ಈಗ ಸ್ವಲ್ಪ ಹೊತ್ತಿನ ಮುಂಚೆ ಫರೀದ್ ಜಕಾರಿಯರವರ "GPS" ನೋಡುತ್ತಿದ್ದೆ. ಫರೀದ್ ಜಕಾರಿಯ ಗೊತ್ತಲ್ಲ? ಭಾರತೀಯ ಸಂಜಾತ; ಅಮೇರಿಕದ ಪತ್ರಕರ್ತ. ಜಾಗತಿಕ ರಾಜಕೀಯ ಆಯಾಮಗಳ ಮೇಲೆ ವಸ್ತುನಿಷ್ಠ ಅಭಿಪ್ರಾಯ ಕೊಡುವ ಅಧ್ಯಯನಶೀಲ. ಬುದ್ಧಿಜೀವಿ. ಭಾರತೀಯ ಮುಸಲ್ಮಾನರ ಬಗ್ಗೆ ಮತ್ತು ಅವರಲ್ಲಿಯ ವೈಚಾರಿಕ-ಸಾಂಸ್ಕೃತಿಕ ನಾಯಕತ್ವದ ದಾರಿದ್ರ್ಯದ ಬಗ್ಗೆ ಯೋಚಿಸಿದಾಗೆಲ್ಲ ನೆನಪಿಗೆ ಬರುವ ಮುಂಬಯಿಯಲ್ಲಿ ಹುಟ್ಟಿ ಬೆಳೆದ ಲೇಖಕ. ಆದರೆ, ಫರೀದ್ ಈಗ ಅಮೆರಿಕನ್ ಪ್ರಜೆ!
ಇರಲಿ. ಇವತ್ತು ಫರೀದ್ ಜಕಾರಿಯ ಚೀನಾದ ಪ್ರಧಾನಿ ಮತ್ತು ಅಫ್ಘನ್ ಅಧ್ಯಕ್ಷನ ಸಂದರ್ಶನ ಮಾಡಿದ್ದ. ಕೊನೆಯಲ್ಲಿ ರೋಮನ್ ಸಾಮ್ರಾಟ ಮಾರ್ಕಸ್ ಅರಿಲಿಯಸ್ನ ಒಂದೆರಡು ಮಾತುಗಳನ್ನು ಉಲ್ಲೇಖಿಸಿದ. ಮಾರ್ಕಸ್ ಆಸೆಯ (ಬಯಕೆ) ದುಷ್ಟತನಗಳ ಬಗ್ಗೆ ಹೇಳಿದ್ದ. ಅದನ್ನು ಜಕಾರಿಯ ಅಮೆರಿಕದ ಮತ್ತು ಚೀನಾದ ಜನರಿಗೆ ನೆನಪಿಸಿದ. ಹಾಗೆಯೆ ಮಾರ್ಕಸ್ ಸಾವಿನ ಬಗ್ಗೆ ಹೇಳಿದ್ದ ಮಾತನ್ನೂ ಹೇಳಿದ; "ಸಾವನ್ನು ಬಯಸಬಹುದು. ಏಕೆಂದರೆ ಅದು ಎಲ್ಲಾ ಬಯಕೆಗಳಿಗೂ ಅಂತ್ಯ ಹಾಡುತ್ತದೆ."
ಇದು ನೆನ್ನೆಯಿಂದ ನಾನು ಹಲವಾರು ಸಲ ನೆನಪಿಸಿಕೊಂಡ ಪಾಲ್ ನ್ಯೂಮನ್ (83) ನ ಸಾವು ಮತ್ತು ಅದರಿಂದ ನನ್ನಲ್ಲಿ ಆಗಾಗ ಹುಟ್ಟುತ್ತಿದ್ದ ವಿಷಾದಗಳನ್ನು ಈಗ ನಿಲ್ಲಿಸಿದೆ. ನ್ಯೂಮನ್ಗೆ ಇನ್ನೂ ಬದುಕಬೇಕೆಂಬ ಬಯಕೆ ಇತ್ತೊ ಇಲ್ಲವೊ ಗೊತ್ತಿಲ್ಲ. ಆದರೆ ಸಾರ್ಥಕ ಬದುಕಿನ ನಂತರ ಬರುವ ಸಹಜ ಸಾವಿಗೆ ವಿಷಾದಿಸಬಾರದು ಎಂದು ಮನಸ್ಸು ಹೇಳುತ್ತಿದೆ.
ಪಾಲ್ ನ್ಯೂಮನ್ನನ ಬಗ್ಗೆ ನಾನು ಹೆಚ್ಚಿಗೆ ಬರೆಯಲು ಹೋಗುವುದಿಲ್ಲ. ಯಾಕೆಂದರೆ, ನೀವು ಆತನ ಸಿನೆಮಾಗಳನ್ನು ನೋಡಿದ್ದರೆ ನಿಮಗೆ ಅದರ ಅವಶ್ಯಕತೆ ಇಲ್ಲ. ನೋಡಿಲ್ಲವಾದರೆ ಆತನ ಒಂದೆರಡು ಸಿನಿಮಾ ನೋಡಿದರೂ ಸಾಕು ಆತನ ಪ್ರತಿಭೆ ಕಾಣಿಸುತ್ತದೆ. ವಾರದ ಹಿಂದೆ ತಾನೆ ನೋಡಿದ್ದ ಆತನ "ಹಡ್" ಸಿನೆಮಾ ಗಾಢವಾಗಿ ತಟ್ಟಿತ್ತು. ಆ ಸಿನೆಮಾದ ಆತನ ಪಾತ್ರವನ್ನು ಮೆಚ್ಚಲಾಗದು. ಆದರೆ ಅವನನ್ನು ದ್ವೇಷಿಸಲಾಗದು. ಮನುಷ್ಯನ ಒಳ್ಳೆಯತನಗಳ ಬಗ್ಗೆ ಗೌರವ ಹುಟ್ಟಿಸುತ್ತಲೆ ಕೆಟ್ಟವರನ್ನೂ ಒಂದಿಷ್ಟು ಕನಿಕರದಿಂದ ನೋಡುವ ಬಗೆಯನ್ನು ಆ ಸಿನೆಮಾ ಕಲಿಸುತ್ತದೆ.
ನ್ಯೂಮನ್ ನೀಲಿ ಕಣ್ಣುಗಳ ಸ್ಫುರದ್ರೂಪಿ ಮನುಷ್ಯ. ಆದರೆ ಅನೇಕ ಚಿತ್ರಗಳಲ್ಲಿ ಆತ ನೆಗೆಟಿವ್ ಛಾಯೆಗಳಿರುವ indifferent, careless, ಮತ್ತು ಆದರ್ಶಗಳಿಗೆ ಅಂಟಿಕೊಳ್ಳದ ಪಾತ್ರಗಳಲ್ಲಿ ನಟಿಸಿದ್ದಾನೆ. ಆ ಪಾತ್ರಗಳಲ್ಲಿ ನಟಿಸುತ್ತಲೆ ಒಳ್ಳೆಯದರ ಬಗ್ಗೆ ವಿಷಾದವಿಲ್ಲದ ಗೌರವ ಮೂಡಿಸುತ್ತಾನೆ.
ನ್ಯೂಮನ್ನ ಸಿನೆಮಾಗಳಂತೆಯೆ ಆತನ ಸಿನೆಮಾ ಹೊರತಾದ ಕೆಲಸಗಳೂ ನನ್ನಲ್ಲಿ ಅಪಾರ ಕುತೂಹಲ ಮತ್ತು ಹೆಮ್ಮೆ ಮೂಡಿಸುತ್ತವೆ. ತನ್ನ ಹೆಸರಿನಲ್ಲಿ ಮಾರಾಟವಾಗುವ ಆಹಾರ ಉತ್ಪನ್ನಗಳ ತನ್ನ ಪಾಲಿನ ಪ್ರತಿ ಲಾಭಾಂಶವೂ ಸಮುದಾಯ ಸೇವಾ ಸಂಸ್ಥೆಗಳಿಗೆ ಹೋಗುವಂತೆ ಮಾಡಿದ್ದ. ಹಾಗೆಯೆ ಆತ ಒಬ್ಬ ಉದಾರ ಮನಸ್ಸಿನ ಮನುಷ್ಯ. ಉದಾರ ಮೌಲ್ಯಗಳಿಗಾಗಿ ಅನೇಕ ಸಲ ಧ್ವನಿಯೆತ್ತಿದ್ದಾನೆ. 60ರ ದಶಕದಲ್ಲಿಯ ಕಪ್ಪುಜನರ ನಾಗರಿಕ ಹಕ್ಕುಗಳ ಹೋರಾಟವನ್ನು ಬೆಂಬಲಿಸಿದ್ದ. ವಿಯಟ್ನಾಮ್ ಯುದ್ಧವನ್ನು ವಿರೋಧಿಸಿದ್ದ. ಆಗಿನ ಅಧ್ಯಕ್ಷ ನಿಕ್ಸನ್ನ "ವೈರಿ ಪಟ್ಟಿ"ಯಲ್ಲಿ ಆತನ ಹೆಸರೂ ಇತ್ತು. ಆ ಪಟ್ಟಿಯಲ್ಲಿ ತನ್ನ ಹೆಸರು ಸೇರಿಕೊಂಡದ್ದನ್ನು ತನ್ನ ಜೀವನದ ಅತಿ ಹೆಮ್ಮೆಯ ಗಳಿಗೆ ಎಂದು ಹೇಳಿಕೊಂಡಿದ್ದ.
ಹಾಲಿವುಡ್ನ ನನ್ನ ನೆಚ್ಚಿನ ನಟರಲ್ಲಿ ರಾಬರ್ಟ್ ರೆಡ್ಫೋರ್ಡ್ ಸಹ ಒಬ್ಬ. ಆತನೂ ಒಬ್ಬ ಆಕ್ಟಿವಿಸ್ಟ್. ನ್ಯೂಮನ್ ಮತ್ತು ರೆಡ್ಫೋರ್ಡ್ ಇಬ್ಬರೂ ಸೇರಿ ಎರಡು ಚಿತ್ರಗಳಲ್ಲಿ ('Butch Cassidy and The Sundance Kid' ಮತ್ತು 'The Sting') ನಟಿಸಿದ್ದಾರೆ. ಅದ್ಭುತ ಚಿತ್ರಗಳು. ರೆಡ್ಫೋರ್ಡ್ ನ್ಯೂಮನ್ನನ ಸಾವಿಗೆ "ನಾನು ಒಬ್ಬ ನೈಜ ಸ್ನೇಹಿತನನ್ನು ಕಳೆದುಕೊಂಡೆ. My life -- and this country -- is better for his being in it." ಅಂದಿದ್ದಾನೆ. ಈ ದೇಶದ್ದೆ ಏನು, ವಿಶ್ವದ ಅನೇಕ ಜನರ ಜೀವನ ಸಹ್ಯವಾಗಿರುವುದು ಈ ತರಹದ ಸಜ್ಜನರಿಂದ; ಪ್ರಾಮಾಣಿಕ, ಮಾನವೀಯ ಮೌಲ್ಯಗಳ ಕಲಾವಿದರಿಂದ.
ಇದೇ ಸಮಯದಲ್ಲಿ ನನಗೆ ನಮ್ಮ ಭಾರತ ಮತ್ತು ಕರ್ನಾಟಕದ "ತಾರೆ"ಗಳ ನೆನಪು ಬೇಡವೆಂದರೂ ಬರುತ್ತದೆ. ಈ ಹೋಲಿಕೆಗಳಿಂದ ತಪ್ಪಿಸಿಕೊಳ್ಳುವುದು ಅಪಾರ ಹಿಂಸೆ. ಹಾಲಿವುಡ್ನ ನಟ-ನಿರ್ದೇಶಕರ ಬುದ್ಧಿಶಕ್ತಿ ಮತ್ತು ಆಕ್ಟಿವಿಸಮ್ಗೂ ನಮ್ಮ ತಾರಾಲೋಕದ "ಅನ್ಯ ಗ್ರಹ ಜೀವಿಗಳ" ಬುದ್ಧಿಶಕ್ತಿ ಮತ್ತು ಕ್ರಿಯಾಶೀಲತೆಗೂ ಅಂತರ ನಿರಂತರವಾಗಿ ಮುಂದುವರೆಯುತ್ತಿದೆ. ಜಾರ್ಜ್ ಕ್ಲೂನಿ ವಿಶ್ವಸಂಸ್ಥೆಗೆ ಹೋಗಿ ಜನಾಂಗನಾಶದ ಬಗ್ಗೆ ಮಾತನಾಡುತ್ತಾನೆ. ತಮ್ಮ ದೇಶದ ಮತ್ತು ವಿಶ್ವದ ಸ್ಥಿತಿಗತಿಯ ಬಗ್ಗೆ ಹಾಲಿವುಡ್ನ ಅನೇಕ ನಟನಟಿಯರು ಜವಾಬ್ದಾರಿಯಿಂದ ಮತ್ತು ಅಧಿಕೃತತೆಯಿಂದ ಮಾತನಾಡುವ ಶಕ್ತಿ ಮತ್ತು ಜ್ಞಾನ ಪಡೆದಿದ್ದಾರೆ. ಆದರೆ, ನಮ್ಮ ಎಷ್ಟು ನಟನಟಿಯರು ನಮ್ಮ ಸಮಾಜದ ವಾಸ್ತವಿಕ ಸಮಸ್ಯೆಗಳ ಬಗ್ಗೆ ಪ್ರಗತಿಪರ ಚಿಂತನಶೀಲತೆಯಿಂದ ಮಾತನಾಡಬಲ್ಲರು? ಇವರನ್ನು ನೋಡಿದರೆ ಕನಿಕರ ಹುಟ್ಟುತ್ತದೆ. ಇವತ್ತು ನಾವು ನಿಜಕ್ಕೂ ಚಿಂತನೆಯನ್ನು ಇಂಜೆಕ್ಟ್ ಮಾಡಬೇಕಿರುವುದು ನಮ್ಮ ದೇಶದ ಸಿನೆಮಾ ರಂಗಕ್ಕೆ.
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 3, 2008 ರ ಸಂಚಿಕೆಯಲ್ಲಿನ ಲೇಖನ.)
ಕಳೆದ ಮೂರು ದಶಕಗಳ ಜಾಗತಿಕ ವಿದ್ಯಮಾನಗಳನ್ನು ಗಮನಿಸಿ ನೋಡಿ. 1980 ರ ದಶಕದಲ್ಲಿ ರೊನಾಲ್ಡ್ ರೇಗನ್, ಮಾರ್ಗರೇಟ್ ಥ್ಯಾಚರ್ ಮತ್ತು ಮಿಖಾಯಿಲ್ ಗೋರ್ಬಚೆವ್ರ ನಾಯಕತ್ವ ಪ್ರಜಾಪ್ರಭುತ್ವವಾದಿ ಮತ್ತು ಕಮ್ಯುನಿಸ್ಟ್ ದೇಶಗಳ ನಡುವಿನ ಶೀತಲ ಸಮರಕ್ಕೆ ಕೊನೆ ಹಾಡಿತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು ಮೂರು ದಶಕಗಳ ಕಾಲ ಇಡೀ ವಿಶ್ವವೆ ಮುಕ್ತ ಆರ್ಥಿಕತೆಗೆ, ಜಾಗತೀಕರಣಕ್ಕೆ ತೆರೆದುಕೊಂಡಿತು. ಇದರ ಪರಿಣಾಮವಾಗಿ ಕಳೆದ ಶತಮಾನದ ಹಲವಾರು ಪ್ರಮುಖ ರಾಷ್ಟ್ರಗಳು ವಿಶ್ವರಂಗದಲ್ಲಿ ತಮ್ಮ ಪ್ರಾಮುಖ್ಯತೆ ಕಳೆದುಕೊಳ್ಳುತ್ತ ಬಂದಿವೆ. ಮುಂದುವರೆದ ರಾಷ್ಟ್ರಗಳ ಆರ್ಥಿಕ ಸಂಪತ್ತಿನ ವಿಸ್ತರಣೆ ಸ್ಥಗಿತವಾಗಿದ್ದರೆ ಚೀನಾ ಮತ್ತು ಭಾರತದಂತಹ ಪುರಾತನ ನಾಗರಿಕತೆಯ ರಾಷ್ಟ್ರಗಳು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳುತ್ತ ನಡೆದಿವೆ. ಜಾಗತೀಕರಣದಿಂದ ತೃತೀಯ ವಿಶ್ವದ ಬಡ ರಾಷ್ಟ್ರಗಳಿಗೆ ಅನುಕೂಲವಾಗುತ್ತದೆ ಎಂದು ಹೇಳುತ್ತ ಬಂದ ಆರ್ಥಿಕ ತಜ್ಞರ ಮಾತು ನಿಜವಾಗುವತ್ತ ಸಾಗುತಿದೆ.
ಈ ಜಾಗತೀಕರಣದ ಆರಂಭದಲ್ಲಿ ಅಮೆರಿಕ, ಜಪಾನ್, ಮತ್ತು ಯೂರೋಪಿನ ಹಲವಾರು ರಾಷ್ಟ್ರಗಳು ಅಪಾರ ಲಾಭ ಮಾಡಿಕೊಂಡವು. ಪ್ರತ್ಯಕ್ಷ ಮತ್ತು ಪರೋಕ್ಷ ಒತ್ತಡಗಳಿಂದ ತೃತೀಯ ಜಗತ್ತಿನ ದೇಶಗಳ ಕಾನೂನು ಕಾಯ್ದೆಗಳನ್ನು ಬದಲಾಗುವಂತೆ ಅವರು ನೋಡಿಕೊಂಡರು. ಆ ಮೂಲಕ ಬಡ ರಾಷ್ಟ್ರಗಳಿಗೆ ತಮ್ಮ ಸಾಮಗ್ರಿಗಳನ್ನು ಅಪಾರ ಪ್ರಮಾಣದಲ್ಲಿ ರಫ್ತು ಮಾಡಿ ದುಡ್ಡು ಮಾಡಿಕೊಂಡರು. ಅದೇ ಬಡರಾಷ್ಟ್ರಗಳಲ್ಲಿನ ಅಗ್ಗದ ಕೂಲಿ ಮತ್ತು ಉತ್ಪಾದನಾ ವೆಚ್ಚದಿಂದಾಗಿ ತಮಗೆ ಬೇಕಾದ ಸಾಮಗ್ರಿಗಳನ್ನು ತಮ್ಮ ದೇಶದಲ್ಲಿನ ಬೆಲೆಗಿಂತ ಅಗ್ಗದ ಬೆಲೆಗೆ ಕೊಂಡುಕೊಂಡು ತಮ್ಮ ಸುಧಾರಿಸಿದ್ದ ಲೌಕಿಕ ಜೀವನವನ್ನು ಮತ್ತೂ ಐಷಾರಾಮಿ ಮಾಡಿಕೊಂಡರು. ಅಮೆರಿಕದಂತಹ ದೇಶ ಸ್ವತಂತ್ರ ಅರ್ಥವ್ಯವಸ್ಥೆಯ ನೆಪದಲ್ಲಿ ತನ್ನ ದೇಶದ ಒಳಗೂ ಕಾಯ್ದೆಕಾನೂನುಗಳನ್ನು ಮತ್ತೂ ಸಡಿಲಿಸಿಕೊಂಡಿತು. ಮೊದಮೊದಲು ಎಲ್ಲಾ ಚೆನ್ನಾಗಿತ್ತು. ಆದರೆ ಈ ಹೊಸ ಶತಮಾನದಲ್ಲಿ ಪಾತ್ರಗಳು ಬದಲಾಗುತ್ತಿವೆ. ವಿದೇಶಗಳ ಅಗ್ಗದ ಸಾಮಾನುಗಳನ್ನು ಕೊಳ್ಳುವ ಭರದಲ್ಲಿ ಮುಂದುವರೆದ ದೇಶಗಳ ಕಾರ್ಖಾನೆಗಳು ಮುಚ್ಚುತ್ತ ಬಂದವು. ಕಳೆದ ನಾಲ್ಕೈದು ವರ್ಷಗಳಿಂದ ಆಗುತ್ತಿರುವ ಬದಲಾವಣೆಗಳನ್ನೆ ನೋಡಿ. ಜಾಗತೀಕರಣದ ಪ್ರಬಲ ಬೆಂಬಲಿಗನಾಗಿದ್ದ ಅಮೆರಿಕ ಈಗ ತನಗೆ ಅನುಕೂಲವಾಗಿಲ್ಲದ ಈ ಸಮಯದಲ್ಲಿ ಜಾಗತೀಕರಣದ ವಿರೋಧಿಯಾಗುತ್ತ ನಡೆದಿದೆ. ಆರ್ಥಿಕ ಕ್ಷೇತ್ರ ಸರ್ಕಾರದ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು ಎಂದು ಭಾರತ-ಚೀನಾಗಳಂತಹ ದೇಶಗಳ ಮೇಲೆ ಒತ್ತಡ ಹೇರುತ್ತ ಬಂದ ದೇಶ ಈಗ ಒಂದು ವಾರದಿಂದ ಆ ದೇಶದ ಆರ್ಥಿಕ ಕ್ಷೇತ್ರವನ್ನೆ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವತ್ತ, "ಸಮಾಜವಾದಿ" ದೇಶವಾಗುವತ್ತ ಹೊರಟಿದೆ.
ಯುದ್ಧಸಂಬಂಧಿ ಲೇಖನದಲ್ಲಿ ಈ ಆರ್ಥಿಕ ವಿಷಯಗಳ ಹಿನ್ನೆಲೆ ಯಾಕೆ ಎಂದು ನಿಮಗೆ ಈಗಾಗಲೆ ಅನ್ನಿಸಿರಬಹುದು. ಆದಕ್ಕೆ ಉತ್ತರವಾಗಿ ಕಳೆದ ಶತಮಾನದ ಎರಡು ವಿಶ್ವಯುದ್ಧಗಳಿಗೂ ಹಿನ್ನೆಲೆಯಾಗಿ ಇದ್ದದ್ದು ಆರ್ಥಿಕ ವಿಷಯಗಳೆ ಎನ್ನುವುದರತ್ತ ನಿಮ್ಮ ಗಮನ ಸೆಳೆಯಬಯಸುತ್ತೇನೆ. ಮೊದಲ ಮಹಾಯುದ್ಧ ಅಷ್ಟು ದೊಡ್ಡ ಪ್ರಮಾಣದಲ್ಲಿ ಸ್ಫೋಟಗೊಳ್ಳಲು ಕಾರಣವಾಗಿದ್ದು ಜರ್ಮನಿ ಮತ್ತು ಬ್ರಿಟನ್ಗಳ ಆರ್ಥಿಕ ಸಾರ್ವಭೌಮತ್ವದ ಹಂಬಲ. ಕಳೆದ ಶತಮಾನದ ಆರಂಭದಲ್ಲಿ ಕೈಗಾರಿಕೀಕರಣದಿಂದ ಜರ್ಮನಿ ಶ್ರೀಮಂತವಾಗುತ್ತ ನಡೆದಿತ್ತು. ಆದರೆ ಅದಕ್ಕೆ ಆಗಿನ ನಂಬರ್ ಒನ್ ರಾಷ್ಟ್ರ ಬ್ರಿಟನ್ಗಿದ್ದಷ್ಟು ದೊಡ್ಡ ಗಾತ್ರದ ಸಾಮ್ರಾಜ್ಯವಿರಲಿಲ್ಲ. ತನ್ನ ದೇಶದ ಹೊರಗೂ ತನ್ನ ಆರ್ಥಿಕ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಬೇಕೆಂಬ ಜರ್ಮನಿಯ ತುಡಿತವೆ ಸಣ್ಣವಿಷಯವೊಂದನ್ನು ಮುಂದಿಟ್ಟುಕೊಂಡು ಯೂರೋಪಿನ ರಾಷ್ಟ್ರಗಳು ಒಬ್ಬರ ಮೇಲೆ ಒಬ್ಬರು ಯುದ್ಧ ಸಾರಲು ನೆಪವಾಯಿತು. ನಾಲ್ಕು ವರ್ಷಗಳ ಆ ಯುದ್ಧ ನಾಲ್ಕು ಕೋಟಿ ಜನರ ಜೀವ ನುಂಗಿತು!
ಮೊದಲ ಯುದ್ಧವನ್ನು ಸೋತ ಜರ್ಮನಿ ಮತ್ತೆ ಹಿಟ್ಲರ್ನ ಮೂಲಕ ಆರ್ಥಿಕ ಸ್ಥಿರತೆ ಪಡೆದುಕೊಂಡಿತು. ಆ ಆರ್ಥಿಕ ಶ್ರಿಮಂತಿಕೆಯಿಂದ ಬಲಪಡೆದುಕೊಂಡ ಹಿಟ್ಲರ್ನ ಕೋಮುವಾದ ಸಾಮ್ರಾಜ್ಯಶಾಹಿಯಾಗುವತ್ತ ನಡೆಯಿತು. ಆದರೆ ಅಷ್ಟೊತ್ತಿಗೆ ವಿಶ್ವದ ಬಹುಪಾಲು ಕಡೆ ತನ್ನ ವಸಾಹುತಗಳನ್ನು ಹೊಂದಿದ್ದ ಸೂಪರ್ ಪವರ್ ಬ್ರಿಟನ್ಗೆ ಹಿಟ್ಲರ್ನ ವಸಾಹುತುಶಾಹಿಯನ್ನು ವಿರೋಧಿಸುವ ನೈತಿಕ ಬಲ ಇರಲಿಲ್ಲ. ಅದೇ ಸಮಯದಲ್ಲಿ ಅದರ ಆರ್ಥಿಕ ಬಲವೂ ಕ್ಷೀಣಿಸುತ್ತ ಬಂದಿತ್ತು. ತಮ್ಮ ಗತಕಾಲದ ಸಾಮ್ರಾಜ್ಯಶಾಹಿ ಹಿರಿಮೆಯನ್ನು ಪಡೆದುಕೊಳ್ಳಲು ಹಪಹಪಿಸಿದ ನವಶ್ರೀಮಂತ ಇಟಲಿ ಮತ್ತು ಜಪಾನ್ಗಳು ಜರ್ಮನಿಯ ಸಂಗಾತಿಗಳಾದರು. ಅಮೆರಿಕವನ್ನು ಬಿಟ್ಟರೆ ಬ್ರಿಟನ್-ಫ್ರಾನ್ಸ್ಗಳು ವಸಾಹುತುಶಾಹಿಯನ್ನು ಎದುರಿಸುವ ನೈತಿಕ ಸ್ಥಿತಿಯಲ್ಲಿ ಇರಲಿಲ್ಲ. ಆಗ ಅವರಿಗಿದ್ದ ಒಂದೇ ನೈತಿಕ ಬಲ ಎಂದರೆ ತಮ್ಮ ದೇಶಗಳ ಸ್ವತಂತ್ರ ಆಸ್ತಿತ್ವವನ್ನು ಉಳಿಸಿಕೊಳ್ಳುವ ಮತ್ತು ಹಿಟ್ಲರ್ನ ಜನಾಂಗೀಯ ಬರ್ಬರತೆಯನ್ನು ನಿಲ್ಲಿಸುವ ಮಾನವೀಯ ಕಾರಣಗಳು ಮಾತ್ರ.
ಎರಡನೆಯ ವಿಶ್ವಯುದ್ಧದ ನಂತರದ ಶೀತಲಸಮರ ಅಮೆರಿಕ ನಾಯಕತ್ವದ ಪ್ರಜಾಪ್ರಭುತ್ವವಾದಿ ದೇಶಗಳನ್ನು ಮತ್ತು ಸೋವಿಯತ್ ನೇತೃತ್ವದ ಕಮ್ಯುನಿಸ್ಟ್ ದೇಶಗಳನ್ನು ಹಲವಾರು ಸಲ ವಿಶ್ವಸಮರದ ಅಂಚಿಗೆ ತಂದು ನಿಲ್ಲಿಸಿದ್ದಿದೆ. ಆದರೆ, ಜಾನ್ ಕೆನ್ನೆಡಿಯಂತಹ ನಾಯಕರು ತಮ್ಮ ದೇಶದೆಡೆಗಿನ ತೀವ್ರ ಕಾಳಜಿಯಿಂದ ಅದನ್ನು ಭಂಗಗೊಳಿಸಿದ್ದಿದೆ. ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ದೇಶದ ಸೇನಾಧಿಕಾರಿಗಳು ರಷ್ಯಾದ ಮೇಲೆ ಯುದ್ಧಕ್ಕೆ ಹಾತೊರೆಯುತ್ತಿದ್ದಾಗ ಕೆನ್ನೆಡಿ ಅವರಿಗೆ ಮೊದಲ ವಿಶ್ವಯುದ್ಧ ಎಂತಹ ಸಣ್ಣ ತಪ್ಪಿನಿಂದ ಪ್ರಚೋದನೆಗೊಂಡಿತು ಎಂಬುದನ್ನು ವಿವರಿಸುವ ಪುಸ್ತಕ ಓದಲು ಕೊಟ್ಟಿದ್ದನಂತೆ.
ಈಗ ಶೀತಲಸಮರ ಇಲ್ಲ. ಆದರೆ ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಜಾಗತಿಕ ರಾಷ್ಟ್ರಗಳು ಯಾವ ತರಹದ ನೈತಿಕ ಬಲಹೀನತೆ ಮತ್ತು ಯುದ್ಧಕ್ಕೆ ಹೋಗಬೇಕಾದ ಹೆದರಿಕೆಗಳಿಂದ ಕೂಡಿದ್ದವೊ ಅಂತಹುದೆ ಸಂದರ್ಭ ಈಗ ಕೂಡಿಬರುತ್ತ ಇದೆ. ಈ ಬಾರಿ ಜರ್ಮನಿ-ಇಟಲಿ-ಜಪಾನ್ಗಳ ಪಾತ್ರವನ್ನು ರಷ್ಯ, ಚೀನಾ, ಇರಾನ್ಗಳು ವಹಿಸುವ ಸಾಧ್ಯತೆಗಳಿವೆ. 1991 ರಿಂದ ಜಾಗತಿಕ ರಂಗದಲ್ಲಿ ಪರ್ಯಾಯ ನಾಯಕತ್ವವನ್ನು ಕಳೆದುಕೊಂಡ ಪರಿಣಾಮವಾಗಿ ರಷ್ಯ ಅನುಭವಿಸುತ್ತಿರುವ ಕೀಳರಿಮೆ ಎರಡನೆ ವಿಶ್ವಯುದ್ಧದ ಜರ್ಮನಿ-ಜಪಾನ್ಗಳ ಕೀಳರಿಮೆಯನ್ನು ನೆನಪಿಸುತ್ತಿದೆ. ಮಧ್ಯಪ್ರಾಚ್ಯದ ಇಸ್ಲಾಮಿಕ್ ದೇಶಗಳಲ್ಲಿ ಜಾತ್ಯತೀತ ಪ್ರಜಾಪ್ರಭುತ್ವವನ್ನು ಹರಡುವ ಒಳ್ಳೆಯ ಕಾರಣದ ಬದಲು ದುರ್ಬಲ ಕಾರಣ ಕೊಟ್ಟು ಇರಾಕ್ ಅನ್ನು ಆಕ್ರಮಿಸಿದ ಅಮೆರಿಕದ ಕೃತ್ಯ ಬ್ರಿಟನ್ ಸಿಕ್ಕಿಹಾಕಿಕೊಂಡಿದ್ದ ಗೊಜಲುಗಳಿಗೆ ಸಮವಾಗಿದೆ. ಇದು, ತನ್ನ ಸುಪರ್ದಿಯಲ್ಲಿದ್ದ ಹಳೆಯ ರಾಷ್ಟ್ರಗಳನ್ನು ಮತ್ತೆ ಆಕ್ರಮಿಸಿಕೊಳ್ಳಲು ನೋಡುತ್ತಿರುವ ರಷ್ಯಾದ ಪ್ರಯತ್ನಕ್ಕೆ ಇಂಬು ನೀಡುತ್ತಿದೆ. ಇನ್ನು, ಯಹೂದಿ ಜನಾಂಗದ ವಿರುದ್ಧ ಇರಾನಿನ ಅಧ್ಯಕ್ಷ ಆಡುತ್ತಿರುವ ಮಾತುಗಳು ಹಿಟ್ಲರ್ನ ಜನಾಂಗದ್ವೇಷದ ಪ್ರತಿರೂಪವಾಗಿ, ಯಹೂದಿ-ಕ್ರಿಶ್ಚಿಯನ್ನರ ವಿರುದ್ಧ ಕಂದಾಚಾರಿ ಮುಸ್ಲಿಮ್ ರಾಷ್ಟ್ರಗಳನ್ನು ಎತ್ತಿಕಟ್ಟುವ ಪ್ರಯತ್ನವಾಗಿ ಕಾಣುತ್ತಿದೆ. ಪೆಟ್ರೋಲಿನ ಮೇಲಿನ ಅಮೆರಿಕ ಮತ್ತು ಯೂರೋಪು ರಾಷ್ಟ್ರಗಳ ಅತೀವ ಅವಲಂಬನೆ ಮತ್ತು ಚೀನಾ-ಭಾರತಕ್ಕಿರುವ ತೈಲದ ಅವಶ್ಯಕತೆ ಇರಾನ್, ರಷ್ಯಾ, ವೆನಿಜುವೇಲಗಳ ಧಮಕಿಯನ್ನು ನೋಡಿಯೂ ನೋಡದಂತೆ ಇದ್ದುಬಿಡಲು ವಿಶ್ವರಾಷ್ಟ್ರಗಳನ್ನು ಪ್ರೇರೇಪಿಸುತ್ತಿದೆ.
ಇದೇ ಸಂದರ್ಭದಲ್ಲಿ, ಕ್ಷೀಣಿಸುತ್ತಿರುವ ಅಮೆರಿಕದ ಆರ್ಥಿಕ ಸಾರ್ವಭೌಮತ್ವ ಯುದ್ಧಕ್ಕೆ ಕಾಲುಕೆರೆದು ನಿಲ್ಲುವ ದೇಶಗಳಿಗೆ ಯುದ್ಧ ಬೇಡವೆಂದು ಹೇಳುವ ಅದರ ಪ್ರಭಾವವನ್ನು ಗಣನೀಯವಾಗಿ ಇಲ್ಲವಾಗಿಸುತ್ತಿದೆ. ಏಳು ವರ್ಷಗಳ ಹಿಂದೆ ದೆಹಲಿಯ ಪಾರ್ಲಿಮೆಂಟ್ ಭವನದ ಮೇಲೆ ಜಿಹಾದಿ ಭಯೋತ್ಪಾದಕರ ದಾಳಿಯ ನಂತರದ ಘಟನೆಯನ್ನೆ ನೆನಪಿಸಿಕೊಳ್ಳಿ. ಆಗ ಭಾರತ ಮತ್ತು ಪಾಕಿಸ್ತಾನಗಳೆರಡೂ ಗಡಿಯಲ್ಲಿ ಸೇನಾ ಜಮಾವಣೆ ಮಾಡಿಕೊಂಡು ಯುದ್ಧಘೋಷಕ್ಕೆ ಸಮಯ ನೋಡುತ್ತಿದ್ದರು. ಆದರೆ ಆಗ ಯಾರೊಬ್ಬರೂ ಯುದ್ಧಘೋಷ ಮಾಡದಂತೆ ತಡೆದದ್ದು ಅಮೆರಿಕ ಮತ್ತು ಹಲವರ ಆರ್ಥಿಕ ಹಿತಾಸಕ್ತಿಗಳು.
ಆ ಸೇನಾಜಮಾವಣೆಗೆ ಮೂರು ತಿಂಗಳ ಹಿಂದಷ್ಟೆ ಆಲ್ಖೈದಾ ಮತಾಂಧರು ಅಮೆರಿಕದ ಮೇಲೆ ದಾಳಿ ಮಾಡಿದ್ದರು. ತನ್ನ ದೇಶದ ಜನರ ಸ್ಥೈರ್ಯ ಕ್ಷೀಣಿಸಿ ಅದು ಆರ್ಥಿಕತೆಯ ಮೇಲೆ ಕೆಟ್ಟಪ್ರಭಾವ ಬೀರುವುದನ್ನು ಅಮೆರಿಕ ತಡೆಯಬೇಕಿತ್ತು. ಆಗ ಅದು ಇನ್ನೂ ಜಾಗತೀಕರಣದ ಲಾಭಗಳನ್ನು ಸವಿಯುತ್ತಿತ್ತು. ಭಾರತದಲ್ಲಿ ಅಮೆರಿಕದ ಅನೇಕ ಕಂಪನಿಗಳು ಹಣಹೂಡಿದ್ದವು. ಭಾರತ ಮತ್ತು ಪಾಕಿಸ್ತಾನ ಯುದ್ಧ ಆರಂಭವಾದರೆ ಈ ಕಂಪನಿಗಳಿಗೆ ನಷ್ಟವಾಗುವ ಸಾಧ್ಯತೆಗಳಿದ್ದವು. ಅತ್ತ ಪಾಕಿಸ್ತಾನದ ಸ್ನೇಹವನ್ನು ಕಳೆದುಕೊಳ್ಳುವ ಮತ್ತು ಇತ್ತ ಭಾರತದ ಆರ್ಥಿಕ ಹಿಂಜರಿತವನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿ ಅಮೆರಿಕ ಇರಲಿಲ್ಲ. ಅಮೆರಿಕಕ್ಕಷ್ಟೇ ಅಲ್ಲದೆ ಇತರ ಅನೇಕ ವಿಶ್ವರಾಷ್ಟ್ರಗಳಿಗೂ ಆ ಯುದ್ಧದಿಂದ ನಷ್ಟವಿತ್ತು. ಇನ್ನು ಆಗತಾನೆ ಪ್ರಾರಂಭವಾಗಿದ್ದ ತನ್ನ ಆರ್ಥಿಕ ಬೆಳವಣಿಗೆಯನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ಭಾರತವೂ ಇರಲಿಲ್ಲ. ಹಾಗಾಗಿ ಅಮೆರಿಕ ಮತ್ತಿತರ ರಾಷ್ಟ್ರಗಳು ಭಾರತ-ಪಾಕಿಸ್ತಾನಗಳೆರಡರ ಮೇಲೂ ಒತ್ತಡ ಹೇರಿದವು. ತನ್ನದೇ ಆರ್ಥಿಕ ಕಾರಣಗಳಿಗಾಗಿ ಭಾರತ ಆ ಮಾತಿಗೆ ಕಿವಿಗೊಟ್ಟಿತು. ಯುದ್ಧಕ್ಕೆ ಹೋಗಲು ಯಾವುದೇ ನೈತಿಕ ಬಲವಾಗಲಿ, ಅಮೆರಿಕದ ಬೆಂಬಲವಾಗಲಿ ಇಲ್ಲದಿದ್ದ ಪಾಕಿಸ್ತಾನವೂ ಸುಮ್ಮನಾಯಿತು.
ಅಮೆರಿಕದ ಪ್ರಸಿದ್ಧ ಅರ್ಥಶಾಸ್ತ್ರಜ್ಜನೊಬ್ಬನ ಪ್ರಕಾರ ಅಮೆರಿಕದ ಆರ್ಥಿಕ ಕ್ಷೇತ್ರದಲ್ಲಿ ಈಗ ಆಗುತ್ತಿರುವ ಘಟನೆಗಳು "ಶತಮಾನಕ್ಕೊಮ್ಮೆ ಘಟಿಸುವ" ಘಟನೆಗಳು. ಈ ದೇಶದ ಆಂತರಿಕ ಅರ್ಥವ್ಯವಸ್ಥೆಯೆ ಕುಸಿದು ಹೋಗುವ ವಿದ್ಯಮಾನಗಳು ಇಲ್ಲಿ ನಡೆಯುತ್ತಿವೆ. ತನ್ನ ದೇಶದ ಅರ್ಥವ್ಯವಸ್ಥೆಯನ್ನು ಕಾಪಾಡಿಕೊಳ್ಳಲು "ಮುಕ್ತ ಅರ್ಥವ್ಯವಸ್ಥೆ"ಯ ಅಮೆರಿಕದ ಸರ್ಕಾರ "ಸುಮಾರು 32 ಲಕ್ಷ ಕೋಟಿ ರೂಪಾಯಿ"ಗಳನ್ನು ಹೂಡಿ "ನಿಯಂತ್ರಿತ ಅರ್ಥವ್ಯವಸ್ಥೆ"ಯತ್ತ ನಡೆದಿದೆ. ಇದಕ್ಕೆ ದುಡ್ಡು ಹೊಂಚಲು ತನ್ನ ವಿದೇಶಾಂಗ ನೀತಿಯಲ್ಲಿ ಅಮೆರಿಕ ಯಾವಯಾವ ರಾಜಿಗಳನ್ನು ಮಾಡಿಕೊಳ್ಳುತ್ತದೆ ಎನ್ನುವುದೂ ಸಹ ವಿಶ್ವದ ಭವಿಷ್ಯವನ್ನು ನಿರ್ಧರಿಸುತ್ತದೆ. ಈಗಾಗಲೆ ಯಾವುದೇ ಬಾಧ್ಯತೆಯನ್ನು ತೋರಿಸದೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವ ರಷ್ಯಾ ಕೆಲವು ದುಷ್ಟ ರಾಷ್ಟ್ರಗಳಿಗೆ ಆಯುಧಗಳನ್ನು ಮಾರಲು ಆರಂಭಿಸಬಹುದು. ಅಮೆರಿಕವೂ ಅದನ್ನೆ ಮಾಡಬಹುದು. ಇನ್ನು ಜಾಗತಿಕ ಮಟ್ಟದಲ್ಲಿ ಇಲ್ಲಿಯವರೆಗೆ ಯಾವುದೆ ಪ್ರಬುದ್ಧತೆ ಮತ್ತು ನೈತಿಕ ನಾಯಕತ್ವ ನೀಡಿಲ್ಲದ ಚೀನಾ ತನ್ನ ಪ್ರಭಾವ ಮತ್ತು ಹತೋಟಿ ವಿಸ್ತರಿಸಿಕೊಳ್ಳುವ ಕೆಲಸಕ್ಕೆ ಕೈಹಾಕಬಹುದು.
ವಿಶ್ವಕ್ಕೆ ನೈತಿಕ ನಾಯಕತ್ವ ನೀಡುವ ನಿಟ್ಟಿನಲ್ಲಿ ಅಮೆರಿಕದ ಮುಂದಿನ ಅಧ್ಯಕ್ಷರುಗಳ ಬಗ್ಗೆಯೂ ನಂಬಿಕೆ ಇಡುವುದು ಕಷ್ಟವಾಗುತ್ತಿದೆ. ಎಲ್ಲಕ್ಕೂ ಬಲ ಮತ್ತು ಯುದ್ಧವೆ ಪರಿಹಾರ ಎನ್ನುವ ಮೆಕೈನ್-ಪೇಲಿನ್ರ ನಾಯಕತ್ವ ಪರಿಸ್ಥಿತಿಯನ್ನು ಮತ್ತೂ ಹದಗೆಡಿಸಿದರೆ ಮಾತುಕತೆ-ರಾಯಭಾರ ಎನ್ನುವ ಒಬಾಮ-ಬೈಡೆನ್ ನಾಯಕತ್ವ ಕೆಲವು ರೌಡಿ ರಾಷ್ಟ್ರಗಳ ಗೂಂಡಾಗಿರಿಗೆ ಹಾದಿ ನೀಡಬಹುದು. ಇವೆಲ್ಲವೂ ಬರಲಿರುವ ದಿನಗಳಲ್ಲಿ ಜಾಗತಿಕ ರಂಗದಲ್ಲಿ ಅರಾಜಕತ್ವ ಮತ್ತು ಯುದ್ಧದ ಕಾರ್ಮೋಡಗಳು ಕವಿಯಬಲ್ಲ ಸಾಧ್ಯತೆಗಳನ್ನು ತೋರಿಸುತ್ತಿದೆ.
ಆದರೆ ಇವೇ ಕಾರಣಗಳು ಮುಂದಿನ ದಿನಗಳಲ್ಲಿ ವಿಶ್ವಸಂಸ್ಥೆ ಮತ್ತು ಭಾರತದ ಪಾತ್ರಗಳನ್ನೂ, ಅವುಗಳ ನೈತಿಕ ನಾಯಕತ್ವವನ್ನೂ ವಿಸ್ತರಿಸಬಹುದು. ಆದರೆ ಸ್ವತಃ ಹುಸಿ-ರಾಷ್ಟ್ರೀಯವಾದಿಗಳ ಮತ್ತು ಉಗ್ರ-ಕೋಮುವಾದಿಗಳ ಕೈಗೆ ಜಾರುತ್ತಿರುವ ಭಾರತ ಆ ಮಟ್ಟದ ಬೌದ್ಧಿಕ ಮತ್ತು ನೈತಿಕ ನಾಯಕತ್ವ ನೀಡಬಲ್ಲುದೆ ಎನ್ನುವುದು ಸಂದೇಹದ ವಿಷಯ. ಛೇ, ಈ ಸಂದರ್ಭದಲ್ಲಿ ನೈತಿಕ ಮತ್ತು ಬೌದ್ಧಿಕ ಧೀಮಂತಿಕೆಯ ನೆಹರೂ ಇರಬೇಕಿತ್ತು. ವಿಶ್ವಕ್ಕೆ ನಾಯಕತ್ವ ನೀಡಬಹುದಾಗಿದ್ದ "ರಾಜರ್ಷಿ" (Philosopher King) ಅವರು.
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 26, 2008 ರ ಸಂಚಿಕೆಯಲ್ಲಿನ ಲೇಖನ.)
ಮತ್ತೆ ಇನ್ನೊಂದು ದೊಡ್ಡ ಊರಿನಲ್ಲಿ ಬಾಂಬ್ಗಳು ಸ್ಫೋಟಿಸಿವೆ. ಕಳೆದ ವಾರ ದೆಹಲಿಯಲ್ಲಿ ನಡೆದ ಸ್ಫೋಟಗಳಿಂದ ಇಲ್ಲಿಯವರೆಗೆ 21 ಜನ ಸತ್ತಿದ್ದಾರೆ. ಭಾರತದಲ್ಲಿನ ಪ್ರಜಾಪ್ರಭುತ್ವವನ್ನು ಮತ್ತು ಇಲ್ಲಿಯ ವೈವಿಧ್ಯತೆಯನ್ನು ಸಹಿಸದ ಕೆಲವು ವಿಕೃತ ಮನಸ್ಸಿನ ಜನ ಕೈಗೊಂಡ ದಾಳಿ ಇದು. ವಿಪರ್ಯಾಸ ಏನೆಂದರೆ, ಮತಾಂಧತೆ ಮತ್ತು ಜನಾಂಗದ್ವೇಷದಿಂದ ನರಳುವ ಈ ಗುಂಪಿನ ಪ್ರತಿ ಕಾರ್ಯವೂ ಅವರಂತಹುದೆ ಆಲೋಚನೆಗಳ ಇನ್ನೊಂದು ಗುಂಪಿಗೆ ಬಲವನ್ನು ನೀಡುತ್ತ್ತಿದೆ. ಆ ಮಟ್ಟಿಗೆ ಅವರ ಕೃತ್ಯಗಳಿಗೆ ದುಪ್ಪಟ್ಟು ವಿನಾಶಕಾರಿ ಬಲವಿದೆ. ಇಂತಹ ಘಟನೆ ಘಟಿಸುವ ಪ್ರತಿಸಲವೂ ದೇಶ ತಕ್ಕಷ್ಟು ಮಟ್ಟಿಗೆ ಅಸ್ಥಿರವೂ ಅನಾಗರಿಕವೂ ಆಗುತ್ತಿದೆ. ದೇಶ ಇಂತಹುದನ್ನು ತಡೆದುಕೊಳ್ಳಬಲ್ಲ ಬಲ ಕ್ಷೀಣಿಸುತ್ತಿದೆ.
ಈ ಸಂದರ್ಭದಲ್ಲಿ ನಮ್ಮ ಸರ್ಕಾರಗಳು ಕೋಮುವಾದವನ್ನು ಇಷ್ಟು ದಿನ ಎದುರಿಸಿದ್ದಕ್ಕಿಂತ ಬೇರೆ ರೀತಿಯಲ್ಲಿ ಎದುರಿಸದಿದ್ದರೆ ನಮ್ಮ ದೇಶದ ಭವಿಷ್ಯ ಇನ್ನೂ ಕರಾಳವಾಗಲಿದೆ. ಅದು ಅಪನಂಬಿಕೆಯಿಂದ, ಸಂಘರ್ಷಗಳಿಂದ, ಅಂತಃಕಲಹಗಳಿಂದ, ಭೀಭತ್ಸ ಘಟನೆಗಳಿಂದ ಕೂಡಲಿದೆ. ಈಗ ಘಟಿಸುತ್ತಿರುವ ಘಟನೆಗಳಿಂತ ಹೆಚ್ಚು ಪಾಲು ಮುಂದಕ್ಕೆ ಘಟಿಸುವ ಸಾಧ್ಯತೆಗಳಿವೆ. ಕಳೆದ ಒಂದು ವರ್ಷದಲ್ಲಿ ಆಗಿರುವ ಬಾಂಬ್ ಸ್ಫೋಟಗಳನ್ನು ಮತ್ತು ಕೋಮುಹಿಂಸಾಚಾರಗಳನ್ನು ಗಮನಿಸಿದರೆ ಸಾಕು, ಭಯೋತ್ಪಾದನೆ ಮತ್ತು ಕೋಮುವಾದದ ಸಮಸ್ಯೆಯನ್ನು ಮುಂದೂಡುವ ಸ್ಥಿತಿಯಲ್ಲಿ ಭಾರತೀಯ ಸಮಾಜ ಇಲ್ಲದಿರುವುದನ್ನು ಅದು ತೋರಿಸುತ್ತದೆ.
ನಮ್ಮ ದೇಶದ ಜನಸಂಖ್ಯೆಯಲ್ಲಿ ಶೇ. 13 ರಷ್ಟಿರುವ ಭಾರತೀಯ ಮುಸಲ್ಮಾನರು ನಮ್ಮದೇ ನೆಲದವರು. ಇವರಲ್ಲಿನ ಬಹುಪಾಲು ಜನ ನಾನಾ ಕಾರಣಗಳಿಗೆ ಹಿಂದೂ ಸಮಾಜದಿಂದ ಮುಸಲ್ಮಾನ ಮತಕ್ಕೆ ಮತಾಂತರವಾದವರು. ಇತರೆಲ್ಲರಂತೆ ಸಹಸ್ರಾರು ವರ್ಷಗಳಿಂದ ಭಾರತದ ನೆಲದಲ್ಲಿ ಬೇರು ಬಿಟ್ಟವರು. ಆದರೆ, ಭಾರತದ ಇವತ್ತಿನ ಸಂದರ್ಭದಲ್ಲಿ ತೀರಾ ಅಪನಂಬಿಕೆಯಿಂದ, ಪರಕೀಯತೆಯಿಂದ, ಬಡತನದಿಂದ, ರಾಜಕೀಯ ಮತ್ತು ಸಾಂಸ್ಕೃತಿಕ ನಾಯಕತ್ವದ ದಾರಿದ್ರ್ಯದಿಂದ, ತನ್ನದೇ ಮತದ ಪುರೋಹಿತಶಾಹಿಯಿಂದ ನರಳುತ್ತಿರುವ ದೊಡ್ಡ ಸಮುದಾಯ ಎಂದರೆ ಅದು ಈ ಮುಸಲ್ಮಾನ ಸಮುದಾಯ. ಇದನ್ನು ನಾವು ಕೇವಲ ಭಾರತೀಯ ಮುಸಲ್ಮಾನರ ದುರಂತ ಎನ್ನಲಾಗದು. ಅದು ನಿಜಕ್ಕೂ ಭಾರತದ ದುರಂತ. ಪ್ರತಿ ಏಳು ಭಾರತೀಯರಲ್ಲಿ ಒಬ್ಬ ಈ ಸಮುದಾಯಕ್ಕೆ ಸೇರಿದವನು. ಈ ಸಮುದಾಯದವರ ಹಿಂದುಳಿದಿರುವಿಕೆಯನ್ನು ಅವರ ಸ್ವಾತಂತ್ರ್ಯ ಮತ್ತು ಹಕ್ಕುಗಳಿಗೆ ತೊಂದರೆಯಾಗದಂತೆ ಸರಿಪಡಿಸುವ ಕರ್ತವ್ಯ ಇಡೀ ಭಾರತದ ಮೇಲಿದೆ. ತನ್ನದೇ ಜನರ ಹಿತಾಸಕ್ತಿ ಮತ್ತು ಹಕ್ಕುಗಳನ್ನು ಕಡೆಗಣಿಸುವ ದೇಶ ದೇಶವಲ್ಲ. ಅದೊಂದು ಪಟ್ಟಭದ್ರ ಸ್ವಾರ್ಥಿಗಳ ಒಕ್ಕೂಟ. ಅದು ನಾವಾಗಕೂಡದು.
ದಿಕ್ಕುಗೆಡಿಸುವ ಪರಿಸ್ಥಿತಿ
ಇವತ್ತಿನ ಭಾರತೀಯ ಹಿಂದೂ ಸಮುದಾಯದಲ್ಲಿ ಎರಡು ರೀತಿಯ ದೇಶಪ್ರೇಮಿ ಗುಂಪುಗಳಿವೆ. ಒಂದು ತಮ್ಮ ಹಿಂದೂ ಮತಪ್ರೇಮವನ್ನೇ ದೇಶಪ್ರೇಮ ಎಂದುಕೊಂಡ ಗುಂಪಾದರೆ ಇನ್ನೊಂದು ಮತದ ಹೊರತಾಗಿ ದೇಶದ ಬಗ್ಗೆ ಯೋಚಿಸುವ ಜಾತ್ಯತೀತರ ಗುಂಪು. ಒಟ್ಟಾರೆ ಭಾರತೀಯ ಸಮಾಜದ ಏಳಿಗೆಯ ಬಗ್ಗೆ ಯೋಚಿಸುವ ಈ ಜಾತ್ಯತೀತರ ಗುಂಪನ್ನು ಮುಸಲ್ಮಾನ ಪ್ರೇಮಿಗಳೆಂದು ಹಿಂದೂ ಮತಾಂಧರು ಬಿಂಬಿಸಿ ತಮ್ಮದೇ ನೈಜ ದೇಶಪ್ರೇಮ ಎಂದು ಸಾರುತ್ತಿದ್ದಾರೆ. ಮತಸಹಿಷ್ಣ್ಣುತೆಯ ಸಂದರ್ಭದಲ್ಲಿ "ಮುಸಲ್ಮಾನ ಪ್ರೇಮಿ" ಎನ್ನುವುದು ಕೆಟ್ಟ ಪದ ಅಲ್ಲದಿದ್ದರೂ ಇಸ್ಲಾಮಿಗೂ ಭಯೋತ್ಪಾದಕತೆಗೂ ಗಂಟುಬಿದ್ದಿರುವ ಈ ಸಂದರ್ಭದಲ್ಲಿ ಅದಕ್ಕೆ "ದೇಶದ್ರೋಹಿ" ಪಟ್ಟವಿದೆ. ಇದು ಎಂತಹ ದೇಶಪ್ರೇಮಿಯನ್ನೂ ಧೃತಿಗೆಡಿಸುವ ಪಟ್ಟ.
ಹೇಗೆ ಹಿಂದೂ ಮೂಲಭೂತವಾದಿಗಳು ಇಡೀ ಹಿಂದೂ ಸಮಾಜವನ್ನು ಪ್ರತಿನಿಧಿಸುವುದಿಲ್ಲವೊ ಹಾಗೆಯೆ ಇಸ್ಲಾಮ್ ಮೂಲಭೂತವಾದಿ ಭಯೋತ್ಪಾದಕರು ಭಾರತೀಯ ಮುಸಲ್ಮಾನರನ್ನು ಪ್ರತಿನಿಧಿಸುವುದಿಲ್ಲ ಹಾಗೆ ಪ್ರತಿನಿಧಿಸಿದ್ದರೆ ದೇಶ ಪ್ರತಿದಿನವೂ ಹೊತ್ತಿ ಉರಿಯುತ್ತಿತ್ತು. ಹಾಗಾಗಿ ಜಾತ್ಯತೀತ ಹಿಂದೂಗಳು ಇಸ್ಲಾಮ್ ಮತಾಂಧರ ಭಯೋತ್ಪಾದಕತೆಯ ಸಂದರ್ಭದಲ್ಲಿ ಭಯೋತ್ಪಾದಕ ಕೃತ್ಯವನ್ನಷ್ಟೆ ಖಂಡಿಸುತ್ತಾರೆ. ಒಬ್ಬರ ತಪ್ಪಿಗೆ ಇಡೀ ಸಮುದಾಯವನ್ನು ಹೊಣೆ ಮಾಡುವುದು ಅಮಾನವೀಯ ಎನ್ನುವ ಕನಿಷ್ಠ ಕಾಳಜಿಯಿಂದ ಇಸ್ಲಾಮ್ ಅನ್ನು ಹೊರಗಿಟ್ಟು ಟೀಕೆ ಮಾಡುತ್ತಾರೆ. ಆದರೆ ಭಯೋತ್ಪಾದಕರ ಕೃತ್ಯಕ್ಕೆ ಇಡೀ ಮುಸಲ್ಮಾನ ಸಮುದಾಯವನ್ನು ಗಲ್ಲಿಗೇರಿಸಬೇಕು ಎನ್ನುವ ಹಿಂದೂ ರಾಷ್ಟ್ರೀಯವಾದಿಗಳಿಗೆ ಇದು ಸಾಕಾಗುವುದಿಲ್ಲ. ಅದಕ್ಕೆ "ತುಷ್ಟೀಕರಣ"ದ ಲೇಪ ಹಚ್ಚುತ್ತಾರೆ. ಮುಸ್ಲಿಂ ವಿರೋಧಿ ಭಾವನೆಗಳ ಜೊತೆಜೊತೆಗೆ ಜಾತ್ಯತೀತ ವಿರೋಧಿ ಭಾವನೆಗಳನ್ನೂ ಸಾಮಾನ್ಯ ಜನತೆಯಲ್ಲಿ ಉದ್ಧೀಪಿಸುತ್ತಾರೆ. ಇದೇ ಸಂದರ್ಭದಲ್ಲಿ ಮುಸಲ್ಮಾನ ಸಮುದಾಯದಿಂದ ಬಲಿಷ್ಠವಾಗಿ ಮೂಡಿಬಂದಿಲ್ಲದ ವೈಚಾರಿಕ ಜಾತ್ಯತೀತ ನಾಯಕತ್ವದ ಕೊರತೆ ಸಹ ದೇಶದ ಜಾತ್ಯತೀತರ ಕೆಲಸವನ್ನು ಮತ್ತಷ್ಟು ಕಠಿಣ ಮಾಡುತ್ತಿದೆ.
ಇನ್ನು ನಮ್ಮ ದೇಶದ ಜಾತ್ಯತೀತ ರಾಜಕಾರಣಿಗಳ "ಪೊಲಿಟಿಕಲಿ ಕರೆಕ್ಟ್" ಮತ್ತು ಚುನಾವಣಾ ಕೇಂದ್ರಿತ ನಡವಳಿಕೆ ಎರಡೂ ಮತಗಳ ಮತಾಂಧರ ಬೆಂಕಿಗೆ ತುಪ್ಪ ಸುರಿಯುತ್ತಿದೆ. ಹಿಂದೂ ಮತಾಂಧತೆಯನ್ನು ಎದುರಿಸುವಾಗ ತೋರಿಸುವ ಅಲ್ಪಧೈರ್ಯವನ್ನೂ ಮುಸಲ್ಮಾನ ಮತಾಂಧತೆಯನ್ನು ಎದುರಿಸುವಾಗ ತೋರುತ್ತಿಲ್ಲ. ಇದು ಇಸ್ಲಾಮ್ ಮತಾಂಧರಿಗೆ ಕೆಲವು ರಹದಾರಿಗಳನ್ನು ಕೊಟ್ಟರೆ ಹಿಂದೂ ಮತಾಂಧರಿಗೆ ನೈತಿಕ ಬಲ ನೀಡುತ್ತಿದೆ.
ಮತೀಯ ಮೂಲಭೂತವಾದಕ್ಕೆ ಅನೇಕ ಕಾರಣಗಳಿವೆ. ಆದರೆ ಭಾರತದಲ್ಲಿ ಇಸ್ಲಾಮ್ ಮೂಲಭೂತವಾದಕ್ಕೆ ಬಲ ಸಿಗುತ್ತಿರುವುದು ಆ ಸಮುದಾಯದಲ್ಲಿನ ಅವಿದ್ಯೆ, ಅಜ್ಞಾನ, ಬಡತನ, ಮತ್ತು ಹೊರಗಿನ ಪ್ರಭಾವದಿಂದಾಗಿ. ಈ ಸಮುದಾಯದ ಬಹುಪಾಲು ಜನ ಹಿಂದೂ ಸಮಾಜದಲ್ಲಿನ ದಲಿತರಷ್ಟೆ ಬಡವರೂ, ಹಿಂದುಳಿದವರೂ ಆಗಿದ್ದಾರೆ. ಇದನ್ನು ಸರಿಪಡಿಸಲು ಅನೇಕ ಯೋಜನೆ ಮತ್ತು ಕಾನೂನುಗಳನ್ನು ತರಬೇಕಿದೆ. ಆದರೆ ಚುನಾವಣಾ ರಾಜಕಾರಣದಿಂದಾಗಿ ಮತ್ತು ದೇಶದಲ್ಲಿ ಬಲಪಡೆದುಕೊಳ್ಳುತ್ತಿರುವ ಮೂಲಭೂತವಾದದಿಂದಾಗಿ ಇದು ಆಗಬೇಕಾದಷ್ಟು ಆಗುತ್ತಿಲ್ಲ. ಇದರ ಜೊತೆಗೆ ಮುಲ್ಲಾ-ಮಸೀದಿ-ಪುರೋಹಿತಶಾಹಿಯ ಕಪಿಮುಷ್ಟಿಯಲ್ಲಿರುವ ಬಹುಪಾಲು ಇಸ್ಲಾಮ್ ಸಮುದಾಯವೂ ಸಾಕಷ್ಟು ಆಧುನಿಕವಾಗುತ್ತಿಲ್ಲ ಮತ್ತು ಸ್ಥಳೀಯವಾಗುತ್ತಿಲ್ಲ. ಸಾಚಾರ್ ಕಮಿಟಿಯ ಶಿಫಾರಸುಗಳ ಅನುಷ್ಠಾನಕ್ಕೆ ಆಗ್ರಹಿಸುವ ಬದಲು ಅದರ ಸಮುದಾಯ ನಾಯಕರು ಒಸಾಮಾ-ತಾಲಿಬಾನ್-ಸದ್ಧಾಮ್ಗಳ ಬೆಂಬಲಕ್ಕೆ ಜಾಥಾ ತೆಗೆಯುತ್ತಾರೆ. ಸ್ಥಳೀಯ ಭಾಷೆಗಳನ್ನು ಕಲಿತು ಕಾಯ್ದೆ-ಕಾನೂನು ಅರಿಯುವ ಬದಲು ಅವರಲ್ಲಿಯ ಬಡವರು ಉರ್ದು-ಅರಬ್ಬಿ ಕಲಿಯುತ್ತಾರೆ. ಇದೊಂದು ದಿಕ್ಕುಗೆಡಿಸುವ ಪರಿಸ್ಥಿತಿ.
ಶಿಕ್ಷಣದ ಹಕ್ಕು ಮತ್ತು ಶಾಲೆಗಳ ರಾಷ್ಟ್ರೀಕರಣ
ಕಳೆದ ಶತಮಾನದ ಭಾರತ ಬಡಭಾರತ. ದೇಶದ ಜನತೆಗೆ ಎರಡು ಹೊತ್ತಿನ ಊಟ ಒದಗಿಸುವುದೆ ಸರ್ಕಾರಕ್ಕೆ ಕಷ್ಟವಾಗಿದ್ದಾಗ ಪ್ರತಿ ಮಗುವಿಗೂ ಶಿಕ್ಷಣ ಒದಗಿಸುವುದು ಸರ್ಕಾರದ ಮೊದಲ ಆದ್ಯತೆ ಆಗಿರಲಿಲ್ಲ. ಅಂತಹ ಸಂದರ್ಭದಲ್ಲಿ ಧಾರ್ಮಿಕ ಸಂಸ್ಥೆಗಳು, ಮಠಗಳು, ಚರ್ಚುಗಳು, ಹಾಗು ವ್ಯಕ್ತಿಗಳು ಶಾಲೆಗಳನ್ನು ತೆರೆದು ದೊಡ್ಡ ಮಟ್ಟದ ಶೈಕ್ಷಣಿಕ ಕ್ರಾಂತಿ ಮಾಡಿದರು. ಆವತ್ತಿನ ಸಂದರ್ಭದಲ್ಲಿ ಅವರು ಮಾಡಿದ್ದು ದೇಶ ಕಟ್ಟುವ ಕೆಲಸ. ಆದರೆ ಈಗಿನ ಸಂದರ್ಭದಲ್ಲಿ ಈ ಶಾಲೆಗಳನ್ನು ರಾಷ್ಟ್ರೀಕರಣ ಮಾಡಿದರೆ ಅಷ್ಟರ ಮಟ್ಟಿಗೆ ಕೋಮುವಾದವನ್ನೂ ತಡೆಯಬಹುದು ಎನ್ನಿಸುತ್ತದೆ. ಯಾಕೆಂದರೆ, ಇವತ್ತು ಈ ಮಠಗಳು, ಕೋಮು ಸಂಘಟನೆಗಳು, ಮಸೀದಿಗಳು, ಚರ್ಚುಗಳು ನಡೆಸುತ್ತಿರುವ ಶಾಲೆಗಳಲ್ಲಿ ದೇಶದ ಸಾಮರಸ್ಯಕ್ಕೆ ಮತ್ತು ಜಾತ್ಯತೀತ ಸಿದ್ಧಾಂತಕ್ಕೆ ಪೂರಕವಾದ ಶಿಕ್ಷಣ ಸಿಗುತ್ತಿಲ್ಲ. ಜ್ಞಾನ ಮತ್ತು ವಿಜ್ಞಾನವನ್ನು ಕಲಿಯಬೇಕಾದ ಚಿಕ್ಕಮಕ್ಕಳು ವೇದ, ಅರೇಬಿಕ್ ಕುರಾನ್, ಬೈಬಲ್ ಗಾಸ್ಪೆಲ್ಗಳ ಬಾಯಿಪಾಠದ ಮೂಲಕ ಕೋಮುವಾದವನ್ನೂ ಕಲಿಯುತ್ತಿದ್ದಾರೆ. ತಮ್ಮ ಮತೀಯ ಹೆಚ್ಚುಗಾರಿಕೆಯ ಬಗ್ಗೆ ಉಪದೇಶ ಪಡೆದುಕೊಂಡೇ ಇಲ್ಲಿಂದ ಹೊರಬರುವ ವಿದ್ಯಾರ್ಥಿಗಳಲ್ಲಿ ತಮ್ಮ ಸಮುದಾಯ, ಮಠ, ಮತದ ಬಗ್ಗೆ ಪ್ರಶ್ನಿಸಲಾಗದ ನಾಯಿನಿಷ್ಠೆ ಇರುವ ಪರಿಸ್ಥಿತಿ ಇದೆ.
ಇವತ್ತಿನ ಸಂದರ್ಭದಲ್ಲಿ ಭಾರತ ಸರ್ಕಾರವೆ ದೇಶದ ಪ್ರತಿ ಮಗುವಿಗೂ ಶಿಕ್ಷಣ ಕೊಡುವ ಕೆಲಸ ಮಾಡಬಹುದಾಗಿದೆ. ಅಷ್ಟಿದ್ದರೂ ಕಳೆದ ಹಲವಾರು ತಿಂಗಳುಗಳಿಂದ ಕೇಂದ್ರ ಸರ್ಕಾರ "ಶಿಕ್ಷಣದ ಹಕ್ಕು" ಕಾಯಿದೆಯನ್ನು ಜಾರಿಗೊಳಿಸದೆ ಮುಂದಕ್ಕೆ ಹಾಕುತ್ತಿದೆ. ಕೇಂದ್ರ ಸರ್ಕಾರ ಈ ಕಾಯಿದೆಯನ್ನು ಎಷ್ಟು ಬೇಗ ತರುತ್ತದೊ ಅಷ್ಟು ಬೇಗ ನಮ್ಮ ದೇಶದ ಮಕ್ಕಳು ಕೋಮುವಾದಿಗಳ ವಿಷಪೂರಿತ ಸಿದ್ಧಾಂತದಿಂದ ತಪ್ಪಿಸಿಕೊಳ್ಳುವ ಅವಕಾಶ ಇದೆ. ಈ ಕಾಯಿದೆಗಾಗಿ ಭಾರತದ ಜಾತ್ಯತೀತ ಪ್ರಜೆಗಳು ಆಗ್ರಹಿಸಬೇಕಿದೆ.
ಪೊಲೀಸರ ದಕ್ಷತೆ ಮತ್ತು ಹಸ್ತಕ್ಷೇಪ
ದೇಶದಲ್ಲಿಯ ಇಸ್ಲಾಮ್-ಭಯೋತ್ಪಾದಕರನ್ನು ಮತ್ತು ಹಿಂದು-ಭಸ್ಮಾಸುರರನ್ನು ತಡೆಯಲು ಸರ್ಕಾರಗಳು ಅನೇಕ ತಕ್ಷಣದ ಮತ್ತು ದೀರ್ಘಕಾಲೀನ ಕ್ರಮಗಳನ್ನು ಕೈಗೊಳ್ಳಬೇಕಿದೆ. ಜಾತ್ಯತೀತ-ಪ್ರಜಾಪ್ರಭುತ್ವವಾದಿ-ವೈಜ್ಞಾನಿಕ ಶಿಕ್ಷಣ ಮತ್ತು ಬಡತನ ನಿವಾರಣೆಯ ಮೂಲಕ ಕೋಮುವಾದನ್ನು ತಡೆಯುವುದು ದೀರ್ಘಕಾಲೀನ ಪರಿಹಾರವಾದರೆ ದೇಶದ ಆಂತರಿಕ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದು ತಕ್ಷಣ ಮಾಡಬೇಕಾದ ಕೆಲಸ. ಆದರೆ ಇದು ಆಗುವ ಸಾಧ್ಯತೆ ಕಡಿಮೆ. ಈಗಾಗಲೆ ನಮ್ಮ ದೇಶದ ಪೊಲೀಸರು ಕೀಳರಿಮೆ, ರಾಜಕೀಯ ಹಸ್ತಕ್ಷೇಪ, ಮತ್ತು ಸಂಪನ್ಮೂಲಗಳ ಕೊರತೆಯಿಂದ ನರಳುತ್ತಿದ್ದಾರೆ. ಆರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಐಪಿಎಸ್ ಆಫಿಸರ್ ಒಬ್ಬರನ್ನು ಭೇಟಿ ಆಗಿದ್ದೆ. ಮಾತುಕತೆಯ ನಡುವೆ ನಾನೊಬ್ಬ ಸಾಫ್ಟ್ವೇರ್ ಇಂಜಿನಿಯರ್ ಎಂದೆ. ಅಷ್ಟಕ್ಕೆ ಆತ, "ಐಪಿಎಸ್ನಲ್ಲಿ ನಾನು ಫಸ್ಟ್ ರ್ಯಾಂಕ್ ಬಂದಿದ್ದೆ; ಆದರೂ ನನಗೆ ಜುಜುಬಿ ಸಂಬಳ ಬರುತ್ತದೆ; ಈ ಸಾಫ್ಟ್ವೇರ್ನ ಹುಡುಗರು ನನಗಿಂತ ಹೆಚ್ಚಿಗೆ ಸಂಬಳ ಪಡೆಯುತ್ತಾರೆ; ನಾನೇನು ಕಮ್ಮಿ; ಈ ಸರ್ಕಾರಿ ಕೆಲಸಕ್ಕೆ ಸೇರಿಕೊಂಡು ಜೀವನ ಹಾಳಾಯಿತು;" ಹಾಗೆ ಹೀಗೆ ಎಂದು ಹುಚ್ಚನಂತೆ ಮಾತನಾಡಿದ್ದ. ಆತ ಬಹುಶಃ ಬೆಂಗಳೂರಿನ ನಂಬರ್-2 ಫೋಲಿಸ್ ಆಫಿಸರ್! ವೃತ್ತಿಯ ಮಹತ್ವ ಗೊತ್ತಿಲ್ಲದೆ ಕೇವಲ ಸಂಬಳದಿಂದ ತಮ್ಮ ಯೋಗ್ಯತೆ ಅಳೆದುಕೊಳ್ಳುವ ಇಂತಹವರಿಂದ ಬೆಂಗಳೂರು, ದೆಹಲಿ, ಹೈದರಾಬಾದುಗಳಲ್ಲಿ ಸುರಕ್ಷತೆ ಅಪೇಕ್ಷಿಸುವುದು ನಮ್ಮ ಹುಚ್ಚುತನ.
ಇನ್ನು ನಮ್ಮಲ್ಲಿಯ ರಾಜಕೀಯ ಹಸ್ತಕ್ಷೇಪ ಎಂತಹ ಪ್ರಾಮಾಣಿಕ ಪೊಲೀಸರನ್ನೂ ಸಿನಿಕರನ್ನಾಗಿ ಭ್ರಷ್ಟರನ್ನಾಗಿ ಮಾಡಿಬಿಡುತ್ತದೆ. ಇಲ್ಲದಿದ್ದರೆ ಕೋಮುದ್ವೇಷ ಹುಟ್ಟಿಸುವ ಆದಿಉಡುಪಿಯ ಬೆತ್ತಲೆ ಪ್ರಕರಣದಲ್ಲಿ ಪೊಲೀಸರು ನಿರ್ವೀರ್ಯರಾಗುತ್ತಿದ್ದರೆ? ಪದ್ಮಪ್ರಿಯ ಎಂಬ ಹೆಂಗಸನ್ನು ಆತ್ಮಹತ್ಯೆಗೆ ತಳ್ಳಿದ ಮನುಷ್ಯ ರಾಜಾರೋಷವಾಗಿ ಓಡಾಡಲು ಸಾಧ್ಯವಿತ್ತೆ? ಮುಗ್ಧರನ್ನು ಬಸ್ಸಿನಲ್ಲಿ ಕೂಡಿಹಾಕಿ ಸುಟ್ಟವರು ನಾಯಕರಾಗಲು ಸಾಧ್ಯವಿತ್ತೆ? ಇಂತಹ ಪ್ರತಿದಿನದ ಘಟನೆಗಳಿಗೂ ಪೊಲೀಸರ ದಕ್ಷತೆಯನ್ನು ಆಗ್ರಹಿಸಿದರೆ ಮಾತ್ರ ಆಗಾಗ್ಗೆ ಸಂಭವಿಸುವ ಮುಸಲ್ಮಾನ ಭಯೋತ್ಪಾದಕರ ಬಾಂಬು ದಾಳಿಗಳಿಂದಲೂ ನಮಗೆ ರಕ್ಷಣೆ ಸಿಗುತ್ತದೆ. ಇದನ್ನು ಭಾವಾವೇಶದಲ್ಲಿ ಪ್ರತಿಕ್ರಿಯಿಸುವ ಸಮಾಜ ಆಲೋಚಿಸಬೇಕಿದೆ.