Dec 26, 2007

ಕಂದ ಎಂದೂ ನಗುತಿರು...

(ವಿಕ್ರಾಂತ ಕರ್ನಾಟಕ - ಜನವರಿ 04, 2008 ರ ಸಂಚಿಕೆಯಲ್ಲಿನ ಬರಹ)

ಓಹ್. ಎಂತಹ ಸುಂದರ ನಗು, ಆ ಮಗುವಿನದು. ಒಮ್ಮೊಮ್ಮೆ ತುಂಟನಂತೆ, ಒಮ್ಮೊಮ್ಮೆ ಮುಗ್ಧನಂತೆ ಕಾಣುತ್ತಾನೆ. ಇನ್ನೂ ಕೇವಲ ಐದು ವರ್ಷ ಅವನಿಗೆ. ಆಡುತ್ತಾ, ಪಾಡುತ್ತಾ ಬೆಳೆಯುತ್ತಿದ್ದಾನೆ. ತಾನು ಬೆಳೆದು ದೊಡ್ಡವನಾದ ಮೇಲೆ ಡಾಕ್ಟರಾಗುತ್ತೇನಮ್ಮ ಎಂದಿದ್ದಾನೆ ಅಮ್ಮನೊಂದಿಗೆ ಒಮ್ಮೆ. ಬಾಲವಾಡಿಗೆ (ಕಿಂಡರ್‌ಗಾರ್ಟನ್) ಹೋಗಲು ಏನೋ ಹುಮ್ಮಸ್ಸು ಅವನಿಗೆ. ಬೆಳಗ್ಗೆ ಅಮ್ಮನಿಗಿಂತ ಬೇಗ ಎದ್ದು ಅವಳನ್ನು ಎಬ್ಬಿಸಲು ಓಡುತ್ತಾನೆ. "ನಡಿಯಮ್ಮ, ಶಾಲೆಗೆ ಹೋಗೋಣ," ಎನ್ನುತ್ತಾನೆ.

ಸರಿಯಾಗಿ ವರ್ಷದ ಹಿಂದೆ; 2007 ರ ಜನವರಿ 15. ಬಾಗ್ದಾದಿನ ತನ್ನ ಮನೆಯ ಮುಂದೆ ಆಡುತ್ತಿದ್ದ ಆ ಮಗುವನ್ನು ಇದ್ದಕ್ಕಿದ್ದಂತೆ ಹಲವಾರು ಜನ ಸುತ್ತುವರಿದು ಹಿಡಿದುಕೊಂಡುಬಿಟ್ಟರು. ಆ ದುಷ್ಟಜಂತುಗಳು ಮುಖವಾಡಗಳನ್ನು ಧರಿಸಿದ್ದ ಕ್ಷುದ್ರ ಹೇಡಿಗಳೂ ಆಗಿದ್ದರು. ನಾನಾ ತರಹದ ಹಿಂಸೆಯಿಂದ ನರಳುತ್ತಿರುವ, ಪರದೇಶಿ ಸೈನಿಕರು, ಒಳಗಿನ ಕೋಮುವಾದಿ ಭಯೋತ್ಪಾದಕರು, ಹೊರಗಿನ ಕೋಮುವಾದಿ ಭಯೋತ್ಪಾದಕರು, ಒಂದು ಪಂಗಡವನ್ನು ಕಂಡರಾಗದ ಮತ್ತೊಂದು ಪಂಗಡದ ಜಾತ್ಯಂಧ ಮುಸಲ್ಮಾನರು, ಹೀಗೆ ಎಲ್ಲರೂ ಸೇಡು ತೀರಿಸಿಕೊಳ್ಳಲು, ರಕ್ತ ಹರಿಸಲು ಹಾತೊರೆಯುತ್ತಿರುವ ಇರಾಕಿನಂತಹ ಇರಾಕಿನಲ್ಲಿಯೆ ಅಪರೂಪವಾದ ಬರ್ಬರ ಕೃತ್ಯವೊಂದನ್ನು ಆ ಹೇಡಿಗಳು ಅಂದು ಎಸಗಿಬಿಟ್ಟರು. ಯೂಸ್ಸಿಫ್ ಎಂಬ ಆ ಐದು ವರ್ಷಗಳ, ನಗುಮುಖದ ಮಗುವನ್ನು ಹಿಡಿದುಕೊಂಡು, ಅವನ ಮೇಲೆ ಪೆಟ್ರೊಲ್ ಸುರಿದು, ಬೆಂಕಿ ಹಚ್ಚಿ, ಓಡಿ ಬಿಟ್ಟರು. ಬೀದಿಯಲ್ಲಿ ಆಡುತ್ತಿದ್ದ ಆ ಮಗುವಿಗೆ ಹೀಗೆ ಮಾಡಿದ ಆ ದುಷ್ಕರ್ಮಿಗಳು ಯಾರು, ಯಾಕೆ ಹೀಗೆ ಮಾಡಿದರು, ಅವರಿಗೆ ಯಾಕೆ ಈ ಪರಿಯ ಮಾನವದ್ವೇಷ, ಇವು ಯಾವುವೂ ಇವತ್ತಿಗೂ ಗೊತ್ತಾಗಿಲ್ಲ.

ಬೆಂಕಿಯಲ್ಲಿ ಉರಿದ ಮಗು ಇರಾಕಿನ ಆಸ್ಪತ್ರೆಯಲ್ಲಿ ಎರಡು ತಿಂಗಳು ಚಿಕಿತ್ಸೆ ಪಡೆಯಿತು. ಪ್ರಾಣಕ್ಕೇನೂ ಅಪಾಯವಾಗಲಿಲ್ಲ. ಆದರೆ, ಮುಖವೆಲ್ಲ ಸುಟ್ಟು ಹೋಗಿತ್ತು. ಸುಂದರ ನಗು ಮಾಸಿ ಹೋಗಿ ಅವನ ಮುಖ ದೊಡ್ಡವರೆ ನೋಡಿ ಬೆಚ್ಚುವಷ್ಟು ಕುರೂಪವಾಗಿಬಿಟ್ಟಿತು. ತುಟಿಗಳು ತೆರೆಯಲಾರದಷ್ಟು ಬಿಗಿದು ಹೋದವು. ಅನ್ನವನ್ನೂ ಸಹ ಕಷ್ಟಪಟ್ಟು ಬಾಯಿಗೆ ತುರುಕಿಕೊಂಡು ತಿನ್ನಬೇಕಾಯಿತು. ಮಾತು ಅಸ್ಪಷ್ಟವಾಗಿಬಿಟ್ಟವು. ಸ್ವರ ಕ್ಷೀಣವಾಗಿ ಕೇಳಿಸುತ್ತಿತ್ತು. ಅಪ್ಪಅಮ್ಮ ಸ್ವಲ್ಪವೇ ಸ್ವಲ್ಪ ಬೇಸರದ ಮಾತಾಡಿದರೂ ಅವನು ಅಳಲು ಆರಂಭಿಸಿ ಬಿಡುತ್ತಿದ್ದ. ತಾನು ಮುದ್ದಾಡುತ್ತಿದ್ದ ತನ್ನ ಪುಟ್ಟ ತಂಗಿಯನ್ನು ಸಹ ನೋಡಿ ಹೊಟ್ಟೆಕಿಚ್ಚು ಪಡುವಂತಾಗಿ ಬಿಟ್ಟ. ಯೂಸ್ಸಿಫ್‌ನ ಐದು ವರ್ಷದ ದೇಹ ಮತ್ತು ಮನಸ್ಸು ಎರಡೂ ಶಾಶ್ವತವಾಗಿ ಬದಲಾಗಿ ಬಿಟ್ಟವು.

ಪ್ರಾಥಮಿಕ ಚಿಕಿತ್ಸೆ ಕೊಟ್ಟು ಸುಟ್ಟ ಗಾಯಗಳನ್ನು ಒಣಗಿಸಿದ ನಂತರ ಬಾಗ್ದಾದಿನ ವೈದ್ಯರುಗಳು ತಮ್ಮ ಕೈಯಲ್ಲಿ ಇದಕ್ಕಿಂತ ಹೆಚ್ಚಿಗೆ ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಬಿಟ್ಟರು. ಯೂಸಿಫ್‌ನ ಅಪ್ಪ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಸಾಮಾನ್ಯ ಮನುಷ್ಯ. ಅವನಿಗೆ ಯೂಸಿಫ್‌ನನ್ನು ಇರಾಕಿನ ಹೊರಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವಷ್ಟು ಆರ್ಥಿಕ ತ್ರಾಣವಿರಲಿಲ್ಲ. ಹೋಗಲಿ, ಈ ವಿಷಯದ ಬಗ್ಗೆ ಟಿವಿ, ಪತ್ರಿಕೆಯವರೊಂದಿಗೆ ಮಾತನಾಡೋಣ ಎಂದರೆ ಅದು ಇರಾಕಿನಲ್ಲಿ ಭಾರೀ ಅಪಾಯಕಾರಿ ದುಸ್ಸಾಹಸ. ತನ್ನ ಜೀವದ ಮೇಲೆ ಮತ್ತು ಇಡೀ ಕುಟುಂಬದ ಮೇಲೆ ಮತ್ತೊಂದು ದಾಳಿಗೆ ಆಹ್ವಾನ ಕೊಟ್ಟಂತೆ ಅದು.

ಆದರೆ ಮಗನ ಸ್ಥಿತಿ ನೋಡಿ ಅಪ್ಪಅಮ್ಮ ಸುಮ್ಮನೆ ಕೂಡುವಂತಿರಲಿಲ್ಲ. ಕರುಳಿನ ಕುಡಿಯ ನಗುವನ್ನು ಮತ್ತೆ ಮೋಡಲು ಅಮ್ಮ ನಿರ್ಧರಿಸಿಬಿಟ್ಟಳು. ಮಗುವನ್ನು ಹೀಗೆ ನೋಡುವುದಕ್ಕಿಂತ ತಾನು ಸಾಯುವುದೆ ಮೇಲು ಎಂದುಕೊಂಡಳು. ನನ್ನ ಮಗು ಮೊದಲಿನಂತೆ ನಗುವುದನ್ನು ನೋಡವುದಷ್ಟೆ ತನಗೆ ಬೇಕಾಗಿರುವುದು, ಯಾರಾದರೂ ಸಹಾಯ ಮಾಡಲು ಸಾಧ್ಯವೆ ಎಂದು ಪತ್ರಕರ್ತರನ್ನು ಕೇಳಿಕೊಂಡಳು. ಸಿ.ಎನ್.ಎನ್. ರವರು ಟಿವಿಯವಲ್ಲಿ ಮತ್ತು CNN.com ನಲ್ಲಿ ಯೂಸ್ಸಿಫ್‌ನ ಕತೆಯನ್ನೂ, ಆ ತಾಯಿಯ ಮನವಿಯನ್ನೂ ಕಳೆದ ಆಗಸ್ಟ್ 22 ರಂದು ವರದಿ ಮಾಡಿದರು.

CNN.com ನಲ್ಲಿ ಪ್ರಕಟವಾದ ಯೂಸ್ಸಿಫ್‌ನ ಕತೆ ಮತ್ತು ಅವನ ಫೋಟೋಗಳು ಓದುಗರಲ್ಲಿ ಸಂಚಲನ ಉಂಟು ಮಾಡಿಬಿಟ್ಟವು. CNN.com ನ ಹನ್ನೆರಡು ವರ್ಷಗಳ ಇಂಟರ್ನೆಟ್ ಇತಿಹಾಸದಲ್ಲಿ ಓದುಗರು ಈ ವರದಿಗೆ ಸ್ಪಂದಿಸಿದಷ್ಟು ಇನ್ಯಾವ ವರದಿಗೂ ಸ್ಪಂದಿಸಿರಲಿಲ್ಲ. ಯೂಸ್ಸಿಫ್‌ನ ತಾಯಿಯ ಮನವಿಗೆ ಓಗೊಟ್ಟು ತಮ್ಮ ಕೈಲಾದ ಸಹಾಯ ಮಾಡಲು ಅನೇಕ ಓದುಗರು ಮುಂದೆ ಬಂದರು. ಅಮೆರಿಕದ್ದಷ್ಟೆ ಅಲ್ಲದೆ ವಿಶ್ವದ ಹತ್ತಾರು ಪ್ರಸಿದ್ಧ ಸೇವಾಸಂಸ್ಥೆಗಳು ಸಹಾಯಕ್ಕೆ ತಕ್ಷಣ ಮುಂದಾದರು.

ಇಷ್ಟೆಲ್ಲ ಸಹಾಯದ ಆಶ್ವಾಸನೆ ಬಂದ ಮೇಲೆ, ವೀಸಾ, ಭದ್ರತೆ ಮುಂತಾದ ಎಲ್ಲಾ ಎಡರುತೊಡರುಗಳನ್ನು ಎದುರಿಸಿ ಮಗುವನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದಕ್ಕೆ ಅಪ್ಪಅಮ್ಮ ತೀರ್ಮಾನಿಸಿದರು. ಚಿಲ್ಡ್ರನ್ಸ್ ಬರ್ನ್ ಫೌಂಡೇಷನ್ ಯೂಸ್ಸಿಫ್‌ನ ಕುಟುಂಬದ ಪ್ರಯಾಣದ ವೆಚ್ಚ ಮತ್ತು ಅಮೆರಿಕದಲ್ಲಿಯ ಆತನ ಚಿಕಿತ್ಸೆಗೆ ಬೇಕಾದ ಹಣವನ್ನು ಭರಿಸಲು ಒಪ್ಪಿಕೊಂಡಿತು. ಯೂಸ್ಸಿಫ್‌ನ ಚಿಕಿತ್ಸೆಗೆ ಸಾವಿರಾರು ಓದುಗರು ಚಿಲ್ಡ್ರನ್ಸ್ ಬರ್ನ್ ಫೌಂಡೇಷನ್‌ಗೆ ಧನಸಹಾಯ ಮಾಡಲು ಮುಂದಾದರು.

ಲೇಖನದ ವಿಡಿಯೊ ಪ್ರಸ್ತುತಿ

ಕಳೆದ ಸೆಪ್ಟೆಂಬರ್ 11 ರಂದು ಯೂಸ್ಸಿಫ್‌ ಕುಟುಂಬ ಸಮೇತನಾಗಿ ಅಮೆರಿಕದಲ್ಲಿ ಬಂದಿಳಿದ. ಹತ್ತೇ ದಿನಗಳ ಒಳಗೆ ವೈದ್ಯರ ತಂಡವೊಂದು ಮೊದಲ ಸರ್ಜರಿ ಮಾಡಿದರು. ಅಲ್ಲಿಂದೀಚೆಗೆ ವೈದ್ಯರು ಆಗಾಗ ಸರ್ಜರಿ ಮಾಡುತ್ತಲೆ ಬಂದರು. ಬಹಳ ಕಾಂಪ್ಲಿಕೇಟೆಡ್ ಆದ ಸರ್ಜರಿಗಳು ಇವು. ಸುಟ್ಟು ಒಣಗಿರುವ ಚರ್ಮದ ಮೇಲ್ಪದರವನ್ನು ತೆಗೆಯುವುದು; ಪಕ್ಕದಲ್ಲಿಯೆ ಇನ್ನೊಂದು ಒಳ್ಳೆಯ ಮಾಂಸ ಬೆಳೆಸುವುದು; ಅದನ್ನು ಬೇರೆಡೆಗೆ ಎಳೆದು ಕೂಡಿಸುವುದು; ಹೆಚ್ಚಿಗೆ ಬೆಳೆದ ಟಿಶ್ಯೂವನ್ನು ತೆಗೆಯುವುದು; ಸದ್ಯದ ಸರ್ಜರಿಯ ಗಾಯ ವಾಸಿಯಾದ ನಂತರ ಮತ್ತೊಂದಕ್ಕೆ ಸಿದ್ಧವಾಗುವುದು. ಮೂರು ತಿಂಗಳಲ್ಲಿ ಇಂತಹ ಹತ್ತು ಸರ್ಜರಿಗಳ ಅವಶ್ಯಕತೆಯಿರುವ, ಸುದೀರ್ಘ ಪಯಣ ಇದು. ಯೂಸ್ಸಿಫ್‌ಗಂತೂ ಮಾನಸಿಕ, ದೈಹಿಕ ವೇದನೆಯ ನೋವಿನ ಯಾತ್ರೆ.

ಇತ್ತೀಚಿನ ಸುದ್ದಿಯ ಪ್ರಕಾರ, ಕೇವಲ ಹತ್ತಾರು ದಿನಗಳ ಹಿಂದಷ್ಟೆ ಒಂದು ದೊಡ್ಡ ಸರ್ಜರಿ ಆಗಿದೆ. ಆಧುನಿಕ ವಿಜ್ಞಾನ ಮತ್ತು ವೈದ್ಯಶಾಸ್ತ್ರ ಯೂಸ್ಸಿಫ್‌ನ ನಗುವನ್ನು ಮತ್ತೆ ಹಿಂದಿರುಗಿಸುವ ಆಶಾಭಾವನೆ ಬಹಳಷ್ಟು ಜನರಲ್ಲಿ ಇದೆ. ವಿಶ್ವದಾದ್ಯಂತದ ಲಕ್ಷಾಂತರ ಜನ ಯೂಸ್ಸಿಫ್‌ನ ಸ್ನಿಗ್ಧ ನಗುವನ್ನು ಮತ್ತೆ ಕಾಣಲು ಆಶಿಸುತ್ತಿದ್ದಾರೆ. ಯೂಸ್ಸಿಫ್‌ನ ಚಿಕಿತ್ಸೆಯನ್ನು ನಿಯಮಿತವಾಗಿ ಫಾಲೊ ಮಡುತ್ತಿದ್ದಾರೆ.

ದೇಶದ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಪಂಗಡದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ, ಚರ್ಮದ ಬಣ್ಣದ ಹೆಸರಿನಲ್ಲಿ, ತಮಗಿಷ್ಟ ಬಂದ ಕ್ಷುಲ್ಲಕ ವಿಷಯದ ಹೆಸರಿನಲ್ಲಿ ಪ್ರಪಂಚದಾದ್ಯಂತ ಕೊಲೆಗಡುಕ ಮನಸ್ಸಿನ ಜನ ಹಿಂಸಾಚಾರ ಮಾಡುತ್ತಲೆ ಬಂದಿದ್ದಾರೆ. ಮನುಷ್ಯನ ಈ ಮೃಗೀಯ ಪ್ರವೃತ್ತಿ ಮೊದಲಿನಂದಲೂ ಇದ್ದದ್ದೆ. ಸಾವಿರಾರು ಮೈಲಿಗಳ ದೂರದಲ್ಲಿ ಯೂಸ್ಸಿಫ್‌‌ಗೆ ಆಗಿದ್ದು ನಮ್ಮ ನಡುವೆಯೂ ಆಗಾಗ ನಡೆಯುತ್ತಿರುತ್ತದೆ. ಏನೂ ತಪ್ಪು ಮಾಡಿರದ ದುರದೃಷ್ಟ ಜನ ಅನ್ಯಾಯಕ್ಕೊಳಗಾಗುತ್ತಾರೆ. ಆ ದುರದೃಷ್ಟವಂತರಲ್ಲಿ ಕೆಲವೆ ಕೆಲವರಿಗೆ ಮಾತ್ರ ಯೂಸ್ಸಿಫ್‌ಗೆ ದೊರಕಿದ ಸಹಾಯ ದೊರಕುತ್ತದೆ. ಎಷ್ಟೇ ಸಹಾಯ ಸಿಕ್ಕರೂ ಅದು ಈಗಾಗಲೆ ಆದ ಅನ್ಯಾಯವನ್ನು ಸರಿ ಮಾಡುವುದಿಲ್ಲ.

ಆದರೆ, ಇಂತಹ ಅನ್ಯಾಯಗಳು ಅನಾದಿ ಕಾಲದಿಂದ ಇದ್ದರೂ, ಶಿಕ್ಷೆಯ ಭಯವಿಲ್ಲದ ಒಂದು ಕೆಟ್ಟ ವ್ಯವಸ್ಥೆಯಲ್ಲಿ ಇಂತಹವು ಪದೆಪದೆ ಆಗುವ ಸಾಧ್ಯತೆಗಳಿರುತ್ತವೆ. ಅಪರಾಧಿಗಳನ್ನು ಹಿಡಿದು ಅವರು ಮಾಡಿದ ಅಪರಾಧವನ್ನು ಸಾಬೀತು ಮಾಡಿ ಅವರಿಗೆ ಶಿಕ್ಷೆ ವಿಧಿಸಲು ಅವಕಾಶವಿರುವ ಉತ್ತಮ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ಬಹಳ ಕಮ್ಮಿ ಸಲ ಮರುಕಳಿಸುತ್ತವೆ. ನಮ್ಮ ದೇಶದಲ್ಲಿಯೆ ಗಮನಿಸಿ. ಕೊಲೆ, ಸುಲಿಗೆ ಮಾಡಿಯೂ ಸಿಕ್ಕಿಹಾಕಿಕೊಳ್ಳದ ರಾಜ್ಯಗಳಲ್ಲಿ ಈಗಲೂ ಅಪರಾಧಗಳ ಪ್ರಮಾಣ ಜಾಸ್ತಿ. ಅದೆ ಕಾನೂನು ಮತ್ತು ಸುವ್ಯವಸ್ಥೆ ಸ್ವಲ್ಪಮಟ್ಟಿಗೆ ಉತ್ತಮವಾಗಿರುವ ರಾಜ್ಯಗಳಲ್ಲಿ ಅದು ಕಮ್ಮಿ. ಶಾಂತಿಯ ಸಮಯದಲ್ಲಿ ಅಪರಾಧ ಮಾಡಿದರೆ ಸಿಕ್ಕಿಹಾಕಿಕೊಂಡು ಬಿಡುತ್ತೇವೆ ಎಂದೆ ದುಷ್ಕರ್ಮಿಗಳು ಗಲಭೆಗಳೆದ್ದಾಗ ಆ ಸಮಯವನ್ನು ದುರುಪಯೋಗಪಡಿಸಿಕೊಳ್ಳಲು ಹಾತೊರೆಯುವುದು. ಮಿಕ್ಕ ಸಮಯದಲ್ಲಿ ಶಿಕ್ಷೆಯ ಭಯದಲ್ಲಿ ಬಾಲ ಮುದುರಿಕೊಂಡಿರುವ ದುಷ್ಟರು ತಮಗೆ ಅನುಕೂಲವಾದ ಪರಿಸ್ಥಿತಿ ಸೃಷ್ಟಿಸಿಕೊಳ್ಳಲು ಏನೋ ಒಂದು ಕಿತಾಪತಿ ಮಾಡುತ್ತಿರುತ್ತಾರೆ. ಎಲ್ಲಿಯವರೆಗೆ ನಮ್ಮಲ್ಲಿ ಗುಂಪಲ್ಲಿ ಹೊಡೆದು ಸಿಕ್ಕಿಹಾಕಿಕೊಳ್ಳದ ಪರಿಸ್ಥಿತಿ ಇರುತ್ತದೊ ಅಲ್ಲಿಯವರೆಗೂ ನಮ್ಮಲ್ಲಿ ಈ ಮಾಸ್‌ಮರ್ಡರ್‌ಗಳು, ಹಿಂಸಾಚಾರಗಳು ಜಾತಿಯ ಹೆಸರಿನಲ್ಲಿ, ಕೋಮುವಾದದ ಹೆಸರಿನಲ್ಲಿ, ಇನ್ನೆಂತಹುದೊ ಹೆಸರಿನಲ್ಲಿ ನಡೆಯುತ್ತಿರುತ್ತದೆ. ಅದು ಕಮ್ಮಿಯಾಗಲು ಇರುವ ಒಂದೆ ದಾರಿ ಎಂದರೆ, ಗುಂಪಿನ ಹಿಂಸಾಚಾರದಲ್ಲಿ ತೊಡಗಿಕೊಂಡವರಿಗೂ ಶೀಘ್ರ ಶಿಕ್ಷೆಯಾಗುವಂತಹ ವ್ಯವಸ್ಥೆಯನ್ನು ಸೃಷ್ಟಿಸಿಕೊಳ್ಳುವುದು. ಇಂತಹ ವ್ಯವಸ್ಥೆ ವೈಯಕ್ತಿಕ ಕಾರಣಕ್ಕೆ ಒಬ್ಬ ಇನ್ನೊಬ್ಬರನ್ನು ಕೊಲೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸದಿದ್ದರೂ ಆ ಪ್ರಮಾಣವನ್ನೂ ಸಹ ಕಮ್ಮಿ ಮಾಡುತ್ತದೆ.

ಯೂಸ್ಸಿಫ್‌ ಮತ್ತೊಮ್ಮೆ ನಗಲಿ. ಅದರ ಜೊತೆಗೆ ಅವನ ಹಳೆಯ ಮುಗ್ಧತೆಯೂ ಮತ್ತೊಮ್ಮೆ ಹಿಂದಿರುಗಲಿ. ಹಾಗೆಯೆ ಪ್ರಪಂಚದಾದ್ಯಂತ ಎಲ್ಲಾ ತರಹದ ಅಪರಾಧಿಗಳು ಸಿಕ್ಕಿಬೀಳುವ, ಅವರಿಗೆ ಶಿಕ್ಷೆಯಾಗುವ ವ್ಯವಸ್ಥೆಗಳು ಸ್ಥಾಪನೆಯಾಗಿ, ಮನುಷ್ಯನ ಮೃಗೀಯ ಪ್ರವೃತ್ತಿಗೆ ಮತ್ತು ದ್ವೇಷಕ್ಕೆ ಕನಿಷ್ಠ ಜೈಲುಶಿಕ್ಷೆಯ ಭಯದ ಕಡಿವಾಣವಾದರೂ ಇರಲಿ. ಅಲ್ಲವೆ?

Dec 19, 2007

ಕೆ.ಆರ್.ಎಸ್. ಡ್ಯಾಮ್ ಪ್ರೈವೇಟ್ ಲಿಮಿಟೆಡ್.

(ವಿಕ್ರಾಂತ ಕರ್ನಾಟಕ - ಡಿಸೆಂಬರ್ 28, 2007 ರ ಸಂಚಿಕೆಯಲ್ಲಿನ ಬರಹ)

ಬೊಲಿವಿಯ ಎನ್ನುವುದು ದಕ್ಷಿಣ ಅಮೆರಿಕ ಖಂಡದಲ್ಲಿನ ಐದನೆ ದೊಡ್ಡ ದೇಶ. ಭೂವಿಸ್ತೀರ್ಣದಲ್ಲಿ ಕರ್ನಾಟಕದ ಎಂಟರಷ್ಟು ದೊಡ್ಡದಾದ ಈ ದೇಶದ ಜನಸಂಖ್ಯೆ ಸುಮಾರು 90 ಲಕ್ಷ. ಕಳೆದ ಶತಮಾನದಲ್ಲಿ ಮಿಲಿಟರಿಯ ನಿರಂಕುಶ ಆಡಳಿತ, ಭ್ರಷ್ಟಾಚಾರ ಮತ್ತು ಸಾಮ್ರಾಜ್ಯಶಾಹಿ ಪರಕೀಯರು ಅವಕಾಶ ಸಿಕ್ಕಿದಾಗಲೆಲ್ಲ ದೋಚಿದ ಪರಿಣಾಮವಾಗಿ ಈ ದೇಶ ದಕ್ಷಿಣ ಅಮೆರಿಕದಲ್ಲಿನ ಅತಿ ಬಡರಾಷ್ಟ್ರಗಳಲ್ಲಿ ಒಂದು. ಕಳೆದೆರಡು ದಶಕಗಳಿಂದ ಪ್ರಜಾಪ್ರಭುತ್ವ ಇದ್ದರೂ ಈಗಲೂ ಭ್ರಷ್ಟಾಚಾರ, ಹಿಂಸೆ, ಅರಾಜಕತೆ ಮುಂದುವರೆದಿದೆ. ಚಿನ್ನ, ಕಬ್ಬಿಣ, ಮ್ಯಾಗ್ನೇಷಿಯಮ್, ನೈಸರ್ಗಿಕ ಅನಿಲಗಳನ್ನೊಳಗೊಂಡಂತೆ ಬೇಕಾದಷ್ಟು ನೈಸರ್ಗಿಕ ಸಂಪನ್ಮೂಲಗಳಿದ್ದರೂ ಬಡವಾಗಿಯೆ ಇರುವ ಈ ದೇಶವನ್ನು ಆ ಕಾರಣಕ್ಕಾಗಿಯೆ "ಚಿನ್ನದ ಗಣಿಯ ಮೇಲೆ ಕುಳಿತಿರುವ ಕತ್ತೆ" ಎಂದೂ ಅನ್ನುತ್ತಾರೆ.

1982 ರಲ್ಲಿ ಮತ್ತೆ ಪ್ರಜಾಪ್ರಭುತ್ವಕ್ಕೆ ಮರಳಿದ ಈ ದೇಶ ಅಲ್ಲಿಂದೀಚೆಗೆ ವಿಶ್ವಬ್ಯಾಂಕ್‌ನ ಸಲಹೆಗಳ ಪ್ರಕಾರ ಅನೇಕ ಆರ್ಥಿಕ ಸುಧಾರಣೆಗಳನ್ನು ತಂದಿತು. "ಬಡದೇಶಗಳಲ್ಲಿ ಭ್ರಷ್ಟಾಚಾರ ಜಾಸ್ತಿ; ಅದರ ಜೊತೆಗೆ ಒಳ್ಳೆಯ ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆ ಮಾಡಲು ಅವರ ಬಳಿ ಸಾಕಷ್ಟು ಸಂಪನ್ಮೂಲಗಳಾಗಲಿ, ಕೌಶಲವಾಗಲಿ ಇರುವುದಿಲ್ಲ. ಹಾಗಾಗಿ ನೀರು ಸರಬರಾಜನ್ನು ಖಾಸಗೀಕರಣ ಮಾಡಿದರೆ ಅದರಿಂದ ಬಂಡವಾಳವೂ, ಉಸ್ತುವಾರಿ ಕೌಶಲವೂ ಹರಿದುಬರುತ್ತದೆ," ಎಂಬ ತನ್ನ ನಂಬಿಕೆಯ ಆಧಾರದ ಮೇಲೆ ವಿಶ್ವಬ್ಯಾಂಕ್ 1999 ರಲ್ಲಿ ಬೊಲಿವಿಯ ಸರ್ಕಾರಕ್ಕೆ ಸುಮಾರು ಹತ್ತುಲಕ್ಷ ಜನಸಂಖ್ಯೆ ಇರುವ ಕೋಚಬಾಂಬ ನಗರದ ನೀರು ಸರಬರಾಜನ್ನು ಖಾಸಗೀಕರಣ ಮಡುವಂತೆ ಒತ್ತಾಯಿಸಿತು. ಮಾಡದೆ ಇದ್ದರೆ ಸುಮಾರು 100 ಕೋಟಿ ರೂಪಾಯಿಗಳ ಸಾಲವನ್ನು ನವೀಕರಿಸುವುದಿಲ್ಲ ಎಂದು ಹೇಳಿತು. ವಿದೇಶಿ ಸಹಾಯದ ಮೇಲೆಯೆ ಅವಲಂಬಿತವಾದ ಆ ದೇಶ ವಿಧಿಯಿಲ್ಲದೆ ಕೋಚಬಾಂಬ ನಗರದ ನೀರು ಸರಬರಾಜನ್ನು ಖಾಸಗೀಕರಣಗೊಳಿಸಿತು.

ಹಾಗೆ ಖಾಸಗೀಕರಣಗೊಂಡ ಆ ಜಲಯೋಜನೆ ಸಣ್ಣದೇನೂ ಅಗಿರಲಿಲ್ಲ. ಸುಮಾರು 10000 ಕೋಟಿ ರೂಪಾಯಿಗಳ ಆ ಯೋಜನೆಯನ್ನು ಇಂಗ್ಲೆಂಡ್-ಇಟಲಿ-ಅಮೆರಿಕ-ಸ್ಪೇನ್‌ಗಳ ನಾಲ್ಕು ಬೃಹತ್ ಬಹುರಾಷ್ಟ್ರೀಯ ಕಂಪನಿಗಳ ಒಕ್ಕೂಟವಾದ "ಅಂತರ್‌ರಾಷ್ಟ್ರೀಯ ಜಲ" ತನ್ನದಾಗಿಸಿಕೊಂಡಿತು. ಕೋಚಬಾಂಬ ನಗರಕ್ಕೆ ನೀರು ಸರಬರಾಜು ಮಾಡುವುದರ ಜೊತೆಗೆ ವಿದ್ಯುತ್ ಉತ್ಪಾದನೆ ಮತ್ತು ನೀರಾವರಿಗೂ ಆ ಯೋಜನೆ ವಿಸ್ತಾರಗೊಂಡಿತ್ತು.

ಖಾಸಗೀಕರಣಗೊಂಡದ್ದೆ, ಬಂತು ಆಪತ್ತು. ಆ ನಗರದಲ್ಲಿನ ಎಷ್ಟೋ ಬಡ ಜನರ ಮಾಸಿಕ ಆದಾಯವೆ 4-5 ಸಾವಿರ ರೂಪಾಯಿಯಾಗಿದ್ದರೆ, ಈಗವರು ತಿಂಗಳಿಗೆ ಕಟ್ಟಬೇಕಾದ ನೀರಿನ ಬಿಲ್ಲು ಸುಮಾರು ಸಾವಿರ ರೂಪಾಯಿಯ ತನಕ ಏರಿತು. ಬಡಜನರು ನೀರು ಅಥವ ಊಟದಲ್ಲಿ ಯಾವುದಾದರೂ ಒಂದನ್ನು ಮಾತ್ರ ಆರಿಸಿಕೊಳ್ಳುವ ಸ್ಥಿತಿಗೆ ಮುಟ್ಟಿಬಿಟ್ಟರು. ಈ ಬೆಲೆಏರಿಕೆ ತಾಳಲಾರದೆ ಕೆಲವೆ ತಿಂಗಳುಗಳಲ್ಲಿ ಜನಾಭಿಪ್ರಾಯ, "ಜೀವ ಮತ್ತು ಜಲ ಸಂರಕ್ಷಣಾ ಸಂಘಟನೆ" ಯಾಗಿ ರೂಪಪಡೆದು ಕೊಂಡಿತು. ಒಮ್ಮೆ ನಾಲ್ಕು ದಿನಗಳ ಕಾಲ ಆ ನಗರದಲ್ಲಿ ಸತತ ಬಂದ್ ನಡೆಯಿತು. ಇದಾದ ತಿಂಗಳಿನಲ್ಲಿಯೆ ಬೊಲಿವಿಯಾದ ಮೂಲೆಮೂಲೆಗಳಿಂದ ಲಕ್ಷಾಂತರ ಜನ ಕೋಚಬಾಂಬ ನಗರಕ್ಕೆ ಬಂದು ಮತ್ತೊಮ್ಮೆ ಹರತಾಳ ಮಾಡಿದರು. "ನೀರು ದೇವರ ಕೊಡುಗೆಯೆ ಹೊರತು ವ್ಯಾಪಾರದ ಸರಕಲ್ಲ", "ಜಲವೆ ಜೀವ" ಎಂಬ ಘೋಷಣೆಗಳೊಂದಿಗೆ ನಗರದ ಇಡೀ ಸಾರಿಗೆ ವ್ಯವಸ್ಥೆಯನ್ನು ನಿಲ್ಲಿಸಿ ಬಿಟ್ಟರು.

ಮಾತುಕತೆಗಳ ನಡುವೆ ಹರತಾಳ ಮುಂದುವರೆಯಿತು. ಬೆಲೆಏರಿಕೆ ಇಳಿಸುತ್ತೇವೆ ಎಂದ ಸರ್ಕಾರ ಜಲ ಖಾಸಗೀಕರಣದಿಂದಾಗಿ ಏನೂ ಮಾಡಲಾಗಲಿಲ್ಲ. ನಿಲ್ಲದ ಪ್ರತಿಭಟನೆಯ ಬೆನ್ನುಮೂಳೆ ಮುರಿಯಲು ಸರ್ಕಾರ ಕರ್ಫ್ಯೂ ವಿಧಿಸಿತು. ಒಂದಷ್ಟು ಪ್ರತಿಭಟನಾಕಾರರು ಬಂಧನಕ್ಕೊಳಗಾದರು. ಬೀದಿಗಳು ರಣರಂಗವಾಗಿ ಬದಲಾದವು. ಕೊನೆಕೊನೆಗೆ ಪೋಲಿಸರೂ ಸರ್ಕಾರದ ವಿರುದ್ಧ ಬಂಡೆದ್ದರು. ಒಮ್ಮೆ ಪೋಲಿಸರು ಪರಿಸ್ಥಿತಿಯನ್ನು ಹತೋಟಿಗೆ ತರಲೆಂದು ಬಂದಿದ್ದ ಸೈನಿಕರ ಮೇಲೆಯೆ ಅಶ್ರುವಾಯು ಪ್ರಯೋಗಿಸಿದರು. ಒಟ್ಟು ಐದು ಜನ ಹಿಂಸಾಚಾರಕ್ಕೆ ಬಲಿಯಾದರು. ಬೇರೆಬೇರೆ ಕಾರಣಕ್ಕೆ ಸರ್ಕಾರದ ನೀತಿಗಳ ವಿರುದ್ಧ ಇದ್ದವರೆಲ್ಲ ಒಂದಾದರು. "ಕೋಚಬಾಂಬ ಜಲ ಕದನ" ಶುರುವಾದ ನಾಲ್ಕೇ ತಿಂಗಳಿನಲ್ಲಿ ಸರ್ಕಾರ ಇಡೀ ಒಪ್ಪಂದವನ್ನು ರದ್ದುಗೊಳಿಸಬೇಕಾಯಿತು. ಕೊನೆಗೂ ದೇಶವಾಸಿಗಳ ಕೈಗೆ ಮತ್ತೊಮ್ಮೆ ನೀರಿನ ಹಕ್ಕು ಮತ್ತು ಹತೋಟಿ ಬಂದಿತು.

---x---

ನೀರ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುವ ನದಿ. ನಮ್ಮ ಕರ್ನಾಟಕದಲ್ಲಿಯೂ ಹರಿಯುವ ಭೀಮಾ ನದಿಯ ಉಪನದಿಗಳಲ್ಲಿ ಅದೂ ಒಂದು. ಭೀಮೆ ಕೃಷ್ಣೆಯ ಉಪನದಿ. "ಮಹಾರಾಷ್ಟ್ರ ಕೃಷ್ಣಾ ಕಣಿವೆ ಅಭಿವೃದ್ಧಿ ಮಂಡಳಿ" 1984 ರಲ್ಲಿ ನೀರಾ ನದಿಗೆ ದೇವಗಢ ಅಣೆಕಟ್ಟು ಕಟ್ಟಲು ಯೋಜನೆ ಹಾಕಿಕೊಂಡಿತು. ಶುರುವಿನಲ್ಲಿ ಕೇವಲ 62 ಕೋಟಿ ರೂಪಾಯಿಗಳ ಯೋಜನೆಯಾಗಿ ಪ್ರಾರಂಭವಾದ ಈ ಯೋಜನೆಗೆ ಇಲ್ಲಿಯ ತನಕ 450 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ಇನ್ನು ಕೇವಲ ಶೇ. 5 ರಷ್ಟು ಅಣೆಕಟ್ಟಿನ ಕೆಲಸ ಬಾಕಿ ಇದೆ. ಆದರೆ ಇನ್ನೂ ಮುಗಿಯಬೇಕಾದ ಎಡದಂಡೆ/ಬಲದಂಡೆ ಕಾಲುವೆಗಳ ಕಾಮಗಾರಿ ಸಾಕಷ್ಟಿದೆ. ಉಳಿದ ಡ್ಯಾಮ್‌ಗೆ ಮತ್ತು ಇತರೆ ಕಾಮಗಾರಿಗಳಿಗೆ 1000 ಕೋಟಿ ರೂಪಾಯಿಯ ಅವಶ್ಯಕತೆ ಇದೆ ಎನ್ನುತ್ತಾರೆ ಅಲ್ಲಿಯ ನೀರಾವರಿ ಸಚಿವ ರಾಮರಾಜೆ ನಿಂಬಾಳ್ಕರ್.

ಇತ್ತೀಚಿನ ಸುದ್ದಿ ಏನೆಂದರೆ, ಆ 1000 ಕೋಟಿ ರೂಪಾಯಿಯನ್ನು ಒಟ್ಟುಗೂಡಿಸಲು ಅಲ್ಲಿಯ ಸರ್ಕಾರದ ಕೈಯಲ್ಲಿ ಸಾಧ್ಯವಿಲ್ಲವಂತೆ. ಹಾಗಾಗಿ ಯಾರು ಸಾವಿರ ಕೋಟಿ ಹೂಡಲು ಸಿದ್ಧರಿದ್ದಾರೊ ಅವರಿಗೆ ಆ ಅಣೆಕಟ್ಟು ಮತ್ತು ನದಿಯ ನೀರಿನ ಯಜಮಾನಿಕೆ ವಹಿಸಿಕೊಡಲು ಮಹಾರಾಷ್ಟ್ರದ ಸರ್ಕಾರ ಇದೆ ಸೆಪ್ಟೆಂಬರ್‌ನಲ್ಲಿ ತೀರ್ಮಾನಿಸಿತು. ಆಸಕ್ತರು ಸರ್ಕಾರವನ್ನು ಸಂಪರ್ಕಿಸಬೇಕೆಂದು ಕೋರಿತು. ಈಗ ಐದು ಕಂಪನಿಗಳು ನದಿಯನ್ನು ಕೊಳ್ಳಲು ಆಸಕ್ತಿ ತೋರಿಸಿವೆಯೆಂದು ಇಂಗ್ಲಿಷಿನ "ಔಟ್‌ಲುಕ್" ವಾರಪತ್ರಿಕೆ ಇತ್ತೀಚೆಗೆ ತಾನೆ ವರದಿ ಮಾಡಿದೆ. ಈ ಆಸಕ್ತಿ ಅಂತಿಮವಾಗಿ ಮಾರಾಟದಲ್ಲಿ ಕೊನೆಗೊಂಡರೆ, ಒಂದು ದೊಡ್ಡ ಅಣೆಕಟ್ಟು, 229 ಕಿ.ಮಿ. ಉದ್ದದ ಬಲದಂಡೆ ಮತ್ತು ಎಡದಂಡೆ ಕಾಲುವೆಗಳ ಒಂದು ಲಕ್ಷ ಎಕರೆಗೂ ಮೀರಿದ ನೀರಾವರಿಯ ಉಸ್ತುವಾರಿ ಖಾಸಗಿ ಕಂಪನಿಯ ಕೈಗೆ ಹೋಗುತ್ತದೆ.

ಭಾರತದ ಮುಂದುವರೆದ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಒಂದು. ಅಲ್ಲಿಯ ಆರ್ಥಿಕ ಸುಧಾರಣೆಗಳಿಂದಾಗಿ ಅದು ಇತರೆ ರಾಜ್ಯಗಳಿಗಿಂತ ಹೆಚ್ಚಾಗಿ ಕೈಗಾರಿಕೀಕರಣವಾಗಿದೆ. ಹಾಗೆಯೆ ನಗರೀಕರಣವೂ ಆಗಿದೆ. ಮಹಾರಾಷ್ಟ್ರ ಸರ್ಕಾರ 2007-2008 ರ ಹಣಕಾಸಿನ ವರ್ಷದಲ್ಲಿ ಸುಮಾರು 68300 ಕೋಟಿ ರೂಪಾಯಿಗಳ ಆದಾಯ ನಿರೀಕ್ಷಿಸುತ್ತಿದ್ದು ಸುಮಾರು 510 ಕೋಟಿ ರೂಪಾಯಿಗಳ ಉಳಿತಾಯದ ಬಜೆಟ್ ಮಂಡಿಸಿದೆ. ಇಷ್ಟು ದೊಡ್ಡ ಸರ್ಕಾರದ ಬಳಿ ದೇವಗಢ್ ಅಣೆಕಟ್ಟೆಯ ಯೋಜನೆಗಾಗಿ 1000 ಕೋಟಿ ಎತ್ತಿಡಲಾಗುವುದಿಲ್ಲ ಎಂದರೆ ಆ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ, ಇಲ್ಲವೆ ಆ ಯೋಜನೆಯಲ್ಲಿ ನಂಬಿಕೆಯಿಲ್ಲ, ಎಂದಾಗುವುದಿಲ್ಲವೆ?

ಲೇಖನದ ವಿಡಿಯೊ ಪ್ರಸ್ತುತಿ

ಈ ಅಣೆಕಟ್ಟಿನ ಖಾಸಗೀಕರಣದ ವಿಚಾರ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿದ್ದರೂ ಅದರ ಪರಿಣಾಮ ಮತ್ತು ಪ್ರಭಾವ ಕ್ರಮೇಣ ಇಡೀ ದೇಶಕ್ಕೆ ವ್ಯಾಪಿಸುತ್ತದೆ. ಭಾರತದಂತಹ ಕೃಷಿಪ್ರಧಾನ, ಬಹುಸಂಖ್ಯಾತ ರೈತರ ದೇಶದಲ್ಲಿ ಒಂದು ನದಿಯನ್ನು, ಇಡೀ ಅಣೆಕಟ್ಟನ್ನು ಖಾಸಗೀಕರಣ ಮಾಡುವ ವಿಚಾರವೆ ಒಂದು ಕೆಟ್ಟ ಜೋಕು. ದಕ್ಷಿಣ ಅಮೆರಿಕದಲ್ಲಿಯೆ ಏನು ದಕ್ಷಿಣ ಭಾರತದಲ್ಲಿಯೂ ನೀರು ಜೀವನಾಧಾರವು ಹೌದು, ಭಾವನಾತ್ಮಕ ವಿಷಯವೂ ಹೌದು. ಕನ್ನಂಬಾಡಿಯಿಂದ ನೀರನ್ನು ಕಾವೇರಿ ನದಿಗೆ ಬಿಡಬೇಕೆ ಬೇಡವೆ ಎಂಬ ವಿಚಾರಕ್ಕೆ ಗದ್ದಲ ಎದ್ದರೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿನ ಸರ್ಕಾರಗಳೆ ಅದುರುತ್ತವೆ. ಆಂಧ್ರದ ರೈತರು ಅಲ್ಲಿಯ ಸರ್ಕಾರದ ಕಿವಿ ಹಿಂಡಿ ಪ್ರಶ್ನಿಸುತ್ತಿದ್ದರೆ ಇಲ್ಲಿ ಕರ್ನಾಟಕದ ಸರ್ಕಾರ ಆಲಮಟ್ಟಿಯ ಎತ್ತರದ ಬಗ್ಗೆ ಉತ್ತರ ಕೊಡುತ್ತಿರುತ್ತದೆ. ಇನ್ನು ಬೆಳೆದು ನಿಂತಿರುವ ಪೈರಿಗೆ ಸಮಯಕ್ಕೆ ಸರಿಯಾಗಿ ಡ್ಯಾಮಿನಿಂದ ನೀರು ಬಿಡದೆ ಇದ್ದರೆ ಈಗೀಗ ರೈತರು ಅದೇ ದಿನ ಡ್ಯಾಮಿಗೇ ದಾಳಿಯಿಡಲು ಪ್ರಾರಂಭಿಸಿ ಬಿಟ್ಟಿದ್ದಾರೆ. 2002 ರ ಸೆಪ್ಟೆಂಬರ್‌ನಲ್ಲಿ ಮೂರು ಸಾವಿರ ರೈತರು ಕನ್ನಂಬಾಡಿ ಅಣೆಕಟ್ಟೆಯ ಕಚೇರಿಗೆ ದಾಳಿ ಮಾಡಿ ಶಾಸಕರದೂ ಸೇರಿದಂತೆ ಏಳು ಸರ್ಕಾರಿ ಕಾರುಗಳನ್ನು ಜಖಂ ಗೊಳಿಸಿದ್ದರು. ಕೊನೆಗೆ ಪೋಲಿಸರು ಲಾಠಿಚಾರ್ಜ್ ಮಾಡಿ, ಅಶ್ರುವಾಯು ಪ್ರಯೋಗಿಸಿ ಪರಿಸ್ಥಿತಿಯನ್ನು ತಹಬಂದಿಗೆ ತರಬೇಕಾಯಿತು. ಕೇವಲ ಒಂದೂವರೆ ತಿಂಗಳಿನ ಹಿಂದೆ ಹಿರಾಕುಡ್ ಜಲಾಶಯದ ನೀರನ್ನು ಕೈಗಾರಿಕೆಗಳಿಗೆ ಬಿಡಬಾರದೆಂದು ಒರಿಸ್ಸಾದ ಸುಮಾರು ಹತ್ತು ಸಾವಿರ ರೈತರು ಆ ಜಲಾಶಯದ ಬಳಿ ಹೋಗಿ ಪ್ರತಿಭಟನೆ ನಡೆಸಿದ್ದರು.

ಖಾಸಗೀಕರಣ ಶಿಸ್ತನ್ನು ಮತ್ತು ಆರ್ಥಿಕ ಜವಾಬ್ದಾರಿಯನ್ನು (Fiscal Responsibility) ತರುತ್ತದೆ ಎನ್ನುವುದೇನೊ ನಿಜ. ಆದರೆ, ಕೆಲವೊಮ್ಮೆ ಲಾಭದ ಕಾರಣಕ್ಕಾಗಿ ಅದು ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಳ್ಳುವ ಅಪಾಯ ಇರುತ್ತದೆ. ಲಾಭದ ದೃಷ್ಟಿಯಿಂದ ಇನ್ನೊಬ್ಬರು ತನ್ನ ಬೆಳೆಗೆ ನೀರು ಬಿಡದೆ ಚೆಲ್ಲಾಟವಾಡುತ್ತಿದ್ದಾರೆ ಎನ್ನುವುದನ್ನು ರೈತ, ಅದರಲ್ಲೂ ಪ್ರಜಾಪ್ರಭುತ್ವದ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯವನ್ನು ಅನುಭವಿಸಿರುವ ಭಾರತದ ರೈತ ಸಹಿಸಿಕೊಳ್ಳುವುದು ಅಸಾಧ್ಯ. ಹಾಗೆಯೆ ಹರಿಯುತ್ತಿರುವ ನದಿಯಲ್ಲಿ ಈಜಾಡಲು ದುಡ್ಡು, ಗಾಳ ಹಾಕಿ ಮೀನು ಹಿಡಿಯಲು ದುಡ್ಡು, ಬಟ್ಟೆಯೊಗೆಯಲು ದುಡ್ಡು, ಕೊನೆಗೆ ಬೊಗಸೆ ನೀರು ಕುಡಿಯಲೂ ದುಡ್ಡು ಎಂಬ ವಿಚಿತ್ರ ಕಾನೂನುಗಳೇನಾದರೂ ಬಂದುಬಿಟ್ಟರೆ ಅದು ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತೆ.

ಒಳ್ಳೆಯ ಬೆಳೆ ಆಗಿಯೂ ಸೂಕ್ತ ಬೆಲೆ ಸಿಗದಿದ್ದರೆ ರೈತ ಸಹಿಸಿಕೊಳ್ಳಬಲ್ಲ. ಮಳೆಯಿಲ್ಲದೆ ಬೆಳೆ ಒಣಗಿ ಹೋದರೂ ರೈತ ಸಹಿಸಿಕೊಳ್ಳಬಲ್ಲ. ಆದರೆ, ಯಾವುದೊ ಕಾರಣಕ್ಕಾಗಿ ಇರುವ ನೀರನ್ನು ತನ್ನ ಗದ್ದೆಗೆ ಹನಿಸದೆ ಹೋದರೆ ರೈತ ಸಹಿಸಲಾರ. ಅಷ್ಟಕ್ಕೂ ಆತ ಏನೇ ಆಗಲಿ ಗೊಣಗಿಕೊಂಡೇ ಸುಮ್ಮನಾಗುವ, ಮನೆ ಬಿಟ್ಟು ಹೊರಬರದ ನಗರವಾಸಿ ಮಧ್ಯಮವರ್ಗದವನಲ್ಲ. ವಾತಾವರಣದಲ್ಲಿನ ಚಂಚಲತೆಯೆಂತೆ ಬದಲಾಗುವ ರೈತನ ಚಂಚಲ ಮನೋಭಾವದ, ಅಸ್ಥಿರ ಜೀವನದ, ಅವರ ಸಂಖ್ಯಾಬಲದ ಹಾಗೂ ಮನುಷ್ಯನ ಅಸಹಾಯಕತೆಯ ರೋಷದ ಪರಿಚಯ ಇಲ್ಲದ ಅವಿವೇಕಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಮಾತ್ರ ನದಿಯನ್ನು, ನೀರನ್ನು ಖಾಸಗೀಕರಣಗೊಳಿಸುತ್ತಾರೆ.

ಅವರಿಗಿಂತ ಅವಿವೇಕಿಗಳು, ಪ್ರಪಂಚದ ಇತರ ಕಡೆಗಳಲ್ಲಿ ನೀರಿನ ಸುದ್ದಿಗೆ ಹೋಗಿ ಕೈಸುಟ್ಟಕೊಂಡವರ ಕತೆಯ ಅರಿವಿಲ್ಲದ ತಿಳಿಗೇಡಿಗಳು ಮಾತ್ರ ಅಂತಹುದನ್ನು ಲಾಭದ ಆಸೆಯಲ್ಲಿ ಕೊಳ್ಳಲು ಮುಂದೆ ಬರುತ್ತಾರೆ.

ಮಹಾರಾಷ್ಟ್ರದಲ್ಲಿ ಆರಂಭವಾಗಿರುವ ಚಾಳಿ ಪಕ್ಕದ ರಾಜ್ಯಗಳಿಗೂ ಹಬ್ಬದೆ ಇರಲಿ ಎಂದು ಬಯಸೋಣ, ಅಲ್ಲವೆ? ಇಲ್ಲದಿದ್ದರೆ, ನಮ್ಮಲ್ಲಿಯ ಭ್ರಷ್ಟರು ಪೈಪೋಟಿಯ ಮೇಲೆ ಕೆ.ಆರ್.ಎಸ್. ಡ್ಯಾಮ್ ಪ್ರೈವೇಟ್ ಲಿಮಿಟೆಡ್, ಆಲಮಟ್ಟಿ ಡ್ಯಾಮ್ ಪ್ರೈವೇಟ್ ಲಿಮಿಟೆಡ್, ತುಂಗಭದ್ರ ಡ್ಯಾಮ್ ಪ್ರೈವೇಟ್ ಲಿಮಿಟೆಡ್‌ಗಳಿಗೆ ಅವೆಲ್ಲವನ್ನೂ ಮಾರಿಬಿಡುತ್ತಾರೆ; ಬೆಂಗಳೂರಿನ ಸುತ್ತಮುತ್ತಲ ಸರ್ಕಾರಿ ಜಮೀನನ್ನು ಹರಾಜು ಹಾಕಿದಂತೆ.

Dec 12, 2007

"ಏಯ್ ಬೋ.. ಮಗನೆ, ಭಾರತಕ್ಕೆ ಹಿಂದಿರುಗಿ ಹೋಗೊ..."

(ವಿಕ್ರಾಂತ ಕರ್ನಾಟಕ - ಡಿಸೆಂಬರ್ 21, 2007 ರ ಸಂಚಿಕೆಯಲ್ಲಿನ ಬರಹ)

ಆ ರಾಜ್ಯದ ನಗರವೊಂದರಲ್ಲಿ ಆತನದೊಂದು ಸಣ್ಣ ಫ್ಯಾಕ್ಟರಿ ಇರುತ್ತದೆ. ಖರ್ಚು ಹೆಚ್ಚಾಗಿ ಲಾಭಾಂಶ ಕಡಿಮೆ ಆಗುತ್ತಿದ್ದ ಸಮಯ ಅದು. ಬಹಳ ದಿನಗಳಿಂದ ಸ್ಥಳೀಯರೇ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಸಂಬಳಗಳೂ, ಖರ್ಚುಗಳೂ ಜಾಸ್ತಿ. ಆ ಸಮಯದಲ್ಲಿ ಮಾಲೀಕನಿಗೆ ದೂರದ ಊರಿನಲ್ಲಿ ಕಮ್ಮಿ ಬೆಲೆಗೆ ಕೂಲಿಯವರು ಸಿಗುತ್ತಾರೆ ಎಂದು ಯಾರೋ ಹೇಳುತ್ತಾರೆ. ಸರಿ. ಇವನು ಒಬ್ಬ ಮೇಸ್ತ್ರ್ರಿಗೆ ದುಡ್ಡು ಕೊಟ್ಟು ಆ ಊರಿನಿಂದ ಒಂದೈವತ್ತು ಜನರನ್ನು ಕರೆಸಿಕೊಳ್ಳುತ್ತಾನೆ. ಕೂಲಿಯವರು ಬಂದ ತಕ್ಷಣ ಅವರನ್ನು ಫ್ಯಾಕ್ಟರಿಯ ಶೆಡ್ ಒಂದರಲ್ಲಿ ಕೂಡಿ ಹಾಕುತ್ತಾನೆ. ಮೊದಲ ದಿನದಿಂದಲೇ ಕೆಲಸ ಶುರು. ಪ್ರತಿದಿನ 12-16 ಗಂಟೆ ಕೆಲಸ. ಕೆಲಸ ಮುಗಿಸಿ ಅವರು ಹೊಸ ಊರು ನೋಡಲೆಂದು ಹೊರಗೆ ಹೋಗುವಂತಿಲ್ಲ. ಕಾಂಪೌಂಡ್ ಗೇಟ್‌ಗೆ ಬೀಗ ಹಾಕಲಾಗಿರುತ್ತದೆ. ಈ ಪರದೇಶಿಗಳು ಕೆಲಸ ಮಾಡಲು ಆರಂಭಿಸಿದ ತಕ್ಷಣ ಮಾಲೀಕ ಸ್ಥಳೀಯರನ್ನೆಲ್ಲ ತೆಗೆದುಹಾಕಿ ಬಿಡುತ್ತಾನೆ. ಸ್ಥಳೀಯರಿಗೆ ಕೊಡುತ್ತಿದ್ದ ಕೂಲಿಯಲ್ಲಿಯ ಕಾಲು ಭಾಗಕ್ಕಿಂತ ಕಮ್ಮಿ ಸಂಬಳ ಇವರಿಗೆ. ಯಜಮಾನ ತಾನೆ ಖುದ್ದಾಗಿ ನಿಂತು ಒಂದುಮೊಟ್ಟೆಯ ಆಮ್ಲೆಟ್ ಅನ್ನು ಇಬ್ಬರು ಕೂಲಿಗಳಿಗೆ ಬ್ರೇಕ್‌ಫಾಸ್ಟ್ ಎಂದು ಹಂಚುತ್ತಾನೆ. ಒಂದು ಸೇಬನ್ನು ನಾಲ್ಕು ಭಾಗ ಮಾಡಿ ನಾಲ್ವರಿಗೆ ಕೊಡುತ್ತಾನೆ. ಸುಂದರ ಭವಿಷ್ಯದ ಕನಸು ಹೊತ್ತು ಬಂದ ಈ ಗಂಡಸರ ಅಪ್ಪಅಮ್ಮಂದಿರು, ಹೆಂಡತಿಮಕ್ಕಳು ಊರಿನಲ್ಲಿ. ಇಲ್ಲಿ ಅಪರಿಚಿತ ಸ್ಥಳದಲ್ಲಿ ಇವರು ಜೀತದಾಳುಗಳು. ಗುಲಾಮರು. ಕೆಲಸ ನಿಧಾನ ಆಯಿತೆಂದರೆ ಯಜಮಾನ ಬಂದು ಬಂದು ಕೆಟ್ಟ ಮಾತಿನಲ್ಲಿ ಬೈಯ್ಯುತ್ತಿದ್ದ: "ಬೋಳಿ ಮಗನೆ, ನೀನು ಭಾರತಕ್ಕೆ ಹಿಂದಿರುಗಿ ಹೋಗೊ...!!"

ಈ ಗುಲಾಮಗಿರಿಯ ಕತೆ ನಡೆದದ್ದು ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ. ನೂರಾರು ವರ್ಷಗಳ ಇಲ್ಲವೆ ಹತ್ತಾರು ವರ್ಷಗಳ ಹಿಂದೆಯಲ್ಲ; ಕೇವಲ 6 ವರ್ಷಗಳ ಹಿಂದೆ. ಹೌದು. ಆ ಕೂಲಿ ಆಳುಗಳು ಭಾರತದಿಂದ ಬಂದ 52 ಜನ ಫಿಟ್ಟರ್‌ಗಳು, ವೆಲ್ಡರ್‌ಗಳು. ಅವರಲ್ಲೊಬ್ಬ ಎಲೆಕ್ಟ್ರಿಕಲ್ ಇಂಜಿನಿಯರ್ ಸಹಾ ಇದ್ದ...

---x---

ಮೆಕ್ಸಿಕೋಗೆ ಹೊಂದಿಕೊಂಡಿರುವ ಕ್ಯಾಲಿಫೋರ್ನಿಯದಂತಹ ರಾಜ್ಯಗಳಲ್ಲಿ ಎಲ್ಲಾದರೂ ಕೃಷಿ ಕೆಲಸದಲ್ಲಿ ತೊಡಗಿರುವ ಒಂದು ಗುಂಪು ನಿಮಗೆ ಕಾಣಿಸಿದರೆ ಅದು ಖಂಡಿತವಾಗಿ ಮೆಕ್ಸಿಕೊ, ಇಲ್ಲವೆ ಮಧ್ಯಅಮೇರಿಕದ ರಾಷ್ಟ್ರಗಳಿಂದ ಇಲ್ಲಿಗೆ ಜೀವನ ಹುಡುಕಿಕೊಂಡು ಬಂದಿರುವ ಲ್ಯಾಟಿನೋಗಳದೇ ಆಗಿರುತ್ತದೆ. ಕಳೆದ ಮೂರು-ನಾಲ್ಕು ಶತಮಾನಗಳಿಂದ ಆಫ್ರಿಕನ್ ಮೂಲದ ಕಪ್ಪು ಜನರು ಎಂತೆಂತಹ ಕೆಲಸ ಮಾಡುತ್ತಿದ್ದರೊ ಅದನ್ನು ಇವತ್ತು ಈ ಲ್ಯಾಟಿನೋಗಳು ಮಾಡುತ್ತಿದ್ದಾರೆ. ಇವರಲ್ಲಿ ಎಷ್ಟೋ ಜನ ಅಮೇರಿಕದಲ್ಲಿ ಕೂಲಿ ಮಾಡಲು ಎಂತೆಂತಹುದೊ ಪಡಿಪಾಟಲುಗಳನ್ನು ಪಟ್ಟುಕೊಂಡು, ಕಳ್ಳತನದಲ್ಲಿ ಈ ದೇಶದೊಳಕ್ಕೆ ನುಸುಳಿ ಬಂದಿರುತ್ತಾರೆ. ಇವರಿಲ್ಲದಿದ್ದರೆ ಅಮೇರಿಕದ ಕೃಷಿಯೇ ನಿಂತುಹೋಗುತ್ತದೆ ಎನ್ನುವ ಸ್ಥಿತಿಗೆ ಈ ದೇಶ ಇಂದು ಬಂದು ಬಿಟ್ಟಿದೆ.

ತಮ್ಮ ಸ್ವಂತ ಊರಿನಲ್ಲಿನ ಜೀವನಕ್ಕಿಂತ ಹೆಚ್ಚು ಸಹನೀಯವಾದ ಜೀವನ ಹುಡುಕಿಕೊಂಡು ಮನುಷ್ಯ ಅಲೆಮಾರಿ ಆಗುತ್ತಲೇ ಇದ್ದಾನೆ. ಯಾವಯಾವ ದೇಶದಲ್ಲಿ ಬಡತನ ಹೆಚ್ಚಿದೆಯೊ, ನಿರುದ್ಯೋಗ ಹೆಚ್ಚಿದೆಯೊ ಅಲ್ಲಿಂದೆಲ್ಲ ಜನ ಗುಳೆ ಹೋಗುತ್ತಲೇ ಇರುತ್ತಾರೆ. ನೋಬೆಲ್ ಪುರಸ್ಕೃತ ಅಮೇರಿಕನ್ ಸಾಹಿತಿ ಜಾನ್ ಸ್ಟೈನ್‌ಬೇಕ್ ತನ್ನ "ದ ಗ್ರೇಪ್ಸ್ ಆಫ್ ವ್ರ್ಯಾಥ್" ಕಾದಂಬರಿಯಲ್ಲಿ ಕಳೆದ ಶತಮಾನದ ಉತ್ತರಾರ್ಧದಲ್ಲಿ ಹೇಗೆ ಅಮೇರಿಕದ ರೈತರು ಮಣ್ಣಿನ ವಾಸನೆ ಕಳೆದುಕೊಂಡರು, ಕೃಷಿ ಎನ್ನುವುದು ಹೇಗೆ ಉದ್ಯಮವಾಗಿಬಿಟ್ಟಿತು, ಹೇಗೆ ಆ ರೈತರು ಆಮದು ಮಾಡಿಕೊಂಡ ಪರದೇಶಿ ಕೂಲಿಗಳಿಂದ ಕೆಲಸ ಮಾಡಿಸುತ್ತ ನೆಲವನ್ನು, ಅದರ ವಾಸನೆಯನ್ನು, ಸ್ಪರ್ಶವನ್ನು ಮರೆತರು, ಮತ್ತು ಹೇಗೆ ಆ ಕೃಷಿಕಾರ್ಮಿಕರನ್ನು ದಂಡಿಸುತ್ತಿದ್ದರು ಎಂದು ಹೇಳುತ್ತ ಹೀಗೆ ಬರೆಯುತ್ತಾನೆ: "ಚೀನಾದಿಂದ, ಜಪಾನಿನಿಂದ, ಮೆಕ್ಸಿಕೋದಿಂದ, ಫಿಲಿಫ್ಫೀನ್ಸ್‌ನಿಂದ ಗುಲಾಮರನ್ನು ಆಮದು ಮಾಡಿಕೊಂಡರು. ಈಗ ಅವರನ್ನು ಗುಲಾಮರು ಎಂದೇನೂ ಕರೆಯುತ್ತಿರಲಿಲ್ಲ. ಅವರ ಬಗ್ಗೆ ಒಬ್ಬ ಬ್ಯುಸಿನೆಸ್‌ಮ್ಯಾನ್ ಹೀಗಂದ, ಅವರು ಕೇವಲ ಬೇಳೆ ಮತ್ತು ಅಕ್ಕಿಯಿಂದಲೆ ಜೀವನ ಮಾಡುತ್ತಾರೆ. ಅವರಿಗೆ ಒಳ್ಳೆಯ ಸಂಬಳ ತೆಗೆದುಕೊಂಡು ಏನು ಮಾಡಬೇಕು ಅಂತಲೆ ಗೊತ್ತಿಲ್ಲ. ಯಾಕೆ, ಅಂತೀರ? ನೋಡಿ. ಅವರು ಎಂತಹುದನ್ನು (ಅಗ್ಗವಾದದ್ದನ್ನು) ತಿನ್ನುತ್ತಾರೆ ನೋಡಿ. ಮತ್ತೆ, ಅವರೇನಾದರೂ ಸ್ವಲ್ಪ ತರಲೆ ಮಾಡಲು ಆರಂಭಿಸಿದರೆ ಸುಲಭವಾಗಿ ದೇಶದಿಂದ ಗಡಿಪಾರು ಮಾಡಬಹುದು...." ಇದನ್ನು ಸ್ಟೈನ್‌ಬೆಕ್ ಬರೆದದ್ದು 1939 ರಲ್ಲಿ.

ಟಲ್ಸ ಎನ್ನುವುದು ಓಕ್ಲಹೋಮ ಎನ್ನುವ ರಾಜ್ಯದಲ್ಲಿರುವ, ಸುಮಾರು ನಾಲ್ಕು ಲಕ್ಷ ಜನಸಂಖ್ಯೆಯ ಒಂದು ದೊಡ್ಡ ನಗರ. ಜಾನ್ ಪಿಕ್ಲ್ ಕಂಪನಿ ಎನ್ನುವುದು ತೈಲ ಉದ್ದಿಮೆಗಳಿಗೆ ಯಂತ್ರೋಪಕರಣಗಳನ್ನು ತಯಾರಿಸಿ ಕೊಡುವ ಅಲ್ಲಿಯ ಒಂದು ಕಂಪನಿ. ಜಾನ್ ಪಿಕ್ಲ್ ಎನ್ನುವವನು ಅದರ ಮಾಲೀಕ. ಸುಮಾರು 60 ಎಕರೆಗಳ ವಿಶಾಲ ಪ್ರದೇಶದಲ್ಲಿ ಹರಡಿದ್ದ ಫ್ಯಾಕ್ಟರಿ ಅದು. ಇಲ್ಲಿಯ ಲೆಕ್ಕಾಚಾರದಲ್ಲಿ ಆತ ಒಬ್ಬ ಸಣ್ಣ ಉದ್ದಿಮೆದಾರ. ಆರು ವರ್ಷಗಳ ಹಿಂದೆ, ಅಂದರೆ 2001 ರಲ್ಲಿ ಜಾನ್ ಪಿಕ್ಲ್ ಭಾರತಕ್ಕೆ ಹೋಗಿ ಅಲ್ಲಿಂದ ೫೨ ಜನ ಭಾರತೀಯರನ್ನು ಕರೆದುಕೊಂಡು ಬರುತ್ತಾನೆ. ವೆಲ್ಡರ್‌ಗಳು, ಎಲೆಕ್ಟ್ರಿಶಿಯನ್‌ಗಳು, ಲೇತ್ ಕೆಲಸ ಮಾಡುವ ಫಿಟ್ಟರ್‌ಗಳು ಅವರು. ಅವರಿಗೆ ಅಡಿಗೆ ಮಾಡಿಹಾಕಲು ಇಬ್ಬರು ಅಡಿಗೆಭಟ್ಟರೂ ಆ ಗುಂಪಿನಲ್ಲಿ ಇರುತ್ತಾರೆ. ಅವರಿಗೆಲ್ಲ ಎಚ್-1 ವೀಸಾದ ಸುಳ್ಳು ಆಶ್ವಾಸನೆ ನೀಡಿ, ಅದಕ್ಕಿಂತ ಕಡಿಮೆ ಹಕ್ಕುಗಳಿರುವ ಬಿ-1 ವೀಸಾದಲ್ಲಿ ಕರೆದುಕೊಂಡು ಬರುತ್ತಾನೆ, ಜಾನ್ ಪಿಕ್ಲ್. ಅದಕ್ಕೆ ಆ ಭಾರತೀಯರಿಂದಲೆ ಸುಮಾರು ಒಂದು ಲಕ್ಷ ರೂಪಾಯಿಗೂ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗಿರುತ್ತದೆ. ಅವರು ಟಲ್ಸದ ಕಾರ್ಖಾನೆಯಲ್ಲಿ ಬಂದಿಳಿದ ತಕ್ಷಣ ಜಾನ್ ಪಿಕ್ಲ್‌ನ ಹೆಂಡತಿ ಖುದ್ದಾಗಿ ಅವರಿಂದ ಪಾಸ್‌ಪೋರ್ಟ್‌ಗಳನ್ನು ಕಿತ್ತಿಟ್ಟುಕೊಳ್ಳುತ್ತಾಳೆ. 52 ಜನರನ್ನೂ ಹತ್ತಿಪ್ಪತ್ತು ಜನರ ವಾಸಕ್ಕಷ್ಟೇ ಯೋಗ್ಯವಾದ ಕಟ್ಟಡದಲ್ಲಿ ವಾಸ ಮಾಡಲು ಹೇಳುತ್ತಾರೆ. ವಾಸಕ್ಕಾಗಿ ಅಲ್ಪಸ್ವಲ್ಪ ಬದಲಾಯಿಸಿದ್ದ ಹಳೇ ಶೆಡ್ಡು ಅದು.
ಲೇಖನದ ವಿಡಿಯೊ ಪ್ರಸ್ತುತಿ

ಬಂದವರು ಬೇಗಬೇಗ ಕೆಲಸ ಕಲಿತ ಮೇಲೆ ಅಲ್ಲಿಯ ಹಳಬರನ್ನೆಲ್ಲ ಪಿಕ್ಲ್ ಕೆಲಸದಿಂದ ತೆಗೆದುಬಿಡುತ್ತಾನೆ. ಸ್ಥಳೀಯರಿಗೆ ಕೊಡುತ್ತಿದ್ದ ಸಂಬಳ 2-3 ಸಾವಿರ ಡಾಲರ್ ಆಗಿದ್ದರೆ ಇವರಿಗೆ ಕೇವಲ 500 ಡಾಲರ್ ಸಂಬಳ. ವಾರಕ್ಕೆ ಆರು ದಿನಗಳ ಕೆಲಸ. ದಿನಕ್ಕೆ 12-16ಗಂಟೆಗಳ ಕತ್ತೆ ದುಡಿತ. ಸ್ವಲ್ಪ ನಿಧಾನ ಮಾಡಿದರೆ ನೀವು ಭಾರತೀಯರು ಸೋಮಾರಿಗಳು, ಎಂಬ ಬೈಗಳು. ದಿನೇದಿನೆ ಪರಿಸ್ಥಿತಿ ಬಿಗಡಾಯಿಸುತ್ತ ಹೋಗುತ್ತದೆ. ಅಪ್ಪಣೆ ಇಲ್ಲದೆ ಫ್ಯಾಕ್ಟರಿಯಿಂದ ಹೊರಗೆ ಹೋದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಮತ್ತು ಭಾರತಕ್ಕೆ ಗಡಿಪಾರು ಮಾಡಲಾಗುತ್ತದೆ ಎಂಬ ಎಚ್ಚರಿಕೆ ಕೊಟ್ಟಿರಲಾಗುತ್ತದೆ. ಕೊನೆಗೆ ಮಾಲೀಕನೆ ಅವರಿಗೆ ಒದಗಿಸಲಾಗುವ ಊಟದ ಉಸ್ತುವಾರಿಯನ್ನು ನೋಡಿಕೊಳ್ಳಲು ಆರಂಭಿಸುತ್ತಾನೆ. "ನೀವು ಗತಿಯಿಲ್ಲದೆ ಇದ್ದವರು, ನೀವು ಭಾರತದಲ್ಲಿ ತಿನ್ನುವುದನ್ನು ನಾನು ನೋಡಿಲ್ಲವ, ನಿಮಗೆಲ್ಲ ಯಾಕಷ್ಟು ಊಟ?" ಎಂದು ಜಬರಿಸುತ್ತಾನೆ. ಮೂರು ದಿನಕ್ಕೊಮ್ಮೆ ಒಂದು ಲೋಟ ಹಾಲು. ಕಮ್ಮಿ ಬೆಲೆಯ ಅಕ್ಕಿ. ಮೆಕ್ಸಿಕನ್ನರು ತಿನ್ನುವ ಕಂದುಬಣ್ಣದ ಹಲಸಂದೆಯೆ ಮುಖ್ಯ ಆಹಾರ. ಭಾರತೀಯ ಸಾಂಬಾರುಮಸಾಲೆ ಸಾಮಗ್ರಿಗಳು ತುಟ್ಟಿ ಎಂದು ಅವಕ್ಕೂ ಕೊಕ್ಕೆ. ಕಬ್ಬಿಣದ ಕೆಲಸ ಮಾಡುವಾಗ ಏನಾದರೂ ಅಪಘಾತವಾಗಿ, ಯಾರಿಗಾದರೂ ಗಾಯವಾದರೆ ಏನೋ ಒಂದು ನೋವುನಿವಾರಕ ಮಾತ್ರೆ ತಂದುಕೊಡುತ್ತಿದ್ದರು. ಆಸ್ಪತೆಗೆ ಕರೆದುಕೊಂಡು ಹೋಗುವ ಮಾತೇ ಇಲ್ಲ. ಯಾರಾದರೂ ಕಾಯಿಲೆ ಬಿದ್ದರೆ, ಪಿಕ್ಲ್ "ನೀನು ವೈದ್ಯರ ಬಳಿಗೆ ಹೋಗಬೇಕ? ನಾನೆ ನಿನ್ನ ವೈದ್ಯ," ಎನ್ನುತ್ತಿದ್ದ.

ಆ ಭಾರತೀಯರಿಗೆ ಬದುಕು ಅಸಹನೀಯವಾಗಲಾರಂಭಿಸಿತು. ಇಸ್ಲಾಂ ಕೋಮುವಾದಿಗಳು ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ ಮಾಡಿ ಆಗ ಮೂರ್ನಾಲ್ಕು ತಿಂಗಳಾಗಿತ್ತಷ್ಟೆ. ಆದರೂ ಕೆಲವರು ದನಿಯೆತ್ತಲು ಆರಂಭಿಸಿದರು. ಆಗ ಪಿಕ್ಲ್ ಅವರಿಗೆ ಗಡಿಪಾರು ಮಾಡುವುದಾಗಿ ಹೆದರಿಸುತ್ತಿದ್ದ. ಒಮ್ಮೆ ರಜಾದಿನ ಕೆಲವರು ಹತ್ತಿರದಲ್ಲಿ ಇದ್ದ ಚರ್ಚಿಗೆ ಹೋಗಲು ಅಪ್ಪಣೆ ಕೇಳಿದರೆ "ಬೋಳಿ ಮಗನೆ, ನೀನು ಭಾರತಕ್ಕೆ ಹಿಂದಿರುಗಿ ಹೋಗು," ಎಂದು ಇನ್ನೂ ಏನೇನೊ ಕೆಟ್ಟ ಮಾತುಗಳನ್ನು ಬೈದ.

ಕೊನೆಗೆ ಸಹಾಯ ಚರ್ಚಿನ ಮೂಲಕವೇ ಬರುತ್ತದೆ. ಇವರ ಪರಿಸ್ಥಿತಿ ನೋಡಿದ ಮಾರ್ಕ್ ಎನ್ನುವ ಚರ್ಚಿನಲ್ಲಿ ಪರಿಚಯವಾದ ಸಜ್ಜನನೊಬ್ಬ ನಿಮಗೇನಾದರೂ ಸಹಾಯ ಬೇಕಾದರೆ ಹೇಳಿ ಎಂದಿರುತ್ತಾನೆ. ಕಾರ್ಖಾನೆಯ ಒಳಗೆ ಒಮ್ಮೆ ಪರಿಸ್ಥಿತಿ ಬಿಗಡಾಯಿಸಿ ಏಳು ಜನರನ್ನು ಮಾರನೆಯ ದಿನ ಗಡಿಪಾರು ಮಾಡಲು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಆ ಏಳೂ ಜನರು ಅಂದು ರಾತ್ರಿ ಕಾಂಪೌಂಡ್‌ನ ಕೆಳಗೆ ನುಸುಳಿ ಓಡಿ ಬಂದು ಬಿಡುತ್ತಾರೆ. ಮಾರ್ಕ್ ಅವರಿಗೆಲ್ಲ ಆಶ್ರಯ ಕೊಡುತ್ತಾನೆ. ಇದು ಕತೆಯ ಅರ್ಧ ಮಾತ್ರ. ಅವರು ಓಡಿ ಬಂದನಂತರ ಒಳಗೆ ರೈಫಲ್ ಹಿಡಿದ ಗಾರ್ಡ್ ಉಳಿದವರನ್ನು ಕಾವಲು ಕಾಯಲು ಪ್ರಾರಂಭಿಸುತ್ತಾನೆ. ಅಲ್ಲಿರುವ ಮಿಕ್ಕ 45 ಜನರೂ ಸಂಪೂರ್ಣವಾಗಿ ಈ ಆಧುನಿಕ ಗುಲಾಮಿತನದಿಂದ ಸಂಪೂರ್ಣವಾಗಿ ಬಿಡಿಸಿಕೊಳ್ಳಬೇಕಾದರೆ ತಿಂಗಳುಗಳು ಹಿಡಿಸುತ್ತವೆ. ಮಾರ್ಕ್, ಒಬ್ಬ ವಕೀಲ, ಮತ್ತು ಸ್ಥಳೀಯ ಚರ್ಚಿನ ಸಹಾಯದಿಂದ ಕೊನೆಗೂ ಎಲ್ಲರ ಬಿಡುಗಡೆ ಆಗುತ್ತದೆ. ಒಟ್ಟು ಐದು ತಿಂಗಳುಗಳ ಕಾಲ ಈ ನತದೃಷ್ಟ ಭಾರತೀಯರು ಅಮೇರಿಕದ ನೆಲದಲ್ಲಿ ಅಕ್ಷರಶಃ ಜೀತದಾಳುಗಳಾಗಿ ನರಕಸದೃಶ ಜೀವನ ನಡೆಸಿರುತ್ತಾರೆ. ಅದೂ, ಕೇವಲ ಆರು ವರ್ಷಗಳ ಇತ್ತೀಚೆಗೆ.

ಇದೇ ವಿಷಯದ ಮೇಲೆ ಈಗಲೂ ಕೋರ್ಟುಕಚೇರಿಗಳು ನಡೆಯುತ್ತಿವೆ. ಆದರೆ, ಇಲ್ಲಿ ನಮಗೆ ಮುಖ್ಯವಾಗಬೇಕಿರುವುದು ಇಂತಹುದಕ್ಕೆ ಇಲ್ಲಿಯ ಪ್ರಜ್ಞಾವಂತ ಸಮೂಹ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದು. ಜಾನ್ ಬೊವ್ ಎಂಬ ಯುವ ಪತ್ರಕರ್ತನೊಬ್ಬ ಇಂತಹುದೇ ಇನ್ನೆರಡು ಆಧುನಿಕ ಕಾಲದ ಗುಲಾಮರ ಘಟನೆಗಳನ್ನಿಟ್ಟುಕೊಂಡು ಇತ್ತೀಚೆಗೆ ತಾನೆ ಓoboಜies: “Nobodies: Modern American Slave Labor and the Dark Side of the Global Economy” ಎಂಬ ಪುಸ್ತಕ ಬರೆದಿದ್ದಾನೆ. ಇಂತಹುವುಗಳನ್ನು ತಡೆಯುವುದು ಹೇಗೆ ಎಂದು ಮಾತನಾಡುತ್ತಿದ್ದಾನೆ. ಪಾಲಿಸಿ ಮೇಕಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ಅವನಂತಹ ಪ್ರಜ್ಞಾವಂತ ಜನ ಈ ದೇಶದಲ್ಲಿ ಅಂತಹವು ಆಗದ ರೀತಿ ಏನು ಮಾಡಬೇಕೊ ಅಂತಹುದನ್ನು ಮಾಡಲು ಯತ್ನಿಸುತ್ತಿದ್ದಾರೆ.

ಆದರೆ, ನಮ್ಮಲ್ಲಿ?

ಕ್ರಿಯಾಶೀಲರಲ್ಲದ ಚಿಂತಕರು:
ಭಾರತದ ಮಟ್ಟದಲ್ಲಿ ಹೇಳಬೇಕೆಂದರೆ ಇಂದು ಅನೇಕ ಪ್ರಾಮಾಣಿಕ ಮನಸ್ಸುಗಳು ಪಾಲಿಸಿ ಮೇಕಿಂಗ್‌ನಲ್ಲಿ ತೊಡಗಿಸಿಕೊಳ್ಳುತ್ತಿವೆ. ಅರುಣಾ ರಾಯ್, ಅರವಿಂದ್ ಖೇಜ್ರಿವಾಲ, ಜಯಪ್ರಕಾಶ್ ನಾರಾಯಣ್ ಮುಂತಾದವರು ಕೇಂದ್ರ ಸರ್ಕಾರಕ್ಕೆ ಕೆಲವು ಕಾಯಿದೆಕಾನೂನು ಬದಲಾಯಿಸಲು, ಸುಧಾರಿಸಲು ಸಲಹೆಸೂಚನೆ ಕೊಡುತ್ತಿದ್ದಾರೆ. ಹೋರಾಡುತ್ತಿದ್ದಾರೆ. ಕರ್ನಾಟಕದಲ್ಲಿ? ನಮ್ಮಲ್ಲಿ ಕನ್ನಡದ ಚಿಂತಕರದೆಲ್ಲ ಅದು ಬೇಡ, ಇದು ಬೇಡ ಎನ್ನುವ ಭಾಷಣಗಳೆ. ಏನು ಸುಧಾರಣೆ ಮಾಡಬೇಕು, ಹೇಗೆ ಮಾಡಬೇಕು ಎನ್ನುವ ಸಲಹೆಗಳೇ ಇಲ್ಲ. ಸರ್ಕಾರಕ್ಕೆ ಪ್ರಗತಿಪರರು ಕೊಡಬಹುದಾದ ಮಾರ್ಗದರ್ಶನಗಳೆಲ್ಲ ಬಹುಶಃ ಲಂಕೇಶರ 1985 ರ ಸುಮಾರಿಗೇ ನಿಂತು ಹೋಯಿತು ಎನ್ನಿಸುತ್ತದೆ. ಜನ ನೆಲೆ ಕಳೆದುಕೊಳ್ಳುತ್ತಿರುವುದಾಗಲಿ, ಕೆಲಸ ಹುಡುಕುತ್ತ ಅಲೆಮಾರಿಗಳಾಗಿರುವುದಾಗಲಿ, ರೈತರ ಆತ್ಮಹತ್ಯೆಗಳಾಗಲಿ, ಕರ್ನಾಟಕದ ಇತರ ಜ್ವಲಂತ ಸಮಸ್ಯೆಗಳ ಬಗ್ಗೆಯಾಗಲಿ ಯಾವೊಬ್ಬ ಕನ್ನಡದ ಪತ್ರಕರ್ತರೂ ಪಿ. ಸಾಯಿನಾಥ್ ಬರೆದಂತಹ ಒಂದು ಪುಸ್ತಕ ಬರೆದದ್ದು ಕಾಣಿಸಲಿಲ್ಲ. ಚರ್ಚೆ ಮಾಡಿದ್ದು ಕಾಣಿಸಲಿಲ್ಲ. ಈಗೆಲ್ಲ ರೌಡಿಗಳ, ರಾಜಕಾರಣಿಗಳ, ವೇಶ್ಯೆಯರ, ಭ್ರಷ್ಟರ ಕಂತೆಪುರಾಣ ಬರೆಯುವವರು, ದುಡ್ಡು ಮಾಡುವುದು ಹೇಗೆ ಎಂದು ಹೇಳುವವರೆ ಧರೆಗೆ ದೊಡ್ಡವರು.

ಉತ್ತಮ ವ್ಯವಸ್ಥೆಯನ್ನು ಯಾರೂ ಬೆಳ್ಳಿ ತಟ್ಟೆಯಲ್ಲಿ ಕೊಡುವುದಿಲ್ಲ. ಅಧಿಕಾರಶಾಹಿಗೆ, ರಾಜಕಾರಣಿಗಳಿಗೆ ಸಮಾಜಚಿಂತಕರು ಮಾರ್ಗದರ್ಶನವಾಗಲಿ, ತಿಳುವಳಿಕೆಯಾಗಲಿ ಕೊಡದೆ ಇದ್ದರೆ ನಮ್ಮದೇ ಈ ವ್ಯವಸ್ಥೆ ಸುಧಾರಿಸೀತಾದರೂ ಹೇಗೆ? ಕ್ರಿಯಾಶೀಲತೆಯಿಲ್ಲದ ಪ್ರಾಮಾಣಿಕತೆ ಉಪಯೋಗಕ್ಕೆ ಬಾರದ್ದು. ನಮ್ಮಲ್ಲಿಯ ಈ ಚಿಂತಕರು ಈಗ ಕ್ರಿಯಾಶೀಲರಾಗಬೇಕಿದೆ; ಮಾರ್ಗದರ್ಶಕರಾಗಬೇಕಿದೆ. ಇಲ್ಲದಿದ್ದರೆ ಅವರ ಮಾತುಗಳು ಕೇವಲ ಬೌದ್ಧಿಕ ಕಸರತ್ತಿನ ಬೊಗಳೆಗಳಾಗಿಬಿಡುತ್ತವೆ.

ಈಗ ಆಗಿರುವಂತೆ...

Dec 5, 2007

e-ಕನ್ನಡದ ಹೆಮ್ಮೆ ourkarnataka.com

(ವಿಕ್ರಾಂತ ಕರ್ನಾಟಕ - ಡಿಸೆಂಬರ್ 14, 2007 ರ ಸಂಚಿಕೆಯಲ್ಲಿನ ಬರಹ)

1999. ಆಗಿನ್ನೂ ಕನ್ನಡ ಅಂತರ್ಜಾಲ ನಿಧಾನಕ್ಕೆ ಕಣ್ಣು ತೆರೆಯುತ್ತಿತ್ತು. ಇದ್ದದ್ದು ಬಹುಶಃ ಬೆರಳೆಣಿಕೆಯ ಕನ್ನಡ ವೆಬ್‌ಸೈಟುಗಳು. ಬರಹ ವಾಸುರವರು ಬರಹ ಕನ್ನಡ ಲಿಪಿ ತಂತ್ರಾಂಶವನ್ನು ಉಚಿತವಾಗಿ ಒದಗಿಸಲು ಆರಂಭಿಸಿದ್ದ ದಿನಗಳು ಅವು. ಅ ದಿನಗಳಲ್ಲಿ ದಕ್ಷಿಣಕನ್ನಡ ಮೂಲದ, ಕೊಂಕಣಿ ಮನೆಮಾತಿನ, ಮೈಸೂರಿನ ಯುವಕನೊಬ್ಬ ಜರ್ಮನಿಗೆ ಪ್ರಾಜೆಕ್ಟ್ ಒಂದಕ್ಕೆ ನಾಲ್ಕಾರು ತಿಂಗಳ ಕಾಲ ಹೋಗುತ್ತಾನೆ. ಅಲ್ಲಿ ಬಯಸಿದ್ದಕ್ಕಿಂತ ಹೆಚ್ಚಿನ ಬಿಡುವು. ಆ ಬಿಡುವಿನಲ್ಲಿ ಕನ್ನಡದ ವೆಬ್‌ಸೈಟು ಒಂದನ್ನು ಆರಂಭಿಸುವ ಯೋಚನೆ ಬರುತ್ತದೆ. ಸರಿ, ಜರ್ಮನಿಯಿಂದಲೆ ಆ ವೆಬ್‌ಸೈಟು ಶುರುವಾಯಿತು. ಮೊದಲಿಗೆ ಕನ್ನಡ ಚಲಚಿತ್ರಗೀತೆಗಳನ್ನು ಒದಗಿಸಲಾಗುತ್ತಿತ್ತು. ಆ ಯುವಕನ ತಮ್ಮ ಮೈಸೂರಿನಲ್ಲಿ ಇನ್ನೂ ಕಾಲೇಜು ಓದುತ್ತಿದ್ದ. ಆತ ಆಗಾಗ ಕನ್ನಡದಲ್ಲಿ ಬರೆಯುತ್ತಿದ್ದ. ಆತನ ಒಂದಷ್ಟು ಲೇಖನಗಳು ಪ್ರಕಟವಾದವು. ಇತರೆ ಸ್ನೇಹಿತರದು ಮತ್ತಷ್ಟು. ವೆಬ್‌ಸೈಟಿಗೆ ಭೇಟಿ ಕೊಟ್ಟ ಓದುಗರು ಬರೆದ ಲೇಖನಗಳು ಮಗದಷ್ಟು. ಆ ಮಧ್ಯೆ ಬರಹ ವಾಸು ಸೈಟನ್ನು ಮತ್ತಷ್ಟು ಸುಧಾರಿಸಲು ಕೆಲವು ಸಲಹೆ ಕೊಟ್ಟರು. ಓದುಗರು ಫಾಂಟ್ ಅನ್ನು ಇನ್ಸ್ಟಾಲ್ ಮಾಡುವ ಅಗತ್ಯವಿಲ್ಲದೆ ಪುಟ ನೋಡಬಹುದಾದ ವ್ಯವಸ್ಥೆ ಇರುವ ಡೈನಾಮಿಕ್ ಫಾಂಟ್ಸ್‌ನ ವ್ಯವಸ್ಥೆ ಮಾಡಿಕೊಟ್ಟರು. ಹೀಗೆ ವೆಬ್‌ಸೈಟು ಬೆಳೆಯುತ್ತಾ ಹೋಯಿತು. ಇವತ್ತು ಯಾವುದಾದರೂ ಒಂದು ಕನ್ನಡ ವೆಬ್‌ಸೈಟಿನಲ್ಲಿ ಎಲ್ಲಾ ತರಹದ ವಿಷಯ ಸಾಮಗ್ರಿ ಇದೆ ಅಂದರೆ, ಅದು ಆ ಯುವಕ ಜರ್ಮನಿಯಲ್ಲಿ ಪ್ರಾರಂಭಿಸಿದ ourkarnataka.com ದಲ್ಲಿ. ಆತ ಶೇಷಗಿರಿ ಶೆಣೈ.

ಇಲ್ಲಿ ನಾನು ಎಲ್ಲಾ ತರಹದ ಸಾಮಗ್ರಿ ಎಂದೆ. ಹೌದು, ಅದು ಕ್ಲೀಷೆಯಲ್ಲ. ಹೊಸದಿಗಂತ, ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಹಲವು ಅಂಕಣ ಲೇಖನಗಳು, ಮೈಸೂರಿನ ಸ್ಟಾರ್ ಆಫ್ ಮೈಸೂರ್ ಇಂಗ್ಲಿಷ್ ದಿನಪತ್ರಿಕೆಯ ಲೇಖನಗಳು, ಲಂಕೇಶ್ ಪತ್ರಿಕೆಯ ಹಲವಾರು ಲೇಖನಗಳು, ಗೌರಿ ಲಂಕೇಶ್ ಪತ್ರಿಕೆಯ ಲೇಖನಗಳು; ಇವೆಲ್ಲವೂ ಪ್ರಕಟವಾಗುವುದು ಅವರ್‌ಕರ್ನಾಟಕ.ಕಾಮ್‌ನಲ್ಲಿ. "ಮುಸ್ಲಿಮರನ್ನು ಭಾರತದಿಂದ ಓಡಿಸಬೇಕು, ಹಿಡಿಬಡಿಕೊಲ್ಲು," ಎನ್ನುವಂತಹ ಉಗ್ರ ಬಲಪಂಥೀಯ ಲೇಖನಗಳಿಂದ ಹಿಡಿದು, ಗೌರಿ ಲಂಕೇಶ್ ಮಲೆನಾಡಿನ ಅರಣ್ಯದಲ್ಲಿ ಸಾಕೇತ್ ರಾಜನ್ ಸಂದರ್ಶನ ಮಾಡಿದ ಉಗ್ರ ಎಡಪಂಥೀಯ ಲೇಖನಗಳೂ ಇವತ್ತು ಇದೊಂದೆ ವೇದಿಕೆಯಲ್ಲಿ ಸಮಾನವಾಗಿ ಸ್ಥಳ ಹಂಚಿಕೊಂಡಿವೆ. ಭಾರತದ ಪುರೋಹಿತಶಾಹಿಯನ್ನು ವಿಜೃಂಭಿಸುವ ಲೇಖನದ ಪಕ್ಕದಲ್ಲಿಯೇ, ಅವೆಲ್ಲವನ್ನೂ ನಿರಾಕರಿಸುವ, ತೆಗಳುವ, ಲೇವಡಿ ಮಾಡುವ, ತನ್ನದೇ ರೀತಿಯಲ್ಲಿ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಸಂಗತಿಗಳನ್ನು ವಿಶ್ಲೇಷಿಸುವ ಬಿ. ಚಂದ್ರೇಗೌಡರ "ಕಟ್ಟೇಪುರಾಣ" ಪ್ರಕಟಗೊಳ್ಳುತ್ತಿದೆ.

ಅವರ್‌ಕರ್ನಾಟಕ.ಕಾಮಿನಲ್ಲಿ ಇಂತಹ ವಿಷಯದ ಬಗ್ಗೆ ಲೇಖನ ಇಲ್ಲ ಎನ್ನುವಂತಿಲ್ಲ. "ಕಡ್ಡಾಯವಾಗಿ ತುಂಟರಿಗಾಗಿ ಮಾತ್ರ" ಎನ್ನುವ ಟ್ಯಾಗ್‌ಲೈನಿನೊಂದಿಗೆ ಸುಮಾರು ಮೂರುನೂರಕ್ಕೂ ಹೆಚ್ಚಿನ ಜೋಕುಗಳು "Fiಟ್ಟಿಂgu" ಕಾಲಮ್ಮಿನಲ್ಲಿ ನಿಮಗೆ ಸಿಗುತ್ತವೆ. ಇನ್ಯಾವ ಕನ್ನಡದ ವೆಬ್‌ಸೈಟಿನಲ್ಲೂ ನಿಮಗೆ ಇಷ್ಟೊಂದು ಜೋಕುಗಳು ಒಂದೇ ಕಡೆ ಸಿಗುವುದಿಲ್ಲ. ಸಮಾಜದ ಭ್ರಷ್ಟರ ಕುರಿತು ವಿವಿಧ ಪತ್ರಿಕೆಗಳಲ್ಲಿ ಬಂದ ಲೇಖನಗಳನ್ನು, ಈ ವೆಬ್‌ಸೈಟಿಗೆಂದೇ ಓದುಗರು ಬರೆದ ಲೇಖನಗಳನ್ನು ಒಂದೆಡೆ ಪ್ರಕಟಿಸಿರುವ "ಥೂ ನಿಮ್ಮ" ವಿಭಾಗವಂತೂ ಹಲವಾರು ಪಟ್ಟಭದ್ರರ ಮುಖವನ್ನು ವಿಶ್ವದಾದ್ಯಂತದ ಕನ್ನಡ ಓದುಗರಿಗೆ ಬೇಕೆಂದಾಗ ತೋರಿಸುತ್ತದೆ. ಜ್ಯೋತಿಷ್ಯವೂ ಇದೆ; ಅದರ ಜೊತೆಯಲ್ಲಿಯೇ, ಪವಾಡಗಳ, ಜ್ಯೋತಿಷ್ಯಗಳ ಟೊಳ್ಳುತನವನ್ನು ಬಯಲು ಮಾಡುವ ವಿಚಾರವಾದಿ ಡಾ. ನರೇಂದ್ರ ನಾಯಕರ ಅನೇಕ ಲೇಖನಗಳಿವೆ. ಹಳೆಯಕಾಲದ ಗಾದೆಗಳಿಂದ ಹಿಡಿದು ಆಧುನಿಕ ಕಾಲದ ಗಾದೆಗಳ ತನಕ 2000 ಕ್ಕೂ ಹೆಚ್ಚಿನ ಕನ್ನಡ ಗಾದೆಗಳಿವೆ. 1800 ಕ್ಕೂ ಮೀರಿದ ಕನ್ನಡದ ಒಗಟುಗಳಿವೆ. "ಇಲ್ಲಿಯವರೆಗೂ ಹತ್ತು ಸಾವಿರಕ್ಕೂ ಹೆಚ್ಚಿನ ಹಾವುಗಳನ್ನು ಹಿಡಿದಿದ್ದೇನೆ," ಎನ್ನುವ ಮೈಸೂರಿನ ಸ್ನೇಕ್‌ಶ್ಯಾಮ್‌ರ ಸರ್ಪಲೋಕವೂ ಇಲ್ಲಿದೆ. ಕೊತ್ವಾಲ್ ರಾಮಚಂದ್ರ, ಮುತ್ತಪ್ಪ ರೈ, ಹೆಸರು ಬದಲಾಯಿಸಿಕೊಂಡು ಇಂಗ್ಲಿಷಿನಲ್ಲಿ ತನ್ನ ಭೂಗತಲೋಕದ ಕತೆ ಬರೆದುಕೊಂಡಿರುವ ವ್ಯಕ್ತಿಯೊಬ್ಬನ ಕತೆಯೂ ಇಲ್ಲಿದೆ. ಭಗವದ್ಗೀತೆಯ ಹಲವಾರು ಅಧ್ಯಾಯಗಳ ಕನ್ನಡ ಅನುವಾದವಿದೆ; ಮುಸ್ಲಿಮ್ ಸಂಪ್ರದಾಯಗಳ ಲೇಖನಗಳೂ ಇವೆ. ಸಂಸ್ಕೃತ, ತುಳು, ಕೊಡವ, ಕೊಂಕಣಿ ಭಾಷೆಗಳನ್ನು ಕಲಿಯಲು ಆನ್‌ಲೈನ್ ಪಾಠಗಳೂ ಇವೆ.

ದಂಡಪಿಂಡಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ:

ನಿಮಗೆಲ್ಲ ಗೊತ್ತಿರುವಂತೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಎಂಬ ಅಪ್ಪಟ ದಂಡಪಿಂಡಗಳ, ಸೂಟುಬೂಟುಧಾರಿಗಳ ಸರ್ಕಾರಿ ಇಲಾಖೆ ಒಂದಿದೆ. ಈ ಇಲಾಖೆ ಬೇರೆಬೇರೆ ವೇದಿಕೆಗಳಲ್ಲಿ ಏನು ಮಾಡುತ್ತದೆ ಎನ್ನುವುದರ ಬಗ್ಗೆ ನನಗೆ ಅಜ್ಞಾನ ಇರುವುದು ನಿಜವಾದರೂ, ಇಲ್ಲಿಯವರೆಗೂ ಇವರು ಕೈಗೊಂಡಿರುವ ಇಂಟರ್ನೆಟ್ ಯೋಜನೆಗಳೆಲ್ಲಾ ದೊಡ್ಡ ಫ್ಲಾಪ್ ಶೋಗಳು. ಬೇಜವಾಬ್ದಾರಿಯವು. ಹೇಳಬೇಕೆಂದರೆ ಅಂತರ್ಜಾಲದಲ್ಲಿನ ಕನ್ನಡ ದ್ರೋಹಿಗಳು ಇವರು. ಆದಿಕವಿ ಪಂಪನ ಪಂಪಭಾರತದಿಂದ ಹಿಡಿದು ಡಿವಿಜಿಯವರ ಮಂಕುತಿಮ್ಮನ ಕಗ್ಗದ ತನಕ ಅನೇಕ ಕನ್ನಡ ಕಾವ್ಯಗಳನ್ನು ಇವರು ಕನ್ನುಡಿ.ಆರ್ಗ್ ಎಂಬ ವೆಬ್‌ಸೈಟಿನಲ್ಲಿ ಪ್ರಕಟಿಸಿದ್ದರು. ಅದು ಬದುಕಿದ್ದದ್ದೆ ಒಂದೆರಡು ವರ್ಷ. ಹತ್ತಾರು ಲಕ್ಷ ಖರ್ಚು ಮಾಡಿ, ಸಮಗ್ರ ದಾಸ ಸಾಹಿತ್ಯವನ್ನು www.dasasahitya.org ಎಂಬ ಹೆಸರಿನಲ್ಲಿ ಬಹುಶಃ ಎರಡು ವರ್ಷದ ಹಿಂದೆ ಇಂಟರ್ನೆಟ್‌ನಲ್ಲಿ ಪ್ರಕಟಿಸಿದರು. ಇವತ್ತು ಅದರ ಡೊಮೈನ್ ಎಕ್ಸ್‌ಪೈರ್ ಆಗಿದೆ. ಸಮಗ್ರ ವಚನ ಸಾಹಿತ್ಯವನ್ನೂ ಹೀಗೆಯೇ ಲಕ್ಷಾಂತರ ಹಣ ವೆಚ್ಚ ಮಾಡಿ, ಕೇವಲ ಏಳೆಂಟು ತಿಂಗಳ ಹಿಂದೆ www.vachanasahitya.org ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಇಂದು ಅದರ ಡೊಮೈನೂ ಎಕ್ಸ್‌ಪೈರ್ ಆಗಿದೆ. ನಿಮಗಿದು ಗೊತ್ತಿರಲಿ, ಒಂದು ಡೊಮೈನ್‌ಗೆ ಒಂದು ವರ್ಷಕ್ಕೆ ತಗಲುವ ಖರ್ಚು ಕೇವಲ 400 ರೂಪಾಯಿಗಳು. ಎಲ್ಲಾ ಕಂಟೆಂಟ್ ಸಿದ್ದಪಡಿಸಿ ಒಂದು ಸಲ ವೆಬ್‌ಸೈಟಿಗೆ ಅಪ್‌ಲೋಡ್ ಮಾಡಿಬಿಟ್ಟರೆ, ಅದಕ್ಕೆ ಇಡೀ ವರ್ಷಕ್ಕೆ ಕೊಡಬೇಕಾಗಿರುವ ಬಾಡಿಗೆ ಹಣ 4000 ರೂಪಾಯಿಗೂ ಕಮ್ಮಿ. ಹತ್ತಿಪ್ಪತ್ತು ಲಕ್ಷ ಖರ್ಚು ಮಾಡಿ, ಎಲ್ಲವನ್ನೂ ಸಿದ್ದಪಡಿಸಿ, ಕೇವಲ ವೆಬ್‌ಸೈಟ್ ಉದ್ಘಾಟನೆಗೆಂದೇ ಲಕ್ಷಾಂತರ ಹಣವನ್ನು ಖರ್ಚು ಮಾಡಿ, ಧಾಂಧೂಮ್ ಎಂದು ಆರಂಭಿಸುವ ಈ ಹೊಣೆಗೇಡಿಗಳು, ಕೇವಲ ಒಂದೇ ವರ್ಷದಲ್ಲಿ ನಾಲ್ಕೈದು ಸಾವಿರ ರೂಪಾಯಿಗಳ ಕೆಲಸವನ್ನೂ ಸಮಯಕ್ಕೆ ಸರಿಯಾಗಿ ಮಾಡಲಾಗದೆ, ಕನ್ನಡದ ಕೆಲಸಕ್ಕೆ ಹೀಗೆ ಎಳ್ಳುನೀರು ಬಿಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿಯೇ ನಮಗೆ ಅವರ್‌ಕರ್ನಾಟಕ.ಕಾಮ್, ಅಂತರ್ಜಾಲದಲ್ಲಿ ಹೆಚ್ಚುಹೆಚ್ಚು ಪ್ರಸ್ತುತವಾಗುತ್ತದೆ. ಕನ್ನಡ ಅಂತರ್ಜಾಲಕ್ಕೆ ಸಂಬಂಧಪಟ್ಟಂತೆ ಯಾವುದನ್ನು ಕನ್ನಡ ಸಂಸ್ಕೃತಿ ನಿರ್ದೇಶನಾಲಯ ಮಾಡಬೇಕಿದೆಯೊ ಅದನ್ನು ಅವರ್‌ಕರ್ನಾಟಕ.ಕಾಮ್ ಕಳೆದ ಏಳೆಂಟು ವರ್ಷಗಳಿಂದ ಮಾಡಿಕೊಂಡು ಬಂದಿದೆ. ಇವತ್ತು ಕನ್ನಡ ಜ್ಞಾನಪೀಠ ಪುರಸ್ಕೃತರ ಬಗ್ಗೆ ಅಧಿಕೃತ ಮಹಿತಿ ನೀಡುವ ಒಂದು ಪುಟವನ್ನೂ ಕನ್ನಡ ಸಂಸ್ಕೃತಿ ಇಲಾಖೆ ಹೊಂದಿಲ್ಲ. ಆದರೆ, ಅವರ್‌ಕರ್ನಾಟಕ.ಕಾಮಿನಲ್ಲಿ ಕುವೆಂಪುರವರಿಂದ ಹಿಡಿದು ಅನಂತಮೂರ್ತಿಯವರ ತನಕ ಅವರ ವ್ಯಕ್ತಿಚಿತ್ರ, ಕೃತಿಪರಿಚಯ, ವಿಮರ್ಶೆಗಳಿವೆ. ನವೋದಯ, ನವ್ಯ, ಬಂಡಾಯ, ಜನಪದ, ಹೀಗೆ ಹಲವಾರು ಸಾಹಿತ್ಯ ಘಟ್ಟಗಳ ಕುರಿತ ವಿಸ್ತೃತ ಲೇಖನಗಳಿವೆ. ಬಹುಶಃ ಇಲ್ಲಿರುವಷ್ಟು ಕನ್ನಡ ಸಾಹಿತ್ಯ ಸಂಬಂಧಿ ಲೇಖನಗಳು, ಸಾಹಿತ್ಯಕ್ಕೇ ಮೀಸಲಾದ ಇತರ ವೆಬ್‌ಸೈಟುಗಳಲ್ಲಿ ಕಾಣಸಿಗುವುದೂ ಅಪರೂಪವೆ. ಹಾಗಾಗಿಯೇ ಇದೊಂದು ಕನ್ನಡ ಆನ್‌ಲೈನ್ ಲೈಬ್ರರಿ.

ಲೇಖನದ ವಿಡಿಯೊ ಪ್ರಸ್ತುತಿ

ಶೇಷಗಿರಿ ಶೆಣೈರವರ ಮನೆತನದ ಹಿರಿಯರು ಸ್ವಾತಂತ್ರ್ಯ ಹೋರಾಟದಲ್ಲಿಯೂ, ತುರ್ತುಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿಯೂ ಪಾಲ್ಗೊಂಡಿದ್ದವರು. ಜನಸಂಘ ಮತ್ತು ಆರೆಸ್ಸೆಸ್ ವಿಚಾರಧಾರೆಯ ಹಿನ್ನೆಲೆ ಹೊಂದಿರುವ ಕುಟುಂಬ. ಶೇಷಗಿರಿ ಕಳೆದ ಆರೇಳು ವರ್ಷಗಳಿಂದ ಇಲ್ಲಿಯೇ ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಇದ್ದಾರೆ. ಪ್ರತಿಯೊಂದನ್ನೂ ಇಲ್ಲಿನಿಂದಲೇ ನೋಡಿಕೊಳ್ಳುತ್ತಾರೆ. ಈಗ ವೆಬ್‌ಸೈಟನ್ನು ಯೂನಿಕೋಡ್‌ಗೆ ಬದಲಾಯಿಸುವುದು ಮುಂದಿರುವ ಯೋಜನೆ. ಇಲ್ಲಿಯ ತನಕ ವೆಬ್‌ಸೈಟಿಗಾಗಿ ಯಾರಿಂದಲೂ ಒಂದು ಪೈಸೆ ತೆಗೆದುಕೊಳ್ಳದೆ, ಆಗಾಗ ಬೇರೆಯವರ ಲೇಖನಗಳನ್ನು ಸ್ವತಃ ತಾವೆ ಟೈಪ್ ಮಾಡುತ್ತ, ಎಲ್ಲವನ್ನೂ ತಾವೇ ಭರಿಸುತ್ತ, ವೆಬ್‌ಸೈಟ್ ಯಾವ ಕಾರಣಕ್ಕೂ ನಿಲ್ಲದಂತೆ ನೋಡಿಕೊಳ್ಳುತ್ತ, ಕನ್ನಡದ ಕೆಲಸ ಮಾಡುತ್ತಿದ್ದಾರೆ. ಶೇಷಗಿರಿಯವರ ತಮ್ಮ ಸಂದೀಪ್ ಶೆಣೈ ಮೈಸೂರಿನಲ್ಲಿ ಕಾನೂನು ಪದವೀಧರರು. ಅವರೂ ಆಗಾಗ ಬರೆಯುತ್ತಾರೆ; ಬರೆಸುತ್ತಾರೆ; ಪ್ರಕಟಣೆಗೆ ಲೇಖಕರ ಒಪ್ಪಿಗೆ ಪಡೆದುಕೊಳ್ಳುತ್ತಾರೆ. ಚುರುಕಿನ, ಕುತೂಹಲದ ವ್ಯಕ್ತಿ. ಕಳೆದ ಏಪ್ರಿಲ್‌ನಲ್ಲಿ ನಮ್ಮ ಪತ್ರಿಕಾ ಬಳಗದೊಡನೆ ಅವರನ್ನು ಮೈಸೂರಿನಲ್ಲಿ ಭೇಟಿಯಾಗಿದ್ದೆ. ಅವರ ಐಡಿಯಾಲಜಿ ಬಗ್ಗೆ ಕೇಳಿದ್ದಕ್ಕೆ ಸಂದೀಪ್ ಎಂದಿದ್ದು: "ಸೌತ್ ಕೆನರಾ ಅಂದ ಮೇಲೆ ಮತೀಯ ಬಲಪಂಥೀಯತೆ ರಕ್ತದಲ್ಲೇ ಬಂದುಬಿಡುತ್ತೆ. ಹೌದು ನಾನು ಬಲಪಂಥೀಯ. ಆದರೆ, ಇತ್ತೀಚೆಗೆ ಲಂಕೇಶ ಬಳಗದಲ್ಲಿರುವ ದೂರದ ಸಂಬಂಧಿ ಸದಾಶಿವ್ ಶೆಣೈ, ಶಶಿಧರ್ ಭಟ್, ಇಂತಹವರ ಸಂಪರ್ಕ ಬಂದ ಮೇಲೆ ನಿಲುವುಗಳು ಸ್ವಲ್ಪಸ್ವಲ್ಪ ಬದಲಾಗಿವೆ. ಅಂದ ಹಾಗೆ, ಅಮೇರಿಕದಲ್ಲಿದ್ದರೂ ಅದು ಹೇಗೆ ನೀವು 'ಸೆಕ್ಯುಲರ್' ಆದಿರಿ??"

ತಮ್ಮ ಒಲವುನಿಲುವುಗಳನ್ನು ಮೀರಿ, ಪ್ರತಿಫಲಾಪೇಕ್ಷೆಯಿಲ್ಲದೆ ಕನ್ನಡದ ಕೆಲಸಕ್ಕೆ ತೊಡಗಿಕೊಂಡ ಕುಟುಂಬ ಇವರದು.

ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ ಎಂದ ಸಂಕೇಶ್ವರ್:

ಈ ವೆಬ್‌ಸೈಟಿನಲ್ಲಿ ಯಾವೊಂದು ವಿಚಾರಕ್ಕೂ ಮಡಿಮೈಲಿಗೆ ಇಲ್ಲ. ಹಾಗೆಯೆ, ಒಂದು ಸಲ ವೆಬ್‌ಸೈಟಿನಲ್ಲಿ ಹಾಕಿದ್ದನ್ನೂ ಮತ್ತೆ ತೆಗೆಯುವ ಪ್ರಶ್ನೆಯೇ ಇಲ್ಲ. ಒಮ್ಮೆ ಹೀಗಾಯಿತು: 2003 ರಲ್ಲಿ ಒಂದು ವಿಜಯ್ ಸಂಕೇಶ್ವರ್‌ರ ವಿಆರ್‌ಎಲ್ ಬಸ್ಸಿನಲ್ಲಿ ಶ್ರೀಮತಿ ಭಟ್ ಎನ್ನುವವರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಆ ಹೈಟೆಕ್ ಬಸ್ಸಿನಲ್ಲಿನ ಸೇವೆ ಹೇಗಿತ್ತು ಎಂದರೆ, ಗಾಜು ಒಡೆದಿದ್ದ ಕಿಟಕಿಯ ಪಕ್ಕ ಆಕೆಯ ಸೀಟು! ಪ್ರತಿಭಟಿಸಿದ್ದಕ್ಕೆ ಪ್ಲಾಸ್ಟಿಕ್ ಪೇಪರ್‌ನಿಂದ ಕಿಟಕಿಯನ್ನು ಮುಚ್ಚಿದರಂತೆ. ಮಧ್ಯರಾತ್ರಿ ದೇಹಬಾಧೆಗೆ ನಿಲ್ಲಿಸಿದ ಜಾಗದಲ್ಲಿ ಟಾಯ್ಲೆಟ್ಟುಗಳೇ ಇಲ್ಲ. ದಾರಿಬದಿಯಲ್ಲಿ ಕತ್ತಲೆಯಲ್ಲಿ ಹೋಗಿ ಪೂರೈಸಿಕೊಂಡು ಬರಲು ಹೇಳಿದರಂತೆ. ಈ ಎಲ್ಲಾ ಅನುಭವವನ್ನೂ ಬರೆದು, ಆಕೆ ಕುಳಿತಿದ್ದ ಜಾಗದ ಫೋಟೋ ಸಮೇತವಾಗಿ ಆಕೆಯ ಗಂಡ ಅವರ್‍ಕರ್ನಾಟಕಕ್ಕೆ ಬರೆದರು. ಅದನ್ನು ಪ್ರಕಟಿಸಿದರು. ವಿಆರ್‌ಎಲ್ ನಿಂದ ಇದೇ ತರಹದ ಟ್ರೀಟ್‌ಮೆಂಟ್‌ಗೆ ಒಳಗಾಗಿದ್ದ ಅನೇಕರು ವೆಬ್‌ಸೈಟಿಗೆ ಪ್ರತಿಕ್ರಿಯಿಸಿ ಪತ್ರಬರೆದರು. ಇದು ವಿಆರ್‌ಎಲ್ ನವರ ಗಮನಕ್ಕೂ ಬಂತು. ಆ ಪುಟವನ್ನು ತೆಗೆದುಬಿಡಲು ಒತ್ತಡ ಹಾಕಿದರು. ಶೇಷಗಿರಿ ಒಪ್ಪಿಕೊಳ್ಳಲಿಲ್ಲ. ನಿಮ್ಮ ಅಭಿಪ್ರಾಯವನ್ನೊ, ಉತ್ತರವನ್ನೊ ಬರೆಯಿರಿ, ಅದನ್ನೂ ಪ್ರಕಟಿಸಿಸುತ್ತೇವೆ; ಆದರೆ ಒಂದು ಸಲ ಹಾಕಿದ್ದನ್ನು ತೆಗೆಯುವ ಪ್ರಶ್ನೆಯೇ ಇಲ್ಲ, ಎಂದರು. ಕೊನೆಗೆ ಸ್ವತಃ ವಿಜಯ್ ಸಂಕೇಶ್ವರರೇ, "ನಾನು ನನ್ನ ಹಣವನ್ನು ಇನ್ನೂ ಲಾಭದಾಯಕವಾದ ಉದ್ದಿಮೆಯಲ್ಲಿ ಬೇರೆಕಡೆ ತೊಡಗಿಸಬಹುದಿತ್ತು. ಅದರೆ ಈ ಕೆಲಸವನ್ನು ನಾನು ಸಮಾಜಕ್ಕಾಗಿ ಮಾಡುತ್ತಿದ್ದೇನೆ. ನಮ್ಮ ವಿ.ಅರ್.ಎಲ್. ಮಾತ್ರ ಅದು ಮಾಡುತ್ತಿದೆ, ಇದು ಮಾಡುತ್ತಿದೆ. ಭಾರತದಲ್ಲಿ ಯಾರೂ ಸರಿಯಾಗಿ ಬಸ್ಸುಗಳ ಬಾಡಿ ಬ್ಯುಲ್ಡ್ ಮಾಡುವುದಿಲ್ಲ. ಎಲ್ಲಾ ಭಾರತದಲ್ಲಿ ಸಿಗುವ (ಕಳಪೆ) ವಸ್ತುಗಳಿಂದಲೆ ಬಾಡಿ ಕಟ್ಟುತ್ತಾರೆ. ನಮ್ಮದು ಬೆಸ್ಟ್ ಅಂತ ಹೇಳುತ್ತಿಲ್ಲ. ಆದರೆ ನಾನು ನನ್ನ ಕೈಯಲ್ಲಿ ಎಷ್ಟು ಚೆನ್ನಾಗಿ ಮಾಡಬಹುದೊ ಅಷ್ಟು ಮಾಡುತ್ತಿದ್ದೇನೆ. ದಯವಿಟ್ಟು ಇನ್ನೊಮ್ಮೆ ಯೋಚಿಸಿ ಮತ್ತು ಈ ಪುಟವನ್ನು ತೆಗೆಯಿರಿ ಎಂದು ಕೇಳಿಕೊಳ್ಳುತ್ತೇನೆ." ಎಂದು ಬರೆದರು. ಅದನ್ನೂ ಪ್ರಕಟಿಸಿದರು. ಆದರೆ ಯಾವುದನ್ನೂ ತೆಗೆಯಲಿಲ್ಲ!
[http://www.ourkarnataka.com/issues/issues_vrl.htm]