(ವಿಕ್ರಾಂತ ಕರ್ನಾಟಕ - ಆಗಸ್ಟ್ ೦೩, ೨೦೦೭ರ ಸಂಚಿಕೆಯಲ್ಲಿನ ಬರಹ)
ಕರ್ನಾಟಕದಲ್ಲಿನ ನಕ್ಸಲೀಯರಿಂದ ಬಂದದ್ದು ಎನ್ನಲಾಗುವ ಇ-ಮೇಯ್ಲ್ ಅದು. ಅದನ್ನು ನಂಬಬಹುದಾದರೆ, ಎರಡು ವಾರಗಳ ಹಿಂದೆ ಮಲೆನಾಡಿನಲ್ಲಿ ಪೋಲಿಸರಿಂದ ಹತ್ಯೆಯಾದವರಲ್ಲಿ ಇಬ್ಬರು ಸಕ್ರಿಯ ನಕ್ಸಲೀಯರು. ಮಿಕ್ಕ ಮೂವರು ಅವರೇ ಹೇಳುವ ಪ್ರಕಾರ ನಕ್ಸಲೀಯರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ, ಅವರ ಬಗ್ಗೆ ಸಹಾನುಭೂತಿ ಹೊಂದಿದ್ದ ಅಲ್ಲಿನ ಆದಿವಾಸಿ ರೈತರು. ಆ ಐದು ಜನರ ಮರಣದ ನಂತರ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಿಂದ ನಕ್ಸಲೀಯ ಚಟುವಟಿಕೆಗಳ ಬಗ್ಗೆ ಸುದ್ದಿಗಳು ಬರುತ್ತಲೆ ಇವೆ. ಅಲ್ಲಿ ಮನೆ ದೋಚಿದರು, ಇಲ್ಲಿ ಧಮಕಿ ಹಾಕಿದರು, ಅಲ್ಲಿ ಎ.ಎಸ್.ಐ. ಗೆ ಗುಂಡು ಹೊಡೆದರು, ಇತ್ಯಾದಿ. ಈ ಮಧ್ಯೆ, ಇವುಗಳಲ್ಲಿ ಕೆಲವನ್ನು ದುಷ್ಕರ್ಮಿಗಳೆ ಮಾಡಿ ಅವನ್ನು ನಕ್ಸಲೀಯರ ಮೇಲೆ ಹಾಕುತ್ತಿದ್ದಾರೆ ಎನ್ನುವ ಆರೋಪ ಮತ್ತು ಸಂದೇಹಗಳು ಬೇರೆ.
ಆದರೆ, ಬೇರೆಯವರು ಮಾಡಿ ನಮ್ಮ ಮೇಲೆ ಹಾಕುತ್ತಿದ್ದಾರೆ ಎನ್ನುವುದು ನಕ್ಸಲೀಯರು ಮಾಡುತ್ತಿರುವ ಮತ್ತು ಈಗಾಗಲೆ ಮಾಡಿರುವ ಕಾನೂನುಬಾಹಿರ ಕೆಲಸಕ್ಕೆ ವಿನಾಯಿತಿ ಕೊಡುವುದಿಲ್ಲ. ನಕ್ಸಲೀಯರು ಭಾರತದ ಪ್ರಜೆಗಳು ಒಪ್ಪಿಕೊಂಡಿರುವ ಸಂವಿಧಾನಕ್ಕೆ ಬಾಹಿರವಾದ ಭೂಗತ ಚಟುವಟಿಕೆ ಮಾಡುತ್ತಿರುವುದಾಗಲಿ, ಮಲೆನಾಡಿನ ಕೆಲವು ಕಡೆ ಜನರನ್ನು ಹೆದರಿಸಿರುವುದಾಗಲಿ, ಈಗಾಗಲೆ ಹಲವು ಹೆಣಗಳನ್ನು ಉರುಳಿಸಿರುವುದಾಗಲಿ ಸುಳ್ಳಲ್ಲ. ಈಗಿರುವ ಮೂಲಭೂತ ಪ್ರಶ್ನೆ ಎಂದರೆ, ಲೈಸನ್ಸ್ ಇಲ್ಲದ ಬಂದೂಕು ಹಿಡಿದು ಪ್ರಜಾಪ್ರಭುತ್ವ ವಿರೋಧಿ ಕೃತ್ಯದಲ್ಲಿ ತೊಡಗಿರುವ ನಕ್ಸಲೀಯರಿಗೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿದೆಯೆ ಎನ್ನುವುದು.
ಅನ್ಯಾಯ, ಅಕ್ರಮ, ಶೋಷಣೆಗಳು ನಮಗೇ ಆಗಲಿ ಇನ್ನೊಬ್ಬರಿಗೆ ಆಗಲಿ ಆದಾಗ ಅದನ್ನು ವಿರೋಧಿಸಬೇಕು. ಆದರೆ ಹೇಗೆ? ನಾವು ಒಂದು ವ್ಯವಸ್ಥೆ ಎಂದು ಮಾಡಿಕೊಂಡಾಗ ಎಲ್ಲರೂ ಅದರಂತೆ ನಡೆಯಬೇಕು. ನಮ್ಮ ನ್ಯಾಯಾಂಗ ಎನ್ನುವುದು ಇರುವುದೇ ಅನ್ಯಾಯದಿಂದ ರಕ್ಷಣೆ ಪಡೆಯಲು. ಅದನ್ನು ಉಪಯೋಗಿಸಿಕೊಳ್ಳುವ ಬದಲಿಗೆ ಎಲ್ಲರೂ ತಮ್ಮ ಭುಜಬಲ ಪರಾಕ್ರಮ ತೋರಿಸಲು ಆರಂಭಿಸಿಬಿಟ್ಟರೆ, ಅದು ಪ್ರಜಾಪ್ರಭುತ್ವವಲ್ಲ; ಅರಾಜಕತ್ವ. "ಇಲ್ಲಿ ಅನ್ಯಾಯವಾಗಿದೆ, ತಕ್ಷಣಕ್ಕೆ ನ್ಯಾಯ ಸಿಗುತ್ತಿಲ್ಲ, ಅದಕ್ಕೆ ಬಂದೂಕು ಹಿಡಿಯುವುದೆ ಸರಿ," ಎಂಬ ನಕ್ಸಲೀಯ ಸಿದ್ದಾಂತವನ್ನೇನಾದರೂ ಸಮಾಜ ಒಪ್ಪಿಕೊಂಡು ಬಿಟ್ಟರೆ ಪ್ರತಿದಿನವೂ ಬೀದಿಗಳಲ್ಲಿ ಗುಂಡಿನ ಸದ್ದು ಮೊರೆಯುತ್ತಿರುತ್ತದೆ. ಕೆಲವರ ಮನೆಗಳ ಒಳಗೂ ಗುಂಡು ಹಾರುತ್ತಿರುತ್ತದೆ.
ಇವತ್ತು ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಕಾಲಾನುಕಾಲಕ್ಕೆ ಅನ್ಯಾಯಗಳ ವಿರುದ್ಧ ಜನರು ಹೋರಾಟ ಮಾಡುತ್ತಲೆ ಇದ್ದಾರೆ. ಸಂವಿಧಾನಬದ್ಧವಾಗಿ, ಅಹಿಂಸಾತ್ಮಕವಾಗಿ ಈ ಜನರು ಮಾಡುತ್ತಿರುವ ಹೋರಾಟಕ್ಕೆ ನಿಜವಾಗಲೂ ಆತ್ಮಸ್ಥೈರ್ಯ ಬೇಕು. ಸಮಾಜದ ಒಳಗೆ ಇದ್ದುಕೊಂಡು ಮಾಡುವ ಹೋರಾಟಕ್ಕೆ ಅನೇಕ ಪ್ರತಿರೋಧಗಳು, ಅವಮಾನಗಳು, ಒತ್ತಡಗಳು ಬರುತ್ತಿರುತ್ತವೆ. ಅವರ ಹೋರಾಟ ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಯಾರೋ ಪ್ರಾರಂಭಿಸಿದ್ದನ್ನು ಮತ್ಯಾರೊ ಮುಂದುವರೆಸಿ, ಮತ್ಯಾರೊ ಕೊನೆಗೊಳಿಸಬೇಕಾಗುತ್ತದೆ. ಆ ಜನಪರ ಹೋರಾಟದಲ್ಲಿ ಎದುರಾಗುವ ಒತ್ತಡ, ಅವಮಾನ, ಸೋಲುಗಳನ್ನೆಲ್ಲ ಎದುರಿಸಲಾಗದೆ ಕಾಡಿಗೆ ಓಡಿ ಹೋಗಿ ಬಂದೂಕು ಹಿಡಿಯುವವರು ನಿಜಕ್ಕೂ ಪಲಾಯನವಾದಿಗಳು. ಅವರಿಗೆ ತಮ್ಮ ಹೋರಾಟದ ಮೇಲಿನ ನಂಬಿಕೆಗಿಂತ ಬಂದೂಕಿನ ಮೇಲಿನ ನಂಬಿಕೆಯೆ ಹೆಚ್ಚು. ಅವರು ನಮಗೆ ಯಾವ ರೀತಿಂದಲೂ ರೋಲ್‍ಮಾಡೆಲ್‌ಗಳಾಗಬಾರದು. ಹಾಗೆ ಆದ ದಿನ ಪ್ರಜಾಪ್ರಭುತ್ವಕ್ಕೆ ಭವಿಷ್ಯವಿಲ್ಲ.
ಕರ್ನಾಟಕದಲ್ಲಿಯಂತೂ ನಕ್ಸಲೀಯರ ಬಗ್ಗೆ ವಿಚಿತ್ರ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ನಕ್ಸಲೀಯರು ಕಮ್ಯುನಿಸ್ಟ್ ವಾದದ ಪರ ಇರುವುದರಿಂದ ಆ ವಾದವನ್ನು ವಿರೋಧಿಸುವ ಬಲಪಂಥೀಯರು ಇಲ್ಲಿ ನಕ್ಸಲೀಯರ ಬದ್ಧದ್ವೇಷಿಗಳು. ಪ್ರಪಂಚದ ಬೇರೆಬೇರೆ ಕಡೆ ಬಲಪಂಥೀಯರೆಂದರೆ ಕ್ಯಾಪಿಟಲಿಸ್ಟ್‌ಗಳು, ಅಲ್ಪಸ್ವಲ್ಪ ಮತೀಯ ಮೂಲಭೂತವಾದಿಗಳು. ಅದರೆ ಭಾರತದಲ್ಲಿ ಬಲಪಂಥೀಯರೆಂದರೆ ಅಪ್ಪಟ ಕೋಮುವಾದಿಗಳು. "ನಿಮ್ಮ ಆರ್ಥಿಕ ಸಿದ್ಧಾಂತಗಳು ಏನೇ ಇರಲಿ, ಅವುಗಳಿಂದ ಜನಕ್ಕೆ ಒಳ್ಳೆಯದಾಗುವಂತೆ ನೋಡಿಕೊಳ್ಳಿ; ಸಬಲರಿಂದ ದುರ್ಬಲರ ಶೋಷಣೆ ಆಗುತ್ತಿದ್ದರೆ ಅದಕ್ಕೆ ಕಡಿವಾಣಗಳನ್ನು ಹಾಕಿ; ಆದರೆ, ಕೋಮುವಾದಿಗಳಾಗಬೇಡಿ, ಹುಟ್ಟಿನ ಆಧಾರದ ಮೇಲೆ ಜನರಲ್ಲಿ ಭೇದಭಾವ ಮಾಡಬೇಡಿ; ಕಂದಾಚಾರವನ್ನು ಉತ್ತೇಜಿಸಬೇಡಿ; ಭಾರತದ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಅರಿವಿರಲಿ;" ಎಂದಷ್ಟೇ ಹೇಳುವ ಜನರು ಇವತ್ತು ಭಾರತದಲ್ಲಿ ಬಲಪಂಥೀಯ ವಿರೋಧಿಗಳು. ಹಾಗಾಗಿ, ವಿರೋಧಿಯ ವಿರೋಧಿ ನಮ್ಮ ಸ್ನೇಹಿತ ಎಂದುಕೊಂಡು ನಕ್ಸಲೀಯರು ಈ ಗುಂಪಿನವರನ್ನು ತಮ್ಮವರು ಎಂದು ಭಾವಿಸಿಕೊಳ್ಳುವುದು, ಅದೇ ರೀತಿ ತಮ್ಮ ವಿರೋಧಿ ತಮ್ಮ ಇನ್ನೊಬ್ಬ ವಿರೋಧಿಯ ಸ್ನೇಹಿತ ಎಂದು ಕೋಮುವಾದಿಗಳು ಜಾತ್ಯತೀತರನ್ನು ಅಂದುಕೊಳ್ಳುವುದು ಎರಡೂ ಕಡೆಯ ಅಂಧರಿಗೆ ಸಹಜವಾಗಿಯೆ ಇದೆ.
ಇವತ್ತು ಮಲೆನಾಡಿನ ಕೋಮುವಾದಿ ಮತಾಂಧರಿಗೆ ಭಯ ಹುಟ್ಟಿಸುತ್ತಿರುವವರೆ ನಕ್ಸಲೀಯರು, ಅವರಿಗೆ ಇವರೆ ಸರಿ ಎನ್ನುವ ವಾದ ಜಾತ್ಯತೀತರು ಎಂದು ಹೇಳಿಕೊಳ್ಳುವ ಕೆಲವರಿಂದ ಕೇಳಿಬರುತ್ತದೆ. ಆದರೆ, ಹಾಗೆ ಹೇಳುವವರಿಗೆ ತಾವು ನಂಬಿರುವ ಜಾತ್ಯತೀತ, ಕೋಮುವಾದಿ ವಿರೋಧಿ ಸಿದ್ಧಾಂತದಲ್ಲಿ ಪ್ರಾಮಾಣಿಕ ನಂಬಿಕೆಯೆ ಇಲ್ಲ ಎನ್ನಬೇಕು. ಕೋಮುವಾದವನ್ನು ಜನರಲ್ಲಿ ಉದಾತ್ತ ಮಾನವೀಯ ಮೌಲ್ಯಗಳನ್ನು ತುಂಬಿ, ಪ್ರಜಾಸತ್ತಾತ್ಮಕ ಹೋರಾಟದಿಂದ ಗೆದ್ದರೆ ಮಾತ್ರ ಅದು ನಿಜವಾದ ಗೆಲುವಾಗುತ್ತದೆಯೆ ಹೊರತು ನಕ್ಸಲೀಯರ ಬಂದೂಕಿನ ಬೆದರಿಕೆಗೆ ಕೋಮುವಾದಿಗಳು ಬಾಲ ಮುದುರಿಕೊಂಡರೆ ಅಲ್ಲ. ಮೂಲಭೂತವಾದದ ವಿರುದ್ಧದ ಹೋರಾಟಕ್ಕೆ ನಕ್ಸಲರ ಬೆಂಬಲ ಬೇಕಾಗಿಲ್ಲ. ಹಾಗೆ ಬೇಕು ಎನ್ನುವವರು ಸಮಾನತೆಗಾಗಿ, ಸಾಮರಸ್ಯಕ್ಕಾಗಿ, ನ್ಯಾಯಕ್ಕಾಗಿ ಹೋರಾಡುತ್ತಿರುವವರ ಹೋರಾಟವನ್ನೆ ಅಣಕಿಸಿದಂತೆ.
ಇನ್ನು, ತಾನು ನಂಬಿದ ಸಿದ್ಧಾಂತಕ್ಕೆ ಯಾರೋ ಒಬ್ಬ ಪ್ರಾಣ ಕೊಡಲೂ ತಯಾರು ಎಂದ ಮಾತ್ರಕ್ಕೆ ಅವರ ಸಿದ್ಧಾಂತ ಶ್ರೇಷ್ಠವಾಗಿ ಬಿಡುವುದಿಲ್ಲ. ಗುಂಡಿಗೆ ಎದೆಯೊಡ್ಡಿದ್ದರಿಂದಾಗಿ ನಕ್ಸಲೀಯ ಸಿದ್ಧಾಂತ ಸರಿ ಅಂತಾದರೆ, ಜಿಹಾದಿ ಭಯೋತ್ಪಾದಕರ ಹಾಗು ಗಾಂಧಿಯನ್ನು ಕೊಂದ ಗೋಡ್ಸೆಯ ಮತಾಂಧ ಸಿದ್ಧಾಂತವೂ ಸರಿ ಎಂತಾಗಿಬಿಡುತ್ತದೆ. ಆದರೆ, ಇವು ಯಾವುವೂ ಸರಿಯಲ್ಲ ಎನ್ನುತ್ತದೆ ನಾಗರಿಕ ಸಮಾಜ.
ನಮ್ಮದು ಆರ್ಥಿಕಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿರುವ ದೇಶ. ಹೀಗೆಯೆ ಮುಂದುವರೆಯುತ್ತಿರಬೇಕಾದರೆ ಕಾಲಾನುಕಾಲಕ್ಕೆ ಅಭಿವೃದ್ಧಿ ಪರ ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಳ್ಳುತ್ತಿರ ಬೇಕಾಗುತ್ತದೆ. ಹಾಗೆ ಕೈಗೆತ್ತಿಕೊಂಡಾಗ ಕೆಲವೊಮ್ಮೆ ಅದಕ್ಷರ, ಅವಿವೇಕಿಗಳ ಕೆಲಸದಿಂದ, ಭ್ರಷ್ಟರ ಪಿತೂರಿ ಸಂಚುಗಳಿಂದ ಕೆಲವು ಅಚಾತುರ್ಯಗಳೂ ಆಗುತ್ತವೆ. ಆದರೆ ಏನೋ ಆಗಿಬಿಡಬಹುದು ಎಂದು ಸರ್ಕಾರ ಸುಮ್ಮನಿರಲು ಸಾಧ್ಯವಿಲ್ಲ. ಯಾವುದೇ ಯೋಜನೆ ಕೈಗೆತ್ತಿಕೊಂಡಾಗ ಅದರಿಂದ ಲಾಭ ಪಡೆಯುವವರು ಇರುವಂತೆ ಅದರಿಂದ ನಷ್ಟಕ್ಕೊಳಗಾಗುವವರೂ ಇರುತ್ತಾರೆ. ನಷ್ಟಕ್ಕೊಳಗಾದವರ ನೋವನ್ನು ಕಮ್ಮಿ ಮಾಡುವುದು ನಾಗರಿಕ ಸರ್ಕಾರದ ಕೆಲಸ. ಈಗ ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಗಾಗಿ ಅಲ್ಲಿನ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸಬೇಕಾಗಿದೆ. ಈ ಮೂಲನಿವಾಸಿಗಳಿಗೆ ಸರಿಯಾದ ಪರಿಹಾರ ದೊರಕುತ್ತಿಲ್ಲ ಎನ್ನುವುದೆ ಇಲ್ಲಿ ದೊಡ್ಡ ಸಮಸ್ಯೆ ಆದಂತಿದೆ. ಅದಕ್ಕೆ, ಪರಿಹಾರ ನೀಡಬೇಕಾದ ಸರ್ಕಾರದ ಒಂದು ಅಂಗ ಕಾರಣವಾಗಿದೆಯೆ ಹೊರತು ಯೋಜನೆಯಾಗಲಿ, ಪ್ರಜಾಪ್ರಭುತ್ವವಾಗಲಿ ಅಲ್ಲ. ತನ್ನ ಪ್ರಜೆಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಇಲ್ಲಿ ಅನ್ಯಾಯವಾಗಿದೆ ಎಂದು ನಕ್ಸಲರಿಂದ ತಿಳಿದುಕೊಳ್ಳುವುದಕ್ಕಿಂತ, ನಕ್ಸಲರ ಬಲವಂತಕ್ಕೆ ನ್ಯಾಯ ಮಾಡಲು ಹೋಗುವುದಕ್ಕಿಂತ ಹೆಚ್ಚಿನ ಅವಮಾನ ಜನರಿಂದ ಆಯ್ಕೆಯಾದ ಜವಾಬ್ದಾರಿಯುತ ಸರ್ಕಾರಕ್ಕೆ ಇಲ್ಲ.
ಆದರೆ ಅದಕ್ಕಿಂತ ದೊಡ್ಡ ನಾಚಿಕೆಗೇಡಿನ, ಪ್ರಜಾಪ್ರಭುತ್ವ ವಿರೋಧಿ ಕೆಲಸವೇನೆಂದರೆ, ಸರ್ಕಾರ ಅನ್ಯಾಯವನ್ನು ಸರಿಪಡಿಸದೇ ಹೋಗಿಬಿಡುವುದು.
Jul 27, 2007
ಪ್ರಜಾಪ್ರಭುತ್ವದಲ್ಲಿ ನಕ್ಸಲರಿಗೆ ಸ್ಥಳವಿಲ್ಲ...
Jul 23, 2007
ನಮ್ಮನ್ನು ಒಕ್ಕಲೆಬ್ಬಿಸುತ್ತಿರುವ ನಮ್ಮದೇ ಸರ್ಕಾರಗಳು
(ವಿಕ್ರಾಂತ ಕರ್ನಾಟಕ - ಜುಲೈ ೨೭, ೨೦೦೭ರ ಸಂಚಿಕೆಯಲ್ಲಿನ ಬರಹ)
ಇತ್ತೀಚಿನ ದಿನಗಳಲ್ಲಿ ಆಫ್ರಿಕಾ ಎಂದ ತಕ್ಷಣ ಕಣ್ಣ ಮುಂದೆ ಬರುವುದು ಅಲ್ಲಿಯ ಏಡ್ಸ್ ರೋಗ ಮತ್ತು ಅಂತಃಕಲಹಗಳು; AK-47 ಹಿಡಿದು ಓಡಾಡುತ್ತಿರುವ ಕಪ್ಪು ಹುಡುಗರ ಚಿತ್ರ. ಅನ್ಯ ಬುಡಕಟ್ಟುಗಳಿಗೆ, ಅನ್ಯ ಮತಕ್ಕೆ ಸೇರಿದವರ ಸಂತತಿ ನಿರ್ನಾಮವೆ (Ethnic Cleansing) ಅಲ್ಲಿ ಬಂದೂಕು ಕೈಗೆತ್ತಿಕೊಂಡಿರುವವರ ಪರಮ ಗುರಿ. ಬೋಸ್ನಿಯಾ, ಚೆಚೆನ್ಯ, ಇಸ್ರೇಲ್-ಪ್ಯಾಲೆಸ್ಟೈನ್, ಇಲ್ಲೆಲ್ಲ ಆಗುತ್ತಿರುವುದೂ ಇದೆ. ಪ್ಯಾಲೆಸ್ಟೈನ್‍ನಲ್ಲಿ ಈ ನಡುವೆ ಮುಸ್ಲಿಮ್ ಗುಂಪುಗಳ ಮಧ್ಯೆಯೇ ಹೊಡೆದಾಟ ಆರಂಭವಾಗಿದೆ. ನಮ್ಮ ಪಕ್ಕದ ಶ್ರೀಲಂಕಾದಲ್ಲಿಯೂ ಇಂತಹದೇ ಅಂತಃಕಲಹ; ಭಾಷೆಯ ಹೆಸರಿನಲ್ಲಿ. ದೇಶ ಒಡೆದ ಸಮಯದಲ್ಲಿ ಅತ್ತಲಿನಿಂದ ಹಿಂದೂಗಳು, ಇತ್ತಲಿನಿಂದ ಮುಸ್ಲಿಮರು ಗುಳೆ ಹೋಗಿದ್ದು ನಮ್ಮದೇ ಇತಿಹಾಸವಾಗಿದ್ದರೆ, ಕಾಶ್ಮೀರದಲ್ಲಿ ಮುಸ್ಲಿಮ್ ಮತಾಂಧರ ಬೆದರಿಕೆ, ಕೊಲೆ, ಕಿರುಕುಳ ತಾಳಲಾರದೆ ಅಲ್ಲಿನ ಪಂಡಿತರು ಜಮ್ಮು ಮತ್ತು ದೆಹಲಿಗಳಿಗೆ ವಲಸೆ ಬಂದದ್ದು ನಮ್ಮದೇ ವರ್ತಮಾನ. ಅನೇಕ ದೇಶಗಳಲ್ಲಿ ಶತಶತಮಾನಗಳಿಂದ ಒಂದು ಕಡೆ ನೆಲಸಿದ್ದ ಜನಾಂಗಗಳು ಇಂದು ಬಂದೂಕಿನ ಗುಂಡುಗಳಿಂದ ನಾಶವಾಗುತ್ತಿವೆ, ಇಲ್ಲವೆ ತಮಗೆ ಗೊತ್ತಿಲ್ಲದ ಇನ್ನೊಂದು ಜಾಗಕ್ಕೆ ವಲಸೆ ಹೋಗುತ್ತಿವೆ. ವಲಸೆಗಾರರು ಹೊಸ ಸ್ಥಳದಲ್ಲಿ ಮತ್ತೆ ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕಾದದ್ದು ಶೂನ್ಯದಿಂದಲೆ; ಬಡತನದಿಂದಲೆ; ಅಂದಿನ ಅನ್ನವನ್ನು ಅಂದೇ ಹುಡುಕಿಕೊಳ್ಳಬೇಕಾದ ತುರ್ತಿನಿಂದಲೆ.
ಇದೇನೊ ತನ್ನ ಭಾಷೆ, ಮತ, ಜಾಗ, ಬಣ್ಣವೆ ಶ್ರೇಷ್ಠ ಎನ್ನುವ ಅಂಧರಿಂದ, ಕ್ಷುದ್ರಮನಸ್ಸಿನ ಮಾನಸಿಕ ರೋಗಿಗಳಿಂದ ಉದ್ಭವಿಸುವ ಸಮಸ್ಯೆ. ಆದರೆ ವಿಶ್ವದ ಅನೇಕ ಕಡೆ ಅಲ್ಲಿಯ ಸರ್ಕಾರಗಳೆ ಜನರನ್ನು ತಮ್ಮ ನೆಲದಿಂದ ಮೂಲೋತ್ಪಾಟನೆ ಮಾಡುತ್ತಿವೆಯಲ್ಲ, ಅದೂ ಕಾನೂನುಬದ್ಧವಾಗಿ. ಅದಕ್ಕೇನನ್ನುವುದು? ಮಿಲೂನ್ ಕೊಥಾರಿ ಎನ್ನುವ ಭಾರತೀಯರೊಬ್ಬರು ಕಳೆದ ಆರು ವರ್ಷಗಳಿಂದ ವಿಶ್ವಸಂಸ್ಥೆಯಲ್ಲಿ "ಸಾಕಾಗುವಷ್ಟು ವಸತಿ" ವಿಷಯದ ಮೇಲೆ "ವಿಶೇಷ ತನಿಖಾವರದಿಗಾರ" ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪ್ತಕಾರ, ಇಂದು ಪ್ರಪಂಚದಾದ್ಯಂತ ಸರ್ಕಾರಗಳೆ ಜನರನ್ನು ಬಲವಂತವಾಗಿ ಒಕ್ಕಲೆಬ್ಬಿಸುತ್ತಿವೆ. ಇದು ಕೇವಲ ಸರ್ವಾಧಿಕಾರಿಗಳ, ನಿರಂಕುಶಪ್ರಭುತ್ವಗಳ ದೇಶಗಳಲ್ಲಷ್ಟೆ ಅಲ್ಲ, ಜವಾಬ್ದಾರಿಯುತ ಪ್ರಜಾಪ್ರಭುತ್ವಗಳಲ್ಲಿಯೂ ಆಗುತ್ತಿದೆ. ಈ ಬಹುಪಾಲು ಒಕ್ಕಲೆಬ್ಬಿಸುವ ಕೆಲಸಗಳೆಲ್ಲ ಆಗುತ್ತಿರುವುದು ಅಭಿವೃದ್ಧಿಯ, ಜನೋಪಯೋಗಿ ಯೋಜನೆಗಳ ಹೆಸರಿನಲ್ಲಿ. ಇಂತಹ ಕಾನೂನುಬದ್ದ ಒಕ್ಕಲೆಬ್ಬಿಸುವಿಕೆಯಿಂದ ಮನೆಮಠಗಳನ್ನು ಕಳೆದುಕೊಳ್ಳುತಿರುವ ಜನರ ಪ್ರಮಾಣ ಯುದ್ಧ ಮತ್ತು ಅಂತಃಕಲಹಗಳಿಂದ ವಲಸೆ ಹೋಗುತ್ತಿರುವ ಜನರ ಪ್ರಮಾಣಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನದು, ಎನ್ನುತ್ತಾರೆ ಕೊಥಾರಿ!
ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವ ಈ ಬಲಾತ್ಕಾರದ ವಲಸೆ ಬೇರೆ ಬೇರೆ ದೇಶಗಳಲ್ಲಿ ಹೇಗೆ ಆಗುತ್ತಿದೆ ಎಂದು ಮಿಲೂನ್ ಕೊಥಾರಿ ಬಹಳ ಅಧ್ಯಯನ ಮಾಡಿದ್ದಾರೆ. ಜಿಂಬಾಬ್ವೆಯಲ್ಲಿನ ಆಪರೇಷನ್ ರೆಸ್ಟೋರ್ ಆರ್ಡರ್ ನಿಂದಾಗಿ 7 ಲಕ್ಷ ಜನ ತಮ್ಮ ಮನೆಗಳನ್ನು, ಜೀವನೋಪಾಯಗಳನ್ನು ಕಳೆದುಕೊಂಡರು. ಈಗಲೂ ಅವರಲ್ಲಿ ಬಹಳಷ್ಟು ಜನಗಳಿಗೆ ತಲೆಯ ಮೇಲೆ ಸೂರಿಲ್ಲ. ಕೇವಲ ೧೬ ಕಿ.ಮೀ.ಗಳ ಲ್ಯಾರಿ ಎಕ್ಸ್‍ಪ್ರೆಸ್ ವೇ ನಿರ್ಮಾಣಕ್ಕೆ ಪಾಕಿಸ್ತಾನದಲ್ಲಿ ಮನೆಮಠ ಕಳೆದುಕೊಂಡವರ ಸಂಖ್ಯೆ ಸುಮಾರು ಎರಡೂವರೆ ಲಕ್ಷ. ಮುಂಬಯಿಯಲ್ಲಿ ಸ್ಲಮ್ಮುಗಳಲ್ಲಿ ವಾಸಿಸುತ್ತಿದ್ದ 4 ಲಕ್ಷಕ್ಕೂ ಹೆಚ್ಚು ಜನರ 92000 ಮನೆಗಳನ್ನು ಕೆಡವಲಾಗಿದೆ. ಕಾಂಬೋಡಿಯಾದ ಹಳ್ಳಿಯೊಂದರಿಂದ ಎರಡು ಸಾವಿರ ಕುಟುಂಬಗಳನ್ನು ಸೈನ್ಯದ ನೆರವಿನಿಂದ ಅಲ್ಲಿನ ಸರ್ಕಾರ ಬಲಾತ್ಕಾರವಾಗಿ ಖಾಲಿ ಮಾಡಿಸಿದೆ. ನೈಜೀರಿಯಾದಲ್ಲಿನ ರಾಜಧಾನಿಯನ್ನು ಸುಂದರಗೊಳಿಸುವ ಯೋಜನೆಗೆ ಹಾಗು ಇತರ ಕಾರಣಗಳಿಗಾಗಿ ಅಲ್ಲಿನ ವಸತಿಹೀನರ ಸಂಖ್ಯೆ 8 ಲಕ್ಷಕ್ಕೆ ತಲುಪಿದೆ. ಮೆಕ್ಸಿಕೊದಲ್ಲಿಯ ಲಾ ಪರೋಟ ಡ್ಯಾಮ್‌ನಿಂದಾಗಿ ಸುಮಾರು ಇಪ್ಪತ್ತೈದು ಸಾವಿರ ಬಡ ರೈತರು ಗುಳೆ ಹೋಗಬೇಕಾಗಿದೆ.
ಹೀಗೆ ಬಲಾತ್ಕಾರವಾಗಿ ಒಕ್ಕಲೆಬ್ಬಿಸುವುದರಿಂದ ಎಂತೆಂತಹ ಪರಿಣಾಮಗಳಾಗುತ್ತವೆ ಎಂದು ಕೊಥಾರಿ ಹೀಗೆ ಬರೆಯುತ್ತಾರೆ: "ಈ ಒಕ್ಕಲೆಬ್ಬಿಸುವಿಕೆ ಎಲ್ಲೇ ಆಗಲಿ, ಅಲ್ಲೆಲ್ಲ ತಾರತಮ್ಯ ಮ?ಭಾವ ಬಹಳ ಮುಖ್ಯ ಪಾತ್ರ ವಹಿಸಿರುತ್ತದೆ. ಒಂದು ನಿರ್ದಿಷ್ಟ ಜನಾಂಗ/ಮತ/ಕೋಮಿಗೆ ಸೇರಿದ ಅಲ್ಪಸಂಖ್ಯಾತ ಜನ ಇಲ್ಲವೆ ಮೂಲನಿವಾಸಿಗಳಾದ ಜನರೆ ಇಂತಹ ಬಲಾತ್ಕಾರಕ್ಕೆ ಗುರಿಯಾಗುವ ಸಂಭವ ಹೆಚ್ಚು. ಎಲ್ಲರಿಗಿಂತ ಹೆಚ್ಚಿನ ಯಾತನೆ ಅನುಭವಿಸುವವರೆಂದರೆ ಹೆಂಗಸರೆ. ಮನೆ ಕಳೆದುಕೊಂಡದ್ದಷ್ಟೆ ಅಲ್ಲದೆ ತಮ್ಮ ಜೀವನೋಪಾಯಗಳನ್ನು, ಕೆಲಸಗಳನ್ನು, ಸಂಬಂಧಗಳನ್ನು, ತಮಗಿದ್ದ ಯಾವುದೊ ಒಂದು ತರಹದ ಬೆಂಬಲ ವ್ಯವಸ್ಥೆಗಳನ್ನು ಅವರು ಕಳೆದುಕೊಳ್ಳುತ್ತಾರೆ. ಆಪ್ತವಾದ ರಕ್ತಸಂಬಂಧಗಳು ಮುರಿದುಬೀಳುತ್ತವೆ. ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಉಲ್ಬಣಗೊಳ್ಳುವುದಲ್ಲದೆ ಸಾವುನೋವುಗಳ ಸಂಖ್ಯೆಯೂ ಹೆಚ್ಚಾಗುತ್ತದೆ."
ಈಗ ಕರ್ನಾಟಕದ ವಿಷಯಕ್ಕೆ ಬರೋಣ. ಇತ್ತೀಚೆಗೆ ತಾನೆ 12500 ಸಾವಿರ ಎಕರೆ (5000 ಹೆಕ್ಟೇರ್) ಪ್ರದೇಶದಲ್ಲಿನ ನಂದಗುಡಿ ವಿಶೇಷ ಆರ್ಥಿಕ ವಲಯಕ್ಕೆ ಕೇಂದ್ರದ ಒಪ್ಪಿಗೆಯೂ ಸಿಕ್ಕಿದೆ. ಇದರಲ್ಲಿ ಒಂದು ವಿಷಯದ ಬಗ್ಗೆ ಹೆಚ್ಚಿಗೆ ಅಷ್ಟೇನೂ ಮಾಹಿತಿ ಸಿಗಲಿಲ್ಲ. ೩೬ ಹಳ್ಳಿಗಳ ಈ ವಲಯದಲ್ಲಿ ಈಗಿರುವ ಊರು ಮತ್ತು ಮ?ಗಳು ಕೃಷಿಭೂಮಿಯ ಸಹಿತವಾಗಿ ವಿಶೇಷ ವಲಯಕ್ಕೆ ಸೇರುತ್ತದೊ, ಅಥವ ಕೇವಲ ಕೃಷಿಭೂಮಿಯನ್ನು ಮಾತ್ರ ಸ್ವಾಧೀನ ಪಡಿಸಿಕೊಂಡು ಹಳ್ಳಿಮನೆಗಳನ್ನು ಹಾಗೆಯೆ ಬಿಡಲಾಗುತ್ತದೊ, ಎಂದು. ಹೇಗಾದರೂ ಸರಿ, ಹತ್ತಾರು ಸಾವಿರ ಕುಟುಂಬಗಳು ಈ ಊರುಗಳಿಂದ 15 ಕಿ.ಮಿ. ದೂರದ ಹೊಸಕೊಟೆಗೊ, ಇಲ್ಲವೆ 40 ಕಿ.ಮಿ. ದೂರದ ಬೆಂಗಳೂರಿಗೊ, ಇಲ್ಲವೆ ಇನ್ನೆಲ್ಲಿಗೊ ವಲಸೆ ಹೋಗಬೇಕಾಗುತ್ತದೆ. ಜಮೀನು ಕಳೆದುಕೊಂಡವರಿಗೆ ಅಷ್ಟೊಇಷ್ಟೊ ದುಡ್ಡಾದರೂ ಸಿಗಬಹುದು. ಆದರೆ, ಈ ಊರುಗಳಲ್ಲಿಯ ಭೂಮಾಲೀಕರಲ್ಲದ, ಕೃಷಿಕಾರ್ಮಿಕರಾದ ಬಡವರ ಗತಿಯಂತೂ ಸ್ಯಾಡಿಸ್ಟ್‌ಗಳಿಗೇ ಪ್ರೀತಿ!
ಇದೇ ಸಮಯದಲ್ಲಿ, ರೈತರಲ್ಲದವರಿಗೆ, ವಿದ್ಯಾವಂತರಿಗೆ, ಉದ್ಯೋಗಗಳನ್ನು ಸೃಷ್ಟಿಸಲಿರುವ ಈ ವಿಶೇಷ ವಲಯಗಳನ್ನು ಬೇಡವೇ ಬೇಡ ಎಂದು ನಿರಾಕರಿಸಿ ಬಿಟ್ಟರೆ ಅದು ಹೊಟ್ಟೆಪಾಡಿಗಾಗಿ ಯಾವುದೊ ಒಂದು ಉದ್ಯೋಗಕ್ಕೆ ಕಾತರಿಸುತ್ತಿರುವ ಜನತೆಗೆ ಜೀವನ ನಿರಾಕರಿಸುವಂತಾಗುವ ಸ್ಯಾಡಿಸ್ಟಿಕ್ ಕೆಲಸವಾಗಿ ಬಿಡುತ್ತದೆ. ಹಾಗಾಗಿ ಉದ್ಯೋಗ ಸೃಷ್ಟಿಸುವ ವಿಶೇಷ ವಲಯಗಳು ಬೇಕು. ಅದರೆ ಎಲ್ಲಿ? ಜನನಿಬಿಢವಾಗಿರುವ, ಯೋಗ್ಯ ಕೃಷಿಭೂಮಿಯಾಗಿದ್ದು ಸ್ಥಳೀಯರಿಗೆ ಜೀವ? ಕೊಡುತ್ತಿರುವ ಜಾಗದಲ್ಲಿಯೊ, ಅಥವ ಕೃಷಿಗೆ ಯೋಗ್ಯವಲ್ಲದ, ಸರ್ಕಾರಿ ಭೂಮಿ ಹೆಚ್ಚಿರುವ, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಒಕ್ಕಲೆಬ್ಬಿಸುವ ಅವಶ್ಯಕತೆ?ಲ್ಲದ ಜಾಗದಲ್ಲಿಯೊ? ಹಣ ಮಾಡುವ ಸ್ವಾರ್ಥಕ್ಕೆ ಭ್ರಷ್ಟ ಅಧಿಕಾರಸ್ಥರು ಯೋಗ್ಯವಲ್ಲದ ಸ್ಥಳದಲ್ಲಿ ಮುಗ್ಧರ ಜೀವನದೊಂದಿಗೆ ಚೆಲ್ಲಾಟವಾಡಬಾರದು.
ಆದರೆ, ಹಾಗೆ ಆಗದಂತೆ ತಡೆಯುವವರು ಯಾರು?
Jul 8, 2007
ಸ್ಟೀರಿಯೋಟೈಪ್‌ಗಳನ್ನು ನಂಬಿದರೆ ಜೀವನಪ್ರೀತಿ ಸಾಧ್ಯವೆ?
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜುಲೈ 20, 2007 ರ ಸಂಚಿಕೆಯಲ್ಲಿನ ಲೇಖನ)
ಇದೇ ಜುಲೈ ನಾಲ್ಕರಂದು ಅಮೇರಿಕ ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಂಡಿತು. ಅದರ ಮಾರನೆಯ ದಿನ ಅಮೇರಿಕದ ನ್ಯೂಸ್ ವೆಬ್‌ಸೈಟುಗಳಲ್ಲಿ ಸಾಕಷ್ಟು ಜನಪ್ರಿಯಯವಾದ, ವಿಶ್ವಾಸಾರ್ಹವಾದ CNN.com ಗೆ ಹೋದಾಗ ಆಶ್ಚರ್ಯವಾಯಿತು. ಅಂದಿನ ಅವರ ಮೇಜರ್ ನ್ಯೂಸ್‌ನ ಹೆಡ್ಡಿಂಗ್ ಏನಿತ್ತೆಂದರೆ, ಸಮಾಜದಿಂದ ತಿರಸ್ಕೃತಗೊಂದ ವಿಧವೆಯರು ಸಾಯಲು ಈ ನಗರಕ್ಕೆ ಬರುತ್ತಾರೆ. ಅದರ ಕೆಳಗೆ ಉತ್ತರ ಭಾರತದ ವಯಸ್ಸಾದ ಹಿಂದೂ ವಿಧವೆಯೊಬ್ಬಳ ಚಿತ್ರ. ಜುಲೈ ೫ ರ ಹಗಲಿನ ಹಲವಾರು ಗಂಟೆಗಳ ಕಾಲ ಆ ವೆಬ್‌ಸೈಟಿನಲ್ಲಿ ಮುಖ್ಯಸುದ್ದಿಯಾಗಿದ್ದ ಈ ಲೇಖನದ ಒಳಗೆ ಹೋದರೆ, ಮುಖ್ಯಾಂಶಗಳು ಎಂದು ಈ ಕೆಳಗಿನ ಸಾಲುಗಳು ಇದ್ದವು.
- ಭಾರತದ ಹಿಂದೂ ವಿಧವೆಯರು ಪುನರ್ವಿವಾಹವಾಗುವಂತಿಲ್ಲ; ಅವರು ತಳೆಬೋಳಿಸಿಕೊಳ್ಳಬೇಕು, ಬಿಳಿಯ ಬಟ್ಟೆ ಉಡಬೇಕು
- ನಿನಗೆ ಬಹಳ ವಯಸ್ಸಾಗಿಬಿಟ್ಟಿದೆ, ಎಲ್ಲಿಯಾದರೂ ಹೋಗಿಬಿಡು ಎಂದು ತನ್ನ ಮಗ ಹೇಳಿದ ಎಂದು ವಿಧವೆಯೊಬ್ಬಳು ತಿಳಿಸಿದಳು
- ಸ್ತ್ರೀ ಗುಂಪೊಂದು ಬದಲಾವಣೆಗೆ ಪ್ರಯತ್ನಿಸುತ್ತಿದೆ, ಹಾಗೂ ವಿಧವೆಯರಿಗೆ ಆಶ್ರಯ ಕಲ್ಪಿಸುತ್ತಿದೆ
- ಭಾರತದಲ್ಲಿ 4 ಕೋಟಿ ವಿಧವೆಯರಿದ್ದಾರೆ ಎಂದು ಅಂದಾಜು
ಸುಮಾರು 55000 ಜನಸಂಖ್ಯೆಯ ಕೃಷ್ಣನ ಮಥುರೆಯ ಪಕ್ಕದ ಬೃಂದಾವನ ನಗರದಲ್ಲಿ ಸುಮಾರು 15000 ವಿಧವೆಯರು ಸಾವನ್ನು ಎದುರು ನೋಡುತ್ತ ಅಲ್ಲಿಯ ಬೀದಿಗಳಲ್ಲಿ ವಾಸಿಸುತ್ತಿದ್ದಾರೆ ಎನ್ನುತ್ತದೆ ಈ ಲೇಖನ. ಆ ಊರಿನಲ್ಲಿ ಇದು ನಿಜವೇನೊ. ಆದರೆ, ಲೇಖನ ಓದಿದ ಮೇಲೆ ಇಡೀ ಭಾರತದ ಹಿಂದೂ ಸಮಾಜದಲ್ಲಿ ವಯಸ್ಸಾದ ವಿಧವೆಯರನ್ನೆಲ್ಲ ಮನೆ ಬಿಟ್ಟು ಓಡಿಸಲಾಗುತ್ತದೆ, ಅವರೆಲ್ಲ ಹೀಗೆ ತಲೆಬೋಳಿಸಿಕೊಂಡು, ಬಿಳಿಯ ಸೀರೆ ಉಟ್ಟು ಬೀದಿಗಳಲ್ಲಿ ಬದುಕುತ್ತಾರೆ ಎನ್ನುವ ಕಲ್ಪನೆ ಬರುತ್ತದೆ. ಇದು ಹಾಸ್ಯಾಸ್ಪದವೊ, ಲೇಖಕನ ಅಜ್ಞಾನವೊ, ಇಲ್ಲವೆ ಇಂತಹ ಸ್ಟೀರಿಯೋಟೈಪ್‌ಗಳನ್ನು ಸುಮ್ಮನೆ ಒಪ್ಪಿಕೊಂಡು ಬಿಡುವ ಜನರ ಪರಿಮಿತಿಯೊ, ಅಥವ ಎಲ್ಲವೂ? ಮುಸ್ಲಿಮರೆಲ್ಲರ ಪ್ರಥಮ ನಿಯತ್ತು ಅವರ ಮತ ಎಂಬ ಸ್ಟೀರಿಯೋಟೈಪ್ ನಮ್ಮಲ್ಲಿನ ಕೂಪಮಂಡೂಕಗಳಿಗೆ ಹೇಗಿದೆಯೊ ಅದೇ ರೀತಿ ಭಾರತ ಎಂದರೆ ಇದು, ಅಲ್ಲಿನ ಜನರೆಲ್ಲ ಹೀಗೆ ಎನ್ನುವ ಸ್ಟೀರಿಯೋಟೈಪ್ ಪಾಶ್ಚಾತ್ಯ ದೇಶಗಳ ಕೂಪಮಂಡೂಕಗಳಲ್ಲಿದೆ.
ರಾಜ್‌ಕುಮಾರ್‌ರ ಶವವನ್ನು ಮಣ್ಣು ಮಾಡಿದ್ದನ್ನು ಇಲ್ಲಿ ಟಿವಿಯಲ್ಲಿ ನೋಡಿದ ಬೆಂಗಳೂರಿನ ಕನ್ನಡ ಹೆಣ್ಣೊಂದು, "ಅದು ಯಾಕೆ ರಾಜ್‌ಕುಮಾರ್‌ರನ್ನು ಹೂತಿದ್ದು?" ಎಂದು ಅದೇನೊ ವಿಚಿತ್ರ ಘಟನೆ ಎನ್ನುವಂತೆ ನನಗೆ ಕೇಳಿದ್ದಳು! ಹಿಂದೂಗಳಲ್ಲಿ ಹಿಂದೆ ಇದ್ದ ಸತಿ ಪದ್ದತಿಯನ್ನು ಈಗ ನಿವಾರಿಸಲಾಗಿದೆ ಎಂದು ಯಾರೊ ಒಬ್ಬ ಕನ್ನಡ ಫ಼ೋರಮ್‌ವೊಂದರಲ್ಲಿ ಬರೆದಿದ್ದ. ಈತನ ಮಾತಿನ ಅರ್ಥ ಇದನ್ನು ಇತ್ತೀಚೆಗೆ ನಿವಾರಿಸಿಕೊಳ್ಳುವ ತನಕ ಭಾರತದ ಎಲ್ಲಾ ಕಡೆಯ ಹಿಂದೂ ವಿಧವೆಯರು ಸತಿ ಹೋಗುತ್ತಿದ್ದರು, ಅಂತಹ ಅಮಾನವೀಯ ಕ್ರಿಯೆಯನ್ನು ಕೈಬಿಟ್ಟು ಹಿಂದೂ ಸಮಾಜ ಸುಧಾರಣೆಯಾಗಿದೆ ಎಂಬಂತಿತ್ತು. ಹೇಳಬೇಕೆಂದರೆ, ಭಾರತದೊಳಗೇ ಇರುವ ಕರ್ನಾಟಕದಲ್ಲಿ ಸತಿ ಹೋಗಿದ್ದನ್ನು, ಅದು ಜೀವನ ಪದ್ದತಿಯಾಗಿದ್ದನ್ನು ನಾವೆಲ್ಲೂ ಕೇಳಿಲ್ಲ. ಹಾಗಿರುವಾಗ ಹಿಂದೂಗಳೆಲ್ಲ ಸತಿ ಹೋಗುತ್ತಿದ್ದರು ಎನ್ನುವುದು ಹೇಗೆ ಸರಿಯಾಗುತ್ತದೆ? ಕರ್ನಾಟಕದ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಲಿಂಗಾಯತರನ್ನು ಸತ್ತಾಗ ಸುಡುವುದಿಲ್ಲ. ಎರಡನೆ ಸ್ಥಾನದ ಒಕ್ಕಲಿಗರಲ್ಲಿರುವುದೂ (ಮಲೆನಾಡ ಒಕ್ಕಲಿಗರನ್ನು ಹೊರತುಪಡಿಸಿ) ಮಣ್ಣು ಮಾಡುವ ಶವಸಂಸ್ಕಾರವೆ. ಮೂರನೆ ಸ್ಥಾನದಲ್ಲಿರುವ ಕುರುಬರಲ್ಲೂ, ಮುಸ್ಲಿಮರಲ್ಲೂ ಸುಡುವ ಪದ್ದತಿ ಇಲ್ಲ. ಕರಾವಳಿ ಮತ್ತು ಮಲೆನಾಡ ದಲಿತರನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ಕಡೆ ಅವರನ್ನೂ ಹೂಳುವುದೆ ಪದ್ದತಿ. ಹಾಗೆ ನೋಡಿದರೆ, ಕರ್ನಾಟಕದ ಜನಸಂಖ್ಯೆಯ ಶೇ. 70 ಕ್ಕೂ ಹೆಚ್ಚಿನವರ ಶವಸಂಸ್ಕಾರ ಎಂದರೆ, ಮಣ್ಣು ಮಾಡುವುದು. ಹಾಗಿರುವಾಗ ಇವರಲ್ಲೆಲ್ಲ ಸತಿ ಹೇಗೆ ಸಾಧ್ಯ? ಸಿನೆಮಾಗಳಲ್ಲಿ ಸ್ಟೀರಿಯೋಟೈಪಿಕ್ ಆಗಿ ತೋರಿಸುವ ಶವದಹನದ ಚಿತ್ರಗಳನ್ನು ನೋಡಿ ಬೆಳೆದ, ಒಂದು ಪರಿಧಿಯ ಆಚೆ ಅನುಭವವಿಲ್ಲದ ಜನಕ್ಕೆ ಹೂಳುವುದು ಯಾರದೋ ಅಪರೂಪದ ವಿಚಿತ್ರ ಸಂಪ್ರದಾಯದಂತೆ ಕಾಣಿಸುತ್ತದೆ.
ಯಾರೊ ಒಬ್ಬ ಏನೋ ಮಾಡಿದ್ದಕ್ಕೆ ಅವನ ತರಹ ಇರುವ ಎಲ್ಲರೂ ಹಾಗೆ ಎಂದು ಜನ ಅಂದುಕೊಂಡು ಬಿಡುತ್ತಾರಲ್ಲ, ಅದಕ್ಕಿಂತ ದಡ್ಡತನ ಬೇರೊಂದಿಲ್ಲ. ಐಸೊಲೇಟೆಡ್ ಕೇಸುಗಳನ್ನು ಸಾರ್ವತ್ರಿಕ ಮಾಡಿಬಿಡುವ ಬರಹಗಳು, ವಾದಗಳು ಬಹಳ ಅಪಾಯಕಾರಿ. ಮೈಸೂರಿನ ಒಬ್ಬ ಅಯ್ಯಂಗಾರಿ ಬ್ರಾಹ್ಮಣ ಯುವಕ ದೆಹಲಿಯ ಜವಹರ್‌ಲಾಲ್ ನೆಹರೂ ವಿವಿಯಲ್ಲಿ ಓದಿ, ಮಲೆನಾಡಿನಲ್ಲಿ ನಕ್ಸಲೀಯನಾಗಿ ಅಲೆಯುತ್ತ, ಕೊನೆಗೆ ಪೋಲಿಸರಿಂದ ಹತವಾಗಿ ಬಿದ್ದ ತಕ್ಷಣ ಅಯ್ಯಂಗಾರಿಗಳನ್ನು, ಬ್ರಾಹ್ಮಣರನ್ನು, ಮೈಸೂರಿನವರನ್ನು, ಜೆ.ಎನ್.ಯು.ನಲ್ಲಿ ಓದಿದದವರನ್ನೆಲ್ಲ ನಕ್ಸಲೀಯರು ಎನ್ನಲು ಸಾಧ್ಯವೆ? ಹೊಟ್ಟೆ ತುಂಬಿದ ಮುಸ್ಲಿಮನೊಬ್ಬ ದಾವಣಗೆರೆಯ ಬಿ.ಡಿ.ಟಿ.ಯಲ್ಲಿ ಇಂಜಿನಿಯರಿಂಗ್ ಮಾಡಿ, ಅಲ್ಲಿಂದ ಇಂಗ್ಲೆಂಡಿಗೆ ಹೋಗಿ ಮತೀಯ ಅಫೀಮು ಕುಡಿದು ಮತಾಂಧನಾದ ಮಾತ್ರಕ್ಕೆ ಭಾರತದ ಮುಸ್ಲಿಮರೆಲ್ಲ, ಅಥವ ಬಿ.ಡಿ.ಟಿ.ಯಲ್ಲಿ ಓದಿದವರೆಲ್ಲ ಕೋಮುವಾದಿಗಳಾಗಿ ಬಿಟ್ಟರೆ? ಮಲೆನಾಡಿನ ಒಕ್ಕಲಿಗ ಕುಟುಂಬದಲ್ಲಿ ಹುಟ್ಟಿದ ಕುವೆಂಪು ಮೂಢನಂಬಿಕೆಗಳನ್ನು ಬಿಡಬೇಕು, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು, ಜಾತೀಯತೆ ತೊರೆಯಬೇಕು ಎಂದು ಹೇಳಿ, ಅವರ ಒಬ್ಬ ಮಗ ಅಂತರ್ಜಾತೀಯ ವಿವಾಹವಾಗಿ, ಇನ್ನೊಬ್ಬ ಮಗ ಅಂತರ್ಮತೀಯ ವಿವಾಹವಾದ ಮಾತ್ರಕ್ಕೆ ಮಲೆನಾಡ ಒಕ್ಕಲಿಗರೆಲ್ಲ, ಕುವೆಂಪು ಓದಿದ ಕನ್ನಡಿಗರೆಲ್ಲ ನಿರಂಕುಶಮತಿಗಳಾಗಿಬಿಟ್ಟರಾ? ಪ್ರಗತಿಶೀಲರಾಗಿಬಿಟ್ಟರಾ? ಬಂಜಗೆರೆಯವರ ಪುಸ್ತಕ ನಿಷೇಧಿಸಬೇಕು ಎಂದು ಕೆಲವು ಲಿಂಗಾಯತ ಫ಼್ಯಾಸಿಸ್ಟ್‌ಗಳು ಹೇಳಿದ ಮಾತ್ರಕ್ಕೆ ಎಲ್ಲಾ ಲಿಂಗಾಯತರೂ ಹಾಗೆಯೇ ಏನು? ಹಾಗಿದ್ದರೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ, ಫ಼್ಯೂಡಲ್ ವ್ಯವಸ್ಥೆಯನ್ನು, ಜಾತಿ ಅಹಂಕಾರವನ್ನು ವಿರೋಧಿಸುವ ಅನೇಕ ಲಿಂಗಾಯತ ಪತ್ರಕರ್ತರು, ಬರಹಗಾರರು ಬಂಜಗೆರೆಯವರಿಗೆ ನೈತಿಕ ಬೆಂಬಲ ನೀಡುತ್ತಿರುವುದು ಸುಳ್ಳೆ?
ಒಂದು ಬಣ್ಣದವನೊ, ಬಣದವನೊ, ಜಾತಿಯವನೊ, ಊರಿನವನೊ, ನಾಡಿನವನೊ ಏನೊ ಒಂದು ಮಾಡಿದಾಕ್ಷಣ ಅವನಂತಿರುವವರನ್ನೆಲ್ಲ, ಅವನ ತರಹದ ಹಿನ್ನೆಲೆ ಇರುವವರನ್ನೆಲ್ಲ ಹಾಗೆಯೆ ಎಂದು ಭಾವಿಸುವುದು, ಸಂಶಯ ಪಿಶಾಚಿಗಳಾಗಿ ಬಿಡುವುದು, ಪೂರ್ವಾಗ್ರಹಕ್ಕೊಳಗಾಗುವುದು ಯಾವ ಬುದ್ಧಿವಂತಿಕೆ? ಯಾರದೊ ಕೌಟುಂಬಿಕ ಜೀವನ ಚೆನ್ನಾಗಿಲ್ಲ ಎನ್ನುವುದೆ ಮದುವೆಯಾಗದೆ ಹೋಗುವುದಕ್ಕೆ ಕಾರಣವಾಗುವುದು ಸರಿಯೆ? ಯಾರೊ ಎಲ್ಲಿಯೋ ತಮ್ಮ ವಯಸ್ಸಾದ ವಿಧವೆ ತಾಯಿಯನ್ನು ಬೃಂದಾವನದ ಬೀದಿಯಲ್ಲಿ ತೊರೆದು ಹೋದ ಮಾತ್ರಕ್ಕೆ ಎಲ್ಲಾ ಮಕ್ಕಳೂ ಹಾಗೆ ಮಾಡುತ್ತಾರೆ ಎಂದುಕೊಂಡುಬಿಟ್ಟರೆ ನಮ್ಮ ತೊದಲು ಮಾತಿನ ಮಗುವನ್ನು ಪ್ರೀತಿಸಲು ಸಾಧ್ಯವೆ? ವಿಶ್ವಾಸವಿಲ್ಲದ, ಆಶಾವಾದವಿಲ್ಲದ, ಪ್ರೀತಿಯಿಲ್ಲದ ನಾಳೆಯನ್ನು ಎದುರು ನೋಡುವುದಾದರೂ ಹೇಗೆ?
Jul 1, 2007
ತಿಮ್ಮಕ್ಕನಿಂದ ಕಲಿತಿದ್ದೇನು?
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜುಲೈ 13, 2007 ರ ಸಂಚಿಕೆಯಲ್ಲಿನ ಲೇಖನ)
ಬಿಕ್ಕಲು ಚಿಕ್ಕಣ್ಣ ಮತ್ತು ತಿಮ್ಮಕ್ಕ ಎಂಬ ದಂಪತಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾಗಡಿ ತಾಲ್ಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ ನೆಟ್ಟು ಬೆಳೆಸಿದ ಸಾಲು ಮರಗಳ ಬಗ್ಗೆ ಸುಮಾರು ಹದಿನೈದು-ಇಪ್ಪತ್ತು ವರ್ಷದ ಹಿಂದೆ ಪತ್ರಿಕೆಗಳ ಮೂಲಕ ಹೊರಪ್ರಪಂಚಕ್ಕೆ ತಿಳಿಯಲಾರಂಭಿಸಿದ್ದು. ಸಾರ್ವಜನಿಕ ಜೀವನದಲ್ಲಿ ನಿಸ್ವಾರ್ಥ ಎನ್ನುವುದೇ ಹುಸಿ ಆಗುತ್ತಿರುವ ಸದ್ಯದ ಭಾರತದಲ್ಲಿ ತಿಮ್ಮಕ್ಕ ಕಾಲಕ್ರಮೇಣ ನಿಸ್ವಾರ್ಥ ಸೇವೆಯ ಚಿಹ್ನೆಯಾಗಿ, ಸ್ಫೂರ್ತಿಯಾಗಿ, ಹೆಮ್ಮೆಯಾಗಿ ಬದಲಾಗುತ್ತ ಹೋದರು. ತಿಮ್ಮಕ್ಕನನ್ನು ನೆನೆಸಿಕೊಂಡಾಗ, ಸಾಲುಮರಗಳು ಮಾತುಕತೆಗೆ ನುಸುಳಿದಾಗ ಜನ ಇದ್ದಕ್ಕಿದ್ದಂತೆ ಒಳ್ಳೆಯವರಾಗಿ ಬಿಡುತ್ತಿದ್ದರು!!
ನನ್ನದೇ ಅವಿಭಜಿತ ಜಿಲ್ಲೆಗೆ ಸೇರಿದ್ದ ತಿಮ್ಮಕ್ಕನ ಬಗ್ಗೆ ನಾಲ್ಕು ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಬಂದ ಸುದ್ದಿಯನ್ನು ಇಂಟರ್‌ನೆಟ್‌ನಲ್ಲಿ ಓದಿದ್ದೆ. ಅದು ಯಾವ ಕಾರಣಕ್ಕೂ ಸಂತಸ ಪಡಬಹುದಾದ, ಸಂಭ್ರಮಿಸಬಹುದಾದ ಸುದ್ದಿ ಆಗಿರಲಿಲ್ಲ. ಕೆಳಜಾತಿಗೆ ಸೇರಿದ್ದ ತಿಮ್ಮಕ್ಕ ಹುಲಿಕಲ್‌ನ ಬೇರೆ ಜಾತಿಯವರಿಗೆ ಸೇರಿದ್ದ ದೇವಸ್ಥಾನವನ್ನು ಪ್ರವೇಶಿಸಿಬಿಟ್ಟಿದ್ದಾಳೆ ಎಂದು ಆ ಊರಿನ ಮೇಲ್ಜಾತಿಯವರು ತಿಮ್ಮಕ್ಕನಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎನ್ನುವುದೆ ಆ ಸುದ್ದಿ. ಹಳ್ಳಿಯ ಇತರೆ ಜನರ ಅವಕೃಪೆಗೆ ಪಾತ್ರರಾದರೆ ಅಲ್ಲಿಯ ಜೀವನ ಎಷ್ಟು ಅಸಹನೀಯವಾಗಿರುತ್ತದೆ ಎನ್ನುವುದನ್ನು ಹಳ್ಳಿ ಜೀವನ ಕಂಡವರಿಗೆ ಹೇಳಬೇಕಾಗಿಯೇ ಇಲ್ಲ. ನಾನಂತೂ ಅದನ್ನು ಓದಿದ ಹಲವಾರು ದಿನಗಳ ಕಾಲ ಡಿಸ್ಟರ್ಬ್ ಆಗಿಬಿಟ್ಟಿದ್ದೆ.
ಇದಾದ ಎರಡು-ಮೂರು ತಿಂಗಳಿಗೆ ಬೆಂಗಳೂರಿಗೆ ನನ್ನ ಮದುವೆಗಾಗಿ ಬರಬೇಕಾಯಿತು. ಮದುವೆಯಾದ ಎರಡನೇ ದಿನಕ್ಕೆ ನಾನು ಕೈಗೊಂಡ ಮೊದಲ ತೀರ್ಥಯಾತ್ರೆ ಸಾಲುಮರದ ತಿಮ್ಮಕ್ಕನ ಹುಲಿಕಲ್‌ಗೆ. ತಿಮ್ಮಕ್ಕನೊಂದಿಗೆ ಕಳೆದ ಆ ಒಂದೆರೆಡು ಗಂಟೆಗಳ ಸಮಯ, ಈಗಲೂ ಹಚ್ಚಹಸಿರಾಗಿದೆ ಎನ್ನಬಹುದಾದ ನನ್ನ ಜೀವದ ಬೆರಳೆಣಿಕೆಯ ಘಟನೆಗಳಲ್ಲಿ ಒಂದು. ಆ ಸ್ವಾಭಿಮಾನಿ ತಿಮ್ಮಕ್ಕಳನ್ನು ಭೇಟಿಯಾದ ಮೇಲೆ ಆ ಅಜ್ಜಿಯೆಡೆಗಿನ ಗೌರವದ ಭಾವನೆ ಪ್ರೀತಿಗೂ, ಹೆಮ್ಮೆಗೂ ತಿರುಗಿತ್ತು.
ಅಂದು ತಿಮ್ಮಕ್ಕಳನ್ನು ನಾವು ಭೇಟಿಯಾದಾಗ ಅಜ್ಜಿ ಇನ್ನೂ ಹಳೆಯ ಮನೆಯಲ್ಲಿಯೆ ಇದ್ದಳು. ಆಕೆಗೆಂದು ಸರ್ಕಾರ ಕಟ್ಟಿಸುತ್ತಿದ್ದ ಮನೆಯ ಕಾಮಗಾರಿ ಇನ್ನೂ ನಡೆಯುತ್ತಿದ್ದು, ಕೆಲವು ಸಣ್ಣಪುಟ್ಟ ಕೆಲಸಗಳಷ್ಟೆ ಬಾಕಿ ಇದ್ದವು. ಹೆಚ್ಚೆಂದರೆ ಒಂದು ಇಲ್ಲವೆ ಎರಡು ತಿಂಗಳಿನ ಕೆಲಸ. ಆದರೆ ಬಹುಶಃ ವರ್ಷದ ನಂತರ ಇರಬೇಕು, ತಿಮ್ಮಕ್ಕ ಹೊಸ ಮನೆಗೆ ಹೋದ ಸುದ್ದಿ ಪತ್ರಿಕೆಗಳಲ್ಲಿ ಬಂತು. ಅಜ್ಜಿ ಅಂದು ಮನೆಯ ಪಕ್ಕವೆ ಪಾಯ ಹಾಕಿದ್ದ ಇನ್ನೊಂದು ಕಟ್ಟಡದ ಪಾಯ ತೋರಿಸಿ, ಇದು ಹೆರಿಗೆ ಆಸ್ಪತ್ರೆಗಾಗಿ ಎಂದಿದ್ದಳು. ಆದರೆ ಇವತ್ತದು ಹೆರಿಗೆ ಆಸ್ಪತ್ರೆ ಆಗಿಲ್ಲ; ಬದಲಿಗೆ ಕ್ವಾಟ್ರಸ್ ಆಗಿದೆಯಂತೆ!
ತಿಮ್ಮಕ್ಕನಿಗೆ ಎದುರಾದ, ಎದುರಾಗುತ್ತಿರುವ ತೊಂದರೆಗಳನ್ನು, ಆಕೆಯ ಹೆಸರಿನಲ್ಲಿಯೆ ಆಗಬೇಕಾಗಿದ್ದ ಹೆರಿಗೆ ಆಸ್ಪತ್ರೆ ಮತ್ತೇನೋ ಆಗಿರುವುದನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮಗೆ ನಮ್ಮ ಹಳ್ಳಿಗಳ ಸಾಮಾಜಿಕ, ರಾಜಕೀಯ ಪರಿಸ್ಥಿತಿಗಳ ಸ್ಪಷ್ಟ ಅರಿವಿರಬೇಕು. ತಿಮ್ಮಕ್ಕನಿಗೆ ಎಲ್ಲಾ ಕಡೆ ಹೆಸರಿರಬಹುದು. ಆದರೆ ತಿಮ್ಮಕ್ಕ ಶ್ರೀಮಂತಳಲ್ಲ. ಈ ದರಿದ್ರ ಜಾತಿವ್ಯವಸ್ಥೆಯಲ್ಲಿ ಆಕೆ ಮೇಲ್ಜಾತಿಯವಳೂ ಅಲ್ಲ. ಆಕೆಗೆ ಯಾವ ರಾಜಕೀಯ ಬಲವೂ ಇಲ್ಲ. ಇಲ್ಲಿಯ ತನಕ ತಾನಿರುವ ಪರಿಸರದಲ್ಲಿ ತಿಮ್ಮಕ್ಕನಿಗೆ ಗೌರವನೀಯ ಬದುಕು ಸಾಧ್ಯವಾಗಿದ್ದರೆ ಅದು ದೇಶಕ್ಕೆಲ್ಲ ತಿಮ್ಮಕ್ಕ ಗೊತ್ತಿರುವುದರಿಂದ. ಮಾಗಡಿಯ ಹಿಂದಿನ ಶಾಸಕ ರೇವಣ್ಣನವರಾಗಲಿ, ಈಗಿನ ಬಾಲಕೃಷ್ಣರಿಗಾಗಲಿ ತಿಮ್ಮಕ್ಕನಿಗೆ ನೈತಿಕ ಬೆಂಬಲ ಕೊಡುವುದು ನಿಜಕ್ಕೂ ಕಷ್ಟ. ನನ್ನ ತಿಳುವಳಿಕೆಯ ಪ್ರಕಾರ ಹುಲಿಕಲ್‌ನ ಹೆರಿಗೆ ಆಸ್ಪತ್ರೆಗೆ ತಿಮ್ಮಕ್ಕನ ಹೆಸರಿಡುವುದಾಗಲಿ, ತಿಮ್ಮಕ್ಕ ಹೇಳಿದಳೆಂದು ಅಲ್ಲಿ ಆಸ್ಪತ್ರೆ ಮಾಡುವುದಾಗಲಿ, ಇಲ್ಲವೆ ಅದಕ್ಕೆ ತಿಮ್ಮಕ್ಕನ ಹೆಸರಿಡುವುದಾಗಲಿ ಅಲ್ಲಿನ ಲೋಕಲ್ ಎಮ್.ಎಲ್.ಎ.ಗೆ ಓಟಿನ ಲೆಕ್ಕಾಚಾರದ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಾಗಿಯೆ ಅದು ಇನ್ನೂ ಮುಂದಕ್ಕೆ ಹೋಗುತ್ತಿರುವುದು. ಜಾತಿಗಳಲ್ಲಿನ ಮತ್ತು ವ್ಯಕ್ತಿಗಳಲ್ಲಿನ ಒಳಗೊಳಗಿನ ಅಹಂ ಮತ್ತು ಹೊಟ್ಟೆಕಿಚ್ಚುಗಳೆ ಇವಕ್ಕೆ ಕಾರಣ ಎಂದು ನನ್ನ ಅಂದಾಜು.
ತಿಮ್ಮಕ್ಕ ಬೆಂಗಳೂರಿನ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ, ಅದು ಪತ್ರಿಕೆಗಳಲ್ಲೆಲ್ಲ ಬಂದ ಮೇಲೆ ಕೆಲವು ಸೆಲೆಬ್ರೆಟಿಗಳೂ, ವಿಧಿಯಿಲ್ಲದೆ ಒಬ್ಬ ಮಂತ್ರಿಯೂ ಹೋಗಿ ಫೋಟೊ ತೆಗೆಸಿಕೊಂಡು ಬಂದಿದ್ದಾರೆ. ಆದರೆ ಇವರಿಗೆಲ್ಲ ತಿಮ್ಮಕ್ಕನ ಸ್ಫೂರ್ತಿ ಅರ್ಥವಾಗಿದೆಯೆ ಎನ್ನುವುದು ಸಂದೇಹ. ಇವತ್ತು ತಿಮ್ಮಕ್ಕನ ಊರು ಹೊಸದಾಗಿ ಸೃಷ್ಟಿಯಾಗುತ್ತಿರುವ ರಾಮನಗರ ಜಿಲ್ಲೆಗೆ ಒಳಪಡುತ್ತಿದೆ. ನಿಜವಾಗಲು ಸರ್ಕಾರಕ್ಕೆ ತಿಮ್ಮಕ್ಕ ಎಂಬ ವಿದ್ಯಮಾನ (phenomenon), ಸ್ಫೂರ್ತಿ ಅರ್ಥವಾಗಿದೆ ಎಂದಾದರೆ ತಿಮ್ಮಕ್ಕ ನೆಟ್ಟಂತಹ ಸಾಲುಮರಗಳನ್ನು ಇಡೀ ರಾಮನಗರ ಜಿಲ್ಲೆಯ ಪ್ರತಿಯೊಂದು ಗ್ರಾಮಪಂಚಾಯಿತಿಯೂ ಕೈಗೆತ್ತಿಕೊಳ್ಳಬೇಕು ಎಂಬ ಸಣ್ಣ ಸರ್ಕಾರಿ ಆದೇಶ ಹೊರಡಿಸಿದರೆ ಸಾಕು. ಐದಾರು ವರ್ಷಗಳಲ್ಲಿ ಆ ಜಿಲ್ಲೆಯ ಪ್ರತಿ ಊರಿನಲ್ಲಿ ಸಾಲುಮರಗಳು ನಲಿದಾಡುತ್ತಿರುತ್ತವೆ. ತಿಮ್ಮಕನ ಸಾಲುಮರದ ಕಾನ್ಸೆಪ್ಟ್ ಅನ್ನು ತಮ್ಮ ಅಜೆಂಡಾ ಆಗಿ ಗ್ರಾಮಪಂಚಾಯಿತಿಗಳು ಕೈಗೆತ್ತಿಕೊಳ್ಳುವುದೆ ಇವತ್ತು ನಾವು ತಿಮ್ಮಕ್ಕನಿಗೆ ತೊರಿಸಬಹುದಾದ ನಿಜವಾದ ಕೃತಜ್ಞತೆ. ತಿಮ್ಮಕ್ಕನ ಸ್ಫೂರ್ತಿಯನ್ನು ಮುಂದಕ್ಕೊಯ್ಯಬೇಕಾದದ್ದು ಸರ್ಕಾರದ, ಸಮಾಜದ ಕರ್ತವ್ಯ ಕೂಡ.
ತಿಮ್ಮಕ್ಕನಿಂದ ಹೇಗೆ ಸ್ಫೂರ್ತಿ ಪಡೆಯಬಹುದು ಎನ್ನುವುದು ನಮ್ಮ ರಾಜಕಾರಣಿಗಳಿಗೆ, ಅಧಿಕಾರಣಿಗಳಿಗೆ, ಗ್ರಾಮ ಪಂಚಾಯಿತಿಗಳಿಗೆ ಹೊಳೆಯದೆ ಇರುವಾಗ, ತಿಮ್ಮಕ್ಕ ಸಪ್ತಸಾಗರದಾಚೆಯ ಸಂಸ್ಥೆಯೊಂದಕ್ಕೆ ಒಂಬತ್ತು ವರ್ಷದ ಹಿಂದೆಯೆ ಸ್ಫೂರ್ತಿಯಾಗಿದ್ದಾಳೆ. "Thimmakka’s Resources for Environmental Education (TREE)" (ತಿಮ್ಮಕ್ಕ.ಆರ್ಗ್) ಎಂಬ ಈ ಲಾಭರಹಿತ ಸಂಸ್ಥೆಯನ್ನು ಅಮೇರಿಕದಲ್ಲಿ ರಿತು ಪ್ರೆಮಲಾನಿ ಎನ್ನುವವರು 1998 ರಲ್ಲಿಯೆ ಸ್ಥಾಪಿಸಿದ್ದಾರೆ. ಪರಿಸರಕ್ಕೆ ಸಂಬಂದಪಟ್ಟ ಸಮಸ್ಯೆಗಳಿಗೆ ಆರ್ಥಿಕವಾಗಿ ಸಾಧ್ಯವಾದ, ಕಾರ್ಯರೂಪಕ್ಕೆ ತರಬಹುದಾದ ಪರಿಹಾರಗಳ ಹುಡುಕಾಟದಲ್ಲಿ ತನ್ನನ್ನು ಇದು ತೊಡಗಿಸಿಕೊಂಡಿದೆ.