May 26, 2007

ಕನ್ಯೆ ಕುಂತಿಗೆ ಕರ್ಣ ಹುಟ್ಟಿದ್ದು ನಿಜವೇ? ಯಾಕಾಗಿರಬಾರದು?

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜೂನ್ 8, 2007 ರ ಸಂಚಿಕೆಯಲ್ಲಿನ ಲೇಖನ)

ಮಹಾಭಾರತದ ಮೇಲಿನ ಆ ಕನ್ನಡ ಕಾದಂಬರಿಯಲ್ಲಿ "ಬೀಜ" ಗಣಿತಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಬೀಜ ಎನ್ನುವ ಪದ ಇಲ್ಲದ ಪ್ಯಾರಾಗಳಾಗಲಿ, ಪುಟಗಳಾಗಲಿ ಅದರಲ್ಲಿ ಅಪರೂಪ. ಅದರಲ್ಲಿ ಸೂರ್ಯ, ಯಮ, ವಾಯು, ಮತ್ತು ಇಂದ್ರರ ಜೊತೆ ಸಂತಾನಕ್ಕಾಗಿ ಕುಂತಿ ಸಂಭೋಗ ಮಾಡುವುದಷ್ಟೇ ಅಲ್ಲ, ಅದನ್ನು ಮನಃಪೂರ್ವಕವಾಗಿ ಆಸ್ವಾದಿಸುತ್ತಾಳೆ ಎಂದು ಲೇಖಕರು ಬರೆಯುತ್ತಾರೆ. ಆದರೆ ಇವತ್ತು ಅಂತಹವರೆ ಮಹಾಭಾರತದ ಬಗ್ಗೆ ಕೇವಲ ಬಹಿರಂಗ ಹೆಮ್ಮೆ ತೊರಿಸುವ ಕೋಮುವಾದಿಗಳ ಆರಾಧ್ಯ ಲೇಖಕರಾಗಿರುವುದು ನಗೆಪಾಟಲೊ, ಕ್ರೂರ ವ್ಯಂಗ್ಯವೊ ಗೊತ್ತಾಗುತ್ತಿಲ್ಲ. ಪುರಾಣವನ್ನು ಇತಿಹಾಸವಾಗಿ ಪರಿವರ್ತಿಸಿದೆ ಎಂಬ ಅಹಂಕಾರ ಇನ್ನು ಇತಿಹಾಸಕ್ಕೆ ಏನೇನು ಮಾಡಬಹುದು? ಯಾವೊಂದು ಜೀವದ ಮೇಲೂ ಪ್ರೀತಿಯಿಲ್ಲದ, ಇತಿಹಾಸದ ಬಗ್ಗೆ ಗೌರವ, ವಿನಯ ಇಲ್ಲದ ಜನ ಎಲ್ಲವನ್ನೂ ತಮ್ಮ ಕಾಮಾಲೆ ಕಣ್ಣಿನಿಂದ ನೋಡುತ್ತಾರೆ ಎನ್ನುವುದು ಇತ್ತೀಚೆಗೆ ತಾನೆ ಮತ್ತೊಮ್ಮೆ ಸಾಬೀತಾಗಿದೆ. ಬೀಜದ ಮೇಲಿನ ಕುತೂಹಲ ಬೀಜ ಒಡೆಯುವ ಕತೆ ಹೇಳುವ ತನಕ ಮುಂದುವರೆದಿದೆ! ಒಗ್ಗೂಡಿಸುವುದಕ್ಕಿಂತ ಭಾಷೆ-ಪಂಗಡ-ಜಾತಿ-ಮತ-ನೆಲ-ನೀರು ಇತ್ಯಾದಿಗಳ ಆಧಾರದ ಮೇಲೆ ಜನರನ್ನು ಒಡೆಯುವುದರಲ್ಲಿ ನಮ್ಮಲ್ಲಿ ಕೆಲವರು ನಿಸ್ಸೀಮರು.

ಹಳ್ಳಿಗಾಡಿನ ನನ್ನಂತಹ ಬಹುಪಾಲು ಭಾರತೀಯರು ರಾಮಾಯಣ, ಮಹಾಭಾರತದ ಕತೆಗಳನ್ನು ಕೇಳುತ್ತ ಬೆಳೆದವರು. ನಾನು ಎಂಟೊಂಭತ್ತು ವರ್ಷದವನಿದ್ದಾಗ ನನ್ನ ಹಳ್ಳಿ ಜನ ಆಡಿದ "ದಾನ ಶೂರ ವೀರ ಕರ್ಣ" ನಾಟಕದ ಪ್ರತಿಯೊಂದು ಡೈಲಾಗ್ ಮತ್ತು ಮಟ್ಟು ನನಗೆ ಬಾಯಿಪಾಟ ಆಗಿಬಿಟ್ಟಿತ್ತು. ಸಹಸ್ರಾರು ವರ್ಷಗಳಿಂದ ಭಾರತದ ಆಳದಲ್ಲಿ ಇಳಿದು ಹೋದ ರಾಮ, ಕೃಷ್ಣರ ಕತೆಯನ್ನು ಮೆಚ್ಚಲು, ನಮ್ಮ ಈ ಪ್ರಾಚೀನ ಪುರಾಣಗಳ ಪರಂಪರೆಯ ಬಗ್ಗೆ ಹೆಮ್ಮೆ ತಾಳಲು ನಮಗೆ ಇತರ ಮತ, ಕೋಮುಗಳ ಮೇಲಿನ ದ್ವೇಷ ಮೂಲವಾಗಿರಲಿಲ್ಲ. ಆಗ ಕೂಡದು. ಆದರೆ ಇಂದಿನ ದುರ್ದೈವ ಏನೆಂದರೆ, ಪರಮತ ಸಹಿಷ್ಣುಗಳನ್ನು ರಾಮನ ಮೌಲ್ಯಗಳನ್ನು ನಿರಾಕರಿಸುವವರು ಎಂದು ಕೋಮುವಾದಿಗಳು ಆರೋಪಿಸುತ್ತಾರೆ. ಇನ್ನೊಂದು ಪಂಗಡವಿದೆ; ರಾಮ, ಕೃಷ್ಣರ ಉಲ್ಲ್ಲೇಖ ತೆಗೆದುಕೊಂಡ ಮಾತ್ರಕ್ಕೆ ಅವರನ್ನು ಕೋಮುವಾದಿಗಳು ಎಂದು ಬಿಡುವ ಗುಂಪಿದು; ಗಾಂಧಿಯ ಭಾರತ ಅರ್ಥವಾಗಿಲ್ಲದ ಗುಂಪಿದು. ಇವರಿಬ್ಬರ ಅತಿರೇಕವನ್ನು ನಮ್ಮ ಸಮಾಜ ಮೀರಬೇಕಿದೆ.

ರಾಮಾಯಣ, ಮಹಾಭಾರತದಲ್ಲಿನ ಘಟನೆಗಳು ವಾಲ್ಮೀಕಿ, ವ್ಯಾಸ ಬರೆದ ಹಾಗೆಯೆ ಅಕ್ಷರಶಃ ನಡೆದದ್ದು ಎಂದು ಒಪ್ಪಲು ಎಷ್ಟು ಕಷ್ಟವೊ ಕೆಲವು ಅವಾಸ್ತವ ಎನ್ನಿಸುವ ಘಟನೆಗಳ ಹೊರತಾಗಿ ಅಂತಹುದೊಂದು ಪಾತ್ರಗಳು, ಘಟನೆಗಳು ನಡೆದೇ ಇಲ್ಲ ಎನ್ನುವುದೂ ಕಷ್ಟವೆ. ಭೂಮಿಗೆ ಶತಶತ ಕೋಟಿ ವರ್ಷಗಳ ಇತಿಹಾಸವಿದೆ. ಆದರೆ ನಮಗೆ ಅಷ್ಟಿಷ್ಟು ಗೊತ್ತಿರುವ ಇತಿಹಾಸ ಮಾತ್ರ ಸುಮಾರ ಎರಡೂವರೆ ಸಾವಿರ ವರ್ಷಗಳದ್ದು. ಹೀಗಾಗಿ ಕೆಲವೊಂದು ಪುರಾಣಗಳ ಐತಿಹಾಸಿಕತೆಯನ್ನು ನಿರಾಕರಿಸುವುದು ಕಷ್ಟ. ಅದೇ ರೀತಿ ಕೆಲವು ಪುರಾಣಗಳ ವಾಸ್ತವತೆಯನ್ನು ಇವತ್ತಿನ ವಿಜ್ಞಾನದ ಬೆಳಕಿನಲ್ಲಿ ಒಪ್ಪುವುದೂ ಅಸಾಧ್ಯ.

ಭಾರತೀಯ ಪುರಾಣಗಳ ವಿಷಯಕ್ಕೆ ಬಂದರೆ, ಮಹಾಭಾರತ ರಾಮಾಯಣಕ್ಕಿಂತ ಹೆಚ್ಚು ಸಂಕೀರ್ಣವಾದದ್ದು, ವಿಸ್ತಾರವಾದದ್ದು. ಗೊಂದಲ ಹುಟ್ಟಿಸುವುದರ ಜೊತೆಗೆ ಕೆಲವೊಂದು ವೈಜ್ಞಾನಿಕ ಜಿಜ್ಞಾಸೆಗೂ ತಳ್ಳುತ್ತದೆ. ಈಗಿನ ಕಾಲದ ಟೆಸ್ಟ್‌ಟ್ಯೂಬ್ ಬೇಬಿಗಳು, ಸ್ಪರ್ಮ್ ಇಂಜೆಕ್ಷನ್, ಕ್ಲೋನಿಂಗ್ ಇವನ್ನೆಲ್ಲ ಗಮನಿಸಿದರೆ ಗಾಂಧಾರಿಯ ಶತಪುತ್ರ ಹಾಗು ಏಕಪುತ್ರಿ ಸಂತಾನ ಅಸಾಧ್ಯ ಎಂದೇನೂ ಅನ್ನಿಸುವುದಿಲ್ಲ. ಆದರೆ, ಇಲ್ಲಿಯತನಕವೂ ಕನ್ಯೆ ಕುಂತಿಗೆ ಸಂಭೋಗವಿಲ್ಲದೆ ಕೇವಲ ದೈವ ಪವಾಡದಿಂದ ಕರ್ಣ ಹುಟ್ಟಿದ ಎಂಬ ಕತೆ ನಂಬಲು, ಒಪ್ಪಿಕೊಳ್ಳಲು ವೈಜ್ಞಾನಿಕ ಹಿನ್ನೆಲೆಯಿಂದ ನೋಡುವ ಜನರಿಗೆ ಕಷ್ಟವಾಗುತ್ತಿತ್ತು. ಕೆಲವೊಂದು ಕ್ರಿಸ್ತ ಪುರಾಣಗಳು ಏಸು ಕ್ರಿಸ್ತ ಸಹ ಮಹಾಭಾರತದ ಕರ್ಣನ ರೀತಿ ಕಾನೀನ, ಕನ್ಯೆ ಮೇರಿಗೆ ಜನಿಸಿದವನು ಎನ್ನುತ್ತವೆ.

ಅಮೇರಿಕಾದಲ್ಲಿನ ಒಮಾಹ ನಗರದ ಮೃಗಾಲಯವೊಂದರಲ್ಲಿ 2001 ರಲ್ಲಿ ಶಾರ್ಕ್ ಮೀನೊಂದು ಮರಿಯೊಂದಕ್ಕೆ ಜನನ ನೀಡಿತು. ವಿಚಿತ್ರ ಏನೆಂದರೆ ಅಲ್ಲಿನ ನೀರುಕೊಳದಲ್ಲಿ ಇದ್ದದ್ದೆ ಮೂರು ಹೆಣ್ಣು ಶಾರ್ಕ್‌ಗಳು. ಅವು ಅಲ್ಲಿಗೆ ಬಂದದ್ದೆ ಚಿಕ್ಕಮರಿಗಳಾಗಿದ್ದಾಗ. ಜೊತೆಗೆ, ಅವು ಯಾವುವೂ ಮೂರು ವರ್ಷಗಳಿಂದ ಯಾವುದೇ ಗಂಡು ಶಾರ್ಕಿನ ಸಂಪರ್ಕಕ್ಕೆ ಬಂದಿರಲಿಲ್ಲ. ಇಂತಹ ಸ್ಥಿತಿಯಲ್ಲಿ ಮರಿ ಶಾರ್ಕ್‌ನ ಜನನ ಎಲ್ಲರನ್ನೂ ಅಚ್ಚರಿ ಪಡಿಸಿತು. ಇಲ್ಲಿಯತನಕ ಇದ್ದ ನಂಬಿಕೆ ಏನೆಂದರೆ, ಮೊಲೆ ಹಾಲುಡಿಸುವ ಸಸ್ತನಿ ಪ್ರಾಣಿಗಳಂತೆ ಶಾರ್ಕ್‌ಗಳಲ್ಲೂ ಸಹ ಸಂತಾನೋತ್ಪತ್ತಿಗೆ ಗಂಡು ಹೆಣ್ಣಿನ ಮಿಲನ ಅತ್ಯವಶ್ಯ ಎನ್ನುವುದು. ಹಾಗಾಗಿ, ವಿಜ್ಞಾನಿಗಳು ಮರಿ ಶಾರ್ಕಿನ ಡಿ.ಎನ್.ಎ. ಪರೀಕ್ಷೆ ಮಾಡಲು ನಿರ್ಧರಿಸಿದರು.

ಐದಾರು ವರ್ಷಗಳ ಪರೀಕ್ಷೆಯ ನಂತರ ಕಳೆದ ವಾರ ಫಲಿತಾಂಶ ಪ್ರಕಟವಾಗಿದೆ. ಮರಿ ಶಾರ್ಕ್ ಕಾನೀನ!!! ಅದರ ಡಿ.ಎನ್.ಎ. ನಲ್ಲಿ ಪಿತೃಮೂಲದ ಡಿ.ಎನ್.ಎ. ಇಲ್ಲವೇ ಇಲ್ಲ. ಇರುವುದು ಕೇವಲ ತಾಯಿಯ ಡಿ.ಎನ್.ಎ. ಮಾತ್ರ. ಸಂಭೋಗವಿಲ್ಲದೆ, ಗಂಡಸಿನ ಪ್ರತ್ಯಕ್ಷ-ಪರೋಕ್ಷ ಪಾತ್ರವಿಲ್ಲದೆ ಕೆಲವೊಂದು ಜಾತಿಯ ಕ್ರಿಮಿ ಕೀಟಗಳು ಗರ್ಭ ಧರಿಸಬಲ್ಲವು. ಉರಗ ಜಾತಿಗೆ ಸೇರಿದ ಹಾವು, ಹಲ್ಲಿ, ಮೊಸಳೆಗಳಲ್ಲಿ, ಮೀನಿನ ಜಾತಿಯಲ್ಲಿ ಇಂತಹುದು ಅಪರೂಪವಾದರೂ ಆಗಾಗ ಘಟಿಸುತ್ತವೆ. ಆದರೆ ಮನುಷ್ಯನೂ ಸೇರಿದಂತೆ ಯಾವ ಸಸ್ತನಿ ಪ್ರಾಣಿಗಳಲ್ಲಿಯೂ ಇಲ್ಲಿಯತನಕ ಇದು ದಾಖಲಾಗಿಲ್ಲ. ಶಾರ್ಕ್ ಮೀನಿನ ಜಾತಿಗೆ ಸೇರಿದ್ದರೂ ಅವೂ ಸಹ ಗರ್ಭ ಧರಿಸಲು ಗಂಡಸಿನ ಅವಶ್ಯಕತೆ ಬೇಕೇ ಬೇಕು ಎಂದೆ ಇಲ್ಲಿಯತನಕ ನಂಬಲಾಗಿತ್ತು. ಈಗ ಕಾನೀನ ಶಾರ್ಕ್ ಆ ನಂಬಿಕೆಯನ್ನು ಬುಡಮೇಲು ಮಾಡಿದೆ. ಅಂದ ಹಾಗೆ, ಆ ಕಾನೀನ ಶಾರ್ಕ್ ಈಗ ಬದುಕಿಲ್ಲ. ಹುಟ್ಟಿದ ಕೆಲವೇ ಗಂಟೆಗಳಲ್ಲಿ ಸ್ಟ್ರಿಂಗ್‌ರೆ ದಾಳಿಗೆ ತುತ್ತಾಗಿ ಅದು ಅಂದೇ ಸತ್ತಿತು.

ವಿಜ್ಞಾನಿಗಳು ಮಾತ್ರ ಗಂಡಸಿನ ಪಾತ್ರವಿಲ್ಲದ ಇಂತಹ ಜನನ ಒಳ್ಳೆಯ ಬೆಳವಣಿಗೆಯಲ್ಲ ಎನ್ನುತ್ತಾರೆ. ಹೀಗೆ ಹುಟ್ಟಿದ ಮರಿಗಳಲ್ಲಿ ಅನುವಂಶಿಕ ವೈವಿಧ್ಯತೆ ಕಮ್ಮಿ ಇರುತ್ತದೆ; ಪ್ರಾಣಿಗಳ ಜೆನೆಟಿಕ್ ವೈವಿಧ್ಯತೆಯೆ ಅವು ಕಾಯಿಲೆ, ಹವಾಮಾನ ವೈಪರೀತ್ಯದಂತಹ ಅಪಾಯಗಳಿಗೆ ಹೊಂದಿಕೊಳ್ಳುವ ತಾಕತ್ತನ್ನು ನೀಡುತ್ತದೆ ಎನ್ನಲಾಗುತ್ತದೆ.

ಈಗ ಮತ್ತೊಮ್ಮೆ ಪುರಾಣದ ಮೂಲ ಪ್ರಶ್ನೆಗೆ ಬರೋಣ. ಇಲ್ಲಿಯ ತನಕ ಶಾರ್ಕ್‌ಗಳ ಕಾನೀನ ಸಾಧ್ಯತೆಯನ್ನು ನಿರಾಕರಿಸಲಾಗುತ್ತಿತ್ತು. ಅದೇ ರೀತಿ ಮನುಷ್ಯನೂ ಸೇರಿದಂತೆ ಸಸ್ತನಿಗಳ ಕಾನೀನ ಕತೆಯನ್ನೂ. ಇಲ್ಲಿಯತನಕ ಅದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಎಂದ ಮಾತ್ರಕ್ಕೆ ಎಂದೂ ಆಗಿಲ್ಲ ಎನ್ನುವುದೂ, ಮುಂದೆ ಆಗುವುದೂ ಇಲ್ಲ ಎನ್ನುವುದು ಅಹಂಕಾರದ ಮಾತಾಗುತ್ತದೆ. ಈ ಜಗತ್ತು ಎಷ್ಟು ಕೌತುಕಮಯ ಎಂದರೆ ಅತ್ತ ಪುರಾಣವನ್ನು ಸಂಪೂರ್ಣವಾಗಿ ನಂಬಲಾಗದು; ಇನ್ನೊಂದೆಡೆ ವಿಜ್ಞಾನ ಎಲ್ಲವನ್ನೂ ಹೇಳುತ್ತಿಲ್ಲ. ಆದರೆ ಪುರಾಣಗಳ ಅನೇಕಾನೇಕ ಸುಳ್ಳುಗಳನ್ನು ಆಧಾರಸಹಿತವಾಗಿ ಅವು ಸುಳ್ಳು ಎಂದು ವಿಜ್ಞಾನ ಸಾಬೀತು ಪಡಿಸಿದೆ. ಹಾಗಾಗಿ ನಾವು ಪುರಾಣಗಳಲ್ಲಿ ತೆಗೆದು ಕೊಳ್ಳಬೇಕಿರುವುದು ಅವುಗಳಲ್ಲಿನ ನೀತಿ, ಆಧ್ಯಾತ್ಮವನ್ನಷ್ಟೆ ಹೊರತು ಈಗಾಗಲೆ ಸುಳ್ಳೆಂದು ಸಾಬೀತಾಗಿರುವ ಕುರುಡು ನಂಬಿಕೆಗಳನ್ನಲ್ಲ. ಸಾಬೀತಾಗುವ ತನಕ ಆರೋಗ್ಯಕರ ಸಂಶಯ ಇಟ್ಟುಕೊಂಡರಷ್ಟೆ ನಮಗೆ ನಿಜ ಕಾಣಿಸಲು ಸಾಧ್ಯ. ಅಲ್ಲವೆ?

May 20, 2007

ಪಿ.ಬಿ.ಎಸ್.: ಅಣ್ಣಾವ್ರಂತೆ ಅಮರ.

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜೂನ್ 1, 2007 ರ ಸಂಚಿಕೆಯಲ್ಲಿನ ಲೇಖನ)


ಒಲವಿನಾ ಪ್ರಿಯಲತೆ, ಅವಳದೇ ಚಿಂತೆಽಽ
ಅವಳ ಮಾತೆ, ಮಧುರ ಗೀತೆ
ಅವಳೆ ಎನ್ನ ದೇವತೆ...

ರೇಡಿಯೋದಲ್ಲಿ ಪಿ.ಬಿ. ಶ್ರೀನಿವಾಸ್‌ರ ಹಾಡು ಬರುತ್ತಿದ್ದರೆ, ಕನ್ನಡದ ಜನತೆ ರಾಜ್‌ಕುಮಾರ್ ಅವರನ್ನು ಕಲ್ಪಿಸಿಕೊಂಡು, ತಮ್ಮ ಇನಿಯಳ ಬಗ್ಗೆ ನವಿರಾದ ಪ್ರೀತಿಯ ಭಾವನೆಗಳನ್ನು, ಆಕೆ ಪಕ್ಕದಲ್ಲಿ ಇರದೆ ಇದ್ದರೆ ಅಗಲಿಕೆಯ ನೋವನ್ನು ಹಾಗೂ ತಮ್ಮ ಜೀವನದಲ್ಲಿ ಆಕೆಯ ಪ್ರಾಮುಖ್ಯತೆಯ ಸತ್ಯ ಸಾಕ್ಷಾತ್ಕಾರವನ್ನು ಮಾಡಿಕೊಳ್ಳುತ್ತಿದ್ದ ಜಮಾನಾ ಒಂದಿತ್ತು. ಹದಿನೈದು ಇಪ್ಪತ್ತು ವರ್ಷಗಳ ಹಿಂದಿನ ಹೈಸ್ಕೂಲಿನ ದಿನಗಳಲ್ಲಿ ನನ್ನ ಪೀಳಿಗೆಗೂ ಪ್ರೀತಿ ಪ್ರೇಮದ ಬಗ್ಗೆ ಒಂದು ಮಧುರವಾದ ಭಾವನೆಗಳನ್ನು ಹುಟ್ಟಿಸಿದ್ದೇ ರೇಡಿಯೋದಲ್ಲಿ ಬರುತ್ತಿದ್ದ ಪಿ.ಬಿ. ಶ್ರೀನಿವಾಸ್ ಹಾಡಿದ್ದ ಹಾಡುಗಳು. ಆಗ ಈ "ಪ್ರೀತ್ಸೆ, ಪ್ರೀತ್ಸೆ" ಯಂತಹ ಭಯಂಕರ, ಭೀಭತ್ಸ ಕೋರಿಕೆಯ ಹಾಡುಗಳಾಗಲಿ, "ಉರುಳಿಸು ಬಾರೊ, ಕೆರಳಿಸು ಬಾರೊ, ಅರಳಿಸೊ ಬಾರೊ ನನ್ನನ್ನ" ಎನ್ನುತ್ತ "show me how you love your wife" ಎಂದು ಕೇಳುವ ಹಾಡುಗಳಾಗಲಿ ಇರಲಿಲ್ಲ. ಪಿ.ಬಿ ಶ್ರೀನಿವಾಸರ ಕಂಠ ಹೇಗಿತ್ತೊ ಅದೇ ರೀತಿ ಅಂದಿನ ಸಾಹಿತ್ಯವೂ ಚೆನ್ನಿತ್ತು. ಆ ಮಧುರಾತಿಮಧುರ ಸಾಹಿತ್ಯ; ಆ ಉದ್ವೇಗವಿಲ್ಲದ, ಪ್ರಶಾಂತ ಗಾಯನ; ಹಿನ್ನೆಲೆಯಲ್ಲಿ ಸಂಪನ್ನ, ಸಜ್ಜನ, ಆದರ್ಶವಂತ ರಾಜ್‌ಕುಮಾರ್‌ರ ಕಲ್ಪನೆ; ಇವೆಲ್ಲವುಗಳಿಂದಾಗಿಯೆ ಇರಬೇಕು, ನನ್ನ ಮೆಚ್ಚಿನ ಗಾಯಕನ ಪಟ್ಟಿಯಲ್ಲಿ ಪಿ.ಬಿ. ಶ್ರೀನಿವಾಸ್ ಬಿಟ್ಟರೆ ಬೇರೊಬ್ಬರು ಇಂದಿಗೂ ಬಂದಿಲ್ಲ. ಬಹುಶಃ ಇದು ನನ್ನೊಬ್ಬನದೇ ಕತೆಯಲ್ಲ ಅನ್ನಿಸುತ್ತದೆ.

ಯಾಕೆ ಇದು ನನ್ನೊಬ್ಬನದೆ ಕತೆಯಲ್ಲ ಎನ್ನಿಸುತ್ತದೆ ಅಂದರೆ, ಕರ್ನಾಟಕದ ಜನತೆ ಇವತ್ತಿಗೂ ಪಿ.ಬಿ.ಎಸ್.ರ ಬಗ್ಗೆ ತೋರಿಸುತ್ತಿರುವ ಪ್ರೀತಿಯನ್ನು ಗಮನಿಸಿ. ಎರಡು ವಾರದ ಹಿಂದೆ ಇಲ್ಲಿನ ಸಿಲಿಕಾನ್ ಕಣಿವೆಯಲ್ಲಿ ಪಿ.ಬಿ.ಎಸ್.ರ ಗಾಯನ ಕಾರ್ಯಕ್ರಮವೊಂದನ್ನು ಇಲ್ಲಿನ ಕನ್ನಡ ಕೂಟ ಏರ್ಪಡಿಸಿತ್ತು. ನಾನೂರಕ್ಕೂ ಹೆಚ್ಚು ಜನ ಹಿಡಿಸುವ ಸಭಾಂಗಣ ತುಂಬಿ ಹೋಗಿ, ನೂರಾರು ಜನ ಅಕ್ಷರಶಃ ಬಾಗಿಲಿಂದ ಹೊರಗೆ ನಿಂತಿದ್ದರು. ಇಂತಹ ಕಾರ್ಯಕ್ರಮದಲ್ಲಿ ಗಟ್ಟಿಯಾಗಿ ಹಾಡಬೇಕಾದ ಅನಿವಾರ್ಯತೆಯಿಂದಾಗಿ ಪಿ.ಬಿ.ಎಸ್.ರ ಧ್ವನಿ ಒಡೆಯುತ್ತದೆ. ಆದರೂ ಜನ ಅದ್ಯಾವುದನ್ನೂ ಲೆಕ್ಕಿಸದೆ, ಚಪ್ಪಾಳೆಯ ಮೇಲೆ ಚಪ್ಪಾಳೆ ಹೊಡೆಯುತ್ತ, ಅವರ ಹಾಡನ್ನು, ಮಾತನ್ನು, ಕನ್ನಡದಲ್ಲಿ ಅವರೇ ಬರೆದಿರುವ ಕವನಗಳನ್ನು ಆಸ್ವಾದಿಸುತ್ತ, ಮೈಮನದಲ್ಲೆಲ್ಲ ನಾಸ್ಟಾಲ್ಜಿಯ ತುಂಬಿಕೊಂಡು, ಕಳೆದು ಹೋಗಿದ್ದರು. ಅಂದಿನ ಆ ಕಾರ್ಯಕ್ರಮ ಒಂದರಲ್ಲಿಯೆ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಅನಿವಾಸಿ ಕನ್ನಡ ಜನತೆ ಪಿ.ಬಿ.ಎಸ್.ಗೆ ಸಂಗ್ರಹಿಸಿ ಕೊಟ್ಟರು! ಇದನ್ನೆಲ್ಲ ನೋಡಿದರೆ, ಅಣ್ಣಾವ್ರ ಬಗ್ಗೆಯ ಪ್ರೀತಿ ಮತ್ತು ನೆನಪನ್ನು ಜನ ಪಿ.ಬಿ.ಎಸ್.ರವರಲ್ಲಿ ಕಂಡುಕೊಳ್ಳುತ್ತಿದ್ದಾರೇನೊ ಎನ್ನಿಸುತ್ತದೆ.

30-40 ವರ್ಷದ ಹಿಂದೆ ಈಗಿನಷ್ಟು ಶೇಕಡಾವರು ಸಂಖ್ಯೆಯಲ್ಲಿ ಜನ ಅಕ್ಷರಸ್ಥರಾಗಿರಲಿಲ್ಲ. ಹಾಗಾಗಿ ಎಲ್ಲಾ ಸ್ತರದ ಜನರ ಮೇಲೆ ಪತ್ರಿಕೆ-ಪುಸ್ತಕಗಳ ಪ್ರಭಾವವೂ ಕಮ್ಮಿಯೆ ಇತ್ತು. ರೇಡಿಯೊ ಬಿಟ್ಟರೆ ಇನ್ಯಾವ ದೊಡ್ಡ ಸಮೂಹ ಮಾಧ್ಯಮಗಳೂ ಇರಲಿಲ್ಲ. ಅಂತಹ ಸಮಯದಲ್ಲಿ ಗ್ರಾಮ-ಪಟ್ಟಣ, ಬಡವ-ಬಲ್ಲಿದ, ಅಕ್ಷರಸ್ಥ-ಅನಕ್ಷರಸ್ಥ ಎಂಬ ಭೇದವಿಲ್ಲದೆ ಜನರನ್ನು ಮುಟ್ಟುತ್ತಿದ್ದದ್ದು ಸಿನೆಮಾಗಳು, ಸಿನೆಮಾ ಹಾಡುಗಳು. ರಾಜ್‌ಕುಮಾರ್ ಚಿತ್ರಗಳೆ ಆಗ ಒಳ್ಳೆಯತನ, ದೇಶಪ್ರೇಮ, ಜವಾಬ್ದಾರಿ, ಸರಳತೆ, ಸಜ್ಜನಿಕೆಯ ಬಗ್ಗೆ ಕನ್ನಡದ ಬಹುಪಾಲು ಜನತೆಗೆ ಇದ್ದ ನೀತಿಪಾಠಗಳು. ಪಿ.ಬಿ.ಎಸ್.ರ ಕಂಠವೆ ಅದನ್ನೆಲ್ಲ ಬೋಧಿಸುತ್ತಿದ್ದ ಅಶರೀರವಾಣಿ. ರಾಜ್‌ಕುಮಾರ್-ಚಿ.ಉದಯಶಂಕರ್-ಜಿ.ಕೆ.ವೆಂಕಟೇಶ್-ಪಿ.ಬಿ.ಶ್ರೀನಿವಾಸ್ ಇವರ ಕಾಂಬಿನೇಷನ್‌ನಲ್ಲಿ ಬಂದ ಅಸಂಖ್ಯ ಹಾಡುಗಳಿಗೆ ಲೆಕ್ಕವೇ ಇಲ್ಲ. ಈ ಸಿನೆಮಾದವರೇ ಆಗಿನ People’s Teachers. ಆಗ ಸಿನೆಮಾದವರಿಗೂ ಬದ್ಧತೆಯಿತ್ತು.

ಈಗ ಮೊದಲಿಗಿಂತಲೂ ಹೆಚ್ಚಿನ ಸಿನೆಮಾಗಳು ಬರುತ್ತಿವೆ; ಸಹಜವಾಗಿಯೆ ಸಿನೆಮಾ ಹಾಡುಗಳೂ ಹೆಚ್ಚಿಗೆ ಹುಟ್ಟುತ್ತಿವೆ. ಆದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಬಂದ ಸಿನೆಮಾ ಹಾಡುಗಳಿಗಿಂತ ಹೆಚ್ಚಾಗಿ ಪಿ.ಬಿ. ಶ್ರೀನಿವಾಸರ ಹಾಡುಗಳನ್ನೇ ಕನ್ನಡಿಗರು ಈಗಲೂ ನೆನಪಿನಲ್ಲಿಟ್ಟಿರುವುದು. ಕೆಲವರು ಎಂತೆಂತದ್ದನ್ನೊ ಹಾಡು ಎಂದುಕೊಂಡು ಗೀಚಿ ಹಾಕುತ್ತಿದ್ದಾರೆ. ಅದನ್ನು ಹಾಡುವವರೂ ವಾದ್ಯಗಳ ಗದ್ದಲದಲ್ಲಿ ತಮ್ಮ ಸ್ವರ ಕೇಳಿಸದಂತೆ ಹಾಡುತ್ತಾರೆ. ಸಂಗೀತ ಮತ್ತು ಸಾಹಿತ್ಯ ಎಷ್ಟು ರಭಸವಾಗಿ, ಅಸಹ್ಯಕರವಾಗಿ ಇರುತ್ತವೆ ಅಂದರೆ ಅವಸರವಸರದಲ್ಲಿ ಹಸ್ತಮೈಥುನಕ್ಕೆ ಅಣಿಯಾಗುವವರಿಗೆ ಲಾಯಕ್ಕಾದ ಗತಿಯಲ್ಲಿ; ಚಿತ್ರಗಳೂ ಅಂತಹುದೇ ನೃತ್ಯದಿಂದ ಕೂಡಿರುತ್ತವೆ.

ಬಾರೆ, ಬಾರೆ, ಚೆಂದದ ಚೆಲುವಿನ ತಾರೆ,
ಬಾರೆ, ಬಾರೆ, ಒಲವಿನ ಚಿಲುಮೆಯ ತಾರೆ...

....

ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ
ನಿನಗೆಂದೆ ಬರೆದ ಪ್ರೇಮದ ಓಲೆ
ಅದ ಓದಲು ಹರಿವುದು ಜೇನಿನಾ ಹೊಳೆ...

ಛೇ. ಎಲ್ಲಿ ಹೋದವೋ ಆ ದಿನಗಳು....

ನಮ್ಮ ಪತ್ರಿಕೆಯ ಹಿತೈಷಿ ಹಾಗೂ ನನ್ನ ಆತ್ಮೀಯ ಗೆಳೆಯ ಮಧುಕಾಂತ್ ಇಲ್ಲಿನ ಎಫ಼್.ಎಮ್. ರೇಡಿಯೊ ಒಂದರಲ್ಲಿ ಕಳೆದ ಕೆಲವು ತಿಂಗಳುಗಳಿಂದ ಪ್ರತಿ ತಿಂಗಳೂ ಒಂದೊಂದು ಕನ್ನಡ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಆ ಕಾರ್ಯಕ್ರಮ ಇಂಟರ್‌ನೆಟ್‌ನಲ್ಲೂ ನೇರಪ್ರಸಾರ ಆಗುವುದರಿಂದ ಬೆಂಗಳೂರಿನಲ್ಲೂ ಜನ ಇದನ್ನು ತಮ್ಮ ಕಂಪ್ಯೂಟರ್‌ನಲ್ಲಿ ಕೇಳುತ್ತಾರೆ. ಯಾವುದೊ ಒಂದು ಟಿವಿ/ರೇಡಿಯೋ ಕಾರ್ಯಕ್ರಮ ಇಷ್ಟವಾದರೆ ಮತ್ತೆ ಅದನ್ನು ನೋಡುವ/ಕೇಳುವ ಅನುಕೂಲ ನಮ್ಮಲ್ಲಿ ಇಲ್ಲವೇ ಇಲ್ಲ. ಆದರೆ ಈ ಇಂಟರ್‌ನೆಟ್‌ನ ಅಪರಿಮಿತ ಸಾಧ್ಯತೆಗಳಿಂದಾಗಿ ಮುಂದುವರಿದ ದೇಶಗಳಲ್ಲಿ ಅದು ಸಾಧ್ಯವಾಗಿದೆ. ಮಧುರವರು ಪಿ.ಬಿ.ಎಸ್.ರನ್ನು ಆಪ್ತವಾಗಿ ರೇಡಿಯೋ ಸಂದರ್ಶನ ಮಾಡಿದ, ಪಿ.ಬಿ.ಎಸ್. ಕನ್ನಡ ಚಿತ್ರರಂಗದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡ, ತಮ್ಮ ಸ್ವರಚಿತ ಕನ್ನಡ ಕವನಗಳನ್ನು ಹಾಡಿದ ಆ ಸಂದರ್ಶನ ಈಗ ಆನ್‌ಲೈನ್‌ನಲ್ಲಿ ಲಭ್ಯವಿದೆ. ಅದರ ವಿಳಾಸ: http://www.itsdiff.com

ಅದೇ ರೀತಿ, http://www.sampada.net/podcasts ವೆಬ್‌ಸೈಟಿನಲ್ಲಿ ತೇಜಸ್ವಿ, ಕಂಬಾರ, ಅನಂತಮೂರ್ತಿ, ಜಿಎಸ್ಸೆಸ್, ನಿಸಾರ್ ಅಹ್ಮದ್ ಮತ್ತಿತರ ಕನ್ನಡ ಸಾಹಿತಿಗಳ ಬಿಚ್ಚುಮಾತಿನ ಸಂದರ್ಶನಗಳ ಧ್ವನಿಮುದ್ರಣಗಳೂ ಇವೆ. ಓ.ಎಲ್.ಎನ್. ಸ್ವಾಮಿ, ಉದಯವಾಣಿಯ ಇಸ್ಮಾಯಿಲ್ ಮುಂತಾದವರು ಮಾಡಿರುವ ಈ ಕೆಲಸ ನಿಜಕ್ಕೂ ಶ್ಲಾಘನೀಯ. ಇದನ್ನೆಲ್ಲ ಇವರು ಮಾಡಿರುವುದು ತಮ್ಮ ಬಿಡುವಿನ ವೇಳೆಯಲ್ಲಿ. ಇಂಟರ್‌ನೆಟ್‌ನಲ್ಲಿ ಸುಮ್ಮನೆ ಬಡಬಡಿಸುವ, ಸ್ವರತಿಯಲ್ಲಿ ಮುಳುಗಿರುವ ಅನೇಕ ಕನ್ನಡಿಗರು ಮಾತಿಗಿಂತ ಕೃತಿಯಲ್ಲಿ ತೊಡಗಿಕೊಳ್ಳಲು ಇವೆಲ್ಲ ಪ್ರೇರಣೆಯಾಗಬೇಕಿದೆ. ಅಲ್ಲವೆ?

May 11, 2007

ಮಹಿಮಾ "ಗಾಂಧಿ", ಕ್ರಿಯಾಶೀಲ ಕೃಷ್ಣ...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮೇ 25, 2007 ರ ಸಂಚಿಕೆಯಲ್ಲಿನ ಲೇಖನ)

ಕಳೆದ ವರ್ಷ ಪತ್ರಿಕೆಯನ್ನು ಆರಂಭಿಸುವುದಕ್ಕೆಂದು ಬೆಂಗಳೂರಿನಲ್ಲಿದ್ದಾಗ ನಮ್ಮ ಪತ್ರಿಕೆಯ ಪ್ರಕಾಶಕರಾದ ನನ್ನಣ್ಣ ಸುರೇಶ್ ಮತ್ತು ನಾನು ಕರ್ನಾಟಕದ ರಾಜಕೀಯ ಕುರಿತು ಮಾತನಾಡುತ್ತಿದ್ದೆವು. ವಿಷಯ ಎಲ್ಲೆಲ್ಲೊ ಹೋಗಿ ಮಹಿಮಾ ಪಟೇಲ್ ಹತ್ತಿರ ಬಂತು. ನನ್ನಣ್ಣ ಆಗ ಹೇಳಿದ್ದು,

"ಹೇ, ಈ ಮಹಿಮಾ ಪಟೇಲ್ ವಿಚಾರ ಗೊತ್ತೇನೊ? ಆ ಮನುಷ್ಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ 'ನಾನು ಯಾರಿಗೂ ಹೆಂಡ ಹಂಚುವುದಿಲ್ಲ, ದುಡ್ಡೂ ಹಂಚುವುದಿಲ್ಲ. ಹಾಕೋ ಹಾಗಿದ್ರೆ ಹಾಕಿ, ಬಿಟ್ರೆ ಬಿಡಿ,' ಎಂದು ಓಪನ್ ಆಗಿ ಹೇಳಿ, ಹಾಗೆಯೆ ಪ್ರಚಾರ ಮಾಡಿ, ಇಡೀ ಕರ್ನಾಟಕದಲ್ಲಿ ಹಣ-ಹೆಂಡ ಹಂಚದೆ ಗೆದ್ದ ಏಕೈಕ ಶಾಸಕ,"
ಎಂದರು. ನನಗೆ ಶಾಕ್ ಆಗಿ ಹೋಯಿತು.

ಸುಮಾರು ಏಳೆಂಟು ವರ್ಷ ಹಳ್ಳಿಗಳಲ್ಲಿನ ಕೆಳಹಂತದ ರಾಜಕಾರಣ ಕಂಡವನು ನಾನು. ಗ್ರಾಮ-ತಾಲ್ಲೂಕು-ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಹಣ-ಹೆಂಡ-ಜಾತಿಯೆ ಗೆಲ್ಲಲು ಬೇಕಾದ ಮೂಲಭೂತ ಸಂಪನ್ಮೂಲಗಳು. ಭ್ರಷ್ಟ ಮಾರ್ಗಗಳಿಂದ ಓಟನ್ನು ಕೊಳ್ಳುವ ತಂತ್ರ-ಕುತಂತ್ರಗಳದೇ ಇಲ್ಲಿ ಮೇಲುಗೈ. ಲೋಕಸಭಾ ವ್ಯಾಪ್ತಿ ಬಹಳ ದೊಡ್ಡದಾಗಿರುವುದರಿಂದ ಹಾಗು ಬಹುಪಾಲು ಮತದಾರರಿಗೆ ಸಂಸದನ ಜೊತೆ ನೇರ ಸಂಪರ್ಕ ಇಲ್ಲದೆ ಇರುವುದರಿಂದ ಅಲ್ಲಿ ಮಾತ್ರ ಅಷ್ಟಿಷ್ಟು ಪಕ್ಷ, ಸಿದ್ಧಾಂತ ಕೆಲಸ ಮಾಡುತ್ತದೆ.

ಹಾಗಾಗಿಯೆ ನನಗೆ ಮಹಿಮಾ ಪಟೇಲರ ವಿಷಯಕ್ಕೆ ಶಾಕ್ ಆಗಿದ್ದು. ಇಲ್ಲಿದ್ದರೂ ನಾನು ಪ್ರತಿದಿನ ಮೂರ್ನಾಲ್ಕು ಕನ್ನಡ ಪತ್ರಿಕೆಗಳನ್ನು ಓದುತ್ತೇನಾದರೂ ಮಹಿಮಾರ ಈ ಗಾಂಧಿವಾದದ ಬಗ್ಗೆ ಗೊತ್ತೇ ಆಗಿರಲಿಲ್ಲ. ಜನರಲ್ಲಿ ಆದರ್ಶಗಳನ್ನು ಬೆಳೆಸುವಂತಹ, ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಅದನ್ನು ಮೆಚ್ಚುವಂತಹ ಹವಾಮಾನವೇ ನಮ್ಮಲ್ಲಿ ಇಲ್ಲ ಎನ್ನಿಸುತ್ತದೆ. ನನಗೆ ಮಹಿಮಾರ ಬಗ್ಗೆ ಹೆಚ್ಚಿಗೆ ಗೊತ್ತಿಲ್ಲ. ಬದುಕಿರುವ ತನಕ ಜೆ.ಎಚ್.ಪಟೇಲರು ತಮ್ಮ ಮಕ್ಕಳನ್ನು ರಾಜಕಾರಣದಲ್ಲಿ ಪ್ರೋತ್ಸಾಹಿಸಲಿಲ್ಲ. ಅಪ್ಪನ ಸಾವಿನ ನಂತರ ಮಹಿಮಾ ಪಟೇಲರು ಜೆ.ಡಿ.ಎಸ್.ಗೆ ಬಂದು ಶಾಸಕರಾಗಿದ್ದಾರೆ. ಈಗ ದೆಹಲಿಯಲ್ಲಿ ರಾಜ್ಯದ ಪ್ರತಿನಿಧಿಯಾಗಿದ್ದಾರೆ. ಈ ವಾರ ನಮ್ಮ ಪತ್ರಿಕೆಗೆ ಕೊಟ್ಟಿರುವ ಸಂದರ್ಶನದಲ್ಲಿ "ವಾರಕ್ಕೆ ಎರಡು ದಿನ ದೆಹಲಿಯಲ್ಲಿದ್ದು ಕೆಲಸ ಮಾಡುತ್ತೇನೆ," ಎಂದಿದ್ದಾರೆ. ಅಲ್ಲಿ ಅದೇನು ಸಾಧಿಸುತ್ತಾರೊ ಗೊತ್ತಿಲ್ಲ. ಕಾರಿಗನೂರನ್ನು ಹೇಗೆ ಅಭಿವೃದ್ಧಿ ಮಾಡಿದ್ದಾರೊ ಗೊತ್ತಿಲ್ಲ. ವಿಧಾನಸಭೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಮಾತನಾಡಿದ್ದು ಗೊತ್ತಾಗಿಲ್ಲ. ಮುಂದಕ್ಕೂ ಹೀಗೆ ಒಳ್ಳೆಯ ಮಾರ್ಗಗಳನ್ನು ಅನುಸರಿಸುತ್ತಾರೊ, ಇಲ್ಲ ರಾಜಿ ಮಾಡಿಕೊಂಡು ಭ್ರಷ್ಟರಾಗಿಬಿಡುತ್ತಾರೊ, ಅದೂ ಗೊತ್ತಿಲ್ಲ.

ಆದರೆ, ನಮ್ಮ ಭ್ರಷ್ಟಾತಿಭ್ರಷ್ಟ ಚುನಾವಣಾ ವ್ಯವಸ್ಥೆಯಲ್ಲಿ ಹಣ-ಹೆಂಡ ಹಂಚುವುದಿಲ್ಲ ಎಂದು ಘೋಷಿಸಿ, ಅದೇ ರೀತಿ ನಡೆದುಕೊಂಡು, ಗಾಂಧಿ ಮಾರ್ಗದಲ್ಲಿ ಗೆದ್ದು ಬಂದಿರುವ ಒಂದೇ ಕಾರಣ ಸಾಕು ಅವರನ್ನು ತಲೆಯ ಮೇಲಿಟ್ಟುಕೊಂಡು ಮೆರೆಸಲು. ಕರ್ನಾಟಕದ 224 ಕ್ಷೇತ್ರಗಳಲ್ಲಿ ಇವರೊಬ್ಬರೇ ಹಾಗೆ ವಿಧಾನಸಭೆ ಪ್ರವೇಶಿಸಿರುವುದು. ಹಾಗೆಂದು ಇದನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ತಮ್ಮ ತಂದೆತಾಯಿಯವರ ಹೆಸರಿನ ಮೇಲೆ, ಮನೆತನದ ರಾಜಕೀಯ ಬಲದ ಬುನಾದಿಯ ಮೇಲೆ ರಾಜಕಾರಣಕ್ಕೆ ಬರುವವರಿಗೆ ಅವರದೇ ಆದ ಅಡ್ವಾಂಟೇಜಸ್ ಇರುತ್ತವೆ. ಇವತ್ತು ಕರ್ನಾಟಕದ ವಿಧಾನಸಭೆಯಲ್ಲಿ ಮಹಿಮಾರಿಂದ ಹಿಡಿದು ಎಚ್.ಡಿ. ರೇವಣ್ಣ, ಕುಮಾರಸ್ವಾಮಿ, ಕೃಷ್ಣ ಭೈರೇಗೌಡ, ಸುಧಾಕರ್ ರೆಡ್ಡಿ, ಪರಿಮಳಾ ನಾಗಪ್ಪ, ಕುಮಾರ್ ಬಂಗಾರಪ್ಪ, ಪ್ರಕಾಶ್ ಖಂಡ್ರೆ, ಡಿ.ಆರ್. ಪಾಟೀಲ್, ದಿನೇಶ್ ಗುಂಡೂರಾವ್, ನಾಗಮಣಿ ನಾಗೇಗೌಡ, ವಿಜಯಲಕ್ಷ್ಮಮ್ಮ ಬಂಡಿಸಿದ್ದೇಗೌಡ, ತನ್ವೀರ್ ಸೇಟ್, ಹೀಗೆ ಇನ್ನೂ ಅನೇಕರು ಇದ್ದಾರೆ. ಮಹಿಮಾ ಪಟೇಲ್ ಮಾಡಿದ್ದನ್ನು ಇವರಲ್ಲಿ ಕನಿಷ್ಠ ಹತ್ತು ಜನ ಮಾಡಿದರೆ ಸಾಕು, ಇನ್ನುಳಿದ 214 ಶಾಸಕರು ತಮ್ಮ ಅನೈತಿಕ ಚುನಾವಣೆಗಳ ಬಗ್ಗೆ ಜಿಗುಪ್ಸೆ ಪಟ್ಟುಕೊಂಡು ಕರ್ನಾಟಕದ ರಾಜಕೀಯ ಚಿತ್ರವನ್ನೆ ಬದಲಾಯಿಸಿಬಿಡುತ್ತಾರೆ. ಈಗಲೂ ಸಹ ಕರ್ನಾಟಕದ ಪ್ರತಿಯೊಬ್ಬ ಶಾಸಕನೂ ಮಹಿಮಾ ಪಟೇಲ್ ಎದುರಿಗೆ ಬಂದ ತಕ್ಷಣ ತಾನು ಚುನಾವಣೆಯಲ್ಲಿ ಗೆದ್ದು ಬರಲು ಮಾಡಿದ ಅನೈತಿಕ ಕೆಲಸಗಳಿಗೆ ನಾಚಿಕೆ ಪಟ್ಟುಕೊಳ್ಳಬೇಕು.

ಕಳೆದ ತಿಂಗಳು ಬೆಂಗಳೂರಿನಲ್ಲಿದ್ದಾಗ ನಮ್ಮ ಪತ್ರಿಕೆಯ ಮಲ್ಲನಗೌಡರೊಂದಿಗೆ ವಿಧಾನಸಭೆಯ ಕಲಾಪ ವೀಕ್ಷಿಸಲು ಹೋಗಿದ್ದೆ. ಅದೊಂದು ಅಪ್ಪಟ ನಾಟಕ ಪ್ರದರ್ಶನ. ತಾವು ಅಲ್ಲಿ ಏನು ಮಾಡುತ್ತಿದ್ದೇವೆ ಎಂಬ ಪ್ರಾಥಮಿಕ ಜ್ಞಾನವೂ ಇಲ್ಲದ, ಹಸಿಹಸಿ ಸುಳ್ಳು ಹೇಳುವ, ಜೋಕರ್ ನಟರುಗಳೆ ಹೆಚ್ಚಿರುವ ನಾಟಕ ತಂಡ ಎನ್ನಿಸಿಬಿಟ್ಟಿತು. ಬಳ್ಳಾರಿಯಲ್ಲಿ ತಮ್ಮದೇ ಸರ್ಕಾರದ ವಿರುದ್ದ ಧರಣಿ ಕುಳಿತಿದ್ದ ಸಚಿವ ಶ್ರೀರಾಮುಲು ಬಗ್ಗೆ ರಾಜ್ಯದ ಗೃಹಸಚಿವ ಎಂ.ಪಿ. ಪ್ರಕಾಶ್ ಎಂತಹ ಅಪ್ಪಟ ಸುಳ್ಳು ಹೇಳಿದರೆಂದರೆ, ಅದನ್ನು ಕೇಳಿ ಕಾಂಗ್ರೆಸ್‌ನ ಶಾಸಕರೊಬ್ಬರು ಕೇಳಿಯೇ ಬಿಟ್ಟರು: "ಸ್ವಾಮಿ, ಪ್ರಕಾಶ್ ಸಾಹೇಬರೆ, ತಾವು ಓದಿದ ಶಾಲೆಯ ಅಡ್ರೆಸ್ ಕೊಡಿ. ನಿಮ್ಮ ಹಾಗೆ ಮಾತನಾಡುವುದನ್ನು ನಾವೂ ಸ್ವಲ್ಪ ಹೋಗಿ ಕಲಿತು ಬರುತ್ತೇವೆ!!" ಇದನ್ನೆಲ್ಲ ಗಮನಿಸಿಯೆ ಇರಬೇಕು ಮೂರ್ನಾಲ್ಕು ವಾರದ ಹಿಂದೆ ಪ್ರಕಾಶರು "ನಾನು ರಾಜಕಾರಣದಿಂದ ನಿವೃತ್ತಿ ಪಡೆಯುತ್ತೇನೆ," ಎಂದು ಹೇಳಿದ್ದನ್ನು ಜನ ಗಂಭೀರವಾಗಿ ಪರಿಗಣಿಸದೆ ಹೋಗಿದ್ದು. ಈಗ ಮತ್ತೆ ವಾರದ ಹಿಂದೆ, "ನನಗೆ ಚುನಾವಣಾ ರಾಜಕೀಯ ಬೇಡ. ಆದರೆ ರಾಜಕಾರಣದಲ್ಲಿ ಸಕ್ರಿಯನಾಗಿರುತ್ತೇನೆ," ಎಂದು ಪ್ಲೇಟ್ ಬದಲಾಯಿಸಿದ್ದಾರೆ. ಇದರರ್ಥ, ನನ್ನನ್ನು ರಾಜ್ಯಸಭಾ ಎಂ.ಪಿ.ಯನ್ನಾಗಿಯೋ, ಎಮ್.ಎಲ್.ಸಿ.ಯನ್ನಾಗಿಯೋ ಮಾಡ್ರಪ್ಪ ಎಂಬ ಕೋರಿಕೆಯೆ? ಪ್ರಕಾಶರೇ ವಿವರಣೆ ನೀಡಬೇಕು.

ನಿಮಗೆ ಕೃಷ್ಣ ಭೈರೇಗೌಡ ಎಂಬ ವೇಮಗಲ್ ಕ್ಷೇತ್ರದ ಯುವ ಶಾಸಕರ ಬಗ್ಗೆ ಗೊತ್ತಿರಬಹುದು. ಮಾಜಿ ಕೃಷಿ ಸಚಿವ ಭೈರೇಗೌಡರ ಮಗ. ಜಿದ್ದಾಜಿದ್ದಿಯ, ಜಾತಿ ರಾಜಕೀಯಕ್ಕೆ ಹಾಗು ಫ್ಯಾಕ್ಷನಿಸಮ್‌ಗೆ ಹೆಸರಾದ ಕೋಲಾರ ಜಿಲ್ಲೆಯವರು. ಅಮೇರಿಕದಲ್ಲಿ ಒಂದಷ್ಟು ವರ್ಷ ಇದ್ದು, ಮಹಿಮಾರಂತೆ ತಂದೆಯ ಮರಣದ ನಂತರ ಕಾಂಗ್ರೆಸ್‌ಗೆ ಹೋಗಿ ಚುನಾವಣೆಗೆ ನಿಂತವರು. ಅಂದಿನ ಕಲಾಪದಲ್ಲಿ ಮೂರ್ನಾಲ್ಕು ಸಲ ಎದ್ದು ನಿಂತು ನೇರವಾಗಿ, ವಸ್ತುನಿಷ್ಠವಾಗಿ ಮಾತನಾಡಿದರು. ಚುರುಕಾದ, ಸರಳವಾಗಿ ಕಾಣುವ, ಒಳ್ಳೆಯ ಭವಿಷ್ಯ ಇರುವ ರಾಜಕಾರಣಿಯಂತೆ ಕಂಡರು. ಕಾಂಗ್ರೆಸ್‌ನ ದೈತ್ಯಾದಿದೈತ್ಯ ಶಾಸಕರೆಲ್ಲ ತಮ್ಮ ವೈಯಕ್ತಿಕ ಸಮಸ್ಯೆಗಳನ್ನೆ ರಾಜ್ಯದ ಸಮಸ್ಯೆ ಎಂದು ಗೋಳಾಡುತ್ತಿದ್ದಾಗ ಕೃಷ್ಣ ಭೈರೇಗೌಡರು ಜನಪರ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು. ಸೂಕ್ತ ಸಮಯದಲ್ಲಿ ಕಾಮೆಂಟ್ ಮಾಡುತ್ತಿದ್ದರು. ಆದರೆ ಈ ಕಾಂಗ್ರೆಸ್‌ನ ವೃದ್ಧನಾರಿಯರು ಇಂತಹವರಿಗೆ ಹೆಚ್ಚು ಜವಾಬ್ದಾರಿ ಕೊಡುವುದು, ಪ್ರೋತ್ಸಾಹಿಸುವುದು ನಿಜಕ್ಕೂ ಕನಸಿನ ಮಾತು. ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಎಲ್ಲಾ ಈಕ್ವೇಶನ್ಸ್ ಬದಲಾಗಬಹುದಲ್ಲ?

ಇಂದಿನ ನಮ್ಮ ಸುದ್ದಿಮಾಧ್ಯಮಗಳ ಅಜೆಂಡಾ ಒಳ್ಳೆಯದನ್ನು, ಒಳ್ಳೆಯವರನ್ನು ಗುರುತಿಸಬೇಕು, ಪ್ರೋತ್ಸಾಹಿಸಬೇಕು ಎನ್ನುವುದಕ್ಕಿಂತ, ಯಾವಾಗಲೂ ಕೆಟ್ಟದ್ದನ್ನೆ ದೊಡ್ಡದು ಮಾಡಿ, ಅನಾದರ್ಶಗಳನ್ನು ವೈಭವೀಕರಿಸಿ, ಒಳ್ಳೆಯವರೆ ಇಲ್ಲ ಎಂದು ಹೇಳುವುದೇ ಆಗಿದೆ ಎನಿಸುತ್ತದೆ. ಧರಮ್‌ಸಿಂಗ್, ಖರ್ಗೆ, ದೇವೇಗೌಡ, ಯಡಿಯೂರಪ್ಪರಿಗಿಂತ ಜನ ತಿಳಿದುಕೊಳ್ಳಬೇಕಾದ್ದು ಮಹಿಮಾ ಏನು ಮಾಡಿದರು, ಕೃಷ್ಣ ಭೈರೇಗೌಡ ಏನಂದರು ಎನ್ನುವುದು. ಇಂತಹ ಒಂದಷ್ಟು ಆದರ್ಶವಾದಿಗಳಿಗೆ, ಕ್ರಿಯಾಶೀಲರಿಗೆ "ಭೇಷ್ ಕಣಪ್ಪ" ಎಂದು ಆಗಾಗ ಅನ್ನುತ್ತಿದ್ದರೆ ಮಿಕ್ಕ ರಾಜಕಾರಣಿಗಳು ನಾಚಿಕೆ ಪಟ್ಟುಕೊಂಡು ಅಲ್ಪಸ್ವಲ್ಪವಾದರೂ ತಿದ್ದಿಕೊಳ್ಳುತ್ತಾರೆ. ಈಗ ನಮ್ಮ ಪತ್ರಿಕೆ ಮಾಡಬೇಕಿರುವುದೂ ಅದನ್ನೆ. ನೀವೇನಂತೀರಿ?

May 5, 2007

ದೇವರೆ, ಸ್ನೇಹಿತರಿಂದ ನನ್ನನ್ನು ಕಾಪಾಡು!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮೇ 18, 2007 ರ ಸಂಚಿಕೆಯಲ್ಲಿನ ಲೇಖನ)

ಜನವರಿ 19 ರ ಸಂಚಿಕೆಯಲ್ಲಿ ನಮ್ಮ ಪತ್ರಿಕೆಯ ಅಂಕಣಗಾರರಾದ ಮಂಗಳೂರಿನ ನರೇಂದ್ರ ಪೈ ಹೀಗೆ ಬರೆದಿದ್ದರು:

"ಕಾಲ, ದೇಶದ ಪ್ರಜ್ಞೆ ಇಲ್ಲ. ಯುಕ್ತಾಯುಕ್ತ ವಿವೇಚನೆಯೂ ಇಲ್ಲ. ಸಾಮಾನ್ಯರ ಭಾವುಕತೆಯನ್ನು ಬಂಡವಾಳ ಮಾಡಿಕೊಂಡು ಬದುಕುವ ಒಂದು ದುಷ್ಟ ವರ್ಗ ತೆಲೆಯೆತ್ತುತ್ತಿದೆ. ಭಾವುಕ ಮಂದಿ ಉಘೇ ಉಘೇ ಎನ್ನುತ್ತಿದೆ. ಇದು ಇವತ್ತಿನ ನಮ್ಮ ಸ್ಥಿತಿ."

ಕನ್ನಡದ ಪತ್ರಿಕೆಗಳನ್ನು ಮತ್ತು ಬೆಂಗಳೂರಿನಿಂದಲೆ ಪ್ರಕಟವಾಗುವ ಇಂಗ್ಲಿಷ್ ಪತ್ರಿಕೆಗಳನ್ನು ಎದುರಿಗಿಟ್ಟುಕೊಂಡು ಕೂತರೆ ನಮಗೆ ನರೇಂದ್ರರು ಹೇಳುವ ಮಾತು ಇನ್ನೂ ಸ್ಪಷ್ಟವಾಗಿ ಅರ್ಥವಾಗಿ ಹೋಗುತ್ತದೆ. ಇವತ್ತು (ಬಹುಶಃ ಯಾವತ್ತೂ) ಬಹುಪಾಲು ಕನ್ನಡ ಪತ್ರಿಕೆಗಳ ಜೀವಾಳ ವಸ್ತುನಿಷ್ಠ ವರದಿ, ವಿಷಯಮಂಡನೆ ಎನ್ನುವುದಕ್ಕಿಂತ ನಾವು ಅದನ್ನು ಎಷ್ಟು ಚಮತ್ಕಾರಿಕವಾಗಿ, ರೋಚಕವಾಗಿ, ಭಾವನಾತ್ಮಕವಾಗಿ, ಕಾಮ-ಕ್ರೋಧ-ಕ್ರೈಮ್ ರಸಭರಿತವಾಗಿ ಹೇಳುತ್ತೇವೆ ಎನ್ನುವುದರ ಮೇಲೆ ನಿಂತಿದೆ ಎನ್ನಿಸುತ್ತದೆ. ಇದರ ಹೊರತಾಗಿ ಇರುವವರೂ ಇದ್ದಾರೆ. ಆದರೆ ಅವರ ಮಾರುಕಟ್ಟೆ ವಿಜಯ, ಬ್ರ್ಯಾಂಡ್ ನೇಮ್, ಕ್ರೋನಿಯಿಸಮ್, ಉಳಿದಂತಹವರ ತರಹ ಇಲ್ಲ.

ಕನ್ನಡ ಬರಹ ಎಂದರೆ ಭಾವನಾತ್ಮಕ ವಿಷಯಗಳಿಗೆ, ರೋಚಕ, ಟೈಮ್‌ಪಾಸ್ ವಿಷಯಗಳಿಗಷ್ಟೆ ಸೀಮಿತ, ಗಂಭೀರವಾದ ರಾಷ್ಟ್ರೀಯ, ಜಾಗತಿಕ, ಆರ್ಥಿಕ, ವಿಜ್ಞಾನ, ತಂತ್ರಜ್ಜಾನ, ಆಡಳಿತದ ವಿಷಯಗಳಿಗೆ ಇಂಗ್ಲಿಷ್ ಎನ್ನುವಂತಾಗಿದೆ. ಈ ನಿಟ್ಟಿನಲ್ಲಿ ಈಗಲೂ ಬಹುಸಂಖ್ಯಾತರಾಗಿರುವ ಕನ್ನಡ ಪತ್ರಿಕೆಗಳ ಓದುಗರು ಓದುವುದು ಮಾತ್ರ ಭಾವುಕತೆಯನ್ನೆ ಬಂಡವಾಳ ಮಾಡಿಕೊಂಡವರು ಕೊಡುವ ರಸಭರಿತ ಸುದ್ದಿಗಳನ್ನು ಮಾತ್ರ.

ನಮ್ಮ ಪತ್ರಿಕೆಗಳ ವಿಶ್ವಾಸಾರ್ಹತೆಯೆ ದೊಡ್ಡ ಪ್ರಶ್ನೆ ಇಲ್ಲಿ. ಈಗ ತಾನೆ ಒಂದು ತೆಲುಗು ವೆಬ್‌ಸೈಟ್ ಮೇಲೆ ಕಣ್ಣಾಡಿಸುತ್ತಿದ್ದೆ. ತೆಲುಗಿನ ಮೂರ್ನಾಲ್ಕು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ಅಲ್ಲಿಯೂ ಪರಿಚಿತೆಯಾಗಿರುವ ಕನ್ನಡದ ನಟಿ ರಕ್ಷಿತಾಳ ಬಗೆಗಿನ ಸುದ್ಧಿ ಅದು. ಅದರಲ್ಲಿ, "ಹಿರೋಯಿನ್ ರಕ್ಷಿತ ನಿರ್ಮಾಪಕಿಯಾಗುತ್ತಿದ್ದಾಳೆ. ’ಪ್ರೀತಿ ಏಕೆ ಭೂಮಿ ಮೇಲಿದೆ’ ಎನ್ನುವ ಹೆಸರಿನಲ್ಲಿ ಆ ಚಿತ್ರ ತಯಾರಾಗುತ್ತಿದೆ. ಇದರಲ್ಲಿ ಆಕೆಯ ಭಾವಿ ಪತಿ ಪ್ರೇಮ್‌ನ ಸಹೋದರ ಅರುಣ್ ನಾಯಕನಾಗಿ ನಟಿಸಲಿದ್ದಾನೆ. ಈ ಚಿತ್ರಕ್ಕೆ ಪ್ರೇಮ್ ನಿರ್ದೇಶನ ವಹಿಸಿಕೊಂಡಿದ್ದಾರೆ." ಎಂದಿದೆ. ನಿಜವೆ??? ಈ ಅರುಣ್ ಎಂಬ ಪ್ರೇಮ್‌ರ ಸೋದರ ಆ ಚಿತ್ರದ ನಾಯಕನೆ? ನೋಡಿದರೆ ಕನ್ನಡ ಪತ್ರಿಕೆಗಳ ಜಾಹಿರಾತಿನಲ್ಲಿ ಪ್ರೇಮ್‌ರೇ ಮಿಂಚುತ್ತಿದ್ದಾರಲ್ಲ? ನಾನು ಇಂಜಿನಿಯರಿಂಗ್ ಮಾಡುತ್ತಿದ್ದಾಗ ಪತ್ರಿಕೆಯೊಂದರಲ್ಲಿ ಮಾಯಾವತಿ ಮತ್ತು ಕಾಂಶಿರಾಮ್ ಗಂಡಹೆಂಡತಿ ಎಂದು ವರದಿಯಾಗಿತ್ತು. ಅದನ್ನು ನಂಬಿಕೊಂಡು ಸ್ನೇಹಿತರ ಬಳಿ ಅವರಿಬ್ಬರೂ ಗಂಡಹೆಂಡತಿ ಎಂದು ವಾದಿಸಿ, ನಂತರ ಅಲ್ಲವೆಂದು ಗೊತ್ತಾಗಿ ಮುಖಭಂಗವಾಗಿತ್ತು!!!

ನೀವು ಕನ್ನಡದ ಎರಡುಮೂರು ದಿನಪತ್ರಿಕೆಗಳನ್ನು ನೋಡುವಿರಾದರೆ ಒಂದೇ ಸುದ್ದಿ ಆ ಮೂರ್ನಾಲ್ಕು ಪತ್ರಿಕೆಗಳಲ್ಲಿ ಬೇರೆ ಬೇರೆಯಾಗಿಯೇ ಬರುತ್ತಿದೆಯಲ್ಲ ಎಂದು ನಿಮಗೆ ಗೊತ್ತಾಗಿರುತ್ತದೆ. ಇದು ಸುದ್ದಿ ವಿಶ್ಲೇಷಣೆಯ ಮಾತಲ್ಲ. ಮೂಲ ಸುದ್ದಿಯೇ ಬೇರೆಬೇರೆ ರೂಪ ತಾಳಿ ಬಿಟ್ಟಿರುತ್ತದೆ. ಇದು ಹೇಗೆ? ಜನವರಿಯಲ್ಲಿ ಪೇಜಾವರರ ಮೇಲೆ ದಾಖಲಾದ ಕೋರ್ಟ್ ಮೊಕದ್ದಮೆಯ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದೆ. ಒಂದು ಪತ್ರಿಕೆ ಅಡಳಿತಾರೂಢ ಮಂತ್ರಿ-ಪೋಲಿಸರ ಪ್ಲಾಂಟೆಡ್ ಸುದ್ದಿಗಳನ್ನು ಮಾತ್ರ ಬಿತ್ತರಿಸುತ್ತಿತ್ತು. ಯಾವುದೆ ಕಾರಣಕ್ಕೂ ಬ್ಯಾಕ್‌ಗ್ರೌಂಡ್ ಚೆಕ್ ಮಾಡುತ್ತಿರಲಿಲ್ಲ. ಕೇಸಿನ ಇಡೀ ಹಿನ್ನೆಲೆ ಗೊತ್ತಿದ್ದ ಇನ್ನೊಂದು ಪತ್ರಿಕೆ ಒಂದು ವರದಿಯಲ್ಲಿ ಅಕ್ಕ ತಮ್ಮನನ್ನು ಗೊತ್ತಿದ್ದೂ ಗೊತ್ತಿದ್ದೂ ಗಂಡ ಹೆಂಡತಿ ಎಂದು ವಿಕೃತವಾಗಿ ವರದಿ ಮಾಡಿತು. ಕನ್ನಡದ ಒಂದೆರಡು ದಿನಪತ್ರಿಕೆಗಳಂತೂ ಯಡಿಯೂರಪ್ಪನವರಿಗೆ ಮರ್ಯಾದೆ ಕಳೆಯುವಂತಹ, ಭಯ ಹುಟ್ಟಿಸುವಂತಹ ಯಾವ ಸುದ್ದಿಯನ್ನೂ ಒಳಗಿನ ಪುಟಗಳಿಗೆ ತಳ್ಳುವುದಿಲ್ಲ. ಆ ಪತ್ರಿಕೆಗಳು ಸತ್ಯವನ್ನು ಹೇಳುತ್ತಿವೆ ಎನ್ನುವುದಕ್ಕಿಂತ ಇಲ್ಲಿನ ಒಳ ಸತ್ಯ ಬೇರೆಯದೇ ಇದೆ. ಬಿಜೆಪಿಯಲ್ಲಿನ ಯಡಿಯೂರಪ್ಪ ವಿರೋಧಿ ಗುಂಪು ಹೇಗಾದರೂ ಮಾಡಿ ಈ ಸರ್ಕಾರವನ್ನು ಬೀಳಿಸುವಂತೆ, ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಆಗದಂತೆ ಮಾಡಲು ನಡೆಸುತ್ತಿರುವ ಶತಾಯಗತಾಯ ಪ್ರಯತ್ನ ಅದು; Ongoing, Organized Conspiracy!

ಇದನ್ನು ಆರನೆ ಶತಮಾನದ ಮುಸಲ್ಮಾನ ನಾಯಕ ಇಮಾಮ್ ಅಲಿ ಹೇಳಿದ್ದು ಎನ್ನುತ್ತಾರೆ: "ದೇವರೆ, ನನ್ನನ್ನು ನನ್ನ ಸ್ನೇಹಿತರಿಂದ ಕಾಪಾಡು. ನನ್ನ ಶತ್ರುಗಳಿಂದ ನನ್ನನ್ನು ನಾನು ರಕ್ಷಿಸಿಕೊಳ್ಳಬಲ್ಲೆ." ಯಡಿಯೂರಪ್ಪ ಮತ್ತು ಗ್ಯಾಂಗ್, ಗೌಡರು ತಮಗೆ ಅಧಿಕಾರ ಬಿಡುತ್ತಾರೊ ಇಲ್ಲವೊ ಎನ್ನುವುದಕ್ಕಿಂತ ತಮ್ಮ ಪಕ್ಷದ ಸ್ನೇಹಿತರೆ ಹೇಗೆ ತಮಗೆ ನೇಣಿನ ಕುಣಿಕೆ ಸಿದ್ದಪಡಿಸಿಕೊಂಡು ಸಮಯ ಕಾಯುತ್ತಿದ್ದಾರೆ ಎನ್ನುವುದನ್ನು ಗಮನಿಸಬೇಕು. ಬಹುಶಃ ಅದನ್ನು ಗಮನಿಸಿಯೇ ಇರಬೇಕು ಅವರೂ ಈ ತಮ್ಮ ಸ್ನೇಹಿತರಿಂದ ರಕ್ಷಣೆ ಕೋರಿ ದೇವಾಲಯಗಳಿಗೆ ಹೋಗಿ ಬರುತ್ತಿರುವುದು ಹಾಗೂ ಮಠ-ಮಂದಿರಗಳಿಗೆಲ್ಲ ಅವರ ಮನೆಯ ತಿಜೋರಿಯಿಂದಲೂ ನೀಡದಷ್ಟು ಉದಾರದಿಂದ ಜನರ ದುಡ್ಡನ್ನು ಕಾಣಿಕೆ ಒಪ್ಪಿಸುತ್ತಿರುವುದು.

ಈಗಿನ ಕಾಲದ ಮನುಷ್ಯನಿಗೆ ಕೇವಲ ತಾನು ಮಾಡಿಕೊಂಡ ಸ್ನೇಹಿತರಷ್ಟೆ ಇರುವುದಿಲ್ಲ. ಆತ ಮೆಚ್ಚುವ ರಾಜಕಾರಣಿ, ಮಠಾಧೀಶ, ಶಿಕ್ಷಕರು, ಅವನ ಜಾತಿಯ ಮುಖಂಡ, ಅವನು ಓದುವ ಪತ್ರಿಕೆ, ಪತ್ರಕರ್ತ, ಲೇಖಕ; ಹೀಗೇ ಅನೇಕರಿರುತ್ತಾರೆ. ಅವರು ಹೇಳಿದ್ದನ್ನು ಎಷ್ಟೋ ಸಲ ವಿವೇಚನೆ ಮಾಡದೆ ಒಪ್ಪಿಕೊಂಡುಬಿಡುತ್ತಾನೆ. ಈ ಇಡೀ ಗುಂಪಿನಲ್ಲಿ ವ್ಯವಸ್ಥಿತವಾಗಿ ಸುಳ್ಳು ಹೇಳಬಲ್ಲವರು ಸರ್ಕಾರದಲ್ಲಿರುವ ರಾಜಕಾರಣಿಗಳು ಹಾಗೂ ಪತ್ರಕರ್ತರು. ಒಬ್ಬ ಸಾಮಾನ್ಯ ನಾಗರಿಕ ದೇವರಲ್ಲಿ ಕೇಳಿಕೊಳ್ಳಬೇಕಿರುವುದು ಇವರ ಸುಳ್ಳುಗಳನ್ನು ನೋಡುವ ಶಕ್ತಿ ನೀಡು ಎಂದು. ನಿಮಗೀಗಾಗಲೆ ಗೊತ್ತಿರುವಂತೆ, ರೌಡಿಗಳು ಸುಪಾರಿ ತೆಗೆದುಕೊಂಡು ಯಾರು ಯಾರನ್ನೊ ಕೊಲ್ಲುವಂತೆ ಗುಜರಾತಿನ ಪೋಲಿಸರು ಸುಪಾರಿ ಪಡೆದು ಒಂದಷ್ಟು ಜನರನ್ನು ಗುಂಡಿಟ್ಟು ಕೊಂದಿದ್ದಾರಂತೆ. ಹಾಗೆ ಕೊಲೆ ಮಾಡಿದವರನ್ನೆಲ್ಲ, ಭಯೋತ್ಪಾದಕರು, ದೇಶದ್ರೋಹಿಗಳು ಎಂದು ಪ್ರಚಾರ ಕೊಟ್ಟು ಮೊದಲು ಬಚಾವಾಗಿದ್ದಾರೆ. ಆದರೆ, ಒಬ್ಬ ಒಳ್ಳೆಯ ಪತ್ರಕರ್ತ ಈ ಸುದ್ದಿಗಳ ಹಿಂದೆ ಬಿದ್ದು ಇದನ್ನೆಲ್ಲ ಬಯಲಿಗೆಳೆದಿದ್ದಾನೆ. ಒಂದಷ್ಟು ಒಳ್ಳೆಯ ಪೋಲಿಸರು ಈ ದೇಶಭಕ್ತ ಪೋಲಿಸರನ್ನೆಲ್ಲ ಹಿಡಿದುಹಾಕಿದ್ದಾರೆ. ವಿಚಾರಣೆ ನಡೆಯುತ್ತಿದೆ.

ಈ ಘಟನೆ ಗುಜರಾತಿನಲ್ಲಿ ಕಂಪನಗಳನ್ನು ಎಬ್ಬಿಸಿದೆ. ಅಲ್ಲಿ ಈ ವರ್ಷವೇ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ, ಈ ನಕಲಿ ಎನ್‌ಕೌಂಟರ್ ತನಗೆ ಉರುಳಾಗದಂತೆ ನೋಡಿಕೊಳ್ಳುವುದು ನರೇಂದ್ರ ಮೋದಿಗೆ ಅತ್ಯವಶ್ಯಕ. ಈ ವಿಷಯದ ಬಗ್ಗೆ ಮೋದಿಯ ಹತ್ತಿರದ ಸ್ನೇಹಿತರು ಹೇಳಿದ್ದಾರೆ ಎನ್ನಲಾದ ಒಂದು ವರದಿಯನ್ನು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿತ್ತು. ಅದರ ಸಾರಾಂಶ:
"ಶೇಕ್ ಒಬ್ಬ ಭಯೋತ್ಪಾದಕ; ಅವನನ್ನು ಕೊಲ್ಲಲೇ ಬೇಕಿತ್ತು ಎಂದು ಜನರಿಗೆ ಹೇಳುತ್ತೇವೆ. ಟೆರ್ರರಿಸ್ಟ್ ಅನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಿದೆ ಎಂದು ಹೇಳುತ್ತೇವೆ. ಶೇಕ್‌ನ ಪಿ.ಎ. ಆಗಿದ್ದ ಪ್ರಜಾಪತಿಯ ಬಗ್ಗೆ ನಾವು ಏನೂ ಮಾತನಾಡಲೂ ಹೋಗುವುದಿಲ್ಲ. ಯಾಕೆಂದರೆ ಅವನೊಬ್ಬ ಹಿಂದು. ಹಾಗೆಯೆ ಶೇಕ್‌ನ ಹೆಂಡತಿ ಎನ್ನಲಾಗುತ್ತಿರುವ ಕೌಸರ್‌ಬಿ, ನಿಜವಾಗಲೂ ಆತನ ಹೆಂಡತಿ ಹೌದೊ ಅಲ್ಲವೊ ಎನ್ನುವುದು ನಮ್ಮ ಸಂಶಯ. ಆ ಸಂದೇಹವನ್ನೆ ದೊಡ್ಡದು ಮಾಡಿ ಜನರಿಗೆ ಹೇಳುತ್ತೇವೆ."

ಹೀಗೆ ಅಧಿಕಾರಸ್ಥರ ಮತ್ತು ಕೆಲವು ಪತ್ರಕರ್ತರ ದುಷ್ಟಕೂಟ ವ್ಯವಸ್ಥಿತವಾಗಿ ಸುದ್ದಿಯನ್ನು ಸದಾ ಪ್ಲಾಂಟ್ ಮಾಡುತ್ತಿರುತ್ತಾರೆ. ಈ ನಮ್ಮ ಸ್ನೇಹಿತರಿಂದ ನಮ್ಮನ್ನು ಆ ಭಗವಂತನೇ ಕಾಪಾಡಬೇಕು!