Jan 27, 2007

...<-->ಹಾಯ್ -> ಲವ್ ಯು -> ಬೈ--><---...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಫ಼ೆಬ್ರವರಿ 9, 2007 ರ ಸಂಚಿಕೆಯಲ್ಲಿನ ಲೇಖನ)

ಆರ್ಥಿಕ ಸ್ವಾತಂತ್ರ್ಯ ಮತ್ತು ವ್ಯಕ್ತಿಸ್ವ್ವಾತಂತ್ರ್ಯಗಳಿಂದಾಗಿ ಮುಂದುವರೆದ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜನ ಒಂಟಿಯಾಗಿ ಜೀವಿಸುವುದು, ಮದುವೆಯಾಗದೆಯೆ ಇನ್ನೊಬ್ಬರ ಜೊತೆ ಜೊತೆಯಾಗಿ ಬದುಕುವುದು, ಮದುವೆಯಾಗಿ ಕೆಲವೆ ಗಂಟೆ, ದಿನ, ವರ್ಷಗಳಲ್ಲಿ ವಿಚ್ಛೇದನ ನೀಡುವುದು, ಇವೆಲ್ಲವೂ ಸಾಮಾನ್ಯ. ಹೌದು, ಕೆಲವೊಮ್ಮೆ ಕೆಲವೇ ಗಂಟೆಗಳಲ್ಲೂ ವಿಚ್ಛೇದನ ನೀಡುತ್ತಾರೆ!! ಇದರಲ್ಲಿ ಬಹಳ ಪ್ರಸಿದ್ಧವಾದದ್ದು ಪಾಪ್ ಸಿಂಗರ್ ಬ್ರಿಟ್ನಿ ಸ್ಪಿಯರ್‍ಸ್‌ಳ ವಿಚ್ಛೇದನ. ಎರಡು ವರ್ಷಗಳ ಹಿಂದೆ ಆಕೆ ತನ್ನ ಬಾಲ್ಯ ಸ್ನೇಹಿತನನ್ನು ಮದುವೆಯಾಗಿ, ಕೇವಲ 55 ಗಂಟೆಗಳ ಒಳಗೆ ತನ್ನ ಮದುವೆಯನ್ನು ಅನೂರ್ಜಿತಗೊಳಿಸಿಕೊಂಡಳು.

ಅಮೇರಿಕಾದಲ್ಲಿ ಮದುವೆಯಾಗುವುದಕ್ಕಿಂತ ಮೊದಲು ಸಹಜವಾಗಿ ಡೇಟ್ ಮಾಡುತ್ತಾರೆ. ಕೆಲವೊಮ್ಮೆ ಈ ಡೇಟಿಂಗ್ ಎನ್ನುವುದು ವರ್ಷಗಟ್ಟಲೆ ನಡೆಯುತ್ತದೆ. ಗಂಡು-ಗೆಣ್ಣು ಇಬ್ಬರೂ ಮದುವೆಗೆ ಮೊದಲು ಜೊತೆಯಾಗಿ ವಾಸ ಮಾಡುವುದು ಸಹಜ. ಎಷ್ಟೋ ಜನ ವರ್ಷಗಟ್ಟಲೆ ಮದುವೆಯಾಗದೆ ಜೊತೆಯಾಗಿದ್ದುಕೊಂಡು ನಂತರ ಹಾಗೆಯೆ ಬೇರೆಯಾಗಿ ಬಿಡುತ್ತಾರೆ. ಇನ್ನು ಇಲ್ಲಿನ ವಿಚ್ಛೇದನದ ಶೇಕಡಾವಾರು ಅಂತೂ ಬಹಳ ಹೆಚ್ಚು. ಎಷ್ಟೋ ಮಕ್ಕಳಿಗೆ ತಮ್ಮ ತಾಯಿಗೆ ತಮ್ಮ ಅಪ್ಪನಲ್ಲದ ಬೇರೊಬ್ಬ ಗಂಡಸಿಂದ ಆದ ಸೋದರಸೋದರಿಯರು, ತಮ್ಮ ಅಪ್ಪನಿಗೆ ತಮ್ಮ ಅಮ್ಮನಿಂದಲ್ಲದೆ ಬೇರೊಬ್ಬ ಹೆಣ್ಣಿನಿಂದ ಆದ ಸೋದರಸೋದರಿಯರು ಸಾಮಾನ್ಯ. ತನ್ನ ತಾಯಿ-ತಂದೆಗೆ, ತನ್ನ ತಂದೆ-ತಾಯಿಗೆ ಹುಟ್ಟದ ಅಂತಹ ಸೋದರಸೋದರಿಯರನ್ನು ಇಲ್ಲಿ half-brother, half-sister ಎನ್ನುತ್ತಾರೆ. ಇನ್ನು, ಈಗ ಅಮೇರಿಕದಲ್ಲಿ ಶೇ. 51 ರಷ್ಟು ಮಹಿಳೆಯರು ಏಕಾಂಗಿಯಾಗಿ ಉಳಿಯುತ್ತಿದ್ದಾರೆ ಎಂದ ಮಾತ್ರಕ್ಕೆ ಅವರು ಪ್ರೇಮಜೀವನದಲ್ಲಿ ಸಕ್ರಿಯರಾಗಿಲ್ಲ, ಸಂಗಾತಿಗಳನ್ನು ಹುಡುಕಿಕೊಳ್ಳುತ್ತಿಲ್ಲ ಎನ್ನುವಂತಿಲ್ಲ.

ಹೀಗೆ ಗಂಡು-ಹೆಣ್ಣು ಜೊತೆಯಾಗಿರುವುದು, ಬೇರೆಯಾಗುವುದು ಹೆಚ್ಚಾಗಿರುವ ಇಲ್ಲಿನ ಸಮಾಜದಲ್ಲಿ, 'ಬೇರೆಯಾಗೋಣ' ಎನ್ನುವ ಮುಜಗರದ, ಕೆಲವೊಮ್ಮೆ ಅತೀವ ಧೈರ್ಯ, ಭಂಡತನ, ಎಲ್ಲವನ್ನೂ ಬಯಸುವ ಮಾತನ್ನು ಒಬ್ಬರು ಇನ್ನೊಬ್ಬರಿಗೆ ಹೇಗೆ ಹೇಳುತ್ತಾರೆ ಎನ್ನುವುದು ಬಹಳ ಕುತೂಹಲಕರ. ಇತ್ತೀಚೆಗೆ ವೆಬ್‌ಸೈಟ್ ಒಂದು ನೀವು ನಿಮ್ಮ ಸಂಗಾತಿಗೆ ಅದನ್ನು ಹೇಗೆ ಹೇಳಿದಿರಿ, ಅಥವ ನಿಮ್ಮ ಸಂಗಾತಿ ಅದನ್ನು ನಿಮಗೆ ಹೇಗೆ ತಿಳಿಸಿದರು, ಯಾವಾಗ ತಿಳಿಸಿದರು, ಹೇಗೆ ಬೇರೆಯಾದಿರಿ ಎಂದು ಬರೆಯಿರಿ ಎಂದು ಕೇಳಿದ್ದಕ್ಕೆ ಬಂದ ಉತ್ತರಗಳು ___... ಈ ಖಾಲಿ ಜಾಗದಲ್ಲಿ ಕುತೂಹಲಕಾರಿಯಾಗಿತ್ತು ಎಂದು ಬರೆಯುವುದೊ, ಆಘಾತಕಾರಿಯಾಗಿತ್ತೊ ಎಂದು ಬರೆಯುವುದೊ ಗೊತ್ತಾಗುತ್ತಿಲ್ಲ. ಯಾಕೆಂದರೆ, ಕಾಲ ಮತ್ತು ದೇಶಕ್ಕೆ ಅನುಗುಣವಾಗಿ ಆ ಪದ ಅದಲು ಬದಲಾಗುತ್ತದೆ. ಅದು ಹೇಗೆ ಎಂದು ನೀವೇ ನೋಡಿ:

  • ಅಂದು ನಮ್ಮ ಮದುವೆಯ ಆನ್ನಿವರ್ಸರಿ. ಸೆಲೆಬ್ರೇಟ್ ಮಾಡಲೆಂದು ಸಂಜೆ ಕೆಲಸದಿಂದ ಹೊರಟು ಮನೆಗೆ ಬಂದೆ. ಮನೆಗೆ ಬಂದರೆ ನನ್ನ ಹೆಂಡತಿ ಹಾಸಿಗೆಯ ಮೇಲೆ ತಲೆಕೆಡಿಸಿಕೊಂಡು ಕುಳಿತಿದ್ದಳು. ಯಾಕೆ, ಏನಾಯಿತು ಎಂದು ಕೇಳಿದೆ. ತನ್ನ ಹಳೆಯ ಬಾಯ್‌ಫ್ರೆಂಡ್ ಇರಾಕ್ ಯುದ್ಧದಿಂದ ವಾಪಸು ಬಂದಿದ್ದಾನೆ, ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾನೆ, ತಾನು ಅದಕ್ಕೆ ಒಪ್ಪಿಗೆ ಕೊಟ್ಟಿದ್ದೇನೆ ಎಂದು ಹೇಳಿದಳು! ಆಗ ನಮ್ಮ ಮನೆಯ ಮುಂದೆ ಕಾರಿನ ಹಾರ್ನ್ ಕೇಳಿಸಿತು. ನನ್ನ ಹೆಂಡತಿ ಎದ್ದು ಹೋದಳು.
  • ಅನ್ನನಾಳದ ಕ್ಯಾನ್ಸರ್ ಸರ್ಜರಿಗಾಗಿ ನಾನು ಆಸ್ಪತ್ರೆಗೆ ದಾಖಲಾಗಿದ್ದೆ. ಸರ್ಜರಿಯ ನಂತರ ಅಲ್ಲಿಯೇ ಒಂದು ತಿಂಗಳು ಇರಬೇಕಾಯಿತು. ಊಟ-ತಿಂಡಿ ಹೊಟ್ಟೆಗೆ ಹೋಗಲು ನನ್ನ ಜಠರಕ್ಕೆ ಟ್ಯೂಬ್ ತೂರಿಸಿದ್ದರು. ನಾನು ಇನ್ನೇನು ಆಸ್ಪತ್ರೆಯಿಂದ ಬಿಡುಗಡೆಯಾಗಬೇಕು ಎನ್ನುವ ಸಮಯದಲ್ಲಿ ನನ್ನ ಅಪ್ಪಅಮ್ಮ ನನ್ನ ಆಸ್ಪತ್ರೆಯ ಕೋಣೆಗೆ ಬಂದರು. ನನ್ನ ಅಮ್ಮ ಅಳುತ್ತಿದ್ದಳು. ಅವತ್ತು ಆಕೆಗೆ ನನ್ನನ್ನು ಮನೆಗೆ ಕರೆದುಕೊಂಡು ಬರಬೇಡ ಎಂದು ನನ್ನ ಹೆಂಡತಿ ಫೋನ್ ಮಾಡಿದ್ದಳಂತೆ. ಕಾರಣ ಕೇಳಿದರೆ, ಅವಳ ಕೈಯ್ಯಲ್ಲಿ ನನ್ನನ್ನು ನೋಡಿಕೊಳ್ಳಲು ಆಗುವುದಿಲ್ಲವೆಂತಲೂ, ತಾನು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುತ್ತಿರುವುದಾಗಿಯೂ ಹೇಳಿದಳಂತೆ.
  • ನನಗೆ 2000 ದ ಇಸವಿಯಲ್ಲಿ ಲಕ್ವ ಹೊಡೆದಿತ್ತು. ನನ್ನನ್ನು ಕಾಣಲು ಆಸ್ಪತ್ರೆಗೆ ನನ್ನ ಹೆಂಡತಿ ಲಾಯರ್ ಜೊತೆ ಬಂದಳು! ನಾನು ಅಲ್ಲಿ ಮಲಗಿರಬೇಕಾದರೆ, ತಾನು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಹೇಳಿದಳು. ಅವತ್ತು ಕ್ರಿಸ್‌ಮಸ್ ಈವ್! (ಕ್ರಿಸ್‌ಮಸ್‌ನ ಹಿಂದಿನ ದಿನ)
  • ನಾನು ಹಾಗು ನನ್ನ ಹೆಂಡತಿ ಕ್ರಿಸ್‌ಮಸ್‌ಗೆ ಅವಳ ಅಪ್ಪನ ಮನೆಗೆ ಹೋಗಲು ತಯಾರಾಗುತ್ತಿದ್ದೆವು. ಆಗ ನಾನು ಅವಳಿಗೆ, ನಾನು ಬರುವುದಿಲ್ಲ, ನಾನೀಗ ಬೇರೊಬ್ಬಳನ್ನು ನೋಡುತ್ತಿದ್ದೇನೆ ಎಂದು ಹೇಳಿದೆ.
  • ನಾವಿಬ್ಬರೂ ಕ್ಲಬ್ಬಿನಲ್ಲಿ ಇದ್ದೆವು. ನನ್ನ ಹೆಂಡತಿ ಹಾರ್ಡ್ ಲಿಕ್ಕರ್ ತೆಗೆದುಕೊಂಡಿದ್ದಳು. ನಾವಿಬ್ಬರೂ ಡ್ಯಾನ್ಸ್ ಫ್ಲೋರ್‌ನಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ನನ್ನನ್ನು ಅಲ್ಲಿಯೇ ಬಿಟ್ಟು ಆಕೆ ಟೇಬಲ್ ಒಂದರ ಮೇಲೆ ಹತ್ತಿ, ಎರಡು ಹಾಡುಗಳಿಗೆ ಹಾಲ್‌ನಲ್ಲಿದ್ದ ಎಲ್ಲಾ ಜನರಿಗೂ ಬೆತ್ತಲೆ ನೃತ್ಯ ಮಾಡಿದಳು. ಹೀಗೆ ಎಲ್ಲವನ್ನೂ ತೋರಿಸಿದ ಬಳಿಕ ಯಾವನೋ ಒಬ್ಬನ ಮೇಲೆ ಮೇಲಿಂದ ಬಿದ್ದು, ಅವನೊಂದಿಗೆ ಶಾಶ್ವತವಾಗಿ ಹೊರಟು ಹೋದಳು.
  • ನಮ್ಮ ಮದುವೆಯ ಆನ್ನಿವರ್ಸರಿ ಡಿನ್ನರ್‌ಗೆ ಆತ ಬರಲಿಲ್ಲ. ಕೇವಲ 'ಗುಡ್‌ಬೈ' ಎಂದು ಮಾತ್ರ ಬರೆದಿದ್ದ ನೋಟ್ ಇಟ್ಟು ಹೂಗಳನ್ನು ಕಳುಹಿಸಿದ.
  • ನನ್ನ ಬಾಯ್‌ಫ್ರೆಂಡ್ ನನ್ನೊಂದಿಗೆ ಬ್ರೇಕ್‌ಅಪ್ ಮಾಡಿಕೊಳ್ಳುತ್ತಿರುವ ವಿಷಯವನ್ನು ಇಮೇಯ್ಲ್‌ನಲ್ಲಿ ಕಳುಹಿಸಿದ. ಅದಾದ ಸ್ವಲ್ಪ ಹೊತ್ತಿಗೆ ಆತನ ಹೊಸ ಗರ್ಲ್‌ಫ್ರೆಂಡ್ ನನಗೆ SMS ಕಳುಹಿಸಿದಳು: "ಎರಡು ವಾರಗಳ ಒಳಗೆ ನೀನು ಬೇರೆ ಜಾಗ ನೋಡಿಕೊ. ಯಾಕೆಂದರೆ ನಾನು ಅಲ್ಲಿಗೆ ಮೂವ್ ಆಗುತ್ತಿದ್ದೇನೆ."
  • ನನ್ನ ಬಾಯ್‌ಫ್ರೆಂಡ್ ಒಂದು ದಿನ ಸಿನಿಮಾ ಹಾಲ್‌ನಲ್ಲಿ ಬೇರೊಬ್ಬ ಹುಡುಗಿಯೊಂದಿಗೆ ಚಕ್ಕಂದ ಆಡುತ್ತ ಸಿನೆಮಾ ನೋಡುತ್ತಿದ್ದಾಗ ಸಿಕ್ಕಿಬಿದ್ದ. ನಾನು ಮತ್ತು ನನ್ನ ಸ್ನೇಹಿತರು ಕುಳಿತಿದ್ದ ಸಾಲಿನ ಮುಂದಿನ ಸಾಲಿನಲ್ಲಿಯೆ ಅವರಿಬ್ಬರೂ ಕುಳಿತಿದ್ದರು!
  • ನಮ್ಮ ಮದುವೆ ಇನ್ನು ಆರು ತಿಂಗಳು ಇದೆ ಎನ್ನುವಾಗ ನನ್ನ ಭಾವಿಪತಿ ಫೊನ್ ಮಾಡಿ ತನಗೆ ಏನು ಬೇಕಾಗಿದೆ ಎಂತಲೆ ಗೊತ್ತಾಗುತ್ತಿಲ್ಲ, ಎಂದ. ಹಿನ್ನೆಲೆಯಲ್ಲಿ ಅವನಿಗೆ ಐ ಲವ್ ಯು ಎನ್ನುತ್ತಿದ್ದ ಹೆಂಗಸೊಬ್ಬಳ ಸ್ವರ ನನಗೆ ಕೇಳಿಸಿತು. ಅವನೂ ಅವಳಿಗೆ ಐ ಲವ್ ಯು ಎಂದ. ನಮ್ಮ ಮದುವೆ ಮುರಿಯಿತು. ಅವನು ಪ್ರಪೋಸ್ ಮಾಡುವಾಗ ಕೊಟ್ಟಿದ್ದ ಉಂಗುರವನ್ನು ನಾನು ಅವನಿಗೆ ವಾಪಸು ಮಾಡಲಿಲ್ಲ. ಅದಕ್ಕಾಗಿ ನನ್ನ ಮೇಲೆ ಕೇಸು ಹಾಕಿದ.
  • 'ಇಲ್ಲಿಗೆ ಸಾಕು' ಎಂದು ನನ್ನ ಬಾಯ್‌ಫ್ರೆಂಡ್ ನನಗೊಂದು ಎರಡು ಪದಗಳ SMS ಕಳುಹಿಸಿದ. ಅಷ್ಟೆ. ಅಲ್ಲಿಗೆ ನಮ್ಮ ಸಂಬಂಧ ಮುಗಿಯಿತು.

Jan 21, 2007

ಸೆಕೆಂಡ್ ಹ್ಯಾಂಡ್ ಹಡಗಿಗೆ ಕೈಯ್ಯೊಡ್ಡಿ ನಿಂತ ಭಾರತ!!!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಫ಼ೆಬ್ರವರಿ 2, 2007 ರ ಸಂಚಿಕೆಯಲ್ಲಿನ ಲೇಖನ)

ಕಳೆದ ವಾರ ನಡೆದ ಎರಡು ಘಟನೆಗಳು ಭಾರತದ ಮಿಲಿಟರಿ ಅಸಾಮರ್ಥ್ಯಕ್ಕೆ ಹಿಡಿದ ಎರಡು ಜ್ವಲಂತ ನಿದರ್ಶನಗಳು. ಇಲ್ಲಿ ಮಿಲಿಟರಿ ಅಸಾಮರ್ಥ್ಯ ಎಂದರೆ ಅದನ್ನು ನಮ್ಮ ಸೈನಿಕರ ಅಸಾಮರ್ಥ್ಯ ಎಂದು ಭಾವಿಸಬಾರದು. ಯಾಕೆಂದರೆ, ಅಂತಿಮವಾಗಿ ಮಿಲಿಟರಿಗೆ ಏನು ಬೇಕು, ಏನು ಬೇಡ ಎನ್ನುವುದನ್ನು ತೀರ್ಮಾನಿಸುವವರು ರಾಜಕಾರಣಿಗಳು, ಅಧಿಕಾರಿಗಳು. ಹಾಗಾಗಿ ಇದು ಸಂಪೂರ್ಣವಾಗಿ ನಮ್ಮ ದೇಶದ ಆಡಳಿತಗಾರರ ದೂರದೃಷ್ಟಿಗೆ, ಕನಸಿಗೆ, ಕೆಚ್ಚಿಗೆ, ಇಚ್ಚಾಶಕ್ತಿಗೆ ಸಂಬಂಧಿಸಿದ್ದು.

ಇಂದು ಬಹುಶಃ ಸಾವಿರಾರು ಕೃತಕ ಉಪಗ್ರಹಗಳು ಭೂಮಿಯ ಮೇಲೆ ಅಂತರಿಕ್ಷದಲ್ಲಿವೆ. ಕೆಲವು ಭೂಮಿಯನ್ನು ನಾನಾ ತರಹ, ನಾನಾ ಸಲ ಸುತ್ತುವ ಉಪಗ್ರಹಗಳಾದರೆ, ಇನ್ನು ಕೆಲವು ಒಂದೇ ಸ್ಥಳದಲ್ಲಿ ಇರುವಂತೆ ಕಾಣಿಸುವ ಜಿಯೊಸ್ಟೇಷನರಿ ಉಪಗ್ರಹಗಳು. (ಆದರೆ ಅವೂ ಸಹ ಭೂಮಿಯನ್ನು ದಿನಕ್ಕೊಂದು ಬಾರಿ ಸುತ್ತುತ್ತವೆ.) ಅಂತರರಾಷ್ಟ್ರ್ರೀಯ ಬಾಹ್ಯಾಕೇಶ ಕೇಂದ್ರ ಸಹ ಒಂದು ರೀತಿಯ ಉಪಗ್ರಹವೆ. ಅದು ಎಷ್ಟು ವೇಗದಲ್ಲಿ ಭೂಮಿಯನ್ನು ಸುತ್ತುತ್ತಿದೆ ಎಂದರೆ, ಡಿಸೆಂಬರ್ ತಿಂಗಳಿನಲ್ಲಿ ಆ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್, 2007 ರ ಹೊಸ ವರ್ಷವನ್ನು 16 ಬಾರಿ ಆಚರಿಸಿದರು. ಹೇಗೆಂದರೆ ಆ ಬಾಹ್ಯಾಕೇಶ ಕೇಂದ್ರ 24 ಘಂಟೆಗಳಲ್ಲಿ 16 ಸಲ ಭೂಮಿಯನ್ನು ಸುತ್ತುತ್ತದೆ!

ಉಪಗ್ರಹಗಳನ್ನು ನಾಗರೀಕ ಮತ್ತು ಮಿಲಿಟರಿ ಉದ್ದೇಶಗಳೆರಡಕ್ಕೂ ಬಳಸಲಾಗುತ್ತದೆ. ಭಾರತದ ಬಹಳಷ್ಟು ಉಪಗ್ರಹಗಳು ನಾಗರೀಕ ಉದ್ದೇಶಕ್ಕೆ ಬಳಸುವ ಕಮ್ಯುನಿಕೇಶನ್ ಉಪಗ್ರಹಗಳು. ಅವುಗಳ ಉಪಯೋಗ ಟಿವಿ, ರೇಡಿಯೋ, ಟೆಲಿಫೋನ್, ಇತ್ಯಾದಿಗಳ ಸಿಗ್ನಲ್‌ಗಳನ್ನು ಪ್ರಸಾರ ಮಾಡವುದು. ಒಂದು ದೇಶ, ಭೂಭಾಗದ ಮೇಲೆ ಕ್ಯಾಮೆರಾ ಕಣ್ಣಿಟ್ಟು ಗೂಢಚಾರಿಕೆ ನಡೆಸುವ ಮಿಲಿಟರಿ ಉಪಗ್ರಹಗಳೂ ಕಮ್ಯುನಿಕೇಶನ್ ಉಪಗ್ರಹಗಳೆ. ಇನ್ನು ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (GPS) ಉಪಗ್ರಹಗಳಿಂದ ಪಡೆವ ಮಾಹಿತಿಯನ್ನು ಮುಂದುವರಿದ ದೇಶಗಳಲ್ಲಿ ಸಾಮಾನ್ಯ ಕಾರು ಚಾಲಕರೂ ಸಹ ರೋಡ್ ಡೈರೆಕ್ಷನ್ಸ್‌ಗೆ ಉಪಯೋಗಿಸುತ್ತಾರೆ. ಹಾಗೆಯೆ ಮಿಲಿಟರಿಯವರು ಸದ್ದಾಮ್ ಹುಸೇನ್ ಯಾವ ಮನೆಯಲ್ಲಿ ಅಡಗಿ ಕುಳಿತಿದ್ದಾನೆ, ಕ್ಷಿಪಣಿಗೆ ಯಾವ ಮಾಹಿತಿ ನೀಡಿದರೆ ಅದು ಹೋಗಿ ಅದೇ ಮನೆಯ ಮೇಲೆ ಬಾಂಬ್ ಹಾಕುತ್ತದೆ ಎಂದು ಲೆಕ್ಕ ಹಾಕಲೂ ಬಳಸುತ್ತಾರೆ.

ಈ ಉಪಗ್ರಹಗಳಿಗೂ ಆಯಸ್ಸು ಇರುತ್ತದೆ. ಐದಾರು ವರ್ಷಗಳ ನಂತರ ಅವುಗಳಲ್ಲಿ ಬಹಳವು ಉಪಯೋಗಕ್ಕೆ ಬರುವುದಿಲ್ಲ. ಈ ವಿಜ್ಞಾನ ಕೆಲವೊಮ್ಮೆ ಯಾವ ವೇಗದಲ್ಲಿ ಮುಂದುವರೆಯುತ್ತದೆ ಎಂದರೆ, ನಾಲ್ಕೈದು ವರ್ಷಗಳ ಹಿಂದೆ ಉಪಯುಕ್ತ ಮಾಹಿತಿ ಎನ್ನಿಸುತ್ತಿದ್ದ ಮಾಹಿತಿ ಇಂದು ಓಬೀರಾಯನ ಕಾಲದ ಮಾಹಿತಿ ಎನ್ನಿಸಿಕೊಳ್ಳುತ್ತದೆ. ಈ ಆಯಸ್ಸು ಮುಗಿದ ಉಪಗ್ರಹಗಳು ಯಾರಿಗೂ ಯಾವುದೇ ಅಪಾಯ ಮಾಡದೆ, ತಮ್ಮ ಕಕ್ಷೆಯಲ್ಲಿ ಅನಂತ ಕಾಲ ಸುತ್ತುತ್ತವೆ ಅಷ್ಟೆ.

ಭೂಮಿಯಿಂದ 865 ಕಿ.ಮೀ. ದೂರದಲ್ಲಿ ಇಂತಹ ಆಯಸ್ಸು ಮುಗಿದಿದ್ದ ತನ್ನದೆ ಉಪಗ್ರಹವೊಂದನ್ನು ಇದೇ ಜನವರಿ 11 ರಂದು ಚೀನಾ ದೇಶ ಕ್ಷಿಪಣಿ ಉಡಾಯಿಸಿ ನುಚ್ಚುನೂರು ಮಾಡಿತು. ಚೀನಾ ಇದನ್ನು ಎಲ್ಲಿಯೂ ಹೇಳದಿದ್ದರೂ ಬಾಹ್ಯಾಕಾಶದ ಮೇಲೆ ನಿರಂತರ ಕಣ್ಣಿಟ್ಟಿರುವ ಅಮೇರಿಕಕ್ಕೆ ಇದು ಗೊತ್ತಾಗಿ ಅದಕ್ಕೆ ಶಾಕ್ ಆಯಿತು. ಯಾಕೆಂದರೆ, ಹೀಗೆ ಅಂತರಿಕ್ಷದಲ್ಲಿನ ಉಪಗ್ರಹಗಳನ್ನು ನಾಶ ಪಡಿಸುವ ತಾಕತ್ತು ಇಲ್ಲಿಯತನಕ ಇದ್ದದ್ದು ಅಮೇರಿಕ ಮತ್ತು ರಷ್ಯಾಕ್ಕೆ ಮಾತ್ರ. ಈಗ ಅದು ಚೀನಾ ದೇಶಕ್ಕೂ ಇದೆ ಎಂದು ಸಾಬೀತಾಯಿತು.

ಇಂದು ಅಮೇರಿಕ ತಾನು ನಡೆಸುವ ಪ್ರತಿಯೊಂದು ಯುದ್ಧ ಕಾರ್ಯಾಚರಣೆಗೂ ಉಪಗ್ರಹಗಳನ್ನು ಅವಲಂಬಿಸಿದೆ. ಪ್ರಪಂಚದ ಯಾವುದೇ ಮೂಲೆಯಲ್ಲೇ ಆಗಲಿ, ಮೇಲೆ ಸೂರಿರದ ಬಯಲಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ತನ್ನ ಉಪಗ್ರಹಗಳ ಮೂಲಕ ಅಮೇರಿಕ ನೋಡುತ್ತದೆ. ತನಗೆ ಬೇಕಾದ ಟೆರ್ರರಿಸ್ಟ್‌ಗಳು ಅಡಗಿ ಕುಳಿತಿರುವ ಜಾಗದ ಮಾಹಿತಿ ತಿಳಿದರೆ ಸಾಕು, ಆ ಜಾಗಕ್ಕೆ ಹತ್ತಿರ ಇರಬಹುದಾದ ತನ್ನ ಹಡಗಿನಿಂದ ಕೂಡಲೆ ಉಪಗ್ರಹಗಳ ನೆರವಿನಿಂದ ಕ್ಷಿಪಣಿ ಉಡಾಯಿಸುತ್ತದೆ. ತನ್ನ ಸೈನಿಕರು ಹೋಗುವುದಕ್ಕಿಂತ ಮುಂಚೆಯೆ, ವಿಮಾನಗಳನ್ನೂ ಸಹ ಕಳುಹಿಸದೆ, ಸಾವಿರಾರು ಮೈಲಿ ದೂರದಲ್ಲಿರುವ ತನ್ನ ಹಡಗಿನಿಂದ ಕ್ಷಿಪಣಿಗಳನ್ನು ಕರಾರುವಾಕ್ಕಾಗಿ ಕಳುಹಿಸಿ ಆ ಸ್ಥಳವನ್ನೆಲ್ಲ ಬುಡಮೇಲು ಮಾಡುವ ತಾಕತ್ತು ಇವತ್ತು ಅಮೇರಿಕಕ್ಕಿದೆ. ಅಫ್ಘಾನಿಸ್ತಾನ್ ಮತ್ತು ಇರಾಕಿನಲ್ಲಿ ನಡೆಯುತ್ತಿರುವ ಗೆರಿಲ್ಲಾ ಮಾದರಿಯ ಯುದ್ದದಲ್ಲಿ ಅಮೇರಿಕದ ಸೈನಿಕರ ಸಾವಿನ ಪ್ರಮಾಣ ಕಡಿಮೆಯಿದ್ದರೆ ಅದಕ್ಕೆ ಮುಖ್ಯ ಕಾರಣ ಅವರ ಉಪಗ್ರಹಾಧಾರಿತ ಆಧುನಿಕ ತಂತ್ರಜ್ಞಾನ.

ಈಗ ಅಂತಹ ಉಪಗ್ರಹಗಳನ್ನೆಲ್ಲ ಚೈನಾ ಮನಸ್ಸು ಮಾಡಿದರೆ ನುಚ್ಚುನೂರು ಮಾಡಬಲ್ಲದು ಎನ್ನುವುದೆ ಅಮೇರಿಕದ ಆಕ್ಷೇಪಣೆಗೆ ಮುಖ್ಯ ಕಾರಣ. ಈ ಘಟನೆ ಅಮೇರಿಕಕ್ಕೇ ಗಾಬರಿ ಉಂಟುಮಾಡಿದೆ ಎನ್ನಬಹುದಾದರೆ, ಚೀನಾದವರು ನಮಗಿಂತ ಮಿಲಿಟರಿಯಲ್ಲಿ ಎಷ್ಟು ಮುಂದಿದ್ದಾರೆ ಎನ್ನುವುದನ್ನು ನಾವು ಸುಲಭವಾಗಿ ಊಹಿಸಬಹುದು.

ಚೀನಾ ಹೀಗೆ ಸದ್ದಿಲ್ಲದ್ದೆ ಆಕಾಶದಲ್ಲಿ ದೀಪಾವಳಿ ಆಚರಿಸುತ್ತಿದ್ದರೆ, ಭಾರತ 39 ವರ್ಷಗಳಷ್ಟು ಹಳೆಯದಾದ ಸೆಕೆಂಡ್ ಹ್ಯಾಂಡ್ ಮಿಲಿಟರಿ ಹಡಗನ್ನು ಕಳೆದ ವಾರವಷ್ಟೆ ಅಮೇರಿಕಾದಿಂದ ಕೊಂಡುಕೊಂಡು ಹೆಮ್ಮೆಯಿಂದ ಬೀಗುತ್ತಿತ್ತು! 1968 ರಲ್ಲಿಯೆ ಅಮೇರಿಕದ ನೌಕಾದಳ ಸೇರಿದ USS Trenton ಎಂಬ ಈ ಹಡಗನ್ನು ಭಾರತ ಸರ್ಕಾರ 218 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಆ ಹಡಗು ನಾವು ನಮಗಿಂತ ಮಿಲಿಟರಿಯಲ್ಲಿ ಅನೇಕ ಪಟ್ಟು ಬಲಿಷ್ಠರಾದ ಚೀನಾದವರ ಮೇಲೆ ಯುದ್ಧ ಮಾಡುವಾಗ ಹೆಚ್ಚು ಉಪಯೋಗಕ್ಕೆ ಬರದಿದ್ದರೂ ನಮಗಿಂತ ಕನಿಷ್ಠರಾದ ಪಾಕಿಸ್ತಾನದ ಮೇಲೆ ಖಂಡಿತ ಉಪಯೋಗಕ್ಕೆ ಬರುತ್ತದೆ! ಹಾಗಾಗಿ ಅದರ ಉಪಯೋಗದ ಬಗ್ಗೆ ಎರಡನೇ ಪ್ರಶ್ನೆಯಿಲ್ಲ. ಆದರೆ ಇಲ್ಲಿನ ದುರಂತ ಏನೆಂದರೆ, ನಮ್ಮ ಸೈನಿಕರಿಗೆ ಅಮೇರಿಕ 40 ವರ್ಷಗಳ ಹಿಂದೆ ತಯಾರಿಸಿದಂತಹ ಹಡಗನ್ನು ನಾವೇ ತಯಾರಿಸಿ ನೀಡಲು ನಮಗೆ ಇಲ್ಲಿಯತನಕವೂ ಸಾಧ್ಯವಾಗಿಲ್ಲ ಎನ್ನುವುದು.

ಅಸಮರ್ಥ ನಾಯಕರು, ದೇಶಪ್ರೇಮವಿಲ್ಲದ ಅಧಿಕಾರಶಾಹಿ, ಪಲಾಯನವಾದವನ್ನೆ ವೇದಾಂತ, ಮುಕ್ತಿಗೆ ದಾರಿ ಎಂದು ಬೋಧಿಸುತ್ತ ಬಂದ ಮತಾಂಧರು, ಸ್ವಾಭಿಮಾನ ಮತ್ತು ಪೌರಪ್ರಜ್ಞೆ ಇಲ್ಲದ ಜನರ ಅಡಿಯಲ್ಲಿ ಅನೇಕ ವರ್ಷಗಳ ಕಾಲ ಬಿದ್ದು ನರಳಿದ ಕಾರಣಕ್ಕೆ ಇವತ್ತಿಗೂ ನಮ್ಮ ಭವ್ಯ ಭಾರತ ಕೇವಲ ಬೆಂಗಳೂರಿನಷ್ಟು ಜನಸಂಖ್ಯೆಯಿರುವ, ನಮ್ಮ ಗುಲ್ಬರ್ಗ ಜಿಲ್ಲೆಯಷ್ಟು ಮಾತ್ರವೆ ಭೂವಿಸ್ತಾರವಿರುವ ಇಸ್ರೇಲ್ ದೇಶದಿಂದ ವರ್ಷಕ್ಕೆ 7000 ಕೋಟಿ ರೂಪಾಯಿಗಳಷ್ಟು ಮಿಲಿಟರಿ ಆಯುಧಗಳನ್ನು ಆಮದು ಮಾಡಿಕೊಳ್ಳುತ್ತಿದೆ! ಇಂತಹ ಅಸಹಾಯಕತೆಯ ಬಗ್ಗೆ ಯೋಚಿಸದ ಜನಕ್ಕೆ ಸದ್ಯದ ಬರ್ನಿಂಗ್ ಇಷ್ಯೂಸ್ ಏನೆಂದರೆ ಸದ್ದಾಮ್‌ಗೆ ನೇಣು ಆಗಿದ್ದು, ವಿರಾಟ್ ಶಕ್ತಿಪ್ರದರ್ಶನ ಮಾಡುವುದು, ಮೊಟ್ಟೆಯನ್ನು ನಿಷೇಧಿಸುವುದು! ಧರ್ಮಭೀರುಗಳ ಮಾತು ಕೇಳಿಕೊಂಡು ಸೈನ್ಯದಲ್ಲಿ ಮೊಟ್ಟೆ, ಮಾಂಸಾಹಾರ ನಿಷೇಧಿಸಿಲ್ಲ ಎನ್ನುವುದೊಂದೆ ಸದ್ಯದ ಸಮಾಧಾನ!!! ಪಕ್ಕದ ಮತಾಂಧ ಪಾಕಿಸ್ತಾನದ ಭಯವಿಲ್ಲದೆ ಹೋಗಿದ್ದರೆ ನಮ್ಮ ಧರ್ಮಗುರುಗಳು, ಅಡ್ವಾಣಿ ಸಾಹೇಬರು ಅಲ್ಲಿಯೂ ಬಾಲವಾಡಿಸಿ, ಸೈನಿಕರಿಗೆ ಲಾಠಿ ಮಾತ್ರ ಕೊಟ್ಟು ಬಾಳೆಹಣ್ಣಿನ ರಸಾಯನವನ್ನು ಪಥ್ಯ ಮಾಡಿಬಿಡುತ್ತಿದ್ದರು!

Jan 12, 2007

ಇಂಟರ್‍ನೆಟ್‍ನಲ್ಲಿ ನವಗ್ರಹ ಕಾಟ!!!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಜನವರಿ 26, 2007 ರ ಸಂಚಿಕೆಯಲ್ಲಿನ ಲೇಖನ)

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಾಲಿ ಅಧ್ಯಕ್ಷರಾದ ದಲಿತಕವಿ ಸಿದ್ದಲಿಂಗಯ್ಯನವರು ತಮ್ಮ ಆತ್ಮಕತೆಯಾದ ಊರುಕೇರಿಯ 'ಉಡುಪಿಗೆ ಹೋದದ್ದು' ಅಧ್ಯಾಯದಲ್ಲಿ ಹೀಗೆ ಬರೆಯುತ್ತಾರೆ:

“ಉಡುಪಿಯ ಒಂದು ಸಂಘದವರು ವಿಚಾರಸಂಕಿರಣ ಮಾಡಿದ್ದರು. ವಿಚಾರಸಂಕಿರಣದಲ್ಲಿ ನಾವು ವೇದಿಕೆಯ ಮೇಲೆ ಕುಳಿತಿದ್ದೆವು. ಪೇಜಾವರ ಶ್ರೀಗಳು ಆಶೀರ್ವಾದ ಮಾಡಬೇಕಾಗಿತ್ತು. ಅವರು ಬಂದ ಕೂಡಲೇ ಇಡೀ ಸಭೆ ಎದ್ದು ನಿಂತು ಗೌರವ ಸೂಚಿಸಿತು. ವೇದಿಕೆಯಲ್ಲಿದ್ದವರೂ ಎದ್ದು ನಿಂತರು. ಕುಳಿತಿದ್ದವನು ನಾನೊಬ್ಬನೇ. ಈಗ ನನಗೆ ಆ ಬಗ್ಗೆ ಪಶ್ಚಾತ್ತಾಪವಾಗುತ್ತಿದೆ. ಆದರೆ ಆಗ ನಾನು ಮಾಡಿದ್ದು ಸರಿ ಎನ್ನಿಸುತ್ತದೆ. ಹಾಗೆ ಕುಳಿತಿದ್ದರಿಂದ ನಾನು ಸ್ವಾಮಿಗಳು ಮತ್ತು ಸಭಿಕರ ಗಮನ ಸೆಳೆದೆ. ಅತ್ಯಂತ ಚಿಕ್ಕವನಂತೆ ಕಾಣುತ್ತಿದ್ದ ನನ್ನನ್ನು ಯಾರೂ ಲಘುವಾಗಿ ತೆಗೆದುಕೊಳ್ಳದ ಪರಿಸ್ಥಿತಿ ನಿರ್ಮಾಣವಾಯಿತು. ಪೇಜಾವರ ಸ್ವಾಮಿಗಳು ದಲಿತರ ಕೇರಿಗಳಿಗೆ ಭೇಟಿ ಕೊಟ್ಟಿದ್ದರು. ಸುಧಾರಣೆಯ ಮಾತುಗಳನ್ನು ಆಡುತ್ತಿದ್ದರು. ಆ ವ್ಯವಸ್ಥೆಯಲ್ಲಿ ಅವರು ಅಷ್ಟು ಮಾಡಿದ್ದೇ ಹೆಚ್ಚಾಗಿತ್ತು. ಆದರೂ ಆಗ ಉಗ್ರ ಕ್ರಾಂತಿಕಾರಿಯಾದ ನಾನು ಪೇಜಾವರರನ್ನು ಕುರಿತು ನಿಮಗೆ ನಿಜವಾಗಿ ದಲಿತರ ಬಗ್ಗೆ ಕಾಳಜಿ ಇದ್ದರೆ ಒಬ್ಬ ಅಸ್ಪೃಶ್ಯನನ್ನು ನಿಮ್ಮ ಮಠಕ್ಕೆ ಮಠಾಧಿಪತಿಯಾಗಿ ಮಾಡಿ ಎಂದು ಬಹಿರಂಗವಾಗಿ ಕೇಳಿದೆ. ಸ್ವಾಮಿಗಳು ಇದಕ್ಕೆ ಸ್ಪಷ್ಟವಾದ ಉತ್ತರ ಹೇಳದಿದ್ದರೂ ಸುಧಾರಣೆಯ ಬಗ್ಗೆ ಅವರಿಗಿರುವ ಕಳಕಳಿಯನ್ನು ವಿವರಿಸಿದರು. ಸಂಘದವರು ನಾನು ಉಡುಪಿ ಬಿಡುವವರೆಗೂ ತುಂಬಾ ಚೆನ್ನಾಗಿ ನೋಡಿಕೊಂಡರು."”


ಹೀಗೆ, ಇದ್ದುದರಲ್ಲೆ ಪ್ರಗತಿಪರರೆಂದು ಹೆಸರಾಗಿದ್ದವರು ಪೇಜಾವರ ಶ್ರೀಗಳು. ಆದರೆ ಇತ್ತೀಚಿನ ಹತ್ತಾರು ವರ್ಷಗಳಲ್ಲಿ ಅವರ ಪರಧರ್ಮ ಅಸಹಿಷ್ಣುತೆ ನಾನಾ ತರಹ ಕಾಣಿಸುತ್ತಿತ್ತು. ಹಿಂದೂ ಮತೀಯರಲ್ಲಿನ ಅಸಮಾನತೆಯನ್ನು, ತಾರತಮ್ಯವನ್ನು ಹೋಗಲಾಡಿಸಲು ಪ್ರಯತ್ನಿಸಿ, ಒಳಗಿನಿಂದ ಅದನ್ನು ಕಟ್ಟಲು ಪ್ರಯತ್ನಿಸದೆ, ಹಿಂದೂ ಮತೀಯರಿಗೆ ನಿಜವಾದ ಅಪಾಯವಿರುವುದು ಮುಸ್ಲಿಮರಿಂದ, ಕ್ರಿಶ್ಚಿಯನ್ನರಿಂದ, ಜಾತ್ಯತೀತರಿಂದ ಎನ್ನುವಂತೆ ಮಾತನಾಡುತ್ತಿದ್ದರು. ಕರಸೇವೆ, ಬಾಬರಿ ಮಸೀದಿ ಧ್ವಂಸ ಮುಂತಾದ ಸಂಘಪರಿವಾರದ ಚಟುವಟಿಕೆಗಳಲ್ಲಿ ಮಂಚೂಣಿಯಲ್ಲಿ ಪಾಲ್ಗೊಂಡಿದ್ದರಿಂದ ಬಹಳಷ್ಟು ಪ್ರಚಾರ ಸಿಕ್ಕಿ,ಕರ್ನಾಟಕದ ಮಠಾಧೀಶರಲ್ಲೆಲ್ಲ ರಾಜಕಾರಣಿಗಳ ಮಟ್ಟದಲ್ಲಿ ಅತಿಯಾದ ಪ್ರಭಾವ ಪಡೆದುಕೊಂಡು ಬಿಟ್ಟರು.

ಹಾಗೆ ನೋಡಿದರೆ, ಪೇಜಾವರರಿಗಿಂತ ಹೆಚ್ಚಿನ ಧಾರ್ಮಿಕ, ಸಾಮಾಜಿಕ ಜಾಗೃತಿಯಲ್ಲಿ ತೊಡಗಿಕೊಂಡು, ತಮ್ಮ ಮಠಗಳನ್ನು ದೊಡ್ಡ ಶೈಕ್ಷಣಿಕ ಸಂಸ್ಥೆಗಳನ್ನಾಗಿ, ಸಾಮಾಜಿಕ ಸಾಮರಸ್ಯದ ಕೇಂದ್ರಗಳನ್ನಾಗಿ ಮಾಡಿರುವ ಅನೇಕ ಮಠಾಧೀಶರು ಇವತ್ತು ಕರ್ನಾಟಕದಲ್ಲಿದ್ದಾರೆ. ಅದರೆ ಅವರ್‍ಯಾರಿಗೂ ಪೇಜಾವರರಿಗಿರುವಷ್ಟು ರಾಷ್ಟ್ರೀಯ, ರಾಜ್ಯ ಮಟ್ಟದ ಪ್ರಭಾವ ಇಲ್ಲ. ವಿಜಯ ಕರ್ನಾಟಕ ದಿನಪತ್ರಿಕೆಯ ವಿಶ್ವೇಶ್ವರ ಭಟ್ಟರೆ ಹೇಳುವಂತೆ, "ರಾಜ್ಯದ ಕೆಲವು ಮಠಾಧೀಶರು ಎಷ್ಟೊಂದು ವಿಶ್ವಾಸ, ಪ್ರಭಾವ ಬೆಳೆಸಿಕೊಂಡಿದ್ದಾರೆಂದರೆ ಅವರು ರಾಷ್ಟ್ರಪತಿ, ಪ್ರಧಾನಿಯನ್ನು ನೇರವಾಗಿ ಪೋನಿನಲ್ಲಿ ಸಂಪರ್ಕಿಸಿ ಮಾತನಾಡಬಲ್ಲರು. ಪೇಜಾವರದ ವಿಶ್ವೇಶತೀರ್ಥ ಸ್ವಾಮೀಜಿಯವರು ವಾಜಪೇಯಿ ಪ್ರಧಾನಿಯಾಗಿದ್ದಾಗ ನೇರವಾಗಿ ಮಾತನಾಡುತ್ತಿದ್ದರು. ಪ್ರಧಾನಿ ಮನೆಗೆ ಅವರಿಗೆ ಮುಕ್ತ ಪ್ರವೇಶವಿತ್ತು. ಅಡ್ವಾಣಿಯವರೊಂದಿಗೆ ಸಹ ಅವರದೊಂದು ಸಲುಗೆಯಿತ್ತು." ಬಹುಶಃ ಅವರ ಆ ಸಲುಗೆ ಮತ್ತು ಪ್ರಭಾವ ವಾರದ ಹಿಂದೆಯೂ ಕೆಲಸ ಮಾಡಿ, ಕರ್ನಾಟಕದ ಉಪಮುಖ್ಯಮಂತ್ರಿಗಳಿಂದ ದೂರು ಕೊಟ್ಟವರನ್ನೆ ವಿಚಾರಣೆ ಮಾಡಿಸುವುದಾಗಿ ಹೇಳಿಸಿರಬೇಕು!

ಇದೊಂದು ಹಣಕ್ಕೆ ಸಂಬಂಧಿಸಿದ ವಿಷಯ. ಮೇಲುನೋಟಕ್ಕೆ ಕಾಣಿಸುವ ವಿಚಾರ ಏನೆಂದರೆ, ಬೆಳಿಗ್ಗೆ ಸಾಲ ತೆಗೆದುಕೊಂಡು ಹೋದವರು ಮಧ್ಯಾಹ್ನಕ್ಕೆ ಏನೋ ಮೋಸವಾಗಿ ಬಿಟ್ಟಿತು ಎಂದಿದ್ದಾರೆ. ಸಾಲ ಕೊಟ್ಟವರು ಅವರಿಗೆ ಒಂದು ದಿನವೂ ಸಮಯ ಕೊಡದೆ, ಕಾನೂನನ್ನು ಕೈಗೆತ್ತಿಕೊಂಡು ತಮಗೆ ಸೇರಿದ ಆವರಣವೊಂದರಲ್ಲಿ ಕೂಡಿಹಾಕಿಕೊಂಡು ಹೊಡೆದು, ಬೆದರಿಸಿ, ಸಾಲ ತೀರಿಸದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದಿದ್ದಾರೆ. ಹೊಡೆಸಿಕೊಂಡವರು ಕಾನೂನು, ಹಕ್ಕುಗಳನ್ನು ಬಲ್ಲವರು. ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಲೆಕ್ಚರರ್. ಹೀಗಾಗಿ, ಅವರು ದೈಹಿಕ ಹಿಂಸೆಯ ಬಗ್ಗೆ ದೂರು ನೀಡಲು ಪ್ರಯತ್ನಿಸಿದರೂ ಯಾರೂ ಸ್ವೀಕರಿಸಿಲ್ಲ. ಆದ್ದರಿಂದ ನೇರವಾಗಿ ಕೋರ್ಟಿಗೆ ಹೋಗಿದ್ದಾರೆ. ಕೋರ್ಟು ತನಿಖೆಗೆ ಆದೇಶಿಸುತ್ತದೆ. ಆ ಆದೇಶದಂತೆ ಪೋಲಿಸರು ಮಾಡಬೇಕಾಗಿರುವುದು, ಹಿಂಸೆ ಕೊಟ್ಟಿದ್ದು ನಿಜವೆ ಅಲ್ಲವೆ ಎಂದು ಕಂಡುಹಿಡಿಯುವುದು ಮಾತ್ರ. ಹೌದಾದರೆ, ಕಾನೂನಿನ ಪ್ರಕಾರ ಅದರಲ್ಲಿ ಪಾಲ್ಗೊಂಡವರಿಗೆ ತಪ್ಪಿಗೆ ಅನುಗುಣವಾಗಿ ಶಿಕ್ಷೆಯಾಗುತ್ತದೆ. ಹಾಗೆಂದು, ಸಾಲ ತೆಗೆದುಕೊಂಡವರ ಸಾಲವೇನೂ ಮನ್ನಾ ಆಗುವುದಿಲ್ಲ. ಸಾಲ ತೆಗೆದುಕೊಂಡಿರುವುದನ್ನು ಅವರೂ ಒಪ್ಪಿಕೊಂಡಿರುವುದರಿಂದ ಸಾಲವನ್ನು ಅವರು ತೀರಿಸಲೇಬೇಕಾಗುತ್ತದೆ.

ಇಷ್ಟು ಸರಳವಾದ ಕೇಸು ಇದು. ಆದರೆ ಯಾವಾಗ ಇದು ಬೇರೆ ಯಾವ ಪತ್ರಿಕೆಯಲ್ಲೂ ಬರದೆ, ನಮ್ಮ ಪತ್ರಿಕೆಯಲ್ಲಿ ಮಾತ್ರ ಬಂದಿತೊ, ತಕ್ಷಣ ಸ್ವಯಂಘೋಷಿತ ಹಿಂದೂ ರಕ್ಷಕರು ನಮಗೆ ಮೇಲಿಂದ ಮೇಲೆ ದೇಶವಿದೇಶಗಳಿಂದ ಕೆಟ್ಟದಾಗಿ ಪತ್ರ ಬರೆಯಲು ಆರಂಂಭಿಸುತ್ತಾರೆ. ನಮ್ಮ ಪತ್ರಿಕೆಯಲ್ಲಿ ಇಲ್ಲಿಯವರೆಗೆ ಬಂದ ಯಾವುದೆ ಜನಪರ ಕಾಳಜಿಯ ವಿಷಯವೂ, ಸಂಚಿಕೆಯೂ ಅವರಿಗೆ ಮುಖ್ಯವಾಗುವುದಿಲ್ಲ. ಮುಖ್ಯವಾಗುವುದು ಪೇಜಾವರರ ಬಗ್ಗೆ ಬರೆದ ಒಂದೇ ಒಂದು ಲೇಖನ ಮಾತ್ರ! ನಮ್ಮನ್ನು ತೆಗಳುವುದರ ಜೊತೆಗೆ, "ನೀವು ಹೇಳಿರುವುದೆಲ್ಲ ಸುಳ್ಳು. ನಿಜ ಇಲ್ಲಿದೆ ನೋಡಿ," ಎಂದು ಇಂಟರ್ನೆಟ್ಟಿನಲ್ಲಿರುವ ಒಂದು ಪಬ್ಲಿಕ್ ಫೋರಮ್‌ನ ಲಿಂಕ್ ಕಳುಹಿಸುತ್ತಾರೆ.

ಇಂತಹ ಫೋರಂಗಳಲ್ಲಿ ಬಹಳ ಜನ ತಮ್ಮ ನೈಜ ಹೆಸರನ್ನು ಮರೆಮಾಡಿ, ಯಾವುದೊ ನಿಕ್‌ನೇಮ್ ಇಟ್ಟುಕೊಂಡಿರುತ್ತಾರೆ. ನಮ್ಮ ಪತ್ರಿಕೆಗೆ ನೋಡಿ ಎಂದು ಕಳುಹಿಸಿದ ಫೋರಂನ ಹೆಸರು "ಹಿಂದುತ್ವದ ಸೈನಿಕರು" ಎಂದು. ಅದರಲ್ಲಿ ಹಿಂದು ವಿರೋಧಿ ಎನ್ನಿಸುವ ಒಂದು ಪದವೂ ಇರಲು ಸಾಧ್ಯವಿಲ್ಲ. ಅದರಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರ ಅರ್ಹತೆ ಬಹುಶಃ ಹಿಂದೂ ಮತೋನ್ಮತ್ತರಾಗಿರಬೇಕು ಎಂದಷ್ಟೆ ಇರಬೇಕು! ಇವರಿಗೆ ಪರಧರ್ಮ ಸಹಿಷ್ಣುತೆ ಎಂದರೆ ಏನೆಂದೇ ಗೊತ್ತಿಲ್ಲ. ಅದರಲ್ಲಿ ಪ್ರಕಟವಾಗಿರುವ ಪೇಜಾವರ ಶ್ರೀಗಳ ಮೇಲಿನ ದೂರಿನ ಕುರಿತಾದ ಚರ್ಚೆಯ ಕನ್ನಡ ಭಾವಾನುವಾದ ಹೀಗಿದೆ:

ಡಿಫೆಂಡರ್: ಸಂಸ್ಕೃತ ಅಧ್ಯಾಪಕನೊಬ್ಬ ಪೇಜಾವರ ಶ್ರೀಗಳ ಮೇಲೆ ದೂರು ನೀಡಿದ್ದಾನಂತೆ. ಯಾರಾದರೂ ಅದರ ಬಗ್ಗೆ ಪ್ರಕಟವಾಗಿರುವ ಆನ್‌ಲೈನ್ ಲಿಂಕ್‌ಗಳನ್ನು ಕೊಡುತ್ತೀರಾ?

ಹರ್ ಹರ್ ಮಹಾದೇವ್: ಇದೇನಾದರೂ ನಿಜ ಎಂದಾದರೆ, ಇದರಲ್ಲಿ ಹೈದರಾಬಾದಿನ ವ್ಯಾಟಿಕನ್ ಕ್ಲಬ್ ಮತ್ತು 10 ಜನಪಥ್‌ನ ಕೈವಾಡ ಇದೆ ಎನ್ನುವುದು ಗ್ಯಾರಂಟಿ.

ಹರ್ ಹರ್ ಮಹಾದೇವ್: ಇದರ ಬಗ್ಗೆ ಕೆಲವು ವಿಷಯ ಸಂಗ್ರಹಿಸಿದೆ. ಸ್ವಾಮೀಜಿ ಒಳ್ಳೆಯ ಮನಸ್ಸಿನಿಂದ ದುಡ್ಡು ಕೊಟ್ಟಿದ್ದು ನಿಜವಂತೆ, ಆದರೆ ಆ ಖದೀಮನ ಮನಸ್ಸಿನಲ್ಲಿ ಬೇರೇನೊ ಇತ್ತಂತೆ. ಮೂಲಗಳು ಹೇಳುವ ಪ್ರಕಾರ, ವೆಂಕಟೇಶನನ್ನು ಛೂಬಿಟ್ಟವರು ಲಂಕೇಶ್ ಪತ್ರಿಕೆಯ ಪ್ರಕಾಶಕರಾದ ಇಂದ್ರಜಿತ್ ಲಂಕೇಶ್ ಮತ್ತು ರವೀಂದ್ರ ರೇಷ್ಮೆ. ಆ ಪತ್ರಿಕೆ ಕಮ್ಯುನಿಸ್ಟರ ಮತ್ತು ಹಿಂದೂವಿರೋಧಿಗಳ ಮುಖವಾಣಿ. ಇಂದ್ರಜಿತ್ ಲಂಕೇಶ್‌ರ ಸೋದರಿ ಗೌರಿ ಲಂಕೇಶ್ ನಕ್ಸಲಿಸಂ ಅನ್ನು ಬೆಂಬಲಿಸಿದ್ದಾರೆ. ಕೆಲವು ವರದಿಗಳು ಆಕೆ ಇಸ್ಲಾಮಿಕ್ ಜಿಹಾದ್ ಅನ್ನು ಬೆಂಬಲಿಸಿದ್ದನ್ನು ಕನ್ಫರ್ಮ್ ಮಾಡಿವೆ.

ಹರ್ ಹರ್ ಮಹಾದೇವ್: ಅದರೆ ಪೇಜಾವರ ಸ್ವಾಮೀಜಿ ಅಷ್ಟೊಂದು ದುಡ್ಡನ್ನು ಸಾಲ ಕೊಟ್ಟ ಬಗ್ಗೆ ನನಗೆ ಆಶ್ಚರ್ಯವಾಗುತ್ತಿದೆ. ಅವರು ಪ್ರಾಮಾಣಿಕರು ಎಂದುಕೊಂಡಿದ್ದೆ. ತಿರುಪತಿಯ ಕ್ರಿಶ್ಚಿಯನ್ ಮತಾಂತರದ ಬಗ್ಗೆ ವರದಿ ಮಾಡಲು ಹೋಗಿದ್ದ 'ಹಿಂದು ಟೈಗರ್‌'ನನ್ನು ಪೋಲಿಸರು ಬಂಧಿಸಿ, ಬಿಡುಗಡೆ ಮಾಡಿದ ಬಳಿಕ, ಹಿಂದು ಟೈಗರ್ ಸಹಾಯಕ್ಕಾಗಿ ಇದೇ ಸ್ವಾಮೀಜಿ ಬಳಿಗೆ ಹೋದರೆ ಅವರು ಸಹಾಯ ಮಾಡಲು ನಿರಾಕರಿಸಿದರು. ಸ್ವಾಮೀಜಿ, ಇವತ್ತು ಏನಾಯಿತು? ಪ್ರವಚನ್ ದೇನಾ ಬಹುತ್ ಬಡಾ ಬಾತ್ ಹೈ.

ಬಿಂದುಮಾಧವ್: ನಾನು ಬೆಂಗಳೂರಿನವನು ಹಾಗೂ ಪೂರ್ಣಪ್ರಜ್ಞಾ ವಿದ್ಯಾಪೀಠದೊಂದಿಗೆ ನಿಕಟ ಸಂಪರ್ಕ ಇರುವವನು. ಇದೇ ವಿಷಯದ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳಲು ಕಳೆದ ಎರಡು ದಿನಗಳಿಂದ ವಿದ್ಯಾಪೀಠದಲ್ಲಿಯೆ ಇದ್ದೆ. ಕೊಲೆ ಪ್ರಯತ್ನದ ಆಪಾದನೆ 'ಅಪ್ಪಟ ಸುಳ್ಳು'. ಈ ಕೇಸಿನ ಹಿಂದೆ ಬಹಳಷ್ಟು ಹಿಂದುವಿರೋಧಿ ಶಕ್ತಿಗಳಿವೆ. ಸ್ವಾಮೀಜಿ ದುಡ್ಡು ಕೊಟ್ಟಿದ್ದು ನಿಜ. ಆರೋಪಿ ವೆಂಕಟೇಶ್ ದುಡ್ಡು ವಾಪಸು ಕೊಡಲು ನಿರಾಕರಿಸಿ, ಹಿಂದೂವಿರೋಧಿಗಳೊಂದಿಗೆ ಸೇರಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ. ಹಿಸ್ ಹೋಲಿನೆಸ್ ಸ್ವಾಮೀಜಿ ತಮ್ಮ ಶಿಷ್ಯರಿಗೆಲ್ಲ ಯಾವುದೆ ಡ್ರಾಸ್ಟಿಕ್ ಆಕ್ಷನ್ ತೆಗೆದುಕೊಳ್ಳದಿರಲು ಕೇಳಿಕೊಂಡಿದ್ದಾರೆ. ಯಾರಿಗಾದರೂ ವಿವರಣೆ ಬೇಕಿದ್ದರೆ ನನಗೆ ತಿಳಿಸಿ. ನಾನು ಅದನ್ನು ನೇರವಾಗಿ ಹಿಸ್ ಹೋಲಿನೆಸ್ ಇಂದ ಪಡೆಯುತ್ತೇನೆ.

ಡಿಫೆಂಡರ್: ನನ್ನದು ಕೆಲವು ಪ್ರಶ್ನೆಗಳಿವೆ: ಮಠದಿಂದ ದುಡ್ಡನ್ನು ಸಾಲ ಕೊಡುವುದು ಸ್ವಾಮೀಜಿಗಳಿಗೆ ಸಹಜವಾಗಿ ಅಭ್ಯಾಸವಾಗಿರುವ ಪರಿಪಾಠವೇ? ಅದೂ ಇಷ್ಟೊಂದು ದುಡ್ಡನ್ನು? ವೆಂಕಟೇಶ್ ಫ್ರಾಡ್ ಆದಲ್ಲಿ, ಅದು ಹೇಗೆ ಸ್ವಾಮೀಜಿಗೆ ಗೊತ್ತಾಗಲಿಲ್ಲ? ಆತನ ಪೂರ್ವಾಪರ ಗೊತ್ತಿಲ್ಲದೆ ಸ್ವಾಮೀಜಿಗಳು ಅಷ್ಟೊಂದು ಹಣವನ್ನು ಆತನಿಗೆ ಕೊಟ್ಟುಬಿಟ್ಟರೆ? ಇದು ಯಾಕೊ ಸಂಶಯಾಸ್ಪದವಾಗಿ ಕಾಣುತ್ತದೆ. ಗೊತ್ತಿಲ್ಲದ ಮನುಷ್ಯನಿಗೆ ಅವರು ಲಕ್ಷಾಂತರ ರೂಪಾಯಿ ಕೊಡಬಲ್ಲರು, ಆದರೆ ತನ್ನ ಜೀವವನ್ನೆ ತ್ಯಾಗ ಮಾಡಲು ಸಿದ್ಧವಾಗಿದ್ದ ಹಿಂದೂ ಟೈಗರ್‌ಗೆ ಏಕೆ ಸ್ವಾಮೀಜಿ ಸಹಾಯ ಮಾಡಲಿಲ್ಲ? ಈ ದುಡ್ಡು ಮಠಕ್ಕೆ ಸೇರಿದ್ದು. ವಿದ್ಯಾಪೀಠ, ದೇವಸ್ಥಾನ, ಸಮಾಜಸೇವೆಗೆ ಮುಡಿಪಾಗಿರುವ ದುಡ್ಡು ಇದು. ಅದು ಹೇಗೆ ಒಬ್ಬ ವ್ಯಕ್ತಿ ಇಷ್ಟೊಂದು ದುಡ್ಡನ್ನು ಇಷ್ಟು ಸುಲಭವಾಗಿ ಪಡೆದುಕೊಂಡ?

ಕೌಶಿಕ್777: ತಿರುಪತಿ ದೇವಾಲಯವನ್ನು ಕ್ರಿಶ್ಚಿಯನ್ನರಿಂದ ವಿಮೋಚನೆಗೊಳಿಸಲು ಹೋರಾಟ ಪ್ರಾರಂಭಿಸಿದವರೆ ಪೇಜಾವರ ಸ್ವಾಮೀಜಿಗಳು. ತಮ್ಮ ಹಿರಿತನ ಮತ್ತು ಜನ ಅವರ ಮೇಲೆ ಇಟ್ಟುಕೊಂಡಿರುವ ಗೌರವದಿಂದ ಸಹಜವಾಗಿ ಅವರೇ ಆ ಹೋರಾಟದ ನಾಯಕರಾದರು. ಕೆಲವು ನಿವೃತ್ತ ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ಗೌರವಾನ್ವಿತ ಜನರ ಸತ್ಯಶೋಧನಾ ಮಿತಿಯನ್ನು ರಚಿಸಿ, ಅದರ ಬಗ್ಗೆ ಮಾಹಿತಿ ನೀಡಲು ಅವರನ್ನು ಇವರೆ ತಿರುಪತಿಗೆ ಕಳುಹಿಸಿದ್ದರು. ಆ ಸಮಿತಿ ಸ್ವಾಮೀಜಿಗೆ ಕ್ರಿಶ್ಚಿಯನ್ನರು ಅನಧಿಕೃತವಾಗಿ ದೇವಸ್ಥಾನಕ್ಕೆ ಸೇರಿರುವ ನೆಲವನ್ನು ಆಕ್ರಮಿಸಿಕೊಂಡಿರುವ ಬಗ್ಗೆ ವರದಿ ನೀಡಿತು. ನಿಯಮಗಳಿಗೆ ವಿರುದ್ಧವಾಗಿ ಅನೇಕ ಕ್ರಿಶ್ಚಿಯನ್ನರು ಟಿಟಿಡಿಯಲ್ಲಿ ಕೆಲಸಕ್ಕಿದ್ದರು. ಇದಾದ ನಂತರ ಟಿಟಿಡಿ ಚರ್ಚೆಗಾಗಿ ಪೇಜಾವರ ಸ್ವಾಮೀಜಿಯನ್ನು ಕರೆಯಿತು. ಆ ಚರ್ಚೆಯ ನಂತರ ಸ್ವಾಮೀಜಿ ತಮ್ಮ ಹೋರಾಟವನ್ನು ನಿಲ್ಲಿಸಿದರು. ಈಗ ಅದರ ಬಗ್ಗೆ ಸುದ್ದಿಯೇ ಇಲ್ಲ. ಯಾಕೆ? ಯಾಕೆ? ಯಾಕೆ? ನಮ್ಮವನಿಗೆ ಸಹಾಯ ಮಾಡಲು ಸ್ವಾಮೀಜಿ ನಿರಾಕರಿಸಿದ್ದು ಯಾಕೆ? ಶುರುವಿನಲ್ಲಿ ಗದ್ದಲ ಎಬ್ಬಿಸಿದ ಬಳಿಕ ಚೆಡ್ಡಿವಾಲಾಗಳು ಹಿಂದೂಗಳ ಬೆನ್ನಿಗೆ ಇರಿಯುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ, ಭಗವದ್ಗೀತೆಯ ಮೇಲೆ ಅಥಾರಿಟಿ ಇರಬೇಕಾದ ಒಬ್ಬ ಗೌರವಯುತ ಸ್ವಾಮೀಜಿ ಯಾಕೆ ಈ ರೀತಿ ನಡೆದುಕೊಳ್ಳುತ್ತಿರುವುದು? ಕೃಷ್ಣ ಅರ್ಜುನನಿಗೆ ನೀಡಿದ ಉಪದೇಶದಿಂದ ಇವರು ಏನನ್ನು ಕಲಿತಿದ್ದಾರೆ?

ಶಿವೋಹಮ್: ಇಂತಹ ದೊಡ್ಡ ಸ್ವಾಮೀಜಿಗಳಿಗೆ ಕೊಡುವ 'ಸಂತ' ಪದವಿಯನ್ನು ನಾವು ಒಪ್ಪದೆ ಇರಲು ಇಂತಹ ಘಟನೆಗಳು ಸಹಾಯ ಮಾಡುತ್ತವೆ. ಆದರೆ ಇವರು ನಮ್ಮವರೆ ಆದ ಸನಾತನಿ ಸಾಧು ಆಗಿರುವುದರಿಂದ ನಮಗೆ ಸಂತೋಷವೇನೂ ಆಗಿಲ್ಲ. ಇತ್ತೀಚೆಗೆ ಬಹುಶಃ ಸ್ವಾಮೀಜಿಗಳು ಕೂಡ ನವಗ್ರಹಗಳ ದುಷ್ಟ ಪ್ರಭಾವಕ್ಕೆ ಒಳಗಾಗುತ್ತಾರೆ ಅನ್ನಿಸುತ್ತದೆ.

ಬಿಂದುಮಾಧವ್: ನಾನು ಸ್ವಾಮೀಜಿಗಳೊಂದಿಗೆ ಮಾತನಾಡಿ ಮುಂದಿನ ಎರಡು ವಾರಗಳಲ್ಲಿ ಉತ್ತರಗಳನ್ನು ಪಡೆಯಲು ಪ್ರಯತ್ನಿಸುತ್ತೇನೆ.”


* * *


ಈ ಲೇಖನ ಬರೆಯುತ್ತಿರುವ ಹೊತ್ತಿನಲ್ಲಿ ಅಂತರ್ಜಾಲದಲ್ಲಿನ ಈ ಬಹಿರಂಗ ಸಾರ್ವಜನಿಕ ಚರ್ಚೆ ಸದ್ಯಕ್ಕೆ ಇಲ್ಲಿಗೆ ನಿಂತಿದೆ. ಬಿಂದು ಮಾಧವರು ಮತ್ತೇನನ್ನು ಹೊರಗೆಡವುತ್ತಾರೊ ಗೊತ್ತಿಲ್ಲ!


ಗಾಂಧಿಯನ್ನು 'ಹಂದಿ' ಎಂದ ಹುಂಬ!

ಇದೇ ಫೋರಮ್‌ನಲ್ಲಿ, ಅಮೇರಿಕದಲ್ಲಿರುವ ಭಾರತೀಯ ಮೂಲದ ವಿದೂಷಕನೊಬ್ಬ ಮಹಾತ್ಮ ಗಾಂಧಿಯ ವೇಷ ಧರಿಸಿ, ಸ್ಟ್ರಿಪ್‌ಡ್ಯಾನ್ಸರ್ಸ್ ಮಾಡುವ ಲೈಂಗಿಕ ಪ್ರಚೋದನೆಯ ಪೋಲ್‌ಡ್ಯಾನ್ಸ್ ಮಾಡಿದ್ದರ ಬಗ್ಗೆಯೂ ಚರ್ಚೆಯಾಗುತ್ತಿದೆ:

ಎಚ್‌ಟಿಗಜ್ಜರ್: ನಾನು ಗಾಂಧಿಯ ಯಾವುದೆ ನೀತಿಗಳನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಯಾರೂ ಸಹ ಇಂತಹ ಅಶ್ಲೀಲ ವಿಡಿಯೊ ಮಾಡಬಾರದು.

ಅಭಿ: ಗಾಂಧಿ ಎಂಬ ಹಂದಿ ಸ್ವಾತಂತ್ರ್ಯ ಬರುವುದಕ್ಕೆ ಮೊದಲು ಹಿಂದೂಗಳ ನಂಬರ್ 1 ಶತ್ರುವಾಗಿದ್ದ. ಅವನಿಂದಲೆ ನೀನು ಈ ಫೋರಮ್‌ಗೆ ಬರುತ್ತಿರುವುದು. ಗಾಂಧಿ ಇಲ್ಲದೆ ಇದ್ದರೆ ನೀನು ಬೇರೆ ಏನನ್ನಾದರು ಮಾಡುತ್ತಿದ್ದೆ. ಹಹ್ಹಾ! ನೂರು ಕೋಟಿ ಜನ ಮಾಡದ್ದನ್ನು ಈ ಜೋಕರ್ ಮಾಡಿದ! ”ಪ್ರತಿದಿನವೂ 'ರಘುಪತಿ ರಾಘವ ರಾಜಾರಾಮ್', 'ವೈಷ್ಣವ ಜನತೊ' ಭಜನೆ ಮಾಡುತ್ತಿದ್ದ, ಭಗವದ್ಗೀತೆಯ ಸಾರವನ್ನೆಲ್ಲ ಅರಿತಿದ್ದ, ಮಹಾತ್ಮ ಎಂದು ತನ್ನ ವಾರಿಗೆಯವರಿಂದಲೆ ಕರೆಸಿಕೊಂಡ ಗಾಂಧಿ ಈ ಹಿಂದೂ ಮತೋನ್ಮತ್ತರ ಪ್ರಕಾರ ಒಂದು ಹಂದಿ; ಅವರ ನಂಬರ್ 1 ಶತ್ರು! ಸಂಘ ಪರಿವಾರದವರು ಎಷ್ಟೇ ಪತ್ರಿಕಾ ಹೇಳಿಕೆಗಳನ್ನು ನೀಡಿದರೂ ಅವರಿಗೆ ಗಾಂಧಿಯ ಬಗ್ಗೆ ಯಾವುದೇ ಪ್ರೀತಿಯಿಲ್ಲ ಹಾಗು ಅವರು ಗಾಂಧಿ ಕೊಲೆಯನ್ನು ಸಮರ್ಥಿಸುತ್ತಾರೆ ಎನ್ನಲು ಅವರು ಒಳಕೋಣೆಯಲ್ಲಿ ಮಾತನಾಡಿಕೊಳ್ಳುವ ಇಂತಹ ಮಾತುಗಳಿಗಿಂತ ಬೇರೆ ಉದಾಹರಣೆ ಬೇಕೆ? ಇಲ್ಲಿನ ಫೋರಮ್‌ನಲ್ಲಿ ಪಾಲ್ಗೊಳ್ಳುವವರು 'ನಾನು ಹಿಸ್ ಹೋಲಿನೆಸ್ ಪೇಜಾವರರಿಂದಲೆ ನೇರ ಉತ್ತರ ಪಡೆಯುತ್ತೇನೆ,' ಎನ್ನುವ ಪೇಜಾವರರ ಅಂತರಂಗದ ಶಿಷ್ಯರು! ಇವರ ಈ ಪರಿಯ ಮಿಲಿಟೆಂಟ್ ಮೂಲಭೂತವಾದ ತಾಲಿಬಾನಿಗಳಿಗಿಂತ ಹೇಗೆ ಭಿನ್ನ? ಯಾವುದೇ ಮತದ ಮೂಲಭೂತವಾದಿಗಳ ಕೈಗೆ ಅಧಿಕಾರ ಸಿಕ್ಕಿದರೆ ದೇಶವಾಸಿಗಳ ಜೀವನ ಹೇಗಿರುತ್ತದೆ ಎನ್ನಲು ತಾಲಿಬಾನ್ ಆಡಳಿತದಲ್ಲಿದ ಅಫ್ಘಾನಿಸ್ತಾನವನ್ನು ನೆನಪಿಸಿಕೊಂಡರೆ ಸಾಕು. ದಿನಕ್ಕೊಂದರಂತೆ ಜಾತಿ ಸಮಾವೇಶಗಳು, ಹಿಂದೂ ವಿರಾಟ್ ಯಾತ್ರೆಗಳು, ಆತ್ಮಾಹುತಿ ಮಾಡಿಕೊಂಡರೆ ಸ್ವರ್ಗದಲ್ಲಿ ಮಜಾ ಮಾಡಲು 72 ಕನ್ಯೆಯರು ಸಿಗುತ್ತ್ತಾರೆ ಎಂದುಕೊಳ್ಳುವ ಜಿಹಾದಿಗಳು, ಸಾಮೂಹಿಕ ಸನ್ನಿ ಸೃಷ್ಟಿಸುವ ಬೆನ್ನಿಹಿನ್‌ಗಳು ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ, ಪ್ರಜ್ಞಾವಂತ ಜನ ಹೆಚ್ಚೆಚ್ಚು ವೈಚಾರಿಕರಾಗಬೇಕಿದೆ. ಇಲ್ಲದಿದ್ದರೆ, ಭವಿಷ್ಯ ಈಗಿರುವುದಕ್ಕಿಂತ ಹೆಚ್ಚು ಮಂಕಾಗುತ್ತದೆ

Jan 7, 2007

ಕಲಿಯುಗದಿಂದ ಕೃತಯುಗಕ್ಕೆ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಜನವರಿ 19, 2007 ರ ಸಂಚಿಕೆಯಲ್ಲಿನ ಲೇಖನ)

ಅವರು ದೆಹಲಿಯ ಹೊರವಲಯದ ಹೈಟೆಕ್ ಸಿಟಿ ನೋಯ್ಡಾದ ಶ್ರೀಮಂತರ ಮನೆಗಳಲ್ಲಿ ಕಸಮುಸುರೆ ತೊಳೆಯುವ, ಬಟ್ಟೆ ಒಗೆಯುವ, ಟಾಯ್ಲೆಟ್, ಚರಂಡಿ ಸ್ವಚ್ಛ ಮಾಡುವ ಬಡವರು. ಅವರ ವಾಸ ನೋಯ್ಡಾದ ಪಕ್ಕದ ನಾಥಾರಿಯಲ್ಲಿ. ಅವರು ಆ ಕ್ಷೇತ್ರದ ಮತದಾರರೂ ಅಲ್ಲ. ಯಾಕೆಂದರೆ, ಅವರಲ್ಲಿ ಬಹುಪಾಲು ಜನ ಬೇರೆ ಕಡೆಗಳಿಂದ ಉದ್ಯೋಗಗಳನ್ನು ಹುಡುಕಿಕೊಂಡು ಬಂದ ಬಡಬಗ್ಗರು. ಅವರಿಗೆ ಮೇಲೆ ಹೇಳಿದ್ದಕ್ಕಿಂತ ಒಳ್ಳೆಯ ಕೆಲಸಗಳು ಸಿಕ್ಕರೆ ಅದು ಲಾಟರಿ ಹೊಡೆದಂತೆ! ಇಂತಹ ಸ್ಥಿತಿಯಲ್ಲಿ, ಸರಿಯಾಗಿ ಇಪ್ಪತ್ತೊಂದು ತಿಂಗಳ ಹಿಂದೆ ನಾಥಾರಿಯಿಂದ ಬೀನಾ ಎಂಬ ಹುಡುಗಿ ನಾಪತ್ತೆಯಾಗುತ್ತಾಳೆ. ಆ ಹುಡುಗಿಯ ಅಪ್ಪಅಮ್ಮ ಪೋಲಿಸರಿಗೆ ಆ ವಿಚಾರವಾಗಿ ದೂರು ಕೊಡಲು ಹೋದರೆ, 'ಈ ದರಿದ್ರರಿಗೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ಕೊಡಲು ಎಷ್ಟು ಧೈರ್ಯ, ಇವರೇನು ಅಧಿಕಾರಸ್ಥರೆ, ರಾಜಕಾರಣಿಗಳೆ, ಅಡೋಬಿ ಸಾಪ್ಟ್‍ವೇರ್ ಸಂಸ್ಥೆಯ ಎಮ್.ಡಿ.ಯೆ, ಚಹಾ ಕೊಡಿಸಲೂ ಯೋಗ್ಯತೆಯಿಲ್ಲದವರಿಂದ ದೂರು ದಾಖಲಿಸುವಷ್ಟು ಚೀಪಾಗಿ ಹೋದೆವೆ ನಾವು?' ಎಂದುಕೊಂಡು, ಬಹುಶಃ ಸಾಕಷ್ಟು ಮರ್ಯಾದೆ ಮಾಡಿ, ದೂರು ಸ್ವೀಕರಿಸದೆ ಪೋಲಿಸರು ಕಳುಹಿಸಿರುತ್ತಾರೆ.

ಅಲ್ಲಿಂದೀಚೆಗೆ ಇದೇ ಏರಿಯಾದಿಂದ 38 ಕ್ಕೂ ಹೆಚ್ಚು ಹೆಣ್ಣುಮಕ್ಕಳು ನಾಪತ್ತೆಯಾದ ಬಗ್ಗೆ ಪೋಷಕರು ದೂರು ನೀಡಲು ಪ್ರಯತ್ನಿಸುತ್ತಲೆ ಇರುತ್ತಾರೆ. ಅದು ಹೇಗೊ, ಇತ್ತೀಚೆಗೆ ತಾನೆ ನಾಪತ್ತೆಯಾದ 16 ವರ್ಷದ ಹುಡುಗಿಯ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಆಕೆಯ ಸೆಲ್‌ಫೋನ್ ಉಪಯೋಗಿಸುತ್ತಿರುವ ವ್ಯಕ್ತಿಯ ಸುಳಿವು ಪೋಲಿಸರಿಗೆ ಸಿಗುತ್ತದೆ. ಆತ ಅದೇ ಏರಿಯಾದ ಶ್ರೀಮಂತನೊಬ್ಬನ ಮನೆಯ ಸೇವಕ. ಹಾಳಾಗಿ ಹೋಗಲಿ ಎಂದು ತನಿಖೆ ಪ್ರಾರಂಭಿಸಿದರೆ, ಆತನ ಒಡೆಯನ ಮನೆಯ ಹತ್ತಿರದ ಚರಂಡಿಯಲ್ಲಿ ಸುಮಾರು 15 ಮಕ್ಕಳ ಮೂಳೆ, ತಲೆಬುರುಡೆಗಳು ಸಿಗುತ್ತವೆ. ಇಷ್ಟು ದಿನ ತಮ್ಮ ದೂರು ಸ್ವೀಕರಿಸದೆ ತಮ್ಮನ್ನು ಪ್ರಜೆಗಳಾಗಿ ಪರಿಗಣಿಸದೆ ಕ್ರಿಮಿಗಳಂತೆ ನಡೆಸಿಕೊಂಡ ಪೋಲಿಸರು, ಮಕ್ಕಳು ನಾಪತ್ತೆಯಾದಾಗಿನಿಂದ ಅಸಹಾಯಕವಾಗಿ ನರಳಿದ ಹೆತ್ತಕರುಳಿಗೆ ನೀಡಿದ ಒಂದೆ ಒಂದು ಪ್ರಾಮಾಣಿಕ ಉತ್ತರ, "ಆ ತಲೆಬುರುಡೆಗಳಲ್ಲಿ ನಿಮ್ಮದೂ ಒಂದಾಗಿರಬಹುದು" ಎಂದನಿಸುತ್ತದೆ.

ಬೀನಾ ನಾಪತ್ತೆಯಾದ ಕೂಡಲೆ ತನಿಖೆ ಆರಂಭಿಸಿದ್ದರೆ ಹತ್ತಿಪ್ಪತ್ತು ಇರಲಿ, 2 ನೆಯ ಮಗು ನಾಪತ್ತೆಯಾಗುವುದೆ ಅಸಂಭವವಾಗಿತ್ತು. ವಿಪರ್ಯಾಸ ಏನೆಂದರೆ, ಕಳೆದು ಹೋದವರಲ್ಲಿ ಬಹುಪಾಲು ಜನ ಕೇವಲ ಮುನ್ನೂರು ಅಡಿಯ ಸುತ್ತಳೆಯಲ್ಲಿ ವಾಸ ಮಾಡುತ್ತಿದ್ದವರು! ಇಲ್ಲಿ ಏನೋ ಒಂದು ಪ್ಯಾಟರ್ನ್ ಇದೆ ಎಂದು ಪೋಲಿಸರು ಯೋಚಿಸಲು ಈ ಮಕ್ಕಳೇನು ದೇವಪುತ್ರರೆ? ಆ ರಾಜ್ಯಕ್ಕೊಬ್ಬ ಮಹಾತ್ಮ ಮಂತ್ರಿಯಾಗಿದ್ದಾನೆ.'ಇದೇನು ಈ ಸೀರಿಯಲ್ ಕೊಲೆಗಳ ವಿಷಯ ಮಹಾಪ್ರಭುಗಳೆ?' ಎಂದರೆ, 'ಇದೆಲ್ಲಾ ಮಾಮೂಲಿ ಕಣ್ರಿ, ರೂಟಿನ್.' ಎನ್ನುತ್ತಾನೆ.

ಇಷ್ಟೆಲ್ಲ ಆದರೂ, ಆ ರಾಜ್ಯದ ಸಮಾಜವಾದಿ ಮುಖ್ಯಮಂತ್ರಿ ಆ ಊರಿಗೆ ಕಾಲಿಡುವುದಿಲ್ಲ. ನೋಯ್ಡಾಗೆ ಹೋದ ಮುಖ್ಯಮಂತ್ರಿ ಮುಂದಿನ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುತ್ತಾನಂತೆ! ಪಾಪ, ಅಲ್ಲಿಗೆ ಹೋಗದವರು ಇಲ್ಲಿಯ ತನಕ ಅಧಿಕಾರವನ್ನೆ ಕಳೆದುಕೊಳ್ಳದೆ, ಸಾಯುವ ತನಕ ಉತ್ತರ ಪ್ರದೇಶವನ್ನು ಆಳಿದಂತಿದೆ!

ಕರ್ನಾಟಕದಲ್ಲಿಯೂ ಅಂತಹ ಪವಿತ್ರ, ಪಾವನ ನಗರಗಳು ಒಂದೆರಡಿವೆ. ಇಡೀ ಚಾಮರಾಜನಗರವೆ ಹತ್ತಿ ಉರಿದರೂ, ಸಾವಿರಾರು ಜನ ಲಿಂಗೈಕ್ಯರಾದರೂ ಕರ್ನಾಟಕದ ಮುಖ್ಯಮಂತ್ರಿ ಅಲ್ಲಿಗೆ ಹೋಗುವುದು ಸಾಧ್ಯವೇ ಇಲ್ಲ. ತಮ್ಮೂರಿಗೆ ಮುಖ್ಯಮಂತ್ರಿ ಬರಲೇ ಬೇಕೆಂದರೆ ಚಾಮರಾಜನಗರದವರು ಮೊದಲು ಮಾಡಬೇಕಾದ ಕೆಲಸ, ಆ ಪಟ್ಟಣವನ್ನೆ ಒಂದು ರಾಜ್ಯವನ್ನಾಗಿ ಮಾಡಿಕೊಳ್ಳುವುದು. ಆಗಲಾದರೂ ಅವರೂರಿನವರೆ ಯಾರೊ ಒಬ್ಬರು ಮುಖ್ಯಮಂತ್ರಿಯಾಗುತ್ತಾರೆ! ಕರ್ನಾಟಕದ ಮುಖ್ಯಮಂತ್ರಿಗಳಿಂದಂತೂ ಇದಕ್ಕೆ ಯಾವುದೇ ವಿರೋಧ ಬರುವುದು ಸಂದೇಹ! ಶಾಪಗ್ರಸ್ತನಾಗಿ ಅಧಿಕಾರ ಕಳೆದುಕೊಳ್ಳುವುದಕ್ಕಿಂತ ಯಾವುದೋ ಮೂಲೆಯಲ್ಲಿನ ಮೂಲಾನಕ್ಷತ್ರದ ಊರನ್ನು ಗಡಿಪಾರು ಮಾಡುವುದೇ ಒಳ್ಳೆಯದು! ಕಲಿಯುಗ, ಕಲಿಯುಗ!! ಹಾಳಾದ್ದು ಮುಗಿಯುವುದೇ ಇಲ್ಲ.

ಇಲ್ಲ, ಮುಗಿಯುತ್ತಿದೆ! ಯಾಕೆಂದರೆ, ಕಲಿಯುಗ ಕೃತಯುಗವಾಗುವ ಸಂಧಿಕಾಲ ಇದು. ಇದೆಲ್ಲ ಆರಂಭವಾಗುವುದು ಯಾರೊ ಯಾರಿಗೊ ದುಡ್ಡು ಕೊಡುವುದರ ಮೂಲಕ. ಅದು ಹೇಗಾಯಿತೆಂದರೆ...

ಕೊಟ್ಟವನು ಕೋಡಂಗಿ, ಇಸ್ಕೊಂಡೊನು ಈರಭದ್ರ! ಆದರೆ, ಈ ಕೇಸಿನಲ್ಲಿ ಕೊಟ್ಟವನು ಉಗ್ರನಾಗಿ, ರುದ್ರನಾಗಿ, ತನ್ನ ಗಣಕ್ಕೆ ವೀರಭದ್ರನ ಉಸ್ತುವಾರಿಯಲ್ಲಿ ತಾಂಡವ ನೃತ್ಯ ಮಾಡಲು ಆಜ್ಞಾಪಿಸುತ್ತಾನೆ. ಆಗ ಇಸ್ಕೊಂಡವನ ತಿಥಿ ಚೆನ್ನಾಗಿ ಆಗುತ್ತದೆ. ಆದರೆ, ಇದು ಇನ್ನೂ ಕಲಿಯುಗ ಸ್ವಾಮಿ! ಇಲ್ಲಿನ ವ್ಯವಸ್ಥೇನೆ ಬೇರೆ!! ಪ್ರಜಾಪ್ರಭುತ್ವವಂತೆ, ಹಕ್ಕುಗಳಂತೆ, ಎಲ್ಲರೂ ಸಮಾನರಂತೆ, ಮಣ್ಣುಮಸಿಯಂತೆ!!! ಈ ವ್ಯವಸ್ಥೆಯಲ್ಲಿ, ಹೊಡೆಸಿಕೊಂಡವನು ದೂರು ಕೊಟ್ಟರೆ ಪೋಲಿಸರು ಹೊಡೆದವರನ್ನು ವಿಚಾರಣೆ ಮಾಡಿ, 'ವಸೂಲಿ ಮಾಡುವುದಕ್ಕೆ ರೀತಿನೀತಿ ಹೀಗೀಗಿದೆ ಸ್ವಾಮಿ, ನಿಮ್ಮದು ಸ್ವಲ್ಪ ತಪ್ಪಾಯಿತು, ಅದಕ್ಕೆ ಇಷ್ಟು ದಂಡ, ಒಂದಿಷ್ಟು ಶಿಕ್ಷೆ' ಎಂದು ಹೇಳಿ, ಹೊಡಿಸಿಕೊಂಡವನ ಪರವಾಗಿ ಖುದ್ದಾಗಿ ತಾವೆ ಪಬ್ಲಿಕ್
ಪ್ರಾಸಿಕ್ಯೂಟರ್ ನೇಮಿಸಬೇಕಂತೆ. ಆದರೂ ಕಾಲ ಅಷ್ಟೇನೂ ಕೆಟ್ಟಿಲ್ಲ ನೋಡಿ!! 'ಹೊಡೆಸಿಕೊಂಡವನು ದೂರು ಕೊಡಬಾರದಾಗಿತ್ತು, ಇಡೀ ರಾಜ್ಯಸರ್ಕಾರವೆ ಧರ್ಮಸಂಧರ ಪರ ನಿಲ್ಲುತ್ತದೆ.' ಎಂದು ಉಪಮುಖ್ಯಮಂತ್ರಿಗಳೆ ವೇದಘೋಷಗಳ ನಡುವೆ ಘೋಷಿಸಿ, ತಮ್ಮ ದೈವವಾದ ಶ್ರೀರಾಮನ ತ್ರೇತಾಯುಗಕ್ಕೆ ಇರಲಿ, ಅದಕ್ಕಿಂತ ಉಚ್ಚವಾದ, ಪೂರ್ವವಾದ, ಆದಿಯಾದ ಕೃತಯುಗಕ್ಕೇ ನೇರವಾಗಿ ಕಲಿಯುಗವನ್ನು ಹೊತ್ತೊಯ್ದು ಧರ್ಮಸಂಸ್ಥಾಪನೆ ಮಾಡುತ್ತಾರೆ.

ಆ ಸಂದರ್ಭದಲ್ಲಿ, ಸಂವಿಧಾನವೆಂಬ ಒಂದು ಕಾಗದದ ತುಂಡು ಕಲಿಯುಗದಲ್ಲಿ ಶಿಷ್ಟರಕ್ಷಣೆ ಮಾಡದೆ ದುಷ್ಟ ರಕ್ಷಣೆ ಮಾಡಿತ್ತಾದ್ದರಿಂದ, ಅದರ ಸಂಹಾರ ಮಾಡಲು ಬ್ರಹ್ಮರ್ಷಿ ಪೇಜಾವರರು ತಮ್ಮ ಪ್ರಿಯಶಿಷ್ಯ ಯಡಿಯೂರಪ್ಪನಿಗೆ 'ಹೊಯ್ ಯಡ್ಡಿ' ಎಂದು ಆದೇಶಿಸುತ್ತಾರೆ. ಆಗ ಶಿಷ್ಯ ಯಡಿಯೂರಪ್ಪನು ತನ್ನ ಓರೆಯಿಂದ ಕತ್ತಿಯನ್ನು ಹೊರಸೆಳೆದು ಸಂವಿಧಾನವನ್ನು ಸಹಸ್ರಸಹಸ್ರ ತುಂಡುಗಳಾಗಿ ತುಂಡರಿಸಿ ಗುರುಗಳ ಪ್ರೀತಿಗೆ ಪಾತ್ರನಾಗಿ 'ಹೊಯ್ಯಡಿ ಯಡಿಯೂರಪ್ಪನವರು' ಎಂದು ಬಿರುದಾಂಕಿತರಾಗುತ್ತಾರೆ.

ಇದಾದ ಹತ್ತು ತಿಂಗಳ ನಂತರ, ಹಿಂದೆ ಆದ ಒಡಂಬಡಿಕೆಯಂತೆ, ಹೊಯ್ಯಡಿ ರಾಜವಂಶದ ಯಡಿಯೂರಪ್ಪನವರ ಪಟ್ಟಾಭಿಷೇಕ ರಾಜಗುರುಗಳಾದ "ಶ್ರೀಶ್ರೀಶ್ರೀ ಬ್ರಹ್ಮರ್ಷಿ ಪೇಜಾವರ ವಿಶ್ವೇಶ್ವರತೀರ್ಥ ಯತೀಂದ್ರರ" ದಿವ್ಯ ಸಾನಿಧ್ಯದಲ್ಲಿ ನೇರವೇರಿತು.

ಪಟ್ಟಾಭಿಷೇಕದ ನಂತರ, "ಶಿಷ್ಯ ಹೊಯ್ಯಡಿ, ಪಕ್ಕದ ಯವನ ದೇಶವಾದ ಪಾಕಿಸ್ತಾನವು ಖುರಾನ್ ಎಂಬ ಅವರ ಪುರಾಣಗ್ರಂಥದ ಆಧಾರದ ಮೇಲೆ ರಾಜ್ಯಭಾರ ನಡೆಸುತ್ತಿದೆ; ಅವರನ್ನು ಎದುರಿಸಲು, ಅವರಿಗೆ ಸರಿಸಮನಾಗಿ ನೀನೂ ಸಹ ನಮ್ಮ ಧಾರ್ಮಿಕ ಗ್ರಂಥವಾದ ಮನುಸ್ಮೃತಿಯ ಆಧಾರದ ಮೇಲೆ ರಾಜ್ಯವನ್ನು ನಡೆಸು. ಅಯೋಗ್ಯರು ತಮ್ಮ ಜನ್ಮಯೋಗ್ಯವಲ್ಲದ ಮಾತನ್ನು ಆಡಿದರೆ, ಕೇಳಿದರೆ, ಅವರಿಗೆ ಶಿಕ್ಷೆ ನೀಡಲು ನಾನು ನನ್ನ ತಪೋಬಲದಿಂದ ಸೀಸವನ್ನು ತಯಾರಿಸುತ್ತೇನೆ," ಎಂದು ತಮ್ಮ ಶಿಷ್ಯನಿಗೆ ಉಪದೇಶಿಸಿ, ಬ್ರಹ್ಮರ್ಷಿಗಳು ವಾಯುಮಾರ್ಗದಲ್ಲಿ ಉಡುಪಿ ಕ್ಷೇತ್ರದಲ್ಲಿನ ತಮ್ಮ ಆಶ್ರಮಕ್ಕೆ ತೆರಳಿದರು. ನಂತರ ವರ್ಣೀಯರು, ಅವರ್ಣೀಯರು ತಮ್ಮ ತಮ್ಮ ಜನ್ಮಯೋಗ್ಯತಾನುಸಾರ ಇಹಲೋಕವನ್ನು ಕಳೆದು, ಪುನರಪಿ ಜನನಂ ಪುನರಪಿ ಮರಣಂ ಹೊಂದುತ್ತ, ಕಲಿಯುಗ ಕಳೆದು ಕೃತಯುಗ ಅಥವ ಸತ್ಯಯುಗ ಪ್ರಾರಂಭವಾಯಿತು.