Mar 26, 2009

ಉಡುಪಿಯಲ್ಲೊಂದು ಸಂವಾದ: ಕರ್ನಾಟಕದ ಪ್ರಚಲಿತ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ - ನಮ್ಮೆದುರಿನ ಸವಾಲುಗಳು

ಸ್ನೇಹಿತರೆ,

ಮೊದಲಿಗೆ, ಎಲ್ಲರಿಗೂ ಉಗಾದಿ ಹಬ್ಬದ ಶುಭಾಶಯಗಳು.

ಜನಪರ ವೇದಿಕೆ-ಉಡುಪಿ ಘಟಕ, ಇದರ ಸಹಯೋಗದೊಂದಿಗೆ www.vicharamantapa.net ಇದೇ ಭಾನುವಾರ (29-03-2009), ಮಧ್ಯಾಹ್ನ 3:00 ಗಂಟೆಗೆ "ಪ್ರಚಲಿತ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ: ನಮ್ಮೆದುರಿನ ಸವಾಲುಗಳು" ಈ ವಿಷಯದ ಮೇಲೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮದ ವಿವರ ಹೀಗಿದೆ:

ಸ್ಥಳ: ಮಹಾಜನ ಸಭಾಂಗಣ, ಕಿದಿಯೂರು ಹೋಟೆಲ್, ಬಸ್ ನಿಲ್ದಾಣದ ಬಳಿ, ಉಡುಪಿ.

ದಿನ ಮತ್ತು ಸಮಯ: ಭಾನುವಾರ (29-03-2009), ಮಧ್ಯಾಹ್ನ 3:00

ಪ್ರಸ್ತಾವನೆ: ಡಿ.ಎಸ್. ನಾಗಭೂಷಣ್

ವಿಷಯದ ಕುರಿತು ಮಾತು: ರವಿ ಕೃಷ್ಣಾ ರೆಡ್ಡಿ

ಪ್ರತಿಕ್ರಿಯೆ: ಪಟ್ಟಾಭಿರಾಮ ಸೋಮಯಾಜಿ, ಶಾರದಾ ಭಟ್, ಜಯನ್ ಮಲ್ಪೆ, ಹಾಗೂ ಕಾರ್ಯಕ್ರಮಕ್ಕೆ ಬಂದವರು.

ಅಧ್ಯಕ್ಷತೆ: ಸಿ.ಎನ್. ಶೆಟ್ಟಿ




ಉಡುಪಿ ಮತ್ತು ಮಂಗಳೂರಿನ ಓದುಗರಿಗೆ ಮತ್ತು ಆಸಕ್ತರಿಗೆ, ಹಾಗೂ ಕಾರ್ಯಕ್ರಮಕ್ಕೆ ಬರುವ ಅನುಕೂಲತೆಗಳಿರುವ ಎಲ್ಲರಿಗೂ ಈ ಸಂವಾದಕ್ಕೆ ಬಂದು ಅದರಲ್ಲಿ ಪಾಲ್ಗೊಳ್ಳಬೇಕೆಂದು ವೈಯಕ್ತಿಕವಾಗಿ ಆಹ್ವಾನಿಸುತ್ತಿದ್ದೇನೆ. ಬನ್ನಿ. ಕರ್ನಾಟಕದ ಇವತ್ತಿನ ಸ್ಥಿತಿ ಮತ್ತು ಮುಖ್ಯವಾಗಿ "ಗತಿ"ಯ ಬಗ್ಗೆ ಮಾತನಾಡೋಣ. ಹಾಗೆಯೆ, ಬಹುಶಃ, ಕರಾವಳಿಯ ಇವತ್ತಿನ "ವಾಸ್ತವ"ದ ಬಗ್ಗೆಯೂ.

ಮತ್ತೂ ಮುಖ್ಯವಾಗಿ, ಈ ಬ್ಲಾಗ್ ಓದುವ ಓದುಗರು ಈ ಸಂವಾದದ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು, ಹಾಗೂ ತಾವು ಅಲ್ಲಿ ಇದ್ದಿದ್ದರೆ ಯಾವ ಪ್ರಶ್ನೆಗಳನ್ನು ಕೇಳುತ್ತಿದ್ದಿರೊ, ಅಥವ ಯಾವ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಿರೊ ಅದನ್ನೂ ಸಹ, ಇಲ್ಲಿ ಹಂಚಿಕೊಳ್ಳಬಹುದು. ಕಾರ್ಯಕ್ರಮಕ್ಕೆ ಹೋಗುವ ಮೊದಲು ನಾನು ಅವೆಲ್ಲವನ್ನೂ ಓದಿಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ. ಮುಖ್ಯವೆನಿಸಿದ್ದನ್ನು ಪ್ರಸ್ತಾಪಿಸುವ ಆಥವ ಸಂವಾದದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನೂ ನನ್ನ ಕಡೆಯಿಂದ ಮಾಡುತ್ತೇನೆ.

ನಮಸ್ಕಾರ,
ರವಿ...

Mar 10, 2009

ಜಾತಿಅಹಂ, ಸ್ಪೃಶ್ಯ/ಅಸ್ಪೃಶ್ಯ, ನಿಜವಾಗಿ "ಹಿಂದುಳಿದವರು", ಒಳಮೀಸಲಾತಿ, "ಅನಂತ ನಿಷ್ಠ" ಭಟ್...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 20, 09 ರ ಸಂಚಿಕೆಯಲ್ಲಿನ ಲೇಖನ.)

ಭಾರತದ ಸಮಾಜದಲ್ಲಿಯ ಜಾತಿವ್ಯವಸ್ಥೆಯಿಂದಾಗಿ "ಸಾಮಾಜಿಕವಾಗಿ ಮುಂದುವರೆದವರು" ಎಂದು ಗುರುತಿಸಲಾಗುವ ಮೇಲ್ಜಾತಿಗಳ ಜನರಿಗೆ ಕೆಲವು ವಿಶೇಷ ಹಕ್ಕು ಮತ್ತು ಸವಲತ್ತುಗಳು ಸುಲಭವಾಗಿ ಬಂದುಬಿಡುತ್ತವೆ. ಒಂದು ಸ್ವಸ್ಥ ಸಮಾಜದಲ್ಲಿ ಆ ಹಕ್ಕು ಮತ್ತು ಸವಲತ್ತುಗಳನ್ನು ಬಳಸಿಕೊಳ್ಳಲು ಜನ ಹೇಸಿಗೆ ಪಟ್ಟುಕೊಳ್ಳಬೇಕು. ಆದರೆ ಹಾಗೆ ಹೇಸಿಗೆ ಪಟ್ಟುಕೊಳ್ಳಲು ಜನಕ್ಕೆ ಅದು ಹೇಸಿಗೆ ಅನ್ನುವುದು ಮೊದಲು ಗೊತ್ತಾಗಬೇಕು. ಅದು ಗೊತ್ತಾಗಬೇಕಾದರೆ ನಾವು ಶತಮಾನಗಳಿಂದ ಪಾಲಿಸಿಕೊಂಡ ಬಂದ ಜಾತಿರಿವಾಜುಗಳನ್ನು, ಅವುಗಳ ನೈತಿಕತೆ/ಅನೈತಿಕತೆಯನ್ನು ಮುಕ್ತವಾಗಿ ವಿಮರ್ಶೆಗೆ ಒಡ್ಡಿಕೊಳ್ಳಬೇಕು. ಆಧುನಿಕ ವಿಚಾರಗಳಿಗೆ ತೆರೆದುಕೊಳ್ಳಬೇಕು. ಆದರೆ ಇವು ಈಗಲೂ ಅಗತ್ಯವಾದಷ್ಟು ಆಗುತ್ತಿಲ್ಲ. ಆದ್ದರಿಂದಲೇ, ಯಾವ ನಡವಳಿಕೆಗಳಿಗೆ ಜನ ಹೇಸಿಗೆ ಪಟ್ಟುಕೊಳ್ಳಬೇಕೊ ಅದಕ್ಕೆ ಪಟ್ಟುಕೊಳ್ಳುತ್ತಿಲ್ಲ. ಎಲ್ಲಾ ಜಾತಿನಾಯಕರುಗಳು ಯಾವೊಂದು ಎಗ್ಗುಸಿಗ್ಗಿಲ್ಲದೆ ತಮ್ಮ ಜಾತಿಸಮಾವೇಶ ಏರ್ಪಡಿಸುತ್ತಾರೆ. ಅಲ್ಲಿ ತಮ್ಮ ಜಾತಿಪರಾಕ್ರಮಗಳನ್ನು ಊದಿಕೊಳ್ಳುತ್ತಾರೆ. ನೆರೆದ ಜಾತಿ-ಜನ ಅಂತಹ ತುತ್ತೂರಿಗೆ ಚಪ್ಪಾಳೆ ತಟ್ಟುತ್ತಾರೆ. ಜಾತಿವಾದ ಮಾಡುವುದು ಹೆಮ್ಮೆಯ ವಿಚಾರ, ಅದರಲ್ಲಿ ಮುಜಗರ ಪಟ್ಟುಕೊಳ್ಳುವುದು ಏನೂ ಇಲ್ಲ, ಎನ್ನುವ ಸ್ಥಿತಿಗೆ ನಾವು ತಲುಪಿಬಿಟ್ಟಿದ್ದೇವೆ.

ಕರ್ನಾಟಕದ ಮಟ್ಟಿಗೆ ಹೇಳಬಹುದಾದರೆ, ಮೇಲ್ಜಾತಿಗಳ ಒಂದು ವಿಶಾಲ ಜನಸಮೂಹ ಕೆಳವರ್ಗದವರು ತಮಗೆ ಡೊಗ್ಗುಸಲಾಮು ಹಾಕಿಕೊಂಡು ಬದುಕಲಿ ಎಂದು ಬಯಸುತ್ತಾರೆ. ಅಂತಹವರನ್ನು ಮಾತ್ರ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಾರೆ ಅಥವ ರಾಜಕೀಯವಾಗಿ ಮೇಲಕ್ಕೆ ಕರೆದುಕೊಳ್ಳುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ "ಮೀಸಲು" ಕ್ಷೇತ್ರಗಳಿಂದ ಆಯ್ಕೆಯಾಗಿರುವ ಶಾಸಕರ ಜಾತಿ ಹಿನ್ನೆಲೆ, ಆ ಜಾತಿಯ ಸಾಮಾಜಿಕ ಸ್ಥಾನಮಾನ. ಮತ್ತು ಆ ಕ್ಷೇತ್ರದಲ್ಲಿ ಆ ಜಾತಿಯ ಜನಸಂಖ್ಯಾ ಪ್ರಮಣವನ್ನು ನಾವು ಸ್ವಲ್ಪ ಅಧ್ಯಯನ ಮಾಡಿದರೂ ಸಾಕು, ಹೇಗೆ ಮೇಲ್ಜಾತಿ ಮನಸ್ಥಿತಿ ನಮ್ಮಲ್ಲಿ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡುತ್ತಿದೆ ಎನ್ನುವುದು ಗೊತ್ತಾಗುತ್ತದೆ. ಎಲ್ಲೆಲ್ಲಿ ಪರಿಶಿಷ್ಟ ಜಾತಿಗಳಿಗೆ ಸೇರಿದ ಚಾರಿತ್ರಿಕವಾಗಿ "ಅಸ್ಪೃಶ್ಯ" ರೆಂದು ಪರಿಗಣಿಸಲ್ಪಟ್ಟಿದ್ದವರು ಹೆಚ್ಚಾಗಿರುವರೊ ಅಥವ ಎಲ್ಲಿ ದಲಿತಪ್ರಜ್ಞೆ ಜಾಗೃತವಾಗಿದೆಯೊ ಆ ಕ್ಷೇತ್ರಗಳಲ್ಲೆಲ್ಲ ಮೇಲ್ಜಾತಿಯ ಜನರು "ಸ್ಪೃಶ್ಯ" ಜಾತಿಗಳಿಗೆ ಸೇರಿದ, ಆದರೆ ಮೀಸಲಾತಿಗಾಗಿ ಪರಿಶಿಷ್ಟ ಜಾತಿಯೊಳಗೆ ಗುರುತಿಸಲಾದ ಕಡಿಮೆ ಸಂಖ್ಯೆಯಲ್ಲಿರುವ ಸಮುದಾಯದ ಜನರನ್ನೆ ಆರಿಸಿದ್ದಾರೆ. ಹಾಗೆ ಸಾಧ್ಯವಾಗಿಲ್ಲವಾದಲ್ಲಿ ದಲಿತರಲ್ಲೆ ಕಡಿಮೆ “Threatening” ನವರನ್ನು ಗೆಲ್ಲಿಸಿಕೊಂಡಿದ್ಡಾರೆ. ದಲಿತ-ಹಿಂದುಳಿದ ಜಾತಿಗಳ ಬಗ್ಗೆ ಪಾರಂಪರಿಕವಾಗಿ ಮೃದುಭಾವನೆ ಇಲ್ಲದ ಪಕ್ಷ ಎಂದೆ ಗುರುತಾದ ಬಿಜೆಪಿ ಅತಿ ಹೆಚ್ಚು ಮೀಸಲು ಸ್ಥಾನಗಳನ್ನು ಪಡೆಯಲು ಮತ್ತು ಆ ಮೀಸಲು ಸ್ಥಾನಗಳಲ್ಲಿ ಗೆದ್ದ ಬಹುಪಾಲು ಶಾಸಕರು "ಸ್ಪೃಶ್ಯ" ಜಾತಿಗಳಿಗೆ ಸೇರಿರುವುದು ಇದನ್ನೆ ಸ್ಪಷ್ಟವಾಗಿ ಹೇಳುತ್ತದೆ. [ಈ "ಸ್ಪೃಶ್ಯ/ಅಸ್ಪೃಶ್ಯ/ಜಾತಿ ಹಿತಾಸಕ್ತಿ" ಆಯ್ಕೆಯ ರಾಜಕೀಯವನ್ನು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ನಾನು ಖುದ್ದು ಕಂಡಿದ್ದೇನೆ. ಕಳೆದ ನಾಲ್ಕೈದು ಸಲದಿಂದಲೂ ನಮ್ಮಲ್ಲಿಯ "ಮೇಲ್ಜಾತಿಗಳ" ಜನರು ಎಲ್ಲಾ ಕೂಡಿ ಮಾತನಾಡಿಕೊಂಡರೊ ಎಂಬಂತೆ ತಮ್ಮ ಹಿತಾಸಕ್ತಿಗಳಿಗೆ ಮತ್ತು ನಿಯಂತ್ರಣಕ್ಕೆ ಅಡ್ಡಿ ಮಾಡದ ಅಲ್ಪಸಂಖ್ಯಾತ ದಲಿತರನ್ನೆ ಆರಿಸುತ್ತಿದ್ದಾರೆ. ಅವರ ಮೊದಲ ಆಯ್ಕೆ ಆನೇಕಲ್ ತಾಲ್ಲೂಕಿನ ದಲಿತರಲ್ಲಿ ಬಹುಸಂಖ್ಯಾತರಾಗಿರುವ ತಮಿಳು ಮನೆಮಾತಿನ ಆದಿ ದ್ರಾವಿಡರಾಗಲಿ (25-30 ಸಾವಿರ) ಅಥವ ಕನ್ನಡ ಮನೆಮಾತಿನ ಆದಿಕರ್ನಾಟಕದವರಾಗಲಿ (15-20 ಸಾವಿರ) ಅಲ್ಲ; ತೆಲುಗು ಮನೆಮಾತಿನ (7-8 ಸಾವಿರ ಮಾತ್ರವಿರುವ) “Threaten” ಮಾಡದ ಮತ್ತೊಂದು ದಲಿತ ಪಂಗಡ.]

ಜಾತಿ ಅಹಂ ಮತ್ತು ಮೇಲ್ಜಾತಿಗಳ "ಹಿಂದುಳಿದವರು":

ಕರ್ನಾಟಕದಲ್ಲಿ "ಸಾಮಾಜಿಕವಾಗಿ ಮುಂದುವರೆದವರು" ಎಂದು ಗುರುತಿಸಲಾಗುವ ಕೆಲವೆ ಕೆಲವು "ಮೇಲ್ಜಾತಿ"ಗಳನ್ನು ಬಿಟ್ಟರೆ (ಬ್ರಾಹ್ಮಣ/ವೈಶ್ಯ/ಬಂಟ/...) ಮಿಕ್ಕ ಎಲ್ಲಾ ಜಾತಿಗಳು (ಹಲವು ಲಿಂಗಾಯಿತ ಪಂಗಡಗಳು ಮತ್ತು ಒಕ್ಕಲಿಗರಾದಿಯಾಗಿ) ಮೀಸಲಾತಿಯಲ್ಲಿ ಬರುತ್ತಾರೆ. ಈ ಮೀಸಲಾತಿ ವರ್ಗೀಕರಣದಲ್ಲಿ ಬಹುಶಃ ಕರ್ನಾಟಕದ ಶೇ. 80 ಕ್ಕೂ ಜನ ಇರಬಹುದು. ಇವರಿಗೆಲ್ಲ ಸೇರಿ ಇರುವ ಮೀಸಲಾತಿ ಶೇ. 50. ಮಿಕ್ಕ ಶೇ. 10-20 ಜನರಿಗೆ (ಹಿಂದುಳಿದ ವರ್ಗದಲ್ಲಿರುವ ಮಧ್ಯಮವರ್ಗದವರು ಮತು ಸರ್ಕಾರಿ ನೌಕರರು ಸೇರಿ) ಸಾಮಾನ್ಯ ವರ್ಗದ ಶೇ. 50 "ರಿವರ್ಸ್ ಮೀಸಲಾತಿ." ಮೇಲ್ಜಾತಿಗಳಾಗಿರುವ ಪಂಗಡಗಳಲ್ಲಿ ಇರುವ ಬಡವರಿಗೂ ನೆರವಾಗಲಿ ಎಂದೊ ಅಥವ ಅದಕ್ಕಿಂತ ಹೆಚ್ಚಾಗಿ ಅಪ್ಪಟ ಜಾತಿ-ರಾಜಕೀಯ ಕಾರಣಗಳಿಗಾಗಿ ಮೇಲ್ಜಾತಿಗಳು ಹಿಂದುಳಿದವರಾಗಿದ್ದಾರೆ. ಆದರೆ ಈ "ಹಿಂದುಳಿದ-ಮೇಲ್ಜಾತಿ"ಗಳಲ್ಲಿಯ ಜಾತಿಪ್ರಜ್ಞೆ/ಜಾತಿಅಹಂ ಇರುವವರು ತಾವು "ಬ್ಯಾಕ್‌ವರ್ಡ್ ಕ್ಯಾಸ್ಟ್" ಎಂದು ಹೇಳಿಕೊಳ್ಳುವುದಿಲ್ಲ. ಕರ್ನಾಟಕದ ಜಾತಿಶ್ರೇಣಿಯಲ್ಲಿ ತಾವು ಮೊದಲ ಸಾಲಿನಲ್ಲಿ ಇದ್ದೇವೆ ಎಂದು ಬೀಗುತ್ತಾರೆ.

ಹಾಲಿ ಕರ್ನಾಟಕ ಸರ್ಕಾರದ ಮಂತ್ರಿಮಂಡಲ ರಚನೆಯಾದಾಗ ಈ ಮಂತ್ರಿಮಂಡಲದಲ್ಲಿ ಯಾವಯಾವ ವರ್ಗಗಳಿಗೆ ಪ್ರಾತಿನಿಧ್ಯ ಕೊಡಲಾಗಿದೆ ಎಂದು ತೋರಿಸಲು ಬಹುಶಃ ಸರ್ಕಾರದ/ಪಕ್ಷದ ವತಿಯಿಂದ ಕೊಡಲಾದ ಪಟ್ಟಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಅದರಲ್ಲಿ ನನ್ನ ಹಾಗೆಯೆ ಜಾತಿ ಸೂಚಕ ಹೆಸರುಗಳಿರುವ "ಸಮರಸಿಂಹ ರೆಡ್ಡಿ"ಗಳನ್ನೆಲ್ಲ "ಹಿಂದುಳಿದ ವರ್ಗ"ಗಳಿಗೆ ಸೇರಿಸಲಾಗಿತ್ತು. ಇಷ್ಟು ದಿನವೂ ಒಕ್ಕಲಿಗರ ಗುಂಪಿನಲ್ಲಿ ಕಾಣಿಸುತ್ತಿದ್ದ ಈ ಗುಂಪು ಇದ್ದಕ್ಕಿದ್ದಂತೆ ಯಾವುದೆ ಸರ್ಕಾರಿ/ಸಾಮಾಜಿಕ ಬದಲಾವಣೆ ಇಲ್ಲದೆ "ವರ್ಗಾಂತರ"ವಾಗಿ ಬಿಟ್ಟಿತ್ತು. ಈ ಸಮುದಾಯದ ಜನ ಪ್ರಬಲವಾಗಿರುವ ಕಡೆಯೆಲ್ಲ "ಜನಾಂಗ ಸಮಾವೇಶ" ನಡೆಸುತ್ತ ತೊಡೆ ತಟ್ಟಿ ಮೀಸೆ ತೀಡುವ ಜನ ಅದು ಯಾವಾಗ ಸಾಮಾಜಿಕವಾಗಿ "ಹಿಂದುಳಿದವ"ರಾದರು ಎನ್ನುವ ಸೋಜಿಗ ನನ್ನದು.

ಇಲ್ಲಿ "ಮುಂದುವರೆದ ವರ್ಗಗಳಲ್ಲಿ" ಜಾತಿಅಹಂ ಯಾವ ರೀತಿ ಇರುತ್ತದೆ ಮತ್ತು ಅಷ್ಟಿದ್ದರೂ ಇವರು ಹೇಗೆ "ಹಿಂದುಳಿದವರಾಗುವ" ಮೂಲಕ ನಮ್ಮ ಸಾಮಾಜಿಕ ನ್ಯಾಯದ ಅಣಕ ಮಾಡುತ್ತಾರೆ ಎನ್ನುವುದಕ್ಕೆ ನನ್ನ ಹತ್ತಿರದ ಉದಾಹರಣೆ ಕೊಡುತ್ತೇನೆ. ಇದು ನನ್ನೊಬ್ಬನ ಸ್ವಂತ ಅನುಭವವಾದರೂ ಅದನ್ನು ಕರ್ನಾಟಕಕ್ಕೆ ಒಂದಷ್ಟು ಮಟ್ಟಿಗೆ ಸಾರ್ವತ್ರಿಕಗೊಳಿಸಬಹುದು ಎಂಬ ಖಚಿತ ಅಭಿಪ್ರಾಯ ನನ್ನದು. ಕಳೆದ ಸಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಣದ ಪ್ರಭಾವವನ್ನು, ಪ್ರಜಾಪ್ರಭುತ್ವದ ಅಣಕವನ್ನೂ, ದುಡ್ಡಿದ್ದವರ ಕಾನೂನು ಉಲ್ಲಂಘನೆಯನ್ನೂ ವಿರೋಧಿಸಿ, ವೈಯಕ್ತಿಕವಾಗಿ ನನ್ನ ನೈತಿಕ ಪ್ರತಿಭಟನೆ ತೋರಿಸಲು ನಾನು ಚುನಾವಣೆಗೆ ನಿಂತಿದ್ದೆ. ಗೋಪಾಲಗೌಡರು ಮಾಡಿದ್ದಂತೆ ಜನರಿಂದಲೆ ದುಡ್ಡುಸಂಗ್ರಹಿಸಬೇಕು, ಮಾಡುವ ಖರ್ಚು ಚುನಾವಣಾ ಆಯೋಗ ವಿಧಿಸಿದ ಮಿತಿಯೊಳಗೆ ಇರಬೇಕು, ಎಲ್ಲಾ ಖರ್ಚಿಗೂ ಸರಿಯಾಗಿ ಲೆಕ್ಕ ಕೊಡಬೇಕು, ಮತ್ತು ಸಾಧ್ಯವಾದರೆ ಚುನಾವಣೆಯ ಅಕ್ರಮಗಳ ಬಗ್ಗೆ ಚರ್ಚೆಯಾಗುವಂತೆ ಆಗಬೇಕು ಎನ್ನುವುದು ಆಗ ಹಾಕಿಕೊಂಡ ಗುರಿ. ಅದೊಂದು ಸಂಪೂರ್ಣವಾಗಿ ಸಾಂಕೇತಿಕ ಸ್ಪರ್ಧೆ. ಆ ಸಮಯದಲ್ಲಿ ಒಮ್ಮೆ ಊರಿಗೆ ಹೋಗಿದ್ದೆ. ಅಲ್ಲಿ ಸ್ಥಳೀಯ ರಾಜಕೀಯ ಕಾರಣಗಳಿಗಾಗಿ ಊರಿನ ಸುತ್ತಮುತ್ತಲ ಒಂದಷ್ಟು ಯುವಕರು ನಮ್ಮ ಮನೆಗೆ ಬಂದಿದ್ದರು. ಅವರಲ್ಲಿ ಒಬ್ಬ ಕೇಳಿದ, "ಏನ್ ಗುರು, ಬೆಂಗಳೂರಲ್ಲಿ ಎಲೆಕ್ಷನ್‌ಗೆ ನಿಂತಿದ್ದೀಯಂತೆ? ಪೇಪರ್‌ನಲ್ಲಿ ಬಂದಿತ್ತು. ಏನು, ಗೆಲ್ತೀಯ?" ನಾನು ಯಾಕೆ ನಿಂತಿದ್ದೇನೆ ಮತ್ತು ಅದರ ಉದ್ದೇಶ ಏನು ಎಂದು ಗೊತ್ತಿಲ್ಲದ ಆತನಿಗೆ, "ಇದು ನೀವು ಮಾಡುತ್ತಿರುವಂತಹ ಸೋಲು ಗೆಲುವಿನ, ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ, ಜನರಿಗೆ ದುಡ್ಡು ಹಂಚುವ ಚುನಾವಣೆ ಅಲ್ಲ. ಜನರಿಂದ ದುಡ್ಡು ಸಂಗ್ರಹಿಸಿ, ಅಷ್ಟನ್ನೆ ಖರ್ಚು ಮಾಡುವ ಚುನಾವಣೆ ನನ್ನದು. ಅಲ್ಲಲ್ಲಿ ಒಂದಷ್ಟು ಬಡವರು ಸಹ ಹತ್ತಿಪ್ಪತ್ತು ರೂಪಾಯಿ ಕೊಟ್ಟಿದ್ದಾರೆ. ಎಲ್ಲಾದಕ್ಕೂ ಲೆಕ್ಕ ಇರುತ್ತೆ. ನೀನೂ ಕೊಟ್ಟರೆ ಅದನ್ನೂ ತೆಗೆದುಕೊಳ್ಳುತ್ತೇನೆ. ನಿನ್ನ ಹೆಸರನ್ನು ನನ್ನ ವೆಬ್‌ಸೈಟಿನಲ್ಲಿ ಹಾಕುತ್ತೇನೆ," ಎಂದೆ. ತಕ್ಷಣವೆ ಆತನ ಮೇಲ್ಜಾತಿ ಅಹಂ ಕೆರಳಿ ಎದ್ದಿತು: "ಏನ್ ಗುರು? ರೆಡ್ಡಿಯಾಗಿದ್ದುಕೊಂಡು ಜನರ ಹತ್ತಿರ ಎಲೆಕ್ಷನ್‌ಗೆ ದುಡ್ಡು ಕೇಳ್ತೀಯ? ಛೇ ಛೇ. ಇದು ಸರಿ ಇಲ್ಲ. ನಮ್ಮ ಜಾತಿಗೇ ಅವಮಾನ," ಎಂದುಬಿಟ್ಟ. ನಾನು ನಗುತ್ತ ಸುಮ್ಮನಾದೆ. ಹೀಗೆ, "ನಾವು ಮೇಲ್ಜಾತಿಯ ಜನರಾಗಿದ್ದುಕೊಂಡು ಹೀಗೆ ಮಾಡುವುದಾ?" ಎಂದು ಲಿಂಗಾಯತ/ಒಕ್ಕಲಿಗರಾದಿಯಾಗಿ ಇತರ ಎಲ್ಲಾ ಮೇಲ್ಜಾತಿಗಳು ಬಹಿರಂಗವಾಗಿ ನಮ್ಮಲ್ಲಿ ಪ್ರತಾಪ ಕೊಚ್ಚುತ್ತಾರೆ. ತಾವು ಯಾವಯಾವ ರೀತಿ "ಶ್ರೇಷ್ಠರು" ಎನ್ನುತ್ತಾರೆ. ಆದರೆ, ನಿಜವಾದ "ಸಾಮಾಜಿಕವಾಗಿ ಹಿಂದುಳಿದವರ" ಜೊತೆ ಅವರ ಅವಕಾಶಗಳನ್ನು ಕಿತ್ತುಕೊಳ್ಳಲು ಪೈಪೋಟಿ ಮಾಡುತ್ತಾರೆ!

ಪ್ರಗತಿಪರರ ಸವಾಲು:

ಇಲ್ಲಿಯ ಕಠೋರ-ವಾಸ್ತವ ಯಾವುದೆಂದರೆ, ಮೇಲ್ಜಾತಿಗಳ "ಅಹಂಕಾರಿ/ಜಾತಿವಾದಿ" ಜನರಿಗೆ ಅವರ ಜಾತಿಅಹಂ/ಜಾತಿವಾದ ಅನೈತಿಕವಾದದ್ದು ಎಂದು ಹೇಳುವ ಸಾಮಾಜಿಕ/ಸಾಂಸ್ಕೃತಿಕ ನಾಯಕತ್ವವೆ ಅವರಲ್ಲಿ ಇಲ್ಲವಾಗಿರುವುದು ಇಲ್ಲವೆ ನಗಣ್ಯವಾಗಿರುವುದು. ಕರ್ನಾಟಕದಲ್ಲಿಯ ಎಲ್ಲಾ ಮೇಲ್ಜಾತಿಗಳ ಜನ ನಿಜವಾದ ಅರ್ಥದಲ್ಲಿ "ಹಿಂದುಳಿದವ"ರಾಗಿರುವುದು, ಬಡವರಾಗಿರುವುದು ಈ ವಿಚಾರದಲ್ಲಿ. ಇದ್ದ/ಇರುವ ಸಾಂಸ್ಕೃತಿಕ ನಾಯಕರನ್ನು ಸಹ ನಮ್ಮಲ್ಲಿಯ ಜಾತಿವಾದ ಬುದ್ಧನನ್ನು ಅರಗಿಸಿಕೊಂಡ "ಭಾರತೀಯ ಸಂಪ್ರದಾಯ"ಕ್ಕನುಗುಣವಾಗಿ ತನ್ನೊಳಗೆ ಎಳೆದುಕೊಂಡುಬಿಡುತ್ತದೆ ಇಲ್ಲವೆ ಅವರನ್ನು ಬಹಿಷ್ಕರಿಸಿಬಿಡುತ್ತದೆ. ಇದಕ್ಕೆ ಇತ್ತೀಚಿನ ಉದಾಹರಣೆಯಾಗಿ ಕುವೆಂಪು, ಲಂಕೇಶ್, ಚಂಪಾಗಳಾದಿಯಾಗಿ ಕೆಲವು ಉದಾಹರಣೆಗಳನ್ನು ಕೊಡಬಹುದು. ಜಾತಿವಾದಿಯಾಗದೆ ಅಥವ ಜಾತಿಗಳೊಂದಿಗೆ ಗುರುತಿಸಿಕೊಳ್ಳದೆ ಮೇಲ್ಜಾತಿಯ ಜನರನ್ನು ಈ ಜಾತಿಅಹಮ್‌ನಿಂದ ಮತ್ತು ಜಾತಿವಾದದಿಂದ ಹೊರತರುವುದೆ ಪ್ರಗತಿಪರರಿಗಿರುವ ದೊಡ್ಡ ಸವಾಲು.



ಒಳ ಮೀಸಲಾತಿ - ಸಾಮಾಜಿಕ ನ್ಯಾಯದ ಮುಂದುವರೆದ ಭಾಗ:
ಕಳೆದ ಚುನಾವಣೆಯಲ್ಲಿ ಮೀಸಲು ಸ್ಥಾನಗಳಲ್ಲಿ ಗೆದ್ದ ಬಹುಪಾಲು ಶಾಸಕರು ಚಾರಿತ್ರಿಕವಾಗಿ "ಅಸ್ಪೃಶ್ಯ"ರಾದ ಬಹುಸಂಖ್ಯಾತ ಜನಾಂಗಗಳಿಗೆ ಸೇರಿರದೆ ಅಲ್ಪಸಂಖ್ಯಾತರಾದ "ಸ್ಪೃಶ್ಯ" ಜಾತಿಗಳಿಗೆ ಸೇರಿರುವುದರ ಮೂಲವನ್ನು ಅರ್ಥ ಮಾಡಿಕೊಳ್ಳಲಾಗದ, ಅರ್ಥವಾದರೂ ಏನೊಂದೂ ಮಾಡಲಾಗದ ದೈನೇಸಿ ಸ್ಥಿತಿಯಲ್ಲಿ ಕರ್ನಾಟಕದ ಇವತ್ತಿನ ದಲಿತ ನಾಯಕತ್ವ ಇದ್ದರೆ, ’ಇದು ದಲಿತರ ಸಮಸ್ಯೆ, ನಮಗೆ ಸಂಬಂಧಿಸಿದ್ದಲ್ಲ’ ಎನ್ನುವ ಮನೋಭಾವದಲ್ಲಿ ಒಟ್ಟು ಸಮಾಜದ ಬಗ್ಗೆ ಯೋಚಿಸಬೇಕಾದ ಜಾತ್ಯತೀತ ನಾಯಕತ್ವ ಇದೆ. ಇವೊತ್ತು ನಮ್ಮಲ್ಲಿರುವವರೆಲ್ಲ ಜಾತಿ ನಾಯಕರುಗಳೆ ಹೊರತು ಎಲ್ಲಾ ಸಮುದಾಯಗಳನ್ನು ಪ್ರತಿನಿಧಿಸಬಲ್ಲ ರಾಜ್ಯಮಟ್ಟದ ನಾಯಕರುಗಳಲ್ಲ. ಇಂತಹ ಸಂದರ್ಭದಲ್ಲಿ, "ಒಳ ಮೀಸಲಾತಿ" ಜಾರಿಯಾದರೆ ದಲಿತರ ಒಗ್ಗಟ್ಟು ಒಡೆದುಹೋಗಿಬಿಡುತ್ತದೆ ಎಂಬ ಅನವಶ್ಯಕ ಭಯದಲ್ಲಿ ದಲಿತ ಸಮುದಾಯದ ನಾಯಕರು ಮೀಸಲಾತಿಯ ನೈಜ ಉದ್ದೇಶವನ್ನೆ ಮರೆಯುತ್ತಿದ್ದಾರೆ. ಮೀಸಲಾತಿ ಎನ್ನುವುದೆ "ಒಳ ಮೀಸಲಾತಿ" ಅಲ್ಲವೆ? ಹಾಗಿದ್ದಾಗ, ಸಂದರ್ಭ ಬೇಡಿದಾಗ ಮತ್ತು ನ್ಯಾಯವೂ ಯುಕ್ತವೂ ಆಗಿರುವಾಗ ಮೀಸಲಾತಿಯಲ್ಲಿ "ಒಳ ಮೀಸಲಾತಿ" ಕೊಡುವುದರಲ್ಲಿ ತಪ್ಪೇನಿದೆ? ನಿಜವಾದ ದಲಿತರಿಗೆ ಸಿಗಬೇಕಾದ ಸ್ಥಾನಗಳು "ಹಿಂದುಳಿದ" ವರ್ಗಗಳಿಗೆ ಸಿಗುತ್ತಿರುವುದೂ, ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಸ್ಥಾನಗಳು "ಮೇಲ್ಜಾತಿ"ಯ ಜನರಿಗೆ ಸಿಗುತ್ತಿರುವುದೂ ಸಾಮಾಜಿಕ ನ್ಯಾಯದ ಅಪಹಾಸ್ಯ ಮಾಡಿದಂತೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪಟ್ಟಿಯಲ್ಲಿರುವ ಆದರೆ ಆ ಮಟ್ಟದ ಸವಲತ್ತುಗಳಿಗೆ ಅರ್ಹರಲ್ಲದ ಗುಂಪುಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸುವುದೂ, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ, ಆದರೆ ಸಾಮಾಜಿಕವಾಗಿ ಮುಂದುವರೆದ ಮತ್ತು ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸಲು ಅರ್ಹರಾದ ಗುಂಪುಗಳನ್ನು ಹಿಂದುಳಿದ ವರ್ಗಗಳಿಂದ ಹೊರಹಾಕುವುದು ಇವತ್ತು ಕರ್ನಾಟಕ ಸಾಮಾಜಿಕ ನ್ಯಾಯದ ಸಂದರ್ಭದಲ್ಲಿ ತಕ್ಷಣಕ್ಕೆ ಆಗಬೇಕಾದ ಕೆಲಸ.

ಆದರೆ, ಇವತ್ತಿನ ನಮ್ಮ ಸಂದರ್ಭ ಹೇಗಿದೆ ಅಂದರೆ, ಇಂತಹುವುದನ್ನು ಚರ್ಚಿಸುವ ಆರೋಗ್ಯಕರ ವಾತಾವರಣವೆ ನಮ್ಮಲ್ಲಿ ಇಲ್ಲ. ಮೇಲ್ಜಾತಿಗಳ ಜನ ಹೇಗೆ ತಮ್ಮ ಪರಂಪರಾಗತ ಹೆಚ್ಚುಗಾರಿಗೆ ಬಿಟ್ಟುಕೊಡಲು ಸಿದ್ಧರಿಲ್ಲವೊ ಅದೇ ರೀತಿ ಹಿಂದುಳಿದ-ದಲಿತರಲ್ಲಿಯ ಮುಂದುವರೆದವರು ತಮ್ಮ ಸವಲತ್ತುಗಳನ್ನು ತಮಗಿಂತ ಹಿಂದುಳಿದವರಿಗೆ ಬಿಟ್ಟುಕೊಡಲು ಸಿದ್ಧರಿಲ್ಲ. ಎಲ್ಲಾ ಹಂತಗಳಲ್ಲೂ ಫ್ಯೂಡಲಿಸಂ ಆವರಿಸಿಕೊಂಡುಬಿಟ್ಟಿದೆ. ಹಾಗೆಯೆ, ಎಲ್ಲರಿಗೂ ಹಿಂದುಳಿದವರಾಗುವ/ದಲಿತರಾಗುವ ಪೈಪೋಟಿ. ತಮ್ಮ ಜಾತಿ ಸಮಾವೇಶಗಳಲ್ಲಿ ತೊಡೆತಟ್ಟುವ, ತಮ್ಮನ್ನು ತಾವು ಮೇಲ್ಜಾತಿ ಎಂದು ಹೇಳಿಕೊಳ್ಳುವ ಜನರೂ ಅನುಕೂಲಕ್ಕೆ ತಕ್ಕಂತೆ ತಮ್ಮನ್ನು "ಹಿಂದುಳಿದ ಜಾತಿ" ಎಂದು ವರ್ಗೀಕರಿಸಿಕೊಳ್ಳುತ್ತಿದ್ದಾರೆ. ಎಲ್ಲರನ್ನೂ ಒಂದು ಸಮಹಂತಕ್ಕೆ ಏರಿಸುವ ಮೂಲಕ ಜಾತಿವ್ಯವಸ್ಥೆ ಮತ್ತು ಜಾತಿಗಳ ಹೆಚ್ಚುಗಾರಿಕೆ ಕೊನೆಗಾಣಿಸಬೇಕು ಎಂದು ಆಶಿಸಿದ ನಮ್ಮ ರಾಷ್ಟ್ರಸ್ಥಾಪಿಸಿದ ಹಿರಿಯರ (Founding Fathers of India) ಆಶಯಕ್ಕೆ ನಾವು ಮೋಸ ಮಾಡುತ್ತಿದ್ದೇವೆ.


ದಿನಪತ್ರಿಕೆಗಳೂ, ಅನಂತನಿಷ್ಠೆಯೂ...
ಕರ್ನಾಟಕದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಪಕ್ಷ ಅಧಿಕಾರಕ್ಕೆ ಬರಲು (1983) "ಲಂಕೇಶ್ ಪತ್ರಿಕೆ" ಯ ಕೊಡುಗೆಯೂ ಒಂದಷ್ಟು ಇತ್ತು ಎಂದು ಆಗಾಗ ಸ್ಮರಿಸಲಾಗುತ್ತದೆ. ಅದೇ ರೀತಿ, ಬಿಜೆಪಿ ಕರ್ನಾಟಕದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವಂತಾಗುವಲ್ಲಿ ಕನ್ನಡದ ಎರಡು-ಮೂರು ದಿನಪತ್ರಿಕೆಗಳ ಕೊಡುಗೆಯನ್ನು ನಾವು ಗುರುತಿಸಬಹುದು. ಅವುಗಳಲ್ಲಿ ಮೊದಲಿಗೆ ಗುರುತಿಸಬೇಕಾದದ್ದು "ವಿಜಯ ಕರ್ನಾಟಕ"ವನ್ನು. ನಾನು ಈ ಜಾತಿವಾದ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಬರೆಯುತ್ತ ಆ ಪತ್ರಿಕೆಯ ಇತ್ತೀಚಿನ ಲೇಖನಗಳನ್ನು ಗಮನಿಸುತ್ತಿದ್ದೆ. ಇದ್ದಕ್ಕಿದ್ದಂತೆ ಬಿಜೆಪಿಯ ವಿರುದ್ಧ, ಅಲ್ಲಿಯ "ವಂಶಪಾರಂಪರ್ಯ" ರಾಜಕೀಯದ ವಿರುದ್ಧ, ಲಿಂಗಾಯತರಲ್ಲಿ "ಪಂಚಮಸಾಲಿ"ಗಳಿಗೆ ಮತ್ತು ಇತರರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ, ಪುಂಖಾನುಪುಂಖವಾಗಿ ಲೇಖನಗಳು ಪ್ರಕಟವಾಗುತ್ತಿವೆ! ಈ ಪತ್ರಿಕೆಯ ಸಂಪಾದಕ ವಿಶ್ವೇಶ್ವರ್ ಭಟ್ ತಾವು ಮಾಜಿ ಕೇಂದ್ರಸಚಿವ ಅನಂತಕುಮಾರ್‌ರ ಕೈಕೆಳಗೆ ಕೆಲಸ ಮಾಡಿದ್ದ ಹಳೆಯ ಋಣವನ್ನು ತೀರಿಸಲೆಂಬಂತೆ, ಅನಂತಕುಮಾರರ ಮೇಲೆ ಮುನಿಸಿಕೊಂಡಿರುವ ಡಾ. ಯಡ್ಡ್‌ಯೂರಪ್ಪನವರ ವಿರುದ್ಧ ಮೊದಲ ಸಾಲಿನಲ್ಲಿ ನಿಂತು ಅಟ್ಯಾಕ್ ಮಾಡುತ್ತಿದ್ದಾರೆ. ಬಹುಶಃ ಇಲ್ಲಿಯ ತನಕ ಕರ್ನಾಟಕದ ಯಾವೊಬ್ಬ ದಿನಪತ್ರಿಕೆಯ ಸಂಪಾದಕರೂ ತಲುಪದ ಭಟ್ಟಂಗಿ ಮತ್ತು ಪತ್ರಿಕೆಯ ದುರುಪಯೋಗದ ಹಂತಕ್ಕೆ "ಅನಂತ ನಿಷ್ಠ" ಭಟ್ ಇಳಿದುಬಿಟ್ಟಿದ್ದಾರೆ. ಇಲ್ಲಿಯ ವ್ಯಂಗ್ಯ ಏನೆಂದರೆ, ಆ ಪತ್ರಿಕೆಯಲ್ಲಿ ಬರುತ್ತಿರುವ ಒಂದಷ್ಟು ಯಡಿಯೂರಪ್ಪ ವಿರೋಧಿ ಲೇಖನಗಳೂ ಸಕಾರಣವಾಗಿರುವುದು.

"ವಿಜಯ ಕರ್ನಾಟಕ"ದ ಇಂದಿನ (ಮಾರ್ಚ್ 8, 09) ದಿನಪತ್ರಿಕೆಯಲ್ಲಿ "ಸಾಮಾಜಿಕ ನ್ಯಾಯ"ಕ್ಕೆ ಸಂಬಂಧಿಸಿದಂತೆಯೆ ಒಂದು ಮುಖಪುಟ ಸುದ್ಧಿ ಮಾಡಲಾಗಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ 80 ಲಕ್ಷ ಇರುವ ಪಂಚಮಸಾಲಿಗಳಿಗೆ 44 ಲಕ್ಷ ಜನಸಂಖ್ಯೆಯ ಬಣಜಿಗ ನಾಯಕ ಡಾ. ಯಡ್ಡ್‌ಯೂರಪ್ಪ ಅನ್ಯಾಯ ಮಾಡುತ್ತಿದ್ದಾರೆ ಎನ್ನುವುದೆ ಸುದ್ಧಿ. (ಆ ಪತ್ರಿಕೆಯ ಪ್ರಕಾರ ಕರ್ನಾಟಕದ ಲಿಂಗಾಯತರಲ್ಲಿಯ ಪ್ರಮುಖ ಮೂರು ಪಂಗಡಗಳ ಜನಸಂಖ್ಯೆ ಒಟ್ಟು 1.85 ಕೋಟಿ!. ಇನ್ನು ಮಿಕ್ಕ ಪಂಗಡಗಳೂ ಸೇರಿದರೆ ಅವರ ಜನಸಂಖ್ಯೆ 2 ಕೋಟಿ ದಾಟದೆ? ಅಬ್ಬಬ್ಬಾ. ಇಷ್ಟು ದಿನ ಕರ್ನಾಟಕದ 5.3 ಕೋಟಿ ಜನಸಂಖ್ಯೆಯಲ್ಲಿ ಲಿಂಗಾಯತರ ಸಂಖ್ಯೆ ಸುಮಾರು ಶೇ. 15 ರಷ್ಟಿದೆ, ಅಂದರೆ ಸುಮಾರು 80-90 ಲಕ್ಷ, ಎಂದು ಬರೆದವರೆಲ್ಲ ಇನ್ನೆಂತಹ "ನೂರೆಂಟು ಸುಳ್ಳು"ಗಳ ಸರದಾರರಾಗಿರಬಾರದು?) ಇದು ನಮ್ಮ ಪತ್ರಿಕೆಗಳ ಮುಖಪುಟದ Authenticity.

ಇಷ್ಟಿದ್ದರೂ, ಭಟ್ "ಅನಂತ ನಿಷ್ಠೆ"ಯಿಂದ ಮಾಡುತ್ತಿರುವ "ಯಡಿಯೂರಪ್ಪ ವಿರೋಧಿ ಅಭಿಯಾನ" ಈ ಸಲ ಕನ್ನಡದ ಪತ್ರಿಕಾಜಗತ್ತಿಗೆ ಪಾಠವೊಂದನ್ನು ಕಲಿಸುವ ಸಾಧ್ಯತೆ ಇದೆ. ಎಸ್.ಎಂ. ಕೃಷ್ಣ ಬೆಂಗಳೂರು ದಕ್ಷಿಣದಲ್ಲಿ ನಿಂತು, ಆ ಮೂಲಕ ಅಲ್ಲಿ ಅನಂತ್ ಕುಮಾರ್ ಸೋತು, ಕೇಂದ್ರದಲ್ಲಿ ಎನ್.ಡಿ.ಎ.ಯೂ ಕಣ್ತೆರೆಯದೆ ಹೋದರೆ, ರೋಷತಪ್ತ ಡಾ. ಯಡ್ಡ್‌ಯೂರಪ್ಪ ಒಂದಿಬ್ಬರು "ಭಟ್ಟಂಗಿ"ಗಳ ಅಂಗಿ-ಚಡ್ಡಿಯನ್ನು ಕಳಚಬಹುದು. ಹಾಗೆಯೆ, ಹಾಲಿ ಸರ್ಕಾರದ ಹಗರಣಗಳೂ "ವಿಜಯ ಕರ್ನಾಟಕ"ದ ಮೂಲಕವೆ ಬಯಲಿಗೆ ಬೀಳುವುದನ್ನು ಊಹಿಸಬಹುದು.

Mar 4, 2009

ಸ್ಲಮ್‌ಡಾಗ್ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ, ಆ ಸಿನೆಮಾ ಸರಿ ಇಲ್ಲ ಅನ್ನುವವರು...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 13, 09 ರ ಸಂಚಿಕೆಯಲ್ಲಿನ ಲೇಖನ.)

ಜೀವನಪ್ರೀತಿಯನ್ನು ನವೀಕರಿಸುತ್ತ ಆಶಾವಾದದಲ್ಲಿ ಮತ್ತು ಒಳ್ಳೆಯತನದಲ್ಲಿ ಕೊನೆಯಾಗುವ, ಈ ಆಸ್ಕರ್ ಪ್ರಶಸ್ತಿ ವಿಜೇತ ಸಿನೆಮಾವನ್ನು ಈ ಲೇಖನ ಬರೆಯುವುದಕ್ಕೆ ಸ್ವಲ್ಪ ಮುಂಚೆಯೆ ನೋಡಿದ್ದು. ಅದನ್ನು ನೋಡಿಕೊಂಡು ಹೊರಬರುತ್ತ, ಇಂತಹ ಒಳ್ಳೆಯ ಸಿನೆಮಾವನ್ನು "ಈ ಚಿತ್ರ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ, ಅದು ಸರಿ ಇಲ್ಲ, ನಾವು ಹೇಗೆ ಇದ್ದರೂ ನಮ್ಮನ್ನು ಕೆಟ್ಟದಾಗಿ ತೋರಿಸಬಾರದು," ಎಂದು ಹೇಳುತ್ತಿರುವವರ ಮನಸ್ಥಿತಿಯವರ ಕುರಿತು ಯೋಚಿಸುತ್ತಿದ್ದೆ. ಈ ಸಿನೆಮಾದ ಬಗ್ಗೆ ಈ ರೀತಿಯ ಆಕ್ಷೇಪಣೆ ಎತ್ತುವವರು ರೋಗಗ್ರಸ್ತ ಮನಸ್ಸಿನವರೂ, ಕೀಳರಿಮೆಯಿಂದ ನರಳುತ್ತಿರುವ ಅಹಂಕಾರಿಗಳೂ, ತಮಗಿಂತ ಕೀಳಾದವರು ತಮ್ಮ ಸೇವೆಯನ್ನು ಮಾಡಲಷ್ಟೆ ಲಾಯಕ್ಕು ಎನ್ನುವ ಮನೋಭಾವದವರೂ ಆಗಿರಲೇಬೇಕು ಎಂಬಂತಹ ಕಟು ಅಭಿಪ್ರಾಯ ನನ್ನಲ್ಲಿ ಸುಳಿಯಿತು.

ಈ ಸಿನೆಮಾದ ಬಗ್ಗೆ ಜನ ಮಾತನಾಡಲು ಆರಂಭಿಸಿದಾಗಿನಿಂದ ಅಂತರ್ಜಾಲದಲ್ಲಿ, ಭಾರತದ ಮಾಧ್ಯಮಗಳಲ್ಲಿ, ಕನ್ನಡದ ಪತ್ರಿಕೆಗಳಲ್ಲಿ ಅದರ ಬಗ್ಗೆ ಬಂದ ವಿಮರ್ಶೆ ಮತ್ತು ಅಭಿಪ್ರ್ರಾಯಗಳನ್ನು ಓದುತ್ತ ಬಂದಿದ್ದೇನೆ. ಯಾವ ಸಮುದಾಯ ಅಥವ ವರ್ಗದ ಭಾರತೀಯರಿಗೆ ವಿದೇಶಗಳಲ್ಲಿ ಅವಕಾಶಗಳಿರುತ್ತವೆಯೊ ಅಥವ ಭಾರತದ ನವ-ಆರ್ಥಿಕ ವ್ಯವಸ್ಥೆಯಲ್ಲಿ ಯಾವ ವರ್ಗಗಳಿಗೆ ಹೆಚ್ಚು ಲಾಭವಾಗುತ್ತದೊ ಅಂತಹವರೆ ಈ ಸಿನೆಮಾ ನಮ್ಮ ದೇಶದ ಮಾನ ಹರಾಜು ಹಾಕುತ್ತಿದೆ ಎಂದು ಬೊಬ್ಬೆಯಿಡುವವರಲ್ಲಿ ಮುಂಚೂಣಿಯಲ್ಲಿರುವವರು. ಸುಲಭವಾಗಿ ಗುರುತಿಸಬಹುದಾದ ಒಂದು ಆರ್ಥಿಕ ಮತ್ತು ಸಾಮಾಜಿಕ ವರ್ಗಕ್ಕೆ ಸೇರಿದ ಜನ ಇವರು. ವಾಸ್ತವವನ್ನು ಮುಚ್ಚಿಟ್ಟು ಭಾವೋದ್ರೇಕ ವಿಷಯಗಳ ಮೇಲೆ ಬುಡಕಟ್ಟು ಕಟ್ಟಬಯಸುವ, ಮಧ್ಯಕಾಲೀನ ಯುಗಕ್ಕೆ ಹೋಗಬಯಸುವ ಗುಂಪಿದು. ಇದಕ್ಕೆ ಮುಂಚೆ "ವೈಟ್ ಟೈಗರ್" ಕಾದಂಬರಿ ಭಾರತದ ಮಾನ ಕಳೆಯುತ್ತದೆ ಎಂದು ಟೀಕಿಸಿದ ಗುಂಪೂ ಇದೇನೆ. ಕರ್ನಾಟಕದ ಗೃಹ ಸಚಿವರ ಮಾತನ್ನೆ ನೋಡಿ: "ಸ್ಲಮ್‌ಡಾಗ್ ಮಿಲಿಯನೇರ್ ಭಾರತವನ್ನು ಕೆಟ್ಟರೀತಿಯಲ್ಲಿ ತೋರಿಸುತ್ತದೆ. ಅಡಿಗರ ವೈಟ್ ಟೈಗರ್ ಪುಸ್ತಕವೂ ಅಷ್ಟೆ." ಸಮಾಜ ನಿರ್ಮಾಣದಲ್ಲಿ ಕಲೆ ಮತ್ತು ಸಾಹಿತ್ಯದ ಪ್ರಭಾವ ಮತ್ತು ಅದು ಹುಟ್ಟಿಸುವ ವೈಚಾರಿಕ ಸಂಘರ್ಷ ಮತ್ತು ನೈತಿಕತೆಯ ಮಹತ್ವ ಅರಿಯದ ಜನರಿವರು. ಸ್ವವಿಮರ್ಶೆಗೆ ಮತ್ತು ಬೇರೆಯವರ ವಿಮರ್ಶೆಗೆ ತೆರೆದುಕೊಳ್ಳದ, ಅಭದ್ರ ಮನಸ್ಥಿತಿಯ, ಆತ್ಮವಿಶ್ವಾಸವಿಲ್ಲದ ಗುಂಪು ಇದು.

ಈ ಚಿತ್ರವನ್ನು ಬಲಪಂಥೀಯ ಧೋರಣೆಯುಳ್ಳ ಎನ್ನಾರೈಗಳೂ ಬಲವಾಗಿ ವಿರೋಧಿಸಿರುವುದನ್ನು ನಾವು ಅಂತರ್ಜಾಲದಲ್ಲಿ ನೋಡಬಹುದು. ಈ ಸಿನೆಮಾ ನೋಡಿದ ವಿದೇಶಿಯರು (ಅಂದರೆ ಬಿಳಿಯರು) ಎಲ್ಲಿ ತಮ್ಮನ್ನು ಕೀಳಾಗಿ ಕಾಣಿಬಿಡುತ್ತಾರೊ ಎಂಬ ಭಯ ಮತ್ತು ಕೀಳರಿಮೆ ಇದನ್ನು ವಿರೋಧಿಸುವ ಎನ್ನಾರೈಗಳಿಗಿದ್ದಂತಿದೆ. ನಾನು ಚಿಕ್ಕವನಿದ್ದಾಗ ನನ್ನಮ್ಮ ಮತ್ತು ನನ್ನೂರಿನ ಇನ್ನೂ ಕೆಲವರು ನಮ್ಮ ಪಕ್ಕದ ಹಳ್ಳಿಯ ಶ್ರೀಮಂತ ಡಾಕ್ಟರೊಬ್ಬರ ಕತೆ ಹೇಳುತ್ತಿದ್ದರು. ಬೆಂಗಳೂರಿನಲ್ಲಿ ದೊಡ್ಡ ಡಾಕ್ಟರ್ ಆಗಿ ನೆಲೆಯಾದ ಆ ಮನುಷ್ಯ ತನ್ನ ಮನೆಗೆ ಬರುವ ಅತಿಥಿಗಳಿಗೆ ತನ್ನ ತಂದೆತಾಯಿಯರನ್ನು ತೋರಿಸಿ ಅವರು ನಮ್ಮ ಮನೆಯ ಆಳುಗಳು ಎಂದು ಹೇಳುತ್ತಿದ್ದರಂತೆ. ಬೇರೆಯವರ ಮುಂದೆ ಹಾಗೆಯೆ ನಡೆಸಿಕೊಳ್ಳುತ್ತಿದ್ದರಂತೆ. ಈ ಕತೆ ಎಷ್ಟು ನಿಜವೊ ಉತ್ಪ್ರೇಕ್ಷೆಯೋ ಗೊತ್ತಿಲ್ಲ. ಅದರೆ ಆರ್ಥಿಕ ಸ್ಥಿತಿಯಲ್ಲಿ ಮೇಲಕ್ಕೆ ಹೋದ ಒಂದಷ್ಟು ಜನರಲ್ಲಿ ಕಾಣುವ ಕೀಳರಿಮೆಯನ್ನೂ ಮತ್ತು ಅವರ ದುಷ್ಟತನಗಳನ್ನೂ ನೋಡಿರುವವರಿಗೆ ಈ ಕತೆ ಅವಾಸ್ತವ ಎನ್ನಿಸುವುದಿಲ್ಲ. ದೊಡ್ಡ ಮನುಷ್ಯನಾಗಿಬಿಡುವ ಆಸೆಗಾಗಿ ಶ್ರೀಮಂತರ ಮನೆಯ ಹೆಣ್ಣನ್ನು ಮದುವೆಯಾಗಿ ನಂತರ ತನ್ನ ಹೆತ್ತವರು ಮತ್ತು ಒಡಹುಟ್ಟಿದವರೊಂದಿಗೆ ಯಾವೊಂದು ಸಂಬಂಧವನ್ನೂ ಇಟ್ಟುಕೊಳ್ಳದೆ ಅವರನ್ನು Disown ಮಾಡಿರುವ ಅನೇಕ "ಪ್ರತಿಭಾವಂತ" ಜನ ನಮ್ಮ ಪಟ್ಟಣಗಳಲ್ಲಿ ಹೇರಳವಾಗಿ ಸಿಗುತ್ತಾರೆ. ಇನ್ನೊಬ್ಬರ ಮುಂದೆ ನಮ್ಮನ್ನು ದೊಡ್ಡದಾಗಿ ಬಿಂಬಿಸದ ಯಾವೊಂದೂ ನಮ್ಮದಲ್ಲ. ನಾವು ಅದೆಲ್ಲವನ್ನೂ ಮೀರಿದವರು. ನಾವು ಪರಿಶುದ್ಧರು. ಶ್ರೇಷ್ಠಕುಲ ಸಂಜಾತರು. ಆಗರ್ಭ ಶ್ರೀಮಂತರು! ಇಂತಹ ಮನಸ್ಥಿತಿಗಳ ಮುಂದುವರಿದ ಭಾಗವೆ "(ವಿದೇಶಿಯರು ನೋಡುವ) ಸ್ಲಮ್‌ಡಾಗ್‌ನಲ್ಲಿ ಅದೆಲ್ಲ ತೋರಿಸುವ ಅವಶ್ಯಕತೆ ಇತ್ತೆ?" ಎನ್ನುವುದು.

ಎಲ್.ಕೆ. ಅಡ್ವಾನಿ ಎನ್ನುವ ರಾಷ್ಟ್ರನಾಯಕ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಹೇಳಿದರೆನ್ನಲಾದ ಮಾತನ್ನು ಈ ಸಿನೆಮಾಗೆ ಹೋಗುವ ಸ್ವಲ್ಪ ಮುಂಚೆಯಷ್ಟೆ ನಾನು ಪತ್ರಿಕೆಗಳಲ್ಲಿ ಓದಿ ಹೋಗಿದ್ದೆ. "ಸಂಸತ್‌ಭವನದ ಮೇಲೆ ದಾಳಿ ಮಾಡಿದ ಉಗ್ರನ ಹೆಸರು ಅಫ್ಜಲ್ ಗುರು ಎಂದಿರದೆ ಆನಂದನೊ, ಮೋಹನನೊ ಆಗಿದ್ದರೆ, ಇಷ್ಟರಲ್ಲಾಗಲೆ ಆತ ನೇಣು ಕಂಡಾಗಿರುತ್ತಿತ್ತು," ಎಂದಿದ್ದರು ಈ ನಮ್ಮ "ಉಕ್ಕಿನ" ರಾಷ್ಟ್ರನಾಯಕರು. ಎಂತಹ ಕೀಳು ಹೇಳಿಕೆ ಇದು? ದೇಶದ ಉಪ-ಪ್ರಧಾನಿಯಾಗಿದ್ದ ಒಬ್ಬ Statesman ಹೇಳುವ ಮಾತುಗಳಲ್ಲ ಇವು. ಅಧಿಕಾರ ದಾಹದಿಂದ ತನ್ನೆಲ್ಲ ಹಿರಿತನ ಮತ್ತು ಸಜ್ಜನಿಕೆಯನ್ನು ಕಳೆದುಕೊಂಡ ಹಿರಿಯನೊಬ್ಬನ ಹತಾಶ ಮಾತುಗಳಿವು. ಯುವಕರ ಮನಸ್ಸಿನಲ್ಲಿ ವಿಷ ಬಿತ್ತಿ, ಆ ಮೂಲಕ ದೇಶದ ಪ್ರಧಾನಿಯಾಗಬೇಕೆಂದು ಹಂಬಲಿಸುವ ಇಂತಹ ಮನಸ್ಥಿತಿಯ ಮನುಷ್ಯ ಭಾರತದ ಪ್ರಧಾನಿಯಾಗಿಬಿಟ್ಟರೆ ಭಾರತದ ಜನರ ಸ್ಥಿತಿ ಹಿಟ್ಲರ್‌ನ ಕಾಲದಲ್ಲಿ ಕೋಮುವಿಷವನ್ನು ಉಂಡ ಜರ್ಮನ್ನರ ಸ್ಥಿತಿಗಿಂತ ಬೇರೆ ಆಗುವುದಿಲ್ಲ. ಕೋಮುವಾದಿ ಪಕ್ಷದಿಂದ ಬಂದಿದ್ದರೂ ಸಹ ಅಧಿಕಾರದಾಹದೆಡೆಗೆ ಒಂದು ಮಟ್ಟದ ನಿರ್ಲಕ್ಷ್ಯವನ್ನು, ಕನಿಷ್ಠ ಸಜ್ಜನಿಕೆಯೊಂದನ್ನು, ಮತಸಹಿಷ್ಣುತೆಯನ್ನು ಮಾಜಿ ಪ್ರಧಾನಿ ವಾಜಪೇಯಿ ಹೊಂದಿದ್ದರು. ಆದರೆ, ಆ ಒಳ್ಳೆಯ ಗುಣಗಳ್ಯಾವುವೂ ಅಡ್ವಾನಿಯವರಲ್ಲಿ ಕಾಣಿಸುತ್ತಿಲ್ಲ.

ಸ್ಲಮ್‌ಡಾಗ್ ಸರಿ ಇಲ್ಲ ಎನ್ನುವ ಜನರಲ್ಲಿ ಬಹುಸಂಖ್ಯಾತ ಜನ ಭಾಜಪದ ಬೆಂಬಲಿಗರು ಎನ್ನುವುದಕ್ಕೆ ಯಾವುದೆ ಸಮೀಕ್ಷೆಯಾಗಲಿ, ಸಂಶೋಧನೆಯಾಗಲಿ ಮಾಡಬೇಕಿಲ್ಲ. ಇವರ ನಾಯಕ ಅಡ್ವಾನಿ ಹೇಳಿದ "ಅಫ್ಜಲ್, ಆನಂದ, ಮೋಹನ" ಥಿಯರಿಯನ್ನಿಟ್ಟುಕೊಂಡೆ ನಾವು ಸ್ಲಮ್‌ಡಾಗ್ ಅನ್ನು ವಿಶ್ಲೇಷಿಸಿದರೆ, ಆ ಜನಕ್ಕೆ ಈ ಸಿನೆಮಾ ಯಾಕೆ ಇಷ್ಟವಾಗಿಲ್ಲ ಎನ್ನುವುದಕ್ಕೆ ಇನ್ನೂ ಒಳ್ಳೆಯ ಕಾರಣ ಕೊಡಬಹುದು. ಅದು ಸಿನೆಮಾದ ನಾಯಕನ ಮತ. ಮೊದಲಿಗೆ ಸಿನೆಮಾದಲ್ಲಿ ಹಿಂದೂ ಕೋಮುವಾದಿಗಳು ಮುಸ್ಲಿಮರನ್ನು ಸಾಯಿಸುವ ಕೋಮುಗಲಭೆಯ ದೃಶ್ಯವಿದೆ. ಆ ದೃಶ್ಯದಲ್ಲಿ ಮುಸ್ಲಿಮ್ ತಾಯಿಯೊಬ್ಬಳನ್ನು ಆಕೆಯ ಮಕ್ಕಳ ಮುಂದೆಯೆ ಹಿಂದೂಗಳು ಕೊಲ್ಲುತ್ತಾರೆ. ಎಲ್ಲೂ ಮುಸಲ್ಮಾನ ದುಷ್ಟರು ಮುಗ್ಧ ಹಿಂದೂಗಳನ್ನು ಕೊಲ್ಲುವ ದೃಶ್ಯ ಇಲ್ಲ. ಭಾರತದಲ್ಲಿ ಮುಸಲ್ಮಾನರ ಮೇಲೆ ಹಿಂದೂಗಳು ಹಲ್ಲೆ ಮಾಡುವುದು ಈ ಚಿತ್ರದ ಮೂಲಕ ಪ್ರಪಂಚಕ್ಕೇ ಗೊತ್ತಾಗುತ್ತಿದೆಯೆ ಹೊರತು, ಮುಸಲ್ಮಾನರು ಹಿಂದೂಗಳನ್ನು ಸಾಯಿಸುವುದು ಪ್ರಪಂಚಕ್ಕೆ ಗೊತ್ತಾಗುತ್ತಿಲ್ಲ! ಎಂತಹ ಅಪಚಾರ ಮತ್ತು ಸುಳ್ಳಿನ ಪ್ರಚಾರ! ಈ ದೃಶ್ಯ ಹಾಳಾಗಿ ಹೋಗಲಿ ಅಂದರೆ, ಈ ಸಿನೆಮಾದ ಮುಸಲ್ಮಾನ ಹುಡುಗ ಕೊನೆಗೂ ಪಂದ್ಯ ಗೆದ್ದು ಬಿಡುತ್ತಾನೆ. ಸ್ಲಮ್ಮಿನಲ್ಲಿ ಬೆಳೆದ, ಯಾವೊಂದು ವಿದ್ಯೆಯೂ ಇಲ್ಲದ, ಕಾಲ್‌ಸೆಂಟರ್‌ನಲ್ಲಿ ಟೀ ಬಾಯ್ ಆದ ಹುಡುಗ ಪಂದ್ಯ ಗೆಲ್ಲುವುದೆಂದರೇನು? ಈ ಪಂದ್ಯ ಗೆದ್ದವನು ಹಿಂದೂವಾದರೂ ಆಗಿದ್ದರೆ ಅಷ್ಟು ಇಷ್ಟು ಸಹಿಸಿಕೊಳ್ಳಬಹುದಿತ್ತು. ಹೋಗಲಿ ಅಂದರೆ ಅವನು "ಆನಂದನೂ ಅಲ್ಲ, ಮೋಹನನೂ ಅಲ್ಲ. ಅವನ ಹೆಸರು ಜಮಾಲ್ ಮಲ್ಲಿಕ್." ಹೌದು. ಹೀಗೆ ಯೋಚನೆ ಮಾಡುವುದೆ ಎಷ್ಟೊಂದು ಕೀಳು ಎನ್ನಿಸುತ್ತದೆ ನನಗೂ. ಅದರೆ, ಪ್ರಜ್ಞಾಪೂರ್ವಕವಾಗಿ ಅಥವ ಅಪ್ರಜ್ಞಾಪೂರ್ವಕವಾಗಿ ಕೆಲವು ಸಂಕುಚಿತ ಮನೋಭಾವದ ಜನ ಹೀಗೆಯೂ ಯೋಚಿಸಬಲ್ಲರು ಎನ್ನುವುದಕ್ಕೆ ಅಡ್ವಾನಿ ಬಹಿರಂಗವಾಗಿ ಹೇಳಿದ ಮಾತನ್ನೆ ನಾವು ಆಧಾರವಾಗಿಟ್ಟುಕೊಳ್ಳಬಹುದು.

1927 ರಲ್ಲಿ ಅಮೆರಿಕದ ಕ್ಯಾಥರಿನ್ ಮೇಯೊ ಎನ್ನುವ ಬರಹಗಾರ್ತಿ "ಮದರ್ ಇಂಡಿಯಾ" ಎನ್ನುವ ಪುಸ್ತಕ ಬರೆಯುತ್ತಾಳೆ. ಅದರಲ್ಲಿ ಭಾರತವನ್ನು ಮೋರಿ-ಚರಂಡಿಗಳ ದೇಶ ಎಂಬಂತೆ ಬಿಂಬಿಸುತ್ತಾಳೆ. ಭಾರತೀಯರು ತಮ್ಮನ್ನು ತಾವು ಆಳಲು ಅನರ್ಹರು, ಬ್ರಿಟಿಷರು ಅವರನ್ನು ಆಳುವುದೆ ಉತ್ತಮ ಎನ್ನುತ್ತ್ತಾಳೆ. ಆ ಪುಸ್ತಕಕ್ಕೆ ಗಾಂಧಿ ಯಂಗ್ ಇಂಡಿಯಾದಲ್ಲಿ ವಿಮರ್ಶೆ ಬರೆಯುತ್ತ ಹೇಳುತ್ತಾರೆ: "ಈ ಪುಸ್ತಕವನ್ನು ಬಹಳ ಬುದ್ಧಿವಂತಿಕೆಯಿಂದ, ಪರಿಣಾಮಕಾರಿಯಾಗಿ ಬರೆಯಲಾಗಿದೆ. ಈ ಪುಸ್ತಕದಲ್ಲಿನ ಹೇಳಿಕೆಗಳನ್ನು ಬಹಳ ಜಾಗರೂಕತೆಯಿಂದ ಆರಿಸಲಾಗಿದೆ. ಹಾಗಾಗಿ ಆ ಹೇಳಿಕೆಗಳು ಈ ಪುಸ್ತಕ ನಿಜಕ್ಕೂ ಸತ್ಯವನ್ನೆ ಹೇಳುತ್ತದೆ ಎಂಬ ತಪ್ಪು ಅಭಿಪ್ರಾಯ ಮೂಡಿಸುತ್ತವೆ. ಆದರೆ ಈ ಪುಸ್ತಕ ನನ್ನಲ್ಲಿ ಮೂಡಿಸುವ ಅಭಿಪ್ರಾಯ ಏನೆಂದರೆ, ಈ ಪುಸ್ತಕ ಒಂದು ದೇಶದ ಮೋರಿಗಳನ್ನು ತೆರೆದು, ಅವನ್ನು ಪರಿಶೀಲಿಸಿ ನೋಡುವ ಏಕೈಕ ಉದ್ದೇಶದಿಂದ ಕಳುಹಿಸಲಾದ ಚರಂಡಿ ಪರಿಶೀಲಕನೊಬ್ಬನ ವರದಿ." ಹೀಗೆ ಹೇಳುವ ಗಾಂಧಿ ಇನ್ನೂ ಮುಂದಕ್ಕೆ ಹೋಗಿ ಭಾರತೀಯರಿಗೆ ಹೀಗೆ ಹೇಳುತ್ತಾರೆ: "ಪ್ರತಿಯೊಬ್ಬ ಭಾರತೀಯನೂ ಓದಬಹುದಾದ ಮತ್ತು ಆ ಮೂಲಕ ಒಂದಷ್ಟು ಲಾಭ ಮಾಡಿಕೊಳ್ಳಬಹುದಾದ ಪುಸ್ತಕ ಇದು. ಆಕೆ ಮಾಡಿರುವ ಅನೇಕ ಆರೋಪಗಳಲ್ಲಿ ಹುದುಗಿರುವ ಒಳಾರ್ಥವನ್ನು (ವಾಸ್ತವವನ್ನು) ನಾವು ಖಂಡಿತ ತಿರಸ್ಕರಿಸಲಾರೆವು. ಬೇರೆಯವರು ನಮ್ಮನ್ನು ಹೇಗೆ ನೋಡುತ್ತಾರೊ ಅದೇ ರೀತಿ ನಮ್ಮನ್ನು ನಾವು ನೋಡಿಕೊಳ್ಳುವುದು ಒಳ್ಳೆಯದೆ. ಆ ಪುಸ್ತಕವನ್ನು ಬರೆದ ಉದ್ದೇಶವನ್ನು ನಾವು ಪರೀಕ್ಷಿಸುವ ಅಗತ್ಯವಿಲ್ಲ. ಬದಲಿಗೆ ನಮ್ಮ ಸಮಾಜದೂಷಣೆಗೆ ಕಾರಣವಾದ ವಿಷಯಗಳನ್ನು ತೊಡೆದುಹಾಕಲು ನಾವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರಯತ್ನಿಸುವಂತೆ ಅದು ನಮ್ಮನ್ನು ಪ್ರಚೋದಿಸಬೇಕು."

ಸ್ಲಮ್‌ಡಾಗ್ ಮಿಲಿಯನೇರ್ ಅನ್ನು ನಾವು ಯಾವ ಕೋನದಿಂದಲೂ "ಮದರ್ ಇಂಡಿಯಾ"ಗೆ ಹೋಲಿಸಲಾಗದು. ನಿಮಗೆ ಇಲ್ಲಿ ಒಬ್ಬ ಸಿನೆಮಾ ಪ್ರೇಮಿಯೊಬ್ಬನ, ಕಲಾವಿದನೊಬ್ಬನ ಕೃತಿ ಕಾಣಿಸುತ್ತದೆಯೆ ಹೊರತು "ಮೋರಿ ಪರಿಶೀಲಕನ" ಡಾಕ್ಯುಮೆಂಟರಿ ಅಲ್ಲ. ಭಾರತವನ್ನು ಕೆಟ್ಟದಾಗಿ ತೋರಿಸಬೇಕು ಎನ್ನುವ ಉದ್ದೇಶದಿಂದ ಈ ಚಿತ್ರ ನಿರ್ಮಿಸಲಾಗಿದೆ ಎಂದು ಹೇಳುವುದು ತೀರಾ ಬಾಲಿಶವಾದದ್ದು. ಆದರೂ, ಸಿನೆಮಾ ನೋಡುವ ಮನರಂಜನೆಯ ಹೊರತಾಗಿಯೂ ಈ ಸಿನೆಮಾ ನಮಗೆ ಒಂದಷ್ಟು ಕಲಿಸುತ್ತದೆ. ಹಾಲಿ ಮತ್ತು ಭಾವಿ ಭಾರತದ ಗಂಭೀರ ಸಮಸ್ಯೆಯೊಂದರ ಬಗ್ಗೆ ನಮ್ಮ ಗಮನ ಸೆಳೆಯುತ್ತದೆ. ಅದು Urban Poverty. ನಮ್ಮ ನಗರಗಳ ಕೊಳಚೆಪ್ರದೇಶಗಳಲ್ಲಿ ವಾಸಿಸುವವರ ಜೀವನ ಎಷ್ಟೋ ಸಲ ಹಳ್ಳಿಗಳಲ್ಲಿನ ದಲಿತರ ಜೀವನಕ್ಕಿಂತ ಕೆಟ್ಟದಾಗಿರುತ್ತದೆ. ದೊಡ್ಡದೊಡ್ಡ ನಗರಗಳಲ್ಲಿ ಬೇರೂರಿರುವ ಈ ಸ್ಲಮ್‌ಗಳು "breeding grounds for crime." ರಾಜಕೀಯ ಪ್ರೇರಿತ ಪೂರ್ವಯೋಜಿತ ಕೋಮುಗಲಭೆಗಳು ಮೊದಲಿಗೆ ಹುಟ್ಟುವುದೆ ಈ ಸ್ಲಮ್ಮುಗಳಲ್ಲಿ. ಇಲ್ಲಿ ಜೀವದ ಬೆಲೆ ಬಹಳ ಅಗ್ಗ. ಈಗಲಾದರೂ ನಮ್ಮ ಪಾಲಿಸಿ ಮೇಕರ್‌ಗಳು ನಗರಗಳಲ್ಲಿನ ಬಡತನವನ್ನು ಒಂದು ಗಂಭೀರ ಸಮಸ್ಯೆ ಎಂದು ಪರಿಗಣಿಸಿ, ಸ್ಲಮ್ಮುಗಳಲ್ಲಿನ ಜನರನ್ನು ಮುಖ್ಯವಾಹಿನಿಗೆ ಸೇರಿಸಿಕೊಳ್ಳುವ, ಅವರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿರುವ ಆರೋಗ್ಯವಂತ ಪರಿಸರ ನಿರ್ಮಿಸಿಕೊಡುವ, ಮತ್ತು ಅವರ ಬಡತನವನ್ನು ಕೊನೆಗೊಳಿಸುವ ದಿಕ್ಕಿನೆಡೆಗೆ ಚರ್ಚೆ ಮತ್ತು ಕೆಲಸಗಳನ್ನು ಆರಂಭಿಸುತ್ತಾರೆ ಎಂದು ಆಶಿಸೋಣ. ಸ್ಲಮ್‌ಡಾಗ್ ಮಿಲಿಯನೇರ್‌ನಿಂದ ನಮ್ಮ ಸಿನೆಮಾ ಜಗತ್ತು ಏನನ್ನು ಕಲಿಯತ್ತದೊ ಬಿಡುತ್ತದೊ, ಕನಿಷ್ಠ ನಮ್ಮ ಸಾಮಾಜಿಕ ಸಂದರ್ಭದಲ್ಲಾದರೂ ಅದು ನಗರಗಳಲ್ಲಿನ ಬಡತನದ ಬಗ್ಗೆ ಸಂವಾದ ಆರಂಭಿಸಿದರೆ ಅದೇ ಅದರ ದೊಡ್ಡ ಕೊಡುಗೆ. ನಮ್ಮವರು ಆರಂಭಿಸದಿದ್ದರೂ ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಾದರೂ ಅದನ್ನು ಆರಂಭಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ.