Oct 29, 2006

ನೀವು ಪ್ರಾಮಾಣಿಕರಾಗಿದ್ದರೆ ಇನ್ನು ಲಂಚ ಕೊಡಬೇಕಾಗಿಲ್ಲ!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ನವೆಂಬರ್ 10, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ನನ್ನ ಪ್ರಕಾರ ಲಂಚದಲ್ಲಿ ಎರಡು ವಿಧ. ಒಂದು, ಕಾನೂನುಬದ್ಧವಾಗಿ ಯಾವುದೇ ತಕರಾರಿಲ್ಲದೆ ಆಗಬೇಕಾದ ಕೆಲಸಕ್ಕೆ ಕೊಡುವ ಲಂಚ; ಉದಾಹರಣೆಗೆ, ಜನನಮರಣ ಪತ್ರಕ್ಕೆ, ಚಾಲಕ ಪರವಾನಿಗೆ ಪಡೆಯಲು, ರೇಷನ್ ಕಾರ್ಡ್ ಪಡೆಯಲು, ವಿದ್ಯುತ್ ಸಂಪರ್ಕ ಪಡೆಯಲು, ಜಾತಿ ಪ್ರಮಾಣ ಪತ್ರ, ಇತರೆ. ಇನ್ನೊಂದು, ಕಾನೂನು ವಿರೋಧಿ ಕೆಲಸಗಳಿಗೆ ಕೊಡುವ ಲಂಚ: ಉದಾಹರಣೆಗೆ, ಇನ್ನೂ ಆಗದಿರುವ ಕಾಮಗಾರಿಗಳಿಗೆ ಕಳ್ಳತನದಲ್ಲಿ ಬಿಲ್ ಮಾಡಿಸಿಕೊಳ್ಳಲು ಕೊಡುವ ಹಣ, ಸುಳ್ಳು ದಾಖಲೆಗಳನ್ನು ಸೃಷ್ಟಿಸಲು ಕೊಡುವ ಹಣ, ಕೋಟ್ಯಂತರ ಬೆಲೆಯ ಜಮೀನುಗಳನ್ನು ಲಕ್ಷಗಳ ಲೆಕ್ಕದಲ್ಲಿ ಮಂಜೂರು ಮಾಡಿಸಿಕೊಳ್ಳಲು ಕೊಡುವ ಹಣ, ನಾವು ಕೇಳುವ ಎಲ್ಲಾ ತರಹದ ಬೋಫೋರ್ಸ್, ಶವಪೆಟ್ಟಿಗೆ, ಛಾಪಾ ಕಾಗದ ಹಗರಣ, ಇತ್ಯಾದಿ. ಇವೆರಡರಲ್ಲಿ ದೇಶಕ್ಕೆ ಅತಿ ಕೆಟ್ಟದ್ದು ಯಾವುದಿರಬಹುದು?

ಭ್ರಷ್ಟಾಚಾರ ಭ್ರಷ್ಟಾಚಾರವೆ. ಆದರೆ ನನಗನ್ನಿಸುವುದು ಜನಸಾಮಾನ್ಯರು ತಮ್ಮ ನ್ಯಾಯಬದ್ಧ ಕೆಲಸ ಮಾಡಿಸಿಕೊಳ್ಳಲು ಕೊಡುವ ಹಣವೆ ಎಲ್ಲಕ್ಕಿಂತ ಅಪಾಯಕಾರಿಯಾದದ್ದು. ದೊಡ್ಡ ಮೊತ್ತಕ್ಕಿಂತ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುವುದೆ ಇದರಿಂದ. ಲಂಚ ತೆಗೆದುಕೊಂಡವರಿಗೆ ತಪ್ಪಿಸಿಕೊಳ್ಳಲು ಇಲ್ಲಿ ಅನೇಕ ದಾರಿಗಳಿರುತ್ತವೆ. ಈ ತರಹದ ಲಂಚ ತೆಗೆದುಕೊಳ್ಳುವವರು ಇದನ್ನು ಪ್ರತಿದಿನ ಮಾಡುತ್ತಿರುವುದರಿಂದ ಎಲ್ಲರೂ ಇದನ್ನೊಂದು ಜೀವನ ಕ್ರಮ ಎಂದು ಭಾವಿಸುವ ಸಾಧ್ಯತೆ ಇರುತ್ತದೆ. ಕೊಡುವವರು ಮತ್ತು ತೆಗೆದುಕೊಳ್ಳುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಎಲ್ಲರೂ ನೈತಿಕವಾಗಿ ದುರ್ಬಲರಾಗುತ್ತ ಹೋಗುತ್ತಾರೆ. ಆದರೆ, ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ಎಸಗುವವರಿಗೆ ಎಂದಿಗೂ ಒಂದು ಭಯವಿರುತ್ತದೆ. ಯಾರು ಬಂದು ಎಂದು ತಮ್ಮ ಫೈಲ್ ಓಪನ್ ಮಾಡುತ್ತಾರೊ ಎನ್ನುವ ಅಂಜಿಕೆಯಿರುತ್ತದೆ. ಎಷ್ಟೋ ಸಲ ಸಿಕ್ಕಿಯೂ ಹಾಕಿಕೊಳ್ಳುತ್ತಾರೆ. ಬಯಲಿಗೆಳೆಯಲು ಬೇಕಾಗುವುದು ಕೇವಲ ಒಬ್ಬ ವ್ಯಕ್ತಿ. ಈ ಮಟ್ಟದ ಭ್ರಷ್ಟಾಚಾರದಲ್ಲಿ ಕೆಲವೆ ಜನ ತೊಡಗಿರುವುದರಿಂದ ಅದು ಬಹುಜನರ ನೈತಿಕ ಶ್ರದ್ಧೆಯನ್ನು ಹಾಳು ಮಾಡುವುದಿಲ್ಲ. ಯಾರೊ ಒಬ್ಬ ಗಣ್ಯ/ಗಣ್ಯೆ ವ್ಯಭಿಚಾರ ಮಾಡುವುದಕ್ಕೂ ಊರೂರಿನಲ್ಲಿ ವ್ಯಭಿಚಾರ ಎನ್ನುವುದು ಸಾಮಾನ್ಯ ಎನ್ನುವುದಕ್ಕೂ ವ್ಯತ್ಯಾಸ ಇರುತ್ತದೆ.

ಈಗ ಇಂತಹ ಎರಡೂ ತರಹದ ಲಂಚವನ್ನು ಭಾರತದಾದ್ಯಂತ ಕೊಡದಿರಲು, ತಡೆಯಲು, ಕಂಡುಹಿಡಿಯಲು, ಭಾರತದ ಪ್ರತಿಯೊಬ್ಬ ಪ್ರಜೆಗೂ ಈಗ ಒಂದು ಅವಕಾಶವಿದೆ, ಆಯುಧವಿದೆ. ಈ ಆಯುಧ ಕೇವಲ ರಾಮನೊಬ್ಬ ಹೆದೆಯೇರಿಸಬಹುದಾದ ಬಿಲ್ಲಲ್ಲ. ಬದಲಿಗೆ ಸೀತೆಯೆಂಬ ಅಗ್ನಿದಿವ್ಯ ನೈತಿಕತೆಯನ್ನು ಪಡೆಯಲು ಪ್ರತಿಯೊಬ್ಬ ಪ್ರಜೆಯೂ ಉಪಯೋಗಿಸಬಹುದಾದ ಬಿಲ್ಲಿದು. ಹೆದೆಯೇರಿಸಲು ಬೇಕಾದದ್ದು ಕೇವಲ ಹತ್ತು ರೂಪಾಯಿ, ಒಂದು ಅರ್ಜಿ, ಸ್ವಲ್ಪ ಧೈರ್ಯ, ಮತ್ತು ಆಗಾಗ 30 ದಿನಗಳ ತಾಳ್ಮೆ! ಇದನ್ನು ದೆಹಲಿಯಲ್ಲಿನ ಅತಿ ಸಾಮಾನ್ಯ ಸ್ಲಮ್ ನಿವಾಸಿಗಳೂ ಹೆದೆಯೇರಿಸಿ ಬಾಣ ಹೂಡಿ ಭ್ರಷ್ಟತೆಯನ್ನು ಭೇದಿಸಿದ್ದಾರೆ. ಅವರಿಗೆ ಪ್ರಾರಂಭದಲ್ಲಿ ಇದನ್ನು ತೋರಿಸಿದ್ದು ದೆಹಲಿಯಲ್ಲಿನ ಪರಿವರ್ತನ್ ಎಂಬ ಜನಾಂದೋಲನ ಸಂಸ್ಥೆ ಮತ್ತು ಅರವಿಂದ್ ಖೇಜ್ರಿವಾಲ್ ಎಂಬ ಅದರ ರೂವಾರಿ.

ಐಐಟಿಗಳು ನಮ್ಮ ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳು. ಇಂಜಿನಿಯರಿಂಗ್‌ನಲ್ಲಿ ಆಸಕ್ತರಾದ ದೇಶದ ಅತಿ ಬುದ್ಧಿವಂತ ವಿದ್ಯಾರ್ಥಿಗಳು ಈ ಕಾಲೇಜುಗಳಿಗೆ ಪ್ರವೇಶ ಪರೀಕ್ಷೆಯ ಮುಖಾಂತರ ಸೇರಿಕೊಳ್ಳುತ್ತಾರೆ. ದೇಶವಿದೇಶಗಳಲ್ಲಿ ಐಐಟಿಗಳಿಂದ ಪದವಿ ಪಡೆದವರ ಸಾಧನೆ ಬಹಳ ಗಣನೀಯವಾದದ್ದು. ವಿದ್ಯಾರ್ಥಿಗಳಷ್ಟೆ ಅಲ್ಲ, ನಮ್ಮ ದೇಶವೂ ಅಷ್ಟೆ; ಬಹಳ ಕಾಳಜಿಯಿಂದ ಈ ಕಾಲೇಜುಗಳಲ್ಲಿ ಸಿಗುವ ಶಿಕ್ಷಣ ಶ್ರೇಷ್ಠ ಮಟ್ಟದ್ದಾಗಿರುವಂತೆ ಕೋಟ್ಯಂತರ ರೂಪಾಯಿ ವಿನಿಯೋಗಿಸಿದೆ, ವಿನಿಯೋಗಿಸುತ್ತಿದೆ. ತಾವು ಕಡಿಮೆ ಬೆಲೆಗೆ ಇಲ್ಲವೆ ಉಚಿತವಾಗಿ ಪಡೆಯುವ ಈ ಶ್ರೇಷ್ಠ ಮಟ್ಟದ ಶಿಕ್ಷಣ ಭಾರತೀಯರ ಶ್ರಮದ, ತೆರಿಗೆಯ ಹಣ ಎನ್ನುವುದು ಇಲ್ಲಿಂದ ಹೊರಬರುವ ವಿದ್ಯಾರ್ಥಿಗಳಿಗೆ ತಿಳಿದಿರುವುದರಿಂದಲೆ ಅವರೂ ಸಹ ಅನೇಕ ಸಾಮಾಜಿಕ ಸೇವೆಗಳಲ್ಲಿ, ಧನಸಹಾಯದ ರೂಪದಲ್ಲಿ ತಮ್ಮ ಕೃತಜ್ಞತೆಯನ್ನು ತೋರಿಸುತ್ತಿರುತ್ತಾರೆ. ಇಂತಹ ಐಐಟಿಗಳಲ್ಲೊಂದಾದ ಖರಗ್‌ಪುರ್ ಐಐಟಿಯಿಂದ 1989 ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದವರು ಅರವಿಂದ್ ಖೇಜ್ರಿವಾಲ್. ಐಐಟಿಗಳಿಂದ ಬಂದವರಿಗೆ ನಿರುದ್ಯೋಗದ ಸಮಸ್ಯೆ ಇಲ್ಲವೇ ಇಲ್ಲ ಎಂದು ಹೇಳಬಹುದೇನೊ. ಪದವಿ ಮುಗಿಸುವುಷ್ಟರಲ್ಲೆ ಅವರ ಕೈಯಲ್ಲಿ ಕ್ಯಾಂಪಸ್ ಸಂದರ್ಶನದಲ್ಲಿ ಪಡೆದ ಪ್ರತಿಷ್ಠಿತ ಕಂಪನಿಗಳ ಉದ್ಯೋಗದ ಆಫರ್ ಲೆಟರ್ ಇರುತ್ತದೆ. ಆದರೆ ಅರವಿಂದ್ ಖೇಜ್ರಿವಾಲ್ ಸಿವಿಲ್ ಸರ್ವಿಸಸ್ ಪರೀಕ್ಷೆ ತೆಗೆದುಕೊಂಡು, 1992 ರಲ್ಲಿ ಇಂಡಿಯನ್ ರೆವೆನ್ಯೂ ಸರ್ವಿಸ್ (IRS) ನಲ್ಲಿ ತೆರಿಗೆ ಅಧಿಕಾರಿಯಾಗಿ ಸೇರಿಕೊಳ್ಳುತ್ತಾರೆ. ತೆರಿಗೆ ಇಲಾಖೆಯಲ್ಲಿನ ತಮ್ಮ ಆರಂಭಿಕ ದಿನಗಳಲ್ಲಿಯೆ ಅವರಿಗೆ ಸರ್ಕಾರದಲ್ಲಿನ ಭ್ರಷ್ಟಾಚಾರಕ್ಕೆ ಅಲ್ಲಿ ಪಾರದರ್ಶಕತೆ ಇಲ್ಲದಿರುವುದೆ ಒಂದು ಮುಖ್ಯ ಕಾರಣ ಎಂದು ಗೊತ್ತಾಗುತ್ತದೆ. ತಮ್ಮ ಸರ್ಕಾರಿ ಕೆಲಸದಿಂದ ಸುದೀರ್ಘ ರಜೆ ತೆಗೆದುಕೊಂಡ ಅರವಿಂದ್, ವ್ಯವಸ್ಥೆಯಲ್ಲಿನ ಭ್ರಷ್ಟತೆಯ ವಿರುದ್ಧ ಹೋರಾಡಲು ತೊಡಗಿಸಿಕೊಳ್ಳುತ್ತಾರೆ. ಕೊನೆಗೆ ಸರ್ಕಾರಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ದೆಹಲಿಯಲ್ಲಿ ಪರಿವರ್ತನ್ ಆರಂಭಿಸುತ್ತಾರೆ. ನಾಲ್ಕೈದು ವರ್ಷಗಳಲ್ಲಿಯೆ ಇವರಿಗೆ ಎಷ್ಟು ಬೆಂಬಲ ಮತ್ತು ಯಶಸ್ಸು ದೊರೆತಿದೆಯೆಂದರೆ, ಈ ವರ್ಷದ ಪ್ರತಿಷ್ಠಿತ ಮ್ಯಾಗ್ಸೆಸೇ ಪ್ರಶಸ್ತಿ ಇವರಿಗೆ ದೊರಕಿದೆ.

ನೀವು ಪರಿವರ್ತನ್‌ನ ವೆಬ್‌ಸೈಟಿಗೆ ಹೋದರೆ, ಆ ಸೈಟಿನಲ್ಲಿನ ಇತರೆ ವಿಷಯ ನೋಡುವುದಕ್ಕೆ ಮೊದಲು ಮುಖಪುಟದಲ್ಲಿ ಕೇವಲ ಹತ್ತು ಸಾಲುಗಳಿವೆ. ಅವೇನೆಂದರೆ:

 • ಭಾರತದ ಪ್ರಜೆಗಳಾದ ನಾವು ಈ ದೇಶದ ಧಣಿಗಳು. ಸರ್ಕಾರಗಳು ಇರುವುದು ನಮ್ಮ ಸೇವೆಗಾಗಿ.
 • ನಾವೆಲ್ಲರೂ ತೆರಿಗೆ ಕಟ್ಟುತ್ತೇವೆ. ರಸ್ತೆಯಲ್ಲಿನ ಭಿಕ್ಷುಕ ಸಹ ತೆರಿಗೆ ನೀಡುತ್ತಾನೆ. ಅವನು ಸೋಪು ಅಥವ ಬೆಂಕಿಪೊಟ್ಟಣ ಅಂತಹುದನ್ನು ಕೊಂಡುಕೊಂಡಾಗ ಮಾರಾಟ ತೆರಿಗೆ, ಎಕ್ಸೈಜ್ ತೆರಿಗೆ, ಇತ್ಯಾದಿ ರೂಪದಲ್ಲಿ ತೆರಿಗೆ ಕೊಡುತ್ತಾನೆ. ಈ ದುಡ್ಡು ನಮಗೆ ಸೇರಿದ್ದು.
 • ನಮ್ಮ ಕ್ಷೇಮಾಭಿವೃದ್ಧಿಗಾಗಿ ಎಷ್ಟೊಂದು ಹಣ ವಿನಿಯೋಗಿಸಲಾಗಿದೆ ಎಂದು ಕಾಗದದ ಮೇಲಿದೆಯಲ್ಲ, ಆದರೆ ಆ ದುಡ್ಡೆಲ್ಲ ಎಲ್ಲಿ ಹೋಗುತ್ತದೆ? ಆಸ್ಪತ್ರೆಗಳಲ್ಲಿ ಯಾಕೆ ಔಷಧಿಗಳಿಲ್ಲ? ಸರ್ಕಾರಿ ಶಾಲೆಗಳಲ್ಲಿನ ಆ ಶಿಕ್ಷಕರೆಲ್ಲ ಎಲ್ಲಿ ಹೋದರು? ಜನ ಯಾಕೆ ಹಸಿವೆಯಿಂದ ಸಾಯುತ್ತಿದ್ದಾರೆ? ರಸ್ತೆಗಳೆಲ್ಲ ಯಾಕೆ ಇಷ್ಟೊಂದು ಹದಗೆಟ್ಟ ಸ್ಥಿತಿಯಲ್ಲಿವೆ? ಬೀದಿಗಳೆಲ್ಲ ಯಾಕೆ ಇಷ್ಟೊಂದು ಗಲೀಜಾಗಿವೆ?
 • ಧಣಿಯ ಪ್ರಾಥಮಿಕ ಕರ್ತವ್ಯ ಏನೆಂದರೆ ಸಮಯಕ್ಕೆ ಸರಿಯಾಗಿ ತನ್ನ ಸೇವಕನಿಂದ ಕೆಲಸದ ಲೆಕ್ಕ ತೆಗೆದುಕೊಳ್ಳುವುದು. ನಾವು, ಧಣಿಗಳು, ನಮ್ಮ ಸರ್ಕಾರಗಳಿಂದ ಎಂದೂ ಲೆಕ್ಕ ತೆಗೆದುಕೊಂಡಿಲ್ಲ. ಯಾಕೆಂದರೆ, ಲಭ್ಯವಿದ್ದ ಕಾನೂನು ಮತ್ತು ಆಡಳಿತದ ಚೌಕಟ್ಟಿನಲ್ಲಿ, ಹಾಗೆ ಮಾಡಲು ಸಾಧ್ಯವಿರಲಿಲ್ಲ.
 • ಆದರೆ, ಈಗ ನಮಗೆ ಸರ್ಕಾರಗಳನ್ನು ಪ್ರಶ್ನಿಸುವ ಅಧಿಕಾರ ಇದೆ. ಸರ್ಕಾರಗಳು ನಮಗೆ ಮಾಹಿತಿ ನೀಡುವುದು ಈಗ ಕಾನೂನುಬದ್ಧ. ಹಲವಾರು ರಾಜ್ಯ ಸರ್ಕಾರಗಳು ಮಾಹಿತಿ ಹಕ್ಕಿನ ಕಾನೂನುಗಳನ್ನು ತಂದಿವೆ. ಇದು ಸರ್ಕಾರವನ್ನು ಪ್ರಶ್ನಿಸಲು, ಅವರ ಕಡತಗಳನ್ನು ಪರಿಶೀಲಿಸಲು, ಸರ್ಕಾರದ ದಾಖಲೆಗಳ ಪ್ರತಿ ತೆಗೆದುಕೊಳ್ಳಲು, ಹಾಗೂ ಸರ್ಕಾರ ಕೈಗೊಳ್ಳುವ ಕೆಲಸಗಳನ್ನು ಪರಿಶೀಲಿಸುವ ಅಧಿಕಾರವನ್ನು ಪ್ರಜೆಗಳಿಗೆ ಕೊಟ್ಟಿದೆ.

ಮುಂದಿನ ವಾರ, ಖೇಜ್ರಿವಾಲ್ ಹೇಳಿದ ಮಾಹಿತಿ ಹಕ್ಕು ಕಾಯ್ದೆಯ ಹಿನ್ನೆಲೆ, ಅದನ್ನು ಬಳಸುವ ಬಗ್ಗೆ, ಮತ್ತು ಅದನ್ನು ಲಂಚಕ್ಕಿಂತ ಶಕ್ತಿಯುತವಾಗಿ ಬಳಸಿ ಯಶಸ್ಸು ಪಡೆದವರ ಕೆಲವು ನಿಜಕತೆಗಳು.

Oct 21, 2006

ದೇಶಪ್ರೇಮ ಎಂದರೆ ಸ್ವಮತಪ್ರೇಮವೆ?

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ನವೆಂಬರ್ 3, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಹೀಗೊಂದು ಸಭೆ:
ಅಕ್ಕ ಸಮ್ಮೇಳನಕ್ಕೆ ಬಂದಿದ್ದ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಸ್ಯಾನ್ ಫ್ರಾನ್ಸಿಸ್ಕೋದ ಸಿಲಿಕಾನ್ ಕಣಿವೆಗೂ ಬಂದಿದ್ದರು. ಆ ಪ್ರಯುಕ್ತ ಸ್ಥಳೀಯ ಕನ್ನಡ ಕೂಟ ಅವರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು. ಹಿಂದುಗಳು ಪೂಜಿಸುವ ಧರ್ಮಸ್ಥಳದ ಮಂಜುನಾಥ ದೇವಸ್ಥಾನದ ಉಸ್ತುವಾರಿ ಜೈನ ಮತದ ಹೆಗ್ಗಡೆ ಮನೆಯವರದು. ಆದಾಯ ಮತ್ತು ತೀರ್ಥಯಾತ್ರೆಯ ವಿಚಾರದಲ್ಲಿ ಕರ್ನಾಟಕದ ತಿರುಪತಿ ಧರ್ಮಸ್ಥಳ. ಹಾಗಾಗಿ ದೇವಾಲಯದ ಖರ್ಚಿಗಿಂತ ಅನೇಕ ಪಟ್ಟು ಹೆಚ್ಚಿನ ಆದಾಯ ಈ ದೇವಸ್ಥಾನಕ್ಕಿದೆ. ಆ ಹೆಚ್ಚಿನ ಹಣವನ್ನು ದೇವಾಲಯದವರು ಅನೇಕ ಸಾಮಾಜಿಕ ಕೆಲಸಗಳಿಗೆ, ವಿದ್ಯಾಸಂಸ್ಥೆಗಳಿಗೆ ಉಪಯೋಗಿಸುತ್ತಿದ್ದಾರೆ. ಧಾರವಾಡದಲ್ಲಿನ ಇಂಜಿನಿಯರಿಂಗ್ ಕಾಲೇಜು, ದಂತ ವೈದ್ಯ ಕಾಲೇಜುಗಳಿಂದ ಹಿಡಿದು ಮಂಗಳೂರು, ಮೈಸೂರು, ಉಜಿರೆ ಇಲ್ಲೆಲ್ಲ ಅನೇಕ ಶಾಲೆ ಕಾಲೇಜುಗಳನ್ನು ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ನಡೆಸುತ್ತಿದೆ. ಇದರ ಜೊತೆಗೆ ಧರ್ಮಸ್ಥಳದ ಸುತ್ತಮುತ್ತ ಹೆಗ್ಗಡೆಯವರು ಕೈಗೊಂಡಿರುವ ಗ್ರಾಮೀಣಾಭಿವೃದ್ಧಿ ಕೆಲಸಗಳು, ಮದ್ಯಪಾನ ವಿರೋಧಿ ಕೆಲಸಗಳು ಕನ್ನಡಿಗರಿಗೆ ಪರಿಚಿತವಾದವುಗಳೇ.

ಅಂದಿನ ಸಭೆಯಲ್ಲಿ ಅವರ ವಿದ್ಯಾಸಂಸ್ಥೆಗಳಲ್ಲಿ ಓದಿದ್ದವರು ಇದ್ದರು. ಅವರ ಸಾಮಾಜಿಕ ಕೆಲಸಗಳನ್ನು ಪ್ರಶಂಸಿಸುವವರಿದ್ದರು. ಕರ್ನಾಟಕದ ಪ್ರಭಾವಿ ವ್ಯಕ್ತಿಯೊಬ್ಬರನ್ನು ಕಾಣಲು, ಅವರ ಮಾತುಗಳನ್ನು ಕೇಳಲು ಬಂದವರಿದ್ದರು. ಅನೇಕ ಜೈನ ಕನ್ನಡಿಗರಿದ್ದರು. ಹೀಗಾಗಿ ಅದು ಕೇವಲ ದೇವಸ್ಥಾನಕ್ಕೆ ಸಂಬಂಧಪಟ್ಟ ಸಭೆಯಾಗಲಿ, ಒಂದು ಜಾತಿ, ಮತಕ್ಕೆ ಸಂಬಂಧಿಸಿದ್ದಾಗಲಿ ಆಗಿರಲಿಲ್ಲ.

ಮೊದಲಿಗೆ ಹೆಗ್ಗಡೆಯವರು ಒಂದರ್ಧ ಗಂಟೆ ಸುಲಲಿತವಾಗಿ ಕನ್ನಡದಲ್ಲಿ ಮಾತನಾಡಿದರು. ದೇವಸ್ಥಾನದ ಸಮಿತಿಯ ವತಿಯಿಂದ ನಡೆಸುವ ಗ್ರಾಮೀಣಾಭಿವೃದ್ಧಿ ಯೋಜನೆ, ದುಶ್ಚಟಗಳ ನಿರ್ಮೂಲನ, ಮಹಿಳಾ ವಿಕಾಸ, ಸ್ವ-ಉದ್ಯೋಗ ಕಾರ್ಯಕ್ರಮಗಳು, ದೇವಸ್ಥಾನ ಮತ್ತು ಹಳೆಯ ಸ್ಮಾರಕಗಳ ಪುನರುದ್ಧಾರ ಮೊದಲಾದ ಹಲವಾರು ಯೋಜನೆಗಳನ್ನು ಪರಿಚಯ ಮಾಡಿಕೊಟ್ಟರು. ಎಲ್ಲರೂ ತಮ್ಮ ತಮ್ಮ ಭಾಷೆ ಸಂಸ್ಕೃತಿಗಳನ್ನು ಉಳಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಮೇರಿಕದಲ್ಲಿರುವ ಕನ್ನಡಿಗರು ಕನ್ನಡವನ್ನು ಉಳಿಸಿಕೊಂಡಿದ್ದಾರೆ. ತಮ್ಮ ಬೇರುಗಳನ್ನು ಉಳಿಸಿಕೊಳ್ಳುತ್ತಿರುವ ಪ್ರಯತ್ನವನ್ನು ಮಾಡುತ್ತಿರುವ ಇಲ್ಲಿಯ ಕನ್ನಡಿಗರಿಗೆ ಗೌರವ ಅರ್ಪಿಸುತ್ತೇನೆ ಎಂದು ಹೇಳಿ, ಕೊನೆಯಲ್ಲಿ 'ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು' ಉಲ್ಲೇಖಿಸುವುದರೊಂದಿಗೆ ತಮ್ಮ ಭಾಷಣ ಮುಗಿಸಿದರು. ಅವರ ಕನ್ನಡ ಭಾಷಣದಲ್ಲಿ ಜಾತಿ, ಮತಕ್ಕೆ ಸಂಬಂಧಿಸಿದಂತೆ ಏನೂ ಇರಲಿಲ್ಲ.

ನಂತರ ಪ್ರಶ್ನೋತ್ತರ. ಮೊದಲ ಪ್ರಶ್ನೆಯೆ, ಹಿಂದು ಧರ್ಮ ಹಿಂದುಳಿಯುತ್ತಿದೆಯಲ್ಲ, ಏಕೆ? ಅವರಿಗೆ ಕೇಳಿದ ಹಲವಾರು ಪ್ರಶ್ನೆಗಳಲ್ಲಿ ಬಹುಶಃ ಎರಡು ಪ್ರಶ್ನೆಗಳನ್ನು ಬಿಟ್ಟರೆ ಮಿಕ್ಕ ಎಲ್ಲಾ ಪ್ರಶ್ನೆಗಳೂ ಹಿಂದೂಗಳಿಗೆ ಏನಾಗಿದೆ, ಏನು ಮಾಡಿದರೆ ನಮ್ಮ ಮತ ಬೆಳೆಯುತ್ತದೆ, ಅದನ್ನು ಬೆಳೆಸುವುದಕ್ಕೆ ನೀವೇನು ಮಾಡುತ್ತಿದ್ದೀರ, ನಮ್ಮವರು ಯಾಕೆ ಒಗ್ಗಟ್ಟಾಗಿಲ್ಲ, ಈ ವಿಷಯದ ಮೇಲೆ ರಾಜಕಾರಣಿಗಳ ಮೇಲೆ ನೀವೇಕೆ ಪ್ರಭಾವ ಬೀರುತ್ತಿಲ್ಲ, ಇತ್ಯಾದಿ, ಇತ್ಯಾದಿ. ಬಹುಶಃ ಕೇಳಿದವರ ಅಭಿಪ್ರಾಯ ಜೈನಮತದ ವೀರೇಂದ್ರ ಹೆಗ್ಗಡೆ ಹಿಂದೂಮತ ಸಂರಕ್ಷರಾಗಬೇಕು; ಅವರು ಮಾಡುವ ಸಾಮಾಜಿಕ ಕೆಲಸಗಳಲ್ಲಿ ತಮಗೆ ಆಸಕ್ತಿ ಇಲ್ಲ ಎಂದಿರಬೇಕು! ಜಾತ್ಯತೀತ ಪ್ರಜಾಪ್ರಭುತ್ವದ ಭಾರತದಿಂದ ಜಾತ್ಯತೀತ ಪ್ರಜಾಪ್ರಭುತ್ವದ ಅಮೇರಿಕಾಗೆ ಬಂದು, ಇಲ್ಲಿ ಸ್ವಲ್ಪಮಟ್ಟಿಗೆ ಕ್ರಿಶ್ಚಿಯನ್ ಬಲಪಂಥೀಯತೆ ಪ್ರೋತ್ಸಾಹಿಸುವ ರಿಪಬ್ಲಿಕನ್ ಪಕ್ಷವನ್ನು ದ್ವೇಷಿಸುತ್ತ, ಭಾರತದಲ್ಲಿ ಮಾತ್ರ ಅಂತಹುದೇ ಹಿಂದೂ ಬಲಪಂಥೀಯತೆ ಬೆಳೆಯಬೇಕು ಎಂದು ಆಶಿಸುವ ಇವರದು ಆತ್ಮದ್ರೋಹವಲ್ಲದೆ ಮತ್ತೇನು?

ಅಲ್ಲಿ ಇನ್ನೂ ಅಸಂಬದ್ಧ ಅನ್ನಿಸಿದ್ದು ಹೆಗ್ಗಡೆಯವರು ಈ ತರಹದ ಪ್ರಶ್ನೆಗಳನ್ನು ಪರೋಕ್ಷವಾಗಿ ಪ್ರೋತ್ಸಾಹಿಸಿದ ರೀತಿ. ಹಿಂದೂಮತದ ಸ್ಥಿತಿಗತಿಯ ಬಗ್ಗೆ ಪ್ರಶ್ನೆ ಕೇಳಿದವರೊಂದಿಗೆ ಅವರು ಅನೇಕ ಸಲ ತಮ್ಮ ಸಹಮತ ವ್ಯಕ್ತ ಪಡಿಸಿದರು. ಹಿಂದೂಗಳು ಬೇರೆ ಮತದವರಷ್ಟು ಉಗ್ರರಲ್ಲ ಎನ್ನುವ ರೀತಿಯಲ್ಲಿ ಹೇಳಿ, ಆಶಾದಾಯಕ ವಿಷಯವೆಂದರೆ ಈಗೀಗ ಪ್ರಜಾವಾಣಿ ಗುಂಪಿನವರು ಸಹ ತಮ್ಮ ಸುಧಾ ವಾರಪತ್ರಿಕೆಯಲ್ಲಿ ಧಾರ್ಮಿಕ ವಿಚಾರಗಳನ್ನು ಪ್ರಕಟಿಸುತ್ತಿದ್ದಾರೆ, ಇವನ್ನು ಮೊದಲೆಲ್ಲ ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ ಎಂದರು! ಮಾಧ್ಯಮಗಳೂ ಈಗ ಮತವಿಚಾರಗಳನ್ನು ಮೊದಲಿಗಿಂತ ಹೆಚ್ಚಾಗಿ ಪ್ರಚಾರ ಮಾಡುತ್ತಿವೆ ಎಂದರು. ಅವರ ಲೆಕ್ಕದಲ್ಲಿ ಮತಪ್ರೇಮ ಒಂದು ಆಶಾದಾಯಕ ಬೆಳವಣಿಗೆ!

ಪ್ರಶ್ನೆ ಕೇಳಿದ ಅನೇಕರಿಗೆ ತಮ್ಮ ತಾಯ್ನಾಡಿನ ಬಗ್ಗೆ ಕಾಳಜಿ ಇಲ್ಲ ಎಂದಲ್ಲ. ಅನೇಕರಿಗೆ ಭಾರತ ಎಂದರೆ ಸಾಕು ಮೈ ನವಿರೇಳುತ್ತದೆ. ಆದರೆ ಅವರಲ್ಲಿ ಬಹುಪಾಲು ಜನರಿಗೆ ಭಾರತ ಎಂದರೆ ಪುಣ್ಯನದಿಗಳ, ತೀರ್ಥಸ್ಥಳಗಳ, ದೇವಸ್ಥಾನಗಳ ಪುರಾಣದ ಪುಣ್ಯನೆಲವೇ ಭಾರತ. ಅವರ ಲೆಕ್ಕದಲ್ಲಿ ತಮ್ಮ ಮತಪ್ರೇಮ ದೇಶಪ್ರೇಮವೂ ಹೌದು! ಅವರಿಗೆ ಜನತಾ ಜನಾರ್ಧನರ ಭಾರತದ ಕಲ್ಪನೆ ಆಗುತ್ತಿಲ್ಲ. ಇವರ ಪ್ರಕಾರ ನಾಲ್ಕಾರು ದೇವಸ್ಥಾನಗಳನ್ನು ಹೆಚ್ಚಿಗೆ ಕಟ್ಟಿಬಿಟ್ಟರೆ ದೇಶ ಉದ್ಧಾರವಾಗಿಬಿಡುತ್ತದೆ ಎಂದಿರಬೇಕು! ಆದರೆ, ದೇಶದ ಸಂಪತ್ತು ಸ್ವಾಭಿಮಾನದ, ಶ್ರಮಜೀವಿಗಳಾದ ಅಲ್ಲಿನ ಜನ, ಅಲ್ಲವೆ? ಅವರು ಸಾಮಾಜಿಕವಾಗಿ, ಆರ್ಥಿಕವಾಗಿ, ನೈತಿಕವಾಗಿ ಮುಂದುವರಿದರೆ ಮಾತ್ರ ದೇಶ ಮುಂದುವರಿದಂತೆ, ಗುಡಿ-ಚರ್ಚು ಮಸೀದಿಗಳನ್ನು ಕಟ್ಟುವುದರಿಂದ ಅಲ್ಲ, ಅಲ್ಲವೆ? ನಾಡು ಕಟ್ಟುವುದು ಎಂದರೆ ಸ್ಥಾವರ ರೂಪದ ಪ್ರಾರ್ಥನಾಮಂದಿರಗಳನ್ನು ಕಟ್ಟುವುದೆ?

ಅಂದಹಾಗೆ, ಮತಪ್ರೇಮ ಜಾತಿಪ್ರೇಮಕ್ಕಿಂತ ಅದು ಹೇಗೆ ಭಿನ್ನ? ನನ್ನ ಮತವೇ ಶ್ರೇಷ್ಠ ಎನ್ನುವ ತಾಲಿಬಾನಿಗೂ, ಬಜರಂಗಿಗೂ, ಕ್ರೈಸ್ತ ಮತಾಂಧನಿಗೂ ನನ್ನ ಜಾತಿಯೇ ಶ್ರೇಷ್ಠ ಎನ್ನುವ ಕರ್ಮಠ ಜಾತಿವಾದಿಗೂ ವ್ಯತ್ಯಾಸ ಇದೆಯೆ? ನನ್ನ ಮತವೆ ಶ್ರೇಷ್ಠ ಎನ್ನುವ ಮತಾಂಧರಲ್ಲವೆ ಬುದ್ಧನ ವಿಗ್ರಹ ಒಡೆದದ್ದು, ಮಸೀದಿ ಬೀಳಿಸಿದ್ದು, ಇನ್ನೊಂದು ಮತದವರು ಜಾಸ್ತಿಯಿರುವ ದೇಶಕ್ಕೆ ದಾಳಿಯಿಟ್ಟದ್ದು, ಇಡುತ್ತಿರುವುದು?

ಇನ್ನೊಂದು ಸಭೆ:
ಕಳೆದ ವಾರ ಮತ್ತೊಂದು ಸಭೆಗೆ ಹೋಗಿದ್ದೆ. ಎರಡು ಗಂಟೆಗಳ ಕಾಲ ಮಾತನಾಡಿದ, ಪ್ರಶ್ನೆಗಳಿಗೆ ಉತ್ತರಿಸಿದ ವ್ಯಕ್ತಿ ದೆಹಲಿಯಿಂದ ಬಂದವರು. ಇನ್ನೂ ನಲವತ್ತು ದಾಟಿರದ ಮನುಷ್ಯ. ದೇಶಪ್ರೇಮ ಎನ್ನುವ ಪದ ಅಲ್ಲಿ ಬರದಿದ್ದರೂ ಅಲ್ಲಿ ಇದ್ದದ್ದೆಲ್ಲ ಭಾರತದ ಕುರಿತ ದೇಶಪ್ರೇಮ. ಆ ವ್ಯಕ್ತಿ ಮಾತನಾಡಿದ್ದೆಲ್ಲ ನಾಡಜನರ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ, ಮೌಲ್ಯಗಳ ಬಗ್ಗೆ, ನೈತಿಕತೆ ಬಗ್ಗೆ, ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುವ ಬಗ್ಗೆ, ನಾಗರೀಕರನ್ನು ತಮ್ಮ ಕಾರ್ಯಗಳಿಗೆ ತಾವೇ ಹೊಣೆಗಾರರನ್ನಾಗಿ ಮಾಡುವ ಬಗ್ಗೆ, ಜನ ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದರ ಬಗ್ಗೆ, ಸಕ್ರಿಯರಾಗುವ ಬಗ್ಗೆ, ತನ್ಮೂಲಕ ಭಾರತವನ್ನು ಕಟ್ಟುವುದರ ಬಗ್ಗೆ. ಆ ಸಭೆಯಲ್ಲಿ ಅಬ್ಬರವಿರಲಿಲ್ಲ. ಆಕ್ರೋಷವಿರಲಿಲ್ಲ. ಕೀಳರಿಮೆ, ಮೇಲರಿಮೆಗಳಿರಲಿಲ್ಲ. ಚೀತ್ಕಾರವಿರಲಿಲ್ಲ. ನಿರಾಶೆಯಿರಲಿಲ್ಲ. ಅಹಂಕಾರವಿರಲಿಲ್ಲ. ಕಪಟ ವಿನಯವಿರಲಿಲ್ಲ. ಯಾರು ಯಾರ ಕಾಲಿಗೂ ಬೀಳಲಿಲ್ಲ. ಜಾತಿ, ಮತದ ಹೆಸರೇ ಇರಲಿಲ್ಲ. ಸಭೆ ಮುಗಿದ ನಂತರ ಅನ್ನಿಸಿದ್ದು, ಇದೇ ಅಲ್ಲವೆ ನೈಜ ದೇಶಪ್ರೇಮ, ನಿಜವಾದ ದೇಶಸೇವೆ ಎಂದು. ಆ ವ್ಯಕ್ತಿ ಈ ವರ್ಷದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದಿರುವ ಅರವಿಂದ್ ಖೇಜ್ರಿವಾಲ. ಯಾರೀ ಅರವಿಂದ್ ಖೇಜ್ರಿವಾಲ? ಅವರು ಮಾಡುತ್ತಿರುವುದಾದರೂ ಏನು?

Oct 15, 2006

ಕೊಂದವನ ಮನೆಯವರಿಗೆ ಪ್ರೀತಿ ತೋರಿದವರು

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 27, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಆಮಿಷ್ ಜನರ ಹಿನ್ನೆಲೆ:
17 ನೆ ಶತಮಾನದಲ್ಲಿ ಜೇಕಬ್ ಅಮ್ಮನ್‌ನಿಂದ ಯೋರೋಪ್‌ನಲ್ಲಿ ಆರಂಭವಾದದ್ದು ಅಮಿಷ್ ಚಳವಳಿ. ಇದಕ್ಕೆ ಮೂಲ ಮೆನ್ನೊನೈಟ್ಸ್ ಎಂಬ ಮತ್ತೊಂದು ಕ್ರಿಶ್ಚಿಯನ್ ಚಳವಳಿ. ಮೆನ್ನೊನೈಟ್ಸ್ ಆಧುನಿಕರಣಗೊಳ್ಳುತ್ತಿದೆ ಎನ್ನಿಸಿದಾಗ ಮತ್ತೆ ಅದರ ಮೂಲ ಕಟ್ಟುಪಾಡುಗಳನ್ನು ಯಾವುದೇ ರಾಜಿಯಿಲ್ಲದೆ ಉಳಿಸಿಕೊಳ್ಳಬೇಕು ಎಂದು ಹುಟ್ಟಿದ್ದು ಆಮಿಷ್ ಗುಂಪು. 18 ನೆ ಶತಮಾನದ ಆರಂಭದಲ್ಲಿ ಕೆಲವು ಆಮಿಷ್ ಜನ ಅಮೇರಿಕಕ್ಕೆ ವಲಸೆ ಬಂದರು. ಹೀಗೆ ಬಂದವರು ಈಗ ಈ ದೇಶದ 22 ರಾಜ್ಯಗಳಲ್ಲಿ ಅಲ್ಲಲ್ಲಿ ವಾಸಿಸುತ್ತಿದ್ದಾರೆ. ಅಧಿಕೃತವಾಗಿ ಅವರ ಸಂಖ್ಯೆ ಎಷ್ಟು ಎಂದು ಗೊತ್ತಾಗದಿದ್ದರೂ ಓಲ್ಡ್ ಆರ್ಡರ್ ಆಮಿಷ್ ಮೆನ್ನೊನೈಟ್ ಚರ್ಚ್‌ನ ಸದಸ್ಯರ ಸಂಖ್ಯೆ 1,80,000 ಎಂದು ಅಂದಾಜು. ಅದರಲ್ಲಿ 45000 ಆಮಿಷರು ಒಹಾಯೊ ರಾಜ್ಯವೊಂದರಲ್ಲೆ ಇದ್ದಾರೆ. ಸುಮಾರು ೧೫೦೦ ಜನ ಕೆನಡಾದಲ್ಲಿ ಇದ್ದಾರೆ. (ಬೇರೆಬೇರೆ ವೆಬ್‌ಸೈಟ್‌ಗಳು ಬೇರೆಬೇರೆ ಜನಸಂಖ್ಯೆ ನಮೂದಿಸಿದರೂ ಎಲ್ಲರೂ ಕೊಡುವುದು ಲಕ್ಷಕ್ಕಿಂತ ಹೆಚ್ಚು ಮತ್ತು ಎರಡು ಲಕ್ಷಕ್ಕಿಂತ ಕಮ್ಮಿಯ ಸಂಖ್ಯೆ.) ಬಹುಪಾಲು ಎಲ್ಲಾ ಆಮಿಷರು ಹುಟ್ಟಿನಿಂದಲೆ ಆಮಿಷ್. ಹೊರಗಿನಿಂದ ಆಮಿಷ್ ಚರ್ಚಿಗೆ ಮತಾಂತರವಾದವರು ಬಹಳ ವಿರಳ. ಜೊತೆಗೆ ಆಮಿಷ್‌ನಿಂದ ಹೊರಗೆ ವಿವಾಹವಾಗುವುದೂ ನಿಷಿದ್ಧ. ಹಾಗಾಗಿ, ಯಾವುದೇ ವರ್ಣಸಂಕರವಾಗದೆ ಕೆಲವು ಆಮಿಷ್ ಗುಂಪುಗಳಲ್ಲಿ ಸೀಮಿತ ಜೀನ್‌ಗುಂಪು ಇರುವುದರಿಂದಾಗಿ ಕೆಲವು ವಂಶಪಾರಂಪರಿಕ ನ್ಯೂನತೆಗಳೊಂದಿಗೆ ಮಕ್ಕಳು ಜನಿಸುತ್ತಿದ್ದಾರೆ ಎಂದು ಅಂದಾಜು.

ಅವರ ಕೆಲವು ನಂಬಿಕೆಗಳು, ಜೀವನರೀತಿ:

 • ಮದುವೆಯಾಗದ ಆಮಿಷ್ ಗಂಡಸರು ಮೀಸೆಗಡ್ಡಗಳಿಲ್ಲದಂತೆ ಮುಖಕ್ಷೌರ ಮಾಡಿಕೊಂಡಿರುತ್ತಾರೆ. ಮದುವೆಯಾದ ನಂತರ ಕೇವಲ ಗಡ್ಡ ಮಾತ್ರ ಬಿಡುತ್ತಾರೆ. ಮೀಸೆ ಬಿಡುವುದು ನಿಷಿದ್ಧ. ಕಾರಣ, ಮೀಸೆ ಶೌರ್ಯ, ಅಹಂಕಾರ, ಹೆಮ್ಮೆ, ಸೈನ್ಯ, ಯುದ್ಧ ಮುಂತಾದಕ್ಕೆ ಸಂಕೇತ ಎಂದು!
 • ಬೈಬಲ್‌ನಲ್ಲಿ ಹೇಳಿರುವ ಮೂರು ಆದೇಶಗಳು ಇವರಿಗೆ ಬಹಳ ಪವಿತ್ರ. ನಾಸ್ತಿಕರ ಜೊತೆ ಬೆರೆಯಬೇಡ. ನ್ಯಾಯವಂತಿಕೆ ಮತ್ತು ಕೃತ್ರಿಮ ಅದು ಹೇಗೆ ಸಮಾನವಾಗುತ್ತದೆ? ಕತ್ತಲಿನೊಂದಿಗೆ ಬೆಳಕಿಗೆ ಅದೆಂತಹ ಸ್ನೇಹವಿರಲು ಸಾಧ್ಯ? ದೇವರು ಹೇಳಿದ, ಅವರಿಂದ ಹೊರಗೆ ಬಂದು ನೀನು ಪ್ರತ್ಯೇಕವಾಗಿ ಇರು.ಪ್ರಪಂಚವನ್ನು ಅನುಸರಿಸಬೇಡ. ಆದರೆ ಒಳ್ಳೆಯದು, ಸ್ವೀಕಾರಾರ್ಹವಾದದ್ದು, ಪರಿಪೂರ್ಣವಾದ್ದು ದೇವರ ಇಚ್ಛೆ ಎಂಬುದರತ್ತ ನಿನ್ನ ಮನಸ್ಸನ್ನು ನವೀಕರಿಸಿಕೊಳ್ಳುತ್ತಿರು
 • ಬೈಬಲ್‌ನ ಪ್ರಪಂಚವನ್ನು ಅನುಸರಿಸಬೇಡ ಎನ್ನುವುದರ ಆಧಾರದ ಮೇಲೆ, ವಿದ್ಯುತ್‌ಶಕ್ತಿ ಹೊರಜಗತ್ತಿಗೆ ಸಂಪರ್ಕ ಕಲ್ಪಿಸುತ್ತದೆ ಎನ್ನುವ ಕಾರಣದಿಂದ 1919 ರಲ್ಲಿ ಆಮಿಷ್ ಹಿರಿಯರು ವಿದ್ಯುತ್ ಬಳಕೆಯನ್ನು ನಿಷೇಧಿಸಿದರು. ವಿದ್ಯುತ್‌ನ ಬಳಕೆಯಿಂದ ಹೊರಜಗತ್ತಿಗೆ ಸುಲಭ ಸಂಪರ್ಕ ಏರ್ಪಟ್ಟು ಅದು ತಮ್ಮ ಚರ್ಚಿನ ಮತ್ತು ಕೌಟುಂಬಿಕ ಜೀವನ ಹದಗೆಡಲು ಕಾರಣವಾಗಬಹುದು ಎನ್ನುವುದು ಅವರ ಭಯವಾಗಿತ್ತು.
 • ಎರಡನೆ ದೈವಾಜ್ಞೆ, ನೀನು ಇಲ್ಲಿ ಮೇಲಿನ ಸ್ವರ್ಗದಲ್ಲಿನ, ಅಥವ ಕೆಳಗಿನ ಭೂಮಿಯ ಮೇಲಿನ, ಅಥವ ಭೂಮಿಯ ಕೆಳಗಿನ ನೀರಿನಲ್ಲಿರುವ ಯಾವುದನ್ನೇ ಆಗಲಿ ಮತ್ತು ಯಾವುದೇ ತರಹದ ಪ್ರತಿಮೆಯನ್ನಾಗಲಿ ನಿನಗೆ ನೀನು ಮಾಡಿಕೊಳ್ಳಕೂಡದುಎಂದು ಇರುವುದರಿಂದ ಅವರು ತಮ್ಮ ಯಾವುದೇ ಛಾಯಾಚಿತ್ರ ತೆಗೆಸಿಕೊಳ್ಳುವುದಿಲ್ಲ. ಜೊತೆಗೆ ತಮ್ಮ ಮಕ್ಕಳಿಗೆ ತರುವ ಗೊಂಬೆಗಳಿಗೂ ತಲೆ ಇರುವುದಿಲ್ಲ. ಇವೆಲ್ಲ ಮಕ್ಕಳು ಚಿಕ್ಕಂದಿನಿಂದಲೆ ಪ್ರತಿಮೆ, ವಿಗ್ರಹ ಮುಂತಾದವುಗಳಿಂದ ದೂರ ಇರಲು ಕಲಿಸುತ್ತದೆ. ಆದರೆ ಹೊರಗಿನವರು ತಮ್ಮ ನೇರ ಚಿತ್ರ ತೆಗೆಯದೆ ತಾವು ಕೆಲಸ ಮಾಡುತ್ತಿರುವಂತಹುದನ್ನು ತೆಗೆಯಲು ಅವರ ಅಭ್ಯಂತರವಿಲ್ಲ.
 • ಇಂಗ್ಲಿಷಿನ ಜೊತೆಗೆ ಆಮಿಷ್ ಜನ ಪೆನ್‌ಸಿಲ್ವೇನಿಯ ಜರ್ಮನ್ ಅಥವ ಪೆನ್‌ಸಿಲ್ವೇನಿಯ ಡಚ್ ಎಂಬ ಮತ್ತೊಂದು ಭಾಷೆಯನ್ನೂ ಆಡುತ್ತಾರೆ. ಇವರು ಆಮಿಷ್ ಅಲ್ಲದ ಜನರನ್ನು ಕರೆಯುವುದು ಮಾತ್ರ ಇಂಗ್ಲಿಷ್ ಎಂದು!
 • ಎಲ್ಲರೂ ಹೆಚ್ಚಾಗಿ ಕಪ್ಪು ಬಣ್ಣದ ಕುದುರೆಗಾಡಿಯನ್ನೆ ಹೊಂದಿರುತ್ತಾರೆ. ಬಣ್ಣ ಒಂದೇ ಇರುವುದು ಯಾಕೆಂದರೆ ಎಲ್ಲರೂ ಸಮಾನ ಎಂದು ನಿರೂಪಿಸಲು. ಕಾರು ಮತ್ತಿತರ ಯಂತ್ರ ವಾಹನಗಳು ಹೊರಜಗತ್ತಿಗೆ ಸುಲಭ ಸಂಪರ್ಕ ಕಲ್ಪಿಸುತ್ತವೆ ಎಂಬ ಕಾರಣಕ್ಕೆ ಅವುಗಳ ಮಾಲೀಕರಾಗುವುದು ನಿಷಿದ್ಧವಿದೆ. ಜೊತೆಗೆ, ಕಾರಿನ ಮಾಲೀಕತೆ ಸಮುದಾಯದಲ್ಲಿ ಅಸಮಾನತೆ ತರುತ್ತದೆ; ಅವುಗಳ ಮಾಲೀಕರು ಅವನ್ನು ತಮ್ಮ ಶ್ರೀಮಂತಿಕೆ, ಸ್ಥಾನಮಾನಗಳ ಪ್ರದರ್ಶನಕ್ಕೆ ಬಳಸುತ್ತಾರೆ; ಆ ಮೂಲಕ ಅದು ಸಮುದಾಯವನ್ನು ಬೇರ್ಪಡಿಸಬಹುದು ಎನ್ನುವುದು ಮತ್ತೊಂದು ಕಾರಣ. ಆದರೆ ಪ್ರಯಾಣ ಮತ್ತಿತರ ಸಮಯದಲ್ಲಿ ಇಂಗ್ಲಿಷ್ ಮಂದಿ ಉಪಯೋಗಿಸುವ ಬಸ್ಸು, ಕಾರು, ರೈಲು ಬಳಸಲು ಅನುಮತಿ ಇದೆ.
 • ಚರ್ಚಿನ ನಿಯಮಗಳನ್ನು ಪಾಲಿಸದವರಿಗೆ, ಅವರ ನಿಯಮಗಳ ಪ್ರಕಾರ ತಪ್ಪು ಮಾಡಿದವರಿಗೆ ಬಹಿಷ್ಕಾರ ಹಾಕುವ ಪದ್ದತಿ ಆಮಿಷಾ ಜನರಲ್ಲಿದೆ. ಬಹಿಷ್ಕಾರಕ್ಕೊಳಗಾದ ವ್ಯಕ್ತಿಯನ್ನು ಅವನ/ಅವಳ ಮನೆಯವರೂ ಬಹಿಷ್ಕೃತರೊಂದಿಗೆ ಜೊತೆಯಲ್ಲಿ ಊಟ ಮಾಡದೆ ಬಹಿಷ್ಕರಿಸಬೇಕು. ವಿವಿಧ ಆಮಿಷ್ ಗುಂಪುಗಳಲ್ಲಿ ಬಹಿಷ್ಕೃತರಿಗೆ ನೀಡುವ ಶಿಕ್ಷೆಯಲ್ಲಿ ವ್ಯತ್ಯಾಸಗಳಿವೆ.
 • ಅವರದು ಕೃಷಿಯಾಧಾರಿತ ಜೀವನ. ಉಳಲು ಕುದುರೆಗಳನ್ನು ಮಾತ್ರ ಬಳಸುತ್ತಾರೆ. ಯಾವುದೇ ಯಂತ್ರಗಳಿಲ್ಲ. ಬಹಳ ಕಾಲ ಕೈಯ್ಯಲ್ಲೆ ಹಾಲು ಕರೆಯುತ್ತಿದ್ದವರು ಈಗೀಗ ಹಾಲು ಕರೆಯುವ ಯಂತ್ರ ಬಳಸಲು ಪ್ರಾರಂಭಿಸಿದ್ದಾರಂತೆ. ಗ್ಯಾಸ್ ಬಳಸಬಹುದು. ಮನೆಗಳಲ್ಲಿ ನೀರು ಕಾಯಿಸಲು, ಒಲೆ ಮತ್ತು ದೀಪ ಉರಿಸಲು, ಮುಂತಾದುವಕ್ಕೆ ಗ್ಯಾಸ್ ಬಳಸುತ್ತಾರೆ.
 • ಸಮುದಾಯವೆಲ್ಲ ಸೇರಿ ಹೊಸದಾಗಿ ಮದುವೆಯಾದ ದಂಪತಿಗಳಿಗೆ ಯಾವುದೇ ಆಧುನಿಕ ಉಪಕರಣಗಳಿಲ್ಲದೆ ಹುಳಿ, ಸುತ್ತಿಗೆ, ಗರಗಸದ ಸಹಾಯದಿಂದ ಹಲಗೆ ಮತ್ತು ತೊಲೆಗಳಿಂದ ದೊಡ್ಡದಾದ ದನದ ಕೊಟ್ಟಿಗೆಯನ್ನು ಒಂದೇ ದಿನದಲ್ಲಿ ಕಟ್ಟಿಕೊಡುತ್ತಾರೆ. ನೂರಾರು ಗಂಡಸರು ಆ ಕೆಲಸ ಮಾಡುತ್ತಿದ್ದರೆ ಹೆಂಗಸರು ಊಟ, ತಂಪು ಪಾನೀಯದ ವ್ಯವಸ್ಥೆಯಲ್ಲಿ ತೊಡಗಿರುತ್ತಾರೆ. ಮನೆಯವರೆಲ್ಲರೂ ತಮ್ಮ ಕುದುರೆ ಗಾಡಿಗಳಲ್ಲಿ ಈ ಕೆಲಸಕ್ಕೆ ಬೆಳಿಗ್ಗೆಯೆ ಬಂದುಬಿಡುತ್ತಾರೆ.

ಕೊಲೆಪಾತಕನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು!

ಕಳೆದ ವಾರದ ಲೇಖನದಲ್ಲಿ ವಿವರಿಸಿದಂತೆ ತಮ್ಮ ಐದು ಜನ ಕಂದಮ್ಮಗಳನ್ನು ಗುಂಡಿಟ್ಟು ಕೊಂದು ಮತ್ತೈವರನ್ನು ಗಾಯಗೊಳಿಸಿದ ನಾಲ್ಮಡಿ ಚಾರ್ಲ್ಸ್ ಕಾರ್ಲ್ ರಾಬರ್ಟ್ಸ್‌ನ ಅಂತ್ಯಕ್ರಿಯೆಯಲ್ಲಿ ಆಮಿಷ್ ಜನ ನಡೆದುಕೊಂಡ ರೀತಿ ಮಾತ್ರ ಬಹುಶಃ ಅವರು ಮಾತ್ರ ಮಾಡಲು ಸಾಧ್ಯವಾದದ್ದು. ರಾಬರ್ಟ್ಸ್‌ನ ಹೆಣ ಊಳುವ ಸಂದರ್ಭದಲ್ಲಿ ಹಾಜರಿದ್ದ ಸುಮಾರು 75 ಜನರಲ್ಲಿ ಅರ್ಧದಷ್ಟು ಜನ ಆಮಿಷ್ ಜನರಂತೆ! ಯಾವಾಗಲೂ ಶಾಂತಿ ಮತ್ತು ಅಹಿಂಸೆ ಪಾಲಿಸುವುದು ಹಾಗು ಎಂತಹುದೇ ಸಂದರ್ಭದಲ್ಲಿ ಪ್ರತಿಭಟನೆ ಮಾಡದಿರುವುದು ಆಮಿಷರ ಸಿದ್ಧಾಂತ. ಕೊಲೆಪಾತಕ ನಮ್ಮನ್ನು ಕೊಲ್ಲಲು ಬಂದಾಗಲೂ ನಾವು ಪ್ರತಿಭಟಿಸಬಾರದು, ಹಿಂಸೆಗೆ ಇಳಿಯಬಾರದು ಎನ್ನುತ್ತಾರೆ ಅವರು. ಯಾಕೆ ಎಂದು ಅವರು ಕೊಡುವ ಕಾರಣಗಳು ಇವು: ಕೊಲೆಗಾರ ನಮ್ಮ ಮೇಲೆ ಬಿದ್ದಾಗ ನಾವು ಬಲ ಉಪಯೋಗಿಸಿ ಎದುರಿಸಿದ ಮಾತ್ರಕ್ಕೆ ನಮ್ಮ ಜೀವ ಉಳಿಯುತ್ತದೆ ಎನ್ನುವ ಖಾತರಿ ಇಲ್ಲ. ಕೊಲೆಗಾರ ನಮ್ಮನ್ನು ಸಾಯಿಸಬಹುದಾದ ಪಕ್ಷದಲ್ಲಿ, ಸಾಯಿಸಲಿ ಬಿಡಿ. ಕ್ರಿಶ್ಚಿಯನ್ನರಿಗೆ ಸಾವಿನ ಹೆದರಿಕೆಯಿಲ್ಲ. ಕನಿಷ್ಠ ನಮ್ಮ ಅಹಿಂಸಾತ್ಮಕ ಪ್ರತಿಕ್ರಿಯೆಲ್ಲಾದರೂ ಕೊಲೆಗಾರನಿಗೆ ಕ್ರಿಸ್ತನ ಪ್ರೀತಿ ಕಾಣಿಸಲಿ.

ಆಮಿಷರ ಕೆಲವು ಆಚರಣೆ ಮತ್ತು ನಂಬಿಕೆಗಳು ಮೂಢನಂಬಿಕೆಗಳಿಗೆ ಹತ್ತಿರ ಮತ್ತು ಜಡ ಹಾಗು ಮತ್ತೆ ಕೆಲವು ಆಚರಣೆಗಳು ಆದರ್ಶ ಸಮಾಜದಲ್ಲಿ ಮಾತ್ರ ಪಾಲಿಸಲು ಸಾಧ್ಯ ಎಂಬ ವಾಸ್ತವವನ್ನು ಗ್ರಹಿಸುತ್ತ ಅವರ ಅಹಿಂಸೆ ಮತ್ತು ಸಮುದಾಯ ಸೇವೆಯನ್ನು ನಾವೆಲ್ಲರೂ ಅಭಿನಂದಿಸೋಣ. ಬಹುಜನರಿಗೆ ಮಾರಕವಲ್ಲದ ಅವರ ಮುಗ್ಧ ಜೀವನ ರೀತಿ ಹಾಗೆ ಉಳಿದುಕೊಂಡರೆ ಅದಕ್ಕಿಂತ ಇನ್ನೇನು ಬೇಕು. ಏನಂತೀರಿ?

Oct 8, 2006

ಆಮಿಷಕ್ಕೊಳಗಾಗದ ಆಮಿಷರು

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 20, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಅಂದು ಗಾಂಧಿ ಜಯಂತಿ. ಬೆಳಗಿನಿಂದ ಅಲ್ಲಲ್ಲಿ ಕೇಳಿಬಂದ ಗಾಂಧಿಯನ್ನು ನೆನಪಿಸಿಕೊಳ್ಳುತ್ತ ಭಾರತದಲ್ಲಿನ ಮಕ್ಕಳು ಇನ್ನೇನು ನಿದ್ದೆಯ ಸೆರಗಿಗೆ ಜಾರಿಕೊಳ್ಳಬೇಕು ಎನ್ನುವ ಸಮಯದಲ್ಲಿ ಅಮೇರಿಕದ ಪೆನ್‌ಸಿಲ್ವೇನಿಯ ರಾಜ್ಯದಲ್ಲಿ ಬೆಳ್ಳನೆ ಬೆಳಗು. ಅಲ್ಲಿಯ ಏಕೋಪಾಧ್ಯಾಯ ಶಾಲೆಯೊಂದರಲ್ಲಿ ಹಿರಿಕಿರಿಯ ಮಕ್ಕಳು ಒಂದೇ ಕೋಣೆಯಲ್ಲಿ ಪಾಠಕ್ಕೆ ಸೇರಿದ್ದರು! ಹೌದು, ಎಲ್ಲಾ ವಯಸ್ಸಿನ ಎಲ್ಲಾ ತರಗತಿಯ ಮಕ್ಕಳಿಗೂ ಒಂದೇ ಕೋಣೆಯಲ್ಲಿ ಒಬ್ಬರೆ ಅಧ್ಯಾಪಕರು ಪಾಠ ಮಾಡುವ ಇಂತಹ ಅನೇಕ ಏಕೋಪಾಧ್ಯಾಯ ಶಾಲೆಗಳು ಅಮೇರಿಕದಲ್ಲಿವೆ. ಆದರೆ ಇವು ಯಾವುವೂ ದುಡ್ಡಿಲ್ಲದೆ, ಅನುಕೂಲವಿಲ್ಲದೆ, ಸರ್ಕಾರದ ಅಥವ ಸಮಾಜದ ಕಾಳಜಿಯಿಲ್ಲದೆ ವಿಧಿಯಿಲ್ಲದೆ ನಡೆಸುವ ಏಕೋಪಾಧ್ಯಾಯ ಶಾಲೆಗಳಲ್ಲ. ಬದಲಿಗೆ ಗಾಂಧಿಯ ಹೆಸರು ಕೇಳದೆ ಇದ್ದರೂ ಪ್ರಜ್ಞಾಪೂರ್ವಕವಾಗಿ ಗಾಂಧಿ ಪ್ರತಿಪಾದಿಸಿದ ಅಹಿಂಸೆ, ಪ್ರೀತಿ, ಸಮುದಾಯ ಸೇವೆಯನ್ನು ಮಾತ್ರ ನೆಚ್ಚಿಕೊಂಡು ಆಧುನಿಕ ಆಮಿಷಗಳನ್ನು ನಿರಾಕರಿಸಿ ಬದುಕುತ್ತಿರುವ ಕ್ರೈಸ್ತ ಮತದ ಆಮಿಷ್ ಜನಾಂಗಕ್ಕೆ ಸೇರಿದ ಶಾಲೆಗಳು.

ದಿನಾಂಕ ಅಕ್ಟೋಬರ್ 2, 2006. ಹಾಲು ಗಾಡಿ ಓಡಿಸುವ 32 ವರ್ಷ ವಯಸ್ಸಿನ ಲಾರಿ ಚಾಲಕ ಇಂತಹ ಏಕೋಪಾಧ್ಯಾಯ ಶಾಲೆಗೆ ತನ್ನ ಬಂದೂಕಿನೊಡನೆ ನುಗ್ಗಿದ. ಬಂದೂಕನ್ನು ಸ್ವತಃ ನೋಡಿರುವುದು ಇರಲಿ, ಅದರ ಚಿತ್ರವನ್ನೂ ನೋಡಿರದ ಅನೇಕ ಮಕ್ಕಳು ಆ ಶಾಲೆಯಲ್ಲಿ ಇದ್ದರು. ಅಮೇರಿಕದಲ್ಲಿನ ಮಕ್ಕಳು ಬಂದೂಕಿನ ಚಿತ್ರವನ್ನೂ ನೋಡಿರುವುದಿಲ್ಲ ಎನ್ನುವುದು ಇಲ್ಲಿ ಅಷ್ಟು ದೊಡ್ಡ ಉತ್ಪ್ರೇಕ್ಷೆಯೇನಲ್ಲ. ಯಾಕೆಂದರೆ ಊರು ಬಿಟ್ಟು ಹೊರಗೆ ಹೋಗಿರದ ಆ ಶಾಲೆಯ ಕೆಲವು ಮಕ್ಕಳು ಅದನ್ನು ನೋಡಿರುವ ಸಾಧ್ಯತೆ ಇರುವುದಿಲ್ಲ. ಯಾಕೆಂದರೆ ಅವರ ಮನೆಗಳಲ್ಲಿ ಟೀವಿ ಇಲ್ಲ, ಅವರು ಚಲನಚಿತ್ರ ನೋಡುವುದಿಲ್ಲ. ಮೊದಲಿಗೆ ಅವರ ಮನೆಗಳಿಗೆ ವಿದ್ಯುತ್‌ನ ಪ್ರವೇಶವೇ ಇಲ್ಲ! ಅವರು ಬಡವರೂ ಅಲ್ಲ.

ಆ ಬಂದೂಕುದಾರಿಯ ಹೆಸರು ನಾಲ್ಮಡಿ ಚಾರ್ಲ್ಸ್ ಕಾರ್ಲ್ ರಾಬರ್ಟ್ಸ್ ಎಂದು. ಒಳಗೆ ನುಗ್ಗಿದವನೆ ಕೋಣೆಯಲ್ಲಿನ ಎಲ್ಲಾ 15 ಗಂಡು ಮಕ್ಕಳನ್ನು ಮತ್ತು ನಾಲ್ಕು ಜನ ವಯಸ್ಕರನ್ನು ಹೊರಗೆ ಕಳುಹಿಸಿದ. ಉಳಿದ ಹತ್ತು ಜನ ಹೆಣ್ಣು ಮಕ್ಕಳ ಕೈಕಾಲು ಕಟ್ಟಿದ. ನಂತರ ಅವರನ್ನು ಸಾಲಾಗಿ ನಿಲ್ಲಿಸಿ ಅವರ ಮೇಲೆ ಅನೇಕ ಸುತ್ತು ಎಲ್ಲೆಂದರಲ್ಲಿ ಗುಂಡು ಹಾರಿಸಿದ. ಮೂವರು ಹೆಣ್ಣುಮಕ್ಕಳು ಸ್ಥಳದಲ್ಲೇ ಸತ್ತರು. ಒಂದು ಗುಂಡು ತನಗೆ ಹೊಡೆದುಕೊಂಡ; ಸತ್ತ. ಮತ್ತಿಬ್ಬರು ಹೆಣ್ಣು ಮಕ್ಕಳು ಆಸ್ಪತ್ರೆಯಲ್ಲಿ ಸತ್ತರು. ಉಳಿದ ಐದು ಮಕ್ಕಳು ಗುಂಡೇಟಿನ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸತ್ತವರೆಲ್ಲ 6 ರಿಂದ 13 ವರ್ಷ ವಯಸ್ಸಿನ ಮಕ್ಕಳು.

ಈ ಘಟನೆಯಾಗುವುದಕ್ಕೆ ಕೇವಲ 5 ದಿನಗಳ ಹಿಂದೆಯಷ್ಟೆ, ಸೆಪ್ಟೆಂಬರ್ 27 ರಂದು ಸುಮಾರು ಐವತ್ತು ವಯಸ್ಸಿನ ವ್ಯಕ್ತಿ ಅಮೇರಿಕದ ಬೇರೊಂದು ರಾಜ್ಯದಲ್ಲಿ ಶಾಲೆಯೊಂದಕ್ಕೆ ನುಗ್ಗಿ ಬಂದೂಕು ತೋರಿಸಿ ಆರು ವಿದ್ಯಾರ್ಥಿನಿಯರನ್ನು ತನ್ನ ವಶಕ್ಕೆ ತೆಗೆದುಕೊಂಡ. ನಂತರ ಅವರಲ್ಲಿ ನಾಲ್ವರನ್ನು ಹೊರಕ್ಕೆ ಕಳುಹಿಸಿದ. ನಮ್ಮಲ್ಲಿನ ಕಮ್ಯಾಂಡೊ ಮಾದರಿಯ ಇಲ್ಲಿನ ವಿಶೇಷ ಆಯುಧ ಮತ್ತು ತಂತ್ರ ತಂಡ (SWAT) ಬಂದಾಗ ತನ್ನ ವಶದಲ್ಲಿದ್ದ ಇಬ್ಬರು ಹುಡುಗಿಯರಲ್ಲಿ ಒಬ್ಬಳ ಮೇಲೆ ಪ್ರಾಣಾಂತಿಕ ಗುಂಡುಹಾರಿಸಿ ನಂತರ ತನಗೆ ತಾನೆ ಇನ್ನೊಂದು ಗುಂಡು ಹೊಡೆದುಕೊಂಡು ಸ್ಥಳದಲ್ಲೆ ಸತ್ತ. ಗುಂಡು ತಗಲಿದ ಹುಡುಗಿ ಆಸ್ಪತ್ರೆಯಲ್ಲಿ ಸತ್ತಳು. ಇದಾದ ಎರಡೇ ದಿನಕ್ಕೆ ಮತ್ತೊಂದು ರಾಜ್ಯದಲ್ಲಿ 15 ವರ್ಷ ವಯಸ್ಸಿನ ಹುಡುಗ ತನ್ನ ಶಾಲೆಯ ಪ್ರಿನ್ಸಿಪಾಲ್‌ಗೆ ಗುಂಡು ಹೊಡೆದು ಸಾಯಿಸಿದ. ಇದಕ್ಕೂ ಮುಂಚಿನ ಸೆಪ್ಟೆಂಬರ್ ಎರಡನೆ ವಾರದ ಮತ್ತೊಂದು ಘಟನೆಯಲ್ಲಿ ೨೫ ವರ್ಷದ ವ್ಯಕ್ತಿ ಶಾಲೆಯಲ್ಲಿ ಗುಂಡು ಹಾರಿಸಿ ಒಬ್ಬನನ್ನು ಕೊಂದು ಇತರೆ ೨೦ ಜನರನ್ನು ಗಾಯಗೊಳಿಸಿದ್ದ.

ಬಂದೂಕು ಹೊಂದಿರುವುದು ಹೆಮ್ಮೆ ಮತ್ತು ಹಕ್ಕು ಎನ್ನುವ ಅಮೇರಿಕಾದಲ್ಲಿನ ಸಂಸ್ಕೃತಿಯಿಂದಾಗಿ ಕೆಲವೊಂದು ಮತಿಗೆಟ್ಟ ವಿಕೃತ ಮನಸ್ಸಿನ ಹುಡುಗರು ಹಾಗು ವಯಸ್ಕರು ಸುಲಭವಾಗಿ ಸಿಕ್ಕುವ ಗನ್ ಹಿಡಿದು ಆಗಾಗ್ಗೆ ಶಾಲೆ ಕಾಲೇಜುಗಳಿಗೆ ನುಗ್ಗಿ ಗುಂಡು ಹಾರಿಸಿ ಬೇರೆಯವರನ್ನು ಸಾಯಿಸುತ್ತಿರುತ್ತಾರೆ. ಕೊಲರ್‍ಯಾಡೊ ರಾಜ್ಯದ ಕೊಲಂಬೈನ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಏಪ್ರಿಲ್ 20, 1999 ರಂದು ತಮ್ಮ ಶಾಲೆಗೆ ನುಗ್ಗಿ 12 ಜನ ವಿದ್ಯಾರ್ಥಿಗಳನ್ನು ಹಾಗು ಒಬ್ಬ ಉಪಾಧ್ಯಾಯರನ್ನು ಕೊಂದಿದ್ದು ತಮ್ಮ ದೇಶದಲ್ಲಿನ ಬಂದೂಕು ಸಂಸ್ಕೃತಿಯ ಬಗ್ಗೆ ಇಲ್ಲಿನ ಜನ ಗಂಭೀರವಾಗಿ ಚಿಂತಿಸುವಂತೆ ಮಾಡಿತ್ತು. ಆ ಘಟನೆಯ ಹಿನ್ನೆಲೆಯಲ್ಲಿ ಮೈಕೆಲ್ ಮೂರ್ ತೆಗೆದ 'ಬೌಲಿಂಗ್ ಫಾರ್ ಕೊಲಂಬೈನ್' ಸಾಕ್ಷ್ಯಚಿತ್ರ ಆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದದ್ದಲ್ಲದೆ ಅನೇಕ ಚರ್ಚೆಗಳನ್ನು ಹುಟ್ಟಿಹಾಕಿತ್ತು. ಇದೇ ಗಾಂಧಿ ಜಯಂತಿಯಂದು ಆದ ಮೇಲೆ ವಿವರಿಸಿದ ರಕ್ತಪಾತ ಮತ್ತೊಮ್ಮೆ ಅಂತಹ ಚರ್ಚೆಯನ್ನು ಹುಟ್ಟುಹಾಕಿರುವುದಲ್ಲದೆ ಇಡೀ ಅಮೇರಿಕಕ್ಕೆ ತಮ್ಮ ಪಾಡಿಗೆ ತಾವಿದ್ದ ಒಂದು ವಿಶಿಷ್ಟ ಪಂಗಡದ ಪರಿಚಯವನ್ನು ದೊಡ್ಡ ರೀತಿಯಲ್ಲಿ ಮಾಡಿಸುತ್ತಿದೆ.

ಬಹುಶಃ ಮೂರ್‍ನಾಲ್ಕು ವರ್ಷದ ಹಿಂದೆ ಇರಬಹುದು ನಾನು ಹ್ಯಾರಿಸನ್ ಫೋರ್ಡ್‌ನ 'ವಿಟ್ನೆಸ್' ಸಿನೆಮಾ ನೋಡಿದ್ದು. ಆ ಸಿನೆಮಾ ನೋಡುವಾಗಲೆ ಅಮಿಷ್ ಎನ್ನುವ ಪದ ಮೊದಲ ಸಲ ಕೇಳಿದ್ದು. ಆ ಚಿತ್ರದಲ್ಲಿ ತಮ್ಮ ಸುತ್ತಮುತ್ತ ಅತ್ಯಾಧುನಿಕತೆಯ ಕಾರು-ರೈಲು-ಯಂತ್ರಗಳಿಂದ ಅಮೇರಿಕ ಆವರಿಸಿಕೊಂಡಿದ್ದರೂ ತಾವು ಮಾತ್ರ ಜಟಕಾ ಬಂಡಿಗಳಲ್ಲಿ ಓಡಾಡುವ, ಕರೆಂಟ್ ಉಪಯೋಗಿಸದ, ಎರಡು ಶತಮಾನದ ಹಿಂದಿನ ರೀತಿಯ ಜೀವನ ನಡೆಸುವವರಂತೆ ಕಾಣಿಸುತ್ತಿದ್ದ ಐರೋಪ್ಯ ಮೂಲದ ಆ ಬಿಳಿಯ ಕೈಸ್ತ ಜನರನ್ನು ನೋಡಿ ನನಗೆ ನಂಬಲಾಗಲಿಲ್ಲ. ತಕ್ಷಣ ಇಂಟರ್‌ನೆಟ್‌ನಲ್ಲಿ ಹುಡುಕಿದಾಗ ಸುಮಾರು ಎರಡು ಲಕ್ಷದಷ್ಟು ಆಮಿಷ್ ಜನ ಅಮೇರಿಕದಲ್ಲಿ ವಾಸವಾಗಿದ್ದಾರೆ, ಅವರೆಲ್ಲ ಹೆಚ್ಚಾಗಿ ಪೂರ್ವರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ವಾಸವಿದ್ದಾರೆ ಎಂದು ಗೊತ್ತಾಯಿತು. ಹಾಗೂ 'ವಿಟ್ನೆಸ್' ಚಲನಚಿತ್ರದಲ್ಲಿ ತೋರಿಸಿರುವುದು ಉತ್ಪ್ರೇಕ್ಷೆಯಲ್ಲ ಎಂದೂ ತಿಳಿಯಿತು. ಆಮಿಷ್ ಜನ ತಮ್ಮ ಫೋಟೊ ತೆಗೆಸಿಕೊಳ್ಳುವುದಿಲ್ಲ. ಮಕ್ಕಳಿಗೆಂದು ತರುವ ಬೊಂಬೆಗಳಿಗೆ ತಲೆಯೇ ಇರುವುದಿಲ್ಲ. ಕೃಷಿಯಲ್ಲಿ ಯಂತ್ರಗಳ ಉಪಯೋಗವಿಲ್ಲ. ಕಟ್ಟಳೆ ಮೀರಿದವರಿಗೆ ಕಠಿಣ ಶಿಕ್ಷೆಯ ಬಹಿಷ್ಕಾರ ಬೇರೆ. ಅಂದ ಹಾಗೆ ಆಮಿಷ್ ಗಂಡಸರು ಮೀಸೆ ಬಿಡುವುದಿಲ್ಲ. ಮೀಸೆ ಬಿಡದಿರುವುದಕ್ಕೆ ಕಾರಣ ಏನು ಗೊತ್ತೆ? ಗೊತ್ತಿದ್ದರೆ ಒಂದು ಸಾಲು ಬರೆಯಿರಿ. ಇಂತಹ ಎಷ್ಟೋ ವಿಭಿನ್ನತೆಗಳಿರುವ ಆಮಿಷ್ ಜನಾಂಗದ ಮತ್ತು ತಮ್ಮ ಮಕ್ಕಳನ್ನು ಕೊಂದವನ ಬಗ್ಗೆ ಅವರು ನಡೆದುಕೊಂಡ ರೀತಿಯ ಬಗೆಗಿನ ಮತ್ತಷ್ಟು ವಿವರಗಳನ್ನು ಮುಂದಿನ ವಾರ ಬರೆಯುತ್ತೇನೆ.