Mar 20, 2008

ಐಟಿ ಕ್ಷೇತ್ರಕ್ಕೆ ಬರಲಿದೆಯೆ ಕಷ್ಟದ ದಿನಗಳು?

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 28, 2008 ರ ಸಂಚಿಕೆಯಲ್ಲಿ ಈ ಲೇಖನ "ಐಟಿಗೆ ಬಂತು ಆಪತ್ತು" ಹೆಸರಿನಲ್ಲಿ ಪ್ರಕಟವಾಗಿದೆ.)

90 ರ ದಶಕದ ಆರಂಭದ ಸಮಯ ಅದು. ದೇಶದಲ್ಲಿ ಕಾಂಗ್ರೆಸ್ಸೇತರ ಸರ್ಕಾರಗಳ ಪ್ರಯೋಗ ಎರಡನೇ ಬಾರಿಗೂ ವಿಫಲವಾಗುತ್ತಿದ್ದ ಕಾಲಘಟ್ಟ. ಆ ಸಮಯದಲ್ಲಿ ಭಾರತ ಸರ್ಕಾರದ ಹಣಕಾಸು ಪರಿಸ್ಥಿತಿ ತೀರ ಹದಗೆಟ್ಟು ಚಂದ್ರಶೇಖರ್‌ರವರ ಸರ್ಕಾರ ಚಿನ್ನದ ರಿಸರ್ವ್ ಅನ್ನು ಅಡವಿಡಬೇಕಾಗಿ ಬಂತು. ಅದೇ ಸಮಯದಲ್ಲಿ ರಾಜಕೀಯ ಕಾರಣಗಳಿಗಾಗಿ ಆ ಸರ್ಕಾರ ಬಿದ್ದು ಹೋಯಿತು. ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ರಾಜೀವ್ ಗಾಂಧಿ ಶ್ರೀಲಂಕಾದ ತಮಿಳು ಭಯೋತ್ಪಾದಕರ ಬಾಂಬಿಗೆ ಬಲಿಯಾದರು. ಅದೇ ಅನುಕಂಪದ ಮೇಲೆ ಕಾಂಗ್ರೆಸ್ ಮೆಜಾರಿಟಿಯ ಹತ್ತಿರಕ್ಕೆ ತೆವಳಿಕೊಂಡಿತು. ಆಗ ಆಕಸ್ಮಿಕವಾಗಿ ಪ್ರಧಾನಿಯಾದವರು ನರಸಿಂಹರಾವ್. ಈಗಿನ ಪ್ರಧಾನಿ ಮನಮೋಹನ ಸಿಂಗರು ಆಗ ಭಾರತದ ಹಣಕಾಸು ಮಂತ್ರಿಯಾದರು. ದೇಶದ ಆರ್ಥಿಕ ಅಭಿವೃದ್ಧಿಗೆ ವಿದೇಶಿ ಸಹಾಯಮತ್ತು ವಿದೇಶಗಳ ಬಂಡವಾಳ ಬೇಕೆಬೇಕು ಎನ್ನುವ ಸ್ಥಿತಿಯಲ್ಲಿ ಮನಮೋಹನ ಸಿಂಗರು ಜಾಗತೀಕರಣದ ಪರವಾಗಿ ಸುಧಾರಣೆಗಳನ್ನು ತಂದರು. ವಿದೇಶಿ ಕಂಪನಿಗಳು ಭಾರತದಲ್ಲಿ ಕಾರ್ಖಾನೆಗಳನ್ನು ತೆರೆಯಲು, ವ್ಯವಹಾರ ಮಾಡಲು, ಮತ್ತಷ್ಟು ಸುಲಭವಾಗಿ ಭಾರತಕ್ಕೆ ಸಾಮಾನುಗಳನ್ನು ರಫ್ತು ಮಾಡಲು ಅನುವು ಮಾಡಿಕೊಟ್ಟರು. ಸಾಲ ಕೊಡುತ್ತಿದ್ದ ವಿಶ್ವಬ್ಯಾಂಕ್ ಆದೇಶದಂತೆ ನಷ್ಟದಲ್ಲಿದ್ದ ಅನೇಕ ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚಿದರು ಇಲ್ಲವೆ ಖರ್ಚು ಕಮ್ಮಿಯಾಗುವಂತೆ ನೋಡಿಕೊಂಡರು. ಒಟ್ಟಿನಲ್ಲಿ ದುಡ್ಡಿದ್ದ ಬೇರೆ ದೇಶದ ಶ್ರೀಮಂತರಿಗೆ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತದಲ್ಲಿ ದುಡ್ಡು ಹಾಕಿ ದುಡ್ಡು ತೆಗೆಯಲು ಸಾಧ್ಯವಿದೆ ಎನ್ನುವಂತಹ ವಾತಾವರಣ ನಿರ್ಮಿಸಿಕೊಟ್ಟರು.

ಮುಂದಿನ ಹಲವಾರು ವರ್ಷಗಳಲ್ಲಿ ಇಡೀ ದೇಶದ ಆರ್ಥಿಕ ಸ್ಥಿತಿಯೆ ಬದಲಾಗಿ ಹೋಯಿತು. ಲಕ್ಷಾಂತರ ಜನ ಇದ್ದ ಕೆಲಸ ಕಳೆದುಕೊಂಡರು. ಇನ್ನಷ್ಟು ಲಕ್ಷಾಂತರ ಜನಕ್ಕೆ ಹೊಸಹೊಸ ಉದ್ಯೋಗಗಳು ಸಿಕ್ಕವು. ಸಾಮಾನ್ಯ ರೈತರು ಕಂಗಾಲಾದರು. ಬುದ್ಧಿವಂತ ರೈತರು ಮತ್ತು ಸ್ಥಿತಿವಂತ ರೈತರು ರಫ್ತು ಮಾಡಬಹುದಾದ ವಾಣಿಜ್ಯ ಬೆಳೆಗಳಿಗೆ ಕೈಹಾಕಿ ಇನ್ನೂ ಸ್ಥಿತಿವಂತರಾದರು. ನೂರಾರು ಕಾರ್ಖಾನೆಗಳು, ಕಟ್ಟಡಗಳು ತಲೆಯೆತ್ತಿದವು. ಮೂಲಭೂತ ಸೌಕರ್ಯಗಳನ್ನು ಹೆಚ್ಚು ಮಾಡುವ ಈ ಕಾಮಗಾರಿಗಳಿಂದಾಗಿ ಲಕ್ಷಾಂತರ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾದವು. ಎಲ್ಲಾ ತರಹದ ಜನರಲ್ಲಿ ದುಡ್ಡು ಓಡಾಡಲಾರಂಭಿಸಿತು. ಶ್ರೀಮಂತರ ಕೈಯ್ಯಲ್ಲಿ ಇನ್ನೂ ಹೆಚ್ಚಿಗೆ ದುಡ್ಡು ಓಡಾಡಿತು. (ಆದರೆ ಭಾರತದ ಸಮಾಜ ಬಹಳ ದೊಡ್ಡ, ಸಂಕೀರ್ಣ ಸಮಾಜ. ಸಮಗ್ರವಾಗಿ, ಸಮತೋಲನವಾಗಿ, ಸಮಾನವಾಗಿ ಈ ಅಭಿವೃದ್ಧಿ ಆಗಲಿಲ್ಲ.)

ಆ ಸಮಯದಲ್ಲಿನ ಬೆಂಗಳೂರಿನ ಸುತ್ತಮುತ್ತಲ ಕತೆಯನ್ನೆ ತೆಗೆದುಕೊಳ್ಳೋಣ. ಉದಾರಿಕರಣದಿಂದಾಗಿ ಮತ್ತು ಆಗ ಭಾರತದಲ್ಲಿ ಬೆಳೆಯುತ್ತಿದ್ದ ಐಟಿ ಉದ್ಯಮದಿಂದಾಗಿ ಐಟಿ ಕಂಪನಿಗಳಿಗೆ ಬೆಂಗಳೂರಿನ ಸುತ್ತಮುತ್ತ ಎಲ್ಲೆಂದರಲ್ಲಿ ಕಟ್ಟಡಗಳು ಬೇಕಾಗಿದ್ದವು. ಅದು 1994 ರ ಸುಮಾರು. ಸಿಂಗಪುರ್ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ವೈಟ್‌ಫೀಲ್ಡ್ ಹತ್ತಿರ ಐಟಿ ಪಾರ್ಕ್ ಕಟ್ಟಡದ ಕಾಮಗಾರಿ ಆರಂಭವಾಯಿತು. ಇನ್ನೂ ಅನೇಕ ಕಡೆ ಸ್ಥಳೀಯ ಶ್ರೀಮಂತರೆ ದೊಡ್ಡದೊಡ್ಡ ಕಟ್ಟಡಗಳನ್ನು ಕಟ್ಟಿ ಸಾಪ್ಟ್‌ವೇರ್ ಕಂಪನಿಗಳಿಗೆ ಬಾಡಿಗೆ ಕೊಡಲಾರಂಭಿಸಿದರು. ಶ್ರೀಮಂತರ ಕೈಯ್ಯಲ್ಲಿ ಮೊದಲೆ ಹೆಚ್ಚಿನ ದುಡ್ಡು ಓಡಾಡುತ್ತಿತ್ತು. ಆಗ ಇನ್ನೂ ಜಾಸ್ತಿಯಾಯಿತು. ಜೊತೆಗೆ ಆಗ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಜಾಸ್ತಿಯಾದರು. ಮನೆಗಳು, ಫ್ಲಾಟ್‌ಗಳು ಇನ್ನೂ ಹೆಚ್ಚಿಗೆ ಬೇಕಾಗಿ ಬಂತು. ಸರಿ, ಶುರುವಾಯಿತು ರಿಯಲ್ ಎಸ್ಟೇಟ್ ಎಂಬ "ಗೋಲ್ಡ್ ರಷ್." ವೈಟ್‌ಫೀಲ್ಡ್‌ನ ಹತ್ತಿರ ಒಂದು ಎಕರೆ ಜಮೀನು ಕೋಟಿ ರೂಪಾಯಿಗೆ ಕಮ್ಮಿ ಇಲ್ಲದಂತೆ ಮಾರಾಟವಾಯಿತು. ಎಲೆಕ್ಟ್ರಾನಿಕ್ ಸಿಟಿಯ ಹತ್ತಿರ ಎಕರೆಗೆ ಒಂದೆರಡು ಲಕ್ಷ ಮಾತ್ರ ಇದ್ದ ಗದ್ದೆಗಳೆಲ್ಲ ರಾತ್ರೋರಾತ್ರಿ ನಾಲ್ಕೈದು ಲಕ್ಷಕ್ಕೆ ಏರಿಬಿಟ್ಟಿತು. ಇವೆಲ್ಲ ಕೈಬದಲಾಯಿಸಿಕೊಳ್ಳುವ ವ್ಯವಹಾರಗಳು. ಹಾಗಾಗಿ ಮುಂದಿನ ವರ್ಷದಷ್ಟೊತ್ತಿಗೆ ಬೆಂಗಳೂರಿನ ಸುತ್ತಮುತ್ತ ಎಕರೆಗೆ ಹತ್ತಿಪ್ಪತ್ತು ಲಕ್ಷ ಬೆಲೆಯಾಗಿಬಿಟ್ಟಿತು. ಬೆಂಗಳೂರಿನಲ್ಲಿ ಸೈಟುಗಳ ಕತೆಯೂ ಇದೇ ಆಯಿತು.

ಆಗ ಕರ್ನಾಟಕದಲ್ಲಿ ದೇವೆಗೌಡರು ಮುಖ್ಯಮಂತ್ರಿ. ಬೆಂಗಳೂರಿನಲ್ಲಿ ಎಲ್ಲಾ ತರಹದ ಆರ್ಥಿಕ ಚಟುವಟಿಕೆ ಉತ್ತುಂಗದಲ್ಲಿದ್ದ ಕಾಲ. ತಮ್ಮ ಅವಧಿ ಮುಗಿದ ನಂತರ ನಡೆದ 1996 ರ ಚುನಾವಣೆಯಲ್ಲಿ ನರಸಿಂಹ್‌ರಾವ್‌ರ ಸರ್ಕಾರ ಬಿದ್ದು ಹೋಯಿತು. ಕರ್ನಾಟಕದಲ್ಲಿ ಜನತಾದಳಕ್ಕೆ 16 ಲೋಕಸಭಾ ಸ್ಥಾನ ಗಳಿಸಿಕೊಟ್ಟ ದೇವೇಗೌಡರು ಆಕಸ್ಮಿಕವಾಗಿ ಎಂಬಂತೆ ದೇಶದ ಪ್ರಧಾನಿಯಾದರು. ಅದೇ ಸಮಯದಲ್ಲಿ ಮೇಲೆ ಹೋಗಿದ್ದು ಕೆಳಕ್ಕೆ ಬರಲೇಬೇಕು ಎಂಬಂತೆ ದೇಶದಲ್ಲಿನ ಆರ್ಥಿಕ ಚಟುವಟಿಕೆ ಕಮ್ಮಿಯಾಗಲಾರಂಭಿಸಿತು. ರಿಯಲ್ ಎಸ್ಟೇಟ್‌ನಲ್ಲಿ ದುಡ್ಡು ಹಾಕಿದ ಜನ ಭೀತಿಗೊಂಡು ಸಿಕ್ಕಷ್ಟು ಬೆಲೆಗೆ ಜಮೀನುಗಳನ್ನು ಕೈತೊಳೆದುಕೊಳ್ಳಲು ಆರಂಭಿಸಿಬಿಟ್ಟರು. ಹೀಗೆ ದುಡ್ಡು ಕಳೆದುಕೊಂಡ, ದಲ್ಲಾಳಿ ಕಮಿಷನ್ ಕಮ್ಮಿಯಾದ ಬೆಂಗಳೂರಿನ ಸುತ್ತಮುತ್ತಲಿನ ಒಂದಷ್ಟು ಜನ ಇದೆಲ್ಲ ದೇವೆಗೌಡರ ಕಾಲಗುಣ ಎಂದರು. ಸೀತಾರಾಮ್ ಕೇಸರಿ ದೇವೇಗೌಡರ ಸರ್ಕಾರಕ್ಕೆ ಬೆಂಬಲ ವಾಪಸು ಪಡೆದುಕೊಂಡ ದಿನ ನಾನು ಕೋಲಾರ ಜಿಲ್ಲೆಯ ಚಿಂತಾಮಣಿಯಲ್ಲಿದ್ದೆ. ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಅಂದು ಅಕ್ಷರಶಃ ಹಬ್ಬ ಆಚರಿಸಿದರು. ಪಟಾಕಿ ಹೊಡೆದರು. "ನಾನು ಇಳಿದಾಗ ಇಲ್ಲಿಯ ಜನ ಚಪ್ಪಾಳೆ ತಟ್ಟಿದರು, ಹೊಟ್ಟೆಗೆ ಹಾಲು ಕುಡಿದರು," ಎಂಬಂತೆ ಹೇಳುವ ದೇವೇಗೌಡರ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ. ಅಂದು ಆಗಿದ್ದು ಹಾಗೆಯೆ. ಆದರೆ ಅದಕ್ಕೆ ನಾನಾ ಮುಖಗಳಿವೆ. ಅಷ್ಟೊತ್ತಿಗೆ ರಾಜಕಾರಣಿಗಳು ರಿಯಲ್ ಎಸ್ಟೇಟ್ ದಲ್ಲಾಳಿಗಳೂ ಆಗಿದ್ದರು!

ಮುಂದಿನ ಮೂರ್ನಾಲ್ಕು ವರ್ಷಗಳ ಕಾಲ ಐಟಿ ಮತ್ತು ಗಾರ್ಮೆಂಟ್ ಇಂಡಸ್ಟ್ರಿ ಬಿಟ್ಟರೆ ಇನ್ಯಾವುದೂ ಬೆಂಗಳೂರಿನಲ್ಲಿ ಸರಿಯಾಗಿ ಬೆಳೆಯಲಿಲ್ಲ. ವೈಟ್‌ಫೀಲ್ಡ್ ಹತ್ತಿರ ಕೋಟಿಗೆ ಜಮೀನು ಕೊಂಡವರು ಐದುಹತ್ತು ಲಕ್ಷ ಸಿಕ್ಕರೂ ಸಾಕೆಂದು ಮಿಕಕ್ಕೆ ಬಲೆ ಹಾಕಿಕೊಂಡು ಕುಳಿತರು. ಮಾರಾಟದ ಅಗ್ರಿಮೆಂಟ್ ಬರೆದುಕೊಟ್ಟು ಅಡ್ವಾನ್ಸ್ ತೆಗೆದುಕೊಂಡ ರೈತನಿಗೆ ಜಮೀನೂ ಉಳಿಯಿತು. ಅಡ್ವಾನ್ಸೂ ಉಳಿಯಿತು. ರಿಜಿಸ್ಟ್ರೇಷನ್ ಮಾಡಿಕೊಳ್ಳಲು ಬೆಂಗಳೂರಿನ, ನಾರ್ಥ್ ಇಂಡಿಯಾದ, ಆಂಧ್ರದ ಶ್ರೀಮಂತರು ಅತ್ತಕಡೆ ತಲೆಯೇ ಹಾಕಲಿಲ್ಲ. ಒಳ್ಳೆಯ ದುಡ್ಡಿಗೆ ಮಾರಿಕೊಂಡ ರೈತ ಅದನ್ನು ಮತ್ತೆಲ್ಲೊ ಒಳ್ಳೆಯ ಕಡೆ ಹೂಡಿ ಬಚಾವಾದ. ಒಂದಷ್ಟು ಜನ ಚೆಂದದ ಮನೆ ಕಟ್ಟಿಕೊಂಡರು. ಮತ್ತೊಂದಷ್ಟು ಜನ ತಾವೆ ರಿಯಲ್ ಎಸ್ಟೇಟ್‌ಗೆ ಇಳಿದು ಎಲ್ಲವನ್ನೂ ಕಳೆದುಕೊಂಡರು. ಬಹಳಷ್ಟು ಮನೆಯ ಗಂಡುಮಕ್ಕಳು ಬೆಂಗಳೂರು ಮತ್ತು ಸುತ್ತಮುತ್ತಲ ಬಾರುಗಳನ್ನು, ಢಾಭಾಗಳನ್ನು ಉದ್ದಾರ ಮಾಡಿದರು! ಮದುವೆಗಳು ವೈಭವೋಪೇತವಾಗಿ ಮಾಡಲ್ಪಟ್ಟವು.

ಅದು 2000 ರ ಕೊನೆಕೊನೆಯ ತಿಂಗಳು. ನಾನಾಗ ಬೆಂಗಳೂರಿನ ಮೊಟೊರೊಲದಲ್ಲಿ ಸಾಪ್ಟ್‌ವೇರ್ ಇಂಜಿನಿಯರ್ ಆಗಿದ್ದೆ. ಆಗ ಮೊಟೊರೊಲದ ಒಟ್ಟು ಜಾಗತಿಕ ಉದ್ಯೋಗಿಗಳ ಸಂಖ್ಯೆ ಸುಮಾರು ಒಂದೂಕಾಲು ಲಕ್ಷ ಇತ್ತು. 2001 ರ ಶುರುವಿನಲ್ಲಿ ಅಮೆರಿಕದಲ್ಲಿ ಇಂಟರ್‌ನೆಟ್ ಕಂಪನಿಗಳ ಬಂಡವಾಳ ಬಯಲಾಗುತ್ತ ಹೋಗಿ ರಾತ್ರೋರಾತ್ರಿ ಕಂಪನಿಗಳು ಬಾಗಿಲು ಮುಚ್ಚಿಕೊಳ್ಳುವುದು ಆರಂಭವಾಯಿತು. ನನಗೆ ನೆನಪಿರುವಂತೆ ಬಹುಶಃ ಸುಮಾರು ಆರು ತಿಂಗಳ ಅವಧಿಯಲ್ಲಿಯೆ ಮೊಟೊರೊಲ ಸುಮಾರು 40 ಸಾವಿರ ಜನರನ್ನು ಕೆಲಸದಿಂದ ತೆಗೆಯಿತು. ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿನ ಅನೇಕ ಜನ (ಎನ್ನಾರೈಗಳನ್ನೂ ಒಳಗೊಂಡು) ಕೆಲಸ ಕಳೆದುಕೊಂಡರು. ಷೇರುಮಾರುಕಟ್ಟೆಯಲ್ಲಿ ಹೂಡಿದ್ದ ತಮ್ಮ ಜೀವಮಾನದ ಸೇವಿಂಗ್ಸ್ ಕಳೆದುಕೊಂಡರು. ಕೆಲಸವಿಲ್ಲದೆ, ಆದಾಯವಿಲ್ಲದೆ, ಮನೆಯ ಸಾಲದ ಕಂತು ಕಟ್ಟಲಾರದೆ ಮನೆಗಳನ್ನು ಕಳೆದುಕೊಂಡರು. ಸಾವಿರಾರು ಎನ್ನಾರೈಗಳು ಬೆಂಗಳೂರಿನ ವಿಮಾನ ಹತ್ತಿದರು.

ಬೆಂಗಳೂರಿನ ರಿಯಲ್ ಎಸ್ಟೇಟ್ ಅಷ್ಟೆಲ್ಲ ಪ್ರಪಾತಕ್ಕೆ ಹೋಗುತ್ತಿದ್ದರೂ ಅಲ್ಲಿಯತನಕವೂ ಬೆಂಗಳೂರಿನ ಐಟಿ ಮುನ್ನುಗ್ಗುತ್ತಲೆ ಇತ್ತು. ಇನ್ಫೋಸಿಸ್, ವಿಪ್ರೊ, ಟಿಸಿಎಸ್, ಮುಂತಾದ ಅನೇಕ ಸಾಪ್ಟ್‌ವೇರ್ ಕಂಪನಿಗಳು ಪ್ರತಿದಿನ ಅಕ್ಷರಶಃ ಹತ್ತಿಪ್ಪತ್ತರಿಂದ ಹಿಡಿದು ನೂರರ ತನಕವೂ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದರು. ಆದರೆ ಯಾವಾಗ ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಸಣ್ಣ ನೆಗಡಿ ಆಯಿತೊ ಇಲ್ಲಿ ಇವರು ಸೀನಲಾರಂಭಿಸಿದರು. 2001 ರ ಮೇ ತಿಂಗಳ ಸುಮಾರಿನಲ್ಲಿ ಬೆಂಗಳೂರಿನ ಒಂದೆರಡು ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಬೆಳಿಗ್ಗೆ ಕೆಲಸಕ್ಕೆ ಹೋದ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಒಳಗೆ ಕಾಲಿಡಲಾಗಲಿಲ್ಲ. ಅವರ ಬ್ಯಾಡ್ಜ್‌ಗಳು ಕೆಲಸ ಮಾಡಲಿಲ್ಲ. ಬಾಗಿಲು ತೆರೆಯಲಿಲ್ಲ. ಒಂದೆರಡು ಗಂಟೆಗಳಲ್ಲಿ ತಮ್ಮನ್ನು ಕೆಲಸದಿಂದ ತೆಗೆದಿರುವ ಪತ್ರ ಕೈಯ್ಯಲ್ಲಿ ಹಿಡಿದುಕೊಂಡು ಅವರು ಮನೆಯ ಕಡೆ ಹೊರಡಬೇಕಾಯಿತು. ಮೊಟ್ಟಮೊದಲ ಸಲ ಬೆಂಗಳೂರಿನ ಐಟಿ ಹುಡುಗರ ಎದೆಯಲ್ಲಿ ಭಯದ ಲಬ್‌ಡಬ್ ಆರಂಭವಾಯಿತು.

ಅದೇ ಸುಮಾರಿನಲ್ಲಿ ಕಾಲೇಜುಗಳ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ 'ಇಂತಹ ದಿನಕ್ಕೆ ಬಂದು ನಮ್ಮಲ್ಲಿ ಕೆಲಸಕ್ಕೆ ಸೇರಿಕೊಳ್ಳಿ' ಎಂಬ ಆಫರ್ ಲೆಟರ್ ಕೊಟ್ಟಿದ್ದ ವಿಪ್ರೊ, ಇನ್ಫೋಸಿಸ್ ಮುಂತಾದ ಕಂಪನಿಗಳು, 'ಈಗ ಬೇಡ, ಇನ್ನೊಂದಾರು ತಿಂಗಳು ಬಿಟ್ಟುಕೊಂಡು ಬನ್ನಿ' ಎಂದವು. ಮತ್ತೊಂದಷ್ಟು ಕಂಪನಿಗಳು, 'ಅನಿವಾರ್ಯ ಕಾರಣಗಳಿಗಾಗಿ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತಿಲ್ಲ; ಆಫರ್ ಅನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ' ಎಂಬ ವಿಷಾದದ ಪತ್ರಗಳನ್ನು ಕಳುಹಿಸಿದವು. ಮತ್ತೊಂದಷ್ಟು ಕಂಪನಿಗಳು ವರ್ಷಕ್ಕೆ ನಾಲ್ಕು ಲಕ್ಷ ಕೊಡುತ್ತೇವೆ ಎಂದಿದ್ದ ಕಡೆ ಈಗ ಕೇವಲ ಐವತ್ತು ಸಾವಿರ ಸ್ಟೈಪೆಂಡ್ ಕೊಡುತ್ತೇವೆ ಎಂದವು.

ಆದರೆ, ಇವೆಲ್ಲ ಆದ ಆರೇಳು ತಿಂಗಳಿನಲ್ಲಿಯೆ ವರ್ಲ್ಡ್ ಟ್ರೇಡ್ ಸೆಂಟರ್ ಬಿತ್ತು. ಅಮೆರಿಕ ಸರ್ಕಾರ ತನ್ನ ಆರ್ಥಿಕ ವ್ಯವಸ್ಥೆ ಬೀಳದೆ ಇರಲೆಂದು ಲಕ್ಷಾಂತರ ಕೋಟಿಗಳ ದುಡ್ಡನ್ನು ಹರಿಯಬಿಟ್ಟಿತು. ಸಾಲದ ಮೇಲಿನ ಬಡ್ಡಿ ಕಮ್ಮಿ ಮಾಡಿತು. ತಮ್ಮ ಷೇರುಗಳ ಬೆಲೆ ಹೆಚ್ಚಾಗಲು ಅಮೆರಿಕದ ಕಂಪನಿಗಳು "ಖರ್ಚು ಕಮ್ಮಿ-ಲಾಭ ಹೆಚ್ಚು" ಎಂಬ ಮಂತ್ರದ ಹಾದಿ ಹಿಡಿದವು. ಆ ಮಂತ್ರದ ಒಂದು ತಂತ್ರವೆ ಕೆಲವಾರು ಖರ್ಚಿನ ಕೆಲಸಗಳನ್ನು ಹೊರಗುತ್ತಿಗೆ ನೀಡುವುದು. ಇನ್ನೂ ಹೆಚ್ಚಿನ ಸಾಫ್ಟ್‌ವೇರ್ ಕೆಲಸಗಳು ಭಾರತಕ್ಕೆ, ಹಾರ್ಡ್‌ವೇರ್ ಉತ್ಪಾದನೆ ಚೀನಾ-ತೈವಾನ್-ಮಲೇಷಿಯಕ್ಕೆ ಮುಖ ಮಾಡಿದವು. ಒಂದು ವರ್ಷಕ್ಕಿಂತ ಕಮ್ಮಿ ಅವಧಿಯಲ್ಲಿ ಮತ್ತೆ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಗಳು ಲೇಯಾಫ್ ಎನ್ನುವ ಪದವನ್ನೆ ಮರೆತುಬಿಡುವಷ್ಟು ವೇಗವಾಗಿ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಆರಂಭಿಸಿದವು. ಈ ಸಾರಿ ಕಾಲ್‌ಸೆಂಟರ್ ಉದ್ಯಮದಿಂದಾಗಿ ಇಂಗ್ಲಿಷ್ ಬಲ್ಲ ಇಂಜಿನಿಯರೇತರರಿಗೂ ಕೆಲಸಗಳು ತೆರೆದುಕೊಂಡವು. ಬೆಂಗಳೂರು ಎಂಬ ಒಂದೇ ನಗರ ಜಾಗತಿಕವಾಗಿ ಇಡೀ ಭಾರತದ ಇಮೇಜನ್ನೆ ಬದಲಾಯಿಸಿಬಿಟ್ಟಿತು.


ವಿಡಿಯೊ ಪ್ರಸ್ತುತಿ ಭಾಗ - 1

ಹೆಚ್ಚಿದ ಬೆಂಗಳೂರಿನ ಆಕರ್ಷಣೆ, ಕಮ್ಮಿಯಾದ ನಿರುದ್ಯೋಗ, ಮೊದಲಿಗಿಂತ ಹತ್ತಿಪ್ಪತ್ತು ಪಟ್ಟು ಹೆಚ್ಚಿಗೆ- ದಿನಕ್ಕೆ ಅಕ್ಷರಶಃ ನೂರಿನ್ನೂರು ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಲಾರಂಭಿಸಿದ ಟಿಸಿಎಸ್, ವಿಪ್ರೊ, ಇನ್ಫೋಸಿಸ್, ಸತ್ಯಮ್, ಐಬಿಎಮ್, ಎಚ್‌ಪಿ, ಇಡಿಎಸ್, ಇತ್ಯಾದಿಗಳು, ಏರಿಏರಿ ಹೋದ ಷೇರು ಮಾರುಕಟ್ಟೆ, ರಾತ್ರೋರಾತ್ರಿ ಸಾವಿರ ಹಾಕಿ ಲಕ್ಷ ಮಾಡಿಕೊಂಡ ಜನ, ಮೊದಲೆಲ್ಲ ಸಂಬಳ ಕೊಡಲೆ ಒದ್ದಾಡುತ್ತಿದ್ದ ಸರ್ಕಾರ ದುಡ್ಡು ಹೆಚ್ಚಾಗಿ ಸಿಕ್ಕಸಿಕ್ಕ ಮಠಗಳಿಗೆಲ್ಲ ದಾನ ಮಾಡುವಷ್ಟು ಆದಾಯ, ಇತ್ಯಾದಿ ಇತ್ಯಾದಿಯಿಂದಾಗಿ ಬೆಂಗಳೂರಿನ ರಿಯಲ್ ಎಸ್ಟೇಟ್ ಕಳೆದ ನಾಲ್ಕೈದು ವರ್ಷಗಳಿಂದ ಮತ್ತೆ ಚಿಗಿತುಕೊಂಡು ಬಿಟ್ಟಿತು. ಒಂದೇ ವರ್ಷದಲ್ಲಿ ಡಬಲ್, ಟ್ರಿಪಲ್, ಮಲ್ಟಿಪಲ್ ಏರಿಕೆ! ನಾಲ್ಕು ವರ್ಷದ ಹಿಂದೆ ಐದು ಲಕ್ಷಕ್ಕೆ ಕೇಳುವವರಿಲ್ಲದ ಜಮೀನು ಈಗ ಎರಡು ಕೋಟಿಗೆ! ಬೆಂಗಳೂರಿನ ಎಚ್.ಎಸ್.ಆರ್. ಲೇಔಟಿನಲ್ಲಿ ಹದಿನೈದು ಲಕ್ಷಕ್ಕೆ ಮಾರಾಟವಾದ ಸೈಟು ನಾಲ್ಕೆ ವರ್ಷಗಳಲ್ಲಿ ಕೋಟಿಗೆ ಕಮ್ಮಿ ಇಲ್ಲ! ತಿಂಗಳಿಗೆ ಕೇವಲ ಹತ್ತು ಸಾವಿರ ಕಂತು ಕಟ್ಟಿ ತೆಗೆದುಕೊಂಡ ಅಪಾರ್ಟ್‌ಮೆಂಟ್ ಹತ್ತಿಪ್ಪತ್ತು ಕಂತು ಕಟ್ಟುವಷ್ಟರಲ್ಲಿ ಹತ್ತಿಪ್ಪತ್ತು ಲಕ್ಷ ರೂಪಾಯಿ ಲಾಭಕ್ಕೆ ಮಾರಾಟ! ಜನ ಮರುಳೊ, ಜಾತ್ರೆ ಮರುಳೊ? ಹೌದು ಮತ್ತು ಇಲ್ಲ. ಅಷ್ಟಿಷ್ಟು ದುಡ್ಡು ಕೂಡಿಟ್ಟುಕೊಂಡವರಿಗೆ ಮನೆ ಬೇಕು; ಇನ್ನೂ ಹೆಚ್ಚಿನ ದುಡ್ಡು ಇರುವವರಿಗೆ ತಮ್ಮ ದುಡ್ಡು ಇನ್ನಷ್ಟು ದುಡಿಯಬೇಕು. ಅದು ರಿಯಲ್ ಎಸ್ಟೇಟ್ ಆದರೂ ಆಗಿರಬಹುದು, ಷೇರು ಮಾರುಕಟ್ಟೆ ಆದರೂ ಆಗಿರಬಹುದು.

ಇತಿಹಾಸ ಪುನರಾವರ್ತನೆ ಆಗಲಿದೆ !?

ಈಗಿನ ಪರಿಸ್ಥಿತಿ ಹೇಗಿದೆ, ಅಂದಿರಾ? ರಿಯಲ್ ಎಸ್ಟೇಟ್ ಮಾರುಕಟ್ಟೆಯ ಏರಿಳಿತದಂತೆಯೆ ಮೇಲೆ ಏರುತ್ತಿದ್ದ ಭಾರತದ ಐಟಿ ಇಂಡಸ್ಟ್ರಿಯ ರೋಲರ್ ಕೋಸ್ಟರ್ ಇಷ್ಟರಲ್ಲಿಯೆ ಕೆಳಗೆ ಬರಲಿರುವ ಸೂಚನೆಗಳು ಕಾಣಿಸುತ್ತಿವೆ. ಭಾರತದ ಬಹುತೇಕ ಐಟಿ ಕಂಪನಿಗಳು ತಮ್ಮದೆ ಆದ ಉತ್ಪನ್ನಗಳನ್ನು ಹೊಂದಿಲ್ಲ. ಇನ್ನೊಬ್ಬರ ಉತ್ಪನ್ನ ಅಭಿವೃದ್ಧಿ ಪಡಿಸಲು ಬೇಕಾದ ಮಾನವ ಸಂಪನ್ಮೂಲ ಒದಗಿಸುವ ಒಂದು ರೀತಿಯ ದಲ್ಲಾಳಿ ಕೆಲಸ ಇವರದು. ಈಗ ಬೇಕಾದಷ್ಟು ಬೇಡಿಕೆ ಇರುವುದರಿಂದ ಬೇರೆಯವರು ಕೇಳಿದಾಗ ನಮ್ಮಲ್ಲಿ ಜನ ಇರಲಿ ಎಂದು ತಮ್ಮ ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ಕೆಲಸಕ್ಕೆ ತೆಗೆದುಕೊಂಡಿರುತ್ತಾರೆ. ಟಿಸಿಎಸ್, ವಿಪ್ರೊ, ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿರುವ ಎಲ್ಲರೂ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ ಎನ್ನುವಂತಿಲ್ಲ. ಒಮ್ಮೊಮ್ಮೆ ಸುಮಾರು ಕಾಲುಭಾಗ ಇಂಜಿನಿಯರುಗಳು ಬರಲಿರುವ ಕೆಲಸಕ್ಕೆ ಕಾಯುತ್ತಿರುತ್ತಾರೆ. ಹಾಗೆ ಕಾಯುತ್ತಿರುವವರನ್ನು ಬೆಂಚ್ ಮೇಲೆ ಇರುವವರು ಎನ್ನುತ್ತಾರೆ. ಇಷ್ಟು ದಿನ ಎಲ್ಲವೂ ಚೆನ್ನಾಗಿಯೆ ನಡೆಯುತ್ತಿತ್ತು. ನೌಕರರು ಹೆಚ್ಚು ಇದ್ದಷ್ಟೂ ಅವರಿಗೆ ಬರಲಿರುವ ಆರ್ಡರ್‌ಗಳು ಮತ್ತು ಲಾಭಾಂಶ ಜಾಸ್ತಿಯೆ ಇರುತ್ತಿದ್ದವು. ಆದರೆ ಅಮೆರಿಕದಲ್ಲಿನ ಹಾಲಿ ಆರ್ಥಿಕ ಹಿಂಜರಿತ ಮತ್ತು ಡಾಲರ್ ಎದುರಿನ ರೂಪಾಯಿ ಬೆಲೆ ಏರಿಕೆ ಈ ಪರಿಸ್ಥಿತಿಯನ್ನು ಬದಲಾಯಿಸುತ್ತಿದೆ.

ಇದರ ಜೊತೆಗೆ ನಮ್ಮಲ್ಲಿನ ಸಾಪ್ಟ್‌ವೇರ್ ಕಂಪನಿಗಳ ಮೇಲೆ ಷೇರು ಮಾರುಕಟ್ಟೆಯ ಒತ್ತಡವೂ ಈಗ ಹೆಚ್ಚಾಗುತ್ತಿದೆ. ಇವತ್ತು ಇನ್ಫೋಸಿಸ್‌ನ ಷೇರು ಬೆಲೆ ಮೂರು ವರ್ಷದ ಹಿಂದೆ ಎಷ್ಟಿತ್ತೊ ಅಲ್ಲಿಗೆ ಹಿಮ್ಮುಖವಾಗಿ ಬಂದು ನಿಂತಿದೆ. ವಿಪ್ರೊದರ ಕತೆಯೂ ಅದೆ. ಟಿಸಿಎಸ್‌ನ ಕತೆಯೂ ಅದೆ. ಆದರೆ ಇದೇ ಸಮಯದಲ್ಲಿ ಭಾರತದ ಷೇರು ಮಾರುಕಟ್ಟೆ ಕಳೆದ ಆರು ತಿಂಗಳಿನಲ್ಲಿ ಎಷ್ಟೆಲ್ಲ "ರಕ್ತದೋಕುಳಿ" ಗಳನ್ನು ಕಂಡರೂ ಈಗಲೂ ಅದು ಆರು ತಿಂಗಳ ಹಿಂದೆ ಯಾವ ಏರುಮಟ್ಟದಲ್ಲಿತ್ತೊ ಅದೆ ಮಟ್ಟದಲ್ಲಿದೆ. ಅಂದರೆ, ಭಾರತದ ಷೇರು ಮಾರುಕಟ್ಟೆಯಲ್ಲಿ ಇವತ್ತು ಇತರೆ ಉದ್ದಿಮೆಗಳ ಸ್ಟಾಕ್‌ಗಳಷ್ಟು ಚೆನ್ನಾಗಿ ಐಟಿ ಕಂಪನಿಗಳ ಸ್ಟಾಕ್‌ಗಳು ಪರ್ಫಾರ್ಮ್ ಮಾಡುತ್ತಿಲ್ಲ. ಹಾಗಾಗಿ, ಅವುಗಳ ಮೇಲೆ ಬಂಡವಾಳ ಹೂಡಿರುವ Institutional investor ಗಳು ಆದಷ್ಟೂ "ಕಮ್ಮಿ ಖರ್ಚು-ಹೆಚ್ಚಿನ ಆದಾಯ-ಇನ್ನೂ ಹೆಚ್ಚಿನ ಲಾಭ" ತೋರಿಸಲು ಅವುಗಳ ಮೇಲೆ ಒತ್ತಡ ಹಾಕುತ್ತಿರುತ್ತಾರೆ. ಪ್ರತಿ ಷೇರಿಗೂ ಲಾಭದ ಪ್ರಮಾಣ ಪ್ರತಿ ತ್ರೈಮಾಸಿಕಕ್ಕೂ ಜಾಸ್ತಿ ಆದರೆ ಮಾತ್ರ ಈ ಕಂಪನಿಗಳ ಷೇರು ಬೆಲೆಯೂ ಜಾಸ್ತಿಯಾಗುತ್ತದೆ. ಕೇವಲ ಆದಾಯ ಹೆಚ್ಚಿ, "ವಾವ್" ಎನ್ನುವಷ್ಟು ಪ್ರಮಾಣದ ಲಾಭಾಂಶ ತೋರಿಸದಿದ್ದರೆ ಇವರು ಒಂದೇ ದಿನ ಲಕ್ಷಾಂತರ ಸ್ಟಾಕ್‌ಗಳನ್ನು ಡಂಪ್ ಮಾಡಿ, "ವಾವ್" ಎನ್ನುವಂತಹ ಮತ್ತಿನ್ನೆಂತಹುದೊ ಗೆಲ್ಲುವ ಎತ್ತಿನ ಬಾಲ ಹಿಡಿಯುತ್ತಾರೆ. ಇದು ವ್ಯವಹಾರ. ಯಾವುದೆ ನಿಷ್ಠೆ, ಭಾವನೆ, ಹುಸಿಆಶಾವಾದಗಳಿಗೆ ಇಲ್ಲಿ ಜಾಗವಿಲ್ಲ.

ಅಮೆರಿಕದಲ್ಲಿಯ ಗೃಹಸಾಲಗಳ ಫಜೀತಿ, ಇಳಿಯುತ್ತಿರುವ ಡಾಲರ್ ಮೌಲ್ಯ, ಹಿಂಜರಿಕೆಯಲ್ಲಿರುವ ಆರ್ಥಿಕ ಪರಿಸ್ಥಿತಿ, ಮುಂತಾದುವುಗಳಿಂದಾಗಿ ಇನ್ನು ಮೇಲೆ ಇಲ್ಲಿಂದ ಅಲ್ಲಿಗೆ ಬರಲಿರುವ ಆರ್ಡರ್‌ಗಳೂ ಕಮ್ಮಿಯಾಗಲಿವೆ. ಈಗಾಗಲೆ ಅಂತಹವು ಕೆಲವು ಆಗಿವೆ. ಈ ಪರಿಸ್ಥಿತಿಯಲ್ಲಿ ಭಾರತದ ಐಟಿ ಕಂಪನಿಗಳ ಆದಾಯ ಎರಡಂಕಿಯ ಪ್ರಗತಿ ಕಾಣುವುದು ಕಷ್ಟವಾಗಬಹುದು. ಹಾಗಾಗಿ ಈಗ ಅವರು ಮುಂಬಯಿಯ ದಲಾಲ್ ರಸ್ತೆಯನ್ನು ತೃಪ್ತಿಪಡಿಸಲು ಮಾಡಬಹುದಾದ ಕೆಲಸ ಎಂದರೆ ಆದಷ್ಟೂ ತಮ್ಮ ಖರ್ಚುಗಳನ್ನು ಕಮ್ಮಿ ಮಾಡಿಕೊಳ್ಳುವುದು. ಮೊದಲನೆಯದಾಗಿ, ನೌಕರರಿಗೆ ಕೊಡುತ್ತಿರುವ ಕೆಲವು ಸವಲತ್ತುಗಳನ್ನು ಮತ್ತು ಬೋನಸ್ ಅನ್ನು ಕಮ್ಮಿ ಮಾಡುವುದು. ಎರಡನೆಯದಾಗಿ, ಅಗತ್ಯವಿಲ್ಲದಾಗ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳದೆ ಇರುವುದು. ಅಂತಿಮವಾಗಿ, ಬೆಂಚ್ ಮೇಲೆ ಇರುವವರನ್ನು ಲೇಯಾಫ್ ಮಾಡಿ ಮನೆಗೆ ಕಳಿಸುವುದು. (ಈಗಾಗಲೆ ಕಾಲೇಜು ಕ್ಯಾಂಪಸ್‌ಗಳ ಸಂದರ್ಶನ ಇಳಿಮುಖವಾಗಿದೆ. ಕೆಲವು ಕಂಪನಿಗಳು ಈ ವರ್ಷ ಒಂದೆರಡು ಐಐಟಿಗಳತ್ತ ತಲೆಯನ್ನೆ ಹಾಕಿಲ್ಲ. ಮತ್ತೆ ಕೆಲವು ಕಂಪನಿಗಳು ಎರಡು-ಮೂರು ತಿಂಗಳು ನಿಧಾನವಾಗಿ ಕೆಲಸಕ್ಕೆ ಸೇರಿ ಎನ್ನುತ್ತಿವೆಯಂತೆ.)

2002 ರಲ್ಲಿ ಕರ್ನಾಟಕ ಸರ್ಕಾರ ನಷ್ಟದಲ್ಲಿದ್ದ ತನ್ನ ಸಾರ್ವಜನಿಕ ಉದ್ದಿಮೆ NGEF ಅನ್ನು ಮುಚ್ಚಿದಾಗ ಅದರಲ್ಲಿ ಇದ್ದ ನೌಕರರ ಸಂಖ್ಯೆ ಕೇವಲ 2400. ಆದರೆ ಅದನ್ನು ಮುಚ್ಚುವಷ್ಟರಲ್ಲಿ ಸರ್ಕಾರಕ್ಕೆ ಸಾಕಾಗಿ ಹೋಗಿತ್ತು. ಸ್ಥಳೀಯವಾಗಿ ಪ್ರತಿಭಟನೆಗಳು ನಡೆದು ಬೆಂಗಳೂರಿನಿಂದ ಹಿಡಿದು ದಿಲ್ಲಿಯತನಕವೂ ದೂರು ದಾಖಲಾಗಿತ್ತು. ಇವತ್ತು ಭಾರತದ ಮೂರು ದೊಡ್ಡ ಐಟಿ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್, ಮತ್ತು ವಿಪ್ರೊಗಳ ಒಟ್ಟು ನೌಕರರ ಸಂಖ್ಯೆ ಸುಮಾರು 2,80,000. ಇವರೇನಾದರೂ ಸುಮ್ಮನೆ ಸೀನಿದಂತೆ, ಬೆಂಚಿನ ಮೇಲೆ ಇರುವವರನ್ನು ಲೇಯಾಫ್ ಮಾಡಿಬಿಟ್ಟರೂ ಅರ್ಧ ಲಕ್ಷ ಜನ ಒಂದೆರಡು ತಿಂಗಳ ಅಂತರದಲ್ಲಿಯೆ ಕೆಲಸ ಕಳೆದುಕೊಂಡು ಬಿಡುತ್ತಾರೆ. ವಿಪರ್ಯಾಸ ಏನೆಂದರೆ ಇವರ ಪರವಾಗಿ ಯಾರೂ ರ್‍ಯಾಲಿ ತೆಗೆಯುವುದಿಲ್ಲ. ಪ್ರತಿಭಟನೆ ಮಾಡುವುದಿಲ್ಲ. ಅದಕ್ಕೆ ನಾನಾ ತರಹದ ಆರ್ಥಿಕ-ಸಾಮಾಜಿಕ-ರಾಜಕೀಯ ಕಾರಣಗಳಿವೆ. ಹಾಗೆಯೆ, ಹೀಗೆ ಕೆಲಸ ಕಳೆದುಕೊಂಡವರ ಜೀವನವೇನೂ ಹಳಬರ ರೀತಿ ಬೀದಿಗೆ ಬೀಳುವುದಿಲ್ಲ. ಮತ್ತು ಇವರ ನಿರುದ್ಯೋಗ ಧೀರ್ಘಕಾಲೀನವೂ ಆಗಿರುವುದಿಲ್ಲ. ಹಣದ ಯಂತ್ರ ಈಗ ಬಹುವೇಗವಾಗಿ ಚಲಿಸುತ್ತಿದೆ.

ಬರಲಿರುವ ದಿನಗಳಲ್ಲಿ ನಮ್ಮ ಐಟಿ ಉದ್ದಿಮೆ ಪ್ರತಿದಿನವೂ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿ ಮಾಡದೆ ಇದ್ದರೂ ಅದು ಹಾಗೆಯೆ ಮಂದಗತಿಯಲ್ಲಿ ಇರುತ್ತದೆ ಎಂದು ಹೇಳುವ ಹಾಗೂ ಇಲ್ಲ. ಭಾರತದ ರೂಪಾಯಿ ಡಾಲರ್ ಎದುರು ಏರುತ್ತಿದೆ. ಆದರೆ ಯುರೊ ಎದುರು ಬೀಳುತ್ತಿದೆ. ಅಂದರೆ, ಅಮೆರಿಕಕ್ಕೆ ಭಾರತ ಮತ್ತು ಭಾರತದ ತಂತ್ರಜ್ಞರು ತುಟ್ಟಿ. ಯೂರೋಪಿಯನ್ನರಿಗೆ ನಮ್ಮ ವಸ್ತುಗಳು ಮತ್ತು ನಮ್ಮವರು ಮೊದಲಿಗಿಂತ ಅಗ್ಗ. (ಮೂರು ವರ್ಷದ ಹಿಂದೆ ಐದು ಸಾವಿರ ಯೂರೊಗೆ ಒಂದು ಮಾರುತಿ ಕಾರು ಕೊಳ್ಳಬಹುದಿತ್ತು ಎಂದುಕೊಂಡರೆ, ಇವತ್ತು ಕೇವಲ ನಾಲ್ಕು ಸಾವಿರ ಯೂರೊಗೆ ಅದನ್ನು ಕೊಳ್ಳಬಹುದು.) ಈ ಪರಿಸ್ಥಿತಿಯಲ್ಲಿ ತನ್ನ ಐಟಿ ಕೆಲಸಗಳಿಗೆ ಯೂರೋಪು ಭಾರತದತ್ತ ಹೆಚ್ಚಿನ ಮುಖ ಮಾಡಿದರೆ ಮತ್ತೆ ಇಲ್ಲಿ ಮೊದಲಿನ ಗಡಿಬಿಡಿ ಆರಂಭವಾಗಿಯೆ ಬಿಡುತ್ತದೆ. ಅದೇ ಸಮಯದಲ್ಲಿ ಅಮೆರಿಕ ಬೇಗ ಚೇತರಿಸಿಕೊಂಡರೂ ಬೇಡಿಕೆ ಹೆಚ್ಚುತ್ತದೆ. ಇನ್ನು ಭಾರತದೊಳಗಿನ ಆರ್ಥಿಕ ಅಭಿವೃದ್ಧಿ ಮತ್ತು ಅದರಿಂದ ಉದ್ಭವಿಸುವ ದೇಶೀಯ ಬೇಡಿಕೆಗಳು ಸಹ ಐಟಿ ಉದ್ದಿಮೆಗೆ ಒಳ್ಳೆಯ ದಿನಗಳನ್ನು ತರಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮುಂದಿನ ಒಂದೆರಡು ವರ್ಷಗಳ ಕಾಲ ಪರಿಸ್ಥಿತಿ ಹೀಗೆಯೆ ಇರುತ್ತದೆ ಎಂದು ಹೇಳುವ ಹಾಗೆ ಇಲ್ಲ.

ಲೇಯಾಫ್ ಆದರೆ ಜೀವನ ಮುಗಿದೆ ಹೋಯಿತೆ?

ಈ ಆಧುನಿಕ ಅರ್ಥವ್ಯವಸ್ಥೆಯಲ್ಲಿ ಈ ಗೊಂದಲ, ಸಮಸ್ಯೆ, ಏರುಪೇರುಗಳೆಲ್ಲ ಇದ್ದದ್ದೆ. ನೂರು ವರ್ಷದ ಹಿಂದೆ ಈ ಲೇಯಾಫ್, ಲಾಕೌಟ್‌ಗಳೆಲ್ಲ ಎಲ್ಲಿದ್ದವು? ಅವು ಈಗಿನ ಅರ್ಥವ್ಯವಸ್ಥೆಯ ಕೊಡುಗೆ. ಇದು ಎಷ್ಟು ಸಂಕೀರ್ಣ ಎಂದರೆ ಒಮ್ಮೊಮ್ಮೆ ಯಾರು ಹೇಗೆ ದುಡ್ಡು ಮಾಡುತ್ತಾರೆ ಅಥವ ಕಳೆದುಕೊಳ್ಳುತ್ತಾರೆ ಎನ್ನುವುದಕ್ಕೆ ವಿವರಣೆಯೆ ಇರುವುದಿಲ್ಲ. ಹಾಗೆಯೆ ನೌಕರಿಯೂ ಸಹ. ಈಗಿನ ಕಾಲದ ಲೇಯಾಫುಗಳಿಗೆ ನೌಕರನ ಕಾರ್ಯಕ್ಷಮತೆಯೊಂದೆ ಕಾರಣವಲ್ಲ. ಬಹಳಷ್ಟು ಸಲ ಅದು ಗಣನೆಗೇ ಬರುವುದಿಲ್ಲ. ಕಂಪನಿ ಸಾಕಷ್ಟು ಲಾಭದಲ್ಲಿದೆಯೆ? ಆತ ಕೆಲಸ ಮಾಡುತ್ತಿರುವ ಗ್ರೂಪ್, ಡಿವಿಷನ್, ಯಾ ಉತ್ಪನ್ನಕ್ಕೆ ದುಡ್ಡು ಮಾಡುವ ಭವಿಷ್ಯ ಇದೆಯೆ? ಇದಷ್ಟೆ ಮುಖ್ಯವಾಗುವುದು. ಕೆಲಸ ಕಳೆದುಕೊಳ್ಳುವುದು ಯಾವುದೆ ಸಮಾಜದಲ್ಲಿ ಮುಜುಗರದ ವಿಷಯ. ಆದರೆ ಭಾರತದ ಸಮಾಜದಲ್ಲಿ ಅದು ಅವಮಾನದ ವಿಚಾರವೂ ಹೌದು. ಈ ಅರ್ಥವ್ಯವಸ್ಥೆಯಲ್ಲಿ ಕೆಲಸ ಕಳೆದುಕೊಂಡವರು ಮತ್ತು ಅವರನ್ನು ಸಂದೇಹದಿಂದ ನೋಡುವ ಜನ, ಇಬ್ಬರೂ ಬದಲಾಗಬೇಕಿದೆ.


ವಿಡಿಯೊ ಪ್ರಸ್ತುತಿ ಭಾಗ - 2

ಒಂದೇ ಸಲ ಬಹಳಷ್ಟು ಜನ ಲೇಯಾಫ್ ಆದಾಗ, ಲೇಯಾಫ್ ಆದವರಿಗೆಲ್ಲ ತಕ್ಷಣಕ್ಕೆ ಕೆಲಸ ಸಿಗದೆ ಹೋಗಬಹುದು. ನಿರುದ್ಯೋಗ ತಾವಂದುಕೊಂಡದ್ದಕ್ಕಿಂತ ಜಾಸ್ತಿ ದಿನ ಇದ್ದು ಬಿಡಬಹುದು. ಹಾಗಾದಲ್ಲಿ ಅವು ಬಹಳ ಕಠಿಣ ದಿನಗಳು. ಆ ದಿನಗಳನ್ನು ಸ್ವಾವಲಂಬಿ ಆಗಲು ಮತ್ತು ಹೊಸ ಕೌಶಲಗಳನ್ನು ಕಲಿಯಲು ಬಳಸಿಕೊಳ್ಳುವುದು, ಆದಾಯದ ಮಿತಿಯಲ್ಲಿ ಬದುಕುವುದು, ಸಿನಿಕರಾಗದಿರುವುದು, ನಿರಾಶಾವಾದಿಗಳಾಗದಿರುವುದು, ಮತ್ತು ಜೀವನಪ್ರೀತಿ ಹಾಗು ಸಾಹಸಪ್ರವೃತ್ತಿ ಉಳಿಸಿಕೊಳ್ಳುವುದು... ಇವು ಬಹಳ ಮುಖ್ಯ. ಹಾಗಿದ್ದಾಗ ಮಾತ್ರ ಮತ್ತೆ ಒಳ್ಳೆಯ ಸಮಯ ಬಂದಾಗ ಪರಿಸ್ಥಿತಿಯ ಸದುಪಯೋಗಪಡಿಸಿಕೊಳ್ಳಲು ಆಗುತ್ತದೆ. ಇಲ್ಲದಿದ್ದರೆ ಅದೇ ಗೋಳಿನ ಕಥೆ.

ಇದು ಕೇವಲ ಈಗಿನ, ಈ ಜನರೇಷನ್ನಿನ ಸವಾಲು ಮಾತ್ರವಲ್ಲ್ಲ. ಮುಂದಿನ ಹಲವಾರು ಶತಮಾನಗಳ ಕಾಲ ಭಾರತದ ಮನಸ್ಥಿತಿಯನ್ನು ಡಿಫೈನ್ ಮಾಡಲಿದೆ ಬರಲಿರುವ ಆರ್ಥಿಕ ಇಳಿಜಾರಿನ ಕಷ್ಟದ ದಿನಗಳಲ್ಲಿ ನಾವು ಗಳಿಸಲಿರುವ ಶಿಕ್ಷಣ ಮತ್ತು ಆಗಿನ ನಮ್ಮ Conduct..... ಯಾಕೆಂದರೆ, ಕೆಳಗೆ ಹೋಗಿದ್ದು ಮತ್ತೆ ಇನ್ನೊಂದು ರೂಪದಲ್ಲಿ ಮೇಲಕ್ಕೆ ಬಂದೇ ಬರಬೇಕು. ಬರುತ್ತದೆ. ಕಳೆದ ಶತಮಾನದಲ್ಲಿ ಇಂತಹುದು ಯೂರೋಪಿನಲ್ಲಿ ಮತ್ತು ಅಮೆರಿಕದಲ್ಲಿ ಒಮ್ಮೆಯಲ್ಲ, ಹಲವಾರು ಬಾರಿ ಆಗಿಹೋಗಿದೆ. ನಮಗಿದು ಹೊಸತಷ್ಟೆ! ಮತ್ತೊಂದು ತರಹದ ಆರ್ಥಿಕವ್ಯವಸ್ಥೆ ಬರುವ ತನಕ ಅಥವ ನಾವೆ ಸೃಷ್ಟಿಸಿಕೊಳ್ಳುವ ತನಕ, we should play by its rules and excel.


ಲೇಖನಕ್ಕೆ ಪೂರಕವಾಗಿ ಬ್ಲಾಗಿನಲ್ಲಿ ಹೆಚ್ಚುವರಿಯಾಗಿ ಸೇರಿಸಿರುವ ಟಿಪ್ಪಣಿ
ತಮ್ಮ ತಪ್ಪಿಲ್ಲದಿದ್ದರೂ ಲೇಯಾಫ್ ಆಗಿಬಿಡುವ ಸಂದರ್ಭ ಬಂದಾಗ ಮನುಷ್ಯ ಒಂದಷ್ಟು ಇತಿಹಾಸವನ್ನು ನೆನಪಿಸಿಕೊಳ್ಳುವುದು ಸೂಕ್ತ. ಇದು ಅಮೆರಿಕದ ರಾಯಿಟರ್ಸ್ ಸುದ್ದಿಸಂಸ್ಥೆಯ ಮುಖ್ಯಸ್ಥ ತನ್ನ ಕೆಲಸಗಾರರನ್ನು ಲೇಯಾಫ್ ಮಾಡಿದಾಗ ಅವರಿಗೆ ಬರೆದ ಪತ್ರ:
"ನಾನು ಬೆಳದದ್ದು ಕನೆಕ್ಟಿಕಟ್ ರಾಜ್ಯದ ನ್ಯೂ ಲಂಡನ್‌ನಲ್ಲಿ. 19 ನೆ ಶತಮಾನದಲ್ಲಿ ಅದು ತಿಮಿಂಗಲಗಳ ಮಾಂಸಸಂಸ್ಕರಣೆಯ ಮುಖ್ಯ ಕೇಂದ್ರಗಳಲ್ಲಿ ಒಂದಾಗಿತ್ತು. 1960-70 ರ ಸುಮಾರಿಗೆ ತಿಮಿಂಗಲಗಳ ಕಾಲ ಮುಗಿದು ಹೋಗಿ ಬಹಳ ವರ್ಷಗಳಾಗಿದ್ದವು. ಆ ಕಾಲದಲ್ಲಿ ಆ ಪ್ರಾಂತ್ಯದ ಮುಖ್ಯ ಉದ್ಯೋಗದಾತರಾದವರು ಮಿಲಿಟರಿ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಖಾನೆಗಳು. ಅದು ವಿಯಟ್ನಾಮ್ ಯುದ್ಧದ ಸಮಯ. ನನ್ನ ಸಹಪಾಠಿಗಳ ಪೋಷಕರು ನೌಕಾಪಡೆಯಲ್ಲಿ, ಕರಾವಳಿ ಕಾವಲುಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಯುದ್ಧದ ನಂತರ ಬಂದ ಶಾಂತಿಯ ಸಮಯ ಮತ್ತೆ ಆ ಪ್ರಾಂತ್ಯದ ನಕ್ಷೆಯನ್ನು ಬದಲಾಯಿಸಿತು. ಈಗ ಅದು ಜೂಜು ಕೆಸಿನೊಗಳಿಗೆ ಮತ್ತು ಫಾರ್ಮಸ್ಯೂಟಿಕಲ್ ರಿಸರ್ಚ್ ಕಂಪನಿಯಾದ ಫೈಜ಼ರ್‌ಗೆ ಹೆಸರುವಾಸಿ. ನೌಕರಿಗಳು ಹೋದವು; ನೌಕರಿಗಳು ಸೃಷ್ಟಿಯಾದವು. ಕಲಿತಿದ್ದ ಕೆಲಸ ಉಪಯೋಗಕ್ಕೆ ಬಾರದೆ ಹೋಯಿತು; ಹೊಸ ಕುಶಲತೆಗಳು ಬೇಕಾಗಿ ಬಂತು. ನಾಡು ಬದಲಾಯಿತು; ಜನ ಬದಲಾದರು. ಇದು ಕೇವಲ ನ್ಯೂ ಲಂಡನ್ನಿನ ವಿಷಯ ಮಾತ್ರವಲ್ಲ. ಎಷ್ಟೊಂದು ಬಟ್ಟೆಗಿರಣಿ ನಗರಗಳ ಗಿರಣಿಗಳು ಮುಚ್ಚಲಿಲ್ಲ; ಎಷ್ಟೊಂದು ಶೂಉತ್ಪಾದನಾ ನಗರಗಳ ಶೂಕಾರ್ಖಾನೆಗಳು ಬೇರೆಡೆಗೆ ಸ್ಥಳಾಂತರವಾಗಲಿಲ್ಲ; ಎಷ್ಟೊಂದು ಗಾರ್ಮೆಂಟ್ ಕಾರ್ಖಾನೆಗಳ ನಗರಗಳು ಈಗ ತಮ್ಮ ಉಡುಪುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿಲ್ಲ? ಬದಲಾವಣೆ ಕಷ್ಟ. ಅಚಾನಕ್ಕಾಗಿ ತಕ್ಷಣವೆ ಬದಲಾಗಬೇಕಾಗಿ ಬಂದವರಿಗೆ ಅದು ಇನ್ನೂ ಕಷ್ಟ. ಹೊರಗುತ್ತಿಗೆಯ ಬಗ್ಗೆ ಈಗ ಬಹಳ ಬಿಸಿಯಾಗಿ ಚರ್ಚೆ ನಡೆಯುತ್ತಿದೆ. ಆದರೆ ಇಲ್ಲಿನ ಕೆಲಸಗಳು ಭಾರತಕ್ಕೆ, ಚೀನಾಗೆ, ಅಥವ ಮೆಕ್ಸಿಕೊ ದೇಶಕ್ಕೆ ಹೋಗುತ್ತಿರುವ ಬಗ್ಗೆ ನಡೆಯುತ್ತಿರುವ ಚರ್ಚೆ ಈ ಮೊದಲು ನಮ್ಮದೆ ದೇಶದೊಳಗೆ ಒಂದು ಪ್ರಾಂತ್ಯದ ಉದ್ಯೋಗಗಳು ಇನ್ನೊಂದು ಪ್ರಾಂತ್ಯಕ್ಕೆ ಹೋಗುತ್ತಿದ್ದಾಗ ಆಗುತ್ತಿದ್ದ ಚರ್ಚೆಗಿಂತ ಭಿನ್ನವೇನೂ ಅಲ್ಲ. ಎಲ್ಲಿ ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ಕೆಲಸ ಆಗುತ್ತದೆಯೊ ಅಲ್ಲಿ ಆ ಕೆಲಸ ಮಾಡಲ್ಪಡುತ್ತದೆ. ಅಂತಿಮವಾಗಿ ಅದು ಬೆಂಗಳೂರುಗಳಿಗೆ ಮತ್ತು ಶೇಂಜಿನ್ನುಗಳಿಗೆ ಸಹಾಯವಾಗುದಕ್ಕಿಂತ ಹೆಚ್ಚಾಗಿ ನ್ಯೂಲಂಡನ್ನಿಗೆ, ನ್ಯೂಬೆಡ್‌ಪೋರ್ಡ್ಸ್‌ಗೆ, ನ್ಯೂಯಾರ್ಕಿಗೆ ಸಹಾಯವಾಗುತ್ತದೆ. ಅದು ಹೇಗೆ ಸಹಾಯವಾಗುತ್ತದೆ ಅಂದರೆ ಈ ಸ್ಥಿತಿ ಜನರನ್ನು ಮತ್ತು ಬಂಡವಾಳವನ್ನು ಇದೆ ಕೆಲಸವನ್ನು ಬೇರೆ ತರಹ ಮಾಡಲು, ಇನ್ನೂ ಉತ್ತಮವಾದ ಕೆಲಸ ಮಾಡಲು ಸಾಧ್ಯವಾಗುವಂತೆ ಅನುವು ಮಾಡುತ್ತದೆ. ಅದು ಯಾಕೆ ಸಹಾಯ ಮಾಡುತ್ತದೆ ಅಂದರೆ ಅದು ಅಂತಿಮ ಉತ್ಪನ್ನವನ್ನು ಇನ್ನೂ ಕಡಿಮೆ ಬೆಲೆಗೆ ಉತ್ಪಾದಿಸುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಅದು ಕಂಪನಿಗಳಿಗೆ ಲಾಭ ಮಾಡಿಕೊಟ್ಟರೂ ಗ್ರಾಹಕರಿಗೂ ಆ ಲಾಭ ದೊರೆಯುತ್ತದೆ. ತಮ್ಮ ಕೆಲಸವನ್ನು ಇನ್ನೊಂದು ಕಡೆಗೆ, ತಮಗಿಂತ ಸಾವಿರಾರು ಡಾಲರ್ ಕಮ್ಮಿ ಸಂಬಳ ಪಡೆಯುವರಿಗೆ ಕಳೆದುಕೊಳ್ಳುವ ಜನಕ್ಕೆ ಇದು ನಿಜಕ್ಕೂ ಕಷ್ಟದ ಸಂದರ್ಭ. ಆದರೆ ಇದು ಹೊರಗುತ್ತಿಗೆಯ ಬಾಧ್ಯತೆಗಳು ಮತ್ತು ಅದರಿಂದ ಉದಿಸುವ ಅವಕಾಶಗಳ ಬಗ್ಗೆ ಯೋಚಿಸುವಂತೆಯೆ ಕೆಲಸ ಕಳೆದುಕೊಳ್ಳುವ ಬಾಧೆ ಮತ್ತು ಮುಂದೆ ತೆರೆದುಕೊಳ್ಳಲಿರುವ ಅವಕಾಶಗಳ ಬಗ್ಗೆಯೂ ಯೋಚಿಸಬೇಕಾದ ಸಮಯ. ಪ್ರತಿಯೊಂದು ಸಂಸ್ಥೆಯಂತೆಯೆ ಪ್ರತಿಯೊಬ್ಬ ಮನುಷ್ಯನೂ ನಮ್ಮ ಅಪ್ಪಂದಿರು ಮತ್ತು ತಾತಂದಿರು ಮಾಡಿದಂತೆ, ಶೂಕಾರ್ಖಾನೆಗಳು ಮತ್ತು ಬಟ್ಟೆಗಿರಣಿಗಳು ಮಾಡಿದಂತೆ, ತಮ್ಮ ಆರ್ಥಿಕ ಭವಿತವ್ಯದತ್ತ ನಡೆಯುತ್ತಿರಬೇಕು.
[ಇದನ್ನು ನಾವು ನಮ್ಮಲ್ಲಿಯೆ ಘಟಿಸಿದ ಕೆಲವು ಸಂದರ್ಭಗಳಿಗೆ ಹೋಲಿಸಿಕೊಳ್ಳಬಹುದು: ದಾವಣಗೆರೆಯ ಬಟ್ಟೆಗಿರಣಿಗಳು ಮುಚ್ಚಿಕೊಂಡವು. ಇನ್ಯಾವುದೊ ಮೂಲದಿಂದ ಬೆಂಗಳೂರಿನ ಸುತ್ತಮುತ್ತ ಲಕ್ಷಾಂತರ ಹೆಣ್ಣುಮಕ್ಕಳಿಗೆ ಗಾರ್ಮೆಂಟ್ ಉದ್ಯೋಗಗಳು ತೆರೆದುಕೊಂಡವು. ದಾವಣಗೆರೆ ಮತ್ತೊಂದು ರೀತಿಯಲ್ಲಿ ಮುನ್ನಡೆಯಿತು. ಇತ್ಯಾದಿ.]

Mar 12, 2008

ವಿಜ್ಞಾನ ವಿಶೇಷದ ನಾಗೇಶ್ ಹೆಗಡೆಯವರು...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 21, 2008 ರ ಸಂಚಿಕೆಯಲ್ಲಿನ ಲೇಖನ)

ಕನ್ನಡದ ಇತ್ತೀಚಿನ ಒಂದೆರಡು ದಿನಪತ್ರಿಕೆಗಳ ವಯಸ್ಸೆ ಹತ್ತಿಪ್ಪತ್ತು ವರ್ಷ ಆಗದೆ ಇರುವಾಗ, 26 ವರ್ಷಗಳಿಂದ ಸತತವಾಗಿ ಪ್ರಜಾವಾಣಿಯಲ್ಲಿ ಬರುತ್ತಿರುವ ಅಂಕಣ "ವಿಜ್ಞಾನ ವಿಶೇಷ." ಹೌದು, ಈ ಅಂಕಣ ಕಾಲು ಶತಮಾನವನ್ನು ದಾಟಿಯಾಗಿದೆ. ವಿದ್ಯಾರ್ಥಿಗಳಲ್ಲಿ ಮತ್ತು ಓದುಗರಲ್ಲಿ ಕೇವಲ ವಿಜ್ಞಾನದ ವಿಷಯಕ್ಕೆ ಕುತೂಹಲ ಹುಟ್ಟಿಸುವುದಷ್ಟೆ ಅಲ್ಲದೆ, ವಿಜ್ಞಾನದ ಇತ್ತೀಚಿನ ಸಾಧನೆಗಳು, ಅದರಿಂದ ಬದಲಾಗಿರುವ ಸಮಾಜ, ಆಗಲಿರುವ ಆರ್ಥಿಕ-ಸಾಮಾಜಿಕ-ವೈಜ್ಞಾನಿಕ ಸ್ಥಿತ್ಯಂತರಗಳು, ಮುಂತಾದವನ್ನೆಲ್ಲ ವೈಚಾರಿಕ ಮತ್ತು ವೈಜ್ಞಾನಿಕ ಬದ್ಧತೆಯಿಂದ ಬರೆಯುತ್ತ ಬಂದವರು ವಿಜ್ಞಾನ ವಿಶೇಷದ ಲೇಖಕರಾದ ನಾಗೇಶ್ ಹೆಗಡೆಯವರು. ಸುಮಾರು ಮೂರು ದಶಕಗಳ ಕಾಲ ಪ್ರಜಾವಾಣಿ-ಸುಧಾದಲ್ಲಿ ಪತ್ರಕರ್ತರಾಗಿದ್ದು, ಎರಡು ವರ್ಷಗಳ ಹಿಂದೆ ನಿವೃತ್ತರಾಗಿ, ಈಗ "ನಿಸರ್ಗ" ಕೃಷಿ ಮಾಡುತ್ತಿರುವವರು. ಇತ್ತೀಚಿನ ದಶಕಗಳಲ್ಲಿ ಕನ್ನಡ ನಾಡು ಕಂಡ ಅಪರೂಪದ (ಪರಿಸರ) ವಿಜ್ಞಾನದ "ಗುರು."

ದೆಹಲಿಯ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದಿಂದ ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಾಗೇಶ್ ಹೆಗಡೆಯವರು ಪಿಎಚ್‌ಡಿ ಪಡೆಯಲೆಂದು ಒರಿಸ್ಸಾಗೆ ಹೋಗಿ, ಭಾರತದಲ್ಲಿನ ಪಿಎಚ್‌ಡಿ ವ್ಯಾಸಂಗ ಬಯಸುವ ನಾಲ್ಕೈದು ವರ್ಷಗಳ "ಕೌಟುಂಬಿಕ ಜೀತಪದ್ಧತಿ" ಇಷ್ಟಪಡದೆ ಅದನ್ನು ಮಧ್ಯದಲ್ಲಿಯೆ ಬಿಟ್ಟು ಆಗಿನ ಉತ್ತರ ಪ್ರದೇಶದ ನೈನಿತಾಲ್ ವಿಶ್ವವಿದ್ಯಾಲಯದಲ್ಲಿ ಸಹಾಯಕ್ಕೆ ಪ್ರಾಧ್ಯಾಪಕರಾಗಿ ಸೇರಿಕೊಂಡವರು. ಅದೇ ಸಮಯದಲ್ಲಿ ಇಲ್ಲಿ ಪ್ರಜಾವಾಣಿಯವರು ತಮ್ಮ ಪತ್ರಿಕೆಯಲ್ಲಿ ವೈಜ್ಞಾನಿಕ ವಿಷಯಗಳಿಗೆ ವರದಿಗಾರರನ್ನು ಹುಡುಕುತ್ತಿದ್ದರು. ಹಾಗೆ ಪ್ರಜಾವಾಣಿಗೆ "Science and Development Correspondent" ಆಗಿ ಅವರು ಕರ್ನಾಟಕಕ್ಕೆ ವಾಪಸು ಬಂದಿದ್ದು. ಅಲ್ಲಿಂದೀಚೆಗೆ ಅವರು ಸುಧಾ ಮತ್ತು ಪ್ರಜಾವಾಣಿಯ ಲಕ್ಷಾಂತರ ಓದುಗರಿಗೆ ಸರಳ ಕನ್ನಡದಲ್ಲಿ ವಿಜ್ಞಾನದ ನವೀನ ಸಂಶೋಧನೆಗಳ ಬಗೆಗೆ ಮತ್ತು ಪರಿಸರದ ಬಗೆಗೆ ಸಾಮಾಜಿಕ ಕಾಳಜಿಯಿಂದ ಕೂಡಿದ ಲೇಖನಗಳನ್ನು ಬರೆಯುತ್ತ, ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಲು ಮತ್ತು ಕೆಲವೊಂದು ಸಂಶೋಧನೆಗಳ ಮತ್ತು ಅಭಿವೃದ್ಧಿ ಮಾದರಿಗಳ ಅತಿಯನ್ನು ಅರ್ಥಮಾಡಿಕೊಳ್ಳಲು ಓದುಗರನ್ನು ಪ್ರಚೋದಿಸುತ್ತ ಬರುತ್ತಿದ್ದಾರೆ.

ಸಂಪದ.ನೆಟ್ ತಂಡದವರು ಇತ್ತೀಚೆಗೆ ತಾನೆ ನಾಗೇಶ್ ಹೆಗಡೆಯವರ ಆಡಿಯೊ ಸಂದರ್ಶನವನ್ನು ಮಾಡಿದ್ದಾರೆ. ಅದು sampada.net ನಲ್ಲಿ ಇದೆ. ಈ ಅಂತರ್ಜಾಲ ತಾಣದ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ, ಅನಂತಮೂರ್ತಿ, ಲಿಂಗದೇವರು ಹಳೆಮನೆ, ಜಿ.ಎಸ್.ಶಿವರುದ್ರಪ್ಪ, ಟಿ.ಎನ್.ಸೀತಾರಾಮ್, ನಿಸಾರ್ ಅಹಮದ್, ಜಿ.ಟಿ. ನಾರಾಯಣ ರಾವ್‌ರೊಡನೆ ಪ್ರಾಧ್ಯಾಪಕ ಓ.ಎಲ್.ಎನ್. ಸ್ವಾಮಿ, ಉದಯವಾಣಿಯ ಇಸ್ಮಾಯಿಲ್, ಪವನಜ, ಹರಿಪ್ರಸಾದ್, ಮುಂತಾದವರು ಮಾಡಿರುವ ಅಪರೂಪದ ಆಡಿಯೊ ಸಂದರ್ಶನಗಳು ಇಲ್ಲಿವೆ. ಕಳೆದ ತಿಂಗಳಷ್ಟೆ ನಮ್ಮ ಪತ್ರಿಕೆಯ ಲೇಖಕ ಬಳಗದವರಲ್ಲೊಬ್ಬರಾದ ನರೇಂದ್ರ ಪೈ "ದೇಶ ಕಾಲ" ನಡೆಸುತ್ತಿರುವ ವಿವೇಕ ಶಾನಭಾಗರ ಸಂದರ್ಶನ ಮಾಡಿದ್ದರು. ಈ ತಿಂಗಳು ಪ್ರಶಾಂತ್ ಪಂಡಿತ್ ಎನ್ನುವವರು ನಾಗೇಶ್ ಹೆಗಡೆಯವರ ಸಂದರ್ಶನ ಮಾಡಿದ್ದಾರೆ. ಆ ಸಂದರ್ಶನದಲ್ಲಿ ನಾಗೇಶ್ ಹೆಗಡೆಯವರು ಪರಿಸರ-ಮಾಧ್ಯಮ-ಚಳವಳಿ-ವೈಜ್ಞಾನಿಕ ಮನೋಭಾವ-ಪತ್ರ್ರಿಕೆಗಳಿಗೆ ಬರೆಯುವ ರೀತಿ-ಡಿಜಿಟಲ್ ಡಿವೈಡ್, ಮುಂತಾದುವುಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಎರಡು ವಿಷಯಗಳನ್ನಷ್ಟೆ ಇಲ್ಲಿ ಪ್ರಸ್ತಾಪಿಸುತ್ತೇನೆ.

ಬೇಕು, ಉಪಯುಕ್ತ ಕನ್ನಡ:

"ಕನ್ನಡದ ಇವತ್ತಿನ ಸಂದರ್ಭದಲ್ಲಿ ಭಾಷೆಯ (ಸ್ಥಿತಿಗತಿಯ) ಬಗ್ಗೆ ನಿಮ್ಮ ಅಭಿಪ್ರಾಯ ಏನು?" ಎನ್ನುವ ಪ್ರಶ್ನೆಗೆ ಹೆಗಡೆಯವರ ಅಭಿಪ್ರಾಯ ಬಹಳ ಗಮನಾರ್ಹವಾದದ್ದು. "ಭಾಷೆಯ ಬಗ್ಗೆ ವ್ಯಾಖ್ಯಾನ ನೀಡುವಷ್ಟು ಪಾಂಡಿತ್ಯ ನನ್ನದಲ್ಲ," ಎನ್ನುತ್ತಲೆ ಆರಂಭಿಸುವ ಇವರು,

"(ಜ್ಞಾನವನ್ನು ಎಲ್ಲರಿಗೂ ಕೊಡಬೇಕು ಎನ್ನುವುದರ ಹಿನ್ನೆಲೆಯಲ್ಲಿ) ಕನ್ನಡದಲ್ಲಿ ವಿಜ್ಞಾನ ಸೃಷ್ಟಿಯಾಗುತ್ತಿಲ್ಲ. ಇವತ್ತು ವಿಜ್ಞಾನ ಸೃಷ್ಟಿ ಆಗುತ್ತಿರುವುದು ಇಂಗ್ಲಿಷಿನಲಿ, ಸ್ಪ್ಯಾನಿಷ್‌ನಲ್ಲಿ, ಫ್ರೆಂಚ್‌ನಲ್ಲಿ, ಜಪಾನಿಯಲ್ಲಿ. ಆ ಬೇರೆ ಭಾಷೆಗಳಲ್ಲಿರುವ ಜ್ಞಾನವನ್ನು ಅರ್ಥ ಮಾಡಿಕೊಂಡರಷ್ಟೆ ನಾವು ಅದನ್ನು ಇತರರಿಗೆ ಕೊಡಲು ಸಾಧ್ಯ. ಅದನ್ನು ಅರ್ಥಮಾಡಿಕೊಳ್ಳಲು ಸಹಜವಾಗಿ ನಮಗೆ ಇಂಗ್ಲಿಷ್ ಬೇಕೇ ಬೇಕು. ನಂತರ ಅದರ ವಿವರಣೆ ಮಾಡಲು ನಮಗೆ ಕನ್ನಡ ಬೇಕು. ಭಾಷೆ ಕೇವಲ ಜ್ಞಾನದ ವಾಹಿನಿಯಷ್ಟೆ ಅಲ್ಲ. ಅದರಲ್ಲಿ ಮನರಂಜನೆ ಇರಬೇಕು. ಸೃಜನಶೀಲತೆ ಇರಬೇಕು. (ಈ ಹಿನ್ನೆಲೆಯಲ್ಲಿ) ಕತೆ-ಕವಿತೆ-ಕಾದಂಬರಿಗಳ ಸಾಹಿತ್ಯಕ್ಕೆ ಅದರದೆ ಆದ ಸ್ಥಾನ ಇದೆ. ಆದರೆ ಜ್ಞಾನ ಈ ಕತೆ-ಕವಿತೆ-ಕಾದಂಬರಿಗಳಿಗೆ ಲಿಮಿಟ್ ಆಗಬಾರದು. ಎಷ್ಟು ದಿನ ಅಂತ ನೀವು ಕಾಲ್ಪನಿಕ ಜಗತ್ತಿನಲ್ಲಿ ಇರುತ್ತೀರ? ವಾಸ್ತವ ಜಗತ್ತು ಬೇಕೇ ಬೇಕಲ್ಲ? ಈ ವಾಸ್ತವ ಜಗತ್ತಿನಲ್ಲಿ ಏನೇನು ವಹಿವಾಟುಗಳು ನಡೆಯುತ್ತವೆ ಎನ್ನುವುದನ್ನು ಹೇಳುವುದಕ್ಕೆ ಭಾಷೆ ಬೇಕೇ ಬೇಕು. ಇವತ್ತು ಹಾಗೆ ನೋಡಿದರೆ, ವಿಜ್ಞಾನದ ಬಗ್ಗೆ ಕನ್ನಡದಲ್ಲಿ ಅಷ್ಟಿಷ್ಟು ಮಾಹಿತಿಯಾದರೂ ಇದೆ. ಅದರೆ ದುರದೃಷ್ಟವಶಾತ್ ಷೇರು ಮಾರುಕಟ್ಟೆ ಬಗ್ಗೆ ಮಾಹಿತಿ ಎಲ್ಲಿದೆ? ವಾಣಿಜ್ಯದ ವಿಚಾರಗಳಿಗೆ ಕನ್ನಡದಲ್ಲಿ ಮಾಹಿತಿಯೆ ಇಲ್ಲ. ಡಿಜಿಟಲ್ ಲೋಕದಲ್ಲಿ ಇಷ್ಟೆಲ್ಲ ಬದಲಾವಣೆ ಆಗುತ್ತಿದೆ. ಆದರೆ ಮಾಹಿತಿ ಬರುತ್ತಿಲ್ಲ. ನಮ್ಮ ಕಂಪ್ಯೂಟರ್ ಹುಡುಗರೆಲ್ಲ, ಕೆಲವರನ್ನು ಬಿಟ್ಟರೆ, ಏನು ಆಗುತ್ತಿದೆ ಈ ಜಗತ್ತಿನಲ್ಲಿ, ಡಿಜಿಟಲ್ ಡಿವೈಡ್ ಆಗುತ್ತಿದೆಯಲ್ಲ ಎಂದು ಚಿಂತೆ ಮಾಡುತ್ತಾರೆಯೆ ಹೊರತು ಆ ಡಿಜಿಟಲ್ ಡಿವೈಡನ್ನು ತುಂಬುವುದು ಹೇಗೆ ಎಂದು ಯಾರೂ ಹೆಚ್ಚಿಗೆ ಮಾತನಾಡುತ್ತಿಲ್ಲ. ಇಡೀ ಜಗತ್ತಿನಲ್ಲೆಲ್ಲ ಅನಿವಾಸಿ ಕನ್ನಡಿಗರಿದ್ದಾರೆ. ಕನ್ನಡ ಅಕ್ಷರ ನೋಡಿದರೂ ಅವರ ಹೃದಯ ಬಹಳ ಪ್ರಫುಲ್ಲಿತವಾಗುತ್ತದೆ, ಖುಷಿಯಾಗುತ್ತದೆ. ಸಂಜೆವಾಣಿ ಯಂತಹ ಪತ್ರಿಕೆ ಕೂಡ ಬಹಳ ಚೆನ್ನಾಗಿ, ಸುಂದರವಾಗಿ ಕಾಣುತ್ತಿರುತ್ತದೆ. ಅದೆಲ್ಲ ಸರಿ. ಆದರೆ ಇಷ್ಟೆ ಸುಲಭವಾಗಿ ಕನ್ನಡವನ್ನು ಲ್ಯಾಪ್‌ಟಾಪ್ ಮೂಲಕವೊ, ಅಂಗೈಗಣಕದ ಮೂಲಕವೊ ಯಶಸ್ವಿಯಾಗಿ ಟ್ರಾನ್ಸ್‌ಫರ್ ಮಾಡಲು ಸಾಧ್ಯವಿದೆ ಎನ್ನುವುದನ್ನು ಯಾರು ಹೇಳಬೇಕು? ಆ ಸಂಖ್ಯೆ ಬಹಳ ಸಣ್ಣದಿದೆ. ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವ ಕನ್ನಡಿಗರು ಎಚ್.ಪಿ. ಇನ್ಫೋಸಿಸ್ ಮುಂತಾಗಿ ಎಲ್ಲಾ ಕಡೆ ಇದ್ದಾರೆ. ಇಲ್ಲಿಂದ ಹಿಡಿದು ಕ್ಯಾಲಿಫೋರ್ನಿಯ ತನಕ ಇದ್ದಾರೆ. ಆದರೆ ಕನ್ನಡವನ್ನು ನಾವು ಸುಲಭವಾಗಿ ಕಂಪ್ಯೂಟರ್‌ಗೆ ವರ್ಗಾಯಿಸಲು ಸಾಧ್ಯವಿದೆ; ಅದನ್ನು ಕೈಗಣಕ, ಅಂಗೈಗಣಕದ ಮುಖಾಂತರ ಪ್ರತಿಯೊಬ್ಬರಿಗೂ, ಹಳ್ಳಿಯವನಿಗೂ, ಕ್ಷೌರಿಕನಿಗೂ, ನಮ್ಮಲ್ಲಿನ ರೈತರ ಕೈಗೂ ಅದನ್ನು ಕೊಡಲು ಸಾಧ್ಯವಿದೆ ಎಂದು ಹೇಳುವವರು ಮತ್ತು ಅದನ್ನು ಮಾಡಿ ತೋರಿಸುವವರ ಸಂಖ್ಯೆ ಕಮ್ಮಿಯಿದೆ. (ಸಾಹಿತ್ಯದ ಕನ್ನಡಕ್ಕೆ ಹೊರತಾದ ಇಂತಹ ವಿಜ್ಞಾನದ) 'ಉಪಯುಕ್ತ ಕನ್ನಡ' ಎನ್ನುವುದು ಬೇಕು ನಮಗೆ. ಅದು ಆಯಿತೆಂದರೆ ಆಗ ನಾವು ಭಾಷೆಯ ಸಂಪೂರ್ಣ ಸಾಧ್ಯತೆಯನ್ನು ಸ್ವೀಕಾರ ಮಾಡಿದಂತಾಗುತ್ತದೆ."
ಎನ್ನುತ್ತಾರೆ.

ಶುಷ್ಕರಸ ಕಮ್ಮಿ ಮಾಡಲು ಸೇರಿಸುವ ಭೀಭತ್ಸರಸ:

ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಮಾಧ್ಯಮಗಳಲ್ಲಿ ಹೆಚ್ಚಾಗುತ್ತಿರುವ ರೋಚಕತೆ ಮತ್ತು ಇಳಿಮುಖವಾಗಿರುವ ಎಲ್ಲಾ ತರಹದ ಬದ್ಧತೆಗಳು ಯಾರಿಗೇ ಆಗಲಿ ಎದ್ದು ಕಾಣಿಸುವಂತಹುದು. ಎರಡು ವರ್ಷದ ಹಿಂದಿನ ತನಕವೂ ಪತ್ರಿಕೆಯೊಂದರಲ್ಲಿ ಪೂರ್ಣಾವಧಿ ಉದ್ಯೋಗಿಯಾಗಿ ಕೆಲಸ ಮಾಡಿರುವ ನಾಗೇಶ ಹೆಗಡೆಯವರು ಈ ಮಾಧ್ಯಮಗಳ ಇತ್ತೀಚಿನ ಪಲ್ಲಟಗಳ ಬಗ್ಗೆ ಹೀಗೆ ಹೇಳುತ್ತಾರೆ:
""ಮೊದಲೆಲ್ಲ ಒಂದು ರೀತಿಯ ಶಿಸ್ತು ಇತ್ತು. ಬಹುಶಃ ಪೈಪೋಟಿಯಿಂದಾಗಿಯೊ ಏನೊ ಈಗ ಇನ್ನಷ್ಟು ಕೊಡಬೇಕು, ಹೊಸತು ಕೊಡಬೇಕು, ರೋಚಕವಾಗಿ ಕೊಡಬೇಕು ಎನ್ನುವಂತಾಗಿಬಿಟ್ಟಿದೆ. ಗಂಭೀರ ವಿಷಯಗಳ ಬಗ್ಗೆ ಹೇಳುವಾಗಲೂ ರೋಚಕತೆ ಬಂದುಬಿಡುತ್ತದೆ. ಗಾಂಭೀರ್ಯ ಮಾಯವಾಗುತ್ತಿದೆ. ತ್ವರಿತ ಮತ್ತು ತುರ್ತಿನಲ್ಲಿ ಮಾಹಿತಿ ಕೊಡಬೇಕು ಅಥವ ಅತ್ಯಂತ ವೇಗವಾಗಿ ಮಾಹಿತಿ ಕೊಡಬೇಕು ಎನ್ನುವ ಹಂತದಲ್ಲಿ ವಿವೇಕ ಕಮ್ಮಿಯಾಗಿಬಿಡುತ್ತದೆ. ಈ ತ್ವರಿತ ಯುಗದಲ್ಲಿ ಬರವಣಿಗೆಗೆ ಅಥವ ವಿಷಯಕ್ಕೆ ನ್ಯಾಯ ಒದಗಿಸುವುದು ಕಷ್ಟವಾಗುತ್ತದೆ. ನೀವು ಯಾವುದನ್ನು ಸುಲಭವಾಗಿ ಬರೆಯುತ್ತೀರೊ ಆ ಬರವಣಿಗೆ ಕೂಡ ಅಷ್ಟೇ ಸತ್ವಹೀನವಾಗುತ್ತದೆ. "ಶುಷ್ಕರಸ" ಜಾಸ್ತಿಯಾಗಿಬಿಡುತ್ತದೆ. ಅದು ಬರಬಾರದು ಎಂತಲೆ ಕೆಲವು ಲೇಖಕರು ಬಹಳ ಸಾರಿ ಅನಗತ್ಯವಾಗಿ ಕೃತಕವಾಗಿ "ಭೀಭತ್ಸರಸ" ಸೇರಿಸಲು ಪ್ರಯತ್ನಿಸುತ್ತಾರೆ. ರೋಷ, ಕ್ರೋಧವನ್ನು ಸೇರಿಸುತ್ತಾರೆ. ಈಗ ಮಾಹಿತಿಯ ಮಹಾಪ್ರವಾಹವೆ ಹರಿಯುತ್ತಿದೆ. ಆ ಪ್ರವಾಹದಲ್ಲಿ ತೇಲುತ್ತಿರುವ ನಮಗೆ ಸ್ವಲ್ಪ ಗಟ್ಟಿಯಾದ ವಿಚಾರಗಳನ್ನು ಹೇಳುವ ದ್ವೀಪಗಳ ಆಸರೆ ಬೇಕು. ವಾರಪತ್ರಿಕೆಗಳು, ಮಾಸಪತ್ರಿಕೆಗಳು ಅಂತಹ ಗಂಭೀರವಾದ ವಿಷಯಗಳನ್ನು ಸಾವರಿಸಿಕೊಂಡು ಹೇಳುತ್ತವೆ. ಆದರೆ ಅದನ್ನು ಓದುವಷ್ಟು ವ್ಯವಧಾನ ನಮಗಿದೆಯೆ ಎನ್ನುವುದೆ ಪ್ರಶ್ನೆ."

ಪರಿಸರದ ಬಗ್ಗೆ ಬಹಳ ಬರೆದಿರುವ ನಾಗೇಶ್ ಹೆಗಡೆಯವರ ಅನೇಕ ಲೇಖನಗಳು ಪುಸ್ತಕರೂಪದಲ್ಲಿಯೂ ಬಂದಿವೆ. "ಇರುವುದೊಂದೇ ಭೂಮಿ," "ಸುರಿಹೊಂಡ ಭರತಖಂಡ," "ನಮ್ಮೊಳಗಿನ ಬ್ರಹ್ಮಾಂಡ," ಇತ್ಯಾದಿಯಾಗಿರುವ ಅವರ ಪುಸ್ತಕಗಳು ಪರಿಸರ-ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಬಂದಿರುವ ಮಹತ್ವದ ಆಕರ ಗ್ರಂಥಗಳು. ಕಬ್ಬಿಣದ ಅದಿರು ರಫ್ತಿನ ವಿಚಾರವಾಗಿ ಅವರು ಬರೆದಿದ್ದ ಲೇಖನಗಳು 1975 ರ ಸುಮಾರಿನಲ್ಲಿಯೆ ಸಂಸತ್ತಿನಲ್ಲಿ ಪ್ರಸ್ತಾಪಗೊಂಡಿತ್ತು.
ನೀವು ಎಷ್ಟೇ ಪ್ರತಿಭಾವಂತರಾಗಿದ್ದರೂ, ಎಷ್ಟೇ ಬದ್ಧತೆಯುಳ್ಳವರಾಗಿದ್ದರೂ ಒಂದು ವ್ಯವಸ್ಥೆಯ ಒಳಗೆ ಕೆಲಸ ಮಾಡುತ್ತಿರುವ ತನಕವೂ ಕೆಲವೊಂದು ಶಿಸ್ತಿನಲ್ಲಿ ಮತ್ತು ಮಿತಿಯಲ್ಲಿ ಕೆಲಸ ಮಾಡಬೇಕಿರುತ್ತದೆ. ಇಷ್ಟು ದಿನವೂ ಪ್ರಜಾವಾಣಿಯ ವ್ಯವಸ್ಥೆಯೊಳಗೆ ಮತ್ತು ಆ ವೃತ್ತಿಧರ್ಮದ ಮಿತಿಯಲ್ಲಿ ಕೆಲಸ ಮಾಡಬೇಕಿದ್ದ ನಾಗೇಶ್ ಹೆಗಡೆಯವರು ಒಂದರ್ಥದಲ್ಲಿ ಈಗ ಸ್ವತಂತ್ರರಾಗಿದ್ದಾರೆ. ತಮ್ಮ ಸುದೀರ್ಘ ಸೇವಾಅವಧಿಯಲ್ಲಿ ಸುಧಾ ಮತ್ತು ಪ್ರಜಾವಾಣಿಯ ಮುಖಾಂತರ ಅನೇಕ ಲೇಖಕರನ್ನು ಪ್ರೋತ್ಸಾಹಿಸಿದ ನಾಗೇಶ್ ಹೆಗಡೆಯವರು ಈಗ ಕನ್ನಡದ ಪರಿಸರ-ವಿಜ್ಞಾನ-ತಂತ್ರಜ್ಞಾನದ ವಿಷಯಗಳಲ್ಲಿ ಒಂದಷ್ಟು ಚಳವಳಿಕಾರ ಕಾರ್ಯಕರ್ತನ ಸಕ್ರಿಯ ಪಾತ್ರ ನಿರ್ವಹಿಸಬೇಕಾದ ಗಳಿಗೆ ಬಂದಿದೆ ಎನ್ನಿಸುತ್ತದೆ.




(ಲೇಖನಕ್ಕೆ ಪೂರಕವಾಗಿ ಬ್ಲಾಗಿನಲ್ಲಿ ಹೆಚ್ಚುವರಿಯಾಗಿ ಸೇರಿಸಿರುವ ಅಡಿ ಟಿಪ್ಪಣಿಗಳು)

ಬದಲಾಗುತ್ತಿರುವ ಕನ್ನಡ ವಾರಪತ್ರಿಕೆಗಳು:
ನಾಗೇಶ ಹೆಗಡೆಯವರು ಮಾಧ್ಯಮದ ಬಗ್ಗೆ ಹೇಳಿದ್ದನ್ನು ನಾನು ನನ್ನದೆ ಅನುಭವದ ಹಿನ್ನೆಲೆಯಲ್ಲಿ ಯೋಚಿಸುತ್ತದೆ. ಇವತ್ತು ಮಾಧ್ಯಮಗಳಲ್ಲಿ ವಿವೇಕವಷ್ಟೆ ಅಲ್ಲ ಕನಿಷ್ಠ ಶೈಕ್ಷಣಿಕ ಅರ್ಹತೆ ಇಲ್ಲದವರೂ ಕಾಣಿಸಿಕೊಳ್ಳುತ್ತಿದ್ದಾರೆ. ಬೇರೆ ಎಲ್ಲೂ ಸಲ್ಲದವರು ಇವತ್ತು ಈ ವಿಭಾಗಕ್ಕೆ ಬರುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಮಾಧ್ಯಮ ವಿಭಾಗದಲ್ಲಿ ಎಂ.ಎ. ಮಾಡುತ್ತಿರುವ ಕನ್ನಡ ಮಾಧ್ಯಮದ ಹುಡುಗನನ್ನು ವರ್ಷದ ಹಿಂದೆ, ಕನ್ನಡದಲ್ಲಿ ಯಾವ ಪುಸ್ತಕಗಳನ್ನು ಓದಿದ್ದೀರಿ ಎಂದು ಕೇಳಿದ್ದೆ. ಅಕ್ಷರಶಃ ಆತನಲ್ಲಿ ಉತ್ತರವಿರಲಿಲ್ಲ. ಮಹತ್ವದ ಚಿಂತಕರು ಗೊತ್ತಿಲ್ಲ. ಪ್ರಚಲಿತ ವಿದ್ಯಮಾನಗಳು ಗೊತ್ತಿಲ್ಲ. ಸ್ವತಂತ್ರವಾಗಿ ಒಂದು ಪುಟ್ಟ ಲೇಖನ ಬರೆಯುವ ಯೋಗ್ಯತೆಯೂ ಈ "ಸ್ನಾತಕೋತ್ತರ ಪದವೀಧರ" ರಲ್ಲಿ ಇಲ್ಲ. ನಮ್ಮ ವಿಶ್ವವಿದ್ಯಾಲಯಗಳಲ್ಲಿ ಇನ್ನೆಂತಹ ಶೈಕ್ಷಣಿಕ ಪದ್ಧ್ದತಿ ಇದೆಯೊ, ಇನ್ನೆಂತಹ ದರಿದ್ರ ಪುಸ್ತಕಗಳು ಇವರಿಗೆ ಪಠ್ಯಪುಸ್ತಕಗಳಾಗಿವೆಯೊ ಗೊತ್ತಿಲ್ಲ. ಇತ್ತೀಚಿನ ಕನ್ನಡದ ದಿನಪತ್ರಿಕೆಗಳನ್ನು ನೋಡುತ್ತಿದ್ದರೆ ಅನ್ನಿಸುವುದೇನೆಂದರೆ, " 'ರೋಚಕವಾದ, ಬೇಜವಾಬ್ದಾರಿಯ, ಜೀವದ್ವೇಷಿ ತಲೆಬರಹ ಕೊಡುವುದು ಹೇಗೆ?' ಎನ್ನುವುದೆ ಇತ್ತೀಚಿನ ಜರ್ನಲಿಸಮ್ ಕೋರ್ಸುಗಳ ಸಿಲಬಸ್ ಆಗಿರಬಹುದೆ?" ಎಂದು.

ಆದರೆ, ಈ ರೋಚಕತೆಯ ಕಾಲ ಕನ್ನಡದಲ್ಲಿ ಮುಗಿಯುತ್ತ ಬರುತ್ತಿದೆ, ಜನ ಬದಲಾವಣೆ ಬಯಸುತ್ತಿದ್ದಾರೆ, ಮತ್ತೆ ಕೆಲವರು ಆ ಬದಲಾವಣೆ ತರುತ್ತಿದ್ದಾರೆ ಎನ್ನುವುದಕ್ಕೆ ಕಳೆದ ಎರಡು ವರ್ಷಗಳಲ್ಲಿ ಕನ್ನಡದಲ್ಲಿ ಬಂದ ಮೂರು ಗಂಭೀರ ವಾರಪತ್ರಿಕೆಗಳನ್ನೆ ನಾವು ನೆನಪಿಸಿಕೊಳ್ಳಬಹುದು. ನಮ್ಮದೆ "ವಿಕ್ರಾಂತ ಕರ್ನಾಟಕ," ನಟರಾಜ್ ಹುಳಿಯಾರ್ ತಂಡದವರ "ಕನ್ನಡ ಟೈಮ್ಸ್," ದೆಹಲಿಯಿಂದ ಬರುವ "ದಿ ಸಂಡೆ ಇಂಡಿಯನ್,"- ಇವು ಯಾವುವೂ ರೋಚಕತೆಯನ್ನು ಹಾಗು ಜನರ ಭಾವನೆಗಳೊಡನೆ ಚೆಲ್ಲಾಟವಾಡುವುದನ್ನು ತಮ್ಮ ಬಂಡವಾಳ ಮಾಡಿಕೊಂಡಿಲ್ಲ. ಗಂಭೀರ ವಿಷಯಗಳನ್ನು ಗಂಭೀರವಾಗಿಯೆ ಚರ್ಚಿಸುತ್ತಿವೆ. ಕೆಲವು ಸ್ಥಾಪಿತ ಟ್ಯಾಬ್ಲಾಯ್ಡ್‌ಗಳೂ ತಮ್ಮ ಮಿತಿಯಲ್ಲಿ ಅದನ್ನೆ ಮಾಡುತ್ತಿವೆ. ಒಂದು ಪ್ರಜ್ಞಾವಂತ ಗುಂಪು ಅಲ್ಲಲ್ಲಿ ಬಿಡಿಬಿಡಿಯಾಗಿ ಸಕ್ರಿಯವಾಗಿದೆ ಎನ್ನುವುದಕ್ಕೆ ಮತ್ತು ಭವಿಷ್ಯ ಅಷ್ಟು ನಿರಾಶಾದಾಯಕವಾಗಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ.

ಕಾಳಜಿಗೂ ವಿಧಾನಕ್ಕೂ ಸಂಬಂಧವಿಲ್ಲದವರ ವ್ಯವಸ್ಥೆ
ನಾಗೇಶ ಹೆಗಡೆಯವರು ಡಿಜಿಟಲ್ ಡಿವೈಡ್ ಬಗ್ಗೆ ಮಾತನಾಡುತ್ತ ತಂತ್ರಜ್ಞಾನದ ಇಂಡಸ್ಟ್ರಿಯಲ್ಲಿರುವ ಕನ್ನಡಿಗರ ಬಗ್ಗೆ ಕೆಲವೊಂದು ಪ್ರಶ್ನೆಗಳು ಎತ್ತಿದ್ದನ್ನು ಇಲ್ಲಿ ನೀವು ನೋಡಿದಿರಿ. ಸ್ವತಃ ಅನಿವಾಸಿ ತಂತ್ರಜ್ಞನಾದ ನಾನು ಇದೇ ಪ್ರ್ರಶ್ನೆಗಳನ್ನು ನಾಲ್ಕೈದು ವರ್ಷಗಳ ಹಿಂದೆ ನನಗೆ ನಾನೆ ಹಾಕಿಕೊಂಡಿದ್ದೆ. ಆ ವಿಚಾರಕ್ಕೆ ಒಂದೆರಡು ಲೇಖನಗಳನ್ನು ಮತ್ತು ಪ್ರಜಾವಾಣಿಗೂ ಒಂದೆರಡು ವಾಚಕರ ವಾಣಿ ಪತ್ರ ಬರೆದಿದ್ದೆ. ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಕನ್ನಡದ ಉದ್ಧಾಮ ಸಾಹಿತಿಯೊಬ್ಬರೊಡನೆ ಮತ್ತು ಮತ್ತೊಬ್ಬ ಭೀಕರನಟ ಕಮ್ ಕನ್ನಡ ಹೋರಾಟಗಾರ ಎಂಎಲ್‌ಸಿಯೊಡನೆ "ಸರ್ಕಾರ ಹೇಗೆ ಸುಲಭವಾಗಿ ತನ್ನ ಕಂಪ್ಯೂಟರುಗಳನ್ನು ಒಂದೇ ಏಟಿಗೆ ಕನ್ನಡೀಕರಿಸಬಹುದು," ಎಂದು ವಿವರಿಸಿದ್ದೆ. ದಯವಿಟ್ಟು ಇದನ್ನು ಪರಿಷತ್ತಿನಲ್ಲಿ ಪ್ರಸ್ತಾಪಿಸಿ ಎಂದು ವಿನಂತಿಸಿದ್ದೆ. ಆದರೆ, ಅವರು ಪ್ರಸ್ತಾಪಿಸಿದ್ದೆ ಬೇರೆ. ಅವರ ಕಾಳಜಿಗೂ ಅವರು ಮಾಡುವ ಕೆಲಸಗಳಿಗೂ ಅಥವ ವಿಧಾನಗಳಿಗೂ ಸಂಬಂಧವೇ ಇಲ್ಲ... ಇದನ್ನೆಲ್ಲ ನೋಡಿ ಕೊನೆಗೆ ನನಗನ್ನಿಸಿದ್ದು:
"ನಮ್ಮನ್ನು (ಜನತೆಯನ್ನು-ಭಾಷೆಯನ್ನು-ನಾಡನ್ನು) ಪ್ರತಿನಿಧಿಸುತ್ತಿರುವವರು ಮಹಾ ಅಯೋಗ್ಯರು. ನಮ್ಮ ಸಮಸ್ಯೆ ಇರುವುದೆ ಇಲ್ಲಿ. ಪರಿಹಾರವನ್ನೂ ಇಲ್ಲಿಯೆ ಹುಡುಕಬೇಕು."

Mar 6, 2008

ವಿಶ್ವಕ್ಕೇ ನಾಯಕತ್ವ ಕೊಡಬಲ್ಲವನಿಗೆ ಕೊನೆಯ ಸ್ಥಾನ!!!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 14, 2008 ರ ಸಂಚಿಕೆಯಲ್ಲಿನ ಲೇಖನ)

ನೀವು ಈ ಲೇಖನವನ್ನು ಓದುತ್ತಿರುವ ಹೊತ್ತಿಗೆ ಅಮೆರಿಕದ ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಗಳು ಯಾರು ಎನ್ನುವುದು ಹೆಚ್ಚೂಕಮ್ಮಿ ತೀರ್ಮಾನವಾಗಿ ಹೋಗಿರುತ್ತದೆ. ಈಗಾಗಲೆ ಇಬ್ಬರು ತೀರ್ಮಾನವಾಗಿದ್ದಾರೆ. ಒಬ್ಬಾತ ರಿಪಬ್ಲಿಕನ್ ಪಕ್ಷದ ಜಾನ್ ಮೆಕೈನ್. ಇನ್ನೊಬ್ಬಾತ ಗ್ರೀನ್ ಪಾರ್ಟಿಯ ಅಭ್ಯರ್ಥಿ ರಾಲ್ಫ್ ನೇಡರ್. ಸದ್ಯದ ಸ್ಥಿತಿಯಲ್ಲಿ ಡೆಮಾಕ್ರಾಟ್ ಪಕ್ಷದ ಹಿಲ್ಲರಿ ಕ್ಲಿಂಟನ್ ಅಥವ ಬರಾಕ್ ಒಬಾಮ, ರಾಲ್ಫ್ ನೇಡರ್‌ನನ್ನು ಕಣದಿಂದ ಹಿಂದೆ ಸರಿದು ತಮ್ಮನ್ನು ಬೆಂಬಲಿಸುವಂತೆ ಕೋರುವ ಮತ್ತು ಅದನ್ನು ನೇಡರ್ ಒಪ್ಪಿಕೊಳ್ಳುವ ಸಾಧ್ಯತೆಗಳು ಕಮ್ಮಿ. ರಾಲ್ಫ್ ನೇಡರ್ ಅಧ್ಯಕ್ಷನಾಗುವುದು ಅಸಾಧ್ಯ ಎನ್ನುವುದು ನೇಡರ್‌ಗೂ ಗೊತ್ತು. ಆದರೆ, ಆತ ಈ ಸಲವೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಅಮೆರಿಕದ ಅಧ್ಯಕ್ಷನಾಗುವಂತೆ ಮಾಡಿಬಿಡಬಲ್ಲನೆ ಎನ್ನುವುದೆ ಸದ್ಯದ ಕುತೂಹಲ. ಹೌದು, 2000 ದರ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾರ್ಜ್ ಬುಷ್ ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾಗುವಲ್ಲಿರಾಲ್ಫ್ ನೇಡರ್‌ನ ದೊಡ್ಡ ಪಾತ್ರವೇ ಇತ್ತು.

ಲೆಬನಾನ್ ಸುಮಾರು 40 ಲಕ್ಷ ಜನಸಂಖ್ಯೆಯ ಸಣ್ಣ ದೇಶ. ಇಸ್ರೇಲಿನ ಉತ್ತರಕ್ಕಿದೆ. ಅರಬ್ ಮೂಲದ ಈ ದೇಶದ ಜನರಲ್ಲಿ ಶೇ. 60 ಮುಸಲ್ಮಾನರಾದರೆ, ಮಿಕ್ಕ ಶೇ. 40 ಕ್ರೈಸ್ತರು. ಅರಬ್ ದೇಶಗಳಲ್ಲೆಲ್ಲ ಇದ್ದುದರಲ್ಲಿ ಪ್ರಗತಿಪರ ದೇಶ. ಈ ದೇಶದಿಂದ ರೋಸ್ ಮತ್ತು ನಾಥ್ರಾ ನೇಡರ್ ಎನ್ನುವ ಅರಬ್ಬಿ ಮಾತನಾಡುವ ಯುವ ಕ್ರೈಸ್ತ ದಂಪತಿಗಳು ಬಹುಶಃ 1925 ರ ಸುಮಾರಿನಲ್ಲಿ ಅಮೆರಿಕಕ್ಕೆ ವಲಸೆ ಬರುತ್ತಾರೆ. ಗಂಡಹೆಂಡತಿ ಇಬ್ಬರೂ ಪ್ರಗತಿಪರ ನಿಲುವು ಹೊಂದಿದ್ದವರು. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರ ಸಕ್ರಿಯ ಆಸಕ್ತಿ ಇರಬೇಕು ಎನ್ನುವ ನಿಲುವಿದ್ದವರು. ಇಲ್ಲಿ ಇವರು ಒಂದು ರೆಸ್ಟಾರೆಂಟ್ ನಡೆಸುತ್ತಿದ್ದರು.

1955 ರಲ್ಲೊಮ್ಮೆ ಅವರು ವಾಸಿಸುತ್ತಿದ್ದ ಕನೆಕ್ಟಿಕಟ್ ರಾಜ್ಯದಲ್ಲಿ ಬಹುದೊಡ್ಡ ಪ್ರವಾಹ ಬಂದು ಅಪಾರ ಆಸ್ತಿಪಾಸ್ತಿ ನಷ್ಟವಾಗುತ್ತದೆ. ಆಗ ಆ ರಾಜ್ಯದ ಸೆನೆಟರ್ ಆಗಿದ್ದಾತ ಪ್ರೆಸ್ಕಾಟ್ ಬುಷ್. ಆತ ನೇಡರ್‌ರವರಿದ್ದ ಊರಿಗೆ ಪ್ರವಾಹದ ಬಗ್ಗೆ ಖುದ್ದು ತಿಳಿದುಕೊಳ್ಳಲು ಬರುತ್ತಾನೆ. ಆಗ ರೋಸ್ ನೇಡರ್‌ಳೂ ಆತನನ್ನು ಮಾತನಾಡಿಸಲು ಹೋಗುತ್ತಾಳೆ. ಆತ ಮಾಮೂಲಿ ಸೌಜನ್ಯದಂತೆ ಆಕೆಯ ಕೈಕುಲುಕಲು ಕೈ ನೀಡುತ್ತಾನೆ. ಕೈಕುಲುಕುತ್ತ ಕುಲುಕುತ್ತಾ ರೋಸ್ ಪ್ರವಾಹದ ಸ್ಥಿತಿಯನ್ನು, ಭವಿಷ್ಯದಲ್ಲಿ ಪ್ರವಾಹದ ಸಾಧ್ಯತೆಯನ್ನು ತಡೆಯಲು ಆ ನಗರದಲ್ಲಿ ನಿರ್ಮಿಸಬೇಕಾದ ಒಂದು ಒಣ-ಜಲಾಶಯದ ಅವಶ್ಯಕತೆಯನ್ನು ಹೇಳುತ್ತಾಳೆ. ಹಾಗೆಯೆ ಪ್ರೆಸ್ಕಾಟ್ ಬುಷ್ ಕೈ ಹಿಂದೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರೂ, ಆತ ಆ ಜಲಾಶಯವನ್ನು ನಿರ್ಮಿಸಲು ವಾಗ್ದಾನ ಮಾಡುವಂತೆ ಕೋರುತ್ತಾಳೆ. ಹಾಗೂ ಅಲ್ಲಿಯ ತನಕ ಕೈಬಿಡುವುದಿಲ್ಲ ಎನ್ನುವುದನ್ನು ಸೂಚಿಸುತ್ತಾಳೆ ಎನ್ನಿಸುತ್ತದೆ. ಆಕೆಯ ಈ ಪರಿಯ ಕೋರಿಕೆಗೆ ಮಣಿದ ಸೆನೆಟರ್ ಬುಷ್ ಒಣ ಜಲಾಶಯ ನಿರ್ಮಿಸುವುದಾಗಿ ವಾಗ್ದಾನ ಕೊಡುತ್ತಾನೆ. ಮುಂದಕ್ಕೆ ಆತ ತನ್ನ ಮಾತನ್ನು ಉಳಿಸಿಕೊಳ್ಳುತ್ತಾನೆ. 1988 ರಲ್ಲಿ ಅಧ್ಯಕ್ಷನಾಗುವ ಜಾರ್ಜ್ ಬುಷ್ ಇದೇ ಪ್ರೆಸ್ಕಾಟ್ ಬುಷ್‌ನ ಮಗ. ಹಾಗೆಯೆ, ಆತನ ಮೊಮ್ಮಗ ಇನ್ನೊಬ್ಬ ಜಾರ್ಜ್ ಬುಷ್ ಅಧ್ಯಕ್ಷ ಚುನಾವಣೆಯಲ್ಲಿ ಕೂದಲೆಳೆಯ ಅಂತರದಲ್ಲಿ ಗೆಲ್ಲಲು ರೋಸ್ ನೇಡರ್‌ಳ ಮಗ ರಾಲ್ಫ್ ನೇಡರ್ ಹೆಚ್ಚೂಕಮ್ಮಿ ಕಾರಣವಾಗಿ ಬಿಡುತ್ತಾನೆ.

ರಾಲ್ಫ್ ನೇಡರ್ ಹಾರ್ವರ್ಡ್ ಕಾನೂನು ಕಾಲೇಜಿನ ಪದವೀಧರ. ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ವಕೀಲ. ಈತನಿಗೆ ಯುವಕನಾಗಿದ್ದಾಗಿನಿಂದಲೂ ಆಟೊಮೊಬೈಲ್ ಇಂಡಸ್ಟ್ರಿಯ ಬಗ್ಗೆ ಮತ್ತು ಕಾರುಗಳಲ್ಲಿನ ಸುರಕ್ಷತೆಯ ಬಗ್ಗೆ ಆಸಕ್ತಿ. ಆ ಬಗ್ಗೆ ಸ್ಟಡಿ ಮಾಡುವ ನೇಡರ್ ತನ್ನ 31 ನೆ ವಯಸ್ಸಿನಲ್ಲಿ (1965) ಒಂದು ಪುಸ್ತಕ ಬರೆಯುತ್ತಾನೆ. ಅದರ ಹೆಸರು, "Unsafe at Any Speed." ಅದರಲ್ಲಿ ಅಮೆರಿಕದ ಬಹುತೇಕ ಕಾರುಗಳು, ಅದರಲ್ಲೂ ಮುಖ್ಯವಾಗಿ ಜನರಲ್ ಮೋಟಾರ್ಸ್‌ರವರ "ಷೆವ್ರಲೆಟ್ ಕಾರ್ವೆರ್" ಕಾರು ಹೇಗೆ ಸುರಕ್ಷಿತವಲ್ಲ, ಸಣ್ಣಪುಟ್ಟ ಅಪಘಾತಕ್ಕೆಲ್ಲ ಹೇಗೆ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಸರಿಯಾಗಿ ಡಿಸೈನ್ ಮಾಡದೆ ಇರುವುದರಿಂದ ಹೇಗೆ ಕಾರುಗಳು ಸುಲಭವಾಗಿ ಪಲ್ಟಿ ಹೊಡೆಯುತ್ತಿವೆ, ಮುಂತಾದುವುಗಳ ಬಗ್ಗೆ ಚರ್ಚಿಸಿರುತ್ತಾನೆ. ಇವೆಲ್ಲ ಗೊತ್ತಿದ್ದರೂ ಕಾರು ಕಂಪನಿಗಳು ಇವನ್ನೆಲ್ಲ ಕಡೆಗಣಿಸಿವೆ ಎಂದು ನಿರೂಪಿಸುತ್ತಾನೆ. ಈ ಪುಸ್ತಕ ಬಹಳ ಚರ್ಚೆಗೆ ದಾರಿ ಮಾಡಿಕೊಡುತ್ತದೆ. GM ಕಂಪನಿಯ ಮೇಲೆ ಅನೇಕರು ದಾವೆ ಹೂಡುತ್ತಾರೆ. ಅಮೆರಿಕದ ಸೆನೆಟ್ ಸಮಿತಿ ಕಾರುಸುರಕ್ಷತೆಯ ಬಗ್ಗೆ ತನಿಖೆ ಆರಂಭಿಸುತ್ತದೆ. ಆ ಸಮಿತಿಯ ಮುಂದೆ "GM ಕಂಪನಿಯವರು ಸುರಕ್ಷತೆಯ ಬಗ್ಗೆ ಹೇಗೆ ಕನಿಷ್ಠ ಕಾಳಜಿ ಹೊಂದಿದ್ದಾರೆ," ಎಂದು ಉದಾಹರಣೆ ಸಹಿತ ರಾಲ್ಫ್ ನಿರೂಪಿಸುತ್ತ ಹೋಗುತ್ತಾನೆ.

ಇದರಿಂದೆಲ್ಲ ಭೀತಿಗೊಂಡ GM ಕಂಪನಿ ರಾಲ್ಫ್ ನೇಡರ್‌ನ ಮಾನಹಾನಿಗೆ ಪ್ರಯತ್ನ ಪಡುತ್ತದೆ. ಖಾಸಗಿ ಪತ್ತೆದಾರರನ್ನು ನೇಮಿಸುತ್ತದೆ. ಆತನ ಇತಿಹಾಸವನ್ನೆಲ್ಲ ಶೋಧಿಸುತ್ತದೆ. ಆತನ ಫೋನ್‌ಗಳನ್ನು ಕದ್ದಾಲಿಸುತ್ತದೆ. ಕೊನೆಗೆ ವೇಶ್ಯೆಯರಿಗೆ ದುಡ್ಡುಕೊಟ್ಟು ರಾಲ್ಫ್ ನೇಡರ್‌ನನ್ನು ಬಲೆಗೆ ಹಾಕಿಕೊಳ್ಳಲು ಸಂಚು ರೂಪಿಸುತ್ತದೆ. ಇಷ್ಟೆಲ್ಲ ಮಾಡಿಯೂ ಕೊನೆಗೆ GM ಕಂಪನಿಗೆ ತಿಳಿದುಬರುವುದೇನೆಂದರೆ, 'ಇಡೀ ವಾಷಿಂಗ್‌ಟನ್ ಡಿ.ಸಿ. ಪ್ರದೇಶದಲ್ಲಿಯೆ ಸ್ವಚ್ಚ ಜೀವನವನ್ನು ನಡೆಸುತ್ತಿರುವ ಅತಿ ಮುಗ್ಧ ಯುವಕ ಅಂದರೆ ರಾಲ್ಫ್ ನೇಡರ್,' ಎಂದು. ಇದೆಲ್ಲ ಆಗುತ್ತಿರುವಾಗ, ತನ್ನ ಖಾಸಗಿ ಜೀವನವನ್ನು ಈ ರೀತಿ ಅಕ್ರಮವಾಗಿ ಶೋಧಿಸುತ್ತಿರುವುದು ಹಾಗುಪತ್ತೆದಾರರು ತನ್ನನ್ನು ಹಿಂಬಾಲಿಸುತ್ತಿರುವುದು ರಾಲ್ಫ್‌ನ ಗಮನಕ್ಕೆ ಬರುತ್ತದೆ. ಆತ GM ಮೇಲೆ ತನ್ನ ಖಾಸಗಿ ಜೀವನದ ಮೇಲಿನ ದಾಳಿಯನ್ನು ಆರೋಪಿಸಿ ಮೊಕದ್ದಮೆ ಹೂಡುತ್ತಾನೆ. ಆ ಸಮಯದಲ್ಲಿ, ಅಂದರೆ 40 ವರ್ಷಗಳ ಹಿಂದೆಯೆ ವರ್ಷಕ್ಕೆ ಸುಮಾರು 7000 ಕೋಟಿ ರೂಪಾಯಿ (1.7 ಬಿಲಿಯನ್ ಡಾಲರ್) ನಿವ್ವಳ ಲಾಭ ಇದ್ದ ಸಂಸ್ಥೆ ಜನರಲ್ ಮೋಟಾರ್ಸ್. ಅದು ಈ ಕೇಸಿನಲ್ಲಿ ಸಿಕ್ಕಿಬೀಳುತ್ತದೆ. ಅಮೆರಿಕದ ಆ ಅತಿದೊಡ್ಡ ಕಂಪನಿಯ ಅಧ್ಯಕ್ಷ ಸಾರ್ವಜನಿಕವಾಗಿ ತಮ್ಮ ಕುಕೃತ್ಯಗಳಿಗೆ ಕ್ಷಮೆ ಯಾಚಿಸುತ್ತಾನೆ. ನೇಡರ್‌ಗೆ 2.9 ಲಕ್ಷ ಡಾಲರ್ ಪರಿಹಾರ ಸಿಗುತ್ತದೆ. ಆ ದುಡ್ಡನ್ನು ಸ್ವಂತಕ್ಕೆ ಬಳಸಿಕೊಳ್ಳದ ನೇಡರ್ ಗ್ರಾಹಕ ಹಿತರಕ್ಷಣೆಯ ಸಂಸ್ಥೆಯೊಂದನ್ನು ಆರಂಭಿಸುತ್ತಾನೆ. ಮುಂದಕ್ಕೆ ಅಮೆರಿಕದ್ದೆ ಏನು, ಇಡೀ ವಿಶ್ವದ ಕಾರುಗಳಲ್ಲಿನ ಸುರಕ್ಷಾ ವಿಧಾನಗಳೆಲ್ಲ ಬದಲಾಗಿ ಹೋಗುತ್ತವೆ. ಲಕ್ಷಾಂತರ ಜನರ ಪ್ರಾಣ ಉಳಿಯುತ್ತದೆ. ಇವತ್ತಿಗೂ ಉಳಿಯುತ್ತಿದೆ.

ಇಲ್ಲಿಂದ ಮುಂದಕ್ಕೆ ಆ ವಲಸೆ ಬಂದ ದಂಪತಿಗಳ ಮಗ ಅಮೆರಿಕದ ಸಮಾಜದ ಮೇಲೆ ಅಳಿಯದ ಪ್ರಭಾವ ಬೀರುತ್ತ ಹೋಗುತ್ತಾನೆ. ಅನೇಕ ನಾಗರಿಕ ಸಂಸ್ಥೆಗಳನ್ನು ಕಟ್ಟುತ್ತಾನೆ. ಈತನ ಕೆಲಸದಿಂದ ಪ್ರೇರೇಪಿತರಾದ ನೂರಾರು ಆದರ್ಶ ವಿದ್ಯಾರ್ಥಿಗಳು ಆತನ ಸಂಘಸಂಸ್ಥೆಗಳಲ್ಲಿ ತೊಡಗಿಕೊಳ್ಳಲು, ಕೆಲಸ ಮಾಡಲು, ಸ್ವಯಂಪ್ರೇರಣೆಯಿಂದ ಬರುತ್ತಾರೆ. ಆತನ ಮುಂದಾಳತ್ವದಲ್ಲಿ ಒಂದಿಡೀ ಗುಂಪು ಸ್ವಸ್ಥ ಸಮಾಜದ ನಿರ್ಮಾಣಕ್ಕೆ, ಅನೇಕ ಸಾಮಾಜಿಕ-ಆರ್ಥಿಕ-ರಾಜಕೀಯ ಬದಲಾವಣೆಗಳಿಗೆ ಕಾರಣವಾಗುತ್ತದೆ. ಆ ಆದರ್ಶವಂತ ಯುವಕರನ್ನು ವಾಷಿಂಗ್‌ಟನ್ ಪೋಸ್ಟ್ ಪತ್ರಿಕೆ "Nader’s Raiders" ಎಂದೇ ಕರೆಯುತ್ತದೆ. ವ್ಯವಸ್ಥೆಯಲ್ಲಿನ ಅನ್ಯಾಯಗಳಿಗೆ ಮತ್ತು ಅಕ್ರಮಗಳಿಗೆ ನ್ಯಾಯ ಪಡೆದುಕೊಳ್ಳಲು ಇಡೀ ಅಮೆರಿಕದ ಜನತೆ ದಿಟ್ಟಿಸಿ ನೋಡುವ ಏಕೈಕ ಅಮೆರಿಕನ್ ಅಂದರೆ ನೇಡರ್ ಎನ್ನುವಂತಾಗಿಬಿಡುತ್ತದೆ. ಅಮೆರಿಕದಲ್ಲಿ ಬಹುಶಃ ಬೀಟಲ್ಸ್‌ಗಳಿಗಿಂತ ಹೆಚ್ಚಿನ ಪತ್ರಗಳು ಈತನಿಗೆ ಬರೆಯಲ್ಪಡುತ್ತವೆ. ಟೈಮ್ ಮ್ಯಾಗಜೈನ್, ಲೈಫ್ ಮ್ಯಾಗಜೈನ್‌ನಂತಹ ಪತ್ರಿಕೆಗಳು ರ್‍ಯಾಲ್ಫ್ ನೇಡರ್‌ನನ್ನು ಅಮೆರಿಕದ ನೂರು ಅತಿಪ್ರಭಾವಿ ವ್ಯಕ್ತಿಗಳಲ್ಲಿ ಒಂದಾಗಿ ಗುರುತಿಸುತ್ತವೆ. ಆತನಿಗೆ ಇನ್ನೂ 38 ವರ್ಷವಾಗಿರುವಾಗಲೆ, ಯಾವುದೆ ಪಕ್ಷದೊಡನೆ ಗುರುತಿಸಿಕೊಳ್ಳದ ಆತನನ್ನು (ಆದರೂ ಆತನ ಐಡಿಯಾಲಜಿಗೆ ಡೆಮಾಕ್ರಾಟ್ ಪಕ್ಷವೆ ಹತ್ತಿರ) ಅಮೆರಿಕದ ಅಧ್ಯಕ್ಷನನ್ನಾಗಿ ಮಾಡಬೇಕೆಂಬ "Draft Nader" ಮೂವ್‌ಮೆಂಟ್ ಆರಂಭವಾಗುತ್ತದೆ. ಆಗಲೆ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಸಂದರ್ಶಕರು ಆತನನ್ನು ಆ ಪ್ರಶ್ನೆ ಕೇಳುತ್ತಾರೆ. ಆ ಸಮಯದಲ್ಲಿ ಆತ ಅದಕ್ಕೆ ಒಲವು ತೋರಿಸುವುದಿಲ್ಲ. ವ್ಯವಸ್ಥೆಯನ್ನು ಸುಧಾರಿಸುವ ತನ್ನ ಕಾಯಕದಲ್ಲಿಯೆ ಮುಂದುವರೆಯುತ್ತಾನೆ. ಅಮೆರಿಕದ ಎಷ್ಟೊ ಅಭಿಷಿಕ್ತ ಅಧ್ಯಕ್ಷರಿಗೂ ಜನರಲ್ಲಿ ಇಲ್ಲದ ಪ್ರಭಾವ ಈತನಿಗಿರುತ್ತದೆ. ರೊನಾಲ್ಡ್ ರೇಗನ್ ಬರುವವರೆಗೂ ಬಹಳ ಪರಿಣಾಮಕಾರಿಯಾಗಿ ಅಮೆರಿಕದ ಜನತೆಯನ್ನು ಪ್ರಭಾವಿಸುತ್ತ, ತಮ್ಮ ನಾಗರಿಕ ಜವಾಬ್ದಾರಿಗಳನ್ನು ಹೊರುವಂತೆ ಪ್ರಚೋದಿಸುತ್ತ ಹೋಗುತ್ತಾನೆ.



ಯಾವಾಗ ರೇಗನ್ ಮತ್ತು ಮೊದಲ ಬುಷ್ ಅಮೆರಿಕವನ್ನು ಮತ್ತೆ ಕಾರ್ಪೊರೇಟ್ ಜಗತ್ತಿನ ಲಾಭಬಕಾಸುರತೆಗೆ ಅನುವು ಮಾಡಿಕೊಡುತ್ತಾರೊ, ಎರಡೂ ಪಕ್ಷಗಳ ರಾಜಕಾರಣದಲ್ಲಿ ಹಣದ ಪ್ರಭಾವ ಹೆಚ್ಚಾಗುತ್ತ್ತದೊ, ಆಗ, ಅಮೆರಿಕಕ್ಕೆ ಮೂರನೆ ಪಕ್ಷವೊಂದರ ಅವಶ್ಯಕತೆ ಇದೆ ಎಂದು ರ್‍ಯಾಲ್ಫ್ ತೀರ್ಮಾನಿಸುತ್ತಾನೆ. 2000 ನೆ ಇಸವಿಯಲ್ಲಿ ಅಧಿಕೃತವಾಗಿ ಗ್ರೀನ್ ಪಾರ್ಟಿಯ ಅಭ್ಯರ್ಥಿಯಾಗುತ್ತಾನೆ. ಆಗ ಈಗಿನ ಅಧ್ಯಕ್ಷ ಜಾರ್ಜ್ ಬುಷ್ ರಿಪಬ್ಲಿಕನ್ ಅಭ್ಯರ್ಥಿ. ಆಲ್ ಗೋರ್ ಡೆಮಾಕ್ರಾಟ್ ಅಭ್ಯರ್ಥಿ. ಆ ಚುನಾವಣೆಯಲ್ಲಿ 28 ಲಕ್ಷ ಜನ ನೇಡರ್‌ಗೆ ವೋಟು ಹಾಕುತ್ತಾರೆ. ದೇಶದಲ್ಲಿ ಚಲಾಯಿಸಲಾದ ಒಟ್ಟಾರೆ ಮತದಲ್ಲಿ ಜಾರ್ಜ್ ಬುಷ್ ಆಲ್ ಗೋರ್‌ಗಿಂತ ಕಮ್ಮಿ ಪಡೆಯುತ್ತಾನೆ. ಆದರೆ ಎಲೆಕ್ಟೊರಲ್ ವೋಟುಗಳ ಆಧಾರದ ಮೇಲೆ ಬುಷ್ ಗೆಲ್ಲುತ್ತಾನೆ. ಅದು ಸಾಧ್ಯವಾಗುವಂತೆ ಮಾಡಿದ್ದು ಆತನ ತಮ್ಮ ಗವರ್ನರ್ ಆಗಿದ್ದ ಫ್ಲೊರಿಡ ರಾಜ್ಯ. ಅಲ್ಲಿ ಅನೇಕ ಅವ್ಯವಹಾರಗಳ ಆರೋಪದ ಮಧ್ಯೆ ಕೇವಲ ಐದು ನೂರು ವೋಟುಗಳ ಅಂತರದಲ್ಲಿ ಬುಷ್ ಗೆಲ್ಲುತ್ತಾನೆ. ಆದರೆ ಅದೇ ರಾಜ್ಯದಲ್ಲಿ ಅಷ್ಟೇನೂ ಪ್ರಚಾರ ಮಾಡದಿದ್ದರೂ ನೇಡರ್ ಸುಮಾರು ಒಂದು ಲಕ್ಷ ಮತ ಪಡೆಯುತ್ತಾನೆ. ನೇಡರ್ ನಿಲ್ಲದೆ ಇದ್ದಿದ್ದರೆ ಆ ಮತಗಳೆಲ್ಲ ಗೋರ್‌ಗೇ ಬೀಳುತ್ತಿತ್ತು ಎನ್ನುವ ಡೆಮಾಕ್ರಾಟರು ಅದೇ ಕಾರಣಕ್ಕೆ ಇವತ್ತಿಗೂ ನೇಡರ್‌ನನ್ನು ಕ್ಷಮಿಸಿಲ್ಲ. ಆದರೆ, ನಿಷ್ಠುರ ಪ್ರಾಮಾಣಿಕನಾದ, ರಾಜಿಯಿಲ್ಲದ ನೈತಿಕವಾದಿ ನೇಡರ್ ಅವರನ್ನು ಕೇಳುತ್ತಿರುವುದು ಒಂದೇ ಪ್ರಶ್ನೆ, "ನೀವು ಹೇಗೆ ರಿಪಬ್ಲಿಕನ್ನರಿಗಿಂತ ಭಿನ್ನ?" ಅಧಿಕಾರ ಬಂದಾಗ ಹೆಚ್ಚುಕಮ್ಮಿ ಒಂದೆ ತರಹ ಮಾಡುವ ಅವರ ಬಳಿ ಆಗಲೂ ಉತ್ತರವಿಲ್ಲ. ಈಗಲೂ ಉತ್ತರವಿಲ್ಲ.

ಸೋಲುತ್ತೇನೆ ಎಂದು ಗೊತ್ತಿದ್ದರೂ, ಸಾರ್ವಜನಿಕ ಜೀವನದಲ್ಲಿ ಬದ್ಧತೆಯಿರಬೇಕು, ಹಣದ ಪ್ರಭಾವ ಇರಬಾರದು, ಕಾರ್ಪೊರೇಷನ್‌ಗಳಿಗಿಂತ ಜನರ ಹಿತಾಸಕ್ತಿ ಮುಖ್ಯ, ಹಾಗಾಗಿಯೆ ಆ ಬಗ್ಗೆ ಚರ್ಚೆಯಾಗುವುದೂ ಅಗತ್ಯ ಎಂದು ಮತ್ತೆ 2004 ರಲ್ಲೂ ನೇಡರ್ ಚುನಾವಣೆಗೆ ನಿಂತಿದ್ದ. ಮತ್ತೆ, ಈ ಸಲವೂ ನಿಲ್ಲುವುದಾಗಿ ಘೋಷಿಸಿದ್ದಾನೆ ಈ 74 ವರ್ಷದ "ಸಂತ." ಹೌದು, ಒಂದರ್ಥದಲ್ಲಿ ಈತ ಸಂತನೆ. ಮದುವೆ ಆಗಿಲ್ಲ. ಈತ ಎಂದಾದರೂ ಪ್ರೇಮದಲ್ಲಿ ಬಿದ್ದಿದ್ದಾಗಲಿ, ಡೇಟ್ ಮಾಡಿದ್ದಾಗಲಿ, ಯಾರೂ ನೋಡಿಲ್ಲ. ನನಗೆ ಅದಕ್ಕೆಲ್ಲ ಬಿಡುವಿಲ್ಲ ಎನ್ನುತ್ತಲೆ, ಪ್ರತಿದಿನ ಮತ್ತು ಪ್ರತಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಮೀಸಲಿಟ್ಟಿದ್ದಾನೆ.

ಇವತ್ತು ಅಮೆರಿಕದಲ್ಲಿ ಅಧ್ಯಕ್ಷನಾಗುವ ಯೋಗ್ಯತೆ ಇರುವವರಲ್ಲಿ ಮೊದಲ ಸ್ಥಾನ ನಿಸ್ಸಂಶಯವಾಗಿ ರಾಲ್ಫ್ ನೇಡರ್‌ದೆ. ಆದರೆ, ಈ ಪಕ್ಷ ವ್ಯವಸ್ಥೆ ಮತ್ತು ರಾಜಕೀಯ ಬಯಸುವ ರಾಜಿ-ವಶೀಲಿಗಳು, ಹಣದ ಮಹಿಮೆ ಮತ್ತು ಪ್ರಭಾವ, ಬದಲಾಗುವ ಸಂದರ್ಭಗಳು, ಮತ್ತು ಸುಲಭವಾಗಿ ಕುರಿಮಂದೆಯಾಗಿಬಿಡುವ ಬಹುಸಂಖ್ಯಾತ indifferent ಜನ ಅದನ್ನು ಸಾಧ್ಯವಾಗಿಸುವುದಿಲ್ಲ. ನೇಡರ್‌ನ ಸೋಲು ಅಮೆರಿಕದ ಸೋಲು. ಆದರೆ ಅದು ಕೇವಲ ಅಮೆರಿಕದ ನಷ್ಟವಲ್ಲ. "Maybe if we started talking about civic globalization instead of corporate globalization, the world will move forward." ಎನ್ನುವ ನೇಡರ್‌ನ ಸೋಲು ಈ ಲಾಭಕೋರ, ಸ್ವಾರ್ಥ ಪ್ರಪಂಚದಲ್ಲಿ ವಿಶ್ವಕ್ಕೂ ಆಗುವ ನಷ್ಟ.


ರಾಲ್ಫ್ ನೇಡರ್ ನೇಡರ್ ಚಿಕ್ಕವನಿದ್ದಾಗ ಆತನ ಅಪ್ಪ ಮಗ ಶಾಲೆಯಿಂದ ಬಂದಾಗ ಒಂದು ಪ್ರಶ್ನೆ ಕೇಳುತ್ತಿದ್ದನಂತೆ: ಮಗಾ, ಇವತ್ತು ಶಾಲೆಯಲ್ಲಿ ಏನು ಕಲಿತೆ? ನಂಬಲು ಕಲಿತೆಯೊ, ಅಥವ ಯೋಚಿಸಲು ಕಲಿತೆಯೊ? (What did you learn today, Ralph? Did you learn to believe or did you learn to think?) ಜವಾಬ್ದಾರಿಯುತ ಸಮಾಜದಲ್ಲಿ ಒಂದಲ್ಲ ಒಂದು ಸಮಯದಲ್ಲಿ ಯಾರಾದರೂ ವಿದ್ಯಾರ್ಥಿಗಳನ್ನು ಕೇಳಲೇಬೇಕಾದ ಬಹುಮುಖ್ಯ ಪ್ರಶ್ನೆ ಇದೆ. ಯಾರೂ ಕೇಳದಿದ್ದರೂ ವಿದ್ಯಾರ್ಥಿಗಳು ತಮಗೆ ತಾವೆ ಹಾಕಿಕೊಳ್ಳಬೇಕಾದ ಪ್ರಶ್ನೆ ಇದು. "ಸಂಸ್ಕಾರ" ಆರಂಭವಾಗುವುದೆ ಇಂತಹ ಪ್ರಶ್ನೆಯ ಮೂಲಕ. ಅಲ್ಲವೆ?

Mar 2, 2008

ಹಾಜರಾಗುವ ಹಜಾರಗಳಲ್ಲಿ ಹಾಕಲಿರುವ ಹಾಜರಿ ....

ಇಲ್ಲಿಯವರೆಗೂ ಯಾವುದೆ ಬ್ಲಾಗುಗಳಲ್ಲಿ ಮತ್ತು ವೆಬ್‌ಸೈಟುಗಳಲ್ಲಿ ಕಾಮೆಂಟು ಬಿಡುತ್ತಿರಲಿಲ್ಲ. ಮುಖ್ಯ ಕಾರಣ, ಯಾವುದಕ್ಕಾದರೂ ತೊಡಗಿಕೊಂಡರೆ passionate ಆಗಿ ತೊಡಗಿಕೊಳ್ಳುವ ನನ್ನ ಗುಣದಿಂದಾಗಿ, ಇಂತಹ ಕಾಮೆಂಟುಗಳು ಮತ್ತು ಚರ್ಚೆಗಳು ನನ್ನ energy ಯನ್ನು ಹೀರಿಬಿಡುತ್ತವೆ ಎನ್ನುವುದು. ಅಷ್ಟೆ ಪ್ರಬಲವಾದ ಇನ್ನೊಂದು ಕಾರಣ, ವಿಷಯವನ್ನು ಎಲ್ಲೆಲ್ಲಿಂದ ಎಲ್ಲೆಲ್ಲಿಗೊ ಕೊಂಡಿಹಾಕಿ, ಅನಾಮಿಕವಾಗಿ ಇಲ್ಲವೆ ಗುಪ್ತನಾಮಗಳಲ್ಲಿ ಕೊಳಕಾಗಿ ಬರೆಯುವವರ ಬಗೆಗಿರುವ ಜಿಗುಪ್ಸೆ. ಅಪ್ರಬುದ್ಧರನ್ನು, ಬೇಜವಬ್ದಾರರನ್ನು, ಅಸಂಬದ್ಧವಾಗಿ ಮಾತನಾಡುವವರನ್ನು, ಕೆಟ್ಟದಾಗಿ ಟೀಕೆ ಮಾಡುವವರನ್ನೂ ಸಹಿಸಿಕೊಳ್ಳಬಲ್ಲೆ. ಆದರೆ, ಈ ಹೇಡಿ, ಕೊಳಕುಕೊಳಕಾಗಿ ಒಂದೆರಡು ಪದಗಳ, ವಾಕ್ಯಗಳ ಅನಾಮಿಕ ಟೀಕೆಟಿಪ್ಪಣಿ ಮಾಡುವವರನ್ನು ಸಹಿಸಿಕೊಳ್ಳುವುದು ಭಾರೀ ಕಷ್ಟ. ಇದೇ ಕಾರಣಕ್ಕೆ ಇಷ್ಟೂ ದಿನ ಕೇವಲ ಇಮೇಯ್ಲುಗಳಿಗೆ, ಅದೂ ಸಮಯ ಮತ್ತು ಮನಸ್ಸಿದ್ದಲ್ಲಿ ಉತ್ತರಿಸುತ್ತಿದೆ.

ಒಂದೆರಡು ವೈಯಕ್ತಿಕ ಕಾರಣಗಳಿಗೆ ಈಗ ಮನಸ್ಸು ಒಂದಷ್ಟು ಉಲ್ಲಸಿತವಾಗಿದೆ. ಅದೇ ಮನಸ್ಥಿತಿಯಲ್ಲಿ, ನಾನು ಆಗಾಗ ಹಾಜರಾಕುವ (ಕನ್ನಡದ ಬಹುತೇಕ) ಬ್ಲಾಗುಗಳಲ್ಲಿ ಅಲ್ಲೊಂದು ಇಲ್ಲೊಂದು, ಸರಿಯೆನಿಸಿದ ಕಡೆ ಕಾಮೆಂಟು ಬಿಡಬೇಕು ಹಾಗೂ ಒಂದಷ್ಟು ಸಹಬರಹಗಾರರನ್ನು ಪರಿಚಯ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಿದ್ದೇನೆ. ಇದನ್ನು ಕೇವಲ ಒಂದು ತಿಂಗಳು ಮಾತ್ರ ಮಾಡಬೇಕು, ಮುಂದಕ್ಕೆ ಶಿವನಿಚ್ಚೆ ಎಂದುಕೊಂಡಿದ್ದೇನೆ.

ನನ್ನ ಬ್ಲಾಗು ಬ್ಲಾಗ್‍ಸ್ಪಾಟ್‌ನಲ್ಲಿರುವುದರಿಂದ ಕಾಮೆಂಟು ಹಾಕುವ ಕಡೆಯಲ್ಲ ಲಾಗಿನ್ ಆಗಿ ಅಧಿಕೃತವಾಗಿಯೆ ಬಿಡಬಹುದು. ಆದರೆ, ವರ್ಡ್‌ಪ್ರೆಸ್‌ನಲ್ಲಿ ಇನ್ನೂ ಲಾಗಿನ್ ಕ್ರಿಯೇಟ್ ಮಾಡಿಲ್ಲ. ಮಾಡಬೇಕು. ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ, ಕೆಲವು ಪುಣ್ಯಾತ್ಮರು ಯಾರು ಯಾರೊ ಹೆಸರಿನಲ್ಲಿ ಎಲ್ಲೆಲ್ಲಿಯೊ ಕಾಮೆಂಟು ಬಿಟ್ಟುಬಿಡುತ್ತಾರೆ. (ಇದನ್ನು ಕಳೆದ ವರ್ಷದ ಇಂಟರ್‍ನೆಟ್‍ನಲ್ಲಿ ನವಗ್ರಹ ಕಾಟ!!! ಲೇಖನದಲ್ಲಿ ಪ್ರಸ್ತಾಪಿಸಿದ್ದೆ.) ಒಂದೆರಡು ಕಡೆ ನನ್ನದೆ ಹೆಸರಿನಲ್ಲಿ, ಕೆಲವೊಮ್ಮೆ ಅಧಿಕೃತ ಎನ್ನುವಂತೆ ತೋರಿಸಲು ಸೂಕ್ತ ಹೈಪರ್‍ಲಿಂಕ್ ಹಾಕಿ ಬರೆದಿದ್ದಾರೆ. ಇದರಿಂದ ತಲೆಹೋಗುವುದು ಏನೂ ಇಲ್ಲವಾದರೂ, ಆಗಾಗ ಆಗುವಂತೆ ಯಾರಾದರೂ ಕೇಳಿದರೆ ಬರೆದದ್ದು ನಾನಲ್ಲ ಎನ್ನುವ ಇಲ್ಲದ ತರಲೆ. ಈಗ ಆ ತರಲೆ ಸ್ವಲ್ಪ ಜಾಸ್ತಿಯೇ ಆಗಬಹುದು, ಆಗದೆಯೂ ಇರಬಹುದು. ಆದರೂ, ಕಾಮೆಂಟು ಬಿಡುವ ಕಡೆಯೆಲ್ಲ ಲಾಗಿನ್ ಆಗಿಯೇ ಕಾಮೆಂಟು ಬಿಡಬೇಕು.

ಮೊದಲ ಕಾಮೆಂಟನ್ನು ಸುಪ್ರೀತ್ ಎನ್ನುವ ಹುಡುಗ ಬರೆಯುವ "ಒಂಟಿ ಹಕ್ಕಿಯ ಹಾಡು" ಬ್ಲಾಗಿನಲ್ಲಿ ಬಿಡಬೇಕು ಎಂದುಕೊಂಡಿದ್ದೇನೆ. ಕಳೆದ ಐದಾರು ತಿಂಗಳಿನಿಂದ ಆಗೊಮ್ಮೆ ಈಗೊಮ್ಮೆ ಈ ಯುವಕನ ಬ್ಲಾಗ್ ನೋಡುತ್ತಿರುವ ನನಗೆ ಈ ಯುವಕನ ಚಿಂತನೆಯ transition ಕುತೂಹಲಕರವಾಗಿ ಕಂಡಿದೆ. ತನ್ನ ದಾರಿ ಮತ್ತು ಸ್ವತಂತ್ರ ಯೋಚನಾಕ್ರಮ ಕಂಡುಕೊಳ್ಳುವ ನಿಟ್ಟಿನಲ್ಲಿರುವ ಈ ತಮ್ಮನ ಪೊರೆಕಳಚಿಕೊಳ್ಳುವಿಕೆ ಹಿಂದೆ ನಾನೊಮ್ಮೆ ಬರೆದಿದ್ದ ಲೇಖನವನ್ನು ನೆನಪಿಸುತ್ತದೆ. ಅದು ಗಿರೀಶ ಮಟ್ಟೆಣ್ಣವರ್ ಎಂಬಾತನ ಬಗ್ಗೆ ಬರೆದಿದ್ದ "ದೇಶಭಕ್ತರು ಬಾಂಬ್ ಹಿಡಿಯಲೇಬೇಕೆ?" ಲೇಖನ. ಅದರಲ್ಲಿ ನಾವು ಚಂದಮಾಮ-ಸುಧಾ-ಆನಕೃ-ಲಂಕೇಶ್-ಭೈರಪ್ಪ-ಲಂಕೇಶ್-ಕಾರಂತ-ಕುವೆಂಪು ಹಾದಿಯಲ್ಲಿ transition ಆಗುವ ಬಗ್ಗೆ ಬರೆದಿದ್ದೆ. ಚಿಂತನೆಯ ಜಂಗಮ-ಸ್ಥಾವರಗಳ ಬಗೆಗಿನ ಆ ಲೇಖನ ಈ ಹುಡುಗನ ಈಗಿರುವ ಜಂಗಮ ಮನೋಸ್ಥಿತಿಯನ್ನು ನೆನಪಿಸುತ್ತಿದೆ.

"ಆದರೆ ಜೀವನ ಒಂದು ಜಂಗಮ ಕ್ರಿಯೆ. ವಯಸ್ಸು ಬೆಳೆದಂತೆ, ಓದು ವಿಸ್ತಾರವಾದಂತೆ, ಅನುಭವ ಪಕ್ವಗೊಂಡಂತೆ, ಗೆಲುವು ಮತ್ತು ಸೋಲುಗಳು ನೆಕ್ಕಿದಂತೆ, ಸತ್ಯ ಮತ್ತು ಆದರ್ಶವಂತರ ಸೋಲೂ ಕಣ್ಣಿಗೆ ಕಾಣಿಸಬೇಕು. ಇಲ್ಲದಿದ್ದಲ್ಲಿ ಬುದ್ಧಿ ಎಲ್ಲೋ ನಿಂತ ನೀರಾಗಿದೆ ಎಂದೇ ಅರ್ಥ. ಚಂದಮಾಮದ ಕಥೆಗಳನ್ನು ಬಾಲ್ಯದ ಮೂರ್ನಾಲ್ಕು ವರ್ಷಗಳು ಓದಿದ ನಂತರ ಸುಧಾ, ತರಂಗ, ರಾಗಸಂಗಮಗಳಿಗೆ ಬೆಳೆಯಬೇಕು. ಯಂಡಮೂರಿ, ಪತ್ತೇದಾರಿಗಳ ನಂತರ ಆನಕೃ, ತರಾಸು, ಭೈರಪ್ಪ, ಲಂಕೇಶ್, ಕಾರಂತ, ಕುವೆಂಪುಗಳಾಚೆ ವಿಸ್ತರಿಸುತ್ತಿರಬೇಕು. ಭಗತ್‌ಸಿಂಗ್ ಇಷ್ಟವಾಗಬೇಕು. ಆತನಿಗೆ ಗಲ್ಲು ತಪ್ಪಿಸದ ಗಾಂಧಿಯೂ ಇಷ್ಟವಾಗಬೇಕು. ಗಾಂಧಿಯಾಚೆಯೂ ದೃಷ್ಟಿ ನೆಡಬೇಕು. ಹರಿಯುವ ನೀರಿಗೆ ದೋಷವಿಲ್ಲ. ಈ ಪಯಣದಲ್ಲಿ ಯಾವುದೇ ಸ್ಥಳದಲ್ಲಿ ಗೂಟ ಬಡಿದುಕೊಂಡು ನಿಂತರೆ ಅದೇ ಸ್ಥಾವರ. ಆಗ ಬೆಳವಣಿಗೆ ನಿಂತ ನೀರಾಗಿ ಗಬ್ಬೇಳುತ್ತದೆ. ವ್ಯಕ್ತಿ, ದೇಶ ಹಿಂದುಳಿಯುತ್ತದೆ. ಮುಂದುವರಿದವರ ಅನಾಸ್ಥೆಯಲ್ಲಿ, ಮರುಕದಲ್ಲಿ, ಹೀಯಾಳಿಕೆಯಲ್ಲಿ, ಶೋಷಣೆಯಲ್ಲಿ ಕಾಲ ಗತಿಸುತ್ತದೆ."

(ಈ ಲೇಖನ ದಟ್ಸ್‌ಕನ್ನಡ.ಕಾಮ್ ನಲ್ಲಿ ಪ್ರಕಟವಾಗಿತ್ತು. ಇತ್ತೀಚಿನ ದಿನಗಳಲ್ಲಿ ಆ ವೆಬ್‌ಸೈಟಿನಲ್ಲಾಗುತ್ತಿರುವ ಟೆಕ್ನಿಕಲ್ ಬದಲಾವಣೆಗಳಿಂದಾಗಿ ಇರಬಹುದು, ಅಲ್ಲಿ ಈ ಮೊದಲಿದ್ದ ಅನೇಕ ಲಿಂಕುಗಳು ಕೆಲಸ ಮಾಡುತ್ತಿಲ್ಲ. ಅದೇ ಕಾರಣಕ್ಕೆ ಈ ಮೇಲಿನ ಲೇಖನವನ್ನು ಇಲ್ಲಿಯೇ ಬ್ಲಾಗಿಗೆ ಸೇರಿಸಿದ್ದೇನೆ. http://amerikadimdaravi.blogspot.com/2003/11/blog-post.html)

ಹಾಗೆಯೆ, ಈ ಒಂದು ತಿಂಗಳಿನ ಸಕ್ರಿಯತೆ ಒಂದಷ್ಟು ಬಾಹ್ಯ ಮತ್ತು ಆಂತರಿಕ ಸಂವಾದಕ್ಕೆ ಹಾಗೂ ಒಂದಷ್ಟು ಹೊಸಪರಿಚಯಗಳಿಗೆ ಎಡೆ ಮಾಡಿಕೊಡುತ್ತದೆ ಎಂದುಕೊಳ್ಳುತ್ತೇನೆ. ನೋಡೋಣ...