Nov 30, 2010

ಬೊಮ್ಮಸಂದ್ರದಿಂದ...

ಈಗ ವಾಸ್ತವ್ಯ ಬದಲಾಗಿದೆ (ಪೂರ್ತಿ ಅಲ್ಲದಿದ್ದರೂ ಬಹುಪಾಲು.) ಇನ್ನೊಂದಷ್ಟು ದಿನಗಳಲ್ಲಿ ಇನ್ನೊಂದು ಜಾಗಕ್ಕೆ/ಮನೆಗೆ ಬದಲಾಯಿಸಬಹುದು. ಊರಿನಿಂದ ದೂರ ಏನಲ್ಲ.

ನಿಧಾನಕ್ಕೆ ಕರ್ನಾಟಕದ ಮತ್ತು ಭಾರತದ ದೈನಂದಿನ ಜೀವನದ ಗೋಳು ತಟ್ಟುತ್ತಿದೆ. ಈಗ ತಾನೆ RTO ಕಛೇರಿಗೆ ಹೋಗಿ ಬಂದೆ. ಮುಗ್ದರು, ಅಮಾಯಕರು, ಪ್ರಾಮಾಣಿಕರು ಎಲ್ಲರೂ ಇಲ್ಲಿ ಅಸಹಾಯಕರು. ಅಂತಹ ಅಸಹಾಯಕರಿಗೆ ಮಾತ್ರ ಕಾನೂನು ಅನ್ವಯವಾಗುತ್ತದೆ. ಮತ್ತು ಅವರಿಗೆ ನ್ಯಾಯ ದಕ್ಕುತ್ತಿಲ್ಲ.
ನಮ್ಮ ಸರ್ಕಾರಿ ವ್ಯವಸ್ಥೆಯ ಭ್ರಷ್ಟಾಚಾರವನ್ನು ನೋಡಿ ಥೊರೋ ಮತ್ತು ಗಾಂಧಿ ಮಾಡಿದ ಕಾನೂನು ಉಲ್ಲಂಘನೆಯೇ ಈಗಿನ ನಮ್ಮ ಸಂದರ್ಭದ ನಮ್ಮದೇ ಸ್ವತಂತ್ರ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ನೈತಿಕವಾಗಿಯೂ ಸರಿಯೇನೊ ಎನ್ನಿಸುತ್ತಿದೆ. ಥೊರೋ ತೆರಿಗೆ ಕಟ್ಟಬೇಕಾದ ಕಾನೂನು ಕಟ್ಟುಪಾಡನ್ನು ಉಲ್ಲಂಘಿಸಿದ. ನನಗೆ ತೆರಿಗೆ ಕಟ್ಟಲು ಅಭ್ಯಂತರವಿಲ್ಲ. ಆದರೆ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವುದಕ್ಕಿಂತ ಕಾನೂನು ಉಲ್ಲಂಘಿಸಿ ದಂಡ ಹಾಕಿಸಿಕೊಳ್ಳುವುದೇ ನೈತಿಕತೆ ಮತ್ತು ಮೌಲ್ಯವನ್ನು ಕಾಪಾಡುತ್ತದೆ ಎನ್ನಿಸಿತ್ತದೆ.

ಜಾಗ ಬದಲಾವಣೆಯೊಂದಿಗೆ ಹಲವಾರು ಕೆಲಸಗಳು ಜವಾಬ್ದಾರಿಗಳು ಮುಂದಿವೆ. ಒಂದೊಂದನ್ನೇ ಮಾಡುತ್ತ ಹೋಗುತ್ತೇನೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಮತ್ತು ಪ್ರಜಾಪ್ರಭುತ್ವವಾದಿ ವಿಷಯಗಳಿಗೆ ಸಕ್ರಿಯನಾಗುತ್ತೇನೆ. ನಾನು ತೊಡಗಿಸಿಕೊಳ್ಳಬಹುದಾದ ವಿಷಯಗಳಿದ್ದಲ್ಲಿ ಸ್ನೇಹಿತರು ಅದನ್ನು ನನ್ನ ಗಮನಕ್ಕೆ ತಂದರೆ ಅವರಿಗೆ ನಾನು ಆಭಾರಿ. (ನನ್ನ ದೂರವಾಣಿ ಸಂಖ್ಯೆ: ೯೬೮೬೦೮೦೦೦೫)

ನಮಸ್ಕಾರ,
ರವಿ...

Oct 10, 2010

ಕರ್ನಾಟಕದ ರಾಜಕಾರಣದಲ್ಲಿ ಮೌಲ್ಯಗಳಿಗಾಗಿ...

ಈ ಕೆಳಗಿನದನ್ನು ಈಗ ಚಾಲ್ತಿಯಲ್ಲಿರುವ ವಿಧಾನಸಭೆಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ಬರೆದದ್ದು. ಈಗ ಮತ್ತೊಮ್ಮೆ ಸೂಕ್ತ ಎಂದು ಇಲ್ಲಿ ಹಾಕುತ್ತಿದ್ದೇನೆ.
ರವಿ...

ಇತ್ತೀಚಿನ ದಿನಗಳಲ್ಲಿನ ಕರ್ನಾಟಕದಲ್ಲಿನ ರಾಜಕಾರಣದ ಕೀಳುಮನರಂಜನೆಯ ನಾಟಕವನ್ನು ಮತ್ತು ಸಂಪೂರ್ಣವಾಗಿ ಇಲ್ಲವಾಗಿಬಿಟ್ಟಿರುವ ರಾಜಕೀಯ ಮೌಲ್ಯಗಳನ್ನು ನೀವೆಲ್ಲ ನೋಡಿಯೇ ಇರುತ್ತೀರ ಎನ್ನುವುದು ನನ್ನ ಖಚಿತ ಅಭಿಪ್ರಾಯ. ಅಧಿಕಾರಲಾಲಸೆ, ಹಣ, ಜಾತಿ, ಮತ್ತು ಕೋಮು ಉನ್ಮಾದಗಳು ಚುನಾವಣಾ ರಾಜಕಾರಣದ ಮುಖ್ಯ ಭಾಗಗಳಾಗಿ ಹೋಗಿವೆ. ಬೆಂಗಳೂರು ನಗರವಂತೂ ರಿಯಲ್ ಎಸ್ಟೇಟ್ ಮತ್ತು ಗಣಿ ದೊರೆಗಳ ಒಡ್ಡೋಲಗವಾಗಿ ಹೋಗಿದೆ.

ಇಂತಹ ಪರಿಸ್ಥಿತಿಯಲ್ಲಿ, ಬರಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ, ಯಾವ ಅಭ್ಯರ್ಥಿ ಹತ್ತಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿರುವನೊ ಅವನು ಮಾತ್ರ ಗೆಲ್ಲಲಿದ್ದಾನೆ. ಮತದಾರರಿಗೆ ಉಡುಗೊರೆಗಳನ್ನು ಕೊಟ್ಟರೆ ಮಾತ್ರ, ಕೀಳು ಮಟ್ಟದ ಜಾತಿ ಮತ್ತು ಕೋಮು ಭಾವನೆಗಳನ್ನು ಉದ್ಧೀಪಿಸಿದರೆ ಮಾತ್ರ, ಅಂತಿಮವಾಗಿ ನಮ್ಮನ್ನೆಲ್ಲ ಒಡೆದರೆ ಮಾತ್ರ ಅವನು ಗೆಲ್ಲಲಿದ್ದಾನೆ. ಅವನು ಚುನಾಯಿತನಾಗಲು ಇನ್ಯಾವುದೆ ಒಳ್ಳೆಯ ಸಕಾರಣಗಳು ಪರಿಗಣಿತವಾಗುವುದಿಲ್ಲ. ನಮ್ಮ ಜನರೇಷನ್ನಿನ ಮತ್ತು ನಮ್ಮ ಈ ಸಮಕಾಲೀನ ಸಂದರ್ಭದ ಸವಾಲುಗಳನ್ನು ಅರಿಯದ ಜನರೆ ಹೀಗೆ ಚುನಾಯಿತರಾಗಲಿದ್ದಾರೆ.

ಇವರು ಖರ್ಚು ಮಾಡಲಿರುವ ಪ್ರತಿಯೊಂದು ರೂಪಾಯಿಯೂ ಅನೈತಿಕವಾಗಿ ಸಂಪಾದಿಸಿದ, ಕಳ್ಳಮಾರ್ಗಗಳಿಂದ ಮಾಡಿದ, ಯಾವುದೆ ಲೆಕ್ಕಪತ್ರಗಳಿಲ್ಲದ, ಕಪ್ಪುಹಣ. ದುಡ್ಡಿರುವ ಜನ ಈ ಚುನಾವಣೆಯನ್ನು ಕೊಳ್ಳಲಿದ್ದಾರೆ. ಪ್ರತಿಯೊಂದು ರಾಜಕೀಯ ಪಕ್ಷವೂ ನೆಲದ ಕಾನೂನನ್ನು ಮತ್ತು ಜನಮತವನ್ನು ಉಲ್ಲಂಘಿಸಲಿವೆ ಮತ್ತು ಲೇವಡಿ ಮಾಡಲಿದೆ.

ಭಾರತ ದೇಶದ ಚುನಾವಣಾ ಆಯೋಗವು ವಿಧಾನಸಭೆಯ ಚುನಾವಣೆಗೆ ಒಬ್ಬ ಅಭ್ಯರ್ಥಿ ೧೦ ಲಕ್ಷ ರೂಪಾಯಿಗಳಗಿಂತ ಹೆಚ್ಚಿಗೆ ಖರ್ಚು ಮಾಡಬಾರದೆಂಬ ಕಾನೂನಿನ ಮಿತಿಯನ್ನು ವಿಧಿಸಿದೆ. ಅದರೆ, ಬಹುಪಾಲು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅದರ ಹತ್ತರಷ್ಟನ್ನು ಖರ್ಚು ಮಾಡಲಿದ್ದಾರೆ. ಮತ್ತು ಬೆಂಗಳೂರಿನಲ್ಲಂತೂ ಕೆಲವು ಅಭ್ಯರ್ಥಿಗಳು ಆ ಕಾನೂನು ಮಿತಿಯ ನೂರು ಪಟ್ಟಿಗಿಂತಲೂ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದಾರೆ. ಅನೈತಿಕವಾಗಿ ಮಾಡಿದ, ಲೆಕ್ಕಾಜಮಾ ಇಲ್ಲದ, ಕಪ್ಪುಹಣವನ್ನೆ ಇವರು ಖರ್ಚು ಮಾಡಲಿದ್ದಾರೆ ಮತ್ತು ಇನ್ನೂ ಹೆಚ್ಚಿಗೆ ಅದೇ ತರಹದ ಕೆಟ್ಟಹಣವನ್ನು ಸಂಪಾದಿಸುವ ಉದ್ದೇಶ ಹೊಂದಿದ್ದಾರೆ ಎನ್ನುವುದರ ಬಗ್ಗೆ ನೀವು ಯಾವುದೆ ಸಂಶಯ ಇಟ್ಟುಕೊಳ್ಳಬೇಡಿ. ಇದು ನ್ಯಾಯಯುತವಾದ ಚುನಾವಣೆಯಲ್ಲ. ಈ ವ್ಯವಸ್ಥೆಯಲ್ಲಿ, ಈ ಸಂದರ್ಭದಲ್ಲಿ, ಯಾವೊಬ್ಬ ಪ್ರಾಮಾಣಿಕ ಮನುಷ್ಯನೂ ಚುನಾವಣೆಗೆ ನಿಂತು ಗೆಲ್ಲಲಾರ.

ಮಾನವ ಇತಿಹಾಸದಲ್ಲಿ ಸಮಾನತೆ ಮತ್ತು ಪ್ರಜಾರಾಜ್ಯದ ಮೌಲ್ಯಗಳನ್ನು ಎತ್ತಿಹಿಡಿದ ಅತಿದೊಡ್ಡ ಮಹಾತ್ಮರಲ್ಲಿ ಒಬ್ಬನಾದ ಅಬ್ರಹಾಮ್ ಲಿಂಕನ್ ಒಮ್ಮೆ ಹೀಗೆ ಅಂದಿದ್ದಾನೆ: "ಪ್ರತಿಭಟಿಸಬೇಕಾದ ಸಮಯದಲ್ಲಿ ಮೌನವಾಗಿಬಿಡುವ ಪಾಪ ಕೆಲಸವನ್ನು ಮಾಡುವ ಮನುಷ್ಯರು ಹೇಡಿಗಳು."

ಈ ಸಂದರ್ಭದಲ್ಲಿ, ಭಾರತದ ನಾಗರಿಕರಾಗಿ, ನಮ್ಮ ಜವಾಬ್ದಾರಿಗಳು ತಾನೆ ಏನು? ಈ ಸವಾಲಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಕೇವಲ "ಬಾಯುಪಚಾರದ" ಮಾತುಗಳನ್ನು ಹೇಳುವ ಮೂಲಕವೆ? ಸಿನಿಕರಾಗಿ, ಸ್ವಾರ್ಥಿಗಳಾಗಿ ಇರುವುದರ ಮೂಲಕವೆ? ಅಥವ, ನಮ್ಮ ಹಕ್ಕುಗಳನ್ನು ಮತ್ತು ಜವಾಬ್ದಾರಿಗಳನ್ನು ತಿಳಿದುಕೊಂಡು, ಧರ್ಮಯುತವಾದ ಹಾದಿಯನ್ನು ತುಳಿಯುವುದರ ಮೂಲಕವೆ?

ನಾವು ಕೇವಲ ಸುಮ್ಮನೆ, ಸಂಬಂಧವಿಲ್ಲದ ರೀತಿಯಲ್ಲಿ ಇದ್ದುಬಿಡಲು ಸಾಧ್ಯವಿಲ್ಲ ಎಂದು ನಾನು ಖಚಿತವಾಗಿ ಭಾವಿಸುತ್ತೇನೆ. ಈಗ ನಾವು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಹೋದರೆ ಅದು ಬಹುದೊಡ್ಡ ಪಾಪಕಾರ್ಯ ಮತ್ತು ಅದು ನಾವು ಹುಟ್ಟಿಬೆಳೆದ, ನಾವು ದುಡಿದು ಜೀವನ ಸಾಗಿಸುತ್ತಿರುವ, ತೆರಿಗೆ ಕಟ್ಟುತ್ತಿರುವ, ನಮ್ಮ ಮಕ್ಕಳು ಬೆಳೆಯುತ್ತಿರುವ ಮತ್ತು ಅವರು ತಮ್ಮ ಜೀವನವನ್ನು ಕಳೆಯಲಿರುವ ಬೆಂಗಳೂರು ಮತ್ತು ಕರ್ನಾಟಕಕ್ಕೆ ಎಸಗುವ ದ್ರೋಹ ಎಂದು ನಾನು ಭಾವಿಸುತ್ತೇನೆ. ಕಳ್ಳರು, ಸುಳ್ಳರು, ಕ್ರಿಮಿನಲ್‌ಗಳು, ಸಮಾಜಘಾತುಕ ಶಕ್ತಿಗಳು, ಸಣ್ಣಮನಸ್ಸಿನ ಜನರೂ ನಮ್ಮ ಪ್ರತಿನಿಧಿಗಳಾಗುವುದನ್ನು ನಾವು ಭರಿಸಲು ಸಾಧ್ಯವೆ?

ಉಳಿದ ಲೇಖನ ಮತ್ತು ನನ್ನ ಆ ಸಮಯದ ಪ್ರಯತ್ನ/ಪ್ರಯೋಗಕ್ಕೆ ಸಿಕ್ಕ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳುವ ಆಸಕ್ತಿಯುಳ್ಳವರು, ಇಲ್ಲಿ ನೋಡಬಹುದು.
http://www.ravikrishnareddy.com/kannada.html

ಸಹನಾಗರೀಕರೆ, ಬೇವು ಬಿತ್ತಿ ಮಾವು ಬೆಳೆಯಲಾಗದು...

ಕರ್ನಾಟಕದ ರಾಜಕಾರಣದ ಬಗ್ಗೆ ಇಂತಹುದೊಂದು ಮಾತನ್ನು ಈಗಾಗಲೆ ಹಲವರು ಬಳಸಿರಬಹುದು. ಹಾಗೆಯೇ ಇದೂ ಸಹ ಕ್ಲೀಷೆ ಆಗಿಬಿಡಬಹುದು. ಅದು ದೇಶದ ದುರಂತ...

ಯಾಕೆ ಹೀಗಾಯಿತು? ಕೇವಲ ಜನರೇ ಕಾರಣರೆ? ಅವರಿಗೆ ಆಯ್ಕೆಗಳೇ ಇರಲಿಲ್ಲವೇ? ನಾಯಕರು ಅವರಾಗಿಯೇ ಬರುತ್ತಾರಾ ಅಥವ ಜನ ಮುಂದಕ್ಕೆ ತರುತ್ತಾರಾ?

ಪ್ರಜಾರಾಜ್ಯದಲ್ಲಿ ಯಥಾ ಪ್ರಜಾ ತಥಾ ಪ್ರತಿನಿಧಿ. ಅಲ್ಲವೇ?

ಉತ್ತಮ ಸಮಾಜದ ಕನಸು ಕಾಣುವುದಕ್ಕೆ ಮತ್ತು ಕ್ರಿಯಾಶೀಲರಾಗುವುದಕ್ಕೆ ಸಮಯ ಬಂದಿದೆಯೇ?

Sep 7, 2010

ಕೈಗಾರಿಕೆಗಳಿಗೆ ಕೃಷಿಜಮೀನು ಕೊಟ್ಟ ಹಳ್ಳಿಯ ಆರಂಭದ ದಿನಗಳು...

[ಮುಗಿದಿಲ್ಲದ, ಹೆಸರಿಟ್ಟಿಲ್ಲದ, ಪರಿಷ್ಕರಣಗೊಂಡಿಲ್ಲದ ಕತೆ-ಕಾದಂಬರಿಯೊಂದರ ಅಲ್ಲಲ್ಲಿಯ ಸಾಲುಗಳು.]

ಮೈಬಗ್ಗಿಸಿ ಕೆಲಸ ಮಾಡಲು ಗೊತ್ತಿಲ್ಲದ ಒಂದೆರಡು ಹಳೆಯ ಸ್ಥಿತಿವಂತ ಮನೆಗಳ ಹುಡುಗರು ಕಾರ್ಮಿಕ ಮುಖಂಡರಾಗಿ ಬೆಳೆದರು. ತಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಕೆಲವು ಕಾರ್ಖಾನೆಗಳ ಮಾಲೀಕರು ಇವರ ಸೇವೆಯನ್ನು ಬಳಸಿಕೊಳ್ಳುತ್ತಿದ್ದರು. ಇವರು ತಮ್ಮ ಗೂಂಡಾಗಿರಿಯನ್ನು ಉರಿಗೆ ಹೊಸಬರಾಗಿದ್ದವರ ಮೇಲೆ ತೋರಿಸುತ್ತಿದ್ದರೆ ಹೊರತು ಊರಿನವರ ಮೇಲೆ ತೋರಿಸುತ್ತಿರಲಿಲ್ಲ. ಊರಿನ ಬಹುತೇಕ ವಿಚಾರಗಳಲ್ಲಿ ಇನ್ನೂ ಹಳಬರ ಮತ್ತು ಹಿರಿಯರ ಮಾತೇ ನಡೆಯುತ್ತಿತ್ತು. ಆದರೆ ಕಾರ್ಖಾನೆಗಳ ಕಡೆ ಓಡಾಡಿಕೊಂಡು ರೌಡಿಸಂ ಮಾಡುತ್ತಿದ್ದ, ಮಾಲೀಕರನ್ನು ಮತ್ತು ನೌಕರರನ್ನು ಅನುಕೂಲಕ್ಕೆ ತಕ್ಕಂತೆ ಹೆದರಿಸಿ, ಸುಲಿಗೆ ಮಾಡಿಕೊಂಡು ಓಡಾಡುತ್ತಿದ್ದ ಯುವಕರಲ್ಲಿ ಒಂದಿಬ್ಬರು ಆಗಾಗ ಬಾಡಿಗೆ ಮನೆಗಳಲ್ಲಿದ್ದ ಹೆಂಗಸರನ್ನು ಬಲಾತ್ಕಾರ ಮಾಡುವುದು ಗೊತ್ತೂ ಗೊತ್ತಾಗದಂತೆ ನಡೆಯುತ್ತಿತ್ತು. ಬಾಡಿಗೆ ಮನೆಗಳಲ್ಲಿದ್ದ ಅನೇಕ ಕಾರ್ಮಿಕರು ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದುದ್ದರಿಂದ ಹಲವರ ಮನೆಗಳಲ್ಲಿ ಗಂಡನಿಲ್ಲದ ರಾತ್ರಿಗಳನ್ನು ಹೆಂಗಸರು ಕಳೆಯಬೇಕಿತ್ತು. ಹಾಗಾಗಿ ಅವರನ್ನು ಬಲಾತ್ಕಾರ ಮಾಡುವುದು ಪಡ್ಡೆ ಹುಡುಗರಿಗೆ ಕಷ್ಟವೇನೂ ಆಗಿರಲಿಲ್ಲ. ಆ ರೀತಿಯ ಅತ್ಯಾಚಾರಗಳಿಗೆ ಒಳಗಾದವರು ತಮ್ಮ ಸ್ಥಿತಿಗತಿಗಳಿಗೆ ಅನುಗುಣವಾಗಿ ಊರು ಖಾಲಿ ಮಾಡಿಕೊಂಡು ಹೋಗುತ್ತಿದ್ದರು ಇಲ್ಲವೆ ಪರಿಸ್ಥಿತಿಗೆ ಹೊಂದಿಕೊಂಡು ಬಿಡುತ್ತಿದ್ದರು.

ಬಾಡಿಗೆ ಮನೆಗಳಲ್ಲಿದ್ದ ಹೊರಊರಿನ ಹೆಣ್ಣುಮಕ್ಕಳಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಊರಿನ ಪುಂಡರಿಂದ ಅತ್ಯಾಚಾರಕ್ಕೆ ಒಳಗಾಗುತ್ತಿದ್ದ ಸಮಯದಲ್ಲಿ ಊರಿನ ಕೆಲವು ಬಡವರ ಹೆಣ್ಣುಮಕ್ಕಳ ಸ್ಥಿತಿಯೂ ಅಷ್ಟೇನು ಚೆನ್ನಾಗಿರಲಿಲ್ಲ. ಇದ್ದ ಸಣ್ಣಪುಟ್ಟ ಜಮೀನು ಕಳೆದುಕೊಂಡ ಸಣ್ಣ ರೈತರು ಒಂದೆರಡು ಎಮ್ಮೆ ಮತ್ತು ಹಸುಗಳಿಂದ ಜೀವನ ಮಾಡಬೇಕಿತ್ತು. ಹೊಲಗದ್ದೆಗಳು ಇಲ್ಲದ್ದರಿಂದ ಅವರು ತಮ್ಮ ಹಸುಗಳಿಗೆ ಪ್ರತಿದಿನವೂ ಹುಲ್ಲನ್ನು ಹೊಂದಿಸಬೇಕಿತ್ತು. ಒಂದು ಕಾಲದಲ್ಲಿ ಅವರದಾಗಿದ್ದ, ಆದರೆ ಇಂದು ಅವರದಲ್ಲದ ಜಮೀನುಗಳಲ್ಲಿ ಮಾತ್ರ ಹುಲ್ಲು ಧಂಡಿಯಾಗಿ ಬೆಳೆಯುತ್ತಿತ್ತು. ಕಾರ್ಖಾನೆಗಳ ಖಾಲಿ ಪ್ರದೇಶಗಳಲ್ಲಿ ಮಳೆಗಾಲದಲ್ಲಂತೂ ಹುಲ್ಲು ಆಳೆತ್ತರ ಬೆಳೆಯುತ್ತಿತ್ತು. ಆದರೆ ಕಾರ್ಖಾನೆಗಳಿಗೆಲ್ಲ ಮುಳ್ಳುತಂತಿಯ ಬೇಲಿಗಳಿದ್ದವು ಮತ್ತು ಪ್ರತಿ ಕಾರ್ಖಾನೆಗೂ ವಾಚ್‌ಮನ್‌ಗಳೆಂದು ಕರೆಸಿಕೊಳ್ಳುತ್ತಿದ್ದ ಕಾವಲುಗಾರರು ಇದ್ದರು. ಮನೆಗಳಲ್ಲಿ ಹಸುಗಳಿದ್ದ ಹೆಣ್ಣುಮಕ್ಕಳು ಇಂತಹ ಕಾರ್ಖಾನೆಗಳಿಗೆ ಬೆಳಿಗ್ಗೆ ನಸುಕಿನಲ್ಲೆ ಹುಲ್ಲು ಕೊಯ್ದುಕೊಂಡು ಬರಲು ಕುಡುಗೋಲಿನ ಸಮೇತ ಹೋಗುತ್ತಿದ್ದರು. ಕೆಲವು ವಾಚ್‌ಮನ್‌ಗಳು ಒಳ್ಳೆಯವರಿದ್ದು ಹುಲ್ಲು ಕೊಯ್ದುಕೊಳ್ಳಲು ಬಿಡುತ್ತಿದ್ದರೆ ಮತ್ತೆ ಕೆಲವರು ಬಿಟ್ಟಿಯಾಗಿ ಬಿಡುತ್ತಿರಲಿಲ್ಲ. ಹೆಣ್ಣುಮಕ್ಕಳ ದೇಹವನ್ನು ಆಗಾಗ ಶುಲ್ಕವಾಗಿ ಪಡೆಯುತ್ತಿದ್ದರು. ಹಲವಾರು ಮನೆಗಳಲ್ಲಿ ಅಪ್ಪಂದಿರಿಗೆ ಇದು ಗೊತ್ತಿತ್ತು. ಕೆಲವರು ಹೀಗಾಗದಂತೆ ಹುಷಾರಾಗಿ ನೋಡಿಕೊಂಡರು. ಮತ್ತೆ ಕೆಲವರು ಕುರುಡರಾದರು. ಅಭಿವೃದ್ಧಿಯ ಕಡೆ ಮುಖ ಮಾಡಿ ಬದಲಾಗುತ್ತಿರುವ ಹೊಸ ಪ್ರಪಂಚದಲ್ಲಿ ಅವರ ಜೀವನ ಈ ತಾಪತ್ರಯಗಳನ್ನು ಗಣಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅನಾನುಕೂಲಿಗಳು ಮತ್ತು ಅಬಲರು ಎರಡೂ ಕಡೆ ಶೋಷಿಸಲ್ಪಡುತ್ತಿದ್ದರು.

ಜಮೀನು ಕಳೆದುಕೊಂಡ ವಿಧವೆಯರದು ಇನ್ನೊಂದು ಕತೆ. ಮಕ್ಕಳಿಲ್ಲದೆ ಒಬ್ಬಂಟಿಯಾಗಿದ್ದ ವಿಧವೆಯರಿಗೆ ಮತ್ತು ಇನ್ನೂ ಅಪ್ರಾಪ್ತ ವಯಸ್ಸಿನ ಮಕ್ಕಳಿದ್ದ ವಿಧವೆಯರಿಗೆ ಪರಿಹಾರ ಕೊಡಿಸಲು ಹಾಗು ಕೋರ್ಟು-ಬ್ಯಾಂಕಿಗೆ ಕರೆದುಕೊಂಡು ಹೋಗಲು ಮೂರ್ನಾಲ್ಕು ಗಂಡಸರು ಪೈಪೋಟಿಯಲ್ಲಿ ಮುಂದಕ್ಕೆ ಬಂದರು. ಒಂದಿಬ್ಬರು ತಮ್ಮ ಭಾವಂದಿರ ಮತ್ತು ರಕ್ತಸಂಬಂಧಿಕರ ಮಾತು ಕೇಳಿ ಬಚಾವಾದರು. ಒಂದಿಬ್ಬರು ಗೊತ್ತಾಗದೆ ದುಡ್ಡನ್ನೆಲ್ಲ ಈ ಮುಂಡಾಮೋಚು ಜನರಿಗೆ ಕಳೆದುಕೊಂಡರು. ಮತ್ತೊಂದಿಬ್ಬರು ಹಾಗೆ ಸಹಾಯ ಮಾಡಲು ಬಂದವರಿಗೆ ದೈಹಿಕವಾಗಿಯೂ ಒಪ್ಪಿಸಿಕೊಂಡು ಒಂದಿಷ್ಟು ದುಡ್ಡೂ ಉಳಿಸಿಕೊಂಡು ಏನೂ ಆಗಿಲ್ಲದಂತೆ ಜೀವನ ಮುಂದುವರೆಸಿದರು. ಕೆಲವರು ಇದ್ದಕ್ಕಿದ್ದಂತೆ ಮೈತುಂಬಿಕೊಂಡು, ಬಿರಿದ ಟೊಮೆಟೊ ಹಣ್ಣಿನಂತೆ ಸ್ಥೂಲಕಾಯರಾದರು.

ಜಮೀನು ಕಿತ್ತುಕೊಂಡ ಸರ್ಕಾರ ಮತ್ತು ಅದರ ಸೀಮಿತ ದೃಷ್ಟಿಕೋನದ ದಡ್ಡ ಅಧಿಕಾರಿಗಳು ಪರಿಹಾರದ ಹಣ ಕೊಡುವುದರೊಂದಿಗೆ ತಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಂಡರು. ತಮ್ಮ ಪಾಲಿಗೆ ಬಂದ ದುಡ್ಡನ್ನು ಜನ ಬಳಸಬಹುದಾದ ರೀತಿಗಳನ್ನು ಮತ್ತು ಜೀವನೋಪಾಯಕ್ಕೆ ತೊಡಗಿಸಿಕೊಳ್ಳಲು ಇರಬಹುದಾದ ಮಾರ್ಗಗಳನ್ನು ಹಳ್ಳಿಯ ಮುಗ್ಧ ಜನತೆಗೆ ತಿಳಿಸುವ ಕಾರ್ಯವನ್ನು ಅವರು ಮಾಡಲಿಲ್ಲ.

ಯಾವುದು ನ್ಯಾಯ, ಯಾವುದು ಮೌಲ್ಯ, ಯಾವುದನ್ನು ಉಳಿಸಿಕೊಳ್ಳಬೇಕು, ಯಾವುದನ್ನು ತಡೆಯಬೇಕು, ಎನ್ನುವಂತಹ ಚಿಂತನೆ ಊರಿನ ಸಮಷ್ಟಿ ಮಾನಸದಲ್ಲಿ ಹುಟ್ಟಲಿಲ್ಲ. ಇದನ್ನೆಲ್ಲ ಯೋಚಿಸಿ ಮಾತನಾಡುವವರ ಮಾತಿಗೆ ಬೆಲೆ ಇಲ್ಲದ ಸಂದರ್ಭ ಅದು. ಊರಿನ ಅಧ:ಪತನವನ್ನು ಸಹಿಸಲಾಗದ ಹಲವು ಅನುಕೂಲಸ್ಥರು ತಮ್ಮ ಉಳಿದಿದ್ದ ಹೊಲದಲ್ಲಿ ಮನೆ ಮಾಡಿಕೊಂಡು ಊರಿನಿಂದ ಹೊರಗಾದರು.

Sep 1, 2010

ಹೀಗೊಬ್ಬ (ಮಾಜಿ) ನಿರಾಶ್ರಿತಳ ಕತೆ...

ಅದು ಹೇಗೋ ಈ ಲಿಂಕ್ ನೋಡಿದೆ. ತೆಲುಗಿನಲ್ಲಿದೆ. ಸುಮಲತರ ಟಿವಿ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳಲ್ಲಿ ಇರಬಹುದಾದ ಅತಿರಂಜನೆಯಾಗಲಿ ಅಥವ ನಾಟಕೀಯತೆಯಾಗಲಿ ಇಲ್ಲಿ , ಈ ಎಪಿಸೋಡ್‌ನಲ್ಲಿ, ಕಾಣಿಸಲಿಲ್ಲ. ಭಾಷೆ ಅರ್ಥವಾಗದಿದ್ದರೂ ಭಾವಾರ್ಥ ಅರ್ಥವಾಗಬಹುದು ಎಂದು ಭಾವಿಸಿ ಇಲ್ಲಿ ಕೊಡುತ್ತಿದ್ದೇನೆ.

ಚಪ್ಪಲಿ ಹೊಲೆಯುವ ವೆಂಕಟೇಶ್ವರಲುರವರ ಮುಗ್ಧತೆ ಮತ್ತು ಸರಳ ಚಿಂತನೆ ನಮ್ಮ ನೆಲದ ಸಹಸ್ರಾರು ವರ್ಷಗಳ ನಾಗರಿಕತೆಯ ವಿಕಾಸದ ಮತ್ತು ಅದು ಸಾಗಿ ಬಂದ ದಾರಿಯ ಕುರುಹು ಎನ್ನಿಸುತ್ತದೆ. ಅವರ ತಾತ ಹೇಳುತ್ತಿದ್ದರಂತೆ: "ಬಿಸಿಲಿಗೆ ಹೋಗುವವರನ್ನು ನೆರಳಿಗೆ ತರಬೇಕಪ್ಪ. ಅವರಿಗೆ ಇಲ್ಲದಿದ್ದಾಗ ಹತ್ತಿರಕ್ಕೆ ಕರೆದು ನಮಗಿರುವುದರಲ್ಲೆ ಅವರಿಗೂ ಇಡಬೇಕಪ್ಪ." ಸಾಮಾಜಿಕ-ಆರ್ಥಿಕ-ಬೌದ್ಧಿಕ ಇತಿಮಿತಿಗಳೇನೇ ಇರಲಿ, ಕಲುಷಿತವಾಗಲೊಲ್ಲದ ಮನಸ್ಸುಗಳು.

ಇತ್ತೀಚೆಗೆ ತಾನೆ ಬೆಂಗಳೂರಿನಲ್ಲಿ ಹಲವಾರು ನಿರಾಶ್ರಿತರು ಸಾವಿಗೀಡಾದರು....
Aug 30, 2010

ಗಾಂಜಾ ಬೆಳೆಯುವ ಲಿವರ್‌ಮೋರ್ ಮನೆಯ ಮೇಲೆ ದಾಳಿ

[ಮುಗಿದಿಲ್ಲದ, ಹೆಸರಿಟ್ಟಿಲ್ಲದ, ಪರಿಷ್ಕರಣಗೊಂಡಿಲ್ಲದ ಕತೆ-ಕಾದಂಬರಿಯೊಂದರ ಅಲ್ಲಲ್ಲಿಯ ಸಾಲುಗಳು.]

ತಡ ಮಾಡಿದರೆ ಅವಕಾಶ ಎಲ್ಲಿ ತಪ್ಪಿಹೋಗಿಬಿಡುತ್ತದೊ ಎಂದು ಕಿಮ್, ಕೊರಾನ್, ಮತ್ತು ಕೀಲೋ ಅಂದು ರಾತ್ರಿ ಮೂರು ಗಂಟೆಗೇ ಎದ್ದು ಒಬ್ಬೊಬ್ಬರೂ ಒಂದೊಂದು ರಿವಾಲ್ವರ್ ಅನ್ನು ಜೇಬಲ್ಲಿ ತುರಿಕಿಕೊಂಡು ಕಾರಿನಲ್ಲಿ ಓಕ್‌ಲ್ಯಾಂಡ್‌ನಿಂದ ಲಿವರ್‌ಮೋರ್‌ಗೆ ಹೊರಟರು. ಕೊರಾನ್‌ಗೆ ಆ ಮನೆಯ ವಿಳಾಸ ಗೊತ್ತಿತ್ತು. ಮುಂಜಾವು ನಾಲ್ಕೂವರೆಗೆಲ್ಲ ಗಾಂಜಾ ಬೆಳೆಯುತ್ತಿದ್ದವನ ಮನೆಯ ಮುಂದಿದ್ದರು. ಅದು ನಾಲ್ಕು ಬೆಡ್‌ರೂಮ್‌ಗಳ ದೊಡ್ಡ ಮನೆ. ರಸ್ತೆಯಲ್ಲಿ ಯಾರೊಬ್ಬರ ಸಂಚಾರವಾಗಲಿ ಸುಳಿವಾಗಲಿ ಕಾಣಿಸಲಿಲ್ಲ. ಕಾರು ಇಳಿದವರೆ ಮೂವರೂ ಸದ್ದಿಲ್ಲದೆ ಮನೆಯನ್ನು ಬಳಸಿ ಹಿಂಬದಿಯ ಹಿತ್ತಿಲಿಗೆ ನುಸುಳಿದರು. ಕೊರಾನ್ ತುದಿಯಲ್ಲಿ ಚಪ್ಪಟೆಯಾಗಿ ಸ್ವಲ್ಪ ಬಾಗಿದ್ದ ಕಬ್ಬಿಣದ ಕಾಗೆಕೊಕ್ಕಿನ ಸರಳನ್ನು ಜೊತೆಗೆ ಒಯ್ದಿದ್ದ. ಹಿಂಬದಿಯ ಬಾಗಿಲ ಪಕ್ಕದಲ್ಲಿದ್ದ ಕಿಟಕಿಯ ಅಂಚಿನಲ್ಲಿ ಆ ಸರಳನ್ನು ತೂರಿಸಿ ವಿರುದ್ಧ ದಿಕ್ಕಿನಲ್ಲಿ ಜೋರಾಗಿ ಎಳೆದ. ಕಿಟಕಿ ಬಾಗಿಲಿನ ಕೊಂಡಿ ಒಳಗೆ ಚಳ್‌ಪಳ್ ಎಂದು ಕಿತ್ತುಬಂತು. ಕೂಡಲೆ ಕಿಟಕಿಯನ್ನು ಪೂರ ಅಂಚಿಗೆ ಸರಿಸಿ ಮೂವರೂ ಒಳಗೆ ನುಗ್ಗಿದರು.

ಒಳಗೆ ತನ್ನ ೨೫ ವರ್ಷದ ಬಿಳಿಯ ಗರ್ಲ್‌ಫ್ರೆಂಡ್ ಮಿಸ್ಟಿ ಜೊತೆ ಮಲಗಿದ್ದ ೩೫ ವರ್ಷದ ಬಿಳಿಯ ಸೊನೆಪಸುಟ್‌ಗೆ ಇವರು ಮಾಡಿದ ಸದ್ದು ಅರೆಬರೆ ನಿದ್ದೆಯಲ್ಲೂ ಗೊತ್ತಾಯಿತು. ಮದುವೆ ಆಗಿಲ್ಲದಿದ್ದರೂ ಆತನಿಗೆ ತನ್ನ ಗರ್ಲ್‌ಫ್ರೆಂಡ್‌ನಿಂದ ಇಬ್ಬರು ಪುಟ್ಟಮಕ್ಕಳಿದ್ದರು. ದೊಡ್ದವನಿಗೆ ಎರಡೂವರೆ ವರ್ಷ ಮತ್ತು ಚಿಕ್ಕ ಮಗುವಿಗೆ ಇನ್ನೂ ಎಂಟು ತಿಂಗಳಷ್ಟೇ ಆಗಿತ್ತು. ಆ ಚಿಕ್ಕಮಗು ಆಗಾಗ ರಾತ್ರಿ ಹೊತ್ತು ಡೈಪರ್ ಒದ್ದೆ ಮಾಡಿಕೊಂಡರೆ ಅಳುತ್ತಿದ್ದಿದ್ದರಿಂದ ಅವರಿಬ್ಬರಿಗೂ ನಿದ್ದೆಯಲ್ಲೂ ಏಳುವುದು ಅಭ್ಯಾಸವಾಗಿತ್ತು. ಆ ಮಕ್ಕಳಿಬ್ಬರೂ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು. ಇನ್ನೆರಡು ಕೋಣೆಯಲ್ಲಿ ಕುಂಡಗಳಲ್ಲಿದ್ದ ಗಾಂಜಾ ಗಿಡಗಳು ತಮ್ಮ ನಿರಂತರ ಬೆಳವಣಿಗೆಯಲ್ಲಿ ತೊಡಗಿದ್ದವು.

ಹೊರಗಿನ ಸದ್ದಿಗೆ ಎಚ್ಚರವಾಗಿ ಆ ಬಿಳಿಯ ಎದ್ದು ಹೊರಗೆ ಬಂದ. ಆತನ ಗರ್ಲ್‌ಫ್ರೆಂಡ್‌ಗೂ ಎಚ್ಚರವಾಗಿ ಅವಳೂ ಅವನ ಹಿಂದೆ ಬಂದಳು. ಇವರು ಲಿವಿಂಗ್‌ರೂಮಿಗೆ ಬರುವಷ್ಟರಲ್ಲಿ ಮೂವರು ಅಣ್ಣತಮ್ಮಂದಿರೂ ಅಲ್ಲಿದ್ದರು. ಅಷ್ಟೊತ್ತಿಗೆ ಮೂವರ ಕೈಯ್ಯಲ್ಲೂ ರಿವಲ್ವಾರ್‌ಗಳು ಸ್ಥಾಪಿತವಾಗಿದ್ದವು. ಅರೆಬರೆ ಬೆಳಕಿನಲ್ಲಿ ಇವರನ್ನು ಕಂಡ ಮನೆಯವರಿಬ್ಬರೂ ಸ್ಥಂಭಿತರಾಗಿ ನಿಂತುಬಿಟ್ಟರು. ದೊಡ್ದವ ಕಿಮ್ ಕಾಲ್ಸ್ಟನ್ ಅವರಿಗೆ ಮೊದಲ ಮಾತಿನಲ್ಲಿ ಎಚ್ಚರಿಕೆ ಕೊಟ್ಟ.
"ತಾಯ್ಗಂಡನೆ, ಕೈಮೇಲೆತ್ತು. ಏನೂ ತಂತ್ರ ಮಾಡ್ಬೇಡ. ನೀನೂ ಅಷ್ಟೆ, ಸೂಳೆ."
ಮನೆಯವಳಿಗೆ ಮಕ್ಕಳ ಯೋಗಕ್ಷೇಮದ ಭಯ ಆಯಿತು.
"ದಯವಿಟ್ಟು ಏನೂ ಮಾಡಬೇಡಿ. ಮಕ್ಕಳು ನಿದ್ದೆ ಮಾಡ್ತಿದ್ದಾವೆ."
"ಹಾಗಾದ್ರೆ ಕೇಳಿ. ಮನೇಲಿ ಎಷ್ಟು ಹಣ ಇದೆಯೋ ಎಲ್ಲಾ ತಂದುಕೊಡಿ. ಹಾಗೇನೆ ಮನೇಲಿರೋ ಗಾಂಜಾ ಕೂಡ."
ಬಿಳಿಯನಿಗೆ ಅಷ್ಟು ಸುಲಭವಾಗಿ ಬಿಟ್ಟುಕೊಡಲು ಮನಸ್ಸಾಗಲಿಲ್ಲ.
"ಯಾವ ಗಾಂಜಾ? ನಿಮಗೆಲ್ಲೋ ತಪ್ಪು ಸಮಾಚಾರ ಸಿಕ್ಕಿದೆ."
ಅದನ್ನು ಕೇಳಿ ಕೊರಾನ್‌ಗೆ ಕೋಪಬಂತು. ಬಿಳಿಯನ ಬಳಿ ಹೋಗಿ ಅವನ ಮೂತಿಗೆ ಒಂದು ಗುದ್ದಿದ. "ಸೂಳೆಮಗನೆ, ಸುಳ್ಳು ಹೇಳ್ತೀಯಾ? ನಾನು ಹಿಂದೊಮ್ಮೆ ಇಲ್ಲಿಗೆ ಬಂದಿದ್ದೆ."
ಬಿಳಿಯನ ಮೂಗಿನಿಂದ ರಕ್ತ ಒಸರಲು ಆರಂಭವಾಯಿತು. ತನ್ನ ಗೆಳೆಯನ ಸ್ಥಿತಿ ನೋಡಿ ಆ ಬಿಳಿಯಳಿಗೆ ಭಯವಾಯಿತು. ಇವರು ಇನ್ನೇನು ಮಾಡುತ್ತಾರೋ ಎಂದು ಮಕ್ಕಳಿರುವ ಕೋಣೆಗೆ ಹೋಗಲು ಅತ್ತ ನುಗ್ಗಿದಳು. ಅದನ್ನು ನೋಡಿ ದೊಡ್ಡಣ್ಣ ಕಿಮ್ "ಸೂಳೆ, ಅಲ್ಲೇ ನಿಂತ್ಕೊ," ಎಂದ. ಆತನ ಪಕ್ಕದಲ್ಲಿದ್ದ ೧೫ ವರ್ಷದ ಕೀಲೊ ಅವಳು ನಿಲ್ಲದ್ದನ್ನು ಕಂಡು ರಿವಾಲ್ವರ್‌ನ ಟ್ರಿಗರ್ ಅನ್ನು ಅವಸರದಲ್ಲಿ ಒತ್ತಿದ.ಅದು ಹೋಗಿ ಅವಳ ತೊಡೆಗೆ ಬಡಿಯಿತು. ಓ ಮೈ ಗಾಡ್ ಎಂದು ಕಿರುಚಿಕೊಂಡು ಮುಗ್ಗರಿಸಿ ಮಕ್ಕಳ ರೂಮಿನ ಬಾಗಿಲ ಬಳಿ ಬಿದ್ದಳು.

ಒಳಗೆ ಮಕ್ಕಳು ಇದ್ಯಾವುದರ ಪರಿವೆ ಇಲ್ಲದೆ ಇನ್ನೂ ಗಾಢನಿದ್ರೆಯಲ್ಲಿದ್ದರು.

....

Jul 9, 2010

ಲಿಂಗಾಯತ ಸಮಾವೇಶದಲ್ಲಿ ಆನು "ಹೊರಗಣವನು"

ನನ್ನ ಇನ್ನಿತರೆ ವ್ಯವಹಾರಗಳಲ್ಲಿ ವ್ಯಸ್ತನಾಗುವುದಕ್ಕಿಂತ ಮುಂಚೆ ಇದನ್ನು ಇಲ್ಲಿ ದಾಖಲಿಸೋಣ ಎಂದು ಬರೆಯುತ್ತಿದ್ದೇನೆ.

ಕಳೆದ ವಾರ (ಜುಲೈ 3-4, 2010) ಕೆನಡಾದ ಟೊರಾಂಟೋದಲ್ಲಿ ಲಿಂಗಾಯತ (ಮತ್ತು/ಅಥವ ವೀರಶೈವ) ಸಮುದಾಯದ ಸಮಾವೇಶ ನಡೆಯಿತು. "ಉತ್ತರ ಅಮೆರಿಕದ ವೀರಶೈವ ಸಮಾಜ" ವರ್ಷಕ್ಕೊಮ್ಮೆ ನಡೆಸುವ ಸಮಾವೇಶ ಅದು. ಯಾವುದೇ ಜಾತಿಯ ಸಮಾವೇಶ ಅಥವ ಸಭೆಗಳಲ್ಲಿ ಪಾಲ್ಗೊಳ್ಳುವುದು ಜಾತ್ಯತೀತ ಮತ್ತು ಪ್ರಗತಿಪರ ನಿಲುವಿನ ಮತ್ತು ಬದ್ಧತೆಯ ಯಾರೊಬ್ಬರಿಗೂ ಕಷ್ಟ. ಅದು ತಪ್ಪೂ ಕೂಡ. ಸಮಾನತೆ ಮತ್ತು ಸಹಬಾಳ್ವೆಗಾಗಿ ಹೋರಾಡುತ್ತ, 12ನೇ ಶತಮಾನದಲ್ಲಿಯೆ ಜಾತ್ಯತೀತವಾದ (casteless) ಸಮಾಜವೊಂದನ್ನು ಕಟ್ಟುತ್ತ ಬೆಳೆದ ಸಮುದಾಯದವರ ಈಗಿನ ತಲೆಮಾರಿನ ಜನರ ಸಮಾವೇಶದಲ್ಲಿ ಪಾಲ್ಗೊಳ್ಳಲು ಯಾವುದೇ ಹಿಂಜರಿಕೆ ಇರಕೂಡದು. ಆದರೆ ವಾಸ್ತವ ಹಾಗೆ ಇಲ್ಲ ಎಂದು ಎಲ್ಲರಿಗೂ ಗೊತ್ತು. ಲಿಂಗಾಯತ ಸಮುದಾಯ ಎನ್ನುವುದು ಬೇರೆಯದೇ ಮತವೋ ಅಥವ ಅದೂ ಒಂದು ಜಾತಿಯೋ ಎನ್ನುವುದೇ ಬಹುಸಂಖ್ಯಾತರಿಗೆ ಸ್ಪಷ್ಟವಾಗಿಲ್ಲ. ಬಸವಣ್ಣಾದಿ ಶರಣರ ಆದರ್ಶದ ಹಿನ್ನೆಲೆಯಿಂದ ನೋಡಿದರೆ ಅದು ಅವೆರಡೂ ಆಗಬಾರದು. ಅದೊಂದು ಜಾತ್ಯತೀತ ಮತ್ತು ಪ್ರಗತಿಪರ ಚಿಂತನೆಯ, ಆಚರಣೆಯಲ್ಲಿ ತೊಡಗಿಕೊಂಡ ಜನಸಮೂಹವಾಗಬೇಕು. ವಾಸ್ತವ ಮತ್ತೊಮ್ಮೆ ಎದುರು ನಿಲ್ಲುತ್ತದೆ. ಯಾರಿಗೆ ಅಲ್ಲದಿದ್ದರೂ ಕರ್ನಾಟಕದ ಜನತೆಗೆ ವೈಚಾರಿಕ ಮಾರ್ಗದರ್ಶನ ನೀಡಬಹುದಾಗಿದ್ದ ಸಮುದಾಯವೊಂದು ಅಂತಹ ಅವಕಾಶವನ್ನು ಕಳೆದುಕೊಂಡಿದ್ದು ಮತ್ತು ಜವಾಬ್ದಾರಿ ಮರೆತದ್ದು ಚಾರಿತ್ರಿಕ ವ್ಯಂಗ್ಯ. ವಿಶಾಲವಾಗಬೇಕಾಗಿದ್ದದ್ದು ಮನುಷ್ಯನ ಸ್ವಾರ್ಥ ಮತ್ತು ಸ್ವಹಿತಾಸಕ್ತಿಯ ಸಂಚಿಗೆ ಬಲಿಯಾಗಿ ಸಂಕುಚಿತವಾದದ್ದಂತೂ ಮೂಲಚಳವಳಿಗೆ ಮತ್ತು ಹಿರಿಯರಿಗೆ ಬಗೆದ ದ್ರೋಹ.

ಹೀಗಿದ್ದರೂ, ಒಂದಿಷ್ಟು ಆಗ್ರಹ ಮತ್ತು ಪ್ರೀತಿಗೆ, ಈ ಸಮುದಾಯದ ಕೆಲವರನ್ನಾದರೂ ಅನುಸಂಧಾನದಲ್ಲಿ ತೊಡಗಿಸಿಕೊಳ್ಳಬಹುದಾದ ಅವಕಾಶಕ್ಕಾಗಿ ಈ ಸಮಾವೇಶಕ್ಕೆ ಆಹ್ವಾನಿತನಾಗಿ ಹೋಗಿದ್ದೆ. ವಚನ ಸಾಹಿತ್ಯದ ವಿದ್ವಾಂಸರಲ್ಲೊಬ್ಬರಾದ ರಮ್ಜಾನ್ ದರ್ಗಾ ಮುಖ್ಯ ಭಾಷಣಕಾರರಾಗಿ ಬಂದಿದ್ದರು. ನಾಡಿನ ಕೆಲವೇ ಪ್ರಗತಿಪರ ಮಠಾಧೀಶರರಲ್ಲಿ ಒಬ್ಬರಾದ ಚಿತ್ರದುರ್ಗದ ಶಿವಮೂರ್ತಿ ಶರಣರಿದ್ದರು. ಪ್ರಸ್ತಾಪಿಸಲು ಅನೇಕ ವಿಷಯಗಳಿದ್ದವು. ಕೊಟ್ಟಿರುವ ಅವಧಿಯಲ್ಲಿ ಈ ಎಲ್ಲಾ ವಿಚಾರಗಳನ್ನು ಪ್ರಸ್ತಾಪಿಸಬೇಕಾಗಿದ್ದಿದ್ದರಿಂದ ಒಂದು ಸಣ್ಣ ಲೇಖನವನ್ನು ಬರೆದುಕೊಳ್ಳೋಣ ಎಂದುಕೊಂಡಿದ್ದೆ. ಆದರೆ ಸಮಯಾಭಾವ ಮತ್ತು ಅದರ ಹಿಂದಿನ ದಿನಗಳ ಜೆಟ್ ಲ್ಯಾಗ್‌ನಿಂದಾಗಿ ಸಾಧ್ಯವಾಗಲಿಲ್ಲ. ಅದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಒಂದೇ ವಿಷಯದ ಮೇಲೆ ಯಾವುದೆ ಸಂಕೋಚ ಮತ್ತು ಪೊಲಿಟಿಕಲಿ ಕರೆಕ್ಟ್ ಆಗಿರಬೇಕಾದ ಹಿಂಜರಿಕೆಗಳಿಲ್ಲದೆ ಮಾತನಾಡಿದೆ. ಯಾರೊಬ್ಬರ ಜಾತಿಅಹಂ ಅನ್ನು ತೃಪ್ತಿಪಡಿಸಲು ನಾನಲ್ಲಿ ಹೋಗಿರಲಿಲ್ಲ. ಹಾಗೇನಾದರೂ ಆಗಿದ್ದಲ್ಲಿ ನನ್ನನ್ನೇ ನಾನು ಕ್ಷಮಿಸಿಕೊಳ್ಳುವ ಹಾಗಿರಲಿಲ್ಲ. ನನ್ನ ಇತರೆ ಪ್ರಗತಿಪರ ಮಿತ್ರರಿಗೆ ನನ್ನ ಬಗ್ಗೆ ನಾಚಿಕೆ ಮತ್ತು ಅಸಹ್ಯ ಅಗದ ಹಾಗೆ ನಡೆದುಕೊಂಡೆ ಎಂದು ಹೇಳಿದರೆ ಎಲ್ಲವನ್ನೂ ಹೇಳಿದಂತಾಗುತ್ತದೆ ಎಂದು ಭಾವಿಸುತ್ತೇನೆ. ಒಂದೆರಡು ಸಲ ಸಣ್ಣಪುಟ್ಟ ವಿವರಣೆ ಮತ್ತು ಪ್ರತಿರೋಧ ಬಂದರೂ, ಒಟ್ಟಾರೆಯಾಗಿ ಬಹಳಷ್ಟು ಜನ ನನ್ನ ಮಾತಿನ ಅರ್ಥ ಮತ್ತು ವಾಸ್ತವವನ್ನು ಗಮನಿಸಿದ್ದು ಗೊತ್ತಾಯಿತು. ಹಲವಾರು ಅಂತರ್ಜಾತಿ, ಅಂತರ್ಮತೀಯ, ಅಂತರ್ಜನಾಂಗ ಮದುವೆಗಳಾಗಿದ್ದ ಜನ ಅಲ್ಲಿದ್ದರು. ಅವರಿಗೆ ಅಪಥ್ಯವಾಗುವಂತಹುದೇನನ್ನೂ ನಾನು ಹೇಳಲಿಲ್ಲ. (ಸಾಧ್ಯವಾದಾಗ ಅದರ ಆಡಿಯೊ ಹಾಕುತ್ತೇನೆ.)

ಪ್ರಜಾವಾಣಿಯ ವರದಿಗಾರರಾಗಿದ್ದ ಮತ್ತು ಈಗ ಟೊರಾಂಟೋದಲ್ಲಿಯೇ ವಾಸವಾಗಿದ್ದು ಅಲ್ಲಿಂದಲೇ ಸ್ಥಳೀಯ ಭಾರತೀಯ ಸಮುದಾಯದವರಿಗಾಗಿ ಒಂದು ಪತ್ರಿಕೆಯನ್ನೂ ಹೊರತರುತ್ತಿರುವ ನಾಗರಾಜ್ ಈ ಸಮಾವೇಶದ ಆಯೋಜಕರಿಗೆ ಕೆಲವೊಂದು ಸಲಹೆಗಳನ್ನು ಕೊಟ್ಟರು. ಬಸವಾನುಯಾಯಿಗಳು ಎಂದು ಎದೆತಟ್ಟಿ ಹೇಳಿಕೊಳ್ಳುವವರಿಗೆ ಬಹಳ ಸೂಕ್ತವಾದ ಮತ್ತು ಅವರು ಮಾಡಲೇಬೇಕಾದ ಸಲಹೆಗಳವು. ಅದನ್ನು ಅನುಮೋದಿಸುತ್ತ ನಾನೂ ಒಂದು ಮಾತು ಸೇರಿಸಿದೆ: ಬಾಗಿಲು ತೆರೆದಿಡಿ; ಮುಚ್ಚಿಡಬೇಡಿ. ಈ ಸಮುದಾಯ ಸಂಸ್ಥೆಯ ಮುಂದಿನ ನಡೆಗಳು ಗಮನಿಸಲು ಅರ್ಹ.

Jun 2, 2010

ಎದೆಯ ಕೂಗನು ಮೀರಿ... ಬಿಡುಗಡೆಯ ಚಿತ್ರಗಳು


ಒಂದಷ್ಟು ಸಂವಾದ, ಚರ್ಚೆ, ತಮಾಷೆ ಮತ್ತು ಖುಷಿಯ ನಡುವೆ "ಎದೆಯ ಕೂಗನು ಮೀರಿ" ಕಳೆದ ಭಾನುವಾರ ಮೈಸೂರಿನಲ್ಲಿ ಬಿಡುಗಡೆಯಾಯಿತು. ಈ ಕಾರ್ಯಕ್ರಮ ನಡೆಸಲು ಸಹಾಯ ಮಾಡಿದ ಮತ್ತು ನಡೆಸಿಕೊಟ್ಟ ಗೆಳೆಯ ಪೃಥ್ವಿ, ಅವರ ಮನೆಯವರು, ಪೃಥ್ವಿಯ ಬಾಲ್ಯದ ಗೆಳೆಯ ರಾಮಚಂದ್ರ ಗಂಗ, ಅಸಿತ ಮತ್ತು ಪ್ರಭುಶಂಕರ್‌ರವರಿಗೆ ನನ್ನ ಕೃತಜ್ಞತೆಗಳು.

ಅಂದ ಹಾಗೆ ಪುಸ್ತಕದ ಮುಖಪುಟ ವಿನ್ಯಾಸ ಬಸವರಾಜುರವರದು. ಬೆಂಗಳೂರಿನಲ್ಲಿಯ ಅವರ ಕೆಲಸದ ಒತ್ತಡದಿಂದ ಅವರಿಗೆ ಬರಲಾಗಿರಲಿಲ್ಲ. ಅವರಿಗೂ ನನ್ನ ಧನ್ಯವಾದಗಳು ಮತ್ತು ಕೃತಜ್ಞತೆಗಳು.

ಕಾರ್ಯಕ್ರಮದ ಕೆಲವು ಚಿತ್ರಗಳು ಇಲ್ಲಿವೆ. ಇವನ್ನು ತೆಗೆದ ಸತೀಶ್ ಶಿಲೆ ಮತ್ತು ಮೃತ್ಯುಂಜಯರವರಿಗೆ ಮತ್ತೊಮ್ಮೆ ಧನ್ಯವಾದಗಳು.ಇದು ಪ್ರಜಾವಾಣಿಯಲ್ಲಿ ಬಂದ ವರದಿ:

May 26, 2010

ಎದೆಯ ಕೂಗನು ಮೀರಿ...: ಮೈಸೂರಿನಲ್ಲಿ ಬಿಡುಗಡೆ

ಸ್ನೇಹಿತರೆ,

ಮೊದಲು ದಟ್ಸ್‌ಕನ್ನಡದಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು, ನಂತರ ವಿಕ್ರಾಂತ ಕರ್ನಾಟಕದಲ್ಲೂ ಧಾರಾವಾಹಿಯಾಗಿ ಪ್ರಕಟವಾಗಿದ್ದ ಅನುವಾದಿತ ಕಾದಂಬರಿ "ಎದೆಯ ಕೂಗನು ಮೀರಿ..." ಇದೇ ಭಾನುವಾರ ಸಂಜೆ ೫ ಗಂಟೆಗೆ ಮೈಸೂರಿನಲ್ಲಿ ಪುಸ್ತಕರೂಪದಲ್ಲಿ ಬಿಡುಗಡೆಯಾಗಲಿದೆ. ಕಾದಂಬರಿಯ ಮೂಲಕರ್ತೃ ಅಸಿತ ಪ್ರಭುಶಂಕರ ಸಹ ಅಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ವಿವರಗಳು ಹೀಗಿವೆ:

ಪುಸ್ತಕ ಬಿಡುಗಡೆ ಮತ್ತು ಅಧ್ಯಕ್ಷತೆ:
ಡಾ. ಇ. ರತಿರಾವ್ (ನಿವೃತ್ತ ವಿಜ್ಞಾನಿ)

ಪುಸ್ತಕದ ಕುರಿತು:
ಡಾ. ಆರ್. ಇಂದಿರಾ (ಸಮಾಜಶಾಸ್ತ್ರಜ್ಞೆ)

ಉಪಸ್ಥಿತಿ:
ಅಸಿತ ಪ್ರಭುಶಂಕರ (ಕಾದಂಬರಿಯ ಮೂಲಕರ್ತೃ)
ರವಿ ಕೃಷ್ಣಾ ರೆಡ್ಡಿ (ಅನುವಾದಕ)

ಸ್ಥಳ: ಮನೆಯಂಗಳ, ಕಲಾಮಂದಿರ, ಮೈಸೂರು
ದಿನಾಂಕ: 30-5-2010, ಭಾನುವಾರ
ಸಮಯ: ಸಂಜೆ 5 ಗಂಟೆಗೆ

ಪ್ರಕಾಶಕರು: ಮೌಲ್ಯಾಗ್ರಹ ಪ್ರಕಾಶನ, ಬೆಂಗಳೂರು - 99

ಈ ಕಾರ್ಯಕ್ರಮಕ್ಕೆ ತಮಗೆಲ್ಲ ಸ್ವಾಗತ.

ಹೆಚ್ಚಿನ ವಿವರಗಳು ಬೇಕಿದ್ದಲ್ಲಿ, ದಯವಿಟ್ಟು ಸಂಪರ್ಕಿಸಿ: ೯೬೮೬೦೮೦೦೦೫ (ಸದ್ಯಕ್ಕೆ ಬೆಂಗಳೂರಿನಲ್ಲಿದ್ದೇನೆ; ಇದು ನನ್ನ ಮೊಬೈಲ್ ಸಂಖ್ಯೆ.)

Feb 22, 2010

K.R. ಶ್ರೀಧರ್, ಬ್ಲೂಮ್‌ಬಾಕ್ಸ್, ಸಗಣಿ, ಹಳ್ಳಿಯಲ್ಲಿಯೆ ವಿದ್ಯುತ್...

K.R. ಶ್ರೀಧರ್ ಮತ್ತು ಬ್ಲೂಮ್‌ಬಾಕ್ಸ್, ಈ ಎರಡು ಹೆಸರುಗಳು ಮುಂದಿನ ದಿನಗಳಲ್ಲಿ ನಿಮಗೆ ಆಗಾಗ ಕಿವಿಗೆ ಬೀಳಬಹುದು; Clean, Green, ಮತ್ತು Cheap Energy ನಿಮ್ಮ ಆಸಕ್ತಿಯ ವಿಷಯಗಳಲ್ಲಿ ಒಂದಾಗಿದ್ದರೆ. ಕೆಳಗಿನ ವಿಡಿಯೊ ನೋಡಿ.ಈ ತಂತ್ರಜ್ಞಾನದ ಪರ-ವಿರುದ್ಧದ ವಾದಗಳನ್ನು ಓದಲು ಈ ಕೆಳಗಿನ ಲಿಂಕ್‌ನಲ್ಲಿರುವ ಕಾಮೆಂಟ್ಸ್ ವಿಭಾಗಕ್ಕೆ ಹೋಗಿ:
http://news.cnet.com/8301-11128_3-10457410-54.html

ಈ ತಂತ್ರಜ್ಞಾನ ಮತ್ತಷ್ಟು mature ಆದಮೇಲೆ ಮತ್ತು mass production ಆರಂಭವಾದ ಮೇಲೆ ಈ generatorಗಳು ಇನ್ನೂ ಅಗ್ಗವಾಗಬಹುದು. ಬಹುಶಃ ಹತ್ತು-ಹದಿನೈದು ಲಕ್ಷಕ್ಕೆಲ್ಲ ನಮ್ಮ ಹಳ್ಳಿಗಳು ಗ್ರಿಡ್‌ನ ಸಹಾಯವಿಲ್ಲದೆ ತಮ್ಮದೆ ಊರಿನಲ್ಲಿ ವಿದ್ಯುತ್ ಉತ್ಪಾದಿಸಿಕೊಳ್ಳಬಹುದು. Biomass ಇಂಧನವನ್ನೂ ಬಳಸಬಹುದು ಎಂದು ಹೇಳುತ್ತಿರುವುದರಿಂದ ಸಗಣಿಯ ಗೋಬರ್ ಗ್ಯಾಸ್ ಯಾಕಾಗುವುದಿಲ್ಲ? ಹಾಗೇನಾದರೂ ಆದರೆ, ಹಳ್ಳಿಗಳು ವಿದ್ಯುತ್‌ನ ವಿಚಾರದಲ್ಲಿ ಪೂರ್ಣವಾಗಿ ಸ್ವಾವಲಂಬಿಯಾಗಬಹುದು (ಜನರೇಟರ್‌ನ ಹೊರತಾಗಿ). ಗೋಬರ್ ಗ್ಯಾಸ್ ಇಲ್ಲದ ಕಡೆ ಮತ್ತು ಪಟ್ಟಣಗಳಲ್ಲಿ CNG/LPG ಬಳಸಬಹುದು. ನಾನಂತೂ ಇದನ್ನು ನೋಡಿದ ಸಮಯದಿಂದ excite ಆಗಿದ್ದೇನೆ. ಮುಂದಿನ ಒಂದೆರಡು ವರ್ಷಗಳಲ್ಲಿ ಇಂತಹುದೆ ಹೊಸಹೊಸ ತಂತ್ರಜ್ಞಾನಗಳನ್ನು ನಾವು ನೋಡಲಿದ್ದೇವೆ. ಕೊನೆಗೆ ಯಾವುದು ಯಶಸ್ವಿಯಾಗಲಿದೆಯೊ ನೋಡಬೇಕು.

Feb 10, 2010

ಬಿಟಿ ಬದನೆ - ಒಂದೆರಡು ಉತ್ತರಗಳು...

ಪ್ರಜಾಪ್ರಭುತ್ವ. ಅದರ ಮುಂದೆ ನನಗೆ ಮಿಕ್ಕೆಲ್ಲವೂ ಚಿಕ್ಕದೆ. ಜೈರಾಮ್ ರಮೇಶ್ ಸದ್ಯಕ್ಕೆ ಭಾರತದಲ್ಲಿ ಬಿಟಿ ಬದನೆ ಇಲ್ಲ ಎಂದಿದ್ದಾರೆ. ಅದಕ್ಕೆ ಬೇರೆಲ್ಲ ಕಾರಣಗಳಿಗಿಂತ ಬಹುಸಂಖ್ಯಾತ ಜನರ ವಿರೋಧವಿದ್ದದ್ದೆ ಪ್ರಮುಖ ಕಾರಣ ಎಂದು ನನ್ನ ಭಾವನೆ. ಮಾತುಕತೆ ಮತ್ತು consensus ಇಲ್ಲದ ಪ್ರಜಾಪ್ರಭುತ್ವ ಒಳ್ಳೆಯದಲ್ಲ. ಹಾಗಾಗಿ ಬಿಟಿ ಬದನೆ ನಿಷೇಧದಿಂದ ನನಗೆ ತೀರ ಬೇಸರವೇನೂ ಇಲ್ಲ. ಮತ್ತು GE ಮತ್ತು ಜೈವಿಕ ಸಂಶೋಧನೆಗಳ ಬಾಗಿಲು ಇದರಿಂದೇನೂ ಮುಚ್ಚಿಲ್ಲ. ಜನ ಹೆಚ್ಚುಹೆಚ್ಚು ತಿಳಿದುಕೊಂಡಂತೆ ಅಕಾರಣ ಭಯಗಳೂ ಕಮ್ಮಿಯಾಗುತ್ತ ಹೋಗುತ್ತದೆ.

ನನಗೆ ಅನ್ನಿಸಿದ ಹಾಗೆ ಬಹಳ ಜನ 200-300 ಪದಗಳ ಲೇಖನಗಳನ್ನು ಓದಿ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಂಡುಬಿಡುತ್ತಾರೆ. ಇಂತಹ ಸಣ್ಣ ಲೇಖನ-ವರದಿಗಳು ಸಂಪೂರ್ಣವಾದ ಮತ್ತು ವಸ್ತುನಿಷ್ಟವಾದ ಮಾಹಿತಿ ಹೊಂದಿರುವುದು ಅಪರೂಪ. ಅವು ಲೇಖನವಾಗಿ ಓದುಗರ ಗಮನ ಸೆಳೆಯಬೇಕಾದರೆ ಅವು ಸಾಕಷ್ಟು ಘೋಷಣಾತ್ಮಕವಾಗಿ, ಸಂವೇದನಾತ್ಮಕವಾಗಿ ಇರಬೇಕು. ಅಪಾಯ ಇರುವುದು ಅಲ್ಲಿಯೆ. ಅಷ್ಟರಿಂದಲೆ ರೂಪಿಸಿಕೊಳ್ಳುವ ಅಭಿಪ್ರಾಯ ಯಾರಿಗೂ ಒಳ್ಳೆಯದು ಮಾಡುವುದಿಲ್ಲ.

ಬಿಟಿ ಬದನೆ ಬಗ್ಗೆ ಬರೆದ ಲೇಖನಕ್ಕೆ ಇಲ್ಲಿ ಎರಡು ಪ್ರಶ್ನೆ-ಪ್ರತಿಕ್ರಿಯೆಗಳು ಬಂದಿವೆ. churumuri.com ಯಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಅಭಿಪ್ರಾಯಗಳು ಬಂದಿವೆ. ಇಲ್ಲಿ ಬಂದಿರುವ ಪ್ರತಿಕ್ರಿಯೆಗಳನ್ನು ಮೂಲವಾಗಿಟ್ಟುಕೊಂಡು ಒಂದೆರಡು ಸೃಷ್ಟೀಕರಣ ಕೊಡುತ್ತೇನೆ.

ಸಲ್ಲಾಪ ಬ್ಲಾಗಿನ ಸುನಾಥ ಹೀಗೆ ಬರೆದಿದ್ದಾರೆ:

ನಮ್ಮ ರೈತರು ಬಿಟಿ ಬೆಳೆಗಳಿಗೆ ಹೆದರುತ್ತಿರಲು ಬೇರೊಂದು ಕಾರಣವಿದೆ. ಅದು ಸಂಪೂರ್ಣವಾಗಿ ವ್ಯಾಪಾರೀ ಕಾರಣ. ಸಾಂಪ್ರದಾಯಕ ಬೆಳೆಗಳ ಬೀಜಗಳನ್ನು ನಮ್ಮವರೇ ಹಿಡಿದಿಟ್ಟುಕೊಳ್ಳಬಹುದು, ಆದರೆ ಬಿಟಿ ಬೆಳೆಗಳನ್ನು ಒಮ್ಮೆ ಬೆಳೆದರೆ ಸಾಕು, ನಿರಂತರವಾಗಿ ಈ ಬಿಟಿ ಕಂಪನಿಗಳನ್ನು ಬೀಜಗಳಿಗಾಗಿ ಅವಲಂಬಿಸಬೇಕಾಗುತ್ತದೆ. ಈ ಕಂಪನಿಗಳು ಕೆಲ ಕಾಲಾನಂತರ ಅಂದರೆ ನಮ್ಮ ಸಾಂಪ್ರದಾಯಕ ಕೃಷಿಯ ನಷ್ಟದ ನಂತರ ನಮ್ಮನ್ನು ಶೋಷಿಸಲು ಪ್ರಾರಂಭಿಸುವರು ಎಂದು ಹೇಳಲಾಗುತ್ತಿದೆ. ಇದು ಸರಿ ಇರಬಹುದೆ?
ನನ್ನ ಪ್ರಕಾರ ಇದು ರೈತನಿಗೆ ಗಂಭೀರ ಸಮಸ್ಯೆಯೆ ಅಲ್ಲ. ನನ್ನ ಅನುಭವದ ಪ್ರಕಾರ, ಇಂದು ಬೆಳೆಯುವ ಬಹುಪಾಲು ಕಮರ್ಷಿಯಲ್ ಬೆಳೆಗಳನ್ನು ಬೆಳೆಯಲು ರೈತ ತನ್ನ ಬೀಜಗಳನ್ನು ಉಪಯೋಗಿಸುವುದಿಲ್ಲ. ಅದಕ್ಕೆ ಆತ ಒಳ್ಳೆಯ ಗುಣಮಟ್ಟದ ಬೀಜಗಳನ್ನು ಮಾರುವ ಕಂಪನಿಗಳಿಂದ ಬೀಜಗಳ ಪಾಕೆಟ್/ಚೀಲಗಳನ್ನು ಕೊಳ್ಳುತ್ತಾನೆ. ಬೆರಕೆ ಆಗಿರದ, ಒಂದೆ ಗುಣಮಟ್ಟ ಇರುವ ಬೀಜಗಳಷ್ಟೆ ರೈತನಿಗೆ ಮುಖ್ಯ. ತಾನೆ ಬೀಜಗಳನ್ನು ಸಂಸ್ಕರಿಸಿಕೊಳ್ಳುವುದು ಸ್ವಲ್ಪ ತ್ರಾಸದಾಯಕ ಕೆಲಸ ಮತ್ತು ಅದು ಗುಣಮಟ್ಟದ ಖಾತ್ರಿ ಕೊಡುವುದಿಲ್ಲ. ತಾನೆ ಸಂಸ್ಕರಿಸಿಕೊಂಡ ಬೀಜಗಳಿಂದಾಗಿ ಇಳುವರಿ ಕಡಿಮೆ ಮಾಡಿಕೊಳ್ಳುವುದನ್ನು ಕಮರ್ಷಿಯಲ್ ಬೆಳೆಗಳ ಬೆಳೆಗಾರ ಇಷ್ಟಪಡುವುದಿಲ್ಲ.

(ರಾಗಿ-ಜೋಳದಂತಹ ಕೆಲವೆ ಮಳೆಯಾಧಾರಿತ ಬೆಳೆಗಳಿಗೆ ರೈತ ತನ್ನಲ್ಲಿರುವ ಬೀಜಗಳನ್ನು ಉಪಯೋಗಿಸುತ್ತಾನೆ. ಈ ಬೆಳೆಗಳು ನೀರಾವರಿ ಬೆಳೆಗಳಲ್ಲ. ಮತ್ತು ಈ ಬೆಳೆಗಳಿಗೆ inputs ಸಹ ಕಡಿಮೆ.)

ಇನ್ನು ಶೋಷಣೆಯ ಪ್ರಶ್ನೆ: ತನಗೆ ಬೇಕಾದದ್ದನ್ನು ಬೆಳೆಯಲು ರೈತ ಸ್ವತಂತ್ರ. ಇಂತಹ ಬೀಜ/ಬೆಳೆ ಬೆಳೆಯುವುದು ಬೇಡ ಎಂದು ಆತ ಅಂದುಕೊಂಡರೆ ಯಾರೂ ಆತನನ್ನು ಬಲಾತ್ಕರಿಸಲಾಗದು. ಇನ್ನು ಮೊನ್ಸಾಂಟೊದಂತಹ ಕಂಪನಿಗಳು ಬೆಲೆ ಹೆಚ್ಚಿಸುವುದೊ ಇನ್ನೆಂತಹುದೊ ಶೋಷಣೆ ಆರಂಭಿಸಿದರೆ ಸರ್ಕಾರ ಒಂದು ಕಾಯ್ದೆ/ತಿದ್ದುಪಡಿ ತಂದರೆ ಸಾಕು. ಇಂತಹ ಕಂಪನಿಗಳ ವಿರುದ್ಧ ಸರ್ಕಾರಕ್ಕಿಂತ, ನೆಲದ ಕಾನೂನಿಗಿಂತ ಬಲಶಾಲಿಯಾದ ಆಯುಧ ಇನ್ನೊಂದಿಲ್ಲ. ಸರ್ಕಾರ ಯಾರದು? ಜನರದ್ದೆ. (ಕನಿಷ್ಠ, ಜನರ ಪಾತ್ರವಿರುವ ಉತ್ತಮ ಪ್ರಜಾಪ್ರಭುತ್ವಗಳಲ್ಲಿ). ಹಿಂದೆ ಹಲವಾರು MNCಗಳನ್ನು ನಮ್ಮ ನೆಲದಿಂದ ಉಚ್ಚಾಟಿಸಲಾಗಿದೆ. ಕಂಪನಿಗಳು ಜನವಿರೋಧಿ ಕೆಲಸ ಮಾಡಿದರೆ ಸರ್ಕಾರವೆ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಹಾಗಾಗಿ, ಇವೆಲ್ಲ clerical ಹಂತದಲ್ಲಿಯೆ ನಿವಾರಿಸಬಹುದಾದ ಸಮಸ್ಯೆಗಳು. (ಅದು ಹೇಳಿದಷ್ಟು ಸುಲಭವಲ್ಲ ಎಂದು ಗೊತ್ತು. ಆದರೆ ಅಸಾಧ್ಯವಲ್ಲವಲ್ಲ.)

ಹುಡುಗುಮನ ಬ್ಲಾಗಿನ ಶ್ರೀಹರ್ಷ ಸಾಲಿಮಠರ ಅಬಿಪ್ರಾಯ ಇದು:
ಬಿ.ಟಿ.ಬದನೆಯ ಬೀಜಗಳನ್ನು ಒಂದು ಸಾರಿ ಕೊಂಡರಾಯಿತು, ಮತ್ತೆ ಕೊಳ್ಳುವ ಅವಶ್ಯಕತೆಯಿಲ್ಲ. ಬದನೆಯ ಬೀಜಗಳ ಮರುಬಳಕೆ ಮಾಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಇಲ್ಲಿ ಎರಡು ಮುಖ್ಯ ಅಂಶಗಳಿವೆ,
೧. ಒಮ್ಮೆ ಜೀನನ್ನು ಬದಲಾಯಿಸಿ ಪ್ರಕೃತಿಯಲ್ಲಿ ಬಿಟ್ಟರೆ ಅದು ಮುಂದೆ ಅನಿಯಂತ್ರಿತವಾಗುತ್ತದೆ. ರಸಾಯನಿಕ ಗೊಬ್ಬರವನ್ನು ಹಾಕುವುದು ನಿಲ್ಲಿಸಿದರೆ ರಸಾಯನಿಕ ಗೊಬ್ಬರದ ಹಾನಿಯನ್ನು ತಡೆಯಬಹುದು. ಜೀನ್ ಬದಲಾದರೆ ಅದು ಶಾಶ್ವತ! ಅದರ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ಎಲ್ಲೇ ಚಿಕ್ಕ ತಪ್ಪಾಗಿದ್ದರೂ ಅದನ್ನು ಸರಿಪಡಿಸುವ ಪ್ರಮೇಯವೇ ಇರುವುದಿಲ್ಲ. It's a permanent blunder!
೨. ಒಂದೇ ಜಾತಿಯ ಬೇರೆ ಬೇರೆ ತಳಿಯ ಗಿಡಗಳ ನಡುವೆ ಜೀನ್ ಬದಲಾವಣೆ ಸಾಮಾನ್ಯ. ಆದರೆ ಬ್ಯಾಕ್ಟೀರಿಯಾ ಅಥವಾ ಪ್ರಾಣಿ ಸಸ್ಯಗಳ ನಡುವೆ ಜೀನ್ ಬದಲಾವಣೆ ಎಷ್ಟರ ಮಟ್ಟಿಗೆ ಸರಿ? Ethically how far it is correct? ಎಂಬುದೂ ಪ್ರಶ್ನೆ.

ನಾನು ಇತ್ತೀಚೆಗೆ ಓದಿದ ಎರಡು ಪುಸ್ತಕಗಳನ್ನು ನೀವೂ ಓದಿದರೆ ಮೇಲಿನ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಅಥವ ಇವು ಅನಗತ್ಯ ಭಯಗಳು ಎನಿಸಬಹುದು. ಮೇಲೆ ಹೇಳಿದಂತೆ ಸಣ್ಣಪುಟ್ಟ ಲೇಖನಗಳು ಅಥವ ನನ್ನ ಒಂದೆರಡು ಪ್ಯಾರಾದ ವಿವರಣೆಗಳು ವಿಷಯವನ್ನು ಸಮಗ್ರವಾಗಿ ತಿಳಿಸಲು ಸಹಾಯ ಮಾಡುವುದಿಲ್ಲ. ಮೊದಲ ಪುಸ್ತಕ, ರಿಚರ್ಡ್ ಡಾಕಿನ್ಸ್‌ನ "The Greatest Show on Earth: The Evidence for Evolution". ಎರಡನೆಯದು, ನಾನು ಹಿಂದಿನ ಲೇಖನದಲ್ಲಿ ಪ್ರಸ್ತಾಪಿಸಿದ್ದ ಸ್ಟ್ಯುವರ್ಟ್ ಬ್ರಾಂಡ್‌ನ "Whole Earth Discipline: An Ecopragmatist Manifesto".

ಬಿಟಿ ಬದನೆ ವಿಷಯ ಏನೇ ಇರಲಿ, GM/GE ಬೆಳೆಗಳಂತೂ ಹೆಚ್ಚಲಿವೆ. ನನ್ನ ಸಣ್ಣಪುಟ್ಟ ಓದಿನಿಂದ ಸದ್ಯಕ್ಕೆ ನನಗೆ ಕಾಣಿಸುತ್ತಿರುವುದು ಇದು. ಮುಂದಿನ ಐದು-ಹತ್ತು ವರ್ಷಗಳಲ್ಲಿ ಪ್ರಪಂಚದ ಬಹುತೇಕ ಜನರ ಊಟದಲ್ಲಿ ಒಂದು ತರಕಾರಿ/ಬೇಳೆ/ಅಕ್ಕಿ/ಹಣ್ಣಾದರೂ GM ಮೂಲದ್ದಾಗಿರುತ್ತದೆ. ಇದೇ ಸರಿ ಎಂದಾಗಲಿ ಅಥವ ಆಗಿಯೇ ತೀರುತ್ತದೆ ಎಂದಾಗಲಿ ಘೋಷಿಸಲಾರೆ. ಮಿಕ್ಕ ವಿಷಯ/ಪುಸ್ತಕ/ಸಂದರ್ಭಗಳ ಸಂಪರ್ಕಕ್ಕೆ ಬಂದಾಗ ಈ ಅಭಿಪ್ರಾಯಗಳು ಬದಲಾಗಬಹುದು. ಸದ್ಯಕ್ಕಿಲ್ಲ.

Stewart Brand ಎರಡು ದಿನಗಳ ಹಿಂದೆ ಬೇ ಏರಿಯಾದ KQED ರೇಡಿಯೋದ Forum ಚರ್ಚೆಯಲ್ಲಿ ಪಾಲ್ಗೊಂಡಿದ್ದ. ಅದರ ಧ್ವನಿಮುದ್ರಿಕೆ ಕೇಳಲು ಇಲ್ಲಿ ಲಭ್ಯವಿದೆ. http://www.kqed.org/epArchive/R201002081000. ಆತ ವಂದನಾ ಶಿವ ಬಗ್ಗೆ ಸ್ವಲ್ಪ ತೀಕ್ಷ್ಣವಾದ ಕಾಮೆಂಟ್ ಮಾಡುತ್ತಾನೆ. "ಮಾತಿನ ಮಲ್ಲಿ/ವಾಚಾಳಿ (loquacious)," ಎನ್ನುತ್ತಾನೆ! ಮಾನವಹಕ್ಕುಗಳ ಪರ ಹೋರಾಡುವ ವಂದನಾ ಶಿವ ಬಗ್ಗೆ ನನಗೆ ಗೌರವವೆ ಇದೆ. ಆದರೆ ಆಕೆ ಎತ್ತುವ ಎಲ್ಲಾ ವಿಚಾರಗಳಿಗೂ ಸಮ್ಮತ ಇರಲೇಬೇಕು ಎಂದೇನೂ ಇಲ್ಲ. ಇದು ಅಂತಹುದೊಂದು ವಿಷಯ. ನಾವು ಜೀವಿಸುತ್ತಿರುವ ಅರ್ಥವ್ಯವಸ್ಥೆ ವಿಭಿನ್ನವಾದದ್ದು. ಹಕ್ಕುರಕ್ಷಣೆ ಮುಖ್ಯ. ಹಾಗೆಂದು ಆಚೆ ಹೋಗದ ಹಾಗೆ ಗೋಡೆ ಕಟ್ಟಿಕೊಳ್ಳಬೇಕಿಲ್ಲ. ಇದು ಜಂಗಮ ಪ್ರಪಂಚ.

ಚುರುಮುರಿಯಲ್ಲಿ ಓದುಗರೊಬ್ಬರು ಈ ವಿಡಿಯೊ ಹಂಚಿಕೊಂಡಿದ್ದಾರೆ. (ಕೊನೆಯಲ್ಲಿ) ಸ್ವಲ್ಪ ಅತಿರೇಕದ ಮಾತು ಎನ್ನಿಸಿದರೂ ಗಮನಿಸಲು ಅರ್ಹವಾದ ವಿಡಿಯೊ:

ಹಾಗೆಯೆ, ಈ ವಿಚಾರದ ಬಗ್ಗೆ ಹಲವಾರು ಕಡೆ ಓದುಗರು Food Inc. ಡಾಕ್ಯುಮೆಂಟರಿಯನ್ನು ಉಲ್ಲೇಖಿಸುತ್ತಾರೆ. ನಾನು ಇದನ್ನು ಸುಮಾರು ಆರು ತಿಂಗಳ ಹಿಂದೆಯೆ ನೋಡಿದ್ದೆ. ಸಾವಯವ ತರಕಾರಿಗಳನ್ನು ಕೊಳ್ಳುವುದು ಹೆಚ್ಚುಮಾಡಿದ್ದೆ ನಾನು ಇದು ಮತ್ತು ಇಂತಹುದೆ ಹಲವಾರು ಡಾಕ್ಯುಮೆಂಟರಿಗಳನ್ನು ನೋಡಿದ ಮೇಲೆ. ಆದರೆ ಅಲ್ಲಿ ಬರುವ ಮೊನ್ಸಾಂಟೊ ಬಗ್ಗೆ ನನಗೆ ಭಯ ಇಲ್ಲ. MNC ಗಳು ಪ್ರಜಾಡಳಿತದ ಸರ್ಕಾರಗಳಿಗಿಂತ ಬಲಶಾಲಿಯಲ್ಲ. ಅಮೇರಿಕದ ರೈತರನ್ನು ಕೋರ್ಟಿಗೆಳೆದಂತೆ ಭಾರತದ ಸಣ್ಣಪುಟ್ಟ ರೈತರನ್ನು ಕೋರ್ಟಿಗೆಳೆಯುವುದು ಸುಲಭವಲ್ಲ. ಸಾಧ್ಯವೂ ಅಲ್ಲ.

Feb 5, 2010

BT brinjal : Why it shouldn't be banned?

The debate for and against BT brinjal cultivation is on in full swing in Karnataka and also in some other parts of the country. With the Karnataka CM announcing that BT brinjal will not be allowed in the state and that it will be conveyed to the Centre, the opposing group has scored a big win. A good deal of people have joined this anti-BT bandwagon and are spreading everything that they can think of in the name of nature and farmers’ interests, without considering the scientific facts and environmental costs of conventional agriculture and its burden on farmers.

By considering some key facts, this whole episode can be termed anti-democratic, anti-scientific, and ignorant blabbering. Even though it sounds like it is pro-farmers’, it is against the interest of farmers. Karnataka’s ryot leaders are opposing BT cultivation either because of their ideological opposition to globalization and corporatization of agriculture, or they falsely think it is against the interests of farming community. By doing so they are pushing the farmers to the same old labour intensive, pesticide and chemical fertilizer based, highly expensive, and lesser or no-profit occupation. Also, they may be least aware of the possibilities of this new knowledge field and its positive implications on farming. Today’s farmers are more informed and are exposed to choices. It is they who should decide what they want to plant and what not, depending on the supply-demand of modern economics, rather these self-proclaimed leaders making decisions based on their political and ideological compulsions. Any demand for banning certain crops is anti-democratic and stepping on the farmers’ freedom.

While some environmentalists call GM crops as anti-nature and is against the ecosystem, in fact their opposition to Genetically Engineered (GE) crops can be termed as an act of support for the ongoing environmental degradation. They want global warming to be contained. But they have no pragmatic farming solutions for sufficiently feeding the today’s world population without greatly hurting the climate and sustain it.

A section of our society opposes these new breeding methods in the name globalization and rich corporations controlling the lives of poor people. They do so in the name of pro-poor and economic equality. They seem to have genuine love for the downtrodden and poverty stricken people. So they should know GE can cure malnutrition among the poor in the third world countries, including India, without people changing their diet and the quantity of food they consume.

Stewart Brand is an ecologist living near the silicon valley of America. His previous work, the ‘Whole Earth Catalog’, has helped promoting and popularizing organic farming in its own way in the beginning. To minimize the impact of his living on climate, he has been living with his wife in a 450 sqft tugboat in the bay for the last 25 years. He is 73 years old now and has written a new book, “Whole Earth Discipline – An Ecopragmatist Manifesto”. I suggest to the people who are opposing BT brinjal to read this book immediately. Stewart Brand is a lifelong environmentalist and a liberal and has genuine care and concern for the poor and disadvantaged. So, we can safely assume that this book is not written by a scientist or a spokesperson of a multinational company with some vested interest in the success of GM crops.

According to Peter Raven, a botanist and environmentalist, who was also recognized as one of the “Heroes for the Planet” by TIME magazine, “Nothing has driven more species to extinction or caused more instability in the world’s ecological systems than the development of an agriculture sufficient to feed 6.3 billion people.”

Today, 40 percent of all the land surface is used for food crops. And, soil holds more carbon in it than all living vegetation and the atmosphere combined. Tilling releases that carbon. Jim Cook, a plant pathologist and sustainable-agriculture evangelist says: “Carbon disappears faster if you stir the soil. If you chop the crop residue up, bury it, and stir it-which is what we call tillage-there’s a burst of biological activity, since you keep making new surface area to be attacked by the decomposers. You’re not sequestering carbon anymore, you’re basically burning up the whole season’s residue.” He also says, “The fact that at least 40 percent of the land surface is used for crops is hardly ever taken into account in our current approach to climate change. A self-regulating planet needs its ecosystems to stay in homeostasis. We cannot have both our crops and a steady comfortable climate.”

Stewart Brand writes, plowed land is the source of gigatons of carbon dioxide in the atmosphere. Cultivated soil loses half of its organic carbon over decades of plowing. According to scientific studies, sustained no-till farming can bring the carbon content back to a level the equal of wildland soil, such as in tallgrass prairies. More and more of GE agriculture is shifting to no-till (to give an example, 80 percent of soybean acreage), because it saves the farmer time, money, and fuel. We now know the role of fossil fuel in global warming. According to experts, about 5 percent of all fossil fuel use is by agriculture and most of this goes on weed and pest control.

And why is this weed and pest control important? About 40 percent of crop yield in the world is lost to weeds and pests every year. The main success of GE crops is in lowering these losses; herbicide tolerance and insect resistance. In 2007, Science magazine reported, “Over the past 11 years, biotech crop area has increased more than 60 fold, making GM crops one of the most quickly adopted farming technologies in modern history.” Supporting this view, Stewart Brand writes in his book, “Farmers want GE technology for their crops; nonfarmers want them not to want it… In 2006, when two hundred French anti-GE activists destroyed fifteen acres of GE corn near Toulouse, eight hundred local farmers marched in a nearby town to protest the attack and petition the government to support GE research. In 2000, GE soybeans were legal in Argentina but outlawed in Brazil. The difference in productivity was so obvious that Brazilian farmers smuggled the seeds across the border, until their government relented and legalized GE agriculture.” So we can safely assume that at least some of the protesters in Hyderabad who heckled Jairam Ramesh in favour of BT brinjal had farmers’ interest in their heart and were not in the payroll of any multinationals.

Not only it helps to contain global warming, the new breakthroughs and advancements in Genetic Engineering is helping farmers and poor alike. According to World Health Organization, “An estimated 250,000 to 500,000 vitamin A-deficient children become blind every year, half of them dying within 12 months of losing their sight.” And, a report by UN Children’s Fund states, “Vitamin A deficiency is compromising the immune systems of approximately 40 percent of the developing world’s under-fives and leading to the early deaths of an estimated one million young children each year.” In his book, Stewart Brand writes about a new breed of rice, “golden rice”, which is being developed. Scientists added two genes from a daffodil and one gene from a bacteria creating this golden rice which is rich in Vitamin A. In July 2000, TIME magazine put Ingo Potrykus, the scientist behind this breakthrough, on its cover, with the headline, “This rice could save a million kids a year.” And this golden rice is not in the hands of any MNC. It has been managed by the Humanitarian Golden Rice Network, chaired by Potrykus. Any farmer making less than $10,000 a year could get the seeds for free and own the right to breed and sow them year after year. Field trials of this are being conducted in the Philippines by the International Rice Research Institute with the goal of freeing the GE rice for public use by 2011.

In the October of last year, North Karnataka has seen the wrath of nature in the form of unruly floods. Thousands of acres of rice crop was lost to it. In India and Bangladesh alone, 4 million tons of rice a year is lost to flooding. And, that is enough to feed 3 crore (30 million) people. Using GE techniques, writes Stewart Brand, scientists introduced a single submergence tolerance gene into locally adapted high-yielding rice varieties where it makes the plants able to “hold their breath” for two whole weeks under water. The submersible rice has now been tested in farmers’ fields (the last stage before release for public use) in Bangladesh, India, and Laos.

Before banning the cultivation of BT brinjal, the Indian government needs to consider all these facts. It is not BT brinjal that is at stake here. It is the possibilities of GE and its role in human welfare that is at stake. While China, USA, South American and some African nations are embracing it, we should not shut our doors on it by succumbing to pressure groups. Man needs to employ every available tool to fight the climate change and correct some of his past wrongdoings. Avoiding or stopping the progress of GE will only make the matter worse. Sensible and progressive people need to sit and think about feeding the world population without hurting the ecosystem, before venturing to protest GM crops. There is no discounting of the facts that there are some genuine issues like dependency on multinationals and monopoly of knowledge. But a decent effort is going on in the field to make GM and GE freer, like open-source software, and that should be least of our concerns.

ಬಿಟಿ ಬದನೆ/Genetic Engineering ಪರ ಒಂದು ವಾದ. ಅಭಿಪ್ರಾಯಗಳಿಗೆ ಆಹ್ವಾನ...

ಮೊದಲಿಗೆ ಸ್ವಲ್ಪ ಸ್ವವಿವರ; ಗೊತ್ತಿಲ್ಲದವರಿಗೆ. ನಾನು ಹಳ್ಳಿಯಿಂದ, ರೈತ ಕುಟುಂಬದಿಂದ ಬಂದವನು. ಹೊಲ-ಗದ್ದೆ-ತೋಟಗಳ ಉತ್ತು-ಬಿತ್ತು-ಬೆಳೆ-ಮಾರಾಟಗಳಲ್ಲಿ ಪಾಲ್ಗೊಂಡವನು. ಒಳ್ಳೆಯ ಬೀಜ ಮತ್ತು ಹಸುಗಳಿಂದ ರೈತನಿಗೆ ಆಗುವ ಲಾಭ ಕಂಡವನು. ಹಾಗೆಯೆ ಆತನ ಜೀವನದ ಅನಿಶ್ಚತೆಯನ್ನು, ಜೀವನದಲ್ಲಿನ ಜೂಜನ್ನು ಸ್ವತಃ ಅನುಭವಿಸಿ ಕಂಡವನು. ಇಂಜಿನಿಯರಿಂಗ್ ಓದುವಾಗ, ಮನೆಯಲ್ಲಿ ಬೇರೆ ಆದಾಯ ಇದ್ದರೂ ನನ್ನ ಹಾಸ್ಟೆಲ್-ಊಟ-ಮತ್ತಿತರ ತಿಂಗಳ ಖರ್ಚುಗಳನ್ನು ನನ್ನ ತಾಯಿ ತಾನು ಸಾಕಿದ್ದ ಸೀಮೆಹಸುವಿನ ಹಾಲು ಮಾರಿ ಬಂದ ಹಣದಿಂದ ನೋಡಿಕೊಳ್ಳುತ್ತಿದ್ದಳು. (ಆಕೆಯ ತಾಯಿ ಇನ್ನೂ ಗಟ್ಟಿಗಿತ್ತಿ. ತನ್ನದೇ ಎಂಟು ಮಕ್ಕಳಿದ್ದರೂ, ಹಿರಿಯವನಾದ ತನ್ನ ಸವತಿಯ ಮಗನನ್ನು ಆಕೆ ಇಂಜಿನಿಯರಿಂಗ್ ಮಾಡಿಸಿದ್ದೂ ಬಹುಶಃ ಅದೇ ರೀತಿ. ) ಅಮೆರಿಕದಲ್ಲಿ ಕುರಿ-ಕೋಳಿ-ದನ ಮುಂತಾದ ಮಾಂಸೋತ್ಪಾದನೆ ಉದ್ಯಮ ಮತ್ತು ಅದು ಪರಿಸರದ ಮೇಲೆ ಉಂಟುಮಾಡುವ ಒತ್ತಡವನ್ನು ಗಮನಿಸಿ ಸಸ್ಯಾಹಾರಿಯಾದವನು. ಇಲ್ಲಿ ಆದಷ್ಟು Organic ಹಾಲನ್ನು ಮತ್ತು ಸಾವಯವ ತರಕಾರಿಗಳನ್ನು (ದುಪ್ಪಟ್ಟಾಗಿದ್ದರೂ) ಬಳಸಲು ಪ್ರಯತ್ನಿಸುವವನು. ಮತ್ತು, ನಾನು ಕೆಲಸ ಮಾಡುತ್ತಿರುವುದು ಸೆಮಿಕಂಡಕ್ಟರ್ ಕಂಪನಿಯಲ್ಲಿ. GM/GE ಬೆಳೆಗಳ ಯಶಸ್ಸಿನಿಂದ ನನಗೆ ಯಾವ ವೈಯಕ್ತಿಕ ಲಾಭವೂ ಇಲ್ಲ.

ಇಷ್ಟು ಹೇಳಿ, ಬಿಟಿ ಬದನೆ ಬಗ್ಗೆ ಬರೆದ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಇದನ್ನು ವಾರದ ಹಿಂದೆಯೇ ಬರೆದಿದ್ದರೂ ಕಾರಣಾಂತರಗಳಿಂದ ಇಂದು ಹಾಕುತ್ತಿದ್ದೇನೆ. ಓದುಗರ ಅಭಿಪ್ರಾಯಗಳಿಗೆ ಸ್ವಾಗತ. ನಾನು ಅಂತರ್ಜಾಲದಲ್ಲಿನ ಚರ್ಚೆ/ಕಾಮೆಂಟುಗಳಿಗೆ ಸಾಮಾನ್ಯವಾಗಿ ಉತ್ತರಿಸುವುದಿಲ್ಲ. ಆದರೆ ಈ ವಿಷಯದ ಬಗ್ಗೆ ಉತ್ತಮವಾದ ಮತ್ತು ಅರ್ಹವಾದ ಕಾಮೆಂಟುಗಳು ಬಂದರೆ ಉತ್ತರಿಸುವ ಮನಸ್ಸಿದೆ.ಬಿಟಿ ತಂತ್ರಜ್ಞಾನದ ಪರ ಒಂದು ವಾದ


ಬಿಟಿ ಬದನೆಯ ಬಗ್ಗೆ ನಾಡಿನಲ್ಲಿ ಇತ್ತೀಚೆಗೆ ಪರ-ವಿರೋಧ ಚರ್ಚೆ ಜೋರಾಗಿಯೆ ನಡೆಯುತ್ತಿದೆ. ಆ ಬೆಳೆಯನ್ನು ರಾಜ್ಯದಲ್ಲಿಯೂ ನಿಷೇಧಿಸುವ ಬಗ್ಗೆ ಸ್ವತಃ ಮುಖ್ಯಮಂತ್ರಿಯೆ ಆಶ್ವಾಸನೆ ಕೊಡುವುದರ ಮೂಲಕ ಸದ್ಯ ವಿರೋಧಿಗಳ ಪ್ರಭಾವವೆ ಕೆಲಸ ಮಾಡುತ್ತಿದೆ. ಅದೇ ಸಮಯದಲ್ಲಿ ರೈತರಲ್ಲದ ಜನರಲ್ಲಿ ಬಿಟಿ ಬೆಳೆಗಳ ಬಗ್ಗೆ ಭಯ ಬಿತ್ತುವ ಕೆಲಸವೂ ನಡೆಯುತ್ತಿದೆ. ಈ ಇಡೀ ಪ್ರಹಸನವೆ ಅಜ್ಞಾನ ಮತ್ತು ಅವೈಜ್ಞಾನಿಕ ಮನೋಭಾವನೆಯಿಂದ ಕೂಡಿರುವಂತಹುದು. ರೈತವಿರೋಧಿಯಾದದ್ದು. ಜಾಗತಿಕ ತಾಪಮಾನ ಮತ್ತಷ್ಟು ಏರಲು ಸಹಕರಿಸುವಂತಹುದು. ವರ್ತಮಾನ ಮತ್ತು ಭವಿಷ್ಯದ ಹಸಿವೆಯನ್ನು ತಡೆಗಟ್ಟಲು ಅಸಮರ್ಥವಾದದ್ದು. ಬಡವರು ಅಪೌಷ್ಠಿಕಾಂಶ ಆಹಾರ ಸೇವನೆಯಿಂದ ನರಳುವಂತೆ ಮಾಡುವಂತಹುದು. ಇಲ್ಲಿರುವ ಮೂಲಭೂತ ಪ್ರಶ್ನೆ ಇದಷ್ಟೆ ಆಗಲಿ, ಅಥವ ಬಿಟಿ ಬದನೆಯ ಪರ-ವಿರೋಧವಾಗಲಿ ಅಲ್ಲ. ಬದಲಿಗೆ ಜ್ಞಾನ ಮತ್ತು ವಿಜ್ಞಾನವನ್ನು ವಿರೋಧಿಸುವ ಮನೋಭಾವದ ಬಗ್ಗೆ. ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಅದು ತಂದೊಡ್ಡಲಿರುವ ಅಪಾಯಕಾರಿ ಪರಿಣಾಮಗಳ ಬಗ್ಗೆ.

ಬಿಟಿ ಬದನೆಯ ವಿರುದ್ಧ ಕರ್ನಾಟಕದಲ್ಲಿ ಧ್ವನಿಯೆತ್ತುತ್ತಿರುವವರಲ್ಲಿ ನಾವು ಒಂದು ಗಣನೀಯ ವಿಪರ್ಯಾಸ ನೋಡಬಹುದು. ಈ ಗುಂಪಿನವರಲ್ಲಿ ಒಂದಷ್ಟು ಜನ ಪರಿಸರವಾದಿಗಳಿದ್ದಾರೆ. ಸದ್ಯದ ರಾಸಾಯಾನಿಕ ಕೀಟನಾಶಕಗಳ ಕೃಷಿ ಪದ್ಧತಿ ಪರಿಸರಕ್ಕೆ ಹಾನಿಕಾರಕ ಎಂದು ಗೊತ್ತಿರುವವರು ಇವರು. ಬಿಟಿ ಬದನೆ, ಬಿಟಿ ಹತ್ತಿಯಂತಹ GM ಆಹಾರಬೆಳೆಗಳು ಕ್ರಿಮಿನಾಶಕಗಳ ಬಳಕೆಯನ್ನು ನಿಲ್ಲಿಸುತ್ತವೆ ಮತ್ತು ಆ ಮೂಲಕ ಪರಿಸರಕ್ಕೆ ಹಾನಿಯಾಗದಂತೆ ತಡೆಯುತ್ತದೆ ಎನ್ನುವುದು ಇವರಿಗೆ ಮುಖ್ಯವಾಗುತ್ತಿಲ್ಲ. ಇದೇ ಗುಂಪಿನಲ್ಲಿ ದೀನ-ದಲಿತ-ಬಡವರ ಪರ ಮಾತನಾಡುವವರೂ, ಹಸಿವಿನ ನಿರ್ಮೂಲನಕ್ಕೆ ಕರೆಕೊಡುವವರೂ ಇದ್ದಾರೆ. ಆದರೆ ಅವರಿಗೆ ಗೊತ್ತಿಲ್ಲದ್ದು ಏನೆಂದರೆ GM ಬೆಳೆಗಳ ಹಿಂದಿರುವ ಜೈವಿಕ ತಂತ್ರಜ್ಞಾನ ಹಸಿವೆಯನ್ನಷ್ಟೆ ಅಲ್ಲ, ಅಪೌಷ್ಠಿಕತೆಯನ್ನೂ ನಿವಾರಿಸಬಲ್ಲ ತಾಕತ್ತನ್ನು ಹೊಂದಿದೆ ಎನ್ನುವುದು; ಅದು A-ಅನ್ನಾಂಗದ ಕೊರತೆಯಿಂದ ಉಂಟಾಗುವ ಕುರುಡನ್ನು ಸುಲಭವಾಗಿ ಇಲ್ಲವಾಗಿಸುವ ಸಾಧ್ಯತೆಗಳನ್ನು ಹೊಂದಿದೆ ಎನ್ನುವುದು. ಇನ್ನು ಬಿಟಿ ವಿರುದ್ಧ ಕೆಲವು ರೈತಮುಖಂಡರೂ ಧ್ವನಿಯೆತ್ತಿದ್ದಾರೆ. ಅವರ ವಿರೋಧಕ್ಕೆ ಹಿನ್ನೆಲೆಯಾಗಿ ಬಹುರಾಷ್ಟ್ರೀಯ ಕಂಪನಿಗೆಳನ್ನು ವಿರೋಧಿಸುವ ತಾತ್ವಿಕ ವಿರೋಧವಾದರೂ ಇದ್ದಿದ್ದರೆ ಅದು ನಮ್ಮ ಸಂದರ್ಭದಲ್ಲಿ ತಕ್ಕಮಟ್ಟಿಗೆ ಸಮರ್ಥನೀಯವಾಗಿರುತ್ತಿತ್ತು. ಆದರೆ, ಬಿಟಿ ಬದನೆಯನ್ನು ವಿರೋಧಿಸುವ ಮೂಲಕ ಕರ್ನಾಟಕದ ರೈತರನ್ನು ತಾವು ಮತ್ತದೇ ಹೆಚ್ಚಿನ ಮಾನವಶ್ರಮ-ರಸಗೊಬ್ಬರ-ಕೀಟನಾಶಕಗಳನ್ನು ಬೇಡುವ, ಕಡಿಮೆ ಲಾಭದ ಕೃಷಿಪದ್ಧತಿಗೆ ದೂಡುತ್ತಿದ್ದೇವೆ ಎನ್ನುವುದು ಅವರಿಗೆ ಅರ್ಥವಾಗುತ್ತಿಲ್ಲ. ಹಾಗೆಯೆ, ಅಕಾಲಿಕ ಪ್ರವಾಹದಿಂದಾಗಿ ಎರಡುವಾರಗಳ ಕಾಲ ನೀರಿನಲ್ಲಿ ಮುಳುಗಿದ್ದರೂ ಭತ್ತದ ಬೆಳೆ ನಾಶವಾಗದ ಒಂದು ಅಸಾಮಾನ್ಯ ಸಾಧ್ಯತೆ ಈ ಜೈವಿಕ ವಿಜ್ಞಾನದ ಅಭಿವೃದ್ಧಿಯಿಂದಾಗಿ ಸಾಧ್ಯ ಎನ್ನುವ ವಿಷಯ ಅವರಿಗೆ ಗೊತ್ತಾಗಿಲ್ಲ. ಕೊನೆಯದಾಗಿ, ಈ ಗುಂಪಿನಲ್ಲಿ ಕೆಲವು ಮತೀಯ ಮೂಲಭೂತವಾದಿಗಳೂ ಇದ್ದಾರೆ. ವಿಜ್ಞಾನ ಮತ್ತು ಜೀವವಿಕಾಸದ ಅರಿವೇ ಇಲ್ಲದ ಇವರು ಗರಿಷ್ಠ ಕ್ಷಮೆಗೆ ಅರ್ಹರು!

ಅಮೆರಿಕದ ಸಿಲಿಕಾನ್ ಕಣಿವೆಯ ಕೊಲ್ಲಿ ಪ್ರದೇಶದಲ್ಲಿ ಒಬ್ಬ ಪರಿಸರವಾದಿ ಇದ್ದಾನೆ. ಆತ ಪರಿಸರವಿಜ್ಞಾನಿಯೂ ಹೌದು. ಅಮೆರಿಕದಲ್ಲಿ ಸಾವಯವ ಕೃಷಿ ಪದ್ಧತಿ ಜನಪ್ರಿಯವಾಗಲು ಆತನ ಕೊಡುಗೆಯೂ ಸ್ವಲ್ಪ ಇದೆ. ತಾನು ಬದುಕುವ ಬದುಕು ಪರಿಸರಹಾನಿಗೆ ಬಹಳ ಕಮ್ಮಿ ಕಾರಣವಾಗಬೇಕು ಎಂದು 73 ವರ್ಷದ ಈ ಹಿರಿಯ ಕಳೆದ 25 ವರ್ಷಗಳಿಂದ ಕೊಲ್ಲಿಯ ಸಮುದ್ರದಡದಲ್ಲಿ ಲಂಗರು ಹಾಕಿದ ಹಳೆಯ ಮೋಟಾರ್‌ದೋಣಿಯಲ್ಲಿ ವಾಸಿಸುತ್ತಿದ್ದಾನೆ. ಆತನ ಹೆಸರು ಸ್ಟ್ಯುವರ್ಟ್ ಬ್ರ್ಯಾಂಡ್. ಏರುತ್ತಿರುವ ಜಾಗತಿಕ ತಾಪಮಾನ, ಜಗತ್ತಿನ ಬಹುಸಂಖ್ಯಾತ ಬಡವರಿಗೆ ಲಭ್ಯವಿಲ್ಲದ ಆಹಾರ, ವಿದ್ಯುತ್ತು, ಸಮಾನತೆ, ಗೌರವಯುತ ಬದುಕುಗಳ ಬಗ್ಗೆ, ಹೆಚ್ಚಾಗುತ್ತಲೆ ಇರುವ ವಿಶ್ವದ ಜನ ಸಂಖ್ಯೆ ಮತ್ತು ಅದು ಪರಿಸರದ ಮೇಲೆ ಉಂಟುಮಾಡುತ್ತಿರುವ ಒತ್ತಡ, ಇವೆಲ್ಲವುಗಳ ಬಗ್ಗೆ ಈತ ಎಲ್ಲಾ ಉದಾರಶೀಲ ಪ್ರಜ್ಞಾವಂತರಂತೆ ತಲೆಕೆಡಿಸಿಕೊಂಡಿದ್ದಾನೆ. ಹಾಗೆಯೆ, ಈ ಎಲ್ಲಾ ಸಮಸ್ಯೆಗಳನ್ನು ಜಗತ್ತು ಹೇಗೆ ಪರಿಹರಿಸಿಕೊಳ್ಳಬಲ್ಲದು ಮತ್ತು ಪ್ರಗತಿಯ ಹಾದಿಯಲ್ಲಿ ಮಾನವ ಈ ಭೂಮಿಯನ್ನೂ ಹೇಗೆ ವಾಸಯೋಗ್ಯವಾಗಿಟ್ಟುಕೊಳ್ಳಬಹುದು ಎನ್ನುವುದರ ಬಗ್ಗೆ ಕೆಲವು ತಿಂಗಳ ಹಿಂದೆ ಒಂದು ಪುಸ್ತಕ ಬರೆದಿದ್ದಾನೆ. ಅದರ ಹೆಸರು "Whole Earth Discipline - ವಾಸ್ತವಪರಿಸರವಾದಿಯ ಪ್ರಣಾಳಿಕೆ." ಈ ಪುಸ್ತಕದಲ್ಲಿ ಎರಡು ಅಧ್ಯಾಯಗಳು ಜೆನೆಟಿಕ್ ಇಂಜಿನಿಯರಿಂಗ್ ಮತ್ತು ಜೈವಿಕ ತಂತ್ರಜ್ಞಾನದ ಕುರಿತೇ ಆಗಿದೆ. ಬಿಟಿ ಬದನೆಯನ್ನು ವಿರೋಧಿಸುತ್ತಿರುವ ನಮ್ಮ ’ಪರಿಸರವಾದಿಗಳು’, ’ರೈತಪರ ಹೋರಾಟಗಾರರು’, ’ಸಮಾನತಾವಾದಿಗಳು’, ತತ್‌ಕ್ಷಣವೆ ಓದಬೇಕಾದ ಪುಸ್ತಕ ಇದ್ದರೆ ಅದು ಇದೇನೆ.

1960 ರಲ್ಲಿ ಈ ಭೂಮಿಯಲ್ಲಿಯ ಜನಸಂಖ್ಯೆ ಸುಮಾರು 300 ಕೋಟಿ ಇತ್ತು. ಇವತ್ತು ಅದು ಸುಮಾರು 670 ಕೋಟಿ. ಹಸಿರು ಕ್ರಾಂತಿ, ರಾಸಾಯನಿಕ ಗೊಬ್ಬರಗಳು, ಕ್ರಿಮಿನಾಶಕಗಳು, ಜೈವಿಕ ತಂತ್ರಜ್ಞಾನ, ವಿಸ್ತಾರವಾದ ಕೃಷಿಭೂಮಿ ಮತ್ತು ನೀರಾವರಿ ಪ್ರದೇಶಗಳು, ಉತ್ತಮಗೊಂಡ ರಸ್ತೆಗಳು ಮತ್ತು ಸರಕು ಸಾಗಾಣಿಕೆ, ಚಲನಶೀಲವಾದ ಆರ್ಥಿಕತೆ, ಮುಂತಾದವುಗಳಿಂದಾಗಿ ಎಷ್ಟೆಲ್ಲ ಸಮಸ್ಯೆಗಳ ನಡುವೆಯೂ ಇಂದು ಮನುಷ್ಯ ಭೂಮಿಯ ಮೇಲಿನ ಎಲ್ಲರಿಗೂ ಸಾಕಾಗುವಷ್ಟು ಆಹಾರ ಬೆಳೆಯುತ್ತಿದ್ದಾನೆ. ಅದು ಎಲ್ಲರಿಗೂ ಲಭ್ಯವಿದೆಯೆ ಮತ್ತು ಸಾಕಷ್ಟು ಪೌಷ್ಠಿಕವಾದದ್ದೆ ಎನ್ನುವುದು ಬೇರೆ ವಿಷಯ. ಅದರೆ, ಇಷ್ಟು ಮಾತ್ರದ ಆಹಾರ ಉತ್ಪಾದನೆ ಭವಿಷ್ಯದಲ್ಲಿಯೂ ಸಾಧ್ಯವೆ ಎನ್ನುವುದು ಈಗ ಸದ್ಯ ವಿಶ್ವದ ಮುಂದಿರುವ ಒಂದು ಗಂಭೀರ ಪ್ರಶ್ನೆ. ಅದು ಸಾಧ್ಯವಾದರೂ ಅದು ಬೇಡುವ ಬೆಲೆ ಏನು, ಜೀವಜಗತ್ತಿನ ಮೇಲೆ ಅದರ ಪರಿಣಾಮ ಏನು ಎನ್ನುವುದು ಅದಕ್ಕಿಂತ ಗಂಭೀರ ಪ್ರಶ್ನೆ.

ಬಿಟಿ ಬದನೆಯ ಬಗ್ಗೆ ಭಯಪೀಡಿತರಾಗಿರುವ ನಮ್ಮ ಪರಿಸರವಾದಿಗಳಿಗೆ ಪೀಟರ್ ರ್‍ಯಾವೆನ್ ಎನ್ನುವ ಪ್ರಸಿದ್ಧ ಸಸ್ಯವಿಜ್ಞಾನಿ ಮತ್ತು ಪರಿಸರವಾದಿ ಗೊತ್ತಿರಬಹುದು. ಪ್ರಸಿದ್ಧ ಟೈಮ್ ಮ್ಯಾಗಜೈನ್ ಈ ವಿಜ್ಞಾನಿಯನ್ನು "Hero for the Planet" ಪಟ್ಟಿಯಲ್ಲಿ ಒಬ್ಬರನ್ನಾಗಿ ಗುರುತಿಸಿದೆ. ಈ ವಿಜ್ಞಾನಿ ಬರೆಯುತ್ತಾರೆ: "ಜಗತ್ತಿನ 630 ಕೋಟಿ ಜನರಿಗೆ ಉಣಿಸಲು ಸಾಧ್ಯವಾಗುವಂತೆ ಅಭಿವೃದ್ಧಿಪಡಿಸಲಾದ ಕೃಷಿಪದ್ಧತಿಯ ಹೊರತಾಗಿ ಬೇರ್‍ಯಾವುದೂ ಜಗತ್ತಿನ ಅನೇಕ ಜೀವಸಂಕುಲಗಳ ನಿರ್ನಾಮಕ್ಕೆ ಮತ್ತು ಹೆಚ್ಚಾದ ಪರಿಸರದ ಅಸಮತೋಲನಕ್ಕೆ ಕಾರಣವಾಗಿಲ್ಲ." ಬಹುಪಾಲು ಜನರಿಗೆ ಗೊತ್ತಿಲ್ಲದ್ದು ಏನೆಂದರೆ ಭೂಮಿಯ ಶೇ.40ರಷ್ಟು ನೆಲವನ್ನು ಆಹಾರ ಬೆಳೆಯಲು ಉಪಯೋಗಿಸಲಾಗುತ್ತದೆ ಎನ್ನುವುದು. ಬರಲಿರುವ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗಲಿದೆ. ಮತ್ತು, ಸಹಜವಾಗಿಯೆ, ಜಾಗತಿಕ ತಾಪಮಾನ ಏರಿಕೆಗೆ ಇದರ ಪಾಲೂ ಹೆಚ್ಚಾಗಲಿದೆ. ಜಾಗತಿಕ ತಾಪಮಾನ ಏರಿಕೆಯಲ್ಲಿ ಮತ್ತು ವಾತಾವರಣಕ್ಕೆ ಇಂಗಾಲ ಹೊರಚೆಲ್ಲುವುದರಲ್ಲಿ ತಮ್ಮ ಪಾತ್ರವಿಲ್ಲ ಎಂದುಕೊಳ್ಳುವ ರೈತರ ಮೊದಲ ಕೆಲಸವೆ ನೆಲದಲ್ಲಿ ಹುದುಗಿರುವ ಇಂಗಾಲವನ್ನು ವಾತಾವರಣಕ್ಕೆ ಬಿಡುವುದು. ಸಸ್ಯಗಳಲ್ಲಿರುವ ಮತ್ತು ವಾತಾವರಣದಲ್ಲಿರುವ ಒಟ್ಟು ಇಂಗಾಲಕ್ಕಿಂತ ಹೆಚ್ಚಿನ ಇಂಗಾಲ ನೆಲದಲ್ಲಿದೆ. ರೈತ ನೆಲವನ್ನು ಉತ್ತಾಗಲೆಲ್ಲ ಇಂಗಾಲ ಹೊರಬರುತ್ತದೆ. ಉಳುಮೆ ಕಡಿಮೆ ಮಾಡಿದಷ್ಟೂ ಅಷ್ಟು ಮಾತ್ರದ ಇಂಗಾಲ ಹೊರಚೆಲ್ಲುವಿಕೆ ಕಮ್ಮಿಯಾಗುತ್ತದೆ. ಮತ್ತು, ಜಗತ್ತಿನ ಶೇ.40 ರಷ್ಟು ಬೆಳೆ ಹೊಲಗದ್ದೆಗಳಲ್ಲಿನ ಕಳೆ ಮತ್ತು ಕೀಟಗಳಿಗೆ ಬಲಿಯಾಗುತ್ತದೆ. ಮತ್ತೂ ಇನ್ನೊಂದು ವಿಷಯ: ಜಗತ್ತಿನ ಶೇ.5 ರಷ್ಟು ತೈಲ ಕೃಷಿಗೆ ಬಳಕೆಯಾಗುತ್ತದೆ. ಅದರ ಬಹುಪಾಲು ಕಳೆ ಮತ್ತು ಕೀಟನಾಶಕಗಳ ತಯಾರಿಕೆಗೆ ಬಳಕೆಯಾಗುತ್ತದೆ. ಬಿಟಿ ಬದನೆಯಂತಹ GM ಬೆಳೆಗಳ ಹೆಚ್ಚುಗಾರಿಕೆ ಇರುವುದೆ ಅವುಗಳ ಕೀಟನಿರೋಧ ಮತ್ತು ಕಳೆನಿರೋಧದಲ್ಲಿ. ಇದು ಪರಿಸರವಾದಿಗಳು ಗಮನಿಸಬೇಕಾದ ಪ್ರಮುಖ ಅಂಶ.

ಕೃಷಿ ಬಹಳ ಕಷ್ಟದಾಯಕವಾದ, ಬೆನ್ನೆಲುಬು ಮುರಿದುಹೋಗುವ ಕೆಲಸ. ಈ ಕ್ಷೇತ್ರದಲ್ಲಿ ತೊಡಗಿಕೊಂಡವರ ಬಡತನ ನಿವಾರಣೆ ಆಗುವುದು ಬಹಳ ಅಪರೂಪ. ಬೇರೆ ಎಲ್ಲಾ ಕ್ಷೇತ್ರಗಳಿಗಿಂತ ಕಮ್ಮಿ ಕೂಲಿ ಕ್ಷೇತ್ರದ ಕೂಲಿಕಾರ್ಮಿಕರಿಗೆ ದೊರೆಯುತ್ತದೆ. ಮನುಷ್ಯನ ನಾಗರಿಕತೆಯುದ್ದಕ್ಕೂ ಹಳ್ಳಿಯಲ್ಲಿನ ಯುವಜನಾಂಗ ನಗರದತ್ತ ಒಂದು ಕಣ್ಣಿಟ್ಟೇ ನಡೆದುಬಂದ ಇತಿಹಾಸ ಇದೆ. ಹೀಗಿರುವಾಗ, ತಮ್ಮ ಪರಿಸರದಲ್ಲಿಯೇ ತಮ್ಮ ಜೀವನವನ್ನು ಉತ್ತಮಗೊಳಿಸಬಲ್ಲ ಸಾಧ್ಯತೆ ಇರುವ ಬಿಟಿ ತಂತ್ರಜ್ಜಾನವನ್ನು ಪ್ರಪಂಚದ ಅನೇಕ ಕಡೆಯ ರೈತರು ವಿರೋಧಿಸುತ್ತಿಲ್ಲ. ವಿರೋಧಿಸುತ್ತಿರುವವರಲ್ಲಿರುವ ಬಹುಪಾಲು ಜನ ಕೃಷಿಕ್ಷೇತ್ರದಿಂದ ಹೊರಗಿರುವವರೆ. ಅದಕ್ಕಿಲ್ಲಿದೆ ಎರಡು ಉದಾಹರಣೆಗಳು. 2000 ದ ಸಮಯದಲ್ಲಿ ಬಿಟಿ ಸೋಯಾಅವರೆ ಬೆಳೆಯುವುದು ಬ್ರೆಜಿಲ್ ದೇಶದಲ್ಲಿ ನಿಷಿದ್ಧವಾಗಿತ್ತು. ಆದರೆ ಪಕ್ಕದ ಅರ್ಜೆಂಟಿನಾದಲ್ಲಿ ಯಾವುದೆ ನಿಷೇಧ ಇರಲಿಲ್ಲ. ಅರ್ಜೆಂಟಿನಾದ ರೈತರು ತಮಗಿಂತ ಕಮ್ಮಿ ಖರ್ಚು ಮಾಡಿ ಹೆಚ್ಚಿನ ಇಳುವರಿಯನ್ನು ಪಡೆಯುತ್ತಿರುವುದನ್ನು ಕಂಡ ಬ್ರೆಜಿಲ್ ರೈತರು ಗಡಿಯಾಚೆಯಿಂದ ಬಿಟಿ ಅವರೆ ಬೀಜವನ್ನು ಕಳ್ಳಸಾಗಾಣಿಕೆ ಮಾಡಲು ಆರಂಭಿಸಿಬಿಟ್ಟರು. ಇದರಿಂದ ಎಚ್ಚೆತ್ತ ಬ್ರೆಜಿಲ್ ಸರ್ಕಾರ ನಿಷೇಧವನ್ನು ಹಿಂತೆಗೆದುಕೊಂಡಿತು. 2006 ರಲ್ಲಿ ಫ್ರಾನ್ಸ್ ದೇಶದ ಟೌಲೌಸ್ ಎಂಬ ಊರಿನ ಬಳಿ ಸುಮಾರು 200 ಜನ ಬಿಟಿ ವಿರೋಧಿ ಚಳವಳಿಕಾರರು ಸುಮಾರು 15 ಎಕರೆಯಲ್ಲಿ ಬೆಳೆದಿದ್ದ ಬಿಟಿ ಜೋಳವನ್ನು ನಾಶಮಾಡಿದರು. ಆದರೆ ಅದಕ್ಕೆ ಉತ್ತರವಾಗಿ 800 ರೈತರು ಮೆರವಣಿಗೆ ತೆಗೆದದ್ದೆ ಅಲ್ಲದೆ ಜೈವಿಕ ತಂತ್ರಜ್ಞಾನದ ಕ್ಷೇತ್ರದಲ್ಲಿನ ಸಂಶೋಧನೆಗಳನ್ನು ಬೆಂಬಲಿಸಲು ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದರು. ನಮ್ಮ ನಾಡಿನ ರೈತನಾಯಕರು ಇದನ್ನು ಗಮನಿಸಬೇಕು.

ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಅಸಾಮಾನ್ಯವಾದ ಸಂಶೋಧನೆಗಳು ಆಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಾರ್ಷಿಕ ಎರಡೂವರೆ ಲಕ್ಷದಿಂದ ಐದು ಲಕ್ಷದಷ್ಟು ಮಕ್ಕಳು A ಅನ್ನಾಂಗದ ಕೊರತೆಯಿಂದ ಅಂಧರಾಗುತ್ತಿದ್ದಾರೆ. ಅದರಲ್ಲಿ ಅರ್ಧದಷ್ಟು ಮಕ್ಕಳು ದೃಷ್ಟಿ ಕಳೆದುಕೊಂಡ ವರ್ಷದೊಳಗೇ ಸಾವನ್ನಪ್ಪುತ್ತಾರೆ. ಈಗ ಫಿಲಿಫ್ಫೀನ್ಸ್‌ನಲ್ಲಿ ಅಂತರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆ ’ಬಂಗಾರದ ಅಕ್ಕಿ’ಯ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದೆ. ಈ ’ಬಂಗಾರದ ಅಕ್ಕಿ’ಯ ಸೇವನೆ ದೈನಂದಿನ A ಅನ್ನಾಂಗದ ಕೊರತೆಯನ್ನು ನೀಗಲಿದೆ. ಇದು ಸಾಧ್ಯವಾಗಿರುವುದು ಹಳದಿಬಣ್ಣದ ಡ್ಯಾಫೊಡಿಲ್ ಹೂವಿನ ಎರಡು ಜೀನ್ ಮತ್ತು ಬ್ಯಾಕ್ಟೀರಿಯಾ ಒಂದರ ಒಂದು ಜೀನ್ ಅನ್ನು ಭತ್ತಕ್ಕೆ ಸೇರಿಸುವುದರ ಮೂಲಕ. ಇನ್ನೊಂದೆರಡು ವರ್ಷದಲ್ಲಿ ಎಲ್ಲರ ಬಳಕೆಗೆ ಲಭ್ಯವಾಗಲಿರುವ ಈ ಅಕ್ಕಿ ಕೇವಲ ಅನ್ನವನ್ನು ಮಾತ್ರ ಉಣ್ಣಲು ಸಾಧ್ಯವಿರುವ ತೃತೀಯ ಜಗತ್ತಿನ ಅನೇಕ ದೇಶಗಳ ಮಕ್ಕಳಿಗೆ ನೆರವಾಗಲಿದೆ. ಕೇವಲ ಒಂದೇ ಒಂದು ಜೀನ್ ಒಂದರ ಸಂಕರದಿಂದಾಗಿ ಎರಡು ವಾರಗಳ ಕಾಲ ನೀರಿನಲ್ಲಿ ಮುಳುಗಿದರೂ ಕೊಳೆಯದ ಭತ್ತದ ಬೆಳೆಯೊಂದರ ಅಭಿವೃದ್ಧಿ ಮತ್ತು ಪರೀಕ್ಷೆ ಭಾರತ, ಭಾಂಗ್ಲಾ, ಮತ್ತು ಲಾವೋಸ್ ದೇಶಗಳಲ್ಲಿ ನಡೆಯುತ್ತಿದೆ. ಮೂರ್ನಾಲ್ಕು ತಿಂಗಳುಗಳ ಹಿಂದೆ ಅಕಾಲಿಕ ಪ್ರವಾಹಕ್ಕೆ ತುತ್ತಾಗಿ ಸಾವಿರಾರು ಎಕರೆಗಳಲ್ಲಿನ ತಮ್ಮ ಭತ್ತದ ಬೆಳೆಯನ್ನು ಕಳೆದುಕೊಂಡ ಉತ್ತರಕರ್ನಾಟಕದ ರೈತರು ಇಂತಹ ಭತ್ತದ ತಳಿಯೊಂದನ್ನು ಯಾಕಾದರೂ ವಿರೋಧಿಸಿಯಾರು? ರೈತನಾಯಕರ ಮತ್ತು ದೀನದಲಿತರ ಪರ ಮಾತನಾಡುವ ಸಮಾನತವಾದಿಗಳ ಬೆಂಬಲ ಇರಬೇಕಾದದ್ದು ಇಂತಹ ವೈಜ್ಞಾನಿಕ ವಿಚಾರಗಳಿಗೆ.

ಇತ್ತೀಚೆಗೆ ಬಲ ಪಡೆದುಕೊಳ್ಳುತ್ತಿರುವ ಸಾವಯವ ಕೃಷಿ ನಾಡಿನ ಎಲ್ಲಾ ಜನತೆಗೂ ಆಹಾರ ನೀಡಬಲ್ಲ ಬಲ ಪಡೆದುಕೊಳ್ಳಬೇಕಾದರೆ ಅದು ಬಿಟಿ ತಂತ್ರಜ್ಞಾವನ್ನು ಬಳಸಿಕೊಂಡರೆ ಮಾತ್ರ ಸಾಧ್ಯವಾಗುತ್ತದೆ. ಇಲ್ಲವೆಂದರೆ ಅದು ಹೆಚ್ಚು ದುಡ್ಡು ತೆರಬಲ್ಲ ಶ್ರೀಮಂತರ ಆಹಾರವಾಗಿ, ನಾಡಿನ ಬಡಜನತೆ ಹಸಿವಿನಲ್ಲಿ ಬಳಲಬೇಕಾಗುತ್ತದೆ. ರೈತರು ನೆಲವನ್ನು ಮತ್ತೆಮತ್ತೆ ಕೆರೆಯುತ್ತ, ಕೀಟನಾಶಕ-ಕಳೆನಾಶಕ ಸಿಂಪಡಿಸುತ್ತ, ಬೆಳೆ ನಾಶವಾದಾಗ ಮತ್ತು ಬೆಲೆ ಇಲ್ಲವಾದಾಗ ನೇಣು ಹಾಕಿಕೊಳ್ಳುತ್ತ ಇರಬೇಕಾಗುತ್ತದೆ. ಇಂತಹ ಎಲ್ಲಾ ವಿಚಾರಗಳನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಸರ್ಕಾರವೊಂದು ಬಿಟಿ ಬದನೆಯಂತಹ ಬೆಳೆಯನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳಬೇಕೆ ಹೊರತು ಒತ್ತಡಗುಂಪುಗಳ ಒತ್ತಡಗಳಿಗೆ ಮಣಿದು ಅಲ್ಲ. "ಅಭಿವೃದ್ಧಿ"ಯ ಮಂತ್ರ ಜಪಿಸುವ ಸರ್ಕಾರಗಳು ಕೇವಲ ರಸ್ತೆ-ಕಟ್ಟಡಗಳ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿಯಾಗುತ್ತದೆ ಎಂದು ಭಾವಿಸಬಾರದು. ಅದು ಇಂತಹ ವಿಷಯಗಳಲ್ಲಿ ತನ್ನದೇ ಆದ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯೊಂದನ್ನು ಆರಂಭಿಸುವ ನಿಟ್ಟಿನಲ್ಲಿಯೂ ಕಾರ್ಯೋನ್ಮುಖವಾಗಬೇಕಾಗುತ್ತದೆ.

ರವಿ ಕೃಷ್ಣಾ ರೆಡ್ಡಿ
(ಜನವರಿ 28, 2010)

Jan 29, 2010

ಹಂಪಿ ವಿವಿ ತಂಡದಿಂದ ಪ್ರವಾಹೋತ್ತರ ವಿದ್ಯಮಾನಗಳ ವರದಿ....

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಉತ್ತರಕರ್ನಾಟಕಕ್ಕೆರಗಿದ ಪ್ರವಾಹ ಮತ್ತು ಅದು ಉಂಟುಮಾಡಿದ ಅಪಾರ ನೋವು-ನಷ್ಟ ಗೊತ್ತಿರುವುದೆ. ಲಕ್ಷಾಂತರ ಜನರ ಜೀವನ ಅಕ್ಷರಶಃ ಬೀದಿಗೆ ಬಿದ್ದ ಸಮಯ ಅದು. ನಾಡಿನ ಜನತೆಯೂ ಸಹಾನುಭೂತಿಯಿಂದ ಮತ್ತು ಸಹನಾಗರಿಕ ಜವಾಬ್ದಾರಿಯಿಂದ ನಡೆದುಕೊಂಡ ಗಳಿಗೆಯೂ ಹೌದು.

ನೈಸರ್ಗಿಗ ಪ್ರವಾಹ, ಕೆಲವು ಕಡೆಯ ಮಾನವಕೃತ ಅನೈಸರ್ಗಿಕ ಪ್ರವಾಹಗಳು (flash flodds), ಅದಕ್ಕೆ ಕಾರಣವಾದ ಅಂಶಗಳು, ಪರಿಹಾರ ಕಾರ್ಯಗಳು, ವಿವಿಧ ಸಮುದಾಯಗಳು ಜನ ಆ ಸಂದರ್ಭದಲ್ಲಿ ನಡೆದುಕೊಳ್ಳುವ ರೀತಿ, ದಲಿತರ ಮತ್ತು ಹೆಂಗಸರ ವಿಶೇಷ ಅನಾನುಕೂಲತೆಗಳು, ಇತ್ಯಾದಿಗಳ ಬಗ್ಗೆ ಹಂಪಿ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಕೈಗೊಳ್ಳಲಾದ ಅಧ್ಯಯನದ ವರದಿ ಇತ್ತೀಚಿಗೆ ಕಣ್ಣಿಗೆ ಬಿತ್ತು. ಹೀಗೆಯೆ ಕನ್ನಡದ ಬ್ಲಾಗುಗಳನ್ನು ನೋಡುತ್ತಿದ್ದಾಗ ಕಾಣಿಸಿದ "ನೀಲಿಗ್ಯಾನ" (http://hulimurthygyaana.blogspot.com) ಎಂಬ ಬ್ಲಾಗಿನಲ್ಲಿ ಆ ವರದಿ ಲಭ್ಯವಿದೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ಹಂಪಿಯ ವಿಶ್ವವಿದ್ಯಾಲಯಲಕ್ಕೆ ಹೋಗಿದ್ದಾಗ ಅಲ್ಲಿನ ಕುಲಪತಿಗಳಾದಿಯಾಗಿ ಅಲ್ಲಿಯ ಹಲವು ಅಧ್ಯಾಪಕರಿಗೆ ವಿಶ್ವವಿದ್ಯಾಲಯದ ಪ್ರಕಟಣೆಗಳನ್ನು, ಥೀಸೀಸ್‌ಗಳನ್ನು, ಅಧ್ಯಯನ ವರದಿಗಳನ್ನು ವಿಕಿಪೀಡಿಯಾ ಮಾದರಿಯಲ್ಲಿ ಅಂತರ್ಜಾಲದಲ್ಲಿ ಪ್ರಕಟಿಸಿ ಎಂದು ಕೋರಿದ್ದೆ. ಕೋರಿದ್ದೆ ಎನ್ನುವುದಕ್ಕಿಂತ ಒತ್ತಾಯಪಡಿಸಿದ್ದೆ ಮತ್ತು ಅದರ ಪರವಾಗಿ ವಾದ ಮಂಡಿಸಿದ್ದೆ ಎನ್ನುವುದೆ ಸೂಕ್ತ. ವಿಶ್ವವಿದ್ಯಾಲಯವೊಂದು ಇಂತಹ ವೆಬ್‌ಸೈಟ್ ನಡೆಸಲು ಏನೇನೂ ಖರ್ಚು ಬರುವುದಿಲ್ಲ. ಅವರಲ್ಲಿ ಈಗ ಲಭ್ಯವಿರುವ ಸೌಲಭ್ಯವನ್ನೆ ಬಳಸಿಕೊಂಡು Drupal, Wordpress ನಂತಹ ಮುಕ್ತ ತಂತ್ರಾಂಶಗಳನ್ನು ಬಳಸಿಕೊಂಡು ಒಂದೆರಡು ವಾರದಲ್ಲಿ ನಿರ್ಮಿಸಬಹುದು. ಅಲ್ಲಿಯ ವಿಶ್ವವಿದ್ಯಾಲಯದಲ್ಲಿ ಇಂಟರ್ನೆಟ್ ಸೌಲಭ್ಯವೂ, ಮತ್ತು ಕಂಪ್ಯೂಟರ್‍ಗಳ ಲಭ್ಯತೆಯೂ ಸಾಕಷ್ಟು ಉತ್ತಮವಾಗಿಯೆ ಇದೆ. ಅದರೆ, ಆ ವಿಶ್ವವಿದ್ಯಾಲಯ ಅಂತರ್ಜಾಲದಲ್ಲೂ ಇಂತಹುದೊಂದು ಕನ್ನಡದ ಕೆಲಸ ಮಾಡಲು ಎಂದು ಸಾಧ್ಯವೊ ಗೊತ್ತಿಲ್ಲ.

ಈಗ ಅದೇ ವಿವಿಯ ಅಧ್ಯಯನ ತಂಡವೊಂದರ ವರದಿ ಓದಿ ಮತ್ತೆ ಅದನ್ನೆಲ್ಲ ನೆನಸಿಕೊಂಡು ಬೇಸರವಾಗುತ್ತಿದೆ. ನೀಲಿಗ್ಯಾನ ಬ್ಲಾಗಿನ ಹುಲಿಕುಂಟೆ ಮೂರ್ತಿ ಎನ್ನುವವರು ಇಂತಹ ವರದಿಯೊಂದನ್ನು ಅಂತರ್ಜಾಲದಲ್ಲಿ ಪ್ರಕಟಿಸಿದ್ದಕ್ಕಾಗಿಯೆ ವಿಶೇಷ ಅಭಿನಂದನೆಗಳಿಗೆ ಅರ್ಹರು.(ಅವರನ್ನು ಅಭಿನಂದಿಸುತ್ತಲೆ ಆ ಬ್ಲಾಗ್‌ಪೋಸ್ಟಿನ ತಾಂತ್ರಿಕ ಅಡಚಣೆಯ ಬಗ್ಗೆ ಒಂದು ಮಾತು. ಆ ವರದಿಯ ಪೋಸ್ಟ್ ಬರಹ ಫಾಂಟ್‌ನಲ್ಲಿದೆ. ತಮ್ಮ ಕಂಪ್ಯೂಟರ್‌ನಲ್ಲಿ ಬರಹ ಇಲ್ಲದ ಜನ ಅದನ್ನು ಓದಲಾರರು. ಬಹುಶಃ ಮೂರ್ತಿಯವರಿಗೆ ಇದು ಗೊತ್ತಿಲ್ಲದೆ ಇರಬಹುದು. ಗೊತ್ತಿದ್ದರೂ ಅದನ್ನು ಯೂನಿಕೋಡ್‌ಗೆ ಕನ್ವರ್ಟ್ ಮಾಡುವ ರೀತಿ ಗೊತ್ತಿಲ್ಲದೆ ಇರಬಹುದು. ಹೇಗಾದರೂ ಮಾಡಿ ಅದನ್ನು ಗೊತ್ತುಮಾಡಿಕೊಂಡು ಅವರು ಆ ವರದಿಯನ್ನು ಯೂನಿಕೋಡ್‌ಗೆ ಬದಲಾಯಿಸಲು ಈ ಮೂಲಕ ಒತ್ತಾಯಿಸುತ್ತೇನೆ. ಬರಹ ಕನ್ವರ್ಟ್ ನಲ್ಲಿ ಅದು ಅರ್ಧ ನಿಮಿಷದ ಕೆಲಸ.)

ಬರಹ ಫಾಂಟ್ಸ್ ಇರುವ ಓದುಗರು ಆ ವರದಿಯನ್ನು ಇಲ್ಲಿ ಓದಬಹುದು:
http://hulimurthygyaana.blogspot.com/2010/01/ege-aa-ajuaaa-aavaau-ajaga-czsaaaiaaa.html

ಬಹಳ ಗಂಭೀರವಾದ ಮತ್ತು ಮೌಲಿಕವಾದ ಅಧ್ಯಯನ. ವರದಿ ಅಕಾಡೆಮಿಕ್ ಪರಿಭಾಷೆಯಲ್ಲಿದ್ದರೂ ಓದಲು ಸರಳವಾಗಿಯೆ ಇದೆ. ಇಂತಹುದೊಂದು ಕ್ಷೇತ್ರಕಾರ್ಯವನ್ನು ಮಾಡಿದ ಮತ್ತು ಅದನ್ನು ದಾಖಲಿಸಿದ ತಂಡ ಅಭಿನಂದನಾರ್ಹ. ಆದರೆ, ಇಂತಹುದೊಂದು ಕೆಲಸ ವಿವಿಗಳು ಮಾಡುತ್ತವೆ ಎನ್ನುವುದೆ ಎಷ್ಟೋ ಜನಕ್ಕೆ, ಬರಹಗಾರರಿಗೆ, ಪತ್ರಕರ್ತರಿಗೆ, ವಿದ್ಯಾರ್ಥಿಗಳಿಗೆ, ಗೊತ್ತಾಗುವುದಿಲ್ಲ. ಅವರಿಗೆ ಗೊತ್ತಾಗದಿದ್ದರೆ ಇಂತಹ ವರದಿಗಳ ಪ್ರಯೋಜನವಾದರೂ ಏನು? ಇಂತಹ ವಿಷಯ ಮತ್ತು ಅಂಕಿಅಂಶಗಳು ವಿವಿ ವಿಭಾಗಗಳ ಖಾಸಗಿ ಪ್ರಚಾರಕ್ಕಷ್ಟೇ ಸೀಮಿತವಾಗಿಬಿಡಬಾರದು. ಇದನ್ನು ಗಮನದಲ್ಲಿಟ್ಟುಕೊಂಡೆ ನಾನು ಅಲ್ಲಿಯ ಕುಲಪತಿಗಳಿಗೆ ಮತ್ತು ಅಧ್ಯಾಪಕರಿಗೆ ಅವರ ಅಧ್ಯಯನ ಮತ್ತು ಸಂಶೋಧನೆಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಲು ಕೋರಿದ್ದು. ಆದರೆ....

ನನಗೆ ಈ ಹುಲಿಕುಂಟೆ ಮೂರ್ತಿಯವರ ಪರಿಚಯ ಇಲ್ಲ. ಆದರೆ ಅವರ ಬ್ಲಾಗಿನಲ್ಲಿ ಒಂದಷ್ಟು ಪದ್ಯಗಳು, ಒಳ್ಳೆಯ ಲೇಖನಗಳೂ ಇವೆ. ಮೇಲಿನ ವರದಿಯೊಂದಿಗೆ ಅವನ್ನೂ ಗಮನಿಸಿ. ಹಲವಾರು ಬರಹಗಳು ಯೂನಿಕೊಡ್‌ನಲ್ಲಿಯೆ ಇವೆ.

Jan 19, 2010

ಕನ್ನಡ ಚಿತ್ರರಂಗ 75 - ರೇಡಿಯೋ ಕಾರ್ಯಕ್ರಮ: ಮಧುಕಾಂತ್, ಪುಟ್ಟಸ್ವಾಮಿ

ಗೆಳೆಯ ಮಧುಕಾಂತ್ ಇಲ್ಲಿ ನಾಳೆ ಒಂದು ಒಳ್ಳೆಯ ರೇಡಿಯೊ ಕಾರ್ಯಕ್ರಮ ಕೊಡುತ್ತಿದ್ದಾರೆ. ಅದು ಕನ್ನಡ ಚಿತ್ರರಂಗದ 75 ವರ್ಷಗಳ ಕುರಿತಂತೆ.

ಲೇಖಕ ಕೆ. ಪುಟ್ಟಸ್ವಾಮಿಯವರು "ವಿಕ್ರಾಂತ ಕರ್ನಾಟಕ"ದಲ್ಲಿ ಕನ್ನಡ ಚಿತ್ರರಂಗದ 75 ವರ್ಷಗಳ ಇತಿಹಾಸವನ್ನು ಕುರಿತು (ಏಪ್ರಿಲ್ 18, 2008 ರ ಸಂಚಿಕೆಯಿಂದ ಜುಲೈ 31,2009 ರ ಸಂಚಿಕೆಯ ತನಕ) ಬರೆದಿದ್ದರು. ಅದು ಕನ್ನಡ ಚಿತ್ರರಂಗದ ಬಗೆಗೆ ಮಾತ್ರವಲ್ಲದೆ, ಆ ಮೂಲಕ ಕನ್ನಡದ ಒಂದು ಕಾಲಘಟ್ಟದ ಸಾಂಸ್ಕೃತಿಕ ಚರಿತ್ರೆಯ ಕುರಿತಾದ ಅಪೂರ್ವ ಲೇಖನ ಸರಣಿಯೂ ಆಗಿತ್ತು. ಕನ್ನಡ ಚಿತ್ರರಂಗದ ಇತಿಹಾಸವನ್ನು ಅಭ್ಯಸಿಸುವವರಿಗೆ ಇನ್ನು ಮುಂದಕ್ಕೆ ಎಲ್ಲಾ ರೀತಿಯಿಂದಲೂ ಆಕರ ಮೂಲವಾಗುವ ಬರಹಗಳು ಅವು. ಇತ್ತೀಚೆಗೆ ತಾನೆ ಈ ಲೇಖನಗಳು "ಸಿನಿಮಾ ಯಾನ (ಕನ್ನಡ ಚಿತ್ರರಂಗ 75 : ಒಂದು ಫ್ಲಾಷ್‌ಬ್ಯಾಕ್)" ಎಂಬ ಪುಸ್ತಕ ರೂಪದಲ್ಲಿ ಬಂದಿದೆ.
ಈ ಪುಸ್ತಕಕ್ಕೆ ಎನ್.ಎಸ್. ಶಂಕರ್ ಬರೆದಿರುವ ಮುನ್ನುಡಿ ಇಲ್ಲಿದೆ.

"ಸಿನೆಮಾ ಯಾನ" ಬಿಡುಗಡೆಯ ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ.

ಈ ಪುಸ್ತಕದ ಹಿನ್ನೆಲೆಯಲ್ಲಿ, ಪುಟ್ಟಸ್ವಾಮಿಯವರೊಂದಿಗೆ ನೇರಪ್ರಸಾರದ ಸಂದರ್ಶನ ಮತ್ತು ಮಾತುಕತೆಯನ್ನು ಮಧುಕಾಂತ್ ತಮ್ಮ ನಾಳೆಯ ರೇಡಿಯೊ ಕಾರ್ಯಕ್ರಮದಲ್ಲಿ ನಡೆಸಿಕೊಡುತ್ತಿದ್ದಾರೆ. ಬೇ ಏರಿಯಾದಲ್ಲಿರುವ ಕೇಳುಗರು ಈ ಕಾರ್ಯಕ್ರಮವನ್ನು 90.1 FM ತರಂಗಾಂತರದಲ್ಲಿ ಕೇಳಬಹುದು. ಜೊತೆಗೆ, ಇಂಟರ್ನೆಟ್ ಸೌಲಭ್ಯ ಇರುವ ಎಲ್ಲರೂ ಎಲ್ಲಿಂದಲಾದರೂ ತಮ್ಮ ಕಂಪ್ಯೂಟರ್ ಮೂಲಕ ಆಲಿಸಬಹುದು. ತಮ್ಮ ಅಭಿಪ್ರಾಯಗಳನ್ನೂ ಈ ನೇರಪ್ರಸಾರದಲ್ಲಿ ಹಂಚಿಕೊಳ್ಳಬಹುದು.
ದಿನಾಂಕ: ಜನವರಿ 20, 2010 - ಬುಧವಾರ
ಸಮಯ: 7.30 AM to 8.30 AM (PST) / ರಾತ್ರಿ 9 ರಿಂದ 10 (ಭಾರತೀಯ ಕಾಲಮಾನ)

ಹೆಚ್ಚಿನ ವಿವರಗಳು ಮಧುಕಾಂತ್‌ರ ಬ್ಲಾಗ್‌ನಲ್ಲಿ ಇವೆ.

ಅಂದ ಹಾಗೆ, ಇಲ್ಲಿಯವರೆಗೆ ಇಂತಹ 19 ಕನ್ನಡ ಕಾರ್ಯಕ್ರಮಗಳನ್ನು ಕೊಟ್ಟಿರುವ ಮಧುಕಾಂತರಿಗೆ ಇದು 20 ನೇ ಕಾರ್ಯಕ್ರಮ. ಅವರ ಹಿಂದಿನ ಎಲ್ಲಾ ಕಾರ್ಯಕ್ರಮಗಳೂ ಈ ಕೆಳಗಿನ ಕೊಂಡಿಯಲ್ಲಿ ಕೇಳಲು ಲಭ್ಯವಿದೆ.
http://www.itsdiff.com/Kannada.html

ತಮ್ಮದೆ ನೆಲೆಯಲ್ಲಿ ಒಂದು ಒಳ್ಳೆಯ ಆರೋಗ್ಯವಂತ ಸಾಂಸ್ಕತಿಕ ಸಂದರ್ಭವನ್ನು ಸೃಷ್ಟಿಸಿಕೊಳ್ಳಲು ತವಕಿಸುವ ಮಧುಕಾಂತರಂತಹ ಪ್ರಯತ್ನಗಳು ಗಮನಾರ್ಹ ಮತ್ತು ಪ್ರಶಂಸನೀಯ.