Jan 29, 2010

ಹಂಪಿ ವಿವಿ ತಂಡದಿಂದ ಪ್ರವಾಹೋತ್ತರ ವಿದ್ಯಮಾನಗಳ ವರದಿ....

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಉತ್ತರಕರ್ನಾಟಕಕ್ಕೆರಗಿದ ಪ್ರವಾಹ ಮತ್ತು ಅದು ಉಂಟುಮಾಡಿದ ಅಪಾರ ನೋವು-ನಷ್ಟ ಗೊತ್ತಿರುವುದೆ. ಲಕ್ಷಾಂತರ ಜನರ ಜೀವನ ಅಕ್ಷರಶಃ ಬೀದಿಗೆ ಬಿದ್ದ ಸಮಯ ಅದು. ನಾಡಿನ ಜನತೆಯೂ ಸಹಾನುಭೂತಿಯಿಂದ ಮತ್ತು ಸಹನಾಗರಿಕ ಜವಾಬ್ದಾರಿಯಿಂದ ನಡೆದುಕೊಂಡ ಗಳಿಗೆಯೂ ಹೌದು.

ನೈಸರ್ಗಿಗ ಪ್ರವಾಹ, ಕೆಲವು ಕಡೆಯ ಮಾನವಕೃತ ಅನೈಸರ್ಗಿಕ ಪ್ರವಾಹಗಳು (flash flodds), ಅದಕ್ಕೆ ಕಾರಣವಾದ ಅಂಶಗಳು, ಪರಿಹಾರ ಕಾರ್ಯಗಳು, ವಿವಿಧ ಸಮುದಾಯಗಳು ಜನ ಆ ಸಂದರ್ಭದಲ್ಲಿ ನಡೆದುಕೊಳ್ಳುವ ರೀತಿ, ದಲಿತರ ಮತ್ತು ಹೆಂಗಸರ ವಿಶೇಷ ಅನಾನುಕೂಲತೆಗಳು, ಇತ್ಯಾದಿಗಳ ಬಗ್ಗೆ ಹಂಪಿ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಕೈಗೊಳ್ಳಲಾದ ಅಧ್ಯಯನದ ವರದಿ ಇತ್ತೀಚಿಗೆ ಕಣ್ಣಿಗೆ ಬಿತ್ತು. ಹೀಗೆಯೆ ಕನ್ನಡದ ಬ್ಲಾಗುಗಳನ್ನು ನೋಡುತ್ತಿದ್ದಾಗ ಕಾಣಿಸಿದ "ನೀಲಿಗ್ಯಾನ" (http://hulimurthygyaana.blogspot.com) ಎಂಬ ಬ್ಲಾಗಿನಲ್ಲಿ ಆ ವರದಿ ಲಭ್ಯವಿದೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ಹಂಪಿಯ ವಿಶ್ವವಿದ್ಯಾಲಯಲಕ್ಕೆ ಹೋಗಿದ್ದಾಗ ಅಲ್ಲಿನ ಕುಲಪತಿಗಳಾದಿಯಾಗಿ ಅಲ್ಲಿಯ ಹಲವು ಅಧ್ಯಾಪಕರಿಗೆ ವಿಶ್ವವಿದ್ಯಾಲಯದ ಪ್ರಕಟಣೆಗಳನ್ನು, ಥೀಸೀಸ್‌ಗಳನ್ನು, ಅಧ್ಯಯನ ವರದಿಗಳನ್ನು ವಿಕಿಪೀಡಿಯಾ ಮಾದರಿಯಲ್ಲಿ ಅಂತರ್ಜಾಲದಲ್ಲಿ ಪ್ರಕಟಿಸಿ ಎಂದು ಕೋರಿದ್ದೆ. ಕೋರಿದ್ದೆ ಎನ್ನುವುದಕ್ಕಿಂತ ಒತ್ತಾಯಪಡಿಸಿದ್ದೆ ಮತ್ತು ಅದರ ಪರವಾಗಿ ವಾದ ಮಂಡಿಸಿದ್ದೆ ಎನ್ನುವುದೆ ಸೂಕ್ತ. ವಿಶ್ವವಿದ್ಯಾಲಯವೊಂದು ಇಂತಹ ವೆಬ್‌ಸೈಟ್ ನಡೆಸಲು ಏನೇನೂ ಖರ್ಚು ಬರುವುದಿಲ್ಲ. ಅವರಲ್ಲಿ ಈಗ ಲಭ್ಯವಿರುವ ಸೌಲಭ್ಯವನ್ನೆ ಬಳಸಿಕೊಂಡು Drupal, Wordpress ನಂತಹ ಮುಕ್ತ ತಂತ್ರಾಂಶಗಳನ್ನು ಬಳಸಿಕೊಂಡು ಒಂದೆರಡು ವಾರದಲ್ಲಿ ನಿರ್ಮಿಸಬಹುದು. ಅಲ್ಲಿಯ ವಿಶ್ವವಿದ್ಯಾಲಯದಲ್ಲಿ ಇಂಟರ್ನೆಟ್ ಸೌಲಭ್ಯವೂ, ಮತ್ತು ಕಂಪ್ಯೂಟರ್‍ಗಳ ಲಭ್ಯತೆಯೂ ಸಾಕಷ್ಟು ಉತ್ತಮವಾಗಿಯೆ ಇದೆ. ಅದರೆ, ಆ ವಿಶ್ವವಿದ್ಯಾಲಯ ಅಂತರ್ಜಾಲದಲ್ಲೂ ಇಂತಹುದೊಂದು ಕನ್ನಡದ ಕೆಲಸ ಮಾಡಲು ಎಂದು ಸಾಧ್ಯವೊ ಗೊತ್ತಿಲ್ಲ.

ಈಗ ಅದೇ ವಿವಿಯ ಅಧ್ಯಯನ ತಂಡವೊಂದರ ವರದಿ ಓದಿ ಮತ್ತೆ ಅದನ್ನೆಲ್ಲ ನೆನಸಿಕೊಂಡು ಬೇಸರವಾಗುತ್ತಿದೆ. ನೀಲಿಗ್ಯಾನ ಬ್ಲಾಗಿನ ಹುಲಿಕುಂಟೆ ಮೂರ್ತಿ ಎನ್ನುವವರು ಇಂತಹ ವರದಿಯೊಂದನ್ನು ಅಂತರ್ಜಾಲದಲ್ಲಿ ಪ್ರಕಟಿಸಿದ್ದಕ್ಕಾಗಿಯೆ ವಿಶೇಷ ಅಭಿನಂದನೆಗಳಿಗೆ ಅರ್ಹರು.(ಅವರನ್ನು ಅಭಿನಂದಿಸುತ್ತಲೆ ಆ ಬ್ಲಾಗ್‌ಪೋಸ್ಟಿನ ತಾಂತ್ರಿಕ ಅಡಚಣೆಯ ಬಗ್ಗೆ ಒಂದು ಮಾತು. ಆ ವರದಿಯ ಪೋಸ್ಟ್ ಬರಹ ಫಾಂಟ್‌ನಲ್ಲಿದೆ. ತಮ್ಮ ಕಂಪ್ಯೂಟರ್‌ನಲ್ಲಿ ಬರಹ ಇಲ್ಲದ ಜನ ಅದನ್ನು ಓದಲಾರರು. ಬಹುಶಃ ಮೂರ್ತಿಯವರಿಗೆ ಇದು ಗೊತ್ತಿಲ್ಲದೆ ಇರಬಹುದು. ಗೊತ್ತಿದ್ದರೂ ಅದನ್ನು ಯೂನಿಕೋಡ್‌ಗೆ ಕನ್ವರ್ಟ್ ಮಾಡುವ ರೀತಿ ಗೊತ್ತಿಲ್ಲದೆ ಇರಬಹುದು. ಹೇಗಾದರೂ ಮಾಡಿ ಅದನ್ನು ಗೊತ್ತುಮಾಡಿಕೊಂಡು ಅವರು ಆ ವರದಿಯನ್ನು ಯೂನಿಕೋಡ್‌ಗೆ ಬದಲಾಯಿಸಲು ಈ ಮೂಲಕ ಒತ್ತಾಯಿಸುತ್ತೇನೆ. ಬರಹ ಕನ್ವರ್ಟ್ ನಲ್ಲಿ ಅದು ಅರ್ಧ ನಿಮಿಷದ ಕೆಲಸ.)

ಬರಹ ಫಾಂಟ್ಸ್ ಇರುವ ಓದುಗರು ಆ ವರದಿಯನ್ನು ಇಲ್ಲಿ ಓದಬಹುದು:
http://hulimurthygyaana.blogspot.com/2010/01/ege-aa-ajuaaa-aavaau-ajaga-czsaaaiaaa.html

ಬಹಳ ಗಂಭೀರವಾದ ಮತ್ತು ಮೌಲಿಕವಾದ ಅಧ್ಯಯನ. ವರದಿ ಅಕಾಡೆಮಿಕ್ ಪರಿಭಾಷೆಯಲ್ಲಿದ್ದರೂ ಓದಲು ಸರಳವಾಗಿಯೆ ಇದೆ. ಇಂತಹುದೊಂದು ಕ್ಷೇತ್ರಕಾರ್ಯವನ್ನು ಮಾಡಿದ ಮತ್ತು ಅದನ್ನು ದಾಖಲಿಸಿದ ತಂಡ ಅಭಿನಂದನಾರ್ಹ. ಆದರೆ, ಇಂತಹುದೊಂದು ಕೆಲಸ ವಿವಿಗಳು ಮಾಡುತ್ತವೆ ಎನ್ನುವುದೆ ಎಷ್ಟೋ ಜನಕ್ಕೆ, ಬರಹಗಾರರಿಗೆ, ಪತ್ರಕರ್ತರಿಗೆ, ವಿದ್ಯಾರ್ಥಿಗಳಿಗೆ, ಗೊತ್ತಾಗುವುದಿಲ್ಲ. ಅವರಿಗೆ ಗೊತ್ತಾಗದಿದ್ದರೆ ಇಂತಹ ವರದಿಗಳ ಪ್ರಯೋಜನವಾದರೂ ಏನು? ಇಂತಹ ವಿಷಯ ಮತ್ತು ಅಂಕಿಅಂಶಗಳು ವಿವಿ ವಿಭಾಗಗಳ ಖಾಸಗಿ ಪ್ರಚಾರಕ್ಕಷ್ಟೇ ಸೀಮಿತವಾಗಿಬಿಡಬಾರದು. ಇದನ್ನು ಗಮನದಲ್ಲಿಟ್ಟುಕೊಂಡೆ ನಾನು ಅಲ್ಲಿಯ ಕುಲಪತಿಗಳಿಗೆ ಮತ್ತು ಅಧ್ಯಾಪಕರಿಗೆ ಅವರ ಅಧ್ಯಯನ ಮತ್ತು ಸಂಶೋಧನೆಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಲು ಕೋರಿದ್ದು. ಆದರೆ....

ನನಗೆ ಈ ಹುಲಿಕುಂಟೆ ಮೂರ್ತಿಯವರ ಪರಿಚಯ ಇಲ್ಲ. ಆದರೆ ಅವರ ಬ್ಲಾಗಿನಲ್ಲಿ ಒಂದಷ್ಟು ಪದ್ಯಗಳು, ಒಳ್ಳೆಯ ಲೇಖನಗಳೂ ಇವೆ. ಮೇಲಿನ ವರದಿಯೊಂದಿಗೆ ಅವನ್ನೂ ಗಮನಿಸಿ. ಹಲವಾರು ಬರಹಗಳು ಯೂನಿಕೊಡ್‌ನಲ್ಲಿಯೆ ಇವೆ.

Jan 19, 2010

ಕನ್ನಡ ಚಿತ್ರರಂಗ 75 - ರೇಡಿಯೋ ಕಾರ್ಯಕ್ರಮ: ಮಧುಕಾಂತ್, ಪುಟ್ಟಸ್ವಾಮಿ

ಗೆಳೆಯ ಮಧುಕಾಂತ್ ಇಲ್ಲಿ ನಾಳೆ ಒಂದು ಒಳ್ಳೆಯ ರೇಡಿಯೊ ಕಾರ್ಯಕ್ರಮ ಕೊಡುತ್ತಿದ್ದಾರೆ. ಅದು ಕನ್ನಡ ಚಿತ್ರರಂಗದ 75 ವರ್ಷಗಳ ಕುರಿತಂತೆ.

ಲೇಖಕ ಕೆ. ಪುಟ್ಟಸ್ವಾಮಿಯವರು "ವಿಕ್ರಾಂತ ಕರ್ನಾಟಕ"ದಲ್ಲಿ ಕನ್ನಡ ಚಿತ್ರರಂಗದ 75 ವರ್ಷಗಳ ಇತಿಹಾಸವನ್ನು ಕುರಿತು (ಏಪ್ರಿಲ್ 18, 2008 ರ ಸಂಚಿಕೆಯಿಂದ ಜುಲೈ 31,2009 ರ ಸಂಚಿಕೆಯ ತನಕ) ಬರೆದಿದ್ದರು. ಅದು ಕನ್ನಡ ಚಿತ್ರರಂಗದ ಬಗೆಗೆ ಮಾತ್ರವಲ್ಲದೆ, ಆ ಮೂಲಕ ಕನ್ನಡದ ಒಂದು ಕಾಲಘಟ್ಟದ ಸಾಂಸ್ಕೃತಿಕ ಚರಿತ್ರೆಯ ಕುರಿತಾದ ಅಪೂರ್ವ ಲೇಖನ ಸರಣಿಯೂ ಆಗಿತ್ತು. ಕನ್ನಡ ಚಿತ್ರರಂಗದ ಇತಿಹಾಸವನ್ನು ಅಭ್ಯಸಿಸುವವರಿಗೆ ಇನ್ನು ಮುಂದಕ್ಕೆ ಎಲ್ಲಾ ರೀತಿಯಿಂದಲೂ ಆಕರ ಮೂಲವಾಗುವ ಬರಹಗಳು ಅವು. ಇತ್ತೀಚೆಗೆ ತಾನೆ ಈ ಲೇಖನಗಳು "ಸಿನಿಮಾ ಯಾನ (ಕನ್ನಡ ಚಿತ್ರರಂಗ 75 : ಒಂದು ಫ್ಲಾಷ್‌ಬ್ಯಾಕ್)" ಎಂಬ ಪುಸ್ತಕ ರೂಪದಲ್ಲಿ ಬಂದಿದೆ.




ಈ ಪುಸ್ತಕಕ್ಕೆ ಎನ್.ಎಸ್. ಶಂಕರ್ ಬರೆದಿರುವ ಮುನ್ನುಡಿ ಇಲ್ಲಿದೆ.

"ಸಿನೆಮಾ ಯಾನ" ಬಿಡುಗಡೆಯ ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ.

ಈ ಪುಸ್ತಕದ ಹಿನ್ನೆಲೆಯಲ್ಲಿ, ಪುಟ್ಟಸ್ವಾಮಿಯವರೊಂದಿಗೆ ನೇರಪ್ರಸಾರದ ಸಂದರ್ಶನ ಮತ್ತು ಮಾತುಕತೆಯನ್ನು ಮಧುಕಾಂತ್ ತಮ್ಮ ನಾಳೆಯ ರೇಡಿಯೊ ಕಾರ್ಯಕ್ರಮದಲ್ಲಿ ನಡೆಸಿಕೊಡುತ್ತಿದ್ದಾರೆ. ಬೇ ಏರಿಯಾದಲ್ಲಿರುವ ಕೇಳುಗರು ಈ ಕಾರ್ಯಕ್ರಮವನ್ನು 90.1 FM ತರಂಗಾಂತರದಲ್ಲಿ ಕೇಳಬಹುದು. ಜೊತೆಗೆ, ಇಂಟರ್ನೆಟ್ ಸೌಲಭ್ಯ ಇರುವ ಎಲ್ಲರೂ ಎಲ್ಲಿಂದಲಾದರೂ ತಮ್ಮ ಕಂಪ್ಯೂಟರ್ ಮೂಲಕ ಆಲಿಸಬಹುದು. ತಮ್ಮ ಅಭಿಪ್ರಾಯಗಳನ್ನೂ ಈ ನೇರಪ್ರಸಾರದಲ್ಲಿ ಹಂಚಿಕೊಳ್ಳಬಹುದು.
ದಿನಾಂಕ: ಜನವರಿ 20, 2010 - ಬುಧವಾರ
ಸಮಯ: 7.30 AM to 8.30 AM (PST) / ರಾತ್ರಿ 9 ರಿಂದ 10 (ಭಾರತೀಯ ಕಾಲಮಾನ)

ಹೆಚ್ಚಿನ ವಿವರಗಳು ಮಧುಕಾಂತ್‌ರ ಬ್ಲಾಗ್‌ನಲ್ಲಿ ಇವೆ.

ಅಂದ ಹಾಗೆ, ಇಲ್ಲಿಯವರೆಗೆ ಇಂತಹ 19 ಕನ್ನಡ ಕಾರ್ಯಕ್ರಮಗಳನ್ನು ಕೊಟ್ಟಿರುವ ಮಧುಕಾಂತರಿಗೆ ಇದು 20 ನೇ ಕಾರ್ಯಕ್ರಮ. ಅವರ ಹಿಂದಿನ ಎಲ್ಲಾ ಕಾರ್ಯಕ್ರಮಗಳೂ ಈ ಕೆಳಗಿನ ಕೊಂಡಿಯಲ್ಲಿ ಕೇಳಲು ಲಭ್ಯವಿದೆ.
http://www.itsdiff.com/Kannada.html

ತಮ್ಮದೆ ನೆಲೆಯಲ್ಲಿ ಒಂದು ಒಳ್ಳೆಯ ಆರೋಗ್ಯವಂತ ಸಾಂಸ್ಕತಿಕ ಸಂದರ್ಭವನ್ನು ಸೃಷ್ಟಿಸಿಕೊಳ್ಳಲು ತವಕಿಸುವ ಮಧುಕಾಂತರಂತಹ ಪ್ರಯತ್ನಗಳು ಗಮನಾರ್ಹ ಮತ್ತು ಪ್ರಶಂಸನೀಯ.

Dec 12, 2009

Invictus - ರಾಜಕಾರಣಿಗಳಿಗೆ, ಸಮಾಜ ಚಳವಳಿಗಾರರಿಗೆ ಒಂದು ಪಾಠ...

Invictus (ಅಜೇಯ) - ಸಿನಿಮಾವನ್ನು ನೋಡಿಬಂದ ನಂತರ ಈ ಚಿಕ್ಕ ಟಿಪ್ಪಣಿ ಬರೆಯಬೇಕೆನೆಸಿ ಬರೆಯುತ್ತಿದ್ದೇನೆ.

ಕ್ಲಿಂಟ್ ಈಸ್ಟ್‌ವುಡ್ ಹಾಲಿವುಡ್ ಚಿತ್ರಜಗತ್ತಿನಲ್ಲಿ unbelievable ಎನ್ನಬಹುದಾದಷ್ಟು ಮಾರ್ಪಾಡುಗಳನ್ನು ಪಡೆದ ನಟ. Old West ಸಿನೆಮಾಗಳಲ್ಲಿ ಅನಾಮಿಕ gunslinger ಪಾತ್ರಗಳಲ್ಲಿ, Dirty Harry ಪೋಲಿಸ್ ಪಾತ್ರಗಳಲ್ಲಿ ನಟಿಸಿದ್ದ ಈತನಿಗೆ ಈಗ 79 ವರ್ಷ. ಆದರೂ ವರ್ಷಕ್ಕೆ ಒಂದಾದರೂ ಆಸ್ಕರ್ ಪ್ರಶಸ್ತಿಗೆ ಅರ್ಹವಾದ ಸಿನೆಮಾ ನಿರ್ದೇಶಿಸುತ್ತಿದ್ದಾನೆ; ನಟಿಸುತ್ತಿದ್ದಾನೆ. ಈ ವರ್ಷದ ಆತನ ಚಿತ್ರ Invictus. ಏಕಕಾಲದಲ್ಲಿ ಒಂದು ಉತ್ತಮ ಕ್ರೀಡಾ ಸಿನೆಮಾವೂ, ಚಾರಿತ್ರಿಕ ಸಿನೆಮಾವೂ, ಸ್ಫೂರ್ತಿದಾಯಕ ಸಿನೆಮಾವೂ ಆಗಿರುವ ಇದು ಈ ವರ್ಷ ಒಂದೆರೆಡು ಆಸ್ಕರ್‌ಗಳನ್ನು ಗಳಿಸಲಿದೆ.

ಇರಲಿ. ಇಲ್ಲಿ ನಾನು ಮುಖ್ಯವಾಗಿ ಟಿಪ್ಪಣಿ ಮಾಡಬಯಸಿದ್ದು, ಇದು ಹೇಗೆ ನಮ್ಮ ರಾಜಕಾರಣಿಗಳಿಗೆ, ಸಮಾಜ ಕಾರ್ಯಕರ್ತರಿಗೆ ಪಾಠವಾಗಬಲ್ಲದು ಎನ್ನುವ ವಿಚಾರಕ್ಕೆ. ಆಡಳಿತ ಎಂದರೆ ಅಧಿಕಾರ ಚಲಾಯಿಸುವ, ಹೊಣೆಗಾರಿಕೆ ಇಲ್ಲದೆ ಜನರ ದುಡ್ಡು ಖರ್ಚು ಮಾಡುವ, ರಸ್ತೆ-ಕಟ್ಟಡಗಳ ನಿರ್ಮಾಣವನ್ನೆ ಅಭಿವೃದ್ದಿ ಎಂದು ಭಾವಿಸಿರುವ, ಮತ್ತು ಜನರನ್ನು ನೈತಿಕವಾಗಿ, ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿ ಮಹತ್ತಿಗೆ ಏರಿಸುವ ಉಸಾಬರಿ ಇಲ್ಲದ ಕೆಲಸ ಎಂದೆ ಭಾವಿಸಿರುವ ನಮ್ಮ ರಾಜ್ಯದ ಪರಿಸರದಲ್ಲಿ ಒಬ್ಬ ಉತ್ತಮ ರಾಜನೀತಿಜ್ಞನ ನಾಯಕತ್ವದ ಗುಣ ಏನು ಎಂದು ಅರಿಯಲು ನಮ್ಮ ರಾಜಕಾರಣಿಗಳು ಈ ಸಿನೆಮಾ ನೊಡಬೇಕು. ಹಾಗೆಯೆ, ಜನರಲ್ಲಿ ನಾನಾ ವಿಚಾರಗಳಲ್ಲಿ ಜಾಗೃತಿ ಮೂಡಿಸುವ ಮತ್ತು ವಿವಿಧ ವರ್ಗಗಳನ್ನು ಒಂದು ನಿಶ್ಚಿತ ಸಾಧನೆಯೆಡೆಗೆ ಕೊಂಡೊಯ್ಯಲು ಶ್ರಮಿಸುವ ಸಮಾಜ ಚಳವಳಿಕಾರರಿಗೆ ಮತ್ತು ಕಾರ್ಯಕರ್ತರಿಗೆ ರೂಪಕಗಳ ಬಲಶಾಲಿ ಮಹತ್ವ ಪರಿಚಯವಾಗಲು ಈ ಸಮಕಾಲೀನ ಕತೆ ಸಹಾಯ ಮಾಡುತ್ತದೆ. ನೆಲ್ಸನ್ ಮಂಡೇಲಾನನ್ನು ನಮ್ಮಲ್ಲಿಯ ಒಬ್ಬನನ್ನಾಗಿ ಮಾಡಿಕೊಂಡ ದೇಶ ನಮ್ಮದು. ಆತ ಭಾರತ ರತ್ನ. ಆತ ಇವತ್ತಿನ ಗಾಂಧಿ. ತನ್ನ ದೇಶದ ಒಡೆದ ಮನಸ್ಸುಗಳನ್ನು ಬೆಸೆಯಲು ಆತ ಬಳಸಿಕೊಳ್ಳುವ ಮತ್ತು ಸೃಷ್ಟಿಸಿಕೊಳ್ಳುವ ಅವಕಾಶಗಳನ್ನು ತಿಳಿದುಕೊಳ್ಳಲು ನಮಗೆ ಈ ಸಿನೆಮಾದಿಂದ ಸಾಧ್ಯ. ಎಲ್ಲಾ ದೇಶದ ಆಡಳಿತಕಾರರಿಗೂ ಇದೊಂದು ಕಲಿಕೆಯ ಅಧ್ಯಾಯ.