ಈಗ ಸ್ವಲ್ಪ ಹೊತ್ತಿನ ಮುಂಚೆ ಫರೀದ್ ಜಕಾರಿಯರವರ "GPS" ನೋಡುತ್ತಿದ್ದೆ. ಫರೀದ್ ಜಕಾರಿಯ ಗೊತ್ತಲ್ಲ? ಭಾರತೀಯ ಸಂಜಾತ; ಅಮೇರಿಕದ ಪತ್ರಕರ್ತ. ಜಾಗತಿಕ ರಾಜಕೀಯ ಆಯಾಮಗಳ ಮೇಲೆ ವಸ್ತುನಿಷ್ಠ ಅಭಿಪ್ರಾಯ ಕೊಡುವ ಅಧ್ಯಯನಶೀಲ. ಬುದ್ಧಿಜೀವಿ. ಭಾರತೀಯ ಮುಸಲ್ಮಾನರ ಬಗ್ಗೆ ಮತ್ತು ಅವರಲ್ಲಿಯ ವೈಚಾರಿಕ-ಸಾಂಸ್ಕೃತಿಕ ನಾಯಕತ್ವದ ದಾರಿದ್ರ್ಯದ ಬಗ್ಗೆ ಯೋಚಿಸಿದಾಗೆಲ್ಲ ನೆನಪಿಗೆ ಬರುವ ಮುಂಬಯಿಯಲ್ಲಿ ಹುಟ್ಟಿ ಬೆಳೆದ ಲೇಖಕ. ಆದರೆ, ಫರೀದ್ ಈಗ ಅಮೆರಿಕನ್ ಪ್ರಜೆ!
ಇರಲಿ. ಇವತ್ತು ಫರೀದ್ ಜಕಾರಿಯ ಚೀನಾದ ಪ್ರಧಾನಿ ಮತ್ತು ಅಫ್ಘನ್ ಅಧ್ಯಕ್ಷನ ಸಂದರ್ಶನ ಮಾಡಿದ್ದ. ಕೊನೆಯಲ್ಲಿ ರೋಮನ್ ಸಾಮ್ರಾಟ ಮಾರ್ಕಸ್ ಅರಿಲಿಯಸ್‌ನ ಒಂದೆರಡು ಮಾತುಗಳನ್ನು ಉಲ್ಲೇಖಿಸಿದ. ಮಾರ್ಕಸ್ ಆಸೆಯ (ಬಯಕೆ) ದುಷ್ಟತನಗಳ ಬಗ್ಗೆ ಹೇಳಿದ್ದ. ಅದನ್ನು ಜಕಾರಿಯ ಅಮೆರಿಕದ ಮತ್ತು ಚೀನಾದ ಜನರಿಗೆ ನೆನಪಿಸಿದ. ಹಾಗೆಯೆ ಮಾರ್ಕಸ್ ಸಾವಿನ ಬಗ್ಗೆ ಹೇಳಿದ್ದ ಮಾತನ್ನೂ ಹೇಳಿದ; "ಸಾವನ್ನು ಬಯಸಬಹುದು. ಏಕೆಂದರೆ ಅದು ಎಲ್ಲಾ ಬಯಕೆಗಳಿಗೂ ಅಂತ್ಯ ಹಾಡುತ್ತದೆ."
ಇದು ನೆನ್ನೆಯಿಂದ ನಾನು ಹಲವಾರು ಸಲ ನೆನಪಿಸಿಕೊಂಡ ಪಾಲ್ ನ್ಯೂಮನ್ (83) ನ ಸಾವು ಮತ್ತು ಅದರಿಂದ ನನ್ನಲ್ಲಿ ಆಗಾಗ ಹುಟ್ಟುತ್ತಿದ್ದ ವಿಷಾದಗಳನ್ನು ಈಗ ನಿಲ್ಲಿಸಿದೆ. ನ್ಯೂಮನ್‌ಗೆ ಇನ್ನೂ ಬದುಕಬೇಕೆಂಬ ಬಯಕೆ ಇತ್ತೊ ಇಲ್ಲವೊ ಗೊತ್ತಿಲ್ಲ. ಆದರೆ ಸಾರ್ಥಕ ಬದುಕಿನ ನಂತರ ಬರುವ ಸಹಜ ಸಾವಿಗೆ ವಿಷಾದಿಸಬಾರದು ಎಂದು ಮನಸ್ಸು ಹೇಳುತ್ತಿದೆ.
ಪಾಲ್ ನ್ಯೂಮನ್ನನ ಬಗ್ಗೆ ನಾನು ಹೆಚ್ಚಿಗೆ ಬರೆಯಲು ಹೋಗುವುದಿಲ್ಲ. ಯಾಕೆಂದರೆ, ನೀವು ಆತನ ಸಿನೆಮಾಗಳನ್ನು ನೋಡಿದ್ದರೆ ನಿಮಗೆ ಅದರ ಅವಶ್ಯಕತೆ ಇಲ್ಲ. ನೋಡಿಲ್ಲವಾದರೆ ಆತನ ಒಂದೆರಡು ಸಿನಿಮಾ ನೋಡಿದರೂ ಸಾಕು ಆತನ ಪ್ರತಿಭೆ ಕಾಣಿಸುತ್ತದೆ. ವಾರದ ಹಿಂದೆ ತಾನೆ ನೋಡಿದ್ದ ಆತನ "ಹಡ್" ಸಿನೆಮಾ ಗಾಢವಾಗಿ ತಟ್ಟಿತ್ತು. ಆ ಸಿನೆಮಾದ ಆತನ ಪಾತ್ರವನ್ನು ಮೆಚ್ಚಲಾಗದು. ಆದರೆ ಅವನನ್ನು ದ್ವೇಷಿಸಲಾಗದು. ಮನುಷ್ಯನ ಒಳ್ಳೆಯತನಗಳ ಬಗ್ಗೆ ಗೌರವ ಹುಟ್ಟಿಸುತ್ತಲೆ ಕೆಟ್ಟವರನ್ನೂ ಒಂದಿಷ್ಟು ಕನಿಕರದಿಂದ ನೋಡುವ ಬಗೆಯನ್ನು ಆ ಸಿನೆಮಾ ಕಲಿಸುತ್ತದೆ.
ನ್ಯೂಮನ್ ನೀಲಿ ಕಣ್ಣುಗಳ ಸ್ಫುರದ್ರೂಪಿ ಮನುಷ್ಯ. ಆದರೆ ಅನೇಕ ಚಿತ್ರಗಳಲ್ಲಿ ಆತ ನೆಗೆಟಿವ್ ಛಾಯೆಗಳಿರುವ indifferent, careless, ಮತ್ತು ಆದರ್ಶಗಳಿಗೆ ಅಂಟಿಕೊಳ್ಳದ ಪಾತ್ರಗಳಲ್ಲಿ ನಟಿಸಿದ್ದಾನೆ. ಆ ಪಾತ್ರಗಳಲ್ಲಿ ನಟಿಸುತ್ತಲೆ ಒಳ್ಳೆಯದರ ಬಗ್ಗೆ ವಿಷಾದವಿಲ್ಲದ ಗೌರವ ಮೂಡಿಸುತ್ತಾನೆ.
ನ್ಯೂಮನ್‌ನ ಸಿನೆಮಾಗಳಂತೆಯೆ ಆತನ ಸಿನೆಮಾ ಹೊರತಾದ ಕೆಲಸಗಳೂ ನನ್ನಲ್ಲಿ ಅಪಾರ ಕುತೂಹಲ ಮತ್ತು ಹೆಮ್ಮೆ ಮೂಡಿಸುತ್ತವೆ. ತನ್ನ ಹೆಸರಿನಲ್ಲಿ ಮಾರಾಟವಾಗುವ ಆಹಾರ ಉತ್ಪನ್ನಗಳ ತನ್ನ ಪಾಲಿನ ಪ್ರತಿ ಲಾಭಾಂಶವೂ ಸಮುದಾಯ ಸೇವಾ ಸಂಸ್ಥೆಗಳಿಗೆ ಹೋಗುವಂತೆ ಮಾಡಿದ್ದ. ಹಾಗೆಯೆ ಆತ ಒಬ್ಬ ಉದಾರ ಮನಸ್ಸಿನ ಮನುಷ್ಯ. ಉದಾರ ಮೌಲ್ಯಗಳಿಗಾಗಿ ಅನೇಕ ಸಲ ಧ್ವನಿಯೆತ್ತಿದ್ದಾನೆ. 60ರ ದಶಕದಲ್ಲಿಯ ಕಪ್ಪುಜನರ ನಾಗರಿಕ ಹಕ್ಕುಗಳ ಹೋರಾಟವನ್ನು ಬೆಂಬಲಿಸಿದ್ದ. ವಿಯಟ್ನಾಮ್ ಯುದ್ಧವನ್ನು ವಿರೋಧಿಸಿದ್ದ. ಆಗಿನ ಅಧ್ಯಕ್ಷ ನಿಕ್ಸನ್‌ನ "ವೈರಿ ಪಟ್ಟಿ"ಯಲ್ಲಿ ಆತನ ಹೆಸರೂ ಇತ್ತು. ಆ ಪಟ್ಟಿಯಲ್ಲಿ ತನ್ನ ಹೆಸರು ಸೇರಿಕೊಂಡದ್ದನ್ನು ತನ್ನ ಜೀವನದ ಅತಿ ಹೆಮ್ಮೆಯ ಗಳಿಗೆ ಎಂದು ಹೇಳಿಕೊಂಡಿದ್ದ.
ಹಾಲಿವುಡ್‌ನ ನನ್ನ ನೆಚ್ಚಿನ ನಟರಲ್ಲಿ ರಾಬರ್ಟ್ ರೆಡ್‌ಫೋರ್ಡ್ ಸಹ ಒಬ್ಬ. ಆತನೂ ಒಬ್ಬ ಆಕ್ಟಿವಿಸ್ಟ್. ನ್ಯೂಮನ್ ಮತ್ತು ರೆಡ್‌ಫೋರ್ಡ್ ಇಬ್ಬರೂ ಸೇರಿ ಎರಡು ಚಿತ್ರಗಳಲ್ಲಿ ('Butch Cassidy and The Sundance Kid' ಮತ್ತು 'The Sting') ನಟಿಸಿದ್ದಾರೆ. ಅದ್ಭುತ ಚಿತ್ರಗಳು. ರೆಡ್‌ಫೋರ್ಡ್ ನ್ಯೂಮನ್ನನ ಸಾವಿಗೆ "ನಾನು ಒಬ್ಬ ನೈಜ ಸ್ನೇಹಿತನನ್ನು ಕಳೆದುಕೊಂಡೆ. My life -- and this country -- is better for his being in it." ಅಂದಿದ್ದಾನೆ. ಈ ದೇಶದ್ದೆ ಏನು, ವಿಶ್ವದ ಅನೇಕ ಜನರ ಜೀವನ ಸಹ್ಯವಾಗಿರುವುದು ಈ ತರಹದ ಸಜ್ಜನರಿಂದ; ಪ್ರಾಮಾಣಿಕ, ಮಾನವೀಯ ಮೌಲ್ಯಗಳ ಕಲಾವಿದರಿಂದ.
ಇದೇ ಸಮಯದಲ್ಲಿ ನನಗೆ ನಮ್ಮ ಭಾರತ ಮತ್ತು ಕರ್ನಾಟಕದ "ತಾರೆ"ಗಳ ನೆನಪು ಬೇಡವೆಂದರೂ ಬರುತ್ತದೆ. ಈ ಹೋಲಿಕೆಗಳಿಂದ ತಪ್ಪಿಸಿಕೊಳ್ಳುವುದು ಅಪಾರ ಹಿಂಸೆ. ಹಾಲಿವುಡ್‌ನ ನಟ-ನಿರ್ದೇಶಕರ ಬುದ್ಧಿಶಕ್ತಿ ಮತ್ತು ಆಕ್ಟಿವಿಸಮ್‌ಗೂ ನಮ್ಮ ತಾರಾಲೋಕದ "ಅನ್ಯ ಗ್ರಹ ಜೀವಿಗಳ" ಬುದ್ಧಿಶಕ್ತಿ ಮತ್ತು ಕ್ರಿಯಾಶೀಲತೆಗೂ ಅಂತರ ನಿರಂತರವಾಗಿ ಮುಂದುವರೆಯುತ್ತಿದೆ. ಜಾರ್ಜ್ ಕ್ಲೂನಿ ವಿಶ್ವಸಂಸ್ಥೆಗೆ ಹೋಗಿ ಜನಾಂಗನಾಶದ ಬಗ್ಗೆ ಮಾತನಾಡುತ್ತಾನೆ. ತಮ್ಮ ದೇಶದ ಮತ್ತು ವಿಶ್ವದ ಸ್ಥಿತಿಗತಿಯ ಬಗ್ಗೆ ಹಾಲಿವುಡ್‌ನ ಅನೇಕ ನಟನಟಿಯರು ಜವಾಬ್ದಾರಿಯಿಂದ ಮತ್ತು ಅಧಿಕೃತತೆಯಿಂದ ಮಾತನಾಡುವ ಶಕ್ತಿ ಮತ್ತು ಜ್ಞಾನ ಪಡೆದಿದ್ದಾರೆ. ಆದರೆ, ನಮ್ಮ ಎಷ್ಟು ನಟನಟಿಯರು ನಮ್ಮ ಸಮಾಜದ ವಾಸ್ತವಿಕ ಸಮಸ್ಯೆಗಳ ಬಗ್ಗೆ ಪ್ರಗತಿಪರ ಚಿಂತನಶೀಲತೆಯಿಂದ ಮಾತನಾಡಬಲ್ಲರು? ಇವರನ್ನು ನೋಡಿದರೆ ಕನಿಕರ ಹುಟ್ಟುತ್ತದೆ. ಇವತ್ತು ನಾವು ನಿಜಕ್ಕೂ ಚಿಂತನೆಯನ್ನು ಇಂಜೆಕ್ಟ್ ಮಾಡಬೇಕಿರುವುದು ನಮ್ಮ ದೇಶದ ಸಿನೆಮಾ ರಂಗಕ್ಕೆ.
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 3, 2008 ರ ಸಂಚಿಕೆಯಲ್ಲಿನ ಲೇಖನ.)
ಕಳೆದ ಮೂರು ದಶಕಗಳ ಜಾಗತಿಕ ವಿದ್ಯಮಾನಗಳನ್ನು ಗಮನಿಸಿ ನೋಡಿ. 1980 ರ ದಶಕದಲ್ಲಿ ರೊನಾಲ್ಡ್ ರೇಗನ್, ಮಾರ್ಗರೇಟ್ ಥ್ಯಾಚರ್ ಮತ್ತು ಮಿಖಾಯಿಲ್ ಗೋರ್ಬಚೆವ್‌ರ ನಾಯಕತ್ವ ಪ್ರಜಾಪ್ರಭುತ್ವವಾದಿ ಮತ್ತು ಕಮ್ಯುನಿಸ್ಟ್ ದೇಶಗಳ ನಡುವಿನ ಶೀತಲ ಸಮರಕ್ಕೆ ಕೊನೆ ಹಾಡಿತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು ಮೂರು ದಶಕಗಳ ಕಾಲ ಇಡೀ ವಿಶ್ವವೆ ಮುಕ್ತ ಆರ್ಥಿಕತೆಗೆ, ಜಾಗತೀಕರಣಕ್ಕೆ ತೆರೆದುಕೊಂಡಿತು. ಇದರ ಪರಿಣಾಮವಾಗಿ ಕಳೆದ ಶತಮಾನದ ಹಲವಾರು ಪ್ರಮುಖ ರಾಷ್ಟ್ರಗಳು ವಿಶ್ವರಂಗದಲ್ಲಿ ತಮ್ಮ ಪ್ರಾಮುಖ್ಯತೆ ಕಳೆದುಕೊಳ್ಳುತ್ತ ಬಂದಿವೆ. ಮುಂದುವರೆದ ರಾಷ್ಟ್ರಗಳ ಆರ್ಥಿಕ ಸಂಪತ್ತಿನ ವಿಸ್ತರಣೆ ಸ್ಥಗಿತವಾಗಿದ್ದರೆ ಚೀನಾ ಮತ್ತು ಭಾರತದಂತಹ ಪುರಾತನ ನಾಗರಿಕತೆಯ ರಾಷ್ಟ್ರಗಳು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳುತ್ತ ನಡೆದಿವೆ. ಜಾಗತೀಕರಣದಿಂದ ತೃತೀಯ ವಿಶ್ವದ ಬಡ ರಾಷ್ಟ್ರಗಳಿಗೆ ಅನುಕೂಲವಾಗುತ್ತದೆ ಎಂದು ಹೇಳುತ್ತ ಬಂದ ಆರ್ಥಿಕ ತಜ್ಞರ ಮಾತು ನಿಜವಾಗುವತ್ತ ಸಾಗುತಿದೆ.
ಈ ಜಾಗತೀಕರಣದ ಆರಂಭದಲ್ಲಿ ಅಮೆರಿಕ, ಜಪಾನ್, ಮತ್ತು ಯೂರೋಪಿನ ಹಲವಾರು ರಾಷ್ಟ್ರಗಳು ಅಪಾರ ಲಾಭ ಮಾಡಿಕೊಂಡವು. ಪ್ರತ್ಯಕ್ಷ ಮತ್ತು ಪರೋಕ್ಷ ಒತ್ತಡಗಳಿಂದ ತೃತೀಯ ಜಗತ್ತಿನ ದೇಶಗಳ ಕಾನೂನು ಕಾಯ್ದೆಗಳನ್ನು ಬದಲಾಗುವಂತೆ ಅವರು ನೋಡಿಕೊಂಡರು. ಆ ಮೂಲಕ ಬಡ ರಾಷ್ಟ್ರಗಳಿಗೆ ತಮ್ಮ ಸಾಮಗ್ರಿಗಳನ್ನು ಅಪಾರ ಪ್ರಮಾಣದಲ್ಲಿ ರಫ್ತು ಮಾಡಿ ದುಡ್ಡು ಮಾಡಿಕೊಂಡರು. ಅದೇ ಬಡರಾಷ್ಟ್ರಗಳಲ್ಲಿನ ಅಗ್ಗದ ಕೂಲಿ ಮತ್ತು ಉತ್ಪಾದನಾ ವೆಚ್ಚದಿಂದಾಗಿ ತಮಗೆ ಬೇಕಾದ ಸಾಮಗ್ರಿಗಳನ್ನು ತಮ್ಮ ದೇಶದಲ್ಲಿನ ಬೆಲೆಗಿಂತ ಅಗ್ಗದ ಬೆಲೆಗೆ ಕೊಂಡುಕೊಂಡು ತಮ್ಮ ಸುಧಾರಿಸಿದ್ದ ಲೌಕಿಕ ಜೀವನವನ್ನು ಮತ್ತೂ ಐಷಾರಾಮಿ ಮಾಡಿಕೊಂಡರು. ಅಮೆರಿಕದಂತಹ ದೇಶ ಸ್ವತಂತ್ರ ಅರ್ಥವ್ಯವಸ್ಥೆಯ ನೆಪದಲ್ಲಿ ತನ್ನ ದೇಶದ ಒಳಗೂ ಕಾಯ್ದೆಕಾನೂನುಗಳನ್ನು ಮತ್ತೂ ಸಡಿಲಿಸಿಕೊಂಡಿತು. ಮೊದಮೊದಲು ಎಲ್ಲಾ ಚೆನ್ನಾಗಿತ್ತು. ಆದರೆ ಈ ಹೊಸ ಶತಮಾನದಲ್ಲಿ ಪಾತ್ರಗಳು ಬದಲಾಗುತ್ತಿವೆ. ವಿದೇಶಗಳ ಅಗ್ಗದ ಸಾಮಾನುಗಳನ್ನು ಕೊಳ್ಳುವ ಭರದಲ್ಲಿ ಮುಂದುವರೆದ ದೇಶಗಳ ಕಾರ್ಖಾನೆಗಳು ಮುಚ್ಚುತ್ತ ಬಂದವು. ಕಳೆದ ನಾಲ್ಕೈದು ವರ್ಷಗಳಿಂದ ಆಗುತ್ತಿರುವ ಬದಲಾವಣೆಗಳನ್ನೆ ನೋಡಿ. ಜಾಗತೀಕರಣದ ಪ್ರಬಲ ಬೆಂಬಲಿಗನಾಗಿದ್ದ ಅಮೆರಿಕ ಈಗ ತನಗೆ ಅನುಕೂಲವಾಗಿಲ್ಲದ ಈ ಸಮಯದಲ್ಲಿ ಜಾಗತೀಕರಣದ ವಿರೋಧಿಯಾಗುತ್ತ ನಡೆದಿದೆ. ಆರ್ಥಿಕ ಕ್ಷೇತ್ರ ಸರ್ಕಾರದ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು ಎಂದು ಭಾರತ-ಚೀನಾಗಳಂತಹ ದೇಶಗಳ ಮೇಲೆ ಒತ್ತಡ ಹೇರುತ್ತ ಬಂದ ದೇಶ ಈಗ ಒಂದು ವಾರದಿಂದ ಆ ದೇಶದ ಆರ್ಥಿಕ ಕ್ಷೇತ್ರವನ್ನೆ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವತ್ತ, "ಸಮಾಜವಾದಿ" ದೇಶವಾಗುವತ್ತ ಹೊರಟಿದೆ.
ಯುದ್ಧಸಂಬಂಧಿ ಲೇಖನದಲ್ಲಿ ಈ ಆರ್ಥಿಕ ವಿಷಯಗಳ ಹಿನ್ನೆಲೆ ಯಾಕೆ ಎಂದು ನಿಮಗೆ ಈಗಾಗಲೆ ಅನ್ನಿಸಿರಬಹುದು. ಆದಕ್ಕೆ ಉತ್ತರವಾಗಿ ಕಳೆದ ಶತಮಾನದ ಎರಡು ವಿಶ್ವಯುದ್ಧಗಳಿಗೂ ಹಿನ್ನೆಲೆಯಾಗಿ ಇದ್ದದ್ದು ಆರ್ಥಿಕ ವಿಷಯಗಳೆ ಎನ್ನುವುದರತ್ತ ನಿಮ್ಮ ಗಮನ ಸೆಳೆಯಬಯಸುತ್ತೇನೆ. ಮೊದಲ ಮಹಾಯುದ್ಧ ಅಷ್ಟು ದೊಡ್ಡ ಪ್ರಮಾಣದಲ್ಲಿ ಸ್ಫೋಟಗೊಳ್ಳಲು ಕಾರಣವಾಗಿದ್ದು ಜರ್ಮನಿ ಮತ್ತು ಬ್ರಿಟನ್‌ಗಳ ಆರ್ಥಿಕ ಸಾರ್ವಭೌಮತ್ವದ ಹಂಬಲ. ಕಳೆದ ಶತಮಾನದ ಆರಂಭದಲ್ಲಿ ಕೈಗಾರಿಕೀಕರಣದಿಂದ ಜರ್ಮನಿ ಶ್ರೀಮಂತವಾಗುತ್ತ ನಡೆದಿತ್ತು. ಆದರೆ ಅದಕ್ಕೆ ಆಗಿನ ನಂಬರ್ ಒನ್ ರಾಷ್ಟ್ರ ಬ್ರಿಟನ್‌ಗಿದ್ದಷ್ಟು ದೊಡ್ಡ ಗಾತ್ರದ ಸಾಮ್ರಾಜ್ಯವಿರಲಿಲ್ಲ. ತನ್ನ ದೇಶದ ಹೊರಗೂ ತನ್ನ ಆರ್ಥಿಕ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಬೇಕೆಂಬ ಜರ್ಮನಿಯ ತುಡಿತವೆ ಸಣ್ಣವಿಷಯವೊಂದನ್ನು ಮುಂದಿಟ್ಟುಕೊಂಡು ಯೂರೋಪಿನ ರಾಷ್ಟ್ರಗಳು ಒಬ್ಬರ ಮೇಲೆ ಒಬ್ಬರು ಯುದ್ಧ ಸಾರಲು ನೆಪವಾಯಿತು. ನಾಲ್ಕು ವರ್ಷಗಳ ಆ ಯುದ್ಧ ನಾಲ್ಕು ಕೋಟಿ ಜನರ ಜೀವ ನುಂಗಿತು!
ಮೊದಲ ಯುದ್ಧವನ್ನು ಸೋತ ಜರ್ಮನಿ ಮತ್ತೆ ಹಿಟ್ಲರ್‌ನ ಮೂಲಕ ಆರ್ಥಿಕ ಸ್ಥಿರತೆ ಪಡೆದುಕೊಂಡಿತು. ಆ ಆರ್ಥಿಕ ಶ್ರಿಮಂತಿಕೆಯಿಂದ ಬಲಪಡೆದುಕೊಂಡ ಹಿಟ್ಲರ್‌ನ ಕೋಮುವಾದ ಸಾಮ್ರಾಜ್ಯಶಾಹಿಯಾಗುವತ್ತ ನಡೆಯಿತು. ಆದರೆ ಅಷ್ಟೊತ್ತಿಗೆ ವಿಶ್ವದ ಬಹುಪಾಲು ಕಡೆ ತನ್ನ ವಸಾಹುತಗಳನ್ನು ಹೊಂದಿದ್ದ ಸೂಪರ್ ಪವರ್ ಬ್ರಿಟನ್‌ಗೆ ಹಿಟ್ಲರ್‌ನ ವಸಾಹುತುಶಾಹಿಯನ್ನು ವಿರೋಧಿಸುವ ನೈತಿಕ ಬಲ ಇರಲಿಲ್ಲ. ಅದೇ ಸಮಯದಲ್ಲಿ ಅದರ ಆರ್ಥಿಕ ಬಲವೂ ಕ್ಷೀಣಿಸುತ್ತ ಬಂದಿತ್ತು. ತಮ್ಮ ಗತಕಾಲದ ಸಾಮ್ರಾಜ್ಯಶಾಹಿ ಹಿರಿಮೆಯನ್ನು ಪಡೆದುಕೊಳ್ಳಲು ಹಪಹಪಿಸಿದ ನವಶ್ರೀಮಂತ ಇಟಲಿ ಮತ್ತು ಜಪಾನ್‌ಗಳು ಜರ್ಮನಿಯ ಸಂಗಾತಿಗಳಾದರು. ಅಮೆರಿಕವನ್ನು ಬಿಟ್ಟರೆ ಬ್ರಿಟನ್-ಫ್ರಾನ್ಸ್‌ಗಳು ವಸಾಹುತುಶಾಹಿಯನ್ನು ಎದುರಿಸುವ ನೈತಿಕ ಸ್ಥಿತಿಯಲ್ಲಿ ಇರಲಿಲ್ಲ. ಆಗ ಅವರಿಗಿದ್ದ ಒಂದೇ ನೈತಿಕ ಬಲ ಎಂದರೆ ತಮ್ಮ ದೇಶಗಳ ಸ್ವತಂತ್ರ ಆಸ್ತಿತ್ವವನ್ನು ಉಳಿಸಿಕೊಳ್ಳುವ ಮತ್ತು ಹಿಟ್ಲರ್‌ನ ಜನಾಂಗೀಯ ಬರ್ಬರತೆಯನ್ನು ನಿಲ್ಲಿಸುವ ಮಾನವೀಯ ಕಾರಣಗಳು ಮಾತ್ರ.
ಎರಡನೆಯ ವಿಶ್ವಯುದ್ಧದ ನಂತರದ ಶೀತಲಸಮರ ಅಮೆರಿಕ ನಾಯಕತ್ವದ ಪ್ರಜಾಪ್ರಭುತ್ವವಾದಿ ದೇಶಗಳನ್ನು ಮತ್ತು ಸೋವಿಯತ್ ನೇತೃತ್ವದ ಕಮ್ಯುನಿಸ್ಟ್ ದೇಶಗಳನ್ನು ಹಲವಾರು ಸಲ ವಿಶ್ವಸಮರದ ಅಂಚಿಗೆ ತಂದು ನಿಲ್ಲಿಸಿದ್ದಿದೆ. ಆದರೆ, ಜಾನ್ ಕೆನ್ನೆಡಿಯಂತಹ ನಾಯಕರು ತಮ್ಮ ದೇಶದೆಡೆಗಿನ ತೀವ್ರ ಕಾಳಜಿಯಿಂದ ಅದನ್ನು ಭಂಗಗೊಳಿಸಿದ್ದಿದೆ. ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ದೇಶದ ಸೇನಾಧಿಕಾರಿಗಳು ರಷ್ಯಾದ ಮೇಲೆ ಯುದ್ಧಕ್ಕೆ ಹಾತೊರೆಯುತ್ತಿದ್ದಾಗ ಕೆನ್ನೆಡಿ ಅವರಿಗೆ ಮೊದಲ ವಿಶ್ವಯುದ್ಧ ಎಂತಹ ಸಣ್ಣ ತಪ್ಪಿನಿಂದ ಪ್ರಚೋದನೆಗೊಂಡಿತು ಎಂಬುದನ್ನು ವಿವರಿಸುವ ಪುಸ್ತಕ ಓದಲು ಕೊಟ್ಟಿದ್ದನಂತೆ.
ಈಗ ಶೀತಲಸಮರ ಇಲ್ಲ. ಆದರೆ ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಜಾಗತಿಕ ರಾಷ್ಟ್ರಗಳು ಯಾವ ತರಹದ ನೈತಿಕ ಬಲಹೀನತೆ ಮತ್ತು ಯುದ್ಧಕ್ಕೆ ಹೋಗಬೇಕಾದ ಹೆದರಿಕೆಗಳಿಂದ ಕೂಡಿದ್ದವೊ ಅಂತಹುದೆ ಸಂದರ್ಭ ಈಗ ಕೂಡಿಬರುತ್ತ ಇದೆ. ಈ ಬಾರಿ ಜರ್ಮನಿ-ಇಟಲಿ-ಜಪಾನ್‌ಗಳ ಪಾತ್ರವನ್ನು ರಷ್ಯ, ಚೀನಾ, ಇರಾನ್‌ಗಳು ವಹಿಸುವ ಸಾಧ್ಯತೆಗಳಿವೆ. 1991 ರಿಂದ ಜಾಗತಿಕ ರಂಗದಲ್ಲಿ ಪರ್ಯಾಯ ನಾಯಕತ್ವವನ್ನು ಕಳೆದುಕೊಂಡ ಪರಿಣಾಮವಾಗಿ ರಷ್ಯ ಅನುಭವಿಸುತ್ತಿರುವ ಕೀಳರಿಮೆ ಎರಡನೆ ವಿಶ್ವಯುದ್ಧದ ಜರ್ಮನಿ-ಜಪಾನ್‌ಗಳ ಕೀಳರಿಮೆಯನ್ನು ನೆನಪಿಸುತ್ತಿದೆ. ಮಧ್ಯಪ್ರಾಚ್ಯದ ಇಸ್ಲಾಮಿಕ್ ದೇಶಗಳಲ್ಲಿ ಜಾತ್ಯತೀತ ಪ್ರಜಾಪ್ರಭುತ್ವವನ್ನು ಹರಡುವ ಒಳ್ಳೆಯ ಕಾರಣದ ಬದಲು ದುರ್ಬಲ ಕಾರಣ ಕೊಟ್ಟು ಇರಾಕ್ ಅನ್ನು ಆಕ್ರಮಿಸಿದ ಅಮೆರಿಕದ ಕೃತ್ಯ ಬ್ರಿಟನ್ ಸಿಕ್ಕಿಹಾಕಿಕೊಂಡಿದ್ದ ಗೊಜಲುಗಳಿಗೆ ಸಮವಾಗಿದೆ. ಇದು, ತನ್ನ ಸುಪರ್ದಿಯಲ್ಲಿದ್ದ ಹಳೆಯ ರಾಷ್ಟ್ರಗಳನ್ನು ಮತ್ತೆ ಆಕ್ರಮಿಸಿಕೊಳ್ಳಲು ನೋಡುತ್ತಿರುವ ರಷ್ಯಾದ ಪ್ರಯತ್ನಕ್ಕೆ ಇಂಬು ನೀಡುತ್ತಿದೆ. ಇನ್ನು, ಯಹೂದಿ ಜನಾಂಗದ ವಿರುದ್ಧ ಇರಾನಿನ ಅಧ್ಯಕ್ಷ ಆಡುತ್ತಿರುವ ಮಾತುಗಳು ಹಿಟ್ಲರ್‌ನ ಜನಾಂಗದ್ವೇಷದ ಪ್ರತಿರೂಪವಾಗಿ, ಯಹೂದಿ-ಕ್ರಿಶ್ಚಿಯನ್ನರ ವಿರುದ್ಧ ಕಂದಾಚಾರಿ ಮುಸ್ಲಿಮ್ ರಾಷ್ಟ್ರಗಳನ್ನು ಎತ್ತಿಕಟ್ಟುವ ಪ್ರಯತ್ನವಾಗಿ ಕಾಣುತ್ತಿದೆ. ಪೆಟ್ರೋಲಿನ ಮೇಲಿನ ಅಮೆರಿಕ ಮತ್ತು ಯೂರೋಪು ರಾಷ್ಟ್ರಗಳ ಅತೀವ ಅವಲಂಬನೆ ಮತ್ತು ಚೀನಾ-ಭಾರತಕ್ಕಿರುವ ತೈಲದ ಅವಶ್ಯಕತೆ ಇರಾನ್, ರಷ್ಯಾ, ವೆನಿಜುವೇಲಗಳ ಧಮಕಿಯನ್ನು ನೋಡಿಯೂ ನೋಡದಂತೆ ಇದ್ದುಬಿಡಲು ವಿಶ್ವರಾಷ್ಟ್ರಗಳನ್ನು ಪ್ರೇರೇಪಿಸುತ್ತಿದೆ.
ಇದೇ ಸಂದರ್ಭದಲ್ಲಿ, ಕ್ಷೀಣಿಸುತ್ತಿರುವ ಅಮೆರಿಕದ ಆರ್ಥಿಕ ಸಾರ್ವಭೌಮತ್ವ ಯುದ್ಧಕ್ಕೆ ಕಾಲುಕೆರೆದು ನಿಲ್ಲುವ ದೇಶಗಳಿಗೆ ಯುದ್ಧ ಬೇಡವೆಂದು ಹೇಳುವ ಅದರ ಪ್ರಭಾವವನ್ನು ಗಣನೀಯವಾಗಿ ಇಲ್ಲವಾಗಿಸುತ್ತಿದೆ. ಏಳು ವರ್ಷಗಳ ಹಿಂದೆ ದೆಹಲಿಯ ಪಾರ್ಲಿಮೆಂಟ್ ಭವನದ ಮೇಲೆ ಜಿಹಾದಿ ಭಯೋತ್ಪಾದಕರ ದಾಳಿಯ ನಂತರದ ಘಟನೆಯನ್ನೆ ನೆನಪಿಸಿಕೊಳ್ಳಿ. ಆಗ ಭಾರತ ಮತ್ತು ಪಾಕಿಸ್ತಾನಗಳೆರಡೂ ಗಡಿಯಲ್ಲಿ ಸೇನಾ ಜಮಾವಣೆ ಮಾಡಿಕೊಂಡು ಯುದ್ಧಘೋಷಕ್ಕೆ ಸಮಯ ನೋಡುತ್ತಿದ್ದರು. ಆದರೆ ಆಗ ಯಾರೊಬ್ಬರೂ ಯುದ್ಧಘೋಷ ಮಾಡದಂತೆ ತಡೆದದ್ದು ಅಮೆರಿಕ ಮತ್ತು ಹಲವರ ಆರ್ಥಿಕ ಹಿತಾಸಕ್ತಿಗಳು.
ಆ ಸೇನಾಜಮಾವಣೆಗೆ ಮೂರು ತಿಂಗಳ ಹಿಂದಷ್ಟೆ ಆಲ್‌ಖೈದಾ ಮತಾಂಧರು ಅಮೆರಿಕದ ಮೇಲೆ ದಾಳಿ ಮಾಡಿದ್ದರು. ತನ್ನ ದೇಶದ ಜನರ ಸ್ಥೈರ್ಯ ಕ್ಷೀಣಿಸಿ ಅದು ಆರ್ಥಿಕತೆಯ ಮೇಲೆ ಕೆಟ್ಟಪ್ರಭಾವ ಬೀರುವುದನ್ನು ಅಮೆರಿಕ ತಡೆಯಬೇಕಿತ್ತು. ಆಗ ಅದು ಇನ್ನೂ ಜಾಗತೀಕರಣದ ಲಾಭಗಳನ್ನು ಸವಿಯುತ್ತಿತ್ತು. ಭಾರತದಲ್ಲಿ ಅಮೆರಿಕದ ಅನೇಕ ಕಂಪನಿಗಳು ಹಣಹೂಡಿದ್ದವು. ಭಾರತ ಮತ್ತು ಪಾಕಿಸ್ತಾನ ಯುದ್ಧ ಆರಂಭವಾದರೆ ಈ ಕಂಪನಿಗಳಿಗೆ ನಷ್ಟವಾಗುವ ಸಾಧ್ಯತೆಗಳಿದ್ದವು. ಅತ್ತ ಪಾಕಿಸ್ತಾನದ ಸ್ನೇಹವನ್ನು ಕಳೆದುಕೊಳ್ಳುವ ಮತ್ತು ಇತ್ತ ಭಾರತದ ಆರ್ಥಿಕ ಹಿಂಜರಿತವನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿ ಅಮೆರಿಕ ಇರಲಿಲ್ಲ. ಅಮೆರಿಕಕ್ಕಷ್ಟೇ ಅಲ್ಲದೆ ಇತರ ಅನೇಕ ವಿಶ್ವರಾಷ್ಟ್ರಗಳಿಗೂ ಆ ಯುದ್ಧದಿಂದ ನಷ್ಟವಿತ್ತು. ಇನ್ನು ಆಗತಾನೆ ಪ್ರಾರಂಭವಾಗಿದ್ದ ತನ್ನ ಆರ್ಥಿಕ ಬೆಳವಣಿಗೆಯನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ಭಾರತವೂ ಇರಲಿಲ್ಲ. ಹಾಗಾಗಿ ಅಮೆರಿಕ ಮತ್ತಿತರ ರಾಷ್ಟ್ರಗಳು ಭಾರತ-ಪಾಕಿಸ್ತಾನಗಳೆರಡರ ಮೇಲೂ ಒತ್ತಡ ಹೇರಿದವು. ತನ್ನದೇ ಆರ್ಥಿಕ ಕಾರಣಗಳಿಗಾಗಿ ಭಾರತ ಆ ಮಾತಿಗೆ ಕಿವಿಗೊಟ್ಟಿತು. ಯುದ್ಧಕ್ಕೆ ಹೋಗಲು ಯಾವುದೇ ನೈತಿಕ ಬಲವಾಗಲಿ, ಅಮೆರಿಕದ ಬೆಂಬಲವಾಗಲಿ ಇಲ್ಲದಿದ್ದ ಪಾಕಿಸ್ತಾನವೂ ಸುಮ್ಮನಾಯಿತು.
ಅಮೆರಿಕದ ಪ್ರಸಿದ್ಧ ಅರ್ಥಶಾಸ್ತ್ರಜ್ಜನೊಬ್ಬನ ಪ್ರಕಾರ ಅಮೆರಿಕದ ಆರ್ಥಿಕ ಕ್ಷೇತ್ರದಲ್ಲಿ ಈಗ ಆಗುತ್ತಿರುವ ಘಟನೆಗಳು "ಶತಮಾನಕ್ಕೊಮ್ಮೆ ಘಟಿಸುವ" ಘಟನೆಗಳು. ಈ ದೇಶದ ಆಂತರಿಕ ಅರ್ಥವ್ಯವಸ್ಥೆಯೆ ಕುಸಿದು ಹೋಗುವ ವಿದ್ಯಮಾನಗಳು ಇಲ್ಲಿ ನಡೆಯುತ್ತಿವೆ. ತನ್ನ ದೇಶದ ಅರ್ಥವ್ಯವಸ್ಥೆಯನ್ನು ಕಾಪಾಡಿಕೊಳ್ಳಲು "ಮುಕ್ತ ಅರ್ಥವ್ಯವಸ್ಥೆ"ಯ ಅಮೆರಿಕದ ಸರ್ಕಾರ "ಸುಮಾರು 32 ಲಕ್ಷ ಕೋಟಿ ರೂಪಾಯಿ"ಗಳನ್ನು ಹೂಡಿ "ನಿಯಂತ್ರಿತ ಅರ್ಥವ್ಯವಸ್ಥೆ"ಯತ್ತ ನಡೆದಿದೆ. ಇದಕ್ಕೆ ದುಡ್ಡು ಹೊಂಚಲು ತನ್ನ ವಿದೇಶಾಂಗ ನೀತಿಯಲ್ಲಿ ಅಮೆರಿಕ ಯಾವಯಾವ ರಾಜಿಗಳನ್ನು ಮಾಡಿಕೊಳ್ಳುತ್ತದೆ ಎನ್ನುವುದೂ ಸಹ ವಿಶ್ವದ ಭವಿಷ್ಯವನ್ನು ನಿರ್ಧರಿಸುತ್ತದೆ. ಈಗಾಗಲೆ ಯಾವುದೇ ಬಾಧ್ಯತೆಯನ್ನು ತೋರಿಸದೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವ ರಷ್ಯಾ ಕೆಲವು ದುಷ್ಟ ರಾಷ್ಟ್ರಗಳಿಗೆ ಆಯುಧಗಳನ್ನು ಮಾರಲು ಆರಂಭಿಸಬಹುದು. ಅಮೆರಿಕವೂ ಅದನ್ನೆ ಮಾಡಬಹುದು. ಇನ್ನು ಜಾಗತಿಕ ಮಟ್ಟದಲ್ಲಿ ಇಲ್ಲಿಯವರೆಗೆ ಯಾವುದೆ ಪ್ರಬುದ್ಧತೆ ಮತ್ತು ನೈತಿಕ ನಾಯಕತ್ವ ನೀಡಿಲ್ಲದ ಚೀನಾ ತನ್ನ ಪ್ರಭಾವ ಮತ್ತು ಹತೋಟಿ ವಿಸ್ತರಿಸಿಕೊಳ್ಳುವ ಕೆಲಸಕ್ಕೆ ಕೈಹಾಕಬಹುದು.
ವಿಶ್ವಕ್ಕೆ ನೈತಿಕ ನಾಯಕತ್ವ ನೀಡುವ ನಿಟ್ಟಿನಲ್ಲಿ ಅಮೆರಿಕದ ಮುಂದಿನ ಅಧ್ಯಕ್ಷರುಗಳ ಬಗ್ಗೆಯೂ ನಂಬಿಕೆ ಇಡುವುದು ಕಷ್ಟವಾಗುತ್ತಿದೆ. ಎಲ್ಲಕ್ಕೂ ಬಲ ಮತ್ತು ಯುದ್ಧವೆ ಪರಿಹಾರ ಎನ್ನುವ ಮೆಕೈನ್-ಪೇಲಿನ್‌ರ ನಾಯಕತ್ವ ಪರಿಸ್ಥಿತಿಯನ್ನು ಮತ್ತೂ ಹದಗೆಡಿಸಿದರೆ ಮಾತುಕತೆ-ರಾಯಭಾರ ಎನ್ನುವ ಒಬಾಮ-ಬೈಡೆನ್ ನಾಯಕತ್ವ ಕೆಲವು ರೌಡಿ ರಾಷ್ಟ್ರಗಳ ಗೂಂಡಾಗಿರಿಗೆ ಹಾದಿ ನೀಡಬಹುದು. ಇವೆಲ್ಲವೂ ಬರಲಿರುವ ದಿನಗಳಲ್ಲಿ ಜಾಗತಿಕ ರಂಗದಲ್ಲಿ ಅರಾಜಕತ್ವ ಮತ್ತು ಯುದ್ಧದ ಕಾರ್ಮೋಡಗಳು ಕವಿಯಬಲ್ಲ ಸಾಧ್ಯತೆಗಳನ್ನು ತೋರಿಸುತ್ತಿದೆ.
ಆದರೆ ಇವೇ ಕಾರಣಗಳು ಮುಂದಿನ ದಿನಗಳಲ್ಲಿ ವಿಶ್ವಸಂಸ್ಥೆ ಮತ್ತು ಭಾರತದ ಪಾತ್ರಗಳನ್ನೂ, ಅವುಗಳ ನೈತಿಕ ನಾಯಕತ್ವವನ್ನೂ ವಿಸ್ತರಿಸಬಹುದು. ಆದರೆ ಸ್ವತಃ ಹುಸಿ-ರಾಷ್ಟ್ರೀಯವಾದಿಗಳ ಮತ್ತು ಉಗ್ರ-ಕೋಮುವಾದಿಗಳ ಕೈಗೆ ಜಾರುತ್ತಿರುವ ಭಾರತ ಆ ಮಟ್ಟದ ಬೌದ್ಧಿಕ ಮತ್ತು ನೈತಿಕ ನಾಯಕತ್ವ ನೀಡಬಲ್ಲುದೆ ಎನ್ನುವುದು ಸಂದೇಹದ ವಿಷಯ. ಛೇ, ಈ ಸಂದರ್ಭದಲ್ಲಿ ನೈತಿಕ ಮತ್ತು ಬೌದ್ಧಿಕ ಧೀಮಂತಿಕೆಯ ನೆಹರೂ ಇರಬೇಕಿತ್ತು. ವಿಶ್ವಕ್ಕೆ ನಾಯಕತ್ವ ನೀಡಬಹುದಾಗಿದ್ದ "ರಾಜರ್ಷಿ" (Philosopher King) ಅವರು.
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 26, 2008 ರ ಸಂಚಿಕೆಯಲ್ಲಿನ ಲೇಖನ.)
ಮತ್ತೆ ಇನ್ನೊಂದು ದೊಡ್ಡ ಊರಿನಲ್ಲಿ ಬಾಂಬ್‌ಗಳು ಸ್ಫೋಟಿಸಿವೆ. ಕಳೆದ ವಾರ ದೆಹಲಿಯಲ್ಲಿ ನಡೆದ ಸ್ಫೋಟಗಳಿಂದ ಇಲ್ಲಿಯವರೆಗೆ 21 ಜನ ಸತ್ತಿದ್ದಾರೆ. ಭಾರತದಲ್ಲಿನ ಪ್ರಜಾಪ್ರಭುತ್ವವನ್ನು ಮತ್ತು ಇಲ್ಲಿಯ ವೈವಿಧ್ಯತೆಯನ್ನು ಸಹಿಸದ ಕೆಲವು ವಿಕೃತ ಮನಸ್ಸಿನ ಜನ ಕೈಗೊಂಡ ದಾಳಿ ಇದು. ವಿಪರ್ಯಾಸ ಏನೆಂದರೆ, ಮತಾಂಧತೆ ಮತ್ತು ಜನಾಂಗದ್ವೇಷದಿಂದ ನರಳುವ ಈ ಗುಂಪಿನ ಪ್ರತಿ ಕಾರ್ಯವೂ ಅವರಂತಹುದೆ ಆಲೋಚನೆಗಳ ಇನ್ನೊಂದು ಗುಂಪಿಗೆ ಬಲವನ್ನು ನೀಡುತ್ತ್ತಿದೆ. ಆ ಮಟ್ಟಿಗೆ ಅವರ ಕೃತ್ಯಗಳಿಗೆ ದುಪ್ಪಟ್ಟು ವಿನಾಶಕಾರಿ ಬಲವಿದೆ. ಇಂತಹ ಘಟನೆ ಘಟಿಸುವ ಪ್ರತಿಸಲವೂ ದೇಶ ತಕ್ಕಷ್ಟು ಮಟ್ಟಿಗೆ ಅಸ್ಥಿರವೂ ಅನಾಗರಿಕವೂ ಆಗುತ್ತಿದೆ. ದೇಶ ಇಂತಹುದನ್ನು ತಡೆದುಕೊಳ್ಳಬಲ್ಲ ಬಲ ಕ್ಷೀಣಿಸುತ್ತಿದೆ.
ಈ ಸಂದರ್ಭದಲ್ಲಿ ನಮ್ಮ ಸರ್ಕಾರಗಳು ಕೋಮುವಾದವನ್ನು ಇಷ್ಟು ದಿನ ಎದುರಿಸಿದ್ದಕ್ಕಿಂತ ಬೇರೆ ರೀತಿಯಲ್ಲಿ ಎದುರಿಸದಿದ್ದರೆ ನಮ್ಮ ದೇಶದ ಭವಿಷ್ಯ ಇನ್ನೂ ಕರಾಳವಾಗಲಿದೆ. ಅದು ಅಪನಂಬಿಕೆಯಿಂದ, ಸಂಘರ್ಷಗಳಿಂದ, ಅಂತಃಕಲಹಗಳಿಂದ, ಭೀಭತ್ಸ ಘಟನೆಗಳಿಂದ ಕೂಡಲಿದೆ. ಈಗ ಘಟಿಸುತ್ತಿರುವ ಘಟನೆಗಳಿಂತ ಹೆಚ್ಚು ಪಾಲು ಮುಂದಕ್ಕೆ ಘಟಿಸುವ ಸಾಧ್ಯತೆಗಳಿವೆ. ಕಳೆದ ಒಂದು ವರ್ಷದಲ್ಲಿ ಆಗಿರುವ ಬಾಂಬ್ ಸ್ಫೋಟಗಳನ್ನು ಮತ್ತು ಕೋಮುಹಿಂಸಾಚಾರಗಳನ್ನು ಗಮನಿಸಿದರೆ ಸಾಕು, ಭಯೋತ್ಪಾದನೆ ಮತ್ತು ಕೋಮುವಾದದ ಸಮಸ್ಯೆಯನ್ನು ಮುಂದೂಡುವ ಸ್ಥಿತಿಯಲ್ಲಿ ಭಾರತೀಯ ಸಮಾಜ ಇಲ್ಲದಿರುವುದನ್ನು ಅದು ತೋರಿಸುತ್ತದೆ.
ನಮ್ಮ ದೇಶದ ಜನಸಂಖ್ಯೆಯಲ್ಲಿ ಶೇ. 13 ರಷ್ಟಿರುವ ಭಾರತೀಯ ಮುಸಲ್ಮಾನರು ನಮ್ಮದೇ ನೆಲದವರು. ಇವರಲ್ಲಿನ ಬಹುಪಾಲು ಜನ ನಾನಾ ಕಾರಣಗಳಿಗೆ ಹಿಂದೂ ಸಮಾಜದಿಂದ ಮುಸಲ್ಮಾನ ಮತಕ್ಕೆ ಮತಾಂತರವಾದವರು. ಇತರೆಲ್ಲರಂತೆ ಸಹಸ್ರಾರು ವರ್ಷಗಳಿಂದ ಭಾರತದ ನೆಲದಲ್ಲಿ ಬೇರು ಬಿಟ್ಟವರು. ಆದರೆ, ಭಾರತದ ಇವತ್ತಿನ ಸಂದರ್ಭದಲ್ಲಿ ತೀರಾ ಅಪನಂಬಿಕೆಯಿಂದ, ಪರಕೀಯತೆಯಿಂದ, ಬಡತನದಿಂದ, ರಾಜಕೀಯ ಮತ್ತು ಸಾಂಸ್ಕೃತಿಕ ನಾಯಕತ್ವದ ದಾರಿದ್ರ್ಯದಿಂದ, ತನ್ನದೇ ಮತದ ಪುರೋಹಿತಶಾಹಿಯಿಂದ ನರಳುತ್ತಿರುವ ದೊಡ್ಡ ಸಮುದಾಯ ಎಂದರೆ ಅದು ಈ ಮುಸಲ್ಮಾನ ಸಮುದಾಯ. ಇದನ್ನು ನಾವು ಕೇವಲ ಭಾರತೀಯ ಮುಸಲ್ಮಾನರ ದುರಂತ ಎನ್ನಲಾಗದು. ಅದು ನಿಜಕ್ಕೂ ಭಾರತದ ದುರಂತ. ಪ್ರತಿ ಏಳು ಭಾರತೀಯರಲ್ಲಿ ಒಬ್ಬ ಈ ಸಮುದಾಯಕ್ಕೆ ಸೇರಿದವನು. ಈ ಸಮುದಾಯದವರ ಹಿಂದುಳಿದಿರುವಿಕೆಯನ್ನು ಅವರ ಸ್ವಾತಂತ್ರ್ಯ ಮತ್ತು ಹಕ್ಕುಗಳಿಗೆ ತೊಂದರೆಯಾಗದಂತೆ ಸರಿಪಡಿಸುವ ಕರ್ತವ್ಯ ಇಡೀ ಭಾರತದ ಮೇಲಿದೆ. ತನ್ನದೇ ಜನರ ಹಿತಾಸಕ್ತಿ ಮತ್ತು ಹಕ್ಕುಗಳನ್ನು ಕಡೆಗಣಿಸುವ ದೇಶ ದೇಶವಲ್ಲ. ಅದೊಂದು ಪಟ್ಟಭದ್ರ ಸ್ವಾರ್ಥಿಗಳ ಒಕ್ಕೂಟ. ಅದು ನಾವಾಗಕೂಡದು.
ದಿಕ್ಕುಗೆಡಿಸುವ ಪರಿಸ್ಥಿತಿ
ಇವತ್ತಿನ ಭಾರತೀಯ ಹಿಂದೂ ಸಮುದಾಯದಲ್ಲಿ ಎರಡು ರೀತಿಯ ದೇಶಪ್ರೇಮಿ ಗುಂಪುಗಳಿವೆ. ಒಂದು ತಮ್ಮ ಹಿಂದೂ ಮತಪ್ರೇಮವನ್ನೇ ದೇಶಪ್ರೇಮ ಎಂದುಕೊಂಡ ಗುಂಪಾದರೆ ಇನ್ನೊಂದು ಮತದ ಹೊರತಾಗಿ ದೇಶದ ಬಗ್ಗೆ ಯೋಚಿಸುವ ಜಾತ್ಯತೀತರ ಗುಂಪು. ಒಟ್ಟಾರೆ ಭಾರತೀಯ ಸಮಾಜದ ಏಳಿಗೆಯ ಬಗ್ಗೆ ಯೋಚಿಸುವ ಈ ಜಾತ್ಯತೀತರ ಗುಂಪನ್ನು ಮುಸಲ್ಮಾನ ಪ್ರೇಮಿಗಳೆಂದು ಹಿಂದೂ ಮತಾಂಧರು ಬಿಂಬಿಸಿ ತಮ್ಮದೇ ನೈಜ ದೇಶಪ್ರೇಮ ಎಂದು ಸಾರುತ್ತಿದ್ದಾರೆ. ಮತಸಹಿಷ್ಣ್ಣುತೆಯ ಸಂದರ್ಭದಲ್ಲಿ "ಮುಸಲ್ಮಾನ ಪ್ರೇಮಿ" ಎನ್ನುವುದು ಕೆಟ್ಟ ಪದ ಅಲ್ಲದಿದ್ದರೂ ಇಸ್ಲಾಮಿಗೂ ಭಯೋತ್ಪಾದಕತೆಗೂ ಗಂಟುಬಿದ್ದಿರುವ ಈ ಸಂದರ್ಭದಲ್ಲಿ ಅದಕ್ಕೆ "ದೇಶದ್ರೋಹಿ" ಪಟ್ಟವಿದೆ. ಇದು ಎಂತಹ ದೇಶಪ್ರೇಮಿಯನ್ನೂ ಧೃತಿಗೆಡಿಸುವ ಪಟ್ಟ.
ಹೇಗೆ ಹಿಂದೂ ಮೂಲಭೂತವಾದಿಗಳು ಇಡೀ ಹಿಂದೂ ಸಮಾಜವನ್ನು ಪ್ರತಿನಿಧಿಸುವುದಿಲ್ಲವೊ ಹಾಗೆಯೆ ಇಸ್ಲಾಮ್ ಮೂಲಭೂತವಾದಿ ಭಯೋತ್ಪಾದಕರು ಭಾರತೀಯ ಮುಸಲ್ಮಾನರನ್ನು ಪ್ರತಿನಿಧಿಸುವುದಿಲ್ಲ ಹಾಗೆ ಪ್ರತಿನಿಧಿಸಿದ್ದರೆ ದೇಶ ಪ್ರತಿದಿನವೂ ಹೊತ್ತಿ ಉರಿಯುತ್ತಿತ್ತು. ಹಾಗಾಗಿ ಜಾತ್ಯತೀತ ಹಿಂದೂಗಳು ಇಸ್ಲಾಮ್ ಮತಾಂಧರ ಭಯೋತ್ಪಾದಕತೆಯ ಸಂದರ್ಭದಲ್ಲಿ ಭಯೋತ್ಪಾದಕ ಕೃತ್ಯವನ್ನಷ್ಟೆ ಖಂಡಿಸುತ್ತಾರೆ. ಒಬ್ಬರ ತಪ್ಪಿಗೆ ಇಡೀ ಸಮುದಾಯವನ್ನು ಹೊಣೆ ಮಾಡುವುದು ಅಮಾನವೀಯ ಎನ್ನುವ ಕನಿಷ್ಠ ಕಾಳಜಿಯಿಂದ ಇಸ್ಲಾಮ್ ಅನ್ನು ಹೊರಗಿಟ್ಟು ಟೀಕೆ ಮಾಡುತ್ತಾರೆ. ಆದರೆ ಭಯೋತ್ಪಾದಕರ ಕೃತ್ಯಕ್ಕೆ ಇಡೀ ಮುಸಲ್ಮಾನ ಸಮುದಾಯವನ್ನು ಗಲ್ಲಿಗೇರಿಸಬೇಕು ಎನ್ನುವ ಹಿಂದೂ ರಾಷ್ಟ್ರೀಯವಾದಿಗಳಿಗೆ ಇದು ಸಾಕಾಗುವುದಿಲ್ಲ. ಅದಕ್ಕೆ "ತುಷ್ಟೀಕರಣ"ದ ಲೇಪ ಹಚ್ಚುತ್ತಾರೆ. ಮುಸ್ಲಿಂ ವಿರೋಧಿ ಭಾವನೆಗಳ ಜೊತೆಜೊತೆಗೆ ಜಾತ್ಯತೀತ ವಿರೋಧಿ ಭಾವನೆಗಳನ್ನೂ ಸಾಮಾನ್ಯ ಜನತೆಯಲ್ಲಿ ಉದ್ಧೀಪಿಸುತ್ತಾರೆ. ಇದೇ ಸಂದರ್ಭದಲ್ಲಿ ಮುಸಲ್ಮಾನ ಸಮುದಾಯದಿಂದ ಬಲಿಷ್ಠವಾಗಿ ಮೂಡಿಬಂದಿಲ್ಲದ ವೈಚಾರಿಕ ಜಾತ್ಯತೀತ ನಾಯಕತ್ವದ ಕೊರತೆ ಸಹ ದೇಶದ ಜಾತ್ಯತೀತರ ಕೆಲಸವನ್ನು ಮತ್ತಷ್ಟು ಕಠಿಣ ಮಾಡುತ್ತಿದೆ.
ಇನ್ನು ನಮ್ಮ ದೇಶದ ಜಾತ್ಯತೀತ ರಾಜಕಾರಣಿಗಳ "ಪೊಲಿಟಿಕಲಿ ಕರೆಕ್ಟ್" ಮತ್ತು ಚುನಾವಣಾ ಕೇಂದ್ರಿತ ನಡವಳಿಕೆ ಎರಡೂ ಮತಗಳ ಮತಾಂಧರ ಬೆಂಕಿಗೆ ತುಪ್ಪ ಸುರಿಯುತ್ತಿದೆ. ಹಿಂದೂ ಮತಾಂಧತೆಯನ್ನು ಎದುರಿಸುವಾಗ ತೋರಿಸುವ ಅಲ್ಪಧೈರ್ಯವನ್ನೂ ಮುಸಲ್ಮಾನ ಮತಾಂಧತೆಯನ್ನು ಎದುರಿಸುವಾಗ ತೋರುತ್ತಿಲ್ಲ. ಇದು ಇಸ್ಲಾಮ್ ಮತಾಂಧರಿಗೆ ಕೆಲವು ರಹದಾರಿಗಳನ್ನು ಕೊಟ್ಟರೆ ಹಿಂದೂ ಮತಾಂಧರಿಗೆ ನೈತಿಕ ಬಲ ನೀಡುತ್ತಿದೆ.
ಮತೀಯ ಮೂಲಭೂತವಾದಕ್ಕೆ ಅನೇಕ ಕಾರಣಗಳಿವೆ. ಆದರೆ ಭಾರತದಲ್ಲಿ ಇಸ್ಲಾಮ್ ಮೂಲಭೂತವಾದಕ್ಕೆ ಬಲ ಸಿಗುತ್ತಿರುವುದು ಆ ಸಮುದಾಯದಲ್ಲಿನ ಅವಿದ್ಯೆ, ಅಜ್ಞಾನ, ಬಡತನ, ಮತ್ತು ಹೊರಗಿನ ಪ್ರಭಾವದಿಂದಾಗಿ. ಈ ಸಮುದಾಯದ ಬಹುಪಾಲು ಜನ ಹಿಂದೂ ಸಮಾಜದಲ್ಲಿನ ದಲಿತರಷ್ಟೆ ಬಡವರೂ, ಹಿಂದುಳಿದವರೂ ಆಗಿದ್ದಾರೆ. ಇದನ್ನು ಸರಿಪಡಿಸಲು ಅನೇಕ ಯೋಜನೆ ಮತ್ತು ಕಾನೂನುಗಳನ್ನು ತರಬೇಕಿದೆ. ಆದರೆ ಚುನಾವಣಾ ರಾಜಕಾರಣದಿಂದಾಗಿ ಮತ್ತು ದೇಶದಲ್ಲಿ ಬಲಪಡೆದುಕೊಳ್ಳುತ್ತಿರುವ ಮೂಲಭೂತವಾದದಿಂದಾಗಿ ಇದು ಆಗಬೇಕಾದಷ್ಟು ಆಗುತ್ತಿಲ್ಲ. ಇದರ ಜೊತೆಗೆ ಮುಲ್ಲಾ-ಮಸೀದಿ-ಪುರೋಹಿತಶಾಹಿಯ ಕಪಿಮುಷ್ಟಿಯಲ್ಲಿರುವ ಬಹುಪಾಲು ಇಸ್ಲಾಮ್ ಸಮುದಾಯವೂ ಸಾಕಷ್ಟು ಆಧುನಿಕವಾಗುತ್ತಿಲ್ಲ ಮತ್ತು ಸ್ಥಳೀಯವಾಗುತ್ತಿಲ್ಲ. ಸಾಚಾರ್ ಕಮಿಟಿಯ ಶಿಫಾರಸುಗಳ ಅನುಷ್ಠಾನಕ್ಕೆ ಆಗ್ರಹಿಸುವ ಬದಲು ಅದರ ಸಮುದಾಯ ನಾಯಕರು ಒಸಾಮಾ-ತಾಲಿಬಾನ್-ಸದ್ಧಾಮ್‌ಗಳ ಬೆಂಬಲಕ್ಕೆ ಜಾಥಾ ತೆಗೆಯುತ್ತಾರೆ. ಸ್ಥಳೀಯ ಭಾಷೆಗಳನ್ನು ಕಲಿತು ಕಾಯ್ದೆ-ಕಾನೂನು ಅರಿಯುವ ಬದಲು ಅವರಲ್ಲಿಯ ಬಡವರು ಉರ್ದು-ಅರಬ್ಬಿ ಕಲಿಯುತ್ತಾರೆ. ಇದೊಂದು ದಿಕ್ಕುಗೆಡಿಸುವ ಪರಿಸ್ಥಿತಿ.
ಶಿಕ್ಷಣದ ಹಕ್ಕು ಮತ್ತು ಶಾಲೆಗಳ ರಾಷ್ಟ್ರೀಕರಣ
ಕಳೆದ ಶತಮಾನದ ಭಾರತ ಬಡಭಾರತ. ದೇಶದ ಜನತೆಗೆ ಎರಡು ಹೊತ್ತಿನ ಊಟ ಒದಗಿಸುವುದೆ ಸರ್ಕಾರಕ್ಕೆ ಕಷ್ಟವಾಗಿದ್ದಾಗ ಪ್ರತಿ ಮಗುವಿಗೂ ಶಿಕ್ಷಣ ಒದಗಿಸುವುದು ಸರ್ಕಾರದ ಮೊದಲ ಆದ್ಯತೆ ಆಗಿರಲಿಲ್ಲ. ಅಂತಹ ಸಂದರ್ಭದಲ್ಲಿ ಧಾರ್ಮಿಕ ಸಂಸ್ಥೆಗಳು, ಮಠಗಳು, ಚರ್ಚುಗಳು, ಹಾಗು ವ್ಯಕ್ತಿಗಳು ಶಾಲೆಗಳನ್ನು ತೆರೆದು ದೊಡ್ಡ ಮಟ್ಟದ ಶೈಕ್ಷಣಿಕ ಕ್ರಾಂತಿ ಮಾಡಿದರು. ಆವತ್ತಿನ ಸಂದರ್ಭದಲ್ಲಿ ಅವರು ಮಾಡಿದ್ದು ದೇಶ ಕಟ್ಟುವ ಕೆಲಸ. ಆದರೆ ಈಗಿನ ಸಂದರ್ಭದಲ್ಲಿ ಈ ಶಾಲೆಗಳನ್ನು ರಾಷ್ಟ್ರೀಕರಣ ಮಾಡಿದರೆ ಅಷ್ಟರ ಮಟ್ಟಿಗೆ ಕೋಮುವಾದವನ್ನೂ ತಡೆಯಬಹುದು ಎನ್ನಿಸುತ್ತದೆ. ಯಾಕೆಂದರೆ, ಇವತ್ತು ಈ ಮಠಗಳು, ಕೋಮು ಸಂಘಟನೆಗಳು, ಮಸೀದಿಗಳು, ಚರ್ಚುಗಳು ನಡೆಸುತ್ತಿರುವ ಶಾಲೆಗಳಲ್ಲಿ ದೇಶದ ಸಾಮರಸ್ಯಕ್ಕೆ ಮತ್ತು ಜಾತ್ಯತೀತ ಸಿದ್ಧಾಂತಕ್ಕೆ ಪೂರಕವಾದ ಶಿಕ್ಷಣ ಸಿಗುತ್ತಿಲ್ಲ. ಜ್ಞಾನ ಮತ್ತು ವಿಜ್ಞಾನವನ್ನು ಕಲಿಯಬೇಕಾದ ಚಿಕ್ಕಮಕ್ಕಳು ವೇದ, ಅರೇಬಿಕ್ ಕುರಾನ್, ಬೈಬಲ್ ಗಾಸ್ಪೆಲ್‌ಗಳ ಬಾಯಿಪಾಠದ ಮೂಲಕ ಕೋಮುವಾದವನ್ನೂ ಕಲಿಯುತ್ತಿದ್ದಾರೆ. ತಮ್ಮ ಮತೀಯ ಹೆಚ್ಚುಗಾರಿಕೆಯ ಬಗ್ಗೆ ಉಪದೇಶ ಪಡೆದುಕೊಂಡೇ ಇಲ್ಲಿಂದ ಹೊರಬರುವ ವಿದ್ಯಾರ್ಥಿಗಳಲ್ಲಿ ತಮ್ಮ ಸಮುದಾಯ, ಮಠ, ಮತದ ಬಗ್ಗೆ ಪ್ರಶ್ನಿಸಲಾಗದ ನಾಯಿನಿಷ್ಠೆ ಇರುವ ಪರಿಸ್ಥಿತಿ ಇದೆ.
ಇವತ್ತಿನ ಸಂದರ್ಭದಲ್ಲಿ ಭಾರತ ಸರ್ಕಾರವೆ ದೇಶದ ಪ್ರತಿ ಮಗುವಿಗೂ ಶಿಕ್ಷಣ ಕೊಡುವ ಕೆಲಸ ಮಾಡಬಹುದಾಗಿದೆ. ಅಷ್ಟಿದ್ದರೂ ಕಳೆದ ಹಲವಾರು ತಿಂಗಳುಗಳಿಂದ ಕೇಂದ್ರ ಸರ್ಕಾರ "ಶಿಕ್ಷಣದ ಹಕ್ಕು" ಕಾಯಿದೆಯನ್ನು ಜಾರಿಗೊಳಿಸದೆ ಮುಂದಕ್ಕೆ ಹಾಕುತ್ತಿದೆ. ಕೇಂದ್ರ ಸರ್ಕಾರ ಈ ಕಾಯಿದೆಯನ್ನು ಎಷ್ಟು ಬೇಗ ತರುತ್ತದೊ ಅಷ್ಟು ಬೇಗ ನಮ್ಮ ದೇಶದ ಮಕ್ಕಳು ಕೋಮುವಾದಿಗಳ ವಿಷಪೂರಿತ ಸಿದ್ಧಾಂತದಿಂದ ತಪ್ಪಿಸಿಕೊಳ್ಳುವ ಅವಕಾಶ ಇದೆ. ಈ ಕಾಯಿದೆಗಾಗಿ ಭಾರತದ ಜಾತ್ಯತೀತ ಪ್ರಜೆಗಳು ಆಗ್ರಹಿಸಬೇಕಿದೆ.
ಪೊಲೀಸರ ದಕ್ಷತೆ ಮತ್ತು ಹಸ್ತಕ್ಷೇಪ
ದೇಶದಲ್ಲಿಯ ಇಸ್ಲಾಮ್-ಭಯೋತ್ಪಾದಕರನ್ನು ಮತ್ತು ಹಿಂದು-ಭಸ್ಮಾಸುರರನ್ನು ತಡೆಯಲು ಸರ್ಕಾರಗಳು ಅನೇಕ ತಕ್ಷಣದ ಮತ್ತು ದೀರ್ಘಕಾಲೀನ ಕ್ರಮಗಳನ್ನು ಕೈಗೊಳ್ಳಬೇಕಿದೆ. ಜಾತ್ಯತೀತ-ಪ್ರಜಾಪ್ರಭುತ್ವವಾದಿ-ವೈಜ್ಞಾನಿಕ ಶಿಕ್ಷಣ ಮತ್ತು ಬಡತನ ನಿವಾರಣೆಯ ಮೂಲಕ ಕೋಮುವಾದನ್ನು ತಡೆಯುವುದು ದೀರ್ಘಕಾಲೀನ ಪರಿಹಾರವಾದರೆ ದೇಶದ ಆಂತರಿಕ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದು ತಕ್ಷಣ ಮಾಡಬೇಕಾದ ಕೆಲಸ. ಆದರೆ ಇದು ಆಗುವ ಸಾಧ್ಯತೆ ಕಡಿಮೆ. ಈಗಾಗಲೆ ನಮ್ಮ ದೇಶದ ಪೊಲೀಸರು ಕೀಳರಿಮೆ, ರಾಜಕೀಯ ಹಸ್ತಕ್ಷೇಪ, ಮತ್ತು ಸಂಪನ್ಮೂಲಗಳ ಕೊರತೆಯಿಂದ ನರಳುತ್ತಿದ್ದಾರೆ. ಆರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಐಪಿಎಸ್ ಆಫಿಸರ್ ಒಬ್ಬರನ್ನು ಭೇಟಿ ಆಗಿದ್ದೆ. ಮಾತುಕತೆಯ ನಡುವೆ ನಾನೊಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಎಂದೆ. ಅಷ್ಟಕ್ಕೆ ಆತ, "ಐಪಿಎಸ್‌ನಲ್ಲಿ ನಾನು ಫಸ್ಟ್ ರ್‍ಯಾಂಕ್ ಬಂದಿದ್ದೆ; ಆದರೂ ನನಗೆ ಜುಜುಬಿ ಸಂಬಳ ಬರುತ್ತದೆ; ಈ ಸಾಫ್ಟ್‌ವೇರ್‌ನ ಹುಡುಗರು ನನಗಿಂತ ಹೆಚ್ಚಿಗೆ ಸಂಬಳ ಪಡೆಯುತ್ತಾರೆ; ನಾನೇನು ಕಮ್ಮಿ; ಈ ಸರ್ಕಾರಿ ಕೆಲಸಕ್ಕೆ ಸೇರಿಕೊಂಡು ಜೀವನ ಹಾಳಾಯಿತು;" ಹಾಗೆ ಹೀಗೆ ಎಂದು ಹುಚ್ಚನಂತೆ ಮಾತನಾಡಿದ್ದ. ಆತ ಬಹುಶಃ ಬೆಂಗಳೂರಿನ ನಂಬರ್-2 ಫೋಲಿಸ್ ಆಫಿಸರ್! ವೃತ್ತಿಯ ಮಹತ್ವ ಗೊತ್ತಿಲ್ಲದೆ ಕೇವಲ ಸಂಬಳದಿಂದ ತಮ್ಮ ಯೋಗ್ಯತೆ ಅಳೆದುಕೊಳ್ಳುವ ಇಂತಹವರಿಂದ ಬೆಂಗಳೂರು, ದೆಹಲಿ, ಹೈದರಾಬಾದುಗಳಲ್ಲಿ ಸುರಕ್ಷತೆ ಅಪೇಕ್ಷಿಸುವುದು ನಮ್ಮ ಹುಚ್ಚುತನ.
ಇನ್ನು ನಮ್ಮಲ್ಲಿಯ ರಾಜಕೀಯ ಹಸ್ತಕ್ಷೇಪ ಎಂತಹ ಪ್ರಾಮಾಣಿಕ ಪೊಲೀಸರನ್ನೂ ಸಿನಿಕರನ್ನಾಗಿ ಭ್ರಷ್ಟರನ್ನಾಗಿ ಮಾಡಿಬಿಡುತ್ತದೆ. ಇಲ್ಲದಿದ್ದರೆ ಕೋಮುದ್ವೇಷ ಹುಟ್ಟಿಸುವ ಆದಿಉಡುಪಿಯ ಬೆತ್ತಲೆ ಪ್ರಕರಣದಲ್ಲಿ ಪೊಲೀಸರು ನಿರ್ವೀರ್ಯರಾಗುತ್ತಿದ್ದರೆ? ಪದ್ಮಪ್ರಿಯ ಎಂಬ ಹೆಂಗಸನ್ನು ಆತ್ಮಹತ್ಯೆಗೆ ತಳ್ಳಿದ ಮನುಷ್ಯ ರಾಜಾರೋಷವಾಗಿ ಓಡಾಡಲು ಸಾಧ್ಯವಿತ್ತೆ? ಮುಗ್ಧರನ್ನು ಬಸ್ಸಿನಲ್ಲಿ ಕೂಡಿಹಾಕಿ ಸುಟ್ಟವರು ನಾಯಕರಾಗಲು ಸಾಧ್ಯವಿತ್ತೆ? ಇಂತಹ ಪ್ರತಿದಿನದ ಘಟನೆಗಳಿಗೂ ಪೊಲೀಸರ ದಕ್ಷತೆಯನ್ನು ಆಗ್ರಹಿಸಿದರೆ ಮಾತ್ರ ಆಗಾಗ್ಗೆ ಸಂಭವಿಸುವ ಮುಸಲ್ಮಾನ ಭಯೋತ್ಪಾದಕರ ಬಾಂಬು ದಾಳಿಗಳಿಂದಲೂ ನಮಗೆ ರಕ್ಷಣೆ ಸಿಗುತ್ತದೆ. ಇದನ್ನು ಭಾವಾವೇಶದಲ್ಲಿ ಪ್ರತಿಕ್ರಿಯಿಸುವ ಸಮಾಜ ಆಲೋಚಿಸಬೇಕಿದೆ.
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 19, 2008 ರ ಸಂಚಿಕೆಯಲ್ಲಿನ ಲೇಖನ.)
ಅಮೆರಿಕ ಎಂದ ತಕ್ಷಣ ಎಷ್ಟೋ ಸಲ ಅದೊಂದು ಅಂಕೆಶಂಕೆಯಿಲ್ಲದ ಮಹಾನ್ ಲಿಬರಲ್ ದೇಶ ಎನ್ನುವ ಕಲ್ಪನೆ ತಾನೆತಾನಾಗಿ ಬಂದುಬಿಡುತ್ತದೆ. ವಿಚ್ಚೇದನಗಳು, ಮರುಮದುವೆಗಳು, half-sisterಗಳು, hlaf-brotherಗಳು, ಸಿಂಗಲ್ ಮಾಮ್‌ಗಳು, ಸಮಾನತೆಗೆ ಹೋರಾಡುವ ಜನರು, ಪ್ರಜಾಪ್ರಭುತ್ವವಾದಿಗಳು; ಇವೆಲ್ಲ ಅಮೆರಿಕದ ಸಮಾಜದ ಬಗ್ಗೆ ನಮ್ಮಂತಹ ವಿದೇಶಿಯರಲ್ಲಿ ತಕ್ಷಣ ಮೂಡುವ ಚಿತ್ರಗಳು. ಆದರೆ, ಈ ಮುಂದುವರೆದ ದೇಶದಲ್ಲಿ ಕೋಮುವಾದಂತಹ ಸಂಕುಚಿತತೆ ಯಾವ ಹಂತದಲ್ಲಿ ಜೀವಂತವಾಗಿದೆ ಎನ್ನುವುದನ್ನು ನಮ್ಮ ಓದುಗರಿಗೆ ಪರಿಚಯಿಸಲು ಈ ಲೇಖನ.
ಈ ದೇಶವನ್ನು, ವಿಶೇಷವಾಗಿ ಇಲ್ಲಿಯ ಅಧ್ಯಕ್ಷೀಯ ಚುನಾವಣೆಗಳನ್ನು ಗಮನಿಸಿದಾಗ ಈ ದೇಶದ ಕಠೋರ ಸಂಪ್ರದಾಯವಾದ ಮತ್ತು ಕ್ರಿಶ್ಚಿಯನ್ ಬಲಪಂಥೀಯತೆ ಎದ್ದು ಕಾಣಿಸುವ ಅಂಶ. ಈ ಸಲದ ಅಧ್ಯಕ್ಷೀಯ ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳ ಹಿನ್ನೆಲೆ ಮತ್ತು ಇಲ್ಲಿಯ ಜನ ಮತ್ತು ಮೀಡಿಯ ಅದಕ್ಕೆ ಸ್ಪಂದಿಸುತ್ತಿರುವ ರೀತಿಯನ್ನೆ ನೋಡಿ. ಕ್ರಿಶ್ಚಿಯನ್ supremacy ಗೆ ತೊಂದರೆಯಾಗದಂತಹ ಇಲ್ಲಿನ ಬಹುಸಂಖ್ಯಾತ ಜನತೆಯ ಬಯಕೆಯನ್ನು ಅದು ತೋರಿಸುತ್ತದೆ.
ಬರಾಕ್ ಒಬಾಮನ ತಂದೆ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ್ದರೂ ಇಸ್ಲಾಮಿನ ಆಚಾರಗಳನ್ನು ಪಾಲಿಸುವ ಕಟ್ಟರ್ ಮುಸಲ್ಮಾನನಾಗಿರಲಿಲ್ಲ. ಆತನಿಗೆ ಒಟ್ಟು ಮೂವರು ಹೆಂಡತಿಯರು ಮತ್ತು ಮದುವೆಯ ಹೊರಗಿನ ಇನ್ನೊಂದು ಸಂಬಂಧವೂ ಇತ್ತು. ಆ ನಾಲ್ವರೂ ಹೆಂಗಸರಿಂದ ಆತನಿಗೆ ಮಕ್ಕಳಿದ್ದವು. ಅವರಲ್ಲಿ ಇಬ್ಬರು ಬಿಳಿಯ ಕ್ರಿಶ್ಚಿಯನ್ ಹೆಂಗಸರು. ಅವರಲ್ಲೊಬ್ಬಾಕೆ ಒಬಾಮನ ತಾಯಿ. ಆಕೆಯೇನೂ Practising ಕ್ರಿಶ್ಚಿಯನ್ ಆಗಿರಲಿಲ್ಲ. ನಾಸ್ತಿಕಳಾಗಿದ್ದಳು. ಜೊತೆಗೆ ಆಕೆಯ ಎರಡನೆಯ ಗಂಡನೂ ಇಸ್ಲಾಮ್ ಮತಕ್ಕೆ ಸೇರಿದ್ದ ಇಂಡೋನೇಷ್ಯಾದ ವ್ಯಕ್ತಿ. ಅವರಿಬ್ಬರಿಗೂ ಇಂಡೋನೇಷ್ಯಾದಲ್ಲಿ ಹುಟ್ಟಿದ ಹೆಣ್ಣುಮಗುವಿನ ಹೆಸರು ಮಾಯಾ. ಮಾಯಾ ಈಗ ಬೌದ್ಧ ಮತಾನುಯಾಯಿ.
ಒಬಾಮನ ತಾಯಿ ನಾಸ್ತಿಕಳಾಗಿದ್ದರೂ ತನ್ನ ಮಕ್ಕಳಿಗೆ ಬೈಬಲ್, ಹಿಂದೂ ಉಪನಿಷತ್‌ಗಳು, ಬೌದ್ಧ ಸೂಕ್ತಿ ಮುಂತಾದ ಹಲವಾರು ಮತಗಳ ಧಾರ್ಮಿಕ ಗ್ರಂಧಗಳನ್ನು ಓದಲು ಪ್ರೇರೇಪಿಸುತ್ತಿದ್ದಳಂತೆ. ಇಂತಹ ಅಸಂಪ್ರದಾಯಿಕ ವಾತಾವರಣದಲ್ಲಿ ಬೆಳೆದ ಬರಾಕ್ ಒಬಾಮ್ ತನ್ನ ಮೊಟ್ಟಮೊದಲ ಕೆಲಸ ಆರಂಭಿಸಿದ್ದು ಕಪ್ಪು ಕ್ರಿಶ್ಚಿಯನ್ನರ ಚರ್ಚುಗಳು ನಡೆಸುತ್ತಿದ್ದ ಸಂಘಟನೆಗೆ ಕೆಲಸ ಮಾಡುವುದರ ಮೂಲಕ. ಬಹುಶಃ ಅಲ್ಲಿಂದಲೆ ಆತನಿಗೆ ಕ್ರಿಶ್ಚಿಯನ್ ಸಂಪ್ರದಾಯಗಳ ಪರಿಚಯ ಆಗಿದ್ದಿರಬೇಕು. ಇಂತಹ ವೈವಿಧ್ಯಮಯ ಹಿನ್ನೆಲೆ ಇರುವುದರಿಂದಲೆ ಒಬಾಮ ಇವತ್ತು ಅಮೆರಿಕದ ಜನರಿಗೆ ತನ್ನ ಕ್ರಿಶ್ಚಿಯನ್ ಮತ ಮತ್ತು ಆ ಮತಕ್ಕೆ ತನ್ನ ನಿಷ್ಠೆಯನ್ನು ಆಗಾಗ ಗಟ್ಟಿಯಾಗಿ ಹೇಳುತ್ತಿರಬೇಕು. ಹಾಗೆ ಹೇಳಿದರೆ ಮಾತ್ರ ಆತನಿಗೆ ಅಮೆರಿಕದ ಅಧ್ಯಕ್ಷನಾಗುವ ಅವಕಾಶ ಇದೆ. ಇಲ್ಲಿ ಸ್ವಲ್ಪ ಹೆಚ್ಚುಕಮ್ಮಿ ಆದರೂ ಅದು ಉಲ್ಟಾ ಹೊಡೆಯುವ ಸಂಭವವೇ ಹೆಚ್ಚು. ಆತನ ಅಪ್ಪನ ಹಿನ್ನೆಲೆಯಿಂದಾಗಿ ಈಗಾಗಲೆ ಆತನನ್ನು ಇಸ್ಲಾಮಿಗೆ ಮತ್ತು ಭಯೋತ್ಪಾದಕತೆಗೆ ಗಂಟು ಹಾಕುವ ಕೆಲಸ ಹಲವಾರು ಬಾರಿ ನಡೆದಿದೆ. ಕೆಲವು ಮತೀಯ ಬಲಪಂಥೀಯ ಮೀಡಿಯಾದ ಆಕ್ಟಿವಿಸ್ಟ್‌ಗಳು ಅದನ್ನು ಈಗಲೂ ಪ್ರಯತ್ನಿಸುತ್ತಿದ್ದಾರೆ.
ಹಾಗಾಗಿಯೆ ಈ ವಿಷಯದಲ್ಲಿ ಒಬಾಮ ಬಹಳ ಚಾಲಾಕಿತನದಿಂದ ನಡೆದುಕೊಳ್ಳುತ್ತಿದ್ದಾನೆ. ಆತನ ಚಾಲಾಕಿತನಕ್ಕೆ ಆತ ತನ್ನ ತಾಯಿಯ ಬಗ್ಗೆ ಹೇಳಿರುವ ಮಾತುಗಳೆ ಸಾಕ್ಷಿ. ಆತನ ತಾಯಿಯ ಸಹಪಾಠಿಗಳ ಪ್ರಕಾರ ಆಕೆ ಪಕ್ಕಾ ನಾಸ್ತಿಕಳಾಗಿದ್ದಳು. ಆಕೆಯ ಮಗಳಾದ ಮಾಯಾ (ಒಬಾಮನ ಅರ್ಧ-ತಂಗಿ) ತನ್ನ ತಾಯಿ ನಾಸ್ತಿಕಳಾಗಿದ್ದಳು ಅನ್ನುವುದಕ್ಕಿಂತ ಯಾವುದನ್ನೂ ನಿರಾಕರಿಸದ ಅಜ್ಞೇಯತಾವಾದಿ (ಅಗ್ನಾಸ್ಟಿಕ್) ಆಗಿದ್ದಳು ಎನ್ನುತ್ತಾಳೆ. ಆದರೆ ಒಬಾಮ ತನ್ನ ಕ್ರೈಸ್ತ ಮತ ನಿಷ್ಠೆಯನ್ನು ಸಾಬೀತು ಮಾಡಲು ಹೇಳುವುದೇ ಬೇರೆ. "ನನ್ನ ತಾಯಿ ಕ್ಯಾನ್ಸಾಸ್ ರಾಜ್ಯದ ಕ್ರೈಸ್ತ ಹೆಂಗಸು. ನನ್ನನ್ನು ಬೆಳೆಸಿದ್ದು ನನ್ನಮ್ಮ. ಹಾಗಾಗಿಯೆ ನಾನು ಮೊದಲಿನಿಂದಲೂ ಕ್ರೈಸ್ತನೆ." ಎನ್ನುತ್ತಾನೆ! ಆತ ಈಗ ಪ್ರಾಕ್ಟಿಸಿಂಗ್ ಕ್ರಿಶ್ಚಿಯನ್ ಆಗಿದ್ದರೂ ಮೇಲಿನ ಮಾತು ಆತ ರಾಜಕೀಯ ಕಾರಣಗಳಿಗಾಗಿ, ಅಂದರೆ ಬಹುಸಂಖ್ಯಾತ ಕ್ರಿಶ್ಚಿಯನ್ನರನ್ನು ತೃಪ್ತಿ ಪಡಿಸಲು ಹೇಳುವ ಮಾತು ಎಂದು ಸಂದೇಹಿಸಿದರೆ ತಪ್ಪೇನೂ ಆಗಲಾರದು.
ಇನ್ನು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜಾನ್ ಮೆಕೈನ್ ಸಹ ಹೇಳಿಕೊಳ್ಳುವಂತಹ ಕಟ್ಟರ್ ಕ್ರಿಶ್ಚಿಯನ್ ಆಗಲಿ, ಏಕಪತ್ನಿವ್ರತಸ್ಥನಾಗಲಿ ಅಲ್ಲ. ಯುದ್ಧಖೈದಿಯಾಗಿ ಬಿಡುಗಡೆಯಾದ ಮೇಲೆ ಆತ ತನ್ನ ಮೊದಲ ಹೆಂಡತಿಯಿದ್ದರೂ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದ. ಅದು ಮದುವೆಯ ಮೇಲೆ ಪರಿಣಾಮ ಬೀರಿತು. ನಂತರ ತನ್ನ ಈಗಿನ ಹೆಂಡತಿಯನ್ನು (ಆತನಿಗಿಂತ 18 ವರ್ಷ ಚಿಕ್ಕವಳು) ಡೇಟ್ ಮಾಡಲು ಆರಂಭಿಸಿದ. ಆಕೆಯನ್ನು ಮದುವೆಯಾಗಲೆಂದೆ ತನ್ನ ಮೊದಲ ಹೆಂಡತಿಯಿಂದ ಆತ ವಿಚ್ಚೇದನ ಪಡೆದದ್ದು. ಜೊತೆಗೆ ಜಾನ್ ಮೆಕೈನ್ ತನ್ನ ರಿಪಬ್ಲಿಕನ್ ಪಕ್ಷದ ಬಲಪಂಥೀಯ ಕ್ರಿಶ್ಚಿಯನ್ನರೊಡನೆ ಹಲವಾರು ವಿಷಯಗಳಿಗೆ ಸಹಮತ ಹೊಂದಿಲ್ಲ. ಇನ್ನು ಅಮೆರಿಕದ ಸಾಮಾನ್ಯ ಜನತೆ ವಿಚ್ಚೇದನಗೊಂಡಿರುವ ಅಧ್ಯಕ್ಷನನ್ನು ಬೆಂಬಲಿಸಲು ಹಿಂದೆಮುಂದೆ ನೋಡುತ್ತಾರೆ. ಕಳೆದ ಬಾರಿ ಜಾನ್ ಕೆರ್ರಿಗೆ ಅದೂ ಒಂದು ನೆಗೆಟಿವ್ ಅಂಶವಾಗಿತ್ತು. ಇದೆಲ್ಲದರ ಜೊತೆಗೆ, ಜಾನ್ ಮೆಕೈನ್ ಒಂದು ರೀತಿ ನಮ್ಮ ವಾಜಪೇಯಿ ಇದ್ದ ಹಾಗೆ. ತನ್ನ ಪಕ್ಷದ "ಸಂಘ ಪರಿವಾರ"ದ ಪೂರ್ಣಮನಸ್ಸಿನ ಬೆಂಬಲ ಈತನಿಗೆ ಇಲ್ಲ.
ಇಲ್ಲಿಯ ಕ್ರಿಶ್ಚಿಯನ್ ಸಂಘ ಪರಿವಾರದವರು ಗರ್ಭಿಣಿಯಾದ ಹೆಂಗಸು ಯಾವುದೇ ಕಾರಣಕ್ಕೂ ಗರ್ಭಪಾತ ಮಾಡಿಸಬಾರದು ಎನ್ನುತ್ತಾರೆ. ಅಪ್ರಾಪ್ತ ವಯಸ್ಸಿನ ಹುಡುಗಿ ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿ ಆಗಿಬಿಟ್ಟು ಆಕೆಗೆ ಗರ್ಭಪಾತ ಇಷ್ಟವಿದ್ದರೂ ಅಂತಹ ಗರ್ಭಪಾತಕ್ಕೂ ಅವಕಾಶ ಇರಬಾರದು ಎಂದು ವಾದಿಸುತ್ತಾರೆ ಅವರು. ಆದರೆ ಅದಕ್ಕೆ ಮೆಕೈನ್‌ನ ಪೂರ್ಣ ಬೆಂಬಲ ಇರಲಿಲ್ಲ. ಗರ್ಭವನ್ನು ಉಳಿಸಿಕೊಳ್ಳುವ ಇಲ್ಲವೆ ಇಳಿಸಿಕೊಳ್ಳುವ ಆಯ್ಕೆ ಹೆಂಗಸಿಗೆ ಇರಬೇಕು ಎಂಬುದರ ಪರ ಇರುವ ಡೆಮಾಕ್ರಾಟರಂತೆ ಜಾನ್ ಮೆಕೈನ್ ಸಹ. ಹಲವಾರು ಕಾಯಿಲೆಗಳಿಗೆ ಮದ್ದು ಹುಡುಕಬಹುದು ಎಂದು ಭಾವಿಸುವ ಭ್ರೂಣದ ಜೀವಕೋಶಗಳ ಸಂಶೋಧನೆ (embryonic stem cell research) ಸಹ ಚರ್ಚು ಪರಿವಾರದವರಿಗೆ ಇಷ್ಟವಾಗದ ವಿಷಯ. ಆದರೆ ಇದಕ್ಕೆ ಡೆಮಾಕ್ರಾಟರ ಮತ್ತು ಉದಾರವಾದಿಗಳ ಬೆಂಬಲ ಇದೆ. ಜಾನ್ ಮೆಕೈನ್‌ನದೂ ಸಹ.
ಈ ಚುನಾವಣೆಯ ಸಮಯದಲ್ಲಿ ತನಗೆ ಸಿಗದೆ ಹೋಗುತ್ತಿದ್ದ ಈ ಸಂಘ ಪರಿವಾರದ ಬೆಂಬಲ ಪಡೆಯಲು ಮೆಕೈನ್ ಮಾಡಿದ ಕೆಲಸ ಸ್ಯಾರಾ ಪೇಲಿನ್ ಎಂಬ ಐದು ಮಕ್ಕಳ ತಾಯಿಯನ್ನು ತನ್ನ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿಕೊಂಡಿದ್ದು. ಇದು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಯತ್ನ. ಒಂದು ಹಿಲ್ಲರಿ ಕ್ಲಿಂಟನ್‌ಳನ್ನು ಬೆಂಬಲಿಸುತ್ತಿದ್ದ ಸ್ತ್ರೀಯರನ್ನು ಸೆಳೆಯುವ ಪ್ರಯತ್ನವಾದರೆ ಮತ್ತೊಂದು ಸಂಪ್ರದಾಯವಾದಿಗಳನ್ನು ಸೆಳೆಯುವುದು. ಈಕೆಯ ಎರಡು ವೈಯಕ್ತಿಕ ಸಂಗತಿಗಳಂತೂ ಸಂಪ್ರದಾಯವಾದಿ, pro-life ಕ್ರೈಸ್ತ ಮೂಲಭೂತವಾದಿಗಳಲ್ಲಿ ರೋಮಾಂಚನ ಹುಟ್ಟಿಸಿಬಿಟ್ಟಿದೆ.
44 ವರ್ಷದ ಈ ಅಲಾಸ್ಕಾ ರಾಜ್ಯಪಾಲೆಗೆ ಕೇವಲ ಐದು ತಿಂಗಳ ಹಿಂದೆ ಗಂಡು ಮಗುವೊಂದು ಹುಟ್ಟಿತು. ಆ ಮಗು ಗರ್ಭದಲ್ಲಿದ್ದಾಗಲೆ ಅದಕ್ಕೆ ಡೌನ್ ಸಿಂಡ್ರೋಮ್ ಕಾಯಿಲೆ ಇದೆ ಎನ್ನುವುದು ಗೊತ್ತಾಗಿತ್ತು. ಡೌನ್ ಸಿಂಡ್ರೋಮ್ ಒಂದು ರೀತಿಯ ಮಾನಸಿಕ ಮತ್ತು ದೈಹಿಕ ವಿಕಲತೆಗಳ ಕಾಯಿಲೆ. ಸಾಮಾನ್ಯವಾಗಿ ನಲವತ್ತಕ್ಕಿಂತ ಹೆಚ್ಚಿನ ವಯಸ್ಸಾದ ಹೆಂಗಸರಿಗೆ ಹುಟ್ಟುವ ಮಕ್ಕಳಿಗೆ ಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚು. ಹುಟ್ಟಲಿರುವ ಮಗುವಿಗೆ ಆ ಕಾಯಿಲೆ ಇದೆಯೆ ಇಲ್ಲವೆ ಎನ್ನುವುದನ್ನು ಪರೀಕ್ಷೆಗಳ ಮೂಲಕ ತಿಳಿದುಕೊಳ್ಳಬಹುದು. ಅಂತಹ ಕಾಯಿಲೆ ಏನಾದರೂ ತಮಗೆ ಹುಟ್ಟಲಿರುವ ಮಗುವಿಗೆ ಇದೆ ಎಂದಾದರೆ ಗರ್ಭಪಾತ ಮಾಡಿಸಿಕೊಳ್ಳುವ ಅವಕಾಶ ಈ ದೇಶದಲ್ಲಿ ತಾಯಂದಿರಿಗೆ ಇದೆ. ಆದರೆ ಸ್ಯಾರಾ ಪೇಲಿನ್ ಗರ್ಭಪಾತ ಮಾಡಿಸಿಕೊಳ್ಳಲಿಲ್ಲ. ಆಕೆಯ ಈ ತೀರ್ಮಾನವೆ "ಜೀವ ದೇವರ ಸೃಷ್ಟಿ, ಅಮೂಲ್ಯ," ಎನ್ನುವ ಕ್ರಿಶ್ಚಿಯನ್ನರಲ್ಲಿ ರೋಮಾಂಚನ ಮೂಡಿಸಿರುವುದು. ಇದರ ಜೊತೆಗೆ ಆಕೆಯ 17 ವರ್ಷದ ಅಪ್ರಾಪ್ತ ವಯಸ್ಸಿನ ಮಗಳು ಗರ್ಭವತಿ ಆಗಿಬಿಟ್ಟಿರುವ ವಿಷಯವೂ ಆಕೆಗೆ ಅನುಕೂಲವಾಗಿ ಪರಿಣಮಿಸಿಬಿಟ್ಟಿದೆ. ತನ್ನ ಮಗಳು ಗರ್ಭಿಣಿ ಆಗಿದ್ದಾಳೆಂತಲೂ, ಆಕೆ ಗರ್ಭಪಾತ ಮಾಡಿಸಿಕೊಳ್ಳುವುದಿಲ್ಲ, ಬದಲಿಗೆ ಮಗುವಿನ ತಂದೆಯನ್ನು ಇಷ್ಟರಲ್ಲೆ ಮದುವೆಯಾಗಲಿದ್ದಾಳೆಯೆಂತಲೂ ಸ್ಯಾರಾ ಪೇಲಿನ್ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೇಲೆ ಬಹಿರಂಗ ಪಡಿಸಿದಳು. ಆಕೆಯ ಈ ಸದ್ಯದ ಸ್ಥಿತಿಯಲ್ಲಿ ಡೆಮೊಕ್ರಾಟರೇನಾದರೂ ಇದ್ದುಬಿಟ್ಟಿದ್ದರೆ ಸಂಪ್ರದಾಯವಾದಿಗಳು ಅವರನ್ನು ಇಷ್ಟೊತ್ತಿಗೆ ಮುಕ್ಕಿ ಬಿಡುತ್ತಿದ್ದರು. ಅದರೆ ಈಗ ಸ್ಯಾರಾ ಪೇಲಿನ್ ಹೇಳುವಂತೆ ಮಾಡುವವಳು, ತಮ್ಮ ನಂಬಿಕೆಗಳೆ ಅವಳವೂ ಸಹ, ಅದಕ್ಕೆ ಆಕೆಯ ಈ ತೀರ್ಮಾನಗಳೆ ಸಾಕ್ಷಿ ಎಂದು ಹೆಮ್ಮೆಯಿಂದ ಸಾರುತ್ತಿದ್ದಾರೆ!
ಅಮೆರಿಕವೆಂಬ ಮುಂದುವರೆದ ದೇಶದಲ್ಲಿ ಕೋಮುವಾದ ಮತ್ತು ಸಂಪ್ರದಾಯವಾದ ಜೀವಂತವಾಗಿರುವುದಕ್ಕೆ ಮತ್ತು ಅದು ಚುನಾವಣೆಗಳಲ್ಲಿ ಬೀರುವ ಪ್ರಭಾವಕ್ಕೆ ಇವೆಲ್ಲ ಕುರುಹುಗಳು.
ಮೀಡಿಯ ಮತ್ತು ಕೋಮುವಾದ :
ತಮಗೆ ಆಗುವ ಅನುಭವ ಹಾಗು ಹೆಚ್ಚಿನ ಹೊರಸಂಪರ್ಕದಿಂದಾಗಿ ಸಾಮಾನ್ಯವಾಗಿ ಮೀಡಿಯಾದವರು ತಮ್ಮ ಸಮಕಾಲೀನ ಸಮಾಜಕ್ಕಿಂತ ಮುಂದುವರೆದಿರುತ್ತಾರೆ. ಸ್ವಲ್ಪ ಹೆಚ್ಚಿಗೇ ಉದಾರವೂ ಪ್ರಗತಿಪರವೂ ಆಗಿರುತ್ತಾರೆ. ಆದರೆ ಎಲ್ಲ ಮೀಡಿಯಾದವರೂ ಹಾಗೆ ಅಲ್ಲ. ರೂಪರ್ಟ್ ಮುರ್ಡಾಕ್ ಎನ್ನುವ ಸಹಸ್ರಕೋಟ್ಯಾಧಿಪತಿ ನಡೆಸುವ ಫಾಕ್ಸ್ ನ್ಯೂಸ್ ಅಮೆರಿಕದ ಕ್ರೈಸ್ತ ಬಲಪಂಥೀಯರ "ಪಾಂಚಜನ್ಯ". ನಮ್ಮ ರಾಜ್ಯದ ಕೆಲವು ಮುರ್ಡಾಕ್ ಅಭಿಮಾನಿ ಪತ್ರಿಕೆಗಳಲ್ಲಿ ಕಾಣಿಸುವ ಹಿಂದೂ ಮತೀಯವಾದದಂತಹುದೆ ಮತೀಯವಾದ ಈ ಚಾನೆಲ್‌ನಲ್ಲಿ ಕಾಣಿಸುತ್ತದೆ. ತಮಗಾಗದ ಎಡಪಂಥೀಯ ಡೆಮಾಕ್ರಾಟರ ಬಗ್ಗೆ ಈ ಚಾನೆಲ್‌ನ ಆಂಕರ್‌ಗಳು ಬಳಸುವ ಭಾಷೆ ಮತ್ತು ಅವರು ಮಾಡುವ witch-hunt ಹೇಸಿಗೆ ಹುಟ್ಟಿಸುತ್ತದೆ. ಕಳೆದ ವಾರದಿಂದೀಚೆಗೆ ಈ ಚಾನೆಲ್‌ನಲ್ಲಿ ಕಾಣಿಸುವ ಕಟ್ಟರ್‌ಗಳೆಲ್ಲ ಆಡುತ್ತಿರುವ ಮಾತು, "ನಮ್ಮ ದೇಶದ ಲಿಬರಲ್ ಮೀಡಿಯ ಕಳೆದ ಒಂದೂವರೆ ವರ್ಷದಲ್ಲಿ ಬರಾಕ್ ಒಬಾಮನ ಬಗ್ಗೆ ಮಾಡಿರುವ ತನಿಖಾ ವರದಿಗಳಿಗಿಂತ ಹೆಚ್ಚಿನ ತನಿಖೆಯನ್ನು ಕೇವಲ ಒಂದು ವಾರದಲ್ಲೆ ಸ್ಯಾರಾ ಪೇಲಿನ್ ಬಗ್ಗೆ ಮಾಡಿಬಿಟ್ಟಿದ್ದಾರೆ. ನಾಚಿಕೆಗೇಡು. ಕೀಳುಮಟ್ಟ." ರಿಪಬ್ಲಿಕನ್ ಪಕ್ಷದ ಸಮಾವೇಶದಲ್ಲಂತೂ ಮೂಲಭೂತವಾದಿಗಳು ಮಾತುಮಾತಿಗೆ ಮಾಧ್ಯಮದವರನ್ನು ಹಂಗಿಸುತ್ತಿದ್ದರು.
ಈ ಫಾಕ್ಸ್ ನ್ಯೂಸ್ ಬಿಟ್ಟು ಇಲ್ಲಿಯ ಬಹುತೇಕ ಮುಖ್ಯವಾಹಿನಿ ಚಾನಲ್‌ಗಳು ಜಾತ್ಯತೀತತೆಗೆ ಮತ್ತು ಉದಾರವಾದಕ್ಕೆ ಒತ್ತು ಕೊಡುತ್ತವೆ. ಆ ಕಾರಣಕ್ಕಾಗಿಯೆ ಈ ಚುನಾವಣೆಯಲ್ಲಿ ಬಹುಪಾಲು ಚಾನೆಲ್‌ಗಳು ಒಬಾಮ ಪರ ಇರುವಂತೆ ಕಾಣಿಸುತ್ತವೆ. ಆದರೆ ಅವರು ಸಹ ಕೆಲವೊಮ್ಮೆ ಬಹಳ ಎಚ್ಚರಿಕೆ ತೆಗೆದುಕೊಳ್ಳುತ್ತಾರೆ. ಒಂದು ಲಿಬರಲ್ ಎನ್ನಬಹುದಾದ ಚಾನಲ್ ಸಹ ಒಬಾಮ ಇಂಡೋನೇಷ್ಯಾದಲ್ಲಿ ಒಂದೆರಡು ವರ್ಷ ಓದಿದ ಶಾಲೆಯನ್ನು ತೋರಿಸಿ, "ಇದು ಬಹುಪಾಲು ಮುಸಲ್ಮಾನರೆ ಬರುವ ಶಾಲೆ. ಆದರೆ ಇದು ಮುಲ್ಲಾಗಳು ನಡೆಸುವ ಮದರಸಾ ಅಲ್ಲ ಎನ್ನುವುದನ್ನು ನಾವು ಖಚಿತ ಪಡಿಸಿಕೊಂಡಿದ್ದೇವೆ!" ಎಂದು ವರದಿ ಮಾಡುತ್ತದೆ. ಈ ದೇಶದ ಬಹುಸಂಖ್ಯಾತ ಕ್ರೈಸ್ತರ ಹಮ್ಮಿಗೆ ಪೆಟ್ಟಾಗದಂತೆ ಅವರೂ ಎಷ್ಟು ಮುಂಜಾಗರೂಕತೆ ವಹಿಸುತ್ತಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ.
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 12, 2008 ರ ಸಂಚಿಕೆಯಲ್ಲಿನ ಲೇಖನ.)
ಕಾಲ್ಪನಿಕ ಕತೆಗಳನ್ನು ಬರೆಯುವ ಕತೆಗಾರರನ್ನೂ ಮೀರಿಸುವಂತಹ ಅದ್ಭುತವಾದ ಐತಿಹಾಸಿಕ ಸಂದರ್ಭದಲ್ಲಿ ಇವತ್ತು ಅಮೆರಿಕ ಬಂದು ನಿಂತುಬಿಟ್ಟಿದೆ. ಈ ದೇಶದ ಕೋಟ್ಯಾಂತರ ಜನರು ಮತ್ತು ಕೆಲವು ಅರ್ಹ ವ್ಯಕ್ತಿಗಳು ಸೇರಿಕೊಂಡು ಈ ಇತಿಹಾಸ ನಿರ್ಮಿಸ ಹೊರಟಿದ್ದಾರೆ. ಈಗಾಗಲೆ ಒಂದು ಹಂತದ ಇತಿಹಾಸ ನಿರ್ಮಾಣವಾಗಿ ಹೋಗಿದೆ. ಕೇವಲ ನಲವತ್ತು-ಐವತ್ತು ವರ್ಷಗಳ ಹಿಂದೆ ಅಮೆರಿಕದ ಕೆಲವು ದಕ್ಷಿಣ ರಾಜ್ಯಗಳ ರೆಸ್ಟಾರೆಂಟ್‌ಗಳಿಗೆ, ಟಾಯ್ಲೆಟ್‌ಗಳಿಗೆ, ಬಸ್ಸಿಗೆ ಕಾಯುವ ಕೋಣೆಗಳಿಗೆ, ಮತ್ತೂ ಇನ್ನೂ ಅನೇಕ ಸಾರ್ವಜನಿಕ ಸ್ಥಳಗಳಿಗೆ ಯಾವೊಬ್ಬ ಕಪ್ಪು ಮನುಷ್ಯನಿಗೂ ಪ್ರವೇಶವಿರಲಿಲ್ಲ. ಬಿಳಿಯರಿಗೇ ಒಂದು ಜಾಗ, ಕರಿಯರಿಗೇ ಒಂದು ಜಾಗ ಎಂದು ಆಗ ಬೇರ್ಪಡಿಸಲಾಗಿತ್ತು. ಶಾಲಾಕಾಲೇಜುಗಳೂ ಅಷ್ಟೆ. ಬಸ್ಸಿನಲ್ಲಿ ಯಾರಾದರೂ ಬಿಳಿಯ ಸ್ತ್ರೀ/ಪುರುಷ ಬಂದರೆ ಅವರಿಗೆ ಕರಿಯರು ಎದ್ದು ಸೀಟು ಬಿಡಬೇಕಿತ್ತು. ಬಿಳಿಯ ಕ್ರಿಶ್ಚಿಯನ್ನರ ಮತಾಂಧ ಗುಂಪಾದ ಕೂ ಕ್ಲಕ್ಸ್ ಕ್ಲಾನ್ (KKK) ಇನ್ನೂ ಕೆಲವೆಡೆ ಸಕ್ರಿಯವಾಗಿತ್ತು. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ನೇತೃತ್ವದಲ್ಲಿ ನಾಗರಿಕ ಹಕ್ಕುಗಳ ಹೋರಾಟ ನಡೆಯುತ್ತಿದ್ದಾಗ ಕೆಕೆಕೆ ಮತಾಂಧರು ಕೆಲವು ಕಡೆ ಕರಿಯರನ್ನು ಮತ್ತು ಚಳವಳಿಕಾರರನ್ನು ಮರಕ್ಕೆ ನೇತು ಹಾಕಿ ನೇಣು ಬಿಗಿಯುತ್ತಿದ್ದರು. ಕರಿಯರನ್ನು ಬೆದರಿಸಲು ಅವರುಗಳ ಮನೆಯ ಮುಂದೆ ಶಿಲುಬೆ ಸುಡುತ್ತಿದ್ದರು. ಆಗ ಅಮೆರಿಕದ ಜನಸಂಖ್ಯೆಯಲ್ಲಿ ಶೇ. 14 ರಷ್ಟಿದ್ದ ಕಪ್ಪು ಜನಾಂಗದ ಬಹುಪಾಲು ಜನರು ಮತದಾರರ ಪಟ್ಟಿಯಲ್ಲಿಯೇ ಇರಲಿಲ್ಲ.
ಆದರೆ ಕಳೆದ ಐವತ್ತು ವರ್ಷಗಳಲ್ಲಿ ಆಗಿರುವ ಬದಲಾವಣೆ ನೋಡಿ. ತಮ್ಮ ಹಿಂದಿನ ತಲೆಮಾರಿನ ವರ್ಣಭೇದ, ಅಸಮಾನತೆ, ಜನಾಂಗೀಯದ್ವೇಷ ಮುಂತಾದ ಕೀಳು ಸಂಗತಿಗಳನ್ನೆಲ್ಲ ದಾಟಿಕೊಂಡು ಒಬ್ಬ ಕಪ್ಪು ಮನುಷ್ಯನನ್ನು ಅಮೆರಿಕದ ಅಧ್ಯಕ್ಷನನ್ನಾಗಿ ಮಾಡುವ ಐತಿಹಾಸಿಕ ಸಂದರ್ಭಕ್ಕೆ ಇವತ್ತು ಅಮೆರಿಕದ ಬಹುಪಾಲು ಜನತೆ ಸಾಗಿ ಬಂದುಬಿಟ್ಟಿದ್ದಾರೆ.
ಅನೇಕ ವಿಚಾರಗಳಿಗೆ ಬರಾಕ್ ಒಬಾಮ ಅಮೆರಿಕದ ಇತರ ಟಿಪಿಕಲ್ ಕಪ್ಪು ಜನಾಂಗದವರಂತೆ ಅಲ್ಲ. ಒಬಾಮಾನ ತಾಯಿ ಬಿಳಿಯ ಹೆಂಗಸು. ಆಕೆ ಇನ್ನೂ ಹದಿನೆಂಟರ ಹರೆಯದಲ್ಲಿದ್ದಾಗಲೆ ಸ್ಪಷ್ಟ ಆಲೋಚನೆಗಳಿದ್ದ, ವರ್ಣಭೇದವನ್ನು ನಿರಾಕರಿಸುತ್ತಿದ್ದ ನಾಸ್ತಿಕ ಯುವತಿ. ಫೆಸಿಫಿಕ್ ಮಹಾಸಾಗರದಲ್ಲಿರುವ ದ್ವೀಪರಾಜ್ಯ ಹವಾಯಿಯಲ್ಲಿ ಆಕೆ ಕೀನ್ಯಾದಿಂದ ಬಂದಿದ್ದ ಒಬ್ಬ ಕರಿಯ ವಿದ್ಯಾರ್ಥಿಯನ್ನು ಸಂಧಿಸಿದ್ದು. ಆತನ ಹೆಸರು ಬರಾಕ್ ಹುಸೇನ್ ಒಬಾಮ. ಪರಿಚಯ ಸ್ನೇಹಕ್ಕೆ ಪ್ರೇಮಕ್ಕೆ ತಿರುಗಿತು. ಆಕೆ ಇನ್ನೂ ಇಪ್ಪತ್ತು ವರ್ಷ ವಯಸ್ಸು ದಾಟುವ ಮುಂಚೆಯೆ ಆತನ ಹೆಂಡತಿಯಾಗಿದ್ದಳು. ಇಂತಹ ಅಪರೂಪದ ದಾಂಪತ್ಯಕ್ಕೆ ಹುಟ್ಟಿದವನು ಬರಾಕ್ ಒಬಾಮ.
ಕೀನ್ಯಾದಿಂದ ಅಮೆರಿಕಕ್ಕೆ ಸ್ಕಾಲರ್‌ಶಿಪ್ ಮೇಲೆ ಬಂದಿದ್ದ ಒಬಾಮ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪಶ್ಚಿಮದ ಹವಾಯಿಯಿಂದ ಪೂರ್ವದ ಹಾರ್ವರ್ಡ್‌ಗೆ ಒಬ್ಬನೆ ಹೋದ. ಐದಾರು ಸಾವಿರ ಮೈಲುಗಳ ದೂರ ಸಂಸಾರವನ್ನೂ ಬೇರ್ಪಡಿಸಿತು. ಹೆಂಡತಿಗೆ ವಿಚ್ಚೇದನ ನೀಡಿದ ಹಿರಿಯ ಒಬಾಮ ತನ್ನ ವಿದ್ಯಾಭ್ಯಾಸದ ನಂತರ ತಾಯ್ನಾಡಿಗೆ ಹಿಂದಿರುಗಿದ. ಹೀಗೆ ಅಪ್ಪನ ಪ್ರೀತಿ ಮತ್ತು ಒಡನಾಟವನ್ನು ಅನುಭವಿಸದೆ ತನ್ನ ತಾಯಿ ಮತ್ತು ಅಜ್ಜಅಜ್ಜಿಯರೊಂದಿಗೆ ಕಿರಿಯ ಒಬಾಮ ಬೆಳೆದ. ಮಗನಿಗೆ ಆರು ವರ್ಷವಾಗಿದ್ದಾಗ ಒಬಾಮಾನ ತಾಯಿ ಇಂಡೋನೇಷ್ಯಾದ ವ್ಯಕ್ತಿಯೊಬ್ಬನನ್ನು ಮದುವೆ ಮಾಡಿಕೊಂಡು ಆತನೊಂದಿಗೆ ಇಂಡೋನೇಷ್ಯಾಕ್ಕೆ ಹೋದಳು. ಮಗ ಆಕೆಯನ್ನು ಹಿಂಬಾಲಿಸಿದ. ಆದರೆ ಅಲ್ಲಿ ಮೂರ್ನಾಲ್ಕು ವರ್ಷ ಕಳೆದ ನಂತರ ಮಗನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ತಾಯಿ ಒಬಾಮನನ್ನು ತನ್ನ ಪೋಷಕರ ಬಳಿಗೆ ಹವಾಯಿಗೆ ಕಳುಹಿಸಿಬಿಟ್ಟಳು. ಮುಂದಕ್ಕೆ ಕಾಲೇಜಿಗೆ ಹೋಗುವ ತನಕವೂ ಆತ ಅಜ್ಜಅಜ್ಜಿಯರ ಆರೈಕೆಯಲ್ಲಿ ಬೆಳೆದ.
ಶಾಲಾ ದಿನಗಳಲ್ಲಿ ಅಷ್ಟೇನೂ ಹೇಳಿಕೊಳ್ಳುವಂತಹ ವಿದ್ಯಾರ್ಥಿಯಾಗಿರದಿದ್ದ ಒಬಾಮಾ ಕಾಲೇಜಿಗೆಂದು ಲಾಸ್ ಏಂಜಲಿಸ್‌ಗೆ ಬಂದ. ಅಲ್ಲಿ ಎರಡು ವರ್ಷ ಓದಿದ ನಂತರ ಇನ್ನೂ ಗಂಭೀರವಾಗಿ ವ್ಯಾಸಂಗ ಮಾಡಲು ನ್ಯೂಯಾರ್ಕಿಗೆ ಹೋದ. ಅಲ್ಲಿ ನಾಲ್ಕು ವರ್ಷ ಓದಿದ ನಂತರ ಕಪ್ಪುಜನರ ಚರ್ಚುಗಳ ಪರವಾಗಿ ಸಮುದಾಯ ಸಂಘಟಕನ ಕೆಲಸ ಮಾಡಲು ಶಿಕಾಗೊಗೆ ಹೋದ. ಅಲ್ಲಿ ಮೂರು ವರ್ಷಗಳ ಕಾಲ ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ನಿರ್ವಹಿಸಿದ. ನಂತರವೆ ಆತ ಅಮೆರಿಕದ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಹಾರ್ವರ್ಡ್‌ಗೆ ಕಾನೂನು ಓದಲು ಹೋದದ್ದು. ಅಲ್ಲಿ ಓದುವಾಗಲೆ ಅಪಾರ ಹೆಸರು ಮತ್ತು ಯಶಸ್ಸು ಗಳಿಸಿದ. ಓದು ಮುಗಿಸಿದ ನಂತರ ವರ್ಷಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಸಂಪಾದಿಸಬಹುದಾಗಿದ್ದ ಕೆಲಸಗಳನ್ನೆಲ್ಲ ಬಿಟ್ಟು ಮತ್ತೆ ಶಿಕಾಗೋಗೆ ಮರಳಿದ. ಅಲ್ಲಿ ಮತ್ತೊಮ್ಮೆ ಸಮುದಾಯ ಕೆಲಸಗಳಲ್ಲಿ ತೊಡಗಿಸಿಕೊಂಡ. ರಾಜಕೀಯವನ್ನೂ ಅರಿತುಕೊಳ್ಳುತ್ತ ಹೋದ. ಆ ಮಧ್ಯೆ ಮಿಷೆಲ್ ಜೊತೆ ಮದುವೆಯೂ ಆದ.
ಇದೇ ಸಮಯದಲ್ಲಿ ಆತನ ಕರ್ತೃತ್ವ ಶಕ್ತಿಯನ್ನು ಮೆಚ್ಚಿಕೊಂಡಿದ್ದ ಕಪ್ಪು ಜನಾಂಗದ ಶಾಸಕಿಯೊಬ್ಬಳು ತನ್ನ ಸೀಟನ್ನು ಆತನಿಗೆ ಬಿಟ್ಟುಕೊಟ್ಟು ತಾನು ಇನ್ನೂ ಮೇಲಿನ ಹುದ್ದೆಗೆ ಸ್ಪರ್ಧಿಸುವುದಾಗಿ ಹೇಳಿದಳು. ಒಬಾಮ ಇಲಿನಾಯ್ ರಾಜ್ಯದ ಶಾಸನಸಭೆಯ ಚುನಾವಣೆಗೆ ಅಣಿಯಾಗುವಷ್ಟರಲ್ಲಿ ಆ ಹಾಲಿ ಶಾಸಕಿ ವಾಪಸು ಬಂದು ತಾನೆ ಮತ್ತೆ ಪುನರ್‌ಸ್ಪರ್ಧಿಸುವುದಾಗಿ ಹೇಳಿದಳು. ಆದರೆ ಒಬಾಮ ಹಿಂದೆಗೆಯಲಿಲ್ಲ. ಆಕೆಯೂ ಸ್ಪರ್ಧಿಸಿದಳು. ಆದರೆ ಆಕೆಯ ನಾಮಪತ್ರವನ್ನು ಪರಿಶೀಲಿಸಿದ ಒಬಾಮ ಆಕೆಯ ನಾಮಪತ್ರದಲ್ಲಿ ಕೆಲವು ಮತದಾರರ ಸಹಿಗಳಲ್ಲಿನ ದೋಷಗಳನ್ನು ಗುರುತಿಸಿ ಆಕೆ ಆ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಳಾಗುವಂತೆ ನೋಡಿಕೊಂಡ. ಮತ್ತೂ ಕೆಲವು ಸ್ಪರ್ಧಿಗಳ ಗತಿ ಅದೇ ಅಯಿತು. ಹೀಗೆ ಒಬಾಮ 1996 ರಲ್ಲಿ ತನ್ನ ಮೊದಲ ಚುನಾವಣೆಯಲ್ಲಿ ಸುಲಭವಾಗಿ ಗೆದ್ದುಬಿಟ್ಟ. ಅದಾದ ನಾಲ್ಕು ವರ್ಷಗಳಿಗೆ ಒಬಾಮ ಇನ್ನೂ ಮೇಲಿನ ಸೆನೆಟ್ ಸ್ಥಾನಕ್ಕೆ ಸ್ಪರ್ಧಿಸಿದ. ಆದರೆ ಈ ಸಲ ತನ್ನದೇ ಪಕ್ಷದ ಪ್ರಾಥಮಿಕ ಸ್ಪರ್ಧೆಯಲ್ಲಿ ತನ್ನದೇ ಜನಾಂಗದ ಬಲಿಷ್ಠ ಅಭ್ಯರ್ಥಿಯೆದುರು ಸೋತು ಹೋದ. ಆದರೆ ಅದಾದ ನಾಲ್ಕೆ ವರ್ಷಗಳಿಗೆ ದೇಶದ ಸೆನೆಟ್ ಸ್ಥಾನಕ್ಕೆ ಸ್ಪರ್ಧಿಸಿದ. ಅದೇ ಸಮಯದಲ್ಲಿ (2004) ಆತ ಜಾನ್ ಕೆರ್ರಿ ಪರವಾಗಿ ಡೆಮೊಕ್ರಾಟ್ ಪಕ್ಷದ ಸಮ್ಮೆಳನದಲ್ಲಿ ಇಡೀ ದೇಶದ ಗಮನ ಸೆಳೆಯುವಂತಹ ಪ್ರಭಾವಕಾರಿ ಭಾಷಣ ಮಾಡಿದ. ಅಂದೇ ಬರಾಕ್ ಒಬಾಮ ಎಂಬ ಭವಿಷ್ಯದ ರಾಷ್ಟ್ರನಾಯಕನನ್ನು ಈ ದೇಶದ ರಾಜಕೀಯ ವಿಶ್ಲೇಷಕರು ಗುರುತಿಸಿಬಿಟ್ಟರು. ಅದಾದ ನಂತರ ನಡೆದ ಚುನಾವಣೆಯಲ್ಲಿ ಕೆರ್ರಿ ಬುಷ್‌ಗೆ ಸೋತಿದ್ದ. ಆದರೆ ಇಲಿನಾಯ್‌ನಲ್ಲಿ ಸೆನೆಟ್ ಸ್ಥಾನವನ್ನು ಒಬಾಮ ಸುಲಭವಾಗಿ ಗೆದ್ದಿದ್ದ.
ಈಗ, ಅದಾದ ನಾಲ್ಕೇ ವರ್ಷಗಳಲ್ಲಿ "ಬದಲಾವಣೆ ಮತ್ತು ಭರವಸೆ" ಎಂಬ ಸ್ಲೋಗನ್ನಿನಡಿಯಲ್ಲಿ ಹಿಲ್ಲರಿ ಕ್ಲಿಂಟನ್‌ಳಂತಹ ದೈತ್ಯ ನಾಯಕಿಯನ್ನೂ ಸೋಲಿಸಿ ತನ್ನ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾನೆ. ಕರಿಯ ಮನುಷ್ಯನೊಬ್ಬ ದೊಡ್ಡ ಪಕ್ಷವೊಂದರ ಅಧಿಕೃತ ಅಭ್ಯರ್ಥಿಯಾದ ಈ ಸಂದರ್ಭವಂತೂ ಅಮೆರಿಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ವಲಯದ ಮಹತ್ವದ ಘಟನೆ. ಯಾವುದೆ ಸಹಾಯಕಾರಿ ಕೌಟುಂಬಿಕ ಹಿನ್ನೆಲೆ ಇಲ್ಲದಿದ್ದರೂ, ಕಷ್ಟಪಟ್ಟು, ಕೆಲವೊಮ್ಮೆ ಭಾರಿ ಕಿಲಾಡಿತನದಿಂದ ಪೂರ್ವಯೋಜಿತ ಕರಾರುವಾಕ್ಕು ದಾಳಗಳನ್ನು ಉರುಳಿಸಿಯೆ ಬರಾಕ್ ಒಬಾಮಾ ರಾಜಕೀಯದಲ್ಲಿ ಮೇಲೆ ಬಂದಿದ್ದಾನೆ. ಈ ಯಶಸ್ಸು ಮತ್ತು ಆತನ ಪ್ರಭಾವಶಾಲಿ ಮಾತುಗಾರಿಕೆ ಆತನಿಗೆ ಸೆಲೆಬ್ರಿಟಿ ವ್ಯಕ್ತಿತ್ವ ತಂದುಕೊಟ್ಟುಬಿಟ್ಟಿದೆ. ಅದನ್ನು ಆತ ತನ್ನ ಉಪಯೋಗಕ್ಕೂ ಬಳಸಿಕೊಳ್ಳುತ್ತಿದ್ದಾನೆ. ರಾಜಕೀಯದಲ್ಲಿ ಆಸಕ್ತಿ ತೋರದ ಯುವಜನತೆ ಇವತ್ತು ಆ ವ್ಯಕ್ತಿತ್ವದಿಂದಾಗಿಯೆ ಆತನೆಡೆಗೆ ಆಕರ್ಷಿತರಾಗಿದ್ದಾರೆ. ಇಡೀ ದೇಶದ ಬಹುಪಾಲು ಉದಾರವಾದಿ ಯುವಜನತೆ ಆತನನ್ನು ಒಬ್ಬ ರಾಕ್ ಸ್ಟಾರ್‌ನಂತೆ, ತಮ್ಮ ಆಶಾಕಿರಣದಂತೆ ಕಾಣುತ್ತಿದ್ದಾರೆ. ಹಾಗೆಯೆ, ಜಗತ್ತಿನ ಬಲಿಷ್ಠ ರಾಷ್ಟ್ರವಾದ ಬಹುಸಂಖ್ಯಾತ ಬಿಳಿಯರ ಅಮೆರಿಕಕ್ಕೆ ಕಪ್ಪು ಜನಾಂಗದ ವ್ಯಕ್ತಿಯೊಬ್ಬ ಅಧ್ಯಕ್ಷನಾಗಬಹುದಾದ ಈ ಒಂದು ಐತಿಹಾಸಿಕ ಸಂದರ್ಭದಿಂದಾಗಿ ಇಡೀ ವಿಶ್ವವೆ ಇವತ್ತು ಬರಾಕ್ ಒಬಾಮನತ್ತ ನೋಡುತ್ತಿದೆ.
ಕೇವಲ ಅಮೆರಿಕದಲ್ಲಿಯಷ್ಟೆ ಅಲ್ಲ, ವಿಶ್ವದ ಹಲವಾರು ಕಡೆ 47 ವರ್ಷದ ಈ ಬರಾಕ್ ಒಬಾಮ ಗೆಲ್ಲಬೇಕೆಂದು ಜನ ಬಯಸುತ್ತಿದ್ದಾರೆ. ಅದಕ್ಕೆ ನಾನಾ ಕಾರಣಗಳಿವೆ. ಹಾಗೆ ಆದಲ್ಲಿ ಅದು ಒಂದು ಅದ್ಭುತವಾದ ಸಂಕೇತವಾಗಲಿದೆ. ಸಮಾನತೆಗಾಗಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಪ್ರಜಾಪ್ರಭುತ್ವ ಸಿದ್ಧಾಂತದೊಂದಿಗೆ ಹೋರಾಡುವವರಿಗೆ ಅದು ಮಹತ್ತರ ಸ್ಫೂರ್ತಿಯಾಗಲಿದೆ. ಆದರೆ, ಇಂತಹ ಸ್ಫೂರ್ತಿ ಮತ್ತು ಮಾದರಿಯಾಗಬಹುದಾದ ಅವಕಾಶಕ್ಕೆ ಎದುರು ನಿಂತಿರುವವನು ಜಾನ್ ಮೆಕೈನ್ ಎಂಬ 72 ವರ್ಷದ ಹಿರಿಯ. ಒಂದು ರೀತಿಯ ದೈವಿಕಪ್ರಭೆ ಬೆಳೆಸಿಕೊಂಡು ಬಿಟ್ಟಿರುವ ಒಬಾಮನ ವಿರುದ್ಧ ಸ್ಪರ್ಧಿಸಲಿರುವ ಆತ ದುಷ್ಟನೂ, ಅನರ್ಹನೂ, ಬಿಳಿಯ ಮತಾಂಧನೂ ಆಗಿರಬೇಕು ಎಂದು ಯಾರಾದರೂ ಅಂದುಕೊಂಡರೆ ಅದೊಂದು ತಪ್ಪು ಅಭಿಪ್ರಾಯ.
ಜಾನ್ ಮೆಕೈನ್ ಸಾಮಾನ್ಯನೇನಲ್ಲ. ಆತನ ಅಪ್ಪ ಮತ್ತು ಅಜ್ಜ ಇಬ್ಬರೂ ಅಮೆರಿಕದ ನೌಕಾದಳದಲ್ಲಿ ಎರಡನೆ ಅತ್ಯುನ್ನತ ಸ್ಥಾನವಾದ ಅಡ್ಮಿರಲ್ ಆಗಿದ್ದವರು. ಜಾನ್ ಮೆಕೈನ್ ಸಹ ನೌಕಾದಳದಲ್ಲಿ ಯುದ್ಧವಿಮಾನದ ಪೈಲಟ್ ಆಗಿದ್ದ. ಅದು 60 ರ ದಶಕದ ವಿಯಟ್ನಾಮ್ ಯುದ್ಧ. ಮೆಕೈನ್ ಹಾರಿಸುತ್ತಿದ್ದ ಯುದ್ಧವಿಮಾನವನ್ನು ವಿಯಟ್ನಾಮ್ ಕ್ರಾಂತಿಕಾರಿಗಳು ಹೊಡೆದುರುಳಿಸಿದರು. ಪ್ಯಾರಾಚೂಟ್‌ನಿಂದ ಹಾರಿ ಮೆಕೈನ್ ಪ್ರಾಣ ಉಳಿಸಿಕೊಂಡ. ಆದರೆ ಆತನನ್ನು ಸುತ್ತುವರೆದ ವಿಯಟ್ನಾಮ್ ಜನ ಎಗ್ಗಾಮುಗ್ಗಾ ಹೊಡೆದು ಸೈನಿಕರ ಬಂಧಿಖಾನೆಗೆ ತಳ್ಳಿದರು. ಐದೂವರೆ ವರ್ಷಗಳ ಕಾಲ ಯುದ್ಧಖೈದಿಯಾಗಿದ್ದ ಆತನಿಗೆ ಅಲ್ಲಿ ಅಪಾರವಾದ ಚಿತ್ರಹಿಂಸೆಗಳನ್ನು ಕೊಟ್ಟರು. ಅದೇ ಸಮಯದಲ್ಲಿ ಆತನ ಅಪ್ಪ ಅಡ್ಮಿರಲ್ ಆದ. ಯುದ್ಧಖೈದಿಗಳ ಮನೋಸ್ಥೈರ್ಯವನ್ನು ಬಗ್ಗುಬಡಿಯಲು ಮೆಕೈನ್‌ನಂತಹ ದೊಡ್ಡ ಮನುಷ್ಯರ ಮಗನನ್ನು ಬಿಡುಗಡೆ ಮಾಡಲು ವಿಯಟ್ನಾಮ್ ಸೈನ್ಯ ಮುಂದೆ ಬಂತು. ಆದರೆ ಅದಕ್ಕೆ ಸ್ವತಃ ಮೆಕೈನ್ ಒಪ್ಪಿಕೊಳ್ಳಲಿಲ್ಲ. ತನಗೆ ಸರದಿ ಪ್ರಕಾರವೇ ಬಿಡುಗಡೆ ಆಗಲಿ ಎಂದು ಕುಳಿತುಕೊಂಡ. ತಮ್ಮ ಯೋಜನೆಗೆ ಅಡ್ಡಿಪಡಿಸಿದ ಮೆಕೈನ್ ಬಗ್ಗೆ ವಿಯಟ್ನಾಮ್ ಸೈನಿಕರು ಕೋಪಗೊಂಡರು. ಶಿಕ್ಷೆ ಜೋರಾಯಿತು. ಆ ಚಿತ್ರಹಿಂಸೆಗಳು ಎಷ್ಟು ಭೀಕರವಾಗಿದ್ದವೆಂದರೆ ದೇಶಭಕ್ತ ಮೆಕೈನ್ ತನ್ನ ರಾಷ್ಟ್ರದ ವಿರುದ್ಧವೇ ತಪ್ಪೊಪ್ಪಿಗೆ ಹೇಳಿಕೆ ಬರೆದುಕೊಟ್ಟ. ನಂತರವೂ ಶಿಕ್ಷೆ ಮುಂದುವರೆಯುತ್ತಿತ್ತು. ಅಂತಿಮವಾಗಿ ಯುದ್ಧ ಮುಗಿದ ನಂತರ ಮೆಕೈನ್ ಬಿಡುಗಡೆ ಆದ.
ಬಿಡುಗಡೆಯ ನಂತರವೂ ಆತ ನೌಕಾದಳದಲ್ಲಿ ಸೇವೆ ಸಲ್ಲಿಸಿದ. ಆದರೆ ಆತನ ಯುದ್ಧಖೈದಿ ಸ್ಥಾನಮಾನ ಆತನಿಗೆ ದೊಡ್ಡ ಹೆಸರನ್ನೂ ತಂದುಕೊಟ್ಟಿತ್ತು. ಅನೇಕ ವರ್ಷಗಳ ಕಾಲ ರಾಜಕೀಯ ನಾಯಕರುಗಳೊಂದಿಗೆ ನೌಕಾದಳದ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡಿದ. ಕೊನೆಗೆ ಅರಿಜೋನ ರಾಜ್ಯದಿಂದ ಅಮೆರಿಕದ ಪ್ರಜಾಪ್ರತಿನಿಧಿ ಸಭೆಗೆ ರಿಪಬ್ಲಿಕನ್ ಪಕ್ಷದಿಂದ ಆಯ್ಕೆಯಾದ. ನಂತರ ಸೆನೆಟರ್ ಆದ. ರಿಪಬ್ಲಿಕನ್ ಪಕ್ಷ ಅಮೆರಿಕದ ಈಗಿನ ಸಂದರ್ಭದಲ್ಲಿ ಮತೀಯ ಸಂಪ್ರದಾಯವಾದಿಗಳ ಪಕ್ಷ. ಇಂತಹ ಪಕ್ಷದಲ್ಲಿದ್ದರೂ ಮೆಕೈನ್ ನೇರಮಾತಿನ ನಿಷ್ಠುರವಾದಿ ಮತ್ತು ಅನೇಕ ವಿಷಯಗಳಿಗೆ ಉದಾರವಾದಿ. ಒಮ್ಮೆ ಆಗಿನ ಜನಪ್ರಿಯ ಅಧ್ಯಕ್ಷನಾಗಿದ್ದ ರೋನಾಲ್ಡ್ ರೇಗನ್ ವಿರುದ್ಧವೆ ಗುಡುಗಿದ್ದ. ಅನೇಕ ವಿಷಯಗಳಿಗೆ ಬಲಪಂಥೀಯ ಕ್ರಿಶ್ಚಿಯನ್ನರನ್ನು ಎದುರು ಹಾಕಿಕೊಂಡಿದ್ದ.
ಜಾನ್ ಮೆಕೈನ್ ಎಂಟು ವರ್ಷಗಳ ಹಿಂದೆಯೆ ರಿಪಬ್ಲಿಕನ್ ಪಕ್ಷದಿಂದ ಅಭ್ಯರ್ಥಿಯಾಗಬೇಕಿತ್ತು. ಆದರೆ ಆಗ ಜಾರ್ಜ್ ಬುಷ್ ಎದುರು ತನ್ನ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಸೋತುಹೋದ. ಆ ಚುನಾವಣೆಯಲ್ಲಿ ಆತನ ವಿರುದ್ಧ ಮತೀಯ ಬಲಪಂಥೀಯರು ಬಹಳ ಕೆಟ್ಟದಾದ ಪ್ರಚಾರ ಕೈಗೊಂಡರು. ಆತನ ಹೆಂಡತಿ ಬಾಂಗ್ಲಾ ದೇಶದಿಂದ ಒಬ್ಬ ಅನಾಥ ಬೆಂಗಾಲಿ ಹುಡುಗಿಯನ್ನು ತಂದು ಸಾಕಿಕೊಂಡಿದ್ದಳು. ಆ ಹುಡುಗಿ ಇಲ್ಲಿನ ಆಫ್ರಿಕನ್ ಅಮೆರಿಕನ್ನರಂತೆ ಕಪ್ಪಗಿದ್ದಳು. ಅದನ್ನೆ ತಮ್ಮ ದಾಳವಾಗಿ ಬಳಸಿಕೊಂಡ ಬಿಳಿಯ ಫ್ಯಾಸಿಸ್ಟ್‌ಗಳು ಆ ಹುಡುಗಿ ಜಾನ್ ಮೆಕೈನ್‌ನ ಅಕ್ರಮ ಸಂಬಂಧದ ಶಿಶು ಎಂಬ ಸುಳ್ಳುಸುದ್ದಿಗಳನ್ನು ಹಬ್ಬಿಸಿಬಿಟ್ಟರು. ಅದನ್ನೆ ಬಳಸಿಕೊಂಡ ಜಾರ್ಜ್ ಬುಷ್ ತಾನು ಎಲ್ಲರಿಗಿಂತ ಕಟ್ಟರ್ ಸಂಪ್ರದಾಯವಾದಿ, ಪಕ್ಕಾ ಕ್ರಿಶ್ಚಿಯನ್ ದೈವಭಕ್ತ ಎಂದು ನಂಬಿಸಿಬಿಟ್ಟ. ಜಾತ್ಯಾತಿತ ಅಮೆರಿಕ ದೇಶದ ರಿಪಬ್ಲಿಕನ್ ಬಲಪಂಥೀಯರು ಬುಷ್‌ನನ್ನು ಗೆಲ್ಲಿಸಿಬಿಟ್ಟರು!
ಹೀಗೆ ತನ್ನದೇ ಪಕ್ಷದಲ್ಲಿ ಜಾನ್ ಮೆಕೈನ್ ಒಬ್ಬಂಟಿ. ಆತನನ್ನು ಎಲ್ಲರೂ ಗುರುತಿಸುವುದೆ "ಒಂಟಿ ಸಲಗ" (Maverick- ಸ್ವತಂತ್ರ ವ್ಯಕ್ತಿತ್ವದ ಏಕಾಂಗಿ ಎಂಬ ಅರ್ಥ) ಎಂದು. ತನ್ನದೇ ಪಕ್ಷದ ಮತಾಂಧರನ್ನು ಎದುರು ಹಾಕಿಕೊಳ್ಳಬಲ್ಲ ಈತನಿಗೆ ಬೇರೆ ಮತಾಂಧರ ಬಗ್ಗೆಯೂ ತಾಳ್ಮೆ ಇಲ್ಲ. ಪ್ರಜಾಪ್ರಭುತ್ವವಾದಿ ಸಹ. ಅದೇ ಕಾರಣಕ್ಕೆ ಸದ್ಧಾಮನ ಸರ್ವಾಧಿಕಾರ ಕೊನೆಗೊಳಿಸಲು ಈತನ ಬೆಂಬಲವಿತ್ತು. ದೇಶದ ವಿಷಯ ಬಂದಾಗ ತನ್ನೆಲ್ಲ ವೈಯಕ್ತಿಕ ಸ್ವಾರ್ಥವನ್ನು ಪಕ್ಕಕ್ಕಿಡಬಲ್ಲ ಮನುಷ್ಯ. ತನಗೆ ಸರಿ ಅನ್ನಿಸಿದ್ದನ್ನು ಮುಲಾಜಿಲ್ಲದೆ ಆಡಬಲ್ಲ. ಹಾಗೆಯೆ ಚಾಲಾಕಿ ಕೂಡ. ಹಿಲ್ಲರಿ ಕ್ಲಿಂಟನ್‌ಳನ್ನು ತನ್ನ ಉಪಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸದ ಒಬಾಮಾನ ನಡವಳಿಕೆಯನ್ನು ಎತ್ತಿ ತೋರಿಸಲು ಮತ್ತು ಆ ಮೂಲಕ ಹೆಚ್ಚಿನ ಮಟ್ಟದಲ್ಲಿ ಸ್ತ್ರೀ ಮತದಾರರನ್ನು ಸೆಳೆಯಲು ತನ್ನ ಉಪಾಧ್ಯಕ್ಷ ಸ್ಥಾನಕ್ಕೆ ಸ್ಯಾರಾ ಪೇಲಿನ್ ಎಂಬ ಸುಂದರ ಮೊಗದ ರಾಜ್ಯಪಾಲೆಯನ್ನು ಆರಿಸಿಕೊಂಡಿದ್ದಾನೆ. ಈ ಅನಿರೀಕ್ಷಿತ ಆಯ್ಕೆ ಇಷ್ಟು ದಿನ ಒಬಾಮಾನ ಪರ ಇದ್ದ ಅಲೆಯನ್ನು ಕಟ್ಟಿಹಾಕಿಬಿಟ್ಟಿದೆ. ಒಬಾಮಾನ ಬೆಂಬಲಿಗರು ಈಗ ನಿಜಕ್ಕೂ ದಂಗಾಗಿದ್ದಾರೆ.
ಸೈದ್ಧಾಂತಿಕ ಒಲವುಗಳನ್ನು ಬದಿಗಿಟ್ಟು ನೋಡಿದರೆ ಒಬಾಮ ಮತ್ತು ಜಾನ್ ಮೆಕೈನ್ ಇಬ್ಬರೂ ಅರ್ಹರೆ. ಇಂತಹ ಸಂದರ್ಭ ಅನೇಕ ದೇಶಗಳಿಗೆ ಒದಗಿ ಬರುವುದಿಲ್ಲ. ಹಾಗೆ ನೋಡಿದರೆ ಹಿಲ್ಲರಿ ಕ್ಲಿಂಟನ್ ಸಹ ಅರ್ಹ ಅಭ್ಯರ್ಥಿಯೆ. ಜಾನ್ ಮೆಕೈನ್ ಒಳ್ಳೆಯ ಮನುಷ್ಯನಾದರೂ ಆತನ ಮತೀಯ ಸಂಪ್ರದಾಯವಾದಿ ಮತ್ತು ಯುದ್ಧದಾಹಿ ಪಕ್ಷ ಹಿನ್ನೆಲೆಯಲ್ಲಿ ಇದ್ದೇ ಇರುತ್ತದೆ. ಹಾಗಾಗಿಯೆ ಅಮೆರಿಕದ ಬಲಪಂಥೀಯತೆಗೆ ಕಡಿವಾಣ ಬೀಳಲು ಈ ಬಾರಿ ರಿಪಬ್ಲಿಕನ್ ಪಕ್ಷ ಸೋಲಬೇಕಿತ್ತು. ಜಾನ್ ಮೆಕೈನ್‌ನನ್ನು ಸೋಲಿಸಲು ಒಬಾಮಾಗಿಂತ ಹಿಲ್ಲರಿಗೆ ಹೆಚ್ಚಿನ ಅವಕಾಶಗಳಿದ್ದವು. ಆದರೆ ಸದ್ಯದ ಸ್ಥಿತಿಯಲ್ಲಿ ಫೋಟೋಫಿನಿಷ್ ಫಲಿತಾಂಶ ಬರುವ ಸಾಧ್ಯತೆಗಳೇ ಜಾಸ್ತಿ. ನನ್ನ ಊಹೆಯ ಪ್ರಕಾರ ಈಗ ಜಾನ್ ಮೆಕೈನ್ ಗೆಲ್ಲುವ ಸಾಧ್ಯತೆಗಳೆ ಹೆಚ್ಚಿವೆ. ಯಾಕೆಂದರೆ ಈ ಮತೀಯ ಬಲಪಂಥೀಯರು ಜನಾಂಗೀಯ ದ್ವೇಷ ಬಿತ್ತುವಲ್ಲಿ, ಸುಳ್ಳುಸುದ್ದಿ ಹಬ್ಬಿಸುವುದರಲ್ಲಿ, ಭವಿಷ್ಯದ ಬಗ್ಗೆ ವಿನಾಕಾರಣ ಭಯಪಡುವಂತೆ ಮಾಡುವಲ್ಲಿ ಮತ್ತು ಕೊನೆಕ್ಷಣದ ಕಾರ್ಯಾಚರಣೆಯಲ್ಲಿ ಸಿದ್ಧಹಸ್ತರು. ಎಲ್ಲಾ ಮತಗಳಲ್ಲೂ, ಎಲ್ಲಾ ದೇಶಗಳಲ್ಲೂ ಇರುವ ಇವರ ಕುತಂತ್ರಗಳು ಒಂದೇ ತರಹನವು. ನಮ್ಮಲ್ಲೂ ಹೀಗೆಯೆ. ಅಲ್ಲವೆ?
("ಅಕ್ಕ 2006" ರ ಸಮಯದಲ್ಲಿ ಬರೆದದ್ದು. "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಯ ಸೆಪ್ಟೆಂಬರ್ 22, 2006ರ ಸಂಚಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ.)
ಅದು 1994. ಧಾರವಾಡ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ಸ್ನೇಹಿತರೊಬ್ಬರ ರೂಮಿನಲ್ಲಿ ಒಂದು ರಾತ್ರಿ ತಂಗಿದ್ದೆ. ಅಂದು ಅವರು ಕ್ಯಾಂಪಸ್‌ನ ಬಗ್ಗೆ ಮಾತನಾಡುತ್ತ ಅಲ್ಲಿ ಹರಿಯುವ ಶಾಲ್ಮಲ ನದಿಯ ಬಗ್ಗೆ ಹೇಳಿದ್ದರು. ಅದೇ ಮೊದಲ ಸಲ ಆ ಮುದ್ದಾದ ಹೆಸರನ್ನು ಕೇಳಿದ್ದು. ಇಲ್ಲಿಯವರೆಗೂ ನೋಡಿಲ್ಲದ ಆ ಗುಪ್ತಗಾಮಿನಿ ನನಗೆ ಅಂದೇ ಆಪ್ತವಾಗಿಬಿಟ್ಟಿತು.
ನಾಲ್ಕೈದು ವರ್ಷಗಳ ಹಿಂದೆ ಹೀಗೆ ಅಂತರ್ಜಾಲದಲ್ಲಿ ಕನ್ನಡ ಭಾವಗೀತೆಗಳನ್ನು ಕೇಳುತ್ತಿದ್ದಾಗ ಅಚಾನಕ್ಕಾಗಿ ಶಾಲ್ಮಲಾ ಎಂಬ ಪದ ಸಿ.ಅಶ್ವಥ್‌ರ ಕಂಚಿನ ಕಂಠದಿಂದ ಹೊಮ್ಮಿ ನನ್ನ ಕಿವಿ ಮುಟ್ಟಿತು.
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೇ ಹರಿಯುವವಳು ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೇ ಕೊರೆಯುವವಳು ಸದಾ... ಗುಪ್ತಗಾಮಿನಿ ನನ್ನ ಶಾಲ್ಮಲಾ
ತಕ್ಷಣ ಕವಿಯ ಹೆಸರು ಹುಡುಕಿದೆ. ಚಂದ್ರಶೇಖರ ಪಾಟೀಲ ಎಂದಿತ್ತು. ಅಂದರೆ, ಚಂಪಾ ಅಲ್ಲವಾ? ಎಂತಾ ಅದ್ಭುತ ಕವಿತೆ ಬರೆದಿದ್ದಾರೆ ಮಾರಾಯ ಎಂದುಕೊಂಡೆ. ಅಲ್ಲಿಂದ ಇಲ್ಲಿಯವರೆಗೆ ಮನಸ್ಸು ಶಾಂತವಾಗಿರಲಿ ಇಲ್ಲದಿರಲಿ, ಕಂಪ್ಯೂಟರ್ ಮುಂದೆ ಇದ್ದರೆ ಸಾಕು ಆ ಹಾಡನ್ನು ಅನಂತ ಸಲ ಕೇಳಿದ್ದೇನೆ; ಕೇಳುತ್ತಲೇ ಇದ್ದೇನೆ. ಹಾಡು ಪ್ರಾರಂಭವಾಗುತ್ತಲೆ ಮನಸ್ಸು ಪ್ರಶಾಂತತೆಗೆ ಜಿಗಿದಿರುತ್ತದೆ.
ನಾನು ಚಂಪಾರವರನ್ನು ಮೊದಲ ಬಾರಿ ಭೇಟಿಯಾಗಿದ್ದು ಕಳೆದ ವರ್ಷ. ಸಾಹಿತ್ಯ ಪರಿಷತ್ತಿನ ಅವರ ಕಛೇರಿಯಲ್ಲಿ. ಮತ್ತೆ ಈ ವರ್ಷ ನಮ್ಮ ಸಂಪಾದಕರೊಡನೆ ಹೋಗಿ ಭೇಟಿಯಾಗಿದ್ದೆವು. ನಾನು ಕಳೆದ ವರ್ಷ ಭೇಟಿಯಾಗಿದ್ದಿದ್ದು ಇನ್ನೂ ನೆನಪಿತ್ತು ಅವರಿಗೆ. ಪತ್ರಿಕೆಯ ವಿಷಯ ಕೇಳಿ ಸಂತೋಷ ವ್ಯಕ್ತಪಡಿಸಿದರು.
ಅಕ್ಕ ಸಮ್ಮೇಳನದ ಸರ್ಕಾರಿ ಪಟ್ಟಿಯಲ್ಲಿ ಈ ಬಾರಿ ಚಂಪಾರವರೂ ಇದ್ದರು. ಸಮ್ಮೇಳನದ ಎರಡನೆಯ ದಿನ ಅವರನ್ನು ಕಂಡು ಮಾತನಾಡಿಸಿದೆ. ನನ್ನನ್ನು ಕಂಡಾಗ ಪರಿಚಯದ ನಗು ಬೀರಿದರು. ಅಂದು ಮತ್ತು ಮಾರನೆಯ ದಿನ ಅವರು ದ್ವಾರಕಾನಾಥ್ ಮತ್ತು ಹನುಮಂತರೆಡ್ಡಿಯವರೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಜೊತೆಯಾಗಿ ವೀಕ್ಷಿಸಿದರು. ಜಾನಪದ, ತತ್ವಪದ ಹಾಡುಗಾರ ಜನ್ನಿಯವರ ಹಾಡುಗಳನ್ನು ಮುಂದಿನ ಸಾಲಿನಲ್ಲಿಯೆ ಕುಳಿತು ನಾವೆಲ್ಲ ಕೇಳಿದೆವು. "ಯಾರಿಗೆ ಬಂತು ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ" ಮತ್ತು "ಓ ನನ್ನ ಚೇತನ ಆಗು ನೀ ಅನಿಕೇತನ" ಕವನಗಳು ಜನ್ನಿಯವರ ಕಂಚಿನ ಕಂಠದಲ್ಲಿ ಅಮೇರಿಕದಲ್ಲಿ ಮೊಳಗಿದಾಗ ಅನೇಕರಿಗೆ ಅದು ಸಾಂಕೇತಿಕವಾಗಿ ಅನೇಕ ಅರ್ಥಗಳನ್ನು ಕೊಟ್ಟಿತು. ಅಂದೇ ರಾತ್ರಿ ರೆಡ್ಡಿಯವರ ರೂಮಿನಲ್ಲಿ ಚಂಪಾ, ದ್ವಾರಕಾನಾಥ್, ಜನ್ನಿಯೊಂದಿಗೆ ಮಾತುಕತೆ 2-3 ಗಂಟೆಗಳ ಕಾಲ ಹೊಳೆಯಾಗಿ ಹರಿಯಿತು. ಇನ್ನೇನು ಊಟಕ್ಕೆ ಹೋಗಬೇಕು ಎನ್ನುವಾಗ ನಾನು ಚಂಪಾರವರಿಗೆ ನನ್ನ ಮತ್ತು ಅವರ ಶಾಲ್ಮಲ ಕವಿತೆಯ ಸಂಬಂಧದ ಬಗ್ಗೆ ಹೇಳಿದೆ. "ಕಂಪ್ಯೂಟರ್‌ನಲ್ಲಿ ಬರುತ್ತದೆ, ಕೇಳ್ತೀರ್ರೀ ಸರ?" ಎಂದೆ. "ಹ್ಞೂಂ, ಹಾಕ್ರಿ," ಎಂದರು. ಅಶ್ವಥ್‌ರ ಅಪ್ರತಿಮ ಕಂಠದಲ್ಲಿ, ರಚಯಿತನ ಸಮ್ಮುಖದಲ್ಲಿ, ಧಾರವಾಡದ ಶಾಲ್ಮಲ ಬಾಲ್ಟಿಮೋರ್‌ನಲ್ಲಿ ಗುಪ್ತಗಾಮಿನಿಯಾಗಿ, ತಪ್ತಕಾಮಿನಿಯಾಗಿ, ಸುಪ್ತಮೋಹಿನಿಯಾಗಿ ಕೊರೆಕೊರೆದು ಐದು ನಿಮಿಷಗಳ ಕಾಲ ಹರಿದೊ ಹರಿದಳು. ಹಾಡು ಮುಗಿದ ನಂತರ ನಮ್ಮೈವರಲ್ಲಿ ಭಾವಪರವಶರಾಗಿರದಿದ್ದವರು ಯಾರೂ ಇರಲಿಲ್ಲ! ಸ್ವಲ್ಪ ಹೊತ್ತು ಮಾತು ಭೂಗರ್ಭದ ಮೌನ ಧರಿಸಿತ್ತು.
ನನ್ನ ಬದುಕ ಭುವನೇಶ್ವರಿ ನನ್ನ ಶಾಲ್ಮಲಾ ನನ್ನ ಹೃದಯ ರಾಜೇಶ್ವರಿ ನನ್ನ ಶಾಲ್ಮಲಾ! ಸದಾ... ಗುಪ್ತಗಾಮಿನಿ ನನ್ನ ಶಾಲ್ಮಲಾ