Aug 28, 2008

ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 5, 2008 ರ ಸಂಚಿಕೆಯಲ್ಲಿನ ಲೇಖನ.)

ಮೂರು ವರ್ಷಗಳ ಹಿಂದೆ ಸ್ನೇಹಿತರೊಬ್ಬರು ಒಂದು ಕನ್ನಡ ಕಾದಂಬರಿಯನ್ನು ಓದಲು ತಂದುಕೊಟ್ಟರು. ನಾನೇನೂ ಕೇಳಿರಲಿಲ್ಲ. ಚೆನ್ನಾಗಿದೆ, ಓದಿ, ಎಂದು ಅವರೆ ಕೊಟ್ಟಿದ್ದು. ಆರಂಭಿಸಿದಾಗಿನಿಂದ ಬಹುಶಃ ಎಷ್ಟು ಸಾಧ್ಯವೊ ಅಷ್ಟು ಬೇಗ ಓದಿ ಮುಗಿಸಿದ ನೆನಪು. ಮಂಗಳೂರಿನ ಸುತ್ತಮುತ್ತ ಸ್ವಾತಂತ್ರ್ಯಪೂರ್ವದ ಸಮಯದಲ್ಲಿ ನಡೆಯುವ ಕತೆ ಅದು. ಬ್ರಾಹ್ಮಣರ ಮನೆಯ ಹುಡುಗಿಯೊಬ್ಬಳು ಮುಸ್ಲಿಂ ಯುವಕನನ್ನು ಪ್ರೇಮಿಸಿ ಮದುವೆಯೂ ಆಗುವ ಕತೆ. ಮಂಗಳೂರಿನ ಸುತ್ತಮುತ್ತ ಇವತ್ತು ಇರುವ ಜನಾಂಗದ್ವೇಷವನ್ನು ನೆನಸಿಕೊಂಡರೆ ಇವತ್ತಿನ ಸಂದರ್ಭದಲ್ಲಿ ಮೈನಡುಗಿಸುವ ಕಲ್ಪನೆ ಅದು. ಈ ಕತೆಗೆ ಹಿನ್ನೆಲೆಯಾಗಿ ಇರುವುದು ಗಾಂಧೀಜಿ ಮಂಗಳೂರಿಗೆ ಬರುವ ಎಳೆ. ಗಾಂಧೀಜಿಯ ಆಗಮನ ಯಾವಯಾವ ಜನವರ್ಗದಲ್ಲಿ ಯಾವಯಾವ ತರಹದ ತಲ್ಲಣಗಳನ್ನೂ, ಪಲ್ಲಟಗಳನ್ನೂ, ಮೌನಕ್ರಾಂತಿಯನ್ನೂ ಮಾಡುತ್ತದೆ ಎನ್ನುವುದನ್ನು ಅದ್ಭುತವಾಗಿ ತೋರಿಸುವ ಕಾದಂಬರಿ ಅದು. ಒಂದು ಐತಿಹಾಸಿಕ ಘಟನೆಯನ್ನು ಎಳೆಯಾಗಿ ಇಟ್ಟುಕೊಂಡು ಅದರ ಸುತ್ತ ಕಾದಂಬರಿ ಕಟ್ಟುವುದು ಕನ್ನಡದಲ್ಲಿ ಬಹಳ ಕಮ್ಮಿ. ಲೇಖಕರು ತೆಗೆದುಕೊಂಡ ವಿಷಯ, ಅದಕ್ಕೆ ಅವರು ಅಂತಿಮವಾಗಿ ಕೊಟ್ಟ ಅಂತ್ಯ, ಅವರ ಚಿಂತನೆಗಳು, ಆಲೋಚನೆಗಳು ಆದರ್ಶಪ್ರಾಯವಾದವು. ಅಲ್ಲಿಯವರೆಗೂ ನಾನು ಆ ಲೇಖಕರ ಹೆಸರನ್ನೇ ಕೇಳಿರಲಿಲ್ಲ ಎನ್ನುವುದು ನನಗೆ ಒಂದು ರೀತಿಯ ಅವಮಾನದ ವಿಷಯವಾಗಿಬಿಟ್ಟಿತು. ಆ ಕಾದಂಬರಿಯ ಹೆಸರು, "ಗಾಂಧಿ ಬಂದ." ಬರೆದವರು, "ತುಳುನಾಡಿನ ಹೆಣ್ತನದ ಸ್ವಾಭಿಮಾನಿ ದೇವತೆ 'ಸಿರಿ'ಯ ಖಾಸಾ ತಂಗಿಯಂತಿರುವ" ಎಚ್. ನಾಗವೇಣಿ.

ಎರಡು ತಿಂಗಳ ಹಿಂದೆ ನಡೆದ ಪದ್ಮಪ್ರಿಯಾರ ಪ್ರಕರಣ ನಿಮಗೆ ನೆನಪಿರಬಹುದು. ಈ ಪ್ರಕರಣ ಕರ್ನಾಟಕದಲ್ಲಿನ ನ್ಯಾಯಾಂಗ ಮತ್ತು ಪೊಲಿಸ್ ವ್ಯವಸ್ಥೆ ತನ್ನ ನೀಚ ಮಟ್ಟದಲ್ಲಿ ಇರುವುದನ್ನು ಎತ್ತಿ ತೋರಿಸಿದ್ದಷ್ಟೇ ಅಲ್ಲದೆ, ನಮ್ಮ ಸಮಾಜದಲ್ಲಿ ಪ್ರಗತಿಪರ ಚಿಂತನೆಗೆ ಯಾವ ಮಟ್ಟದ ಹಿನ್ನಡೆ ಆಗಿದೆ ಎನ್ನುವುದನ್ನೂ ತೋರಿಸಿತು. ಹೆಂಗಸೊಬ್ಬಳ ಆತ್ಮಹತ್ಯೆ ಪ್ರಕರಣದ ಮೂಲಕ ಇಡೀ ಸಮಾಜದ ಸದ್ಯದ ಪರಿಸ್ಥಿತಿಯ Snapshot ಕೊಟ್ಟ ಘಟನೆ ಅದು. ಆ ಸಮಯದಲ್ಲಿ ಕರ್ನಾಟಕದ ಅನೇಕ ಲೇಖಕರು ಹಲವಾರು ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ನನ್ನ ಪ್ರಕಾರ ಆ ಇಡೀ ಘಟನೆಗೆ ನಮ್ಮದೇ ನೆಲದ ಉದಾಹರಣೆಯೊಂದಿಗೆ ಸಮರ್ಥವಾದ ಉತ್ತರ ಮತ್ತು ತಾರ್ಕಿಕ ಪರಿಹಾರ ಕೊಟ್ಟವರು ಡಾ. ನಾಗವೇಣಿ. ಪದ್ಮಪ್ರಿಯರ ಪ್ರಕರಣವನ್ನು ವಿಶ್ಲೇಷಿಸುತ್ತ ಅವರು ಬರೆದ "ಹೆಣ್ಣಿಗೆ ಬೇಕೆ 'ದಾರಿದೀಪ'?" ಇಡೀ ನಾಡಿನ ಹೆಣ್ಣುಮಕ್ಕಳಿಗೆ ದಾರಿದೀಪವಾಗಬೇಕಿರುವ ಲೇಖನ. ಅದರಲ್ಲಿ ತುಳುನಾಡಿನ ಪಾಡ್ದನದ (ಜನಪದ ಮೌಖಿಕ ಕಾವ್ಯ) ಕತೆಯೊಂದನ್ನು ಉದಾಹರಿಸುತ್ತ ಸ್ವಾಭಿಮಾನಿ ಮತ್ತು ಸ್ವಾಯತ್ತ ಸಮಾಜದಲ್ಲಿ ಪದ್ಮಪ್ರಿಯ ಪ್ರಕರಣ ಹೇಗೆ ಕೊನೆಯಾಗಬೇಕಿತ್ತು ಎಂದು ಹೇಳುತ್ತಾರೆ. ಆ ಪಾಡ್ದನದ ಸ್ಥೂಲ ಕತೆ ಅವರದೆ ಬರವಣಿಗೆಯಲ್ಲಿ ಹೀಗಿದೆ:

"ಕೌಟುಂಬಿಕ ನಿಯತಿಯನ್ನು ಮುರಿದ ಗಂಡನಿಗೆ, ಹೆಂಡತಿ ಶಾಸ್ತ್ರ ಸಮ್ಮತವಾಗಿ ಬರ (ವಿಚ್ಚೇದನ) ಹೇಳಿ, ಆತನನ್ನು ತನ್ನ ಬದುಕಿನಿಂದ ಸಂಪೂರ್ಣ ನಿರಾಕರಿಸುವ ಮೂಲಕ -ಸಮಾಜದ ಸ್ಥಾಪಿತ ವ್ಯವಸ್ಥೆಯನ್ನು ಧಿಕ್ಕರಿಸಿ- ಮತ್ತೆ ಮರುಮದುವೆಯಾಗಿ ಸುಭದ್ರವಾದ ಹೊಸ ಬದುಕನ್ನು ರೂಪಿಸಿಕೊಳ್ಳುವಲ್ಲಿ, ತುಳುವ ಸಮಾಜದ ಮಹಿಳೆಯರಿಗೆ ಮಾದರಿಯಾಗಿ ನಿಂತವಳು- ಈ ಮೌಖಿಕ ಮಹಾಕಾವ್ಯದ ಸಾಂಸ್ಕೃತಿಕ ವೀರೆ ತುಳುನಾಡಿನ ಸಿರಿ.

"ತುಳುವ ಸ್ತ್ರೀ ಸಮುದಾಯಕ್ಕೆ ಹೊಸ ಮೌಲ್ಯವನ್ನು ಕಟ್ಟಿಕೊಡುವ ಸಲುವಾಗಿಯೇ ಈ ಸಮಾಜಕ್ಕೆ ಒಂದು ಮೌಲ್ಯವಾಗಿ ಕಾಣಿಸಿಕೊಂಡ ಸಿರಿ- ಗಂಡನ ವಿಷಯಲಂಪಟತನವನ್ನು ಸಾರ್ವಜನಿಕವಾಗಿ ಪ್ರಶ್ನಿಸಿ ಪ್ರತಿಭಟಿಸಿ, ಸಾಮಾಜಿಕ ನ್ಯಾಯಪಂಚಾಯತಿಯ ಸಂದರ್ಭದಲ್ಲಿ ಕೈ ಹಿಡಿದ ಗಂಡನೇ ಎದುರಾಳಿ ಪಕ್ಷದ ಪರವಹಿಸಿ, ಹೆಂಡತಿಗೇ ದ್ರೋಹ ಬಗೆದಾಗ ಆ ನೀತಿಗೆಟ್ಟ ಗಂಡನಿಗೆ ಆ ದಿನವೇ ವಿಚ್ಛೇದನ ನೀಡಿ, ಆತನ ಪೌರುಷಕೆ ಸವಾಲೆಸೆದು..... ಮರುಮದುವೆಯಾಗುವ ಮೂಲಕ, ಅಲಕ್ಷಿತ ಸಮುದಾಯದಲ್ಲಿ ಆಕೆ ಒಂದು ಹೊಸ ಮಾದರಿ ವ್ಯವಸ್ಥೆಯನ್ನು ನಿರ್ಮಿಸಿದ ಪರಿ... ಈ ಪಾಡ್ದನದ ಕಥಾ ಹಂದರದಲ್ಲಿ (ಅದೆಷ್ಟು) ದಿಟ್ಟವಾಗಿ ಅರಳಿದೆ....."
ಕನ್ನಡದ ಇವತ್ತಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಅನೇಕ ಖಾಲಿ ಕೊಡಗಳು ವಿಪರೀತ ಎನ್ನುವಷ್ಟು ಗದ್ದಲ ಮಾಡುತ್ತಿವೆ. ಮೀಡಿಯೋಕರ್‌ಗಳೆಲ್ಲ ಸ್ಟಾರ್‌ಗಳಾಗಿ ಬಿಟ್ಟಿದ್ದಾರೆ. ಇದಕ್ಕೆ ಕಳೆದ ಒಂದೆರಡು ದಶಕಗಳಲ್ಲಿ ಬದಲಾಗಿರುವ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಜೊತೆಜೊತೆಗೆ ಹೊಸದಾಗಿ ಹುಟ್ಟಿರುವ ಓದುಗ ವರ್ಗವೂ ಕಾರಣ. ಇನ್ನೂ ಸ್ಪಷ್ಟ ಮಾಡಿಕೊಂಡಿಲ್ಲದ ಚಿಂತನೆಗಳ ಮತ್ತು ಪ್ರಬುದ್ಧವಾಗಿಲ್ಲದ ಆಲೋಚನೆಗಳ ಈ ಹೊಸ ಯುವ ಓದುಗ ವರ್ಗವನ್ನು ಪ್ರಭಾವಿಸುವ ಮತ್ತು ದಾರಿತಪ್ಪಿಸುವ ಒಂದು ದುಷ್ಟಕೂಟವೆ ಇವತ್ತು ಕನ್ನಡದಲ್ಲಿದೆ. ಸಾಮಾಜಿಕ ಕಾಳಜಿಗಳಾಗಲಿ, ಪ್ರಾಮಾಣಿಕ ಬದ್ಧತೆಯಾಗಲಿ ಇಲ್ಲದ ಈ ಜನರ ನಡುವೆ ನಮಗೆ ಇವೆಲ್ಲವೂ ಇರುವ ಲೇಖಕರು ಮುಖ್ಯವಾಗುತ್ತಾರೆ. ಹಾಗಾಗಿಯೆ, ಬಹುಶಃ ಕನ್ನಡದ ಹತ್ತು ಅತ್ಯುತ್ತಮ ಕಾದಂಬರಿಗಳಲ್ಲಿ ಒಂದನ್ನು ಬರೆದ ಡಾ. ನಾಗವೇಣಿಯವರು ಈ ಸಂದರ್ಭದಲ್ಲಿ ನಮಗೆ ಕಾದಂಬರಿಗಾರ್ತಿಯಾಗಿಯಷ್ಟೇ ಅಲ್ಲದೆ ಸಮಕಾಲೀನಕ್ಕೆ ಪ್ರತಿಕ್ರಿಯಿಸುವವರಾಗಿಯೂ ಪ್ರಸ್ತುತರು. ಅವರ "ವಸುಂಧರೆಯ ಗ್ಯಾನ" ಪುಸ್ತಕದಲ್ಲಿಯ "ಬರಿದಾಗುತ್ತಿರುವ ನನ್ನ ಪ್ರೀತಿಯ ಕಡಲು" ಲೇಖನ ನಮ್ಮ ರಾಜ್ಯದ ಹೈಸ್ಕೂಲು ಅಥವ ಕಾಲೇಜಿನ ತರಗತಿಗಳಲ್ಲಿ ಚರ್ಚಿಸಬೇಕಾದ ಲೇಖನ. ಲಿಂಗ, ಕೋಮು, ಮತ್ತು ವರ್ಣಭೇದಗಳನ್ನು ಮೀರಿದ ಉತ್ತಮವಾದ ಒಂದು ಸ್ವಾಭಿಮಾನಿ ಸಮಾಜ ಕಟ್ಟಲು ಇವರಂತಹ ಚಿಂತನಶೀಲ ಲೇಖಕರ ಅವಶ್ಯಕತೆ ಇಡೀ ಸಮಾಜಕ್ಕೆ ಎಂದಿಗೂ ಇರುತ್ತದೆ.


ಲೇಖನದ ವಿಡಿಯೊ ಪ್ರಸ್ತುತಿ

ಆದರೆ, ಇತ್ತೀಚಿನ ದಿನಗಳಲ್ಲಿ ನನ್ನಲ್ಲಿ ಅಪಾರವಾದ ಹೆಮ್ಮೆ ಮತ್ತು ಆತ್ಮವಿಮರ್ಶೆಯನ್ನು ಹುಟ್ಟಿಸಿದ, ನನ್ನ ಮಗಳಿಗೂ ವೈಚಾರಿಕ ಆದರ್ಶವಾಗಬೇಕೆಂದು ನಾನು ಬಯಸಿದ ಈ ನನ್ನ ಮೆಚ್ಚಿನ ಲೇಖಕಿಯೊಂದಿಗೆ ಸಹಮತವಾಗದ ವಿಚಾರಧಾರೆ ಅವರು ಕಳೆದ ವಾರ ಪತ್ರಿಕೆಯ "ಸ್ತ್ರೀಮತ" ಅಂಕಣಕ್ಕೆ ಬರೆದ "ಸ್ನೇಹಕ್ಕೆ ಬೇಕಿಲ್ಲ ಸಂಬಂಧಗಳ ಕವಚ." ಇಡೀ ರಾಜ್ಯದ "ಮಹಿಳಾ ಸಂಕುಲದ ಏಕೈಕ ಪ್ರತಿನಿಧಿಯಾಗಿ ಸಂಪುಟದಲ್ಲಿರುವ" ಶೋಭಾ ಕರಂದ್ಲಾಜೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ನೇಹದ ಬಗ್ಗೆ ಬರೆಯುತ್ತ ಅವರು ಸಮರ್ಥಿಸಿಕೊಳ್ಳುವ ವ್ಯಕ್ತಿ ಮತ್ತು ವಿಚಾರಗಳು ಗಾಬರಿ ಹುಟ್ಟಿಸುವಂತಹವು. ದುರಂತ ಏನೆಂದರೆ, ಯಾವಯಾವುದನ್ನು ಶೋಭಾರವರು ಮಂತ್ರಿಯಾಗಿದ್ದುಕೊಂಡು ಮಾಡಬೇಕು ಎಂದು ಸ್ತ್ರೀಸಂಕುಲದ ಪರವಾಗಿ ನಾಗವೇಣಿಯವರು ಆಶಿಸುತ್ತಾರೊ ಅದನ್ನು ಮಾಡಲಾಗದ ಸ್ಥಿತಿಯಲ್ಲಿ ಶೋಭಾರವರು ಇರುವುದು. ಅದಕ್ಕೆ ಅವರು ಹೆಣ್ಣು ಎಂಬುದು ಕಾರಣವಲ್ಲ. ಬದಲಿಗೆ ಅವರಿಗಿಲ್ಲದ ವೈಚಾರಿಕತೆ ಮತ್ತು ಅರ್ಹತೆ. ಅವೆರಡೂ ಅವರಿಗೆ ಇದ್ದಿದ್ದೆ ಆದರೆ ಅವರು ಇವತ್ತು ಇರುವ ಉತ್ತಮ ಸ್ಥಿತಿಯಲ್ಲಿ (ಅಧಿಕಾರ) ಮತ್ತು ಕೆಟ್ಟ ಸ್ಥಿತಿಯಲ್ಲಿ (ಸಂಪುಟದಲ್ಲಿಯ "ಏಕೈಕ" ಮಹಿಳೆ ಎಂಬ ಅವಮಾನಕಾರಿ ಹೆಗ್ಗಳಿಕೆ ಮತ್ತು ಅಸಮಾನತೆ ಬೋಧಿಸುವ ಫ್ಯಾಸಿಸ್ಟ್ ಸಿದ್ಧಾಂತ) ಇರುತ್ತಿರಲಿಲ್ಲ.

ಡಾ. ನಾಗವೇಣಿಯವರು ಶೋಭಾರವರನ್ನು "ಈ ನಾಡಿನ ಅದರಲ್ಲೂ ಗ್ರಾಮೀಣ ಮಹಿಳೆಯರ ಕನಸು ಮತ್ತು ಆಶಾಕಿರಣ." ಎಂದುಬಿಟ್ಟಿದ್ದಾರೆ! ಅದರ ಜೊತೆಗೇ, ಶೋಭಾರವರ ಬೆನ್ನಿಗೆ ನಿಂತ ಯಡಿಯೂರಪ್ಪನವರನ್ನೂ ವಾಚಾಮಗೋಚರ ಹೊಗಳಿಬಿಟ್ಟಿದ್ದಾರೆ. ಆದರೆ ಅವರು ಸ್ವಲ್ಪ ನಿಷ್ಠುರವಾಗಿ ಯೋಚಿಸಿದ್ದರೆ ಅವರಿಗೇ ಗೊತ್ತಾಗಬಹುದಾಗಿದ್ದ ವಿಚಾರ ಕುಮಾರಸ್ವಾಮಿಯವರ ಮಂತ್ರಿಮಂಡಲದಲ್ಲಿ ಯಾವೊಬ್ಬ ಸ್ತ್ರೀಯೂ ಮಂತ್ರಿಯಾಗದೇ ಹೋಗದ್ದಕ್ಕೆ ಶೋಭಾರವರ ಪಾಲೂ ಇದೆ ಎನ್ನುವುದು. ಯಡಿಯೂರಪ್ಪನವರಿಗೆ ಶೋಭಾ ಮಂತ್ರಿಯಾಗಬೇಕಿತ್ತೆ ಹೊರತು ಬೇರೊಬ್ಬ ಶಾಸಕಿಯಲ್ಲ. ಯಾರನ್ನಾದರೂ ಸರಿ, ಒಟ್ಟಿನಲ್ಲಿ ಒಬ್ಬ ಶಾಸಕಿಯನ್ನಾದರೂ ಮಂತ್ರಿ ಮಾಡಿ ಎಂದು ಶೋಭಾರವರು ಆಗ ಹೇಳಲಿಲ್ಲ. ಅವರ ಗುರಿ ತಾವು ಮಂತ್ರಿಯಾಗುವುದಾಗಿತ್ತೆ ಹೊರತು ಸ್ತ್ರೀಯರಿಗೆ ಪ್ರಾತಿನಿಧ್ಯ, ಅರ್ಹರಿಗೆ ಪ್ರಾತಿನಿಧ್ಯ, ಸಮಾನ ಅವಕಾಶಗಳು, ಇವು ಯಾವುವೂ ಆಗಿರಲಿಲ್ಲ. ಅವರಿಗೆ ಅನುಕೂಲವಾದರೆ ಮಾತ್ರ ಲಿಂಗಸಮಾನತೆ ಅಥವ ಅರ್ಹರಿಗೆ ಪ್ರಾತಿನಿಧ್ಯ ಎಂಬ ಮಾತುಗಳು. ಇದು ಅಪ್ಪಟ ಸಮಯಸಾಧಕತನವೆ ಹೊರತು ಬೇರೇನೂ ಅಲ್ಲ.

ಯಡಿಯೂರಪ್ಪನವರ ಜೊತೆ ಅವರಿಗೆ ಇರಬಹುದಾದ ಅಥವ ಇಲ್ಲದಿರಬಹುದಾದ ಸಂಬಂಧವನ್ನು ಬದಿಗಿಟ್ಟು ಮಂತ್ರಿಯಾದಾಗಿನಿಂದ ಶೋಭಾರವರ ಕಾರ್ಯವೈಖರಿಯನ್ನು ನೋಡಿದರೂ ಅವರಲ್ಲಿ ಎದ್ದು ಕಾಣಿಸುವುದು ಅವೈಜ್ಞಾನಿಕ ಮತ್ತು ಅಪ್ರಜಾಸತ್ತಾತ್ಮಕ ನಡವಳಿಕೆ. ಮೈಸೂರು ದಸರಾ ವಿಷಯದಲ್ಲಿ ಅವರ ಹೇಳಿಕೆಗಳನ್ನು ಮತ್ತು ದೇಶವಿದೇಶಗಳ ಮಹಾರಾಜರನ್ನು ಕರೆದು ಸನ್ಮಾನಿಸುವಂತಹ ಕ್ರಾಂತಿಕಾರಿ ಆಲೋಚನೆಗಳನ್ನು ಕೇಳಿದಾಗ ಅವರಿಗೆ ಇರಬಹುದಾದ ಪ್ರಾಥಮಿಕ ಜ್ಞಾನದ ಬಗ್ಗೆಯೇ ಸಂಶಯ ಬರುತ್ತದೆ. ಇಂತಹವರನ್ನು ನಮ್ಮ ನಾಡಿನ ಹೆಣ್ಣುಮಕ್ಕಳ ಆಶಾಕಿರಣ ಎಂದು ಭಾವಿಸಿಬಿಟ್ಟರೆ ನಿಜಕ್ಕೂ ನಾವು ಹಿಮ್ಮುಖವಾಗಿ ಚಲಿಸುತ್ತಿದ್ದೇವೆ.

ಇಷ್ಟಕ್ಕೂ ನಮ್ಮ ನಾಡಿನ ಹೆಣ್ಣುಮಕ್ಕಳಿಗೆ ರಾಜಕೀಯದಲ್ಲಿ ಆದರ್ಶವಾಗಬೇಕಾದವರು, ಸ್ಫೂರ್ತಿಯಾಗಬೇಕಾದವರು ಅನೇಕರಿದ್ದಾರೆ. ಶೋಭಾರವರಿಗಿಂತ ಮೊದಲೆ ಅನೇಕ ಮಹಿಳೆಯರು ಕರ್ನಾಟಕದಲ್ಲಿ ಮಂತ್ರಿಗಳಾಗಿ, ಸಭಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇಂದಿರಾ ಗಾಂಧಿ ೪೦ ವರ್ಷಗಳ ಹಿಂದೆಯೇ ದೇಶದ ಅತ್ಯುನ್ನತ ಹುದ್ದೆ ಕೈಗೆತ್ತಿಕೊಂಡರು. ಈಗಲೂ ದೇಶದಲ್ಲಿ ಮೂವರು ಮಹಿಳಾ ಮುಖ್ಯಮಂತ್ರಿಗಳಿದ್ದಾರೆ. ಇವರೆಲ್ಲರೂ ಶೋಭಾರವರಂತೆ ಗ್ರಾಮೀಣ ಹಿನ್ನೆಲೆಯಿಂದ ಬಂದಿಲ್ಲ ಎನ್ನುವುದೊ ಅಥವ ಅವರಂತಹ ಬಡತನದ ಹಿನ್ನೆಲೆ ಇಲ್ಲ ಎನ್ನುವುದೊ ಅವರನ್ನು ಅನರ್ಹರನ್ನಾಗಿ ಅಥವ ಕಡಿಮೆ ಸಾಧಕರನ್ನಾಗಿ ಮಾಡುವುದಿಲ್ಲ.

ಇನ್ನು, ಯಡಿಯೂರಪ್ಪನವರಿಗೆ ಶೋಭಾರವರ ಬಗೆಗೆ ಇರಬಹುದಾದ ಸ್ನೇಹ, ನಿಷ್ಠೆಯ ಬಗೆಗೆ ನಾಗವೇಣಿಯವರು ಬಹಳ ಒತ್ತು ಕೊಟ್ಟಿದ್ದಾರೆ. ಆದರೆ, ಶೋಭಾರವರಿಗೆ ಯಡಿಯೂರಪ್ಪನವರ ಪರ ನಿಷ್ಠೆ ಎಲ್ಲಿಯತನಕ ಇದೆ ಎನ್ನುವುದನ್ನು ಭವಿಷ್ಯದ ದಿನಗಳೇ ಹೇಳಬೇಕು. ರಾಜಕೀಯದಲ್ಲಿ "ನಾನು ಅವರಿಗೆ ಹನುಮಂತ" ಎಂದವನೆ ರಾವಣನಾಗಿದ್ದನ್ನು ನಾವು ಪ್ರತಿನಿತ್ಯ ಕಾಣುತ್ತಿದ್ದೇವೆ. ಹಾಗೆಯೇ, ಎಂತಹ ದುಷ್ಟರಲ್ಲೂ ಕೆಲವೊಮ್ಮೆ ಒಂದೆರಡು ಒಳ್ಳೆಯ ಗುಣ ಇರಬಹುದೇನೊ. ಆದರೆ ಆ ಒಂದೆರಡು ಒಳ್ಳೆಯ ಗುಣಗಳು ಅವರ ಅನರ್ಹತೆ ಅಥವ ದುಷ್ಟತನವನ್ನು ಸರಿದೂಗಿಸಲಾಗದು. ತಮ್ಮ ಅವೈಚಾರಿಕತೆ, ಅಜ್ಞಾನ, ಮೂಢನಂಬಿಕೆ, ಅಪ್ರಜಾಪ್ರಭುತ್ವ ಚಿಂತನೆಗಳಿಂದಾಗಿ ಯಾರಿಗೂ ಆದರ್ಶವಾಗಬಾರದ ಶೋಭಾರವರನ್ನು ಅವರ ಬಡತನದ ಹಿನ್ನೆಲೆ ಮತ್ತು ಈಗಿನ ಪುರುಷಪ್ರಧಾನ ರಾಜಕೀಯದಲ್ಲಿ ಮಂತ್ರಿಗಿರಿಯ ತನಕದ ಸಾಧನೆಯಿಂದಾಗಿ ಆದರ್ಶ ಮಾಡಿಕೊಂಡು ಬಿಟ್ಟರೆ ಅದರಲ್ಲಿ ದೊಡ್ಡ ಅಪಾಯವಿದೆ.

ಈ ಸಮಯದಲ್ಲಿ ಯಡಿಯೂರಪ್ಪ ಮತ್ತು ಶೋಭಾರವರ ಸ್ನೇಹ ಅಥವ ಸಂಬಂಧವನ್ನು ನಿರ್ಲಕ್ಷಿಸಿ, (ಅದು ಎಷ್ಟೇ ಉದಾರವೂ ಪ್ರಶಂಸನೀಯವೂ ಆಗಿದ್ದರೂ) ಅವರು ಕರ್ನಾಟಕದ ಪ್ರಜೆಗಳಿಗೆ ಸ್ಫೂರ್ತಿಗೆ ಅರ್ಹವಾದ, ಜವಾಬ್ದಾರಿಯುತವಾದ ಆಡಳಿತ ನೀಡಬಲ್ಲರೆ ಎನ್ನುವುದನ್ನಷ್ಟೆ ಗಮನಿಸಬೇಕು. ಆ ಜವಾಬ್ದಾರಿಯುತ ಆಡಳಿತದಲ್ಲಿ ಅವರ ವೈಯಕ್ತಿಕ ನಡವಳಿಕೆಯೂ ಸೇರಿರುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಮಾದರಿಯಾಗಲು ಅವರಿಗಿರಬಹುದಾದ ಅರ್ಹತೆ ಎಲ್ಲಿಯವರೆಗೆ ಸಾಬೀತಾಗುವುದಿಲ್ಲವೊ ಅಲ್ಲಿಯ ತನಕ ವೈಯಕ್ತಿಕ ಸ್ನೇಹ, ನಿಷ್ಠೆ ಮುಂತಾದ ಭಾವನಾತ್ಮಕ ವಿಷಯಗಳನ್ನು ನಿರ್ಲಕ್ಷಿಸಿ, ವಿಮರ್ಶಿಸುತ್ತಿರಬೇಕು. ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ನೀಡುವ ರಿಯಾಯಿತಿ ಪ್ರಜಾಪ್ರಭುತ್ವದಲ್ಲಿ ವಿಮರ್ಶೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಅಸ್ತ್ರವಾಗಿಬಿಡುತ್ತದೆ. ಆ ಸ್ವ್ವಾತಂತ್ರ್ಯವನ್ನು ಒತ್ತೆಯಿಟ್ಟುಕೊಳ್ಳುವ ಹಕ್ಕು ಯಾರಿಗೂ ಇಲ್ಲ.

Aug 26, 2008

ಬಸವಣ್ಣನಾಗಬೇಕೆಂದು ಬಯಸಿದ ಯಡಿಯೂರಪ್ಪ ಅಮೆರಿಕದಲ್ಲಿ ಮೂಗಬಸವನಾದದ್ದು!

(ಎರಡು ವರ್ಷದ ಹಿಂದೆ ಆಗಿನ ಉಪಮುಖ್ಯಮಂತ್ರಿ ಯಡಿಯೂರಪ್ಪನವರು "ಅಕ್ಕ" ಸಮ್ಮೇಳನಕ್ಕೆ ಬಂದಿದ್ದಾಗ ಅವರು ಸಿಲಿಕಾನ್ ಕಣಿವೆಯಲ್ಲಿ ಭಾಗವಹಿಸಿದ್ದ ಕಾರ್ಯಕ್ರಮವೊಂದರ ವರದಿ ಇದು. ಈ ಮುಂಚೆ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 22, 2006ರ ಸಂಚಿಕೆಯಲ್ಲಿ ಪ್ರಕಟವಾಗಿದೆ. "ಅಕ್ಕ 2008"ರ ಸಮಯದಲ್ಲಿ "ಅಕ್ಕ-2006"ರ ಸಮಯದಲ್ಲಿ ಬರೆದ ಲೇಖನಗಳು.)

ಸದ್ಯದ ಸಂಕೀರ್ಣ ಜಾಗತೀಕರಣದ ಸವಾಲುಗಳನ್ನು ಎದುರಿಸಲು ನಾಡಿನ ಚುಕ್ಕಾಣಿ ಹಿಡಿದಿರುವ ನಮ್ಮ ಉಪ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ವಾರಿಗೆಯ ರಾಜಕಾರಿಣಿಗಳು ಹೇಗೆ ಅಸಮರ್ಥರು ಎಂದು ಯಡಿಯೂರಪ್ಪನವರು ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಭಾಗವಹಿಸಿದ ಸಮಾರಂಭದಲ್ಲಿ ದೃಷ್ಟಿಮಾಂದ್ಯರೂ ಕಾಣಬಲ್ಲಷ್ಟು ಸ್ಪಷ್ಟವಾಗಿ ಕಾಣುತ್ತಿತ್ತು.

TiE (The Indus Entrepreneurs) ಎನ್ನುವುದು ಅಮೆರಿಕದಲ್ಲಿರುವ ಭಾರತೀಯ ಉದ್ಯಮಿಗಳು 1992 ರಲ್ಲಿ ಹುಟ್ಟುಹಾಕಿದ ಒಂದು ಲಾಭರಹಿತ ಸಂಸ್ಥೆ. ಕರ್ನಾಟಕದ ಕುಮಾರ್ ಮಳವಳ್ಳಿ, ದೇಶ್ ದೇಶಪಾಂಡೆ, ಬಿ.ವಿ. ಜಗದೀಶ್ ಮುಂತಾದ ಯಶಸ್ವಿ ಉದ್ಯಮಿಗಳು ಇದರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಈ ಸಂಸ್ಥೆಯ ಮೂಲ ಉದ್ದೇಶ ಅಮೇರಿಕದಲ್ಲಿ ನೆಲಸಿರುವ ಭಾರತೀಯರಿಗೆ ಅವರೇನಾದರೂ ಹೊಸ ಉದ್ಯಮಗಳನ್ನು, ಕಂಪನಿಗಳನ್ನು ಸ್ಥಾಪಿಸಬೇಕು, ಅದಕ್ಕೆ ಬಂಡವಾಳವನ್ನು ಆಕರ್ಷಿಸಬೇಕು ಎನ್ನುವ ಉದ್ದೇಶವಿದ್ದಲ್ಲಿ, ಅವರಿಗೆ ಬೇಕಾದ ಎಲ್ಲಾ ರೀತಿಯ ಮಾರ್ಗದರ್ಶನ ನೀಡಲು, ತನ್ಮೂಲಕ ಹೆಚ್ಚು ಹೆಚ್ಚು ಭಾರತೀಯರು ಅಮೆರಿಕದ ಕಾರ್ಪೊರೇಟ್ ಜಗತ್ತಿನಲ್ಲಿ ಯಶಸ್ವಿ ಉದ್ಯಮಿಗಳಾಗಲು, ಸಹಾಯ ಮಾಡುತ್ತದೆ. ಅದರ ಜೊತೆಗೆ ಇಲ್ಲಿಯವರಿಗೆ ಭಾರತದಲ್ಲಿ ಬಂಡವಾಳ ತೊಡಗಿಸಲು ಇರುವ ಅವಕಾಶಗಳೇನು, ಯಾವ ಯಾವ ರಾಜ್ಯಗಳಲ್ಲಿ ಏನೇನು ಸೌಲಭ್ಯಗಳಿವೆ, ಹೆಚ್ಚಿನ ಬೆಳವಣಿಗೆಗೆ ಎಲ್ಲೆಲ್ಲಿ ಅವಕಾಶಗಳಿವೆ ಎಂದು ತಿಳಿಸಲು ಸೆಮಿನಾರುಗಳನ್ನು ಏರ್ಪಡಿಸುತ್ತದೆ. ತಮ್ಮ ತಮ್ಮ ರಾಜ್ಯಗಳಿಗೆ ಇಲ್ಲಿಂದ ಬಂಡವಾಳ ಆಕರ್ಷಿಸಲು ಬರುವ ಮಂತ್ರಿ, ಮುಖ್ಯಮಂತ್ರಿಗಳಂತಹ ನಿಯೋಗಗಳಿಗೆ ಅಮೆರಿಕದಲ್ಲಿ TiE ಒಂದು ಉತ್ತಮ ವೇದಿಕೆ.

ಕರ್ನಾಟಕದಿಂದ ಅಕ್ಕ ಸಮ್ಮೇಳನಕ್ಕೆ ಬಂದಿದ್ದ ನಿಯೋಗದೊಂದಿಗೆ ಸಿಲಿಕಾನ್ ಕಣಿವೆಯ TiE ಸದಸ್ಯರ ಮತ್ತು ಸ್ಥಳೀಯ ಕನ್ನಡಿಗರ ಭೇಟಿಯೊಂದನ್ನು ಅಕ್ಕ ಉಪಾಧ್ಯಕ್ಷರಾದ ಪ್ರಭುದೇವ್‌ರವರು ಏರ್ಪಡಿಸಿದ್ದರು. ಹಣಕಾಸು ಮಂತ್ರಿ ಯಡಿಯೂರಪ್ಪ, ಭಾರಿ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಸಚಿವ ಕಟ್ಟ್ಟಾ ಸುಬ್ರಹ್ಮಣ್ಯ ನಾಯ್ಡು, ಸಣ್ಣ ಕೈಗಾರಿಕಾ ಸಚಿವ ಶಿವಾನಂದ ನಾಯಕ್, ವಾಣಿಜ್ಯ ಮತ್ತು ಕೈಗಾರಿಕೆಯ ಪ್ರಿನ್ಸಿಪಲ್ ಕಾರ್ಯದರ್ಶಿ ಕೆ.ಎಮ್.ಶಿವಕುಮಾರ್, ಮತ್ತು ಇತರ ಹಿರಿಕಿರಿಯ ಅಧಿಕಾರಿಗಳ ನಿಯೋಗ ಈ ಸಭೆಯಲ್ಲಿ ಪಾಲ್ಗೊಂಡಿತ್ತು. ನಮ್ಮ ಮಾನ್ಯ ಉಪಮುಖ್ಯಮಂತ್ರಿಗಳು ಸಭೆ ಹೇಗೆ ನಡೆಯುತ್ತದೆ ಎನ್ನುವುದರ ಬಗ್ಗೆ ಎಷ್ಟು ಚೆನ್ನಾಗಿ ಅರಿತುಕೊಂಡು ಬಂದಿದ್ದರೆಂದರೆ, ಸಭೆಗೆ ನಿಯೋಗದಲ್ಲಿನ ಎಲ್ಲರನ್ನೂ ಒಂದು ಸಲ ಪರಿಚಯಿಸಿದ ಪ್ರಭುದೇವ್, "ಈ ಕಾರ್ಯಕ್ರಮ ಹೇಗೆ ನಡೆಯುತ್ತದೆ ಎಂದರೆ, ಮೊದಲಿಗೆ ಗೌರವಾನ್ವಿತ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾತನಾಡುತ್ತಾರೆ, ನಂತರ ಕಟ್ಟಾ ಸುಬ್ರ..." ಎಂದು ಇನ್ನೂ ಮುಂದಕ್ಕೆ ಹೇಳುತ್ತಿದ್ದಂತೆ ತಮ್ಮ ಸಿದ್ಧಪಡಿಸಿದ ಭಾಷಣದೊಂದಿಗೆ ಯಡಿಯೂರಪ್ಪನವರು ಎದ್ದು ಪೋಡಿಯಮ್‌ಗೆ ನುಗ್ಗೇ ಬಿಟ್ಟರು! ಅದು ಎಷ್ಟು ಚೆನ್ನಾಗಿ ತಲೆಬಗ್ಗಿಸಿಕೊಂಡು ನುಗ್ಗಿದರೆಂದರೆ, ಪ್ರಭುದೇವ್ "ಒಂದು ನಿಮಿಷ ಸರ್, ಇನ್ನೂ ಸ್ವಲ್ಪ ಹೇಳಬೇಕು, ಒಂದು ನಿಮಿಷ ಸರ್...," ಎಂದು ಕನ್ನಡದಲ್ಲಿ ಕೇಳಿಕೊಳ್ಳುತ್ತಿದ್ದರೂ, ಅವರು ಮಾತನಾಡುತ್ತಿರುವುದು ಇಂಗ್ಲೀಷೇ ಇರಬೇಕು, ನನ್ನನ್ನು ಇನ್ನೂ ಪರಿಚಯಿಸುತ್ತಿರಬೇಕು ಎಂದುಕೊಂಡು ಪೋಡಿಯಮ್ ಅನ್ನು ಆಕ್ರಮಿಸಿಕೊಂಡು ತಮ್ಮ ಭಾಷಣ ಪ್ರಾರಂಭಿಸಿಬಿಟ್ಟರು. ತುಂಬ ಘನತೆಯಿಂದ ನಡೆಯುವ ಇಂತಹ ನೂರಾರು ಕಾರ್ಯಕ್ರಮಗಳನ್ನು ನೋಡಿರುವ ಸ್ಥಳೀಯ ಪ್ರೇಕ್ಷಕರು ಶಾಕ್ ಆಗಿ ಸುಮ್ಮನೆ ನೋಡುತ್ತಿದ್ದರು. 6 ನಿಮಿಷಗಳ ತಮ್ಮ ಇಂಗ್ಲಿಷ್ ಭಾಷಣದಲ್ಲಿ ಯಡಿಯೂರಪ್ಪನವರು ತಲೆ ಎತ್ತಿ ಸಭಿಕರನ್ನು ನೋಡಲೇ ಇಲ್ಲ! ಅಷ್ಟು ಶ್ರದ್ಧೆಯಿಂದ, ಪ್ರತಿಯೊಂದು ಪದವನ್ನೂ ಗಮನವಿಟ್ಟು ಓದಿದ್ದೇ ಓದಿದ್ದು. ಕೊನೆಯ ವಾಕ್ಯವಾದ "Thank you very much for this fruitful interaction..." ಹೇಳುವಾಗಲೂ ತಲೆಯೆತ್ತಿ ಸಭಿಕರನ್ನು ನೋಡಲಿಲ್ಲ. ಅವರ ಇಡೀ ಭಾಷಣದಲ್ಲಿ ಬಂದಿದ್ದವರನ್ನು ಪ್ರಭಾವಿತಗೊಳಿಸುವಂತಹುದು ಏನೂ ಇರಲಿಲ್ಲ. ಮಾನ್ಯರು, ತಮಗೆ ಮಂತ್ರಿಗಿರಿಯೊ ಪಕ್ಷದ ಕುರ್ಚಿಯೊ ಇನ್ನೆಂತಹುದೊ ಬೇಕಾದಾಗ, ದೆಹಲಿ ವರಿಷ್ಠರನ್ನು ನೋಡಲು ಹೋದಾಗ ಇದೇ ಮಟ್ಟದ ಸಿದ್ಧತೆ ಮಾಡಿಕೊಂಡು ಹೋಗುತ್ತಾರೆಯೇ? ಇದೇ ರೀತಿ ಅಲ್ಲಿನ ಸಭೆಯಲ್ಲಿಯೂ ನಡೆದುಕೊಳ್ಳುತ್ತಾರೆಯೆ? ಸ್ವಂತದ್ದಕ್ಕಾದರೆ ಒಂದು ಸಿದ್ಧತೆ, ಸರ್ಕಾರದ್ದಕ್ಕಾದರೆ ಮತ್ತೊಂದು ಬಗೆಯ ಸಿದ್ಧತೆ?

ಮುಂದಿನ ಸರದಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡುರವರದು. ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಇವರೇ ಅಂದಿನ ಸ್ಟಾರ್ ಪರ್ಫಾರ್ಮರ್! ಹೇಳಿಕೊಳ್ಳುವಂತಹ ಇಂಗ್ಲಿಷ್ ಬರದಿದ್ದರೂ, ಸಿದ್ಧಪಡಿಸಿದ ಭಾಷಣಕ್ಕಿಂತ ಬಹಳ ಆಪ್ತವಾಗಿ, ತಮಾಷೆಯಾಗಿ, ಆತ್ಮವಿಶ್ವಾಸದಿಂದ ತಮ್ಮ ಬಟ್ಳರ್ ಇಂಗ್ಲಿಷ್‍ನಲ್ಲಿ 10 ನಿಮಿಷ ಮಾತನಾಡಿದರು. "We had a serious of business meeting," ಎಂದರೊಮ್ಮೆ! ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಸ್ಥಳೀಯ ಸಿಲಿಕಾನ್ ಕಣಿವೆಯ ಸಾಮ್ಯತೆಗಳನ್ನು ಹೋಲಿಸುತ್ತ "we are having bloodly relationship," ಎಂದರು! ಬಹಳಷ್ಟು ಜನ ಅದನ್ನು bloody ಎಂದು ಅಪಾರ್ಥ ಮಾಡಿಕೊಂಡು ಅವರೆಂದದ್ದು bloodly ಯಾ ಇಲ್ಲ bloody ಯಾ, ಅಥವ blood relationship ಇರಬಹುದಾ ಎಂದು ಸಭೆ ಮುಗಿದ ಮೇಲೆ ಮಾತನಾಡಿಕೊಳ್ಳುತ್ತಿದ್ದರು! ಆದರೆ ಅವರು ಏನು ಹೇಳಿದರು ಎನ್ನುವುದಕ್ಕಿಂತ, ಹೇಳಿದ ಮತ್ತು ಮಾತನಾಡಿದ ಹಾವಭಾವದ ರೀತಿಗೆ ಜನ ಮೆಚ್ಚಿದರು.

ಇಡೀ ಕಾರ್ಯಕ್ರಮದ ಇಂಪ್ರೆಸಿವ್ ಘಟ್ಟ ಮುಂದಿನ 20 ನಿಮಿಷಗಳದು. ಕರ್ನಾಟಕದಲ್ಲಿನ ಅವಕಾಶಗಳು, ಉದ್ದಿಮೆಗಳು, ವಾತಾವರಣ, ಅನುಕೂಲಗಳು, ಇವೆಲ್ಲವನ್ನೂ ಪ್ರತಿಬಿಂಬಿಸುವ 10 ನಿಮಿಷಗಳ ವಿಡಿಯೊ ಚಿತ್ರ ನಿಜಕ್ಕೂ ಅದ್ಭುತವಾಗಿತ್ತು. ಬಹಳ ವೃತ್ತಿನೈಪುಣ್ಯದಿಂದ ಸಿದ್ಧಪಡಿಸಲಾಗಿತ್ತು. ಅದು ಎಷ್ಟೊಂದು ಪರಿಣಾಮಕಾರಿಯಾಗಿ ಇತ್ತೆಂದರೆ, ಅದಾದ ನಂತರ ಮಾತನಾಡಿದ IAS ಅಧಿಕಾರಿ ಕೆ.ಎಮ್. ಶಿವಕುಮಾರ್ ಅದರಲ್ಲಿ ಬಂದಿರುವುದನ್ನೆಲ್ಲ ಅಕ್ಷರಶಃ ನಂಬಬೇಡಿ ಎಂಬ ಹಿತವಚನ ಹೇಳಿದರು! ಶಿವಕುಮಾರ್ ಬಹಳ ಚೆನ್ನಾಗಿ ತಿಳಿದುಕೊಂಡು, ಸಿದ್ಧವಾಗಿ ಬಂದಿದ್ದರು. ಅವರು ಮಾತನಾಡಿದ ರೀತಿ ಹಾಗೂ ಹೇಳಿದ ಕೆಲವು ವಿಚಾರಗಳು, ಉದಾಹರಣೆಗೆ, "ಇಲ್ಲಿಯ ಸಿಲಿಕಾನ್ ಕಣಿವೆಯಲ್ಲಿ ಗರಾಜಿನಲ್ಲಿ ಪ್ರಾರಂಭಿಸಿ, ನಂತರ ದೈತ್ಯ ಕಂಪನಿಗಳಾದ ಉದಾಹರಣೆಗಳು ನಿಮಗೆ ಗೊತ್ತು. ಅವು ಇಲ್ಲಿ ಘಟಿಸಿದವು. ಅಂತಹುದೇ ಕಥೆಗಳು ಈಗ ಬೆಂಗಳೂರಿನಲ್ಲಿ ಪ್ರತಿನಿತ್ಯ ಘಟಿಸುತ್ತಿವೆ," ಎಂಬಂತಹ ಯಶಸ್ಸಿನ ಕತೆಗಳು ಬಹಳ ಪರಿಣಾಮಕಾರಿಯಾಗಿದ್ದವು. ಸಭೆಗೆ ಬಂದಿದ್ದವರು ಏನು ತಿಳಿದುಕೊಳ್ಳಬೇಕು ಎಂದು ಬಂದಿದ್ದರೊ ಅದನ್ನಷ್ಟೆ ಅವರು ಬಹಳ ಚೆನ್ನಾಗಿ ಹೇಳುತ್ತಿದ್ದರೆ, ಮಾನ್ಯ ಉಪಮುಖ್ಯಮಂತ್ರಿಗಳು ತಮ್ಮ ಪಾಳೆಯಗಾರಿಕೆ ಗತ್ತಿನಲ್ಲಿ ಮಧ್ಯದಲ್ಲಿಯೇ ತಮ್ಮ ಎಡಗೈ ಎತ್ತಿ, "ಪ್ರಶ್ನೆಗಳನ್ನು ತೆಗೆದುಕೊಳ್ಳೋಣ, ನಿಲ್ಲಿಸಿ," ಎಂದುಬಿಟ್ಟರು! ಉಪಮುಖ್ಯಮಂತ್ರಿಗಳಿಗೆ ಸಭಾಮರ್ಯಾದೆ ಅರ್ಥವಾಗಲಿಲ್ಲ ಎಂದರೆ ಹೇಗೆ? ಇದೇನು ರಾಜರ ಆಸ್ಥಾನವೊ ಅಥವ ಪ್ರಜಾಪ್ರಭುತ್ವವೊ? ಯಡಿಯೂರಪ್ಪನವರ ಧಾರ್ಷ್ಟ್ಯದಿಂದ ಇರಿಸುಮುರಿಸಾದ ಶಿವಕುಮಾರ್ ಮಧ್ಯಕ್ಕೆ ಮಾತು ನಿಲ್ಲಿಸಿಬಿಟ್ಟರು. ಆದರೆ ಆದ ಅವಮಾನದ ಸೇಡನ್ನು ಕೊನೆಯಲ್ಲಿ ಬೇರೆ ರೀತಿ ತೀರಿಸಿಕೊಂಡರು!

ನಂತರ ಮಾತನಾಡಿದ್ದು ಕೈಗಾರಿಕಾಭಿವೃದ್ಧಿ ಇಲಾಖೆಯ ಕಮಿಷನರ್ ರಾಜ್‌ಕುಮಾರ್ ಖತ್ರಿ. ಕಂಪ್ಯೂಟರ್ ಪವರ್ ಪಾಯಿಂಟ್ ಪ್ರದರ್ಶನ ಕೊಟ್ಟ ಖತ್ರಿ, ಸರ್ಕಾರಿ ಅಧಿಕಾರಿಗಳಿಗೂ ಕಂಪ್ಯೂಟರ್ ಬಳಸಲು ಬರುತ್ತದೆ ಎಂದು ತೋರಿಸಿಕೊಟ್ಟರು. ಚೆನ್ನಾಗಿತ್ತು. ಅದಾದ ಮೇಲೆ ನಡೆದ ಪ್ರಶ್ನೋತ್ತರದ್ದೆ ದೊಡ್ಡ ತಮಾಷೆ ಮತ್ತು ದುರಂತ. ಇಂತಹ ಸಭೆಗಳಲ್ಲಿ ಭಾಗವಹಿಸುವವರಿಗೆ ಹೆಚ್ಚಿನ, ವಸ್ತುನಿಷ್ಠ ವಿಷಯ ತಿಳಿಯುವುದೇ ಪ್ರಶ್ನೋತ್ತರ ಸಮಯದಲ್ಲಿ. ಸಭಾ ಮರ್ಯಾದೆಯ ಪ್ರಯುಕ್ತ ಎಲ್ಲರೂ ಸಭೆಗೆ ಹಿರಿಯರಾಗಿದ್ದ ಯಡಿಯೂರಪ್ಪನವರಿಗೇ ಪ್ರಶ್ನೆಗಳನ್ನು ಕೇಳಿದರೆ ಅವರು ತಮ್ಮ ಎಂದಿನ ಗತ್ತಿನಲ್ಲಿ, ಒಂದು ಮಾತೂ ಆಡದೆ, ಕಟ್ಟಾಗೆ ಉತ್ತರ ನೀಡಲು ಕೈತೋರಿಸುತ್ತಿದ್ದರು. ಒಂದೇ ಒಂದು ಮಾತು ಆ ಅವಧಿಯಲ್ಲಿ ಅವರಿಂದ ಬರಲಿಲ್ಲ. ಇವರು ಜಾಗತೀಕರಣದ ಸಂದರ್ಭದಲ್ಲಿ ನಮ್ಮ ಹಣಕಾಸು ಸಚಿವರು! ಕಟ್ಟಾರವರ ಉತ್ತರಗಳು ಇನ್ನೂ ಮಜವಾಗಿದ್ದವು. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಉತ್ತರಿಸುವಂತೆ, ಒಂದೇ ಪದದ ಇಲ್ಲವೆ ಒಂದೇ ವಾಕ್ಯದ ಉತ್ತರಗಳು! ಎಲ್ಲರಿಗಿಂತ ಚೆನ್ನಾಗಿ ಉತ್ತರಿಸಬಹುದಿದ್ದ ಶಿವಕುಮಾರ್ ಒಂದೇ ಒಂದು ಸಲ ಉತ್ತರಿಸಲು ಯತ್ನಿಸಿದರೆ ಹೊರತು ರಾಜಕಾರಣಿಗಳ ಅಯೋಗ್ಯತೆ ಪ್ರದರ್ಶನವಾಗಲು ಬಿಟ್ಟು ಗಂಭೀರವಾಗಿ ತಮಾಷೆ ನೋಡುತ್ತ ಕುಳಿತಿದ್ದರು. ಆ ಸಭೆಯಲ್ಲಿ ಕರ್ನಾಟಕದಿಂದ ಬಂದಿದ್ದ ನಿಯೋಗಕ್ಕಿಂತ ಚೆನ್ನಾಗಿ ಕರ್ನಾಟಕವನ್ನು ಸಮರ್ಥಿಸಿಕೊಂಡವರೆಂದರೆ ಅನಿವಾಸಿಗಳಾದ ಪ್ರಭುದೇವ್ ಮತ್ತು ಕುಮಾರ್ ಮಳವಳ್ಳಿ. ಇವರಿಬ್ಬರಿಗೂ ಇಲ್ಲಿ ಯಾವುದೇ ಸ್ವಹಿತಾಸಕ್ತಿ ಇರಲಿಲ್ಲ. ಅದು ಅವರ ಜವಾಬ್ದಾರಿಯೂ ಆಗಿರಲಿಲ್ಲ. ಇದ್ದದ್ದೆಲ್ಲ, ಈ ಮೂಲಕವಾದರೂ ಕರ್ನಾಟಕಕ್ಕೆ ಇನ್ನೊಂದಷ್ಟು ಉದ್ದಿಮೆಗಳು ಹೋಗಲಿ, ಮತ್ತಷ್ಟು ಉದ್ಯೋಗ ಸೃಷ್ಟಿಯಾಗಲಿ, ಜನಜೀವನ ಹಸನಾಗಲಿ ಎಂಬ ನಾಡಪ್ರೀತಿ ಮತ್ತು ತಾಯಿನೆಲದ ಹೆಮ್ಮೆ ಮಾತ್ರ.

ಬಂದಿದ್ದವರಲ್ಲಿ ಕರ್ನಾಟಕ ಉದ್ಯೋಗ ಮಿತ್ರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಎಲ್. ಶಿವಾನಂದ ಮಾತ್ರ ಸ್ವಲ್ಪ ಚುರುಕಾಗಿ, ನಗುಮುಖದಿಂದ ಮಾತನಾಡುತ್ತ, ತಮ್ಮ ವಿಸಿಟಿಂಗ್ ಕಾರ್ಡ್ ಹಂಚುತ್ತ, ವಿವರಣೆ ಬಯಸಿದವರಿಗೆ ವಿವರಣೆ ನೀಡುತ್ತ ಓಡಾಡುತ್ತಿದ್ದರು. ಪ್ರಶ್ನೋತ್ತರ ಮುಗಿದ ಮೇಲೆ ಕೆಲವು ಅನಿವಾಸಿ ಕನ್ನಡಿಗರೊಂದಿಗೆ ಕಟ್ಟಾ ನಾಯ್ಡ ಬಹಳ ಚೆನ್ನಾಗಿ, ಕ್ರಮಬದ್ಧವಾಗಿ ಮಾತನಾಡುತ್ತಿದ್ದರು. ತಮ್ಮ ಇಲಾಖೆಗೆ ಅವಶ್ಯಕವಿರುವ ಕೆಲವು ಕನ್ನಡ ಪರಿಭಾಷೆಗಳನ್ನು ಚೆನ್ನಾಗಿ ಕಲಿತಿದ್ದರು. ಇವರಿಗೆ ತೊಡಕಿದ್ದದ್ದೆಲ್ಲ ಇಂಗ್ಲಿಷಿನದೆ. ದುಬಾಷಿ ಇಟ್ಟುಕೊಂಡರೆ ತಮ್ಮ ಬಾಡಿಲ್ಯಾಂಗ್ವೇಜ್‌ನಿಂದಲೆ ಜನರನ್ನು ಪ್ರಭಾವಿತಗೊಳಿಸಬಹುದು, ತನ್ಮೂಲಕ ತಮ್ಮ ಹುದ್ದೆಗೆ ಇನ್ನೂ ಹೆಚ್ಚಿನ ನ್ಯಾಯ ಸಲ್ಲಿಸಬಹುದು ಎಂದು ಇವರಿಗೆ ಹೇಳುವವರು ಇಲ್ಲವೆ? ಇಡೀ ಸಭೆಯಲ್ಲಿ ಕಮ್ಮಿ ಪದ ಖರ್ಚು ಮಾಡಿದವರೆಂದರೆ ಸಚಿವ ಶಿವಾನಂದ ನಾಯ್ಕ! ಅದೂ ಸಭೆ ಮುಗಿದ ನಂತರ ಇದ್ದ ಅನೌಪಚಾರಿಕ ಮಾತುಕತೆಯಲ್ಲಿ, ಒಂದಿಬ್ಬರೊಡನೆ ಮಾತ್ರ.

ತಾವು ಯಾವ ಕೆಲಸ ಮಾಡಲು ಯೋಗ್ಯರು ಎಂಬ ತಿಳಿವು, ತಮ್ಮ ಕೈಯ್ಯಲ್ಲಿ ಸಾಧ್ಯವಾಗದಿದ್ದಲ್ಲಿ ಸಮರ್ಥರಿಗೆ ಅದನ್ನು ಬಿಡಬೇಕು, ಅದರಲ್ಲೇ ತಮ್ಮ ದೊಡ್ಡತನ ಮತ್ತು ಪ್ರಜಾಹಿತ ಇರುವುದು ಎಂಬ ಸೂಕ್ಷ್ಮತೆ ಈ ಪಾಳೆಯಗಾರಿಕೆ ಮನೋಭಾವದ ಜನಪ್ರತಿನಿಧಿಗಳಿಗೆ ಅರ್ಥವಾಗುವುದು ಯಾವಾಗ? ಪ್ರಜಾಪ್ರಭುತ್ವ ಬೇರೂರಿರುವ, ಸಭಾಮರ್ಯಾದೆ ಗೊತ್ತಿರುವ ಜನರ ಮಧ್ಯೆ ತಮ್ಮ ನಡವಳಿಕೆಯಿಂದ ಏನು ಸಂದೇಶ ಹೊರಡುತ್ತದೆ, ಅದರಿಂದ ತಮ್ಮ ಹುದ್ದೆಗೆ ತಾವೆಷ್ಟು ಅನರ್ಹರಾಗಿರುತ್ತೇವೆ ಎಂದು ಈ ರಾಜಕಾರಣಿಗಳು ಅರಿಯುವುದು ಯಾವಾಗ? ಯಡಿಯೂರಪ್ಪನವರನ್ನು "ನೀವು ಏನು ಸಾಧಿಸಬೇಕು ಎಂದುಕೊಂಡಿರುವಿರಿ?" ಎಂದು ಪ್ರಭುದೇವ್ ಕೇಳಿದ್ದಕ್ಕೆ, "ನಾನು ಬಸವಣ್ಣನಂತೆ ಕೆಲಸ ಮಾಡಬೇಕು," ಎಂದಿದ್ದರಂತೆ. ಅಮೆರಿಕಾಗೊ, ಜಪಾನಿಗೊ ಮೂರು ದಿನಗಳ ಮಾತಿನ ಅವಶ್ಯಕತೆಯಿಲ್ಲದ ತಾಂತ್ರಿಕ ಕೆಲಸಕ್ಕೆ ಹೋಗುವ ಇಂಜಿನಿಯರುಗಳಿಗೆ ಅಲ್ಲಲ್ಲಿನ ಸಂಸ್ಕೃತಿ, ನಡವಳಿಕೆಗಳ ಬಗ್ಗೆ ನಮ್ಮ ಕಂಪನಿಗಳು ನಾಲ್ಕಾರು ದಿನಗಳ ತರಬೇತಿ ಕೊಟ್ಟು ಕಳುಹಿಸುತ್ತವೆ. ನಾಡಿನ ಗತಿ ಬದಲಿಸಬಲ್ಲವರು, ಅದೇ ಕರ್ತವ್ಯವಾಗಿರುವವರು, ಎಲ್ಲಿ ಹೇಗೆ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಯೋಚಿಸದೆ, "ನಾನು ಬಸವಣ್ಣನಂತೆ ಆಗಬೇಕು" ಎಂದುಕೊಂಡರೆ ಆಗಿಬಿಡುತ್ತಾರಾ? ಕೈಗೆಟುಕದ ದ್ರಾಕ್ಷಿಯನ್ನು ನರಿ ಹುಳಿ ಎಂದಂತೆ!

ಕಾನೂನಿಗೆ ವಿರುದ್ಧವಾದರೂ ಇಬ್ಬರು ಹೆಂಡಿರು ಇರಲೇಬೇಕು

- ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?
- ಜಯಪ್ರದ, ವಿಜಯಶಾಂತಿ, ರೋಜಾ, ಬಾಲಕೃಷ್ಣ
- ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರು

ಮೇಲಿನ ಲೇಖನಗಳಿಗೆ ಪೂರಕವಾಗಿ ಬರೆದ ಬರಹ ಇದು.

ಕಾನೂನಿಗೆ ವಿರುದ್ಧವಾದರೂ ಇಬ್ಬರು ಹೆಂಡಿರು ಇರಲೇಬೇಕು

ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್ ರಂತಹ ತೆಲುಗು ಸೂಪರ್‌ಸ್ಟಾರ್‌ಗಳ ಬಹುಪಾಲು ಚಿತ್ರಗಳಲ್ಲಿ ಹೆಂಗಸು ಸ್ವಂತ ವ್ಯಕ್ತಿತ್ವವೇ ಇಲ್ಲದ ಗ್ಲಾಮರ್ ಬೊಂಬೆ ಅಷ್ಟೆ. ಆಧುನಿಕ ಕಾಲದ ಜೀವನ ನೀತಿಗಳಾಗಲಿ, ಪ್ರಜಾಪ್ರಭುತ್ವದಲ್ಲಿನ ಕಾನೂನು ಪರಿಜ್ಞಾನವಾಗಲಿ, ವಾಸ್ತವಿಕತೆಯಾಗಲಿ, ಈ ಸೂಪರ್‌ಸ್ಟಾರ್‌ಗಳ ಚಿತ್ರಗಳಲ್ಲಿ ಅಪರೂಪವೆಂದರೆ ಅಪರೂಪ. ಅದರಲ್ಲೂ ಚಿರಂಜೀವಿ ಮತ್ತು ಬಾಲಕೃಷ್ಣರಂತೂ ಹಾಲಿವುಡ್ ಆಕ್ಷನ್ ನಟರನ್ನೂ ಮೀರಿಸುವಂತಹ ನಾನಾತರಹದ ಸಾಹಸಗಳನ್ನು ಮೆರೆವ, ಬೇಕಾದರೆ ಆಕಾಶವನ್ನೆ ಕಾಲಿನಲ್ಲಿ ಅಳೆದುಬಿಡಬಲ್ಲ ಪುರುಷಸಿಂಹರು. ಇವರಿಗೆಲ್ಲ ತಮ್ಮ ಚಿತ್ರದಲ್ಲಿ ಒಬ್ಬಳೇ ಪ್ರೇಯಸಿ ಅಥವ ಒಬ್ಬಳೇ ಹೆಂಡತಿ ಸಾಕಾಗುವುದಿಲ್ಲ. ಕನಿಷ್ಠ ಇಬ್ಬರಾದರೂ ಇರಲೇಬೇಕು. ಮಾತೆತ್ತಿದರೆ ತೊಡೆ ತಟ್ಟಿ, ಮೀಸೆ ತಿರುವುವ ಈ ಸೂಪರ್‌ಸ್ಟಾರ್‌ಗಳು "ನಾನು ಧೀರಗಂಡಸು, ಪುರುಷಸಿಂಹ," ಎಂದರೇನೆ ಅಲ್ಲಿನ ಪ್ರೇಕ್ಷರಿಗೆ ತೃಪ್ತಿ. ಕಾನೂನಿನ ಪ್ರಕಾರ ಅಪರಾಧವಾದ ಇಬ್ಬರು ಹೆಂಡತಿಯರನ್ನು ಮದುವೆ ಮಾಡಿಕೊಳ್ಳುವುದು ಇವರ ಸಿನೆಮಾ ಕತೆಗಳಿಗೆ ಅನ್ವಯಿಸುವುದಿಲ್ಲ. ಇಂತಹ ಚಿತ್ರಗಳಲ್ಲೆ ನಟಿಸುವ ಇವರು ಜನರಿಗೆ ಯಾವ ತರಹದ ಸಂದೇಶ ಕೊಡುತ್ತಾರೆ? ರಾಜಕೀಯ ಆಕಾಂಕ್ಷೆಗಳಿರುವವರಾದರೂ ಜನರನ್ನು ಮನರಂಜಿಸುವುದಕ್ಕಿಂತ ಮುಖ್ಯವಾಗಿ ಅವರ ಜಾಗೃತಿಗೆ ಪ್ರಯತ್ನಿಸಬಾರದೆ? ಇಲ್ಲ. ಭಾರತಾದ್ಯಂತದ ಬಹುಪಾಲು ಸಿನೆಮಾ ಸ್ಟಾರ್‌ಗಳ ಸ್ಥಿತಿಯೂ ಇದೆ. ತಮ್ಮ ಚಿತ್ರಗಳು ಯಾವಾಗಲೂ ನೆಲದ ಕಾನೂನಿಗೆ ಅತೀತವಾದ ವಿಷಯ ಹೊಂದಿರಬೇಕು, ಆದಷ್ಟೂ ವಾಸ್ತವದಿಂದ ದೂರ ಇರಬೇಕು, ಜನರನ್ನು ಆದಷ್ಟೂ ಪಲಾಯನವಾದಿಗಳನ್ನಾಗಿ ಮಾಡಬೇಕು, ಎಂಬುದೆ ಅವರೆಲ್ಲರ ಬುದ್ಧಿಹೀನ ತೀರ್ಮಾನವಾದಂತಿದೆ.

ತೆಲುಗು ಸಿನೆಮಾ ರಂಗದಲ್ಲಿ ಕನ್ನಡ ನಟರು

- ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?
- ಜಯಪ್ರದ, ವಿಜಯಶಾಂತಿ, ರೋಜಾ, ಬಾಲಕೃಷ್ಣ

ಮೇಲಿನ ಲೇಖನಗಳಿಗೆ ಪೂರಕವಾಗಿ ಬರೆದ ಬರಹ ಇದು.

ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರು
ಕರ್ನಾಟಕಲ್ಲಿ ಕಾಣದ ಒಂದು ಸಂಸ್ಕೃತಿ ಆಂಧ್ರದಲ್ಲಿದೆ. ಅದೇನೆಂದರೆ, ಕುಟುಂಬಸಮೇತರಾಗಿ ಸಿನೆಮಾಗಳಿಗೆ ಹೋಗುವುದು. ಸಿನೆಮಾ ಹುಚ್ಚಿನ ಅಪ್ಪಅಮ್ಮಂದಿರು ಮಕ್ಕಳನ್ನೂ ಕರೆದುಕೊಂಡು ಸಿನೆಮಾ ಎಂಜಾಯ್ ಮಾಡಲು ಹೋಗುತ್ತಾರೆ. ವಾರಕ್ಕೆರಡು ಸಿನೆಮಾ ಬಿಡುಗಡೆ ಆಗುವ ತೆಲುಗು ಸಿನೆಮಾ ರಂಗದಲ್ಲಿ ಹೀಗಾಗಿಯೆ ಅನೇಕ ಸೂಪರ್‌ಸ್ಟಾರ್‌ಗಳು. ಈ ಎಲ್ಲಾ ಸೂಪರ್‌ಸ್ಟಾರ್‌ಗಳಿಗೂ ಪ್ರಕಾಶ್ ರಾಜ್ ಎಂಬ ನಟ ತಮ್ಮ ಚಿತ್ರದಲ್ಲಿ ವಿಲ್ಲನ್ ಆಗಿಯೊ, ಇಲ್ಲದಿದ್ದರೆ ಇನ್ಯಾವುದಾದರೂ ಮುಖ್ಯಪಾತ್ರದಲ್ಲಿಯೂ ಇರಲೇಬೇಕು. ಈ ಪ್ರಕಾಶ್ ರಾಜ್ ಮಹಾನ್ ಕಿರಿಕಿರಿ ಆಸಾಮಿ. ಅನೇಕ ಸಲ ಅಲ್ಲಿನ ಕಲಾವಿದರ ಒಕ್ಕೂಟದಲ್ಲಿ ನಿರ್ಮಾಪಕರು ಈತನ ಮೇಲೆ ದೂರು ಕೊಟ್ಟಿದ್ದಾರೆ. ಒಮ್ಮೆಯಂತೂ ಈತನನ್ನು ಆರು ತಿಂಗಳು ಸಿನೆಮಾದಲ್ಲಿ ನಟಿಸದಂತೆ ಬ್ಯಾನ್ ಮಾಡಲಾಗಿತ್ತು. ಸರಿಯಾಗಿ ಡೇಟ್ಸ್ ಕೊಡುವುದಿಲ್ಲ, ಯಾರ ಮೇಲೆಯೊ ಕೈಮಾಡಿದ್ದ, ಎಂದೆಲ್ಲ ದೂರು. ತಮಿಳಿನಲ್ಲಿಯೂ ಆತ ಬಹಳ ಬ್ಯುಸಿ ನಟ. ಇಷ್ಟಾದರೂ ತೆಲುಗಿನ ಸೂಪರ್‌ಸ್ಟಾರ್‌ಗಳಿಗೆ, ನಿರ್ಮಾಪಕರಿಗೆ ಈ ನಟ ಬೇಕೆ ಬೇಕು. ಯಾಕೆಂದರೆ, ಆತ ಅಂತಹ ಅಗಾಧ ಪ್ರತಿಭಾವಂತ. ತೆರೆಯ ಮೇಲೆ ಪಾತ್ರವನ್ನೆ ಜೀವಿಸಿಬಿಡುತ್ತಾನೆ. ಈ ಪ್ರಕಾಶ್ ರಾಜ್ ಬೇರಾರೂ ಅಲ್ಲ, ನಮ್ಮ ಕನ್ನಡದ ಪ್ರಕಾಶ್ ರೈ.

ತೆಲುಗು ಸಿನೆಮಾಗಳಲ್ಲಿ ನಾಯಕನಟನಾಗಿ ಹೆಸರು ಮಾಡಿದ ಕನ್ನಡಿಗರಲ್ಲಿ ಮೊದಲ ಹೆಸರು ಸುಮನ್. ಆತನ ಪೂರ್ಣ ಹೆಸರು ಮಂಗಳೂರು ಸುಮನ್ ತಲ್ವಾರ್. 80 ರ ದಶಕದಲ್ಲಿ ಭರವಸೆಯ ನಾಯಕನಟನಾಗಿ ಬೆಳೆಯುತ್ತಿದ್ದ ಈತ ಬ್ಲೂಫಿಲಮ್ ಕೇಸೊಂದರಲ್ಲಿ ಆರು ತಿಂಗಳು ಜೈಲುವಾಸ ಅನುಭವಿಸಿದ್ದ. ಅದಾದ ಮೇಲೆ ಹಲವಾರು ವರ್ಷಗಳ ಅಜ್ಞಾತವಾಸದ ನಂತರ ಮತ್ತೆ ಚಲಾವಣೆಗೆ ಬಂದ. "ಅನ್ನಮಯ್ಯ" ಎಂಬ ಪ್ರಸಿದ್ಧ ಚಲನಚಿತ್ರದಲ್ಲಿ ಈತ ತಿರುಪತಿ ವೆಂಕಟರಮಣನಾಗಿ ನಟಿಸಿದ್ದನ್ನು ಪ್ರೇಕ್ಷಕರು ಕೊಂಡಾಡಿಬಿಟ್ಟರು. ಮೊದಲಿಗೆ ಚಂದ್ರಬಾಬು ನಾಯ್ಡು ಪರ ಇದ್ದ ಈತ 2004 ರಲ್ಲಿ ಬಿ.ಜೆ.ಪಿ. ಸೇರಿದ. ಕಳೆದ ಸಾರಿಯ ಚುನಾವಣೆಯಲ್ಲಿ ಬಿ.ಜೆ.ಪಿ. ಒಂದು ಹೆಜ್ಜೆ ಹಿಂದೆ ಹೋಯಿತು!

ಸುಮನ್ ನಂತರ ತೆಲುಗಿನಲ್ಲಿ ಬೆಳೆಯಲು ಆರಂಭಿಸಿದ ಕನ್ನಡದ ನಟ ಎಂದರೆ ವಿನೋದ್ ಆಳ್ವ. ಆತ ಅಲ್ಲಿ ವಿನೋದ್ ಕುಮಾರ್. ವಿಜಯಶಾಂತಿಯ "ಕರ್ತವ್ಯಂ"ನಲ್ಲಿ ನಟಿಸಿದ್ದ ಈತ ಆಕೆಯ ನೆರಳಿನಲ್ಲಿ ಬೆಳೆಯಲು ಯತ್ನಿಸಿದ. ಒಂದಷ್ಟು ಚಿತ್ರಗಳು ಯಶಸ್ವಿಯೂ ಆದವು. ಆದರೂ, ಬಹಳ ದಿನ ನಿಲ್ಲಲಿಲ್ಲ. ಇದೇ ವಿಜಯಶಾಂತಿಗೆ ದೊಡ್ಡ ಬ್ರೇಕ್ ಕೊಟ್ಟ "ಪ್ರತಿಘಟನ"ದಲ್ಲಿ ಕೆಟ್ಟ ಅತ್ಯಾಚಾರಿ ವಿಲನ್ ಆಗಿ ನಟಿಸಿ ಬಹಳ ಕಾಲ ಅಂತಹುದೇ ಪಾತ್ರಗಳಲ್ಲಿ ನಟಿಸಿದ ಮತ್ತೊಬ್ಬ ಕನ್ನಡಿಗ ಚರಣ್ ರಾಜ್. ತೀರಾ ಇತ್ತೀಚಿನವರೆಗೂ ವಿಲ್ಲನ್ ಆಗಿ ತೆಲುಗು ಚಿತ್ರಗಳಲ್ಲಿ ಚಲಾವಣೆಯಲ್ಲಿ ಇದ್ದ ಈ ನಟ ಈ ನಡುವೆ ಹೆಚ್ಚಿಗೆ ಕಾಣಿಸುತ್ತಿಲ್ಲ.

ತೆಲುಗಿನಲ್ಲಿ ವಿಲ್ಲನ್‌ಗಳಾಗಿ ಮಿಂಚಿದ ಇನ್ನಿಬ್ಬರು ಕನ್ನಡ ನಟರೆಂದರೆ ಪ್ರಭಾಕರ್ ಮತ್ತು ದೇವರಾಜ್. ಅಲ್ಲಿ ಪ್ರಭಾಕರ್ ಕನ್ನಡ ಪ್ರಭಾಕರ್ ಎಂದೇ ಪ್ರಸಿದ್ಧ. ಚಿರಂಜೀವಿಯ ಒಂದು ಚಿತ್ರದಲ್ಲಿ ಪ್ರಭಾಕರ್ ಮತ್ತು ಜಯಮಾಲ ಇಬ್ಬರೂ ಜೊತೆಯಾಗಿ ನಟಿಸಿದ್ದರು. ಸ್ವಲ್ಪ ಕ್ರಾಂತಿಕಾರಿ ಸಂದೇಶವಿರುವ "ಎರ್ರ ಮಂದಾರಂ" (ಕೆಂಪು ತಾವರೆ) ಚಿತ್ರದಲ್ಲಿ ದೇವರಾಜ್ ಕ್ರೂರ ಜಮೀನ್ದಾರನ ಪಾತ್ರದಲ್ಲಿ ಜೀವಿಸಿ ಬಿಟ್ಟಿದ್ದರು. ಅದಾದ ಮೇಲೆ ಅನೇಕ ಚಿತ್ರಗಳಲ್ಲಿ ದೇವರಾಜ್ ಖಳನಾಗಿ ನಟಿಸಿದರು. ಇದು ಯಾವ ಮಟ್ಟ ತಲುಪಿತೆಂದರೆ, ಕನ್ನಡ ಚಿತ್ರಗಳಲ್ಲಿ ಪ್ರಾಮಾಣಿಕ, ಸತ್ಯನಿಷ್ಠ ಪೊಲಿಸ್ ಅಧಿಕಾರಿ ಪಾತ್ರದಲ್ಲಿ ನಟಿಸುವ ತನ್ನನ್ನು ತೆಲುಗಿನಲ್ಲಿ ಖಳನಾಗಿ ನೋಡುವುದನ್ನು ಕನ್ನಡದ ಪ್ರೇಕ್ಷಕರು ಇಷ್ಟಪಡುತ್ತಿಲ್ಲವಾದ್ದರಿಂದ ಇನ್ನು ಖಳನಾಗಿ ನಟಿಸುವುದಿಲ್ಲ ಎಂದು ದೇವರಾಜ್ ಹೇಳಿಕೆಯೊಂದನ್ನು ಕೊಟ್ಟಿದ್ದರು. ಅದನ್ನು ಎಷ್ಟು ಪಾಲಿಸಿದರೊ ಗೊತ್ತಾಗಲಿಲ್ಲ.

ಆದರೆ, ಎಲ್ಲರಿಗಿಂತ ಹೆಚ್ಚಿನ ಯಶಸ್ಸು ಪಡೆದ ನಟನೆಂದರೆ ಕೊಪ್ಪಳ ಜಿಲ್ಲೆಯ, ಗಂಗಾವತಿಯ ಹುಡುಗ ಶ್ರೀಕಾಂತ್. ಅದು ಹೇಗೊ ಹೈದರಾಬಾದ್ ಸೇರಿಕೊಂಡ ಈ ಹುಡುಗ ಮೊದಮೊದಲು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ. ಆದರೆ ಯಾವಾಗ ತೆಲುಗಿನ ಷೋಮ್ಯಾನ್ ರಾಘವೇಂದ್ರ ರಾವ್‌ರ "ಪೆಳ್ಳಿಸಂದಡಿ" ಸೂಪರ್‌ಹಿಟ್ ಆಗಿಬಿಟ್ಟಿತೊ, ಈತನ ನಸೀಬು ಬದಲಾಗಿ ಬಿಟ್ಟಿತು. ಅಲ್ಲಿಂದೀಚೆಗೆ ಒಮ್ಮೆ ಆರಕ್ಕೇಳಿ, ಮತ್ತೊಮ್ಮೆ ಮೂರಕ್ಕಿಳಿದು, ಮತ್ತೆ ಏರುತ್ತ, ಹೀಗೆ ಕಳೆದ ಹತ್ತು ವರ್ಷಗಳಿಂದಲೂ ಚಲಾವಣೆಯಲ್ಲಿದ್ದಾನೆ. ಈ ನಡುವೆ ಮುನ್ನಾಬಾಯಿಯ ತೆಲುಗು ರಿಮೇಕ್‌ಗಳಲ್ಲಿ ಚಿರಂಜೀವಿಯ ದೋಸ್ತ್ ಆಗಿ ನಟಿಸುತ್ತಿದ್ದಾನೆ. ಧಾರವಾಡದಲ್ಲಿ ಬಿ.ಕಾಮ್. ಮಾಡಿರುವ ಈತ, 2007 ರಲ್ಲಿ ರವಿಚಂದ್ರನ್ ಜೊತೆಗೆ "ಯುಗಾದಿ" ಎನ್ನುವ ಕನ್ನಡ ಚಿತ್ರದಲ್ಲಿಯೂ ನಟಿಸಿದ್ದ. ಅದು ತೆಲುಗಿನಲ್ಲಿ ಹಿಟ್ ಆಗಿದ್ದ ಚಿತ್ರವೊಂದರ ರಿಮೇಕ್. ಆದರೂ ಇಲ್ಲಿ ಅದು ಬೋರಲು ಬಿತ್ತು. ಇನ್ನು ಆತ ಕನ್ನಡಕ್ಕೆ ಬರುವುದು ಸಂದೇಹವೆ.

ಪೂರಕ ಓದಿಗೆ:
- ಕಾನೂನಿಗೆ ವಿರುದ್ಧವಾದರೂ ಇಬ್ಬರು ಹೆಂಡಿರು ಇರಲೇಬೇಕು

ಜಯಪ್ರದ, ವಿಜಯಶಾಂತಿ, ರೋಜಾ, ಬಾಲಕೃಷ್ಣ...

(ಜನವರಿ 2008 ರಲ್ಲಿ ಬರೆದ ಲೇಖನ ಇದು. "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಯ ಜನವರಿ 18, 2008 ರ ಸಂಚಿಕೆಯ ಮುಖಪುಟ ಲೇಖನವಾಗಿ ಪ್ರಕಟವಾಗಿದೆ. ಚಿರಂಜೀವಿಯ ರಾಜಕೀಯ ಪ್ರವೇಶ ಈಗ "ಪ್ರಜಾ ರಾಜ್ಯಂ" ಪಕ್ಷದ ಆರಂಭದೊಂದಿಗೆ ಆರಂಭವಾಗಿದುವ ಸಂದರ್ಭದಲ್ಲಿ ಇಲ್ಲಿ.)

-ಮೊದಲ ಭಾಗ
-- ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?"

ಆಂಧ್ರದಿಂದ ಹಾರಿಹೋದ ಶಾಕುಂತಲೆ
ಕನ್ನಡದ ಪ್ರೀತಿಯ ಅಣ್ಣಾವ್ರು ನಟಿಸಿರುವ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕಾಳಿದಾಸನ ಹೆಂಡತಿಯಾಗಿ, ಕವಿಕಲ್ಪನೆಯ ಶಾಕುಂತಲೆಯಾಗಿ, "ಪ್ರಿಯತಮಾ, ಕರುಣೆಯಾ ತೋರೆಯಾ?" ಎಂದು ಕೇಳಿದ ಸುಂದರಿ ಜಯಪ್ರದ ಆಂಧ್ರದ ರಾಜಕೀಯದಲ್ಲಿ ಸಾಕಷ್ಟು ಲಾಭ ಮಾಡಿಕೊಂಡಾಕೆ. ಎನ್.ಟಿ.ಆರ್. ಸತ್ತ ನಂತರ ಜಯಪ್ರದರನ್ನು ರಾಜಕೀಯಕ್ಕೆ ಎಳೆದುಕೊಂಡ ಚಂದ್ರಬಾಬು ನಾಯ್ಡು, ಅವರನ್ನು ತಮ್ಮ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆಯನ್ನಾಗಿ ಮಾಡಿ, ಏಳೆಂಟು ವರ್ಷದ ಹಿಂದಿನ ಚುನಾವಣೆಯಲ್ಲಿ ವ್ಯಾಪಕವಾಗಿ ಪ್ರಚಾರಕ್ಕೆ ಬಳಸಿಕೊಂಡರು. ನಂತರ ತಮ್ಮ ಪಕ್ಷದಿಂದ ಆಕೆಯನ್ನು ರಾಜ್ಯಸಭೆಗೆ ಆರಿಸಿ ಕಳುಹಿಸಿದರು. ಇಪ್ಪತ್ತೈದು ವರ್ಷಗಳ ಹಿಂದೆಯೆ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಜಯಪ್ರದ, ನಾಯ್ಡುವಿನೊಂದಿಗೆ ಭಿನ್ನಾಭಿಪ್ರಾಯ ಬಂದಿದ್ದೆ, ತಕ್ಷಣ ಹಿಂದಿ ರಾಜ್ಯವಾದ ಉತ್ತರಪ್ರದೇಶಕ್ಕೆ ಹೋಗಿ, ಅಲ್ಲಿ ಮುಲಾಯಂ ಸಿಂಗರ ಪಾರ್ಟಿಯಿಂದ ಕಳೆದ ಬಾರಿ ಲೋಕಸಭೆಗೆ ನಿಂತು ಅಲ್ಲಿಯೂ ಆರಿಸಿ ಬಂದರು. ಒಮ್ಮೆ ತೆಲುಗು ಭಾಷೆಯ ದಕ್ಷಿಣದ ರಾಜ್ಯದ ಪ್ರಾದೇಶಿಕ ಪಕ್ಷದಿಂದ ರಾಜ್ಯಸಭೆಗೆ. ಮತ್ತೊಮ್ಮೆ ಹಿಂದಿ ಭಾಷೆಯ ಉತ್ತರದ ರಾಜ್ಯದ ಪ್ರಾದೇಶಿಕ ಪಕ್ಷದಿಂದ ಲೋಕಸಭೆಗೆ. ಹೀಗೆ ಉತ್ತರ-ದಕ್ಷಿಣದಲ್ಲೆಲ್ಲ ತನ್ನ ಸಿನೆಮಾ ಗ್ಲಾಮರ್‌ನಿಂದಾಗಿ ಸಲ್ಲುತ್ತಿರುವ ಈ ನಟಿ, ಈಗಲೂ ಸಿನೆಮಾದಲ್ಲಿ ನಟಿಸುವುದನ್ನು ಬಿಟ್ಟಿಲ್ಲ. ಕೆಲವೆ ವಾರಗಳ ಹಿಂದೆ ಈಕೆ ಕನ್ನಡದಲ್ಲಿ ನಟಿಸಿರುವ "ಈ ಬಂಧನ" ಚಿತ್ರ ಬಿಡುಗಡೆ ಆಗಿದೆ. ನಿಜಕ್ಕೂ ಈ ನಟಿ ತಾನು ಲೋಕಸಭೆಯ ಸದಸ್ಯೆಯಾಗಿ ನಿರ್ವಹಿಸಬೇಕಾದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆಯೆ? ಮನುಷ್ಯನ ಜಾತಿ, ಬಣ್ಣ, ಲಿಂಗ, ಬಾಹ್ಯ ಸೌಂದರ್ಯ, ದುಡ್ಡು, ಬಾಹುಬಲ, ಮುಂತಾದ ಕ್ಷುಲ್ಲಕ ವಿಷಯಗಳನ್ನಷ್ಟೆ ನೋಡಿ, ಅಯೋಗ್ಯರನ್ನೆಲ್ಲ ಆರಿಸುವ ಭಾರತದ ಪ್ರಜೆ ನಿಜಕ್ಕೂ ಜವಾಬ್ದಾರಿಯನ್ನು ತೋರಿಸುತ್ತಿದ್ದಾನೆಯೆ ಎನ್ನುವುದೆ ಬಹುಶಃ ಸರಿಯಾದ ಪ್ರಶ್ನೆ, ಅಲ್ಲವೆ? ಇದೇ ಸಮಯದಲ್ಲಿ, ನೂರಾರು ಅಯೋಗ್ಯರಿರುವ ಶಾಸನಸಭೆಗಳ ವಿಷಯದಲ್ಲಿ ಕೇವಲ ಜಯಪ್ರದಾರ ವಿಷಯಕ್ಕೆ ಈ ಪ್ರಶ್ನೆ ಕೇಳಿದರೆ, ಅದು ಕ್ರೂರವಾಗಿಬಿಡುತ್ತದೆ ಎನ್ನುವುದೂ ಒಪ್ಪಬೇಕಾದದ್ದೆ.

ಅಮ್ಮಾ, ತಾಯೆ, ತೆಲಂಗಾಣ- ವಿಜಯಶಾಂತಿಯ ಮಂತ್ರಪಠಣ
ಕರ್ನಾಟಕ ಏಕೀಕರಣವಾಗುವ ತನಕ ಕನ್ನಡ ಜಿಲ್ಲೆಗಳಾದ ಗುಲ್ಬರ್ಗ, ಬೀದರ್, ರಾಯಚೂರು ಜಿಲ್ಲೆಗಳು ಹೈದರಾಬಾದ್ ರಾಜ್ಯಕ್ಕೆ ಸೇರಿದ್ದವು. ಹಾಗಾಗಿಯೆ ಆ ಭಾಗಕ್ಕೆ ಹೈದರಾಬಾದ್ ಕರ್ನಾಟಕ ಎನ್ನುವುದು. ಹೈದರಾಬಾದ್ ರಾಜ್ಯದಲ್ಲಿ ಇದ್ದ ತೆಲುಗು ಭೂಪ್ರದೇಶವೆ ತೆಲಂಗಾಣ. ಹೈದರಾಬಾದ್ ಕರ್ನಾಟಕದಲ್ಲಿ, ವಿಶೇಷವಾಗಿ ಬೀದರ್‌ನಲ್ಲಿ ನಿಜಾಮರ ಪ್ರಭಾವದಿಂದಾಗಿ ಉರ್ದು-ಮಿಶ್ರಿತ ಕನ್ನಡವಿದೆ. ಅದೇ ರೀತಿ, ತೆಲಂಗಾಣದ ತೆಲುಗಿನಲ್ಲೂ ಉರ್ದುವಿನ ಪ್ರಭಾವ ಸ್ವಲ್ಪ ಹೆಚ್ಚಾಗಿಯೆ ಇದೆ. ಕನ್ನಡ ಸಿನೆಮಾಗಳಲ್ಲಿ ಇನ್‌ಸೆನ್ಸಿಟಿವ್ ನಿರ್ದೇಶಕರು ಹಾಸ್ಯಪ್ರಸಂಗಗಳಿಗೆ ಧಾರವಾಡ ಕನ್ನಡವನ್ನು ಬಳಸುವಂತೆ, ತೆಲುಗು ಚಿತ್ರಗಳಲ್ಲಿ ತೆಲಂಗಾಣ ಭಾಷೋಚ್ಚಾರವನ್ನು ಕಾಮೆಡಿ ಮಾಡಲು ಬಳಸಿಕೊಳ್ಳುತ್ತಾರೆ. ನಮ್ಮ ಹೈದರಾಬಾದ್ ಕರ್ನಾಟಕದಂತೆಯೆ, ತೆಲಂಗಾಣವೂ ಆರ್ಥಿಕವಾಗಿ ಹಿಂದುಳಿದ, ಸಾಮಾಜಿಕ ಅಸಮಾನತೆಗಳು ಹೆಚ್ಚಿರುವ, ಊಳಿಗಮಾನ್ಯ ಪದ್ದತಿ ಪ್ರಬಲವಾಗಿರುವ ಪ್ರದೇಶ. ರಾಯಲಸೀಮೆಯ ರೆಡ್ಡಿಗಳು ಮತ್ತು ಕರಾವಳಿ ಆಂಧ್ರದ ಕಮ್ಮರು ಪ್ರಬಲವಾಗಿರುವ ಆಂಧ್ರದ ರಾಜಕೀಯದಿಂದ ನಮ್ಮ ಸೀಮೆ ಅಭಿವೃದ್ಧಿಯಾಗುತ್ತಿಲ್ಲ ಎಂದು ತೆಲಂಗಾಣದ ಜನರು ಹಲವಾರು ದಶಕಗಳಿಂದ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುತ್ತಲೆ ಬಂದಿದ್ದಾರೆ.

ಹೀಗೆ ಹೋರಾಡುತ್ತ ಬಂದ ಜನರ ಗುಂಪಿಗೆ ಇತ್ತೀಚಿನ ಸೇರ್ಪಡೆ, ಸಿನೆಮಾ ನಟಿ ವಿಜಯಶಾಂತಿ. ಬೆರಳೆಣಿಕೆಯಷ್ಟು ಕನ್ನಡ ಸಿನೆಮಾಗಳಲ್ಲಿಯೂ ನಟಿಸಿರುವ ವಿಜಯಶಾಂತಿ ಕನ್ನಡ ಸಿನೆಮಾ ಪ್ರೇಕ್ಷಕರಿಗೇನೂ ಅಪರಿಚಿತಳಲ್ಲ. ದಿಲ್ಲಿಯ ಟಫ್‌ಕಾಪ್ ಕಿರಣ್ ಬೇಡಿ ಯವರ ಧೈರ್ಯ-ಸಾಹಸಗಳಿಂದ ಪ್ರೇರಿತವಾದ "ಕರ್ತವ್ಯಂ" ಎಂಬ ಚಿತ್ರದಲ್ಲಿ ಈಕೆ ನಟಿಸಿದ್ದೆ, ಭಾರತದಲ್ಲೆಲ್ಲ ಈಕೆಯನ್ನು "ಆಂಗ್ರಿ ಯಂಗ್ ವುಮನ್," "ಲೇಡಿ ಅಮಿತಾಬ್," ಎಂದೆಲ್ಲ ಗುರುತಿಸುವಂತೆ ಮಾಡಿಬಿಟ್ಟಿತು. ಸಾಧ್ಯವಾದಾಗಲೆಲ್ಲ ನಾಯಕಿ ಪ್ರಧಾನವಾದ, ರಾಜಕೀಯ ಪ್ರೇರಿತವಾದ ಸಿನೆಮಾ ಮಾಡಿಕೊಂಡು ಬಂದ ವಿಜಯಶಾಂತಿಯ ಪೊಲಿಟಿಕಲ್ ಆಕ್ಟಿವಿಸಮ್ಮನ್ನು ಆಕೆಯ ಚಿತ್ರಗಳಿಂದಲೆ ಗುರುತಿಸಬಹುದಾಗಿತ್ತು. ಹತ್ತು ವರ್ಷಗಳ ಹಿಂದೆ ಆಂಧ್ರದಲ್ಲಿ ಅಡಿಪಾಯವೆ ಇಲ್ಲದ ಬಿ.ಜೆ.ಪಿ. ಸೇರಿಕೊಂಡ ತೆಲಂಗಾಣ ಮೂಲದ ಈ ನಟಿ, ಈಗ ಆ ಪಕ್ಷಕ್ಕೆ ಆಂಧ್ರದಲ್ಲಿ ಭವಿಷ್ಯವಿಲ್ಲ ಎಂತಲೊ ಏನೊ, ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಆಗ್ರಹಿಸಿ ಇತ್ತೀಚೆಗೆ ತಾನೆ "ತಾಯಿ ತೆಲಂಗಾಣ ಪಕ್ಷ" ಸ್ಥಾಪಿಸಿದ್ದಾಳೆ. ತನ್ನ ಸಿನೆಮಾಗಳಲ್ಲಿದ್ದ ಸ್ಪಷ್ಟತೆ ಮತ್ತು ಆದರ್ಶವನ್ನು ನಿಜಜೀವನದ ರಾಜಕೀಯಕ್ಕೆ ತರಲಾಗದೆ ಈಕೆ ಏನೆಲ್ಲ ಮಾಡುತ್ತಿದ್ದರೂ ಅದು ಪರಿಣಾಮಕಾರಿಯಾಗಿಲ್ಲ. ತೆಲಂಗಾಣದಲ್ಲಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಪ್ರಬಲವಾಗಿರುವ ಜಾತಿಗಳಾದ ವೆಲಮ ಅಥವ ರೆಡ್ಡಿ ಜಾತಿಗೆ ಸೇರಿಲ್ಲದ ವಿಜಯಶಾಂತಿಗೆ, ಜಾತಿಪ್ರೇಮದ ರಾಜಕಾರಣದಲ್ಲಿ ಗೆಲುವು ಸಿಗುವುದು ಕಷ್ಟವೆ; ಯಾವುದಾದರೂ ಒಳ್ಳೆಯ ಭಾವೋನ್ಮಾದದ ವಿಷಯಾಧಾರಿತ ಸಂದರ್ಭ ಕೂಡಿ ಬರದ ಹೊರತು.

ಸುವಾಸನೆ ಬೀರಲಿದ್ದಾಳೆಯೆ ರೋಜಾ?
ಹಿಂದಿ, ತೆಲುಗು, ತಮಿಳಿನ ಹೀರೋಯಿನ್‌ಗಳನ್ನೆಲ್ಲ ಕನ್ನಡಕ್ಕೆ ಎಳೆದು ತರುವ ರವಿಚಂದ್ರನ್ "ಹೂವಾ ರೋಜಾ ಹೂವಾ, ಹೂವಾ, ನನ್ನ, ಜೀವಾ..." ಎಂದು "ಕಲಾವಿದ" ಚಿತ್ರದಲ್ಲಿ ಗುಲಾಬಿ ಹೂವುಗಳಿಂದ ಶೃಂಗರಿಸಿದ್ದು ನಟಿ ರೋಜಾಳನ್ನು. ಈ ರೋಜಾ ಒಂದಷ್ಟು ಕಾಲ ತೆಲುಗು ಮತ್ತು ತಮಿಳು ಚಿತ್ರರಂಗಗಳೆರಡಲ್ಲೂ ಮಿಂಚಿಬಿಟ್ಟಳು. ಜಯಪ್ರದ ತೆಲುಗುದೇಶದ ಗಡಿ ದಾಟಿ ಉತ್ತರಪ್ರದೇಶದಲ್ಲಿ ಸಮಾಜವಾದಿಯಾದಾಗಿನಿಂದ ಅಂತಹುದೇ ಗ್ಲಾಮರ್‌ನ ಹುಡುಕಾಟದಲ್ಲಿದ್ದ ನಾಯ್ಡು, ಯಾವಾಗ ರೋಜಾಳಿಗೆ ರಾಜಕೀಯದಲ್ಲಿ ಆಸಕ್ತಿ ಇದೆ ಎಂದು ತಿಳಿಯಿತೊ, ತಕ್ಷಣ ತಮ್ಮ ಪಕ್ಷಕ್ಕೆ ಸೆಳೆದುಕೊಂಡು, ಆಕೆಯನ್ನೆ ಮಹಿಳಾ ಘಟಕದ ಅಧ್ಯಕ್ಷೆಯನ್ನಾಗಿ ಮಾಡಿಬಿಟ್ಟರು. ಜಾತಿವಾದಿ ರಾಜಕಾರಣದಲ್ಲಿ ಜಯಪ್ರದಾಳಿಗೆ ಇಲ್ಲದ ಒಂದು ಅಡ್ವಾಂಟೇಜ್ ರೋಜಾಳಿಗಿತ್ತು. ಅದು ಆಕೆ ಪ್ರಬಲವಾದ ರೆಡ್ಡಿ ಜಾತಿಗೆ ಸೇರಿದ್ದದ್ದು. ಅದನ್ನೆ ಉಪಯೋಗಿಸಿ ನಾಯ್ಡು ಕೋಲಾರದ ಪಕ್ಕದ ಚಿತ್ತೂರು ಜಿಲ್ಲೆಯಲ್ಲಿ ಆಕೆಯನ್ನು ಕಳೆದ ಸಲದ ವಿಧಾನಸಭಾ ಚುನಾವಣೆಗೆ ಇಳಿಸಿದರು. ಅದರೆ, ಕಾಂಗ್ರೆಸ್ ಪರ ಅಲೆಯಲ್ಲಿ ರೋಜಾಳ ಸುವಾಸನೆ ಮತದಾರರ ಮೂಗಿಗೆ ಸೋಕಲಿಲ್ಲ. ಇನ್ನೊಂದು ವರ್ಷಕ್ಕೆಲ್ಲ ಬರಲಿರುವ ಚುನಾವಣೆಯಲ್ಲಾದರೂ ರೋಜಾ ಸುವಾಸನೆ ಬೀರಲಿದ್ದಾಳೆಯೆ ಎನ್ನುವುದನ್ನು ನೋಡಬೇಕು. ಆದರೆ, ತಮ್ಮ ಹಣ ಮತ್ತು ಪ್ರಸಿದ್ಧಿಯನ್ನು ಇನ್ನಷ್ಟು ಹಣ ಮತ್ತು ಅಧಿಕಾರ ಲಾಭಕ್ಕಾಗಿ ಉಪಯೋಗಿಸಿಕೊಳ್ಳುವ ಇಂತಹ ಜನರಿಂದ ಜನರ ಜೀವನಮಟ್ಟ ಸುಧಾರಿಸುತ್ತದೆಯೆ ಎನ್ನುವುದು ಕೇಳಲೇ ಬೇಕಾದ ಪ್ರಶ್ನೆ.

ಬಾಲಕೃಷ್ಣ ಆಗುವನೆ ಅನ್ನಗಾರು?
ಅಣ್ಣಾವ್ರು ಎನ್.ಟಿ.ಆರ್. ರ ವಾರಸುದಾರರು ಯಾರು ಎನ್ನುವುದು ಕಳೆದ 25 ವರ್ಷಗಳಲ್ಲಿ ಆಂಧ್ರದಲ್ಲಿ ಪದೆಪದೆ ಕೇಳಿ ಬಂದ ಪ್ರಶ್ನೆ. ಅದಕ್ಕೆ ಒಮ್ಮೆ ಎನ್.ಟಿ.ಆರ್. ಸ್ವತಃ ತಮ್ಮ ಮಗ "ಯುವರತ್ನ" ಬಾಲಕೃಷ್ಣ ಎಂದಿದ್ದರು. ಕೊನೆಗೆ ಆ ವಾರಸುದಾರಿಕೆಯನ್ನು ಅಳಿಯ ಚಂದ್ರಬಾಬು ನಾಯ್ಡು ಕಿತ್ತುಕೊಂಡಾಗ ಅದಕ್ಕೆ ಬಾಲಕೃಷ್ಣನ ಸಮ್ಮತಿ ಇತ್ತು. ಮಾವನಿಗೆ ಬುದ್ಧಿ ಕಲಿಸಲು ಆಗ ಚಂದ್ರಬಾಬು ನಾಯ್ಡುಗೆ ಬಹಳ ಸಹಾಯ ಮಾಡಿದವರು ಅವರ ಷಡ್ಡಕ, ಎನ್.ಟಿ.ಆರ್‌ರ ಹಿರಿಯ ಅಳಿಯ ದಗ್ಗುಬಾಟಿ. ಇದೇ ದಗ್ಗುಬಾಟಿ ಮತ್ತು ಆತನ ಹೆಂಡತಿ ಪುರಂಧರೇಶ್ವರಿ ಕಳೆದ ಚುನಾವಣೆಯಲ್ಲಿ ನಾಯ್ಡುವಿನ ಮೇಲೆ ತಿರುಗಿ ಬಿದ್ದು ಕಾಂಗ್ರೆಸ್ ಸೇರಿದರು. ಆತ್ಮಗೌರವದ ಹೆಸರಿನಲ್ಲಿ ತನ್ನ ಅಪ್ಪ ಯಾವುದನ್ನು ವಿರೋಧಿಸಿದ್ದರೊ ಅದೇ ಪಕ್ಷದಿಂದ ಮಗಳು ಈಗ ಎಂ.ಪಿ.. ಅಷ್ಟೇ ಅಲ್ಲ, ಕೇಂದ್ರದಲ್ಲಿ ಮಂತ್ರಿ ಸಹ. ಕೆಲವೇ ದಿನಗಳ ಹಿಂದೆ ಆಕೆ ಒಂದು ಅಣಿಮುತ್ತನ್ನು ಉದುರಿಸಿದ್ದಾರೆ: ತನ್ನ ಅಪ್ಪನ ನಿಜ ವಾರಸುದಾರ ಈಗಿನ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಎಂದು!

ಚಿರಂಜೀವಿ ಬಿಟ್ಟರೆ ತೆಲುಗು ಸಿನೆಮಾ ರಂಗದಲ್ಲಿ ಹೆಚ್ಚಿನ ಸ್ಟಾರ್‌ಪವರ್ ಇರುವ ನಟ ಬಾಲಕೃಷ್ಣ. ಇತ್ತೀಚೆಗೆ ಬಾಲಕೃಷ್ಣ ತನ್ನ ಮಗಳನ್ನು ನಾಯ್ಡುವಿನ ಮಗನಿಗೆ ಧಾರೆಯೆರೆದು ಕೊಟ್ಟಿದ್ದಾರೆ. ರಾಜಕೀಯಕ್ಕೆ ಬರುವ ಆಕಾಂಕ್ಷೆಗಳು ಆತನಿಗೆ ತೀವ್ರವಾಗಿದ್ದರೂ ಬಹುಶಃ ಚಿತ್ರರಂಗದಲ್ಲಿಯೇ ನಂಬರ್ ಒನ್ ಆಗದ ತಾನು ರಾಜಕೀಯದಲ್ಲಿ ಗೆಲ್ಲುತ್ತೇನೆಯೆ ಎಂಬ ಸಂದೇಹದಿಂದಲೊ ಇಲ್ಲವೆ ಸೂಕ್ತ ಸಮಯಕ್ಕಾಗಿಯೊ ಕಾಯುತ್ತಿರುವಂತಿದೆ. ಇದೇ ಬಾಲಕೃಷ್ಣ ಒಂದೆರಡು ವರ್ಷದ ಹಿಂದೆ ನಿರ್ಮಾಪಕನೊಬ್ಬನ ಮೇಲೆ ಗುಂಡು ಹಾರಿಸಿದ್ದು ಬಾರಿ ಸುದ್ದಿಯಾಗಿತ್ತು. ಆದರೆ ಇಲ್ಲಿಯವರೆಗೂ ಕಾನೂನು ತನ್ನ ಕೆಲಸ ಪೂರೈಸಿದಂತಿಲ್ಲ.

ಬಾಲಕೃಷ್ಣ ನಟಿಸಿದ "ಸಮರಸಿಂಹ ರೆಡ್ಡಿ" ತೆಲುಗಿನಲ್ಲಿ ರಾಯಲಸೀಮೆಯ ರಕ್ತಪಾತದ ಫ್ಯಾಕ್ಷನಿಸಮ್ ಮತ್ತು ಪಾಳೆಯಗಾರಿಕೆಯ ಫಾರ್ಮುಲಾ ಕತೆಗಳಿಗೆ ದಾರಿ ಮಾಡಿಕೊಟ್ಟಿತು. ಅಲ್ಲಿಯವರೆಗೂ ರೆಡ್ಡಿ ಎಂಬ ಜಾತಿಸೂಚಕ ಪಾತ್ರಗಳನ್ನು ಪೋಷಿಸದೆ ಇದ್ದ ತೆಲುಗು ಸಿನೆಮಾಗಳಲ್ಲಿ ಇದ್ದಕ್ಕಿದ್ದಂತೆ ನಾಯಕನಟರೆಲ್ಲ ರೆಡ್ಡಿ ಎಂಬ ಹೆಸರಿನ ಪಾತ್ರಗಳಲ್ಲಿ ನಟಿಸಿಬಿಟ್ಟರು. ಸಣ್ಣಪುಟ್ಟ ನಾಯಕರಿಂದ ಹಿಡಿದು ಸೂಪರ್‌ಸ್ಟಾರ್‌ಗಳೆಲ್ಲ ಇದೇ ತರಹದ ಚಿತ್ರಗಳನ್ನು ಮಾಡಲಾರಂಭಿಸಿಬಿಟ್ಟರು. ಇದು ಎಷ್ಟರ ಮಟ್ಟಿಗೆ ಹಬ್ಬಿಬಿಟ್ಟಿತೆಂದರೆ ಸ್ವತಃ ಮೆಗಾಸ್ಟಾರ್ ಚಿರಂಜೀವಿ ಇದೇ ಫಾರ್ಮುಲಾದ ಮೇಲೆ "ಇಂದ್ರ" ಎನ್ನುವ ಸಿನೆಮಾ ಮಾಡಬೇಕಾಗಿ ಬಂತು. ಆದರಲ್ಲಿ ನಾಯಕನ ಹೆಸರು ಇಂದ್ರಸೇನ ರೆಡ್ಡಿ! ಈಗಲೂ ಆ ತರಹದ ಚಿತ್ರಗಳು ಬರುವುದು ನಿಂತಿಲ್ಲ. ಆದರೆ ಅಬ್ಬರ ಕಮ್ಮಿಯಾದಂತಿದೆ.


ಮೊದಲ ಭಾಗ
- ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?"

ಪೂರಕ ಓದಿಗೆ:
- ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರು
- ಕಾನೂನಿಗೆ ವಿರುದ್ಧವಾದರೂ ಇಬ್ಬರು ಹೆಂಡಿರು ಇರಲೇಬೇಕು

ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?

(ಜನವರಿ 2008 ರಲ್ಲಿ ಬರೆದ ಲೇಖನ ಇದು. "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಯ ಜನವರಿ 18, 2008 ರ ಸಂಚಿಕೆಯ ಮುಖಪುಟ ಲೇಖನವಾಗಿ ಪ್ರಕಟವಾಗಿದೆ. ಚಿರಂಜೀವಿಯ ರಾಜಕೀಯ ಪ್ರವೇಶ ಈಗ "ಪ್ರಜಾ ರಾಜ್ಯಂ" ಪಕ್ಷದ ಆರಂಭದೊಂದಿಗೆ ಆರಂಭವಾಗಿದುವ ಸಂದರ್ಭದಲ್ಲಿ ಇಲ್ಲಿ.)

1980 ರಲ್ಲಿ ಇತ್ತ ಕರ್ನಾಟಕದಲ್ಲಿ ಗುಂಡೂರಾವ್ ಎಂಬ ಅರೆ ಜೋಕರ್, ಅರೆ ಗೂಂಡಾ ಮುಖ್ಯಮಂತ್ರಿಯಾದರೆ, ಅತ್ತ ಆಂಧ್ರ ಪ್ರದೇಶದಲ್ಲಿ ಮುಖ್ಯಮಂತ್ರಿಯಾದಾತನ ಹೆಸರು ಅಂಜಯ್ಯ. ಪೂರ್ಣ ಜೋಕರ್. ಯಾವೊಬ್ಬ ಆಂಧ್ರದ ಮುಖ್ಯಮಂತ್ರಿಯೂ ಮುಂದೆ ಸಾಧಿಸಲಾಗದ್ದನ್ನು ಆತ ಮಾಡಿದ. ಏನೆಂದರೆ, 72 ಜನರನ್ನು ಮಂತ್ರಿಗಳನ್ನಾಗಿ ಮಾಡಿದ್ದ! ಆತನನ್ನು ಇಂದಿರಾ ಗಾಂಧಿ ಅಧಿಕಾರದಿಂದ ಕೆಳಗಿಳಿಸಿದಾಗ ಆತ ಹೀಗೆ ಅಂದ ಅನ್ನುತ್ತಾರೆ: "ನಾನು ಮೇಡಮ್ಮಿನ ಆಶೀರ್ವಾದದಿಂದ ಬಂದೆ, ಈಗ ಅವರ ಅದೇಶದ ಮೇರೆಗೆ ಹೋಗುತ್ತಿದ್ದೇನೆ. ನಾನು ಯಾಕೆ ಬಂದೆ, ಈಗ ಯಾಕೆ ಹೋಗುತ್ತಿದ್ದೇನೆ ಎನ್ನುವುದೇನೂ ನನಗೆ ಗೊತ್ತಿಲ್ಲ."

ಪಾಪ. ಇಂತಹ ಕುರಿಯನ್ನೂ, ಆತ ಒಂದು ರಾಜ್ಯದ ಮುಖ್ಯಮಂತ್ರಿ ಎನ್ನುವುದನ್ನೂ ನೋಡದೆ ಹೈದರಾಬಾದಿನ ವಿಮಾನನಿಲ್ದಾಣದಲ್ಲಿ ಆಗಿನ ಪ್ರಧಾನಿಯ ಮಗ ರಾಜೀವ ಗಾಂಧಿ ಅವಮಾನಿಸಿ ಬಿಟ್ಟರು. ಅಷ್ಟು ಸಾಲದೆಂಬಂತೆ, ದೋಸೆ ಮಗುಚುವಂತೆ ಕೇವಲ ಎಂಟೇ ತಿಂಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಗರ್ವಿಷ್ಟ ದಿಲ್ಲಿ ದೊರೆಗಳು ಆಂಧ್ರದಲ್ಲಿ ಬದಲಾಯಿಸಿಬಿಟ್ಟರು. 1982 ರಲ್ಲಿ ಆಂಧ್ರ ಕಂಡದ್ದು ಮೂವರು ಮುಖ್ಯಮಂತ್ರಿಗಳನ್ನು. ಇದನ್ನೆಲ್ಲ ಮೂಕವಾಗಿ ನೋಡಿದ ತೆಲುಗು ಜನ ಇದು ತಮಗಾದ ಅವಮಾನ ಎಂದುಕೊಂಡು ಕನಲಿ ಹೋದರು. ಅದಕ್ಕಿಂತ ಕೆಲವು ವರ್ಷಗಳ ಮೊದಲಿನಿಂದಲೂ ರಾಜಕೀಯಕ್ಕೆ ಬರಲು ಸಮಯ ನೋಡುತ್ತಿದ್ದ ತೆಲುಗಿನ ಜನಪ್ರಿಯ ಚಲನಚಿತ್ರ ನಟ, "ಅನ್ನಗಾರು" (ಅಣ್ಣಾವ್ರು) ಎನ್.ಟಿ. ರಾಮರಾವ್, ಆಗ ಜನರನ್ನು ಕೇಳಿದ್ದು ಒಂದೇ ಪ್ರಶ್ನೆ: "ಏನಾಯಿತು ತೆಲುಗು ಆತ್ಮಗೌರವ?"

ಈ ತೆಲುಗು ಆತ್ಮಗೌರವದ ಪ್ರಶ್ನೆಯನ್ನೆ ಮುಂದಿಟ್ಟುಕೊಂಡು, ದಿಲ್ಲಿ ದೊರೆಸಾನಿಯ ಗುಲಾಮರ ವಿರುದ್ಧ ಎನ್.ಟಿ.ಆರ್. ತೆಲುಗು ದೇಶಂ ಪಕ್ಷ ಕಟ್ಟಿದರು. ಅದಾದ ಒಂಬತ್ತು ತಿಂಗಳಿಗೆ ನಡೆದ ಚುನಾವಣೆಯಲ್ಲಿ, 35 ವರ್ಷಗಳ ನಿರಂತರ ಕಾಂಗ್ರೆಸ್ ಆಡಳಿತ ಧೂಳಿಪಟವಾಗಿ ಹೋಯಿತು. ಜನರ ಆತ್ಮಗೌರವ ಎಷ್ಟು ತೀವ್ರವಾಗಿ ಕೆಲಸ ಮಾಡಿತೆಂದರೆ, ಇಂದಿರಾ ಗಾಂಧಿ ಸತ್ತ ಮೇಲೆ ಇಡೀ ದೇಶ ರಾಜೀವ್ ಗಾಂಧಿಯ ಕೈಗೆ ಮೂರನೆ ಎರಡರಷ್ಟು ಬಹುಮತ ಕೊಟ್ಟರೆ, ಆಂಧ್ರದಲ್ಲಿ ಜನ ಕ್ಯಾರೇ ಎನ್ನಲಿಲ್ಲ. ಅದು ಯಾವ ಮಟ್ಟಕ್ಕೆಂದರೆ, ಆ ಲೋಕಸಭೆಯಲ್ಲಿ ತೆಲುಗು ದೇಶಂ ಎನ್ನುವ ಒಂದೇ ರಾಜ್ಯದಲ್ಲಿರುವ ಪ್ರಾದೇಶಿಕ ಪಕ್ಷ ಇಡೀ ದೇಶಕ್ಕೆ ಅಧಿಕೃತ ವಿರೋಧ ಪಕ್ಷವಾಗಿತ್ತು!

ಆಂಧ್ರದ ವಿಷಯಕ್ಕೆ ಬಂದರೆ, ಒಂದು ವಿಷಯದಲ್ಲಂತೂ ಕಳೆದ 25 ವರ್ಷಗಳಲ್ಲಿ ಮತ್ತೊಮ್ಮೆ ಇತಿಹಾಸ ಮೂಲ ಸ್ಥಾನಕ್ಕೆ ಬಂದಿದೆ. ಈಗಲೂ ದಿಲ್ಲಿ ದೊರೆಸಾನಿಯ ಗುಲಾಮರೆ ಆಂಧ್ರವನ್ನು ಆಳುತ್ತಿರುವವರು. ಈಗಿನ ಮುಖ್ಯಮಂತ್ರಿಯ ಪಾಪ್ಯುಲರ್ ಸ್ಲೋಗನ್ ಏನೆಂದರೆ, "ಮರಳಿ ಇಂದಿರಮ್ಮ ಪಾಲನ."

ಅದು ಬಿಟ್ಟರೆ, ಮತ್ತೆ ಜನ ಈಗ ಮತ್ತೊಬ್ಬ ಸಿನೆಮಾ ನಟನತ್ತ ನೋಡುತ್ತಿದ್ದಾರೆ. ಮುಠಾಮೇಸ್ತ್ರಿ ಎಂಬ ಯಶಸ್ವಿ ಸಿನೆಮಾದಲ್ಲಿ ಎಮ್‌ಎಲ್‌ಎ. ಆಗಿ, ಮಂತ್ರಿಯೂ ಅಗಿದ್ದ ಆ ನಟ ರಾಜಕೀಯಕ್ಕೆ ಬರುವುದು ಇನ್ನೇನು ಖಾಯಂ. ಎನ್.ಟಿ.ಆರ್. ನಂತರ ಅಷ್ಟೆ ಜನಪ್ರಿಯತೆ ಮತ್ತು ಫ್ಯಾನ್ ಫಾಲ್ಲೊಯಿಂಗ್ ಇರುವ ಚಿರಂಜೀವಿ, ಆಂಧ್ರದ ಮುಖ್ಯಮಂತ್ರಿ ಆಗುತ್ತಾರೆಯೆ ಎನ್ನುವುದೆ ಈಗ ಎಲ್ಲರೂ ಕೇಳುತ್ತಿರುವ ಪ್ರಶ್ನೆ. ಆಂಧ್ರದ ಪತ್ರಿಕೆಗಳು, ಟಿವಿ, ಮತ್ತು ತೆಲುಗು ವೆಬ್‌ಸೈಟುಗಳು ಈಗ ಇದೇ ಸುದ್ದಿಯಿಂದ ಅಕ್ಷರಶಃ ತುಂಬಿ ತುಳುಕುತ್ತಿವೆ.


ರೆಡ್ಡಿ, ಕಮ್ಮರ ಪ್ರಾಬಲ್ಯದಲ್ಲಿ ರಾಜಕೀಯ ಬಲ ಪಡೆದುಕೊಳ್ಳದ ದಲಿತ-ಹಿಂದುಳಿದ ವರ್ಗಗಳು
ಚಿರಂಜೀವಿ ಆಂಧ್ರದ ರಾಜಕಾರಣಕ್ಕೆ ಇಳಿಯುವುದಕ್ಕೆ ಎನ್.ಟಿ.ಆರ್. ಗೆ ಒದಗಿದಂತಹ ಭಾವಾವೇಶದ, ಎಲ್ಲವೂ ಕೂಡಿಬಂದಂತಹ ಸನ್ನಿವೇಶ ಬರದೆ ಇದ್ದರೂ, ಅಲ್ಲಿಯ ಈಗಿನ ಸಾಮಾಜಿಕ ಪರಿಸ್ಥಿತಿ ಚಿರಂಜೀವಿಗೆ ಅನುಕೂಲವಾಗಿ ಇದೆ ಅಂತಲೆ ಅನ್ನಬೇಕು. ಆಂಧ್ರದ ಇತಿಹಾಸದಲ್ಲಿ ಒಂದು ಬಾರಿಗೆ ದಲಿತ, ಮತ್ತೊಂದು ಬಾರಿಗೆ ಹಿಂದುಳಿದ ವರ್ಗದವರೊಬ್ಬರು ಮುಖ್ಯಮಂತ್ರಿಯಾದದ್ದು ಬಿಟ್ಟರೆ ಇಲ್ಲಿಯವರೆಗೂ ಮುಖ್ಯಮಂತ್ರಿ ಆದವರೆಲ್ಲ ರೆಡ್ಡಿ, ಕಮ್ಮ, ವೆಲಮ, ಅಥವ ಬ್ರಾಹ್ಮಣರಂತಹ ಜಮೀನ್ದಾರಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪ್ರಬಲವಾದ ಜಾತಿಗೆ ಸೇರಿದವರು. ಅದರಲ್ಲೂ ಆಂಧ್ರದ ಜನಸಂಖ್ಯೆಯಲ್ಲಿ ಕೇವಲ ಶೇ. 6.5 ರಷ್ಟಿರುವ ರೆಡ್ಡಿಗಳು 30 ವರ್ಷಕ್ಕಿಂತ ಹೆಚ್ಚು ಕಾಲ ಮುಖ್ಯಮಂತ್ರಿಗಳಾಗಿದ್ದರೆ, ಶೇ. 5 ಕ್ಕಿಂತ ಕಮ್ಮಿ ಇರುವ ಕಮ್ಮರು 15-20 ವರ್ಷಗಳ ಕಾಲ ಆಳಿದ್ದಾರೆ. ಆಂಧ್ರದ ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿರುವ ಹಿಂದುಳಿದ ಜಾತಿಗಳಿಗೆ ಸೇರಿದವರಲ್ಲಿ ಒಬ್ಬರು ಮಾತ್ರ ಆಂಧ್ರದ ಮುಖ್ಯಮಂತ್ರಿ ಆಗಿದ್ದರು. ಆತ, ರಾಜೀವ್ ಗಾಂಧಿಯಿಂದ ಅವಮಾನ ಮಾಡಿಸಿಕೊಂಡ ಅಂಜಯ್ಯ.

ಈ ಜಾತಿ ಸಮೀಕರಣವೆ ಈಗ ಚಿರಂಜೀವಿಗೆ ಸಹಕಾರಿಯಾಗಿರುವುದು. ಚಿರಂಜೀವಿ ಮತ್ತವರ ಸಹಚರರು ಜಾತಿ ವಿಷಯವನ್ನು ಎಲ್ಲೂ ಎತ್ತದೆ, ಅದನ್ನು ಬಹಳ ಹುಷಾರಾಗಿ ಹ್ಯಾಂಡ್ಲ್ ಮಾಡುತ್ತಿದ್ದರೂ, ಮೂರನೆ ಶಕ್ತಿಯ ಹುಡುಕಾಟದಲ್ಲಿರುವ ಆಂಧ್ರಪ್ರದೇಶದ ಕೆಲವು ಸಾಮಾಜಿಕ ಕಾರ್ಯಕರ್ತರು ಮತ್ತು ಪಕ್ಷಗಳು ಅದನ್ನು ನೇರವಾಗಿಯೆ ಹೇಳುತ್ತಿದ್ದಾರೆ. ಆಂಧ್ರದಲ್ಲಿನ ಮೇಲ್ಜಾತಿಯ ನಾಯಕತ್ವಕ್ಕೆ ಕೊನೆ ಹಾಡಲೇ ಬೇಕು ಎನ್ನುತ್ತಿದ್ದಾರೆ.

ಆಂಧ್ರದ ಇಂದಿನ ಜನಸಂಖ್ಯೆಯಲ್ಲಿ ಬಲಿಜ, ಒಂಟರಿ, ತೆಲುಗ ಮುಂತಾದ ಹಲವು ಉಪಜಾತಿಗಳನ್ನು ಹೊಂದಿರುವ ಕಾಪು ಎಂಬ ಹಿಂದುಳಿದ ಜಾತಿಯ ಜನರ ಸಂಖ್ಯೆ ಶೇ. 18-22. ಕೇಂದ್ರದಲ್ಲಿ ಮಂತ್ರಿಯಾಗಿರುವ, ಹಲವಾರು ಜನಪ್ರಿಯ ಸಿನೆಮಾಗಳನ್ನು ನಿರ್ದೇಶಿಸಿದ ದಾಸರಿ ನಾರಾಯಣರಾವ್ ಬಿಟ್ಟರೆ ಈ ಜಾತಿಯ ಯಾರೊಬ್ಬರೂ ಈಗ ರಾಜಕೀಯದಲ್ಲಿ ಪ್ರಬಲವಾಗಿಲ್ಲ. ಚಿರಂಜೀವಿ ಸಹ ಇದೇ ಜಾತಿಗೆ ಸೇರಿದವರು. ಮೂರು ವರ್ಷಗಳ ಹಿಂದಿನ ಚುನಾವಣೆಯಲ್ಲಿಯೆ ಚಿರಂಜೀವಿಯನ್ನು ರಾಜಕೀಯಕ್ಕೆ ತಂದು ಹೊಸ ಪಕ್ಷ ಸ್ಥಾಪಿಸಬೇಕೆಂದು ದಾಸರಿಗೆ ಯೋಜನೆಯಿತ್ತು. ಆದರೆ ಯಾವಾಗ ಚಿರಂಜೀವಿ ಧೈರ್ಯ ತೋರಲಿಲ್ಲವೊ, ಅವರು ಹೋಗಿ ಕಾಂಗ್ರೆಸ್ ಸೇರಿಕೊಂಡರು. ನಂತರ, ಹಿಂದುಳಿದ ಜಾತಿಗಳನ್ನು ಸೇರಿಸಿಕೊಂಡು ರಾಜಕೀಯ ಮಾಡುವ ಧೈರ್ಯವನ್ನು ರೆಡ್ಡಿ-ಕಾಂಗ್ರೆಸ್ ಮತ್ತು ಕಮ್ಮ-ತೆಲುಗು ದೇಶಂ ನ ಯಾವೊಬ್ಬ ಹಿಂದುಳಿದ ನಾಯಕರೂ ಮಾಡಲಿಲ್ಲ.

ಆಂಧ್ರದ ರಾಜಕೀಯದಲ್ಲಿ ರೆಡ್ಡಿಗಳ ಪ್ರಾಬಲ್ಯವಾದರೆ, ಅಲ್ಲಿಯ ಸಿನೆಮಾ ರಂಗದಲ್ಲಿ ಕಮ್ಮರ ಪ್ರಾಬಲ್ಯ. ಸಿನೆಮಾ ರಂಗದಲ್ಲಿನ ಕಮ್ಮರ ಪ್ರಾಬಲ್ಯದ ನಡುವೆಯೂ ಕಳೆದ 25 ವರ್ಷಗಳಿಂದ ಚಿರಂಜೀವಿ ತೆಲುಗು ಸಿನೆಮಾ ಲೋಕದಲ್ಲಿ ಅನಭಿಷಿಕ್ತ ಸಾಮ್ರಾಟನಾಗಿ ಮೆರೆಯುತ್ತಲೆ ಬಂದಿದ್ದಾರೆ. ಈಗ, ಅದೇ ಸಾಧನೆ ರೆಡ್ಡಿ-ಕಮ್ಮರ ಹಿಡಿತದಲ್ಲಿರುವ ರಾಜಕೀಯದಲ್ಲಿಯೂ ಆಗುತ್ತದೆಯೆ ಎನ್ನುವುದೇ ಸದ್ಯದ ಪ್ರಶ್ನೆ. ಆಂಧ್ರದ ಪತ್ರಿಕೆಗಳಿಗಂತೂ ಈ ಪ್ರಶ್ನೆ ಪ್ರತಿನಿತ್ಯದ ಆಮ್ಲಜನಕವಾಗಿ ಹೋಗಿದೆ.

ಒಟ್ಟಿನಲ್ಲಿ ದಲಿತ-ಹಿಂದುಳಿದ ಜಾತಿಗಳ ಹೊಸ ಜಾತಿ ಸಮೀಕರಣದಲ್ಲಿ ಆಂಧ್ರ ಮುಳುಗೇಳುತ್ತಿದೆ. ಇದು, ಕೋಲಾರದಿಂದ ಹಿಡಿದು ಬೀದರ್ ತನಕ ಗಡಿ ಹಂಚಿಕೊಂಡಿರುವ ಕರ್ನಾಟಕದ ಗಡಿಜಿಲ್ಲೆಗಳಲ್ಲಿಯೂ ಏನಾದರೂ ಪ್ರಭಾವ ಬೀರುತ್ತದೆಯೆ ಎನ್ನುವುದು ಕುತೂಹಲಕಾರಿ. ಅದನ್ನು, ಈ ಭಾಗದ ಜನಜೀವನವನ್ನು ಕಂಡಿರುವುದಷ್ಟೆ ಅಲ್ಲದೆ, ಸ್ವತಃ ಆಂಧ್ರದ ಸರ್ಕಾರಿ ಶಾಲೆಯಲ್ಲಿ ಮಾಸ್ತರರಾಗಿರುವ ಕನ್ನಡದ ಪ್ರಸಿದ್ಧ ಸಾಹಿತಿ "ಅರಮನೆ"ಯ ಕುಂ. ವೀರಭದ್ರಪ್ಪನವರು ಬಹುಶಃ ಅಧಿಕಾರಯುತವಾಗಿ ಹೇಳಬಹುದೇನೊ. ಇದರ ಬಗ್ಗೆ ಅವರಷ್ಟೆ ಅಧಿಕಾರಯುತವಾಗಿ, ಸಂಖ್ಯಾಬಲದ ಮತ್ತು ಜಾಗೃತ ಪ್ರಜ್ಞೆಯ ಹಿನ್ನೆಲೆಯಿಂದ ಹೇಳಬಲ್ಲವರು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೋಲಾರ ಮೂಲದ ಡಾ. ಸಿ.ಎಸ್. ದ್ವಾರಕಾನಾಥ್ ಅವರು.


ಸ್ವಯಂಕೃಷಿ, ಪದ್ಮಭೂಷಣ ಚಿರಂಜೀವಿ
ಈಗ ತಮಿಳುನಾಡಿಗೆ ಸೇರಿರುವ ಊರಿನಲ್ಲಿ ಹುಟ್ಟಿಬೆಳೆದ ಕನ್ನಡದ ಅಣ್ಣಾವ್ರು ನಟಿಸಿದ "ಅನುರಾಗ ಅರಳಿತು" ಸಿನೆಮಾ ಮತ್ತು ಅವರು ಆ ಚಿತ್ರದಲ್ಲಿ ಹಾಡಿದ "ಶ್ರೀಕಂಠ, ವಿಷಕಂಠ" ಎಂಬ ಹಾಡು ನಿಮಗೆ ನೆನಪಿರಬಹುದು. ಅದೇ ಸಿನೆಮಾ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಮರಾಠಿ-ಕನ್ನಡಿಗ-ತಮಿಳ ರಜನಿಕಾಂತ್ ನಟಿಸಿದ "ಮನ್ನನ್" ಎಂಬ ತಮಿಳು ಚಿತ್ರವಾಯಿತು. ಅದೇ ಸಿನೆಮಾ ತೆಲುಗಿನಲ್ಲಿ ಮನೆ ಅಳಿಯ ಅಥವ ಮನೆಗೆ ಗಂಡ ಎಂಬರ್ಥದ "ಘರಾನಾ ಮೊಗುಡು" ಆಯಿತು. ಆ ಚಿತ್ರದಲ್ಲಿ ಚಿರಂಜೀವಿ ಎಂಬ ತೆಲುಗಿನ ಆಗಿನ ಸೂಪರ್‌ಸ್ಟಾರ್ ನಟ ಡಿಸ್ಕೊ ಶಾಂತಿ ಎಂಬ ಕ್ಯಾಬರೆ ನರ್ತಕಿಯೊಂದಿಗೆ "ಬಂಗಾರು ಕೋಡಿ ಪೆಟ್ಟ" ಎಂಬ ಹಾಡಿಗೆ ಹೆಜ್ಜೆ ಹಾಕಿದ ರೀತಿ ಬಹುಶಃ ಇಡೀ ದಕ್ಷಿಣ ಭಾರತದ ಯುವಜನಾಂಗ ಆ ಹಾಡಿನಿಂದ ರೋಮಾಂಚಿತರಾಗುವಂತೆ ಮಾಡಿಬಿಟ್ಟಿತು. ಅಲ್ಲಿಯವರೆಗಿನ ತೆಲುಗಿನ ಎಲ್ಲಾ ದಾಖಲೆಗಳನ್ನು ಮುರಿದ ಆ ಚಿತ್ರ ಚಿರಂಜೀವಿಯನ್ನು ಆಗಿನ ಪ್ರಸಿದ್ಧ ಇಂಗ್ಲಿಷ್ ವಾರಪತ್ರಿಕೆ "ಇಂಡಿಯಾ ಟುಡೆ" ಮುಖಪುಟದಲ್ಲಿ ಪ್ರತಿಷ್ಠಾಪಿಸಿ, ಆ ಪತ್ರಿಕೆ ಚಿರಂಜೀವಿಯನ್ನು "ಬಿಗ್ಗರ್ ದ್ಯಾನ್ ಬಚ್ಚನ್" ಎಂದು ಘೋಷಿಸುವಂತೆ ಮಾಡಿಬಿಟ್ಟಿತು.

ಆ ಸಿನೆಮಾ ಬರುವುದಕ್ಕಿಂತ ಹತ್ತುಹದಿನೈದು ವರ್ಷದಿಂದಲೆ ತೆಲುಗಿನಲ್ಲಿ ಚಿರಂಜೀವಿ ಹವಾ ಆರಂಭವಾಗಿತ್ತು. ಎನ್.ಟಿ.ಆರ್. ನಿಧಾನಕ್ಕೆ ರಾಜಕೀಯದತ್ತ ವಾಲುತ್ತಿದ್ದರು. ಅದಕ್ಕೆ ಪೂರಕವಾಗೆಂಬಂತೆ ಅವರು ರಾಜಕೀಯ ಪ್ರೇರಿತವಾದ ಸಾಮಾಜಿಕ ಚಿತ್ರಗಳನ್ನು ಮತ್ತು ತಮ್ಮ ದೈವಪ್ರಭೆಯನ್ನು ಬೆಳೆಸುವಂತಹ ಚಾರಿತ್ರಿಕ, ಪೌರಾಣಿಕ ಪಾತ್ರಗಳಲ್ಲಷ್ಟೆ ಮಾಡುತ್ತಿದ್ದರು. ಮತ್ತೊಬ್ಬ ನಟ ಅಕ್ಕಿನೇನಿ ನಾಗೇಶ್ವರ್‌ರಾವ್‌ರವರದು ಮೊದಲಿನಿಂದಲೂ ಸಾಫ್ಟ್ ಪಾತ್ರಗಳೆ. ಜೊತೆಗೆ ಅವರಿಬ್ಬರಿಗೂ ವಯಸ್ಸೂ ಆಗುತ್ತ ಬಂದಿತ್ತು. ಮತ್ತೊಬ್ಬ ನಟ ಕೃಷ್ಣ ಸಹ ಒಂದೇ ರೀತಿಯ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಮಯ. ಆಗ ಈ ಯುವಕ ಆಗಿನ ಕಾಲಕ್ಕೆ ಮೈನವಿರೇಳುವಂತೆ ಕುಣಿಯುತ್ತ, ತೆಲುಗಿನಲ್ಲಿ ಅಭೂತಪೂರ್ವವೆನಿಸಿದ್ದಂತಹ ಫೈಟಿಂಗ್‌ಗಳನ್ನು ಮಾಡುತ್ತ, ಮಾದಕವಾಗಿ ಕಾಣಿಸುತ್ತಿದ್ದ ರಾಧ, ರಾಧಿಕ, ಮಾಧವಿ, ವಿಜಯಶಾಂತಿ, ಸುಮಲತ ಎಂಬಿತ್ಯಾದಿ ನವತರುಣಿಯರ ಜೊತೆಗೆ ಮತ್ತು ಜಯಮಾಲಿನಿ, ಜ್ಯೋತಿಲಕ್ಷ್ಮಿ, ಸಿಲ್ಕ್‌ಸ್ಮಿತರಂತಹ ಭಯಂಕರ ಕಾಮಪ್ರಚೋದಿನಿಯರೊಂದಿಗೂ ಸಮಾನವಾಗಿ ಬಳುಕುತ್ತ ತೆಲುಗು ಸಿನೆಮಾವನ್ನು ಆವರಿಸಿಕೊಂಡುಬಿಟ್ಟ. ಎನ್.ಟಿ.ಆರ್. ಆಂಧ್ರದ ಮುಖ್ಯಮಂತ್ರಿಯಾದ ವರ್ಷದಲ್ಲಿಯೆ ಬಿಡುಗಡೆಯಾದವನು "ಖೈದಿ." ಆ ಸಿನೆಮಾದಲ್ಲಿ ಚಿರಂಜೀವಿ, ಒಂದು ಕಡೆ ಕಾಮಕನ್ನಿಕೆಯಂತೆ ಕಾಣಿಸುತ್ತಿದ್ದ ಮಾಧವಿಯೊಡನೆ ನಾಗದೇವತೆಗಳಂತೆ ಅರೆನಗ್ನರಾಗಿ "ತಾಳೆ ಹೂವ ಎದೆಯಿಂದ ಜಾರಿ ಜಾರಿ ಹೊರಬಂದ" ಹಾಡಿನಲ್ಲಿ ಶೃಂಗಾರ ರಸವನ್ನು ಚೆಲ್ಲುತ್ತ, ಮತ್ತೊಂದು ಕಡೆ ರೋಷತಪ್ತ ಯುವಕನಾಗಿ ಬೆಂಕಿಯುಂಡೆಗಳನ್ನು ಚೆಲ್ಲುತ್ತ ದುಷ್ಟಸಂಹಾರ ಮಾಡಿದ್ದೆ, ತೆಲುಗು ಸಿನೆಮಾ ಪ್ರೇಕ್ಷಕರು ಆತನಿಗೆ ಶರಣಾಗಿ ಬಿಟ್ಟರು. ಅದಾಗಿ 25 ವರ್ಷಗಳಾದವು. "ಕೊಣಿದೆಲ ಶಿವ ಶಂಕರ ವರ ಪ್ರಸಾದ್" ಎಂಬ ಮೂಲಹೆಸರಿನ ಮೆಗಾಸ್ಟಾರ್ ಚಿರಂಜೀವಿ ಈಗಲೂ ಆ ಜನರನ್ನು ದಾಸ್ಯಮುಕ್ತರನ್ನಾಗಿ ಮಾಡಿಲ್ಲ!

"ಪದ್ಮಭೂಷಣ" ಚಿರಂಜೀವಿಯ ಕೌಟುಂಬಿಕ ವಿಷಯಕ್ಕೆ ಬಂದರೆ, ಆತ ಮದುವೆ ಆಗಿರುವುದು ತೆಲುಗಿನ ಪೋಷಕ-ಹಾಸ್ಯ ನಟರಲ್ಲಿ ಒಬ್ಬರಾಗಿದ್ದ ಅಲ್ಲು ರಾಮಲಿಂಗಯ್ಯನವರ ಮಗಳನ್ನು. ಆಲ್ಲು ರಾಮಲಿಂಗಯ್ಯ ನಟನೆಯಲ್ಲಿ ಮತ್ತು ಹಾವಭಾವದಲ್ಲಿ ನಮ್ಮ ಕನ್ನಡದ ಮುಸುರಿ ಇದ್ದಂತೆ. ಆದರೆ ಅವರು "ಬ್ರಿಟಿಷರೆ, ಭಾರತ ಬಿಟ್ಟು ತೊಲಗಿ" ಚಳವಳಿಯಲ್ಲಿ ಪಾಲ್ಗೊಂಡು ಜೈಲಿಗೆ ಹೋಗಿದ್ದ ಸ್ವಾತಂತ್ರ್ಯ ಹೋರಾಟಗಾರ ಸಹ. ಅರ್ಧ ಶತಮಾನದಲ್ಲಿ ಸಾವಿರಕ್ಕೂ ಹೆಚ್ಚಿನ ತೆಲುಗು ಚಿತ್ರಗಳಲ್ಲಿ ನಟಿಸಿದ್ದ ಆ ಹಿರಿಯ ನಟನ ಅನುಭವ ಮತ್ತು ಶ್ರೇಯೋಭಿಲಾಷೆ ಅಳಿಯ ಚಿರಂಜೀವಿಗೆ ಸಿಕ್ಕಿದ್ದು ಒಂದು ರೀತಿಯಲ್ಲಿ ಅದೃಷ್ಟವೆ.

ಚಿರಂಜೀವಿಯ ಮೊದಲ ತಮ್ಮ ನಾಗೇಂದ್ರ ಬಾಬು ಅಷ್ಟೇನೂ ಯಶಸ್ವಿಯಾಗದ ನಟ. ತನ್ನ ಒರಟು ಮುಖದಿಂದಾಗಿ ಪೋಷಕ ಅಥವ ವಿಲ್ಲನ್ ಪಾತ್ರಗಳಿಗೆ ಸೀಮಿತವಾಗಿದ್ದು ಈಗ ನಿರ್ಮಾಪಕನಾಗಿದ್ದಾನೆ. ಕೊನೆಯ ತಮ್ಮ ಪವನ್ ಕಲ್ಯಾಣ್. ಮಾತೆತ್ತಿದರೆ ಬಿರುದಾಂಕಿತರಾಗಿ ಬಿಡುವ ಸಿನೆಮಾ ರಂಗದಲ್ಲಿ ಆತನಿಗಿರುವ ಬಿರುದು "ಪವರ್ ಸ್ಟಾರ್." ಇತ್ತೀಚಿನ ತೆಲುಗು ಯುವನಟರಲ್ಲಿ ಬಹಳ ಭರವಸೆಯ, ಪ್ರಯೋಗಶೀಲ, ಜನಪ್ರಿಯ ನಾಯಕನಟ. ಜೀವನದಲ್ಲಿಯೂ ಒಂದು ರೀತಿಯಲ್ಲಿ ಪ್ರಯೋಗಶೀಲನೆ. ಹತ್ತು ವರ್ಷಗಳ ಹಿಂದೆಯೆ ಈತನಿಗೆ ಮದುವೆ ಆಗಿ ಒಂದು ಮಗುವೂ ಇತ್ತು. ಆದರೆ ಹೆಂಡತಿಯಿಂದ ಬೇರೆ ಇದ್ದು, ತನ್ನ ಸಹನಟಿಯೊಂದಿಗೆ ವಾಸವಾಗಿದ್ದ. ಎರಡನೆ ಮದುವೆ ಮಾಡಿಕೊಂಡ ಎಂದೂ ಸುದ್ದಿಯಾಗಿತ್ತು. ಆಗ ಮೊದಲ ಹೆಂಡತಿ ಎರಡನೆ ಮದುವೆ ಮಾಡಿಕೊಂಡಿದ್ದಾನೆ ಎಂದು ಕೋರ್ಟಿಗೆ ಹೋದಳು. ಎಚ್ಚರಗೊಂಡ ಈತ ಈಗ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಒಮ್ಮೆ ಆತ ಆಂಧ್ರಪ್ರದೇಶದ ಡೆಕ್ಕನ್ ಹೆರಾಲ್ಡ್ ಆದ "ಡೆಕ್ಕನ್ ಕ್ರಾನಿಕಲ್‍"ನ ಪತ್ರಕರ್ತರ ಮೇಲೆ ಕೈಮಾಡಿ ಅದೊಂದು ದೊಡ್ಡ ರಾದ್ಧಾಂತವೆ ಆಗಿ ಹೋಗಿತ್ತು. ಇತ್ತೀಚೆಗೆ ತಾನೆ ಒಂದು ಕೋಟಿ ಹಣ ಹೂಡಿ "Common Man Protection Force" ಎಂಬ ಸಾಮಾಜಿಕ ಸೇವಾ ಸಂಸ್ಥೆ ಬೇರೆ ಸ್ಥಾಪಿಸಿದ್ದಾನೆ.

ಇಪ್ಪತ್ತರ ಹರೆಯದ ಹುಡುಗಿಯರೊಂದಿಗೆ ಕುಣಿಯುತ್ತ, ಅವರ ಮೈಮೇಲೆಲ್ಲ ಕೈಯಾಡಿಸುವ 52 ವರ್ಷದ ಚಿರಂಜೀವಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಹೆಣ್ಣು ಮಕ್ಕಳಿಬ್ಬರಿಗೂ ಮದುವೆ ಆಗಿದೆ. ಚಿರಂಜೀವಿ ಸ್ವತಃ ಮುತುವರ್ಜಿ ವಹಿಸಿ ಮೊದಲ ಮಗಳಿಗೆ ಭರವಸೆಯ ಯುವನಟನಾಗಿ ಹೊಮ್ಮುತ್ತಿದ್ದ ಉದಯ್ ಕಿರಣ್ ನೊಂದಿಗೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿದ್ದ. ಆದರೆ ಅದು ನಿಶ್ಚಿತಾರ್ಥಕ್ಕೇ ಕೊನೆಯಾಯಿತು. ಕೊನೆಗೆ ಬೇರೊಬ್ಬ ಉದ್ಯಮಿಯೊಂದಿಗೆ ಆಕೆಯ ಮದುವೆ ಆಯಿತು. ಎರಡನೆಯ ಮಗಳು ಇತ್ತೀಚೆಗೆ ತಾನೆ ಮನೆಯಿಂದ ಓಡಿಹೋಗಿ ಆರ್ಯಸಮಾಜದಲ್ಲಿ ಮದುವೆಯಾದಳು. ಹೈದರಾಬಾದಿನಲ್ಲಿಯೆ ಇದ್ದರೆ ಅಪ್ಪನ ಅಭಿಮಾನಿಗಳು ಮತ್ತು ಶಾರ್ಟ್‌ಟೆಂಪರ್ ಚಿಕ್ಕಪ್ಪ ಪವನ್ ಕಲ್ಯಾಣ್ ಏನು ಮಾಡಿಬಿಡುತ್ತಾರೊ ಎಂದು ಗೋವಾದ ತನಕ ಗುಟ್ಟಾಗಿ ಕಾರಿನಲ್ಲಿ ಹೋಗಿ, ಅಲ್ಲಿಂದ ವಿಮಾನದಲ್ಲಿ ದೆಹಲಿಗೆ ಹೋಗಿ, ಅಲ್ಲಿ ಆಂಧ್ರದ ಒಬ್ಬ ಪ್ರಸಿದ್ಧ ವಕೀಲರನ್ನು ಹಿಡಿದುಕೊಂಡು ತನಗೆ ಅಪ್ಪನಿಂದ ಭದ್ರತೆ ಬೇಕು ಎಂದು ಸುಪ್ರಿಮ್‌ಕೋರ್ಟಿನಲ್ಲಿ ಕೇಸು ಹಾಕಿ, ಅಪ್ಪನಿಗೆ ಇನ್ನಿಲ್ಲದ ಫಜೀತಿ, ಮುಜುಗರ, ಅವಮಾನ ಮಾಡಿಬಿಟ್ಟಳು. ಕೆಲವು ಊಹಾಪೋಹಗಳ ಪ್ರಕಾರ ಆಕೆಗೆ ಹೈದರಾಬಾದಿನ ಕೆಲವು ಕಾಂಗ್ರೆಸ್ ನಾಯಕರ ಪರೋಕ್ಷ ಬೆಂಬಲ ಇತ್ತು ಎಂದೂ ಆಂಧ್ರದ ಪತ್ರಿಕೆಗಳು ವರದಿ ಮಾಡಿದ್ದವು.

ಮಗನ ಹೆಸರು ರಾಮ್ ಚರಣ್ ತೇಜ. ಒಂದೆರಡು ತಿಂಗಳ ಹಿಂದೆ ಆತನ ಮೊದಲ ಸಿನೆಮಾ ಬಿಡುಗಡೆ ಆಯಿತು. ಅಪಾರ ನಿರೀಕ್ಷೆಯೊಂದಿಗೆ ಬಿಡುಗಡೆ ಆದ ಈ ಚಿತ್ರ ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಗಡಿ ಊರುಗಳಲ್ಲಿ ಒಟ್ಟು 44 ಥಿಯೇಟರುಗಳಲ್ಲಿ ಬಿಡುಗಡೆ ಆಯಿತು. ಇತ್ತೀಚಿನ ಸುದ್ದಿಯ ಪ್ರಕಾರ ಈ ಚಿತ್ರ ಕರ್ನಾಟಕವೊಂದರಲ್ಲಿಯೆ ಎರಡೂವರೆ ಕೋಟಿ ಸಂಪಾದಿಸಿದೆಯಂತೆ.


ಮುಂದಿನ ಭಾಗದಲ್ಲಿ:
- ಆಂಧ್ರದಿಂದ ಹಾರಿಹೋದ ಶಾಕುಂತಲೆ
- "ಅಮ್ಮಾ, ತಾಯೆ, ತೆಲಂಗಾಣ" ವಿಜಯಶಾಂತಿಯ ಮಂತ್ರಪಠಣ
- ಸುವಾಸನೆ ಬೀರಲಿದ್ದಾಳೆಯೆ ರೋಜಾ?
- ಬಾಲಕೃಷ್ಣ ಆಗುವನೆ ಅನ್ನಗಾರು?

ಪೂರಕ ಓದಿಗೆ:
- ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರು
- ಕಾನೂನಿಗೆ ವಿರುದ್ಧವಾದರೂ ಇಬ್ಬರು ಹೆಂಡಿರು ಇರಲೇಬೇಕು

Aug 21, 2008

ಒಲಿಂಪಿಕ್ಸ್ : ಬರ ಕೊನೆಯಾಗುತ್ತದೆ, ಆದರೆ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಆಗಸ್ಟ್ 29, 2008 ರ ಸಂಚಿಕೆಯಲ್ಲಿನ ಲೇಖನ.)

ಈ ಬಾರಿಯೂ ಭಾರತ ಏನಾದರೂ ಒಂದು ಪದಕ ಗೆದ್ದರೆ ಅದು ಪವಾಡವೆ ಎನ್ನುವಂತಹ ಸ್ಥಿತಿ ೨೦೦೮-ಒಲಿಂಪಿಕ್ಸ್ ಆರಂಭವಾದಾಗಲೆ ಇತ್ತು. ಬಹುಶಃ ಕೆಲವೆ ಕೆಲವರನ್ನು ಬಿಟ್ಟರೆ ಇಡೀ ದೇಶ ಅಂತಹ ದೊಡ್ಡ ಆಸೆಗಳನ್ನು ಇಟ್ಟುಕೊಂಡಿರಲಿಲ್ಲ. ಅಂತಹುದರಲ್ಲಿ ಅಭಿನವ್ ಬಿಂದ್ರಾ ಹತ್ತು ಮೀಟರ್‌ಗಳ ಏರ್ ರೈಫಲ್ ವಿಭಾಗದಲ್ಲಿ ಚಿನ್ನದ ಪದಕ ಪಡೆದದ್ದು ಒಂದು ಚಾರಿತ್ರಿಕ ಘಟನೆ. ಅಷ್ಟೆ ಮುಖ್ಯವಾದದ್ದು ಆ ಪೈಪೋಟಿಯ ಸಮಯದಲ್ಲಿ ಆತ ತೋರಿಸಿದ ಪ್ರಬುದ್ಧ ನಡವಳಿಕೆ.

ಆದರೆ, ಈ ಎಲ್ಲಾ ಸಾಧನೆಗೆ ಮತ್ತು ಹೆಮ್ಮೆಗೆ ವಿರುದ್ಧವಾಗಿದ್ದದ್ದು ನಮ್ಮ ರಾಜಕೀಯ ನಾಯಕರುಗಳ, ಕ್ರೀಡಾಸಂಸ್ಥೆಗಳ ಪದಾಧಿಕಾರಿಗಳ, ಮತ್ತು ಸರ್ಕಾರಗಳ ನಡವಳಿಕೆ. ಬಿಂದ್ರಾ ಚಿನ್ನ ಗೆದ್ದದ್ದೇ, ತಮ್ಮ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಮಾಡುವ ತಮ್ಮ ಮಾಮೂಲಿ ನಿಕೃಷ್ಟ ನಡವಳಿಕೆಗಳನ್ನು ಎಂದಿನಂತೆ ಭಾರತದ ಘನತೆವೆತ್ತ ಕೇಂದ್ರ ಸರ್ಕಾರ ಮತ್ತು ಹಲವಾರು ರಾಜ್ಯ ಸರ್ಕಾರಗಳು ಆರಂಭಿಸಿಬಿಟ್ಟವು. ಅತ್ತ ಟಿವಿಯಲ್ಲಿ ಬಿಂದ್ರಾರ ಅಪ್ಪ, "ಅಭಿನವ್‌ನ ಈ ಸಾಧನೆಗಾಗಿ ಇಡೀ ಜೀವನ ಪಣ ಇಟ್ಟಿದ್ದೆವು. ಜೀವನಪೂರ್ತಿ ಮಾಡಿದ ಉಳಿತಾಯವನ್ನು ಆತನಿಗಾಗಿ ಖರ್ಚು ಮಾಡಿದ್ದೇವೆ. ಯಾಕೆಂದರೆ, ನಾವು ಸರ್ಕಾರದ ಬಳಿಗೆ ಆತನಿಗಾಗಿ ಅದು ಬೇಕಾಗಿದೆ, ಇದು ಬೇಕಾಗಿದೆ ಎಂದು ಹೋದಾಗಲೆಲ್ಲ ಅವರು... (ಹೇಳುವುದೊ ಬೇಡವೊ ಎಂಬ ಗೊಂದಲ, ಸ್ವಲ್ಪ ತಡವರಿಕೆ) ಅವರೂ ಕೊಟ್ಟಿದ್ದಾರೆ; ಸರ್ಕಾರವೂ ಕೊಟ್ಟಿದೆ. ಆದರೆ ಈ ಚಿನ್ನದ ಪದಕ ಗೆಲ್ಲಬೇಕಾದರೆ ಎಷ್ಟು ಕಷ್ಟ ಪಡಬೇಕಾಗುತ್ತದೆ ಎನ್ನುವುದು ಅವರಿಗೆ ಗೊತ್ತಾಗಲಿಲ್ಲ. ಆ ಕಷ್ಟದ ಗ್ಯಾಪ್ ಏನಿತ್ತು ಅದನ್ನು ನಾವು ತುಂಬಿದೆವು..." ಎನ್ನುತ್ತಿದ್ದರೆ ಇತ್ತ ಈ ಸರ್ಕಾರಗಳು ಮುಖದ ಮೇಲೆ ಬಿದ್ದ ಎಂಜಲನ್ನು ಒರೆಸಿಕೊಳ್ಳುತ್ತ ಬಿಂದ್ರಾಗೆ ಕೋಟ್ಯಾಂತರ ರೂಪಾಯಿಗಳ ಬಹುಮಾನ ಘೋಷಣೆ ಮಾಡಿದರು. ಬಿಂದ್ರಾರ ಈ ಸಾಧನೆ ಇತರ ಕ್ರೀಡಾಪಟುಗಳಿಗೂ ಸ್ಫೂರ್ತಿಯಾಗಲಿ ಎಂಬ ಭೀಭತ್ಸ ಮಾತುಗಳನ್ನೇ ಆಡುತ್ತ ಇತರ ಭಾರತೀಯ ಕ್ರೀಡಾಪಟುಗಳು ಅಯೋಗ್ಯರು, ಅನರ್ಹರು, ಇಲ್ಲವೆ ಸ್ಫೂರ್ತಿ ಇಲ್ಲದವರು ಎಂಬಂತೆ ಅಣಕಿಸುತ್ತಿದ್ದರು.

ವಾಸ್ತವದಲ್ಲಿ, ಅಭಿನವ್‌ರ ಈ ಬಾರಿಯ ವಿಜಯದಲ್ಲಿ ಭಾರತಕ್ಕೆ ಅನೇಕ ಸಂದೇಶಗಳಿವೆ. ಮುಂದಕ್ಕೆ ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವಯುತವಾಗಿ ಪಾಲ್ಗೊಳ್ಳಬೇಕಾದರೆ ಏನೇನು ಬೇಕು ಮತ್ತು ಈ ಕೂಡಲೆ ಏನೇನು ಮಾಡಬೇಕು ಎನ್ನುವುದು ಈ ಸಂದೇಶಗಳಲ್ಲಿ ಒಂದು. ಅದೇ ರೀತಿ ಮುಂದಿನ ದಿನಗಳಲ್ಲಿ ಸರ್ಕಾರದ ಬೆಂಬಲ ಇಲ್ಲದಿದ್ದರೂ ನಮ್ಮ ಕ್ರೀಡಾಪಟುಗಳು ಗೆಲ್ಲಬಲ್ಲ ಸಾಧ್ಯತೆಗಳ ಬಗ್ಗೆ ಮತ್ತು ಅದಕ್ಕೆ ಕಾರಣವಾಗುವ ಅವರ ಆರ್ಥಿಕ ಹಿನ್ನೆಲೆಯ ಬಗ್ಗೆಯೂ ಸೂಕ್ಷ್ಮವಾಗಿ ತಿಳಿಸುತ್ತದೆ. ಭಾರತ ಈಗ ಹದಿನೈದು ಇಪ್ಪತ್ತು ವರ್ಷಗಳ ಹಿಂದಿನ ಬರೀ ಬಡವರ ಭಾರತ ಅಲ್ಲ. ಈಗಿನ ಮೇಲ್ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗ ವಿಸ್ತಾರಗೊಂಡಿದೆ. ಅನೇಕ ಶ್ರೀಮಂತರಿರುವ ಈ ಸಂದರ್ಭದಲ್ಲಿ ತಮ್ಮ ವಾರಿಗೆಯವರಿಗಿಂತ ಭಿನ್ನವಾದದ್ದನ್ನು ಮಾಡಲು ಈ ವರ್ಗ ಹಪಹಪಿಸುತ್ತಿದೆ. ಅವುಗಳಲ್ಲಿ ಒಂದು ತಮ್ಮ ಮಕ್ಕಳನ್ನು ಕ್ರೀಡಾಪಟುಗಳನ್ನಾಗಿ ಮಾಡುವುದು. ಅಭಿನವ್ ಬಿಂದ್ರಾ, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ, ಯುವರಾಜ್ ಸಿಂಗ್, ಜೀವ್ ಮಿಲ್ಖಾ ಸಿಂಗ್; ಹೀಗೆ ಇವತ್ತಿನ ಅನೇಕ ಕ್ರೀಡಾಪಟುಗಳು ಶ್ರೀಮಂತ ಮನೆತನದ ಹಿನ್ನೆಲೆ ಉಳ್ಳವರು. ಇವರ ಪೋಷಕರು ತಮ್ಮ ಮಕ್ಕಳಿಗೆ ಬೇಕಾದ ಕ್ರೀಡಾ ಸೌಲಭ್ಯಗಳಿಗಾಗಿ ಎಷ್ಟು ದುಡ್ಡು ಬೇಕಾದರೂ ಖರ್ಚು ಮಾಡಬಲ್ಲವರು. ತರಬೇತಿಗಾಗಿ ಯಾವ ದೇಶಕ್ಕೆ ಬೇಕಾದರೂ ಕಳುಹಿಸಬಲ್ಲ ಆರ್ಥಿಕ ಚೈತನ್ಯ ಇರುವವರು. ಆದರೆ, ಇಂತಹ ಕುಟುಂಬಗಳಿಂದ ಬರುವ ಕ್ರೀಡಾಪಟುಗಳು ಟೀಮ್‌ವರ್ಕ್ ಇಲ್ಲದ, ಒಬ್ಬೊಬ್ಬರೆ ಆಡಬಹುದಾದ ಆಟಗಳಿಗೇ ಬಹುಪಾಲು ಸೀಮಿತವಾಗುತ್ತಾರೆ. ವಿಶ್ವದರ್ಜೆಯ ತರಬೇತಿ, ಕುಟುಂಬದ ಪ್ರೋತ್ಸಾಹ, ಮತ್ತು ತಮ್ಮ ವೈಯಕ್ತಿಕ ಪರಿಶ್ರಮ ಹಾಗು ಮಹತ್ವಾಕಾಂಕ್ಷೆಗಳಿಂದಾಗಿ ಮುಂದಿನ ವರ್ಷಗಳಲ್ಲಿ ಹಲವಾರು ಅಭಿನವ್ ಬಿಂದ್ರಾರು ಏಕಸ್ಪರ್ಧಿ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ನಾವು ಎದುರು ನೋಡಬಹುದು.

ಅದೇ ರೀತಿ, ತಂಡಗಳು ಸ್ಪರ್ಧಿಸುವ ಆಟಗಳಲ್ಲೂ ಒಳ್ಳೆಯ ಕ್ರೀಡಾಪಟುಗಳು ಬರುವುದು ಅಸಂಭವವಲ್ಲ. ಆದರೆ ಇವರು ಬರುವುದು ಬಹುಪಾಲು ಮಧ್ಯಮವರ್ಗದ ಕುಟುಂಬಗಳಿಂದ. ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ಒಂದು ಒಳ್ಳೆಯ ಕೆಲಸಕ್ಕೆ ಸೇರಿಸಿದರೆ ಸಾಕು ಎಂದು ಯೋಚಿಸುತ್ತಿದ್ದ ಹಿಂದಿನ ಮಧ್ಯಮವರ್ಗಕ್ಕಿಂತ ಈಗಿನ ಮಧ್ಯಮವರ್ಗ ಬೇರೆಯ ರೀತಿ ಯೋಚಿಸುತ್ತಿದ್ದೆ. ಇದು ಭಿನ್ನಸಂಸ್ಕೃತಿಗಳಿಗೆ, ಪ್ರದೇಶಗಳಿಗೆ, ಆಯಾಮಗಳಿಗೆ ಎಕ್ಸ್‌ಪೋಸ್ ಆಗಿರುವ ತಲೆಮಾರು. ಹಾಗಾಗಿಯೆ ಒಂದಷ್ಟು ಪೋಷಕರು ಪಾಶ್ಚಾತ್ಯ ಪ್ರಪಂಚದಲ್ಲಿ ಕ್ರೀಡಾಪಟುಗಳ ಪೋಷಕರು ಎಷ್ಟೆಲ್ಲಾ ತ್ಯಾಗ ಮತ್ತು ಪರಿಶ್ರಮ ಮಾಡುತ್ತಾರೊ ಅದೆಲ್ಲವನ್ನೂ ಮಾಡಲು ಇಲ್ಲೂ ಸಿದ್ಧವಾಗುತ್ತಿದ್ದಾರೆ. ಆದರೆ ಇವರಿಗೆ ಸರ್ಕಾರದಿಂದ ಮತ್ತು ಖಾಸಗಿಯವರಿಂದ ಪ್ರೋತ್ಸಾಹ ಬೇಕಾಗುತ್ತದೆ. ಸಮಸ್ಯೆ ಮುಂದುವರೆಯುವುದೇ ಇಲ್ಲಿ.

ನಮಗೆ ಇನ್ನೂ ಒಗ್ಗಿಲ್ಲದ, ಒಗ್ಗದ ಆಟಗಳು:
ಕೂಲಂಕಷವಾಗಿ ನೋಡಿದಾಗ, ಅನೇಕ ಒಲಿಂಪಿಕ್ ಆಟಗಳು ನಮ್ಮ ದೇಶಕ್ಕೆ ಹೊರಗಿನವು. ನಮ್ಮ ದೇಸೀಯತೆಗೆ ಮತ್ತು ನಮ್ಮ ಆರ್ಥಿಕ ಪರಿಸ್ಥಿತಿಗೆ ಅವು ಸ್ವಲ್ಪವೂ ಒಗ್ಗುವುದಿಲ್ಲ. ಬಹುಶಃ ಅರ್ಧಕ್ಕಿಂತ ಹೆಚ್ಚಿನ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುವವರೆ ಇರುವುದಿಲ್ಲ. ಇಡೀ ದೇಶದಾದ್ಯಂತ ಈಜು ಕಲಿತಿರುವ ಹೆಣ್ಣುಮಕ್ಕಳೆ ಸಾವಿರ-ಲಕ್ಷಗಳಲ್ಲಿರುವಾಗ ನಮ್ಮ ಹೆಣ್ಣುಮಕ್ಕಳು ಸಿಂಕ್ರೊನೈಸ್‌ಡ್ ಈಜು ಇರಲಿ, ಮಾಮೂಲಿ ಈಜು ಸ್ಪರ್ಧೆಗೆ ಅರ್ಹತೆ ಗಳಿಸುವುದೂ ಒಂದು ದೊಡ್ಡ ಸಾಧನೆಯೆ. ವಿಶಿಷ್ಟ ಸಾಂಸ್ಕೃತಿಕ ಹಿನ್ನೆಲೆ ಮತ್ತು ಅಷ್ಟೇ ವಿಶಿಷ್ಟವಾದ ಸಂಗೀತ ಬೇಕಾದ ರ್‍ಹಿದಮಿಕ್ ಜಿಮ್ನ್ಯಾಸ್ಟಿಕ್‌ನ ಕತೆಯೂ ಇದೆ. ವಾಟರ್ ಪೋಲೊ, ಬೇಸ್‌ಬಾಲ್, ಕುದುರೆಸವಾರಿ, ಕಯಾಕ್, ರೋಯಿಂಗ್, ಬೀಚ್ ವಾಲಿಬಾಲ್, ಮುಂತಾದ ಅನೇಕ ಆಟಗಳನ್ನು ಆಡುವ ಎಷ್ಟು ಭಾರತೀಯ ಮಹಿಳೆಯರಿದ್ದಾರೆ? ಇದ್ದರೂ ಇವರು ಶ್ರೀಮಂತ ವರ್ಗಕ್ಕೆ ಸೇರಿದವರಾಗಿರುತ್ತಾರೆ ಮತ್ತು ಖಯಾಲಿಗೆ ಆಡುವವರಾಗಿರುತ್ತಾರೆಯೆ ಹೊರತು ನೈಜ ಕ್ರೀಡಾಪಟುಗಳು ಎಷ್ಟು ಜನ ಸಿಗುತ್ತಾರೆ?

ಲಿಂಗಭೇಧವನ್ನು ಹೊರತುಪಡಿಸಿ, ಕೇವಲ ಪುರುಷ ಕ್ರೀಡಾಪಟುಗಳ ವಿಚಾರ ಯೋಚಿಸಿದಾಗಲೂ, ನಮ್ಮಲ್ಲಿ ಅವರಿಗೆ ಅನುಕೂಲವಾದ ಪರಿಸರ ಇಲ್ಲ. ಕಮ್ಯುನಿಸ್ಟ್ ದೇಶಗಳಲ್ಲಿ ಸರ್ಕಾರವೆ ವಿಶೇಷ ಮುತುವರ್ಜಿ ತೆಗೆದುಕೊಂಡು ಉತ್ತಮ ಕ್ರೀಡಾಪಟುಗಳನ್ನು "ಉತ್ಪಾದಿಸುತ್ತವೆ." ತಮ್ಮ ದೇಶದಲ್ಲಿ ಎಲ್ಲವೂ ಚೆನ್ನಾಗಿದೆ, ಹಾಲುತುಪ್ಪ ಉಕ್ಕಿಹರಿಯುತ್ತಿದೆ ಎಂದು ಹೊರದೇಶಗಳಿಗೆ ಅವು ಸಂದೇಶಗಳನ್ನು ಕೊಡುವುದೆ ಕ್ರೀಡೆಗಳಲ್ಲಿ ಗೆಲ್ಲುವ ಮೂಲಕ! ಇದು ಇತಿಹಾಸದುದ್ದಕ್ಕೂ ನಿರೂಪಿತವಾಗಿದೆ. ಇನ್ನು ಮುಂದುವರೆದ ದೇಶಗಳಲ್ಲಿ ಅದು ಎಂತಹ ಗ್ಲಾಮರ್ ಇಲ್ಲದ ಕ್ರೀಡೆ ಆಗಿದ್ದರೂ, ಆ ಕ್ರೀಡೆಯ ಕ್ರೀಡಾಪಟು ಅದರಲ್ಲಿ ಉತ್ತಮವಾಗಿದ್ದರೆ ಅವನು ಅದರಿಂದಲೆ ಜೀವನ ರೂಪಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಆತನಿಗೆ ಆರಂಭದಿಂದಲೆ ಪ್ರಾಯೋಜಕರು, ಕೋಚ್‌ಗಳೂ, ಕುಟುಂಬದ ಬೆಂಬಲವೂ ಸಿಗುತ್ತದೆ. ಓದು, ಕಾಲೇಜು, ಡಿಗ್ರಿ, ನೌಕರಿ, ಮುಂತಾದುವುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಆತ/ಆಕೆ ಪೂರ್ಣಪ್ರಮಾಣದ ತರಬೇತಿಯಲ್ಲಿ ತೊಡಗಿಕೊಳ್ಳಬಹುದು. ಆದರೆ, ನಮ್ಮಲ್ಲಿ? ಎಲ್ಲೋ ಕೆಲವು ಶ್ರೀಮಂತ ರೆಸಿಡೆನ್ಸಿ ಶಾಲೆಗಳಲ್ಲಿ ಕ್ರೀಡೆಗಳಿಗೆ ಪ್ರಾಮುಖ್ಯತೆ ಕೊಡುತ್ತಾರೆಯೆ ಹೊರತು ಬಹುಸಂಖ್ಯಾತ ಶಾಲೆಗಳಲ್ಲಲ್ಲ. ಒಬ್ಬ ಕ್ರೀಡಾಪಟು ಈ ತರಹದ ಆಟದಲ್ಲಿ ಯೋಗ್ಯನಿದ್ದಾನೆ ಎಂದು ಗೊತ್ತಾಗುವಷ್ಟರಲ್ಲಿ ಆತನ ಸಾಮರ್ಥ್ಯ ಇಳಿಮುಖವಾಗುವ ವಯಸ್ಸಾಗಿಬಿಟ್ಟಿರುತ್ತದೆ. ಹಾಗೆಯೆ, ನಾನು ಆಡುವ ಆಟದ ಮೂಲಕವೆ ನನ್ನ ಜೀವನ ರೂಪಿಸಿಕೊಳ್ಳುತ್ತೇನೆ ಎನ್ನುವ ಸ್ಥಿತಿ ಭಾರತದ ಬಹುಪಾಲು ಅಗ್ರ ಕ್ರೀಡಾಪಟುಗಳಿಗೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಕ್ರೀಡಾಪಟುಗಳು ಈ ರೀತಿಯ ವೈಯಕ್ತಿಕ ಸಮಸ್ಯೆಗಳಿಲ್ಲದ ಅನ್ಯದೇಶಗಳ ಕ್ರೀಡಾಪಟುಗಳ ವಿರುದ್ಧ ಗೌರವಯುತವಾಗಿ ಸ್ಪರ್ಧಿಸುವುದಾದರೂ ಹೇಗೆ?

ಲೇಖನದ ವಿಡಿಯೊ ಪ್ರಸ್ತುತಿ

ಈ ಎಲ್ಲವುಗಳ ಹಿನ್ನೆಲೆಯಲ್ಲಿ ನೋಡಿದಾಗ, ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳು, ಲಿಂಗಭೇಧ, ಮತ್ತು ಸರ್ಕಾರದ ಮಟ್ಟದಲ್ಲಿ ಇಲ್ಲವಾದ ಒಂದು ಉತ್ತಮ ಕ್ರೀಡಾ ಪಾಲಿಸಿಯೆ ನಾವು ಅಂತರಾರಾಷ್ಟ್ರೀಯ ಕ್ರೀಡೆಗಳಲ್ಲಿ ಹೀನಾಯವಾದ ಪ್ರದರ್ಶನ ನೀಡಲು ಮೂಲಭೂತ ಕಾರಣಗಳು. ನಾವು ಅವುಗಳನ್ನು ಸರಿಪಡಿಸಿಕೊಳ್ಳದೆ ಪದಕ ಬರಲಿಲ್ಲ ಎಂದುಕೊಳ್ಳುವುದು ಅಜ್ಞಾನದ ಪರಮಾವಧಿ ಮತ್ತು ಪಲಾಯನವಾದ.

ಕ್ರಿಕೆಟ್ - ಭಾರತದ ಸಮುದಾಯ ಕ್ರೀಡೆ:
ಭಾರತದಲ್ಲಿ ಕ್ರಿಕೆಟ್‌ಗೆ ಸಿಗುವ ಪ್ರಾಮುಖ್ಯತೆ ಮತ್ತು ಅದರ ಸ್ಟಾರ್ ಆಟಗಾರರ ಧಿಮಾಕಿನ ಬಗ್ಗೆ ನಮ್ಮ ಎಷ್ಟೇ ತಕರಾರುಗಳಿದ್ದರೂ, ಇವತ್ತು ಭಾರತದಲ್ಲಿ ಪ್ರತಿಯೊಂದು ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆ ಉಳ್ಳವರೂ ಆಡುವ ಕ್ರೀಡೆ ಎಂದರೆ ಅದೇನೆ. ಸರ್ಕಾರಿ ಕೃಪಾಪೋಷಣೆ ಇಲ್ಲದಿದ್ದರೂ ಜಾರ್ಖಂಡ್‌ನಂತಹ ಹಿಂದುಳಿದ ರಾಜ್ಯದಿಂದ ಬಂದಂತಹ ಸಾಮಾನ್ಯ ಹಿನ್ನೆಲೆಯ ಧೋನಿ ಇವತ್ತು ಭಾರತದ ನಂಬರ್ ಒನ್ ಆಟಗಾರ. ಧೋನಿಯಂತಹ ಅನೇಕರು ಕ್ರಿಕೆಟ್‌ನಲ್ಲಿ ಸಿಗುತ್ತಾರೆ. ಗಲ್ಲಿಗಲ್ಲಿಗಳಲ್ಲಿ, ಸಣ್ಣ ಮೈದಾನಗಳಲ್ಲಿ, ಸುಸಜ್ಜಿತ ಸ್ಟೇಡಿಯಮ್‌ಗಳಲ್ಲಿ, ಎಲ್ಲಿ ಬೇಕಾದರೂ ಆಡಬಲ್ಲ, ಆಡಲು ಸಹಆಟಗಾರರೂ ಸಿಗುವ ಅಪ್ಪಟ ಸಮುದಾಯ ಕ್ರೀಡೆ ಅದು. ಚೆನ್ನಾಗಿ ಆಡುವವರನ್ನು ಗುರುತಿಸುವ, ಅವರನ್ನು ಮೇಲಕ್ಕೆತ್ತುವ ಒಂದು ನೈಸರ್ಗಿಕ ವ್ಯವಸ್ಥೆಯೂ ಅದರಲ್ಲಿದೆ; ಅದರ ಗ್ಲಾಮರ್‌ನಿಂದಾಗಿ. ಐಪಿಎಲ್, ಐಸಿಎಲ್‌ಗಳಿಂದಾಗಿ ಅನೇಕ ಸ್ಥಳೀಯ ಆಟಗಾರರೂ ಈ ಕ್ರೀಡೆಯಿಂದಲೆ ಜೀವನ ರೂಢಿಸಿಕೊಳ್ಳುವ ಸಂದರ್ಭ ಸೃಷ್ಟಿ ಆಗುತ್ತಿದೆ. ಒಲಿಂಪಿಕ್ಸ್ ಅಸಾಮರ್ಥ್ಯದ ನಡುವೆಯೂ ವಿಶ್ವಮಟ್ಟದಲ್ಲಿ ನಮ್ಮ ಸಾಧನೆ ಮತ್ತು ಕೊಡುಗೆಯ ಬಗ್ಗೆ ನಾವು ಹೆಮ್ಮೆ ಪಡಬಹುದಾದ ಆಟ ಕ್ರಿಕೆಟ್.

ಜನರೇ ಅಪರಾಧಿಗಳು:
ಒಲಿಂಪಿಕ್ಸ್ ನಡೆಯುವ ಪ್ರತಿ ಸಂದರ್ಭದಲ್ಲೂ 'ಭವ್ಯ, ದಿವ್ಯ, ಪುರಾತನ ದೇಶವಾದ ನಮಗೆ ಪದಕ ಬರುತ್ತಿಲ್ಲ,' ಎಂದು ಗೋಳಾಡುವ ಕೆಲವು ಭಾರತೀಯರನ್ನು ಕಂಡಾಗ ಅಸಹ್ಯ ಉಂಟಾಗುತ್ತದೆ. ನಮಗೆಲ್ಲೊ ಅನ್ಯಾಯವಾಗುತ್ತಿದೆ ಎನ್ನುವಂತೆ ಆಡುತ್ತಾರೆ ಈ ಹುಸಿ ದೇಶಭಕ್ತರು. ಪ್ರಜಾಪ್ರತಿನಿಧಿಯಾಗಲು ಯಾವೊಂದು ಮೂಲಭೂತ ಅರ್ಹತೆ ಇಲ್ಲದಿದ್ದರೂ ಕೇವಲ ತನ್ನ ದುಡ್ಡಿನ ಬಲದಿಂದ ಗೆದ್ದ ಒಬ್ಬ ಪಕ್ಷೇತರ ಶಾಸಕ ಕರ್ನಾಟಕದ ರಾಜಕೀಯ ಅಸಂಗತಗಳಿಂದಾಗಿ ಮಂತ್ರಿಯಾಗುವ ಸಂದರ್ಭ ಮೂರು ತಿಂಗಳ ಹಿಂದೆ ಉಂಟಾಯಿತು. ಆತನಿಗೆ ಕ್ರೀಡಾ ಇಲಾಖೆ ನೀಡುವ ಘೋಷಣೆ ಆಯಿತು. "ಏನಕ್ಕೆ ಆ ಖಾತೆ, ಕಬಡ್ಡಿ ಆಡುವುದಕ್ಕಾ (ಅಥವ ಆಡಿಸುವುದಕ್ಕಾ)?" ಎಂದು ಆತ ಕ್ರೀಡಾ ಇಲಾಖೆಯ ಬಗ್ಗೆ ನಿಕೃಷ್ಟವಾಗಿ ಮಾತನಾಡಿದ. ಕ್ರೀಡೆ ಜನರಲ್ಲಿ ಯಾವ ಮಟ್ಟದ ಚೈತನ್ಯ, ಉತ್ಸಾಹ, ಆಶಾವಾದ ಹುಟ್ಟಿಸುತ್ತದೆ, ಜನರ ಮಾನಸಿಕ ಮತ್ತು ಶಾರೀರಿಕ ಆರೋಗ್ಯವನ್ನು ಹೇಗೆ ಪೋಷಿಸುತ್ತದೆ ಎನ್ನುವ ಕನಿಷ್ಠ ತಿಳುವಳಿಕೆಯೂ ಇಲ್ಲದೆ, ಅದರ ಪ್ರಾಮುಖ್ಯತೆಯೂ ಗೊತ್ತಿಲ್ಲದೆ ಆ ಅಜ್ಞಾನಿ ಒದರಿದ್ದ. ಎಲ್ಲೊ ಅಲ್ಲೊಬ್ಬರು ಇಲ್ಲೊಬ್ಬರು ಆತನ ಆ ಹೇಳಿಕೆಯ ಬಗ್ಗೆ ಛೀಕರಿಸಿಕೊಂಡರು. ಅದರ ಹೊರತಾಗಿ ಬಹುಪಾಲು ಜನತೆ ಅದೂ ಒಂದು ಅದ್ಭುತ ಡೈಲಾಗ್ ಎಂಬಂತೆ ಆನಂದಿಸಿದರು. ಆ ಮಾತಿನ ಬಗ್ಗೆ ವಿಷಾದ ಪಡದೆ ದೇಶ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಪಡೆಯದ ಬಗ್ಗೆ ವಿಷಾದಿಸುವ, ಪುಟಗಟ್ಟಲೆ ವಾಚಕರವಾಣಿಗಳಲ್ಲಿ, ಬ್ಲಾಗ್‌ಗಳಲ್ಲಿ ಮಾತನಾಡುವ ಜನರೆ ಇವತ್ತಿನ ಸಂದರ್ಭದಲ್ಲಿ ಅಪರಾಧಿಗಳು.

Aug 14, 2008

"ಕನ್ನಡ, ಪೂರ್ವದ ಇಟಾಲಿಯನ್" ಮತ್ತು "ಪಂಪೆ, ಹಾಳುಕೊಂಪೆ"

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಆಗಸ್ಟ್ 22, 2008 ರ ಸಂಚಿಕೆಯಲ್ಲಿನ ಲೇಖನ.)

ಕನ್ನಡ ಮತ್ತು ತೆಲುಗು ಭಾಷೆಯ ಲಿಪಿಗಳು ಹೆಚ್ಚೂಕಮ್ಮಿ ಒಂದೇ ರೀತಿ ಇರುವುದರಿಂದ ಮತ್ತು ಕರ್ನಾಟಕ ಮತ್ತು ಆಂಧ್ರ ನೂರಾರು ಮೈಲು ಉದ್ದದ ಗಡಿ ಹಂಚಿಕೊಂಡಿರುವುದರಿಂದ ಆಗಾಗ್ಗೆ ಕನ್ನಡದ ಪತ್ರಿಕೆಗಳಲ್ಲಿ ತೆಲುಗಿನ ಅಥವ ಆಂಧ್ರದ ಸುದ್ದಿಗಳು ಬರುವುದು ಸಹಜ. ಅಂತಹ ಲೇಖನಗಳಲ್ಲಿ ಅನೇಕ ಸಲ ಬರುವ ಕ್ಲಿಷೆ, ತೆಲುಗು, ಪೂರ್ವದ ಇಟಾಲಿಯನ್. ಎಂದು. ಇದನ್ನು ಮೆಚ್ಚುಗೆಯ ರೂಪದಲ್ಲಿಯೊ ಅಥವ ಹೆಮ್ಮೆಯ ರೂಪದಲ್ಲಿಯೋ ಬಳಸಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ವಾಕ್ಯ ಕಂಡಾಗಲೆಲ್ಲ ನನಗೆ ಆಂಧ್ರದ ಕಾಂಗ್ರೆಸ್ಸಿಗರು ದೆಹಲಿ ಹೈಕಮ್ಯಾಂಡಿನ ಇಟಲಿಯಮ್ಮನನ್ನು ಭೇಟಿಯಾದಾಗ ’ನಾನು ಆಂಧ್ರದವನು, ನಮ್ಮ ಭಾಷೆಯನ್ನು ಪೂರ್ವದ ಇಟಾಲಿಯನ್ ಎನ್ನುತ್ತಾರೆ,’ ಎಂಬ ರೆಡಿಮೇಡ್ ವಾಕ್ಯದಿಂದಲೆ ಆರಂಭಿಸುತ್ತಾರಾ? ಎಂಬ ತಮಾಷೆಯ ಆಲೋಚನೆ ಬರುತ್ತದೆ. ನಮ್ಮ ದೇಶದ ಕೆಲವು ಗುಲಾಮಿ ಮನಸ್ಥಿತಿಗಳನ್ನು ಕಂಡಾಗ ಅದು ಅಸಾಧ್ಯವೂ ಅಲ್ಲವೇನೊ?

ಇಟಲಿಯಲ್ಲಿದ್ದಾಗ ನಾನು ಇದರ ಬಗ್ಗೆ ಬಹಳ ಯೋಚಿಸಿದೆ. ಸ್ವಲ್ಪ ಅಧ್ಯಯನವನ್ನೂ ಮಾಡಿದೆ. ಯಾಕೆ ನಾವು ಕೊಡಗನ್ನು ಕರ್ನಾಟಕದ ಕಾಶ್ಮೀರ ಎನ್ನುತ್ತೇವೆ? ಕಾಶ್ಮೀರವನ್ನು ಭಾರತದ ಸ್ವಿಟ್ಜರ್‌ಲ್ಯಾಂಡ್ ಎನ್ನುತ್ತೇವೆ? ತೆಲುಗನ್ನು ಪೂರ್ವದ ಇಟಾಲಿಯನ್ ಎನ್ನುತ್ತೇವೆ? ನಮ್ಮದಲ್ಲದ, ಅಥವ ನಾವು ನೋಡಿಲ್ಲದ, ಕಂಡಿಲ್ಲದ ಅನ್ಯ ವಸ್ತುವಿಗೆ, ಸ್ಥಳಕ್ಕೆ, ಭಾಷೆಗೆ, ವ್ಯಕ್ತಿಗೆ (ಅದೂ ವಿಶೇಷವಾಗಿ ಬಿಳಿಯರಿಗೆ ಅಥವ ಪಶ್ಚಿಮಕ್ಕೆ) ಹೋಲಿಸಿದರೆ ಮಾತ್ರ ನಮ್ಮ ಹಿರಿಮೆ ನಮಗೆ ಮನದಟ್ಟಾಗುತ್ತದೆಯೆ? ಇಲ್ಲದಿದ್ದರೆ ಅದು ಪೀಚು-ಪೇಲವ ಆಗಿಬಿಡುತ್ತದೆಯೆ? ಛೇ, ಎಂತಹ ಕೀಳರಿಮೆ ಇದು. ನಮ್ಮ ಸ್ವಂತಿಕೆಯ ಮತ್ತು ಮಹತ್ತಿನ ಬಗ್ಗೆ ನಮಗೇ ನಂಬಿಕೆಯಿಲ್ಲದಾಗ ಇಂತಹ ಪದಪುಂಜಗಳು ಬಳಕೆಯಾಗುತ್ತವೆ.

"ತೆಲುಗು, ಪೂರ್ವದ ಇಟಾಲಿಯನ್" ಎಂಬ ಮಾತಿಗೂ ಇದೇ ಆಧಾರ. ಈ ಮಾತನ್ನು ಜನ ಸಾಮಾನ್ಯವಾಗಿ ಬಳಸುವುದು ಇಟಾಲಿಯನ್ ಭಾಷೆ ಬಹಳ ಇಂಪಂತೆ, ಹಾಗೆಯೆ ತೆಲುಗು ಸಹ ಇಂಪು, ಎಂದು. ಆದರೆ, ಹೀಗೆ ಹೇಳುವ ಎಷ್ಟೋ ಜನರಿಗೆ ಇಟಾಲಿಯನ್ ಭಾಷೆ ಹೇಗೆ ಧ್ವನಿಸುತ್ತದೆ ಎಂಬ ಕಲ್ಪನೆಯೂ ಇಲ್ಲ. ವಿಚಿತ್ರ ಏನೆಂದರೆ, ತೆಲುಗನ್ನು ಪೂರ್ವದ ಇಟಾಲಿಯನ್ ಎಂದಾತ ಅದನ್ನು ಹಾಗೆ ಹೇಳಿದ್ದು ಅ ಭಾಷೆಯಲ್ಲಿನ ಪದ ಉತ್ಪತ್ತಿಯ ಸಾಮ್ಯತೆಗಳನ್ನು ಗುರುತಿಸಿಯೆ ಹೊರತು ಆ ಭಾಷೆಗಳು ಇಂಪಾಗಿ ಕೇಳಿಸುತ್ತವೆ ಎಂದಲ್ಲ.

ಆ ಭಾಷಾಶಾಸ್ತ್ರಜ್ಞ ಹಾಗೆ ಹೇಳಿದ್ದು, ಇಟಲಿಯಾನೊ ಭಾಷೆಯಂತೆ ತೆಲುಗಿನಲ್ಲಿಯೂ ಪದಗಳು ಸ್ವರದಿಂದಲೆ ಕೊನೆಯಾಗುತ್ತವೆ ಎಂಬ ಕಾರಣಕ್ಕೆ. ಬಹುಶಃ ಆತ ಬಹುಪಾಲು ಪದಗಳು ಅರ್ಧಾಕ್ಷರಗಳಲ್ಲಿಯೆ ಕೊನೆಯಾಗುವ ಹಿಂದಿ ಮತ್ತಿತರ ಉತ್ತರ ಭಾರತದ ಭಾಷೆಗಳನ್ನು ಗಮನಿಸಿ ನಂತರ ದಕ್ಷಿಣ ಭಾರತದ ಭಾಷೆಗಳನ್ನು ಗಮನಿಸಿರಬೇಕು. ಆತ ಹಾಗೆ ಗಮನಿಸಿದ ಮೊದಲ ಭಾಷೆಯೆ ತೆಲುಗು ಆಗಿದ್ದಿರಬೇಕು. ಅಥವ ಇಂತಹುದೆ ಯಾವುದೊ ಒಂದು ಸಂದರ್ಭವಾಗಿರಬೇಕು. ಆಗ ಆತ ತೆಲುಗಿನ ಬಹುಪಾಲು ಪದಗಳು ಅಕಾರಾದಿ ಸ್ವರಗಳಿಂದಲೆ ಕೊನೆಯಾಗುವುದನ್ನು ಗಮನಿಸಿದ್ದಾನೆ. ಇಂಗ್ಲಿಷ್‌ನ ಬಹುಪಾಲು ಪದಗಳು ಅರ್ಧಾಕ್ಷರದಲ್ಲಿಯೆ ಕೊನೆಯಾಗುತ್ತವೆ. ಆದರೆ ಯೂರೋಪಿನ ಅನೇಕ ಭಾಷೆಗಳು ಹೀಗೆ ತೆಲುಗಿನಂತೆಯೆ ಸ್ವರಾಕ್ಷರದ ಜೋಡಣೆಯಿಂದ ಕೊನೆಯಾಗುತ್ತವೆ. ಅದರಲ್ಲಿ ಇಟಾಲಿಯನ್ ಸಹ ಒಂದು. ಬಹುಶಃ ಆತನಿಗೆ ಇಟಾಲಿಯನ್ ಚೆನ್ನಾಗಿ ಗೊತ್ತಿದ್ದಕ್ಕೊ ಅಥವ ಮತ್ತೆನ್ನಿಂತದ್ದಕ್ಕೊ, ತೆಲುಗು ಪೂರ್ವದ ಇಟಾಲಿಯನ್ ಅಂದಿದ್ದಾನೆ, ಅಷ್ಟೆ.

ಆದರೆ ಆತ ತೆಲುಗಿಗಿಂತ ಮುಂಚೆ ಕನ್ನಡವನ್ನು ಗಮನಿಸಿದ್ದರೆ ಇಷ್ಟೊತ್ತಿಗೆ ನಮ್ಮವರೂ, ಕನ್ನಡ, ಪೂರ್ವದ ಇಟಾಲಿಯನ್ ಎಂದು ಇಟಾಲಿಯನ್ ನಾಮಸ್ಮರಣೆ ಮಾಡುತ್ತಿದ್ದರು. ಹೌದು, ನೀವೇ ಗಮನಿಸಿ ನೋಡಿ. ಕನ್ನಡದ ಪದಗಳೂ ಸ್ವರದಿಂದಲೇ ಕೊನೆಯಾಗುತ್ತವೆ. ಅರ್ಧಾಕ್ಷರದಿಂದ ಕೊನೆಯಾಗುವ ಬೇರೆ ಭಾಷೆಯ ಪದಗಳಿಗೆ ನಾವು ’ಉ’ಕಾರ ಸೇರಿಸಿಕೊಂಡು ನಮ್ಮದಾಗಿಸಿಕೊಂಡಿದ್ದೇವೆ. ಆಡು ಭಾಷೆಯಲ್ಲಿ ಇಂಗ್ಲಿಷ್ ಇಂಗ್ಲೀಷು ಆಗಿದೆ; ಕಾರ್, ಬಸ್, ರೈಲ್, ಸ್ಕೂಲ್ ಗಳೆಲ್ಲ ಕಾರು ಬಸ್ಸು ರೈಲು ಸ್ಕೂಲುಗಳಾಗಿವೆ. ಈಗೀಗ ನಮ್ಮದನ್ನಾಗಿ ಮಾಡಿಕೊಳ್ಳುವಲ್ಲಿ ಸೋಲುತ್ತಲೊ, ಅಥವ ಇಂಗ್ಲಿಷ್ ಪದಗಳನ್ನು ಇಂಗ್ಲಿಷರಂತೆ ಬಳಸಿದರೆ ಮಾತ್ರ ಘನತೆ ಎಂಬ ಕಾರಣಕ್ಕಾಗಿಯೊ ಕೆಲವು ಪದಗಳನ್ನು ಮೂಲರೂಪದಲ್ಲಿಯೆ ಬಳಸಲು ಆರಂಭಿಸಿದ್ದೇವೆ. ಇವುಗಳನ್ನು ಬಿಟ್ಟರೆ ನಮ್ಮ ಮೂಲಪದಗಳೆಲ್ಲ ಅಆ..ಓಔ ಸ್ವರದಲ್ಲಿಯೆ ಕೊನೆಯಾಗುತ್ತವೆ. ತೆಲುಗು ಪದಗಳೂ ಹೀಗೆಯೆ. ಇಟಾಲಿಯನ್ ಭಾಷೆಯಲ್ಲಿಯೂ ಹೀಗೆಯೆ. ಅಂದ ಹಾಗೆ, ಇಟಾಲಿಯನ್ ಭಾಷೆಯನ್ನು ಆ ಭಾಷೆಯಲ್ಲಿ ಹೇಳುವುದು ಇಟಲಿಯಾನೊ ಎಂದು. ಇಂಗ್ಲಿಷ್‌ನ ಹೆಸರು ಇಟಾಲಿಯನ್‌ನಲ್ಲಿ "ಇಂಗ್ಲೀಸೆ" (Inglese) ಎಂದು.

ಕನ್ನಡ ಓದುಗರಿಗೆ "ಜೀಸಸ್ ಕ್ರೈಸ್ಟ್" ಪರಿಚಯವಾಗುವುದಕ್ಕಿಂತ ಮೊದಲು ಏಸು ಕ್ರಿಸ್ತನ ಪರಿಚಯವಾಗಿತ್ತು. ಅದೇ ರೀತಿ ಇಟಾಲಿಯನ್ನರಿಗೆ ಆತ ಜೆಸೂ ಕ್ರಿಸ್ತೊ. ಗ್ರೀಕ್‌ನ ಹೆಸರು ಗ್ರೇಚೊ ಎಂದು. ನಾಮಪದಗಳೂ ಹಾಗೆಯೆ: ಡೇವಿಡ್-ದವೀಡೆ; ಪೀಟರ್-ಪೀತ್ರೊ; ಕಾರ್ಲ್-ಕಾರ್ಲೊ; ಅಂತೊನಿಯೊ, ಮರಿಯ, ಸೋನಿಯ, ಪಾವ್ಲ, ಡಾಂಟೆ, ಬರ್ಲುಸ್ಕೊನಿ, ಮಾರ್ಕೋನಿ, ಇತ್ಯಾದಿ. ರೋಮ್, ಮಿಲಾನ್ ನಗರಗಳನ್ನು ಕರೆಯುವುದು ರೋಮಾ, ಮಿಲಾನೊ ಎಂದು. ಅಚ್ಚ ಇಟಾಲಿಯನ್ನರಿಗೆ ಇಂಗ್ಲಿಷರ ಬ್ಯಾಂಗಲೂರ್‌ಗಿಂತ ಕನ್ನಡಿಗರಿಗೆ ಹತ್ತಿರವಾದ ಬೆಂಗಲೂ(ಳೂ)ರು ಬಹಳ ಹತ್ತಿರವಾಗಬಹುದು. ಈ ಎಲ್ಲಾ ಸಾಮ್ಯತೆಗಳಿಂದಾಗಿ ಯಾರಾದರೂ "ಕನ್ನಡ, ಪೂರ್ವದ ಇಟಾಲಿಯನ್" ಅಂದರೆ ಅವರ ಮನಸ್ಥಿತಿಯಲ್ಲಿ ದೋಷ ಹುಡುಕಬಹುದೆ ಹೊರತು ಆ ಮಾತಿನಲ್ಲಲ್ಲ.

ಪಂಪೆ, ಹಾಳುಕೊಂಪೆ...

ಇತ್ತೀಚೆಗೆ ಸ್ನೇಹಿತರೊಬ್ಬರು ಒಂದು ವಿಷಯ ಹೇಳುತ್ತಿದ್ದರು. ಅದು ಕತೆಯೊ, ಕಟ್ಟುಕತೆಯೊ, ಅಥವ ವಾಸ್ತವವೊ ಹೇಳುವುದು ಸ್ವಲ್ಪ ಕಷ್ಟವೆ. ವಿಷಯ ಏನೆಂದರೆ, ಕಳೆದ ಐದತ್ತು ವರ್ಷಗಳಲ್ಲಿ ಕರ್ನಾಟಕ ರಾಜಕೀಯ ರಂಗದ ಮೇಲೆ ಮುಂಚೂಣಿಗೆ ಬಂದುಬಿಟ್ಟಿರುವ ಗಣಿದೊರೆಗಳಾದ ಜನಾರ್ಧನ ರೆಡ್ಡಿ ಮತ್ತವರ ಕುಟುಂಬದವರಿಗೆ ಇಷ್ಟು ಐಶ್ವರ್ಯ ಹೇಗೆ ಬಂತು ಎನ್ನುವುದು. ನಾಡಿನ ಜನತೆಗೆ ಗೊತ್ತಿರುವಂತೆ ರೆಡ್ಡಿಯವರ ತಂದೆ ಕರ್ನಾಟಕ ಸರ್ಕಾರದ ಪೋಲಿಸ್ ಇಲಾಖೆಯಲ್ಲಿದ್ದವರು. ಕತೆ ಆರಂಭವಾಗುವುದು ಅವರು ಹಂಪಿಯಲ್ಲಿ ದಫೇದಾರ್ ಆಗಿದ್ದಾಗಿನಿಂದ. ಆ ಸಮಯದಲ್ಲಿ ಹಾಳು ಹಂಪಿಯಲ್ಲಿ ನಿಧಿ ಹುಡುಕಾಟ ಸಾಮಾನ್ಯವಾಗಿತ್ತಂತೆ. ಯಾರಿಗೊ ಎಲ್ಲಿಯೊ ಏನೊ ಸಿಕ್ಕಿತು ಎಂಬಂತಹ ಸುದ್ದಿಗಳು ಕೇಳಿಬರುತ್ತಿತ್ತಂತೆ; ಆಗ ಹೀಗೆಯೆ ಯಾರೊ ಕೂಲಿಯವನಿಗೆ ನಿಧಿ ಸಿಕ್ಕಿತು; ಅದನ್ನು ರೆಡ್ಡಿಯವರ ದಫೇದಾರ್ ತಂದೆ ವಶಪಡಿಸಿಕೊಂಡು ತಮ್ಮ ಮನೆಗೆ ಹೊತ್ತೊಯ್ದರು; ಇದೇ ಅವರ ಶ್ರೀಮಂತಿಕೆಯ ಮೂಲ, ಎಂದು ಹಂಪಿಯ ಸುತ್ತಮುತ್ತ ಆ ದಫೇದಾರರ ಕಾಲದ ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನುವುದೆ ಆ ವಿಷಯ.

ಇದು ನಿಜವೊ, ಸುಳ್ಳೊ, ದಫೇದಾರರಿಗೆ ಎಷ್ಟು ಸಿಕ್ಕಿತೊ ಇಲ್ಲವೊ, ನಿಜ ಯಾರಿಗೆ ಗೊತ್ತು? ಯುದ್ಧದಲ್ಲಿ ಸೋತ ನಂತರ ಅವ್ಯಾಹತ ಕೊಳ್ಳೆಗೊಳಗಾದ ಹಂಪಿಯಲ್ಲಿ ನಿಧಿ ಸಿಗುವುದು ಸ್ವಲ್ಪ ಕಷ್ಟವೇ ಆದರೂ, ಬೆಂಕಿ ಇಲ್ಲದೆ ಹೋಗೆ ಏಳುವುದಿಲ್ಲ ಎನ್ನುವ ಮಾತಿನ ಹಿನ್ನೆಲೆಯಲ್ಲಿ ಇದನ್ನು ಸಂಪೂರ್ಣವಾಗಿ ತಳ್ಳಿಹಾಕುವುದೂ ಕಷ್ಟವೆ. ಯಾಕೆಂದರೆ, ಕಾಲಾಂತರದಲ್ಲಿ ಊರುಗಳು ಕಣ್ಮರೆಯಾಗುವುದು, ಆಗಾಗ್ಗೆ ಉತ್ಖನನದಲ್ಲಿ ಸಾಕ್ಷ್ಯಗಳು ಕಾಣಿಸುವುದು, ಕೆಲವೊಮ್ಮೆ ಯಾವುದೊ ಪಾಳುಬಿದ್ದ ಊರಿನ ಯಾವುದೊ ಜಾಗದಲ್ಲಿ ಸಾಮಾನುಗಳು ಅಥವ ಒಡವೆಗಳು ಸಿಗುವುದು ಅಸಂಭವವೇನಲ್ಲ.


ಲೇಖನದ ವಿಡಿಯೊ ಪ್ರಸ್ತುತಿ

ಅವರು ಹಂಪೆಯ ಈ ವಿಷಯ ಹೇಳುತ್ತಿದ್ದಾಗ ನನಗೆ ಹಂಪೆಯ ತರಹವೆ ಹೆಸರಿರುವ ಇಟಲಿಯ ಊರೊಂದು ನೆನಪಾಯಿತು. ಅದು ಪಂಪೆ. ಕ್ರಿಸ್ತ ಪೂರ್ವ 7 ನೇ ಶತಮಾನದಲ್ಲಿ ಸ್ಥಾಪನೆಯಾದ ನಗರ. ಅಂದರೆ, ಹಂಪೆಗಿಂತ ಎರಡು ಸಾವಿರ ವರ್ಷಗಳ ಹಳೆಯ ನಗರ. ಆದರೆ ಆ ಊರಿನಲ್ಲಿ ಜನ ಓಡಾಡಿದ್ದು ಮಾತ್ರ ಈಗಿನ ಹಂಪೆಯ ಇತಿಹಾಸವಿದ್ದಷ್ಟು ಕಾಲ. ಮೊದಲ ಶತಮಾನದ ಸಮಯದಲ್ಲಿ ಸುಮಾರು 20 ಸಾವಿರ ಜನಸಂಖ್ಯೆಯ ನಗರ ಅದು. ಯೋಜನಾಬದ್ಧವಾಗಿ, ರೋಮನ್ ವಾಸ್ತಿಶಿಲ್ಪದ ಪ್ರಕಾರ ಕಟ್ಟಲ್ಪಟ್ಟ ನಗರ. ಇಂತಹ ಪಟ್ಟಣ ಹೆಚ್ಚೂಕಮ್ಮಿ 17 ಶತಮಾನಗಳ ಕಾಲ ಮಣ್ಣಿನಲ್ಲಿ, ಬೂದಿಯಲ್ಲಿ ಹೂತುಹೋಗಿತ್ತು. ಅದು ಹೀಗೆ ಪಾಳುಬೀಳುವಂತಾಗಲು ಯಾರೂ ದಾಳಿ ಮಾಡಲಿಲ್ಲ. ಬೆಂಕಿ ಹಚ್ಚಲಿಲ್ಲ. ಭೂಕಂಪವಾಗಲಿಲ್ಲ. ಪ್ರಳಯವಾಗಲಿಲ್ಲ. ಹಾಗೆಯೆ ಒಂದು ರೀತಿಯಲ್ಲಿ ಈ ಎಲ್ಲವೂ ನಿಜ. ನಿಸರ್ಗವೆ ಅದರ ಕಾರಣಕರ್ತೃ. ಅದು ಕ್ರಿ.ಶ. 78. ಆ ನಗರಕ್ಕೆ ಹೊಂದಿಕೊಂಡು ಇದ್ದ ಮೌಂಟ್ ವಿಸೂವಿಯಸ್ ಪರ್ವತ ಮುನಿಸಿಕೊಂಡಿತು. ಮೊದಲು ಭೂಕಂಪವಾಯಿತು. ನಂತರ ಪರ್ವತ ಬೆಂಕಿ ಉಗುಳಿತು. ಕಾಕತಾಳೀಯವೆಂಬಂತೆ ಅದು ಆರಂಭವಾಗಿದ್ದು ಮಾತ್ರ ಸ್ಥಳೀಯ ರೋಮನ್ ಜನ ತಮ್ಮ ಅಗ್ನಿದೇವತೆಯ ಹಬ್ಬ ಮಾಡಿದ ಮಾರನೆಯ ದಿನ.

ಅಗ್ನಿಪರ್ವತ ಅನೇಕ ತಿಂಗಳುಗಳ ಕಾಲ ಬೆಂಕಿ ಮತ್ತು ಬೂದಿಯನ್ನು ಉಗುಳಿತು. ಹಲವರು ಇದ್ದ ಜಾಗದಲ್ಲಿಯೆ ಬೂದಿಯಲ್ಲಿ ಮುಚ್ಚಿಹೋಗಿ ಸತ್ತುಹೋದರು. ದಪ್ಪ ಪದರುಗಳ ಬೂದಿ ನಿಧಾನವಾಗಿ ನಗರವನ್ನು ಮುಚ್ಚುತ್ತ ಬಂತು. ಬದುಕುಳಿದವರು ಊರನ್ನು ತೊರೆದು ಹೋದರು. ಇಡೀ ಊರು ನಿರ್ಮಾನುಷವಾಯಿತು. ಕಾಲಾಂತರದಲ್ಲಿ ಇಂತಹ ಊರು ಇಲ್ಲಿತ್ತು, ಅದರ ಇತಿಹಾಸ ಇದು ಎನ್ನುವುದೆ ಸುತ್ತಮುತ್ತಲಿನ ಜನರಿಗೆ ಮರೆತು ಹೋಗುವಷ್ಟು ಕಣ್ಮರೆಯಾಗುತ್ತ ಬಂತು. ಆ ಊರು ಮತ್ತು ಅದರ ಸುತ್ತಲಿನ ಇನ್ನೂ ಒಂದೆರಡು ನಗರಗಳು ಹೀಗೆಯೆ ಸುಮಾರು 12 ವಿವಿಧ ಬಗೆಯ ಮಣ್ಣಿನ ಪದರಗಳಲ್ಲಿ ಹೂತುಹೋದವು.

ಅದಾದ ಹದಿನೈದು ಶತಮಾನಗಳ ನಂತರವೆ ಭೂಮಿಯೊಳಗಿನ ಆ ನಗರಗಳ ಇರುವಿಕೆ ಇಟಾಲಿಯನ್ನರಿಗೆ ಗೊತ್ತಾಗಿದ್ದು. ಆದರೆ ನಿಜವಾದ ಉತ್ಖನನ ಆರಂಭವಾದದ್ದು ಮಾತ್ರ 18 ನೇ ಶತಮಾನದಲ್ಲಿ. ಕಳೆದ ಎರಡು ಶತಮಾನಗಳಿಂದ ಅದು ಮುಂದುವರೆದಿದೆ. ಆ ಉತ್ಖನನದ ಸಮಯದಲ್ಲಿ ಸಿಕ್ಕ 2000 ವರ್ಷಗಳ ಹಿಂದಿನ ಕಾಮಪ್ರಚೋದಕ ವರ್ಣಭಿತ್ತಿಚಿತ್ರಗಳದೆ ಒಂದು ದೊಡ್ಡ ಕತೆ! ನೇಪಲ್ಸ್‌ನಲ್ಲಿರುವ ಅವಶೇಷಗಳ ಮ್ಯೂಸಿಯಮ್‌ನ ರಹಸ್ಯ ಕೋಣೆಯಲ್ಲಿ ಇಟ್ಟಿರುವ ಆ ವರ್ಣಚಿತ್ರಗಳನ್ನು ನೋಡಲು ಚಿಕ್ಕವರಿಗೆ ಈಗಲೂ ಪ್ರವೇಶವಿಲ್ಲ! ಅನೇಕ ವರ್ಷಗಳ ಕಾಲ ವಯಸ್ಕರಿಗೂ ಇರಲಿಲ್ಲ!
ಎರಡು ಸಹಸ್ರ ವರ್ಷಗಳ ಹಿಂದಿನ ನಗರ ಅದರ ಮೂಲರೂಪದಲ್ಲಿಯೆ ಸಿಕ್ಕಿದ್ದರಿಂದಾಗಿ ಮತ್ತು ಅದರ ಇತಿಹಾಸದಿಂದಾಗಿ ಪಂಪೆ ಇಂದು ಇಟಲಿಯ ಅತಿಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಪ್ರತಿ ವರ್ಷ ಸುಮಾರು 25 ಲಕ್ಷ ಪ್ರವಾಸಿಗರು ಈ ಗತಕಾಲದ ಊರನ್ನು ನೋಡಲು ಬರುತ್ತಾರೆ. ಇತ್ತೀಚಿನ ವರದಿಗಳ ಪ್ರಕಾರ ಉತ್ಖನನದಿಂದ ಎದ್ದ ಈ ಪಾಳುನಗರ ಈಗ ಮತ್ತೆ ಪಾಳು ಬೀಳುತ್ತಿದೆಯಂತೆ. ಕಾರಣ? !ಅತಿಯಾದ ಪ್ರವಾಸೋದ್ಯಮ ಮತ್ತು ಪ್ರವಾಸಿಗರು. ಕೆಲವು ಪ್ರವಾಸಿಗರು ಗೋಡೆಯ ಮೇಲಿನ ಭಿತ್ತಿಚಿತ್ರಗಳ ಪದರವನ್ನು ಕಿತ್ತು ಅಥವ ಕೈಗೆ ಸಿಕ್ಕದ್ದನ್ನು ಬಾಚಿಕೊಂಡು ಒಯ್ಯುತ್ತಿದ್ದಾರಂತೆ.

ಇಂತಹ ದರೋಡೆಗಳಿಂದ ನಿಜವಾದ ನಷ್ಟವಾಗುವುದು ಮಾತ್ರ ನಮ್ಮ ಮನುಷ್ಯ ಜಾತಿಯ ಪರಂಪರೆಗೆ ಮತ್ತು ಇತಿಹಾಸವನ್ನು ಅರ್ಥೈಸಿಕೊಳ್ಳುವ ನಮ್ಮ ಸಾಮರ್ಥ್ಯಕ್ಕೆ. ಅದು ಪಂಪೆಯ ವಿಚಾರದಲ್ಲೂ ನಿಜ, ಹಂಪೆಯ ವಿಚಾರದಲ್ಲೂ ನಿಜ.

Aug 12, 2008

ಗಾಂಧಿ ಜಯಂತಿ ಕಥಾಸ್ಪರ್ಧೆ...

[ಈ ಕಥಾಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಅದು ಇಲ್ಲಿದೆ.]

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆದು ಮೂರು ತಿಂಗಳಾಗುತ್ತ ಬಂದಿದೆ. ಇನ್ನು ಮೂರ್ನಾಲ್ಕು ತಿಂಗಳಿನಲ್ಲಿ ಮತ್ತೆ ಐದು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ! ಬಹುಶಃ ಇನ್ನು ಏಳೆಂಟು ತಿಂಗಳಿನಲ್ಲಿ ಇಡೀ ದೇಶವೆ ಲೋಕಸಭೆಗೆ ತನ್ನ ಪ್ರತಿನಿಧಿಗಳನ್ನು ಚುನಾಯಿಸಲಿದೆ. ಈ ಚುನಾವಣೆಗಳಲ್ಲಿ ನಿಜವಾಗಲೂ ಆಗುವುದು ಏನು, ಜನರ ಮನಸ್ಥಿತಿ ಹೇಗೆ ವರ್ತಿಸುತ್ತದೆ, ಪ್ರಜಾಪ್ರಭುತ್ವ ಯಾವಯಾವ ಹಂತದಲ್ಲಿ ಹೇಗೆ ಬದಲಾಗುತ್ತದೆ, ಇತ್ಯಾದಿಗಳೆಲ್ಲ ಚುನಾವಣಾ ರಾಜಕೀಯವನ್ನು ಬಲ್ಲವರಿಗೆ ಚೆನ್ನಾಗಿ ಗೊತ್ತಿರುವ ಸಂಗತಿಯೆ. ಆದರೆ ಮಿಕ್ಕ ಬಹುಪಾಲು ಜನರಿಗೆ ಇವು ಅಷ್ಟಾಗಿ ಗೊತ್ತಾಗುವುದಿಲ್ಲ. ಯಾಕೆಂದರೆ ಅವರು ಓದುವ ಪತ್ರಿಕಾ ವರದಿಗಳಿಗೆ ಅಥವ ಟಿವಿ ಕಾರ್ಯಕ್ರಮಗಳಿಗೆ ಅವುಗಳದೇ ಆದ ಮಿತಿಯಿದೆ. ಈ ವರದಿಗಳು ಸರಳೀಕರಣಗೊಂಡು, ಸಾಮಾನ್ಯೀಕರಿಸಿಕೊಂಡು ಇರುತ್ತವೆ. ಆದರೆ ಒಂದು ಸಿನೆಮಾಗೆ ಆಗಲಿ, ಅಥವ ಒಂದು ಕತೆ-ಕಾದಂಬರಿಗೆ ಆಗಲಿ ಆ ಮಿತಿ ಇರುವುದಿಲ್ಲ. ಅವುಗಳ ಶಕ್ತಿ ಅವು ಯಾವುದೇ ಸಿದ್ಧಸೂತ್ರಗಳ ಹಂಗಿಲ್ಲದೆ, ಸಂಪಾದಕನ ಅಥವ ಒಂದು ಪತ್ರಿಕೆಯ ಅಥವ ಒಂದು ಮ್ಯಾನೇಜ್‌ಮೆಂಟಿನ ಧ್ಯೇಯಧೋರಣೆಯ ಹಂಗಿಲ್ಲದೆ ಸ್ವತಂತ್ರವಾಗಿ, ಸೃಜನಾತ್ಮಕವಾಗಿ ವಾಸ್ತವವನ್ನು ಕಟ್ಟಿಕೊಡುವುದರಲ್ಲಿ ಇರುತ್ತದೆ. ಹಾಗಾಗಿಯೆ ನಾನು ಹಾಲಿವುಡ್‌ನ ಅನೇಕ ನಿಜಜೀವಿತದ ಘಟನೆಗಳನ್ನು ಆಧರಿಸಿದ ಸಿನೆಮಾಗಳ ಅಭಿಮಾನಿ.

ಇಂತಹ ನೈಜ ವಾಸ್ತವವನ್ನು, ರಾಜಕೀಯ ಮತ್ತು ಅದು ಜನರನ್ನು ಪ್ರಭಾವಿಸುವ ರೀತಿಯನ್ನು, ರಾಜಕಾರಣದಲ್ಲಿನ ಭ್ರಷ್ಟತೆ, ಮೌಲ್ಯಗಳ ಅವನತಿ, ಮೌಲ್ಯಗಳನ್ನು ಕಳೆದುಕೊಂಡು ರಾಜಿಯಾದ ಜನ ಮತ್ತು ಅವರ ಪರಿಸ್ಥಿತಿಗಳನ್ನು, ರಾಜಿಯಾಗದೆ ಹೋದವರ ಕತೆ, ಚುನಾವಣೆ ಗೆಲ್ಲಲು ನಡೆಸುವ ತಂತ್ರಗಳು, ಈ ತಂತ್ರಗಳಿಂದ ಬದಲಾಗುವ ಜನಸಾಮಾನ್ಯರ ಜೀವನಗಳು, ಪಂಚಾಯಿತಿ ಮಟ್ಟದಲ್ಲೂ ನಡೆಯುವ ಭ್ರಷ್ಟತೆ, ಬದಲಾಗುವ ಅಥವಾ ಅಡ್ಡಡ್ಡ ಸೀಳಿಹೋಗುವ ಹಳ್ಳಿ ನಗರಗಳು, ಜಾತಿ ರಾಜಕಾರಣ, ಕೋಮುವಾದ, ಪ್ರತಿನಿಧಿಗಳು ಆಡುವ ಆಟಗಳು, ಬದಲಾಗುವ ಅವರ ಬಣ್ಣಗಳು, ಅದನ್ನು ಜನ ಒಪ್ಪಿಕೊಳ್ಳುವ ಬಗೆ ಮತ್ತು ಅದರ ಕಾರಣಗಳು, ಇತ್ಯಾದಿಗಳಂತಹ ಹಿನ್ನೆಲೆ ಹೊಂದಿರುವ ಸೃಜನಶೀಲ ಸಣ್ಣಕತೆಗಳ "ಗಾಂಧಿ ಜಯಂತಿ ಕಥಾಸ್ಪರ್ಧೆ" ಯನ್ನು "ವಿಕ್ರಾಂತ ಕರ್ನಾಟಕ" ವಾರಪತ್ರಿಕೆ ಆಯೋಜಿಸಿದೆ. ಬಹುಮಾನಗಳ ಪ್ರಾಯೋಜನ ನನ್ನದು. ವಿವರಗಳು ಈ ಕೆಳಕಂಡ ಚಿತ್ರದಲ್ಲಿದೆ. ನಿಮ್ಮಲ್ಲಿ ಒಬ್ಬ ಕತೆಗಾರ ಇದ್ದರೆ, ದಯವಿಟ್ಟು ಅಂತಹ ಕತೆ ಬರೆಯಿರಿ. ಅಥವ ನಿಮ್ಮ ಬಳಗದಲ್ಲಿ ಯಾರಾದರೂ ಅಂತಹವರು ಇದ್ದರೆ ಅವರಿಗೆ ದಯವಿಟ್ಟು ಈ ವಿವರಗಳನ್ನು ತಲುಪಿಸಿ.

ಮೊದಲ ಬಹುಮಾನ: ರೂ. 6000
ಎರಡನೆ ಬಹುಮಾನ: ರೂ. 4000
ಮೂರನೆಯ ಬಹುಮಾನ: ರೂ. 3000
ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ಕತೆ ತಲುಪಲು ಕೊನೆಯ ದಿನಾಂಕ: ಸೆಪ್ಟೆಂಬರ್ 15, 2008

ವಿಳಾಸ:

ವಿಕ್ರಾಂತ ಕರ್ನಾಟಕ 'ಕಥಾಸ್ಪರ್ಧೆ ವಿಭಾಗ'
ನಂ.30/1, ಡಿವಿಜಿ ರಸ್ತೆ, ಬಸವನಗುಡಿ, ಬೆಂಗಳೂರು- 560 004
ದೂರವಾಣಿ : 080-40129999, ಫ್ಯಾಕ್ಸ್: 080-40129979
ಇ-ಮೇಲ್ ವಿಳಾಸ: editor(at)vikrantakarnataka.com

Aug 7, 2008

ಭಾರತೀಯ ಮೂಲದ ಜನಾಂಗವೊಂದರ ವಿರುದ್ಧ ಯೂರೋಪಿನಲ್ಲಿ ತಾರತಮ್ಯ...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಆಗಸ್ಟ್ 15, 2008 ರ ಸಂಚಿಕೆಯಲ್ಲಿನ ಲೇಖನ.)

ಅದು 17 ನೇ ಶತಮಾನದ ಇಂಗ್ಲೆಂಡ್. ಅಂತರ್ಯುದ್ಧದ ಮುಖಾಂತರ ಅರೆಬರೆ ಪ್ರಜಾತಂತ್ರದಿಂದ ಪೂರ್ಣಮಟ್ಟದ ಪ್ರಜಾಪ್ರಭುತ್ವದತ್ತ ಇಂಗ್ಲೆಂಡ್ ಹೊರಳಿದ ಸಮಯ. ಕೆಲವು ಮತೀಯ ಮತ್ತು ರಾಜಕೀಯ ಕಾರಣಗಳಿಂದಾಗಿ ಆರಂಭವಾದ ಆ ಯುದ್ಧ ಆಗಿನ ದೊರೆ ಮೊದಲ ಚಾರ್ಲ್ಸ್‌ನ ಬಹಿರಂಗ ಶಿರಚ್ಚೇದನವನ್ನೇ ಕೇಳಿತು. ದೊರೆಗೆ ಎದುರಾಗಿ ನಿಂತವನು ಆಲಿವರ್ ಕ್ರಾಮ್‌ವೆಲ್ ಎಂಬ ಪ್ರಜಾತಂತ್ರ ಮತ್ತು ಪ್ರಜಾಹಕ್ಕುಗಳ ಪರ ಇದ್ದ ಶ್ರೀಮಂತ ಜಮೀನುದಾರ. ಎಲ್ಲಾ ಅಂತರ್ಯುದ್ಧಗಳಲ್ಲಿ ಆಗುವಂತೆ ಆ ಸಮಯದಲ್ಲಿಯೂ ದೇಶದಲ್ಲಿನ ಎಲ್ಲಾ ತರಹದ ಪ್ರಜೆಗಳು ಅಪಾರವಾದ ಕಷ್ಟನಷ್ಟಗಳಿಗೆ ಈಡಾದರು. ವಿಶೇಷವಾಗಿ, ದೊರೆಯ ಪರ ಇದ್ದ ಅನೇಕ ಜಮೀನುದಾರುಗಳ ಮತ್ತವರ ಕುಟುಂಬಗಳ ಹತ್ಯೆಯಾಯಿತು. ಅವರ ಮನೆಗಳಿಗೆ ಬೆಂಕಿ ಇಟ್ಟರು. ಅನೇಕರು ತಲೆಮರೆಸಿಕೊಂಡು ಓಡಿಹೋಗಿ ಜೀವ ಉಳಿಸಿಕೊಂಡರು. ಈ ಇತಿಹಾಸದ ಹಿನ್ನೆಲೆಯಲ್ಲಿ, ದೊರೆಯ ಪರವಾಗಿ ಹೋರಾಡಿ ಮಡಿದ ತಂದೆ, ಆ ಸುದ್ದಿ ಕೇಳಿ ಕುಸಿದುಬಿದ್ದು ಸತ್ತ ತಾಯಿ, ತಮ್ಮನ್ನೆಲ್ಲ ಮನೆಯಲ್ಲಿ ಕೂಡಿಹಾಕಿ ಸುಟ್ಟುಹಾಕಲು ಪ್ರಯತ್ನಿಸಿದ ವಿರೋಧಿ ಗುಂಪು, ಅದರಿಂದ ಬಚಾವಾಗಿ ತಮ್ಮ ಹಳೆಯ ನಂಬಿಕಸ್ಥ ಸೇವಕನ ಮನೆಯಲ್ಲಿ ವ್ಯವಸಾಯ ಮಾಡುತ್ತ ಬೆಳೆಯುವ 10-15 ವರ್ಷ ವಯಸ್ಸಿನ ಇಬ್ಬರು ಸೋದರರ ಮತ್ತು ಅವರ ಸೋದರಿಯರ ಕತೆಯನ್ನು ಫ್ರೆಡರಿಕ್ ಮ್ಯಾರಿಯಟ್ ಎನ್ನುವ ಲೇಖಕ ಅದ್ಭುತವಾಗಿ ಬರೆದಿದ್ದಾನೆ. ಅದನ್ನು ಈಗಿನ ಲಕ್ಷಾಂತರ ಕನ್ನಡಿಗರು ಓದಿಯೂ ಇದ್ದಾರೆ. ಹೇಗೆಂದರೆ, ಆ ಕಾದಂಬರಿಯನ್ನು ಗೋಪಾಲಕೃಷ್ಣ ಅಡಿಗರು ಕನ್ನಡಕ್ಕೆ "ಬನದ ಮಕ್ಕಳು" ಹೆಸರಿನಲ್ಲಿ ಅನುವಾದ ಮಾಡಿದ್ದಾರೆ ಮತ್ತು ಅದನ್ನು ಎರಡು ದಶಕಗಳ ಹಿಂದೆ ಪಿಯುಸಿಗೊ ಅಥವ ಬೆಂಗಳೂರು ವಿಶ್ವವಿದ್ಯಾಲಯದ ಪದವಿಗೊ ಪಠ್ಯವಾಗಿ ಮಾಡಲಾಗಿತ್ತು.

ಹೈಸ್ಕೂಲು ದಿನಗಳಲ್ಲಿ ನನ್ನನ್ನು ಅಪಾರವಾಗಿ ಸೆಳೆದ, ರೋಮಾಂಚಕಾರಿಯಾದ, ಕಾಡಿನಲ್ಲಿ ಬೆಳೆದ ಹದಿಹರೆಯದ ಹುಡುಗರ ಸಾಹಸ, ಬೇಟೆ, ತ್ಯಾಗ, ಕುಟುಂಬಪ್ರೇಮ, ಯೌವ್ವನದ ಪ್ರೀತಿ, ಮತ್ತು ಯುದ್ಧಭೂಮಿಯ ಘಟನೆಗಳನ್ನೊಳಗೊಂಡ ಕಾದಂಬರಿ ಇದು. ಆ ಕಾದಂಬರಿಯ ಎಡ್ವರ್ಡ್ ಮತ್ತು ಹಂಫ್ರಿ ಸೋದರರಂತೆ ನನ್ನ ಮನಸ್ಸನ್ನು ಸೆಳೆದ ಪಾತ್ರ ಪ್ಯಾಬ್ಲೊ ಎಂಬ ಜಿಪ್ಸಿಯದು.

ಯಾರಿವರು ಈ ಜಿಪ್ಸಿಗಳು? ಯೂರೋಪಿನ ಮತ್ತು ಅಮೆರಿಕದ ಅನೇಕ ವಿಶ್ವಪ್ರಸಿದ್ದ ಕತೆಕಾದಂಬರಿಗಳಲ್ಲಿ ಬರುತ್ತಾರಲ್ಲ? ಪ್ರಸಿದ್ಧ ಫ್ರೆಂಚ್ ಸಾಹಿತಿ ವಿಕ್ಟರ್ ಹ್ಯೂಗೋನ "ನೋಟ್ರ ಡಾಮ್‌ನ ಗೂನುಬೆನ್ನಿನವ" ಕಾದಂಬರಿಯಲ್ಲಿ ಬರುವ ಸುಂದರಿ ಕ್ಯುಸೆಂಡ್ರಳೂ ಜಿಪ್ಸಿ ಯುವತಿ. ಮತ್ತೊಂದು ವಿಶ್ವಪ್ರಸಿದ್ಧ ಸ್ಪ್ಯಾನಿಶ್ ಸಾಹಿತಿ ಮಾರ್ಕ್ವೆಜ್‌ನ "ಒಂದು ನೂರು ವರ್ಷಗಳ ಏಕಾಂತ" ದಲ್ಲಿ ಬರುವ ಹಲವಾರು ಪಾತ್ರಗಳೂ ಜಿಪ್ಸೀಗಳೆ.

ಕಳೆದ ಏಳೆಂಟು ಶತಮಾನಗಳಿಂದ ಯೂರೋಪಿನ ಅನೇಕ ದೇಶಗಳಲ್ಲಿ ಕಂಡುಬರುವ, ಚಮತ್ಕಾರಿಕ ಟ್ರಿಕ್‌ಗಳನ್ನು, ಮ್ಯಾಜಿಕ್‌ಗಳನ್ನು ಮಾಡುತ್ತ, ಗುಂಪುಗುಂಪಾಗಿ ಅಲೆದಾಡುವ ಕಂದುಬಣ್ಣದ ಅಲೆಮಾರಿ ಜನಾಂಗವೆ ಜಿಪ್ಸಿಗಳು. ಬೇರೆಬೇರೆ ದೇಶಗಳಲ್ಲಿ ಬೇರೆಬೇರೆ ಹೆಸರಿನಲ್ಲಿ ಕರೆಯಲ್ಪಡುವ ಇವರನ್ನು ಸಾಮಾನ್ಯವಾಗಿ ಗುರುತಿಸುವುದು ರೋಮಾ ಜಿಪ್ಸೀಗಳು ಎಂದು. ಸ್ವಲ್ಪ ಈಜಿಪ್ಟ್‌ನವರಂತೆ ಕಾಣುತ್ತಿದ್ದುದ್ದರಿಂದ ಇಜಿಪ್ಸೀಯರು, ಜಿಪ್ಸಿಗಳು ಎಂದಾಯಿತು ಎನ್ನುತ್ತಾರೆ ಕೆಲವರು. ಶತಮಾನಗಳ ಕಾಲ ಇವರು ಯಾರು ಮತ್ತು ಯೂರೋಪಿಗೆ ಎಲ್ಲಿಂದ ಬಂದರು ಎನ್ನುವುದು ಅಷ್ಟು ಖಚಿತವಾಗಿ ಯಾರಿಗೂ ಗೊತ್ತಿರಲಿಲ್ಲ. ಆದರೆ ಸುಮಾರು ಇನ್ನೂರು ವರ್ಷಗಳ ಹಿಂದೆ ಒಬ್ಬ ಭಾಷಾಶಾಸ್ತ್ರಜ್ಞ ಜಿಪ್ಸಿಗಳ ರೊಮಾನಿ ಭಾಷೆಗೂ ಮತ್ತು ಕೆಲವು ಭಾರತೀಯ ಭಾಷೆಗಳಿಗೂ ಇದ್ದ ಸಾಮ್ಯತೆಗಳನ್ನು ಗಮನಿಸಿ, ಇವರು ಭಾರತೀಯ ಮೂಲದವರಿರಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ.

"ನಪುಂಸಕತೆ" ಕಳೆದುಕೊಂಡ ಭಾಷೆಗಳು !?
ಆ ಭಾಷಾಶಸ್ತ್ರಜ್ಞ ತನ್ನ ಸಂಶೋಧನೆಯಲ್ಲಿ ಕಂಡುಕೊಂಡ ಆಧಾರವಾದರೂ ಎಂತಹುದು ನೋಡಿ: ಅದು ಆ ಭಾಷೆಗಳಲ್ಲಿ ಇಲ್ಲದ ನಪುಂಸಕ ಲಿಂಗ! ಈಗ ನಮ್ಮ ಕನ್ನಡದ ಉದಾಹರಣೆಯನ್ನೇ ತೆಗೆದುಕೊಳ್ಳೋಣ; ಹುಡುಗ ಬಂದನು, ಹುಡುಗಿ ಬಂದಳು, ಅದು ಬಂದಿತು - ಹೀಗೆ ನಮ್ಮಲ್ಲಿ ಮೂರು ಲಿಂಗಭೇದಗಳಿವೆ. ಇದು ಎಲ್ಲಾ ಭಾರತೀಯ ಭಾಷೆಗಳಲ್ಲಿ ಮೊದಲಿಗೆ ಸಾಮಾನ್ಯವಾಗಿತ್ತು. ಆದರೆ, ಉತ್ತರ ಭಾರತದ ಕೆಲವು ಭಾಷೆಗಳು ಸುಮಾರು ಸಾವಿರ ವರ್ಷಗಳ ಹಿಂದೆ ಈ ನಪುಂಸಕ ಲಿಂಗವನ್ನು ಕಳೆದುಕೊಳ್ಳಲು ಆರಂಭಿಸಿದವು. ಬಹುಪಾಲು ನಪುಂಸಕ ಲಿಂಗ ಪದಗಳು ಪುಲ್ಲಿಂಗವಾಗಿ ಬದಲಾದರೆ ಕೆಲವಾರು ಮಾತ್ರ ಸ್ತ್ರೀಲಿಂಗವಾದವು. ರೋಮಾ ಜಿಪ್ಸೀಗಳ ಭಾಷೆಯಲ್ಲೂ ನಪುಂಸಕ ಲಿಂಗವಿಲ್ಲ. ಹಾಗಾಗಿ ಇವರ ಭಾಷೆ ಭಾರತದಲ್ಲಿಯೇ ಹುಟ್ಟಿರಬೇಕು ಮತ್ತು ಅವರ ವಲಸೆ ಭಾರತೀಯ ಭಾಷೆಗಳು ನಪುಂಸಕ ಲಿಂಗ ಕಳೆದುಕೊಂಡ ಹತ್ತನೆ ಶತಮಾನದಿಂದೀಚೆಗೆಯೇ ಆಗಿರಬೇಕು ಎನ್ನುವ ಅಭಿಪ್ರಾಯಗಳು ಭಾಷಾ ಅಧ್ಯಯನದಿಂದ ಹೊರಬಿತ್ತು.

ಆದರೆ, ಇದು ಕೇವಲ ಭಾಷಾ ಅಧ್ಯಯನದಿಂದ ಮಾತ್ರ ಹೊರಬಂದ ಅಭಿಪ್ರಾಯಗಳು. ಭಾಷೆ ಒಂದು ರೀತಿ ಜಂಗಮವಾದ್ದರಿಂದ ಮತ್ತು ಈ ಜನಾಂಗವೂ ಅಲೆಮಾರಿ ಜಂಗಮ ಜನಾಂಗವಾದ್ದರಿಂದ ಇದಿಷ್ಟೇ ಪುರಾವೆ ಇವರು ಭಾರತೀಯ ಮೂಲದವರು ಎಂದು ಖಡಾಖಂಡಿತವಾಗಿ ಸಾಬೀತು ಮಾಡುವುದಿಲ್ಲವಲ್ಲ? ಹಾಗೆ ಅದು ಸಾಬೀತಾದದ್ದು ಮಾತ್ರ ತೀರಾ ಇತ್ತೀಚಿಗೆ; ಅದೂ 1990 ರಿಂದೀಚೆಗೆ. ಅದೂ ಹೇಗೆಂದರೆ, ಈ ಜಿಪ್ಸೀಗಳಿಗೆ ಬರುವ ಕೆಲವು ಕಾಯಿಲೆ ಮತ್ತು ಡಿಎನ್‌ಎ ಪುರಾವೆಗಳಿಂದ. ಯೂರೋಪು, ಅಮೆರಿಕಗಳಲ್ಲೆಲ್ಲ ಹರಡಿರುವ ಜಿಪ್ಸೀಗಳಿಗೆ ಒಂದು ರೀತಿಯ ಸ್ನಾಯು ದೌರ್ಬಲ್ಯದ ಕಾಯಿಲೆ ಬರುತ್ತದೆ. ಈ ವಿಶಿಷ್ಟ ಕಾಯಿಲೆ ಭಾರತೀಯ ಮೂಲದ ಜನರಿಗೆ ಬಿಟ್ಟರೆ ಬೇರೆಯವರಿಗೆ ಬರುವುದಿಲ್ಲ. ಹಾಗೆಯೆ, ಬಹುಪಾಲು ಜಿಪ್ಸಿಗಳಲ್ಲಿರುವ ಒಂದು ಬಗೆಯ ಕ್ರೋಮೊಸೋಮ್ ಮತ್ತು ಮೈಟೊಕಾಂಡ್ರಿಯಲ್ ಡಿಎನ್‌ಎ ಭಾರತದ ಉಪಖಂಡದವರಲ್ಲಿ ಮಾತ್ರ ಕಂಡುಬರುತ್ತದೆ.

ಹಾಗಾದರೆ ನಮ್ಮ ದೇಶದಲ್ಲಿ ಈ ಜಿಪ್ಸೀಗಳ ಪೂರ್ವಜರು ಯಾರು? ಭಾರತದಲ್ಲಿ ಈಗಲೂ ಕೆಲವು ಕಡೆ ಬಡತನದಿಂದಾಗಿ ಗುಂಪುಗುಂಪುಗಳಾಗಿ ಸಂಚರಿಸುವ ರಾಜಸ್ಥಾನ ಮೂಲದ ಬಂಜಾರರು ಅಥವ ಲಂಬಾಣಿಗಳೆ ಈ ಜಿಪ್ಸೀಗಳ ಪೂರ್ವಜರು!

ಇವರು ಭಾರತೀಯ ಮೂಲದವರು ಎನ್ನುವುದು ವೈಜ್ಞಾನಿಕವಾಗಿ ಖಚಿತವಾದರೂ, ಇಲ್ಲಿಂದ ಯೂರೋಪಿಗೆ ಹೇಗೆ ಹೋದರು ಎನ್ನುವುದಕ್ಕೆ ಖಚಿತ ಉತ್ತರಗಳಿಲ್ಲ. ಹತ್ತನೆ ಶತಮಾನದಲ್ಲಿ ಇರಾನಿನ ಘಜ್ನಿ ಮೊಹಮ್ಮದ್ ಸುಮಾರು ಐದು ಲಕ್ಷ ಹಿಂದುಗಳನ್ನು ಗುಲಾಮರನ್ನಾಗಿ ತನ್ನ ದೇಶಕ್ಕೆ ಎಳೆದುಕೊಂಡು ಹೋದ; ಇವತ್ತಿನ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ದುರ್ಗಮ ಬೆಟ್ಟಗಳಲ್ಲಿ ಇವರನ್ನು ಎಳೆದುಕೊಂಡು ಹೋಗುವಾಗ ಅನೇಕ ಸಾವುನೋವುಗಳಾದವು; ಹಾಗಾಗಿಯೆ ಆ ಬೆಟ್ಟಗಳಿಗೆ ಹಿಂದುಕುಷ್ ಪರ್ವತಗಳು ಎಂಬ ಹೆಸರು ಬಂದಿದ್ದು; ಹಾಗೆ ದಾಳಿಕೋರರು ಎಳೆದುಕೊಂಡು ಹೋದ ಭಾರತೀಯರೆ ಜಿಪ್ಸೀಗಳು ಎನ್ನುತ್ತಾರೆ ಕೆಲವು ಇತಿಹಾಸತಜ್ಞರು. ಮತ್ತೆ ಕೆಲವರು, ಈ ಜಿಪ್ಸೀಗಳು ಕೆಳಜಾತಿಯ ಹಿಂದೂಗಳಾಗಿದ್ದರು; ಇಸ್ಲಾಮಿನ ಆಕ್ರಮಣವನ್ನು ತಡೆಯಲು ಇವರನ್ನು ಸೈನ್ಯಕ್ಕೆ ಸೇರಿಸಿ, ಕ್ಷತ್ರಿಯ ಜಾತಿಗೆ ಬಡ್ತಿ ನೀಡಿ, ಮುಸ್ಲಿಮ್ ದಾಳಿಕೋರರ ವಿರುದ್ಧ ಹೋರಾಡಲು ಪಶ್ಚಿಮಕ್ಕೆ ಕಳುಹಿಸಲಾಯಿತು, ಎನ್ನುತ್ತಾರೆ. ಅವರು ಯಾವುದೆ ಕಾರಣದಿಂದ ಹೊರಹೋಗಿದ್ದರೂ, ಭಾರತದಿಂದ ಹೋದ ನಂತರ ಅವರಿಗೆ ಇಲ್ಲಿನ ಸಂಪರ್ಕ ಸಂಪೂರ್ಣ ಕಳಚಿಹೋಗಿ, ನಂತರ ಅವರು ಒಂದು ವಿಭಿನ್ನ ಗುಂಪಾಗಿ ಯೂರೋಪಿನಲ್ಲಿ ತಲೆಯೆತ್ತಿದ್ದು ಮಾತ್ರ ನಿಜ.

ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಹಂಚಿಹೋಗಿರುವ ಈ ಜನಾಂಗ ಕಳೆದ ಶತಮಾನದಲ್ಲಂತೂ ಯೂರೋಪಿನಲ್ಲಿ ಅನೇಕ ರೀತಿಯ ಜನಾಂಗದ್ವೇಷಕ್ಕೆ ಮತ್ತು ತಾರತಮ್ಯಕ್ಕೆ ಈಡಾಗಿತ್ತು. ಕೆಲವು ಕಮ್ಯುನಿಸ್ಟ್ ದೇಶಗಳೊಂದಿಗೆ ಪ್ರಜಾಪ್ರಭುತ್ವ ದೇಶಗಳೂ ಸಹ ತಮ್ಮ ದೇಶಗಳಲ್ಲಿ ಇವರ ಸಂಖ್ಯೆ ಕಡಿಮೆ ಮಾಡಲು ಸಂಜಯಗಾಂಧಿಯ "ನರ ಕಟ್" ಕಾರ್ಯಕ್ರಮವನ್ನು ಚಾಲ್ತಿಯಲ್ಲಿಟ್ಟಿದ್ದವು. "ಪರಿಶುದ್ಧ ಆರ್ಯ" ಜನಾಂಗವನ್ನು ಮಾತ್ರ ಭೂಮಿಯ ಮೇಲೆ ಉಳಿಸಲು ಮನಸ್ಸು ಮಾಡಿದ್ದ ದುಷ್ಟ ಹಿಟ್ಲರ್ ಯಹೂದಿಗಳ ಜೊತೆಜೊತೆಗೆ ಜಿಪ್ಸೀಗಳನ್ನೂ ಘೆಟ್ಟೋಗಳಲ್ಲಿ ಕೂಡಿಹಾಕಿ ಕೊಂದಿದ್ದ. ನಾಟ್ಜೀಗಳ ಜನಾಂಗದ್ವೇಷಕ್ಕೆ ಸುಮಾರು ಹತ್ತು-ಹದಿನೈದು ಲಕ್ಷ ಜಿಪ್ಸಿಗಳು ಬಲಿಯಾಗಿದ್ದಾರೆ ಎಂದು ಒಂದು ಅಂದಾಜು.

ರೊಮಾ ನಗರವನ್ನು ರಾಜಧಾನಿಯಾಗಿ ಹೊಂದಿರುವ ಈಗಿನ ಇಟಲಿಯಲ್ಲಿ ಸುಮಾರು ಒಂದೂವರೆ ಲಕ್ಷ ರೋಮಾ ಜಿಪ್ಸೀಗಳಿದ್ದಾರೆ ಎಂದು ಅಂದಾಜು. ಬಡವರೂ, ಅಲೆಮಾರಿಗಳೂ, ಮತ್ತು ಅವರಿಗೆಂದೇ ಇರುವ ಕ್ಯಾಂಪ್‌ಗಳಲ್ಲಿ ವಾಸಿಸುವ ಈ ಜನರು ಇನ್ನೂ ಯೂರೋಪಿನ ಮುಖ್ಯವಾಹಿನಿಯಲ್ಲಿ ಬೆರೆಯಲಾಗಿಲ್ಲ. ಈಗ ಇಟಲಿಯಲ್ಲಿ ಈ ಇಡೀ ಜನಾಂಗದವರ ಫಿಂಗರ್‌ಪ್ರಿಂಟ್ ಶೇಖರಿಸುವುದರಲ್ಲಿ ಅಲ್ಲಿನ ಸರ್ಕಾರ ತೊಡಗಿದೆ. ಕಾರಣ? ಈ ಜನಾಂಗದವರು ಮಾಡುವ ಕ್ರಿಮಿನಲ್ ಕೃತ್ಯಗಳನ್ನು ತಡೆಯುವುದು.


ಲೇಖನದ ವಿಡಿಯೊ ಪ್ರಸ್ತುತಿ


ಹೀಗೆ ಫಿಂಗರ್‌ಪ್ರಿಂಟ್ ಮಾಡುವುದರಿಂದ ಏನಾಗುತ್ತದೆ ಎಂದರೆ, ಈ ಜಿಪ್ಸೀಗಳಲ್ಲಿಯ ಯಾರಾದರೂ ಯಾವುದಾದರೂ ಒಂದು ಕಳ್ಳತನ-ಸುಲಿಗೆ-ಕೊಲೆಯಂತಹ ಅಪರಾಧವನ್ನು ಮಾಡಿ ತಮ್ಮ ಬೆರಳಚ್ಚನ್ನು ಘಟನೆ ನಡೆದ ಸ್ಥಳದಲ್ಲಿ ಬಿಟ್ಟುಹೋಗಿದ್ದರೆ, ಅಪರಾಧ ಯಾರು ಮಾಡಿದ್ದಾರೆ ಎನ್ನುವುದನ್ನು ಕಂಡುಹಿಡಿಯುವುದು ಪೋಲಿಸರಿಗೆ ನಿಮಿಷಗಳ ಮಾತ್ರದ ಕೆಲಸ. ಕಂಪ್ಯೂಟರ್ ಮುಂದೆ ಕುಳಿತು, ಘಟನಾ ಸ್ಥಳದಲ್ಲಿ ದೊರೆತಿರುವ ಈ ಬೆರಳಚ್ಚು ಜಿಪ್ಸಿಯದೆ ಎಂಬ ಒಂದು ಪ್ರಶ್ನೆಯನ್ನು ಅದಕ್ಕೆ ಕೇಳಿದರಾಯಿತು. ಅದು ತನ್ನ ಡೇಟಾಬೇಸ್‌ನಲ್ಲಿರುವ ಒಂದೂವರೆ ಲಕ್ಷ ಜಿಪ್ಸೀಗಳ ಬೆರಳಚ್ಚನ್ನೂ ನಿಮಿಷಗಳಲ್ಲಿ ತುಲನೆ ಮಾಡಿ ಆತನ ವಿವರವಿಳಾಸಗಳೊಂದಿಗೆ ತೋರಿಸಿಬಿಡುತ್ತದೆ. ಇದು ಒಳ್ಳೆಯದೆ ಅಲ್ಲವೆ, ಇದರಿಂದ ಏನು ತಪ್ಪು ಎಂದು ಕೆಲವರು ಕೇಳಬಹುದು. ಸಮಸ್ಯೆ ಅಥವ ತಾರತಮ್ಯ ಇರುವುದೇ ಇಲ್ಲಿ. ಇಟಲಿಯ ಇನ್ಯಾವುದೇ ಪ್ರಜೆ ಅಂತಹ ಕೃತ್ಯ ಎಸಗಿದ್ದರೆ ಅವನ ಪತ್ತೆಗಾಗಿ ತಮ್ಮ ಮಾಮೂಲಿ ಪಾರಂಪರಿಕ ತನಿಖಾಕಾರ್ಯಗಳನ್ನು ಮಾಡಬೇಕಾದ ಪೋಲಿಸರು ಜಿಪ್ಸೀಗಳಿಗಾದರೆ ಅದನ್ನು ಮಾಡಬೇಕಿಲ್ಲ. ಒಂದೇ ದೇಶದಲ್ಲಿ ಹುಟ್ಟಿದ, ನೂರಾರು ವರ್ಷಗಳಿಂದ ಆ ನೆಲದಲ್ಲಿ ಓಡಾಡಿದ ಪೂರ್ವಜರಿರುವ, ಇತರರಷ್ಟೇ ಸಮಾನ ನಾಗರಿಕ ಹಕ್ಕುಗಳಿರುವ ಪ್ರಜೆಗಳ ನಡುವೆ ಮಾಡುವ ತಾರತಮ್ಯ ಇದು. ಇದು ಸಿದ್ಧಾಂತದ ಪ್ರಶ್ನೆ; ನ್ಯಾಯದ ಪ್ರಶ್ನೆ; ನೀತಿಯ ಪ್ರಶ್ನೆ; ಮಾನವೀಯತೆಯ ಪ್ರಶ್ನೆ. ಒಂದೇ ದೇಶದಲ್ಲಿ ಹುಟ್ಟಿದವರ ಸಮಾನ ಹಕ್ಕುಗಳ ಪ್ರಶ್ನೆ.

ಕಳೆದ ತಿಂಗಳು ವಿಶ್ವಸಮುದಾಯದಲ್ಲಿ ಇಟಲಿ ಸುದ್ದಿ ಮಾಡಿದ್ದು ಇದೇ ಕಾರಣಕ್ಕೆ. ತನ್ನದೇ ಸದಸ್ಯ ರಾಷ್ಟ್ರವಾದ ಇಟಲಿಯ ಈ ಕೃತ್ಯವನ್ನು ಯೂರೋಪಿಯನ್ ಯೂನಿಯನ್‌ನ ಪಾರ್ಲಿಮೆಂಟ್ ಖಚಿತ ಮಾತುಗಳಲ್ಲಿ ಖಂಡಿಸಿತು. ಇಟಲಿಯಲ್ಲಿ ಮತ್ತೆ ತಲೆ ಎತ್ತುತ್ತಿರುವ ಫ್ಯಾಸಿಸ್ಟ್ ನೀತಿಯ ಪುರಾವೆ ಇದು ಎಂದರು ಅಲ್ಲಿಯ ಕೆಲವರು. ಯೂರೋಪಿನಲ್ಲಿ ಚಿಗುರೊಡೆಯುತ್ತಿರುವ ರೇಸಿಸಮ್‌ನ ಕುರುಹು ಇದು ಎಂದರು. ಇದೇ ಸಮಯದಲ್ಲಿ ಇನ್ನೂ ಒಂದು ಘಟನೆ ನಡೆಯಿತು. ಎರಡು ವಾರದ ಹಿಂದೆ ಇಟಲಿಯ ಬೀಚೊಂದರಲ್ಲಿ ಇಬ್ಬರು ಜಿಪ್ಸಿ ಹುಡುಗಿಯರು ನೀರಾಟ ಆಡುತ್ತ ಸಮುದ್ರದ ನೀರಿನಲ್ಲಿ ಮುಳುಗಿ ಪ್ರಾಣಕಳೆದುಕೊಂಡರು. ನಂತರ ಅವರ ಶವಗಳನ್ನು ಮೇಲಕ್ಕೆತ್ತಿ ಮರಳಿನ ಮೇಲೆ ಸ್ವಲ್ಪಕಾಲ ಮಲಗಿಸಲಾಯಿತು. ಆ ಸಮಯದಲ್ಲಿ ಕೆಲವು ಬಿಳಿಯ ಇಟಾಲಿಯನ್ನರು ಶವಗಳಿಂದ ಅನತಿ ದೂರದಲ್ಲಿ ತಮ್ಮ ಪಾಡಿಗೆ ತಾವು ಸೂರ್ಯಸ್ನಾನ ಮಾಡುತ್ತ, ವಿರಾಮದ ಮೋಜು ಅನುಭವಿಸುತ್ತ, ಏನೂ ಆಗಿಯೆ ಇಲ್ಲವಂತೆ ಕುಳಿತಿದ್ದರು. ಅವರ ಈ ವರ್ತನೆಯ ಫೋಟೋಗಳು ಮಾರನೆ ದಿನ ಇಟಲಿಯ ದಿನಪತ್ರಿಕೆಗಳಲ್ಲಿ ಕಾಣಿಸಿಕೊಂಡವು. ಇಟಲಿಯ ಸಜ್ಜನರು ಸಿಡಿದೆದ್ದರು. ಉಗ್ರಮಾತುಗಳಲ್ಲಿ ತಮ್ಮದೇ ಜನರ ವರ್ತನೆಯನ್ನು ಖಂಡಿಸಿದರು. ಇಟಲಿ ಈಗ ಅಂತಃಸಾಕ್ಷಿಯ ಪ್ರಶ್ನೋತ್ತರದಲ್ಲಿ ತೊಡಗಿಕೊಂಡಿದೆ. ಇವು ಅಲ್ಲಿಯ ತಲ್ಲಣಗಳು... ಭಾರತೀಯ ಮೂಲದ ವಿಶ್ವಜನಾಂಗವೊಂದು ಇನ್ನೂ ಅನುಭವಿಸುತ್ತಿರುವ ತಾರತಮ್ಯಗಳು...

ತಾರತಮ್ಯಗಳ ಬಗ್ಗೆ ಮಾತನಾಡಲು ನಮಗ್ಯಾವ ಹಕ್ಕಿದೆ?
ಇದನ್ನು ಬರೆಯುತ್ತಿರುವ ಹೊತ್ತಿನಲ್ಲಿ ಇಂತಹ ತಾರತಮ್ಯಗಳನ್ನು ಖಂಡಿಸುವ ಅಭಿಪ್ರಾಯವನ್ನು ಈ ಲೇಖನದಲ್ಲಿ ಬಿಂಬಿಸಬೇಕೊ ಬೇಡವೊ ಎನ್ನುವ ಗೊಂದಲದಲ್ಲಿ ಇದ್ದೇನೆ ನಾನು. ಅದು ತಾರತಮ್ಯಗಳು ಸರಿತಪ್ಪು ಎನ್ನುವ ಗೊಂದಲದಿಂದ ಬಂದಿದ್ದಲ್ಲ. ಅದು ನನಗಾಗಲಿ, ಅಥವ ಮತ್ಯಾವುದೇ ಕನ್ನಡ ಬರಹಗಾರನಿಗಾಗಲಿ ಇಂತಹ ಜನಾಂಗದ್ವೇಷವನ್ನಾಗಲಿ, ತಾರತಮ್ಯವನ್ನಾಗಲಿ ಖಂಡಿಸಲು ಯಾವ ಅರ್ಹತೆ ಇದೆ ಎನ್ನುವ ಸ್ವಪ್ರಶ್ನೆಯಿಂದ ಬಂದದ್ದು. ಅದಕ್ಕೆ ಕಾರಣ ನನ್ನ ಕಂಪ್ಯೂಟರ್‌ನ ಪರದೆಯಿಂದ ಕಣ್ಣುಕುಕ್ಕುತ್ತಿರುವ ಒಂದೇ ದಿನದಲ್ಲಿ ಪ್ರಕಟಗೊಂಡ ಎರಡು ಪತ್ರಿಕಾ ವರದಿಗಳು.
ಪ್ರಜಾವಾಣಿಯ ವರದಿಯೊಂದರ ಪ್ರಕಾರ, 1991 ರಲ್ಲಿ ಬಿಜಾಪುರ ಜಿಲ್ಲೆಯಲ್ಲಿ 11 ಜನ ದಲಿತರ ಸಜೀವದಹನ ಮಾಡಿದ ಘಟನೆಯ ಪ್ರಮುಖ ಆರೋಪಿಯನ್ನು ಈಗ ಬಂಧಿಸಲಾಗಿದೆಯಂತೆ. ಜನಾಂಗದ್ವೇಷದಿಂದ ತನ್ನದೇ ಊರಿನವರನ್ನು ಸುಟ್ಟ ಮನುಷ್ಯ ಇಲ್ಲಿಯವರೆಗೂ ಪೋಲಿಸರಿಗೆ ಸಿಕ್ಕಿರಲಿಲ್ಲ. ಆದರೆ ಅದೇ ಊರಿನ ಸುತ್ತಮುತ್ತ ಓಡಾಡಿಕೊಂಡು ಇದ್ದನಂತೆ. ಅಂದರೆ, ಆತನಿಗೆ ಮತ್ತು ಅವನು ಎಸಗಿದ ರೇಸಿಸ್ಟ್ ಕೆಲಸಕ್ಕೆ ಸಾವಿರಾರು ಸಂಖ್ಯೆಯ ನಮ್ಮದೇ ಜನರ ಸಮ್ಮತಿ ಅಥವ ಪ್ರೋತ್ಸಾಹ ಇತ್ತು ಮತ್ತು ಈಗಲೂ ಇದೆ ಎಂದಾಗಲಿಲ್ಲವೆ?

ಎರಡನೆಯ ಪತ್ರಿಕಾ ವರದಿ ಕನ್ನಡಪ್ರಭದ್ದು: ಮೂರು ವರ್ಷಗಳ ಹಿಂದೆ ಕೆಲವು ಮತಾಂಧರು ಉಡುಪಿಯ ಬಳಿ ಇಬ್ಬರು ಅನ್ಯಮತೀಯರನ್ನು ಬೆತ್ತಲೆ ಮಾಡಿ ಎಳೆದಾಡಿದ್ದರು. ಆ ಘಟನೆಯ ಫೋಟೋಗಳು ರಾಜ್ಯಾದ್ಯಂತ ಪತ್ರಿಕೆಗಳಲ್ಲಿ ಬಂದಿತ್ತು. ಈಗ ಆ ಇಡೀ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತ ಮಾಡಿದೆ. ಸಾಕ್ಷ್ಯಾಧಾರಗಳು ಇಲ್ಲವಂತೆ!
ನಮ್ಮದೇ ನಾಡಿನಲ್ಲಿ ಶತಶತಮಾನಗಳಿಂದ ತಾರತಮ್ಯ ಮಾಡಿಕೊಂಡು ಬಂದಿದ್ದಷ್ಟೆ ಅಲ್ಲದೆ, ಈಗಲೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತಹ ವ್ಯವಸ್ಥೆ ಇಲ್ಲ ಎಂದಾದರೆ ಬೇರೆ ಇನ್ಯಾವುದೊ ದೇಶದಲ್ಲಿನ ತಾರತಮ್ಯದ ಬಗ್ಗೆ ಮಾತನಾಡುವುದಕ್ಕೆ ನಮಗೆ ಯಾವ ಹಕ್ಕಿದೆ? ಒಟ್ಟಾರೆ ಭಾರತೀಯ ಸಮಾಜ ಅಂತಹ ಹಕ್ಕುಗಳನ್ನು ಕಷ್ಟಪಟ್ಟು ಗಳಿಸಿಕೊಳ್ಳಬೇಕಿದೆ... ಅಲ್ಲವೆ?