[ಮುಗಿದಿಲ್ಲದ, ಹೆಸರಿಟ್ಟಿಲ್ಲದ, ಪರಿಷ್ಕರಣಗೊಂಡಿಲ್ಲದ ಕತೆ-ಕಾದಂಬರಿಯೊಂದರ ಅಲ್ಲಲ್ಲಿಯ ಸಾಲುಗಳು.]
ತಡ ಮಾಡಿದರೆ ಅವಕಾಶ ಎಲ್ಲಿ ತಪ್ಪಿಹೋಗಿಬಿಡುತ್ತದೊ ಎಂದು ಕಿಮ್, ಕೊರಾನ್, ಮತ್ತು ಕೀಲೋ ಅಂದು ರಾತ್ರಿ ಮೂರು ಗಂಟೆಗೇ ಎದ್ದು ಒಬ್ಬೊಬ್ಬರೂ ಒಂದೊಂದು ರಿವಾಲ್ವರ್ ಅನ್ನು ಜೇಬಲ್ಲಿ ತುರಿಕಿಕೊಂಡು ಕಾರಿನಲ್ಲಿ ಓಕ್‌ಲ್ಯಾಂಡ್‌ನಿಂದ ಲಿವರ್‌ಮೋರ್‌ಗೆ ಹೊರಟರು. ಕೊರಾನ್‌ಗೆ ಆ ಮನೆಯ ವಿಳಾಸ ಗೊತ್ತಿತ್ತು. ಮುಂಜಾವು ನಾಲ್ಕೂವರೆಗೆಲ್ಲ ಗಾಂಜಾ ಬೆಳೆಯುತ್ತಿದ್ದವನ ಮನೆಯ ಮುಂದಿದ್ದರು. ಅದು ನಾಲ್ಕು ಬೆಡ್‌ರೂಮ್‌ಗಳ ದೊಡ್ಡ ಮನೆ. ರಸ್ತೆಯಲ್ಲಿ ಯಾರೊಬ್ಬರ ಸಂಚಾರವಾಗಲಿ ಸುಳಿವಾಗಲಿ ಕಾಣಿಸಲಿಲ್ಲ. ಕಾರು ಇಳಿದವರೆ ಮೂವರೂ ಸದ್ದಿಲ್ಲದೆ ಮನೆಯನ್ನು ಬಳಸಿ ಹಿಂಬದಿಯ ಹಿತ್ತಿಲಿಗೆ ನುಸುಳಿದರು. ಕೊರಾನ್ ತುದಿಯಲ್ಲಿ ಚಪ್ಪಟೆಯಾಗಿ ಸ್ವಲ್ಪ ಬಾಗಿದ್ದ ಕಬ್ಬಿಣದ ಕಾಗೆಕೊಕ್ಕಿನ ಸರಳನ್ನು ಜೊತೆಗೆ ಒಯ್ದಿದ್ದ. ಹಿಂಬದಿಯ ಬಾಗಿಲ ಪಕ್ಕದಲ್ಲಿದ್ದ ಕಿಟಕಿಯ ಅಂಚಿನಲ್ಲಿ ಆ ಸರಳನ್ನು ತೂರಿಸಿ ವಿರುದ್ಧ ದಿಕ್ಕಿನಲ್ಲಿ ಜೋರಾಗಿ ಎಳೆದ. ಕಿಟಕಿ ಬಾಗಿಲಿನ ಕೊಂಡಿ ಒಳಗೆ ಚಳ್‌ಪಳ್ ಎಂದು ಕಿತ್ತುಬಂತು. ಕೂಡಲೆ ಕಿಟಕಿಯನ್ನು ಪೂರ ಅಂಚಿಗೆ ಸರಿಸಿ ಮೂವರೂ ಒಳಗೆ ನುಗ್ಗಿದರು.
ಒಳಗೆ ತನ್ನ ೨೫ ವರ್ಷದ ಬಿಳಿಯ ಗರ್ಲ್‌ಫ್ರೆಂಡ್ ಮಿಸ್ಟಿ ಜೊತೆ ಮಲಗಿದ್ದ ೩೫ ವರ್ಷದ ಬಿಳಿಯ ಸೊನೆಪಸುಟ್‌ಗೆ ಇವರು ಮಾಡಿದ ಸದ್ದು ಅರೆಬರೆ ನಿದ್ದೆಯಲ್ಲೂ ಗೊತ್ತಾಯಿತು. ಮದುವೆ ಆಗಿಲ್ಲದಿದ್ದರೂ ಆತನಿಗೆ ತನ್ನ ಗರ್ಲ್‌ಫ್ರೆಂಡ್‌ನಿಂದ ಇಬ್ಬರು ಪುಟ್ಟಮಕ್ಕಳಿದ್ದರು. ದೊಡ್ದವನಿಗೆ ಎರಡೂವರೆ ವರ್ಷ ಮತ್ತು ಚಿಕ್ಕ ಮಗುವಿಗೆ ಇನ್ನೂ ಎಂಟು ತಿಂಗಳಷ್ಟೇ ಆಗಿತ್ತು. ಆ ಚಿಕ್ಕಮಗು ಆಗಾಗ ರಾತ್ರಿ ಹೊತ್ತು ಡೈಪರ್ ಒದ್ದೆ ಮಾಡಿಕೊಂಡರೆ ಅಳುತ್ತಿದ್ದಿದ್ದರಿಂದ ಅವರಿಬ್ಬರಿಗೂ ನಿದ್ದೆಯಲ್ಲೂ ಏಳುವುದು ಅಭ್ಯಾಸವಾಗಿತ್ತು. ಆ ಮಕ್ಕಳಿಬ್ಬರೂ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು. ಇನ್ನೆರಡು ಕೋಣೆಯಲ್ಲಿ ಕುಂಡಗಳಲ್ಲಿದ್ದ ಗಾಂಜಾ ಗಿಡಗಳು ತಮ್ಮ ನಿರಂತರ ಬೆಳವಣಿಗೆಯಲ್ಲಿ ತೊಡಗಿದ್ದವು.
ಹೊರಗಿನ ಸದ್ದಿಗೆ ಎಚ್ಚರವಾಗಿ ಆ ಬಿಳಿಯ ಎದ್ದು ಹೊರಗೆ ಬಂದ. ಆತನ ಗರ್ಲ್‌ಫ್ರೆಂಡ್‌ಗೂ ಎಚ್ಚರವಾಗಿ ಅವಳೂ ಅವನ ಹಿಂದೆ ಬಂದಳು. ಇವರು ಲಿವಿಂಗ್‌ರೂಮಿಗೆ ಬರುವಷ್ಟರಲ್ಲಿ ಮೂವರು ಅಣ್ಣತಮ್ಮಂದಿರೂ ಅಲ್ಲಿದ್ದರು. ಅಷ್ಟೊತ್ತಿಗೆ ಮೂವರ ಕೈಯ್ಯಲ್ಲೂ ರಿವಲ್ವಾರ್‌ಗಳು ಸ್ಥಾಪಿತವಾಗಿದ್ದವು. ಅರೆಬರೆ ಬೆಳಕಿನಲ್ಲಿ ಇವರನ್ನು ಕಂಡ ಮನೆಯವರಿಬ್ಬರೂ ಸ್ಥಂಭಿತರಾಗಿ ನಿಂತುಬಿಟ್ಟರು. ದೊಡ್ದವ ಕಿಮ್ ಕಾಲ್ಸ್ಟನ್ ಅವರಿಗೆ ಮೊದಲ ಮಾತಿನಲ್ಲಿ ಎಚ್ಚರಿಕೆ ಕೊಟ್ಟ.
"ತಾಯ್ಗಂಡನೆ, ಕೈಮೇಲೆತ್ತು. ಏನೂ ತಂತ್ರ ಮಾಡ್ಬೇಡ. ನೀನೂ ಅಷ್ಟೆ, ಸೂಳೆ."
ಮನೆಯವಳಿಗೆ ಮಕ್ಕಳ ಯೋಗಕ್ಷೇಮದ ಭಯ ಆಯಿತು.
"ದಯವಿಟ್ಟು ಏನೂ ಮಾಡಬೇಡಿ. ಮಕ್ಕಳು ನಿದ್ದೆ ಮಾಡ್ತಿದ್ದಾವೆ."
"ಹಾಗಾದ್ರೆ ಕೇಳಿ. ಮನೇಲಿ ಎಷ್ಟು ಹಣ ಇದೆಯೋ ಎಲ್ಲಾ ತಂದುಕೊಡಿ. ಹಾಗೇನೆ ಮನೇಲಿರೋ ಗಾಂಜಾ ಕೂಡ."
ಬಿಳಿಯನಿಗೆ ಅಷ್ಟು ಸುಲಭವಾಗಿ ಬಿಟ್ಟುಕೊಡಲು ಮನಸ್ಸಾಗಲಿಲ್ಲ.
"ಯಾವ ಗಾಂಜಾ? ನಿಮಗೆಲ್ಲೋ ತಪ್ಪು ಸಮಾಚಾರ ಸಿಕ್ಕಿದೆ."
ಅದನ್ನು ಕೇಳಿ ಕೊರಾನ್‌ಗೆ ಕೋಪಬಂತು. ಬಿಳಿಯನ ಬಳಿ ಹೋಗಿ ಅವನ ಮೂತಿಗೆ ಒಂದು ಗುದ್ದಿದ. "ಸೂಳೆಮಗನೆ, ಸುಳ್ಳು ಹೇಳ್ತೀಯಾ? ನಾನು ಹಿಂದೊಮ್ಮೆ ಇಲ್ಲಿಗೆ ಬಂದಿದ್ದೆ."
ಬಿಳಿಯನ ಮೂಗಿನಿಂದ ರಕ್ತ ಒಸರಲು ಆರಂಭವಾಯಿತು. ತನ್ನ ಗೆಳೆಯನ ಸ್ಥಿತಿ ನೋಡಿ ಆ ಬಿಳಿಯಳಿಗೆ ಭಯವಾಯಿತು. ಇವರು ಇನ್ನೇನು ಮಾಡುತ್ತಾರೋ ಎಂದು ಮಕ್ಕಳಿರುವ ಕೋಣೆಗೆ ಹೋಗಲು ಅತ್ತ ನುಗ್ಗಿದಳು. ಅದನ್ನು ನೋಡಿ ದೊಡ್ಡಣ್ಣ ಕಿಮ್ "ಸೂಳೆ, ಅಲ್ಲೇ ನಿಂತ್ಕೊ," ಎಂದ. ಆತನ ಪಕ್ಕದಲ್ಲಿದ್ದ ೧೫ ವರ್ಷದ ಕೀಲೊ ಅವಳು ನಿಲ್ಲದ್ದನ್ನು ಕಂಡು ರಿವಾಲ್ವರ್‌ನ ಟ್ರಿಗರ್ ಅನ್ನು ಅವಸರದಲ್ಲಿ ಒತ್ತಿದ.ಅದು ಹೋಗಿ ಅವಳ ತೊಡೆಗೆ ಬಡಿಯಿತು. ಓ ಮೈ ಗಾಡ್ ಎಂದು ಕಿರುಚಿಕೊಂಡು ಮುಗ್ಗರಿಸಿ ಮಕ್ಕಳ ರೂಮಿನ ಬಾಗಿಲ ಬಳಿ ಬಿದ್ದಳು.
ಒಳಗೆ ಮಕ್ಕಳು ಇದ್ಯಾವುದರ ಪರಿವೆ ಇಲ್ಲದೆ ಇನ್ನೂ ಗಾಢನಿದ್ರೆಯಲ್ಲಿದ್ದರು.
....
Aug 30, 2010
ಗಾಂಜಾ ಬೆಳೆಯುವ ಲಿವರ್‌ಮೋರ್ ಮನೆಯ ಮೇಲೆ ದಾಳಿ
Subscribe to:
Posts (Atom)