ನಲ್ಲಿಯೇ ಬರುತ್ತಿದ್ದರು. ಸಜ್ಜನರು; ಪ್ರಾಮಾಣಿಕರು. ಮಕ್ಕಳಲ್ಲಿ ಆದರ್ಶದ ಗುಣಗಳನ್ನು ತುಂಬುತ್ತಿದ್ದ, ಪ್ರೀತಿಯಿಂದ, ಗೌರವದಿಂದ ಮಾತನಾಡಿಸುತ್ತಿದ್ದ ಅವರು ನನ್ನ ಮೆಚ್ಚಿನ ಗುರುಗಳೂ ಹೌದು. ಆಗಾಗ ಅವರು "ಫಾರಿನ್"ನಲ್ಲಿದ್ದ ತಮ್ಮ ಮತ್ತೊಬ್ಬ ಶಿಷ್ಯನ ಬಗ್ಗೆ, ಆತನ ಸರಳತೆ ಮತ್ತು ವಿನಯದ ಬಗ್ಗೆ ನಮಗೆ ಉದಾಹರಣೆ ಕೊಡುತ್ತ ಮೌಲ್ಯಗಳ ಕುರಿತು ಹೇಳುತ್ತಿದ್ದರು. ಅವರು ಹೇಳುತ್ತಿದ್ದ ಆ ಶಿಷ್ಯನ ಹೆಸರು ಯಲ್ಲಾರೆಡ್ಡಿ ಎಂದು; ನಮ್ಮೂರಿಗಿಂತ ಮೂರು ಕಿ.ಮೀ. ದೂರದ ತಿರುಮಗೊಂಡನ ಹಳ್ಳಿಯವರು.

ನಾನು ಹೈಸ್ಕೂಲು, ಕಾಲೇಜು ಓದುತ್ತಿದ್ದಾಗ ಕೆಲವೊಮ್ಮೆ ಕೆಲವು ಕೆಲಸಗಳನ್ನು ಮಾಡಲು ಹಿಂಜರಿದರೆ, ನನ್ನ ಮತ್ತು ನನ್ನಣ್ಣನ ಅಹಂಕಾರದ ಮೊಟ್ಟೆ ಒಡೆಯಲು ನನ್ನಮ್ಮ, "ತಿರುಮಗೊಂಡನ ಹಳ್ಳಿಯ ಬಿಡ್ಡಾರೆಡ್ಡಿ ಮಗ ಯಲ್ಲಾರೆಡ್ಡಿ ಗೊತ್ತೇನ್ರೋ? ಅದೆಷ್ಟೋ ಓದವ್ನಂತೆ. ಫಾರಿನ್‌ನಲ್ಲಿದ್ದಾನಂತೆ. ಆದರೆ ಅಲ್ಲಿಂದ ಊರಿಗೆ ಬಂದ ತಕ್ಷಣ ಪ್ಯಾಂಟ್ ಬಿಚ್ಚಾಕಿ, ಚಡ್ಡಿ ಹಾಕ್ಕೊಂಡು, ನೇಗಿಲು ಎತ್ತುಕೊಂಡು ಹೊಲಕ್ಕೆ ಹೋಗ್ತಾನಂತೆ ಉಳೋದಿಕ್ಕೆ. ಇಲ್ಲಿರೋವಷ್ಟು ದಿನಾನೂ ಹೊಲದಲ್ಲಿ ಆಳುಗಳ ಸಮ ದುಡೀತಾನಂತೆ. ನಿಮಗೆಲ್ಲ ಎಷ್ಟ್ರೋ ಕೊಬ್ಬು?" ಎನ್ನುತ್ತಿದ್ದಳು. ನಮಗೆಲ್ಲ ಅಹಂಕಾರವಿಲ್ಲದ, ವಿನಯದ ಜೀವನ ಹೇಗೆ ಎಂಬ ಪಾಠ ಹಾಗೆ ಆಗುತ್ತಿತ್ತು. ಸುತ್ತಮುತ್ತಲ ಹಳ್ಳಿಗಳಲ್ಲಿ ಮನೆಗಳಲ್ಲಿಯ ಹಿರಿಯರು ಮಕ್ಕಳಿಗೆ ಯಾರದಾದರೂ ಉದಾಹರಣೆ ಕೊಡಬೇಕಿದ್ದರೆ ಯಲ್ಲಾರೆಡ್ಡಿಯವರ ಉದಾಹರಣೆ ಹೇಳುತ್ತಿದ್ದರು.

ಯಲ್ಲಾರೆಡ್ಡಿಯವರ ತಂದೆಯವರ ಹೆಸರು ಬಿಡ್ಡಾರೆಡ್ಡಿ ಎಂದು. ಕಳೆದ ವರ್ಷ ತಾನೆ ತಮ್ಮ ನೂರನೆ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ಬಿಡ್ಡಾರೆಡ್ಡಿಯವರಿಗೆ ಈಗ 101 ವರ್ಷ ವಯಸ್ಸು. ದೃಷ್ಟಿ ಈಗಲೂ ಚೆನ್ನಾಗಿದೆ ಅನ್ನುತ್ತಾರೆ. ಮೊದಲಿನಿಂದಲೂ ಸ್ಥಿತಿವಂತರ ಕುಟುಂಬ ಇವರದು. ಆ ಕಾಲದಲ್ಲಿಯೇ ಆಷ್ಟಿಷ್ಟು ಓದಿಕೊಂಡ ಇವರು ಸ್ವಾತಂತ್ರ್ಯ ಹೋರಾಟಗಾರರೂ ಹೌದು. ನಲವತ್ತು ವರ್ಷಗಳ ಹಿಂದೆ ಕೆಲವು ಸಮಾನ ಮನಸ್ಕರೊಂಡನೆ ಸೇರಿಕೊಂಡು ಸುತ್ತಮುತ್ತಲ ಹಳ್ಳಿಗಳಿಗೆಲ್ಲ ಕೇಂದ್ರಸ್ಥಳವಾಗಿದ್ದ ಚಂದಾಪುರದಲ್ಲಿ "ಸ್ವಾಮಿ ವಿವೇಕಾನಂದ ಗ್ರಾಮಾಂತರ ಪ್ರೌಢಶಾಲೆ" ಸ್ಥಾಪಿಸಿದ್ದು ಇವರೆ. ಮಕ್ಕಳೆಂದರೆ ಅಪಾರ ಪ್ರೀತಿ ಇವರಿಗೆ. ಶಾಲೆಯಲ್ಲಿ ಅಧ್ಯಾಪಕರೇನಾದರೂ ಮಕ್ಕಳನ್ನು ಹೊಡೆದದ್ದು ಇವರಿಗೆ ಗೊತ್ತಾದರೆ ಅಧ್ಯಾಪಕರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರಂತೆ. ಜೀವನದಲ್ಲಿ ಒಂದಷ್ಟು ಮೌಲ್ಯಗಳನ್ನು, ಸಾಮಾಜಿಕ ಕಾಳಜಿಗಳನ್ನು ಇಟ್ಟುಕೊಂಡು ಬದುಕಿದವರು.

ಯಲ್ಲಾರೆಡ್ಡಿಯವರು ಬಿಡ್ಡಾರೆಡ್ಡಿಯವರ ಹಿರಿಯ ಮಗ. 35 ವರ್ಷಗಳ ಹಿಂದೆ ರಾಜ್ಯದ ಪ್ರತಿಷ್ಠಿತ ಯು.ವಿ.ಸಿ.ಇ. ಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ. ಮತ್ತು ಎಂ.ಇ. ಮುಗಿಸಿ, ಪಿಎಚ್‌ಡಿ ಗಾಗಿ ಇಂಗ್ಲೆಂಡ್‌ಗೆ ಹೋದರು. ನಂತರ ಅಲ್ಲಿ ಸುಮಾರು 20 ವರ್ಷ ಅಧ್ಯಾಪಕರಾಗಿದ್ದು ಆರೇಳು ವರ್ಷದ ಹಿಂದೆ ತಮ್ಮ ಶ್ರೀಮತಿಯವರೊಡನೆ ತಿರುಮಗೊಂಡನ ಹಳ್ಳಿಗೆ ವಾಪಸ್ಸಾಗಿ, ತಮ್ಮ ಶತಾಯುಷಿ ತಂದೆಯವರೊಡನೆ ಇದ್ದಾರೆ. ಬೆಂಗಳೂರಿನ ಸುತ್ತಮುತ್ತ ರಿಯಲ್ ಎಸ್ಟೇಟ್ ವ್ಯವಹಾರದಿಂದಾಗಿ ಚಿನ್ನದ ಬೆಲೆ ಬಂದಿರುವ ತಮ್ಮ ಜಮೀನಿನಲ್ಲಿ ಈಗಲೂ ಸ್ವತಃ ತಾವೇ ವ್ಯವಸಾಯ ಮಾಡುತ್ತಿದ್ದಾರೆ. ಕಳೆದ ಆರೇಳು ವರ್ಷಗಳಲ್ಲಿ ಬೆಂಗಳೂರಿನ ಒಂದೆರಡು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಿನ್ಸಿಪಾಲ್ ಆಗಿಯೂ ಡಾ. ಯಲ್ಲಾರೆಡ್ಡಿ ಕೆಲಸ ಮಾಡಿದ್ದಾರೆ. ಆಗೆಲ್ಲ ಬೆಳಿಗ್ಗೆ ಮತ್ತು ಸಾಯಂಕಾಲ ಹೊಲದಲ್ಲಿ ನೇಗಿಲು, ಸನಿಕೆ, ಗುದ್ದಲಿಗಳೊಡನೆ ಒಡನಾಟ; ಹತ್ತು ಗಂಟೆಯಾದ ಮೇಲೆ ನಗರದ ಕಾಲೇಜಿನಲ್ಲಿ ಅಧ್ಯಾಪನ ಮತ್ತು ಕಾಲೇಜು ಕೆಲಸ. ಮಧ್ಯೆ ತಂದೆಯವರ ಅಗತ್ಯಗಳನ್ನು ನೋಡಿಕೊಳ್ಳುವುದು. ಬಹುಶಃ ಕರ್ನಾಟಕದ ಯಾವುದೇ ಇಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲರೊಬ್ಬರ ದಿನಚರಿ ಹೀಗೆ ಇದ್ದದ್ದು ಅನುಮಾನ. ಈ ನಡುವೆ ತಮ್ಮದೇ ಒಂದು ಟ್ರಸ್ಟ್ ಮಾಡಿಕೊಂಡು, ಬಡಮಕ್ಕಳನ್ನು ಓದಿಸುವ ಯೋಜನೆ ಹಾಕಿಕೊಂಡು ರಾಮನಗರ, ಮಾಗಡಿಗಳ ಕಡೆ ಓಡಾಡುತ್ತಿದ್ದಾರೆ.

ಕಳೆದ ವಾರ ಲೋಕಾಯುಕ್ತ ದಾಳಿಗೆ ಒಳಗಾದ "ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ" ಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಇದೇ ಯಲ್ಲಾರೆಡ್ಡಿಯವರ ತಮ್ಮ; ಒಂದಷ್ಟು ಮೌಲ್ಯಗಳೊಂದಿಗೇ ಬದುಕಿದ ಶತಾಯುಷಿ ಬಿಡ್ಡಾರೆಡ್ಡಿಯವರ ಕಿರಿಯ ಮಗ.

ಲೇಖನದ ವಿಡಿಯೊ ಪ್ರಸ್ತುತಿ

ಜನ ಹುಟ್ಟುತ್ತಾರೆ, ಸಾಯುತ್ತಾರೆ. ಕುಟುಂಬಗಳು, ಸಾಮ್ರಾಜ್ಯಗಳು ಬೆಳೆಯುತ್ತವೆ, ಕಾಲಕ್ರಮೇಣ ಅವನತಿಯಾಗುತ್ತವೆ. ಕೆಲವು ಮೋಸಗಾರರಿಗೆ ಒಳ್ಳೆಯ ಮಕ್ಕಳು ಹುಟ್ಟುತ್ತಾರೆ. ಕೆಲವು ಒಳ್ಳೆಯವರಿಗೆ ದುಷ್ಟ ಮಕ್ಕಳು ಹುಟ್ಟುತ್ತಾರೆ. ಅದೇನೂ ದೊಡ್ಡ ವಿಷಯವಲ್ಲ. ಮೇಲಿನ ಪ್ರಸಂಗದಲ್ಲಿ ಒಂದೇ ಕುಟುಂಬದಲ್ಲಿನ ವೈರುಧ್ಯಗಳು ಎದ್ದು ಕಾಣಿಸುವುದೇನೋ ನಿಜ. ಆದರೆ, ಇಲ್ಲಿ ಅದಕ್ಕಿಂತ ಭೀಕರವಾದದ್ದು, ಯೋಚಿಸಬೇಕಾದ್ದು, ಇನ್ನೊಂದಿದೆ. ಅದು, ಕಳೆದ ಇಪ್ಪತ್ತು ವರ್ಷಗಳಲ್ಲಿ ಬೆಂಗಳೂರಿನ ಸುತ್ತಮುತ್ತ ಹಾಗೂ ಬಹುಶಃ ಇಡೀ ದೇಶದಲ್ಲಿ ಮೌಲ್ಯಗಳು ಹೇಗೆ ಪಲ್ಲಟಗೊಂಡಿವೆ ಅನ್ನುವುದು. ಇದು ಎಷ್ಟು ಢಾಳಾಗಿದೆ ಎಂದರೆ, ಕಳೆದ ಹತ್ತು ವರ್ಷಗಳಲ್ಲಿ ನನ್ನ ಸುತ್ತಮುತ್ತಲಿನ ಹಳ್ಳಿಗಳಲ್ಲಿಯ ಬಹುಪಾಲು ಜನ ತಮ್ಮ ಮಕ್ಕಳಿಗೆ ಡಾ. ಯಲ್ಲಾರೆಡ್ಡಿಯ ಬಗ್ಗೆ ಹೇಳುತ್ತಿಲ್ಲ. ಬದಲಿಗೆ, "ಆ ಶ್ರೀನಿವಾಸರೆಡ್ಡೀನ ನೋಡ್ರೋ. ಬೆಂಗಳೂರಿನಲ್ಲಿ ಎರಡು ಮೂರು ಬಂಗ್ಲೆಗಳಿವೆ. ಇನ್ನೂ ಎಷ್ಟೋ ಸೈಟುಗಳಿವೆಯಂತೆ. ಇವತ್ತು ಏನಿಲ್ಲಾ ಅಂದರೂ ಐವತ್ತು, ನೂರು ಕೋಟಿಗೆ ಬಾಳ್ತಾನೆ. ಗೌರ್ನಮೆಂಟ್‌ನಲ್ಲಿ ಒಳ್ಳೆ ಕೆಲಸದಲ್ಲಿ ಇದ್ದಾನೆ. ಚೆನ್ನಾಗಿ ದುಡ್ಡು ಮಾಡವ್ನೆ!" ಎನ್ನುತ್ತಿದ್ದಾರೆ. ಇದು ಇಂದಿನ ವಾಸ್ತವ ಪರಿಸ್ಥಿತಿ.

ಇಲ್ಲಿ ಇದಕ್ಕಿಂತ ಹೊಟ್ಟೆಕಿವುಚುವಂತಹದ್ದು ಇನ್ನೊಂದಿದೆ. ಅದೇನೆಂದರೆ, ಹತ್ತಿಪ್ಪತ್ತು ವರ್ಷಗಳ ಹಿಂದೆ ಯಾರು ತಮ್ಮ ಮಕ್ಕಳಿಗೆ ಯಲ್ಲಾರೆಡ್ಡಿಯ ಉದಾಹರಣೆ ಕೊಡುತ್ತಿದ್ದರೊ ಅದೇ ಜನ ಇವತ್ತು ಶ್ರೀನಿವಾಸರೆಡ್ಡಿಯ ಮತ್ತು ಅವರಂತಹವರ ಉದಾಹರಣೆ ಕೊಡುತ್ತಿರುವುದು. ಸಹ್ಯ ಸಮಾಜದಲ್ಲಿ ಇರಲೇಬೇಕಾದ ಕೆಲವು ಕನಿಷ್ಠ ಮೌಲ್ಯಗಳು ಯಾವ ಪರಿ ಅಧೋಗತಿಗೆ ಇಳಿದಿವೆ ಎಂದರೆ, ಸ್ವತಃ ಬಿಡ್ಡಾರೆಡ್ಡಿಯವರೆ ಇವತ್ತು ತಮ್ಮ ಹಿರಿಯ ಮಗನಿಗೆ ತಮ್ಮ ಕಿರಿಯ ಮಗನ ಉದಾಹರಣೆ ಕೊಟ್ಟು, "ನೋಡೋ, ಅವನನ್ನು ನೋಡಿ ಕಲಿತುಕೊ," ಎಂದುಬಿಟ್ಟರೆ, ಅದರಿಂದೇನೂ ಆಶ್ಚರ್ಯ ಪಡಬೇಕಿಲ್ಲ. ಯಾಕೆಂದರೆ, ಅಂತಹುದ್ದು ಇಂದು ಅನೇಕರ ಮನೆಗಳಲ್ಲಿ ಆಗುತ್ತಿವೆ. ಭ್ರಷ್ಟಾಚಾರ ಮಾಡಿ ಸಿಕ್ಕಿಹಾಕಿಕೊಳ್ಳುವುದು ಇವತ್ತು ಅವಮಾನದ ವಿಷಯವಲ್ಲ; ಕೆಲವು ದಿನಗಳ discomfort ಅಷ್ಟೆ. ಯಾವಯಾವ ಮೌಲ್ಯಗಳನ್ನು ಇಟ್ಟುಕೊಂಡು ದುಡಿಯಬೇಕು ಎನ್ನುವುದು ಇವತ್ತಿನ ಅಗತ್ಯ ಅಲ್ಲ. "ಏನಾದರೂ ಮಾಡಿ, ದುಡ್ಡು ಮಾಡಿ," ಎನ್ನುವುದು ಇವತ್ತಿನ ಅವಶ್ಯಕತೆ. ಪ್ರಾಮಾಣಿಕವಾಗಿ ಬದುಕುವವರು ಹುಚ್ಚರು, ಲೂಸರ್‌ಗಳು; ಅವರು ಬಡವರಾಗಿದ್ದರಂತೂ ಲೆಕ್ಕಕ್ಕೇ ಇಲ್ಲ. ಅದೇ ದುಡ್ಡಿರುವವನು ಮಾಡುವ ಹೀನಾತಿಹೀನ ಕೃತ್ಯವೂ ಇವತ್ತು ಸಮರ್ಥನೀಯ. ಹೇಗೆ ಮಾಡಿದ ಎನ್ನುವುದು ಮುಖ್ಯವಲ್ಲ. ಎಷ್ಟು ಮಾಡಿದ ಎನ್ನುವುದಷ್ಟೆ ಮುಖ್ಯ. ದುಷ್ಟರೂ, ಭ್ರಷ್ಟರೂ ಆಗಲಷ್ಟೆ ಈಗ ಪೈಪೋಟಿ.

ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಏನಾಗಿ ಹೋಯಿತು ಈ ಸಮಾಜ? ಮೌಲ್ಯಗಳ ಪುನರ್‌ ಸ್ಥಾಪನೆ ಈಗ ತುರ್ತಾಗಿ ಆಗಬೇಕಿರುವ ಕೆಲಸಗಳಲ್ಲಿ ಒಂದು. ಇಲ್ಲವಾದಲ್ಲಿ ನಾವು ಶತಮಾನಗಳ ಕಗ್ಗತ್ತಲೆಯತ್ತ ಹೆಜ್ಜೆಯಿಡುತ್ತಿದ್ದೇವೆ.

ರಾಷ್ಟ್ರಕವಿಗಳಲ್ಲೂ ಅವನತಿಗೊಂಡ ಮೌಲ್ಯಗಳು
ಇವತ್ತು ಮೌಲ್ಯಗಳು ಜನಸಾಮಾನ್ಯರಲ್ಲಿಯಷ್ಟೇ ಅಲ್ಲ, ಯಾರು ಇಡೀ ಸಮಾಜದ ಸಾಕ್ಷಿಪ್ರಜ್ಞೆ ಆಗಬೇಕಿತ್ತೊ ಅವರಲ್ಲಿಯೇ ಅವನತಿ ಆಗಿಬಿಟ್ಟಿವೆ. ಜಿ.ಎಸ್.ಶಿವರುದ್ರಪ್ಪ ಅವರನ್ನು ಸರ್ಕಾರ ಕಳೆದ ವರ್ಷ "ರಾಷ್ಟ್ರಕವಿ" ಎಂದು ಘೋಷಿಸಿತು. ನಂತರದ ದಿನಗಳಲ್ಲಿ ಎಲ್ಲೆಲ್ಲೂ ಸನ್ಮಾನಕ್ಕೆ ತಲೆಬಾಗುತ್ತಿರುವ ಕವಿಶ್ರೇಷ್ಠರದೇ ಸುದ್ದಿಚಿತ್ರಗಳು! ರಾಷ್ಟ್ರಕವಿ ಎನ್ನುವುದು ಪದವಿಯೇ ಯಾಕಾಗಬೇಕು, ಅದು ಜವಾಬ್ದಾರಿಯೂ ಹೌದಲ್ಲವೆ ಎಂದುಕೊಳ್ಳದ ರಾಷ್ಟ್ರ(ಆಸ್ಥಾನ)ಕವಿಗಳು, ಮೊನ್ನೆ ಯಡ್ಡಯೂರಪ್ಪನವರ ಪ್ರಮಾಣವಚನ ಸಮಾರಂಭಕ್ಕೂ ಹಾಜರು. ಕಳೆದ ಮೂರು ವರ್ಷಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಅನೈತಿಕ, ನಿರ್ಲಜ್ಜ ರಾಜಕೀಯ ಹೊಂದಾಣಿಕೆಗಳಿಗೆಲ್ಲ ತಮ್ಮ ಹಾಜರಿ ಮಾತ್ರದಿಂದಲೆ ಮಾನ್ಯತೆ ದೊರಕಿಸಿಕೊಟ್ಟುಬಿಟ್ಟ, ತಮ್ಮ ಉಪಸ್ಥಿತಿ ಕಾಲಾತೀತವಾಗಿ ಏನನ್ನು ಹೇಳುತ್ತದೆ ಎನ್ನುವುದನ್ನು ಯೋಚಿಸಲಾರದೆ ಹೋದ ಜಿಎಸ್ಸೆಸ್, ಪ್ರಜಾಪ್ರಭುತ್ವದಲ್ಲಿ ರಾಷ್ಟ್ರಕವಿಯಾಗಲು ನಿಜಕ್ಕೂ ಅರ್ಹರೆ?

1949 ರಲ್ಲಿ ಕರ್ನಾಟಕ ಏಕೀಕರಣದ ಹೋರಾಟ ನಡೆಯುತ್ತಿತ್ತು. ದಕ್ಷಿಣದ ಕೆಲವು ಜಾತಿಗಳ ರಾಜಕಾರಣಿಗಳಿಗೆ ಮತ್ತು ಕೆಲವು ಪಟ್ಟಭದ್ರ ಹಿತಾಸಕ್ತರಿಗೆ ಅದು ಬೇಕಿರಲಿಲ್ಲ. ಕವಿ ಕುವೆಂಪು ಏಕೀಕರಣದ ಪರ ಒಮ್ಮೆ ಮಾತನಾಡಿದ್ದಕ್ಕೆ ಆಗಿನ ಸಚಿವರಿಂದ ಎಚ್ಚರಿಕೆಯ ನೋಟಿಸ್ ಬಂತಂತೆ. ಕುವೆಂಪು ಉತ್ತರ ಬರೆದರು.

  ಅಖಂಡ ಕರ್ಣಾಟಕ:
  ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ !
  ಇಂದು ಬಂದು ನಾಳೆ ಸಂದು
        ಹೋಹ ಸಚಿವ ಮಂಡಲ
  ರಚಿಸುವೊಂದು ಕೃತಕವಲ್ತೊ
  ಸಿರಿಗನ್ನಡ ಸರಸ್ವತಿಯ
        ವಜ್ರಕರ್ಣ ಕುಂಡಲ!
  ಅಖಂಡ ಕರ್ಣಾಟಕ:
  ಅಲ್ತೊ ನಮ್ಮ ನಾಲ್ಕುದಿನದ ರಾಜಕೀಯ ನಾಟಕ !


ಯಾವುದು ಸರಿ, ಯಾವುದು ಸರಿಯಲ್ಲ ಎಂಬ ಸ್ಪಷ್ಟ ಕಲ್ಪನೆಯಿದ್ದವರು ಕುವೆಂಪು. ಅವರು ಆಸ್ಥಾನಕವಿಯಲ್ಲ. ನಿಜವಾದ ರಾಷ್ಟ್ರಕವಿ. ಯುವರಾಜರಿಗೆ ಟ್ಯೂಷನ್ ಹೇಳಿಕೊಡಿ ಎಂಬ ಕೋರಿಕೆ ಅರಮನೆಯಿಂದ ಬಂದಾಗಲೂ ಅದನ್ನು ನಿರಾಕರಿಸಿದ್ದ ಸ್ವಾಭಿಮಾನಿ, ಕುವೆಂಪು. ರಾಜಪ್ರಭುತ್ವದಲ್ಲಿ ಪ್ರಜಾಪ್ರಭುತ್ವದ ಆತ್ಮಾಭಿಮಾನ ಇಟ್ಟುಕೊಂಡವರು.

ಕುವೆಂಪು ಅವರ ನೇರಶಿಷ್ಯರುಗಳಲ್ಲಿ ಶ್ರೇಷ್ಠಕವಿ ಎನ್ನಿಸಿಕೊಂಡವರು ಶಿವರುದ್ರಪ್ಪನವರು. ಪ್ರಜಾಪ್ರಭುತ್ವದಲ್ಲಿ ರಾಜಪ್ರಭುತ್ವದಲ್ಲಿರಬೇಕಿದ್ದ ಆಸ್ಥಾನನಿಷ್ಠೆ ಇಟ್ಟುಕೊಂಡವರು.
ಮೌಲ್ಯಗಳಲ್ಲಿ ಎಂತಹ ಅಧೋಗತಿ ನೋಡಿ...

Nov 21, 2007

ವಿವೇಕಾನಂದರನ್ನು ಅಡಿಗಡಿಗೆ ಅವಮಾನಿಸಿದ ಯಡ್ಡಯೂರಪ್ಪ...

(ವಿಕ್ರಾಂತ ಕರ್ನಾಟಕ - ನವೆಂಬರ್ 30, 2007 ರ ಸಂಚಿಕೆಯಲ್ಲಿನ ಬರಹ)

ಆಧುನಿಕ ಕನ್ನಡದ ಸರ್ವಶ್ರೇಷ್ಠ, ದಾರ್ಶನಿಕ ಮನಸ್ಸೊಂದು ಹೀಗೆ ದಾಖಲಿಸುತ್ತದೆ:
"ನಮ್ಮ ರಾಜಕೀಯವಲಯದಲ್ಲಿಯೋ ಭವಿಷ್ಯನಿರ್ಣಯ ಮಾಡುವ ಜ್ಯೋತಿಷಿಗಳಿಗೆ ಪರಮಾಧಿಕಾರ ಲಭಿಸಿದಂತಾಗಿದೆ. ಅಧಿಕಾರಿ ತನ್ನ ಮೇಲ್ಮೆಯನ್ನು ಸಾಧಿಸಲು ಸೇವಾನಿಷ್ಠೆಯನ್ನು ಅನುಸರಿಸುವ ಕ್ಲೇಷಕ್ಕೆ ಹೋಗುವುದಿಲ್ಲ; ಜ್ಯೋತಿಷಿಯನ್ನೋ ಮಾಂತ್ರಿಕನನ್ನೋ ಆಶ್ರಯಿಸುತ್ತಾನೆ. ಮಂತ್ರಿ ತನ್ನ ರಾಜಕೀಯ ಭದ್ರತೆಯನ್ನು ಪ್ರಜಾಸತ್ತೆಯ ಋಜುನಿಯಮಗಳಿಂದ ಸ್ಥಾಪಿಸಿಕೊಳ್ಳುವ 'ಅಭದ್ರ ವಿಜ್ಞಾನ'ಕ್ಕೆ ಬಿಟ್ಟುಕೊಡದೆ ಜ್ಯೋತಿಷಿಯ 'ಸುಭದ್ರ ಅಜ್ಞಾನ'ಕ್ಕೇ ಶರಣು ಹೋಗುತ್ತಾನೆ. ಮಂತ್ರಿತ್ವ ವಹಿಸಿಕೊಳ್ಳುವ ಕಾಲನಿರ್ಣಯ ಮಾಡುವವನು ಜ್ಯೋತಿಷಿ. ಕೊನೆಗೆ ವಿಮಾನ ಏರುವ ಮುಹೂರ್ತ ಇಟ್ಟುಕೊಡುವವನೂ ಜ್ಯೋತಿಷಿ; ಕೊನೆಗೆ ವಿಮಾನ ಹಾರುವ ಸಮಯ ಗೊತ್ತು ಮಾಡುವುದೂ ಇವನ ಕೈಲಿರದಿದ್ದರೆ, ಜೋಯಿಸನ 'ನಿಮಿತ್ತ'ಕ್ಕೆ ಶರಣಾಗಿ, ತನ್ನ ನಿವಾಸದಿಂದಾದರೂ ಆ ಸುಮುಹೂರ್ತಕ್ಕೆ ಹೊರಡದಿದ್ದರೆ ಆತನ ಮನಸ್ಸಿಗೆ ನೆಮ್ಮದಿ ಇಲ್ಲ. ತನ್ನ ಅವಿವೇಕದಿಂದ ಏನಾದರೂ ಕೆಟ್ಟುದಾದರೆ, ಸರಿ, ಹೊರಟ ಗಳಿಗೆಯ ಮೇಲೆ ಹೊರೆ ಹೇರುತ್ತಾರೆ. ಅಧ್ಯಾಪಕ, ಅಧಿಕಾರಿ, ಮಂತ್ರಿ, ವ್ಯಾಪಾರಿ, ಮಠಾಧಿಪತಿ, ಶ್ರಮಜೀವಿ, ಕೂಲಿ, ಕೊನೆಗೆ ಕಳ್ಳ-ಎಲ್ಲರಲ್ಲಿಯೂ ಎಲ್ಲೆಲ್ಲಿಯೂ ಇಂತಹ ಅವೈಜ್ಞಾನಿಕತೆ ಮತ್ತು ಅವಿಚಾರತೆ ವ್ಯಾಪಿಸಿ ವರ್ಧಿಸುತ್ತಿರುವುದನ್ನು ಸಂಕಟದಿಂದ ನೋಡುತ್ತಿರಬೇಕಿದೆ."

ನಿಮಗೆ ಈಗಾಗಲೆ ಗೊತ್ತಾಗಿರಬಹುದು, ಇದನ್ನು ಬರೆದವರು ಋಷಿಪ್ರಜ್ಞೆಯ ಕವಿ, ಸಾಹಿತಿ, ವಿಚಾರವಾದಿ, ಗುರು, ಚಿಂತಕ, ಎಲ್ಲವೂ ಆಗಿದ್ದ ಶ್ರೀ ಕುವೆಂಪುರವರು ಎಂದು. ಅವರು ಇದನ್ನು ಬರೆದದ್ದು ಸರಿಯಾಗಿ 43 ವರ್ಷಗಳ ಹಿಂದೆ; ದಿನಾಂಕ ಮೇ 5, 1963 ರಂದು; "ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ" ಪುಸ್ತಕದ ಮುನ್ನುಡಿಯಲ್ಲಿ.

ಎಂತಹ ಘೋರ, ಅವಮಾನಕರ ಬೌದ್ಧಿಕ ಹಿನ್ನಡೆ ನೋಡಿ, ಕರ್ನಾಟಕಕ್ಕೆ... ಕಳೆದ ನಾಲ್ಕೈದು ದಶಕಗಳಲ್ಲಿ ರಾಜ್ಯದಲ್ಲಿ ಬೌದ್ಧಿಕ ಪ್ರಗತಿ ಆದಂತೆಯೇ ಇಲ್ಲ. ಇಷ್ಟೊತ್ತಿಗೆಲ್ಲ ಯಾವಯಾವ ಕೆಲಸಗಳು ಅವಮಾನಕರವೂ, ತುಚ್ಛವೂ, ಕೀಳುಮಟ್ಟದ್ದೂ ಆಗಬೇಕಿತ್ತೊ ಅವಕ್ಕೆಲ್ಲ ಈಗ "ರಾಜಕೀಯ ಅಧಿಕೃತತೆ" ಸಿಕ್ಕಿಬಿಟ್ಟಿದೆ. ಕಳೆದ ಹತ್ತು ವರ್ಷಗಳಿಂದ ಕರ್ನಾಟಕವನ್ನು ಆಳಿದ ದೇವೇಗೌಡ, ಎಸ್ಸೆಮ್ ಕೃಷ್ಣ, ಕುಮಾರಸ್ವಾಮಿ, ಯಡ್ಡಯೂರಪ್ಪ ಮುಂತಾದವರ ಮಾಟಮಂತ್ರಜ್ಯೋತಿಷ್ಯವಾಸ್ತುಗಳ ಪ್ರಚ್ಛನ್ನ ನಿರ್ಲಜ್ಜ ಆಚರಣೆ ಮತ್ತು ಪ್ರದರ್ಶನ ಕುವೆಂಪುರಂತಹವರು ಯಾವುದರ ವಿರುದ್ಧ ಹೋರಾಡಿದರೊ ಅದೆಲ್ಲವನ್ನೂ ಅಣಕ ಮಾಡುತ್ತಿದೆ. ಅದರಲ್ಲೂ ಹಿಂದೂ ಮತಾಂಧತೆಯನ್ನು ಉದ್ಧೀಪಿಸಿ "ಸಾತ್ ದಿನ್ ಕಾ ಸಾಮ್ರಾಟ್" ಆಗಿಹೋದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಂತೂ, ಕ್ಷಮಿಸಿ, ಯಡ್ಡಯೂರಪ್ಪನವರಂತೂ ಹಿಂದಿನ ಎಲ್ಲಾ ಮತಮೂಢ ಕಂದಾಚಾರಿ ರಾಜಕಾರಣಿಗಳಿಗಿಂತ ಮುಂದಕ್ಕೆ ಹೋಗಿಬಿಟ್ಟಿದ್ದಾರೆ; ಬಹಿರಂಗ ಆಚರಣೆಗೆ ಇಳಿದುಬಿಟ್ಟಿದ್ದಾರೆ. ಸುಂದರವಾದ, ಜೀವಪರವಾದ, ವಿಚಾರಪರವಾದ, ಆಧುನಿಕ ದೃಷ್ಟಿಕೋನದ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿ ಕಾಡುತ್ತಿದ್ದಾರೆ.

ಲೇಖನದ ವಿಡಿಯೊ ಪ್ರಸ್ತುತಿ - ಭಾಗ 1

ಎಷ್ಟೊಂದು ಹೋಮಗಳು; ಯಜ್ಞಗಳು; ಯಾಗಗಳು; ಪೂಜೆಗಳು; ವ್ರತಗಳು; ಮೌನವ್ರತಗಳು; ಶಕುನಗಳು; ಆಶೀರ್ವಾದಗಳು; ದೇವಾಲಯ ಸಂದರ್ಶನಗಳು; ದೈವಕ್ಕೆ ಪೂಜೆ; ಯಾವುದಕ್ಕೂ ಇರಲೆಂದು ದೆವ್ವಕ್ಕೂ ಪೂಜೆ.. ಇವೆಲ್ಲವೂ ಏನಕ್ಕಾಗಿ? ಜನರ ಕ್ಷೇಮಕ್ಕಾಗಿ ಎನ್ನುತ್ತಾರಲ್ಲ ಈ ಎರಡು ನಾಲಿಗೆಯ ವಚನಭ್ರಷ್ಟರು! ತಮ್ಮ ವೈಯಕ್ತಿಕ ಅಧಿಕಾರ ಲಾಲಸೆಗಾಗಿ ಮಾಡಿದ ಈ ತುಚ್ಛ, ನಿರ್ಲಜ್ಜ ಕಂದಾಚಾರಗಳನ್ನು ಜನಸಾಮಾನ್ಯರ ಹಿತಕ್ಕಾಗಿ ಎನ್ನುತ್ತಾರಲ್ಲ, ಯಾವ ಸಂಸ್ಕೃತಿ ಇವರದು? ಇವೆಲ್ಲವನ್ನೂ ಜನರ ಕ್ಷೇಮಕ್ಕಾಗಿಯೇ ಮಾಡುವ ಹಾಗಿದ್ದರೆ, ಇದೆಲ್ಲವನ್ನೂ ಮಾಡಲು ಇಲ್ಲಿಯ ತನಕ ಕಾಯಬೇಕಿತ್ತೆ? ಮುಖ್ಯಮಂತ್ರಿ ಕೂಡುವ ಕುರ್ಚಿಗೆ ಅದ್ಯಾವನೊ ಅವಿವೇಕಿ ಮುಟ್ಠಾಳ ಪೂಜೆ ಮಾಡಿ, 'ಇನ್ನು ಇಪ್ಪತ್ತು ವರ್ಷ ಈ ಕುರ್ಚಿ ನಿಮಗೇ ಸಿಗುವಂತಹ ಪೂಜೆ ಮಾಡಿದ್ದೇನೆ,' ಎಂದನಂತೆ!! ಇದೇನು ಪ್ರಜಾಪ್ರಭುತ್ವವೊ, ಕಾಡುಮೃಗಗಳ ಸಾಮ್ರಾಜ್ಯವೊ? ಮಾರನೆಯ ದಿನ ಮತ್ಯಾವನೊ ಮುಖ್ಯಮಂತ್ರಿಯ ಬಾಯಿಗೆ ಏನನ್ನೋ ಹಾಕಿ, 'ಅದನ್ನು ತೆಗೆದುಕೊಂಡು ಹೋಗಿ ಹಿಂದಿನ ದಿನ ಪೂಜೆ ಮಾಡಿದ್ದ ಅದೇ ಕುರ್ಚಿಗೆ ಹೋಗಿ ಉಗಿ,' ಎಂದನಂತೆ! ಆಹಾ, ಕುರ್ಚಿಯ ಕರ್ಮವೆ! ಅಕಟಕಟಾ... ಕೊನೆಗೂ ಏನಾಯಿತು? ಕೇವಲ ತನ್ನ ಸ್ವಾರ್ಥಕ್ಕಾಗಿಯೇ ಮಾಡಿದ ಈ ಎಲ್ಲಾ ಯಜ್ಞಯಾಗಾದಿಗಳು, ವ್ರತಗಳು, ಪೂಜೆಪುನಸ್ಕಾರಗಳು ಗಳಿಸಿ ಕೊಟ್ಟ ಅಧಿಕಾರಾವಧಿ ಎಷ್ಟು ದಿನ? ಇನ್ನೊಂದು ಕೈಯ ಬೆರಳುಗಳಲ್ಲಿ ಎರಡು ಎಣಿಸುವಷ್ಟರಲ್ಲಿ ಎಲ್ಲಾ ಮುಗಿದೇ ಹೋಯಿತು. ರಾಮ್ ನಾಮ್ ಸತ್ಯ್ ಹೈ!!! ರಾಮ್ ನಾಮ್ ಸತ್ಯ್ ಹೈ!!! ರಾಮ್ ನಾಮ್ ಸತ್ಯ್ ಹೈ!!!

ನಮ್ಮ ದೇಶ ಮತ್ತು ಧರ್ಮಕ್ಕೆ ಕೀರ್ತಿಯ ಕಲಶವನ್ನಿಟ್ಟ" ಒಬ್ಬ ಸನ್ಯಾಸಿಯ ಬಗ್ಗೆ ಕುವೆಂಪು ಹೀಗೆ ಬರೆಯುತ್ತಾರೆ:
"(ದೇವರು, ಧರ್ಮ, ಭಕ್ತಿ, ಪೂಜೆ, ಇಹ, ಪರ ಮೊದಲಾದ) ವಿಚಾರಗಳನ್ನು ಬಹು ಸುಲಭವಾಗಿ ಲೋಕಕ್ಕೆ ತಿಳಿಸಿದ ಒಬ್ಬರು ಮಹಾತ್ಮರಿದ್ದಾರೆ. ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಓದು ಬರೆಹ ಚೆನ್ನಾಗಿ ತಿಳಿದವರಲ್ಲ. ಆದರೂ ಪಾಶ್ಚಾತ್ಯ ದೇಶಗಳಿಂದ ಪಂಡಿತವರ್ಯರಾಗಿ ಬಂದವರೂ ಕೂಡ, ಅವರ ಪದತಲದಲ್ಲಿ, ನಿರಕ್ಷರಕುಕ್ಷಿಗಳಾದ ಸಾಮಾನ್ಯರೊಡನೆ ಕುಳಿತು, ಅವರ ಉಪದೇಶಾಮೃತವನ್ನು ಸವಿದರು. ಅವರ ಶಿಷ್ಯರಾದ ಸ್ವಾಮಿ ವಿವೇಕಾನಂದರು ಯೂರೋಪು ಅಮೆರಿಕಾಗಳಿಗೆ ಹೋಗಿ ವೇದಾಂತ ಬೋಧೆ ಮಾಡಿ ಜಗದ್ವಿಖ್ಯಾತ ರಾದುದಲ್ಲದೆ, ನಮ್ಮ ದೇಶ ಮತ್ತು ಧರ್ಮಗಳಿಗೆ ಕೀರ್ತಿಯ ಕಲಶವನ್ನಿಟ್ಟರು."

ಸ್ವಾಮಿ ವಿವೇಕಾನಂದ ಎಂಬ ಸನ್ಯಾಸಿ ಹೇಳಿದ ವಿಚಾರಗಳಿಗೆ ಭದ್ರವಾಗಿ ಗೋರಿಯನ್ನು ಕಟ್ಟಿ, ಅಷ್ಟೇ ಭದ್ರವಾಗಿ ಆತನ ಆಕಾರವನ್ನು ಮಾತ್ರ ತಮ್ಮ ಅತ್ಯಮೂಲ್ಯ ಆಸ್ತಿಯನ್ನಾಗಿ ಮಾಡಿಕೊಂಡಿರುವವರು ಈಗಿನ ಮೂಢ ಹುಸಿಹಿಂದುತ್ವವಾದಿಗಳು. ಇವರು ಹೇಳುವ ಸುಳ್ಳುಗಳು ಏನೇ ಇರಲಿ, ವಿವೇಕಾನಂದರ ಬಗ್ಗೆ ಏಳೆಂಟು ದಶಕಗಳ ಹಿಂದೆಯೆ ಮತ್ತೊಬ್ಬ ಋಷಿಕವಿ ಠಾಗೂರರು "ನಿಮಗೆ ಭಾರತದ ಬಗ್ಗೆ ತಿಳಿದುಕೊಳ್ಳಬೇಕಿದ್ದರೆ ವಿವೇಕಾನಂದರನ್ನು ಅಭ್ಯಸಿಸಿ. ಅವರಲ್ಲಿ ಪ್ರತಿಯೊಂದೂ ಗುಣಾತ್ಮಕವೆ. ಋಣಾತ್ಮಕವಾದದ್ದು ಅವರಲ್ಲಿ ಯಾವುದೂ ಇಲ್ಲ," ಎಂದಿದ್ದರು. ಭಾರತದಲ್ಲಿನ ಹಿಂದೂ ಸಮಾಜವನ್ನು ಸುಧಾರಿಸಲು ಮಹಾನ್ ಪ್ರಯತ್ನ ಮತ್ತು ಪ್ರಯೋಗಗಳನ್ನು ಮಾಡಿದ, ಭಾರತದ ಸರ್ವಶ್ರೇಷ್ಠ ಜಾತ್ಯತೀತನಾಗಿದ್ದ, ಆದರೆ ಹಿಂದೂ ಮತಾಂಧನಿಂದಲೆ ಹತನಾಗಿ ಹೋದ ಮಹಾತ್ಮ ಗಾಂಧಿ, "ನನ್ನ ದೇಶದ ಮೇಲಿನ ನನ್ನ ಪ್ರೀತಿ ವಿವೇಕಾನಂದರ ಪ್ರಭಾವದಿಂದಾಗಿ ಸಾವಿರಪಟ್ಟು ಹೆಚ್ಚಾಯಿತು," ಎಂದಿದ್ದಾರೆ. ಗಾಂಧಿಯ ಅನುಯಾಯಿಯಾಗಿದ್ದ ಚಕ್ರವರ್ತಿ ರಾಜಗೋಪಾಲಚಾರಿಯವರಂತೂ "ವಿವೇಕಾನಂದರು ಹಿಂದೂಯಿಸಮ್ ಅನ್ನು ಕಾಪಾಡಿದರು," ಎಂದಿದ್ದರೊಮ್ಮೆ.

ಕಳೆದ ನೂರು ವರ್ಷಗಳಿಂದ ಭಾರತದ ಹಲವಾರು ಶ್ರೇಷ್ಠ ಮನಸ್ಸುಗಳನ್ನು ಪ್ರಭಾವಿಸುತ್ತ ಬಂದಿರುವ, ಹಿಂದುತ್ವವವನ್ನು ಕಾಪಾಡಿದ ಸ್ವಾಮಿ ವಿವೇಕಾನಂದರು ಮೂಢನಂಬಿಕೆಗಳ ಬಗ್ಗೆ ಒಮ್ಮೆ ಹೀಗೆ ಹೇಳುತ್ತಾರೆ:

"ಶತಮಾನಗಳಿಂದ ನಾವು ಎದೆಗೊತ್ತಿಕೊಂಡು ಬಂದಿರುವ ಈ ಮೂಢನಂಬಿಕೆಗಳನ್ನು ಭಾರತದ ಮಣ್ಣಿನಿಂದ ಕಿತ್ತೆಸೆಯಬೇಕು. ಮತ್ತೆ ಅವು ಎಂದೂ ಬೆಳೆಯದಂತಹ ಕಡೆ, ಶಾಶ್ವತವಾಗಿ ನಿರ್ನಾಮವಾಗುವಂತಹ ಕಡೆ ಬಿಸಾಕಿಬಿಡಬೇಕು. ಹಿಂದೂ ಜನಾಂಗದ ಮತಿ ಕುಲಗೆಡುತ್ತ ಬಂದಿರುವುದಕ್ಕೆ ಈ ಮೂಢನಂಬಿಕೆಗಳೆ ಕಾರಣ. ಇವು ಮತಿ ದುರ್ಬಲವಾಗಲು ಪ್ರೇರೇಪಿಸುತ್ತವೆ. ಸ್ವಂತಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡ, ಎಲ್ಲಾ ತರಹದ ತೇಜಸ್ಸನ್ನು ಕಳೆದುಕೊಂಡ, ಮಹತ್ತರವಾದದ್ದನ್ನು, ಅತ್ಯುತ್ತಮವಾದದ್ದನ್ನು ಯೋಚಿಸಲಾರದ ಮೆದುಳು ಧರ್ಮದ ಹೆಸರಿನಲ್ಲಿ ಕಾಣಿಸುವ ಎಲ್ಲಾ ತರಹದ ಸಣ್ಣಪುಟ್ಟ ಮೂಢನಂಬಿಕೆಗಳಿಂದ ತನ್ನನ್ನು ವಿಷಯುಕ್ತ ಗೊಳಿಸಿಕೊಳ್ಳುತ್ತಿರುತ್ತದೆ. ಹಾಗಾಗಿ ನಮಗೆ ಇದೆಲ್ಲ ತಿಳಿದಿರಬೇಕು.

"ಮೂಢನಂಬಿಕೆಗಳನ್ನು ನಂಬುವ ಮೂಢರಾಗುವುದರ ಬದಲು ನೀವು ಅತ್ಯುಗ್ರ ನಾಸ್ತಿಕರಾದರೂ ಆದರೆ ಅದರಿಂದ ನನಗೇನೂ ಬೇಜಾರಿಲ್ಲ. ಯಾಕೆಂದರೆ, ನಾಸ್ತಿಕ ಚೈತನ್ಯಶೀಲ; ಅವನನ್ನು ಎಂದಾದರೂ ಬದಲಾಯಿಸಬಹುದು. ಆದರೆ ಈ ಮೌಢ್ಯಗಳು ಆವರಿಸಿಕೊಂಡವೆಂದರೆ ಬುದ್ಧಿ ಹೊರಟೇ ಹೋಯಿತು; ಮತಿ ದುರ್ಬಲವಾಯಿತು; ಜೀವನವನ್ನು ಕೊಳೆಯುವಿಕೆ ಅಮರಿಕೊಂಡು ಕೊಳೆಸಲಾರಂಭಿಸಿಬಿಟ್ಟಿತು.

"ಓ ಧೀರನೆ, ಕೆಚ್ಚಿನ ಮನುಷ್ಯನೆ, ನಮಗೆ ಬೇಕಿರುವುದು ರಕ್ತದಲ್ಲಿ ಅಪರಿಮಿತವಾದ ಚೈತನ್ಯ, ನರಗಳಲ್ಲಿ ಭೀಮಬಲ, ಕಬ್ಬಿಣದ ಮಾಂಸಖಂಡಗಳು, ಮತ್ತು ಎಂದಿಗೂ ಎದೆಗುಂದದ ಉಕ್ಕಿನಂತಹ ಸ್ಥೈರ್ಯವೇ ಹೊರತು, ದುರ್ಬಲವಾದ, ತುಚ್ಛವಾದ ಆಲೋಚನೆಗಳಲ್ಲ. ಅಂತಹ ತುಚ್ಛ, ಕೀಳು ಆಲೋಚನಗಳನ್ನೆಲ್ಲವನ್ನೂ ನಿರಾಕರಿಸಿ. ಎಲ್ಲಾ ತರಹದ ಮೂಢನಂಬಿಕೆಗಳನ್ನು ನಿರಾಕರಿಸಿ. ಎಲ್ಲಾ ತರಹದ ಮೌಢ್ಯಗಳಿಂದ ಕಳಚಿಕೊಳ್ಳಿ. ಧೈರ್ಯವಂತರಾಗಿ; ಸ್ವತಂತ್ರರಾಗಿ.

"ಮೌಢ್ಯತೆ ಮಾನವನ ಅತಿ ದೊಡ್ಡ ಶತ್ರು. ಆದರೆ ಈ ಮತಾಂಧತೆ ಮತ್ತು ಅಸಹಿಷ್ಣುತೆ ಅದಕ್ಕಿಂದ ದೊಡ್ಡ ಶತ್ರು."


ಹಿಂದೂ ಮತದ ಬಗ್ಗೆ, ಉಪನಿಷತ್ತುಗಳ ಬಗ್ಗೆ, ಭಾರತೀಯ ಜೀವನದರ್ಶನದ ಬಗ್ಗೆ ಅಪಾರ ಹೆಮ್ಮೆ ಹೊಂದಿದ್ದ ಕುವೆಂಪುರವರು ಮತ್ತು ವಿಶ್ವವಿಖ್ಯಾತ ಸನ್ಯಾಸಿ ವಿವೇಕಾನಂದರು ಹೇಳಿದ ಮಾತುಗಳ ಹಿನ್ನೆಲೆಯಲ್ಲಿ ಈಗ ಕರ್ನಾಟಕದ ವರ್ತಮಾನವನ್ನು ಗಮನಿಸೋಣ. ಆ ಮಹಾಪುರುಷರ ವಿಚಾರಗಳ್ಯಾವುವೂ ಈ ಮತಾಂಧರಿಗೆ, ಶಿಲಾಯುಗದ ಅವಿವೇಕಿಗಳಿಗೆ ಬೇಕಿಲ್ಲ. ಇವರಿಗೆ ಬೇಕಿರುವುದೆಲ್ಲ ವಿವೇಕಾನಂದರ ಧೀರೊದ್ಧಾತ್ತ ನಿಲುವಿನ ಒಂದು ವಿಗ್ರಹ; ಒಂದು ಕ್ಯಾಲೆಂಡರ್ ಪೋಟೊ; ಅವರು ಧಿಕ್ಕರಿಸಿದ ಮೌಢ್ಯ ಕಂದಾಚಾರಗಳು ಮಾತ್ರ. ಹಾಗೆಯೆ, ತಮ್ಮಂತಹುದೇ ಮತಭ್ರಾಂತರ ಪ್ಯಾಂಫ್ಲೆಟ್ ಸಾಹಿತ್ಯ.

ಮೌಢ್ಯತೆ ಮಾನವನ ಅತಿ ದೊಡ್ಡ ಶತ್ರು; ಮತಾಂಧತೆ ಅದಕ್ಕಿಂತ ದೊಡ್ಡ ಶತ್ರು, ಎಂದರು ಸ್ವಾಮಿ ವಿವೇಕಾನಂದ. ಕರ್ನಾಟಕದ ದುರ್ಗತಿ ನೋಡಿ... ಯಾವುದನ್ನು ಮಾನವನ ಎರಡು ಅತಿ ದೊಡ್ಡ ಶತ್ರುಗಳು ಎಂದು ವಿವೇಕಾನಂದರು ಹೇಳಿದರೊ, ಆ ಎರಡೂ ದುಷ್ಟಶತ್ರುಗಳ ಅಡಿಯಾಳಾಗಿ ಹೋಗಿರುವ ಯಡ್ಡಯೂರಪ್ಪ ಇವತ್ತು ಕರ್ನಾಟಕದ ಮುಖ್ಯಮಂತ್ರಿ; ಕ್ಷಮಿಸಿ. ಏಳೇ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ. ಹ್ಞಾಂ.. ಭಾಗ್ಯವೇ... "ಆವರಣ"ವೇ...

ಈಗ ವಿಚಾರ ಮಾಡೋಣ, ಹಿಂದುವಿನ ಸದ್ಯದ ನಿಜ ಶತ್ರು ಯಾರು? ಎಂದು. ತಮ್ಮ ಬಹಿರಂಗ ಕ್ರಿಯೆಗಳಿಂದ ಕರ್ನಾಟಕವನ್ನು ಅಧಿಕೃತವಾಗಿ ಮೌಢ್ಯಕ್ಕೆ ತಳ್ಳಲು ಯತ್ನಿಸಿದ, ಸ್ವಾಮಿ ವಿವೇಕಾನಂದರನ್ನು ಅಡಿಗಡಿಗೆ ಧಿಕ್ಕರಿಸಿದ, ಅವಮಾನಿಸಿದ ಈ ಯಡ್ಡರು ವಿಶ್ವಮಾನವನಾಗುವುದು ಇರಲಿ, ಕನಿಷ್ಠ ಒಳ್ಳೆಯ ಹಿಂದುವಾಗಲಾದರೂ ಯೋಗ್ಯರೆ?ವಿವೇಕ ನುಡಿಯ ಹಿನ್ನೆಲೆಯಲ್ಲಿ...
ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿನ ವಿಶ್ವಧರ್ಮಸಂಸತ್‌ನಲ್ಲಿ ಪಾಲ್ಗೊಂಡದ್ದು 1893 ರಲ್ಲಿ. ಅಲ್ಲಿಗೆ ಹೋಗುವುದಕ್ಕಿಂತ ಮೊದಲು ಅವರು ಭಾರತದಾದ್ಯಂತ ಯಾತ್ರೆ ಕೈಗೊಂಡಿದ್ದರು. ಆ ಸಮಯದಲ್ಲಿ ಕರ್ನಾಟಕಕ್ಕೂ ಬಂದಿದ್ದರು. 1892 ರಲ್ಲಿ ಮೈಸೂರಿನಲ್ಲಿ ಅಂದಿನ ಮಹಾರಾಜರಾಗಿದ್ದ ಒಂಬತ್ತನೇ ಚಾಮರಾಜ ಒಡೆಯರ ಅತಿಥಿಯಾಗಿ ಒಂದೆರಡು ವಾರ ಇದ್ದರು. ಅದೇ ಪರಿಚಯದ ಮೇಲೆ, ಹೆಚ್ಚುಕಮ್ಮಿ ತಮ್ಮದೇ ವಯಸ್ಸಿನವರಾಗಿದ್ದ ಆ ಯುವ ಮಹಾರಾಜರಿಗೆ ಸ್ವಾಮಿ ವಿವೇಕಾನಂದರು 1894 ರಲ್ಲಿ ಅಮೆರಿಕಾದಿಂದಲೆ ಒಂದು ಕಾಗದ ಬರೆಯುತ್ತಾರೆ: "ಪ್ರತಿಯೊಂದು ದೇಶವೂ, ಪ್ರತಿಯೊಬ್ಬ ಗಂಡಸೂ, ಪ್ರತಿಯೊಬ್ಬ ಹೆಂಗಸೂ ತಮ್ಮ ಆತ್ಮೋದ್ಧಾರವನ್ನು ತಾವೇ ಸಂಪಾದಿಸಿಕೊಳ್ಳಬೇಕು. ಅವರಲ್ಲಿ ಆಲೋಚನೆಗಳನ್ನು ತುಂಬುವುದಷ್ಟೇ ಅವರಿಗೆ ನಾವು ಮಾಡಬೇಕಿರುವ ಸಹಾಯ. ಮಿಕ್ಕದ್ದು ತಾನೇ ತಾನಾಗಿ ಆಗುತ್ತದೆ. ಓ ನನ್ನ ಉದಾತ್ತ ಗುಣದ ರಾಜಕುಮಾರನೆ, ಈ ಜೀವನದ ಆಯಸ್ಸು ಬಹಳ ಕಮ್ಮಿ; ಈ ಪ್ರಪಂಚದ ದುರಹಂಕಾರ ಮತ್ತು ಒಣಪ್ರತಿಷ್ಠೆಗಳು ಬಹಳ ಅಸ್ಥಿರ, ಅಶಾಶ್ವತ. ಆದರೆ ಯಾರು ಇನ್ನೊಬ್ಬರಿಗಾಗಿ ಜೀವಿಸುತ್ತಾರೊ ಅವರು ಮಾತ್ರ ಬದುಕಿರುತ್ತಾರೆ. ಮಿಕ್ಕವರು ಬದುಕಿರುವುದಕ್ಕಿಂತ ಹೆಚ್ಚಾಗಿ ಸತ್ತೇ ಇರುತ್ತಾರೆ."
ಲೇಖನದ ವಿಡಿಯೊ ಪ್ರಸ್ತುತಿ - ಭಾಗ 2

ಈಗಿನ ವಿರೋಧಾಭಾಸ ನೋಡಿ: ಏಳೇ ದಿನಗಳಲ್ಲಿ ಮಾಜಿಯಾಗಿಬಿಟ್ಟ ಕರ್ನಾಟಕದ ಇತ್ತೀಚಿನ ಮುಖ್ಯಮಂತ್ರಿ ತಮಗಾಗಿ ಬದುಕುತ್ತ, ತಮ್ಮ ಕುರ್ಚಿಗಾಗಿ ಹೋಮಹವನಗಳನ್ನು, ಪುರಾಣಗಳಲ್ಲಿನ ರಾಜರು ಮಾಡಿಸುತ್ತಿದ್ದಂತೆ ಯಜ್ಞಯಾಗಾದಿಗಳನ್ನು ಮಾಡಿಸಿದರು. ಇವರು ಜನರಲ್ಲಿ ಅಧಿಕೃತವಾಗಿ ತುಂಬಲು ಯತ್ನಿಸಿದ ಆಲೋಚನೆಗಳೆಲ್ಲ ಮೌಢ್ಯವನ್ನು ಹೆಚ್ಚಿಸುವ ಆಲೋಚನೆಗಳೆ. ಬದುಕುತ್ತಿರುವುದು ತಮಗಾಗಿ; ತುಂಬುತ್ತಿರುವುದು ತುಚ್ಛ ಆಲೋಚನೆಗಳು. ವಿವೇಕಾನಂದರಿಗೆ, ಅವರ ಪ್ರಭಾವಕ್ಕೊಳಗಾಗಿದ್ದ ಮೈಸೂರಿನ ಆ ಯುವ ಮಹಾರಾಜರಿಗೆ ಇವರು ಸಲ್ಲಿಸುತ್ತಿರುವ ಗೌರವವಾದರೂ ಎಂತಹುದು? ಒಂದು ಶ್ರೇಷ್ಠ ಪರಂಪರೆಗೆ ಇವರೆಂತಹ ಉತ್ತರಾಧಿಕಾರಿ? ಇದನ್ನು ಜನರಷ್ಟೇ ಅಲ್ಲ, ಇಂತಹವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಸರ್ಕಾರ ಕಾರು ಕಳುಹಿಸಿತೆಂದು ಹೋಗುವ "ವಯೋ"ವೃದ್ಧರು ನಿಷ್ಠುರವಾಗಿ ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಇದು.


ದುರ್ಜನಃ ಸಜ್ಜನೋ ಭೂಯಾತ್ ಸಜ್ಜನಃ ಶಾಂತಿಮಾಪ್ನುಯಾತ್
ಶಾಂತೋ ಮುಚ್ಯೇತ ಬಂಧೇಭ್ಯೋ ಮುಕ್ತಶ್ಚಾನ್ಯಾನ್ ವಿಮೋಚಯೇತ್||

(ದುರ್ಜನರು ಸಜ್ಜನರಾಗಲಿ, ಸಜ್ಜನರಿಗೆ ಶಾಂತಿ ಲಭಿಸಲಿ, ಶಾಂತರು ಬಂಧಮುಕ್ತರಾಗಲಿ, ಮುಕ್ತರು ಇತರರನ್ನೂ ಮುಕ್ತರನ್ನಾಗಿ ಮಾಡಲಿ.)

Nov 14, 2007

ಬಾಬ್ಬಿ ಜಿಂದಾಲ್ - ಪಕ್ಕಾ ಕೆರಿಯರ್ ರಾಜಕಾರಣಿ

(ವಿಕ್ರಾಂತ ಕರ್ನಾಟಕ - ನವೆಂಬರ್ 23, 2007 ರ ಸಂಚಿಕೆಯಲ್ಲಿನ ಬರಹ)

ಅಮೇರಿಕದಲ್ಲಿಯೆ ಹುಟ್ಟಿ ಬೆಳೆದ ಬಾಬ್ಬಿ ಜಿಂದಾಲ್ ಎಂಬ 36 ವರ್ಷದ ಯುವಕ ಅಮೇರಿಕದ ಲೆಕ್ಕಾಚಾರದಲ್ಲಿ ಹಿಂದುಳಿದ ರಾಜ್ಯವೆಂದು ಪರಿಗಣಿತವಾದ ಲೂಸಿಯಾನ ರಾಜ್ಯಕ್ಕೆ ಗವರ್ನರ್ ಆಗಿ ಒಂದೆರಡು ವಾರಗಳ ಹಿಂದೆ ಚುನಾಯಿಸಲ್ಪಟ್ಟ. ಆ ವಾರ್ತೆಯನ್ನು ಎಲ್ಲಾ ಮಾಮೂಲಿ ಸುದ್ದಿಗಳಂತೆ ರಾಯ್ಟರ್ಸ್, ಅಸ್ಸೊಸಿಯೇಟೆಡ್ ಪ್ರೆಸ್ ಮತ್ತಿತರ ಸುದ್ದಿ ಸಂಸ್ಥೆಗಳು ಪತ್ರಿಕಾಲಯಗಳಿಗೆ ಬಿಡುಗಡೆ ಮಾಡಿದವು. ಸಿಲಿಕಾನ್ ಕಣಿವೆ, ಹಾಲಿವುಡ್ ಮುಂತಾದ ವಿಶ್ವಪ್ರಸಿದ್ಧ ಸ್ಥಳಗಳನ್ನು ಹೊಂದಿರುವ, ಅಮೇರಿಕಾದಲ್ಲಿಯೆ ಅತ್ಯಂತ ಶ್ರೀಮಂತ ರಾಜ್ಯವಾದ ಕ್ಯಾಲಿಪೋರ್ನಿಯಾದ ರಾಜ್ಯಪಾಲನಾಗಿ ಒಂದೆರಡು ತಿಂಗಳ ಹಿಂದೆ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಎಂಬ ವಿಶ್ವಪ್ರಸಿದ್ಧ ಆಕ್ಷನ್ ನಟ ಪುನರ್ ಆಯ್ಕೆಗೊಂಡಾಗಲೆ ತಲೆ ಕೆಡಿಸಿಕೊಳ್ಳದ ಇಲ್ಲಿಯ ಮೀಡಿಯ ಬಾಬ್ಬಿ ಜಿಂದಾಲ್ ಆಯ್ಕೆಯ ಬಗ್ಗೆಯೂ ಅಷ್ಟೇನೂ ತಲೆಕೆಡಿಸಿಕೊಳ್ಳಲಿಲ್ಲ.

ಆದರೆ ಭೂಮಿಯ ಇನ್ನೊಂದು ಭಾಗದಲ್ಲಿದ್ದ ಭಾರತದಲ್ಲಿನ ಮಾಧ್ಯಮಗಳಿಗೆ ಇದೊಂದು ದೊಡ್ಡ ಸುದ್ದಿ. ಅಮೇರಿಕದಲ್ಲಿ ಎದ್ದ ಟೀ ಕಪ್ಪಿನ ಬಿರುಗಾಳಿ ಭಾರತೀಯರಿಗೆ ಕಾಣಿಸಿದ್ದು ಹಿಂದೂ ಮಹಾಸಾಗರದಲ್ಲಿನ ಚಂಡಮಾರುತವಾಗಿ! ಅನೇಕ ಕೋಮುವಾದಿ ಹಿಂದೂ ಭಕ್ತರೆಲ್ಲ "ಜಿಂದಾಲ್ ಎಂಬ ಭಾರತೀಯ ಮೂಲದ ಮನುಷ್ಯ ಅಮೇರಿಕದ ರಾಜ್ಯವೊಂದಕ್ಕೆ ರಾಜ್ಯಪಾಲನಾಗಿ ಆಯ್ಕೆಯಾದ" ಎಂಬ ಸುದ್ದಿ ಕೇಳಿ ಪುಳಕಗೊಂಡು ಬಿಟ್ಟರು. ತಮ್ಮ ಮತದ ಧ್ವಜ ಅಮೇರಿಕಲ್ಲಿಯೂ ಹಾರಾಡುತ್ತಿದೆ ಎಂದು ಹೆಮ್ಮೆ ಪಟ್ಟಿದ್ದೆ ಪಟ್ಟಿದ್ದು. "ನಮ್ ಹುಡುಗೀರು ಹೋಗಿ ಹೋಗಿ ಸಾಬರನ್ನೆ ಲವ್ ಮಾಡಿ ಮದುವೆ ಆಗ್ತವೆ... ಅವರು ಲವ್ ಮಾಡದಂತೆ ಘೋಷಾ ಹಾಕ್ರಿ, ಕಾವಲು ಕಾಯ್ರಿ... ಸಾಬರ ಮತಕ್ಕೆ, ಆ ಕ್ರಿಶ್ಚಿಯನ್ ಮತಕ್ಕೆ ನಮ್ಮವರು ಕನ್ವರ್ಟ್ ಆಗದಂತೆ ಕಾಪಾಡ್ರೀ... ಅಯ್ಯೋ, ಅಮ್ಮಾ ಅಪ್ಪಾ... ನಮ್ಮ ಮತಾನ ಕಾಪಾಡ್ರಿ..." ಎಂದೆಲ್ಲಾ ಚೀರಾಡುವ ಚಣ್ಣ ತೊಟ್ಟ ಬಾಲಕರೆಲ್ಲ "ಜಿಂದಾಲ್ ಜಿಂದಾಬಾದ್" ಎನ್ನಲಾರಂಭಿಸಿಬಿಟ್ಟರು! ಎಂತಹ ವಿಚಿತ್ರ ನೋಡಿ. ತಾನೆತಾನಾಗಿ ಹಿಂದೂ ಮತದಿಂದ ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡ ಪಕ್ಕಾ ರಾಜಕಾರಣಿಯೊಬ್ಬನನ್ನು ಈ ಹುಸಿ ಹಿಂದೂವಾದಿಗಳು ಭಾರತೀಯ (ಅಂದರೆ ಹಿಂದೂ ಎಂದು ಓದಿಕೊಳ್ಳಬೇಕು) ಪತಾಕೆ ಹಾರಿಸಿದವನು ಎಂದು ರೀಮುಗಟ್ಟಲೆ ಹೊಗಳಲಾರಂಭಿಸಿಬಿಟ್ಟರು. ಕೀಳರಿಮೆ ಎನ್ನುವುದು ಮನುಷ್ಯನನ್ನು ಯಾವ ಪರಿ ಆವರಿಸಿಕೊಳ್ಳುತ್ತದೆ ಎನ್ನುವುದಕ್ಕೆ ಈ ದ್ವಂದ್ವಗಳೆ ಸಾಕ್ಷಿ.

ಲೇಖನದ ವಿಡಿಯೊ ಪ್ರಸ್ತುತಿ

ಈ ಬಾಬ್ಬಿ ಜಿಂದಾಲ್‌ನ ಮೂಲ ಹೆಸರು ಪೀಯುಶ್ ಜಿಂದಾಲ್ ಎಂದು. ಈಗಲೂ ಆತನ ಲೀಗಲ್ ಹೆಸರು ಪೀಯುಶ್ ಜಿಂದಾಲ್ ಎಂದೇ ಇದೆ. ನೆನ್ನೆ ಮೊನ್ನೆ ಈ ದೇಶಕ್ಕೆ ಬಂದಿಳಿದ ಹಲವಾರು ಚೀನೀಯರು, ಭಾರತೀಯರೆ ಇಲ್ಲಿನ ಜನಕ್ಕೆ ಉಚ್ಚಾರ ಮಾಡಲು ಅನುಕೂಲವಾಗಲಿ ಅಂತ ಹೆಸರು ಬದಲಾಯಿಸಿಕೊಳ್ಳುವಾಗ ಇನ್ನು ಹೆಚ್ಚಿಗೆ ಬಿಳಿಯರ ನಡುವೆಯೆ ಬೆಳೆದ ಪೀಯುಶ್ ತನ್ನ ವಿದೇಶಿ ಹೆಸರನ್ನು ಬಾಬ್ಬಿ ಎಂದು ಬದಲಾಯಿಸಿಕೊಂಡಿದ್ದು ಆಶ್ಚರ್ಯವೇನೂ ಅಲ್ಲ. ಆದರೆ ಈತನ ಜೀವನದಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಬೇಕಾದದ್ದು ಒಂದಿದೆ: ಅದು ಆತ ತನ್ನ ಕಾಲೇಜಿನ ದಿನಗಳಲ್ಲಿ ಹಿಂದೂ ಮತದಿಂದ ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗಿದ್ದು.

ಕಾಲೇಜಿನ ದಿನಗಳಲ್ಲಿಯೆ ಕ್ರಿಶ್ಚಿಯನ್ ಮತಕ್ಕೆ ಮತಾಂತರನಾಗುವ ಅವಶ್ಯಕತೆ ಅಥವ ಆಲೋಚನೆ ಬಾಬ್ಬಿ ಜಿಂದಾಲ್‌ಗೆ ಬಂದಾದ್ದರೂ ಹೇಗೆ ಎನ್ನುವ ಪ್ರಶ್ನೆ ನಾವು ಹಾಕಿಕೊಂಡರೆ ಆ ವಯಸ್ಸಿನಲ್ಲಿಯೆ ಈತನಿಗೆ ಯಾವ ಹೆಜ್ಜೆ ಇಟ್ಟರೆ ತಾನು ಅಮೇರಿಕದ ಬಹುಸಂಖ್ಯಾತ ಕ್ರಿಶ್ಚಿಯನ್ ಸಮಾಜದಲ್ಲಿ, ಅಂದರೆ ಇಲ್ಲಿಯ ಮುಖ್ಯವಾಹಿನಿಯಲ್ಲಿ ಒಂದಾಗಬಹುದು ಎನ್ನುವ ದೂರದೃಷ್ಟಿ ಇದ್ದದ್ದು ಗೊತ್ತಾಗುತ್ತದೆ. ಕ್ರಿಶ್ಚಿಯನ್ ಮೂಲಭೂತವಾದಿಗಳು ಗಣನೀಯವಾಗಿರುವ ಲೂಸಿಯಾನಾದಂತಹ ರಾಜ್ಯದಲ್ಲಿ ಕ್ರಿಶ್ಚಿಯನ್ ಆಗುವುದರಿಂದ ತನಗೆ ಇಲ್ಲಿಯ ಬಿಳಿಹುಡುಗಿಯರೊಡನೆ ಡೇಟಿಂಗ್ ಸುಲಭ ಮತ್ತು ಹಾಗೆಯೆ ತನ್ನ ಭವಿಷ್ಯದ ರಾಜಕೀಯ ಆಕಾಂಕ್ಷೆಗಳಿಗೂ ಒಳ್ಳೆಯದು ಎನ್ನುವ ಒಂದು ಗಟ್ಟಿ ನಂಬಿಕೆ ಬಾಬ್ಬಿಗೆ ಇತ್ತು ಎಂದು ಕಾಣಿಸುತ್ತದೆ. ಅದಕ್ಕಾಗಿಯೆ ಆತ ಮತಾಂತರವಾಗಿದ್ದು ಎಂದು ಹೇಳಬಹುದೆ ಹೊರತು ಆತನಿಗೆ ನಿಜಕ್ಕೂ ಆಧ್ಯಾತ್ಮದ ಅವಶ್ಯಕತೆ ಇತ್ತೆ ಎನ್ನುವುದು ಸಂದೇಹ. ತನಗೆ ದೆವ್ವ ಅಥವ ಸೈತಾನ ಆವರಿಸಿಕೊಂಡ ಬಗ್ಗೆ, ಹೇಗೆ ಕ್ರಿಶ್ಚಿಯನ್ ಮತ ಹಿಂದೂ ಮತಕ್ಕಿಂತ ಭಿನ್ನ ಮತ್ತು ಉತ್ತಮ ಎಂಬ ಬಗ್ಗೆ, ಕ್ರಿಶ್ಚಿಯನ್ನನಾಗಿ ತಾನು ಪಡೆದ ಪುನರ್ಜನ್ಮದ ಬಗ್ಗೆ, ಬಾಬ್ಬಿ ಜಿಂದಾಲ್ ಏನೆಲ್ಲಾ ಬರೆದರೂ (www.jindalonreligion.com) ಅವೆಲ್ಲ ಪೊಳ್ಳು, ಅಪ್ರಾಮಾಣಿಕ ಚಿಂತನಗಳು ಎಂದೆ ನಾನು ಭಾವಿಸುತ್ತೇನೆ. ತನ್ನ ಸ್ನಾತಕೋತ್ತರ ಪದವಿಗೆ ಪೊಲಿಟಿಕಲ್ ಸೈನ್ಸ್ ಆರಿಸಿಕೊಂಡ ಪ್ರತಿಭಾವಂತ ವಿದ್ಯಾರ್ಥಿ ಬಾಬ್ಬಿಗೆ, ಕ್ರಿಶ್ಚಿಯನ್ ಅಲ್ಲದವನಿಗೆ ಈ ದೇಶದ ರಾಜಕೀಯದಲ್ಲಿ ಒಳ್ಳೆಯ ಭವಿಷ್ಯವಿಲ್ಲ ಎಂದು ಕಲ್ಪಿಸಿಕೊಳ್ಳುವುದು ಕಷ್ಟವಲ್ಲ.

ಇದನ್ನು ನಾವು ಅಮೇರಿಕದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಾಟ್ ಪಕ್ಷದಿಂದ ಸ್ಪರ್ಧಿಸಲು ಪ್ರಯತ್ನಿಸುತ್ತಿರುವ ಬರಾಕ್ ಒಬಾಮ ಎಂಬ ಕಪ್ಪುತಂದೆ-ಬಿಳಿತಾಯಿಯ ಕಪ್ಪುಮಗನ ರಾಜಕೀಯ ನಡೆಗಳ ಹಿನ್ನೆಲೆಯಿಂದಲೂ ಗಮನಿಸಬಹುದು. ಬರಾಕ್ ಒಬಾಮಗೆ ಇಟ್ಟಿರುವುದು ಆತನ ತಂದೆಯ ಹೆಸರನ್ನೆ. ಆದರೆ ತನ್ನ ಮುಸಲ್ಮಾನ ತಂದೆಯ ಪೂರ್ಣ ಹೆಸರಾದ "ಬರಾಕ್ ಹುಸೇನ್ ಒಬಾಮ" ಎಂಬ ಹೆಸರಿನಲ್ಲಿ ಬರುವ "ಹುಸೇನ್" ತನ್ನ ಹೆಸರಿನಲ್ಲಿ ಬಾರದಂತೆ ವಿಶೇಷ ಮುತುವರ್ಜಿ ವಹಿಸುವುದರ ಮತ್ತು ತಾನೊಬ್ಬ ಮಹಾನ್ ಕ್ರಿಶ್ಚಿಯನ್ ಮತಾನುಯಾಯಿ, ಪ್ರತಿವಾರ ಚರ್ಚಿಗೆ ಹೋಗುವ ಆಸ್ತಿಕ ಎಂಬಂತೆ ತೋರಿಸುವುದರ ಹಿಂದಿನ ಹೆಚ್ಚಿನಂಶ ರಾಜಕೀಯ ತಂತ್ರಗಾರಿಕೆಯೆ ಹೊರತು ಮತ್ತೇನೂ ಅಲ್ಲ. ಈ ದೇಶ ಎಷ್ಟೇ ಉದಾರ ದೇಶ ಎನ್ನಿಸಿದರೂ ದಕ್ಷಿಣದ ಹಲವಾರು ರಾಜ್ಯಗಳಲ್ಲಿ ನೀವು ಕೋಮುವಾದಿ ಕ್ರಿಶ್ಚಿಯನ್‌ರನ್ನು ತೃಪ್ತಿಪಡಿಸದಿದ್ದರೆ ಚುನಾವಣೆ ಗೆಲ್ಲುವುದು ಅಸಂಭವವೆ. ಹಾಗಾಗಿ, ಬರಾಕ್ ಒಬಾಮನಷ್ಟೆ ಮಹತ್ವಾಕಾಂಕ್ಷಿಯಂತೆ ಕಾಣುವ ಬಾಬ್ಬಿ ಜಿಂದಾಲ್ ಮತಾಂತರದಿಂದ ಪ್ರಾರಂಭಿಸಿ ಈವರೆಗಿನ ತನ್ನ ಪ್ರತಿಯೊಂದು ಹೆಜ್ಜೆಯನ್ನೂ ಲೆಕ್ಕಾಚಾರಯುತವಾಗಿ ಇಟ್ಟಿರುವುದು ಆತನ ರಾಜಕೀಯ ಮಹತ್ವಾಕಾಂಕ್ಷೆಯನ್ನು ತೋರಿಸುತ್ತದೆ.

ಇನ್ನೂ ಚಿಕ್ಕ ವಯಸ್ಸಿನ ಬಾಬ್ಬಿಗೆ ಇನ್ನೂ ಕನಿಷ್ಠ 30 ವರ್ಷಗಳ ಸಕ್ರಿಯ ರಾಜಕಾರಣದ ಅವಕಾಶವಿದೆ. ಅದರಲ್ಲಿ ಮುಂದಿನ ಎಂಟು ವರ್ಷಗಳನ್ನು ಆತ ಲೂಸಿಯಾನಾದ ರಾಜ್ಯಪಾಲನಾಗಿ (ನಾಲ್ಕು ವರ್ಷಗಳ ನಂತರ ಪುನರಾಯ್ಕೆಗೊಂಡ ಪಕ್ಷದಲ್ಲಿ) ಮುಂದುವರೆಯಬಹುದು. ನಂತರ ಆತನ ರಾಜಕೀಯ ಜೀವನ ಏನಾಗಬಹುದು ಎಂದು ಯೋಚಿಸಿದರೆ, ಈ ಮನುಷ್ಯ ತನ್ನ ಮುಂದಿನ ಹೆಜ್ಜೆಗಳನ್ನು ಇನ್ನೂ ಹುಷಾರಾಗಿ ಇಟ್ಟಲ್ಲಿ ಈ ದೇಶದ ರಾಷ್ಟ್ರಾಧ್ಯಕ್ಷನಾಗುವ ತನಕವೂ ಬೆಳೆಯಬಹುದಾದ ಸಾಧ್ಯತೆ ಇದೆ ಎನ್ನಬಹುದು. ಮತ್ತು ಅದು ಸಾಧ್ಯವೂ ಆಗಬಹುದು. ಏಕೆಂದರೆ, ಅಮೇರಿಕದ ಭವಿಷ್ಯದ ರಾಜಕಾರಣದಲ್ಲಿ ಕನಿಷ್ಠ ಉಪರಾಷ್ಟ್ರಪತಿ ಸ್ಥಾನಕ್ಕಾದರೂ ತನ್ನದೆ ಪಕ್ಷದ ಅಥವ ಡೆಮಾಕ್ರಾಟ್ ಪಕ್ಷದ ವೈಲ್ಡ್‌ಕಾರ್ಡ್ ಆಗುವ ಯೋಗ್ಯತೆಗಳೆಲ್ಲಾ ಈತನಲ್ಲಿ ಇವೆ.

2008 ರ ಕೊನೆಗೆ ಈಗಿನ ಅಧ್ಯಕ್ಷ ಜಾರ್ಜ್ ಬುಷ್‌ನ ಆಡಳಿತ ಕೊನೆಯಾಗುತ್ತದೆ. ನಮ್ಮ ಭಾರತದ ನಿರ್ಲಜ್ಜ ವಂಶಪಾರಂಪರ್ಯವನ್ನು ಈ ದೇಶದ ಜನರೂ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ ಎನ್ನುವ ಸ್ವಲ್ಪ ಆಸೆಯಿದ್ದಿದ್ದರೂ ಜಾರ್ಜ್ ಬುಷ್‌ನ ತಮ್ಮ ಜೆಬ್ ಬುಷ್ ಮುಂದಿನ ವರ್ಷದ ಚುನಾವಣೆಗೆ ನಿಲ್ಲುತ್ತಿದ್ದ ಎನ್ನುವುದು ನನ್ನ ನಂಬಿಕೆ. ಜೆಬ್ ಬುಷ್ ಅಮೇರಿಕದ ದೊಡ್ಡ ರಾಜ್ಯಗಳಲ್ಲಿ ಒಂದಾದ ಫ್ಲಾರಿಡಾದ ರಾಜ್ಯಪಾಲನಾಗಿ 1999-2007 ರ ತನಕ ಎರಡು ಅವಧಿಗೆ ಚುನಾಯಿತನಾಗಿದ್ದ. ಇಲ್ಲಿ ಮೂರನೆ ಬಾರಿಗೆ ಸ್ಪರ್ಧಿಸುವಂತಿಲ್ಲ. ಈಗ ಆತನ ಮುಂದಿರುವ ಹುದ್ದೆ ರಾಷ್ಟ್ರಪತಿ ಹುದ್ದೆಯೆ. "ನನ್ನ ತಮ್ಮ ಅತ್ಯುತ್ತಮ ಅಧ್ಯಕ್ಷನಾಗುತ್ತಾನೆ," ಎಂದು ಅಣ್ಣ ಈಗಾಗಲೆ ತಮ್ಮನ ಬಗ್ಗೆ ಹೇಳಿಯಾಗಿದೆ. ಮುಂದಿನ ವರ್ಷದ ಚುನಾವಣೆಯಲ್ಲಿ ಉಪಾಧ್ಯಕ್ಷನಾಗಿ ನಿಲ್ಲುವುದನ್ನು ಜೆಬ್ ಬುಷ್ ತಳ್ಳಿ ಹಾಕಿಲ್ಲ. ಅದಾಗದಿದ್ದರೂ ಇನ್ನು ನಾಲ್ಕು ವರ್ಷಗಳಲ್ಲಿ ಅಥವ ಎಂಟು ವರ್ಷಗಳಲ್ಲಿ ಜೆಬ್ ಬುಷ್ ಚುನಾವಣೆಗೆ ನಿಲ್ಲುವುದು ಗ್ಯಾರಂಟಿಯೆ. ನನಗನ್ನಿಸುವ ಪ್ರಕಾರ ಈಗ ಅಮೇರಿಕದ ಸಂಪ್ರದಾಯವಾದಿ ಪಕ್ಷವಾಗಿರುವ ಬುಷ್‌ನ ರಿಪಬ್ಲಿಕನ್ ಪಕ್ಷಕ್ಕೆ ಬಾಬ್ಬಿ ಜಿಂದಾಲ್‌ನಂತಹ ಬಿಳಿಯನಲ್ಲದ, ಆದರೆ ಸಂಪೂರ್ಣ ಕರಿಯನೂ ಅಲ್ಲದ ಮನುಷ್ಯ ಉಪರಾಷ್ಟ್ರಪತಿ ಹುದ್ದೆಗೆ ಸೂಕ್ತ ಅಭ್ಯರ್ಥಿ. ಬಾಬ್ಬಿ ಜಿಂದಾಲ್ ಏನಾದರೂ ಮುಂದಿನ ದಿನಗಳಲ್ಲಿ ಸ್ವಲ್ಪ ಉದಾರವಾದಿ ಧೋರಣೆಗಳನ್ನು ಬೆಳೆಸಿಕೊಂಡು ಡೆಮಾಕ್ರಾಟ್ ಪಕ್ಷಕ್ಕೆ ಪಕ್ಷಾಂತರ ಮಾಡಿದರೂ ರಾಜ್ಯಪಾಲ ಹುದ್ದೆಗಿಂತ ಮೇಲಿನದಾದ ಉಪರಾಷ್ಟ್ರಪತಿ/ರಾಷ್ಟ್ರಪತಿ ಹುದ್ದೆಗೆ ಅಲ್ಲಿಯೂ ವೈಲ್ಡ್ ಕಾರ್ಡ್ ಆಗುವ ಸಾಧ್ಯತೆ ಇದ್ದೇ ಇದೆ.

ಆದರೆ ಬಾಬ್ಬಿಯ ಬಗ್ಗೆ ಭಾರತ ಮತ್ತು ಇಲ್ಲಿರುವ ಭಾರತೀಯರು ಏನಾದರೂ ಆಸೆ ಇಟ್ಟುಕೊಳ್ಳುವುದು ಮಾತ್ರ ಮೂರ್ಖತನ. ಇಲ್ಲಿರುವ ಭಾರತೀಯರನ್ನು ಬಾಬ್ಬಿ ಕೇವಲ ತನ್ನ ಚುನಾವಣೆಗೆ ಹಣಸಂಗ್ರಹ ಮಾಡಿಕೊಳ್ಳಲು ಉಪಯೋಗಿಸಿಕೊಳ್ಳುತ್ತಾನೆಯೆ ಹೊರತು ಅವರೊಂದಿಗೆ ಈತ ಯಾವ ಕಾರಣಕ್ಕೂ ಹೆಚ್ಚಿಗೆ ಗುರುತಿಸಿಕೊಳ್ಳಲು ಹೋಗುವುದಿಲ್ಲ. ಅದು ಆತನ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದಲ್ಲ. ಈಗಾಗಲೆ ಆತ ಅದನ್ನೆ ಮಾಡಿದ್ದಾನೆ. ಜೊತೆಗೆ ಎಲ್ಲಾ "ನವಮತಾಂತರಿ" ಗಳೂ ಮಾಡುವಂತೆ ತಾನು ಇತರೆಲ್ಲ ಕ್ರಿಶ್ಚಿಯನ್ನರಿಗಿಂತ ಪ್ಯೂರ್ ಕ್ರಿಶ್ಚಿಯನ್ ಎಂದು ತೋರಿಸಿಕೊಳ್ಳುವ ಕೀಳರಿಮೆ ಇರುವುದರಿಂದ ಅದು ಬಹುಸಂಖ್ಯಾತ ಹಿಂದೂ ಭಾರತೀಯರಿಗೆ ಪಥ್ಯವಾಗುವುದು ಕಷ್ಟವೆ. ಇನ್ನು ಪಕ್ಕಾ ಕೆರಿಯರ್ ರಾಜಕಾರಣಿಯಾದ ಬಾಬ್ಬಿ ಜಿಂದಾಲ್ ಬಗ್ಗೆ ಕೇವಲ ಭಾರತೀಯ ಮೂಲದ ರಾಜಕಾರಣಿ ಎಂದಷ್ಟೆ ಭಾವಿಸಬೇಕೆ ಹೊರತು ಅದಕ್ಕಿಂತ ಹೆಚ್ಚಿನದನ್ನು ಆತನಲ್ಲಿ ನಾವು ಬಯಸಬಾರದು. ಎಲ್ಲಿಯವರೆಗೆ ತನ್ನ ಭಾರತೀಯ ಮೂಲ ಲಾಭಕರವಲ್ಲವೊ ಅಲ್ಲಿಯವರೆಗೆ ಈ ಮನುಷ್ಯ ಭಾರತದ ಬಗ್ಗೆ ಮಾತನಾಡುವುದನ್ನೂ ಸಹ ನಾವು ನಿರೀಕ್ಷಿಸಬಾರದು. ಬಾಬ್ಬಿ ಜಿಂದಾಲ್ ಇಲ್ಲಿಯವರೆಗೂ ಮೇಲಿನ ಹುದ್ದೆಗಳಿಗೆ ಹೋಗುವ ತನ್ನ ಸಾಮರ್ಥವನ್ನು, ರಾಜಕೀಯ ನಾಯಕತ್ವವನ್ನು ತೋರಿಸಿದ್ದಾನೆಯೆ ಹೊರತು ಆತನ ಬಗ್ಗೆ ಹೆಮ್ಮೆ ಪಡಬಲ್ಲ ಆದರ್ಶ ಗುಣಗಳನ್ನಲ್ಲ.

ಆದರೆ, ಈತನಿಗೆ ಇನ್ನೂ ಸುಧೀರ್ಘ ಭವಿಷ್ಯ ಇರುವುದರಿಂದ ಅದನ್ನಾಗಲಿ, ಈತನನ್ನಾಗಲೀ ಯಾವ ಕಾರಣಕ್ಕೂ ತಳ್ಳಿ ಹಾಕುವಂತಿಲ್ಲ.

Nov 9, 2007

ಯುದ್ಧ ಮತ್ತು ಶಾಂತಿ...

(ವಿಕ್ರಾಂತ ಕರ್ನಾಟಕ - ನವೆಂಬರ್ 16, 2007 ರ ಸಂಚಿಕೆಯಲ್ಲಿನ ಬರಹ)

ಅದು 1811-1812 ನೆ ಇಸವಿಯ ಯೂರೋಪು. ನೆಪೊಲಿಯನ್ನನ ಕಾಲ. ರಷ್ಯ-ಫ್ರಾನ್ಸ್ ಒಕ್ಕೂಟದಿಂದ ಬೇರಾಗಲು ರಷ್ಯ ಬಯಸುತ್ತಿರುತ್ತದೆ. ಅದನ್ನು ಒಪ್ಪದ ಫ್ರಾನ್ಸ್‌ನ ನೆಪೊಲಿಯನ್ ರಷ್ಯಕ್ಕೆ ಬುದ್ಧಿ ಕಲಿಸಲು ಅದರ ಮೇಲೆ ದಾಳಿ ಮಾಡುತ್ತಾನೆ. ರಷ್ಯಾದ ಒಳಗೇ ಅನೇಕ ಕದನಗಳು ನಡೆಯುತ್ತವೆ. ನೆಪೊಲಿಯನ್ನನದು ದೊಡ್ಡ ಸೈನ್ಯ. ಆದರೂ ರಷ್ಯನ್ನರನ್ನು ಸಂಪೂರ್ಣವಾಗಿ ಸೋಲಿಸಲಾಗುವುದಿಲ್ಲ. ನೆಪೊಲಿಯನ್ನನ ಆಕ್ರಮಣ ತಪ್ಪಿಸಿಕೊಳ್ಳಲು ರಷ್ಯನ್ನರು ಮಾಸ್ಕೊ ತೊರೆದು ಗ್ರಾಮೀಣ ಪ್ರದೇಶಗಳಿಗೆ ಓಡಿ ಹೋಗುತ್ತಾರೆ. ಅಂತಿಮ ಯುದ್ಧಕ್ಕೆ ಕಾಯುತ್ತ ನೆಪೊಲಿಯನ್ ಐದು ವಾರಗಳ ಕಾಲ ಮಾಸ್ಕೋ ನಗರದಲ್ಲಿಯೆ ಬೀಡುಬಿಡುತ್ತಾನೆ. ಅಷ್ಟೊತ್ತಿಗೆ ಮಾಸ್ಕೋಗೆ ಬೆಂಕಿ ಬಿದ್ದಿರುತ್ತದೆ. ಮಾಸ್ಕೊ ಕೈಬಿಟ್ಟಿದ್ದರೂ ರಷ್ಯಾದ ಸೇನಾನಾಯಕ ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತ ಯುದ್ಧಸಿದ್ಧತೆಯಲ್ಲಿ ತೊಡಗಿಕೊಂಡು ಯುದ್ಧವನ್ನು ವಿಳಂಬಿಸುತ್ತಿರುತ್ತಾನೆ. ದಹಿಸುತ್ತಿರುವ ಸ್ಮಶಾನ ಮಾಸ್ಕೋವನ್ನು, ಶಿಸ್ತುತಪ್ಪಿದ ತನ್ನ ಸೈನ್ಯವನ್ನು, ಕೊನೆಗೆ ಫ್ರಾನ್ಸೆ ತನ್ನ ಕೈತಪ್ಪಿಹೋಗುವ ಸ್ಥಿತಿಯನ್ನು ನೋಡಿ ತಲೆಕೆಟ್ಟ ನೆಪೊಲಿಯನ್ ಐದು ವಾರಗಳ ನಂತರ ಮಾಸ್ಕೊ ಬಿಟ್ಟು ಪ್ಯಾರಿಸ್‌ಗೆ ತೆರಳುತ್ತಾನೆ. ಅದು ಭಯಂಕರ ಹಿಮಪಾತದ ಚಳಿಗಾಲ. ಹಿಂದೆಗೆಯುತ್ತಿರುವ ಸೈನ್ಯಕ್ಕೆ ಹಿಂದಿನಿಂದ ಬಂದ ರಷ್ಯನ್ನರು ಅಪಾರ ಹಾನಿ ಮಾಡುತ್ತಾರೆ. ಆರೂವರೆ ಲಕ್ಷ ಸೈನಿಕರನ್ನು ಕಟ್ಟಿಕೊಂಡು ಯುದ್ಧಕ್ಕೆ ಹೋದ ನೆಪೊಲಿಯನ್ ಕೇವಲ ಐದು ತಿಂಗಳ ಆ ಯುದ್ಧದಲ್ಲಿ ಐದೂಮುಕ್ಕಾಲು ಲಕ್ಷ ಸೈನಿಕರನ್ನು ಕಳೆದುಕೊಂಡು ಐವತ್ತು ಸಾವಿರಕ್ಕೂ ಕಮ್ಮಿ ಸೈನಿಕರೊಡನೆ ವಾಪಸು ಮರಳುತ್ತಾನೆ. ಮೊದಲಿಗೆ ಸೋತರೂ ಕೊನೆಗೆ ಗೆದ್ದ ರಷ್ಯನ್ನರು ಕೇವಲ ನಾಲ್ಕು ಲಕ್ಷ ಸೈನಿಕರನ್ನು ಕಳೆದುಕೊಳ್ಳುತ್ತಾರೆ. ಆದರೆ ಸತ್ತ ನಾಗರಿಕರು ಮಾತ್ರ ಲಕ್ಷಾಂತರ.

ಇಂತಹ ಭೀಕರ ಯುದ್ಧದ ಹಿನ್ನೆಲೆಯಲ್ಲಿ ಲಿಯೊ ಟಾಲ್ಸ್‌ಟಾಯ್ ರಚಿಸಿದ ಕೃತಿ "ಯುದ್ಧ ಮತ್ತು ಶಾಂತಿ." ಯಾವ ಮಾನದಂಡ ಉಪಯೋಗಿಸಿದರೂ ಅದು ಒಂದು ಮಹತ್ತರ ಸಾಹಿತ್ಯ ಕೃತಿಯೆ. 1200 ಕ್ಕೂ ಹೆಚ್ಚಿನ ಪುಟಗಳು. ರಷ್ಯ ಮತ್ತು ಫ್ರಾನ್ಸ್‌ನ ವಿಶಾಲ ಐತಿಹಾಸಿಕ ಹರವು ಹೊಂದಿರುವ ಈ ಕಾದಂಬರಿಯಲ್ಲಿ ಇರುವ ಪಾತ್ರಗಳು ಒಟ್ಟು 582 ! ಅವುಗಳಲ್ಲಿ ಸರಿಸುಮಾರು 200 ಪಾತ್ರಗಳು ಕಾಲ್ಪನಿಕವಲ್ಲದ, ಐತಿಹಾಸಿಕ ವ್ಯಕ್ತಿಗಳು. ಒಂದು ರೀತಿಯಲ್ಲಿ ಐತಿಹಾಸಿಕವಲ್ಲದ, ಐತಿಹಾಸಿಕವಾದ, ಮಹಾನ್ ಐತಿಹಾಸಿಕ ಕಾದಂಬರಿ!

ಟಾಲ್ಸ್‌ಟಾಯ್ ಇದನ್ನು (1865-1869) ಒಮ್ಮೆ ಬರೆದು, ನಂತರ ಅನೇಕ ಸಲ ಅದನ್ನು ತಿದ್ದಿತೀಡಿ ಅಂತಿಮ ಆವೃತ್ತಿ ಪ್ರಕಟಿಸುತ್ತಾನೆ. ಈ ಅಂತಿಮ ಪ್ರಕಟನೆಯೆ ಹೆಚ್ಚು ಪ್ರಕಟಣೆಯಲ್ಲಿರುವುದು. ಇಲ್ಲಿಯವರೆಗೆ ಕೇವಲ ಇಂಗ್ಲಿಷ್ ಒಂದಕ್ಕೇ ಇದು ಹತ್ತಕ್ಕೂ ಹೆಚ್ಚಿನ ಸಲ ಬೇರೆಬೇರೆ ಲೇಖಕರಿಂದ ಅನುವಾದಗೊಂಡಿದೆ. ತೀರಾ ಇತ್ತೀಚಿನ ಸುದ್ದಿ ಏನೆಂದರೆ, ಟಾಲ್ಸ್‌ಟಾಯ್‌ನ ಮೊದಲ ಆವೃತ್ತಿಯ "ವಾರ್ ಅಂಡ್ ಪೀಸ್" ಇದೇ ಮೊದಲ ಬಾರಿಗೆ ಇಂಗ್ಲಿಷಿಗೆ ಅನುವಾದಗೊಂಡು ಎರಡು ತಿಂಗಳ ಹಿಂದಷ್ಟೆ ಬಿಡುಗಡೆ ಆಗಿದ್ದರೆ, ಪೂರ್ಣ ಆವೃತ್ತಿಯ ಮತ್ತೊಂದು ಇಂಗ್ಲಿಷ್ ಅನುವಾದ ಕೇವಲ ಎರಡು ವಾರದ ಹಿಂದೆ ಬಿಡುಗಡೆ ಆಗಿದೆ!
ಜೊತೆಜೊತೆಗೆ ಬಿಡುಗಡೆ ಆದ ಬೇರೆಬೇರೆ ಆವೃತ್ತಿಯ ಒಂದೇ ಕಾದಂಬರಿ ಈಗ ಇಂಗ್ಲಿಷ್ ಸಾಹಿತ್ಯ ವಲಯದಲ್ಲಿ ತನ್ನದೆ ಆದ ವಾಗ್ಯುದ್ಧ ಸೃಷ್ಟಿಸಿದ್ದು, ಇತ್ತೀಚಿನ ಅನುವಾದಕರು ಮತ್ತು ಪ್ರಕಾಶಕರು ಒಬ್ಬರಿನ್ನೊಬ್ಬರನ್ನು ಹೀಗಳೆದು ಕೊಳ್ಳುತ್ತಿದ್ದಾರೆ.

ಪೂರ್ಣ ಆವೃತ್ತಿಗಿಂತ 400 ಪುಟಗಳೆ ಕಮ್ಮಿಯಿರುವ ಮೊದಲ ಆವೃತ್ತಿಯ ಅನುವಾದವನ್ನು ಪ್ರಕಟಿಸಿರುವ ಪ್ರಕಾಶಕರು, "ಇದನ್ನು ಟಾಲ್ಸ್‌ಟಾಯ್ ಬರೆದ ಮೊದಲ ಕರಡು ಪ್ರತಿ ಎನ್ನುವ ಹಾಗಿಲ್ಲ. ಇದನ್ನು ಬರೆದು ಮುಗಿಸಿದ ಮೇಲೆ ಟಾಲ್ಸ್‌ಟಾಯ್ ಮುಕ್ತಾಯ ಎಂದು ಬರೆದು ಸಹಿ ಸಹ ಹಾಕಿದ್ದಾನೆ. ಇದೆ ಒರಿಜಿನಲ್ ಆವೃತ್ತಿ" ಎನ್ನುತ್ತಿದ್ದರೆ, ಇದನ್ನು ಇಷ್ಟಪಡದ ವಿರೋಧಿ ಬಣದವರು ಮಾತ್ರ, :ಇಲ್ಲ, ಇಲ್ಲ. ಮೊದಲನೆಯದು ಮೊದಲ ಡ್ರಾಫ್ಟ್ ಅಷ್ಟೆ. ಅಂತಿಮ ಆವೃತ್ತಿಯೆ ಟಾಲ್ಸ್‌ಟಾಯ್ ಸಂಪೂರ್ಣಗೊಳಿಸಿದ ಕಾದಂಬರಿ. ಟಾಲ್ಸ್‌ಟಾಯ್‌ಗೆ ತೃಪ್ತಿ ಆಗಿದ್ದೂ ಈ ಅಂತಿಮ ಆವೃತ್ತಿಯೆ," ಎನ್ನುತ್ತಿದಾರೆ. ಒಂದೆರಡು ವಾರಗಳಿಂದ ಇಂಗ್ಲಿಷಿನ ಸಾಹಿತ್ಯ ಸಂಬಂಧಿ ಸುದ್ಧಿಗಳಲ್ಲಿ ಈ ವಿವಾದ ಪ್ರತಿಧ್ವನಿಸುತ್ತಲೆ ಇದೆ.

ಲೇಖನದ ವಿಡಿಯೊ ಪ್ರಸ್ತುತಿ

ಟಾಲ್ಸ್‌ಟಾಯ್‌ನ ಎರಡು ಮೇರುಕೃತಿಗಳಾದ "ಅನ್ನಾ ಕರೆನಿನಾ" ಮತ್ತು "ಯುದ್ಧ ಮತ್ತು ಶಾಂತಿ" ಯನ್ನು ಕನ್ನಡದ ಹಿರಿಯ ಸಾಹಿತಿ ಮತ್ತು ಮೈಸೂರು ವಿವಿಯ ಮಾಜಿ ಉಪಕುಲಪತಿ ದೇ. ಜವರೇ ಗೌಡರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕುವೆಂಪುರವರ ಪರಮ ಶಿಷ್ಯರಾಗಿದ್ದ ದೇಜಗೌ, ಇತ್ತೀಚಿನ ದಶಕಗಳಲ್ಲಿ ಕುವೆಂಪುರವರ ತತ್ವ-ಸಿದ್ಧಾಂತಗಳಿಗೆ ಎಳ್ಳುನೀರು ಬಿಡಲು ಮನಸು ಮಾಡಿದವರಲ್ಲಿ ಅಗ್ರಗಣ್ಯರು. ಕುವೆಂಪುರವರು ನಿರಾಕರಿಸಿದ್ದ ಜಾತಿವಾದ, ಸ್ವಜನಪಕ್ಷಪಾತ, ಆಡಂಬರಗಳೆ ಇವರಿಗೆ ಪ್ರೀತಿ. ಇವರ ಇತ್ತೀಚಿನ ಕೆಲವು ಚಳವಳಿಗಳಿಗೆ ಕುವೆಂಪುರವರನ್ನು ದ್ವೇಷಿಸುತ್ತಿದ್ದ ಕೋಮುವಾದಿ ಮತಾಂಧರೆಲ್ಲ ಬಂದು ಬೆಂಬಲ ಸೂಚಿಸುತ್ತಿದ್ದಾರೆ ಎಂದರೆ ದೇಜಗೌ ಕುವೆಂಪುರವರಿಂದ ಎಷ್ಟು ದೂರ ಬಂದಿದ್ದಾರೆ ಎನ್ನುವುದು ಗೊತ್ತಾಗುತ್ತದೆ.

ಈ ಹಿನ್ನೆಲೆಯಲ್ಲಿ, ಯುದ್ಧ ಮತ್ತು ಶಾಂತಿ ಯ ಮೊದಲ ಆವೃತ್ತಿಯ ಸಣ್ಣ ಪುಸ್ತಕವನ್ನೂ ಕನ್ನಡಕ್ಕೆ ತರಲು ದೇಜಗೌ ತೊಡಗಿಕೊಂಡರೆ ಅದರಿಂದ ಮೈಸೂರಿನ ಸಾಂಸ್ಕೃತಿಕ ಲೋಕಕ್ಕೆ ಮತ್ತು ಕನ್ನಡ "ಶಾಸ್ತ್ರೀಯ" ಸಾಹಿತ್ಯಕ್ಕೆ ಒಳ್ಳೆಯದೆ ಆಗಬಹುದು.

Oct 23, 2007

ಬಹಿರಂಗ ಕಾಮಕೇಳಿಯಲ್ಲಿ ಜನ ಮತ್ತು ರಾಜಕಾರಣಿಗಳು - ಛೇ... ಛೀ... ಥೂ... ಅಯ್ಯೋ...

ಕಳೆದ ಹಲವಾರು ವಾರಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕಾರಣ ಕೇವಲ ಅರೆಮಬ್ಬಿನ ಕೋಣೆಯಲ್ಲಷ್ಟೆ ಕಾಣಸಿಗುವ ವಿಕೃತ ರಂಜನೆಯನ್ನು ಜನರಿಗೆ ಬಹಿರಂಗವಾಗಿ ನೀಡುತ್ತಿದೆ. ಆದರೆ ತಾವು ನೋಡುತ್ತಿರುವ ಈ ವ್ಯಭಿಚಾರದ ನಾಟಕ ತಾವೆ ಸೃಷ್ಟಿಸಿದ ಒಂದು ಅಂಕ ಮತ್ತು ಅದರಲ್ಲಿ ತಾವು, ತಮ್ಮ ಮನೆಯವರು, ತಮ್ಮ ಮುಂದಿನ ಪೀಳಿಗೆಯವರೂ ಪಾಲ್ಗೊಂಡಿದ್ದಾರೆ ಎನ್ನುವುದನ್ನು ಆ ಕ್ಷಣಿಕ ಉದ್ರೇಕೋನ್ಮತ್ತ ಸ್ಥಿತಿಯಲ್ಲಿ ಜನ ಮರೆತಿದ್ದಾರೆ.

ಯಾವ ಪಕ್ಷಕ್ಕೂ ಬಹುಮತ ನೀಡದೆ, "ನೀನು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಲು ಯೋಗ್ಯ" ಎಂಬ ಸಂದೇಶವನ್ನು ಜನ ಯಾವೊಬ್ಬನಿಗೂ ನೀಡದೆ ಇದ್ದಾಗ ಕರ್ನಾಟಕದ ಎಲ್ಲಾ ನಾಚಿಕೆಗೆಟ್ಟ ರಾಜಕಾರಣಿಗಳೆಲ್ಲ ತಾನೆ ಮುಖ್ಯಮಂತ್ರಿಯಾಗಲು ಯೋಗ್ಯ ಎಂದು ಮುಂದೆ ಬಂದುಬಿಟ್ಟರು. ಇಂತಹ ಬಹುಮತವಿಲ್ಲದ ಸ್ಥಿತಿಯಲ್ಲಿ ಮಂತ್ರಿಯೊ ಮುಖ್ಯಮಂತ್ರಿಯೊ ಆಗುವಾಗ ಇರಬೇಕಾದ ಕನಿಷ್ಠ ನಾಚಿಕೆಯೂ ಇಲ್ಲದೆ ಈ ಭಂಢರು ಎಗ್ಗುಸಿಗ್ಗಿಲ್ಲದೆ ಅದಕ್ಕೆ ಜನಾಭಿಪ್ರಾಯ, ಸಿದ್ಧಾಂತ ಅಂತೆಲ್ಲ ಘೋಷಿಸಿ ಬಿಟ್ಟರು. ಜನ ಸುಮ್ಮನೆ ನೋಡುತ್ತ ನಿಂತರು.

ಲೇಖನದ ವಿಡಿಯೊ ಪ್ರಸ್ತುತಿ - ಭಾಗ 1

ತನ್ನ ಕ್ಷೇತ್ರದ ಹೊರಗೆ ಮತ್ತೊಬ್ಬ ಕಾಂಗ್ರೆಸ್ಸಿಗನನ್ನು ಗೆಲ್ಲಿಸಲೂ ಯೋಗ್ಯತೆ ಇಲ್ಲದ ಕಾಂಗ್ರೆಸ್‌ನ ಅನೇಕ ಮುಖಂಡರು 224 ಶಾಸಕರನ್ನು ಪ್ರತಿನಿಧಿಸಬೇಕಾದ ಮುಖ್ಯಮಂತ್ರಿ ಹುದ್ದೆಯನ್ನು ಕೇವಲ ತಮ್ಮ ಸೀನಿಯಾರಿಟಿ ಮತ್ತು ಕಾಲು ನೆಕ್ಕುವ ನಿರ್ಲಜ್ಜ ಯೋಗ್ಯತೆಯ ಆಧಾರದ ಮೇಲೆ ತಮಗೂ ಹಕ್ಕಿದೆ ಎಂದು ಸಾಧಿಸುತ್ತಾರೆ. ಪಕ್ಷಾವಾರು ಲೆಕ್ಕಾಚಾರದಲ್ಲಿ ಜೆಡಿಎಸ್ ಶಾಸನಸಭೆಯಲ್ಲಿ ಮೂರನೇ ಸ್ಥಾನದಲ್ಲಿದ್ದರೂ ಅದರ ನಾಯಕನಿಗೆ ತಾನೆ ಮುಖ್ಯಮಂತ್ರಿಯಾಗಬೇಕು. ತನ್ನ ಪಕ್ಷ ಮೊದಲೆರಡು ಸ್ಥಾನದಲ್ಲಿ ಇಲ್ಲದಿದ್ದರೂ ಅವರ ಪ್ರಕಾರ ತನ್ನನ್ನು ಮುಖ್ಯಮಂತ್ರಿ ಮಾಡದ ಜನ ಮತ್ತು ಪಕ್ಷ ವಿಶ್ವಾಸದ್ರೋಹಿಗಳು. ಪಕ್ಷ ಬಿಟ್ಟ ಅವರ ಹಿಂದೆ ಹೋಗಿದ್ದು ಕೇವಲ ಏಳು ಜನ ಮಾತ್ರ. ನಲವತ್ತು ಶಾಸಕರನ್ನು ಬೆನ್ನ ಹಿಂದೆ ಇಟ್ಟುಕೊಂಡವರೆಲ್ಲ ಸಮಗ್ರ ಕರ್ನಾಟಕದ ಪರಮೋಚ್ಚ ಪ್ರತಿನಿಧಿ. ಜಾತ್ಯತೀತ, ಕೋಮುವಾದ, ಭ್ರಷ್ಟಾಚಾರ, ಪ್ರಜಾಪ್ರಭುತ್ವ ಇವೆಲ್ಲ ತಮಗೆ ಬೇಕೆಂದಾಗ ಬದಲಾಯಿಸಿಕೊಳ್ಳಬಲ್ಲ ಆಟದ ನಿಯಮಗಳು. ಕಾಮಾತುರದಲ್ಲಿ ಮೂತಿಮುಖ ನೋಡದೆ ಸಂಗ ಮಾಡಿಬಿಟ್ಟು, ತೀಟೆ ತೀರಿದ ನಂತರ, "ಅಯ್ಯೋ, ನೀನು 'ಕುಂಕುಮ' ಇಟ್ಟುಕೊಂಡ ಹೊಲಸು ಎಂದು ಗೊತ್ತೇ ಇರಲಿಲ್ಲ," ಎಂದು ಹೇಳುವ ಸಮಯಸಾಧಕರೆಲ್ಲ "ಹಿಂದಿನ ಅರವತ್ತು ವರ್ಷಗಳಲ್ಲಿ ಯಾರೂ ಮಾಡಿರದಷ್ಟು ಕೆಲಸ ಮಾಡಿರುವ ಮಹಾನ್ ಸಾಧಕರು!" ನೈತಿಕತೆಯ ವಿಷಯಕ್ಕೆ ಬಂದರೆ, ಅದು ನಿಜವೆ.

ಅದು 1999 ರ ವಿಧಾನಸಭಾ ಚುನಾವಣೆಯ ಸಮಯ. ತಾನೆ ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿಯ ಆ ಕುಂಕುಮಧಾರಿ ರಾಜ್ಯದಲ್ಲೆಲ್ಲ ತಮ್ಮನ್ನು ಬಿಂಬಿಸಿಕೊಂಡು ಬಂದರು. ವಿಶೇಷವಾದ ಸೂಟುಗಳನ್ನು ಸಹ ಹೊಲಿಸಿಕೊಂಡು ಬಿಟ್ಟಿದ್ದಾರೆ ಎಂಬ ಪುಕಾರಿತ್ತು. ನೋಡಿದರೆ ಅವರ ಕ್ಷೇತ್ರದ ಜನರೆ ಆ ಬಾರಿ ಅವರನ್ನು ಶಾಸಕರನ್ನಾಗಿ ಮಾಡಲಿಲ್ಲ. ಅವರ ಪಕ್ಷಕ್ಕೆ ಸಿಕ್ಕಿದ್ದು ಕೇವಲ 44 ಸ್ಥಾನಗಳು. 2004 ರ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಮೊದಲ ಸ್ಥಾನವೇನೊ ಬಂತು. ಆದರೆ ಅದು ಕೇವಲ ಮೂರನೆ ಒಂದು ಭಾಗದಷ್ಟು ಸ್ಥಾನಗಳು ಮಾತ್ರ. "ಮುಖ್ಯಮಂತ್ರಿ ಸ್ಥಾನ ಬೇಡ, ಕೊನೆಗೆ ಮಂತ್ರಿ ಸ್ಥಾನ ಕೊಟ್ಟರೂ ಪರವಾಗಿಲ್ಲ, ನಿಮ್ಮ ಪಕ್ಷಕ್ಕೆ ಬಂದುಬಿಡುತ್ತೇನೆ," ಎಂದು ಕೇವಲ ಇಪ್ಪತ್ತು ತಿಂಗಳ ಹಿಂದಷ್ಟೆ ಕಾಂಗ್ರೆಸ್ ಮತ್ತು ಜನತಾದಳಗಳೆರಡರ ಕಾಲಿಗೂ ಬಿದ್ದಿದ್ದರು. ಈಗಲೂ ವಂಚನೆ, ವಚನಭ್ರಷ್ಟತೆ ಎಂದೆಲ್ಲ ಹಾರಾಡುತ್ತ ತುಮಕೂರಿನಲ್ಲಿ ಭಾಷಣ ಬಿಗಿಯಲು ಕುಳಿತಿದ್ದರು. "ನಿಮ್ಮನ್ನೆ ಮುಖ್ಯಮಂತ್ರಿ ಮಾಡುತ್ತೇವೆ, ಬನ್ನಿ" ಎಂದದ್ದೆ ಬೆಂಗಳೂರಿನಿಂದ ಕೇವಲ 70 ಕಿ.ಮಿ. ದೂರದಲ್ಲಿರುವ ತುಮಕೂರಿನಿಂದ ಹೆಲಿಕಾಪ್ಟರ್‌ನಲ್ಲಿ ಓಡೋಡಿ ಬಂದರು. ತಮ್ಮ ನಾಲಿಗೆಯಿಂದ ಹೊರಳಿದ ವಾಕ್ಯವನ್ನು ಕೇಳಿರುವ ಲಕ್ಷಾಂತರ ಜನರಿಗೆ "ನನ್ನ ಮಾತನ್ನು ಮಾಧ್ಯಮದವರು ತಿರುಚಿದ್ದಾರೆ, ನಾನು ಹಾಗೆ ಹೇಳಿಯೆ ಇಲ್ಲ," ಎನ್ನುವವರಿಗೆಲ್ಲ ಇನ್ನೊಬ್ಬರ ವಚನಭ್ರಷ್ಟತೆಯ ಬಗ್ಗೆ, ವಿಶ್ವಾಸದ್ರೋಹದ ಬಗ್ಗೆ ಮಾತನಾಡುವಷ್ಟು ನಿರ್ಲಜ್ಜತೆ, ಅಹಂಕಾರ, ನೈತಿಕ ಹಕ್ಕು!

ಕ್ಷುದ್ರಮತಿಗಳ ಮತೀಯ ಸಂಘರ್ಷವನ್ನು ತಮ್ಮ ರಾಜಕಾರಣಕ್ಕೆ ಉಪಯೋಗಿಸುವ ಧರ್ಮಭ್ರಷ್ಟ ಪಕ್ಷದ ಬಗ್ಗೆ ಇನ್ನೊಂದು ಮಾತು. ಜನಾರ್ಧನ ರೆಡ್ಡಿಯನ್ನು ಅಮಾನತು ಮಾಡಿದ್ದೇವೆ ಅನ್ನುತ್ತಾರೆ; ಮೊನ್ನೆಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಪಕ್ಷದ ಮುಖಂಡತ್ವ ರೆಡ್ಡಿಯದೆ. ತನ್ನ ವ್ಯಭಿಚಾರದಿಂದಾಗಿ ಟೀವಿ ನೋಡುವ ಕನ್ನಡನಾಡಿನ ಚಿಕ್ಕಮಕ್ಕಳಿಗೂ ತಾನು ನಟಿಸಿರುವ ಬ್ಲೂಫಿಲಂ ಚಿತ್ರಗಳನ್ನು ತೋರಿಸಿದ ರೇಣುಕಾಚಾರ್ಯ ಎಂಬ ಕಾಮುಕಾಚಾರ್ಯರನ್ನು ತಮ್ಮ ಧಾರ್ಮಿಕ ಪಕ್ಷದಿಂದ ಅಮಾನತು ಮಾಡಿದ್ದೇವೆ ಅಂದಿದ್ದರು; ಆದರೆ ವಾರದ ಹಿಂದೆ ಅಧಿಕಾರದಾಹಿ ಯಡಿಯೂರಪ್ಪ ನಿಮಿಷಕ್ಕೊಂದು ಮಾತು ಹೇಳುತ್ತ ಟೀವಿಯವರ ಮುಂದೆ ಕಾಣಿಸಿಕೊಳ್ಳುತ್ತಿದ್ದಾಗ ಪ್ರತಿಸಲವೂ ಅವರ ಹಿಂದೆ ಬಾಡಿಗಾರ್ಡ್ ತರಹ ಕಾಣಿಸಿಕೊಳ್ಳುತ್ತಿದ್ದದ್ದು ಅದೇ ರೇಣುಕಾಚಾರ್ಯ. ಐದೂವರೆ ಕೋಟಿ ಜನರಿಗೆ ಹೀಗೆ ಹಿಮಾಲಯ ಗಾತ್ರದ ವಚನವಂಚನೆ ಮಾಡುತ್ತಿರುವ, ಅದನ್ನು ಸಮರ್ಥಿಸಿಕೊಳ್ಳುತಿರುವ ಈ ಜನರಿಗೆ ರಾಮನ ಬಗ್ಗೆ, ಬಸವಣ್ಣನ ಬಗ್ಗೆ, ವಚನಪರಿಪಾಲನೆ ಬಗ್ಗೆ ಮಾತನಾಡುವ ಪ್ರಾಥಮಿಕ ಯೋಗ್ಯತೆ ಇದೆಯೆ?

ಕೊಳಕರಿಗೆಲ್ಲ ಆರತಿ ಎತ್ತುವ ಹೆಂಗಸರು:

ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಹಿಂದೆಂದಿಗಿಂತಲೂ ಹೆಚ್ಚು ಹಣವನ್ನು ಕರ್ನಾಟಕದ ಜನ ನೋಡುತ್ತಿದ್ದಾರೆ. ಅದೇ ಮೂಲಕಾರಣವಾಗಿ, ಹಣದ ಹೊರತಾಗಿ ಮಿಕ್ಕ ಯಾವ ಯೋಗ್ಯತೆಯೂ ಇಲ್ಲದ ಸ್ಕೌಂಡ್ರಲ್‌ಗಳು, ರೋಗ್‌ಗಳೆಲ್ಲ ತಮ್ಮ ವೈಯಕ್ತಿಕ ಐಡೆಂಟಿಟಿಗಾಗಿ ಚುನಾವಣೆಗೆ ಇಳಿಯುತ್ತಿದ್ದಾರೆ. ಚುನಾವಣೆ ಬಂತು ಎಂದರೆ ಜನರಿಗೆ ಊರಹಬ್ಬ. ಅನೇಕರ ಮನೆಗಳು ಗುಂಡಿನ ಗಡಂಗುಗಳಾಗಿ ಬದಲಾಗಿ ಬಿಡುತ್ತವೆ. ಗಂಡಸರಿಗೆ ಯಥೇಚ್ಚವಾಗಿ ಗುಂಡು ತುಂಡಿನ ಸರಬರಾಜು. ಓಟಿನ ಭಿಕ್ಷೆ ಬೇಡುತ್ತ ಬರುವವನಿಗಾಗಿ ಕಾಯುತ್ತ ಕುಳಿತ ಗರತಿಯರು ಕೊಳಕರಿಗೆಲ್ಲ ಆರತಿ ಎತ್ತುತ್ತಾರೆ. ತಟ್ಟೆಯಲ್ಲಿ ಅವನು ಹಾಕಿದ ನೋಟು ನೂರು ರೂಪಾಯಿಯದೊ ಐದುನೂರು ರೂಪಾಯಿಯದೊ ಎಂಬ ಚಿಂತೆ ಈ ನಾರಿಯರಿಗೆ.
ತನ್ನ ಗಂಡ ರಾಜ್ಯದ ಮುಖ್ಯಮಂತ್ರಿಯಾಗಿದ್ದರೆ ನಡುಬೀದಿಯಲ್ಲಿ ಓಟು ಕೇಳುವ ಮತ್ತು ಆರತಿ ತಟ್ಟೆಗಳಿಗೆ ನೋಟು ಹಾಕುವ ತಲೆಹಿಡುಕ ಕೆಲಸ ರಾಜ್ಯದ ಮುಖ್ಯಮಂತ್ರಿಯ ಹೆಂಡತಿಯೆ ಮಾಡುತ್ತಿರುತ್ತಾಳೆ.

ಸುಮಾರು ನಲವತ್ತು ವರ್ಷದ ಹಿಂದೆ ಆಗಿದ್ದು ಇದು. ನನ್ನೂರಿನ ಆ ಹಿರಿಯರು ಸ್ವಾತಂತ್ರ್ಯದ ಸಮಯದಲ್ಲಿಯೆ ಕ್ರಿಯಾಶೀಲರಾಗಿದ್ದವರು. ತಮ್ಮ ಮುವ್ವತ್ತರ ವಯಸ್ಸಿಗೆಲ್ಲ ನಮ್ಮ ತಾಲ್ಲೂಕಿನಲ್ಲಿ ಹೆಸರುವಾಸಿಯಾಗಿದ್ದವರು. ಅವರಿಗೆ ಕೊಡಬೇಕಿದ್ದ ಎಂ.ಎಲ್.ಎ. ಸೀಟನ್ನು ಕಾಂಗ್ರೆಸ್ ಪಕ್ಷ ಪಕ್ಕದ ರಾಜ್ಯದ ಮುಖ್ಯಮಂತ್ರಿಯ ಅಳಿಯನಿಗೆ ಕೊಟ್ಟುಬಿಟ್ಟಿತು. ಇವರು ಪಕ್ಷೇತರರಾಗಿ ನಿಂತರು. ಜಿದ್ದಾಜಿದ್ದಿಯ ಚುನಾವಣೆ ಅದು. ಕಾಂಗ್ರೆಸ್‌ನಿಂದ ಏನನ್ನು ನಿಲ್ಲಿಸಿದರೂ ಗೆಲ್ಲುತ್ತಿದ್ದ ಆ ಸಮಯದಲ್ಲಿ ಇವರು ಕಾಂಗ್ರೆಸ್‌ಗೆ ಸೋತಿದ್ದು ಕೇವಲ ಮೂರಂಕಿಯ ಮತಗಳ ಅಂತರದಿಂದ. ಆಗ ಗೆದ್ದ ಅಭ್ಯರ್ಥಿ ನನ್ನ ಕ್ಷೇತ್ರದ ಜನರನ್ನು ಕುರಿತು ಒಂದು ಮಾತು ಹೇಳಿದನಂತೆ: "ಈ ಕ್ಷೇತ್ರದವರು ದುಡ್ಡು ಕೊಟ್ಟರೆ ಹೆಂಡತಿಯರನ್ನು ಬೇಕಾದರೂ ಕೊಟ್ಟುಬಿಡುತ್ತಾರೆ."

ಹತ್ತು ತಿಂಗಳ ಹಿಂದೆ ಕರ್ನಾಟಕದಲ್ಲಿ ಒಂದು ಶಾಸಕ ಸ್ಥಾನಕ್ಕೆ ಚುನಾವಣೆ ಆಯಿತು. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ ಅದು. ಸಿದ್ಧರಾಮಯ್ಯ ಹಲವಾರು ವರ್ಷಗಳಿಂದ ರಾಜಕೀಯದಲ್ಲಿರುವವರು. ಶುರುವಿನಲ್ಲಿ ಇವರದು ಹೋರಾಟದ ರಾಜಕೀಯವೆ. ಮಂತ್ರಿಯಾಗಿ ಹಲವಾರು ವರ್ಷ "ಸೇವೆ"ಯನ್ನೂ ಸಲ್ಲಿಸಿದ್ದಾರೆ. ಒಂದು ವರ್ಷಕ್ಕೂ ಹೆಚ್ಚಿನ ಕಾಲ ಉಪಮುಖ್ಯಮಂತ್ರಿ ಆಗಿದ್ದವರು. ಕರ್ನಾಟಕದ ಶಾಸನಸಭೆಯಲ್ಲಿ ಇವರಿಗಿಂತ ನೀಚರೂ, ಭ್ರಷ್ಟರೂ, ದುಷ್ಟರೂ, ಅವಿವೇಕಿಗಳೂ, ಅಜ್ಞಾನಿಗಳೂ, ಅನರ್ಹರೂ ಶಾಸಕರಾಗಿರುವಾಗ ಇವರೂ ಒಬ್ಬ ಶಾಸಕರಾಗಿ ಅಲ್ಲಿದ್ದರೆ ನಾಡಿಗೆ ಸ್ವಲ್ಪಮಟ್ಟಿಗೆ ಕ್ಷೇಮವೆ. ಆದರೆ, ಕೇವಲ ಜಾತಿಬಲದಿಂದ, ದುಡ್ಡಿನ ಬಲದಿಂದ, ಅಧಿಕಾರಪಕ್ಷ ಬಲದಿಂದ ಇವರೆದುರು ಚುನಾವಣೆಗೆ ನಿಂತ ಶಿವಬಸಪ್ಪನವರಿಗೆ ಸಂವಿಧಾನದತ್ತ ಹಕ್ಕಿನ ಯೋಗ್ಯತೆ ಬಿಟ್ಟರೆ ಶಾಸಕರಾಗಲು ಸಿದ್ಧರಾಮಯ್ಯನವರಿಗಿಂತ ಇನ್ಯಾವ ತರಹದ ಹೆಚ್ಚಿನ ಯೋಗ್ಯತೆ ಇತ್ತು ಎನ್ನುವುದು ಉತ್ತರವಿಲ್ಲದ ಪ್ರಶ್ನೆ.

ಈ ಹಿನ್ನೆಲೆಯಲ್ಲಿ ನೋಡಿದಾಗ, ಹತ್ತಾರು ಕೋಟಿ ರೂಪಾಯಿಗೂ ಹೆಚ್ಚಿನ ಹಣ ಹರಿಯಿತು ಎನ್ನುವ ಆ ಉಪಚುನಾವಣೆಯಲ್ಲಿ ಸಿದ್ಧರಾಮಯ್ಯ ಕೇವಲ 257 ಮತಗಳ ಅಂತರದಿಂದ ಸೋಲುತ್ತಾರೆ ಎಂದರೆ ಆ ಕ್ಷೇತ್ರದ ಜನ ಇನ್ನೆಂತಹ ಪ್ರಲೋಭನೆಗೆ, ನೈತಿಕ ಭ್ರಷ್ಟತೆಗೆ, ತಲೆಹಿಡುಕತನಕ್ಕೆ ಒಳಗಾಗಿರಬೇಡ? ಇಲ್ಲಿ ಸಿದ್ಧರಾಮಯ್ಯನವರೇನೂ ಕಮ್ಮಿ ಇಲ್ಲ. ಕಾಂಗ್ರೆಸ್‌ನಲ್ಲಿರುವ ಜಾತಿಬಲದ, ಹಣಬಲದ ಲೂಟಿಕೋರ ಭ್ರಷ್ಟರನ್ನೆಲ್ಲ ತಮ್ಮ ಕ್ಷೇತ್ರಕ್ಕೆ ಕರೆತಂದು ತಮ್ಮ ಪರ ಕೋಟ್ಯಾಂತರ ರೂಪಾಯಿ ಚೆಲ್ಲಲು ದಾರಿಮಾಡಿಕೊಡುತ್ತಾರೆ. ಕಾಂಗ್ರೆಸ್ಸಿನ ರಾಜ್ಯಘಟಕದ ಅಧ್ಯಕ್ಷರೆ ಕಾರಿನಲ್ಲಿ ಹತ್ತಾರು ಲಕ್ಷ ಕ್ಯಾಷ್‌ನೊಂದಿಗೆ ಸಿಕ್ಕಿ ಬೀಳುತ್ತಾರೆ. ವಾರೆವ್ಹಾ. ಜನರನ್ನು ಭ್ರಷ್ಟರನ್ನಾಗಿಸಲು ಸಮಬಲದ ಪೈಪೋಟಿ! ಅಷ್ಟೆಲ್ಲ ಕೋಟಿ ಹಣ ಆ ಒಂದೇ ಒಂದು ಕ್ಷೇತ್ರದಲ್ಲಿ ಹರಿಯಿತು ಅಂದರೆ ಆ ಕ್ಷೇತ್ರದ ಜನರಿಗೆ ಈ ತಲೆಹಿಡುಕರು ಎಷ್ಟೊಂದು ಸಲ ತಲೆ ನೀವಿರಬೇಡ? ಬಹುಶಃ ಅಲ್ಲಿ ಸೋತವರು ಕೊನೆಯಲ್ಲಿ ಹೀಗೆಯೂ ಹೇಳಿರಬಹುದಲ್ಲವೆ: "ಈ ಕ್ಷೇತ್ರದ ಜನ ತಮ್ಮ ಮನೆಯವರನ್ನು ಹರಾಜಿಗೆ ಇಟ್ಟು ಯಾರು ಹೆಚ್ಚಿಗೆ ದುಡ್ಡು ಕೊಡುತ್ತಾರೊ ಅವರಿಗೆ ಮಾತ್ರ ಕೊಡುತ್ತಾರೆ. ಮುಂದಿನ ಸಲ ಇನ್ನೂ ಹೆಚ್ಚಿನ ದುಡ್ಡಿನೊಂದಿಗೆ ಬಂದು ನಾವೆ ಮಜಾ ಮಾಡೋಣ!"

ಛೇ. ಇದನ್ನೆಲ್ಲ ನೋಡಿದರೆ ನಮ್ಮ ನಾಡಿನ ಅನೇಕ ಸಜ್ಜನರ ಮನೆಗಳು ಮನೆಯವರೆಲ್ಲ ವ್ಯಭಿಚಾರಕ್ಕೆ ಇಳಿದ ವೇಶ್ಯಾಗೃಹಗಳಾಗಿ ಪರಿವರ್ತನೆಯಾಗಿ ಬಿಟ್ಟಿವೆ ಎಂದರೆ ಅದು ಅಪಚಾರವೆ?

ಜೈಲಿಗೆ ಹೋಗದ ಗಣಿ ರೆಡ್ಡಿ ಅಂಡ್ ಕೊ ಅಥವ ಕುಮಾರಸ್ವಾಮಿ ಅಂಡ್ ಕೊ.:

ನಮ್ಮ ಪತ್ರಿಕೆಯ (ವಿಕ್ರಾಂತ ಕರ್ನಾಟಕ) ಸೆಪ್ಟೆಂಬರ್ 29, 2006 ರ ಸಂಚಿಕೆಯಲ್ಲಿನ ನನ್ನ ಅಂಕಣ ಲೇಖನದ ಶೀರ್ಷಿಕೆ, "ಗೃಹಖಾತೆ ಎನ್ನುವುದು ಒಂದಿದೆಯೆ?" ಅದರಲ್ಲಿ ಆಗ ತಾನೆ ಹೊರಗೆ ಬಂದಿದ್ದ ಗಣಿ ಹಗರಣವನ್ನು ಕುರಿತು ಹೀಗೆ ಬರೆದಿದ್ದೆ: "(ಗಣಿ ಹಗರಣದ ವಿಡಿಯೊ ಸೀಡಿಗಳಲ್ಲಿರುವುದು) ನಿಜವಾದ ವಿಡಿಯೊ ಚಿತ್ರವೊ ಇಲ್ಲಾ ಕೃತಕವಾಗಿ ತಯಾರಿಸಿದ್ದೊ ಎಂದು ನಮ್ಮ ಪೋಲಿಸ್ ಇಲಾಖೆ ಇಲ್ಲಿಯವರೆಗೆ ತಿಳಿದುಕೊಳ್ಳಲಾಗಲಿಲ್ಲ ಎಂದರೆ ಇಂತಹ ಅನಾದಿಕಾಲದ ತಂತ್ರಜ್ಞಾನ ಹೊಂದಿರುವವರ ಕೈಯಲ್ಲಿ ನಮ್ಮ ಭವಿಷ್ಯದ ಸುರಕ್ಷತೆಯನ್ನು ಕನಸುವುದಕ್ಕಿಂತ ಹಗಲು ಕನಸು ಬೇರೊಂದಿಲ್ಲ. ಅವು ಕೃತಕವೇ ಆಗಿರಲಿ, ಇಲ್ಲವೆ ನೈಜದ್ದೆ ಆಗಿರಲಿ, ಅವುಗಳ ಮೂಲ ಎಲ್ಲಿಯದು ಎನ್ನುವುದನ್ನು ಪೋಲಿಸ್ ಇಲಾಖೆ ಇಷ್ಟೊತ್ತಿಗೆ ಕಂಡು ಹಿಡಿದು ಜನಕ್ಕೆ ತಿಳಿಸಬೇಕಿತ್ತು. ಅದು ಕೃತಕವೇ ಆಗಿದ್ದಲ್ಲಿ ಈ ಸೀಡಿ ಪ್ರಕರಣ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಕಂಡ ಅತಿ ದೊಡ್ಡ ವಂಚನೆ. ಹಾಗಿದ್ದ ಪಕ್ಷದಲ್ಲಿ ಜನಾರ್ಧನ ರೆಡ್ಡಿ ಬಳ್ಳಾರಿಯ ಮನೆಯಲ್ಲಲ್ಲ, ಅಲ್ಲಿನ ಜೈಲಿನಲ್ಲಿ ಕಂಬಿ ಎಣಿಸಬೇಕು. ಸೀಡಿಯಲ್ಲಿರುವುದು ನಿಜವೇ ಆಗಿದ್ದಲ್ಲಿ ಚೆನ್ನಿಗಪ್ಪ, ಪ್ರಕಾಶ್, ಕುಮಾರಸ್ವಾಮಿಯಾದಿಯಾಗಿ ಹತ್ತಾರು ಜನ ತಮ್ಮ ಭ್ರಷ್ಟಾಚಾರ ಹಾಗೂ ಅಧಿಕಾರ ದುರುಪಯೋಗದ ಪ್ರಯಕ್ತ ಬೆಂಗಳೂರಿನ ವಿಧಾನಸೌಧದಲ್ಲಲ್ಲ, ಪರಪ್ಪನ ಅಗ್ರಹಾರದ ಕಾರಾಗೃಹದ ಕತ್ತಲು ಕೋಣೆಯಲ್ಲಿ ತಮ್ಮ ಕೊನೆಗಾಲದ ತನಕ ಕಾಲ ತಳ್ಳಬೇಕು. ಇವೆರಡರಲ್ಲಿ ಒಂದು ಆಗಲೇಬೇಕು. ಇಲ್ಲದಿದ್ದಲ್ಲಿ ಕರ್ನಾಟಕದಲ್ಲಿ ಕಾನೂನು, ನ್ಯಾಯ, ಆಡಳಿತ, ನೈತಿಕತೆ ಸತ್ತಿದೆ ಎಂದೇ ಅರ್ಥ. ನೀವು ಈ ಮಾತಿಗೆ ನಗುತ್ತಿರುವಿರಿ ಎಂದಾದರೆ, ಇವೆಲ್ಲ ನಮ್ಮಲ್ಲಿ ಎಂದೋ ಸತ್ತಿವೆ ಮತ್ತು ನಮಗೆ ಅವುಗಳ ಅವಶ್ಯಕತೆಯಿಲ್ಲ ಹಾಗೂ ನಾನು ಅಸಾಧ್ಯವನ್ನು ಬಯಸುವ ಹಗಲುಗನಸಿನ ಆಶಾವಾದಿ ಎಂದರ್ಥ, ಅಲ್ಲವೆ?"

ಈ ಹಗರಣ ಬಯಲಿಗೆ ಬಂದು ಈಗ ಒಂದು ವರ್ಷಕ್ಕೂ ಮೇಲಾಗಿದೆ. ಕುಮಾರಸ್ವಾಮಿ/ಚೆನ್ನಿಗಪ್ಪ/ಪ್ರಕಾಶ್ ಗುಂಪಿನ ಯಾರೊಬ್ಬರಿಗೂ ಮತ್ತು ಜನಾರ್ಧನ ರೆಡ್ಡಿಯ ಗುಂಪಿನ ಯಾರೊಬ್ಬರೂ ಜೈಲಿನಲ್ಲಿಲ್ಲ. ಯಾವ ತರಹದ ಕಾನೂನು, ಧರ್ಮ ಮತ್ತು ನೈತಿಕತೆಯ ಪಾಠವನ್ನು ನಾವು ನಮ್ಮ ಮಕ್ಕಳಿಗೆ ಮಾಡುತ್ತಿದ್ದೇವೆ ಎಂಬ ಕಿಂಚಿತ್ ನೋವೂ ಜನಮಾನಸದಲ್ಲಿ ಇದ್ದಂತಿಲ್ಲ. ಇದ್ದರೂ ಅದು ಸಾಂಘಿಕವಾಗಿ ಪ್ರಕಟವಾಗಿಲ್ಲ.

ಮಠಾಧೀಶರಿಗೆ ಈ ಅಧಿಕಾರ ಕೊಟ್ಟವರು ಯಾರು?

ಕರ್ನಾಟಕದ ಯಾವೊಬ್ಬ ಮೇಲ್ಜಾತಿಯ ಮಠಾಧೀಶರಾಗಲಿ ಇಲ್ಲಿಯವರೆಗೂ ಓಟು ಹಾಕಿರುವುದು ಸಂಶಯದ ವಿಚಾರ. ಜನಾಡಳಿತದ ಮೂಲಭೂತ ಪ್ರಕ್ರಿಯೆಯಲ್ಲಿಯೇ ಪಾಲ್ಗೊಳ್ಳದ ಇವರಿಗೆ ಹಸ್ತಾಂತರದ ಬಗ್ಗೆ ಮಾತನಾಡಲು ಯಾವ ಹಕ್ಕಿದೆ? ಒಂದೆರಡು ಜಾತಿಗಳ ಜನರಲ್ಲಿ ಜನವಿರೋಧಿ ಜಾತಿಭಾವನೆ ಪೋಷಿಸುವ, ಜಾತಿಮೂಲ ಹಿಡಿದು ಜನವಿಭಜನೆ ಮಾಡುವ ಇವರಿಗೆ ಸಮಗ್ರ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂದು ಹೇಳುವ ಹಕ್ಕು ಬಂದಿದ್ದಾದರೂ ಹೇಗೆ? ಯಡಿಯೂರಪ್ಪನವರಿಗಾದ ಸ್ಥಿತಿ ಸಿದ್ಧರಾಮಯ್ಯನವರಿಗೊ, ಖರ್ಗೆಗೊ ಆಗಿದ್ದರೆ ಅವರು ಈ ರೀತಿ ಮಾತನಾಡುತ್ತಿದ್ದರೆ? "ನೀವು ಮಾಡಿದ್ದು ನನಗಿಷ್ಟವಾಗಿಲ್ಲ" ಎಂದು ನೇರವಾಗಿ ಹೇಳಲಾಗದ ಸಿದ್ಧಗಂಗಾ ಸ್ವಾಮಿಗಳು ಯಡಿಯೂರಪ್ಪನವರ ಸ್ಥಾನದಲ್ಲಿ ಕೆ.ಎಸ್. ಈಶ್ವರಪ್ಪ ಇದ್ದಿದ್ದರೆ ಧರ್ಮಯಾತ್ರೆ ಎಂಬ ಭೀಕರ ಜೋಕ್‌ಗೆ ಆಶೀರ್ವಾದ ಮಾಡುತ್ತಿದ್ದರೆ? ದಸರಾ ಉದ್ಘಾಟನೆಯನ್ನು ನಿರಾಕರಿಸುವುದಕ್ಕೆ ಈ ಶತಾಯುಷಿಗಳು ರಾಜಕಾರಣಿಗಳ ತರಹ ಆರೋಗ್ಯದ ಕಾರಣ ನೀಡುತ್ತಿದ್ದರೆ? ಕುಮಾರಸ್ವಾಮಿಯ ಬದಲಿಗೆ ಒಕ್ಕಲಿಗನಲ್ಲದ ಮತ್ತೊಬ್ಬ ಮುಖ್ಯಮಂತ್ರಿ ಆಗಿದ್ದಿದ್ದರೆ ಬಾಲಗಂಗಾಧರ ಸ್ವಾಮಿಗಳು ಇಷ್ಟೆಲ್ಲ ರಾದ್ಧಾಂತಗಳ ನಡುವೆ ದಸರಾ ಉದ್ಘಾಟನೆಗೆ ಒಪ್ಪಿಕೊಳ್ಳುತ್ತಿದ್ದರೆ?

ಕರ್ನಾಟಕದ ಜನಸಂಖ್ಯೆಯಲ್ಲಿ ಲಿಂಗಾಯತರ ಸಂಖ್ಯೆ ಮುಕ್ಕಾಲು ಕೋಟಿಯ ಆಸುಪಾಸು ಎನ್ನುತ್ತದೆ ಆಗೀಗ ಪ್ರಕಟಗೊಳ್ಳುವ ಜಾತಿವಾರು ಸಂಖ್ಯೆ. ಆದರೆ ಈ ಮಧ್ಯೆ ಕೆಲವು ಲಿಂಗಾಯತ ಮುಖಂಡರು ಎರಡೂವರೆ ಕೋಟಿ ಲಿಂಗಾಯತರಿಗೆ ಮೋಸ, ಮೂರೂವರೆ ಕೋಟಿ ಲಿಂಗಾಯತರಿಗೆ ಮೋಸ ಎನ್ನುತ್ತಿದ್ದಾರೆ. ಆ ಅಸಂಬದ್ಧ ಸುಳ್ಳುಹೇಳಿಕೆಗಳನ್ನು ಕೆಲವು ಪತ್ರಿಕೆಗಳು ಪ್ರಕಟಿಸಿಯೂ ಬಿಟ್ಟಿವೆ. ಜಾತಿಜಾತಿ ಎನ್ನುವ ಈ ಸಂಕುಚಿತ ಕೋಮುವಾದಿಗಳಿಗೆ ಕನಿಷ್ಟ ತಮ್ಮ ಜಾತಿಯ ಜನ ಈಗ ಎಷ್ಟಿದ್ದಾರೆ ಎನ್ನುವ ಸಾಮಾನ್ಯಜ್ಞಾನವೂ ಇಲ್ಲ. ಇನ್ನು ಇವರಿಗೆ ನಿಜಕ್ಕೂ 800 ವರ್ಷಗಳ ಹಿಂದಿನ ಬಸವಣ್ಣನ ಬಗ್ಗೆ ಗೊತ್ತಿದೆಯೆ? ಹೋಗಲಿ, "ಹುಸಿಯ ನುಡಿಯಲು ಬೇಡ" ಎಂದ ಆತನ ಬಗ್ಗೆ ಕನಿಷ್ಟ ಗೌರವವಾದರೂ ಈ ಬಸವದ್ರೋಹಿಗಳಿಗೆ ಇದೆಯೆ?

ಹೀನ ಸಂದರ್ಭದಲ್ಲಿ ನಾವು:

ಈಗ ಒಂದು ನಿಮಿಷ ಯೋಚನೆ ಮಾಡೋಣ. ಈ ಪರಿಸ್ಥಿತಿಯನ್ನು ಕೇವಲ ಕರ್ನಾಟಕಕ್ಕೆ ಸೀಮಿತಗೊಳಿಸಿಕೊಳ್ಳದೆ ಭಾರತದ ಹಿನ್ನೆಲೆಯಲ್ಲಿಯೇ ನೋಡೋಣ. ಪ್ರಜಾಪ್ರಭುತ್ವದ ಅರ್ಥವೇ ಗೊತ್ತಿಲ್ಲದ, ರಾಷ್ಟ್ರೀಯತೆಯ ಪರಿಕಲ್ಪನೆಯೇ ಇಲ್ಲದ, ಸ್ವರಾಜ್ಯದ ಹೊಣೆಯೇ ಬೇಕಿಲ್ಲದ ಬಹುಸಂಖ್ಯಾತ ಸ್ವಾರ್ಥ ಜಾತಿವಾದಿ ಜನಸಮೂಹ ನಮ್ಮದು ಎಂದರೆ ಅದು ತಪ್ಪಾಗುತ್ತದೆಯೆ? ಇಡೀ ಪ್ರಪಂಚದ ಯಾವ ಪ್ರಬುದ್ಧ ಪ್ರಜಾಪ್ರಭುತ್ವದಲ್ಲಿ ನಿಮಗೆ ಈ ಮಟ್ಟದ ನೀಚ, ಲಜ್ಜೆಗೇಡಿ, ನಿರ್ಲಜ್ಜ, ಸ್ವಾರ್ಥ, ಜವಾಬ್ದಾರಿಹೀನ, ಜಾತಿವಾದಿ, ಕೋಮುವಾದಿ ರಾಜಕಾರಣಿಗಳು ಮತ್ತು ಅವರನ್ನು ಚುನಾಯಿಸುವ ಜನರು ಕಾಣ ಸಿಗುತ್ತಾರೆ? ಹೌದು. ನಮಗಿಂತ ಕೆಟ್ಟ ವ್ಯವಸ್ಥೆಗಳು ಇವೆ. ಅನೇಕ ದೇಶಗಳಲ್ಲಿ ಈಗಲೂ ಸರ್ವಾಧಿಕಾರಗಳಿವೆ; ಮಿಲಿಟರಿ ಆಡಳಿತಗಳಿವೆ; ಕಮ್ಯುನಿಸ್ಟ್ ಆಡಳಿತಗಳಿವೆ; ರಾಜಸತ್ತೆಗಳು ಇವೆ. ಆದರೆ ಪ್ರಶ್ನೆ ಅವುಗಳ ಬಗ್ಗೆ ಅಲ್ಲ. ಬೆದರಿಕೆಯಿಲ್ಲದ, ತಮಗೆ ಬೇಕಾದವರನ್ನು ಮುಕ್ತವಾಗಿ ಚುನಾಯಿಸುವ ಸ್ವಾತಂತ್ರ್ಯ ಇರುವ ನಮ್ಮಂತಹ ಎಷ್ಟು ದೇಶಗಳಲ್ಲಿ ರಾಜಕಾರಣಿಗಳು ನಮ್ಮವರಂತೆ ನಿರ್ಲಜ್ಜರೂ, ಭ್ರಷ್ಟರೂ, ಅನೈತಿಕ ಕ್ರಿಮಿಗಳೂ ಆಗಿರುತ್ತಾರೆ?

ಲೇಖನದ ವಿಡಿಯೊ ಪ್ರಸ್ತುತಿ - ಭಾಗ 2

ಇನ್ನು ಕರ್ನಾಟಕದ ವಿಚಾರಕ್ಕೆ ಬಂದರೆ, ನಮ್ಮನ್ನು ನಾವು ಆಳಿಕೊಳ್ಳಲಾಗದ, ವಸಾಹುತುಶಾಹಿಯ ಸಂಕೇತವಾದ ರಾಷ್ಟ್ರಪತಿ ಆಳ್ವಿಕೆಗೆ ಕಳೆದ ಮುವ್ವತ್ತಾರು ವರ್ಷಗಳಲ್ಲಿ ನಾಲ್ಕು ಸಲ (1971/1977/1989/2007) ಕರ್ನಾಟಕ ಒಳಗಾಗಿದೆ. ಈ ಸತ್ಯ ನಾವು ನಿಜಕ್ಕೂ ಸ್ವರಾಜ್ಯಕ್ಕೆ ಅರ್ಹರೆ ಎನ್ನುವ ಪ್ರಶ್ನೆಯನ್ನು ಪದೆಪದೆ ಎತ್ತುತ್ತದೆ. ಇದರಷ್ಟೆ ಗಂಭೀರ ಸ್ಥಿತಿ ಇನ್ನೊಂದಿದೆ. ಅದು, ನಾವು ಆರಿಸಿ ಕಳುಹಿಸುವ ಜನರು ನೀಡುವ ಆಡಳಿತಕ್ಕಿಂತ ಅವರಿಲ್ಲದ ಈ ರಾಷ್ಟ್ರಪತಿ ಆಡಳಿತವೆ ಕಡಿಮೆ ಭ್ರಷ್ಟಾಚಾರದ, ಅಷ್ಟಿಷ್ಟು ಸಜ್ಜನಿಕೆ ಉಳ್ಳಆಡಳಿತ ಎನ್ನಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳೂ ಇವೆ. ಹಾಗೆಯೆ, ಮುಂದಿನ ವರ್ಷದ ಚುನಾವಣೆಯಲ್ಲಿ ಜನರಿಗೆ ಉತ್ತಮ ಪರ್ಯಾಯವೂ ಇಲ್ಲ ಎಂದರೆ ಅದು ದುರ್ದೈವ ಮಾತ್ರವಲ್ಲ ವಾಸ್ತವವೂ ಹೌದು. ಛೇ. ಆಧುನಿಕ ಶಿಕ್ಷಣದ ಹಾಗೂ ಮುಂದುವರೆದ ಸಮಾಜ ಮತ್ತು ದೇಶಗಳ ಹಿನ್ನೆಲೆಯಲ್ಲಿ ಹೇಳುವುದಾದರೆ ನಾವು ನಿಜಕ್ಕೂ ಒಂದು ಹೀನ ಸಂದರ್ಭದಲ್ಲಿ ಬದುಕುತ್ತಿದ್ದೇವೆ ಮತ್ತು ಅದಕ್ಕೆ ನಾವೆ ಕಾರಣರು ಎಂದರೆ ಅದು ತಪ್ಪಾಗುತ್ತದೆಯೆ?

ದಕ್ಷಿಣ ಆಫ್ರಿಕಾದ ವರ್ಣಭೇದ ಸಮಾಜದ ಹಿನ್ನೆಲೆಯಲ್ಲಿ ರಚಿತವಾದ ಒಂದು ಅಸಾಮಾನ್ಯ ಕಾದಂಬರಿಯ ಹೆಸರು "Cry, The Beloved Country". ಅದರದೆ ಗುಂಗಿನಲ್ಲಿರುವ ನನಗೆ ಈಗ ಅನ್ನಿಸುತ್ತಿರುವುದು, "Cry, The Beloved Karnataka".

Oct 11, 2007

ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?

(ವಿಕ್ರಾಂತ ಕರ್ನಾಟಕ - ಅಕ್ಟೋಬರ್ 12/19, 2007 ರ ಸಂಚಿಕೆಯಲ್ಲಿನ ಬರಹ)

2003 ರ ಆದಿಭಾಗದಲ್ಲಿ 48 ರೂಪಾಯಿಗೆ ಒಂದು ಅಮೇರಿಕನ್ ಡಾಲರ್ ಸಿಗುತ್ತಿತ್ತು. ಆದರೆ ಇವತ್ತು 40 ರೂಪಾಯಿಗೇ ಒಂದು ಡಾಲರ್ ಸಿಗುತ್ತಿದೆ. ಪೆಟ್ರೋಲಿಯಮ್ ತೈಲ, ಯಂತ್ರೋಪಕರಣಗಳು, ರಸಗೊಬ್ಬರ, ರಾಸಾಯನಿಕ, ಮುಂತಾದವುಗಳನ್ನು ವಿದೇಶಗಳಿಂದ ಕೊಳ್ಳುವ ಭಾರತಕ್ಕೆ ಈ ಲೆಕ್ಕಾಚಾರದಲ್ಲಿ ಉಳಿತಾಯವೆ ಆಗುತ್ತಿದೆ. ಇದು ಯಾವ ಲೆಕ್ಕಾಚಾರದಲ್ಲಿ ಉಳಿತಾಯ ಎಂದು ತಿಳಿದುಕೊಳ್ಳಬೇಕಾದರೆ ಬೆಲೆಯಲ್ಲಿ ಏರಿಳಿತಗಳನ್ನು ಕಂಡಿರುವ ಅಂತರರಾಷ್ಟ್ರೀಯ ಉತ್ಪನ್ನಗಳನ್ನು ಬಿಟ್ಟು ಏರಿಳಿತಗಳನ್ನು ಕಂಡಿರದ ಒಂದು ವಸ್ತುವಿನ ಮೇಲೆ ರೂಪಾಯಿಯ ಮೌಲ್ಯ ವೃದ್ಧಿಯನ್ನು ಅಳೆಯೋಣ. 2001 ರ ಕೊನೆಯಲ್ಲಿ ಬಿಡುಗಡೆಯಾದ ಮೈಕ್ರೊಸಾಫ್ಟ್ ಕಂಪನಿಯ ವಿಂಡೋಸ್ XP ಆಪರೇಟಿಂಗ್ ಸಿಸ್ಟಮ್‌ನ ಆವತ್ತಿನ ಬೆಲೆ 199 ಡಾಲರ್ ಆಗಿದ್ದರೆ, ಇವತ್ತಿನ ಬೆಲೆಯೂ 199 ಡಾಲರ್ರೆ. ಆದರೆ 2003 ರಲ್ಲಿ ಭಾರತದಲ್ಲಿ ಇದನ್ನು ಕೊಳ್ಳಲು 9500 ರೂಪಾಯಿ ಕೊಡಬೇಕಿದ್ದರೆ, ಇವತ್ತು ಅದನ್ನು ಕೊಳ್ಳಲು ನಾವು ತೆರಬೇಕಾದ ಬೆಲೆ ಕೇವಲ 8000 ರೂಪಾಯಿ ಅಷ್ಟೆ. ಹೀಗೆ, ಏರಿಳಿತ ಕಂಡಿರದ ವಿದೇಶಿ ವಸ್ತುಗಳು ಇವತ್ತು ಅಗ್ಗವಾಗಿವೆ. ಇನ್ನು ಅಗ್ಗವಾದ ವಸ್ತುಗಳು ಮತ್ತೂ ಅಗ್ಗವಾಗಿದ್ದರೆ, ತುಟ್ಟಿಯಾದ ವಸ್ತುಗಳು ಅಮೇರಿಕದವರಿಗೆ ಆಗಿರುವಷ್ಟು ಶೇಕಡಾವಾರು ಪ್ರಮಾಣದಲ್ಲಿ ನಮಗೆ ತುಟ್ಟಿಯಾಗಿಲ್ಲ.


ಲೇಖನದ ವಿಡಿಯೊ ಪ್ರಸ್ತುತಿ


ನಮ್ಮ ಮೌಲ್ಯ ಹೆಚ್ಚುತ್ತಿದೆ ಎನ್ನುವುದು ಯಾರಿಗೆ ಆಗಲಿ ಅಭಿಮಾನದ ವಿಚಾರ. ಅದೂ ದೇಶಕ್ಕೆ ಸಂಬಂಧಿಸಿದ ಇಂತಹ ವಿಚಾರಗಳಲ್ಲಿ ಬಹಳಷ್ಟು ಜನ ಭಾವುಕರಾಗಿ ಯೋಚಿಸುವುದೆ ಹೆಚ್ಚು. ಡಾಲರ್‌ಗೆ ಎದುರಾಗಿ ರೂಪಾಯಿಯ ಬೆಲೆ ಹೆಚ್ಚುತ್ತಿದೆ ಎಂದ ಮಾತ್ರಕ್ಕೆ ರೂಪಾಯಿಯ ಬೆಲೆ ಹೆಚ್ಚಾಯಿತು ಎಂದೇನೂ ಅಲ್ಲ. ಡಾಲರ್ ಅಪಮೌಲ್ಯಕ್ಕೊಳಗಾದರೂ ರೂಪಾಯಿಯ ಬೆಲೆ ಹೆಚ್ಚಾಗುತ್ತದೆ. ಈಗಿನ ಸದ್ಯದ ಸ್ಥಿತಿಯಲ್ಲಿ ಆಗಿರುವುದೂ ಇದೆ. ಯಾಕೆಂದರೆ, ಮತ್ತೊಂದು ಪ್ರಮುಖ ಜಾಗತಿಕ ಕರೆನ್ಸಿಯಾದ ಯೂರೊ ಲೆಕ್ಕದಲ್ಲಿ ರೂಪಾಯಿಯ ಮೌಲ್ಯ ಇಳಿಮುಖವಾಗಿದೆ. 2003 ರಲ್ಲಿ ಐವತ್ತು ರೂಪಾಯಿಗೆ ಒಂದು ಯೂರೊ ಸಿಗುತ್ತಿತ್ತು. ಆದರೆ ಇವತ್ತು ಒಂದು ಯೂರೊಗೆ ಐವತ್ತೈದೂವರೆ ರೂಪಾಯಿ ತೆರಬೇಕು.

ಕಳೆದ ಒಂದೆರಡು ವರ್ಷಗಳಲ್ಲಿ ಡಾಲರ್‌ನ ಎದುರು ರೂಪಾಯಿ ಮೌಲ್ಯ ಹೆಚ್ಚಾಗಿರುವುದರಿಂದ ಆಮದಿನ ವಿಚಾರದಲ್ಲಿ ದೇಶಕ್ಕೆ ಒಳ್ಳೆಯದೆ ಆಗಿದೆ. 2006 ರಲ್ಲಿ ಭಾರತ 112 ಶತಕೋಟಿ ಡಾಲರ್‌ಗಳಷ್ಟು ಉತ್ಪನ್ನಗಳನ್ನು ರಫ್ತು ಮಾಡಿದ್ದರೆ, 188 ಶತಕೋಟಿ ಡಾಲರ್‌ಗಳಷ್ಟು ಬೆಲೆಯ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ಇದನ್ನೆ ಇವತ್ತಿನ ಲೆಕ್ಕಾಚಾರದಲ್ಲಿ ಲೆಕ್ಕ ಹಾಕಿದರೆ, ನಮ್ಮ ಆಮದಿನ ಪ್ರಮಾಣ ಜಾಸ್ತಿ ಇರುವುದರಿಂದ ನಾವು ಕಳೆದ ವರ್ಷ ಕೊಂಡುಕೊಂಡ ಸಾಮಾನುಗಳನ್ನು ಈ ವರ್ಷ ಇನ್ನೂ ಕಮ್ಮಿ ಬೆಲೆಗೆ ಕೊಳ್ಳಬಹುದು. ಹಾಗೆಯೆ ನಮ್ಮ ಆಮದು-ರಪ್ತು ಮಧ್ಯೆಯ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗುತ್ತದೆ. ಅಂದರೆ ದೇಶದಿಂದ ಹೊರಗೆ ಹೋಗುವ ನಿವ್ವಳ ದುಡ್ಡಿನ ಪ್ರಮಾಣ ಕಮ್ಮಿಯಾಗುತ್ತದೆ.

ಆದರೆ, ಇದು ಮೇಲೆ ಹೇಳಿದಷ್ಟು ಸರಳ ಅಲ್ಲ. ಇಲ್ಲಿ ಸಮಸ್ಯೆಯೂ ಇದೆ. ಕಳೆದ ವರ್ಷ ನಮ್ಮ ಬೆಂಗಳೂರಿನ ಸುತ್ತಮುತ್ತಲ ಗಾರ್ಮೆಂಟ್ ಫ್ಯಾಕ್ಟರಿಯವರಿಗೆ ಐದು ಜೊತೆ ರೆಡಿಮೇಡ್ ಬಟ್ಟೆಗಳಿಗೆ 4600 ರೂಪಾಯಿ ಕೊಡುತ್ತಿದ್ದ ಅಮೇರಿಕದವರು ಈಗ ಕೊಡುವುದು 4000 ರೂಪಾಯಿ ಮಾತ್ರ. ಕಳೆದ ವರ್ಷ ಒಂದು ಸಾಫ್ಟ್‌‌ವೇರ್ ಪ್ರಾಜೆಕ್ಟ್‌ಗೆ 20 ಸಾವಿರ ಡಾಲರ್ ಎಂದಿದ್ದ ಅಮೇರಿಕನ್ ಕಂಪನಿಯೊಂದು ಪ್ರಾಜೆಕ್ಟ್ ಮುಗಿದ ನಂತರ ಯಾವುದೇ ಚೌಕಾಸಿ ಮಾಡದೆ 20 ಸಾವಿರ ಡಾಲರ್‌ಗೆ ಚೆಕ್ ಕೊಟ್ಟಿತು ಎಂದಿಟ್ಟುಕೊಳ್ಳೋಣ. ಆದರೆ ಸುಮಾರು ಒಂಬತ್ತು ಲಕ್ಷ ರೂಪಾಯಿ ಬರುತ್ತದೆ ಎಂದು ಲೆಕ್ಕ ಹಾಕಿದ್ದ ಭಾರತದ ಕಂಪನಿಗೆ ಈಗ ಬರುವುದು ಎಂಟು ಲಕ್ಷ ಮಾತ್ರವೆ. ಮೊದಲೆ ಹೇಳಿದಂತೆ ಇಲ್ಲಿ ಯಾರೂ ಬೆಲೆಯಲ್ಲಿ ಚೌಕಾಸಿ ಮಾಡಿಲ್ಲ. ಆಗಿರುವ ಚಮತ್ಕಾರವೆಲ್ಲ ಕರೆನ್ಸಿಯಲ್ಲಿಯ ಏರಿಳಿತದಲ್ಲಿ ಮಾತ್ರ.

ಇಂತಹ ಸ್ಥಿತಿಯಲ್ಲಿ ಹತ್ತಾರು ಲಕ್ಷ ಜನರಿಗೆ ಉದ್ಯೋಗ ನೀಡಿರುವ ಐಟಿ ಕಂಪನಿಗಳ ಮತ್ತು ಗಾರ್ಮೆಂಟ್ ಕಂಪನಿಗಳ ಸ್ಥಿತಿ ಏನಾಗುತ್ತದೆ ಎನ್ನುವುದೆ ಗಂಭೀರವಾದ ವಿಷಯ. ಲಾಭವೆ ಮುಖ್ಯವಾಗಿರುವ, ವರ್ಷಕ್ಕೆ ಶೇ.30 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ವೃದ್ಧಿಯಾಗುತ್ತಿರುವ ಐಟಿ ಕಂಪನಿಗಳು, ಅದರಲ್ಲೂ ವಿಶೇಷವಾಗಿ ಸ್ಟಾಕ್‌ಮಾರ್ಕೆಟ್‌ನಲ್ಲಿ ಟ್ರೇಡ್ ಮಾಡುತ್ತಿರುವ ಟಿಸಿಎಸ್, ಇನ್ಫೋಸಿಸ್, ವಿಪ್ರೊ, ಸತ್ಯಂ, ಮುಂತಾದ ಕಂಪನಿಗಳು ಯಾವಾಗಲೂ ಗಣನೀಯ ಪ್ರಮಾಣದ ಲಾಭ ತೋರಿಸುತ್ತಿರಲೇ ಬೇಕು. ಇಲ್ಲದಿದ್ದರೆ ಅವುಗಳ ಷೇರಿನ ಬೆಲೆ ಇಳಿಯುತ್ತ ಹೋಗುತ್ತದೆ. ಹಾಗೆ ಆಗದೆ ಇರುವಂತೆ ಅವರು ನೋಡಿಕೊಳ್ಳಬೇಕಾದರೆ ತಮ್ಮ ಖರ್ಚುಗಳನ್ನು ಕಮ್ಮಿ ಮಾಡಿಕೊಳ್ಳಬೇಕು. ಪ್ರಾಜೆಕ್ಟ್ ಇಲ್ಲದಿದ್ದರೆ ಹೊಸಬರನ್ನು ಕೆಲಸಕ್ಕೆ ತೆಗೆದುಕೊಳ್ಳಲೇ ಬಾರದು. ಈಗಾಗಲೆ ಪ್ರಾಜೆಕ್ಟ್ ಇಲ್ಲದೆ ಕುಳಿತಿರುವ ತನ್ನ ನೌಕರರನ್ನು ಕೆಲಸದಿಂದ ತೆಗೆಯಬೇಕು. ತಾವು ಒಪ್ಪಿಕೊಂಡ ಕೆಲಸವನ್ನು ತಮಗಿಂತ ಕಮ್ಮಿಗೆ ಬೇರೆ ಯಾರಾದರೂ ಮಾಡಿದರೆ (ಹೊರದೇಶವಾದರೂ ಸರಿ) ಅವರಿಗೆ ಔಟ್‌ಸೋರ್ಸ್ ಮಾಡಬೇಕು. ತಮ್ಮಲ್ಲಿ ಕೆಲಸ ಮಾಡುತ್ತಿರುವವರಿಗೆ ಸ್ಥಿತಿ ಉತ್ತಮವಾಗುವ ತನಕ ಸಂಬಳ ಜಾಸ್ತಿ ಮಾಡಬಾರದು. ಅವರಿಗೆ ಕೊಡುತ್ತಿರುವ ಕೆಲವು ಸೌಲಭ್ಯಗಳನ್ನು ತೆಗೆಯಬೇಕು.

ನಮ್ಮ ಐಟಿ ಕಂಪನಿಗಳು ಇವೆಲ್ಲವನ್ನೂ ಮಾಡಿದರೆ ಮಾತ್ರ ಅವರ ಸ್ಟಾಕ್ ಬೆಲೆ ಹಾಗೆ ಇರುತ್ತದೆ. ಐಟಿ ಕಂಪನಿಗಳು ಅದನ್ನು ಮಾಡಿಯೂ ತೀರುತ್ತವೆ. ಐದಾರು ವರ್ಷದ ಹಿಂದೆ ಇಂತಹುದೆ ಸ್ಥಿತಿ ಬಂದಿದ್ದಾಗ ಭಾರತದ ಪ್ರಸಿದ್ಧ ಐಟಿ ಕಂಪನಿಯೊಂದು ಕಕ್ಕಸು ಕೋಣೆಯಲ್ಲಿ ಸುರುಳಿ ಒದಗಿಸುವುದನ್ನೆ ನಿಲ್ಲಿಸಿಬಿಟ್ಟಿತು. ಕಛೇರಿಯಲ್ಲಿ ಇರುವುದೆಲ್ಲ ಪಾಶ್ಚಾತ್ಯ ಮಾದರಿಯ ಕಮೋಡ್‌ಗಳು; ಒರೆಸಿಕೊಳ್ಳಲು ಕಾಗದವೆ ಇಲ್ಲ! ಆಗ ಆ ಕಂಪನಿಯೇನೂ ನಷ್ಟದಲ್ಲಿರಲಿಲ್ಲ. ಆಗಲೂ ನೂರಾರು ಕೋಟಿ ಲಾಭ ಮಾಡುತ್ತಿತ್ತು. ಅಷ್ಟಿದ್ದರೂ, ಕಾಗದಸುರುಳಿ ಕೊಡದೆ ಇರುವುದರಿಂದ ವರ್ಷಕ್ಕೆ ಎಷ್ಟೊಂದು ಲಕ್ಷ ರೂಪಾಯಿ ಉಳಿತಾಯವಾಗುತ್ತಿದೆ ಎಂಬ ಲೆಕ್ಕ ಬೇರೆ ಕೊಟ್ಟಿತು ಅದು ತನ್ನ ನೌಕರರಿಗೆ. ಸ್ಟಾಕ್ ಮಾರ್ಕೆಟ್ ಹೋದ ಕಾರಣದಿಂದಾಗಿ ನೂರಾರು ಕೋಟಿ ರೂಪಾಯಿಗಳ ನಗದು ಹಣ ಹೊಂದಿರುವ ಐಟಿ ಕಾರ್ಖಾನೆಗಳದೆ ಈ ಗತಿಯಾದರೆ ಇನ್ನು ಬಹುಪಾಲು ಕೌಟುಂಬಿಕ ಯಜಮಾನಿಕೆಗಳಲ್ಲಿಯೆ ನಡೆಯುವ ಗಾರ್ಮೆಂಟ್ ಕಾರ್ಖಾನೆಗಳ ಗತಿ ಏನಾಗಬಹುದು?

ರೂಪಾಯಿಯ ಮೌಲ್ಯ ಹೆಚ್ಚಾಗಿರುವುದರಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಐಟಿ ಕಂಪನಿಗಳು ತಮ್ಮ ವಿದೇಶಿ ಗ್ರಾಹಕರೊಡನೆ ಚೌಕಾಸಿಗೆ ಇಳಿಯಬಹುದು. ಅದರಲ್ಲೂ ಬಹುಮುಖ್ಯ ಪ್ರಾಜೆಕ್ಟ್‌ಗಳನ್ನು ಭಾರತಕ್ಕೆ ಔಟ್‌ಸೋರ್ಸ್ ಮಾಡಿರುವ ವಿದೇಶಿ ಕಂಪನಿಗಳು ಈ ಚೌಕಾಸಿಗೆ ಒಪ್ಪಿಕೊಳ್ಳಲೂ ಬಹುದು. ಯಾಕೆಂದರೆ ಅವರಿಗೆ ರಾತ್ರೊರಾತ್ರಿ ಇನ್ನೊಂದು ದೇಶಕ್ಕೆ ಈ ಪ್ರಾಜೆಕ್ಟ್‌ಗಳನ್ನು ಸಾಗಿಸಲು ಆಗುವುದಿಲ್ಲ. ಆದರೆ ಇದೇ ಮಾತನ್ನು ಗಾರ್ಮೆಂಟ್ ಕಾರ್ಖಾನೆಗಳ ವಿಚಾರಕ್ಕೆ ಹೇಳಲಾಗುವುದಿಲ್ಲ. ನಮಗಿಂತ ಕಮ್ಮಿ ಬೆಲೆಗೆ ಬಟ್ಟೆಬರೆ ಹೊಲಿದು ಕೊಡಲು ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕ ಮುಂತಾದ ನಮ್ಮ ಅಕ್ಕಪಕ್ಕದ ದೇಶಗಳೆ ಇವೆ. ಇನ್ನು ಈ ಗಾರ್ಮೆಂಟ್ ಕಂಪನಿಗಳ ಲಾಭವೂ ಸಾಫ್ಟ್‌ವೇರ್ ಕಂಪನಿಗಳಿಗೆ ಇದ್ದಂತೆ ಶೇ. 30-40 ರ ರೇಂಜಿನಲ್ಲಿ ಇರುವುದು ಸಂಶಯ. ಹಾಗಾಗಿ ಸದ್ಯದ ಸ್ಥಿತಿಯಲ್ಲಿ ಅವರಿಗೆ ಲಾಭದ ಪ್ರಮಾಣ ಕಡಿಮೆ ಆಗಿ, ಕೆಲವರಿಗೆ ಸರಿದೂಗಿಸಿಕೊಂಡು ಹೋಗುವುದೆ ಕಷ್ಟವಾಗಿ ಬಿಟ್ಟಿರಬಹುದು. ಈಗಾಗಲೆ ಕೆಲವೊಂದು ಕಡೆ ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ನೌಕರರನ್ನು ತೆಗೆಯುತ್ತಿದ್ದಾರೆ ಎಂಬ ಸುದ್ದಿಗಳು ಬರಲು ಆರಂಭವಾಗಿವೆ. ಭಾರತೀಯ ಟೆಕ್ಸ್‌ಟೈಲ್ ಉದ್ಯಮದ ಒಕ್ಕೂಟ ಸಂಸ್ಥೆ ಏರಿರುವ ರೂಪಾಯಿಯಿಂದಾಗಿ ಹೊಸ ಉದ್ಯೋಗ ಸೃಷ್ಟಿಯಾಗುವುದಿರಲಿ, ಇರುವವರಲ್ಲಿಯೆ 2.72 ಲಕ್ಷ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನುತ್ತಿದೆ. ಕೆಳಮಟ್ಟದಲ್ಲಿ, ಬಡವರಲ್ಲಿ, ಹೆಚ್ಚಿನ ವಿದ್ಯಾಭ್ಯಾಸ ಇಲ್ಲದ ಜನವರ್ಗದಲ್ಲಿ ಸದ್ದಿಲ್ಲದ ಕ್ರಾಂತಿ ಉಂಟು ಮಾಡುತ್ತಿದ್ದ ಗಾರ್ಮೆಂಟ್ ಉದ್ಯಮಕ್ಕೆ ಬರಲಿರುವ ದಿನಗಳು ಅಷ್ಟೇನೂ ಚೆನ್ನಾಗಿಲ್ಲ. ರೂಪಾಯಿಯ ಮೌಲ್ಯ ಮತ್ತೆ ಕಮ್ಮಿಯಾಗಿ ನಮ್ಮ ರಫ್ತು ಉತ್ಪನ್ನಗಳು ಅಗ್ಗವಾದರೂ ಈ ಉದ್ಯಮಕ್ಕೆ ಹೊರಗಿನ ದೇಶಗಳಲ್ಲಿ ಪೈಪೋಟಿ ಇದ್ದೇ ಇದೆ.

ಹೀಗೆ, ರೂಪಾಯಿಯ ಬೆಲೆ ಹೆಚ್ಚಾಗಿದ್ದರಿಂದ ನಮ್ಮ ದೇಶದ ಉತ್ಪನ್ನಗಳು ಬೇರೆ ದೇಶದವರಿಗೆ ತುಟ್ಟಿಯಾಗುತ್ತವೆ, ಇಲ್ಲವೆ ಇನ್ನು ಮೇಲೆ ನಮ್ಮವರು ಬಹಳ ಕಮ್ಮಿ ಲಾಭಾಂಶ ಇಟ್ಟುಕೊಳ್ಳಬೇಕು. ಇಂತಹ ಸ್ಥಿತಿಯಲ್ಲಿ ಹೊಸ ಉದ್ಯೋಗಗಳು ಬೇಗ ಸೃಷ್ಟಿಯಾಗುವುದಿಲ್ಲ. ಇಂತಹ ಸ್ಥಿತಿ ಬರಬಾರದು ಎಂದೇ ಚೀನಾ ದೇಶ ತನ್ನ ಯೆನ್ ಮೌಲ್ಯ ಜಾಸ್ತಿ ಇದ್ದರೂ ಅದು ಕೃತಕವಾಗಿ ಕಮ್ಮಿಯಿರುವಂತೆ ನೋಡಿಕೊಂಡಿದ್ದರು. ಹಾಗಾಗಿಯೆ ಚೀನಾದ ಉತ್ಪನ್ನಗಳು ಹೊರಗಿನವರಿಗೆ ಯಾವಾಗಲೂ ಅಗ್ಗ.

ಈಗ ನಮ್ಮವರು ಅದೇ ದುಡ್ಡಿಗೆ ಹೆಚ್ಚು ಸಾಮಾನುಗಳನ್ನು ಹೊರದೇಶಗಳಿಂದ ಕೊಂಡುಕೊಳ್ಳಬಹುದು. ಇದು ಜೀವನಾವಶ್ಯಕ ವಸ್ತುಗಳ ವಿಚಾರಕ್ಕೆ ಆದರೆ ದೇಶಕ್ಕೆ ನಷ್ಟವೇನಿಲ್ಲ. ಆದರೆ ಲಕ್ಷುರಿ ಸಾಮಾನುಗಳನ್ನು ಆಮದು ಮಾಡಿಕೊಳ್ಳುತ್ತ ಹೋದರೆ, ವಿದೇಶಗಳಲ್ಲಿ ಮೋಜು ಉಡಾಯಿಸುವುದು ಅಗ್ಗ ಎಂದುಕೊಂಡು ಓಡುತ್ತಿದ್ದರೆ ಅದರಿಂದ ದೇಶಕ್ಕೆ ಅಪಾಯವೆ ಹೆಚ್ಚು. ಜಾಗತೀಕರಣ, ಬಡವರು-ಬಲ್ಲಿದರು, ಎಮ್.ಎನ್.ಸಿಗಳ ಶೋಷಣೆ ಎಂದೆಲ್ಲ ಬಾಯಿಬಡಿದುಕೊಳ್ಳುವವರೆ ಬೆಂಜ್ ಕಾರು ಕೊಳ್ಳುವ ದೇಶ ನಮ್ಮದು. ಹೀಗಿರುವಾಗ ನಮ್ಮಲ್ಲಿ ದುಡ್ಡಿರುವವರೆಲ್ಲ ಇನ್ನು ಮುಂದೆ ದೇಶದಲ್ಲಿ ತಯಾರಾಗುವ ಮಾರುತಿ, ಟಾಟಾ, ಬಿಪಿಎಲ್ ಬಿಟ್ಟು ಅದೇ ಬೆಲೆಗೆ ಸಿಗುವ ಬಿಎಮ್‌ಡಬ್ಲ್ಯು, ಮರ್ಸಿಡಿಸ್, ಸೋನಿ ಕೊಳ್ಳುತ್ತಾರೆ. ಇಂತಹ ಚಾಳಿ ಹೆಚ್ಚಾದರೆ ರೂಪಾಯಿಯ ಮೌಲ್ಯ ಹೆಚ್ಚಾಗಿದ್ದರಿಂದ ದೇಶಕ್ಕೆ ಯಾವ ರೀತಿಯಿಂದಲೂ ಒಳ್ಳೆಯದಾದಂತಾಗುವುದಿಲ್ಲ. ಇದರಿಂದ ನಮ್ಮ ದೇಶದ ಒಳಗಿನ ಜನರಿಗೆ ಉದ್ಯೋಗ ನಷ್ಟವಾಗುತ್ತ ಹೋಗುತ್ತದೆ.

ಆದರೆ, ಈ ಸ್ಥಿತಿ ಮತ್ತೊಂದು ತಿರುವಿಗೆ ಕಾರಣವಾದರೆ ಅದರಿಂದ ಒಳ್ಳೆಯದೂ ಆಗಬಹುದು. ವಿದೇಶದ ಜನರಿಗೆ ಬಟ್ಟೆ ಹೊಲಿಯುವುದರ ಬದಲು ನಮ್ಮವರು ದೇಶದೊಳಗಿನ ಜನರಿಗೇ ಬಟ್ಟೆ ಹೊಲಿದುಕೊಡಬಹುದು. ಉತ್ತಮ ಗುಣಮಟ್ಟದ ಬಟ್ಟೆ ಆಗ ಕಮ್ಮಿ ಬೆಲೆಗೆ ಸಿಗಬಹುದು. ಅಮೇರಿಕದ ಕಂಪನಿಗಳತ್ತ ಮುಖ ಮಾಡಿರುವ ಸಾಫ್ಟ್‌ವೇರ್ ಕಂಪನಿಗಳು ನಮ್ಮ ದೇಶಕ್ಕೆ ಅಗತ್ಯವಾದ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಲು ಮುಂದಾಗಬಹುದು. ಹೊರಗಿನಿಂದ ಬರುವ/ಹೋಗುವ ಹಣದ ಪ್ರಮಾಣ ಕಮ್ಮಿಯಾಗಿ ಬಂಡವಾಳ ದೇಶದ ಒಳಗೇ ಹರಿಯುವ ಸಾಧ್ಯತೆ ಹೆಚ್ಚಾಗಬಹುದು. ಒಟ್ಟಿನಲ್ಲಿ ರಫ್ತು-ಆಮದು ಕೇಂದ್ರಿತ ಆರ್ಥ ವ್ಯವಸ್ಥೆಯ ಪರದೇಶಿ ಅವಲಂಬನೆ ಕಮ್ಮಿಯಾಗಬಹುದು. ಆದರೆ ಅದನ್ನು ಕಾಲವೆ ಹೇಳಬೇಕು.

ಒಟ್ಟಿನಲ್ಲಿ ಇದೊಂದು ರೀತಿಯ ವಿಚಿತ್ರ ಸ್ಥಿತಿ. ಕೆಲವರು ರೂಪಾಯಿಯ ಮೌಲ್ಯ ಹೆಚ್ಚಾಗಿದ್ದರಿಂದ ಒಳ್ಳೆಯದಾಯಿತು ಎನ್ನುತ್ತಿದ್ದರೆ ಮತ್ತೆ ಕೆಲವರು ಅದರಿಂದ ಕಷ್ಟದ ದಿನಗಳು ಬರಲಿವೆ ಎನ್ನುತ್ತಿದ್ದಾರೆ. ಹೆಚ್ಚಾಗಬೇಕು ಎಂದು ಬಯಸಿದರೆ ಕೆಲವೊಂದು ಉದ್ಯಮಗಳು ನಷ್ಟಕ್ಕೆ ಸಿಲುಕುತ್ತವೆ. ಅಲ್ಲಿ ಉದ್ಯೋಗ ಸೃಷ್ಟಿಯಾಗುವುದಿಲ್ಲ. ಕಮ್ಮಿಯಾಗಲಿ ಎಂದು ಬಯಸಿದರೆ ಪೆಟ್ರೋಲ್‌ನಂತಹ ವಸ್ತುಗಳ ಬೆಲೆ ಹೆಚ್ಚಾಗುತ್ತದೆ. ವಿದೇಶಗಳ ಮೇಲಿನ ಅವಲಂಬನೆ ಜಾಸ್ತಿಯಾಗುತ್ತದೆ. ರೂಪಾಯಿ ಬೆಲೆ ಜಾಸ್ತಿಯಾಗಿದ್ದಕ್ಕೆ ಸಂತೋಷ ಪಡುತ್ತಿರುವವರ ಸಂತಸ ಸಕಾರಣ ಎನ್ನುವಂತಿಲ್ಲ. ಕಮ್ಮಿಯಾಗಲಿ ಎಂದು ಬಯಸುವವರನ್ನು ಸಂಶಯದ ದೃಷ್ಟಿಯಿಂದ ನೋಡದೆ ಇರಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಜನಸಾಮಾನ್ಯರಲ್ಲಿ ಆರ್ಥಿಕ ವಿಚಾರಗಳು ಹೆಚ್ಚೆಚ್ಚು ಚರ್ಚೆಯಾಗುವುದಂತೂ ನಿಜ. ಆ ಸಮಯದಲ್ಲಿ ಏನೇ ಆಗಲಿ ಅದರಿಂದ ದೇಶಕ್ಕೆ ಒಳ್ಳೆಯದಾಗಲಿ ಎಂದು ಬಯಸುವುದಷ್ಟೆ ನಾವು ಜನಸಾಮಾನ್ಯರು ಮಾಡಬಹುದಾದದ್ದು.

ಅಥವ, ಇನ್ನೇನಾದರೂ ಮಾಡುವುದು ಇದೆಯೆ?

Oct 4, 2007

ಚೀನಾದಲ್ಲಿ ಜೀವಿಸಲು ಕಾರಣಗಳೆ ಇಲ್ಲವಂತೆ ?!

(ವಿಕ್ರಾಂತ ಕರ್ನಾಟಕ - ಅಕ್ಟೋಬರ್ 5, 2007 ರ ಸಂಚಿಕೆಯಲ್ಲಿನ ಬರಹ)

"ಚೀನಾವನ್ನು ಸುತ್ತು ಹಾಕಿಕೊಂಡು ಬಂದರೆ ಅಲ್ಲಿ ಬದುಕಲು ಕಾರಣಗಳೇ ಇಲ್ಲ ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ." ಹೀಗೆಂದು ಸಾರಾಸಗಟಾಗಿ ಬರೆದ ವಾಕ್ಯವನ್ನು ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ಮೊದಲ ಪುಟದಲ್ಲಿ ನೋಡಿ ನಿಜಕ್ಕೂ ಗಾಬರಿಯಾಯಿತು. 132 ಕೋಟಿ ಜನರ, ಜನಸಂಖ್ಯೆಯ ದೃಷ್ಟಿಯಿಂದ ಪ್ರಪಂಚದಲ್ಲಿಯೆ ಅತಿ ದೊಡ್ಡ ದೇಶವಾದ ಚೀನಾದ ಅಷ್ಟೂ ಜನರನ್ನು ಕಾರಣಗಳಿಲ್ಲದ ಬದುಕುತ್ತಿರುವ ಜನ ಎಂದು ಭಾವಿಸುವುದು ಕೇವಲ ಅಮಾನವೀಯ ಮಾತ್ರವಲ್ಲ ಜೀವವಿರೋಧಿಯೂ ಸಹ, ಅಲ್ಲವೆ?

ರವೀಂದ್ರ ಭಟ್ಟ ಎನ್ನುವವರು ಪ್ರಜಾವಾಣಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು. ಆಗಸ್ಟ್‌ನಲ್ಲಿ ಕರ್ನಾಟಕದ ಶಾಸಕರ ಎರಡು ತಂಡಗಳು ಚೀನಾ ಪ್ರವಾಸ ಮಾಡಿದ್ದು ನಿಮಗೆ ನೆನಪಿರಬಹುದು. ಆ ಪ್ರವಾಸವನ್ನು ಕವರ್ ಮಾಡಲು ಪ್ರಜಾವಾಣಿ ವತಿಯಿಂದ ನಿಯುಕ್ತರಾದವರು ಭಟ್ಟರು. ಶಾಸಕರ ಪ್ರವಾಸದ ಬಗ್ಗೆ, ಅಲ್ಲಿ ಶಾಸಕರು ಮೊಬೈಲ್ ಸಿಮ್‌ಕಾರ್ಡ್ ದೊರಕಿಸಿಕೊಂಡ ಬಗ್ಗೆ, ಕನ್ನಡದ ಕುಟುಂಬವೊಂದು ಶಾಸಕರಿಗೆ ಭಾಷೆಯ ಮತ್ತು ಇಡ್ಲಿಸಂಬಾರ್‌ನಂತಹ ಭಾರತೀಯ ಊಟತಿಂಡಿಯ ವಿಚಾರಕ್ಕೆ ಸಹಾಯ ಮಾಡುತ್ತಿರುವ ಬಗ್ಗೆ ಇವರು ಚೀನಾದಿಂದಲೆ ಪ್ರಜಾವಾಣಿಗೆ ಬರೆಯುತ್ತಿದ್ದ ನೇರಪ್ರಸಾರದ ವರದಿಗಳನ್ನು ಮುಂಚೆಯೇ ಓದಿದ್ದೆ. ಅವರು ಬರೆದದ್ದೆಲ್ಲವೂ ಬಹಳ ಮಟ್ಟಿಗೆ Human Interest Stories. ಆದರೆ ರಾಜ್ಯದ ಜನತೆಯ ಖರ್ಚಿನಲ್ಲಿ ಪ್ರವಾಸ ಹೋಗಿದ್ದ ಶಾಸಕರ ಮೂಲ ಉದ್ದೇಶವಾಗಿದ್ದ ಚೀನಾದ ಅಭಿವೃದ್ಧಿಯನ್ನು ಕುರಿತಾಗಿ ಶಾಸಕರು ಕಲಿತದ್ದನ್ನಾಗಲಿ, ಕಲಿಯಲು ಪ್ರಯತ್ನಿಸಿದ್ದಾನ್ನಾಗಲಿ ಭಟ್ಟರು ಬರೆದದ್ದು ಕಂಡುಬರಲಿಲ್ಲ. ಇದಕ್ಕೆ ಕಾರಣ ಅವರು ಬರೆಯದೆ ಇರುವುದಾಗಿರಬಹುದು ಅಥವ ಆ ಲೇಖನ ನನಗೆ ಕಾಣಸಿಗದೆ ಹೋಗಿದ್ದೂ ಆಗಿರಬಹುದು.

ಆದರೆ, ಪ್ರವಾಸ ಮುಗಿದ ನಂತರ ಭಟ್ಟರು ತಮ್ಮ ಇಡೀ ಪ್ರವಾಸದ ಅನುಭವವನ್ನು, ಗ್ರಹಿಕೆಯನ್ನು ಸಾಪ್ತಾಹಿಕ ಪುರವಣಿಯ ಲೇಖನದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಎದ್ದು ಕಾಣುವುದು, "ಚೀನಾವನ್ನು ಸುತ್ತು ಹಾಕಿಕೊಂಡು ಬಂದರೆ ಅಲ್ಲಿ ಬದುಕಲು ಕಾರಣಗಳೇ ಇಲ್ಲ ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ," "ಚೀನಾದಲ್ಲಿ ವೈವಿಧ್ಯತೆಯೆ ಇಲ್ಲ, ಅದರಿಂದಾಗಿ ಅಲ್ಲಿ ಜೀವನಾಸಕ್ತಿಯೇ ಇಲ್ಲ," "ಭಾರತದಲ್ಲಿಯ ಭಾಷಾ ವೈವಿಧ್ಯದಿಂದಾಗಿ ಹಾಗೂ ಜಾತಿವ್ಯವಸ್ಥೆಯಿಂದಾಗಿ ಇಲ್ಲಿ ಜೀವನೋತ್ಸಾಹ ಉಕ್ಕಿ ಹರಿಯುತ್ತಿದೆ," "ಅಲ್ಲಿ ದೇವಸ್ಥಾನ ಎಂಬುದಿಲ್ಲ, ಇರುವುದೆಲ್ಲ ಸ್ಮಾರಕಗಳೆ ಹಾಗೂ ಅಲ್ಲಿ ಇಂಗ್ಲಿಷ್ ಕಲಿತವರು ಕ್ರೈಸ್ತ ಮತವನ್ನೂ ಸ್ವೀಕರಿಸುತ್ತಿದ್ದಾರೆ," "ಅಲ್ಲಿ ಕುಟುಂಬ ವ್ಯವಸ್ಥೆಯೆ ಹದಗೆಟ್ಟು ಹೋಗಿದೆ," ಎನ್ನುವಂತಹ ಭಾರತ ಮತ್ತು ಚೀನಾದ ಸಾಮಾಜಿಕ ಸ್ಥಿತಿಗತಿಗಳನ್ನು ತುಲನೆ ಮಾಡುವ ಖಡಾಖಂಡಿತ ಮಾತುಗಳು.

ಲೇಖನದ ವಿಡಿಯೊ ಪ್ರಸ್ತುತಿ

ಕಳೆದ ಆರು ವರ್ಷಗಳಿಂದ ಚೀನಾ ಮೂಲದ ನಾಲ್ಕಾರು ಜನರೊಡನೆ ಸ್ವತಃ ಒಡನಾಡಿದ ಅನುಭವವುಳ್ಳ, ಕೆಲಸದ ಪ್ರಯುಕ್ತ ಒಂದಿಬ್ಬರೊಡನೆ ಪ್ರತಿದಿನವೂ ವ್ಯವಹರಿಸಬೇಕಾದ ಅಗತ್ಯತೆ ಇರುವ ನನಗೆ ಭಟ್ಟರ ಲೇಖನ ಪಕ್ಕಾ Racist ಮಾತ್ರವಲ್ಲ, ದುರುದ್ದೇಶಪೂರಿತವಾದ, ಅವರಿಗಷ್ಟೆ ಗೊತ್ತಿರಬಹುದಾದ ದ್ವೇಷಮಯ ಕಾರಣಗಳಿಂದ ಪ್ರೇರಿತವಾದದ್ದು ಎನ್ನಿಸಿತು.

ಇಷ್ಟೇ ಅಪಾಯಕಾರಿಯಾದದ್ದು ಜಾತಿವಾದಕ್ಕೆ ಭಟ್ಟರು ಕೊಡುತ್ತಿದ್ದ ನೇರ ಸಮರ್ಥನೆ. 'ಭಾರತದಲ್ಲಿಯ ಜೀವನೋತ್ಸಾಹಕ್ಕೆ ಇಲ್ಲಿರುವ ಜಾತಿವೈವಿಧ್ಯತೆಯೂ ಒಂದು ಪ್ರಮುಖ ಕಾರಣ' ಎನ್ನುವ ನೂತನ-ಸಂಶೋಧನೆಯನ್ನು ಎರಡು ಕಡೆ ಒತ್ತಿ ಹೇಳುತ್ತಾರೆ. ಇವರ ಪ್ರಕಾರ ಜಾತಿವೈವಿಧ್ಯ ಹಾಗೂ ಭಾಷಾವೈವಿಧ್ಯಗಳಿಲ್ಲದ ಸಮಾಜ ಮತ್ತು ದೇಶಗಳಲ್ಲಿ ಜೀವನೋತ್ಸಾಹ ಇಲ್ಲ ಮತ್ತು ಅಲ್ಲಿನ ಜನಕ್ಕೆ ಜೀವಿಸಲು ಕಾರಣಗಳೂ ಇಲ್ಲ.

ಕನ್ನಡದ ಪತ್ರಕರ್ತರಾಗಿರುವ ರವೀಂದ್ರ ಭಟ್ಟರಿಗೆ ಚೀನಾದಲ್ಲಿಯ ಬಹುಸಂಖ್ಯಾತ ಜನ ಮಾತನಾಡುವ ಮ್ಯಾಂಡರಿನ್ ಭಾಷೆಯಾಗಲಿ, ಅಥವ ಕ್ಯಾಂಟೊನಿಸ್ ಭಾಷೆಯಾಗಲಿ ಗೊತ್ತಿರುವ ಸಾಧ್ಯತೆ ಕಡಿಮೆ ಎಂದು ಭಾವಿಸಿಕೊಳ್ಳುತ್ತ ಹೇಳಬಹುದಾದರೆ, ಅವರು ಕನಿಷ್ಠ ಒಂದೆರಡು ಚೀಣೀ ಕುಟುಂಬಗಳೊಡನೆ ಒಡನಾಡಿರುವ ಸಾಧ್ಯತೆಗಳೂ ಇಲ್ಲ ಎಂದುಕೊಳ್ಳಬಹುದು. ಅಷ್ಟಕ್ಕೂ ಅವರು ಹೋಗಿದ್ದದ್ದು ನಮ್ಮ ಸರ್ಕಾರದ ಖರ್ಚಿನಲ್ಲಿ ಮತ್ತು ಬಹುಶಃ ಅಲ್ಲಿನ ಸರ್ಕಾರದ ಅತಿಥಿಯಾಗಿ. ಈ ತರಹದ "ಅಧಿಕೃತ ಪ್ರವಾಸ" ದಲ್ಲಿ ಆಗಬಹುದಾದ ಅನುಭವಗಳ ಆಧಾರದ ಮೇಲೆಯೆ 132 ಕೋಟಿ ಜನಸಂಖ್ಯೆಯ ಚೀನಾದಲ್ಲಿ "ಕುಟುಂಬ ವ್ಯವಸ್ಥೆಯೆ ಹದಗೆಟ್ಟು ಹೋಗಿದೆ" ಎನ್ನುವುದು ಅಹಂಕಾರದ ಮಾತಷ್ಟೆ ಅಲ್ಲ, ಅದು ಓದುಗರಿಗೂ ಮಾಡುವ ಅಪಚಾರ ಮತ್ತು ಮೋಸ.

ಈ ಲೇಖನವನ್ನು ಓದಿದ ಮಾರನೆಯ ದಿನವೆ ನಾಲ್ಕು ವರ್ಷಗಳ ಹಿಂದೆಯಷ್ಟೆ ಚೀನಾದಿಂದ ಅಮೇರಿಕಕ್ಕೆ ಬಂದಿರುವ ನನ್ನ ಸಹೋದ್ಯೋಗಿಯನ್ನು ಕಾಫಿಗೆ ಕರೆದುಕೊಂಡು ಹೋಗಿ, "ಚೀನಾದಲ್ಲಿಯ ಕುಟುಂಬ ವ್ಯವಸ್ಥೆ ಮತ್ತು ನಿಮ್ಮ ಕೆಲವು ಕೌಟುಂಬಿಕ ವಿಚಾರಗಳನ್ನು ಹೇಳಿ," ಎಂದೆ. ನಾನು ಕಳೆದ ಸಾರಿ ಒಬ್ಬನೆ ಭಾರತಕ್ಕೆ ಬಂದಿದ್ದಾಗ ನಮ್ಮ ಮನೆಗೂ ಬಂದು ನನ್ನ ಹೆಂಡತಿಯನ್ನೂ, ಪುಟ್ಟ ಮಗುವನ್ನೂ ಮಾತನಾಡಿಸಿಕೊಂಡು ಹೋಗುತ್ತಿದ್ದ ಆಕೆಗೆ ನನ್ನ ಬಗ್ಗೆ ಬಹಳ ವಿಶ್ವಾಸವಿದೆ. ಹಾಗಾಗಿ ಆಕೆ ಯಾವುದನ್ನೂ ಮುಚ್ಚಿಟ್ಟುಕೊಳ್ಳದೆ ಮುಕ್ತವಾಗಿ ಹೇಳಿದಳು. ತನಗೆ ಹೇಳಲು ಗೊತ್ತಾಗದೆ ಇದ್ದದ್ದನ್ನು ತನ್ನ ಇನ್ನೊಬ್ಬ ಚೀಣೀ ಸ್ನೇಹಿತೆಯನ್ನು ಕರೆದು ಆಕೆಯಿಂದ ಹೇಳಿಸಿದಳು. ಆಕೆ ಎರಡನೆಯ ತಲೆಮಾರಿನ ಚೀಣೀ ಕ್ರೈಸ್ತಳು. ಮದುವೆಯಾಗಿರುವುದು ಬೌದ್ಧ ಮತದ ಮೂಲದವನನ್ನು. ನಮ್ಮಲ್ಲಿಯ ಅಂತರ್ಜಾತೀಯ ವಿವಾಹಕ್ಕೆ ಎದುರಾಗುವ ಅಡ್ಡಿಗಳ ಹಿನ್ನೆಲೆಯಲ್ಲಿ 'ಚೀನಾದಲ್ಲಿ ಕ್ರೈಸ್ತರು ಬೌದ್ಧ ಮತದವರನ್ನು ಮದುವೆಯಾಗಲು ಸಮಾಜ ಅಡ್ಡಿ ಮಾಡುವುದಿಲ್ಲವೆ' ಎಂದು ಕೇಳಿದೆ. ಅದಕ್ಕೆ ಆಕೆ ನನ್ನತ್ತ ಕನಿಕರದಿಂದ ನೋಡಿದಳು! ಅವರಿಬ್ಬರೊಡನೆ ಮಾತನಾಡಿದ ಮೇಲೆ ನನಗೆ ಭಟ್ಟರ ಬಗ್ಗೆ ಮತ್ತು ಅವರ ದುರುದ್ದೇಶಪೂರಿತ, ಪೂರ್ವಗ್ರಹಪೀಡಿತ, ಅರೆಬರೆ ಸುಳ್ಳುಗಳ ಲೇಖನದ ಬಗ್ಗೆ, ಮತ್ತು ನಮಗೆ ಓದಲು ಸಿಗುವ ಲೇಖನಗಳ ಖಚಿತತೆಯ ದುರದೃಷ್ಟತೆಯ ಬಗ್ಗೆ ಕನಿಕರ ಹೆಚ್ಚುತ್ತ ಹೋಯಿತು.

ಭಟ್ಟರ ಹಾಗೆ ಪ್ರವಾಸ ಹೋಗಿಬಂದವರು ಬರೆದದ್ದನ್ನು ಸಾಮಾನ್ಯವಾಗಿ ಬಹಳಷ್ಟು ಜನ ಮುಗ್ಧ ಓದುಗರು ಪ್ರಶ್ನಿಸದೆ ಒಪ್ಪಿಕೊಂಡು ಬಿಡುತ್ತಾರೆ. ಇವೆಲ್ಲವೂ ಇನ್ನೊಂದು ದೇಶದ ಬಗ್ಗೆ ಲೇಖಕರೊಬ್ಬರು ನೀಡುತ್ತಿರುವ ಸಾಂಸ್ಕೃತಿಕ ಮತ್ತು ಚಾರಿತ್ರಿಕ ದಾಖಲೆಗಳು. ಓದುಗರು ಇಂತಹ ಲೇಖನಗಳ ಆಧಾರದ ಮೇಲೆ ಒಂದು ಇಡೀ ಸಮುದಾಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುತ್ತಾರೆ. ಹಾಗಾಗಿಯೆ ಇಂತಹ ಲೇಖನಗಳನ್ನು ಬರೆಯುವಾಗ ಬರಹಗಾರರು ಬಹಳ ಎಚ್ಚರಿಕೆಯಿಂದ ಇರಬೇಕು. ಇದೇ ಲೇಖನ ಇಂಗ್ಲಿಷಿನಲ್ಲಿಯೊ, ಅಂತರ್ಜಾಲದಲ್ಲಿಯೊ ಬಂದಿದ್ದರೆ ಅದರ ಸರಿತಪ್ಪುಗಳ ಬಗ್ಗೆ ಯಾರಾದರೂ ಪ್ರತಿಕ್ರಿಯಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅಂತಹ ಸಂದರ್ಭಗಳಲ್ಲಿ ಕೊನೆಗೆ ನಿಲ್ಲುವುದು ಅದರ ಸರಿತಪ್ಪುಗಳ ಚರ್ಚೆಯ ಅಂತಿಮ ಮಾತು. ಆದರೆ ಕನ್ನಡದ ಪತ್ರಿಕೆಗಳ ಮಟ್ಟಿಗೆ ಹೇಳಬಹುದಾದರೆ ಇಂತಹ ವಿಷಯಕ್ಕೆ ನಾವು ದುರದೃಷ್ಟವಂತರು. ಯಾರೂ ಪ್ರತಿಕ್ರಿಯಿಸದೆ ಹೋಗುವ ಸಂಭವ ಹೆಚ್ಚಿರುವಾಗ ಲೇಖಕನ ಅರೆಬರೆ ಮಾತುಗಳೆ ಅಂತಿಮ ಸತ್ಯವಾಗಿ ಬಿಡುತ್ತದೆ.

ಇದನ್ನೆಲ್ಲ ನಮ್ಮವರು ಗಮನಿಸುವುದು ಯಾವಾಗ?

ಪ್ರಜಾವಾಣಿಯಲ್ಲಿಯ ರವೀಂದ್ರ ಭಟ್ಟರ ಲೇಖನ:
http://www.prajavani.net/Content/Sep162007/weekly2007091445995.asp


ಪ್ರಜಾವಾಣಿಗೆ ನಾನು ಬರೆದ ಪ್ರತಿಕ್ರಿಯೆ:
http://www.prajavani.net/Content/Sep232007/weekly2007092246923.asp

Sep 24, 2007

ಏನನ್ನೂ ಕಲಿಸದ ಕನ್ನಡ ಚಿತ್ರಗಳು...


ನಮ್ಮಲ್ಲಿ ವ್ಯಕ್ತಿಪೂಜೆ, ವ್ಯಕ್ತಿ‌ಆರಾಧನೆ ಯಾವ ಮಟ್ಟಕ್ಕೆ ಮುಟ್ಟಿದೆ ಅಂದರೆ ಅದು ಜನರ ಪ್ರಬುದ್ಧತೆಯನ್ನೆ ಹೊಸಕಿ ಹಾಕುತ್ತಿದೆ. ಮನರಂಜನೆಯ ಹೆಸರಿನಲ್ಲಿ ಜನರ ಚಿಂತನಶಕ್ತಿಯನ್ನು, ಬೌದ್ಧಿಕ ಪ್ರಗತಿಯನ್ನು ಅಣಕಿಸುತ್ತಿದೆ. ನನಗೆ ಯಾರೂ ಒಳ್ಳೆಯ ಪಾತ್ರ ಕೊಡುತ್ತಿಲ್ಲ, ಎನ್ನುವ ವಿಷ್ಣುವರ್ಧನ್‌ರಂತಹ ಪ್ರತಿಭಾಶಾಲಿ, ಕನ್ನಡದ ಈಗಿನ ನಂಬರ್ ಒನ್ ನಟ ಅಪರೂಪಕ್ಕೊಮ್ಮೆ ಸಿಕ್ಕಿದ ಪಾತ್ರದಲ್ಲಿ ತಮ್ಮ ಇಮೇಜು, ಇಸಮುಗಳನ್ನೆಲ್ಲ ಬಿಟ್ಟು ನಟಿಸಲಾಗಲಿಲ್ಲ ಅಂದರೆ ಅದು ಯಾರ ದೌರ್ಭ್ಯಾಗ್ಯ, ಯಾರ ದೌರ್ಬಲ್ಯ? ದೆಹಲಿಯಲ್ಲಿ ಶಾರುಖ್ ಯಾವುದೆ ಮೇಕಪ್ ಇಲ್ಲದೆ, ಹೀರೋಯಿನ್ ಇಲ್ಲದೆ, ಬಣ್ಣಗೆಟ್ಟ ಮನೆಯತ್ತ ಸ್ಕೂಟರ್ ತಳ್ಳುತ್ತ ನಟಿಸುತ್ತಿರುವಾಗ ನಮ್ಮಲ್ಲಿನ ಹಿರಿಯರಿಗೆ ರೈತನ ಪಾತ್ರದಲ್ಲೂ ಸೆಕ್ಸಿಯಾಗಿ ಕಾಣುವ ಹಂಬಲ!

ಇಡೀ "ಮಾತಾಡ್ ಮಾತಾಡು ಮಲ್ಲಿಗೆ"ಯ ಚಿತ್ರತಂಡದಲ್ಲಿಯ ಯಾರೊಬ್ಬರಿಗೂ "ಕರ್ನಾಟಕದ ಯಾವೊಬ್ಬ ರೈತನ ನಡೆ-ನುಡಿ-ವೇಷ-ಭೂಷಣಗಳು ಈ ರೀತಿಯಾಗಿ ಇರುವುದಿಲ್ಲ," ಎಂದು ಹೇಳುವ ಕಾಮನ್ ಸೆನ್ಸ್ ಆಗಲಿ ಧೈರ್ಯವಾಗಲಿ ಇಲ್ಲದೆ ಹೋಗಿಬಿಡುವುದು ಒಂದು ನಾಡಿನ ಜನರ ಸ್ವತಂತ್ರ ಮನೋಭಾವದ, ಪ್ರಬುದ್ಧತೆಯ ಉದಾಹರಣೆಯೂ ಆಗಬಹುದು. ಇದು ಕೇವಲ ಕರ್ನಾಟಕಕ್ಕೆ ಮಾತ್ರ ಅಂಟಿರುವ ರೋಗವಲ್ಲ. ಕನ್ನಡದ "ಅಪ್ತಮಿತ್ರ" ಎಂಬ ರಿಮೇಕ್ ಚಿತ್ರವೊಂದರ ರಿಮೇಕ್ ಆದ ತಮಿಳಿನ "ಚಂದ್ರಮುಖಿ" ಚಿತ್ರದಲ್ಲಿ ಹೆಣ್ಣೊಬ್ಬಳ ಮಾನಸಿಕ ಕಾಯಿಲೆ ಗುಣಪಡಿಸಲು ವೈದ್ಯನೊಬ್ಬ ಸಾಯಬೇಕು ಎಂದು ಕಣ್ಣೀರು ಸುರಿಸುವ ರಜನಿಕಾಂತ್ ತಮಿಳರ ಸಾಂಸ್ಕೃತಿಕ ನಾಯಕನಾಗಿ ಎಷ್ಟರ ಮಟ್ಟಿಗೆ ಪ್ರಬುದ್ಧತೆ ಮತ್ತು ಬದ್ಧತೆ ತೋರಿಸುತ್ತಿದ್ದಾರೆ? ತೆಲುಗಿನ ನಂಬರ್ ಒನ್ ನಟ ಚಿರಂಜೀವಿ ತಮ್ಮ ರಾಜಕೀಯ ಪ್ರವೇಶಕ್ಕೆ ಮುಹೂರ್ತ ಇಡುವುದರ ಬಗ್ಗೆ ಚರ್ಚೆ ಮಾಡಲು ಅಮೇರಿಕ ಪ್ರವಾಸದಲ್ಲಿ ತೊಡಗಿದ್ದರು ಎಂದು ಇತ್ತೀಚೆಗೆ ತಾನೆ ಕೆಲವು ತೆಲುಗು ಪತ್ರಿಕೆಗಳು ಹೇಳುತ್ತಿದ್ದವು. ಇಂಗ್ಲಿಷೇ ಬರದ ಹಳ್ಳಿಗನೊಬ್ಬ ಖಳನಾಯಕನನ್ನು ಹುಡುಕಿಕೊಂಡು ಅಮೇರಿಕಕ್ಕೆ ಬಂದು ಇಲ್ಲಿ ತನ್ನ ಸಾಹಸ, ಶೌರ್ಯ, ಪರಾಕ್ರಮ ಮೆರೆಸುವುದನ್ನು ಹೇಳುವ "ಜೈ ಚಿರಂಜೀವ" ಎಂಬ ಬಂಡಲ್ ಸಿನೆಮಾದಲ್ಲಿ ಎರಡು ವರ್ಷದ ಹಿಂದೆ ತಾನೆ ನಟಿಸಿರುವ ಇವರು ಯಾವ ಮಟ್ಟದಲ್ಲಿ ಜನರ ಬೌದ್ಧಿಕ ಪ್ರಗತಿಯನ್ನು ಮೇಲೆತ್ತಬಲ್ಲರು? ಏಳೂವರೆ ಕೋಟಿ ಜನಸಂಖ್ಯೆಯ ಆಂಧ್ರಕ್ಕೆ ಯಾವ ತರಹದ ಜನನಾಯಕರಾಗಬಲ್ಲರು?

ಈ ಸೂಪರ್‌ಸ್ಟಾರ್‌ಗಳಲ್ಲಿ ಕೆಲವರು ಈಗಾಗಲೆ ಕನ್ಯಾದಾನ ಮಾಡಿರುವ ಅಪ್ಪಂದಿರು; ಕೆಲವರು ತಾತಂದಿರು. ಆದರೂ ಅವರಿಗೆ ತಮ್ಮ ಮಗಳ ವಯಸ್ಸಿನ ಹಿರೋಯಿನ್‌ಗಳೆ ಬೇಕು. ತಮ್ಮ ಬೋಳು ತಲೆ ಮುಚ್ಚಿಕೊಳ್ಳಲು ಪೇಟ ಕಟ್ಟುತ್ತಾರೆ! ಬಿಳಿಯ ಕೂದಲು ಕಾಣಿಸದಂತೆ ಮೆಹಂದಿ ಹಚ್ಚುತ್ತಾರೆ. ಯಾಕೆ ಇವರು Graceful ಆಗಿ ಹಿರಿಯರಾಗುವುದಿಲ್ಲ? ರಾಜ್‌ಕುಮಾರ್ ತಮ್ಮ ಆದರ್ಶ ಎನ್ನುವ ಇವರಿಗೆ ಅಣ್ಣಾವ್ರ ಬೋಳುತಲೆ ಮತ್ತು ಸಹಜವಾಗಿ ಮುದುಕರಾದ ಅವರ ಪ್ರಬುದ್ಧತೆ ಕಾಣುವುದಿಲ್ಲವೇಕೆ?

ನಿಜಕ್ಕೂ ನಮ್ಮಲ್ಲಿ ಏನಾಗುತ್ತಿದೆ? ಅಂತರ್ಜಾತಿ ಪ್ರೇಮದ ಕತೆ ಹೇಳುವ ಜ್ಞಾನಪೀಠ ಪ್ರಶಸ್ತಿ ವಿಜೇತ ಗುಜರಾತಿ ಸಾಹಿತ್ಯಕೃತಿಯನ್ನು "ಜನುಮದ ಜೋಡಿ" ಸಿನೆಮಾ ಮಾಡುವ ನಾಗಾಭರಣ ಉದಯ ಟೀವಿಯಲ್ಲಿ ದೆವ್ವಭೂತಗಳ, ನಾಗರಹಾವಿನ ಮಹಿಮೆಯ, ಮೂಢಾತಿಮೂಢ ನಂಬಿಕೆ ಬೆಳೆಸುವ ಅವೈಚಾರಿಕ ಧಾರಾವಾಹಿ ಮಾಡುತ್ತಾರೆ. ಚಾರಿತ್ರಿಕ ಹಿನ್ನೆಲೆಯಲ್ಲಿ ಉತ್ತಮ ಎನ್ನಬಹುದಾದ ಕಾಲ್ಪನಿಕ ಕತೆಯೊಂದರಲ್ಲಿ ಕೇವಲ ಪ್ರಚಾರಕ್ಕೋಸ್ಕರ "ಕಲ್ಲರಳಿ ಹೂವಾಗಿ"ಯಲ್ಲಿ ಅಂಬರೀಷರನ್ನು "ಮದಕರಿ ನಾಯಕ" ಮಾಡುತ್ತಾರೆ. ಶುಭಮಂಗಳ ಚಿತ್ರದಲ್ಲಿ ಮೂಗನಾಗಿ ಅತಿಸಹಜವಾಗಿ ನಟಿಸಿರುವ, ಆದರೆ ಈ ಮಧ್ಯೆ ನಟನೆಯ ಅ‌ಆ‌ಇ‌ಈಯನ್ನೆ ಮರೆತಿರುವ ಅಂಬರೀಷ್ ತಮ್ಮ ಈಗಿನ ರೂಪಕ್ಕೆ, ಗಾತ್ರಕ್ಕೆ ನಾಲಾಯಕ್ ಆದ ಪಾತ್ರ ಮಾಡಿ, ಕ್ಲೈಮಾಕ್ಸ್‌ನಲ್ಲಿ "ಕಂದ, ನಾನು ಬರುವುದು ತಡವಾಯಿತೆ," ಎಂಬ ಒಂದೆ ಒಂದು ನಾಟಕದ ಡೈಲಾಗ್‌ನಿಂದಾಗಿ ಥಿಯೇಟರ್‌ನಲ್ಲಿಯ ಜನ ಸಹಾನುಭೂತಿಯಿಂದ ನಗುವಂತೆ ಮಾಡುತ್ತಾರಲ್ಲ, ಯಾಕೆ?

"ತಮಗೆ ಯಾರೂ ಒಳ್ಳೆಯ ಪಾತ್ರ ಕೊಡುತ್ತಿಲ್ಲ," ಎನ್ನುವ ಹಿರಿಯ ನಟ ವಿಷ್ಣುವರ್ಧನ್ ತಮಗೆ ಬೇಕಾದ ಪಾತ್ರದಲ್ಲಿ ನಟಿಸಲು ತಾವೆ ಚಿತ್ರ ನಿರ್ಮಿಸುವ ಯುವಕ ಸುದೀಪ್‌ರ ಉದಾಹರಣೆಯನ್ನು ಗಮನಿಸಬೇಕು. ತಮ್ಮ ಇಮೇಜು ಬದಿಗಿಟ್ಟು, ವಯಸ್ಸಿಗೆ ಸೂಕ್ತವಾದ ಪಾತ್ರ ಇರುವ ಚಿತ್ರವನ್ನು ಅವರೆ ನಿರ್ಮಿಸಬೇಕು. ಆದರೆ ಅವರು ಇಂತಹ ಪ್ರಯತ್ನ ಮಾಡುವುದು ಅಸಾಧ್ಯ ಅನ್ನಿಸುತ್ತದೆ. "ಮಾತಾಡ್ ಮಾತಾಡು ಮಲ್ಲಿಗೆ" ಬಿಡುಗಡೆಯಾಗುವುದಕ್ಕೆ ಮೊದಲು, "ರೈತರು ಚಳವಳಿ ಮಾಡಿದರೆ ಬೇಕಾದರೆ ನಾನು ಮುಂದಾಳತ್ವ ವಹಿಸುತ್ತೇನೆ," ಎಂದಿದ್ದ ಅವರು ಕಳೆದ ವಾರ ತಾನೆ "ನಾವು ಅಲ್ಲಿಗೆ ಹೋಗಿ ಏನು ಮಾಡುವುದು. ನಾವು ದೊಡ್ಡ ಫೇಲ್ಯೂರ್‌ಗಳು. ನಮ್ಮ ಚಿತ್ರರಂಗದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೇ ನಮ್ಮಿಂದ ಸಾಧ್ಯವಾಗುತ್ತಿಲ್ಲ," ಎಂದಿದ್ದಾರೆ. ಈ ಬಾಯುಪಚಾರದ ಮಾತುಗಳ ಹಿನ್ನೆಲೆಯಲ್ಲಿ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಅವಾಸ್ತವ ಎನ್ನಿಸುವುದಿಲ್ಲವೆ?

"ಚಿಗುರಿದ ಕನಸು" ಕಮರ್ಷಿಯಲ್ ಆಗಿ ಸೋತ ಮಾತ್ರಕ್ಕೆ ಒಳ್ಳೆಯ ಸಾಮಾಜಿಕ ಸಿನೆಮಾಗಳಿಗೆ ಅಣ್ಣಾವ್ರ ಕುಟುಂಬವೂ ತಿಲಾಂಜಲಿ ಇತ್ತಂತಿದೆ. ರಿಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದಿರುವ ಶಿವರಾಜ್ ಕುಮಾರ್ ಆಗಾಗ ಕೆಲವು ಪ್ರಯೋಗಶೀಲ ನಿರ್ದೇಶಕರನ್ನು ಪ್ರೋತ್ಸಾಹಿಸುವುದು ನಿಜವಾದರೂ, ಅವರ ಇತ್ತೀಚಿನ ಅನೇಕ ಚಿತ್ರಗಳು ಇತರರಿಗಿಂತ ಭಿನ್ನವಾಗೇನೂ ಇಲ್ಲ. ಕೃತಕ ಎನ್ನಿಸುವ ಕತೆಗಳ, ಗಂಡನೆ ಸರ್ವಸ್ವ ಎನ್ನುವಂತಹ ಭಾವಪ್ರಧಾನ ಚಿತ್ರಗಳಿಗೆ ಹೆಚ್ಚಿನ ಶೆಲ್ಫ್‌ಲೈಫ್ ಇಲ್ಲ ಎನ್ನುವುದನ್ನು ಅವರು ಅರಿಯಬೇಕು.

ಶಂಕರ್‌ನಾಗ್‌ರ ತರುವಾಯ ಅವರ ರೀತಿ ಯೋಚಿಸುವ ಮಹತ್ವಾಕಾಂಕ್ಷಿ, ಪ್ರಯೋಗಶೀಲ, ಬುದ್ಧಿಜೀವಿ, ಕ್ರಿಯಾಶೀಲ ನಟರು ಬರದೆ ಹೋಗಿದ್ದು ಕನ್ನಡ ಚಿತ್ರರಂಗದ ಈಗಿನ ದುರಂತಕ್ಕೆ ಸ್ವಲ್ಪ ಮಟ್ಟಿಗೆ ಕಾರಣವೂ ಹೌದು. ಅಪರಿಚಿತ ಎಂಬ ಸಹಜವಾದ, ಅತ್ಯುತ್ತಮ ಚಿತ್ರ ಮಾಡುವ ಕಾಶಿನಾಥ್ ಈಗ ನಗೆಪಾಟಲಿಗೆ ಪರ್ಯಾಯ ಪದ ಆಗಿಹೋಗಿದ್ದಾರೆ. ಒಳ್ಳೆಯ ಕಮರ್ಷಿಯಲ್ ಚಿತ್ರ ಮಾಡುವ ತಾಕತ್ತಿರುವ ಉಪೇಂದ್ರ ಪ್ರತಿಭಾವಂತ ಮಾತ್ರವಲ್ಲದೆ ಇಮೇಜನ್ನು ಬದಿಗಿಟ್ಟು ನಟಿಸಬಲ್ಲ ಹಾಗೂ ರಿಸ್ಕ್ ತೆಗೆದುಕೊಳ್ಳಬಲ್ಲ ಧೈರ್ಯವಂತ ಸಹ. ಆದರೂ ರಿಮೇಕ್ ಚಿತ್ರಗಳ ಶಾರ್ಟ್‌ಕಟ್ ಮತ್ತು ದಿಢೀರ್ ಸಕ್ಸೆಸ್‌ನ ಹಂಬಲ ಅವರಿಗೆ.

ಇಂತಹ ಒಳ್ಳೊಳ್ಳೆಯ ನಿರ್ದೇಶಕರೆಲ್ಲ ಹೀರೋ ಆಗಿ ಮಿಂಚಬೇಕೆಂಬ ಹಂಬಲದಿಂದಾಗಿ ಇವತ್ತು ಕನ್ನಡದಲ್ಲಿ ಪ್ರತಿಭಾವಂತ ನಿರ್ದೇಶಕರ ಕೊರತೆ ಇದೆ. ಅಷ್ಟೇ ಅಲ್ಲ, ನಟರ ಕೊರತೆಯೂ ಇದೆ. ಮದಕರಿ ನಾಯಕನ ಪಾತ್ರಕ್ಕೆ ಅಂಬರೀಷರೆ ಬೇಕಾಗಿರುವುದು ಇದನ್ನೆ ಅಲ್ಲವೆ ಸಾರುವುದು? ಆಗಾಗ ಅಲ್ಲೊಂದು ಚಿತ್ರ ಇಲ್ಲೊಂದು ಚಿತ್ರ ಸಕ್ಸೆಸ್ ಕಾಣುತ್ತಿದ್ದರೂ ಒಟ್ಟಿನಲ್ಲಿ <>ಪ್ರತಿಭಾವಂತ ನಟ, ನಿರ್ದೇಶಕ, ತಂತ್ರಜ್ಞರ ಕೊರತೆಯಲ್ಲಿ ಕನ್ನಡ ಚಿತ್ರರಂಗವಿದೆ. ಹಾಗೆಯೆ, ಒಳ್ಳೆಯ ಚಿತ್ರಕ್ಕಾಗಿ ದುಡ್ಡು ಕಳೆದುಕೊಳ್ಳಲೂ ಸಿದ್ಧವಿರುವ ಬುದ್ಧಿಜೀವಿ ಶ್ರೀಮಂತರ ಕೊರತೆಯಂತೂ ಇದ್ದೇ ಇದೆ. ಎಲ್ಲಿಯವರೆಗೂ ಇವೆರಡರ ಕೊರತೆ ನೀಗುವುದಿಲ್ಲವೊ ಅಲ್ಲಿಯವರೆಗೂ ನಮ್ಮ ಸಿನೆಮಾಗಳು ಸಮಾಜವನ್ನು ಪ್ರತಿಬಿಂಬಿಸುವುದಿಲ್ಲ; Human Spirit ಅನ್ನು Elevate ಮಾಡುವುದಿಲ್ಲ. ಚೀಪ್ ಮನರಂಜನೆಯ ಹೊರತಾಗಿ ರಾಜ್‌ಕುಮಾರೋತ್ತರ ಸಿನೆಮಾಗಳಿಂದ ಕಲಿಯುವುದು ಏನೇನೂ ಇರುವುದಿಲ್ಲ.
ರಿಚ್‌ಮಂಡ್ ಎನ್ನುವುದು ಸಿಲಿಕಾನ್ ಕಣಿವೆಗೆ ಸುಮಾರು ಐವತ್ತು ಮೈಲಿ ದೂರದ, ಸ್ಯಾನ್ ಫ್ರಾನ್ಸಿಸ್ಕೋಗೆ ಬಹಳ ಹತ್ತಿರದ ಪಟ್ಟಣ. ಈ ಪಟ್ಟಣದ ಜನಸಂಖ್ಯೆ ಸುಮಾರು ಒಂದು ಲಕ್ಷ. ಅದರಲ್ಲಿ ಬಿಳಿಯರು ಕೇವಲ ಶೇ.21 ರಷ್ಟಿದ್ದರೆ, ಕರಿಯರು ಶೇ.36 ರಷ್ಟಿದ್ದಾರೆ. ಹಾಗಾಗಿ ಈ ಪಟ್ಟಣದಲ್ಲಿ ಕರಿಯರದೇ ಹೆಚ್ಚುಗಾರಿಕೆ. ಈ ಪಟ್ಟಣದ ರಿಚ್‌ಮಂಡ್ ಹೈಸ್ಕೂಲ್‌ಗೆ ಬರುವವರಲ್ಲಿ ಬಡತನದ ಹಿನ್ನೆಲೆಯ ಕರಿಯ ವಿದ್ಯಾರ್ಥಿಗಳೆ ಹೆಚ್ಚು. ಕೆನ್ ಕಾರ್ಟರ್ ಎಂಬ ಕಪ್ಪು ಮನುಷ್ಯ ಇದೇ ಶಾಲೆಯ ಹಳೆಯ ವಿದ್ಯಾರ್ಥಿ. ಆತನಿಗೆ ಕ್ರೀಡಾಸಾಮಗ್ರಿಗಳ ಸ್ವಂತ ಅಂಗಡಿ ಇರುತ್ತದೆ. ನೆರೆಹೊರೆಯವರಿಗೆ ಹೋಲಿಸಿದರೆ ಆತ ಸ್ಥಿತಿವಂತನೆ. ಅಷ್ಟಿದ್ದರೂ ಜುಜುಬಿ ಸಂಬಳಕ್ಕೆ ತನ್ನ ಹಳೆಯ ಹೈಸ್ಕೂಲಿನ ಬ್ಯಾಸ್ಕೆಟ್‌ಬಾಲ್ ಆಟಗಾರರನ್ನು ಕೋಚ್ ಮಾಡುವ ಪಾರ್ಟ್‌ಟೈಮ್ ಕೆಲಸವನ್ನು ಒಪ್ಪಿಕೊಳ್ಳುತ್ತಾನೆ.

ನಮ್ಮಲ್ಲಿ ಹೈಸ್ಕೂಲ್ ಎಂದರೆ ಎಂಟರಿಂದ ಹತ್ತನೆ ತರಗತಿಯ ತನಕ. ಆದರೆ ಈ ದೇಶದಲ್ಲಿ ಹೈಸ್ಕೂಲ್ ಅಂದರೆ 9 ರಿಂದ 12 ನೆ ತರಗತಿಯ ತನಕ. ನಮ್ಮಲ್ಲಿ 12 ನೆ ತರಗತಿಯ ಪಿಯುಸಿ (ಅದರಲ್ಲೂ ವಿಶೇಷವಾಗಿ ವಿಜ್ಞಾನ) ಹೇಗೆ ಮುಂದಿನ ಕಾಲೇಜು ಓದಿಗೆ ನಿರ್ಣಾಯಕವೊ ಅದೇ ರೀತಿ ಇಲ್ಲಿಯೂ 12 ನೆ ತರಗತಿಯಲ್ಲಿನ ಗ್ರೇಡುಗಳು ಕಾಲೇಜಿಗೆ ಸೇರಿಕೊಳ್ಳಲು ಬಹಳ ನಿರ್ಣಾಯಕ. ಅ ಶಾಲೆಯ ಬ್ಯಾಸ್ಕೆಟ್‌ಬಾಲ್ ಆಟಗಾರರು ಅತ್ಯುತ್ತಮ ಆಟಗಾರರು. ಒಂದು ರೀತಿಯಲ್ಲಿ ಸೋಲನ್ನೆ ಕಾಣದವರು. ಹಾಗಾಗಿಯೆ ಅಹಂಕಾರಿಗಳು ಸಹ. ಇತರರನ್ನು ಕೇವಲವಾಗಿ ಕಾಣುವ, ಓದಿನ ಬಗ್ಗೆ ಕೇರ್ ಮಾಡದ, ಸ್ವರತಿಯಲ್ಲಿ ಮುಳುಗಿ ಹೋದವರು. ಇಂತಹವರನ್ನು ಆ ವರ್ಷದ ಅಂತರ್‌ಶಾಲಾ ಟೂರ್ನ್‌ಮೆಂಟ್‌ಗೆ ಕೋಚ್ ಮಾಡಲು ಕಾರ್ಟರ್ ಬರುತ್ತಾನೆ. ಈಗಿನ ಹುಡುಗರ ಉಡಾಫೆ ಮತ್ತು ಈಗಿನ ಯಶಸ್ಸೆ ಯಾವಾಗಲೂ ಶಾಶ್ವತ ಎಂದುಕೊಂಡ ಅಜ್ಞಾನ, ಹಾಗೂ ಓದಿನ ಬಗೆಗಿನ ದಿವ್ಯ ನಿರ್ಲಕ್ಷ್ಯ ಆತನಿಗೆ 30 ವರ್ಷಗಳ ಹಿಂದಿನ ತನ್ನ ಹೈಸ್ಕೂಲ್ ಸ್ನೇಹಿತರನ್ನು ನೆನಪಿಸುತ್ತದೆ. ಆಗಲೂ ಬ್ಯಾಸ್ಕೆಟ್‌ಬಾಲ್ ಹುಡುಗರು ಹೀಗೆಯೆ. ಆಟಕ್ಕೆ ಮಾತ್ರ ಗಮನ; ಓದಿಗೆ ನಮಸ್ಕಾರ! ತಾವು ಇತರರಿಗಿಂತ ಮೇಲಿನವರು ಎಂದುಕೊಂಡಿದ್ದವರು. ಆದರೆ ಹೈಸ್ಕೂಲಿನ ನಂತರ ಕಾಲೇಜಿಗೆ ಹೋಗಲಾಗದ ಎಷ್ಟೋ ಹುಡುಗರು ಗೂಂಡಾಗಿರಿ, ಕಳ್ಳತನ, ಕಾನೂನುವಿರೋಧಿ ಕೆಲಸಗಳಲ್ಲಿ ತೊಡಗಿಕೊಂಡು ಜೈಲು ಕಂಡಿರುತ್ತಾರೆ. ಕೆಲವರು ಇತರೆ ರೌಡಿಗಳಿಂದ ಕೊಲೆಯೂ ಆಗಿರುತ್ತಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಈಗಿನ ಆಟಗಾರರ ಮಾರ್ಕ್ಸ್ ನೋಡುವ ಕಾರ್ಟರ್, ಅವರು ಉತ್ತಮ ಅಂಕಗಳನ್ನು ತೆಗೆದುಕೊಳ್ಳುವ ತನಕ ಪ್ರಾಕ್ಟಿಸ್ಸೂ ಇಲ್ಲ, ಆಟವೂ ಇಲ್ಲ ಎಂದು ನಿರ್ಬಂಧಿಸುತ್ತಾನೆ. ಇದು ಆಗಿದ್ದು 1999 ರಲ್ಲಿ. ಆತ ಹೀಗೆ ಮಾಡಿದ್ದನ್ನು ನೋಡಿ ಊರಿನವರು, ಪೊಷಕರು ಮತ್ತು ಮಿಕ್ಕ ಅಧ್ಯಾಪಕರು ತಿರುಗಿ ಬೀಳುತ್ತಾರೆ. ತಮ್ಮ ಅಭಿಪ್ರಾಯವನ್ನು ಮತಕ್ಕೆ ಹಾಕಿ ಬ್ಯಾಸ್ಕೆಟ್ಬಾಲ್ ಕೋರ್ಟಿನ ಲಾಕ್‌ಔಟ್ ಅನ್ನು ಕೊನೆಗೊಳಿಸುತ್ತಾರೆ. ಇದನ್ನು ಸಹಿಸದ ಕಾರ್ಟರ್ ಅದೇ ಸಭೆಯಲ್ಲಿ ರಾಜಿನಾಮೆ ಘೋಷಿಸುತ್ತಾನೆ. ಆದರೆ ತನ್ನ ಸಾಮಾನುಗಳನ್ನು ತೆಗೆದುಕೊಳ್ಳಲು ಬ್ಯಾಸ್ಕೆಟ್‌ಬಾಲ್ ಕೋರ್ಟಿಗೆ ಬರುವ ಕಾರ್ಟರ್‌ಗೆ ಅಲ್ಲಿ ಕಾಣಿಸಿದ್ದು ಖುಷಿಯಿಂದ ಆಡುತ್ತಿರುವ ಆಟಗಾರರಲ್ಲ; ಬದಲಿಗೆ ಕೈಯಲ್ಲಿ ಪುಸ್ತಕ ಪೆನ್ನು ಹಿಡಿದು ಓದುತ್ತಿರುವ ವಿದ್ಯಾರ್ಥಿಗಳು. ಕಾರ್ಟರ್ ಮತ್ತೆ ಕೋಚ್ ಮಾಡಲು ನಿರ್ಧರಿಸುತ್ತಾನೆ. ಆ ತಂಡ ರಾಜ್ಯ ಮಟ್ಟದ ಚಾಂಪಿಯನ್‌ಶಿಪ್ ಫೈನಲ್‌ಗೂ ಹೋಗುತ್ತದೆ. ಪಂದ್ಯ ಕೊನೆಗೊಳ್ಳಲು ಒಂದೆರಡು ಸೆಕೆಂಡ್ ಮಾತ್ರ ಇರುವಾಗ ಅವರ ತಂಡ ಒಂದು ಪಾಯಿಂಟ್‌ಗಿಂತ ಮುಂದೆ ಇರುತ್ತದೆ. ಆದರೆ ಅವರ ವಿರೋಧಿ ತಂಡ ಅಂತಿಮ ಸೆಕೆಂಡಿನಲ್ಲಿ ಮೂರು ಪಾಯಿಂಟ್ ಸ್ಕೋರ್ ಮಾಡಿ ಗೆಲುವು ಸಾಧಿಸುತ್ತದೆ.

ಆದರೆ ಜೀವನ ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ಆಟಕ್ಕಿಂತ ಜೀವನ ಮುಖ್ಯ. ಅದೇ ಕಾರ್ಟರ್‌ನ ಫಿಲಾಸಫಿ. ರಿಚ್‌ಮಂಡ್ ಶಾಲೆಯ ಇತಿಹಾಸದಲ್ಲಿ ಪ್ರತಿವರ್ಷವೂ ಕೇವಲ ಶೇ.3 ರಷ್ಟು ವಿದ್ಯಾರ್ಥಿಗಳು ಮಾತ್ರ ಕಾಲೇಜು ಮೆಟ್ಟಲು ಹತ್ತುತ್ತಿರುತ್ತಾರೆ. ಆದರೆ, ಆ ವರ್ಷ ಹತ್ತು ಜನರ ಬ್ಯಾಸ್ಕೆಟ್‌ಬಾಲ್ ತಂಡವೊಂದರಿಂದಲೆ ಆರು ಜನ ಕಾಲೇಜು ಮೆಟ್ಟಲು ಹತ್ತುತ್ತಾರೆ! ಕೋಚ್ ಕಾರ್ಟರ್‌ನ ಮಾರ್ಗದರ್ಶನದಲ್ಲಿ ಬ್ಯಾಸ್ಕೆಟ್‌ಬಾಲ್ ಆಟಗಾರರು ವಿದ್ಯಾರ್ಥಿಗಳಾಗಿ ಮಾರ್ಪಡುತ್ತಾರೆ; ಹುಡುಗರು ಪ್ರಬುದ್ಧ ಗಂಡಸರಾಗುತ್ತಾರೆ.

ಈ ನಿಜಜೀವನದ ಘಟನೆಯನ್ನು 2005 ರಲ್ಲಿ ಬಿಡುಗಡೆಯಾದ ಕೋಚ್ ಕಾರ್ಟರ್ ಸಿನೆಮಾ ಸಾಕಷ್ಟು ವಸ್ತುನಿಷ್ಠವಾಗಿ ಅನಾವರಣಗೊಳಿಸುತ್ತದೆ. ರೌಡಿಸಮ್, ರೇಸಿಸಮ್, ಬಡತನ, ದಾರಿ ತಪ್ಪಿದ ಹುಡುಗರು, ದಾರಿ ತೋರದ ದೊಡ್ಡವರು, ಹದಿಹರಯದವರ ಸಮಸ್ಯೆಗಳು, ಕೆಲವು ಸಾಮಾಜಿಕ ಸಮಸ್ಯೆಗಳು; ಹೀಗೆ ಹತ್ತಾರು ಸಮಸ್ಯೆಗಳನ್ನು, ಆಯಾಮಗಳನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ. ಕಾರ್ಟರ್ ಆಗಿ ಸ್ಯಾಮುಯೆಲ್ ಜಾಕ್ಸನ್‌ನ ನಟನೆ ಬಹಳ ಸಹಜವಾಗಿದೆ. ಚಿತ್ರ ನೋಡುಗರ ಊumಚಿಟಿ Sಠಿiಡಿiಣ ಅನ್ನು ನಿಜಕ್ಕೂ ಮೇಲಕ್ಕೇರಿಸುತ್ತದೆ.


ನಮ್ಮಲ್ಲಿ ಪ್ರತಿಯೊಂದು ಜಾತಿಯ ಬಗ್ಗೆಯೂ ಕೆಲವು ಜೀವವಿರೋಧಿ ಆಡುಮಾತುಗಳಿವೆ. ಆ ಬಣ್ಣವಿರುವ ಆ ಜಾತಿಯವನನ್ನು ನಂಬಬೇಡ, ಈ ಬಣ್ಣವಿರುವ ಈ ಜಾತಿಯವನನ್ನು ನಂಬಬೇಡ ಎನ್ನುವಂತಹುದರಿಂದ ಹಿಡಿದು, ಈ ಜಾತಿಯವರೆಲ್ಲ ಹೀಗೆಯೆ, ಆ ಜಾತಿಯವರೆಲ್ಲ ಹೀಗೆಯೆ, ಆ ಮತದವರೆಲ್ಲ ದೇಶದ್ರೋಹಿಗಳು, ಇವರೆಲ್ಲ ಕೀಳು ಜನ, ಎಂಬಂತಹ ಜಾತಿಗೆ ಗುಣ-ಅವಗುಣದ ಮೊಳೆ ಹೊಡೆದ ಸಂಕುಚಿತ ಮಾತುಗಳು ಅವು. ಮಗು ಹುಟ್ಟುವುದಕ್ಕಿಂತ ಮೊದಲೆ ಅದರ ಗುಣಗಳನ್ನು ಅದರ ಅಪ್ಪಅಮ್ಮನ ಜಾತಿ ನಿರ್ಧರಿಸಿಬಿಡುತ್ತದೆ!

ಇದು ಯೂರೋಪಿನಲ್ಲಿಯೂ ಕಡಿಮೆ ಇರಲಿಲ್ಲ ಹಿಟ್ಲರ್‌ನ "ಮೈನ್ ಕೆಂಪ್" ಪುಸ್ತಕದ ತುಂಬೆಲ್ಲ ಯಹೂದಿಗಳ ಬಗೆಗಿನ ದ್ವೇಷ, ಅಸಹನೆ, ಪೂರ್ವಾಗ್ರಹಪೀಡಿತ ದೃಷ್ಟಿಕೋನವೆ ಕಾಣುತ್ತದೆ. ಯೂರೋಪಿಯನ್ ಕ್ರಿಶ್ಚಿಯನ್ನರ ಪ್ರಕಾರ ಯಹೂದಿಗಳೆಂದರೆ ನಂಬಿಕೆಗೆ ಅನರ್ಹರು; ಏಸುವಿಗೇ ಮೋಸ ಮಾಡಿದವರು; "ದೇವರು ಆಯ್ಕೆ ಮಾಡಿದ" ಜನ ಎಂಬ ಅಹಂಕಾರದಿಂದ ಮೆರೆಯುವವರು; ವ್ಯಾಪಾರಿ ಬುದ್ಧಿಯವರು; ಶೋಷಕರು; ಹೀಗೆ ಕೆಟ್ಟ ಅಭಿಪ್ರಾಯಗಳೆ ಜಾಸ್ತಿ. ಎರಡನೆ ಮಹಾಯುದ್ಧದ ಸಮಯದಲ್ಲಿ ಹಿಟ್ಲರ್ ಸುಮಾರು 60 ಲಕ್ಷ ಯಹೂದಿಗಳ ಮಾರಣಹೋಮ ಮಾಡಿದರೂ, ಯಹೂದಿಗಳ ಮೇಲಿನ ಸ್ಟೀರಿಯೊಟೈಪಿಕ್ ಭಾವನೆ ಪಾಶ್ಚಾತ್ಯ ಜಗತ್ತಿನಲ್ಲಿ ಈಗಲೂ ಬದಲಾದ ಹಾಗೆ ಕಾಣುವುದಿಲ್ಲ. ನನ್ನ ಹಳೆಯ ಸಹೋದ್ಯೋಗಿ ಒಬ್ಬ ಬಿಳಿಯ ಕ್ರಿಶ್ಚಿಯನ್. ಆತ ಮತಾಂಧನಂತೂ ಅಲ್ಲವೆ ಅಲ್ಲ. ಸಾಕಷ್ಟು ಉದಾರ ದೃಷ್ಟಿಕೋನ ಇರುವವನು. ಎರಡು ವರ್ಷದ ಹಿಂದೆ ಭಾರತೀಯ ಫಾರ್ಸಿಯೊಬ್ಬಳನ್ನು ಮದುವೆಯಾಗಿದ್ದಾನೆ. ಇಷ್ಟೆಲ್ಲ ಇದ್ದರೂ ಆತ ಯಹೂದಿಯೊಬ್ಬನ ಬಗ್ಗೆ ನನಗೊಂದು ಮಾತು ಹೇಳಿದ್ದ: "ಅವನೊಬ್ಬ ಯಹೂದಿ. ಅವರನ್ನು ನಾನು ನಂಬುವುದಿಲ್ಲ. ಅಪಾಯಕಾರಿ, ನಂಬಿಕೆಗೆ ಅನರ್ಹ ಜನ."

ಅದು 1920 ರ ಬ್ರಿಟನ್. ಕ್ರಿಶ್ಚಿಯನ್ನರೆ ಹೆಚ್ಚಿರುವ ಆ ದೇಶದಲ್ಲಿ ಲಿಥುವೇನಿಯಾದ ಯಹೂದಿಯೊಬ್ಬ ವ್ಯಾಪಾರ ವಹಿವಾಟಿನಿಂದ ಶ್ರೀಮಂತನಾಗಿರುತ್ತಾನೆ. ಆತನ ಎರಡು ಮಕ್ಕಳಲ್ಲಿ ಹೆರಾಲ್ಡ್ ಅಬ್ರಹಾಮ್ಸ್ ಒಬ್ಬ. ಅಬ್ರಹಾಮ್ಸ್ ಎನ್ನುವುದು ಯಹೂದಿಗಳು ಮಾತ್ರ ಇಟ್ಟುಕೊಳ್ಳುವ ಹೆಸರು. ಯಹೂದಿಗಳೆಂದರೆ ಹೊರನೋಟಕ್ಕೇ ತಾರತಮ್ಯ ತೋರಿಸುತ್ತಿದ್ದ ಆ ಸಮಯದಲ್ಲಿ ಹೆರಾಲ್ಡ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಸೇರುತ್ತಾನೆ. ತನ್ನ ಮಿಕ್ಕ ಕ್ರಿಶ್ಚಿಯನ್ ಸಹಪಾಠಿಗಳ ಮಧ್ಯೆ ತನಗೊಂದು ಸ್ಥಾನ ಪಡೆದುಕೊಳ್ಳಲು, ಯಹೂದಿಗಳೆಂದರೆ ಎರಡನೆ ದರ್ಜೆಯ ಮನುಷ್ಯರಂತೆ ನೋಡುವ ಬ್ರಿಟಿಷರ ನಡುವೆ ಗೌರವ ಸಂಪಾದಿಸಲು, ತನ್ನ ಇಂಗ್ಲಿಷ್‌ಮನ್‌ನೆಸ್ ಮತ್ತು ಬ್ರಿಟನ್‌ಗೆಡೆಯ ದೇಶಭಕ್ತಿಯನ್ನು ಅಡಿಗಡಿಗೆ ಸಾಬೀತು ಮಾಡುವ ಕರ್ಮವನ್ನು ತೊಳೆದುಕೊಳ್ಳಲು 1924 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೂರು ಮೀಟರ್ ಓಟದಲ್ಲಿ ಪಾಲ್ಗೊಳ್ಳಲು ನಿರ್ಧರಿಸುತ್ತಾನೆ. ಅದಕ್ಕಾಗಿ ಮತ್ತೊಬ್ಬ "ಪರಕೀಯ," ಲಂಡನ್‌ನಲ್ಲಿ ಹುಟ್ಟಿದ ಆದರೆ ಅರಬ್ ಮತ್ತು ಇಟಾಲಿಯನ್ ಮೂಲದ ಸ್ಯಾಮ್ ಮುಸ್ಸಾಬಿನಿ ಎಂಬ ಕೋಚಿನ ಸಹಾಯ ಪಡೆಯುತ್ತಾನೆ.

ಒಲಿಂಪಿಕ್ಸ್‌ನಲ್ಲಿ ಹೆರಾಲ್ಡ್‌ಗೆ ಸಹಸ್ಪರ್ಧಿಯಾಗಿ ಮತ್ತೊಬ್ಬ ಬ್ರಿಟನ್ ಇರುತ್ತಾನೆ. ಆತ "ಹಾರುವ ಸ್ಕಾಟ್ಸ್‌ಮನ್" ಎರಿಕ್ ಲಿಡ್ಲ್. ಸ್ಕಾಟಿಷ್ ಮೂಲದ ಆತ ಚೀನಾದಲ್ಲಿ ಹುಟ್ಟಿದವನು. ಆದರೆ ದೇವರ ಕಾರ್ಯದಲ್ಲಿ ತೊಡಗಿಕೊಂಡ ಮಿಷನರಿ ಯುವಕ. ತಾನು ಓಡುವುದರಿಂದ ದೇವರಿಗೆ ಖುಷಿಯಾಗುತ್ತದೆ, ಅದಕ್ಕಾಗಿಯೆ ಓಡುತ್ತೇನೆ ಎಂದುಕೊಂಡ ದೈವಭಕ್ತ. ಭಾನುವಾರ ಸಬ್ಬತ್ ದಿನ, ಅಂದು ದೇವರ ಪ್ರಾರ್ಥನೆಯಲ್ಲಿ ಮಾತ್ರ ಕಾಲ ಕಳೆಯಬೇಕು, ಮಿಕ್ಕೆಲ್ಲ ಕೆಲಸಗಳೂ ಅಂದು ವರ್ಜಿತ ಎನ್ನುವ ಕಟ್ಟರ್ ಆಸ್ತಿಕ. 1924 ರ ಒಲಿಂಪಿಕ್ಸ್‌ನಲ್ಲಿ 100 ಮೀಟರ್ಸ್ ಓಟದ ಪ್ರಾರಂಭಿಕ ಓಟ ಭಾನುವಾರ ಆಗಿ ಬಿಡುತ್ತದೆ. ತನ್ನ ನಂಬಿಕೆ ಮತ್ತು ಸಿದ್ಧಾಂತಗಳನ್ನು ಸ್ವಲ್ಪವೂ ಬದಲಿಸಿಕೊಳ್ಳಲು ಇಚ್ಚಿಸದ ಈತ 100 ಮೀಟರ್ ಓಟವನ್ನು ಬಿಟ್ಟು 400 ಮೀಟರ್ ಓಟಕ್ಕೆ ಸಿದ್ದವಾಗುತ್ತಾನೆ.

ಆ ಒಲಿಂಪಿಕ್ಸ್‌ನಲಿ ಫೇವರೈಟ್‌ಗಳು ಮಾತ್ರ ಅಮೇರಿಕನ್ನರು. ಅಷ್ಟಿದ್ದರೂ ಹೆರಾಲ್ಡ್ ಅಬ್ರಹಾಮ್ಸ್ 100 ಮೀಟರ್ ಓಟದಲ್ಲಿ ಚಿನ್ನದ ಪದಕ ಪಡೆಯುತ್ತಾನೆ. ಎರಿಕ್ ಲಿಡ್ಲ್ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಪಡೆಯುತ್ತಾನೆ. ಎಲ್ಲಾ ಪ್ರತಿರೋಧಗಳ ನಡುವೆ ತಮ್ಮ ಆಸ್ತಿತ್ವ, ಐಡೆಂಟಿಟಿ, ಯೋಗ್ಯತೆ, ನಂಬಿಕೆಗಳನ್ನು ಸಾಬೀತು ಮಾಡುವ ಆ ಇಬ್ಬರು ಯುವಕರ ನಿಜಜೀವನದ ಕತೆಯನ್ನು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಬ್ರಿಟನ್ನಿನ ರಾಜಕಾರಣಿಯೊಬ್ಬ 1981 ರಲ್ಲಿ "Chariots of Fire" ಎಂಬ ಹೆಸರಿನಲ್ಲಿ ನಿರ್ಮಿಸುತ್ತಾನೆ. ಒಟ್ಟು ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಪಡೆಯುವ ಆ ಚಿತ್ರ, ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನೂ ಪಡೆಯುತ್ತದೆ.


ಚಲನಚಿತ್ರಗಳು ಮನರಂಜನೆ ದೃಷ್ಟಿಯಿಂದ ಮಾತ್ರವಲ್ಲ ಸಮಾಜಶಿಕ್ಷಣದ ದೃಷ್ಟಿಯಿಂದಲೂ ಬಹಳ ಪ್ರಬಲವಾದ ಮಾಧ್ಯಮ. ಸಿನೆಮಾ ಎನ್ನುವುದು ಕಪೋಲಕಲ್ಪಿತ, ಪೌರಾಣಿಕ, ಕಾಲ್ಪನಿಕ ಪ್ರಪಂಚದ ಕತೆಯಾಗಿದ್ದಾಗ ಅದನ್ನು ಸಂಪೂರ್ಣ ಮನರಂಜನೆ ಎಂದು ಭಾವಿಸಬಹುದು. ಆದರೆ ಹಾಲಿವುಡ್‌ನ ಬಹುಪಾಲು ಅತ್ಯುತ್ತಮ ಚಿತ್ರಗಳಂತೂ ಸಮಾಜವನ್ನು ಹಾಗೆಯೆ ನೈಜವಾಗಿ ಪ್ರತಿಬಿಂಬಿಸುತ್ತವೆ. ನೋಡುಗರಿಗೆ ಸಮಾಜಶಿಕ್ಷಣವನ್ನೂ ನೀಡುತ್ತವೆ. ನಿಜಜೀವನದ ಕತೆಗಳ ಆಧಾರದ ಮೇಲೆ ಬಂದಿರುವ ಚಿತ್ರಗಳಿಗಂತೂ ಅಲ್ಲಿ ಲೆಕ್ಕವೇ ಇಲ್ಲ. ಕೇವಲ ಕ್ರೀಡೆಗೆ ಸಂಬಂಧಿಸಿದ ನೈಜಘಟನೆಗಳ ಆಧಾರದ ಮೇಲೆ ಬಂದಿರುವ ಚಿತ್ರಗಳೇ ಅನೇಕವಿವೆ. "ಚಾರಿಯಟ್ಸ್ ಆಫ್ ಫೈರ್," "ಕೋಚ್ ಕಾರ್ಟರ್" ಮಾತ್ರವಲ್ಲದೆ, ಕರಿಯರನ್ನು ಬಿಳಿಯರನ್ನು ಒಟ್ಟಾಗಿಸುವ 'Remember the Titans,' ಬಡ‌ಊರಿನ ಕಪ್ಪು-ಬಿಳಿಯ ಶಾಲಾಹುಡುಗರ ತಂಡ ರಾಜ್ಯಮಟ್ಟದ ಫೈನಲ್ ತಲುಪುವ 'Friday Night Lights,' ಇತ್ತೀಚಿನ ಯಶಸ್ವಿ ನಟ ಟಾಮ್ ಕ್ರೂಸ್ ನಿರ್ಮಿಸಿದ 'Without Limits,' ನ್ಯೂಜಿಲ್ಯಾಂಡ್‌ನ 67 ವರ್ಷದ ಬಡಮುದುಕ ಅಮೇರಿಕದಲ್ಲಿ ತನ್ನ ಇಂಡಿಯನ್ ಬೈಕ್ ಓಡಿಸಿ ಅನೇಕ ದಾಖಲೆಗಳನ್ನು ನಿರ್ಮಿಸುವ 'A World's Fastest Indian,' ಹೆಂಗಸರ ಬೇಸ್‌ಬಾಲ್ ಇತಿಹಾಸದ ಹಲವಾರು ನೈಜಘಟನೆಗಳನ್ನು ಹೆಣೆದು ನಿರ್ಮಿಸಿರುವ ಮಡೊನ್ನ ನಟಿಸಿರುವ 'The League of Their Own,' ಬೇಸ್‌ಬಾಲ್ ಆಟದ ಸ್ಫೂರ್ತಿದಾಯಕ ಕತೆಗಳಲ್ಲೊಂದಾದ 35 ವರ್ಷದ "ಮುದಿ"ಶಾಲಾಮಾಸ್ತರನೊಬ್ಬ ಮೇಜರ್ ಲೀಗ್‌ಗೆ ಆಡುವ 'The Rookie,' ಬಾಕ್ಸರ್‌ಗಳ ಏಳುಬೀಳಿನ ಕತೆ ಹೇಳುವ ‘Raging Bull,’ ‘The Hurricane,’ ‘Ali,’ ‘Million Dollar Baby,’ ‘Cinderella Man,’; ಆರ್ಥಿಕ ಮುಗ್ಗಟ್ಟಿನ ಸಮಯದಲ್ಲಿ ಇಡೀ ದೇಶ ಕುಳ್ಳಗಿನ ಕುದುರೆಯೊಂದರ ಗೆಲುವಿನಲ್ಲಿ ಜೀವನಾಸಕ್ತಿಯನ್ನು, ಸ್ಫೂರ್ತಿಯನ್ನೂ ಕಂಡುಕೊಳ್ಳುವ 'Seabiscuit,' ಇತ್ಯಾದಿ. ಈ ನೈಜಘಟನೆಗಳ ಬಹುಪಾಲು ಚಿತ್ರಗಳು ಮಾನವ ಚೈತನ್ಯವನ್ನು ಉದ್ಧೀಪನಗೊಳಿಸುವ ಚಿತ್ರಗಳು. ಜೀವನದಲ್ಲಿ ಅನೇಕ ಬಾರಿ ಸಿಗುವ ಎರಡನೆ ಅವಕಾಶದ ಬಗ್ಗೆ ಹೇಳುವ ಆಶಾವಾದಿ ಚಿತ್ರಗಳು. ನಮ್ಮ ಸುತ್ತಮುತ್ತಲ ಪರಿಸರಿದಲ್ಲಿಯೆ ಸಿಗುವ ಅನೇಕ ಲೋಕಲ್ ಹೀರೋಗಳ ಕತೆಗಳು.

ಸಾಹಿತ್ಯ ಮತ್ತು ಕಲೆಯ ಮೂಲಭೂತ ಗುಣವೆ ಮನುಷ್ಯನನ್ನು ಮೇಲ್ಮಟ್ಟದ ಮಾನಸಿಕ ಸ್ತರಕ್ಕೆ ಏರಿಸುವುದು. ವಾಸ್ತವ ಜಗತ್ತಿನ ಚಿತ್ರ ಕೊಡುವುದರ ಜೊತೆಜೊತೆಗೆ ಆಶಾವಾದವನ್ನು, ನೈತಿಕತೆಯನ್ನು ಜನರಲ್ಲಿ ತುಂಬುವುದು. ಹಾಲಿವುಡ್‌ನ ನೂರಾರು ಚಿತ್ರಗಳು ಅದನ್ನು ಪ್ರಾಮಾಣಿಕವಾಗಿ ಮಾಡುತ್ತವೆ.
ಇದರ ಹಿನ್ನೆಲೆಯಲ್ಲಿ ವರ್ಷಕ್ಕೆ ಸುಮಾರು ಸಾವಿರ ಚಿತ್ರಗಳ ರೀಲುಸುತ್ತುವ ಭಾರತೀಯ ಸಿನೆಮಾಗಳನ್ನು ಇಟ್ಟುಕೊಂಡು ನೋಡಿ. ಪ್ರೀತಿಪ್ರೇಮದ ಹಿನ್ನೆಲೆ ಇಲ್ಲದ, ಅನಗತ್ಯವಾಗಿ sentimental exploitation ಮಾಡದ, ನಿಜಜೀವನದ ಘಟನೆಗಳ ಆಧಾರದ ಮೇಲೆ ನಿರ್ಮಿಸಿರುವ, ಜೀವನಪ್ರೀತಿಯನ್ನು ಉಕ್ಕಿಸುವ ಯಾವುದಾದರೂ ಒಂದು ಉತ್ತಮ ಚಲನಚಿತ್ರ ನೋಡಿದ ನೆನಪು ನಿಮಗಿದೆಯೆ, "ಚಕ್ ದೆ ಇಂಡಿಯಾ" ದ ಹೊರತಾಗಿ?

ಚಲನಚಿತ್ರ ಏಕವ್ಯಕ್ತಿಯ ಸೃಷ್ಟಿಯಲ್ಲ. "ಚಕ್ ದೆ ಇಂಡಿಯಾ" ದಂತಹ ಉತ್ತಮ ಚಿತ್ರ ಬರಬೇಕಾದರೆ ಪ್ರತಿಭೆ ಮತ್ತು ಹಣ ಎರಡೂ ಇರಬೇಕು. ಇಂತಹ ಸಬ್ಜೆಕ್ಟ್ ಆರಿಸಿಕೊಳ್ಳುವುದಕ್ಕೆ ಧೈರ್ಯವೂ ಬೇಕು, ಬದ್ಧತೆಯೂ ಬೇಕು. ಹೆಣ್ಣುಮಕ್ಕಳ ಸಮಸ್ಯೆ, ಭಾರತದಲ್ಲಿನ ಒಬ್ಬ ಮುಸಲ್ಮಾನ ತನ್ನ ದೇಶಪ್ರೇಮವನ್ನು ಅಡಿಗಡಿಗೆ ಸಾಬೀತು ಮಾಡಬೇಕಾದ ಹೀನಾಯ ರೇಸಿಸಂ, ಭಾಷೆ ಮತ್ತು ರಾಜ್ಯದ ಬಗ್ಗೆ ಯೋಚಿಸುವ ದೇಶದಲ್ಲಿ ರಾಷ್ಟ್ರೀಯತೆಯ ಪ್ರಜ್ಞೆಯ ಅಭಾವ, ಇತ್ಯಾದಿಗಳನ್ನು ಗಂಭೀರವಾಗಿ ವಿಶ್ಲೇಷಿಸುವ ಬುದ್ಧಿಮಟ್ಟವೂ ಇರಬೇಕು. ಭಾರತದ ಸದ್ಯದ ಅತಿಜನಪ್ರಿಯ ನಟನಾದ ಶಾರುಖ್ ಖಾನ್‌ನಂತಹ ನಟ ಯಾವುದೆ ಇಮೇಜಿಗೆ ಒಳಪಡದೆ ತನ್ನನ್ನೆ ತಾನು ಅಂಡರ್‌ಪ್ಲೆ ಮಾಡಿಕೊಳ್ಳುತ್ತ ನಟಿಸುವ ಮನಸ್ಸು ಮತ್ತು ಪ್ರತಿಭೆ ಇರಬೇಕು. ಇಷ್ಟೆಲ್ಲ ಇರುವುದರಿಂದಲೆ "ಚಕ್ ದೆ ಇಂಡಿಯಾ" ಭಾರತೀಯ ಚಿತ್ರರಂಗದಲ್ಲಿ ಮೈಲುಗಲ್ಲಾಗಿಯಂತೂ ನಿಲ್ಲುತ್ತದೆ. ಅರೆಬರೆ, ಅಪ್ರಬುದ್ಧ, ಕೃತಕ ಸಿನೆಮಾಗಳನ್ನೆ ಹೆಚ್ಚಿಗೆ ತಯಾರಿಸುವ ಭಾರತೀಯ ಚಿತ್ರರಂಗದಲ್ಲಿ ನಿಜಜೀವನವನ್ನು ಬಿಂಬಿಸುವ ಯಶಸ್ವಿ ಚಿತ್ರಗಳ ನಿರ್ಮಾಣಕ್ಕೆ ಈ ಚಿತ್ರ ದೊಡ್ಡ ಮಟ್ಟದಲ್ಲಿ ಬುನಾದಿ ಹಾಕಿದೆ ಅಂತಲೆ ಹೇಳಬೇಕು.

ಸಾರ್ವಕಾಲಿಕ ಮೌಲ್ಯಗಳ ಬಗ್ಗೆ ಹೇಳುವ ಚಿತ್ರಕ್ಕೂ, ಒಂದು ಉತ್ತಮ ಪಠ್ಯಪುಸ್ತಕಕ್ಕೂ ಅಷ್ಟೇನೂ ವ್ಯತ್ಯಾಸವಿಲ್ಲ. ಉತ್ತಮ ಸಿನೆಮಾ ನಿರ್ಮಾಣ ಬದ್ಧತೆಯುಳ್ಳವರ ಸಮಾಜಸೇವೆಯೂ ಆಗಬಹುದು. ಆ ದೃಷ್ಟಿಯಲ್ಲಿ ಕರ್ನಾಟಕದ ಮಟ್ಟಿಗೆ ಹೇಳಬಹುದಾದರೆ ಒಂದು ಒಳ್ಳೆಯ ಚಿತ್ರಕ್ಕಾಗಿ ದುಡ್ಡು ಹಾಕಿ ಕಳೆದುಕೊಳ್ಳಲೂ ಸಿದ್ಧವಿರುವ ಶ್ರೀಮಂತರ ಕೊರತೆ ಬಹಳಷ್ಟಿದೆ. ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಶ್ರೀಮಂತರ ಕೊರತೆ ಇಲ್ಲ. ಆದರೆ ಇವರಲ್ಲಿ ಬಹಳಷ್ಟು ಜನರಿಗೆ ಅಭಿರುಚಿಯೂ ಇಲ್ಲ, ಪ್ರಬುದ್ಧತೆಯೂ ಇಲ್ಲ, ಸಾಮಾಜಿಕ ಬದ್ಧತೆಯೂ ಇಲ್ಲ. ಕೇವಲ ಮುವ್ವತ್ತು ವರ್ಷಗಳ ಹಿಂದೆ ಕೆ.ವಿ.ಸುಬ್ಬಣ್ಣ ಎಂಬ ಶ್ರೀಮಂತ ಅನೇಕ ಬರಹಗಾರರಿಗೆ ಸಹಾಯ ಮಾಡಿದ್ದನ್ನು, ತನ್ನ ಹಳ್ಳಿಯಲ್ಲಿ ನೀನಾಸಂ ಎಂಬ ಸಾಂಸ್ಕೃತಿಕ ಸಂಸ್ಥೆ ಹುಟ್ಟುಹಾಕಿದ್ದನ್ನು ಕಾಣುವ ನಾವು ಇತ್ತೀಚಿನ ದಿನಗಳಲ್ಲಿ ಆ ರೀತಿ ಮಣ್ಣಿಗೆ ಮರಳುವ ಛಾತಿ ಇರುವ ಯಾವೊಬ್ಬ ಆಗರ್ಭ ಶ್ರೀಮಂತರನ್ನೂ ಕಾಣುತ್ತಿಲ್ಲ. ಸ್ವಪ್ರಯತ್ನದಿಂದ ಶ್ರೀಮಂತರಾದವರು ತಮ್ಮ ಶ್ರೀಮಂತಿಕೆಯ ಅಲ್ಪ ಭಾಗವನ್ನೂ ಈ ತರಹದ ಕೆಲಸಗಳಿಗೆ ಕಳೆದುಕೊಳ್ಳಲು ತಯಾರಾಗುವುದನ್ನು ನೋಡುತ್ತಿಲ್ಲ. ಈಗಿನ ಎರಡನೆ ತಲೆಮಾರಿನ ಶ್ರೀಮಂತರಿಗಂತೂ ದೇಶೀಯತೆಯ ಪರಿಚಯವೇ ಇಲ್ಲವೇನೊ!

ಯಾವುದರಲ್ಲೂ ದುಡ್ಡು ಕಳೆದುಕೊಳ್ಳಬಾರದು ಎನ್ನುವ ಮನಸ್ಥಿತಿಯಲ್ಲಿ ಸಮಾಜ ಇದ್ದುಬಿಟ್ಟರೆ ದುಡ್ಡೂ ಒಂದು ಮುಖ್ಯ ಅಂಶವಾದ ಕೆಲವು ಉತ್ತಮ ಕೃತಿ-ಕಾರ್ಯಗಳು ಬರಲು ಬಹಳ ದಿನ ಕಾಯಬೇಕು. ನಾಡಿನ ಬಡತನ ಕೇವಲ ಊಟತಿಂಡಿಯ ಬಡತನದಲ್ಲಿ ಮಾತ್ರವಿಲ್ಲ. ಜನರ ಅಪ್ರಬುದ್ಧತೆ, Inferior ಕೆಲಸಗಳು, ತುಚ್ಚ ಗುಣಮಟ್ಟದ ಪತ್ರಿಕೆ, ಸಿನೆಮಾ, ಟಿವಿ; ಕೀಳು ಯೋಚನೆಗಳು, ಕೀಳು ಯೋಜನೆಗಳು; ಇವೆಲ್ಲವೂ ನಾಡಿನ ಬಡತನದ, ಹಿಂದುಳಿದಿರುವಿಕೆಯ ಸಂಕೇತಗಳೆ. ಎಲ್ಲಿಯವರೆಗೆ ನಮ್ಮಲ್ಲಿನ ಶ್ರೀಮಂತರು ಇವನ್ನು ಯೋಚಿಸುವುದಿಲ್ಲವೊ ಅಲ್ಲಿಯವರೆಗೂ ನಾಡು ಕೆಲವೊಂದು ದಾರಿದ್ರ್ಯದಲ್ಲಿ ನಲಗುತ್ತದೆ. ಸ್ವಾಭಿಮಾನ, ಸ್ವಂತಿಕೆ ಇಲ್ಲದ ಶ್ರೀಮಂತರು ತೇಜಸ್ವಿಯವರು ಹೇಳುವ ಹೊಸತೊಂದು ಕಾಫಿ ಸಂಸ್ಕೃತಿಯ ಹಿಂದೆ ಬಿದ್ದು ನಾಡಿಗೆ ಅವಮಾನ ಮಾಡುತ್ತಿರುತ್ತಾರೆ:

"(ಚಿಕ್ಕಮಗಳೂರು ಜಿಲ್ಲೆಯ) ಇಲ್ಲಿಯ ಜನರಿಗೆ ಇರೋದು ಕಾಫಿ ಸಂಸ್ಕೃತಿ. ತಮ್ಮ ಮಕ್ಕಳಿಗೆ ಸೂಟು ಬೂಟು ಹಾಕೋದನ್ನು ಕಲಿಸೋದಕ್ಕೆ ಸ್ಟೈಲಿಷ್ ಇಂಗ್ಲಿಷ್ ಮಾತಾಡಿಸೋದಕ್ಕೆ ಈ ಪ್ಲಾಂಟರುಗಳು ಎಷ್ಟು ಹಣ ಸುರೀತಾರೆ ನನಗೆ ಗೊತ್ತು. ಫೋರ್ಕು ಚಾಕು ಇಟ್ಟುಕೊಂಡು ಊಟದ ಸರ್ಕಸ್ ಮಾಡೋದಕ್ಕೆ ಎಷ್ಟು ತೊಂದರೆ ತಗೋತಾರೆ ಗೊತ್ತಾ ನಿಮಗೆ? ಇವತ್ತು ಕಾರಿಟ್ಟುಕೊಂಡು ಹ್ಯಾಟ್ ಹಾಕಿಕೊಂಡು ಅಣ್ಣಾತೆ ತರ ಇರದೇ ಇರೋನು ಮನುಷ್ಯನಲ್ಲಾಂತ, ಆನುಕೂಲವಿಲ್ಲದವನು ಇವತ್ತು ತನಗೆ ಕಾರಿಲ್ಲಾಂತ ಕೊರಗುತ್ತಾ ಶ್ರೀಮಂತ ಬಂಧುಗಳ ಕಣ್ಣಿಗೆ ಬೀಳದ ಹಾಗೆ ಕದ್ದು ಬಸ್ಸಿಗೆ ಕಾಯುತ್ತಾ ಕೂರ ಬೇಕಿದೆ. ಇವೆಲ್ಲ ಗೊತ್ತಾಗುತ್ತಾ ಸಾರ್! ಕಾಫಿ ಕಲ್ಚರ್ ಅಂದಿದ್ದು ನಾನು ಇದನ್ನೆ. ಯೂರೋಪಿಯನ್ನರಿಂದ ಕಾಫೀನೂ ಕಾಫಿತೋಟಾನೂ ಇವರಿಗೆ ಸಿಕ್ಕಿದ್ದು. ಅವರು ಕಟ್ಟಿಸಿದ ಕುರ್ಚಿ ಕಕ್ಕಸಿಗೆ ಇವರು ಹೋಗಿ ಅವರ ತರಾನೇ ಇವರೂ ಕಾಗದದ ಸುರುಳೀಲಿ ತಿಕ್ಕಿಕೋತಾರೆ..." - (ಪೂರ್ಣಚಂದ್ರ ತೇಜಸ್ವಿ - ಚಿದಂಬರ ರಹಸ್ಯ)