Sep 24, 2007

ಏನನ್ನೂ ಕಲಿಸದ ಕನ್ನಡ ಚಿತ್ರಗಳು...


ನಮ್ಮಲ್ಲಿ ವ್ಯಕ್ತಿಪೂಜೆ, ವ್ಯಕ್ತಿ‌ಆರಾಧನೆ ಯಾವ ಮಟ್ಟಕ್ಕೆ ಮುಟ್ಟಿದೆ ಅಂದರೆ ಅದು ಜನರ ಪ್ರಬುದ್ಧತೆಯನ್ನೆ ಹೊಸಕಿ ಹಾಕುತ್ತಿದೆ. ಮನರಂಜನೆಯ ಹೆಸರಿನಲ್ಲಿ ಜನರ ಚಿಂತನಶಕ್ತಿಯನ್ನು, ಬೌದ್ಧಿಕ ಪ್ರಗತಿಯನ್ನು ಅಣಕಿಸುತ್ತಿದೆ. ನನಗೆ ಯಾರೂ ಒಳ್ಳೆಯ ಪಾತ್ರ ಕೊಡುತ್ತಿಲ್ಲ, ಎನ್ನುವ ವಿಷ್ಣುವರ್ಧನ್‌ರಂತಹ ಪ್ರತಿಭಾಶಾಲಿ, ಕನ್ನಡದ ಈಗಿನ ನಂಬರ್ ಒನ್ ನಟ ಅಪರೂಪಕ್ಕೊಮ್ಮೆ ಸಿಕ್ಕಿದ ಪಾತ್ರದಲ್ಲಿ ತಮ್ಮ ಇಮೇಜು, ಇಸಮುಗಳನ್ನೆಲ್ಲ ಬಿಟ್ಟು ನಟಿಸಲಾಗಲಿಲ್ಲ ಅಂದರೆ ಅದು ಯಾರ ದೌರ್ಭ್ಯಾಗ್ಯ, ಯಾರ ದೌರ್ಬಲ್ಯ? ದೆಹಲಿಯಲ್ಲಿ ಶಾರುಖ್ ಯಾವುದೆ ಮೇಕಪ್ ಇಲ್ಲದೆ, ಹೀರೋಯಿನ್ ಇಲ್ಲದೆ, ಬಣ್ಣಗೆಟ್ಟ ಮನೆಯತ್ತ ಸ್ಕೂಟರ್ ತಳ್ಳುತ್ತ ನಟಿಸುತ್ತಿರುವಾಗ ನಮ್ಮಲ್ಲಿನ ಹಿರಿಯರಿಗೆ ರೈತನ ಪಾತ್ರದಲ್ಲೂ ಸೆಕ್ಸಿಯಾಗಿ ಕಾಣುವ ಹಂಬಲ!

ಇಡೀ "ಮಾತಾಡ್ ಮಾತಾಡು ಮಲ್ಲಿಗೆ"ಯ ಚಿತ್ರತಂಡದಲ್ಲಿಯ ಯಾರೊಬ್ಬರಿಗೂ "ಕರ್ನಾಟಕದ ಯಾವೊಬ್ಬ ರೈತನ ನಡೆ-ನುಡಿ-ವೇಷ-ಭೂಷಣಗಳು ಈ ರೀತಿಯಾಗಿ ಇರುವುದಿಲ್ಲ," ಎಂದು ಹೇಳುವ ಕಾಮನ್ ಸೆನ್ಸ್ ಆಗಲಿ ಧೈರ್ಯವಾಗಲಿ ಇಲ್ಲದೆ ಹೋಗಿಬಿಡುವುದು ಒಂದು ನಾಡಿನ ಜನರ ಸ್ವತಂತ್ರ ಮನೋಭಾವದ, ಪ್ರಬುದ್ಧತೆಯ ಉದಾಹರಣೆಯೂ ಆಗಬಹುದು. ಇದು ಕೇವಲ ಕರ್ನಾಟಕಕ್ಕೆ ಮಾತ್ರ ಅಂಟಿರುವ ರೋಗವಲ್ಲ. ಕನ್ನಡದ "ಅಪ್ತಮಿತ್ರ" ಎಂಬ ರಿಮೇಕ್ ಚಿತ್ರವೊಂದರ ರಿಮೇಕ್ ಆದ ತಮಿಳಿನ "ಚಂದ್ರಮುಖಿ" ಚಿತ್ರದಲ್ಲಿ ಹೆಣ್ಣೊಬ್ಬಳ ಮಾನಸಿಕ ಕಾಯಿಲೆ ಗುಣಪಡಿಸಲು ವೈದ್ಯನೊಬ್ಬ ಸಾಯಬೇಕು ಎಂದು ಕಣ್ಣೀರು ಸುರಿಸುವ ರಜನಿಕಾಂತ್ ತಮಿಳರ ಸಾಂಸ್ಕೃತಿಕ ನಾಯಕನಾಗಿ ಎಷ್ಟರ ಮಟ್ಟಿಗೆ ಪ್ರಬುದ್ಧತೆ ಮತ್ತು ಬದ್ಧತೆ ತೋರಿಸುತ್ತಿದ್ದಾರೆ? ತೆಲುಗಿನ ನಂಬರ್ ಒನ್ ನಟ ಚಿರಂಜೀವಿ ತಮ್ಮ ರಾಜಕೀಯ ಪ್ರವೇಶಕ್ಕೆ ಮುಹೂರ್ತ ಇಡುವುದರ ಬಗ್ಗೆ ಚರ್ಚೆ ಮಾಡಲು ಅಮೇರಿಕ ಪ್ರವಾಸದಲ್ಲಿ ತೊಡಗಿದ್ದರು ಎಂದು ಇತ್ತೀಚೆಗೆ ತಾನೆ ಕೆಲವು ತೆಲುಗು ಪತ್ರಿಕೆಗಳು ಹೇಳುತ್ತಿದ್ದವು. ಇಂಗ್ಲಿಷೇ ಬರದ ಹಳ್ಳಿಗನೊಬ್ಬ ಖಳನಾಯಕನನ್ನು ಹುಡುಕಿಕೊಂಡು ಅಮೇರಿಕಕ್ಕೆ ಬಂದು ಇಲ್ಲಿ ತನ್ನ ಸಾಹಸ, ಶೌರ್ಯ, ಪರಾಕ್ರಮ ಮೆರೆಸುವುದನ್ನು ಹೇಳುವ "ಜೈ ಚಿರಂಜೀವ" ಎಂಬ ಬಂಡಲ್ ಸಿನೆಮಾದಲ್ಲಿ ಎರಡು ವರ್ಷದ ಹಿಂದೆ ತಾನೆ ನಟಿಸಿರುವ ಇವರು ಯಾವ ಮಟ್ಟದಲ್ಲಿ ಜನರ ಬೌದ್ಧಿಕ ಪ್ರಗತಿಯನ್ನು ಮೇಲೆತ್ತಬಲ್ಲರು? ಏಳೂವರೆ ಕೋಟಿ ಜನಸಂಖ್ಯೆಯ ಆಂಧ್ರಕ್ಕೆ ಯಾವ ತರಹದ ಜನನಾಯಕರಾಗಬಲ್ಲರು?

ಈ ಸೂಪರ್‌ಸ್ಟಾರ್‌ಗಳಲ್ಲಿ ಕೆಲವರು ಈಗಾಗಲೆ ಕನ್ಯಾದಾನ ಮಾಡಿರುವ ಅಪ್ಪಂದಿರು; ಕೆಲವರು ತಾತಂದಿರು. ಆದರೂ ಅವರಿಗೆ ತಮ್ಮ ಮಗಳ ವಯಸ್ಸಿನ ಹಿರೋಯಿನ್‌ಗಳೆ ಬೇಕು. ತಮ್ಮ ಬೋಳು ತಲೆ ಮುಚ್ಚಿಕೊಳ್ಳಲು ಪೇಟ ಕಟ್ಟುತ್ತಾರೆ! ಬಿಳಿಯ ಕೂದಲು ಕಾಣಿಸದಂತೆ ಮೆಹಂದಿ ಹಚ್ಚುತ್ತಾರೆ. ಯಾಕೆ ಇವರು Graceful ಆಗಿ ಹಿರಿಯರಾಗುವುದಿಲ್ಲ? ರಾಜ್‌ಕುಮಾರ್ ತಮ್ಮ ಆದರ್ಶ ಎನ್ನುವ ಇವರಿಗೆ ಅಣ್ಣಾವ್ರ ಬೋಳುತಲೆ ಮತ್ತು ಸಹಜವಾಗಿ ಮುದುಕರಾದ ಅವರ ಪ್ರಬುದ್ಧತೆ ಕಾಣುವುದಿಲ್ಲವೇಕೆ?

ನಿಜಕ್ಕೂ ನಮ್ಮಲ್ಲಿ ಏನಾಗುತ್ತಿದೆ? ಅಂತರ್ಜಾತಿ ಪ್ರೇಮದ ಕತೆ ಹೇಳುವ ಜ್ಞಾನಪೀಠ ಪ್ರಶಸ್ತಿ ವಿಜೇತ ಗುಜರಾತಿ ಸಾಹಿತ್ಯಕೃತಿಯನ್ನು "ಜನುಮದ ಜೋಡಿ" ಸಿನೆಮಾ ಮಾಡುವ ನಾಗಾಭರಣ ಉದಯ ಟೀವಿಯಲ್ಲಿ ದೆವ್ವಭೂತಗಳ, ನಾಗರಹಾವಿನ ಮಹಿಮೆಯ, ಮೂಢಾತಿಮೂಢ ನಂಬಿಕೆ ಬೆಳೆಸುವ ಅವೈಚಾರಿಕ ಧಾರಾವಾಹಿ ಮಾಡುತ್ತಾರೆ. ಚಾರಿತ್ರಿಕ ಹಿನ್ನೆಲೆಯಲ್ಲಿ ಉತ್ತಮ ಎನ್ನಬಹುದಾದ ಕಾಲ್ಪನಿಕ ಕತೆಯೊಂದರಲ್ಲಿ ಕೇವಲ ಪ್ರಚಾರಕ್ಕೋಸ್ಕರ "ಕಲ್ಲರಳಿ ಹೂವಾಗಿ"ಯಲ್ಲಿ ಅಂಬರೀಷರನ್ನು "ಮದಕರಿ ನಾಯಕ" ಮಾಡುತ್ತಾರೆ. ಶುಭಮಂಗಳ ಚಿತ್ರದಲ್ಲಿ ಮೂಗನಾಗಿ ಅತಿಸಹಜವಾಗಿ ನಟಿಸಿರುವ, ಆದರೆ ಈ ಮಧ್ಯೆ ನಟನೆಯ ಅ‌ಆ‌ಇ‌ಈಯನ್ನೆ ಮರೆತಿರುವ ಅಂಬರೀಷ್ ತಮ್ಮ ಈಗಿನ ರೂಪಕ್ಕೆ, ಗಾತ್ರಕ್ಕೆ ನಾಲಾಯಕ್ ಆದ ಪಾತ್ರ ಮಾಡಿ, ಕ್ಲೈಮಾಕ್ಸ್‌ನಲ್ಲಿ "ಕಂದ, ನಾನು ಬರುವುದು ತಡವಾಯಿತೆ," ಎಂಬ ಒಂದೆ ಒಂದು ನಾಟಕದ ಡೈಲಾಗ್‌ನಿಂದಾಗಿ ಥಿಯೇಟರ್‌ನಲ್ಲಿಯ ಜನ ಸಹಾನುಭೂತಿಯಿಂದ ನಗುವಂತೆ ಮಾಡುತ್ತಾರಲ್ಲ, ಯಾಕೆ?

"ತಮಗೆ ಯಾರೂ ಒಳ್ಳೆಯ ಪಾತ್ರ ಕೊಡುತ್ತಿಲ್ಲ," ಎನ್ನುವ ಹಿರಿಯ ನಟ ವಿಷ್ಣುವರ್ಧನ್ ತಮಗೆ ಬೇಕಾದ ಪಾತ್ರದಲ್ಲಿ ನಟಿಸಲು ತಾವೆ ಚಿತ್ರ ನಿರ್ಮಿಸುವ ಯುವಕ ಸುದೀಪ್‌ರ ಉದಾಹರಣೆಯನ್ನು ಗಮನಿಸಬೇಕು. ತಮ್ಮ ಇಮೇಜು ಬದಿಗಿಟ್ಟು, ವಯಸ್ಸಿಗೆ ಸೂಕ್ತವಾದ ಪಾತ್ರ ಇರುವ ಚಿತ್ರವನ್ನು ಅವರೆ ನಿರ್ಮಿಸಬೇಕು. ಆದರೆ ಅವರು ಇಂತಹ ಪ್ರಯತ್ನ ಮಾಡುವುದು ಅಸಾಧ್ಯ ಅನ್ನಿಸುತ್ತದೆ. "ಮಾತಾಡ್ ಮಾತಾಡು ಮಲ್ಲಿಗೆ" ಬಿಡುಗಡೆಯಾಗುವುದಕ್ಕೆ ಮೊದಲು, "ರೈತರು ಚಳವಳಿ ಮಾಡಿದರೆ ಬೇಕಾದರೆ ನಾನು ಮುಂದಾಳತ್ವ ವಹಿಸುತ್ತೇನೆ," ಎಂದಿದ್ದ ಅವರು ಕಳೆದ ವಾರ ತಾನೆ "ನಾವು ಅಲ್ಲಿಗೆ ಹೋಗಿ ಏನು ಮಾಡುವುದು. ನಾವು ದೊಡ್ಡ ಫೇಲ್ಯೂರ್‌ಗಳು. ನಮ್ಮ ಚಿತ್ರರಂಗದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೇ ನಮ್ಮಿಂದ ಸಾಧ್ಯವಾಗುತ್ತಿಲ್ಲ," ಎಂದಿದ್ದಾರೆ. ಈ ಬಾಯುಪಚಾರದ ಮಾತುಗಳ ಹಿನ್ನೆಲೆಯಲ್ಲಿ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಅವಾಸ್ತವ ಎನ್ನಿಸುವುದಿಲ್ಲವೆ?

"ಚಿಗುರಿದ ಕನಸು" ಕಮರ್ಷಿಯಲ್ ಆಗಿ ಸೋತ ಮಾತ್ರಕ್ಕೆ ಒಳ್ಳೆಯ ಸಾಮಾಜಿಕ ಸಿನೆಮಾಗಳಿಗೆ ಅಣ್ಣಾವ್ರ ಕುಟುಂಬವೂ ತಿಲಾಂಜಲಿ ಇತ್ತಂತಿದೆ. ರಿಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದಿರುವ ಶಿವರಾಜ್ ಕುಮಾರ್ ಆಗಾಗ ಕೆಲವು ಪ್ರಯೋಗಶೀಲ ನಿರ್ದೇಶಕರನ್ನು ಪ್ರೋತ್ಸಾಹಿಸುವುದು ನಿಜವಾದರೂ, ಅವರ ಇತ್ತೀಚಿನ ಅನೇಕ ಚಿತ್ರಗಳು ಇತರರಿಗಿಂತ ಭಿನ್ನವಾಗೇನೂ ಇಲ್ಲ. ಕೃತಕ ಎನ್ನಿಸುವ ಕತೆಗಳ, ಗಂಡನೆ ಸರ್ವಸ್ವ ಎನ್ನುವಂತಹ ಭಾವಪ್ರಧಾನ ಚಿತ್ರಗಳಿಗೆ ಹೆಚ್ಚಿನ ಶೆಲ್ಫ್‌ಲೈಫ್ ಇಲ್ಲ ಎನ್ನುವುದನ್ನು ಅವರು ಅರಿಯಬೇಕು.

ಶಂಕರ್‌ನಾಗ್‌ರ ತರುವಾಯ ಅವರ ರೀತಿ ಯೋಚಿಸುವ ಮಹತ್ವಾಕಾಂಕ್ಷಿ, ಪ್ರಯೋಗಶೀಲ, ಬುದ್ಧಿಜೀವಿ, ಕ್ರಿಯಾಶೀಲ ನಟರು ಬರದೆ ಹೋಗಿದ್ದು ಕನ್ನಡ ಚಿತ್ರರಂಗದ ಈಗಿನ ದುರಂತಕ್ಕೆ ಸ್ವಲ್ಪ ಮಟ್ಟಿಗೆ ಕಾರಣವೂ ಹೌದು. ಅಪರಿಚಿತ ಎಂಬ ಸಹಜವಾದ, ಅತ್ಯುತ್ತಮ ಚಿತ್ರ ಮಾಡುವ ಕಾಶಿನಾಥ್ ಈಗ ನಗೆಪಾಟಲಿಗೆ ಪರ್ಯಾಯ ಪದ ಆಗಿಹೋಗಿದ್ದಾರೆ. ಒಳ್ಳೆಯ ಕಮರ್ಷಿಯಲ್ ಚಿತ್ರ ಮಾಡುವ ತಾಕತ್ತಿರುವ ಉಪೇಂದ್ರ ಪ್ರತಿಭಾವಂತ ಮಾತ್ರವಲ್ಲದೆ ಇಮೇಜನ್ನು ಬದಿಗಿಟ್ಟು ನಟಿಸಬಲ್ಲ ಹಾಗೂ ರಿಸ್ಕ್ ತೆಗೆದುಕೊಳ್ಳಬಲ್ಲ ಧೈರ್ಯವಂತ ಸಹ. ಆದರೂ ರಿಮೇಕ್ ಚಿತ್ರಗಳ ಶಾರ್ಟ್‌ಕಟ್ ಮತ್ತು ದಿಢೀರ್ ಸಕ್ಸೆಸ್‌ನ ಹಂಬಲ ಅವರಿಗೆ.

ಇಂತಹ ಒಳ್ಳೊಳ್ಳೆಯ ನಿರ್ದೇಶಕರೆಲ್ಲ ಹೀರೋ ಆಗಿ ಮಿಂಚಬೇಕೆಂಬ ಹಂಬಲದಿಂದಾಗಿ ಇವತ್ತು ಕನ್ನಡದಲ್ಲಿ ಪ್ರತಿಭಾವಂತ ನಿರ್ದೇಶಕರ ಕೊರತೆ ಇದೆ. ಅಷ್ಟೇ ಅಲ್ಲ, ನಟರ ಕೊರತೆಯೂ ಇದೆ. ಮದಕರಿ ನಾಯಕನ ಪಾತ್ರಕ್ಕೆ ಅಂಬರೀಷರೆ ಬೇಕಾಗಿರುವುದು ಇದನ್ನೆ ಅಲ್ಲವೆ ಸಾರುವುದು? ಆಗಾಗ ಅಲ್ಲೊಂದು ಚಿತ್ರ ಇಲ್ಲೊಂದು ಚಿತ್ರ ಸಕ್ಸೆಸ್ ಕಾಣುತ್ತಿದ್ದರೂ ಒಟ್ಟಿನಲ್ಲಿ <>ಪ್ರತಿಭಾವಂತ ನಟ, ನಿರ್ದೇಶಕ, ತಂತ್ರಜ್ಞರ ಕೊರತೆಯಲ್ಲಿ ಕನ್ನಡ ಚಿತ್ರರಂಗವಿದೆ. ಹಾಗೆಯೆ, ಒಳ್ಳೆಯ ಚಿತ್ರಕ್ಕಾಗಿ ದುಡ್ಡು ಕಳೆದುಕೊಳ್ಳಲೂ ಸಿದ್ಧವಿರುವ ಬುದ್ಧಿಜೀವಿ ಶ್ರೀಮಂತರ ಕೊರತೆಯಂತೂ ಇದ್ದೇ ಇದೆ. ಎಲ್ಲಿಯವರೆಗೂ ಇವೆರಡರ ಕೊರತೆ ನೀಗುವುದಿಲ್ಲವೊ ಅಲ್ಲಿಯವರೆಗೂ ನಮ್ಮ ಸಿನೆಮಾಗಳು ಸಮಾಜವನ್ನು ಪ್ರತಿಬಿಂಬಿಸುವುದಿಲ್ಲ; Human Spirit ಅನ್ನು Elevate ಮಾಡುವುದಿಲ್ಲ. ಚೀಪ್ ಮನರಂಜನೆಯ ಹೊರತಾಗಿ ರಾಜ್‌ಕುಮಾರೋತ್ತರ ಸಿನೆಮಾಗಳಿಂದ ಕಲಿಯುವುದು ಏನೇನೂ ಇರುವುದಿಲ್ಲ.




ರಿಚ್‌ಮಂಡ್ ಎನ್ನುವುದು ಸಿಲಿಕಾನ್ ಕಣಿವೆಗೆ ಸುಮಾರು ಐವತ್ತು ಮೈಲಿ ದೂರದ, ಸ್ಯಾನ್ ಫ್ರಾನ್ಸಿಸ್ಕೋಗೆ ಬಹಳ ಹತ್ತಿರದ ಪಟ್ಟಣ. ಈ ಪಟ್ಟಣದ ಜನಸಂಖ್ಯೆ ಸುಮಾರು ಒಂದು ಲಕ್ಷ. ಅದರಲ್ಲಿ ಬಿಳಿಯರು ಕೇವಲ ಶೇ.21 ರಷ್ಟಿದ್ದರೆ, ಕರಿಯರು ಶೇ.36 ರಷ್ಟಿದ್ದಾರೆ. ಹಾಗಾಗಿ ಈ ಪಟ್ಟಣದಲ್ಲಿ ಕರಿಯರದೇ ಹೆಚ್ಚುಗಾರಿಕೆ. ಈ ಪಟ್ಟಣದ ರಿಚ್‌ಮಂಡ್ ಹೈಸ್ಕೂಲ್‌ಗೆ ಬರುವವರಲ್ಲಿ ಬಡತನದ ಹಿನ್ನೆಲೆಯ ಕರಿಯ ವಿದ್ಯಾರ್ಥಿಗಳೆ ಹೆಚ್ಚು. ಕೆನ್ ಕಾರ್ಟರ್ ಎಂಬ ಕಪ್ಪು ಮನುಷ್ಯ ಇದೇ ಶಾಲೆಯ ಹಳೆಯ ವಿದ್ಯಾರ್ಥಿ. ಆತನಿಗೆ ಕ್ರೀಡಾಸಾಮಗ್ರಿಗಳ ಸ್ವಂತ ಅಂಗಡಿ ಇರುತ್ತದೆ. ನೆರೆಹೊರೆಯವರಿಗೆ ಹೋಲಿಸಿದರೆ ಆತ ಸ್ಥಿತಿವಂತನೆ. ಅಷ್ಟಿದ್ದರೂ ಜುಜುಬಿ ಸಂಬಳಕ್ಕೆ ತನ್ನ ಹಳೆಯ ಹೈಸ್ಕೂಲಿನ ಬ್ಯಾಸ್ಕೆಟ್‌ಬಾಲ್ ಆಟಗಾರರನ್ನು ಕೋಚ್ ಮಾಡುವ ಪಾರ್ಟ್‌ಟೈಮ್ ಕೆಲಸವನ್ನು ಒಪ್ಪಿಕೊಳ್ಳುತ್ತಾನೆ.

ನಮ್ಮಲ್ಲಿ ಹೈಸ್ಕೂಲ್ ಎಂದರೆ ಎಂಟರಿಂದ ಹತ್ತನೆ ತರಗತಿಯ ತನಕ. ಆದರೆ ಈ ದೇಶದಲ್ಲಿ ಹೈಸ್ಕೂಲ್ ಅಂದರೆ 9 ರಿಂದ 12 ನೆ ತರಗತಿಯ ತನಕ. ನಮ್ಮಲ್ಲಿ 12 ನೆ ತರಗತಿಯ ಪಿಯುಸಿ (ಅದರಲ್ಲೂ ವಿಶೇಷವಾಗಿ ವಿಜ್ಞಾನ) ಹೇಗೆ ಮುಂದಿನ ಕಾಲೇಜು ಓದಿಗೆ ನಿರ್ಣಾಯಕವೊ ಅದೇ ರೀತಿ ಇಲ್ಲಿಯೂ 12 ನೆ ತರಗತಿಯಲ್ಲಿನ ಗ್ರೇಡುಗಳು ಕಾಲೇಜಿಗೆ ಸೇರಿಕೊಳ್ಳಲು ಬಹಳ ನಿರ್ಣಾಯಕ. ಅ ಶಾಲೆಯ ಬ್ಯಾಸ್ಕೆಟ್‌ಬಾಲ್ ಆಟಗಾರರು ಅತ್ಯುತ್ತಮ ಆಟಗಾರರು. ಒಂದು ರೀತಿಯಲ್ಲಿ ಸೋಲನ್ನೆ ಕಾಣದವರು. ಹಾಗಾಗಿಯೆ ಅಹಂಕಾರಿಗಳು ಸಹ. ಇತರರನ್ನು ಕೇವಲವಾಗಿ ಕಾಣುವ, ಓದಿನ ಬಗ್ಗೆ ಕೇರ್ ಮಾಡದ, ಸ್ವರತಿಯಲ್ಲಿ ಮುಳುಗಿ ಹೋದವರು. ಇಂತಹವರನ್ನು ಆ ವರ್ಷದ ಅಂತರ್‌ಶಾಲಾ ಟೂರ್ನ್‌ಮೆಂಟ್‌ಗೆ ಕೋಚ್ ಮಾಡಲು ಕಾರ್ಟರ್ ಬರುತ್ತಾನೆ. ಈಗಿನ ಹುಡುಗರ ಉಡಾಫೆ ಮತ್ತು ಈಗಿನ ಯಶಸ್ಸೆ ಯಾವಾಗಲೂ ಶಾಶ್ವತ ಎಂದುಕೊಂಡ ಅಜ್ಞಾನ, ಹಾಗೂ ಓದಿನ ಬಗೆಗಿನ ದಿವ್ಯ ನಿರ್ಲಕ್ಷ್ಯ ಆತನಿಗೆ 30 ವರ್ಷಗಳ ಹಿಂದಿನ ತನ್ನ ಹೈಸ್ಕೂಲ್ ಸ್ನೇಹಿತರನ್ನು ನೆನಪಿಸುತ್ತದೆ. ಆಗಲೂ ಬ್ಯಾಸ್ಕೆಟ್‌ಬಾಲ್ ಹುಡುಗರು ಹೀಗೆಯೆ. ಆಟಕ್ಕೆ ಮಾತ್ರ ಗಮನ; ಓದಿಗೆ ನಮಸ್ಕಾರ! ತಾವು ಇತರರಿಗಿಂತ ಮೇಲಿನವರು ಎಂದುಕೊಂಡಿದ್ದವರು. ಆದರೆ ಹೈಸ್ಕೂಲಿನ ನಂತರ ಕಾಲೇಜಿಗೆ ಹೋಗಲಾಗದ ಎಷ್ಟೋ ಹುಡುಗರು ಗೂಂಡಾಗಿರಿ, ಕಳ್ಳತನ, ಕಾನೂನುವಿರೋಧಿ ಕೆಲಸಗಳಲ್ಲಿ ತೊಡಗಿಕೊಂಡು ಜೈಲು ಕಂಡಿರುತ್ತಾರೆ. ಕೆಲವರು ಇತರೆ ರೌಡಿಗಳಿಂದ ಕೊಲೆಯೂ ಆಗಿರುತ್ತಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಈಗಿನ ಆಟಗಾರರ ಮಾರ್ಕ್ಸ್ ನೋಡುವ ಕಾರ್ಟರ್, ಅವರು ಉತ್ತಮ ಅಂಕಗಳನ್ನು ತೆಗೆದುಕೊಳ್ಳುವ ತನಕ ಪ್ರಾಕ್ಟಿಸ್ಸೂ ಇಲ್ಲ, ಆಟವೂ ಇಲ್ಲ ಎಂದು ನಿರ್ಬಂಧಿಸುತ್ತಾನೆ. ಇದು ಆಗಿದ್ದು 1999 ರಲ್ಲಿ. ಆತ ಹೀಗೆ ಮಾಡಿದ್ದನ್ನು ನೋಡಿ ಊರಿನವರು, ಪೊಷಕರು ಮತ್ತು ಮಿಕ್ಕ ಅಧ್ಯಾಪಕರು ತಿರುಗಿ ಬೀಳುತ್ತಾರೆ. ತಮ್ಮ ಅಭಿಪ್ರಾಯವನ್ನು ಮತಕ್ಕೆ ಹಾಕಿ ಬ್ಯಾಸ್ಕೆಟ್ಬಾಲ್ ಕೋರ್ಟಿನ ಲಾಕ್‌ಔಟ್ ಅನ್ನು ಕೊನೆಗೊಳಿಸುತ್ತಾರೆ. ಇದನ್ನು ಸಹಿಸದ ಕಾರ್ಟರ್ ಅದೇ ಸಭೆಯಲ್ಲಿ ರಾಜಿನಾಮೆ ಘೋಷಿಸುತ್ತಾನೆ. ಆದರೆ ತನ್ನ ಸಾಮಾನುಗಳನ್ನು ತೆಗೆದುಕೊಳ್ಳಲು ಬ್ಯಾಸ್ಕೆಟ್‌ಬಾಲ್ ಕೋರ್ಟಿಗೆ ಬರುವ ಕಾರ್ಟರ್‌ಗೆ ಅಲ್ಲಿ ಕಾಣಿಸಿದ್ದು ಖುಷಿಯಿಂದ ಆಡುತ್ತಿರುವ ಆಟಗಾರರಲ್ಲ; ಬದಲಿಗೆ ಕೈಯಲ್ಲಿ ಪುಸ್ತಕ ಪೆನ್ನು ಹಿಡಿದು ಓದುತ್ತಿರುವ ವಿದ್ಯಾರ್ಥಿಗಳು. ಕಾರ್ಟರ್ ಮತ್ತೆ ಕೋಚ್ ಮಾಡಲು ನಿರ್ಧರಿಸುತ್ತಾನೆ. ಆ ತಂಡ ರಾಜ್ಯ ಮಟ್ಟದ ಚಾಂಪಿಯನ್‌ಶಿಪ್ ಫೈನಲ್‌ಗೂ ಹೋಗುತ್ತದೆ. ಪಂದ್ಯ ಕೊನೆಗೊಳ್ಳಲು ಒಂದೆರಡು ಸೆಕೆಂಡ್ ಮಾತ್ರ ಇರುವಾಗ ಅವರ ತಂಡ ಒಂದು ಪಾಯಿಂಟ್‌ಗಿಂತ ಮುಂದೆ ಇರುತ್ತದೆ. ಆದರೆ ಅವರ ವಿರೋಧಿ ತಂಡ ಅಂತಿಮ ಸೆಕೆಂಡಿನಲ್ಲಿ ಮೂರು ಪಾಯಿಂಟ್ ಸ್ಕೋರ್ ಮಾಡಿ ಗೆಲುವು ಸಾಧಿಸುತ್ತದೆ.

ಆದರೆ ಜೀವನ ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ಆಟಕ್ಕಿಂತ ಜೀವನ ಮುಖ್ಯ. ಅದೇ ಕಾರ್ಟರ್‌ನ ಫಿಲಾಸಫಿ. ರಿಚ್‌ಮಂಡ್ ಶಾಲೆಯ ಇತಿಹಾಸದಲ್ಲಿ ಪ್ರತಿವರ್ಷವೂ ಕೇವಲ ಶೇ.3 ರಷ್ಟು ವಿದ್ಯಾರ್ಥಿಗಳು ಮಾತ್ರ ಕಾಲೇಜು ಮೆಟ್ಟಲು ಹತ್ತುತ್ತಿರುತ್ತಾರೆ. ಆದರೆ, ಆ ವರ್ಷ ಹತ್ತು ಜನರ ಬ್ಯಾಸ್ಕೆಟ್‌ಬಾಲ್ ತಂಡವೊಂದರಿಂದಲೆ ಆರು ಜನ ಕಾಲೇಜು ಮೆಟ್ಟಲು ಹತ್ತುತ್ತಾರೆ! ಕೋಚ್ ಕಾರ್ಟರ್‌ನ ಮಾರ್ಗದರ್ಶನದಲ್ಲಿ ಬ್ಯಾಸ್ಕೆಟ್‌ಬಾಲ್ ಆಟಗಾರರು ವಿದ್ಯಾರ್ಥಿಗಳಾಗಿ ಮಾರ್ಪಡುತ್ತಾರೆ; ಹುಡುಗರು ಪ್ರಬುದ್ಧ ಗಂಡಸರಾಗುತ್ತಾರೆ.

ಈ ನಿಜಜೀವನದ ಘಟನೆಯನ್ನು 2005 ರಲ್ಲಿ ಬಿಡುಗಡೆಯಾದ ಕೋಚ್ ಕಾರ್ಟರ್ ಸಿನೆಮಾ ಸಾಕಷ್ಟು ವಸ್ತುನಿಷ್ಠವಾಗಿ ಅನಾವರಣಗೊಳಿಸುತ್ತದೆ. ರೌಡಿಸಮ್, ರೇಸಿಸಮ್, ಬಡತನ, ದಾರಿ ತಪ್ಪಿದ ಹುಡುಗರು, ದಾರಿ ತೋರದ ದೊಡ್ಡವರು, ಹದಿಹರಯದವರ ಸಮಸ್ಯೆಗಳು, ಕೆಲವು ಸಾಮಾಜಿಕ ಸಮಸ್ಯೆಗಳು; ಹೀಗೆ ಹತ್ತಾರು ಸಮಸ್ಯೆಗಳನ್ನು, ಆಯಾಮಗಳನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ. ಕಾರ್ಟರ್ ಆಗಿ ಸ್ಯಾಮುಯೆಲ್ ಜಾಕ್ಸನ್‌ನ ನಟನೆ ಬಹಳ ಸಹಜವಾಗಿದೆ. ಚಿತ್ರ ನೋಡುಗರ ಊumಚಿಟಿ Sಠಿiಡಿiಣ ಅನ್ನು ನಿಜಕ್ಕೂ ಮೇಲಕ್ಕೇರಿಸುತ್ತದೆ.


ನಮ್ಮಲ್ಲಿ ಪ್ರತಿಯೊಂದು ಜಾತಿಯ ಬಗ್ಗೆಯೂ ಕೆಲವು ಜೀವವಿರೋಧಿ ಆಡುಮಾತುಗಳಿವೆ. ಆ ಬಣ್ಣವಿರುವ ಆ ಜಾತಿಯವನನ್ನು ನಂಬಬೇಡ, ಈ ಬಣ್ಣವಿರುವ ಈ ಜಾತಿಯವನನ್ನು ನಂಬಬೇಡ ಎನ್ನುವಂತಹುದರಿಂದ ಹಿಡಿದು, ಈ ಜಾತಿಯವರೆಲ್ಲ ಹೀಗೆಯೆ, ಆ ಜಾತಿಯವರೆಲ್ಲ ಹೀಗೆಯೆ, ಆ ಮತದವರೆಲ್ಲ ದೇಶದ್ರೋಹಿಗಳು, ಇವರೆಲ್ಲ ಕೀಳು ಜನ, ಎಂಬಂತಹ ಜಾತಿಗೆ ಗುಣ-ಅವಗುಣದ ಮೊಳೆ ಹೊಡೆದ ಸಂಕುಚಿತ ಮಾತುಗಳು ಅವು. ಮಗು ಹುಟ್ಟುವುದಕ್ಕಿಂತ ಮೊದಲೆ ಅದರ ಗುಣಗಳನ್ನು ಅದರ ಅಪ್ಪಅಮ್ಮನ ಜಾತಿ ನಿರ್ಧರಿಸಿಬಿಡುತ್ತದೆ!

ಇದು ಯೂರೋಪಿನಲ್ಲಿಯೂ ಕಡಿಮೆ ಇರಲಿಲ್ಲ ಹಿಟ್ಲರ್‌ನ "ಮೈನ್ ಕೆಂಪ್" ಪುಸ್ತಕದ ತುಂಬೆಲ್ಲ ಯಹೂದಿಗಳ ಬಗೆಗಿನ ದ್ವೇಷ, ಅಸಹನೆ, ಪೂರ್ವಾಗ್ರಹಪೀಡಿತ ದೃಷ್ಟಿಕೋನವೆ ಕಾಣುತ್ತದೆ. ಯೂರೋಪಿಯನ್ ಕ್ರಿಶ್ಚಿಯನ್ನರ ಪ್ರಕಾರ ಯಹೂದಿಗಳೆಂದರೆ ನಂಬಿಕೆಗೆ ಅನರ್ಹರು; ಏಸುವಿಗೇ ಮೋಸ ಮಾಡಿದವರು; "ದೇವರು ಆಯ್ಕೆ ಮಾಡಿದ" ಜನ ಎಂಬ ಅಹಂಕಾರದಿಂದ ಮೆರೆಯುವವರು; ವ್ಯಾಪಾರಿ ಬುದ್ಧಿಯವರು; ಶೋಷಕರು; ಹೀಗೆ ಕೆಟ್ಟ ಅಭಿಪ್ರಾಯಗಳೆ ಜಾಸ್ತಿ. ಎರಡನೆ ಮಹಾಯುದ್ಧದ ಸಮಯದಲ್ಲಿ ಹಿಟ್ಲರ್ ಸುಮಾರು 60 ಲಕ್ಷ ಯಹೂದಿಗಳ ಮಾರಣಹೋಮ ಮಾಡಿದರೂ, ಯಹೂದಿಗಳ ಮೇಲಿನ ಸ್ಟೀರಿಯೊಟೈಪಿಕ್ ಭಾವನೆ ಪಾಶ್ಚಾತ್ಯ ಜಗತ್ತಿನಲ್ಲಿ ಈಗಲೂ ಬದಲಾದ ಹಾಗೆ ಕಾಣುವುದಿಲ್ಲ. ನನ್ನ ಹಳೆಯ ಸಹೋದ್ಯೋಗಿ ಒಬ್ಬ ಬಿಳಿಯ ಕ್ರಿಶ್ಚಿಯನ್. ಆತ ಮತಾಂಧನಂತೂ ಅಲ್ಲವೆ ಅಲ್ಲ. ಸಾಕಷ್ಟು ಉದಾರ ದೃಷ್ಟಿಕೋನ ಇರುವವನು. ಎರಡು ವರ್ಷದ ಹಿಂದೆ ಭಾರತೀಯ ಫಾರ್ಸಿಯೊಬ್ಬಳನ್ನು ಮದುವೆಯಾಗಿದ್ದಾನೆ. ಇಷ್ಟೆಲ್ಲ ಇದ್ದರೂ ಆತ ಯಹೂದಿಯೊಬ್ಬನ ಬಗ್ಗೆ ನನಗೊಂದು ಮಾತು ಹೇಳಿದ್ದ: "ಅವನೊಬ್ಬ ಯಹೂದಿ. ಅವರನ್ನು ನಾನು ನಂಬುವುದಿಲ್ಲ. ಅಪಾಯಕಾರಿ, ನಂಬಿಕೆಗೆ ಅನರ್ಹ ಜನ."

ಅದು 1920 ರ ಬ್ರಿಟನ್. ಕ್ರಿಶ್ಚಿಯನ್ನರೆ ಹೆಚ್ಚಿರುವ ಆ ದೇಶದಲ್ಲಿ ಲಿಥುವೇನಿಯಾದ ಯಹೂದಿಯೊಬ್ಬ ವ್ಯಾಪಾರ ವಹಿವಾಟಿನಿಂದ ಶ್ರೀಮಂತನಾಗಿರುತ್ತಾನೆ. ಆತನ ಎರಡು ಮಕ್ಕಳಲ್ಲಿ ಹೆರಾಲ್ಡ್ ಅಬ್ರಹಾಮ್ಸ್ ಒಬ್ಬ. ಅಬ್ರಹಾಮ್ಸ್ ಎನ್ನುವುದು ಯಹೂದಿಗಳು ಮಾತ್ರ ಇಟ್ಟುಕೊಳ್ಳುವ ಹೆಸರು. ಯಹೂದಿಗಳೆಂದರೆ ಹೊರನೋಟಕ್ಕೇ ತಾರತಮ್ಯ ತೋರಿಸುತ್ತಿದ್ದ ಆ ಸಮಯದಲ್ಲಿ ಹೆರಾಲ್ಡ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಸೇರುತ್ತಾನೆ. ತನ್ನ ಮಿಕ್ಕ ಕ್ರಿಶ್ಚಿಯನ್ ಸಹಪಾಠಿಗಳ ಮಧ್ಯೆ ತನಗೊಂದು ಸ್ಥಾನ ಪಡೆದುಕೊಳ್ಳಲು, ಯಹೂದಿಗಳೆಂದರೆ ಎರಡನೆ ದರ್ಜೆಯ ಮನುಷ್ಯರಂತೆ ನೋಡುವ ಬ್ರಿಟಿಷರ ನಡುವೆ ಗೌರವ ಸಂಪಾದಿಸಲು, ತನ್ನ ಇಂಗ್ಲಿಷ್‌ಮನ್‌ನೆಸ್ ಮತ್ತು ಬ್ರಿಟನ್‌ಗೆಡೆಯ ದೇಶಭಕ್ತಿಯನ್ನು ಅಡಿಗಡಿಗೆ ಸಾಬೀತು ಮಾಡುವ ಕರ್ಮವನ್ನು ತೊಳೆದುಕೊಳ್ಳಲು 1924 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೂರು ಮೀಟರ್ ಓಟದಲ್ಲಿ ಪಾಲ್ಗೊಳ್ಳಲು ನಿರ್ಧರಿಸುತ್ತಾನೆ. ಅದಕ್ಕಾಗಿ ಮತ್ತೊಬ್ಬ "ಪರಕೀಯ," ಲಂಡನ್‌ನಲ್ಲಿ ಹುಟ್ಟಿದ ಆದರೆ ಅರಬ್ ಮತ್ತು ಇಟಾಲಿಯನ್ ಮೂಲದ ಸ್ಯಾಮ್ ಮುಸ್ಸಾಬಿನಿ ಎಂಬ ಕೋಚಿನ ಸಹಾಯ ಪಡೆಯುತ್ತಾನೆ.

ಒಲಿಂಪಿಕ್ಸ್‌ನಲ್ಲಿ ಹೆರಾಲ್ಡ್‌ಗೆ ಸಹಸ್ಪರ್ಧಿಯಾಗಿ ಮತ್ತೊಬ್ಬ ಬ್ರಿಟನ್ ಇರುತ್ತಾನೆ. ಆತ "ಹಾರುವ ಸ್ಕಾಟ್ಸ್‌ಮನ್" ಎರಿಕ್ ಲಿಡ್ಲ್. ಸ್ಕಾಟಿಷ್ ಮೂಲದ ಆತ ಚೀನಾದಲ್ಲಿ ಹುಟ್ಟಿದವನು. ಆದರೆ ದೇವರ ಕಾರ್ಯದಲ್ಲಿ ತೊಡಗಿಕೊಂಡ ಮಿಷನರಿ ಯುವಕ. ತಾನು ಓಡುವುದರಿಂದ ದೇವರಿಗೆ ಖುಷಿಯಾಗುತ್ತದೆ, ಅದಕ್ಕಾಗಿಯೆ ಓಡುತ್ತೇನೆ ಎಂದುಕೊಂಡ ದೈವಭಕ್ತ. ಭಾನುವಾರ ಸಬ್ಬತ್ ದಿನ, ಅಂದು ದೇವರ ಪ್ರಾರ್ಥನೆಯಲ್ಲಿ ಮಾತ್ರ ಕಾಲ ಕಳೆಯಬೇಕು, ಮಿಕ್ಕೆಲ್ಲ ಕೆಲಸಗಳೂ ಅಂದು ವರ್ಜಿತ ಎನ್ನುವ ಕಟ್ಟರ್ ಆಸ್ತಿಕ. 1924 ರ ಒಲಿಂಪಿಕ್ಸ್‌ನಲ್ಲಿ 100 ಮೀಟರ್ಸ್ ಓಟದ ಪ್ರಾರಂಭಿಕ ಓಟ ಭಾನುವಾರ ಆಗಿ ಬಿಡುತ್ತದೆ. ತನ್ನ ನಂಬಿಕೆ ಮತ್ತು ಸಿದ್ಧಾಂತಗಳನ್ನು ಸ್ವಲ್ಪವೂ ಬದಲಿಸಿಕೊಳ್ಳಲು ಇಚ್ಚಿಸದ ಈತ 100 ಮೀಟರ್ ಓಟವನ್ನು ಬಿಟ್ಟು 400 ಮೀಟರ್ ಓಟಕ್ಕೆ ಸಿದ್ದವಾಗುತ್ತಾನೆ.

ಆ ಒಲಿಂಪಿಕ್ಸ್‌ನಲಿ ಫೇವರೈಟ್‌ಗಳು ಮಾತ್ರ ಅಮೇರಿಕನ್ನರು. ಅಷ್ಟಿದ್ದರೂ ಹೆರಾಲ್ಡ್ ಅಬ್ರಹಾಮ್ಸ್ 100 ಮೀಟರ್ ಓಟದಲ್ಲಿ ಚಿನ್ನದ ಪದಕ ಪಡೆಯುತ್ತಾನೆ. ಎರಿಕ್ ಲಿಡ್ಲ್ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಪಡೆಯುತ್ತಾನೆ. ಎಲ್ಲಾ ಪ್ರತಿರೋಧಗಳ ನಡುವೆ ತಮ್ಮ ಆಸ್ತಿತ್ವ, ಐಡೆಂಟಿಟಿ, ಯೋಗ್ಯತೆ, ನಂಬಿಕೆಗಳನ್ನು ಸಾಬೀತು ಮಾಡುವ ಆ ಇಬ್ಬರು ಯುವಕರ ನಿಜಜೀವನದ ಕತೆಯನ್ನು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಬ್ರಿಟನ್ನಿನ ರಾಜಕಾರಣಿಯೊಬ್ಬ 1981 ರಲ್ಲಿ "Chariots of Fire" ಎಂಬ ಹೆಸರಿನಲ್ಲಿ ನಿರ್ಮಿಸುತ್ತಾನೆ. ಒಟ್ಟು ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಪಡೆಯುವ ಆ ಚಿತ್ರ, ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನೂ ಪಡೆಯುತ್ತದೆ.


ಚಲನಚಿತ್ರಗಳು ಮನರಂಜನೆ ದೃಷ್ಟಿಯಿಂದ ಮಾತ್ರವಲ್ಲ ಸಮಾಜಶಿಕ್ಷಣದ ದೃಷ್ಟಿಯಿಂದಲೂ ಬಹಳ ಪ್ರಬಲವಾದ ಮಾಧ್ಯಮ. ಸಿನೆಮಾ ಎನ್ನುವುದು ಕಪೋಲಕಲ್ಪಿತ, ಪೌರಾಣಿಕ, ಕಾಲ್ಪನಿಕ ಪ್ರಪಂಚದ ಕತೆಯಾಗಿದ್ದಾಗ ಅದನ್ನು ಸಂಪೂರ್ಣ ಮನರಂಜನೆ ಎಂದು ಭಾವಿಸಬಹುದು. ಆದರೆ ಹಾಲಿವುಡ್‌ನ ಬಹುಪಾಲು ಅತ್ಯುತ್ತಮ ಚಿತ್ರಗಳಂತೂ ಸಮಾಜವನ್ನು ಹಾಗೆಯೆ ನೈಜವಾಗಿ ಪ್ರತಿಬಿಂಬಿಸುತ್ತವೆ. ನೋಡುಗರಿಗೆ ಸಮಾಜಶಿಕ್ಷಣವನ್ನೂ ನೀಡುತ್ತವೆ. ನಿಜಜೀವನದ ಕತೆಗಳ ಆಧಾರದ ಮೇಲೆ ಬಂದಿರುವ ಚಿತ್ರಗಳಿಗಂತೂ ಅಲ್ಲಿ ಲೆಕ್ಕವೇ ಇಲ್ಲ. ಕೇವಲ ಕ್ರೀಡೆಗೆ ಸಂಬಂಧಿಸಿದ ನೈಜಘಟನೆಗಳ ಆಧಾರದ ಮೇಲೆ ಬಂದಿರುವ ಚಿತ್ರಗಳೇ ಅನೇಕವಿವೆ. "ಚಾರಿಯಟ್ಸ್ ಆಫ್ ಫೈರ್," "ಕೋಚ್ ಕಾರ್ಟರ್" ಮಾತ್ರವಲ್ಲದೆ, ಕರಿಯರನ್ನು ಬಿಳಿಯರನ್ನು ಒಟ್ಟಾಗಿಸುವ 'Remember the Titans,' ಬಡ‌ಊರಿನ ಕಪ್ಪು-ಬಿಳಿಯ ಶಾಲಾಹುಡುಗರ ತಂಡ ರಾಜ್ಯಮಟ್ಟದ ಫೈನಲ್ ತಲುಪುವ 'Friday Night Lights,' ಇತ್ತೀಚಿನ ಯಶಸ್ವಿ ನಟ ಟಾಮ್ ಕ್ರೂಸ್ ನಿರ್ಮಿಸಿದ 'Without Limits,' ನ್ಯೂಜಿಲ್ಯಾಂಡ್‌ನ 67 ವರ್ಷದ ಬಡಮುದುಕ ಅಮೇರಿಕದಲ್ಲಿ ತನ್ನ ಇಂಡಿಯನ್ ಬೈಕ್ ಓಡಿಸಿ ಅನೇಕ ದಾಖಲೆಗಳನ್ನು ನಿರ್ಮಿಸುವ 'A World's Fastest Indian,' ಹೆಂಗಸರ ಬೇಸ್‌ಬಾಲ್ ಇತಿಹಾಸದ ಹಲವಾರು ನೈಜಘಟನೆಗಳನ್ನು ಹೆಣೆದು ನಿರ್ಮಿಸಿರುವ ಮಡೊನ್ನ ನಟಿಸಿರುವ 'The League of Their Own,' ಬೇಸ್‌ಬಾಲ್ ಆಟದ ಸ್ಫೂರ್ತಿದಾಯಕ ಕತೆಗಳಲ್ಲೊಂದಾದ 35 ವರ್ಷದ "ಮುದಿ"ಶಾಲಾಮಾಸ್ತರನೊಬ್ಬ ಮೇಜರ್ ಲೀಗ್‌ಗೆ ಆಡುವ 'The Rookie,' ಬಾಕ್ಸರ್‌ಗಳ ಏಳುಬೀಳಿನ ಕತೆ ಹೇಳುವ ‘Raging Bull,’ ‘The Hurricane,’ ‘Ali,’ ‘Million Dollar Baby,’ ‘Cinderella Man,’; ಆರ್ಥಿಕ ಮುಗ್ಗಟ್ಟಿನ ಸಮಯದಲ್ಲಿ ಇಡೀ ದೇಶ ಕುಳ್ಳಗಿನ ಕುದುರೆಯೊಂದರ ಗೆಲುವಿನಲ್ಲಿ ಜೀವನಾಸಕ್ತಿಯನ್ನು, ಸ್ಫೂರ್ತಿಯನ್ನೂ ಕಂಡುಕೊಳ್ಳುವ 'Seabiscuit,' ಇತ್ಯಾದಿ. ಈ ನೈಜಘಟನೆಗಳ ಬಹುಪಾಲು ಚಿತ್ರಗಳು ಮಾನವ ಚೈತನ್ಯವನ್ನು ಉದ್ಧೀಪನಗೊಳಿಸುವ ಚಿತ್ರಗಳು. ಜೀವನದಲ್ಲಿ ಅನೇಕ ಬಾರಿ ಸಿಗುವ ಎರಡನೆ ಅವಕಾಶದ ಬಗ್ಗೆ ಹೇಳುವ ಆಶಾವಾದಿ ಚಿತ್ರಗಳು. ನಮ್ಮ ಸುತ್ತಮುತ್ತಲ ಪರಿಸರಿದಲ್ಲಿಯೆ ಸಿಗುವ ಅನೇಕ ಲೋಕಲ್ ಹೀರೋಗಳ ಕತೆಗಳು.

ಸಾಹಿತ್ಯ ಮತ್ತು ಕಲೆಯ ಮೂಲಭೂತ ಗುಣವೆ ಮನುಷ್ಯನನ್ನು ಮೇಲ್ಮಟ್ಟದ ಮಾನಸಿಕ ಸ್ತರಕ್ಕೆ ಏರಿಸುವುದು. ವಾಸ್ತವ ಜಗತ್ತಿನ ಚಿತ್ರ ಕೊಡುವುದರ ಜೊತೆಜೊತೆಗೆ ಆಶಾವಾದವನ್ನು, ನೈತಿಕತೆಯನ್ನು ಜನರಲ್ಲಿ ತುಂಬುವುದು. ಹಾಲಿವುಡ್‌ನ ನೂರಾರು ಚಿತ್ರಗಳು ಅದನ್ನು ಪ್ರಾಮಾಣಿಕವಾಗಿ ಮಾಡುತ್ತವೆ.
ಇದರ ಹಿನ್ನೆಲೆಯಲ್ಲಿ ವರ್ಷಕ್ಕೆ ಸುಮಾರು ಸಾವಿರ ಚಿತ್ರಗಳ ರೀಲುಸುತ್ತುವ ಭಾರತೀಯ ಸಿನೆಮಾಗಳನ್ನು ಇಟ್ಟುಕೊಂಡು ನೋಡಿ. ಪ್ರೀತಿಪ್ರೇಮದ ಹಿನ್ನೆಲೆ ಇಲ್ಲದ, ಅನಗತ್ಯವಾಗಿ sentimental exploitation ಮಾಡದ, ನಿಜಜೀವನದ ಘಟನೆಗಳ ಆಧಾರದ ಮೇಲೆ ನಿರ್ಮಿಸಿರುವ, ಜೀವನಪ್ರೀತಿಯನ್ನು ಉಕ್ಕಿಸುವ ಯಾವುದಾದರೂ ಒಂದು ಉತ್ತಮ ಚಲನಚಿತ್ರ ನೋಡಿದ ನೆನಪು ನಿಮಗಿದೆಯೆ, "ಚಕ್ ದೆ ಇಂಡಿಯಾ" ದ ಹೊರತಾಗಿ?

ಚಲನಚಿತ್ರ ಏಕವ್ಯಕ್ತಿಯ ಸೃಷ್ಟಿಯಲ್ಲ. "ಚಕ್ ದೆ ಇಂಡಿಯಾ" ದಂತಹ ಉತ್ತಮ ಚಿತ್ರ ಬರಬೇಕಾದರೆ ಪ್ರತಿಭೆ ಮತ್ತು ಹಣ ಎರಡೂ ಇರಬೇಕು. ಇಂತಹ ಸಬ್ಜೆಕ್ಟ್ ಆರಿಸಿಕೊಳ್ಳುವುದಕ್ಕೆ ಧೈರ್ಯವೂ ಬೇಕು, ಬದ್ಧತೆಯೂ ಬೇಕು. ಹೆಣ್ಣುಮಕ್ಕಳ ಸಮಸ್ಯೆ, ಭಾರತದಲ್ಲಿನ ಒಬ್ಬ ಮುಸಲ್ಮಾನ ತನ್ನ ದೇಶಪ್ರೇಮವನ್ನು ಅಡಿಗಡಿಗೆ ಸಾಬೀತು ಮಾಡಬೇಕಾದ ಹೀನಾಯ ರೇಸಿಸಂ, ಭಾಷೆ ಮತ್ತು ರಾಜ್ಯದ ಬಗ್ಗೆ ಯೋಚಿಸುವ ದೇಶದಲ್ಲಿ ರಾಷ್ಟ್ರೀಯತೆಯ ಪ್ರಜ್ಞೆಯ ಅಭಾವ, ಇತ್ಯಾದಿಗಳನ್ನು ಗಂಭೀರವಾಗಿ ವಿಶ್ಲೇಷಿಸುವ ಬುದ್ಧಿಮಟ್ಟವೂ ಇರಬೇಕು. ಭಾರತದ ಸದ್ಯದ ಅತಿಜನಪ್ರಿಯ ನಟನಾದ ಶಾರುಖ್ ಖಾನ್‌ನಂತಹ ನಟ ಯಾವುದೆ ಇಮೇಜಿಗೆ ಒಳಪಡದೆ ತನ್ನನ್ನೆ ತಾನು ಅಂಡರ್‌ಪ್ಲೆ ಮಾಡಿಕೊಳ್ಳುತ್ತ ನಟಿಸುವ ಮನಸ್ಸು ಮತ್ತು ಪ್ರತಿಭೆ ಇರಬೇಕು. ಇಷ್ಟೆಲ್ಲ ಇರುವುದರಿಂದಲೆ "ಚಕ್ ದೆ ಇಂಡಿಯಾ" ಭಾರತೀಯ ಚಿತ್ರರಂಗದಲ್ಲಿ ಮೈಲುಗಲ್ಲಾಗಿಯಂತೂ ನಿಲ್ಲುತ್ತದೆ. ಅರೆಬರೆ, ಅಪ್ರಬುದ್ಧ, ಕೃತಕ ಸಿನೆಮಾಗಳನ್ನೆ ಹೆಚ್ಚಿಗೆ ತಯಾರಿಸುವ ಭಾರತೀಯ ಚಿತ್ರರಂಗದಲ್ಲಿ ನಿಜಜೀವನವನ್ನು ಬಿಂಬಿಸುವ ಯಶಸ್ವಿ ಚಿತ್ರಗಳ ನಿರ್ಮಾಣಕ್ಕೆ ಈ ಚಿತ್ರ ದೊಡ್ಡ ಮಟ್ಟದಲ್ಲಿ ಬುನಾದಿ ಹಾಕಿದೆ ಅಂತಲೆ ಹೇಳಬೇಕು.

ಸಾರ್ವಕಾಲಿಕ ಮೌಲ್ಯಗಳ ಬಗ್ಗೆ ಹೇಳುವ ಚಿತ್ರಕ್ಕೂ, ಒಂದು ಉತ್ತಮ ಪಠ್ಯಪುಸ್ತಕಕ್ಕೂ ಅಷ್ಟೇನೂ ವ್ಯತ್ಯಾಸವಿಲ್ಲ. ಉತ್ತಮ ಸಿನೆಮಾ ನಿರ್ಮಾಣ ಬದ್ಧತೆಯುಳ್ಳವರ ಸಮಾಜಸೇವೆಯೂ ಆಗಬಹುದು. ಆ ದೃಷ್ಟಿಯಲ್ಲಿ ಕರ್ನಾಟಕದ ಮಟ್ಟಿಗೆ ಹೇಳಬಹುದಾದರೆ ಒಂದು ಒಳ್ಳೆಯ ಚಿತ್ರಕ್ಕಾಗಿ ದುಡ್ಡು ಹಾಕಿ ಕಳೆದುಕೊಳ್ಳಲೂ ಸಿದ್ಧವಿರುವ ಶ್ರೀಮಂತರ ಕೊರತೆ ಬಹಳಷ್ಟಿದೆ. ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಶ್ರೀಮಂತರ ಕೊರತೆ ಇಲ್ಲ. ಆದರೆ ಇವರಲ್ಲಿ ಬಹಳಷ್ಟು ಜನರಿಗೆ ಅಭಿರುಚಿಯೂ ಇಲ್ಲ, ಪ್ರಬುದ್ಧತೆಯೂ ಇಲ್ಲ, ಸಾಮಾಜಿಕ ಬದ್ಧತೆಯೂ ಇಲ್ಲ. ಕೇವಲ ಮುವ್ವತ್ತು ವರ್ಷಗಳ ಹಿಂದೆ ಕೆ.ವಿ.ಸುಬ್ಬಣ್ಣ ಎಂಬ ಶ್ರೀಮಂತ ಅನೇಕ ಬರಹಗಾರರಿಗೆ ಸಹಾಯ ಮಾಡಿದ್ದನ್ನು, ತನ್ನ ಹಳ್ಳಿಯಲ್ಲಿ ನೀನಾಸಂ ಎಂಬ ಸಾಂಸ್ಕೃತಿಕ ಸಂಸ್ಥೆ ಹುಟ್ಟುಹಾಕಿದ್ದನ್ನು ಕಾಣುವ ನಾವು ಇತ್ತೀಚಿನ ದಿನಗಳಲ್ಲಿ ಆ ರೀತಿ ಮಣ್ಣಿಗೆ ಮರಳುವ ಛಾತಿ ಇರುವ ಯಾವೊಬ್ಬ ಆಗರ್ಭ ಶ್ರೀಮಂತರನ್ನೂ ಕಾಣುತ್ತಿಲ್ಲ. ಸ್ವಪ್ರಯತ್ನದಿಂದ ಶ್ರೀಮಂತರಾದವರು ತಮ್ಮ ಶ್ರೀಮಂತಿಕೆಯ ಅಲ್ಪ ಭಾಗವನ್ನೂ ಈ ತರಹದ ಕೆಲಸಗಳಿಗೆ ಕಳೆದುಕೊಳ್ಳಲು ತಯಾರಾಗುವುದನ್ನು ನೋಡುತ್ತಿಲ್ಲ. ಈಗಿನ ಎರಡನೆ ತಲೆಮಾರಿನ ಶ್ರೀಮಂತರಿಗಂತೂ ದೇಶೀಯತೆಯ ಪರಿಚಯವೇ ಇಲ್ಲವೇನೊ!

ಯಾವುದರಲ್ಲೂ ದುಡ್ಡು ಕಳೆದುಕೊಳ್ಳಬಾರದು ಎನ್ನುವ ಮನಸ್ಥಿತಿಯಲ್ಲಿ ಸಮಾಜ ಇದ್ದುಬಿಟ್ಟರೆ ದುಡ್ಡೂ ಒಂದು ಮುಖ್ಯ ಅಂಶವಾದ ಕೆಲವು ಉತ್ತಮ ಕೃತಿ-ಕಾರ್ಯಗಳು ಬರಲು ಬಹಳ ದಿನ ಕಾಯಬೇಕು. ನಾಡಿನ ಬಡತನ ಕೇವಲ ಊಟತಿಂಡಿಯ ಬಡತನದಲ್ಲಿ ಮಾತ್ರವಿಲ್ಲ. ಜನರ ಅಪ್ರಬುದ್ಧತೆ, Inferior ಕೆಲಸಗಳು, ತುಚ್ಚ ಗುಣಮಟ್ಟದ ಪತ್ರಿಕೆ, ಸಿನೆಮಾ, ಟಿವಿ; ಕೀಳು ಯೋಚನೆಗಳು, ಕೀಳು ಯೋಜನೆಗಳು; ಇವೆಲ್ಲವೂ ನಾಡಿನ ಬಡತನದ, ಹಿಂದುಳಿದಿರುವಿಕೆಯ ಸಂಕೇತಗಳೆ. ಎಲ್ಲಿಯವರೆಗೆ ನಮ್ಮಲ್ಲಿನ ಶ್ರೀಮಂತರು ಇವನ್ನು ಯೋಚಿಸುವುದಿಲ್ಲವೊ ಅಲ್ಲಿಯವರೆಗೂ ನಾಡು ಕೆಲವೊಂದು ದಾರಿದ್ರ್ಯದಲ್ಲಿ ನಲಗುತ್ತದೆ. ಸ್ವಾಭಿಮಾನ, ಸ್ವಂತಿಕೆ ಇಲ್ಲದ ಶ್ರೀಮಂತರು ತೇಜಸ್ವಿಯವರು ಹೇಳುವ ಹೊಸತೊಂದು ಕಾಫಿ ಸಂಸ್ಕೃತಿಯ ಹಿಂದೆ ಬಿದ್ದು ನಾಡಿಗೆ ಅವಮಾನ ಮಾಡುತ್ತಿರುತ್ತಾರೆ:

"(ಚಿಕ್ಕಮಗಳೂರು ಜಿಲ್ಲೆಯ) ಇಲ್ಲಿಯ ಜನರಿಗೆ ಇರೋದು ಕಾಫಿ ಸಂಸ್ಕೃತಿ. ತಮ್ಮ ಮಕ್ಕಳಿಗೆ ಸೂಟು ಬೂಟು ಹಾಕೋದನ್ನು ಕಲಿಸೋದಕ್ಕೆ ಸ್ಟೈಲಿಷ್ ಇಂಗ್ಲಿಷ್ ಮಾತಾಡಿಸೋದಕ್ಕೆ ಈ ಪ್ಲಾಂಟರುಗಳು ಎಷ್ಟು ಹಣ ಸುರೀತಾರೆ ನನಗೆ ಗೊತ್ತು. ಫೋರ್ಕು ಚಾಕು ಇಟ್ಟುಕೊಂಡು ಊಟದ ಸರ್ಕಸ್ ಮಾಡೋದಕ್ಕೆ ಎಷ್ಟು ತೊಂದರೆ ತಗೋತಾರೆ ಗೊತ್ತಾ ನಿಮಗೆ? ಇವತ್ತು ಕಾರಿಟ್ಟುಕೊಂಡು ಹ್ಯಾಟ್ ಹಾಕಿಕೊಂಡು ಅಣ್ಣಾತೆ ತರ ಇರದೇ ಇರೋನು ಮನುಷ್ಯನಲ್ಲಾಂತ, ಆನುಕೂಲವಿಲ್ಲದವನು ಇವತ್ತು ತನಗೆ ಕಾರಿಲ್ಲಾಂತ ಕೊರಗುತ್ತಾ ಶ್ರೀಮಂತ ಬಂಧುಗಳ ಕಣ್ಣಿಗೆ ಬೀಳದ ಹಾಗೆ ಕದ್ದು ಬಸ್ಸಿಗೆ ಕಾಯುತ್ತಾ ಕೂರ ಬೇಕಿದೆ. ಇವೆಲ್ಲ ಗೊತ್ತಾಗುತ್ತಾ ಸಾರ್! ಕಾಫಿ ಕಲ್ಚರ್ ಅಂದಿದ್ದು ನಾನು ಇದನ್ನೆ. ಯೂರೋಪಿಯನ್ನರಿಂದ ಕಾಫೀನೂ ಕಾಫಿತೋಟಾನೂ ಇವರಿಗೆ ಸಿಕ್ಕಿದ್ದು. ಅವರು ಕಟ್ಟಿಸಿದ ಕುರ್ಚಿ ಕಕ್ಕಸಿಗೆ ಇವರು ಹೋಗಿ ಅವರ ತರಾನೇ ಇವರೂ ಕಾಗದದ ಸುರುಳೀಲಿ ತಿಕ್ಕಿಕೋತಾರೆ..." - (ಪೂರ್ಣಚಂದ್ರ ತೇಜಸ್ವಿ - ಚಿದಂಬರ ರಹಸ್ಯ)

Sep 12, 2007

ಧರೆಯೆ ಹತ್ತಿ ಉರಿಯುವಾಗ ಎಲ್ಲಿ ಓಡಿ ಹೋಗುವೆ?

(ವಿಕ್ರಾಂತ ಕರ್ನಾಟಕ - ಸೆಪ್ಟೆಂಬರ್ 21, 2007 ರ ಸಂಚಿಕೆಯಲ್ಲಿನ ಬರಹ)

ಭೂತಾಯಿಯ ತಾಪಮಾನ ಏರುತ್ತಿರುವ ವಿಷಯ ಇವತ್ತು ಕೇವಲ ಭವಿಷ್ಯದ ಪೀಳಿಗೆಯ ಬಗ್ಗೆ ಕಾಳಜಿ ಇರುವವರ ಅಥವ ತಾವು ತೆರಳುವಾಗ ತಾವು ಬಂದಾಗ ಹೇಗಿತ್ತೊ ಅದಕ್ಕಿಂತ ಉತ್ತಮವಾದ ಸ್ಥಿತಿಯಲ್ಲಿ ಈ ನಿಸರ್ಗವನ್ನು ಬಿಟ್ಟು ಹೋಗಬೇಕು ಎಂದು ಹಂಬಲಿಸುವ ಸಜ್ಜನರ ಕಾಳಜಿ ಮಾತ್ರವಾಗಿ ಉಳಿದಿಲ್ಲ. ಜಾತಿ, ಮತ, ವರ್ಣ ಶ್ರೇಷ್ಠತೆ ಎಂದೆಲ್ಲ ಸಂಕುಚಿತವಾಗಿ ಕನವರಿಸುವ ಧರ್ಮಲಂಡರೆಲ್ಲ ಈಗ ಪರಿಸರ ಪರಿಸರ ಎಂದು ಕನವರಿಸುವಷ್ಟು ಭೂಮಿ ಬಿಸಿಯಾಗುತ್ತಿದೆ.

ಕನ್ನಡದ ದಿನಪತ್ರಿಕೆಯೊಂದರಲ್ಲಿ ಪರಿಸರದ ಬಗ್ಗೆ ಮತಾಂಧರೊಬ್ಬರು ಬರೆದಿರುವ ಸಾಲುಗಳು ಇವು: "ಇಂದು ಪರಿಸರ ಸಂರಕ್ಷಣೆಯ ಬಗ್ಗೆ ಅನೇಕ ಯೋಜನೆಗಳನ್ನು ಹಾಕಲಾಗುತ್ತಿದೆ. ಇದು ಬರಿಯ ಜನಮೆಚ್ಚುಗೆ ಗಳಿಸುವ ನಾಟಕವಾಗಿದೆಯೇ ಹೊರತು ಕಾರ್ಯ ರೂಪದಲ್ಲಿ ಏನೂ ಆಗುತ್ತಿಲ್ಲ. ಅನೇಕ ಸಾಂಕ್ರಾಮಿಕ ರೋಗಗಳಿಂದ ಜನರು ನರಳುತ್ತಿದ್ದಾರೆ. ಪ್ರಪಂಚದ ತಾಪಮಾನವು ಸತತವಾಗಿ ದಿನೇ ದಿನೇ ಹೆಚ್ಚುತ್ತಿದೆ. ಗಾಳಿ ಮತ್ತು ನೀರು ಕಲುಷಿತವಾಗಿದೆ. ಆದರೂ ಯಾರಿಗೂ ಅದರ ಪರಿವೆಯೇ ಇಲ್ಲವಾಗಿದೆ. ಶಿವಾಜಿಯು ಪರಿಸರದ ಬಗ್ಗೆ ಎಂದೂ ಭಾಷಣವನ್ನಾಗಲೀ ಉಪದೇಶವನ್ನಾಗಲೀ ಮಾಡುವ ಗೋಜಿಗೆ ಹೋಗಲಿಲ್ಲ. ಆದರೆ ಅವನ ಪ್ರತಿಯೊಂದು ನಡೆ ನುಡಿಯೂ ಪರಿಸರದ ರಕ್ಷಣೆಯಲ್ಲಿಯೇ ಮಗ್ನವಾಗಿರುತ್ತಿದ್ದಿತು. ಹೇರಳವಾಗಿ ಮರಗಳನ್ನು ಕಡಿದು ಹಡಗು ನಿರ್ಮಾಣ ಮಾಡಬಹುದಾಗಿದ್ದಿತು. ಆದರೆ ಎಂದೂ ಒಂದು ಮರವನ್ನು ಕಡಿಯುವ ಯೋಚನೆಯನ್ನು ಮಾಡಲಿಲ್ಲ."

ಇಂದಿನ ಗ್ಲೋಬಲ್ ವಾರ್ಮಿಂಗ್‌ಗೆ ಮೂಲ ಕಾರಣ ಎನ್ನಬಹುದಾದದ್ದು ಯೂರೋಪಿನಲ್ಲಿ ಆರಂಭವಾದ ಕೈಗಾರಿಕಾ ಕ್ರಾಂತಿ. ಆದರೆ ಶಿವಾಜಿಯ ಕಾಲದಲ್ಲಿ ಆ ಕ್ರಾಂತಿ ಇನ್ನೂ ಆರಂಭವೇ ಆಗಿರಲಿಲ್ಲ! ಆದರೂ ಶಿವಾಜಿಯನ್ನು ಹೊಗಳುವ ಭರದಲ್ಲಿ ಕೆಲವರು ಶಿವಾಜಿ ಹಡಗು ನಿರ್ಮಾಣ ಮಾಡದೆ ಇದ್ದದ್ದಕ್ಕೆ ಪರಿಸರದ ಬಗ್ಗೆ ಶಿವಾಜಿಗೆ ಇದ್ದ ಕಾಳಜಿಯೇ ಮೂಲಕಾರಣ ಎಂದು ಆರೋಪಿಸುತ್ತಿದ್ದಾರೆ. ಸತ್ಯ ಮತ್ತು ವಾಸ್ತವದ ಬಗ್ಗೆ ಇದನ್ನು ಬರೆದಿರುವವರ ಜ್ಞಾನದ ಮಟ್ಟ ಏನೇ ಇದ್ದರೂ, ಪರಿಸರ ಮಾಲಿನ್ಯ ಎನ್ನುವುದು ಈಗಿನ ಅತಿಮುಖ್ಯ ಸಮಸ್ಯೆ ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಈಗಿನ ಸಮಸ್ಯೆಗೆ ಶಿವಾಜಿಯ ಬಳಿ ಮೂರು ಶತಮಾನದ ಮೊದಲೆ ಉತ್ತರವಿತ್ತು ಎಂದುಬಿಟ್ಟರೆ ಶಿವಾಜಿಗೆ ಚಾರಿತ್ರಿಕ ಅಪಮಾನ ಮಾಡಿದಂತಾಗುವುದಿಲ್ಲ, ಬದಲಿಗೆ ಹೊಗಳಿದಂತಾಗುತ್ತದೆ ಎಂದುಕೊಂಡು ಬಿಟ್ಟಿದ್ದಾರಷ್ಟೆ ಈ ಪುಣ್ಯಾತ್ಮರು. ಅದನ್ನು ಹಾಸ್ಯಪ್ರವೃತ್ತಿಯ ಆ ಪತ್ರಿಕೆಯ ಸುಜ್ಞಾನಿ ಸಂಪಾದಕರು ಪ್ರಕಟಿಸಿಬಿಟ್ಟಿದ್ದಾರೆ!

"ಭೂತಾಪಮಾನದ ಏರಿಕೆಯಿಂದಾಗಿ ಇಡೀ ಮಾನವ ಜಾತಿಯೆ ಇಂದು ಅಪಾಯಕ್ಕೆ ಸಿಲುಕಿದೆ. ಬೃಹತ್ ಕಂಪನಿಗಳ ಕೈಗಾರಿಕೆಗಳು ಹೊರಸೂಸುತ್ತಿರುವ ತ್ಯಾಜ್ಯಗಳೆ ಈ ತಾಪಮಾನದ ಏರಿಕೆಗೆ ಪ್ರಮುಖ ಕಾರಣ. ಜನರ ಮೇಲಿನ ಈ ರೀತಿಯ ನಿರ್ಲಜ್ಜ ದಾಳಿಯ ಹೊರತಾಗಿಯೂ ಪಶ್ಚಿಮದ ನಾಯಕರು, ಅದರಲ್ಲೂ ವಿಶೇಷವಾಗಿ ಬುಷ್, ಬ್ಲೇರ್, ಸರ್ಕೋಜಿ ಮತ್ತು ಬ್ರೌನ್ ಇವರುಗಳು ಜನರ ಬುದ್ಧಿವಂತಿಕೆಯನ್ನು ಅಣಕ ಮಾಡುವಂತೆ ಈಗಲೂ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದಾರೆ."

ಇದನ್ನು ಯಾರೊ ಮಾನವ ಪ್ರೇಮಿ ನಾಯಕನೊ, ಅಥವ ಬದ್ಧತೆಯುಳ್ಳ (ಸಮಾಜ)ವಿಜ್ಞಾನಿಯೊ ಹೇಳಿದ ಮಾತು ಎಂದುಕೊಳ್ಳಬೇಡಿ. ಹೀಗಂದಾತ ಮತದ ಅಫೀಮು ತಿಂದ ಬಿನ್ ಲ್ಯಾಡೆನ್! ಗ್ಲೋಬಲ್ ವಾರ್ಮಿಂಗ್ ಬಗ್ಗೆ ಮಾತನಾಡಿದರೆ ತನ್ನ ಬಗ್ಗೆ ಒಂದಷ್ಟು ಸದಭಿಪ್ರಾಯ ಹುಟ್ಟಬಹುದು ಎಂದುಕೊಂಡು ಆ ಪುಣ್ಯಾತ್ಮ ಹೀಗಂದನೊ, ಅಥವ ಅಫ್ಘನಿಸ್ತಾನದ ಬೆಟ್ಟಗಳಲ್ಲಿ ನೆಲ ಬಿಸಿಯಾಗುತ್ತಿರುವ ಅನುಭವ ಸ್ವತಃ ಆತನಿಗೇ ಆಗುತ್ತಿದೆಯೊ ಏನೊ, ಯಾರಿಗೆ ಗೊತ್ತು!

ಹೀಗೆ ಇವತ್ತು ದುಷ್ಟರು ಶಿಷ್ಟರಿಗೆ ಸರಿಸಮಾನವಾಗಿ ಭೂ ತಾಪಮಾನದಲ್ಲಿ ಏರಿಕೆ ಆಗುತ್ತಿರುವುದರ ಬಗ್ಗೆ ಮತ್ತು ಅದರಿಂದ ಆಗಬಹುದಾದ ವಿನಾಶದ ಬಗ್ಗೆ ಭಯಪಡುತ್ತಿದ್ದಾರೆ.

ವಿಜ್ಞಾನಿಗಳ ಪ್ರಕಾರ ಭೂಮಿಯ ತಾಪಮಾನದ ಏರಿಕೆ ಮತ್ತು ಇಳಿಕೆ ಭೂಮಿಯ ಇತಿಹಾಸದಲ್ಲಿ ಅನೇಕ ಸಾರಿ ಆಗಿಹೋಗಿದೆ. ಸೂರ್ಯನನ್ನು ಸುತ್ತ್ತುವ ಭೂಮಿಯ ಕಕ್ಷೆಯಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ತಾಪಮಾನದಲ್ಲಿ ವೈಪರೀತ್ಯಗಳು ಉಂಟಾಗುತ್ತವೆ. ಎಚ್ಚರವಾಗುವ ಅಗ್ನಿಪರ್ವತಗಳಿಂದಲೂ ಏರಿಳಿತಗಳು ಉಂಟಾಗಬಹುದು. ಹಾಗೆಯೆ ವಾತಾವರಣದಲ್ಲಿನ ಆವಿ, ಇಂಗಾಲದ ಡೈ‌ಆಕ್ಸೈಡ್, ಓಜೋನ್, ಮಿಥೇನ್ ಮತ್ತು ನೈಟ್ರಸ್ ಆಕ್ಸೈಡ್ ಅನಿಲಗಳ ಪ್ರಮಾಣದಲ್ಲಿ ಏರುಪೇರಾದರೂ ಭೂಮಿಗೆ ಚಳಿಜ್ವರ ಬರಬಹುದು. ಇವೆಲ್ಲವೂ ಮಾನವನ ಪಾತ್ರ ಇಲ್ಲದೆಯೆ ಆಗುವಂತಹವು. ಆದರೆ ಭೂಮಿಯ ಇತಿಹಾಸದಲ್ಲಿ ಬಹುಶಃ ಇದೇ ಮೊದಲ ಭಾರಿಗೆ ಮನುಷ್ಯ ವಾತಾವರಣದಲ್ಲಿನ ಉಷ್ಣಾಂಶ ಏರುಪೇರಿಗೆ ನೇರ ಕಾರಣ ಆಗುತ್ತಿದ್ದಾನೆ ಎನ್ನಬಹುದು. ಸಹಸ್ರಾರು ವರ್ಷಗಳಿಂದ ವಾತಾವರಣದಲ್ಲಿನ ಇಂಗಾಲದ ಡೈ‌ಆಕ್ಸೈಡ್‌ನ ಪ್ರಮಾಣ ಇಳಿಯುತ್ತ ಬಂದಿದ್ದರೆ ಕಳೆದ ಐದಾರು ದಶಕಗಳಲ್ಲಿ ಅದು ಏರುತ್ತ ಹೋಗಿದೆ. ಇದಕ್ಕೆ ಕಳೆದೆರಡು ಶತಮಾನಗಳ ಕೈಗಾರಿಕಾ ಕ್ರಾಂತಿಯೆ ಕಾರಣ.

ಭೂಮಿಯ ತಾಪಮಾನದ ಏರಿಕೆಯಿಂದಾಗಿ ಜನಜೀವನಕ್ಕೆ ಕೆಡುಕು ಕಾದಿದೆಯೆ ಹೊರತು ಒಳಿತು ಮಾತ್ರ ಇಲ್ಲ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ. ಸಮುದ್ರ ಉಕ್ಕೇರಬಹುದು; ಅತಿವೃಷ್ಟಿ ಅನಾವೃಷ್ಟಿ ಆಗಬಹುದು; ವಿಪರೀತ ಚಳಿ, ವಿಪರೀತ ಸೆಕೆ ಆಗಬಹುದು; ಕೆಲವು ಕಡೆ ನೀರೇ ಸಿಗದೆ ಹೋಗಬಹುದು; ಮತ್ತು ಕೆಲವು ಕಡೆ ಯಾವಾಗಲೂ ತೇವ ಇದ್ದುಬಿಡಬಹುದು; ಇವೆಲ್ಲವುಗಳಿಂದಾಗಿ ಜೀವಕೋಟಿಗೆ ನಾನಾ ತರಹದ ಕಾಯಿಲೆಕಸಾಲೆಗಳು ಬರಬಹುದು.

ಈ ನಿಧಾನಪ್ರಳಯದ ಸಮಯ ಮತ್ತು ಅದರ ಪ್ರಮಾಣ ಯಾವ ಮಟ್ಟದ್ದು ಎಂದು ಖರಾರುವಾಕ್ಕಾಗಿ ಹೇಳಲಾಗದಿದ್ದರೂ ಈಗ ಮನುಷ್ಯ ಹೋಗುತ್ತಿರುವ ದಾರಿ ಸರಿ ಇದ್ದಂತಿಲ್ಲ. ಮೊದಲಿನಂತೆ ಆಗಬೇಕಾದರೆ ನೂರಿನ್ನೂರು ವರ್ಷಗಳ ಹಿಂದೆ ಮನುಷ್ಯ ನಿಸರ್ಗವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದನೊ ಆ ಮಟ್ಟಕ್ಕೆ ಈಗ ಮಾನವ ಹಿಂದಿರುಗಬೇಕೇನೊ. ಆದರೆ, ಈ ಜನಸಂಖ್ಯೆಯ ಪ್ರಮಾಣ, ತಂತ್ರಜ್ಞಾನದಲ್ಲಿ ಹಿಂದಿರುಗಲಾಗದಷ್ಟು ಬೆಳವಣಿಗೆಗಳಾಗಿರುವುದು, ಸಾಲದೆಂಬಂತೆ ಅಣುಬಾಂಬ್‌ಗಳ ಮೇಲೆ ಬೆರಳಿಟ್ಟು ಕೂತಿರುವ ಹಿಂಸಾವಿನೋದಿ ಹೇಡಿಗಳು... ಇಡೀ ಮನುಷ್ಯ ಜಾತಿಯೆ ಒಟ್ಟಾಗದಿದ್ದರೆ ಹಲವಾರು ಜೀವಜಾತಿಗಳ ಜೊತೆಗೆ ಮಾನವಜಾತಿಯೂ ಇಲ್ಲವಾಗಿ ಬಿಡುವ ಕಾಲಘಟ್ಟದಲ್ಲಿ ನಾವಿರುವಂತಿದೆ.

ಮಹಾಭಾರತದಲ್ಲಿ ಒಂದು ಪ್ರಸಂಗ ಬರುತ್ತದೆ. ಯಕ್ಷರಿಂದ ದುರ್ಯೋಧನನನ್ನು ಬಿಡಿಸಿಕೊಂಡು ಬರಲು ಭೀಮನಿಗೆ ಹೇಳುವ ಯುಧಿಷ್ಠಿರ ಸಮಾನ ಶತ್ರುವಿನ ಬಗ್ಗೆ ಒಂದು ಉದಾಹರಣೆ ಕೊಡುತ್ತಾನೆ: "ನಾವು ನಾವೆ ಇರುವಾಗ ನಾವು ಐವರು, ಅವರು ನೂರು. ಬೇರೊಬ್ಬರು ದಂಡೆತ್ತಿ ಬಂದಾಗ ನಾವು ನೂರೈವರು." ಬಿನ್ ಲ್ಯಾಡೆನ್‌ನಂತಹ ಆಧುನಿಕ ಕಾಲದ ರಾಕ್ಷಸ ಸಹ ಮನುಷ್ಯ ಜಾತಿಗೆ ಬಂದಿರುವ ಸಮಾನ ವಿಪತ್ತಿನ ಬಗ್ಗೆ ಮಾತನಾಡುತ್ತಿರುವುದನ್ನು ಕಂಡಾಗ ಎಲ್ಲರೂ ಒಟ್ಟಾಗುತ್ತಿದ್ದಾರೆ ಎಂದೆನಿಸದಿರದು. ಈ ಸಮಸ್ಯೆಯ ಸಂಕೀರ್ಣತೆಯಿಂದಾಗಿ ಎಲ್ಲರಿಗಿಂತ ಹೆಚ್ಚಾಗಿ ವಿಶ್ವದ ರಾಜಕೀಯ ನಾಯಕತ್ವ ಮಾತ್ರ ಇದನ್ನು ಪರಿಣಾಮಕಾರಿಯಾಗಿ ಎದುರುಗೊಳ್ಳಬಹುದು. ಆದರೆ, ಆಡಳಿತವನ್ನು ಆರ್ಥಿಕಪ್ರಗತಿಯ ದೃಷ್ಟಿಯಿಂದಷ್ಟೆ ನೋಡುತ್ತಿರುವ ಪಾಶ್ಚಾತ್ಯ ಪ್ರಜಾಪ್ರಭುತ್ವ ಸರ್ಕಾರಗಳು, ಅವರನ್ನೆ ಹಿಂಬಾಲಿಸುತ್ತಿರುವ ತೃತೀಯ ಜಗತ್ತಿನ ರಾಷ್ಟ್ರಗಳು, ನೈತಿಕತೆಯ ದನಿ ಕಳೆದುಕೊಳ್ಳುತ್ತಿರುವ ಅಥವ ಕಳೆದುಕೊಂಡಿರುವ ವಿಶ್ವ ನಾಯಕತ್ವ; ಇವೆಲ್ಲವೂ ಬೇರೆಯ ವಾಸ್ತವವನ್ನೆ ಹೇಳುತ್ತಿವೆ.

ಆಗಾಗ ಸಹಜವಾಗಿ ತಾನೆ ಬಿಸಿಯಾಗಿ ಶಾಂತವಾಗುವ ಭೂಮಿಗೆ ಬೇರೊಬ್ಬರು ಅಂದರೆ ಮನುಷ್ಯನೂ ಬೆಂಕಿ ಹಚ್ಚಲು ಸಾಧ್ಯವಿದ್ದಂತಿದೆ. ಆದರೆ ಅದಕ್ಕೆ ಬೆಂಕಿ ಹಚ್ಚುವ ಮೊದಲು ಮನುಷ್ಯ ಯೋಚಿಸಬೇಕಿದೆ. ಯಾಕೆಂದರೆ ಇದು ತನ್ನ ತಲೆಯ ಮೇಲೆ ಕೈ‌ಇಟ್ಟುಕೊಂಡ ಭಸ್ಮಾಸುರನ ಕತೆಯಂತೆ. ತನಗೆ ದೊರೆತಿರುವ ವರದ (ಇಲ್ಲಿ ಶಾಪ ಎನ್ನುವುದೇ ಸೂಕ್ತ) ಮಹಿಮೆ ನೋಡಲು ಅವನೇ ಇರುವುದಿಲ್ಲ...

Sep 6, 2007

ಕದನ ಸೋಲುತ್ತಿರುವ ಜವರಾಯ, ಯುದ್ಧ ಗೆಲ್ಲಲಾಗದ ನರ ...

(ವಿಕ್ರಾಂತ ಕರ್ನಾಟಕ - ಸೆಪ್ಟೆಂಬರ್ 14, 2007 ರ ಸಂಚಿಕೆಯಲ್ಲಿನ ಬರಹ)

ಪ್ರತಿದಿನದ ಸಕ್ರಿಯ ಸಮಯದ ಬಹುಪಾಲನ್ನು ಕಂಪ್ಯೂಟರ್‌ನ ಮುಂದೆ ಕಳೆಯುವುದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡದ ಅಶಿಸ್ತಿನಿಂದಾಗಿ ಬಂದಿರುವ ಕುತ್ತಿಗೆ ನೋವಿಗೆ ಕಾರಣ ಹುಡುಕಲು ಅಂದು ನಾನು ಸಿಲಿಕಾನ್ ಕಣಿವೆಯ ಆಸ್ಪತ್ರೆಯಲ್ಲಿ ಕುಳಿತಿದ್ದೆ. ತಾನಿರಬೇಕಾದ ತೂಕಕ್ಕಿಂತ ಜಾಸ್ತಿಯಿದ್ದ ಅರವತ್ತರ ಆಜುಬಾಜಿನ ಬಿಳಿಯ ಧಢೂತಿ ಹೆಂಗಸು ಎಕ್ಸ್-ರೆ ತೆಗೆಯುತ್ತಿದ್ದಳು. ಅದು ಐದ್ಹತ್ತು ನಿಮಿಷಗಳ ಕೆಲಸ. ಅದು ಇದು ಲೋಕಾಭಿರಾಮವಾಗಿ ಮಾತನಾಡುತ್ತಿದ್ದೆವು. ಸುತ್ತಮುತ್ತಲೆಲ್ಲ ಆಧುನಿಕ ವೈದ್ಯಕೀಯ ಯಂತ್ರೋಪಕರಣಗಳು. ಎಕ್ಸ್-ರೆ ತೆಗೆದದ್ದು ಮುಗಿಯಿತು. ಕೈಯ್ಯಲ್ಲಿ ಒಂದು ಬಿಲ್ಲೆ ಗಾತ್ರದ ಕಪ್ಪು ಮೆಮೊರಿ ಸ್ಟಿಕ್ ಹಿಡಿದುಕೊಂಡು ಆಕೆ ಹೇಳಿದಳು: "ಒಂದೆರಡು ನಿಮಿಷ ನೀವು ಕಾಯಬೇಕು. ಎಲ್ಲಾ ಎಕ್ಸ್-ರೇಗಳು ಸರಿಯಾಗಿ ಬಂದಿವೆಯಾ ಎಂದು ಪರೀಕ್ಷಿಸಿಕೊಂಡು ಬರುತ್ತೇನೆ. ನೋಡಿ, ನಿಮ್ಮ ಎಕ್ಸ್-ರೇ ಫೋಟೋಗಳೆಲ್ಲ ಈ ಚಿಕ್ಕ ವಸ್ತುವಿನಲ್ಲಿ ಇದ್ದಾವೆ. ಮೊದಲೆಲ್ಲ ಒಂದು ಎಕ್ಸ್-ರೇಗೆ ಒಂದೊಂದು ನೆಗೆಟಿವ್ ಬೇಕಾಗಿತ್ತು. ಅದನ್ನೆಲ್ಲ ಡೆವಲಪ್ ಮಾಡಿಸೋದಿಕ್ಕೆ ಗಂಟೆಗಟ್ಟಲೆ ಸಮಯ ತೆಗೆದುಕೊಳ್ತಿತ್ತು. ಈಗ ಎಲ್ಲಾ ನಿಮಿಷಾರ್ಧದಲ್ಲಿ ಆಗಿಬಿಡುತ್ತದೆ."

ನಾನೂ ಅದನ್ನೆ ಯೋಚಿಸುತ್ತ, "ಹೌದು, ತಂತ್ರಜ್ಞಾನ ಬಹಳ ಮುಂದುವರೆದಿದೆ. ಭಾರತದ ಉಪನಿಷತ್‌ಗಳಲ್ಲಿ ಒಂದು ಮಾತಿದೆ: 'ಮೃತ್ಯುವಿನಿಂದ ಅಮರತ್ವದೆಡೆಗೆ ಸಾಗೋಣ,' ಎಂದು. ಮನುಷ್ಯನ ಚಿರಂತನ ಹುಡುಕಾಟ ಅದು. ಮೊದಲೆಲ್ಲ ಕೋಮಾ ಬಂದರೆ ಆ ವ್ಯಕ್ತಿ ಸತ್ತೆ ಹೋದ ಎಂದು ತಿಳಿಯುತ್ತಿದ್ದರು. ಈಗ ನೋಡಿ, ಆಧುನಿಕ ತಂತ್ರಜ್ಞಾನಗಳಿಂದಾಗಿ ಕೋಮಾದಲ್ಲಿ ಹಲವಾರು ವರ್ಷ ಜೀವಂತ ಶವದಂತೆ ಇರುವವರು ಸಹ ಎಷ್ಟೋ ದಿನಗಳ ನಂತರ ಅದರಿಂದ ಹೊರಬಂದು ಬದುಕುತ್ತಿದ್ದಾರೆ," ಎಂದೆ.

ನಾವು ಮಾತನಾಡುತ್ತಿದ್ದದ್ದು ಲೋಕಾಭಿರೂಢಿಯ ಮಾತು. ನಮ್ಮಿಬ್ಬರ ಏಕಾಂತವನ್ನು ಮಾತುಗಳಿಂದ ತುಂಬಿಸುವುದಷ್ಟೆ ಅಲ್ಲಿದ್ದ ಗುರಿ. ಆದರೆ ನನ್ನ ಮಾತು ಮುಗಿಯುತ್ತಿದ್ದಂತೆ ಆಕೆ ಗಂಭೀರವಾಗಿಬಿಟ್ಟಳು. ನನ್ನ ಕಣ್ಣನ್ನೆ ನೇರವಾಗಿ ದಿಟ್ಟಿಸುತ್ತ ಹೇಳಿದಳು: "You know what, ನನ್ನ ಮಗ ಮೂರು ವರ್ಷ ಕೋಮಾದಲ್ಲಿದ್ದ. ಕೆಲವೆ ವರ್ಷಗಳ ಹಿಂದೆ ಅದರಿಂದ ಹೊರಬಂದ. ಈಗ ಚೆನ್ನಾಗಿದ್ದಾನೆ. ಈ ವೈದ್ಯಕೀಯ ವಿಜ್ಞಾನ, ತಂತ್ರಜ್ಞಾನ ಇಷ್ಟು ಮುಂದುವರಿಯದೆ ಇದ್ದಿದ್ದರೆ ಅವನು ಎಂದೋ ಸಾಯಬೇಕಿತ್ತು."

ಕಾಲ ಮುಂದುವರೆಯುತ್ತಿದೆ. ಜೊತೆಜೊತೆಗೆ ಅವಿಷ್ಕಾರಗಳು ಮತ್ತು ತಂತ್ರಜ್ಞಾನ ಸಹ. ಹುಟ್ಟುವವರು ಹುಟ್ಟುತ್ತಿದ್ದಾರೆ. ಸಾಯುವವರು ಸಾಯುತ್ತಿದ್ದಾರೆ. ಆದರೆ, ಹಿಂದೆ ಎಂದೂ ಸಾಧ್ಯವಾಗದ್ದು ಇಂದು ಸಾಧ್ಯವಾಗುತ್ತಿದೆ. ಹೌದು. ಸತ್ತೇ ಹೋದವರನ್ನು ಬದುಕಿಸಲಾಗುತ್ತಿದೆ...

ಹೃದಯಾಘಾತ ಯಾವಾಗ ಆಗುತ್ತೆ ಎಂದು ಹೇಳುವುದು ಕಷ್ಟ. ವಯಸ್ಸಾದವರು ಇದಕ್ಕೆ ಬಲಿಯಾಗುವ ಸಾಧ್ಯತೆ ಮತ್ತು ಪ್ರಮಾಣ ಜಾಸ್ತಿ ಇದ್ದರೂ, 20-30 ವರ್ಷ ವಯಸ್ಸಿನ ಜವ್ವನಿಗರೂ ಇದಕ್ಕೆ ಬಲಿಯಾಗಬಹುದು. ನಾನು ಇಂಜಿನಿಯರಿಂಗ್ ಓದುತ್ತಿದ್ದಾಗ ಬೆಳಿಗ್ಗೆಯೆ ಎದ್ದು ತನ್ನ ರೂಮ್‌ಮೇಟ್‌ನೊಂದಿಗೆ ಜಾಗಿಂಗ್ ಹೋಗಿದ್ದ ನನ್ನ ಸಹಪಾಠಿ ಇದ್ದಕ್ಕಿದ್ದಂತೆ ನಡುರಸ್ತೆಯಲ್ಲಿ ಕುಸಿದು ಬಿದ್ದು ಕ್ಷಣಾರ್ಧದಲ್ಲಿ ಸತ್ತಿದ್ದ. ಹೈದಾರಾಬಾದಿಗೆ ಸಂಸಾರ ಸಮೇತ ಪ್ರವಾಸ ಹೋಗಿದ್ದ ಪರಿಚಯಸ್ಥರೊಬ್ಬರು ಇನ್ನೂ ಶಾಲೆಗೆ ಹೋಗುತ್ತಿರುವ ತಮ್ಮ ಪುಟ್ಟಮಗಳ ಕಣ್ಮುಂದೆ ಬಸ್ಸಿನಲ್ಲಿ ಕುಳಿತ ಜಾಗದಲ್ಲಿಯೆ ಹೃದಯಾಘಾತವಾಗಿ ಸತ್ತು ಹೋದರು. ಅವರ ವಯಸ್ಸು 40-45 ರೊಳಗಿತ್ತು. ಹಾಗೆ ಆಗುವುದಕ್ಕೆ ಕೇವಲ ಒಂದು ತಿಂಗಳ ಹಿಂದೆಯಷ್ಟೆ ನನ್ನೂರಿನಲ್ಲಿರುವ ನಾರಾಯಣ ಹೃದಯಾಲಯದಲ್ಲಿ ಕಂಪ್ಲೀಟ್ ಚೆಕಪ್ ಮಾಡಿಸಿಕೊಂಡು ಅಲ್ಲಿನ ಡಾಕ್ಟರಿಂದ ಎಲ್ಲವೂ ಸರಿಯಾಗಿದೆ ಎಂಬ ಆಶ್ವಾಸನೆ ಪಡೆದುಕೊಂಡಿದ್ದರು ಅವರು. ಆದರೂ, ಜವರಾಯ ಬಂದರೆ ಬರಿಕೈಲಿ ಬರಲಿಲ್ಲ; ಕುಡುಗೋಲು ಕೊಡಲ್ಯೊಂದು ಹೆಗಲೇರಿ ಜವರಾಯ!

ಭಾರತದಲ್ಲಿ ಇನ್ನೂ ಎಷ್ಟೋ ಕಡೆ ಈಗ ಹುಟ್ಟುತ್ತಿರುವ ಮಕ್ಕಳದೇ ಜನನ ವಿವರಗಳು ಡೇಟಾಬೇಸ್‌ಗೆ ಹೋಗದೆ ಇರುವಾಗ ಇನ್ನು ಹೃದಯಾಘಾತಕ್ಕೆ ಒಳಗಾಗಿ ವರ್ಷಕ್ಕೆ ಎಷ್ಟು ಜನ ಸಾಯುತ್ತಾರೆ ಎಂಬ ವಿವರ ಪಡೆಯುವುದು ಅಸಾಧ್ಯವೆ. ಆದರೆ ಅಮೇರಿಕದಲ್ಲಿ ಆ ಸಮಸ್ಯೆ ಇಲ್ಲ. ಪ್ರತಿವರ್ಷ ಸುಮಾರು 2,50,000 ಜನ ಇಲ್ಲಿ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರುತ್ತಾರೆ. ಇದಕ್ಕೆ ಮುಖ್ಯಕಾರಣ, ಹೃದಯಕ್ಕೆ ರಕ್ತ ಒದಗಿಸುವ ರಕ್ತನಾಳಗಳು ಕೊಬ್ಬಿನಾಂಶದಿಂದಾಗಿ ಎಲ್ಲೊ ಒಂದು ಕಡೆ ಕಟ್ಟಿಕೊಂಡು ಬಿಡುವುದು. ಹೃದಯಾಘಾತಕ್ಕೆ ಒಳಗಾದವರಿಗೆ ಯಾರಾದರೂ ಆ ಕೂಡಲೆ ಎದೆ ಒತ್ತಿ, ಬಾಯಿಯಿಂದ ಉಸಿರು ತುಂಬಿ, ಐದು ನಿಮಿಷದೊಳಗೆ ಅವರನ್ನು ಎಮರ್ಜೆನ್ಸಿಗೆ ಕರೆದುಕೊಂಡು ಹೋಗುವಂತಾದರೆ, ರೋಗಿ ಬದುಕಿಕೊಳ್ಳಬಹುದು. ಈ ದೇಶದಲ್ಲಿ 911 ಫೋನ್ ಕರೆ ಮಾಡಿದರೆ ಮೂರ್ನಾಲ್ಕು ನಿಮಿಷಗಳಲ್ಲಿ ಮನೆ ಬಾಗಿಲ ಬಳಿ ಆಂಬುಲೆನ್ಸ್ ಬಂದಿರುತ್ತದೆ. ಹೆಚ್ಚೆಂದರೆ ಏಳೆಂಟು ನಿಮಿಷಗಳು. ಇಷ್ಟೆಲ್ಲ ಇದ್ದರೂ, ಹೃದಯಾಘಾತಕ್ಕೆ ಒಳಗಾದವರು ಸತ್ತೇ ಹೋಗುವ ಸಾಧ್ಯತೆ ಇಲ್ಲಿ ಶೇ. 95. ಇನ್ನು ಭಾರತದಲ್ಲಿ?

(ಮತ್ತೊಂದು ವರದಿಯ ಪ್ರಕಾರ ಪ್ರತಿವರ್ಷ ಅಮೇರಿಕದಲ್ಲಿ ಹೃದಯಾಘಾತಕ್ಕೊಳಗಾದ 3,25,000 ಜನ ಆಸ್ಪತ್ರೆಗೆ ಬರುವುದಕ್ಕಿಂತ ಮೊದಲೆ ಸತ್ತಿರುತ್ತಾರಂತೆ. (http://www.americanheart.org))

ಇಷ್ಟಕ್ಕೂ ಈ ಹೃದಯಾಘಾತದ ಸಾವು ಅಂದರೆ ಏನು? ಹೃದಯಸ್ತಂಭನವಾದಾಗ ಮನುಷ್ಯನ ಅಂಗಾಂಗಳಿಗೆ ಯಾವುದೆ ಗಾಯವಾಗಿಲ್ಲ. ಎಲ್ಲವೂ ಇದ್ದ ಹಾಗೆಯೆ ಇವೆ. ರೋಗಿ ರಕ್ತವನ್ನೂ ಕಳೆದುಕೊಂಡಿಲ್ಲ. ಆಗಿರುವುದೆಲ್ಲ "ಕ್ಲಿನಿಕಲ್ ಡೆತ್": ಅಂದರೆ ಆತನ ಹೃದಯ ಬಡಿಯುವುದನ್ನು ನಿಲ್ಲಿಸಿದೆ, ರಕ್ತಚಲನೆ ನಿಂತಿದೆ ಎಂದಷ್ಟೆ. ಆಗ ಮೆದುಳು ಏನು ಮಾಡುತ್ತಿದೆ? ಯಾವಾಗ ಹೃದಯದ ಬಡಿತ ನಿಲ್ಲುವುದೊ ಆ ಕೂಡಲೆ ಮೆದುಳು ದೇಹದಲ್ಲಿನ ಆಮ್ಲಜನಕವನ್ನು ಉಳಿತಾಯ ಮಾಡಲು ತನ್ನನ್ನೆ ತಾನು "ಸ್ಥಗಿತ" ಗೊಳಿಸಿಕೊಳ್ಳುತ್ತದೆ. ಅದು ಹೃದಯಕ್ಕಿಂತ ನಿಧಾನಕ್ಕೆ ಸಾಯುತ್ತದೆ. ಯಾವಾಗ ಮೆದುಳೂ ಸಾಯುತ್ತದೊ ಆಗ ವ್ಯಕ್ತಿ "ಕಾನೂನಿನ ಪ್ರಕಾರ ಮೃತ."

ಇಷ್ಟಕ್ಕೂ ವೈದ್ಯಕೀಯ ಪರಿಭಾಷೆಯಲ್ಲಿ ಸಾವು ಎಂದರೆ ಮನುಷ್ಯನ ಜೀವಕೋಶಗಳ ಸಾವು ಎಂದರ್ಥ. ಯಾವಾಗ ಆಮ್ಲಜನಕದ ಕೊರತೆಯಿಂದ ಹೃದಯ ಮತ್ತು ಮಿದುಳು ಪುನಶ್ಚೇತನಗೊಳಿಸಲಾಗದಷ್ಟು ಹಾನಿಗೊಳಗಾಗುತ್ತವೊ ಆಗ ಹೃದಯಾಘಾತಕ್ಕೊಳಗಾದ ಮನುಷ್ಯನನ್ನು ಮತ್ತೆ ಬದುಕಿಸಲು ಸಾಧ್ಯವಿಲ್ಲ. ಈ ಎರಡು ಪ್ರಮುಖ ಅಂಗಗಳನ್ನು ಪುನಶ್ಚೇತನಗೊಳಿಸಲಾಗದ ಪ್ರಕ್ರಿಯೆ ಆಘಾತಕ್ಕೊಳಗಾದ ನಾಲ್ಕೈದು ನಿಮಿಷಗಳಿಗೆ ಆರಂಭವಾಗುತ್ತದೆ. ಹಾಗಾಗಿಯೆ ಆ ಮೊದಲ ಐದು ನಿಮಿಷಗಳು ಜೀವನ್ಮರಣದ ನಡುವಿನ ಅವಧಿ. ಆ ಅವಧಿಯಲ್ಲಿ ಬಾಯಿಯಿಂದ ಉಸಿರು ತುಂಬಿ (CPR – Cardiopulmonary Resuscitation), ಹೃದಯದ ಪುನಶ್ಚೇತನದ ಚಿಕಿತ್ಸೆ ಕೊಡದಿದ್ದರೆ ಬದುಕುವ ಸಾಧ್ಯತೆ ಅತಿ ಕಡಿಮೆ.

ಹೌದಾ? ನಿಜವಾಗಲೂ? ಬೇರೆ ಯಾವ ಸಾಧ್ಯತೆಗಳೂ ಇಲ್ಲವೆ? ಖಂಡಿತವಾಗಿ? ಸರಿಯಾಗಿ ನೋಡೀಪ್ಪ? ನಿಮ್ಮ ಕೈಲಾದದ್ದನ್ನೆಲ್ಲ ಮಾಡಿದ್ದೀರಾ? ಪ್ಲೀಸ್, ಇನ್ನೊಂದು ಸಲ ನೋಡಿ, ಪ್ಲೀಸ್.... ಪ್ರಶ್ನೆಗಳು, ಪ್ರಶ್ನೆಗಳು, ಪ್ರಶ್ನೆಗಳು; ಜಿಜ್ಞಾಸೆ. ಪ್ರಕೃತಿ ಒಡ್ಡುತ್ತ ಬಂದಿರುವ ನಿರಂತರ ಸವಾಲಿಗೆ ಎದುರುತ್ತರ ಕೊಡಲು ಮಾನವನ ನಿರಂತರ ಅಭೀಪ್ಸೆ ಇದು.



ಸರಿ. ವಿಜ್ಞಾನಿಗಳು, ವೈದ್ಯರು ಮತ್ತೆ "ಸತ್ತ" ಮನುಷ್ಯನ ಜೀವಕೋಶಗಳನ್ನು ಗಮನಿಸಲು ಆರಂಭಿಸಿದರು. ಒಮ್ಮೆ ಅವರಿಗೆ ಆಘಾತವಾಯಿತು. ಸತ್ತು ಒಂದು ಗಂಟೆಗೂ ಮೇಲಾಗಿದ್ದ ಶವವೊಂದರ ಜೀವಕೋಶಗಳನ್ನು ಮೈಕ್ರೋಸ್ಕೋಪ್‌ನಲ್ಲಿ ನೋಡಿದ ಡಾ. ಲ್ಯಾನ್ಸ್ ಬೆಕರ್ ಎಂಬುವವರಿಗೆ ತಾವು ಕಂಡಿದ್ದನ್ನು ನಂಬಲಾಗಲಿಲ್ಲ. ಶವದ ಒಳಗಿನ ಜೀವಕೋಶಗಳು ಸತ್ತ ಹಾಗೆ ಕಾಣಿಸುತ್ತಿಲ್ಲ!!! ಡಾ. ಬೆಕರ್ ಅಂದುಕೊಂಡರು: 'ಓಹ್ ಹೊ, ಇಷ್ಟು ದಿನ ನಾವು ಏನೊ ಒಂದು ತಪ್ಪು ಮಾಡಿಬಿಟ್ಟೆವು.'

ಸರಿ ಮತ್ತೆ. ಜೀವಕೋಶಗಳು ಸತ್ತಿಲ್ಲ; ಶವವನ್ನು ಬದುಕಿಸಲು ಇನ್ನೇನು ಸಮಸ್ಯೆ? ಆಮ್ಲಜನಕ ಹರಿಸಿ ನೋಡಿ ಅಂದರು ಸಂಶೋಧಕರು. ಅಲ್ಲಿಯೇ ಮತ್ತೊಂದು ಸಮಸ್ಯೆ ಮತ್ತು ಪರಿಹಾರ ಒಟ್ಟೊಟ್ಟಿಗೆ ದೊರಕಿದವು. ಆಮ್ಲಜನಕದ ಸಪ್ಲೈ ನಿಂತ ಐದು ನಿಮಿಷಗಳ ಒಳಗೆ ಜೀವಕೋಶಗಳಿಗೆ ಮತ್ತೆ ಆಮ್ಲಜನಕ ದೊರಕಿದರೆ ಅವು ಬದುಕುತ್ತವೆ. ಐದು ನಿಮಿಷಗಳ ನಂತರ ದೊರಕಿದರೆ, ಇನ್ನೂ ಜೀವಂತ ಸ್ಥಿತಿಯಲ್ಲಿ ಇರುವ ಅವು ಆಮ್ಲಜನಕ ಸಿಕ್ಕ ತಕ್ಷಣ ಸಾಯುತ್ತವೆ! ಆಮ್ಲಜನಕವಿಲ್ಲದೆ ಅವು ಬದುಕುವುದಿಲ್ಲ; ಐದು ನಿಮಿಷಗಳ ನಂತರ ಕೊಡ ಹೋದರೆ ಒಂದೆ ಒಂದು ಉಸಿರೆಳೆದು ಸಾಯುತ್ತವೆ.

ಹೃದಯಾಘಾತಕ್ಕೊಳಗಾದವರನ್ನು ಎಮರ್ಜೆನ್ಸಿ ರೂಮಿಗೆ ತಂದ ತಕ್ಷಣ ಏನು ಮಾಡುತ್ತಾರೆ? ಬಾಯಿಗೆ ಆಕ್ಸಿಜನ್ ನಳಿಕೆ ಹಾಕುತ್ತಾರೆ; ಎದೆಯ ಮೇಲೆ ವಿದ್ಯುತ್ ಪ್ಯಾಡ್‌ಗಳನ್ನಿಟ್ಟು ಒಂದೆರಡು ಬಾರಿ ಕರೆಂಟ್ ಹರಿಸಿ ಹೃದಯಕ್ಕೆ ಝಳಕ್ ಕೊಡುತ್ತಾರೆ. ಹೃದಯ ಆದಷ್ಟೂ ಜಾಸ್ತಿ ಹೆಚ್ಚಿನ ಆಮ್ಲಜನಕ ತೆಗೆದುಕೊಳ್ಳುವಂತಾಗಲು ಅದಕ್ಕೆ ಅಡ್ರಿನಲಿನ್ ಇಂಜೆಕ್ಷನ್ ಚುಚ್ಚುತ್ತಾರೆ. ಕೆಲವೊಂದು ಸಮಯದಲ್ಲಿ ಹೃದಯ ಕೆಲಸ ಆರಂಭಿಸಿ ನಂತರ ಮೆದುಳೂ ಕೆಲಸ ಆರಂಭಿಸುತ್ತದೆ. ಆದರೆ, ಐದು ನಿಮಿಷಗಳ ನಂತರ ಇದು ಮಾಡಲ್ಪಟ್ಟರೆ ಯಾವ ಜೀವಕೋಶಕ್ಕೆ ಆಮ್ಲಜನಕ ಸಿಗುತ್ತದೊ ಅದು ಸಾಯುತ್ತ ಹೋಗುತ್ತದೆ. ಮೆದುಳಿನ ಜೀವಕೋಶಗಳು ಸಾಯುವ ತನಕ ಮನುಷ್ಯ ಕೋಮಾದಲ್ಲಿರುತ್ತಾನೆ (ಅಪ್ರಜ್ಞಾ ಸ್ಥಿತಿ). ಎಲ್ಲಾ ಸತ್ತ ಮೇಲೆ ಮನುಷ್ಯ both clinically and legally dead.

ಈ ಎಲ್ಲಾ ಹೊಸ ಜ್ಞಾನದಿಂದ ವೈದ್ಯರಿಗೆ ಗೊತ್ತಾಗಿದ್ದು ಏನೆಂದರೆ, ಆಮ್ಲಜನಕದ ಸಪ್ಲೈ ಇಲ್ಲದ ಜೀವಕೋಶದ ಸಾವು ಕ್ಷಣಮಾತ್ರದಲ್ಲಿ ಘಟಿಸುವ ಘಟನೆಯಲ್ಲ; ಅದೊಂದು ಪ್ರಕ್ರಿಯೆ. ಪ್ರಕ್ರಿಯೆಯ ಡೆಫಿನಿಷನ್ ಪ್ರಕಾರ ಯಾವುದೆ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡಬಹುದು. ಇದನ್ನೆ ಆಧಾರವಾಗಿ ಇಟ್ಟುಕೊಂಡು ಸಂಶೋಧಕರು ಅನೇಕ ವರ್ಷಗಳ ಕಾಲ ಅನೇಕ ತರಹದ ಪ್ರಯತ್ನಗಳನ್ನು ಪ್ರಯೋಗಗಳನ್ನು ಲಕ್ಷಕ್ಕೂ ಹೆಚ್ಚಿನ ರೋಗಿಗಳ ಮೇಲೆ ಪ್ರಯತ್ನಿಸುತ್ತ ಹೋದರು. ಆದರೆ ಯಾವುವೂ ಪರಿಪೂರ್ಣ ಉತ್ತರ ಕೊಡಲು ಸಾಧ್ಯವಾಗಲಿಲ್ಲ. ಈ ಎಲ್ಲದರ ಮಧ್ಯೆ ಒಂದು ಪ್ರಯತ್ನ ಮಾತ್ರ ಹೆಚ್ಚಿನ ಪ್ರಮಾಣದ ಯಶಸ್ಸನ್ನು ಪಡೆಯುತ್ತಿದ್ದರೂ ಅದು ಅಷ್ಟೇನೂ ಹೈಟೆಕ್ ಉತ್ತರ ಅಲ್ಲವಾದ್ದರಿಂದ ಡಾಕ್ಟರ್‌ಗಳಿಗೆ ಅದನ್ನು ಒಪ್ಪಿಕೊಳ್ಳಲೂ ಕಷ್ಟವಾಗುತ್ತಿತ್ತು. ಮರಣವನ್ನು ಇಷ್ಟು ಜುಜುಬಿ ಆಗಿ ಗೆಲ್ಲಲು ಸಾಧ್ಯವೆ ಎಂಬ ಉದಾಸೀನ ಬಹುಪಾಲು ವೈದ್ಯರುಗಳದು!

ಅದು ನಾವು ತಿಂಡಿ-ತರಕಾರಿಗಳನ್ನು ಫ್ರೆಷ್ ಆಗಿ ಇಡಲು, ಅವುಗಳಲ್ಲಿನ ಜೀವಕೋಶಗಳು ಸಾಯದಂತಿರಲು ರೆಫ್ರಿಜರೇಟರ್ ಬಳಸುತ್ತೀವಲ್ಲ, ಆ ತಿಳುವಳಿಕೆಯಿಂದ ಬಂದದ್ದಾಗಿತ್ತು! ಅದೆ Hypothermia, ಅಂದರೆ ದೇಹದ ಉಷ್ಣತೆ ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಇರುವ ಲಘು ಉಷ್ಣತೆಯ ಚಿಕಿತ್ಸೆ. ಹೃದಯಾಘಾತಕ್ಕೊಳಗಾದ ಮನುಷ್ಯನ ದೇಹದ ಉಷ್ಣತೆಯನ್ನು ನಾಲ್ಕೈದು ಡಿಗ್ರಿ, ಅಂದರೆ ೯೩ ಡಿಗ್ರಿ ಫ್ಯಾರೆನ್‍ಹೀಟ್‌ಗೆ ಇಳಿಸುವುದು. ೨೦೦೨ ರಲ್ಲಿ ಯೂರೋಪಿನ ಸಂಶೋಧಕರ ತಂಡವೊಂದು ಈ ತಂತ್ರದಿಂದ ಹೆಚ್ಚಿನ ಪ್ರಮಾಣದ ಯಶಸ್ಸು ಪಡೆದದ್ದನ್ನು ಆಧಾರ ಸಮೇತ ನಿರೂಪಿಸಿತು. ಅಲ್ಲಿಂದೀಚೆಗೆ ಕೆಲವು ಮನುಷ್ಯರು ಸಾವಿನ ದವಡೆಯಿಂದ ಬಿಡಿಸಿಕೊಂಡು ಬರುತ್ತಿದ್ದಾರೆ. ಮಾನವ ಜವರಾಯನ ಮೇಲೆ ಕನಿಷ್ಠ ಕೆಲವು ಕದನಗಳನ್ನಾದರೂ ಗೆಲ್ಲುತ್ತಿದ್ದಾನೆ.

ಈ ಕೋಲ್ಡ್ ಥೆರಪಿಯ ಪ್ರಕಾರ ಮೊದಲಿಗೆ ಈಗ ಮಾಡುತ್ತಿರುವ ಪ್ರಥಮ ಚಿಕಿತ್ಸೆಯನ್ನೆ ಮಾಡಿ ನಿಂತಿರುವ ಹೃದಯದ ಚಲನೆಯನ್ನು ಮತ್ತೆ ಆರಂಭಿಸುತ್ತಾರೆ. ಕೇವಲ ಒಂದು ಗಂಟೆ ಮಾತ್ರ ಆಮ್ಲಜನಕ ಕೊಡುತ್ತಾರೆ. ಆದರೆ ಎಲ್ಲಾ ಜೀವಕೋಶಗಳು ಆಮ್ಲಜನಕ ಸೇವಿಸಿ ಸಾಯದೆ ಇರುವಂತೆ ಮಾಡಲು ಕೂಡಲೆ ರೋಗಿಯ ರಕ್ತನಾಳಕ್ಕೆ ಎರಡು ಲೀಟರ್ ತಣ್ಣನೆಯ ಉಪ್ಪುನೀರನ್ನು ಹರಿಸುತ್ತಾರೆ. ನಂತರ ಎದೆ ಮತ್ತು ತೊಡೆಯ ಭಾಗಕ್ಕೆ ಪ್ಯಾಡ್‌ಗಳನ್ನು ಇಟ್ಟು ಅವಕ್ಕೆ ತಂಪು ನೀರನ್ನು ಹರಿಸುತ್ತಾರೆ. ಹೀಗೆ ಒಟ್ಟಾರೆ ದೇಹದ ಉಷ್ಣವನ್ನು ೯೩ ಡಿಗ್ರಿ ಫ್ಯಾರೆನ್‍ಹೀಟ್‌ಗೆ ೨೪ ಗಂಟೆಗಳ ಕಾಲ ಇಳಿಸುತ್ತಾರೆ. ನಂತರ ನಿಧಾನಕ್ಕೆ ದೇಹದ ಉಷ್ಣತೆಯನ್ನು ಸಾಮಾನ್ಯ ಮಟ್ಟಕ್ಕೆ ತರುತ್ತಾರೆ. ಈ ವಿಧದಲ್ಲಿ ಅನೇಕ ರೋಗಿಗಳನ್ನು ಅವರು ಸತ್ತ ಒಂದು ಗಂಟೆಯ ನಂತರವೂ, ಕೋಮಾದಲ್ಲಿದ್ದ ಹಲವಾರು ದಿನಗಳ ನಂತರವೂ ಬದುಕಿಸಲಾಗುತ್ತಿದೆ.

ಆದರೆ, ಈ ಚಿಕಿತ್ಸೆ ಎಲ್ಲಾ ಕಡೆಯೂ ಲಭ್ಯವಿಲ್ಲ. ಅಮೇರಿಕದಲ್ಲಿಯೂ ಕೇವಲ ಶೇ. ೫ ರಷ್ಟು ಆಸ್ಪತ್ರೆಗಳಲ್ಲಿ ಮಾತ್ರ ಇದು ಲಭ್ಯವಿದೆ.

ಇದೇ ಸಮಯದಲ್ಲಿ ಈ ಚಿಕಿತ್ಸೆ ಮೂಲಕ ಬದುಕುಳಿದವರು, ಅಂದರೆ "ಸತ್ತು" ನಂತರ ಮತ್ತೆ ಬದುಕಿದವರು ಹೇಳುತ್ತಿರುವ ಮರಣೋತ್ತರ ಅನುಭವದ ಕತೆಗಳಿವೆಯಲ್ಲ, ಅವುಗಳದೇ ಒಂದು ದೊಡ್ಡ ಕತೆ. ಕೆಲವರು ಆ ಸಮಯದಲ್ಲಿ ತಾವು ಮೇಲಿನಿಂದ ತಮ್ಮ ದೇಹವಿದ್ದ ಕೋಣೆಯಲ್ಲಿ ನಡೆಯುತ್ತಿದ್ದದ್ದನ್ನು, ಅದರ ಪಕ್ಕದ ಕೋಣೆಯಲ್ಲಿ ನಡೆಯುತ್ತಿದ್ದನ್ನು ಕಂಡೆವು ಎನ್ನುತ್ತಿದ್ದಾರೆ; ಅದೊಂದು ಅಪೂರ್ವ ಅನುಭವ ಎನ್ನುತ್ತಿದ್ದಾರೆ. ಇನ್ನು ಕೆಲವರು ನನಗೇನೂ ಜ್ಞಾಪಕವಿಲ್ಲ ಎನ್ನುತ್ತಿದ್ದಾರೆ. ಬರಲಿರುವ ದಿನಗಳು ಸಾವಿನಾಚೆಗಿನ ವಿಶ್ವವನ್ನೆ (ಅದು ಇದ್ದರೆ) ನಮಗೆ ತೆರೆಯಬಹುದು. ಜೀವನದ ಅರ್ಥ ಅಥವ ನಿರರ್ಥಕತೆಯನ್ನು ಮನಗಾಣಿಸಬಹುದು.

ಆದರೆ, ಮುಪ್ಪು ಮತ್ತು ನೈಸರ್ಗಿಕ ಸಾವು ಎನ್ನುವುದೊಂದಿದೆಯಲ್ಲ? ಕದನ ಸೋಲುತ್ತಿರುವ ಜವರಾಯ ಯುದ್ಧ ಸೋಲುವ ಮನಸ್ಥಿತಿಯಲ್ಲಿರುವ ಹಾಗೆ ಕಾಣುತ್ತಿಲ್ಲ. ಅದನ್ನೂ ಗೆಲ್ಲುವ ಮನುಷ್ಯ ಪ್ರಯತ್ನವೂ ನಿಲ್ಲುವಂತೆ ಕಾಣುತ್ತಿಲ್ಲ. ಡಾ. ಬೆಕರ್ ಪ್ರಕಾರ, "ವೈದ್ಯದ ಮೂಲಭೂತವೆ ಮನುಷ್ಯನನ್ನು ಸಾವಿನ ದವಡೆಯಿಂದ ಪಾರು ಮಾಡುವುದು. ನಾನು ಜವರಾಯನೊಡನೆ ೨೦ ವರ್ಷಗಳಿಂದ ಕಾದಾಡುತ್ತಿದ್ದೇನೆ. ಅವನನ್ನು ವ್ಯಕ್ತಿಗತವಾಗಿ ಭೇಟಿಯಾಗುವ ತನಕ ಅದನ್ನು ಮುಂದುವರೆಸುತ್ತೇನೆ."

ಅಲ್ಲಿಯವರೆಗೂ: "ಎಂತಹ ಹೂಳಿನ ಮೇಲೆಯೂ ಕಾಲಕ್ರಮೇಣ ಹುಲ್ಲು ಬೆಳೆಯುತ್ತದೆ; ಎಂತಹ ಸೂಡಿನ ಸುಟ್ಟುನೆಲವನ್ನಾದರೂ ಕಾಲಕ್ರಮೇಣ ಹಸುರು ತಬ್ಬುತ್ತದೆ. ಅಲ್ಲಿ ಹೆಣ ಹೂಳಿದ್ದಾರೆಂಬ ಚಿಹ್ನೆಯೆ ಮಾಸಿಹೋಗುತ್ತದೆ; ಅಲ್ಲಿ ಹೆಣ ಸುಟ್ಟಿದ್ದರು ಎಂಬ ಗುರುತೂ ಕಾಣದಂತೆ ಗರುಕೆ ತಬ್ಬಿ ನಳನಳಿಸಿ ಹಸುರು ನಗೆ ಬೀರುತ್ತದೆ. ಹಾಗೆಯೆ ಬದುಕಿನ ಇತರ ಸದ್ಯೋಮುಖ್ಯ ಸಂಗತಿಗಳು ಬರುಬರುತ್ತಾ ಜನಮನವನ್ನಾಕ್ರಮಿಸಿ," ... (ಕುವೆಂಪು - ಮಲೆಗಳಲ್ಲಿ ಮದುಮಗಳು)