Aug 28, 2008

ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 5, 2008 ರ ಸಂಚಿಕೆಯಲ್ಲಿನ ಲೇಖನ.)

ಮೂರು ವರ್ಷಗಳ ಹಿಂದೆ ಸ್ನೇಹಿತರೊಬ್ಬರು ಒಂದು ಕನ್ನಡ ಕಾದಂಬರಿಯನ್ನು ಓದಲು ತಂದುಕೊಟ್ಟರು. ನಾನೇನೂ ಕೇಳಿರಲಿಲ್ಲ. ಚೆನ್ನಾಗಿದೆ, ಓದಿ, ಎಂದು ಅವರೆ ಕೊಟ್ಟಿದ್ದು. ಆರಂಭಿಸಿದಾಗಿನಿಂದ ಬಹುಶಃ ಎಷ್ಟು ಸಾಧ್ಯವೊ ಅಷ್ಟು ಬೇಗ ಓದಿ ಮುಗಿಸಿದ ನೆನಪು. ಮಂಗಳೂರಿನ ಸುತ್ತಮುತ್ತ ಸ್ವಾತಂತ್ರ್ಯಪೂರ್ವದ ಸಮಯದಲ್ಲಿ ನಡೆಯುವ ಕತೆ ಅದು. ಬ್ರಾಹ್ಮಣರ ಮನೆಯ ಹುಡುಗಿಯೊಬ್ಬಳು ಮುಸ್ಲಿಂ ಯುವಕನನ್ನು ಪ್ರೇಮಿಸಿ ಮದುವೆಯೂ ಆಗುವ ಕತೆ. ಮಂಗಳೂರಿನ ಸುತ್ತಮುತ್ತ ಇವತ್ತು ಇರುವ ಜನಾಂಗದ್ವೇಷವನ್ನು ನೆನಸಿಕೊಂಡರೆ ಇವತ್ತಿನ ಸಂದರ್ಭದಲ್ಲಿ ಮೈನಡುಗಿಸುವ ಕಲ್ಪನೆ ಅದು. ಈ ಕತೆಗೆ ಹಿನ್ನೆಲೆಯಾಗಿ ಇರುವುದು ಗಾಂಧೀಜಿ ಮಂಗಳೂರಿಗೆ ಬರುವ ಎಳೆ. ಗಾಂಧೀಜಿಯ ಆಗಮನ ಯಾವಯಾವ ಜನವರ್ಗದಲ್ಲಿ ಯಾವಯಾವ ತರಹದ ತಲ್ಲಣಗಳನ್ನೂ, ಪಲ್ಲಟಗಳನ್ನೂ, ಮೌನಕ್ರಾಂತಿಯನ್ನೂ ಮಾಡುತ್ತದೆ ಎನ್ನುವುದನ್ನು ಅದ್ಭುತವಾಗಿ ತೋರಿಸುವ ಕಾದಂಬರಿ ಅದು. ಒಂದು ಐತಿಹಾಸಿಕ ಘಟನೆಯನ್ನು ಎಳೆಯಾಗಿ ಇಟ್ಟುಕೊಂಡು ಅದರ ಸುತ್ತ ಕಾದಂಬರಿ ಕಟ್ಟುವುದು ಕನ್ನಡದಲ್ಲಿ ಬಹಳ ಕಮ್ಮಿ. ಲೇಖಕರು ತೆಗೆದುಕೊಂಡ ವಿಷಯ, ಅದಕ್ಕೆ ಅವರು ಅಂತಿಮವಾಗಿ ಕೊಟ್ಟ ಅಂತ್ಯ, ಅವರ ಚಿಂತನೆಗಳು, ಆಲೋಚನೆಗಳು ಆದರ್ಶಪ್ರಾಯವಾದವು. ಅಲ್ಲಿಯವರೆಗೂ ನಾನು ಆ ಲೇಖಕರ ಹೆಸರನ್ನೇ ಕೇಳಿರಲಿಲ್ಲ ಎನ್ನುವುದು ನನಗೆ ಒಂದು ರೀತಿಯ ಅವಮಾನದ ವಿಷಯವಾಗಿಬಿಟ್ಟಿತು. ಆ ಕಾದಂಬರಿಯ ಹೆಸರು, "ಗಾಂಧಿ ಬಂದ." ಬರೆದವರು, "ತುಳುನಾಡಿನ ಹೆಣ್ತನದ ಸ್ವಾಭಿಮಾನಿ ದೇವತೆ 'ಸಿರಿ'ಯ ಖಾಸಾ ತಂಗಿಯಂತಿರುವ" ಎಚ್. ನಾಗವೇಣಿ.

ಎರಡು ತಿಂಗಳ ಹಿಂದೆ ನಡೆದ ಪದ್ಮಪ್ರಿಯಾರ ಪ್ರಕರಣ ನಿಮಗೆ ನೆನಪಿರಬಹುದು. ಈ ಪ್ರಕರಣ ಕರ್ನಾಟಕದಲ್ಲಿನ ನ್ಯಾಯಾಂಗ ಮತ್ತು ಪೊಲಿಸ್ ವ್ಯವಸ್ಥೆ ತನ್ನ ನೀಚ ಮಟ್ಟದಲ್ಲಿ ಇರುವುದನ್ನು ಎತ್ತಿ ತೋರಿಸಿದ್ದಷ್ಟೇ ಅಲ್ಲದೆ, ನಮ್ಮ ಸಮಾಜದಲ್ಲಿ ಪ್ರಗತಿಪರ ಚಿಂತನೆಗೆ ಯಾವ ಮಟ್ಟದ ಹಿನ್ನಡೆ ಆಗಿದೆ ಎನ್ನುವುದನ್ನೂ ತೋರಿಸಿತು. ಹೆಂಗಸೊಬ್ಬಳ ಆತ್ಮಹತ್ಯೆ ಪ್ರಕರಣದ ಮೂಲಕ ಇಡೀ ಸಮಾಜದ ಸದ್ಯದ ಪರಿಸ್ಥಿತಿಯ Snapshot ಕೊಟ್ಟ ಘಟನೆ ಅದು. ಆ ಸಮಯದಲ್ಲಿ ಕರ್ನಾಟಕದ ಅನೇಕ ಲೇಖಕರು ಹಲವಾರು ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ನನ್ನ ಪ್ರಕಾರ ಆ ಇಡೀ ಘಟನೆಗೆ ನಮ್ಮದೇ ನೆಲದ ಉದಾಹರಣೆಯೊಂದಿಗೆ ಸಮರ್ಥವಾದ ಉತ್ತರ ಮತ್ತು ತಾರ್ಕಿಕ ಪರಿಹಾರ ಕೊಟ್ಟವರು ಡಾ. ನಾಗವೇಣಿ. ಪದ್ಮಪ್ರಿಯರ ಪ್ರಕರಣವನ್ನು ವಿಶ್ಲೇಷಿಸುತ್ತ ಅವರು ಬರೆದ "ಹೆಣ್ಣಿಗೆ ಬೇಕೆ 'ದಾರಿದೀಪ'?" ಇಡೀ ನಾಡಿನ ಹೆಣ್ಣುಮಕ್ಕಳಿಗೆ ದಾರಿದೀಪವಾಗಬೇಕಿರುವ ಲೇಖನ. ಅದರಲ್ಲಿ ತುಳುನಾಡಿನ ಪಾಡ್ದನದ (ಜನಪದ ಮೌಖಿಕ ಕಾವ್ಯ) ಕತೆಯೊಂದನ್ನು ಉದಾಹರಿಸುತ್ತ ಸ್ವಾಭಿಮಾನಿ ಮತ್ತು ಸ್ವಾಯತ್ತ ಸಮಾಜದಲ್ಲಿ ಪದ್ಮಪ್ರಿಯ ಪ್ರಕರಣ ಹೇಗೆ ಕೊನೆಯಾಗಬೇಕಿತ್ತು ಎಂದು ಹೇಳುತ್ತಾರೆ. ಆ ಪಾಡ್ದನದ ಸ್ಥೂಲ ಕತೆ ಅವರದೆ ಬರವಣಿಗೆಯಲ್ಲಿ ಹೀಗಿದೆ:

"ಕೌಟುಂಬಿಕ ನಿಯತಿಯನ್ನು ಮುರಿದ ಗಂಡನಿಗೆ, ಹೆಂಡತಿ ಶಾಸ್ತ್ರ ಸಮ್ಮತವಾಗಿ ಬರ (ವಿಚ್ಚೇದನ) ಹೇಳಿ, ಆತನನ್ನು ತನ್ನ ಬದುಕಿನಿಂದ ಸಂಪೂರ್ಣ ನಿರಾಕರಿಸುವ ಮೂಲಕ -ಸಮಾಜದ ಸ್ಥಾಪಿತ ವ್ಯವಸ್ಥೆಯನ್ನು ಧಿಕ್ಕರಿಸಿ- ಮತ್ತೆ ಮರುಮದುವೆಯಾಗಿ ಸುಭದ್ರವಾದ ಹೊಸ ಬದುಕನ್ನು ರೂಪಿಸಿಕೊಳ್ಳುವಲ್ಲಿ, ತುಳುವ ಸಮಾಜದ ಮಹಿಳೆಯರಿಗೆ ಮಾದರಿಯಾಗಿ ನಿಂತವಳು- ಈ ಮೌಖಿಕ ಮಹಾಕಾವ್ಯದ ಸಾಂಸ್ಕೃತಿಕ ವೀರೆ ತುಳುನಾಡಿನ ಸಿರಿ.

"ತುಳುವ ಸ್ತ್ರೀ ಸಮುದಾಯಕ್ಕೆ ಹೊಸ ಮೌಲ್ಯವನ್ನು ಕಟ್ಟಿಕೊಡುವ ಸಲುವಾಗಿಯೇ ಈ ಸಮಾಜಕ್ಕೆ ಒಂದು ಮೌಲ್ಯವಾಗಿ ಕಾಣಿಸಿಕೊಂಡ ಸಿರಿ- ಗಂಡನ ವಿಷಯಲಂಪಟತನವನ್ನು ಸಾರ್ವಜನಿಕವಾಗಿ ಪ್ರಶ್ನಿಸಿ ಪ್ರತಿಭಟಿಸಿ, ಸಾಮಾಜಿಕ ನ್ಯಾಯಪಂಚಾಯತಿಯ ಸಂದರ್ಭದಲ್ಲಿ ಕೈ ಹಿಡಿದ ಗಂಡನೇ ಎದುರಾಳಿ ಪಕ್ಷದ ಪರವಹಿಸಿ, ಹೆಂಡತಿಗೇ ದ್ರೋಹ ಬಗೆದಾಗ ಆ ನೀತಿಗೆಟ್ಟ ಗಂಡನಿಗೆ ಆ ದಿನವೇ ವಿಚ್ಛೇದನ ನೀಡಿ, ಆತನ ಪೌರುಷಕೆ ಸವಾಲೆಸೆದು..... ಮರುಮದುವೆಯಾಗುವ ಮೂಲಕ, ಅಲಕ್ಷಿತ ಸಮುದಾಯದಲ್ಲಿ ಆಕೆ ಒಂದು ಹೊಸ ಮಾದರಿ ವ್ಯವಸ್ಥೆಯನ್ನು ನಿರ್ಮಿಸಿದ ಪರಿ... ಈ ಪಾಡ್ದನದ ಕಥಾ ಹಂದರದಲ್ಲಿ (ಅದೆಷ್ಟು) ದಿಟ್ಟವಾಗಿ ಅರಳಿದೆ....."
ಕನ್ನಡದ ಇವತ್ತಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಅನೇಕ ಖಾಲಿ ಕೊಡಗಳು ವಿಪರೀತ ಎನ್ನುವಷ್ಟು ಗದ್ದಲ ಮಾಡುತ್ತಿವೆ. ಮೀಡಿಯೋಕರ್‌ಗಳೆಲ್ಲ ಸ್ಟಾರ್‌ಗಳಾಗಿ ಬಿಟ್ಟಿದ್ದಾರೆ. ಇದಕ್ಕೆ ಕಳೆದ ಒಂದೆರಡು ದಶಕಗಳಲ್ಲಿ ಬದಲಾಗಿರುವ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಜೊತೆಜೊತೆಗೆ ಹೊಸದಾಗಿ ಹುಟ್ಟಿರುವ ಓದುಗ ವರ್ಗವೂ ಕಾರಣ. ಇನ್ನೂ ಸ್ಪಷ್ಟ ಮಾಡಿಕೊಂಡಿಲ್ಲದ ಚಿಂತನೆಗಳ ಮತ್ತು ಪ್ರಬುದ್ಧವಾಗಿಲ್ಲದ ಆಲೋಚನೆಗಳ ಈ ಹೊಸ ಯುವ ಓದುಗ ವರ್ಗವನ್ನು ಪ್ರಭಾವಿಸುವ ಮತ್ತು ದಾರಿತಪ್ಪಿಸುವ ಒಂದು ದುಷ್ಟಕೂಟವೆ ಇವತ್ತು ಕನ್ನಡದಲ್ಲಿದೆ. ಸಾಮಾಜಿಕ ಕಾಳಜಿಗಳಾಗಲಿ, ಪ್ರಾಮಾಣಿಕ ಬದ್ಧತೆಯಾಗಲಿ ಇಲ್ಲದ ಈ ಜನರ ನಡುವೆ ನಮಗೆ ಇವೆಲ್ಲವೂ ಇರುವ ಲೇಖಕರು ಮುಖ್ಯವಾಗುತ್ತಾರೆ. ಹಾಗಾಗಿಯೆ, ಬಹುಶಃ ಕನ್ನಡದ ಹತ್ತು ಅತ್ಯುತ್ತಮ ಕಾದಂಬರಿಗಳಲ್ಲಿ ಒಂದನ್ನು ಬರೆದ ಡಾ. ನಾಗವೇಣಿಯವರು ಈ ಸಂದರ್ಭದಲ್ಲಿ ನಮಗೆ ಕಾದಂಬರಿಗಾರ್ತಿಯಾಗಿಯಷ್ಟೇ ಅಲ್ಲದೆ ಸಮಕಾಲೀನಕ್ಕೆ ಪ್ರತಿಕ್ರಿಯಿಸುವವರಾಗಿಯೂ ಪ್ರಸ್ತುತರು. ಅವರ "ವಸುಂಧರೆಯ ಗ್ಯಾನ" ಪುಸ್ತಕದಲ್ಲಿಯ "ಬರಿದಾಗುತ್ತಿರುವ ನನ್ನ ಪ್ರೀತಿಯ ಕಡಲು" ಲೇಖನ ನಮ್ಮ ರಾಜ್ಯದ ಹೈಸ್ಕೂಲು ಅಥವ ಕಾಲೇಜಿನ ತರಗತಿಗಳಲ್ಲಿ ಚರ್ಚಿಸಬೇಕಾದ ಲೇಖನ. ಲಿಂಗ, ಕೋಮು, ಮತ್ತು ವರ್ಣಭೇದಗಳನ್ನು ಮೀರಿದ ಉತ್ತಮವಾದ ಒಂದು ಸ್ವಾಭಿಮಾನಿ ಸಮಾಜ ಕಟ್ಟಲು ಇವರಂತಹ ಚಿಂತನಶೀಲ ಲೇಖಕರ ಅವಶ್ಯಕತೆ ಇಡೀ ಸಮಾಜಕ್ಕೆ ಎಂದಿಗೂ ಇರುತ್ತದೆ.


ಲೇಖನದ ವಿಡಿಯೊ ಪ್ರಸ್ತುತಿ

ಆದರೆ, ಇತ್ತೀಚಿನ ದಿನಗಳಲ್ಲಿ ನನ್ನಲ್ಲಿ ಅಪಾರವಾದ ಹೆಮ್ಮೆ ಮತ್ತು ಆತ್ಮವಿಮರ್ಶೆಯನ್ನು ಹುಟ್ಟಿಸಿದ, ನನ್ನ ಮಗಳಿಗೂ ವೈಚಾರಿಕ ಆದರ್ಶವಾಗಬೇಕೆಂದು ನಾನು ಬಯಸಿದ ಈ ನನ್ನ ಮೆಚ್ಚಿನ ಲೇಖಕಿಯೊಂದಿಗೆ ಸಹಮತವಾಗದ ವಿಚಾರಧಾರೆ ಅವರು ಕಳೆದ ವಾರ ಪತ್ರಿಕೆಯ "ಸ್ತ್ರೀಮತ" ಅಂಕಣಕ್ಕೆ ಬರೆದ "ಸ್ನೇಹಕ್ಕೆ ಬೇಕಿಲ್ಲ ಸಂಬಂಧಗಳ ಕವಚ." ಇಡೀ ರಾಜ್ಯದ "ಮಹಿಳಾ ಸಂಕುಲದ ಏಕೈಕ ಪ್ರತಿನಿಧಿಯಾಗಿ ಸಂಪುಟದಲ್ಲಿರುವ" ಶೋಭಾ ಕರಂದ್ಲಾಜೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ನೇಹದ ಬಗ್ಗೆ ಬರೆಯುತ್ತ ಅವರು ಸಮರ್ಥಿಸಿಕೊಳ್ಳುವ ವ್ಯಕ್ತಿ ಮತ್ತು ವಿಚಾರಗಳು ಗಾಬರಿ ಹುಟ್ಟಿಸುವಂತಹವು. ದುರಂತ ಏನೆಂದರೆ, ಯಾವಯಾವುದನ್ನು ಶೋಭಾರವರು ಮಂತ್ರಿಯಾಗಿದ್ದುಕೊಂಡು ಮಾಡಬೇಕು ಎಂದು ಸ್ತ್ರೀಸಂಕುಲದ ಪರವಾಗಿ ನಾಗವೇಣಿಯವರು ಆಶಿಸುತ್ತಾರೊ ಅದನ್ನು ಮಾಡಲಾಗದ ಸ್ಥಿತಿಯಲ್ಲಿ ಶೋಭಾರವರು ಇರುವುದು. ಅದಕ್ಕೆ ಅವರು ಹೆಣ್ಣು ಎಂಬುದು ಕಾರಣವಲ್ಲ. ಬದಲಿಗೆ ಅವರಿಗಿಲ್ಲದ ವೈಚಾರಿಕತೆ ಮತ್ತು ಅರ್ಹತೆ. ಅವೆರಡೂ ಅವರಿಗೆ ಇದ್ದಿದ್ದೆ ಆದರೆ ಅವರು ಇವತ್ತು ಇರುವ ಉತ್ತಮ ಸ್ಥಿತಿಯಲ್ಲಿ (ಅಧಿಕಾರ) ಮತ್ತು ಕೆಟ್ಟ ಸ್ಥಿತಿಯಲ್ಲಿ (ಸಂಪುಟದಲ್ಲಿಯ "ಏಕೈಕ" ಮಹಿಳೆ ಎಂಬ ಅವಮಾನಕಾರಿ ಹೆಗ್ಗಳಿಕೆ ಮತ್ತು ಅಸಮಾನತೆ ಬೋಧಿಸುವ ಫ್ಯಾಸಿಸ್ಟ್ ಸಿದ್ಧಾಂತ) ಇರುತ್ತಿರಲಿಲ್ಲ.

ಡಾ. ನಾಗವೇಣಿಯವರು ಶೋಭಾರವರನ್ನು "ಈ ನಾಡಿನ ಅದರಲ್ಲೂ ಗ್ರಾಮೀಣ ಮಹಿಳೆಯರ ಕನಸು ಮತ್ತು ಆಶಾಕಿರಣ." ಎಂದುಬಿಟ್ಟಿದ್ದಾರೆ! ಅದರ ಜೊತೆಗೇ, ಶೋಭಾರವರ ಬೆನ್ನಿಗೆ ನಿಂತ ಯಡಿಯೂರಪ್ಪನವರನ್ನೂ ವಾಚಾಮಗೋಚರ ಹೊಗಳಿಬಿಟ್ಟಿದ್ದಾರೆ. ಆದರೆ ಅವರು ಸ್ವಲ್ಪ ನಿಷ್ಠುರವಾಗಿ ಯೋಚಿಸಿದ್ದರೆ ಅವರಿಗೇ ಗೊತ್ತಾಗಬಹುದಾಗಿದ್ದ ವಿಚಾರ ಕುಮಾರಸ್ವಾಮಿಯವರ ಮಂತ್ರಿಮಂಡಲದಲ್ಲಿ ಯಾವೊಬ್ಬ ಸ್ತ್ರೀಯೂ ಮಂತ್ರಿಯಾಗದೇ ಹೋಗದ್ದಕ್ಕೆ ಶೋಭಾರವರ ಪಾಲೂ ಇದೆ ಎನ್ನುವುದು. ಯಡಿಯೂರಪ್ಪನವರಿಗೆ ಶೋಭಾ ಮಂತ್ರಿಯಾಗಬೇಕಿತ್ತೆ ಹೊರತು ಬೇರೊಬ್ಬ ಶಾಸಕಿಯಲ್ಲ. ಯಾರನ್ನಾದರೂ ಸರಿ, ಒಟ್ಟಿನಲ್ಲಿ ಒಬ್ಬ ಶಾಸಕಿಯನ್ನಾದರೂ ಮಂತ್ರಿ ಮಾಡಿ ಎಂದು ಶೋಭಾರವರು ಆಗ ಹೇಳಲಿಲ್ಲ. ಅವರ ಗುರಿ ತಾವು ಮಂತ್ರಿಯಾಗುವುದಾಗಿತ್ತೆ ಹೊರತು ಸ್ತ್ರೀಯರಿಗೆ ಪ್ರಾತಿನಿಧ್ಯ, ಅರ್ಹರಿಗೆ ಪ್ರಾತಿನಿಧ್ಯ, ಸಮಾನ ಅವಕಾಶಗಳು, ಇವು ಯಾವುವೂ ಆಗಿರಲಿಲ್ಲ. ಅವರಿಗೆ ಅನುಕೂಲವಾದರೆ ಮಾತ್ರ ಲಿಂಗಸಮಾನತೆ ಅಥವ ಅರ್ಹರಿಗೆ ಪ್ರಾತಿನಿಧ್ಯ ಎಂಬ ಮಾತುಗಳು. ಇದು ಅಪ್ಪಟ ಸಮಯಸಾಧಕತನವೆ ಹೊರತು ಬೇರೇನೂ ಅಲ್ಲ.

ಯಡಿಯೂರಪ್ಪನವರ ಜೊತೆ ಅವರಿಗೆ ಇರಬಹುದಾದ ಅಥವ ಇಲ್ಲದಿರಬಹುದಾದ ಸಂಬಂಧವನ್ನು ಬದಿಗಿಟ್ಟು ಮಂತ್ರಿಯಾದಾಗಿನಿಂದ ಶೋಭಾರವರ ಕಾರ್ಯವೈಖರಿಯನ್ನು ನೋಡಿದರೂ ಅವರಲ್ಲಿ ಎದ್ದು ಕಾಣಿಸುವುದು ಅವೈಜ್ಞಾನಿಕ ಮತ್ತು ಅಪ್ರಜಾಸತ್ತಾತ್ಮಕ ನಡವಳಿಕೆ. ಮೈಸೂರು ದಸರಾ ವಿಷಯದಲ್ಲಿ ಅವರ ಹೇಳಿಕೆಗಳನ್ನು ಮತ್ತು ದೇಶವಿದೇಶಗಳ ಮಹಾರಾಜರನ್ನು ಕರೆದು ಸನ್ಮಾನಿಸುವಂತಹ ಕ್ರಾಂತಿಕಾರಿ ಆಲೋಚನೆಗಳನ್ನು ಕೇಳಿದಾಗ ಅವರಿಗೆ ಇರಬಹುದಾದ ಪ್ರಾಥಮಿಕ ಜ್ಞಾನದ ಬಗ್ಗೆಯೇ ಸಂಶಯ ಬರುತ್ತದೆ. ಇಂತಹವರನ್ನು ನಮ್ಮ ನಾಡಿನ ಹೆಣ್ಣುಮಕ್ಕಳ ಆಶಾಕಿರಣ ಎಂದು ಭಾವಿಸಿಬಿಟ್ಟರೆ ನಿಜಕ್ಕೂ ನಾವು ಹಿಮ್ಮುಖವಾಗಿ ಚಲಿಸುತ್ತಿದ್ದೇವೆ.

ಇಷ್ಟಕ್ಕೂ ನಮ್ಮ ನಾಡಿನ ಹೆಣ್ಣುಮಕ್ಕಳಿಗೆ ರಾಜಕೀಯದಲ್ಲಿ ಆದರ್ಶವಾಗಬೇಕಾದವರು, ಸ್ಫೂರ್ತಿಯಾಗಬೇಕಾದವರು ಅನೇಕರಿದ್ದಾರೆ. ಶೋಭಾರವರಿಗಿಂತ ಮೊದಲೆ ಅನೇಕ ಮಹಿಳೆಯರು ಕರ್ನಾಟಕದಲ್ಲಿ ಮಂತ್ರಿಗಳಾಗಿ, ಸಭಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇಂದಿರಾ ಗಾಂಧಿ ೪೦ ವರ್ಷಗಳ ಹಿಂದೆಯೇ ದೇಶದ ಅತ್ಯುನ್ನತ ಹುದ್ದೆ ಕೈಗೆತ್ತಿಕೊಂಡರು. ಈಗಲೂ ದೇಶದಲ್ಲಿ ಮೂವರು ಮಹಿಳಾ ಮುಖ್ಯಮಂತ್ರಿಗಳಿದ್ದಾರೆ. ಇವರೆಲ್ಲರೂ ಶೋಭಾರವರಂತೆ ಗ್ರಾಮೀಣ ಹಿನ್ನೆಲೆಯಿಂದ ಬಂದಿಲ್ಲ ಎನ್ನುವುದೊ ಅಥವ ಅವರಂತಹ ಬಡತನದ ಹಿನ್ನೆಲೆ ಇಲ್ಲ ಎನ್ನುವುದೊ ಅವರನ್ನು ಅನರ್ಹರನ್ನಾಗಿ ಅಥವ ಕಡಿಮೆ ಸಾಧಕರನ್ನಾಗಿ ಮಾಡುವುದಿಲ್ಲ.

ಇನ್ನು, ಯಡಿಯೂರಪ್ಪನವರಿಗೆ ಶೋಭಾರವರ ಬಗೆಗೆ ಇರಬಹುದಾದ ಸ್ನೇಹ, ನಿಷ್ಠೆಯ ಬಗೆಗೆ ನಾಗವೇಣಿಯವರು ಬಹಳ ಒತ್ತು ಕೊಟ್ಟಿದ್ದಾರೆ. ಆದರೆ, ಶೋಭಾರವರಿಗೆ ಯಡಿಯೂರಪ್ಪನವರ ಪರ ನಿಷ್ಠೆ ಎಲ್ಲಿಯತನಕ ಇದೆ ಎನ್ನುವುದನ್ನು ಭವಿಷ್ಯದ ದಿನಗಳೇ ಹೇಳಬೇಕು. ರಾಜಕೀಯದಲ್ಲಿ "ನಾನು ಅವರಿಗೆ ಹನುಮಂತ" ಎಂದವನೆ ರಾವಣನಾಗಿದ್ದನ್ನು ನಾವು ಪ್ರತಿನಿತ್ಯ ಕಾಣುತ್ತಿದ್ದೇವೆ. ಹಾಗೆಯೇ, ಎಂತಹ ದುಷ್ಟರಲ್ಲೂ ಕೆಲವೊಮ್ಮೆ ಒಂದೆರಡು ಒಳ್ಳೆಯ ಗುಣ ಇರಬಹುದೇನೊ. ಆದರೆ ಆ ಒಂದೆರಡು ಒಳ್ಳೆಯ ಗುಣಗಳು ಅವರ ಅನರ್ಹತೆ ಅಥವ ದುಷ್ಟತನವನ್ನು ಸರಿದೂಗಿಸಲಾಗದು. ತಮ್ಮ ಅವೈಚಾರಿಕತೆ, ಅಜ್ಞಾನ, ಮೂಢನಂಬಿಕೆ, ಅಪ್ರಜಾಪ್ರಭುತ್ವ ಚಿಂತನೆಗಳಿಂದಾಗಿ ಯಾರಿಗೂ ಆದರ್ಶವಾಗಬಾರದ ಶೋಭಾರವರನ್ನು ಅವರ ಬಡತನದ ಹಿನ್ನೆಲೆ ಮತ್ತು ಈಗಿನ ಪುರುಷಪ್ರಧಾನ ರಾಜಕೀಯದಲ್ಲಿ ಮಂತ್ರಿಗಿರಿಯ ತನಕದ ಸಾಧನೆಯಿಂದಾಗಿ ಆದರ್ಶ ಮಾಡಿಕೊಂಡು ಬಿಟ್ಟರೆ ಅದರಲ್ಲಿ ದೊಡ್ಡ ಅಪಾಯವಿದೆ.

ಈ ಸಮಯದಲ್ಲಿ ಯಡಿಯೂರಪ್ಪ ಮತ್ತು ಶೋಭಾರವರ ಸ್ನೇಹ ಅಥವ ಸಂಬಂಧವನ್ನು ನಿರ್ಲಕ್ಷಿಸಿ, (ಅದು ಎಷ್ಟೇ ಉದಾರವೂ ಪ್ರಶಂಸನೀಯವೂ ಆಗಿದ್ದರೂ) ಅವರು ಕರ್ನಾಟಕದ ಪ್ರಜೆಗಳಿಗೆ ಸ್ಫೂರ್ತಿಗೆ ಅರ್ಹವಾದ, ಜವಾಬ್ದಾರಿಯುತವಾದ ಆಡಳಿತ ನೀಡಬಲ್ಲರೆ ಎನ್ನುವುದನ್ನಷ್ಟೆ ಗಮನಿಸಬೇಕು. ಆ ಜವಾಬ್ದಾರಿಯುತ ಆಡಳಿತದಲ್ಲಿ ಅವರ ವೈಯಕ್ತಿಕ ನಡವಳಿಕೆಯೂ ಸೇರಿರುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಮಾದರಿಯಾಗಲು ಅವರಿಗಿರಬಹುದಾದ ಅರ್ಹತೆ ಎಲ್ಲಿಯವರೆಗೆ ಸಾಬೀತಾಗುವುದಿಲ್ಲವೊ ಅಲ್ಲಿಯ ತನಕ ವೈಯಕ್ತಿಕ ಸ್ನೇಹ, ನಿಷ್ಠೆ ಮುಂತಾದ ಭಾವನಾತ್ಮಕ ವಿಷಯಗಳನ್ನು ನಿರ್ಲಕ್ಷಿಸಿ, ವಿಮರ್ಶಿಸುತ್ತಿರಬೇಕು. ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ನೀಡುವ ರಿಯಾಯಿತಿ ಪ್ರಜಾಪ್ರಭುತ್ವದಲ್ಲಿ ವಿಮರ್ಶೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಅಸ್ತ್ರವಾಗಿಬಿಡುತ್ತದೆ. ಆ ಸ್ವ್ವಾತಂತ್ರ್ಯವನ್ನು ಒತ್ತೆಯಿಟ್ಟುಕೊಳ್ಳುವ ಹಕ್ಕು ಯಾರಿಗೂ ಇಲ್ಲ.

Aug 26, 2008

ಬಸವಣ್ಣನಾಗಬೇಕೆಂದು ಬಯಸಿದ ಯಡಿಯೂರಪ್ಪ ಅಮೆರಿಕದಲ್ಲಿ ಮೂಗಬಸವನಾದದ್ದು!

(ಎರಡು ವರ್ಷದ ಹಿಂದೆ ಆಗಿನ ಉಪಮುಖ್ಯಮಂತ್ರಿ ಯಡಿಯೂರಪ್ಪನವರು "ಅಕ್ಕ" ಸಮ್ಮೇಳನಕ್ಕೆ ಬಂದಿದ್ದಾಗ ಅವರು ಸಿಲಿಕಾನ್ ಕಣಿವೆಯಲ್ಲಿ ಭಾಗವಹಿಸಿದ್ದ ಕಾರ್ಯಕ್ರಮವೊಂದರ ವರದಿ ಇದು. ಈ ಮುಂಚೆ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 22, 2006ರ ಸಂಚಿಕೆಯಲ್ಲಿ ಪ್ರಕಟವಾಗಿದೆ. "ಅಕ್ಕ 2008"ರ ಸಮಯದಲ್ಲಿ "ಅಕ್ಕ-2006"ರ ಸಮಯದಲ್ಲಿ ಬರೆದ ಲೇಖನಗಳು.)

ಸದ್ಯದ ಸಂಕೀರ್ಣ ಜಾಗತೀಕರಣದ ಸವಾಲುಗಳನ್ನು ಎದುರಿಸಲು ನಾಡಿನ ಚುಕ್ಕಾಣಿ ಹಿಡಿದಿರುವ ನಮ್ಮ ಉಪ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ವಾರಿಗೆಯ ರಾಜಕಾರಿಣಿಗಳು ಹೇಗೆ ಅಸಮರ್ಥರು ಎಂದು ಯಡಿಯೂರಪ್ಪನವರು ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಭಾಗವಹಿಸಿದ ಸಮಾರಂಭದಲ್ಲಿ ದೃಷ್ಟಿಮಾಂದ್ಯರೂ ಕಾಣಬಲ್ಲಷ್ಟು ಸ್ಪಷ್ಟವಾಗಿ ಕಾಣುತ್ತಿತ್ತು.

TiE (The Indus Entrepreneurs) ಎನ್ನುವುದು ಅಮೆರಿಕದಲ್ಲಿರುವ ಭಾರತೀಯ ಉದ್ಯಮಿಗಳು 1992 ರಲ್ಲಿ ಹುಟ್ಟುಹಾಕಿದ ಒಂದು ಲಾಭರಹಿತ ಸಂಸ್ಥೆ. ಕರ್ನಾಟಕದ ಕುಮಾರ್ ಮಳವಳ್ಳಿ, ದೇಶ್ ದೇಶಪಾಂಡೆ, ಬಿ.ವಿ. ಜಗದೀಶ್ ಮುಂತಾದ ಯಶಸ್ವಿ ಉದ್ಯಮಿಗಳು ಇದರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಈ ಸಂಸ್ಥೆಯ ಮೂಲ ಉದ್ದೇಶ ಅಮೇರಿಕದಲ್ಲಿ ನೆಲಸಿರುವ ಭಾರತೀಯರಿಗೆ ಅವರೇನಾದರೂ ಹೊಸ ಉದ್ಯಮಗಳನ್ನು, ಕಂಪನಿಗಳನ್ನು ಸ್ಥಾಪಿಸಬೇಕು, ಅದಕ್ಕೆ ಬಂಡವಾಳವನ್ನು ಆಕರ್ಷಿಸಬೇಕು ಎನ್ನುವ ಉದ್ದೇಶವಿದ್ದಲ್ಲಿ, ಅವರಿಗೆ ಬೇಕಾದ ಎಲ್ಲಾ ರೀತಿಯ ಮಾರ್ಗದರ್ಶನ ನೀಡಲು, ತನ್ಮೂಲಕ ಹೆಚ್ಚು ಹೆಚ್ಚು ಭಾರತೀಯರು ಅಮೆರಿಕದ ಕಾರ್ಪೊರೇಟ್ ಜಗತ್ತಿನಲ್ಲಿ ಯಶಸ್ವಿ ಉದ್ಯಮಿಗಳಾಗಲು, ಸಹಾಯ ಮಾಡುತ್ತದೆ. ಅದರ ಜೊತೆಗೆ ಇಲ್ಲಿಯವರಿಗೆ ಭಾರತದಲ್ಲಿ ಬಂಡವಾಳ ತೊಡಗಿಸಲು ಇರುವ ಅವಕಾಶಗಳೇನು, ಯಾವ ಯಾವ ರಾಜ್ಯಗಳಲ್ಲಿ ಏನೇನು ಸೌಲಭ್ಯಗಳಿವೆ, ಹೆಚ್ಚಿನ ಬೆಳವಣಿಗೆಗೆ ಎಲ್ಲೆಲ್ಲಿ ಅವಕಾಶಗಳಿವೆ ಎಂದು ತಿಳಿಸಲು ಸೆಮಿನಾರುಗಳನ್ನು ಏರ್ಪಡಿಸುತ್ತದೆ. ತಮ್ಮ ತಮ್ಮ ರಾಜ್ಯಗಳಿಗೆ ಇಲ್ಲಿಂದ ಬಂಡವಾಳ ಆಕರ್ಷಿಸಲು ಬರುವ ಮಂತ್ರಿ, ಮುಖ್ಯಮಂತ್ರಿಗಳಂತಹ ನಿಯೋಗಗಳಿಗೆ ಅಮೆರಿಕದಲ್ಲಿ TiE ಒಂದು ಉತ್ತಮ ವೇದಿಕೆ.

ಕರ್ನಾಟಕದಿಂದ ಅಕ್ಕ ಸಮ್ಮೇಳನಕ್ಕೆ ಬಂದಿದ್ದ ನಿಯೋಗದೊಂದಿಗೆ ಸಿಲಿಕಾನ್ ಕಣಿವೆಯ TiE ಸದಸ್ಯರ ಮತ್ತು ಸ್ಥಳೀಯ ಕನ್ನಡಿಗರ ಭೇಟಿಯೊಂದನ್ನು ಅಕ್ಕ ಉಪಾಧ್ಯಕ್ಷರಾದ ಪ್ರಭುದೇವ್‌ರವರು ಏರ್ಪಡಿಸಿದ್ದರು. ಹಣಕಾಸು ಮಂತ್ರಿ ಯಡಿಯೂರಪ್ಪ, ಭಾರಿ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಸಚಿವ ಕಟ್ಟ್ಟಾ ಸುಬ್ರಹ್ಮಣ್ಯ ನಾಯ್ಡು, ಸಣ್ಣ ಕೈಗಾರಿಕಾ ಸಚಿವ ಶಿವಾನಂದ ನಾಯಕ್, ವಾಣಿಜ್ಯ ಮತ್ತು ಕೈಗಾರಿಕೆಯ ಪ್ರಿನ್ಸಿಪಲ್ ಕಾರ್ಯದರ್ಶಿ ಕೆ.ಎಮ್.ಶಿವಕುಮಾರ್, ಮತ್ತು ಇತರ ಹಿರಿಕಿರಿಯ ಅಧಿಕಾರಿಗಳ ನಿಯೋಗ ಈ ಸಭೆಯಲ್ಲಿ ಪಾಲ್ಗೊಂಡಿತ್ತು. ನಮ್ಮ ಮಾನ್ಯ ಉಪಮುಖ್ಯಮಂತ್ರಿಗಳು ಸಭೆ ಹೇಗೆ ನಡೆಯುತ್ತದೆ ಎನ್ನುವುದರ ಬಗ್ಗೆ ಎಷ್ಟು ಚೆನ್ನಾಗಿ ಅರಿತುಕೊಂಡು ಬಂದಿದ್ದರೆಂದರೆ, ಸಭೆಗೆ ನಿಯೋಗದಲ್ಲಿನ ಎಲ್ಲರನ್ನೂ ಒಂದು ಸಲ ಪರಿಚಯಿಸಿದ ಪ್ರಭುದೇವ್, "ಈ ಕಾರ್ಯಕ್ರಮ ಹೇಗೆ ನಡೆಯುತ್ತದೆ ಎಂದರೆ, ಮೊದಲಿಗೆ ಗೌರವಾನ್ವಿತ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾತನಾಡುತ್ತಾರೆ, ನಂತರ ಕಟ್ಟಾ ಸುಬ್ರ..." ಎಂದು ಇನ್ನೂ ಮುಂದಕ್ಕೆ ಹೇಳುತ್ತಿದ್ದಂತೆ ತಮ್ಮ ಸಿದ್ಧಪಡಿಸಿದ ಭಾಷಣದೊಂದಿಗೆ ಯಡಿಯೂರಪ್ಪನವರು ಎದ್ದು ಪೋಡಿಯಮ್‌ಗೆ ನುಗ್ಗೇ ಬಿಟ್ಟರು! ಅದು ಎಷ್ಟು ಚೆನ್ನಾಗಿ ತಲೆಬಗ್ಗಿಸಿಕೊಂಡು ನುಗ್ಗಿದರೆಂದರೆ, ಪ್ರಭುದೇವ್ "ಒಂದು ನಿಮಿಷ ಸರ್, ಇನ್ನೂ ಸ್ವಲ್ಪ ಹೇಳಬೇಕು, ಒಂದು ನಿಮಿಷ ಸರ್...," ಎಂದು ಕನ್ನಡದಲ್ಲಿ ಕೇಳಿಕೊಳ್ಳುತ್ತಿದ್ದರೂ, ಅವರು ಮಾತನಾಡುತ್ತಿರುವುದು ಇಂಗ್ಲೀಷೇ ಇರಬೇಕು, ನನ್ನನ್ನು ಇನ್ನೂ ಪರಿಚಯಿಸುತ್ತಿರಬೇಕು ಎಂದುಕೊಂಡು ಪೋಡಿಯಮ್ ಅನ್ನು ಆಕ್ರಮಿಸಿಕೊಂಡು ತಮ್ಮ ಭಾಷಣ ಪ್ರಾರಂಭಿಸಿಬಿಟ್ಟರು. ತುಂಬ ಘನತೆಯಿಂದ ನಡೆಯುವ ಇಂತಹ ನೂರಾರು ಕಾರ್ಯಕ್ರಮಗಳನ್ನು ನೋಡಿರುವ ಸ್ಥಳೀಯ ಪ್ರೇಕ್ಷಕರು ಶಾಕ್ ಆಗಿ ಸುಮ್ಮನೆ ನೋಡುತ್ತಿದ್ದರು. 6 ನಿಮಿಷಗಳ ತಮ್ಮ ಇಂಗ್ಲಿಷ್ ಭಾಷಣದಲ್ಲಿ ಯಡಿಯೂರಪ್ಪನವರು ತಲೆ ಎತ್ತಿ ಸಭಿಕರನ್ನು ನೋಡಲೇ ಇಲ್ಲ! ಅಷ್ಟು ಶ್ರದ್ಧೆಯಿಂದ, ಪ್ರತಿಯೊಂದು ಪದವನ್ನೂ ಗಮನವಿಟ್ಟು ಓದಿದ್ದೇ ಓದಿದ್ದು. ಕೊನೆಯ ವಾಕ್ಯವಾದ "Thank you very much for this fruitful interaction..." ಹೇಳುವಾಗಲೂ ತಲೆಯೆತ್ತಿ ಸಭಿಕರನ್ನು ನೋಡಲಿಲ್ಲ. ಅವರ ಇಡೀ ಭಾಷಣದಲ್ಲಿ ಬಂದಿದ್ದವರನ್ನು ಪ್ರಭಾವಿತಗೊಳಿಸುವಂತಹುದು ಏನೂ ಇರಲಿಲ್ಲ. ಮಾನ್ಯರು, ತಮಗೆ ಮಂತ್ರಿಗಿರಿಯೊ ಪಕ್ಷದ ಕುರ್ಚಿಯೊ ಇನ್ನೆಂತಹುದೊ ಬೇಕಾದಾಗ, ದೆಹಲಿ ವರಿಷ್ಠರನ್ನು ನೋಡಲು ಹೋದಾಗ ಇದೇ ಮಟ್ಟದ ಸಿದ್ಧತೆ ಮಾಡಿಕೊಂಡು ಹೋಗುತ್ತಾರೆಯೇ? ಇದೇ ರೀತಿ ಅಲ್ಲಿನ ಸಭೆಯಲ್ಲಿಯೂ ನಡೆದುಕೊಳ್ಳುತ್ತಾರೆಯೆ? ಸ್ವಂತದ್ದಕ್ಕಾದರೆ ಒಂದು ಸಿದ್ಧತೆ, ಸರ್ಕಾರದ್ದಕ್ಕಾದರೆ ಮತ್ತೊಂದು ಬಗೆಯ ಸಿದ್ಧತೆ?

ಮುಂದಿನ ಸರದಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡುರವರದು. ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಇವರೇ ಅಂದಿನ ಸ್ಟಾರ್ ಪರ್ಫಾರ್ಮರ್! ಹೇಳಿಕೊಳ್ಳುವಂತಹ ಇಂಗ್ಲಿಷ್ ಬರದಿದ್ದರೂ, ಸಿದ್ಧಪಡಿಸಿದ ಭಾಷಣಕ್ಕಿಂತ ಬಹಳ ಆಪ್ತವಾಗಿ, ತಮಾಷೆಯಾಗಿ, ಆತ್ಮವಿಶ್ವಾಸದಿಂದ ತಮ್ಮ ಬಟ್ಳರ್ ಇಂಗ್ಲಿಷ್‍ನಲ್ಲಿ 10 ನಿಮಿಷ ಮಾತನಾಡಿದರು. "We had a serious of business meeting," ಎಂದರೊಮ್ಮೆ! ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಸ್ಥಳೀಯ ಸಿಲಿಕಾನ್ ಕಣಿವೆಯ ಸಾಮ್ಯತೆಗಳನ್ನು ಹೋಲಿಸುತ್ತ "we are having bloodly relationship," ಎಂದರು! ಬಹಳಷ್ಟು ಜನ ಅದನ್ನು bloody ಎಂದು ಅಪಾರ್ಥ ಮಾಡಿಕೊಂಡು ಅವರೆಂದದ್ದು bloodly ಯಾ ಇಲ್ಲ bloody ಯಾ, ಅಥವ blood relationship ಇರಬಹುದಾ ಎಂದು ಸಭೆ ಮುಗಿದ ಮೇಲೆ ಮಾತನಾಡಿಕೊಳ್ಳುತ್ತಿದ್ದರು! ಆದರೆ ಅವರು ಏನು ಹೇಳಿದರು ಎನ್ನುವುದಕ್ಕಿಂತ, ಹೇಳಿದ ಮತ್ತು ಮಾತನಾಡಿದ ಹಾವಭಾವದ ರೀತಿಗೆ ಜನ ಮೆಚ್ಚಿದರು.

ಇಡೀ ಕಾರ್ಯಕ್ರಮದ ಇಂಪ್ರೆಸಿವ್ ಘಟ್ಟ ಮುಂದಿನ 20 ನಿಮಿಷಗಳದು. ಕರ್ನಾಟಕದಲ್ಲಿನ ಅವಕಾಶಗಳು, ಉದ್ದಿಮೆಗಳು, ವಾತಾವರಣ, ಅನುಕೂಲಗಳು, ಇವೆಲ್ಲವನ್ನೂ ಪ್ರತಿಬಿಂಬಿಸುವ 10 ನಿಮಿಷಗಳ ವಿಡಿಯೊ ಚಿತ್ರ ನಿಜಕ್ಕೂ ಅದ್ಭುತವಾಗಿತ್ತು. ಬಹಳ ವೃತ್ತಿನೈಪುಣ್ಯದಿಂದ ಸಿದ್ಧಪಡಿಸಲಾಗಿತ್ತು. ಅದು ಎಷ್ಟೊಂದು ಪರಿಣಾಮಕಾರಿಯಾಗಿ ಇತ್ತೆಂದರೆ, ಅದಾದ ನಂತರ ಮಾತನಾಡಿದ IAS ಅಧಿಕಾರಿ ಕೆ.ಎಮ್. ಶಿವಕುಮಾರ್ ಅದರಲ್ಲಿ ಬಂದಿರುವುದನ್ನೆಲ್ಲ ಅಕ್ಷರಶಃ ನಂಬಬೇಡಿ ಎಂಬ ಹಿತವಚನ ಹೇಳಿದರು! ಶಿವಕುಮಾರ್ ಬಹಳ ಚೆನ್ನಾಗಿ ತಿಳಿದುಕೊಂಡು, ಸಿದ್ಧವಾಗಿ ಬಂದಿದ್ದರು. ಅವರು ಮಾತನಾಡಿದ ರೀತಿ ಹಾಗೂ ಹೇಳಿದ ಕೆಲವು ವಿಚಾರಗಳು, ಉದಾಹರಣೆಗೆ, "ಇಲ್ಲಿಯ ಸಿಲಿಕಾನ್ ಕಣಿವೆಯಲ್ಲಿ ಗರಾಜಿನಲ್ಲಿ ಪ್ರಾರಂಭಿಸಿ, ನಂತರ ದೈತ್ಯ ಕಂಪನಿಗಳಾದ ಉದಾಹರಣೆಗಳು ನಿಮಗೆ ಗೊತ್ತು. ಅವು ಇಲ್ಲಿ ಘಟಿಸಿದವು. ಅಂತಹುದೇ ಕಥೆಗಳು ಈಗ ಬೆಂಗಳೂರಿನಲ್ಲಿ ಪ್ರತಿನಿತ್ಯ ಘಟಿಸುತ್ತಿವೆ," ಎಂಬಂತಹ ಯಶಸ್ಸಿನ ಕತೆಗಳು ಬಹಳ ಪರಿಣಾಮಕಾರಿಯಾಗಿದ್ದವು. ಸಭೆಗೆ ಬಂದಿದ್ದವರು ಏನು ತಿಳಿದುಕೊಳ್ಳಬೇಕು ಎಂದು ಬಂದಿದ್ದರೊ ಅದನ್ನಷ್ಟೆ ಅವರು ಬಹಳ ಚೆನ್ನಾಗಿ ಹೇಳುತ್ತಿದ್ದರೆ, ಮಾನ್ಯ ಉಪಮುಖ್ಯಮಂತ್ರಿಗಳು ತಮ್ಮ ಪಾಳೆಯಗಾರಿಕೆ ಗತ್ತಿನಲ್ಲಿ ಮಧ್ಯದಲ್ಲಿಯೇ ತಮ್ಮ ಎಡಗೈ ಎತ್ತಿ, "ಪ್ರಶ್ನೆಗಳನ್ನು ತೆಗೆದುಕೊಳ್ಳೋಣ, ನಿಲ್ಲಿಸಿ," ಎಂದುಬಿಟ್ಟರು! ಉಪಮುಖ್ಯಮಂತ್ರಿಗಳಿಗೆ ಸಭಾಮರ್ಯಾದೆ ಅರ್ಥವಾಗಲಿಲ್ಲ ಎಂದರೆ ಹೇಗೆ? ಇದೇನು ರಾಜರ ಆಸ್ಥಾನವೊ ಅಥವ ಪ್ರಜಾಪ್ರಭುತ್ವವೊ? ಯಡಿಯೂರಪ್ಪನವರ ಧಾರ್ಷ್ಟ್ಯದಿಂದ ಇರಿಸುಮುರಿಸಾದ ಶಿವಕುಮಾರ್ ಮಧ್ಯಕ್ಕೆ ಮಾತು ನಿಲ್ಲಿಸಿಬಿಟ್ಟರು. ಆದರೆ ಆದ ಅವಮಾನದ ಸೇಡನ್ನು ಕೊನೆಯಲ್ಲಿ ಬೇರೆ ರೀತಿ ತೀರಿಸಿಕೊಂಡರು!

ನಂತರ ಮಾತನಾಡಿದ್ದು ಕೈಗಾರಿಕಾಭಿವೃದ್ಧಿ ಇಲಾಖೆಯ ಕಮಿಷನರ್ ರಾಜ್‌ಕುಮಾರ್ ಖತ್ರಿ. ಕಂಪ್ಯೂಟರ್ ಪವರ್ ಪಾಯಿಂಟ್ ಪ್ರದರ್ಶನ ಕೊಟ್ಟ ಖತ್ರಿ, ಸರ್ಕಾರಿ ಅಧಿಕಾರಿಗಳಿಗೂ ಕಂಪ್ಯೂಟರ್ ಬಳಸಲು ಬರುತ್ತದೆ ಎಂದು ತೋರಿಸಿಕೊಟ್ಟರು. ಚೆನ್ನಾಗಿತ್ತು. ಅದಾದ ಮೇಲೆ ನಡೆದ ಪ್ರಶ್ನೋತ್ತರದ್ದೆ ದೊಡ್ಡ ತಮಾಷೆ ಮತ್ತು ದುರಂತ. ಇಂತಹ ಸಭೆಗಳಲ್ಲಿ ಭಾಗವಹಿಸುವವರಿಗೆ ಹೆಚ್ಚಿನ, ವಸ್ತುನಿಷ್ಠ ವಿಷಯ ತಿಳಿಯುವುದೇ ಪ್ರಶ್ನೋತ್ತರ ಸಮಯದಲ್ಲಿ. ಸಭಾ ಮರ್ಯಾದೆಯ ಪ್ರಯುಕ್ತ ಎಲ್ಲರೂ ಸಭೆಗೆ ಹಿರಿಯರಾಗಿದ್ದ ಯಡಿಯೂರಪ್ಪನವರಿಗೇ ಪ್ರಶ್ನೆಗಳನ್ನು ಕೇಳಿದರೆ ಅವರು ತಮ್ಮ ಎಂದಿನ ಗತ್ತಿನಲ್ಲಿ, ಒಂದು ಮಾತೂ ಆಡದೆ, ಕಟ್ಟಾಗೆ ಉತ್ತರ ನೀಡಲು ಕೈತೋರಿಸುತ್ತಿದ್ದರು. ಒಂದೇ ಒಂದು ಮಾತು ಆ ಅವಧಿಯಲ್ಲಿ ಅವರಿಂದ ಬರಲಿಲ್ಲ. ಇವರು ಜಾಗತೀಕರಣದ ಸಂದರ್ಭದಲ್ಲಿ ನಮ್ಮ ಹಣಕಾಸು ಸಚಿವರು! ಕಟ್ಟಾರವರ ಉತ್ತರಗಳು ಇನ್ನೂ ಮಜವಾಗಿದ್ದವು. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಉತ್ತರಿಸುವಂತೆ, ಒಂದೇ ಪದದ ಇಲ್ಲವೆ ಒಂದೇ ವಾಕ್ಯದ ಉತ್ತರಗಳು! ಎಲ್ಲರಿಗಿಂತ ಚೆನ್ನಾಗಿ ಉತ್ತರಿಸಬಹುದಿದ್ದ ಶಿವಕುಮಾರ್ ಒಂದೇ ಒಂದು ಸಲ ಉತ್ತರಿಸಲು ಯತ್ನಿಸಿದರೆ ಹೊರತು ರಾಜಕಾರಣಿಗಳ ಅಯೋಗ್ಯತೆ ಪ್ರದರ್ಶನವಾಗಲು ಬಿಟ್ಟು ಗಂಭೀರವಾಗಿ ತಮಾಷೆ ನೋಡುತ್ತ ಕುಳಿತಿದ್ದರು. ಆ ಸಭೆಯಲ್ಲಿ ಕರ್ನಾಟಕದಿಂದ ಬಂದಿದ್ದ ನಿಯೋಗಕ್ಕಿಂತ ಚೆನ್ನಾಗಿ ಕರ್ನಾಟಕವನ್ನು ಸಮರ್ಥಿಸಿಕೊಂಡವರೆಂದರೆ ಅನಿವಾಸಿಗಳಾದ ಪ್ರಭುದೇವ್ ಮತ್ತು ಕುಮಾರ್ ಮಳವಳ್ಳಿ. ಇವರಿಬ್ಬರಿಗೂ ಇಲ್ಲಿ ಯಾವುದೇ ಸ್ವಹಿತಾಸಕ್ತಿ ಇರಲಿಲ್ಲ. ಅದು ಅವರ ಜವಾಬ್ದಾರಿಯೂ ಆಗಿರಲಿಲ್ಲ. ಇದ್ದದ್ದೆಲ್ಲ, ಈ ಮೂಲಕವಾದರೂ ಕರ್ನಾಟಕಕ್ಕೆ ಇನ್ನೊಂದಷ್ಟು ಉದ್ದಿಮೆಗಳು ಹೋಗಲಿ, ಮತ್ತಷ್ಟು ಉದ್ಯೋಗ ಸೃಷ್ಟಿಯಾಗಲಿ, ಜನಜೀವನ ಹಸನಾಗಲಿ ಎಂಬ ನಾಡಪ್ರೀತಿ ಮತ್ತು ತಾಯಿನೆಲದ ಹೆಮ್ಮೆ ಮಾತ್ರ.

ಬಂದಿದ್ದವರಲ್ಲಿ ಕರ್ನಾಟಕ ಉದ್ಯೋಗ ಮಿತ್ರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಎಲ್. ಶಿವಾನಂದ ಮಾತ್ರ ಸ್ವಲ್ಪ ಚುರುಕಾಗಿ, ನಗುಮುಖದಿಂದ ಮಾತನಾಡುತ್ತ, ತಮ್ಮ ವಿಸಿಟಿಂಗ್ ಕಾರ್ಡ್ ಹಂಚುತ್ತ, ವಿವರಣೆ ಬಯಸಿದವರಿಗೆ ವಿವರಣೆ ನೀಡುತ್ತ ಓಡಾಡುತ್ತಿದ್ದರು. ಪ್ರಶ್ನೋತ್ತರ ಮುಗಿದ ಮೇಲೆ ಕೆಲವು ಅನಿವಾಸಿ ಕನ್ನಡಿಗರೊಂದಿಗೆ ಕಟ್ಟಾ ನಾಯ್ಡ ಬಹಳ ಚೆನ್ನಾಗಿ, ಕ್ರಮಬದ್ಧವಾಗಿ ಮಾತನಾಡುತ್ತಿದ್ದರು. ತಮ್ಮ ಇಲಾಖೆಗೆ ಅವಶ್ಯಕವಿರುವ ಕೆಲವು ಕನ್ನಡ ಪರಿಭಾಷೆಗಳನ್ನು ಚೆನ್ನಾಗಿ ಕಲಿತಿದ್ದರು. ಇವರಿಗೆ ತೊಡಕಿದ್ದದ್ದೆಲ್ಲ ಇಂಗ್ಲಿಷಿನದೆ. ದುಬಾಷಿ ಇಟ್ಟುಕೊಂಡರೆ ತಮ್ಮ ಬಾಡಿಲ್ಯಾಂಗ್ವೇಜ್‌ನಿಂದಲೆ ಜನರನ್ನು ಪ್ರಭಾವಿತಗೊಳಿಸಬಹುದು, ತನ್ಮೂಲಕ ತಮ್ಮ ಹುದ್ದೆಗೆ ಇನ್ನೂ ಹೆಚ್ಚಿನ ನ್ಯಾಯ ಸಲ್ಲಿಸಬಹುದು ಎಂದು ಇವರಿಗೆ ಹೇಳುವವರು ಇಲ್ಲವೆ? ಇಡೀ ಸಭೆಯಲ್ಲಿ ಕಮ್ಮಿ ಪದ ಖರ್ಚು ಮಾಡಿದವರೆಂದರೆ ಸಚಿವ ಶಿವಾನಂದ ನಾಯ್ಕ! ಅದೂ ಸಭೆ ಮುಗಿದ ನಂತರ ಇದ್ದ ಅನೌಪಚಾರಿಕ ಮಾತುಕತೆಯಲ್ಲಿ, ಒಂದಿಬ್ಬರೊಡನೆ ಮಾತ್ರ.

ತಾವು ಯಾವ ಕೆಲಸ ಮಾಡಲು ಯೋಗ್ಯರು ಎಂಬ ತಿಳಿವು, ತಮ್ಮ ಕೈಯ್ಯಲ್ಲಿ ಸಾಧ್ಯವಾಗದಿದ್ದಲ್ಲಿ ಸಮರ್ಥರಿಗೆ ಅದನ್ನು ಬಿಡಬೇಕು, ಅದರಲ್ಲೇ ತಮ್ಮ ದೊಡ್ಡತನ ಮತ್ತು ಪ್ರಜಾಹಿತ ಇರುವುದು ಎಂಬ ಸೂಕ್ಷ್ಮತೆ ಈ ಪಾಳೆಯಗಾರಿಕೆ ಮನೋಭಾವದ ಜನಪ್ರತಿನಿಧಿಗಳಿಗೆ ಅರ್ಥವಾಗುವುದು ಯಾವಾಗ? ಪ್ರಜಾಪ್ರಭುತ್ವ ಬೇರೂರಿರುವ, ಸಭಾಮರ್ಯಾದೆ ಗೊತ್ತಿರುವ ಜನರ ಮಧ್ಯೆ ತಮ್ಮ ನಡವಳಿಕೆಯಿಂದ ಏನು ಸಂದೇಶ ಹೊರಡುತ್ತದೆ, ಅದರಿಂದ ತಮ್ಮ ಹುದ್ದೆಗೆ ತಾವೆಷ್ಟು ಅನರ್ಹರಾಗಿರುತ್ತೇವೆ ಎಂದು ಈ ರಾಜಕಾರಣಿಗಳು ಅರಿಯುವುದು ಯಾವಾಗ? ಯಡಿಯೂರಪ್ಪನವರನ್ನು "ನೀವು ಏನು ಸಾಧಿಸಬೇಕು ಎಂದುಕೊಂಡಿರುವಿರಿ?" ಎಂದು ಪ್ರಭುದೇವ್ ಕೇಳಿದ್ದಕ್ಕೆ, "ನಾನು ಬಸವಣ್ಣನಂತೆ ಕೆಲಸ ಮಾಡಬೇಕು," ಎಂದಿದ್ದರಂತೆ. ಅಮೆರಿಕಾಗೊ, ಜಪಾನಿಗೊ ಮೂರು ದಿನಗಳ ಮಾತಿನ ಅವಶ್ಯಕತೆಯಿಲ್ಲದ ತಾಂತ್ರಿಕ ಕೆಲಸಕ್ಕೆ ಹೋಗುವ ಇಂಜಿನಿಯರುಗಳಿಗೆ ಅಲ್ಲಲ್ಲಿನ ಸಂಸ್ಕೃತಿ, ನಡವಳಿಕೆಗಳ ಬಗ್ಗೆ ನಮ್ಮ ಕಂಪನಿಗಳು ನಾಲ್ಕಾರು ದಿನಗಳ ತರಬೇತಿ ಕೊಟ್ಟು ಕಳುಹಿಸುತ್ತವೆ. ನಾಡಿನ ಗತಿ ಬದಲಿಸಬಲ್ಲವರು, ಅದೇ ಕರ್ತವ್ಯವಾಗಿರುವವರು, ಎಲ್ಲಿ ಹೇಗೆ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಯೋಚಿಸದೆ, "ನಾನು ಬಸವಣ್ಣನಂತೆ ಆಗಬೇಕು" ಎಂದುಕೊಂಡರೆ ಆಗಿಬಿಡುತ್ತಾರಾ? ಕೈಗೆಟುಕದ ದ್ರಾಕ್ಷಿಯನ್ನು ನರಿ ಹುಳಿ ಎಂದಂತೆ!

ಕಾನೂನಿಗೆ ವಿರುದ್ಧವಾದರೂ ಇಬ್ಬರು ಹೆಂಡಿರು ಇರಲೇಬೇಕು

- ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?
- ಜಯಪ್ರದ, ವಿಜಯಶಾಂತಿ, ರೋಜಾ, ಬಾಲಕೃಷ್ಣ
- ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರು

ಮೇಲಿನ ಲೇಖನಗಳಿಗೆ ಪೂರಕವಾಗಿ ಬರೆದ ಬರಹ ಇದು.

ಕಾನೂನಿಗೆ ವಿರುದ್ಧವಾದರೂ ಇಬ್ಬರು ಹೆಂಡಿರು ಇರಲೇಬೇಕು

ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್ ರಂತಹ ತೆಲುಗು ಸೂಪರ್‌ಸ್ಟಾರ್‌ಗಳ ಬಹುಪಾಲು ಚಿತ್ರಗಳಲ್ಲಿ ಹೆಂಗಸು ಸ್ವಂತ ವ್ಯಕ್ತಿತ್ವವೇ ಇಲ್ಲದ ಗ್ಲಾಮರ್ ಬೊಂಬೆ ಅಷ್ಟೆ. ಆಧುನಿಕ ಕಾಲದ ಜೀವನ ನೀತಿಗಳಾಗಲಿ, ಪ್ರಜಾಪ್ರಭುತ್ವದಲ್ಲಿನ ಕಾನೂನು ಪರಿಜ್ಞಾನವಾಗಲಿ, ವಾಸ್ತವಿಕತೆಯಾಗಲಿ, ಈ ಸೂಪರ್‌ಸ್ಟಾರ್‌ಗಳ ಚಿತ್ರಗಳಲ್ಲಿ ಅಪರೂಪವೆಂದರೆ ಅಪರೂಪ. ಅದರಲ್ಲೂ ಚಿರಂಜೀವಿ ಮತ್ತು ಬಾಲಕೃಷ್ಣರಂತೂ ಹಾಲಿವುಡ್ ಆಕ್ಷನ್ ನಟರನ್ನೂ ಮೀರಿಸುವಂತಹ ನಾನಾತರಹದ ಸಾಹಸಗಳನ್ನು ಮೆರೆವ, ಬೇಕಾದರೆ ಆಕಾಶವನ್ನೆ ಕಾಲಿನಲ್ಲಿ ಅಳೆದುಬಿಡಬಲ್ಲ ಪುರುಷಸಿಂಹರು. ಇವರಿಗೆಲ್ಲ ತಮ್ಮ ಚಿತ್ರದಲ್ಲಿ ಒಬ್ಬಳೇ ಪ್ರೇಯಸಿ ಅಥವ ಒಬ್ಬಳೇ ಹೆಂಡತಿ ಸಾಕಾಗುವುದಿಲ್ಲ. ಕನಿಷ್ಠ ಇಬ್ಬರಾದರೂ ಇರಲೇಬೇಕು. ಮಾತೆತ್ತಿದರೆ ತೊಡೆ ತಟ್ಟಿ, ಮೀಸೆ ತಿರುವುವ ಈ ಸೂಪರ್‌ಸ್ಟಾರ್‌ಗಳು "ನಾನು ಧೀರಗಂಡಸು, ಪುರುಷಸಿಂಹ," ಎಂದರೇನೆ ಅಲ್ಲಿನ ಪ್ರೇಕ್ಷರಿಗೆ ತೃಪ್ತಿ. ಕಾನೂನಿನ ಪ್ರಕಾರ ಅಪರಾಧವಾದ ಇಬ್ಬರು ಹೆಂಡತಿಯರನ್ನು ಮದುವೆ ಮಾಡಿಕೊಳ್ಳುವುದು ಇವರ ಸಿನೆಮಾ ಕತೆಗಳಿಗೆ ಅನ್ವಯಿಸುವುದಿಲ್ಲ. ಇಂತಹ ಚಿತ್ರಗಳಲ್ಲೆ ನಟಿಸುವ ಇವರು ಜನರಿಗೆ ಯಾವ ತರಹದ ಸಂದೇಶ ಕೊಡುತ್ತಾರೆ? ರಾಜಕೀಯ ಆಕಾಂಕ್ಷೆಗಳಿರುವವರಾದರೂ ಜನರನ್ನು ಮನರಂಜಿಸುವುದಕ್ಕಿಂತ ಮುಖ್ಯವಾಗಿ ಅವರ ಜಾಗೃತಿಗೆ ಪ್ರಯತ್ನಿಸಬಾರದೆ? ಇಲ್ಲ. ಭಾರತಾದ್ಯಂತದ ಬಹುಪಾಲು ಸಿನೆಮಾ ಸ್ಟಾರ್‌ಗಳ ಸ್ಥಿತಿಯೂ ಇದೆ. ತಮ್ಮ ಚಿತ್ರಗಳು ಯಾವಾಗಲೂ ನೆಲದ ಕಾನೂನಿಗೆ ಅತೀತವಾದ ವಿಷಯ ಹೊಂದಿರಬೇಕು, ಆದಷ್ಟೂ ವಾಸ್ತವದಿಂದ ದೂರ ಇರಬೇಕು, ಜನರನ್ನು ಆದಷ್ಟೂ ಪಲಾಯನವಾದಿಗಳನ್ನಾಗಿ ಮಾಡಬೇಕು, ಎಂಬುದೆ ಅವರೆಲ್ಲರ ಬುದ್ಧಿಹೀನ ತೀರ್ಮಾನವಾದಂತಿದೆ.