Apr 28, 2007

ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮೇ 11, 2007 ರ ಸಂಚಿಕೆಯಲ್ಲಿನ ಲೇಖನ)

  1. ಕಳ ಬೇಡ
  2. ಕೊಲ ಬೇಡ
  3. ಹುಸಿಯ ನುಡಿಯಲು ಬೇಡ
  4. ಮುನಿಯ ಬೇಡ
  5. ಅನ್ಯರಿಗೆ ಅಸಹ್ಯ ಪಡಬೇಡ
  6. ತನ್ನ ಬಣ್ಣಿಸ ಬೇಡ
  7. ಇದಿರ ಹಳಿಯಲು ಬೇಡ

ಇವು ಅಂತರಂಗ ಮತ್ತು ಬಹಿರಂಗ ಶುದ್ಧಿಗಾಗಿ ಬಸವಣ್ಣ ಇತ್ತ ಸಪ್ತ ಸೂತ್ರಗಳು. ಬೈಬಲ್ ಕತೆಗಳ ಪ್ರಕಾರ, ಇದೇ ತರಹದ "ಹತ್ತು ಕಟ್ಟಳೆಗಳು" (Ten Commandments) ಯಹೂದಿ ಮೂಲದ ಮೋಸಸ್‌ಗೆ ದೇವರೇ ಬರೆದು ಕೈಗಿತ್ತನೆಂದು ಪ್ರತೀತಿ. ಅವು ಯಾವುವೆಂದರೆ:
  1. ನಿಮ್ಮನ್ನು ಈಜಿಪ್ಟಿನ ಗುಲಾಮಿತನದಿಂದ ಪಾರು ಮಾಡಿ ಇಸ್ರೇಲ್‌ಗೆ ಕರೆತಂದ ದೇವರು ನಾನೇ ಹಾಗೂ ನಿಮಗೆ ನನಗಿಂತ ಬೇರೆ ದೇವರು ಇರಬಾರದು
  2. ನೀವು ನಿಮಗಾಗಿ ಯಾವುದೇ ಮೂರ್ತಿ-ವಿಗ್ರಹಗಳನ್ನು ಮಾಡಿಕೊಳ್ಳ ಕೂಡದು
  3. ನೀವು ದೇವರ ಹೆಸರನ್ನು ಯಾವುದೆ ಕಾರಣಕ್ಕೂ ದುರುಪಯೋಗ ಪಡಿಸಿಕೊಳ್ಳಬಾರದು
  4. ನೀವು ದೈವ ಪ್ರಾರ್ಥನೆಗೆಂದು ಇರುವ ವಿಶ್ರಾಂತಿ ದಿನವನ್ನು (ಸಬ್ಬತ್) ಪಾಲಿಸಬೇಕು ಹಾಗು ಅದನ್ನು ಪವಿತ್ರವಾಗಿಟ್ಟುಕೊಳ್ಳಬೇಕು
  5. ಹೆತ್ತವರನ್ನು ಗೌರವಿಸಬೇಕು
  6. ಯಾರನ್ನೂ ಕೊಲೆ ಮಾಡಬಾರದು
  7. ವ್ಯಭಿಚಾರ ಮಾಡ ಬಾರದು
  8. ಕಳ್ಳತನ ಮಾಡ ಬಾರದು
  9. ಸುಳ್ಳು ಸಾಕ್ಷ್ಯ ಹೇಳ ಬಾರದು
  10. ನೆರೆಯವನ ಹೆಂಡತಿಯನ್ನಾಗಲಿ, ಆತನ ಆಸ್ತಿಯನ್ನಾಗಲಿ ಅಪೇಕ್ಷಿಸಬಾರದು

ಇವನ್ನು ದೈವಾಜ್ಞೆಯೆಂತಲೊ, ಕಟ್ಟಳೆಯೆಂತಲೊ ಎಂದುಕೊಳ್ಳುವುದಕ್ಕಿಂತ, ಮೂರನೆಯ ಮತ್ತು ಕೊನೆಯ ಆರು ಸೂತ್ರಗಳು ನಾಗರಿಕ ಸಮಾಜದ ಉನ್ನತಿ ಮತ್ತು ಶಾಂತಿಗಾಗಿ ಹಾಗು ಅಂತರಂಗ, ಬಹಿರಂಗ ಶುದ್ಧಿಗಾಗಿ ಎಲ್ಲರೂ ಮತಾತೀತವಾಗಿ ಒಪ್ಪಬಹುದಾದ, ಪಾಲಿಸಬಹುದಾದ ಸೂತ್ರಗಳು ಎಂದು ಭಾವಿಸುವುದೆ ಸರಿಯಾದದ್ದು. ಬಸವಣ್ಣ ಹೇಳುವುದು ಇದನ್ನೇ ಅಲ್ಲವೆ?

ಆಧ್ಯಾತ್ಮ ಪ್ರಪಂಚದಲ್ಲಿ ತೊಡಗಿಕೊಂಡ ಅನುಭಾವಿಗಳಿಗೆ, ನಿಜಜೀವನದ ಸವಾಲುಗಳಿಂದ ದೂರ ಉಳಿದವರಿಗೆ ತಾವು ಇನ್ನೊಬ್ಬರಿಗೆ ಕೇಡು ಬಗೆಯದೆ ಬದುಕಲು ಮೇಲಿನ ಸರಳವಾದ ಸೂತ್ರಗಳೆ ಸಾಕು. ಆದರೆ, ವೈರುಧ್ಯಗಳಿಂದ ತುಂಬಿದ ಜೀವನದಲ್ಲಿ, ಹೆಜ್ಜೆ ಹೆಜ್ಜೆಗೆ ಸಿನಿಕತೆ ಹೆಚ್ಚಿಸುವಂತಹ ಘಟನೆಗಳೆ ನಡೆಯುತ್ತಿರುವ ಸಮಯದಲ್ಲಿ ಮೇಲಿನ ಎಲ್ಲಾ ಹೇಳಿಕೆಗಳು ಜನಸಾಮಾನ್ಯರಿಗೆ ಕೇವಲ ಹೇಳಿಕೆಗಳಾಗಿ ಉಳಿದುಬಿಡುತ್ತವೆ. ಮಾಡಬಾರದ್ದು ಮಾಡಿ ಯಶಸ್ಸು ಸಾಧಿಸಿದವರ ಹಾಗೂ ನ್ಯಾಯವಾಗಿ ಬದುಕಿ ಸೋಲುಂಡವರ ಉದಾಹರಣೆಗಳು ಕಣ್ಣ ಮುಂದೆ ಬಂದಾಗ ಜನ ಹಿಂಬಾಲಿಸುವುದು ಗೆದ್ದವರನ್ನೆ ಹೊರತು ನ್ಯಾಯ ನೀತಿ ಎಂದುಕೊಂಡು ಸೋತವರನ್ನು ಅಲ್ಲ. ಅದು ವಾಸ್ತವ. ಹಾಗಿರುವಾಗ, ನ್ಯಾಯವಾಗಿಯೆ ಬದುಕಿ ಎಂದು ಜನರನ್ನು ಹುರಿದುಂಬಿಸುವುದು ಹೇಗೆ? ಜನರನ್ನು, ವಿಶೇಷವಾಗಿ ಯುವಕರನ್ನು ಆಶಾವಾದಿಗಳಾಗಿರುವಂತೆ, ನ್ಯಾಯ-ನೈತಿಕತೆ ಪಾಲಿಸುವಂತೆ, ಶ್ರಮಜೀವಿಗಳಾಗುವಂತೆ, ತಮ್ಮ ಪ್ರಯತ್ನವನ್ನು ನಿಲ್ಲಿಸದಂತೆ, ಸುತ್ತಮುತ್ತಲ ಜನ ಸ್ವಾರ್ಥಿಗಳಾಗಿದ್ದರೂ ಸಮಾಜದ ಒಳಿತಿಗಾಗಿಯೆ ಚಿಂತಿಸುವಂತೆ ಮಾಡುವುದು ಹೇಗೆ? ಪ್ರಪಂಚ ಎಷ್ಟೇ ಕೆಟ್ಟದ್ದಿರಲಿ ನಾವು ಮಾತ್ರ ಒಳ್ಳೆಯದನ್ನು ಮಾಡುತ್ತ ಮುಂದುವರಿಯಬೇಕು ಎಂದು ಜನರಿಗೆ ಸರಳವಾಗಿ, ಪ್ರಾಮಾಣಿಕವಾಗಿ ಹೇಳುವುದು ಹೇಗೆ?

ಇದೇ ತರಹದ ಪ್ರಶ್ನೆಗಳನ್ನು 1968 ರಲ್ಲಿ 19 ವರ್ಷದ ಕಾಲೇಜು ಹುಡುಗನೊಬ್ಬ ಹಾಕಿಕೊಂಡ. ಆತನ ಹೆಸರು ಕೆಂಟ್ ಕೀತ್. ಆತ ಓದುತ್ತಿದ್ದದ್ದು ಅಮೇರಿಕದ ಅತಿ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ. ಅದು ಅರವತ್ತರ ದಶಕ. ಅಮೇರಿಕದ ಇತಿಹಾಸದಲ್ಲಿ ವಿಯೆಟ್ನಾಮ್ ಯುದ್ಧದಿಂದ ಹಿಡಿದು ಅವರದೇ ನೆಲದಲ್ಲಿ ಶುರುವಾದ ನಾಗರಿಕ ಹಕ್ಕುಗಳ ಹೋರಾಟದ ಸಮಯ. ಎಲ್ಲೆಲ್ಲೂ ಕ್ಷೋಭೆ; ಸಂಘರ್ಷ. ಚಳವಳಿಯಲ್ಲಿ ತೊಡಗಿದ್ದ ಕಾಲೇಜು ವಿದ್ಯಾರ್ಥಿಗಳು ಕಟ್ಟಡಗಳನ್ನು ಆಕ್ರಮಿಸಿಕೊಂಡು, ಪೋಲಿಸರತ್ತ ಕಲ್ಲು ಎಸೆಯಲು ಹಿಂದೆ ಮುಂದೆ ನೋಡದ ವರ್ಷಗಳು. ಆದರೆ ಈ ಹಿಂಸಾತ್ಮಕ ಸಂಘರ್ಷವನ್ನು ಇಷ್ಟ ಪಡದ ಕೆಂಟ್ ಅನೇಕ ಕಡೆ ಇದೇ ವಿಚಾರವಾಗಿ ಭಾಷಣ ಮಾಡುತ್ತಿದ್ದ. ಪರರ ಒಳಿತುಗಳನ್ನು ಕುರಿತು ಆಲೋಚಿಸುವಂತೆಯೂ, ಇಡೀ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುವುದಕ್ಕಿಂತ ವ್ಯವಸ್ಥೆಯ ಮುಖಾಂತರವೆ ಸಾಧಿಸಬೇಕಾದ ಬದಲಾವಣೆಗಳನ್ನು ಸಾಧಿಸಿಕೊಳ್ಳಬೇಕೆಂದು ಹೇಳುತ್ತಿದ್ದ. ಆಗ ಆತ ಗಮನಿಸಿದ ಇನ್ನೊಂದು ಮುಖ್ಯ ಅಂಶವೆಂದರೆ, ಸ್ವಲ್ಪ ಕಷ್ಟವಾದರೆ ಅಥವ ಸೋಲು ಎದುರಾದರೆ ಸಾಕು ಆದರ್ಶವಾದಿ, ಕ್ರಿಯಾಶೀಲ, ಸಜ್ಜನ ಯುವಕರು ಬೇಗನೆ ಸೋಲೊಪ್ಪಿಕೊಂಡು ಸುಮ್ಮನಾಗಿಬಿಡುತ್ತಿದ್ದರು. ಮತ್ತೆ ಪ್ರಯತ್ನಿಸುತ್ತಿರಲಿಲ್ಲ. ಪ್ರಯತ್ನಿಸುತ್ತಲೆ ಇರಲು ಅವರಿಗೆ ಆಳವಾದ, ಆತ್ಮಕ್ಕೆ ಇಳಿಯುವಂತಹ ಪ್ರಬಲವಾದ ಕಾರಣಗಳು ಬೇಕಾಗಿದ್ದವು.

ಇದನ್ನೆಲ್ಲ ಗಮದಲ್ಲಿಟ್ಟುಕೊಂಡು ಕೆಂಟ್ ತನ್ನ ಪ್ರೌಢಶಾಲೆಯ ವಿದ್ಯಾರ್ಥಿ ನಾಯಕರಿಗೆ "ಮೌನ ಕ್ರಾಂತಿ: ವಿದ್ಯಾರ್ಥಿ ಸಂಘಗಳಲ್ಲಿ ಕ್ರಿಯಾಶೀಲ ನಾಯಕತ್ವ" ಎನ್ನುವ ಬುಕ್‌ಲೆಟ್ ಅಥವ ಕೈಪಿಡಿ ಒಂದನ್ನು ಬರೆದ. ಅದನ್ನು 1968 ರಲ್ಲಿ ಹಾರ್ವರ್ಡ್ ಸ್ಟೂಡೆಂಟ್ ಏಜನ್ಸೀಸ್ ಪ್ರಕಟಿಸಿತು. ಆ ಕೈಪಿಡಿಯ ಎರಡನೇ ಅಧ್ಯಾಯದಲ್ಲಿ ಆತ ಜೀವನದ ಅತಿ ಮುಖ್ಯ ಸವಾಲಿನ ಬಗ್ಗೆ ಬರೆದಿದ್ದ: "ಬೇರೆಯವರು ನಮ್ಮ ಒಳ್ಳೆಯತನವನ್ನು ಗೌರವಿಸದಿದ್ದರೂ ನಾವು ಮಾತ್ರ ಯಾವಾಗಲೂ ಯಾವುದು ಸರಿಯಾದದ್ದೊ, ಒಳ್ಳೆಯದ್ದೊ, ನಿಜವಾದದ್ದೊ ಅದನ್ನೆ ಮಾಡಬೇಕು," ಎನ್ನುವುದೆ ಆ ಸವಾಲು. ಅದಕ್ಕೆ ಆತ "Paradoxical Commandments" (ವೈರುದ್ಧ್ಯದ, ವಿರೋಧಾಭಾಸದ, ವ್ಯತಿರಿಕ್ತ, ವಿರುದ್ಧೋಕ್ತಿ ಕಟ್ಟಳೆಗಳು) ಎಂದು ಹೆಸರಿಸಿದ. ಇಲ್ಲಿನ ವಿರೋಧಾಭಾಸ ಏನೆಂದರೆ, ಬದುಕಿನಲ್ಲಿ ನಮ್ಮ ನಿಯಂತ್ರಣದಲ್ಲಿಲ್ಲದ ಅನೇಕವು ನಡೆಯುತ್ತಲೆ ಇರುತ್ತವ್: ಸರ್ಕಾರ, ಸಮಾಜ, ಜನರ ಮೋಸ, ಶೋಷಣೆ, ಯುದ್ಧ ಇತ್ಯಾದಿ. ಆದರೆ ನಾವು ಏನು ಮಾಡಬೇಕು, ಹೇಗೆ ಮಾಡಬೇಕು ಎನ್ನುವುದು ನಮ್ಮ ನಿಯಂತ್ರಣದಲ್ಲಿರುವುದು. ಸಮಾಜದ ಕೆಟ್ಟದ್ದಕ್ಕೆ ನಮ್ಮ ಒಳ್ಳೆಯತನ ಉತ್ತರವಾಗಬೇಕೆ ಹೊರತು ಕೆಟ್ಟದ್ದನ್ನು ಮಾಡುವುದಲ್ಲ. ಇಂತಹ ವೈರುದ್ಧ್ಯಗಳನ್ನೆಲ್ಲ ಯೋಚಿಸಿ ಕೆಂಟ್ ಕೀತ್ ಎಂಬ ಕೇವಲ 19 ವರ್ಷದ ಹುಡುಗ ಬರೆದ ಸರಳವಾದ, ಆಳವಾದ, ಜೀವನಪ್ರೀತಿಯ ಸಾಲುಗಳು ಹೀಗಿವೆ:

  1. ಜನರು ತರ್ಕಹೀನರು, ಯುಕ್ತಾಯುಕ್ತ ಪರಿಜ್ಞಾನ ಇಲ್ಲದವರು, ಹಾಗೂ ಸ್ವಾರ್ಥಿಗಳು.
    ಏನೇ ಇರ್‍ಲಿ, ಅವರನ್ನು ಪ್ರೀತಿಸಿ..
  2. ನೀವು ಒಳ್ಳೆಯದನ್ನು ಮಾಡಿದರೆ ಜನ ನೀವು ಸ್ವಾರ್ಥದ ದುರುದ್ದೇಶಗಳನ್ನಿಟ್ಟುಕೊಂಡು ಮಾಡುತ್ತಿದ್ದೀರಿ ಎಂದು ನಿಂದಿಸುತ್ತಾರೆ.
    ಏನೇ ಹೇಳ್ಲಿ, ಒಳ್ಳೆಯದನ್ನು ಮಾಡಿ.
  3. ನೀವು ಜೀವನದಲ್ಲಿ ಯಶಸ್ವಿಯಾದರೆ ನಿಮಗೆ ಖೋಟಾ ಸ್ನೇಹಿತರು, ನಿಜವಾದ ಶತೃಗಳು ಸಿಗುತ್ತಾರೆ.
    ಆದ್ರೂ, ಯಶಸ್ವಿಯಾಗಿ.
  4. ನೀವು ಇಂದು ಮಾಡುವ ಒಳ್ಳೆಯ ಕೆಲಸವನ್ನು ಜನ ನಾಳೆ ಮರೆತುಬಿಡುತ್ತಾರೆ.
    ಆದ್ರೂ, ಒಳ್ಳೆಯದನ್ನು ಮಾಡಿ
  5. ಪ್ರಾಮಾಣಿಕತೆ ಮತ್ತು ಮುಕ್ತಮನಸ್ಸು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ.
    ಏನೇ ಆಗ್ಲಿ, ಪ್ರಾಮಾಣಿಕರಾಗಿ, ಮುಕ್ತಮನಸ್ಸಿನಿಂದ ಇರಿ
  6. ಅತ್ಯುನ್ನತವಾದ ದೊಡ್ಡದೊಡ್ಡ ಆಲೋಚನೆಗಳ ಉನ್ನತ ಮನುಷ್ಯರನ್ನು ಕೀಳು ಆಲೋಚನೆಗಳ ಸಣ್ಣ ಜನರು ಹೊಡೆದುರುಳಿಸಬಹುದು.
    ಆದ್ರೂ, ದೊಡ್ಡದಾಗಿಯೆ ಆಲೋಚಿಸಿ
  7. ಜನ ದುರ್ಬಲರ, ದಲಿತರ ಬಗ್ಗೆ ವಿಶ್ವಾಸ ತೋರುತ್ತಾರೆ, ಆದರೆ ಸಬಲರನ್ನೆ ಹಿಂಬಾಲಿಸುತ್ತಾರೆ.
    ಹಾಗಿದ್ರೂ, ಕೆಲವಾದರೂ ದಲಿತ-ದುರ್ಬಲರ ಪರ ಹೋರಾಡಿ
  8. ನೀವು ವರ್ಷಗಳ ಕಾಲ ಕಟ್ಟಿದ್ದು ರಾತ್ರೋರಾತ್ರಿ ಹಾಳುಗೆಡವಲ್ಪಡಬಹುದು.
    ಏನೇ ಆಗ್ಲಿ, ಕಟ್ಟಿಯೇ ಕಟ್ಟಿ
  9. ಜನಕ್ಕೆ ನಿಜವಾಗಲೂ ಸಹಾಯ ಬೇಕು, ಆದರೆ ನೀವು ಅವರಿಗೆ ಸಹಾಯ ಮಾಡಿದರೆ ಅವರು ನಿಮ್ಮ ಮೇಲೆಯೆ ಆಕ್ರಮಣ ಮಾಡಬಹುದು.
    ಆದ್ರೂ, ಜನಕ್ಕೆ ಸಹಾಯ ಮಾಡಿ
  10. ನಿಮ್ಮೆಲ್ಲ ಒಳ್ಳೆಯದನ್ನು ನೀವು ಜಗತ್ತಿಗೇ ನೀಡಿದ್ದರೂ ಅವರು ನಿಮ್ಮ ಹಲ್ಲುದುರಿಸಬಹುದು.
    ಆದ್ರೂ, ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ.
ಕೆಂಟ್ ಈ ಕೈಪಿಡಿಯನ್ನು 1972 ರಲ್ಲಿ ಮತ್ತಷ್ಟು ಪರಿಷ್ಕರಣೆ ಮಾಡಿದ. ಅದರ 30 ಸಾವಿರ ಪ್ರತಿಗಳನ್ನು ಈ ಸಾರಿ ಅಮೇರಿಕದ ಸೆಕಂಡರಿ ಶಾಲೆ ಪ್ರಿನ್ಸಿಪಾಲರ ರಾಷ್ಟ್ರೀಯ ಒಕ್ಕೂಟ ಪ್ರಕಟಿಸಿತು. ಅದಾದ ಮೇಲೆ ಹಾರ್ವರ್ಡ್‌ನಲ್ಲಿ ಶಿಕ್ಷಣ ಮುಗಿಸಿದ ಕೆಂಟ್, ತನ್ನ ಹುಟ್ಟೂರಾದ ಹವಾಯಿ ದ್ವೀಪದ ಹೊನಲುಲುಗೆ ವಾಪಸು ಬಂದು, ಸರ್ಕಾರಿ ಕೆಲಸಕ್ಕೆ ಸೇರಿಕೊಂಡು, ಇನ್ನೂ ಬಹಳಷ್ಟು ಡಿಗ್ರಿ ಪಡೆಯುತ್ತ, ಮದುವೆ ಮಾಡಿಕೊಂಡು, ಪ್ರಪಂಚ ಸುತ್ತುತ್ತ, ಮೂರು ಮಕ್ಕಳನ್ನು ದತ್ತು ತೆಗೆದುಕೊಂಡು, ಅಲ್ಲಲ್ಲಿ ಭಾಷಣಗಳನ್ನು ಮಾಡುತ್ತ, ಮುಂದಿನ 25 ವರ್ಷಗಳ ಜೀವನವನ್ನು ಕ್ರಿಯಾಶೀಲವಾಗಿ ಕಳೆದರು. ಇದೇ ಸಮಯದಲ್ಲಿ ಅವರ ಕೈಪಿಡಿಯಲ್ಲಿನ ಒಂದೇ ಒಂದು ಪುಟ, ವಿರುದ್ಧೋಕ್ತಿ ಕಟ್ಟಲೆಗಳು, ಅವರಿಗಿಂತ ವೇಗವಾಗಿ, ಕರ್ತೃವಿನ ಹೆಸರಿಲ್ಲದೆ ಪ್ರಪಂಚದಲ್ಲೆಲ್ಲ ಹರಡುತ್ತಿದ್ದವು. ಮನೆ-ಕಚೇರಿ-ಕಾಲೇಜು ಗೋಡೆ-ಬೀರುಗಳ ಮೇಲೆ, ಇಂಟರ್‌ನೆಟ್‌ನಲ್ಲಿ, ಎಲ್ಲೆಂದರಲ್ಲಿ ಈ ಹತ್ತು+ಹತ್ತು ಸಾಲುಗಳು ಕಾಣಿಸುತ್ತ ಹೋದವು. ಇದು ಹೇಗೋ ಮದರ್ ಥೆರೆಸರ ಕಲ್ಕತ್ತದ ಶಿಶು ಭವನದಲ್ಲಿ ಪದ್ಯ ರೂಪದಲ್ಲಿ ಗೋಡೆಯ ಮೇಲೆ ಕಾಣಿಸಿಕೊಂಡಿತು. ಇದು ಥೆರೆಸಾರವರೆ ಬರೆದಿರುವ ಪದ್ಯ ಎಂದು ಜನ ಭಾವಿಸಿಬಿಟ್ಟರು. ಮದರ್ ಥೆರೆಸ ಸಾಯುವುದಕ್ಕಿಂತ ಎರಡು ವರ್ಷಗಳ ಹಿಂದೆ ಪ್ರಕಟವಾದ ಅವರ ಮೇಲಿನ ಪುಸ್ತಕವೊಂದರಲ್ಲಿ ಹಾಗೆಯೇ ಬಂದು ಬಿಟ್ಟಿತು.

1997 ರಲ್ಲಿ ಮದರ್ ಥೆರೆಸ ತೀರಿಕೊಂಡರು. ಆ ಸಮಯದಲ್ಲಿ ಕೆಂಟ್ ತಮ್ಮ ರೋಟರಿ ಕ್ಲಬ್ಬಿನ ಮೀಟಿಂಗ್‌ಗೆ ಹೋಗಿದ್ದರು. ಅಲ್ಲಿ ಅವರ ಸಹಸದಸ್ಯರೊಬ್ಬರು ಮದರ್‌ರ ನೆನಪಿಗಾಗಿ ಮದರ್ ಥೆರೆಸ ರಚಿಸಿರುವ ಎನಿವೆ ಪದ್ಯವನ್ನು ಓದುವುದಾಗಿ ಹೇಳಿ ಅದನ್ನು ಓದಿದರು. ಅದು ಸ್ವತಃ ಕೆಂಟ್ ಬರೆದಿದ್ದ ಪ್ಯಾರಡಾಕ್ಸಿಕಲ್ ಕಮ್ಯಾಂಡ್‌ಮೆಂಟ್ಸ್!!! ಕೆಂಟ್‌ರಿಗೆ ಆಘಾತವಾಗಿದ್ದು ಸಹಜ. ಅದಾದ ಮೇಲೆ ಕೆಂಟ್ ಅದನ್ನು ತಾವೆ ಬರೆದಿದ್ದು ಎಂದು ಘೋಷಿಸಿಕೊಂಡು, ಅದನ್ನೇ ವಿಸ್ತರಿಸಿ "Anyway – The Paradoxical Commandments – Finding Personal Meaning in a Crazy World" ಎಂಬ ಪುಸ್ತಕವನ್ನು 2002 ರಲ್ಲಿ ಪ್ರಕಟಿಸಿದರು. ಅದಾದ ಮೇಲೆ "Do It Anyway" ಎಂಬ ಇನ್ನೊಂದು ಪುಸ್ತಕವನ್ನೂ ಬರೆದರು. ತಮ್ಮ ಸುತ್ತಮುತ್ತಲಿನ ಪ್ರಪಂಚ ಎಲ್ಲವನ್ನೂ ಭ್ರಷ್ಟ ಮಾಡಲು ಹವಣಿಸುತ್ತಿದ್ದರೂ ತಾವು ಭ್ರಷ್ಟರಾಗದೆ ಇರಲು ಪ್ರಪಂಚದ ನಾನಾ ಕಡೆಯ ಲಕ್ಷಾಂತರ ಜನ ಇಂದು ಈ ಪುಸ್ತಕಗಳನ್ನು ಓದುತ್ತಿದ್ದಾರೆ. ಸಿನಿಕ ಪ್ರಪಂಚದಲ್ಲಿ ತಾವು ಒಳ್ಳೆಯದನ್ನು ಮಾತ್ರ ಮಾಡುತ್ತಿರಲು ತೀರ್ಮಾನಿಸುತ್ತಿದ್ದಾರೆ. ಇದನ್ನು ಓದುವ ಅನೇಕರಿಗೆ ಆಧ್ಯಾತ್ಮಿಕ ಪಯಣದಲ್ಲಿ ಪಾಲ್ಗೊಂಡಂತೆ.


(ಸಂಪಾದಕರ ನೋಟ್:)
ಬನ್ನಿ, ನಾವೂ ಈ ಪಯಣದಲ್ಲಿ ಪಾಲ್ಗೊಳ್ಳೋಣ.

ಪ್ರಪಂಚದ ಕೆಟ್ಟದ್ದನ್ನು, ದುಷ್ಟತೆಯನ್ನು ನಮ್ಮಲ್ಲಿರುವ ಒಳ್ಳೆಯತನ ಹಾಗು ಉತ್ತಮ ಗುಣಗಳಿಂದ ಎದುರಿಸಿದಾಗ ಹುಟ್ಟುವ ವಿವೇಕ, ಘನತೆ ಮತ್ತು ಆತ್ಮಸಂತೋಷವನ್ನು ಕೆಂಟ್ ಕೀತ್‌ರ "Anyway" ಪುಸ್ತಕ ಸರಳವಾಗಿ, ಉದಾಹರಣೆಗಳ ಮೂಲಕ ನಿರೂಪಿಸುತ್ತದೆ. ಜೀವನದ ಬಗ್ಗೆ ಆಶಾವಾದವನ್ನು ಕಳೆದುಕೊಳ್ಳದೆ, ನಮ್ಮಲ್ಲಿನ ಒಳ್ಳೆಯತನಗಳು ಬಾಹ್ಯ ಒತ್ತಡಗಳಿಂದ ನಷ್ಟವಾಗದಂತೆ ಕಾಪಾಡಿಕೊಳ್ಳಲು, ಇನ್ನೂ ಹೆಚ್ಚಿನ ನೈತಿಕತೆಯಿಂದ ಬಾಳುವಂತೆ, ಬದುಕನ್ನು ಗಾಢವಾಗಿ ಪ್ರೀತಿಸುವಂತೆ ಹುರಿದುಂಬಿಸುವ ಈ ಪುಸ್ತಕವನ್ನು ರವಿಯವರು ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ. ಮುಂದಿನ ವಾರದಿಂದ ಅದನ್ನು ಧಾರಾವಾಹಿಯಾಗಿ ನಿಮ್ಮ ಮೆಚ್ಚಿನ ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟಿಸುತ್ತಿದ್ದೇವೆ. ತಾವು ಎಂದಿನಂತೆ ಅದನ್ನು ಒಲವಿನಿಂದ ಸ್ವೀಕರಿಸುತ್ತೀರಿ ಎನ್ನುವ ನಂಬಿಕೆ ನಮ್ಮದು.

Apr 22, 2007

ಈ ಅಂಧಕಾರ ನಮ್ಮನ್ನು ದೀನರನ್ನಾಗಿ ಮಾಡಿದೆ...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮೇ 4, 2007 ರ ಸಂಚಿಕೆಯಲ್ಲಿನ ಲೇಖನ)

ಕಳೆದ ಗಾಂಧಿ ಜಯಂತಿಯಂದು ಮತಿಗೆಟ್ಟವನೊಬ್ಬ ಬಂದೂಕು ಹಿಡಿದು ನಾಗರಿಕ ಸಮಾಜದ ಎಲ್ಲಾ ರೀತಿಯ ಆಮಿಷಗಳನ್ನು ನಿರಾಕರಿಸಿ ಬದುಕುತ್ತಿರುವ ಅಮೇರಿಕದಲ್ಲಿನ ಆಮಿಷ್ ಜನರ ಶಾಲೆಯೊಂದಕ್ಕೆ ನುಗ್ಗಿ 6 ರಿಂದ 13 ವರ್ಷ ವಯಸ್ಸಿನ 5 ಜನ ಹೆಣ್ಣು ಮಕ್ಕಳನ್ನು ಕೊಂದ ಬಗ್ಗೆ ಬರೆದ ಲೇಖನದಲ್ಲಿ ಹೀಗೆ ಬರೆದಿದ್ದೆ:

"ಬಂದೂಕು ಹೊಂದಿರುವುದು ಹೆಮ್ಮೆ ಮತ್ತು ಹಕ್ಕು ಎನ್ನುವ ಅಮೇರಿಕಾದಲ್ಲಿನ ಸಂಸ್ಕೃತಿಯಿಂದಾಗಿ ಕೆಲವೊಂದು ಮತಿಗೆಟ್ಟ ವಿಕೃತ ಮನಸ್ಸಿನ ಹುಡುಗರು ಹಾಗು ವಯಸ್ಕರು ಸುಲಭವಾಗಿ ಸಿಕ್ಕುವ ಗನ್ ಹಿಡಿದು ಆಗಾಗ್ಗೆ ಶಾಲೆ ಕಾಲೇಜುಗಳಿಗೆ ನುಗ್ಗಿ ಗುಂಡು ಹಾರಿಸಿ ಬೇರೆಯವರನ್ನು ಸಾಯಿಸುತ್ತಿರುತ್ತಾರೆ. ಕೊಲರ್‍ಯಾಡೊ ರಾಜ್ಯದ ಕೊಲಂಬೈನ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಏಪ್ರಿಲ್ 20, 1999 ರಂದು ತಮ್ಮ ಶಾಲೆಗೆ ನುಗ್ಗಿ ೧೨ ಜನ ವಿದ್ಯಾರ್ಥಿಗಳನ್ನು ಹಾಗು ಒಬ್ಬ ಉಪಾಧ್ಯಾಯರನ್ನು ಕೊಂದಿದ್ದು ತಮ್ಮ ದೇಶದಲ್ಲಿನ ಬಂದೂಕು ಸಂಸ್ಕೃತಿಯ ಬಗ್ಗೆ ಇಲ್ಲಿನ ಜನ ಗಂಭೀರವಾಗಿ ಚಿಂತಿಸುವಂತೆ ಮಾಡಿತ್ತು. ಆ ಘಟನೆಯ ಹಿನ್ನೆಲೆಯಲ್ಲಿ ಮೈಕೆಲ್ ಮೂರ್ ತೆಗೆದ 'ಬೌಲಿಂಗ್ ಫಾರ್ ಕೊಲಂಬೈನ್' ಸಾಕ್ಷ್ಯಚಿತ್ರ ಆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದದ್ದಲ್ಲದೆ ಅನೇಕ ಚರ್ಚೆಗಳನ್ನು ಹುಟ್ಟಿಹಾಕಿತ್ತು. ಇದೇ ಗಾಂಧಿ ಜಯಂತಿಯಂದು ಆದ ಮೇಲೆ ವಿವರಿಸಿದ ರಕ್ತಪಾತ ಮತ್ತೊಮ್ಮೆ ಅಂತಹ ಚರ್ಚೆಯನ್ನು ಹುಟ್ಟುಹಾಕಿರುವುದಲ್ಲದೆ ಇಡೀ ಅಮೇರಿಕಕ್ಕೆ ತಮ್ಮ ಪಾಡಿಗೆ ತಾವಿದ್ದ ಒಂದು ವಿಶಿಷ್ಟ ಪಂಗಡದ ಪರಿಚಯವನ್ನು ದೊಡ್ಡ ರೀತಿಯಲ್ಲಿ ಮಾಡಿಸುತ್ತಿದೆ."

ಮೇಲಿನ ಘಟನೆ ಆಗಿ ಆರು ತಿಂಗಳು ಆಗಿದೆ. ಈಗ ಒಬ್ಬನೆ ಒಬ್ಬ ವ್ಯಕ್ತಿ ಕೈಗೊಳ್ಳುವ ಇಂತಹ ಸಮೂಹ ಕಗ್ಗೊಲೆಗಳ ವಿಷಯದಲ್ಲಿ ವಿಕೃತವಾಗಿ ಇನ್ನೊಬ್ಬ ವಿಕೃತ ದಾಖಲೆ ಬರೆದಿದ್ದಾನೆ. ಇನ್ನೂ ದಕ್ಷಿಣ ಕೊರಿಯಾದ ಪ್ರಜೆಯಾಗಿದ್ದ, ಆದರೆ ಕಳೆದ 15 ವರ್ಷದಿಂದ ಅಮೇರಿಕದಲ್ಲಿಯೇ ವಾಸವಿದ್ದ, ತನ್ನ ಸ್ನಾತಕ ಪದವಿಗಾಗಿ ಇಂಗ್ಲಿಷ್ ಮೇಜರ್ ಓದುತ್ತಿದ್ದ ಆತನ ಹೆಸರು ಸ್ಯೂಂಗ್-ಹ್ಯಿ ಛೊ. ಮೊನ್ನೆ ಏಪ್ರಿಲ್ 16 ರಂದು ಬೆಳ್ಳಂಬೆಳಿಗ್ಗೆ 7:15 ಕ್ಕೆ ಅಮೇರಿಕಾದ ಪೂರ್ವ ಭಾಗದಲ್ಲಿರುವ ವರ್ಜೀನಿಯ ತಾಂತ್ರಿಕ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ಗೆ ನುಗ್ಗಿ ಒಂದು ಹೆಣ್ಣು ಮತ್ತು ಒಂದು ಗಂಡು ವಿದ್ಯಾರ್ಥಿಯನ್ನು ಗುಂಡಿಟ್ಟು ಕೊಂದಿದ್ದಾನೆ. ತಕ್ಷಣ ತನ್ನ ರೂಮಿಗೆ ಹೋಗಿ, ತನ್ನ ಅನೇಕ ಚಿತ್ರಗಳಿರುವ, ತನ್ನನ್ನು ಏಸು ಕ್ರಿಸ್ತನಿಗೆ ಸಮೀಕರಿಸಿಕೊಂಡ, ಶ್ರೀಮಂತಿಕೆ ಮತ್ತು ಲೋಲುಪ್ತ ಮನಸ್ಸಿನ ಜನರ ವಿರುದ್ದ ದೊಡ್ಡ ಭಾಷಣ ಬಿಗಿದ ವಿಡಿಯೊ ತಯಾರಿಸಿ, ತನ್ನ ಇತರ ಬರವಣಿಗೆಗಳ ಪಾರ್ಸೆಲ್ ತೆಗೆದುಕೊಂಡು 9 ಗಂಟೆ ಸುಮಾರಿಗೆ ನ್ಯೂಯಾರ್ಕಿನ NBC ಟಿವಿ ವಿಳಾಸಕ್ಕೆ ಅಂಚೆಗೆ ಹಾಕಿದ್ದಾನೆ.

ನಂತರ ಈ ಹುಚ್ಚ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಸೈನ್ಸ್ ಮತ್ತು ಮೆಕ್ಯಾನಿಕ್ಸ್ ವಿಭಾಗದ ಕಟ್ಟಡಕ್ಕೆ ಹೋಗಿ, ಒಳಗಿನಿಂದ ಹೆಬ್ಬಾಗಿಲಿಗೆ ಚೈನುಗಳನ್ನು ಸುತ್ತಿ, ಸಿಕ್ಕ ಸಿಕ್ಕ ತರಗತಿಗಳಿಗೆ ನುಗ್ಗಿ ವಿದ್ಯಾರ್ಥಿಗಳತ್ತ, ಅಧ್ಯಾಪಕರತ್ತ ಗುಂಡು ಹಾರಿಸಿದ್ದಾನೆ. ಪೀಚಲು ದೇಹದ, ಕುಳ್ಳಗಿನ, ದೈಹಿಕವಾಗಿ ಬಲಶಾಲಿಯಲ್ಲದ, ಅದೇ ತರಗತಿಗಳಲ್ಲಿದ್ದ ಯಾವುದಾದರೂ ಯೂರೋಪಿಯನ್ ಮೂಲದ ಬಲಿಷ್ಠ ಅಮೇರಿಕನ್ ಹುಡುಗಿಯೊಬ್ಬಳು ಅನಾಮತ್ತಾಗಿ ನೆಲಕ್ಕೊಗೆಯಬಲ್ಲಷ್ಟು ದುರ್ಬಲನಾದ ಈತನಿಗೆ ಅಷ್ಟು ಶಕ್ತಿ ಬಂದದ್ದು ಅವನ ಕೈಯಲ್ಲಿದ್ದ 9mm, semi-automatic Glock ಪಿಸ್ತೂಲ್‌ನಿಂದಾಗಿ ಮಾತ್ರ. ಕೆಲವೇ ನಿಮಿಷಗಳಲ್ಲಿ ಐದಾರು ತರಗತಿಗಳಿಗೆ ನುಗ್ಗಿ ಈತನು ಹಾರಿಸಿರಬಹುದಾದ ಗುಂಡುಗಳು ಸುಮಾರು 175 ರಿಂದ 225 ಎಂದು ಅಂದಾಜು. ಫ಼್ರೆಂಚ್ ಭಾಷಾ ತರಗತಿಯೊಂದರಲ್ಲೆ 11 ಜನ ಸತ್ತರೆ, ಜರ್ಮನ್ ಭಾಷಾ ತರಗತಿಯಲ್ಲಿ ಬದುಕುಳಿದವರು ಕೇವಲ 4 ಜನ. ಇವನ ಎಷ್ಟು ನೇರವಾಗಿ, ಹತ್ತಿರದಿಂದ ಗುಂಡು ಹೊಡೆದಿದ್ದಾನೆಂದರೆ, ಕೆಲವೇ ಹೊತ್ತಿನಲ್ಲಿ 30 ಜನರ ಪ್ರಾಣ ತೆಗೆದಿದ್ದಾನೆ. ಕೊನೆಗೆ ಪೋಲಿಸರು ಬರುವಷ್ಟರಲ್ಲಿ ತನಗೆ ತಾನೆ ಗುಂಡು ಹೊಡೆದುಕೊಂಡು ಸತ್ತಿದ್ದಾನೆ. ಕೊಲೆಗಡುಕನನ್ನೂ ಸೇರಿಸಿಕೊಂಡು ಅಂದು ಸತ್ತವರು ಒಟ್ಟು 33 ಜನ.

ವರ್ಜೀನಿಯ ಟೆಕ್ ಯೂನಿವರ್ಸಿಟಿ ಸುಮಾರು 26000 ಜನ ವಿದ್ಯಾರ್ಥಿಗಳು ಇರುವ, 2600 ಎಕರೆಗಳಲ್ಲಿ ಹರಡಿರುವ ಬಹುದೊಡ್ಡ ಕ್ಯಾಂಪಸ್. ಈ ವಿಶ್ವವಿದ್ಯಾಲಯದಲ್ಲಿ ಓದುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೆ 700. ಇಷ್ಟು ದೊಡ್ಡ ಹತ್ಯಾಕಾಂಡದ ನೋವು ಭಾರತಕ್ಕೂ ನೇರವಾಗಿ ತಟ್ಟಿದ್ದು ನಿಜ. ಈ ಕಗ್ಗೊಲೆಗೆ ಮಿನಾಲ್ ಪಾಂಚಾಲ್ ಎಂಬ ಮುಂಬಯಿಯ ಹುಡುಗಿ ಮತ್ತು ಲೋಗನಾಥನ್ ಎಂಬ ಪ್ರೊಫೆಸರ್ ಸಹ ಬಲಿಯಾಗಿದ್ದಾರೆ. ಇಡೀ ಕಗ್ಗೊಲೆಯಲ್ಲಿ ಆ ಮಾನಸಿಕ ಅಸ್ವಸ್ಥನ ತಪ್ಪನ್ನು ಬಿಟ್ಟರೆ ಮಿಕ್ಕ ಯಾರಲ್ಲೆ ಆಗಲಿ ತಪ್ಪು ಹುಡುಕುವುದು ಕಷ್ಟ. ಯಾರು ಯಾವಾಗ ಎಲ್ಲೆಲ್ಲಿ ಇರಬೇಕಿತ್ತೊ ಆ ಜಾಗದಲ್ಲಿ ಪಾಠ ಮಾಡುತ್ತಲೊ, ಓದುತ್ತಲೊ, ಕೇಳುತ್ತಲೊ ಇದ್ದರು. ತಮ್ಮ ಪಾಡಿಗೆ ತಾವಿದ್ದವರನ್ನು ಗುರುತು ಪರಿಚಯವಿಲ್ಲದ ಅಪರಿಚಿತನೊಬ್ಬ ಹುಚ್ಚುಚ್ಚಾಗಿ ಗುಂಡು ಹಾರಿಸಿ ಸಾಯಿಸಿದ. ಆ ಜಾಗದಲ್ಲಿದ್ದವರು ಬೇರೆ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ.

ಈಗ ಅಮೇರಿಕದಲ್ಲಿ ಮತ್ತೆ ಬಂದೂಕು ನಿಯಂತ್ರಣದ ವಿಷಯ ಚರ್ಚೆಗೆ ಬಂದಿದೆ. ಆದರೆ ಇಲ್ಲಿನ ಬಲಪಂಥೀಯರು ಗನ್ನು ಹೊಂದಿರುವುದನ್ನು ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯದ ಸಿದ್ಧಾಂತದ ಮಟ್ಟಕ್ಕೆ ಏರಿಸಿಬಿಟ್ಟಿರುವುದರಿಂದ ರಾಜಕಾರಣಿಗಳಿಗೂ ಅದನ್ನು ವಿರೋಧಿಸುವುದು ಓಟಿನ ಲೆಕ್ಕಾಚಾರದಲ್ಲಿ ಕಷ್ಟ. ಈ ಘಟನೆಯಿಂದಾಗಿ ಈಗ ವಲಸೆ ಬಂದಿರುವವರ ಬಗ್ಗೆಯೂ, ಅವರ ಹಿನ್ನೆಲೆ, ಅವರು ಅನುಭವಿಸುವ ಕೀಳರಿಮೆ ಮತ್ತು ಇಲ್ಲಿನ ಸಮಾಜಕ್ಕೆ ಅಪಾಯಕಾರಿಯಾಗಬಹುದಾದ ಸಾಧ್ಯತೆಗಳ ಬಗ್ಗೆಯೂ ಚರ್ಚೆಯಾಗುತ್ತಿದೆ. ಕೊಲೆಗಡುಕ ದಕ್ಷಿಣ ಕೊರಿಯಾದ ಪ್ರಜೆ ಎಂದು ಕೇಳಿ ದಕ್ಷಿಣ ಕೊರಿಯ ಆಘಾತ ಮತ್ತು ಅವಮಾನವನ್ನು ಅನುಭವಿಸಿತ್ತು. ಇಲ್ಲಿ ವಾಸಿಸುತ್ತಿರುವ ಕೊರಿಯನ್ನರಿಗೂ ಸಹಜವಾಗಿ ಅದೇ ಅನುಭವವಾಗಿರುತ್ತದೆ.

ಕೊಲೆಗಡುಕ ಛೋಗೆ ಬಾಲ್ಯದಲ್ಲಿ ಕೆಲವೊಂದು ಸಮಸ್ಯೆಗಳಿದ್ದವು ಎಂದು ವರದಿಗಳು ಹೇಳುತ್ತವೆ. ಆತನ ವಿಕೃತ ಮತ್ತು ಹಿಂಸಾತ್ಮಕ ಕವನ ಮತ್ತು ಬರಹಗಳನ್ನು ಓದಿ, ಆತನ ಅಧ್ಯಾಪಕರು ಎರಡು ವರ್ಷಗಳ ಹಿಂದೆ ಆತನಿಗೆ ಮಾನಸಿಕ ಚಿಕಿತ್ಸೆ ಪಡೆಯಲು ಹೇಳಿದ್ದರು. ಅದ್ಯಾವುದೂ ಆತನಿಗೆ ನೆರವಾಗಲಿಲ್ಲ. ಈತ ಹೀಗೆ ತನ್ನ ಹುಚ್ಚಾಟಕ್ಕೆ ತಾರ್ಕಿಕ ಅಂತ್ಯ ಕೊಡಲು ಒದ್ದಾಡುತ್ತಿರಬೇಕಾದರೆ, ಈತನಿಗಿಂತ ಎರಡು ವರ್ಷ ದೊಡ್ಡವಳಾದ ಅಕ್ಕ ಅಮೇರಿಕದ ಗೃಹ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಓದಿದ್ದು ಪ್ರತಿಷ್ಠಿತ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ. ಜಾಗತಿಕ ಆರ್ಥಿಕತೆ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಸನ್-ಕ್ಯೂಂಗ್ ಛೊ ಇಂಟರ್ನಿಯಾಗಿ ಥಾಯ್‌ಲ್ಯಾಂಡ್-ಬರ್ಮಾ ಗಡಿಗೆಲ್ಲಾ ಹೋಗಿ, ಅಲ್ಲಿನ ಕೆಲಸಗಾರರ ಸ್ಥಿತಿಗತಿ ನೋಡಿ ಬಂದಿದ್ದಳು. ಬುದ್ದಿವಂತೆಯಾದ, ನಮ್ರಳಾದ, ಈ ಆಸ್ತಿಕ ಹೆಣ್ಣುಮಗಳು, ತನ್ನ ತಮ್ಮ ಮಾಡಿದ ಕಗ್ಗೊಲೆಗೆ ಕುಟುಂಬದ ಪರವಾಗಿ ಹೇಳಿದ್ದು: "32 ಜನರನ್ನು ಬಲಿ ತೆಗೆದುಕೊಂಡ ಇಂತಹ ಅವಿವೇಕದ, ಭಯಾನಕ ದುರಂತದ ಕುರಿತು ನಮಗಾಗಿರುವ ದು:ಖವನ್ನು ಯಾವ ಪದಗಳೂ ವಿವರಿಸಲು ಅಶಕ್ಯ. ನಮ್ಮ ಹೃದಯ ನುಚ್ಚುನೂರಾಗಿದೆ. ನನ್ನ ತಮ್ಮ ಮೌನ ಸ್ವಭಾವದ, ಸಂಕೋಚದ ಹುಡುಗನಾಗಿದ್ದ; ಅವನು ಇಂತಹ ಹಿಂಸೆ ಮಾಡಲು ಶಕ್ತ ಎಂದು ನಮಗೆ ಎಂದೂ ಊಹಿಸಲಾಗಿರಲಿಲ್ಲ. ಆತ ಪ್ರಪಂಚವೆ ಅಳುವಂತೆ ಮಾಡಿದೆ. ನಾವು ದುಸ್ವಪ್ನವನ್ನು ಬದುಕುತ್ತಿದ್ದೆವೆ. ಈ ಅಂಧಕಾರ ನಮ್ಮನ್ನು ದೀನರನ್ನಾಗಿ ಮಾಡಿದೆ."

Apr 15, 2007

ಮಂಗಳೂರಿನ ಸಜ್ಜನರೊಡನೆ...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಏಪ್ರಿಲ್ 27, 2007 ರ ಸಂಚಿಕೆಯಲ್ಲಿನ ಲೇಖನ)

ಕನ್ನಡದ ಕೆಲಸ ಮಾಡುತ್ತಿರುವ ದಕ್ಷಿಣ ಕನ್ನಡ ಮೂಲದ ಆ ಯುವ ಲಾಯರ್ ಮೈಸೂರಿನಲ್ಲಿ "ಸೌತ್ ಕೆನೆರ ಎಂದ ಮೇಲೆ ಮತೀಯ ಬಲಪಂಥೀಯತೆ ರಕ್ತದಲ್ಲೇ ಬಂದುಬಿಡುತ್ತೆ. ನಾನೂ ಬಲಪಂಥೀಯ," ಎಂದಿದ್ದ ಮಾತುಗಳೆ ಮೈಸೂರು ಬಿಟ್ಟು ಮಂಗಳೂರಿನತ್ತ ಹೋಗುತ್ತಿದ್ದಾಗ ನನಗೆ ನೆನಪಾಗುತ್ತಿದ್ದದ್ದು.

ಮಂಗಳೂರಿನಲ್ಲಿ ಯುವ ಪತ್ರಕರ್ತ ಹರೀಶ್ ಆದೂರ್ ನಮಗಾಗಿ ಕೆಲವು ಮಿತ್ರರ ಗುಂಪನ್ನು ಸೇರಿಸಿ ಕಾಯುತ್ತಿದ್ದರು. ಮಂಗಳೂರಿನ ಪ್ರಸಿದ್ಧ ಸಾಹಿತ್ಯಿಕ ಗುಂಪಾದ "ದಾಸಜನ" ರ ಗುಂಪದು. ಆತ್ಮೀಯತೆಯ, ಮುಕ್ತ ವಾತಾವರಣದಲ್ಲಿ ನಡೆದ ಆ ಸಂವಾದಕ್ಕೆ ನಮ್ಮ ಅಂಕಣಕಾರರಾದ ವಿವೇಕ್ ಪೈ ಅವರೂ ಕೂಡಿಕೊಂಡರು. ಅಷ್ಟೊತ್ತಿಗೆ ನನಗೆ ಮಂಗಳೂರಿನ ಬಗೆಗಿರುವ ಅನೇಕ ಪೂರ್ವಾಗ್ರಹಗಳು ಕಳಚುತ್ತಾ ಹೋಗುತ್ತಿದ್ದವು.

ಹರೀಶ್ ಆದೂರ್ ಈಗ ತಾನೆ ಪ್ರೇಮದಲ್ಲಿ ಬಿದ್ದಂತೆ ಕಾಣಿಸುವ ಯುವ ಬರಹಗಾರ. ಯಾವ ಊರಿನ ಬಸ್‌ಸ್ಟ್ಯಾಂಡಿನಲ್ಲಿ ಇಳಿದರೂ ತನಗೆ ಕಾಣಿಸುವ ಹೊಸ ಪತ್ರಿಕೆ ಕೊಳ್ಳುವ ಹವ್ಯಾಸಿ. ಬಹುಶಃ ಕರ್ನಾಟಕದ ಎಲ್ಲಾ ಪತ್ರಿಕೆಗಳೂ ಇವರ ಮನೆಯಲ್ಲಿರಬೇಕು. ಹಾಗೆಯೆ ಕಂಡಕಂಡ ಪೆನ್ನುಗಳನ್ನೆಲ್ಲಾ ಕೂಡಿ ಹಾಕುವ "ಸಾವಿರ ಪೆನ್ನುಗಳ ಸರದಾರ". ಯಾವುದೇ ಇಸಮ್ಮುಗಳ ಹಂಗಿಲ್ಲದ ಈ ನಗುಮೊಗದ ಯುವಕ ನನಗೆ ಮಂಗಳೂರಿನ ಜನರ ಸಜ್ಜನಿಕೆ, ಚುರುಕುತನ ಮತ್ತು ಕ್ರಿಯಾಶೀಲತೆಯಂತೆ ಕಂಡರು. ಮೂಡಬಿದ್ರೆಯ ಪಕ್ಕದ ಹಸಿರು ತುಂಬಿದ ಬೆಟ್ಟಗುಡ್ಡಗಳ ನಡುವಿನ ಅವರ ತೋಟದ ಮನೆಯಲ್ಲಿ ಅವರ ತಂದೆತಾಯಿಗಳ ಸಂಜೆಹೊತ್ತಿನ ಆತಿಥ್ಯ, ಆತ್ಮೀಯತೆ ನಗರ ಪ್ರದೇಶಗಳಲ್ಲಿ ಕಾಣಸಿಗಲಾರದಂತದ್ದು. ಮಂಗಳೂರು ಎಂದಾಕ್ಷಣ ಅಪ್ಪಟ ಮೂಲಭೂತವಾದಿಗಳ, ಲೆಕ್ಕಾಚಾರದ ಜನರ ಪ್ರದೇಶ ಎಂದು ಮಾಧ್ಯಮಗಳಲ್ಲಿ ಬಿಂಬಿತವಾಗಿರುವುದೆಲ್ಲ ಸುಳ್ಳು ಎನ್ನುವುದು ನಮಗೆ ಅಷ್ಟೊತ್ತಿಗೆ ಚೆನ್ನಾಗಿ ಗೊತ್ತಾಗಿತ್ತು.

ಅವತ್ತು ರಾತ್ರಿ ನಮ್ಮ ಮತ್ತೊಬ್ಬ ಅಂಕಣಕಾರರಾದ ಅರವಿಂದ ಚೊಕ್ಕಾಡಿಯವರ ಮನೆಯಲ್ಲಿ ಊಟವಾಯಿತು. ಅವರ ಶ್ರೀಮತಿ ಪತ್ರಿಕೆಯ ಬಳಗಕ್ಕೆ ಪ್ರೀತಿಯಿಂದ ಬಿಸಿಬಿಸಿ ನೀರುದೋಸೆ ಬಡಿಸಿ, ಅದರ ಜೊತೆಗೆ ಟೀಯನ್ನೂ ಕೊಟ್ಟರು! ಇತ್ತ ಕಡೆ ಊಟದ ಜೊತೆಜೊತೆಗೆ ಟೀಯನ್ನೂ ಕೊಡುತ್ತಾರೆ ಎಂದು ನಮ್ಮಲ್ಲಿ ಯಾರಿಗೂ ಗೊತ್ತಿರಲಿಲ್ಲ. ಊಟದ ಜೊತೆಗೆ ಅರವಿಂದರ "ಅರವಿಂದಾ, ಪ್ರಮೀಳಾ" ಎಂದು ಮುದ್ದುಮುದ್ದಾಗಿ, ಗಟ್ಟಿಯಾಗಿ ಉಲಿಯುವ ಅವರ ಪುಟ್ಟ ಮಗಳು ಅಧ್ಯಯನಳ ಸಾಹಚರ್ಯ ನಮ್ಮನ್ನೆಲ್ಲ ಖುಷಿಯಲ್ಲಿ ಮುಳುಗಿಸಿತ್ತ್ತು. ದಕ್ಷಿಣ ಕನ್ನಡದ ಮನೆಯ ಆತ್ಮೀಯತೆಯಿಂದ ಬಿಡಿಸಿಕೊಂಡು, ಪೈ ಅವರನ್ನು ಬೀಳ್ಕೊಂಡು, ಕಾರ್ಕಳದ ಲಾಡ್ಜಿಗೆ ನಾನು ಮತ್ತು ಮಲ್ಲನಗೌಡರು ಬರುವಷ್ಟರಲ್ಲಿ ಅರವಿಂದರು ಜಿನೇಶ್ ಎನ್ನುವ ಒಬ್ಬ ಹುಡುಗನೊಂದಿಗೆ ಇದ್ದರು.

ಅವತ್ತು ರಾತ್ರಿ ನಮ್ಮಗಳ ಮಾತುಕತೆ ನಡುರಾತ್ರಿಯವರೆಗೂ ನಡೆಯಿತು. ಅಲ್ಲಿದ್ದ ನಮಗ್ಯಾರಿಗೂ ಕುಡಿತದ ಅಭ್ಯಾಸವಾಗಲಿ, ರಾತ್ರಿಯನ್ನು ಹಗಲು ಮಾಡಿಕೊಳ್ಳುವ ಕೆಟ್ಟ ಹವ್ಯಾಸಗಳಾಗಲಿ ಇರಲಿಲ್ಲ. ಅಲ್ಲಿದ್ದದ್ದು ಸಮಾನಮನಸ್ಕರ ಮಾತುಕತೆ ಮಾತ್ರ. ಅದೂ ವಿಷಯಾಧಾರಿತವಾಗಿತ್ತೆ ಹೊರತು ಏನೇನೋ ಗಾಸಿಪ್ ವಿಚಾರವಾಗಲಿ, ಇನ್ನೊಬ್ಬರ ವೈಯಕ್ತಿಕ ಜೀವನವನ್ನು ಕುರಿತಾದ್ದಾಗಲಿ ಆಗಿರಲಿಲ್ಲ. ಇಷ್ಟೆಲ್ಲ ಇತಿಮಿತಿಗಳ ನಡುವೆ, ನಮ್ಮ ಚೊಚ್ಚಲ ಭೇಟಿಯಲ್ಲಿಯೇ ಸಮಯದ ಪರಿವೆಯಿಲ್ಲದೆ ಮಾತನಾಡುತ್ತ ಕುಳಿತದ್ದು ನಮ್ಮೆಲ್ಲರಿಗೂ ಆಶ್ಚರ್ಯ ಹುಟ್ಟಿಸಿತು. ಜಿನೇಶ್ ಮೌನವಾಗಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ.

ಮಾರನೆಯ ದಿನ ಬೆಳಿಗ್ಗೆ ಜಿನೇಶ್ ಆರೂವರೆಗೆಲ್ಲ ಬಂದು, ಕಾರ್ಕಳದಿಂದ ಹತ್ತು ಕಿ.ಮೀ. ದೂರದ ಅವರೂರಾದ ನಲ್ಲೂರಿನ ಕೂಷ್ಮಾಂಡಿನೀ ಜೈನ ಬಸದಿಗೆ ಕರೆದುಕೊಂಡು ಹೋದ. ನಾನು ಬಹುಶಃ ಇದೇ ಮೊದಲ ಸಲ ಪೂಜೆ ನಡೆಯುವ ಬಸದಿಗೆ ಹೋಗಿದ್ದು. ಇಲ್ಲಿನ ಬಸದಿಯಲ್ಲಿ ಜೈನರ ಪ್ರಕಾರ ಸ್ವರ್ಗದ ಕಲ್ಪನೆ ಹೇಗಿರುತ್ತದೊ ಅಂತಹುದರ ಪ್ರತಿ ನಿರ್ಮಿಸಿದ್ದಾರೆ. ಅವರ ತಂದೆ ನಮಗೆ ಅದನ್ನೆಲ್ಲ ತೋರಿಸಿ, ಬಸದಿಯ ಸ್ಥಳಮಹಾತ್ಮೆಯನ್ನೂ ವಿವರಿಸಿದರು. ದೇವಸ್ಥಾನದಿಂದ ಹೊರಗೆ ಬಂದು ನೋಡಿದರೆ ಎದುರಿಗೆ ಚಾಚಿ ನಿಂತ ಬೆಟ್ಟಗಳಲ್ಲಿ ಹಸಿರು ಮೈಚಾಚಿ ನಿಂತಿದೆ. ಸ್ವರ್ಗ ಇಲ್ಲಿಯೇ ಇದೆ ಎಂದು ಒಂದು ಕ್ಷಣ ಅನ್ನಿಸಿದ್ದು ಸುಳ್ಳಲ್ಲ.

ಜಿನೇಶ್‌ರದು ಕೂಡು ಕುಟುಂಬ. ಅವರ ದೊಡ್ಡಪ್ಪ, ಚಿಕ್ಕಪ್ಪನವರೆಲ್ಲ ಒಂದೇ ಸೂರಿನಡಿ ಇರುವ ದೊಡ್ಡ ಕುಟುಂಬ. ಅವರ ಮನೆಯಲ್ಲಿ ಜಿನೇಶರ ತಾಯಿ ಮತ್ತು ಅಕ್ಕತಂಗಿಯರಿಂದ ನಮಗೆ ಮತ್ತೊಮ್ಮೆ ದಕ್ಷಿಣ ಕನ್ನಡದ ವಾತ್ಸಲ್ಯ ಪೂರ್ಣ ಆತಿಥ್ಯ. ಆ ಹುಡುಗ ನನಗೆ ಪರಿಚಯವಾಗಿ ಇನ್ನೂ ಹನ್ನೆರಡು ಗಂಟೆಗಳೂ ಆಗಿರಲಿಲ್ಲ. ಆ ತಾಯಂದಿರಿಗೆ ಬಹುಶಃ ನಾನು ಯಾರು, ಯಾವ ಊರಿನವನು ಎಂದು ಗೊತ್ತಿದ್ದ ಹಾಗೆಯೂ ಇರಲಿಲ್ಲ. ಅವರಿಗೆ ಅದು ಮುಖ್ಯವೂ ಅಲ್ಲವೇನೊ! ಮನೆಗೆ ಮಗ ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದಿದ್ದಾನೆ ಎನ್ನುವುದಷ್ಟೆ ಅವರಿಗೆ ಮುಖ್ಯವಾಗಿರಬೇಕು. ದಕ್ಷಿಣ ಕನ್ನಡದ ಆ ಮೂರು ಮನೆಗಳಲ್ಲಿ ವಿನಾಕಾರಣ ಕಂಡ ವಾತ್ಸಲ್ಯ, ಪ್ರೀತಿ ಮತ್ತು ನಿರಾಡಂಬರವನ್ನು ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಹುಡುಕಿಕೊಂಡು ಹೋದರೂ ಸಿಗುವುದು ಅಪರೂಪವೇನೊ. ಎದೆ ಇದ್ದಕ್ಕಿದ್ದಂತೆ ಭಾವುಕವಾಗುತ್ತಿತ್ತು.

ಜಿನೇಶ್ ನನ್ನನ್ನು ಮತ್ತು ಮಲ್ಲನಗೌಡರನ್ನು ಮೂರಂತಸ್ತಿನ ಮನೆಯ ಮೇಲಕ್ಕೆ ಕರೆದುಕೊಂಡು ಹೋಗಿ ಸುತ್ತಲಿನ ಅಗಾಧ ಹಸಿರು ರಾಶಿಯನ್ನು ತೋರಿಸಿದ. ಆಗಲೇ ಆತನ ಮನೆಯ ಗ್ರಂಥ ಭಂಡಾರ ನೋಡಿದ್ದು. ಆ ಹುಡುಗನ ಬಗ್ಗೆ ನನಗೆ ಅಲ್ಲಿಯವರೆಗೂ ಏನೂ ಗೊತ್ತಿರಲಿಲ್ಲ. ಅವರ ಮನೆ, ವಹಿವಾಟು ನೋಡಿ, ಶ್ರೀಮಂತರ ಮನೆಯ ಹುಡುಗ, ಕನ್ನಡ ಓದಿಕೊಂಡಿದ್ದಾನೆ, ಶ್ರೀಮಂತರಿಗಿರುವಂತೆ ದೊಡ್ಡ ಹವ್ಯಾಸಗಳಿಲ್ಲ ಎನ್ನಿಸಿತ್ತು. ಆ ಸಮಯದಲ್ಲಿಯೇ ಜಿನೇಶ್ ಐದು ಕನ್ನಡ ಪುಸ್ತಕಗಳನ್ನು ಕೈಗಿಟ್ಟು, ನಾವೇ ಕೆಲವು ಸ್ನೇಹಿತರು ಸೇರಿ ಮೌಲ್ಯ ಪ್ರಕಾಶನ ಎನ್ನುವ ಸಂಸ್ಥೆಯನ್ನು ಆರಂಭಿಸಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ನಾವು ಪ್ರಕಟಿಸಿದ ಪುಸ್ತಕಗಳು ಇವು, ಎಂದ. ಇಡೀ ಪ್ರವಾಸದಲ್ಲಿ ಅತ್ಯಂತ ದೊಡ್ಡ ಶಾಕ್ ಅನುಭವಿಸಿದ ಗಳಿಗೆ ಅದು! ಈ ಪುಸ್ತಕಗಳ ಬಿಡುಗಡೆಗೆ ಮೈಸೂರಿನಿಂದ ರಾಮದಾಸ್ ಬಂದಿದ್ದರಂತೆ ಎಂದರು ಮಲ್ಲನಗೌಡರು. ಏಟಿನ ಮೇಲೆ ಏಟು! ದಕ್ಷಿಣ ಕನ್ನಡದ ನಲ್ಲೂರಿನ ಈ ಯುವಕರೆಲ್ಲಿ, ಮೈಸೂರಿನ ಸೆಕ್ಯುಲರ್ ರಾಮದಾಸರೆಲ್ಲಿ? ಈಗಿನ ಕಾಲದ ಸಿರಿವಂತ ಮಕ್ಕಳೆಲ್ಲಿ, ಅವರ ಕನ್ನಡ ಪುಸ್ತಕ ಪ್ರಕಟಿಸುವ ಅಭಿರುಚಿಯೆಲ್ಲಿ?

ಬೆಂಗಳೂರಿನ ಶ್ರೀಮಂತ ಯುವಕರು ರಾತ್ರಿಯೆಲ್ಲ ಕುಡಿದು, ಬೆಳಿಗ್ಗೆ ನಾಲ್ಕು ಗಂಟೆ ಸುಮಾರಿಗೆ ಅನ್ನ ಕೇಳಿಕೊಂಡು ಹೋಟೆಲ್‌ಗೆ ಹೋಗಿ ಧಾಂಧಲೆ ಮಾಡಿ ದೇಶದಲ್ಲೆಲ್ಲ ಹೆಸರುವಾಸಿ ಆಗುತ್ತಿರಬೇಕಾದರೆ, ಇನ್ನೂ ಇಪ್ಪತ್ತೆರಡು ಇಪ್ಪತ್ತುಮೂರು ದಾಟಿರದ, ಈ ವಯಸ್ಸಿಗೇ "ಮೌಲ್ಯ" ಭರಿತ ಪುಸ್ತಕಗಳನ್ನು ಮುದ್ರಿಸುತ್ತ, ಸುತ್ತಮುತ್ತ ವಿಜೃಂಭಿಸುತ್ತಿರುವ ಆಕರ್ಷಣೀಯವಾದ ಕೋಮುವಾದವನ್ನು, ಅವೈಚಾರಿಕತೆಯನ್ನು ನಿರಾಕರಿಸುತ್ತ, ಮೈಮನಗಳನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಶ್ರಮಿಸುತ್ತಿದ್ದಾರೆ ಇಲ್ಲಿನ ಯುವಕರು! ಆ ಪುಟ್ಟ ತಮ್ಮನನ್ನು ಸಂತೋಷದಿಂದ ತಬ್ಬಿಕೊಳ್ಳದೆ ಇದ್ದಿದ್ದರೆ ನನ್ನ ಮನಸ್ಸಿನಲ್ಲೆದ್ದ ಆನಂದದ ಭಾವನೆಗಳಿಗೆ ಅಪಚಾರ ಮಾಡಿದಂತಾಗಿಬಿಡುತ್ತಿತ್ತು! ಘಟ್ಟದ ಕೆಳಗಿನ ಯಾವೊಂದು ಕ್ಷಣವೂ ಭವಿಷ್ಯದ ಬಗ್ಗೆ ನಿರಾಶೆ ಮೂಡಿಸಲಿಲ್ಲ.

ಮೌಲ್ಯ ಪ್ರಕಾಶನ, ನಲ್ಲೂರು, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ - ಇವರ ಪ್ರಕಟಣೆಗಳು:
೧. ಅನ್ವಯ (ವೈಚಾರಿಕ) - ಅರವಿಂದ ಚೊಕ್ಕಾಡಿ
೨. ಮಾಗಿಯ ಕೋಗಿಲೆ (ಕವನ ಸಂಕಲನ) - ಸುಬ್ರಾಯ ಚೊಕ್ಕಾಡಿ
೩. ಹನಿ ಹನಿ ಸೂರ್ಯ (ಹನಿ ಕವಿತೆಗಳು) - ಜಿ.ಎಸ್. ಉಬರಡ್ಕ
೪. ಋಣ ಸಂದಾಯ (ಕಥೆಗಳು) - ಎಂ. ಜೆ. ಪದ್ಮಿನಿ
೫. ನೆನಪು ತೆರೆವ ಕವಿಮನ - (ಪಾಬ್ಲೊ ನೆರೂಡ ಅವರ ಆತ್ಮಕತೆಯ ಸಂಗ್ರಹ) - ನಯನಾ ಕಶ್ಯಪ್

Apr 8, 2007

ಜೀವಂತ ರೋಲ್ ಮಾಡೆಲ್ ಇನ್ನಿಲ್ಲ...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಏಪ್ರಿಲ್ 20, 2007 ರ ಸಂಚಿಕೆಯಲ್ಲಿನ ಲೇಖನ)

ಪತ್ರಿಕೆಯ ಕೆಲಸಕ್ಕೆಂದು ಎರಡು ವಾರದ ಹಿಂದೆ ಅಮೇರಿಕಾದಿಂದ ಬೆಂಗಳೂರಿಗೆ ವಿಮಾನ ಹತ್ತಿದಾಗ ದಾರಿ ಓದಿಗೆಂದು ನನ್ನ ಕೈಯ್ಯಲ್ಲಿದ್ದ ಪುಸ್ತಕ ನಾನು ಈ ಹಿಂದೆಯೆ ಓದಿದ್ದ 'ಕರ್ವಾಲೊ'. ಆ ಸುದೀರ್ಘ ವಿಮಾನ ಪ್ರಯಾಣದಲ್ಲಿ ನಿದ್ದೆಯಿಂದ ಎಚ್ಚೆತ್ತಾಗಲೆಲ್ಲ 23 ನೆ ಮುದ್ರಣದ ಕರ್ವಾಲೊ ಕೈಯಲ್ಲಿರುತ್ತಿತ್ತು. ಬೆಂಗಳೂರಿಗೆ ಬಂದು ಮೂರು ದಿನ ಮಂಡ್ಯ-ಮೈಸೂರು-ಮಂಗಳೂರು-ಶಿವಮೊಗ್ಗ ಇಲ್ಲೆಲ್ಲ ಸುತ್ತಾಡಿಕೊಂಡು ಬಂದ ಮೇಲೆ ಕಳೆದ ವಾರದ ಲೇಖನ ಬರೆಯಲು ಕುಳಿತಾಗ ಅದರಲ್ಲಿ ತೇಜಸ್ವಿಯವರೂ ಕಾಣಿಸಿಕೊಂಡಿದ್ದರು. ಅದರ ಪುಟವಿನ್ಯಾಸ ಮಾಡುವಾಗ ನಮ್ಮ ವಿನ್ಯಾಸಕಾರ ವೀರೇಶ್ ತೇಜಸ್ವಿಯವರ ಅದ್ಭುತವಾದ ಚಿತ್ರವೊಂದನ್ನು ಅಲ್ಲಿ ಅಳವಡಿಸಿದ್ದರು. ಇವೆಲ್ಲ ಕಾಕತಾಳೀಯವೊ ಏನೊ ಗೊತ್ತಾಗುತ್ತಿಲ್ಲ. ಅದರೆ, ತೇಜಸ್ವಿ ನಮಗೆಲ್ಲ ಹೇಗೆ ಪ್ರಸ್ತುತವಾಗಿದ್ದರು ಎಂಬುದನ್ನು ಇದು ತೋರಿಸುತ್ತದೆ.

ಕರ್ನಾಟಕದ ಯುವಜನತೆ ಎಲ್ಲಾ ತರಹದ ಮೌಢ್ಯ, ಶೋಷಣೆ, ಜಾತಿವಾದ ಹಾಗು ಕೋಮುವಾದಗಳನ್ನು ನಿವಾರಿಸಿಕೊಂಡು, ವಿಜ್ಞಾನದೀವಿಗೆಯನ್ನು ಹಿಡಿದು ನಿರಂಕುಶಮತಿಗಳಾಗಬೇಕೆಂದು ಸಂದೇಶ ನೀಡಿದ ಕುವೆಂಪುರವರ ಬಗ್ಗೆ ತೇಜಸ್ವಿಯವರು "ಅಣ್ಣನ ನೆನಪು" ವಿನಲ್ಲಿ ಹೀಗೆ ಬರೆಯುತ್ತಾರೆ: "(ಅಣ್ಣ) ಮಂತ್ರವನ್ನೇನೋ ಹೇಳಿದರು, ಆದರೆ ಅದನ್ನು ಕಾರ್ಯಗತಗೊಳಿಸುವ ತಂತ್ರದ ಬಗ್ಗೆ ಯೋಚಿಸಿರಲೇ ಇಲ್ಲ."

ಕಳೆದ ನಾಲ್ಕೈದು ವರ್ಷಗಳಿಂದ, ಈ ಮೇಲಿನ ವಾಕ್ಯದ ಕುರಿತು ಚಿಂತಿಸಿದಷ್ಟು ಬಹುಶಃ ನಾನು ಇನ್ಯಾವುದೆ ವಾಕ್ಯ ಅಥವ ಪದವನ್ನು ಕುರಿತು ಚಿಂತಿಸಿಲ್ಲ. ಭಾರತದ ಸಮಾಜದಲ್ಲಿ ಹೊಸ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕೋಮುವಾದ, ಅಸಮಾನತೆ, ಶೋಷಣೆ; ಹೀನಾಯವಾಗಿ ಹೋಗುತ್ತಿರುವ ರಾಜಕಾರಣ ಮತ್ತು ಇಲ್ಲವಾಗುತ್ತಿರುವ ರಾಜಕೀಯ-ಸಾಂಸ್ಕೃತಿಕ ನಾಯಕತ್ವ; ಇನ್ನಿಲ್ಲದ ವೇಗದಲ್ಲಿ ಬೆಳೆಯುತ್ತಿರುವ ಮತಪ್ರೇಮವೇ ದೇಶಪ್ರೇಮ ಎಂಬ ಉನ್ಮಾದ; ಇಂತಹ ಪ್ರತಿಯೊಂದನ್ನು ಯೋಚಿಸಿದಾಗಲೂ ನನಗೆ ಕುವೆಂಪು ಮತ್ತು ತೇಜಸ್ವಿ ನೆನಪಾಗುತ್ತಾರೆ. ಮಂತ್ರದಿಂದ ತಂತ್ರದತ್ತ ಹೋಗುವುದು ಹೇಗೆ ಎಂಬ ಆಲೋಚನೆ ಆವರಿಸುತ್ತದೆ.

ಅದು 2004 ರ ಜನವರಿ ತಿಂಗಳು. ಕರ್ನಾಟಕದಲ್ಲಿ ನಾಡಗೀತೆಯ ವಿವಾದ ಭುಗಿಲೆದ್ದಿತ್ತು. ತೇಜಸ್ವಿಯವರು ಕೆಲವು ಸೈದ್ಧಾಂತಿಕ ಕಾರಣಗಳಿಗಾಗಿ ನಾಡಗೀತೆಯ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದಾಗ ಅವರ ಮೇಲೆ ಪ್ರತ್ಯಕ್ಷವಾಗಿ ಮತ್ತು ಕುವೆಂಪುರವರ ವಿರುದ್ಧ ಪರೋಕ್ಷವಾಗಿ ಮಾಧ್ಯಮಗಳಲ್ಲಿ ಜಾತಿವಾದಿಗಳು ಮುಗಿಬಿದ್ದರು. ಅಮೇರಿಕದಲ್ಲಿದ್ದ ನಾನು ಆ ವಿಚಾರವಾಗಿ ನಡೆಯುತ್ತಿದ್ದ ಚರ್ಚೆಗಳನ್ನು ಗಮನಿಸುತ್ತಿದ್ದೆ. ಇಂಟರ್‌ನೆಟ್‌ನಲ್ಲಂತೂ ಅಸಹ್ಯ-ಹೇಸಿಗೆ ಹುಟ್ಟಿಸುವಷ್ಟು ಜಾತಿವಾದ ಮತ್ತು ಅಸಹಿಷ್ಣುತೆ. ಆಗ ನನಗೆ ಅನ್ನಿಸಿದ್ದು, ಕನ್ನಡದ ಇಂಟರ್‌ನೆಟ್ ಓದುಗರಿಗೆ ಕುವೆಂಪುರವರ ವಿಚಾರಗಳೇ ಗೊತ್ತಿಲ್ಲ, ಎಂದು. ಇದರ ಜೊತೆಜೊತೆಗೆ, 12 ನೆ ಶತಮಾನದಲ್ಲಿಯೇ ವೈಚಾರಿಕ ಕ್ರಾಂತಿ ಮಾಡಿದ ವಚನ ಸಾಹಿತ್ಯವನ್ನು ಯಾವೊಬ್ಬ ಶ್ರೀಮಂತ ಲಿಂಗಾಯತ ಮಠವಾಗಲಿ, ಸಂಘಸಂಸ್ಥೆಗಳಾಗಲಿ ಇಂಟರ್‌ನೆಟ್‌ನಲ್ಲಿ ಹಾಕಿಲ್ಲ ಎಂಬ ನೋವೂ ಕಾಡುತ್ತಿತ್ತು. ಹಾಗೆ ಹುಟ್ಟಿದ್ದು vicharamanatapa.net. ಆ ವೆಬ್‌ಸೈಟಿನಲ್ಲಿ ಕುವೆಂಪುರವರ "ವಿಚಾರಕ್ರಾಂತಿಗೆ ಆಹ್ವಾನ" ದಿಂದ ಕೆಲವು ಲೇಖನಗಳನ್ನು ಹಾಕಲು ತೇಜಸ್ವಿಯವರ ಅನುಮತಿಗಾಗಿ ಪ್ರಯತ್ನಿಸಬೇಕು ಎಂದುಕೊಂಡಾಗ ನೆನಪಿಗೆ ಬಂದಾತ ನನ್ನ ಇಂಜಿನಿಯರಿಂಗ್ ಸಹಪಾಠಿ ಸೋಮಶೇಖರ. ತೇಜಸ್ವಿಯವರ ಮಗಳು ಈಶಾನ್ಯೆ ಬೆಂಗಳೂರಿನ ಐಟಿ ಕಂಪನಿಯಲ್ಲಿ ಈತನ ಸಹೋದ್ಯೋಗಿ. ಆತನಿಗೆ ಹೇಳಿ ತೇಜಸ್ವಿಯವರ ಮೂಡಿಗೆರೆಯ ನಂಬರ್ ತರಿಸಿಕೊಂಡೆ. ಇಲ್ಲಿಯೇ ಇರುವ ಇನ್ನೊಬ್ಬ ಹಿರಿಯ ಗೆಳೆಯ ಮೃತ್ಯುಂಜಯ ಹರ್ತಿಕೋಟೆಯವರು ಈ ವಿಚಾರವಾಗಿ ಒಮ್ಮೆ ತೇಜಸ್ವಿಯವರ ಬಳಿ ಮಾತನಾಡಿಯಾದ ಮೇಲೆ ನಾನು ತೇಜಸ್ವಿಯವರಿಗೆ ಕರೆ ಮಾಡಿ ಅವರ ಅನುಮತಿ ಕೋರಿದೆ. "ಇಡೀ ಪುಸ್ತಕ ಬೇಡ್ರಿ. ಅದರಲ್ಲಿ ನಿಮಗೆ ಸೂಕ್ತ ಅನ್ನಿಸಿದ ಎರಡು-ಮೂರು ಲೇಖನ ಹಾಕಿಕೊಳ್ರಿ," ಎಂದರು. ಮುಂದಿನ ಎರಡು ವಾರಗಳು ನಾನು ಮತ್ತು ನನ್ನ ಹೆಂಡತಿ ಪಟ್ಟಾಗಿ ಕುಳಿತು ಕುವೆಂಪುರವರು ಬೆಂಗಳೂರು ವಿಶ್ವವಿದ್ಯಾನಿಲಯದ ಹತ್ತನೆಯ ಘಟಿಕೋತ್ಸವದಲ್ಲಿ ಮಾಡಿದ "ವಿಚಾರ ಕ್ರಾಂತಿಗೆ ಆಹ್ವಾನ" ಮತ್ತು 1974 ರಲ್ಲಿ ಮೈಸೂರಿನ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟದಲ್ಲಿ ಮಾಡಿದ "ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ!" ಲೇಖನಗಳನ್ನು ಕಂಪ್ಯೂಟರ್‌ನಲ್ಲಿ ಟೈಪು ಮಾಡಿ, ವೆಬ್‌ಸೈಟಿಗೆ ಏರಿಸಿದೆವು.

2004 ರ ಜುಲೈನಲ್ಲಿ ತೇಜಸ್ವಿಯವರು ಮತ್ತೊಂದು ಚರ್ಚೆಗೆ ದಾರಿ ಮಾಡಿಕೊಟ್ಟರು. ಅದು ಕಂಪ್ಯೂಟರ್‌ನಲ್ಲಿ ಕನ್ನಡ ಅಳವಡಿಕೆಗೆ ಸಂಬಂಧಿಸಿದಂತೆ. ಇದಕ್ಕೆ ಮಹತ್ತರ ತಿರುವು ಬಂದಿದ್ದು ಹಿರಿಯ ಪತ್ರಕರ್ತ ನಾಗೇಶ ಹೆಗಡೆಯವರು ತೇಜಸ್ವಿಯರ ಸಂದರ್ಶನ ಮಾಡಿದ ಮೇಲೆ. ಅದನ್ನು ಓದಿದ ಕೂಡಲೆ ನಾನು ನಾಗೇಶ ಹೆಗಡೆಯವರಿಗೆ ಫೋನ್ ಮಾಡಿ ಈ ಚರ್ಚೆಯನ್ನು ಸರ್ಕಾರದ ಎಮ್ಮೆ ಚರ್ಮಕ್ಕೆ ಚುರುಕು ಮುಟ್ಟುವ ತನಕ ಮುಂದುವರೆಸಬೇಕೆಂದು ಕೋರಿಕೊಂಡೆ. ಪ್ರಜಾವಾಣಿಯ ವಾಚಕರ ವಾಣಿಗೆ ಪತ್ರವನ್ನೂ ಬರೆದೆ. ಅದರ ಮುಂದಿನ ವರ್ಷ ಬೆಂಗಳೂರಿಗೆ ಬಂದಿದ್ದಾಗ 'ಅಗ್ನಿ' ವಾರಪತ್ರಿಕೆಯ ಪತ್ರಕರ್ತ ಮಿತ್ರ ಮಂಜುನಾಥ ಅದ್ದೆಯವರೊಡನೆ 'ಆದರೆ ತೇಜಸ್ವಿಯವರನ್ನು ನೋಡಿ ಬರಬೇಕು,' ಎಂದು ಪ್ರಸ್ತಾಪಿಸಿದ್ದೆ. ತೇಜಸ್ವಿಯವರ ಮನೆಯಲ್ಲಿ ಆಗಾಗ ಇದ್ದು ಬರುತ್ತಿದ್ದ ಅದ್ದೆ ಕೂಡಲೆ ತೇಜಸ್ವಿಯವರಿಗೆ ಫೋನ್ ಮಾಡಿದರು. ಆದರೆ ಅಂದು ತೇಜಸ್ವಿಯವರು ಮನೆಯಲ್ಲಿರಲಿಲ್ಲ. ಆ ವರ್ಷ ಅವರನ್ನು ನೋಡದೆ ವಾಪಸು ಬರಬೇಕಾಯಿತು.

ಕಳೆದ ವರ್ಷ "ವಿಕ್ರಾಂತ ಕರ್ನಾಟಕ" ಪ್ರಾರಂಭಿಸಲು ನಾನು ಬೆಂಗಳೂರಿಗೆ ಬಂದಿದ್ದಾಗ ತೇಜಸ್ವಿಯವರು ಆರೋಗ್ಯ ಸರಿಯಿಲ್ಲದೆ ಬೆಂಗಳೂರಿನಲ್ಲಿಯೆ ಇದ್ದರು. ಆ ಸಮಯದಲ್ಲಿ ಜಯಂತ ಕಾಯ್ಕಿಣಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದು ಗಾಂಧಿಬಜಾರಿನಲ್ಲಿತ್ತು. ನಾನು ಮತ್ತು ಆಗಿನ ನಮ್ಮ ಸಂಪಾದಕರಾಗಿದ್ದ ಸತ್ಯಮೂರ್ತಿಯವರು ಅಲ್ಲಿಗೆ ಹೋಗಿದ್ದೆವು. ಎಲ್ಲರಿಗೂ ಆಶ್ಚರ್ಯವಾಗುವಂತೆ ತೇಜಸ್ವಿಯವರು ಆ ಸಮಾರಂಭಕ್ಕೆ ಬಂದು ಬಿಟ್ಟರು. ಇನ್ನೂ 68 ವರ್ಷದ ತೇಜಸ್ವಿ ಅಂದು ಬಹಳ ನಿತ್ರಾಣವಾಗಿ, ವಯಸ್ಸಿಗಿಂತ ಹಿರಿಯರಾದಂತೆ ಕಂಡರು. ಕಾರ್ಯಕ್ರಮ ಮುಗಿದ ಮೇಲೆ ಹೋಗಿ ಪರಿಚಯ ಮಾಡಿಕೊಂಡೆ. ಹೆಚ್ಚಿಗೆ ಮಾತನಾಡುವ ಪರಿಸ್ಥಿತಿ ಅಲ್ಲಿರಲಿಲ್ಲ.

ಎರಡು ವಾರದ ಹಿಂದೆ ನಮ್ಮ ಪತ್ರಿಕೆಯ ಮಲ್ಲನಗೌಡರು ಮತ್ತು ನಾನು ಕಾರ್ಕಳದಿಂದ ಶಿವಮೊಗ್ಗಕ್ಕೆ ಹೋಗುವಾಗ ಮೂಡಿಗೆರೆಯ ಮೇಲೆ ಹೋಗಿದ್ದರೆ ಚೆನ್ನಿತ್ತು ಎಂದು ಅನೇಕ ಸಲ ಮಾತಾಡಿಕೊಂಡೆವು. ಶಿವಮೊಗ್ಗಾದಲ್ಲಿ ಹಿರಿಯ ಲೇಖಕ ಡಿ.ಎಸ್. ನಾಗಭೂಷಣ್‌ರ ಜೊತೆ ಮಾತನಾಡುತ್ತ, ತೇಜಸ್ವಿಯವರನ್ನು ನೋಡದೆ ಬಂದೆವು ಎಂದು ಹಲುಬಿದ್ದೆವು. ನಾಗಭೂಷಣ್ ಅವರು, 'ಮುಂದಿನ ವಾರ ನಾನು ಮೂಡಿಗೆರೆಗೆ ಹೋಗುತ್ತಿದ್ದೇನೆ,' ಎಂದರು. ಅವರು ಮೂಡಿಗೆರೆಗೆ ಹೋಗಿದ್ದನ್ನು ನಾನು ಟೀವಿಯಲ್ಲಿ ನೋಡಿದೆ. ಅದು ಅವರು ತೇಜಸ್ವಿಯವರ ಪಾರ್ಥಿವ ಶರೀರದ ಮುಂದೆ ನಿಂತಿದ್ದ ದೃಶ್ಯ. ಎಲ್ಲರದೂ ತಡವಾಗಿತ್ತು.

ಶುಕ್ರವಾರ ತೇಜಸ್ವಿಯವರ ಶವಸಂಸ್ಕಾರ. ನಾನು ಅಮೇರಿಕಕ್ಕೆ ಹೊರಡಬೇಕಿದ್ದದ್ದು ಶನಿವಾರ. ವಾಪಸು ಹೊರಡಲು ಮಾಡಿಕೊಳ್ಳಬೇಕಿದ್ದ ಯಾವುದೇ ತಯ್ಯಾರಿ ಇನ್ನೂ ಮಾಡಿಕೊಂಡಿರಲಿಲ್ಲ. ಆದರೂ ಅದ್ದೆಗೆ, ನಾನೂ ನಿಮ್ಮ ಜೊತೆ ಮೂಡಿಗೆರೆಗೆ ಬರುತ್ತೇನೆ ಎಂದು ತಿಳಿಸಿ ಕೊನೆಯ ಕ್ಷಣದಲ್ಲಿ ಹಿಂದೆಗೆದೆ. ಆ ವಿಷಾದ ಜೀವನ ಪರ್ಯಂತ ಬೆನ್ನಿಗಿರುತ್ತದೆ.

ಹೀಗೆ ಕಳೆದ ನಾಲ್ಕೈದು ವರ್ಷಗಳಿಂದ ನನ್ನ ಜೀವಂತ Role Model ಆಗಿದ್ದ, Conviction ಮೂಡಿಸುತ್ತಿದ್ದ ಮನೆಯ ಹಿರಿಯ ಇನ್ನಿಲ್ಲ. ಕಾನನದ ನಡುವಿನಿಂದ ನನ್ನ ಪೀಳಿಗೆಗೆ ಮೌನವಾಗಿ ಮಾರ್ಗದರ್ಶನ ಮಾಡುತ್ತಿದ್ದ ಋಷಿ ಇನ್ನಿಲ್ಲ. ಸಮಾಜ ಸುಧಾರಣೆಯ ಮಂತ್ರ ಮತ್ತು ತಂತ್ರಗಳ ಕುರಿತು ಮಾತನಾಡುತ್ತಿದ್ದ ಮಾಯಾಲೋಕದ ವಾಸ್ತವಜೀವಿ ಇನ್ನಿಲ್ಲ. ಕೊನೆಯ ಗುರು ಮತ್ತು ಹಿರಿಯನನ್ನು ಕಳೆದುಕೊಂಡ ತಬ್ಬಲಿಗಳು ನಾವೆಲ್ಲ.

Apr 1, 2007

ಆದರ್ಶವಾದಿಗಳೊಡನೆ ಒಂದು ಬೆಳಗ್ಗೆ...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಏಪ್ರಿಲ್ 13, 2007 ರ ಸಂಚಿಕೆಯಲ್ಲಿನ ಲೇಖನ)



ಈ ಸಲ ಶ್ರೀರಾಮನವಮಿ ಮಂಗಳವಾರವಿತ್ತು. ನಾನು ಅಮೇರಿಕದಿಂದ ಬಂದಿಳಿದಿದ್ದು ಅದರ ಹಿಂದಿನ ಭಾನುವಾರದ ರಾತ್ರಿ. ಸೋಮವಾರ ಬೆಳಗ್ಗೆ ಏಳಕ್ಕೆಲ್ಲ ಪತ್ರಿಕೆಯ ಕಚೇರಿಗೆ ಬಂದಾಗ ಗೊತ್ತಾಗಿದ್ದು, ನಮ್ಮ ಗೌರವ ಸಂಪಾದಕರಾದ ರೇಷ್ಮೆಯವರಿಗೆ ಅದರ ಹಿಂದಿನ ದಿನ ಮಾತೃವಿಯೋಗವಾಯಿತೆಂಬ ಸುದ್ದಿ. ಗದಗ್‌ನಲ್ಲಿದ್ದ ಅವರೊಡನೆ ಫೊನಿನಲ್ಲಿ ಮಾತನಾಡಿದೆ. ಅವರ ಸೂಚನೆ-ಆದೇಶದಂತೆ ನಮ್ಮ ಸಂಪಾದಕೀಯ ತಂಡ ಆ ವಾರದ ಸಂಚಿಕೆಯನ್ನು ರೂಪಿಸಿತು. ಮಾರನೆಯ ದಿನ ಬೆಳಗ್ಗೆ ಆರಕ್ಕೆಲ್ಲ ಪತ್ರಿಕೆಯ ಸಂಪಾದಕೀಯ ಬಳಗದೊಡನೆ, ರೇಷ್ಮೆಯವರ ಅನುಪಸ್ಥಿತಿಯಲ್ಲಿ ನಮ್ಮ ಪ್ರಯಾಣ ಆರಂಭವಾಯಿತು.

ನಾವು ಮೊದಲು ಹೊರಟಿದ್ದು ಮಂಡ್ಯ-ಮೈಸೂರು ಕಡೆಗೆ. ಮೊದಲ ನಿಲ್ದಾಣ, ರಾಮನಗರದಿಂದ 20 ಕಿಲೋಮೀಟರ್ ದೂರದ ಕುಗ್ರಾಮವೊಂದರಲ್ಲಿ. ನೆಂಟರೊಬ್ಬರ ಮನೆಗೆ ವೈಯಕ್ತಿಕ, ಸೌಜನ್ಯದ ಭೇಟಿಗೆ. ಚಿಟ್ಟನಹಳ್ಳಿ ಎನ್ನುವ ಹೆಸರಿನ ಆ ಊರು ಇರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ
ಮಾಗಡಿ ತಾಲ್ಲೂಕಿಲಿ . ಈಗೊಂದೆರಡು ತಿಂಗಳಿನಿಂದ ಆ ಊರಿನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್‌ನಲ್ಲಿ ಮಾಸ್ಟರ್ಸ್ ಪದವಿ ಪಡೆದಿರುವ ದಂಪತಿ ವಾಸ ಮಾಡುತ್ತಿದ್ದಾರೆ. ಅವರು ನನ್ನ ಹೆಂಡತಿಯ ಅಕ್ಕ ಮತ್ತು ಆಕೆಯ ಗಂಡ. ನಮ್ಮ ಆನೇಕಲ್ ತಾಲ್ಲೂಕಿನ, ನಮ್ಮ ಪಕ್ಕದೂರಿನವನೆ ಆದ ನನ್ನ ಷಡ್ಡಕ ಈಗ ಇಲ್ಲಿಗೆ ವಾಸ ಬದಲಿಸಿದ್ದಾನೆ. ಆತ ಪ್ರಸಿದ್ಧ ವಿಪ್ರೊ ಕಂಪನಿಯಲ್ಲಿ ಲೀಡ್ ಆರ್ಕಿಟೆಕ್ಟ್. ಮಹಾನ್ ಆದರ್ಶವಾದಿ. ನೈಸರ್ಗಿಕ ಕೃಷಿಯ ಪರಮ ಆರಾಧಕನಾದ ಈತ ಬೆಂಗಳೂರಿನಿಂದ 80 ಕಿ.ಮೀ. ದೂರದ ಈ ಹಳ್ಳಿಯಲ್ಲಿ ನಾಲ್ಕೈದು ಎಕರೆ ಜಮೀನು ತೆಗೆದುಕೊಂಡಿದ್ದಾನೆ. ಪ್ರತಿದಿನ ಬೆಳ್ಳಂಬೆಳಗ್ಗೆ ಈ ಹಳ್ಳಿಯಿಂದ ಬೆಂಗಳೂರಿನ ದಕ್ಷಿಣದ ಎಲೆಕ್ಟ್ರಾನಿಕ್ಸ್ ಸಿಟಿಗೆ 70 ಕಿ.ಮೀ.ಗೂ ಹೆಚ್ಚು ದೂರ ಪ್ರಯಾಣ ಮಾಡುತ್ತಾನೆ!

2006 ರ ಜೂನ್‌ನಲ್ಲಿ ನಾನು "ವಿಕ್ರಾಂತ ಕರ್ನಾಟಕ" ದಂತಹ ಒಂದು ಪತ್ರಿಕೆಯ ಅವಶ್ಯಕತೆ ಕನ್ನಡಕ್ಕಿದೆ ಎಂದು ಬೆಂಗಳೂರಿಗೆ ಬಂದು, ಇದರ ಸಿದ್ಧತೆಗಳಿಗಾಗಿ ಸುಮಾರು ಎರಡು ತಿಂಗಳಿದ್ದೆ. ಆಗ ಒಂದು ಸಲವೂ ನಾನು ನನ್ನ ಷಡ್ಡಕ ಪರಸ್ಪರ ಭೇಟಿಯಾಗಲು ಆಗಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಆತ ಯಾವಾಗಲೂ ಬ್ಯುಸಿ ಇರುತ್ತಿದ್ದುದು. ಕರೆ ಮಾಡಿದಾಗಲೆಲ್ಲ, ಈ ನಮ್ಮ ಭ್ರಷ್ಟ ವ್ಯವಸ್ಥೆಯಲ್ಲಿ ಲಂಚ ಕೊಡದೆ ಜಮೀನು ನೊಂದಾವಣೆ ಮಾಡಿಸಿಕೊಳ್ಳಲು ಮಾಗಡಿಯ ತಾಲ್ಲೂಕು ಕಚೇರಿಯ ಕಂಬಗಳನ್ನು ಸುತ್ತುತ್ತಿದ್ದ. ಈಗಲೂ ಸಹ ಆತನ ಜಮೀನಿನ ರಿಜಿಸ್ಟ್ರೇಷನ್ ಆಗಿಲ್ಲ. ನಾನು ಈ ಹಿಂದೆ ಬರೆದಿದ್ದ ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಅರ್ಜಿ ಗುಜರಾಯಿಸಿ ಕುಳಿತಿದ್ದಾನೆ. ಅಂತಹ ಪರಮ ಆದರ್ಶವಾದಿ.

ದೇಶದ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಉದ್ಯೋಗಕ್ಕಿರುವ ಈತನಿಗೆ ಮನೆಯಲ್ಲಿ ಇಂಟರ್‌ನೆಟ್ ಇರಲೇಬೇಕಿತ್ತು; ಇಲ್ಲ.ನಮ್ಮ ಟೆಲಿಕಾಮ್ ಇಲಾಖೆಯವರು ಕೇಳಿದ ಲಂಚವೆಂಬ ಅಮೇಧ್ಯ ಕೊಡಲು ಈತ ಒಪ್ಪಲಿಲ್ಲ."ನಾನು ಅರ್ಜಿ ಸಲ್ಲಿಸಿ, ಹಣ ತುಂಬಿಸಿದ್ದೇನೆ. ಲಂಚ ಎಂದು ಒಂದು ಪೈಸೆಯನ್ನೂ ಕೊಡಲು ನಾನು ತಯ್ಯಾರಿಲ್ಲ, ನೀವು ಕೊಟ್ಟಾಗ ಕೊಡ್ರಿ." ಎಂದು ಕುಳಿತಿದ್ದ. ಅವರು ಒಂದು ತಿಂಗಳು ಸತಾಯಿಸಿ,ನಂತರ ಕೊಟ್ಟರಂತೆ. ಆದರೆ ಅವರು ಕೊಟ್ಟ ಕನೆಕ್ಷನ್‌ನಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ಅದೂ ಕೆಲಸ ಮಾಡುತ್ತಿಲ್ಲ!

ಈತನಿಗೆ ತಕ್ಕ ಜೊತೆ ಈತನ ಹೆಂಡತಿ,ಶಿಲ್ಪ. ಖ್ಯಾತ ಪರಿಸರವಾದಿ ಆ.ನ. ಯಲ್ಲಪ್ಪ ರೆಡ್ಡಿಯ ತಮ್ಮನ ಮಗಳು. ಕಂಪ್ಯೂಟರ್ ಇಂಜಿನಿಂಯರಿಂಗ್‌ನಲ್ಲಿ M.E. ಮಾಡಿದ್ದರೂ ಕೆಲಸದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇದೇ ಊರಿನ ಸರ್ಕಾರಿ ಕನ್ನಡ ಮೀಡಿಯಮ್‌ನ ಹೈಸ್ಕೂಲ್ ಮಕ್ಕಳಿಗೆ ರಾತ್ರಿ ಪಾಠ ಹೇಳಿಕೊಡುತ್ತ ಉಳಿದುಬಿಟ್ಟಿದ್ದಾಳೆ. ಈಕೆ ಹುಟ್ಟಿದ್ದು, ಬೆಳೆದದ್ದು, ಓದಿದ್ದು ಎಲ್ಲವೂ ಬೆಂಗಳೂರು ನಗರದಲ್ಲಿ! ಕಲಿತದ್ದು ಪೂರ್ತಿ ಇಂಗ್ಲಿಷ್ ಮೀಡಿಯಮ್‌ನಲ್ಲಿ. ಕನ್ನಡವನ್ನು ಕೇವಲ ಒಂದು ವಿಷಯವಾಗಿ ಕಲಿತಷ್ಟೆ ಪರಿಚಯ. ಈಗ ಇಂಗ್ಲಿಷ್-ಕನ್ನಡ ನಿಘಂಟು ಹಿಡಿದುಕೊಂಡು, ಕನ್ನಡ ಮೀಡಿಯಮ್‌ನಲ್ಲಿ ಪ್ರಾಥಮಿಕ ಶಾಲೆ ಓದಿರುವ ಗಂಡನಿಂದ ಕೆಲವೊಂದು ಅನುವಾದ ಮಾಡಿಸಿಕೊಂಡು, ನಮ್ಮ ಹಳ್ಳಿಗಳ ಬಹುಪಾಲು ಮಕ್ಕಳಿಗೆ ತಲೆನೋವಾಗಿರುವ ಇಂಗ್ಲಿಷ್ ಮತ್ತು ಗಣಿತವನ್ನು ರಾತ್ರಿ ಪಾಠ ಹೇಳಿಕೊಡುತ್ತಿದ್ದಾಳೆ!

ನೈಸರ್ಗಿಕ ಕೃಷಿಯ ಆರಾಧಕನಾದ ಶಶಿ ಜಪಾನಿನ ವಿಶ್ವವಿಖ್ಯಾತ ನೈಸರ್ಗಿಕ ಕೃಷಿ ತಜ್ಞ ಪುಕುವೊಕನ ಒಂದು ಹುಲ್ಲುಕಡ್ಡಿಯ ಕ್ರಾಂತಿಯ ಅನೇಕ ಪ್ರತಿಗಳನ್ನು ಅವರಿವರಿಗೆ ಕೊಡಲು ತನ್ನ ಲೈಬ್ರರಿಯಲ್ಲಿ ಇಟ್ಟಿದ್ದಾನೆ. ತನ್ನ ಸಾಫ್ಟ್‌ವೇರ್ ವೃತ್ತಿಗೆ ಸಂಬಂಧಿಸಿದ ತಂತ್ರಜ್ಞಾನದ ಮತ್ತು ಮ್ಯಾನೇಜ್‌ಮೆಂಟ್ ಪುಸ್ತಕಗಳ ಜೊತೆಗೆ, ಚಾರ್ಲ್ಸ್ ಡಾರ್ವಿನ್ನನ "Origin of Species" ನಿಂದ ಹಿಡಿದು, ವೇದಾಂತದವರೆಗೆ ಪುಸ್ತಕಗಳನ್ನಿಟ್ಟಿದ್ದಾನೆ ತನ್ನ ರೀಡಿಂಗ್ ರೂಮಿನಲ್ಲಿ. ಅದರಲ್ಲಿ ಅರ್ಧಕ್ಕರ್ಧ ಕನ್ನಡ ಪುಸ್ತಕಗಳೂ ಇವೆ. ಕುವೆಂಪು, ಎಚ್. ನರಸಿಂಹಯ್ಯ, ಎಸ್.ಎಲ್. ಭೈರಪ್ಪನವರ ಅನೇಕ ಪುಸ್ತಕಗಳಿವೆ. ಇಲ್ಲಿಯವರೆಗೆ ಪ್ರಕಟಗೊಂಡಿರುವ ತೇಜಸ್ವಿಯವರ ಪ್ರತಿಯೊಂದು ಪುಸ್ತಕವೂ ಇದೆ! ನಾಡಿನಿಂದ ಮತ್ತೆ ಕಾಡಿಗೆ ಮರಳಿದ ನಿಸರ್ಗದ ಸಾಹಿತಿ ತೇಜಸ್ವಿಯವರ ಎಲ್ಲಾ ಪುಸ್ತಕಗಳನ್ನು ಈ ನಿಸರ್ಗ ಪ್ರೇಮಿಯ ಮನೆಯಲ್ಲಿ ನೋಡಿ ನನಗೇನೂ ಆಶ್ಚರ್ಯವಾಗಲಿಲ್ಲ. ವಾರಾಂತ್ಯದಲ್ಲಿ ಈ ಹಳ್ಳಿಯ ಮಕ್ಕಳನ್ನು ಕೂರಿಸಿಕೊಂಡು, ಯಾವುದಾದರೂ ಒಂದು ಒಳ್ಳೆಯ ಪುಸ್ತಕವನ್ನು ಆರಿಸಿಕೊಂಡು ಅವರಿಗೆ ಶಶಿ ಬುಕ್‌ರೀಡಿಂಗ್ ಮಾಡುತ್ತಾನಂತೆ!

ಹಳ್ಳಿಗಳಲ್ಲಿನ ಜೀವನ ನಮ್ಮ "Feel Good" ಲೇಖನಗಳನ್ನು ಬರೆಯುವ ಲೇಖಕರು ಹೇಳಿದಷ್ಟು ಸರಳವಲ್ಲ; ಆದರ್ಶ, ಪ್ರೀತಿ, ಪ್ರೇಮಗಳಿಂದಲೇ ತುಂಬಿರುವುದೂ ಅಲ್ಲ. ಅದು ಬಹಳ ಸಂಕೀರ್ಣವಾದದ್ದು. ಶಶಿಯಂತಹ ಪರಮ ಆದರ್ಶವಾದಿಗೆ ಇಲ್ಲಿ ವಾಸ್ತವದ ಹೆಸರಿನಲ್ಲಿ ನಾನಾ ತರಹದ ಕಿರಿಕಿರಿ ಹುಟ್ಟಬಹುದು. ನಾವು ಹೋದಾಗ ಶಶಿ ಮನೆಯಲ್ಲಿ ಇರಲಿಲ್ಲ. ಆತನೂ ನಮ್ಮ ಹಾಗೆಯೆ ಬೆಳಗ್ಗೆ ಆರಕ್ಕೆಲ್ಲ ಮನೆ ಬಿಟ್ಟಿದ್ದ. ಶಿಲ್ಪ ಮನೆಯ ಸುತ್ತಮುತ್ತ ತೋರಿಸುತ್ತ, ಇಲ್ಲಿನ ಕಾಲ್ನಡಿಗೆಯ ದೂರದ ಸಾವನದುರ್ಗದ ಕಾಡುಗಳಲ್ಲಿ ಕರಡಿ ಇವೆಯೆಂದೂ, ಆಗಾಗ ತಮ್ಮ ಮನೆಯ ಬಾಗಿಲಿಗೇ ಬಂದು ಬಿಡುವ ನಾಗರ ಹಾವು, ಕೊಳಕು ಮಂಡಲಗಳ ಬಗ್ಗೆ ತನ್ನ ನಾಲ್ಕು ವರ್ಷದ ಮಗನ ಕೈ ಹಿಡಿದುಕೊಂಡು ಹೇಳಿದಳು. ಹಾಗೆ ಹಾವುಗಳು ಬಂದಾಗ ಸುತ್ತಮುತ್ತಲಿನ ಮನೆಯವರು ಅವನ್ನು ಕೊಲ್ಲಲು ಮುಂದಾಗುತ್ತಾರೆ ಎಂತಲೂ, ಆದರೆ ಶಶಿ ಬೇಡ ಎಂದು ತಡೆಯುತ್ತಾನೆ, ತಮ್ಮಂತೆಯೆ ನಿಸರ್ಗದ ಹಕ್ಕುದಾರರಾದ ಹಾವುಗಳನ್ನು ಕೊಲ್ಲಬಾರದೆಂದು ಹಳ್ಳಿಯವರೊಡನೆ ವಾದಿಸುತ್ತಾನೆ ಎಂದೂ ಹೇಳಿದಳು.

ನನ್ನ ಪಕ್ಕದ ಊರಿನವನೇ ಆದ ಶಶಿ ನನ್ನಂತೆಯೆ ಹಳ್ಳಿ ಗಮಾರ. ಆದರೂ ಪ್ರತಿನಿತ್ಯ ಹಳ್ಳಿಯಲ್ಲಿದ್ದುಕೊಂಡು ನಿಸರ್ಗದೊಡನೆ ಗುದ್ದಾಡುವರಿಗಿಂತ ಭಿನ್ನವಾಗಿ ಯೋಚಿಸುತ್ತಾನೆ. ಹಾವುಗಳನ್ನು ಕೊಲ್ಲಬಾರದೆಂದದ್ದನ್ನು ಕೇಳಿ ನಾನೆಂದೆ, "ಕೊಲ್ಲಬಾರದು, ಓಡಿಸಬಾರದು ಎಂದು ಅಷ್ಟೆಲ್ಲ ರಿಜಿಡ್ ಆದರೆ ಕಷ್ಟ. ಮನೆಯ ಹತ್ತಿರ ಹಾವುಗಳು ಬರದೆ ಇರಲು ನಮ್ಮ ಹಳ್ಳಿಗಳ ಕಡೆ ಬೆಳ್ಳುಳ್ಳಿಯ ಸಿಪ್ಪೆಯನ್ನು ಮನೆಯ ಸುತ್ತ ಎಸೆಯುತ್ತಾರೆ. ನೀನೂ ಹಾಗೇ ಮಾಡಮ್ಮ." ಎಂದೆ.

ನಾಲ್ಕು ವರ್ಷದ ಇವರ ಮಗ ಇದೇ ಹಳ್ಳಿಯ ಅಂಗನವಾಡಿಯಲ್ಲಿ ಒಂದೆರಡು ದಿನ ಕುಳಿತು, ಅಲ್ಲಿನ ವಾತಾವರಣಕ್ಕೆ ಸರಿಯಾಗಿ ಹೊಂದಿಕೊಳ್ಳಲಾಗದೆ ಭಯದಿಂದ ಓಡಿ ಬಂದು ಬಿಟ್ಟಿದ್ದಾನೆ. ಮತ್ತೆ ಅಂಗನವಾಡಿಗೆ ಹೋಗಲು ತಯ್ಯಾರಿಲ್ಲ. ತಿಂಗಳಿಗೆ ಸರಿಸುಮಾರು ಆರಂಕಿಯ ಸಂಬಳ ಇರುವ ಇವರಿಗೆ ಮಗನನ್ನು ಬೆಂಗಳೂರಿನ ಯಾವುದೋ ಪ್ರತಿಷ್ಠಿತ ಶಾಲೆಗೆ ಸೇರಿಸುವ ಉಮೇದಿಲ್ಲ. ಮಗನಿಗೆ ಮನೆಯಲ್ಲಿಯೆ ಹೋಮ್ ಸ್ಕೂಲಿಂಗ್ ಮಾಡುತ್ತೇವೆ ಎನ್ನುತ್ತಿದ್ದರು!

M.E. ಮಾಡಿದ್ದರೂ ಸಾಫ್ಟ್‌ವೇರ್ ಕೆಲಸಕ್ಕಾಗಲಿ, ಲೆಕ್ಚರಿಂಗ್ ವೃತ್ತಿಗಾಗಲಿ ಹೋಗದ ಆಕೆಯ ಬಗ್ಗೆ ಯೋಚಿಸುತ್ತ, ಆಕೆಯ ವಿದ್ಯಾಭ್ಯಾಸಕ್ಕೆ ಖರ್ಚಾಗಿರುವ ಸಾರ್ವಜನಿಕ ಹಣ ಪೋಲಾಗಲಿಲ್ಲವೆ ಎನ್ನುವ ಸಂದೇಹದ ಮಧ್ಯೆ, ನನ್ನಂತಹ ಹಳ್ಳಿ ಗಮಾರರಿಗೆ ಆಕೆ ಪಾಠ ಹೇಳಿಕೊಡುತ್ತಿರುವುದರ ಬಗ್ಗೆ ಹೆಮ್ಮೆ ಪಡುತ್ತ, ನಗುವುದೊ ಅಳುವುದೊ ಗೊತ್ತಾಗದ ಸಂದಿಗ್ಧತೆಯಲ್ಲಿ ಆಕೆ ನೀಡಿದ ರಾಮನವಮಿಯ ಮೊದಲ ಪಾನಕ ಗುಟುಕರಿಸುತ್ತ, ದಾರಿ ಖರ್ಚಿಗೆಂದು ಆಕೆ ನೀಡಿದ ಸೀಬೆ, ಸಪೋಟ, ಮಾವಿನ ಕಾಯಿ ಮತ್ತು ಮಾಗುತ್ತಿದ್ದ ಹಲಸಿನ ಹಣ್ಣನ್ನು ಗಾಡಿಗೆ ಹಾಕಿಕೊಂಡು, ಹಾಲಿ ಮುಖ್ಯಮಂತ್ರಿಗಳು ಪ್ರತಿನಿಧಿಸುತ್ತಿರುವ ರಾಮನಗರದತ್ತ ನಮ್ಮ ಹುಡುಗರೊಂದಿಗೆ ಹೊರಟೆ...






ಆತ್ಮಶ್ರೀಗಾಗಿ ನಿರಂಕುಶಮತಿಗಳಾದವರು

ನಮ್ಮ ಪತ್ರಿಕೆಯ ಕಚೇರಿಯಲ್ಲಿ ಈ ಲೇಖನದ ಪುಟ ವಿನ್ಯಾಸ ಮಾಡುವುದಕ್ಕೆ ಒಂದೆರಡು ಘಂಟೆ ಮುಂಚೆ ನಾನು ಮತ್ತು ಶಶಿ ಎಲೆಕ್ಟ್ರಾನಿಕ್ಸ್ ಸಿಟಿಯ ಸಾಧಾರಣ ಹೋಟೆಲ್ ಒಂದರಲ್ಲಿ ಬೆಳಗ್ಗೆ ಏಳಕ್ಕೆಲ್ಲ ಇಡ್ಲಿ ತಿನ್ನಲು ಕುಳಿತಿದ್ದೆವು. ಮಾತು ನಾನಾ ದಿಕ್ಕಿನಲ್ಲಿ ಹರಿದಿತ್ತು. ಅದರಲ್ಲಿ ಒಂದನ್ನು ಆತ ಬಹಳ ಗಂಭೀರವಾಗಿ ಹೇಳಿದ: "ಈ ಕೋಮುವಾದಿಗಳು ತಮ್ಮ ಸಂಘಟನೆಗೆ ನನ್ನನ್ನು ಎಳೆದುಕೊಳ್ಳಲು, ನನ್ನಿಂದ ಚಂದಾ ವಸೂಲು ಮಾಡಲು ಬಂದಿದ್ದರು. ನಾನು ಹೇಳಿದೆ: 'ನೋಡಿ, ನಿಮಗೂ ನನಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ. ಹಾಗಾಗಿ ಕೊಡುವುದಿಲ್ಲ.' ಅದಕ್ಕೂ ಮುಂಚೆ ಅವರೊಡನೆ ಬೆರೆತು ಒಂದೆರಡು ಕಡೆ ಓಡಾಡಿದ್ದೆ. ಈ ಕೋಮುವಾದಿಗಳು ಸಮಾಜದ ಪ್ರತಿ ಸ್ತರದಲ್ಲಿ infiltrate ಮಾಡುತ್ತಿದ್ದಾರೆ. ಕಿಸಾನ್ ಸಂಘ, ವಿದ್ಯಾರ್ಥಿ ಸಂಘ, ಕಾರ್ಮಿಕರ ಸಂಘ; ಇದನ್ನು ಬಹಳ ವ್ಯವಸ್ಥಿತವಾಘಿ ಮಾಡುತ್ತಿದ್ದಾರೆ. ಇದನ್ನು ಹೇಗಾದರೂ ಮಾಡಿ ಈಗಲೇ ಎದುರುಗೊಳ್ಳಬೇಕು. ಕಾರ್ನಾಡರು ಭೈರಪ್ಪನವರ ವಿರುದ್ಧ ವಿಜಯ ಕರ್ನಾಟಕದಲ್ಲಿ ಬರೆದ ಲೇಖನ ಓದಿ ಭೈರಪ್ಪನವರ ಹಲವಾರು ಪುಸ್ತಕಗಳನ್ನು ಓದಿದೆ. ಒಳ್ಳೆಯ ಕತೆಗಾರ ಎನ್ನುವುದನ್ನು ಬಿಟ್ಟರೆ ಕಾರ್ನಾಡರು ಹೇಳಿದ ಎಲ್ಲವೂ ಕಾಣಿಸುತ್ತವೆ. ದೇಶದಲ್ಲಿ ಕೋಮುವಾದ ವಿಷ ಬೆರೆಸುತ್ತಿದೆ."

ಸುಮಾರು 25 ಸಾಫ್ಟ್‌ವೇರ್ ಇಂಜಿನಿಯರ್‌ಗಳು ಶಶಿಗೆ ನೇರವಾಗಿ ರಿಪೋರ್ಟ್ ಮಾಡಿಕೊಳ್ಳುತ್ತಾರೆ. ಆದರೂ ಈತ ಹಾಕಿಕೊಂಡಿದ್ದು ಮಾತ್ರ ಸಾಧಾರಣ ಹವಾಯಿ ಚಪ್ಪಲಿ.ಆತ್ಮಶ್ರೀಗಾಗಿ ನಿರಂಕುಶಮತಿಗಳದವರ ನಡೆನುಡಿಯಲ್ಲಿ ದ್ವಂದ್ವಗಳು ಬಹಳ ಕಮ್ಮಿ....






ಮಕ್ಕಳ ವಿಯೋಗ ಶೋಕ ನಿರಂತರ

ಈ ಹಾವುಗಳು ಮತ್ತು ಅವನ್ನು ಕೊಲ್ಲುವುದರ ಬಗ್ಗೆ ಶಿಲ್ಪಳೊಂದಿಗೆ ಮಾತನಾಡುತ್ತಿದ್ದಾಗ ನಾನು ಐದಾರು ವರ್ಷದ ಹಿಂದೆ ಅಮೇರಿಕಕ್ಕೆ ಹೋಗುವ ಹಿಂದಿನ ತಿಂಗಳು ನಡೆದ ಘಟನೆ ನೆನಪಾಗುತ್ತಿತ್ತು. ಅಂದು ನನ್ನೂರಿನಿಂದ 20 ಕಿ.ಮೀ. ದೂರದ ತಮಿಳುನಾಡಿಗೆ ಸೇರಿದ ಸೋದರಮಾವನ ಊರಿಗೆ ಹೋಗಿದ್ದೆ. ಹೊಲದಲ್ಲಿ ಮನೆ ಮಾಡಿದ್ದ ಮಾವ. ಆತನ ನಾಲ್ಕು ವರ್ಷದ ಮೊಮ್ಮಗ ಬೆಳಗ್ಗೆ ಎದ್ದು ಮನೆಯ ಮುಂದಿನ ಬಯಲಿನಲ್ಲಿ ಬೆಳಗ್ಗೆ ಏಳರ ಸುಮಾರಿಗೆ ಎಂದಿನಂತೆ ಆಟವಾಡುತ್ತ ಪಾಯಖಾನೆಗೆ ಕುಳಿತಿದ್ದಾನೆ. ಆರಡಿ ಉದ್ದದ ಆ ನಾಗರಹಾವು ತಾನೆ ತಾನಾಗಿ ಇವನ ಬಳಿಗೆ ಬಂದಿತೊ, ಇಲ್ಲ ಈತನೇ ಹೋಗಿ ಅದರ ಪಕ್ಕದಲ್ಲಿ ಕುಳಿತನೊ, ಏನಾಯಿತೊ, ಅದು ಮಗುವನ್ನು ಕಚ್ಚಿ ಬಿಟ್ಟಿತು. ಅವನು ನೋವಿಗೆ ಕಿಟಾರನೆ ಕಿರುಚಿಕೊಂಡ.ಮನೆಯಲ್ಲಿದ್ದವರೆಲ್ಲ ಓಡಿ ಬಂದರು. ಮಗುವಿನ ಅಮ್ಮ ಪುಟ್ಟ ಪುಟ್ಟ ಹೆಜ್ಜೆಯಿಡುತ್ತ ತಾನು ಬರಬಾರದಷ್ಟು ವೇಗದಲ್ಲಿ ಬಂದಳು. ಯಾಕೆಂದರೆ ಆಕೆ ಒಂಬತ್ತು ತಿಂಗಳ ತುಂಬು ಗರ್ಭಿಣಿ. ಅಲ್ಲಿಯೇ ಗದ್ದೆಗೆ ನೀರು ಹಾಯಿಸುತ್ತಿದ್ದ ಮಗುವಿನ ಅಪ್ಪನಿಗೂ ಕರುಳಿನ ಕರೆ ಕೇಳಿ, ಆತ ಓಡಿ ಬಂದ. ಹಾವು ಇನ್ನೂ ಮನೆಯ ಮುಂದೆಯೇ ಇತ್ತು. ಅಪ್ಪನಿಗೆ ಕ್ಷಣಾರ್ಧದಲ್ಲಿ ವಷಯ ಗೊತ್ತಾಯಿತು. ತಕ್ಷಣವೆ ಕೈಗೆ ಬಡಿಗೆ ತೆಗೆದುಕೊಂಡ. ರೋಷತಪ್ತ ಅಪ್ಪನ ಏಟಿಗೆ ಆರಡಿ ಉದ್ದದ ಹಾವು ಹೆಣವಾಗಿ ಬಿತ್ತು. ಕೂಡಲೆ ಅಪ್ಪ ಮಗುವಿನ ಕಾಲಿಗೆ ವಿಷ ಮೇಲಕ್ಕೆ ಏರದಂತೆ ಪಟ್ಟಿಕಟ್ಟಿ, ಮೊಪೆಡ್‌ನಲ್ಲಿ ಮಗನನ್ನು ಕೂರಿಸಿಕೊಂಡು ಉಟ್ಟ ಬಟ್ಟೆಯಲ್ಲಿ ಎರಡು ಕಿ.ಮೀ. ದೂರದ ಆಸ್ಪತ್ರೆಗೆ ಹೊರಟ. ಅಲ್ಲಿ ಯಾರೂ ಇರಲಿಲ್ಲವೋ ಅಥವ ಅವರಲ್ಲಿ ಮದ್ದಿರಲಿಲ್ಲವೋ, ಅಲ್ಲಿಂದ ಹತ್ತು ಕಿ.ಮೀ. ದೂರದ ತಾಲ್ಲೂಕು ಕೇಂದ್ರವಾದ ಹೊಸೂರು ಆಸ್ಪತ್ರೆಗೆ ಹೋಗಲು ತಿಳಿಸಿದ್ದಾರೆ.

ಅಪ್ಪ ಹೊಸೂರಿನತ್ತ ಗಾಡಿ ತಿರುಗಿಸಿದ.ಕ್ಷಣಕ್ಷಣವೂ ಅಮೂಲ್ಯ. ನಿಧಾನಿಸಿದಷ್ಟು ವಿಷ ತಲೆಗೆ ಏರುವ ಭೀತಿ. ಬಹುಶಃ ಹಾವು ಕಡಿದ ಮುಕ್ಕಾಲು ಘಂಟೆಗೆ ಹೊಸೂರು ಆಸ್ಪತ್ರೆಯಲ್ಲಿರಬಹುದು. ಅಲ್ಲಿಗೆ ಬರುವಷ್ಟರಲ್ಲಿ ಮಗುವಿನ ಬಾಯಿಂದ ನೊರೆ ಬರಲು ಆರಂಭವಾಗಿದೆ. ವೈದ್ಯರು ಮಾಡಬಹುದಾದದ್ದನ್ನೆಲ್ಲ ಮಾಡಿದರು. ಮಗು ಅಪ್ಪನ ಮುಂದೆಯೆ ಭುವಿಗೆ ವಿದಾಯ ಹೇಳಿತು. ಅಮ್ಮ ಮನೆಯಲ್ಲಿ ಬೋರಾಡುತ್ತಿದ್ದಾಳೆ. ಇನ್ನೊಂದೆರಡು ವಾರದಲ್ಲಿ ತಂಗಿ ಭುವಿಯ ಮೇಲೆ ಅರಳಬೇಕಿದ್ದಾಗ ಅಣ್ಣ ಸ್ವಾಗತ ಕೋರದೆ ವಿದಾಯ ಹೇಳಿದ್ದ...

ಹೊಲದಿಂದ ಒಂದು ಕಿ.ಮೀ. ದೂರದ ಹಳ್ಳಿಯಲ್ಲಿ ಇನ್ನೊಬ್ಬ ಮಾವನ ಮನೆಯಲ್ಲಿದ್ದ ನನಗೆ ಮಗುವನ್ನು ಹಾವು ಕಚ್ಚಿದ, ಅವನನ್ನು ಹೊಸೂರಿಗೆ ಕರೆದುಕೊಂಡು ಹೋದ ವಿಷಯ ಗೊತ್ತಾಯಿತು. ನಾನು, ಮಗುವಿನ ಚಿಕ್ಕಪ್ಪ ಸಿಕ್ಕ ಗಾಡಿ ಹತ್ತಿಕೊಂಡು ಓಡಿದೆವು. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಹೊರಗೆ ಕಣ್ಣೀರಿಡುತ್ತ ಕುಳಿತಿದ್ದ ಅಪ್ಪನನ್ನೂ, ಅಷ್ಟರಲ್ಲಿ ಅಲ್ಲಿ ನೆರೆದಿದ್ದ ನೆಂಟರ ಮುಖ ನೋಡಿದ ಮೇಲೆ ನಮಗೆ ಯಾರೂ ಏನೂ ಹೇಳಬೇಕಾಗಿರಲಿಲ್ಲ. ಪೋಸ್ಟ್ ಮಾರ್ಟಮ್ ಆಗದೆ ಶವ ತೆಗೆದುಕೊಂಡು ಹೋಗಲಾಗದು ಎಂದಿದ್ದರು ಆಸ್ಪತ್ರೆಯವರು. ಪೋಸ್ಟ್ ಮಾರ್ಟಮ್ ಮಾಡಬೇಕಾದ ಡಾಕ್ಟರ್ ಇಲ್ಲದೆ ಐದಾರು ಘಂಟೆ ಕಾಯಬೇಕಾಯಿತು. ಒಳಗೆ ಮಗುವಿನ ಪೋಸ್ಟ್ ಮಾರ್ಟಮ್ ಮಾಡುತ್ತಿದ್ದ ರೂಮಿನಲ್ಲಿದ್ದ ನೊಣಗಳ ಹಾರಾಟ ಮತ್ತು ಗುಂಯ್‌ಗುಟ್ಟುವಿಕೆ, ವೈದ್ಯರು ಉಪಯೋಗಿಸುತ್ತಿದ್ದ ಫಿನೈಲ್‌ನಂತಹ ದ್ರಾವಣದ ಘಾಟು ವಾಸನೆ ಸುದೀರ್ಘ ಕಾಲ ನಮ್ಮನ್ನು ಹಿಂಸಿಸಿತು. ಸಹಿ ಹಾಕಿಸಿಕೊಂಡು ಮಗುವಿನ ಶವವನ್ನು ಅಪ್ಪನ ಕೈಗೆ ಇತ್ತಾಗ ಅದರ ತಲೆ, ಮೈಯೆಲ್ಲಾ ಬ್ಯಾಂಡೇಜು, ರಾಸಾಯನಿಕಗಳ ಕಮಟು ವಾಸನೆ. ಅಪ್ಪ ಮಗನ ಹೆಣವನ್ನು ತೊಡೆಯ ಮೇಲೆ ಕೂರಿಸಿಕೊಂಡು ಜೀಪಿನ ಹಿಂದೆ ಕುಳಿತ. ಅವನ ಪಕ್ಕ ನಾನು ಕುಳಿತೆ. ಜೀಪಿನಲ್ಲಿ ಒಟ್ಟು ಆರೇಳು ಜನ ಇದ್ದಿರಬಹುದು. ಆದರೂ, ಹನ್ನೆರಡು ಕಿ.ಮೀ.ಗಳ ಆ ಪ್ರಯಾಣ ಒಂದೂ ಮಾತಿಲ್ಲದೆ ಮುಗಿಯಿತು...

ಮನೆಯ ಬಳಿಗೆ ಬರುವಷ್ಟರಲ್ಲಿ ಮಣ್ಣಿಗೆ ಬರಬೇಕಾದವರೆಲ್ಲ ಬಂದಿದ್ದರು. ಮೈಯೆಲ್ಲಾ ಪೋಸ್ಟ್‌ಮಾರ್ಟಮ್ ಮಾಡಿದ ಬ್ಯಾಂಡೇಜು ಇದ್ದಿದ್ದರಿಂದ ಮಗುವಿಗೆ ಸ್ನಾನ ಸಹ ಮಾಡಿಸುವ ಹಾಗೆ ಇರಲಿಲ್ಲ. ತುಂಬು ಗರ್ಭಿಣಿ ಮಗನನ್ನು ನೋಡಿದಳೋ ಇಲ್ಲವೋ ನನಗೆ ಗೊತ್ತಾಗಲಿಲ್ಲ. ಸೂರ್ಯ ಪಡುವಣದಲ್ಲಿ ಅಸ್ತಮಿಸುತ್ತಿದ್ದಾಗ ಮನೆಯ ಏಕೈಕ ಮೊಮ್ಮಗ ಮಣ್ಣಲ್ಲಿ ಮಣ್ಣಾಗಿ ಹೋದ. ಅಂದು ಆ ತಾಯಿಯನ್ನು ಮಾತನಾಡಿಸುವ ಧೈರ್ಯ ನನ್ನಲ್ಲಿರಲಿಲ್ಲ. ಒಂದೆರಡು ತಿಂಗಳಿಗೆ ಅಮೇರಿಕಕ್ಕೆ ಹೋದೆ. ಮತ್ತೊಮ್ಮೆ ಬಂದಾಗಲೆ ಆಕೆಯನ್ನು ಮಾತನಾಡಿಸಿದ್ದು. ಆಗಲೂ ನನಗೆ ಆಕೆಯ ಬಳಿ ಆ ವಿಷಯ ಮಾತನಾಡಲಾಗಲಿಲ್ಲ. ಈ ಲೇಖನ ಬರೆಯುತ್ತಿರುವುದಕ್ಕೆ ಅರ್ಧ ಘಂಟೆ ಮುಂಚೆ ತನ್ನ ಇನ್ನೊಬ್ಬ ಹೆಣ್ಣುಮಗಳೊಂದಿಗೆ ಆ ತಾಯಿ ನಮ್ಮ ಮನೆಗೆ ಬಂದಿದ್ದಳು. ಈಗ ಆ ವಿಷಯ ಎತ್ತುವುದು ಅಧಿಕ ಪ್ರಸಂಗಿತನ. ನಾನು ಅದರ ಬಗ್ಗೆ ಮಾತನಾಡಲಿಲ್ಲ. ಆಗಲೆ ನನಗೆ ಗೊತ್ತಾಗಿದ್ದು, ಮಕ್ಕಳ ವಿಯೋಗದ ನೋವನ್ನು ಕಾಲವೂ ಸಹ ಸಂಪೂರ್ಣವಾಗಿ ಮರೆಸುವುದಿಲ್ಲ ಎಂದು...