Sep 29, 2006

ಅಯೋಗ್ಯರನ್ನು ಕೈಯ್ಯಾರೆ ಆರಿಸಿಕೊಂಡು ಅಭಿವೃದ್ಧಿಯಾಗಲಿಲ್ಲ ಅಂದರೆ?

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 13, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ರಾಜಧಾನಿಯ ಹೊರಗೆ ಬೆಳಗಾವಿಯಲ್ಲಿ ಮೊಟ್ಟಮೊದಲ ಬಾರಿಗೆ ನಡೆದ ವಿಶೇಷ ಅಧಿವೇಶನವನ್ನು ಗಮನಿಸುತ್ತ, ಮೂರು ವರ್ಷದ ಹಿಂದೆ ಬರೆದಿದ್ದ "ಬೆಳಗಾವಿ, ಹೊಸೂರು ಮತ್ತು ಅಯೋಗ್ಯ ಆಡಳಿತಗಾರರು" ಲೇಖನವನ್ನು ಮತ್ತೊಮ್ಮೆ ಓದುತ್ತ ಕುಳಿತಾಗ ತೀವ್ರವಾಗಿ ಅನ್ನಿಸುತ್ತಿರುವುದು ಏನೆಂದರೆ, ಇದರಲ್ಲಿ ಜನರ ಪಾಲು ಏನೂ ಇಲ್ಲವೆ ಎನ್ನುವುದು. ಅಯೋಗ್ಯ ಆಡಳಿತಗಾರರು ಎಂದರೆ ಯಾರು? ಪ್ರಜಾಪ್ರಭುತ್ವದಲ್ಲಿ ಅಯೋಗ್ಯರು ಅದು ಹೇಗೆ ಆಡಳಿತಗಾರರಾದರು? ಅವರನ್ನು ಚುನಾಯಿಸಿದವರು ಯಾರು? ಯಾಕಾಗಿ ಅಂತಹವರನ್ನು ಚುನಾಯಿಸಿದರು? ಚುನಾಯಿಸಿಯಾದ ಮೇಲೆ ಅವರಿಂದ ಕನ್ನಡ ಉದ್ಧಾರವಾಗಲಿಲ್ಲ, ಕನ್ನಡ ಜನಪದ ಉದ್ಧಾರವಾಗಲಿಲ್ಲ ಎಂದರೆ ನಿಜವಾಗಲೂ ಜನರು ತಮ್ಮ ಜವಾಬ್ದಾರಿಯನ್ನು ಬೇರೊಬ್ಬರ ಹೆಗಲಿಗೆ ಪ್ರಜ್ಞಾಪೂರ್ವಕವಾಗಿ ವರ್ಗಾಯಿಸುತ್ತಿಲ್ಲವೆ? ಚುನಾವಣೆಯ ನಂತರ ರಾಜಕಾರಣಿಗಳು ಹೇಳುವ ಕ್ಲೀಷೆಯುಕ್ತ ಮಾತಾದ ಮತದಾರ ಪ್ರಭು ನೀಡಿದ ತೀರ್ಪುಎನ್ನುವುದು ಯಾವಾಗಲೂ ನ್ಯಾಯವಾದದ್ದೆ? ಯೋಗ್ಯವಾದದ್ದೆ?

ಚುನಾವಣೆಯಲ್ಲಿ ಒಬ್ಬರನ್ನು ಗೆಲ್ಲಿಸಲು ಬಹುಸಂಖ್ಯಾತ ಮತದಾರರಿಗೆ ಒಂದು ಕಾರಣವಿರುತ್ತದೆ. ಉದಾಹರಣೆಗೆ, ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಾಸಕರು ಗೆಲ್ಲಲು ಆ ಕ್ಷೇತ್ರದಲ್ಲಿ ಮತ ಚಲಾಯಿಸಿದ ಬಹುಜನರು ತಾವು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದನ್ನೇ ಮುಖ್ಯ ವಿಷಯವನ್ನಾಗಿ ಮಾಡಿಕೊಂಡಿರುವುದು. ಈಗ ಆ ಕ್ಷೇತ್ರಗಳಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿಯಾಗಿಲ್ಲ ಅಂದರೆ ಅದಕ್ಕೆ ಕಾರಣ ಆ ಕ್ಷೇತ್ರದ ಶಾಸಕರಲ್ಲ, ಬದಲಿಗೆ ಅಲ್ಲಿನ ಜನ. ಅವರಿಗೆ ಅಭಿವೃದ್ಧಿಗಿಂತ ಅವರ ಶಾಸಕ ಪ್ರತಿ ಸಲದ ವಿಧಾನಸಭಾ ಅಧಿವೇಶನದಲ್ಲಿ ಮರಾಠಿಯಲ್ಲಿ ಕೂಗಾಡುತ್ತ, ಕಪ್ಪು ಬಟ್ಟೆ ಧರಿಸಿ ಧರಣಿ ಕೂರುತ್ತ, ಸಭಾತ್ಯಾಗ ಮಾಡುತ್ತ, ಮಹಾರಾಷ್ಟ್ರದಿಂದ ಒಬ್ಬ ರಾಜಕಾರಣಿಯನ್ನು ಬೆಳಗಾವಿಗೆ ಆಹ್ವಾನಿಸಿ ಪ್ರಚೋದನಾಕಾರಿ ಭಾಷಣ ಮಾಡಿಸುತ್ತ ತಮ್ಮ ಊರು ಮಹಾರಾಷ್ಟ್ರಕ್ಕೆ ಸೇರುವ ತನಕ ಹೋರಾಡುತ್ತಿರಬೇಕು. ಈ ಮಧ್ಯೆ ಅವರ ಊರು ಎಷ್ಟೇ ಹಿಂದುಳಿದು ಬಿಟ್ಟರೂ ಅವರಿಗೆ ಚಿಂತೆಯಿಲ್ಲ.

ಆದರೆ, ಇಡೀ ಉತ್ತರ ಕರ್ನಾಟಕವೆ ಹಿಂದುಳಿದಿದೆ ಎನ್ನುವ ಮಾತೊಂದಿದೆಯಲ್ಲ? ಅಲ್ಲಿನ ಮಿಕ್ಕ ಕ್ಷೇತ್ರಗಳ ಜನಕ್ಕೆ ಮರಾಠಿಯೆನ್ನುವುದು ಒಂದು ವಿಷಯವೆ ಅಲ್ಲವಲ್ಲ? ಹಾಗಾದರೆ, ಆ ಭಾಗ ಹಿಂದುಳಿದಿರಲು ಕಾರಣವೇನು? ಅಲ್ಲಿನ ಜನಗಳಿಗೆ ಅಭಿವೃದ್ಧಿಗಿಂತ ಬೇರೆ ವಿಷಯಗಳು ಮುಖ್ಯವಾಗುತ್ತಿವೆಯೆ?

ಇರಬಹುದು. ಇರಬಹುದು ಏನು, ಇರಲೇಬೇಕು. ತಮ್ಮ ಜಾತಿಯ ಯಾರೋ ಒಬ್ಬ ಮುಖ್ಯಮಂತ್ರಿ ಆಗುತ್ತಾನೆ ಎಂದರೆ ಮಿಕ್ಕೆಲ್ಲ ವಿಷಯಗಳು ಗೌಣವಾಗಿ ಅವರವರ ಕ್ಷೇತ್ರಗಳಲ್ಲಿ ಆ ಜಾತಿಯ ಜನ ಆ ಸಂಭವನೀಯ ಮುಖ್ಯಮಂತ್ರಿಯ ಪಕ್ಷಕ್ಕೆ ಮತ ನೀಡುವುದಿಲ್ಲವೆ? ಯಾವುದೋ ಊರಿನಲ್ಲಿ ಅಲ್ಲಿನ ಸ್ಥಳೀಯ ಕೋಮುವಾದಿಗಳು ತಮ್ಮ ಊರಿನ ಒಂದು ಜಾಗ ಮಸೀದಿಗೆ ಸೇರಿದ್ದು, ದೇವಸ್ಥಾನಕ್ಕೆ ಸೇರಿದ್ದು ಎಂದು ಕಿತ್ತಾಡಿಕೊಳ್ಳುತ್ತಿದ್ದರೆ, ಬೇರೆ ಕ್ಷೇತ್ರಗಳಲ್ಲಿನ ಜನ ತಮ್ಮ ಕೋಮುವನ್ನು ಪ್ರತಿನಿಧಿಸುವ ಪಕ್ಷಕ್ಕೆ ಮತ ಚಲಾಯಿಸುವುದಿಲ್ಲವೆ? ತಮ್ಮ ಊರಿನ ಯಾವುದೊ ಒಂದು ಜಾತಿಯೊ ಪಂಗಡವೊ ಒಂದು ಪಕ್ಷದೊಂದಿಗೆ ಗುರುತಿಸಿಕೊಂಡಿದೆ ಎಂದರೆ, ಅಭ್ಯರ್ಥಿ ಯಾರೆಂದು ಗಮನಿಸದೆ ಆ ಪಂಗಡದ ವಿರೋಧಿ ಪಕ್ಷಕ್ಕೆ ಇನ್ನೊಂದು ಪಂಗಡದವರು ಮತ ಚಲಾಯಿಸುವುದಿಲ್ಲವೆ? ಚುನಾವಣಾ ಪ್ರಚಾರ ಸಮಯದಲ್ಲಿ ಸ್ವಾಭಿಮಾನ, ಆತ್ಮಾಭಿಮಾನ ಬಿಟ್ಟು ಯಾರು ಹೆಚ್ಚಿನ ಹಣ ಮತ್ತು ಹೆಂಡ ಕೊಡುತ್ತಾನೊ ಅಂತಹ ಅಭ್ಯರ್ಥಿಯ ಪರ ನಿರ್ಲಜ್ಜೆಯಿಂದ ಓಡಾಡಿ ಮತ ಹಾಕುವುದಿಲ್ಲವೆ? ಹೀಗೆ ಪಂಗಡ, ಜಾತಿ, ಮತ, ಹೆಂಡ, ಹಣ ಮುಂತಾದ ಕ್ಷುಲ್ಲಕ, ಕೀಳು ವಿಷಯಗಳ ಆಧಾರದ ಮೇಲೆ ಮತ ಹಾಕುವ ಜನ, ನಂತರ ನಮ್ಮ ಊರುಕೇರಿ ಅಭಿವೃದ್ಧಿಯಾಗಲಿಲ್ಲ ಎಂದರೆ ಅದಕ್ಕೆ ಹೊಣೆ ಯಾರು? ಇಡೀ ಉತ್ತರ ಕರ್ನಾಟಕಕ್ಕೆ ದಕ್ಷಿಣ ಕರ್ನಾಟಕದ ಜನ ಒಟ್ಟಾಗಿ ಮೋಸ ಮಾಡುತ್ತಿದ್ದಾರೆಯೆ? ರಾಜ್ಯದ ಗ್ರಾಮೀಣ ಭಾಗಕ್ಕೆ ಬೆಂಗಳೂರು ನಗರ ಮೋಸ ಮಾಡುತ್ತಿದೆಯೆ?

ತಮ್ಮ ಊರು, ತಾಲ್ಲೂಕು, ಜಿಲ್ಲೆ ಉದ್ಧಾರವಾಗಲಿಲ್ಲ ಎನ್ನುವ ಜನ ಮೊದಲು ನೋಡಬೇಕಾದದ್ದು ತಮ್ಮನ್ನು ಪ್ರತಿನಿಧಿಸುತ್ತಿರುವವರು ಬೆಂಗಳೂರಿನಲ್ಲಿ ಕಟ್ಟಿಕೊಂಡಿರುವ ಅರಮನೆಗಳನ್ನು, ಆರ್ಥಿಕ ಸಾಮ್ರಾಜ್ಯಗಳನ್ನು, ಅವರು ಮಾಡುವ ತಮ್ಮ ಮಕ್ಕಳ ವೈಭವೋಪೇತ ಮದುವೆಗಳನ್ನು. ಸ್ವಂತಕ್ಕೆ ಇಷ್ಟೆಲ್ಲ ಮಾಡಿಕೊಳ್ಳುವ ಜನ ತಮ್ಮ ಕ್ಷೇತ್ರಕ್ಕೆ ಏನೂ ಮಾಡುತ್ತಿಲ್ಲ ಎಂದರೆ ಅದಕ್ಕೆ ನಾವು ಏನೋ ತಪ್ಪು ಮಾಡಿ ಅವರನ್ನು ಚುನಾಯಿಸಿದ್ದೇವೆ, ಅದಕ್ಕೆ ನಮ್ಮ ಕ್ಷೇತ್ರದ ಉಸಾಬರಿ ಮಾಡೆಂದು ಕೇಳುವ ಅಧಿಕಾರ ಕಳೆದುಕೊಂಡಿದ್ದೇವೆ ಎಂದು ಜನ ಭಾವಿಸಬೇಕೆ ಹೊರತು ತಮ್ಮ ಜನಪ್ರತಿನಿಧಿಗಳು ಏನೂ ಮಾಡುತ್ತಿಲ್ಲ ಎಂದಲ್ಲ. ಶಾಸಕರು ಏನೂ ಮಾಡಲಾಗದವರಾಗಿದ್ದರೆ ಅಷ್ಟೆಲ್ಲ ಕೋಟ್ಯಾಂತರ ರೂಪಾಯಿಗಳನ್ನು ಅದು ಹೇಗೆ ಮಾಡಿಕೊಳ್ಳುತ್ತಿದ್ದರು? ಮುಂದಿನ ಚುನಾವಣೆಗೆ ಊರಿಗೆ ಬಂದು ಜಾತಿ-ಮತ-ಹಣ-ಹೆಂಡದಿಂದಲೆ ಮತ್ತೊಂದು ಚುನಾವಣೆ ಹೇಗೆ ಗೆಲ್ಲುತ್ತಿದ್ದರು?

ವಿಶೇಷ ವಿಧಾನಮಂಡಲ ಅಧಿವೇಶನ ಬೆಳಗಾವಿಯಲ್ಲಾದಾಗ ರಾಜ್ಯದ ಎಲ್ಲಾ ಶಾಸಕರು ಅಲ್ಲಿ ಇಷ್ಟು ತುರಾತುರಿಯಲ್ಲಿ ಸೇರಬೇಕಾಗಿ ಬಂದ ಕಾರಣವನ್ನು ಗಮನಿಸಿ, ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅದೊಂದನ್ನೆ ಚರ್ಚಿಸಬೇಕಿತ್ತು. ಅದಕ್ಕಾಗಿ ಶಾಸನಗಳನ್ನು ರೂಪಿಸಬೇಕಿತ್ತು. ಸರ್ಕಾರಕ್ಕೆ ಸಲಹೆ ಸೂಚನೆ ಕೊಡಬೇಕಿತ್ತು. ವಿಶೇಷವಾಗಿ ಉತ್ತರ ಕರ್ನಾಟಕದ ಶಾಸಕರು ಇದರ ಸದುಪಯೋಗ ಪಡಿಸಿಕೊಂಡು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸರ್ಕಾರದಿಂದ ಕಾರ್ಯಕ್ರಮ ಅನುಷ್ಠಾನಗೊಳಿಸಿಕೊಳ್ಳಬೇಕಿತ್ತು; ಕೇವಲ ಬಾಯಿ ಮಾತಿನ ಆಶ್ವಾಸನೆಗಳನ್ನಲ್ಲ. ಆದರೆ ಆದದ್ದೇನು? ಧರಂ, ಖರ್ಗೆ, ಪಾಟೀಲ್ ಆದಿಯಾಗಿ ಉತ್ತರ ಕರ್ನಾಟಕದ ಅನೇಕ ಧೀಮಂತ ಶಾಸಕರು ಈ ಅಧಿವೇಶನ ಕರೆದಿರುವ ಔಚಿತ್ಯ ಮತ್ತು ಕ್ರಮಬದ್ಧತೆಯನ್ನು ಪ್ರಶ್ನಿಸುತ್ತ ಗಲಭೆ ಗದ್ದಲ ಎಬ್ಬಿಸಿದರೆ ಹೊರತು ಇದೊಂದು ವಿಶೇಷ ಅಧಿವೇಶನ, ಇಲ್ಲಿ ರಾಜಕೀಯ ಬೇಡ ಎಂದುಕೊಳ್ಳಲಿಲ್ಲ! ಅವರು ಹೀಗೆ ನಡೆದುಕೊಳ್ಳಲು ಅವರಲ್ಲ ಕಾರಣ. ಅವರನ್ನು ಪದೇಪದೆ ಚುನಾಯಿಸಿದ ಮತದಾರರು. ಇದು ನಮ್ಮ ತಪ್ಪುಗಳಿಗೆಲ್ಲ ಹೊಣೆ ಹೊರುವ ಸಮಯ. ಇನ್ನೊಬ್ಬರ ಮೇಲೆ ಜಾರಿಸಲು ಹೋದರೆ ನಮ್ಮ ಜೀವನ ಸಹನೀಯವಾಗಿರುವುದಿಲ್ಲ, ನಮ್ಮ ಮಕ್ಕಳು ಮೊಮ್ಮಕ್ಕಳು ನಮ್ಮನ್ನು ಕ್ಷಮಿಸುವುದಿಲ್ಲ.

ಈಗಲೂ ಕಾಲ ಮಿಂಚಿಲ್ಲ. ಉತ್ತರ ಕರ್ನಾಟಕದ, ಹಾಗೆಯೆ ಇಡೀ ರಾಜ್ಯದ ಗ್ರಾಮೀಣ ಭಾಗಗಳ ವಿದ್ಯಾವಂತ ಜನರು, ವಕೀಲರು, ಶಿಕ್ಷಕರು, ಸಮಷ್ಠಿ ಪ್ರಜ್ಞೆಯಲ್ಲಿ ಚಿಂತಿಸಿ, ನಾಯಕತ್ವ ವಹಿಸಿ, ಅಭಿವೃದ್ಧಿಯ ಸಾರಥ್ಯ ವಹಿಸಬಲ್ಲ ಯೋಗ್ಯರನ್ನು ಚುನಾಯಿಸುವ ಭೂಮಿಕೆ ಸಿದ್ಧಪಡಿಸಿಕೊಳ್ಳಬೇಕೆ ಹೊರತು ಜವಾಬ್ದಾರಿಯಿಂದ ನುಣುಚಿಕೊಳ್ಳುವುದಲ್ಲ. ಅಯೋಗ್ಯರು ಆಳುವುದು ಅಯೋಗ್ಯರನ್ನೆ. ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ ಸಾಗುವಂತೆ ಅಯೋಗ್ಯತೆಯಿಂದ...

Sep 24, 2006

ಮುಖ್ಯಮಂತ್ರಿ ಹೆಸರಿನ ಉಪ ಮುಖ್ಯಮಂತ್ರಿಗಳು-ಧರಂ, ಕುಮಾರ್

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 06, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಶಿಕ್ಷಣ ಬಚಾವೊ ಆಂದೋಲನವಂತೆ, ಅದು ವಾರದ ಹಿಂದೆ ಬೆಂಗಳೂರಿನಲ್ಲಿ ಶಿಕ್ಷಣ ಸಂಬಂಧಿ ವಿಚಾರ ಸಂಕಿರಣ ಏರ್ಪಡಿಸಿತ್ತಂತೆ. ಅಲ್ಲಿ ಪ್ರಾಸಂಗಿಕವಾಗಿ ಕರ್ನಾಟಕದ ಉನ್ನತ ಶಿಕ್ಷಣ (?) ಸಚಿವ ಡಿ.ಎಚ್. ಶಂಕರಮೂರ್ತಿ ಟಿಪ್ಪು ಸುಲ್ತಾನನ ಬಗ್ಗೆ ಮಾತನಾಡಿದರಂತೆ. ಅವರ ಪ್ರಕಾರ ಪರ್ಷಿಯನ್ ಅನ್ನು ರಾಜ್ಯ ಭಾಷೆ ಮಾಡಿದ ಟಿಪ್ಪು ಸುಲ್ತಾನನಿಗೆ ರಾಜ್ಯದ ಇತಿಹಾಸದಲ್ಲಿ ಸ್ಥಾನ ಕೊಡಬಾರದಂತೆ! ಆತ ಕನ್ನಡ ವಿರೋಧಿಯಂತೆ. ಬಲವಂತವಾಗಿ ಮತಾಂತರ ಮಾಡಿದನಂತೆ. ಶಂಕರಮೂರ್ತಿ ಇದೆಲ್ಲವನ್ನು ಹೇಳಿರುವುದು ಶಾಲಾ ಬಾಲಕರ ಮುಂದೆ ಎಂದು 'ವಿಜಯ ಕರ್ನಾಟಕ' ದಿನಪತ್ರಿಕೆಯಲ್ಲಿನ ಅಂದಿನ ಕಾರ್ಯಕ್ರಮದ ಚಿತ್ರ ನೋಡಿದರೆ ಗೊತ್ತಾಗುತ್ತದೆ. ಮಕ್ಕಳು ಮೈಸೂರು ಹುಲಿ ಟಿಪ್ಪು ಸುಲ್ತಾನ, ಅವನ ಒಳ್ಳೆಯ ಗುಣಗಳು ಇಂತಿಂತಹವು, ಎಂದೆಲ್ಲ ಓದುತ್ತಿದ್ದರೆ ಅವರ ಶಿಕ್ಷಣ ಮಂತ್ರಿ ಅಲ್ಲಿ ಬಂದು ಯಾರ್ರಿ ಹೇಳಿದ್ದು ಎಂದರೆ ಮಕ್ಕಳಿಗೆ ಪಾಠ ಮಾಡಿದ ಉಪಾಧ್ಯಾಯರು ಓಡುವುದಾದರೂ ಎಲ್ಲಿಗೆ? ಎಂತಹ ವೇದಿಕೆಯಲ್ಲಿ ಎಂತಹ ಮಾತು? ಇವರು ಶಿಕ್ಷಣ, ಅದೂ ಉನ್ನತ ಶಿಕ್ಷಣ ಸಚಿವರು!

ಟಿಪ್ಪು ಸುಲ್ತಾನ ಏನೇ ಇರಬಹುದು, ಆದರೆ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಜನ ಅವನನ್ನು ಒಪ್ಪಿಕೊಂಡದ್ದು ಬ್ರಿಟಿಷರ ವಿರುದ್ಧಹೋರಾಡಿದ ದೇಶಭಕ್ತನನ್ನಾಗಿ. 'ಆನಂದಮಠ' ಕಾದಂಬರಿಯಲ್ಲಿ ವಂದೇಮಾತರಂ ಗೀತೆ ಮುಸ್ಲಿಮರ ಆಡಳಿತವನ್ನು ಕೊನೆಗಾಣಿಸಿದ ಬ್ರಿಟಿಷರನ್ನು ಹೊಗಳುತ್ತ, ತಾಯಿ ಕಾಳಿಯನ್ನು ಸ್ತುತಿಸುತ್ತ ಹಾಡಿದರೆ ನಂತರ ಅದೇ ಗೀತೆಯನ್ನು ಬ್ರಿಟಿಷರ ವಿರುದ್ಧ ಹೋರಾಡಲು ಬಳಸಲಾಯಿತು. ಕಾಲಾಂತರದಲ್ಲಿ ಕಾದಂಬರಿಯಲ್ಲಿನ ಅದರ ಸಂದರ್ಭಕ್ಕಿಂತ ವಂದೇ ಮಾತರಂಎಂಬ ಎರಡು ಪದಗಳಲ್ಲಿರುವ ದೇಶಭಕ್ತಿ ಉತ್ತೇಜಕ ಸ್ಲೋಗನ್ ಗುಣ ಮುಖ್ಯವಾಯಿತು. ಕಾದಂಬರಿ ಓದಿರದ ಬಂಗಾಳಿಗಳು, ಬಂಗಾಳಿಗಳಲ್ಲದವರು, ಅನಕ್ಷರಸ್ಥರು ಅದನ್ನು ತಾಯಿಕಾಳಿಗೆ ವಂದನೆ ಎನ್ನುವ ಅರ್ಥಕ್ಕಿಂತ ತಾಯಿನಾಡಿಗೆ ವಂದನೆ ಎಂಬ ರೀತಿಯಲ್ಲಿ ಬಳಸಿದರು. ಜನಗಣಮನದ ಮೂಲದ ಬಗ್ಗೆ ಏನೇ ಮಾತನಾಡಿದರೂ ನಾವು ಅದನ್ನು ನಮ್ಮ ರಾಷ್ಟ್ರಗೀತೆಯನ್ನಾಗಿ ಮಾಡಿಕೊಂಡಿರುವುದೇಕೆ?

ಇದೇ ರೀತಿಯಲ್ಲಿ ಕೆಲವೊಂದು ಐತಿಹಾಸಿಕ ವ್ಯಕ್ತಿಗಳಿಗೆ ಸಂದರ್ಭಕ್ಕನುಸಾರವಾಗಿ ಕೆಲವು ಮೂಲಭೂತ ನೈತಿಕ ಗುಣಗಳನ್ನು ಆರೋಪಿಸಿ ನೆನೆಸುವುದು, ಸಂದರ್ಭಕ್ಕೆ ಬಳಸಿಕೊಳ್ಳುವುದು ಎಲ್ಲಾ ಕಾಲ, ಸಮಾಜದಲ್ಲಿ ಆಗುವಂತಹುದು. ಟಿಪ್ಪು ಬ್ರಿಟಿಷರನ್ನು ಬಿಟ್ಟು ಇತರೆ ಸ್ಥಳೀಯ ರಾಜರ ವಿರುದ್ಧ ಹೋರಾಡಿ ಮಡಿದಿದ್ದರೆ ಆತನನ್ನು ಯಾರೂ ದೇಶಭಕ್ತ ಎನ್ನುತ್ತಿರಲಿಲ್ಲವೇನೊ. ಕೆಲವು ವೈಜ್ಞಾನಿಕ ಸಿದ್ಧಾಂತಗಳು ಬದಲಾಗುವ ತರಹವೆ ಹೊಸಹೊಸ ಸತ್ಯಗಳು ಹೊರಗೆ ಬಂದಂತೆಲ್ಲ ಇತಿಹಾಸವೂ ಬದಲಾಗುತ್ತಿರುತ್ತದೆ. ಕೆಲವು ವರ್ಷಗಳ ನಂತರ ಟಿಪ್ಪುವಿಗೊ, ಇನ್ನೊಬ್ಬನಿಗೊ ಹಾಗೆ ಆಗಲೂಬಹುದು. ಆಗಲೂ ಸಹ ಅವನ ಕೆಲವು ಗುಣಗಳು ಬದಲಾಗಬಹುದೆ ಹೊರತು ಟಿಪ್ಪುವನ್ನು ಕರ್ನಾಟಕದ, ಭಾರತದ ಇತಿಹಾಸದಿಂದ ತೆಗೆಯಲು ಸಾಧ್ಯವಿಲ್ಲ. ಅದು ಆದ ಪಕ್ಷದಲ್ಲಿ ಸತ್ಯವನ್ನು ಪ್ರಜ್ಞಾಪೂರ್ವಕವಾಗಿ ಮುಚ್ಚಿಟ್ಟಂತೆ. ಎಲ್ಲಾ ಮತಗಳಲ್ಲಿರುವ ಮೂಲಭೂತವಾದಿಗಳು ಮಾತ್ರ ಮಾಡುವ ಕೆಲಸ ಅದು.

ಆದರೆ, ಶಂಕರಮೂರ್ತಿ ಟಿಪ್ಪುವಿನ ವಿಷಯ ಕೆದಕಿರುವುದು ಇತಿಹಾಸದ ಸತ್ಯ ಬಗೆಯಲು ಅಲ್ಲ, ಬದಲಿಗೆ ಜನರಲ್ಲಿ ಭೇದ ಬಿತ್ತಲು, ಭಾವನೆಗಳನ್ನು ಕೆರಳಿಸಲು, ಮತ ರಾಜಕಾರಣಕ್ಕೆ ಒಂದು ಆಯುಧವನ್ನಾಗಿ ಬಳಸಲು. ಇದು ಯಾವ ಜವಾಬ್ದಾರಿಯ ಕೆಲಸ, ಇದೆಂತಹ ದೇಶಭಕ್ತಿ? ಇವರ ಪ್ರಕಾರ ಅಕ್ಬರ್‌ಗೆ ದಿ ಗ್ರೇಟ್ ಎನ್ನಬಾರದಂತೆ. ಅಕ್ಬರ್ ಎಂಬ ಪದದ ಅರ್ಥವೇ ದಿ ಗ್ರೇಟ್ ಎಂದು ಶಂಕರಮೂರ್ತಿಗಳೇ. ನೀವು ಇತಿಹಾಸದ ಪುಟಗಳಲ್ಲಿ ಅಕ್ಬರ್‌ನ ಹೆಸರನ್ನೆ ತಿದ್ದುವ ಬಗ್ಗೆ ಕಾರ್ಯೋನ್ಮುಖರಾಗುವುದು ಒಳ್ಳೆಯದು. ಬಾಬರ್‌ನ ಮೊಮ್ಮಗ ಎಂದು ತಿದ್ದಿಬಿಟ್ಟರೆ ಹೇಗೆ?

ಇಂತಹ ಅಧಿಕ ಪ್ರಸಂಗಿ ಶಿಕ್ಷಣ ಮಂತ್ರಿಯ ಕೆಳಗೆ ಶಿಕ್ಷಣ ಪಡೆಯುತ್ತಿರುವ ನಮ್ಮ ಮಕ್ಕಳು ನಿಜವಾಗಲೂ ನಾಳಿನ ಭವಿಷ್ಯವಾಗುತ್ತಾರಾ? ಅದು ಚೆನ್ನಾಗಿರುತ್ತದಾ? ಸರಿಪಡಿಸಿಕೊಳ್ಳಲು ಕಾಲ ಮಿಂಚಿಲ್ಲ. ಆದರೆ ಅದು ಸದ್ಯಕ್ಕೆ ಆಗುತ್ತದೆಯೆ? ಬಹುಶಃ ಇಲ್ಲ. ಏಕೆಂದರೆ...

ಕಾಂಗ್ರೆಸ್-ಜನತಾದಳ ಸಮ್ಮಿಶ್ರ ಸರ್ಕಾರದ ಧರಂಸಿಂಗ್ ಮತ್ತು ಭಾಜಪ-ಜನತಾದಳದ ಕುಮಾರಸ್ವಾಮಿಯವರನ್ನು ಅದು ಹೇಗೆ ಮುಖ್ಯಮಂತ್ರಿಗಳು ಎಂದು ಕರೆಯಬಹುದೊ ನನಗರ್ಥವಾಗುತ್ತಿಲ್ಲ. ಏಕೆಂದರೆ, ತಮ್ಮ ಮಂತ್ರಿಮಂಡಲದಲ್ಲಿ ದಳಕ್ಕೆ ಸೇರಿದ್ದ ಅರೆಪಾಲು ಮಂತ್ರಿಗಳು ಧರಂ ಸಿಂಗರಿಗೆ ನೇರವಾಗಿ ರಿಪೋರ್ಟ್ ಮಾಡಿಕೊಳ್ಳುತ್ತಿದ್ದರೆ? ಈಗಿನ ಮಂತ್ರಿಮಂಡಲದಲ್ಲಿ ಭಾಜಪಕ್ಕೆ ಸೇರಿರುವ ಮಂತ್ರಿಗಳು ಕುಮಾರಸ್ವಾಮಿಯವರಿಗೆ ರಿಪೋರ್ಟ್ ಮಾಡಿಕೊಳ್ಳುತ್ತಿದ್ದಾರಾ? ಹಾಗೆ ಕಾಣಿಸುವುದಿಲ್ಲ. ಭಾಜಪ ಮಂತ್ರಿಗಳ ವಿಷಯಕ್ಕೆ ಬಂದಾಗ ಕೊನೆಯ ಮಾತು ಯಡಿಯೂರಪ್ಪನವರಿಗೆ ಬಿಟ್ಟದ್ದು, ಇಲ್ಲವೆ ಆ ಪಕ್ಷದ ನಾಯಕರಿಗೆ ಬಿಟ್ಟದ್ದು. ಅವರನ್ನು ತೆಗೆಯುವುದಕ್ಕಾಗಲಿ, ಸೇರಿಸಿಕೊಳ್ಳುವುದಕ್ಕಾಗಲಿ, ಪ್ರಶ್ನಿಸುವುದಕ್ಕಾಗಲಿ ಕುಮಾರಸ್ವಾಮಿಯವರಿಗೆ ಅಧಿಕಾರವಿದ್ದಂತಿಲ್ಲ.

ಹಾಗಾದರೆ, ಮುಖ್ಯಮಂತ್ರಿ ಎಂದು ಕಾಗದದ ಮೇಲಿದ್ದರೂ, ವಾಸ್ತವದಲ್ಲಿ ಕೇವಲ ಅರ್ಧ ಮಂತ್ರಿಮಂಡಲವನ್ನು ಮಾತ್ರ ನಿಭಾಯಿಸಲು ಅಧಿಕಾರವಿರುವ (ಉಪ)ಮುಖ್ಯಮಂತ್ರಿಗಳೇ ಅಲ್ಲವೆ ಇವರು? ಆಲ್‌ಮೋಸ್ಟ್ ಮುಖ್ಯಮಂತ್ರಿಗಳಿದ್ದಷ್ಟು ಅಧಿಕಾರವಿದ್ದ ಉಪಮುಖ್ಯಮಂತ್ರಿಗಳು ಧರಂ ಸಿಂಗ್ ಮತ್ತು ಕುಮಾರ ಸ್ವಾಮಿಯವರು ಎಂದರೆ ತಪ್ಪಾಗುತ್ತದೆಯೆ?

ಒಬ್ಬ ಮಂತ್ರಿಯನ್ನು ಸೇರಿಸಿಕೊಳ್ಳುವ ಅಥವ ಬಿಡುವ ವಿಷಯದಲ್ಲಿ ಮುಖ್ಯಮಂತ್ರಿಗೆ ಸಂಪೂರ್ಣ ಅಧಿಕಾರವಿರಬೇಕು. ಇಲ್ಲದಿದ್ದರೆ ಈಗಿನ ಸಮ್ಮಿಶ್ರ ಸರ್ಕಾರಗಳಲ್ಲಿ ಆಗುತ್ತಿರುವಂತೆ ತಮ್ಮ ಸ್ಥಾನಕ್ಕೆ ನಾಲಾಯಕ್ ಆದ ಮಂತ್ರಿಗಳು ಪಕ್ಷ ರಾಜಕಾರಣದಿಂದಾಗಿ ಮುಂದುವರಿಯುತ್ತಿರುತ್ತಾರೆ. ಅದರಿಂದ ಜನಜೀವನಕ್ಕೆ ಅಪಾಯ, ಅಭಿವೃದ್ಧಿಗೆ ಮಾರಕ. ಬೇರೆ ದೇಶಕ್ಕೆ ನಮ್ಮ ನಾಡಿನ ನೆಲ-ಜಲ-ಜನವನ್ನು ಮಾರಿಕೊಳ್ಳುವುದು ಮಾತ್ರವೆ ದೇಶದ್ರೋಹವಲ್ಲ. ನಮ್ಮದೇ ದೇಶದ ಜನಕ್ಕೆ ಮೋಸ ಮಾಡುವುದು, ಜಾತಿಮತಗಳ ಹೆಸರಿನಲ್ಲಿ ಹಿಂಸೆ ಮಾಡುವುದು, ಭಾವನೆಗಳನ್ನು ಕೆರಳಿಸಿ ಅಪನಂಬಿಕೆ ಹುಟ್ಟಿಸುವುದು, ಸಮಾನತೆಯ ಹೆಸರಿನಲ್ಲಿ ಪ್ರಜಾಪ್ರಭುತ್ವ ವಿರೋಧಿ ಸಿದ್ಧಾಂತದ ಮೇಲೆ ಬಂದೂಕು ಹಿಡಿಯುವುದು, ಸರಿಯಾದ ಆಡಳಿತ ಕೊಡಲಾಗದಿರುವುದು, ಇವೆಲ್ಲವೂ ದೇಶದ್ರೋಹಗಳೆ. ತಮ್ಮ ಮಂತ್ರಿಮಂಡಲದ ಸದಸ್ಯರೆ ಮೇಲುನೋಟಕ್ಕೆ ಇಂತಹ ದೇಶದ್ರೋಹಿ ಕೃತ್ಯದಲ್ಲಿ ತೊಡಗಿರುವಾಗ ಅಂತಹ ಮಂತ್ರಿಯನ್ನು ವಜಾ ಮಾಡುವ ಅಧಿಕಾರ ಮುಖ್ಯಮಂತ್ರಿಗಿಲ್ಲದಿದ್ದರೆ, ಅದಕ್ಕೆ ಯಾರು ಹೊಣೆ? ಮತದಾರರೆ ಇರಬೇಕಲ್ಲವೆ?

ಹಾಗಿದ್ದಲ್ಲಿ, ನಮ್ಮ ಕರ್ನಾಟಕಕ್ಕೆ ಇಡೀ ಮಂತ್ರಿಮಂಡಲದ ಮೇಲೆ ಸಂವಿಧಾನಬದ್ಧವಾದ ಅಧಿಕಾರ ಮತ್ತು ನಿಯಂತ್ರಣ ಹೊಂದಿರಬೇಕಾದ ಮುಖ್ಯಮಂತ್ರಿಗಳ ಅವಶ್ಯಕತೆಯಿಲ್ಲವೆ? ಸಂವಿಧಾನೇತರ ಶಕ್ತಿಗಳು ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಯಾರಿಗೂ ಜವಾಬ್ದಾರರಾಗದಿರುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದೆ? ಮುಂದಿನ ಸಾರಿಯ ವಿಧಾನಸಭಾ ಚುನಾವಣೆಯಲ್ಲಿ ಜನ ಯೋಚಿಸಬೇಕಾದ ವಿಷಯ ಇದು.

Sep 17, 2006

ಗೃಹ ಖಾತೆಯೆನ್ನುವುದು ಒಂದಿದೆಯೆ?

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 29, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಕರ್ನಾಟಕ ರಾಜ್ಯದ ಗೃಹ ಸಚಿವರಾದ ಎಂ.ಪಿ. ಪ್ರಕಾಶ್ 'ಈ ವರ್ಷವೂ ಯಾವುದೇ ಕಾರಣಕ್ಕೂ ಬಾಬಾಬುಡನ್‌ಗಿರಿಯ ಶೋಭಾಯಾತ್ರೆಗೆ ಅವಕಾಶ ಕೊಡುವುದಿಲ್ಲ. ಅದನ್ನು ನಿಷೇಧಿಸುತ್ತೇವೆ' ಎಂದು ಪತ್ರಕರ್ತರಿಗೆ ಹೇಳಿಕೆ ಕೊಡುತ್ತಾರೆ. ಅದಾದ ಒಂದೆರಡು ದಿನಗಳಲ್ಲಿಯೆ ಆ ಖಾತೆಗೆ ಎಳ್ಳಷ್ಟೂ ಸಂಬಂಧವಿಲ್ಲದ, ಆದರೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಉನ್ನತ ಶಿಕ್ಷಣ ಸಚಿವ ಡಿ.ಎಚ್. ಶಂಕರಮೂರ್ತಿ, 'ಅದು ಪ್ರಕಾಶರ ಸ್ವಂತ ಅಭಿಪ್ರಾಯವೇ ಹೊರತು ಸರ್ಕಾರದ ತೀರ್ಮಾನವಲ್ಲ' ಎಂದು ಸ್ಪಷ್ಟಪಡಿಸುತ್ತಾರೆ! ಎಂ.ಪಿ. ಪ್ರಕಾಶ್ ಶಂಕರಮೂರ್ತಿಗೆ 'ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದೆ ಅಷ್ಟೆ' ಎಂದು ತಿಳಿಸಿದ್ದಾರಂತೆ! ಈಗ ನಮ್ಮನ್ನೆ ನಾವು ಕೇಳಿಕೊಳ್ಳೋಣ. ಮಂತ್ರಿಗಳಾದ ಮೇಲೆ ಕೊಡುವ ಹೇಳಿಕೆಗಳಿಗೆ ವೈಯಕ್ತಿಕ ಅಭಿಪ್ರಾಯಗಳಿಲ್ಲ, ಆ ಸ್ಥಾನದಿಂದ ಮಾತನಾಡಿದರೆ ಅದು ಸರ್ಕಾರದ ತೀರ್ಮಾನ ಎಂದು ಅರಿಯಲಾಗದಷ್ಟು ಬೇಜವಾಬ್ದಾರಿ, ತಮ್ಮ ಖಾತೆಯನ್ನು ಸಮರ್ಥಿಸಿಕೊಳ್ಳಲಾಗದಷ್ಟು, ನಿಭಾಯಿಸಲಾಗದಷ್ಟು ಮಹಾಮಹಿಮರನ್ನು ತಮ್ಮ ಮಂತ್ರಿಗಳನ್ನಾಗಿ ಪಡೆಯಲು ಕರ್ನಾಟಕದ ಜನತೆ ಮಾಡಿರುವ ಭಾಗ್ಯವಾದರೂ ಏನು? ಇವರು ನಮ್ಮ ಸಚಿವರಾಗಿ ಇನ್ನೆಷ್ಟು ಕಾಲ ನಮ್ಮ ಹಣೆಬರಹ ತಿದ್ದಬೇಕು?
ಸೋಮವಾರ, ಸೆಪ್ಟೆಂಬರ್ 18 ರಂದು, ಪ್ರಜಾವಾಣಿ ಪತ್ರಿಕೆ 'ಠಾಣೆಯಲ್ಲಿ ಮಂತ್ರಿ ರಂಪಾಟ' ಎಂಬ ಶೀರ್ಷಿಕೆಯಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ರಾಮಚಂದ್ರೇಗೌಡ ಬೆಂಗಳೂರು ನಗರದ ಪೋಲಿಸ್ ಠಾಣೆಯೊಂದಕ್ಕೆ ಹೋಗಿ ರಂಪಾಟ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ ಎಂದು ಪ್ರಕಟಿಸಿದೆ. ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಶಿವಣ್ಣ ಎನ್ನುವವರಿಗೆ ಗೌಡರ ನುಡಿಮುತ್ತು ಹೀಗಿತ್ತಂತೆ: 'ಏನ್ರೀ ಮನೆಗೆ ಬಾ ಅಂತ ಹೇಳಿದರೆ ಬರೋದಿಲ್ವಾ ನೀವು? ನಿಮ್ಮ ಕಮಿಷನರ್ ನೀಲಂ ಅಚ್ಯುತರಾವ್‌ಗೆ ಪೋನ್ ಮಾಡಿದರೆ ಅವರೇ ಒಂದು ಸೆಕೆಂಡ್‌ನಲ್ಲಿ ನಮ್ಮ ಮನೆಗೆ ಬರುತ್ತಾರೆ. ನೀವೇನು ಬಹಳ ಸ್ಮಾರ್ಟ್ ಆಗಿ ಬಿಹೇವ್ ಮಾಡ್ತೀರಾ?' ಇದು ನಿಜವೇ ಆಗಿದ್ದಲ್ಲಿ, ಒಂದು ಸೆಕೆಂಡ್‌ನಲ್ಲಿ ತಂತ್ರಜ್ಞಾನ ಇಲಾಖೆಯ ಮಂತ್ರಿಗಳ ಮನೆಗೆ ಹಾಜರಾಗುವ ಅಚ್ಯುತರಾವ್ ಅವರಂತಹ ದಕ್ಷ, ಚುರುಕು ಕಮಿಷನರ್‌ರನ್ನು ಪಡೆದಿರುವ ಬೆಂಗಳೂರಿನ ಪುಣ್ಯಕ್ಕೆ ಎಣೆಯುಂಟೆ?!

ಆದರೆ, ಹೌದು, ಎಣೆ ಇದೆ ಎನ್ನುತ್ತದೆ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಕೊಲೆ ಮತ್ತು ದರೋಡೆಗಳು. ಸೆಪ್ಟೆಂಬರ್ ಹನ್ನೊಂದರಿಂದ ಹದಿನೆಂಟರವರೆಗಿನ ದಿನಪತ್ರಿಕೆಗಳನ್ನು ಹರಡಿಕೊಂಡು ಕೂತರೆ ನಿಮಗೆ ಎದ್ದು ಕಾಣಿಸುವ ಸುದ್ದಿಗಳೆಂದರೆ: 'ಬೆಂಗಳೂರನ್ನು ತಲ್ಲಣಗೊಳಿಸಿದ ಭೂ ಮಾಫಿಯಾ - ಬೀದಿ ಕಾಳಗ, ರೌಡಿಗಳ ಹತ್ಯೆ''ನಗರದಲ್ಲಿ ದರೋಡೆಗಳ ಸರಮಾಲೆ' 'ದರೋಡೆಗೆ ಹೊಂಚು: ಐವರು ರೌಡಿಗಳ ಬಂಧನ' `ಬೆಂಗಳೂರಲ್ಲಿ ಒಟ್ಟು ಐದು ಕೊಲೆ' 'ಪಿಸ್ತೂಲ್ ತೋರಿಸಿ ನಗದು, ಚಿನ್ನಾಭರಣ ದರೋಡೆ' 'ಐದು ದರೋಡೆ ಪ್ರಕರಣ' 'ಲೇವಾದೇವಿದಾರನ ಕೊಲೆ: ಪರಾರಿ'

ದಿನಕ್ಕೊಂದರಂತೆ ಎದ್ದು ಕಾಣಿಸುವ ಈ ವರದಿಗಳಲ್ಲಿ ನಮ್ಮ ಗೃಹಖಾತೆ ಹೆಮ್ಮೆ ಪಟ್ಟುಕೊಳ್ಳುವಂತಹುದು ಏನಾದರೂ ಇದ್ದರೆ ಅದು 'ದರೋಡೆಗೆ ಹೊಂಚು: ಐವರು ರೌಡಿಗಳ ಬಂಧನ' ಮಾತ್ರ. ಮೇಲಿನ ಸುದ್ದಿಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ತಕ್ಷಣದ ಕೋಪದಲ್ಲಿ ನಡೆದುಬಿಡುವ ಕೊಲೆಗಳನ್ನು ಸೇರಿಸಿಲ್ಲ. ಈಗ ಮತ್ತೊಮ್ಮೆ ಯೋಚಿಸೋಣ. ಬೆಂಗಳೂರು ನಗರ ಸುರಕ್ಷಿತವಾಗಿದೆಯೆ? ಈ ಪರಿಯಲ್ಲಿ ಅಭಿವೃದ್ಧಿಯಾಗುತ್ತಿರುವ ನಗರವನ್ನು, ಅದರ ಸಂಕೀರ್ಣ ಸುರಕ್ಷತೆಯನ್ನುಗಮನಿಸುವಂತಹ ಮಂತ್ರಿಗಳಾಗಲಿ, ಅಧಿಕಾರಿಗಳಾಗಲಿ, ಮುಖಂಡರಾಗಲಿ ನಮಗೆ ಇಂದು ಇದ್ದಾರೆಯೆ? ನಾವು, ನಮ್ಮ ಹಿರಿಯರು, ನಮ್ಮ ಮಕ್ಕಳು ಮುಂದಕ್ಕೂ ನಿರಾತಂಕವಾಗಿ ಬದುಕುವ ಆಸೆ ಇದೆಯೆ?

ಇನ್ನು ಸೀಡಿ ಪ್ರಕರಣ. ಎರಡೇ ದಿನಗಳ ಅಂತರದಲ್ಲಿ ಎರಡನೇ ಮತ್ತು ಮೂರನೆ ಸೀಡಿ ಸ್ಫೋಟ ಎಂದು ಪತ್ರಿಕೆಗಳು ಪ್ರಕಟಿಸಿದವು. ಹಾಗಾದರೆ, ಮೊದಲ ಸೀಡಿ ಎಲ್ಲಿ ಸ್ಫೋಟವಾಯಿತು? ಜನಾರ್ಧನ ರೆಡ್ಡಿ ಬಳ್ಳಾರಿಯಲ್ಲಿ ತೋರಿಸಿದ್ದು ತಾನೆ? ಹಾಗಿದ್ದಲ್ಲಿ ಎರಡು ಮತ್ತು ಮೂರಕ್ಕೂ ರೆಡ್ಡಿಯೇ ಜವಾಬ್ದಾರರಲ್ಲವೆ? ಹೀಗೆ ಯೋಚಿಸಿಯೆ ಅಲ್ಲವೆ ಪತ್ರಿಕೆಗಳು ಎರಡು ಮತ್ತು ಮೂರನೆ ಸೀಡಿ ಎಂದು ಬರೆದದ್ದು? ಹಾಗಿದ್ದ ಪಕ್ಷದಲ್ಲಿ ನಮ್ಮ ಗೃಹ ಖಾತೆ ಏನು ಮಾಡುತ್ತಿದೆ? ಇವು ನಿಜವಾದ ವೀಡಿಯೊ ಚಿತ್ರವೊ ಇಲ್ಲಾ ಕೃತಕವಾಗಿ ತಯಾರಿಸಿದ್ದೊ ಎಂದು ನಮ್ಮ ಪೋಲಿಸ್ ಇಲಾಖೆ ಇಲ್ಲಿಯವರೆಗೆ ತಿಳಿದುಕೊಳ್ಳಲಾಗಲಿಲ್ಲ ಎಂದರೆ ಇಂತಹ ಅನಾದಿಕಾಲದ ತಂತ್ರಜ್ಞಾನ ಹೊಂದಿರುವವರ ಕೈಯಲ್ಲಿ ನಮ್ಮ ಭವಿಷ್ಯದ ಸುರಕ್ಷತೆಯನ್ನು ಕನಸುವುದಕ್ಕಿಂತ ಹಗಲು ಕನಸು ಬೇರೊಂದಿಲ್ಲ. ಅವು ಕೃತಕವೇ ಆಗಿರಲಿ, ಇಲ್ಲವೆ ನೈಜದ್ದೆ ಆಗಿರಲಿ, ಅವುಗಳ ಮೂಲ ಎಲ್ಲಿಯದು ಎನ್ನುವುದನ್ನು ಪೋಲಿಸ್ ಇಲಾಖೆ ಇಷ್ಟೊತ್ತಿಗೆ ಕಂಡು ಹಿಡಿದು ಜನಕ್ಕೆ ತಿಳಿಸಬೇಕಿತ್ತು. ಅದು ಕೃತಕವೇ ಆಗಿದ್ದಲ್ಲಿ ಈ ಸೀಡಿ ಪ್ರಕರಣ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಕಂಡ ಅತಿ ದೊಡ್ಡ ವಂಚನೆ. ಅಂತಹ ಪಕ್ಷದಲ್ಲಿ ಜನಾರ್ಧನ ರೆಡ್ಡಿ ಬಳ್ಳಾರಿಯ ಮನೆಯಲ್ಲಲ್ಲ, ಅಲ್ಲಿನ ಜೈಲಿನಲ್ಲಿ ಕಂಬಿ ಎಣಿಸಬೇಕು. ಸೀಡಿಯಲ್ಲಿರುವುದು ನಿಜವೇ ಆಗಿದ್ದಲ್ಲಿ ಚೆನ್ನಿಗಪ್ಪ, ಪ್ರಕಾಶ್, ಕುಮಾರ ಸ್ವಾಮಿಯಾದಿಯಾಗಿ ಹತ್ತಾರು ಜನ ತಮ್ಮ ಭ್ರಷ್ಟಾಚಾರ, ಅಧಿಕಾರ ದುರುಪಯೋಗದ ಪ್ರಯಕ್ತ ಬೆಂಗಳೂರಿನ ವಿಧಾನಸೌಧದಲ್ಲಲ್ಲ, ಪರಪ್ಪನ ಅಗ್ರಹಾರದ ಕಾರಾಗೃಹದ ಕತ್ತಲು ಕೋಣೆಯಲ್ಲಿ ತಮ್ಮ ಕೊನೆಗಾಲದ ತನಕ ಕಾಲ ತಳ್ಳಬೇಕು. ಇವೆರಡರಲ್ಲಿ ಒಂದು ಆಗಲೇಬೇಕು. ಇಲ್ಲದಿದ್ದಲ್ಲಿ ಕರ್ನಾಟಕದಲ್ಲಿ ಕಾನೂನು, ನ್ಯಾಯ, ಆಡಳಿತ, ನೈತಿಕತೆ ಸತ್ತಿದೆ ಎಂದೇ ಅರ್ಥ. ನೀವು ಈ ಮಾತಿಗೆ ನಗುತ್ತಿರುವಿರಿ ಎಂದಾದರೆ, ಇವೆಲ್ಲ ನಮ್ಮಲ್ಲಿ ಎಂದೋ ಸತ್ತಿವೆ, ಮತ್ತು ನಮಗೆ ಅವುಗಳ ಅವಶ್ಯಕತೆಯಿಲ್ಲ, ಹಾಗೂ ನಾನು ಅಸಾಧ್ಯವನ್ನು ಬಯಸುವ ಹಗಲುಗನಸಿನ ಆಶಾವಾದಿ ಎಂದರ್ಥ, ಅಲ್ಲವೆ?

ನನ್ನ ಇಲ್ಲಿನ ಐದಾರು ವರ್ಷಗಳ ಅನುಭವ ಮತ್ತು ಈ ದೇಶದಲ್ಲಿನ ಕೆಲವು ನೈಜ ಘಟನೆಗಳನ್ನಾಧರಿಸಿದ ಸಿನೆಮಾ ಮತ್ತು ಡಾಕ್ಯುಮೆಂಟರಿಗಳನ್ನು ನೋಡಿದ ಅನುಭವದ ಮೇಲೆ ಯೋಚಿಸಿದಾಗ ಅನ್ನಿಸುವುದು, ಗಣಿಕಪ್ಪ ಮತ್ತು ಸೀಡಿಯಂತಹ ಘಟನೆ ಇಲ್ಲೇನಾದರು ಜರುಗಿದ್ದರೆ ಟೀವಿ ಮತ್ತು ಪತ್ರಿಕಾ ಮಾಧ್ಯಮವೇ ಸಾಕಿತ್ತು ತಪ್ಪಿತಸ್ಥರನ್ನು ಜೈಲಿಗೆ ಹಾಕಲು. ಇಲ್ಲಿನವರು ಅಷ್ಟೊಂದು ವೃತ್ತಿಪರರು, ದೇಶಭಕ್ತರು, ಸಂವೇದನೆ ಉಳ್ಳವರು. ಕರ್ನಾಟಕದ ಯಾವುದೊ ಮೂಲೆಯಲ್ಲಿ ಕೇವಲ ಹತ್ತಾರು ಜನ ವಿದ್ಯಾರ್ಥಿಗಳು ಮೀಸಲಾತಿ ವಿರೋಧಿ ಪ್ರತಿಭಟನೆ ಮಾಡಿದರೆ ಅದನ್ನೆ ಮುಖಪುಟದ ಮುಖ್ಯ ಸುದ್ದಿ ಮಾಡಿ, ಜನರ ಭಾವನೆಗಳನ್ನು ಕೆರಳಿಸಿ ತಮ್ಮದೇನಾದರೂ ಸ್ವಾರ್ಥ ಇದ್ದರೆ ಅದನ್ನು ಈಡೇರಿಸಿಕೊಳ್ಳುವಂತಹ ಪತ್ರಕರ್ತರು ನಮ್ಮ ನಡುವೆ ಇರುವಾಗ, ಅವರು ಎಷ್ಟು ನಿಜ ಹೇಳಿದರೆ ತಾನೆ ಜನ ನಂಬುತ್ತಾರೆ, ಅಧಿಕಾರಸ್ಥರು ಬೆಚ್ಚುತ್ತಾರೆ? ಇವೆಲ್ಲವನ್ನು ನೋಡಿದರೆ, ನಮ್ಮ ಭವಿಷ್ಯ ಹೇಗಿರಬೇಕು, ನಮ್ಮ ನಾಯಕರು ಹೇಗಿರಬೇಕು, ನಮ್ಮ ನೈತಿಕ ಪ್ರಜ್ಞೆ ಯಾರಾಗಿರಬೇಕು, ಯಾರನ್ನು ನಂಬಬೇಕು, ಯಾರನ್ನು ಓದಬೇಕು ಎಂದೆಲ್ಲ ಯೋಚಿಸಬೇಕಾದ ಸಮಯ ಈಗ ಬಂದು ಬಿಟ್ಟಿದೆ. ಏಕೆಂದರೆ ಈಗ ಕಾಲ ನಿಜವಾಗಲೂ ಕೆಟ್ಟಿದೆ. ರೆಡ್ಡಿ ಅಥವ ಈಗಿನ ಮಂತ್ರಿಮಂಡಲದ ಕೆಲವು ಸದಸ್ಯರು ಕಂಬಿ ಎಣಿಸುವ ತನಕ ಅದು ಕೆಟ್ಟೇ ಇರುತ್ತದೆ.

Sep 10, 2006

ಭೈರಪ್ಪನವರ ಬೈರಿಗೆ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 22, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಸಮ್ಮೇಳನದಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಇದ್ದಿದ್ದರಲ್ಲಿ ಪರವಾಗಿಲ್ಲ ಎಂಬಷ್ಟು ಜನ ಇದ್ದದ್ದು ಭೈರಪ್ಪನವರೊಂದಿಗೆ ಇದ್ದ ಸಂವಾದದ ಕಾರ್ಯಕ್ರಮದಲ್ಲಿ. ಅಮೇರಿಕಾದಲ್ಲಿನ ಕನ್ನಡ ಓದುಗರಲಿಯೂ ಭೈರಪ್ಪ ಜನಪ್ರಿಯ ಸಾಹಿತಿ. ಇದಕ್ಕೆ ಮುಖ್ಯ ಕಾರಣ, ತಮ್ಮ 20-30 ರ ವಯಸ್ಸಿನ ಆಸುಪಾಸಿನಲ್ಲಿ ಈ ದೇಶಕ್ಕೆ ಬಂದಿರುವ ಬಹುಪಾಲು ಕನ್ನಡಿಗರ ಕನ್ನಡ ಓದು ನಿಂತಿರುವುದು ಭೈರಪ್ಪನವರ ಕಾದಂಬರಿಗಳೊಂದಿಗೆ. ಅಲ್ಲಿಂದೀಚೆ ಬಂದ ಇತರ ಮಹತ್ವದ ಲೇಖಕರನ್ನಾಗಲಿ ಅಥವ ಕುವೆಂಪು, ಕಾರಂತ, ಅನಂತಮೂರ್ತಿ, ಲಂಕೇಶರನ್ನಾಗಲಿ ಬಹಳ ಜನ ಓದಿರುವುದು ಕಮ್ಮಿ. ಹೀಗಾಗಿ ಬಹಳಷ್ಟು ಜನರಿಗೆ ಭೈರಪ್ಪನವರ ಬಗ್ಗೆ ಪೂಜ್ಯ ಭಾವನೆ!

ಸಂವಾದದಲ್ಲಿ ಭೈರಪ್ಪನವರಿಗೆ ಕೇಳಿದ ಮೊದಲ ಎರಡು ಪ್ರಶ್ನೆಗಳಿಗೆ ಅವರು ಕೊಟ್ಟ ಉತ್ತರಗಳು ಕುತೂಹಲಕಾರಿಯಾಗಿದ್ದವು. ಮೊದಲನೆಯದು ಅವರ ಸಾಕ್ಷಿಕಾದಂಬರಿಯಲ್ಲಿ ಬರುವ ಮಂಜಯ್ಯ ಪಾತ್ರದ ಕುರಿತಾಗಿತ್ತು. "ಸಾಕ್ಷಿಯ ಮಂಜಯ್ಯನನ್ನೇ ನೋಡಿ. ಆತ ಸತ್ತು ಪ್ರೇತವಾಗಿ ಯಮನ ಬಳಿಗೆ ಹೋಗುತ್ತಾನೆ. ಅಲ್ಲಿ ಯಮನಿಗೆ ಚಿತ್ರಗುಪ್ತರಿಂದ ಸತ್ಯ ಏನೆಂದು ಮೊದಲೇ ಗೊತ್ತಿದ್ದರೂ, ಯಮ ಸಹ ನಂಬುವಂತಹ ಮಾತು ಮಂಜಯ್ಯ ನುಡಿಯುತ್ತಾನೆ. ಯಮನನ್ನೇ ನಂಬಿಸಿಬಿಡುತ್ತಾನೆ. ಬದುಕಿದ್ದಾಗಲೂ ಅವನು ಸುಳ್ಳೇ ಹೇಳುತ್ತಿದ್ದ. ಸತ್ತ ಮೇಲೂ ಅವನು ಸುಳ್ಳೇ ಹೇಳುತ್ತಾನೆ. ಸುಳ್ಳನ್ನು ಬಿಡುವುದೇ ಇಲ್ಲ. ಜೀವನದಲ್ಲಿ ಸುಳ್ಳು ಪ್ರತಿಸಲವೂ ವಿಜೃಂಭಿಸುತ್ತಿರುತ್ತೆ. ಈಗಿನ ಪ್ರಪಂಚವನ್ನೇ ನೋಡಿ. ಯಾವಾಗಲೂ ಸುಳ್ಳಿಗೇ ಜಯ." ಭೈರಪ್ಪನವರು ಹೇಳುತ್ತಿರುವುದಾದರೂ ಏನು? ಹಾಗಾದರೆ ಅವರು ಹೇಳುತ್ತಿರುವುದೂ ಸುಳ್ಳಿರಬಹುದಲ್ಲ? ಎಂತಹ ಜೀವವಿರೋಧಿ ನಿರಾಶಾವಾದ? ಇವರು ಹೇಳುತ್ತಿರುವುದು ಒಂದು ರೀತಿ ನಿತ್ಯಪಾಪಿ ಸಿದ್ಧಾಂತವನ್ನಲ್ಲವೆ? ಆತ್ಮಗಳಲ್ಲಿ ಸಹ ಮೇಲು ಕೀಳುಗಳು ಉಂಟು ಎಂದಲ್ಲವೆ ಇವರು ಹೇಳುತ್ತಿರುವುದು? ಇದು ನಿಜವೆ? ಕೆಲವು ಮನುಷ್ಯರು ಪಾಪಿಯಾಗಿಯೆ ಹುಟ್ಟಿ ಪಾಪಿಗಳಾಗಿಯೇ ಸಾಯುತ್ತಾರೆಯೆ? ಅವರಿಗೆ ಮೋಕ್ಷವೇ ಇಲ್ಲವೆ?


ಇನ್ನೊಂದು ಪ್ರಶ್ನೆ, "ನೀವು ಮಹಾಭಾರತ ಆಧಾರಿತ ಪರ್ವ ಬರೆದಿರಿ. ರಾಮಾಯಣ ಆಧಾರಿತ ಕಾದಂಬರಿ ಇನ್ನೂ ಯಾಕೆ ಬರೆದಿಲ್ಲ." ಅದಕ್ಕವರು, "ರಾಮಾಯಣದ ಪಾತ್ರಗಳು ಒಂದು ರೀತಿ ಪರಿಪೂರ್ಣ. ಅವು ನಮ್ಮ ಇಡೀ ಸಂಸ್ಕೃತಿಯ ಆದರ್ಶಗಳು. ಜೀವನದ ಸರ್ವಶ್ರೇಷ್ಠ ಮೌಲ್ಯಗಳ ಅರಕ ರಾಮಾಯಣ. ಅದನ್ನು ಮರುಸೃಷ್ಟಿ ಮಾಡೋದಕ್ಕೆ ಹೋದರೆ ಇಡೀ ಸಂಸ್ಕೃತಿಯನ್ನು, ಮೌಲ್ಯಗಳನ್ನು, ನಮ್ಮ ಪರಂಪರೆಯನ್ನು ನಾಶ ಮಾಡಿದ ಹಾಗೆ. ಅಂತಹ ಕೆಲಸ ನನಗಿಷ್ಟವಿಲ್ಲ." ಅಂದರೆ ಭೈರಪ್ಪನವರ ಮಾತಿನ ಅರ್ಥ ರಾಮಾಯಣದ ಮರುಸೃಷ್ಟಿ ಮಾಡಿದವರೆಲ್ಲ ಕೆಟ್ಟವರು ಎಂದಲ್ಲವೆ? ಕುಮಾರವ್ಯಾಸ ಹೇಳಿದ ತಿಣುಕಿದನು ಫಣಿರಾಯ ರಾಮಾಯಣಗಳ ಭಾರದಲ್ಲಿ ಮಾತನ್ನು ನಂಬುವುದಾದರೆ, ಅದೆಷ್ಟು ಜನ ವಾಲ್ಮೀಕೇತರ ರಾಮಾಯಣ ಕತೃ ಪಾಪಿಗಳು ಭೂಮಿಯ ಮೇಲೆ ಇದ್ದಾರೆ, ಆಗಿ ಹೋಗಿದ್ದಾರೆ? ಹಿಂದೆ ಕುಳಿತಿದ್ದ ಸಾಹಿತಿಗಳೊಬ್ಬರು ಗೊಣಗುತ್ತಿದ್ದರು; "ಭೈರಪ್ಪನವರ ದೃಷ್ಟಿ ಕುವೆಂಪುರವರ ರಾಮಾಯಣ ದರ್ಶನಂ ಮೇಲಿದೆ," ಎಂದು!

ಅದೇ ವೇದಿಕೆಯಲ್ಲಿ ಭೈರಪ್ಪನವರು ಹೇಳಿದ ಇನ್ನೊಂದು ಮಾತು, "ಸಾಹಿತ್ಯದಿಂದ ಸಮಾಜ ಸುಧಾರಣೆ ಆಗೋದೆಲ್ಲ ಸುಳ್ಳು. ಈ ಸುಧಾರಣೆ, ಬದಲಾವಣೆ ಇವೆಲ್ಲ ಮಾರ್ಕ್ಸಿಸ್ಟ್ ಪದಪುಂಜಗಳು. ಇವೆಲ್ಲಾ ಬಹಳ ಅಪಾಯಕಾರಿ ಟರ್ಮಿನಾಲಜಿಗಳು." ಹಾಗಾದರೆ, ರಾಮಾಯಣವನ್ನು ಮರು ಸೃಷ್ಟಿಸಿದ ಮಾತ್ರಕ್ಕೆ ಸಮಾಜದಲ್ಲಿನ ಮೌಲ್ಯಗಳು ಕೆಟ್ಟುಹೋಗುತ್ತವಾ? ಸುಧಾರಣೆ ಸಾಧ್ಯವಿಲ್ಲವಾದರೆ ಕೆಡುಕೂ ಸಾಧ್ಯವಿಲ್ಲ ಅಲ್ಲವೆ? ಎಂತಹ ವಿರೋಧಾಭಾಸಗಳು ಮಾರಾಯ್ರೆ?

ಮಾಧ್ಯಮಗಳ ಭೂಗೋಳ ಜ್ಞಾನ!

ಕಾರ್ಯಕ್ರಮ ಮುಗಿಯುವುದಕ್ಕೆ ಇನ್ನೂ ೧೨ ಗಂಟೆಗಳ ಸಮಯ ಇದೆ ಎನ್ನುವಾಗಲೇ ಬೆಂಗಳೂರಿನಲ್ಲಿ ಕನ್ನಡ ದಿನಪತ್ರಿಕೆಗಳು "ಅಕ್ಕ ಸಮ್ಮೇಳನಕ್ಕೆ ತೆರೆ" ಎಂದು ಮುದ್ರಣಗೊಳ್ಳುತ್ತಿದ್ದವು. ಗುರುಕಿರಣರ ರಸಮಯ ಸಂಗೀತ ಕಾರ್ಯಕ್ರಮದೊಂದಿಗೆ ಸಮ್ಮೇಳನಕ್ಕೆ ತೆರೆ ಬಿತ್ತು ಎಂದು ಕರ್ನಾಟಕದಲ್ಲಿನ ಜನ ಬೆಳಿಗ್ಗೆಯ ಕಾಫಿಯೊಂದಿಗೆ ದಿನಪತ್ರಿಕೆಗಳಲ್ಲಿ ಓದುತ್ತಿದ್ದರೆ ಆ ಕಾರ್ಯಕ್ರಮ ಇಲ್ಲಿ ಇನ್ನೂ ಆರಂಭವೇ ಆಗಿರಲಿಲ್ಲ! ಕೊನೆಯ ದಿನದ ಕಾರ್ಯಕ್ರಮದ ಬೆಳ್ಳಂಬೆಳಗ್ಗೆ, ಬೆಂಗಳೂರಿನಿಂದ ಬಂದಿದ್ದ ಪತ್ರಕರ್ತರೊಬ್ಬರು ಇಲ್ಲಿಂದ ಅವರ ಪತ್ರಿಕೆಗೆ ವರದಿ ಮತ್ತು ಫೋಟೊಗಳನ್ನು ನನ್ನ ಲ್ಯಾಪ್‌ಟಾಪ್‌ನಿಂದಲೇ ಕಳುಹಿಸಿದರು. ಲೇಖನದಲ್ಲಿ ಏನಿತ್ತು ಎಂದು ನನಗೇನೂ ಗೊತ್ತಿರಲಿಲ್ಲ. ಮಾರನೆಯ ದಿನ ಆ ಪತ್ರಿಕೆಯ ವೆಬ್‌ಸೈಟ್ ತೆಗೆದು ನೋಡುತ್ತೇನೆ; ಇನ್ನೂ ಹದಿನೈದು ಗಂಟೆಗಳ ಕಾರ್ಯಕ್ರಮ ಇರುವಾಗಲೇ ಅಲ್ಲಿಗೆ ಬಂದಿದ್ದ ಕೆಲವರು ಅಳುತ್ತಾ ಭಾವಪೂರ್ಣ ವಿದಾಯ ತೆಗೆದುಕೊಂಡಿದ್ದರು! ಬೆಂಗಳೂರಿನಲ್ಲಿ ಸೋಮವಾರದ ಮುಂಜಾವು ಬಾಲ್ಟಿಮೋರ್‌ನಲ್ಲಿ ಇನ್ನೂ ಭಾನುವಾರದ ಮುಸ್ಸಂಜೆಯಾಗಿರುತ್ತದೆ ಎನ್ನುವ ಭೂಗೋಳದ ಸಾಮಾನ್ಯ ಜ್ಞಾನವೂ ಇಲ್ಲದಿದ್ದರೆ ಹೇಗೆ? ಇದನ್ನೆಲ್ಲ ಊಹಿಸಿಯೇ ಇರಬೇಕು ಅಮೇರಿಕದಿಂದ ನಮ್ಮ ಅಂತರ್ಜಾಲ ತಾಣಕ್ಕೆ ಇ-ಮೇಯ್ಲ್ ಕಳುಹಿಸಿದ್ದ ಓದುಗರೊಬ್ಬರು ಹೀಗೆ ಬರೆದಿದ್ದು:

"ಮಾನ್ಯ ಸಂಪಾದಕರಿಗೆ,

ಅಮೆರಿಕಾದ ಬಾಲ್ಟಿಮೋರಿನಲ್ಲಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ನಿಮ್ಮ ಪತ್ರಿಕೆ ಸಂಯಮದಿಂದ ವರ್ತಿಸುತ್ತಿರುವುದು ಮೆಚ್ಚಿಗೆ ತಂದಿತು. ಇಲ್ಲಿ ನಡೆಯುತ್ತಿರುವ ವಿಶ್ವಕನ್ನಡ ಸಮ್ಮೇಳನ ಒಂದು ರೀತಿಯಲ್ಲಿ ಹೊಟ್ಟೆ ತುಂಬಿದವರ ಜಾತ್ರೆ. ಹೆಂಗಸರಿಗೆ ತಮ್ಮ ಅಲಂಕಾರ ಪ್ರದರ್ಶಿಸಲು ಒಂದು ಪಾರ್ಟಿ. ಎಂಟು ಕೋಟಿ ವೆಚ್ಚದಲ್ಲಿ ನಡೆಸುತ್ತಿರುವ ಈ ಸಮ್ಮೇಳನದಿಂದ ಕನ್ನಡ ಉದ್ಧಾರವಾಗುತ್ತದೆಂಬುದು ದೊಡ್ಡ ಭ್ರಮೆಯಲ್ಲದೆ ಬೇರೇನಿಲ್ಲ.

ಈ ಸಮ್ಮೇಳನವನ್ನು ವರದಿ ಮಾಡಲು ಸಂತೆ ನೆರೆಯುವ ಮುನ್ನ ನೆರೆದಿರುವ ಗಂಟುಕಳ್ಳರಂತೆ, ಕರ್ನಾಟಕದಿಂದ ಇಲ್ಲಿ ಬಂದು ಠಿಕಾಣಿ ಹೂಡಿರುವ ಸಂಪಾದಕರುಗಳನ್ನು ನೋಡಿ ನನಗೆ ನಗು ಬರುತ್ತಿದೆ. ಇವರು ಇದೇ ಉತ್ಸಾಹವನ್ನು ಕರ್ನಾಟಕದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೂ ತೋರುವರೇ? ಅವರ ಜೊತೆಗೆ ಇಲ್ಲಿಯ ಕೆಲವು ಪ್ರಜ್ಞಾವಂತ ಬರಹಗಾರರೂ ಕೈಜೋಡಿಸಿ, ಅಕ್ಕ ಪದಾಧಿಕಾರಿಗಳನ್ನು ಹಾಡಿ ಹೊಗಳುತ್ತಿರುವುದು ಕಂಡು ವಿಷಾದವಾಗುತ್ತಿದೆ. "ಅಕ್ಕ"ದ ರೊಕ್ಕಸ್ಥರ ಅಧೀನರಾಗಿರುವ ಇವರು ಮಾಡುವ ವರದಿ ಎಷ್ಟರ ಮಟ್ಟಿಗೆ ವಸ್ತುನಿಷ್ಟವಾಗಿದ್ದೀತೋ ಆ ಕನ್ನಡಮ್ಮನೇ ಬಲ್ಲಳು!

ಯಾರ ಮೇಲೂ ದ್ವೇಷಾಸೂಯೆಗಳಿಲ್ಲದೆ, ನನ್ನ ಕಳಕಳಿಯನ್ನು ವ್ಯಕ್ತಪಡಿಸಲು ಮಾತ್ರ ಈ ಪತ್ರ ಬರೆದಿದ್ದೇನೆ.

ಸದಾಶಯ ಹೊತ್ತ ಕನ್ನಡಿಗ,

-ವಿನಯ್ ಅರಸೀಕೆರೆ, ಅಮೆರಿಕ"

Sep 3, 2006

'ಅಕ್ಕ' ಸಂಭ್ರಮದಲ್ಲಿ...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 15, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

"ಎಲ್ಲಾ ಅಡೆತಡೆಗಳನ್ನು ದಾಟಿ ವಿಮಾನ ಕ್ಷೇಮವಾಗಿ ನೆಲಕ್ಕಿಳಿಯಿತು." "ವಿಮಾನದಲ್ಲಿದ್ದವರೆಲ್ಲ ಸಂತೋಷವಾಗಿ ಚಪ್ಪಾಳೆ ತಟ್ಟಿ ವಿಮಾನ ಚಾಲಕರ ಕಾರ್ಯಕ್ಷಮತೆಯನ್ನು ಪ್ರಶಂಸಿಸಿದರು." ಹೀಗೆ ಅನೇಕ ಕಡೆ ಓದಿದ್ದೆ. ನನ್ನ ಹಲವಾರು ವಿಮಾನ ಪ್ರಯಾಣಗಳಲ್ಲಿ ಇಂತಹುದು ಎಂದೂ ಆಗಿರಲಿಲ್ಲ. ಆಗಬೇಕು ಎಂಬ ಆಸೆಯೂ ನನಗಿರಲಿಲ್ಲ. ಅಕ್ಕ ಸಮ್ಮೇಳನಕ್ಕೆ ಮೂರು ದಿನದ ಹಿಂದೆ ಅಮೇರಿಕದ ನೆಲ ಮುಟ್ಟಿದ ಅರ್ನೆಸ್ಟೊ ಚಂಡಮಾರುತ, ಕ್ರಮೇಣ ಬಲವೃದ್ಧಿಸಿಕೊಂಡು ಸಮ್ಮೇಳನ ನಡೆಯುತ್ತಿದ್ದ ಕಡೆಗೆ ತನ್ನ ಪಥ ಬದಲಾಯಿಸಿತ್ತು. ಹಾಗಾಗಿ ಅಮೇರಿಕದ ಬೇರೆ ಕಡೆಯಿಂದ ವಿಮಾನಗಳಲ್ಲಿ ಬರಬೇಕಾಗಿದ್ದವರಿಗೆಲ್ಲ ಸ್ವಲ್ಪ ಚಿಂತೆ ಪ್ರಾರಂಭವಾಗಿತ್ತು. ನನಗೂ ಇದು ಸುಮಾರು 4000 ಕಿ.ಮಿ. ದೂರದ ವಿಮಾನ ಪ್ರಯಾಣ.

ನಾನು ಇಳಿಯಬೇಕಾಗಿದ್ದ ವಿಮಾನ ವಾಷಿಂಗ್ಟನ್ ಡಿ.ಸಿ. ಸಮ್ಮೇಳನ ನಡೆಯುತ್ತಿರುವ ಜಾಗದಿಂದ 60 ಕಿ.ಮಿ. ದೂರದಲ್ಲಿತ್ತು. ಐದು ವರ್ಷಗಳ ಹಿಂದೆ ಆದ ಭಯೋತ್ಪಾದಕರ ಅಟ್ಟಹಾಸದ ನಂತರ ವಾಷಿಂಗ್ಟನ್ ಡಿ.ಸಿ.ಯಲ್ಲಿ ಇಳಿಯುವ ವಿಮಾನಗಳಲ್ಲಿ ಕೊನೆಯ 30 ನಿಮಿಷಗಳಲ್ಲಿ ಪ್ರಯಾಣಿಕರು ತಮ್ಮ ಕುರ್ಚಿಯಿಂದ ಎದ್ದು ಓಡಾಡುವಂತಿಲ್ಲ. ಅದನ್ನು ಘೋಷಿಸಿದ ವಿಮಾನದ ಚಾಲಕ. ಅಷ್ಟೊತ್ತಿಗೆ ವಿಮಾನ ಸ್ವಲ್ಪ ಮೇಲಕ್ಕೆ ಕೆಳಕ್ಕೆ ಒಲಾಡುತ್ತಿತ್ತು. ನೆಲದಿಂದ ೧೦ ಕಿ.ಮಿ. ಮೇಲೆ ಹಾರಾಡುವ ವಿಮಾನ, ಅಂತರಿಕ್ಷದಲ್ಲಿನ ವಾಯು-ಒತ್ತಡ ವೈಪರೀತ್ಯಗಳಿಂದಾಗಿ ಆಗಾಗ ಸ್ವಲ್ಪ ಓಲಾಡುತ್ತದೆ. ಇದ್ದಕ್ಕಿದ್ದಂತೆ ಹಾರುತ್ತಿರುವ ಎತ್ತರದಿಂದ ಹತ್ತಾರು ಅಡಿ ಕೆಳಕ್ಕೆ ಸರ್ರನೆ ಜಾರಿಬಿಡುತ್ತದೆ. ಆಗ ಪ್ರಯಾಣಿಕರಿಗೆ ರೋಲರ್‌ಕೋಸ್ಟರ್‌ನಲ್ಲಿ ಮೇಲಿಂದ ಕೆಳಕ್ಕೆ ಜರ್ರನೆ ಜಾರುವಾಗ ಆಗುವ ಅನುಭವವಾಗುತ್ತದೆ. ಅದೇ ರೀತಿ ನಮ್ಮ ವಿಮಾನವೂ ಮಾಡಲು ಪ್ರಾರಂಭಿಸಿತು. ಇದೂ ಆಗಾಗ ಆಗುವಂತೆ ಒಂದೈದು ನಿಮಿಷದಲ್ಲಿ ಮುಗಿಯುತ್ತದೆ ಎಂದುಕೆಂಡೆ. ಹತ್ತಾಯಿತು, ಇಪ್ಪತ್ತಾಯಿತು, ಮುಗಿಯಲೇ ಇಲ್ಲ. ಆಚೆ ನೋಡಿದರೆ ದಟ್ಟವಾದ ಮೋಡಗಳು. ನಾವು ಇನ್ನೂ ಎಷ್ಟು ಮೇಲೆ ಇದ್ದೇವೆ ಎಂದು ನೋಡೋಣವೆಂದರೆ ಮೋಡಗಳಲ್ಲಿ ಅಂಗೈ ಅಗಲ ಖಾಲಿ ಜಾಗವಿಲ್ಲ. ಟಾರು ಇಲ್ಲದ ರಸ್ತೆಗಳಲ್ಲಿ ನಮ್ಮ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ, ಅದೂ ಕೊನೇಯ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿರುವ ಅನುಭವ. ವಿಮಾನ 500 ಅಡಿ ಮೇಲೆ, ಮೋಡಗಳಿಗಿಂತ ಕೆಳಕ್ಕೆ ಬಂದ ಮೇಲೆ ಕೆಳಗೆ ಹಸಿರು ಮರಗಳು, ತುಂಬಿ ಹರಿಯುತ್ತಿರುವ ಪೋಟೋಮ್ಯಾಕ್ ನದಿ ಕಾಣಿಸುತ್ತಿತ್ತು. ಆಗಲೂ ವಿಮಾನದೊಳಗಿನ ಬಸ್ ಪ್ರಯಾಣ ನಿಂತಿರಲಿಲ್ಲ. ನೆಲವನ್ನು ಮುಟ್ಟಲು ಇನ್ನೇನು 40-50 ಅಡಿ ಮಾತ್ರ ಇದೆ, ಆಗಲೇ ರನ್‌ವೇ ಮೇಲೆ ಹಾರುತ್ತಿದೆ ಅನ್ನುವಾಗಲೂ ವಿಮಾನ ಗಾಳಿಯ ರಭಸಕ್ಕೆ ಎಡಕ್ಕೆ ಬಲಕ್ಕೆ ವಾಲಿತು. ನೆಲ ಮುಟ್ಟಿತು. ಬ್ರೇಕ್ ಹಾಕಿದಾಗ ಎಂದಿನಂತೆ ದೊಡ್ಡ ಶಬ್ದ ಕೇಳಿಸಿ, ವಿಮಾನ ನಿಯಂತ್ರಣಕ್ಕೆ ಬಂದಿದ್ದು ಒಳಗಿದ್ದವರಿಗೆಲ್ಲ ಗೊತ್ತಾಯಿತು. ಇನ್ನೇನೂ ತೊಂದರೆಯಿಲ್ಲ ಎಂದು ಖಾತ್ರಿಯಾಗಿದ್ದ ನನ್ನ ಪಕ್ಕದ ಅಮೇರಿಕನ್ ಪ್ರಯಾಣಿಕ ಮೊದಲನೆಯವನಾಗಿ ನಿಟ್ಟುಸಿರು ಬಿಟ್ಟು ಚಪ್ಪಾಳೆ ಹೊಡೆದ. ಅಲ್ಲಿಯವರೆಗೂ ಕಾದಿದ್ದವರಂತೆ ನಾವೆಲ್ಲ ಸೇರಿಕೊಂಡೆವು. ಆವನಿಗೆ ನಾನೆಂದೆ, "ಇದು ನಾನು ಕಂಡ ದ ಮೋಸ್ಟ್ ರಫ್ ಲ್ಯಾಂಡಿಂಗ್." "ನನಗಿದು ಎರಡನೆಯದು," ಎಂದ ಅವನು!

ಇಳಿದ ನಂತರ ಮುಕ್ಕಾಲು ಗಂಟೆಯ ಪ್ರಯಾಣ ಮಳೆ ಮತ್ತು ವಾರಾಂತ್ಯದ ಟ್ರಾಪಿಕ್ ಪ್ರಭಾವದಿಂದಾಗಿ ಎರಡೂವರೆ ಗಂಟೆ ತೆಗೆದುಕೊಂಡಿತು. ಸಮ್ಮೇಳನದ ಜಾಗಕ್ಕೆ ಬರುವಷ್ಟರಲ್ಲಿ ಯಡಿಯೂರಪ್ಪನವರು ತೆರೆಯ ಮೇಲೆ ಟೈ ಸಮೇತ ಸೂಟ್ ಧಾರಿಯಾಗಿ ಮಾತನಾಡುತ್ತಿದ್ದರು. ಸ್ವಲ್ಪ ಹೊತ್ತಾದ ಮೇಲೆ ಕ್ಯಾಲಿಫೋರ್ನಿಯಾದಿಂದ ಬಂದಿದ್ದ ಮತ್ತೊಬ್ಬ ಪರಿಚಯಸ್ಥರು ಸಿಕ್ಕರು. ನನ್ನ ವಿಮಾನದ ಅನುಭವ ಹೇಳಿದೆ. ಇದು ನಮ್ಮ ವಿಮಾನದಲ್ಲಿಯೂ ಆಯಿತು, ನನ್ನ ಪಕ್ಕದಲ್ಲಿ ಕುಳಿತಿದ್ದ ಹೆಂಗಸೊಬ್ಬರು "ಪ್ರೇಯಿಂಗ್ ಫಾರ್ ಹರ್ ಲೈಫ್," ಎಂದರವರು. ಸಮ್ಮೇಳನಕ್ಕೆ ಅಂದು ಬಂದ ಬಹಳಷ್ಟು ಜನರಿಗೆ ಆ ಅನುಭವವಾಗಿತ್ತು.

ಕರ್ನಾಟಕದ ಮಂತ್ರಿ ಮಹೋದಯರಿಗೆ, ಶಾಸಕರಿಗೆ, ತಾವು ಇನ್ನೂ ಹಾಲಿಗಳಿದ್ದಾಗಲೆ ತಮ್ಮ ಅಧಿಕಾರದ, ದೌಲಿನ ನಶ್ವರತೆಯ ಅರಿವು, ಅದೂ ಕನ್ನಡಿಗರ ಮಧ್ಯೆಯೇ ಆಗಬೇಕೆಂದರೆ ಅದಕ್ಕೆ ಪ್ರಶಸ್ತವಾದ ಸ್ಥಳ - ಅಕ್ಕ ಸಮ್ಮೇಳನ. ಕರ್ನಾಟಕದ ಎರಡನೇ ಮತ್ತು ಮೂರನೇ ಅಧಿಕಾರ ಸ್ಥಾನಗಳು ಸಾಮಾನ್ಯರಂತೆ ಒಬ್ಬೊಬ್ಬರೆ ಕುಳಿತು, ಎದ್ದು, ಅದೂ ಸಾಮಾನ್ಯರಲ್ಲಿ ಸಾಮಾನ್ಯವಾಗಿ ಓಡಾಡುತ್ತಿದ್ದದ್ದು ಎಲ್ಲಾ ಕಡೆ ಕಣ್ಣಿಗೆ ಕಾಣಿಸುತ್ತಿತ್ತು. ಇಲ್ಲಿರುವ ಅರ್ಧಕ್ಕಿಂತ ಹೆಚ್ಚಿನ ಅಮೇರಿಕನ್ನಡಿಗರಿಗೆ ಅವರ ಹೆಸರು ತಿಳಿದಿರುವುದೇ ಸಂದೇಹ. ಇನ್ನು ಅವರ ಜೊತೆ ಮುಖ್ಯಮಂತ್ರಿಯವರ ಪ್ರಾಯೋಜಕತ್ವದಲ್ಲಿ ಬಂದಿದ್ದ ಇತರ 20+ ಶಾಸಕರ ಬಗ್ಗೆ ಹೇಳುವುದೇ ಬೇಡ.

ಇಂತಹ ದೊಡ್ಡ ಸಮ್ಮೇಳನದ ವ್ಯವಸ್ಥೆ ಮಾಡುವಾಗ ಅನೇಕ ಅವ್ಯವಸ್ಥೆಗಳೂ ನಡೆಯುತ್ತವೆ. ೪೦೦೦ ಜನರಿಗೆ ದೊಡ್ಡ ಪರದೆಯ ಮೇಲೆ 'ಗಂಡುಗಲಿ ಕುಮಾರರಾಮ' ಚಿತ್ರ ಪ್ರದರ್ಶನ ಎಂದಿದ್ದರು. ತೋರಿಸಿದ್ದು 200+ ಕುರ್ಚಿಗಳ ಒಂದು ಹಾಲ್‌ನಲ್ಲಿ. ಇದ್ದದ್ದು 20+ ಜನ. ತಾರಾರವರ ಸೈನೈಡ್ ಚಿತ್ರಕ್ಕೆ ಮತ್ತು 'ಹಸೀನಾ' ಚಿತ್ರಕ್ಕೆ ಸಾಹಿತ್ಯದ ಕಾರ್ಯಕ್ರಮಗಳಿಗಿಂತ ಹೆಚ್ಚು ಜನ ಸೇರಿದ್ದರು. ಅಮೇರಿಕನ್ನಡತಿ ಯುವತಿಯೊಬ್ಬರು ನಿರ್ದೇಶಿಸಿದ್ದ `ಗುಟ್ಟು' ಚಲನಚಿತ್ರಕ್ಕೆ 200ಕ್ಕೂ ಮೇಲೆ ಜನ. ಈ ಚಿತ್ರಕ್ಕೆ ಒಳಕ್ಕೆ ಹೊರಕ್ಕೆ ಹೋಗುವವರ ಸಂಖ್ಯೆ ಜಾಸ್ತಿ ಇತ್ತು! ಶಾಸ್ತ್ರೀಯ ಮತ್ತು ಭಾವಗೀತೆಗಳ ಹಾಡುಗಳಿಗೆ ವ್ಯವಸ್ಥೆ ಮಾಡಿದ್ದ 300+ ಸೀಟುಗಳ ಸಭಾಂಗಣ ಕರ್ನಾಟಕದಿಂದ ಬಂದಿದ್ದ ಹಾಡುಗಾರರು ಹಾಡುತ್ತಿದ್ದಾಗಲೆಲ್ಲ ತುಂಬಿಹೋಗುತ್ತಿತ್ತು. ಎಸ್.ಪಿ. ಬಾಲಸುಬ್ರಹ್ಮಣ್ಯಮ್‌ರವರ ಹಾಡುಗಳಿಗೆ ಜನ ಖುಷಿಯಿಂದ ನರ್ತಿಸಿದರು. ಕವಿ ಪುತಿನರ ಮಗಳು ಅಲಮೇಲು ಅವರ ಅಮೇರಿಕದಲ್ಲಿನ ಕನ್ನಡ ಕುಟುಂಬಗಳೆರಡರ ಸರಸ ವಿರಸದ ಕತೆಯ 'ಕುಜದೋಷವೊ ಶುಕ್ರದೆಸೆಯೊ' ನಾಟಕವನ್ನೂ, ಸಂಭಾಷಣೆಯನ್ನೂ ಇಲ್ಲಿನವರು ಚೆನ್ನಾಗಿ ಆನಂದಿಸಿದರು.

ಇವೆಲ್ಲದರ ಮಧ್ಯೆ 'ಅಕ್ಕ' ಮಾಡುವ ಸಮಾಜಸೇವಾ ಕಾರ್ಯಕ್ರಮಗಳ ಬಗ್ಗೆ ಸಮರ್ಥವಾಗಿ ಜನಕ್ಕೆ ತಿಳಿಸಿಕೊಡುವಲ್ಲಿ ಸೋತು ಕೇವಲ ಮನರಂಜನಾ ಕಾರ್ಯಕ್ರಮ ಆಯೋಜಕ ಸಮಿತಿಯಾಗುತ್ತಿರುವುದು ಸ್ಪಷ್ಟವಾಗುತ್ತಿತ್ತು. ಇಂತಹ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸುವಾಗ ಏನೇನು ಅನಿವಾರ್ಯ ತೊಂದರೆಗಳಿರುತ್ತವೆ ಎನ್ನುವುದನ್ನು ಈ ಇ-ಮೇಯ್ಲ್‌ಗಳ ಯುಗದಲ್ಲಿಯೂ ವಿವರಿಸದೆ ತಪ್ಪು ಮಾಡದೆ ಬಂದಿದ್ದವರಿಂದ ಬೈಸಿಕೊಳ್ಳುತ್ತಿದ್ದರು. ಉದಾಹರಣೆಗೆ, ಊಟಕ್ಕೆ ಅರ್ಧ ಕಿ.ಮಿ. ದೂರ ವ್ಯವಸ್ಥೆ ಮಾಡಿದ್ದರಿಂದ ನೂರಾರು ಸಾವಿರ ಡಾಲರ್ ಉಳಿತಾಯವಾಗುತ್ತಿರುವದನ್ನು ವಿವರಿಸಿದ್ದರೆ ಸಾಕಿತ್ತು ಜನ ಅರ್ಥ ಮಾಡಿಕೊಳ್ಳುತ್ತಿದ್ದರು. ಇದು ನಾಲ್ಕನೇ ಸಮ್ಮೇಳನ. ಇಷ್ಟೊತ್ತಿಗೆ ಬಹಳಷ್ಟನ್ನು ಕಲಿಯಬೇಕಿತ್ತು. ಹಾಗೆಂದು ಅವರಿಂದ ಬಹಳಷ್ಟನ್ನು ಬಯಸುವುದು ಸಹಾ ತಪ್ಪು. ಸಮಿತಿಯಲ್ಲಿನ ಬಹಳಷ್ಟು ಜನ ಪ್ರತಿದಿನ ನೌಕರಿಗೆ ಹೋಗುವವರು, ಸ್ವಯಂಸೇವಕ ಕಾರ್ಯಕರ್ತರು. ಅತೀವ ಶ್ರಮ ಮತ್ತು ಸಮಯ ಬೇಡುವ ಸಮ್ಮೇಳನದ ಕೆಲಸಕ್ಕೆ ಅವರು ಒಂದು ಪೈಸೆ ಬಯಸುವುದೂ ಇಲ್ಲ, ಸಿಗುವುದೂ ಇಲ್ಲ (ಕೆಲವರಿಗೆ ಪ್ರಚಾರ ಬಿಟ್ಟು). ಅವರ ನಿಸ್ವಾರ್ಥ ಸೇವೆಯಲ್ಲಿ ಪದೇಪದೇ ತಪ್ಪು ಹಿಡಿಯುವುದು, ಅನುಕಂಪ ತೋರಿಸದಿರುವುದು ಸಹಾ ತಪ್ಪು. ಅನಾಮಧೇಯರಾಗಿ ದುಡಿದ ನೂರಾರು ಮಂದಿಗೆ ಬಂದ ಸಾವಿರಾರು ಮಂದಿ ಒಂದು ಹಂತದಲ್ಲಿ ಕೃತಜ್ಞರಾಗಿರಲೇಬೇಕು. ಈ ಲೇಖನ ಕಳಿಸುತ್ತಿರುವಾಗ ಇನ್ನೂ ಅರ್ಧ ದಿನದ ಕಾರ್ಯಕ್ರಮ ಇದ್ದಿದ್ದರಿಂದ, ಆ ನಿಸ್ವಾರ್ಥಿ, ಅನಾಮಧೇಯ ಕನ್ನಡಬಂಧುಗಳಿಗೆ ನನ್ನ ಧನ್ಯವಾದ ಮತ್ತು ಕೃತಜ್ಞತೆಗಳನ್ನು ಅರ್ಪಿಸುತ್ತ, ಉಳಿದವನ್ನು ಮುಂದಿನ ಕಂತಿನಲ್ಲಿ ಬರೆಯುತ್ತೇನೆ.