Jan 30, 2008

ಗಲ್ಲಿ ಗೂಂಡಾಗಳೆಲ್ಲ ಬೆಂಗಳೂರಿನ ಮೇಯರ್‌ಗಳು...

(ವಿಕ್ರಾಂತ ಕರ್ನಾಟಕ - ಫೆಬ್ರವರಿ 08, 2008 ರ ಸಂಚಿಕೆಯಲ್ಲಿನ ಬರಹ)

2002 ನೆ ಇಸವಿ; ಭಾರತದ ನಂಬರ್ 1 ಮುಖ್ಯಮಂತ್ರಿ ಎಂದು ಬಿರುದಾಂಕಿತರಾಗಿದ್ದ ಎಸ್.ಎಂ. ಕೃಷ್ಣರ ಕಾಲ. ಈಗಿನಂತೆಯೆ ಆಗಲೂ ಬೆಂಗಳೂರಿನ ಸುತ್ತಮುತ್ತ ಐಟಿ ಇಂಡಸ್ಟ್ರಿ ತೀವ್ರವಾಗಿ ಬೆಳೆಯುತ್ತಿತ್ತು. ತನ್ನ ಓರಗೆಯವರಿಗಿಂತ ವೇಗವಾಗಿ ಬೆಳೆಯುತ್ತಿದ್ದ ತನ್ನ ಉದ್ದಿಮೆಗೆ ಬೆಂಗಳೂರಿನಲ್ಲಿ 100 ಎಕರೆ ಜಾಗ ಬೇಕಿದೆ ಎಂದು ಇನ್ಫೋಸಿಸ್ ಸರ್ಕಾರವನ್ನು ಕೇಳಿಕೊಂಡಿತು. ತಕ್ಷಣ ಕರ್ನಾಟಕ ಸರ್ಕಾರದ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ವಿಧಾನಸೌಧದಿಂದ ಕೇವಲ ಹತ್ತು-ಹನ್ನೆರಡು ಕಿ.ಮಿ. ದೂರದಲ್ಲಿರುವ ಸರ್ಜಾಪುರ ರಸ್ತೆಯ ಬೆಳ್ಳಂದೂರು ಗ್ರಾಮದ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಆದೇಶ ಹೊರಡಿಸಿತು.

ಇವತ್ತು ಆ ಜಮೀನುಗಳ ಬೆಲೆ ಕನಿಷ್ಠವೆಂದರೂ ಎಕರೆಗೆ ನಾಲ್ಕೈದು ಕೋಟಿ ರೂಪಾಯಿ ಆಗುತ್ತದೆ. 2002 ರಲ್ಲಿ ಏನಿಲ್ಲವೆಂದರೂ 40 ಲಕ್ಷದಿಂದ ಒಂದೂವರೆ ಕೋಟಿ ಇತ್ತು. ಇನ್ನೂ ಎಷ್ಟೋ ಜನ ರೈತರು ತಮ್ಮ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿದ್ದರು. ಅವರಿಗೆಲ್ಲ KIADB ಎಕರೆಗೆ ಕೇವಲ 9 ಲಕ್ಷ ರೂಪಾಯಿ ಮಾತ್ರ ಪರಿಹಾರ ಹಣ ನಿಗದಿಪಡಿಸಿತು. ಇದು ಯಾವ ದಿಕ್ಕಿನಿಂದ ನೋಡಿದರೂ ಅನ್ಯಾಯ. ಆ ಸಮಯದಲ್ಲಿ ಬೆಳ್ಳಂದೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದವರು ಜಗನ್ನಾಥ್. ಇವರು ಅಭಿವೃದ್ಧಿಯ ವಿರೋಧಿಯಾಗಲಿ, ಐಟಿ ಇಂಡಸ್ಟ್ರಿಯ ವಿರುದ್ಧವಾಗಲಿ ಇರಲಿಲ್ಲ. ಇದಕ್ಕೆ ಕೊಡಬಹುದಾದ ಒಂದೆ ಒಂದು ಉದಾಹರಣೆ ಎಂದರೆ, ಇಡೀ ಕರ್ನಾಟಕದಲ್ಲಿ ಕಂಪ್ಯೂಟರೀಕರಣಗೊಂಡ ಪ್ರಪ್ರಥಮ ಗ್ರಾಮಪಂಚಾಯಿತಿ ಎಂದರೆ ಬೆಳ್ಳಂದೂರು ಗ್ರಾಮಪಂಚಾಯಿತಿ. ಆ ವಿಷಯದಲ್ಲಿ ಕರ್ನಾಟಕಕ್ಕೆ ಏನು ಇಡೀ ಭಾರತಕ್ಕೆ ಒಂದು ಮಾದರಿ ಗ್ರಾಮ ಪಂಚಾಯಿತಿ ಅದು. ದೇಶವಿದೇಶಗಳ ಅನೇಕರು ಈ ಗ್ರಾಮ ಪಂಚಾಯಿತಿಯನ್ನು ಕೇಸ್‌ಸ್ಟಡಿಯಾಗಿ ಸ್ವೀಕರಿಸಿ ಗ್ರಾಮೀಣ ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನದ ಸರಿಯಾದ ಬಳಕೆಯ ಬಗ್ಗೆ ಅಭ್ಯಾಸ ಮಾಡಿದ್ದಾರೆ. ಇದಕ್ಕೆಲ್ಲ ಮೂಲಕಾರಣ ಆಗಿನ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದ ಕೆ. ಜಗನ್ನಾಥ್.

KIADB ಯವರು ಇಂತಹ ಗ್ರಾಮಪಂಚಾಯಿತಿಯ ರೈತರ ಜಮೀನನ್ನು ಅಗ್ಗದ ಬೆಲೆಗೆ ವಶಪಡಿಸಿಕೊಳ್ಳಲು ತೀರ್ಮಾನಿಸಿಬಿಟ್ಟರು. ಆ ಸಮಯದಲ್ಲಿ, ತನ್ನ ಜನರ ಮೇಲೆ ಆಗುತ್ತಿರುವ ಈ ಹಗಲುದರೋಡೆಯನ್ನು ತಡೆಯುವ ತೀರ್ಮಾನವನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದ ಜಗನ್ನಾಥ್ ತೆಗೆದುಕೊಂಡರು. "ಈ ಅನ್ಯಾಯದ ವಿರುದ್ಧ ನಾವು ಕೊನೆಯವರೆಗೂ ಹೋರಾಟ ನಡೆಸುತ್ತೇವೆ. ಐಟಿ ಉದ್ದಿಮೆಗಳು ಕರ್ನಾಟಕದ ಹಳ್ಳಿಗಳನ್ನು ನಾಶಪಡಿಸಲು ನಾವು ಬಿಡುವುದಿಲ್ಲ. ಒಂದು ಹಳ್ಳಿಯನ್ನು ಕಳೆದುಕೊಂಡರೆ ಅದು ರಾಜ್ಯದ ಆತ್ಮವನ್ನೆ ಕಳೆದುಕೊಂಡಂತೆ," ಎಂದ ಜಗನ್ನಾಥ್ ಕದನವನ್ನು ನೇರವಾಗಿ ಇನ್ಫೋಸಿಸ್‌ನ ಅಂಗಳಕ್ಕೆ ತೆಗೆದುಕೊಂಡು ಹೋಗಿಬಿಟ್ಟರು. ಈ ಅನ್ಯಾಯದಲ್ಲಿ ಇನ್ಫೋಸಿಸ್‌ನವರದು ನೇರಪಾತ್ರ ಇಲ್ಲದಿದ್ದರೂ ಮಾರುಕಟ್ಟೆ ಬೆಲೆಗಿಂತ ಕಮ್ಮಿ ಬೆಲೆಗೆ ಕೊಂಡುಕೊಳ್ಳುವ ಅನ್ಯಾಯದ ಲಾಭ ಇನ್ಫೋಸಿಸ್‌ನವರದಾಗಿತ್ತು. "ಕೊಳ್ಳುವ ಹಾಗಿದ್ದರೆ ಇನ್ಫೋಸಿಸ್‌ನವರು ಮಾರುಕಟ್ಟೆ ಬೆಲೆಗೆ ನೇರವಾಗಿ ನಮ್ಮಿಂದಲೆ ಕೊಂಡುಕೊಳ್ಳಲಿ, ಈ ಸರ್ಕಾರಿ ಮಧ್ಯವರ್ತಿಗಳ ಅನ್ಯಾಯದ ಕಾನೂನಿನ ಶೋಷಣೆ ಯಾಕೆ?" ಎನ್ನುವ ವಾದ ಹಳ್ಳಿಗರದು. ಹಾಗಾಗಿ, ಇನ್ಫೋಸಿಸ್‌ನ ನಾರಾಯಣಮೂರ್ತಿಯವರು ಒಮ್ಮೆ ದೆಹಲಿಯ ಆರ್ಥಿಕ ಸಮ್ಮೇಳನವೊಂದರಲ್ಲಿ ಮಾತನಾಡುತ್ತಿರುವಾಗ ಅದೇ ಸಭೆಯಲ್ಲಿ ಇನ್ಫೋಸಿಸ್‌ನ ಅನ್ಯಾಯದ ನೆಲದೋಚುವಿಕೆ ವಿರುದ್ಧ ಬೆಳ್ಳಂದೂರು ಗ್ರಾಮದ ಜಗನ್ನಾಥ್ ಘೋಷಣೆ ಕೂಗಿದರು. ಜಗನ್ನಾಥರ ಈ ಪರಿಯ ಹಳ್ಳಿ-ದಿಲ್ಲಿಯ ಸಾತ್ವಿಕ ಹೋರಾಟಕ್ಕೆ ಮಣಿದ ಇನ್ಫೋಸಿಸ್ ಕೊನೆಗೂ ಮಾರುಕಟ್ಟೆ ಬೆಲೆಗಿಂತ ಕಮ್ಮಿಬೆಲೆಗೆ KIADB ಮುಖಾಂತರ ಜಮೀನು ಕೊಳ್ಳುವ ತನ್ನ ಯೋಜನೆಯನ್ನು ಸ್ಥಗಿತಗೊಳಿಸಿತು.

ಜಗನ್ನಾಥರ ಈ ಹೋರಾಟವನ್ನು ಮತ್ತು ಅವರ ಅವಧಿಯಲ್ಲಿ ಬೆಳ್ಳಂದೂರು ಗ್ರಾಮಪಂಚಾಯಿತಿಯ ಯಶಸ್ಸನ್ನು ನಾನು ಇಲ್ಲಿಂದಲೆ ಗಮನಿಸಿದ್ದೆ. ಆಗಾಗ ಬೆಳ್ಳಂದೂರು ಗ್ರಾಮಪಂಚಾಯಿತಿಗೆ ಅತ್ಯುತ್ತಮ ಗ್ರಾಮಪಂಚಾಯಿತಿ ಪ್ರಶಸ್ತಿಗಳು ಬರುವುದನ್ನು ಓದುತ್ತಿದ್ದೆ. ಹಾಗಾಗಿಯೆ ಜಗನ್ನಾಥರನ್ನು ಮತ್ತು ಬೆಳ್ಳಂದೂರು ಪಂಚಾಯಿತಿಯನ್ನು ಒಮ್ಮೆ ನೋಡಬೇಕು ಎಂದುಕೊಂಡು 2006 ರಲ್ಲಿ ಅವರನ್ನು ಭೇಟಿಯಾಗಲು ಹೋಗಿದ್ದೆ. ಆಗ ನಾನು ಅವರಿಗೆ "ಈಗಿನ ಗ್ರಾಮಪಂಚಾಯಿತಿ ವ್ಯವಸ್ಥೆಯ ದೊಡ್ಡ ದೋಷ ಏನಣ್ಣ?" ಎಂದು ಕೇಳಿದ್ದೆ. ಅದಕ್ಕವರು, "ಗ್ರಾಮಪಂಚಾಯಿತಿಗಳಲ್ಲಿ ರೊಟೇಷನಲ್ ಮೀಸಲಾತಿ ಇದೆ. ಅಂದರೆ ಒಂದು ವಾರ್ಡ್‌ನಲ್ಲಿ ಐದು ವರ್ಷಕ್ಕೊಮ್ಮೆ ಜಾತಿ ಅಥವ ಲಿಂಗ ಮೀಸಲಾತಿ ಬದಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಹಾಲಿ ಸದಸ್ಯರು ಮುಂದಿನ ಚುನಾವಣೆಗೆ ನಿಲ್ಲಲು ಆಗುವುದೇ ಇಲ್ಲ. ಹಾಗಾಗಿಯೆ ಪಂಚಾಯಿತಿ ಸದಸ್ಯನಿಗೆ ತನ್ನ ಜವಾಬ್ದಾರಿ ನಿರ್ವಹಿಸಬೇಕಾದ ಅವಶ್ಯಕತೆಯಿಲ್ಲ. ಹೇಗಿದ್ದರೂ ತಾನು ಮುಂದಿನ ಚುನಾವಣೆಗೆ ನಿಲ್ಲಲಾಗುವುದಿಲ್ಲ, ಹಾಗಾಗಿ ಈ ಒಂದೆ ಅವಕಾಶದಲ್ಲಿ ಎಷ್ಟು ಭ್ರಷ್ಟಾಚಾರ ಮಾಡಬಹುದೊ ಅಷ್ಟೆಲ್ಲ ಮಾಡಿಬಿಡೋಣ ಎಂದು ಪ್ರತಿನಿಧಿಗಳು ಅಂದುಕೊಳ್ಳುವಂತೆ ಮಾಡಿಬಿಟ್ಟಿದೆ ಈ ವ್ಯವಸ್ಥೆ. ಪ್ರತಿ ಚುನಾವಣೆಗೂ ಬದಲಾಗುವ ಈ ವಾರ್ಡ್ ಮೀಸಲಾತಿ ಹೋಗಬೇಕು. ಬದಲಿಗೆ ಒಂದೆರಡು ಅವಧಿಗಾದರೂ ಈ ಜಾತಿ-ಲಿಂಗ ಮೀಸಲು ವ್ಯವಸ್ಥೆ ಬದಲಾಗಬಾರದು, ಒಳ್ಳೆಯವರು ತಮ್ಮ ಒಳ್ಳೆಯ ಕೆಲಸಗಳಿಗೆ ಪ್ರತಿಫಲ ಇದೆ ಎನ್ನುವಂತಹ ಆಶಾವಾದ ಇರಬೇಕು," ಎಂದಿದ್ದರು.

ಅವರು ಹೇಳಿದ ಮಾತಿನ ಹಿನ್ನೆಲೆಯಲ್ಲಿಯೆ ನಾನು ಸುಮಾರು 60 ಲಕ್ಷ ಜನಸಂಖ್ಯೆಯ ಬೆಂಗಳೂರಿನ ಕಾರ್ಪೊರೇಷನ್ ವ್ಯವಸ್ಥೆಯನ್ನೂ ಗಮನಿಸುತ್ತಿದ್ದೆ. ಇಲ್ಲೂ ಅಷ್ಟೆ. ಜಾತಿವಾರು, ಲಿಂಗವಾರು ಮೀಸಲಾತಿಗಳು ಚುನಾವಣೆಯಿಂದ ಚುನಾವಣೆಗೆ ಬದಲಾಗುತ್ತಿರುತ್ತವೆ. ಮೇಯರ್‌ಗಳೂ ವರ್ಷಕ್ಕೊಮ್ಮೆ ಬದಲಾಗುತ್ತಿರುತ್ತಾರೆ. ಇದೊಂದು ದೊಡ್ಡ ಜೋಕು. ಯಾರೂ ಒಂದು ವರ್ಷಕ್ಕಿಂತ ಹೆಚ್ಚಿನ ಕಾಲ ಮೇಯರ್ ಆಗಿರಲು ಸಾಧ್ಯವಿಲ್ಲ. ಒಮ್ಮೆ ಮೇಯರ್ ಆದ ಮೇಲೆ ಮತ್ತೆ ಮೇಯರ್ ಆಗಲು ಸಾಧ್ಯವೇ ಇಲ್ಲದ ಸ್ಥಿತಿ. ಈ ವ್ಯವಸ್ಥೆಯಲ್ಲಿ ಮೇಯರ್ ಆಗಲು ಇರುವ ಕನಿಷ್ಠ ಯೋಗ್ಯತೆ ಅಂದರೆ ನಗರಪಾಲಿಕೆ ಸದಸ್ಯನಾಗಿರುವುದು ಮತ್ತು ಮೇಯರ್‌ಗಿರಿ ತನ್ನ ಜಾತಿ-ಲಿಂಗಕ್ಕೆ ಮೀಸಲಾಗಿರುವುದು. ಈ ಪರಿಸ್ಥಿತಿಯಿಂದಾಗಿ ಕಳೆದ ಹತ್ತಾರು ವರ್ಷಗಳಲ್ಲಿ ಎಂತೆಂತಹವರೆಲ್ಲ ಬೆಂಗಳೂರಿನ ಮೇಯರ್ ಆಗಿದ್ದಾರೆ ಎನ್ನುವುದನ್ನು ನೀವು ಗಮನಿಸಿದ್ದರೆ ನಿಮಗೆ ಈ ವ್ಯವಸ್ಥೆಯ ಭೀಕರತೆಯ ಅರಿವಾಗುತ್ತದೆ. ಕರ್ನಾಟಕದ ಮಾಜಿ ಮಂತ್ರಿ-ಮುಖ್ಯಮಂತ್ರಿಗಳ ಮನೆಯ ಗುಲಾಮರು, ಛೇಲಾಗಳು, ಇಲ್ಲವೆ ಆ ಛೇಲಾಗಳ ಹೆಂಡಂದಿರು, ಗಲ್ಲಿಯ ರೌಡಿಗಳು, ಅಯೋಗ್ಯರೆಲ್ಲ ಬೆಂಗಳೂರಿನ ಮೇಯರ್‌ಗಳಾಗಿ ಹೋಗಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆ ಇವತ್ತು ಯಾವ ದೃಷ್ಟಿಯಿಂದಲೂ ನಗಣ್ಯವಲ್ಲ. ಈ ಮಹಾನಗರ ಪಾಲಿಕೆಯ 2007-08 ರ ವಾರ್ಷಿಕ ಅಂದಾಜು ವರಮಾನ 3302 ಕೋಟಿ ರೂಪಾಯಿಗಳು. ಇದು ಗೋವಾ ರಾಜ್ಯಸರ್ಕಾರದ ವಾರ್ಷಿಕ ವರಮಾನಕ್ಕಿಂತ ಹೆಚ್ಚಿಗೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. (ಇದೇ ಅವಧಿಯಲ್ಲಿ ಗೋವಾ ರಾಜ್ಯದ ಅಂದಾಜು ವರಮಾನ 2263 ಕೋಟಿ ರೂಪಾಯಿಗಳು ಮಾತ್ರ.) ಕರ್ನಾಟಕದ ಸುಮಾರು ಶೇ. 15 ರಷ್ಟು ಜನ ಇಂತಿಪ್ಪ ಬೆಂಗಳೂರಿನಲ್ಲಿ ವಾಸಿಸುತ್ತಾರೆ. ಆದರೆ, ಇಷ್ಟು ದೊಡ್ಡ ನಗರವನ್ನು ಜೀವಿಸಲು ಯೋಗ್ಯ ತಾಣವಾಗಿ ಮಾಡಬೇಕಾದ, ಜನಪರ ಆಡಳಿತ ನೀಡಬೇಕಾದ, ನಗರದ ಪ್ರಜಾಮುಖ್ಯಸ್ಥನಾಗಬೇಕಾದ ಮೇಯರ್‌ಗೆ ಯಾವುದೇ ಜಾತಿ-ಲಿಂಗ-ವೋಟಿನ ಯೋಗ್ಯತೆ ಬಿಟ್ಟರೆ ಮಿಕ್ಕ ಇನ್ಯಾವ ಕನಿಷ್ಠ ಯೋಗ್ಯತೆಯೂ ಬೇಕಾಗಿಲ್ಲ.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರಿನಂತಹ ನಗರಗಳ ಮೇಯರ್‌ಗಳನ್ನು ಕಾರ್ಪೊರೇಟರ್‌ಗಳು ಚುನಾಯಿಸುವ ಪಾರ್ಲಿಮೆಂಟರಿ ವ್ಯವಸ್ಥೆಯೆ ಅಯೋಗ್ಯವಾದದ್ದು. ಇಲ್ಲೆಲ್ಲ ಕಾರ್ಪೊರೇಟರ್‌ಗಳ ಚುನಾವಣೆ ಜೊತೆಜೊತೆಗೆ ನೇರವಾಗಿ ಮೇಯರ್ ಅನ್ನೂ ಆಯ್ಕೆ ಮಾಡುವ ವ್ಯವಸ್ಥೆ ಬರಬೇಕು. ಕನಿಷ್ಠ ಆಗಲಾದರೂ ಯಾವುದೊ ಒಂದು ಗಲ್ಲಿಯ ರೌಡಿಯೊ, ಯಾರದೊ ಮನೆಯ ಗುಲಾಮನೊ, ಇನ್ನೆಂತಹ ಅಯೋಗ್ಯನೊ ಕಾರ್ಪೊರೇಟರ್ ಆಗಿ ನಂತರ ಒಂದು ವರ್ಷಕ್ಕೆ ನಗರದ ಮೇಯರ್ರೂ ಆಗಿಬಿಡುವ ಆಕಸ್ಮಿಕಗಳ ಬದಲು ಇಡೀ ನಗರದ ಜನರ ಒಪ್ಪಿಗೆಯಿಂದ ಒಬ್ಬ ಮೇಯರ್ ಆಗುವಂತೆ ಆಗುತ್ತದೆ. ಹೀಗೆ ಮೇಯರ್ ಆದವನು ಅಯೋಗ್ಯನಾಗಿದ್ದರೂ, ಅಯೋಗ್ಯನನ್ನು ಆರಿಸಿದ ಜವಾಬ್ದಾರಿ ಇಡೀ ನಗರದ ಜನತೆಯದಾಗಿರುತ್ತದೆ. ಈಗಿನಂತೆ ಜನ ಆಗ ಅಯೋಗ್ಯನನ್ನು ಆರಿಸಿದ ಇನ್ನೊಂದು ವಾರ್ಡಿನ ಜನರನ್ನು ಬೈದುಕೊಂಡು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಅವಕಾಶ ಇರುವುದಿಲ್ಲ.

ಲೇಖನದ ವಿಡಿಯೊ ಪ್ರಸ್ತುತಿ


ನಮ್ಮ ದೇಶದಲ್ಲಿ ಪ್ರಧಾನಿಗೆ ಅಥವ ಮುಖ್ಯಮಂತ್ರಿಗೆ ನೇರಚುನಾವಣೆ ನಡೆದರೆ ಹಾಗೆ ಆಯ್ಕೆಯಾದವರು ಸರ್ವಾಧಿಕಾರಿಗಳಾಗಿಬಿಡುವ, ಒಂದಷ್ಟು ಜನರನ್ನು (ಭಾಷೆ-ಜಾತಿ-ಕೋಮು-ರಾಜ್ಯಗಳ ಆಧಾರದ ಮೇಲೆ) ಶಾಶ್ವತವಾಗಿ ಕಡೆಗಣಿಸುವ ಇಲ್ಲವೆ ಕೆಟ್ಟದಾಗಿ ನಡೆಸಿಕೊಳ್ಳುವ ಸಾಧ್ಯತೆಗಳು ಜಾಸ್ತಿ. ಯಾಕೆಂದರೆ ನಮ್ಮಲ್ಲಿ ಈ ಜಾತಿ-ಭಾಷೆ-ಕೋಮು-ಪ್ರಾಂತಾವಾರು ಮುಂತಾದವು ಜಂಗಮವಲ್ಲ, ಸ್ಥಾವರಗಳು. ಆದರೆ ಬೆಂಗಳೂರಿನಂತಹ ನಗರಗಳ ವಿಚಾರ ಹಾಗೆ ಅಲ್ಲ. ಇವು ಯಾವಾಗಲೂ ಚಲನಶೀಲ. ಮತ್ತು ಈ ಸ್ಥಳೀಯಸಂಸ್ಥೆಗಳ ಮುಖ್ಯಸ್ಥರು ಸರ್ವಾಧಿಕಾರಿಗಳಾಗದಂತೆ ನೋಡಿಕೊಳ್ಳಲು ಅವರ ಮೇಲೆ ರಾಜ್ಯ-ರಾಷ್ಟ್ರ ಸರ್ಕಾರಗಳು ಇರುತ್ತವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಸ್ತುತ ನಗರಸಭೆ ಮೇಯರ್-ಉಪಮೇಯರ್ ಚುನಾವಣೆಯೆ ಅಯೋಗ್ಯವಾದದ್ದು. People in these cities definitely deserve better.

ತಮ್ಮ ಮೂಲಭೂತ ಜವಾಬ್ದಾರಿಯನ್ನು ನಿರ್ವಹಿಸದ ಕರ್ನಾಟಕದ ಅಯೋಗ್ಯ ಶಾಸಕರು

ಇವತ್ತಿನ ಕರ್ನಾಟಕದಲ್ಲಿ ಶೇ. 34 ಜನ ನಗರವಾಸಿಗಳು ಎನ್ನುತ್ತವೆ ಅಂಕಿಅಂಶಗಳು. ಅಂದರೆ ಹತ್ತಿರಹತ್ತಿರ ಎರಡು ಕೋಟಿ ಕನ್ನಡಿಗರು ಇವತ್ತು ನಗರ-ಪಟ್ಟಣಗಳಲ್ಲಿ ವಾಸಿಸುತ್ತಿದ್ದಾರೆ. ಈ ನಗರ-ಪಟ್ಟಣಗಳ ಸ್ಥಳೀಯ ಸಂಸ್ಥೆಗಳಿಗೆ (ಬೆಂಗಳೂರು ಹೊರತು ಪಡಿಸಿ) ಕಳೆದ ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆದದ್ದು, ಅದರಲ್ಲಿ ಬಿಜೆಪಿಯನ್ನು ಹಿಂದಿಕ್ಕಿ ಗ್ರಾಮೀಣ ಮತದಾರರ ಪಕ್ಷ ಎಂತಲೆ ಗುರುತಾದ ಜೆಡಿಎಸ್ ಎರಡನೆ ಸ್ಥಾನಕ್ಕೆ ಬಂದಿದ್ದು, ಆ ಫಲಿತಾಂಶಗಳು ಹಸ್ತಾಂತರ ಎಂಬ ಪ್ರಹಸನದ ಮೇಲೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಪರಿಣಾಮ ಬೀರಿದ್ದು ನಿಮಗೆ ಗೊತ್ತ್ತಿರಬಹುದು.

ಕಳೆದ ಶತಮಾನದ ಆದಿಯಲ್ಲಿ ಭಾರತದ ಫ್ಯೂಡಲ್ ಸಮಾಜಕ್ಕೆ ಜಾತಿ-ಲಿಂಗ ಭೇದವಿಲ್ಲದೆ ಎಲ್ಲರೂ ಪಾಲ್ಗೊಳ್ಳಬಹುದಾದ ಪ್ರಜಾಪ್ರಭುತ್ವದ ಕಲ್ಪನೆಯೆ ಇರಲಿಲ್ಲ. ಇತ್ತೀಚಿನ ದಶಕಗಳಲ್ಲಿ ಬಂದ ಗ್ರಾಮಪಂಚಾಯಿತಿಗಳು ಮತ್ತು ನಗರಸಭೆಗಳು ಪ್ರಜಾಆಡಳಿತದಲ್ಲಿ ಬೇರುಮಟ್ಟದ ಪ್ರಜಾಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಿದವು. ಸ್ಥಳೀಯರನ್ನು ಸ್ಥಳೀಯವಾಗಿಯೆ ಸ್ವಾವಲಂಬಿಯಾಗಿಸುವ, ಅವರ ಕೃತ್ಯಗಳಿಗೆ ಅವರನ್ನೆ ಜವಾಬ್ದಾರರನ್ನಾಗಿಸುವ ಈ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯ ಪರಿಣಾಮ ಬಹಳ ದೂರಗಾಮಿಯಾದದ್ದು; ಧನಾತ್ಮಕವಾದದ್ದು.

ಆದರೆ ಈ ಸ್ಥಳೀಯ ಸಂಸ್ಥೆಗಳ ಮೇಲೆ ರಾಜ್ಯ ಸರ್ಕಾರದ ಅಧಿಕಾರರೂಢ ಪಕ್ಷಗಳು ಮಾಡುವ ಅತ್ಯಾಚಾರಗಳಂತೂ ಇಡೀ ವ್ಯವಸ್ಥೆಯ, ಆಶಯದ ಶೀಲಹರಣ ಅಂತಲೆ ಹೇಳಬೇಕು. ಕರ್ನಾಟಕವನ್ನೆ ತೆಗೆದುಕೊಂಡರೆ, ನಾಲ್ಕು ತಿಂಗಳಿನ ಹಿಂದೆಯೆ, ಅಂದರೆ ಅಕ್ಟೋಬರ್ 3, 2007 ರ ಸುಮಾರಿನಲ್ಲಿಯೆ ತಮ್ಮ ಜವಾಬ್ದಾರಿಗಳನ್ನು ಸ್ವೀಕರಿಸಬೇಕಿದ್ದ ನಗರಪ್ರದೇಶದ 4920 ಜನಪ್ರತಿನಿಧಿಗಳು ಇಲ್ಲಿಯವರೆಗೂ ಅದನ್ನು ಸ್ವೀಕರಿಸಲಾಗಿಲ್ಲ. ಅದಕ್ಕೆ ಮೂಲಕಾರಣವಾಗಿದ್ದದ್ದು ಈ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರಿಗೆ ಮೀಸಲು ನಿಗದಿ ಪಡಿಸಲಾಗದಿದ್ದದ್ದು. ಇದಕ್ಕೆ ಅನೇಕ ಕಾರಣಗಳನ್ನು ಕೊಡಬಹುದಾದರೂ, ಶಾಸನಸಭೆಯಲ್ಲಿ ತಮ್ಮ ಮೂಲಭೂತ ಜವಾಬ್ದಾರಿಯನ್ನು ನಿರ್ವಹಿಸಲಾಗದ ಕರ್ನಾಟಕದ ಅಪ್ರಯೋಜಕ-ಅಯೋಗ್ಯ ಶಾಸಕರು ಮತ್ತು ಮಂತ್ರಿಗಳೆ ಮೂಲಕಾರಣ. ಅಸಮರ್ಥ ಅಧಿಕಾರಿಗಳಿಂದ ಮತ್ತು ಭ್ರಷ್ಟ ರಾಜಕಾರಣಿಗಳಿಂದ ಒಂದು ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗದಂತಹ ಕಾನೂನುಗಳನ್ನು ಈ ಶಾಸಕರು ತಂದಿದ್ದರೆ ಈಗಿನ ಸ್ಥಿತಿ ಉದ್ಭವಿಸುತ್ತಿರಲಿಲ್ಲ.

Jan 24, 2008

ಬರೀ ಒಂದಿಬ್ಬರು ಸ್ಟಾರ್‌ಗಳನ್ನಷ್ಟೆ ಅಲ್ಲ, ಭಾರತವನ್ನೂ ಬೆಳೆಸಬೇಕಿರುವ ಕ್ರಿಕೆಟ್...

(ವಿಕ್ರಾಂತ ಕರ್ನಾಟಕ - ಫೆಬ್ರವರಿ 1, 2008 ರ ಸಂಚಿಕೆಯಲ್ಲಿನ ಬರಹ)


ಕೋಟ್ಯಾಂತರ ಜನ ಕನ್ನಡಿಗರಿಗೆ ಎನ್ನಲಾಗದಿದ್ದರೂ ಒಂದಷ್ಟು ಲಕ್ಷ ಕನ್ನಡಿಗರಿಗೆ ಪರಿಚಯ ಇರುವವರು ಅವರು. ಹತ್ತಾರು, ಬಹುಶಃ ನೂರಾರು ಕೋಟಿಗಳ ಆಸ್ತಿಯನ್ನೂ ಮಾಡಿದ್ದಾರೆ. ಚೆನ್ನಾಗಿ ಓದಿಕೊಂಡಿದ್ದಾರೆ. ಕೆಲವೊಂದು ಸಾಮಾಜಿಕ ಕಾಳಜಿಗಳೂ ಇದ್ದಂತಿವೆ. ಇದೇ ಕಾರಣಕ್ಕೆ ಅವರನ್ನು ನಾನು ಸುಮಾರು ಎರಡೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದೆ. ಅವರಿಗೂ ಕ್ರೀಡೆಗಳ ಬಗ್ಗೆ ಆಸಕ್ತ್ತಿಯಿತ್ತು. ಹಾಗಾಗಿಯೆ ಅಂದು ಭಾರತದ Pathetic State of Sports ಬಗ್ಗೆ ವಿಷಯ ಬಂತು. ಆ ಮಾತುಕತೆಗೆ ನನಗೆ ಹಿನ್ನೆಲೆಯಾಗಿದ್ದದ್ದು ನಾನು 2003 ನವೆಂಬರ್‌ನಲ್ಲಿ ಬರೆದಿದ್ದ ಒಂದು ಲೇಖನ.

ಅಮೆರಿಕಾದಲ್ಲಿ ಅಷ್ಟೇನೂ ಜನಪ್ರಿಯವಲ್ಲದ ಫುಟ್‌ಬಾಲ್ (ಸಾಕರ್) ಕ್ರೀಡೆಯಲ್ಲಿ ಆಗ ತಾನೆ, ಅಂದರೆ 2003ರಲ್ಲಿ, ಒಬ್ಬ ಕಪ್ಪು ಹುಡುಗ ಆಡಲು ಆರಂಭಿಸಿದ್ದ. ಆತನ ಹೆಸರು ಫ್ರೆಡ್ಡಿ ಅಡು. ತನ್ನ ಎಂಟನೆ ವಯಸ್ಸಿನಲ್ಲಿ ಆಫ್ರಿಕಾ ಖಂಡದ ಘಾನಾ ದೇಶದಿಂದ ಅಮೆರಿಕಕ್ಕೆ ವಲಸೆ ಬಂದವ ಅವ. ಅಮೆರಿಕದವರು ಕೆಲವು ದೇಶಗಳಲ್ಲಿ ವಲಸೆ ಲಾಟರಿ ನಡೆಸುತ್ತಾರೆ. ಹಾಗೆ ಲಾಟರಿ ಹೊಡೆದವರಿಗೆ ತಮ್ಮ ದೇಶಕ್ಕೆ ವಲಸೆ ಬರಲು ಅನುಮತಿ ಕೊಡುತ್ತಾರೆ. ಅಂತಹುದೊಂದು ಲಾಟರಿಯಲ್ಲಿ ಅಡುವಿನ ಅಮ್ಮನಿಗೆ ಲಾಟರಿ ಹೊಡೆದಿತ್ತು. ಹಾಗೆ ಅಮೆರಿಕಕ್ಕೆ ಬಂದವನು ಅವನು. ಸೋಜಿಗ ಏನೆಂದರೆ, ಹಾಗೆ ಬಂದ ಆರು ವರ್ಷಕ್ಕೆಲ್ಲ, ಅಂದರೆ ತನ್ನ ಹದಿನಾಲ್ಕನೆ ವಯಸ್ಸಿಗೆಲ್ಲ ಆತ ಅಮೇರಿಕದಲ್ಲಿ ಜನಪ್ರಿಯ ಸಾಕರ್ ಆಟಗಾರನಾಗಿಬಿಟ್ಟ. ಆಗ ಆತನ ವ್ಯಕ್ತಿಚಿತ್ರ ಬರೆಯುತ್ತ ನಾನು ಆಗಿನ ಭಾರತದ ಕ್ರೀಡಾಸ್ಥಿತಿಯನ್ನು ಹೀಗೆ ವಿಮರ್ಶಿಸಿದ್ದೆ:

"ನವೆಂಬರ್ 19, 2003 ರ ಹೊಸ ಪಟ್ಟಿಯ ಪ್ರಕಾರ ವಿಶ್ವ ಫುಟ್ಬಾಲ್‌ನಲ್ಲಿ ಭಾರತದ ಸ್ಥಾನ 204 ಸ್ಥಾನಗಳಲ್ಲಿ 128 ನೆಯದು. ಅಮೇರಿಕೆಯಂತಹ ದೇಶ ಲಾಟರಿಯೋ ಮತ್ತೊಂದೋ ನೀಡಿ, ತಿಳಿದೋ, ತಿಳಿಯದೆಯೋ ಎಲ್ಲಾ ರಂಗಗಳಲ್ಲಿಯೂ ಪ್ರಪಂಚದಲ್ಲಿನ ಶ್ರೇಷ್ಠರನ್ನು ತನ್ನತ್ತ ಸೆಳೆಯುತ್ತಿದೆ. ನಾವು ಕ್ರಿಕೆಟ್ ಎಂಬ ಒಂದೇ ಆಟದಲ್ಲಿ ದೇಶದ ಚೈತನ್ಯ ಮತ್ತು ಆಶಾವಾದವನ್ನು ಅರಸುತ್ತ ಸಾಗುತ್ತಿದ್ದೇವೆ. ಒಬ್ಬ ಕಪಿಲ್ ದೇವ್‌ಗೆ, ಒಬ್ಬ ಗಾಂಧಿಗೆ, ಒಬ್ಬ ಠಾಗೂರ್‌ಗೆ, ಒಬ್ಬ ರಾಮನ್‌ಗೆ, ಒಬ್ಬ ಟಾಟಾಗೆ, ಒಬ್ಬ ಧ್ಯಾನ್ ಸಿಂಗ್‌ಗೆ ತೃಪ್ತಿಪಟ್ಟುಕೊಳ್ಳುತ್ತ, ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ನೆರೆಮನೆಯವನ ಎರಡೂ ಕಣ್ಣು ಹೋಗಲಿ ಎಂಬ ವಿಲಕ್ಷಣ ತೃಪ್ತಿಯಲ್ಲಿದ್ದೇವೆ. ನಮಗೆ ಬೇಕಾಗಿರುವುದು ಒಬ್ಬಿಬ್ಬರಲ್ಲ, ಬದಲಿಗೆ ಪ್ರತಿ ರಂಗದಲ್ಲಿಯೂ ಸಾವಿರಾರು ಗಾಂಧಿ-ರಾಮನ್-ಮೂರ್ತಿ-ಠಾಗೂರ್-ಧ್ಯಾನ್‍‍ಗಳು ಎಂದು ತಿಳಿದುಕೊಳ್ಳದೆ ಹೋಗುತ್ತಿದ್ದೇವೆ.

"ಆದರ್ಶಗಳನ್ನು ಸಿನೆಮಾಗಳಲ್ಲಿಯೂ, ನಾಯಕತ್ವವನ್ನು ನಟರಲ್ಲಿಯೂ, ತೃಪ್ತಿಯನ್ನು ಕ್ರಿಕೆಟ್‌ನಲ್ಲಿಯೂ ಕಾಣುತ್ತ ಮೂಲಭೂತ ಸಮಸ್ಯೆಗಳಿಗೆ ಒತ್ತು ನೀಡದೆ ಮೂಲಭೂತವಾದ ಬೆಳೆಸುತ್ತ ವೈಜ್ಞಾನಿಕತೆಯಿಲ್ಲದೆ ಧರ್ಮ ಕರ್ಮಗಳಲ್ಲಿ ಮುಳುಗೇಳುತ್ತಿದ್ದೇವೆ. ಬೆಂಗಳೂರಿನ ಸುಸಜ್ಜಿತ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವರ್ಷಕ್ಕೊಂದು ಆಟ ಆಡಿಸುತ್ತ, ತಂಡವನ್ನು ದೇಶದಾಚೆ ಕಳುಹಿಸಿ ಇಲ್ಲಿನ ಜನರಿಗೆ ಟಿವಿ ನೋಡಿಸುತ್ತ, ಸ್ಥಳೀಯ ಪಂದ್ಯಗಳ ಕತ್ತು ಹಿಸುಕುತ್ತ, ಇಲ್ಲಿ ಆಡಿಸುವ ಒಂದು ಆಟ ಎಷ್ಟು ಉದ್ಯೋಗ, ನೆಮ್ಮದಿ, ಉಪಕಸುಬುಗಳನ್ನು ಸೃಷ್ಟಿಸುತ್ತದೆ ಎಂಬ ಪರಿವೆಯಿಲ್ಲದೆ ದೂರದೃಷ್ಟಿಯಿಲ್ಲದ ಜೋಭದ್ರಗೇಡಿಗಳಡಿಯಲ್ಲಿ ಕ್ರೀಡೆ, ದೇಶ ಹಿಂದುಳಿಯುತ್ತಿದೆ. ಅಮೇರಿಕೆಯಲ್ಲಿ 60 ವರ್ಷಗಳ ಹಿಂದೆ ಮಹಾ ಆರ್ಥಿಕ ಮುಗ್ಗಟ್ಟು ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ಜನತೆ Seabiscuit ಎಂಬ ರೇಸ್ ಕುದುರೆಯಲ್ಲಿ ತನ್ನ ಚೈತನ್ಯವನ್ನು ಕಂಡುಕೊಂಡಿತು.
ಅಂತಹ ಮಾನಸಿಕ, ದೈಹಿಕ, ಆರ್ಥಿಕ ಚೈತನ್ಯ ಪ್ರತಿ ರಂಗದಲ್ಲಿಯೂ, ಕ್ರೀಡೆಯಲ್ಲಿಯೂ ಕಾಣೋಣ ಎಂದು ಆಶಿಸುತ್ತಾ, ಬಿಡದೆ ಪ್ರಯತ್ನಿಸುತ್ತಾ, ಕಲಿಯುತ್ತಾ..."

ಇದೇ ಹಿನ್ನೆಲೆಯಲ್ಲಿ ನಾನು ಸಾಮಾಜಿಕ ಕಾಳಜಿ ಇದ್ದ ಆ ಶ್ರೀಮಂತ ಕನ್ನಡಿಗರಿಗೆ ಹೇಳಿದೆ: "ಅಲ್ಲ ಸಾರ್, ಯಾಕೆ ನೀವು ಎರಡು-ಮೂರು ಗಂಟೆಗಳ, 20-25 ಓವರ್‌ಗಳ ಕ್ರಿಕೆಟ್ ಆಟವನ್ನು ಇಲ್ಲಿ ಬೆಂಗಳೂರಿನಲ್ಲಿ ಆಡಿಸಲು ಪ್ರಯತ್ನಿಸಬಾರದು. ಅಮೆರಿಕಾದಲ್ಲಿ 3-4 ಲಕ್ಷ ಜನಸಂಖ್ಯೆ ಇರುವ ಪ್ರತಿ ನಗರವೂ ಬೇಸ್‌ಬಾಲ್, ಅಮೆರಿಕನ್ ಫುಟ್‌ಬಾಲ್, ಐಸ್‌ಹಾಕಿ, ಬ್ಯಾಸ್ಕೆಟ್‌ಬಾಲ್ ಆಟಗಳ ತನ್ನದೇ ಆದ ಯಾವುದಾದರೂ ಒಂದು ತಂಡವನ್ನಾದರೂ ಹೊಂದಿದ್ದು, ತಮ್ಮ ನಗರದ ಸುಸಜ್ಜಿತ ಸ್ಟೇಡಿಯಮ್‌ಗಳಲ್ಲಿ ಬೇರೆ ನಗರದ ತಂಡಗಳೊಡನೆ ಆಡುತ್ತವೆ. ಪ್ರತಿ ಆಟಕ್ಕೂ ಆಟ ನೋಡಲು 10-20 ಸಾವಿರದಿಂದ ಹಿಡಿದು, 50-60 ಸಾವಿರದ ತನಕ ಕ್ರೀಡಾಪ್ರೇಮಿಗಳು ಬರುತ್ತಾರೆ. ಅದೇ ಒಂದು ಪರ್ಯಾಯ ಎಕಾನಮಿ. ನೂರಾರು ಜನರಿಗೆ ಅದರಿಂದ ಉದ್ಯೋಗ ದೊರೆಯುತ್ತದೆ. ಅನೇಕ ಲೋಕಲ್ ಸ್ಟಾರ್‌ಗಳು ಹುಟ್ಟಿಕೊಳ್ಳುತ್ತಾರೆ. ಸಾಯಂಕಾಲದ ಹೊತ್ತು ಇರುವುದರಿಂದ ಯಾರೂ ಕೆಲಸ ಬಿಟ್ಟು ಆಟ ನೋಡಲು ಬರುವ ಅಗತ್ಯ ಇಲ್ಲ. ಆ ನಗರದ ಲೋಕಲ್ ಟಿವಿಯವರು ಲೈವ್ ಆಟ ತೋರಿಸುತ್ತಾರೆ. ಜನರಿಗೂ ಮನರಂಜನೆ, ಸ್ಥಳೀಯರಿಗೆ ದ್ಯೋಗ, ಒಂದಷ್ಟು ಸ್ಥಳೀಯ ಸ್ಟಾರ್‌ಗಳ ಜನನ. ಇದನ್ನೆ ನೀವೂ ಯಾಕೆ ಇಲ್ಲಿ ಪ್ರಯತ್ನಿಸಬಾರದು? ಅದಕ್ಕೆ ದುಡ್ಡೇನೂ ಜಾಸ್ತಿ ಬೇಕಾಗಿಲ್ಲ. ಆದರೆ, ನಮ್ಮಲ್ಲಿ ಒಂದೆರಡು ಟೀಮ್ ಕಟ್ಟೋದಿಕ್ಕೆ ಸ್ವಲ್ಪ ಸಮಯ ಹಿಡಿಯುತ್ತೆ. ಒಳ್ಳೆ ಕಾಂಟ್ಯಾಕ್ಟ್ಸ್ ಇರೊ ನಿಮ್ಮಂತಹವರು ಇದನ್ನು ಖಂಡಿತ ಸಾಧ್ಯ ಮಾಡಬಹುದು," ಎಂದೆ.

ನಾನು ಈ ಮಾತು ಹೇಳಿ ಮುಗಿಸಿದ್ದೆ, ಸ್ವತಃ ಕನಸುಗಳಿರುವ ಅವರು ಒಂದು ಕ್ಷಣವೂ ಯೋಚಿಸದೆ, "ಅವೆಲ್ಲ ಇಲ್ಲಿ ಆಗಲ್ರಿ" ಎಂದುಬಿಟ್ಟರು!

***
ಕಳೆದ ವಾರ ತಾನೆ ಆಸ್ಟ್ರೇಲಿಯದಲ್ಲಿನ ತನ್ನ ಮೂರನೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಗೆದ್ದಿದೆ. ಮೊದಲ ಎರಡು ಮ್ಯಾಚ್‌ಗಳನ್ನು ಸೋತಿದ್ದಕ್ಕೆ (ಅದು ಯಾವ ರೀತಿಯಲ್ಲಾದರೂ ಆಗಿರಲಿ) ತಮ್ಮ ಆತ್ಮವಿಶ್ವಾಸವನ್ನೆ ಕಳೆದುಕೊಂಡುಬಿಟ್ಟಿದ್ದ ದೇಶದ ಒಂದಷ್ಟು ಕ್ರಿಕೆಟ್ ಹುಚ್ಚಿನ ಜನ ಈಗ ಮತ್ತೆ ಶ್ವಾಸಕೋಶದಲ್ಲಿ ಗಾಳಿ ತುಂಬಿಸಿಕೊಂಡು, ಅದನ್ನೆ ಎದೆಯುಬ್ಬಿಕೊಂಡಂತೆ ತೋರಿಸುತ್ತ ಓಡಾಡುತ್ತಿದ್ದಾರೆ. ಈ ಐದು ದಿನಗಳ ಟೆಸ್ಟ್ (ಪರೀಕ್ಷಿಸುವ) ಕ್ರಿಕೆಟ್ ಯಾವ ಸಮಯದಲ್ಲಿ, ಯಾವ ಅಗತ್ಯಕ್ಕೆ ಹುಟ್ಟಿತೊ ಈಗಲೂ ಪ್ರಪಂಚದ ಏಳೆಂಟು ದೇಶಗಳ ಜನ ಈಗಿನ ಕಾಲಕ್ಕೆ ಅನಗತ್ಯವಾಗಿರುವ ಇದನ್ನು ಆಡುತ್ತಲೆ ಬರುತ್ತಿದ್ದಾರೆ. ಏಕದಿನಗಳ ಪಂದ್ಯ ಇದ್ದುದರಲ್ಲಿ ಕ್ರಿಕೆಟ್ ಈಗಲೂ ಪ್ರಸ್ತುತವಾಗಿರುವಂತೆ ನೋಡಿಕೊಂಡಿದೆ. ಆದರೆ, ನಮ್ಮ ದೇಶದಲ್ಲಿರುವ ಕ್ರಿಕೆಟ್‌ನ ಇವತ್ತಿನ ಸ್ವರೂಪ ಅನೇಕ ಕಾರಣಗಳಿಗೆ ಪ್ರತಿಗಾಮಿಯಾದದ್ದು, ವಿಚ್ಛಿದ್ರಕಾರಿಯಾದದ್ದು.

ಅನೇಕ ಸ್ತರದಲ್ಲಿ, ಅನೇಕ ವಿಧದಲ್ಲಿ ಅಪಾರ ಪ್ರಭಾವಶಾಲಿಯಾಗಿರುವ ಈ ಕ್ರಿಕೆಟ್ ಆಟ ಭಾರತದಲ್ಲಿ ದೇಶಕ್ಕೆ ಅನುಕೂಲವಾಗಿ ಬೆಳೆಯುತ್ತಿದೆಯಾ ಎಂದರೆ ಇಲ್ಲ ಅಂತಲೆ ಹೇಳಬೇಕು. ಭಾರತದ ಕ್ರಿಕೆಟ್ ಮಂಡಳಿ ಎಷ್ಟು Filthy Rich ಆಗಿದೆಯೊ ಅದು ನಡೆದುಕೊಳ್ಳುತ್ತಿರುವ ರೀತಿಯೂ, ಅದರ ಸಾರ್ವಜನಿಕ ಬದ್ಧತೆಯೂ ಅಷ್ಟೆ Filthy ಯಾಗಿದೆ. ಅದಕ್ಕೆ ಉದಾಹರಣೆಯಾಗಿ ಅದು ಕರ್ನಾಟಕದಲ್ಲಿ ಈವರೆಗೂ ತೋರಿಸಿರುವ ನಡವಳಿಕೆಯನ್ನೆ ತೆಗೆದುಕೊಳ್ಳೋಣ. ಆರೇಳು ವರ್ಷಗಳ ಹಿಂದೆ ಭಾರತದ ಕ್ರಿಕೆಟ್ ತಂಡದಲ್ಲಿ ಅರ್ಧಕ್ಕಿಂತ ಹೆಚ್ಚು ಆಟಗಾರರು ಕರ್ನಾಟಕದವರೆ ಆಗಿದ್ದರು. ಇಂತಹ ಕಾಂಟ್ರಿಬ್ಯೂಷನ್ ಮಾಡಿದ ರಾಜ್ಯಕ್ಕೆ ಭಾರತದ ಕ್ರಿಕೆಟ್ ಮಂಡಳಿ ಏನು ಮಾಡಿದೆ? ಮೈಸೂರಿನಲ್ಲಾಗಲಿ, ಹುಬ್ಬಳ್ಳಿಯಲ್ಲಾಗಲಿ ಒಂದು ಸ್ಟೇಡಿಯಮ್ ಕಟ್ಟಿಸಿದ್ದಾರಾ? ನಗರ-ನಗರಗಳ ಮಧ್ಯೆ ಆಟವಾಡಿಸಿ, ಹೊಸ ಪ್ರತಿಭೆಗಳ ಶೋಧನೆಗೆ ಪ್ರಯತ್ನಿಸಿದ್ದಾರಾ? ಇದು ಎಂತಹ ಬೇಜವಾಬ್ದಾರಿ, ಅಯೋಗ್ಯ ಸಂಸ್ಥೆ ಎಂದರೆ, ಇವತ್ತಿಗೂ ರಾಜ್ಯರಾಜ್ಯಗಳ ನಡುವೆ ಆಡುವ ರಣಜಿ ಕ್ರಿಕೆಟ್ ಮತ್ತದೇ ಐದು ದಿನಗಳ ಟೆಸ್ಟ್ ಕ್ರಿಕೆಟ್ . ರಾಜ್ಯಗಳ ನಡುವೆ ಏಕದಿನದ ಪಂದ್ಯಗಳೇ ನಡೆಯುವುದಿಲ್ಲ. ಆದರೂ ಈ ಮುಠ್ಠಾಳರು ಟೆಸ್ಟ್ ಕ್ರಿಕೆಟ್‌ಗೆಂದೇ ಒಂದು ತಂಡ, ಏಕದಿನ ಪಂದ್ಯಕ್ಕೆ ಒಂದು ತಂಡ, 20/20 ಪಂದ್ಯಕ್ಕೆ ಮತ್ತೊಂದು ತಂಡ ಆಯ್ಕೆ ಮಾಡುತ್ತಾರೆ. ಹೊಸ ಆಟಗಾರರನ್ನು ಮೂಲಭೂತವಾಗಿ ಆಯ್ಕೆ ಮಾಡುವುದು ಮಾತ್ರ ಐದು ದಿನಗಳ ರಣಜಿ ಕ್ರಿಕೆಟ್ ಆಟದಲ್ಲಿನ ಪ್ರದರ್ಶನದ ಆಧಾರದ ಮೇಲೆ! ಇಲ್ಲಿ ಇದಕ್ಕೆ ಇನ್ನೂ ಒಂದು ಆಯಾಮವಿದೆ. ಇವತ್ತು ನ್ಯಾಷನಲ್ ಟೀಮ್‌ಗೆ ಆಯ್ಕೆಯಾದವ ಮಾತ್ರ ಅದೃಷ್ಟವಂತ. ಮಿಕ್ಕವರು ಎಷ್ಟೇ ಒಳ್ಳೆಯ ಆಟಗಾರರಾಗಿದ್ದರೂ ಕ್ರಿಕೆಟ್ ಆಟದಿಂದಲೆ ಅವರ ಜೀವನೋಪಾಯ ಸಾಧ್ಯವಿಲ್ಲ. ಇಂತಹ ಜನಪ್ರಿಯ ಆಟದ ಆಟಗಾರರ Pathetic ಸ್ಥಿತಿ ಅಂದರೆ ಅದು ಇದೇ.



ಲೇಖನದ ವಿಡಿಯೊ ಪ್ರಸ್ತುತಿ

ಭಾರತಕ್ಕೆ ಸ್ವಾತಂತ್ರ್ಯ ಬಂದು, ನಂತರ ಪ್ರಜಾಪ್ರಭುತ್ವವೂ ಸ್ಥಾಪನೆಯಾಗಿ ದಕ್ಷಿಣ ಕರ್ನಾಟಕದ ಮೈಸೂರು ಸಂಸ್ಥಾನ ಬಚಾವಾಯಿತು. ಇಲ್ಲದಿದ್ದರೆ ಶ್ರೀಕಂಠದತ್ತ ಒಡೆಯರ್ ಎಂಬುವವರು ಮೈಸೂರಿನ ರಾಜರಾಗಿಬಿಡುತ್ತಿದ್ದರು. ಯಾವೊಂದು ಕನಸೂ, ಯೋಜನೆಯೂ ಇಲ್ಲದ ಇವರು (ಇದ್ದಿದ್ದರೆ ಮೈಸೂರಿನ ಲೋಕಸಭಾ ಕ್ಷೇತ್ರದ ಜನ ಇವರನ್ನು ಎರಡೆರಡು ಸಲ ಸೋಲಿಸುತ್ತಿರಲಿಲ್ಲ) ಈಗ ಕರ್ನಾಟಕ ಕ್ರಿಕೆಟ್ ಬೋರ್ಡಿನ ಅಧ್ಯಕ್ಷರು. ಇವರ ಕಾಲದಲ್ಲೂ ಕರ್ನಾಟಕದ ಕ್ರಿಕೆಟ್ ಒಂದು ಹೊಸ ತಿರುವು ತೆಗೆದುಕೊಳ್ಳುವುದು ಸಂಶಯ. ಇನ್ನು ಕೇಂದ್ರದಲ್ಲಿ ಪ್ರಭಾವಿ ಮಂತ್ರಿಯಾಗಿ, ಕೈತುಂಬ ಕೆಲಸ ಇರುವ, ಪ್ರತಿದಿನ ಪವರ್ ಪಾಲಿಟಿಕ್ಸ್‌ನಲ್ಲಿ ಗುದ್ದಾಡಬೇಕಿರುವ ಶರದ್ ಪವಾರ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ. ಇಂತಹ ರಾಜಕಾರಣಿಗಳ, ಹೊಟ್ಟೆಕಿಚ್ಚಿನ ಸ್ವಕೇಂದ್ರಿತ, ಸ್ವಾರ್ಥಿ, ಮಾಜಿ ಕ್ರಿಕೆಟ್ ಆಟಗಾರರ ಕೈಯಲ್ಲಿ ಇವತ್ತು ಭಾರತದ ಕ್ರಿಕೆಟ್ ಇದೆ. ಇವರಾರಿಗೂ ದೇಶದ ಪ್ರಗತಿಗೆ ಪೂರಕವಾಗಿ ಭಾರತದ ಒಳಗೆ ಕ್ರಿಕೆಟ್ ಅನ್ನು ಬೆಳೆಸುವ ಯೋಚನೆಗಳಾಗಲಿ, ಯೋಜನೆಗಳಾಗಲಿ ಇದ್ದಂತಿಲ್ಲ. ದೇಶದ ಬಗ್ಗೆ ಪರಿವೆ ಇಲ್ಲದ ಶುದ್ಧ ದಡ್ಡರು, ಸ್ವಾರ್ಥಿಗಳು ಭಾರತದಲ್ಲಿ ಕ್ರಿಕೆಟ್ ಆಟವನ್ನು ನಿಯಂತ್ರಿಸುವ ಅಧಿಕಾರ ಸ್ಥಾನದಲ್ಲಿರುವ ಈ ಮುಠ್ಠಾಳ ಶ್ರೀಮಂತ ಜೋಕರ್‌ಗಳು.

ತೆರೆದಿರುವ ಬಾಗಿಲು

ಮೂರ್ನಾಲ್ಕು ವರ್ಷಕ್ಕೊಮ್ಮೆ ಬೆಂಗಳೂರಿನಲ್ಲೂ ಅಂತಾರ್ರಾಷ್ಟ್ರೀಯ ಕ್ರಿಕೆಟ್ ಆಟ ನಡೆಯುತ್ತದೆ. ಸುಮಾರು ಅರವತ್ತು+ ಲಕ್ಷ ಜನಸಂಖ್ಯೆಯ ಬೆಂಗಳೂರಿನಲ್ಲಿ ನೂರಕ್ಕೆ ಒಬ್ಬರಿಗೂ ಸ್ಟೇಡಿಯಮ್‌ನಲ್ಲಿ ಕುಳಿತು ಆಟ ನೋಡುವ ಭಾಗ್ಯ ಇಲ್ಲ. ಅವುಗಳ ಬೆಲೆಯೂ ಕಮ್ಮಿಯಿಲ್ಲ. ಶ್ರೀಮಂತರಿಗಷ್ಟೆ ಟಿಕೆಟ್. ಅವರೂ ಲಾಠಿಚಾರ್ಜ್ ಮಾಡಿಸಿಕೊಂಡು ಟಿಕೆಟ್ ಕೊಳ್ಳಬೇಕು! ಎಂತಹ ಹೀನಾಯ ಸ್ಥಿತಿ.

ಈ ಎಲ್ಲವುಗಳ ಹಿನ್ನೆಲೆಯಲ್ಲಿ ಕಳೆದ ವರ್ಷ ಭಾರತಕ್ಕೆ ವರದಾನದಂತೆ ಘಟಿಸಿದ ಘಟನೆ ಎಂದರೆ 20/20 ಕ್ರಿಕೆಟ್. ಎರಡು-ಮೂರು ಗಂಟೆಗಳಲ್ಲಿ ಮುಗಿಯುವ ಈ ಆಟ ಮುಂದಿನ ದಿನಗಳಲ್ಲಿ ಭಾರತದ ಒಳಗೂ ಪ್ರಭಾವ ಬೀರಲಿದೆ. ಭಾರತದಲ್ಲಿನ, ವಿಶೇಷವಾಗಿ ಅನೇಕ ಮಾಜಿ ಸ್ಟಾರ್ ಆಟಗಾರರನ್ನು ಹೊಂದಿರುವ ಕರ್ನಾಟಕದಲ್ಲಿನ ಶ್ರೀಮಂತರಿಗೆ, ಉದ್ಯಮಿಗಳಿಗೆ ಈಗ ಒಂದು ಅವಕಾಶವಿದೆ. ಅದು ಮೈಸೂರು, ಹುಬ್ಬಳಿ, ಮಂಗಳೂರು, ದಾವಣಗೆರೆಯಂತಹ ನಗರಗಳಲ್ಲಿ ಒಳ್ಳೆಯ ಕ್ರಿಕೆಟ್‌ಕ್ಲಬ್‌ಗಳನ್ನು ಮಾಡಿ, ನಗರಗಳ ಮಧ್ಯೆ ಪಂದ್ಯಗಳನ್ನು ಏರ್ಪಡಿಸುವುದು. ಇವತ್ತು ಕರ್ನಾಟಕದಲ್ಲಿ ಏಳೆಂಟು ಟಿವಿ ಚಾನಲ್‌ಗಳಿವೆ. ಮನರಂಜನೆ, ಸುದ್ದಿ, ಕ್ರೀಡೆಗಳ ವಿಚಾರಕ್ಕೆ ಈ ಚಾನಲ್‌ಗಳಿಗಿರುವುದು ಬಕಾಸುರ ಹಸಿವು. ಸರಿಯಾಗಿ ಯೋಜನೆ ಮಾಡಿ, ಒಂದೆರಡು ವರ್ಷಗಳ ಪ್ರಯತ್ನಶೀಲತೆ ಹಾಕಿದರೆ, ಸ್ಥಳೀಯ ಕುಂಬ್ಳೆ, ಜಾವಗಲ್‌ಗಳು, ಯಾವ ಧೋನಿ, ತೆಂಡೂಲ್ಕರ್‌ಗಿಂತಲೂ ಇಷ್ಟವಾಗುತ್ತಾರೆ. ಸ್ಥಳೀಯ ಕ್ಲಬ್‌ನಲ್ಲಿ ಆಟವಾಡುವ ಹುಡುಗನೂ ಒಂದು ಒಳ್ಳೆಯ ಆರ್ಥಿಕ ಭವಿಷ್ಯ ಕಟ್ಟಿಕೊಳ್ಳುತ್ತಾನೆ. ಅನೇಕ ಜನರಿಗೆ ಉದ್ಯೋಗವೂ, ಸಾವಿರಾರು ಜನರಿಗೆ ತಮ್ಮ ಊರಿನ ಬಗ್ಗೆ ಪ್ರೇಮವೂ, ಅಲ್ಲಿಯೇ ಉತ್ತಮ ಕ್ರೀಡಾರಂಜನೆಯೂ ಸಿಗುತ್ತದೆ. ಒಂದು ಜನಪ್ರಿಯ ಕ್ರೀಡೆಕ್ರೀಡೆ ಕೊಡಬೇಕಾದದ್ದು ಅದು. ಮುಂದುವರೆದ ದೇಶಗಳಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿರುವ ರೀತಿಯೂ ಇದೆ. ಪಾಶ್ಚಾತ್ಯ ದೇಶಗಳಲ್ಲಿನ “Who Wants to Be a Millionaire” ನಮ್ಮಲ್ಲಿ ಕೌನ್ ಬನೇಗ ಕರೋಡ್‌ಪತಿಯಾಗಿ ಬಂತು. ಅದೇ ತರಹ ಆಟಗಳೂ, ಕನಿಷ್ಠ ಟಿವಿಯವರ ಹಸಿವಿನಿಂದಾಗಿಯಾದರೂ ಬರುತ್ತವೆ. ಕಾಲ ಕೆಲವೊಮ್ಮೆ ಬಹುವೇಗವಾಗಿ ಚಲಿಸಿಬಿಡುತ್ತದೆ.

Jan 16, 2008

ಅಗಾಧ ಸಾಧ್ಯತೆಗಳ ನ್ಯಾನೊ ಕಾರು

(ವಿಕ್ರಾಂತ ಕರ್ನಾಟಕ - ಜನವರಿ 25, 2008 ರ ಸಂಚಿಕೆಯಲ್ಲಿನ ಬರಹ)

ಇಂತಹುದೊಂದು ಸಾಧನೆ ಕೇವಲ ಭಾರತಕ್ಕೇ ಅಲ್ಲ, ಪ್ರಪಂಚಕ್ಕೂ ಬೇಕಾಗಿತ್ತು. ಭಾರತದ ಬಹುಸಂಖ್ಯಾತ ಕೆಳಮಧ್ಯಮವರ್ಗದ ಬಡವರೂ ಕಾರು ಕೊಂಡುಕೊಳ್ಳಬಹುದಾದಷ್ಟು ಅಗ್ಗದ ಬೆಲೆಯಲ್ಲಿ ಕಾರನ್ನು ಒದಗಿಸಬೇಕು ಎಂದುಕೊಂಡ ರತನ್ ಟಾಟಾರ ಕನಸಿನಲ್ಲಿ ವ್ಯಾಪಾರ-ವಹಿವಾಟಿನ ಯೋಚನೆಯೆ ಮೂಲಯೋಚನೆ ಎಂದುಕೊಂಡರೂ, ಟಾಟಾರವರ ನ್ಯಾನೊ ಕಾರಿಗೆ ಅದನ್ನು ಮೀರಿದ ಸಾಧ್ಯತೆಗಳಿವೆ. ಇದು ನಿಜಕ್ಕೂ ಯಶಸ್ವಿಯಾಗಿ ಮಾರಾಟವಾದರೆ, ಜಾಗತಿಕ ಪರಿಸರ, ಭಾರತದ ಆರ್ಥಿಕತೆ, ಭಾರತೀಯರ ಇನ್ನೊವೇಷನ್ ಸ್ಪಿರಿಟ್, ವಿಶ್ವದಾದ್ಯಂತದ ಆಟೊಮೊಬೈಲ್ ಇಂಡಸ್ಟ್ರಿಯ ಸ್ಥಿತಿ ಮತ್ತು ಗತಿಗಳ ಮೇಲೆಲ್ಲ ಇದು ನೇರ ಪರಿಣಾಮ ಬೀರಲಿದೆ. ಇವತ್ತು ನ್ಯಾನೊ ಕಾರಿನ ಅಗ್ಗಳಿಕೆ ಅತಿ ಕಮ್ಮಿ ಬೆಲೆಯ, ಯಾರಿಂದಲೂ ಇಷ್ಟು ಅಗ್ಗದ ಬೆಲೆಗೆ ತಯಾರಿಸಲಾಗದ ಕಾರು ಎನ್ನುವುದಾಗಿದ್ದರೂ, ವಿಶ್ವದಾದ್ಯಂತದ ಜನ ಮತ್ತು ಮಾಧ್ಯಮಗಳು ಈ ಕಾರಿನತ್ತ ಹರಿಸಿದ ಗಮನ ಪರೋಕ್ಷವಾಗಿ ಅನೇಕ ಗಂಭೀರ ಪರಿಣಾಮಗಳನ್ನು (ripple effect) ಬೀರಲಿದೆ.

ಈ ಕಾರಿನ ಯಶಸ್ಸು ಜಾಗತಿಕವಾಗಿ ಬೀರಲಿರುವ ಪ್ರಭಾವ ಒಳ್ಳೆಯ ಪ್ರಭಾವವೇ ಆಗಲಿದೆ. ವಿಶ್ವದ ಎಲ್ಲಾ ದೇಶದವರಿಗಿಂತ ಹೆಚ್ಚಿನ ಕಾರುಗಳನ್ನು ಕೊಳ್ಳುವ ಅಮೆರಿಕದಂತಹ ದೇಶದಲ್ಲಿ ಬಹುಪಾಲು ಜನ ಓಡಿಸುವುದು ದೊಡ್ಡದೊಡ್ಡ ಕಾರುಗಳನ್ನು. ಇಪ್ಪತ್ತು ವರ್ಷಗಳ ಹಿಂದೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿದಿದ್ದೆ, ಅಮೆರಿಕದ ಜನ ಮತ್ತು ಅಮೆರಿಕದ ದೈತ್ಯ ಕಾರು ಉತ್ಪಾದಕ ಕಂಪನಿಗಳು ಮೈಲೇಜಿನ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ. ಬಲಶಾಲಿ ಇಂಜಿನ್ನಿನ ಹೆಸರಿನಲ್ಲಿ, ಅಪಘಾತವಾದರೂ ಕಮ್ಮಿ ಅಪಾಯವಾಗುತ್ತದೆ ಎನ್ನುವಂತಹ ಸುರಕ್ಷತೆಯ ಹೆಸರಿನಲ್ಲಿ, ಐಷಾರಾಮದ ಹೆಸರಿನಲ್ಲಿ, ದೈತ್ಯಗಾತ್ರದ ಎಸ್‌ಯುವಿಗಳನ್ನು ಇಲ್ಲವೆ ಸ್ಪೋರ್ಟ್ಸ್ ಕಾರುಗಳ ತರಹದ ಕಾರುಗಳನ್ನು ಇಲ್ಲಿಯ ಜನ ಕೊಳ್ಳಲು ಆರಂಭಿಸಿಬಿಟ್ಟರು. ಇಲ್ಲಿನ ಬಹುಪಾಲು ದೈತ್ಯ ಕಾರುಗಳ ಮೈಲೇಜು ಒಂದು ಲೀಟರ್ ಪೆಟ್ರೊಲಿಗೆ ಕೇವಲ 8-10 ಕಿ.ಮಿ. ಮಾತ್ರ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಪೆಟ್ರೊಲಿನ ಬೆಲೆ ಕಿರಿಕಿರಿಯಾಗುವಷ್ಟು ಹೆಚ್ಚಾಗುವ ತನಕವೂ, ಪರಿಸರ ಕಾಳಜಿಯಿರುವ ಅಲ್ಲೊಬ್ಬರು ಇಲ್ಲೊಬ್ಬರು ಎಲೆಕ್ಟ್ರಿಕ್ ಕಾರುಗಳನ್ನೊ ಇಲ್ಲವೆ ಹೈಬ್ರಿಡ್ ಕಾರುಗಳನ್ನೊ ಕೊಳ್ಳುತ್ತಿದ್ದರೆ ಹೊರತು ಹೆಚ್ಚಿಗೆ ಮೈಲೇಜು ಕೊಡುವ, ಪರಿಸರ ಸ್ನೇಹಿ ಕಾರುಗಳ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಇನ್ನು, ಅಮೇರಿಕದಲ್ಲಿ ಸಿಗುವ ಅತಿ ಕಡಿಮೆ ಬೆಲೆಯ ಕಾರಿನ ಬೆಲೆ 10300 ಡಾಲರ್! ಹಾಗಾಗಿಯೆ, ಭಾರತದಲ್ಲಿ ಕೇವಲ 2500 ಡಾಲರ್‌ಗಳಿಗೆ ಒಂದು ಸಣ್ಣ ಕಾರು, ಅದೂ ಲೀಟರ್‌ಗೆ 25 ಕಿ.ಮಿ. ಮೈಲೇಜು ಕೊಡುವ ಕಾರು ಸಾಧ್ಯ ಅಂತಾದರೆ, ಅಮೆರಿಕದಲ್ಲಿಯೆ ಏನು, ಯೂರೋಪು, ಏಷ್ಯಾಗಳ ಕಾರು ಉತ್ಪಾದಕರೆಲ್ಲ ಇಂತಹುದೇ ಕಾರುಗಳ ಉತ್ಪಾದನೆಯತ್ತ ಗಮನ ಕೊಡುವುದು ಇನ್ನು ತೀರಾ ಅಗತ್ಯವಾಗಿ ಬಿಡುತ್ತದೆ.

ಇವತ್ತಿನ ಜಾಗತಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಟಾಟಾದವರ ನ್ಯಾನೊ ಕಾರು ರಸ್ತೆಗೆ ಇಳಿಯಲು ಇದಕ್ಕಿಂತ ಪ್ರಶಸ್ತವಾದ ಸಮಯ ಹಿಂದೆ ಇರಲಿಲ್ಲ. ಕಚ್ಚಾತೈಲದ ಬೆಲೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಭಾರತ ಮತ್ತು ಚೀನಾ ದೇಶಗಳ ಅರ್ಥಿಕ ಅಭಿವೃದ್ಧಿ ಈ ಬೆಲೆಯೆರಿಕೆ ನಿಲ್ಲದ ರೀತಿ ನೋಡಿಕೊಳ್ಳುತ್ತಿದೆ. ಇಂದಿನ ಕಚ್ಚಾತೈಲದ 2/3 ಭಾಗದಷ್ಟು ಸರಬರಾಜು ಗಲ್ಫ್ ದೇಶಗಳಿಂದ ಆಗುತ್ತಿದೆ. ಅಲ್ಲಿನ ಬಹುಪಾಲು ದೇಶಗಳಲ್ಲಿ ಪ್ರಜಾಪ್ರಭುತ್ವವಾಗಲಿ, ಜವಾಬ್ದಾರಿಯುತ ಸರ್ಕಾರಗಳಾಗಲಿ ಇಲ್ಲದೇ ಇರುವುದರಿಂದ ಅಲ್ಲಿಗೆ ಹೋಗುವ ಈ ತೈಲದ ಹಣ ಒಮ್ಮೊಮ್ಮೆ ಇಸ್ಲಾಮ್ ಮತಾಂಧ ಭಯೋತ್ಪಾದಕರ ಕೈಗೂ ಸೇರುತ್ತಿದೆ. ಹಾಗೆಯೆ, ಪೆಟ್ರೋಲಿಯಮ್ ಉತ್ಪನ್ನಗಳನ್ನು ಉರಿಸುವುದರಿಂದ ಉತ್ಪತ್ತಿಯಾಗುವ ಇಂಗಾಲದ ಡೈಆಕ್ಸೈಡ್ ಅನಿಲ ಗ್ಲೋಬಲ್ ವಾರ್ಮಿಂಗ್‌ಗೆ ಮೂಲಕಾರಣವಾಗಿದೆ. ಹೀಗೆ, ಉತ್ತಮ ಮೈಲೇಜು ಇಲ್ಲದ, ಇಂಧನ-ಎಫಿಷಿಯೆಂಟ್ ಅಲ್ಲದ ವಾಹನಗಳು ನೇರವಾಗಿಯೆ ಕಚ್ಚಾ ತೈಲದ ಬೇಡಿಕೆ ಮತ್ತು ತನ್ಮೂಲಕ ಭಯೋತ್ಪಾದನೆ ಮತ್ತು ಪರಿಸರ ಹಾನಿಗೆ ಕಾಣಿಕೆ ನೀಡುತ್ತಿವೆ. ವಿಶ್ವದಾದ್ಯಂತದ ಜವಾಬ್ದಾರಿಯುತ ಜನ, ಸಂಘಸಂಸ್ಥೆಗಳು, ಮತ್ತು ಸರ್ಕಾರಗಳು ಈ ಕೊಂಡಿಯನ್ನು ಅರ್ಥ ಮಾಡಿಕೊಂಡು ಅದನ್ನು ಎದುರಿಸುವ ಮಾರ್ಗೋಪಾಯಗಳ ಹುಡುಕಾಟದಲ್ಲಿರುವಾಗಲೆ ಟಾಟಾದವರ ನ್ಯಾನೊ ಕಾರು ಮಾರುಕಟ್ಟೆಗೆ ಬಂದಿದೆ.

ಲೇಖನದ ವಿಡಿಯೊ ಪ್ರಸ್ತುತಿ

ಈಗ ನಮ್ಮ ಭಾರತದ್ದೆ ಉದಾಹರಣೆ ತೆಗೆದುಕೊಳ್ಳೋಣ. ಜಾಗತೀಕರಣವನ್ನು ಸಕಾರಣವಾಗಿಯೆ ವಿರೋಧಿಸುತ್ತಿರುವವರು ಏನೇ ಹೇಳಿದರೂ, ಬಹುಪಾಲು ಜನರ ಜೀವನ ರೀತಿ ಇಂದು ಬದಲಾಗಿದೆ. ಸೆಮಿನಾರುಗಳಲ್ಲಿ, ಸಣ್ಣಪುಟ್ಟ ಸಭೆಗಳಲ್ಲಿ, ಕೆಲವೊಂದು ಜವಾಬ್ದಾರಿಯುತ ಮಾಧ್ಯಮಗಳಲ್ಲಿ ಜನರಿಗೆ ಎಷ್ಟೇ ಆರ್ಥಿಕಸಂಬಂಧಿ ಸಂಯಮ ಬೋಧಿಸಿದರೂ ಬಹುಪಾಲು ಜನರಿಗೆ ಇದು ಮುಟ್ಟುವುದೇ ಇಲ್ಲ. ನ್ಯಾನೊ ಕಾರಿನಿಂದ ಪರಿಸರಕ್ಕೆ ಹಾನಿ, ಟ್ರಾಫಿಕ್ ಜಾಮ್ ಜಾಸ್ತಿ ಎಂದೆಲ್ಲ ಪರಿಸರವಾದಿಗಳು ಹೇಳಿಕೊಂಡು ಓಡಾಡಿದರೂ, ಕಾರು ಕೊಳ್ಳುವ ತಾಕತ್ತು ಬಂದ ತಕ್ಷಣ ಮಧ್ಯಮವರ್ಗದ ಮನುಷ್ಯ ಕಾರು ಕೊಂಡೇಕೊಳ್ಳುತ್ತಾನೆ. ಎಲ್ಲಾ ಸಮಯದಲ್ಲಿಯೂ ಅದು ಅವಶ್ಯಕ ಎಂದಲ್ಲ. ಆದರೂ ಕೊಳ್ಳುತ್ತಾನೆ. ಆತ ಮೊದಲು ಕೊಳ್ಳುವ ಕಾರು ಸೆಕೆಂಡ್ ಹ್ಯಾಂಡ್ ಕಾರು ಆಗಿರುತ್ತದೆ, ಇಲ್ಲವೆ ಮಾರುತಿ-800 ಆಗಿರುತ್ತದೆ. ನ್ಯಾನೊ ಬಂದ ಮೇಲೆ ಈ ವರ್ಗಕ್ಕೆ ಸೇರಿದ ಜನ ಕೊಳ್ಳುವ ಮೊದಲ ಕಾರು ನ್ಯಾನೊ ಕಾರೇ ಆಗಿರುತ್ತದೆ. ನ್ಯಾನೊ ಕಾರಿಗೆ ಮಾರುತಿ-800 ಗೆ ಬೇಕಾದಷ್ಟು ಕಬ್ಬಿಣ ಬೇಕಿಲ್ಲ; ಗಾಜು ಬೇಕಿಲ್ಲ; ರಬ್ಬರ್ ಬೇಕಿಲ್ಲ. ಯಾವುದೆ ಕಚ್ಚಾಸಾಮಗ್ರಿಯ ವಿಚಾರದಲ್ಲೂ ನ್ಯಾನೊ ಕಾರಿಗೆ ಇತರ ಇನ್ಯಾವ ಕಾರಿಗಿಂತಲೂ ಕಡಿಮೆ ವಸ್ತುವನ್ನು ಉಪಯೋಗಿಸಲಾಗಿರುತ್ತದೆ. ಇನ್ನು ಇದು ಮಾರುತಿ-800 ಕೊಡುವುದಕ್ಕಿಂತಲೂ ಹೆಚ್ಚಿನ ಮೈಲೇಜ್ ಕೊಡುವುದರಿಂದ, ಅಷ್ಟು ಮಾತ್ರದ ಪೆಟ್ರೋಲ್ ಬಳಕೆ ಮತ್ತು ಕಾರ್ಬನ್ ಡೈಆಕ್ಸೈಡ್ ಹೊರ ಚೆಲ್ಲುವಿಕೆ ಕಡಿಮೆಯಾಗುತ್ತದೆ. ಇವುಗಳ ಜೊತೆಗೇ, ಇದು ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಕಾರು ಆಗಿರುವುದರಿಂದ ಇದಕ್ಕೆ ಕೊಡುವ ಪ್ರತಿಯೊಂದು ರೂಪಾಯಿಯೂ ಭಾರತದ ಒಳಗೆಯೇ ಚಲಾವಣೆ ಆಗುತ್ತದೆ. ಇದು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸೃಷ್ಟಿಸುವ ಪ್ರತಿಯೊಂದು ಉದ್ಯೋಗವೂ ಭಾರತೀಯನಿಗೇ ಸಿಗುತ್ತದೆ.

ಇದೇ ಸಮಯದಲ್ಲಿ, ಸಿಂಗೂರಿನ ರಕ್ತ ಈ ಕಾರಿಗೆ ಅಂಟಿಕೊಂಡಿದೆ ಎಂದು ಈಗಾಗಲೆ ಕೆಲವರು ಈ ಕಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಒಂದು ಅರ್ಥದಲ್ಲಿ ಈ ವಿರೋಧ ಬಹಳ ಸಮಯೋಚಿತವಾದದ್ದು ಮತ್ತು ಉದ್ದೇಶರೀತ್ಯ ಸಕಾಲಿಕವಾದದ್ದು. ಟಾಟಾದಂತಹ ಬಲಿಷ್ಠ ಬಹುರಾಷ್ಟ್ರೀಯ ಕಂಪನಿಗಳು ಕಂಪನಿಯ ಆರ್ಥಿಕ ಹಿತವನ್ನೆ ಮುಖ್ಯವಾಗಿ ಭಾವಿಸಿಕೊಂಡು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮರೆತಾಗಲೆಲ್ಲ ಇಂತಹದ್ದು ಆಗುತ್ತಿರುತ್ತದೆ. ಈಗಾಗಲೆ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳುವುದಕ್ಕೆ ಮತ್ತು ಮುಂದೆ ಅಂತಹ ತಪ್ಪುಗಳನ್ನು ಮಾಡದೆ ಎಚ್ಚರವಾಗಿ ಇರುವುದಕ್ಕೆ ಈ ರೀತಿಯ ಪ್ರತಿಭಟನೆಗಳು ಸಹಕಾರಿ. ಎಲ್ಲೆಲ್ಲಿ ಬೇಜವಾಬ್ದಾರಿಯಾಗಿ ರೈತರನ್ನು ಒಕ್ಕಲೆಬ್ಬಿಸಿ, ಅವರ ಜಮೀನನ್ನು ವಶಪಡಿಸಿಕೊಂಡು ಅದನ್ನು ದೊಡ್ದದೊಡ್ಡ ಕಂಪನಿಗಳಿಗೆ ಕೊಡಲು ರಾಜ್ಯಸರ್ಕಾರಗಳು ಮುಂದಾಗುತ್ತಿವೆಯೊ ಅಲ್ಲೆಲ್ಲ ಈಗ ನ್ಯಾನೊ ಹೆಸರಿನಲ್ಲಿ ಕೇಳಿಬರುತ್ತಿರುವ ಪ್ರತಿಭಟನೆ ನೈತಿಕ ತಾಕತ್ತು ತುಂಬಲಿದೆ. ಆದರೆ, ಇದು ನ್ಯಾನೊ ಕಾರಿನ ಯಶಸ್ಸಿಗೆ ಅಥವ ಉತ್ಪಾದನೆಗೆ ತಡೆದುಕೊಳ್ಳ್ಳಲಾಗದಷ್ಟು ಪೆಟ್ಟು ಕೊಡುತ್ತದೆ ಎಂದು ಹೇಳಲಾಗದಿದ್ದರೂ, ಟಾಟಾದವರ ಇತರ ಯೋಜನೆಗಳಿಗೆ ಪಾಠವಂತೂ ಆಗುತ್ತದೆ. ಅಷ್ಟು ಮಾತ್ರಕ್ಕಾದರೂ ಈ ಪ್ರತಿಭಟನೆಗಳನ್ನು ಮತ್ತು ಅದರ ಟೈಮಿಂಗ್ ಅನ್ನು ಮೆಚ್ಚಲೆ ಬೇಕು.

ಪರಿಸರವಾದಿಗಳ Self-defeating ವಿರೋಧ:
ಈ ಕಾರಿಗೆ ಕೆಲವು ಪರಿಸರವಾದಿಗಳು ಒಡ್ಡುತ್ತಿರುವ ವಿರೋಧ ಮಾತ್ರ ವಾಸ್ತವವಾಗಿ ಅವರು ಹೋರಾಡುತ್ತಿರುವ ನೀತಿಯನ್ನೆ ವಿರೋಧಿಸುತ್ತಿದೆ. This is nothing but self-defeating. ನ್ಯಾನೊ ಕಾರು ಯಾವ ಕಾರಣಕ್ಕೂ ಈಗಾಗಲೆ ಮಾರುಕಟ್ಟೆಯಲ್ಲಿರುವ ಇತರ ಕಾರುಗಳಿಗಿಂತ ಹೆಚ್ಚಿನ ಗ್ರೀನ್‌ಹೌಸ್ ಅನಿಲಗಳನ್ನು ಹೊರಚೆಲ್ಲದಿರುವಂತೆ ನೋಡಿಕೊಳ್ಳುವುದರಲ್ಲಿ ಪರಿಸರದ ಹಿತಾಸಕ್ತಿ ಇದೆಯೆ ಹೊರತು ಈ ಕಾರನ್ನು ವಿರೋಧಿಸುವುದರಲ್ಲಿ ಅಲ್ಲ. ಏಕೆಂದರೆ, ಮೇಲೆ ಹೇಳಿದಂತೆ, ಬೇರೆಲ್ಲ ಕಾರುಗಳಿಗಿಂತ ಕಮ್ಮಿ ಕಚ್ಚಾ ಸಾಮಗ್ರಿ ಈ ಕಾರಿಗೆ ಬೇಕು; ಕಮ್ಮಿ ಪೆಟ್ರೋಲ್ ಕುಡಿಯುತ್ತದೆ; ಮತ್ತು ಕಾರು ಕೊಳ್ಳುವವರು ಪರಿಸರ-ಭಯೋತ್ಪಾದನೆ-ಆಮದು-ರಫ್ತು ಮುಂತಾದ ವಿಷಯಗಳ ಬಗ್ಗೆಯೆಲ್ಲ ಯೋಚನೆ ಮಾಡದೆ, ಯಾವ ಕಾರು ಕೊಡುವ ದುಡ್ಡಿಗೆ ಮೋಸವಿಲ್ಲವೊ ಅದನ್ನು ಕೊಳ್ಳುತ್ತಿರುತ್ತಾರೆ. ಹೀಗಿರುವಾಗ, ಈ ಕಾರಿನಿಂದಲೆ ಪರಿಸರಕ್ಕೆ ಹಾನಿ, ಈ ಕಾರನ್ನು ನಿಷೇಧಿಸಬೇಕು ಎನ್ನುವುದರಲ್ಲಿ ಅರ್ಥವಿಲ್ಲ. ಕೆಲವು ಪ್ರಾಮಾಣಿಕವಾದ ಕಾಳಜಿಗಳನ್ನು ಇಟ್ಟುಕೊಂಡು ಹೋರಾಡುವ ಪರಿಸರವಾದಿಗಳು ಈ ವಿಷಯದಲ್ಲಿ ತಮ್ಮ ಆಶಯಗಳನ್ನು ವಿರೋಧಿಸುವ ದುಷ್ಟಕೂಟದ ದಾಳಗಳಾಗುತ್ತಿದ್ದಾರೆನೊ ಎನ್ನಿಸುತ್ತದೆ.

ವಿಶ್ವದ ಅತಿದೊಡ್ಡ ಆಟೊಮೊಬೈಲ್ ಕಂಪನಿಯಾದ ಜನರಲ್ ಮೋಟಾರ್ಸ್‌ನವರು 1996 ರಲ್ಲಿ ಸಂಪೂರ್ಣವಾಗಿ ವಿದ್ಯುತ್‌ನಿಂದಲೆ ಓಡುವ EV1 ಎಂಬ ಎಲೆಕ್ಟ್ರಿಕ್ ಕಾರನ್ನು ಉತ್ಪಾದಿಸಿ ಆಯ್ದ ಜನರಿಗೆ ಲೀಸಿಗೆ ಕೊಟ್ಟಿದ್ದರು. ಅವುಗಳ ಒಟ್ಟು ಸಂಖ್ಯೆ ಕೇವಲ 1167 ಮಾತ್ರ ಆಗಿತ್ತು. ಅವು Zero-ಎಮಿಷನ್ ಕಾರುಗಳು. ಒಂದಿಷ್ಟೂ ಪೆಟ್ರೊಲ್ ಬಳಸದ, ಇಂಜಿನ್ ಇಲ್ಲದ ಕಾರು ಅದು. ಯಾವಾಗ ಅದು ಒಂದು ಮಟ್ಟದ ಯಶಸ್ಸು ಕಾಣಲಾರಂಭಿಸಿತೊ ಅಮೆರಿಕದ ತೈಲ ಕಂಪನಿಗಳಿಗೆ ಮತ್ತು ಸ್ವತಃ ಕಾರಿನ ಕಂಬಷ್ಚನ್ ಇಂಜಿನ್ ಮತ್ತು ಅದರ ರಿಪೇರಿಗಳಿಂದಲೆ ಅಪಾರ ಲಾಭ ಮಾಡುವ ಆಟೊಮೊಬೈಲ್ ಕಂಪನಿಗಳಿಗೆ ಭಯವಾಗಲು ಆರಂಭವಾಯಿತು. ಕೊನೆಗೆ ತೈಲಕಂಪನಿಗಳ ಮತ್ತು ಈ ಆಟೋಮೊಬೈಲ್ ಇಂಡಸ್ಟ್ರಿಯ ಲಾಬ್ಬಿ ಯಾವ ಮಟ್ಟಕ್ಕೆ ಹೋಯಿತೆಂದರೆ, ಸ್ವತಃ ಇಂತಹ ಕಾರುಗಳನ್ನು ಕಡ್ಡಾಯ ಮಾಡಲು ಪ್ರೋತ್ಸಾಹಿಸಬೇಕಿದ್ದ ಕ್ಯಾಲಿಫೋರ್ನಿಯ ಸರ್ಕಾರದ ವಾಯುಸಂಪನ್ಮೂಲ ಬೋರ್ಡ್ ದಾರಿ ತಪ್ಪಿಬಿಟ್ಟಿತು. ಕೊನೆಗೆ ಜಿಎಮ್ ಕಂಪನಿ ಬಳಕೆಯಲ್ಲಿದ್ದ ಪ್ರತಿಯೊಂದು EV1 ಕಾರನ್ನು ವಾಪಸು ತೆಗೆದುಕೊಂಡು, ಒಂದೆ ಒಂದು ಕಾರನ್ನು ಬಿಟ್ಟು ಮಿಕ್ಕೆಲ್ಲವನ್ನೂ ಕ್ರಷ್ ಮಾಡಿಬಿಟ್ಟಿತು. ಆಗ ತಾನೆ
ಕಣ್ಣುಬಿಡುತ್ತಿದ್ದ ತನ್ನದೆ ಕಂಪನಿಯ ಪರಿಸರಸ್ನೇಹಿ EV1 ಕಾರಿಗಾಗಿ ತನ್ನ ಇತರ ತೈಲಮೂಲದ ಹೆಚ್ಚು ಲಾಭದಾಯಕವಾದ ಕಾರುಗಳ ಉತ್ಪಾದನೆಗೆ ಪೆಟ್ಟುಕೊಟ್ಟುಕೊಳ್ಳಲು ಸ್ವತಃ ಜಿಎಮ್ ಬಯಸಲಿಲ್ಲ. ಆ ಕಾರುಗಳನ್ನು ಕೊಳ್ಳಲು ಹಗಲು ರಾತ್ರಿ ಕಾವಲು ಕಾಯ್ದ ಹಲವಾರು ಜನರ ವಿರೋಧವನ್ನೂ ಮೀರಿ ತನ್ನ ಕಾರನ್ನು ತಾನೆ ಕತ್ತು ಹಿಸುಕಿ ಕೊಂದುಬಿಟ್ಟಿತು. ಆ ಸಮಯದಲ್ಲಿ ಅವರಿಗೆ ಗೊತ್ತಿಲ್ಲದೆ ತಕ್ಕಮಟ್ಟಿಗೆ ಸಹಕರಿಸಿಬಿಟ್ಟವರು ಯಾರೆಂದರೆ ವಿದ್ಯುತ್‌ನಿಂದಲೂ ಪರಿಸರಕ್ಕೆ ಹಾನಿ ಎಂದ ಪರಿಸರವಾದಿಗಳು! ಅದಕ್ಕಾಗಿಯೆ ನ್ಯಾನೊ ವಿಚಾರದಲ್ಲಿಯೂ ಅಂತಹುದೊಂದು ಆಗದೆ ಇರಲಿ ಎಂದು ನಾವು ಬಯಸಬೇಕು.

ಸೆಕೆಂಡ್‌ಹ್ಯಾಂಡ್ ಕಾರುಗಳ ಮಾರಾಟ ಸೃಷ್ಟಿಸುವ ಹೊಸ ಕಾರುಗಳ ಬೇಡಿಕೆ:
ನ್ಯಾನೊ ಮಾರುಕಟ್ಟೆಗೆ ಬಂದ ಮೇಲೆ ಸೆಕೆಂಡ್‌ಹ್ಯಾಂಡ್ ಕಾರುಗಳ ಮಾರಾಟ, ಅದರಲ್ಲೂ ಭಾರತದಲ್ಲಿ ಬಹುಸಂಖ್ಯೆಯಲ್ಲಿರುವ ಸಣ್ಣಕಾರುಗಳ ಸೆಕೆಂಡ್‌ಹ್ಯಾಂಡ್ ಮಾರಾಟಗಳು ಕಮ್ಮಿ ಆಗಲಿವೆ. ಅದರಿಂದ ನೇರವಾಗಿ ಉಪಯೋಗವಾಗಲಿರುವುದು ಪರಿಸರಕ್ಕೆ. ಒಂದು ಸೆಕಂಡ್‌ಹ್ಯಾಂಡ್ ಕಾರಿನ ಮಾರಾಟ ಪರೋಕ್ಷವಾಗಿ ಮತ್ತೊಂದು ಹೊಸಕಾರಿನ ಕೊಳ್ಳುವಿಕೆಯಲ್ಲಿ ಮುಗಿಯುವ ಸಾಧ್ಯತೆಯೇ ಹೆಚ್ಚು. ಈಗಾಗಲೆ ತನ್ನ ಬಳಿ ಇರುವ ಮಾರುತಿ 800 ನಂತಹ ಕಾರನ್ನು ಮಾರುವ ಮಾಲೀಕ ನಂತರ ಕೊಳ್ಳುವುದು ಅದಕ್ಕಿಂದ ದುಬಾರಿಯಾದ, ಅದಕ್ಕಿಂತ ಕಡಿಮೆ ಮೈಲೇಜು ಕೊಡುವ, ಅದಕ್ಕಿಂತ ದೊಡ್ಡದಾದ ಐಷಾರಾಮಿ ಕಾರನ್ನು. ಇನ್ನು ಮೇಲೆ ಸೆಕೆಂಡ್‌ಹ್ಯಾಂಡ್ ಕಾರುಗಳ ಬೇಡಿಕೆ ಕಮ್ಮಿ ಆಗುವುದರಿಂದ, ತಮಗೆ ತೀರ ಅಗತ್ಯವಾಗಿಲ್ಲದ ಹೊರತು ಸಣ್ಣಕಾರುಗಳ ಹಾಲಿ ಮಾಲೀಕರು ಇನ್ನೊಂದು ದೊಡ್ಡ ಕಾರನ್ನು ಕೊಳ್ಳುವ ಕನ್ಸ್ಯೂಮರಿಸಮ್ ಕಾಯಿಲೆಯಿಂದ ಒಂದಷ್ಟು ದಿನ ಮುಕ್ತರಾಗಿರುತ್ತಾರೆ.

Jan 14, 2008

MPEG 4 ಫಾರ್ಮ್ಯಾಟ್‌ನಲ್ಲಿ ಏನೇ ಆಗಲಿ, ಒಳ್ಳೆಯದನ್ನೆ ಮಾಡಿ - ಕೇಳು-ಪುಸ್ತಕ

ಗೆಳೆಯ ಪ್ರದೀಪ್ ಸಿಂಹ (www.humanglory.org), - "ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ - ಒಂದು ಕೇಳು-ಪುಸ್ತಕ" ವನ್ನು MPEG 4 ಫಾರ್ಮ್ಯಾಟ್‌‍ಗೆ ಕನ್ವರ್ಟ್ ಮಾಡಿದ್ದಾರೆ. ಇದನ್ನು ಆಪಲ್ ಕ್ವಿಕ್‌‌ಟೈಮ್‌ನಲ್ಲಿ ಪ್ಲೆ ಮಾಡಬಹುದು. ಈ ಫಾರ್ಮ್ಯಾಟ್‌ನ ಮುಖ್ಯ ಅನುಕೂಲವೆಂದರೆ ಬೇಕಾದ ಅಧ್ಯಾಯಕ್ಕೆ ಮುಂದೆ-ಹಿಂದೆ ಜಂಪ್ ಮಾಡಬಹುದು.

"ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ" ಕೇಳು-ಪುಸ್ತಕದ ಒಂದು ಹೆಚ್ಚುಗಾರಿಕೆ ಏನೆಂದರೆ, ಅಧ್ಯಾಯ 1 ರಿಂದ ಅಧ್ಯಾಯ 11 ರವರೆಗಿನ ಅಧ್ಯಾಯಗಳು ಒಂದು ರೀತಿ ಸ್ವತಂತ್ರ ಅಧ್ಯಾಯಗಳು. ಈ ಅಧ್ಯಾಯಗಳ ಕಂಟಿನ್ಯುಟಿ ಇತರೆ ಅಧ್ಯಾಯಗಳ ಮೇಲೆ ಅವಲಂಬಿತವಾಗಿಲ್ಲ. ಹಾಗಾಗಿ, ಈ .m4b ಕೇಳು-ಪುಸ್ತಕ ಕೇಳುಗರು ಹಿಂದೆ ಎಲ್ಲಿ ನಿಲ್ಲಿಸಿದ್ದೆವು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಇನ್ನೊಂದು ಸ್ವತಂತ್ರ ಅಧ್ಯಾಯಕ್ಕೆ ಹೋಗಲು ಅನುಕೂಲ ಮಾಡಿಕೊಡುತ್ತದೆ. ಒಂದು ರೀತಿಯಲ್ಲಿ 13 ಅಧ್ಯಾಯಗಳ ಆಲ್ಬಮ್; ಆದರೆ ಒಂದೇ ಫೈಲು. ಈ ಫಾರ್ಮ್ಯಾಟ್‍ನ ಕೇಳು-ಪುಸ್ತಕ ಇಲ್ಲಿ ಡೌನ್‌ಲೋಡ್‌ಗೆ ಲಭ್ಯವಿದೆ.

ಕಳೆದ ವಾರ ಈ ಕೇಳು-ಪುಸ್ತಕವನ್ನು ಆಲಿಸಿದ ಗೆಳೆಯರೊಬ್ಬರು ಬರೆದದ್ದು ಹೀಗೆ: "Downloaded your audio book last week and listened to it while driving to and from work over the last week. It has come out well. It can do without **** ** *** ************* ******. Overall it is has come out very well. Useful book and great work. Good to see you put the technology to good use this way."

ಮೂಲಲೇಖನಕ್ಕೆ ಮತ್ತು ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನಗಳಿಗೆ, ದಯವಿಟ್ಟು ಇಲ್ಲಿಗೆ ಭೇಟಿ ಕೊಡಿ:
http://vicharamantapa.net/Anyway/

ನಮಸ್ಕಾರ,
ರವಿ...

Jan 6, 2008

ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ - ಒಂದು ಕೇಳು-ಪುಸ್ತಕ

ಸ್ನೇಹಿತರೆ,

ಇಂಗ್ಲಿಷಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಆಡಿಯೊ ಪುಸ್ತಕ ಸಂಸ್ಕೃತಿ ಕನ್ನಡದ ಮಟ್ಟಿಗೆ ಹೇಳುವುದಾದರೆ ಇಲ್ಲವೆ ಇಲ್ಲ. ನಮ್ಮಲ್ಲಿ ಆಗಾಗ ಇನ್ಸ್‌ಪಿರೇಷನಲ್ ಆಡಿಯೊ ಕ್ಯಾಸೆಟ್‍ಗಳು ಬಿಡುಗಡೆಯಾಗುತ್ತವೆ ಎನ್ನುವುದನ್ನು ಬಿಟ್ಟರೆ ಇಡೀ ಗದ್ಯ ಪುಸ್ತಕವೆ ಆಡಿಯೊ ಆಗಿದ್ದು ಇಲ್ಲ. ಇತ್ತೀಚೆಗೆ ತಾನೆ ಕವಿ-ಪತ್ರಕರ್ತ ಜಿ.ಎನ್. ಮೋಹನ್‌ರವರು ತಮ್ಮ "ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ" ಕವನಸಂಕಲನದ ಕವನಗಳನ್ನು ಹಲವಾರು ಕನ್ನಡ ಸಾಹಿತಿಗಳಿಂದ ವಾಚಿಸಿ, ಅದನ್ನೆ ಸಿ.ಡಿ. ಮಾಡಿದ್ದಾರೆ. ಆ ನಿಟ್ಟಿನಲ್ಲಿ ಇದೇ ಮೊದಲ ಪ್ರಯತ್ನವೇನೊ.

ಕೆಂಟ್ ಕೀತ್‌ರವರು ಇಂಗ್ಲಿಷಿನಲ್ಲಿ ಬರೆದಿರುವ "Anyway – The Paradoxical Commandments" ಎಂಬ ಪುಸ್ತಕವಿದೆ. ಆ ಕಟ್ಟಳೆಗಳು ಹೀಗಿವೆ:

  • ಜನರು ತರ್ಕಹೀನರು, ಯುಕ್ತಾಯುಕ್ತ ಪರಿಜ್ಞಾನ ಇಲ್ಲದವರು, ಹಾಗೂ ಸ್ವಕೇಂದ್ರಿತ ಸ್ವಾರ್ಥಿಗಳು - ಏನೇ ಇರ್ಲಿ, ಅವರನ್ನು ಪ್ರೀತಿಸಿ.
  • ನೀವು ಒಳ್ಳೆಯದನ್ನು ಮಾಡಿದ್ದರೆ ಜನ ನೀವು ಸ್ವಾರ್ಥದ ದುರುದ್ದೇಶಗಳನ್ನಿಟ್ಟುಕೊಂಡು ಮಾಡುತ್ತಿದ್ದೀರಿ ಎಂದು ನಿಂದಿಸುತ್ತಾರೆ - ಯಾರು ಏನೇ ಹೇಳ್ಲಿ, ಒಳ್ಳೆಯದನ್ನು ಮಾಡಿ.
  • ನೀವು ಜೀವನದಲ್ಲಿ ಯಶಸ್ವಿಯಾದರೆ ನಿಮಗೆ ಖೋಟಾ ಸ್ನೇಹಿತರು, ನಿಜವಾದ ಶತ್ರುಗಳು ಸಿಗುತ್ತಾರೆ - ಆದ್ರೂ ಯಶಸ್ವಿಯಾಗಿ.
  • ನೀವು ಇಂದು ಮಾಡುವ ಒಳ್ಳೆಯ ಕೆಲಸವನ್ನು ಜನ ನಾಳೆ ಮರೆತುಬಿಡುತ್ತಾರೆ - ಆದ್ರೂ ಒಳ್ಳೆಯದನ್ನು ಮಾಡಿ.
  • ಪ್ರಾಮಾಣಿಕತೆ ಮತ್ತು ಮುಕ್ತ ಮನಸ್ಸು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ - ಏನೇ ಆಗ್ಲಿ, ಪ್ರಾಮಾಣಿಕರಾಗಿ, ಮುಕ್ತಮನಸ್ಸಿನಿಂದ ಇರಿ.
  • ಉನ್ನತವಾದ ದೊಡ್ಡದೊಡ್ಡ ಆಲೋಚನೆಗಳ ಉನ್ನತ ಮನುಷ್ಯರನ್ನು ಕೀಳೂ ಆಲೋಚನೆಗಳ ಸಣ್ಣ ಜನರು ಹೊಡೆದುರುಳಿಸಬಹುದು - ಆದ್ರೂ ದೊಡ್ಡದಾಗಿಯೇ ಆಲೋಚಿಸಿ.
  • ಜನ ದುರ್ಬಲರ, ದಲಿತರ ಬಗ್ಗೆ ವಿಶ್ವಾಸ ತೋರುತ್ತಾರೆ, ಆದರೆ ಸಬಲರನ್ನೆ ಹಿಂಬಾಲಿಸುತ್ತಾರೆ - ಹಾಗಿದ್ರೂ ಕೆಲವಾದರೂ ದಲಿತ-ದುರ್ಬಲರ ಪರ ಹೋರಾಡಿ.
  • ನೀವು ವರ್ಷಗಳ ಕಾಲ ಕಟ್ಟಿದ್ದು ರಾತ್ರೋರಾತ್ರಿ ಹಾಳುಗೆಡವಲ್ಪಡಬಹುದು - ಏನೇ ಆಗ್ಲಿ, ಕಟ್ಟಿಯೇ ಕಟ್ಟಿ.
  • ಜನರಿಗೆ ನಿಜವಾಗಲೂ ಸಹಾಯ ಬೇಕು, ಆದರೆ ನೀವು ಅವರಿಗೆ ಸಹಾಯ ಮಾಡಿದರೆ ಅವರು ನಿಮ್ಮ ಮೇಲೆಯೇ ಆಕ್ರಮಣ ಮಾಡಬಹುದು - ಆದ್ರೂ, ಸಹಾಯ ಮಾಡಿ.
  • ನಿಮ್ಮ ಕೈಲಾದುದನ್ನು, ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ; ಆಗಲು ಜನ ನಿಮ್ಮ ಹಲ್ಲುದುರಿಸಬಹುದು - ಆದ್ರೂ ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ.

ಈ ಪುಸ್ತಕವನ್ನು ನಾನು "ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ." ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದೇನೆ. ಇದು ಸುಮಾರು 14 ವಾರಗಳ ಕಾಲ "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಈಗ ಅದನ್ನೆ ನಾನು ಆಡಿಯೊ ಪುಸ್ತಕವಾಗಿ ಪರಿವರ್ತಿಸಿದ್ದೇನೆ.

"ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ." ಕೇಳು-ಪುಸ್ತಕ mp3 ಫಾರ್ಮ್ಯಾಟ್‌ನಲ್ಲಿದೆ. ಒಂದೇ ಸಿಟ್ಟಿಂಗ್‌ನಲ್ಲಿ ಕಂಪ್ಯೂಟರ್‍ನಲ್ಲಿ ರೆಕಾರ್ಡ್ ಮಾಡಿ, ಅದನ್ನೆ Audacity ಸಾಫ್ಟ್‌ವೇರ್ ಬಳಸಿ ಸ್ವಲ್ಪ ಎಡಿಟ್ ಮಾಡಿದ್ದೇನೆ. ಹಿನ್ನೆಲೆ ಸಂಗೀತ, ವಿಶೇಷ ಎಫ್ಫೆಕ್ಟ್ಸ್ ಅಂತಹವೇನೂ ಸದ್ಯಕ್ಕೆ ಸಂಯೋಜಿಸಿಲ್ಲ. ಅವೆಲ್ಲ ಮಾಡಬೇಕು ಅಂತಿದ್ದರೂ, ಸಮಯಾಭಾವದಿಂದ ಮತ್ತು ಇದ್ದಕ್ಕಿದ್ದಂತೆ ಬದಲಾಗುವ ಆಸಕ್ತಿಯ ಕಾರಣವಾಗಿ ಅದೆಲ್ಲ ಮಾಡಲಾಗಿಲ್ಲ. ಯಾರಾದರೂ ಹವ್ಯಾಸಿ ಕನ್ನಡ ಸ್ನೇಹಿತರು, ಇದನ್ನು ಡೌನ್‌ಲೋಡ್ ಮಾಡಿಕೊಂಡು, ಅದಕ್ಕೆ ಪ್ರೊಫೆಷನಲ್ ಟಚ್ ಕೊಟ್ಟು, ಸುಧಾರಿಸಿದರೆ, ನಿಮ್ಮಷ್ಟೆ ಸಂತೋಷ ನನ್ನದು, ಅಥವ ನನ್ನಷ್ಟೆ ಸಂತೋಷ ನಿಮ್ಮದು.

ಕೇಳುಗರ ಬ್ಯಾಂಡ್‌ವಿಡ್ತ್‌ಗೆ ಅನುಕೂಲವಾಗುವಂತೆ ಮೂರು ವಿಧವಾಗಿ ಇವನ್ನು ವಿಭಾಗಿಸಿದ್ದೇನೆ. ನಿಮಗೆ ಅನುಕೂಲವಾದ ರೀತಿಯಲ್ಲಿ ಡೌನ್‌ಲೋಡ್ ಮಾಡಿಕೊಂಡು, ಅನುಕೂಲವಾದ ರೀತಿಯಲ್ಲಿ (ಕಂಪ್ಯೂಟರ್, mp3 ಪ್ಲೇಯರ್, ಬೂಮ್‌ಬಾಕ್ಸ್, ಇತ್ಯಾದಿ), ಸಾವಕಾಶವಾಗಿ ಕೇಳಬಹುದು. ಒಟ್ಟಾರೆಯಾಗಿ 2 ಗಂಟೆ 13 ನಿಮಿಷಗಳ ಕೇಳು-ಪುಸ್ತಕ ಇದು.

(ಈ .mp3 ಫೈಲುಗಳನ್ನು ನಿಮ್ಮ ಕಂಪ್ಯೂಟರ್‌ಗೆ ಡೌನ್‌ಲೋಡ್ ಮಾಡಿಕೊಳ್ಳುವ ಬಗೆ: ಕೆಳಗಿನ ಹೈಪರ್‍ಲಿಂಕ್‍ಗಳ ಮೇಲೆ ಬಲಮೌಸ್ ಒತ್ತನ್ನು ಒತ್ತಿ, ಆಗ ಇಳಿಬರುವ ಮೆನುವಿನಲ್ಲಿ "save target as..." ನಂತಹುದನ್ನು ಆಯ್ಕೆ ಮಾಡಿಕೊಂಡು ಬೇಕಾದ ಫೋಲ್ಡರ್‌ನಲ್ಲಿ ಶೇಖರಿಸಿಕೊಳ್ಳಿ.)


ನಿಮಗೆ ಇದನ್ನು ಇತರರ ಜೊತೆ ಹಂಚಿಕೊಳ್ಳಬೇಕೆನಿಸಿದರೆ, ಈ ಕೊಂಡಿಯನ್ನು ಫಾರ್ವರ್ಡ್ ಮಾಡಬಹುದು.
http://vicharamantapa.net/Anyway/

ನಿಮ್ಮ ಸಲಹೆ, ಸೂಚನೆ, ವಿಮರ್ಶೆ, ಇಷ್ಟೇನಾ, ಏನ್ ಮಹಾ, ಹ್ಞೂ,..... ಗಳನ್ನೆಲ್ಲ ಇಲ್ಲಿಗೆ ಕಳುಹಿಸಬಹುದು. ravikreddy@yahoo.com

ಪ್ರೀತಿಯಿಂದ,
ರವಿ...

Jan 2, 2008

ಪ್ರಪಾತದ ಅಂಚಿನಲ್ಲಿ ಪರಿವರ್ತನೆಯ ಸಂಕಲ್ಪ

(ವಿಕ್ರಾಂತ ಕರ್ನಾಟಕ - ಜನವರಿ 11, 2008 ರ ಸಂಚಿಕೆಯಲ್ಲಿನ ಬರಹ)

ಇಂಡೋನೇಷ್ಯಾದ ಬಾಲಿ ಪಟ್ಟಣದಲ್ಲಿ ಜಗತ್ತಿನ ಹವಾಮಾನ ಬದಲಾವಣೆಯ ಕುರಿತ ವಿಶ್ವಸಂಸ್ಥೆಯ ಜಾಗತಿಕ ಸಮಾವೇಶ ಕಳೆದ ತಿಂಗಳು ನಡೆಯಿತು. ಜಗತ್ತೆಲ್ಲ ಕಳೆದ ಶತಮಾನದಿಂದೀಚೆಗೆ ಭೂಮಿಯ ಮೇಲೆ ಘಟಿಸುತ್ತಿರುವ ಹವಾಮಾನದ ವೈಪರೀತ್ಯಗಳನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ಒಂದು ಒಮ್ಮತದ ತೀರ್ಮಾನಕ್ಕೆ ಬರುತ್ತಿದ್ದರೆ, ಜಗತ್ತಿನ ದೊಡ್ಡಣ್ಣ ಅಮೆರಿಕ ಮಾತ್ರ ಹಠ ಮಾಡುತ್ತಿತ್ತು. "ನಾವು ಇಲ್ಲಿ ಕೈಗೊಳ್ಳಲಾಗುತ್ತಿರುವ ನಿರ್ಣಯವನ್ನು ಒಪ್ಪುವುದಿಲ್ಲ; ಇದರ ಬದಲಿಗೆ ನಮ್ಮಂತಹ ಜಗತ್ತಿನ ಇತರ ಶ್ರೀಮಂತ ರಾಷ್ಟ್ರಗಳು ಬಡದೇಶಗಳಿಗೆ ತಂತ್ರಜ್ಞಾನದ ಸಹಾಯ (ಕೃಪೆ!) ಮಾಡಬೇಕು", ಎಂದೆಲ್ಲ ಠೇಂಕಾರದಿಂದ ಬಡಬಡಿಸುತ್ತಿತ್ತು. ಕೊನೆಗಳಿಗೆಯ ತನಕವೂ ಅದು ಬಗ್ಗಲಿಲ್ಲ. ಇನ್ನೇನು ಇಡೀ ಸಮಾವೇಶವೆ ಒಂದು ವ್ಯರ್ಥ ಕಸರತ್ತಿನಂತೆ ಕಾಣಿಸುತ್ತಿದ್ದ ಸಮಯ. ತೃತೀಯ ಜಗತ್ತಿನ ಸ್ವಾಭಿಮಾನಿ ರಾಷ್ಟ್ರಗಳಿಗೆ ಅಮೆರಿಕದ ಮೊಂಡಾಟ ನೋಡಿನೋಡಿ ಸಾಕಾಗಿ ಹೋಯಿತು. ಎಲ್ಲರೂ ಅಮೆರಿಕವನ್ನು ಸಾಧ್ಯವಾದಷ್ಟು ಒಳ್ಳೆಯ ಭಾಷೆಯಲ್ಲಿಯೆ ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದರು.

ಆ ಸಮಯದಲ್ಲಿ "ಪ್ಯಾಪ್ಯುವ ನ್ಯೂ ಗಿನಿ" ಎಂಬ ದ್ವೀಪರಾಷ್ಟ್ರದ ಪ್ರತಿನಿಧಿ ಮಾತನಾಡಲು ಎದ್ದ. ಸುಮಾರು ಅರವತ್ತು ಲಕ್ಷ ಜನಸಂಖ್ಯೆಯ, ಅಂದರೆ ನಮ್ಮ ಬೆಂಗಳೂರಿಗಿಂತ ಕಮ್ಮಿ ಜನಸಂಖ್ಯೆಯ ದೇಶ ಇದು. ಅಮೆರಿಕವನ್ನುದ್ದೇಶಿಸಿ ಪ್ಯಾಪ್ಯುವ ನ್ಯೂ ಗಿನಿಯ ಪ್ರತಿನಿಧಿ ಹೇಳಿದ್ದು ಇಷ್ಟೆ: "ನಮಗೆ ನಿಮ್ಮ ನಾಯಕತ್ವ ಬೇಕು. ಅದರೆ ಯಾವುದೊ ಒಂದು ಕಾರಣಕ್ಕೆ ಅದು ನಿಮ್ಮಿಂದ ಸಾಧ್ಯವಿಲ್ಲವಾದರೆ, ಅದನ್ನು ನಮಗೆ ಬಿಟ್ಟುಬಿಡಿ. ದಯವಿಟ್ಟು ನಮ್ಮ ದಾರಿಯಿಂದ ಅಡ್ಡ ತೊಲಗಿ. (Please, get out of the way)." ಒಂದು ಸ್ವಾಭಿಮಾನಿ ದೇಶ, ಅದು ಎಷ್ಟೇ ಸಣ್ಣದಾಗಿದ್ದರೂ, ಬಡವಾಗಿದ್ದರೂ, ಪ್ರಾಮಾಣಿಕವಾದ, ನ್ಯಾಯಯುತವಾದ, ನೈತಿಕ ಧರ್ಮದಿಂದ ಕೂಡಿದ ಮಾತನ್ನು ಆಡಿದರೆ, ಎಷ್ಟೆ ಬಲಿಷ್ಠ ರಾಷ್ಟ್ರವೂ ತನ್ನ ಅಹಮ್ಮಿನ ಬಗ್ಗೆ ನಾಚಿಕೆ ಪಡಲೇಬೇಕು. ಬಾಲಿಯಲ್ಲೂ ಅದೇ ಆಯಿತು. ಪ್ಯಾಪ್ಯುವ ನ್ಯೂ ಗಿನಿಯ ನೈತಿಕ ಪೆಟ್ಟಿಗೆ ತಲೆಬಾಗಿದ ಅಮೆರಿಕ ನಂತರ ಸಮಾವೇಶದ ನಿರ್ಣಯಗಳಿಗೆ ಅಡ್ಡ ಮಾಡಲಿಲ್ಲ.

ಲೇಖನದ ವಿಡಿಯೊ ಪ್ರಸ್ತುತಿ

ಹೌದು. ಹೊಟ್ಟೆಪಾಡಿನ ಚಿಂತೆಯೆ ದೊಡ್ಡ ಚಿಂತೆ ಆಗಿರುವ ತೃತೀಯ ಜಗತ್ತಿನ ರಾಷ್ಟ್ರಗಳೆಲ್ಲ ಇವತ್ತು ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಇದು ಬಡತನದ ಬಗ್ಗೆ ಅಲ್ಲ. ಯುದ್ಧದ ಬಗ್ಗೆ ಅಲ್ಲ. ಭಯೋತ್ಪಾದನೆಯ ಬಗ್ಗೆ ಅಲ್ಲ. ಬದಲಿಗೆ ಇಡೀ ಜೀವಸಂಕುಲದ ಅಳಿವುಉಳಿವಿನ ಬಗ್ಗೆ. ಭೂತಾಪಮಾನ ಹಿಂದೆಂದೂ ಏರಿರದ ರೀತಿಯಲ್ಲಿ ಏರುತ್ತಿರುವಂತಹ ಆರ್ಥಿಕ ಅಭಿವೃದ್ಧಿಯಲ್ಲಿ ತೊಡಗಿರುವ ಮನುಷ್ಯ, ಕೊನೆಗೆ ತನ್ನ ಸಂತತಿಯನ್ನೆ ನಾಶಮಾಡಿಕೊಳ್ಳುವ, ಭೂಮಿಯನ್ನು ice age ನತ್ತ ರಭಸವಾಗಿ ತಳ್ಳುತ್ತಿರುವುದರ ಬಗ್ಗೆ.

ಇವತ್ತು ಭೂತಾಪಮಾನ ಏರುತ್ತಿರುವುದು ಮುಖ್ಯವಾಗಿ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುತ್ತಿರುವ ಘಟಕಗಳಿಂದ, ಹೊಗೆ ಮತ್ತು ಬೆಂಕಿಯನ್ನುಗುಳುವ ಕೈಗಾರಿಕೆಗಳಿಂದ, ಪೆಟ್ರೋಲ್-ಡೀಸಲ್‌ನಿಂದ ಓಡುವ ವಾಹನಗಳಿಂದ, ಮಲೇಷ್ಯಾ, ಇಂಡೋನೇಷ್ಯಾದಂತಹ ರಾಷ್ಟ್ರಗಳಲ್ಲಿ ಕೃಷಿ ಭೂಮಿಗಾಗಿ ಕಾಡು ಕಡಿದು ಬೆಂಕಿ ಇಡುತ್ತಿರುವುದರಿಂದ (slash and burn agriculture).

ಭೂಮಿಯ ಮೇಲಿನ ಜೀವಸಂತತಿ ಅಳಿದುಹೋಗದಂತೆ ಮುಂಜಾಗರೂಕತೆ ವಹಿಸುವ ಕೆಲಸ ಈಗ ಶ್ರೀಮಂತ ರಾಷ್ಟ್ರಗಳಿಗಷ್ಟೇ ಸೇರಿದ ಜವಾಬ್ದಾರಿಯಾಗಿರದೆ ಭಾರತದಂತಹ ತೃತೀಯ ಜಗತ್ತಿನ ದೇಶಗಳಿಗೂ ಸೇರಿದೆ. ಈಗ ವಾರ್ಷಿಕ 1,38,000 ಮೆಗಾವ್ಯಾಟ್ ವಿದ್ಯುತ್ ಅನ್ನು ನಮ್ಮ ದೇಶ ಉತ್ಪಾದಿಸುತ್ತಿದೆ. ಇದರಲ್ಲಿ ಪರಿಸರಕ್ಕೆ, ವಿಶೇಷವಾಗಿ ತಾಪಮಾನಕ್ಕೆ ತೊಂದರೆಯಾಗದಂತಹ ಸ್ವಚ್ಚ ವಿದ್ಯುತ್ ಉತ್ಪಾದನೆಗೆ ಹೆಸರಾದ ಜಲವಿದ್ಯುತ್‌ನ ಪಾಲು ಕೇವಲ ಶೇ. 25 ಮಾತ್ರ ಆಗಿದ್ದರೆ, ಪರಿಸರ ಹಾನಿಗೆ ಅಪಾರವೆನಿಸುವಷ್ಟು ಕೆಟ್ಟಕೊಡುಗೆ ಕೊಡುವ ಕಲ್ಲಿದ್ದಲು ಮತ್ತಿತರ ತೈಲಮೂಲದ ಉಷ್ಣವಿದ್ಯುತ್ ಸ್ಥಾವರಗಳ ಕೊಡುಗೆ ಶೇ. 65 ರಷ್ಟು ಇದೆ. ಈ ಕಾಲದ ಕೈಗಾರಿಕೆ-ಸೇವಾವಲಯ-ಐಟಿ-ಪ್ರವಾಸ ಮುಂತಾದ ಆಧುನಿಕ ಉದ್ಯಮವಾಧಾರಿತ ಆರ್ಥಿಕ ಪ್ರಗತಿಯಲ್ಲಿ ದಾಪುಗಾಲಿಡುತ್ತಿರುವ ಭಾರತಕ್ಕೆ ಇದೇ ವೇಗವನ್ನು ಕಾಪಾಡಿಕೊಳ್ಳಬೇಕಾದರೆ ಇನ್ನು ಐದು ವರ್ಷದಲ್ಲಿ 73000 ಮೆಗಾವ್ಯಾಟ್‌ಗಷ್ಟು ಹೆಚ್ಚಿನ ಹೊಸ ವಿದ್ಯುತ್‌ಶಕ್ತಿಯನ್ನು ಉತ್ಪಾದಿಸಬೇಕಾದೆಯಂತೆ. ಆ ನಿಟ್ಟಿನಲ್ಲಿ ಕಳೆದ ವರ್ಷ (2007 ರಲ್ಲಿ) ಸುಮಾರು 21000 ಮೆಗಾವ್ಯಾಟ್ ಉತ್ಪಾದಿಸಬಲ್ಲ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆಯಂತೆ. ಇದರಲ್ಲಿ, ಕಲ್ಲಿದ್ದಲು/ನೈಸರ್ಗಿಕ ಅನಿಲ ಬಳಸಿ ತಯಾರಿಸುವ ಉಷ್ಣವಿದ್ಯುತ್ ಘಟಕಗಳ ಪಾಲು ಶೇ. 82 ರಷ್ಟು ಇದೆ.

ಇಂತಹ ತಕ್ಷಣದ ಬೇಡಿಕೆ ಹುಟ್ಟುವಂತಹ ಸಮಯದಲ್ಲಿ ಎಲ್ಲಕ್ಕಿಂತ ಬೇಗ ಉತ್ಪಾದನೆ ಆರಂಭಿಸಬಲ್ಲ ಘಟಕಗಳೆಂದರೆ ಉಷ್ಣ ವಿದ್ಯುತ್ ಘಟಕಗಳೆ. ಇವುಗಳಿಗೆ ನದಿ ಅಳೆಯಬೇಕಿಲ್ಲ; ಜಮೀನು ಸ್ವಾಧೀನ ಪಡಿಸಿಕೊಳ್ಳಬೇಕಿಲ್ಲ; ಡ್ಯಾಮ್ ಕಟ್ಟ ಬೇಕಿಲ್ಲ; ಪರಿಸರ ಇಲಾಖೆಯ ಕಳ್ಳ ಸಮ್ಮತಿಯೂ ಕಷ್ಟವಿಲ್ಲ, ಸಿಕ್ಕಾಪಟ್ಟೆ ನೀರೂ ಬೇಕಾಗಿಲ್ಲ. ಯಾವುದಾದರೂ ಬಂಜರು ಭೂಮಿಯೊ, ಸರ್ಕಾರದ ಅರಣ್ಯ ಪ್ರದೇಶವೊ ಇದ್ದು, ಕಲ್ಲಿದ್ದಲು ಗಣಿಗಳಿಂದ ನೇರ ರೈಲಿನ ವ್ಯವಸ್ಥೆ ಮಾಡಿಕೊಂಡರೆ ಸಾಕು, ಕಮ್ಮಿ ನೀರಿನಲ್ಲಿ ಹೆಚ್ಚು ವಿದ್ಯುತ್ ಉತ್ಪಾದಿಸಬಹುದು. ಬಹುಶ: ಕೆಲಸ ಆರಂಭಿಸಿದ ಎರಡು-ಮೂರು ವರ್ಷಗಳಲ್ಲೆಲ್ಲ ತಂತಿಯಲ್ಲಿ ವಿದ್ಯುತ್ ಹರಿಸಬಹುದು. ಸರ್ಕಾರಕ್ಕೆ ಆರ್ಥಿಕ ಪ್ರಗತಿಗೆ ಹಿನ್ನಡೆಯಾಗದಂತೆ ನೋಡಿಕೊಳ್ಳುವ ಉಮೇದು; ಖಾಸಗಿಯವರಿಗೆ ಆದಾಯಕ್ಕೆ ಹೊಸ ಮೂಲ; ಕೃಷಿಕರಿಗೆ ಉಚಿತ ಇಲ್ಲವೆ ಸಬ್ಸಿಡಿ ವಿದ್ಯುತ್; ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ತಡೆಯಿರದ ವಿದ್ಯುತ್; ಎಲ್ಲರಿಗೂ ತೃಪ್ತಿ. ಪರಿಸರದ ಪ್ರಶ್ನೆ ಆಮೇಲೆ.

ಪರಿಸರಕ್ಕೆ ಹೆಚ್ಚಿನ ಹಾನಿ ಮಾಡದ ಜಲವಿದ್ಯುತ್ ಘಟಕಗಳು ಸುಲಭವಾಗಿ ಆರಂಭಿಸಬಲ್ಲ ಅಥವ ವಿಸ್ತರಿಸಬಲ್ಲ ಯೋಜನೆಗಳಲ್ಲ. ಆದರೆ, ವಿಸ್ತರಿಸುವುದಕ್ಕೆ ಸುಲಭವಾದ ಉಷ್ಣವಿದ್ಯುತ್ ಘಟಕಗಳು ಪರಿಸರಕ್ಕೆ, ಜಾಗತಿಕ ತಾಪಮಾನಕ್ಕೆ ಒಳ್ಳೆಯದಲ್ಲ. ಹೋಗಲಿ ಒಳ್ಳೆಯ ಮಳೆ ಆಗಿ ಅಣೆಕಟ್ಟುಗಳು ತುಂಬಿದಾಗ ಹೆಚ್ಚುಹೆಚ್ಚು ವಿದ್ಯುತ್ ಉತ್ಪಾದಿಸಿ ಅದನ್ನು ಶೇಖರಿಸಿ ಇಟ್ಟುಕೊಳ್ಳೋಣ ಎಂದರೆ ಅದು ಅಷ್ಟು ಸುಲಭವಲ್ಲ. ತತ್‌ಕ್ಷಣದ ಅಗತ್ಯದಷ್ಟು ವಿದ್ಯುತ್ ಉತ್ಪಾದಿಸಬೇಕೆ ಹೊರತು, ಉತ್ಪಾದಿಸಿದ್ದೆಲ್ಲ ಉಪಯೋಗಿಸಬಹುದು ಅಂತಿಲ್ಲ. ಇನ್ನು, ವಿದ್ಯುತ್‌ನ ಬೇಡಿಕೆ ಕೇವಲ ಭಾರತದ ಸಮಸ್ಯೆಯಷ್ಟೆ ಅಲ್ಲ. ಪ್ರಪಂಚದ ಬಹುಪಾಲು ದೇಶಗಳದ್ದೂ ಹೌದು. ಅದರಲ್ಲೂ ವಿಶ್ವದ ಅತಿಹೆಚ್ಚು ಜನರನ್ನು ಹೊಂದಿರುವ ಚೀನಾಕ್ಕೂ ಇದು ಸಮಸ್ಯೆಯೆ. ಅಲ್ಲೂ ಇದೆ ಕತೆ. ಅಮೆರಿಕದಲ್ಲೂ ಇದೇ ಕತೆ.

ಹೀಗಾಗಿಯೆ ಇತ್ತೀಚೆಗೆ ಅನೇಕ ದೇಶಗಳಲ್ಲಿನ, ವಿಶೇಷವಾಗಿ ಅಮೆರಿಕದಂತಹ ಮುಂದುವರಿದ ದೇಶಗಳಲ್ಲಿನ ಉದ್ಯಮಿಗಳು ಮತ್ತು ವಿಜ್ಞಾನಿಗಳು ಪರಿಸರಕ್ಕೆ ಹೆಚ್ಚು ಹಾನಿಯಾಗದಂತಹ ಪರ್‍ಯಾಯ ವಿದ್ಯುತ್ ಮೂಲಗಳನ್ನು ಹುಡುಕುತ್ತಿದ್ದಾರೆ. ಇದರಲ್ಲಿ ಪರಿಸರ ಕಾಳಜಿಗಿಂತ, ಸಮಸ್ಯೆಯನ್ನೂ ಲಾಭಕ್ಕೆ ತಿರುಗಿಸಿಕೊಳ್ಳುವ ಉದ್ಯಮಿಗಳ ಸಂಖ್ಯೆ ಹೆಚ್ಚಿದ್ದರೂ ಕೆಲವು ಜನ ಪ್ರಾಮಾಣಿಕವಾಗಿಯೆ ಇದಕ್ಕೆ ಸ್ಪಂದಿಸುತ್ತಿದ್ದಾರೆ. ಕೆಲವು ಸರ್ಕಾರಗಳು ತಾಪಮಾನದ ವೈಪರೀತ್ಯಕ್ಕೆ ಮೂಲಕಾರಣವಾದ ಗ್ರೀನ್‌ಹೌಸ್ ಅನಿಲಗಳ ಹೊರಚೆಲ್ಲುವಿಕೆಯನ್ನು ತಹಬಂದಿಗೆ ತರುವಂತಹ ಕಾನೂನುಗಳನ್ನು ಬಿಗಿ ಗೊಳಿಸುತ್ತಿವೆ. ಸೌರ್ ವಿದ್ಯುತ್‌ಗೆ, ವಿಂಡ್‌ಪವರ್ ಜನರೇಷನ್‌ಗೆ ಸಬ್ಸಿಡಿಗಳನ್ನು ಹೆಚ್ಚಿಸಿ ಪ್ರೋತ್ಸಾಹಿಸುತ್ತಿವೆ. ಕಳೆದ ಒಂದೆರಡು ವರ್ಷಗಳಿಂದಂತೂ ಪಾಶ್ಚಾತ್ಯ ವಿಜ್ಞಾನ ಜಗತ್ತು ಪರಿಸರ ಸ್ನೇಹಿ ಹಸಿರು ತಂತ್ರಜ್ಞಾನದ (Green Tech) ಅನ್ವೇಷಣೆಯಲ್ಲಿ ತೊಡಗಿಸಿಕೊಂಡುಬಿಟ್ಟಿದೆ. ಅಮೆರಿಕದ ಮಾಜಿ ಉಪಾಧ್ಯಕ್ಷ ಆಲ್ ಗೋರ್‌ನಂತಹವರು ಕನಿಷ್ಠ ಈಗಲಾದರೂ ಮನುಷ್ಯ ಎಚ್ಚತ್ತು ವಿನಾಶದಂಚಿನಿಂದ U-ಟರ್ನ್ ತೆಗೆದುಕೊಳ್ಳಲು ಪ್ರೇರೇಪಿಸುತ್ತಿದ್ದಾರೆ.

ಎರವಲು ತಂತ್ರಜ್ಞಾನದ ನಿರೀಕ್ಷೆಯಲ್ಲಿ ಭಾರತ - ಪರೋಕ್ಷ ಗುಲಾಮಿತನದಲ್ಲಿ ರಾಜ್ಯಗಳು
ಇಲ್ಲಿ ಒಂದಂತೂ ನಿಜ; ಅಮೆರಿಕದಂತಹ ರಾಷ್ಟ್ರಗಳಲ್ಲಿನ ವಿಜ್ಞಾನಿಗಳು ಕಂಡುಹಿಡಿಯುವ ತಂತ್ರಜ್ಞಾನವೆ ಬೇರೆ ದೇಶಗಳಿಗೂ ಹರಡುವುದು. ಭಾರತವೂ ಸೇರಿದಂತೆ ವಿಶ್ವದ ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ಅಮೆರಿಕದಿಂದ ಸೋರಿದ ಎಂಜಲು, ಎರವಲು ತಂತ್ರಜ್ಞಾನವೆ ಆಪತ್ತಿಗೆ ಆಗುವುದು. ಇದು ಯಾಕೆ? ವಿಶೇಷವಾಗಿ, ಅಪಾರ ಸಂಖ್ಯೆಯ ಪದವೀಧರರನ್ನು ಉತ್ಪಾದಿಸುವ ಭಾರತಕ್ಕೆ ಯಾಕೆ ಇಂತಹುದು ಸಾಧ್ಯವಾಗುವುದಿಲ್ಲ? ಇವತ್ತು ಸಂಬಳದ ದೃಷ್ಟಿಯಿಂದ ಪ್ರತಿಭಾವಂತರನ್ನು ಆಕರ್ಷಿಸಬಲ್ಲ ತಾಕತ್ತಿರುವ ಭಾರತದ ಯಾವೊಂದು ಖಾಸಗಿ ಉದ್ದಿಮೆಸಂಸ್ಥೆಯೂ ವಿಜ್ಞಾನದ R&D ಯಲ್ಲಿ ತೊಡಗಿಕೊಂಡಂತೆ ಕಾಣಿಸುತ್ತಿಲ್ಲ. ಇನ್ನು ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿನ ವೈಜ್ಞಾನಿಕ ಪ್ರಯೋಗಗಳೂ ಹೆಚ್ಚಿನ ಮಟ್ಟದ ಯಶಸ್ಸು ಕಂಡಂತೆ ಕಾಣಿಸುವುದಿಲ್ಲ. ಎಲ್ಲರೂ ರಿವರ್ಸ್ ಇಂಜಿನಿಯರಿಂಗ್‌ಗೇ ತೃಪ್ತರಾದಂತೆ ಕಾಣಿಸುತ್ತಿದೆ. ಇನ್ನು ಇಂತಹ ವಿಷಯಗಳಲ್ಲಿ ಭಾರತದ ಯಾವೊಂದು ರಾಜ್ಯಸರ್ಕಾರವೂ ಜವಾಬ್ದಾರಿಯನ್ನೆ ತೆಗೆದುಕೊಂಡಂತೆ ಕಾಣುತ್ತಿಲ್ಲ. ನಮ್ಮ ಕರ್ನಾಟಕ ಸರ್ಕಾರದ ಉದಾಹರಣೆಯನ್ನೆ ತೆಗೆದುಕೊಂಡರೆ, ವೈಜ್ಞಾನಿಕ ಮನೋಭಾವ ಇಲ್ಲದ ಮೂಢ, ವಾಮಾಚಾರಪ್ರೇಮಿಗಳೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರು! ಸರ್ಕಾರಿ ಇಲಾಖೆಗಳನ್ನು ಕಂಪ್ಯೂಟರೀಕರಣ ಮಾಡುವುದನ್ನೆ ವಿಜ್ಞಾನದ ಅಭಿವೃದ್ಧಿ ಎಂದುಕೊಳ್ಳುವ ಮುಟ್ಟಾಳ ಜನ ಇವರು. ರಾಜ್ಯಸರ್ಕಾರದ್ದೆ ಆದ ಒಂದು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾಗಲಿ, ಕೊನೆಗೆ ವಿಶ್ವವಿದ್ಯಾನಿಲಯಗಳಲ್ಲಿನ ವೈಜ್ಞಾನಿಕ ಪ್ರಯೋಗಗಳನ್ನು ಗಮನಿಸಿ, ಪ್ರೋತ್ಸಾಹಿಸುವಂತಹ ವ್ಯವಸ್ಥೆಯಾಗಲಿ ಇದ್ದಂತಿಲ್ಲ. ರಾಜ್ಯಗಳು ಕೇಂದ್ರಸರ್ಕಾರದ ಕೃಪೆಯಲ್ಲಿ; ಕೇಂದ್ರ ವಿದೇಶಗಳ ಕೃಪೆಯಲ್ಲಿ. ಸ್ವಾವಲಂಬಿಯಾದ ವ್ಯವಸ್ಥೆಯನ್ನು ಕಟ್ಟಿಕೊಳ್ಳುವ ಸ್ವಾಭಿಮಾನಿ ಯೋಚನೆಯೆ ನಮ್ಮ ರಾಜ್ಯಗಳನ್ನಾಳುವ ಅಯೋಗ್ಯರಿಗಿಲ್ಲ. ಛೇ.

ಪರಿಸರ ಸ್ನೇಹಿ ಉತ್ಪನ್ನಗಳು ಲಾಭದಾಯಕವೂ ಹೌದು
ಫೋರ್ಡ್ ಮತ್ತು ಜನರಲ್ ಮೋಟಾರ್ಸ್ ಕಂಪನಿಗಳು ಕಳೆದ ಶತಮಾನದ ಆದಿಭಾಗದಲ್ಲಿ ದೊಡ್ಡಮಟ್ಟದಲ್ಲಿ ಕಾರುಗಳನ್ನು ತಯಾರಿಸಲು ಆರಂಭಿಸಿದ ಅಮೆರಿಕದ ಕಂಪನಿಗಳು. ಕ್ರಮೇಣ ಇವು ವಿಶ್ವದ ಎರಡು ಅತಿದೊಡ್ಡ ಆಟೊಮೊಬೈಲ್ ಕಂಪನಿಗಳಾಗಿದ್ದೆ ಅಲ್ಲದೆ ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ಬಲಿಷ್ಠ ಬಹುರಾಷ್ಟ್ರೀಯ ಕಂಪನಿಗಳೂ ಆಗಿಬಿಟ್ಟವು. ಆದರೆ, ಈ ಎರಡೂ ಕಂಪನಿಗಳು ಕಳೆದ ಒಂದೆರಡು ದಶಕಗಳಲ್ಲಿ ಹೊಸ ಶೋಧನೆ ಮಾಡದೆ ಸ್ವಲ್ಪ ಮೈಮರೆತವು. ಅಮೆರಿಕದಲ್ಲಿ ಕಮ್ಮಿ ಬೆಲೆಗೆ ಸಿಗುವ ಪೆಟ್ರೋಲ್ ನಿಂದಾಗಿ ಮೈಲೇಜ್ ಬಗ್ಗೆ ಯೋಚಿಸದೆ ಸುಮ್ಮನೆ ಪವರ್‌ಫುಲ್ ಇಂಜಿನ್‌ಗಳನ್ನು ತಯಾರಿಸುತ್ತ ಬೀಗುತ್ತಿದ್ದವು. ಇದೇ ಸಮಯದಲ್ಲಿ ಜಪಾನಿನ ಟೊಯೊಟ ಮತ್ತು ಹೋಂಡಾ ಕಂಪನಿಗಳು ಒಳ್ಳೆ ಬಾಳಿಕೆ ಬರುವ, ಹೆಚ್ಚು ಮೈಲೇಜೂ ಕೊಡುವ ಗಾಡಿಗಳತ್ತ ದೃಷ್ಟಿ ಹರಿಸಿದರು. ಕಳೆದ ಮೂರುನಾಲ್ಕು ವರ್ಷಗಳಲ್ಲಿ ವಿಪರೀತ ಏರಿದ ಕಚ್ಚಾತೈಲದ ಬೆಲೆಯಿಂದಾಗಿ ಮತ್ತು ಪರಿಸರಪ್ರಜ್ಞೆಯ ಗ್ರಾಹಕರಿಂದಾಗಿ ಜಿಎಮ್ ಮತ್ತು ಫೋರ್ಡ್‌ಗಳ ಮಾರಾಟ ಇಳಿದುಹೋಗಿ, ಇವತ್ತು ಅವೆರಡೂ ವಿಪರೀತ ನಷ್ಟದಲ್ಲಿ ಅಳಿವುಉಳಿವಿನ ಹೋರಾಟದಲ್ಲಿ ಸಿಕ್ಕಿಹಾಕಿಕೊಂಡಿವೆ. ಫೋರ್ಡ್ ಅಂತೂ ಜಾಗತಿಕ ಆಟೊಮೊಬೈಲ್ ಪ್ರಪಂಚದಲ್ಲಿ ಎರಡನೆ ಸ್ಥಾನದಿಂದ ಮೂರನೆ ಸ್ಥಾನಕ್ಕೆ ಶಾಶ್ವತವಾಗಿ ಹೋಗಿಬಿಟ್ಟಿದೆ. ಈಗ ಜಿಎಮ್ ಅನ್ನು ಹಿಂದಿಕ್ಕೆ ಮೊದಲ ಸ್ಥಾನಕ್ಕೆ ಹೋಗಲು ಟೊಯೋಟ ಕೆಲವೆ ತಿಂಗಳುಗಳ ದೂರದಲ್ಲಿದೆ. ಟೊಯೋಟದವರು ಅಭಿವೃದ್ಧಿ ಪಡಿಸಿದ ಹೈಬ್ರಿಡ್ ಎಲೆಕ್ಟಿಕ್ ಕಾರು "ಪ್ರಿಯಸ್" ಉತ್ತಮ ಮೈಲೇಜು ಕೊಡುವುದರ ಜೊತೆಗೆ ಪರಿಸರ ಸ್ನೇಹಿಯೂ ಹೌದು. ಸುಮಾರು 22000 ಡಾಲರ್ ಬೆಲೆಯ ಈ ಕಾರನ್ನು ಕೊಳ್ಳಲು ತಮ್ಮ ನೌಕರರಿಗೆ ಗೂಗ್ಲ್ ಕಂಪನಿಯೂ ಸೇರಿದಂತೆ ಅಮೆರಿಕದ ಹಲವಾರು ಕಂಪನಿಗಳು 3000 ದಿಂದ 10000 ಡಾಲರ್ ವರೆಗೆ ಸಬ್ಸಿಡಿ ನೀಡುತ್ತಿವೆ. ಈ ಕಾರಿನ ಇಂತಹ ಅಭೂತಪೂರ್ವ ಯಶಸ್ಸು ಜಾಗತಿಕವಾಗಿ ಮೋಟಾರುವಾಹನಗಳ ಮೈಲೇಜ್ ಉತ್ತಮಗೊಳ್ಳಲು ಪ್ರೇರೇಪಿಸುತ್ತಿದೆಯಷ್ಟೇ ಅಲ್ಲದೆ ಅದರಿಂದ ಪರೋಕ್ಷವಾಗಿ ಗ್ರೀನ್‌ಹೌಸ್ ಅನಿಲಗಳ ನಿಯಂತ್ರಣಕ್ಕೂ, ಹೊಸಹೊಸ ಸಂಶೋಧನೆಗಳಿಗೂ ಪ್ರೇರಕವಾಗಿದೆ.