Jun 28, 2011

ಕರ್ನಾಟಕ ಪ್ರಜಾ ಮಂಡಲ - ಸಂವಿಧಾನದ ಮೇಲಾಣೆ

ಸ್ನೇಹಿತರೆ,

ನಾವು ಒಂದಿಷ್ಟು ಸಮಾನಮನಸ್ಕರು (ಸುಜಾತ ಕುಮಟ, ಸೂರ್ಯ ಮುಕುಂದರಾಜ್, ಶಾಂತವೇರಿ ರಾಮಮನೋಹರ್, ಮುಕುಂದರಾಜ್, ನಾನು, ಮತ್ತು ಇನ್ನೂ ಹಲವರು) "ಕರ್ನಾಟಕ ಪ್ರಜಾ ಮಂಡಲ" ಎಂಬ ವೇದಿಕೆಯೊಂದನ್ನು ಹುಟ್ಟುಹಾಕಿದ್ದೇವೆ. (ಇದರ ಹುಟ್ಟು ಹೇಗಾಯಿತು ಎಂದು ಮುಂದೊಮ್ಮೆ ಬರೆಯುತ್ತೇನೆ.) ಈ ಸಂಘಟನೆಯ ಮೂಲ ಉದ್ದೇಶ, ’ಕರ್ನಾಟಕದ ಸಮಾಜ, ಸಂಸ್ಕೃತಿ, ಮತ್ತು ರಾಜಕೀಯ ಕ್ಷೇತ್ರದಲ್ಲಿನ ಸುಧಾರಣೆಗಳಿಗಾಗಿ’ ಕಾರ್ಯಕ್ರಮಗಳನ್ನು ರೂಪಿಸುವುದು. ಕರ್ನಾಟಕ ರಾಜಕಾರಣದ ಇತ್ತೀಚಿನ ಕ್ಷುದ್ರ ಪ್ರಹಸನವಾದ ಆಣೆ-ಪ್ರಮಾಣದ ವಿರುದ್ಧವಾಗಿ "ಸಂವಿಧಾನದ ಮೇಲಾಣೆ" ಎಂಬ ಪ್ರತಿಭಟನಾ ಕಾರ್ಯಕ್ರಮ (27/6/2011)ಮಾಡುವುದರ ಮೂಲಕ ನಾವು ಮೊದಲು ಮಾಡಿದ್ದೇವೆ. ಅಂದು ನಮ್ಮ ಜೊತೆಗೆ ಹಲವಾರು ಹಿರಿಯರು, ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಬೆಂಗಳೂರಿನ ಪುರಭವನದ ಮೆಟ್ಟಿಲುಗಳ ಮೇಲೆ ನಡೆದ ಅದು ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿತ್ತು.


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಮತ್ತು ನ್ಯಾಯಾಲಯದಿಂದ ತೀರ್ಮಾನವಾಗಬೇಕಾದದ್ದನ್ನು ದೇವಸ್ಥಾನವೊಂದರಲ್ಲಿ ಆಣೆ-ಪ್ರಮಾಣ ಮಾಡಿಕೊಳ್ಳುವುದರ ಮೂಲಕ ತೀರ್ಮಾನಿಸಿಕೊಳ್ಳಲು ಬಯಸುವ ಮೂಢ-ಅವೈಚಾರಿಕ-ಅಪ್ರಬುದ್ಧ ನಡವಳಿಕೆಯ ವಿರುದ್ಧ ಘೋಷಣೆ ಕೂಗಿ, ಒಂದಷ್ಟು ಒಳ್ಳೆಯ ಕವನಗಳನ್ನು ಹಾಡಿ, ಕೆಲವು ಕವಿಗಳು ಕವನವನ್ನು ವಾಚಿಸಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು. ಅದರ ಕುರಿತ ಚಿತ್ರಗಳು, ಪತ್ರಿಕಾ ವರದಿಗಳ ಕ್ಲಿಪ್ಪಿಂಗ್‌ಗಳು ಇಲ್ಲಿವೆ. ನೀವು ಮುಂದಿನ ದಿನಗಳಲ್ಲಿ ನಮ್ಮೊಡನೆ ಕೈಜೋಡಿಸುವ ಆಸಕ್ತಿಯಿದ್ದಲ್ಲಿ (ದಯವಿಟ್ಟು ಜೊತೆಗೂಡಿ ಎಂದು ಕೇಳಿಕೊಳ್ಳುತ್ತೇನೆ) ದಯವಿಟ್ಟು ಮೇಲೆ ಹೆಸರಿಸಿದ ಯಾರನ್ನಾದರೂ ಸರಿ ಸಂಪರ್ಕಿಸಿ. (ನನ್ನ ದೂರವಾಣಿ ಸಂಖ್ಯೆ: ೯೬೮೬೦೮೦೦೦೫)

ಉದಯವಾಣಿಯಲ್ಲಿ:


ಪ್ರಜಾವಾಣಿಯಲ್ಲಿ:


ವಿಜಯ ಕರ್ನಾಟಕದಲ್ಲಿ:
ಕನ್ನಡಪ್ರಭದಲ್ಲಿ:


ಚಿತ್ರ-ವರದಿ ಕೃಪೆ: ಮೇಲೆ ಹೆಸರಿಸಿರುವ ಪತ್ರಿಕೆಗಳದು.

ಮಾಧ್ಯಮ ಕರ್ನಾಟಕ : ಪರ್ಯಾಯ ಮಾಧ್ಯಮದ ಹುಡುಕಾಟದಲ್ಲಿ...

ಕಳೆದ ಶನಿವಾರ ಮತ್ತು ಭಾನುವಾರ (ಜೂನ್ 25-26, 2011) ಚಿತ್ರದುರ್ಗದಲ್ಲಿ ’ಮಾಧ್ಯಮ ಕರ್ನಾಟಕ" ಎಂಬ ವಿಚಾರ ಸಂಕಿರಣ ನಡೆಯಿತು. ’ಬಯಲು ಸಾಹಿತ್ಯ ವೇದಿಕೆ, ಕೊಟ್ಟೂರು’, ಮತ್ತು ’ಗೆಳೆಯರ ಬಳಗ, ಚಿತ್ರದುರ್ಗ’, ’ನಾವು-ನಮ್ಮಲ್ಲಿ’ ಸಹಯೋಗದೊಂದಿಗೆ ಆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಇದಕ್ಕೆ ಹೆಚ್ಚಾಗಿ ಕನ್ನಡದ ಕೆಲವು ಪ್ರಮುಖ ಪ್ರಗತಿಪರ ವಿಚಾರಧಾರೆಯ ಪತ್ರಕರ್ತರು, ಬರಹಗಾರರು, ಆಸಕ್ತರು ಬಂದಿದ್ದರು. ಆಯೋಜಕರಲ್ಲಿ ಬಹುಪಾಲಿನವರು ಚಿತ್ರದುರ್ಗದ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಯುವಕರೇ ಇದ್ದರು. (ಯುವಕರೇ ಅಂದರೆ ಯುವಕ ಮತ್ತು ಯುವತಿಯರು ಎಂದು ಭಾವಿಸಬೇಕಾಗಿ ವಿನಂತಿ.) ಆಯೋಜನೆ ಮತ್ತು ವ್ಯವಸ್ಥೆಯ ದೃಷ್ಟಿಯಿಂದ ಬಹಳ ಪ್ರೀತಿ, ಆಸಕ್ತಿ, ಮತ್ತು ಕಾಳಜಿಯಿಂದ ಸಂಯೋಜಿಸಲ್ಪಟ್ಟ ಕಾರ್ಯಕ್ರಮ. ಅವರೆಲ್ಲರಿಗೂ ನಾನು ಈ ಮೂಲಕ ಅಭಿಮಾನ, ಅಭಿನಂದನೆ ಮತ್ತು ಧನ್ಯವಾದ ತಿಳಿಸುತ್ತೇನೆ. ಈ ಗುಂಪಿನ ಮೇಲೆ ನನಗೆ ಬಹಳಷ್ಟು ಆಶಾವಾದವಿದೆ. ಇವರ ತಾಕತ್ತು ಅವರು ಹೊಂದಿರುವ ಪ್ರಾಮಾಣಿಕತೆ, ಕ್ರಿಯಾಶೀಲತೆ, ವೈಚಾರಿಕ ನಿಲುವುಗಳು, ಮತ್ತು ಆದರ್ಶಗಳಲ್ಲಿದೆ.

ಮೊದಲ ದಿನದದ ಗೋಷ್ಠಿಯಲ್ಲಿ ನನ್ನದೂ ಒಂದು ವಿಷಯ ಮಂಡನೆಯಿತ್ತು. ವಿಷಯ, "ಆದರ್ಶ ಪತ್ರಿಕೋದ್ಯಮ". ಅದಕ್ಕೂ ಎರಡು ದಿನದ ಹಿಂದೆ ಬೆಂಗಳೂರಿನ ಗೆಳೆಯರಿಬ್ಬರ ಜೊತೆ ಗಂಭೀರವಾಗಿ ಮಾತನಾಡುತ್ತಿದ್ದಾಗ ನಾನು ಮಂಡಿಸಲಿರುವ ವಿಷಯವನ್ನು ಯಾವ ವಿಚಾರದ ಪ್ರಸ್ತಾಪದ ಮೂಲಕ ಕೊನೆಗೊಳಿಸಬೇಕು ಎನ್ನುವ ಸ್ಪಷ್ಟತೆ ಬಂದಿತ್ತು. ಅದು, ಕರ್ನಾಟಕದಲ್ಲಿ ಪರ್ಯಾಯ ಮಾಧ್ಯಮದ ಹುಡುಕಾಟದ ಮೂಲಕ ನಾವೊಂದು ಆದರ್ಶ ಮಾಧ್ಯಮ ಸಂಸ್ಥೆ/ಗುಂಪೊಂದರ ಸಾಕಾರ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನುವುದು. ಆ ಪರ್ಯಾಯ ಮಾಧ್ಯಮ internet ಆಧಾರಿತವಾಗಿರುತ್ತದೆ. ಈ ಮಾಧ್ಯಮ ಉತ್ತಮ ಜೀವನ ಮೌಲ್ಯಗಳ, ಸ್ವಾತಂತ್ರ್ಯದ, ಸಮಾನತೆಯ, ಪ್ರಜಾಪ್ರಭುತ್ವದ ಪರ ಇದ್ದುಕೊಂಡೆ ಸಬಲ ಧ್ವನಿಯಾಗಿಯೂ ಬೆಳೆಯಲು ಸಾಧ್ಯವಿದೆ. ಇದಕ್ಕೆ ಬೇಕಿರುವುದು ದುಡ್ಡಿಗಿಂತ ಹೆಚ್ಚಾಗಿ ಬದ್ಧತೆಯುಳ್ಳ ಮತ್ತು ಹೆಚ್ಚಿನ ಮಟ್ಟದ ಹಣದ ಅವಶ್ಯಕತೆಯಿರದ ಒಂದಿಷ್ಟು ಯುವ ಪತ್ರಕರ್ತರು ಮತ್ತು ಬರಹಗಾರರು. ಇದು ಈ ಕೂಡಲೆ ಸಾಧ್ಯವಾಗುವ ಸಂಗತಿಯಲ್ಲ. ನಮ್ಮ ಕನ್ನಡದ-ಕರ್ನಾಟಕದ ಸಂದರ್ಭದಲ್ಲಿ ಬಹುಶ: ಐದಾರು ವರ್ಷಗಳನ್ನೆ ತೆಗೆದುಕೊಳ್ಳಬಹುದು. ಇದನ್ನೆ ನಾನು ಅಲ್ಲಿ ಪ್ರಸ್ತಾಪಿಸಿದ್ದೆ.

ನನ್ನ ಮುಂದಿನ ದಿನಗಳ ಸುಮಾರು ನಾಲ್ಕನೆ ಒಂದು (ಎಚ್ಚರದ ಸ್ಥಿತಿಯ) ಸಮಯವನ್ನು ಮತ್ತು ನನ್ನ ಒಂದಷ್ಟು ಆದಾಯದ ಪಾಲನ್ನು ಇದರ ಸಾಕಾರಕ್ಕೆ ವಿನಿಯೋಗಿಸಲಿದ್ದೇನೆ. ಬಹುಶಃ ಕೈಗೆ ಸಿಗುವ ಸಮಾನಮನಸ್ಕರಿಗೆಲ್ಲ ಇದರ ಬಗ್ಗೆ ಪ್ರಸ್ತಾಪಿಸಲಿದ್ದೇನೆ. ಇದನ್ನು ಓದುವ ಗೆಳೆಯರು ಈ ನಿಟ್ಟಿನಲ್ಲಿ ನನಗೊಂದಿಷ್ಟು ಸಹಾಯ ಮಾಡಬಹುದು. ನೀವು ಈ ವಿಷಯದಲ್ಲಿ ಆಸಕ್ತರಾಗಿದ್ದರೆ ಮತ್ತು ಒಂದಿಷ್ಟು ಗಂಟೆಗಳ ಸಮಯವನ್ನು ಕೊಡಬಲ್ಲಿರಾದರೆ ದಯವಿಟ್ಟು ಸಂಪರ್ಕಿಸಿ (೯೬೮೬೦೮೦೦೦೫). ಅಥವ ನಿಮ್ಮ ಸ್ನೇಹಿತರ ಬಳಗದಲ್ಲಿ ಅಂತಹವರಿದ್ದರೆ ಅವರಿಗೆ ನನ್ನನ್ನು ಸಂಪರ್ಕಿಸಲು ತಿಳಿಸಿ. ಅವರು ಕರ್ನಾಟಕದ (ಅಥವ ದೇಶದ) ಯಾವುದೇ ಪ್ರದೇಶದಲ್ಲಿರಲಿ, ತೊಂದರೆಯಿಲ್ಲ. ಆದರೆ ಅವರಿಗೆ ಒಂದಿಷ್ಟು ಸವಲತ್ತುಗಳಿರಬೇಕು (ಕಂಪ್ಯೂಟರ್, ಇಂಟರ್ನೆಟ್). ಒಂದಿಷ್ಟು ಓದಿಕೊಂಡಿರಬೇಕು. ಹೊಸತನ್ನು ಓದುವ, ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಹಂಬಲ ಮತ್ತು ಅವುಗಳನ್ನು ವಿಮರ್ಶಿಸುವ ಬೌದ್ಧಿಕ ಸಾಮಗ್ರಿ ಇರಬೇಕು. ಅವರು ಹೇಳುವ ವಿಚಾರಕ್ಕೆ ಬದ್ಧರಾಗಿರಬೇಕು. ಪ್ರಾಮಾಣಿಕರಾಗಿರಬೇಕು. ಅವರ ಸಮಯಕ್ಕೆ ಮತ್ತು ಬರವಣಿಗೆಗೆ ಸೂಕ್ತ ಮಾಸಿಕ ಸಂಭಾವನೆಯನ್ನು ಕೊಡಲಾಗುವುದು. ಉಳಿದಂತೆ, ನನ್ನ ವಿಚಾರಗಳೇನು ಮತ್ತು ನಿಲುವುಗಳೇನು ಎಂದು ಈ ಬ್ಲಾಗ್ ಓದುವವರಿಗೆ ತಿಳಿದೇ ಇದೆ.

Jun 27, 2011

ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಠಿಯ ಚಿತ್ರಗಳು

ಕಳೆದ ವಾರ (19/6/11) ನಡೆದ ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಠಿಯ ಚಿತ್ರಗಳು ಇವು. ಬಿಡುಗಡೆಯಾದ ಪುಸ್ತಕಗಳ ಮುಖಪುಟ ಸಹ ಈ ಪೋಸ್ಟ್‌ಗೆ ಸೇರಿಸಿದ್ದೇನೆ. ಅಂದು ಬಂದಿದ್ದ ಗೆಳೆಯರಿಗೆ, ಹಿತೈಷಿಗಳಿಗೆ, ನೆರವಾದ ಮಿತ್ರರಿಗೆ, ಕವಿಗಳಿಗೆಲ್ಲ ಮತ್ತೊಮ್ಮೆ ಧನ್ಯವಾದಗಳು.

Jun 14, 2011

ಪುಸ್ತಕ ಬಿಡುಗಡೆ ಮತ್ತು ಕವಿಗೋಷ್ಠಿ : ದಿ. 19-6-2011

ಸ್ನೇಹಿತರೆ,

"ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ", ಮತ್ತು "ದೇಶ-ಕಾಲ-ಶ್ರಮ," ಎಂಬ ನನ್ನ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಇದೇ ಭಾನುವಾರದಂದು (19/6/11) ಬೆಳಗ್ಗೆ 10:30 ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಇಟ್ಟುಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಕವಿಗೋಷ್ಠಿಯನ್ನು ಸಹ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ತಮ್ಮನ್ನು ಈ ಮೂಲಕ ಆಹ್ವಾನಿಸುತಿದ್ದೇನೆ.

"ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ," ಇಂಗ್ಲಿಷ್‍ನ "Anyway" ಕೃತಿಯ ಅನುವಾದ. ಮೂಲ ಲೇಖಕರು ಕೆಂಟ್ ಎಂ. ಕೀತ್. "ದೇಶ-ಕಾಲ-ಶ್ರಮ" ನಾನು "Outliers" ಬಗ್ಗೆ ಬರೆದಿದ್ದ ಲೇಖನಗಳ ಸಂಗ್ರಹರೂಪ.

ಅಂದು ವೇದಿಕೆಯಲ್ಲಿ ನಟರಾಜ್ ಹುಳಿಯಾರ್, ಪೃಥ್ವಿ ದತ್ತ ಚಂದ್ರ ಶೋಭಿ, ಮತ್ತು ವಿ.ಪಿ. ನಿರಂಜನಾರಾಧ್ಯರಿರುತ್ತಾರೆ. ಪುಸ್ತಕ ಬಿಡುಗಡೆಯ ನಂತರದ ಕವಿಗೋಷ್ಠಿಯಲ್ಲಿ ಮಂಜುನಾಥ ವಿ. ಎಂ., ಕಾರ್ಪೆಂಟರ್, ಕುಮಾರ್ ಎಸ್., ಜಯಶಂಕರ್ ಹಲಗೂರು, ರಶ್ಮಿ ಹೆಗಡೆ, ಸಿ. ರವಿಂದ್ರನಾಥ್, ಸುಜಾತಾ ಕುಮಟಾ, ಶಿವಸುಂದರ್, ನಾಗತಿಹಳ್ಳಿ ರಮೇಶ್, ದಿನೇಶ್ ಕುಮಾರ್, ಬಾಲ ಗುರುಮೂರ್ತಿ, ಮತ್ತು ಚೀಮನಹಳ್ಳಿ ರಮೇಶ್ ಬಾಬು ತಮ್ಮ ಕವನಗಳನ್ನು ಓದಲಿದ್ದಾರೆ.


ಮತ್ತೊಮ್ಮೆ ತಮ್ಮನ್ನು ಆಹ್ವಾನಿಸುತ್ತ,

ಪ್ರೀತಿಯಿಂದ,
ರವಿ ಕೃಷ್ಣಾ ರೆಡ್ಡಿ
೯೬೮೬೦-೮೦೦೦೫


Book Release event invitation