(ವಿಕ್ರಾಂತ ಕರ್ನಾಟಕ - ಡಿಸೆಂಬರ್ 07, 2007 ರ ಸಂಚಿಕೆಯಲ್ಲಿನ ಬರಹ)
ಇದೇ ನವೆಂಬರ್ 24-25 ರಂದು ಕರ್ನಾಟಕದ ದೂರದರ್ಶನಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಲೋಕಾಯುಕ್ತರು ಮಾಡಿದೊಂದು ದಾಳಿಯದೆ ಸುದ್ದಿ. "ಶ್ರೀನಿವಾಸ ರೆಡ್ಡಿ ಎಂಬ ಸರ್ಕಾರಿ ನೌಕರ ತನ್ನ ಆದಾಯಕ್ಕೂ ಮೀರಿದ ಆಸ್ತಿಯನ್ನು ಹೊಂದಿದ್ದಾರೆ," ಎಂದು ಲೋಕಾಯುಕ್ತರು ಬಹಿರಂಗ ಪಡಿಸಿದ ಆ ನೌಕರನ ಮತ್ತವರ ಹೆಂಡತಿಮಕ್ಕಳ ಆಸ್ತಿ ವಿವರ ಹೀಗಿದೆ:
. ಮನೆಯಲ್ಲೇ ಪತ್ತೆಯಾದ ನಗದು ಹಣ ರೂ 33.7 ಲಕ್ಷ
. ಬ್ಯಾಂಕ್ ಖಾತೆಗಳಲ್ಲಿರುವ ಹಣ 1 ಕೋಟಿ ಒಂಬತ್ತು ಲಕ್ಷ
. ಷೇರುಗಳ ಮೇಲೆ ಹೂಡಿಕೆ ರೂ 15 ಲಕ್ಷ
. ಕೊಟ್ಟಿರುವ ಮುಂಗಡ ರೂ 1.5 ಕೋಟಿ
. ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಮೂರು 40x60 ನಿವೇಶನಗಳು
. ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ 40x60 ಸೈಟುಗಳಲ್ಲಿರುವ 3 ಮನೆಗಳು
. ಆನೇಕಲ್ ತಾಲ್ಲೂಕಿನಲ್ಲಿ 14 ಎಕರೆ 33 ಗುಂಟೆ ಜಮೀನು
. ಹೆಗ್ಗಡದೇವನ ಕೋಟೆ ಯಲ್ಲಿ - 12 ಎಕರೆ ಕೃಷಿ ಜಮೀನು
. ಚಿನ್ನ 1.5 ಕೆ.ಜಿ.
. ಬೆಳ್ಳಿ 10 ಕೆ.ಜಿ.
. ಕಾರುಗಳು - 2
. ಇರುವ ಸಾಲ - 75 ಲಕ್ಷ
---
ಪ್ರಸಿದ್ಧ ನಾರಾಯಣ ಹೃದಯಾಲಯ, ಇತ್ತೀಚೆಗೆ ತಾನೆ ಲಕ್ಷ್ಮಿ ಎಂಬ ನಾಲ್ಕು ಕೈಗಳ ಪುಟ್ಟ ಮಗುವಿಗೆ ಸರ್ಜರಿ ಮಾಡಿ ಪ್ರಸಿದ್ಧಿಗೆ ಬಂದ ಸ್ಪರ್ಶ ಆಸ್ಪತ್ರೆ, ಎಂ.ಟಿ.ಆರ್.ರ ಉತ್ಪಾದನಾ ಘಟಕ, ರೇವಾ ಎಲೆಕ್ಟ್ರಿಕ್ ಕಾರಿನ ಫ್ಯಾಕ್ಟರಿ, ಮುಂತಾದ ಹತ್ತಾರು ವಿಶೇಷಗಳನ್ನು ತನ್ನ ನೂರಿನ್ನೂರು ಎಕರೆ ವಿಸ್ತೀರ್ಣದಲ್ಲಿ ಹಿಡಿದಿಟ್ಟಿಕೊಂಡಿರುವ ಊರು ನನ್ನೂರು, ಬೊಮ್ಮಸಂದ್ರ. ವಿಧಾನಸೌಧದಿಂದ ಕೇವಲ 22 ಕಿ.ಮೀ. ದೂರದಲ್ಲಿದೆ. ಇಪ್ಪತ್ತು ವರ್ಷಗಳ ಹಿಂದೆ ಇದೇ ಊರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾನು ಓದುತ್ತಿದ್ದಾಗ ನಮಗೆ ಮುಖ್ಯೋಪಾಧ್ಯಾಯರಾಗಿದ್ದವರು ರಾಮಚಂದ್ರಪ್ಪ ಎನ್ನುವವರು. ನಮ್ಮೂರಿಗಿಂತ ನಾಲ್ಕೈದು ಕಿ.ಮೀ. ದೂರದ ಊರು ಅವರದು. ಅಲ್ಲಿಂದ ಸೈಕಲ್‌ನಲ್ಲಿಯೇ ಬರುತ್ತಿದ್ದರು. ಸಜ್ಜನರು; ಪ್ರಾಮಾಣಿಕರು. ಮಕ್ಕಳಲ್ಲಿ ಆದರ್ಶದ ಗುಣಗಳನ್ನು ತುಂಬುತ್ತಿದ್ದ, ಪ್ರೀತಿಯಿಂದ, ಗೌರವದಿಂದ ಮಾತನಾಡಿಸುತ್ತಿದ್ದ ಅವರು ನನ್ನ ಮೆಚ್ಚಿನ ಗುರುಗಳೂ ಹೌದು. ಆಗಾಗ ಅವರು "ಫಾರಿನ್"ನಲ್ಲಿದ್ದ ತಮ್ಮ ಮತ್ತೊಬ್ಬ ಶಿಷ್ಯನ ಬಗ್ಗೆ, ಆತನ ಸರಳತೆ ಮತ್ತು ವಿನಯದ ಬಗ್ಗೆ ನಮಗೆ ಉದಾಹರಣೆ ಕೊಡುತ್ತ ಮೌಲ್ಯಗಳ ಕುರಿತು ಹೇಳುತ್ತಿದ್ದರು. ಅವರು ಹೇಳುತ್ತಿದ್ದ ಆ ಶಿಷ್ಯನ ಹೆಸರು ಯಲ್ಲಾರೆಡ್ಡಿ ಎಂದು; ನಮ್ಮೂರಿಗಿಂತ ಮೂರು ಕಿ.ಮೀ. ದೂರದ ತಿರುಮಗೊಂಡನ ಹಳ್ಳಿಯವರು.
ನಾನು ಹೈಸ್ಕೂಲು, ಕಾಲೇಜು ಓದುತ್ತಿದ್ದಾಗ ಕೆಲವೊಮ್ಮೆ ಕೆಲವು ಕೆಲಸಗಳನ್ನು ಮಾಡಲು ಹಿಂಜರಿದರೆ, ನನ್ನ ಮತ್ತು ನನ್ನಣ್ಣನ ಅಹಂಕಾರದ ಮೊಟ್ಟೆ ಒಡೆಯಲು ನನ್ನಮ್ಮ, "ತಿರುಮಗೊಂಡನ ಹಳ್ಳಿಯ ಬಿಡ್ಡಾರೆಡ್ಡಿ ಮಗ ಯಲ್ಲಾರೆಡ್ಡಿ ಗೊತ್ತೇನ್ರೋ? ಅದೆಷ್ಟೋ ಓದವ್ನಂತೆ. ಫಾರಿನ್‌ನಲ್ಲಿದ್ದಾನಂತೆ. ಆದರೆ ಅಲ್ಲಿಂದ ಊರಿಗೆ ಬಂದ ತಕ್ಷಣ ಪ್ಯಾಂಟ್ ಬಿಚ್ಚಾಕಿ, ಚಡ್ಡಿ ಹಾಕ್ಕೊಂಡು, ನೇಗಿಲು ಎತ್ತುಕೊಂಡು ಹೊಲಕ್ಕೆ ಹೋಗ್ತಾನಂತೆ ಉಳೋದಿಕ್ಕೆ. ಇಲ್ಲಿರೋವಷ್ಟು ದಿನಾನೂ ಹೊಲದಲ್ಲಿ ಆಳುಗಳ ಸಮ ದುಡೀತಾನಂತೆ. ನಿಮಗೆಲ್ಲ ಎಷ್ಟ್ರೋ ಕೊಬ್ಬು?" ಎನ್ನುತ್ತಿದ್ದಳು. ನಮಗೆಲ್ಲ ಅಹಂಕಾರವಿಲ್ಲದ, ವಿನಯದ ಜೀವನ ಹೇಗೆ ಎಂಬ ಪಾಠ ಹಾಗೆ ಆಗುತ್ತಿತ್ತು. ಸುತ್ತಮುತ್ತಲ ಹಳ್ಳಿಗಳಲ್ಲಿ ಮನೆಗಳಲ್ಲಿಯ ಹಿರಿಯರು ಮಕ್ಕಳಿಗೆ ಯಾರದಾದರೂ ಉದಾಹರಣೆ ಕೊಡಬೇಕಿದ್ದರೆ ಯಲ್ಲಾರೆಡ್ಡಿಯವರ ಉದಾಹರಣೆ ಹೇಳುತ್ತಿದ್ದರು.
ಯಲ್ಲಾರೆಡ್ಡಿಯವರ ತಂದೆಯವರ ಹೆಸರು ಬಿಡ್ಡಾರೆಡ್ಡಿ ಎಂದು. ಕಳೆದ ವರ್ಷ ತಾನೆ ತಮ್ಮ ನೂರನೆ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ಬಿಡ್ಡಾರೆಡ್ಡಿಯವರಿಗೆ ಈಗ 101 ವರ್ಷ ವಯಸ್ಸು. ದೃಷ್ಟಿ ಈಗಲೂ ಚೆನ್ನಾಗಿದೆ ಅನ್ನುತ್ತಾರೆ. ಮೊದಲಿನಿಂದಲೂ ಸ್ಥಿತಿವಂತರ ಕುಟುಂಬ ಇವರದು. ಆ ಕಾಲದಲ್ಲಿಯೇ ಆಷ್ಟಿಷ್ಟು ಓದಿಕೊಂಡ ಇವರು ಸ್ವಾತಂತ್ರ್ಯ ಹೋರಾಟಗಾರರೂ ಹೌದು. ನಲವತ್ತು ವರ್ಷಗಳ ಹಿಂದೆ ಕೆಲವು ಸಮಾನ ಮನಸ್ಕರೊಂಡನೆ ಸೇರಿಕೊಂಡು ಸುತ್ತಮುತ್ತಲ ಹಳ್ಳಿಗಳಿಗೆಲ್ಲ ಕೇಂದ್ರಸ್ಥಳವಾಗಿದ್ದ ಚಂದಾಪುರದಲ್ಲಿ "ಸ್ವಾಮಿ ವಿವೇಕಾನಂದ ಗ್ರಾಮಾಂತರ ಪ್ರೌಢಶಾಲೆ" ಸ್ಥಾಪಿಸಿದ್ದು ಇವರೆ. ಮಕ್ಕಳೆಂದರೆ ಅಪಾರ ಪ್ರೀತಿ ಇವರಿಗೆ. ಶಾಲೆಯಲ್ಲಿ ಅಧ್ಯಾಪಕರೇನಾದರೂ ಮಕ್ಕಳನ್ನು ಹೊಡೆದದ್ದು ಇವರಿಗೆ ಗೊತ್ತಾದರೆ ಅಧ್ಯಾಪಕರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರಂತೆ. ಜೀವನದಲ್ಲಿ ಒಂದಷ್ಟು ಮೌಲ್ಯಗಳನ್ನು, ಸಾಮಾಜಿಕ ಕಾಳಜಿಗಳನ್ನು ಇಟ್ಟುಕೊಂಡು ಬದುಕಿದವರು.
ಯಲ್ಲಾರೆಡ್ಡಿಯವರು ಬಿಡ್ಡಾರೆಡ್ಡಿಯವರ ಹಿರಿಯ ಮಗ. 35 ವರ್ಷಗಳ ಹಿಂದೆ ರಾಜ್ಯದ ಪ್ರತಿಷ್ಠಿತ ಯು.ವಿ.ಸಿ.ಇ. ಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ. ಮತ್ತು ಎಂ.ಇ. ಮುಗಿಸಿ, ಪಿಎಚ್‌ಡಿ ಗಾಗಿ ಇಂಗ್ಲೆಂಡ್‌ಗೆ ಹೋದರು. ನಂತರ ಅಲ್ಲಿ ಸುಮಾರು 20 ವರ್ಷ ಅಧ್ಯಾಪಕರಾಗಿದ್ದು ಆರೇಳು ವರ್ಷದ ಹಿಂದೆ ತಮ್ಮ ಶ್ರೀಮತಿಯವರೊಡನೆ ತಿರುಮಗೊಂಡನ ಹಳ್ಳಿಗೆ ವಾಪಸ್ಸಾಗಿ, ತಮ್ಮ ಶತಾಯುಷಿ ತಂದೆಯವರೊಡನೆ ಇದ್ದಾರೆ. ಬೆಂಗಳೂರಿನ ಸುತ್ತಮುತ್ತ ರಿಯಲ್ ಎಸ್ಟೇಟ್ ವ್ಯವಹಾರದಿಂದಾಗಿ ಚಿನ್ನದ ಬೆಲೆ ಬಂದಿರುವ ತಮ್ಮ ಜಮೀನಿನಲ್ಲಿ ಈಗಲೂ ಸ್ವತಃ ತಾವೇ ವ್ಯವಸಾಯ ಮಾಡುತ್ತಿದ್ದಾರೆ. ಕಳೆದ ಆರೇಳು ವರ್ಷಗಳಲ್ಲಿ ಬೆಂಗಳೂರಿನ ಒಂದೆರಡು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಿನ್ಸಿಪಾಲ್ ಆಗಿಯೂ ಡಾ. ಯಲ್ಲಾರೆಡ್ಡಿ ಕೆಲಸ ಮಾಡಿದ್ದಾರೆ. ಆಗೆಲ್ಲ ಬೆಳಿಗ್ಗೆ ಮತ್ತು ಸಾಯಂಕಾಲ ಹೊಲದಲ್ಲಿ ನೇಗಿಲು, ಸನಿಕೆ, ಗುದ್ದಲಿಗಳೊಡನೆ ಒಡನಾಟ; ಹತ್ತು ಗಂಟೆಯಾದ ಮೇಲೆ ನಗರದ ಕಾಲೇಜಿನಲ್ಲಿ ಅಧ್ಯಾಪನ ಮತ್ತು ಕಾಲೇಜು ಕೆಲಸ. ಮಧ್ಯೆ ತಂದೆಯವರ ಅಗತ್ಯಗಳನ್ನು ನೋಡಿಕೊಳ್ಳುವುದು. ಬಹುಶಃ ಕರ್ನಾಟಕದ ಯಾವುದೇ ಇಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲರೊಬ್ಬರ ದಿನಚರಿ ಹೀಗೆ ಇದ್ದದ್ದು ಅನುಮಾನ. ಈ ನಡುವೆ ತಮ್ಮದೇ ಒಂದು ಟ್ರಸ್ಟ್ ಮಾಡಿಕೊಂಡು, ಬಡಮಕ್ಕಳನ್ನು ಓದಿಸುವ ಯೋಜನೆ ಹಾಕಿಕೊಂಡು ರಾಮನಗರ, ಮಾಗಡಿಗಳ ಕಡೆ ಓಡಾಡುತ್ತಿದ್ದಾರೆ.
ಕಳೆದ ವಾರ ಲೋಕಾಯುಕ್ತ ದಾಳಿಗೆ ಒಳಗಾದ "ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ" ಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಇದೇ ಯಲ್ಲಾರೆಡ್ಡಿಯವರ ತಮ್ಮ; ಒಂದಷ್ಟು ಮೌಲ್ಯಗಳೊಂದಿಗೇ ಬದುಕಿದ ಶತಾಯುಷಿ ಬಿಡ್ಡಾರೆಡ್ಡಿಯವರ ಕಿರಿಯ ಮಗ.
ಜನ ಹುಟ್ಟುತ್ತಾರೆ, ಸಾಯುತ್ತಾರೆ. ಕುಟುಂಬಗಳು, ಸಾಮ್ರಾಜ್ಯಗಳು ಬೆಳೆಯುತ್ತವೆ, ಕಾಲಕ್ರಮೇಣ ಅವನತಿಯಾಗುತ್ತವೆ. ಕೆಲವು ಮೋಸಗಾರರಿಗೆ ಒಳ್ಳೆಯ ಮಕ್ಕಳು ಹುಟ್ಟುತ್ತಾರೆ. ಕೆಲವು ಒಳ್ಳೆಯವರಿಗೆ ದುಷ್ಟ ಮಕ್ಕಳು ಹುಟ್ಟುತ್ತಾರೆ. ಅದೇನೂ ದೊಡ್ಡ ವಿಷಯವಲ್ಲ. ಮೇಲಿನ ಪ್ರಸಂಗದಲ್ಲಿ ಒಂದೇ ಕುಟುಂಬದಲ್ಲಿನ ವೈರುಧ್ಯಗಳು ಎದ್ದು ಕಾಣಿಸುವುದೇನೋ ನಿಜ. ಆದರೆ, ಇಲ್ಲಿ ಅದಕ್ಕಿಂತ ಭೀಕರವಾದದ್ದು, ಯೋಚಿಸಬೇಕಾದ್ದು, ಇನ್ನೊಂದಿದೆ. ಅದು, ಕಳೆದ ಇಪ್ಪತ್ತು ವರ್ಷಗಳಲ್ಲಿ ಬೆಂಗಳೂರಿನ ಸುತ್ತಮುತ್ತ ಹಾಗೂ ಬಹುಶಃ ಇಡೀ ದೇಶದಲ್ಲಿ ಮೌಲ್ಯಗಳು ಹೇಗೆ ಪಲ್ಲಟಗೊಂಡಿವೆ ಅನ್ನುವುದು. ಇದು ಎಷ್ಟು ಢಾಳಾಗಿದೆ ಎಂದರೆ, ಕಳೆದ ಹತ್ತು ವರ್ಷಗಳಲ್ಲಿ ನನ್ನ ಸುತ್ತಮುತ್ತಲಿನ ಹಳ್ಳಿಗಳಲ್ಲಿಯ ಬಹುಪಾಲು ಜನ ತಮ್ಮ ಮಕ್ಕಳಿಗೆ ಡಾ. ಯಲ್ಲಾರೆಡ್ಡಿಯ ಬಗ್ಗೆ ಹೇಳುತ್ತಿಲ್ಲ. ಬದಲಿಗೆ, "ಆ ಶ್ರೀನಿವಾಸರೆಡ್ಡೀನ ನೋಡ್ರೋ. ಬೆಂಗಳೂರಿನಲ್ಲಿ ಎರಡು ಮೂರು ಬಂಗ್ಲೆಗಳಿವೆ. ಇನ್ನೂ ಎಷ್ಟೋ ಸೈಟುಗಳಿವೆಯಂತೆ. ಇವತ್ತು ಏನಿಲ್ಲಾ ಅಂದರೂ ಐವತ್ತು, ನೂರು ಕೋಟಿಗೆ ಬಾಳ್ತಾನೆ. ಗೌರ್ನಮೆಂಟ್‌ನಲ್ಲಿ ಒಳ್ಳೆ ಕೆಲಸದಲ್ಲಿ ಇದ್ದಾನೆ. ಚೆನ್ನಾಗಿ ದುಡ್ಡು ಮಾಡವ್ನೆ!" ಎನ್ನುತ್ತಿದ್ದಾರೆ. ಇದು ಇಂದಿನ ವಾಸ್ತವ ಪರಿಸ್ಥಿತಿ.
ಇಲ್ಲಿ ಇದಕ್ಕಿಂತ ಹೊಟ್ಟೆಕಿವುಚುವಂತಹದ್ದು ಇನ್ನೊಂದಿದೆ. ಅದೇನೆಂದರೆ, ಹತ್ತಿಪ್ಪತ್ತು ವರ್ಷಗಳ ಹಿಂದೆ ಯಾರು ತಮ್ಮ ಮಕ್ಕಳಿಗೆ ಯಲ್ಲಾರೆಡ್ಡಿಯ ಉದಾಹರಣೆ ಕೊಡುತ್ತಿದ್ದರೊ ಅದೇ ಜನ ಇವತ್ತು ಶ್ರೀನಿವಾಸರೆಡ್ಡಿಯ ಮತ್ತು ಅವರಂತಹವರ ಉದಾಹರಣೆ ಕೊಡುತ್ತಿರುವುದು. ಸಹ್ಯ ಸಮಾಜದಲ್ಲಿ ಇರಲೇಬೇಕಾದ ಕೆಲವು ಕನಿಷ್ಠ ಮೌಲ್ಯಗಳು ಯಾವ ಪರಿ ಅಧೋಗತಿಗೆ ಇಳಿದಿವೆ ಎಂದರೆ, ಸ್ವತಃ ಬಿಡ್ಡಾರೆಡ್ಡಿಯವರೆ ಇವತ್ತು ತಮ್ಮ ಹಿರಿಯ ಮಗನಿಗೆ ತಮ್ಮ ಕಿರಿಯ ಮಗನ ಉದಾಹರಣೆ ಕೊಟ್ಟು, "ನೋಡೋ, ಅವನನ್ನು ನೋಡಿ ಕಲಿತುಕೊ," ಎಂದುಬಿಟ್ಟರೆ, ಅದರಿಂದೇನೂ ಆಶ್ಚರ್ಯ ಪಡಬೇಕಿಲ್ಲ. ಯಾಕೆಂದರೆ, ಅಂತಹುದ್ದು ಇಂದು ಅನೇಕರ ಮನೆಗಳಲ್ಲಿ ಆಗುತ್ತಿವೆ. ಭ್ರಷ್ಟಾಚಾರ ಮಾಡಿ ಸಿಕ್ಕಿಹಾಕಿಕೊಳ್ಳುವುದು ಇವತ್ತು ಅವಮಾನದ ವಿಷಯವಲ್ಲ; ಕೆಲವು ದಿನಗಳ discomfort ಅಷ್ಟೆ. ಯಾವಯಾವ ಮೌಲ್ಯಗಳನ್ನು ಇಟ್ಟುಕೊಂಡು ದುಡಿಯಬೇಕು ಎನ್ನುವುದು ಇವತ್ತಿನ ಅಗತ್ಯ ಅಲ್ಲ. "ಏನಾದರೂ ಮಾಡಿ, ದುಡ್ಡು ಮಾಡಿ," ಎನ್ನುವುದು ಇವತ್ತಿನ ಅವಶ್ಯಕತೆ. ಪ್ರಾಮಾಣಿಕವಾಗಿ ಬದುಕುವವರು ಹುಚ್ಚರು, ಲೂಸರ್‌ಗಳು; ಅವರು ಬಡವರಾಗಿದ್ದರಂತೂ ಲೆಕ್ಕಕ್ಕೇ ಇಲ್ಲ. ಅದೇ ದುಡ್ಡಿರುವವನು ಮಾಡುವ ಹೀನಾತಿಹೀನ ಕೃತ್ಯವೂ ಇವತ್ತು ಸಮರ್ಥನೀಯ. ಹೇಗೆ ಮಾಡಿದ ಎನ್ನುವುದು ಮುಖ್ಯವಲ್ಲ. ಎಷ್ಟು ಮಾಡಿದ ಎನ್ನುವುದಷ್ಟೆ ಮುಖ್ಯ. ದುಷ್ಟರೂ, ಭ್ರಷ್ಟರೂ ಆಗಲಷ್ಟೆ ಈಗ ಪೈಪೋಟಿ.
ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಏನಾಗಿ ಹೋಯಿತು ಈ ಸಮಾಜ? ಮೌಲ್ಯಗಳ ಪುನರ್ ಸ್ಥಾಪನೆ ಈಗ ತುರ್ತಾಗಿ ಆಗಬೇಕಿರುವ ಕೆಲಸಗಳಲ್ಲಿ ಒಂದು. ಇಲ್ಲವಾದಲ್ಲಿ ನಾವು ಶತಮಾನಗಳ ಕಗ್ಗತ್ತಲೆಯತ್ತ ಹೆಜ್ಜೆಯಿಡುತ್ತಿದ್ದೇವೆ.
ರಾಷ್ಟ್ರಕವಿಗಳಲ್ಲೂ ಅವನತಿಗೊಂಡ ಮೌಲ್ಯಗಳು
ಇವತ್ತು ಮೌಲ್ಯಗಳು ಜನಸಾಮಾನ್ಯರಲ್ಲಿಯಷ್ಟೇ ಅಲ್ಲ, ಯಾರು ಇಡೀ ಸಮಾಜದ ಸಾಕ್ಷಿಪ್ರಜ್ಞೆ ಆಗಬೇಕಿತ್ತೊ ಅವರಲ್ಲಿಯೇ ಅವನತಿ ಆಗಿಬಿಟ್ಟಿವೆ. ಜಿ.ಎಸ್.ಶಿವರುದ್ರಪ್ಪ ಅವರನ್ನು ಸರ್ಕಾರ ಕಳೆದ ವರ್ಷ "ರಾಷ್ಟ್ರಕವಿ" ಎಂದು ಘೋಷಿಸಿತು. ನಂತರದ ದಿನಗಳಲ್ಲಿ ಎಲ್ಲೆಲ್ಲೂ ಸನ್ಮಾನಕ್ಕೆ ತಲೆಬಾಗುತ್ತಿರುವ ಕವಿಶ್ರೇಷ್ಠರದೇ ಸುದ್ದಿಚಿತ್ರಗಳು! ರಾಷ್ಟ್ರಕವಿ ಎನ್ನುವುದು ಪದವಿಯೇ ಯಾಕಾಗಬೇಕು, ಅದು ಜವಾಬ್ದಾರಿಯೂ ಹೌದಲ್ಲವೆ ಎಂದುಕೊಳ್ಳದ ರಾಷ್ಟ್ರ(ಆಸ್ಥಾನ)ಕವಿಗಳು, ಮೊನ್ನೆ ಯಡ್ಡಯೂರಪ್ಪನವರ ಪ್ರಮಾಣವಚನ ಸಮಾರಂಭಕ್ಕೂ ಹಾಜರು. ಕಳೆದ ಮೂರು ವರ್ಷಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಅನೈತಿಕ, ನಿರ್ಲಜ್ಜ ರಾಜಕೀಯ ಹೊಂದಾಣಿಕೆಗಳಿಗೆಲ್ಲ ತಮ್ಮ ಹಾಜರಿ ಮಾತ್ರದಿಂದಲೆ ಮಾನ್ಯತೆ ದೊರಕಿಸಿಕೊಟ್ಟುಬಿಟ್ಟ, ತಮ್ಮ ಉಪಸ್ಥಿತಿ ಕಾಲಾತೀತವಾಗಿ ಏನನ್ನು ಹೇಳುತ್ತದೆ ಎನ್ನುವುದನ್ನು ಯೋಚಿಸಲಾರದೆ ಹೋದ ಜಿಎಸ್ಸೆಸ್, ಪ್ರಜಾಪ್ರಭುತ್ವದಲ್ಲಿ ರಾಷ್ಟ್ರಕವಿಯಾಗಲು ನಿಜಕ್ಕೂ ಅರ್ಹರೆ?
1949 ರಲ್ಲಿ ಕರ್ನಾಟಕ ಏಕೀಕರಣದ ಹೋರಾಟ ನಡೆಯುತ್ತಿತ್ತು. ದಕ್ಷಿಣದ ಕೆಲವು ಜಾತಿಗಳ ರಾಜಕಾರಣಿಗಳಿಗೆ ಮತ್ತು ಕೆಲವು ಪಟ್ಟಭದ್ರ ಹಿತಾಸಕ್ತರಿಗೆ ಅದು ಬೇಕಿರಲಿಲ್ಲ. ಕವಿ ಕುವೆಂಪು ಏಕೀಕರಣದ ಪರ ಒಮ್ಮೆ ಮಾತನಾಡಿದ್ದಕ್ಕೆ ಆಗಿನ ಸಚಿವರಿಂದ ಎಚ್ಚರಿಕೆಯ ನೋಟಿಸ್ ಬಂತಂತೆ. ಕುವೆಂಪು ಉತ್ತರ ಬರೆದರು.
ಅಖಂಡ ಕರ್ಣಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ !
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರಕರ್ಣ ಕುಂಡಲ!
ಅಖಂಡ ಕರ್ಣಾಟಕ:
ಅಲ್ತೊ ನಮ್ಮ ನಾಲ್ಕುದಿನದ ರಾಜಕೀಯ ನಾಟಕ !
ಯಾವುದು ಸರಿ, ಯಾವುದು ಸರಿಯಲ್ಲ ಎಂಬ ಸ್ಪಷ್ಟ ಕಲ್ಪನೆಯಿದ್ದವರು ಕುವೆಂಪು. ಅವರು ಆಸ್ಥಾನಕವಿಯಲ್ಲ. ನಿಜವಾದ ರಾಷ್ಟ್ರಕವಿ. ಯುವರಾಜರಿಗೆ ಟ್ಯೂಷನ್ ಹೇಳಿಕೊಡಿ ಎಂಬ ಕೋರಿಕೆ ಅರಮನೆಯಿಂದ ಬಂದಾಗಲೂ ಅದನ್ನು ನಿರಾಕರಿಸಿದ್ದ ಸ್ವಾಭಿಮಾನಿ, ಕುವೆಂಪು. ರಾಜಪ್ರಭುತ್ವದಲ್ಲಿ ಪ್ರಜಾಪ್ರಭುತ್ವದ ಆತ್ಮಾಭಿಮಾನ ಇಟ್ಟುಕೊಂಡವರು.
ಕುವೆಂಪು ಅವರ ನೇರಶಿಷ್ಯರುಗಳಲ್ಲಿ ಶ್ರೇಷ್ಠಕವಿ ಎನ್ನಿಸಿಕೊಂಡವರು ಶಿವರುದ್ರಪ್ಪನವರು. ಪ್ರಜಾಪ್ರಭುತ್ವದಲ್ಲಿ ರಾಜಪ್ರಭುತ್ವದಲ್ಲಿರಬೇಕಿದ್ದ ಆಸ್ಥಾನನಿಷ್ಠೆ ಇಟ್ಟುಕೊಂಡವರು.
ಮೌಲ್ಯಗಳಲ್ಲಿ ಎಂತಹ ಅಧೋಗತಿ ನೋಡಿ...