Aug 28, 2009

ದಶಸಹಸ್ರ ಗಂಟೆಯೆಂಬ ಪ್ರತಿಭಾ-ನಿಯಮ...

[ವಿಕ್ರಾಂತ ಕರ್ನಾಟಕದ ಸೆಪ್ಟೆಂಬರ್ 4,2009 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.
ಲೇಖನ ಸರಣಿಯ ಹಿಂದಿನ ಲೇಖನಗಳು:
ಮೊದಲನೆಯ ಲೇಖನ: "ಹೊರಗಣವರು" - ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ!
ಎರಡನೆಯದು: ಹುಟ್ಟಿದ ಘಳಿಗೆ ಸರಿ ಇರಬೇಕು...]


ಪ್ರತಿಭಾವಂತರು ಹೇಗಾಗುತ್ತಾರೆ? ನಾವು ಯಾವುದನ್ನು ಪ್ರತಿಭೆ ಎನ್ನುತ್ತೇವೆಯೋ ಅದು ಮನುಷ್ಯನಿಗೆ ಹುಟ್ಟುತ್ತಲೆ ಇರುತ್ತದೆಯೊ ಅಥವ ಮನುಷ್ಯ ಅದನ್ನು ಕಾಲಾನುಕ್ರಮೇಣ ಸಂಪಾದಿಸಿಕೊಳ್ಳುತ್ತಾನೊ? ಮ್ಯಾಲ್ಕಮ್ ಗ್ಲಾಡ್‌ವೆಲ್ ಪ್ರಕಾರ ಕಲಿಯುವ/ಅಭ್ಯಾಸ ಮಾಡುವ ಹಂಬಲಿಕೆಯೆ ಪ್ರತಿಭೆ. ಒಬ್ಬನಿಗೆ ಯಾವುದೊ ಒಂದು ವಿಷಯ/ಆಟ/ಕಲೆಯ ಬಗ್ಗೆ ಆಸಕ್ತಿ ಮೂಡುತ್ತದೆ. ಅದು ಕ್ರಮೇಣ ತೀವ್ರವಾದ ಆಸಕ್ತಿಯಾಗಿ ಬದಲಾಗುತ್ತದೆ. ತನ್ನ ಆಸಕ್ತಿಯ ವಿಷಯದಲ್ಲಿ ಪ್ರಾವೀಣ್ಯತೆ ಪಡೆದುಕೊಳ್ಳಲು ಆತ ಹಲವಾರು ವೈಯಕ್ತಿಕ ಸುಖಗಳನ್ನು--ನಿದ್ದೆ, ಮೋಜು, ತಿರುಗಾಟ, ಸಂಸಾರಸುಖ, ಹಣಸಂಪಾದನೆ, ಮುಂತಾದುವುಗಳನ್ನು ನಿರ್ಲಕ್ಷ್ಯ ಮಾಡಿ ಇಲ್ಲವೆ ತ್ಯಾಗ ಮಾಡಿ ಮುಂದುವರೆಯುತ್ತಾನೆ. ಕೆಲವೊಮ್ಮೆ ತನ್ನ ಮನೆಯವರ ಇಷ್ಟಕ್ಕೆ ವಿರುದ್ಧವಾಗಿಯೂ ನಡೆಯಬೇಕಾಗುತ್ತದೆ. ಕಷ್ಟನಷ್ಟಗಳೂ ಬರಬಹುದು. ಆದರೆ, ತನ್ನ ವಿಷಯದ ಬಗೆಗಿನ ತೀವ್ರಾಸಕ್ತಿಯಿಂದಾಗಿ, ಅದರಲ್ಲಿ ಪ್ರಾವೀಣ್ಯತೆ ಪಡೆಯುವ ಹಂಬಲಿಕೆಯಿಂದಾಗಿ, ತೀವ್ರ ಅಭ್ಯಾಸ ಮಾಡುತ್ತ ಹೋಗುತ್ತಾನೆ. ಇದೆಲ್ಲದರಿಂದಾಗಿ ಕೊನೆಗೆ ಪ್ರಾವೀಣ್ಯತೆಯನ್ನು ಪಡೆಯುತ್ತಾನೆ. ಪ್ರತಿಭಾವಂತ ಎನಿಸಿಕೊಳ್ಳುತ್ತಾನೆ. ಆದರೆ, ಆ ಕಲಿಕೆಯ ದಿನಗಳಲ್ಲಿ ಆತನಲ್ಲಿದ್ದ ಹಂಬಲಿಕೆ ಮತ್ತು ಪಟ್ಟುಬಿಡದೆ ಮಾಡಿದ ಅಭ್ಯಾಸವೆ ಇಲ್ಲಿ ಪ್ರತಿಭೆಯೆ ಹೊರತು, ಪ್ರತಿಭೆ ಎನ್ನುವುದು ಆತನಲ್ಲಿದ್ದ ಯಾವುದೊ ಒಂದು ಹುಟ್ಟುಗುಣ ಅಥವ ಜಾದೂ ಅಂಶವಲ್ಲ.

ಇಲ್ಲಿ ಇನ್ನೊಂದು ಅಂಶವಿದೆ. ಬಹಳಷ್ಟು ಜನ ತಮಗೆ ಇಷ್ಟವಾದ ವಿಷಯದಲ್ಲಿ, ತೀವ್ರವಾದ ಆಸಕ್ತಿಯಿಂದ, ಅತೀವ ಹಂಬಲದಿಂದ ಅಭ್ಯಾಸ ಆರಂಭಿಸಿರುತ್ತಾರೆ. ಅನೇಕ ದಿನ-ವಾರ-ವರ್ಷಗಳ ಅಭ್ಯಾಸ ಮಾಡುತ್ತಾರೆ. ಮೊಟ್ಟಮೊದಲ ಸಣ್ಣ ಕಂಪ್ಯೂಟರ್ ಬಂದಾಗ ಬಿಲ್ ಗೇಟ್ಸ್, ಬಿಲ್ ಜಾಯ್ ತರಹವೆ ನೂರಾರು ಹುಡುಗರು ಅದರಲ್ಲಿ ಆಡಲು, ಪ್ರೋಗ್ರಾಮ್ ಬರೆಯಲು ಪ್ರಯತ್ನಿಸಿರುತ್ತಾರೆ. ಕೆಲವರು ಆರಂಭದಲ್ಲಿ ಒಂದಷ್ಟು ಯಶಸ್ಸನ್ನೂ ಪಡೆದಿರುತ್ತಾರೆ. ಆದರೆ ಅವರೆಲ್ಲರೂ ಬಿಲ್ ಗೇಟ್ಸ್ ಆಗಲಿಲ್ಲವಲ್ಲ, ಏಕೆ? ನಮ್ಮಲ್ಲಿಯೂ ಸಾವಿರಾರು ಹುಡುಗರು ಅನೇಕ ಉದ್ದಾಮ ಗುರುಗಳ ಬಳಿ ಸಂಗೀತವನ್ನೊ, ಕಲೆಯನ್ನೊ, ಆಟವನ್ನೊ ಅಭ್ಯಾಸ ಮಾಡುತ್ತಾರೆ. ಆದರೆ ಅವರೆಲ್ಲರೂ ಭೀಮಸೇನ ಜೋಷಿಯಾಗಲಿ, ಗಂಗೂಬಾಯಿ ಹಾನಗಲ್ ಆಗಲಿ, ಸಚಿನ್ ತೆಂಡೂಲ್ಕರ್ ಆಗಲಿ ಆಗುತ್ತಿಲ್ಲವಲ್ಲ, ಯಾಕೆ? ಇದಕ್ಕೆ ಉತ್ತರ, ಒಬ್ಬ ತನ್ನ ಆಯ್ಕೆಯ ವಿಷಯದಲ್ಲಿ ಪ್ರತಿಭಾವಂತ ಎನ್ನಿಸಿಕೊಳ್ಳಬೇಕಾದರೆ ಆತ ಎಷ್ಟು ಗಂಟೆಗಳ ಕಾಲ ತೀವ್ರಾಸಕ್ತಿಯಿಂದ ಅಭ್ಯಾಸ ಮಾಡಿದ್ದಾನೆ ಎನ್ನುವುದರಲ್ಲಿದೆ. ಆ ಗಂಟೆಗಳ ಪ್ರಮಾಣವಾದರೂ ಎಷ್ಟು?

"ಆಂಡರ್ಸ್ ಎರಿಕ್‌ಸನ್ ಎನ್ನುವ ಮನ:ಶಾಸ್ತ್ರಜ್ಞನೊಬ್ಬ ತನ್ನ ಇಬ್ಬರು ಸಹೋದ್ಯೋಗಿಗಳೊಂದಿಗೆ 1990ರ ಸುಮಾರಿನಲ್ಲಿ ಬರ್ಲಿನ್ನಿನ ಪ್ರಸಿದ್ಧ ಸಂಗೀತ ಅಕಾಡೆಮಿಯಲ್ಲಿ ಒಂದು ಅಧ್ಯಯನ ಕೈಗೊಳ್ಳುತ್ತಾನೆ. ಅಕಾಡೆಮಿಯ ಅಧ್ಯಾಪಕರ ಸಹಾಯದೊಂದಿಗೆ ಅವರು ಅಕಾಡೆಮಿಯಲ್ಲಿನ ಪಿಟೀಲು ವಾದ್ಯಗಾರರನ್ನು ಮೂರು ಗುಂಪುಗಳಾಗಿ ವಿಭಾಗಿಸುತ್ತಾರೆ. ಮೊದಲ ಗುಂಪಿನಲ್ಲಿ ವಿಶ್ವದರ್ಜೆಯ ಪಿಟೀಲುಗಾರರಾಗುವ ಸಾಮರ್ಥ್ಯಗಳಿದ್ದ ವಿದ್ಯಾರ್ಥಿಗಳಿರುತ್ತಾರೆ. ಎರಡನೆಯದರಲ್ಲಿ 'ಉತ್ತಮ/ಪರವಾಗಿಲ್ಲ' ಎನ್ನಬಹುದಾದವರು. ಮೂರನೆಯ ಗುಂಪು ಬಹುಶಃ ಸ್ವಂತವಾಗಿ ಎಂದೂ ಕಾರ್ಯಕ್ರಮ ನೀಡಲಾಗದ, ಶಾಲೆಯೊಂದರಲ್ಲಿ ಸಂಗೀತದ ಮೇಷ್ಟ್ರುಗಳಾಗುವುದರಲ್ಲಿ ಮಾತ್ರ ಆಸಕ್ತಿಯಿದ್ದ ವಿದ್ಯಾರ್ಥಿಗಳದು. ಈ ಮೂರೂ ಗುಂಪಿನ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಪ್ರಶ್ನೆಯೊಂದನ್ನು ಕೇಳಲಾಯಿತು: ನಿಮ್ಮ ಇಲ್ಲಿಯವರೆಗಿನ ಜೀವಮಾನದಲ್ಲಿ, ನೀವು ಪಿಟೀಲನ್ನು ಕೈಗೆತ್ತಿಕೊಂಡ ಮೊದಲ ದಿನದಿಂದ ಇಲ್ಲಿಯವರೆಗೆ, ಒಟ್ಟು ಎಷ್ಟು ಗಂಟೆಗಳ ಕಾಲ ಅಭ್ಯಾಸ ಮಾಡಿದ್ದೀರಿ?

"ಆ ಮೂರೂ ಗುಂಪುಗಳಲ್ಲಿದ್ದ ಎಲ್ಲರೂ ಬಹುತೇಕ ಸುಮಾರು ಒಂದೇ ವಯಸ್ಸಿನಲ್ಲಿ (ಐದು ವರ್ಷದ ಸುಮಾರಿನಲ್ಲಿ) ಪಿಟೀಲು ಕಲಿಯಲು ಆರಂಭಿಸಿದ್ದರು. ಆರಂಭದ ಮೊದಲ ಕೆಲವು ವರ್ಷಗಳಲ್ಲಿ ಎಲ್ಲರೂ ಸಮಾನ ಎನ್ನಬಹುದಾದಷ್ಟು ಕಾಲ (ವಾರಕ್ಕೆ 2-3 ಗಂಟೆಗಳ ಅವಧಿ) ಅಭ್ಯಾಸ ಮಾಡಿದ್ದರು. ಆದರೆ ಆ ಹುಡುಗರಿಗೆ ಎಂಟು ವರ್ಷ ಆಗುತ್ತಿದ್ದ ಸುಮಾರಿನಲ್ಲಿ ನಿಜವಾದ ವ್ಯತ್ಯಾಸಗಳು ಕಾಣಲಾರಂಭಿಸಿದವು. ತಮ್ಮ ತರಗತಿಯಲ್ಲಿ ಶ್ರೇಷ್ಠ ವಿದ್ಯಾರ್ಥಿಗಳಾಗಿ ಹೊರಹೊಮ್ಮಲಿದ್ದ ವಿದ್ಯಾರ್ಥಿಗಳು ಬೇರೆಲ್ಲರಿಗಿಂತ ಹೆಚ್ಚಿನ ಅಭ್ಯಾಸ ಮಾಡಲು ಶುರುವಿಟ್ಟುಕೊಂಡರು. ಒಂಬತ್ತನೆ ವಯಸ್ಸಿಗೆ ವಾರಕ್ಕೆ ಆರು ಗಂಟೆಗಳು, 12ನೆ ವಯಸ್ಸಿಗೆ ವಾರಕ್ಕೆ 8 ಗಂಟೆಗಳು, 14ನೆ ವಯಸ್ಸಿಗೆ ವಾರಕ್ಕೆ 16 ಗಂಟೆಗಳು, ಹೀಗೆ ಮೇಲೆಮೇಲಕ್ಕೆ ಹೋಗುತ್ತ ಹೋಯಿತು ಅವರ ಅಭ್ಯಾಸದ ಸಮಯ. ಅವರ ಇಪ್ಪತ್ತನೆಯ ವಯಸ್ಸಿಗೆಲ್ಲ, ಏಕಚಿತ್ತದಿಂದ, ತಾವು ಕಲಿಯುತ್ತಿದ್ದ ವಾದ್ಯದಲ್ಲಿ ಅತ್ಯುತ್ತಮ ಪ್ರಾವೀಣ್ಯತೆ ಪಡೆಯುವ ಏಕಮೇವ ಉದ್ದೇಶದಿಂದ, ವಾರವೊಂದಕ್ಕೆ 30 ಗಂಟೆಗಳಿಗೂ ಹೆಚ್ಚಿನ ಕಾಲ ಅಭ್ಯಾಸ ಮಾಡುತ್ತಿದ್ದರು. ಹೇಳಬೇಕೆಂದರೆ, ತಮ್ಮ ಇಪ್ಪತ್ತನೆಯ ವಯಸ್ಸಿಗೆಲ್ಲ ಈ ಶ್ರೇಷ್ಠ ಸಂಗೀತಗಾರರು ತಲಾ ಹತ್ತು ಸಾವಿರ ಗಂಟೆಗಳ ಅಭ್ಯಾಸ ಪೂರೈಸಿದ್ದರು. ಇದಕ್ಕೆ ವಿರುದ್ಧವಾಗಿ, 'ಉತ್ತಮ/ಪರವಾಗಿಲ್ಲ' ಎನ್ನುವ ಗುಂಪಿನಲ್ಲಿದ್ದ ವಿದ್ಯಾರ್ಥಿಗಳು ಸುಮಾರು ಎಂಟು ಸಾವಿರ ಗಂಟೆಗಳನ್ನು ಪೂರೈಸಿದ್ದರೆ, ಭಾವಿ ಸಂಗೀತ ಅಧ್ಯಾಪಕರು ಕೇವಲ ನಾಲ್ಕು ಸಾವಿರ ಗಂಟೆಗಳ ಅಭ್ಯಾಸ ಪೂರೈಸಿದ್ದರು.

"ಎರಿಕ್‌ಸನ್ ಮತ್ತು ಆತನ ಸಹೋದ್ಯೋಗಿಗಳು ನಂತರ ಇದೇ ರೀತಿ ಹವ್ಯಾಸಿ ಮತ್ತು ವೃತ್ತಿಪರ ಪಿಯಾನೊವಾದಕರ ಗುಂಪನ್ನು ತುಲನೆ ಮಾಡುತ್ತಾರೆ. ಇಲ್ಲಿಯೂ ಸಹ ಹಿಂದಿನದೆ ರೀತಿಯ ಮಾದರಿಗಳು ಕಂಡುಬಂದವು. ಹವ್ಯಾಸಿ ಪಿಯಾನೊಗಾರರು ತಮ್ಮ ಬಾಲ್ಯಕಾಲದಲ್ಲಿ ವಾರಕ್ಕೆ ಮೂರು ಗಂಟೆಗಳಿಗಿಂತ ಹೆಚ್ಚಿನ ಅಭ್ಯಾಸ ಮಾಡುತ್ತಿರಲಿಲ್ಲ ಮತ್ತು ತಮ್ಮ ಇಪ್ಪತ್ತನೆಯ ವಯಸ್ಸಿಗೆ ಅವರೆಲ್ಲ ಸರಾಸರಿ ಎರಡು ಸಾವಿರ ಗಂಟೆಗಳ ಕಾಲ ಅಭ್ಯಾಸ ಮಾಡಿದ್ದರು. ಮತ್ತೊಂದು ಕಡೆ ವೃತ್ತಿಪರರು ತಮ್ಮ ಅಭ್ಯಾಸದ ಅವಧಿಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತ ಹೋಗಿ, ತಮ್ಮ ಇಪ್ಪತ್ತನೆಯ ವಯಸ್ಸಿಗೆಲ್ಲ, ಪಿಟೀಲುಗಾರರಂತೆಯೆ, ದಶಸಹಸ್ರ ಗಂಟೆಗಳನ್ನು ಮುಟ್ಟಿಕೊಂಡಿದ್ದರು.

"ಎರಿಕ್‌ಸನ್ನನ ಈ ಅಧ್ಯಯನದಲ್ಲಿ ಕಂಡುಬಂದ ಅತಿ ಗಮನಾರ್ಹ ಅಂಶ ಏನೆಂದರೆ, ಅಲ್ಲಿಯ ಶ್ರೇಷ್ಠರ ಗುಂಪಿನಲ್ಲಿ ಒಬ್ಬನೇ ಒಬ್ಬ "ಸಹಜ ಪ್ರತಿಭಾವಂತ"ನನ್ನು ಅವರ ತಂಡ ಕಾಣಲಿಲ್ಲ. ತನ್ನ ವಾರಿಗೆಯವರು ಅಭ್ಯಾಸ ಮಾಡುತ್ತಿದ್ದದ್ದಕಿಂತ ಕಮ್ಮಿ ಅಭ್ಯಾಸ ಮಾಡುತ್ತ ತಾನು ಮಾತ್ರ ಮಿಕ್ಕೆಲ್ಲರಿಗಿಂತ ಸುಲಲಿತವಾಗಿ ಸಾಧನೆಯ ಶಿಖರ ಏರಿದ ಒಬ್ಬನೇ ಒಬ್ಬ ಜನ್ಮಜಾತ ಪ್ರತಿಭಾವಂತ ಅವರಿಗೆ ಸಿಗಲಿಲ್ಲ. ಹಾಗೆಯೆ, ಇತರೆಲ್ಲರಿಗಿಂತ ಹೆಚ್ಚಿನ ಶ್ರಮ ಹಾಕಿಯೂ, ಸಾಧನೆಯ ಶಿಖರ ಏರಲು ಏನೊ ಒಂದು ಕಮ್ಮಿಯಾಗಿಬಿಟ್ಟ "ಗಾಣದೆತ್ತು"ಗಳೂ ಅವರಿಗೆ ಕಾಣಿಸಲಿಲ್ಲ. ಅವರ ಈ ಸಂಶೋಧನೆ ಇಲ್ಲಿ ಏನನ್ನು ಹೇಳುತ್ತದೆ ಎಂದರೆ, ಒಳ್ಳೆಯ ಸಂಗೀತಶಾಲೆಯೊಂದಕ್ಕೆ ಸೇರಿಕೊಂಡ ಅರ್ಹ ವಿದ್ಯಾರ್ಥಿಗಳಲ್ಲಿ ಒಬ್ಬನನ್ನು ಮತ್ತೊಬ್ಬನಿಂದ ಬೇರ್ಪಡಿಸುವ ಅಂಶ ಏನೆಂದರೆ ಅವನು ಇತರರಿಗಿಂತ ಎಷ್ಟು ಹೆಚ್ಚಿನ ಪ್ರಮಾಣದ ಅಭ್ಯಾಸ ಮಾಡುತ್ತಾನೆ ಎನ್ನುವುದಷ್ಟೆ. ಇಷ್ಟೆ ಇದರಲ್ಲಿರುವುದು. ಇನ್ನೂ ಹೇಳಬೇಕೆಂದರೆ, ಸಾಧನೆಯ ಅತ್ಯುನ್ನತ ಸ್ಥಾನದಲ್ಲಿರುವವರು ಜಾಸ್ತಿ ದುಡಿಯುತ್ತಾರೆ, ಅಥವ ಎಲ್ಲರಿಗಿಂತಲೂ ಜಾಸ್ತಿ ದುಡಿಯುತ್ತಾರೆ ಎನ್ನುವುದು ಮಾತ್ರವಲ್ಲ. ಅವರು ಹೆಚ್ಚು, ಹೆಚ್ಚೆಚ್ಚು ಕಷ್ಟಪಟ್ಟು ದುಡಿಯುತ್ತಾರೆ." ("Outliers" - ಪು. 39)

ಈ ದಶಸಹಸ್ರ ಗಂಟೆಯ ನಿಯಮದ ಆಧಾರದ ಮೇಲೆಯೆ ಗ್ಲಾಡ್‌ವೆಲ್ ವಿಶ್ವಪ್ರಸಿದ್ಧ ಸಂಗೀತತಂಡ "ಬೀಟಲ್ಸ್" ಮತ್ತು ಮೈಕ್ರೋಸಾಫ್ಟಿನ ಬಿಲ್ ಗೇಟ್ಸ್‌ನ ಯಶಸ್ಸನ್ನು ಅವಲೋಕಿಸುತ್ತಾನೆ. ಬೀಟಲ್ಸ್ 1960ರಲ್ಲಿ ಇಂಗ್ಲೆಂಡಿನ ಅಷ್ಟೇನೂ ಹೆಸರಿಲ್ಲದ ಹೈಸ್ಕೂಲ್ ಹುಡುಗರ ಒಂದು ರಾಕ್ ಬ್ಯಾಂಡ್. ಆ ಸುಮಾರಿನಲ್ಲಿ ಅವರಿಗೆ ಜರ್ಮನಿಯ ಹ್ಯಾಂಬರ್ಗ್ ಎಂಬ ಊರಿನಲ್ಲಿ ಕಾರ್ಯಕ್ರಮ ನೀಡಲು ಆಕಸ್ಮಿಕವಾಗಿ ಅವಕಾಶ ಸಿಗುತ್ತದೆ. ಅದು ಬೆತ್ತಲೆ ಕ್ಲಬ್ಬುಗಳಲ್ಲಿ ಹಾಡುವ ಅವಕಾಶ. ಬೀಟಲ್ಸ್ ತಂಡದ ಒಂದಿಬ್ಬರು ಆ ಸಮಯದಲ್ಲಿ ವಯಸ್ಕರೂ ಅಗಿರಲಿಲ್ಲ. ಅದರೂ ಅಲ್ಲಿ ಸಿಗುತ್ತಿದ್ದ ಮದ್ಯ ಮತ್ತು ಲೈಂಗಿಕಸುಖದ ಅವಕಾಶಗಳಿಂದಾಗಿ ಅವರು ಜರ್ಮನಿಯ ಆ ಊರಿಗೆ ಮುಂದಿನ ಒಂದೆರಡು ವರ್ಷ ಹೋಗಿಬರುತ್ತಾರೆ. ಇಲ್ಲಿಯೇ ಆವರ ತಂಡ "ಪ್ರತಿಭಾವಂತ"ವಾಗಿದ್ದು.

1960-62ರ ಒಂದೂವರೆ ವರ್ಷದ ಅವಧಿಯಲ್ಲಿ ಬೀಟಲ್ಸ್ ಐದು ಸಲ ಹ್ಯಾಂಬರ್ಗ್‌ಗೆ ಪ್ರವಾಸ ಕೈಗೊಳ್ಳುತ್ತಾರೆ. ಅಲ್ಲಿ ಒಟ್ಟು 270 ದಿನ ಕಳೆಯುತ್ತಾರೆ. ಪ್ರತಿದಿನ ಸುಮಾರು 8 ಗಂಟೆಗಳ ಕಾಲ ಹಾಡುಗಾರಿಕೆ. 1964ರಲ್ಲಿ ಅವರಿಗೆ ಮೊಟ್ಟಮೊದಲ ಯಶಸ್ಸು ಸಿಗುವ ಹೊತ್ತಿಗೆಲ್ಲ ಅವರು ಸ್ಟೇಜಿನ ಮೇಲೆ ಸುಮಾರು 1200 ಕಾರ್ಯಕ್ರಮಗಳನ್ನು ಕೊಟ್ಟಿದ್ದರು. ಬಹುತೇಕ ಸಂಗೀತ ಬ್ಯಾಂಡ್‌ಗಳು ತಮ್ಮ ಇಡೀ ಜೀವಮಾನದಲ್ಲಿ ಅಷ್ಟೊಂದು ಕಾರ್ಯಕ್ರಮ ನೀಡಿರುವುದಿಲ್ಲ. ಬೀಟಲ್ಸ್‌ರ ಜೀವನಚರಿತ್ರೆ ಬರೆದಿರುವಾತ ಹೇಳುತ್ತಾನೆ, "ಹ್ಯಾಂಬರ್ಗ್‌ಗೆ ಹೊರಟಾಗ ಸ್ಟೇಜಿನ ಮೇಲೆ ಕಾರ್ಯಕ್ರಮ ಕೊಡುವ ವಿಷಯದಲ್ಲಿ ಅವರದು ಸಾಧಾರಣ ತಂಡ. ಆದರೆ ಅಲ್ಲಿಂದ ಅವರು ಒಂದು ಅತ್ಯುತ್ತಮ ತಂಡವಾಗಿ ಹಿಂದಿರುಗಿದರು. ಬಹಳಹೊತ್ತು ಹಾಡಬಲ್ಲ ದೈಹಿಕ ಶಕ್ತಿಯನ್ನಷ್ಟೆ ಅವರು ಅಲ್ಲಿ ಪಡೆದುಕೊಳ್ಳಲಿಲ್ಲ. ದೀರ್ಘಕಾಲ ಬೇರೆಬೇರೆ ಅಭಿರುಚಿಯ ಶ್ರೋತೃಗಳಿಗಾಗಿ ಹಾಡುವ ಕಾರಣದಿಂದಾಗಿ ಕೇವಲ ರಾಕ್ ಅಂಡ್ ರೋಲ್ ಮಾತ್ರವಲ್ಲದೆ Jazz ಮತ್ತಿತರ ಪ್ರಕಾರಗಳ ಅಸಂಖ್ಯಾತ ಹಾಡುಗಳನ್ನೂ ಅವರು ಕಲಿಯಬೇಕಾಯಿತು. ಅದಕ್ಕೆ ಮೊದಲು ಸ್ಟೇಜ್ ಮೇಲೆ ಅವರಿಗೊಂದು ಶಿಸ್ತಿರಲಿಲ್ಲ. ಆದರೆ ವಾಪಸು ಬಂದಾಗ ಅವರು ಬೇರೆಯವರಂತಿರಲಿಲ್ಲ. ಅದು ಅವರು ರೂಪುಗೊಂಡ ಸಂದರ್ಭ."

ಈಗ ಬಿಲ್ ಗೇಟ್ಸ್ ವಿಚಾರ ನೋಡೋಣ. ಬಿಲ್‌ನ ಅಪ್ಪ ಒಬ್ಬ ಸ್ಥಿತಿವಂತ ಲಾಯರ್. ಚಿಕ್ಕಂದಿನಿಂದಲೂ ತನ್ನ ಜೊತೆಯವರಿಗಿಂತ ಸ್ವಲ್ಪ ಮುಂದಿದ್ದ ಕಾರಣದಿಂದಾಗಿ ಆತನ ಅಪ್ಪಅಮ್ಮ ಆತನನ್ನು ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗೆ ಸೇರಿಸುತ್ತಾರೆ. ಅದು ಸಿಯಾಟಲ್ ನಗರದ ಶ್ರೀಮಂತರ ಮಕ್ಕಳು ಹೋಗುವ ಶ್ರೀಮಂತ ಶಾಲೆ. ಬಿಲ್ ಗೇಟ್ಸ್ ಎಂಟನೆಯ ತರಗತಿಯಲ್ಲಿದ್ದಾಗ ಆ ಶಾಲೆಗೆ ಶ್ರೀಮಂತ ಶಾಲಾ ಮಕ್ಕಳ "ತಾಯಂದಿರ ಕ್ಲಬ್" ಕಂಪ್ಯೂಟರ್ ಒಂದನ್ನು ಉಡುಗೊರೆಯಾಗಿ ನೀಡುತ್ತದೆ. ಅದು 1968. ಆಗ ಶಾಲೆಗಳಲ್ಲಿರಲಿ, ಅಮೆರಿಕದ ಎಷ್ಟೊ ಕಾಲೇಜುಗಳಲ್ಲಿಯೆ ಕಂಪ್ಯೂಟರ್ ಇರಲಿಲ್ಲ. ಅಂತಹುದರಲ್ಲಿ ಎಂಟನೆಯ ತರಗತಿಯ ಬಿಲ್ ತನ್ನ ಒಂದಷ್ಟು ಸ್ನೇಹಿತರೊಂದಿಗೆ ಕಂಪ್ಯೂಟರ್ ಕಲಿಯಲು ಆರಂಭಿಸುತ್ತಾನೆ. ಈ ಕಂಪ್ಯೂಟರ್ ಹೊರಗಿನ ಮೇನ್‌ಫ್ರೇಮ್ ಒಂದಕ್ಕೆ ಕನೆಕ್ಟ್ ಆಗಿರುತ್ತದೆ ಮತ್ತು ಅದನ್ನು ಉಪಯೋಗಿಸಲು ಬಾಡಿಗೆ ಕೊಡಬೇಕಿರುತ್ತದೆ. ಇವರು ಉಪಯೋಗಿಸಿದಷ್ಟೂ ಅವರ ಶ್ರೀಮಂತ ತಾಯಂದಿರು ದುಡ್ಡು ಕೂಡಿಸುತ್ತ ಹೋಗುತ್ತಾರೆ. ಇದೇ ಸಮಯದಲ್ಲಿ ಸ್ಥಳೀಯ ಕಂಪನಿಯೊಂದರ ಸಾಫ್ಟ್‌ವೇರ್ ಪ್ರೊಗ್ರಾಮ್‌ಗಳನ್ನು ಟೆಸ್ಟ್ ಮಾಡುವ ಮತ್ತು ಅದಕ್ಕೆ ಪ್ರತಿಯಾಗಿ ಅವರ ಕಂಪ್ಯೂಟರ್‌ಗಳನ್ನು ಉಪಯೋಗಿಸುವ ಅವಕಾಶ ಬಿಲ್ ಗೇಟ್ಸ್‌ಗೆ ದೊರೆಯುತ್ತದೆ. ಅದಾದ ನಂತರ ಒಂದಷ್ಟು ದಿನ ವಿಶ್ವವಿದ್ಯಾಲಯದ ಕಂಪ್ಯೂಟರ್ ಬಳಸುವ ಅವಕಾಶ. ತನ್ನ 16ನೆ ವಯಸ್ಸಿನ ಒಂದು 7-ತಿಂಗಳ ಅವಧಿಯಲ್ಲಿ ಬಿಲ್ ಗೇಟ್ಸ್ ಪ್ರತಿದಿನ ಸರಾಸರಿ 8 ಗಂಟೆಗಳ ಕಾಲ ಕಂಪ್ಯೂಟರ್ ಬಳಸಿರುತ್ತಾನೆ. ಹೀಗೆ ಆತನಿಗೆ ಅವಕಾಶಗಳ ಮೇಲೆ ಅವಕಾಶ ದೊರೆಯುತ್ತ ಹೋಗುತ್ತದೆ. ಬಿಲ್ ತೀವ್ರಾಸಕ್ತಿಯಿಂದ ಕಲಿಯುತ್ತ ಹೋಗುತ್ತಾನೆ.

ತನ್ನ 19ನೆಯ ವಯಸ್ಸಿನಲ್ಲಿ ಕಾಲೇಜು ವಿದ್ಯಾಭ್ಯಾಸಕ್ಕೆ ನಮಸ್ಕಾರ ಹಾಕಿ ತನ್ನದೆ ಸಾಫ್ಟ್‌ವೇರ್ ಕಂಪನಿಯಲ್ಲಿ ತೊಡಗಿಸಿಕೊಳ್ಳುವ ಹೊತ್ತಿಗೆಲ್ಲ ಬಿಲ್ ಗೇಟ್ಸ್‌ಗೆ ಸುಮಾರು ಏಳು ವರ್ಷಗಳಿಂದ ನಿರಂತರವಾಗಿ ಸಾಫ್ಟ್ಟ್‌ವೇರ್ ಪ್ರೋಗ್ರಾಮ್ಸ್ ಬರೆಯುತಿದ್ದ ಅನುಭವ ಇತ್ತು. ಗಂಟೆಗಳ ಲೆಕ್ಕಾಚಾರದಲ್ಲಿ ಆತ ಹತ್ತುಸಾವಿರ ಗಂಟೆಗಳಿಗಿಂತ ಮುಂದಿದ್ದ. ಆತನೆ ಹೇಳುವ ಪ್ರಕಾರ ಬಹುಶಃ ಆ ಸಮಯದಲ್ಲಿ ಆತನಿಗಿದ್ದಷ್ಟು ಪ್ರೋಗ್ರಾಮಿಂಗ್ ಅನುಭವ ಇಡೀ ಪ್ರಪಂಚದಲ್ಲಿ ಅವನದೇ ವಯಸ್ಸಿನ ಮತ್ತೊಬ್ಬನಿಗೆ ಇದ್ದಿದ್ದು ಸಂದೇಹ; "ಚಿಕ್ಕ ವಯಸ್ಸಿಗೆಲ್ಲ ನನಗೆ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಬಗ್ಗೆ ಒಳ್ಳೆಯ ಜ್ಞಾನ ಮತ್ತು ಅನುಭವ ದಕ್ಕಿತ್ತು. ನನ್ನದೆ ವಯಸ್ಸಿನ ಯಾರೊಬ್ಬರಿಗಿಂತ ಹೆಚ್ಚಿನ ಮತ್ತು ಉತ್ತಮ ಅನುಭವ ನನಗಿತ್ತು. ಅದು ಸಾಧ್ಯವಾಗಿದ್ದು ನಂಬಲಸಾಧ್ಯವಾದ ಅದೃಷ್ಟಕಾರಿ ಘಟನೆಗಳ ಸರಣಿಯಿಂದಾಗಿ."

(ಮುಂದುವರೆಯುವುದು...)


ಮುಂದಿನ ವಾರ: ಯಾವುದಕ್ಕೂ "ಸಂಸ್ಕಾರ" ಇರಬೇಕ್ರಿ !

ಲೇಖನ ಸರಣಿಯ ಇದುವರೆಗಿನ ಲೇಖನಗಳು:

Aug 20, 2009

ಹುಟ್ಟಿದ ಘಳಿಗೆ ಸರಿ ಇರಬೇಕು...

[ವಿಕ್ರಾಂತ ಕರ್ನಾಟಕದ ಆಗಸ್ಟ್ 28,2009 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.]

ಭಾಗ - 1: "ಹೊರಗಣವರು" - ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ!

’ಮೆಡಿಸಿನ್ ಹ್ಯಾಟ್ ಟೈಗರ್ಸ್’ ಎನ್ನುವುದು ಕೆನಡಾದಲ್ಲಿಯ ಒಂದು ಬಾಲಕರ ಐಸ್ ಹಾಕಿ ತಂಡ. ಅದು ಹಲವಾರು ಚಾಂಪಿಯನ್‌ಷಿಗಳನ್ನು ಗೆದ್ದಿದೆ. ಮ್ಯಾಲ್ಕಮ್ ಗ್ಲಾಡ್‌ವೆಲ್ ತನ್ನ ಹೊರಗಣವರು ಪುಸ್ತಕದಲ್ಲಿ ಈ ತಂಡದ ಬಾಲಕರ ಜನ್ಮದಿನವನ್ನು ವಿಶ್ಲೆಷಿಸುತ್ತಾನೆ. (2007 ರ) ಟೈಗರ್ಸ್ ತಂಡದ 25 ಆಟಗಾರರಲ್ಲಿ 17 ಹುಡುಗರು ನಾಲ್ಕು ತಿಂಗಳ ಅವಧಿಯಲ್ಲಿ, ಅದೂ ಜನವರಿ-ಏಪ್ರಿಲ್ ತಿಂಗಳುಗಳಲ್ಲಿ ಹುಟ್ಟಿದವರು! ಆಗಸ್ಟ್-ಡಿಸೆಂಬರ್ ಅವಧಿಯಲ್ಲಿ ಹುಟ್ಟಿರುವ ಹುಡುಗರು ಕೇವಲ ಐವರು ಮಾತ್ರ. ಇದೇ ರೀತಿ ಜೆಕೊಸ್ಲಾವಾಕಿಯಾದ ೨೦೦೭ರ ರಾಷ್ಟ್ರೀಯ ಜೂನಿಯರ್ ತಂಡದಲ್ಲಿ ಜುಲೈ, ಅಕ್ಟೋಬರ್, ನವೆಂಬರ್, ಅಥವ ಡಿಸೆಂಬರ್‌ನಲ್ಲಿ ಹುಟ್ಟಿದ ಒಬ್ಬನೇ ಒಬ್ಬ ಆಟಗಾರ ಇಲ್ಲ. ಆಗಸ್ಟ್ ಮತ್ತು ಸೆಪ್ಟೆಂಬರ್‌ಗೆ ಸೇರಿದವರು ತಲಾ ಒಬ್ಬರಿದ್ದಾರೆ. ಅಂದರೆ, ಈ ಮೇಲಿನ ಎರಡೂ ಉದಾಹರಣೆಗಳಲ್ಲಿ ವರ್ಷದ ಉತ್ತರಾರ್ಧದಲ್ಲಿ ಹುಟ್ಟಿದವರಿಗೆ ಹೆಚ್ಚು ’ಅವಕಾಶ’ ಇದ್ದಂತಿಲ್ಲ್ಲ. ಪೂರ್ವಾರ್ಧದಲ್ಲಿ ಹುಟ್ಟಿದವರಿಗೇ ಹೆಚ್ಚಿನ ಅವಕಾಶಗಳು ಇದ್ದಂತಿವೆ. ಯಾಕೆ ಹೀಗೆ?

ಕೆನಡಾದಲ್ಲಿ ಐಸ್ ಹಾಕಿ ಆಟ ನಮ್ಮ ದೇಶದಲ್ಲಿ ಕ್ರಿಕೆಟ್ ಇದ್ದಂತೆ. ಉತ್ತರ ಧ್ರುವದವರೆಗೂ ಚಾಚಿಕೊಂಡಿರುವ ಈ ಹಿಮಾವೃತ ದೇಶದಲ್ಲಿ ಆ ಆಟಕ್ಕಿರುವಷ್ಟು ಪ್ರಸಿದ್ಧಿ ಮತ್ತು ಜನಪ್ರಿಯತೆ ಬೇರೆ ಆಟಕ್ಕಿಲ್ಲ. ಅಲ್ಲಿ ಚಿಕ್ಕಂದಿನಿಂದಲೆ ಸುಧೃಢ ಮಕ್ಕಳನ್ನು ಆರಿಸಿಕೊಂಡು ಅವರಿಗೆ ಅತ್ಯುತ್ತಮವಾದ ಟ್ರೈನಿಂಗ್ ಕೊಡಲಾಗುತ್ತದೆ. ಹಾಗೆ ಆಯ್ಕೆಯಾಗುವ ಮಕ್ಕಳ ಗುಂಪನ್ನು "ಕೆಂಪು ದಳ" ಎನ್ನುತ್ತಾರೆ. ಆಯಾಯ ವರ್ಷದ ಕೆಂಪು ದಳಕ್ಕೆ ಆಯ್ಕೆಯಾಗಲು ಒಬ್ಬ ಹುಡುಗನಿಗೆ ಜನವರಿ ಒಂದಕ್ಕೆ ಒಂಬತ್ತು ತುಂಬಿರಬೇಕು. ಅಂದರೆ, ಈ ವರ್ಷದ ಕೆಂಪು ದಳದಲ್ಲಿರುವ ಹುಡುಗರೆಲ್ಲ 2000 ನೇ ಇಸವಿಯಲ್ಲಿ ಹುಟ್ಟಿದವರಾಗಿರುತ್ತಾರೆ. ಆ ವರ್ಷದ ಜನವರಿ ಎರಡರಂದು ಹುಟ್ಟಿದ ಹುಡುಗ ಅದೇ ವರ್ಷದ ಡಿಸೆಂಬರ್ ಅಂತ್ಯದಲ್ಲಿ ಹುಟ್ಟಿದವನಿಗಿಂತ ಹನ್ನೆರಡು ತಿಂಗಳು ಹೆಚ್ಚಿನ ವಯಸ್ಸಿನವನಾಗಿರುತ್ತಾನೆ. ಹಾಗಾಗಿ ಸಹಜವಾಗಿ ದೈಹಿಕವಾಗಿಯೂ ಅವನಿಗಿಂತ ಬಲಿಷ್ಠನಾಗಿರುತ್ತಾನೆ. ಆ ವಯಸ್ಸಿನಲ್ಲಿ ಈ ತಿಂಗಳುಗಳ ವ್ಯತ್ಯಾಸ ಬಹಳ ಗಣನೀಯವಾದದ್ದೆ. ಗಣಿತದ ಲೆಕ್ಕಾಚಾರದಲ್ಲಿ ಹೇಳಬಹುದಾದರೆ, ಜನವರಿಯಲ್ಲಿ ಹುಟ್ಟಿದವನು ಡಿಸೆಂಬರ್‌ನಲ್ಲಿ ಹುಟ್ಟಿದವನಿಗಿಂತ ಶೇ. 10 ಹಿರಿಯ ವಯಸ್ಸಿನವನು ಆಗಿರುತ್ತಾನೆ. ಹಾಗಾಗಿ, ವರ್ಷದ ಪೂರ್ವಾರ್ಧದಲ್ಲಿ ಹುಟ್ಟಿದವರೆ ಹೆಚ್ಚಿನ ಸಂಖ್ಯೆಯಲ್ಲಿ ಕೆಂಪು ದಳಕ್ಕೆ ಆಯ್ಕೆಯಾಗುವುದು ಇಲ್ಲಿ ಸಹಜವಾದದ್ದು.

ಇನ್ನು ಈ "ಕೆಂಪು ದಳ"ಕ್ಕೆ ಆಯ್ಕೆಯಾದ ಆಟಗಾರನಿಗೆ ಸಿಗುವ ವಿಶೇಷ ಅನುಕೂಲಗಳನ್ನು ನೋಡಿ. ತನ್ನ ವಾರಿಗೆಯ ಮಾಮೂಲಿ ಶಾಲಾತಂಡಗಳಲ್ಲಿ ಆಡುವ ಹುಡುಗರಿಗಿಂತ ಒಳ್ಳೆಯ ಕೋಚಿಂಗ್ ಕೆಂಪು ದಳದವನಿಗೆ ಸಿಗಲಾರಂಭವಾಗುತ್ತದೆ. ಆತನ ಸಹಆಟಗಾರರೂ ಉತ್ತಮ ಮತ್ತು ಬಲಿಷ್ಠ ಆಟಗಾರರಾಗಿರುತ್ತಾರೆ. ಪ್ರತಿ ಸೀಸನ್ನಿನಲ್ಲೂ ಸಾದಾ ತಂಡಗಳಿಗಿಂತ ಹೆಚ್ಚಿನ ಪಂದ್ಯಗಳನ್ನು ಇವನು ಆಡುತ್ತಾನೆ. ಅವರಿಗಿಂತ ಎರಡು-ಮೂರು ಪಟ್ಟು ಹೆಚ್ಚು ಅಭ್ಯಾಸ ಮಾಡುತ್ತಾನೆ. ಈ ಎಲ್ಲಾ ಅನುಕೂಲಗಳಿಂದಾಗಿ ಮೂರ್ನಾಲ್ಕು ವರ್ಷಕ್ಕೆ ಮೇಜರ್ ಜೂನಿಯರ್ ಲೀಗ್‌ಗೆ ಆಯ್ಕೆಯಾಗುವ ಸಮಯದಲ್ಲಿ ತನ್ನ ವಾರಿಗೆಯ ಶಾಲಾತಂಡದ ಬಾಲಕರಿಗಿಂತ ಹೆಚ್ಚಿನ ಅವಕಾಶ ಇವನಿಗೇ ಇರುತ್ತದೆ. ಹಾಗಾಗಿ, ಆಯ್ಕೆಗೆ Cut-off ದಿನಾಂಕ ಇರುವ ಕಡೆ "ಜಾತಕ" ಕೂಡಿ ಬಂದರೆ ಒಳ್ಳೆಯದು.

ಇದು ಏನನ್ನು ಹೇಳುತ್ತದೆ? "ಶ್ರೇಷ್ಠರು ಮತ್ತು ಪ್ರತಿಭೆಯುಳ್ಳವರು ಸಾಧನೆಯ ಶಿಖರವನ್ನು ಬಹಳ ಸುಲಭವಾಗಿ ಹತ್ತುತ್ತಾರೆ ಎನ್ನುವುದು ಬಹಳ ಸರಳೀಕೃತಗೊಂಡ ಅಭಿಪ್ರಾಯ ಎನ್ನುವುದನ್ನು ಇದು ತಿಳಿಸುತ್ತದೆ. ಹೌದು, ವೃತ್ತಿಪರ ತಂಡಕ್ಕೆ ಆಯ್ಕೆಯಾಗುವ ಆಟಗಾರರು ನನಗಿಂತ ಅಥವ ನಿಮಗಿಂತ ಉತ್ತಮ ಆಟಗಾರರು ಎನ್ನುವುದೇನೊ ನಿಜ. ಅದರೆ ಅವರಿಗೆ ಅತ್ಯುತ್ತಮ ಆರಂಭವೆ ಸಿಕ್ಕಿತು. ಆ ಆರಂಭದ ಅವಕಾಶಕ್ಕೆ ಅವರು ಅರ್ಹರಾಗಿರಲಿಲ್ಲ. ಹಾಗೆಯೆ ಅದನ್ನು ಅವರು ಗಳಿಸಲೂ ಇಲ್ಲ. ಆದರೆ ಆ ಅವಕಾಶವೆ ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಈಗಾಗಲೆ ಯಾರು ಯಶಸ್ವಿಗಳೊ ಅಂತಹವರಿಗೆ ಮತ್ತಷ್ಟು ಯಶಸ್ವಿಯಾಗಲು ಇನ್ನಷ್ಟು ಅವಕಾಶಗಳು ದೊರಕುವ ಸಾಧ್ಯತೆ ಬೇರೆಲ್ಲರಿಗಿಂತ ಹೆಚ್ಚಿರುತ್ತದೆ. ಎಲ್ಲರಿಗಿಂತ ಹೆಚ್ಚಿನ ತೆರಿಗೆ ವಿನಾಯಿತಿಗಳು ಶ್ರೀಮಂತರಿಗೆ ದೊರಕುತ್ತವೆ. ಉತ್ತಮ ವಿದ್ಯಾರ್ಥಿಗಳತ್ತ ಅಧ್ಯಾಪಕರ ವಿಶೇಷ ಗಮನ ಹರಿಯುತ್ತದೆ ಹಾಗೂ ಅಂತಹವರಿಗೆ ಒಳ್ಳೆಯ ಪಾಠ ದೊರಕುತ್ತದೆ. ’ಯಶಸ್ಸು’ ಎನ್ನುವುದು ’ಅನುಕೂಲಗಳ ಒಟ್ಟುಮೊತ್ತ’ (Accumulative Advantage). ಒಬ್ಬ ವೃತ್ತಿಪರ ಹಾಕಿ ಆಟಗಾರ ತನ್ನ ವಾರಿಗೆಯವರಿಗಿಂತ ಸ್ವಲ್ಪ ಉತ್ತಮವಾಗಿ ಆರಂಭಿಸುತ್ತಾನೆ. ಆ ಸಣ್ಣ ವ್ಯತ್ಯಾಸವೆ ಅವಕಾಶವೊಂದಕ್ಕೆ ದಾರಿ ಮಾಡಿಕೊಡುತ್ತದೆ. ಆ ಅವಕಾಶ ಆರಂಭದ ವ್ಯತ್ಯಾಸವನ್ನು ಮತ್ತಷ್ಟು ಹಿಗ್ಗಿಸುತ್ತದೆ ಮತ್ತು ಆ ಹಿಗ್ಗಿದ ವ್ಯತ್ಯಾಸ ಮತ್ತಿನ್ನೊಂದು ಅವಕಾಶವನ್ನು ಒದಗಿಸುತ್ತದೆ. ಕಾಲಕ್ರಮೇಣ ಪ್ರಾರಂಭದ ಆ ಸಣ್ಣ ವ್ಯತ್ಯಾಸ ಬಹಳ ಮುಖ್ಯವಾದದ್ದೂ ಮತ್ತು ಹಿರಿದೂ ಆದ ವ್ಯತ್ಯಾಸವಾಗಿ ಪರಿಣಮಿಸಿ ಆ ಆಟಗಾರನನ್ನು ಅಪ್ಪಟ "ಹೊರಗಣವ"ನನ್ನಾಗಿ ಮಾಡುವ ತನಕ ಒಯ್ಯುತ್ತದೆ. ಆದರೆ ಆತ ಮೊದಲಿಗೇ ಹೊರಗಣವನಾಗಿ ಆರಂಭಿಸಲಿಲ್ಲ. ಬೇರೆಯವರಿಗಿಂತ ಸ್ವಲ್ಪವೆ ಸ್ವಲ್ಪ ಹೆಚ್ಚು ಉತ್ತಮವಾಗಿ ಆರಂಭಿಸಿದ." (“Outliers” - ಪು. 30)

ಈಗ ದೇಶ-ಕಾಲದತ್ತ ಮತ್ತು ವರ್ಷಗಳತ್ತ ನೋಡೋಣ, ಇವತ್ತಿನ ಡಾಲರ್ ಮೌಲ್ಯದ ಪ್ರಕಾರ ಇಲ್ಲಿಯವರೆಗಿನ ನಮ್ಮ ಚರಿತ್ರೆಯಲ್ಲಿನ ಅತಿ ಶ್ರೀಮಂತರ ಪಟ್ಟಿಯೊಂದನ್ನು ಮಾಡಿದರೆ, ಅದರಲ್ಲಿ ಜಾನ್ ರಾಕ್‌ಫೆಲ್ಲರ್ ಸುಮಾರು 320 ಶತಕೋಟಿ ಡಾಲರ್‌ಗಳಷ್ಟು ಶ್ರೀಮಂತ; ಮೊದಲನೆಯವನು. ಹೈದರಾಬಾದಿನ ಕೊನೆಯ ನಿಜಾಮ ಉಸ್ಮಾನ್ ಅಲಿ ಖಾನ್ ಆ ಪಟ್ಟಿಯಲ್ಲಿ ಐದನೆಯವನು (ಸುಮಾರು 210 ಬಿಲಿಯನ್ ಡಾಲರ್). ರಾಣಿ ಕ್ಲಿಯೊಪಾಟ್ರ 21ನೆಯವಳು. ಮುಖೇಶ್ ಅಂಬಾನಿಗೆ 40ನೆ ರ್‍ಯಾಂಕ್. ಮೊದಲ 75 ಜನರ ಪಟ್ಟಿಯಲ್ಲಿ 45 ಜನ ಅಮೆರಿಕನ್ನರೆ ಇದ್ದಾರೆ. ಆದರೆ ಆ ಪಟ್ಟಿಯಲ್ಲಿನ ಕುತೂಹಲಕಾರಿ ವಿಷಯವೊಂದರತ್ತ ಗ್ಲಾಡ್‌ವೆಲ್ ನಮ್ಮ ಗಮನ ಸೆಳೆಯುತ್ತಾನೆ. ಆ 75 ಜನರ ಪಟ್ಟಿಯಲ್ಲಿರುವ ಅಮೆರಿಕನ್ನರಲ್ಲಿ 14 ಜನ ಕೇವಲ 9 ವರ್ಷಗಳ ಅಂತರದಲ್ಲಿ ಹುಟ್ಟಿದವರು. ನಂಬರ್ 1 ಶ್ರೀಮಂತ ರಾಕ್‌ಫೆಲ್ಲರ್‌ನನ್ನೂ ಒಳಗೊಂಡು ಈ ಹದಿನಾಲ್ಕು ಜನ ಹುಟ್ಟಿರುವುದು 1831 ರಿಂದ 1840 ಅವಧಿಯಲ್ಲಿ. ಈ ಅವಧಿಯಲ್ಲಿಯೆ ಅಷ್ಟೊಂದು ’ಭಾವಿ’ ಶ್ರೀಮಂತರು ಹುಟ್ಟಿದ್ದು ಹೇಗೆ?

"ತನ್ನ ಇತಿಹಾಸದಲ್ಲಿಯೆ ಅತಿ ದೊಡ್ಡ ಬದಲಾವಣೆಗಳನ್ನು ಮತ್ತು ಮಾರ್ಪಾಡುಗಳನ್ನು ಅಮೆರಿಕದ ಆರ್ಥಿಕತೆ ಕಂಡಿದ್ದು 1860 ಮತ್ತು 1870 ರ ಅವಧಿಯಲ್ಲಿ. ದೇಶದಾದ್ಯಂತ ರೈಲು ರೋಡುಗಳು ಹಾಕಲ್ಪಟ್ಟ ಮತ್ತು ವಾಲ್ ಸ್ಟ್ರೀಟ್ ಹುಟ್ಟಿದ ಸಂದರ್ಭ ಅದು. ಕೈಗಾರಿಕಾ ಉತ್ಪಾದನೆ ತೀವ್ರಗತಿಯಲ್ಲಿ ಆರಂಭವಾದ ಸಮಯವೂ ಅದೇ. ಹಾಗೆಯೆ, ಸಾಂಪ್ರದಾಯಿಕ ಆರ್ಥಿಕ ವ್ಯವಸ್ಥೆಯ ಸಂಪ್ರದಾಯಗಳನ್ನು ಮತ್ತು ನೀತಿಗಳನ್ನು ಮುರಿಯಲ್ಪಟ್ಟ ಮತ್ತು ಹೊಸದಾಗಿ ಸೃಷ್ಟಿಸಲ್ಪಟ್ಟ ಸಂದರ್ಭವೂ ಅದೇನೆ. ಈ ಹಿನ್ನೆಲೆಯಲ್ಲಿ ಆ ಹದಿನಾಲ್ಕು ಜನರ ಪಟ್ಟಿ ಏನನ್ನು ಹೇಳುತ್ತದೆ ಅಂದರೆ, ಆ ಆರ್ಥಿಕ ಮಾರ್ಪಾಡುಗಳು ಆಗುತ್ತಿದ್ದಾಗ ನಿಮ್ಮ ವಯಸ್ಸು ಎಷ್ಟು ಎನ್ನುವುದು ಪರಿಗಣನೆಗೆ ಅರ್ಹವಾದದ್ದು ಮತ್ತು ಮುಖ್ಯವಾದದ್ದು, ಎಂದು. ನೀವು 1840 ರಲ್ಲಿ ಹುಟ್ಟಿದವರಾಗಿದ್ದರೆ ನೀವು ಅದನ್ನು ತಪ್ಪಿಸಿಕೊಂಡಿರಿ. ಆ ಕ್ಷಣದ ಅವಕಾಶಗಳನ್ನು ಬಳಸಿಕೊಳ್ಳಲು ನೀವಿನ್ನೂ ಚಿಕ್ಕವರು. ನೀವು 1820 ರ ಸುಮಾರಿನಲ್ಲಿ ಹುಟ್ಟಿದ್ದರೆ ನಿಮಗಾಗ ವಯಸ್ಸಾಗಿ ಹೋಗಿದೆ. ನಿಮ್ಮ ಚಿಂತನೆ ಹಳೆಯದಾಗಿದೆ. ಆದರೆ, ಭವಿಷ್ಯದಲ್ಲಿ ಏನಿದೆ ಎನ್ನುವುದನ್ನು ನೋಡಬಲ್ಲ ಒಂಬತ್ತು ವರ್ಷಗಳ ಒಂದು ಸಣ್ಣ ಅವಧಿ ಈ ಎರಡರ ಮಧ್ಯೆ ಇದೆ. ಆ 14 ಜನರ ಪಟ್ಟಿಯಲ್ಲಿರುವ ಎಲ್ಲರೂ ಪ್ರತಿಭಾವಂತರು ಮತ್ತು ದೂರದೃಷ್ಟಿ ಇದ್ದವರು. ಆದರೆ, ಹೇಗೆ ಜನವರಿ-ಮಾರ್ಚ್ ಅವಧಿಯಲ್ಲಿ ಹುಟ್ಟಿದ ಹಾಕಿ ಮತ್ತು ಫುಟ್‌ಬಾಲ್ ಆಟಗಾರರಿಗೆ ಅಸಾಮಾನ್ಯಾವಾದ ಅವಕಾಶ ದೊರಕುತ್ತದೊ ಅಂತಹುದೆ ಒಂದು ಅಸಾಮಾನ್ಯ ಅವಕಾಶ ಆ ಪಟ್ಟಿಯಲ್ಲಿರುವವರಿಗೂ ದೊರಕಿತ್ತು. (“Outliers”- ಪು. 63)

ಇದೇ ತರಹದ ಅವಕಾಶ ದೊರಕಲ್ಪಟ್ಟ ಮತ್ತೊಂದು ತಲೆಮಾರು 1953-56 ಅವಧಿಯಲ್ಲಿ ಹುಟ್ಟಿದವರದು. ಕಂಪ್ಯೂಟರ್ ಉದ್ದಿಮೆಯ ಹಿರಿತಲೆಗಳ ಪ್ರಕಾರ ಪರ್ಸನಲ್ ಕಂಪ್ಯೂಟರ್‌ನ ಇತಿಹಾಸದಲ್ಲಿ ಅತಿ ಪ್ರಮುಖವಾದ ಘಟನೆ ನಡೆದದ್ದು 1975 ರ ಜನವರಿಯಲ್ಲಿ. ಅದು ಮನೆಯಲ್ಲಿಯೆ ಜೋಡಿಸಿ-ಓಡಿಸಬಹುದಾದ “Altairs 8800” ಎಂಬ ಸಣ್ಣ ಕಂಪ್ಯೂಟರ್ 397 ಡಾಲರ್‌ಗಳಿಗೆ ಮಾರುಕಟ್ಟೆಗೆ ಬಂದ ಸಂದರ್ಭ. ಅಲ್ಲಿಯವರೆಗೂ ಕಂಪ್ಯೂಟರ್‌ಗಳೆಂದರೆ ಭಾರೀ ಗಾತ್ರದ, ಕೆಲವೆ ಕೆಲವು ಕಡೆ ಮಾತ್ರ ಇರುತ್ತಿದ್ದ ದೈತ್ಯ ಮೈನ್‌ಫ್ರೇಮ್ ಮೆಷಿನ್‌ಗಳು. ಕಂಪ್ಯೂಟರ್‌ನಲ್ಲಿ ಕೆಲಸ ಮಾಡಬೇಕು, ತಮ್ಮ ಹೊಸಹೊಸ ಪ್ರೋಗ್ರಾಮ್‌ಗಳನ್ನು ಪರೀಕ್ಷಿಸಬೇಕು ಎಂದು ತುಡಿಯುತ್ತಿದ ’Geek’ ಯುವಜನಾಂಗವೊಂದರ ಕನಸು ಸಾಕಾರಗೊಂಡದ್ದು 1975 ರಲ್ಲಿ; Altairs ಮೂಲಕ.

1975 ಪರ್ಸನಲ್ ಕಂಪ್ಯೂಟರ್‌ಗಳ ಅರುಣೋದಯದ ಸಮಯ ಎಂದಾದರೆ, ಆಗ ಅದರ ಉಪಯೋಗ ಪಡೆದುಕೊಳ್ಳಲು ಸಮರ್ಥರಾಗಿದ್ದವರು ಯಾರು? ಮೇಲಿನ ರಾಕ್‌ಫೆಲ್ಲರ್ ಕಾಲಮಾನಕ್ಕೆ ಅನ್ವಯಿಸಲ್ಪಟ್ಟ ನಿಯಮವೆ ಇಲ್ಲಿಯೂ ಅನ್ವಯವಾಗುತ್ತದೆ.

"ಮೈಕ್ರೋಸಾಫ್ಟ್ಟ್‌ನಲ್ಲಿ ಹಿರಿಯ ಅಧಿಕಾರಿಯಾಗಿದ್ದ ನೇಥನ್ ಮೈರ್ವಾಲ್ಡ್ ಹೇಳುತ್ತಾರೆ, "1975 ರ ಸುಮಾರಿನಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿದ್ದು, ಅಷ್ಟೊತ್ತಿಗೆ ಸ್ವಲ್ಪ ವಯಸ್ಸು ಆಗಿಬಿಟ್ಟಿದ್ದರೆ ಬಹುಶಃ ಅವರು IBM ನಲ್ಲಿ ನೌಕರಿ ಮಾಡುತ್ತಿದ್ದರು. ಒಂದು ಸಲ ಅಲ್ಲಿ ಸೇರಿಕೊಂಡರೆ ಮುಗಿಯಿತು, ಹೊರಗಿನ ಹೊಸ ಪ್ರಪಂಚಕ್ಕೆ ತೆರೆದುಕೊಳ್ಳುವುದು ಕಷ್ಟವಿತ್ತು. ಅದು ಮೇನ್‌ಫ್ರೇಮ್‌ಗಳನ್ನು ಮಾಡುತ್ತಿದ್ದ ಬಿಲಿಯನ್‌ಗಟ್ಟಳೆ ಡಾಲರ್‌ಗಳ ಹೆಸರುವಾಸಿ ಕಂಪನಿ. ಕಂಪ್ಯೂಟರ್ ಎಂದರೆ ಮೇನ್‌ಪ್ರೇಮ್‌ಗಳು ಎನ್ನುವಂತಿದ್ದ ಸಮಯ ಅದು. ಹಾಗಿರುವಾಗ, ಕೆಲಸಕ್ಕೆ ಬಾರದ ಈ ಸಣ್ಣ ಕಂಪ್ಯೂಟರ್‌ಗಳಲ್ಲಿ ಏನು ಮಾಡುವುದು ಎನ್ನುವ ಮನಸ್ಥಿತಿ ಅವರದು. ಅವರ ದೂರದೃಷ್ಟಿ ಅಷ್ಟಕ್ಕೇ ಸೀಮಿತವಾಗಿಬಿಟ್ಟಿತ್ತು. ಅವರಿಗೆ ಆರಾಮವಾಗಿ ಜೀವನ ನಡೆಯುತ್ತಿತ್ತು. ಅವರ ಪ್ರಕಾರ ಆಗ ಬಿಲಿಯನ್‌ಗಟ್ಟಲೆ ದುಡ್ಡು ಮಾಡುವ ಹೊಸ ಅವಕಾಶಗಳು ಇರಲಿಲ್ಲ."

"1975 ರ ಸುಮಾರಿಗೆ ನಿಮ್ಮದು ಕಾಲೇಜು ವಿದ್ಯಾಭ್ಯಾಸ ಮುಗಿಸಿ ಕೆಲವು ವರ್ಷ ಆಗಿಬಿಟ್ಟಿದ್ದರೆ ನೀವು ಆ ಹಳೆಯ ತಲೆಮಾರಿಗೆ ಸೇರಿದವರು. ಈಗ ತಾನೆ ಹೊಸ ಮನೆ ಕೊಂಡಿದ್ದೀರಿ. ಹೊಸದಾಗಿ ಮದುವೆ ಆಗಿದೆ. ಇಷ್ಟರಲ್ಲಿಯೆ ಮಗು ಆಗಬಹುದು. ಒಳ್ಳೆ ಕೆಲಸ ಬಿಟ್ಟು ಸುಮ್ಮನೆ ಯಾವುದೊ 397 ಡಾಲರ್‌ಗಳ ಸಣ್ಣ ಕಂಪ್ಯೂಟರ್ ಕಿಟ್‌ನ ನೆಲೆಯಿಲ್ಲದ ಕ್ಷೇತ್ರದಲ್ಲಿ ಮನಸ್ಸು ತೊಡಗಿಸುವ ಸ್ಥಿತಿಯಲ್ಲಿ ನೀವಿಲ್ಲ. ಹಾಗಾಗಿ 1952 ಕ್ಕಿಂತ ಮೊದಲು ಹುಟ್ಟಿದವರನ್ನು ನಾವಿಲ್ಲಿ ಪರಿಗಣಿಸುವ ಅವಶ್ಯಕತೆ ಇಲ್ಲ.

"ಅದೇ ಸಮಯದಲ್ಲಿ, ನೀವು ತೀರಾ ಚಿಕ್ಕವರಾಗಿರುವುದೂ ಉಪಯೋಗಕ್ಕಿಲ್ಲ. ಅಂದರೆ ಹೈಸ್ಕೂಲ್‌ಗೆ ಹೋಗುವ ವಯಸ್ಸು ಸಾಕಾಗುವುದಿಲ್ಲ. ಹಾಗಾಗಿ 1958 ರಿಂದ ಈಚೆಗೆ ಹುಟ್ಟಿದವರನ್ನೂ ಪರಿಗಣಿಸುವುದು ಬೇಡ. ಬರಲಿರುವ ಕಂಪ್ಯೂಟರ್ ಕ್ರಾಂತಿಯಲ್ಲಿ ಪಾಲ್ಗೊಳ್ಳಬೇಕಿದ್ದರೆ 1975 ರಲ್ಲಿ ಅತ್ತ ಹೆಚ್ಚೂ ಅಲ್ಲದ ಇತ್ತ ಕಮ್ಮಿಯೂ ಅಲ್ಲದ ವಯಸ್ಸೆಂದರೆ 20 ಇಲ್ಲವೆ 21 ವರ್ಷ ವಯಸ್ಸಾಗಿರುವುದು. ಅಂದರೆ, ನೀವು 1954 ಅಥವ 1955 ರಲ್ಲಿ ಹುಟ್ಟಿದವರಾಗಿರುವುದು.

"ಇದನ್ನು ಪರೀಕ್ಷಿಸಲು ಒಂದು ಸುಲಭ ಮಾರ್ಗ ಇದೆ. ಬಿಲ್ ಗೇಟ್ಸ್ ಹುಟ್ಟಿದು ಯಾವಾಗ?

"1955ರ ಅಕ್ಟೋಬರ್‌ನಲ್ಲಿ.

"ಆಪಲ್‌ನ ಸ್ಟೀವ್ ಜಾಬ್ಸ್, ಗೂಗಲ್‌ನ ಎರಿಕ್ ಸ್ಮಿಡ್ಟ್, ಸನ್ ಮೈಕ್ರೊಸಿಸ್ಟಮ್ಸ್‌ನ ವಿನೋದ್ ಖೋಸ್ಲ? 1955. UNIX ಆಪರೇಟಿಂಗ್ ಸಿಸ್ಟಮ್ ಬರೆದವರಲ್ಲಿ ಮುಖ್ಯನಾದ ಮತ್ತು ಸನ್ ಮೈಕ್ರೊಸಿಸ್ಟಮ್ಸ್‌ನ ಸ್ಥಾಪಕರಲ್ಲಿ ಒಬ್ಬನಾದ ಬಿಲ್ ಜಾಯ್, ಮತ್ತು ಸನ್ ಮೈಕ್ರೊಸಿಸ್ಟಮ್ಸ್‌ನ ಮತ್ತೊಬ್ಬ ಸ್ಥಾಪಕ ಸ್ಕಾಟ್ ಮೆಕ್ನೀಲಿ: 1954. ಬಿಲ್ ಗೇಟ್ಸ್ ಜೊತೆಯಲ್ಲಿ ಮೈಕ್ರೊಸಾಫ್ಟ್ ಸ್ಥಾಪಿಸಿದ ಅತನ ಸ್ನೇಹಿತ ಪಾಲ್ ಅಲ್ಲೆನ್: 1953. ಮೈಕ್ರೋಸಾಫ್ಟ್‌ನ ಈಗಿನ CEO ಆಗಿರುವ ಸ್ಟೀವ್ ಬಾಲ್ಮರ್: 1956." (“Outliers” - ಪು. 68)

ಸರಿ, ಯಶಸ್ಸಿಗೆ ದೇಶ-ಕಾಲವೂ ಕೂಡಿಬರಬೇಕು. ಆದರೆ ಪ್ರತಿಭೆ-ಪರಿಶ್ರಮ ಎಷ್ಟಿರಬೇಕು?

ಮುಂದಿನ ವಾರ: ದಶಸಹಸ್ರ ಗಂಟೆಯೆಂಬ ಪ್ರತಿಭಾ-ನಿಯಮ.

(ಮುಂದುವರೆಯುವುದು...)


ಭಾಗ - 1: "ಹೊರಗಣವರು" - ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ!

Aug 19, 2009

ಪೆಜತ್ತಾಯರ "ರಕ್ಷಾ" ಮತ್ತು ರಹಮತರ ನಾಯಿಪುರಾಣ...

ರಹಮತ್ ತರೀಕೆರೆಯವರು "ಕೆಂಡಸಂಪಿಗೆ"ಯಲ್ಲಿ ಬರೆಯುತ್ತಿರುವ "ನಾಯಿಪುರಾಣ" ಮತ್ತೆ ಹಳೆಯ ನೆನಪುಗಳನ್ನು ಎಬ್ಬಿಸುತ್ತಿದೆ. ಈ ವಾರ ನಾಯಿಪುರಾಣದ ಎರಡನೆಯ ಕಂತು ಪ್ರಕಟವಾಗಿದೆ. ಕೆಲವು ಬರಹಗಳನ್ನು ಓದಿದಾಕ್ಷಣ ಮನಸ್ಸು ಅದೆಂತಹುದೊ ಪ್ರಶಾಂತತೆಗೆ ತಲುಪಿಬಿಡುತ್ತದೆ. ಇಂದೂ ಸಹ ಹಾಗೆಯೆ ಆಯಿತು.

ನಾಯಿಪುರಾಣದ ಮೊದಲ ಕಂತು ಪೆಜತ್ತಾಯರ ಪುಸ್ತಕದ ಪ್ರಸ್ತಾಪದೊಂದಿಗೆ ಆರಂಭವಾಗುತ್ತದೆ. ಆ ಪುಸ್ತಕವನ್ನು ರಹಮತ್ "ನನಗೆ ತಿಳಿದಂತೆ ನಾಯಿಯ ಬಗ್ಗೆ ಕನ್ನಡದಲ್ಲಿ ಬಂದಿರುವ ಮೊದಲ ಜೀವನ ಚರಿತ್ರೆ" ಎನ್ನುತ್ತಾರೆ. ಅದರ ಹೆಸರು "ನಮ್ಮ ರಕ್ಷಕ ರಕ್ಷಾ". ಆ ಪುಸ್ತಕಕ್ಕೆ ಮುನ್ನುಡಿ ಬರೆಯುವ ಅವಕಾಶವನ್ನು ಪೆಜತ್ತಾಯರು ನನಗೆ ಕೊಟ್ಟಿದ್ದರು. ನಾಯಿಪುರಾಣದ ಓದಿನಿಂದಾಗಿ ಮತ್ತೊಮ್ಮೆ ನೆನಪಾದ ’ರಕ್ಷಾ’ನನ್ನು ನೆನೆಯುತ್ತ ಆ ಮುನ್ನುಡಿಯನ್ನು ಇಲ್ಲಿ ಕೊಡುತ್ತಿದ್ದೇನೆ.

"ನಮ್ಮ ರಕ್ಷಕ ರಕ್ಷಾ"ದ ಮುನ್ನುಡಿ...

ಮಧುಸೂದನ ಪೆಜತ್ತಾಯರು ನನಗೆ 2004 ರಿಂದೀಚೆಗಷ್ಟೆ ಪರಿಚಯಸ್ಥರು. ದಟ್ಸ್‌ಕನ್ನಡ.ಕಾಮಿನಲ್ಲಿ ನಾನು ಆಗಾಗ ಬರೆಯುತ್ತಿದ್ದ ಲೇಖನಗಳಿಗೆ ಈ ಹಿರಿಯ ಮಿತ್ರರು ಆಗಾಗ ಇ-ಮೇಲ್‌ನಲ್ಲಿ ಪ್ರತಿಕ್ರಿಯಿಸುತ್ತಿದ್ದರು. 2007 ರಲ್ಲಿ ಒಮ್ಮೆ ಅವರು ಸಂಕ್ರಾಂತಿಯ ಶುಭಾಶಯ ಕೋರುತ್ತ ಅವರ ನಾಯಿ ’ರಕ್ಷ’ ಇನ್ನೂ ಶಾಲಾಬಾಲಕಿಯಾಗಿದ್ದ ಪೆಜತ್ತಾಯರ ಮಗಳ ಪಕ್ಕದಲ್ಲಿ ಅವರ ಮನೆಯ ಗೇಟಿನ ಮೇಲೆ ಕಾಲೂರಿ ನಿಂತಿರುವ ಚಿತ್ರವನ್ನೂ ಕಳುಹಿಸಿದ್ದರು. ನಿಜಕ್ಕೂ ನಾನು ದಂಗಾಗಿ ಹೋಗಿದ್ದೆ. ಹೇಳಬೇಕೆಂದರೆ ಅಷ್ಟೊಂದು ದೈತ್ಯಗಾತ್ರದ ನಾಯಿಯನ್ನು ನಾನು ಅಲ್ಲಿಯವರೆಗೂ ನೋಡಿರಲಿಲ್ಲ ಎನ್ನಬೇಕು. ಅದನ್ನೆ ಪೆಜತ್ತಾಯರಿಗೆ ಬರೆದೆ. ಅವರು ಆ ನಾಯಿ ತಮ್ಮ ಕುಟುಂಬದ ಮಗನಾಗಿ ಹೋದ ಕತೆ ಮತ್ತು ಅದರ ನೆನಪನ್ನು ಬರೆದಿದ್ದರು. ಈ ಪತ್ರ ವ್ಯವಹಾರಕ್ಕೆ ಕೇವಲ ನಾಲ್ಕೈದು ತಿಂಗಳ ಹಿಂದಷ್ಟೆ ನಾನು ’ವಿಕ್ರಾಂತ ಕರ್ನಾಟಕ’ ವಾರಪತ್ರಿಕೆ ಆರಂಭಿಸಿದ್ದೆ. ಆ ಹಿನ್ನೆಲೆಯಲ್ಲಿ, "ನೀವು ಯಾಕೆ ನಿಮ್ಮ ರಕ್ಷಾನ ಬಗ್ಗೆ ನಮ್ಮ ಪತ್ರಿಕೆಗೆ ಬರೆಯಬಾರದು? ದಯವಿಟ್ಟು ಬರೆಯಿರಿ." ಎಂದು ವಿನಂತಿಸಿದ್ದೆ.

ಸರಿಯಾಗಿ ಅದಾದ ಒಂದು ವರ್ಷದ ನಂತರ ಪೆಜತ್ತಾಯರು ರಕ್ಷಾನ ಬಗ್ಗೆ ಬರೆದು ಮುಗಿಸಿದ್ದಾರೆ. ಈ ಒಂದೇ ವರ್ಷದಲ್ಲಿ ಅನೇಕ ಘಟನಗೆಳು ಘಟಿಸಿ ಹೋಗಿವೆ. ನನ್ನ ಜೀವನದಲ್ಲಾದ ಘಟನೆಗಳು ಇಲ್ಲಿ ಅಪ್ರಸ್ತುತ. ಆದರೆ ಈ ಒಂದೇ ವರ್ಷದಲ್ಲಿ ಪೆಜತ್ತಾಯರು ತಮ್ಮ ಕಣ್ಣಿಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಅವರ ಹೃದಯವೂ ಶಸ್ತ್ರಚಿಕಿತ್ಸೆಗೆ ಒಳಗಾಗಿದೆ. ತಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಸುವಂತಹ ಕಾಯಿಲೆಕಸಾಲೆಗಳನ್ನು ಅನುಭವಿಸಿ ಚೇತರಿಸಿಕೊಂಡಿದ್ದಾರೆ. ಇವುಗಳ ಮಧ್ಯೆಯೇ ತಮ್ಮ ಹಿರಿಮಗಳ ಮದುವೆ ಮಾಡಿದ್ದಾರೆ. ಆ ಸಂಭ್ರಮವನ್ನು ಅದೆಲ್ಲದರ ಸಡಗರದೊಂದಿಗೆ ಅನುಭವಿಸಿದ್ದಾರೆ. ಹಾಗೆಯೆ ಕಂಪ್ಯೂಟರ್‌ನ ’ಬರಹ’ದಲ್ಲಿ ಒಂದೊಂದೆ ಕನ್ನಡ ಅಕ್ಷರವನ್ನು ಟೈಪ್ ಮಾಡುತ್ತ ರಕ್ಷಾನ ಕತೆಯನ್ನು ಬರೆದಿದ್ದಾರೆ. ಕಂಪ್ಯೂಟರ್ ಅನ್ನು ಹೆಚ್ಚಿಗೆ ನೋಡಿದರೆ ಪೆಜತ್ತಾಯರ ಕಣ್ಣಿಗೆ ಆಯಾಸವಾಗುತ್ತದೆ. ಕಿರಿಕಿರಿಯಾಗುತ್ತದೆ. ಆ ಕಿರಿಕಿರಿಯಲ್ಲೂ, ಇತರ ದೈಹಿಕ ಸಮಸ್ಯೆಗಳ ನಡುವೆಯೂ ಪೆಜತ್ತಾಯರಿಗೆ ರಕ್ಷಾ ಎಂದೆಂದಿಗಿಂತ ಮುಖ್ಯವಾಗುತ್ತ, ಮಗನೆಂದು ಭಾವಿಸಿದ್ದಕ್ಕಿಂತ ಹೆಚ್ಚಾಗಿ ಆತ್ಮಬಂಧುವಾಗುತ್ತ ಹೋಗಿದ್ದಾನೆ.

ಅವರ ಆತ್ಮಬಂಧುವಿನ ಕತೆ ಈಗ ನಿಮ್ಮ ಕೈಯ್ಯಲ್ಲಿದೆ.

ಕನ್ನಡದ ಮೊಟ್ಟಮೊದಲ ಪ್ರಸಿದ್ಧ ನಾಯಿ "ಹುಲಿಯ" ಎಂದರೆ ಬಹುಶಃ ತಪ್ಪಾಗಲಾರದು. ಕ್ರಿ.ಶ. 1967 ರಲ್ಲಿ ಕುವೆಂಪುರವರು ಬರೆದ ಬೃಹತ್ಕಾದಂಬರಿ ’ಮಲೆಗಳಲ್ಲಿ ಮದುಮಗಳು’. ಅದರಲ್ಲಿ ದೈತ್ಯಗಾತ್ರದ ಕರಿ ನಾಯಿ ಹುಲಿಯ ತಾನೇ ಒಂದು ಪಾತ್ರವಾಗಿ, ಕೌತುಕವಾಗಿ, ಜೀವವಾಗಿ, ಜೀವಿಸುತ್ತದೆ; ವಿಜೃಂಭಿಸುತ್ತದೆ. ಆ ಇಡೀ ಕಾದಂಬರಿಯಲ್ಲಿ ಹುಟ್ಟಿನಿಂದ ಹಿಡಿದು ಅದರ ಸಾವಿನ ತನಕ ದಾಖಲಾಗಿರುವ ಏಕೈಕ ಜೀವ ’ಹುಲಿಯ’ ಎಂದರೆ ನಿಮಗೆ ಆ ನಾಯಿಯ ಹಿರಿಮೆಯ ಕಲ್ಪನೆ ಆಗಬಹುದು ಎಂದು ಭಾವಿಸುತ್ತೇನೆ. ಕನ್ನಡ ಸಾಹಿತ್ಯಪ್ರೇಮಿಗಳ ಪ್ರೀತಿಗೆ ಪಾತ್ರವಾದ ಮತ್ತೊಂದು ನಾಯಿ ಎಂದರೆ ಪೂರ್ಣಚಂದ್ರ ತೇಜಸ್ವಿಯವರ ’ಕರ್ವಾಲೊ’ ಕಾದಂಬರಿಯಲ್ಲಿ ಬರುವ ’ಕಿವಿ’. ನೀವು ಈ ಕಾದಂಬರಿಗಳನ್ನೇನಾದರೂ ಈ ಮುಂಚೆಯೆ ಓದಿದ್ದರೆ ರಕ್ಷಾನನ್ನು ಓದುತ್ತ ಓದುತ್ತ ಅವರೂ ನಿಮ್ಮ ಸ್ಮೃತಿ ಪಟಲದಲ್ಲಿ ಖಂಡಿತ ಹಾದುಹೋಗುತ್ತಿರುತ್ತಾರೆ. ಹಾಗೆಯೆ, ಇನ್ನುಮುಂದೆ ಹುಲಿಯ ಮತ್ತು ಕಿವಿಗಳ ಜೊತೆಜೊತೆಗೆ ರಕ್ಷನೂ ನಿಮ್ಮ ಮನೋಮಂಡಲದ ಒಡನಾಡಿಯಾಗುತ್ತಾನೆ.

ನಾನು ರಕ್ಷಾನ ಬಗ್ಗೆ ಓದುತ್ತ ನನ್ನದೇ ಜೀವನದ ಸುಮಧುರವಾದ, ಆದರೆ ನೋವಿನಲ್ಲಿ ಕೊನೆಗೊಂಡ ಒಂದು ಭಾಗದ ಮರುಪ್ರಯಾಣ ಮಾಡಿದ್ದೇನೆ. ಬೆಂಗಳೂರಿನ ದಕ್ಷಿಣಕ್ಕಿರುವ ಹಳ್ಳಿಯೊಂದರಲ್ಲಿ ಹುಟ್ಟಿಬೆಳೆದವನು ನಾನು. ಬಹುಶಃ ನನಗಾಗ ನಾಲ್ಕೈದು ವರ್ಷ. ಪಕ್ಕದ ಮನೆಯವರ ನಾಯಿಯ ಸಣ್ಣ ಮರಿಯೊಂದನ್ನು ನನ್ನ ಬಲವಂತಕ್ಕೆ ನನ್ನಣ್ಣ ಮನೆಗೆ ತಂದ ನೆನಪು. ಆಗೆಲ್ಲ ನಮ್ಮ ಕಡೆಯ ಹಳ್ಳಿಗಳಲ್ಲಿ ಸಾಕುನಾಯಿಯೂ ಯಾವುದೊ ಬೀದಿ ನಾಯಿಗೆ ಹುಟ್ಟಿದ ಮರಿಯೇ ಆಗಿರುತ್ತಿತ್ತು. (ಈಗಲೂ ಅದು ಹಾಗೆಯೆ ಇರಬಹುದು ಎನ್ನಿಸುತ್ತದೆ.) ಊರುನಾಯಿ ಜಾತಿಯ ಆ ಹೆಣ್ಣು ನಾಯಿಮರಿ ಮುಂದೆ ಐದಾರು ವರ್ಷಗಳ ಕಾಲ ನಮ್ಮ ಜೀವನದ ಭಾಗವೇ ಆಗಿಬಿಟ್ಟಿತ್ತು. ಹೊಲದ ಬಳಿಗೆ ಹಸುಗಳನ್ನು ಹೊಡೆದುಕೊಂಡು ಹೋಗುವಾಗ ಒಮ್ಮೊಮ್ಮೆ ನನ್ನಮ್ಮ ಅದನ್ನು ಮನೆಯಲ್ಲಿ ಕೂಡಿ ಹಾಕಿ ಹೋಗುತ್ತಿದ್ದರು. ನನ್ನ ಹಳ್ಳಿಯ ಹಳೆಯ ಮನೆಯ ಬಾಗಿಲಿಗೆ ಬಹುಶಃ ಶತಮಾನವನ್ನು ಮೀರಿದ ಆಯಸ್ಸು. ಹಾಗೆ ಕೂಡಿಹಾಕಿದಾಗಲೆಲ್ಲ ಆ ನಮ್ಮ ನಾಯಿ ಬಾಗಿಲನ್ನು ಕಚ್ಚಿಕಚ್ಚಿ ಮಾಡಿರುವ ಸಣ್ಣದೊಂದು ಕಿಂಡಿ ಈಗಲೂ ಇದೆ. ಆ ನಾಯಿಯ ಬಗ್ಗೆ ಹೇಳಿಕೊಳ್ಳಲು ಯಾಕೊ ಮನಸ್ಸು ತುಡಿಯುತ್ತದೆ. ಅದು ನೆನಪಾದಾಗಲೆಲ್ಲ ಮನಸ್ಸು ಭಾವುಕವಾಗಿಬಿಡುತ್ತದೆ. ಅನೇಕ ನೆನಪುಗಳು ಪಾರಾಗಲಾರದಂತಹ ಮುತ್ತಿಗೆ ಹಾಕುತ್ತವೆ. ಅಷ್ಟು ಆಪ್ತವಾಗಿದ್ದ ಆ ನಾಯಿ ಇನ್ನೂ ಚೆನ್ನಾಗಿರುವಾಗಲೆ ಅದರ ಜನನಾಂಗಕ್ಕೆ ಒಂದು ರೀತಿಯ ಕ್ಯಾನ್ಸರ್ ಬಂದು ಬಹಳ ನರಳುತ್ತಿತ್ತು. ಅದು ನಮ್ಮ ಜೀವನದಲ್ಲಿ ಅನೇಕ ಸಂಗತಿಗಳು ಘಟಿಸುತ್ತಿದ್ದ ಸಮಯ. ನಾವು ಅದರ ಬಗ್ಗೆ ಹೆಚ್ಚಿನ ಗಮನ ಕೊಡಲಿಲ್ಲವೊ ಅಥವ ಆಗಲಿಲ್ಲವೊ ಎನ್ನುವುದರ ಬಗ್ಗೆ ನನಗೆ ಗೊಂದಲವಿದೆ. ಇದ್ದಕ್ಕಿದ್ದಂತೆ ಒಂದು ದಿನ ಅದು ಮಾಯವಾಗಿಬಿಟ್ಟಿತು. ನಂತರ ಎಲ್ಲಿಯೂ ಅದರ ಪತ್ತೆಯಾಗಲಿಲ್ಲ. ಅದಾಗಿ ಇಪ್ಪತ್ತು ವರ್ಷಗಳ ಮೇಲಾಯಿತು. ಈ ಮಧ್ಯೆ ಒಂದು ನಾಯಿಯನ್ನು ಸಾಕಲೇಬೇಕಾದ ಅನೇಕ ಸಂದರ್ಭಗಳು ನಮಗೆ ಎದುರಾಗಿವೆ. ಆದರೆ ನನಗಾಗಲಿ ನನ್ನಣ್ಣನಿಗಾಗಲಿ ಮತ್ತೊಂದು ನಾಯಿಯನ್ನು ತಂದುಸಾಕುವ ನೈತಿಕ ಧೈರ್ಯ ಬರಲೇ ಇಲ್ಲ. ಬಹುಶಃ ಅದರ ದುರಂತವೆ ಅದನ್ನು ನಾವು ಮರೆಯದಂತೆ ಮಾಡಿಬಿಟ್ಟಿದೆ ಎನ್ನಿಸುತ್ತದೆ. ಹೆಸರೇ ಇಲ್ಲದ ಆ ನಮ್ಮ ಮೊದಲ ಮತ್ತು ಕೊನೆಯ ನಾಯಿಯ ನೆನಪಿನಿಂದ ಇಲ್ಲಿಯವರೆಗೂ ನಾವು ಹೊರಬರಲಾಗಿಲ್ಲ. ಆಗುವುದೂ ಇಲ್ಲ. ಈಗ ಅದಕ್ಕೆ ಮತ್ತೊಂದು ಕಾರಣವಿದೆ. ಮಧುಸೂದನ ಪೆಜತ್ತಾಯರ ’ರಕ್ಷಾ’ ಮತ್ತು ಈ ಮುನ್ನುಡಿ ಆ ನೆನಪನ್ನು ಈಗ ಮತ್ತಷ್ಟು ಗಾಢ ಮಾಡಿಬಿಟ್ಟಿದೆ; ಒಂದಷ್ಟು ಮಟ್ಟಿಗೆ ಅಧಿಕೃತವಾಗಿ ದಾಖಲಿಸುವಂತೆ ಮಾಡಿಬಿಟ್ಟಿದೆ.

ಗಂಡುಮಕ್ಕಳಿಲ್ಲದ ಪೆಜತ್ತಾಯರು "ನಾವು ರಕ್ಷಾನನ್ನು ಗಂಡುಮಗುವಿನಂತೆ ಸಾಕಿದೆವು" ಎಂದು ಬರೆಯುತ್ತಾರೆ. ಆದರೆ ಅವರು ರಕ್ಷಾನನ್ನು ಒಬ್ಬ ಮನುಷ್ಯನಿಗಿಂತ ಹೆಚ್ಚಾಗಿ ನೋಡಿದ್ದು ಇಲ್ಲಿ ಎದ್ದು ಕಾಣಿಸುತ್ತದೆ. ನಮ್ಮಲ್ಲಿಯ ಎಷ್ಟೋ ಜನಕ್ಕೆ ತಮ್ಮ ಮಗ-ಮಗಳು-ಗಂಡ-ಹೆಂಡತಿಯಂತಹ ಎಷ್ಟೋ ರಕ್ತಸಂಬಂಧಿಗಳ ಬಗ್ಗೆಯೆ ಇಷ್ಟೆಲ್ಲ, ಹೀಗೆಲ್ಲ ಬರೆದುಕೊಳ್ಳಲಾಗುವುದಿಲ್ಲ ಎಂದರೆ ಅದು ಅಷ್ಟೇನೂ ಕ್ರೂರ ಅಭಿಪ್ರಾಯ ಅಲ್ಲ ಎಂದು ಭಾವಿಸುತ್ತೇನೆ. ಹಾಗೆಯೆ, ರಕ್ಷಾ ಕೇವಲ ಪೆಜತ್ತಾಯರ ಕುಟುಂಬವನ್ನಷ್ಟೆ ಅಲ್ಲ, ತನ್ನ ಸಂಪರ್ಕಕ್ಕೆ ಬಂದ ಇತರರ ಜೀವನವನ್ನೂ ಸಂಪನ್ನಗೊಳಿಸಿದ್ದು ಇಲ್ಲಿ ನಮ್ಮ ಅರಿವಿಗೆ ಬರುತ್ತದೆ. ಸಹಮಾನವರೊಡನೆಯ ಸಂಕೀರ್ಣ ಸಂಬಂಧಕ್ಕಿಂತ ಒಂದು ನಾಯಿಯೊಡನೆಯ ಸರಳ ಸಂಬಂಧ ನಮ್ಮ ಜೀವನವನ್ನು ಪ್ರಭಾವಿಸುವುದರ ಬಗ್ಗೆ ಅಚ್ಚರಿಯಾಗುತ್ತದೆ.

’ನಮ್ಮ ರಕ್ಷಕ ರಕ್ಷಾ’ ಕೇವಲ ನಾಯಿಯೊಂದರ ಕತೆಯಲ್ಲ. ಕನ್ನಡವನ್ನಷ್ಟೆ ಓದುವ ಬಹಳಷ್ಟು ಓದುಗರಿಗೆ ಭೌಗೋಳಿಕವಾಗಿ ಹತ್ತಿರವಾಗಿದ್ದರೂ ಬಹಳಷ್ಟು ಮಟ್ಟಿಗೆ ಅಪರಿಚಿತವಾದ ಒಂದು ಹೊಸ ಲೋಕವನ್ನು ಈ ಬರಹ ತೋರಿಸುತ್ತದೆ. ಈ ಬರಹಕ್ಕೆ ಅನೇಕ ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳಿವೆ ಎನ್ನುವ ಅಭಿಪ್ರಾಯ ನನ್ನದು. ಪ್ರತಿಯೊಬ್ಬ ಓದುಗನಿಗೂ ತನ್ನದೇ ಆದ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಗಳಿರುವುದರಿಂದ ಮತ್ತು ಅವರ ಒಳನೋಟಗಳೂ ವಿಭಿನ್ನವಾಗಿರುವ ಸಾಧ್ಯತೆಗಳಿರುವುದರಿಂದ, ಈ ಪುಸ್ತಕವನ್ನು ಓದುತ್ತ ಅವರೂ ನಾನು ಕೇಳಿಕೊಂಡಂತೆ ಅನೇಕ ಪ್ರಶ್ನೆಗಳನ್ನು ಮತ್ತು ಅವಕ್ಕೆ ಉತ್ತರಗಳನ್ನು ಕಂಡುಕೊಳ್ಳುತ್ತ ಹೋಗುತ್ತಾರೆ ಎನ್ನುವ ನಂಬಿಕೆ ನನ್ನದು. ಒಂದು ಆರ್ಥಿಕ ಮತ್ತು ಸಾಮಾಜಿಕ ವರ್ಗಕ್ಕಷ್ಟೆ ಸೀಮಿತವಾಗಬಹುದಾಗಿದ್ದ, ಕನ್ನಡಕ್ಕೆ ಪರಕೀಯ ಅನ್ನಿಸುವಂತಹ ಜೀವನವೃತ್ತಾಂತವೊಂದು ಪೆಜತ್ತಾಯರ ಕನ್ನಡಪ್ರೇಮದಿಂದಾಗಿ ಮತ್ತು ಈ ನೆಲದ ಮಣ್ಣಿನೊಡನೆಯ ಒಡನಾಟದಿಂದಾಗಿ ಅಪ್ಪಟ ಕನ್ನಡದ್ದಾಗಿದ್ದೆ. ಜೊತೆಗೆ, ಕನ್ನಡದಲ್ಲಿ ಅಪರೂಪವಾಗಿರುವ ಮೇಲ್ಮಧ್ಯಮವರ್ಗದ ನೇರ ಅನುಭವಗಳು ಮುಂದಕ್ಕೆ ಸ್ವತಂತ್ರವಾಗಿಯೆ ಕನ್ನಡದಲ್ಲಿ ಬರಲಿವೆ ಎಂಬ ಆಶಾವಾದವನ್ನು ನನಗೆ ಈ ಬರಹ ಮೂಡಿಸಿದೆ.

ರಕ್ಷಾನ ಇಡೀ ಜೀವನವನ್ನು ಮಧುಸೂದನ ಪೆಜತ್ತಾಯರು ಕಾಲಾನುಕ್ರಮಣದಲ್ಲಿ ಬರೆದಿದ್ದಾರೆ. ಹಾಗೆಯೆ ಅವನ ಸುತ್ತಲಮುತ್ತಲ ಕೌಟುಂಬಿಕ ಮತ್ತು ಸಾಮಾಜಿಕ ಜೀವನವನ್ನು ಬಹಳ ಸರಳವಾಗಿ, ಸಜ್ಜನ ಹಾಸ್ಯಾಭಿರುಚಿಯಿಂದ ಕಟ್ಟಿಕೊಟ್ಟಿದ್ದಾರೆ. ಇಂತಹ ಸರಳ-ಸುಂದರ ಬರಹಕ್ಕೆ ಮುನ್ನುಡಿಯ ಅವಶ್ಯಕತೆಯಿಲ್ಲ ಎಂದು ನನಗೆ ಅನೇಕ ಬಾರಿ ಅನ್ನಿಸಿದೆ. ಆದರೆ ಪೆಜತ್ತಾಯರ ಪ್ರೀತಿ ಮತ್ತು ಬಹುಶಃ ಅದಕ್ಕಿಂತ ಹೆಚ್ಚಾಗಿ ರಕ್ಷಾ ನನಗೆ ಕಟ್ಟಿಕೊಟ್ಟಿರುವ ನೆನಪುಗಳೆ ಈ ಮುನ್ನುಡಿ ಬರೆಸಿದೆ ಎಂದು ನನ್ನ ಭಾವನೆ. ಈ ಅನುಭವಕ್ಕೆ ಮತ್ತು ಅವಕಾಶಕ್ಕೆ ನಾನು ಪೆಜತ್ತಾಯರಿಗೆ ಋಣಿ.

ನನ್ನ ಪ್ರಕಾರ ಇವತ್ತು ರಕ್ಷಾನ ಬಗ್ಗೆ ಕನ್ನಡದಲ್ಲಿ ಹೇಳಲು ಸಾಧ್ಯವಾಗಿರುವುದು ಮಧುಸೂದನ ಪೆಜತ್ತಾಯರಂತಹ ಅಪ್ಪಟ ಕನ್ನಡ ಮನಸ್ಸಿಗೆ ನಾಯಿಯೊಂದನ್ನು ಸಾಕಲೇಬೇಕೆಂದು ಪ್ರೇರೇಪಿಸಿದ ಅವರ ಇಬ್ಬರು ಹೆಣ್ಣುಮಕ್ಕಳಾದ ರಾಧಿಕಾ ಮತ್ತು ರಚನಾರಿಂದಾಗಿ. ಇಲ್ಲಿ ದಾಖಲಾಗಿರುವ ರಕ್ಷಾನ ಇತಿಹಾಸ ಸುಮಾರು ಹನ್ನೆರಡು ವರ್ಷಗಳ ಹಿಂದಕ್ಕೆಯೆ ಮುಗಿಯುತ್ತದೆ. ಆದರೆ ರಕ್ಷಾನನ್ನು ತಮ್ಮನೆಂದು ಸಾಕಿದ ಆ ಇಬ್ಬರು ಪುಟ್ಟಮಕ್ಕಳು ಈ ಹನ್ನೆರಡು ವರ್ಷಗಳಲ್ಲಿ ಎಲ್ಲಿ ಮುಟ್ಟಿದರು ಎನ್ನುವ ಕುತೂಹಲ ನನ್ನಂತೆಯೆ ಓದುಗರಿಗೂ ಬರುವುದು ಸಹಜ ಅನ್ನಿಸುತ್ತದೆ. ಈ ಇಡೀ ವೃತ್ತಾಂತದಲ್ಲಿ ತಾರ್ಕಿಕವಾಗಿ ಮುಕ್ತಾಯವಾಗಿಲ್ಲದ ವಿವರ ಎಂದರೆ ಅವರದೆ ಎಂದು ನನ್ನ ಭಾವನೆ.

ರಕ್ಷಾನ ಹಿರಿಯಕ್ಕ ರಾಧಿಕಾ ಈಗ ವೈದ್ಯೆ-ಮನೋರೋಗ ತಜ್ಞೆ. ಕಿರಿಯಕ್ಕ ರಚನಾ ಅಂತರ‌ರಾಷ್ಟ್ರೀಯ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ MBA ಮಾಡಿದ್ದು, ಸದ್ಯಕ್ಕೆ ಸುಳಿಮನೆ ಎಸ್ಟೇಟ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ತಮ್ಮ ಮತ್ತು ತಮ್ಮ ಕುಟುಂಬದ ಬದುಕನ್ನು ಸಂಪನ್ನಗೊಳಿಸಿದ ನಾಯಿಯ ಕುರಿತು, ಅದರ ಹುಟ್ಟು ಮತ್ತು ಸಾವಿನ ತನಕದ ಜೀವನವನ್ನು ದಾಖಲಿಸಿರುವ ಇಂತಹ ಸುದೀರ್ಘ ನುಡಿನಮನವನ್ನು ನಾನು ಇಲ್ಲಿಯವರೆಗೂ ಕನ್ನಡದಲ್ಲಿ ಕಂಡಿಲ್ಲ. ಸ್ವಾಭಿಮಾನದಲ್ಲಿ, ನಿಯತ್ತಿನಲ್ಲಿ, ಗುಣದಲ್ಲಿ, ಬಂಧುತ್ವದಲ್ಲಿ ಒಂದು ಶ್ರೇಷ್ಠಜೀವಿಯಂತೆ ನಡೆದುಕೊಂಡ ರಕ್ಷಾ ನನ್ನನ್ನು ಬಹಳ ದಿನ ಕಾಡಿದ್ದಾನೆ. ಅವನ ಬಗ್ಗೆ ಓದುತ್ತಿರುವಾಗಲೆ ನಾನು ನನ್ನದೇ ಆದ ನೆನಪು ಮತ್ತು ಕಲ್ಪನೆಗಳ ಬೆನ್ನೇರಿ ಸವಾರಿ ಮಾಡಿದ್ದೇನೆ. ಸಂತೋಷ ಅನುಭವಿಸಿದ್ದೇನೆ. ನೀವೂ ಅಂತಹುದೇ ಸಂತೋಷವನ್ನು ಅನುಭವಿಸುತ್ತೀರ ಎನ್ನುವ ವಿಶ್ವಾಸ ನನ್ನದು.

ರವಿ ಕೃಷ್ಣಾ ರೆಡ್ಡಿ
ಕ್ಯಾಲಿಫೋರ್ನಿಯ, ಅಮೆರಿಕ
ಫೆಬ್ರವರಿ 18, 2008


ಪುಸ್ತಕದ ಇತರ ವಿವರಗಳು:
"ನಮ್ಮ ರಕ್ಷಕ ರಕ್ಷಾ"
ಲೇ: ಎಸ್.ಎಂ. ಪೆಜತ್ತಾಯ
ಪ್ರಕಾಶಕರು: ಕಟ್ಟೆ ಪ್ರಕಾಶನ, ಚಿಂತನ ವಿಕಾಸ ವಾಹಿನಿ, ತಲವಾಟ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.
ಬೆಲೆ: ರೂ. 60

ಪೆಜತ್ತಾಯರ ಇತರ ಲೇಖನಗಳು ಮತ್ತು ಅವರ ಆತ್ಮಕತೆ ಕೆಂಡಸಂಪಿಗೆಯಲ್ಲಿ ಪ್ರಕಟವಾಗುತ್ತಿದೆ. ಆಸಕ್ತರು ಇಲ್ಲಿ ಗಮನಿಸಬಹುದು.

Aug 13, 2009

"ಹೊರಗಣವರು" - ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ!

["ವಿಕ್ರಾಂತ ಕರ್ನಾಟಕ"ದ ಆಗಸ್ಟ್ 21, 2009ರ ಸಂಚಿಕೆಯಲ್ಲಿನ ಲೇಖನ]

ಸಾಧಕರ ಅಥವ ಯಶಸ್ವಿಗಳ ಬಗೆಗಿನ ಮನುಷ್ಯನ ಕುತೂಹಲ ಇಂದುನೆನ್ನೆಯದಲ್ಲ. ಇತಿಹಾಸವಂತೂ ಕೆಲವೊಮ್ಮೆ ಅವರದೇ ಚರಿತ್ರೆಯಿಂದ ತುಂಬಿಹೋಗಿದೆ. ಆರ್ಥಿಕವಾಗಿ ಬಹುಯಶಸ್ವಿಯಾದವರ ಬಗ್ಗೆ ತಿಳಿದುಕೊಳ್ಳಬೇಕೆಂಬ ಈಗಿನವರ ದಾಹವೂ ಕಳೆದೆರಡು ಶತಮಾನಗಳ ಹೊಸ ಆರ್ಥಿಕ ವ್ಯವಸ್ಥೆಯಲ್ಲಿ ಅರ್ಥಮಾಡಿಕೊಳ್ಳುವಂತಹುದೆ. ತಮ್ಮ ಜೀವನದಲ್ಲಿ ಸ್ಫೂರ್ತಿ-ಪ್ರೇರಣೆ ಪಡೆದುಕೊಳ್ಳಲು ಜನ ಇಂತಹವರ ಯಶಸ್ಸಿನ ಕತೆಗಳನ್ನು ಓದುತ್ತಾರೆ. ಅವರನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಮಾದರಿಯಾಗಿ ಮಾಡಿಕೊಳ್ಳುತ್ತಾರೆ. ಹೀಗೆ ಮಾಡುತ್ತ ಕೆಲವರು ಒಂದು ಹಂತದ ತನಕ ಯಶಸ್ಸನ್ನೂ ಪಡೆಯಬಹುದು. ಹಾಗೆಯೆ, ಬಹುಪಾಲು ಜನ ತಮ್ಮ ಮತ್ತದೇ ಜೀವನದ ಸುಳಿಯಲ್ಲಿ ಸುತ್ತುತ್ತಿರಬಹುದು.

ಜೀವನದಲ್ಲಿ ಅಪಾರ ಸಾಧನೆ ಮಾಡಿದ ಮತ್ತು ಅಸಾಮಾನ್ಯ ಯಶಸ್ಸು ಪಡೆದ ಜನರು (ಅಥವ ಸಮುದಾಯಗಳು) ಮಾಮೂಲಿ ಬಹುಸಂಖ್ಯಾತ ಜನರಿಗಿಂತ ಭಿನ್ನವಾದವರು. ಅವರು ಸಾಮಾನ್ಯರ ಗುಂಪಿಗಿಂತ "ಹೊರಗಣವರು." ಎಲ್ಲರೂ ಯಾವಾಗೆಂದರೆ ಆಗ ಈ "ಯಶಸ್ವಿ" ಹೊರಗಣವರಲ್ಲ್ಲಿ ಒಬ್ಬರಾಗಲು ಸಾಧ್ಯವಿಲ್ಲ. ಹಲವಾರು ಸಾಧಕರ ಜೀವನವನ್ನು ನಾವು ಗಮನಿಸಿದಾಗ ನಮಗೆ ಮೇಲ್ನೋಟಕ್ಕೆ ಕಾಣಿಸುವುದೇನೆಂದರೆ, ಸಾಧಕರಾಗಲು ಮೊದಲಿಗೆ ಪ್ರತಿಭೆ ಬೇಕು. ಬಹುಶಃ ಅದು ಜನ್ಮಜಾತವಾಗಿ ಬರಬೇಕು. ಹಾಗೆಯೆ ಕಠಿಣ ಪರಿಶ್ರಮ ಬೇಕು. ಜೊತೆಗೆ ವಿಪರೀತವೆನಿಸುವಷ್ಟು ಸಾಧಿಸುವ ಮನೋಬಲ ಅಥವ ಆಕಾಂಕ್ಷೆ ಇರಬೇಕು. ಅಂತಹವರು ಮಾತ್ರ "ಹೊರಗಣವ"ರಾಗಲು ಸಾಧ್ಯ.

ಹೌದೆ? ಪ್ರತಿಭೆ ಜನ್ಮಜಾತವೆ? ಆ ಪ್ರತಿಭೆಯಿಂದ, ಬುದ್ಧಿಯಿಂದ, ಮಹತ್ವಾಕಾಂಕ್ಷೆಯಿಂದ, ಪರಿಶ್ರಮದಿಂದ, ಯಾರು ಏನು ಬೇಕಾದರೂ ಸಾಧಿಸಲು ಸಾಧ್ಯವೆ? ಯಶಸ್ಸಿಗೆ ಅಥವ ಸಾಧನೆಗೆ ಇಷ್ಟೇ ಸಾಕೆ ಅಥವ ಇನ್ನೂ ಏನಾದರೂ ಬೇಕೆ?

ಒಬ್ಬ ವ್ಯಕ್ತಿಯ ಅಥವ ಸಮುದಾಯದ ಯಶಸ್ಸಿನಲ್ಲಿ ಆತನ ಕುಟುಂಬದ, ಸಮುದಾಯದ, ಸಂದರ್ಭದ ಪಾಲಿಲ್ಲವೆ? ಇದರಲ್ಲಿ ಒಬ್ಬನ ಸಾಂಸ್ಕೃತಿಕ ಹಿನ್ನೆಲೆ, ಕೌಟುಂಬಿಕ ಹಿನ್ನೆಲೆ ಯಾವ ಪಾತ್ರ ವಹಿಸುತ್ತದೆ? ಸಮುದಾಯವೊಂದರ ಯಶಸ್ಸಿನಲ್ಲಿ ಅದರ ಸಂಸ್ಕೃತಿ ಯಾ ಪರಂಪರೆಯ ಪಾತ್ರವೇನು?

ಹಾಗೆಯೆ, ಪ್ರತಿಭೆ, ಪರಿಶ್ರಮ, ಮಹಾತ್ವಾಕಾಂಕ್ಷೆ ಇರುವವರೆಂದು ಕಾಣಿಸುವ ಕೆಲವರು ಎಷ್ಟೆಲ್ಲಾ ಏಗಿದರೂ ಸಾಧನೆಯ ಶಿಖರ ಏರಲು ಸಾಧ್ಯವಾಗುವುದಿಲ್ಲವೇಕೆ?

ಈಗ ಕೆಲವೊಂದು ವ್ಯಕ್ತಿಗಳ ಉದಾಹರಣೆ ತೆಗೆದುಕೊಂಡು ಇದರ ಬಗ್ಗೆ ಆಲೋಚಿಸೋಣ. ಇಂದು ಜಗತ್ತಿನಲ್ಲಿಯೆ ಅತಿಶ್ರೀಮಂತನಾದ ಬಿಲ್ ಗೇಟ್ಸ್‌ಗೆ ಈ ಪರಿಯ ಯಶಸ್ಸು ಪಡೆಯಲು ಇದ್ದ ಅನುಕೂಲಗಳಾದರೂ ಯಾವುವು? ಅವುಗಳಲ್ಲಿ ಪ್ರತಿಭೆಯೇ ಮುಖ್ಯವಾಗಿದ್ದರೆ, ಅವನಿಗಿಂತ ಪ್ರತಿಭಾವಂತರು ಯಾರೂ ಇಲ್ಲವೆ? ಅಥವ ಇರಲಿಲ್ಲವೆ? ಅಂದ ಹಾಗೆ, ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ಸ್ಕಾಟ್ ಮೆಕ್ನೀಲಿ, ಎರಿಕ್ ಸ್ಮಿಡ್ಟ್, ವಿನೋದ್ ಖೋಸ್ಲ, ನಮ್ಮದೇ ದೇಶದ ನಂದನ್ ನಿಲೇಕಣಿ, ಮುಂತಾದ ಪ್ರಸಿದ್ಧರನ್ನು ಬೆಸೆಯುವ ಸಮಾನ ಎಳೆ ಒಂದಿದೆ. ಇಲ್ಲ, ನಾನು ಅವರೆಲ್ಲರೂ ತೊಡಗಿಸಿಕೊಂಡಿರುವ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ಗಳ ಐಟಿ/ಹೈಟೆಕ್ ಉದ್ಯಮದ ಬಗ್ಗೆ ಮಾತನಾಡುತ್ತಿಲ್ಲ. ನಾನು ಪ್ರಸ್ತಾಪಿಸುತ್ತಿರುವುದು ಅವರ ಯಶಸ್ಸಿಗೆ ಕಾರಣವಾದ ಅವರ "ಜಾತಕ"ದ ಬಗ್ಗೆ. ಮೇಲೆ ಪ್ರಸ್ತಾಪಿಸಿರುವ ಎಲ್ಲರೂ ಹೆಚ್ಚುಕಮ್ಮಿ ಒಂದೇ ವರ್ಷದ ಅವಧಿಯಲ್ಲಿ, ಅಂದರೆ 1954-55 ರಲ್ಲಿ ಹುಟ್ಟಿದವರು. ಇವರು ಮಾತ್ರವಲ್ಲ, ಇವತ್ತು ಐಟಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅನೇಕರು ಹುಟ್ಟಿದ್ದು 1954-56 ರ ಅವಧಿಯಲ್ಲಿ! ಈ ಅವಧಿ "ಸುಮಹೂರ್ತ" ಆಗಿದ್ದಾದರೂ ಹೇಗೆ?

ಇದೇ ಸಂದರ್ಭದಲ್ಲಿ, "ಅಮೆರಿಕದ ಅತಿ ಬುದ್ಧಿವಂತ ಮನುಷ್ಯ" ಎನಿಸಿಕೊಂಡಿರುವ, ಸುಮಾರು 195-210 ರ ಸುಮಾರಿನಲ್ಲಿ ಬುದ್ಧಿ ಪ್ರಮಾಣ (IQ) ಹೊಂದಿರುವ ಕ್ರಿಸ್ ಲ್ಯಾಂಗನ್ ಯಾಕೆ ಅಂತಹ ಹೇಳಿಕೊಳ್ಳುವಷ್ಟು ಸಾಧನೆ ಮಾಡಲಾಗಲಿಲ್ಲ, ಆಗುತ್ತಿಲ್ಲ? ಅವನ ಕತೆಯಾದರೂ ಏನು?

ಹಾಗೆಯೆ, ವಿಶ್ವಪ್ರಸಿದ್ಧ ಸಂಗೀತತಂಡ ಬೀಟಲ್ಸ್‌ಗೂ, ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ಸ್ ಅನ್ನು ಬರೆದ ಬಿಲ್ ಗೇಟ್ಸ್, ಬಿಲ್ ಜಾಯ್‌ನಂತಹವರಿಗೂ, ಅಪಾರ ಪ್ರತಿಭಾವಂತರೆಂದು ಕಾಣಿಸುವ ಅನೇಕ ಆಟಗಾರರಿಗೂ ಇರುವ ಸಮಾನಾಂಶ ಏನಿರಬಹುದು? ಇಲ್ಲಿ ಅವರ "ಜನ್ಮಜಾತ ಪ್ರತಿಭೆ"ಯನ್ನು ಗಣನೆಗೆ ತೆಗೆದುಕೊಳ್ಳದೆ, ಅವರು ಹಾಕಿದ ಪರಿಶ್ರಮದ ಬಗ್ಗೆ ಗಮನ ಹರಿಸೋಣ. ಇವರು ತಮ್ಮತಮ್ಮ ಕ್ಷೇತ್ರದಲ್ಲಿ ಆ ಸಾಧನೆ ಮಾಡಲು ಎಷ್ಟೊಂದು ಸಮಯ "ಅಭ್ಯಾಸ" ಮಾಡಿರಬಹುದು? ಇಷ್ಟಕ್ಕೂ ಒಬ್ಬರು "ಪ್ರತಿಭಾವಂತ"ರಾಗಲು ಏನು ಬೇಕು? ಇತ್ತೀಚೆಗೆ ತಾನೆ ನಿಧನರಾದ ನಮ್ಮವರೇ ಆದ ಪ್ರಸಿದ್ಧ ಹಾಡುಗಾರ್ತಿ ಗಂಗೂಬಾಯಿ ಹಾನಗಲ್‌ರವರ ಜೀವನವನ್ನು ಗಮನಿಸಿದಾಗ, ಅವರು ಕಲಿಕೆಯ ಸಮಯದಲ್ಲಿ ಹಾಕಿದ ಅಪಾರ ಪರಿಶ್ರಮ ಮತ್ತು ಸಮಯ ನಮ್ಮ ಗಮನ ಸೆಳೆಯುತ್ತದೆ. ಅವರ ಅದೆಷ್ಟು ಗಂಟೆಗಳ ಅಭ್ಯಾಸ ಅವರನ್ನು ಶ್ರೇಷ್ಟ ಸಂಗೀತಗಾರ್ತಿಯನ್ನಾಗಿ ರೂಪಿಸಿರಬಹುದು? ವರ್ಷವೆ, ಹತ್ತು ವರ್ಷವೆ? ಅಥವ, ಸಾವಿರ ಗಂಟೆಗಳೆ? ಐದು ಸಾವಿರ ಗಂಟೆಗಳೆ?

ಈಗ ಸಮುದಾಯಗಳ ವಿಷಯಕ್ಕೆ ಬರೋಣ. ಯಾಕೆ ಕೆಲವೊಂದು ದೇಶ-ಸಮುದಾಯಗಳ ಜನ ಕೆಲವು ವಿಷಯಗಳಲ್ಲಿ ಬೇರೆಲ್ಲರಿಗಿಂತ ಉತ್ತಮ ಸಾಧನೆ ತೋರುತ್ತಾರೆ? ಪೂರ್ವ ಏಷಿಯನ್ನರಿಗೆ ಗಣಿತ ಬಹಳ ಸುಲಭ. ನಮ್ಮದೇ ದೇಶವನ್ನು ಗಮನಿಸಿದಾಗ ಗಣಿತ ಮತ್ತು ವಿಜ್ಞಾನದಲ್ಲಿ ಪಕ್ಕದ ತಮಿಳುನಾಡಿನವರು ಎಲ್ಲರಿಗಿಂತ ಮುಂದಿರುತ್ತಾರೆ. ಪೂರ್ವ ಏಷಿಯನ್ನರಿಗೂ ಮತ್ತು ನೆರೆಯ ತಮಿಳುನಾಡಿನವರಿಗೂ ಒಂದು ಸಮಾನಾಂಶವಿದೆ. ಅದು ಅವರ ಮುಖ್ಯ ಬೆಳೆ ಮತ್ತು ಆಹಾರವಾದ ಭತ್ತ ಮತ್ತು ಅನ್ನ. ಅದೇ ಅವರು ಗಣಿತದಲ್ಲೂ ಮುಂದಿರಲು ಕಾರಣವೆ? ಹೇಗೆ? ಅಂದ ಹಾಗೆ, ಗಣಿತವೆಂದರೆ ಭಯಭೀತರಾಗುವ (ಅಥವ ಆಗುತ್ತಿದ್ದ) ನಮ್ಮ ಬಯಲುಸೀಮೆಯ ಹಳ್ಳಿಗಾಡಿನ ಮಕ್ಕಳಿಗೆ ಅವರ ಪರಿಸರ ಮತ್ತು ಅಲ್ಲಿನ ಜೀವನೋಪಾಯಗಳೂ ಅವರಿಗೆ ಗಣಿತ ದೂರವಾಗಲು (?) ಒಂದು ಕಾರಣ ಆಗಿರಬಹುದೆ?

ಇನ್ನು ಕೆಲವು ಸಮುದಾಯಗಳು ಕೆಲವೊಂದು ಕೆಲಸಗಳಲ್ಲಿ ಕಳಪೆ ಸಾಧನೆ ತೋರುತ್ತಾರೆ. ಕಳೆದ ದಶಕದ ತನಕ ಕೊರಿಯನ್ನರ ವಿಮಾನ ಸಂಸ್ಥೆ ಬಹಳ ಕುಪ್ರಸಿದ್ಧಿ ಪಡೆದಿತ್ತು. ಬೇರೆ ಎಲ್ಲ ಏರ್‌ಲೈನ್ಸ್‌ನವರಿಗಿಂತ ಕೊರಿಯನ್ ಏರ್‌ಲೈನ್ಸ್‌ನ ಅಪಘಾತದ ಪ್ರಮಾಣ ಜಾಸ್ತಿ ಇತ್ತು. ಕೆಲವು ದೇಶಗಳಂತೂ ತಮ್ಮ ದೇಶದ ಮೇಲೆ ಕೊರಿಯನ್ ಏರ್‌ಲೈನ್ಸ್‌ನ ವಿಮಾನಗಳು ಹಾರದಂತೆ ನಿಷೇಧಿಸಿಯೂ ಬಿಟ್ಟಿದ್ದವು. ಅದಕ್ಕೆ ಕಾರಣ ಏನಿರಬಹುದು? ಕೊರಿಯನ್ನರದೂ ನಮ್ಮ ದೇಶದಂತೆಯೆ ಹಿರಿಯರನ್ನು, ತಮಗಿಂತ ಹೆಚ್ಚಿನ ಅಧಿಕಾರ ಉಳ್ಳವರನ್ನು ಗೌರವಿಸುವ, ತಗ್ಗಿಬಗ್ಗಿ ನಡೆಯುವ ಸಂಪ್ರದಾಯ. ಅವರ ಭಾಷೆಯೂ ಅಂತಹ "ಪಾಳೆಯಗಾರಿಕೆ/Feudal" ಗುಣಗಳನ್ನು ಹೊಂದಿದೆ. ನಮ್ಮ ಭಾಷೆಯನ್ನೆ ಗಮನಿಸಿ. ಇಲ್ಲಿ ಏಕವಚನ/ಬಹುವಚನಗಳು ಸ್ಪಷ್ಟವಾಗಿ ವಿಭಾಗವಾಗಿವೆ. ಹಿರಿಯರನ್ನು, ತಮಗಿಂತ ಮೇಲಿನವರನ್ನು ಬಹುವಚನದಲ್ಲಿ ಸಂಬೋಧಿಸಲು ಭಾಷೆ ಅವಕಾಶ ಮಾಡಿಕೊಟ್ಟಿದೆ. ಒಂದೇ ಅರ್ಥ ಕೊಡುವ ಪದದ ಬೇರೆಬೇರೆ ರೂಪವೆ (ನೀನು/ನೀವು, ಅವಳು/ಅವರು) ಯಾರು ಯಾರನ್ನು ಸಂಬೋಧಿಸುತ್ತಿದ್ದಾರೆ ಎನ್ನುವುದನ್ನೂ, ಸಮಾಜದಲ್ಲಿನ ಶ್ರೇಣಿಯನ್ನೂ ತಿಳಿಸಿಬಿಡುತ್ತದೆ. ಇಂತಹುದೆ ಸಂಪ್ರದಾಯ ಮತ್ತು ಭಾಷೆಯ ಕೊರಿಯನ್ನರಿಗೆ ಅವರ ಆ ಸಂಪ್ರದಾಯ ಮತ್ತು ಭಾಷೆಯೆ ಅವರು ಉತ್ತಮ ವಿಮಾನ ಪೈಲಟ್/ಸಹಪೈಲಟ್/ಫ್ಲೈಟ್ ಇಂಜಿನಿಯರ್‌ಗಳಾಗದಂತೆ ತಡೆದಿತ್ತೆ?

ಕಾನ್ವೆಂಟ್‌ಗಳಿಗೆ ಹೋಗುವ ನಮ್ಮ ಬಹುಪಾಲು ಮಧ್ಯಮ/ಮೇಲ್ಮಧ್ಯಮವರ್ಗದ ಮಕ್ಕಳಿಗಿಂತ ಸರ್ಕಾರಿ ಶಾಲೆಗಳಿಗೆ ಹೋಗುವ ನಮ್ಮ ಬಡಮಕ್ಕಳು ಓದಿನಲ್ಲಿ ಸಹಜವಾಗಿಯೆ ಹಿಂದುಳಿದಿರುತ್ತಾರೆ. ಅದಕ್ಕಿರಬಹುದಾದ ಮುಖ್ಯ ಕಾರಣಗಳಲ್ಲಿ ಆ ಮಕ್ಕಳಿಗೆ ಮನೆಯಲ್ಲಿ ಹೇಳಿಕೊಡಲಾಗದ ಅವಿದ್ಯಾವಂತ, ಬಡ ಪೋಷಕರೂ ಒಂದು. ಈ ಬಡ-ಅವಿದ್ಯಾವಂತ ಪೋಷಕರ ಮಕ್ಕಳು ಕಲಿಯುವುದಕ್ಕೂ ಮಧ್ಯಮವರ್ಗದ ವಿದ್ಯಾವಂತ ಪೋಷಕರ ಮಕ್ಕಳು ಕಲಿಯುತ್ತಿರುವುದಕ್ಕೂ ಇರುವ ಅಂತರವನ್ನು ನಮ್ಮ ಸಮಾಜ ತೊಡೆಯಲು ಸಾಧ್ಯವೆ? ನಮ್ಮ ಸರ್ಕಾರಿ ಶಾಲೆಗಳ ಬೇಸಿಗೆ ರಜೆಯನ್ನು ಕಡಿಮೆ ಮಾಡಿದರೆ, ಅಥವ ದೀರ್ಘ ರಜೆಗಳೆ ಇಲ್ಲದಂತೆ ಮಾಡಿದರೆ, ಸರ್ಕಾರಿ ಶಾಲೆಗಳ ಬಡಮಕ್ಕಳೂ ಓದಿನಲ್ಲಿ ಮುಂದಿರಬಲ್ಲರೆ? ಇಷ್ಟಕ್ಕೂ ಬೇಸಿಗೆ ರಜೆಗೂ ಬಡಮಕ್ಕಳ ಓದಿಗೂ ಹೇಗೆ ಎಲ್ಲಿಂದೆಲ್ಲಿಯ ಸಂಬಂಧ?

ಹೀಗೆ, ಒಬ್ಬ ವ್ಯಕ್ತಿ ಅಥವ ಸಮುದಾಯ ಯಶಸ್ಸು ಪಡೆಯಬೇಕಾದರೆ ಅದರಲ್ಲಿ ಅವಕಾಶ ಮತ್ತು ಸಂಪ್ರದಾಯ/ಪರಂಪರೆ ಯ ಪಾತ್ರ ಎಷ್ಟು ಎನ್ನುವುದನ್ನು ಮೂಲವಾಗಿಟ್ಟುಕೊಂಡು ಮ್ಯಾಲ್ಕಮ್ ಗ್ಲಾಡ್‌ವೆಲ್ ಎನ್ನುವ ಇಂಗ್ಲಿಷ್ ಲೇಖಕ "Outliers – The Story of Success" ಎನ್ನುವ ಪುಸ್ತಕ ಬರೆದಿದ್ದಾನೆ. ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ಆತ ಬರೆದಿರುವ ಮೂರನೆ ಪುಸ್ತಕ ಇದು. ಆತನ ಹಿಂದಿನ ಎರಡು ಪುಸ್ತಕಗಳೂ ಪ್ರಸಿದ್ಧಿ ಪಡೆದಿವೆ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬೆಸ್ಟ್‌ಸೆಲ್ಲರ್ಸ್ ಆಗಿವೆ. "ಹೊರಗಣವರು" ನಿಮಗೆ ಜೀವನದಲ್ಲಿ ಹೇಗೆ ಯಶಸ್ವಿಯಾಗಬಹುದು ಎನ್ನುವುದನ್ನು ಕಲಿಸುವುದಿಲ್ಲ. ಅದು 'ಯಶಸ್ಸಿಗೆ ಏಳೆಂಟು ಸೂತ್ರಗಳು, ಮೆಟ್ಟಿಲುಗಳಂತಹ' ಪುಸ್ತಕ ಅಲ್ಲ. ವೈಯಕ್ತಿಕ ಯಶಸ್ಸಿಗೆ ಹಾತೊರೆಯುವವರಿಗೆ ಈ ಪುಸ್ತಕ ಯಾವುದೆ ಸಿದ್ಧಸೂತ್ರಗಳನ್ನು ಒದಗಿಸುವುದಿಲ್ಲ. ಅದರೆ, ಒಂದು ಸಮುದಾಯವನ್ನು ಉತ್ತಮಗೊಳಿಸಬೇಕು ಎಂದುಕೊಳ್ಳುವ ನೀತಿನಿರೂಪಕರಿಗೆ (Policy Makers), ರಾಜನೀತಿಜ್ಞರಿಗೆ, ಚಿಂತಕರಿಗೆ, ಅಧಿಕಾರಸ್ಥರಿಗೆ, ಶಿಕ್ಷಣತಜ್ಞರಿಗೆ, ಮತ್ತು ತಮ್ಮ ಮಕ್ಕಳು ಜೀವನದಲ್ಲಿ ಯಶಸ್ವಿಯಾಗಲು ತಾವೇನು ಮಾಡಬಹುದು ಎಂದು ಆಲೋಚಿಸುವ ಪೋಷಕರಿಗೆ ಅಪಾರವಾದ ಜ್ಞಾನವನ್ನೂ, ಒಳನೋಟಗಳನ್ನೂ ನೀಡುತ್ತದೆ.

ಈಗ, "ಹೊರಗಣವರು" ನಲ್ಲಿ ಮೇಲಿನ ಆಯಾಮಗಳಿಗೆ ಪೂರಕವಾಗಿ ಗ್ಲಾಡ್‌ವೆಲ್ ಒದಗಿಸಿರುವ ಒಂದಷ್ಟು ಉದಾಹರಣೆಗಳನ್ನು, ಪುರಾವೆಗಳನ್ನು ಗಮನಿಸೋಣ.

(ಮುಂದುವರೆಯುವುದು...)