ಈಗ ಓದುತ್ತಿರುವ ಗಾಂಧಿಯ ಪುಸ್ತಕದಲ್ಲಿ ಸಸ್ಯಾಹಾರದ ಬಗ್ಗೆ ಗಾಂಧಿ ಮಾಡಿದ ಕೆಲವು ಪ್ರಯೋಗಗಳು ಮತ್ತು ಅವರು ಲಂಡನ್ನಿನಲ್ಲಿ ಓದುತ್ತಿರುವಾಗ ಸಸ್ಯಾಹಾರಿ ರೆಸ್ಟಾರೆಂಟ್‌ಗಳನ್ನು ಹುಡುಕಿಕೊಂಡು ಮೈಲುಗಟ್ಟಲೆ ನಡೆದೇ ಹೋಗುತ್ತಿದ್ದ ಚಿತ್ರಣವಿದೆ. ದೊಡ್ಡವನಾದ ಮೇಲೆ ಚೆನ್ನಾಗಿ ಮಾಂಸ ತಿನ್ನಬೇಕು; ಮಾಂಸ ತಿಂದು ಗಟ್ಟಿಯಾದರಷ್ಟೆ ಬ್ರಿಟಿಷರನ್ನು ದೇಶದಿಂದ ಹೊರಗಟ್ಟಲು ಸಾಧ್ಯ, ಎನ್ನುವ ಕಲ್ಪನೆಯೊಂದು ಗಾಂಧಿಯ ತಲೆ ಹೊಕ್ಕಿತ್ತು (ಹೇಳಬೇಕೆಂದರೆ, ಹೊಕ್ಕಿಸಲ್ಪಟ್ಟಿತ್ತು, ಅವರ ಬಾಲ್ಯ ಸ್ನೇಹಿತನೊಬ್ಬನಿಂದ). ಆದರೆ ತನ್ನ ತಾಯಿಗೆ (ಒತ್ತಾಯಪೂರ್ವಕವಾಗಿ) ಕೊಟ್ಟಿದ್ದ ವಚನದಿಂದಾಗಿ ಲಂಡನ್ನಿನಲ್ಲಿ ಸಸ್ಯಾಹಾರಿಯಾಗಿಯೇ ಕಾಲತಳ್ಳಬೇಕಿದ್ದ ಅಗತ್ಯ ಅಥವ ದರ್ದು ಗಾಂಧಿಗಿತ್ತು. ಆದರೆ ಗಾಂಧಿಯ ಮನಸ್ಸು ಅಲ್ಲಿ ವೈಚಾರಿಕ ಕಾರಣಗಳಿಗಾಗಿ ಬದಲಾಯಿತು. ಅಲ್ಲಿಯ ಬಿಳಿಯ ಸಸ್ಯಾಹಾರಿಗಳ ಜೊತೆ ಸೇರಿ, ಪುಸ್ತಕಗಳನ್ನು ಓದಿ, ಸಸ್ಯಾಹಾರವನ್ನು ಮನಃಪೂರ್ವಕವಾಗಿ ಜೀವನಪರ್ಯಂತ ಸ್ವೀಕರಿಸಿದರು. ಆದರೆ ಆ ವೈಚಾರಿಕ ಕಾರಣಗಳು ಮತ್ತು ಮಾಂಸಾಹಾರ ಮುಂದೆಂದೂ ಸೇವಿಸದಂತೆ ಗಾಂಧಿ ಮನಸ್ಸು ಬದಲಾಯಿಸಲು ಕಾರಣಗಳೇನಾಗಿದ್ದವು ಎನ್ನುವುದು ಮೊಮ್ಮಗನ ಪುಸ್ತಕದಲ್ಲಿ ದಾಖಲಾಗಿಲ್ಲ.
ಈಗ ಒಂದೆರಡು ವರ್ಷದಿಂದ ಗ್ಲೋಬಲ್ ವಾರ್ಮಿಂಗ್ ಮತ್ತು ಹವಾಮಾನ ವೈಪರೀತ್ಯಗಳ ಬಗ್ಗೆ ಓದಿ, ನೋಡಿ, ಕೇಳಿ, ನನಗೆ ನಿಜಕ್ಕೂ ಮನುಷ್ಯ ಅಥವ ಜೀವಸಂಕುಲದ ಉಳಿವಿನ ಬಗ್ಗೆಯೇ ಸಂದೇಹ ಬರುತ್ತಿದೆ. ಮನುಷ್ಯ ಪ್ರಕೃತಿಯನ್ನು ನಡೆಸಿಕೊಳ್ಳುತ್ತಿರುವ ರೀತಿ ಅದು ಮನುಷ್ಯನಿಗೆ ಕರುಣೆ ತೋರಿಸುವ ಯಾವೊಂದು ಅವಕಾಶಗಳನ್ನೂ ಉಳಿಸುತ್ತಿಲ್ಲ. ಇದರ ಬಗ್ಗೆ ಯೋಚಿಸಿದಾಗೆಲ್ಲ ನನಗೆ ಮನುಷ್ಯ ತನ್ನ ಆಹಾರಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು ಮತ್ತು ಮಾಂಸಾಹಾರದ ಮೇಲಿನ ಅವಲಂಬನೆ ಕಮ್ಮಿ ಮಾಡಿಕೊಳ್ಳಬೇಕು ಎನ್ನಿಸುತ್ತದೆ.
ಇದರ ಬಗ್ಗೆ ಒಂದು ಲೇಖನ ಬರೆಯಬೇಕು ಎಂದು ನನಗೆ ಆರೇಳು ತಿಂಗಳಿನಿಂದ ಅನ್ನಿಸುತ್ತಿತ್ತು. ಆಗಲಿಲ್ಲ. ಕನಿಷ್ಠ ಈಗಲಾದರೂ ನನ್ನ ಆಲೋಚನೆಗಳನ್ನು ದಾಖಲಿಸೋಣ, ಆಮೇಲೆ ವಿಸ್ತೃತವಾಗಿ, ಬೇರೆಬೇರೆ ಕೋನಗಳಿಂದ ಅವಲೋಕಿಸಿ ಬರೆಯೋಣ ಎಂದುಕೊಂಡು ಇಲ್ಲಿ ಸದ್ಯಕ್ಕೆ ಕೆಲವನ್ನು ನೋಟ್ ಮಾಡುತ್ತಿದ್ದೇನೆ.
ಬಾಲ್ಯದಲ್ಲಿ ಕೆಲವೊಂದು ಹಬ್ಬಕ್ಕೊ, ಇಲ್ಲಾ ತಿಂಗಳಿಗೊ, ಇಲ್ಲಾ ನೆಂಟರು ಬಂದಾಗಲೊ ಅಥವ ನೆಂಟರ ಮನೆಗೆ ಹೋದಾಗಲೊ ಅಷ್ಟೇ ಮಾಂಸ ತಿನ್ನುವ ಅವಕಾಶ ಸಿಗುತ್ತಿದ್ದದ್ದು. ಆದರೆ ಕಾಲೇಜಿನ ದಿನಗಳಲ್ಲಿ ವಾರಕ್ಕೊಮ್ಮೆಯಾದರೂ ತಿನ್ನುತ್ತಿದೆ. ಅಂತಹುದೇ ದಿನಗಳಲ್ಲಿ ನನ್ನಪ್ಪ ಅಂದ ಮಾತಿನಿಂದಾಗಿ ಆಗಾಗ ಕೋಳಿಸಾರು ತಿನ್ನಬೇಕು ಎನ್ನುವ ಚಪಲವನ್ನು ನನ್ನ ವೀಕ್‌ನೆಸ್‌ಗೆ ಸಮೀಕರಿಸಿಕೊಂಡು ಸುಮಾರು ಎರಡೂವರೆ ವರ್ಷಗಳ ಕಾಲ ಪಕ್ಕಾ ಸಸ್ಯಾಹಾರಿಯಾಗಿ ಕಳೆದಿದ್ದೆ. ಕೇಕ್ ಸಹ ತಿಂದಿರಲಿಲ್ಲ. ಎಂದೂ ಅದರ ಬಗ್ಗೆ ವಿಷಾದವಾಗಲಿಲ್ಲ. ಬದಲಿಗೆ ನನಗೆ ನನ್ನ ಇಚ್ಚಾಶಕ್ತಿಯ ಬಗ್ಗೆ ಹೆಮ್ಮೆ ಆಗುತ್ತಿತ್ತು. ಆದರೆ ಮತ್ತೊಂದು ಸಂದರ್ಭದಲ್ಲಿ ಆ ಚಪಲ ಇನ್ನು ವೀಕ್‌ನೆಸ್ ಆಗಿ ಉಳಿದಿಲ್ಲ ಅನ್ನಿಸಿದ ಮೇಲೆ, ಹಾಗು ನಾನೆ ದುಡಿದು ತಿನ್ನಲಾರಂಭಿಸಿದ ಮೇಲೆ ಮತ್ತೆ ಮಾಂಸಾಹಾರಿಯಾದೆ. ವಿಸ್ಕಾನ್ಸಿನ್‌ನಲ್ಲಿ ಇದ್ದ ಆರಂಭದ ಸಂದರ್ಭದಲ್ಲಿ ಕಾರಿಲ್ಲದ್ದರಿಂದ ಮತ್ತು ಗುಜರಾತಿಯೊಬ್ಬರ ಊರ ಹೊರಗಿನ ಮೋಟೆಲ್ ಒಂದರಲ್ಲಿ ಇದ್ದ ಕಾರಣದಿಂದಾಗಿ ಸುಮಾರು ಮೂರು ತಿಂಗಳ ಕಾಲ ಪಕ್ಕದ ಪೆಟ್ರೋಲ್ ಬಂಕಿನ ಡೆಲಿಯಲ್ಲಿ ಕೇವಲ ಕರಿದ ಚಿಕನ್ ಮತ್ತು ಇತರ ಮಾಂಸವನ್ನೆ ತಿಂದು ಕಾಲ ಹಾಕಿದ್ದೆ. ಈಗ ಮತ್ತೆ ನಾಲಿಗೆ ರುಚಿ ಬೇಡುತ್ತಿದೆ.
ಇನ್ನು ಊರಿನಲ್ಲಿ ಮಾಂಸ ತಿನ್ನಲಾರದೆ ಇರಲು ಕೆಲವು ಆಪ್ತ ಕಾರಣಗಳೂ ಇವೆ. ನಾನು ಪಕ್ಕಾ ಸಸ್ಯಾಹಾರಿಯಾದರೆ ಕೆಲವೊಂದು ಪ್ರೀತಿಯ ನೆಂಟರ ಮತ್ತು ಸ್ನೇಹಿತರ ಜೊತೆ ಕುಳಿತು ಊಟವನ್ನು ಎಂಜಾಯ್ ಮಾಡುವ ಅವಕಾಶವನ್ನೆ ಕಳೆದುಕೊಳ್ಳುತ್ತೇನೆ. ಕೆಲವೊಮ್ಮೆ ನನ್ನವರ ಪರಂಪರೆಯ ಮುಂದುವರಿಕೆಗಾದರೂ ಮಾಂಸಾಹಾರಿಯಾಗಿ ಮುಂದುವರೆಯಬೇಕು ಎನ್ನಿಸುತ್ತದೆ.
ಆದರೆ, ಮಾಂಸಾಹಾರಕ್ಕಾಗಿ ಮನುಷ್ಯ ಉಪಯೋಗಿಸುತ್ತಿರುವ ಶಕ್ತಿಮೂಲಗಳ ಮತ್ತು ಸಂಪನ್ಮೂಲಗಳ ಬಗ್ಗೆ ಯೋಚಿಸುತ್ತಿರುವ ಇತ್ತೀಚಿನ ದಿನಗಳಲ್ಲಿ ನಾನು ನನ್ನ ಕಡೆಯಿಂದ ನನ್ನ ಈಗಿನ ಆಹಾರ ಪದ್ದತಿಯನ್ನೆ ಬದಲಾಯಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎನ್ನಿಸುತ್ತದೆ. ಸುಮ್ಮನೆ ಕೆಲವೊಂದು ಪಾಯಿಂಟ್‌ಗಳನ್ನು ಇಲ್ಲಿ ಹೆಸರಿಸಿ ಇವತ್ತಿಗೆ ಇದನ್ನು ಮುಗಿಸುತ್ತೇನೆ. ಆದಾಗಲೆಲ್ಲ ಈ ಬ್ಲಾಗ್ ಪೋಸ್ಟನ್ನು ಅಪ್‌ಡೇಟ್ ಮಾಡಿಕೊಂಡರಾಯಿತು.
ಗಾಂಧಿ ಯಾಕೆ ಸಸ್ಯಾಹಾರದ ಪರ ಇದ್ದರು ಎನ್ನುವುದಾಗಲಿ, ಅಥವ ಮಾಂಸಾಹಾರಿಗಳು ಹಾಗೆಹೀಗೆ ಎನ್ನುವ ವಾದಗಳಾಗಲಿ ನನಗೆ ಅನಗತ್ಯ. ಆದರೆ ಈ ಪರಿ ಜನಸಂಖ್ಯೆ ಇರುವ ಇವತ್ತಿನ ಸಂದರ್ಭಕ್ಕೆ ಪ್ರತಿಯೊಬ್ಬ ಮನುಷ್ಯನು ತನ್ನ ಜೀವನಪದ್ಧತಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳದಿದ್ದರೆ, ಅವನು ಪ್ರಕೃತಿಗೆ ಮಾಡುತ್ತಿರುವ ಅಪಚಾರ ಇಡೀ ಜೀವಸಂಕುಲಕ್ಕೆ ನೋವಿನ ದಿನಗಳನ್ನು ತರಲಿದೆ ಎಂದು ನನಗೆ ಅನ್ನಿಸುತ್ತಿರುವುದರಿಂದ, ಅದಕ್ಕೆ ನಾನೇನು ಮಾಡಬೇಕು ಎಂದು ಪ್ರಶ್ನೆ ಹಾಕಿಕೊಂಡಿರುವುದರಿಂದ, ಬರಲಿರುವ ದಿನಗಳಲ್ಲಿ ನನ್ನ ಜೀವನಪದ್ಧತಿ ಮತ್ತು ಆಹಾರ ಪದ್ಧತಿಗಳೂ ಬದಲಾಗಲಿವೆ. ಇಲ್ಲದಿದ್ದರೆ, I will be feeling sorry all the time. ನಾನು ಮತ್ತೊಮ್ಮೆ ಸಸ್ಯಾಹಾರಿಯಾಗಬೇಕಿದೆ ಮತ್ತು ಸ್ಥಳೀಯವಾದದ್ದನ್ನೆ ತಿನ್ನುವ ಅಥವ ಬೆಳೆದುಕೊಳ್ಳುವ ಬಗ್ಗೆ ಯೋಚಿಸಬೇಕಿದೆ.
ಇದರ ಜೊತೆಗೆ, ಇದನ್ನು ಯಾಕೆ ಮತ್ತು ಹೇಗೆ ಸಮುದಾಯಕ್ಕೆ ತೆಗೆದುಕೊಂಡು ಹೋಗಬೇಕು ಮತ್ತು ಈಗಾಗಲೆ ತೆಗೆದುಕೊಂಡು ಹೋಗಿರುವವರು ಬಳಸುತ್ತಿರುವ ಮಾರ್ಗಗಳು ಏನು, ಅವುಗಳ ಪರಿಣಾಮ ಏನು ಎನ್ನುವುದು ನನ್ನ ಮುಂದಿನ ದಿನಗಳ ಒಂದು ಪಾಲು ಸಮಯವನ್ನು ತೆಗೆದುಕೊಳ್ಳುತ್ತದೆ.
ಇದನ್ನು ಓದುವ ಓದುಗರು, ತಮ್ಮ ತಿಳುವಳಿಕೆ, ಅಭಿಪ್ರಾಯ, ಪರವಿರೋಧಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ಎಲ್ಲವನ್ನೂ ಓದುತ್ತೇನೆ. ಅಗತ್ಯವಾದಲ್ಲಿ ನನ್ನ ಪ್ರತಿಕ್ರಿಯೆ ಬರೆಯುತ್ತೇನೆ.
Dec 31, 2008
ಮನುಷ್ಯ ಉಳಿಯಬೇಕಾದರೆ ಸಸ್ಯಾಹಾರದತ್ತ ತಿರುಗಬೇಕು...
Dec 30, 2008
ನಿಮ್ಮಗಳ ನಿಷ್ಠೆಯೂ ಭಾರತಕ್ಕಿಲ್ಲ
(ಗುಜರಾತಿನ ಧೇಡ್ ಜಾತಿಗೆ ಸೇರಿದ) ದಲಿತ ಕುಟುಂಬವೊಂದು ಮೊದಲ ಬಾರಿಗೆ ಸತ್ಯಾಗ್ರಹ ಆಶ್ರಮದಲ್ಲಿ ಇರಲು ಬಂದಾಗ ಅದನ್ನು ಕಸ್ತೂರಬಾ ಸಹ ಒಪ್ಪಿಕೊಂಡಿರಲಿಲ್ಲ. ಆಫ್ರಿಕಾದಲ್ಲಿದ್ದಾಗ ಇಂತಹುದಕ್ಕೆ ಅಷ್ಟೇನೂ ವಿರೋಧ ತೋರಿಸದಿದ್ದ ಕಸ್ತೂರಬಾಗೆ ಇಲ್ಲಿ ಸರೀಕರ ಮುಂದೆ ದಲಿತರನ್ನು ಮುಟ್ಟಿಕೊಳ್ಳುವುದು ಅಥವ ಅವರನ್ನು ಪಕ್ಕದಲ್ಲಿಟ್ಟುಕೊಳ್ಳುವುದು ಬಹಳ ಕಷ್ಟವಾಗಿರಬೇಕು. ಆದರೆ ಯಾವಾಗ ಗಾಂಧಿ ‘ನಿನಗೆ ಅದು ಅಸಾಧ್ಯವಾದರೆ ನನ್ನನ್ನು ಬಿಟ್ಟು ಹೋಗಬಹುದು. ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿ ಬೇರೆಯಾಗೋಣ,’ ಎಂದರೊ ಕಸ್ತೂರಬಾ ಅದಕ್ಕೆ ಮಣಿದರು. ಆದರೆ, ಅವರಿಗೆ ತುಂಬ ಹತ್ತಿರವಾಗಿದ್ದ ಮಗನ್‍ಲಾಲ್ (ಗಾಂಧಿಯ ದೊಡ್ಡಪ್ಪನ ಮೊಮ್ಮಗ) ಮತ್ತು ಆತನ ಹೆಂಡತಿ ಗಾಂಧಿಯನ್ನು ತೊರೆದು ಆಶ್ರಮದಿಂದ ಹೊರಟೇಬಿಟ್ಟರು. (ಮತ್ತೆ ಅವರು ಮನಸ್ಸು ಶುದ್ಧೀಕರಿಸಿಕೊಂಡು ವಾಪಸಾಗುತ್ತಾರೆ!)
ಹೀಗೆ ಅಸ್ಪೃಶ್ಯತೆ ಮತ್ತು ಜಾತಿಶ್ರೇಷ್ಠತೆ ಅಸಾಮಾನ್ಯವಾಗಿದ್ದ ಆ ಸಮಯದಲ್ಲಿ ಬ್ರಿಟಿಷರಿಂದ ಸ್ವರಾಜ್ಯವನ್ನು ಕೇಳುತ್ತಿದ್ದ ಹಿಂದುಗಳಲ್ಲಿ ಹೆಚ್ಚಿನ ಪಾಲು ಫ್ಯೂಡಲ್ ಮನೋಭಾವದ ಮೇಲ್ಜಾತಿಯವರೆ ಆಗಿದ್ದರು. ಇದನ್ನೆಲ್ಲ ಗಮನಿಸಿಯೆ ಗಾಂಧಿ ಅನೇಕ ಸಲ ‘ಅಸ್ಪೃಶ್ಯತೆಯನ್ನು ಪಾಲಿಸುವವರು ಸ್ವರಾಜ್ಯವನ್ನು ಕೇಳಲು ಅರ್ಹರಲ್ಲ.’ ಎಂದು ಹೇಳುತ್ತಿದ್ದರು. ‘ಮೊದಲಿಗೆ ಸಾಧಿಸಿಬೊಡೋಣ, ಮಿಕ್ಕದ್ದನ್ನು ಆಮೇಲೆ ನೋಡಿಕೊಳ್ಳೋಣ,’ ಎನ್ನುವ ಸಾಮಾನ್ಯ ಜನರ ಮತ್ತು ಸಾಮಾನ್ಯ ನಾಯಕರ ಮನೋಭಾವಕ್ಕೆ ಇದನ್ನು ಹೋಲಿಸಿದರೆ, ಗಾಂಧಿ ಕೇವಲ ಅಸ್ಪೃಶ್ಯತೆಯ ವಿಚಾರಕ್ಕೆ ಸ್ವರಾಜ್ಯವನ್ನೂ ಪಣಕ್ಕೆ ಒಡ್ಡಿದ್ದರು ಎನ್ನಿಸುತ್ತದೆ. ಈಗಲೂ ಕೆಲವರಿಗೆ ಹಾಗೆಯೆ ಅನ್ನಿಸುತ್ತದೆ. ಆದರೆ ಅದು ಗಾಂಧಿಯ ನೈತಿಕತೆಯ ಮಟ್ಟ. ಜೊತೆಗೆ ಹಿಂದೂ ಸಮಾಜವನ್ನೂ ಮಾನಸಿಕವಾಗಿ ಶುಚಿ ಮಾಡುವ ಕ್ರಿಯೆಯ ಭಾಗ. ಗಾಂಧಿ ಪದೆಪದೆ ಪ್ರತಿಪಾದಿಸುತ್ತಿದ್ದದ್ದು ಸ್ವರಾಜ್ಯಕ್ಕೆ ಭಾರತೀಯರು ಮೊದಲು ಅರ್ಹರಾಗಬೇಕು. ಗಾಂಧಿಯ ಗಮನ ಇದ್ದದ್ದು ಸ್ವರಾಜ್ಯ ಪಡೆದುಕೊಂಡ ಮೇಲೆ ನಾವು ಅದನ್ನು ಹೇಗೆ ನಿಭಾಯಿಸುತ್ತೇವೆ ಮತ್ತು ಉಳಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ. ಭಾರತ ದಾಸ್ಯಕ್ಕೆ ಯಾಕೆ ಒಳಗಾಯಿತು ಎನ್ನುವುದಕ್ಕೆ ಟಾಲ್ಸ್‌ಟಾಯ್ ಹೇಳಿದ್ದ ಮಾತೂ ಬಹುಶಃ ಇದಕ್ಕೆ ಪೂರಕವಾಗಿತ್ತು. (ಗಾಂಧಿ ಮತ್ತು ಟಾಲ್ಸ್‌ಟಾಯ್ ನಡುವಿನ ಪತ್ರವ್ಯವಹಾರ ಮತ್ತು ಗಾಂಧಿಯ ಮೇಲೆ ಟಾಲ್ಸ್‌ಟಾಯ್ ಪ್ರಭಾವವನ್ನು ಇನ್ನೊಂದರಲ್ಲಿ ಬರೆಯುತ್ತೇನೆ.)
ಇದನ್ನೆಲ್ಲ ಓದುತ್ತಿರುವಾಗ ನನಗೆ ಇವತ್ತಿನ ಭಾರತ ಮತ್ತು ಅದರ ಈಗಿನ ಸವಾಲುಗಳ ಬಗ್ಗೆ ಯೋಚನೆ ಮಾಡುವುದರಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ. ಗಾಂಧಿಯ ಕಾಲದಲ್ಲಿ ಅಸ್ಪೃಶ್ಯತೆ ಮತ್ತು ಜಾತಿವಾದದ ಪರ ಇದ್ದ ಮನೋಭಾವದ ಜನರ ಇಂದಿನ ಪೀಳಿಗೆಯ ಸಂತಾನ ಜಾತೀಯತೆಯನ್ನು ಬೇರೊಂದು ತರದಲ್ಲಿ ಮುಂದುವರೆಸುತ್ತಿದ್ದಾರೆ. ಅದೇ ರೀತಿ ನಿಜವಾದ ಭಾರತೀಯರು ಇಲ್ಲಿಯ ಹಿಂದೂಗಳು ಮಾತ್ರವೆ ಎನ್ನುವುದನ್ನೂ ಘೋಷಿಸುತ್ತಿದ್ದಾರೆ. ಅವರಿಗೆ ಗಾಂಧಿ ಆಗ ಪ್ರತಿಪಾದಿಸಿದ ಅರ್ಹತೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಇವತ್ತಿನ ನೈಜ ಜಾತ್ಯತೀತ ಭಾರತೀಯ ಒಂದನ್ನು ಹೇಳಬೇಕಿದೆ; ಒಂದು ಸಮುದಾಯ ಅಥವ ಕೋಮಿನ ಜನರನ್ನು ನಿಜವಾದ ದೇಶವಾಸಿಗಳಲ್ಲ, ಅವರ ನಿಷ್ಠೆ ಭಾರತಕ್ಕಿಲ್ಲ ಎನ್ನುವ ನಿಮ್ಮಗಳ ನಿಷ್ಠೆಯೂ ಭಾರತಕ್ಕಿಲ್ಲ. ಭಾರತದಲ್ಲಿ ಹುಟ್ಟಿರುವವರನ್ನೆ ಒಂದು ಕೃತ್ರಿಮ ಸಿದ್ಧಾಂತದ ಆಧಾರದ ಮೇಲೆ ಭಾರತೀಯರಲ್ಲ ಎನ್ನುವವರು ಭಾರತೀಯರಾಗಲು ಅರ್ಹತೆ ಸಂಪಾದಿಸಬೇಕಿದೆ.
ಈ ಅರ್ಹತೆ ಸಂಪಾದಿಸಿಲ್ಲದ ಜನ ದೇಶದಲ್ಲಿ ಅಂತಃಕಲಹ ಹೆಚ್ಚಿಸಿ ಜನಾಂಗನಾಶಕ್ಕೆ ಮುಂದಾಗುವ ಮುನ್ನವೆ ದೇಶದ ಜಾತ್ಯತೀತ ನಾಯಕತ್ವ ಎಚ್ಚರವಾಗಬೇಕಿದೆ. ಆದರೆ. ಕೇವಲ ಲೌಕಿಕ ಅಭಿವೃದ್ಧಿಯ ಕಡೆಗೆ ಗಮನ ಕೊಟ್ಟು ಜನತೆಯ ಸಾಮಾಜಿಕ-ಸಾಂಸ್ಕೃತಿಕ-ಅಧ್ಯಾತ್ಮಿಕ ಶುದ್ಧಿಗೆ ಮತ್ತು ಅಭಿವೃದ್ಧಿಗೆ ಗಮನ ಕೊಡದ ಈಗಿನ ಸರ್ಕಾರಗಳ ಸಂದರ್ಭದಲ್ಲಿ ಮೂಲಭೂತವಾದಿಗಳನ್ನು ಮತ್ತು ಹಣದ ಹೆಚ್ಚುಗಾರಿಕೆಯನ್ನು ಎದುರುಗೊಳ್ಳಲು ಗಾಂಧಿ ಪ್ರತಿಪಾದಿಸಿದ ಸರಳ ಬದುಕು, ದೈಹಿಕ ದುಡಿಮೆಯ ಶ್ರೇಷ್ಠತೆ, ಮತ್ತು ವೈಯಕ್ತಿಕ ಸುಖದ ತ್ಯಾಗದಂತಹ ಅಸ್ತ್ರಗಳನ್ನು ಬಳಸಿಕೊಳ್ಳಬೇಕಿದೆ.
Dec 28, 2008
ಗಾಂಧಿ, ಸಾವರ್ಕರ್, ಪ್ರಚೋದಕರು...
ಈಗ ಓದುತ್ತಿರುವ "Gandhi - The Man, His People, and the Empire" ನಲ್ಲಿ ಲೇಖಕ ರಾಜ್‌ಮೋಹನ್ ಗಾಂಧಿ, ಸಾವರ್ಕರ್ ಮತ್ತು ಮೋಹನ್‌ದಾಸ್ ಗಾಂಧಿಯ ನಡುವಿನ ಎರಡು ಭೇಟಿಗಳ ಬಗ್ಗೆ ಬರೆಯುತ್ತಾರೆ. ಆ ಭಾಗಗಳನ್ನು ಓದುವ ಒಂದೆರಡು ದಿನಗಳ ಹಿಂದೆಯಷ್ಟೆ ನಾನು ಇಲ್ಲಿ ಒಬ್ಬ ಮಂಡ್ಯದ ಯುವಕನನ್ನು ಭೇಟಿಯಾಗಿದ್ದೆ. ಬುದ್ಧಿವಂತ. ಸಂಸ್ಕೃತ, ಕನ್ನಡ, ಇಂಗ್ಲಿಷ್ ಎಲ್ಲಾ ಓದುತ್ತಾನೆ. ಅಲ್ಲಿ ಹತ್ತಾರು ವರ್ಷಗಳ ಕಾಲ ಸಾವರ್ಕರ್ ಪ್ರಣೀತ ಹಿಂದೂ ಮತೀಯವಾದಿಗಳ ಅಂಗಳದಲ್ಲೂ ಓಡಾಡಿದ್ದಾನೆ. ಆತನ ಜೊತೆ ಮಾತನಾಡುತ್ತಿದ್ದಾಗ ಅಚಾನಕ್ಕಾಗಿ ಗಾಂಧಿ ವಿಷಯ ಬಂತು. ನಾನೆಂದೆ, 'ಅಲ್ರಿ, ಈ ಹಿಂದೂ ಮತೀಯವಾದಿಗಳಿಗೆ ಗಾಂಧೀಜಿ ಅಂದ್ರೆ ಯಾಕಿಷ್ಟು ಕೋಪ? ಅದು ಯಾಕೆ ಗಾಂಧಿಯನ್ನು ಈ ಪರಿ ದ್ವೇಷಿಸುತ್ತಾರೆ?'
ಆ ಯುವಕನ ಉತ್ತರ ನನ್ನ ಬುದ್ಧಿ ಮತ್ತು ವಿವೇಚನಾ ಶಕ್ತಿಯನ್ನೆ ಅಣಕಿಸಿತು. ಜನರ ದುಷ್ಟತನ ಅಥವ ಪಿತೂರಿಗಳನ್ನು ಅರ್ಥ ಮಾಡಿಕೊಳ್ಳುವ ನನ್ನ ಅಸಾಮರ್ಥ್ಯವನ್ನೂ ನನಗೆ ಎತ್ತಿ ತೋರಿಸಿತು. ಆತ ಹೇಳಿದ್ದು, 'ನೀವು ಚೆನ್ನಾಗಿ ಹೇಳ್ತೀರ, ಗಾಂಧೀನ ಕಂಡೆಮ್ ಮಾಡದೇ ಇದ್ದರೆ ಸಾವರ್ಕರ್ ಗ್ರೇಟು ಅಂತ ತೋರಿಸೋದು ಹೇಗೆ? ಸಾವರ್ಕರ್‌ನ ಮುಂದಕ್ಕೆ ತರಬೇಕು ಅಂದರೆ ಗಾಂಧೀನ ಬೈಯ್ಯಲೇಬೇಕು.' ಇದು ಮತೀಯವಾದಿಗಳ ಪಡಸಾಲೆಯಲ್ಲಿ ಓಡಾಡಿ ಎದ್ದುಬಂದವನ ಮಾತು. ಆತನ ಮಾತನ್ನು ಒಪ್ಪಿಕೊಳ್ಳದೆ ಇರಲು ನನಗೆ ಯಾವ ಕಾರಣಗಳೂ ಕಾಣುತ್ತಿಲ್ಲ.
ಈಗ ಗಾಂಧಿ ಓದುವಾಗ ಆ ಯುವಕನ ಮಾತುಗಳು ಪದೇಪದೆ ನೆನಪಾಗುತ್ತವೆ.
ಸಾವರ್ಕರ್‌ರ ಗುರು ಕೃಷ್ಣವರ್ಮ ಎಂಬಾತ ಲಂಡನ್ನಿನಲ್ಲಿ Indian Socialogist ಎನ್ನುವ ಪತ್ರಿಕೆ ನಡೆಸುತ್ತಿದ್ದ. ಆತನ ಸಿದ್ಧಾಂತ ಬ್ರಿಟಿಷರ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಾಗಿತ್ತು. ಅದಕ್ಕೆ ತರಬೇತಿಯೂ ಕೊಡಲಾಗುತ್ತಿತ್ತು. ಗಾಂಧಿ ಬ್ರಿಟಿಷರ ಜೊತೆ ದಕ್ಷಿಣ ಆಫ್ರಿಕಾದ ಭಾರತೀಯರ ಸಮಸ್ಯೆಗಳನ್ನು ಚರ್ಚಿಸಲು 1905 ರಲ್ಲಿ ಲಂಡನ್ನಿಗೆ ಬಂದಿದ್ದಾಗ ಅವರ ಅಹಿಂಸಾತ್ಮಕ ಹೋರಾಟವನ್ನು ಟೀಕಿಸಿದ್ದ ಕೃಷ್ಣವರ್ಮನನ್ನೂ ಭೇಟಿ ಆಗುತ್ತಾರೆ. ಆಗಿನ ಕೆಲ ಭಾರತೀಯರಲ್ಲಿ ತೀವ್ರವಾಗಿ ತುಡಿಯುತ್ತಿದ್ದ ಹಿಂಸಾತ್ಮಕ ವಿರೋಧವನ್ನು ಕಂಡ ಗಾಂಧಿ ಕೃಷ್ಣವರ್ಮನ ಗುಂಪಿನ ಜೊತೆ ಎರಡು ದಿನ ಕಳೆಯುತ್ತಾರೆ. ಅವರ ಸಿದ್ಧಾಂತದ ಬಗ್ಗೆ ಕಳವಳಗೊಂಡಿದ್ದ ಗಾಂಧಿ ಅವರನ್ನು ಮಾತುಕತೆಯ ಮೂಲಕ, ಚರ್ಚೆಯ ಮೂಲಕ ಎಂಗೇಜ್ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಹಿಂಸೆಗೆ ಪರ್ಯಾಯವಾಗಿ ಅವರಿಗೆ ಶಾಂತಿಯುತ ಅಸಹಕಾರವನ್ನು ಅಪ್ಪಿಕೊಳ್ಳಲು ಹೇಳುತ್ತಾರೆ. ಅಲ್ಲಿಯೇ 23 ವರ್ಷದ ಸಾವರ್ಕರ್ 36 ವರ್ಷದ ಗಾಂಧಿಯನ್ನು ಮೊದಲ ಸಲ ಭೇಟಿ ಆಗಿದ್ದು.
ಗಾಂಧಿ 1909 ರಲ್ಲಿ ಮತ್ತೊಮ್ಮೆ ದಕ್ಷಿಣ ಆಫ್ರಿಕಾದಿಂದ ಲಂಡನ್ನಿಗೆ ಬರುತ್ತಾರೆ. ಅವರು ಬರುವುದಕ್ಕೆ ಎಂಟು ದಿನಗಳ ಹಿಂದೆಯಷ್ಟೆ ಕೃಷ್ಣವರ್ಮ ಮತ್ತು ಸಾವರ್ಕರ್‌ರಿಂದ ಪ್ರಚೋದನೆಗೊಂಡ ಮದನ್‍ಲಾಲ್ ಧಿಂಗ್ರಾ ಎಂಬ ಯುವಕ ಕರ್ಜನ್ ವಿಲ್ಲಿ ಎಂಬಾತನನ್ನು ಕೊಂದಿರುತ್ತಾನೆ. (ಕರ್ಜನ್ ವಿಲ್ಲಿ ಆಗಿನ ಇಂಗ್ಲೆಂಡ್ ಸರ್ಕಾರದಲ್ಲಿ ಭಾರತದ ಉಸ್ತುವಾರಿ ನೋಡಿಕೊಳ್ಳುತ್ತಿದ ವಿದೇಶಾಂಗ ಸಚಿವನ ರಾಜಕೀಯ ಸಹಾಯಕ.) ಇದೇ ಹಿನ್ನೆಲೆಯಲ್ಲಿ ಗಾಂಧಿ ಮತ್ತೊಮ್ಮೆ ಉಗ್ರವಾದಿ ವಿದ್ಯಾರ್ಥಿಗಳ ಜೊತೆ ಒಂದು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಅದು ಅವರಿಂದಲೆ ಬಂದಿದ್ದ ಆಹ್ವಾನ. ಆ ಸಭೆಯಲ್ಲಿ ಗಾಂಧಿ ಧಿಂಗ್ರಾನನ್ನು ಕೊಲೆ ಮಾಡಲು ಪ್ರಚೋದಿಸಿದವರು ಧಿಂಗ್ರಾಗಿಂತ ದೊಡ್ಡ ಅಪರಾಧಿಗಳು ಎನ್ನುತ್ತಾರೆ. ಅಲ್ಲಿ ಸಾವರ್ಕರ್ ಇನ್ನೊಬ್ಬ ಭಾಷಣಕಾರ. ಆತ ಏನು ಹೇಳಿದ ಎಂದು ಈ ಪುಸ್ತಕದಲ್ಲಿ ಹೇಳಿಲ್ಲ. ಆ ಸಮಯದಲ್ಲಿ ಕರ್ಜನ್‌ನ ಕೊಲೆಯಲ್ಲಿಯ ಸಾವರ್ಕರ್ ಪಾತ್ರ ಇನ್ನೂ ಬಹಿರಂಗವಾಗಿರಲಿಲ್ಲ.
ಆದರೆ ತದನಂತರದ ದಿನಗಳಲ್ಲಿ ಆ ಕೊಲೆಯಲ್ಲಿ ಸಾವರ್ಕರ್‌ರ ಪ್ರಚೋದನೆ ಮತ್ತು ಸಮರ್ಥನೆ ನಿರೂಪಿತವಾಗಿ, ಸಾವರ್ಕರ್‌ಗೆ ಜೈಲುಶಿಕ್ಷೆಯಾಗಿ ಅಂಡಮಾನಿಗೆ ಕಳಿಸಲಾಗುತ್ತದೆ.
ಈ ಮೇಲಿನ ಪ್ರಸಂಗದ ಬಗ್ಗೆ ರಾಜ್‌ಮೋಹನ್ ಬರೆಯುತ್ತಾರೆ: "ನಂತರದ ದಿನಗಳಲ್ಲಿ ಸಾವರ್ಕರ್ ಗಾಂಧಿಯ ಬಗ್ಗೆ ತೋರಿಸುವ ದ್ವೇಷ ಬಹುಶಃ ಯಾವಾಗ ಗಾಂಧಿ ಕರ್ಜನ್ ವಿಲ್ಲಿಯನ್ನು ಕೊಲೆ ಮಾಡಲು ಪ್ರಚೋದಿಸಿದವರು ಧಿಂಗ್ರಾಗಿಂತ ದೊಡ್ಡ ಅಪರಾಧಿಗಳು ಎಂದರೊ ಆಗ ಹುಟ್ಟಿದ್ದಾಗಿರಬೇಕು."
ಈ ಪ್ರವಾಸದ ನಂತರದ ಹಡಗು ಪ್ರಯಾಣದಲ್ಲೆ ಗಾಂಧಿ "ಹಿಂದ್ ಸ್ವರಾಜ್" ಬರೆದದ್ದು.
(ಇದೇ ಸಮಯದಲ್ಲಿ, ತಾವು ಮಾಡುತ್ತಿರುವುದೇ ಸರಿಯಾದ ಹೋರಾಟ, ಅದಕ್ಕೆ ಸಶಸ್ತ್ರ ಹೋರಾಟವೆ ಸರಿ ಎಂದು ಸಮರ್ಥಿಸಿಕೊಳ್ಳುವ ನಕ್ಸಲ್‌ವಾದಿಗಳೂ ನೆನಪಾಗುತ್ತಾರೆ. ತಮ್ಮ ಲೌಕಿಕ ಸುಖಗಳನ್ನು ತ್ಯಾಗ ಮಾಡಿ ಹೋರಾಟ ಮಾಡಿದಾಕ್ಷಣಕ್ಕೆ ಯಾರೊಬ್ಬರ ಹಿಂಸಾತ್ಮಕ ಹೋರಾಟವೂ ಆದರ್ಶಪ್ರಾಯವಲ್ಲ ಮತ್ತು ಪ್ರಶಂಸನೀಯವಲ್ಲ. ಅದು ದೇಶಪ್ರೇಮಿ ಉಗ್ರವಾದಿಗಳಿಗೂ, ಮೂಲಭೂತವಾದಿಗಳಿಗೂ, ಅಸಮಾನತಾ ವಿರೋಧಿ ನಕ್ಸಲ್‌ವಾದಿಗಳಿಗೂ ಸಮಾನವಾಗಿ ಅನ್ವಯಿಸುತ್ತದೆ.)
