Feb 29, 2008

"ಇಂಟರ್‌ನೆಟ್‌ನಲ್ಲಿ ನವಗ್ರಹ ಕಾಟ" ಮತ್ತಿತರ 2007 ರ ಪೂರ್ವಾರ್ಧದ 26 ಲೇಖನಗಳು

ಇವು 2007 ರ ಜನವರಿಯಿಂದ ಜುಲೈ ವರೆಗೆ ಬರೆದಿರುವ ಅಂಕಣ ಲೇಖನಗಳು. ಇವುಗಳೊಂದಿಗೆ ನಾನು ಇಲ್ಲಿಯವರೆಗೆ ಅಂಕಣಕ್ಕೆ ಬರೆದಿರುವ ಎಲ್ಲಾ ಲೇಖನಗಳನ್ನೂ ಇಲ್ಲಿಗೆ ಸೇರಿಸಿದಂತಾಯಿತು. ಇದೇ ಸಮಯದಲ್ಲಿ ಅಂಕಣಕ್ಕಲ್ಲದೆ ಪತ್ರಿಕೆಗೆ ಬರೆದ ಇತರ ಇನ್ನೂ ಒಂದೆರಡು ಲೇಖನಗಳಿವೆ. ನಿಧಾನಕ್ಕೆ ಸೇರಿಸಬೇಕು.


ಈಗ ಈ ಲೇಖನಗಳನ್ನು ಮತ್ತೆ ನೋಡುತ್ತಿದ್ದಾಗ ತೇಜಸ್ವಿ ಮತ್ತು ಭೈರಪ್ಪನವರು ಒಂದಲ್ಲ ಒಂದು ಸಂದರ್ಭದಲ್ಲಿ ಈ ಅವಧಿಯಲ್ಲಿ (ಅಂದರೆ 2007 ರ ಪೂರ್ವಾರ್ಧದಲ್ಲಿ) ನನಗೆ ಪ್ರಸ್ತುತರಾಗಿದ್ದು ಕಾಣಿಸುತ್ತದೆ. ತೇಜಸ್ವಿಯವರು ಸಾಯುವ ನಾಲ್ಕೈದು ದಿನಗಳ ಹಿಂದೆ ಬರೆದಿದ್ದ "ಆದರ್ಶವಾದಿಗಳೊಡನೆ ಒಂದು ಬೆಳಗ್ಗೆ..." ಲೇಖನದಲ್ಲೂ ಅವರಿದ್ದಾರೆ. ಅವರು ತೀರಿಕೊಂಡ ಸಂದರ್ಭದಲ್ಲಿ ಬರೆದದ್ದು "ಜೀವಂತ ರೋಲ್ ಮಾಡೆಲ್ ಇನ್ನಿಲ್ಲ...". ಹಾಗೆಯೆ, ರಾಮದಾಸರು ತೀರಿಕೊಂಡ ಸಂದರ್ಭದಲ್ಲಿ ಬರೆದ "ಕಾಲಕ್ಕಿಂತ ಮುಂದಿದ್ದ ದಾರ್ಶನಿಕರು..." ಲೇಖನದಲ್ಲೂ ನೆನಪಾಗಿದ್ದಾರೆ.

ಇನ್ನು ಭೈರಪ್ಪನವರೂ ಮೂರ್ನಾಲ್ಕು ಕಡೆ ಕಾಣಿಸಿಕೊಂಡಿರುವುದನ್ನು ಕಂಡಾಗ ನನಗೇನಾದರೂ ಭೈರಪ್ಪ-ಫೋಬಿಯ ಇತ್ತೆ ಎನ್ನುವ ಸಂದೇಹ ಬರುತ್ತದೆ. ಆದರೆ ಅದು ನನ್ನೊಬ್ಬನದೆ ಕತೆಯಲ್ಲ, ಹಾಗೂ ಆ ಸಮಯದಲ್ಲಿ ವರ್ತಮಾನಕ್ಕೆ ಪ್ರತಿಕ್ರಿಯಿಸುತ್ತಿದ್ದ ಕನ್ನಡ ಬರಹಗಾರರು ಈ ವಿಚಾರದಲ್ಲಿ ಪದೆಪದೆ ಭೈರಪ್ಪನವರನ್ನು (ಪರ-ವಿರೋಧ) ಚರ್ಚಿಸಿದ್ದಾರೆ ಎನ್ನಿಸುತ್ತದೆ. ಯಾಕೆಂದರೆ, ಅದು ಆವರಣದ ಮಾಯೆ ಆವರಿಸಿಕೊಂಡಿದ್ದ ಕಾಲ. ಭೈರಪ್ಪನವರನ್ನು ಪ್ರತ್ಯಕ್ಷ-ಪರೋಕ್ಷವಾಗಿ ನೆನಪಿಸಿಕೊಂಡಿರುವ ಲೇಖನಗಳು:
ಎಂದಿನಂತೆ, ಪ್ರತಿಕ್ರಿಯೆಗಳಿಗೆ ಮತ್ತು ವಿಮರ್ಶೆಗಳಿಗೆ ಮುಕ್ತ ಸ್ವಾಗತವಿದೆ.

ನಮಸ್ಕಾರ,
ರವಿ...

Feb 27, 2008

ಸ್ವತಂತ್ರ, ನಿರಂಕುಶಮತಿಗಳು...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮಾರ್ಚ್ 7, 2008 ರ ಸಂಚಿಕೆಯಲ್ಲಿನ ಲೇಖನ)

ಇತಿಹಾಸದಲ್ಲಿ ದಾಖಲಾದ ಅತಿದೊಡ್ಡ ಅಮಾನುಷ ಕೃತ್ಯಗಳಲ್ಲಿ ಹಾಲೊಕಾಸ್ಟ್ (ನರಮೇಧ) ಒಂದು. ದೇಶದೇಶಗಳ ನಡುವೆ ಯುದ್ಧಗಳಾಗಿವೆ. ಕ್ರೈಸ್ತ ಮತ್ತು ಮುಸಲ್ಮಾನ ಮತೀಯರ ನಡುವೆ ಜೆರೊಸಲೆಮ್ ಅನ್ನು ವಶಪಡಿಸಿಕೊಳ್ಳುವುದಕ್ಕೋಸ್ಕರ ಎರಡು ಶತಮಾನಗಳ ಕಾಲ ನಿರಂತರ ಕ್ರುಸೇಡ್ ಕದನಗಳಾಗಿವೆ. ಲಕ್ಷಲಕ್ಷ ಜನ ನೆಪೊಲಿಯನ್ನನ ಕಾಲದಲ್ಲಿ ಯುದ್ಧದಿಂದ ಸತ್ತಿದ್ದಾರೆ. ಆದರೆ, ಒಂದು ಮತಕ್ಕೆ ಸೇರಿದ ಇಡೀ ಜನಾಂಗವನ್ನು ತೊಡೆದುಹಾಕಲು ಇಷ್ಟು ವ್ಯವಸ್ಥಿತವಾಗಿ, ಕ್ರೂರವಾಗಿ ಈ ಮಟ್ಟದಲ್ಲಿ ಯಾರೂ ತೊಡಗಿಕೊಂಡಿರಲಿಲ್ಲ. ಜರ್ಮನಿಯ ಹಿಟ್ಲರ್ ತನ್ನ ಸೈನ್ಯ ನುಗ್ಗಿದ ಯೂರೋಪಿನ ಪ್ರತಿ ದೇಶದಲ್ಲಿ ಯಹೂದಿಗಳನ್ನು ಕಾನ್ಸಂಟ್ರೇಷನ್ ಕ್ಯಾಂಪ್‌ಗಳಲ್ಲಿಟ್ಟು, ಹೆಣ್ಣುಗಂಡು, ಹಿರಿಕಿರಿಯರೆನ್ನದೆ ಎಲ್ಲರನ್ನೂ ಕೋಣೆಗಳಲ್ಲಿ ಬೆತ್ತಲೆ ಕೂಡಿಹಾಕಿ ವಿಷಾನಿಲ ಬಿಟ್ಟು ಕೊಂದ. ಅವನ ಸೇನಾಧಿಕಾರಿಗಳು ಇದನ್ನು ಬಹಳ ವ್ಯವಸ್ಥಿತವಾಗಿ ತಾವು ಹೋದಲ್ಲೆಲ್ಲ ಮಾಡಿದರು. ಕೇವಲ ನಾಲ್ಕೈದು ವರ್ಷಗಳಲ್ಲಿ ಜರ್ಮನಿ, ಆಸ್ಟ್ರಿಯ, ಪೋಲೆಂಡ್, ಲ್ಯಾಟ್ವಿಯ, ಲಿಥುವೇನಿಯ, ಜೆಕೊಸ್ಲೊವಾಕಿಯ, ಗ್ರೀಸ್, ಹಾಲೆಂಡ್, ಯುಗೊಸ್ಲಾವಿಯಮ್ ರೊಮೇನಿಯ, ಫ್ರಾನ್ಸ್, ಸೇರಿದಂತೆ ಯೂರೋಪಿನಾದ್ಯಂತ ಸುಮಾರು 50-60 ಲಕ್ಷ ಯಹೂದಿಗಳನ್ನು ಮಾರಣಹೋಮ ಮಾಡಿಬಿಟ್ಟರು.

1991 ರಲ್ಲಿ ರಾಡ್ನಿ ಕಿಂಗ್ ಎನ್ನುವ ಕರಿಯನೊಬ್ಬ ಅಮೆರಿಕದ ಎರಡನೆ ಅತಿದೊಡ್ಡ ನಗರವಾದ ಲಾಸ್ ಏಂಜಲಿಸ್‌ನಲ್ಲಿ ಮಿತಿಗಿಂತ ವೇಗವಾಗಿ ಕಾರನ್ನು ಓಡಿಸಿಕೊಂಡು ಹೋಗುತ್ತಿದ್ದಾಗ ಪೋಲಿಸರಿಗೆ ಸಿಕ್ಕಿಬೀಳುತ್ತಾನೆ. ಪೋಲಿಸರು ಅವನನ್ನು ಅರೆಸ್ಟ್ ಮಾಡಲು ಹೋದರೆ ಅದನ್ನವನು ದೈಹಿಕವಾಗಿ ಪ್ರತಿಭಟಿಸುತ್ತಾನೆ. ಪರಿಸ್ಥಿತಿ ಕೈಮೀರಿ ಹೋಗುತ್ತದೆ. ಒಂದೆರಡು ನಿಮಿಷಗಳಲ್ಲಿ ನಾಲ್ವರು ಬಿಳಿಯ ಪೋಲಿಸ್ ಆಫಿಸರ್‌ಗಳು ರಾಡ್ನಿಯನ್ನು ಹಿಡಿದುಕೊಂಡು ಕೈಯ್ಯಿಂದ, ಬೆತ್ತದಿಂದ ಬಡಿಯಲು ಆರಂಭಿಸಿಬಿಡುತ್ತಾರೆ. ನೆಲಕ್ಕೆ ಬಿದ್ದವನನ್ನು ಕಾಲಿನಿಂದ ಒದೆಯುತ್ತಾರೆ. ಇದೆಲ್ಲ ಆಗುವಾಗ ಇತರೆ ನಾಲ್ಕೈದು ಪೋಲಿಸ್ ಆಫಿಸರ್‌ಗಳು ಸುಮ್ಮನೆ ನೋಡುತ್ತ ನಿಂತಿರುತ್ತಾರೆ. ಬಿಳಿಯ ಪೋಲಿಸರು ಒಬ್ಬ ಕರಿಯನನ್ನು ಹೀಗೆ ಹಿಗ್ಗಾಮುಗ್ಗಾ ಚಚ್ಚುತ್ತಿರುವುದು ಆ ಮಧ್ಯರಾತ್ರಿಯಲ್ಲೂ ಎಷ್ಟೊಂದು ಗಲಾಟೆ ಸೃಷ್ಟಿಸಿತೆಂದರೆ ಅದು ಅಕ್ಕಪಕ್ಕದ ಅಪಾರ್ಟ್‌ಮೆಂಟಿನವರನ್ನೆಲ್ಲ ಎಬ್ಬಿಸಿಬಿಡುತ್ತದೆ. ಹಾಗೆ ಎದ್ದು ಹೊರಗೆ ನೋಡಿದ ಒಬ್ಬಾತ ತಕ್ಷಣ ಹೋಗಿ ತನ್ನ ವಿಡಿಯೊ ಕ್ಯಾಮೆರ ತಂದು ತನ್ನ ಅಪಾರ್ಟ್‌ಮೆಂಟಿನ ಕಿಟಕಿಯಿಂದ ಅದನ್ನು ರೆಕಾರ್ಡ್ ಮಾಡಿಕೊಳ್ಳುತ್ತಾನೆ. ನಂತರ ಆತ ಆ ವಿಡಿಯೊವನ್ನು ಸ್ಥಳೀಯ ಟಿವಿ ಸ್ಟೇಷನ್ ಒಂದಕ್ಕೆ ತಲುಪಿಸುತ್ತಾನೆ. ಅಮೆರಿಕದಾದ್ಯಂತ ಅದು ಕರಿಯರ ಮೇಲೆ ಬಿಳಿಯರ ಜನಾಂಗೀಯದ್ವೇಷ ಮತ್ತು ದೌರ್ಜನ್ಯ ಎಂದು ಭಾರೀ ಸುದ್ದಿಯಾಗುತ್ತದೆ.

ಇದರಿಂದಾಗಿ ಲಾಸ್ ಏಂಜಲಿಸ್‌ನ ಜಿಲ್ಲಾ ಕಾನೂನು ಇಲಾಖೆ ಆ ಬಿಳಿಯ ಪೋಲಿಸರ ಮೇಲೆ ಕೇಸು ಹಾಕುತ್ತದೆ. ಲಾಸ್ ಏಂಜಲಿಸ್‌ನ ಕಪ್ಪು ಜನಾಂಗದವರಲ್ಲಿ ನಿರುದ್ಯೋಗ, ಬಡತನ, ಅಸಹನೆ, ಗ್ಯಾಂಗ್ ಹಿಂಸಾಚಾರಗಳು ಮತ್ತು ಬಿಳಿಯ-ಕರಿಯ-ಲ್ಯಾಟಿನ್-ಏಷ್ಯನ್ ಮೂಲದ ಜನರ ನಡುವೆ ಜನಾಂಗೀಯ ದ್ವೇಷ Los Angeles Riotಹೆಚ್ಚಿಗೆ ಇದ್ದ ಸಮಯ ಅದು. ಇಂತಹ ಸಮಯದಲ್ಲಿ ಕೋರ್ಟು ಈ ಕೇಸಿನಲ್ಲಿ ಪೋಲಿಸರದೇನೂ ತಪ್ಪಿಲ್ಲ ಎಂದು ತೀರ್ಪು ಕೊಟ್ಟುಬಿಡುತ್ತದೆ. ಹಾಗೆ ತೀರ್ಪು ಕೊಟ್ಟ ಜ್ಯೂರಿ ಮಂಡಳಿಯ 12 ಜನರಲ್ಲಿ ಹತ್ತು ಜನ ಬಿಳಿಯರು, ಒಬ್ಬ ಲ್ಯಾಟಿನ್ ಮೂಲದವ, ಮತ್ತೊಬ್ಬ ಏಷ್ಯನ್. ಒಬ್ಬನೂ ಕರಿಯನಿರಲಿಲ್ಲ. ಇದೆಲ್ಲವನ್ನೂ ಗಮನಿಸಿದ ಕಪ್ಪು ಜನರು ರೊಚ್ಚಿಗೆದ್ದು ಬಿಡುತ್ತಾರೆ. 1992 ರ ಏಪ್ರಿಲ್ 29 ಅದು. 3 ಗಂಟೆಗೆ ತೀರ್ಪು ಬಂದಿದ್ದು. ಸಾಯಂಕಾಲಕ್ಕೆಲ್ಲ ಇಡೀ ನಗರದಲ್ಲಿ ಗಲಭೆ, ದೊಂಬಿ, ಹಿಂಸಾಚಾರ ಶುರುವಾಗಿಬಿಡುತ್ತದೆ. ಕರಿಯರ ಹಿಂಸೆಗೆ ಪ್ರತಿಯಾಗಿ ಇನ್ನಿತರರೂ ಸಶಸ್ತ್ರ ಪ್ರತಿರೋಧ ಆರಂಭಿಸಿಬಿಡುತ್ತಾರೆ. ಮಾರನೆ ದಿನದಿಂದಲೆ ಕರ್ಪ್ಯೂ ಜಾರಿ ಮಾಡಲಾಗುತ್ತದೆ. ಆರು ದಿನಗಳ ನಂತರ ಪರಿಸ್ಥಿತಿ ತಹಬಂದಿಗೆ ಬರುತ್ತದೆ. ಅಷ್ಟರಲ್ಲಿ 52 ಜನ ಹಿಂಸಾಚಾರಕ್ಕೆ ಬಲಿಯಾಗಿರುತ್ತಾರೆ. ಇದಾದ ನಂತರವೂ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಸುಧಾರಿಸುವುದಿಲ್ಲ. ಕೇವಲ 4 ಲಕ್ಷ ಜನಸಂಖ್ಯೆಯ ಲಾಂಗ್ ಬೀಚ್ ನಗರದ ಕರಿಯ-ಲ್ಯಾಟಿನ್-ಏಷ್ಯನ್ ಮಧ್ಯದ ಗ್ಯಾಂಗ್‌ವಾರ್‌ಗಳಿಗೆ ಒಂದೇ ತಿಂಗಳಿನಲ್ಲಿ 120 ಜನ ಬಲಿಯಾಗುತ್ತಾರೆ. ಮುಂದೆ ಹಲವಾರು ವರ್ಷಗಳ ಕಾಲ ಈ ಜನಾಂಗೀಯ ದ್ವೇಷ ಮುಂದುವರಿಯುತ್ತದೆ.

ಈ ಹಿಂಸಾಚಾರ ಆದ ಎರಡು ವರ್ಷಗಳ ನಂತರ ಎರಿನ್ ಗ್ರುವೆಲ್ ಎಂಬ 25 ವರ್ಷದ ಯುವತಿ ಲಾಂಗ್ ಬೀಚಿನ ಹೈಸ್ಕೂಲ್ ಒಂದಕ್ಕೆ ಅಧ್ಯಾಪಕಿಯಾಗಿ ಬರುತ್ತಾಳೆ. ಶಾಲೆಯ ಆಡಳಿತವರ್ಗ "unteachable" ಎಂದು ತೀರ್ಮಾನಿಸಿಬಿಟ್ಟಿದ್ದ ತರಗತಿಯೊಂದರ ಉಸ್ತುವಾರಿಯನ್ನು ಆಕೆಗೆ ಕೊಡಲಾಗುತ್ತದೆ. ಆ ತರಗತಿಯ 15-16 ವರ್ಷದ ಹುಡುಗಹುಡುಗಿಯರೆಲ್ಲ ಒಂದಲ್ಲ ಒಂದು ವಿಧದಲ್ಲಿ ಹಿಂಸಾಚಾರ ಕಂಡಿದ್ದವರು, ಅನುಭವಿಸಿದ್ದವರು. ಕೆಲವರಂತೂ ತಮ್ಮ ಮನೆಯವರನ್ನೆ ಗ್ಯಾಂಗ್ ಹಿಂಸಾಚಾರದಲ್ಲಿ ಕಳೆದುಕೊಂಡಿದ್ದವರು. ಬಹಳಷ್ಟು ವಿದ್ಯಾರ್ಥಿಗಳು ಇಡೀ ಸಮಾಜದ ಬಗ್ಗೆ ನಂಬಿಕೆ ಮತ್ತು ವಿಶ್ವಾಸವನ್ನು ಕಳೆದುಕೊಂಡು, ತಮ್ಮ ಬಣ್ಣದ, ತಮ್ಮ ಜನಾಂಗದ ಗ್ಯಾಂಗ್‌ಗಳಲ್ಲಿ ಗುರುತಿಸಿಕೊಂಡು ಏನೋ ಒಂದು ನೆಮ್ಮದಿ ಕಾಣುತ್ತಿದ್ದವರು. ಬಿಳಿಯರಿಗೆ ಎಲ್ಲವೂ ಸುಲಭ ಎಂದು ಭಾವಿಸಿದ್ದ ಅವರು ತಮ್ಮತಮ್ಮ ಗುಂಪುಗಳ ನಡುವೆ ತರಗತಿಯಲ್ಲಿ ಅಕ್ಷರಶಃ ಗಡಿ ನಿರ್ಮಿಸಿಕೊಂಡಿದ್ದವರು. ಒಂದಷ್ಟು ವಿದ್ಯಾರ್ಥಿಗಳು ಬಾಲಾಪರಾಧಿಗಳ ಜೈಲಿನಲ್ಲಿ ಇದ್ದು ಬಂದವರು. ಅಂತಹ ತರಗತಿಗೆ ಆದರ್ಶಗಳ ಕನಸು ಹೊತ್ತ ಬಿಳಿಯ ಯುವತಿ ಎರಿನ್ ಗ್ರುವೆಲ್ ಅಧ್ಯಾಪಕಿಯಾಗಿ ಬರುತ್ತಾಳೆ.

ಸ್ವಲ್ಪವೂ ಸಹಕಾರ ಕೊಡದ ವಿದ್ಯಾರ್ಥಿಗಳ ಜೊತೆ ಎರಿನ್ ಬಹಳ ಕಷ್ಟದಿಂದ, ಆದರೆ ಆಶಾವಾದದಿಂದ ಏಗುತ್ತಾ ಹೋಗುತ್ತಾಳೆ. ವಿದ್ಯಾರ್ಥಿಗಳು ಆಕೆಯಲ್ಲಿ ವಿಶ್ವಾಸ ತೋರುವುದಿಲ್ಲ. ಒಂದಲ್ಲ ಒಂದು ತರಲೆ ಮಾಡುತ್ತ ಆಕೆಯ ತಾಳ್ಮೆಯನ್ನು ಪರೀಕ್ಷಿಸುತ್ತ ಹೋಗುತ್ತಾರೆ. ಒಮ್ಮೆ ಆಕೆ ಪಾಠ ಮಾಡುತ್ತಿದ್ದಾಗ ಇಡೀ ತರಗತಿ ಮುಸುಮುಸನೆ, ಅಪಹಾಸ್ಯದ ನಗು ನಗಲು ಆರಂಭಿಸಿಬಿಡುತ್ತದೆ. ಎರಿನ್ ಏನೆಂದು ಗಮನಿಸಿದರೆ ತರಗತಿಯಲ್ಲಿನ ಒಬ್ಬ ಕಪ್ಪು ಹುಡುಗ ಕೈಯ್ಯಲ್ಲಿ ಒಂದು ಹಾಳೆ ಹಿಡಿದು ತಲೆಬಗ್ಗಿಸಿಕೊಂಡು ಬಿಕ್ಕುತ್ತಿರುವುದು ಕಾಣಿಸುತ್ತದೆ. ಎರಿನ್ ಆ ಹಾಳೆ ತೆಗೆದುಕೊಂಡು ನೋಡುತ್ತಾಳೆ. ಅದು, ಆ ಹುಡುಗನನ್ನು ಅಪಹಾಸ್ಯ ಮಾಡಿ ಸಹಪಾಠಿಯೊಬ್ಬ ಬರೆದಿದ್ದ ವ್ಯಂಗ್ಯಚಿತ್ರ. ಅದರಲ್ಲಿ ಆ ಕಪ್ಪುಹುಡುಗನ ದಪ್ಪತುಟಿಗಳನ್ನು ಎತ್ತಿತೋರಿಸಲಾಗಿರುತ್ತದೆ.

ಎರಡನೆ ವಿಶ್ವಯುದ್ಧದ ಸಮಯದಲ್ಲಿ ಹಿಟ್ಲರ್‌ನ ನಾಟ್ಜಿಗಳು ಯಹೂದಿಗಳನ್ನು ಮತ್ತು ಕರಿಯರನ್ನು ತುಂಬಾ ಕೀಳುಜನಾಂಗದವರು ಎಂಬಂತೆ ತಮ್ಮ ಪ್ರಚಾರ ಸಾಮಗ್ರ್ರಿಗಳಲ್ಲಿ ಸಾರುತ್ತಿದ್ದರು. ಅವುಗಳಲ್ಲಿ ಯಹೂದಿಗಳನ್ನು ದಪ್ಪ, ಇಲಿ ರೂಪದ ಮೂಗನ್ನು ಹೊಂದಿರುವವರು ಎನ್ನುವಂತೆ ವ್ಯಂಗ್ಯಚಿತ್ರಗಳ ಮೂಲಕ ಚಿತ್ರಿಸುತ್ತಿದ್ದರು. ಕರಿಯರನ್ನು ಅವರಲ್ಲಿ ಎದ್ದುಕಾಣುವ ದಪ್ಪತುಟಿಗಳ ಮೂಲಕ ಚಿತ್ರಿಸುತ್ತಿದ್ದರು. ತನ್ನ ತರಗತಿಯ ವಿದ್ಯಾರ್ಥಿಯೊಬ್ಬ ಇನ್ನೊಬ್ಬನನ್ನು ಇದೆ ತರಹ ಚಿತ್ರಿಸಿರುವುದನ್ನು ನೋಡಿದ ಎರಿನ್, ಇತಿಹಾಸದ ಅತಿದೊಡ್ಡ ಗ್ಯಾಂಗ್ ಆದ, ದೇಶದೇಶಗಳನ್ನೆ ಹತೋಟಿಗೆ ತೆಗೆದುಕೊಂಡು, ಒಂದಿಡೀ ಜನಾಂಗವನ್ನು ನಿರ್ನಾಮ ಮಾಡುವ ಪೈಶಾಚಿಕ ಕೃತ್ಯ ಹಾಲೊಕಾಸ್ಟ್‌ಗೆ ಕಾರಣವಾದ ನಾಟ್ಜಿಗಳೂ ಹೀಗೆಯೆ ಚಿತ್ರಿಸುತ್ತಿದ್ದರು ಎಂದು ಹೇಳಿದಳು. ಹಾಗೆ ಹೇಳುತ್ತ, ನಿಮ್ಮಲ್ಲಿ ಎಷ್ಟು ಜನಕ್ಕೆ ಹಾಲೊಕಾಸ್ಟ್ ಬಗ್ಗೆ ಗೊತ್ತಿದೆ ಎಂದು ಕೇಳಿದಳು. ಒಬ್ಬನೇ ಒಬ್ಬ ಕೈಎತ್ತುತ್ತಾನೆ.

ಅಲ್ಲಿಂದ ಮುಂದಿನ ದಿನಗಳಲ್ಲಿ ಗುರುಶಿಷ್ಯರ ಸಂಬಂಧವೆ ಬದಲಾಗಿಬಿಡುತ್ತದೆ. ಮಾರಣಹೋಮದ ಬಗ್ಗೆ ಹೇಳುತ್ತ, ತರಗತಿಯಲ್ಲಿನ ಹುಡುಗಹುಡುಗಿಯರಿಗೆ ಪ್ರಸ್ತುತವಾದ ಜನಾಂಗೀಯ ದ್ವೇಷ, ಗ್ಯಾಂಗ್‌ವಾರ್, ಮಾದಕದ್ರವ್ಯಗಳು, ಅವರ ನೆರೆಹೊರೆಯ ಸಮಾಜದಲ್ಲಿ ಕರಿಯನಾಗಿರುವದರ ಕಷ್ಟ, ಲ್ಯಾಟಿನ್ ಆಗಿರುವುದರ ಕಷ್ಟ, ಏಷ್ಯನ್ ಆಗಿರುವುದರ ಕಷ್ಟ, ಬಡತನದ ಕಷ್ಟ, ಮುಂತಾದ ಸಮಸ್ಯೆಗಳ ಬಗ್ಗೆ ಮಾತನಾಡಲು, ಚರ್ಚಿಸಲು ಆರಂಭಿಸುತ್ತಾಳೆ ಎರಿನ್. ಇಡೀ ತರಗತಿಯನ್ನು ತನ್ನ ದುಡ್ಡಿನಲ್ಲಿ ಹಾಲೊಕಾಸ್ಟ್ ಮೇಲಿನ ಮ್ಯೂಸಿಯಮ್ಮುಗಳಿಗೆ, "ಶಿಂಡ್ಲರ್ಸ್ ಲಿಸ್ಟ್" ಸಿನೆಮಾಗೆ ಕರೆದುಕೊಂಡು ಹೋಗುತ್ತಾಳೆ. ಅದಕ್ಕಾಗಿ ದುಡ್ಡುಹೊಂದಿಸಲು ಬೇರೆಬೇರೆ ಕಡೆ ಎರಡನೆ ನೌಕರಿ ಸಹ ಮಾಡುತ್ತಾಳೆ. ಇವಳ ಈ ಆದರ್ಶವನ್ನು ಮೊದಲೆಲ್ಲ ಬೆಂಬಲಿಸಿ ಸಹಾನುಭೂತಿ ತೋರಿಸುತ್ತಿದ್ದ ಗಂಡ ಕೊನೆಗೆ ಅವಳನ್ನು ವಿಚ್ಚೇದಿಸಿಬಿಡುತ್ತಾನೆ. ಆದರೂ ಎರಿನ್ ಗ್ರುವೆಲ್ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತ, ಅವರು ಚೆನ್ನಾಗಿ ಓದುವಂತೆ, ಸ್ವತಂತ್ರವಾಗಿ ಯೋಚಿಸುವಂತೆ ಮಾಡುತ್ತಾ ಹೋಗುತ್ತಾಳೆ. ಮಾರಣಹೋಮದಲ್ಲಿ ಬದುಕುಳಿದವರ ಮತ್ತು ಆ ಕಷ್ಟದ ಸಮಯದಲ್ಲಿಯೂ ಯಹೂದಿಗಳಿಗೆ ಸಹಾಯ ಮಾಡಿದವರ ಪುಸ್ತಕಗಳನ್ನು ಓದಲು ಕೊಡುತ್ತಾಳೆ.

ಇದೇ ಸಮಯದಲ್ಲಿ ಆ ವಿದ್ಯಾರ್ಥಿಗಳಿಗೆಲ್ಲ ಅವರ ಪ್ರತಿದಿನದ ಜೀವನಹೋರಾಟದ ಬಗ್ಗೆ, ಸಮಸ್ಯೆಗಳ ಬಗ್ಗೆ, ತಮ್ಮ ನೆನಪುಗಳ ಬಗ್ಗೆ ಡೈರಿ ಬರೆಯಲು ಹೇಳುತ್ತಾಳೆ. ನಿಧಾನವಾಗಿ ಎಲ್ಲರೂ ಬರೆಯುತ್ತ ಹೋಗುತ್ತಾರೆ. ಆ ಬರಹದಲ್ಲಿ ತಮ್ಮನ್ನೆ ತಾವು ಹುಡುಕಿಕೊಳ್ಳುತ್ತ, ಸಹಿಷ್ಣುಗಳಾಗುತ್ತ, ಆಶಾವಾದಿಗಳಾಗುತ್ತ, ತಮ್ಮತಮ್ಮ ಕೃತ್ಯಗಳಿಗೆ ತಾವೆ ಜವಾಬ್ದಾರರಾಗುತ್ತ ಹೋಗುತ್ತಾರೆ. ಈ ಎಲ್ಲದರಿಂದಾಗಿ ಕೊನೆಕೊನೆಗೆ ಇಡೀ ತರಗತಿ ಪರೀಕ್ಷೆಗಳಲ್ಲಿಯೂ ಚೆನ್ನಾಗಿ ಮಾಡುತ್ತ ಅತ್ಯುತ್ತಮ ವಿದ್ಯಾರ್ಥಿಗಳ ತರಗತಿಯಾಗಿ ಬದಲಾಗಿಬಿಡುತ್ತದೆ. ಅಮೆರಿಕದ ಕರಿಯರ ನಾಗರಿಕ ಹಕ್ಕುಗಳ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ "Freedom Riders" ನ ನೆನಪಿನಲ್ಲಿ ತಮ್ಮನ್ನು ತಾವು "Freedom Writers" ಎಂದು ಕರೆದುಕೊಳ್ಳುತಾರೆ. ಅವರ ಮತ್ತು ತನ್ನ ಈ ಅನುಭವವನ್ನು 1999 ರಲ್ಲಿ ಎರಿನ್ ಗ್ರುವೆಲ್ "The Freedom Writers Diary" ಎಂಬ ಪುಸ್ತಕ ಬರೆಯುತ್ತಾಳೆ. ಕಳೆದ ವರ್ಷ ಇದು ಸಿನೆಮಾ ಕೂಡ ಆಗಿದೆ.

--- X ---


ಸಂಸ್ಕಾರದ ಬಗೆಗಿನ ಕೆಲವು ಮಡಿವಂತ ಅಧ್ಯಾಪಕರ ಇತ್ತೀಚಿನ ವಿವಾದದ ಬಗ್ಗೆ ಯೋಚಿಸುತ್ತಿದ್ದಾಗ ಎರಿನ್ ಹೀಗೆ ನೆನಪಾದಳು. ಉತ್ತಮ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳನ್ನು ನಿರಂಕುಶಮತಿಗಳನ್ನಾಗಿ ಮಾಡಬೇಕು. ಆದರೆ ನಮ್ಮ ವ್ಯವಸ್ಥೆ ಇನ್ನೂ ನೋಟ್ಸ್ ಡಿಕ್ಟೇಟ್ ಮಾಡುತ್ತ, ನೂರಕ್ಕೆ 35 ಅಂಕಗಳನ್ನು ತೆಗೆದುಕೊಳ್ಳುವ ಬಗೆ ಹೇಗೆಂದು ಹೇಳಿಕೊಡುತ್ತಿದೆ. ಇನ್ನು ಕೆಲವು ಅಧ್ಯಾಪಕರಿಗೆ, ವಿಶೇಷವಾಗಿ ಕಾಲೇಜು ಅಧ್ಯಾಪಕರಿಗೆ ಪ್ರಪಂಚದ ಯಾವೊಂದು ವಿಷಯವೂ ಮುಖ್ಯವಲ್ಲ. ತಮ್ಮೂರಿನ ಯಾವೊಂದು ಜ್ವಲಂತ ಸಮಸ್ಯೆಯೂ ತರಗತಿಯಲ್ಲಿ ಚರ್ಚಿಸಲು ಅರ್ಹವಲ್ಲ. ಇವರ ಪರಮ ಕಾಳಜಿಗಳು, ಇಡೀ ವರ್ಷದಲ್ಲಿ ಯಾವುದೊ ಒಂದು ಪಿರಿಯಡ್‌ನಲ್ಲಿ ಮಾತ್ರ ಉಚ್ಚರಿಸಬೇಕಾದ "ಸ್ತನ", "ಸಂಭೋಗ" ದಂತಹ ಪದಗಳು. ಇದಿಷ್ಟನ್ನೆ ಗಮನಿಸಿದರೆ ಸಾಕು, ನಮ್ಮ ಅಧ್ಯಾಪಕರುಗಳೂ ಸಹ ಎಂತಹ ಗತಿಗೆಟ್ಟ ಶಿಕ್ಷಣ ವ್ಯವಸ್ಥೆಯ ಉತ್ಪನ್ನಗಳು ಎನ್ನುವುದು ಅರಿವಾಗುತ್ತದೆ.

ನಮ್ಮ ಶಾಲಾಕಾಲೇಜುಗಳಲ್ಲಿ, ವಿಶೇಷವಾಗಿ ಕಾಲೇಜುಗಳಲ್ಲಿ ಚರ್ಚಿಸಲೇಬೇಕಾದ ಅನೇಕ ವಿಷಯಗಳಿವೆ. ಜಾತಿವಾದ, ಕೋಮುವಾದ, ಶೋಷಣೆ, ಮೀಸಲಾತಿ, ಭಯೋತ್ಪಾದನೆ, ನಕ್ಸಲ್‌ವಾದ, ಜಾಗತೀಕರಣ, ರಾಷ್ಟ್ರೀಯತೆ ಯಂತಹ ಹಲವಾರು ಜ್ವಲಂತ ಆರ್ಥಿಕ-ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಸಮಸ್ಯೆಗಳಿವೆ. ಇವುಗಳನ್ನು ವಿದ್ಯಾರ್ಥಿಗಳಿಂದ ಮುಚ್ಚಿಡುತ್ತ ಹೋಗುತ್ತಿದ್ದೇವೆ. ಚರ್ಚಿಸುವುದನ್ನು ಮತ್ತು ಪ್ರಶ್ನೆ ಎತ್ತುವುದನ್ನು ಪ್ರೋತ್ಸಾಹಿಸದ ನಮ್ಮ ಫ್ಯೂಡಲ್ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳನ್ನು ಕೇಡಿಗರಿಗೆ ಗಾಳದಹುಳು ಮಾಡುತ್ತಿದೆ.

ನಮ್ಮಲ್ಲಿ ತತ್‌ಕ್ಷಣಕ್ಕೆ, ಅಮೂಲಾಗ್ರವಾಗಿ ಬದಲಾಗಬೇಕಾದ ಒಂದು ವ್ಯವಸ್ಥೆ ಇದ್ದರೆ ಅದು ಈ ಶಿಕ್ಷಣ ವ್ಯವಸ್ಥೆ ಮತ್ತು ಬೋಧನಾ ಕ್ರಮ. ಭಾರತದ ಸಮಾಜ ಅನಗತ್ಯ ಕಲ್ಪಿತ ಭಯಗಳನ್ನು ಮೀರಿ ಆರಂಭದಿಂದಲೆ ಮುಕ್ತವಾಗಿ ಚರ್ಚೆಯಲ್ಲಿ ತೊಡಗಿ ಕೊಳ್ಳಬೇಕಿದೆ. ಇಲ್ಲದಿದ್ದರೆ ಮೇಲಿನ ಸಮಸ್ಯೆಗಳಿಗೆ ಭೀಕರ ಅಗ್ನಿಪರ್ವತದ ಸ್ಫೋಟಕ ಶಕ್ತಿಯಿದೆ.

Feb 22, 2008

2006 ರಲ್ಲಿ ಬರೆದಿರುವ ಅಂಕಣ ಲೇಖನಗಳು ಹಾಗೂ ಅಡಿಗರ ನೆನಪು...

ಆನ್‍ಲೈನ್‌ನಲ್ಲಿ ಇಲ್ಲದಿರುವ ನನ್ನ ಇತರೆ ಲೇಖನಗಳನ್ನೆಲ್ಲ ಬ್ಲಾಗಿನಲ್ಲಿ ಇಲ್ಲವೆ ವೆಬ್‌ಸೈಟಿನಲ್ಲಿ ಹಾಕಬೇಕು ಎಂದು ಒಂದಷ್ಟು ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಆ ಪಟ್ಟಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚಿನ ಲೇಖನಗಳಿದ್ದವು. ನನ್ನ ಸುಮಾರು ಒಂದು ಒಂದು ವರ್ಷದ ಚಿಂತನೆ ಮತ್ತು ಚಿಂತೆಗಳ ಮೂರ್ತರೂಪ ಅವು. ಎಂದಿನಂತೆ ಯಾವುದೆ ಒಂದು ವಿಷಯಕ್ಕೆ ಸೀಮಿತಗೊಳಿಸಿಕೊಳ್ಳದೆ ಬರೆದಿರುವವು. 2006 ರ ಆಗಸ್ಟ್ ‍ನಿಂದ ಡಿಸೆಂಬರ್ 30 ರವರೆಗೆ ಬರೆದಿರುವ 21 ಲೇಖನಗಳನ್ನು ಈಗ ಬ್ಲಾಗಿಗೆ ಸೇರಿಸಿದ್ದೇನೆ. ಇದೇ ಅವಧಿಯಲ್ಲಿ ಬರೆದಿರುವ ಇತರೆ ಒಂದೆರಡು ಲೇಖನಗಳನ್ನು ಇನ್ನೂ ಸೇರಿಸಬೇಕು. ಹಾಗೆಯೆ 2007 ರ ಉತ್ತರಾರ್ಧದಲ್ಲಿ ಬರೆದಿರುವ ಲೇಖನಗಳನ್ನೂ ಮುಂದಿನ ದಿನಗಳಲ್ಲಿ ಸೇರಿಸಲಿದ್ದೇನೆ.

2006 ರಲ್ಲಿ ಬರೆದಿರುವ ಲೇಖನಗಳು (ಕಾಲಾನುಕ್ರಮಣದಲ್ಲಿ):


ಇವೆಲ್ಲ MS Word ಫೈಲುಗಳಲ್ಲಿ 'ಬರಹ' ಫಾರ್ಮ್ಯಾಟ್‍ನಲ್ಲಿ ಇದ್ದವು. ಇವನ್ನು ಯೂನಿಕೋಡ್‍ಗೆ ಪರಿವರ್ತಿಸುವಾಗ ಮಿ/ವಿ/ಯಿ/ಹಿ/ಷಿ ಯಂತಹ ಅಕ್ಷರಗಳು ನಾಪತ್ತೆಯಾಗುತ್ತಿದ್ದವು. ಏನೊ ನನ್ನ ಸೆಟ್ಟಿಂಗ್‌ ಸಮಸ್ಯೆ. ಆದಷ್ಟೂ ಬಹುಪಾಲನ್ನು ಸರಿಪಡಿಸಿದ್ದೇನೆ. ಆದರೂ ಅಲ್ಲಿ ಇಲಿ ಒಂದೊಂದು ತಪ್ಪು ಉಳಿದುಬಿಟ್ಟಿರಬಹುದು. ಕ್ಷಮೆ ಇರಲಿ. (ಆಸಕ್ತರು ಓದುವಾಗ ಈ ತಪ್ಪುಗಳನ್ನು ಕಂಡರೆ, ಅವನ್ನು ಎತ್ತಿ ತೋರಿಸಿದರೆ, ಭಾರಿ ಖುಷಿ ಸ್ವಾಮಿ!)

ಕೆಲವೊಂದು ಬರಹಗಳಿಗೆ (ಯಾರದೇ ಆಗಿರಲಿ) ಕಾಲದ ಹಂಗಿರುವುದಿಲ್ಲ. ನಾನು ಎಂದೋ ಬರೆದಿದ್ದ ಲೇಖನವನ್ನು ನೆನ್ನೆ ತಾನೆ ಓದಿ ಭಾರೀ ದು:ಖ ಮತ್ತು ಅಸಹನೆಗೊಂಡ ಓದುಗರೊಬ್ಬರು (lostman888) "ಶ್ಯಾನೇ ಪ್ರೀತಿಯಿಂದ" ಬರೆದ ಪತ್ರ ಇವತ್ತು ತಾನೆ ಬಂದಿದೆ. ಇಂತಹ ತತ್‍ಕ್ಷಣದ ಪ್ರತಿಕ್ರಿಯೆಗಳ ವಿಚಾರಕ್ಕೆ ಮತ್ತು ಆಕಸ್ಮಿಕ ಓದುಗಳ (ಅಂದರೆ ಎಲ್ಲೆಲ್ಲಿಂದಲೊ ಆರಂಭಿಸಿ ಎಲ್ಲೆಲ್ಲೊ ಹೋಗಿ ಮುಟ್ಟುವ) ವಿಷಯಕ್ಕೆ ಇಂಟರ್‍ನೆಟ್ ನಿಜಕ್ಕೂ ಕ್ರಾಂತಿ ಮಾಡಿದೆ. ಮುದ್ರಿತ ಪುಸ್ತಕಗಳ ವಿಚಾರದಲ್ಲಿ ನಮ್ಮ ಅಭಿರುಚಿಯದನ್ನೆ ಕೊಳ್ಳುತ್ತೇವೆ, ಓದುತ್ತೇವೆ. ಇಂಟರ್‍ನೆಟ್‍ನಲ್ಲಿನ ಬರಹಗಳಿಗೆ ಆ ಮಿತಿಯಿಲ್ಲ.

ಕನ್ನಡದ ಮಹತ್ವದ ಸಾಹಿತಿಗಳಲ್ಲಿ ಮತ್ತು ಚಿಂತಕರಲ್ಲಿ ಒಬ್ಬರಾದ ಗೋಪಾಲಕೃಷ್ಣ ಅಡಿಗರ ಸಾಹಿತ್ಯವನ್ನು ನಾನು ಓದಿಯೇ ಇಲ್ಲ ಅನ್ನಬೇಕು. ಕವನ ಮತ್ತು ಕಾವ್ಯ ಓದುವ ಅಭ್ಯಾಸವನ್ನು ಇಲ್ಲಿಯವರೆಗೆ ರೂಢಿಸಿಕೊಳ್ಳಲಾಗದೆ ಇರುವುದೆ ಅದಕ್ಕೆ ಮುಖ್ಯ ಕಾರಣ. ಆದರೆ ಅಡಿಗರು ಅನುವಾದಿಸಿರುವ "ಬನದ ಮಕ್ಕಳು" ನನ್ನ ಫೇವರೈಟ್‍ಗಳಲ್ಲಿ ಒಂದು. ಬಟಾಬಯಲಿನಲ್ಲಿ ಹಸುಗಳನ್ನು ಮೇಯಿಸುತ್ತ ಯಾವುದೊ ಒಂದು ಮರದ ಕೆಳಗೆ, ಕೆಲವೊಮ್ಮೆ ನಮ್ಮ ಗದ್ದೆಯ ದೊಡ್ಡಬದಿಯ ಹೊಂಗೆ ಮರಗಳ ಕೆಳಗೆ, ನಮ್ಮ ಹುಲ್ಲುಗಾವಲಿನಲ್ಲಿದ್ದ ಜಾಲಿಮರದ ಅರೆಬರೆ ನೆರಳು/ಬಿಸಿಲಿನ ಕೆಳಗೆ, ಇಲ್ಲವೆ ಬೆಳಿಗ್ಗೆ ಹತ್ತರ ಸುಮಾರಿನ ಎಳೆಬಿಸಿಲಿನಲ್ಲಿ ಹಸಿರು ಹುಲ್ಲಿನ ಮೇಲೆ ಟರ್ಕಿ ಟವೆಲ್ ಹಾಸಿಕೊಂಡು, ಬೋರಲು ಮಲಗಿಕೊಂಡು, ಇಂಗ್ಲೆಂಡಿನ ನವಬನದ ಮಕ್ಕಳ ಕತೆಯನ್ನು ನನ್ನ ಹೈಸ್ಕೂಲು ದಿನಗಳಲ್ಲಿ ಅನೇಕ ಸಲ (ಏಳೆಂಟು ಸಲವಾದರೂ) ಓದಿದ್ದೇನೆ. ಆ ಮುಗ್ಧತೆಯ ದಿನಗಳಲ್ಲಿ ಆ ಪುಸ್ತಕದಲ್ಲಿದ್ದ ಅಡಿಗರ ಅಡ್ರೆಸ್‌ಗೆ ಆ ಪುಸ್ತಕದ ಬಗ್ಗೆ ಒಂದು ಪತ್ರವನ್ನೂ ಬರೆದಿದ್ದೆ (ಬಹುಶಃ 1988-90 ರ ಸುಮಾರಿನಲ್ಲಿರಬೇಕು). ಅನೇಕ ಊರುಗಳಲ್ಲಿ ಅಧ್ಯಾಪನ ಮಾಡಿದ ಅಡಿಗರಿಗೆ ಆ ಪತ್ರ ತಲುಪಿರುವ ಸಾಧ್ಯತೆ ಬಹಳ ಕಮ್ಮಿ ಎನ್ನಿಸುತ್ತದೆ ಈಗ. ನಾನು ಲೇಖಕರೊಬ್ಬರಿಗೆ ಪೆನ್ನಿನಲ್ಲಿ ಬರೆದ ಮೊದಲ ಮತ್ತು ಕೊನೆಯ ಪತ್ರ ಇರಬೇಕು ಅದು!!

ಇವತ್ತು ಆ ಪುಸ್ತಕದ ಇಂಗ್ಲಿಷ್ ಮೂಲ ಗುಟೆನ್‍ಬರ್ಗ್ ನಲ್ಲಿ ಲಭ್ಯವಿದೆ. ಓದಬೇಕು ಎಂದು ಮನಸ್ಸು ಬಹಳ ತುಡಿಯುತ್ತದೆ. ಆದರೆ ಆ ತುಡಿತವನ್ನು ಅಮುಕಿಕೊಂಡು ಕನ್ನಡದ ಪುಸ್ತಕವನ್ನು ಏಳೆಂಟು ವರ್ಷಗಳಿಂದ ಹುಡುಕುತ್ತಿದ್ದೇನೆ. ಸಿಗುತ್ತಿಲ್ಲ.

ನಾನು ಯಾವಾಗಲೊ ಬರೆದ ಲೇಖನಕ್ಕೆ ಓದುಗನೊಬ್ಬ ಇವತ್ತು (ಕೋಪದ!) ಪ್ರತಿಕ್ರಿಯೆ ತೋರಿದ ಬಗ್ಗೆ ಯೊಚಿಸುತ್ತಿದ್ದಾಗ ಅಡಿಗರು ಎಂದೊ ಅನುವಾದಿಸಿದ ಪುಸ್ತಕವನ್ನು ಬೆಂಗಳೂರು ಪಕ್ಕದ ಹಳ್ಳಿಯ ಹುಡುಗ ಓದಿ ಅವರಿಗೆ ಪತ್ರ ಬರೆದದ್ದು ನೆನಪಾಯಿತು. ಈಗ ನೋಡಿದರೆ ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಆದರೆ ಆ ಸಮಯದಲ್ಲಿ ಮನಸ್ಸು ಎಲ್ಲೆಲ್ಲಿಂದ ಎಲ್ಲೆಲ್ಲಿಗೆ ಜಿಗಿಯುತ್ತ ಹೋಯಿತು ಎಂದು ನೋಡಿದರೆ ಆಶ್ಚರ್ಯವಾಗುತ್ತದೆ. ಹಾಗೆಯೆ, ಕೆಲವು ಬರವಣಿಗೆಗಳಿಗೆ ಮತ್ತು ಚಿಂತನೆಗಳಿಗೆ ಕಾಲದ ಮಿತಿಯಿರುವುದಿಲ್ಲ ಎನ್ನುವುದೂ ಅರಿವಾಗುತ್ತದೆ.

Feb 20, 2008

ಸಂಸ್ಕಾರ ಕಲಿಯದವರು ಮಾಡುವ ತಿಥಿ ಪಾಠ...

(ವಿಕ್ರಾಂತ ಕರ್ನಾಟಕ - ಫೆಬ್ರವರಿ 29, 2008 ರ ಸಂಚಿಕೆಯಲ್ಲಿನ ಬರಹ)

ಒಂದೆರಡು ವಾರದ ಹಿಂದೆ ಮಂಗಳೂರು ವಿಶ್ವವಿದ್ಯಾಲಯದ ಹಿಂದಿ ಭಾಷೆಯ ಬೃಹಸ್ಪತಿಗಳು ಕನ್ನಡದಿಂದ ಹಿಂದಿಗೆ ಅನುವಾದಗೊಂಡಿರುವ ಸಂಸ್ಕಾರ ಕಾದಂಬರಿಯನ್ನು ನಾನ್-ಡಿಟೈಲ್ಡ್ ಪಠ್ಯವಾಗಿ ತರಗತಿಯಲ್ಲಿ ಬೋಧಿಸಲು ಮುಜುಗರವಾಗುತ್ತದೆ ಎಂದು ತಕರಾರು ತೆಗೆದಿದ್ದರು. ಬಹುಶಃ ಆ ತಕರಾರಿಗೆ ಅನೇಕ ಆಯಾಮಗಳಿರಬಹುದು. ಆ ಎಲ್ಲಾ ಆಯಾಮಗಳ ಮಧ್ಯೆಯೂ ವಿಶ್ವವಿದ್ಯಾಲಯದ ಶಿಕ್ಷಣ ಮಂಡಳಿ ಆ ತಕರಾರನ್ನು ತಾತ್ಕಾಲಿಕವಾಗಿ ತಳ್ಳಿ ಹಾಕಿತು. ಆದರೆ, ಕರ್ನಾಟಕದ ಯಾವುದೆ ದಿನಪತ್ರಿಕೆಯಾಗಲಿ, ಯಾವೊಬ್ಬ ಶಿಕ್ಷಣ ತಜ್ಞರಾಗಲಿ, ಕೊನೆಗೆ ಯಾವೊಬ್ಬ ಪ್ರಮುಖ ಸಾಹಿತಿಯಾಗಲಿ ಆ ವಿಷಯದ ಮೂಲಕ್ಕೆ ಹೋಗಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾಗಲಿ, ಚರ್ಚಿಸಿದ್ದಾಗಲಿ ಇಲ್ಲಿಯವರೆಗೆ ಕಂಡುಬರಲಿಲ್ಲ. ನಾಡು ತನ್ನೆಲ್ಲ ಸೂಕ್ಷ್ಮತೆಗಳನ್ನು, ನಿಷ್ಠುರತೆಯನ್ನು, ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಒಂದು ಸ್ಪಷ್ಟ ಯೋಚನೆಯನ್ನು ಕಳೆದುಕೊಳುತ್ತಿರುವುದನ್ನು ಇಂತಹ ಹಲವಾರು ಘಟನೆಗಳು ಪ್ರತಿಪಾದಿಸುತ್ತವೆ. ಯಾವುದು ಪ್ರಮುಖವಾಗಿ ಚರ್ಚೆಯಾಗಬೇಕೊ ಅವು ಚರ್ಚೆಯಾಗುತ್ತಿಲ್ಲ. ಯಾವುದು ದೀರ್ಘ ಚರ್ಚೆಗೆ ಅನರ್ಹವೊ ಅವು ವಾರಗಟ್ಟಲೆ ಮುಖಪುಟದಲ್ಲಿ ರೋಚಕ ತಲೆಬರಹಗಳೊಂದಿಗೆ ಚರ್ಚೆಗೊಳಪಡುತ್ತಿವೆ.

ಈ ವಿವಾದದಲ್ಲಿ ನನಗನ್ನಿಸಿದ ಮಟ್ಟಿಗೆ ಇಡೀ ಕರ್ನಾಟಕದಲ್ಲಿ ಯಾವೊಬ್ಬ ಚಿಂತಕನೂ ಎತ್ತದ, ಯಾವುದೆ ಕನ್ನಡ ಪತ್ರಿಕೆಯಲ್ಲಿ ಪ್ರಸ್ತಾಪವಾಗದ ಪ್ರಶ್ನಾ-ಚಿಂತನೆಗಳನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿರುವ ಕನ್ನಡಿಗರೊಬ್ಬರು ಚುರುಮುರಿ.ಕಾಮ್ ಎಂಬ ಇಂಗ್ಲಿಷ್ ಬ್ಲಾಗಿನಲ್ಲಿ ವಾರದ ಹಿಂದೆಯೆ ಎತ್ತಿದ್ದಾರೆ. ಮೈಸೂರಿನ ಡಾ. ಪೃಥ್ವಿ ದತ್ತ ಚಂದ್ರ ಶೋಭಿ ನಮ್ಮ ಪತ್ರಿಕೆಯ ಓದುಗರಿಗೂ ಪರಿಚಿತರೆ. ಇವರ ತಂದೆ ಮತ್ತು ತಾಯಿ ಇಬ್ಬರೂ ಕಾಲೇಜು ಅಧ್ಯಾಪಕರು. ಇವರ ತಂದೆ ಎನ್. ಬೋರಲಿಂಗಯ್ಯನವರು ಮೈಸೂರಿನ ಯುವರಾಜ ಕಾಲೇಜಿನ ಪ್ರಿನ್ಸಿಪಾಲರಾಗಿ ನಿವೃತ್ತರಾದವರು. ಇವರ ತಾಯಿ ಶ್ರೀಮತಿ ಸರಸ್ವತಿ ಮೈಸೂರಿನ ಹಲವಾರು ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಬೋಧಿಸಿದವರು. ಪೃಥ್ವಿಯೂ ಚರಿತ್ರೆ, ಸಾಹಿತ್ಯ ಮತ್ತು ಮಾನವಿಕ ಶಾಸ್ತ್ರಗಳ ಅಧ್ಯಾಪಕರು. "ಸಂಸ್ಕಾರ ಒಂದು ಅತ್ಯುತ್ತಮ ಕಾದಂಬರಿಯಾಗಿದ್ದರೂ ವಿದ್ಯಾರ್ಥಿಗಳಿಗೆ ಅನುವಾದಿತ ಕೃತಿಯೊಂದನ್ನು ಹಿಂದಿ ಭಾಷೆಯ ಪಠ್ಯವಾಗಿ ಮಾಡುವ ದರ್ದು ಏನಿದೆ? ಶ್ರೀಲಾಲ್ ಶುಕ್ಲರಂತಹ ಹಿಂದಿ ಲೇಖಕರ ಪುಸ್ತಕವೊಂದನ್ನು ಪಠ್ಯವಾಗಿ ಇಟ್ಟಿದ್ದರೆ ಅದು ಹೆಚ್ಚು ವಿದ್ಯಾರ್ಥಿ ಪರವಾಗಿರುತ್ತಿತ್ತು," ಎನ್ನುವ ಪೃಥ್ವಿ ಮುಂದಕ್ಕೆ ಹೇಳುವ ಮಾತುಗಳು ನಮ್ಮ ಶೈಕ್ಷಣಿಕ ವ್ಯವಸ್ಥೆಯ ಮೂಲಸಮಸ್ಯೆಯತ್ತ ಬೆರಳು ತೋರುತ್ತದೆ.

"ನಮ್ಮ ಕಾಲೇಜು ಅಧ್ಯಾಪಕರು ಒಂದು ಕಾದಂಬರಿಯನ್ನು ಬೋಧಿಸುವ ವಿಧಾನದಿಂದಾಗಿಯೆ ಈ ವಿವಾದ ತಲೆಯೆತ್ತಿದೆ ಎಂದುಕೊಳ್ಳುತ್ತೇನೆ. ನಾನು ಇದನ್ನು ತಮಾಷೆಯಾಗಿ ಬರೆಯುತ್ತಿಲ್ಲ. ಏನೆಂದರೆ, ನಮ್ಮ ಬಹಳಷ್ಟು ಅಧ್ಯಾಪಕರು ಕಾದಂಬರಿಯ ಪ್ರತಿ ವಾಕ್ಯವನ್ನೂ ಓದುತ್ತಾರೆ ಮತ್ತು ಆ ವಾಕ್ಯವನ್ನು ವಿವರಿಸುತ್ತಾರೆ. ಕಾದಂಬರಿಯೊಂದನ್ನು ಈ ರೀತಿ ಬೋಧಿಸುತ್ತ ಸಮಯ ಕೊಂದುಬಿಡುತ್ತಾರೆ. ಹಾಗೆಯೆ ವಿದ್ಯಾರ್ಥಿಗಳೂ ಪರೀಕ್ಷೆಗೆ ಮುಂಚೆ ಏನನ್ನೂ ಓದುವುದಿಲ್ಲ. ಯಾವುದನ್ನೂ ಮೊದಲೆ ಓದಿಕೊಳ್ಳದೆ, ಪೂರ್ವಸಿದ್ಧತೆಯಿಲ್ಲದೆ ತರಗತಿಗೆ ಬರುತ್ತಾರಾದ್ದರಿಂದ ಚರ್ಚೆ ಮಾಡುವುದು ಅಸಾಧ್ಯವಾಗಿಬಿಡುತ್ತದೆ. ಭಾಷೆ ವಿಷಯಕ್ಕೆ ಯಾವುದೆ ಪ್ರಾಕ್ಟಿಕಲ್ಸ್ ಇಲ್ಲ ನೋಡಿ. ಹಾಗಾಗಿ ಏನೂ ಮಾಡದೆ ಅವರೂ ಬಚಾವಾಗಿಬಿಡಬಹುದು.

"ನಾನು ಸಂಸ್ಕಾರವನ್ನು ಬೋಧಿಸುವಾಗ ಆ ಕಾದಂಬರಿಯ ಮೇಲೆ ಅಬ್ಬಬ್ಬ ಎಂದರೆ 3-6 ಗಂಟೆ ಮಾತ್ರ ವ್ಯಯಿಸುತ್ತೇನೆ. ನನ್ನ ವಿದ್ಯಾರ್ಥಿಗಳು ಅದನ್ನು ಮೊದಲೆ ಓದಿರಬೇಕು. ಆಮೇಲೆ ಏನಿದ್ದರೂ ಅದರಲ್ಲಿರುವ ವಿಷಯಗಳ ಬಗ್ಗೆ ಚರ್ಚೆ ಮಾತ್ರ. ಹೌದು, ಆ ಚರ್ಚೆ ಪ್ರಾಣೇಶಾಚಾರ್ಯ ಮತ್ತು ಚಂದ್ರಿಯ ಸಂಬಂಧವನ್ನು ಕುರಿತೂ ಇರುತ್ತದೆ. ನಾನು ಗಂಡಸು ಎನ್ನುವ ವಿಷಯ ಮತ್ತು ನಾನು ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿದ್ದೇನೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ ಎನ್ನುವುದೇನೊ ನಿಜ. ಹಾಗೆಯೆ ಇಲ್ಲಿ ಎತ್ತಲಾಗಿರುವ ಕೆಲವು ತಕರಾರುಗಳೂ ನನಗೆ ಅರ್ಥವಾಗುತ್ತವೆ.

"ತನ್ನ ಕನ್ನಡ ಸಾಹಿತ್ಯದ ತರಗತಿಯಲ್ಲಿ ಶಭರಶಂಕರವಿಲಾಸ ಅಥವ ಭರತೇಶವೈಭವ ವನ್ನು ಪಾಠ ಮಾಡಬೇಕಾಗಿ ಬಂದಾಗ ನನ್ನಮ್ಮ ವ್ಯಕ್ತಪಡಿಸುತ್ತಿದ್ದ ಕೆಲವು ಅಭಿಪ್ರಾಯಗಳು ನನಗೆ ನೆನಪಾಗುತ್ತವೆ. ಅದನ್ನು ಪಾಠ ಮಾಡಬೇಕಾಗಿ ಬಂದಾಗಲೆಲ್ಲ ಅವರಿಗೆ ಮುಜುಗರವಾಗುತ್ತಿತ್ತು. ಆದರೆ ಆ ಪರಿಸ್ಥಿತಿಯಿಂದ ಹಿಮ್ಮೆಟ್ಟದೆ, ಈ ಪಠ್ಯದಿಂದ ವಿದ್ಯಾರ್ಥಿಗಳು ಮುಖ್ಯವಾಗಿ ಏನನ್ನು ಕಲಿಯಬೇಕಾಗಿದೆ ಎನ್ನುವುದರತ್ತ ತಮ್ಮ ಗಮನವನ್ನು ಅವರು ಕೇಂದ್ರೀಕರಿಸುತ್ತಿದ್ದರು.

"ಕನ್ನಡ ಕಾವ್ಯಗಳನ್ನು ಬೋಧಿಸಿರುವ ಯಾವುದೆ ಅಧ್ಯಾಪಕಿಯನ್ನು ಕೇಳಿನೋಡಿ. ಕನ್ನಡ ಕವಿಗಳ ಶೃಂಗಾರ ರಸದ ವರ್ಣನೆ ಬಹುಪಾಲು ಸಮಯದಲ್ಲಿ ಸ್ತ್ರೀಯೊಬ್ಬಳ ದೇಹದ ವಿಶದ ವರ್ಣನೆ, ಇಲ್ಲವೆ ನಾಯಕನ ಲೈಂಗಿಕ ವಿಜೃಂಭಣೆ, ಇಲ್ಲವೆ ಅದೇ ತರಹದ ಮತ್ತೇನೋ ಆಗಿರುತ್ತದೆ. ಕನ್ನಡದ ಕಾವ್ಯ ಬೋಧನೆಯ ಅಗತ್ಯಗಳಲ್ಲಿ ಒಂದಾದ ಕವಿಕಲ್ಪನೆ ಮತ್ತು ಕಾವ್ಯದಲ್ಲಿ ಶೃಂಗಾರ ಬರುವ ರೀತಿಯನ್ನು ಅಧ್ಯಾಪಕಿಯೊಬ್ಬಳು ತನ್ನ ತರಗತಿಯಲ್ಲಿ ಚರ್ಚಿಸಬೇಕಾದರೆ ಆ ಎಲ್ಲಾ ಅಶ್ಲೀಲ ಪದ್ಯಗಳ ಕುರಿತು ಮಾತನಾಡಿರಬೇಕಿರುತ್ತದೆ.

"ಈ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಹಿಂದಿ ಅಧ್ಯಾಪಕರು ತಮ್ಮ ಸಂಕೋಚಗಳಿಂದ ಹೊರಬರುವಂತೆ ಆಗ್ರಹಿಸಲು ನನಗೆ ಮನಸ್ಸು ಬಹಳ ತುಡಿಯುತ್ತದೆ. ಆದರೆ ಬದಲಿಗೆ ಆ ಅಧ್ಯಾಪಕರು ತಮ್ಮ ಬೋಧನಾಕ್ರಮದ ಬಗ್ಗೆಯೆ ಮರುಚಿಂತನೆ ಮಾಡಬೇಕಾಗಿದೆ ಎಂದು ಹೇಳಬಯಸುತ್ತೇನೆ. ಅವರು ತರಗತಿಯಲ್ಲಿ ಈ ಅಶ್ಲೀಲ ಭಾಗಗಳನ್ನು ವಾಕ್ಯವೂ ಬಿಡದಂತೆ ಓದುವುದು ಹೇಗೆ ಎಂದು ತಲೆಕೆಡಿಸಿಕೊಳ್ಳದೆ, ಆ ಪಠ್ಯದ ವಿಷಯ ಮತ್ತು ಅದರ ಉದ್ದೇಶಗಳ ಬಗ್ಗೆ ಗಮನ ಹರಿಸಬೇಕಿದೆ.

"ಈಗ ಆ ಕಾದಂಬರಿಯಲ್ಲಿರುವ ಅಶ್ಲೀಲತೆ, ಸ್ತನಗಳ ಕುರಿತಿರುವ ಉಲ್ಲೇಖಗಳು ಮತ್ತು ಲೈಂಗಿಕತೆಯ ಅತಿವಿವರಣೆಯ ಬಗ್ಗೆ ಸ್ವಲ್ಪ ಚರ್ಚೆ ಮಾಡೋಣ. ಅವು ಬಂದಿರುವ ಸಂದರ್ಭಗಳು ಯಾವುದು? ಹಲವಾರು ವಿಷಯಗಳನ್ನು ಪ್ರತಿಪಾದಿಸುವ ಸಂಸ್ಕಾರ ಅತಿಮುಖ್ಯವಾಗಿ ಎರಡು ವಿಷಯಗಳನ್ನು ಪ್ರತಿಪಾದಿಸುತ್ತದೆ: ಮೊದಲನೆಯದು, ಜಾತಿಗಳನ್ನು ಮೀರಿದ ಲೈಂಗಿಕ ಸಂಪರ್ಕ ಮಾತ್ರ ಜಾತೀಯತೆಯನ್ನು ಒಡೆಯುತ್ತದೆ ಮತ್ತು ಎರಡನೆಯದು, ಶೂದ್ರ ಸ್ತ್ರೀಯೊಬ್ಬಳು (ಈ ವಿಷಯದಲ್ಲಿ ಚಂದ್ರಿ) ಅಪಾರ ಚೈತನ್ಯದ ಲೌಕಿಕ ಜನಾಂಗವೊಂದನ್ನು ಪ್ರತಿನಿಧಿಸುತ್ತಾಳೆ.

"ಈ ಕಾದಂಬರಿಯಲ್ಲಿ ತನ್ನ ಸಮುದಾಯವನ್ನು ಕಟುವಾಗಿ ಚಿತ್ರಿಸಿರುವುದರ ಕುರಿತು ಮಾಧ್ವ ಸಮುದಾಯ ಮೊದಲಿನಿಂದಲೂ ಅಸಂತೋಷದಿಂದಿರುವುದು ನಿಜವಾದರೂ ನನಗನ್ನಿಸಿದ ಮಟ್ಟಿಗೆ ಅನಂತಮೂರ್ತಿಯವರ ಕ್ರಾಂತಿಕಾರಿ ಒಳನೋಟಗಳು ಅಂತರ್ಜಾತೀಯ (ಲೈಂಗಿಕ) ಸಂಬಂಧಗಳನ್ನು, ಅವು ವೈವಾಹಿಕವಾಗಿರಲಿ ಇಲ್ಲವೆ ಅವಿವಾಹಿತವಾಗಿರಲಿ, ಸಮರ್ಥನೀಯ ಮಾಡುವುದು ಮತ್ತು ಪ್ರತಿಷ್ಠಾಪನೆ ಮಾಡುವುದಾಗಿತ್ತು. ಪ್ರಾಣೇಶಾಚಾರ್ಯ-ಚಂದ್ರಿಯರ ಸಂಬಂಧವನ್ನು ಪ್ರಮುಖವಾಗಿ ಈ ಸಾಮಾಜಿಕ ಅಗತ್ಯದ ಹಿನ್ನೆಲೆಯಿಂದ ನೋಡಬೇಕಿದೆ.

"ಹಾಗಾಗಿ, ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಮೀರಿಹೋಗಲು ಈ ರೀತಿಯಿಂದ (ಕೇವಲ ಲೈಂಗಿಕ ಸಂಪರ್ಕಗಳು ಮಾತ್ರ ಜಾತಿ ಬೇಲಿಗಳನ್ನು ಮುರಿಯಬಲ್ಲವು) ಸಾಧ್ಯ ಎಂಬ ಅನಂತಮೂರ್ತಿಯವರ ವಾದವನ್ನು ಮುಂದಿಟ್ಟುಕೊಂಡು ಅನಂತಮೂರ್ತಿಯವರೊಡನೆ ನಾವು ಸಂವಾದ ಮಾಡುತ್ತಿಲ್ಲವಾದರೆ, ಇನ್ನೇನನ್ನು ನಾವು ನಮ್ಮ ಯುವಕರೊಡನೆ ತರಗತಿಗಳಲ್ಲಿ ಚರ್ಚೆ ಮಾಡಬಲ್ಲೆವೊ ನನಗೆ ಗೊತ್ತಾಗುತ್ತಿಲ್ಲ.

"ಮಂಗಳೂರು ವಿಶ್ವವಿದ್ಯಾಲಯದ ಹಿಂದಿ ಅಧ್ಯಾಪಕರು ಈ ವಿಷಯಗಳನ್ನು ತಮ್ಮ ತರಗತಿಗಳಲ್ಲಿ ಎತ್ತುತ್ತಿಲ್ಲವಾದರೆ, ಅವರಿಗೆ ಸಂಸ್ಕಾರ ದಲ್ಲಿ ಕಾಣಿಸುವುದೆಲ್ಲ ಲೈಂಗಿಕ ಕ್ರಿಯೆಗಳ ವಿವರಣೆಗಳು ಮಾತ್ರವಾದರೆ ಹಾಗೂ ಅವರ ಚಿಂತೆಯೆಲ್ಲ ಇಂತಹ ಅಧ್ಯಾಯಗಳನ್ನು ಹೇಗಪ್ಪಾ ಪಾಠ ಮಾಡುವುದು ಎನ್ನುವುದೇ ಆದರೆ, ಅವರು ಯಾವುದಾದರೂ ಬೇರೆಯೆ ತರಹದ ಉದ್ಯೋಗವನ್ನು ಹುಡುಕಿಕೊಳ್ಳಬೇಕು.

"ಸಂಸ್ಕಾರ ಎತ್ತುವ ಕೆಲವೊಂದು ವಿಷಯಗಳು ನಮ್ಮ ಕಾಲದ ಹಲವಾರು ಅತಿಮುಖ್ಯ ಪ್ರಶ್ನೆಗಳು. ಅವುಗಳ ಬಗ್ಗೆ ನಮ್ಮ ಅಭಿಪ್ರಾಯಗಳು ಏನೇ ಇರಲಿ, ಅವನ್ನು ನಾವು ಎತ್ತಬೇಕು ಮತ್ತು ನಮ್ಮ ತರಗತಿಗಳಲ್ಲಿ ಅವುಗಳ ಬಗ್ಗೆ ಚರ್ಚಿಸಬೇಕು. ಆ ಸಮಯದಲ್ಲಿ ಒಬ್ಬ ಅಧ್ಯಾಪಕ ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಂಡರೂ ಅಥವ ಬ್ರಾಹ್ಮಣ ಸ್ತ್ರೀಯರ ಬಗ್ಗೆ ಅಥವ ಮಾಧ್ವ ಸಮುದಾಯದ ಬಗ್ಗೆ ಅನಂತಮೂರ್ತಿಯವರ ಚಿತ್ರಣ ತಪ್ಪುತಪ್ಪಾಗಿದೆ ಎಂದು ಹೇಳಿದರೂ ನನಗದು ಮುಖ್ಯವಲ್ಲ. ಅದು ಖಂಡಿತವಾಗಿಯೂ ಸಮರ್ಥನೀಯವಾದದ್ದೆ. ಅದರೆ, ಈ ವಿಷಯಗಳನ್ನು 19-20 ವರ್ಷ ವಯಸ್ಸಿನ ಯುವಕಯುವತಿಯರ ಜೊತೆ ಭಾಷೆ ಮತ್ತು ಸಾಹಿತ್ಯದ ತರಗತಿಯಲ್ಲಿ ಚರ್ಚಿಸಲು ನಿರಾಕರಿಸುವುದನ್ನು ಮಾತ್ರ ಒಪ್ಪಿಕೊಳ್ಳಲಾಗದು. ಅದು ಆ ವಿದ್ಯಾರ್ಥಿಗಳಿಗೆ ಮಾಡುವ ಅಪಚಾರ ಮತ್ತು ಅವರ ಪ್ರಬುದ್ಧತೆ ಮತ್ತು ಸಾಮರ್ಥಗಳ ಕೀಳೆಣಿಕೆ ಮಾಡಿದಂತೆ.

"ಈ ವಿಷಯದಲ್ಲಿ ನನಗೆ ನೋವುಂಟು ಮಾಡುತ್ತಿರುವ ಸಂಗತಿ ಎಂದರೆ ಇಲ್ಲಿ ಎದ್ದು ಕಾಣಿಸುವ ಮಡಿವಂತಿಕೆ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಮತ್ತು ಇತರ ಅನೇಕ ಉತ್ತಮ ಕೃತಿಗಳಲ್ಲಿ ಕೂಡಾ ತಪ್ಪು ಹುಡುಕುವುದು ಇದೆ ಸಂಕುಚಿತ ಮನೋಭಾವ.

"What offends me is that we pick faltu fights over the real ones we ought to be concerned about. And this fight is as faltu as it gets."

---X---

ಈ ಪುಸ್ತಕವನ್ನು ಹಿಂದೆಗೆದುಕೊಳ್ಳಬಾರದು ಎನ್ನುವ ನಿರ್ಣಯ ಪ್ರಕಟಿಸಿರುವ ವಿಶ್ವವಿದ್ಯಾಲಯದ ಶಿಕ್ಷಣ ಮಂಡಳಿ ಇದ್ದುದರಲ್ಲಿ ಯೋಗ್ಯವಾದ ನಿರ್ಣಯವನ್ನೆ ತೆಗೆದುಕೊಂಡಿದೆ. ಆದರೆ ಹಾಗೆ ಹಿಂದೆಗೆದುಕೊಳ್ಳದೆ ಇರಲು ಆ ಮಂಡಳಿ ಕೊಟ್ಟಿರುವ ಒಂದು ಕಾರಣ, "ಈ ಹಂತದಲ್ಲಿ ಪುಸ್ತಕವನ್ನು ಹಿಂತೆಗೆದುಕೊಂಡರೆ ಅದರಿಂದ ಲೇಖಕರಿಗೆ ಅವಮಾನ ಮಾಡಿದಂತಾಗುತ್ತದೆ." ಎಂದು. ಇಂತಹ ಕಡುಪ್ರಾಮಾಣಿಕರನ್ನು ಪಡೆದ ನಾಡು ಧನ್ಯವಾಯಿತು! ಅಲ್ಲ, ಇವರ ನಿಷ್ಠೆ ಯಾರ ಕಡೆಗೆ ಇದೆ ನೋಡಿ. ವಿದ್ಯಾರ್ಥಿಗಳಿಗಾಗಲಿ, ಸಮಾಜಕ್ಕಾಗಲಿ, ಶಿಕ್ಷಣಕ್ಕಾಗಲಿ ಇವರ ನಿಷ್ಠೆ ಇಲ್ಲ. ಇವರ ನಿಷ್ಠೆ ಇರುವುದು ಲೇಖಕರಿಗೆ. ಒಂದು ಪ್ರಬುದ್ಧ ಸಮಾಜದಲ್ಲಿ, ಸತ್ಯದೊಡನೆ ಮುಖಾಮುಖಿಯಾಗಲು ಸಿದ್ಧವಿರುವ ವ್ಯವಸ್ಥೆಯಲ್ಲಿ ಒಬ್ಬ ಲೇಖಕನಿಗೆ ಈ ಮಾತಿಗಿಂತ ಬೇರೆಯ ಅವಮಾನ ಬೇರೊಂದು ಇರುವುದಿಲ್ಲ. ಇಂತಹ ಅನರ್ಹ ಶಿಕ್ಷಣ ಮಂಡಳಿಗಳು ಸಿದ್ಧಪಡಿಸುವ ಪಠ್ಯಗಳು ಮತ್ತು ಶಿಕ್ಷಣಕ್ರಮ ನಮ್ಮ ವಿದ್ಯೆ ಮತ್ತು ಚಿಂತನೆಯನ್ನು ಉದ್ದೀಪಿಸುವುದಿಲ್ಲ, ಬದಲಿಗೆ ನಮ್ಮನ್ನು ಪಾಳೆಯಗಾರಿಕೆ ಮತ್ತು ಕುರುಡು ಹಿಂಬಾಲಿಕೆಯತ್ತ ನಡೆಸುತ್ತದೆ.

ಲೇಖನದ ವಿಡಿಯೊ ಪ್ರಸ್ತುತಿ

ಸಂಸ್ಕಾರ ಎನ್ನುವ ಪದವನ್ನು ನಮ್ಮಲ್ಲಿ ಸಭ್ಯ, ನಾಗರಿಕ ವರ್ತನೆ ಅಥವ, ನಾಲ್ಕು ಜನರಿಗೆ ಅಪಚಾರ ಮಾಡದ, ಅಪಕಾರ ಮಾಡದ ನಡವಳಿಕೆ ಎನ್ನುವ ಅರ್ಥದಲ್ಲೂ ಬಳಸುತ್ತಾರೆ. ಹುಟ್ಟಿನ ಮೇಲೆ ಮನುಷ್ಯನ ಸಂಸ್ಕಾರವನ್ನು ಅಳೆಯಬಹುದು, ಹುಟ್ಟು ಮನುಷ್ಯನ ಸಂಸ್ಕಾರವನ್ನು ನಿರ್ಧರಿಸುತ್ತದೆ ಎನ್ನುವುದು ಹೀನಾಯ ಚಿಂತನೆ. ಮನುಷ್ಯ ತನ್ನ ಸುತ್ತಮುತ್ತಲ ಸಮಾಜದಿಂದ, ವ್ಯವಸ್ಥೆಯಿಂದ, ತಾನು ಬೆಳೆಸಿಕೊಳ್ಳುವ ಅರಿವಿನ ಪ್ರಭಾವದಿಂದ ತನ್ನ ಸಂಸ್ಕಾರವನ್ನು ಪಡೆಯುತ್ತಾನೆ. ಅಂದರೆ, ಸಂಸ್ಕಾರವನ್ನು ಕಲಿಯುತ್ತಾನೆ. ಇಂತಹ ಸಂಸ್ಕಾರವನ್ನು ಕಲಿತಿಲ್ಲದ ಕೆಲವು ಅಧ್ಯಾಪಕರು ಮಾಡುವ 'ಸಂಸ್ಕಾರ' ಕಾದಂಬರಿಯ ಪಾಠ, ಪಾಠವಲ್ಲ. ಬದಲಿಗೆ ಅದು ತಿಥಿಯ ಪಾಠ. ಹಾಗು ಪಾಠ ಕಲಿಸುವ ತಮ್ಮ ಸ್ವಧರ್ಮದ ತಿಥಿ.

Feb 13, 2008

ಗಂಡನ ಗೋರಿಯಿಂದ ಗದ್ದುಗೆಯತ್ತ...

(ವಿಕ್ರಾಂತ ಕರ್ನಾಟಕ - ಫೆಬ್ರವರಿ 22, 2008 ರ ಸಂಚಿಕೆಯಲ್ಲಿನ ಬರಹ)

ಅಮೆರಿಕದ ರಾಜಕೀಯ ಈಗ ಇತಿಹಾಸ ನಿರ್ಮಾಣದ ಹೊಸ್ತಿಲಲ್ಲಿ ಬಂದು ನಿಂತಿದೆ. 2009 ರಲ್ಲಿ ಮೊದಲ ಬಾರಿಗೆ ಒಬ್ಬ ಕರಿಯ ಅಥವ ಒಬ್ಬ ಸ್ತ್ರೀ ಅಮೆರಿಕದ ಅಧ್ಯಕ್ಷರಾಗುವ ಐತಿಹಾಸಿಕ ಘಟನೆ ಆಗಿಯೆ ಆಗುತ್ತದೆ ಎಂದು ಖಚಿತವಾಗಿ ಹೇಳಲು ಈ ವರ್ಷದ ನವೆಂಬರ್ ತನಕ ಕಾಯಬೇಕಾದರೂ, ಒಬ್ಬ ನಾಯಕಿ ಅಥವ ಕಪ್ಪುಜನಾಂಗದ ನಾಯಕನೊಬ್ಬ ಇದೇ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷ ಚುನಾವಣೆಗೆ ಪ್ರಮುಖ ಪಕ್ಷದ ಅಧಿಕೃತ ಅಭ್ಯರ್ಥಿಯಾಗುವ ಐತಿಹಾಸಿಕ ಘಟನೆಯಂತೂ ಖಚಿತ. ಇನ್ನು ಆಗಬೇಕಿರುವುದು ಏನಿದ್ದರೂ ಇವರಿಬ್ಬರಲ್ಲಿ ಯಾರು ಎನ್ನುವುದಷ್ಟೆ. ಯಾರೇ ಆದರೂ ಆ ಮಟ್ಟಿಗೆ ಅದು ಐತಿಹಾಸಿಕವೆ.

ಆರು ತಿಂಗಳ ಹಿಂದೆ ಎಲ್ಲರೂ ಅಂದುಕೊಂಡಿದ್ದದ್ದು ಡೆಮಾಕ್ರಾಟ್ ಪಕ್ಷದಿಂದ ಹಿಲ್ಲರಿ ಕ್ಲಿಂಟನ್ ಅಧ್ಯಕ್ಷ ಪದವಿಗೆ ನಾಮಕಾರಣವಾಗುವುದು ಖಚಿತ ಎಂದು. ಈಗ ನೋಡಿ, ಬರಾಕ್ ಒಬಾಮ ಎನ್ನುವ ಅಪರೂಪದ ಫಿನಾಮಿನ ಎಲ್ಲರ ಊಹೆ-ಖಚಿತತೆಗಳನ್ನೂ ಸುಳ್ಳು ಮಾಡಿ, ನಾಮಕರಣದತ್ತ ಮುನ್ನುಗ್ಗುತ್ತಿದೆ. ಡೆಮಾಕ್ರಾಟರಿಗೇ ಆಶ್ಚರ್ಯವಾಗುವ ರೀತಿಯಲ್ಲಿ ಡೆಮಾಕ್ರಾಟ್ ಪಕ್ಷದ ಅಧಿಕೃತ ಸದಸ್ಯರು ಮತ್ತು ಪಕ್ಷೇತರ ಮತದಾರರು ಈ ಅಂಡರ್‌ಡಾಗ್ ಅನ್ನು ಬೆಂಬಲಿಸುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಹಿಲ್ಲರಿ ಮತ್ತು ಬರಾಕ್ ಇಬ್ಬರೂ ತಮ್ಮ ಪಕ್ಷದಿಂದ ಸಮಾನವಾಗಿ ಬೆಂಬಲಮತಗಳನ್ನು ಗಳಿಸುತ್ತಿದ್ದಾರೆ. ಅದರೆ, ದಿನದಿಂದ ದಿನಕ್ಕೆ ಬರಾಕ್ ಬಲ ಹೆಚ್ಚುತ್ತಿರುವುದು ಮಾತ್ರ ಎಲ್ಲರಿಗೂ ಕಾಣಿಸುತ್ತಿದೆ.

ಅಮೆರಿಕದಲ್ಲಿ ಚುನಾವಣೆಗೆ ನಿಲ್ಲುವವರು ತಾವು ಖರ್ಚು ಮಾಡುವ ಹಣದ ಲೆಕ್ಕಾಚಾರವನ್ನು ಬಹಳ ಕಟ್ಟುನಿಟ್ಟಾಗಿ ನೀಡಬೇಕು. ಹಾಗೆಯೆ ಆ ಹಣದ ಮೂಲವನ್ನೂ ಒಪ್ಪಿಸಬೇಕು. ಇಲ್ಲಿ ಯಾವುದೆ ಸುಳ್ಳುಗಳು ನಡೆಯುವುದಿಲ್ಲ. ಇಲ್ಲಿಯ ಕೇಂದ್ರ ಚುನಾವಣಾ ಆಯೋಗ ಅದನ್ನೆಲ್ಲ ನೋಡಿಕೊಳ್ಳುತ್ತದೆ. ಭಾರತದಲ್ಲಿ ಹಣದ ಮತ್ತು ತೆರಿಗೆಯ ವಿಚಾರದಲ್ಲಿ ಅಷ್ಟೇನೂ ಇಲ್ಲದ ಕಟ್ಟುಪಾಡುಗಳ ಮತ್ತು ಪ್ರಾಮಾಣಿಕತೆಯ ಹಿನ್ನೆಲೆಯಲ್ಲಿ ಈ ಮಾತನ್ನು ಭಾರತೀಯ ಓದುಗರಿಗೆ ಅರ್ಥಮಾಡಿಸುವುದು ಬಹಳ ಕಷ್ಟವೆ. ಪ್ರತಿಯೊಂದು ಪೈಸೆಯ ಮೂಲವನ್ನೂ, ವಿಶೇಷವಾಗಿ ಚುನಾವಣೆಗೆ ನಿಂತವರದನ್ನು, ಸತ್ಯಸ್ಯಸತ್ಯವಾಗಿ ಇಲ್ಲಿ ಕಂಡುಕೊಳ್ಳಬಹುದು. ಯಾರು ಯಾರಿಗೆ ಕೊಟ್ಟಿದ್ದಾರೆ ಎನ್ನುವುದನ್ನು ಯಾರು ಬೇಕಾದರೂ ತಿಳಿದುಕೊಳ್ಳಬಹುದು. ನಾನು ಈಗ ತಾನೆ ಮಾಡಿದ ಒಂದು ಸಣ್ಣ ರಿಸರ್ಚ್ ಪ್ರಕಾರ ಪಟೇಲ್-ಸಿಂಗ್-ರೆಡ್ಡಿ ಎಂಬ ಕೇವಲ ಮೂರು ಭಾರತೀಯ ಮೂಲದ ಹೆಸರುಗಳುಳ್ಳ ಜನ ಇಲ್ಲಿಯವರೆಗೆ ಒಂದು ಮಿಲಿಯನ್ ಡಾಲರ್‌ಗಿಂತ (ಸುಮಾರು 4 ಕೋಟಿ ರೂಪಾಯಿಗಳನ್ನು) ಹೆಚ್ಚಿನ ಹಣವನ್ನು ಈ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ದೇಣಿಗೆ ನೀಡಿದ್ದಾರೆ. ಈ ಎಲ್ಲಾ ವಿವರಗಳೂ ಇಂಟರ್ನೆಟ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಿವೆ. (www.opensecrets.org)

ಇಲ್ಲಿ ಚುನಾವಣೆಗೆ ನಿಲ್ಲುವವರು ತಮ್ಮ ಸ್ವಂತ ಹಣವನ್ನು ಖರ್ಚು ಮಾಡುವುದರ ಜೊತೆಗೆ ತಮ್ಮ ಬೆಂಬಲಿಗರಿಂದ ಮತ್ತು ಮತದಾರರಿಂದ ದೇಣಿಗೆ ಸಂಗ್ರಹಿಸಬಹುದು. ಆದರೆ ಒಬ್ಬರಿಂದ ಗರಿಷ್ಠ 2300 ಡಾಲರ್ ಮಾತ್ರ ತೆಗೆದುಕೊಳ್ಳಬಹುದು. ಈಗಾಗಲೆ ಬರಾಕ್ ಮತ್ತು ಹಿಲ್ಲರಿ ಇಬ್ಬರೂ ಕೇವಲ ಈ ಪ್ರಾಥಮಿಕ ಚುನಾವಣೆಗೆಂದೆ ತಲಾ ನೂರು ಮಿಲಿಯನ್ ಡಾಲರ್‌ಗಿಂತ ಹೆಚ್ಚಿಗೆ ದೇಣಿಗೆ ಸಂಗ್ರಹಿಸಿದ್ದಾರೆ. ಹಿಲ್ಲರಿ ಕ್ಲಿಂಟನ್ ಬರಾಕ್ ಒಬಾಮಗಿಂತ ಸ್ವಲ್ಪ ಹೆಚ್ಚಿಗೇ ಸಂಗ್ರಹಿಸಿದ್ದರೂ ಇಲ್ಲಿಯವರೆಗೂ ಅತಿ ಹೆಚ್ಚು ಜನ ಬರಾಕ್‌ಗೆ ದೇಣಿಗೆ ನೀಡಿದ್ದಾರೆ. ಹಿಲ್ಲರಿಗೆ ಕಮ್ಮಿ ಜನ ಗರಿಷ್ಠ ಮೊತ್ತ ನೀಡಿದ್ದರೆ ಬರಾಕ್‌ಗೆ ಕಮ್ಮಿ ಮೊತ್ತದ್ದದಾದರೂ ಹೆಚ್ಚು ಜನ ಕೊಟ್ಟಿದ್ದಾರೆ. ಈ ಬೇರುಮಟ್ಟದ ಪ್ರಚಾರ ಮತ್ತು ಜನಸಾಮಾನ್ಯರ ಬೆಂಬಲವೆ ಬರಾಕ್ ಒಬಾಮನನ್ನು ಒಂದು ಅಪರೂಪದ ರಾಜಕೀಯ ಘಟನೆಯಾಗಿ ಮಾಡಿದೆ. ಆದರೆ, ಇದು ಎಲ್ಲಿಯವರೆಗೆ ಹೋಗುತ್ತದೆ ಎನ್ನುವುದನ್ನು ಅಮೆರಿಕದ ಯಾವೊಬ್ಬ ರಾಜಕೀಯ ಪಂಡಿತನೂ ಖಡಾಖಂಡಿತವಾಗಿ ಹೇಳಲಾಗದೆ ಹೋಗುತ್ತಿದ್ದಾನೆ.

ಅಮೆರಿಕದಲ್ಲಿ ನಡೆಯುತ್ತಿರುವ ಈ ಚುನಾವಣೆಯಿಂದ ಭಾರತೀಯರು ಗಮನಿಸಬೇಕಾದದ್ದು ಮತ್ತು ಕಲಿಯಬೇಕಾದದ್ದು ಒಂದಿದೆ. ಅದು ಚುನಾವಣೆಗೆ ನಿಂತಾಗ ಅಭ್ಯರ್ಥಿಗಳು ಮತ್ತು ಆತನ/ಅವಳ ಮನೆಯವರು ನಡೆದುಕೊಳ್ಳಬೇಕಾದ ರೀತಿ. ಎಲ್ಲರಿಗೂ ಗೊತ್ತಿರುವ ಹಾಗೆ ಬಿಲ್ ಕ್ಲಿಂಟನ್ ಅಮೆರಿಕದ ಜನ ಇಷ್ಟಪಡುವ ಇತ್ತೀಚಿನ ಜನಪ್ರಿಯ ಅಧ್ಯಕ್ಷ. ಬಿಲ್ ಕ್ಲಿಂಟನ್‌ನ ಚಾರ್ಮ್ ಈಗಲೂ ಕೆಲಸ ಮಾಡುತ್ತದೆ. ಅಂತಹ ಬಿಲ್ ಕ್ಲಿಂಟನ್, ಅದು ಜನರಿಗೆ ಹೆದರಿಯಾದರೂ ಆಗಿರಲಿ ಅಥವ ತನ್ನ ಸೌಜನ್ಯದಿಂದಾದರೂ ಆಗಿರಲಿ, ಒಂದು ಮಿತಿಯಲ್ಲಿಯೆ ತನ್ನ ಹೆಂಡತಿಯನ್ನು ಬೆಂಬಲಿಸುತ್ತಿದ್ದಾನೆ ಎನ್ನಬೇಕು. ಬಿಲ್ ಕ್ಲಿಂಟನ್‌ನ ಸಾಧನೆ, ಬುದ್ಧಿವಂತಿಕೆ, ಮಹತ್ವಾಕಾಂಕ್ಷೆ, ಜನಪ್ರಿಯತೆಯಲ್ಲವನ್ನೂ ಬಲ್ಲ ಇಲ್ಲಿಯ ಪ್ರೌಢ ಪತ್ರಕರ್ತರು ಒಮ್ಮೊಮ್ಮೆ ಹಿಲ್ಲರಿ ಕ್ಲಿಂಟನ್‌ಳನ್ನು "ನೀನು ಬಿಲ್ ಕ್ಲಿಂಟನ್‌ನನ್ನು ನಿಯಂತ್ರಿಸಬಲ್ಲೆಯಾ?" ಎಂದು ನೇರವಾಗಿಯೇ ಕೇಳುತ್ತಿದ್ದಾರೆ. ಅದಕ್ಕೆ ಹಿಲ್ಲರಿ ಕ್ಲಿಂಟನ್ "ಇದು ನನ್ನ ಚುನಾವಣಾಪ್ರಚಾರ ಮತ್ತು ಇದು ನನ್ನ ಉಮೇದುವಾರಿಕೆ. ಈ ಚುನಾವಣಾ ಪ್ರಚಾರವನ್ನು ನಾನು ಈ ದೇಶಕ್ಕೆ ಯಾವ ತರಹದ ನಾಯಕತ್ವ ಕೊಡಬಲ್ಲೆ ಎನ್ನುವುದರ ಮೇಲೆ ಕೇಂದ್ರೀಕರಿಸಬೇಕು ಎನ್ನುವುದು ನನ್ನ ಉದ್ಧೇಶ," ಎಂದಿದ್ದಾಳೆ. "ನೀವು ಬಿಲ್ ಕ್ಲಿಂಟನ್‌ನ ಅಭೂತಪೂರ್ವ ಸಾಧನೆ ನೋಡಿದ್ದೀರ, ನಾನು ಆತನ ಹೆಂಡತಿ, ಅದಕ್ಕೆ ನನಗೆ ಮತ ಕೊಡಿ, ನಮ್ಮ ವಂಶವನ್ನು ಆಶೀರ್ವದಿಸಿ," ಎಂದು ಆಕೆ ಎಲ್ಲಿಯೂ ಒಮ್ಮೆಯೂ ಹೇಳಿಲ್ಲ. ಹೇಳುವುದೂ ಇಲ್ಲ. ಹೇಳಲು ಆಗುವುದೂ ಇಲ್ಲ. ಪ್ರಬುದ್ಧ ಜನರು ಗಣನೀಯವಾಗಿರುವ, ಪಕ್ವಗೊಂಡ ಪ್ರಜಾಪ್ರಭುತ್ವದ ರೀತಿ ಅದು. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾಗಳಂತಹ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಗಂಡನ ಗೋರಿಯ ಮೇಲೆ ನಿಂತು ಚುನಾವಣಾ ಪ್ರಚಾರ ಮಾಡುವ ಅಥವ ಅಪ್ಪ-ಅಮ್ಮನ ಹೆಣವನ್ನು ಮುಂದಿಟ್ಟುಕೊಂಡು ಓಟು ಕೇಳುವ ಪರಿಸ್ಥಿತಿಗೆ ಇದನ್ನು ನಾವು ಹೋಲಿಸಿಕೊಳ್ಳಬೇಕು.

ಗಂಡನ ಗೋರಿಯ ಮೇಲೆ ನಿಂತುಕೊಂಡು ಅಥವ ಅಪ್ಪ-ಆಮ್ಮನ ಹೆಣವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದಕ್ಕೂ ಹಿಲ್ಲರಿ ಇನ್ನೂ ಬದುಕಿರುವ ಗಂಡನ ಹೆಸರನ್ನು ಎತ್ತಿಕೊಂಡು ರಾಜಕೀಯ ಮಾಡದಿರುವುದಕ್ಕೂ ಏನು ಸಂಬಂಧ ಎಂದುಕೊಂಡಿರಾದರೆ ನಿಮ್ಮ ಪ್ರಶ್ನೆ ಸಹಜವಾದದ್ದೆ. ಕ್ಷಮಿಸಿ. ಮೊದಲ ಹಂತವನ್ನು ವಿವರಿಸದೆ ಎರಡನೆ ಹಂತಕ್ಕೆ ಹೋಗಿಬಿಟ್ಟೆ. ಬದುಕಿರುವ ಗಂಡನ ಅಥವ ಅಪ್ಪ-ಅಮ್ಮನ ಹೆಸರು ಹೇಳಿಕೊಂಡು ಓಟು ಕೇಳುವ ಸಂದರ್ಭ ಮೊದಲ ಹಂತ. ಈ ಹಂತದಲ್ಲಿ ನಮ್ಮ ರಾಜಕಾರಣ ಇನ್ನೂ ನೀಚವಾಗಿರುತ್ತದೆ. ಅಪ್ಪ-ಅಮ್ಮ-ಗಂಡ ಬದುಕಿರುವ ಸಂದರ್ಭದಲ್ಲಿ ಆ ಅಪ್ಪ-ಅಮ್ಮ-ಗಂಡ ಇನ್ನೊಂದು ಕ್ಷೇತ್ರದಿಂದ ಚುನಾವಣೆಗೆ ನಿಂತಿರುತ್ತಾರೆ ಇಲ್ಲವೆ ಈಗಾಗಲೆ ಯಾವುದಕ್ಕೊ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ. ಆಗ ಅಪ್ಪ-ಅಮ್ಮ-ಗಂಡ-ಹೆಂಡತಿ-ಮಕ್ಕಳಾದಿಯಾಗಿ ಎಲ್ಲರೂ ನಿಕೃಷ್ಟವಾಗಿ "ನಮ್ಮ ವಂಶಕ್ಕೆ ಮತ ಕೊಡಿ" ಎಂದು ಕೇಳುತ್ತಿರುತ್ತಾರೆ. ಇದರ ಜೊತೆಗೇ, ಸಾಯುವ ತನಕ ನಮ್ಮಲ್ಲಿ ರಾಜಕಾರಣಿಗಳು ನಿವೃತ್ತಿ ಆಗುವುದಿಲ್ಲ. ಇವರಿಗೆಲ್ಲ, "ನಾನು ಏನು ಎನ್ನುವುದನ್ನು ಮುಂದಿನ ಚುನಾವಣೆಯಲ್ಲಿ ತೋರಿಸುತ್ತೇನೆ," ಎನ್ನುವ ಕೀಳರಿಮೆಯ ಅಹಂಕಾರ ಮುಖ್ಯವೆ ಹೊರತು, ದೇಶದ ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡಬೇಕು ಎನ್ನುವ ಸದ್ಭಾವನೆ ಅಲ್ಲ. ಅದರ ಜೊತೆಗೆ ವಿದ್ಯಾವಂತ-ಅವಿದ್ಯಾವಂತರಾದಿಯಾಗಿ ಜನರೂ ಹಾಗೆಯೆ ಇದ್ದಾರೆ. ಯಾವುದೊ ಒಂದು ಭಕ್ತಿಗೆ ದಾಸರಾಗಿ ಹೋದ ಜೀನ್ಸ್‌ಗಳಿರುವ ಜನ "ಪ್ರಜಾಪ್ರಭುತ್ವದಲ್ಲಿ ಎಂತಹ ವಂಶಪಾರಂಪರ್ಯ?" ಎನ್ನುವುದನ್ನೆ ಕೇಳುವುದಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಕೇಳಿದರೂ ನಿರ್ಲಜ್ಜ ಜನಕ್ಕೆ ಅದರಿಂದ ನಾಚಿಕೆಯೂ ಆಗುವುದಿಲ್ಲ.


ಲೇಖನದ ವಿಡಿಯೊ ಪ್ರಸ್ತುತಿ

ನಾಲ್ಕು ತಿಂಗಳ ಹಿಂದೆ ವಿಸರ್ಜನೆಗೊಂಡ ನಮ್ಮ ಕರ್ನಾಟಕದ ವಿಧಾನಸಭಾ ಸದಸ್ಯರನ್ನೆ ತೆಗೆದುಕೊಂಡರೆ, ಅಪ್ಪನ ಹೆಸರು ಹೇಳಿಕೊಂಡು ಮತ್ತು ಗಂಡನ ಹೆಸರು ಹೇಳಿಕೊಂಡು ವಂಶಪಾರಂಪರ್ಯಕ್ಕೆ ಪ್ರಜಾಪ್ರಭುತ್ವದ ಮುದ್ರೆ ಹಾಕಿಸಿಕೊಂಡ ಜನರ ದೊಡ್ಡ ಪಟ್ಟಿಯೆ ಇದೆ. ಮಾಜಿ ಶಾಸಕಿಯರ ಪಟ್ಟಿಯಲ್ಲಿರುವ ಭಾಗಿರಥಿ ಮರುಳಸಿದ್ಧನಗೌಡ, ನಾಗಮಣಿ ನಾಗೇಗೌಡ, ವಿಜಯಲಕ್ಷ್ಮಮ್ಮ ಬಂಡಿಸಿದ್ಧೇಗೌಡ, ಪರಿಮಳ ನಾಗಪ್ಪ, ಸುನೀತ ವೀರಪ್ಪಗೌಡ, ಶಕುಂತಲ ಶೆಟ್ಟಿಗಳಲ್ಲಿ ಎಷ್ಟು ಹೆಂಗಸರು ತಮ್ಮ ಗಂಡನ ಹೆಸರಿಲ್ಲದೆ ಶಾಸಕಿಯರಾಗುತ್ತಿದ್ದರು? ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ, ದಿನೇಶ್ ಗುಂಡೂರಾವ್, ಮಹಿಮಾ ಪಟೇಲ್, ಕುಮಾರ್ ಬಂಗಾರಪ್ಪ, ಕೃಷ್ಣ ಭೈರೇಗೌಡ, ಪ್ರಕಾಶ್ ಖಂಡ್ರೆ, ಸುಧಾಕರ್ ಚೌಡರೆಡ್ಡಿ, ತನ್ವೀರ್ ಸೇಠ್, ಯು.ಟಿ. ಖಾದರ್, ಇತ್ಯಾದಿಗಳಲ್ಲಿ ಎಷ್ಟು ಮಕ್ಕಳು ತಮ್ಮ ಅಪ್ಪ ಸಾಯದೆ ಇದ್ದಿದ್ದರೆ ಅಥವ ತಮ್ಮ ಅಪ್ಪ ಲೋಕಸಭೆಗೆ ನಿಲ್ಲದಿದ್ದರೆ ಶಾಸಕರಾಗುತ್ತಿದ್ದರು? ಇದನ್ನೆ ಭಾರತದ ರಾಜಕಾರಣಕ್ಕೂ ಅನ್ವಯಿಸಿದರೆ ಮತ್ತದೇ ಕಪ್ಪುಚುಕ್ಕೆಗಳು. ಅನುಕಂಪದ ಮೇಲೆ, ಹಣದ ಮೇಲೆ, ವಂಶದ ಹೆಸರಿನ ಮೇಲೆ ಚುನಾವಣೆಗೆ ನಿಲ್ಲುವವರನ್ನು ಅವರ ಯೋಗ್ಯತೆಯನ್ನು ಕಡೆಗಣಿಸಿ ಗೆಲ್ಲಿಸುವ ಜನ ಇಲ್ಲವಾಗುವ ತನಕ ನಮ್ಮಲ್ಲಿ ಪ್ರಜಾಪ್ರಭುತ್ವ ಪ್ರಬುದ್ಧವಾಗಿದೆ ಎನ್ನಲಾಗದು.

ಚುನಾವಣೆಯಲ್ಲಿ ಬರಾಕ್ ಒಬಾಮನ ಹೆಂಡತಿ ಮಿಷೆಲ್ ವಹಿಸುತ್ತಿರುವ ಪಾತ್ರದ ಹಿನ್ನೆಲೆಯಲ್ಲಿಯೂ ಒಂದು ಅವಲೋಕನ ಸಾಧ್ಯವಿದೆ. ಅದು ನಮ್ಮಲ್ಲಿ ಚುನಾವಣೆಗೆ ನಿಲ್ಲುವ ದೊಡ್ಡಮನುಷ್ಯರ ಹೆಂಡತಿಯರು ಮಾಡುವ ಕೆಲಸವನ್ನು ಕುರಿತು. ಓದಿನಿಂದ ಮಿಷೆಲ್ ಒಬಾಮ ಒಬ್ಬ ವಕೀಲೆ. ಸ್ವತಃ ಸ್ವಯಂಕೃಷಿ ಹೆಣ್ಣುಮಗಳು. ಅಧ್ಯಕ್ಷೀಯ ಚುನಾವಣೆಗೆ ನಿಂತಿರುವ ತನ್ನ ಗಂಡನ ಪರವಾಗಿ ಅನೇಕ ಕಡೆ ಕೆಲವೊಮ್ಮ ತಾನೊಬ್ಬಳೆ ಓಡಾಡಿ, ಗಂಭೀರವಾದ, ಮನಮುಟ್ಟುವಂತಹ ಭಾಷಣಗಳನ್ನು ಮಾಡುತ್ತಿದ್ದಾಳೆ. ಜನ ಯಾಕೆ ತನ್ನ ಗಂಡನನ್ನು ಬೆಂಬಲಿಸಬೇಕು ಎನ್ನುವುದಕ್ಕೆ ಕಾರಣಗಳನ್ನು ಕೊಡುತ್ತಿದ್ದಾಳೆ. ಅದೆ ನಮ್ಮಲ್ಲಿ ಹಾಲಿ/ಮಾಜಿ ಮುಖ್ಯಮಂತ್ರಿಗಳ ಹೆಂಡತಿಯರೂ ಚುನಾವಣಾ ಪ್ರಚಾರಕ್ಕೆ ಹೋಗುತ್ತಾರೆ, ಕೈಯಲ್ಲಿ ನೋಟು ಹಿಡಿದುಕೊಂಡು. ತನ್ನ ಗಂಡನಿಗೆ ನೀವು ಈ ಕಾರಣಕ್ಕಾಗಿ ಮತ ನೀಡಬೇಕು ಎಂದೇನೂ ಇವರು ಭಾಷಣ ಮಾಡುವುದಿಲ್ಲ. ಬದಲಿಗೆ ಇವರಿಗೆ ಆರತಿಯೆತ್ತುವ ಹೆಂಗಸರ ತಟ್ಟೆಗೆ ನೋಟು ಹಾಕುತ್ತಾರೆ. ಓಟು ಕೊಳ್ಳುತ್ತಾರೆ. ಐದಾರು ಕೋಟಿ ಜನರನ್ನು ಪ್ರತಿನಿಧಿಸುವ ಒಂದು ರಾಜ್ಯದ ಮುಖ್ಯಮಂತ್ರಿಯ ಹೆಂಡತಿಯರು ಮಾಡುವ ಘನಂದಾರಿ ಕೆಲಸ ಇದು. ನಾಚಿಕೆಗೇಡು ಎನ್ನುವ ಪದವೂ ಇಲ್ಲಿ ನಾಚುತ್ತದೆ.


ಡೆಮಾಕ್ರಾಟ್ ಪಕ್ಷದಿಂದ ಯಾರು ಅಭ್ಯರ್ಥಿ ಎನ್ನುವುದು ಇನ್ನೂ ತೀರ್ಮಾನವಾಗದೇ ಇದ್ದರೂ, ರಿಪಬ್ಲಿಕನ್ ಪಕ್ಷದಿಂದ ಜಾನ್ ಮೆಕೈನ್ ಎನ್ನುವುದು ಈಗ ಅನಧಿಕೃತವಾಗಿ ತೀರ್ಮಾನವಾಗಿ ಹೋಗಿದೆ ಎನ್ನಬಹುದು. ಜಾನ್ ಮೆಕೈನ್ ಒಬ್ಬ ಮಾಜಿ ಯುದ್ಧಖೈದಿ. ಬಿಳಿಯ ಕ್ರಿಶ್ಚಿಯನ್ ಸಂಪ್ರದಾಯವಾದಿಗಳಿಂದ ಮತ್ತು ಆರ್ಥಿಕ ವಿಚಾರಗಳಲ್ಲಿ ಸರ್ಕಾರದ ಪಾತ್ರ ಕಮ್ಮಿ ಇರಬೇಕು ಎನ್ನುವ ಕಡು-ಕ್ಯಾಪಿಟಲಿಸ್ಟ್‌ಗಳಿಂದ ತುಂಬಿರುವ ರಿಪಬ್ಲಿಕನ್ ಪಕ್ಷದಲ್ಲಿ ಜಾನ್ ಮೆಕೈನ್ ಒಬ್ಬ ಉದಾರವಾದಿ ನಾಯಕ. ಸದ್ಯದ ಪರಿಸ್ಥಿತಿಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಅಧ್ಯಕ್ಷನಾಗಿ ಚುನಾಯಿತನಾಗುವುದು ಸಂದೇಹವಾದರೂ, ಹಿಲ್ಲರಿಗೆ ಇಲ್ಲವೆ ಒಬಾಮಾಗೆ ಬೀಳುವ ನೆಗೆಟಿವ್ ಓಟುಗಳ ಮೇಲೆ ಆ ಸೋಲುಗೆಲುವು ನಿಂತಿದೆ. ಜೊತೆಗೆ ಗಂಭೀರವಾದ ಭಯೋತ್ಪಾದಕ ಕೃತ್ಯವೊ, ಆಕಸ್ಮಿಕ ಯುದ್ಧವೊ ಘಟಿಸಿಬಿಟ್ಟರೆ ರಿಪಬ್ಲಿಕನ್ನರತ್ತ ಜನಬೆಂಬಲ ತಿರುಗಿಬಿಡುತ್ತದೆ.

ಜಾನ್ ಮೆಕೈನ್ ಈಗ ತನ್ನ ಜೊತೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಯಾರಾದರೂ ಒಬ್ಬನನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಇದ್ದುದುರಲ್ಲಿ ಉದಾರವಾದಿಯಾದ ಮೆಕೈನ್ ತನ್ನ ಪಕ್ಷದ ಸಂಪ್ರದಾಯವಾದಿಗಳನ್ನು ತೃಪ್ತಿ ಪಡಿಸಲು ಅಲ್ಟ್ರಾ ಕನ್ಸರ್ವೇಟಿವ್ ಒಬ್ಬನನ್ನು ಆರಿಸುವ ಸಾಧ್ಯತೆಗಳಿವೆ. ಇತ್ತೀಚಿನ ಊಹಾಪೋಹಗಳ ಪ್ರಕಾರ ಭಾರತೀಯ ಮೂಲದ ನವ-ಕ್ರೈಸ್ತ ಬಾಬ್ಬಿ ಜಿಂದಾಲ್ ಸೂಕ್ತ ಎಂದು ಮೆಕೈನ್‌ನನ್ನು ಇಷ್ಟಪಡದ ಅದರೆ ಬೇರೆ ವಿಧಿಯಿಲ್ಲದ ಕೆಲವು ರಿಪಬ್ಲಿಕನ್ನರು ಹೇಳುತ್ತಿದ್ದಾರೆ. ಬಾಬ್ಬಿ ಜಿಂದಾಲ್ ಒಂದಲ್ಲ ಒಂದು ದಿನ ಅಮೆರಿಕದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ನಿಲ್ಲುವ ಅವಕಾಶಗಳಿವೆ ಎಂದು ನವೆಂಬರ್ 23, 2007 ರ ಅಂಕಣದಲ್ಲಿ ನಾನು ಪ್ರಸ್ತಾಪಿಸಿದ್ದೆ. ಆದರೆ ಈ ಚುನಾವಣೆಗೇ ಬಾಬ್ಬಿಯ ಹೆಸರನ್ನು ಯಾರಾದರೂ ತೇಲಿಬಿಡಬಹುದು ಎಂದು ನಾನು ಭಾವಿಸಿರಲಿಲ್ಲ. ಈ ಚುನಾವಣೆ ರಿಪಬ್ಲಿಕನ್ನರಿಗೆ ಅನಾನುಕೂಲವಾಗಿದ್ದರೂ, ಬರಾಕ್ ಒಬಾಮ ಏನಾದರೂ ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿಯಾದರೆ ಬರಾಕ್‌ಗೆ ಚೆಕ್‌ಮೇಟ್ ಮಾಡಲು ರಿಪಬ್ಲಿಕನ್ನರಿಗೆ ಬಾಬ್ಬಿ ಸೂಕ್ತ ಉಪಾಧ್ಯಕ್ಷ ಅಭ್ಯರ್ಥಿ. ಯಾವುದು ಏನೇ ಆಗಲಿ, ಈ ಚುನಾವಣೆ ಅನೇಕ ಕಾರಣಗಳಿಗೆ ಅಮೆರಿಕಕ್ಕೆ ಮತ್ತು ವಿಶ್ವಕ್ಕೆ ಐತಿಹಾಸಿಕವಾಗುತ್ತದೆ ಎನ್ನುವುದನ್ನಂತೂ ಈಗಲೆ ಬರೆಯಬಹುದು.

Feb 6, 2008

ಸಂಶೋಧನೆಗಳ ಯಶಸ್ಸಿಗೆ ಯುದ್ಧವೂ ಮೂಲವಾಗಬೇಕೆ?

(ವಿಕ್ರಾಂತ ಕರ್ನಾಟಕ - ಫೆಬ್ರವರಿ 15, 2008 ರ ಸಂಚಿಕೆಯಲ್ಲಿನ ಬರಹ)

ಅದು Y2K, ಅಂದರೆ ಇಸವಿ 2000. ನಾನು ಆಗ ಬೆಂಗಳೂರಿನಲ್ಲಿ ಮೊಟೊರೊಲದಲ್ಲಿ ಕೆಲಸ ಮಾಡುತ್ತಿದ್ದೆ. ಎಲ್ಲರಿಗೂ ಗೊತ್ತಿರುವ ಹಾಗೆ ಮೊಟೊರೊಲ ಸೆಲ್‌ಫೋನ್‌ಗಳ ಕಂಪನಿ. ಆ ಸಮಯದಲ್ಲಿ ಈ ಮೊಬೈಲ್ ಫೋನುಗಳ ಲೋಕದಲ್ಲಿನ ಒಂದು ಹೊಸ ತಂತ್ರಜ್ಞಾನದ ಬಗ್ಗೆ ಮತ್ತು ಅದನ್ನು ಫೋನಿನಲ್ಲಿ ಅಳವಡಿಸುವ ವಿವಿಧ ಬಗೆಗಳ ಬಗ್ಗೆ, ಗ್ರಾಹಕರಿಗೆ ಕೊಡಬಹುದಾದ ಹೊಸ ತರಹದ ಸೇವೆಗಳ ಬಗ್ಗೆ, ತನ್ಮೂಲಕ ಮೊಬೈಲ್ ಕಂಪನಿಗಳ ಮತ್ತು ಸರ್ವಿಸ್ ಪ್ರೊವೈಡರ್‌ಗಳ ಆದಾಯ ಹೆಚ್ಚಿಸಿಕೊಳುವ ಹೊಸ ಮಾರ್ಗಗಳ ಬಗ್ಗೆಯೆಲ್ಲ ಆ ಕ್ಷೇತ್ರದಲ್ಲಿ ಚರ್ಚೆಗಳಾಗುತ್ತಿದ್ದವು. ಆಗತಾನೆ ಹೊಸದಾಗಿ ಕೇಳಿಬರುತ್ತಿದ್ದ ಆ ತಂತ್ರಜ್ಞಾನದ ವಿಚಿತ್ರ ಹೆಸರು "ಬ್ಲೂಟೂಥ್".

ಆಮೇಲೆ ಏನೇನೋ ಆಯಿತು; ಅಂದರೆ, ಅಂದುಕೊಂಡಂತೆ ಆಗಲಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು! ಶುರುವಿನಲ್ಲಿ ಬ್ಲೂಟೂಥ್ ತಂತ್ರಜ್ಞಾನದಿಂದ ಏನೆಲ್ಲ ಮಾಡಬಹುದು ಎಂದುಕೊಂಡಿದ್ದರೊ ಅಂತಹುವುದ್ಯಾವುದೂ ಮುಂದಿನ ನಾಲ್ಕೈದು ವರ್ಷಗಳಲ್ಲಿ ಆಗಲಿಲ್ಲ. 2002 ಕ್ಕೆಲ್ಲ ಬಹಳಷ್ಟು ಜನ ಬ್ಲೂಟೂಥ್‌ನ ಯಶಸ್ಸಿನ ಬಗ್ಗೆ ಆಸೆ ಬಿಟ್ಟುಬಿಟ್ಟರು. ಆದರೆ ತಂತ್ರಜ್ಞಾನವೂ ಒಂದು ರೀತಿಯಲ್ಲಿ ಸಮಯದಂತೆ. ಯಾರಿಗೂ ಕಾಯುವುದಿಲ್ಲ. ಎಲ್ಲಿಯವರೆಗೆ ವಿಜ್ಞಾನಿಗಳು ಕೆಲಸ ಮಾಡುತ್ತಿರುತ್ತಾರೊ, ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿರುತ್ತಾರೊ ಅಲ್ಲಿಯವರೆಗೂ ಅದು ಯಾರಿಗೂ, ಯಾವುದಕ್ಕೂ ಕಾಯದೆ ಅಭಿವೃದ್ಧಿ ಆಗುತ್ತಲೆ ಇರುತ್ತದೆ. ಆರಂಭದಲ್ಲಿ ತಂತ್ರಜ್ಞರು ಪ್ರತಿಯೊಂದು ಬ್ಲೂಟೂಥ್ ಎಲೆಕ್ಟ್ರಾನಿಕ್ ಸಾಧನವೂ ಒಂದು ನಿರ್ದಿಷ್ಟವಾದ, ಬದಲೇ ಆಗದ ಸಂಖ್ಯೆ ಹೊಂದಿರಬೇಕು ಎಂಬ ನಿಯಮ ಇಟ್ಟುಕೊಂಡಿದ್ದರು. ಆದರೆ ಈ ನಿಯಮವೆ ಅದರ ಅಳವಡಿಕೆಗೆ ಕಷ್ಟವಾಗುತ್ತಿತ್ತು. ವಿಚಾರ ಮಾಡಿದ ತಂತ್ರಜ್ಞರು ಆ ನಿಯಮವನ್ನು ಕೈಬಿಟ್ಟರು. ಅವು ಅನಾಮಿಕವಾಗಿಯೂ ಒಬ್ಬರು ಇನ್ನೊಬ್ಬರಿಗೆ ಗಂಟುಹಾಕಿಕೊಳ್ಳಬಹುದು ಎಂದರು. ಬ್ಲೂಟೂಥ್‌ನ ಕತೆಯೆ ಬದಲಾಗಿ ಹೋಯಿತು.

ಈಗಂತೂ ವೈರ್‌ಲೆಸ್ ಎಂದರೆ ಏನೆಂದು ಯಾರಿಗೂ ಹೇಳಿಕೊಡಬೇಕಾದ ಅವಶ್ಯಕತೆಯಿಲ್ಲ. ವೈರ್‌ಲೆಸ್ ಯಾವ ರೀತಿ ಕೆಲಸ ಮಾಡುತ್ತದೆ ಎಂದು ಜನಕ್ಕೆ ಗೊತ್ತಿಲ್ಲದಿದ್ದರೂ, ಸೂಕ್ಷ್ಮವಾದ ಬೆಳಕಿನ ತರಂಗಗಳನ್ನು (ಎಲೆಕ್ಟ್ರೊ-ಮ್ಯಾಗ್ನೆಟಿಕ್ ರೇಡಿಯೊ ವೇವ್ಸ್) ಸೃಷ್ಟಿಸಿ ಒಂದು ಎಲೆಕ್ಟ್ರಾನಿಕ್ ಸಾಧನ/ವಸ್ತು ಇನ್ನೊಂದು ಎಲೆಕ್ಟ್ರಾನಿಕ್ ಸಾಧನದೊಂದಿಗೆ ಯಾವುದೆ ತಂತಿಯ ವ್ಯವಸ್ಥೆ ಇಲ್ಲದೆ ಪರಸ್ಪರ ಸಂಪರ್ಕ ಏರ್ಪಡಿಸಿಕೊಳ್ಳುವ ವ್ಯವಸ್ಥೆ ಅದು ಎನ್ನುವುದು ಬಹುಶಃ ಇತ್ತೀಚಿನ ವಿದ್ಯಾರ್ಥಿಗಳಿಗೆಲ್ಲ ಗೊತ್ತು. ರೇಡಿಯೊ ಹುಟ್ಟಿದ್ದು ಇದೇ ವಿಜ್ಞಾನದಿಂದ. ಬ್ಲೂಟೂಥ್ ತಂತ್ರಜ್ಞಾನಕ್ಕೂ ಇದೇ ಮೂಲ. ಆದರೆ ಬ್ಲೂಟೂಥ್‌ನ ಗರಿಷ್ಠ ಮಿತಿ ನೂರು ಮೀಟರ್ ಮಾತ್ರ.

ಯಾವಾಗ ಒಂದು ಬ್ಲೂಟೂಥ್ ಸಾಧನ (Device) ಇನ್ನೊಂದು ಬ್ಲೂಟೂಥ್ ಸಾಧನದೊಂದಿಗೆ ಅನಾಮಿಕವಾಗಿಯೂ ಸಂಪರ್ಕ ಏರ್ಪಡಿಸಿಕೊಳ್ಳುವಂತೆ ಮಾಡಿಬಿಟ್ಟರೊ ಬ್ಲೂಟೂಥ್ ಕಡಿಮೆ ದೂರದ ನಿಸ್ತಂತು ಸಂಪರ್ಕಕ್ಕೆ ವರದಾನವಾಗಿ ಹೋಯಿತು; ವಿಶೇಷವಾಗಿ ಮೊಬೈಲ್ ಫೋನ್‌ಗಳ ಹ್ಯಾಂಡ್ಸ್-ಫ್ರೀ ಹೆಡ್‌ಸೆಟ್‌ಗಳಿಗೆ. ಇತ್ತೀಚಿನ ಎರಡು-ಮೂರು ವರ್ಷಗಳಲ್ಲಿ ಬಂದ ಬಹುತೇಕ ಮೊಬೈಲ್ ಫೋನುಗಳಲ್ಲಿ ಬ್ಲೂಟೂಥ್ ಸೌಕರ್ಯ ಇದೆ. ಈ ಫೋನಿನ ಜೊತೆಗೆ ನೀವು ಒಂದು ಹ್ಯಾಂಡ್ಸ್_ಫ್ರೀ ಬ್ಲೂಟೂಥ್ ಹೆಡ್‌ಸೆಟ್ ತೆಗೆದುಕೊಂಡರೆ ನಿಮ್ಮ ಫೋನನ್ನು ಜೇಬಿನಲ್ಲಿ ಇಟ್ಟುಕೊಂಡು, ಎರಡೆ ಇಂಚು ಉದ್ದದ ಹೆಡ್‌ಸೆಟ್ ಅನ್ನು ಕಿವಿ ಮೇಲೆ ಹೂವು ಇಟ್ಟುಕೊಂಡಂತೆ ಇಟ್ಟುಕೊಂಡು ಫೋನ್ ಸಂಭಾಷಣೆ ನಡೆಸಬಹುದು. (ಆದರೆ ಆ ಸಂಭಾಷಣೆಯ ಸಮಯದಲ್ಲಿ ನೀವು ಒಂದಕ್ಕಂತೂ ಸಿದ್ಧವಾಗಿರಬೇಕು. ಅದು ಆಗಾಗ ಜನ ನಿಮ್ಮನ್ನು ಡಿಸ್ಟರ್ಬ್ ಮಾಡಿಬಿಡುತ್ತಾರೆ. ಅವರೇನೂ ಬೇಕೆಂದು ಮಾಡುವುದಿಲ್ಲ. ಆದರೆ ಅವರಿಗೆ ನೀವು ಫೋನಿನಲ್ಲಿ ಮಾತನಾಡುತ್ತಿದ್ದೀರೆಂದು ಗೊತ್ತೇ ಆಗುವುದಿಲ್ಲ. ಯಾಕೆಂದರೆ ಈ ಹೆಡ್‌ಸೆಟ್ ಅವರಿಗೆ ಕಾಣದಂತೆ ನಿಮ್ಮ ಕಿವಿಯ ಮೇಲೆ ಕುಳಿತಿರುತ್ತದಾದ್ದರಿಂದ. ಹಾಗೆಯೆ, ಸುಮ್ಮನೆ ಗಾಳಿಯಲ್ಲಿ ಮಾತನಾಡುತ್ತ, ನಗುತ್ತ, ರೇಗುತ್ತ, ಕಿಚಾಯಿಸುತ್ತ ಹೋಗುತ್ತಿರುವ ನಿಮ್ಮನ್ನು ಅರೆಹುಚ್ಚನೆಂದು ಭಾವಿಸುವ ಜನರ ನೋಟಕ್ಕೂ ನೀವು ಗುರಿಯಾಗುತ್ತಿರುತ್ತೀರ!)

ಇತ್ತೀಚಿಗೆ ಬಂದಿರುವ ಬ್ಲೂಟೂಥ್‌ನ ಹೊಸ ಉಪಯೋಗ ಮಾತ್ರ ಈ ಮೊಬೈಲ್ ಫೋನಿನ ಪ್ರಪಂಚಕ್ಕಿಂತ ಬೇರೆಯದೆ ಆದದ್ದು. 2003 ರಲ್ಲಿ ಇರಾಕಿನ ಮೇಲೆ ದಂಡೆತ್ತಿ ಹೋದ ಅಮೆರಿಕ ಇಲ್ಲಿಯವರೆಗೂ ತನ್ನ 3945 ಸೈನಿಕರನ್ನು ಕಳೆದುಕೊಂಡಿದೆ. ಇದೇ ಸಮಯದಲ್ಲಿ ಸುಮಾರು 88000 ಇರಾಕಿ ನಾಗರಿಕರು ಸತ್ತಿದ್ದಾರೆ ಎಂದು ಕೆಲವು ವರದಿಗಳು ಹೇಳಿದರೆ, ಮತ್ತೆ ಕೆಲವು 11 ಲಕ್ಷ 68 ಸಾವಿರ ನಾಗರಿಕರು ಸತ್ತಿದ್ದಾರೆ ಎನ್ನುತ್ತಿವೆ. ಇನ್ನು ಗಾಯಗೊಂಡ ಅಮೆರಿಕನ್ ಸೈನಿಕರ ಸಂಖ್ಯೆ 29000 ಎಂದು ಅಂದಾಜು. ಅಂದರೆ ಒಬ್ಬ ಸೈನಿಕ ಸಾಯುವಷ್ಟರಲ್ಲಿ 8 ಜನ ಸೈನಿಕರು ಕೈಕಾಲು ಅಥವ ಇನ್ನೆಂತಹುದೊ ಕಳೆದುಕೊಂಡಿದ್ದಾರೆ. ಹಾಗೆಯೆ ಬಹುಶಃ ಲಕ್ಷಾಂತರ ಇರಾಕಿ ನಾಗರಿಕರೂ ಕೈಕಾಲು ಕಳೆದುಕೊಂಡಿರಬಹುದು.

ಗಾಯಗೊಂಡವರನ್ನು ಅಥವ ಕೈಕಾಲು ಕಳೆದುಕೊಂಡವರನ್ನು, ಇವರಿಗೆ ಒಂದೆ ಕೈ ಹೋಗಿದೆ, ಇವರಿಗೆ ಒಂದೆ ಕಾಲು ಹೋಗಿದೆ, ಎರಡು ಕಾಲು ಹೋದವರಿಗೆ ಹೋಲಿಸಿದರೆ ಇವರು ಅದೃಷ್ಟವಂತರು ಎಂದು ವಿಂಗಡಿಸುವುದು ಅಮಾನವೀಯ. ಆದರೆ ಎರಡೂ ಕಾಲುಗಳನ್ನು ಕಳೆದುಕೊಂಡವರ ನಿತ್ಯದ ಜೀವನ ಮಾತ್ರ ಬಹಳ ಕಷ್ಟತಮವಾದದ್ದು ಹಾಗೂ ಇತರೆಲ್ಲರಿಗಿಂತ ಹೆಚ್ಚಿಗೆ ಪರಾವಲಂಬಿಯಾದದ್ದು ಎಂದು ಅರ್ಥೈಸಿಕೊಳ್ಳುವುದು ತಪ್ಪಾಗಲಾರದು. ಎಷ್ಟೊ ಸಮಯದಲ್ಲಿ ಅಂತಹವರು ತಮ್ಮ ಎಲ್ಲಾ ಸಾಮರ್ಥ್ಯಗಳನ್ನು ಮರೆತು ಕಾಲ ತಳ್ಳುವುದೆ ಹೆಚ್ಚು. ಆದರೆ, ಇತ್ತೀಚಿನ ದಿನಗಳಲ್ಲಿ ಎರಡೂ ಕಾಲು ಕಳೆದುಕೊಂಡಿರುವ ಇಬ್ಬರು ಅಮೆರಿಕನ್ ಸೈನಿಕರಿಗೆ ವಿಜ್ಞಾನಿಗಳು ಹೊಸ ತಂತ್ರಜ್ಞಾನದ ಕೃತಕ ಕಾಲುಗಳನ್ನು ತೊಡಿಸಿ ಮಾಡುತ್ತಿರುವ ಪ್ರಯೋಗ ಅನೇಕ ಕಾರಣಗಳಿಗೆ ಆಶಾದಾಯಕವಾಗಿದೆ.

ಇರಾಕಿನಲ್ಲಿ ಪಹರೆ ಮಾಡುತ್ತಿದ್ದ ಅಮೆರಿಕದ ಜೊಶುವ ಬ್ಲೈಲ್ ಎಂಬ ಸೈನಿಕನ ವಾಹನದ ಕೆಳಗೆ ಬಾಂಬೊಂದು 2006 ರ ಅಕ್ಟೋಬರ್‌ನಲ್ಲಿ ಸ್ಫೋಟಗೊಂಡಿತು. ಬ್ಲೈಲ್ ತೀವ್ರವಾಗಿ ಗಾಯಗೊಂಡ. ಅವನ ಗಾಯಗಳು ತೀವ್ರಸ್ವರೂಪದ್ದಾಗಿದ್ದವು. ಆತ ಬದುಕುಳಿಯುವಷ್ಟರಲ್ಲಿ ಆತನ ಪೃಷ್ಠದಲ್ಲಿ 32 ಪಿನ್ನುಗಳಿದ್ದವು. ಬೆನ್ನುಹುರಿಯ ಮೂಳೆಗಳಿಗೆ ಸಪೋರ್ಟ್ ಕೊಡುವ ಪೆಲ್ವಿಸ್ ಅನ್ನು 6 ಇಂಚಿನ ಸ್ಕ್ರೂ ಹಿಡಿದಿಟ್ಟುಕೊಂಡಿತ್ತು. ಎರಡೂ ತೊಡೆಗಳು ಸರಿಯಾಗಿ ಅರ್ಧದಲ್ಲಿ ತುಂಡಾಗಿದ್ದವು.

ಹೀಗೆ ಕಾಲುಗಳೇ ಇಲ್ಲದಾಗಿ ಹೋದ ಆ ಸೈನಿಕ ಇತ್ತೀಚೆಗೆ ಮತ್ತೆ ನಡೆಯಲಾರಂಭಿಸಿದ್ದಾನೆ. ಆದರೆ ಈ ನಡಿಗೆ ಮೊದಲಿನಷ್ಟು ಸಹಜವಾಗಿ, ಸುಲಭವಾಗಿ ಇಲ್ಲವಾದರೂ, ಇತ್ತೀಚಿನ ಎಲ್ಲಾ ಕೃತಕ ಕಾಲುಗಳಿಗಿಂತ ಸ್ವಲ್ಪ ಹೆಚ್ಚಿಗೇ ಸಲೀಸಾಗಿದೆ. ಈಗ ಲಭ್ಯವಿರುವ ಲೇಟೆಸ್ಟ್ ಕೃತಕ ಕಾಲುಗಳೂ ಬಹಳ ಹೈಟೆಕ್ ಆದವುಗಳೆ. ಹಾಕಿಕೊಂಡವನು ತನ್ನ ತೊಡೆಗಳಲ್ಲಿನ ಸ್ನಾಯುಗಳನ್ನು ಕದಲಿಸುವ ತೀಕ್ಷ್ಣತೆಯ ಮೇಲೆ ಈ ಹೈಟೆಕ್ ಕಾಲುಗಳು ಕೆಲಸ ಮಾಡುತ್ತವೆ. ಆದರೆ ಒಂದು ಕೃತಕ ಕಾಲು ಇನ್ನೊಂದು ಕೃತಕ ಕಾಲಿನ ಜೊತೆ ಮಾತನಾಡಬೇಕಾದರೆ ಅವೆರಡಕ್ಕೂ ವೈರ್ ಸಂಪರ್ಕ ಇರಬೇಕಿತ್ತು ಮತ್ತು ಅವಕ್ಕೆ ಕಂಪ್ಯೂಟರ್‌ನಿಂದ ವೈರ್ ಜೋಡಿಸಿ ಪ್ರೋಗ್ರಾಮ್ ಮಾಡಬೇಕಿತ್ತು. ಜೊತೆಗೆ ಈ ಕೃತಕ ಕಾಲುಗಳನ್ನು ಚಲಾಯಿಸಬೇಕಾದರೆ ಸ್ನಾಯುಗಳನ್ನು ಬಹಳವೆ ಕದಲಿಸಬೇಕಿತ್ತು. ಆದರೆ, ಬ್ಲೈಲ್‌ನ ತೊಡೆಗಳಿಗೆ ಜೋಡಿಸಲಾಗಿರುವ ಎರಡೂ ಕೃತಕ ಕಾಲುಗಳಲ್ಲಿ ಈಗ ಬ್ಲೂಟೂಥ್ ಚಿಪ್‌ಗಳಿವೆ. ಅವೆರಡೂ ಒಂದು ಇನ್ನೊಂದರ ಜೊತೆ ಮಾತನಾಡಿಕೊಳ್ಳುವಂತೆ ವೈರ್‌ಲೆಸ್ ಆಗಿ ಪ್ರೋಗ್ರಾಮ್ ಮಾಡಲಾಗಿದೆ. ನಮ್ಮ ಕಾಲುಗಳು ಮಾಡುವಂತೆಯೆ ಅವೂ ಒಂದು ಇನ್ನೊಂದನ್ನು ಅನುಕರಿಸುತ್ತವೆ; ಅನುಸರಿಸುತ್ತವೆ; ಏರಿಳಿತಗಳಲ್ಲಿ ತಮ್ಮ ವೇಗವನ್ನು ಹೊಂದಿಸಿಕೊಳ್ಳುತ್ತವೆ. ಹಾಗಾಗಿಯೆ ಸ್ನಾಯುಗಳ ಚಲನವನ್ನು ಕಮ್ಮಿ ಬೇಡುತ್ತವೆ. ಧರಿಸಿದವರು ವ್ಯಾಯಾಮ ಮಾಡುವಷ್ಟು ತೀವ್ರವಾಗಿ ತಮ್ಮ ಸ್ನಾಯುಗಳನ್ನು ಕದಲಿಸಬೇಕಿಲ್ಲ.

ಲೇಖನದ ವಿಡಿಯೊ ಪ್ರಸ್ತುತಿ

ಮನುಷ್ಯ ಕೈಕಾಲುಗಳನ್ನು ಯುದ್ಧದಲ್ಲಿ ಮಾತ್ರವೆ ಕಳೆದುಕೊಳ್ಳಬೇಕಿಲ್ಲ. ರಸ್ತೆ ಅಪಘಾತದಲ್ಲಿ ಅನೇಕ ತರಹದ ಮಾರಣಾಂತಿಕ ಗಾಯಗಳಾಗುತ್ತವೆ. ಅಪಘಾತಗಳಲ್ಲಿ ಬದುಕುಳಿದವರು ಎಷ್ಟೋ ಸಲ ತಮ್ಮ ಕೈಕಾಲುಗಳನ್ನು ಕಳೆದುಕೊಂಡಿರುತ್ತಾರೆ. ದ್ವಿಚಕ್ರವಾಹನಗಳು ಹೆಚ್ಚಿರುವ ನಮ್ಮಲ್ಲಂತೂ ಎಷ್ಟೋ ಸಲ ಲಾರಿಬಸ್ಸುಗಳ ಕೆಳಗೆ ಸಿಕ್ಕಿಹಾಕಿಕೊಂಡು ಕಾಲುಗಳು ನಜ್ಜುಗುಜ್ಜಾಗಿ ನರಳಾಡುತ್ತಿರುವವರನ್ನು ಹೈವೇಗಳಲ್ಲಿ ಹೆಚ್ಚಾಗಿ ಓಡಾಡುವವರು ಒಮ್ಮೆಯಾದರೂ ನೋಡಿರುತ್ತಾರೆ. ಇನ್ನು ಕಟ್ಟಡಗಳು ಕುಸಿದೊ ಇಲ್ಲವೆ ಕಾರ್ಖಾನೆಗಳಲ್ಲಾಗುವ ಅವಘಡದಲ್ಲಿಯೊ ಜನ ತಮ್ಮ ತಪ್ಪಿಲ್ಲದೆ ಅಂಗಾಂಗಗಳನ್ನು ಕಳೆದುಕೊಂಡಿರುತ್ತಾರೆ. ಈಗೀಗ ಕೃಷಿಯಲ್ಲಿಯೂ ಯಂತ್ರಗಳ ಬಳಕೆ ಜಾಸ್ತಿ ಆಗಿ ರೈತನೂ ಈಗ ಮೊದಲಿನಷ್ಟು ಸುರಕ್ಷಿತನಾಗಿಲ್ಲ. ಇನ್ನು ನಿಸರ್ಗವೆ ಒಮ್ಮೊಮ್ಮೆ ಕೈಕಾಲು ಮುರಿಯುತ್ತದೆ - ಭೂಕಂಪದ ರೂಪದಲ್ಲಿ, ಚಂಡಮಾರುತ, ಸುಂಟರಗಾಳಿಗಳ ವೇಷದಲ್ಲಿ. ಈ ಹಿನ್ನೆಲೆಯಲ್ಲಿ ನಾವು ವಿಜ್ಞಾನ ನಿರ್ಭಾಗ್ಯ ಮಾನವನ ಜೀವನವನ್ನು ಸಹನೀಯ ಮಾಡಲು ಸಹಕರಿಸುತ್ತಿರುವುದನ್ನು ಗಮನಿಸಬೇಕು. ಮೊದಲನೆ ವಿಶ್ವಯುದ್ಧದ ಸಮಯದಲ್ಲಿ ವಿಮಾನಗಳು ಶತ್ರುಸೈನ್ಯದ ಮೇಲೆ ದಾಳಿಮಾಡಲು ಅತ್ಯುತ್ತಮ ಸಾಧನಗಳು ಎಂಬಂತೆ ಬಳಕೆಗೆ ಬಂದಿದ್ದು. ಆದರೆ ಅದೇ ವಿಮಾನಯಾನ ಇವತ್ತು "ಅತಿ ಸುರಕ್ಷಿತ ಸಾರಿಗೆ ವ್ಯವಸ್ಥೆ" ಎಂದು ಹೆಸರಾಗಿದೆ. ಈಗ ಇರಾಕಿನಲ್ಲಿನ ಯುದ್ಧವೂ ಪಾಶ್ಚಾತ್ಯ ದೇಶಗಳಲ್ಲಿ ಅನೇಕ ಹೊಸ ವೈಜ್ಞಾನಿಕ ಪ್ರಯೋಗಗಳಿಗೆ ಮತ್ತು ಅವುಗಳ ಸಾರ್ವಜನಿಕ ಅಳವಡಿಕೆಗೆ ಕಾರಣವಾಗುತ್ತಿದೆ. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಈ Speedy ಅಳವಡಿಕೆಗೆ ಮತ್ತು ಎಷ್ಟೋ ಸಂಶೋಧನೆಗಳಿಗೆ ಯುದ್ಧವೇ ಕಾರಣವಾಗುವುದು ಮಾತ್ರ ಚರಿತ್ರೆಯ ಕ್ರೂರವ್ಯಂಗ್ಯ; ವಿಷಾದನೀಯ.