ಈಗ ಓದುತ್ತಿರುವ ಗಾಂಧಿಯ ಪುಸ್ತಕದಲ್ಲಿ ಸಸ್ಯಾಹಾರದ ಬಗ್ಗೆ ಗಾಂಧಿ ಮಾಡಿದ ಕೆಲವು ಪ್ರಯೋಗಗಳು ಮತ್ತು ಅವರು ಲಂಡನ್ನಿನಲ್ಲಿ ಓದುತ್ತಿರುವಾಗ ಸಸ್ಯಾಹಾರಿ ರೆಸ್ಟಾರೆಂಟ್‌ಗಳನ್ನು ಹುಡುಕಿಕೊಂಡು ಮೈಲುಗಟ್ಟಲೆ ನಡೆದೇ ಹೋಗುತ್ತಿದ್ದ ಚಿತ್ರಣವಿದೆ. ದೊಡ್ಡವನಾದ ಮೇಲೆ ಚೆನ್ನಾಗಿ ಮಾಂಸ ತಿನ್ನಬೇಕು; ಮಾಂಸ ತಿಂದು ಗಟ್ಟಿಯಾದರಷ್ಟೆ ಬ್ರಿಟಿಷರನ್ನು ದೇಶದಿಂದ ಹೊರಗಟ್ಟಲು ಸಾಧ್ಯ, ಎನ್ನುವ ಕಲ್ಪನೆಯೊಂದು ಗಾಂಧಿಯ ತಲೆ ಹೊಕ್ಕಿತ್ತು (ಹೇಳಬೇಕೆಂದರೆ, ಹೊಕ್ಕಿಸಲ್ಪಟ್ಟಿತ್ತು, ಅವರ ಬಾಲ್ಯ ಸ್ನೇಹಿತನೊಬ್ಬನಿಂದ). ಆದರೆ ತನ್ನ ತಾಯಿಗೆ (ಒತ್ತಾಯಪೂರ್ವಕವಾಗಿ) ಕೊಟ್ಟಿದ್ದ ವಚನದಿಂದಾಗಿ ಲಂಡನ್ನಿನಲ್ಲಿ ಸಸ್ಯಾಹಾರಿಯಾಗಿಯೇ ಕಾಲತಳ್ಳಬೇಕಿದ್ದ ಅಗತ್ಯ ಅಥವ ದರ್ದು ಗಾಂಧಿಗಿತ್ತು. ಆದರೆ ಗಾಂಧಿಯ ಮನಸ್ಸು ಅಲ್ಲಿ ವೈಚಾರಿಕ ಕಾರಣಗಳಿಗಾಗಿ ಬದಲಾಯಿತು. ಅಲ್ಲಿಯ ಬಿಳಿಯ ಸಸ್ಯಾಹಾರಿಗಳ ಜೊತೆ ಸೇರಿ, ಪುಸ್ತಕಗಳನ್ನು ಓದಿ, ಸಸ್ಯಾಹಾರವನ್ನು ಮನಃಪೂರ್ವಕವಾಗಿ ಜೀವನಪರ್ಯಂತ ಸ್ವೀಕರಿಸಿದರು. ಆದರೆ ಆ ವೈಚಾರಿಕ ಕಾರಣಗಳು ಮತ್ತು ಮಾಂಸಾಹಾರ ಮುಂದೆಂದೂ ಸೇವಿಸದಂತೆ ಗಾಂಧಿ ಮನಸ್ಸು ಬದಲಾಯಿಸಲು ಕಾರಣಗಳೇನಾಗಿದ್ದವು ಎನ್ನುವುದು ಮೊಮ್ಮಗನ ಪುಸ್ತಕದಲ್ಲಿ ದಾಖಲಾಗಿಲ್ಲ.
ಈಗ ಒಂದೆರಡು ವರ್ಷದಿಂದ ಗ್ಲೋಬಲ್ ವಾರ್ಮಿಂಗ್ ಮತ್ತು ಹವಾಮಾನ ವೈಪರೀತ್ಯಗಳ ಬಗ್ಗೆ ಓದಿ, ನೋಡಿ, ಕೇಳಿ, ನನಗೆ ನಿಜಕ್ಕೂ ಮನುಷ್ಯ ಅಥವ ಜೀವಸಂಕುಲದ ಉಳಿವಿನ ಬಗ್ಗೆಯೇ ಸಂದೇಹ ಬರುತ್ತಿದೆ. ಮನುಷ್ಯ ಪ್ರಕೃತಿಯನ್ನು ನಡೆಸಿಕೊಳ್ಳುತ್ತಿರುವ ರೀತಿ ಅದು ಮನುಷ್ಯನಿಗೆ ಕರುಣೆ ತೋರಿಸುವ ಯಾವೊಂದು ಅವಕಾಶಗಳನ್ನೂ ಉಳಿಸುತ್ತಿಲ್ಲ. ಇದರ ಬಗ್ಗೆ ಯೋಚಿಸಿದಾಗೆಲ್ಲ ನನಗೆ ಮನುಷ್ಯ ತನ್ನ ಆಹಾರಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು ಮತ್ತು ಮಾಂಸಾಹಾರದ ಮೇಲಿನ ಅವಲಂಬನೆ ಕಮ್ಮಿ ಮಾಡಿಕೊಳ್ಳಬೇಕು ಎನ್ನಿಸುತ್ತದೆ.
ಇದರ ಬಗ್ಗೆ ಒಂದು ಲೇಖನ ಬರೆಯಬೇಕು ಎಂದು ನನಗೆ ಆರೇಳು ತಿಂಗಳಿನಿಂದ ಅನ್ನಿಸುತ್ತಿತ್ತು. ಆಗಲಿಲ್ಲ. ಕನಿಷ್ಠ ಈಗಲಾದರೂ ನನ್ನ ಆಲೋಚನೆಗಳನ್ನು ದಾಖಲಿಸೋಣ, ಆಮೇಲೆ ವಿಸ್ತೃತವಾಗಿ, ಬೇರೆಬೇರೆ ಕೋನಗಳಿಂದ ಅವಲೋಕಿಸಿ ಬರೆಯೋಣ ಎಂದುಕೊಂಡು ಇಲ್ಲಿ ಸದ್ಯಕ್ಕೆ ಕೆಲವನ್ನು ನೋಟ್ ಮಾಡುತ್ತಿದ್ದೇನೆ.
ಬಾಲ್ಯದಲ್ಲಿ ಕೆಲವೊಂದು ಹಬ್ಬಕ್ಕೊ, ಇಲ್ಲಾ ತಿಂಗಳಿಗೊ, ಇಲ್ಲಾ ನೆಂಟರು ಬಂದಾಗಲೊ ಅಥವ ನೆಂಟರ ಮನೆಗೆ ಹೋದಾಗಲೊ ಅಷ್ಟೇ ಮಾಂಸ ತಿನ್ನುವ ಅವಕಾಶ ಸಿಗುತ್ತಿದ್ದದ್ದು. ಆದರೆ ಕಾಲೇಜಿನ ದಿನಗಳಲ್ಲಿ ವಾರಕ್ಕೊಮ್ಮೆಯಾದರೂ ತಿನ್ನುತ್ತಿದೆ. ಅಂತಹುದೇ ದಿನಗಳಲ್ಲಿ ನನ್ನಪ್ಪ ಅಂದ ಮಾತಿನಿಂದಾಗಿ ಆಗಾಗ ಕೋಳಿಸಾರು ತಿನ್ನಬೇಕು ಎನ್ನುವ ಚಪಲವನ್ನು ನನ್ನ ವೀಕ್‌ನೆಸ್‌ಗೆ ಸಮೀಕರಿಸಿಕೊಂಡು ಸುಮಾರು ಎರಡೂವರೆ ವರ್ಷಗಳ ಕಾಲ ಪಕ್ಕಾ ಸಸ್ಯಾಹಾರಿಯಾಗಿ ಕಳೆದಿದ್ದೆ. ಕೇಕ್ ಸಹ ತಿಂದಿರಲಿಲ್ಲ. ಎಂದೂ ಅದರ ಬಗ್ಗೆ ವಿಷಾದವಾಗಲಿಲ್ಲ. ಬದಲಿಗೆ ನನಗೆ ನನ್ನ ಇಚ್ಚಾಶಕ್ತಿಯ ಬಗ್ಗೆ ಹೆಮ್ಮೆ ಆಗುತ್ತಿತ್ತು. ಆದರೆ ಮತ್ತೊಂದು ಸಂದರ್ಭದಲ್ಲಿ ಆ ಚಪಲ ಇನ್ನು ವೀಕ್‌ನೆಸ್ ಆಗಿ ಉಳಿದಿಲ್ಲ ಅನ್ನಿಸಿದ ಮೇಲೆ, ಹಾಗು ನಾನೆ ದುಡಿದು ತಿನ್ನಲಾರಂಭಿಸಿದ ಮೇಲೆ ಮತ್ತೆ ಮಾಂಸಾಹಾರಿಯಾದೆ. ವಿಸ್ಕಾನ್ಸಿನ್‌ನಲ್ಲಿ ಇದ್ದ ಆರಂಭದ ಸಂದರ್ಭದಲ್ಲಿ ಕಾರಿಲ್ಲದ್ದರಿಂದ ಮತ್ತು ಗುಜರಾತಿಯೊಬ್ಬರ ಊರ ಹೊರಗಿನ ಮೋಟೆಲ್ ಒಂದರಲ್ಲಿ ಇದ್ದ ಕಾರಣದಿಂದಾಗಿ ಸುಮಾರು ಮೂರು ತಿಂಗಳ ಕಾಲ ಪಕ್ಕದ ಪೆಟ್ರೋಲ್ ಬಂಕಿನ ಡೆಲಿಯಲ್ಲಿ ಕೇವಲ ಕರಿದ ಚಿಕನ್ ಮತ್ತು ಇತರ ಮಾಂಸವನ್ನೆ ತಿಂದು ಕಾಲ ಹಾಕಿದ್ದೆ. ಈಗ ಮತ್ತೆ ನಾಲಿಗೆ ರುಚಿ ಬೇಡುತ್ತಿದೆ.
ಇನ್ನು ಊರಿನಲ್ಲಿ ಮಾಂಸ ತಿನ್ನಲಾರದೆ ಇರಲು ಕೆಲವು ಆಪ್ತ ಕಾರಣಗಳೂ ಇವೆ. ನಾನು ಪಕ್ಕಾ ಸಸ್ಯಾಹಾರಿಯಾದರೆ ಕೆಲವೊಂದು ಪ್ರೀತಿಯ ನೆಂಟರ ಮತ್ತು ಸ್ನೇಹಿತರ ಜೊತೆ ಕುಳಿತು ಊಟವನ್ನು ಎಂಜಾಯ್ ಮಾಡುವ ಅವಕಾಶವನ್ನೆ ಕಳೆದುಕೊಳ್ಳುತ್ತೇನೆ. ಕೆಲವೊಮ್ಮೆ ನನ್ನವರ ಪರಂಪರೆಯ ಮುಂದುವರಿಕೆಗಾದರೂ ಮಾಂಸಾಹಾರಿಯಾಗಿ ಮುಂದುವರೆಯಬೇಕು ಎನ್ನಿಸುತ್ತದೆ.
ಆದರೆ, ಮಾಂಸಾಹಾರಕ್ಕಾಗಿ ಮನುಷ್ಯ ಉಪಯೋಗಿಸುತ್ತಿರುವ ಶಕ್ತಿಮೂಲಗಳ ಮತ್ತು ಸಂಪನ್ಮೂಲಗಳ ಬಗ್ಗೆ ಯೋಚಿಸುತ್ತಿರುವ ಇತ್ತೀಚಿನ ದಿನಗಳಲ್ಲಿ ನಾನು ನನ್ನ ಕಡೆಯಿಂದ ನನ್ನ ಈಗಿನ ಆಹಾರ ಪದ್ದತಿಯನ್ನೆ ಬದಲಾಯಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎನ್ನಿಸುತ್ತದೆ. ಸುಮ್ಮನೆ ಕೆಲವೊಂದು ಪಾಯಿಂಟ್‌ಗಳನ್ನು ಇಲ್ಲಿ ಹೆಸರಿಸಿ ಇವತ್ತಿಗೆ ಇದನ್ನು ಮುಗಿಸುತ್ತೇನೆ. ಆದಾಗಲೆಲ್ಲ ಈ ಬ್ಲಾಗ್ ಪೋಸ್ಟನ್ನು ಅಪ್‌ಡೇಟ್ ಮಾಡಿಕೊಂಡರಾಯಿತು.
ಗಾಂಧಿ ಯಾಕೆ ಸಸ್ಯಾಹಾರದ ಪರ ಇದ್ದರು ಎನ್ನುವುದಾಗಲಿ, ಅಥವ ಮಾಂಸಾಹಾರಿಗಳು ಹಾಗೆಹೀಗೆ ಎನ್ನುವ ವಾದಗಳಾಗಲಿ ನನಗೆ ಅನಗತ್ಯ. ಆದರೆ ಈ ಪರಿ ಜನಸಂಖ್ಯೆ ಇರುವ ಇವತ್ತಿನ ಸಂದರ್ಭಕ್ಕೆ ಪ್ರತಿಯೊಬ್ಬ ಮನುಷ್ಯನು ತನ್ನ ಜೀವನಪದ್ಧತಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳದಿದ್ದರೆ, ಅವನು ಪ್ರಕೃತಿಗೆ ಮಾಡುತ್ತಿರುವ ಅಪಚಾರ ಇಡೀ ಜೀವಸಂಕುಲಕ್ಕೆ ನೋವಿನ ದಿನಗಳನ್ನು ತರಲಿದೆ ಎಂದು ನನಗೆ ಅನ್ನಿಸುತ್ತಿರುವುದರಿಂದ, ಅದಕ್ಕೆ ನಾನೇನು ಮಾಡಬೇಕು ಎಂದು ಪ್ರಶ್ನೆ ಹಾಕಿಕೊಂಡಿರುವುದರಿಂದ, ಬರಲಿರುವ ದಿನಗಳಲ್ಲಿ ನನ್ನ ಜೀವನಪದ್ಧತಿ ಮತ್ತು ಆಹಾರ ಪದ್ಧತಿಗಳೂ ಬದಲಾಗಲಿವೆ. ಇಲ್ಲದಿದ್ದರೆ, I will be feeling sorry all the time. ನಾನು ಮತ್ತೊಮ್ಮೆ ಸಸ್ಯಾಹಾರಿಯಾಗಬೇಕಿದೆ ಮತ್ತು ಸ್ಥಳೀಯವಾದದ್ದನ್ನೆ ತಿನ್ನುವ ಅಥವ ಬೆಳೆದುಕೊಳ್ಳುವ ಬಗ್ಗೆ ಯೋಚಿಸಬೇಕಿದೆ.
ಇದರ ಜೊತೆಗೆ, ಇದನ್ನು ಯಾಕೆ ಮತ್ತು ಹೇಗೆ ಸಮುದಾಯಕ್ಕೆ ತೆಗೆದುಕೊಂಡು ಹೋಗಬೇಕು ಮತ್ತು ಈಗಾಗಲೆ ತೆಗೆದುಕೊಂಡು ಹೋಗಿರುವವರು ಬಳಸುತ್ತಿರುವ ಮಾರ್ಗಗಳು ಏನು, ಅವುಗಳ ಪರಿಣಾಮ ಏನು ಎನ್ನುವುದು ನನ್ನ ಮುಂದಿನ ದಿನಗಳ ಒಂದು ಪಾಲು ಸಮಯವನ್ನು ತೆಗೆದುಕೊಳ್ಳುತ್ತದೆ.
ಇದನ್ನು ಓದುವ ಓದುಗರು, ತಮ್ಮ ತಿಳುವಳಿಕೆ, ಅಭಿಪ್ರಾಯ, ಪರವಿರೋಧಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ಎಲ್ಲವನ್ನೂ ಓದುತ್ತೇನೆ. ಅಗತ್ಯವಾದಲ್ಲಿ ನನ್ನ ಪ್ರತಿಕ್ರಿಯೆ ಬರೆಯುತ್ತೇನೆ.
Dec 31, 2008
ಮನುಷ್ಯ ಉಳಿಯಬೇಕಾದರೆ ಸಸ್ಯಾಹಾರದತ್ತ ತಿರುಗಬೇಕು...
Dec 30, 2008
ನಿಮ್ಮಗಳ ನಿಷ್ಠೆಯೂ ಭಾರತಕ್ಕಿಲ್ಲ
(ಗುಜರಾತಿನ ಧೇಡ್ ಜಾತಿಗೆ ಸೇರಿದ) ದಲಿತ ಕುಟುಂಬವೊಂದು ಮೊದಲ ಬಾರಿಗೆ ಸತ್ಯಾಗ್ರಹ ಆಶ್ರಮದಲ್ಲಿ ಇರಲು ಬಂದಾಗ ಅದನ್ನು ಕಸ್ತೂರಬಾ ಸಹ ಒಪ್ಪಿಕೊಂಡಿರಲಿಲ್ಲ. ಆಫ್ರಿಕಾದಲ್ಲಿದ್ದಾಗ ಇಂತಹುದಕ್ಕೆ ಅಷ್ಟೇನೂ ವಿರೋಧ ತೋರಿಸದಿದ್ದ ಕಸ್ತೂರಬಾಗೆ ಇಲ್ಲಿ ಸರೀಕರ ಮುಂದೆ ದಲಿತರನ್ನು ಮುಟ್ಟಿಕೊಳ್ಳುವುದು ಅಥವ ಅವರನ್ನು ಪಕ್ಕದಲ್ಲಿಟ್ಟುಕೊಳ್ಳುವುದು ಬಹಳ ಕಷ್ಟವಾಗಿರಬೇಕು. ಆದರೆ ಯಾವಾಗ ಗಾಂಧಿ ‘ನಿನಗೆ ಅದು ಅಸಾಧ್ಯವಾದರೆ ನನ್ನನ್ನು ಬಿಟ್ಟು ಹೋಗಬಹುದು. ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿ ಬೇರೆಯಾಗೋಣ,’ ಎಂದರೊ ಕಸ್ತೂರಬಾ ಅದಕ್ಕೆ ಮಣಿದರು. ಆದರೆ, ಅವರಿಗೆ ತುಂಬ ಹತ್ತಿರವಾಗಿದ್ದ ಮಗನ್‍ಲಾಲ್ (ಗಾಂಧಿಯ ದೊಡ್ಡಪ್ಪನ ಮೊಮ್ಮಗ) ಮತ್ತು ಆತನ ಹೆಂಡತಿ ಗಾಂಧಿಯನ್ನು ತೊರೆದು ಆಶ್ರಮದಿಂದ ಹೊರಟೇಬಿಟ್ಟರು. (ಮತ್ತೆ ಅವರು ಮನಸ್ಸು ಶುದ್ಧೀಕರಿಸಿಕೊಂಡು ವಾಪಸಾಗುತ್ತಾರೆ!)
ಹೀಗೆ ಅಸ್ಪೃಶ್ಯತೆ ಮತ್ತು ಜಾತಿಶ್ರೇಷ್ಠತೆ ಅಸಾಮಾನ್ಯವಾಗಿದ್ದ ಆ ಸಮಯದಲ್ಲಿ ಬ್ರಿಟಿಷರಿಂದ ಸ್ವರಾಜ್ಯವನ್ನು ಕೇಳುತ್ತಿದ್ದ ಹಿಂದುಗಳಲ್ಲಿ ಹೆಚ್ಚಿನ ಪಾಲು ಫ್ಯೂಡಲ್ ಮನೋಭಾವದ ಮೇಲ್ಜಾತಿಯವರೆ ಆಗಿದ್ದರು. ಇದನ್ನೆಲ್ಲ ಗಮನಿಸಿಯೆ ಗಾಂಧಿ ಅನೇಕ ಸಲ ‘ಅಸ್ಪೃಶ್ಯತೆಯನ್ನು ಪಾಲಿಸುವವರು ಸ್ವರಾಜ್ಯವನ್ನು ಕೇಳಲು ಅರ್ಹರಲ್ಲ.’ ಎಂದು ಹೇಳುತ್ತಿದ್ದರು. ‘ಮೊದಲಿಗೆ ಸಾಧಿಸಿಬೊಡೋಣ, ಮಿಕ್ಕದ್ದನ್ನು ಆಮೇಲೆ ನೋಡಿಕೊಳ್ಳೋಣ,’ ಎನ್ನುವ ಸಾಮಾನ್ಯ ಜನರ ಮತ್ತು ಸಾಮಾನ್ಯ ನಾಯಕರ ಮನೋಭಾವಕ್ಕೆ ಇದನ್ನು ಹೋಲಿಸಿದರೆ, ಗಾಂಧಿ ಕೇವಲ ಅಸ್ಪೃಶ್ಯತೆಯ ವಿಚಾರಕ್ಕೆ ಸ್ವರಾಜ್ಯವನ್ನೂ ಪಣಕ್ಕೆ ಒಡ್ಡಿದ್ದರು ಎನ್ನಿಸುತ್ತದೆ. ಈಗಲೂ ಕೆಲವರಿಗೆ ಹಾಗೆಯೆ ಅನ್ನಿಸುತ್ತದೆ. ಆದರೆ ಅದು ಗಾಂಧಿಯ ನೈತಿಕತೆಯ ಮಟ್ಟ. ಜೊತೆಗೆ ಹಿಂದೂ ಸಮಾಜವನ್ನೂ ಮಾನಸಿಕವಾಗಿ ಶುಚಿ ಮಾಡುವ ಕ್ರಿಯೆಯ ಭಾಗ. ಗಾಂಧಿ ಪದೆಪದೆ ಪ್ರತಿಪಾದಿಸುತ್ತಿದ್ದದ್ದು ಸ್ವರಾಜ್ಯಕ್ಕೆ ಭಾರತೀಯರು ಮೊದಲು ಅರ್ಹರಾಗಬೇಕು. ಗಾಂಧಿಯ ಗಮನ ಇದ್ದದ್ದು ಸ್ವರಾಜ್ಯ ಪಡೆದುಕೊಂಡ ಮೇಲೆ ನಾವು ಅದನ್ನು ಹೇಗೆ ನಿಭಾಯಿಸುತ್ತೇವೆ ಮತ್ತು ಉಳಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ. ಭಾರತ ದಾಸ್ಯಕ್ಕೆ ಯಾಕೆ ಒಳಗಾಯಿತು ಎನ್ನುವುದಕ್ಕೆ ಟಾಲ್ಸ್‌ಟಾಯ್ ಹೇಳಿದ್ದ ಮಾತೂ ಬಹುಶಃ ಇದಕ್ಕೆ ಪೂರಕವಾಗಿತ್ತು. (ಗಾಂಧಿ ಮತ್ತು ಟಾಲ್ಸ್‌ಟಾಯ್ ನಡುವಿನ ಪತ್ರವ್ಯವಹಾರ ಮತ್ತು ಗಾಂಧಿಯ ಮೇಲೆ ಟಾಲ್ಸ್‌ಟಾಯ್ ಪ್ರಭಾವವನ್ನು ಇನ್ನೊಂದರಲ್ಲಿ ಬರೆಯುತ್ತೇನೆ.)
ಇದನ್ನೆಲ್ಲ ಓದುತ್ತಿರುವಾಗ ನನಗೆ ಇವತ್ತಿನ ಭಾರತ ಮತ್ತು ಅದರ ಈಗಿನ ಸವಾಲುಗಳ ಬಗ್ಗೆ ಯೋಚನೆ ಮಾಡುವುದರಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ. ಗಾಂಧಿಯ ಕಾಲದಲ್ಲಿ ಅಸ್ಪೃಶ್ಯತೆ ಮತ್ತು ಜಾತಿವಾದದ ಪರ ಇದ್ದ ಮನೋಭಾವದ ಜನರ ಇಂದಿನ ಪೀಳಿಗೆಯ ಸಂತಾನ ಜಾತೀಯತೆಯನ್ನು ಬೇರೊಂದು ತರದಲ್ಲಿ ಮುಂದುವರೆಸುತ್ತಿದ್ದಾರೆ. ಅದೇ ರೀತಿ ನಿಜವಾದ ಭಾರತೀಯರು ಇಲ್ಲಿಯ ಹಿಂದೂಗಳು ಮಾತ್ರವೆ ಎನ್ನುವುದನ್ನೂ ಘೋಷಿಸುತ್ತಿದ್ದಾರೆ. ಅವರಿಗೆ ಗಾಂಧಿ ಆಗ ಪ್ರತಿಪಾದಿಸಿದ ಅರ್ಹತೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಇವತ್ತಿನ ನೈಜ ಜಾತ್ಯತೀತ ಭಾರತೀಯ ಒಂದನ್ನು ಹೇಳಬೇಕಿದೆ; ಒಂದು ಸಮುದಾಯ ಅಥವ ಕೋಮಿನ ಜನರನ್ನು ನಿಜವಾದ ದೇಶವಾಸಿಗಳಲ್ಲ, ಅವರ ನಿಷ್ಠೆ ಭಾರತಕ್ಕಿಲ್ಲ ಎನ್ನುವ ನಿಮ್ಮಗಳ ನಿಷ್ಠೆಯೂ ಭಾರತಕ್ಕಿಲ್ಲ. ಭಾರತದಲ್ಲಿ ಹುಟ್ಟಿರುವವರನ್ನೆ ಒಂದು ಕೃತ್ರಿಮ ಸಿದ್ಧಾಂತದ ಆಧಾರದ ಮೇಲೆ ಭಾರತೀಯರಲ್ಲ ಎನ್ನುವವರು ಭಾರತೀಯರಾಗಲು ಅರ್ಹತೆ ಸಂಪಾದಿಸಬೇಕಿದೆ.
ಈ ಅರ್ಹತೆ ಸಂಪಾದಿಸಿಲ್ಲದ ಜನ ದೇಶದಲ್ಲಿ ಅಂತಃಕಲಹ ಹೆಚ್ಚಿಸಿ ಜನಾಂಗನಾಶಕ್ಕೆ ಮುಂದಾಗುವ ಮುನ್ನವೆ ದೇಶದ ಜಾತ್ಯತೀತ ನಾಯಕತ್ವ ಎಚ್ಚರವಾಗಬೇಕಿದೆ. ಆದರೆ. ಕೇವಲ ಲೌಕಿಕ ಅಭಿವೃದ್ಧಿಯ ಕಡೆಗೆ ಗಮನ ಕೊಟ್ಟು ಜನತೆಯ ಸಾಮಾಜಿಕ-ಸಾಂಸ್ಕೃತಿಕ-ಅಧ್ಯಾತ್ಮಿಕ ಶುದ್ಧಿಗೆ ಮತ್ತು ಅಭಿವೃದ್ಧಿಗೆ ಗಮನ ಕೊಡದ ಈಗಿನ ಸರ್ಕಾರಗಳ ಸಂದರ್ಭದಲ್ಲಿ ಮೂಲಭೂತವಾದಿಗಳನ್ನು ಮತ್ತು ಹಣದ ಹೆಚ್ಚುಗಾರಿಕೆಯನ್ನು ಎದುರುಗೊಳ್ಳಲು ಗಾಂಧಿ ಪ್ರತಿಪಾದಿಸಿದ ಸರಳ ಬದುಕು, ದೈಹಿಕ ದುಡಿಮೆಯ ಶ್ರೇಷ್ಠತೆ, ಮತ್ತು ವೈಯಕ್ತಿಕ ಸುಖದ ತ್ಯಾಗದಂತಹ ಅಸ್ತ್ರಗಳನ್ನು ಬಳಸಿಕೊಳ್ಳಬೇಕಿದೆ.
Dec 28, 2008
ಗಾಂಧಿ, ಸಾವರ್ಕರ್, ಪ್ರಚೋದಕರು...
ಈಗ ಓದುತ್ತಿರುವ "Gandhi - The Man, His People, and the Empire" ನಲ್ಲಿ ಲೇಖಕ ರಾಜ್‌ಮೋಹನ್ ಗಾಂಧಿ, ಸಾವರ್ಕರ್ ಮತ್ತು ಮೋಹನ್‌ದಾಸ್ ಗಾಂಧಿಯ ನಡುವಿನ ಎರಡು ಭೇಟಿಗಳ ಬಗ್ಗೆ ಬರೆಯುತ್ತಾರೆ. ಆ ಭಾಗಗಳನ್ನು ಓದುವ ಒಂದೆರಡು ದಿನಗಳ ಹಿಂದೆಯಷ್ಟೆ ನಾನು ಇಲ್ಲಿ ಒಬ್ಬ ಮಂಡ್ಯದ ಯುವಕನನ್ನು ಭೇಟಿಯಾಗಿದ್ದೆ. ಬುದ್ಧಿವಂತ. ಸಂಸ್ಕೃತ, ಕನ್ನಡ, ಇಂಗ್ಲಿಷ್ ಎಲ್ಲಾ ಓದುತ್ತಾನೆ. ಅಲ್ಲಿ ಹತ್ತಾರು ವರ್ಷಗಳ ಕಾಲ ಸಾವರ್ಕರ್ ಪ್ರಣೀತ ಹಿಂದೂ ಮತೀಯವಾದಿಗಳ ಅಂಗಳದಲ್ಲೂ ಓಡಾಡಿದ್ದಾನೆ. ಆತನ ಜೊತೆ ಮಾತನಾಡುತ್ತಿದ್ದಾಗ ಅಚಾನಕ್ಕಾಗಿ ಗಾಂಧಿ ವಿಷಯ ಬಂತು. ನಾನೆಂದೆ, 'ಅಲ್ರಿ, ಈ ಹಿಂದೂ ಮತೀಯವಾದಿಗಳಿಗೆ ಗಾಂಧೀಜಿ ಅಂದ್ರೆ ಯಾಕಿಷ್ಟು ಕೋಪ? ಅದು ಯಾಕೆ ಗಾಂಧಿಯನ್ನು ಈ ಪರಿ ದ್ವೇಷಿಸುತ್ತಾರೆ?'
ಆ ಯುವಕನ ಉತ್ತರ ನನ್ನ ಬುದ್ಧಿ ಮತ್ತು ವಿವೇಚನಾ ಶಕ್ತಿಯನ್ನೆ ಅಣಕಿಸಿತು. ಜನರ ದುಷ್ಟತನ ಅಥವ ಪಿತೂರಿಗಳನ್ನು ಅರ್ಥ ಮಾಡಿಕೊಳ್ಳುವ ನನ್ನ ಅಸಾಮರ್ಥ್ಯವನ್ನೂ ನನಗೆ ಎತ್ತಿ ತೋರಿಸಿತು. ಆತ ಹೇಳಿದ್ದು, 'ನೀವು ಚೆನ್ನಾಗಿ ಹೇಳ್ತೀರ, ಗಾಂಧೀನ ಕಂಡೆಮ್ ಮಾಡದೇ ಇದ್ದರೆ ಸಾವರ್ಕರ್ ಗ್ರೇಟು ಅಂತ ತೋರಿಸೋದು ಹೇಗೆ? ಸಾವರ್ಕರ್‌ನ ಮುಂದಕ್ಕೆ ತರಬೇಕು ಅಂದರೆ ಗಾಂಧೀನ ಬೈಯ್ಯಲೇಬೇಕು.' ಇದು ಮತೀಯವಾದಿಗಳ ಪಡಸಾಲೆಯಲ್ಲಿ ಓಡಾಡಿ ಎದ್ದುಬಂದವನ ಮಾತು. ಆತನ ಮಾತನ್ನು ಒಪ್ಪಿಕೊಳ್ಳದೆ ಇರಲು ನನಗೆ ಯಾವ ಕಾರಣಗಳೂ ಕಾಣುತ್ತಿಲ್ಲ.
ಈಗ ಗಾಂಧಿ ಓದುವಾಗ ಆ ಯುವಕನ ಮಾತುಗಳು ಪದೇಪದೆ ನೆನಪಾಗುತ್ತವೆ.
ಸಾವರ್ಕರ್‌ರ ಗುರು ಕೃಷ್ಣವರ್ಮ ಎಂಬಾತ ಲಂಡನ್ನಿನಲ್ಲಿ Indian Socialogist ಎನ್ನುವ ಪತ್ರಿಕೆ ನಡೆಸುತ್ತಿದ್ದ. ಆತನ ಸಿದ್ಧಾಂತ ಬ್ರಿಟಿಷರ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಾಗಿತ್ತು. ಅದಕ್ಕೆ ತರಬೇತಿಯೂ ಕೊಡಲಾಗುತ್ತಿತ್ತು. ಗಾಂಧಿ ಬ್ರಿಟಿಷರ ಜೊತೆ ದಕ್ಷಿಣ ಆಫ್ರಿಕಾದ ಭಾರತೀಯರ ಸಮಸ್ಯೆಗಳನ್ನು ಚರ್ಚಿಸಲು 1905 ರಲ್ಲಿ ಲಂಡನ್ನಿಗೆ ಬಂದಿದ್ದಾಗ ಅವರ ಅಹಿಂಸಾತ್ಮಕ ಹೋರಾಟವನ್ನು ಟೀಕಿಸಿದ್ದ ಕೃಷ್ಣವರ್ಮನನ್ನೂ ಭೇಟಿ ಆಗುತ್ತಾರೆ. ಆಗಿನ ಕೆಲ ಭಾರತೀಯರಲ್ಲಿ ತೀವ್ರವಾಗಿ ತುಡಿಯುತ್ತಿದ್ದ ಹಿಂಸಾತ್ಮಕ ವಿರೋಧವನ್ನು ಕಂಡ ಗಾಂಧಿ ಕೃಷ್ಣವರ್ಮನ ಗುಂಪಿನ ಜೊತೆ ಎರಡು ದಿನ ಕಳೆಯುತ್ತಾರೆ. ಅವರ ಸಿದ್ಧಾಂತದ ಬಗ್ಗೆ ಕಳವಳಗೊಂಡಿದ್ದ ಗಾಂಧಿ ಅವರನ್ನು ಮಾತುಕತೆಯ ಮೂಲಕ, ಚರ್ಚೆಯ ಮೂಲಕ ಎಂಗೇಜ್ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಹಿಂಸೆಗೆ ಪರ್ಯಾಯವಾಗಿ ಅವರಿಗೆ ಶಾಂತಿಯುತ ಅಸಹಕಾರವನ್ನು ಅಪ್ಪಿಕೊಳ್ಳಲು ಹೇಳುತ್ತಾರೆ. ಅಲ್ಲಿಯೇ 23 ವರ್ಷದ ಸಾವರ್ಕರ್ 36 ವರ್ಷದ ಗಾಂಧಿಯನ್ನು ಮೊದಲ ಸಲ ಭೇಟಿ ಆಗಿದ್ದು.
ಗಾಂಧಿ 1909 ರಲ್ಲಿ ಮತ್ತೊಮ್ಮೆ ದಕ್ಷಿಣ ಆಫ್ರಿಕಾದಿಂದ ಲಂಡನ್ನಿಗೆ ಬರುತ್ತಾರೆ. ಅವರು ಬರುವುದಕ್ಕೆ ಎಂಟು ದಿನಗಳ ಹಿಂದೆಯಷ್ಟೆ ಕೃಷ್ಣವರ್ಮ ಮತ್ತು ಸಾವರ್ಕರ್‌ರಿಂದ ಪ್ರಚೋದನೆಗೊಂಡ ಮದನ್‍ಲಾಲ್ ಧಿಂಗ್ರಾ ಎಂಬ ಯುವಕ ಕರ್ಜನ್ ವಿಲ್ಲಿ ಎಂಬಾತನನ್ನು ಕೊಂದಿರುತ್ತಾನೆ. (ಕರ್ಜನ್ ವಿಲ್ಲಿ ಆಗಿನ ಇಂಗ್ಲೆಂಡ್ ಸರ್ಕಾರದಲ್ಲಿ ಭಾರತದ ಉಸ್ತುವಾರಿ ನೋಡಿಕೊಳ್ಳುತ್ತಿದ ವಿದೇಶಾಂಗ ಸಚಿವನ ರಾಜಕೀಯ ಸಹಾಯಕ.) ಇದೇ ಹಿನ್ನೆಲೆಯಲ್ಲಿ ಗಾಂಧಿ ಮತ್ತೊಮ್ಮೆ ಉಗ್ರವಾದಿ ವಿದ್ಯಾರ್ಥಿಗಳ ಜೊತೆ ಒಂದು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಅದು ಅವರಿಂದಲೆ ಬಂದಿದ್ದ ಆಹ್ವಾನ. ಆ ಸಭೆಯಲ್ಲಿ ಗಾಂಧಿ ಧಿಂಗ್ರಾನನ್ನು ಕೊಲೆ ಮಾಡಲು ಪ್ರಚೋದಿಸಿದವರು ಧಿಂಗ್ರಾಗಿಂತ ದೊಡ್ಡ ಅಪರಾಧಿಗಳು ಎನ್ನುತ್ತಾರೆ. ಅಲ್ಲಿ ಸಾವರ್ಕರ್ ಇನ್ನೊಬ್ಬ ಭಾಷಣಕಾರ. ಆತ ಏನು ಹೇಳಿದ ಎಂದು ಈ ಪುಸ್ತಕದಲ್ಲಿ ಹೇಳಿಲ್ಲ. ಆ ಸಮಯದಲ್ಲಿ ಕರ್ಜನ್‌ನ ಕೊಲೆಯಲ್ಲಿಯ ಸಾವರ್ಕರ್ ಪಾತ್ರ ಇನ್ನೂ ಬಹಿರಂಗವಾಗಿರಲಿಲ್ಲ.
ಆದರೆ ತದನಂತರದ ದಿನಗಳಲ್ಲಿ ಆ ಕೊಲೆಯಲ್ಲಿ ಸಾವರ್ಕರ್‌ರ ಪ್ರಚೋದನೆ ಮತ್ತು ಸಮರ್ಥನೆ ನಿರೂಪಿತವಾಗಿ, ಸಾವರ್ಕರ್‌ಗೆ ಜೈಲುಶಿಕ್ಷೆಯಾಗಿ ಅಂಡಮಾನಿಗೆ ಕಳಿಸಲಾಗುತ್ತದೆ.
ಈ ಮೇಲಿನ ಪ್ರಸಂಗದ ಬಗ್ಗೆ ರಾಜ್‌ಮೋಹನ್ ಬರೆಯುತ್ತಾರೆ: "ನಂತರದ ದಿನಗಳಲ್ಲಿ ಸಾವರ್ಕರ್ ಗಾಂಧಿಯ ಬಗ್ಗೆ ತೋರಿಸುವ ದ್ವೇಷ ಬಹುಶಃ ಯಾವಾಗ ಗಾಂಧಿ ಕರ್ಜನ್ ವಿಲ್ಲಿಯನ್ನು ಕೊಲೆ ಮಾಡಲು ಪ್ರಚೋದಿಸಿದವರು ಧಿಂಗ್ರಾಗಿಂತ ದೊಡ್ಡ ಅಪರಾಧಿಗಳು ಎಂದರೊ ಆಗ ಹುಟ್ಟಿದ್ದಾಗಿರಬೇಕು."
ಈ ಪ್ರವಾಸದ ನಂತರದ ಹಡಗು ಪ್ರಯಾಣದಲ್ಲೆ ಗಾಂಧಿ "ಹಿಂದ್ ಸ್ವರಾಜ್" ಬರೆದದ್ದು.
(ಇದೇ ಸಮಯದಲ್ಲಿ, ತಾವು ಮಾಡುತ್ತಿರುವುದೇ ಸರಿಯಾದ ಹೋರಾಟ, ಅದಕ್ಕೆ ಸಶಸ್ತ್ರ ಹೋರಾಟವೆ ಸರಿ ಎಂದು ಸಮರ್ಥಿಸಿಕೊಳ್ಳುವ ನಕ್ಸಲ್‌ವಾದಿಗಳೂ ನೆನಪಾಗುತ್ತಾರೆ. ತಮ್ಮ ಲೌಕಿಕ ಸುಖಗಳನ್ನು ತ್ಯಾಗ ಮಾಡಿ ಹೋರಾಟ ಮಾಡಿದಾಕ್ಷಣಕ್ಕೆ ಯಾರೊಬ್ಬರ ಹಿಂಸಾತ್ಮಕ ಹೋರಾಟವೂ ಆದರ್ಶಪ್ರಾಯವಲ್ಲ ಮತ್ತು ಪ್ರಶಂಸನೀಯವಲ್ಲ. ಅದು ದೇಶಪ್ರೇಮಿ ಉಗ್ರವಾದಿಗಳಿಗೂ, ಮೂಲಭೂತವಾದಿಗಳಿಗೂ, ಅಸಮಾನತಾ ವಿರೋಧಿ ನಕ್ಸಲ್‌ವಾದಿಗಳಿಗೂ ಸಮಾನವಾಗಿ ಅನ್ವಯಿಸುತ್ತದೆ.)
Dec 27, 2008
ಶತಮಾನದ ಹಿಂದೆ ಗಾಂಧಿ ಹೇಳಿದ್ದು...
ವಿಚಾರ ಮಂಟಪದ basic ಕೆಲಸ ಮುಗಿದ ತಕ್ಷಣ, ಈ ಒಂದು ಮೂರು ದಿನದಿಂದ ಗಾಂಧಿಯ ಮೊಮ್ಮಗ ರಾಜ್‌ಮೋಹನ್ ಗಾಂಧಿ ಬರೆದಿರುವ "Gandhi - The Man, His People, and the Empire" ಹಿಡಿದುಕೊಂಡು ಕುಳಿತಿದ್ದೇನೆ.
ನನಗೆ ನಾನೆ ಮನನ ಮಾಡಿಕೊಳ್ಳುವುದು, ಗುರುತು ಮಾಡಿಕೊಳ್ಳುವುದು ಬಹಳಷ್ಟು ಇದೆ. ಲೈಬ್ರರಿ ಕಾಪಿ ಎಂದು ಸುಮ್ಮನಾಗುತ್ತೇನೆ. ಸಾಧ್ಯವಾದಾಗ ಇಲ್ಲಿಯೇ ಬರೆದುಕೊಳ್ಳಬೇಕು ಎನ್ನಿಸುತ್ತದೆ. ಈಗ ಅಂತಹುದೊಂದು.
ಸರಿಯಾಗಿ 100 ವರ್ಷದ ಹಿಂದೆ ಗಾಂಧಿ ಮೊದಲ ಬಾರಿಗೆ ಜೈಲಿಗೆ ಹೋಗಿದ್ದು (1908 ರ ಆರಂಭದಲ್ಲಿ). ಸತ್ಯಾಗ್ರಹದ ಆರಂಭ ಕಾಲ ಅದು. 1908 ರ ಅಂತ್ಯದಲ್ಲಿ, ಗಾಂಧಿ ಜೈಲಿನಿಂದ ಹೊರಗೆ ಇರುವಾಗ, ಗಾಂಧಿಯ ಸತ್ಯಾಗ್ರಹದಲ್ಲಿ ಪಾಲ್ಗೊಂಡ ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರು ಅಲ್ಲಿನ ಭಾರತೀಯರ ವಿರುದ್ಧದ ಕಾನೂನುಗಳನ್ನು ಉಲ್ಲಂಘಿಸಿ ಜೈಲಿಗೆ ಹೋಗುತ್ತಾರೆ. ಆದರೆ ಕೆಲವು ಭಾರತೀಯರು ಜೈಲಿಗೂ ತಮ್ಮ ಜಾತಿಶ್ರೇಷ್ಠತೆಯನ್ನು ಒಯ್ಯುತ್ತಾರೆ. ದಲಿತನ ಪಕ್ಕ ಮಲಗಲು ಕೆಲವರು ಒಪ್ಪುವುದಿಲ್ಲ. ಅದನ್ನು ಕೇಳಿ, ಕ್ರುದ್ಧ ಗಾಂಧಿ ಬರೆಯುತ್ತಾರೆ:
"ಈ ಆಷಾಢಭೂತಿತನದ ಮೇಲು ಕೀಳು ಭೇದಗಳಿಂದಾಗಿ ಮತ್ತು ಚಾಲ್ತಿಯಲ್ಲಿರುವ ಜಾತಿ ದಬ್ಬಾಳಿಕೆಯಿಂದಾಗಿ ನಾವು ಸತ್ಯಕ್ಕೆ ಬೆನ್ನು ತೋರಿಸಿ ಅಸತ್ಯವನ್ನು ಅಪ್ಪಿಕೊಂಡಿದ್ದೇವೆ. ಈ ಚಳವಳಿಯಲ್ಲಿ ಪಾಲ್ಗೊಂಡಿರುವ ಭಾರತೀಯರು ಈ ದುಷ್ಟತನ ಎಲ್ಲೆಲ್ಲಿ ಕಾಣಿಸುತ್ತದೊ ಅಲ್ಲೆಲ್ಲವೂ, ತಮ್ಮ ಜಾತಿಯ ವಿರುದ್ಧವೂ, ಕುಟುಂಬದ ವಿರುದ್ಧವೂ ಸತ್ಯಾಗ್ರಹ ಮಾಡಲು ಮುಂದಾಗಲಿ ಎಂದು ಬಯಸುತ್ತೇನೆ. " (ಜನವರಿ 30, 1909 ರಂದು Indian Opinion ನಲ್ಲಿ)
ಈಗಲೂ ಭಾರತದಲ್ಲಿ ಒಂದಲ್ಲ ಒಂದು ರೂಪದಲ್ಲಿ ಬಲಿಷ್ಠವಾಗಿಯೇ ಮುಂದುವರೆಯುತ್ತಿರುವ ಜಾತೀಯತೆ, ಕೋಮುದ್ವೇಷ, ಮೂಲಭೂತವಾದಿತನಗಳ ಹಿನ್ನೆಲೆಯಲ್ಲಿ ಹೇಳಬೇಕೆಂದರೆ, ನಾವು ಸುಧಾರಿಸಿಯೇ ಇಲ್ಲ. ಇಲ್ಲಿಯತನಕದ ಸುಧಾರಣೆ ಸುಧಾರಣೆಯೇ ಅಲ್ಲ. ಬಹುಸಂಖ್ಯಾತರಿಗೆ ಗಾಂಧಿಯ ಸರಳ ಕಾನ್ಸೆಪ್ಟ್‌ಗಳಾಗಲಿ, ಸಮಾನತೆ, ಸರ್ವೋದಯ, ಸಹಬಾಳ್ವೆಯ ವಿಷಯಗಳಾಗಲಿ ಇನ್ನೂ ತಲುಪಿಯೇ ಇಲ್ಲ. ಇದರಲ್ಲಿ ಅಕ್ಷರ ಕಲಿತವರೂ, ಸಮಾಜದಲ್ಲಿ ಗಣ್ಯರಾಗಿರುವವರೂ, ಬರಹಗಾರರೂ ಇದ್ದಾರೆ ಎನ್ನುವುದು ಇನ್ನೂ ಶೋಚನೀಯವಾದ ವಿಷಯ. ಒಂದು ಮುಂದಡಿ ಇಟ್ಟು ಎರಡು ಹಿಂದಡಿ ಇಡುತ್ತಿರುವ ಸಮಾಜವೆ ನಮ್ಮದು?
Dec 20, 2008
"ವಿಚಾರ ಮಂಟಪ"ಕ್ಕೆ ಸಹಾಯ ಬೇಕಿದೆ...
ವಿಚಾರ ಮಂಟಪ ವನ್ನು ಯೂನಿಕೋಡ್‌ಗೆ ಬದಲಾಯಿಸಿ ಹೊಸರೂಪ ನೀಡಬೇಕೆಂದುಕೊಂಡಿದ್ದ ಕೆಲಸ ಅಂದುಕೊಂಡದ್ದಕ್ಕಿಂತ ನಿಧಾನವಾಗುತ್ತಿದೆ. ಈಗಾಗಲೆ ಅರ್ಧ ಕೆಲಸ ಮಾಡಿದ್ದೇನೆ. ಅದಕ್ಕೆ Drupal ವ್ಯವಸ್ಥೆ ಏರಿಸಿ ಆಗಿದೆ. ಹಾಗೆಯೆ "ವಚನಗಳು" ಮತ್ತು "ಕುವೆಂಪು" ವಿಭಾಗವನ್ನೂ ಪೂರ್ಣಗೊಳಿಸಿದ್ದೇನೆ.
http://www.vicharamantapa.net/drupal
ಇನ್ನೂ ಡಾ. ಹೆಚ್. ನರಸಿಂಹಯ್ಯನವರ 'ಹೋರಾಟ ಹಾದಿ"ಯ ಲೇಖನಗಳು, ಬಿ.ವಿ. ವೀರಭದ್ರಪ್ಪನವರ "ವೇದಾಂತ ರೆಜಿಮೆಂಟ್" ಲೇಖನಗಳು, ಸಿದ್ದಲಿಂಗಯ್ಯನವರ "ಆಯ್ದ ಪದ್ಯಗಳು" ಅನ್ನು ಬದಲಿಸಬೇಕಿದೆ. ಇತ್ತೀಚಿನ ವ್ಯಸ್ತ ವೇಳೆಯಿಂದಾಗಿ ಅದಕ್ಕೆ ಬೇಕಾದ ದಿನಂಪ್ರತಿ ಒಂದೆರಡು ಗಂಟೆಗಳ ಸಮಯ ಸಿಗುತ್ತಿಲ್ಲ. ಸಿಕ್ಕರೂ ಮನಸ್ಥಿತಿ ಹೊಂದುತ್ತಿಲ್ಲ. ಹಾಗಾಗಿ, ಈ ಮನವಿ.
ಇನ್ನೂ ಬಾಕಿಯಿರುವ ಲೇಖನ/ಪದ್ಯಗಳನ್ನು ಬರಹ-ANSI ಯಿಂದ ಯೂನಿಕೋಡ್‌ಗೆ ಕನ್ವರ್ಟ್ ಮಾಡಿ ವೆಬ್‍ಸೈಟ್‌ಗೆ ಏರಿಸಲು ಸುಮಾರು ಐದಾರು+ ಗಂಟೆಗಳ ಸಹಾಯ ಬೇಕಾಗಬಹುದು. ಯಾರಾದರೂ ಈ ಕೆಲಸದಲ್ಲಿ ಪಾಲ್ಗೊಳ್ಳಲು ಮುಂದೆ ಬಂದರೆ ನಿಜಕ್ಕೂ ಸಹಾಯವಾಗುತ್ತದೆ.
ಇದು ತುಂಬ ಸುಲಭದ ಕೆಲಸ. ಬ್ಲಾಗ್ ಪೋಸ್ಟ್ ಮಾಡುವುದಕ್ಕೂ ಇದಕ್ಕೂ ಯಾವುದೆ ವ್ಯತ್ಯಾಸವಿಲ್ಲ. ಅದೇ interface. ನಾನು ಒಂದು ಯೂಸರ್ ಐಡಿಗೆ content ಏರಿಸುವ ಅನುಮತಿ ನೀಡಬೇಕಷ್ಟೆ. ನಂತರ ನೀವು ಬ್ಲಾಗ್‍ಗೆ ಲೇಖನ ಪೋಸ್ಟ್ ಮಾಡುವ ಹಾಗೆ ಇಲ್ಲಿಯೂ ಲೇಖನವನ್ನು ಪೋಸ್ಟ್ ಮಾಡಬೇಕು. ಮೂಲಲೇಖನ vicharamantapa.net ನಲ್ಲಿ ಇದೆ. ಅದನ್ನು "Baraha Convert" ಬಳಸಿ ಕಾಪಿ-ಪೇಸ್ಟ್ ಮಾಡಬೇಕಷ್ಟೆ. (ಅಪ್‍ಲೋಡ್ ಆದ ಲೇಖನಕ್ಕೆ ಮೆನು ಕೂಡಿಸುವುದನ್ನು ನಾನು ಮಾಡುತ್ತೇನೆ.)
ಈ ಹಿಂದೆ ಹಲವಾರು ಜನ ಈ ತರಹದ ಸಹಾಯ ಮಾಡುತ್ತೇವೆ ಎಂದು ಮುಂದೆ ಬಂದಿದ್ದರು. ಆದರೆ ಆಗ ಏನು ಕೇಳುವುದು ಎಂದು ಗೊತ್ತಿರಲಿಲ್ಲ. ಈಗ ಎಲ್ಲವೂ ಸ್ವತಂತ್ರವಾಗಿ ಮಾಡುವ ಸಾಧ್ಯತೆ ಇರುವುದರಿಂದ ಅವರಿಗೂ ಪತ್ರ ಬರೆಯುತ್ತೇನೆ. ಬ್ಲಾಗಿನಲ್ಲಿ ಓದಿ ಯಾರಾದರೂ ಸ್ಪಂದಿಸಬಹುದು ಎಂದು ಇಲ್ಲಿಯೂ ಬರೆದಿದ್ದೇನೆ. ನೀವು ಈ ಸಹಾಯ ಮಾಡಬಲ್ಲಿರಾದರೆ ದಯವಿಟ್ಟು vicharamantapa@vicharamantapa.net ಗೆ ಮೇಯ್ಲ್ ಮಾಡಿ. ಯೂಸರ್ ಐಡಿ ವಿವರಗಳನ್ನು ಕಳುಹಿಸುತ್ತೇನೆ.
(ಎಲ್ಲವನ್ನೂ ಕನ್ವರ್ಟ್ ಮಾಡಿದ ಬಳಿಕ Drupal ನಲ್ಲಿರುವ ಮುಖಪುಟವೆ Default ಮುಖಪುಟವಾಗುತ್ತದೆ.)
Dec 7, 2008
ಗಾಂಧಿ ಜಯಂತಿ ಕಥಾಸ್ಪರ್ಧೆ ಫಲಿತಾಂಶ
ನಾನು "ವಿಕ್ರಾಂತ ಕರ್ನಾಟಕ"ದ ಮೂಲಕ ಪ್ರಾಯೋಜಿಸಿದ್ದ "ಗಾಂಧಿ ಜಯಂತಿ ಕಥಾಸ್ಪರ್ಧೆ"ಯ ಫಲಿತಾಂಶ ಪತ್ರಿಕೆಯ ಈ ವಾರದ ಸಂಚಿಕೆಯಲ್ಲಿ ಪ್ರಕಟವಾಗಿದೆ. ಲೇಖಕ ಡಿ.ಎಸ್. ನಾಗಭೂಷಣ್, ಕಾದಂಬರಿಗಾರ್ತಿ ಡಾ. ಎಚ್. ನಾಗವೇಣಿ, ಮತ್ತು ಕವಿ ಸವಿತಾ ನಾಗಭೂಷಣ್‍ರವರು ತೀರ್ಪುಗಾರರಾಗಿ ಕತೆಗಳನ್ನು ಪರಿಶೀಲಿಸಿ, ಫಲಿತಾಂಶ ಮತ್ತು ತಮ್ಮ ಅಭಿಪ್ರಾಯವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ. ಈ ಹಿರಿಯ ಮಿತ್ರರಿಗೆ ನನ್ನ ಧನ್ಯವಾದಗಳನ್ನು ತಿಳಿಸುತ್ತೇನೆ. ಹಾಗೆಯೆ, ಈ ಕಥಾಸ್ಪರ್ಧೆ ಆಯೋಜಿಸಲು ಸಹಕರಿಸಿದ ಮತ್ತು ನಡೆಸಿಕೊಟ್ಟ "ವಿಕ್ರಾಂತ ಕರ್ನಾಟಕ"ದ ಸಂಪಾದಕೀಯ ಮಂಡಳಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕಥಾಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ಕತೆಗಾರ ಮಿತ್ರರಿಗೂ ನನ್ನ ಧನ್ಯವಾದಗಳು. ವಿಜೇತರಿಗೆ ಅಭಿನಂದನೆಗಳು.
ರವಿ...
"ವಿಕ್ರಾಂತ ಕರ್ನಾಟಕ"ದ ಮೂಲಸಂಸ್ಥಾಪಕರಾಗಿದ್ದ ರವಿ ಕೃಷ್ಣಾ ರೆಡ್ಡಿಯವರು ಪ್ರಾಯೋಜಿಸಿರುವ "ಗಾಂಧಿ ಜಯಂತಿ ಕಥಾಸ್ಪರ್ಧೆ"ಗೆ ಬಂದ ಕಥೆಗಳಲ್ಲಿ ತೀರ್ಪುಗಾರರಾದ ನಮ್ಮ ಬಳಿ ಬಂದವು ಒಟ್ಟು 24 ಕಥೆಗಳು. ಕಥೆಗಳು ಗಾಂಧಿವಾದದ ಮೌಲ್ಯಗಳನ್ನಾಧರಿಸಿರಬೇಕೆಂಬುದು ಸ್ಪರ್ಧೆಯ ಮುಖ್ಯ ಆಶಯ. ಈ ಆಶಯವೇನೋ ಇಂದಿನ ರಾಜಕೀಯ ಸಂದರ್ಭದಲ್ಲಿ ಅಮೂಲ್ಯವೆನಿಸುವುದಾದರೂ, ಯಾವುದೇ ನಿರ್ದಿಷ್ಟ ತಾತ್ವಿಕ ಚೌಕಟ್ಟನ್ನು ಕಥೆ ಕಟ್ಟಲು ನೀಡುವುದು ಒಳ್ಳೆಯ ಕಥೆಗಳ ಸೃಷ್ಟಿಯನ್ನು ಪ್ರೋತ್ಸಾಹಿಸುವ ಅತ್ಯುತ್ತಮ ಮಾರ್ಗವೇನೂ ಅಲ್ಲ ಎಂಬುದು ಈ ತೀರ್ಪುಗಾರರ ಅಭಿಮತ. ಹಾಗೇ ಗಾಂಧೀ ಮೌಲ್ಯಗಳನ್ನು ಸಾಕಷ್ಟು ವಿಸ್ತರಿಸಿ ನಿರೂಪಿಸಿರುವ ಸ್ಪರ್ಧೆ; ಕಥೆ ವರದಿಯಂತಿರಬಾರದು, ಸಮಾಜಶಾಸ್ತ್ರೀಯ ಸೃಜನಶೀಲ ದಾಖಲೆಯ ಮಟ್ಟದಲ್ಲಿರಬೇಕು. ಕಲಾತ್ಮಕವಾಗಿರಬೇಕು ಎಂದು ಸೂಚಿಸುವ ಮೂಲಕ ವ್ಯಕ್ತಪಡಿಸಿರುವ ನಿರೀಕ್ಷೆಗಳು ಕಥೆಗಾರರಿಗೆ ರಚನಾತ್ಮಕ ಸವಾಲುಗಳಿಗಿಂತ ಹೆಚ್ಚಾಗಿ ಅವರ ಮೇಲೆ ಸಾಕಷ್ಟು ಒತ್ತಡಗಳನ್ನು ಹಾಕಿರುವುದು ಸ್ಪರ್ಧೆಗೆ ಬಂದ ಕಥೆಗಳನ್ನು ಓದಿದಾಗ ನಮ್ಮ ಗಮನಕ್ಕೆ ಬಂತು.
ಬಹಳಷ್ಟು ಕಥೆಗಳು ಸಮಕಾಲೀನ ರಾಷ್ಟ್ರೀಯ ಸಂಕಟವೆನಿಸಿರುವ ಕೋಮುವಾದಿ ರಾಜಕಾರಣದ ಸುತ್ತಲೇ ಗಿರಕಿ ಹೊಡೆದಿವೆ. ಹಾಗೇ ಕೆಲವು ಕಥೆಗಳು ಭ್ರಷ್ಟಾಚಾರದ ವಸ್ತುವಿನ ಸುತ್ತ ತಿರುಗುತ್ತಾ, ಇಂದಿನ ರಾಜಕೀಯ ಅವನತಿಗೆ ಸಾರ್ವಜನಿಕ ಜೀವನದಲ್ಲಿ ಗಾಂಧಿ ಮೌಲ್ಯಗಳು ಕಣ್ಮರೆಯಾಗಿರುವುದೇ ಕಾರಣವಾಗಿದೆ ಎಂದು ಸೂಚಿಸುವ ಪ್ರಯತ್ನ ಮಾಡಿವೆ. ಆದರೆ ಇವೆಲ್ಲವೂ ಸಮಕಾಲೀನ ಪರಿಸ್ಥಿತಿಯ ಸಂಕೀರ್ಣತೆಗಳನ್ನು, ಜಟಿಲತೆಗಳನ್ನು ಅರಿಯುವ ಪ್ರಯತ್ನ ಮಾಡದೆ, ಗಾಂಧಿವಾದದ ಸರಳ ಗ್ರಹಿಕೆಯ ರೂಪದಲ್ಲಿ ಮೂಡಿ, ಕಥೆಗಳನ್ನು ಜಾಳುಜಾಳುಗೊಳಿಸಿವೆ. ಇನ್ನು ಕೆಲವು ಕಥೆಗಳು ದಟ್ಟ ಸಾಮಾಜಿಕ ವರ್ಣನೆಗಳನ್ನು ಒಳಗೊಂಡು ವಿಶ್ವಾಸ ಹುಟ್ಟಿಸುವುವಾದರೂ, ಆ ವರ್ಣನೆಗಳು ಅಂತಿಮವಾಗಿ ಹುಸಿ ಭಾವನಾತ್ಮಕ ಅಂತ್ಯಗಳನ್ನು ಕಟ್ಟಿ ಕೊಡುವುದರಲ್ಲಿ ವ್ಯರ್ಥವಾಗಿವೆಯಷ್ಟೆ.
ಕಥಾ ಸ್ಪರ್ಧೆಯ ಆಶಯ, ಉದ್ದೇಶ ಮತ್ತು ಸೂಚನೆಗಳನ್ನು ಸರಿಸಿ ನಾವು ಬಹುಮಾನಗಳಿಗೆ ಅರ್ಹವಾದ ಕಥೆಗಳನ್ನು ಹುಡುಕತೊಡಗಿದಾಗ ನಮಗೆ ನಿರಾಶೆಯಾಯಿತೆಂದೇ ಹೇಳಬೇಕು. ಹೀಗಾಗಿ ಈ ಆಶಯ, ಉದ್ದೇಶ, ಸೂಚನೆಗಳನ್ನು ಹಿನ್ನೆಲೆಯ ಸರಿಸಿ; ಗಾಂಧಿವಾದದ ನೇರ ಹಾಗೂ ಸ್ಪಷ್ಟ ಚಹರೆಗಳನ್ನು ಒಳಮೌಲ್ಯವಿದ್ದರೂ, ಕಥೆ ಸೃಷ್ಟಿಸುವ ಒಟ್ಟು ಭಾವನೆಯ ಮಟ್ಟದಲ್ಲಿ ಸ್ಥೂಲವಾಗಿಯಾದರೂ ಗಾಂಧಿ ಮೌಲ್ಯಗಳನ್ನು ಧ್ವನಿಸುವಂತಹ ಕಥೆಗಳನ್ನು ಗುರುತಿಸುವ ಪ್ರಯತ್ನ ಮಾಡಿದಾಗ ದೊರಕಿದ್ದು ಆರು ಕಥೆಗಳು. ಇವುಗಳಲ್ಲಿ ಪ್ರತಿಯೊಂದು ಕಥೆಯೂ ಕಥೆಗಾರಿಕೆಯ ಬೇರೆ ಬೇರೆ ಆಯಾಮಗಳಲ್ಲಿ ಪ್ರಕಟಪಡಿಸಿರುವ ಬೇರೆ ಬೇರೆ ಮಟ್ಟದ ಸಾಧನೆಗಳನ್ನು ಒಟ್ಟು ಮಾಡಿ ನೋಡಿದಾಗ, ಅವೆಲ್ಲವೂ ಹೆಚ್ಚೂಕಡಿಮೆ ಒಂದೇ ಮಟ್ಟದವು ಎನ್ನಿಸಿದವು. ಹಾಗಾಗಿ ನಾವು ಬಹುಮಾನಗಳನ್ನು ಪ್ರಥಮ, ದ್ವಿತೀಯ, ತೃತೀಯ ಎಂದು ವಿಂಗಡಿಸುವುದು ಉಚಿತವೆನ್ನಿಸದೆ, ಈ ಆರೂ ಕಥೆಗಳಿಗೂ ತಲಾ ಎರಡು ಸಾವಿರ ರೂಪಾಯಿಗಳ ಬಹುಮಾನ ನೀಡುವಂತೆ ಶಿಫಾರಸು ಮಾಡಿದ್ದೇವೆ:
- ಪುನರಪಿ- ಚಲಂ, ಹಾಸನ
- ಉತ್ತರಾಧಿಕಾರ- ದೀಪಾ ಹಿರೇಗುತ್ತಿ, ಕೊಪ್ಪ
- ಪಾಲು- ವೆಂಕಟ್ ಮೋಂಟಡ್ಕ, ಬೆಂಗಳೂರು
- ಮಬ್ಬು ಕವಿದ ಹಾದಿ- ಮಾರ್ನಮಿಕಟ್ಟೆ ನಾಗರಾಜ, ಬೆಂಗಳೂರು
- ಮೊಹರಂ ಹಬ್ಬದ ಕಡೆಯ ದಿನ- ಹನುಮಂತ ಹಾಲಿಗೇರಿ, ಬೆಂಗಳೂರು
- ಆವರ್ತ- ಡಾ.ಟಿ.ಎಸ್.ವಿವೇಕಾನಂದ, ಬೆಂಗಳೂರು.
"ಪುನರಪಿ" ಅವಿಚಲವಾದ ನ್ಯಾಯ ಪ್ರಜ್ಞೆ, ಬದ್ಧತೆ, ಕ್ಷಮೆ, ಪ್ರೀತಿ ಮತ್ತು ನಿರ್ಮೋಹಗಳ ಶಕ್ತಿಯನ್ನು ನಿರೂಪಿಸುವ ತನ್ನ ನಿರಾಭರಣ ಮತ್ತು ಸರಳ ಶೈಲಿಯಿಂದಾಗಿ ಗಮನ ಸೆಳೆಯುತ್ತದೆ. "ಉತ್ತರಾಧಿಕಾರ", ಓರ್ವ ಸಮಕಾಲೀನ ರಾಜಕಾರಣಿಯ ಮಾನಸಿಕ ತೊಳಲಾಟವನ್ನು Flash basis ತಂತ್ರದ ಮೂಲಕ ಸ್ವಲ್ಪ 'ನವ್ಯ' ಶೈಲಿಯಲ್ಲಿ ನಿರೂಪಿಸುತ್ತಾ, ಗಾಂಧಿ ನಮ್ಮನ್ನು ಒಂದು 'ಪಾಪಪ್ರಜ್ಞೆ'ಯಾಗಿ ಕಾಡುತ್ತಿರುವ ಪರಿಯನ್ನು ಸೂಕ್ಷ್ಮವಾಗಿ ಹಿಡಿದಿಡುತ್ತದೆ. "ಪಾಲು" ದಟ್ಟ ಪ್ರಾಕೃತಿಕ ವಿವರಗಳ ಹಿನ್ನೆಲೆಯಲ್ಲಿ, ಲೋಭ ತಂದೊಡ್ಡುವ ಆತ್ಯಂತಿಕ ದುರಂತವನ್ನು ಸಾಂಕೇತಿಕ ನೆಲೆಯಲ್ಲಿ ಒಪ್ಪಿಸುವ ಪ್ರಯತ್ನ ಮಾಡುತ್ತದೆ. "ಮಬ್ಬು ಕವಿದ ಹಾದಿ", ಗಾಂಧಿ ಯುಗದ ಆದರ್ಶಗಳನ್ನು ಥಣ್ಣಗೆ ಇಂದಿನ ನೈತಿಕ ಅವನತಿಯ ದಿನಗಳ ಸಂದರ್ಭದಲ್ಲಿಟ್ಟು ಹುಟ್ಟಿಸುವ ವಿಷಾದದಿಂದ ಗಮನ ಸೆಳೆಯುತ್ತದೆ. "ಮೊಹರಂ ಹಬ್ಬದ ಕಡೆಯ ದಿನ", ಊರ ಹಬ್ಬವಾಗಿದ್ದ ಮೊಹರಂ ಆಚರಣೆ ಈ ಜನಗಳ ಕೋಮುವಾದಿ ರಾಜಕಾರಣ ಪರಿಣಾಮವಾಗಿ ಊರಕೆರೆಯನ್ನು ಒಣಗಿಸುವ ದೈವಶಾಪದ ಸಂಕೇತವಾಗುವ ದುರಂತವನ್ನು ಸೂಚ್ಯವಾಗಿ ಹೇಳುತ್ತದೆ. "ಆವರ್ತ", ರಚನಾತ್ಮಕ ಕೆಲಸಗಳು ಎಲ್ಲ ಅಡೆತಡೆಗಳನ್ನೂ ಮೆಟ್ಟಿನಿಲ್ಲಬಲ್ಲವು ಎಂಬುದನ್ನು ಸೂಚಿಸುತ್ತಿರುವಂತೆಯೇ ಇಂದಿನ ರಾಜಕಾರಣ ಅದನ್ನು ವ್ಯಂಗ್ಯಕ್ಕೊಡ್ಡುವ ಪರಿಯನ್ನು ಕುತೂಹಲಕಾರಿ ಕಥನ ಶೈಲಿ ಮತ್ತು ಅನಿರೀಕ್ಷಿತ ಅಂತ್ಯದೊಂದಿಗೆ ನಿರೂಪಿಸುತ್ತದೆ.
ಹಾಗೆ ನೋಡಿದರೆ, ಈ ಸ್ಪರ್ಧೆ ತನ್ನ ವಸ್ತು ನಿರ್ಬಂಧದಿಂದಾಗಿ ಕನ್ನಡದ ಅತ್ಯುತ್ತಮ ಕಥನ ಪ್ರತಿಭೆಗಳನ್ನು ಆಕರ್ಷಿಸದೆ ಬಹುಮಾನಗಳಿಗೆ ಅರ್ಹವಾದ ಕಥೆಗಳು ಬರದಂತಾಗಿದೆ ಎಂದೂ ಹೇಳುವಂತಿಲ್ಲ. ಏಕೆಂದರೆ ಸರಿಸುಮಾರು ಇದೇ ಸಂದರ್ಭದಲ್ಲಿ ನಾಡಿನ ಪ್ರತಿಷ್ಠಿತ ಪತ್ರಿಕೆಗಳ ದೀಪಾವಳಿ ಕಥಾಸ್ಪರ್ಧೆಗಳು ಬಹುಮಾನಿತ ಕಥೆಗಳೂ ಈ ಕಥೆಗಳಿಗಿಂತ ತುಂಬಾ ಉತ್ತಮವಾಗೇನೂ ಇಲ್ಲ! ಹೀಗಾಗಿ, ಅವಕಾಶಗಳು ಹೆಚ್ಚಾಗಿಯೋ, ಪ್ರೋತ್ಸಾಹ ಅತಿಯಾಗಿಯೋ, ಬಹುಮಾನಗಳ ಮೊತ್ತ ವಿಪರೀತವಾದುದರ ಕಾರಣವೋ ಕನ್ನಡ ಕಥೆಗಾರಿಕೆ ಸದ್ಯಕ್ಕಂತೂ ತನ್ನ ಮಹತ್ವಾಕಾಂಕ್ಷೆಯನ್ನು ಕಳೆದುಕೊಂಡಂತಿದೆ. ವೈಯಕ್ತಿಕ ಸ್ತರದಲ್ಲಾಗಲೀ, ಸಾಮುದಾಯಕ ಪ್ರಜ್ಞೆಯ ಸ್ತರದಲ್ಲಾಗಲೀ ತಮ್ಮನ್ನು ಅಲ್ಲಾಡಿಸುವಂತಹ ಕಥೆಗಾಗಿ ಈಗ ಕುತೂಹಲದಿಂದ ಕಾಯುವಂತಾಗಿದೆ.ಡಿ.ಎಸ್.ನಾಗಭೂಷಣ
ಡಾ.ಎಚ್.ನಾಗವೇಣಿ
ಸವಿತಾ ನಾಗಭೂಷಣ
ಗಾಂಧಿ ಜಯಂತಿ ಕಥಾಸ್ಪರ್ಧೆಯನ್ನು ಆಯೋಜಿಸಿದಾಗ ನಾನು ಬರೆದುಕೊಂಡಿದ್ದ ಕಾರಣ ಮತ್ತು ಹಿನ್ನೆಲೆಗಳ ಬ್ಲಾಗ್ ಲೇಖನ ಇದು.
Dec 3, 2008
ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ವಾರಕ್ಕೆರಡು ದಿನ ಧಾರಾವಾಹಿಯಾಗಿ
ಪ್ರಾಮಾಣಿಕರಾದವರಿಗೂ, ಕ್ರಿಯಾಶೀಲರಾದವರಿಗೂ, ಸ್ವಾರ್ಥವಿಲ್ಲದ ಪರೋಪಕಾರಿ ಗುಣ ಇರುವವರಿಗೂ ಎಲ್ಲಾ ಸಮಯದಲ್ಲೂ ಆಶಾವಾದವನ್ನು ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲು. ಎಷ್ಟೋ ಬಾರಿ ಈ ಒಳ್ಳೆಯವರು ಸಿನಿಕತನಕ್ಕೆ ಒಳಗಾಗಿ ಎಲ್ಲವನ್ನೂ Negative ಆಗಿ ನೋಡಲು ಆರಂಭಿಸಿಬಿಡುತ್ತಾರೆ. ಅವರಿಗೆ ಹೀಗಾಗುವುದು ಅವರ ಯೋಜನೆಗಳ ವೈಫಲ್ಯದಿಂದ ಅನ್ನುವುದಕ್ಕಿಂತ ಅವರ ಯೋಜನೆ ಅಥವ ಯೋಚನೆ ಅಥವ ಕೆಲಸಗಳನ್ನು ಇತರರು ನೋಡುವ ಮತ್ತು ಮಾತನಾಡುವ ರೀತಿಯಿಂದಾಗಿ. ಬಹಳ ಸೂಕ್ಷ್ಮ ಮನಸ್ಸಿನವರಂತೂ ಒಂದೆರಡು ಸಲಕ್ಕೆಯೇ ತಮ್ಮ ಚಿಪ್ಪು ಸೇರಿಕೊಂಡುಬಿಡುತ್ತಾರೆ.
ಆಶಾವಾದವನ್ನೂ, Positive Thinking ಅನ್ನೂ, ರಚನಾತ್ಮಕವಾದ ಆಲೋಚನೆಯನ್ನೂ ಜನರು ಉಳಿಸಿಕೊಳ್ಳುವಂತೆ ಪ್ರೇರೇಪಿಸುವ ಪುಸ್ತಕ Do It Anyway. ಇದನ್ನು ನಾನು ಕಳೆದ ವರ್ಷವೆ ಕನ್ನಡಕ್ಕೆ ಅನುವಾದಿಸಿದ್ದೆ. "ವಿಕ್ರಾಂತ ಕರ್ನಾಟಕ"ದಲ್ಲಿ 14 ವಾರಗಳ ಕಾಲ ಧಾರಾವಾಹಿಯಾಗಿ ಪ್ರಕಟಿಸಿದ್ದೆ. ಈ ವರ್ಷ ಇದನ್ನು ಪುಸ್ತಕ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಇನ್ನೂ ಆಗಿಲ್ಲ. ಬಹುಶಃ ಇನ್ನು ನಾಲ್ಕೈದು ತಿಂಗಳುಗಳಲ್ಲಿ ಮಾಡುತ್ತೇನೆ.
ಹೀಗಿರುವಾಗ, ಇದನ್ನು ಯಾಕೆ ನನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬಾರದು ಎಂದುಕೊಂಡು ಈಗ ಅಲ್ಲಿ ಪ್ರಕಟಿಸುತ್ತಿದ್ದೇನೆ. ಅದಕ್ಕೆ Wordpress ನ ಬ್ಲಾಗ್ ಟೆಂಪ್ಲೆಟ್ ಬಳಸಿಕೊಂಡಿದ್ದೇನೆ. ಈ ಮೂಲಕ ಅದನ್ನು ಪ್ರಕಟಿಸುವ ಕೆಲಸ ಸುಲಭವಾಗುವುದಷ್ಟೇ ಅಲ್ಲದೆ ಓದುಗರು ಕಾಮೆಂಟ್ ಬಿಡಲು ಮತ್ತು ಬ್ಲಾಗ್‌ಗಳಲ್ಲಿರುವ ಕೆಲವು ಸೌಕರ್ಯಗಳನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಇದು, ಈ ಕನ್ನಡ ಅನುವಾದದ ವಿಳಾಸ:
http://www.ravikrishnareddy.com/anyway-kannada/
ಸಬ್‍ಸ್ಕ್ರೈಬ್/RSS feed ನ URL ಇದು:
http://www.ravikrishnareddy.com/anyway-kannada/?feed=rss2
ಒಟ್ಟು 13 ಭಾಗಗಳ "ಏನೇ ಆಗಲಿ, ಒಳ್ಳೆಯದನ್ನೇ ಮಾಡಿ" ಅನ್ನು ವಾರಕ್ಕೆರಡು ಭಾಗಗಳಂತೆ (ಪ್ರತಿ ಸೋಮವಾರ ಮತ್ತು ಗುರುವಾರ) ಈ ವೆಬ್‍ಸೈಟ್‌ನಲ್ಲಿ ಏರಿಸುತ್ತ ಹೋಗುತ್ತೇನೆ. ಎಲ್ಲವೂ ಆದಬಳಿಕ ಒಟ್ಟು ಸ್ವರೂಪದಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡುತ್ತೇನೆ. ಸಲಹೆ-ಸೂಚನೆ-ಪ್ರತಿಕ್ರಿಯೆಗಳನ್ನು ಓದುಗರು ಕಾಮೆಂಟ್‌ಗಳ ಮೂಲಕ ಕೊಡಬಹುದು. ಹಾಗೆಯೆ, ತಮಗನ್ನಿಸಿದ್ದನ್ನು ಚರ್ಚೆ ಕೂಡ ಮಾಡಬಹುದು. ಎಂದಿನಂತೆ ನಾನು ಯಾವುದೆ ಕಾಮೆಂಟ್‌ಗಳ ತಂಟೆಗೆ ಹೋಗುವುದಿಲ್ಲ. ಯಾವುದನ್ನೂ ತೆಗೆಯುವುದಿಲ್ಲ.
ಇದೇ ಸಮಯದಲ್ಲಿ ವಿಚಾರ ಮಂಟಪ ವೆಬ್‌ಸೈಟ್ ಅನ್ನೂ Drupal ಬಳಸಿ ಅಪ್‌ಡೇಟ್ ಮಾಡಬೇಕು ಎಂದುಕೊಳ್ಳುತ್ತಿದ್ದೇನೆ. ಸುಮಾರು ನಾಲ್ಕೂವರೆ ವರ್ಷದಿಂದ ಅದರ ಸ್ವರೂಪ ಬದಲಾಯಿಸಲು ಹೋಗಿಲ್ಲ. ಆಗೆಲ್ಲ ಬಹಳಷ್ಟು ಕನ್ನಡ ಅಂತರ್ಜಾಲಿಗರು ವಿಂಡೋಸ್ 2000/98 ಬಳಸುತ್ತಿದ್ದುದ್ದರಿಂದ ಆ ವೆಬ್‍ಸೈಟಿನಲ್ಲಿ ಬರಹ ಫಾಂಟುಗಳನ್ನು ಡೈನಾಮಿಕ ಫಾಂಟ್ ಆಗಿ ಬಳಸಿದ್ದೆ. ಆದರೆ ಈಗ ಶೇ. 90 ಕ್ಕೂ ಹೆಚ್ಚಿನ ಇಂಟರ್ನೆಟ್ ಬಳಕೆದಾರರು ಯೂನಿಕೋಡ್ ಮೂಲಸೌಲಭ್ಯ ಇರುವ OS ಗಳನ್ನು ಬಳಸುತ್ತಿರುವುದರಿಂದ ಈಗ ಯೂನಿಕೋಡ್ ಬಳಸುವುದೆ ಸರಿಯಾದ ಕೆಲಸ. ಹಾಗಾಗಿ, ಯಾರಾದರೂ ಈ ಮುಂಚೆ Drupal ಬಳಸಿದ್ದರೆ ಅಥವ ವಿಚಾರ ಮಂಟಪಕ್ಕೆ ಸರಿ ಹೊಂದುವ Theme ಒಂದನ್ನು ಸೂಚಿಸಿದರೆ ಸ್ವಲ್ಪ ಅನುಕೂಲವಾಗುತ್ತದೆ. ತನ್ನದೆ ಮೂಲಗುಣವನ್ನು ಹೊಂದಿರುವ ವೆಬ್‌ಸೈಟ್ ಒಂದಕ್ಕೆ ಎಲ್ಲಾ ರೀತಿಯಿಂದಲೂ ಸರಿಹೊಂದುವ Theme ಅನ್ನು ನೂರಾರು Theme ಗಳ ನಡುವೆ ಆರಿಸಿಕೊಳ್ಳುವುದೇ ಕಷ್ಟದ ಕೆಲಸ. ನಿಮಗೆ ಗೊತ್ತಿದ್ದರೆ/ಗೊತ್ತಾದರೆ ದಯವಿಟ್ಟು ಇ-ಮೇಯ್ಲ್ ಮಾಡಿ.
Dec 2, 2008
ಕುವೆಂಪು ವಿರುದ್ಧ ದೇವುಡು "ಪಿತೂರಿ" ಮತ್ತು ಅಂತರ್ಜಾತಿ ವಿವಾಹ
ಡಾ. ಪ್ರಭುಶಂಕರರ "ಹೀಗಿದ್ದರು ಕುವೆಂಪು" ಲೇಖನದಲ್ಲಿನ ಈ ಕೆಳಗಿನ ಸಂದರ್ಭಕ್ಕೆ ಪೀಠಿಕೆ ಅಥವ ವಿವರಣೆ ಬೇಕಾಗಿಲ್ಲ, ಅಲ್ಲವೆ?
1967 ರ ಅಕ್ಟೋಬರ್. ಆ ವೇಳೆಗೆ ನಾನು ಕುವೆಂಪುರವರ ಮನೆಯವರಲ್ಲಿ ಒಬ್ಬನಾಗಿದ್ದೆ. ಒಂದು ಸಂಜೆ ನಾನು, ಕೆಲವೇ ವಾರಗಳಲ್ಲಿ ನನ್ನ ಪತ್ನಿಯಾಗಲಿದ್ದ ಡಾ. ಶಾಂತಾ ಅವರೊಡನೆ ಕುವೆಂಪು ಅವರ ಮನೆಗೆ ಹೋದೆ. ಶಾಂತಿಯು ಕುವೆಂಪು ಅವರ ಮಿತ್ರರಾಗಿದ್ದ ಶ್ರೀ. ಡಿ.ಆರ್. ಚನ್ನೇಗೌಡರ ಮಗಳು. ಮಗುವಾಗಿದ್ದಾಗಿನಿಂದ ಕುವೆಂಪು ದಂಪತಿ ಆಕೆಯನ್ನು ಬಲ್ಲರು. ನಾನು ಶಾಂತಿ ಕುವೆಂಪು ಅವರ ಕಾಲಿಗೆ ನಮಸ್ಕರಿಸಿ "ನಾವಿಬ್ಬರೂ ಮದುವೆ ಮಾಡಿಕೊಳ್ಳುತ್ತೇವೆ" ಎಂದೆವು. ಇಬ್ಬರದ್ದೂ ಸಾಮಾಜಿಕ ದೃಷ್ಟಿಯಿಂದ ಬೇರೆ ಬೇರೆ ಜಾತಿ. ಕುವೆಂಪು ಒಳಮನೆ ಕಡೆ ತಿರುಗಿ, ಅತ್ಯಂತ ಉತ್ತೇಜಿತರಾಗಿ ತಮ್ಮ ಶ್ರೀಮತಿಯವರನ್ನು ಕರದರು. ಶ್ರೀಮತಿ ಹೇಮಾವತಿ ತಾಯಿಯವರು, ಏನಾಯಿತೋ ಏನೋ ಎಂದು ಓಡುತ್ತಾ ಬಂದರು. ಆಗ ಕುವೆಂಪು ಉತ್ಸಾಹಿತರಾಗಿ ಎತ್ತರದ ದನಿಯಲ್ಲಿ ಹೇಳಿದರು: "ಪ್ರಭುಶಂಕರ-ಶಾಂತಿ ಮದುವೆಯಾಗುತ್ತಾರಂತೆ, ಪ್ರಭುಶಂಕರ-ಶಾಂತಿ ಮದುವೆಯಾಗುತ್ತಾರಂತೆ! ಜೈ ಗುರುದೇವ-ನಮಗೆ ತುಂಬ ಸಂತೋಷವಾಗಿದೆ." ಹೀಗೆ ಹೇಳುತ್ತಾ ಚಪ್ಪಾಳೆ ತಟ್ಟುತ್ತಾ ತಟ್ಟುತ್ತಾ ಬಹಳ ಹೊತ್ತು ಕಳೆದರು. ಹೇಮಾವತಿ ತಾಯಿಯವರು ತಮ್ಮದೇ ರೀತಿಯಲ್ಲಿ-ಮುಗುಳು ನಗೆ ನಕ್ಕು-ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಲೇ ಹೋದರು. ನಾವಿಬ್ಬರೂ ಅವರಿಗೆ ತುಂಬ ಗೊತ್ತಿದ್ದವರು, ತುಂಬ ಬೇಕಾದವರು ಎಂಬುದು ಮಾತ್ರವೇ ಅವರ ಸಂತೋಷಕ್ಕೆ ಕಾರಣವಾಗಿರಲಿಲ್ಲ. ನಾವಿಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರು ಎಂಬುದೂ ಅದಕ್ಕೆ ಕಾರಣವಾಗಿತ್ತು. ಕುವೆಂಪು ಜಾತಿ ಪದ್ಧತಿಯ ವಿರುದ್ಧ ಕೆಂಡ ಕಾರುತ್ತಿದ್ದರು. ನಾವು ಅದನ್ನು ಆಚರಿಸಿ ತೋರಿಸಿದೆವು. ("ನಮನ" - ಪುಟ 49-50)ಈ ಕೆಳಗಿನ ಸಂದರ್ಭವಂತೂ (ದೇವುಡು ಮತ್ತು ಕುವೆಂಪು) ಕರ್ನಾಟಕದ ಕಳೆದ ಶತಮಾನದ ಪ್ರಮುಖ ಸಾಂಸ್ಕೃತಿಕ ಘಟನೆಗಳಲ್ಲಿ ಒಂದು. ನಾಡಿನ ಎಚ್ಚರವನ್ನು ಕಾಪಾಡಿಕೊಂಡ ಸಂದರ್ಭ. ಈ ವಿಷಯದಲ್ಲಿ ಟಿ.ಎಸ್. ವೆಂಕಣ್ಣಯ್ಯನವರ ಹಿರಿತನ ಮತ್ತು ಅವರು ಬಳಸಿರುವ ಭಾಷೆ ಮತ್ತು ಅದರಲ್ಲಿ ಧ್ವನಿಸಿರುವ ಕುವೆಂಪುರವರ ಸ್ಪಷ್ಟತೆ ಗಮನಿಸಿ. (ಇಲ್ಲಿ ದೇವುಡುರವರ ಬಗ್ಗೆ ಅಥವ ಈಗಲೂ ಮುಂದುವರೆದಿರುವ ಅಂತಹ ಮನಸ್ಥಿತಿಯ ಬಗ್ಗೆ ನನ್ನ ಕಟು ಅಭಿಪ್ರಾಯ ಬರೆಯಬೇಕೆಂದು ಅನ್ನಿಸುತ್ತದೆ. ಆದರೆ, ಈ ಉಲ್ಲೇಖ-ಸರಣಿಯ ಒಟ್ಟಂದಕ್ಕೆ ಅದು ಅಪಚಾರ ಮಾಡುತ್ತದೆ ಎಂದು ಸುಮ್ಮನಾಗುತ್ತೇನೆ. ಈ ಅಭಿಪ್ರಾಯವೂ ಬೇಕಾಗಿರಲಿಲ್ಲವೇನೊ? ಆದರೂ ಕೆಲವು ವಿಚಾರ ಮತ್ತು ವ್ಯಕ್ತಿಗಳೊಂದಿಗಿನ ನನ್ನ Displeasure ವ್ಯಕ್ತಪಡಿಸಲೇಬೇಕೆಂಬ ಉದ್ದೇಶಕ್ಕೆ ಬರೆದಿದ್ದೇನೆ.)
... ಕುವೆಂಪು ಒಂದು ದಿನ ನನ್ನನ್ನು ಕೇಳಿದರು: "ಕನ್ನಡ ಅಧ್ಯಾಪಕರ ಹುದ್ದೆಯೊಂದು ಖಾಲಿ ಇದೆ, ಅರ್ಹತೆ ಉಳ್ಳವರು ಅರ್ಜಿ ಹಾಕಬಹುದು ಎಂದು ಜಾಹೀರಾತು ಪ್ರಕಟವಾಗಿದೆ, ನೋಡಿದ್ದೀರಾ?" ನಾನು ನೋಡಿರಲಿಲ್ಲ. ಆದುದರಿಂದ ಕೇಳಿದೆ: "ಇಲ್ಲ. ಅದು ಎಲ್ಲಿ ಪ್ರಕಟವಾಗಿದೆ?" "ಸರ್ಕಾರದ ಗೆಜೆಟ್‍ನಲ್ಲಿ." ಆ ಕಾಲದಲ್ಲಿ ಇಂತಹ ಜಾಹೀರಾತುಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರಲಿಲ್ಲ. ಸರ್ಕಾರದ ಗೆಜೆಟ್‍ನಲ್ಲಿ ಮಾತ್ರ ಪ್ರಕಟವಾಗುತ್ತಿದ್ದವು. ನನಗೆ ಆಗ ಗೆಜೆಟ್ ಎಂಬುದೊಂದು ಇದೆ ಎಂಬುದೇ ಗೊತ್ತಿರಲಿಲ್ಲವಾಗಿ ನಾನು ಅದನ್ನು ನೋಡುವ ಸಂಭವವೇ ಇರಲಿಲ್ಲ. ಕುವೆಂಪು ಇನ್ನೂ ಏನೋ ಹೇಳಲಿದ್ದಾರೆ ಎಂದು ನಾನು ಸುಮ್ಮನೆ ನಿಂತೇ ಇದ್ದೆ. ಅವರು ಮಾತು ಮುಂದುವರೆಸಿದರು: "ನೋಡಿ, ನೀವು ಆ ಹುದ್ದೆಗೆ ಅರ್ಜಿ ಹಾಕಬೇಡಿ." ನನಗೆ ಆಶ್ಚರ್ಯವಾಯಿತು. ನಾನು ಏಕೆ ಅರ್ಜಿ ಹಾಕಕೂಡದು ಎಂದು ತಿಳಿಯಲಿಲ್ಲ. ಅವರನ್ನೇ ಕೇಳಿದೆ. ಅವರು ವಿವರಿಸಿದರು:
"ನೋಡಿ, ಈಗ ಸರ್ಕಾರಿ ಹುದ್ದೆಗಳಲ್ಲಿ (ಆಗ ಮೈಸೂರು ವಿಶ್ವವಿದ್ಯಾನಿಲಯವು ಸರ್ಕಾರದ ಒಂದು ಇಲಾಖೆಯಾಗಿತ್ತು) ಎ ವೇಕೆನ್ಸಿ, ಬಿ ವೇಕೆನ್ಸಿ ಎಂದು ಎರಡು ಭಾಗಗಳಿವೆ. ಎ ವೇಕೆನ್ಸಿಗೆ ಯಾರು ಬೇಕಾದರೂ ಅರ್ಜಿ ಹಾಕಬಹುದು. ಬಿ ವೇಕೆನ್ಸಿಗೆ ಬ್ರಾಹ್ಮಣೇತರರು ಮಾತ್ರ ಅರ್ಜಿ ಹಾಕಬಹುದು. ಒಂದು ಎ ವೇಕೆನ್ಸಿ ಭರ್ತಿಯಾದರೆ ಮುಂದೆ ಮೂರು ಹುದ್ದೆಗಳನ್ನು ಬಿ ವೇಕೆನ್ಸಿ ಎಂದು ಜಾಹೀರಾತು ಮಾಡುತ್ತಾರೆ. ಎಂದರೆ ಒಬ್ಬರು ಬ್ರಾಹ್ಮಣರಿಗೆ ಕೆಲಸ ಸಿಕ್ಕಿದರೆ ಮುಂದಿನ ಮೂರು ಬ್ರಾಹ್ಮಣೇತರರಿಗೆ ಮೀಸಲಾಗಿರುತ್ತದೆ. ಎ ವೇಕೆನ್ಸಿಗೂ ಬ್ರಾಹ್ಮಣೇತರರು ಅರ್ಜಿ ಹಾಕಬಹುದು. ಅಂಥ ಸಂದರ್ಭದಲ್ಲಿ ಬ್ರಾಹ್ಮಣ ಅಭ್ಯರ್ಥಿಗಿಂತ ಬ್ರಾಹ್ಮಣೇತರ ಅಭ್ಯರ್ಥಿ ಹೆಚ್ಚು ಪ್ರತಿಭಾಶಾಲಿಯಾಗಿದ್ದರೆ ಅವನಿಗೇ ಆ ಹುದ್ದೆ ಸಿಕ್ಕುತ್ತದೆ. ಬ್ರಾಹ್ಮಣ ಅಭ್ಯರ್ಥಿಯು ಮತ್ತೆ ಅನೇಕ ವರ್ಷಗಳ ಕಾಲ ಕಾಯಬೇಕಾಗುತ್ತದೆ." ಈ ಎ ವೇಕೆನ್ಸಿ, ಬಿ ವೇಕೆನ್ಸಿ, ಬ್ರಾಹ್ಮಣ, ಬ್ರಾಹ್ಮಣೇತರ ಯಾವ ಜಟಿಲತೆಗಳೂ ನನ್ನ ತಲೆಯನ್ನು ಪ್ರವೇಶಿಸಿರಲಿಲ್ಲ. ಇಷ್ಟಕ್ಕೂ ನನ್ನ ಗುರುಗಳು ಇದನ್ನೆಲ್ಲ ನನಗೆ ಏತಕ್ಕೆ ಹೇಳುತ್ತಿದ್ದಾರೆ ಎಂಬುದೇ ನನಗೆ ಹೊಳೆಯಲಿಲ್ಲ. ನನ್ನ ಮುಖದಲ್ಲಿ ಆ ಗೊಂದಲ ಎದ್ದು ಕಾಣುತ್ತಿತ್ತೆಂದು ತೋರುತ್ತದೆ. ಆದುದರಿಂದ ಅವರು ಮತ್ತೂ ಮುಂದುವರಿದು ಹೇಳಿದರು:
"ಶ್ರೀ ದೇ.ನ. ರಾಮು (ದೇವುಡು ನರಸಿಂಹ ಶಾಸ್ತ್ರಿಗಳ ಮಗ) ನಿಮ್ಮ ಮೇಷ್ಟ್ರು. ಅವರು 5-6 ವರ್ಷಗಳಿಂದಲೂ ಲೋಕಲ್ ಕ್ಯಾಂಡಿಡೇಟ್ (ಹಂಗಾಮಿ ಅಧ್ಯಾಪಕರು) ಆಗಿ ಕೆಲಸ ಮಾಡುತ್ತಿದ್ದಾರೆ. ಈಗ ಜಾಹೀರಾತಾಗಿರುವುದು ’ಎ’ ವೇಕೆನ್ಸಿ. ನೀವು ಅರ್ಜಿ ಹಾಕಿದರೆ, ಪ್ರತಿಭೆಯನ್ನು ಗಮನಿಸಿ ನಿಮಗೇ ಈ ಕೆಲಸ ಸಿಕ್ಕಿಬಿಡುತ್ತದೆ. ಶ್ರೀ ರಾಮು ಅವರಿಗೆ ತಪ್ಪಿಹೋಗುತ್ತದೆ. ಅವರು ಇನ್ನು ಎಷ್ಟು ವರ್ಷಗಳು ಕಾಯಂ ಹುದ್ದೆಗಾಗಿ ಕಾಯಬೇಕೋ ಗೊತ್ತಿಲ್ಲ. ಆದುದರಿಂದ ನೀವು ಅರ್ಜಿ ಹಾಕಬೇಡಿ. ಮುಂದೆ ನಿಮಗೆ ಬೇಕಾದಷ್ಟು ಅವಕಾಶಗಳು ಸಿಕ್ಕುತ್ತವೆ."
ವಿಷಯ ಅರ್ಥವಾದ ಕೂಡಲೇ ನನ್ನ ಹೃದಯ ತುಂಬಿ ಬಂತು. "ಇಲ್ಲ, ನಾನು ಅರ್ಜಿ ಹಾಕುವುದಿಲ್ಲ" ಎಂದು ಹೇಳಿ ಅವರ ಕೊಠಡಿಯಿಂದ ಹೊರಬಂದೆ. ಆ ವೇಳೆಗಾಗಲೇ ಅವರು ನನ್ನ ಆರಾಧ್ಯ ಮೂರ್ತಿಯಾಗಿದ್ದರು. ಈಗಂತೂ ಅವರ ಜಾತ್ಯತೀತ ಮನೋಭಾವವನ್ನೂ, ನ್ಯಾಯಪಕ್ಷಪಾತ ಬುದ್ಧಿಯನ್ನೂ ಕಂಡು ಅವರಲ್ಲಿ ನನಗಿದ್ದ ಗೌರವಕ್ಕೆ ಆಕಾಶವೂ ಕೂಡ ಮೇರೆ ಅಲ್ಲ ಎನ್ನಿಸಿತು. ಅದಕ್ಕೆ ಪೂರಕವಾದ ಮತ್ತೊಂದು ಸಂಗತಿಯನ್ನು ಹೇಳಿದರೆ ಈ ಸಂಗತಿ ಕೇವಲ ನನಗೆ ಸೀಮಿತವಾದುದಲ್ಲ ಎಂದು ತಿಳಿಯುವುದು ಮಾತ್ರವಲ್ಲದೆ ಕುವೆಂಪು ಏಕೆ ಸರ್ವತ್ರ ಪೂಜಿತರು ಎಂಬುದು ಅರ್ಥವಾಗುತ್ತದೆ.
ಕುವೆಂಪು ಅವರು ಒಮ್ಮೆ ಶ್ರೀರಂಗಪಟ್ಟಣದಲ್ಲಿ ಯುವಜನ ಸಮ್ಮೇಳನ ಸಂದರ್ಭದಲ್ಲಿ "ಯುವಕರು ನಿರಂಕುಶ ಮತಿಗಳಾಗಬೇಕು" ಎಂಬ ವಿಷಯವಾಗಿ ಭಾಷಣ ಮಾಡಿದರು. ಅಂದಿನ ಸಭೆಗೆ ಅಧ್ಯಕ್ಷರು ಪುಟ್ಟಪ್ಪನವರನ್ನು ಅತ್ಯಂತ ಆತ್ಮೀಯವಾಗಿ ನಡೆಸಿಕೊಳ್ಳುತ್ತಲೇ ಬಂದಿದ್ದ ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು. ಬಾಲ್ಯದಿಂದಲೇ ವೈಚಾರಿಕತೆಯ ಆರಾಧಕರಾಗಿದ್ದ ಕುವೆಂಪು ಅಂದಿನ ಉಪನ್ಯಾಸದಲ್ಲಿ, ಸಹಜವಾಗಿಯೇ, ಸಮಾಜದಲ್ಲಿ ಪ್ರಚುರವಾಗಿರುವ ಮೂಢ ನಂಬಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿದ್ದರು. ಮುಂದಾದುದನ್ನು ಕುವೆಂಪು ಅವರ ಮಾತುಗಳಲ್ಲಿಯೇ ಕೇಳಬಹುದು:
"ಪತ್ರಿಕೆಗಳಲ್ಲಿ ಕ್ರೋಧಯುಕ್ತವಾದ ಅನೇಕ ಟೀಕೆಗಳು ಬಂದು ಕೋಲಾಹಲವೆದ್ದಿತು. ದೂರು ವಿಶ್ವವಿದ್ಯಾಲಯಕ್ಕೂ ಹೋಯಿತು. ವಿಶ್ವವಿದ್ಯಾನಿಲಯ ತನಿಖೆ ನಡೆಸಲು ಇಲಾಖೆಯ ಮುಖ್ಯಸ್ಥರೂ ಪ್ರೊಫೆಸರರೂ ಆಗಿದ್ದ ವೆಂಕಣ್ಣಯ್ಯನವರನ್ನು ನೇಮಿಸಿತು. ಅವರು ಆ ಭಾಷಣದ ಪ್ರತಿ ತರಿಸಿಕೊಂಡು ಓದಿ ವಿಶ್ವವಿದ್ಯಾನಿಲಯಕ್ಕೆ ಬರೆದರಂತೆ: "ನನ್ನ ಮಗನಿಗೆ ಬುದ್ಧಿ ಹೇಳಬೇಕಾದರೆ ಇದಕ್ಕಿಂತಲೂ ಉತ್ತಮವಾಗಿ ಮತ್ತು ಸಮರ್ಥವಾಗಿ ನಾನು ಏನನ್ನೂ ಹೇಳಲಾರೆ."
ಶ್ರೀ ದೇವುಡು ನರಸಿಂಹ ಶಾಸ್ತ್ರಿಗಳ ಮಗ ದೇ.ನ. ರಾಮು ಅವರಿಗೆ, ನಾನು ಅರ್ಜಿ ಹಾಕುವುದನ್ನು ತಪ್ಪಿಸಿ ಹುದ್ದೆಯನ್ನು ಕಾಯಂ ಮಾಡಿಸಲು ಹೊರಟಿದ್ದ ಹೊತ್ತಿಗೆ ಕುವೆಂಪು ಅವರಿಗೆ, ಶ್ರೀರಂಗಪಟ್ಟಣದ ತಮ್ಮ ಭಾಷಣದ ವಿರುದ್ಧ ಕೋಲಾಹಲ ಎಬ್ಬಿಸಿ ಪತ್ರಿಕೆಗಳಿಗೂ ವಿಶ್ವವಿದ್ಯಾನಿಲಯಕ್ಕೂ ಬರೆದವರು ಸ್ವಯಂ ಶ್ರೀ ದೇವುಡು ನರಸಿಂಹ ಶಾಸ್ತ್ರಿಗಳು ಎಂಬುದು ಗೊತ್ತಿತ್ತು! ಹೀಗಾಗಿಯೂ ನ್ಯಾಯವಾದುದನ್ನು ಮಾಡಲು ಅವರು ಹಿಂಜರಿಯಲಿಲ್ಲ. ಶಾಸ್ತ್ರಿಗಳ ವಿಷಯದಲ್ಲಾಗಲೀ, ಅವರ ಮಗನ ವಿಷಯದಲ್ಲಾಗಲಿ ಅವರಿಗೆ ಕಿಂಚಿತ್ತೂ ಪೂರ್ವಗ್ರಹ ಉಳಿದಿರಲಿಲ್ಲ!(ಕೃಪೆ: ಡಾ. ಪ್ರಭುಶಂಕರ, "ನಮನ" - ಪುಟ 43-45)
ಪ್ರಶ್ನೆ: ಇದೆಲ್ಲ (ಈ ಬರಹ) ಈಗೇಕೆ?
ಉತ್ತರ: ತಲ್ಲಣದ ಸಮಯದಲ್ಲಿ ಸಜ್ಜನಿಕೆ ಮತ್ತು ಪ್ರೀತಿಯನ್ನು ಹುಡುಕುತ್ತಾ...
ಸರಣಿಯ ಎರಡನೆಯ ಲೇಖನ: ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
ಮೂರನೆಯ ಲೇಖನ: ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
Dec 1, 2008
ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
ಡಾ. ಪ್ರಭುಶಂಕರ ಒಳ್ಳೆಯ ಹಾಸ್ಯಪ್ರಜ್ಞೆಯ ಲೇಖಕರು. ಇವರ ಹಾಸ್ಯಪ್ರೀತಿ ಎಷ್ಟಿದೆಯೆಂದರೆ, "ಪ್ರಭು ಜೋಕ್ಸ್" ಎಂಬ ಸಣ್ಣ ಜೋಕು ಪುಸ್ತಕವನ್ನೂ ಪ್ರಕಟಿಸಿದ್ದಾರೆ. ಇವರ ಹಿಂದಿನ ತಲೆಮಾರಿನ ಲೇಖಕರಲ್ಲಿ ನಾ. ಕಸ್ತೂರಿ ಅಪಾರ ಹಾಸ್ಯಪ್ರಜ್ಞೆಯ, ಅನಾರ್ಥಕೋಶದ ಲೇಖಕರು. ಅವರ ಬಗ್ಗೆ ಪ್ರಭುಶಂಕರರು "ನಾ. ಕಸ್ತೂರಿಯವರು" ಲೇಖನದಲ್ಲಿ ಹೀಗೆ ಹೇಳುತ್ತಾರೆ:
"(ನಾ. ಕಸ್ತೂರಿ) ಅವರ ಸಹಸ್ರಾರು ಶಿಷ್ಯರಲ್ಲಿ ನಾನು ಒಬ್ಬ; ಅವರ ಇತಿಹಾಸ ಬೋಧನೆಯ ಸವಿಯನ್ನು ಎರಡು ವರ್ಷಗಳ ಕಾಲ ಉಂಡವನು; ಅವರಿಂದ ಹಾಸ್ಯದ ದೀಕ್ಷೆ ಪಡೆದವನು; ನಕ್ಕು ನಲಿಸುವುದು ಸಾರ್ಥಕ ಕಾಯಕ ಎಂದು ನಂಬಿ ಅದರಂತೆ ಬಾಳುತ್ತಿರುವವನು."ಈ ಕೆಳಗಿನ ಸಂದರ್ಭ ನಮ್ಮನ್ನು ನಗಿಸಿದರೂ, ಗಾಂಧಿಯನ್ನು ಭೇಟಿ ಮಾಡಿಸಲು ತನ್ನ ಶಿಷ್ಯರನ್ನು ನೂರಾರು ಮೈಲಿ ದೂರ ಕರೆದುಕೊಂಡು ಹೋಗಿದ್ದ ಆಗಿನ ಕಾಲದ ಗುರುಗಳ ಬದ್ಧತೆಯನ್ನೂ ತೋರಿಸುತ್ತದೆ.
("ನಮನ"- ಪುಟ 16)
"1946 ನೆಯ ಇಸವಿಯ ಮೊದಲಲ್ಲಿ ಮಹಾತ್ಮಾ ಗಾಂಧಿಯವರು ಮದರಾಸಿಗೆ ಬಂದಿದ್ದರು. ನಾನು ಆಗ ಮೊದಲ ವರ್ಷದ ಇಂಟರ್ಮೀಡಿಯೆಟ್ ವಿದ್ಯಾರ್ಥಿ. ನಮ್ಮ ಅಚ್ಚು ಮೆಚ್ಚಿನ ಮೇಷ್ಟ್ರಾದ ನಾ. ಕಸ್ತೂರಿಯವರು ನಮ್ಮಲ್ಲಿ ಹದಿನೈದು ಇಪ್ಪತ್ತು ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕೆ ಎಂದು ಮದರಾಸಿಗೆ ಕರೆದುಕೊಂಡು ಹೋದರು. ಗಾಂಧೀಜಿಯವರ ದರ್ಶನ, ಭಾಷಣಗಳ ಲಾಭ ನಮಗೆ ದೊರೆಯಲಿ ಎಂಬುದೂ ಅವರ ಉದ್ದೇಶವಾಗಿತ್ತು. ತ್ಯಾಗರಾಜನಗರದ ದೊಡ್ಡ ಬಯಲಿನಲ್ಲಿ ಮಹಾತ್ಮರ ಉಪನ್ಯಾಸ ಸಂಜೆ ಐದಕ್ಕೆ. ಕಸ್ತೂರಿಯವರು ಮಧ್ಯಾಹ್ನ ಎರಡು ಘಂಟೆಗೇ ನಮ್ಮನ್ನೆಲ್ಲ ವೇದಿಕೆಗೆ ತೀರ ಸಮೀಪದಲ್ಲಿ ಕೂರಿಸಿ ಬಿಟ್ಟರು. ಸುಡುಬಿಸಿಲು, ದಾಹ. ಮೇಷ್ಟ್ರಿಗೆ ವಿದ್ಯಾರ್ಥಿಗಳ ವಿಷಯದಲ್ಲಿ ಕನಿಕರ. ನೀರು ಸಿಕ್ಕುತ್ತಿಲ್ಲ. ಅಷ್ಟರಲ್ಲಿ ಐಸ್ ಕ್ರೀಂ ಮಾರುವವನು ಬಂದ. ನಮಗೆಲ್ಲ ಐಸ್ ಕ್ರೀಂ ಕೊಡಿಸಿ ತಾವೂ ಒಂದನ್ನು ತಿನ್ನುತ್ತಾ ಕುಳಿತರು. ನಾನು ತಿಂದು ಮುಗಿಸಿ ಕೈ ಒರೆಸುವುದು ಯಾವುದಕ್ಕೆ ಎಂದು ಪೇಚಾಡುತ್ತಿದ್ದೆ. ಮೇಷ್ಟ್ರು ನನ್ನ ಹಿಂದೆಯೇ ಕುಳಿತಿದ್ದವರು "ಯಾಕೋ ಪೇಚಾಡ್ತೀಯ, ನಿನ್ನ ಮುಂದೆ ಕುಳಿತಿದ್ದಾನಲ್ಲ ಅವನ ಷರ್ಟಿಗೆ ಒರಸು" ಎಂದರು. ನನಗೆ ಸಂಕೋಚವಾಯಿತು. ಮುಂದೆ ಕುಳಿತಿದ್ದವನು ನನ್ನ ಸಹಪಾಠಿ. ಮದರಾಸಿನ ವಿಷಯ ತಿಳಿಯದೆ ಮಹಾತ್ಮರ ದರ್ಶನಕ್ಕೆ ಎಂದು ಸಿಲ್ಕ್ ಷರ್ಟ್ ಧರಿಸಿ ಬಂದಿದ್ದ. ನಾನು ಹಿಂದೆ ಮುಂದೆ ನೋಡುವುದನ್ನು ಗಮನಿಸಿ ಮೇಷ್ಟ್ರು "ಒರಸೋ ಪರವಾಗಿಲ್ಲ. ಒರಸಪ್ಪ. ಈಗ ನೋಡು ನಾನು ನಿನ್ನ ಷರ್ಟಿಗೆ ಒರಸಿಲ್ಲವೆ?" ಎಂದರು. ಇದು ಕಸ್ತೂರಿಯವರ ಆಶು ಹಾಸ್ಯದ ರೀತಿ. ಆ ಸಂದರ್ಭದಲ್ಲಿ ಸೃಷ್ಟಿಯಾಗಿ, ತಕ್ಷಣ ಹಾಸ್ಯದ ಹೊಳೆ ಹರಿಸಿ, ಕೇಳುಗರು ಅದರಲ್ಲಿ ಮಿಂದು, ತಮ್ಮ ಸ್ವಂತದ ದುಃಖ ಮ್ಲಾನತೆಗಳಿದ್ದರೆ ಅವನ್ನು ತೊಳೆದುಕೊಂಡು ಮತ್ತೆ ಹೊಸಬರಾಗಿ ಮೈ ಒರಸಿಕೊಳ್ಳುತ್ತಾ ನಿಂತಿರುವುದನ್ನು ನೋಡುವುದು ಎಂದರೆ ಕಸ್ತೂರಿಯವರಿಗೆ ಖುಷಿಯೋ ಖುಷಿ." ("ನಮನ"- ಪುಟ 16-17)ಇನ್ನೊಂದು ಘಟನೆ:
"ನನಗಿರಲಿ, ನನ್ನ ಗುರುಗಳಾಗಿದ್ದ ಶ್ರೀ. ಜಿ.ಪಿ. ರಾಜರತ್ನಂ ಅವರನ್ನೂ ಶ್ರೀ ಕಸ್ತೂರಿ ಸತಾಯಿಸದೆ ಬಿಡಲಿಲ್ಲ. "ಲೋ, ರಾಜರತ್ನ, ಪದ್ಯ ಬರೆದು ನನಗೆ ಅವಮಾನ ಮಾಡಿದ್ದೀಯಲ್ಲೋ" ಎಂದು ತರಾಟೆಗೆ ತೆಗೆದುಕೊಂಡರು. ರಾಜರತ್ನಂ ಕಕ್ಕಾಬಿಕ್ಕಿಯಾದರು. "ಇಲ್ಲವಲ್ಲ ಸಾರ್" ಎಂದರು. "ಯಾಕೋ ಇಲ್ಲ, ಬರೆದಿದ್ದೀಯ:ಈ ಕೆಳಗಿನ ಘಟನೆಯಂತೂ ಆಗಿನ ಸಜ್ಜನರ ನಿರ್ಮಲತೆಯನ್ನೂ, ಸರಳತೆಯನ್ನೂ, ತಮ್ಮ ಸಮಕಾಲೀನರ ಪ್ರತಿಭೆ ಮತ್ತು ಯಶಸ್ಸನ್ನು ಸಂಭ್ರಮಿಸುವುದನ್ನೂ ತೋರಿಸುತ್ತದೆ:ಬಣ್ಣದ ತಗಡಿನ ತುತ್ತೂರಿಅಂತ ಬರೆದಿಲ್ವೇನಯ್ಯ. ಅಲ್ಲದೆ ಕೊನೇಲಿ 'ಜಂಬದ ಕೋಳಿಗೆ ಗೋಳಾಯ್ತು' ಅಂತ ಬೇರೆ ಹೇಳಿದೀಯ. ಹೇಳು, ನಾನು ಜಂಬದ ಕೋಳಿನೇನೋ?"" ("ನಮನ"- ಪುಟ 18)
ಕಾಸಿಗೆ ಕೊಂಡನು ಕಸ್ತೂರಿ.
"... ಕಸ್ತೂರಿಯವರು ಒಂದು ದಿನ ಹೇಳಿದರು: "ಪ್ರಭು, ನಾನು ಅಮರನಾಗಿಬಿಟ್ಟೆ ಕಣಯ್ಯ." ಅದಕ್ಕೆ ನಾನು ಹೇಳಿದೆ: "ಹೌದು, ಎಷ್ಟೆಲ್ಲ ಒಳ್ಳೆಯ ಪುಸ್ತಕಗಳನ್ನು ಬರೆದಿದ್ದೀರಿ. ಕನ್ನಡ ಸಾಹಿತ್ಯದಲ್ಲಿ ನಿಮ್ಮದು ಅಮರವಾದ ಸ್ಥಾನವೇ." ಅವರು ನಕ್ಕರು: "ಆ ಭ್ರಾಂತಿ ನನಗಿಲ್ಲ ಕಣಯ್ಯ. ಪುಟ್ಟಪ್ಪ ತನ್ನ "ಕೃತ್ತಿಕೆ" ಕವನ ಸಂಕಲನದಲ್ಲಿ 'ಕವಿಯ ತೃಪ್ತಿ' ಅಂತ ಒಂದು ಸಾನೆಟ್ ಬರೆದಿದ್ದಾನೆ. ಅದರಲ್ಲಿ ಮೊದಲ ಪಂಕ್ತಿಯಲ್ಲೇ ನನ್ನ ಹೆಸರು ಸೇರಿಸಿದ್ದಾನೆ. ಆ ಪದ್ಯ ಓದಿದ್ದೀಯಾ?" "ಓದಿದ್ದೇನೆ. ಬಾಯಲ್ಲೂ ಬರುತ್ತೆ" ಎಂದೆ. "ಹಾಗಾದರೆ ಹೇಳು" ಎಂದರು. ಹೇಳಿದೆ:ಬಳಿಯಿರುವ ವೆಂಕಯ್ಯ, ಕಂಠಯ್ಯ, ಕಸ್ತೂರಿಕಸ್ತೂರಿ ಮುಂದುವರಿದು ಹೇಳಿದರು:
ಶ್ರೀನಿವಾಸರು ಮೆಚ್ಚಿದರೆ ಸಾಕೆನಗೆ ತೃಪ್ತಿ;
ನನ್ನ ಕನ್ನಡ ಕವನಗಳ ಯಶಸ್ಸಿನ ವ್ಯಾಪ್ತಿ.
ಲಂಡನ್ನಿನೊಳಗೂದ ಬೇಕಿಲ್ಲ ತುತ್ತೂರಿ!
"ನೋಡಿದೆಯೇನಯ್ಯ! ಪ್ರಭು, ನಾನು ಯಾರು ಎಂದು ಈಗ ಕೆಲವರಿಗಾದರೂ ಗೊತ್ತು. ಮುಂದೆ, ಹತ್ತಾರು ವರ್ಷಗಳು ಕಳೆದ ಮೇಲೆ ಯಾರಿಗೂ ಗೊತ್ತಿರುವುದಿಲ್ಲ. ಕುವೆಂಪು ಜಗದ್ವಿಖ್ಯಾತರಾಗಿರುತ್ತಾರೆ. ಅವರ ಈ ಕವನವನ್ನು ಓದಿದವರು ನನ್ನ ಹೆಸರಿನ ಕೆಳಗೆ ಗೆರೆ ಎಳೆದು ಪಕ್ಕದ ಮಾರ್ಜಿನ್‌ನಲ್ಲಿ ಯಾರಿವನು ಎಂದು ಪ್ರಶ್ನಾರ್ಥಕ ಚಿಹ್ನೆ ಹಾಕುತ್ತಾರೆ. ಅಷ್ಟು ಸಾಕು ಕಣೋ. ಅದಕ್ಕಿಂತ ಅಮರತ್ವ ಇನ್ನು ಯಾವುದಿದೆಯೋ?" ("ನಮನ"- ಪುಟ 20)
ಪ್ರಶ್ನೆ: ಇದೆಲ್ಲ (ಈ ಬರಹ) ಈಗೇಕೆ?
ಉತ್ತರ: ತಲ್ಲಣದ ಸಮಯದಲ್ಲಿ ಸಜ್ಜನಿಕೆ ಮತ್ತು ಪ್ರೀತಿಯನ್ನು ಹುಡುಕುತ್ತಾ...
ಈ ಸರಣಿಯ ಎರಡನೆಯ ಲೇಖನ: ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
ಮೂರನೆಯ ಲೇಖನ: ಈಗ ನೀವು ಓದಿದ್ದು (?).
ನಾಲ್ಕನೆಯ ಲೇಖನ: ಕುವೆಂಪು ವಿರುದ್ಧ ದೇವುಡು ಪಿತೂರಿ ಮತ್ತು ಅಂತರ್ಜಾತಿ ವಿವಾಹ