Feb 21, 2009

Slumdog Millionaire ಮತ್ತದರ Positive Effect

ನಾಳೆ ಆಸ್ಕರ್ ಪ್ರಶಸ್ತಿಗಳ ಘೋಷಣೆ ಆಗುತ್ತದೆ. ಇತ್ತೀಚಿನ ಸುದ್ದಿಗಳನ್ನು ಗಮನಿಸುತ್ತಿದ್ದರೆ ಭಾರತದ ವಸ್ತು ಇರುವ ಮತ್ತು ಭಾರತದಲ್ಲಿ ತಯಾರಾದ ಸ್ಲಮ್‌‍ಡಾಗ್ ಮಿಲ್ಲಿಯನೇರ್ ಹಲವು ಪ್ರಶಸ್ತಿಗಳನ್ನು ಪಡೆಯುವ ಎಲ್ಲಾ ಸಾಧ್ಯತೆಗಳೂ ಇವೆ. ಈ ವರ್ಷ ಒಳ್ಳೊಳ್ಳೆಯ ಚಿತ್ರಗಳೇ ರೇಸ್‌ನಲ್ಲಿ ಇದ್ದಂತಿವೆ. ಅಷ್ಟಿದ್ದರೂ ಸ್ಲಮ್‌‍ಡಾಗ್ ಶ್ರೇಷ್ಠ ಚಿತ್ರ ಪ್ರಶಸ್ತಿ ಪಡೆಯುವ ಸುದ್ದಿಯೂ ಇದೆ.

ಇಲ್ಲಿ, ನನ್ನ ಒಂದು ಸಂಶಯ ಏನೆಂದರೆ, ಅಕಾಡೆಮಿಯವರು ಬೇಕೆಂತಲೆ "ಮಿಲ್ಕ್"ಗೆ ಶ್ರೇಷ್ಠ ಚಿತ್ರ ಪ್ರಶಸ್ತಿ ಕೊಡಬಹುದು ಎಂದು. ನಾನು ಆ ಸಿನೆಮಾವನ್ನೆ ಅಲ್ಲ, ಆ ಪಟ್ಟಿಯಲ್ಲಿರುವ ಯಾವ ಚಿತ್ರವನ್ನೂ ನೋಡಿಲ್ಲ. ಹಾಗಾಗಿ ಅವುಗಳಲ್ಲಿ ನನಗೆ ಮೆಚ್ಚಿನದ್ದು ಯಾವುದು ಎಂಬ ಅಭಿಪ್ರಾಯ ಇಲ್ಲ. ಅದರೆ ಲಿಬರಲ್ ಮತ್ತು ಪ್ರಗತಿಪರ ಕಾಳಜಿಗಳನ್ನು ಪ್ರೋತ್ಸಾಹಿಸುವ ಅಕಾಡೆಮಿ ಈ ಸಲ ಅದೇ ಕಾರಣಕ್ಕೆ "ಮಿಲ್ಕ್"ನ ಕತೆ ಮತ್ತು ಅದರಲ್ಲಿರುವ ವಿಷಯದಿಂದಾಗಿ ಅದನ್ನೆ ಆಯ್ದುಕೊಳ್ಳಬಹುದು ಎನ್ನಿಸುತ್ತದೆ. ಅದರಲ್ಲಿನ ವಿಷಯ ಇವತ್ತಿನ ಅಮೆರಿಕನ್ ಲಿಬರಲ್‌ಗಳಿಗೆ ಬಹಳ ಮುಖ್ಯವಾದದ್ದು. ಕಳೆದ ನವೆಂಬರ್ ಚುನಾವಣೆಯಲ್ಲಿ ಕ್ಯಾಲಿಫೋರ್ನಿಯ ಮತ್ತಿತರ ರಾಜ್ಯಗಳಲ್ಲಿ ಸಲಿಂಗಿಗಳ ಕಾನೂನಬದ್ಧ ಮದುವೆಯ ಕಾನೂನುಗಳನ್ನು ಜನ ತಿರಸ್ಕರಿಸಿದ್ದಾರೆ. ಸಲಿಂಗಪ್ರೇಮದ ವಿಷಯಕ್ಕೆ ಕಳೆದ ನಾಲ್ಕೈದು ದಶಕಗಳಲ್ಲಿ ಅಮೆರಿಕನ್ ಸಮಾಜ ಉದಾರವಾಗುತ್ತ ಬಂದಿದೆ. ಈಗ ಅವರ ಹೋರಾಟದ ಅಂತಿಮ ಹಂತ ಎನ್ನಬಹುದಾದ ಕಾನೂನುಬದ್ಧ ಮದುವೆಗೆ ಕಳೆದ ಚುನಾವಣೆಯಿಂದ ದೊಡ್ಡ ಹಿನ್ನಡೆಯೇ ಆಗಿದೆ. ಬರಾಕ್ ಒಬಾಮ ಚುನಾವಣೆ ಗೆದ್ದ ಎರಡನೆಯ ದಿನಕ್ಕೆ ಕ್ಯಾಲಿಫೋರ್ನಿಯ ರಾಜ್ಯದ ಸಲಿಂಗಿಗಳ ಮದುವೆಯ ಪ್ರಸ್ತಾಪ (Proposition 8) ಚುನಾವಣೆಯಲ್ಲಿ ಸೋತ ಸುದ್ದಿ ಬಂದಿತು. ಅಂದು ಇದ್ದಕ್ಕಿದ್ದಂತೆ ಹಾಲಿವುಡ್‍ ಮತ್ತು ಬೆವರ್ಲಿ ಹಿಲ್ಸ್‌ನಲ್ಲಿ ಹತ್ತಾರು ಸಾವಿರ ಉದಾರವಾದಿಗಳಿಂದ ಪ್ರತಿಭಟನೆ ಮತ್ತು ರಸ್ತೆತಡೆ ಜೋರಾಗಿಯೆ ನಡೆಯಿತು. ಆ ಪ್ರತಿಭಟನೆಯ ಫೋಟೋಗಳು ಮತ್ತು ವಿವರಗಳು, ಇಲ್ಲಿವೆ. (ಆ ಸಮಯದಲ್ಲಿ ನಾನು ಕೆಲಸದ ಮೇಲೆ ಹಾಲಿವುಡ್‌ ಇರುವ ಲಾಸ್ ಏಂಜಲೀಸ್‌ನಲ್ಲಿ ಇದ್ದೆ. ಅವರ ಪ್ರತಿಭಟನೆಯ ಕಾರಣಕ್ಕೆ ನಾನಿದ್ದ ಬಸ್ಸೂ ಟ್ರಾಫಿಕ್ ಜ್ಯಾಮ್‌ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಹಾಗಾಗಿಯೆ ನನಗೂ ಅದು ಗೊತ್ತಾಗಿದ್ದು.)

ಕರಿಯ ನಟನಟಿಯರನ್ನು ಪ್ರಮುಖ ಪ್ರಶಸ್ತಿಗಳಿಂದ ಆದಷ್ಟು ದೂರ ಇಟ್ಟು ಅನ್ಯಾಯ ಮಾಡುತ್ತಲೆ ಬಂದಿದ್ದ ಅಕಾಡೆಮಿಯ ಪೂರ್ವ ಹಿನ್ನೆಲೆ ಮತ್ತು ಇತ್ತೀಚಿನ ವರ್ಷಗಳಲ್ಲಿನ ಅದರ ವರ್ತನೆ ಗಮನಿಸಿದಾಗ ಅಕಾಡೆಮಿಯ ಪ್ರಶಸ್ತಿ ನೀಡುವ ಲೆಕ್ಕಾಚಾರ ಹೊರಗಿನವರಿಗೆ ಅರ್ಥವಾಗುವುದು ಸ್ವಲ್ಪ ಕಷ್ಟವೆ. (ಈ ವಿಚಾರಕ್ಕೆ In the Heat of the Night ನಲ್ಲಿನ ನಟನೆಗಾಗಿ ಆ ಚಿತ್ರದ ಕರಿಯ ನಾಯಕ ಸಿಡ್ನಿ ಪಾಯಿಟರ್‌ಗೆ ಕೊಡದೆ ಅದರಲ್ಲಿನ ಪೋಷಕ ಪಾತ್ರಕ್ಕೆ ಕೊಟ್ಟ ಶ್ರೇಷ್ಠನಟ ಪ್ರಶಸ್ತಿ ಮತ್ತು ತನ್ನ ಅನೇಕ ಒಳ್ಳೆಯ ಚಿತ್ರಗಳ ನಟನೆಗೆ ಯಾವೊಂದು ಪ್ರಶಸ್ತಿ ದೊರಕದೆ Training Day ನಂತಹ ಆ ವರ್ಷದ Ordinary ಸಿನೆಮಾಕ್ಕೆ ಪ್ರಶಸ್ತಿ ಪಡೆದ ಡೆನ್ಜೆಲ್ ವಾಷಿಂಗ್ಟನ್‍ನ ಉದಾಹರಣೆಯನ್ನು ನಾನಿಲ್ಲಿ ನೆನಪಿಸಿಕೊಳ್ಳುತ್ತೇನೆ.) ಈ ಹಿನ್ನೆಲೆಯನ್ನಿಟ್ಟುಕೊಂಡು ಯೋಚಿಸಿದಾಗ, "ಮಿಲ್ಕ್" ಗೆ ಈ ಸಲ ಶ್ರೇಷ್ಠಚಿತ್ರ ಪ್ರಶಸ್ತಿ ಬರುವ ಸಾಧ್ಯತೆ ನನಗೆ ಹೆಚ್ಚಿಗೆ ಕಾಣಿಸುತ್ತದೆ.

ಈಗ ಸ್ಲಂಮ್‌ಡಾಗ್ ವಿಷಯಕ್ಕೆ ಹಿಂದಿರುಗಿದರೆ, ವಾಸ್ತವ ವಿಚಾರಗಳನ್ನು ಎದುರಿಸಲಾಗದ ಭಾರತದಲ್ಲಿನ ಕೆಲವರು ಸ್ಲಮ್‌ಡಾಗ್ ಭಾರತದ ಮಾನ ಕಳೆಯುತ್ತಿದೆ ಎಂದು ಹೇಳುವ ಮೂಲಕ ತಾವು ಹೇಡಿಗಳು (Cowards) ಎಂದು ನಿರೂಪಿಸುತ್ತಿದ್ದಾರೆ. ಅವರಿಗೆ ಗೊತ್ತಿಲ್ಲದ ವಿಚಾರ ಏನೆಂದರೆ, ಅನೇಕ ಅಮೆರಿಕನ್ ಸಿನೆಮಾಗಳಲ್ಲಿ ಅಮೆರಿಕವನ್ನು ವಿಮರ್ಶೆಗೆ ಒಡ್ಡಿರುವಷ್ಟು, ಬೇರೆ ಯಾವ ದೇಶದವರೂ ಒಡ್ಡಿಲ್ಲ ಎನ್ನುವುದು. ಕಲೆ ಮತ್ತು ಸಾಂಸ್ಕೃತಿಕ ಪ್ರಜ್ಞೆ ಹಾಗೂ ಅದು ಸಮುದಾಯವನ್ನು ಕಟ್ಟುವ ರೀತಿ ಗೊತ್ತಿಲ್ಲದ ಅವಿವೇಕಿಗಳು ಮಾತ್ರ ಸಿನೆಮಾ ಅಥವ ಕಲೆ ದೇಶದ-ಸಂಸ್ಕೃತಿಯ ಮಾನ ಕಳೆಯುತ್ತಿದೆ ಎಂದು ಮಾತನಾಡಬಲ್ಲರು. ತಮ್ಮ ತಪ್ಪು ಮತ್ತು ಪಾಪಗಳನ್ನು ಒಪ್ಪಿಕೊಳ್ಳದ ಹಾಗು ವಿಮರ್ಶೆಗ ಒಡ್ಡಿಕೊಳ್ಳದ ಜನ ಉತ್ತಮ ಸಮಾಜವನ್ನು ಎಂದೂ ನಿರ್ಮಿಸಲಾರರು, ಅದಕ್ಕಾಗಿ ಪ್ರಯತ್ನಿಸಲಾರರು.

ಸ್ಲಮ್‌ಡಾಗ್ ಮಿಲ್ಲಿಯನೇರ್ ಅನ್ನು ನಾನು ನೋಡಿಲ್ಲವಾದರೂ, ಅದು ಅಮೆರಿಕದಲ್ಲಿ ಭಾರತದ ಬಗ್ಗೆ ಸೃಷ್ಟಿಸಿರುವ Good-will ಅನ್ನು ಮಾತ್ರ ಸ್ಪಷ್ಟವಾಗಿ ಗುರುತಿಸಬಲ್ಲೆ. ಪ್ರತಿರೋಧಗಳ ಮಧ್ಯೆಯೂ ಮನುಷ್ಯ ಏನಾದರೂ ಸಾಧಿಸಬಲ್ಲ ಎನ್ನುವ ಕತೆಗೆ ಪೂರಕವಾಗಿ ಅಮೆರಿಕನ್ನರು ಸ್ಲಮ್‌ಡಾಗ್ ಅನ್ನು ಉದಾಹರಿಸುತ್ತಿದ್ದಾರೆ. (ABC News ನಲ್ಲಿ ಡಯಾನ ಸಾಯರ್ಸ್ ಭಾರತದ ಕುಗ್ರಾಮಗಳಿಂದ ಬಂದಿರುವ ಇಬ್ಬರು "ಬಸ್‍ಬಾಲ್" ಪಿಚ್ಚರ್‌ಗಳ ಬಗ್ಗೆ ತನ್ನ ಹೊಳಪುಕಣ್ಣಿನಿಂದ ಮಾತನಾಡುತ್ತ ಸ್ಲಮ್‍ಡಾಗ್ ಸಿನೆಮಾವನ್ನು ಉದಾಹರಿಸಿದ್ದು ನೆನಪಾಗುತ್ತಿದೆ.) ಅವರಿಗೆ ಅದರಲ್ಲಿ ತೋರಿಸಿರುವ ಇತರ ವಾಸ್ತವಗಳು ನಗಣ್ಯ. ಅದಕ್ಕಿಂತ ಭೀಕರ ವಾಸ್ತವಗಳನ್ನು ಇಲ್ಲಿಯ ಜನ ತಮ್ಮ ಸಿನೆಮಾಗಳಲ್ಲಿ ನೋಡಿದ್ದಾರೆ. ನಮ್ಮ ಕೋಮುವಾದಿ ರಾಷ್ಟ್ರಪ್ರೇಮಿಗಳಿಗೆ ಮಾತ್ರ ಈ ಸಿನೆಮಾ ಧ್ವನಿಸುವ ಪಾಠಕ್ಕಿಂತ ಅದರಲ್ಲಿ ಚಿತ್ರಿತವಾಗಿರುವ ಭಾರತದ ಸ್ಲಮ್‌ಗಳ ಚಿತ್ರಣ ತಡೆದುಕೊಳ್ಳಲು ಆಗುತ್ತಿಲ್ಲ. ವಾಸ್ತವವನ್ನು ಎದುರಿಸಲಾಗದ, ಆದರೆ ಜನಾಭಿಪ್ರಾಯವನ್ನು ವಿರುದ್ಧ ದಿಕ್ಕಿನಲ್ಲಿ ರೂಪಿಸಿ ದಾರಿತಪ್ಪಿಸಬಲ್ಲ ಈ ಹೇಡಿಗಳನ್ನು ಎದುರಿಸುವ ಬಗೆಯನ್ನು ಭಾರತ ತಕ್ಷಣ ಕಂಡುಕೊಳ್ಳಬೇಕಿದೆ.

ಭಾರತ ಜಗತ್ತಿನಲ್ಲಿಯೇ ಅತಿ ಹೆಚ್ಚು ಸಿನೆಮಾಗಳನ್ನು ನಿರ್ಮಿಸುವ ದೇಶವಾದರೂ ಜಗತ್ತಿಗೆಲ್ಲ ಕನಸು ಹಂಚಬಲ್ಲ ಸಾಮರ್ಥ್ಯವಿರುವ ಹಾಲಿವುಡ್‍ನ Imagination ಅನ್ನು ತನ್ನತ್ತ ಸೆಳೆಯಲು ಇಲ್ಲಿಯ ತನಕ ಅದಕ್ಕೆ ಸಾಧ್ಯವಾಗಿರಲಿಲ್ಲ. ಈಗ ಅದು ಸ್ಲಮ್‌ಡಾಗ್ ಮಿಲ್ಲಿಯನೇರ್‌ನಿಂದ ಸಾಧ್ಯವಾಗಿದೆ. "Crouching Tiger, Hidden Dragon" ಯಾವ ರೀತಿ ಚೀನಾದ ರಮ್ಯ ಕಾಲ್ಪನಿಕ ಕತೆಗಳನ್ನು, ಅದರ ಸಂಸ್ಕೃತಿ ಮತ್ತು ಇತಿಹಾಸವನ್ನು ಹೊರಜಗತ್ತಿಗೆ ಪರಿಚಯಿಸಲು ಮತ್ತು ಅಂತಹ ಸಿನೆಮಾಗಳು ಹೆಚ್ಚೆಚ್ಚು ಬರಲು ಕಾರಣವಾಯಿತೊ, ಭಾರತದ ವಿಷಯಕ್ಕೆ ಅದನ್ನು "ಸ್ಲಮ್‌ಡಾಗ್ ಮಿಲ್ಲಿಯನೇರ್" ಮಾಡಲಿದೆ. India's time has arrived in Hollywood. ಇನ್ನು ಮುಂದಿನ ಒಂದೆರಡು ವರ್ಷಗಳಲ್ಲಿ ಭಾರತದ ಮತ್ತು ಭಾರತೀಯರ ಸುತ್ತ ಸುತ್ತುವ ಅನೇಕ ಹಾಲಿವುಡ್ ಚಿತ್ರಗಳನ್ನು ನಾವು ನಿರೀಕ್ಷಿಸಬಹುದು. ಈ ಪ್ರಕ್ರಿಯೆ, ಹಾಡು-ನೃತ್ಯ-ಫೈಟಿಂಗ್‌ಗೆ ಹೊರತಾದ, ಬದಲಿಗೆ ನೈಜ ಸಮಾಜವನ್ನು ಬಿಂಬಿಸುವ ಅಥವ ಉತ್ತಮ ಸಮಾಜವನ್ನು ಆಶಿಸುವ ರೀತಿಯ ಭಾರತೀಯ ಚಿತ್ರಗಳ ತಯಾರಿಕೆಗೂ ಪೂರಕವಾದರೆ, ಅದು ನಮ್ಮ ಸಿನೆಮಾ ಲೋಕಕ್ಕಾದ ನಿಜವಾದ ಪರಿಣಾಮ.

ನಾಳೆ ಸ್ಲಮ್‌ಡಾಗ್ ಶ್ರೇಷ್ಠಚಿತ್ರ ಪ್ರಶಸ್ತಿ ಪಡೆಯುತ್ತದೊ ಇಲ್ಲವೊ, ಒಂದಷ್ಟು ಪ್ರಶಸ್ತಿಗಳನ್ನು ಪಡೆಯುವುದಂತೂ ಖಚಿತ. ಹೊರದೇಶಗಳಲ್ಲಿ ಭಾರತದ ಬಗ್ಗೆ ಮತ್ತು ಜೀವನಪ್ರೀತಿಯ ಬಗ್ಗೆ ಈ ಚಿತ್ರ ಸೃಷ್ಟಿಸಿದ ಒಂದು Positive Feeling ಗಾದರೂ ಆಗಲಿ ನಾನು ಆ ಸಿನೆಮಾ ತಂಡಕ್ಕೆ ಕೃತಜ್ಞತೆ ಹೇಳುತ್ತೇನೆ.

Feb 12, 2009

ಪ್ರೇಮಕ್ಕೆ ಜಿಂದಾಬಾದ್ - ಮತ್ತು, ಒಂದು (ಹಳೆಯ) ಪ್ರೇಮ ಕವನ

ಎಲ್ಲಾ ಹಾಲಿ-ಮಾಜಿ ಪ್ರೇಮಿಗಳಿಗೂ, ವಿರಹಿಗಳಿಗೂ, 2009 ರ "ಪ್ರೇಮಿಗಳ ದಿನ"ದ ಶುಭಾಶಯಗಳು.

ರಾಷ್ಟ್ರೀಯ ದಿನಾಚರಣೆಗಳನ್ನು ಬಿಟ್ಟರೆ ಈ ವೈಯಕ್ತಿಕ ದಿನಾಚರಣೆಗಳ ಬಗ್ಗೆ ನನಗೆ ಉತ್ಸಾಹವಾಗಲಿ, ಹೇಳಿಕೊಳ್ಳುವಂತಹ ಗೌರವವಾಗಲಿ ಇಲ್ಲ. ಇನ್ನು ಆಚರಿಸುವುದಂತೂ ದೂರದ ಮಾತು. ಹತ್ತಿರದವರಿಗೆ ಶುಭಾಶಯ ಹೇಳುವುದೂ ಇಲ್ಲವೇ ಇಲ್ಲವೇನೊ. ಆದರೂ, ಕರ್ನಾಟಕದ ಇವತ್ತಿನ ಸಂದರ್ಭದಲ್ಲಿ , ಎಲ್ಲರಿಗೂ, ವಿಶೇಷವಾಗಿ ನನ್ನ ಯುವ ಮಿತ್ರರಿಗೆ, ಈ ಸಲದ ಪ್ರೇಮಿಗಳ ದಿನದ ಶುಭಾಶಯ ಹೇಳುವುದು ಮುಖ್ಯ ಅನ್ನಿಸುತ್ತಿದೆ.

ಭಾರತೀಯ ಪರಂಪರೆಯಲ್ಲಿ ಪ್ರೇಮದ ಮತ್ತು ಪ್ರೇಮಿಗಳ ಉಜ್ವಲ ಪರಂಪರೆಯೇ ಇದೆ. ಶಿವ-ಗಿರಿಜೆ, ರಾಧೆ-ಕೃಷ್ಣ, ರುಕ್ಮಿಣಿ-ಕೃಷ್ಣ, ಸುಭದ್ರೆ-ಅರ್ಜುನ, ಶಶಿಕಲ-ಅಭಿಮನ್ಯು; ನಮ್ಮ ಪುರಾಣಗಳಲ್ಲಿ ಬರುವ ನಿರ್ಭಯ ಪ್ರೇಮಿಗಳು. ಪೃಥ್ವಿರಾಜ್ ಚೌಹಾಣ್ ಮತ್ತು ಸಂಯುಕ್ತ, ಶಹಜಹಾನ್-ಮಮ್ತಾಜ್, ನಮ್ಮ ಸುಪ್ರಸಿದ್ಧ ಐತಿಹಾಸಿಕ ಪ್ರೇಮಿಗಳು. ದೇವದಾಸ್ ಮತ್ತು ಪಾರ್ವತಿಯರಂತೂ ಒಂದು ತಲೆಮಾರನ್ನೇ ಪ್ರಭಾವಿಸಿದ ಕಾಲ್ಪನಿಕ ಪ್ರೇಮಿಗಳು. ಕುವೆಂಪುರವರು ಚಿತ್ರಿಸಿದ ಐತ-ಪೀಂಚಲು ಮತ್ತು ಮುಕುಂದ-ಚಿನ್ನಮ್ಮ ಕನ್ನಡ ಸಾರಸ್ವತ ಲೋಕದ ಅಮರ ಪ್ರೇಮಿಗಳು. ಇನ್ನು ನಮ್ಮ ಹಲವಾರು ಶ್ರೇಷ್ಠ ಸಿನೆಮಾಗಳು ಪ್ರೇಮದ ದೃಶ್ಯ ಕಾವ್ಯಗಳು. ಪ್ರೇಮದ ಈ ಎಲ್ಲಾ ಹಿರಿಮೆಯನ್ನು ಮತ್ತು ಈ ಪ್ರೇಮಿಗಳನ್ನು ನೆನಪಿಸಿಕೊಳ್ಳುತ್ತ ನಮ್ಮ ಯುವ ಜನತೆ ಪ್ರೇಮದ ಹೊಳೆಯಲ್ಲಿ ಈಜಾಡಲು ಯಾವುದೇ ಭಯ-ಸಂಕೋಚ ಪಡದೇ ಇರಲಿ ಎನ್ನುವ ಹಾರೈಕೆ ನನ್ನದು. ಭಾರತದ ಹಲವಾರು ಗಂಭೀರ ಸಾಮಾಜಿಕ ಸಮಸ್ಯೆಗಳಿಗೆ ನಮ್ಮ ಯುವಕ-ಯುವತಿಯರು ಯಾವುದೆ ಕುಲ-ಮತ ನೋಡದೆ ಪ್ರೇಮದಲ್ಲಿ ಮುಳುಗಿ ಮದುವೆ ಆಗುವುದರಲ್ಲಿದೆ ಎನ್ನುವ ನಂಬಿಕೆಯೂ ನನ್ನ ಈ ಹಾರೈಕೆಯ ಹಿಂದಿರುವ ಒಂದು ಕಾರಣ. ನಮ್ಮ ಇಂದಿನ ಮತ್ತು ಮುಂದಿನ ತಲೆಮಾರಿನ ದಾರಿ ಇದೇ ಆಗಬೇಕು.

ಪ್ರೇಮಿಗಳ ದಿನಾಚರಣೆಯ ಸಂಭ್ರಮವನ್ನು ಕೋರುತ್ತ ನನ್ನ ಹಳೆಯ ಪ್ರೇಮ ಕವನವನ್ನು ಇಲ್ಲಿ ನೀಡುತ್ತಿದ್ದೇನೆ. ಇದನ್ನು ನಾನು ಬರೆದದ್ದು 2003 ರಲ್ಲಿ. ಆಸಕ್ತಿ-ನಿರಾಸಕ್ತಿ-ರಾಗ-ವೈರಾಗ್ಯಗಳ ನಡುವೆ ನಾನು ತುಯ್ದಾಡುತ್ತಿದ್ದ ಸಮಯ ಅದು. ಆದರೂ, ಒಂದು ಪ್ರೇಮ ಕವನ ಬರೆಯಬೇಕೆಂದುಕೊಂಡು, ಕನ್ನಡದ ಪ್ರಸಿದ್ಧ ಭಾವಗೀತೆಯೊಂದರ ನಾದದ ಹಿನ್ನೆಲೆಯಲ್ಲಿ ಈ ಕವನ ಬರೆದೆ. ಅದು ಹೀಗಿದೆ:


ಮಧುಬಿಂದಿಗೆಯ ನೀರೆ

ನೀರಸದ ಜೀವನಕೆ ರಸ ಬೆರೆಸ ಬಾರೆ,ನೀರೆ
ಮಧುಬಿಂದಿಗೆಯ ತೆಳುನಡುವಲಿಡಿದು।।

ಅದ ಕಂಡೆ ಇದ ಕಂಡೆ, ತೃಪ್ತಿಯೆಂಬುದು ಇಲ್ಲ.
ಖಂಡ ಖಂಡಗಳ ಜಿಗಿದೆ; ಭಾವ ತಣಿದಿಲ್ಲ.
ಬೇಸರವೊ ದುಃಖವೊ ಈ ಪರಿಯ ತಿಳಿಯೆ
ಎದೆಕೊರತೆಯಾ ತಿಳಿವು ದಿನ ಮನದಲೆಲ್ಲಾ

ರಾಗವೈರಾಗ್ಯಗಳ ಆಚೀಚೆ ನಾ ಪಯಣಿ.
ರಾಗಿಣಿ ರೂಪಿಣಿ ನೀ ಸುಧೆಯಧರ ರಾಣಿ.
ಜನ್ಮಜನ್ಮಾಂತರದ ಅಂಧ ಬಂಧಗಳೇಕೆ?
ಮೃತ್ಯುಂಜಯವು ಜೀವ ನಿನ್ನೊಲವ ಸವಿಯೆ


ಈ ಕವನದ ವಾಚನ ಅಥವ ಗಾಯನ ಮಾಡಿ ನನ್ನ ಯೂಟ್ಯೂಬ್ ಚಾನಲ್‌ನಲ್ಲಿ ಹಾಕಿದ್ದೇನೆ. ಅದನ್ನು ಕೇಳಿ ನಿಮ್ಮ ಕಿವಿಗಾಗುವ ಹಾನಿಗೆ ಅಥವ ಮಾನಸಿಕ ಕ್ಷೋಭೆಗೆ ನಾನು ಯಾವುದೇ ರೀತಿಯಲ್ಲೂ ಜವಾಬ್ದಾರನಲ್ಲ ಎಂದು ಈಗಲೇ ಹೇಳುತ್ತಿದ್ದೇನೆ! ಸ್ವಲ್ಪ ನಕ್ಕು, ತಮಾಷೆ ಮಾಡಿಕೊಂಡು, ಮತ್ತೆ ಪ್ರೇಮವನ್ನು ನೆನಪಿಸಿಕೊಂಡು ಪ್ರೇಮ ಸಾಗರದಲ್ಲಿ ಈಜು ಬೀಳಿ.

ಹಾಲಿ ಪ್ರೇಮಿಗಳೆಲ್ಲರಿಗೂ ಅಭಿನಂದನೆ. ಭಾವಿ ಪ್ರೇಮಿಗಳಿಗೆ ಪ್ರೇಮಲೋಕಕ್ಕೆ ಸ್ವಾಗತ.



ಕವನ ಗಾಯನದ ವಿಡಿಯೊ!


ಪ್ರೇಮಕ್ಕೆ ಜಿಂದಾಬಾದ್...

ರವಿ...

Feb 3, 2009

ಪಟ್ಟಾಭಿರಾಮ ಸೋಮಯಾಜಿ, ಯೂನಿವರ್ಸಿಟಿ ಪ್ರೊಫೆಸರ್‌ಗಳು, ಮತ್ತು ಸ್ವಾತಂತ್ರ್ಯ...

ಇವತ್ತು ಕರ್ನಾಟಕದ ಕರಾವಳಿಯಿಂದ ಕೇಳಿಸುವ ಕೆಲವೆ ಕೆಲವು ಜನಪರ, ಪ್ರಜಾಪ್ರಭುತ್ವವಾದಿ, ಜಾತ್ಯತೀತ ಧ್ವನಿಗಳಲ್ಲಿ ಪಟ್ಟಾಭಿರಾಮ ಸೋಮಯಾಜಿಯವರದೂ ಒಂದು. ಕೋಮುವಾದ, ಶ್ರೀಮಂತಿಕೆಯ ಹಪಹಪಿ, ಜಾತಿಶ್ರೇಷ್ಠತೆ ಮತ್ತು ಮತೀಯವಾದವನ್ನೆ ದೇಶಪ್ರೇಮ ಮತ್ತು ಸಂಸ್ಕೃತಿಯ ರಕ್ಷಣೆ ಎಂದುಕೊಂಡ ಅಪಕ್ವ ಮನಸುಗಳ ವ್ಯವಸ್ಥಿತ ಸಂಚುಗಾರಿಕೆ, ಇದನ್ನೆಲ್ಲ ಅರಿಯಲಾರದ ಬಹುಸಂಖ್ಯಾತರ ವೈಚಾರಿಕ ದಾರಿದ್ರ್ಯ; ಇಂತಹ ಹಲವು ಪಿಡುಗುಗಳಿಂದ ಇವತ್ತು ಕರಾವಳಿ ಕಲುಷಿತವಾಗುತ್ತಿದೆ. ಇಡೀ ಕರ್ನಾಟಕದಲ್ಲಿ ಇವತ್ತು ಎಲ್ಲಿಯಾದರೂ ಪ್ರಗತಿಪರರಾಗಿರುವುದು, ಜಾತ್ಯತೀತನಾಗಿರುವುದು, ಒಟ್ಟು ಸಮಾಜದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವುದು ದೊಡ್ಡ ಸವಾಲಾಗಿ ಇದ್ದರೆ ಅದು ಕರಾವಳಿಯಲ್ಲಿ. ಬೇರೆ ಕಡೆ ಅದು ಸವಾಲು ಅಲ್ಲ ಅಂತಲ್ಲ. ಆದರೆ ಕರಾವಳಿಯ ಸವಾಲು ನಿಸ್ಸಂಶಯವಾಗಿ ದೊಡ್ಡದು.

ನನಗೆ ಸೋಮಾಯಾಜಿಯವರ ವೈಯಕ್ತಿಕ ಪರಿಚಯ ಇಲ್ಲ. ಆದರೆ ಅವರು ಪಾಲ್ಗೊಳ್ಳುವ ಕಾರ್ಯಕ್ರಮಗಳು ಮತ್ತು ಆಡಿದ ಮಾತುಗಳನ್ನು, ಮತ್ತು ಅವರ ಕೆಲವು ಲೇಖನ ಮತ್ತು ಪತ್ರಗಳನ್ನು ಪತ್ರಿಕೆಗಳಲ್ಲಿ ಓದಿ, ಅವರ ಬಗ್ಗೆ ತಿಳಿದಿದೆ. ಸೋಮಯಾಜಿ, ರಾಜಶೇಖರ್, ಫಣಿರಾಜ್‌ರಂತಹ ಕೆಲವು ವ್ಯಕ್ತಿಗಳು ಮಂಗಳೂರು ಮತ್ತು ಉಡುಪಿಗಳಲ್ಲಿ ಇಲ್ಲದೆ ಹೋಗಿದ್ದರೆ ನಮಗೆ ಅಲ್ಲಿಯ ಸಮಕಾಲೀನ ಕ್ರೌರ್ಯವಾಗಲಿ, ಪಟ್ಟಭದ್ರ ಪಿತೂರಿಗಳಾಗಲಿ, ಕೊನೆಗೆ ಅಲ್ಲಿಯೂ ವೈಚಾರಿಕತೆ ಮತ್ತು ಜನಪರ ಹೋರಾಟಗಳು ಜೀವಂತವಾಗಿವೆ ಎನ್ನುವುದಾಗಲಿ ಗೊತ್ತಾಗುತ್ತಿರಲಿಲ್ಲ. ಆದರೆ ಇವತ್ತು ಬಂದಿರುವ ಒಂದು ಇಮೇಯ್ಲಿನ ಮುಖಾಂತರ ತಿಳಿದಿದ್ದೇನೆಂದರೆ, ಕೋಮುವಾದಿ ಶಕ್ತಿಗಳು ಪಟ್ಟಾಭಿರಾಮ ಸೋಮಯಾಜಿಯವರ ಮೂಲಭೂತ ಹಕ್ಕುಗಳನ್ನು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನೆ ಕಸಿಯಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು. ಆ ಇಮೇಯ್ಲಿನ ಸಾರಾಂಶ ಹೀಗಿದೆ:

Mr. Pattabhirama Somayaji, teacher of English who teaches at the University College, Mangalore has been targetted by right wing groups for his consistent remarks against their violence. Now the district-in-charge minister has directed the university to issue notice to him in a bid to dismiss him, for speaking against the "state". This is after his speaking against the pub incident involving Sri Rama Sena in Mangalore last month. A sizeable chunk of students in the Mangalore University College, (about a hundred, led by ABVP), is demanding the removal of Mr. Pattabhirama Somayaji for speaking openly against the recent attack on the pub in Mangalore, and they had observed a forceful bundh of the college. Mr. Somayaji has been a fearless speaker and has been talking truth to power for which he has been consistently targetted in recent times. The latest development is a very dangerous one for Mr. Somayaji, for the autonomy of the University, and needless to say, for larger society.

ಇದನ್ನೆ ಪಾಂಡಿಚೆರ್ರಿ ವಿಶ್ವವಿದ್ಯಾಲಯದ ಡಾ. ನಿಖಿಲ ಎನ್ನುವವರು ಆನ್‍ಲೈನ್ ಪೆಟಿಷನ್ ಮಾಡಿದ್ದಾರೆ.

http://www.ipetitions.com/petition/savepsomayaji/index.html

ಇದು ಎಡ-ಮಧ್ಯಮ-ಬಲ ಸಿದ್ಧಾಂತದ ಪ್ರಶ್ನೆಯಲ್ಲ. ವ್ಯವಸ್ಥೆಯಲ್ಲಿನ ದೋಷದ ವಿರುದ್ಧ ಧ್ವನಿಯೆತ್ತುವ ಮಾನಸಿಕ ಸ್ಥೈರ್ಯ ಮತ್ತು ಸಾಮಾಜಿಕ ಬದ್ಧತೆ ಇರುವ ಎಲ್ಲರಿಗೂ ಸಂಬಂಧಿಸಿದ ಪ್ರಶ್ನೆ ಇದು. ಒಟ್ಟು ಸಮಾಜದ ಒಳಿತಿಗಾಗಿ ಮಾತನಾಡುವವರು ಇವರು. ಒಂದು ಆದರ್ಶ ವ್ಯವಸ್ಥೆಯ ಕನಸಿಟ್ಟುಕೊಂಡು ಮಾತನಾಡುವವರು ಇವರು. ಸಮಾಜದಲ್ಲಿ ಒಂದು ಸಭ್ಯ ನಾಗರಿಕ ವ್ಯವಸ್ಥೆಗಾಗಿ ತಮ್ಮನ್ನು ತಾವು ವೈಯಕ್ತಿಕ ನೋವು-ಕಷ್ಟಗಳಿಗೆ ಒಡ್ಡಿಕೊಳ್ಳುವವರು ಇವರು. ಎಷ್ಟೋ ಸಮಯ ತಾವು ಯಾವ ಸಮಾಜದ ಒಳಿತಿಗಾಗಿ ಆ ನೋವನ್ನು ಸ್ವೀಕರಿಸಿರುತ್ತಾರೊ ಅದೇ ಸಮಾಜದ ತಾತ್ಸಾರಕ್ಕೆ ಒಳಗಾಗುವವರು ಇವರು.

ಇನ್ನು ನಮ್ಮ ಯೂನಿವರ್ಸಿಟಿಗಳ ಸ್ಥಿತಿಯ ಬಗ್ಗೆ. ಇಲ್ಲಿಂದ ಯಾವೊಂದು ಹೊಸ ವಿಚಾರಗಳಾಗಲಿ, ಚಿಂತನೆಯಾಗಲಿ, ಬರುತ್ತಿರುವುದು ಸಂದೇಹ. ಇವತ್ತು ಕರ್ನಾಟಕದಲ್ಲಿ ಎಲ್ಲಿಯಾದರೂ ಯಾರಿಗಾದರೂ ಅವರ ಸಾಮಾಜಿಕ ಬದ್ಧತೆಯನ್ನು ಮತ್ತು ಅವರ ಕನಿಷ್ಠ ಜವಾಬ್ದಾರಿಯನ್ನು ನೆನಪಿಸಬೇಕಿದ್ದರೆ, ಅದು ನಮ್ಮ ವಿಶ್ವವಿದ್ಯಾಲಯಗಳಲ್ಲಿರುವ ಲೆಕ್ಚರರ್‌ಗಳಿಗೆ. ಬಹುಪಾಲು ಎಲ್ಲಾ ವಿಷಯಗಳಿಗೂ ಒಂದಲ್ಲ ಒಂದು ವಿಧದಲ್ಲಿ ಸ್ಪಂದಿಸಬೇಕಾದ, ರಿಯಾಕ್ಟ್ ಮಾಡಬೇಕಾದ, ಜನಕ್ಕೆ ಅಧ್ಯಯನದ ಮೂಲಕ ವಿವರಿಸಬೇಕಾದ, ಮಾರ್ಗದರ್ಶನ ನೀಡಬೇಕಾದ ಈ ವಿಶ್ವವಿದ್ಯಾನಿಲಯಗಳ ಪ್ರೊಫೆಸರ್‌ಗಳು ಇವತ್ತು ಆ ಯಾವುದನ್ನೂ ಮಾಡುವ ಹಾಗೆ ಕಾಣಿಸುತ್ತಿಲ್ಲ. ಕೆಲವೆ ಕೆಲವು ಜನರನ್ನು ಬಿಟ್ಟರೆ ಕರ್ನಾಟಕದಲ್ಲಿ ಬಹುಪಾಲು ಯೂನಿವರ್ಸಿಟಿ ಪ್ರೊಫೆಸರ್‌ಗಳು ಅನಾಮಧೇಯರಾಗಿ, ಸ್ವಾರ್ಥಿಗಳಾಗಿ, ಅಯೋಗ್ಯರಾಗಿ ಬದುಕುತ್ತಿದ್ದಾರೆ. ಸೈಧ್ಧಾಂತಿಕ ವಿರೋಧವಾಗಲಿ, ವೈಚಾರಿಕ ವಿರೋಧವಾಗಲಿ ಕಾಣಿಸಬೇಕಾದಷ್ಟು ಕಾಣಿಸುತ್ತಲೆ ಇಲ್ಲ. ಸ್ವತಂತ್ರ ಮನೋಭಾವದ ಹೊರತಾಗಿ ಅಧಿಕಾರಕ್ಕೆ, ಸರ್ಕಾರಕ್ಕೆ, ಜಾತಿಗೆ, ಗುಲಾಮರಾಗಿ ಹೋಗಿದ್ದಾರೆ ಬಹುಸಂಖ್ಯಾತ ಮೇಷ್ಟ್ರುಗಳು. ಇನ್ನು ಪಟ್ಟಾಭಿರಾಮ ಸೋಮಯಾಜಿಯವರ ಮೇಲೆ ಅಧಿಕಾರಸ್ಥರು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ನೋಡಿ ಯೂನಿವರ್ಸಿಟಿಗಳ ಮೇಷ್ಟ್ರುಗಳು ಇನ್ನೂ ಪುಕ್ಕಲರಾಗಿ ಹೋಗುತ್ತಾರೆ. ಸಮಾಜಕ್ಕೆ ಇರಬೇಕಾದ ತಮ್ಮ ನಿಷ್ಠೆಯನ್ನು ಮರೆತುಬಿಡುತ್ತಾರೆ. ಅವರ ಆ ತಪ್ಪಿನಲ್ಲಿ ಬೆಂಬಲಿಸಬೇಕಾದಾಗ ಬೆಂಬಲಿಸದ ನಮ್ಮ ಪಾಲೂ ಇರುತ್ತದೆ.

ಸ್ನೇಹಿತರೆ, ಹಾಗಾಗಿ ಮೇಲಿನ ಕೊಂಡಿಯಿರುವ ಪುಟಕ್ಕೆ ಹೋಗಿ ಅದಕ್ಕೆ ನಿಮ್ಮ ಬೆಂಬಲವನ್ನು ಸೂಚಿಸಿ. ಬಹುಶಃ ಈ ಪೆಟಿಷನ್ ಸಿದ್ಧಪಡಿಸಿರುವವರು ಅದನ್ನು ಕೊನೆಗೆ ರಾಜ್ಯಪಾಲರಿಗೊ, ಕೇಂದ್ರಸರ್ಕಾರಕ್ಕೊ, ಅಥವ ಸಂಬಂಧಪಟ್ಟ ಇಲಾಖೆಗೊ ಕಳುಹಿಸುತ್ತಾರೆ. ಸದ್ಯದ ಸ್ಥಿತಿಯಲ್ಲಿ ಎಲ್ಲೆಲ್ಲಿ ಬೆಳಕಿನ ದೊಂದುಗಳು ಇವೆಯೊ ಅವೆಲ್ಲವನ್ನೂ ನಾವು ಕಾಪಾಡಿಕೊಳ್ಳಬೇಕು.

ಈಗಾಗಲೆ ಕನ್ನಡದ ಹಲವಾರು ಲೇಖಕರು (ನಟರಾಜ್ ಹುಳಿಯಾರ್, ಸಿ.ಎನ್. ರಾಮಚಂದ್ರ, ರಹಮತ್ ತರಿಕೆರೆ, ಓಎಲ್‍ಎನ್ ಸ್ವಾಮಿ, ಕೆ.ವಿ. ತಿರುಮಲೇಶ್, ಇತ್ಯಾದಿ) ಈ ಆನ್‌ಲೈನ್ ಪೆಟಿಷನ್‍ಗೆ ಸಹಿ ಹಾಕಿದಂತಿದೆ. ನನಗೆ ಈ ವಿಷಯಕ್ಕೆ ಕೇವಲ ಸಹಿ ಹಾಕಿದರೆ ಸಾಲದು, ನನ್ನ ಬ್ಲಾಗಿನಲ್ಲಿ ನಾಲ್ಕು ಸಾಲು ಬರೆಯಬೇಕು ಎನ್ನಿಸಿತು. ದಯವಿಟ್ಟು ನೀವೂ ನಿಮಗೆ ತೋಚಿದ ಹಾಗೆ ಮಾಡಿ.

ರವಿ...