Jun 22, 2009

ಗುಪ್ತರು, ನಾಮರಹಿತರು, ಹಂದಿ, ಮತ್ತು ಸಸ್ಯಾಹಾರ

ಈಗೊಂದು ತಿಂಗಳಿನಿಂದ ತುರಿಸಿಕೊಳ್ಳಲೂ ಬಿಡುವಿಲ್ಲ. ಬರೆಯುವುದಿರಲಿ, ಅದರ ಬಗ್ಗೆ ಯೋಚಿಸುವುದೂ ಸಾಧ್ಯವಾಗಿರಲಿಲ್ಲ. ಈ ಒಂದೇ ತಿಂಗಳಿನಲ್ಲಿ Windows 2000, Xp, Vista, 7, Windows CE, Appleನವರ OS X, Linux, QNX, ಹೀಗೆ ಇದ್ದಬದ್ದದ್ದರೆಲ್ಲ ಕೆಲವು ಪಿಸಿಐ ಮತ್ತು ಯುಎಸ್‌ಬಿ drivers ಬರೆಯುವ ಕೆಲಸ. ಇಷ್ಟಿದ್ದರೂ ನಾಲ್ಕು ವಾರದ ಹಿಂದೆ ಒಂದು ವಿಷಯದ ಬಗ್ಗೆ ಪ್ರತಿಕ್ರಿಯಿಸಲೇ ಬೇಕು ಎನ್ನಿಸಿತು. ಪ್ರಜಾವಾಣಿಯಲ್ಲಿ ದಿನೇಶ್ ಅಮೀನ್‌ಮಟ್ಟು ಮತ್ತು ಜಿ.ಕೆ.ಗೋವಿಂದ್‌ರಾವ್‌ರವರ ಲೇಖನಕ್ಕೆ ಪ್ರತಿಯಾಗಿ ಶಿವಸುಂದರ್ ಮತ್ತು ಅರವಿಂದ ಚೊಕ್ಕಾಡಿ ಪ್ರತಿಕ್ರಿಯಿಸಿದ್ದರು. ಶಿವಸುಂದರ್ ಬರೆದಾಗಲೆ ಅದಕ್ಕೆ ಪೂರಕವಾಗಿ ಬರೆಯಬೇಕೆನ್ನಿಸಿತ್ತು. ಆಗಿರಲಿಲ್ಲ. ಚೊಕ್ಕಾಡಿಯವರು ಪತ್ರ ಕಂಡ ತಕ್ಷಣ ಸ್ವಲ್ಪ ಬಿಡುವು ಮಾಡಿಕೊಂಡು ಬರೆದೆ. ಅದು "ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ" ಎಂದು ಪ್ರಕಟವಾಯಿತು.

ಇದೆಲ್ಲ ಇಲ್ಲಿ ಹೇಳಲು ಇನ್ನೊಂದು ಕಾರಣವಿದೆ. ಅದು ನನ್ನ ವ್ಯಸ್ತ ಸಮಯದ ಮತ್ತು ಬರವಣಿಗೆಯಿಂದ ದೂರವಿದ್ದ ವಿಷಯದ ಬಗ್ಗೆ. ಇದೇ ಸಮಯದಲ್ಲಿ ಈ ಬ್ಲಾಗಿನಲ್ಲಿ ಮೂರ್ನಾಲ್ಕು ಕಾಮೆಂಟುಗಳು "ಅವರು ನೀವೇನಾ? ಅವರು ನೀವೆ." ಎಂದು ಬಂದಿವೆ. ಈ ಬ್ಲಾಗು ನೋಡುವ ಓದುಗರಿಗೆ ಗೊತ್ತಿರುವಂತೆ ಇಂಟರ್ನೆಟ್‌ನ ಚರ್ಚೆ/ಪ್ರತಿಕ್ರಿಯೆಗಳಲ್ಲಿ ನಾನು ಪಾಲ್ಗೊಂಡಿರುವುದು ಅಪರೂಪ. ಯಾರು ಯಾರದೊ ಹೆಸರಿನಲ್ಲಿ, ಗುಪ್ತನಾಮದಲ್ಲಿ, ಅನಾಮಿಕವಾಗಿ ಎಲ್ಲ ಪ್ರತಿಕ್ರಿಯಿಸುವ ಸಾಧ್ಯತೆ ಇರುವ ಇಂಟರ್ನೆಟ್‌ನಲ್ಲಿ ಬೇರೆ ಕಡೆ ಪ್ರತಿಕ್ರಿಯಿಸುವಾಗಲೂ ಲಾಗಿನ್ ಆಗಿ ಮಾಡಬಹುದಾದ ಕಡೆ ಮಾತ್ರ ಇಲ್ಲಿಯವರೆಗೆ ನಾನು ಪ್ರತಿಕ್ರಿಯಿಸಿದ್ದೇನೆ. ಈ ಮುಖೇಡಿಗಳ ಸಹವಾಸ ನನ್ನಲ್ಲಿ ತೀವ್ರ ತಿರಸ್ಕಾರ ಮೂಡಿಸುತ್ತದೆ.

ತಿಂಗಳ ಹಿಂದೆ ಕೆಂಡಸಂಪಿಗೆಯ ಬಗ್ಗೆ ಒಂದು ಟಿಪ್ಪಣಿ ಇಲ್ಲಿ ಬರೆದಿದ್ದೆ. ಅದು ಅನಾಮಿಕತೆಯ ಕುರಿತಾದ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಇತ್ತು. ಅದೇ ತಾಣದಲ್ಲಿ ಯಾರೋ ಓದುಗರು "ವರಾಹ" ಎನ್ನುವ ಹೆಸರಿನಲ್ಲಿ ಕಾಮೆಂಟ್ ಮಾಡುತ್ತಾರೆ. ಅದು ನಾನೇ ಇರಬೇಕು ಎಂದು ಕೆಲಸವಿಲ್ಲದ ಮತ್ತೊಬ್ಬ ಅವಿವೇಕಿ ಬಡಗಿಯೊಬ್ಬನಿಗೆ ಹೊಳೆದು ಬಿಟ್ಟಿದೆ. ಇಲ್ಲಿ ಸ್ವಲ್ಪ ಖಾರವಾಗಿ ಬರೆಯುತ್ತೇನೆ. ಯಾಕೆಂದರೆ ಅದು ಅನಾಮಿಕವಾಗಿ ಬರೆಯುವವರ ಬಗ್ಗೆ ನನಗಿರುವ ತಿರಸ್ಕಾರ ಮತ್ತು ವಿರೋಧವನ್ನು ಸ್ಪಷ್ಟವಾಗಿಯೆ ತೋರಿಸಲಿ ಎಂದು.

ಸುಮಾರು ಎರಡೂವರೆ ವರ್ಷದ ಹಿಂದೆ ಬರೆದ "ಇಂಟರ್ನೆಟ್‌ನಲ್ಲಿ ನವಗ್ರಹ ಕಾಟ" ಲೇಖನದಲ್ಲಿ ಇಂತಹ ಗುಪ್ತ ಹೆಸರುಗಳನ್ನು ಇಟ್ಟುಕೊಂಡು ಏನೆಂದರದು ಬರೆಯುವ ಮತ್ತು ಚರ್ಚಿಸುವ ಜನರ ಬಗ್ಗೆ ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದೆ. ಕನ್ನಡದ ಬ್ಲಾಗು ಲೋಕದಲ್ಲಂತೂ ಗುಪ್ತನಾಮಗಳಿಂದ ಮತ್ತು ಅನಾಮಿಕ ಸೌಲಭ್ಯಗಳಿಂದ ಬರೆಯುವ ಮತ್ತು ಪ್ರತಿಕ್ರಿಯಿಸುವ ದೊಡ್ಡ ಪಡೆಯೇ ಇದೆ. ಕೆಲವು ಲೇಖಕರಿಗಂತೂ ಲಿಂಗಪರಿವರ್ತನೆ ತಲೆಮರೆಸಿಕೊಳ್ಳುವ ಸುಲಭೋಪಾಯ. ಇದರಲ್ಲಿ ಪತ್ರಕರ್ತರದೇ ದೊಡ್ಡ ಗುಂಪಿರಬೇಕು. ಅವರಿಗೆ ತಮ್ಮ ಕೆಲಸದ ಸ್ಥಳದ ಒತ್ತಡದಿಂದ ಮತ್ತು ನೌಕರಿಯ ಭದ್ರತೆಯ ದೃಷ್ಟಿಯಿಂದ ಅದು ಅವಶ್ಯಕವೂ ಆಗಿರಬಹುದು. ಆದರೆ ಅದು ಸರಿ ಆಗಿರಲೇಬೇಕು ಅಂತಿಲ್ಲ. "ಸರಿ" ಅಲ್ಲದ ಎಲ್ಲವನ್ನೂ ನಾನು ನಿರಾಕರಿಸ ಬಯಸುತ್ತೇನೆ.

ಎಲ್ಲಾ ವಿಷಯಗಳಿಗಿಂತ ಮುಖ್ಯವಾಗಿ ಸಾಮಾಜಿಕ ವಿಷಯಗಳ ಬಗ್ಗೆ ಗುಪ್ತವಾಗಿ ಬರೆಯುವ ಜನ ತಮ್ಮ ಬದ್ಧತೆಯ ಬಗ್ಗೆ ಪ್ರಾಮಾಣಿಕವಾಗಿಲ್ಲ ಎಂದು ನನ್ನ ಭಾವನೆ. ಅದು ಅವರ ಅಪ್ರಾಮಾಣಿಕತೆಯನ್ನು, ಹೇಡಿತನವನ್ನು, ಬೇಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಅವರು ಪ್ರಸ್ತಾಪಿಸುವ ವಿಷಯ ಎಷ್ಟೇ ಗಂಭೀರದ್ದಾಗಿರಲಿ ಅವರ ಗುಪ್ತತೆ ಮತ್ತು ಅನಾಮಿಕತೆ ಪ್ರಸ್ತಾಪಿಸಲ್ಪಟ್ಟ ವಿಷಯಕ್ಕೆ ಕೊನೆಗೆ ದ್ರೋಹವನ್ನೆ ಬಗೆಯುತ್ತದೆ. ಜನ ಪ್ರಬುದ್ಧರಾಗುತ್ತ ಹೋದ ಹಾಗೆ ಮುಕ್ತರಾಗುತ್ತ ಹೋಗಬೇಕೆ ಹೊರತು ಗುಪ್ತರಾಗುತ್ತ ಹೋಗಬಾರದು. ಗಾಂಧಿ ಆದರ್ಶವಾಗಿರುವ ಯಾರಿಗೂ ಮುಕ್ತವಾಗಿಲ್ಲದೆ ಗುಪ್ತವಾಗಿರಲು ಸಾಧ್ಯವಿಲ್ಲ.

ನನ್ನ ಬರವಣಿಗೆಯನ್ನು ಸೂಕ್ಷವಾಗಿ ಗಮನಿಸಿರುವ ಯಾರಿಗಾದರೂ ನನ್ನ ಅಭಿಪ್ರಾಯ ಹೀಗೆಯೆ ಇರಬಹುದು ಎಂದು ಗೊತ್ತಿರುತ್ತದೆ. ಆದರೆ ಅನಾಮಿಕವಾಗಿ "ಅವರು ನೀವೇನಾ?" ಎನ್ನುವ ಓದುಗರಿಗೆ ಆ ಸೂಕ್ಷ್ಮತೆ ಗೊತ್ತಾಗುವುದಿಲ್ಲ ಎನ್ನಿಸಿ ಒಮ್ಮೆ ಸ್ಪಷ್ಟವಾಗಿ ಹೇಳಿಬಿಡೋಣ ಎಂದು ಇಷ್ಟೆಲ್ಲ ಬರೆದಿದ್ದೇನೆ.




ಕಳೆದ ವರ್ಷಾಂತ್ಯದಲ್ಲಿ ಮಾಂಸದ mass production, ಅದಕ್ಕೆ ಬಳಕೆಯಾಗುವ ಸಂಪನ್ಮೂಲಗಳು, ನಿಸರ್ಗದ ಮೇಲಿನ ಅದರ ಒತ್ತಡ ಮತ್ತು ದುಷ್ಪರಿಣಾಮಗಳು, ಮುಂತಾದುವನ್ನು ಪ್ರಸ್ತಾಪಿಸುತ್ತ, ಅವನ್ನು ತಡೆಗಟ್ಟಲು ನಮ್ಮನಮ್ಮ ನೆಲೆಯಲ್ಲಿ ನಾವು ಸಸ್ಯಾಹಾರಿಗಳೂ, Locovoreಗಳೂ ಆಗಬೇಕಾದ ಅವಶ್ಯಕತೆಯ ಬಗ್ಗೆ ಬರೆದಿದ್ದೆ. ಆದರೆ ನಾನು ಸ್ವತಃ ಇಲ್ಲಿಯವರೆಗೆ ಪೂರ್ಣವಾಗಿ ಸಸ್ಯಾಹಾರಿಯಾಗಿರಲಿಲ್ಲ. ಅದಕ್ಕೆ ಕೆಲವೊಂದು ಕಾರಣಗಳನ್ನೂ ಆ ಲೇಖನದಲ್ಲಿ ಬರೆದಿದ್ದೆ. ಆದರೆ ಮನಸ್ಸಿನಲ್ಲಿ ಒತ್ತಡ ಹೆಚ್ಚುತ್ತಲೆ ಇತ್ತು. ಹಾಗೆಯೆ ಮೈಯ್ಯಲ್ಲಿ ಕೊಬ್ಬೂ. ವಾರಕ್ಕೊಂದು ಅಥವ ಎರಡು ದಿನ ತಿಂದರೂ ಮಿಕ್ಕೆಲ್ಲ ದಿನಗಳ ಸಂಯಮವನ್ನು ಅದು ಮೀರುತ್ತಿತ್ತು. ಈಗೊಂದು ತಿಂಗಳ ಹಿಂದೆ ಒಂದು ರೀತಿಯ ನಿರ್ವಿಕಾರದ ಹೊತ್ತಿನಲ್ಲಿ ತೀರ್ಮಾನಿಸಿದೆ. ಕೇಕಿನಲ್ಲಿ ಇರಬಹುದಾದ ಮೊಟ್ಟೆಯೊಂದನ್ನು ಬಿಟ್ಟು ಮಿಕ್ಕೆಲ್ಲ ರೀತಿಯ ಮಾಂಸವನ್ನೂ ಈ ದೇಶದಲ್ಲಿ ವರ್ಜಿಸಿದ್ದೇನೆ.

ಹೌದು. ಈ ದೇಶದಲ್ಲಿ ಮಾತ್ರ. ನನ್ನ ದೇಶದಲ್ಲೂ ಬಹುಪಾಲು ಮುಂದುವರೆಯುತ್ತದೆ. ಯಾವುದಾದರೂ ಹಳ್ಳಿಗೆ ಹೋದಾಗ, ಅದೇ ಹಳ್ಳಿಯ ಪರಿಸರದಲ್ಲಿ ಸಿಗುವ ಕೋಳಿ-ಮೀನು ಸಿಕ್ಕರೆ ಅದನ್ನು ತಿನ್ನುವ ಅವಕಾಶವನ್ನು ಮುಕ್ತವಾಗಿ ಇಟ್ಟುಕೊಂಡಿದ್ದೇನೆ. ಇಲ್ಲಿ "ವರಾಹ" ಎನ್ನುವುದು ಪ್ರಸ್ತಾಪವಾಗಿರುವುದರಿಂದ ಹಂದಿ ಮಾಂಸದ ಬಗ್ಗೆಯೂ ಬರೆಯೋಣ ಎಂದು ಬರೆಯುತ್ತಿದ್ದೇನೆ. ಇತ್ತಿಚೆಗೆ ತಾನೆ "ಕಾನೂರು ಹೆಗ್ಗಡಿತಿ" ಇನ್ನೊಮ್ಮೆ ಓದಿದೆ. ಮಲೆನಾಡಿನಲ್ಲಿ ಎಂತೆಂತಹ ಹಂದಿಗಳನ್ನೆಲ್ಲ ತಿನ್ನುತ್ತಿದ್ದರು ಎಂದರೆ ಆಶ್ಚರ್ಯವಾಗುತ್ತದೆ. ಕಾನೂರಿನ ಪುಟ್ಟಣ್ಣ ಮುಳ್ಳುಹಂದಿಯನ್ನು ಕೊಚ್ಚಿಕೊಚ್ಚಿ ಕೊಲ್ಲುವ ದೃಶ್ಯವನ್ನು ಕುವೆಂಪು ರಕ್ತಸಿಕ್ತವಾಗಿ ವರ್ಣಿಸಿದ್ದಾರೆ. ನಮ್ಮಲ್ಲಿ, ಕೊಡಗಿನಲ್ಲಿ, ಮಲೆನಾಡಿನಲ್ಲಿ (ಮೊನ್ನೆಮೊನ್ನೆ ತೀರ್ಥಹಳ್ಳಿಯ ಮಲೆನಾಡು ಕ್ಲಬ್ಬಿನಲ್ಲಿ), ಅಮೆರಿಕದಲ್ಲಿ ಸಿಗುವ ನಾನಾತರಹದ ಪೆಪ್ಪರೋನಿ/ಸಾಸೇಜ್, ಬಾಯಲ್ಲಿ ಇಟ್ಟುಕೊಂಡರೆ ಬೆಣ್ಣೆಯಂತೆ ಕರಗುವ ಸ್ಪೇನಿನ Aged Ham, smoked ham, ಮುಂತಾದುವನ್ನೆಲ್ಲ ತಿಂದಿರುವ ನಾನು ಬಹುಶಃ ಇನ್ನೆಂದೂ ಹಂದಿ ತಿನ್ನುವುದು ಅಸಾಧ್ಯ. ಯಾಕೆಂದರೆ ಅದರಷ್ಟು ಮಾಸ್-ಪ್ರೊಡ್ಯೂಸ್ಡ್ ಮಾಂಸ ಮತ್ತೊಂದಿಲ್ಲ ಮತ್ತು ಕಾಡುಹಂದಿ ನನಗೆ ಸಿಗುವುದಿಲ್ಲ.

ಹಾಗೆಯೆ, ಮಾಂಸಾಹಾರ ಮಾಡದವರು ಶ್ರೇಷ್ಠರು ಮತ್ತು ಸಾತ್ವಿಕರು, ಮಾಂಸಾಹಾರಿಗಳು ತಾಮಸಿಗಳು ಮತ್ತು ಎರಡನೆಯ ದರ್ಜೆಯವರು ಎನ್ನುವ ಯಾವೊಂದು ಜನಾಂಗೀಯ ವಾದವನ್ನು ನಾನು ನಿರಾಕರಿಸುತ್ತೇನೆ. ಅದಕ್ಕೆ ಪೂರಕವಾಗಿಯೆ ಮೇಲೆ ಹಂದಿಯ ಬಗ್ಗೆ ಬರೆದದ್ದು. ಸಸ್ಯಾಹಾರದ ಪರ ನನ್ನ ನಿಲುವು ಸಂಪೂರ್ಣವಾಗಿ Mass production ಗೆ, ಇತ್ತೀಚಿನ ಶತಮಾನಗಳ ಯಾಂತ್ರೀಕರಣಕ್ಕೆ, ಆಹಾರದ ವಿಚಾರದಲ್ಲಿ ಮನುಷ್ಯ ಕಳೆದುಕೊಳ್ಳುತ್ತ ಬಂದಿರುವ ಸ್ವಾವಲಂಬನೆಗೆ, ಪರಿಸರದ ಅಸಮತೋಲನಕ್ಕೆ, ನಿಸರ್ಗದ ಸಂಪನ್ಮೂಲಗಳ exploitationಗೆ ಸಂಬಂಧಪಟ್ಟದ್ದು. ಸಸ್ಯಾಹಾರದ ವಿಚಾರದಲ್ಲೂ ಈ ವಾದವನ್ನು ಮುಂದುವರೆಸಿದರೆ, ಸ್ಥಳೀಯವಾಗಿ ಬೆಳೆದದ್ದನ್ನಷ್ಟೆ ದೈನಂದಿನ ಊಟಕ್ಕೆ ಬಳಸಬೇಕು. ಸದ್ಯಕ್ಕೆ ಭಾರತಕ್ಕೆ ಹಿಂದಿರುಗುವ ತನಕ ಈ ವಿಚಾರದಲ್ಲಿ ನಾನು ಕಠಿಣವಾಗಲು ಸಾಧ್ಯವಿಲ್ಲ. ಮನೆಯಲ್ಲಿ ಸಮಸ್ಯೆ ಗಂಭೀರವಾಗಿಬಿಡಬಹುದು!


ವಾರದಿಂದೀಚೆಗಂತೂ ಇಡೀ ವಿಶ್ವ ಇರಾನಿನತ್ತ ನೋಡುತ್ತಿದೆ. ಜಾತ್ಯತೀತ ಪ್ರಜಾಪ್ರಭುತ್ವದತ್ತ ಇರಾನ್ ಮುಖಮಾಡಿದೆ ಎನ್ನಿಸುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಬಿಜೆಪಿ-ಸಂಘ-ಹಿಂದುತ್ವ-ಹಿಂದುಯಿಸಮ್-ರಾಷ್ಟ್ರೀಯತೆ ಮುಂತಾದ ಚರ್ಚೆಗಳೂ ಕುತೂಹಲಕಾರಿಯಾಗಿವೆ. Outlook ಮತ್ತು Tehelka ಗಳಲ್ಲಂತೂ ಉತ್ತಮ ಲೇಖನಗಳು ಬರುತ್ತಿವೆ. ಆದರೂ ಇತ್ತೀಚಿನ ಚುನಾವಣೆಯನ್ನು ಹಿಂದುತ್ವದ ನಿರಾಕರಣೆ, ಜಾತ್ಯತೀತತೆಯ ಎತ್ತಿಹಿಡಿಯುವಿಕೆ, ಎಂದೆಲ್ಲ ಕೆಲವು ಪ್ರಗತಿಪರರು overrated ಆಗಿ ಸಾರುತ್ತಿದ್ದಾರೆ ಎನ್ನಿಸುತ್ತದೆ. ಆದರೆ ಕೊನೆಗೆ ಇದೇ ಒಂದು ಜನಾಭಿಪ್ರಾಯ ರೂಪಿಸಬಲ್ಲದಾದರೆ ಮತ್ತು ಅದು ನೈತಿಕವಾಗಿ ಸರಿಯಾದುದೂ ಹೌದು ಎಂದು ಜನರಿಗೆ ಮನವರಿಕೆ ಮಾಡಿಕೊಡಬಹುದಾದರೆ ಅದು ಆಗಲೇಬೇಕು.

ಈ ನಡುವೆ ಏನನ್ನೂ ಬರೆಯುತ್ತಿಲ್ಲವಾದ್ದರಿಂದ ನಾನು ಓದಿದ ಕೆಲವು ಮುಖ್ಯ ಲೇಖನಗಳನ್ನು ಇಲ್ಲಿ ಪ್ರತಿವಾರ ಹಂಚಿಕೊಳ್ಳಲಿದ್ದೇನೆ. ಇಂದು ದೇಶದ ಪ್ರಸಿದ್ಧ ಚಿಂತಕ ಆಶಿಶ್ ನಂದಿಯವರ ಲೇಖನ ಓದಿದೆ, ತೆಹೆಲ್ಕಾದಲ್ಲಿ. ಕಳೆದ ಚುನಾವಣೆಯ ಫಲಿತಾಂಶ, ಗಾಂಧಿ, ಸಾವರ್ಕರ್, ಅನೇಕತೆ, ರಾಷ್ಟ್ರೀಯತೆ, ದೇಶ, ಅದರ ಬಗ್ಗೆ ಪಾಶ್ಚಾತ್ಯ ಕಲ್ಪನೆ, ಯೂರೋಪಿಯನ್ ಯೂನಿಯನ್ ಪರಿಕಲ್ಪನೆ, ರಸಹಿಂಡಿದ ಕಬ್ಬನ್ನು ಜಗಿಯುತ್ತಿರುವ ಚೀನಾ ಮತ್ತು ಭಾರತ ಮುಂತಾದ ಬಗ್ಗೆ ಅದ್ಭುತವಾಗಿ ಬರೆದಿದ್ದಾರೆ. ಅವರು ಚುನಾವಣೆಯ ಫಲಿತಾಂಶದ ಬಗ್ಗೆ ಹೇಳಿರುವುದನ್ನು ನನಗೆ ಒಪ್ಪಿಕೊಳ್ಳಲಾಗದಿದ್ದರೂ ಮಿಕ್ಕವನ್ನು ಒಪ್ಪಿಕೊಳ್ಳದೆ ಇರಲಾಗುತ್ತಿಲ್ಲ.

ಸುಗತ ಕರ್ನಾಟಕದ ರಾಜಕೀಯದ ಇತ್ತಿಚಿನ ಘಟನಾವಳಿಗಳ, ಒಳಸುಳಿಗಳ ಬಗ್ಗೆ ಬರೆದಿದ್ದಾರೆ. ಅಂತರ್ರಾಜ್ಯ ಆಯಾಮ ತೆಗೆದುಕೊಳ್ಳುತ್ತಿರುವ ರಾಜ್ಯ ರಾಜಕಾರಣ ನೈತಿಕ ರಾಜಕಾರಣದಿಂದ ದೂರ ಸಾಗುತ್ತಿದೆ. ಹಸಿದ ನರಿಗಳು ಅಧಿಕಾರಕ್ಕೆ ಕಾಯುತ್ತಿದ್ದಾರೆ. ಸ್ವಚ್ಚ ರಾಜಕಾರಣಕ್ಕಲ್ಲ. ಸಿದ್ಧಾಂತರಹಿತ ಪಕ್ಷಾಂತರವನ್ನು ಪ್ರೋತ್ಸಾಹಿಸದ ಮತ್ತು ಭ್ರಷ್ಟರನ್ನು ಪುರಸ್ಕರಿಸದ ರಾಜಕಾರಣದತ್ತ ರಾಜ್ಯದ ಕಾಂಗ್ರೆಸ್ ಗಮನ ನೀಡಬೇಕಿದೆ. ಅದೇ ಅವರ ಮತ್ತು ನಾಡಿನ ಭವಿಷ್ಯವನ್ನು ಚೆನ್ನಾಗಿಡುತ್ತದೆ.

May 22, 2009

ಅನಾಮಿಕತೆ ಮತ್ತು ಅಮಲಿನಲ್ಲಿ ಕೆಂಡಸಂಪಿಗೆ...

ಹಿಂದೊಮ್ಮೆ ಕೆಂಡಸಂಪಿಗೆಯ ಬಗ್ಗೆ ಬರೆದಿದ್ದೆ. ಕನ್ನಡದ ಅಂತರ್ಜಾಲದಿಂದ ಹೊರಗಿದ್ದ ಅನೇಕ ಅರ್ಹರನ್ನು ಅದು ಪ್ರೀತಿಯಿಂದ ಎಳೆದೆಳೆದುಕೊಂಡು ಬಂದು ಕನ್ನಡ ಅಂತರ್ಜಾಲದಲ್ಲಿ ಕೂರಿಸಿದೆ. ಕೂರಿಸುತ್ತಿದೆ. ಆ ಮೂಲಕ, ಕನ್ನಡದ ಅಂತರ್ಜಾಲ ಪ್ರಪಂಚದಲ್ಲಿ ಇಲ್ಲದೆ ಹೋಗಿದ್ದ ಒಂದು ಕರ್ನಾಟಕದ ಪ್ರತಿಬಿಂಬವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದೆ. ಅದನ್ನು ದುಡ್ಡು ಹಾಕಿ ನಡೆಸುತ್ತಿರುವವರು ಯಾರು ಎಂದು ನನಗೆ ಗೊತ್ತಿಲ್ಲ. ಆದರೆ ಅವರು ಹೂಡುತ್ತಿರುವ ದುಡ್ಡಿಗೆ ಅಲ್ಲಿಂದ ಯಾವ ರೀತಿಯ ಹಣಕಾಸಿನ Returns ಇಲ್ಲ ಎಂದು ಮಾತ್ರ ಖಂಡಿತವಾಗಿ ಹೇಳಬಹುದು. ಕನ್ನಡ ಸೈಟುಗಳಿಗೆ ಜಾಹಿರಾತುಗಳು ಸಿಗುತ್ತವೊ ಇಲ್ಲವೊ. ಸಿಕ್ಕರೂ ಅವುಗಳ ಆದಾಯ ಯಾವ ಖರ್ಚಿಗೂ ಸಾಲುವುದಿಲ್ಲ. ಕೆಂಡಸಂಪಿಗೆಯಲ್ಲಂತೂ ಜಾಹಿರಾತುಗಳೇ ಇಲ್ಲ. ಹೀಗಿರುವಾಗ, ಅದನ್ನು ನಡೆಸುತ್ತಿರುವವರು ಯಾವೊಂದು ಆದಾಯದ ನಿರೀಕ್ಷೆಯಿಲ್ಲದೆ ತಮ್ಮ ಸ್ವಂತ ದುಡ್ಡನ್ನು ಕಳೆದುಕೊಳ್ಳುತ್ತಲೆ ಅದನ್ನು ನಡೆಸುತ್ತಿದ್ದಾರೆ ಎಂತಲೇ ಹೇಳಬೇಕು. ಬಹುಶಃ ಅದು ಅವರ ಜೀವನಪರ/ಕನ್ನಡಪರ ಕಾಳಜಿಗಳಿಂದ ಬಂದದ್ದಾಗಿರಬೇಕು. ಅವರು ಯಾರು ಮತ್ತು ಅವರ ಒಲವುನಿಲುವುಗಳೇನು ಎಂದು ಗೊತ್ತಾಗುವ ತನಕ ಯಾವುದನ್ನೂ ನಿಖರವಾಗಿ ಹೇಳಲಾಗುವುದಿಲ್ಲ. ಬಹುಶ: ಆಮೇಲೆಯೂ ಸಹ. ಆದರೆ ಆ ನಂತರದ ಅಭಿಪ್ರಾಯಕ್ಕೆ ತೀರಾ ವೈಯಕ್ತಿಕವಾದ ಅಭಿಪ್ರಾಯಗಳೂ ಸೇರಿಕೊಳ್ಳುತ್ತವೆ.

ಅಬ್ದುಲ್ ರಶೀದ್ ಸಂಪಾದಕತ್ವದಲ್ಲಿ ಬರುತ್ತಿರುವ ಕೆಂಡಸಂಪಿಗೆಗೆ ನಾಗರಾಜ್ ವಸ್ತಾರೆ ಎಂಬ ಕತೆಗಾರ-ಕವಿ-ಲೇಖಕ ಈ ತಿಂಗಳು ಅತಿಥಿ ಸಂಪಾದಕರಾಗಿದ್ದಾರೆ. ಅವರ ಯಾವ ಕತೆಗಳನ್ನು ಓದಿದ್ದೇನೆ ಎಂದು ನೆನಪಿಲ್ಲ. ಓದಿರಬಹುದು. ಇಲ್ಲದೆಯೂ ಇರಬಹುದು. ಒಂದಷ್ಟು ಸಾಹಿತ್ಯವನ್ನು ಓದುವ, ಬಹಳಷ್ಟನ್ನು (ಸಿನೆಮಾ) ನೋಡುವ, ಇನ್ನೂ ಬಹಳಷ್ಟು ಅದೂಇದನ್ನು ಅಂತರ್ಜಾಲದಲ್ಲಿ ಓದುವ ನನಗೆ ಓದಿದ ಸಣ್ಣಕತೆಗಳು ಬಹಳ ದಿನ ಜ್ಞಾಪಕ ಇರುವುದಿಲ್ಲ. ಆದರೆ ಲೇಖಕರ ಹೆಸರು, ಅವರದನ್ನು ಓದಿಲ್ಲದಿದ್ದರೂ, ಸುಮಾರಾಗಿ ಗೊತ್ತಿರುತ್ತದೆ. ಎರಡು-ಮೂರು ಕನ್ನಡ ಪೇಪರ್‌ಗಳನ್ನು ಮತ್ತು ಹಲವು ಕನ್ನಡ ಬ್ಲಾಗ್‌ಗಗಳನ್ನು ಜಾಲಾಡುವ ಅಭ್ಯಾಸವಿರುವ ನನಗೆ ವಸ್ತಾರೆ ಎಂಬ ಹೆಸರು ಇತ್ತೀಚಿನ ವರ್ಷಗಳಲ್ಲಿ ಹಲವು ಸಲ ಕಾಣಿಸಿದೆ. ಜೊತೆಗೆ ಈಗ ಅವರು ಕೆಂಡಸಂಪಿಗೆಗೆ ಅತಿಥಿ ಸಂಪಾದಕರಾಗಿರುವುದು ಇತ್ತೀಚಿನ ಕನ್ನಡ ಸಾಹಿತ್ಯ ಲೋಕದಲ್ಲಿ ಅವರ ಪ್ರಾಮುಖ್ಯವನ್ನೂ ತೋರಿಸುತ್ತಿದೆ.

ಬೆಂಗಳೂರಿನಲ್ಲಿರುವ ಕನ್ನಡ ಲೇಖಕರು; ಅವರಲ್ಲಿಯ Socialites ಮತ್ತು Socialists; ಅವರಿಗೆ ಸಿಗುವ ಪ್ರಚಾರಗಳು; ಪರಸ್ಪರ ಮಾಡಿಕೊಳ್ಳುವ ಪ್ರಸ್ತಾಪಗಳು; ಬೆಂಗಳೂರಿನಿಂದ ಹೊರಗಿರುವ ಪ್ರತಿಭಾವಂತ ಅನಾಮಿಕರು; ಪುಸ್ತಕ ಪ್ರಕಟಿಸುವುದಿರಲಿ, ಜೀವನೋಪಾಯಕ್ಕೂ ತೊಳಲಾಡುವವರು; ಅವರಿಗೆ ದಕ್ಕದ ಅವಕಾಶಗಳು, ಪ್ರಚಾರಗಳು; ಹೀಗೆ ಇಲ್ಲಿ ಇನ್ನೂ ಒಂದಷ್ಟು ಬರೆಯುವ ಮನಸ್ಸಾಗುತ್ತದೆ. ಆದರೆ, ಹೀಗೆ ಬಿಡಿಬಿಡಿಯಾಗಿ ಹೇಳಿ ಹಾಗೆಯೆ ಬಿಡುತ್ತೇನೆ! ಅದು ನಮ್ಮ ಸಮಾಜದಲ್ಲಿನ ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಿಗೆ, ಇವತ್ತಿನ ವಾಸ್ತವ ಮತ್ತು ಮೌಲ್ಯಗಳಿಗೆ ಸಂಬಂಧಪಟ್ಟದ್ದು.

ಈಗ ಮತ್ತೆ ವಸ್ತಾರೆಯಯವರ ವಿಷಯಕ್ಕೆ ಬರುತ್ತೇನೆ. ಸಾಧ್ಯವಾದರೆ ನಾನು ಪ್ರತಿದಿನವೂ ಒಂದು ಸಲ ನೋಡುವ ಕನ್ನಡ ಸೈಟುಗಳಲ್ಲಿ ಕೆಂಡಸಂಪಿಗೆಯೂ ಒಂದು. ಒಂದಷ್ಟು ಓದುತ್ತೇನೆ. ಒಂದಷ್ಟು ಇಲ್ಲ. ನಾಗರಾಜ್ ವಸ್ತಾರೆಯವರು ಅತಿಥಿ-ಸಂಪಾದಕರಾಗಿರುವುದರಿಂದ ಅವರ ಮೊದಲ ಎರಡು ಸಂಪಾದಕೀಯಗಳನ್ನೂ ಓದಿದೆ. ಅದು ಹೆಚ್ಚಾಗಿ ಅನಾಮಿಕ ಪ್ರತಿಕ್ರಿಯೆಕಾರರ ಬಗ್ಗೆ ಇತ್ತು. ಬಯಲಿನಲ್ಲಿ ನಿಂತವರು, ಅಂದರೆ ಸಾರ್ವಜನಿಕ ಜೀವನದಲ್ಲಿ ಇರುವವರು, ತಮ್ಮ ಕೃತಿ-ಅಭಿಪ್ರಾಯವನ್ನು ಬಯಲಿನಲ್ಲಿ ಅನಾವರಣಗೊಳಿಸುವ ಸಾಹಿತಿ-ಕಲಾವಿದರು, ಎಲ್ಲಾ ತರಹದ ಪ್ರತಿಕ್ರಿಯೆಗಳಿಗೆ ಸಿದ್ಧವಾಗಿರಬೇಕಾಗುತ್ತದೆ. ಅಪಪ್ರಚಾರಗಳಿಗೂ ಸಹ. ಅನಾಮಿಕವಾಗಿ ಬರುವುದಕ್ಕೂ ಸಹ. ಇನ್ನು ಅಂತರ್ಜಾಲವಂತೂ ಅನಾಮಿಕವಾಗಿ ಪ್ರತಿಕ್ರಿಯಿಸ ಬಯಸುವವರಿಗೆ ಸ್ವಚ್ಛಂದ-ಸ್ವೇಚ್ಚಾಚಾರದ ಸ್ವರ್ಗ. ಇಂತಹ ಅನಾಮಿಕತೆಯ ಸುತ್ತಲೆ ವಸ್ತಾರೆ ಎರಡು ಬಾರಿ ಸಂಪಾದಕೀಯ ಬರೆದರು. ನನಗೆ ಅದರ ಬಗ್ಗೆ ತಕರಾರಿಲ್ಲ. ಆದರೆ ಅವರ ಎರಡನೆಯ ಲೇಖನದಲ್ಲಿ ಕೆಲವೊಂದು ಅಂಶಗಳು ನನಗೆ ಸರಿ ಕಾಣಲಿಲ್ಲ.

ಬೆಂಗಳೂರಿನಿಂದ ಹೊರಗಿರುವ ನನಗೆ ನನ್ನ ಹಲವು ವಾರಿಗೆಯ ಲೇಖಕರನ್ನು ಮಾತು-ಸ್ನೇಹ-ಪರಿಚಯದಲ್ಲಿ ತೊಡಗಿಸಿಕೊಳ್ಳಬೇಕು, ಆ ಮೂಲಕ ಇವತ್ತಿನ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು, ಮತ್ತು ಸಮಾನಮನಸ್ಕರನ್ನು ಗುರುತಿಸಿಕೊಳ್ಳಬೇಕು ಎಂದು ಅನ್ನಿಸುತ್ತದೆ. ಆದರೆ, ಪದೆಪದೆ ಸಣ್ಣಪುಟ್ಟದ್ದಕ್ಕೆಲ್ಲ ಇಮೇಲ್ ಮಾಡುವ ಅಭ್ಯಾಸವಾಗಲಿ, ಹಪಹಪಿಯಾಗಲಿ ಇಲ್ಲದವನು ನಾನು. ತಮಾಷೆ ಮತ್ತು ಮಾತಿನ ಹರಟೆಯಲ್ಲಿ ಎಷ್ಟು ಕಾಲ ಬೇಕಾದರೂ ತಳ್ಳಬಲ್ಲೆ. ಆದರೆ ಬೌದ್ಧಿಕವಾಗಿಲ್ಲದ ಯಾವೊಂದು ಬರವಣಿಗೆಯೂ, ಅದು ಒಂದೆರಡು ಸಾಲುಗಳೇ ಆಗಿರಲಿ, ಬಹಳ ಕಷ್ಟ. ಹೀಗಾಗಿಯೆ ಅನೇಕ ಸಲ ಸೌಜನ್ಯದ ಪತ್ರಗಳಿಗೂ ಉತ್ತರಿಸುವುದನ್ನು ಮುಂದಕ್ಕೆ ಹಾಕಿರುತ್ತೇನೆ ಅಥವ ಮರೆತುಬಿಟ್ಟಿರುತ್ತೇನೆ. ಹಾಗಾಗಿಯೆ ಅನೇಕ ವಾರಿಗೆಯವರೊಂದಿಗೆ ನನ್ನ ಪತ್ರವ್ಯವಹಾರ ಇಲ್ಲ.

ಆದರೂ, ಅಂತಹವರ ಲೇಖನ-ಕತೆಗಳು ಅವುಗಳಿಗೆ ಸ್ಪಂದಿಸುವಂತಹ ವಿಚಾರಗಳನ್ನು ಹೊಂದಿದ್ದರೆ ಅಂತಹ ಸಂವಾದದಲ್ಲಿ ತೊಡಗಿಸಿಕೊಳ್ಳುವ ಮನಸ್ಸಾಗುತ್ತದೆ. ಆ ಮೂಲಕವಾದರೂ ಅವರೊಡನೆ ವಿಚಾರ-ವಿನಿಮಯ ಸಾಧ್ಯವಾದರೆ ಆಗಲಿ ಎಂದುಕೊಳ್ಳುತ್ತೇನೆ. ಅಂತಹ ಯೋಚನೆಯ ಭಾಗವಾಗಿಯೆ, ಜೊತೆಗೆ ವಸ್ತಾರೆಯವರ ಕೆಲವು ಪ್ರಸ್ತಾಪಗಳು ಕಿರಿಕಿರಿ ಮಾಡಿದ್ದರಿಂದ ಅವರಿಗೆ ಮತ್ತು ಕೆಂಡಸಂಪಿಗೆಗೆ ಈ ಪತ್ರ ಬರೆದೆ. ಆದರೆ ಸಂವಾದದ ರೂಪದಲ್ಲಿ ಪ್ರಕಟಿಸಿ ಎಂದೂ ಕೋರಿದ್ದೆ. ಅದಕ್ಕೆ ವಸ್ತಾರೆ, "ಇದೊಂದು ವೈಯಕ್ತಿಕ ಅಭಿಪ್ರಾಯ ಆದ್ದರಿಂದ ಇದನ್ನು ಕೆಂಡಸಂಪಿಗೆಯಲ್ಲಿ ಹಾಕಲಾಗುವುದಿಲ್ಲ," ಎಂದರು. ಆದರೆ, ಒಮ್ಮೆ ಯೋಚಿಸಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಅದು ಯಾವುದೇ ತಿರುವು ತೆಗೆದುಕೊಳ್ಳಲಿ ಬಹಿರಂಗಗೊಳಿಸದೆ ಬಿಡದ, ಆ ಮೂಲಕ ನನ್ನನ್ನೆ ಪರೀಕ್ಷೆಗೆ ಮತ್ತು ವಿಮರ್ಶೆಗೆ ಒಡ್ಡಿಕೊಳ್ಳುವ ನಾನು ಈಗ ಆ ಪತ್ರವನ್ನು ಇಲ್ಲಿ ಹಾಕುತ್ತಿದ್ದೇನೆ. (ಇದನ್ನು ಮೂರು ದಿನದ ಹಿಂದೆಯೆ ಹಾಕಬೇಕಿತ್ತು. ಆದರೆ ವಸ್ತಾರೆಯವರ ಮಾರುತ್ತರ ಬಂದ ದಿನವೆ ಇನ್ನೊಂದು ಬ್ಲಾಗ್‌ಪೋಸ್ಟ್ ಬರೆದಿದ್ದೆನಾದ್ದರಿಂದ ಒಂದೆರಡು ದಿನ ಅಂತರವಿರಲಿ ಎಂದು ಇಂದು ಹಾಕುತ್ತಿದ್ದೇನೆ.) ಇದನ್ನು ಚರ್ಚೆಗೆ ಎತ್ತಿಕೊಳ್ಳಬಯಸುವವರು ಎತ್ತಿಕೊಳ್ಳಬಹುದು ಅಥವ ಮೇಯ್ಲ್ ಮಾಡಬಹುದು. ನನ್ನ ಅಭಿಪ್ರಾಯಗಳೂ ಅವುಗಳ ಆಧಾರದ ಮೇಲೆ ಬದಲಾದರೂ ಆಗಬಹುದು. ಬೇರೆಯವರದೂ ಸಹ. ಆ ಬದಲಾವಣೆಗಳ ಬಗ್ಗೆ ಕಾಲ ಮಾತ್ರ ಏನಾದರೂ ಹೇಳಬಹುದು.

ಪ್ರೀತಿಯ ನಾಗರಾಜ್,

ನಿಮ್ಮ "ಐನೂರು ಚದರಗಳ ಅನಾಮಿಕತೆಯ ಬಿಕ್ಕಟ್ಟು" ಲೇಖನ ಓದಿ, ಒಂದೆರಡು ವಿಷಯಗಳಿಗೆ ಪ್ರತಿಕ್ರಿಯಿಸಬೇಕು ಎನ್ನಿಸಿತು. ಬ್ಲಾಗ್ ಅಥವ ವೆಬ್‌ಸೈಟುಗಳಲ್ಲಿ ಪ್ರತಿಕ್ರಿಯಿಸುವ ಅಭ್ಯಾಸ ನನಗಿಲ್ಲದಿರುವುದರಿಂದ, ಹಾಗೂ ಈ ಲೇಖನ-ಪತ್ರ ಸ್ವಲ್ಪ ವಿಸ್ತೃತವಾಗಿರುವುದರಿಂದ ಬೇರೆಯಾಗಿಯೆ ಬರೆಯುತ್ತಿದ್ದೇನೆ.

ನಿಮ್ಮ ಲೇಖನದಲ್ಲಿನ ಎರಡು ವಿಷಯಗಳ ಬಗ್ಗೆ ನನ್ನ ಪ್ರತಿಕ್ರಿಯೆ. ಮೊದಲನೆಯದು, ನೆರೆರಾಜ್ಯದ ಮುಖ್ಯಮಂತ್ರಿಯೊಬ್ಬರ ಬಗ್ಗೆ ಬರೆದಿದ್ದೀರಿ. ಅಲ್ಲಿ ಪ್ರಸ್ತಾಪಿಸಿರುವ ಕೆಲವೊಂದು ವಿಷಯಗಳು ನಮ್ಮಲ್ಲಿನ ರಾಜಕೀಯ ಮತ್ತು ಪ್ರಜಾಪ್ರಭುತ್ವದ ಗತಿಯನ್ನು ಗಮನಿಸುವ ನನ್ನಂತಹವನಿಗೆ ಬಹಳ ಮುಖ್ಯವಾಗಿದೆ. ಆ ಕಾರಣಕ್ಕಾಗಿ ಆ ಮುಖ್ಯಮಂತ್ರಿ ಯಾರು ಎಂದು ಹೇಳಿದ್ದರೆ, ಅಥವ ಆತನ ಹೆಸರು ಹೇಳದೆ ಇರುವ ಬಯಕೆ ನಿಮ್ಮದಾಗಿದ್ದಲ್ಲಿ ಕನಿಷ್ಠ ಒಂದಷ್ಟು ಖಚಿತ ಸುಳಿವುಗಳನ್ನಾದರೂ ನೀಡಿದ್ದಲ್ಲಿ ಒಳ್ಳೆಯದಾಗುತ್ತಿತ್ತು. ಆತನ "ಅರಮನೆ" ಮತ್ತು ಅದಕ್ಕೆ ತಗುಲಿರುವ ನೂರೈವತ್ತು ಕೋಟಿ ಮೊತ್ತದ ಬಗ್ಗೆ ನಾನು ಸಂಶಯ ಪಡುತ್ತಿಲ್ಲ. ಆದರೆ, ಆತ ಯಾರು ಎನ್ನುವುದರ ಬಗ್ಗೆ, ಮತ್ತು ಆತ ಅಷ್ಟು ದುಡ್ಡನ್ನು ಹೇಗೆ ಮಾಡಿರಬಹುದು ಎನ್ನುವುದರ ಬಗ್ಗೆ ಒಬ್ಬ ಪ್ರಜೆಯಾಗಿ ನನ್ನ ಸಂಶಯ ಮತ್ತು ಕುತೂಹಲವಿದೆ. ಖಚಿತ ಮಾಹಿತಿಗಳಿರುವ ನಿಮ್ಮಂತಹವರು ಹೀಗೆ ಜನಪ್ರತಿನಿಧಿಗಳ ಬಗ್ಗೆ ಹೆಸರು ಹೇಳದೆ ಅವರನ್ನು ಅನಾಮಿಕವಾಗಿಡುವುದು ಒಳ್ಳೆಯದಲ್ಲ. ಅಂತಹ ಲಕ್ಷುರಿಯನ್ನು ಸಾಹಿತ್ಯ ಅಥವ ಪ್ರಬಂಧ ಎನ್ನುವ "ಸಾಹಿತ್ಯದ ಸವಲತ್ತಿ"ನ ಆಧಾರದ ಮೇಲೆ ಪರಿಗಣಿಸುವುದು ನನ್ನಂತಹವರಿಗೆ ಕಷ್ಟ.

ಈ ವಿಷಯ ಯಾಕೆ ಮುಖ್ಯ ಎನ್ನಲು ಇನ್ನೂ ಸ್ವಲ್ಪ ವಿವರಣೆ ಕೊಡುತ್ತೇನೆ. ಆ ಮುಖ್ಯಮಂತ್ರಿ ನಾಸ್ತಿಕ ಕರುಣಾನಿಧಿಯೆ? ಅವರಿಗೆ ಅಷ್ಟೆಲ್ಲ ಆರೋಗ್ಯವಿರುವ ಹಾಗೆ ಕಾಣಿಸುತ್ತಿಲ್ಲ. ಕೇರಳದ ಎಡರಂಗದ ಮುಖ್ಯಮಂತ್ರಿಗಳಂತೂ ಅಷ್ಟು ಶ್ರೀಮಂತಿಕೆ ಗಳಿಸಿಕೊಳ್ಳುವುದು ಅಸಾಧ್ಯ. ಇನ್ನು ಉಳಿದವರು ಅಶೋಕ್ ಚವಾಣ್ ಅಥವ ರಾಜಶೇಖರ ರೆಡ್ಡಿ. ನಿಮ್ಮ ಲೇಖನದಲ್ಲಿರುವ ಕೆಲವೊಂದು ವಿವರಗಳ ಆಧಾರದ ಮೇಲೆ, ಆ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಇರಬಹುದು; ಈ ವಿವರಗಳು ಅವರಿಗೇ ಹೆಚ್ಚು ಹೋಲುತ್ತಿದೆ, ಎನ್ನುವ ಅಭಿಪ್ರಾಯಕ್ಕೆ ನಾನು ಬಂದಿದ್ದೇನೆ. ಅದು ಅಲ್ಲವಾದಲ್ಲಿ ನಿಮ್ಮ ಲೇಖನ ಹುಟ್ಟಿಸುವ ಸಂಶಯಗಳು ಸಾರ್ವಜನಿಕ ಜೀವನದಲ್ಲಿ ಯಾವ ರೀತಿ ಅನಾರೋಗ್ಯಕರ ಎನ್ನುವುದನ್ನು ನಿರೂಪಿಸುತ್ತದೆ. ಈಗ ಅದು ರಾಜಶೇಖರ್ ರೆಡ್ಡಿಯೇ ಆಗಿದ್ದಲ್ಲಿ, ಮಲಗುವ ಕೋಣೆಯಿಂದ ಗೋಪುರ ಕಾಣಿಸಬಾರದು ಎನ್ನುವ ಹಠಕ್ಕೆ ಕಾರಣ ಏನಿರಬಹುದು ಎಂದು ನಾನು ಯೋಚಿಸುತ್ತೇನೆ. ಅದಕ್ಕೆ ಮತೀಯ ಕಾರಣವಿದೆಯೆ ಅಥವ ಇನ್ಯಾವ ತರಹದ ಅಸಹನೆಯಿಂದ ಅದು ಹುಟ್ಟಿದೆ? ಅದಕ್ಕೆ ಮತೀಯ ಕಾರಣವೆ ಇದ್ದಲ್ಲಿ ಅದು ಒಬ್ಬ ಜನಪ್ರತಿನಿಧಿಯ ಮತಸಹಿಷ್ಣುತೆಯ ಬಗ್ಗೆ ಹಲವಾರು ಒಳನೋಟ ನೀಡುತ್ತದೆ. ಇನ್ನು ನಾವು ಆಂಧ್ರದ ವಿರೋಧ ಪಕ್ಷಗಳಿಂದ ಕೇಳುವ ಭ್ರಷ್ಟಾಚಾರದ ಆಕ್ಷೇಪಗಳಿಗೂ ಅದು ತಾರ್ಕಿಕ-ಪುಷ್ಟಿ ಕೊಡುತ್ತದೆ. ಹಾಗಾಗಿ, ಇಂತಹ ವಿಷಯಗಳ ಬಗ್ಗೆ ಗಂಭೀರವಾಗಿ ಬರೆಯುವಾಗ ಹಾಗೂ ಸಾಮಾಜಿಕ ಕಾಮೆಂಟರಿ ಮಾಡುವಾಗ ಯಾರನ್ನೇ ಆಗಲಿ ಅನಾಮಿಕರನ್ನಾಗಿಡುವುದು, ಹಾಗೆ ಇಡಲೇಬೇಕಾಗಿ ಬಂದಾಗ ಕನಿಷ್ಟ ಕೆಲವಾದರೂ ಸುಳಿವುಗಳನ್ನು ನೀಡದಿರುವುದು ನಮ್ಮ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ಸಾಹಿತ್ಯ ಮತ್ತು ಅದರ ಪ್ರಭಾವವನ್ನು ನಾನು ಅರ್ಥ ಮಾಡಿಕೊಂಡಿರುವ ರೀತಿಯನ್ನು ಬರೆದು ಮುಂದಿನ ವಿಷಯ ಪ್ರಸ್ತಾಪಿಸುತ್ತೇನೆ. ಕೆಲವರಿಗೆ ಸಾಹಿತ್ಯ ಬಹಳ ವೈಯಕ್ತಿಕವಾದದ್ದು. ರಸಾಸ್ವಾದನೆ ಮಾಡಲಷ್ಟೆ ಅರ್ಹವಾದದ್ದು. ಅದೊಂದು ಮನರಂಜನೆಯ ವಸ್ತು. ಆದರೆ ನನ್ನ ಪ್ರಕಾರ ಸಾಹಿತ್ಯ ವೈಚಾರಿಕತೆ-ಜ್ಞಾನ-ಸಂತಸಗಳನ್ನಷ್ಟೆ ಅಲ್ಲದೆ, ಹಲವಾರು ಸಂದರ್ಭಗಳಲ್ಲಿ ಉತ್ತಮವಾದ ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕ-ರಾಜಕೀಯ ಬದಲಾವಣೆಗಳನ್ನು ತರಬಲ್ಲದು. ಬದಲಾವಣೆಯ ತುರ್ತನ್ನೂ, ಅಂತಹ ಸಂದರ್ಭವನ್ನು ಸೃಷ್ಟಿಸುವ ಕೆಲಸವನ್ನೂ ಸಾಹಿತ್ಯ ಪರೋಕ್ಷವಾಗಿ ಮಾಡುತ್ತಿರುತ್ತದೆ. ಹಾಗಾಗಿಯೆ ಸಾಹಿತ್ಯ ಮತ್ತು ಸಾಮಾಜಿಕ ಸಾಹಿತಿಗಳಲ್ಲಿ ಎಲ್ಲರಿಗಿಂತ ಹೆಚ್ಚಿನ ಜವಾಬ್ದಾರಿ ಮತ್ತು ಬದ್ಧತೆಯನ್ನು ನಾನು ಬಯಸುತ್ತೇನೆ.

ಎರಡನೆಯ ವಿಷಯ, ನೀವು ಚಿರಂಜೀವಿಯ ಬಗ್ಗೆ ಹೇಳಿರುವ "ಚಿರಂಜೀವಿ ಎಂಬ ಚಿತ್ರರಂಗದ ಧೀಮಂತ ರಾಜಕೀಯಕ್ಕೆ ಇಳಿದಿರುವುದೂ ಇದೇ ಅಮಲಿನಿಂದ ತಾನೆ? ಇಷ್ಟು ವರ್ಷಗಳ ಪರಿಶ್ರಮದಿಂದ ಅವನು ಕೂಡಿಟ್ಟ ಹಣದ ಮುಪ್ಪಟ್ಟು ಮೊತ್ತವನ್ನು ಆತ ಬರೇ ಪಕ್ಷ ಕಟ್ಟಿ ಮಾಡಿಕೊಂಡನಂತೆ!" ಎಂಬ ಆ ಎರಡು ವಾಕ್ಯಗಳ ಬಗ್ಗೆ. "ಚಿರಂಜೀವಿಯ ಅಮಲಿ"ನಿಂದಾಚೆಗೆ ನಿಮಗೆ ಏನೂ ಕಾಣಿಸದೆ ಹೋಗಿರುವುದರ ಬಗ್ಗೆ ನನ್ನ ತಕರಾರು. ಆಂಧ್ರದಂತಹ ಒಂದು ದೊಡ್ಡ ರಾಜ್ಯದಲ್ಲಿ ಕೇವಲ ಮೇಲ್ವರ್ಗದ ಜನರೆ ತಮ್ಮ ಜನ್ಮಜಾತ ಹಕ್ಕಾಗಿ ರಾಜಕೀಯ ನಾಯಕತ್ವ ಅನುಭವಿಸುತ್ತಿರುವುದು ತಮಗೆ ಗೊತ್ತಿಲ್ಲದೆ ಇರಬಹುದು. ಚಿರಂಜೀವಿ ಈ ಸಲ ಚುನಾವಣೆಗೆ ನಿಂತ ಒಂದೇ ಕಾರಣದಿಂದಾಗಿ ಅಲ್ಲಿ ಈ ಸಲ ಅಲ್ಲಿಯ ಬಲಿಷ್ಠ ಜಾತಿಗಳು ಅಲ್ಲಿಯ ಬಹುಸಂಖ್ಯಾತ ಹಿಂದುಳಿದ ವರ್ಗಗಳ ಜೊತೆಗೆ ನ್ಯಾಯವಾಗಿಯೆ ಅಧಿಕಾರ ಹಂಚಿಕೊಳ್ಳಲು ಸಿದ್ಧವಾಗಿದ್ದಾರೆ. ಈಗ ಚಿರಂಜೀವಿ ಅಧಿಕಾರಕ್ಕೆ ಬಂದಿಲ್ಲದಿರಬಹುದು. ಆದರೆ ಆತ ಸಕಾರಣವಾಗಿಯೆ ಎತ್ತಿದ ಸಾಮಾಜಿಕ ನ್ಯಾಯದ ಪ್ರಶ್ನೆಯಿಂದಾಗಿ, ಈ ಸಲ ಸರಳ ಬಹುಮತ ಪಡೆದುಕೊಂಡರೂ ಅಲ್ಲಿಯ ಹಾಲಿ ಮುಖ್ಯಮಂತ್ರಿ ಆ ರಾಜ್ಯದ ಸಾಮಾಜಿಕ ಅಸಮಾನತೆಯನ್ನು ಗಣನೆಗೆ ತೆಗೆದುಕೊಂಡು ಈ ಸಲದ ಮಂತ್ರಿಮಂಡಲದಲ್ಲಿ ಹಿಂದುಳಿದವರಿಗೆ ಶೇ. ೫೦ ರಷ್ಟು ಸ್ಥಾನಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಇದನ್ನು ನಾನು ಚಿರಂಜೀವಿಯ ಸಾಧನೆ ಎಂದು ಪರಿಗಣಿಸುತ್ತೇನೆ. ಚಿರಂಜೀವಿಯೆಂಬ ನಟನೂ, ಆತನ ಪ್ರಭಾವವೂ, ಆತ ರಾಜಕೀಯಕ್ಕೆ ಇಳಿದು ದುಡ್ಡು ಮಾಡಿಕೊಂಡಿರುವುದು(?), ಇವೆಲ್ಲ ತಮಗೆ ತಿಳಿದಿದೆ. ಆದರೆ ಆತನ ರಾಜಕೀಯ ಪ್ರವೇಶದಿಂದಾಗಿ ಅಲ್ಲಿ ನಡೆಯುತ್ತಿರುವ ಸಾಮಾಜಿಕ ಸ್ಥಿತ್ಯಂತರಗಳು, ಆಗಬೇಕಿರುವ ಸುಧಾರಣೆಗಳು ತಮಗೆ ಗೊತ್ತಾಗುತ್ತಿಲ್ಲ. ಈ ಎಲ್ಲಾ ವಿಷಯಗಳನ್ನು "ಅಮಲು" ಎಂದು ಹೇಳಿ ತಾವು ನಗಣ್ಯ ಮಾಡುತ್ತಿರುವುದು ಮತ್ತು ಆ ಮೂಲಕ ಅವೆಲ್ಲವನ್ನೂ ನಿರಾಕರಿಸುತ್ತಿರುವುದನ್ನು ಅಪಾಯಕಾರಿ ಎಂದು ಭಾವಿಸುತ್ತೇನೆ. ಸಾಹಿತ್ಯದ ಅಥವ ಲಘು-ಬರವಣಿಗೆಯ ಹೆಸರಿನಲ್ಲಿ ತೋರಿಸುವ ಸಾಮಾಜಿಕ ಬೇಜವಾಬ್ದಾರಿ ಎಂತಲೂ ಭಾವಿಸುತ್ತೇನೆ.

ನಮಸ್ಕಾರ,
ರವಿ...

May 18, 2009

ಲೋಕ್‌ ಸತ್ತಾದ ಜೇಪಿ, ಚಿತ್ರದುರ್ಗದ ಜನಾರ್ಧನ ಸ್ವಾಮಿ...

ಸರಿಯಾಗಿ ಎರಡು ವರ್ಷದ ಹಿಂದೆ ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಸುಮಾರು ನೂರು ಜನ ಸೇರಿದ್ದ ಸಭೆಯಲ್ಲಿ ಅವರಿಗೆ ಒಂದು ಪ್ರಶ್ನೆ ಕೇಳಿದೆ. ಅದು ನೇರವಾಗಿತ್ತು. ಅವರ ಇಡೀ ಆಶಾವಾದವನ್ನೆ, ಆದರ್ಶವನ್ನೆ, ವಾಸ್ತವದ ಹೆಸರಿನಲ್ಲಿ Undermine ಮಾಡುವ ರೀತಿಯಲ್ಲೂ ಇತ್ತು. ಆ ಪ್ರಶ್ನೆ ಚುಡಾಯಿಸುವ, ಹಂಗಿಸುವ ರೀತಿಯಲ್ಲಿ ಇರಬಾರದು ಎಂದುಕೊಂಡೆ ಸಾಕಷ್ಟು ಹುಷಾರಿನಲ್ಲಿ ಕೇಳಿದೆ. ಅದು ಅವರಿಗೆ ಮುಜಗರ ಉಂಟು ಮಾಡಿದ್ದನ್ನು ಅವರ ಉತ್ತರ ಹೇಳುತ್ತಿತ್ತು. ನನ್ನನ್ನು ಸ್ವಲ್ಪ ಜಾಡಿಸುವ ರೀತಿಯಲ್ಲಿ, ಒಳ್ಳೆಯದನ್ನು ಕಾಣದ ಅವಿವೇಕಿಯನ್ನು ಬೈಯ್ಯುವ, insult ಮಾಡುವ ರೀತಿಯಲ್ಲಿ ಉತ್ತರಿಸಿದರು. ನನಗೆ ಏನೇನೂ ಬೇಜಾರಾಗಲಿಲ್ಲ. ಅವರ ಆದರ್ಶ ಮತ್ತು ಆಶಾವಾದವನ್ನೆ ನಾನೂ ಹಂಚಿಕೊಳ್ಳುತ್ತಿದ್ದಿದ್ದರಿಂದ, ಅವರ ಒತ್ತಡಗಳು ಮತ್ತು ಕಾಳಜಿಗಳು ನನಗೂ ಅರ್ಥವಾಗಿದ್ದರಿಂದ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೆ ಸುಮ್ಮನಾದೆ. ಆ ಮನುಷ್ಯನ ಎಡೆಗಿನ ನನ್ನ ಗೌರವ ಕುಗ್ಗಲಿಲ್ಲ.

ಆತ ಆಂಧ್ರದ ಮಾಜಿ ಐಎಎಸ್ ಅಧಿಕಾರಿ ಮತ್ತು ಹಾಲಿ ಶಾಸಕ, ಲೋಕಸತ್ತಾ ಪಕ್ಷದ ಡಾ. ಜಯಪ್ರಕಾಶ್ ನಾರಾಯಣ್. "2009 ರಲ್ಲಿ ಆಂಧ್ರ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ನಮ್ಮ ಲೋಕಸತ್ತಾ ಪಕ್ಷ ಹಣ-ಹೆಂಡ ಹಂಚದೆ, ಜಾತಿ ರಾಜಕೀಯ ಮಾಡದೆ, ಚುನಾವಣಾ ಆಯೋಗ ನಿಗದಿಪಡಿಸಿರುವ ಮೊತ್ತವನ್ನಷ್ಟೆ ಖರ್ಚು ಮಾಡಿ, ಬಹುಮತ ಪಡೆದುಕೊಂಡು ಆಂಧ್ರದಲ್ಲಿ ಅಧಿಕಾರಕ್ಕೆ ಬರುತ್ತದೆ." ಎಂದು ಅವತ್ತು ಅವರು ಘೋಷಿಸಿದ್ದರು. ಅದಕ್ಕೆ ಪೂರಕವಾಗಿ ಮಾತನಾಡಿದ್ದರು. ಅಲ್ಲಿದ್ದ ಬಹುಪಾಲು ಜನ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದರು. ಅವರು ಮಾಡುತ್ತಿರುವ "ನಿಶ್ಯಬ್ದ ಕ್ರಾಂತಿ"ಯ ಬಗ್ಗೆ, ಆ ಪ್ರಾಮಾಣಿಕತೆ ಮತ್ತು ಆದರ್ಶದ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನನ್ನೊಬ್ಬನದೆ ಸ್ವಲ್ಪ ಉಲ್ಟಾ ಎನಿಸುವ ಪ್ರಶ್ನೆ. ನಾನು ಕೇಳಿದ್ದೂ ಸಹ, "ಆಂಧ್ರದ ಜನತೆ ವ್ಯಕ್ತಿ ಆರಾಧನೆಯನ್ನು ಇಷ್ಟಪಡುವ ಮನಸ್ಥಿತಿಯವರು. ಸಿನಿಮಾ ರಂಗದ ಜನರನ್ನು ವಿಪರೀತ ಆರಾಧಿಸುವವರು. ಅವರನ್ನೆ ಆದರ್ಶ ಮಾಡಿಕೊಂಡಂತವರು. ಇಂತಹುದರಲ್ಲಿ ಯಾವುದೆ ಸಾಂಸ್ಕೃತಿಕ ಹಿನ್ನೆಲೆಯಿಲ್ಲದವರು ಅಲ್ಲಿ ಜಯಿಸಲು ಸಾಧ್ಯವೆ? ಆದರ್ಶ ಮತ್ತು ಪ್ರಜಾಪ್ರಭುತ್ವದ ಮಾತುಗಳು ಅಲ್ಲಿ ನಿಜಕ್ಕೂ ಎಲ್ಲರನ್ನೂ ಮುಟ್ಟುತ್ತದೆಯೆ?" ಎಂಬ ರೀತಿಯಲ್ಲಿ ಇತ್ತು ಎನಿಸುತ್ತದೆ. ಅದಕ್ಕೇ ಅವರು ಸ್ವಲ್ಪ ಸಿಟ್ಟಾಗಿದ್ದು. ಸಿಡುಕಿದ್ದು.

ಆಂಧ್ರದ ಜನತೆ ಮತ್ತೆ ಕಾಂಗ್ರೆಸ್ ಅನ್ನು ಆರಿಸಿದ್ದಾರೆ. ಚಂದ್ರಬಾಬು ನಾಯ್ಡುವಿನ ಮಹಾಕೂಟ ಸೋಲೊಪ್ಪಿದೆ. "ಕಿಂಗ್-ಮೇಕರ್ ಅಲ್ಲ, 160 ಸ್ಥಾನಗಳು ನಮ್ಮವು. ನಾನೆ ಮುಂದಿನ CM," ಎಂದಿದ್ದ ಮುಠಾಮೇಸ್ತ್ರಿ ಚಿರಂಜೀವಿ ತಾವು ಹೇಳಿಕೊಂಡ ಸ್ಥಾನಗಳಲ್ಲಿ ಸುಮಾರು ಶೇ. 10 ಮಾತ್ರ ಗೆದ್ದಿದ್ದಾರೆ. ಎರಡು ವರ್ಷಗಳ ಹಿಂದೆ ಮುಂದಿನ ಸಲ ಆಂಧ್ರದಲ್ಲಿ ಕ್ರಾಂತಿಯಾಗುತ್ತದೆ, ಪ್ರಜಾಪ್ರಭುತ್ವದ ಪಟ್ಟಾಭಿಷೇಕವಾಗುತ್ತದೆ, ಆಗ ನಮ್ಮದೇ ಸರ್ಕಾರ, ಎಂದಿದ್ದ ಲೋಕ ಸತ್ತಾದ ಜಯಪ್ರಕಾಶ್ ನಾರಾಯಣ್ ಒಂದೇ ಒಂದು ಸ್ಥಾನ ಗೆದ್ದಿದ್ದಾರೆ.

ದೇಶದಾದ್ಯಂತ ನಡೆದ ಈ ಸಲದ ಚುನಾವಣೆಯಲ್ಲಿ ನನ್ನ ಮನಸ್ಸು ತುಂಬಿಬಂದಿರುವುದು ಆ ಒಂದೇ ಒಂದು ಸ್ಥಾನ ಪಡೆದ ಡಾ. ಜಯಪ್ರಕಾಶ್ ನಾರಾಯಣರ ವಿಜಯಕ್ಕೆ. ಬಹುಮತ ಪಡೆಯುತ್ತೇವೆ ಎಂದು ಘೋಷಿಸಿಕೊಂಡು ಓಡಾಡಿ ಒಂದೇ ಒಂದು ಸ್ಥಾನ ಪಡೆದ ಅವರ ಬಗ್ಗೆ ಕೀಟಲೆ ಮಾಡುವುದು, ಚುಡಾಯಿಸುವುದು, ಕೆಲವರಿಗೆ ಸಹಜವಾಗಬಹುದು. ಆದರೆ ನನ್ನಂತಹವರಿಗೆ ಅವರ ಕೆಲಸ ಮತ್ತು ಹೋರಾಟ ’ನಮ್ಮ ಹೋರಾಟ ಮತ್ತು ಸಾವು ಯಾವುದಕ್ಕಾಗಿರಬೇಕು?’ ಎನ್ನುವುದನ್ನು ಈ ಸಂದರ್ಭದಲ್ಲಿ ಮತ್ತೊಮ್ಮೆ ನೆನಪಿಸುತ್ತದೆ. ಇಡೀ ದೇಶದಾದ್ಯಂತ ಅತ್ಯಂತ ಸ್ವಚ್ಚ ಚುನಾವಣೆ ನಡೆಸಿ ಗೆದ್ದುಬಂದ ಡಾ. ಜಯಪ್ರಕಾಶ ನಾರಾಯಣರಿಗೆ ಅಭಿನಂದನೆಗಳು. ಅದಕ್ಕಿಂತ ಹೆಚ್ಚಾಗಿ, ಇಂತಹುದೊಂದನ್ನು ಸಾಧಿಸಿದ್ದಕ್ಕೆ ಭಾರತದ ಪ್ರಜೆಯಾಗಿ ಅವರಿಗೆ ಕೃತಜ್ಞತೆಗಳು.

[ಎರಡು ವರ್ಷಗಳ ಹಿಂದೆ ಬರೆದಿದ್ದ "ಆಂಧ್ರದ ಜಯಪ್ರಕಾಶ್ ನಾರಾಯಣ್" ಎಂಬ ಲೇಖನ ಇಲ್ಲಿದೆ. ಹಾಗೆಯೆ, ತಮ್ಮ ಗೆಲುವಿನ ನಂತರ ಡಾ. ಜೇಪಿ ಹೇಳಿರುವ ಮಾತುಗಳು ಇಲ್ಲಿವೆ. ಭಾರತದಲ್ಲಿ ಒಳ್ಳೆಯ ಪ್ರಬುದ್ಧ ಪ್ರಜಾಪ್ರಭುತ್ವ ಬಯಸುವವರಿಗೆ ಬೇಕಾದ ಮಾತುಗಳು.]



ಚಿತ್ರದುರ್ಗದ ಜನಾರ್ಧನ ಸ್ವಾಮಿ

ಈ ಸಲ ಕರ್ನಾಟಕದಿಂದ ಲೋಕಸಭೆಗೆ ನಿಂತಿದ್ದವರಲ್ಲಿ ಯಾರುಯಾರು ಎಷ್ಟು ಶ್ರೀಮಂತರು ಎಂಬ ಮಾಹಿತಿ ಕೊಡಲು ನಾವೆಲ್ಲರೂ ಅಶಕ್ತರು. ಎಲ್ಲಾ ಸ್ಪರ್ಧಿಗಳು ತಮ್ಮಲ್ಲಿರುವ ಬಿಳಿಹಣದ ಬಗ್ಗೆ, ಆಸ್ತಿಯ ಬಗ್ಗೆ , ನಾಮಪತ್ರ ಸಲ್ಲಿಸುವಾಗ Affidavit ಕೊಡಬೇಕು. ಅದರಲ್ಲಿ ಎಷ್ಟು ನಿಜವೊ, ಎಷ್ಟು ಸುಳ್ಳೊ ಹೇಳಲು ಬರುವುದಿಲ್ಲ. ಹಾಗಾಗಿ ನಾವು ಅದನ್ನು ನಂಬಲೂ ಬಾರದು. ಯಾರ ಬಗ್ಗೆ ಅಲ್ಲದಿದ್ದರೂ ಒಬ್ಬರ ಬಗ್ಗೆಯಂತೂ ಅವರು ಕೊಟ್ಟಿರುವ ಆಸ್ತಿಯೆ ಅವರ ಹತ್ತಿರ ಇರುವುದು ಎನ್ನುವುದನ್ನು ನಾನು ನಂಬಬಲ್ಲೆ. ಅದು ಚಿತ್ರದುರ್ಗದಿಂದ ಲೋಕಸಭೆಗೆ ಚುನಾಯಿತರಾಗಿರುವ ಜನಾರ್ಧನ ಸ್ವಾಮಿ.

ಕರ್ನಾಟಕದಿಂದ ಆರಿಸಿರುವ ಅಭ್ಯರ್ಥಿಗಳಲ್ಲಿ ಪ್ರಾಮಾಣಿಕವಾಗಿ ದುಡಿದ ಹಣವಿರುವ, ಹಾಗೆಯೆ ಕಮ್ಮಿ ದುಡ್ಡು ಖರ್ಚು ಮಾಡಿದ ಅಭ್ಯರ್ಥಿಗಳು ಬಹುಶಃ ಒಂದಿಬ್ಬರು ಇರಬಹುದು. ಅವರಲ್ಲಿ ಜನಾರ್ಧನ ಸ್ವಾಮಿಯೂ ಒಬ್ಬರಾಗಿರುತ್ತಾರೆ. ಚುನಾವಣೆಯಾಗುವುದಕ್ಕೆ ಮುನ್ನ ಕೇವಲ 2 ಅಥವ 3 ಸೈಟು ಇದ್ದ, ಕೇವಲ ಹತ್ತಿಪ್ಪತ್ತು ಲಕ್ಷ ದುಡ್ಡಿದ್ದ, ಬೆಂಗಳೂರಿನಲ್ಲಿ ಮನೆ ಕಟ್ಟಿಕೊಳ್ಳಲು ಪುರುಸೊತ್ತಿಲ್ಲದೆ ಬಾಡಿಗೆ ಮನೆಯಲ್ಲಿದ್ದ ಜನಾರ್ಧನ ಸ್ವಾಮಿ ಕರ್ನಾಟಕದ ಕ್ಷುದ್ರ ಚುನಾವಣೆ ವ್ಯವಸ್ಥೆಯಲ್ಲಿ ಗೆದ್ದಿರುವುದು ಸಾಮಾನ್ಯವೇನಲ್ಲ. ಕೆಲವು ಪತ್ರಕರ್ತ ಮಿತ್ರರು ಹೇಳಿದ ಹಾಗೆ ಈ ಚುನಾವಣೆಯಲ್ಲಿ ಇಡೀ ಕರ್ನಾಟಕದಲ್ಲಿ ಕಡಿಮೆ ಹಣದ ಸರಬರಾಜು ಕಂಡ ಕ್ಷೇತ್ರ ಚಿತ್ರದುರ್ಗವಂತೆ. ಹಾಗೆಂದು ಅಲ್ಲಿಯ ಚುನಾವಣೆ ಲಕ್ಷಗಳಲ್ಲಿ ಆಗಿಲ್ಲ. ಅಲ್ಲಿಯೂ ಕೋಟಿಗಳಲ್ಲಿ ನಡೆದಿದೆಯಂತೆ. ಚುನಾವಣಾ ಆಯೋಗ ನಿಗದಿಪಡಿಸಿರುವ ದುಡ್ಡಿಗಿಂತ ಹೆಚ್ಚಿಗೆ ವೆಚ್ಚ ಮಾಡುವ ಯಾವೊಂದು ಚುನಾವಣೆಯೂ ಅಕ್ರಮ ಮತ್ತು ಅನೈತಿಕ ಎಂದು ಭಾವಿಸುವವನು ನಾನು. ಹಾಗಿರುವಾಗ, ಮೇಲಿನ ಯಾವುದನ್ನು ಸರಿ, ಯಾವುದನ್ನು ತಪ್ಪು ಎನ್ನಬೇಕು? ನನ್ನಲ್ಲಿ ಗೊಂದಲಗಳಿಲ್ಲ.

ಜನಾರ್ಧನ ಸ್ವಾಮಿಯವರ ಜೊತೆಗಿನ ನನ್ನ ಸ್ನೇಹ ಸುಮಾರು ನಾಲ್ಕೈದು ವರ್ಷದ್ದು. ನಾನು ಎಂದೆಂದೂ ಒಪ್ಪಿಕೊಳ್ಳಲಾಗದ ಸಿದ್ಧಾಂತವನ್ನು ಹೊಂದಿರುವ ಪಕ್ಷದಿಂದ ಅವರು ಈಗ ಸಂಸದ. ಹಾಗಾಗಿ ನಮ್ಮ ಸ್ನೇಹ ಮತ್ತು ಮಾತುಕತೆಗಳು ಮುಂದುವರೆಯುತ್ತವೆ ಎಂದಾಗಲಿ ಅಥವ ಅವು ಮುಕ್ತವಾಗಿರುತ್ತವೆ ಎಂದಾಗಲಿ ನಾನು ಭಾವಿಸುತ್ತಿಲ್ಲ. ಕರ್ನಾಟಕದ ರಾಜಕೀಯ ಮತ್ತು ವ್ಯಕ್ತಿಗಳ ಬಗ್ಗೆ ಆಗಾಗ ಚರ್ಚಿಸುವ ಮತ್ತು ಬರೆಯುವ ನನಗೆ ಈಗ ಅವರೂ ಒಬ್ಬ ಜನಪ್ರತಿನಿಧಿ ಮತ್ತು ಅದೇ ಚರ್ಚೆಗೆ ಮತ್ತು ವಿಮರ್ಶೆಗೆ ಅರ್ಹರು. ಈಗಿನ ಕ್ಷುದ್ರ ರಾಜಕೀಯ ವ್ಯವಸ್ಥೆಯಲ್ಲಿ ಪ್ರಾಮಾಣಿಕ ಸ್ನೇಹಿತರು ಮತ್ತು ಆದರ್ಶ-ಪ್ರಾಮಾಣಿಕತೆ-ಬದ್ಧತೆಯ ಹೆಸರಿನಲ್ಲಿ ಬೆಂಬಲಿಸಬಹುದಾದ ರಾಜಕೀಯ ನಾಯಕರು ಇಲ್ಲದಿರುವಾಗ ಸ್ವಾಮಿ ನನ್ನನ್ನು ನಿರಾಶೆಗೊಳಿಸುವುದಿಲ್ಲ ಎಂದು ಭಾವಿಸುತ್ತೇನೆ. ನನ್ನ ಜೀವನದ ಅನೇಕ ತಿರುವುಗಳಲ್ಲಿ ನಾನು ತಪ್ಪುಮಾಡಲು ಅವಕಾಶವಿಲ್ಲದಂತೆ ಪರಿಸ್ಥಿತಿ ಅಥವ ಆ ದೇವರು ನನ್ನ ಕೈಹಿಡಿದಿದ್ದಿದೆ. ಕೆಲವೊಮ್ಮೆ ಸ್ನೇಹಿತರೂ. ಅದೇ ಉದ್ದೇಶದಿಂದ ನಾನು ಸ್ವಾಮಿಯವರ ಬಗ್ಗೆ ಈ ಟಿಪ್ಪಣಿ ಬರೆದಿದ್ದೇನೆ. ಜೀವನ ಅನೇಕ ತಿರುವುಗಳಿಂದ ಕೂಡಿದೆ. ಮತ್ತೆ ನಮ್ಮಿಬ್ಬರದೂ ಇನ್ನೊಮ್ಮೆ ಎಲ್ಲಿಯೋ ಸಂಧಿಸಬಹುದು. ಇಲ್ಲದಿರಬಹುದು. ಹೀಗೆ ಆಗುತ್ತದೆ ಅನ್ನುವುದಕ್ಕೆ ಇಲ್ಲಿ ಯಾರೂ ಕಾಲಜ್ಞಾನಿಗಳಿಲ್ಲ. ಜನಾರ್ಧನ ಸ್ವಾಮಿ, ನಿಮಗೆ ಅಭಿನಂದನೆಗಳು.

ಇಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುವ ಮತ್ತು ಉತ್ತರಿಸುವ ಮೂಲಕ ಈ ಟಿಪ್ಪಣಿ ಮುಗಿಸುತ್ತೇನೆ. ಜನಾರ್ಧನ ಸ್ವಾಮಿಯವರಿಗೆ ಚಿತ್ರದುರ್ಗದಿಂದ ಬಿಜೆಪಿ ಪಕ್ಷ ಸೀಟು ಕೊಟ್ಟಿರುವ ಸಂಗತಿ ನಾನು ಕಳೆದ ಮಾರ್ಚಿನಲ್ಲಿ ಬೆಂಗಳೂರಿನಲ್ಲಿದ್ದ ಸಮಯದಲ್ಲಿಯೆ ಘೋಷಣೆ ಆಯಿತು. ಆಗ ನಮ್ಮಿಬ್ಬರಿಗೂ ಪರಿಚಯ ಮತ್ತು ಸ್ನೇಹ ಇದ್ದುದ್ದನ್ನು ಬಲ್ಲ ಕೆಲ ಪ್ರಗತಿಪರ-ಜಾತ್ಯತೀತ ಮನೋಭಾವದ ಸ್ನೇಹಿತರು ನಾಲ್ಕೈದು ಕಡೆ ನನಗೆ ಈ ಪ್ರಶ್ನೆ ಕೇಳಿದರು. ನಾನು ಬಿಜೆಪಿ ಸಿದ್ಧಾಂತವನ್ನು ಒಪ್ಪದ್ದರಿಂದ ನನ್ನ ಸ್ನೇಹಿತರೂ ಹಾಗೆ ಇರುತ್ತಾರೆ ಎನ್ನುವ ನಂಬಿಕೆ ಅವರದಿತ್ತೇನೊ? "ಅವರು ಯಾಕೆ ಬಿಜೆಪಿಯಿಂದ ನಿಂತರು? ಕಾಂಗ್ರೆಸ್‌ನಿಂದ ನಿಲ್ಲಬಹುದಾಗಿತ್ತಲ್ಲ?" ಆಗೆಲ್ಲ ನಾನು ಅವರಿಗೆ ಹೇಳುತ್ತಿದ್ದ ಉತ್ತರ, "ಈ ತರಹ ಯಾರಾದರೂ ಬಂದು ಸೀಟು ಕೇಳಿದರೆ ನಮ್ಮ ಕರ್ನಾಟಕದ ಕಾಂಗ್ರೆಸ್‌ನಲ್ಲಿ ಅಂತಹವರಿಗೆ ಸೀಟು ಕೊಡುವ ಪರಿಸ್ಥಿತಿ ಇದೆಯೆ? ಅಂತಹವರ ಮಾತನ್ನು ಸಂಯಮದಿಂದ ಕೇಳುವ ಅಥವ ಅಂತಹವರನ್ನು ಬಳಸಿಕೊಳ್ಳುವ ಪರಿಸ್ಥಿತಿ ಅಥವ ಮನಸ್ಥಿತಿ ನಿಜಕ್ಕೂ ಅಲ್ಲಿದೆಯೆ?" ಜನಾರ್ಧನ ಸ್ವಾಮಿ ಎರಡು ವರ್ಷದ ಹಿಂದೆ ಭಾರತಕ್ಕೆ ಹಿಂದಿರುಗಿದಾಗ ಅವರ ಬಗ್ಗೆ ಒಂದು ಲೇಖನ ಬರೆದಿದ್ದೆ: "ಸ್ವಾಮಿ ಮತ್ತು ಮಹಮ್ಮದ್ ಹಾಗೂ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳು." ಅದರಲ್ಲಿ ಕನ್ನಡದ ಅತ್ಯುತ್ತಮ ವ್ಯಂಗ್ಯಚಿತ್ರಕಾರ ಪಿ. ಮಹಮ್ಮದರ ಬಗ್ಗೆ ಬರೆಯುತ್ತ, ಪ್ರಜಾವಾಣಿ ಬಿಟ್ಟರೆ ಬೇರೆ ಯಾವ ದಿನಪತ್ರಿಕೆಯಲ್ಲಿಯೂ ಮಹಮ್ಮದರ ಧೋರಣೆ, ಆಲೋಚನೆ ಮತ್ತು ಮುಕ್ತತೆಗೆ ಸರಿಹೊಂದುವ ಪರಿಸ್ಥಿತಿ ಇಲ್ಲ ಎಂದಿದ್ದೆ. ಅದನ್ನು ಮಹಮ್ಮದರನ್ನು ಮೆಚ್ಚಿಕೊಳ್ಳುವ ಹಾಗು ಸ್ವತಃ ವ್ಯಂಗ್ಯಚಿತ್ರಕಾರರಾಗಿರುವ ಸ್ವಾಮಿಯವರ ವಿಷಯಕ್ಕೂ ಹೇಳಬಹುದು. ನಾವೆಲ್ಲ ಕೋಮುವಾದಿ ಮತ್ತು ಪ್ರತಿಗಾಮಿ ಎಂದು ಸಕಾರಣವಾಗಿಯೆ ವಿರೋಧಿಸುವ ಬಿಜೆಪಿ ಬಿಟ್ಟರೆ ಬೇರೆ ಇನ್ಯಾವ ಪಕ್ಷದಲ್ಲೂ ಅವರಿಗೆ ಸ್ಥಾನ ಸಿಗುತ್ತಿರಲಿಲ್ಲ.

ಇನ್ನೊಂದು ಪ್ರಶ್ನೆಯ ಮೂಲಕ ಇದನ್ನು ಮುಗಿಸುತ್ತೇನೆ. "ಅಕಸ್ಮಾತ್ ಅಂತಹವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರೂ ಅವರನ್ನು ಇಷ್ಟು ಸುಲಭವಾಗಿ ಗೆಲ್ಲಿಸುವ ಪರಿಸ್ಥಿತಿ ಇದೆಯೆ? " ಇದನ್ನು ಬರೆಯುತ್ತಿರುವಾಗ ನನ್ನ ಮನಸ್ಸಿನಲ್ಲಿ ಕೃಷ್ಣ ಭೈರೇಗೌಡರು ಮತ್ತು ಅವರಿಗೆ ಲೀಡ್ ಕೊಡಿಸಲಾಗದ ಹಾಲಿ ಕಾಂಗ್ರೆಸ್ ಶಾಸಕರು, ಅಲ್ಲಿ ಟಿಕೆಟ್ ಪಡೆಯಲು ಬೇಕಾದ ಅರ್ಹತೆಗಳು, ಅಲ್ಲಿಯ "ರಾಜಕುಮಾರ"ರ "ಪ್ರಜಾ"ಪ್ರಭುತ್ವ, ಅಗಣಿತ ನಾಯಕರುಗಳು ಮತ್ತು ಸೈದ್ಧಾಂತಿಕ ಬದ್ಧತೆಯಿಲ್ಲದ ನಾಯಕ-ಕಾರ್ಯಕರ್ತ ಗಣ, ಎಲ್ಲವೂ ನನ್ನ ಮನಸ್ಸಿನಲ್ಲಿದೆ. ಕರ್ನಾಟಕದ ಜಾತ್ಯತೀತ ಪಕ್ಷಗಳ ಹಾಲಿ ಯೋಗ್ಯತೆಯನ್ನೂ ಇದು ತೋರಿಸುತ್ತದೆ. ಅಲ್ಲವೆ?