(ವಿಕ್ರಾಂತ ಕರ್ನಾಟಕದ ಮೇ 8, 09 ರ ಸಂಚಿಕೆಗಾಗಿ ಕಳೆದ ಭಾನುವಾರ ಬರೆದದ್ದು.)
ನಮ್ಮಲ್ಲಿ ಒಂದಷ್ಟು ಪರಂಪರಾಗತ ಸಮಸ್ಯೆಗಳಿವೆ: ಅನಕ್ಷರತೆ, ಜಾತೀಯತೆ, ಬಡತನ, ಮೌಢ್ಯ, ಇತ್ಯಾದಿ. ನನ್ನ ತಲೆಮಾರು ನಂಬಿಕೊಂಡು ಬಂದ ಅಥವ ನಂಬಿದ ಮಾತು ಏನೆಂದರೆ, ವಿದ್ಯೆ ಮತ್ತು "ಆರ್ಥಿಕ ಅಭಿವೃದ್ಧಿ" ನಮ್ಮ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ ಮತ್ತು ಅವುಗಳನ್ನು ಇಲ್ಲವಾಗಿಸುತ್ತದೆ ಎನ್ನುವುದು. ಆದರೆ, ಕಳೆದ ಮಾರ್ಚ್ ತಿಂಗಳಿನಲ್ಲಿ ಸುಮಾರು ಮೂರು ವಾರಗಳ ಕಾಲ ಕರ್ನಾಟಕದ ಬೇರೆಬೇರೆ ಕಡೆ ಸುತ್ತಿದ ನನ್ನ ಅನುಭವಗಳ ಆಧಾರದ ಮೇಲೆ ಹೇಳುವುದಾದರೆ, ನನಗೆ ನಾನೂ ಸಹ ನಂಬಿಕೊಂಡೆ ಬಂದ ಈ ಮೇಲಿನ ಮಾತುಗಳ ಬಗ್ಗೆ ನಂಬಿಕೆ ಹೋಗಿದೆ. ಇದಕ್ಕೆ ಪೂರಕವಾಗಿ ನಾನು ಈ ಸಲದ ನನ್ನ ಪ್ರವಾಸದಲ್ಲಿ ಕಂಡ ಮೂರು ಪ್ರಮುಖ ಘಟನೆಗಳನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ. ಇವು ಆ ದಿನಗಳಲ್ಲಿ ನನ್ನನ್ನು ತೀವ್ರವಾಗಿ ತಟ್ಟಿದ, ನನ್ನ ಮಾತು ಮತ್ತು ಆಲೋಚನೆಗಳನ್ನು ಬಹುವಾಗಿ ಪ್ರಭಾವಿಸಿದ, ಖಿನ್ನತೆ ಮೂಡಿಸಿದ ಘಟನೆಗಳೂ ಹೌದು.
ಇನ್ನೂ ಎಷ್ಟು ದಿನ ನರಬಲಿ ಬೇಡುತ್ತದೆ ಈ ಕ್ರೂರ ಜಾತಿವ್ಯವಸ್ಥೆ?
ಮೊದಲneಯದು, ಬೆಂಗಳೂರಿನಿಂದ ಕೇವಲ 70 ಕಿ.ಮೀ. ದೂರದ ಊರಿನಲ್ಲಿ ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಡೆದಿರುವ ಘಟನೆ. ಅದು ಮಾಗಡಿ ತಾಲ್ಲೂಕಿನ ಒಂದು ಹಳ್ಳಿ. ರಾಮನಗರ ಮತ್ತು ಮಾಗಡಿ ಪಟ್ಟಣಗಳಿಂದ ಸುಮಾರು 20 ಕಿ.ಮೀ. ಅಂತರದಲ್ಲಿರುವ ಊರು. ಆ ಊರಿನಿಂದ ಬೆಂಗಳೂರಿಗೆ ಹೋಗಿ ಲಾಯರ್ ಆಗಿರುವವರು ತಮ್ಮ ತಂದೆತಾಯಿಗಳಿಗೆ ಕಟ್ಟಿಸಿರುವ ಒಂದು ಭರ್ಜರಿ ಮನೆ ಬಿಟ್ಟರೆ ಉಳಿದಿರುವ ಬಹುತೇಕರ ಮನೆಗಳು ಹಳೆಯ ಹೆಂಚಿನ ಮನೆಗಳೆ. ಅಂತಹ ಗಟ್ಟಿಕುಳ ಎಂದು ಹೇಳುವವರಾಗಲಿ, ಜಮೀನ್ದಾರ ಒಕ್ಕಲಿಗರು ಎಂದುಕೊಳ್ಳುವವರಾಗಲಿ ಆ ಊರಿನಲ್ಲಿ ಇಲ್ಲ. ಬಹುಶಃ ಯಾವೊಬ್ಬ ದೊಡ್ಡ ರೈತನಿಗೂ ಆರೇಳು ಎಕರೆಗೆ ಮೀರಿದ ಜಮೀನಿಲ್ಲ. ಎಲ್ಲರೂ ಸಣ್ಣ ಪ್ರಮಾಣದ ರೈತರೆ. ಆ ಊರಿನಲ್ಲಿ ಇರುವುದೆ ಎರಡೂವರೆ ಜಾತಿ. ಮೇಲ್ಜಾತಿಗೆ ಸೇರಿದ ಒಕ್ಕಲಿಗರು, ಅಸ್ಪೃಶ್ಯ ಜಾತಿಯ ದಲಿತರು, ಮತ್ತು ಇನ್ಯಾವುದೊ ಒಂದೆರಡು ಮನೆಗಳು. ನನಗಂತೂ ಅಲ್ಲಿಯ ಎಷ್ಟೋ ಗೌಡರ ಮನೆಗಳಿಗೂ ದಲಿತರ ಮನೆಗಳಿಗೂ ಯಾವೊಂದು ಗಂಭೀರ ವ್ಯತ್ಯಾಸವಾಗಲಿ, ಸ್ಥಿತಿವಂತಿಕೆಯ ಏರುಪೇರಾಗಲಿ ಕಾಣಿಸಲಿಲ್ಲ. ಬಹುಶಃ ಎಲ್ಲರದೂ ಒಂದೇ ತರಹದ, "ಅಸ್ಥಿರತೆಯಲ್ಲಿ ಸ್ಥಿರತೆ" ಕಂಡ ಜೀವನ. ಒಬ್ಬರು ಜಮೀನು ಇರುವ ಕೃಷಿಕರಾದರೆ ಮತ್ತೊಬ್ಬರು ಆ ಜಮೀನುಗಳಲ್ಲಿ ಮತ್ತು ದೂರದ ರಾಮನಗರ-ಮಾಗಡಿಗಳಲ್ಲಿ ಕೆಲಸ ಮಾಡುವ ಕೃಷಿಕಾರ್ಮಿಕರು, ಕೂಲಿಗಳು.
ಎರಡೂ ಸಮುದಾಯಗಳಲ್ಲಿ ಆರ್ಥಿಕ ದೃಷ್ಟಿಯಿಂದ ಸುಮಾರು ಸಮಾನತೆಗಳಿದ್ದರೂ ಅಲ್ಲಿರುವ ಜಾತಿಪ್ರಜ್ಞೆ ಮಾತ್ರ ನರಬಲಿಯನ್ನೆ ತೆಗೆದುಕೊಳ್ಳುವಷ್ಟು ಅಸಮಾನವಾದದ್ದು. ಇಂದಿನ "ಅಭಿವೃದ್ಧಿ ಮಾನದಂಡ"ಕ್ಕೆ ಅನುಗುಣವಾಗಿ ಆ ಊರಿನಲ್ಲಿಯೂ ನೀರಿಗೆ ಬೋರ್‌ವೆಲ್ ಮತ್ತು ಟ್ಯಾಂಕ್‌ಗಳ ವ್ಯವಸ್ಥೆ ಇದೆ. ಸಣ್ಣ ಊರಾಗಿರುವುದರಿಂದ ಮತ್ತು ದಲಿತರ ಹಾಗು ಸವರ್ಣೀಯರ ಮನೆಗಳು ಹತ್ತಿರಹತ್ತಿರ ಹೊಂದಿಕೊಂಡೇ ಇರುವುದರಿಂದ ಇಬ್ಬರೂ ಒಂದೇ ಟ್ಯಾಂಕ್ ಮತ್ತು ನಲ್ಲಿಯನ್ನು ಬಳಸುತ್ತಾರೆ. ಕಳೆದ ಡಿಸೆಂಬರ್‌ನಲ್ಲಿ ದಲಿತರ ಹೆಣ್ಣುಮಗಳು ಕುಡಿಯಲೆಂದು ಒಂದು ಬಿಂದಿಗೆ ನೀರು ತರಲು ನಲ್ಲಿಯ ಬಳಿಗೆ ಹೋಗಿದ್ದಾಳೆ. ಅಲ್ಲಿ ಸವರ್ಣೀಯ ಹೆಣ್ಣುಮಗಳೊಬ್ಬಳು ತನ್ನ ಮೂರ್ನಾಲ್ಕು ಬಿಂದಿಗೆಗೆ ನೀರು ತುಂಬಿಸಿಕೊಳ್ಳುತ್ತಿದ್ದಾಳೆ. ತಾನು ಹಿತ್ತಲಿನಲ್ಲಿ ಬೆಳೆಸಿರುವ ತರಕಾರಿಗಳಿಗೆ ನೀರು ಹಾಕಲು ಆಕೆ ಅಷ್ಟೊಂದು ಬಿಂದಿಗೆಗಳನ್ನು ಸಾಲಿಗೆ ಇಟ್ಟಿದ್ದಳು ಎನ್ನುವುದು ಸುದ್ದಿ. ದಲಿತ ಸಮುದಾಯದ ಹೆಣ್ಣಿಗೆ ಸಹಜವಾಗಿಯೆ ತನಗೆ ಮನೆಗೆ ಬೇಕಿರುವ ಒಂದೇಒಂದು ಬಿಂದಿಗೆ ಹಿಡಿದುಕೊಳ್ಳಲು ಕೇಳಬಹುದಲ್ಲ ಎನ್ನಿಸಿದೆ. ಕೇಳಿದ್ದಾಳೆ. ಆಹಂ ತಲೆ ಎತ್ತಿದೆ. ಮಾತು ಜಾರಿದೆ. ವಿಷಯ ಸ್ಪೃಶ್ಯ, ಅಸ್ಪೃಶ್ಯ, ಕೊಬ್ಬು, ಹಕ್ಕು, ಹೀಗೆ ಎಲ್ಲೆಲ್ಲೊ ಹೋಗಿದೆ. ಒಬ್ಬಳು 'ನೀನು ಮುಟ್ಟಿಸಿಕೊಳ್ಳಬಾರದ ಕೀಳು ಜಾತಿಯವಳು' ಅಂದರೆ, ಇನ್ನೊಬ್ಬಳು 'ಅದ್ಯಾಕೆ? ಹೋಟೆಲ್‌ಗಳಲ್ಲಿ ನಾವು ತಿನ್ನುವ ತಟ್ಟೆಯಲ್ಲಿಯೆ, ನಮ್ಮ ಪಕ್ಕದಲ್ಲಿಯೆ ಕುಳಿತು ತಿನ್ನುವುದಿಲ್ಲವಾ?' ಎಂದಿದ್ದಾಳೆ. ಆ ಊರಿನಲ್ಲಿ ಒಬ್ಬ ದಲಿತರ ಹೆಣ್ಣುಮಗಳು ಮಾಗಡಿಯ ಒಕ್ಕಲಿಗ ಯುವಕನನ್ನು ಮದುವೆ ಆಗಿದ್ದಾಳೆ. ಅದೂ ಪ್ರಸ್ತಾಪವಾಗಿದೆ. ಕೊನೆಗೆ, ಮೇಲ್ಜಾತಿಯ ಹೆಣ್ಣಿನ ಗಂಡನೂ ಜಗಳಕ್ಕೆ ಬಂದಿದ್ದಾನೆ.
ಅಂದು ರಾತ್ರಿ ದಲಿತರ ಹೆಣ್ಣುಮಗಳ ಗಂಡ ನಿನಗ್ಯಾಕೆ ಬೇಕಿತ್ತು ಈ ಜಗಳ ಎಂದು ಹೆಂಡತಿಯನ್ನು ಗದರಿದ್ದಾನೆ. ಬೆಳಿಗ್ಗೆ ಎದ್ದು ಮಾಗಡಿಗೆ ಕೂಲಿಗೆ ಹೋಗಿದ್ದಾನೆ. ಅಂದೇ ಊರಿನಲ್ಲಿ ಪಂಚಾಯಿತಿ ಕರೆದಿದ್ದಾರೆ. ಗಂಡ ಊರಿನಲ್ಲಿ ಇಲ್ಲವಾದ್ದರಿಂದ ಆಕೆ ಮತ್ತು ಆಕೆಯ ಅತ್ತೆಮಾವ ಪಂಚಾಯಿತಿಗೆ ಹೋಗಿದ್ದಾರೆ. ಪಂಚಾಯಿತಿ ಕೇವಲ ಮೇಲ್ಜಾತಿಯವರ ದರ್ಬಾರು. ಜಾತಿ ವ್ಯವಸ್ಥೆ ಎನ್ನುವುದೆ ಕೊಳಕು, ಅದರ ಆಚರಣೆ ಮಾಡುವುದು ಅನೈತಿಕ, ಎಲ್ಲಾ ಮನುಷ್ಯರೂ ಸಮಾನರೆ, ಇಂತಹ ಯಾವೊಂದೂ ಭಾರತದ ಸಂವಿಧಾನಾತ್ಮಕ ಆಶಯಗಳು ಮತ್ತು ಹಕ್ಕುಗಳು ಅಲ್ಲಿ ಚರ್ಚೆಗೆ ಬಂದಿಲ್ಲ. ಜನ್ಮಜಾತವಾಗಿ ಬಂದಿರುವ ಮೇಲುಕೀಳೆಂಬ ಪವಿತ್ರತೆಯನ್ನು ಗಮನಿಸದೆ ಉಚ್ಚರ ಎದುರು ನಿಂತು ವಾದಿಸಿದ್ದಕ್ಕೆ ದಲಿತ ಮಗಳಿಗೆ 150 ರೂಪಾಯಿ ದಂಡ ಹಾಕಿದ್ದಾರೆ.
ಅಂದು ರಾತ್ರಿ ಗಂಡ ಇದನ್ನು ಕೇಳಿ ಬಹುಶಃ ಹೆಂಡತಿಗೆ ತಿರುಗಿಬಿದ್ದಿದ್ದಾನೆ. 150 ರೂಪಾಯಿ ಸಣ್ಣಮೊತ್ತವೇನಲ್ಲ. ಅದು ಅವನ ಒಂದೆರಡು ದಿನದ ದುಡಿಮೆ. ಊರಿನವರ ಪ್ರಕಾರ ಆತ ಅಂದು ಹೆಂಡತಿಗೆ ಹೊಡೆದೊ ಅಥವ ಬೈದೊ ಮಾಡಿದ್ದಾನೆ. (ಆತ ನನಗೆ ಹೇಳಿದ ಪ್ರಕಾರ ಆ ಘಟನೆಯಿಂದ ತೀವ್ರವಾಗಿ ನೊಂದಿದ್ದ ತನ ಹೆಂಡತಿಗೆ ಅಂದು ರಾತ್ರಿ ಸಾಂತ್ವನ ಹೇಳಿದನಂತೆ.) ಮಾರನೆಯ ದಿನ ಬೆಳ್ಳಂಬೆಳಿಗ್ಗೆಯೇ ಎದ್ದ ಆ ಹೆಣ್ಣುಮಗಳು ಅವಮಾನ ಮತ್ತು (ಮಾನಸಿಕ-ದೈಹಿಕ) ಹಿಂಸೆಯನ್ನು ತಾಳಲಾರದೆ ತನ್ನ ಪಕ್ಕದ ಮನೆಯ ನೆಂಟರ ಮನೆಗೆ ಹೋಗಿ ಅವರಲ್ಲಿದ್ದ ಕೀಟನಾಶಕವನ್ನು ಅವರಿಗೆ ಗೊತ್ತಾಗದ ಹಾಗೆ ತಂದು ತನ್ನ ಗಂಡ ಬೆಳಿಗ್ಗೆ ಎದ್ದು ಆಚೆ ಹೋದಾಗ ಕುಡಿದಿದ್ದಾಳೆ. ಅಸೂಕ್ಷ್ಮ ಸಮಾಜದ ಕ್ಷುಲ್ಲಕ ನಡವಳಿಕೆ ನರಬಲಿ ಪಡೆದೇ ತೀರಿದೆ. ಭಾರತ ಜನನಿಯ ಆ ತನುಜಾತೆಯ ವಯಸ್ಸು ಸುಮಾರು 25. ಆರೇಳು ವರ್ಷದ ಮಗ, ನಾಲ್ಕೈದು ವರ್ಷದ ಮಗಳು ಅಮ್ಮನಿಲ್ಲದೆ ಬೆಳೆಯುತ್ತಿದ್ದಾರೆ.
ಅದಾದ ನಂತರ ಪೊಲಿಸ್ ಕೇಸ್ ಆಗಿದೆ. ದಲಿತ ಸಂಘಟನೆಗಳು ಜಾತಾ ತೆಗೆದಿವೆ. ಸರ್ಕಾರ ಹೆಂಡತಿ ಕಳೆದುಕೊಂಡವನಿಗೆ ಒಂದೆರಡು ಲಕ್ಷ ಪರಿಹಾರ ಕೊಟ್ಟಿದೆ. ಇನ್ನೂ ಒಂದೆರಡು ಸೌಕರ್ಯ ಕೊಡುವುದಾಗಿ ಆಶ್ವಾಸನೆ ನೀಡಿದೆ. ಊರಿನ ಮೇಲ್ಜಾತಿಯ ಬಹುತೇಕ ಗಂಡಸರು ಇದು ಜಾಮೀನಿಲ್ಲದ ಪ್ರಕರಣವಾದ್ದರಿಂದ ಮೊದಲಿಗೆ ಮನೆಬಿಟ್ಟು ಓಡಿಹೋಗಿದ್ದಾರೆ. ಎಲ್ಲೆಲ್ಲೊ ಲಕ್ಷಾಂತರ ರೂಪಾಯಿ ಒಟ್ಟುಗೂಡಿಸಿ ಜಾಮೀನು ಸಿಕ್ಕ ನಂತರ ಮನೆಗಳಿಗೆ ವಾಪಸಾಗಿದ್ದಾರೆ. ಊರಿನಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿದ್ದಾರೆ. ಅವರಿಗೆ ಊರಿನಲ್ಲಿ ಕೂಲಿ ಕೊಡುತ್ತಿಲ್ಲ. ರಾಗಿಗಿರಣಿಯಲ್ಲಿ ಹಿಟ್ಟು ಮಾಡಿಕೊಡುತ್ತಿಲ್ಲ. ಅಂಗಡಿಗಳ ಬಳಿಗೂ ಸೇರಿಸುತ್ತಿಲ್ಲ. ಅಷ್ಟೇ ಯಾಕೆ, ಹ್ಮೂ.. ಈ ಘಟನೆ ಹೇಳಿದರೆ ಮಿಕ್ಕ ಚಿತ್ರವೂ ಸಿಗುತ್ತದೆ: ನಾನು ಕಳೆದ ತಿಂಗಳು ಆ ಊರಿನಲ್ಲಿ ಒಂದೆರಡು ರಾತ್ರಿ ಇದ್ದೆ. ಒಮ್ಮೆ ಹೀಗೆ ಸಾಯಂಕಾಲ ನನ್ನ ನಾಲ್ಕೂವರೆ ವಯಸ್ಸಿನ ಮಗಳ ಜೊತೆ ದಲಿತರ ಮನೆಗಳನ್ನು ಹಾಯ್ದು ಬರುತ್ತಿದೆ. ಒಬ್ಬ ಯುವಕ ಕಾಣಿಸಿದ. ಹೋಗಿ ಆತನ ಜಗಲಿಯ ಮೇಲೆ ಮಾತನಾಡಿಸುತ್ತ ಕುಳಿತೆ. ಆಗ ಗೊತ್ತಾಗಿದ್ದು, ಆತನೆ ಹೆಂಡತಿ ಕಳೆದುಕೊಂಡವನು ಎಂದು. ನನ್ನ ಮಗಳದೇ ವಯಸ್ಸಿನ ಆತನ ತಬ್ಬಲಿ ಮಗಳೂ ಅಲ್ಲಿದ್ದಳು. ಹೊಲಗಳಲ್ಲಿ ಸುತ್ತಾಡಿ ಸುಸ್ತಾಗಿದ್ದ ನನ್ನ ಮಗಳು ನನ್ನ ತೊಡೆಯ ಮೇಲೆ ಹಾಗೆಯೆ ನಿದ್ದೆ ಹೋದಳು. ಮಾತನಾಡುತ್ತ ಕತ್ತಲಾಯಿತು. ಮಗಳನ್ನು ಎಬ್ಬಿಸುವುದು ಬೇಡವೆಂದು ಭುಜದ ಮೇಲೆ ಹಾಕಿಕೊಂಡು ನನ್ನ ನೆಂಟರ ಮನೆಯ ಕಡೆ ಹೊರಟೆ. ಕೂಡಲೆ ಮೂರ್ನಾಲ್ಕು ಬೀದಿ ನಾಯಿಗಳು ಬೊಗಳುತ್ತ ಸುತ್ತುವರೆದವು. ಮಗಳು ಭುಜದ ಮೇಲೆ ಇದ್ದಿದ್ದರಿಂದ ಕೈಯ್ಯಲ್ಲಿ ಕೋಲು-ಕಲ್ಲು ಹಿಡಿಯುವ ಸ್ಥಿತಿ ಇರಲಿಲ್ಲ. ಹಾಗಾಗಿ ನಾಯಿಗಳ ಸಮಸ್ಯೆ ಬೇಡ ಎಂದು ನನ್ನ ಜೊತೆಗೆ ಮನೆಯ ತನಕ ಬರಲು ಅಲ್ಲಿಯ ದಲಿತ ಯುವಕನೊಬ್ಬನನ್ನು ಕರೆದೆ. ಅದು ಎರಡು ಜೋಡಿ-ಹಳ್ಳಿಗಳ ಊರು. ನನ್ನ ನೆಂಟರ ಮನೆ ಇದ್ದದ್ದು ಆ ಊರಿಗೆ ನೂರಿನ್ನೂರು ಮೀಟರ್ ದೂರದಲ್ಲಿರುವ ಅವಳಿ ಹಳ್ಳಿಯಲ್ಲಿ. ಊರು ಹತ್ತಿರ ಬರುತ್ತಲೆ ದಲಿತರ ಹುಡುಗ ನಿಂತುಬಿಟ್ಟ. 'ಇನ್ನು ನೀವೆ ಹೋಗಿ ಸಾರ್, ಊರೊಳಗೆ ನಾವೊಬ್ಬೊಬ್ಬರೆ ಓಡಾಡುವುದಿಲ್ಲ.' ಎಂದ. ಯಾಕೆ ಎಂದಿದ್ದಕ್ಕೆ, 'ಒಬ್ಬೊಬ್ಬರೆ ಸಿಕ್ಕರೆ ಹೊಡೆದಾಕಿಬಿಡುತ್ತಾರೆ ಸಾರ್! ನಾವು ಎಲ್ಲಾದರೂ ಹೋಗುವ ಹಾಗಿದ್ದರೆ ಮೂರ್ನಾಲ್ಕು ಜನ ಸೇರಿ ಹೋಗುತ್ತೇವೆ. ಆಗಲೂ ಊರೊಳಗೆ ಹೋಗುವುದಿಲ್ಲ. ಹೀಗೆ ಹೊಲ-ಗುಡ್ಡ ಬಳಸಿಕೊಂಡು ಹೋಗುತ್ತೇವೆ,' ಎಂದ. ಬಹಿಷ್ಕಾರದಿಂದ ತಮಗೆ ಜೀವನ ಮಾಡಲು ಕಷ್ಟವಾಗಿರುವುದರ ಬಗ್ಗೆ, ಅದು ಹುಟ್ಟಿಸಿರುವ ಭಯದ ಬಗ್ಗೆ ಹೇಳಿಕೊಂಡ.
"ನಮ್ಮ ಗುಡಿಸಲಿಗೆ 'ಅವರು' ಬರಂಗಿಲ್ಲ.": ಬಡವರು, ಆದರೂ ಜಾತಿವಾದಿಗಳು.
ಎರಡನೆಯ ಅನುಭವವಾದದ್ದು ಬೆಂಗಳೂರಿನಿಂದ ಸುಮಾರು 150 ಕಿ.ಮೀ. ದೂರದಲ್ಲಿರುವ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ. ಅದು ಹಳ್ಳಿಯಲ್ಲ. ಗೊಲ್ಲರ ಹಟ್ಟಿ. ಆ ಹಟ್ಟಿಯಲ್ಲಿ ಸರ್ಕಾರ ಇತ್ತೀಚೆಗೆ ಕಟ್ಟಿಸಿರುವ ಕೆಲವು ಹೆಂಚಿನ ಮನೆಗಳನ್ನು ಬಿಟ್ಟರೆ ಎಲ್ಲರಿಗೂ ಇರುವುದು ಗುಡಿಸಲುಗಳೇ. ಆ ಇಟ್ಟಿಗೆ-ಹೆಂಚಿನ ಮನೆಗಳಿಗೂ ಇನ್ನೂ ಯಾರೂ ವಾಸಕ್ಕೆ ಹೋಗಿಲ್ಲ. ಆ ಹಟ್ಟಿಯ ಪ್ರತಿ ಗುಡಿಸಲಿಗೂ ಹೆಚ್ಚೆಂದರೆ ಬಹುಶಃ ಐದಾರು ಸಾವಿರ ರೂಪಾಯಿ ತಗಲಬಹುದೇನೊ. ಅದೇ ಅವರ 'ಅರಮನೆ'ಗಳು. ಅಲ್ಲಿ ನನಗೆ ಕಂಡವರೋ ಸರಿಯಾಗಿ ಪೌಷ್ಟಿಕ ಆಹಾರವಿಲ್ಲದ ನರಪೇತಲರು. ಕನಿಷ್ಠ ಸೌಲಭ್ಯಗಳೂ ಇಲ್ಲದೆ ಬದುಕುತ್ತಿರುವವರು. ಮಕ್ಕಳನ್ನು ಕುರಿಮೇಯಿಸಲು ಕಳುಹಿಸುವ ದಟ್ಟದಾರಿದ್ರ್ಯದವರು. ಓದು-ವಿದ್ಯೆ ಇಲ್ಲದ ಆ ಮಕ್ಕಳು ಎಂದಿಗೂ ಮುಖ್ಯವಾಹಿನಿಗೆ ಬರುವ ಸಾಧ್ಯತೆ ಇಲ್ಲದವರು. ಅಂತಹ ಕ್ಷುದ್ರ ಬಡತನದಲೂ ಅವರಲ್ಲಿ ಜಾತೀಯತೆ ಎಷ್ಟು ತೀವ್ರವಾಗಿ ಉಳಿದಿದೆ ಅಂದರೆ, ದಲಿತರಷ್ಟೆ ಅಥವ ದಲಿತರಿಗಿಂತ ಹೆಚ್ಚಿನ ದಾರಿದ್ರ್ಯದಲ್ಲಿ, ದಲಿತರಿಗಿಂತ ಹೆಚ್ಚಿನ ಅಲೆಮಾರಿ ಬದುಕು ಬದುಕುವ ಈ ಜನ ತಮ್ಮ ಗುಡಿಸಲುಗಳ ಒಳಗೆ ದಲಿತರನ್ನು ಬಿಟ್ಟುಕೊಳ್ಳುವುದಿಲ್ಲ. ಕೇವಲ ಸ್ಪೃಶ್ಯರಿಗೆ ಮಾತ್ರ ಪ್ರವೇಶ. ಕೇಳಿದರೆ ಮತ್ತೆ ಅದೆ ಮೇಲುಕೀಳು, ಸಂಪ್ರದಾಯದ ಸೋಗು.
ಜಾತಿವ್ಯವಸ್ಥೆ ಇದ್ದರೆ ತಾನೆ ಏನು? What is your problem, man?
ಮೂರನೆಯ ಅನುಭವ ಶಿವಮೊಗ್ಗ ನಗರದಲ್ಲಿ. ಆ ಯುವಕನ ಹೆಸರು ಮರೆತಿದ್ದೇನೆ. ಹೇಳಲಿರುವ ವಿಷಯಕ್ಕೆ ಆತನ ಹೆಸರಿನ ಅಗತ್ಯವೂ ಇಲ್ಲ. ಆತನನ್ನು ಒಂದು ತಲೆಮಾರಿನ ಪ್ರತಿನಿಧಿ ಎಂದುಕೊಂಡರೆ ಸಾಕು. ಆ ಯುವಕ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾನೆ. ಜೊತೆಗೆ ಕವಿ ಕೂಡ. ಜಾತಿವ್ಯವಸ್ಥೆ ಎನ್ನುವುದೆ ಬ್ರಿಟಿಷರ ಸೃಷ್ಟಿ ಎನ್ನುವ ಸಂಶೋಧಕರ ಹಿಂಬಾಲಕ. ಹೀಗೆಯೆ ಮಾತನಾಡುತ್ತ, "ಜಾತಿಆಚರಣೆ ಇದ್ದರೆ ತಾನೆ ಏನು? ನಾನೊಂದು ಹಳ್ಳಿಗೆ ಹೋಗಿದ್ದೆ. ಆ ಊರಿನ ಗೌಡ ತನ್ನ ಊರಿನ ದಲಿತರಿಗೆ ಏನಾದರೂ ಬೇಕಿದ್ದರೆ ಸ್ವತಃ ತಾನೆ ಒದಗಿಸುತ್ತಾನೆ. ಅವರನ್ನು ಅವನೆ ನೋಡಿಕೊಳ್ಳುತ್ತಾನೆ. ಅಲ್ಲಿ ತಮ್ಮತಮ್ಮ ಸಂಪ್ರದಾಯಗಳನ್ನು ಪಾಲಿಸಿಕೊಂಡು ಅವರ ಪಾಡಿಗೆ ಇದ್ದಾರೆ. ಅವರು ಹಾಗೆ ಸಾಮರಸ್ಯದಿಂದ ಇರುವಾಗ ಅದನ್ನು ತಪ್ಪು ಎನ್ನಲು ನಾವು ಯಾರು?" ಎಂದ. ಸಜ್ಜನಿಕೆಯ ಸಮಾಜದಲ್ಲಿ ಜಾತಿವ್ಯವಸ್ಥೆ ಹೇಗೆ ಅನೈತಿಕ, ಅದು ಯಾವಯಾವ ಸ್ಥರದಲ್ಲಿ ಸೂಕ್ಷ್ಮವಾಗಿ ಹರಿಯುತ್ತದೆ, Feudal ವ್ಯವಸ್ಥೆಯ ಸೃಷ್ಟಿಗೆ ಹೇಗೆ ಕಾರಣವಾಗುತ್ತದೆ, ಸ್ವಲ್ಪ ಏರುಪೇರಾದರೂ ಆ ವ್ಯವಸ್ಥೆ ಹೇಗೆ ಹಿಂಸಾತ್ಮಕವೂ ಶೋಷಕವೂ ಆಗುವ ತಿರುವು ತೆಗೆದುಕೊಳ್ಳುತ್ತದೆ ಎನ್ನುವುದನ್ನು ಆತನಿಗೆ ಒಂದೆರಡು ವಾಕ್ಯದಲ್ಲಿ ವಿವರಿಸುವುದು ಹೇಗೆ ಎಂದು ಯೋಚಿಸುತ್ತ, "ಅದು ಹಾಗಲ್ಲಾರೀ, ಆ ವ್ಯವಸ್ಥೆಯೇ ಒಂದು ವರ್ಗಕ್ಕೆ ಸ್ವಾಭಿಮಾನ, ಸ್ವಾವಲಂಬನೆಯನ್ನು ನಿರಾಕರಿಸುತ್ತದೆ. ದಲಿತರ..." ಎಂದು ಏನೋ ಹೇಳಲು ಹೊರಟೆ. ಅಷ್ಟಕ್ಕೆ ಆತ, "ಅವರ ಊರಲ್ಲಿ ಅವರು ಯಾವುದೊ ವ್ಯವಸ್ಥೆಯಲ್ಲಿ ಚೆನ್ನಾಗಿದ್ದರೆ ಅದು ಹೇಗೆ ತಪ್ಪು? ಅವರಿಗಿಲ್ಲದ ಸಮಸ್ಯೆ ನಿಮಗೇನು? ಅವರೇ ಹಾಗಿರಬೇಕಾದರೆ What is your problem, man?" ಎಂದು ಇಂಗ್ಲಿಷ್ ಕಲಿಕೆಯಿಂದ ಬಂದಿರುವ ವಿಚಿತ್ರ Sophisticated ಹಾವಭಾವದಲ್ಲಿ ತೀಕ್ಷ್ಣವಾಗಿ ಕೇಳಿದ. ಅದು ಆತನೊಬ್ಬನ ಮಾತಲ್ಲ. ಆತ ಒಂದು ಸಮುದಾಯವನ್ನೆ ಪ್ರತಿನಿಧಿಸುತ್ತಿದ್ದಾನೆ. ಅದನ್ನು ಹೇಗೆ ಎದುರಿಸುವುದು? ಎನ್ನುವ ಪ್ರಶ್ನೆ ನನ್ನಲ್ಲಿ ಹುಟ್ಟಿತು. ಹಾಗೆಯೆ ಮಾತನಾಡುತ್ತ ಆತ ಹೇಳಿದ ಇನ್ನೊಂದು ಮಾತೂ ಇಲ್ಲಿ ಮುಖ್ಯ: "ಅಂತರ್ಜಾತಿ ವಿವಾಹವಾದರೆ ಸಂಪ್ರದಾಯಗಳಲ್ಲಿನ ಭಿನ್ನತೆಯಿಂದಾಗಿ ನಮ್ಮ ತಾಯಂದಿರಿಗೆ ಇರಿಸುಮುರಿಸಾಗುತ್ತದೆ. ಹಾಗಿರುವಾಗ ಅಂತರ್ಜಾತಿ ವಿವಾಹ ಯಾಕಾಗಬೇಕು?" ತನಗೆ ಇಷ್ಟವಾದ, ತನ್ನ Intellectuality ಯನ್ನು ಪ್ರಚೋದಿಸಬಹುದಾದ, ಸಮಾನಸಕ್ತಿಗಳನ್ನು ಹೊಂದಿರುವ ಒಂದು ಹುಡುಗಿಯನ್ನು ಆಕೆಯ ಜಾತಿಮತ ನೋಡದೆ ಪ್ರೇಮಿಸಲು, ತನ್ನ ಸಂಗಾತಿಯನ್ನಾಗಿ ಆಯ್ದುಕೊಳ್ಳಲು ತನ್ನ ತಾಯಿಯ ಇರಿಸುಮುರಿಸಿನ ಹೆಸರಿನಲ್ಲಿ ಈತ ನಿರಾಕರಿಸುತ್ತಿದ್ದ. ಇಲ್ಲಿ ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ ಈಗಿನ ಕೌಟುಂಬಿಕ ವಾಸ್ತವಗಳನ್ನು ಗಮನಿಸುತ್ತ ನಾವು ಯೋಚಿಸಬೇಕು. ತಮ್ಮ ಸ್ವಂತ ದುಡಿಮೆಯ ಮೇಲೆ ನಿಲ್ಲಬಲ್ಲ ಬಹುತೇಕ ಗಂಡುಮಕ್ಕಳು ತಮಗೆ ಸಿಗುವ ಅವಕಾಶ ಅಥವ ಅನಿವಾರ್ಯತೆಯಿಂದಾಗಿ ಇಂದು ಹೆತ್ತವರಿಂದ ಬೇರೆಯೆ ಇರುತ್ತಿದ್ದಾರೆ. ಹಾಗಾಗಿ, ತಾಯಿ ಪಾಲಿಸುವ ಸಂಪ್ರದಾಯಗಳು, ರೀತಿರಿವಾಜುಗಳು ಎನ್ನುವುದೇ ಈಗಿನ ಸೊಸೆ-ಅತ್ತೆ ಸಂದರ್ಭದಲ್ಲಿ ಅಪ್ರಸ್ತುತ. ಹಾಗಿರುವಾಗ, ಜಾತಿವ್ಯವಸ್ಥೆಯಿಂದ ಲಾಭವಿಲ್ಲದ, ಅನುಕೂಲವಿಲ್ಲದ, ಅಹಂಕಾರವಿಲ್ಲದ ಯಾರು ತಾನೆ ಇಷ್ಟೆಲ್ಲ ಓದು-ಡಿಗ್ರಿ ಪಡೆದುಕೊಂಡರೂ ಜಾತಿ-ಆಚರಣೆ ಸರಿ ಎನ್ನುತ್ತಾರೆ? ಈಗಿನ ಈ ಎಲ್ಲಾ ಓದು-ವಿದ್ಯೆ ನಮ್ಮಲ್ಲಿ ಎಷ್ಟು ಮಾತ್ರದ ಸುಧಾರಣೆ ತಂದಿದೆ? ನೈತಿಕತೆಯ ಪಾಠ ಕಲಿಸಿದೆ? ಕ್ಷುದ್ರ ಮನೋಭಾವಗಳನ್ನು ಕದಲಿಸಿದೆ?
ಬೆಂಗಳೂರಿನ ದಕ್ಷಿಣಕ್ಕೆ ಇರುವ ನನ್ನ ಹಳ್ಳಿಯ ಸುತ್ತಮುತ್ತಲೂ ಮಾಗಡಿಯ ಹಳ್ಳಿಗಳಲ್ಲಿ ಇರುವಂತಹುದೇ ಜಾತೀಯತೆಯನ್ನು ನಾನು ಚಿಕ್ಕಂದಿನಿಂದಲೂ ಕಂಡಿದ್ದೇನೆ. ಹಾಗಾಗಿ ಆ ಘಟನೆ ನನಗೆ ಆಘಾತ ಉಂಟುಮಾಡಲಿಲ್ಲ. ಅಭಿವೃದ್ಧಿ ಆಗಿರುವ ಬೆಂಗಳೂರಿಗೆ ಇಷ್ಟು ಹತ್ತಿರದಲ್ಲಿದ್ದರೂ, ಸ್ವಾತಂತ್ರ್ಯ ಮತ್ತು ಅಸ್ಪೃಶ್ಯತೆ ನಿವಾರಣೆಯ ಕಾಯ್ದೆಗಳು ಬಂದು ಇಷ್ಟು ದಿನವಾದರೂ, ಈ ಜನ ಈಗಲೂ ಜಾತೀಯತೆ ಮಾಡುತ್ತಿದ್ದಾರಲ್ಲ ಎನ್ನುವ ಆಕ್ರೋಶ, ಸಿಟ್ಟು, ಅಸಹಾಯಕತೆಯನ್ನು ಆ ಘಟನೆ ನನ್ನಲ್ಲಿ ಉಂಟುಮಾಡಿತು. ಆದರೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗುಡಿಸಲಿನಲ್ಲಿ ಕಂಡ ಕಡುಬಡತನದ ಸಮುದಾಯವೂ ತನ್ನ ಜಾತಿ-ಸ್ಪೃಶ್ಯ ಮೇಲ್ಗಾರಿಕೆಯನ್ನು ಶತಮಾನಗಳ ಕಾಲ ಹೇಗೆ ಉಳಿಸಿಕೊಳ್ಳಲು ಸಾಧ್ಯ ಎನ್ನುವ ಪ್ರಶ್ನೆ ನನ್ನಲ್ಲಿ ನಿಜಕ್ಕೂ ಗಾಬರಿ ಮೂಡಿಸಿತು. ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತ ಅಲ್ಲಿಯೇ ಪಾಠ ಮಾಡುತ್ತಿರುವ ಇಂಗ್ಲಿಷ್ ಕಲಿತಿರುವ ಯುವಕ--ಕವಿತೆಗಳನ್ನೂ ಬರೆಯಬಲ್ಲವನು, ಹುಟ್ಟಿನಿಂದ ನಿರ್ಧರಿಸಲ್ಪಡುವ ಮೇಲುಕೀಳು ಆಚರಣೆ ಸರಿ ಎಂದದ್ದು ಇನ್ನೂ ಹೆಚ್ಚಿನ ಗಾಬರಿ ಹುಟ್ಟಿಸಿತು.
ಮೇಲಿನ ಘಟನೆಗಳ ಅವಲೋಕನ, "ಸರ್ಕಾರಗಳು ಹೇಳುತ್ತ ಬಂದಿರುವ 'ಅಭಿವೃದ್ಧಿ' ನಮ್ಮ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ; ಅವುಗಳಿಗೆ ಅಲ್ಲಿ ಪರಿಹಾರವಿಲ್ಲ;" ಎನ್ನುವ ಸಂದೇಹವನ್ನು ನನ್ನಲ್ಲಿ ಹುಟ್ಟಿಸಿದೆ. ಹಾಗೆಯೆ, "ಆರ್ಥಿಕ ಅಭಿವೃದ್ಧಿ"ಗೇ ಸೀಮಿತಗೊಳಿಸಿಕೊಂಡು ನೋಡಿದರೆ, ಬೆಂಗಳೂರು ಮತ್ತು ಅದರ ಸುತ್ತಮುತ್ತಲು ಆಗಿರುವ ಆರ್ಥಿಕ ಅಭಿವೃದ್ಧಿ ಮಾಗಡಿ-ರಾಮನಗರಗಳ ಕುಗ್ರಾಮಗಳನ್ನು ದಾಟಿ, ಚಿಕ್ಕನಾಯಕನಹಳ್ಳಿ-ಹಿರಿಯೂರುಗಳ ಹಟ್ಟಿಗಳನ್ನು ಮುಟ್ಟಿ, ಗುಲ್ಬರ್ಗ-ಬೀದರ್‌ಗಳ ತಾಂಡಾಗಳನ್ನು ತಲುಪಬೇಕಾದರೆ ಇನ್ನೂ ಎಷ್ಟು ಶತಮಾನಗಳು ಬೇಕಾಗಬಹುದು? ಆಗ ಬರುವ ಆ ಅಭಿವೃದ್ಧಿಯೂ ಒಟ್ಟಾರೆ ಸಮಾಜದದಲ್ಲಿ ಯಾವ ರೀತಿಯ ಸಾಮಾಜಿಕ-ಮಾನಸಿಕ ಪರಿವರ್ತನೆಯನ್ನು ತರಬಲ್ಲದು? ಜನರ ಯೋಚನಾಲಹರಿಯಲ್ಲಿ ಪರಿವರ್ತನೆ ಆಗದಿದ್ದಾಗ ನಮ್ಮ ಪರಂಪರಾಗತ ಸಮಸ್ಯೆಗಳು ಮತ್ತು ಮೇಲುಕೀಳುಗಳು ಎಂದಾದರೂ ಸುಧಾರಿಸಲು ಸಾಧ್ಯವೆ? ನಮ್ಮ ಜನ ಕಲಿಯುತ್ತಿರುವ ವಿದ್ಯೆ-ಓದು ಸಾಕಾಗುತ್ತಿದೆಯೆ? ಪಂಚಾಯಿತಿ ಮಾಡಿದ ಆ ಊರಿನ ಬಹುಪಾಲು ಗಂಡಸರು ಅವಿದ್ಯಾವಂತರಲ್ಲ. ಅದು ಟಿವಿ, ಬಸ್ಸು ಇಲ್ಲದೆ ಇರುವ ಕುಗ್ರಾಮವೂ ಅಲ್ಲ. ಆ ಜನ ಕಾಯ್ದೆಗಳ ಬಗ್ಗೆ, ರಾಜಕೀಯದ ಬಗ್ಗೆ ಅಜ್ಞಾನ ಇರುವವರೂ ಅಲ್ಲ. ಈ ಎಲ್ಲಾ 'ಅಭಿವೃದ್ಧಿ' ಮತ್ತು 'ಸೀಮಿತವಾದ ಅಕ್ಷರ ಜ್ಞಾನ' ಆ ಊರಿಗೆ ತಂದದ್ದಾದರೂ ಏನು? ಅಲ್ಲಿ ಆಗಿರುವ ಸುಧಾರಣೆಯಾದರೂ ಯಾವ ಮಟ್ಟದ್ದು? ಆ ಹಳ್ಳಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಂಡರೂ ಅಲ್ಲಿನ ಜನರ ಮನಸ್ಥಿತಿ ಸುಧಾರಿಸುತ್ತದೆಯೆ? ಅದನ್ನು ಸುಧಾರಿಸುವ ಪೂರ್ಣ-ಶಿಕ್ಷಣ ಇಲ್ಲದೆ ಆಗುವ ಈ ಆರ್ಥಿಕ ಅಭಿವೃದ್ಧಿ ನಮ್ಮ ಸಮಾಜ ಸುಧಾರಣೆಗೆ ನೆರವಾಗುತ್ತದೆಯೆ?
ಗಾಂಧೀಜಿಯ "ಹಿಂದ್ ಸ್ವರಾಜ್", ಜಗಳಗಂಟ ನೀರು, ಹಂದಿ-ಜ್ವರ
ನಾನು ಈ ಲೇಖನದಲ್ಲಿ ಮುಖ್ಯವಾಗಿ ಹೇಳಬಯಸಿರುವುದು ನಾವು ಇಂದು ಪರಿಭಾವಿಸಿಕೊಂಡಿರುವ ಅಭಿವೃದ್ಧಿಯ ಪರಿಕಲ್ಪನೆಯನ್ನೆ ಇಂದು ನಾವು ಚರ್ಚೆಗೆ ಒಡ್ಡಬೇಕಿದೆ ಎಂದು. ಈ ಚರ್ಚೆಯಲ್ಲಿ ಅಭಿವೃದ್ಧಿ ಎಂತಹುದಾಗಿರಬೇಕು ಮತ್ತು ಅದರ ಅಂತಿಮ ಗುರಿ ಏನಾಗಿರಬೇಕು ಎನ್ನುವುದು ಮುಖ್ಯವಾಗಬೇಕು. ಈ ಲೇಖನದಲ್ಲಿ ಮೊದಲಿಗೆ ಉದಾಹರಿಸಿದ ನಲ್ಲಿನೀರಿನ ಘಟನೆ ಇಟ್ಟುಕೊಂಡು ಇವತ್ತಿನ ಅಭಿವೃದ್ಧಿ ನಮ್ಮನ್ನು ಮುಟ್ಟಿಸಿರುವ ಅಧೋಗತಿ ಮತ್ತು ಅವಲಂಬನೆ ಕುರಿತು ನಾವು ಯೊಚಿಸಬೇಕು. ಇವತ್ತು ಯಾವೊಂದು ಬಯಲುಸೀಮೆಯ ಹಳ್ಳಿಯಲ್ಲೂ ಜನ ತಮ್ಮ ಕುಡಿಯುವ ನೀರಿಗೆ ಆ ಊರುಗಳಲ್ಲಿ ಪಾರಂಪರಿಕವಾಗಿ ಇದ್ದಂತಹ ಬಾವಿಗಳನ್ನು ಬಳಸುತ್ತಿಲ್ಲ. ಅಂತರ್ಜಲದ ಮಟ್ಟ ಕುಸಿದು ಆ ಬಾವಿಗಳಲ್ಲಿ ಇಂದು ನೀರಿಲ್ಲ. ಇದ್ದರೂ, ಅನುಕೂಲ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಅಲ್ಲಿ ಬೋರ್‌ವೆಲ್‌ಗಳನ್ನು ಕೊರೆದು ಟ್ಯಾಂಕ್ ಕಟ್ಟಿ ನಲ್ಲಿನೀರಿಗೆ ವ್ಯವಸ್ಥೆ ಮಾಡಿದ್ದಾರೆ. ಹಳ್ಳಿಗಳ ಜನ ನೀರಿಗಾಗಿ ಸಂಪೂರ್ಣವಾಗಿ ವಿದ್ಯುತ್ ಅನ್ನೆ ಅವಲಂಬಿಸಿರುವ ಗುಲಾಮಿ ವ್ಯವಸ್ಥೆ ಇದು. ಸಮಯಕ್ಕೆ ಇಲ್ಲದ ವಿದ್ಯುತ್, ಇಂಗುವ ಅಥವ ಸಾಕಾಗದ ಬೋರ್‌ವೆಲ್‌ಗಳು, ಅನಿರ್ದಿಷ್ಟ ನೀರಿನ ವ್ಯವಸ್ಥೆ, ಲಭ್ಯವಿರುವ ಸೀಮಿತ ನೀರಿಗಾಗಿ ಎಲ್ಲರ ಪೈಪೋಟಿ, ಹೀಗೆ ಈ ಅಭಿವೃದ್ಧಿ ಒಂದು ಅನೈಸರ್ಗಿಕ ಅವಲಂಬನೆಯನ್ನು ಮತ್ತು ಸಮಸ್ಯೆಗಳನ್ನು ಸೃಷ್ಟಿಸಿದೆ. ಇಂದು ಹಳ್ಳಿಗಳ ಹೆಂಗಸರ ನಡುವೆ ಮನಸ್ತಾಪ ಸೃಷ್ಟಿಸುತ್ತಿರುವುದರಲ್ಲಿ ಬಹುಶಃ ನೀರು ಮೊದಲ ಸ್ಥಾನದಲ್ಲಿದೆಯೇನೊ.
ಗಾಂಧಿ "ಹಿಂದ್ ಸ್ವರಾಜ್"ನಲ್ಲಿ ರೈಲ್ವೇ ವ್ಯವಸ್ಥೆ ಸೃಷ್ಟಿಸಬಹುದಾದ ಸಮಸ್ಯೆಗಳ ಕುರಿತು ಹೇಳಿದ್ದರು. ಅದೇ ರೀತಿ ನಾವೂ ನಮ್ಮ ಇಂದಿನ ಅಭಿವೃದ್ಧಿ ಹುಟ್ಟಿಸಬಹುದಾದ ಸಮಸ್ಯೆಗಳ ಕುರಿತು ಯೋಚಿಸಬೇಕಿದೆ. ಇವತ್ತು ಭಾರತದಂತಹ ದೇಶದಲ್ಲಿ ಪೆಟ್ರೊಲ್ ಸರಬರಾಜು, ವಿದ್ಯುತ್ ಉತ್ಪಾದನೆ, ಮತ್ತು ಟೆಲಿಫೋನ್ ವ್ಯವಸ್ಥೆಯನ್ನು ಹದಗೆಡಿಸಿದರೆ ಸಾಕು, ಇಡೀ ದೇಶವನ್ನೆ ಮಂಡಿಯೂರುವಂತೆ ಮಾಡಬಹುದು. ಇದನ್ನು ನಾವು ವಿದೇಶಿ ಶಕ್ತಿಗಳೆ ಮಾಡುತ್ತವೆ ಎಂದು ಭಾವಿಸಬೇಕಿಲ್ಲ. ನೈಸರ್ಗಿಕ ವಿಕೋಪಗಳಾಗಿ ಈ ವ್ಯವಸ್ಥೆಗೆ ಪೆಟ್ಟುಬಿದ್ದರೂ ಸಾಕು, ನಾವು ಏನು ನಾಗರಿಕ ವ್ಯವಸ್ಥೆ ಕಟ್ಟಿಕೊಂಡಿದ್ದೆವೆಯೊ ಅದೆಲ್ಲವೂ ಕುಸಿದು ಬಿದ್ದು ಅರಾಜಕತ್ವ ಮೇಲುಗೈ ಪಡೆದುಕೊಳ್ಳುತ್ತದೆ. ನಮ್ಮ ಆಧುನಿಕ ಸಮಾಜ ಮನುಷ್ಯನನ್ನು ದಿನೆದಿನೇ ನಿಸರ್ಗದಿಂದ ವಿಮುಖನನ್ನಾಗಿ ಮಾಡುತ್ತ, ತಂತ್ರಜ್ಞಾನದ ಮೇಲೆ ವಿಪರೀತವೆನ್ನಿಸುವಷ್ಟು ಅವಲಂಬಿತನನ್ನಾಗಿ ಮಾಡುತ್ತ ಸಾಗುತ್ತಿದೆ. "ಆರ್ಥಿಕ ಅಭಿವೃದ್ಧಿ"ಯೆ ಎಲ್ಲಕ್ಕೂ ಪರಿಹಾರ ಎಂದುಕೊಂಡಿರುವ ವಿದ್ಯಾವಂತ ಜನ ಮತ್ತು ರಾಜಕೀಯ ನಾಯಕತ್ವ ಇಂತಹ ವಿಷಯದ ಬಗ್ಗೆ ಯೋಚನೆಯೂ ಮಾಡದಷ್ಟು ಅಹಂಕಾರದಲ್ಲಿದೆ.
ಗಾಂಧೀಜಿ "ರೈಲ್ವೇ ವ್ಯವಸ್ಥೆ" ಸಾಂಕ್ರಾಮಿಕ ರೋಗಗಳನ್ನು ಸುಲಭವಾಗಿ ಎಲ್ಲೆಂದರಲ್ಲಿ ಹರಡುತ್ತದೆ ಎಂದಿದ್ದರು. ಇವತ್ತಿನ ಸಂದರ್ಭದಲ್ಲಿ ಇದನ್ನು ನಾವು ಇಡೀ ಸಾರಿಗೆ ವ್ಯವಸ್ಥೆಯ ಕುರಿತೆ ಯೋಚಿಸಬೇಕು. ಜಾಗತಿಕವಾಗಿ ಈ ವಾರ ಬಹಳ ಪ್ರಾಮುಖ್ಯತೆ ಗಳಿಸಿಕೊಂಡ ವಿಷಯವನ್ನೆ ಇಲ್ಲಿ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಮೆಕ್ಸಿಕೋದಲ್ಲಿ ಕಾಣಿಸಿಕೊಂಡ "ಹಂದಿ-ಜ್ವರ" ಎಂಬ ಸಾಂಕ್ರಾಮಿಕ ಕಾಯಿಲೆ ಪಕ್ಕದ ಅಮೆರಿಕಕ್ಕೇ ಅಲ್ಲದೆ ಬಹುದೂರದ ನ್ಯೂಜಿಲ್ಯಾಂಡ್‌ಗೂ ಕೇವಲ ದಿನವೊಂದರಲ್ಲಿ ಹಾರಿದೆ. ಯಾವುದೊ ಒಂದು ಸಾಂಕ್ರಾಮಿಕ ರೋಗ ಎಲ್ಲೋ ಕಾಣಿಸಿಕೊಂಡರೆ ಅದು ಒಂದೇ ದಿನದಲ್ಲಿ ಬಸ್ಸು-ರೈಲು-ವಿಮಾನಗಳ ಮೂಲಕ ಸಹಸ್ರಾರು ಮೈಲು ದೂರ ಸಾಗುತ್ತಿದೆ. ಸೀಮಿತ ಭೌಗೋಳಿಕ ಪರಿಸರಕ್ಕೆ ಪರಿಮಿತ ಮಾಡಬಹುದಾದದ್ದನ್ನು ಈ ಆಧುನಿಕ ಸೌಲಭ್ಯಗಳು "ಜಾಗತೀಕರಣ" ಮಾಡುತ್ತಿವೆ. ಆ ಮೂಲಕ ಸಾವುನೋವುಗಳನ್ನು ಹೆಚ್ಚು ಮಾಡುತ್ತಿವೆ. ನಮ್ಮ ಕುಗ್ರಾಮಗಳಲ್ಲೂ ಜನ ಎಲ್ಲೆಲ್ಲೊ ಹೋಗಿ ಅಂಟಿಸಿಕೊಂಡು ಬಂದ ಏಡ್ಸ್‌ನಿಂದ ಸಾಯುತ್ತಿದ್ದಾರೆ. ಆಧುನಿಕ ಸೌಲಭ್ಯಗಳು ಮನುಷ್ಯನ ಕಾಮನೆ ಮತ್ತು ಅಹಂಕಾರಕ್ಕೆ ಸಂಯಮ ಇಲ್ಲದಂತೆ ಮಾಡಿದೆ. ಸರಿಯಾಗಿ ಒಂದು ಶತಮಾನದ ಹಿಂದೆ ಗಾಂಧೀಜಿ ಬರೆದ "ಹಿಂದ್ ಸ್ವರಾಜ್" ಅನು ಕನಿಷ್ಠ ಭಾರತ ದೇಶವಾದರೂ ಈಗ ಮತ್ತೊಮ್ಮೆ ಓದಬೇಕಿದೆ.
Apr 30, 2009
"ಅಭಿವೃದ್ಧಿ" ನಮ್ಮ ಸಮಸ್ಯೆಗಳನ್ನು ನಿವಾರಿಸುತ್ತಿದೆಯೆ?
Apr 29, 2009
ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಮದುವೆಯಾದರೆ ಏನಾಗುತ್ತೆ?
ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು
ಮದುವೆಯಾದರೆ ಏನಾಗುತ್ತೆ?
ಏನೂ ಆಗೊಲ್ಲ,
ಮುದ್ದಾದ ಎರಡು ಮಕ್ಕಳಾಗುತ್ತೆ!
--ಸವಿತಾ ನಾಗಭೂಷಣ
ಬಹುಶಃ ನನ್ನ Restless ಮನಸ್ಥಿತಿಯಿಂದಾಗಿಯೊ ಅಥವ ಮತ್ತಿನ್ನೆಂತದ್ದಕ್ಕೊ ಪದ್ಯ-ಕವನ ಓದುವುದು ನನಗೆ ಬಹಳ ಕಷ್ಟ. ಅವನ್ನು ಕತೆ-ಕಾದಂಬರಿ ಓದುವಂತೆ ಬಾಯಿ ತೆರೆಯದೆ ಓದಿಕೊಂಡರೆ ಅವನ್ನು ಅರ್ಥ ಮಾಡಿಕೊಳ್ಳುವುದು, ಪದಗಳ ಮತ್ತು ಭಾವದ ಅರಿವು ಮೂಡುವುದು ಕಷ್ಟವೇನೊ. ಜೊತೆಗೆ ಅದನ್ನು ಗದ್ಯ ಓದಿದಂತೆ ನಿಲ್ಲಿಸದೆ ಸುಮ್ಮನೆ ಓದಿಕೊಂಡು ಹೋಗುವುದೂ ಸರಿಯಲ್ಲವೇನೊ. ಏನೇ ಇರಲಿ ನನ್ನ ಕವನಗಳ ಓದು ಬಹಳ ಸೀಮಿತ. ಎಲ್ಲೋ Referenceಗೆ ಬೇಕಾದಷ್ಟು ಮಾತ್ರ. ಆದರೆ ಆ ಕವನಗಳ ವಾಚನ ಕೇಳಿದಾಗ ಅಥವ ಅವುಗಳ ಹಾಡು ಕೇಳಿದಾಗ ಕವನದ ಶಕ್ತಿ ಮತ್ತು ಸಾಮರ್ಥ್ಯ ನೋಡಿ ಬೆರಗಾಗಿದ್ದೇನೆ. ಕಮ್ಮಿ ಪದಗಳಲ್ಲಿ ಒಂದು ವಿಚಾರವನ್ನು ದೀರ್ಘಕಾಲೀನ ಹಿಡಿದಿಟ್ಟುಕೊಳ್ಳಬೇಕಾದರೆ ಕವನವೇ ಸರಿ.
ಕಳೆದ ತಿಂಗಳು ಮೂರ್ನಾಲ್ಕು ದಿನಗಳ ಕಾಲ ನಾಗಭೂಷಣ ದಂಪತಿಗಳ ಜೊತೆಗಿದ್ದೆ. ಸವಿತಾ ನಾಗಭೂಷಣ ಕಾವ್ಯಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಕವಯತ್ರಿ. ಕಾವ್ಯಕ್ಕಾಗಿ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಕವಯತ್ರಿ ಅವರು. ಅವರ ಗದ್ಯ ಮಾತ್ರ ಓದಿರುವ ನನಗೆ ಅವರ ಪದ್ಯ ಓದಲಾಗಿರಲಿಲ್ಲ. ಎರಡು ವರ್ಷದ ಹಿಂದೆ ಅವರಿಂದ ಅವರ ಕವನ ಸಂಕಲನವೊಂದನ್ನು ತೆಗೆದುಕೊಂಡಿದ್ದೆ. ಆಗಿನ ಸ್ಥಿತಿಯಲ್ಲಿ ನಾನದನ್ನು ಓದಲಾಗಿರಲಿಲ್ಲ. ಜೊತೆಗೆ ಕವನ ಓದುವ ಮನಸ್ಥಿತಿಯೂ ಇರಲಿಲ್ಲ. ಆದರೆ ಈ ಸಲ ಅವರ ಒಂದಷ್ಟು ಕವನಗಳನ್ನು ಅವರಿಂದಲೆ ವಾಚನ ಮಾಡಿಸಿ ಅದನ್ನು ರೆಕಾರ್ಡ್ ಮಾಡಿಕೊಳ್ಳಬೇಕು ಎಂದು ಅವರನ್ನು ನೋಡಲು ಹೋಗುವ ಮೊದಲೆ ತೀರ್ಮಾನಿಸಿದ್ದೆ. ಈಗ ಅವರ ಕವನ-ವಾಚನ Youtube ನಲ್ಲಿದೆ.
ಈ ವಿಡಿಯೋದಲ್ಲಿ ಆರೇಳು ಕವನಗಳಿವೆ. ಇಲ್ಲಿರುವ ಬಹುಪಾಲು ಕವನಗಳು ಏಪ್ರಿಲ್ 5 ರಂದು ಶಿವಮೊಗ್ಗದಲ್ಲಿ ಬಿಡುಗಡೆಯಾದ ಅವರ ’ದರುಶನ’ ಕವನ ಸಂಕಲನದಲ್ಲಿ ಪ್ರಕಟವಾಗಿವೆ. ಒಂದೆರಡು ಅವರ ಬೇರೆ ಕವನ ಸಂಕಲನಗಳಿಂದ ಆಯ್ದದ್ದು. ನಿಮಗೆ ಇಷ್ಟವಾದ ಆರೇಳು ಕವನಗಳನ್ನು ಓದಿ ಎಂದಿದ್ದೆ. Youtube ನ ಹತ್ತುನಿಮಿಷದ ಮಿತಿಯಿಂದಾಗಿ ಅದಕ್ಕೆ ಹೊಂದುವಂತೆ ಒಂದಷ್ಟನ್ನು ಆರಿಸಿ ಮಿಕ್ಕದ್ದನ್ನು ಎಡಿಟ್ ಮಾಡಿದ್ದೇನೆ. (ಅವರ ಬಗ್ಗೆ ಈ ವಿಡಿಯೋದಲ್ಲಿ ಸ್ವಲ್ಪ ಆಡಿಯೊ ಪರಿಚಯ ಕೊಡೋಣ ಎಂದುಕೊಂಡೆ. ಆದರೆ ಸಮಯದ ಮಿತಿಯಿಂದಾಗಿ ಅವರು ಮತ್ತು ಅವರ ಪದ್ಯಗಳೇ ಮಾತನಾಡಲಿ, ಮಿಕ್ಕದ್ದನ್ನು ಬ್ಲಾಗ್‌ನಲ್ಲಿ ಬರೆದರಾಯಿತೆಂದು ಸುಮ್ಮನಾದೆ.)
ಈ ತಿಂಗಳ ಮೊದಲ ದಿನ ಹಂಪಿಯ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ್ದೆ. ಇಂಟರ್ನೆಟ್‌ನಲ್ಲ್ಲಿ ಕನ್ನಡದ Content ಜಾಸ್ತಿಯಾಗಬೇಕು; ಅದು ಬರಹ, ಆಡಿಯೊ, ವಿಡಿಯೊ, ಎಲ್ಲಾ ರೂಪದಲ್ಲಿಯೂ ಇರಬೇಕು; ಅದನ್ನು ಹಂಪಿ ವಿಶ್ವವಿದ್ಯಾಲಯವೂ ಮಾಡಬೇಕು; ತಾವು ಪ್ರಕಟಿಸುವ ಪುಸ್ತಕ ಮತ್ತು ಥಿಸೀಸ್‌ಗಳನ್ನು ಅಂತರ್ಜಾಲಕ್ಕೆ ಹಾಕಬೇಕು; ಅವೆಲ್ಲವೂ ಯೂನಿಕೋಡ್ ರೂಪದಲ್ಲಿ ಇರಬೇಕು; ಸರ್ಚ್ ಮಾಡಿದರೆ ಸುಲಭವಾಗಿ ಸಿಗುವಂತಾಗಬೇಕು; ಹೀಗೆ ಮಾತನಾಡಿದ್ದೆ. ಇದು ನಮ್ಮ ವಿಶ್ವವಿದ್ಯಾಲಯಗಳ ಕುಲಪತಿಗಳ ಮನದಲ್ಲಿ ಬರಬೇಕು. ನಮ್ಮ ಆಶಯದಿಂದಷ್ಟೆ ಇದು ಸಾಧ್ಯವಾಗುವುದಿಲ್ಲ. ಆದರೆ ವೈಯಕ್ತಿಕವಾಗಿ ನಮ್ಮ ಪ್ರಯೋಗಗಳನ್ನು ನಾವು ಮಾಡುತ್ತಿರಬೇಕು. ಹಾಗಾಗಿಯೆ ಈ ಸಲದ ನನ್ನ ಪ್ರವಾಸದಲ್ಲಿ ಇಂತಹುದೊಂದು ಪ್ರಯತ್ನ ಮಾಡಲು ನಾನು ಮನಸ್ಸು ಮಾಡಿದ್ದು. ಬಹುಶಃ Youtube ಪ್ರವೇಶಿಸಿದ ಮೊದಲ ಕನ್ನಡ ಕವಯತ್ರಿಯೂ ಸವಿತಾರವರೆ ಇರಬಹುದು. ಕನ್ನಡದ ಯುವ ಕವಿ-ಲೇಖಕರಾದರೂ ಕನಿಷ್ಠ ಇಂತಹುದೊಂದು ಪ್ರಯತ್ನಕ್ಕೆ ತೊಡಗಲಿ ಎಂದು ಈ ಮೂಲಕ ಹಾರೈಸುತ್ತೇನೆ. ಹಾಗೆಯೆ ಹೀಗೆ ನನ್ನಂತೆ ಮಾಡಲು ಸಾಧ್ಯವಿರುವವರು ತಮ್ಮ ಮೆಚ್ಚಿನ ಕವಿ-ಲೇಖಕರ ವಾಚನಗಳನ್ನು ಹೀಗೆ ಪ್ರಸ್ತುತಿಪಡಿಸಲು ಸಾಧ್ಯವಾದರೆ ಇಂಟರ್ನೆಟ್‌ನಲ್ಲಿ ಕನ್ನಡ ವಿವಿಧ ರೂಪಗಳಲ್ಲಿ ಹರಿದಾಡುತ್ತದೆ. ಭಾಷೆಯನ್ನು ಬೆಳೆಸಲು (’ಉಳಿಸಲು’ ಎಂಬ ಪದ ಹೀನಾಯ ಸ್ಥಿತಿಯನ್ನು ತೋರಿಸುತ್ತದೆ) ನಾನಾ ಮಾರ್ಗಗಳಿವೆ. ಅಷ್ಟಕ್ಕೂ ಅದರ ಅಂತಿಮ ಉದ್ದೇಶ ಮತ್ತು ಅಗತ್ಯ ಸಂವಹನ ಮತ್ತು ವಿಚಾರಪ್ರಸರಣ ತಾನೆ.
ಇಲ್ಲಿ ನಾನು ಮೇಲೆ ಉದಾಹರಿಸಿರುವ ಭಾಗ ಸವಿತಾರವರ "ಏನಾಗುತ್ತೆ" ಕವನದಿಂದ. ಅದರ ಪೂರ್ಣ ಪಾಠ ಇಲ್ಲಿದೆ.
ಏನಾಗುತ್ತೆ?
ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು
ಮದುವೆಯಾದರೆ ಏನಾಗುತ್ತೆ?
ಏನೂ ಆಗೊಲ್ಲ,
ಮುದ್ದಾದ ಎರಡು ಮಕ್ಕಳಾಗುತ್ತೆ!
ರಾಮನನ್ನು ಅಲ್ಲಾಹುವಿನ ಪಕ್ಕದಲ್ಲಿ
ಇಟ್ಟರೆ ಏನಾಗುತ್ತೆ?
ಏನೂ ಆಗೊಲ್ಲ,
ಶಕ್ತಿ-ಭಕ್ತಿ ಎರಡೂ ಹೆಚ್ಚಾಗುತ್ತೆ!
ಹಿಂದೂಸ್ಥಾನ-ಪಾಕಿಸ್ಥಾನ
ಒಂದಾದರೆ ಏನಾಗುತ್ತೆ?
ಏನೂ ಆಗೊಲ್ಲ,
ಅಶಾಂತಿ ಆತಂಕ ಕಮ್ಮಿಯಾಗುತ್ತೆ!
ಹೇಳು... ಏನಾಗುತ್ತೆ, ಏನಾಗುತ್ತೆ?
ಹಿಂದೂಸ್ಥಾನ-ಪಾಕಿಸ್ಥಾನ ಒಂದಾದರೆ ಏನಾಗುತ್ತೆ?
ಏನೂ ಆಗೊಲ್ಲ,
ಒಂದು ಹಳೆಯ ರೋಗ ವಾಸಿಯಾಗುತ್ತೆ!
--ಸವಿತಾ ನಾಗಭೂಷಣ
ಈ ಮೇಲಿನ ವಿಡಿಯೋದಲ್ಲಿರುವ ಇತರ ಕವನಗಳು:
- ರಾಮ-ಕೃಷ್ಣ-ಶಿವ
- ಭಯೋತ್ಪಾದಕ
- ಏನಾಗುತ್ತೆ?
- ಏನಾಗುವೆ?
- ಗಾಂಧಿ
- ಕನಕ-ಕೃಷ್ಣ
- ಜಾತ್ರೆಯಲ್ಲಿ ಶಿವ
'ದರುಶನ' ಸಂಕಲನದ ಮುಖಪುಟದ ಹಿಂಬದಿಯಲ್ಲಿರುವ ಕವಿ-ಪರಿಚಯ
ಸವಿತಾ ನಾಗಭೂಷಣ ಚಿಕ್ಕಮಗಳೂರಿನಲ್ಲಿ ಜನಿಸಿದವರಾದರೂ, ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಮಲೆನಾಡಿನ ರಾಜಧಾನಿ ಎನಿಸಿದ ಶಿವಮೊಗ್ಗದಲ್ಲಿ. ಹಾಗಾಗಿಯೇ ಇವರ ಬಹಳಷ್ಟು ಕವನಗಳು ಬೆಟ್ಟ-ಗುಡ್ಡ-ಕಾಡು, ಗಿಡ-ಮರ-ಬಳ್ಳಿ, ಹಸಿರು-ಹೂ=ಹಣ್ಣು ಮತ್ತು ಹೊಳೆ-ಮಳೆ-ಮೋಡಗಳಿಂದ ಜೀವಂತವಾದ ರೂಪಕಗಳಿಂದ ನಳನಳಿಸುತ್ತವೆ. ಇವುಗಳ ಹಿನ್ನೆಲೆಯೊಂದಿಗೇ ಇವರ ಪದ್ಯಗಳು, ವರ್ತಮಾನದ ಮನುಷ್ಯನ ಆಳದ ಸಂತೋಷ-ನೆಮ್ಮದಿಗಳನ್ನೂ, ದು:ಖ-ವಿಷಾದಗಳನ್ನೂ ಅಂತಃಕರಣಪೂರ್ವಕವಾಗಿ ಹಿಡಿದಿಡುತ್ತವೆ. ಬಹುಶ: ಈ ಕಾರಣಗಳಿಂದಾಗಿಯೇ, ಇವರ ಕವನಗಳು ಸಾಮಾನ್ಯ ಓದುಗರು ಮತ್ತು ವಿಮರ್ಶಕರಿಬ್ಬರ ಗಮನವನ್ನೂ ಸೆಳೆದಿವೆ.
ಕಾವ್ಯಕ್ಕಾಗಿ ('ನಾ ಬರುತ್ತೇನೆ ಕೇಳು') ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದ ಮೊದಲ ಕವಯತ್ರಿಯಾದ ಸವಿತಾ, ತಮ್ಮ ಎಲ್ಲ ಕವನ ಸಂಕಲನಗಳಿಗೂ ಬೇರೆ ಬೇರೆ ಸಂಘ ಸಂಸ್ಥೆಗಳಿಂದ ಬಹುಮಾನ-ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ವಿಶಿಷ್ಟ ಕಾದಂಬರಿ 'ಸ್ತ್ರೀಲೋಕ'ಕ್ಕೆ ಎಂ.ಕೆ.ಇಂದಿರಾ ಮತ್ತು ಬಿ.ಎಚ್.ಶ್ರೀಧರ ಪ್ರಶಸ್ತಿಗಳು ಸಂದಿವೆ. ಕೆಲ ಕಾಲ 'ಸಾಹಿತ್ಯ ಸಂವಾದ' ಎಂಬ ಸಾಹಿತ್ಯಿಕ-ಸಾಂಸ್ಕೃತಿಕ ದ್ವೈಮಾಸಿಕದ ಸಂಪಾದಕರಾಗಿದ್ದ ಸವಿತಾ, ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಪ್ರಕಟಿಸಿದ 'ಸುವರ್ಣ ಕಾವ್ಯ' ಬೃಹತ್ ಸಂಪುಟದ ಸಂಪಾದಕರಲ್ಲೊಬ್ಬರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಇತಿಹಾಸದಲ್ಲಿ ಸ್ನಾತಕೋತ್ತರ ಪಡೆದಿರುವ ಸವಿತಾ ನಾಗಭೂಷಣ, ಸದ್ಯಕ್ಕೆ ತಮ್ಮ ಪತಿ ಡಿ.ಎಸ್.ನಾಗಭೂಷಣ ಅವರೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.
Apr 28, 2009
ಮಾನವ(ವೀಯ) ಪಶು ಸಾಗಾಣಿಕೆ !?
ಭಾರತದಲ್ಲಿ ಊಟ ಸಂಪಾದಿಸಿಕೊಳ್ಳುವುದೇ ದೊಡ್ಡ ಸವಾಲು. ಆ ಸವಾಲು ಸ್ವೀಕರಿಸಿದ ಮನುಷ್ಯರು ಕೋಟ್ಯಾಂತರ ಇರುವುದರಿಂದ ಮತ್ತು ಅವರಲ್ಲಿ ಬಹಳಷ್ಟು ಜನ "ನಗಣ್ಯ"ರೂ ಆಗಿರುವುದರಿಂದ ಅವರ ಸಾವು, ನೋವು, ಅಪಘಾತ, ಸುರಕ್ಷೆ, ಸುದ್ದಿಯೂ ಅಲ್ಲ, ಗಮನಹರಿಸಬೇಕಾದ ಸಮಸ್ಯೆಯೂ ಅಲ್ಲ. ಹೌದೆ? ನಿಜವೆ?
ಒಂದು ಆಟೋದಲ್ಲಿ 12-13 ಜನ ಕುಳಿತು ಯಾವೊಂದು ಸುರಕ್ಷೆಯೂ ಇಲ್ಲದ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಾರೆ; ದಿನಗೂಲಿಗೆ. 10-12 ಜನ ಮಾತ್ರ ಕೂಡಬಹುದಾದ ಜೀಪಿನಲ್ಲಿ ಮೇಲೆ-ಕೆಳಗೆ ಎಲ್ಲಾ ಸೇರಿ 20-25 ಜನ ಕಣಿವೆ-ಗುಡ್ಡ-ಬೆಟ್ಟಗಳಲ್ಲಿ ಮಳೆ-ಬಿಸಿಲು-ಗಾಳಿ-ಧೂಳನ್ನು ಅನುಭವಿಸುತ್ತ ಸಾಗುತ್ತಾರೆ. ಆಗಾಗ ಕಾಲನರಮನೆಗೂ.
ಈ ಚಿತ್ರಗಳು ಈಗಲೂ ಬದಲಾಗಿಲ್ಲ. ಬೆಂಗಳೂರಿನಿಂದ ಹೊರಗೆ ಹೋದರೆ ಎಲ್ಲೆಂದರಲ್ಲಿ ಕಾಣಿಸಬಹುದು. ಅಲ್ಲೇ ಇರುವವರಿಗೆ ಅದೊಂದು ವಿಷಯವೇ ಅಲ್ಲದಿರಬಹುದು. ಆದರೆ ನನಗದು ನೋವಿನ, ಭಯದ, ಖಿನ್ನತೆಯ ಭಾವ ಮೂಡಿಸುತ್ತದೆ. ಈ ಸಲ ಬೆಂಗಳೂರಿನಲ್ಲಿದ್ದಾಗ ಒಂದೆರಡು ಸಲ 75 ರೂಪಾಯಿಯ ಪಾಸ್ ತೆಗೆದುಕೊಂಡು ವೋಲ್ವೋ ಗಾಡಿಯಲ್ಲಿ ಹೋಗಿದ್ದೆ. ನನ್ನೂರಿನಿಂದ ಮೆಜೆಸ್ಟಿಕ್‌ಗೆ 15 ನಿಮಿಷಕ್ಕೆ ಒಂದು ಬಸ್ ಸಿಗುತ್ತದೆ. ಒಬ್ಬರಿಂದ ಹಿಡಿದು ಹತ್ತಿಪ್ಪತ್ತು ಜನರ ತನಕ ಇರುತ್ತಿದ್ದರು. ನಾಲ್ಕೈದು ಕಿ.ಮೀ. ದೂರ ಇಡೀ ಬಸ್ಸಿಗೆ ನಾನೊಬ್ಬನೆ ಇದ್ದೆ. ಏರ್ ಕಂಡೀಷನ್ಡ್ ಬಸ್. ಅಷ್ಟೊಂದು ಲಕ್ಷುರಿ ಇದೆ ಈಗ ಬೆಂಗಳೂರಿನಲ್ಲಿ. ಆದರೆ ಹತ್ತಿಪ್ಪತ್ತು ಕಿ.ಮೀ. ಹೊರಗೆ ಹೋಗಿ ನೋಡಿದರೆ... ಚಿತ್ರವೇ ಬೇರೆ ಆಗುತ್ತದೆ.
ಇಲ್ಲಿ ಆ ಹೆಣ್ಣುಮಕ್ಕಳು ಹೊಟ್ಟೆಪಾಡಿಗೆ ಕುರಿ-ಮಂದೆಯಂತೆ ಮುದುರಿಕೊಂಡು, ಡ್ರೈವರ್‍ನ ಸೀಟಿನಲ್ಲೂ ಜಾಗ ಹಂಚಿಕೊಂಡು, ಸೀಟಿನ ರಾಡಿನ ಮೇಲೆ ಕುಳಿತುಕೊಂಡು, ಹಿಂದೆ ರಸ್ತೆಗೆ ಮುಖಮಾಡಿಕೊಂಡು ಹೋಗುತ್ತಿದ್ದರು ಕುಣಿಗಲ್ ಹತ್ತಿರ. ಅಲ್ಲಿ ಸೊಂಡೂರಿನ ಬಳಿ 20-25 ಜನ 10-12 ಜನ ಹಿಡಿಸುವ ಜೀಪಿನಲ್ಲಿ ಮೇಲೆಒಳಗೆ ಕುಳಿತು, ಸೈಡಿನಲ್ಲಿ ನೇತಾಡುತ್ತ ಹೋಗುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಾವಿರಾರು ಕೋಟಿ ಕಂಡ ಸಣ್ಣ-ವಿಸ್ತಾರದ ಶ್ರೀಮಂತ ನೆಲ ಸೊಂಡೂರು. ಆದರೆ ಅಲ್ಲಿಯ ಗುಡ್ಡ-ಕಣಿವೆ-ಕೊರಕಲುಗಳಲ್ಲಿ ಜೀವದ ಹಂಗು ಬಿಟ್ಟು ಮನೆ-ಊರು ಸೇರುವ ಆತುರದಲ್ಲಿ ಬಿಸಿಲು-ಧೂಳು-ಗಾಳಿ ಲೆಕ್ಕಿಸದೆ ಬಡ ಜನತೆ ಸಾಗುತ್ತಿತ್ತು. ಅಪಘಾತಗಳು ಸಾಮಾನ್ಯ. ಅಲ್ಲಿ ಮನುಷ್ಯರ ಜೀವಕ್ಕೆ ಬೆಲೆಯೇ ಇಲ್ಲ. ದುಡಿಮೆ-ಹೊಟ್ಟೆಪಾಡು-ನೆಮ್ಮದಿಯ ಜೊತೆಗೆ ಪ್ರತಿದಿನದ ಉಳಿವೂ ಒಂದು ಹೋರಾಟವೆ.
Apr 27, 2009
ಇದ್ದಿಲು ಮಾಡುತ್ತ ಕುರುಡಾಗುವರು; ದೇವಿಯ ಮೆರವಣಿಗೆಯಲ್ಲಿ ಹೆಂಗಸರಿಲ್ಲ!
ಇದ್ದಿಲು ಮಾಡುತ್ತ ಕಣ್ಣು ಕಳೆದುಕೊಳ್ಳುವವರು
ಅಂದು ಮಾಗಡಿಯ ಹಳ್ಳಿಯಿಂದ ಹಾಸನಕ್ಕೆ ಹೋಗುತ್ತಿದ್ದೆ. ದಾರಿಯಲ್ಲಿ ಹೆದ್ದಾರಿಗೆ ಹತ್ತಿರದಲ್ಲಿಯೆ ಸುಮಾರು ಹತ್ತಾರು ಎಕರೆ ವಿಸ್ತೀರ್ಣದಲ್ಲಿ ದಟ್ಟ ಬಿಳಿ ಹೊಗೆ ಕಾಣಿಸಿತು. ಪರಿಸರ-ಹೊಗೆ-ತಾಪಮಾನ ಏರಿಕೆ-ಜೀವನ-ದುಡಿಮೆ, ಹೀಗೆ ಓಡಿದ ಮನಸ್ಸು ಅದೇನೆಂದು ನೋಡಲು ಪ್ರಚೋದಿಸಿತು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿಗೆ ಸೇರಿದ ಜಾಗ ಅದು. ಹಾಸನ ಜಿಲ್ಲೆಯ ಗಡಿ ಬಹುಶಃ ಒಂದೆರಡು ಕಿ.ಮೀ. ಅದು ಕೊಬ್ಬರಿ ಚಿಪ್ಪನ್ನು ಇದ್ದಿಲು ಮಾಡುವ ದೇಸೀ ಉದ್ದಿಮೆ!
ಇಲ್ಲಿರುವ ವಿಡಿಯೊ ತಾನೆತಾನಾಗಿ ಒಂದಷ್ಟು ವಿವರಣೆ ಕೊಡುತ್ತದೆ. ಅದಕ್ಕೆ ಇಲ್ಲಿ ಗದ್ಯದ ಅಗತ್ಯವಿಲ್ಲ. ಇದ್ದಿಲು ಆದಬಳಿಕ ಆ ಆಳೆತ್ತರದ ಗುಂಡಿಗಳಿಗೆ ಇಳಿದು ಅದನ್ನು ಹೊರತೆಗೆಯುತ್ತಾರಂತೆ. ಆ ದೃಶ್ಯ ಸಿಗಲಿಲ್ಲ. ಅದು ಹೇಗಿರಬಹುದು, ಅದರಲ್ಲಿ ಇಳಿದವರು ಯಾವ ರೀತಿ ಕಾಣಿಸುತ್ತಾರೆ, ಆ ಗುಂಡಿಯ ಒಳಗೆ ಉಷ್ಣಾಂಶ ಮತ್ತು ಗಾಳಿ ಯಾವ ರೀತಿ ಇರುತ್ತದೆ, ನೀವೆ ಊಹಿಸಿಕೊಳ್ಳಿ.
ಇನ್ನೂ ಇನ್ನೆಂತೆಂತಹ ಕಠಿಣ ದುಡಿಮೆ ಮಾಡುತ್ತ ಜನ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೊ? ಏನಾಯಿತು ಇಷ್ಟು ದಿನವೂ ಆದ 'Wealth Creation' ಮತ್ತು 'ಅಭಿವೃದ್ಧಿ'? ಇವರಿಗೆ ಎಂದಾದರೂ ಅದರಲ್ಲಿ ಪಾಲು ಇದೆಯಾ? ನವಸಂದರ್ಭದ ಯಾವುದೇ Decent ಉದ್ಯೋಗ ಇವರಿಗೆ ಸಿಗಲು ಸಾಧ್ಯವೆ?
ದೇವಿಯ ಮೆರವಣಿಗೆಯಲ್ಲಿ ಹೆಂಗಸರಿಲ್ಲ !
ಮುಂದಕ್ಕೆ ಚನ್ನರಾಯಪಟ್ಟಣದಲ್ಲಿ ದೇವರ ಮೆರವಣಿಗೆ ಕಾಣಿಸಿತು. ವಿವಿಧ ರೀತಿಯ ಬಣ್ಣಬಣ್ಣದ ವೇಷ ಧರಿಸಿ, ಜನಪದರ ದೇಶೀಯ ಕುಣಿತ ಕುಣಿಯುತ್ತ ಹೋಗುತ್ತಿದ್ದರು. ಗಾಡಿ ನಿಲ್ಲಿಸಿ, ಆ ಮೆರವಣಿಗೆ ನೋಡಲು ಹೊರಟೆ. ನಾಲ್ಕೈದು ನಿಮಿಷ ಅದರ ವಿಡಿಯೊ ಹಿಡಿದುಕೊಂಡೆ. ಕತ್ತಿ ಹಿಡಿದುಕೊಂಡು ಬಣ್ಣಬಣ್ಣದ ವೇಷಧಾರಿ, ಡೋಲು-ತಮ್ಮಟೆ ಬಾರಿಸುವವರು, ಶಹನಾಯಿ ಊದುವವರು, ಈಡುಗಾಯಿ ಹೊಡೆಯುವವರು, ಉಸ್ತುವಾರಿ ವಹಿಸಿದ್ದವರು; ಸುಮಾರು ನೂರಿನ್ನೂರು ಜನ ಹೋಗುತ್ತಿದ್ದ ಮೆರವಣಿಗೆ ಅದು.
ನಂತರ ವಾಪಸು ಬರುತ್ತ ಕೆಲವು ಸಾಮಾಜಿಕ ವಿಷಯಗಳ ಬಗ್ಗೆ ಯೋಚಿಸುತ್ತಿದ್ದೆ. ಆ ಇಡೀ ಮೆರವಣಿಗೆಯಲ್ಲಿ, ಕುಣಿತದಲ್ಲಿ, ಪೂಜೆಯಲ್ಲಿ, ಒಬ್ಬಳೇ ಒಬ್ಬ ಹೆಂಗಸು ಕಾಣಿಸಲಿಲ್ಲ. ಅದು, "ಕೋಟೆ ಮಾರಿಕಾಂಬ ದೇವತೆ"ಯ ಮೆರವಣಿಗೆ! ಅಲ್ಲಿ ವಯಸ್ಕ ಹೆಂಗಸರಿರಲಿ ಕನಿಷ್ಠ ಹುಡುಗಿಯರು-ಯುವತಿಯರು ಪಾಲ್ಗೊಳ್ಳುವಂತಹ ಅವಕಾಶವೇ ಇಲ್ಲ. ಈ ದೇವರು-ಮೆರವಣಿಗೆ-ಕುಣಿತ-ಸಂಭ್ರಮ-ಆನಂದ, ಎಲ್ಲವೂ ಗಂಡಸರಿಗೆ ಸೀಮಿತ. ಅಲ್ಲಿಯ ಗ್ರಾಮೀಣ ಹೆಂಗಸರಿಗೂ ಒಂದಷ್ಟು ಕೆಲಸ ಇರುತ್ತದೆ. ಮನೆಯ ಮುಂದೆ ದೇವರು ಬಂದಾಗ ಪೂಜೆಗೆ ಕಡ್ಡಿ-ಕಾಯಿ ಕೊಡುವುದು, ಆರತಿ ಎತ್ತುವುದು, ಮನೆಯಲ್ಲಿ ವಿಶೇಷ ಅಡಿಗೆ ಮಾಡುವುದು, ಸ್ನಾನಕ್ಕೆ ನೀರು ಕಾಯಿಸುವುದು, ಇತ್ಯಾದಿ ಇತ್ಯಾದಿ. ಆದರೆ ಕುಣಿತ ಇಲ್ಲ, ಹಾಡು ಇಲ್ಲ, ವಾದ್ಯ ಇಲ್ಲ, ವೇಷಭೂಷಣಗಳಿಲ್ಲ, ದೇವರ ರಥಕ್ಕೆ ಅವರ ಕೈಯ್ಯಿಲ್ಲ. ಅಣ್ಣತಮ್ಮಂದಿರ ಜೊತೆ ಕಾಲುಹಾಕುವಂತಿಲ್ಲ. ಅಪ್ಪ ಹೆಗಲ ಮೇಲೆ ಹೊತ್ತು ಹೋಗುವುದಿಲ್ಲ. ಮಗ ಕರೆಯುವುದಿಲ್ಲ. ಮನೆಯ ಹೊರಗಡೆ ಸಂಭ್ರಮ ಹಂಚಿಕೊಳ್ಳುವಂತಿಲ್ಲ. ಪಾಲ್ಗೊಳ್ಳುವಂತಿಲ್ಲ.
ಗ್ರಾಮೀಣ, ಅರೆ-ಗ್ರಾಮೀಣ ಪರಿಸರದಲ್ಲಿ ಹೆಣ್ಣಿಗೆ ಸಾಂಸ್ಕೃತಿಕ ಲೋಕಕ್ಕೆ ಎಷ್ಟು ಮಾತ್ರದ ಪ್ರವೇಶ ಇದೆ? ಈ ಪ್ರಶ್ನೆಗೆ ಗ್ರಾಮೀಣ ಭಾರತ ಉತ್ತರ ಹುಡುಕಿಕೊಳ್ಳಬೇಕಿದೆ. ಸಂಪ್ರದಾಯದಲ್ಲಿ ಬಂದ ಎಲ್ಲವೂ ಒಳ್ಳೆಯವೇನೂ ಅಲ್ಲ. ವಿಶೇಷವಾಗಿ ಕಟ್ಟುಪಾಡುಗಳು.
Apr 22, 2009
ಕೋರಮಂಗಲದಲ್ಲೊಬ್ಬ ಸ್ಲಮ್‍ಡಾಗ್ (?), ಹಾಗೂ ಬಾಲ ಭಿಕ್ಷುಕಿ
[ಮೊದಲಿಗೆ, ಆ ಹುಡುಗನನ್ನು "ಸ್ಲಮ್‍ಡಾಗ್" ಎಂದು ಹೆಸರಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ. "ಸ್ಲಮ್‍ಡಾಗ್ ಮಿಲಿಯನೇರ್" ಹಿನ್ನೆಲೆಯಲ್ಲಿ ರೂಪಕವಾಗಿ ಮಾತ್ರ ಹಾಗೆ ಬಳಸಿಕೊಂಡಿದ್ದೇನೆ.]
ತಿಂಗಳ ಹಿಂದೆ ಭಾರತಕ್ಕೆ ಹೋಗಿದ್ದಾಗ ಮೊದಲನೆಯ ದಿನವೆ ಬೆಂಗಳೂರು ಸುತ್ತುವ ಕೆಲಸ ಇತ್ತು. ನಗರಕ್ಕೆ ಬರುವ ದಾರಿಯಲ್ಲಿ ಇಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕೆಲಸ ಮಾಡುವ ಸ್ನೇಹಿತನನ್ನು ನೋಡಲು ಹೋದೆ. ಅಲ್ಲಿಯ STPI ಸಮೀಪವಿರುವ ಹೋಟೆಲ್‌ಗೆ ಹೋದೆವು. ಜೊತೆಗೆ ನನ್ನ ನಾಲ್ಕು ವರ್ಷದ ಮಗಳೂ ಇದ್ದಳು. ಕಾಫಿ ಮುಗಿಸಿ ಆ ಹೋಟೆಲ್‌ನಿಂದ ಹೊರಗೆ ಬಂದ ತಕ್ಷಣ ಕಾಣಿಸಿದ್ದು ಮುಂದಿನ ಮರದ ಬುಡದಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದ ಸುಮಾರು ಎಪ್ಪತ್ತರ ಮುದುಕಿ, ಮತ್ತು ಆಕೆಗೆ ಆತುಕೊಂಡು ತಾನೂ ಆ ಕೆಲಸದಲ್ಲಿ ಪಾಲು ತೆಗೆದುಕೊಂಡಿದ್ದ ಹೆಣ್ಣು ಮಗಳು. ಅವಳಿಗೆ ಬಹುಶಃ ನನ್ನ ಮಗಳದೇ ವಯಸ್ಸು.
STPI ಯ ಕಟ್ಟಡ ಮತ್ತು ಅದರ ಕಾಂಪೌಡ್ ಪಕ್ಕದಲ್ಲಿಯೇ ಇರುವ ಆ ಹೋಟೆಲ್ ಇಲೆಕ್ಟ್ರಾನಿಕ್ಸ್ ಸಿಟಿಯ ಪ್ರಸಿದ್ಧ ಲ್ಯಾಂಡ್ ಮಾರ್ಕ್‌ಗಳು. ದಿನವೂ ಸಾವಿರಾರು ಜನ ಓಡಾಡುವ ಸ್ಥಳ ಅದು. ತಿಂಗಳಿಗೆ ಲಕ್ಷಾಂತರ ಎಣಿಸುವ ಇಂಜಿನಿಯರ್‌ಗಳಿಂದ ಹಿಡಿದು ಕೆಲಸದ ಹುಡುಕಾಟದಲ್ಲಿರುವ ಆಶಾಜೀವಿಗಳು ಕಲೆಯುವ ಜಾಗ. ಹಾಗೆಯೆ, ಇಲೆಕ್ಟ್ರಾನಿಕ್ಸ್ ಸಿಟಿಯ ಪೋಲಿಸ್ ಔಟ್‍ಪೋಸ್ಟ್ ಆ ಮಗು ಕುಳಿತಿದ್ದ ಜಾಗದಿಂದ ಕೇವಲ ನೂರಿನ್ನೂರು ಅಡಿ ದೂರ ಮಾತ್ರ.
ಜೊತೆಯಲ್ಲಿ ನನ್ನ ಮಗಳಿದ್ದದ್ದಕ್ಕೊ, ಅಥವ ಅಂತಹ ಸ್ಥಳದಲ್ಲಿ ಎದ್ದು ಕಾಣಿಸಿದ ಆ ಭೀಕರ ಸಾಮಾಜಿಕ ಅಸಮಾನತೆಗೊ, ದಾರಿದ್ರ್ಯಕ್ಕೊ, ನನ್ನಲ್ಲಿದ್ದ ಕ್ಯಾಮೆರಾದಿಂದ ಆ ಅಜ್ಜಿ ಮತ್ತು ಮಗುವಿನ ವಿಡಿಯೊ ತೆಗೆದೆ. ಒಂದು ವರ್ಷದ ಬಿಡುವಿನ ನಂತರ ಭಾರತಕ್ಕೆ ಬಂದು ಇನ್ನೂ ಅರ್ಧ ದಿನವೂ ಆಗಿರಲಿಲ್ಲ. ಪ್ರಶ್ನೆಗಳು ಎದ್ದು ಕುಳಿತವು. ನಿಜಕ್ಕೂ ಆ ಮಗು ಎಂದಾದರೂ (ನಾವಂದುಕೊಳ್ಳುವ) ಭಾರತದ ಮುಖ್ಯವಾಹಿನಿಗೆ ಸೇರುತ್ತಾಳೆಯೆ? ಆಕೆ ನಿಜಕ್ಕೂ ಶಾಲೆಗೆ ಹೋಗುತ್ತಾಳೆಯೆ? ಏಳೆಂಟು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮಕ್ಕಳು ಭಿಕ್ಷೆ ಬೇಡುವುದನ್ನು ನೋಡಲೂ ಸಾಧ್ಯವಿರಲಿಲ್ಲ. ಎಲ್ಲೋ ಉತ್ತರ ಕರ್ನಾಟಕದಲ್ಲಿ ಕಾಣಿಸುತ್ತಿದ್ದ ಚಿತ್ರಗಳು ಅವು. ಇಂದು, ಇಷ್ಟೆಲ್ಲ ಅಭಿವೃದ್ಧಿ ಆಗಿದೆ ಎಂದು ಕೊಚ್ಚಿಕೊಳ್ಳುವ ಸಮಯದಲ್ಲಿ, ಎಲ್ಲೆಂದರಲ್ಲಿ ಈ ಮಕ್ಕಳು ಭಿಕ್ಷೆ ಬೇಡುತ್ತಿರುವುದನ್ನು ನೋಡುತ್ತಿದ್ದೀವಲ್ಲ? ನಿಜಕ್ಕೂ ಈ 'ಅಭಿವೃದ್ಧಿ' ಯಾರಿಗೆ, ಎಲ್ಲಿ ಆಗುತ್ತಿದೆ? ಭಿಕ್ಷೆ ಬೇಡುತ್ತಿರುವ ಮಗುವನ್ನು ಸಾಕಲಾರದ, ಸಲಹಲಾರದ ಸಮಾಜವಾಯಿತಲ್ಲ ನಮ್ಮದು? ಆ ಮಗುವಿನತ್ತ, ಅಂತಹ ಲಕ್ಷಾಂತರ ಮಕ್ಕಳತ್ತ "ಮುಂದುವರೆದ ಭಾರತ"ದ ಜವಾಬ್ದಾರಿಯಿಲ್ಲವೆ? ನಮ್ಮ ಸಮಾಜ ಇತ್ತೀಚಿನ ವರ್ಷಗಳಲ್ಲಿ ಎಷ್ಟೊಂದು Insensitive ಆಗಿಹೋಗಿದೆಯಲ್ಲ? ಆಕೆಯೂ, ಆ ಪುಟ್ಟಮಗಳೂ ಭಾರತದ ಮಗಳಲ್ಲವೆ? ನಮ್ಮಲ್ಲಿ "Indian Dream" ಎನ್ನುವುದೇನಾದರೂ ಇದೆಯೆ? ಅದರಲ್ಲಿ ಆಕೆಗೆ ಪಾಲಿದೆಯೆ?
ಅದೇ ದಿನ ಸಂಜೆ ಕೋರಮಂಗಲದ National Games Village ಅಪಾರ್ಟ್‌ಮೆಂಟಿನಲ್ಲಿರುವ ಪರಿಚಿತರನ್ನು ನೋಡಲು ಹೋಗಿದ್ದೆ. ಅವರ ಫ್ಲಾಟ್ ಮೂರನೆ ಅಂತಸ್ತಿನಲ್ಲಿತ್ತು. ಮಧ್ಯಮ, ಮೇಲುಮಧ್ಯಮ ವರ್ಗದವರ ವಾಸಸ್ಥಳ ಅದು. ಮಾತು-ಕತೆ ಮುಗಿದ ನಂತರ ಹೊರಗೆ ಬರುತ್ತ ಅಲ್ಲಿಯ ವರಾಂಡದಲ್ಲಿ ನಿಂತು ಮೇಲಿಂದ ಕೆಳಗೆ ನೋಡಿದೆ. ಆ ಗೇಮ್ಸ್ ವಿಲೇಜ್‌ನ ಕಾಂಪೌಂಡಿಗೆ ಹೊಂದಿಕೊಂಡೆ ಹರಿಯುತ್ತಿತ್ತು ತೆರೆದ ದೊಡ್ಡ ಮೋರಿ. ಆ ಮೋರಿಯ ಆ ಬದಿಗೆ ಸ್ಲಮ್ ಇತ್ತು. ಈ ಕಡೆ "ಉಳ್ಳವರ" ಭಾರತ. ಅತ್ತಕಡೆ "ಇಲ್ಲದವರ" ಭಾರತ. ಮಧ್ಯೆ ಬೆಂಗಳೂರಿನ ಹೊಲಸಾತಿಹೊಲಸು ತುಂಬಿಕೊಂಡು ಹರಿಯುವ "ದೊಡ್ಡ ಮೋರಿ." ಕೂಡಲೆ ಕ್ಯಾಮೆರಾ ತೆಗೆದೆ. ಆ ವೈರುದ್ಧ್ಯವನ್ನು ಚಿತ್ರಿಸಲಾರಂಭಿಸಿದೆ.
ಆಗ ಕಾಣಿಸಿದ ಆ ಹುಡುಗ. ಸುಮಾರು 200-300 ಅಡಿ ದೂರದಲ್ಲಿದ್ದ. ಆ ಮೋರಿಯ ಒಳಭಾಗದ ಜಾಗದಲ್ಲಿ, ವಿಚಿತ್ರವಾದ ಸ್ಥಳದಲ್ಲಿ ಕುಳಿತಿದ್ದ. ಅವನು ಕುಳಿತಿದ್ದ ಜಾಗಕ್ಕಿಂತ ಏಳೆಂಟು ಅಡಿ ಕೆಳಗೆ ಆ ವಾಸನೆ ಬರುವ ಕೊಳಕು ಕೊಚ್ಚೆ ನೀರು ಹರಿಯುತ್ತಿದೆ. ಕ್ಯಾಮೆರಾದ Zoom ಚೆನ್ನಾಗಿದ್ದ ಕಾರಣ ಆ ಹುಡುಗನತ್ತ ಗಮನ ಕೇಂದ್ರಿಸಿದೆ. ಹತ್ತಿಪ್ಪತ್ತು ಸೆಕೆಂಡುಗಳಾಗಿದ್ದವಷ್ಟೆ. ಆ ಹುಡುಗ ಏನೋ ಬಿಚ್ಚುವುದು, ಕಳ್ಳತನದಲ್ಲಿ ಅತ್ತಿತ್ತ ನೋಡುವುದು ಕಾಣಿಸಿತು. ನನಗೆ ಅರ್ಥವಾಗಿ ಹೋಯಿತು. ಹುಡುಗ ಈಗ ಏನೋ ಮಾಡಲಿದ್ದಾನೆ; ಬಹುಶಃ ಸಿಗರೇಟ್ ಹಚ್ಚಲಿದ್ದಾನೆ, ಎಂದು ಮನಸ್ಸಿಗೆ ಹೊಳೆಯಿತು. ಆತ ಹಚ್ಚಿಯೇ ಬಿಟ್ಟ! ಅದು ಕ್ಯಾಮೆರಾದಲ್ಲಿ ಸುಮಾರಾಗಿಯೆ ಬಂತು.
ಬಹುಶಃ, ಅದಕ್ಕೂ ತಿಂಗಳ ಹಿಂದೆ ನಾನು "ಸ್ಲಮ್‌ಡಾಗ್ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ, ಆ ಸಿನೆಮಾ ಸರಿ ಇಲ್ಲ ಅನ್ನುವವರು..." ಎಂಬ ಲೇಖನ ಬರೆದಿದ್ದೆ. ಅದರ ಬಗ್ಗೆ ಸಂಪದ.ನೆಟ್‍ನಲ್ಲಿ ನಡೆದ ಒಂದಷ್ಟು ಚರ್ಚೆಯಲ್ಲಿಯೂ ಭಾಗವಹಿಸಿದ್ದೆ. ಅವೆಲ್ಲವೂ ಮನಸ್ಸಿನಲ್ಲಿ ಇತ್ತು. ಇವತ್ತಿನ ಪರಿಸ್ಥಿತಿಯಲ್ಲಿ ಯಾವೊಂದು ದೇಶವೂ ದ್ವೀಪವಾಗಿ ಉಳಿದಿಲ್ಲ.ಇಂತಹ ಸ್ಥಿತಿಯಲ್ಲಿಯೂ ಸಹ ನಮ್ಮ ಸಮಸ್ಯೆಗಳ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯವನ್ನೂ ತೋರದೆ ಬೇರೆಯವರು ನೋಡಿಬಿಡುತ್ತಾರೆ ಎಂದು ಮುಗುಮ್ಮಾಗಿಯೇ ಇರಲು, ಆ ಮೂಲಕ ಭಾರತದ ಹಲವಾರು ಸಮಸ್ಯೆಗಳ ಬಗ್ಗೆ ಕುರುಡಾಗಿಯೇ ಇರಲು ಕೆಲವರು ಬಯಸುತ್ತಾರಲ್ಲ, ಎನ್ನುವ ಖೇದ ಮನಸ್ಸಿನಲ್ಲಿತ್ತು. "ದೇಶಭಕ್ತ"ರೆಂದು ಸ್ಯಯಂಘೋಷಿಸಿಕೊಳ್ಳುವ ಈ ಜನಕ್ಕೆ ಇವೆಲ್ಲ ಕಾಣುವುದಿಲ್ಲವೆ? ಈ ನಗರಗಳ ಬಡತನ, ಇಲ್ಲಿಯ ಸೋತ ಸ್ಲಮ್‍ಡಾಗ್‌ಗಳು, ಅವರ ಜೀವನ, ಅದು ಹುಟ್ಟಿಸುವ ಪಾತಕೀ ಲೋಕ, ಅದರತ್ತ ನಾಗರಿಕ ಸಮಾಜದ ಜವಾಬ್ದಾರಿ, ಅಸಡ್ಡೆ, ಇವು ಯಾವುವೂ ಬಾಧಿಸುವುದಿಲ್ಲವೆ? ಯಾಕೆ? ಈ ಹುಡುಗನೂ, ಇವನಂತಹವರು, ಭಾರತಾಂಬೆಯ ಪುತ್ರರಲ್ಲವೆ? ಪವಿತ್ರ ನಾಡಿನ ನಾಗರಿಕರಲ್ಲವೆ? ಹಾಗಾದರೆ ಯಾರಿವರು? ಇವರೂ ಪುಣ್ಯಭೂಮಿಯ ಮಕ್ಕಳೇ ಆಗಿದ್ದರೆ, ಅವರೂ ತಮ್ಮಂತೆ ಅವಕಾಶಗಳಿರುವ ಜೀವನವನ್ನು ಪಡೆಯಲು ಅರ್ಹರು ಎಂದು ಭಾವಿಸಬಾರದೇಕೆ? ಅದಕ್ಕಾಗಿ ತಮ್ಮ ಒಂದೆರಡು ಅನುಕೂಲಗಳನ್ನು ಬಿಟ್ಟುಕೊಡಬಾರದೇಕೆ? ಅವು ಯಾವುವೂ ದೊರಕದಿದ್ದರೆ ಈ ಹುಡುಗ ಮುಂದೊಂದು ದಿನ ನಾಗರಿಕ ಸಮಾಜ "ಕ್ರಿಮಿನಲ್" ಎಂದು ಪರಿಗಣಿಸುವ ಕೆಲಸಗಳಿಂದಲೆ ಅನ್ನ ಹೊರೆಯಬೇಕಾಗುತ್ತದಲ್ಲ? ಹಾಗಾದರೆ ನಾವೆ ಅಲ್ಲವೆ ಅವರನ್ನು ಭವಿಷ್ಯದ ರೌಡಿಗಳನ್ನಾಗಿ, ದುಷ್ಟ ರಾಜಕಾರಣಿಗಳ, ಡಾನ್‍ಗಳ, ಕೆಟ್ಟ ಬ್ಯುಸಿನೆಸ್‍ಮನ್‌ಗಳ ಅಸ್ತ್ರಗಳನ್ನಾಗಿ ಮಾಡುತ್ತಿರುವುದು? ಪ್ರಶ್ನೆಗಳು ನೂರಾರು.
ಈ ಸಲವಂತೂ ಮನಸ್ಸು ಕುಕ್ಕುವ ಇಂತಹ ಹತ್ತಾರು ವಿಡಿಯೋ ಹಿಡಿದಿದ್ದೇನೆ. ಮುಂದಿನ ಹಲವಾರು ದಿನಗಳ ಕಾಲ ಅವನ್ನು Youtubeನಲ್ಲಿ ಹಾಕುತ್ತ, ಇಲ್ಲಿ ಬ್ಲಾಗ್‍ನಲ್ಲಿ ಅದರ ಬಗ್ಗೆ ಒಂದಷ್ಟು ಬರೆಯುತ್ತಾ ಹೋಗುತ್ತೇನೆ. ಮತ್ತೊಮ್ಮೆ ಜೀವನವನ್ನು, ಜನ-ಜೀವನವನ್ನು ಅದರೆಲ್ಲ ಮಿತಿಗಳೊಂದಿಗೆ ಅರ್ಥ ಮಾಡಿಕೊಳ್ಳಬೇಕಿದೆ.
"ಬೆಂಗಳೂರಿನ ಹೊಲಸು ನೀರು ಮತ್ತೊಬ್ಬರ ಪಾಲಿನ ಕುಡಿಯುವ ನೀರು..."
ಬೆಂಗಳೂರಿನ ದಕ್ಷಿಣಕ್ಕೆ ಹರಿಯುವ (ಮೇಲೆ ಹೆಸರಿಸಿರುವ) ಈ ದೊಡ್ಡ ಮೋರಿ ಕ್ರಮೇಣ ಸರ್ಜಾಪುರ ರಸ್ತೆಯ ಬೆಳ್ಳಂದೂರು ಕೆರೆ ತಲುಪುತ್ತದೆ. ಅಲ್ಲಿಂದ ಅದು ವರ್ತೂರು ಕೆರೆಗೆ ಸೇರಿಕೊಳ್ಳುತ್ತದೆ. ಇವೆರಡೂ ಕೆರೆಗಳು ಒಂದು ರೀತಿಯಲ್ಲಿ ನಿತ್ಯ ಸುಮಂಗಲಿಯರು. ವರ್ಷ ಪೂರ್ತಿ ಕೋಡಿ ಬೀಳುತ್ತವೆ. ವರ್ತೂರು ಕೆರೆಯ ಗದ್ದೆಗಳಲ್ಲಂತೂ ನಾಲ್ಕಾರು ವರ್ಷಗಳ ಹಿಂದಿನ ತನಕ ಭರಪೂರ ಭತ್ತದ ಬೆಳೆಯನ್ನು ಅಲ್ಲಿಯ ರೈತರು ತೆಗೆಯುತ್ತಿದ್ದರು. ಬೆಂಗಳೂರಿನ ಜನರ ಕೊಳಚೆ ವರ್ತೂರಿನ ಗದ್ದೆಗಳಿಗೆ ಗೊಬ್ಬರದ ಅವಶ್ಯಕತೆ ಇಲ್ಲದಂತೆ ಮಾಡಿತ್ತೇನೊ. ಆ ಅಕ್ಕಿ ತಿನ್ನಲು ಎಷ್ಟು ಯೋಗ್ಯವೊ ಗೊತ್ತಿಲ್ಲ. ಆದರೆ ಗದ್ದೆಗಳಂತೂ ದಟ್ಟ ಹಸುರಿನಿಂದ ಕಂಗೊಳಿಸುತ್ತಿದ್ದವು. ಎರಡು ವರ್ಷದ ಹಿಂದೆ ಆ ದಾರಿಯಲ್ಲಿ ಹೋಗಿದ್ದೆ. ವರ್ತೂರು ಕೆರೆ ಏರಿಯ ಕೆಳಗಿನ ಗದ್ದೆಗಳು ಕಾಣಿಸದಂತೆ ಏರಿಗೆ ತಗಡಿನ ಗೋಡೆ ಎಬ್ಬಿಸಿದ್ದರು. ಅಲ್ಲೆಲ್ಲ ಅಪಾರ್ಟ್‌ಮೆಂಟ್‍ಗಳು ಏಳುತ್ತಿದ್ದವು.
ನಿತ್ಯಸುಮಂಗಲಿ ವರ್ತೂರು ಕೆರೆಯ ಕೋಡಿ ನೀರು ಅಲ್ಲಿಂದ ಕೆಲವೆ ಕಿ.ಮೀ.ಗಳ ದೂರದಲ್ಲಿ ಮುಂದಕ್ಕೆ "ದಕ್ಷಿಣ ಪಿನಾಕಿನಿ" ನದಿ ಸೇರುತ್ತದೆ. ಇದು ನಂದಿ ಬೆಟ್ಟದಲ್ಲಿ ಹುಟ್ಟಿ ದಕ್ಷಿಣಕ್ಕೆ ಹರಿಯುವ ನದಿ. ಇಪ್ಪತ್ತು-ಮುವ್ವತ್ತು ವರ್ಷಗಳ ಹಿಂದೆ ಬಹುಶಃ ಈ ನದಿಯ ನೀರೂ ಚೆನ್ನಾಗಿತ್ತೇನೊ. ಆದರೆ ಬೆಳೆದ ಬೆಂಗಳೂರಿನ ಪ್ರಭಾವದಿಂದ ಇದು ಹೋಗುವಲ್ಲೆಲ್ಲ ಕೊಚ್ಚೆಯೆ. ಕುಡಿಯಲಾಗದ, ಕೊನೆಗೆ ಮೈತೊಳೆದುಕೊಳ್ಳಲೂ ಆಗದ ನೀರು. ವರ್ತೂರಿನ ಬಳಿಯಿಂದ ಹದಿನೈದಿಪ್ಪತ್ತು ಕಿ.ಮೀ. ಕ್ರಮಿಸಿ ಆ ನದಿ ತಮಿಳುನಾಡು ಪ್ರವೇಶಿಸುತ್ತದೆ. ಆ ರಾಜ್ಯದಲ್ಲಿ ಸುಮಾರು ಹದಿನೈದು ಕಿ.ಮೀ. ಹರಿದ ನಂತರ ಹೊಸೂರಿನ ಬಳಿಯಿರುವ ಆವಲಪಲ್ಲಿಯಲ್ಲಿ ಈ ನದಿಗೆ ಒಂದು ಚಿಕ್ಕ ಡ್ಯಾಮ್ ಕಟ್ಟಿದ್ದಾರೆ. ಅಲ್ಲಿ ಒಂದು Sewage Treatment Plant ಸಹ ಇದೆ. ಅಲ್ಲಿ ಶುದ್ಧೀಕರಿಸಿದ ನೀರನ್ನು ಐದಾರು ಕಿ.ಮಿ. ದೂರದ ಹೊಸೂರಿಗೆ ಸರಬರಾಜು ಮಾಡುತ್ತಾರೆ. ಹೀಗೆ ಬೆಂಗಳೂರಿನ ಬಚ್ಚಲು, ಕೊಚ್ಚೆ ನೀರು ಭತ್ತ, ತರಕಾರಿಗಳ ಜೀವರೂಪದಲ್ಲಿ ಬೆಂಗಳೂರಿನ ತಟ್ಟೆಗಳಲ್ಲಿ ಕಾಣಿಸಿಕೊಂಡರೆ, ಮತ್ತೊಂದು ರೂಪದಲ್ಲಿ ಕೆಳಗೆ ಹೊಸೂರಿನ ನೀರಿನ ಲೋಟಗಳಲ್ಲಿ ಕಾಣಿಸಿಕೊಳ್ಳುತ್ತದೆ.
Apr 13, 2009
ವಿಜಯ ಕರ್ನಾಟಕದ ಹೊಗಳು ಭಟ್ಟರು: ಭಾಗ - 3
ಇದೇ ವಿಷಯದ ಮೇಲಿನ ಭಾಗ - 1 ಮತ್ತು ಭಾಗ - 2 ನ್ನು ನೋಡಿರುವ ಕೆಲವು ಭಕ್ತರು ಅಪಾರ ಕಿರಿಕಿರಿಗೆ ಒಳಗಾಗಿದ್ದಾರೆ. ಕೇವಲ ದ್ವೇಷ, ರೋಷ ಮತ್ತು ಅಸಹನೆಯಿಂದ ಕುದಿಯುವ ಕೆಲವರಿಗೆ ತಾವು ಎಷ್ಟು ಮಾತ್ರದ ಅಜ್ಞಾನಿಗಳು ಎನ್ನುವ ತಿಳಿವಳಿಕೆಯೂ ಇದ್ದಂತಿಲ್ಲ. ಒಂದು ಸಂಚಿಕೆಯ ದಿನಾಂಕ ಕೊಟ್ಟರೂ ಅದು ಹೊರಬರುವ ದಿನ ಯಾವುದಿರಬಹುದು ಎನ್ನುವ ಜ್ಞಾನವೂ ಇಲ್ಲ. ತಿಳಿದುಕೊಳ್ಳಬೇಕು ಎನ್ನುವ ಯಾವೊಂದು ಕುತೂಹಲವಾಗಲಿ, ಸತ್ಯದ ಬಗ್ಗೆ ಗೌರವವಾಗಲಿ ಇಲ್ಲದ ಅಹಂಕಾರಿಗಳಿಗೆ ಏನು ಹೇಳಿದರೂ ವಿವೇಚನೆ ಬರುವುದಿಲ್ಲ. ತಮ್ಮ ಸ್ವಯಂಕೃತಾಪರಾಧದಿಂದ, ಸ್ವ-ಇಚ್ಚೆಯಿಂದ, ಅಜ್ಞಾನದಲ್ಲಿಯೆ ಕಳೆಯುವಂತಹವರ ಬಗ್ಗೆ ಯಾಕೊ ನನ್ನಲ್ಲಿ ಕನಿಕರ ಹುಟ್ಟುತ್ತಿಲ್ಲ.
ಈ ಹೊಗಳಿಕೆಯ ಬಗ್ಗೆ ಒಂದೆರಡು ಬ್ಲಾಗ್‍ಗಳಲ್ಲಿ (ಅಂತರಂಗ ಮತ್ತು Land of Lime) ಪ್ರಸ್ತಾಪವಾಗಿದೆ. ನನಗೂ ಒಂದಿಬ್ಬರು ಹೇಳಿದ್ದೇನೆಂದರೆ, "ನಿಮ್ಮ ಆಭಿಪ್ರಾಯ, ಪ್ರಬುದ್ಧತೆ, ವಿಚಾರ, ಮುಂತಾದವುಗಳ ಬಗ್ಗೆ ಚರ್ಚೆಯಾಗಲಿ. ಅದನ್ನು ಬಿಟ್ಟು ವೈಯಕ್ತಿಕ ನಿಂದನೆ ಯಾಕೆ ಮಾಡುವುದು; ಹಾಗೆ ಆಗಲು ನೀವು ಬಿಡಬಾರದು." ನಮ್ಮ ಸಮಾಜದಲ್ಲಿ, ವಿಶೇಷವಾಗಿ ಇವತ್ತಿನ ಮಾಧ್ಯಮಗಳಲ್ಲಿ ಅಷ್ಟು ಪ್ರಬುದ್ಧತೆ ಇಲ್ಲ ಎನ್ನುವುದು ಗೊತ್ತಿರುವುದೆ. ಕೆಲವೊಮ್ಮೆ ನಾನೆ ಕೆಲವೊಂದು ವಿಷಯದ ಬಗ್ಗೆ ಚರ್ಚೆ ಎತ್ತಿದಾಗ, ಆ ಚರ್ಚೆಯ ವಿಷಯದ ಬಗ್ಗೆ, ನಾನು ಎತ್ತಿರುವ ಅಂಶಗಳ ಬಗ್ಗೆ ಮಾತನಾಡದೆ, ’ಆತನಿಗೆ ಸರಿಯಾಗಿ ಹೇಳಿದ್ದೀಯ’ ಎನ್ನುವ ಸ್ನೇಹಿತರು ನಮ್ಮ ಕಡೆಯೂ ಇದ್ದಾರೆ. ಈ ವಿಷವರ್ತುಲದಿಂದ ನಾವೂ ಸಹ ಹೊರಗೆ ಬರಬೇಕು. ಇಲ್ಲಿ ನಾವು ಧ್ವನಿ ಎತ್ತಬೇಕಿರುವುದು ವ್ಯಕ್ತಿಯ ವಿರುದ್ಧ ಅಲ್ಲ. ಬದಲಿಗೆ ಅಂತಹ ಮನಸ್ಥಿತಿಯ ವಿರುದ್ಧ. (ಆದರೂ, ಮನಸ್ಥಿತಿಯ ಬಗ್ಗೆ ಮಾತನಾಡುವಾಗ ಕೆಲವೊಮ್ಮೆ ವ್ಯಕ್ತಿಯ ಬಗ್ಗೆಯೂ ಮಾತನಾಡುವ ಅಗತ್ಯವನ್ನು ನಾವು ನಿರಾಕರಿಸುವುದು ಕಷ್ಟ.)
ಈ ಕೆಳಗಿನ ಲೇಖನ ಏಪ್ರಿಲ್ 4 ರಂದು ಮಾರುಕಟ್ಟೆಗೆ ಬಂದ "ಗೌರಿ ಲಂಕೇಶ್" ಪತ್ರಿಕೆಯಲ್ಲಿ ಪ್ರಕಟವಾಗಿದೆ. ಬರೆದಿರುವವರು ಉಡುಪಿಯ ಜಿ. ರಾಜಶೇಖರ್. "ಚುನಾವಣೆಯ ಲೆಕ್ಕಾಚಾರದಲ್ಲಿ ನಿಜಕ್ಕೂ ಮಾನಗೆಟ್ಟವರು ಯಾರು?" ಎನ್ನುವ ಬಹುಮುಖ್ಯ ಪ್ರಶ್ನೆಯನ್ನು ಲೇಖಕ ರಾಜಶೇಖರರು ಎತ್ತಿರುವುದರಿಂದ ಅದನ್ನು ಇಲ್ಲಿ ಕೊಡುವುದು ಮುಖ್ಯ ಎಂದು ನನಗನ್ನಿಸಿತು. ಆ ಪತ್ರಿಕೆಯವರ ಅನುಮತಿಯೊಂದಿಗೆ ಆ ಲೇಖನವನ್ನು ಇಲ್ಲಿ ಕೊಡುತ್ತಿದ್ದೇನೆ. ಗೂಗಲ್ ಸರ್ಚ್ ಮಾಡಿದಾಗಲೂ ಸಿಗಲಿ ಎನ್ನುವ ಉದ್ದೇಶದಿಂದ ಒಂದಷ್ಟು ಲೇಖನವನ್ನು ಯೂನಿಕೋಡ್‌ಗೆ ಬದಲಾಯಿಸಿ ಕೊಡುತ್ತಿದ್ದೇನೆ. ಪೂರ್ಣ ಲೇಖನದ .pdf ಇಲ್ಲಿದೆ.
ವಿ.ಕ. ಸಂಪಾದಕರ ‘ಇಮೋಷನಲ್ ಅತ್ಯಾಚಾರಗಳು’
ಲೇಖಕ: ಜಿ. ರಾಜಶೇಖರ
ಅತಿಹೆಚ್ಚು ಸುಳ್ಳು ಹೇಳುವ ಕನ್ನಡ ದಿನಪತ್ರಿಕೆ ಯಾವುದು? ಸ್ಪರ್ಧೆಯ ಮುಂಚೂಣಿಯಲ್ಲಿ ಉದಯವಾಣಿ (ಮಣಿಪಾಲ ಆವೃತ್ತಿ) ಮತ್ತು ವಿ.ಕ. ಇರುವುದರಿಂದ ನಿಖರವಾಗಿ ಹೇಳುವುದು ಕಷ್ಟ. ಎರಡು ಪತ್ರಿಕೆಗಳ ಸಂಪಾದಕರಲ್ಲಿ ಯಾರು ಹೆಚ್ಚು ಸೋಗಲಾಡಿ? ತನ್ನ ಶಂಖ ತಾನೇ ಹೆಚ್ಚು ಊದಿಕೊಳ್ಳುವ ದಾಸಯ್ಯ ಯಾರು? ಈ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವೇನಲ್ಲ. ಸ್ಪರ್ಧೆಯ ಕಣದಲ್ಲಿ ವಿ.ಕ. ಸಂಪಾದಕ ಒಬ್ಬರೇ ಇದ್ದಾರೆ. ಇನ್ನೊಂದು ಪತ್ರಿಕೆಗೆ ಸಂಪಾದಕ ಇರುವುದು ಹೆಸರಿಗೆ ಮಾತ್ರ. ವಿ.ಕ. ಸಂಪಾದಕರಿಗೆ ಅವರ ಪತ್ರಿಕೆಯ ಹೆಸರಿನಲ್ಲೇ ‘ವಿಜಯ’ ಎಂದು ಇರುವುದಕ್ಕೋ ಏನೋ, ಸೋತವರನ್ನು ಕಂಡರೆ ಎಲ್ಲಿಲ್ಲದ ತಿರಸ್ಕಾರ.
ತಮ್ಮ ದೇವರನ್ನು ಪೂಜಿಸದ, ತಮ್ಮ ಹಾಗೆ ಯೋಚಿಸದ "ಅನ್ಯಮತೀಯ"ರ ಕುರಿತ ದ್ವೇಷ ಪ್ರತಿಪಾದನೆಗೆ ಇವರ ಪತ್ರಿಕೆಯೇ ದಿನನಿತ್ಯದ ಕರಪತ್ರ. ಅತ್ಯಧಿಕ ಪ್ರಸಾರದ ಕನ್ನಡ ದಿನಪತ್ರಿಕೆಯನ್ನು ಫ್ಯಾಸಿಸಂನ ಪ್ರಚಾರಕ್ಕೆ ತೆರವು ಮಾಡಿಕೊಡುವುದರ ಜೊತೆ, ಈ ಸಂಪಾದಕರು ಮೊದಲೇ ಸೋತು ನೆಲಕಚ್ಚಿದವರನ್ನು ಮೆಟ್ಟಿ ತುಳಿದು ಗಹಗಹಿಸಿ ನಗುವ ಫ್ಯಾಸಿಸಂನ ಅಮಾನುಷತೆಯನ್ನೂ ಮೈಗೂಡಿಸಿಕೊಂಡಿದ್ದಾರೆ. ಕಳೆದ ಸೆಪ್ಟಂಬರ್ ತಿಂಗಳಲ್ಲಿ ನಡೆದ ಚರ್ಚ್ ದಾಳಿಗಳ ನಂತರ, ಈ ಸಂಪಾದಕ, ಸತತವಾಗಿ ಒಂದು ತಿಂಗಳ ಕಾಲ, ತನ್ನ ಪತ್ರಿಕೆಯಲ್ಲಿ ಕ್ರೈಸ್ತ ಸಮುದಾಯದ ವಿರುದ್ಧ ನಡೆಸಿದ ದೈವನಿಂದನೆ, ಜನಾಂಗ ನಿಂದನೆ ಮತ್ತು ಅಪಪ್ರಚಾರಗಳ ಅಭಿಯಾನವನ್ನು ನೆನಪಿಸಿಕೊಳ್ಳಿ. ಅನಂತಮೂರ್ತಿ ವಿರುದ್ಧ ವಿಜಯ ಕರ್ನಾಟಕದಲ್ಲಿ ನಡೆದ ಎಸ್‌ಎಂಎಸ್ ವಾಗ್ದಾಳಿಯನ್ನು ನೆನಪಿಸಿಕೊಳ್ಳಿ.
ಪತ್ರಿಕೆಯೊಂದು ತಾನೇ ನಡೆಸುವ ಇಂತಹ ವಾಗ್ವಾದಗಳಲ್ಲಿ ಎದುರಾಳಿ ಅಸಹಾಯಕ ಎಂದು ಗೊತ್ತಿದ್ದೇ ವಿ.ಕ. ಸಂಪಾದಕರು ಅಂತಹವರನ್ನು
ನೆಲಕ್ಕೆ ಕೆಡವಿ ಅಟ್ಟಹಾಸದಲ್ಲಿ ನಗುತ್ತಾರೆ. ಈಗ ಈ ಅಲ್ಪನಿಂದ ಇಕ್ಕಿಸಿಕೊಳ್ಳುವ ಸರದಿ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ರವಿಕೃಷ್ಣಾ ರೆಡ್ಡಿಯವರದ್ದು. ಇದೇ ತಾ. 29.3.09 ರ ಭಾನುವಾರದ ವಿ.ಕ. ಸಂಚಿಕೆಯಲ್ಲಿ ಬರುವ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿರುವ ಜಗದೀಶ್ ರಾವ್ ಕಲ್ಮನೆ ಎಂಬ ಅನಿವಾಸಿ ಕನ್ನಡಿಗನ ಹುಂಬತನದ ಬಗ್ಗೆ ಬರೆದಿದ್ದಾರೆ. ಜೊತೆಗೆ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಜಯನಗರ ಕ್ಷೇತ್ರದಲಿ ಸ್ಪರ್ಧಿಸಿದ್ದ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ರವಿ ಕೃಷ್ಣಾ ರೆಡ್ಡಿಯವರನ್ನೂ ತನ್ನ ಮಾತಿನಲ್ಲಿ ಎಳೆದು ತಂದಿದ್ದಾರೆ. ವಿ.ಕ. ಸಂಪಾದಕರ ಬಾಯಿಯ ತಾಂಬೂಲವಾಗಲು ರವಿ ಕೃಷ್ಣಾ ರೆಡ್ಡಿ ಮಾಡಿದ್ದಾದರೂ ಏನು?
- ವಿ.ಕ. ಸಂಪಾದಕರ ಅನುಮತಿ ಇಲ್ಲದೆ ರವಿ ಕೃಷ್ಣಾ ರೆಡ್ಡಿ ಅಮೆರಿಕದಿಂದ ಬೆಂಗಳೂರು ಜಯನಗರದವರೆಗೆ ಬಂದು ಅಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿದ್ದು.
- ಚುನಾವಣೆಯ ವೆಚ್ಚಕ್ಕೆಂದು ರವಿಕೃಷ್ಣಾ ರೆಡ್ಡಿ ತನ್ನ ಸ್ನೇಹಿತರಿಂದ ಸಂಗ್ರಹಿಸಿದ 4.20 ಲಕ್ಷ ರೂಪಾಯಿಯ ಲೆಕ್ಕವನ್ನು ವಿ.ಕ. ಸಂಪಾದಕರಿಗೆ ಕೊಡದೆ ಇದ್ದದು.
- ಆ ಚುನಾವಣೆಯಲ್ಲಿ ರವಿ ಕೃಷ್ಣಾ ರೆಡ್ಡಿ ‘ಎರಡೂ ನೂರು ಚಿಲ್ಲರೆ’ ಮತಗಳನ್ನು ಪಡೆದುಕೊಂಡದ್ದು.
ಈ 'ಅಪರಾಧ'ಗಳ ಪೈಕಿ, ಮೊದಲ ಎರಡಕ್ಕೆ ರವಿ ಕೃಷ್ಣಾ ರೆಡ್ಡಿ ಚುನಾವಣೆ ಆಯೋಗಕ್ಕೆ ಮಾತ್ರ ಉತ್ತರದಾಯಿ. ಉಳಿದವರಿಗೆ ಅವರು ವಿವರಣೆ ನೀಡಬೇಕಾದ ಆಗತ್ಯವಿಲ್ಲ. ವಿ.ಕ. ಸಂಪಾದಕರ ಪ್ರಕಾರ ರವಿ ಕೃಷ್ಣಾ ರೆಡ್ಡಿ ಜಯನಗರ ಕ್ಷೇತ್ರದಲ್ಲಿ 200 ಚಿಲ್ಲರೆ ಮತ ಪಡೆದುಕೊಂಡು ತನ್ನ ಡಿಪಾಜಿಟ್ಟಿನ ಜೊತೆಗೆ ಮಾನವನ್ನೂ ಕಳೆದುಕೊಂಡಿದ್ದಾರೆ. ಆದರೆ ಚುನಾವಣೆಯ ಈ ಲೆಕ್ಕಾಚಾರದಲ್ಲಿ ನಿಜಕ್ಕೂ ಮಾನಗೆಟ್ಟವರು ಯಾರು? ರವಿ ಕೃಷ್ಣಾ ರೆಡ್ಡಿಯೋ, ಜಯನಗರದ ಸುಶಿಕ್ಷಿತ ಮತದಾರ-ಅಥವಾ ವಿ.ಕ. ಸಂಪಾದಕರೋ? ಆ ಕ್ಷೇತ್ರದಲ್ಲಿ ರವಿ ಕೃಷ್ಣಾ ರೆಡ್ಡಿಗೆ ಪ್ರತಿದ್ವಂದ್ವಿಗಳಾಗಿದ್ದ ಎರಡು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಕೋಟಿಗಟ್ಟಲೆ ಹಣ ಖರ್ಚು ಮಾಡಿ, ಅವರಲ್ಲಿ ಒಬ್ಬ ಗೆದ್ದಿದ್ದಾನೆ. ಅವನು ಮಾನಬಿಟ್ಟವನು ಅಥವಾ ಹಾಸ್ಯಾಸ್ಪದ ಮನುಷ್ಯ ಎಂದು ವಿ.ಕ. ಸಂಪಾದಕರಿಗೆ ಖಂಡಿತ ಅನ್ನಿಸಿರಲಿಕ್ಕಿಲ್ಲ. ಯಾಕೆಂದರೆ ಗೆದ್ದವರನ್ನು ಆರಾಧಿಸುವುದು ಹಾಗೂ ಸೋತವರನ್ನು ತಿರಸ್ಕಾರದಲ್ಲಿ ತುಳಿಯುವುದು ವಿ.ಕ. ಪತ್ರಿಕೆಯ ವೃತ್ತಿಮೌಲ್ಯ.
ಆ ಚುನಾವಣೆಗಳಲ್ಲಿ ತಾನು ಯಾಕೆ ಸ್ಪರ್ಧಿಸುತ್ತಿದ್ದೇನೆ ಎಂದು ತನಗೆ ಗೊತ್ತಿರುವ ಎಲ್ಲರಿಗೂ ರವಿ ಕೃಷ್ಣಾ ರೆಡ್ಡಿ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದರು. ಅವರ ಈ ಪ್ರಯತ್ನದಲ್ಲಿ ಪ್ರಾಮಾಣಿಕತೆಯೂ ಇತ್ತು; ಆರ್ತತೆಯೂ ಇತ್ತು. ತನ್ನ ಚುನಾವಣಾ ಪ್ರಚಾರಕ್ಕೆ ಅವರು ಲಭ್ಯವಿರುವ ಎಲ್ಲ ನ್ಯಾಯಯುತ ಹಾಗೂ ಗೌರವಯುತ ಮಾರ್ಗಗಳನ್ನೂ ಅನುಸರಿಸಿದರು. ವಿ.ಕ. ಸಂಪಾದಕರನ್ನು ಭೇಟಿ ಮಾಡಿದ್ದೂ ಚುನಾವಣಾ ಪ್ರಚಾರದ ಅಂತಹ ಒಂದು ಗೌರವಯುತ ವಿಧಾನವಾಗಿತ್ತು. ವಿ.ಕ. ಸಂಪಾದಕ ಈಗ ಅದನ್ನೇ ಆಡಿಕೊಂಡು ನಗುತ್ತಿದ್ದಾರೆ! ನಗಬೇಕಾದ್ದೆ. ದಿ. ಲಂಕೇಶ್ ಹೇಳುತ್ತಿದ್ದ ಹಾಗೆ “ದಗಾಕೋರರ ಜಗತ್ತಿನಲ್ಲಿ ಪ್ರಾಮಾಣಿಕನಾಗಿರುವುದು ಮೂರ್ಖತನ." (ಆದರೆ ತನ್ನ ಈ ಮಾತಿಗೆ ಮೊದಲು ಅವರು “ಪ್ರಾಮಾಣಿಕರ ಜಗತ್ತಿನಲ್ಲಿ ದಗಾಕೋರನಾಗಿರುವುದು ಅನೈತಿಕ" ಎಂದೂ ಹೇಳಿದ್ದರು).
ರವಿ ಕೃಷ್ಣಾ ರೆಡ್ಡಿ ಮತ್ತು ಜಗದೀಶ್ ರಾವ್ ಕಲ್ಮನೆ ಹುಂಬರೇ ಇರಬಹುದು. ಆದರೆ ಚುನಾವಣೆಗೆ ನಿಂತು ಸೋಲುವುದು ಅಪರಾಧವಲ್ಲ; ಅತ್ಯಂತ ಕಡಿಮೆ ಮತಗಳನ್ನು ಪಡೆಯುವುದೂ ಅಪರಾಧವಲ್ಲ. ಚುನಾವಣೆಯಲ್ಲಿ ಗಳಿಸಿದ ಮತಗಳಿಂದ ಅಭ್ಯರ್ಥಿಗಳ ಯೋಗ್ಯತೆ ಅಳೆಯುವುದಂತೂ ಮೂರ್ಖತನವೇ ಸರಿ. ಹಿಂದೆ ಬೆಂಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಕವಿ ಗೋಪಾಲ ಕೃಷ್ಣ ಅಡಿಗ ಮತ್ತು ಉತ್ತರ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಿವರಾಮ ಕಾರಂತ, ಇಬ್ಬರೂ ಭಾರೀ ಅಂತರದಲ್ಲಿ ಸೋತಿದ್ದರು. ಶಿವರಾಮ ಕಾರಂತರಂತೂ ಅವರ ನಂತರದ ಪ್ರತಿಸ್ಪರ್ಧಿ ಚಲನಚಿತ್ರ ನಟ ಅನಂತನಾಗ್ ಅವರಿಗಿಂತಲೂ ಕಡಿಮೆ ಮತ ಪೆಡದುಕೊಂಡು ಮೂರನೆಯ ಸ್ಥಾನದಲ್ಲಿದ್ದರು. ಹಾಗೆಂದು ವಿ.ಕ.ಸಂಪಾದಕರು ಕನ್ನಡದ ಆ ಇಬ್ಬರು ಧೀಮಂತರ ಮುಖಕ್ಕೂ ಮಂಗಳಾರತಿ ಮಾಡುವವರೋ?
ವಿ.ಕ. ಸಂಪಾದಕರ ಪ್ರಕಾರ ರವಿ ಕೃಷ್ಣಾ ರೆಡ್ಡಿ ಮತ್ತು ಜಗದೀಶ್ ರಾವ್ ಕಲ್ಮನೆ ‘ಲೂಸು’ಗಳು ಹಾಗೂ ಅವರಿಬ್ಬರಿಂದ ವಿ.ಕ. ಪತ್ರಿಕಾ ಸಿಬ್ಬಂದಿ ಸಖತ್ತು ಮನರಂಜನೆ ಪಡೆದುಕೊಂಡಿದೆ. ಚುನಾವಣೆಗಳನ್ನು ಗೆಲ್ಲುವು ದಕ್ಕಾಗಿ ಜನರನ್ನು ಕೊಲ್ಲಲು ಹಿಂದೆಮುಂದೆ ಯೋಚಿಸದ ಮೋದಿ, ಅಧ್ವಾಣಿ ವಗೈರೆಗಳು ಆ ಪತ್ರಿಕೆಯ ಹೀರೋಗಳಾಗಿರುವುದರಿಂದ ವಿ.ಕ.ದ ಸಂಪಾದಕ ಮತ್ತು ಅವರ ಸಿಬ್ಬಂದಿಗೆ ಮನರಂಜನೆ ಒದಗಿಸುವ ಚಟುವಟಿಕೆಗಳ ಕುರಿತು ಯೋಚಿಸಲೂ ಭಯವಾಗುತ್ತದೆ. ವಿ.ಕ. ಸಂಪಾದಕರು ಲೂಸೂ ಅಲ್ಲ, ಮೆಂಟಲ್ ಕೇಸು ಕೂಡ ಅಲ್ಲ ಎಂದೇ ಇಟ್ಟುಕೊಂಡರೂ ಅವರ ಪತ್ರಿಕೆಯಿಂದ ನಮ್ಮಂತಹವರು ಪಡೆಯುವ ಮನರಂಜನೆಯ ಬಗ್ಗೆ ಪ್ರಾಯಶಃ ಅವರಿಗೆ ಗೊತ್ತಿಲ್ಲ. ವಿ.ಕ. ಪ್ರತಿನಿತ್ಯ ಕೋಮುದ್ವೇಷದ ವಿಷವನ್ನು ಎಂತಹ ಹಾಸ್ಯಾಸ್ಪದ ಸುಳ್ಳುಗಳ ಜೊತೆ ಬೆರೆಸಿ, ತನ್ನ ಓದುಗರಿಗೆ ಉಣಬಡಿಸು ತ್ತದೆ ಎನ್ನುವುದಕ್ಕೆ ಒಂದು ಉದಾಹರಣೆ, ವಿ.ಕ. ಸಂಪಾದಕರ ಮೇಲೆ ಹೇಳಿದ ಹೀನ ಅಭಿರುಚಿಯ ಬರಹ ಪ್ರಕಟವಾದ ದಿನ, ಅದೇ ಸಂಚಿಕೆಯ ಇನ್ನೊಂದು ಪುಟದಲ್ಲಿ (ಮಂಗಳೂರು ಆವೃತ್ತಿಯ ಪುಟ 2) ಪ್ರಕಟವಾಗಿರುವ ಈ ವರದಿಯಲ್ಲಿದೆ. ವಿ.ಕ.ದ ಹಸಿಸುಳ್ಳು (ಈ ಘಟನೆಯನ್ನು ವರದಿ ಮಾಡಿದ ಉದಯವಾಣಿಯೂ ಈ ಸುಳ್ಳನ್ನು ರಿಪೀಟ್ ಮಾಡಿದೆ) ಸುದ್ದಿ ಶೀರ್ಷಿಕೆಯಿಂದಲೇ ಪ್ರಾರಂಭವಾಗುತ್ತದೆ....
ಹೀಗೆ ಮುಂದುವರೆಯುವ ಲೇಖನ, ಕೊನೆಗೆ "ವಿ.ಕ. ಸಂಪಾದಕರಂತೂ ಹಿಂದೂ ವೀರರ ಈ ಬಗೆಯ ಹಿಂಸಾಚಾರವನ್ನು ಸಮರ್ಥಿಸುವ ಲೆಕ್ಕಣಿಕೆ ವೀರ. ಅವರಷ್ಟು ಹಾಸ್ಯಾಸ್ಪದ ವ್ಯಕ್ತಿ ಬೇರೆ ಯಾರಿದ್ದಾರು?" ಎನ್ನುವ ಪ್ರಶ್ನೆಯೊಂದಿಗೆ ಮುಗಿಯುತ್ತದೆ.
* ಪೂರ್ಣ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.
ವಿಜಯ ಕರ್ನಾಟಕದ ಹೊಗಳು ಭಟ್ಟರು: ಭಾಗ - 1
ವಿಜಯ ಕರ್ನಾಟಕದ ಹೊಗಳು ಭಟ್ಟರು: ಭಾಗ - 2
Apr 9, 2009
ವಿಜಯ ಕರ್ನಾಟಕದ ಹೊಗಳು ಭಟ್ಟರು : ಭಾಗ-2
ಹೊಗಳುವುದಕ್ಕೆ ಮುಂಚೆ ಆಗಿರುವ ಮಾತುಕತೆ ಇದು. "ವಿಕ್ರಾಂತ ಕರ್ನಾಟಕ"ದ ಗೌರವ ಸಂಪಾದಕರಾದ ರವೀಂದ್ರ ರೇಷ್ಮೆ ಆ ಪತ್ರಿಕೆಯ ಏಪ್ರಿಲ್ 10, 2009 ರ ಸಂಚಿಕೆಯ ಸಂಪಾದಕೀಯದಲ್ಲಿ ಬರೆದಿರುವ ಬರಹ ಇದು.
"ವಿ.ಕ. ಭಟ್ಟರ ವಿಚಿತ್ರ ವ್ಯಾಕುಲ.."ಸ್ನೇಹಿತರೊಂದಿಗೆ ಕಾಫಿಶಾಪ್‌ನಲ್ಲಿ ಕುಳಿತಿರುವಾಗಲೆ ಅಂದು ಸಂಜೆ ಮೊಬೈಲ್ ಫೋನ್ ರಿಂಗಣಿಸಿತು. ಅಷ್ಟಾಗಿ ಪರಿಚಿತವಲ್ಲದ, ಅಪರೂಪಕ್ಕೊಮ್ಮೆ ಬಳಸಿರಬಹುದಾದ ನಂಬರ್ ಅದಾದ್ದರಿಂದ ಕುತೂಹಲದಿಂದಲೇ ಕೇಳಿಸಿಕೊಂಡದ್ದಾಯಿತು.
"ನಾನು ವಿಶ್ವೇಶ್ವರ ಭಟ್ ಮಾತಾಡ್ತಿರೋದು."
"ಹೇಳಿ ಭಟ್ಟರೇ, ಚೆನ್ನಾಗಿದ್ದೀರಾ? ಏನಾದ್ರೂ ತುರ್ತಾಗಿ ಮಾತಾಡೋದಿತ್ತಾ?"
"ಹೌದೌದು, ಇವತ್ತು ನನ್ನ ಕೈಗೆ ನಿಮ್ಮ ವಿಕ್ರಾಂತ ಕರ್ನಾಟಕವನ್ನು ಯಾರೋ ತಂದುಕೊಟ್ರು. ಅದ್ರಲ್ಲಿರೋ ಒಂದು ಬಾಕ್ಸ್ ಐಟೆಮ್‌ನಲ್ಲಿ ನಾನು ಅನಂತಕುಮಾರರು ಕೇಂದ್ರ ಸಚಿವರಾಗಿದ್ದಾಗ ಅವರ ಪಿ.ಎ. ಆಗಿದ್ದೆ ಅಂತ ತಪ್ಪಾಗಿ ಬರೆದಿದ್ದು ನೋಡಿ ಬೇಜಾರೆನಿಸಿ ಫೋನ್ ಮಾಡ್ದೆ..."
"ಅಯ್ಯೋ ನಮ್ಮಂತಹ ಪುಟ್ಟ ಪತ್ರಿಕೆಯಲ್ಲಿ ಆಕಸ್ಮಿಕವಾಗಿ ನುಸುಳಿರಬಹುದಾದ ಒಂದು ಸಣ್ಣ ಲೋಪ ಕುರಿತು ಇಷ್ಟ್ಯಾಕೆ ತಲೆ ಕೆಡಿಸಿಕೊಳ್ತೀರಾ ಭಟ್ರೆ? ನೀವು ಕನ್ನಡದ ಅತ್ಯಧಿಕ ಪ್ರಸಾರದ ದಿನಪತ್ರಿಕೆಯ ಬಾಸ್ ಅಲ್ಲವ..."
"ಇಲ್ಲಿ ಸಣ್ಣ ಪತ್ರಿಕೆ, ದೊಡ್ಡ ಪತ್ರಿಕೆ ಅಂತಲ್ಲ ರೇಷ್ಮೆಯವರೇ, ನಿಮ್ಮಲ್ಲಿ ಆಗಾಗ್ಗೆ ನನ್ನ ವಿಚಾರದಲ್ಲಿ ಇದೇ ತರ ತಪ್ಪು ತಪ್ಪಾಗಿ ನನ್ನನ್ನು ಪರಿಚಯಿಸ್ತಾನೇ ಇರ್‍ತೀರಿ. ಅನಂತಕುಮಾರರು ಕೇಂದ್ರದಲ್ಲಿ ಪ್ರವಾಸೋದ್ಯಮ ಮಂತ್ರಿ ಆಗಿದ್ದಾಗ ನಾನವರ ವಿಶೇಷ ಕರ್ತವ್ಯಾಧಿಕಾರಿ ಆಗಿದ್ದೆನೆ ಹೊರತು ಪಿ.ಎ. ಅಲ್ಲ, ಅದೂ ನನಗೆ ಡೆಪ್ಯುಟಿ ಕಮಿಶ್‌ನರ್ ದರ್ಜೆಯ ಸ್ಥಾನಮಾನ ನೀಡಿದ್ರು ನಿಮಗೆ ಗೊತ್ತಾ?"
"ಹೌದೌದು ನನಗಿದು ಗೊತ್ತಿತ್ತು. ಹಿಂದೆ 2001 ರ ‘ಲಂಕೇಶ್ ಪತ್ರಿಕೆ'ಯಲ್ಲಿ ಬೆಂಗಳೂರಿನ ಅಶೋಕಾ ಹೋಟೆಲ್ಲನ್ನು ಖಾಸಗಿಯವರಿಗೆ ಪರಭಾರೆ ಮಾಡಲಾದ ಹಗರಣ ಕುರಿತು ನಾನು ವರದಿ ಮಾಡಿದಾಗ ನಿಮ್ಮನ್ನು ಓಎಸ್‌ಡಿ ಅಂತಲೆ ಸೂಚಿಸಿದ್ದೆ ಅಂತ ನನಗೆ ಚೆನ್ನಾಗಿ ನೆನಪಿದೆ..."
"ಇರಬಹುದು. ಆಗಲೂ ಅಷ್ಟೆ, ನಾನು ಅನಂತಕುಮಾರರ ವ್ಯಾಪ್ತಿಗೆ ಬರ್‍ತಾ ಇದ್ದ ಆರು ಸಾಂಸ್ಕೃತಿಕ ಪ್ರತಿಷ್ಠಾನಗಳ ಉಸ್ತುವಾರಿಯನ್ನು ಮಾತ್ರ ನೋಡ್ಕೋತಾ ಇದ್ದೆ. ಮುಂದೆ ಅವರೇ ಖಾತೆ ಬದಲಾವಣೆಯಿಂದಾಗಿ ಅರ್ಬನ್ ಡೆವಲಪ್‌ಮೆಂಟ್ ಸಚಿವರಾದಾಗ ಒಂದೇ ವಾರದಲ್ಲಿ ನಾನಲ್ಲಿಂದ ಹೊರಗೆ ಬಂದುಬಿಟ್ಟೆ. ಯಾಕಂದ್ರೆ ನನಗೆ ಈ ರಿಯಲ್ ಎಸ್ಟೇಟು, ಲ್ಯಾಂಡ್ ಡೀಲುಗಳ ಬಗ್ಗೆ ಆಸಕ್ತೀನೆ ಇರ್‍ಲಿಲ್ಲ."
"ಅದಾಯಿತಲ್ಲ ಭಟ್ರೆ, ಇನ್ನೇನಾದ್ರೂ ಸ್ಪಷ್ಟೀಕರಣ ಇದೆಯಾ?"
"ನೀವೇನೂ ಸ್ಪಷ್ಟೀಕರಣ ಹಾಕಬೇಕಿಲ್ಲ, ಆದರೆ ನನ್ನ ಬಗ್ಗೆ ಅಪಾರ್ಥವಾಗದ ಹಾಗೆ ನೋಡಿಕೊಳ್ಳಿ. ನಾನು ಬೆಂಗಳೂರಿನ ಜರ್ನಲಿಸ್ಟ್‌ಗಳ ಪೈಕಿ ಅತಿ ಹೆಚ್ಚಿನ ಯುನಿವರ್ಸಿಟಿ ಡಿಗ್ರಿಗಳನ್ನು ಹೊಂದಿರೋನು ಅನ್ನೋದು ತಮಗೆ ಗೊತ್ತಿರಲಿ... ನಾನು 1986 ರ ಕರ್ನಾಟಕ ಯುನಿವರ್ಸಿಟಿ ಎಂಎಸ್‌ಸಿ ಜಿಯಾಲಜಿನಲ್ಲಿ ಫಸ್ಟ್ ರ್‍ಯಾಂಕ್ ಕೂಡ ತಗೊಂಡಿದ್ದೆ..."
"ಆ ಡಿಗ್ರಿ, ರ್‍ಯಾಂಕುಗಳಿಂದ ನಮ್ಮ ಪತ್ರಿಕೋದ್ಯಮಕ್ಕೆ ಏನು ವ್ಯತ್ಯಾಸ ಆದೀತು ಹೇಳಿ ಭಟ್ರೆ? ನಾನು ಕೂಡ ಅದೇ ಯೂನಿವರ್ಸಿಟಿಯಿಂದಲೆ 1974 ರ ಎಂಎಸ್‌ಸಿ ಬಾಟನಿಯಲ್ಲಿ ಫಸ್ಟ್ ರ್‍ಯಾಂಕ್ ಪಡೆದಿದ್ದೆ... ಸೋ ವಾಟ್?"
"ಹಾಗೇನೆ ನಾನು ವಿ.ಕ.ದ ಸಂಪಾದಕನಾದಾಗಿಂದಲೂ ಅನಂತಕುಮಾರರ ಫೋಟೋ ಬಳಸಿಕೊಂಡು ಮುಖಪುಟದ ವರದಿ ಹಾಕಿದ್ದು ಬರೀ 10-12 ಸಾರಿ ಇದ್ದೀತು ಅಷ್ಟೇ. ಅದರಲ್ಲೂ ಮೊದಲ ಐದು ವರ್ಷ ಅನಂತಕುಮಾರರ ಬಗ್ಗೆ ಫ್ರಂಟ್‌ಪೇಜ್‌ನಲ್ಲಿ ಏನೂ ಬರೀಕೂಡ್ದೂಂತ ನಮ್ಮ ಅಂದಿನ ಪ್ರಕಾಶಕ ವಿಜಯ್ ಸಂಕೇಶ್ವರ್‌ರೇ ನಿರ್ಬಂಧ ವಿಧಿಸಿದ್ರು ಕೂಡ..."
ಒಂದು ಬಾಕ್ಸ್ ಐಟಂನಿಂದಾಗಿ ತಮಗೆ ಅಪಮಾನವಾಯಿತೆಂದು ಹಲುಬುವ ಭಟ್ಟರು, ‘ಅನಂತ ನಿಷ್ಠ’ ಎಂಬ ಆ ಐಟಂನ ಲೇಖಕ- ‘ವಿಕ್ರಾಂತ’ದ ಸಂಸ್ಥಾಪಕ- ಕ್ಯಾಲಿಫೋರ್ನಿಯಾ ನಿವಾಸಿ- ಯುವ ಕನಸುಗಾರ ರವಿ ಕೃಷ್ಣಾ ರೆಡ್ಡಿಯವರ ಚುನಾವಣಾ ರಾಜಕೀಯದ ಶುದ್ಧೀಕರಣದ ಪ್ರಯೋಗವನ್ನು ಮೊನ್ನೆ ಭಾನುವಾರದ ಸಂಪಾದಕೀಯದಲ್ಲಿ ಗೇಲಿಮಾಡಿ ಸಮಾಧಾನ ಮಾಡಿಕೊಂಡಿದ್ದಾರೆ.
ಮೌಲ್ಯಾಧಾರಿತ ಬದಲಾವಣೆಗಾಗಿ ಹಂಬಲಿಸುವ ಪ್ರಾಮಾಣಿಕ ಹೋರಾಟಗಾರರನ್ನು ಹಂಗಿಸುವ ಈ ಹೈ-ಫೈ ಸಂಪಾದಕರು ರೆಡ್ಡಿಯವರಂತೆಯೆ ಅಮೆರಿಕಾದಿಂದ ಸ್ವದೇಶಕ್ಕೆ ಮರಳಿ ಅಧಿಕಾರರೂಢ ಭಾಜಪದ ಅಭ್ಯರ್ಥಿಯಾಗಿ ಚಿತ್ರದುರ್ಗದಿಂದ ಕಣಕ್ಕಿಳಿದಿರುವ ಜನಾರ್ಧನ ಸ್ವಾಮಿಯನ್ನು ಮಾತ್ರ ತಾಯ್ನಾಡಿನ ಋಣ ತೀರಿಸಬಂದ ದೇಶಭಕ್ತನ ಪಟ್ಟಕ್ಕೇರಿಸಿದ್ದಾರೆ!
ರವೀಂದ್ರ ರೇಷ್ಮೆ
ಇಲ್ಲಿಯ ಇನ್ನೊಂದು ಸತ್ಯ ಏನೆಂದರೆ, ನಾನು ಬರೆದಿದ್ದ "ಜಾತಿಅಹಂ, ಸ್ಪೃಶ್ಯ/ಅಸ್ಪೃಶ್ಯ, ನಿಜವಾಗಿ ’ಹಿಂದುಳಿದವರು’, ಒಳಮೀಸಲಾತಿ, ’ಅನಂತ ನಿಷ್ಠ’ ಭಟ್..." ಲೇಖನದಲ್ಲಿ ಎಲ್ಲಿಯೂ ಯಾರನ್ನೂ ಪಿ.ಎ. ಎಂದು ಬರೆದಿರಲಿಲ್ಲ.
ಇದೇ ವಿಷಯದ ಬಗ್ಗೆ ಮತ್ತೊಬ್ಬರು ಬರೆದಿರುವ ಮೂರನೆ ಭಾಗ ಸೋಮವಾರ ಹಾಕುತ್ತೇನೆ.
ವಿಜಯ ಕರ್ನಾಟಕದ ಹೊಗಳು ಭಟ್ಟರು : ಭಾಗ-1
Apr 7, 2009
ವಿಜಯ ಕರ್ನಾಟಕದ ಹೊಗಳು ಭಟ್ಟರು
ಕಳೆದ ಮೂರು ವಾರಗಳಿಂದ ಕರ್ನಾಟಕದ ಸುಮಾರು ಅರ್ಧ ಜಿಲ್ಲೆಗಳಲ್ಲಿ ಸುತ್ತಿದ ದೈಹಿಕ ಆಯಾಸ ಇನ್ನೂ ಹೋಗಿಲ್ಲ. ಅದರ ಜೊತೆಗೆ ಜೆಟ್ ಲ್ಯಾಗ್ ಸಮಸ್ಯೆ. ನಾಳೆ ಮತ್ತೆ ಪ್ರಯಾಣ ಹೊರಡಬೇಕಿದೆ, ಮೂರು ದಿನದ ಮಟ್ಟಿಗೆ. ವಾರಾಂತ್ಯದವರೆಗೆ ಮತ್ತೆ ಬಿಡುವಿಲ್ಲ.
ಕಳೆದ ಎರಡು ಭಾನುವಾರಗಳಲ್ಲೂ ವಿಜಯ ಕರ್ನಾಟಕದಲ್ಲಿ ನನ್ನನ್ನು ಹೊಗಳಿ ಬರೆದಿದ್ದರು. ಹೊಗಳುವುದು ಅಂದರೆ ಗೊತ್ತಲ್ಲ; ಸುಳ್ಳು ಮತ್ತು ಉತ್ಪ್ರೇಕ್ಷೆ ಸಹಜ. ಅದರ ಜೊತೆಗೆ "ನೂರೆಂಟು ಸುಳ್ಳು" ಸೇರಿಕೊಂಡರೆ ಇನ್ನೂ ಭರ್ಜರಿಯಾಗಿರುತ್ತದೆ. ಇಂತಹುದೊಂದು ಹೊಗಳಿಕೆಗಳಿಗೆ ಸಾರ್ವಜನಿಕವಾಗಿ ಸಕ್ರಿಯರಾಗಿರುವವರು ಸದಾ ಸಿದ್ಧರಾಗಿರಬೇಕಾಗುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ, ಹೊಗಳಿಕೆ ತಡವಾಯಿತು. ಅದೂ ಕನಿಷ್ಠ ಒಂದು ವಾರ. ನಾಲ್ಕು ವಾರಗಳ ಹಿಂದಿನ ನನ್ನ "ಜಾತಿಅಹಂ, ಸ್ಪೃಶ್ಯ/ಅಸ್ಪೃಶ್ಯ, ನಿಜವಾಗಿ ’ಹಿಂದುಳಿದವರು’, ಒಳಮೀಸಲಾತಿ, ’ಅನಂತ ನಿಷ್ಠ’ ಭಟ್..." ಲೇಖನದಲ್ಲಿ ಇದ್ದಿರಬಹುದಾದ "ಸುಳ್ಳು ಅಥವ ಸತ್ಯ" ಈ ದಿಢೀರ್ ಹೊಗಳಿಕೆಗೆ ಕಾರಣ. ಆ ಲೇಖನವನ್ನು ಓದಿದ್ದ ಎಲ್ಲರಿಗೂ ಇದು ಗೊತ್ತು.
ಭಟ್ಟಂಗಿಗಳ ಈ ಹೊಗಳು ಪತ್ರಗಳು ನನಗೆ ಮುಂದಕ್ಕೆ ಹಲವಾರು ಕಾರಣಗಳಿಗೆ ಬೇಕಾಗಿರುವುದರಿಂದ ಅವನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಬೇಕೆಂದಾಗ ಹುಡುಕಿಕೊಳ್ಳಲು ಸುಲಭವಾಗುತ್ತದೆ.
ಮಾರ್ಚ್ 29, 2009 ರ ವಿಜಯ ಕರ್ನಾಟಕದಲ್ಲಿ:
ಏಪ್ರಿಲ್ 05, 2009 ರ ವಿಜಯ ಕರ್ನಾಟಕದಲ್ಲಿ:
ಇಲ್ಲಿ "ಬಲಿಪಶು"ವಾದ ಜಗದೀಶ್ ರಾವ್ ಕಲ್ಮನೆ ಯಾರು ಎಂದು ನನಗೆ ಗೊತ್ತಿಲ್ಲ. ಅವರಿಂದ ಕೆಲವು "ಸುಳ್ಳು ಮತ್ತು ನಿಜ"ವನ್ನು ತಿಳಿದುಕೊಳ್ಳುವ ಮನಸ್ಸಿದೆ. ಗೊತ್ತಿದ್ದವರು ಅವರ ವಿವರ ಕಳುಹಿಸಿದರೆ ಸಂತೋಷ. ಅಥವ ಅವರೆ ಇದನ್ನು ಓದಿ ನನ್ನನ್ನು ಸಂಪರ್ಕಿಸಿದರೆ ಇನ್ನೂ ಸಂತೋಷ. ನನ್ನ ಫೋನ್ ಸಂಖ್ಯೆ ಆಗಲಿ ಇಮೇಯ್ಲ್ ಆಗಲಿ ಹುಡುಕಿಕೊಳ್ಳುವುದು ಕಷ್ಟವಲ್ಲ.
ನಿರಂಕುಶಮತಿ ಓದುಗರಿಗೆ ಸತ್ಯ ಏನೆಂದು ಗೊತ್ತು. ಹಾಗಾಗಿ ಈ ವಿಷಯದ ಬಗ್ಗೆ ನನ್ನ ಪ್ರತಿಕ್ರಿಯೆ ಇಲ್ಲ. ಅದರ ಅಗತ್ಯವಾಗಲಿ, ಅದಕ್ಕೆ ಅವಸರವಾಗಲಿ ಇಲ್ಲ. ಒಂದಿಬ್ಬರು ಸ್ನೇಹಿತರಿಗೆ ಹೇಳಿದ್ದನ್ನೆ ಇಲ್ಲಿ ಸದ್ಯಕ್ಕೆ ಬರೆಯುತ್ತೇನೆ: "ನನ್ನ ಮುಂದೆ ಏನಿಲ್ಲವೆಂದರೂ ಇನ್ನೂ 40 ವರ್ಷಗಳ ಸುದೀರ್ಘ ಸಕ್ರಿಯ ಜೀವನವಿದೆ. ನನಗೆ ಯಾವುದೆ ಅಸಹಜವಾದ ಸಾವು ಬರದೆ ಇದ್ದರೆ ಮತ್ತು ನನ್ನ ಆರೋಗ್ಯ ಸರಿಯಾಗಿ ನೋಡಿಕೊಂಡರೆ ಈ ಹೊಗಳುಭಟ್ಟರಿಗಿಂತ ಕನಿಷ್ಟ 25 ವರ್ಷ ಹೆಚ್ಚು ಬದುಕುತ್ತೇನೆ. ಭವಿಷ್ಯ ಯಾರನ್ನು ಎಲ್ಲಿ ಇಡುತ್ತದೆ ಎಂದು ನೋಡುವ ಅವಕಾಶ ಇರುವುದು ನನಗೆ ಮಾತ್ರ. The last laugh will be mine."
ರವಿ...
www.ravikrishnareddy.com
Apr 2, 2009
ಕರ್ನಾಟಕದೊಳಗೊಂದು ಸುತ್ತು - ಭೀಕರ, ಭಯ, ಪ್ರೀತಿ, ಬಡತನ, ಜಾತೀಯತೆ...
ಕಳೆದ ಎರಡು ವಾರಗಳಿಂದ ಕರ್ನಾಟಕದ ಹಲವು ಕಡೆ ಮೂರು ಸುತ್ತು ಹಾಕಿದೆ. ಮುಂದೆ ಏನಾದರೂ ಬರೆಯಬೇಕಾಗಿ ಬಂದಾಗ ಮತ್ತು ನೆನಪು ಕೈಕೊಟ್ಟಾಗ ಈ ಬರಹ ಅನುಕೂಲವಾಗಲಿ ಎಂದು ನಾನು ಕ್ರಮಿಸಿದ ಮಾರ್ಗವನ್ನು ಇಲ್ಲಿ ದಾಖಲಿಸುತ್ತಿದ್ದೇನೆ.
ಮೊದಲ ಮಾರ್ಗ: ಬೆಂಗಳೂರು-ತುಮಕೂರು-ಶಿರಾ-ಬೆಂಗಳೂರು. (ಈ ಮಾರ್ಗದಲ್ಲಿ ತುಮಕೂರಿನ ಶಿರಾ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕು ಮತ್ತು ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಕೆಲವು ಭಾಗಗಳಲ್ಲಿ ಓಡಾಟ.) ಇದು ಒಂದು ದಿನದ ಪ್ರಯಾಣ. ಹೈವೇಯನ್ನು ಬಿಟ್ಟು ಒಳರಸ್ತೆಗಳ ಹಳ್ಳಿಗಳೊಳಗಿನ ಈ ಪ್ರಯಾಣದಲ್ಲಿ ಭೀಕರ ಬಡತನವನ್ನೂ ಮತ್ತು "ಸ್ಪೃಶ್ಯ ಬಡವರಲ್ಲಿಯ" "ಅಸ್ಪೃಶ್ಯ" ಜಾತೀಯತೆಯನ್ನು ಕಂಡೆ. ಅಸ್ಪೃಶ್ಯತೆ ನಮ್ಮಲ್ಲಿ ಇನ್ನೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಮೀಣ ಪರಿಸರದಲ್ಲಿ ಬೇರೂರಿಕೊಂಡೇ ಇದೆ. (ದಿ: ಮಾರ್ಚ್ 21, 2009)
ಎರಡನೆಯದು: (ಮಾರ್ಚ್ 22 ರಿಂದ ಮಾರ್ಚ್ 26 ರವರೆಗೆ) ಬೆಂಗಳೂರು-ರಾಮನಗರ-ಮಾಗಡಿ-ಕುಣಿಗಲ್-ಹಾಸನ-ಶಿವಮೊಗ್ಗ-ಹೆಗ್ಗೋಡು-ಸಾಗರ-ಶಿವಮೊಗ್ಗ-ಮಾಗಡಿ-ಬೆಂಗಳೂರು. ಉಳಿದುಕೊಂಡಿದ್ದ ಸ್ಥಳಗಳು- ಮಾಗಡಿ ತಾಲ್ಲೂಕಿನ ಕುಗ್ರಾಮದಲ್ಲಿ ಎರಡು ದಿನ (ಹೋಗುತ್ತ, ಬರುತ್ತ), ಶಿವಮೊಗ್ಗ ನಗರದಲ್ಲಿ ಎರಡು ದಿನ.
ಈ ಪ್ರಯಾಣದಲ್ಲಿ ಮೇಲ್ಜಾತಿಯ ಜನ ದಲಿತನ ಹೆಂಡತಿಯೊಬ್ಬಳಿಗೆ ದಂಡ ವಿಧಿಸಿ, ಬಹಿಷ್ಕಾರ ಹಾಕಿದ ಕಾರಣಕ್ಕೆ ಮತ್ತು ತದನಂತರ ಅದು ಹಾಕಿದ ಕೌಟುಂಬಿಕ ಒತ್ತಡದಿಂದಾಗಿ ಕಳೆದ ದಿಸೆಂಬರ್‌ನಲ್ಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೆಣ್ಣೊಬ್ಬಳ ಕತೆಯನ್ನು ಆಕೆಯ ಗಂಡನಿಂದ ಕೇಳಿದೆ. ಆ ಹಳ್ಳಿಯ ದಲಿತರು ಈಗಲೂ ಒಬ್ಬೊಬ್ಬರೆ ಆ ಹಳ್ಳಿಯ ಮುಖ್ಯರಸ್ತೆಯಲ್ಲಿ ಓಡಾಡುವುದಿಲ್ಲ! ಸಿಕ್ಕರೆ ಮೇಲ್ಜಾತಿಯವರು ಹೊಡೆದುಹಾಕುತ್ತಾರೆ ಎನ್ನುವ ಭಯ. ಬೆಂಗಳೂರಿನಿಂದ ಕೇವಲ 60-70 ಕಿ.ಮಿ. ದೂರದಲ್ಲಿರುವ ಊರು ಇದು! ಹಾಗೆಯೆ ಇದು, 2009 ನೇ ಇಸವಿ!
ಜೀವನೋಪಾಯಕ್ಕಾಗಿ ತಮ್ಮ 30-40 ವಯಸ್ಸಿಗೆಲ್ಲ ಕಣ್ಣು ಕಳೆದುಕೊಳ್ಳುವ ಜನರನ್ನು ಹಾಸನ-ಮಂಡ್ಯದ ಗಡಿಯಲ್ಲಿ ಮಾತನಾಡಿಸಿದೆ. ಹೊಗೆಯಲ್ಲಿ, ಇದ್ದಿಲಿನಲ್ಲಿ ಕಾಲ ಕಳೆಯುವ "ಕಪ್ಪು ಜನರು" ಇವರು.
ಹಾಸನದಲ್ಲಿ ಪುಸ್ತಕವೊಂದರ ಬಗ್ಗೆ ಮಾತನಾಡಬೇಕಿತ್ತು. ಅದಕ್ಕೆ ಹಿಂದಿನ ಐದಾರು ದಿನಗಳಿಂದ ನೋಡಿದ್ದ ಮೇಲಿನ ಘಟನೆಗಳ ಹಿನ್ನೆಲೆಯಲ್ಲಿ ಮಾತನಾಡುವ ಉತ್ಸಾಹವಾಗಲಿ, ನೈತಿಕ ಧೈರ್ಯವಾಗಲಿ ಇರಲಿಲ್ಲ. ಏನೇನೊ ಬಡಬಡಿಸಿದೆ ಎನ್ನಿಸುತ್ತದೆ.
ಮುಂದಿನ ಮುಖ್ಯ ಸ್ಥಳ ಹೆಗ್ಗೋಡಿನ "ಚರಕ". ಅದ್ಭುತವಾದ ವಾತಾವರಣದಲ್ಲಿ ಹೆಣ್ಣುಮಕ್ಕಳ ಅಪ್ರತಿಮ ಆತ್ಮವಿಶ್ವಾಸವನ್ನು ಕಂಡೆ. ಸುಂದರವಾದ, ಸಮೃದ್ಧ ಪರಿಸರ. ತೀಕ್ಷ್ಣವಲ್ಲದ ಬಡತನ. ಇಲ್ಲದ ಅಥವ ಗೊತ್ತಾಗದ ಜಾತೀಯತೆ.
ಅದೇ ದಿನ ಸಾಗರ ಪಟ್ಟಣದಲ್ಲಿ ಅಲ್ಲಿಯ ಪತ್ರಕರ್ತರ ಸಂಘ ಏರ್ಪಡಿಸಿದ್ದ "ಧರ್ಮ, ರಾಜಕಾರಣ, ಸಂಸ್ಕೃತಿ"ಯ ಬಗೆಗಿನ ಸಂವಾದದಲ್ಲಿ ಪಾಲ್ಗೊಂಡಿದ್ದೆ. ಉತ್ತಮ ಕಾರ್ಯಕ್ರಮ. ಒಳ್ಳೆಯ ಪ್ರತಿಕ್ರಿಯೆ ಮತ್ತು ಪ್ರಶ್ನೆಗಳಿದ್ದವು.
ಮತ್ತೆ ಶಿವಮೊಗ್ಗ, ಅಲ್ಲಿಂದ ಮಾಗಡಿಯ ಕುಗ್ರಾಮಕ್ಕೆ (ವಯಾ ತುರುವೇಕೆರೆ-ಕುಣಿಗಲ್). ಜ್ವರ ಬಂದಿದ್ದ ಮಗಳ ಆರೈಕೆಯಲ್ಲಿ ಪಾಲು. ಮಗುವಿಗೆ ಮಾತ್ರೆ ತಿನ್ನಿಸಲೂ ಬರುವುದಿಲ್ಲ ಎಂಬ ಹೀಯಾಳಿಕೆ ಷಡ್ಡಕನಿಂದ! ಕೊನೆಗೆ ಮುದ್ದೆಯಲ್ಲಿ ಮಾತ್ರೆಯಿಟ್ಟು ಅವಳಿಗೆ ಗೊತ್ತಾಗದ ಹಾಗೆ ತಿನ್ನಿಸಿ ಸ್ವಲ್ಪ ನೆಮ್ಮದಿ ಪಡೆದುಕೊಂಡೆ.
ಇದು ಒಟ್ಟು ನಾಲ್ಕು ದಿನಗಳ ಸುತ್ತಾಟ.
ಮೂರನೆ ಪ್ರಯಾಣ: (ಮಾರ್ಚ್ 28 ರಿಂದ ಏಪ್ರಿಲ್ 2 ರವರೆಗೆ) ಬೆಂಗಳೂರು-ತಿಪಟೂರು-ಶಿವಮೊಗ್ಗ-ಭದ್ರಾವತಿ-ಉಡುಪಿ-ಕುಪ್ಪಳ್ಳಿ-ಶಿವಮೊಗ್ಗ-ಹಂಪಿ-ಸೊಂಡೂರು-ಚಿತ್ರದುರ್ಗದ ಬಳಿಯ ಹಳ್ಳಿ-ಬೆಂಗಳೂರು. ಒಟ್ಟು ಆರು ದಿನಗಳ ಸುತ್ತಾಟ.
ಉಳಿದುಕೊಂಡಿದ್ದ ಸ್ಥಳಗಳು- ಭದ್ರಾವತಿ, ಕುಪ್ಪಳ್ಳಿ, ಹಂಪಿ (ಎರಡು ರಾತ್ರಿ), ಹರ್ತಿಕೋಟೆ ಗ್ರಾಮ.
ಶಿವಮೊಗ್ಗದಲ್ಲಿ ಅನೌಪಚಾರಿಕ ಮಾತುಕತೆಗಳಿದ್ದವು. ಮಾರನೆ ದಿನ ಉಡುಪಿಯಲ್ಲಿ ಕರಾವಳಿ ಜನರ ತಲ್ಲಣಗಳನ್ನು ಕೇಳಿಸಿಕೊಂಡೆ. ನನ್ನ ಒಂದಷ್ಟು/ಬಹಳಷ್ಟು ಅನಿಸಿಕೆಗಳನ್ನು ಹಂಚಿಕೊಂಡೆ. ಭಯ ಹುಟ್ಟಿಸುವ ವಾತಾವರಣದಲ್ಲಿ ಅದನ್ನು ಎದುರಿಸಿ ನಿಲ್ಲುವ ಜನರ ನೈತಿಕ ಧೈರ್ಯವನ್ನು ಕಂಡೆ.
ವಾಪಸು ಬರುತ್ತ ದಾರಿಯಲ್ಲಿ ಮಲೆನಾಡಿನ ರುದ್ರ ರಮಣೀಯತೆನ್ನೂ, ಅಲ್ಲಿನ ಸಮೃದ್ಧಿಯನ್ನೂ, ಹಸಿರು ತುಂಬಿದ ಬೆಟ್ಟಗಳನ್ನೂ, ಆಗುಂಬೆಯ ದಾರಿಯಲ್ಲಿ ಕಾಣಿಸುವ ಕಣಿವೆಯನ್ನೂ, ಕುವೆಂಪುರವರ ಕವಿಶೈಲ-ನವಿಲುಗುಡ್ಡೆ-ಚಿಬ್ಬಲಗುಡ್ಡೆಯನ್ನೂ, ತಿರ್ಥಹಳ್ಳಿಯ ಮಲೆನಾಡು ಕ್ಲಬ್ ಅನ್ನೂ, ಶಿವಮೊಗ್ಗದ ಬಳಿಯ ತೋಟವೊಂದನ್ನೂ ನೋಡಿದೆ.
ಅಲ್ಲಿಂದ ಹಂಪಿಗೆ ರಾತ್ರಿ ಹನ್ನೆರಡವರೆಗೆ ಏಕಾಂಗಿ ಪ್ರಯಾಣ. ನಂತರ ನೋಡಿದ್ದು ಬಯಲುಸೀಮೆಯ ಬಡತನ, ಬಿಸಿಲ ಬೇಗೆ, ರಾತ್ರಿಗಳಲ್ಲಿ ಹೆಣ್ಣುಗಂಡು ಭೇದವಿಲ್ಲದೆ ಮನೆಯ ಹೊರಗೇ ಮಲಗಬೇಕಾದ ಅನಿವಾರ್ಯತೆ. ಹಂಪಿಯದೆ ಒಂದು ದೊಡ್ಡ ಕತೆ. ಅಲ್ಲಿಯ ಹಿರಿಯರೊಬ್ಬರು ನಾಟಿ ಕೋಳಿ ತರಿಸಿ ತಾವೆ ಅಡಿಗೆ ಮಾಡಿದ್ದರು. ಅವರಿಗೆ ಅದ್ಯಾವುದರ ಅವಶ್ಯಕತೆಯೇ ಇರಲಿಲ್ಲ. ಅದ್ಭುತವಾದ, ಮರೆಯಲಾಗದ ಆತಿಥ್ಯ. ಅಲ್ಲಿಯ ಪರಿಸರಕ್ಕೆ ಐಷಾರಾಮಿ ಅನ್ನಬಹುದು. ಮಾರನೆಯ ದಿನ ಹಂಪಿ ವಿಶ್ವವಿದ್ಯಾಲಯದಲ್ಲಿ ಅಲ್ಲಿಯ ಕುಲಪತಿಗಳ ಸಮ್ಮುಖದಲ್ಲಿ ಸುಮಾರು 30 ಜನ ಅಧ್ಯಾಪಕರೊಂದಿಗೆ ಕನ್ನಡ, ಕಂಪ್ಯೂಟರ್, ಅಂತರ್ಜಾಲ, ವಿಶ್ವವಿದ್ಯಾಲಯ ಮಾಡಬೇಕಾದ ಕೆಲಸಗಳ ಬಗ್ಗೆ ಮಾತು ಮತ್ತು ಸಂವಾದ. ಕುಲಪತಿಗಳೆಂದರು: "ಮೊನ್ನೆ ಅವರ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೆ. ನೆನ್ನೆ ನೋಡಿದೆ. ಇವತ್ತು ಕೇಳಿದೆ." ಈ ದಿನಕ್ಕೆ ಸರಿಯಾಗಿ ನಾಲ್ಕು ದಿನದ ಹಿಂದೆ (ಉಡುಪಿಯಲ್ಲಿ ಸಂವಾದ ಇದ್ದ ದಿನ) ನನಗೆ ರಾಜ್ಯಮಟ್ಟದ ಅಪಪ್ರಚಾರ ಸಿಕ್ಕಿತ್ತು! ಅಷ್ಟಾದರೂ ಯಾರೂ ಅದರಿಂದ ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಬೆಳೆಸಿಕೊಂಡಂತಿರಲಿಲ್ಲ.
ನಂತರ ಅದೇ ದಿನ ಸೊಂಡೂರಿನ ಗಣಿಗಳನ್ನು ನೋಡಲು ಹೋದೆ. ಭೀಕರ, ಭಯಾನಕ ರಸ್ತೆಗಳು. ಜೊತೆಗೆ ಬಂದ ಹಂಪಿಯ ವಿದ್ಯಾರ್ಥಿಗಳನ್ನು, ’ಇನ್ನೂ ಎಷ್ಟು ದೂರಾರಿ ಈ ನರಕ’ ಎಂದು ಕೇಳಿದರೆ ಇಲ್ಲೇ ಸಾರ್, ಅನ್ನುತ್ತಿದ್ದರು. ’ಯಾಕೆ, ಇಷ್ಟು ಕಿ.ಮಿ. ಎಂದು ಹೇಳಲು ಆಗುವುದಿಲ್ಲವೆ’ ಎಂದರೆ, ’ಹಾಗೆ ಹೇಳಿದರೆ ನೀವು ಎದೆಯೊಡೆಡು ಸಾಯ್ತೀರಿ.’ ಎಂದರು. ಅಷ್ಟು ಭೀಕರ ರಸ್ತೆಗಳು. ಸುಂದರ ಸೊಂಡೂರು ಬೋಳುಬೋಳಾಗಿ, ಕರ್ನಾಟಕದ ನರಕವಾಗಿ ಪರಿಣಮಿಸಿದೆ. ಸೊಂಡೂರಿನ ಬಳಿಯಿರುವ ಗುಲ್ಬರ್ಗ ವಿಶ್ವವಿದ್ಯಾಲಯದ PG ಕೇಂದ್ರಕ್ಕೂ ಭೇಟಿ ಕೊಟ್ಟಿದ್ದೆ. ಅಲ್ಲಿ ಯುವಕವಿಯೊಬ್ಬ ಹೇಳಿದ: "ಇಲ್ಲಿಯ ಹೊಲಗಳಲ್ಲಿ ಮೊದಲು ಎಲ್ಲೆಂದರಲ್ಲಿ ಡಿಗ್ ಮಾಡಿಸುತ್ತಿದ್ದರು. ಆಗ ಬೇರೆಕಡೆಗಳಿಂದ ಬಂದ ಬಡವಾತಿಬಡವರು ಟೆಂಟ್ ಹಾಕಿಕೊಂಡು ಇಲ್ಲಿ ಡಿಗ್ ಮಡುತ್ತಿದ್ದರು. ಅವರ ಮೈಯೆಲ್ಲಾ ಅದಿರು ತುಂಬಿರುತ್ತಿತ್ತು. ಒಮ್ಮೆ ಅಲ್ಲಿ ನಾವೊಂದಷ್ಟು ಮೇಷ್ಟ್ರುಗಳು ಹೋಗಿದ್ದೆವು. ಹುಡುಗನೊಬ್ಬ ಅಳುತ್ತಿದ್ದ. ಅವನ ಮೈಯೆಲ್ಲಾ ಅದಿರು. ಪರೀಕ್ಷಿಸಿ ನೋಡಿದರೆ ಅವನ ಶಿಶ್ನದಲ್ಲಿ ಅರ್ಧ ಇಂಚು ಅದಿರು ತುಂಬಿಕೊಂಡು ಮೂತ್ರ ಹೊಯ್ಯಲಾರದೆ ಗೊಳೋ ಅನ್ನುತ್ತಿದ್ದ."
ಅಲ್ಲಿಂದ ಚಿತ್ರದುರ್ಗ ಜಿಲ್ಲೆಯ ಹರ್ತಿಕೋಟೆ ಗ್ರಾಮಕ್ಕೆ ಬಂದೆ. ಬಹಳ ಹಳೆಯ, ಒಂದು ಕಾಲದಲ್ಲಿ ಒಳ್ಳೆಯ ನಾಗರಿಕತೆ ಇದ್ದಂತಹ ಊರು. ಅಲ್ಲಿ ಸರ್ಕಾರಿ ಅಧಿಕಾರಿಗಳನ್ನು ಮತ್ತು ಕಾಂಟ್ರಾಕ್ಟುದಾರರನ್ನು ಅವರ ಭ್ರಷ್ಟತೆ ಮತ್ತು ಅದಕ್ಷತೆಗಾಗಿ ಜನ ಹೀನಾಯವಾಗಿ ಹೀಯಾಳಿಸುತ್ತಿದ್ದದ್ದನ್ನು, ಪ್ರಶ್ನಿಸುತ್ತಿದ್ದದ್ದನ್ನು ಕಂಡೆ. ನಾನೂ ಪಾಲ್ಗೊಂಡೆ. ಆ ಊರಿನ ಜನರದ್ದೆ ಒಂದಷ್ಟು ತಪ್ಪುಗಳಿದ್ದವು. ಅದೇ ಊರಿನಲ್ಲಿ ಹಿಂದುಳಿದ ವರ್ಗದವರಿಗಾಗಿ ಕಟ್ಟುತ್ತಿರುವ ಹಾಸ್ಟೆಲ್‌ನ ಅತಿಕೆಟ್ಟ ಕಾಮಗಾರಿಯನ್ನೂ ಕಂಡೆ. ಉತ್ತರ ಭಾರತದ ಗಾರೆಯವನೊಬ್ಬ ಪ್ಲಾಸ್ಟರಿಂಗ್ ಮಾಡಲು ನಾಲ್ಕಿಂಚು ಸಿಮೆಂಟ್ ಮೆತ್ತುತ್ತಿದ್ದ. ಆ ಸಿಮೆಂಟ್ ಮಿಶ್ರಣದಲ್ಲಿ ಸಿಮೆಂಟ್ ಎಷ್ಟು ಅಪರೂಪವಾಗಿತ್ತೆಂದರೆ, ಅವನು ಅದನ್ನು ಗೋಡೆಗೆ ಬಡಿಯುತ್ತಿದ್ದರೆ ಅದು ಕೆಳಕ್ಕೆ ಬೀಳುತ್ತಿತ್ತು. ಅಲ್ಲಿದ್ದ ಇಟ್ಟಿಗೆಗಳೆಲ್ಲ "over burnt" ಇಟ್ಟಿಗೆಗಳು. ಅತೀ ಕಡಿಮೆ ದರ್ಜೆಯವು ಅವು.
ಅಲ್ಲಿಂದ ಊರಿಗೆ ವಾಪಸ್ಸು. ಬಿಸಿಲಿನಿಂದಾಗಿ, ಗಾಡಿ ಓಡಿಸಿದ ಕಷ್ಟದಿಂದಾಗಿ, ಅನಾಸಿನ್ ಒಂದು ತೆಗೆದುಕೊಂಡು ಮಲಗಿದಾಕ್ಷಣ 10+ ಗಂಟೆಗಳ ನಿದ್ರೆ ಬಂತು!
ಮೊದಲ ಪ್ರಯಾಣದಲ್ಲಿ ಒಂದರ್ಧ ನನ್ನದೆ ಚಾಲನೆ. ಉಳಿದ ಎರಡೂ ಧೀರ್ಘ ಓಡಾಟಗಳಲ್ಲಿ ನನ್ನೊಬ್ಬನದೆ ಡ್ರೈವಿಂಗ್. ಸುಮಾರು 2000 ಕಿ.ಮಿ. ಗಳ ಒಟ್ಟು ಪ್ರಯಾಣ, ಕಳೆದೆರಡು ವಾರಗಳಿಂದ. ಬಹುಶಃ ಸೊಂಡೂರಿನ 30-40 ಕಿ.ಮೀ. ಡ್ರೈವಿಂಗ್ ಮಿಕ್ಕೆಲ್ಲಕ್ಕೆ ಸಮ.
ಇದರ ಜೊತೆಗೇ, ಒಂದಷ್ಟು ಗಾಂಧಿವಾದಿಗಳು ನನ್ನ ತಾಲ್ಲೂಕಿಗೆ ಸಮೀಪದ ತಮಿಳುನಾಡಿಗೆ ಸೇರಿದ ಹಳ್ಳಿಯಲ್ಲಿ ನಡೆಸುವ ಆಶ್ರಮವೊಂದಕ್ಕೆ ಉಗಾದಿಯ ದಿನದಂದೆ ಭೇಟಿ ಕೊಟ್ಟಿದ್ದೆ. ಒಳ್ಳೆಯ ಮತ್ತು ಕೆಟ್ಟ ಅಭಿಪ್ರಾಯಗಳೆರಡನ್ನೂ ಮೂಡಿಸಿಕೊಂಡು ಬಂದೆ.
ಈ ಪ್ರಯಾಣದಲ್ಲಿ ಕಂಡಕಂಡೆಲ್ಲೆಲ್ಲ ವಿಡಿಯೊ ಹಿಡಿದಿದ್ದೇನೆ. ಮುಂದಿನ ವಾರದಿಂದ ಅವನ್ನು Youtube ಗೆ ಸೇರಿಸುತ್ತೇನೆ. ಎಲ್ಲವನ್ನೂ ಅವೇ ಹೇಳುತ್ತವೆ.