Aug 14, 2008

"ಕನ್ನಡ, ಪೂರ್ವದ ಇಟಾಲಿಯನ್" ಮತ್ತು "ಪಂಪೆ, ಹಾಳುಕೊಂಪೆ"

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಆಗಸ್ಟ್ 22, 2008 ರ ಸಂಚಿಕೆಯಲ್ಲಿನ ಲೇಖನ.)

ಕನ್ನಡ ಮತ್ತು ತೆಲುಗು ಭಾಷೆಯ ಲಿಪಿಗಳು ಹೆಚ್ಚೂಕಮ್ಮಿ ಒಂದೇ ರೀತಿ ಇರುವುದರಿಂದ ಮತ್ತು ಕರ್ನಾಟಕ ಮತ್ತು ಆಂಧ್ರ ನೂರಾರು ಮೈಲು ಉದ್ದದ ಗಡಿ ಹಂಚಿಕೊಂಡಿರುವುದರಿಂದ ಆಗಾಗ್ಗೆ ಕನ್ನಡದ ಪತ್ರಿಕೆಗಳಲ್ಲಿ ತೆಲುಗಿನ ಅಥವ ಆಂಧ್ರದ ಸುದ್ದಿಗಳು ಬರುವುದು ಸಹಜ. ಅಂತಹ ಲೇಖನಗಳಲ್ಲಿ ಅನೇಕ ಸಲ ಬರುವ ಕ್ಲಿಷೆ, ತೆಲುಗು, ಪೂರ್ವದ ಇಟಾಲಿಯನ್. ಎಂದು. ಇದನ್ನು ಮೆಚ್ಚುಗೆಯ ರೂಪದಲ್ಲಿಯೊ ಅಥವ ಹೆಮ್ಮೆಯ ರೂಪದಲ್ಲಿಯೋ ಬಳಸಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ವಾಕ್ಯ ಕಂಡಾಗಲೆಲ್ಲ ನನಗೆ ಆಂಧ್ರದ ಕಾಂಗ್ರೆಸ್ಸಿಗರು ದೆಹಲಿ ಹೈಕಮ್ಯಾಂಡಿನ ಇಟಲಿಯಮ್ಮನನ್ನು ಭೇಟಿಯಾದಾಗ ’ನಾನು ಆಂಧ್ರದವನು, ನಮ್ಮ ಭಾಷೆಯನ್ನು ಪೂರ್ವದ ಇಟಾಲಿಯನ್ ಎನ್ನುತ್ತಾರೆ,’ ಎಂಬ ರೆಡಿಮೇಡ್ ವಾಕ್ಯದಿಂದಲೆ ಆರಂಭಿಸುತ್ತಾರಾ? ಎಂಬ ತಮಾಷೆಯ ಆಲೋಚನೆ ಬರುತ್ತದೆ. ನಮ್ಮ ದೇಶದ ಕೆಲವು ಗುಲಾಮಿ ಮನಸ್ಥಿತಿಗಳನ್ನು ಕಂಡಾಗ ಅದು ಅಸಾಧ್ಯವೂ ಅಲ್ಲವೇನೊ?

ಇಟಲಿಯಲ್ಲಿದ್ದಾಗ ನಾನು ಇದರ ಬಗ್ಗೆ ಬಹಳ ಯೋಚಿಸಿದೆ. ಸ್ವಲ್ಪ ಅಧ್ಯಯನವನ್ನೂ ಮಾಡಿದೆ. ಯಾಕೆ ನಾವು ಕೊಡಗನ್ನು ಕರ್ನಾಟಕದ ಕಾಶ್ಮೀರ ಎನ್ನುತ್ತೇವೆ? ಕಾಶ್ಮೀರವನ್ನು ಭಾರತದ ಸ್ವಿಟ್ಜರ್‌ಲ್ಯಾಂಡ್ ಎನ್ನುತ್ತೇವೆ? ತೆಲುಗನ್ನು ಪೂರ್ವದ ಇಟಾಲಿಯನ್ ಎನ್ನುತ್ತೇವೆ? ನಮ್ಮದಲ್ಲದ, ಅಥವ ನಾವು ನೋಡಿಲ್ಲದ, ಕಂಡಿಲ್ಲದ ಅನ್ಯ ವಸ್ತುವಿಗೆ, ಸ್ಥಳಕ್ಕೆ, ಭಾಷೆಗೆ, ವ್ಯಕ್ತಿಗೆ (ಅದೂ ವಿಶೇಷವಾಗಿ ಬಿಳಿಯರಿಗೆ ಅಥವ ಪಶ್ಚಿಮಕ್ಕೆ) ಹೋಲಿಸಿದರೆ ಮಾತ್ರ ನಮ್ಮ ಹಿರಿಮೆ ನಮಗೆ ಮನದಟ್ಟಾಗುತ್ತದೆಯೆ? ಇಲ್ಲದಿದ್ದರೆ ಅದು ಪೀಚು-ಪೇಲವ ಆಗಿಬಿಡುತ್ತದೆಯೆ? ಛೇ, ಎಂತಹ ಕೀಳರಿಮೆ ಇದು. ನಮ್ಮ ಸ್ವಂತಿಕೆಯ ಮತ್ತು ಮಹತ್ತಿನ ಬಗ್ಗೆ ನಮಗೇ ನಂಬಿಕೆಯಿಲ್ಲದಾಗ ಇಂತಹ ಪದಪುಂಜಗಳು ಬಳಕೆಯಾಗುತ್ತವೆ.

"ತೆಲುಗು, ಪೂರ್ವದ ಇಟಾಲಿಯನ್" ಎಂಬ ಮಾತಿಗೂ ಇದೇ ಆಧಾರ. ಈ ಮಾತನ್ನು ಜನ ಸಾಮಾನ್ಯವಾಗಿ ಬಳಸುವುದು ಇಟಾಲಿಯನ್ ಭಾಷೆ ಬಹಳ ಇಂಪಂತೆ, ಹಾಗೆಯೆ ತೆಲುಗು ಸಹ ಇಂಪು, ಎಂದು. ಆದರೆ, ಹೀಗೆ ಹೇಳುವ ಎಷ್ಟೋ ಜನರಿಗೆ ಇಟಾಲಿಯನ್ ಭಾಷೆ ಹೇಗೆ ಧ್ವನಿಸುತ್ತದೆ ಎಂಬ ಕಲ್ಪನೆಯೂ ಇಲ್ಲ. ವಿಚಿತ್ರ ಏನೆಂದರೆ, ತೆಲುಗನ್ನು ಪೂರ್ವದ ಇಟಾಲಿಯನ್ ಎಂದಾತ ಅದನ್ನು ಹಾಗೆ ಹೇಳಿದ್ದು ಅ ಭಾಷೆಯಲ್ಲಿನ ಪದ ಉತ್ಪತ್ತಿಯ ಸಾಮ್ಯತೆಗಳನ್ನು ಗುರುತಿಸಿಯೆ ಹೊರತು ಆ ಭಾಷೆಗಳು ಇಂಪಾಗಿ ಕೇಳಿಸುತ್ತವೆ ಎಂದಲ್ಲ.

ಆ ಭಾಷಾಶಾಸ್ತ್ರಜ್ಞ ಹಾಗೆ ಹೇಳಿದ್ದು, ಇಟಲಿಯಾನೊ ಭಾಷೆಯಂತೆ ತೆಲುಗಿನಲ್ಲಿಯೂ ಪದಗಳು ಸ್ವರದಿಂದಲೆ ಕೊನೆಯಾಗುತ್ತವೆ ಎಂಬ ಕಾರಣಕ್ಕೆ. ಬಹುಶಃ ಆತ ಬಹುಪಾಲು ಪದಗಳು ಅರ್ಧಾಕ್ಷರಗಳಲ್ಲಿಯೆ ಕೊನೆಯಾಗುವ ಹಿಂದಿ ಮತ್ತಿತರ ಉತ್ತರ ಭಾರತದ ಭಾಷೆಗಳನ್ನು ಗಮನಿಸಿ ನಂತರ ದಕ್ಷಿಣ ಭಾರತದ ಭಾಷೆಗಳನ್ನು ಗಮನಿಸಿರಬೇಕು. ಆತ ಹಾಗೆ ಗಮನಿಸಿದ ಮೊದಲ ಭಾಷೆಯೆ ತೆಲುಗು ಆಗಿದ್ದಿರಬೇಕು. ಅಥವ ಇಂತಹುದೆ ಯಾವುದೊ ಒಂದು ಸಂದರ್ಭವಾಗಿರಬೇಕು. ಆಗ ಆತ ತೆಲುಗಿನ ಬಹುಪಾಲು ಪದಗಳು ಅಕಾರಾದಿ ಸ್ವರಗಳಿಂದಲೆ ಕೊನೆಯಾಗುವುದನ್ನು ಗಮನಿಸಿದ್ದಾನೆ. ಇಂಗ್ಲಿಷ್‌ನ ಬಹುಪಾಲು ಪದಗಳು ಅರ್ಧಾಕ್ಷರದಲ್ಲಿಯೆ ಕೊನೆಯಾಗುತ್ತವೆ. ಆದರೆ ಯೂರೋಪಿನ ಅನೇಕ ಭಾಷೆಗಳು ಹೀಗೆ ತೆಲುಗಿನಂತೆಯೆ ಸ್ವರಾಕ್ಷರದ ಜೋಡಣೆಯಿಂದ ಕೊನೆಯಾಗುತ್ತವೆ. ಅದರಲ್ಲಿ ಇಟಾಲಿಯನ್ ಸಹ ಒಂದು. ಬಹುಶಃ ಆತನಿಗೆ ಇಟಾಲಿಯನ್ ಚೆನ್ನಾಗಿ ಗೊತ್ತಿದ್ದಕ್ಕೊ ಅಥವ ಮತ್ತೆನ್ನಿಂತದ್ದಕ್ಕೊ, ತೆಲುಗು ಪೂರ್ವದ ಇಟಾಲಿಯನ್ ಅಂದಿದ್ದಾನೆ, ಅಷ್ಟೆ.

ಆದರೆ ಆತ ತೆಲುಗಿಗಿಂತ ಮುಂಚೆ ಕನ್ನಡವನ್ನು ಗಮನಿಸಿದ್ದರೆ ಇಷ್ಟೊತ್ತಿಗೆ ನಮ್ಮವರೂ, ಕನ್ನಡ, ಪೂರ್ವದ ಇಟಾಲಿಯನ್ ಎಂದು ಇಟಾಲಿಯನ್ ನಾಮಸ್ಮರಣೆ ಮಾಡುತ್ತಿದ್ದರು. ಹೌದು, ನೀವೇ ಗಮನಿಸಿ ನೋಡಿ. ಕನ್ನಡದ ಪದಗಳೂ ಸ್ವರದಿಂದಲೇ ಕೊನೆಯಾಗುತ್ತವೆ. ಅರ್ಧಾಕ್ಷರದಿಂದ ಕೊನೆಯಾಗುವ ಬೇರೆ ಭಾಷೆಯ ಪದಗಳಿಗೆ ನಾವು ’ಉ’ಕಾರ ಸೇರಿಸಿಕೊಂಡು ನಮ್ಮದಾಗಿಸಿಕೊಂಡಿದ್ದೇವೆ. ಆಡು ಭಾಷೆಯಲ್ಲಿ ಇಂಗ್ಲಿಷ್ ಇಂಗ್ಲೀಷು ಆಗಿದೆ; ಕಾರ್, ಬಸ್, ರೈಲ್, ಸ್ಕೂಲ್ ಗಳೆಲ್ಲ ಕಾರು ಬಸ್ಸು ರೈಲು ಸ್ಕೂಲುಗಳಾಗಿವೆ. ಈಗೀಗ ನಮ್ಮದನ್ನಾಗಿ ಮಾಡಿಕೊಳ್ಳುವಲ್ಲಿ ಸೋಲುತ್ತಲೊ, ಅಥವ ಇಂಗ್ಲಿಷ್ ಪದಗಳನ್ನು ಇಂಗ್ಲಿಷರಂತೆ ಬಳಸಿದರೆ ಮಾತ್ರ ಘನತೆ ಎಂಬ ಕಾರಣಕ್ಕಾಗಿಯೊ ಕೆಲವು ಪದಗಳನ್ನು ಮೂಲರೂಪದಲ್ಲಿಯೆ ಬಳಸಲು ಆರಂಭಿಸಿದ್ದೇವೆ. ಇವುಗಳನ್ನು ಬಿಟ್ಟರೆ ನಮ್ಮ ಮೂಲಪದಗಳೆಲ್ಲ ಅಆ..ಓಔ ಸ್ವರದಲ್ಲಿಯೆ ಕೊನೆಯಾಗುತ್ತವೆ. ತೆಲುಗು ಪದಗಳೂ ಹೀಗೆಯೆ. ಇಟಾಲಿಯನ್ ಭಾಷೆಯಲ್ಲಿಯೂ ಹೀಗೆಯೆ. ಅಂದ ಹಾಗೆ, ಇಟಾಲಿಯನ್ ಭಾಷೆಯನ್ನು ಆ ಭಾಷೆಯಲ್ಲಿ ಹೇಳುವುದು ಇಟಲಿಯಾನೊ ಎಂದು. ಇಂಗ್ಲಿಷ್‌ನ ಹೆಸರು ಇಟಾಲಿಯನ್‌ನಲ್ಲಿ "ಇಂಗ್ಲೀಸೆ" (Inglese) ಎಂದು.

ಕನ್ನಡ ಓದುಗರಿಗೆ "ಜೀಸಸ್ ಕ್ರೈಸ್ಟ್" ಪರಿಚಯವಾಗುವುದಕ್ಕಿಂತ ಮೊದಲು ಏಸು ಕ್ರಿಸ್ತನ ಪರಿಚಯವಾಗಿತ್ತು. ಅದೇ ರೀತಿ ಇಟಾಲಿಯನ್ನರಿಗೆ ಆತ ಜೆಸೂ ಕ್ರಿಸ್ತೊ. ಗ್ರೀಕ್‌ನ ಹೆಸರು ಗ್ರೇಚೊ ಎಂದು. ನಾಮಪದಗಳೂ ಹಾಗೆಯೆ: ಡೇವಿಡ್-ದವೀಡೆ; ಪೀಟರ್-ಪೀತ್ರೊ; ಕಾರ್ಲ್-ಕಾರ್ಲೊ; ಅಂತೊನಿಯೊ, ಮರಿಯ, ಸೋನಿಯ, ಪಾವ್ಲ, ಡಾಂಟೆ, ಬರ್ಲುಸ್ಕೊನಿ, ಮಾರ್ಕೋನಿ, ಇತ್ಯಾದಿ. ರೋಮ್, ಮಿಲಾನ್ ನಗರಗಳನ್ನು ಕರೆಯುವುದು ರೋಮಾ, ಮಿಲಾನೊ ಎಂದು. ಅಚ್ಚ ಇಟಾಲಿಯನ್ನರಿಗೆ ಇಂಗ್ಲಿಷರ ಬ್ಯಾಂಗಲೂರ್‌ಗಿಂತ ಕನ್ನಡಿಗರಿಗೆ ಹತ್ತಿರವಾದ ಬೆಂಗಲೂ(ಳೂ)ರು ಬಹಳ ಹತ್ತಿರವಾಗಬಹುದು. ಈ ಎಲ್ಲಾ ಸಾಮ್ಯತೆಗಳಿಂದಾಗಿ ಯಾರಾದರೂ "ಕನ್ನಡ, ಪೂರ್ವದ ಇಟಾಲಿಯನ್" ಅಂದರೆ ಅವರ ಮನಸ್ಥಿತಿಯಲ್ಲಿ ದೋಷ ಹುಡುಕಬಹುದೆ ಹೊರತು ಆ ಮಾತಿನಲ್ಲಲ್ಲ.

ಪಂಪೆ, ಹಾಳುಕೊಂಪೆ...

ಇತ್ತೀಚೆಗೆ ಸ್ನೇಹಿತರೊಬ್ಬರು ಒಂದು ವಿಷಯ ಹೇಳುತ್ತಿದ್ದರು. ಅದು ಕತೆಯೊ, ಕಟ್ಟುಕತೆಯೊ, ಅಥವ ವಾಸ್ತವವೊ ಹೇಳುವುದು ಸ್ವಲ್ಪ ಕಷ್ಟವೆ. ವಿಷಯ ಏನೆಂದರೆ, ಕಳೆದ ಐದತ್ತು ವರ್ಷಗಳಲ್ಲಿ ಕರ್ನಾಟಕ ರಾಜಕೀಯ ರಂಗದ ಮೇಲೆ ಮುಂಚೂಣಿಗೆ ಬಂದುಬಿಟ್ಟಿರುವ ಗಣಿದೊರೆಗಳಾದ ಜನಾರ್ಧನ ರೆಡ್ಡಿ ಮತ್ತವರ ಕುಟುಂಬದವರಿಗೆ ಇಷ್ಟು ಐಶ್ವರ್ಯ ಹೇಗೆ ಬಂತು ಎನ್ನುವುದು. ನಾಡಿನ ಜನತೆಗೆ ಗೊತ್ತಿರುವಂತೆ ರೆಡ್ಡಿಯವರ ತಂದೆ ಕರ್ನಾಟಕ ಸರ್ಕಾರದ ಪೋಲಿಸ್ ಇಲಾಖೆಯಲ್ಲಿದ್ದವರು. ಕತೆ ಆರಂಭವಾಗುವುದು ಅವರು ಹಂಪಿಯಲ್ಲಿ ದಫೇದಾರ್ ಆಗಿದ್ದಾಗಿನಿಂದ. ಆ ಸಮಯದಲ್ಲಿ ಹಾಳು ಹಂಪಿಯಲ್ಲಿ ನಿಧಿ ಹುಡುಕಾಟ ಸಾಮಾನ್ಯವಾಗಿತ್ತಂತೆ. ಯಾರಿಗೊ ಎಲ್ಲಿಯೊ ಏನೊ ಸಿಕ್ಕಿತು ಎಂಬಂತಹ ಸುದ್ದಿಗಳು ಕೇಳಿಬರುತ್ತಿತ್ತಂತೆ; ಆಗ ಹೀಗೆಯೆ ಯಾರೊ ಕೂಲಿಯವನಿಗೆ ನಿಧಿ ಸಿಕ್ಕಿತು; ಅದನ್ನು ರೆಡ್ಡಿಯವರ ದಫೇದಾರ್ ತಂದೆ ವಶಪಡಿಸಿಕೊಂಡು ತಮ್ಮ ಮನೆಗೆ ಹೊತ್ತೊಯ್ದರು; ಇದೇ ಅವರ ಶ್ರೀಮಂತಿಕೆಯ ಮೂಲ, ಎಂದು ಹಂಪಿಯ ಸುತ್ತಮುತ್ತ ಆ ದಫೇದಾರರ ಕಾಲದ ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನುವುದೆ ಆ ವಿಷಯ.

ಇದು ನಿಜವೊ, ಸುಳ್ಳೊ, ದಫೇದಾರರಿಗೆ ಎಷ್ಟು ಸಿಕ್ಕಿತೊ ಇಲ್ಲವೊ, ನಿಜ ಯಾರಿಗೆ ಗೊತ್ತು? ಯುದ್ಧದಲ್ಲಿ ಸೋತ ನಂತರ ಅವ್ಯಾಹತ ಕೊಳ್ಳೆಗೊಳಗಾದ ಹಂಪಿಯಲ್ಲಿ ನಿಧಿ ಸಿಗುವುದು ಸ್ವಲ್ಪ ಕಷ್ಟವೇ ಆದರೂ, ಬೆಂಕಿ ಇಲ್ಲದೆ ಹೋಗೆ ಏಳುವುದಿಲ್ಲ ಎನ್ನುವ ಮಾತಿನ ಹಿನ್ನೆಲೆಯಲ್ಲಿ ಇದನ್ನು ಸಂಪೂರ್ಣವಾಗಿ ತಳ್ಳಿಹಾಕುವುದೂ ಕಷ್ಟವೆ. ಯಾಕೆಂದರೆ, ಕಾಲಾಂತರದಲ್ಲಿ ಊರುಗಳು ಕಣ್ಮರೆಯಾಗುವುದು, ಆಗಾಗ್ಗೆ ಉತ್ಖನನದಲ್ಲಿ ಸಾಕ್ಷ್ಯಗಳು ಕಾಣಿಸುವುದು, ಕೆಲವೊಮ್ಮೆ ಯಾವುದೊ ಪಾಳುಬಿದ್ದ ಊರಿನ ಯಾವುದೊ ಜಾಗದಲ್ಲಿ ಸಾಮಾನುಗಳು ಅಥವ ಒಡವೆಗಳು ಸಿಗುವುದು ಅಸಂಭವವೇನಲ್ಲ.


ಲೇಖನದ ವಿಡಿಯೊ ಪ್ರಸ್ತುತಿ

ಅವರು ಹಂಪೆಯ ಈ ವಿಷಯ ಹೇಳುತ್ತಿದ್ದಾಗ ನನಗೆ ಹಂಪೆಯ ತರಹವೆ ಹೆಸರಿರುವ ಇಟಲಿಯ ಊರೊಂದು ನೆನಪಾಯಿತು. ಅದು ಪಂಪೆ. ಕ್ರಿಸ್ತ ಪೂರ್ವ 7 ನೇ ಶತಮಾನದಲ್ಲಿ ಸ್ಥಾಪನೆಯಾದ ನಗರ. ಅಂದರೆ, ಹಂಪೆಗಿಂತ ಎರಡು ಸಾವಿರ ವರ್ಷಗಳ ಹಳೆಯ ನಗರ. ಆದರೆ ಆ ಊರಿನಲ್ಲಿ ಜನ ಓಡಾಡಿದ್ದು ಮಾತ್ರ ಈಗಿನ ಹಂಪೆಯ ಇತಿಹಾಸವಿದ್ದಷ್ಟು ಕಾಲ. ಮೊದಲ ಶತಮಾನದ ಸಮಯದಲ್ಲಿ ಸುಮಾರು 20 ಸಾವಿರ ಜನಸಂಖ್ಯೆಯ ನಗರ ಅದು. ಯೋಜನಾಬದ್ಧವಾಗಿ, ರೋಮನ್ ವಾಸ್ತಿಶಿಲ್ಪದ ಪ್ರಕಾರ ಕಟ್ಟಲ್ಪಟ್ಟ ನಗರ. ಇಂತಹ ಪಟ್ಟಣ ಹೆಚ್ಚೂಕಮ್ಮಿ 17 ಶತಮಾನಗಳ ಕಾಲ ಮಣ್ಣಿನಲ್ಲಿ, ಬೂದಿಯಲ್ಲಿ ಹೂತುಹೋಗಿತ್ತು. ಅದು ಹೀಗೆ ಪಾಳುಬೀಳುವಂತಾಗಲು ಯಾರೂ ದಾಳಿ ಮಾಡಲಿಲ್ಲ. ಬೆಂಕಿ ಹಚ್ಚಲಿಲ್ಲ. ಭೂಕಂಪವಾಗಲಿಲ್ಲ. ಪ್ರಳಯವಾಗಲಿಲ್ಲ. ಹಾಗೆಯೆ ಒಂದು ರೀತಿಯಲ್ಲಿ ಈ ಎಲ್ಲವೂ ನಿಜ. ನಿಸರ್ಗವೆ ಅದರ ಕಾರಣಕರ್ತೃ. ಅದು ಕ್ರಿ.ಶ. 78. ಆ ನಗರಕ್ಕೆ ಹೊಂದಿಕೊಂಡು ಇದ್ದ ಮೌಂಟ್ ವಿಸೂವಿಯಸ್ ಪರ್ವತ ಮುನಿಸಿಕೊಂಡಿತು. ಮೊದಲು ಭೂಕಂಪವಾಯಿತು. ನಂತರ ಪರ್ವತ ಬೆಂಕಿ ಉಗುಳಿತು. ಕಾಕತಾಳೀಯವೆಂಬಂತೆ ಅದು ಆರಂಭವಾಗಿದ್ದು ಮಾತ್ರ ಸ್ಥಳೀಯ ರೋಮನ್ ಜನ ತಮ್ಮ ಅಗ್ನಿದೇವತೆಯ ಹಬ್ಬ ಮಾಡಿದ ಮಾರನೆಯ ದಿನ.

ಅಗ್ನಿಪರ್ವತ ಅನೇಕ ತಿಂಗಳುಗಳ ಕಾಲ ಬೆಂಕಿ ಮತ್ತು ಬೂದಿಯನ್ನು ಉಗುಳಿತು. ಹಲವರು ಇದ್ದ ಜಾಗದಲ್ಲಿಯೆ ಬೂದಿಯಲ್ಲಿ ಮುಚ್ಚಿಹೋಗಿ ಸತ್ತುಹೋದರು. ದಪ್ಪ ಪದರುಗಳ ಬೂದಿ ನಿಧಾನವಾಗಿ ನಗರವನ್ನು ಮುಚ್ಚುತ್ತ ಬಂತು. ಬದುಕುಳಿದವರು ಊರನ್ನು ತೊರೆದು ಹೋದರು. ಇಡೀ ಊರು ನಿರ್ಮಾನುಷವಾಯಿತು. ಕಾಲಾಂತರದಲ್ಲಿ ಇಂತಹ ಊರು ಇಲ್ಲಿತ್ತು, ಅದರ ಇತಿಹಾಸ ಇದು ಎನ್ನುವುದೆ ಸುತ್ತಮುತ್ತಲಿನ ಜನರಿಗೆ ಮರೆತು ಹೋಗುವಷ್ಟು ಕಣ್ಮರೆಯಾಗುತ್ತ ಬಂತು. ಆ ಊರು ಮತ್ತು ಅದರ ಸುತ್ತಲಿನ ಇನ್ನೂ ಒಂದೆರಡು ನಗರಗಳು ಹೀಗೆಯೆ ಸುಮಾರು 12 ವಿವಿಧ ಬಗೆಯ ಮಣ್ಣಿನ ಪದರಗಳಲ್ಲಿ ಹೂತುಹೋದವು.

ಅದಾದ ಹದಿನೈದು ಶತಮಾನಗಳ ನಂತರವೆ ಭೂಮಿಯೊಳಗಿನ ಆ ನಗರಗಳ ಇರುವಿಕೆ ಇಟಾಲಿಯನ್ನರಿಗೆ ಗೊತ್ತಾಗಿದ್ದು. ಆದರೆ ನಿಜವಾದ ಉತ್ಖನನ ಆರಂಭವಾದದ್ದು ಮಾತ್ರ 18 ನೇ ಶತಮಾನದಲ್ಲಿ. ಕಳೆದ ಎರಡು ಶತಮಾನಗಳಿಂದ ಅದು ಮುಂದುವರೆದಿದೆ. ಆ ಉತ್ಖನನದ ಸಮಯದಲ್ಲಿ ಸಿಕ್ಕ 2000 ವರ್ಷಗಳ ಹಿಂದಿನ ಕಾಮಪ್ರಚೋದಕ ವರ್ಣಭಿತ್ತಿಚಿತ್ರಗಳದೆ ಒಂದು ದೊಡ್ಡ ಕತೆ! ನೇಪಲ್ಸ್‌ನಲ್ಲಿರುವ ಅವಶೇಷಗಳ ಮ್ಯೂಸಿಯಮ್‌ನ ರಹಸ್ಯ ಕೋಣೆಯಲ್ಲಿ ಇಟ್ಟಿರುವ ಆ ವರ್ಣಚಿತ್ರಗಳನ್ನು ನೋಡಲು ಚಿಕ್ಕವರಿಗೆ ಈಗಲೂ ಪ್ರವೇಶವಿಲ್ಲ! ಅನೇಕ ವರ್ಷಗಳ ಕಾಲ ವಯಸ್ಕರಿಗೂ ಇರಲಿಲ್ಲ!
ಎರಡು ಸಹಸ್ರ ವರ್ಷಗಳ ಹಿಂದಿನ ನಗರ ಅದರ ಮೂಲರೂಪದಲ್ಲಿಯೆ ಸಿಕ್ಕಿದ್ದರಿಂದಾಗಿ ಮತ್ತು ಅದರ ಇತಿಹಾಸದಿಂದಾಗಿ ಪಂಪೆ ಇಂದು ಇಟಲಿಯ ಅತಿಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಪ್ರತಿ ವರ್ಷ ಸುಮಾರು 25 ಲಕ್ಷ ಪ್ರವಾಸಿಗರು ಈ ಗತಕಾಲದ ಊರನ್ನು ನೋಡಲು ಬರುತ್ತಾರೆ. ಇತ್ತೀಚಿನ ವರದಿಗಳ ಪ್ರಕಾರ ಉತ್ಖನನದಿಂದ ಎದ್ದ ಈ ಪಾಳುನಗರ ಈಗ ಮತ್ತೆ ಪಾಳು ಬೀಳುತ್ತಿದೆಯಂತೆ. ಕಾರಣ? !ಅತಿಯಾದ ಪ್ರವಾಸೋದ್ಯಮ ಮತ್ತು ಪ್ರವಾಸಿಗರು. ಕೆಲವು ಪ್ರವಾಸಿಗರು ಗೋಡೆಯ ಮೇಲಿನ ಭಿತ್ತಿಚಿತ್ರಗಳ ಪದರವನ್ನು ಕಿತ್ತು ಅಥವ ಕೈಗೆ ಸಿಕ್ಕದ್ದನ್ನು ಬಾಚಿಕೊಂಡು ಒಯ್ಯುತ್ತಿದ್ದಾರಂತೆ.

ಇಂತಹ ದರೋಡೆಗಳಿಂದ ನಿಜವಾದ ನಷ್ಟವಾಗುವುದು ಮಾತ್ರ ನಮ್ಮ ಮನುಷ್ಯ ಜಾತಿಯ ಪರಂಪರೆಗೆ ಮತ್ತು ಇತಿಹಾಸವನ್ನು ಅರ್ಥೈಸಿಕೊಳ್ಳುವ ನಮ್ಮ ಸಾಮರ್ಥ್ಯಕ್ಕೆ. ಅದು ಪಂಪೆಯ ವಿಚಾರದಲ್ಲೂ ನಿಜ, ಹಂಪೆಯ ವಿಚಾರದಲ್ಲೂ ನಿಜ.

Aug 12, 2008

ಗಾಂಧಿ ಜಯಂತಿ ಕಥಾಸ್ಪರ್ಧೆ...

[ಈ ಕಥಾಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಅದು ಇಲ್ಲಿದೆ.]

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆದು ಮೂರು ತಿಂಗಳಾಗುತ್ತ ಬಂದಿದೆ. ಇನ್ನು ಮೂರ್ನಾಲ್ಕು ತಿಂಗಳಿನಲ್ಲಿ ಮತ್ತೆ ಐದು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ! ಬಹುಶಃ ಇನ್ನು ಏಳೆಂಟು ತಿಂಗಳಿನಲ್ಲಿ ಇಡೀ ದೇಶವೆ ಲೋಕಸಭೆಗೆ ತನ್ನ ಪ್ರತಿನಿಧಿಗಳನ್ನು ಚುನಾಯಿಸಲಿದೆ. ಈ ಚುನಾವಣೆಗಳಲ್ಲಿ ನಿಜವಾಗಲೂ ಆಗುವುದು ಏನು, ಜನರ ಮನಸ್ಥಿತಿ ಹೇಗೆ ವರ್ತಿಸುತ್ತದೆ, ಪ್ರಜಾಪ್ರಭುತ್ವ ಯಾವಯಾವ ಹಂತದಲ್ಲಿ ಹೇಗೆ ಬದಲಾಗುತ್ತದೆ, ಇತ್ಯಾದಿಗಳೆಲ್ಲ ಚುನಾವಣಾ ರಾಜಕೀಯವನ್ನು ಬಲ್ಲವರಿಗೆ ಚೆನ್ನಾಗಿ ಗೊತ್ತಿರುವ ಸಂಗತಿಯೆ. ಆದರೆ ಮಿಕ್ಕ ಬಹುಪಾಲು ಜನರಿಗೆ ಇವು ಅಷ್ಟಾಗಿ ಗೊತ್ತಾಗುವುದಿಲ್ಲ. ಯಾಕೆಂದರೆ ಅವರು ಓದುವ ಪತ್ರಿಕಾ ವರದಿಗಳಿಗೆ ಅಥವ ಟಿವಿ ಕಾರ್ಯಕ್ರಮಗಳಿಗೆ ಅವುಗಳದೇ ಆದ ಮಿತಿಯಿದೆ. ಈ ವರದಿಗಳು ಸರಳೀಕರಣಗೊಂಡು, ಸಾಮಾನ್ಯೀಕರಿಸಿಕೊಂಡು ಇರುತ್ತವೆ. ಆದರೆ ಒಂದು ಸಿನೆಮಾಗೆ ಆಗಲಿ, ಅಥವ ಒಂದು ಕತೆ-ಕಾದಂಬರಿಗೆ ಆಗಲಿ ಆ ಮಿತಿ ಇರುವುದಿಲ್ಲ. ಅವುಗಳ ಶಕ್ತಿ ಅವು ಯಾವುದೇ ಸಿದ್ಧಸೂತ್ರಗಳ ಹಂಗಿಲ್ಲದೆ, ಸಂಪಾದಕನ ಅಥವ ಒಂದು ಪತ್ರಿಕೆಯ ಅಥವ ಒಂದು ಮ್ಯಾನೇಜ್‌ಮೆಂಟಿನ ಧ್ಯೇಯಧೋರಣೆಯ ಹಂಗಿಲ್ಲದೆ ಸ್ವತಂತ್ರವಾಗಿ, ಸೃಜನಾತ್ಮಕವಾಗಿ ವಾಸ್ತವವನ್ನು ಕಟ್ಟಿಕೊಡುವುದರಲ್ಲಿ ಇರುತ್ತದೆ. ಹಾಗಾಗಿಯೆ ನಾನು ಹಾಲಿವುಡ್‌ನ ಅನೇಕ ನಿಜಜೀವಿತದ ಘಟನೆಗಳನ್ನು ಆಧರಿಸಿದ ಸಿನೆಮಾಗಳ ಅಭಿಮಾನಿ.

ಇಂತಹ ನೈಜ ವಾಸ್ತವವನ್ನು, ರಾಜಕೀಯ ಮತ್ತು ಅದು ಜನರನ್ನು ಪ್ರಭಾವಿಸುವ ರೀತಿಯನ್ನು, ರಾಜಕಾರಣದಲ್ಲಿನ ಭ್ರಷ್ಟತೆ, ಮೌಲ್ಯಗಳ ಅವನತಿ, ಮೌಲ್ಯಗಳನ್ನು ಕಳೆದುಕೊಂಡು ರಾಜಿಯಾದ ಜನ ಮತ್ತು ಅವರ ಪರಿಸ್ಥಿತಿಗಳನ್ನು, ರಾಜಿಯಾಗದೆ ಹೋದವರ ಕತೆ, ಚುನಾವಣೆ ಗೆಲ್ಲಲು ನಡೆಸುವ ತಂತ್ರಗಳು, ಈ ತಂತ್ರಗಳಿಂದ ಬದಲಾಗುವ ಜನಸಾಮಾನ್ಯರ ಜೀವನಗಳು, ಪಂಚಾಯಿತಿ ಮಟ್ಟದಲ್ಲೂ ನಡೆಯುವ ಭ್ರಷ್ಟತೆ, ಬದಲಾಗುವ ಅಥವಾ ಅಡ್ಡಡ್ಡ ಸೀಳಿಹೋಗುವ ಹಳ್ಳಿ ನಗರಗಳು, ಜಾತಿ ರಾಜಕಾರಣ, ಕೋಮುವಾದ, ಪ್ರತಿನಿಧಿಗಳು ಆಡುವ ಆಟಗಳು, ಬದಲಾಗುವ ಅವರ ಬಣ್ಣಗಳು, ಅದನ್ನು ಜನ ಒಪ್ಪಿಕೊಳ್ಳುವ ಬಗೆ ಮತ್ತು ಅದರ ಕಾರಣಗಳು, ಇತ್ಯಾದಿಗಳಂತಹ ಹಿನ್ನೆಲೆ ಹೊಂದಿರುವ ಸೃಜನಶೀಲ ಸಣ್ಣಕತೆಗಳ "ಗಾಂಧಿ ಜಯಂತಿ ಕಥಾಸ್ಪರ್ಧೆ" ಯನ್ನು "ವಿಕ್ರಾಂತ ಕರ್ನಾಟಕ" ವಾರಪತ್ರಿಕೆ ಆಯೋಜಿಸಿದೆ. ಬಹುಮಾನಗಳ ಪ್ರಾಯೋಜನ ನನ್ನದು. ವಿವರಗಳು ಈ ಕೆಳಕಂಡ ಚಿತ್ರದಲ್ಲಿದೆ. ನಿಮ್ಮಲ್ಲಿ ಒಬ್ಬ ಕತೆಗಾರ ಇದ್ದರೆ, ದಯವಿಟ್ಟು ಅಂತಹ ಕತೆ ಬರೆಯಿರಿ. ಅಥವ ನಿಮ್ಮ ಬಳಗದಲ್ಲಿ ಯಾರಾದರೂ ಅಂತಹವರು ಇದ್ದರೆ ಅವರಿಗೆ ದಯವಿಟ್ಟು ಈ ವಿವರಗಳನ್ನು ತಲುಪಿಸಿ.

ಮೊದಲ ಬಹುಮಾನ: ರೂ. 6000
ಎರಡನೆ ಬಹುಮಾನ: ರೂ. 4000
ಮೂರನೆಯ ಬಹುಮಾನ: ರೂ. 3000
ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ಕತೆ ತಲುಪಲು ಕೊನೆಯ ದಿನಾಂಕ: ಸೆಪ್ಟೆಂಬರ್ 15, 2008

ವಿಳಾಸ:

ವಿಕ್ರಾಂತ ಕರ್ನಾಟಕ 'ಕಥಾಸ್ಪರ್ಧೆ ವಿಭಾಗ'
ನಂ.30/1, ಡಿವಿಜಿ ರಸ್ತೆ, ಬಸವನಗುಡಿ, ಬೆಂಗಳೂರು- 560 004
ದೂರವಾಣಿ : 080-40129999, ಫ್ಯಾಕ್ಸ್: 080-40129979
ಇ-ಮೇಲ್ ವಿಳಾಸ: editor(at)vikrantakarnataka.com

Aug 7, 2008

ಭಾರತೀಯ ಮೂಲದ ಜನಾಂಗವೊಂದರ ವಿರುದ್ಧ ಯೂರೋಪಿನಲ್ಲಿ ತಾರತಮ್ಯ...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಆಗಸ್ಟ್ 15, 2008 ರ ಸಂಚಿಕೆಯಲ್ಲಿನ ಲೇಖನ.)

ಅದು 17 ನೇ ಶತಮಾನದ ಇಂಗ್ಲೆಂಡ್. ಅಂತರ್ಯುದ್ಧದ ಮುಖಾಂತರ ಅರೆಬರೆ ಪ್ರಜಾತಂತ್ರದಿಂದ ಪೂರ್ಣಮಟ್ಟದ ಪ್ರಜಾಪ್ರಭುತ್ವದತ್ತ ಇಂಗ್ಲೆಂಡ್ ಹೊರಳಿದ ಸಮಯ. ಕೆಲವು ಮತೀಯ ಮತ್ತು ರಾಜಕೀಯ ಕಾರಣಗಳಿಂದಾಗಿ ಆರಂಭವಾದ ಆ ಯುದ್ಧ ಆಗಿನ ದೊರೆ ಮೊದಲ ಚಾರ್ಲ್ಸ್‌ನ ಬಹಿರಂಗ ಶಿರಚ್ಚೇದನವನ್ನೇ ಕೇಳಿತು. ದೊರೆಗೆ ಎದುರಾಗಿ ನಿಂತವನು ಆಲಿವರ್ ಕ್ರಾಮ್‌ವೆಲ್ ಎಂಬ ಪ್ರಜಾತಂತ್ರ ಮತ್ತು ಪ್ರಜಾಹಕ್ಕುಗಳ ಪರ ಇದ್ದ ಶ್ರೀಮಂತ ಜಮೀನುದಾರ. ಎಲ್ಲಾ ಅಂತರ್ಯುದ್ಧಗಳಲ್ಲಿ ಆಗುವಂತೆ ಆ ಸಮಯದಲ್ಲಿಯೂ ದೇಶದಲ್ಲಿನ ಎಲ್ಲಾ ತರಹದ ಪ್ರಜೆಗಳು ಅಪಾರವಾದ ಕಷ್ಟನಷ್ಟಗಳಿಗೆ ಈಡಾದರು. ವಿಶೇಷವಾಗಿ, ದೊರೆಯ ಪರ ಇದ್ದ ಅನೇಕ ಜಮೀನುದಾರುಗಳ ಮತ್ತವರ ಕುಟುಂಬಗಳ ಹತ್ಯೆಯಾಯಿತು. ಅವರ ಮನೆಗಳಿಗೆ ಬೆಂಕಿ ಇಟ್ಟರು. ಅನೇಕರು ತಲೆಮರೆಸಿಕೊಂಡು ಓಡಿಹೋಗಿ ಜೀವ ಉಳಿಸಿಕೊಂಡರು. ಈ ಇತಿಹಾಸದ ಹಿನ್ನೆಲೆಯಲ್ಲಿ, ದೊರೆಯ ಪರವಾಗಿ ಹೋರಾಡಿ ಮಡಿದ ತಂದೆ, ಆ ಸುದ್ದಿ ಕೇಳಿ ಕುಸಿದುಬಿದ್ದು ಸತ್ತ ತಾಯಿ, ತಮ್ಮನ್ನೆಲ್ಲ ಮನೆಯಲ್ಲಿ ಕೂಡಿಹಾಕಿ ಸುಟ್ಟುಹಾಕಲು ಪ್ರಯತ್ನಿಸಿದ ವಿರೋಧಿ ಗುಂಪು, ಅದರಿಂದ ಬಚಾವಾಗಿ ತಮ್ಮ ಹಳೆಯ ನಂಬಿಕಸ್ಥ ಸೇವಕನ ಮನೆಯಲ್ಲಿ ವ್ಯವಸಾಯ ಮಾಡುತ್ತ ಬೆಳೆಯುವ 10-15 ವರ್ಷ ವಯಸ್ಸಿನ ಇಬ್ಬರು ಸೋದರರ ಮತ್ತು ಅವರ ಸೋದರಿಯರ ಕತೆಯನ್ನು ಫ್ರೆಡರಿಕ್ ಮ್ಯಾರಿಯಟ್ ಎನ್ನುವ ಲೇಖಕ ಅದ್ಭುತವಾಗಿ ಬರೆದಿದ್ದಾನೆ. ಅದನ್ನು ಈಗಿನ ಲಕ್ಷಾಂತರ ಕನ್ನಡಿಗರು ಓದಿಯೂ ಇದ್ದಾರೆ. ಹೇಗೆಂದರೆ, ಆ ಕಾದಂಬರಿಯನ್ನು ಗೋಪಾಲಕೃಷ್ಣ ಅಡಿಗರು ಕನ್ನಡಕ್ಕೆ "ಬನದ ಮಕ್ಕಳು" ಹೆಸರಿನಲ್ಲಿ ಅನುವಾದ ಮಾಡಿದ್ದಾರೆ ಮತ್ತು ಅದನ್ನು ಎರಡು ದಶಕಗಳ ಹಿಂದೆ ಪಿಯುಸಿಗೊ ಅಥವ ಬೆಂಗಳೂರು ವಿಶ್ವವಿದ್ಯಾಲಯದ ಪದವಿಗೊ ಪಠ್ಯವಾಗಿ ಮಾಡಲಾಗಿತ್ತು.

ಹೈಸ್ಕೂಲು ದಿನಗಳಲ್ಲಿ ನನ್ನನ್ನು ಅಪಾರವಾಗಿ ಸೆಳೆದ, ರೋಮಾಂಚಕಾರಿಯಾದ, ಕಾಡಿನಲ್ಲಿ ಬೆಳೆದ ಹದಿಹರೆಯದ ಹುಡುಗರ ಸಾಹಸ, ಬೇಟೆ, ತ್ಯಾಗ, ಕುಟುಂಬಪ್ರೇಮ, ಯೌವ್ವನದ ಪ್ರೀತಿ, ಮತ್ತು ಯುದ್ಧಭೂಮಿಯ ಘಟನೆಗಳನ್ನೊಳಗೊಂಡ ಕಾದಂಬರಿ ಇದು. ಆ ಕಾದಂಬರಿಯ ಎಡ್ವರ್ಡ್ ಮತ್ತು ಹಂಫ್ರಿ ಸೋದರರಂತೆ ನನ್ನ ಮನಸ್ಸನ್ನು ಸೆಳೆದ ಪಾತ್ರ ಪ್ಯಾಬ್ಲೊ ಎಂಬ ಜಿಪ್ಸಿಯದು.

ಯಾರಿವರು ಈ ಜಿಪ್ಸಿಗಳು? ಯೂರೋಪಿನ ಮತ್ತು ಅಮೆರಿಕದ ಅನೇಕ ವಿಶ್ವಪ್ರಸಿದ್ದ ಕತೆಕಾದಂಬರಿಗಳಲ್ಲಿ ಬರುತ್ತಾರಲ್ಲ? ಪ್ರಸಿದ್ಧ ಫ್ರೆಂಚ್ ಸಾಹಿತಿ ವಿಕ್ಟರ್ ಹ್ಯೂಗೋನ "ನೋಟ್ರ ಡಾಮ್‌ನ ಗೂನುಬೆನ್ನಿನವ" ಕಾದಂಬರಿಯಲ್ಲಿ ಬರುವ ಸುಂದರಿ ಕ್ಯುಸೆಂಡ್ರಳೂ ಜಿಪ್ಸಿ ಯುವತಿ. ಮತ್ತೊಂದು ವಿಶ್ವಪ್ರಸಿದ್ಧ ಸ್ಪ್ಯಾನಿಶ್ ಸಾಹಿತಿ ಮಾರ್ಕ್ವೆಜ್‌ನ "ಒಂದು ನೂರು ವರ್ಷಗಳ ಏಕಾಂತ" ದಲ್ಲಿ ಬರುವ ಹಲವಾರು ಪಾತ್ರಗಳೂ ಜಿಪ್ಸೀಗಳೆ.

ಕಳೆದ ಏಳೆಂಟು ಶತಮಾನಗಳಿಂದ ಯೂರೋಪಿನ ಅನೇಕ ದೇಶಗಳಲ್ಲಿ ಕಂಡುಬರುವ, ಚಮತ್ಕಾರಿಕ ಟ್ರಿಕ್‌ಗಳನ್ನು, ಮ್ಯಾಜಿಕ್‌ಗಳನ್ನು ಮಾಡುತ್ತ, ಗುಂಪುಗುಂಪಾಗಿ ಅಲೆದಾಡುವ ಕಂದುಬಣ್ಣದ ಅಲೆಮಾರಿ ಜನಾಂಗವೆ ಜಿಪ್ಸಿಗಳು. ಬೇರೆಬೇರೆ ದೇಶಗಳಲ್ಲಿ ಬೇರೆಬೇರೆ ಹೆಸರಿನಲ್ಲಿ ಕರೆಯಲ್ಪಡುವ ಇವರನ್ನು ಸಾಮಾನ್ಯವಾಗಿ ಗುರುತಿಸುವುದು ರೋಮಾ ಜಿಪ್ಸೀಗಳು ಎಂದು. ಸ್ವಲ್ಪ ಈಜಿಪ್ಟ್‌ನವರಂತೆ ಕಾಣುತ್ತಿದ್ದುದ್ದರಿಂದ ಇಜಿಪ್ಸೀಯರು, ಜಿಪ್ಸಿಗಳು ಎಂದಾಯಿತು ಎನ್ನುತ್ತಾರೆ ಕೆಲವರು. ಶತಮಾನಗಳ ಕಾಲ ಇವರು ಯಾರು ಮತ್ತು ಯೂರೋಪಿಗೆ ಎಲ್ಲಿಂದ ಬಂದರು ಎನ್ನುವುದು ಅಷ್ಟು ಖಚಿತವಾಗಿ ಯಾರಿಗೂ ಗೊತ್ತಿರಲಿಲ್ಲ. ಆದರೆ ಸುಮಾರು ಇನ್ನೂರು ವರ್ಷಗಳ ಹಿಂದೆ ಒಬ್ಬ ಭಾಷಾಶಾಸ್ತ್ರಜ್ಞ ಜಿಪ್ಸಿಗಳ ರೊಮಾನಿ ಭಾಷೆಗೂ ಮತ್ತು ಕೆಲವು ಭಾರತೀಯ ಭಾಷೆಗಳಿಗೂ ಇದ್ದ ಸಾಮ್ಯತೆಗಳನ್ನು ಗಮನಿಸಿ, ಇವರು ಭಾರತೀಯ ಮೂಲದವರಿರಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ.

"ನಪುಂಸಕತೆ" ಕಳೆದುಕೊಂಡ ಭಾಷೆಗಳು !?
ಆ ಭಾಷಾಶಸ್ತ್ರಜ್ಞ ತನ್ನ ಸಂಶೋಧನೆಯಲ್ಲಿ ಕಂಡುಕೊಂಡ ಆಧಾರವಾದರೂ ಎಂತಹುದು ನೋಡಿ: ಅದು ಆ ಭಾಷೆಗಳಲ್ಲಿ ಇಲ್ಲದ ನಪುಂಸಕ ಲಿಂಗ! ಈಗ ನಮ್ಮ ಕನ್ನಡದ ಉದಾಹರಣೆಯನ್ನೇ ತೆಗೆದುಕೊಳ್ಳೋಣ; ಹುಡುಗ ಬಂದನು, ಹುಡುಗಿ ಬಂದಳು, ಅದು ಬಂದಿತು - ಹೀಗೆ ನಮ್ಮಲ್ಲಿ ಮೂರು ಲಿಂಗಭೇದಗಳಿವೆ. ಇದು ಎಲ್ಲಾ ಭಾರತೀಯ ಭಾಷೆಗಳಲ್ಲಿ ಮೊದಲಿಗೆ ಸಾಮಾನ್ಯವಾಗಿತ್ತು. ಆದರೆ, ಉತ್ತರ ಭಾರತದ ಕೆಲವು ಭಾಷೆಗಳು ಸುಮಾರು ಸಾವಿರ ವರ್ಷಗಳ ಹಿಂದೆ ಈ ನಪುಂಸಕ ಲಿಂಗವನ್ನು ಕಳೆದುಕೊಳ್ಳಲು ಆರಂಭಿಸಿದವು. ಬಹುಪಾಲು ನಪುಂಸಕ ಲಿಂಗ ಪದಗಳು ಪುಲ್ಲಿಂಗವಾಗಿ ಬದಲಾದರೆ ಕೆಲವಾರು ಮಾತ್ರ ಸ್ತ್ರೀಲಿಂಗವಾದವು. ರೋಮಾ ಜಿಪ್ಸೀಗಳ ಭಾಷೆಯಲ್ಲೂ ನಪುಂಸಕ ಲಿಂಗವಿಲ್ಲ. ಹಾಗಾಗಿ ಇವರ ಭಾಷೆ ಭಾರತದಲ್ಲಿಯೇ ಹುಟ್ಟಿರಬೇಕು ಮತ್ತು ಅವರ ವಲಸೆ ಭಾರತೀಯ ಭಾಷೆಗಳು ನಪುಂಸಕ ಲಿಂಗ ಕಳೆದುಕೊಂಡ ಹತ್ತನೆ ಶತಮಾನದಿಂದೀಚೆಗೆಯೇ ಆಗಿರಬೇಕು ಎನ್ನುವ ಅಭಿಪ್ರಾಯಗಳು ಭಾಷಾ ಅಧ್ಯಯನದಿಂದ ಹೊರಬಿತ್ತು.

ಆದರೆ, ಇದು ಕೇವಲ ಭಾಷಾ ಅಧ್ಯಯನದಿಂದ ಮಾತ್ರ ಹೊರಬಂದ ಅಭಿಪ್ರಾಯಗಳು. ಭಾಷೆ ಒಂದು ರೀತಿ ಜಂಗಮವಾದ್ದರಿಂದ ಮತ್ತು ಈ ಜನಾಂಗವೂ ಅಲೆಮಾರಿ ಜಂಗಮ ಜನಾಂಗವಾದ್ದರಿಂದ ಇದಿಷ್ಟೇ ಪುರಾವೆ ಇವರು ಭಾರತೀಯ ಮೂಲದವರು ಎಂದು ಖಡಾಖಂಡಿತವಾಗಿ ಸಾಬೀತು ಮಾಡುವುದಿಲ್ಲವಲ್ಲ? ಹಾಗೆ ಅದು ಸಾಬೀತಾದದ್ದು ಮಾತ್ರ ತೀರಾ ಇತ್ತೀಚಿಗೆ; ಅದೂ 1990 ರಿಂದೀಚೆಗೆ. ಅದೂ ಹೇಗೆಂದರೆ, ಈ ಜಿಪ್ಸೀಗಳಿಗೆ ಬರುವ ಕೆಲವು ಕಾಯಿಲೆ ಮತ್ತು ಡಿಎನ್‌ಎ ಪುರಾವೆಗಳಿಂದ. ಯೂರೋಪು, ಅಮೆರಿಕಗಳಲ್ಲೆಲ್ಲ ಹರಡಿರುವ ಜಿಪ್ಸೀಗಳಿಗೆ ಒಂದು ರೀತಿಯ ಸ್ನಾಯು ದೌರ್ಬಲ್ಯದ ಕಾಯಿಲೆ ಬರುತ್ತದೆ. ಈ ವಿಶಿಷ್ಟ ಕಾಯಿಲೆ ಭಾರತೀಯ ಮೂಲದ ಜನರಿಗೆ ಬಿಟ್ಟರೆ ಬೇರೆಯವರಿಗೆ ಬರುವುದಿಲ್ಲ. ಹಾಗೆಯೆ, ಬಹುಪಾಲು ಜಿಪ್ಸಿಗಳಲ್ಲಿರುವ ಒಂದು ಬಗೆಯ ಕ್ರೋಮೊಸೋಮ್ ಮತ್ತು ಮೈಟೊಕಾಂಡ್ರಿಯಲ್ ಡಿಎನ್‌ಎ ಭಾರತದ ಉಪಖಂಡದವರಲ್ಲಿ ಮಾತ್ರ ಕಂಡುಬರುತ್ತದೆ.

ಹಾಗಾದರೆ ನಮ್ಮ ದೇಶದಲ್ಲಿ ಈ ಜಿಪ್ಸೀಗಳ ಪೂರ್ವಜರು ಯಾರು? ಭಾರತದಲ್ಲಿ ಈಗಲೂ ಕೆಲವು ಕಡೆ ಬಡತನದಿಂದಾಗಿ ಗುಂಪುಗುಂಪುಗಳಾಗಿ ಸಂಚರಿಸುವ ರಾಜಸ್ಥಾನ ಮೂಲದ ಬಂಜಾರರು ಅಥವ ಲಂಬಾಣಿಗಳೆ ಈ ಜಿಪ್ಸೀಗಳ ಪೂರ್ವಜರು!

ಇವರು ಭಾರತೀಯ ಮೂಲದವರು ಎನ್ನುವುದು ವೈಜ್ಞಾನಿಕವಾಗಿ ಖಚಿತವಾದರೂ, ಇಲ್ಲಿಂದ ಯೂರೋಪಿಗೆ ಹೇಗೆ ಹೋದರು ಎನ್ನುವುದಕ್ಕೆ ಖಚಿತ ಉತ್ತರಗಳಿಲ್ಲ. ಹತ್ತನೆ ಶತಮಾನದಲ್ಲಿ ಇರಾನಿನ ಘಜ್ನಿ ಮೊಹಮ್ಮದ್ ಸುಮಾರು ಐದು ಲಕ್ಷ ಹಿಂದುಗಳನ್ನು ಗುಲಾಮರನ್ನಾಗಿ ತನ್ನ ದೇಶಕ್ಕೆ ಎಳೆದುಕೊಂಡು ಹೋದ; ಇವತ್ತಿನ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ದುರ್ಗಮ ಬೆಟ್ಟಗಳಲ್ಲಿ ಇವರನ್ನು ಎಳೆದುಕೊಂಡು ಹೋಗುವಾಗ ಅನೇಕ ಸಾವುನೋವುಗಳಾದವು; ಹಾಗಾಗಿಯೆ ಆ ಬೆಟ್ಟಗಳಿಗೆ ಹಿಂದುಕುಷ್ ಪರ್ವತಗಳು ಎಂಬ ಹೆಸರು ಬಂದಿದ್ದು; ಹಾಗೆ ದಾಳಿಕೋರರು ಎಳೆದುಕೊಂಡು ಹೋದ ಭಾರತೀಯರೆ ಜಿಪ್ಸೀಗಳು ಎನ್ನುತ್ತಾರೆ ಕೆಲವು ಇತಿಹಾಸತಜ್ಞರು. ಮತ್ತೆ ಕೆಲವರು, ಈ ಜಿಪ್ಸೀಗಳು ಕೆಳಜಾತಿಯ ಹಿಂದೂಗಳಾಗಿದ್ದರು; ಇಸ್ಲಾಮಿನ ಆಕ್ರಮಣವನ್ನು ತಡೆಯಲು ಇವರನ್ನು ಸೈನ್ಯಕ್ಕೆ ಸೇರಿಸಿ, ಕ್ಷತ್ರಿಯ ಜಾತಿಗೆ ಬಡ್ತಿ ನೀಡಿ, ಮುಸ್ಲಿಮ್ ದಾಳಿಕೋರರ ವಿರುದ್ಧ ಹೋರಾಡಲು ಪಶ್ಚಿಮಕ್ಕೆ ಕಳುಹಿಸಲಾಯಿತು, ಎನ್ನುತ್ತಾರೆ. ಅವರು ಯಾವುದೆ ಕಾರಣದಿಂದ ಹೊರಹೋಗಿದ್ದರೂ, ಭಾರತದಿಂದ ಹೋದ ನಂತರ ಅವರಿಗೆ ಇಲ್ಲಿನ ಸಂಪರ್ಕ ಸಂಪೂರ್ಣ ಕಳಚಿಹೋಗಿ, ನಂತರ ಅವರು ಒಂದು ವಿಭಿನ್ನ ಗುಂಪಾಗಿ ಯೂರೋಪಿನಲ್ಲಿ ತಲೆಯೆತ್ತಿದ್ದು ಮಾತ್ರ ನಿಜ.

ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಹಂಚಿಹೋಗಿರುವ ಈ ಜನಾಂಗ ಕಳೆದ ಶತಮಾನದಲ್ಲಂತೂ ಯೂರೋಪಿನಲ್ಲಿ ಅನೇಕ ರೀತಿಯ ಜನಾಂಗದ್ವೇಷಕ್ಕೆ ಮತ್ತು ತಾರತಮ್ಯಕ್ಕೆ ಈಡಾಗಿತ್ತು. ಕೆಲವು ಕಮ್ಯುನಿಸ್ಟ್ ದೇಶಗಳೊಂದಿಗೆ ಪ್ರಜಾಪ್ರಭುತ್ವ ದೇಶಗಳೂ ಸಹ ತಮ್ಮ ದೇಶಗಳಲ್ಲಿ ಇವರ ಸಂಖ್ಯೆ ಕಡಿಮೆ ಮಾಡಲು ಸಂಜಯಗಾಂಧಿಯ "ನರ ಕಟ್" ಕಾರ್ಯಕ್ರಮವನ್ನು ಚಾಲ್ತಿಯಲ್ಲಿಟ್ಟಿದ್ದವು. "ಪರಿಶುದ್ಧ ಆರ್ಯ" ಜನಾಂಗವನ್ನು ಮಾತ್ರ ಭೂಮಿಯ ಮೇಲೆ ಉಳಿಸಲು ಮನಸ್ಸು ಮಾಡಿದ್ದ ದುಷ್ಟ ಹಿಟ್ಲರ್ ಯಹೂದಿಗಳ ಜೊತೆಜೊತೆಗೆ ಜಿಪ್ಸೀಗಳನ್ನೂ ಘೆಟ್ಟೋಗಳಲ್ಲಿ ಕೂಡಿಹಾಕಿ ಕೊಂದಿದ್ದ. ನಾಟ್ಜೀಗಳ ಜನಾಂಗದ್ವೇಷಕ್ಕೆ ಸುಮಾರು ಹತ್ತು-ಹದಿನೈದು ಲಕ್ಷ ಜಿಪ್ಸಿಗಳು ಬಲಿಯಾಗಿದ್ದಾರೆ ಎಂದು ಒಂದು ಅಂದಾಜು.

ರೊಮಾ ನಗರವನ್ನು ರಾಜಧಾನಿಯಾಗಿ ಹೊಂದಿರುವ ಈಗಿನ ಇಟಲಿಯಲ್ಲಿ ಸುಮಾರು ಒಂದೂವರೆ ಲಕ್ಷ ರೋಮಾ ಜಿಪ್ಸೀಗಳಿದ್ದಾರೆ ಎಂದು ಅಂದಾಜು. ಬಡವರೂ, ಅಲೆಮಾರಿಗಳೂ, ಮತ್ತು ಅವರಿಗೆಂದೇ ಇರುವ ಕ್ಯಾಂಪ್‌ಗಳಲ್ಲಿ ವಾಸಿಸುವ ಈ ಜನರು ಇನ್ನೂ ಯೂರೋಪಿನ ಮುಖ್ಯವಾಹಿನಿಯಲ್ಲಿ ಬೆರೆಯಲಾಗಿಲ್ಲ. ಈಗ ಇಟಲಿಯಲ್ಲಿ ಈ ಇಡೀ ಜನಾಂಗದವರ ಫಿಂಗರ್‌ಪ್ರಿಂಟ್ ಶೇಖರಿಸುವುದರಲ್ಲಿ ಅಲ್ಲಿನ ಸರ್ಕಾರ ತೊಡಗಿದೆ. ಕಾರಣ? ಈ ಜನಾಂಗದವರು ಮಾಡುವ ಕ್ರಿಮಿನಲ್ ಕೃತ್ಯಗಳನ್ನು ತಡೆಯುವುದು.


ಲೇಖನದ ವಿಡಿಯೊ ಪ್ರಸ್ತುತಿ


ಹೀಗೆ ಫಿಂಗರ್‌ಪ್ರಿಂಟ್ ಮಾಡುವುದರಿಂದ ಏನಾಗುತ್ತದೆ ಎಂದರೆ, ಈ ಜಿಪ್ಸೀಗಳಲ್ಲಿಯ ಯಾರಾದರೂ ಯಾವುದಾದರೂ ಒಂದು ಕಳ್ಳತನ-ಸುಲಿಗೆ-ಕೊಲೆಯಂತಹ ಅಪರಾಧವನ್ನು ಮಾಡಿ ತಮ್ಮ ಬೆರಳಚ್ಚನ್ನು ಘಟನೆ ನಡೆದ ಸ್ಥಳದಲ್ಲಿ ಬಿಟ್ಟುಹೋಗಿದ್ದರೆ, ಅಪರಾಧ ಯಾರು ಮಾಡಿದ್ದಾರೆ ಎನ್ನುವುದನ್ನು ಕಂಡುಹಿಡಿಯುವುದು ಪೋಲಿಸರಿಗೆ ನಿಮಿಷಗಳ ಮಾತ್ರದ ಕೆಲಸ. ಕಂಪ್ಯೂಟರ್ ಮುಂದೆ ಕುಳಿತು, ಘಟನಾ ಸ್ಥಳದಲ್ಲಿ ದೊರೆತಿರುವ ಈ ಬೆರಳಚ್ಚು ಜಿಪ್ಸಿಯದೆ ಎಂಬ ಒಂದು ಪ್ರಶ್ನೆಯನ್ನು ಅದಕ್ಕೆ ಕೇಳಿದರಾಯಿತು. ಅದು ತನ್ನ ಡೇಟಾಬೇಸ್‌ನಲ್ಲಿರುವ ಒಂದೂವರೆ ಲಕ್ಷ ಜಿಪ್ಸೀಗಳ ಬೆರಳಚ್ಚನ್ನೂ ನಿಮಿಷಗಳಲ್ಲಿ ತುಲನೆ ಮಾಡಿ ಆತನ ವಿವರವಿಳಾಸಗಳೊಂದಿಗೆ ತೋರಿಸಿಬಿಡುತ್ತದೆ. ಇದು ಒಳ್ಳೆಯದೆ ಅಲ್ಲವೆ, ಇದರಿಂದ ಏನು ತಪ್ಪು ಎಂದು ಕೆಲವರು ಕೇಳಬಹುದು. ಸಮಸ್ಯೆ ಅಥವ ತಾರತಮ್ಯ ಇರುವುದೇ ಇಲ್ಲಿ. ಇಟಲಿಯ ಇನ್ಯಾವುದೇ ಪ್ರಜೆ ಅಂತಹ ಕೃತ್ಯ ಎಸಗಿದ್ದರೆ ಅವನ ಪತ್ತೆಗಾಗಿ ತಮ್ಮ ಮಾಮೂಲಿ ಪಾರಂಪರಿಕ ತನಿಖಾಕಾರ್ಯಗಳನ್ನು ಮಾಡಬೇಕಾದ ಪೋಲಿಸರು ಜಿಪ್ಸೀಗಳಿಗಾದರೆ ಅದನ್ನು ಮಾಡಬೇಕಿಲ್ಲ. ಒಂದೇ ದೇಶದಲ್ಲಿ ಹುಟ್ಟಿದ, ನೂರಾರು ವರ್ಷಗಳಿಂದ ಆ ನೆಲದಲ್ಲಿ ಓಡಾಡಿದ ಪೂರ್ವಜರಿರುವ, ಇತರರಷ್ಟೇ ಸಮಾನ ನಾಗರಿಕ ಹಕ್ಕುಗಳಿರುವ ಪ್ರಜೆಗಳ ನಡುವೆ ಮಾಡುವ ತಾರತಮ್ಯ ಇದು. ಇದು ಸಿದ್ಧಾಂತದ ಪ್ರಶ್ನೆ; ನ್ಯಾಯದ ಪ್ರಶ್ನೆ; ನೀತಿಯ ಪ್ರಶ್ನೆ; ಮಾನವೀಯತೆಯ ಪ್ರಶ್ನೆ. ಒಂದೇ ದೇಶದಲ್ಲಿ ಹುಟ್ಟಿದವರ ಸಮಾನ ಹಕ್ಕುಗಳ ಪ್ರಶ್ನೆ.

ಕಳೆದ ತಿಂಗಳು ವಿಶ್ವಸಮುದಾಯದಲ್ಲಿ ಇಟಲಿ ಸುದ್ದಿ ಮಾಡಿದ್ದು ಇದೇ ಕಾರಣಕ್ಕೆ. ತನ್ನದೇ ಸದಸ್ಯ ರಾಷ್ಟ್ರವಾದ ಇಟಲಿಯ ಈ ಕೃತ್ಯವನ್ನು ಯೂರೋಪಿಯನ್ ಯೂನಿಯನ್‌ನ ಪಾರ್ಲಿಮೆಂಟ್ ಖಚಿತ ಮಾತುಗಳಲ್ಲಿ ಖಂಡಿಸಿತು. ಇಟಲಿಯಲ್ಲಿ ಮತ್ತೆ ತಲೆ ಎತ್ತುತ್ತಿರುವ ಫ್ಯಾಸಿಸ್ಟ್ ನೀತಿಯ ಪುರಾವೆ ಇದು ಎಂದರು ಅಲ್ಲಿಯ ಕೆಲವರು. ಯೂರೋಪಿನಲ್ಲಿ ಚಿಗುರೊಡೆಯುತ್ತಿರುವ ರೇಸಿಸಮ್‌ನ ಕುರುಹು ಇದು ಎಂದರು. ಇದೇ ಸಮಯದಲ್ಲಿ ಇನ್ನೂ ಒಂದು ಘಟನೆ ನಡೆಯಿತು. ಎರಡು ವಾರದ ಹಿಂದೆ ಇಟಲಿಯ ಬೀಚೊಂದರಲ್ಲಿ ಇಬ್ಬರು ಜಿಪ್ಸಿ ಹುಡುಗಿಯರು ನೀರಾಟ ಆಡುತ್ತ ಸಮುದ್ರದ ನೀರಿನಲ್ಲಿ ಮುಳುಗಿ ಪ್ರಾಣಕಳೆದುಕೊಂಡರು. ನಂತರ ಅವರ ಶವಗಳನ್ನು ಮೇಲಕ್ಕೆತ್ತಿ ಮರಳಿನ ಮೇಲೆ ಸ್ವಲ್ಪಕಾಲ ಮಲಗಿಸಲಾಯಿತು. ಆ ಸಮಯದಲ್ಲಿ ಕೆಲವು ಬಿಳಿಯ ಇಟಾಲಿಯನ್ನರು ಶವಗಳಿಂದ ಅನತಿ ದೂರದಲ್ಲಿ ತಮ್ಮ ಪಾಡಿಗೆ ತಾವು ಸೂರ್ಯಸ್ನಾನ ಮಾಡುತ್ತ, ವಿರಾಮದ ಮೋಜು ಅನುಭವಿಸುತ್ತ, ಏನೂ ಆಗಿಯೆ ಇಲ್ಲವಂತೆ ಕುಳಿತಿದ್ದರು. ಅವರ ಈ ವರ್ತನೆಯ ಫೋಟೋಗಳು ಮಾರನೆ ದಿನ ಇಟಲಿಯ ದಿನಪತ್ರಿಕೆಗಳಲ್ಲಿ ಕಾಣಿಸಿಕೊಂಡವು. ಇಟಲಿಯ ಸಜ್ಜನರು ಸಿಡಿದೆದ್ದರು. ಉಗ್ರಮಾತುಗಳಲ್ಲಿ ತಮ್ಮದೇ ಜನರ ವರ್ತನೆಯನ್ನು ಖಂಡಿಸಿದರು. ಇಟಲಿ ಈಗ ಅಂತಃಸಾಕ್ಷಿಯ ಪ್ರಶ್ನೋತ್ತರದಲ್ಲಿ ತೊಡಗಿಕೊಂಡಿದೆ. ಇವು ಅಲ್ಲಿಯ ತಲ್ಲಣಗಳು... ಭಾರತೀಯ ಮೂಲದ ವಿಶ್ವಜನಾಂಗವೊಂದು ಇನ್ನೂ ಅನುಭವಿಸುತ್ತಿರುವ ತಾರತಮ್ಯಗಳು...

ತಾರತಮ್ಯಗಳ ಬಗ್ಗೆ ಮಾತನಾಡಲು ನಮಗ್ಯಾವ ಹಕ್ಕಿದೆ?
ಇದನ್ನು ಬರೆಯುತ್ತಿರುವ ಹೊತ್ತಿನಲ್ಲಿ ಇಂತಹ ತಾರತಮ್ಯಗಳನ್ನು ಖಂಡಿಸುವ ಅಭಿಪ್ರಾಯವನ್ನು ಈ ಲೇಖನದಲ್ಲಿ ಬಿಂಬಿಸಬೇಕೊ ಬೇಡವೊ ಎನ್ನುವ ಗೊಂದಲದಲ್ಲಿ ಇದ್ದೇನೆ ನಾನು. ಅದು ತಾರತಮ್ಯಗಳು ಸರಿತಪ್ಪು ಎನ್ನುವ ಗೊಂದಲದಿಂದ ಬಂದಿದ್ದಲ್ಲ. ಅದು ನನಗಾಗಲಿ, ಅಥವ ಮತ್ಯಾವುದೇ ಕನ್ನಡ ಬರಹಗಾರನಿಗಾಗಲಿ ಇಂತಹ ಜನಾಂಗದ್ವೇಷವನ್ನಾಗಲಿ, ತಾರತಮ್ಯವನ್ನಾಗಲಿ ಖಂಡಿಸಲು ಯಾವ ಅರ್ಹತೆ ಇದೆ ಎನ್ನುವ ಸ್ವಪ್ರಶ್ನೆಯಿಂದ ಬಂದದ್ದು. ಅದಕ್ಕೆ ಕಾರಣ ನನ್ನ ಕಂಪ್ಯೂಟರ್‌ನ ಪರದೆಯಿಂದ ಕಣ್ಣುಕುಕ್ಕುತ್ತಿರುವ ಒಂದೇ ದಿನದಲ್ಲಿ ಪ್ರಕಟಗೊಂಡ ಎರಡು ಪತ್ರಿಕಾ ವರದಿಗಳು.
ಪ್ರಜಾವಾಣಿಯ ವರದಿಯೊಂದರ ಪ್ರಕಾರ, 1991 ರಲ್ಲಿ ಬಿಜಾಪುರ ಜಿಲ್ಲೆಯಲ್ಲಿ 11 ಜನ ದಲಿತರ ಸಜೀವದಹನ ಮಾಡಿದ ಘಟನೆಯ ಪ್ರಮುಖ ಆರೋಪಿಯನ್ನು ಈಗ ಬಂಧಿಸಲಾಗಿದೆಯಂತೆ. ಜನಾಂಗದ್ವೇಷದಿಂದ ತನ್ನದೇ ಊರಿನವರನ್ನು ಸುಟ್ಟ ಮನುಷ್ಯ ಇಲ್ಲಿಯವರೆಗೂ ಪೋಲಿಸರಿಗೆ ಸಿಕ್ಕಿರಲಿಲ್ಲ. ಆದರೆ ಅದೇ ಊರಿನ ಸುತ್ತಮುತ್ತ ಓಡಾಡಿಕೊಂಡು ಇದ್ದನಂತೆ. ಅಂದರೆ, ಆತನಿಗೆ ಮತ್ತು ಅವನು ಎಸಗಿದ ರೇಸಿಸ್ಟ್ ಕೆಲಸಕ್ಕೆ ಸಾವಿರಾರು ಸಂಖ್ಯೆಯ ನಮ್ಮದೇ ಜನರ ಸಮ್ಮತಿ ಅಥವ ಪ್ರೋತ್ಸಾಹ ಇತ್ತು ಮತ್ತು ಈಗಲೂ ಇದೆ ಎಂದಾಗಲಿಲ್ಲವೆ?

ಎರಡನೆಯ ಪತ್ರಿಕಾ ವರದಿ ಕನ್ನಡಪ್ರಭದ್ದು: ಮೂರು ವರ್ಷಗಳ ಹಿಂದೆ ಕೆಲವು ಮತಾಂಧರು ಉಡುಪಿಯ ಬಳಿ ಇಬ್ಬರು ಅನ್ಯಮತೀಯರನ್ನು ಬೆತ್ತಲೆ ಮಾಡಿ ಎಳೆದಾಡಿದ್ದರು. ಆ ಘಟನೆಯ ಫೋಟೋಗಳು ರಾಜ್ಯಾದ್ಯಂತ ಪತ್ರಿಕೆಗಳಲ್ಲಿ ಬಂದಿತ್ತು. ಈಗ ಆ ಇಡೀ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯ ದೋಷಮುಕ್ತ ಮಾಡಿದೆ. ಸಾಕ್ಷ್ಯಾಧಾರಗಳು ಇಲ್ಲವಂತೆ!
ನಮ್ಮದೇ ನಾಡಿನಲ್ಲಿ ಶತಶತಮಾನಗಳಿಂದ ತಾರತಮ್ಯ ಮಾಡಿಕೊಂಡು ಬಂದಿದ್ದಷ್ಟೆ ಅಲ್ಲದೆ, ಈಗಲೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತಹ ವ್ಯವಸ್ಥೆ ಇಲ್ಲ ಎಂದಾದರೆ ಬೇರೆ ಇನ್ಯಾವುದೊ ದೇಶದಲ್ಲಿನ ತಾರತಮ್ಯದ ಬಗ್ಗೆ ಮಾತನಾಡುವುದಕ್ಕೆ ನಮಗೆ ಯಾವ ಹಕ್ಕಿದೆ? ಒಟ್ಟಾರೆ ಭಾರತೀಯ ಸಮಾಜ ಅಂತಹ ಹಕ್ಕುಗಳನ್ನು ಕಷ್ಟಪಟ್ಟು ಗಳಿಸಿಕೊಳ್ಳಬೇಕಿದೆ... ಅಲ್ಲವೆ?