ಇಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿರುವ ಲೇಖನದ ಕೊಂಡಿ...
http://vijaykarnatakaepaper.com/pdf/2011/01/22/20110122a_008101002.pdf
Jan 21, 2011
ದಲಿತರ ಬಲವರ್ಧನೆ: ಬೇಕಿದೆ ಪೂನಾ ಒಪ್ಪಂದದ ಮರುಚಿಂತನೆ
Jan 3, 2011
ಹೀಗೊಂದು ಆರು ದಿನದ ಕರ್ನಾಟಕ ಪ್ರವಾಸ...
ಕಳೆದ ಡಿಸೆಂಬರ್ 26 ರಂದು ನಮ್ಮ ಭಾಗದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣೆ ನಡೆದಿದ್ದು. ಅಂದು ಬೆಳಗ್ಗೆಯೇ ಹೋಗಿ ಓಟು ಹಾಕಿದೆ. ನಾನು ಓಟು ಹಾಕಿದ ಇಬ್ಬರೂ ಗೆಲ್ಲುವುದಿಲ್ಲ ಎಂದು ಗೊತ್ತಿತ್ತು. ತಾಲ್ಲೂಕು ಪಂಚಾಯಿತಿಗೆ ನಿಂತಿದ್ದ ಅಭ್ಯರ್ಥಿಯೊಬ್ಬರು ಯಾವುದೇ ಕಾರಣಕ್ಕೂ ತನ್ನ ಚುನಾವಣೆಯ ಖರ್ಚಿನ ಮಿತಿ ದಾಟುವುದಿಲ್ಲ ಎಂದು ಗೊತ್ತಿತ್ತು. ಅವರಿಗೆ ನನ್ನ ಪರವಾಗಿ ರೂ.1000 ನೀಡಿ ಅವರ ಪರವಾಗಿ ಒಂದು ಸಣ್ಣ ಸಭೆಯಲ್ಲಿ ಭಾಷಣ ಸಹ ಮಾಡಿದ್ದೆ. ಇನ್ನು ಜಿಲ್ಲಾ ಪಂಚಾಯಿತಿಯಲ್ಲಿ ಕಡಿಮೆ ಕೆಟ್ಟ ಆಯ್ಕೆಯನ್ನು ಆರಿಸಿಕೊಂಡೆ. ಅಲ್ಲಿ ಓಟು ನೀಡುವ ಮನಸ್ಸಿರಲಿಲ್ಲ. ಆದರೆ ಆರಿಸಿಕೊಳ್ಳುವುದನ್ನು ನಿರಾಕರಿಸುವ ಆಯ್ಕೆ ಇರಲಿಲ್ಲ. ನೆನ್ನೆ ಫಲಿತಾಂಶ ಬಂದಾಗ ಇಬ್ಬರೂ ಗೆಲ್ಲಲಿಲ್ಲ. ಬೇರೆ ಆಯ್ಕೆ ಇಲ್ಲದೆ ನಾನು ಓಟು ಹಾಕಿದ್ದ ಅಭ್ಯರ್ಥಿ ಮನೆಯನ್ನು ಮಾರಿ ಚುನಾವಣೆಗೆ ನಿಂತಿದ್ದರಂತೆ. ಆಕೆ ಸೋತಿದ್ದಕ್ಕೆ ವಿಷಾದವಿಲ್ಲ. ಆದರೆ ನಾನು ಓಟು ಹಾಕಿದ ತಾಲ್ಲೂಕು ಪಂಚಾಯಿತಿ ಅಭ್ಯರ್ಥಿ ಗೆಲ್ಲಬೇಕಿತ್ತು. ಜನಕ್ಕೆ ಯೋಗ್ಯರು ಬೇಕಾಗಿಲ್ಲ.
(ಇದು ಈ ಚುನಾವಣೆಯಲ್ಲಿ ನಾನು ಕೇಳಿದ ನನ್ನೂರಿನಲ್ಲಿ ನಡೆದ ಸತ್ಯಘಟನೆ. ಚುನಾವಣೆಯ ಹಿಂದಿನ ದಿನ ವ್ಯಕ್ತಿಯೊಬ್ಬ ಜನತಾದಳದ ಸ್ಥಳಿಯ ನಾಯಕನ ಮನೆಗೆ ಓಡಿ ಬರುತ್ತಾನೆ. ’ಅಣ್ಣಾ, ರಾತ್ರಿ ಕಾಂಗ್ರೆಸ್‍ನವರು ಮತ್ತು ಬಿಜೆಪಿಯವರು ಬಂದು ದುಡ್ಡು ಕೊಟ್ಟರಣ್ಣ. ದಳದವರೇ ಕೊಡಲಿಲ್ಲ. ಅದಕ್ಕೇ ಬಂದೆ ಅಣ್ಣ.’ ಹಿಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮೂರೂ ಪಕ್ಷಗಳೂ ದುಡ್ಡು ಹಂಚಿದ್ದರು. ಈ ಸಾರಿ ಕೇವಲ ಇಬ್ಬರೇ ಕೊಟ್ಟಿದ್ದಾರೆ. ನನಗೆ ಎಲ್ಲಿಯಾದರೂ ಮೂರನೆಯವರದು ತಪ್ಪಿ ಹೋಯಿತಾ ಎನ್ನುವುದು ಅವನ ಸಂಶಯ. ಆದರೆ ಈತ ಎಷ್ಟು ಪ್ರಜ್ಞಾವಂತ ಮತ್ತು ನಮ್ಮ ಚುನಾವಣೆ ವ್ಯವಸ್ಥೆ ಯಾರುಯಾರು ಚುನಾವಣೆಗೆ ನಿಂತಿದ್ದಾರೆ ಎನ್ನುವುದನ್ನು ಜನಸಾಮಾನ್ಯರಿಗೆ ತಿಳಿಸುವಲ್ಲಿ ಸೋಲುತ್ತಿದೆ ಅಂದರೆ, ಈ ಕ್ಷೇತ್ರದಲ್ಲಿ ಈ ಚುನಾವಣೆಗೆ ದಳ ತನ್ನ ಅಭ್ಯರ್ಥಿಗಳನ್ನೇ ಹಾಕಿರಲಿಲ್ಲ; ಕಾಂಗ್ರೆಸ್‌ನೊಡನೆ ಆದ ಅಲಿಖಿತ ಒಪ್ಪಂದದಿಂದಾಗಿ. ಬಹುಶ: ಇದು ಕರ್ನಾಟಕದ ಹಲವಾರು ಕಡೆ ಎಲ್ಲೆಲ್ಲಿ ಕಾಂಗ್ರೆಸ್ ಮತ್ತು ಜನತಾದಳದ ನಡುವೆ ಒಪ್ಪಂದಗಳಾಗಿದ್ದವೊ ಅಲ್ಲೆಲ್ಲ ಸ್ಥಳೀಯ ನಾಯಕರಿಗೆ ಅಗಿರಬಹುದಾದ ಅನುಭವ. )
ಓಟು ಹಾಕಿ ಬಂದ ನಂತರ ನನ್ನ ಮತ್ತು ನನ್ನ ಆರು ವರ್ಷದ ಮಗಳು ಅಮೃತಳ ಪ್ರಯಾಣ ಆರಂಭವಾಯಿತು. ಅವಳಿಗೆಂದು ಸುಮಾರು 20-30 ಪುಸ್ತಕಗಳನ್ನು, ಒಂದು ದಿಂಬು ಮತ್ತು ಬ್ಲಾಂಕೆಟ್ ಅನ್ನು ಕಾರಿನಲ್ಲಿ ಹಾಕಿಕೊಂಡಿದ್ದೆ. ನನ್ನೂರಿನಿಂದ ಹೊರಟು NICE ರಸ್ತೆಗೆ ಹೊರಳಿದೆವು. ಅದೇ ರಸ್ತೆಯಲ್ಲಿ ನಾನು ಮತ್ತು ಅವಳು ಕೇವಲ ಎರಡು ದಿನದ ಮುಂಚೆ ಹೋಗಿದ್ದರಿಂದ ಅವಳು ಈ ಸಾರಿ, ’ಈ ರಸ್ತೆಯಲ್ಲಿ ನಂದಿ ಯಾಕಿದೆ?’ ಎಂದು ಕೇಳಲಿಲ್ಲ. ಆದರೆ exit ಬಂದ ಕಡೆಯೆಲ್ಲ ಮೈಸೂರು ಮತ್ತು ತುಮಕೂರಿಗೆ ನೇರ ಹೋಗುತ್ತಿರಬೇಕು ಎಂದು ಹೇಳುತ್ತಿದ್ದಳು. ಮೈಸೂರು ರಸ್ತೆ ಜಂಕ್ಷನ್ನಿನಲ್ಲಿ ಮೈಸೂರಿನ ಗೆಳೆಯ ಡಾ.ಪೃಥ್ವಿ ಹತ್ತಿಕೊಂಡರು. ತುಮಕೂರು ರಸ್ತೆಯಲ್ಲಿ ಚಂಬೆ (ಚಂದ್ರಶೇಖರ್ ಬೆಳಗೆರೆ) ಮತ್ತವರ ಮಗಳು ಭೂಮಿಕ ಹತ್ತಿಕೊಂಡರು. ಭೂಮಿಕ ಅಮೃತಳಿಗೆ ಮುಂದಿನ ನಾಲ್ಕೈದು ಗಂಟೆ ಒಳ್ಳೆಯ ಕಂಪನಿ ನೀಡಿದಳು.
ಹಿರಿಯೂರು ಮತ್ತು ಚಳ್ಳಕೆರೆ ಮಧ್ಯೆ ಇರುವ ಹೆದ್ದಾರಿಗೆ ಹೊಂದಿಕೊಂಡಂತೆ ಚಂಬೆಯವರ ಶಾಲೆ ಇದೆ. ಬಹಳ ಕಡಿಮೆ ಖರ್ಚಿನಲ್ಲಿ, ಸೃಜನಶೀಲತೆಯಿಂದ ಅವರು ಕಟ್ಟಡ ಕಟ್ಟಿದ್ದಾರೆ. ಬಹುಶಃ ನಮ್ಮ ಸರ್ಕಾರಿ ಶಾಲೆಗಳ ಕಟ್ಟಡಗಳಿಗೆ ಆಗುವ ಅರ್ಧ ಖರ್ಚೂ ಇವರ ಕಟ್ಟಡಗಳಿಗೆ ಆಗಿಲ್ಲ. ಅದಾದ ನಂತರ ಅವರ ಊರಾದ ಹಿರಿಯೂರು ತಾಲ್ಲೂಕಿನ ರಾಮಜೋಗಿ ಹಳ್ಳಿಗೆ ಹೋಗಿ ಅಲ್ಲಿ ಊಟ ಮಾಡಿದೆವು. ಚಂಬೆ ತಮ್ಮ ಹುಟ್ಟೂರಿನಲ್ಲಿ ಓಟು ಹಾಕಿದ ನಂತರ ನಮ್ಮ ಪ್ರಯಾಣ ಬಳ್ಳಾರಿಯತ್ತ ಸಾಗಿತು. ಭೂಮಿಕ ನಮ್ಮ ಜೊತೆಗೆ ಬರಲಿಲ್ಲ. ಹಾಗಾಗಿ ಅಮೃತ ಕೂಡಲೆ ತನ್ನ ಪುಸ್ತಕಗಳನ್ನು ಹಿಡಿದು ಅವಳ ಪ್ರಪಂಚಕ್ಕೆ ಜಾರಿಕೊಂಡಳು. ಒಂದೆರಡು ಗಂಟೆ ಓದಿದ ನಂತರ ನಿದ್ದೆ ಮಾಡಿದಳು. ಮುಂದಕ್ಕೆ ಇದೇ ಅವಳ ದಿನಚರಿ.
ನಾವು ಸಂಜೆ ಮೊಳಕಾಲ್ಮೂರು ತಾಲ್ಲೂಕಿನ ರಾಮಪುರ ತಲುಪಿದಾಗ ಅಮೃತ ನಿದ್ದೆ ಮಾಡುತ್ತಿದ್ದಳು. ಡಿಪ್ಲೊಮ ಓದಿರುವ ಹುಡಗನೊಬ್ಬ ನಡೆಸುತ್ತಿದ್ದ ಕಂಪ್ಯೂಟರ್ ಸೆಂಟರ್‌ನಲ್ಲಿ ಖಾರ-ಮಂಡಕ್ಕಿ ಮತ್ತು ಬಜ್ಜಿ ತಿಂದೆವು. ಆತನ ಉದ್ದಿಮೆ ಮತ್ತು ವಾಣಿಜ್ಯದ ಒಂದಷ್ಟು ಪರಿಚಯ ಆಯಿತು. ಸೆಲ್‌ಫೋನ್‌ಗಳಿಗೆ ಹಾಡು ತುಂಬಿಸುವ (!) ಕೆಲಸದಿಂದ ತನ್ನ ಉದ್ದಿಮೆ ಆರಂಭಿಸಿದವನು ಆತ. ಈಗ ಆತನ ಸೆಂಟರ್‌ನಲ್ಲಿ ಕಿಯಾನಿಕ್ಸ್‌ನವರು ಕಂಪ್ಯೂಟರ್‌ಗಳನ್ನು ಬಾಡಿಗೆ ತೆಗೆದುಕೊಂಡು ಸ್ಥಳೀಯ ಗ್ರಾಮಪಂಚಾಯಿತಿ ನೌಕರರಿಗೆ ಕಂಪ್ಯೂಟರ್ ತರಬೇತಿ ನೀಡುತ್ತಿದ್ದಾರೆ. ಈ ತಲೆಮಾರಿನ ಆಶಾವಾದ, ಕ್ರಿಯಾಶೀಲತೆ ಮತ್ತು ಉದ್ದಿಮೆಶೀಲತೆಯ ಪ್ರತೀಕ ಆತ. Not everything is lost.
ಮುಂದಕ್ಕೆ ನಮ್ಮ ಪ್ರಯಾಣ ಬಳ್ಳಾರಿಯ ತೋರಣಗಲ್ಲಿನತ್ತ. ಅಂದು ರಾತ್ರಿ ಅಲ್ಲಿ ಉಳಿದುಕೊಂಡೆವು. ಅಮೃತ ಖುಷಿಯಾಗಿದ್ದಳು. ಒಳ್ಳೆಯ ಸೂಪ್ ಕುಡಿದು ಊಟವನ್ನೂ ಚೆನ್ನಾಗಿಯೇ ಮಾಡಿದಳು. ರಾತ್ರಿ ಚೆನ್ನಾಗಿ ನಿದ್ದೆಯನ್ನೂ ಮಾಡಿದಳು. ಅವಳು ಈ ರೋಡ್ ಟ್ರಿಪ್ ಅನ್ನು ಹೇಗೆ ಸ್ವೀಕರಿಸುತ್ತಾಳೋ ಏನೋ ಎನ್ನುವ ಸಂದೇಹ ಕ್ರಮೇಣ ನನ್ನಲ್ಲಿ ಕರಗುತ್ತಿತ್ತು.
ಡಿಸೆಂಬರ್ 27ರ ಬೆಳಗ್ಗೆ ಅಲ್ಲಿಯ ಜಿಂದಾಲ್‌ನ ಒಂದೆರಡು ಪ್ರದೇಶ ನೋಡಿದೆವು. ಒಂದು ಹೊಸ ಪರಿಸರವನ್ನೇ ಅವರು ಸೃಷ್ಟಿಸಿಕೊಂಡಿದ್ದಾರೆ.
ಅಲ್ಲಿಂದ ನಮ್ಮ ಪ್ರಯಾಣ ಹಂಪಿ ಕನ್ನಡ ವಿಶ್ವವಿದ್ಯಾಲಯದತ್ತ. ಸ್ವಲ್ಪಹೊತ್ತು ಅಲ್ಲಿ ಅಡ್ಡಾಡಿದೆವು. ಈ ವಿಶ್ವವಿದ್ಯಾಲಯ ನನ್ನಲ್ಲಿ ಹುಮ್ಮಸ್ಸು ಹುಟ್ಟಿಸದೆ ನಿರಾಸೆ ಹುಟ್ಟಿಸುತ್ತದೆ. ಕಾರಣ ಹಲವಿವೆ. ಸದ್ಯಕ್ಕೆ ಇದು ಆಕಾಂಕ್ಷೆ, ಮಹತ್ವಾಕಾಂಕ್ಷೆಗಳಿಲ್ಲದ, ಇಂದು ಮತ್ತು ನಾಳೆಗೆ ಸಿದ್ಧವಾಗಿಲ್ಲದ ಕನ್ನಡ ವಿಶ್ವವಿದ್ಯಾಲಯ. ಬದಲಾದ ಈ ಕಾಲಘಟ್ಟದಲ್ಲಿ ಈ ವಿಶ್ವವಿದ್ಯಾಲಯ ತನ್ನ ಜವಾಬ್ದಾರಿ ಮತ್ತು ಆಶಯಗಳನ್ನು ಮತ್ತೊಮ್ಮೆ redefine ಮಾಡಿಕೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಹೆಸರಿಗೆ ಮತ್ತು ಆಶಯಕ್ಕೆ ಅಪಚಾರ.
ನಂತರ ಉಪಕುಲಪತಿಗಳನ್ನು ಕಂಡೆವು. ಬಳಿಕ ಅಲ್ಲಿಯ ಜಾನಪದ ಮ್ಯೂಸಿಯಮ್‌ನತ್ತ ಹೊರಟೆವು. ದಾರಿಯಲ್ಲಿ ಅಚಾನಕ್ಕಾಗಿ ಮೊಗಳ್ಳಿ ಗಣೇಶ್ ಸಿಕ್ಕರು. ಅವರ ಜೊತೆಯಲ್ಲಿ ಹಂಪಿಯ ವಿರೂಪಾಕ್ಷ ದೇವಾಲಯದ ಬಳಿ ಇರುವ "ಮ್ಯಾಂಗೊ ಟ್ರೀ"ಯಲ್ಲಿ ಊಟ. ತುಂಗಭದ್ರ ನದಿಯ ದಂಡೆಯ ಇಳಿಜಾರನ್ನೆ ಬಳಸಿಕೊಂಡು ನೆಲದ ಮೇಲೆ ಕುಳಿತು ಊಟ ಮಾಡುವ ವ್ಯವಸ್ಥೆ ಅಲ್ಲಿದೆ. ನಾವು ಹೋಗಿದ್ದೆ ತೀರಾ ತಡವಾಗಿ ಆಗಿದ್ದರಿಂದ ನಮಗೆ ದಕ್ಷಿಣ ಭಾರತೀಯ ಊಟ ಸಿಗಲಿಲ್ಲ. ಆಗಲೂ ಬಹಳ ಜನ. ಹಾಗಾಗಿ ಸೇವೆ ಸಹ ನಿಧಾನ. ಆದರೆ ಆಹ್ಲಾದಕರ ವಾತಾವರಣ. ಅಮೃತ ಬಹಳ ಹೊತ್ತು ವಿಡಿಯೊ ತೆಗೆಯುತ್ತ ಓಡಾಡುತ್ತ ಕಾಲ ಕಳೆದಳು. ನಂತರ ದೇವಾಲಯದತ್ತ ಹೋದೆವು. ಮತ್ತೆ ವಿಶ್ವವಿದ್ಯಾಲಯಕ್ಕೆ ಪೃಥ್ವಿಯವರ ಪುಸ್ತಕದ ಬಂಡಲ್ ತೆಗೆದುಕೊಳ್ಳಲು ಬರಬೇಕಿದ್ದರಿಂದ ಒಳಗೆ ಹೋಗಲಿಲ್ಲ.
ಅಂದು ರಾತ್ರಿ ಪೃಥ್ವಿ, ಅಮೃತ, ಮತ್ತು ನಾನು ಪ್ರಜಾವಾಣಿಯಲ್ಲಿ ಅಂಕಣ ಬರೆಯುವ ಪ್ರಾಧ್ಯಾಪಕ ಟಿ.ಆರ್.ಚಂದ್ರಶೇಖರ್‌ರವರನ್ನು ಅವರ ಹೊಸಪೇಟೆಯ ಮನೆಯಲ್ಲಿ ಕಂಡೆವು. ಬಹಳ ಹೊತ್ತು ಕರ್ನಾಟಕದ ರಾಜಕಾರಣ, ಅರ್ಥಿಕ ವಿಷಯಗಳು, ಪಾಲಿಸಿ ಮೇಕಿಂಗ್ ಬಗ್ಗೆ ಮಾತನಾಡಿದೆವು. ನಿದ್ದೆಯಿಂದ ಎಬ್ಬಿಸಿಕೊಂಡು ಹೋಗಿದ್ದರಿಂದ ಅಮೃತ ಸ್ವಲ್ಪ ಹೊತ್ತು ಅಲ್ಲಿ ಹೊಂದಿಕೊಳ್ಳಲಿಲ್ಲ. ನಂತರ ಟಿ.ಆರ್.ಚಂದ್ರಶೇಖರ್‌ರವರ ಪತ್ನಿಯ ಜೊತೆ ಮಾತನಾಡುತ್ತ, ಕತೆ ಹೇಳುತ್ತ, ಅವರಿಂದ ತಲೆ ಕೂಡ ಬಾಚಿಸಿಕೊಂಡಳು. ರಾತ್ರಿ ಹೊಸಪೇಟೆಯಲ್ಲಿ ಊಟ. ಅಂದು ಹೋಟೆಲ್‌ನಲ್ಲಿ ಊಟವಾದ ನಂತರ ಅಮೃತಳಿಗೆ ಅವಳು ಎಂದೂ ಹಾಡುವ ಅವಳ ಪಠ್ಯಪುಸ್ತಕದ ಪದ್ಯ "ನದಿಯಲೊಂದು ಬಕ, ಮುದುರಿಕೊಂಡು ಮೊಕ, ಕಾಲನೆತ್ತಿ ಕುಣಿಯುತಿತ್ತು, ಥಕ ಥಕ ಥಕ"ಗೆ ನಟನೆ ಸಮೇತ ಕುಣಿಯುತ್ತ ಹಾಡುವುದನ್ನು ಕಲಿಸಿದೆ. ಬಹಳ ಖುಷಿಯಿಂದ ಕಲಿತಳು. ಅಂದು ರಾತ್ರಿ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ (ಇದ್ದುದರಲ್ಲಿ ಸ್ವಲ್ಪ ತುಟ್ಟಿಯಾದ ಕೋಣೆಯಲ್ಲಿ) ಉಳಿದುಕೊಂಡೆವು.
ಡಿಸೆಂಬರ್ 28ರ ಬೆಳಗ್ಗೆ ಹೊರಡುವ ಮುಂಚೆ ಮತ್ತೊಮ್ಮೆ ಉಪಕುಲಪತಿಗಳನ್ನು ಕಂಡೆವು. ಅಮೃತ ಅಲ್ಲಿ ತನ್ನ ತುಂಟಾಟ ಮತ್ತು ಮುಗ್ಧತೆಯಿಂದ ಉಪಕುಲಪತಿಗಳ ಶ್ರೀಮತಿಯವರಿಂದ ಒಂದು ಗೊಂಬೆಯನ್ನು (ಬ್ಯಾಂಗ್‌ಕಾಕ್ ರಾಜಕುಮಾರಿ) ಉಡುಗೊರೆಯಾಗಿ ಪಡೆದಳು. ಮೊಗಳ್ಳಿಯವರು ತಮ್ಮ ಮಕ್ಕಳಿಗೆ ಅಮೃತಳನ್ನು ಪರಿಚಯಿಸಬೇಕು ಎಂದು ಹೇಳಿದ್ದರಿಂದ ನಾವು ಅವರ ಹೊಸಪೇಟೆಯಲ್ಲಿನ ಮನೆಗೆ ಹೋದೆವು. ನಾವು ಹೋಗಿದ್ದು ತಡವಾಗಿದ್ದರಿಂದ ಅವರ ಮೂವರು ಹೆಣ್ಣುಮಕ್ಕಳೂ ಶಾಲೆಗೆ ರಜೆ ಹಾಕಿ ಮನೆಯಲ್ಲಿದ್ದರು. ನಾನು ಕಾರಿನಿಂದ ಇಳಿಯುವಾಗ ಅವಸರ ಮಾಡಿದ್ದರಿಂದ ಮುನಿಸಿಕೊಂಡ ಅಮೃತ ಬಹಳ ಹೊತ್ತು ಯಾರನ್ನೂ ಸೇರಲಿಲ್ಲ. ನಂತರ ಮೊಗಳ್ಳಿಯವರ ಮಕ್ಕಳಾದ ಸಿರಿ, ಚಂದನ, ಮತ್ತು ವಂದನರ ಜೊತೆ ಆಡಿಕೊಂಡು ಕುಳಿತಳು. ಆ ಮಕ್ಕಳು ಉತ್ತಮ ಚಿತ್ರಕಾರರೂ ಸಹ. ಅವರ ಪ್ರತಿಯೊಂದು ಡ್ರಾಯಿಂಗ್ ಅನ್ನೂ ಬಿಡದೆ ನೋಡಿದಳು. ಸಿರಿಯ ಜೊತೆ ಎರಡನೆ ತರಗತಿಯ ಒಂದು ಇಂಗ್ಲಿಷ್ ಪದ್ಯ ಓದಿದಳು. ನದಿಯಲೊಂದು ಬಕವನ್ನು ಕುಣಿಯುತ್ತ ಹಾಡಿದಳು. ಹೋಗುವ ಸಮಯದಲ್ಲಿ ಆ ಮಕ್ಕಳಿಂದ ಒಂದು ಬಾರ್ಬಿ ಬೊಂಬೆಯನ್ನು ಉಡುಗೊರೆಯಾಗಿ ಪಡೆದಳು.
ಅಲ್ಲಿಂದ ನಾವು ಹೊರಟಿದ್ದು ಗುಲ್ಬರ್ಗದೆಡೆಗೆ. ದಾರಿಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ಸಿಗುತ್ತದೆ. ಇಲ್ಲಿ ಕತೆಗಾರ ಕಲಿಗಣನಾಥ ಗುಡದೂರು ಇದ್ದರು. ಅವರಿಗೆ ಫೋನ್ ಮಾಡಿ ಮಧ್ಯಾಹ್ನ ಊಟದ ಸಮಯಕ್ಕೆ ಅಲ್ಲಿರುತ್ತೇವೆ, ಒಂದು ಒಳ್ಳೆಯ ಜೋಳದ ರೊಟ್ಟಿ ಊಟಕ್ಕೆ ಕರೆದುಕೊಂಡು ಹೋಗಿ ಎಂದು ಕೇಳಿದ್ದೆ. ಅಲ್ಲಿ ಅಮೃತ ಬಹುಶಃ ಅವಳ ಮೊದಲ ಜೋಳದ ರೊಟ್ಟಿ ಊಟ ಉಂಡಳು. ಕಲಿಗಣನಾಥರೊಂದಿಗೆ ಸಾಕಷ್ಟು ಸಮಯ ಕಳೆದೆವು. ಅವರ ಇತ್ತೀಚಿನ ಕಥಾಸಂಕಲನ "ತೂತುಬೊಟ್ಟು"ವನ್ನು ಪೃಥ್ವಿ ಸಹ ಓದಿದ್ದರು. ಅದರ ಬಗ್ಗೆ, ಅವರ ಕೆಲಸದ ಬಗ್ಗೆ, ಜೀವನೋಪಾಯದ ಬಗ್ಗೆ ಒಂದಷ್ಟು ಮಾತನಾಡಿದೆವು. ನಂತರ ಅಲ್ಲಿಂದ ಗುಲ್ಬರ್ಗದತ್ತ. ದಾರಿಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣಾ ಪ್ರಚಾರ ಜೋರಿತ್ತು.
ರಾತ್ರಿ ಗುಲ್ಬರ್ಗದ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಉಳಿದುಕೊಂಡೆವು. ಗುಲ್ಬರ್ಗದಲಿ "ಕಲ್ಬುರ್ಗಿ ಕಂಪು" ನಡೆಯುತ್ತಿತ್ತು. ಹೊರ ಊರು/ರಾಜ್ಯಗಳಿಂದ ಬಂದ ಖಾವಿಧಾರಿಗಳು ಮತ್ತು ಇತರೆ ಜನರಿಂದ ವಿಶ್ವವಿದ್ಯಾಲಯದ ಗೆಸ್ಟ್‌ಹೌಸ್ ತುಂಬಿಹೋಗಿತ್ತು. ಹಾಗಾಗಿ ರೂಮು ದೊರಕಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಆಯಿತು. ಒಂದೇ ರೂಮ್ ಸಿಕ್ಕಿದ್ದು. ಅಮೃತ ಮತ್ತು ನಾನು ನೆಲದ ಮೇಲೆ ಎರಡು ಹಾಸಿಗೆ ಹಾಸಿಕೊಂಡು ಮಲಗಿದೆವು. ಅಲ್ಲಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ಕತೆಗಾರ ವಿಕ್ರಮ್ ವಿಸಾಜಿಯವರ ಸ್ನೇಹಿತ ಶಾಂತಪ್ಪ ಡಂಬಳ ರಾತ್ರಿ ಬಂದು ಮಾತನಾಡಿಸಿಕೊಂಡು ಹೋಗಿದ್ದರು.
ಅವರು ಡಿಸೆಂಬರ್ 29ರ ಬೆಳಗ್ಗೆ ತಿಂಡಿಯ ಸಮಯಕ್ಕೆ ಒಂದು ಜಾಗದಲ್ಲಿ ಸಿಕ್ಕರು. ನಮಗೆ ಗುಲ್ಬರ್ಗ ತೋರಿಸಲು ಅವರು ಉತ್ಸುಕತೆ ತೋರಿದರು. ಆದರೆ ನಮಗೆ ನಗರ ನೋಡುವ ಮನಸ್ಸಿರಲಿಲ್ಲ. ಅವರ ಜೊತೆ ತಿಂಡಿ ಮುಗಿಸಿ ಶರಣರ ಕರ್ಮಭೂಮಿ (ಬಸವ)ಕಲ್ಯಾಣದತ್ತ ಹೊರಟೆವು. ಅಲ್ಲಿ ವಿಕ್ರಮ ವಿಸಾಜಿಯವರ ಗೆಳೆಯ ಮಹಾಂತೇಶ್ ನವಲಕಲ್ ಮನೆಗೆ ಹೋದೆವು. ಅಲ್ಲಿಯ ಗ್ರಾಮೀಣ ಮಹಿಳಾ ಬ್ಯಾಂಕಿನಲ್ಲಿ ಎಮ್.ಡಿ.ಯಾಗಿರುವ ನವಲಕಲ್ ಕತೆಗಾರರೂ ಸಹ. ಪೃಥ್ವಿಯವರ ಥೀಸಿಸ್ ಬಗ್ಗೆ ಮತ್ತು ಅದಕ್ಕೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಅವರಿಬ್ಬರೂ ಮಾತನಾಡಿದರು. ನನಗೆ ಆ ಊರಿನ ಪರಿಚಯ ಇಲ್ಲದ್ದರಿಂದ ಮತ್ತು ಅಲ್ಲಿ ಕಾರು ಓಡಿಸುವ ಇಚ್ಛೆ ಇಲ್ಲದ್ದರಿಂದ ಮಹಾಂತೇಶ್‌ರನ್ನು ಸಾಧ್ಯವಾದರೆ ಅವರ ಡ್ರೈವರ್ ಅನ್ನೇ ಕಳಿಸುವಂತೆ ಕೇಳಿದ. ಆತ ಆ ಊರಿನ ರಸ್ತೆಯಲ್ಲಿ ಕಾರನ್ನು ಆಕಾಶಮಾರ್ಗದಲ್ಲಿ ಓಡಿಸುವಷ್ಟು ಚಾಣಾಕ್ಷ. ಕೋಟೆ ನೋಡಿದೆವು. ಅಮೃತ ಕೋಟೆಯನ್ನು ಮತ್ತು ಅಲ್ಲಿಯ ಕೋತಿಗಳನ್ನು ಖುಷಿಯಿಂದ ನೋಡಿದಳು. ನನಗೆ ಕೋಟೆಯೊಳಗಿನ ನೂರಾರು ಅಡಿ ಆಳದ ಭಾವಿ ಮತ್ತು ಅದಕ್ಕೆ ಯಾವೊಂದು ಅಡೆತಡೆ ಸೂಚನೆಯೂ ಇಲ್ಲದೆ ಇದ್ದಕ್ಕಿದ್ದಂತೆ ಅದು ಎದುರಾಗುವ ಸ್ಥಿತಿ ನೋಡಿ, ತುಂಟ ಮತ್ತು ಮುಗ್ಧ ಮಕ್ಕಳ ವಿಚಾರ ನೆನಪಾಗಿ ಭಯವಾಯಿತು. ಬೇಜವಾಬ್ದಾರಿ ಜನರ ಮೇಲುಸ್ತುವಾರಿ.
ನಂತರ ಅಲ್ಲಿಯ ಬಸವಣ್ಣನ ದೇವಸ್ಥಾನಕ್ಕೆ ಹೋದೆವು. ಚಂಬೆ ಗರ್ಭಗುಡಿಯ ಬಾಗಿಲಿನ ಮೆಟ್ಟಿಲಿಗೆ ನಮಸ್ಕರಿಸಿ ಅದರತ್ತ ನನ್ನ ಗಮನ ಸೆಳೆದರು. ಅದರ ಮೇಲೆಲ್ಲಾ ದಾನಿಗಳ ಹೆಸರು. ಅಲ್ಲಿರುವ ಪ್ರತಿಯೊಂದು ಚಿತ್ರಪಟದಲ್ಲೂ ಎಲ್ಲಕ್ಕಿಂತ ದೊಡ್ಡದಾಗಿ ಕಾಣುವುದು ಅದನ್ನು ಮಾಡಿಸಿದವರ, ಧನಸಹಾಯ ಮಾಡಿದವರ ಹೆಸರು. ನಾಚಿಕೆಗೇಡು. ಇದೊಂದು ರೋಗ. ನಂತರ ಅಕ್ಕ ನಾಗಮ್ಮನ ಗುಹೆ, ಅನುಭವ ಮಂಟಪ ನೋಡಿದೆವು. ಅಲ್ಲಿ ಅಮೃತ ಹುಳಿಯಾದ ಹುಣಿಸೆಕಾಯಿಯನ್ನು ಮರದಿಂದ ಕಿತ್ತು ಸವಿದಳು. ದಾರಿಯಲ್ಲಿ ಮಾತೆ ಮಹಾದೇವಿ ಕಟ್ಟಿಸುತ್ತಿರುವ ಸುಮಾರು ನೂರು ಅಡಿ (ಇನ್ನೂ ಹೆಚ್ಚು?) ಇದ್ದಿರಬಹುದಾದ ಬಸವಣ್ಣನ ಕಾಂಕ್ರಿಟ್ ವಿಗ್ರಹದ ಕಾಮಗಾರಿ ಕಾಣಿಸಿತು. ಬಸವಣ್ಣ ಬಹಳ ಜನರಿಂದ ಬಂಧಿಸಲ್ಪಟ್ಟಿದ್ದಾನೆ. ಜಂಗಮ ಬಸವಣ್ಣನಿಗಿಂತ ಸ್ಥಾವರ ಬಸವಣ್ಣ ಜನಪ್ರಿಯ. ತನ್ನ ಹಿಂಬಾಲಕರೆಂದು ಹೇಳಿಕೊಂಡವರಿಂದ ಬಸವಣ್ಣನಷ್ಟು ದುರುಪಯೋಗಕ್ಕೆ, ಅಪಾರ್ಥಕ್ಕೆ, ಅಪಚಾರಕ್ಕೆ ಒಳಗಾದ ಕರ್ನಾಟಕದ ಮತ್ತೊಬ್ಬ ಚಾರಿತ್ರಿಕ ವ್ಯಕ್ತಿ ಇಲ್ಲ.
ಮತ್ತೆ ಈ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಟ್ರಕ್‌ಗಳು. ಸಾರಿಗೆ ಈ ಊರಿನ ಬಹುದೊಡ್ದ ಉದ್ದಿಮೆ.
ನಂತರ ನವಲಕಲ್ ಕೆಲಸ ಮಾಡುವ GMASS ಮತ್ತು ಅದರ ಮಾತೃಸಂಸ್ಥೆ ಪ್ರವರ್ಧ (NGO) ಇರುವ ಹತ್ತಿರದ ಸಸ್ತಾಪುರಕ್ಕೆ ಹೋದೆವು. ಅಲ್ಲಿ ವಿಶಿಷ್ಟವಾದ ಸ್ಥಳೀಯ ಉಪ್ಪಿಟ್ಟು ತಿನ್ನುತ್ತ ಅವರ ಸಂಸ್ಥೆಗಳ ಬಗ್ಗೆ, micro-finance ಬಗ್ಗೆ, ಸ್ವಸಹಾಯ ಸಂಸ್ಥೆಗಳ ಬಗ್ಗೆ ಮಾತನಾಡಿದೆವು. ಮಧ್ಯದಲ್ಲಿ ಶಾಲೆ ನಿಲ್ಲಿಸಿದ ಸ್ಥಳೀಯ ಊರುಗಳ ಪ್ರಾಥಮಿಕ ಶಾಲಾ ವಯಸ್ಸಿನ ಗಂಡುಮಕ್ಕಳನ್ನು ಅಲ್ಲಿಯೇ ಒಂದು ವರ್ಷ ಇಟ್ಟುಕೊಂಡು ಅವರನ್ನು ಮತ್ತೆ regular ಶಾಲೆಗೆ ಸಿದ್ಧಪಡಿಸುವ ಶಿಕ್ಷಣವನ್ನೂ ಪ್ರವರ್ಧ ನೀಡುತ್ತಿದೆ. ಆ ಮಕ್ಕಳ ತರಗತಿಯಲ್ಲಿ ಒಂದೆರಡು ನಿಮಿಷ ಕಳೆದೆವು. ಹುಡುಗರು ಚೂಟಿ ಇದ್ದರು. ಅವರ ಕ್ಯಾಂಪಸ್‌ನಲ್ಲಿರುವ ನೂರಡಿ ಆಳದ ಭಾವಿ ನನ್ನನ್ನು ಬೆರಗುಗೊಳಿಸಿತು.
(ನವಲಕಲ್ ಕತೆಗಾರರು ಎಂದಿದ್ದೆ. ಅವರ ಕಥಾಸಂಕಲನ "ನೀರಿನ ನೆರಳು" ವಿನ ಒಂದೊಂದು ಪ್ರತಿಯನ್ನು ನಮಗೆ ಕೊಟ್ಟಿದ್ದರು. ಅದರಲ್ಲಿ ’ಗಾಂಧಿ.... ಬಂದಾನೆ’ ಮತ್ತು ’ಅಕ್ರಾಂತ’ ಓದಿದೆ. ’ಅಕ್ರಾಂತ’ 2003ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಚಿನ್ನದ ಪದಕ ಹಾಗೂ ಪ್ರಥಮ ಬಹುಮಾನ ಪಡೆದ ಕತೆ. ಪಾಳೆಯಗಾರಿಕೆ ಹಿನ್ನೆಲೆಯಿಂದ ಬಂದ ಯುವಕರಿಗೆ ಆ ಪ್ರತಿಗಾಮಿ ಧೋರಣೆಯನ್ನು ಹತ್ತಿಕ್ಕುವುದು ಎಷ್ಟು ಕಷ್ಟ ಮತ್ತು ಅವರಿಗೆ ಎಷ್ಟೆಲ್ಲ ಓದಿದರೂ ಆ ಪರಿಸರದಲ್ಲಿ feudal ಧೋರಣೆ ಎಷ್ಟೊಂದು ಅಪ್ಯಾಯಮಾನವಾಗುತ್ತದೆ. ಮತ್ತು ಅದು ಹೇಗೆ ವಿಷಸುಳಿಯಾಗಿ ಸುತ್ತುತ್ತದೆ ಎನ್ನುವುದನ್ನು ನಿರೂಪಿಸುತ್ತದೆ. ನವಲಕಲ್ ಮನಸ್ಸು ಮಾಡಿದರೆ ನಮ್ಮ ಗ್ರಾಮೀಣ ಪರಿಸರ ಮತ್ತು SHG/NGOಗಳ ಸುತ್ತ ಇರುವ ವಿಶಿಷ್ಟ ಪ್ರಪಂಚವನ್ನು ಮತ್ತು ವಾಸ್ತವವನ್ನು ತೆರೆದಿಡಬಲ್ಲರು.)
ನಾವು ಅಲ್ಲಿಂದ ರಾತ್ರಿಯ ಹೊತ್ತಿಗೆ ಆಲಮಟ್ಟಿಗೆ ಹೋಗಬೇಕಿತ್ತು. ಚಂಬೆಯವರು ಹೋಗುವ ದಾರಿಯಲ್ಲಿ ಅಮೃತಳಿಗೆ ವಿಜಾಪುರದ ಗೋಳಗುಮ್ಮಟವನ್ನು ತೋರಿಸೋಣ ಎಂದಿದ್ದರಿಂದ ನಾವು ನವಲಕಲ್ ಮತ್ತು ಅವರ ಸಹೊದ್ಯೊಗಿ ಬಸವರಾಜುರವರಿಂದ ಬೀಳ್ಕೊಂಡು ಮಹಾರಾಷ್ಟ್ರದ ಸೋಲಾಪುರದತ್ತ ಹೊರಟೆವು. ಕಲ್ಯಾಣ ಮತ್ತು ಸೋಲಾಪುರದ ಮಧ್ಯೆ ಬರುವ ನಳದುರ್ಗದ ಕೋಟೆ ರಸ್ತೆಯಲ್ಲಿ ಕಣ್ಣಿಗೆ ಬಿತ್ತು. ಗಾಡಿ ನಿಲ್ಲಿಸಿ ಕಣಿವೆಯ ಆ ಬದಿಯಲ್ಲಿದ್ದ ಕೋಟೆಯ ಹಿನ್ನೆಲೆಯಲ್ಲಿ ಅಮೃತಳ ಹಲವು ಫೋಟೊ ತೆಗೆದೆ. ಸೋಲಾಪುರದಲ್ಲಿ ಗಾಡಿ ನಿಲ್ಲಿಸಿ ಪೃಥ್ವಿ ಮತ್ತು ಚಂಬೆ ಹಣ್ಣು ಮತ್ತು ಹಸಿಕಡಲೆಯ ಕಟ್ಟುಗಳನ್ನು ಖರೀದಿಸಿದರು. ನಾನು ಮತ್ತು ಅಮೃತ ಗೋಂಡ್ ಆದಿವಾಸಿಯೊಬ್ಬನ ಗಿಡಮೂಲಿಕೆ ಮದ್ದುಗಳನ್ನು ನೋಡುತ್ತ ಅವನೊಂದಿಗೆ ಮಾತನಾಡುತ್ತ ನಿಂತೆವು. ದಾರಿಯಲ್ಲಿ ಅಮೃತ ಮೊದಲ ಬಾರಿಗೆ ಹಸಿ ಕಡಲೆಯನ್ನು ಕಟ್ಟಿನಿಂದ ಬಿಡಿಸಿಕೊಂಡು ಸಿಪ್ಪೆ ಬಿಡಿಸಿಕೊಂಡು ತಿಂದಳು. ನನಗೆ ಏನೂ ಉಳಿಸಲಿಲ್ಲ.
ಬಿಜಾಪುರ ಮುಟ್ಟುವಷ್ಟೊತ್ತಿಗೆ ಸಂಜೆ ಆರೂವರೆ. ಗೋಳಗುಮ್ಮಟ ಐದಕ್ಕೆ ಮುಚ್ಚುವುದರಿಂದ ಅತ್ತ ಹೋಗಲಿಲ್ಲ. ಹೆದ್ದಾರಿಯಲ್ಲಿ ಹೋಗುತ್ತಲೆ ಒಂದೆರಡು ಕಿಲೋಮೀಟರ್ ದೂರದಲ್ಲಿದ್ದ ಗುಮ್ಮಟವನ್ನು ಅಮೃತಳಿಗೆ ತೋರಿಸಿದೆವು. ಆ ಕಟ್ಟಡದ ಗುಮ್ಮಟದ ಆರಂಭವಾಗುವ ಜಾಗದಲ್ಲಿ ಓಡಾಡಬಹುದು ಎಂದಿದ್ದಕ್ಕೆ ಅವಳು ’ಅಬ್ಬಬ್ಬ’ ಎಂದಳು.
ರಾತ್ರಿ ಆಲಮಟ್ಟಿಗೆ ಬಂದಾಗ ಅಣೆಕಟ್ಟೆಯ ಕೆಳಗಿನ ಉದ್ಯಾನವನಕ್ಕೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗಳು ಹೋಗುತ್ತಿದ್ದರು. ಬಹುಶಃ ಸಂಗೀತ ಕಾರಂಜಿಯ ಸಮಯ. ನಮಗೆ ವಸತಿಯ ಯೋಚನೆ. ಹಾಗಾಗಿ ಅತ್ತ ಹೋಗಲಾಗಲಿಲ್ಲ. ರಾತ್ರಿ ಐಬಿಯಲ್ಲಿ ವಸತಿ. ಅಮೃತಳಿಗೆ ಅಲ್ಲಿ ತಲೆಸ್ನಾನ ಮಾಡಿಸಿದೆ. ಮತ್ತೆ ರೂಮಿನ ಸಮಸ್ಯೆಯಿಂದಾಗಿ ನಮಗಿಬ್ಬರಿಗೂ ನೆಲದ ಮೇಲೆ ಎರಡು ಹಾಸಿಗೆಗಳು.
ಡಿಸೆಂಬರ್ 30 ರ ಬೆಳಗ್ಗೆ ಏಳೂವರೆಗೆಲ್ಲ ಬಾಗಲಕೋಟೆಯಿಂದ ಅಲ್ಲಿಯೇ ಆಲಮಟ್ಟಿಯ KPCL ನಲ್ಲಿ ಕೆಲಸ ಮಾಡುವ ಇಂಜಿನಿಯರಿಂಗ್ ಸಹಪಾಠಿ ಗುರು ಬಳ್ಳೂರು ಬಂದ. ಅಂದೇ ಕೃಷ್ಣಾ ನದಿಯ ನೀರು ಹಂಚಿಕೆಯ ತೀರ್ಪು ಹೊರಬರುವುದಿತ್ತು. ಹಾಗಾಗಿ ಭದ್ರತೆ ಸ್ವಲ್ಪ ಹೆಚ್ಚಿತ್ತು ಎನ್ನುತ್ತಿದ್ದರು. ಚಂಬೆ ಬಸ್ಸಿನಲ್ಲಿ ಚಿತ್ರದುರ್ಗಕ್ಕೆ ಹಿಂದಿರುಗುವವರಿದ್ದರು. ಅವಸರವಸರವಾಗಿ ಅಮೃತಳಿಗೆ ತಿಂಡಿ ಮಾಡಿಸಿದೆ. ಆಗ ನನಗೂ ಅವಳಿಗೂ ಸಣ್ಣ ಜಟಾಪಟಿ ಆಯಿತು. ಮುನಿಸಿಕೊಂಡು ಹೊರಗೆ ಹೋದಳು. ಅಲ್ಲಿ ಒಬ್ಬಳೇ ಇದ್ದಾಗ ಅಂಗೈ ಮೇಲೆ "My daddy is very bad." ಎಂದು ಬರೆದುಕೊಂಡಿದ್ದಳು. ನಾನು ಹೋಗಿ ಮುದ್ದಿಸುತ್ತ ಕ್ಷಮೆಯಾಚಿಸುತ್ತ ರಾಜಿ ಪಂಚಾಯಿತಿಗೆ ಇಳಿದೆ. ಅಂಗೈ ಮೇಲಿದ್ದದ್ದನ್ನು ನೋಡಿ ಸ್ನೇಹಿತರಿಗೆ ತೋರಿಸಿದೆ. ಸ್ವಲ್ಪ ಹೊತ್ತಿಗೆ ಮುನಿಸು ಹೋಗಿ ಕಾರು ಹತ್ತಿದಳು. ಮತ್ತೆ ಕೆಲವೇ ನಿಮಿಷಗಳಲ್ಲಿ ಅಂಗೈ ಮೇಲಿನ "bad" ಹೊಡೆದು ಹಾಕಿ "My daddy is very bad good in this road trip." ಎಂದು ಬರೆದುಕೊಂಡಳು. ಹೀಗೆ ಆಲಮಟ್ಟಿಯಲ್ಲಿ ಏನೂ ನೋಡದೆ ಹೊರಟೆವು. ಗುರು ಸಹ ನಮ್ಮ ಜೊತೆ ಬಂದ. ಅಣೆಕಟ್ಟೆಯ ಕೆಳಗೆ ಕೃಷ್ಣೆಯನ್ನು ದಾಟುವ ಮೊದಲು ಕಾರು ನಿಲ್ಲಿಸಿ ಅಲ್ಲಿಂದಲೆ ಅಮೃತಳಿಗೆ ಅಣೆಕಟ್ಟೆ ತೋರಿಸಿದೆ. ಅದರ ಹಿಂದೆ ಇದ್ದಿರಬಹುದಾದ ಅಗಾಧ ಜಲರಾಶಿಯ ಬಗ್ಗೆ ಒಂದಷ್ಟು ವಿವರಿಸಿದೆ. ಅವಳಿಗೆ ಅದೆಷ್ಟು ಅರ್ಥವಾಯಿತೊ ತಿಳಿಯಲಿಲ್ಲ.
ಕೂಡಲಸಂಗಮದ ಕ್ರಾಸಿನಲ್ಲಿ ಚಂಬೆ ಹೊಸಪೇಟೆ ಬಸ್ಸು ಹಿಡಿದರು. ನಾವು ಸಂಗಮಕ್ಕೆ ಹೋದೆವು. ನಾರಾಯಣಪುರ ಅಣೆಕಟ್ಟು ತುಂಬಿದ್ದರಿಂದ ಅದರ ಹಿನ್ನೀರು ಬಹಳ ಇತ್ತು. ಅಮೃತ ಅಲ್ಲಿ ಸಂಗಮದಲ್ಲಿ ಕೃಷ್ಣೆಯ ಭಾಗದಲ್ಲಿ ಜಳಕ ಮಾಡುತ್ತಿದ್ದವರನ್ನು ನೋಡುತ್ತ ನಿಂತಳು. ನಂತರ ಬಸವಣ್ಣನ ಸಮಾಧಿ ಇರುವ ಜಾಗಕ್ಕೆ ಹತ್ತಿ-ಇಳಿದು ಹೋದೆವು. ಕಲ್ಯಾಣದಲ್ಲಿ ಅಮೃತಳಿಗೆ ಕಳಬೇಡ, ಕೊಲಬೇಡ ನೆನಪಿಸಿದ್ದೆ. ಆಕೆ ಮೂರು ವರ್ಷದವಳಿದ್ದಾಗ ಅದನ್ನು ಬಹಳ ಮುಗ್ಧವಾಗಿ ಬಾಲಭಾಷೆಯಲ್ಲಿ ಹೇಳುತ್ತಿದ್ಡಳು. ಈಗ ಅವಳಿಗೆ ಅದು ಮರೆತುಹೋಗಿದೆ. ಇಲ್ಲಿ ಬಸವಣ್ಣ ಕೊನೆಯ ಉಸಿರು ಎಳೆದಿರಬಹುದಾದ ಜಾಗದಲ್ಲಿ ನಾನು ಅವಳಿಗೆ ಮತ್ತೊಮ್ಮೆ ಹೇಳಿಕೊಟ್ಟೆ. ಎರಡು ಬಾರಿ ಉಚ್ಚರಿಸಿದಳು.
ಅಲ್ಲಿಂದ ಮೇಲಕ್ಕೆ ಬಂದು ಹೊರಗೆ ಬರುವಷ್ಟರಲ್ಲಿ ಅಮೃತ ’ಕೊಕ್ಕ ಮಾಡಬೇಕು’ ಎಂದಳು. ಅಲ್ಲೆಲ್ಲಾ ಹುಡುಕಾಡಿ ಸುಮಾರು 300-400 ಮೀಟರ್ ದೂರವಿದ್ದ ಶಾಚಾಲಯದತ್ತ ಓಡಿದೆವು. ಯಾವನೊ ತಲೆಕೆಟ್ಟ ಮೂಢ ಮಾಡಿರುವ ವ್ಯವಸ್ಥೆ ಅದು. ಅದಕ್ಕಾಗಿಯೆ ಜನ ಅಲ್ಲಿಗೆ ಹೋಗುವ ದಾರಿಯುದ್ದಕ್ಕೂ ಕಕ್ಕಸ್ಸು ಮಾಡಿ ಆ ಮೂಲಕ ಅವನ ಕಾರ್ಯಕ್ಕೆ ಪ್ರಶಂಸೆ ತೋರುತ್ತಿದ್ದಾರೆ; ಪ್ರತಿದಿನ. ಹೋಗುತ್ತಲೆ ಅಲ್ಲಿದ್ದವನೊಬ್ಬ ದುಡ್ದು ಕೇಳಿದ. ಬಂದೆ ಇರು ಎಂದು ಹೇಳಿ ಎರಡು ಅಂತಸ್ತು ಹತ್ತಿಹೋಗಿ ಅವಳನ್ನು ಟಾಯ್ಲೆಟ್‌ನಲ್ಲಿ ಬಿಟ್ಟೆ. ಯಾವನೊ ಸೂಕ್ಷ್ನತೆ ಇಲ್ಲದ ಮುಟ್ಟಾಳನ ಯೋಜನೆ ಕೂಡಲಸಂಗಮದಲ್ಲಿನ ಶೌಚಾಲಯ.
ನಂತರ ಅಲ್ಲಿಂದ ಹೊರಟು ಅಲ್ಲಿಯ ಬೃಹತ್ ಸಭಾಂಗಣ ನೋಡಿದೆವು. ನಾನು ಅದನ್ನು ಈ ಮುಂಚೆಯೆ 2005ರಲ್ಲಿ ನೋಡಿದ್ದೆ. ಪೃಥ್ವಿಯವರು ನೋಡಿರಲಿಲ್ಲ. ಮತ್ತೆ ಅಲ್ಲಿಯ ಇನ್ನೊಂದು 80-100 ಅಡಿಯ ದೊಡ್ಡ ಗೋಪುರಾಕಾರದ ಕಟ್ಟಡದತ್ತ ಹೋದೆವು. ಅದು ಏನು ಎಂದು ಗೊತ್ತಾಗಲೇ ಇಲ್ಲ. ಎಲ್ಲಿಯೂ ಬೋರ್ಡ್ ಇರಲಿಲ್ಲ. ಕೆಲಸ ನಿಂತಿದ್ದ ಕಾರಣ ಜನರೂ ಕಾಣಿಸಲಿಲ್ಲ. ದೂರದಲ್ಲಿ ಉದ್ಯಾನದ ಕೆಲಸ ಮಾಡುತ್ತ ಇದ್ದ ಒಬ್ಬಾತನನ್ನು ಕೂಗಿ ಕರೆದು ಕೇಳಿದೆ. ಅದು ಮ್ಯೂಸಿಯಮ್ ಅಂದ. ಏನಿಲ್ಲವೆಂದರೂ ಅದಕ್ಕೀಗಾಗಲೆ ಆರೇಳು ಕೋಟಿ ಖರ್ಚಾಗಿರಬೇಕು. ಭೂತಕಟ್ಟಡವಾಗುವ ಎಲ್ಲಾ ಲಕ್ಷಣಗಳೂ ಅಲ್ಲಿದ್ದವು. ಈ ವ್ಯವಸ್ಥೆಯಲ್ಲಿ ಯಾರನ್ನು ಇದಕ್ಕೆ ಹೊಣೆಗಾರನಾಗಿಸುವುದು?
ಸಂಗಮದಿಂದ ಹೊರಟು ಗುರುವನ್ನು ಹೆದ್ದಾರಿಯ ಕ್ರಾಸ್‌ನಲ್ಲಿ ಬಿಟ್ಟು ನಾವು ಮೂವರೆ ಐಹೊಳೆಯತ್ತ ಹೊರಟೆವು. ದಾರಿಯಲ್ಲಿ ಅಮೀನಗಡ ಪಟ್ಟಣದಲ್ಲಿ ಪೃಥ್ವಿ ಅಲ್ಲಿಯ ಪ್ರಸಿದ್ಧ ಕರದಂಟು ಕೊಂಡರು. ಐಹೊಳೆಯಲ್ಲಿ ಅಮೃತ ಅವಳ ಮೊದಲ ಗೋಲಿ ಸೋಡ ಕುಡಿದಳು. ಅಲ್ಲಿಯ ಶಿಲಾದೇಗುಲಗಳನು ನೋಡಿಕೊಂಡು ಪಟ್ಟದಕಲ್ಲಿಗೆ ಹೋದೆವು. ಅಮೃತ ಅಲ್ಲಿಯ ಸ್ಥಳ ಇತಿಹಾಸದ ಬೋರ್ಡ್ ಓದುತ್ತ ಬಹಳ ಕಾಲ ಕಳೆದಳು. ಅದೇ ಸಮಯದಲ್ಲಿ ಗೆಳೆಯ ಗುರು ಆಲಮಟ್ಟಿಯಿಂದ ಫೋನ್ ಮಾಡಿ ಕೃಷ್ಣಾ ನದಿನೀರಿನ ಐತೀರ್ಪು ಅಣೆಕಟ್ಟೆಯ ಎತ್ತರ 524 ಮೀಟರ್ಸ್‌ಗೆ ಏರಿಸಲು ಒಪ್ಪಿಗೆ ಕೊಟ್ಟಿದೆ ಎಂದು ಸುದ್ದಿ ಕೊಟ್ಟ. ನಾನು ಐಫೋನಿನಲ್ಲಿ ಟೈಮ್ಸ್ ಆಫ್ ಇಂಡಿಯಾ ತೆಗೆದು ನೋಡಿದೆ. ಅದರಲ್ಲಿ ಸುದ್ದಿ ಇನ್ನೂ ವಿವರವಾಗಿ ಪ್ರಕಟವಾಗಿರಲಿಲ್ಲ.
ನಂತರ ಅಲ್ಲಿಂದ ಬಾದಾಮಿಗೆ ಹೋದೆವು. ಮೊದಲು ಅಲ್ಲಿಯ KSTDC ಹೋಟೆಲ್‌ಗೆ ಊಟಕ್ಕೆ ಹೋದೆವು. ಅಲ್ಲಿ ಅಮೃತ ಅವಳ ಪರಮಪ್ರಿಯ ಮೊಸರನ್ನವನ್ನು ಸವಿದಳು. ಅದು ನಿಜಕ್ಕೂ ಚೆನ್ನಾಗಿತ್ತು. ಅದರಲ್ಲಿದ್ದ ಉಳ್ಳಾಗಡ್ಡಿಯ ಪ್ರಮಾಣ ನೋಡಿ ಪೃಥ್ವಿ ಇವರಿಗೆ ಈರುಳ್ಳಿ ಬೆಲೆ ಹೆಚ್ಛಾಗಿರುವ ಸುದ್ದಿ ಇನ್ನೂ ತಲುಪಿಲ್ಲ ಎಂದು ತಮಾಷೆ ಮಾಡಿದರು.
ನಂತರ ಬಾದಾಮಿಯ ಗುಹೆಗಳಿಗೆ ಹೋದೆವು. ಅಲ್ಲಿ ಅಮೃತಳಿಗೆ ಕೂರ್ಮಾವತಾರದ ಮತ್ತು ನರಸಿಂಹ ವಿಗ್ರಹವನ್ನು ತೋರಿಸಿದೆ. ಕತೆ ಹೇಳಲಿಲ್ಲ. ಅವಳಿಗೆ ವಿಗ್ರಹ ಮತ್ತು ಶಿಲ್ಪಕಲೆಗಿಂತ ಅಲ್ಲಿದ್ದ ಮಕ್ಕಳು ಮತ್ತು ಕೋತಿಗಳ ಕಡೆಗೇ ಕಣ್ಣು. ಕೆಳಗೆ ಇಳಿದು ಚಹಾ ಕುಡಿಯುತ್ತ ಇದ್ದಾಗ ಬಾದಾಮಿಯ ಬಗ್ಗೆ ಏನನ್ನಿಸಿತು ಎಂದು ಕೇಳಿದೆ. "I will remember this place very well. Because it's name is Badami, no? Because I know badami milk, no? Then how will I forget? Badami is one word, means badami milk. So I will remember badami milk always, means, ’oh, we went to Badami’. I will never forget." ಎಂದು ಅವಳ ಮುಗ್ಧ ಭಾಷೆಯಲ್ಲಿ ಉತ್ಸುಕಳಾಗಿ ಹೇಳಿದಳು.
ಅಲ್ಲಿಂದ ನಾವು ಗದಗ್‍ನತ್ತ ಹೊರಟೆವು. ಗದಗಿನ ತೋಂಟದಾರ್ಯ ಡಂಬಳ ಮಠದ ಮುಖ್ಯಸ್ಥರು ಪ್ರಗತಿಪರ ಮಠಾಧೀಶರಾಗಿ ಹೆಸರಾದವರು. ಗದಗಿನಲ್ಲಿರುವ ಸಾಹಿತಿ, ಮತ್ತು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ ವಸ್ತ್ರದ ಮಠದ ಛತ್ರದಲ್ಲಿ ವಸತಿ ವ್ಯವಸ್ಥೆ ಮಾಡಿದ್ದರು. ಅಲ್ಲಿಗೆ ಸಂಜೆ ಬೆಳಕಿರುವ ಹಾಗೇ ತಲುಪಿದ್ದರಿಂದ ಮಠದ ಮುಂದಿನ ರಸ್ತೆಯಲ್ಲಿ ತಿರುಗಾಡಲು ಹೋದೆವು. ನನಗೆ ಹಿಂದಿನ ದಿನ ಹಸಿಕಡಲೆ ತಿನ್ನಲು ಸಿಕ್ಕಿರಲಿಲ್ಲವಾದ್ದರಿಂದ ಅಲ್ಲಿ ಮಾರುತ್ತಿದ್ದ ಮರಳಿನಲ್ಲಿ ಉಪ್ಪು ಬೆರಸಿ ಬೇಯಿಸಿದ್ದ ಹಸಿರುಕಡಲೆಯನ್ನು ಕಾಲು ಕೇಜಿ ಕೊಂಡೆ. ಉಪ್ಪುಪಾಗಿದ್ದ ಅದನ್ನು ಅಮೃತ ಸಿಪ್ಪೆ ಸಮೇತ ಅಗಿಯಲು ಆರಂಭಿಸಿದಳು.
ಅಂದು ಕೋಣೆಯಲ್ಲಿ ಗಾರೆನೆಲದ ಮೆಲೆ ಕೊಳೆಯಾಗಿದ್ದಲ್ಲೆಲ್ಲ ಆಡುತ್ತ ಕೂರುತ್ತಿದ್ದ ಅವಳನ್ನು ಪೃಥ್ವಿ ಹಾಗೆಲ್ಲ ಎಲ್ಲೆಂದರಲ್ಲಿ ನೆಲದ ಮೆಲೆ ಕೂರಬೇಡ ಎಂದರು. ಅವಳು ಯಾಕೆ ಎಂದು ತನ್ನ ಮೂಲಭೂತ ಪ್ರಶ್ನೆ ಕೇಳುವ ಮೂಲಕ ತನ್ನ ಮೂಲಭೂತ ಹಕ್ಕನ್ನು ಚಲಾಯಿಸಿದಳು. ಪೃಥ್ವಿ ಪ್ರಾಧ್ಯಾಪಕರು. ತಾಳ್ಮೆಯಿಂದ ಅವಳಿಗೆ "ಕೊಳೆಯಾಗಿರುವ ಸ್ಥಳದಲ್ಲಿ germs ಇರುತ್ತವೆ. ಅವನ್ನು ಅಂಟಿಸಿಕೊಂಡರೆ ನಿನಗೆ ಕಾಯಿಲೆ ಬರುತ್ತದೆ," ಎಂದರೆ. "ಬಂದರೆ ಏನಾಗುತ್ತದೆ?", ಅವಳ ಪ್ರಶ್ನೆ. "ಆಗ ನಿನ್ನ ತಲೆ ಇಷ್ಟು ದೊಡ್ಡದಾಗಿ ಊದಿಕೊಳ್ಳುತ್ತದೆ," ಎಂದರು. ನನಗೆ ಅದರ ಹಿಂದಿನ ವಾರ ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ಎಂಡೋಸಲ್ಪಾನ್ ದುಷ್ಪರಿಣಾಮಗಳ ಲೇಖನ ಮತ್ತು ಅದರೊಂದಿಗೆ ಪ್ರಕಟವಾಗಿದ್ದ ಅಕರಾಳ-ವಿಕರಾಳವಾಗಿ ಊದಿಕೊಂಡಿದ್ದ ಮಗುವೊಂದರ ತಲೆ ಮತ್ತು ಮುಖ ರಪ್ಪನೆ ನೆನಪಾಯಿತು. "ಹೌದು ಚಿನ್ನ, ಹಾಗೆಲ್ಲ ಎಲ್ಲೆಂದರಲ್ಲಿ ಕೂರಬೇಡ," ಎಂದು ಗದರಿದೆ.
ಸಂಜೆ ಏಳೂವರೆ ಸುಮಾರಿಗೆ ಚಂದ್ರಶೇಖರ ವಸ್ತ್ರದ ಛತ್ರದ ಕೋಣೆಗೆ ತಮ್ಮ ಸ್ನೇಹಿತರೊಡನೆ ಬಂದರು. ಅವರೊಂದಿಗೆ ಒಂದಷ್ಟು ಮಾತುಕತೆಯಾಯಿತು. ಅವರು ಹೋದ ಬಳಿಕ ನಾವು ಮಠಕ್ಕೆ ಹೋಗಿ ಊಟ ಮಾಡಿದೆವು. ಅಂದು ಅಮೃತ ಹಿಂದಿನ ಎಲ್ಲಾ ದಿನಗಳಿಗಿಂತ ಚೆನ್ನಾಗಿ ಉಂಡಳು. ಚಪಾತಿ, ಹುಚ್ಚೆಳ್ಳು (ಗುರೆಳ್ಳು)ಚಟ್ನಿ, ಮೊಸರನ್ನ ಮುಂತಾದವನ್ನು ಚಪ್ಪರಿಸಿಕೊಂಡು ಖಾಲಿ ಮಾಡಿದಳು.
ಅಂದಿನ ರಾತ್ರಿಯ ನಿದ್ರೆ ಎಂದಿನಂತಿರಲಿಲ್ಲ. ಒಮ್ಮೆ ಮಲಗಿದ ಮೇಲೆ ಬೆಳಗ್ಗೆಯ ತನಕ ಸದ್ದುಗದ್ದಲ ಇಲ್ಲದೆ ಮಲಗುವ ನನ್ನ ಮಗಳು ಅಂದು ಬಹುಶಃ ನಡುರಾತ್ರಿಯಾದ ಮೇಲೆ ಹೊರಳಾಡಲು ಪದೆಪದೆ ತ್ಚು,ತ್ಚು ಎನ್ನಲು ಆರಂಭಿಸಿದಳು. ನಿದ್ದೆ ಬರುತ್ತಿಲ್ಲವೇನೊ ಎಂದು ನಾನು ಅವಳ ಬೆನ್ನು ತಟ್ತುತ್ತ, ಎದೆಯ ಮೇಲೆ ಎಳೆದುಕೊಳ್ಳುತ್ತ, ತಲೆ ಸವರುತ್ತ ಮಲಗಿಸಲು ಯತ್ನಿಸಿದೆ. ನನಗೂ ನಿದ್ದೆ ಕೆಡುತ್ತಿತ್ತು. ಒಮ್ಮೆ ಗದರಿದೆ ಕೂಡ. ಆಗ, ’ಅಬ್ಬು ಆಗಿದೆ ಅಬ್ಬ," ಎಂದು ಕತ್ತಲಿನಲ್ಲ್ಲಿ ನನ್ನ ಬೆರಳಿಡಿದು ಅವಳ ಕೆಳದುಟಿಯ ಮೇಲೆ ಬಲಗಣ್ಣಿನ ರೆಪ್ಪೆಯ ಮೇಲೆ ಆಡಿಸಿದಳು. ಅಲ್ಲೆಲ ಸ್ವಲ್ಪ ಊದಿಕೊಂಡಿತ್ತು. ಸೊಳ್ಳೆಪರದೆ ಇರಲಿಲ್ಲ. ಸೊಳ್ಳೆ ಕಡಿದಿರಬಹುದೆಂದು ಭಾವಿಸಿ ಏನೂ ಆಗಲ್ಲ, ಈಗ ನಿದ್ದೆ ಮಾಡು ಎಂದೆ. ಹಣೆ, ಕುತ್ತಿಗೆ ಮುಟ್ಟಿ ನೋಡಿದೆ. ಜ್ವರ ಇರಲಿಲ್ಲ. ನಂತರ ಯಾವುದೊ ಹೊತ್ತಿನಲ್ಲಿ ಹೊರಳಾಡುತ್ತ ಮಲಗಿಬಿಟ್ಟಳು.
ಡಿಸೆಂಬರ್ 31ರ ಬೆಳಗ್ಗೆ ಅವಳು ಬೇಗ ಏಳಲಿಲ್ಲ. ಮೈಮುಟ್ಟಿ ನೋಡಿದೆ. ಜ್ವರದ ಲಕ್ಷಣ ಕಾಣಿಸಲಿಲ್ಲ. ಬಲವಂತವಾಗಿ ಎಬ್ಬಿಸಿದೆ. ಏನಾಗಿದೆ ಎಂದು ನೋಡುವ ಅವಸರ ನನಗೆ. ಎಬ್ಬಿಸಿದರೂ ಕಣ್ಣು ಬಿಡಲಿಲ್ಲ. ಕೆಳದುಟಿ ಜೋರಾಗಿಯೇ ಊದಿಕೊಂಡಿದೆ. ಬಲಗಣ್ಣಿನ ಕೆಳಗೆ ಸೊಳ್ಳೆ ಕಡಿದಾಗ ಊದಿಕೊಳ್ಳುವ ಹಾಗೆ ಊದಿಕೊಂಡಿದೆ. ಬಲವಂತವಾಗಿ ಕಣ್ಣು ಬಿಡಿಸಿದೆ. ಭಯ ಆಯಿತು. ರೆಪ್ಪೆಗಳೆಲ್ಲ ಊದಿಕೊಂಡಿವೆ. ಅರ್ಧ ಕಣ್ಣು ಮಾತ್ರ ಕಾಣಿಸುತ್ತದೆ. ಮುಖವೆಲ್ಲ ಊದಿಕೊಂಡಿದೆ. ರಾತ್ರಿ ಮಲಗಿದ ಮಗುವಿನ ಮುಖ ಅಲ್ಲವೇ ಅಲ್ಲ ಅದು. ನನಗೆ ಏನೂ ಹೊಳೆಯಲಿಲ್ಲ. ಅವಳಿಗೆ ಈ ಹಿಂದೆ ಎಂದೂ ಹೀಗೆ ಆಗಿರಲಿಲ್ಲ. ಪೃಥ್ವಿ ಸಹ ನೋಡಿ ಅಲರ್ಜಿ ಆಗಿರಬೇಕು ಎಂದರು. ಸಾಧ್ಯವಾದರೆ ಬೇಗ ಹೊರಟು ವೈದ್ಯರಿಗೆ ತೋರಿಸೋಣ ಎಂದರು. ವೈದ್ಯರು ಅಂದ ತಕ್ಷಣ ನಾನು ಅವಳ ಮುಖದ ಒಂದೆರಡು ಪೋಟೊ ತೆಗೆದು ಬೆಂಗಳುರಿನಲ್ಲಿರುವ ನಮ್ಮ ಹಿತೈಷಿ ವೈದ್ಯರಿಗೆ ಫೋನ್ ಮಾಡಿದೆ. ಹೀಗೆಹೀಗೆ ಕಾಣಿಸುತ್ತಿದ್ದಾಳೆ, ಫೋಟೋಗಳನ್ನು ನಿಮ್ಮ ಮಗಳಿಗೆ ಇಮೇಲ್ ಮಾಡಲಾ ಎಂದೆ. ಅವರು ಆಗಲೆ ಮನೆ ಬಿಟ್ಟಿದ್ದರು. ’ಅದೇನೂ ಬೇಡ, ಇದು ಅಲರ್ಜಿ ಅಷ್ಟೆ. ಒಂದೋ ಯಾವುದಾದರೂ ಹುಳ/ಕೀಟ ಕಡಿದಿರಬೇಕು, ಇಲ್ಲವೆ ಊಟದ ತಿಂಡಿಯ ಅಲರ್ಜಿ ಆಗಿರಬೇಕು. ಈ ಕೂಡಲೆ ಈ ಮಾತ್ರೆ ಮತ್ತು ಸಿರಪ್ ಕೊಡು,’ ಎಂದು ಸಿಟ್ರಿಜಿನ್ ಸಿರಪ್ ಮತ್ತು ಇನ್ನೊಂದು ಮಾತ್ರೆ ಹೇಳಿ ಒಂದು ಸ್ಕಿನ್ ಕ್ರೀಮ್ ಸಹ ಹಚ್ಚಲು ಹೇಳಿದರು.
ನಾವು ಕೂಡಲೆ ರೆಡಿಯಾಗಿ ಅವಳ ಮುಖ ತೊಳೆಸಿ ಹೊರಟೆವು. ತೋಂಟದಾರ್ಯರ ಭೇಟಿ ಮಾಡುವ ಮನಸ್ಸಿತ್ತು. ಮಠದ ಬಳಿ ಎಂಟಕ್ಕೆ ಹೋದೆವು. ಹತ್ತಕ್ಕೆ ಭೇಟಿ ಎಂದರು. ನಾವು ಅಲ್ಲಿಯ ಹತ್ತಿರದ ಹೋಟೆಲಿಗೆ ಹೋಗಿ ತಿಂಡಿ ತಿಂದು ಅಮೃತಳಿಗೆ ನನ್ನ ಬಳಿಯಿದ್ದ ಸಿಟ್ರಿಜಿನ್ ಮಾತ್ರೆ ಕೊಟ್ಟೆ. ನಂತರ ಡ್ರಗ್ ಹೌಸಿನಲ್ಲಿ ಮಾತ್ರೆ ಮತ್ತು ಕ್ರೀಮ್ ತೆಗೆದುಕೊಂಡು ಅವಳಿಗೆ ಉಪಚರಿಸಿದೆವು. ಮುಖ ಉದಿಕೊಂಡದ್ದು ಬಿಟ್ಟರೆ ಅವಳಿಗೆ ಯಾವುದೆ ನೋವು ಇರಲಿಲ್ಲ. ಮಾಮೂಲಿಯ ಹಾಗೆ ಇದ್ದಳು. ಅಲ್ಲಿ ಕಾಯುವ ಮನಸ್ಸಾಗಲಿಲ್ಲ. ಚಿತ್ರದುರ್ಗದತ್ತ ಹೊರಟೆವು. ಅಂದು ರಾತ್ರಿ ಚಂಬೆಯವರ ಊರಾದ ರಾಮಜೋಗಿ ಹಳ್ಳಿಯಲ್ಲಿ ಉಳಿಯುವ ಯೋಜನೆ ಇತ್ತು. ಆದರೆ ಯಾವುದೂ ನಿಶ್ಚಿತವಾಗಿರಲಿಲ್ಲ.
ದುರ್ಗದಲ್ಲಿ ಚಂಬೆಯವರ ಮತ್ತವರ ಸ್ನೇಹಿತರ ಕುಟುಂಬ ಸಿಕ್ಕರು. ಅಷ್ಟೊತ್ತಿಗೆ ಅಂದೇ ಊರಿಗೆ ಮರಳೋಣ ಎಂದು ತೀರ್ಮಾನಿಸಿದ್ದೆವು. ಹೊಸವರ್ಷದ ಆಗಮನವನ್ನು ನಾವು ಅವರ ಊರಿನಲ್ಲಿ ಸ್ವಾಗತಿಸಬೇಕು ಎಂದು ಚಂಬೆಯವರ ಅಪೇಕ್ಷೆ. ಆದರೆ ಬದಲಾದ ಪರಿಸ್ಥಿತಿಯಿಂದಾಗಿ ಹಾಗೆ ಮಾಡುವ ಧೈರ್ಯ ಆಗಲಿಲ್ಲ. ಅಮೃತಳ ಮುಖದ ಊತ ಹಾಗೆಯೇ ಇತ್ತು. ಚಂಬೆಯವರಿಗೆ ಸಮಜಾಯಿಷಿ ಹೇಳಿ ಬೆಂಗಳೂರಿನತ್ತ ಹೊರಟೆವು.
ದಾರಿಯಲ್ಲಿ ಮೂರುನಾಲ್ಕು ಫೋನ್ ಮಾಡಿದೆ. ಅವುಗಳ ಪ್ರಭಾವದಿಂದಾಗಿ ಅಮೃತಳನ್ನು ಆ ಸ್ಥಿತಿಯಲ್ಲಿ ಮನೆಗೆ ಕರೆದುಕೊಂಡು ಹೋಗುವ ಮನಸ್ಸಾಗಲಿಲ್ಲ. ಹಾಗಾಗಿ ಹಿರಿಯೂರಿನಿಂದ ನೈಋತ್ಯಕ್ಕೆ ತಿಪಟೂರಿನತ್ತ ಹೊರಟೆವು. ಅಂದು ರಾತ್ರಿ ತಿಪಟೂರಿನ ನೆಂಟರ ಮನೆಯಲ್ಲಿ ಉಳಿದುಕೊಂಡು, ವೈದ್ಯರಿಗೆ ತೋರಿಸುವ ಹಾಗಿದ್ದರೆ ಅಲ್ಲಿಯೇ ತೊರಿಸೋಣ ಎಂದು ಯೋಜನೆ ಹಾಕಿಕೊಂಡೆ.
ದಾರಿಯಲ್ಲಿ ಬರುವ ಹುಳಿಯಾರಿನಲ್ಲಿ ಅಮೃತಳಿಗೆ ಬ್ರೆಡ್ ಕೊಡಿಸಿದೆ. ಅವಳಿಗೆ ಊಟದ ವಿಷಯದಲ್ಲಿ ಇಂತಹುದೇ ಬೇಕು ಎನ್ನುವ ಹಟ ಇಲ್ಲ. ಬ್ರೆಡ್ ಅನ್ನು ನನ್ನೊಂದಿಗೆ ಹಂಚಿಕೊಂಡು ತಿಂದಳು. ಸಂಜೆ ತಿಪಟೂರು ತಲುಪಿದೆವು. ಅಲ್ಲಿ ತಿಂಡಿ ಮತ್ತು ಕಾಫಿ ಮುಗಿದ ನಂತರ ಪೃಥ್ವಿಯವರನ್ನು ಬಸ್‌ಸ್ಟ್ಯಾಂಡಿಗೆ ಕರೆದುಕೊಂಡು ಹೋದೆ. ಅಲ್ಲಿಂದ ಅವರು ಅರಸೀಕೆರೆ ಮಾರ್ಗವಾಗಿ ಮೈಸೂರಿಗೆ ಹೋದರು.
ತಿಪಟೂರಿನ ನೆಂಟರನ್ನು ಅಮೃತ ನೋಡುತ್ತಿದ್ದದ್ದು ಮೊದಲ ಬಾರಿ. ನಾನು ಬಸ್ ಸ್ಟೇಷನ್‌ನಿಂದ ಬರುವಷ್ಟರಲ್ಲಿ ಅವಳು ಹೊಂದಿಕೊಂಡಿದ್ದಳು. ಅಲರ್ಜಿಗೆ ಹಸಿ ಈರುಳ್ಳಿ ಒಳ್ಳೆಯದು ಎಂದು ಅಲ್ಲಿ ನಾಟಿ ವೈದ್ಯ ಮಾಡಿದರು. ಅವಳು ಮೊದಮೊದಲು ಬೇಡ ಎಂದವಳು ಅದು ಒಳ್ಳೆಯದೆಂಬ ವಿಷಯ ಮನದಟ್ಟಾದ ಮೇಲೆ ತಿಂದಳು. ಅಂದು ರಾತ್ರಿ ಚೆನ್ನಾಗಿ ನಿದ್ದೆ ಮಾಡಿದಳು.
ಆ ಮನೆಯೊಡತಿ ಪ್ರತಿಶನಿವಾರ ದೇವಸ್ಥಾನಕ್ಕೆ ಹೋಗುವವರಂತೆ. ಬೆಳಗ್ಗೆ ದೇವಸ್ಥಾನಕ್ಕೆ ಡ್ರಾಪ್ ಕೊಡು ಎಂದು ಕೇಳಿದ್ದರು. ಬೆಳಗ್ಗೆ ಅವರದು ನಿಧಾನ ಆಯಿತು. ಅಷ್ಟೊತ್ತಿಗೆ ಅಮೃತಳೂ ಎದ್ದಳು. ಬಹುಪಾಲು ಊತ ಹೋಗಿತ್ತು. ಗುಳ್ಳೆಗಳು ಮಾತ್ರ ಇದ್ದವು. ನಾನೂ ದೇವಸ್ಥಾನಕ್ಕೆ ಬರುತ್ತೇನೆ ಎಂದಳು. ನಾನು ಮುಖ ತೊಳೆದುಕೊಂಡು ಅವಳಿಗೆ ಸ್ನಾನ ಮಾಡಿಸಿ ಲಂಗ ಮತ್ತು ರವಿಕೆ ಹಾಕಿದೆ. 2011ರ ಮೊದಲ ದಿನ ಆ ಸಾಂಪ್ರದಾಯಿಕ ಉಡುಗೆಯಲ್ಲಿ ಬಹಳ ಮುದ್ದಾಗಿ ಕಂಡಳು. ಒಟ್ಟು ಐದು ಹೆಂಗಸರನ್ನು ಕಾರಿನಲ್ಲಿ ಕೂರಿಸಿಕೊಂಡು ತಿಪಟೂರಿನ ಉಪ-ಕಾರಾಗೃಹದ ಮುಂದಿರುವ ದೇವಸ್ಥಾನಕ್ಕೆ ಕರೆದುಕೊಂಡು ಹೋದೆ. ಅಲ್ಲಿ ಅಮೃತಳ ಹಲವಾರು ಫೋಟೊ ತೆಗೆದೆ. ಅವರು ಪೂಜೆಗೆ ಹೋದಾಗ ನಾನು ಹತ್ತಿರದಲ್ಲೇ ಇದ್ದ ಸಂತೆಯನ್ನು ನೋಡಿಕೊಂಡು ಬಂದೆ. ದೊಡ್ದವರು ಸಂತೆಗೆ ಹೋದಾಗ ಅಮೃತ ಮತ್ತವಳ ನಾಲ್ಕನೆ ತರಗತಿಯ ಸ್ನೇಹಿತೆ ಅಮಿತಳಿಗೆ ಬಾದಾಮಿ ಹಾಲು ಕುಡಿಸಿದೆ. ಮನೆಗೆ ಬರುವಾಗ ದಾರಿಯಲ್ಲಿ ಅಮಿತಳ ಮನೆಗೆ ಹೋದ ಅಮೃತ ಅಲ್ಲಿಯೇ ಒಂದಷ್ಟು ತಿಂದುಕೊಂಡು ಆಡಿಕೊಂಡು ಬಂದಳು. ನಾನು ಸಿರಪ್ ಮತ್ತು ಮಾತ್ರೆ ಕೊಟ್ಟು ಇನ್ನೊಮ್ಮೆ ಸ್ಕಿನ್ ಕ್ರೀಮ್ ಹಚ್ಚಿದೆ.
ಮಧ್ಯಾಹ್ನ ಹನ್ನೆರಡಕ್ಕೆ ತಿಪಟೂರಿನಿಂದ ಅಲ್ಲಿಯೇ ಇದ್ದ ನನ್ನ ಚಿಕ್ಕಮ್ಮನ ಮಗನನ್ನು ಕೂರಿಸಿಕೊಂಡು ಬೆಂಗಳೂರಿಗೆ ಹೊರಟೆವು. ಹಿಂದಿನ ದಿನವೇ ಊರಿಗೆ ಹೋಗೋಣ ಎನ್ನುವ ಸಮಯದಲ್ಲಿ ಹೋಮ್ ಸ್ವೀಟ್ ಹೋಮ್ ಅಲ್ಲವಾ ಅಪ್ಪಾ ಅಂದಿದ್ದಳು ಅಮೃತ. ಹಾಗೆನ್ನುತ್ತಲೇ ನನಗೆ ಸೋಮವಾರದ ತನಕ ಶಾಲೆಯಿಲ್ಲ, ಭಾನುವಾರ ಮನೆಗೆ ಹೋಗೋಣ ಎಂದಿದ್ದಳು. ಎಲ್ಲೇ ಇರಲಿ, ಓದಲು ಪುಸ್ತಕ, ಪ್ರೀತಿಯಿಂದ ಮಾತನಾಡಿಸುವ ಜನ, ಆಗಾಗ ಆಡಲು ಸ್ನೇಹಿತರು ಇದ್ದರೆ ಇರುವ ಜಾಗದಲ್ಲೇ ಸಂತೋಷ ಕಾಣುವವಳು ಅವಳು. ಸಂಜೆ ಮೂರಕ್ಕೆ ಬೊಮ್ಮಸಂದ್ರ ತಲುಪಿದೆವು. ಬಂದ ತಕ್ಷಣ ಅವಳ ಒಂದು ವರ್ಷದ ತಮ್ಮ ಅಮೋಘನೊಂದಿಗೆ ಆಡಲು ಓಡಿದಳು. ಅವನನ್ನು ಅಪ್ಪಿ ಮುದ್ದಾಡಿದಳು. ಅಮ್ಮನಿಗೆ ಮುತ್ತುಕೊಟ್ಟಳು. ಚಿಕ್ಕಕ್ಕ ಮನೆಯಲ್ಲಿರಲಿಲ್ಲ.
ಹಲವಾರು ಕಾರಣಗಳಿಗೆ ಈ ಪ್ರವಾಸ ನನಗೆ ಮುಖ್ಯ. ಈ 1900 ಕಿ.ಮೀ.ಗಳ ಪ್ರವಾಸದುದ್ದಕ್ಕೂ ನಾನು ಹಲವಾರು ವಿಷಯಗಳನ್ನು ಕಲಿಯುತ್ತ ನೋಡುತ್ತ ಹೋದೆ. ಅವೆಲ್ಲ ಮನಸ್ಸಿನಾಳದಲ್ಲಿ ಇವೆ. ಪೃಥ್ವಿ ಅನೇಕ ವಿಷಯಗಳ ಬಗ್ಗೆ ವಿಸ್ತಾರವಾಗಿ ತಿಳಿಸುತ್ತಿದ್ದರು. ಚರ್ಚಿಸುತ್ತಿದ್ದೆವು. ಚಂಬೆ ತಮಾಷೆ ಮಾಡುತ್ತಲೆ ವಾಸ್ತವದ ಪರಿಚಯ ಮಾಡಿಕೊಡುತ್ತಿದ್ದರು. ಭೇಟಿಯಾದ ಅನೇಕ ಜನ ಮತ್ತು ಅವರೊಡನೆಯ ಮಾತು, ದಾರಿಯಲ್ಲಿನ ನಿಸರ್ಗ, ಕಂಡ ಜನ, ಇವೆಲ್ಲದರಿಂದ ಕಲಿತದ್ದು ನನ್ನ ಮುಂದಿನ ದಿನಗಳನ್ನು ಮತ್ತು ನನ್ನ ತೀರ್ಮಾನಗಳನ್ನು ತೀರ್ಮಾನಿಸಲಿವೆ.
ಮತ್ತೆ, ಅಮೃತಳ ಉಪಸ್ಥಿತಿ. ಐಫೋನಿನಲ್ಲಿ ಅವಳ ಫೋಟೊ ತೆಗೆಯುವುದು, ಅದರಲ್ಲಿ ಉತ್ತಮವಾದದ್ದನ್ನು ಕೂಡಲೆ ಐಫೋನ್ app ಮೂಲಕ ಫೇಸ್‌ಬುಕ್‌ಗೆ ಹಾಕುವುದು ಬಹುಶಃ ಹುಮ್ಮಸ್ಸಿನಿಂದ ಮಾಡಿದ ಇನ್ನೊಂದು ಕೆಲಸ.
ಉತ್ತರ ಕರ್ನಾಟಕದ ಬಗ್ಗೆ ಇಲ್ಲೊಂದು ಟಿಪ್ಪಣಿ. ಹಿಂದೆ ನೋಡದ ರಾಯಚೂರು ಮತ್ತು ಬೀದರ್ ಜಿಲ್ಲೆಗಳನ್ನು ಈ ಸಾರಿ ನೋಡಿದೆ. ಉತ್ತರ ಕರ್ನಾಟಕದ ಬಡತನ ನಿಸರ್ಗ ನಿರ್ಮಿತವಲ್ಲ. ಅದು ಮನುಷ್ಯ ನಿರ್ಮಿತ. ನನ್ನ ಪ್ರಕಾರ ಪಾಳೆಯಗಾರಿಕೆ ಸಂಸ್ಕೃತಿ, ನೆಲ ಮತ್ತು ಜಲದ ಅಸಮಾನ ಹಂಚಿಕೆ, ಸಮುದಾಯದ ಅಜ್ಞಾನ, ಸ್ವಹಿತಾಸಕ್ತಿಯ ರಾಜಕಾರಣಿ ಮತ್ತು ಅಧಿಕಾರಿವರ್ಗ, ಇವೇ ಅಲ್ಲಿನ ಬಡತನ ಮತ್ತು ಹಿಂದುಳಿದಿರುವಿಕೆಗೆ ಕಾರಣ. ಭೂಹೀನರಿಗೆ ಭೂಹಂಚಿಕೆ, ಪಂಚಾಯತ್ ವ್ಯವಸ್ಥೆಯಲ್ಲಿನ ಸುಧಾರಣೆಗಳು ಮತ್ತು ನಾಗರಿಕ ಹಕ್ಕುಗಳ ರಕ್ಷಣೆ, ಮತ್ತು ವೈಜ್ಞಾನಿಕ ನೆಲೆಯಲ್ಲಿ ಜನಜಾಗೃತಿ ಮತ್ತು ತಿಳಿವಳಿಕೆ, ಇವು ಈ ಪ್ರದೇಶದ ಸುಧಾರಣೆಗೆ ಕರ್ನಾಟಕ ಮತ್ತು ಭಾರತ ಸರ್ಕಾರ ಮಾಡಬೇಕಾದ, ಜನರು ಒತ್ತಾಯಿಸಬೇಕಾದ ಕೆಲಸಗಳು.
[ಫೇಸ್‌ಬುಕ್‌ನಲ್ಲಿರುವ ಈ ಪ್ರವಾಸದ ಅಮೃತಳ ಫೋಟೊ ಆಲ್ಬಮ್]