Oct 9, 2008

Sorry, we are letting you go...

ಊಫ್... ಮತ್ತೆ ಇನ್ನೊಂದು ದಿನ (ಅಕ್ಟೋಬರ್ 9, 08) ಅಮೆರಿಕದ ವಾಲ್ ಸ್ಟ್ರೀಟ್ ಭಯಂಕರವಾಗಿ ಬಿತ್ತು. ಕೊನೆಯ ಒಂದು ಗಂಟೆಯಲ್ಲಿ 450 ಪಾಯಿಂಟ್‌ಗಳ free fall! ಇದು ನಮ್ಮ ಕಾಲದ global meltdown. ಮುಂದಿನ ದಿನಗಳಲ್ಲಿ ಇಡೀ ಪ್ರಪಂಚದ ಆರ್ಥಿಕ ಚಿತ್ರಣವೇ ಬದಲಾಗಲಿದೆ. ಹೊಸ ದಿನಗಳತ್ತ ಹೆಜ್ಜೆ ಇಡುತ್ತಿದೆ ವಿಶ್ವ ವ್ಯವಸ್ಥೆ.

ಕಳೆದ ತಿಂಗಳ ಕೊನೆಯಲ್ಲಿ ಪತ್ರಿಕೆಯೊಂದು "ಅಮೆರಿಕದ ಆರ್ಥಿಕ ಸಮಸ್ಯೆಗಳು ಮತ್ತು ಅದು ಭಾರತದ ಬಿಪಿಒ ಕಂಪನಿಗಳಲ್ಲಿ ಕೆಲಸ ಮಾಡುವವರ ಮೇಲಿನ ಪ್ರಭಾವ"ದ ಬಗ್ಗೆ ಅಭಿಪ್ರಾಯ ಕೇಳಿದ್ದರು. ಅದಕ್ಕೆ ಒಂದು ಚಿಕ್ಕ ಟಿಪ್ಪಣಿಯನ್ನು ಸುಮಾರು ಏಳೆಂಟು ದಿನಗಳ ಹಿಂದೆ ಕಳುಹಿಸಿದ್ದೆ. ಅದು ಹೀಗಿತ್ತು:

ಇತ್ತೀಚಿನ ವಾರಗಳಲ್ಲಿ ಅಮೆರಿಕದ ಅರ್ಥ ವ್ಯವಸ್ಥೆಯಲ್ಲಿ ಸಂಭವಿಸಿದ ಘಟನೆಗಳು ಭಾರತದ ಬಿಪಿಒ ರಂಗಕ್ಕೆ ನಿಜಕ್ಕೂ ಕೆಟ್ಟ ಸುದ್ದಿಯೆ. ಜೊತೆಗೆ, ಇದರ ಪರಿಣಾಮಗಳೂ ಸಹ ಅಲ್ಪಕಾಲಿಕವೇನಲ್ಲ. ಭಾರತದ ಐಟಿ ರಂಗಕ್ಕೆ ಇದರ ಭೀಕರತೆ ತಟ್ಟಲು ಇನ್ನೂ ಮೂರ್ನಾಲ್ಕು ತಿಂಗಳ ಸಮಯ ಹಿಡಿಯಬಹುದು ಮತ್ತು ಅದು ಅಷ್ಟೇನೂ ದಾರುಣವಾಗಿರದೆ ಇರಬಹುದು. ಯಾಕೆಂದರೆ ಸಾಫ್ಟ್‌ವೇರ್ ಇವತ್ತು ಒಂದು ರೀತಿಯಲ್ಲಿ ನಿತ್ಯುಪಯೋಗಿ ವಸ್ತು. ಹಾಗಾಗಿ ಅದಕ್ಕೆ ಬೇಡಿಕೆ ಇದ್ದೇ ಇರುತ್ತದೆ. ಆದರೆ ಅದನ್ನೆ ನಾವು ಬಿಪಿಒಗಳ ವಿಚಾರಕ್ಕೆ ಹೇಳಲಾಗುವುದಿಲ್ಲ. ಬಿಪಿಒಗಳ ಅವಶ್ಯಕತೆ ಇರುವುದೆ ಗ್ರಾಹಕ ಸಂಸ್ಕೃತಿಯಲ್ಲಿ. ಇವತ್ತಿನ ಅಮೆರಿಕನ್ ಗ್ರಾಹಕ ನಿಜಕ್ಕೂ ಸಂಕಷ್ಟದತ್ತ ಜಾರುತ್ತಿದ್ದಾನೆ.

ಲೆಹ್ಮನ್ ಬ್ರದರ್ಸ್, ವಾಷಿಂಗ್ಟನ್ ಮ್ಯೂಚುಯಲ್, ವಾಕೊವಿಯ ಮುಂತಾದ ಅಮೆರಿಕದ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ಕಣ್ಣುಮುಚ್ಚಿಕೊಂಡದ್ದು ಇಲ್ಲವೆ ದಿವಾಳಿಯಾಗಿ ಬೇರೆ ಕಂಪನಿಗಳಿಗೆ ಮಾರಾಟವಾಗಿದ್ದು ಇಲ್ಲಿ ಹಣಕಾಸಿನ ಮುಗ್ಗಟ್ಟನ್ನು ತಂಡೊಡ್ಡಿದೆ. ಹಲವಾರು ವರ್ಷಗಳಿಂದ ಸ್ಥಗಿತಗೊಂಡಿದ್ದ ಅರ್ಥವ್ಯವಸ್ಥೆ ಸಹ ಇದಕ್ಕೆ ಸಹಾಯ ಮಾಡುತ್ತಿದೆ. ಕಂಪನಿಗಳು ಮಾತ್ರವಲ್ಲದೆ ಜನರೂ ಸಹ ಈಗ ಹಣದ ಮುಗ್ಗಟ್ಟನ್ನು ಎದುರಿಸುತ್ತಿದ್ದಾರೆ. ಅವರ ಖರ್ಚು ಮಾಡುವ ತಾಕತ್ತು ದಿನೆದಿನೆ ಕಮ್ಮಿಯಾಗುತ್ತಿದೆ. ಸಾಲ ಸಿಗುವುದೂ ಕಷ್ಟವಾಗುತ್ತಿದೆ. ಇದೇ ಕಾರಣಕ್ಕಾಗಿ ಇಲ್ಲಿಯ ಆಟೊಮೊಬೈಲ್ ಇಂಡಸ್ಟ್ರಿ ಸೆಪ್ಟೆಂಬರ್ ತಿಂಗಳಿನಲ್ಲಿ ಶೇ. 30 ರಷ್ಟು ಕಮ್ಮಿ ವ್ಯಾಪಾರ ಕಾಣುವಂತಾಗಿದೆ. ಇನ್ನು ಇಲ್ಲಿ ಶುರುವಾಗಲಿರುವ ಹಾಲಿಡೆ ಶಾಪ್ಪಿಂಗ್ ಸೀಸನ್ ಸಹ ಕಳೆದ 30 ವರ್ಷಗಳಲ್ಲಿಯೆ ಕೆಟ್ಟದಾದ ಸೀಸನ್ ಆಗಲಿದೆ ಎಂದು ಅರ್ಥತಜ್ಞರು ಹೇಳುತ್ತಿದ್ದಾರೆ.

ಇವೆಲ್ಲವೂ ಅಮೆರಿಕದ ಗ್ರಾಹಕ ಸಂಸ್ಕೃತಿಯಿಂದಾಗಿ ಬೆಳೆದ ಮತ್ತು ಅವರಿಗೆ ಸೇವೆ ಸಲ್ಲಿಸಲೆಂದೆ ಹುಟ್ಟಿಕೊಂಡ ಭಾರತದ ಬಿಪಿಒ ಉದ್ಯಮಕ್ಕೆ ಈಗಿರುವುದಕ್ಕಿಂತ ಹೆಚ್ಚಿನ ಬೇಡಿಕೆ ತರುವುದಿಲ್ಲ. ಇಲ್ಲಿಯ ಜನ ಹೊಸಹೊಸ ಸಾಮಗ್ರಿಗಳನ್ನು ಕೊಳ್ಳುವುದು ಕಡಿಮೆ ಮಾಡಿದಷ್ಟೂ ಅವುಗಳ ಬಗ್ಗೆ ಕಾಲ್ ಸೆಂಟರ್‌ಗಳಿಗೆ ಕಾಲ್ ಮಾಡುವ ಸಾಧ್ಯತೆಯೂ ಕಮ್ಮಿಯಾಗುತ್ತ ಹೋಗುತ್ತದೆ. ಅಮೆರಿಕದ ಸಾಮಾನ್ಯ ಪ್ರಜೆ ಮತ್ತೆ ಖರ್ಚು ಮಾಡಲು ಆರಂಭಿಸುವ ದಿನಗಳೂ ಹತ್ತಿರದಲ್ಲಿಲ್ಲ. ನಿರುದ್ಯೋಗ ಬೇರೆ ಹೆಚ್ಚುತ್ತ ಹೋಗುತ್ತಿದೆ. ದೊಡ್ಡ ಮಟ್ಟದ ಲೇಯಾಫ್‌ಗಳನ್ನೂ ಸಹ ಇನ್ನು ನಿರೀಕ್ಷಿಸಬಹುದು.

ಇದೆಲ್ಲದರ ಪರಿಣಾಮದಿಂದಾಗಿ ಇನ್ನು ಮುಂದಕ್ಕೆ ಅಮೆರಿಕದ ವಾಣಿಜ್ಯ ನೀತಿಗಳೂ ಬದಲಾಗಲಿವೆ. ಈಗಾಗಲೆ ಸರ್ಕಾರ ಒಂದು ಹಂತದ ರಾಷ್ಟ್ರೀಕರಣಕ್ಕೆ ಮುಂದಾಗಿದೆ. ಇದು ಅಮೆರಿಕದ ಹಲವಾರು ಉದ್ದಿಮೆಗಳ ಮೇಲೆ ಅಮೆರಿಕದ ರಾಜಕಾರಣಿಗಳ ಹತೋಟಿಯನ್ನು ಹೆಚ್ಚಿಸಲಿದೆ. ಈ ರಾಜಕಾರಣಿಗಳ ಮುಂದಿನ ಗುರಿ ಆದಷ್ಟು ಹೆಚ್ಚಿನ ಉದ್ಯೋಗಗಳನ್ನು ಇಲ್ಲಿಯೇ ಸೃಷ್ಟಿಸುವುದು ಮತ್ತು ಈಗಾಗಲೆ ಹೊರಕ್ಕೆ ಹೋಗುತ್ತಿರುವ ಉದ್ಯೋಗಗಳಿಗೆ ಕಡಿವಾಣ ಹಾಕುವುದು. ಇವೆಲ್ಲವೂ ಅಮೆರಿಕದ ಔಟ್‌ಸೋರ್ಸಿಂಗ್‌ನಿಂದಾಗಿ ಲಾಭ ಪಡೆಯಲಾರಂಭಿಸಿದ್ದ ಭಾರತಕ್ಕೆ ಮಾತ್ರವಲ್ಲದೆ, ಚೀನಾ, ತೈವಾನ್, ಮಲೇಷಿಯಾಗಳಂತಹ ದೇಶಗಳಿಗೂ ಕೆಟ್ಟ ಸುದ್ಧಿ.

ಮೊದಲೆ ಹೇಳಿದಂತೆ ಭಾರತದ ಸಾಪ್ಟ್‌ವೇರ್ ಉದ್ಯಮಕ್ಕಿಂತ ಬಿಪಿಒ ಉದ್ಯಮಕ್ಕೆ ಇದರ ಪೆಟ್ಟು ಹೆಚ್ಚು. ಈಗಾಗಲೆ ಒಂದು ಹಂತದ ಪ್ರಬುದ್ಧತೆ ಮುಟ್ಟಿಕೊಂಡಿರುವ ಐಟಿ ಉದ್ಯಮ ಈ ಸಂಕಷ್ಟದ ಸಮಯದಲ್ಲಿ ತನ್ನ ಖರ್ಚುವೆಚ್ಚಗಳನ್ನು ಕಮ್ಮಿ ಮಾಡಿಕೊಂಡು ಆಗಲೂ ಲಾಭದಲ್ಲೆ ಇರಲು ಸಾಧ್ಯವಾಗಬಹುದು. ಆದರೆ ಬಿಪಿಒ ರಂಗಕ್ಕೆ ಅಷ್ಟು ಮಾತ್ರದ ಲಕ್ಷುರಿ ಇಲ್ಲ. ಸದ್ದಿಲ್ಲದೆ ಇಲ್ಲಿ ಲೇಯಾಫ್‌ಗಳು ಶುರುವಾಗಬಹುದು. ದೊಡ್ಡ ಕಂಪನಿಗಳು ಚಿಕ್ಕ ಕಂಪನಿಗಳನ್ನು ಕೊಂಡುಕೊಂಡು ಅನಗತ್ಯವಾದ/ದುಬಾರಿ ಹುದ್ದೆಗಳನ್ನು ತೆಗೆಯಬಹುದು. ಇಂತಹ ಪರಿಸ್ಥಿತಿಗೆ ಆ ಉದ್ಯಮದಲ್ಲಿ ಕೆಲಸ ಮಾಡುತ್ತಿರುವವರು ಸಿದ್ಧವಾಗಬೇಕಾಗುತ್ತದೆ.

ಆದರೆ ಈ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಯುವ ಜನಾಂಗ ಮತ್ತು ಅವರ ಪೋಷಕರು ಒಂದನ್ನು ಜ್ಞಾಪಕದಲ್ಲಿಟ್ಟುಕೊಂಡಿರಬೇಕು- ಅದು, ಇವ್ಯಾವುದಕ್ಕೂ ಅವರು ಕಾರಣರಲ್ಲ. ಇದು ಮುಕ್ತ ಅರ್ಥವ್ಯವಸ್ಥೆಯಲ್ಲಿ ನಮ್ಮ ಹತೋಟಿ ಇಲ್ಲದೆ ಘಟಿಸುವ ಕೃತ್ಯಗಳು. ಉದ್ಯೋಗ ಖಾತರಿ ಇವತ್ತಿನ ಸಂದರ್ಭದಲ್ಲಿ ಶೂನ್ಯ. ನೌಕರಿ ಮತ್ತು ಸಂಪಾದನೆ ಸಮುದ್ರದಲ್ಲಿನ ಉಬ್ಬರಗಳ ಏರಿಳಿತದಂತೆಯೆ ಸಹಜವಾದದ್ದು. ಇದಕ್ಕೆ ಯುವಕರು ತಮ್ಮ ಅದೃಷ್ಟವನ್ನು ಹೀಯಾಳಿಸಿಕೊಳ್ಳುವುದಾಗಲಿ, ಪೋಷಕರು ಮಕ್ಕಳು ಏನೋ ತಪ್ಪು ಮಾಡಿದ್ದಾರೆ ಎಂದು ಭಾವಿಸುವುದಾಗಲಿ ಸಲ್ಲದು.

ಪರಿಸ್ಥಿತಿ ಹೀಗೆ ಒಂದೆರಡು ವರ್ಷಗಳಲ್ಲಿಯೆ ಮೇಲೇರುವುದು ಮತ್ತು ಕೆಳಗಿಳಿಯುವುದು ಭಾರತೀಯರಿಗೆ ಒಂದು ರೀತಿಯಲ್ಲಿ ಸಾಂಸ್ಕೃತಿಕ ಆಘಾತ. ಹಾಗಾಗಿ, ವಿಶೇಷವಾಗಿ ಪೋಷಕರು, ತಮ್ಮದಲ್ಲದ ತಪ್ಪಿಗೆ ಕೆಲಸ ಕಳೆದುಕೊಳ್ಳುವ ತಮ್ಮ ಮಕ್ಕಳಿಗೆ ಮನೋಧೈರ್ಯ ನೀಡಬೇಕು. ಸಾಧ್ಯವಾದರೆ ಅವರನ್ನು ಇನ್ನೂ ಹೆಚ್ಚಿನ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಬೇಕು. ಬೇರೆಬೇರೆ ರಂಗಗಳಲ್ಲಿ ಉದ್ಯೋಗ ಹುಡುಕುವಿಕೆಗೆ ಮತ್ತು ಪ್ರಯೋಗಶೀಲತೆಗೆ ಪ್ರೇರೇಪಿಸಬೇಕು. ನೌಕರಿ ಕಳೆದುಕೊಳ್ಳುವ ಯುವಜನಾಂಗವೂ ಅದೇ ರೀತಿ ಯೋಚಿಸಬೇಕು. ಯಾಕೆಂದರೆ ಮತ್ತೆ ಉದ್ಯೋಗಗಳು ಈ ರೂಪದಲ್ಲಲ್ಲವಾದರೂ ಇನ್ನೊಂದು ರೂಪದಲ್ಲಿ ಬಂದೇ ಬರುತ್ತವೆ. ಹಾಗೆ ಬಂದಾಗ ಈಗಾಗಲೆ ಉದ್ಯೋಗದ ಅನುಭವ ಇರುವ ಇವರು ಆ ಉದ್ಯೋಗಗಳನ್ನು ಪಡೆಯಲು ಮೊದಲ ಸಾಲಿನಲ್ಲಿ ಇರುತ್ತಾರೆ. ಭಾರತೀಯರಿಗೆ ಈ ಅನುಭವ ಹೊಸತಾದರೂ ಪಾಶ್ಚಾತ್ಯ ಪ್ರಪಂಚದಲ್ಲಿ ಇಂತಹವು ಕಳೆದ ಶತಮಾನದಲ್ಲಿ ಅನೇಕ ಬಾರಿ ಆಗಿಹೋಗಿದೆ.
ಮೊದಲೆ ಸಾಕಷ್ಟು ನೆಗೆಟಿವ್ ಇದ್ದ ಇದನ್ನು ಬರೆದ ಹತ್ತು ದಿನಗಳ ಒಳಗೇ ಮತ್ತೆ ಇನ್ನೂ ನೆಗೆಟಿವ್ ಆಗಿ ಬರೆಯಬೇಕಾಗಿ ಬಂದಿದೆ. ಯಾವ bailout ಆಗಲಿ, ಪ್ರಪಂಚದಾದ್ಯಂತದ ಕಂಪನಿಗಳ ಬಡ್ಡಿ ಕಡಿತವಾಗಲಿ ಜನ ತಮ್ಮ ಷೇರುಗಳನ್ನು ಕ್ಯಾಶ್ ಮಾಡಿಕೊಳ್ಳುವ ಅಥವ ಬ್ಯಾಂಕಿನಿಂದ ದುಡ್ಡು ತೆಗೆದುಕೊಂಡು ಮನೆಯಲ್ಲಿ ಇಟ್ಟುಕೊಳ್ಳುವ ಧಾವಂತವನ್ನು ಕಮ್ಮಿ ಮಾಡುತ್ತಿಲ್ಲ. ಇವತ್ತು ಅಮೆರಿಕದ ಎಷ್ಟೋ ಕಂಪನಿಗಳ ಬಳಿ ಇರುವ ನಗದು-ದುಡ್ಡು ಅವರ market capitalization ಗಿಂತ ಜಾಸ್ತಿ ಇದೆ ಎಂದರೆ ಅದು ಅಮೆರಿಕದ ಜನ ಸ್ಟಾಕ್‌ಗಳನ್ನು ಕ್ಯಾಶ್ ಮಾಡಿಕೊಳ್ಳುತ್ತಿರುವ ಬಯಕೆಯನ್ನು ಸೂಚಿಸುತ್ತದೆ. ಕೇವಲ ಐದೇ ತಿಂಗಳಿನಲ್ಲಿ ಸ್ಟಾಕ್ ಮಾರ್ಕೆಟ್‍ನಲ್ಲಿ ಹಣಹೂಡಿದ್ದ ಬಹುಪಾಲು ಜನ ತಮ್ಮ paper money ಮಾತ್ರವಲ್ಲದೆ ತಮ್ಮ ಕಷ್ಟಾರ್ಜಿತ ದುಡಿಮೆಯ ಶೇ. 40 ಕ್ಕೂ ಹೆಚ್ಚನ್ನು ಕಳೆದುಕೊಂಡಿದ್ದಾರೆ.

ಸುಮಾರು 7 ತಿಂಗಳ ಹಿಂದೆ "ಐಟಿ ಕ್ಷೇತ್ರಕ್ಕೆ ಬರಲಿದೆಯೆ ಕಷ್ಟದ ದಿನಗಳು?" ಲೇಖನ ಬರೆದದ್ದು. ಆಗ ಅದು ಸಂದೇಹದ ಮುನ್ಸೂಚನೆ ಆಗಿದ್ದರೂ, ಇದೂ ಹೀಗೇ ಆಗುತ್ತದೆ ಎನ್ನುವ ಖಾತರಿ ಇರಲಿಲ್ಲ. ಆದರೆ ಈಗಿನ ವಸ್ತುಸ್ಥಿತಿ ಬೇರೆಯದೇ ಇದೆ. "ಇದು ಕಷ್ಟ ಕಾಲ" ಎಂದು ವರ್ಷಗಟ್ಟಲೆ ಹೇಳಿಸಿಕೊಳ್ಳುವ ದಿನಗಳಿವು.

ಬರಲಿರುವ ಮೂರು ತಿಂಗಳಂತೂ ಪಾಶ್ಚಾತ್ಯ ಜಗತ್ತಿನ ಬಹುತೇಕ ಕಂಪನಿಗಳಿಗೆ ಬಹಳ ಕಷ್ಟದ ದಿನಗಳು. ಈಗಾಗಲೆ ಭಯಭೀತರಾಗಿರುವ ಇಲ್ಲಿನ ಮಧ್ಯಮವರ್ಗದ ಹಬ್ಬದ ಸೀಸನ್‌ನಲ್ಲಿ ಅನಗತ್ಯವಾದದ್ದಕ್ಕೆ ಖರ್ಚು ಮಾಡದೆ, ಹಣದ ಚಲಾವಣೆಯನ್ನು ನಿಲ್ಲಿಸೇ ಬಿಡುವ ಸಾಧ್ಯತೆ ಇದೆ. ಕಳೆದ ನಾಲ್ಕೈದು ದಶಕಗಳಿಂದ ಅನಗತ್ಯವಾದ ಭೌತಿಕ ಸಾಮಾನುಗಳಿಗೆ ಹಣ ಹರಿಸೇ ಬೆಳೆದ ಸಮಾಜ ಇದು. ಹಣ ಖರ್ಚು ಮಾಡಿದಷ್ಟೂ ಮತ್ತೊಂದು ದಾರಿಯಿಂದ ಹಣ ಬರುತ್ತಿದ್ದ ಅರ್ಥವ್ಯವಸ್ಥೆ ಇದು. ಈಗ, ಖರ್ಚು ಮಾಡುವುದಿಲ್ಲ ಎಂದರೆ ಹಣ ಬರುವುದೂ ನಿಲ್ಲುತ್ತದೆ. (ಅಂದರೆ ಸುಲಭವಾಗಿ ಸಾಲ ಸಿಗುವುದಿಲ್ಲ, ನಿರುದ್ಯೋಗಿಗಳಿಗೆ ಬೇಗ ನೌಕರಿ ಸಿಗುವುದಿಲ್ಲ, ಈಗಾಗಲೆ ಕೆಲಸದಲ್ಲಿ ಇರುವವರು ದೊಡ್ಡ ಸಂಖ್ಯೆಯಲ್ಲಿ ಕೆಲಸ ಕಳೆದುಕೊಳ್ಳುತ್ತಾರೆ - ಇವೆಲ್ಲದರಿಂದ ಮತ್ತದೆ ವರ್ತುಲ.)

ಜಾನ್ ಮೆಕೈನ್ ಎಂಬ ಅಮೆರಿಕದ ರಾಜಕಾರಣಿ "fundamentals of American economy are strong," ಎಂದ. ಈಗ, ಒಂದೇ ತಿಂಗಳಿನಲ್ಲಿ ಅದೇ economy ಯ ಕಾರಣದಿಂದ ಆತ ಅಮೆರಿಕದ ಅಧ್ಯಕ್ಷನಾಗುವ ಎಲ್ಲಾ ಬಾಗಿಲುಗಳು ಮುಚ್ಚಿಕೊಂಡು ಬಿಟ್ಟಿವೆ. ಆದರೆ, ನನ್ನ ಪ್ರಕಾರ ಭಾರತದ economy ಗೆ ಅಷ್ಟು ತೊಂದರೆಯಿಲ್ಲ. ಈ ಜಾಗತಿಕ ಅಲ್ಲೋಲಕಲ್ಲೋಲಗಳಿಂದ ಭಾರತದ ಐಟಿ ಕಂಪನಿಗಳ ಗ್ಲಾಮರ್ ಕುಂದಿದರೂ ಮಿಕ್ಕ ಕ್ಷೇತ್ರಗಳಲ್ಲಿ ಭಾರತದ ಜನತೆಗೆ ಅದು ಅಷ್ಟಾಗಿ ತಟ್ಟುವ ಸಾಧ್ಯತೆ ಕಮ್ಮಿ. ಬೆಳವಣಿಗೆಯ ವೇಗ ನಿಧಾನವಾಗಬಹುದು. ಆದರೆ ಇಳಿಯುವ ಸಾಧ್ಯತೆ ಕಮ್ಮಿ. ಯಾಕೆಂದರೆ, ನಾವು ಎಂದೂ ಮೇಲೆ ಹೋಗಿರಲೇ ಇಲ್ಲ. ಮೇಲೆ ಹೋದವರು ಮಾತ್ರ ಇಳಿಯುತ್ತಿರುವ ಪ್ರಕ್ರಿಯೆ ಇದು.

ನನ್ನ ಅನಿಸಿಕೆಯ ಪ್ರಕಾರ, ಮುಂದಿನ ಒಂದು ವರ್ಷದಲ್ಲಿ ಭಾರತದಲ್ಲಿಯ ಅನೇಕ ಐಟಿ-ಬಿಪಿಒ ಕಂಪನಿಗಳು ಕಣ್ಮರೆಯಾಗಲಿವೆ. ಅಂದರೆ ಇವೆಲ್ಲ ದಿವಾಳಿಯಾಗಿ ಹೋಗಲಿವೆ ಅಂತಲ್ಲ. ಬದಲಾಗಿ ಒಬ್ಬರು ಇನ್ನೊಬ್ಬರನ್ನು ಕೊಳ್ಳಲಿದ್ದಾರೆ, ಇಲ್ಲವೆ ಒಂದು ಇನ್ನೊಂದರ ಜೊತೆ ವಿಲೀನವಾಗಲಿವೆ. ಏರುವ ಖರ್ಚು ಮತ್ತು ಕಮ್ಮಿ ಆಗುವ ವರಮಾನ ಕಂಪನಿಯನ್ನು ನಷ್ಟಕ್ಕೆ ತಳ್ಳದಂತೆ ನೋಡಿಕೊಳ್ಳಲು ಕಂಪನಿಗಳು ಮಾಡುವ ಕೆಲಸ ಅದು. ಹಾಗೆ ಮಾಡುವುದರಿಂದ overlap ಆಗುವ ಇಲಾಖೆಗಳಲ್ಲಿ (HR/Payroll/Admin/Sales ಇತ್ಯಾದಿ) ಕೆಲಸ ಮಾಡುವವರ ಸಂಖ್ಯೆಯನ್ನು ಅರ್ಧಕ್ಕರ್ಧ ಇಳಿಸಿಕೊಂಡು, ಕಾಲಾಂತರದಲ್ಲಿ ಕಂಪನಿ ಬೆಳೆಯುವುದಷ್ಟೇ ಅಲ್ಲದೆ ಲಾಭದಲ್ಲೂ ಮುಂದುವರಿಯಬಹುದು. ಎರಡು ದಿನಗಳ ಹಿಂದೆ TCS ಸಿಟಿಬ್ಯಾಂಕ್ ಗ್ರೂಪಿನ e-Serve ಅನ್ನು ಕೊಂಡುಕೊಳ್ಳಲು ಕೇವಲ ಗ್ಯಾರಂಟೀಡ್ ಬ್ಯುಸಿನೆಸ್ ಮಾತ್ರ ಕಾರಣವಲ್ಲದೆ ಇದೂ ಒಂದು ಕಾರಣ. ಇಷ್ಟರಲ್ಲೆ, e-Serve ಕಂಪನಿಯಲ್ಲಿ ಮೇಲೆ ಹೇಳಿದ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಜನ ಕೆಲಸ ಕಳೆದುಕೊಳ್ಳಲಿದ್ದಾರೆ. ಇಂತಹುದು ಇನ್ನು ಮೇಲೆ ಹೆಚ್ಚಲಿದೆ.

ಕಂಪನಿಗಳು ತಮ್ಮ Quarterly ಫಲಿತಾಂಶಗಳನ್ನು ಬಿಡುಗಡೆ ಮಾಡುವ ಜಾತ್ರೆ ಇನ್ನೇನು ಮುಂದಿನ ವಾರದಿಂದ ಆರಂಭವಾಗಲಿದೆ. ಹಾಗೆಯೆ, ಮುಂದಿನ ತ್ರೈಮಾಸಿಕ ಹೇಗೆ ಇರುತ್ತದೆ ಎನ್ನುವುದರ ಮುನ್ಸೂಚನೆಯನ್ನೂ ಅವು ಕೊಡಲಿವೆ. ಅದರ ಜೊತೆಜೊತೆಗೆ, ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ಮತ್ತು ಭಾರತದ ಐಟಿ-ಬಿಪಿಒ ಕಂಪನಿಗಳಲ್ಲಿ ಮ್ಯಾನೇಜರ್ ತನ್ನ ಕೈಕೆಳಗಿನ ನೌಕರನನ್ನು ಮೀಟಿಂಗ್ ರೂಮಿಗೆ ಕರೆದುಕೊಂಡು ಹೋಗಿ, "Sorry, we are letting you go!" ಎನ್ನುವ ದಿನಗಳೂ ಆರಂಭವಾಗಲಿವೆ. ಇದು ತಮಾಷೆಯಲ್ಲ. ಇದನ್ನು ಅಂತರ್ಜಾಲದಲ್ಲಿ ಓದುವ ಬಹುಪಾಲು ಜನರಿಗೆ ನಗುವ ವಿಚಾರವಂತೂ ಅಲ್ಲವೆ ಅಲ್ಲ.

Oct 6, 2008

ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...

ಇಂತಹದೊಂದು ವಿಶ್ವಾಸ ನನಗೆ ಮೊದಲಿನಿಂದಲೂ ಇತ್ತು. ಆರ್ಥಿಕ ಅಭಿವೃದ್ಧಿ ಕೊನೆಗೂ ತಳವರ್ಗಗಳನ್ನೂ, ಗ್ರಾಮಾಂತರವನ್ನೂ ಮುಟ್ಟುತ್ತದೆ ಮತ್ತು ಅದು ಕಾಲಾಂತರದಲ್ಲಿ ಅಂತರ್ಜಾಲದಲ್ಲೂ ಪ್ರತಿಬಿಂಬಿಸುತ್ತದೆ ಎನ್ನುವುದೇ ಆ ವಿಶ್ವಾಸ.

ನಾನು ಬರೆಯಲಾರಂಭಿಸಿದ್ದು 2003 ರಲ್ಲಿ. ಆಗ ನನ್ನಂತಹ ವಿದೇಶದಲ್ಲಿದ್ದವನಿಗೆ ಕನ್ನಡದಲ್ಲಿ ಏನಾದರೂ ಬರೆದರೆ ಪ್ರಕಟಿಸುವ ಅವಕಾಶ ಇದ್ದದ್ದು ದಟ್ಸ್‌ಕನ್ನಡ ವೆಬ್‌ಸೈಟಿನಲ್ಲಿ. ಶಾಮಸುಂದರ್ ಮತ್ತವರ ಬಳಗ ನನ್ನಂತಹ ಅನೇಕ ಭಿನ್ನ ವೈಚಾರಿಕ ಹಿನ್ನೆಲೆ ಇರುವವರಿಗೆಲ್ಲ ವೇದಿಕೆ ಕೊಟ್ಟಿದ್ದರು. ಬಹುಶಃ, ಸಂವಾದಕ್ಕೆ ಆಸ್ಪದವಿದ್ದ ಮೊದಲ ಕನ್ನಡ ತಾಣ ಅದು.

ಅಷ್ಟಿದ್ದರೂ, ಕನ್ನಡ ಅಂತರ್ಜಾಲ ಪ್ರಪಂಚದಲ್ಲಿ ಮೊದಲಿನಿಂದಲೂ ಬಹುಸಂಖ್ಯಾತರಾಗಿದ್ದವರು ಕೋಮುವಾದಿಗಳು , (ಜಾತಿವಾದಿಗಳೂ ಇದರಲ್ಲೆ ಬರುತ್ತಾರೆ) ಮತ್ತು ತಮ್ಮ ಗತಕಾಲದ ಹಿರಿಮೆಯ ಬಗ್ಗೆ (!) ನಾಸ್ಟಾಲ್ಜಿಕ್ ಆಗಿ ಬರೆಯುವ, ಅಂತಹುದನ್ನೆ ಓದುವವರು. ನಾನು ಬರೆಯಲು ಆರಂಭಿಸಿದ ದಿನಗಳಲ್ಲಂತೂ ಇದು ಎದ್ದು ಕಾಣುವ ಹಾಗೆ ಇತ್ತು. ಸಂಸ್ಕೃತಿ, ದೇಶ, ಜಾತಿ, ಮತ, ಮುಂತಾದವುಗಳ ಪರ ಭಾವಾವೇಶದಿಂದ ಬರೆಯುವವರೆ ಅಂತರ್ಜಾಲದಲ್ಲಿ ತುಂಬಿದ್ದ ಸಮಯ ಅದು. ಆ ಸಮಯದಲ್ಲಿ ಇವುಗಳಿಗೆ ಭಿನ್ನವಾಗಿ (ಸಂಕುಚಿತ ಭಾವನೆಗಳನ್ನು ವಿಮರ್ಶಿಸಿ) ಬರೆಯುವವರು ಬೆರಳೆಣಿಕೆ ಮಂದಿ ಮಾತ್ರ ಇದ್ದರು. ಈ "ಜನಪ್ರಿಯ ಸಿದ್ಧಮಾದರಿ"ಗಳಿಗಿಂತ ಬೇರೆಯದಾಗಿ ಬರೆಯಲಾರಂಭಿಸಿದ್ದ ನನಗೆ ಆ ಸಮಯದಲ್ಲಿ ಸಮಾನಮನಸ್ಕರು ಬಹಳ ಕಮ್ಮಿ ಇದ್ದರು. (ಆದರೆ, ಕನ್ನಡ ಬರಹಲೋಕ ಹಾಗೆ ಇರಲಿಲ್ಲ. ಅಲ್ಲಿ ನಡೆಯುತ್ತಿದ್ದ ಚಿಂತನೆಗಳಿಗೂ ಮತ್ತು ಅಂತರ್ಜಾಲದಲ್ಲಿನ ಕನ್ನಡಲೋಕಕ್ಕೂ ಅಪಾರವಾದ ವ್ಯತ್ಯಾಸಗಳಿದ್ದವು. ಕನ್ನಡ ಅಂತರ್ಜಾಲ ಲೋಕ ಕನ್ನಡದ ಚಿಂತನಾಲೋಕದ ಪ್ರತಿಬಿಂಬ ಆಗಿರಲಿಲ್ಲ ಆಗ.)

ಆಗೆಲ್ಲ ನನ್ನಲ್ಲಿ, ಈ ಪರಿಸ್ಥಿತಿ ಯಾವಾಗ ಬದಲಾಗುತ್ತದೆ, ಕನ್ನಡದ ಅಂತರ್ಜಾಲವೂ ನಿಜವಾದ ಕನ್ನಡ-ಪ್ರಪಂಚವನ್ನು ಪ್ರತಿಬಿಂಬಿಸುವುದು ಯಾವಾಗ ಎನ್ನುವ ಪ್ರಶ್ನೆಗಳು ಹುಟ್ಟುತ್ತಿದ್ದವು. ಆ ಪ್ರಶ್ನೆಗಳಿಗೆ ಮೇಲೆ ಹೇಳಿದ ವಿಶ್ವಾಸ ಉತ್ತರವಾಗುತ್ತಿತ್ತು. ಈ ಆರ್ಥಿಕ ಪ್ರಗತಿ ಕೊನೆಗೆ ಎಲ್ಲಾ ವರ್ಗಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಇಳಿಯಲೇಬೇಕು (ಇಲ್ಲಿ ನೋಡಿ), ಒಟ್ಟಾರೆ ಅದು ನಿಧಾನವಾಗಿ ಎಲ್ಲರನ್ನೂ ಮೇಲಕ್ಕೆತ್ತುತ್ತದೆ (ಇಲ್ಲಿ ನೋಡಿ), ಆಗ ಅದು ಅಂತರ್ಜಾಲದಲ್ಲೂ ಪ್ರತಿಬಿಂಬಿತವಾಗುತ್ತದೆ, ಎನ್ನುವ ಆಶಾವಾದ ಅದು.

ಬಹುಶಃ ಒಂದು-ಎರಡು ವರ್ಷಗಳಿಂದ ನನ್ನ ಆಶಾವಾದ ವಾಸ್ತವವಾಗುತ್ತಿರುವುದನ್ನು ನೋಡುತ್ತಿದ್ದೇನೆ. ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನ ಬಹುತೇಕ ಕನ್ನಡ ಸಾಹಿತಿಗಳಿಗೆ (ಅದರಲ್ಲೂ ಪ್ರಗತಿಪರರೆಂದುಕೊಳ್ಳುವವರಿಗೆ) ’ಇಂಟರ್‍ನೆಟ್ ನೋಡುವುದಿಲ್ಲ, ಇಮೇಲ್ ಗೊತ್ತಿಲ್ಲ,’ ಎನ್ನುವುದು ಬಹಳ ಹೆಮ್ಮೆಯ ವಿಷಯವಾದಂತಿತ್ತು. ತಾವು ಬಡವರ, ದುರ್ಬಲರ, ದಲಿತರ, ಹಿಂದುಳಿದವರ ಪರ ಇದ್ದೇವೆ ಎಂದು ತೋರಿಸಿಕೊಳ್ಳಲು ತಮಗೆ ತಾವೆ ಮಾಡಿಕೊಳ್ಳುವ ಆತ್ಮದ್ರೋಹದಂತೆ ನನಗದು ಕಾಣಿಸುತ್ತಿತ್ತು. ಆದರೆ ಯಾವಾಗ ಕಂಪ್ಯೂಟರ್‌ಗಳು ಮತ್ತು ಇಂಟರ್‌ನೆಟ್ affordable ಆಗುತ್ತಾ ಬಂತು, ಅವರಿಗೂ ಇದರಿಂದ ಆಚೆ ಉಳಿಯಲಾಗಲಿಲ್ಲ, ಆಗುತ್ತಿಲ್ಲ. ಅದರಲ್ಲೂ ವಿಭಿನ್ನ ಹಿನ್ನೆಲೆಯ ಯುವಕರು ಶಿಕ್ಷಣ ಮತ್ತು ನೌಕರಿಯ ಸಾಧ್ಯತೆಗಳಿಂದಾಗಿ ದಿನವೂ ಕಂಪ್ಯೂಟರ್‌ನೊಂದಿಗೇ ಕೆಲಸ ಮಾಡುವಂತಹ ಪರಿಸ್ಥಿತಿ ಉಂಟಾದುದರಿಂದ ಒಂದು ಬಹುದೊಡ್ಡ, ಬಹುಸಂಖ್ಯಾತ ಜನಸಮೂಹವೆ ಇವತ್ತು ಕಂಪ್ಯೂಟರ್‌ಗೆ ತೆರೆದುಕೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಕನ್ನಡ ವೆಬ್‌ಲೋಕ ಬದಲಾಗಿರುವ ಪರಿಸ್ಥಿತಿಯನ್ನು ಅವಲೋಕಿಸಿದರೆ ಸಾಕು, ಇದು ಸ್ಪಷ್ಟವಾಗಿ ಕಾಣಿಸುತ್ತದೆ.

ಯಾವಾಗ ಬ್ಲಾಗುಗಳನ್ನು ಮಾಡಿಕೊಳ್ಳುವುದು ಮುಕ್ತವೂ, ಉಚಿತವೂ, ಸುಲಭವೂ ಆಯಿತೊ ಅಲ್ಲಿಂದೀಚೆಗೆ ನಾನಾ ಹಿನ್ನೆಲೆಯ ಜನ ಕನ್ನಡ ಅಂತರ್ಜಾಲ ಲೋಕಕ್ಕೆ ಅಡಿಯಿಟ್ಟಿದ್ದಾರೆ. ಮೊದಮೊದಲು ಇಲ್ಲಿಯೂ ಕೋಮುವಾದ ಅಥವ ಮತೀಯ ಬಲಪಂಥೀಯತೆಗೆ ಹತ್ತಿರ ಇರುವವರೆ ಹೆಚ್ಚಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಇದ್ದಕ್ಕಿದ್ದಂತೆ ಬದಲಾಗುತ್ತಿದೆ. ನಿಜವಾದ ಕನ್ನಡ ಪ್ರಪಂಚ ಅಂತರ್ಜಾಲದಲ್ಲೂ ಪ್ರತಿಬಿಂಬಿತವಾಗುತ್ತಿದೆ.

ಇದಕ್ಕೆ ಪೂರಕವಾಗಿ ಕೆಲವು ಬ್ಲಾಗುಗಳನ್ನು, ವೆಬ್‌ಸೈಟುಗಳನ್ನು ಉದಾಹರಿಸುತ್ತೇನೆ. ಅಬ್ದುಲ್ ರಷೀದರ "ಕೆಂಡಸಂಪಿಗೆ" ಕನ್ನಡದ ಅಂತರ್ಜಾಲ ಲೋಕಕ್ಕೆ ಪರಿಚಯ ಇಲ್ಲದಿದ್ದವರನ್ನೆಲ್ಲ (ಆದರೆ ಕನ್ನಡದ ಅತಿ ಪ್ರಮುಖ ಬರಹಗಾರರು) ಪರಿಚಯಿಸುತ್ತಿದೆ. ಕುಂ.ವೀ. ಕೆಂಡಸಂಪಿಗೆಗೆಂದೇ ಅಂಕಣ ಬರೆಯುತ್ತಿದ್ದಾರೆ. ಅನಂತಮೂರ್ತಿಯವರೂ ಸಹ. ಇನ್ನು ಸ್ವತಃ ಅಬ್ದುಲ್ ರಷೀದ್, ದೇವನೂರು ಮಹಾದೇವ, ಮೊಗಳ್ಳಿ ಗಣೇಶ್‌ರ ಕತೆ-ಕಾದಂಬರಿಗಳೂ ಪ್ರಕಟವಾಗುತ್ತಿವೆ. ಕವಿ-ಪತ್ರಕರ್ತ ಜಿ.ಎನ್. ಮೋಹನ್ ನಡೆಸುತ್ತಾರೆ ಎನ್ನಲಾದ (ಎಲ್ಲೋ ಓದಿದ್ದು, ಅಧಿಕೃತವಾಗಿ ನನಗೆ ಗೊತ್ತಿಲ್ಲ) "ಅವಧಿ" ಬ್ಲಾಗಿನಲ್ಲೂ ಇಂತಹುದನ್ನೆ ನಾವು ನೋಡುತ್ತೇವೆ. ಡಾ. ನಟರಾಜ್ ಹುಳಿಯಾರ್ ಅಂತರ್ಜಾಲದ ಓದುಗರಿಗೆ ಪರಿಚಯವಾಗಿದ್ದು ಇದೇ ಬ್ಲಾಗಿನಿಂದ.

ಇನ್ನು ಸಂಪದದ ಬಗ್ಗೆ. ಯು.ಆರ್. ಅನಂತಮೂರ್ತಿಯವರ ಋಜುವಾತು ಬ್ಲಾಗಿನಿಂದ ಹಿಡಿದು, ಉದಯವಾಣಿಯ ಇಸ್ಮಾಯಿಲ್‌ರ "ಬರೆವ ಬದುಕಿನ ತಲ್ಲಣ", ಡಿ.ಎಸ್. ನಾಗಭೂಷಣರ "ನಾಗ ಸಂಪದ", ಡಾ. ಕಕ್ಕಿಲಾಯರ "ಆರೋಗ್ಯ ಸಂಪದ", ಇನ್ನೂ ಹಲವಾರು ಬರಹಗಾರರಿಂದ ವೈವಿಧ್ಯಗೊಳ್ಳುತ್ತಿರುವ ತಾಣ, ಸಂಪದ.

ಇವೆಲ್ಲದರ ನಡುವೆ, "ಪಂಚ-ಪಾಂಡವ"ರಿಂದ ನಡೆಸಲ್ಪಡುತ್ತದೆ ಎಂದು ಹೇಳಿಕೊಳ್ಳುವ ಇತ್ತೀಚಿನ "ಸುದ್ದಿ ಮಾತು", ದಿನೇಶ್ ಕುಮಾರ್‍ರ "ದೇಸಿ ಮಾತು", ಮಂಜುನಾಥ ಸ್ವಾಮಿಯವರ "ಹಳ್ಳಿ ಕನ್ನಡ", ಇತ್ಯಾದಿ ಬ್ಲಾಗುಗಳು ಕೋಮುವಾದ ಮತ್ತು ಸಾಮಾಜಿಕ ಅಸಮಾನತೆಗಳ ವಿರುದ್ಧ ಮಾತನಾಡುವವರು ಅಂತರ್ಜಾಲದಲ್ಲಿ ಜಾಸ್ತಿಯಾಗುತ್ತಿರುವುದಕ್ಕೆ ನಿದರ್ಶನಗಳು. ಕೇವಲ ಎರಡು-ಮೂರು ವರ್ಷಗಳ ಹಿಂದೆ ಇಂತಹ ಕನ್ನಡ ಬರಹಗಳು ಮತ್ತು ಅಭಿಪ್ರಾಯಗಳು ಅಪರೂಪವಾಗಿದ್ದದ್ದನ್ನು ಸದ್ಯದ ಸ್ಥಿತಿಗೆ ಹೋಲಿಸಿಕೊಂಡರೆ ಬದಲಾವಣೆಯ ವೇಗವನ್ನೂ, Digital divide ಕುಗ್ಗಿದ್ದನ್ನೂ ಊಹಿಸಬಹುದು.

ನನ್ನ ಹಿಂದಿನ "ಗಾಂಧೀಜಿಯ ಹಂತಕ-ಪಡೆ ವಿಶ್ರಮಿಸುವುದಿಲ್ಲ. ಭಾರತವೂ..." ಲೇಖನದಲ್ಲಿ ಬರೆದಂತೆ, ಆಧುನಿಕ ಶಿಕ್ಷಣ, ಪ್ರಜಾಪ್ರಭುತ್ವ ಮತ್ತು ಇತ್ತೀಚಿನ ಆರ್ಥಿಕ ಬೆಳವಣಿಗೆ ನಮ್ಮ ನೆಲದ ಅನೇಕ ಸಮಸ್ಯೆಗಳನ್ನು ಇಲ್ಲವಾಗಿಸುತ್ತಿದೆ. ಬದಲಾಗುತ್ತಿರುವ ಕನ್ನಡ ಅಂತರ್ಜಾಲ ಲೋಕ ಮತ್ತು ಆ ಬದಲಾವಣೆಗಳ ಮೂಲಕಾರಣ ಅದಕ್ಕೆ ಒಂದಷ್ಟು ಸಮರ್ಥನೆ (ನಮ್ಮ ಪರಿಧಿಯಲ್ಲಿ) ಒದಗಿಸುತ್ತದೆ.

ಆದರೆ, ಸದ್ಯದ ಜಾಗತಿಕ ಅರ್ಥವ್ಯವಸ್ಥೆಯಲ್ಲಿನ ಅಲ್ಲೋಲಕಲ್ಲೋಲಗಳು ಈ ಪ್ರಗತಿಯ ದೀರ್ಘಕಾಲೀನತೆಯ ಬಗ್ಗೆಯೇ ಒಂದಷ್ಟು ಸಂಶಯಗಳನ್ನು ಹುಟ್ಟಿಸಲಾರಂಭಿಸಿದೆ. ನಮ್ಮ ಐಟಿ-ಕೇಂದ್ರಿತ ನೌಕರಿಗಳಲ್ಲಿರುವ ಯುವಜನಾಂಗ ನೌಕರಿ ಕಳೆದುಕೊಳ್ಳಲು ಆರಂಭಿಸಿದಾಗ (ಅದರ ಬಗ್ಗೆ ಮುಂದಿನ ಲೇಖನದಲ್ಲಿ ಬರೆಯುತ್ತೇನೆ), ಅಥವ ಐಟಿ ನೌಕರಿಗಳು ಸುಲಭವಾಗಿ ಸಿಗದೆ ಹೋದಾಗ ಸಹ, ಈ ಡಿಜಿಟಲ್ ಡಿವೈಡ್ ಹೀಗೆಯೆ ಕುಗ್ಗಲಿ ಎನ್ನುವ ಆಶಾಭಾವನೆ ನನ್ನದು.

(ಇತ್ತೀಚಿನ ದಿನಗಳಲ್ಲಿ ಬದಲಾದ ಪರಿಸ್ಥಿತಿಯ ಬಗ್ಗೆ ಬರೆದಿದ್ದರಿಂದ, ಆರೇಳು ವರ್ಷಗಳ ಹಿಂದೆಯೆ ಪರ್ಯಾಯ ಧ್ವನಿಯಾಗಿ ಮೂಡಿಬಂದ ಕನ್ನಡಸಾಹಿತ್ಯ.ಕಾಮ್‌ನ ಬಗ್ಗೆ ಬರೆಯಲು ಹೋಗಿಲ್ಲ. ಅದಕ್ಕೆ ಕನ್ನಡ ಅಂತರ್ಜಾಲ ಲೋಕದಲ್ಲಿ ಅದರದೆ ಆದ ಸ್ಥಾನ ಮತ್ತು ಇತಿಹಾಸವಿದೆ. ಬದಲಾಗುತ್ತಿರುವ ಸ್ಥಿತಿಯನ್ನು ಗುರುತಿಸುವುದಕ್ಕಾಗಿ ಮತ್ತು ದಾಖಲು ಮಾಡುವುದಕ್ಕಾಗಿ ಈ ಲೇಖನ ಬರೆದಿದ್ದೇನೆ.)

Oct 1, 2008

ಗಾಂಧೀಜಿಯ ಹಂತಕ-ಪಡೆ ವಿಶ್ರಮಿಸುವುದಿಲ್ಲ. ಭಾರತವೂ...

ಕರ್ನಾಟಕದ ಇವತ್ತಿನ ದೊಡ್ಡ ಸಮಸ್ಯೆ ಕೋಮುವಾದ ಎನ್ನುವುದು ನನ್ನ ನಂಬಿಕೆ. ಕಳೆದ ಹಲವಾರು ದಶಕಗಳಲ್ಲಿ ಕರ್ನಾಟಕ ಕಂಡ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಪ್ರಗತಿಯನ್ನೆಲ್ಲ ಇವತ್ತಿನ ಕೋಮುವಾದ ನಾಶ ಮಾಡುತ್ತಿದೆ.

ಆಧುನಿಕ ಶಿಕ್ಷಣ, ಪ್ರಜಾಪ್ರಭುತ್ವ ಮತ್ತು ಇತ್ತೀಚಿನ ಆರ್ಥಿಕ ಬೆಳವಣಿಗೆ ನಮ್ಮ ನೆಲದ ಅನೇಕ ಸಮಸ್ಯೆಗಳನ್ನು ಇಲ್ಲವಾಗಿಸುತ್ತಿದೆ. ಜನ, ಅವರ ಮನಸ್ಸು, ಅಭಿಪ್ರಾಯಗಳು ಹೆಚ್ಚುಹೆಚ್ಚು ಚಲನಶೀಲವೂ ಸಹನಶೀಲವೂ ಆಗುತ್ತಿದೆ. ದುಡಿದೇ ಬದುಕಬೇಕಾದ ಯುವಕ-ಯುವತಿಯರು ಸಂಕೋಲೆಗಳನ್ನು ಮತ್ತು ಸಂಕುಚಿತತೆಗಳನ್ನು ಕಳೆದುಕೊಳ್ಳುತ್ತಾ ನಡೆದಿದ್ದಾರೆ. ಆದರೆ ಹಳೆಯ ವ್ಯವಸ್ಥೆಯಿಂದ ಯಾರು ಯಾರು ಲಾಭ ಮಾಡಿಕೊಳ್ಳುತ್ತಿದ್ದರೊ ಅವರು ಇದನ್ನು ಪರಿಭಾವಿಸುವ ರೀತಿಯೆ ಬೇರೆ. ಹಿಂದೂ-ಕೋಮುವಾದವನ್ನು ಪ್ರಚೋದಿಸುವವರು ಮತ್ತು ಅದರ ಹಿಂಭಾಗದ ಇಂಜಿನ್‌ಗಳು ಇವರೆ. (ಮುಸಲ್ಮಾನ/ಕ್ರಿಶ್ಚಿಯನ್ ಕೋಮುವಾದಕ್ಕೆ ಕಾರಣಗಳು ಬೇರೆಯೆ ಇವೆ.)

ಈ ಕೋಮುವಾದದ ನಿಜವಾದ ಅಪಾಯ ಇರುವುದು ಅದು ತರಲಿರುವ status-quo ನಲ್ಲಿ, ನಿಲ್ಲಿಸಲಿರುವ ಎಲ್ಲಾ ತರಹದ ಸಂವಾದದಲ್ಲಿ ಮತ್ತು ಒಂದು ವರ್ಗ ಇನ್ನೊಂದು ವರ್ಗವನ್ನು ಶೋಷಿಸುವುದು ಸರಿ ಎನ್ನುವ ಪ್ರಚೋದನೆಯಲ್ಲಿ.

ಗಾಂಧೀಜಿ ಕೇವಲ ಬ್ರಿಟಿಷರ ವಿರುದ್ಧ ಹೋರಾಡಲಿಲ್ಲ. ಆತ ನಮ್ಮದೇ ದೇಶದ ದುಷ್ಟಶಕ್ತಿಗಳ ವಿರುದ್ಧವೂ ಹೋರಾಡಿದ. ಸಮಾಜದ ದುಷ್ಟತೆಯ ವಿರುದ್ಧ ಹೋರಾಡುತ್ತಲೆ ವ್ಯಕ್ತಿಯ ದುಷ್ಟತೆಯ ವಿರುದ್ಧವೂ ಹೋರಾಡಿದ. ಅದು ಅನೇಕ ರಣಾಂಗಣಗಳಲ್ಲಿ ಏಕಕಾಲದಲ್ಲಿ ಮಾಡುತ್ತಿದ್ದ ಯುದ್ಧ. ಆದರೆ "ಅಂತರಂಗ ಶುದ್ಧಿ"ಗಿಂತ "ಬಹಿರಂಗ ಶುದ್ಧಿ"ಗೇ ಮಹತ್ವ ಕೊಟ್ಟ ಸಂಕುಚಿತ ಮನೋಭಾವದ ಕೋಮುವಾದಿಗಳು ಗಾಂಧೀಜಿಯ ಹತ್ಯೆ ಮಾಡುತ್ತಾರೆ. ಆ ಹಂತಕ ಪಡೆ ಇನ್ನೂ ವಿಶ್ರಮಿಸಿಲ್ಲ.

ಆದರೆ, ಗಾಂಧೀಜಿ ಭಾರತದಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ ಮಾತ್ರವಲ್ಲ. ಭಾರತದ ಅಂತಃಸತ್ವವೆ, ಭಾರತದ ನೈಜರೂಪವೆ ಗಾಂಧೀಜಿ. ದುಷ್ಟತೆಯ ವಿರುದ್ಧ ಭರತಭೂಮಿಯಲ್ಲಿ ನಡೆದ ಶತಶತಮಾನಗಳ ಹೊರಾಟ ಕಳೆದ ಶತಮಾನದಲ್ಲಿ ಗಾಂಧೀಜಿಯ ರೂಪದಲ್ಲಿ ಪ್ರಕಟವಾಯಿತು. ಪರರನ್ನು (ರಾಷ್ಟ್ರ -ರಾಷ್ಟ್ರಗಳನ್ನು/ಸಮುದಾಯ -ಸಮುದಾಯಗಳನ್ನು/ವ್ಯಕ್ತಿ -ವ್ಯಕ್ತಿಗಳನ್ನು) ಆಕ್ರಮಿಸಿಕೊಳ್ಳುವುದರ ವಿರುದ್ಧದ ಭಾರತದ ಹೋರಾಟವೆ ಗಾಂಧೀಜಿ.

ಗಾಂಧೀಜಿಯ ಹಂತಕ ಪಡೆ ಗಾಂಧಿ ಹುಟ್ಟಿದ ಊರಿನಿಂದ ಹಿಡಿದು ಗಾಂಧಿ ಬಂದಿದ್ದ ಮಂಗಳೂರಿನವರೆಗೂ ಇತ್ತೀಚಿನ ದಿನಗಳಲ್ಲಿ ಸಕ್ರಿಯವಾಗಿ, ರಾಜಾರೋಷವಾಗಿ ಓಡಾಡುತ್ತಿದ್ದೆ. ತಮ್ಮ ದುಷ್ಟಮನಸ್ಸಿನ ಚಿಂತನೆಗಳ ಬಿತ್ತನೆಗೆ ನೆಲ ಹಸನು ಮಾಡುತ್ತಿದೆ. ವಿಶ್ರಾಂತಿಯಿಲ್ಲದೆ ಈ ರಕ್ತಾಬೀಜಾಸುರ ಸಂತತಿ ಬೆಳೆಯುತ್ತಿದೆ. ಆದರೆ, ಹೇಗೆ ಗಾಂಧೀಜಿಯ ಹಂತಕ ಪಡೆ ವಿಶ್ರಮಿಸುವುದಿಲ್ಲವೊ ಹಾಗೆಯೆ ಆ ದುಷ್ಟತೆಯ ವಿರುದ್ಧದ ಭಾರತದ ಪ್ರತಿರೋಧ ಮತ್ತು ಹೋರಾಟವೂ ನಡೆಯುತ್ತಿರುತ್ತದೆ ಮತ್ತು ಅಂತಿಮ ಗೆಲುವು ಭಾರತದ್ದೆ ಆಗಿರುತ್ತದೆ. ಇದು ಗೌತಮ ಬುದ್ಧನ ಮೂಲಕ, ಬಸವಣ್ಣನ ಮೂಲಕ, ಸೂಫಿ ಸಂತರ -ಫಕೀರರ ಮೂಲಕ, ತಾರತಮ್ಯ ಸಲ್ಲದೆಂದು ಪದ್ಯಗಳಿಂದ ಹೇಳಿಕೊಟ್ಟ ಸರ್ವಜ್ಞ-ವೇಮನ-ತಿರುವಳ್ಳುವರ್‌-ಕುವೆಂಪುರಂತಹ ಕವಿಗಳ ಮೂಲಕ, ತಮ್ಮದೇ ಜನರ ದುಷ್ಟತೆಯ ವಿರುದ್ಧ ಕಾಲಕಾಲಕ್ಕೆ ಧ್ವನಿಯೆತ್ತಿದ ಅಸಂಖ್ಯಾತ ಹುತಾತ್ಮರ ಮೂಲಕ, ಗಾಂಧೀಜಿಯ ಮೂಲಕ ಸಾಬೀತಾಗುತ್ತ ಬಂದಿದೆ.

ಇವತ್ತಿನ ಗಾಂಧಿ ಜಯಂತಿಯ ಸಂದರ್ಭದಲ್ಲಿ ಗಾಂಧೀಜಿ ಹೇಗೆ ಬದುಕಿದ, ಯಾವ ಕಾರಣಗಳಿಗಾಗಿ ಹತ್ಯೆಯಾದ, ಆತನ ತ್ಯಾಗ ಮತ್ತು ಜೀವನ ನಮಗೆ ಯಾವ ತರಹದ ಸ್ಫೂರ್ತಿ ಮತ್ತು ಸ್ಪಷ್ಟತೆ ನೀಡಬೇಕು ಎಂದು ಆಲೋಚಿಸುತ್ತ, ನಾನು ಹಿಂದೊಮ್ಮೆ ಬರೆದಿದ್ದ ಈ ಲೇಖನವನ್ನು ಮತ್ತೊಮ್ಮೆ ಓದುತ್ತ ಕುಳಿತಿದ್ದೇನೆ:

ಮಹಾತ್ಮ ಹುತಾತ್ಮನಾದಂದು...


ಮಹಾತ್ಮ ಗಾಂಧಿ ಎಂದಷ್ಟೆ ಕರೆಸಿಕೊಳ್ಳುತ್ತಿದ್ದ ಆತ ಜನವರಿ 30, 1948ರ ಶುಕ್ರವಾರದ ದಿನ ಸತ್ತಾಗ ಶ್ರೀಮಂತಿಕೆ, ಆಸ್ತಿ, ಪದವಿ, ಅಧಿಕಾರದ ಹುದ್ದೆ, ಪಾಂಡಿತ್ಯದ ಹೆಚ್ಚುಗಾರಿಕೆ, ವೈಜ್ಞಾನಿಕ ಸಾಧನೆ, ಅಥವ ಯಾವುದೇ ಕಲೆಯ ವರ ಇಲ್ಲದಿದ್ದ ಒಬ್ಬ ಖಾಸಗಿ ಪ್ರಜೆ. ಆದರೂ, ಸರ್ಕಾರ ಮತ್ತು ಸೇನಾಪಡೆ ಎಪ್ಪತ್ತೆಂಟು ವರ್ಷದ, ಲಂಗೋಟಿಯಲ್ಲಿದ್ದ ಕಂದು ಬಣ್ಣದ ಚಿಕ್ಕ ಮನುಷ್ಯನಿಗೆ ಗೌರವ ಸಲ್ಲಿಸಿದರು. ಭಾರತ ಸರ್ಕಾರಕ್ಕೆ 3441 ಪತ್ರಗಳು, ಎಲ್ಲವೂ ಸ್ವಯಂಪ್ರೇರಿತವಾಗಿ, ಸಹಾನುಭೂತಿ ವ್ಯಕ್ತಪಡಿಸಿ, ವಿದೇಶಗಳಿಂದ ಬಂದವು. ನೀತಿವಂತ ಗಾಂಧಿಯ ಜೀವನವನ್ನು ಹಂತಕನ ಗುಂಡುಗಳು ಅಂತ್ಯಗೊಳಿಸಿದಾಗ ಅಷ್ಟೇನೂ ನೈತಿಕ ಶ್ರೀಮಂತಿಕೆಯಿಂದ ಕೂಡಿರದ ನಾಗರಿಕತೆ ಮತ್ತಷ್ಟು ಬಡವಾಯಿತು. "ಮಹಾತ್ಮ ಗಾಂಧಿ ಇಡೀ ಮನುಕುಲದ ಮನಸ್ಸಾಕ್ಷಿಯ ವಕ್ತಾರರಾಗಿದ್ದರು," ಎಂದರು ಅಮೇರಿಕಾ ದೇಶದ ವಿದೇಶಾಂಗ ಮಂತ್ರಿ ಜನರಲ್ ಜಾರ್ಜ್ ಮಾರ್ಷಲ್.

ಪೋಪ್ ಪಿಯುಸ್, ಟಿಬೆಟ್ಟಿನ ದಲೈ ಲಾಮ, ಕ್ಯಾಂಟೆರ್ಬರಿಯ ಆರ್ಚ್‌ಬಿಷಪ್, ಲಂಡನ್‌ನ ಮುಖ್ಯ ರಬ್ಬೈ, ಇಂಗ್ಲೆಂಡಿನ ರಾಜ, ರಾಷ್ಟ್ರಪತಿ ಟ್ರೂಮನ್, ಚಿಯಾಂಗ್ ಕೈ-ಷೆಕ್, ಫ್ರಾನ್ಸ್‌ನ ರಾಷ್ಟ್ರಪತಿ, ಅಷ್ಟ್ಯಾಕೆ, ಪ್ರಪಂಚದ ಎಲ್ಲಾ ಅತಿ ಮುಖ್ಯ ರಾಷ್ಟ್ರಗಳ (ಸೋವಿಯತ್ ರಷ್ಯ ಬಿಟ್ಟು) ಮತ್ತು ಬಹುಪಾಲು ಸಣ್ಣ ರಾಷ್ಟ್ರಗಳ ಮುಖ್ಯಸ್ಥರು ಗಾಂಧಿಯ ಅಂತ್ಯಕ್ಕೆ ಸಾರ್ವಜನಿಕವಾಗಿ ದುಃಖ ವ್ಯಕ್ತಪಡಿಸಿದರು.

ಫ್ರೆಂಚ್ ಸಮಾಜವಾದಿ ಲ್ಯೋನ್ ಬ್ಲಮ್ ಲಕ್ಷಾಂತರ ಜನರಿಗೆ ಅನ್ನಿಸಿದ್ದನ್ನು ಕಾಗದದ ಮೇಲೆ ಬರೆದಿಳಿಸಿದ. "ನಾನು ಗಾಂಧಿಯನ್ನು ಎಂದೂ ನೋಡಲಿಲ್ಲ. ನನಗೆ ಆತನ ಭಾಷೆ ತಿಳಿದಿಲ್ಲ. ಆತನ ದೇಶದಲ್ಲಿ ಎಂದೂ ಕಾಲಿಡಲಿಲ್ಲ. ಆದರೂ, ತುಂಬ ಹತ್ತಿರದವರನ್ನು ಕಳೆದುಕೊಂಡರೆ ಆಗುವಷ್ಟು ದುಃಖ ಆಗುತ್ತಿದೆ. ಈ ಅಸಾಧಾರಣ ಮನುಷ್ಯನ ಸಾವಿನಿಂದಾಗಿ ಇಡೀ ಪ್ರಪಂಚವೇ ಶೋಕಾಚರಣೆಯಲ್ಲಿ ಮುಳುಗಿದೆ."

ಪ್ರೊಫೆಸರ್ ಆಲ್ಬರ್‍ಟ್ ಐನ್‌ಸ್ಟೀನ್ ದೃಢವಾಗಿ ಹೇಳಿದ್ದು : "ಒಂದು ಶಕ್ತಿಶಾಲಿ ಜನಬೆಂಬಲವನ್ನು ಕೇವಲ ವಾಡಿಕೆಯ ರಾಜಕೀಯ ತಂತ್ರ ಮತ್ತು ಕುತಂತ್ರಗಳಿಂದ ಮಾತ್ರವಲ್ಲದೆ ಜೀವನದ ಅತ್ಯುತ್ತಮ ನೈತಿಕ ಮಟ್ಟದ ನಡವಳಿಕೆಯಿಂದಲೂ ಕಟ್ಟಬಹುದು ಎಂದು ಖಚಿತ ಉದಾಹರಣೆಯ ಮುಖಾಂತರ ಗಾಂಧಿ ತೋರಿಸಿಕೊಟ್ಟರು."

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತನ್ನ ಸದಸ್ಯರು ಸತ್ತ ಮನುಷ್ಯನಿಗೆ ಗೌರವ ಸೂಚಿಸಲಿಕ್ಕಾಗಿ ಕಲಾಪವನ್ನು ಕೆಲಕಾಲ ಸ್ಥಗಿತಗೊಳಿಸಿತು. ಬ್ರಿಟಿಷ್ ಪ್ರತಿನಿಧಿ ಫಿಲಿಪ್ ನೋಯೆಲ್‌ಬೆಕರ್ ಗಾಂಧಿಯನ್ನು "ಕಡುಬಡವನ, ಏಕಾಂಗಿಯ ಮತ್ತು ಸೋತವನ ಸ್ನೇಹಿತ," ಎಂದು ವರ್ಣಿಸಿ "ಗಾಂಧಿಯ ಮಹತ್ಸಾಧನೆಗಳು ಇನ್ನು ಮುಂದೆಯೂ ಬರಲಿವೆ." ಎಂದು ಪ್ರತಿಪಾದಿಸಿದ.

ಭದ್ರತಾ ಮಂಡಳಿಯ ಅನ್ಯ ಸದಸ್ಯರು ಗಾಂಧಿಯ ಆಧ್ಯಾತ್ಮಿಕ ಗುಣಗಳನ್ನು ಶ್ಲಾಘಿಸಿ ಶಾಂತಿ ಮತ್ತು ಅಹಿಂಸೆಯಡೆಗೆ ಆತನ ನಿಷ್ಠೆಯನ್ನು ಪ್ರಶಂಸಿಸಿದರು. ಸೋವಿಯತ್ ಒಕ್ಕೂಟದ ಆಂಡ್ರ್ಯಿಗ್ರಾಮಿಕೊ ಗಾಂಧಿಯನ್ನು ಭಾರತದ ಉನ್ನತ ರಾಜಕೀಯ ನಾಯಕರೊಲ್ಲಬ್ಬರೆಂದು ವರ್ಣಿಸಿ ಆತನ ಹೆಸರು ಸುದೀರ್ಘ ಸಮಯ ತೆಗೆದುಕೊಂಡ ಭಾರತದ ಜನರ ರಾಷ್ಟ್ರೀಯ ವಿಮೋಚನಾ ಹೋರಾಟದ ಜೊತೆಗೆ ಎಂದಿಗೂ ಜೋಡಿಸಲ್ಪಡುತ್ತದೆ ಎಂದರು. ಸೋವಿಯತ್ ಉಕ್ರೇನ್‌ನ ಪ್ರತಿನಿಧಿ ಟಾರಾಸೆಂಕೊ ಸಹ ಗಾಂಧಿಯ ರಾಜಕಾರಣವನ್ನು ಒತ್ತುಕೊಟ್ಟು ಹೇಳಿದರು.

ವಿಶ್ವಸಂಸ್ಥೆ ತನ್ನ ಧ್ವಜವನ್ನು ಅರ್ಧ ಕೆಳಗಿಳಿಸಿತು.

ಮಾನವತೆ ತನ್ನ ಧ್ವಜವನ್ನು ಪೂರ್ತಿ ಇಳಿಸಿತು.

ಗಾಂಧಿಯ ಸಾವಿಗೆ ಜಗತ್ತಿನಾದ್ಯಂತದ ಪ್ರತಿಕ್ರಿಯೆಯೇ ಒಂದು ಮುಖ್ಯ ನೈಜಸಾಕ್ಷಿ; ಅದು ವ್ಯಾಪಕವಾಗಿ ಹರಡಿದ್ದ ಮನೋಭಾವ ಮತ್ತು ಅಗತ್ಯವನ್ನು ಅಭಿವ್ಯಕ್ತಗೊಳಿಸಿತು. ನ್ಯೂಯಾರ್ಕ್‌ನ ಪತ್ರಿಕೆಯ ಆಲ್ಬರ್ಟ್ ಡ್ಯೂಶ್ಚ್, "ಗಾಂಧಿಯ ಸಾವಿಗೆ ಪೂಜ್ಯಭಾವನೆಯಿಂದ ಪ್ರತಿಸ್ಪಂದಿಸಿದ ಜಗತ್ತಿಗೆ ಇನ್ನೂ ಸ್ವಲ್ಪ ಭರವಸೆಯಿದೆ." ಎಂದು ಘೋಷಿಸಿ- "-ನವದೆಹಲಿಯ ದುರಂತವನ್ನು ಹಿಂಬಾಲಿಸಿದ ಆಘಾತ ಮತ್ತು ಪರಿತಾಪ ನಾವು ಸಂತತ್ವವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೂ ಅದನ್ನು ಗೌರವಿಸುತ್ತೇವೆ ಎಂಬುದನ್ನು ತೋರಿಸಿಕೊಟ್ಟಿತು." ಎಂದರು.

ಅಮೇರಿಕಾದ ಸೆನೆಟರ್ ಆರ್ಥರ್ ವ್ಯಾಂಡೆನ್‌ಬರ್ಗ್ ಹೇಳಿದ್ದು, "ವಿನಯಶೀಲತೆ ಮತ್ತು ಸರಳ ಸತ್ಯಗಳನ್ನು ಗಾಂಧಿ ಸಾಮ್ರಾಜ್ಯಗಳಿಗಿಂತ ಶಕ್ತಿಶಾಲಿಯನ್ನಾಗಿ ಮಾಡಿದರು." ಕಾದಂಬರಿಗಾರ್ತಿ ಪರ್ಲ್ ಬಕ್ ಗಾಂಧಿಯ ಹತ್ಯೆಯನ್ನು "ಮತ್ತೊಂದು ಶಿಲುಬೆಗೇರಿಕೆ" ಎಂದು ವರ್ಣಿಸಿದರು. ನ್ಯಾಯಾಧೀಶ ಫೆಲಿಕ್ಸ್ ಫ್ರಾಂಕ್‌ಫರ್ಟರ್ ಅದನ್ನು "ಪ್ರಪಂಚದ ಸತ್ಯ ಪಡೆಗಳ ವಿರುದ್ಧದ ಅತಿ ಕ್ರೂರ ಹೊಡೆತ," ಎಂದರು.

ಗಾಂಧಿಯನ್ನು ಪ್ರಶಂಸಿಸುತ್ತಿದ್ದ ಆಡಳಿತಗಾರ ಮತ್ತು ರಾಜಕಾರಣಿಗಳಿಗೆ ತಮ್ಮ ಸ್ವಂತವೇ ನ್ಯೂನತೆಗಳನ್ನು ಕನಿಷ್ಠ ನೆನಪಿಸುವಷ್ಟಾದರೂ ಆಗಿದ್ದರಾತ.

ಕ್ಯಾಲಿಫೋರ್ನಿಯಾದ ಹದಿಮೂರು ವರ್ಷದ ಹುಡುಗಿ ಒಂದು ಕಾಗದದಲ್ಲಿ ಬರೆದಳು: "ಗಾಂಧಿಯ ಸಾವನ್ನು ಕೇಳಿ ನನಗೆ ನಿಜವಾಗಿಯೂ ದಾರುಣ ದುಃಖವಾಯಿತು. ಆತನ ಬಗ್ಗೆ ನನಗೆ ಅಷ್ಟೊಂದು ಆಸಕ್ತಿಯಿದೆ ಎಂದು ಎಂದೂ ಅಂದುಕೊಂಡಿರಲಿಲ್ಲ. ಆದರೆ ಆ ಮಹಾನ್ ವ್ಯಕ್ತಿಯ ಸಾವಿನಿಂದ ನನಗೆ ಎಷ್ಟು ಅಸಂತೋಷವಾಗಿದೆ ಎಂದು ಈಗ ತಿಳಿಯಿತು."

ನ್ಯೂಯಾರ್ಕಿನಲ್ಲಿ, ಹನ್ನೆರಡು ವರ್ಷದ ಹುಡುಗಿ ಅಡಿಗೆ ಮನೆಗೆ ಉಪಹಾರ ಸ್ವೀಕರಿಸಲು ಹೋಗಿದ್ದಳು. ಚಾಲನೆಯಲ್ಲಿದ್ದ ರೇಡಿಯೊ ಗಾಂಧಿಗೆ ಗುಂಡಿಟ್ಟ ಸುದ್ದಿ ತಂದಿತು. ಅದೇ ಕ್ಷಣದಲ್ಲಿ, ಆ ಚಿಕ್ಕ ಹುಡುಗಿ, ಮನೆಕೆಲಸದವಳು, ಮತ್ತು ತೋಟದ ಮಾಲಿ ಪ್ರಾರ್ಥನಾ ಸಭೆ ನಡೆಸಿದರು, ಪ್ರಾರ್ಥಿಸಿದರು ಮತ್ತು ಅತ್ತರು. ಅದೇ ರೀತಿ, ಪ್ರಪಂಚದಾದ್ಯಂತ ಲಕ್ಷಾಂತರ ಜನ ಗಾಂಧಿಯ ಸಾವನ್ನು ವೈಯುಕ್ತಿಕ ನಷ್ಟವೆಂಬಂತೆ ಶೋಕಿಸಿದರು. ಅವರಿಗೆ ಯಾಕೆಂದು ಅಷ್ಟೇನೂ ಸರಿಯಾಗಿ ತಿಳಿದಿರಲಿಲ್ಲ; ಆತ ಏನನ್ನು ಪ್ರತಿನಿಧಿಸಿದ್ದ ಎಂದೂ ಸಹ ಚೆನ್ನಾಗಿ ಗೊತ್ತಿರಲಿಲ್ಲ. ಆದರೆ ಆತ "ಒಳ್ಳೆಯ ಮನುಷ್ಯ"ನಾಗಿದ್ದ ಮತ್ತು ಒಳ್ಳೆಯವರು ವಿರಳ.

ಸರ್ ಸ್ಟಾಫರ್ಡ್ ಕ್ರಿಪ್ಸ್ ಬರೆಯುತ್ತಾರೆ, "ಲೌಕಿಕ ವಸ್ತುಗಳ ಮೇಲೆ ಶಕ್ತಿಯುತ ಚೈತನ್ಯವನ್ನು ಇಷ್ಟು ಬಲಯುತವಾಗಿ ಮತ್ತು ಸಮಂಜಸವಾಗಿ ಯಾವುದೇ ಸಮಯದಲ್ಲಾಗಲಿ ಅಥವ ಕನಿಷ್ಠ ಇತ್ತೀಚಿನ ಇತಿಹಾಸದಲ್ಲಾಗಲಿ ಪ್ರದರ್ಶಿಸಿದ ಮತ್ತೊಬ್ಬ ವ್ಯಕ್ತಿ ನನಗೆ ತಿಳಿದಿಲ್ಲ." ಇದನ್ನೇ ತಾವು ಶೋಕಿಸುತ್ತಿದ್ದಾಗ ಜನ ಗ್ರಹಿಸಿದ್ದು. ಅವರ ಸುತ್ತಮುತ್ತೆಲ್ಲ ಲೌಕಿಕ ವಸ್ತುಗಳು ಅಲೌಕಿಕ ಚೈತನ್ಯಕ್ಕಿಂತ ಬಲವಾಗಿದ್ದವು. ಆತನ ಮಿಂಚಿನಂತಹ ದಿಢೀರ್ ಸಾವು ವಿಶಾಲ ಕತ್ತಲನ್ನು ಅನಾವರಣಗೊಳಿಸಿತು. ಆತನ ನಂತರ ಜೀವಿಸಿದ ಯಾರೂ ಸತ್ಯವಂತ ಜೀವನವನ್ನು ಜೀವಿಸುವುದಕ್ಕಾಗಿ, ಕಕ್ಕುಲತೆ, ಸ್ವವ್ಯಕ್ತಿನಾಶ, ವಿನಯಶೀಲತೆ, ಸೇವೆ ಮತ್ತು ಅಹಿಂಸೆಯನ್ನು ಸುದೀರ್ಘ ಕಾಲ, ಪ್ರಬಲ ಶತ್ರುಗಳ ವಿರುದ್ಧದ ಕಷ್ಟಮಯ ಹೋರಾಟವನ್ನು, ಆತನಷ್ಟು ಕಠಿಣವಾಗಿ ಪ್ರಯತ್ನಿಸಲಿಲ್ಲ ಮತ್ತು ಅಷ್ಟು ಯಶಸ್ಸು ಪಡೆಯಲಿಲ್ಲ. ತನ್ನ ದೇಶದಲ್ಲಿನ ಬ್ರಿಟಿಷ್ ಆಡಳಿತದ ವಿರುದ್ಧ ಮತ್ತು ತನ್ನ ದೇಶದ್ದೇ ಜನರ ದುಷ್ಟತೆಯ ವಿರುದ್ಧ ಆತ ತೀವ್ರವಾಗಿ ಮತ್ತು ನಿರಂತರವಾಗಿ ಹೋರಾಡಿದ. ಆದರೆ ಯುದ್ದದ ಮಧ್ಯದಲ್ಲಿ ತನ್ನ ಕೈಗಳನ್ನು ಪವಿತ್ರವಾಗಿಟ್ಟುಕೊಂಡ. ಮತ್ಸರವಿಲ್ಲದೆ, ಢೋಂಗಿತನವಿಲ್ಲದೆ, ಅಥವ ದ್ವೇಷವಿಲ್ಲದೆ ಹೋರಾಡಿದ.

***

ಈ ಮೇಲಿನ ಸಾಲುಗಳು 1950 ರಲ್ಲಿ ಪ್ರಕಟವಾದ, ಲೂಯಿ ಫಿಷರ್ ಎಂಬ ಪಾಶ್ಚಾತ್ಯ ಲೇಖಕ ಬರೆದ "The Life of Mahatma Gandhi" ಪುಸ್ತಕದ ಒಂದೆರಡು ಪುಟಗಳಲ್ಲಿ ಬರುವ ವಾಕ್ಯಗಳು. ಈ ಪುಸ್ತಕವನ್ನು ಆತ ಬರೆದದ್ದು ಇಂಗ್ಲೀಷ್ ಬಲ್ಲ ಅಮೇರಿಕನ್ ಹಾಗೂ ಪಾಶ್ಚಾತ್ಯ ಓದುಗರನ್ನು ಗಮದಲ್ಲಿಟ್ಟುಕೊಂಡು. ಆದ್ದರಿಂದ ಅಮೇರಿಕನ್ನರಿಗೆ ಅಥವ ಪಾಶ್ಚಾತ್ಯರಿಗೆ ಪ್ರಸ್ತುತ ಮತ್ತು ಪರಿಚಿತವಿರುವ, ಅವರಿಗೆ ಮುಖ್ಯವೆನಿಸುವ ವ್ಯಕ್ತಿ-ವಿಷಯಗಳನ್ನು ತೆಗೆದುಕೊಂಡು ಆ ದೃಷ್ಟಿಕೋನದಲ್ಲಿ ನಿರೂಪಿಸಿರುವುದು.


Youtubeನಲ್ಲಿ ಈ ಲೇಖನದ ವಾಚನ

ಶರಣರ ಗುಣವನ್ನು ಮರಣದಲ್ಲಿ ನೋಡೆಂಬಂತೆ, ಮೋಹನದಾಸ ಗಾಂಧಿ ಸತ್ತಾಗ ಜಗತ್ತು ಪ್ರತಿಕ್ರಿಯಿಸಿದ ರೀತಿ ಅನನ್ಯ. ಆದರೆ ಇಲ್ಲಿ ಆ ಅನನ್ಯತೆಗೆ ಕೇವಲ ಒಳ್ಳೆಯವರು ವಿರಳ ಎಂಬುದಷ್ಟೇ ಕಾರಣವಲ್ಲ ಎನ್ನುವುದು ಸ್ವಲ್ಪ ಆಲೋಚಿಸಿದರೆ ಎಲ್ಲರಿಗೂ ತಿಳಿಯುವ ಸರಳ ಸತ್ಯ. ಐವತ್ತಾರು ವರ್ಷಗಳ ಹಿಂದೆ ಗಾಂಧಿ ಸತ್ತ ದಿನವನ್ನು ಹುತಾತ್ಮರ ದಿನಾಚರಣೆಯನ್ನಾಗಿಸಿ ಕೈತೊಳೆದುಕೊಳ್ಳುವುದಕ್ಕಿಂತ ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಗಾಂಧೀವಾದವನ್ನು ಸಾಣೆ ಹಿಡಿದುಕೊಂಡರೆ ಎಷ್ಟೋ ಸಮಸ್ಯೆಗಳಿಗೆ ನೀತಿಯುಕ್ತ, ಸತ್ಯ ಉತ್ತರ ಸಿಗುತ್ತದೆ.

ನಮ್ಮ ಅನಂತಾನಂತ ಅವತಾರಾಚಾರ್ಯ ಪುರುಷರು(?) ಹೇಳಿದಷ್ಟು ಕಠಿಣವಾಗಲಿ, ಅಮೂರ್ತವಾಗಿಯಾಗಲಿ ಗಾಂಧಿಯ ಚಿಂತನೆಗಳು ಇಲ್ಲ. ಹಾಗೆಯೇ ಗಾಂಧಿ ಹೇಳಿದ ಪ್ರತಿ ಅಕ್ಷರವೂ ಸರಿ, ಅದನ್ನು ಸಮಕಾಲೀನಕ್ಕೆ ತಕ್ಕಂತೆ ಪರಿಷ್ಕರಿಸಿ ಅಳವಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ಮುಲ್ಲಾ ಮಠಾಧೀಶರ ಸ್ವತ್ತಾಗಿಯೂ ಗಾಂಧಿ ಉಳಿದಿಲ್ಲ. ತನ್ನೆಲ್ಲ ಹುಳುಕಗಳ ಜೊತೆಗೆ ಸಾರ್ವಜನಿಕವಾಗಿ ಜೀವಿಸಿದ, ಲೇಖಕ ಫಿಷರ್ ಹೇಳುವಂತೆ ಸ್ವವ್ಯಕ್ತಿನಾಶಕ್ಕೆ (self-effacement) ಶ್ರಮಿಸಿದವನ ವ್ಯಕ್ತಿಪೂಜೆ ಮಾಡುವವರು ಅಪಹಾಸ್ಯಕ್ಕೆ ಈಡಾಗುವುದು ಸಹಜ. ಆದ್ದರಿಂದ ಗಾಂಧಿ-ಬುದ್ಧರ ಪುನರವತಾರಕ್ಕಾಗಿ ಕಾಯಬೇಕು ಎಂಬ ನಿರಾಶಾ ಮತ್ತು ಅಸಹಾಯಕ ಸ್ಥಿತಿಯಲ್ಲಿ ಬಿದ್ದು ಹೊಸ ಮಾರ್ಗಗಳನ್ನು ಹುಡುಕುವ, ಹುಟ್ಟು ಹಾಕುವ ಕೆಲಸ ಮಾಡದೆ ಗಾಂಧಿ-ಬುದ್ಧರಿಗೆ ಕಾಯುವುದು ಕರುಣಾಜನಕವೆನಿಸುವ ಸ್ಥಿತಿ. ಇತಿಹಾಸದ ಮಟ್ಟಿಗೆ ಹೇಳುವುದಾದರೆ ಮತ್ತೆ ನಾ ಬರುವೆ ಎಂದು ಇವರ್ಯಾರೂ ಹೇಳಿಲ !!! ಸತ್ತವರಿಗೆ ಕಾಯುತ್ತಾ ಕೂರುವುದು ಮನುಷ್ಯಜಾತಿಯ ಕ್ರಿಯಾಶಕ್ತಿಯನ್ನೇ ಶಂಕಿಸಿದಂತೆ.

ನಮ್ಮ ದಾರಿ ನಾವೇ ಹುಡುಕಿಕೊಳ್ಳಬೇಕು. ಯಾಕೆಂದರೆ ಹುತಾತ್ಮರು ಪ್ರೇತಾತ್ಮರಲ್ಲ.

(2004 ಜನವರಿ 30 ರಂದು ದಟ್ಸ್‌ಕನ್ನಡದಲ್ಲಿ ಮತ್ತು ನನ್ನ "ಜಿಜ್ಞಾಸಾಗಂಗೆಯ ದಡದ ಕಾಲ್ದಾರಿಯಲ್ಲಿ" ಪುಸ್ತಕದಲ್ಲಿ ಪ್ರಕಟಿತವಾಗಿದೆ.)