(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 27, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)
ಆಮಿಷ್ ಜನರ ಹಿನ್ನೆಲೆ:
17 ನೆ ಶತಮಾನದಲ್ಲಿ ಜೇಕಬ್ ಅಮ್ಮನ್‌ನಿಂದ ಯೋರೋಪ್‌ನಲ್ಲಿ ಆರಂಭವಾದದ್ದು ಅಮಿಷ್ ಚಳವಳಿ. ಇದಕ್ಕೆ ಮೂಲ ಮೆನ್ನೊನೈಟ್ಸ್ ಎಂಬ ಮತ್ತೊಂದು ಕ್ರಿಶ್ಚಿಯನ್ ಚಳವಳಿ. ಮೆನ್ನೊನೈಟ್ಸ್ ಆಧುನಿಕರಣಗೊಳ್ಳುತ್ತಿದೆ ಎನ್ನಿಸಿದಾಗ ಮತ್ತೆ ಅದರ ಮೂಲ ಕಟ್ಟುಪಾಡುಗಳನ್ನು ಯಾವುದೇ ರಾಜಿಯಿಲ್ಲದೆ ಉಳಿಸಿಕೊಳ್ಳಬೇಕು ಎಂದು ಹುಟ್ಟಿದ್ದು ಆಮಿಷ್ ಗುಂಪು. 18 ನೆ ಶತಮಾನದ ಆರಂಭದಲ್ಲಿ ಕೆಲವು ಆಮಿಷ್ ಜನ ಅಮೇರಿಕಕ್ಕೆ ವಲಸೆ ಬಂದರು. ಹೀಗೆ ಬಂದವರು ಈಗ ಈ ದೇಶದ 22 ರಾಜ್ಯಗಳಲ್ಲಿ ಅಲ್ಲಲ್ಲಿ ವಾಸಿಸುತ್ತಿದ್ದಾರೆ. ಅಧಿಕೃತವಾಗಿ ಅವರ ಸಂಖ್ಯೆ ಎಷ್ಟು ಎಂದು ಗೊತ್ತಾಗದಿದ್ದರೂ ಓಲ್ಡ್ ಆರ್ಡರ್ ಆಮಿಷ್ ಮೆನ್ನೊನೈಟ್ ಚರ್ಚ್‌ನ ಸದಸ್ಯರ ಸಂಖ್ಯೆ 1,80,000 ಎಂದು ಅಂದಾಜು. ಅದರಲ್ಲಿ 45000 ಆಮಿಷರು ಒಹಾಯೊ ರಾಜ್ಯವೊಂದರಲ್ಲೆ ಇದ್ದಾರೆ. ಸುಮಾರು ೧೫೦೦ ಜನ ಕೆನಡಾದಲ್ಲಿ ಇದ್ದಾರೆ. (ಬೇರೆಬೇರೆ ವೆಬ್‌ಸೈಟ್‌ಗಳು ಬೇರೆಬೇರೆ ಜನಸಂಖ್ಯೆ ನಮೂದಿಸಿದರೂ ಎಲ್ಲರೂ ಕೊಡುವುದು ಲಕ್ಷಕ್ಕಿಂತ ಹೆಚ್ಚು ಮತ್ತು ಎರಡು ಲಕ್ಷಕ್ಕಿಂತ ಕಮ್ಮಿಯ ಸಂಖ್ಯೆ.) ಬಹುಪಾಲು ಎಲ್ಲಾ ಆಮಿಷರು ಹುಟ್ಟಿನಿಂದಲೆ ಆಮಿಷ್. ಹೊರಗಿನಿಂದ ಆಮಿಷ್ ಚರ್ಚಿಗೆ ಮತಾಂತರವಾದವರು ಬಹಳ ವಿರಳ. ಜೊತೆಗೆ ಆಮಿಷ್‌ನಿಂದ ಹೊರಗೆ ವಿವಾಹವಾಗುವುದೂ ನಿಷಿದ್ಧ. ಹಾಗಾಗಿ, ಯಾವುದೇ ವರ್ಣಸಂಕರವಾಗದೆ ಕೆಲವು ಆಮಿಷ್ ಗುಂಪುಗಳಲ್ಲಿ ಸೀಮಿತ ಜೀನ್‌ಗುಂಪು ಇರುವುದರಿಂದಾಗಿ ಕೆಲವು ವಂಶಪಾರಂಪರಿಕ ನ್ಯೂನತೆಗಳೊಂದಿಗೆ ಮಕ್ಕಳು ಜನಿಸುತ್ತಿದ್ದಾರೆ ಎಂದು ಅಂದಾಜು.
ಅವರ ಕೆಲವು ನಂಬಿಕೆಗಳು, ಜೀವನರೀತಿ:
- ಮದುವೆಯಾಗದ ಆಮಿಷ್ ಗಂಡಸರು ಮೀಸೆಗಡ್ಡಗಳಿಲ್ಲದಂತೆ ಮುಖಕ್ಷೌರ ಮಾಡಿಕೊಂಡಿರುತ್ತಾರೆ. ಮದುವೆಯಾದ ನಂತರ ಕೇವಲ ಗಡ್ಡ ಮಾತ್ರ ಬಿಡುತ್ತಾರೆ. ಮೀಸೆ ಬಿಡುವುದು ನಿಷಿದ್ಧ. ಕಾರಣ, ಮೀಸೆ ಶೌರ್ಯ, ಅಹಂಕಾರ, ಹೆಮ್ಮೆ, ಸೈನ್ಯ, ಯುದ್ಧ ಮುಂತಾದಕ್ಕೆ ಸಂಕೇತ ಎಂದು!
- ಬೈಬಲ್‌ನಲ್ಲಿ ಹೇಳಿರುವ ಮೂರು ಆದೇಶಗಳು ಇವರಿಗೆ ಬಹಳ ಪವಿತ್ರ. ನಾಸ್ತಿಕರ ಜೊತೆ ಬೆರೆಯಬೇಡ. ನ್ಯಾಯವಂತಿಕೆ ಮತ್ತು ಕೃತ್ರಿಮ ಅದು ಹೇಗೆ ಸಮಾನವಾಗುತ್ತದೆ? ಕತ್ತಲಿನೊಂದಿಗೆ ಬೆಳಕಿಗೆ ಅದೆಂತಹ ಸ್ನೇಹವಿರಲು ಸಾಧ್ಯ? ದೇವರು ಹೇಳಿದ, ಅವರಿಂದ ಹೊರಗೆ ಬಂದು ನೀನು ಪ್ರತ್ಯೇಕವಾಗಿ ಇರು.ಪ್ರಪಂಚವನ್ನು ಅನುಸರಿಸಬೇಡ. ಆದರೆ ಒಳ್ಳೆಯದು, ಸ್ವೀಕಾರಾರ್ಹವಾದದ್ದು, ಪರಿಪೂರ್ಣವಾದ್ದು ದೇವರ ಇಚ್ಛೆ ಎಂಬುದರತ್ತ ನಿನ್ನ ಮನಸ್ಸನ್ನು ನವೀಕರಿಸಿಕೊಳ್ಳುತ್ತಿರು
- ಬೈಬಲ್‌ನ ಪ್ರಪಂಚವನ್ನು ಅನುಸರಿಸಬೇಡ ಎನ್ನುವುದರ ಆಧಾರದ ಮೇಲೆ, ವಿದ್ಯುತ್‌ಶಕ್ತಿ ಹೊರಜಗತ್ತಿಗೆ ಸಂಪರ್ಕ ಕಲ್ಪಿಸುತ್ತದೆ ಎನ್ನುವ ಕಾರಣದಿಂದ 1919 ರಲ್ಲಿ ಆಮಿಷ್ ಹಿರಿಯರು ವಿದ್ಯುತ್ ಬಳಕೆಯನ್ನು ನಿಷೇಧಿಸಿದರು. ವಿದ್ಯುತ್‌ನ ಬಳಕೆಯಿಂದ ಹೊರಜಗತ್ತಿಗೆ ಸುಲಭ ಸಂಪರ್ಕ ಏರ್ಪಟ್ಟು ಅದು ತಮ್ಮ ಚರ್ಚಿನ ಮತ್ತು ಕೌಟುಂಬಿಕ ಜೀವನ ಹದಗೆಡಲು ಕಾರಣವಾಗಬಹುದು ಎನ್ನುವುದು ಅವರ ಭಯವಾಗಿತ್ತು.
- ಎರಡನೆ ದೈವಾಜ್ಞೆ, ನೀನು ಇಲ್ಲಿ ಮೇಲಿನ ಸ್ವರ್ಗದಲ್ಲಿನ, ಅಥವ ಕೆಳಗಿನ ಭೂಮಿಯ ಮೇಲಿನ, ಅಥವ ಭೂಮಿಯ ಕೆಳಗಿನ ನೀರಿನಲ್ಲಿರುವ ಯಾವುದನ್ನೇ ಆಗಲಿ ಮತ್ತು ಯಾವುದೇ ತರಹದ ಪ್ರತಿಮೆಯನ್ನಾಗಲಿ ನಿನಗೆ ನೀನು ಮಾಡಿಕೊಳ್ಳಕೂಡದುಎಂದು ಇರುವುದರಿಂದ ಅವರು ತಮ್ಮ ಯಾವುದೇ ಛಾಯಾಚಿತ್ರ ತೆಗೆಸಿಕೊಳ್ಳುವುದಿಲ್ಲ. ಜೊತೆಗೆ ತಮ್ಮ ಮಕ್ಕಳಿಗೆ ತರುವ ಗೊಂಬೆಗಳಿಗೂ ತಲೆ ಇರುವುದಿಲ್ಲ. ಇವೆಲ್ಲ ಮಕ್ಕಳು ಚಿಕ್ಕಂದಿನಿಂದಲೆ ಪ್ರತಿಮೆ, ವಿಗ್ರಹ ಮುಂತಾದವುಗಳಿಂದ ದೂರ ಇರಲು ಕಲಿಸುತ್ತದೆ. ಆದರೆ ಹೊರಗಿನವರು ತಮ್ಮ ನೇರ ಚಿತ್ರ ತೆಗೆಯದೆ ತಾವು ಕೆಲಸ ಮಾಡುತ್ತಿರುವಂತಹುದನ್ನು ತೆಗೆಯಲು ಅವರ ಅಭ್ಯಂತರವಿಲ್ಲ.
- ಇಂಗ್ಲಿಷಿನ ಜೊತೆಗೆ ಆಮಿಷ್ ಜನ ಪೆನ್‌ಸಿಲ್ವೇನಿಯ ಜರ್ಮನ್ ಅಥವ ಪೆನ್‌ಸಿಲ್ವೇನಿಯ ಡಚ್ ಎಂಬ ಮತ್ತೊಂದು ಭಾಷೆಯನ್ನೂ ಆಡುತ್ತಾರೆ. ಇವರು ಆಮಿಷ್ ಅಲ್ಲದ ಜನರನ್ನು ಕರೆಯುವುದು ಮಾತ್ರ ಇಂಗ್ಲಿಷ್ ಎಂದು!
- ಎಲ್ಲರೂ ಹೆಚ್ಚಾಗಿ ಕಪ್ಪು ಬಣ್ಣದ ಕುದುರೆಗಾಡಿಯನ್ನೆ ಹೊಂದಿರುತ್ತಾರೆ. ಬಣ್ಣ ಒಂದೇ ಇರುವುದು ಯಾಕೆಂದರೆ ಎಲ್ಲರೂ ಸಮಾನ ಎಂದು ನಿರೂಪಿಸಲು. ಕಾರು ಮತ್ತಿತರ ಯಂತ್ರ ವಾಹನಗಳು ಹೊರಜಗತ್ತಿಗೆ ಸುಲಭ ಸಂಪರ್ಕ ಕಲ್ಪಿಸುತ್ತವೆ ಎಂಬ ಕಾರಣಕ್ಕೆ ಅವುಗಳ ಮಾಲೀಕರಾಗುವುದು ನಿಷಿದ್ಧವಿದೆ. ಜೊತೆಗೆ, ಕಾರಿನ ಮಾಲೀಕತೆ ಸಮುದಾಯದಲ್ಲಿ ಅಸಮಾನತೆ ತರುತ್ತದೆ; ಅವುಗಳ ಮಾಲೀಕರು ಅವನ್ನು ತಮ್ಮ ಶ್ರೀಮಂತಿಕೆ, ಸ್ಥಾನಮಾನಗಳ ಪ್ರದರ್ಶನಕ್ಕೆ ಬಳಸುತ್ತಾರೆ; ಆ ಮೂಲಕ ಅದು ಸಮುದಾಯವನ್ನು ಬೇರ್ಪಡಿಸಬಹುದು ಎನ್ನುವುದು ಮತ್ತೊಂದು ಕಾರಣ. ಆದರೆ ಪ್ರಯಾಣ ಮತ್ತಿತರ ಸಮಯದಲ್ಲಿ ಇಂಗ್ಲಿಷ್ ಮಂದಿ ಉಪಯೋಗಿಸುವ ಬಸ್ಸು, ಕಾರು, ರೈಲು ಬಳಸಲು ಅನುಮತಿ ಇದೆ.
- ಚರ್ಚಿನ ನಿಯಮಗಳನ್ನು ಪಾಲಿಸದವರಿಗೆ, ಅವರ ನಿಯಮಗಳ ಪ್ರಕಾರ ತಪ್ಪು ಮಾಡಿದವರಿಗೆ ಬಹಿಷ್ಕಾರ ಹಾಕುವ ಪದ್ದತಿ ಆಮಿಷಾ ಜನರಲ್ಲಿದೆ. ಬಹಿಷ್ಕಾರಕ್ಕೊಳಗಾದ ವ್ಯಕ್ತಿಯನ್ನು ಅವನ/ಅವಳ ಮನೆಯವರೂ ಬಹಿಷ್ಕೃತರೊಂದಿಗೆ ಜೊತೆಯಲ್ಲಿ ಊಟ ಮಾಡದೆ ಬಹಿಷ್ಕರಿಸಬೇಕು. ವಿವಿಧ ಆಮಿಷ್ ಗುಂಪುಗಳಲ್ಲಿ ಬಹಿಷ್ಕೃತರಿಗೆ ನೀಡುವ ಶಿಕ್ಷೆಯಲ್ಲಿ ವ್ಯತ್ಯಾಸಗಳಿವೆ.
- ಅವರದು ಕೃಷಿಯಾಧಾರಿತ ಜೀವನ. ಉಳಲು ಕುದುರೆಗಳನ್ನು ಮಾತ್ರ ಬಳಸುತ್ತಾರೆ. ಯಾವುದೇ ಯಂತ್ರಗಳಿಲ್ಲ. ಬಹಳ ಕಾಲ ಕೈಯ್ಯಲ್ಲೆ ಹಾಲು ಕರೆಯುತ್ತಿದ್ದವರು ಈಗೀಗ ಹಾಲು ಕರೆಯುವ ಯಂತ್ರ ಬಳಸಲು ಪ್ರಾರಂಭಿಸಿದ್ದಾರಂತೆ. ಗ್ಯಾಸ್ ಬಳಸಬಹುದು. ಮನೆಗಳಲ್ಲಿ ನೀರು ಕಾಯಿಸಲು, ಒಲೆ ಮತ್ತು ದೀಪ ಉರಿಸಲು, ಮುಂತಾದುವಕ್ಕೆ ಗ್ಯಾಸ್ ಬಳಸುತ್ತಾರೆ.
- ಸಮುದಾಯವೆಲ್ಲ ಸೇರಿ ಹೊಸದಾಗಿ ಮದುವೆಯಾದ ದಂಪತಿಗಳಿಗೆ ಯಾವುದೇ ಆಧುನಿಕ ಉಪಕರಣಗಳಿಲ್ಲದೆ ಹುಳಿ, ಸುತ್ತಿಗೆ, ಗರಗಸದ ಸಹಾಯದಿಂದ ಹಲಗೆ ಮತ್ತು ತೊಲೆಗಳಿಂದ ದೊಡ್ಡದಾದ ದನದ ಕೊಟ್ಟಿಗೆಯನ್ನು ಒಂದೇ ದಿನದಲ್ಲಿ ಕಟ್ಟಿಕೊಡುತ್ತಾರೆ. ನೂರಾರು ಗಂಡಸರು ಆ ಕೆಲಸ ಮಾಡುತ್ತಿದ್ದರೆ ಹೆಂಗಸರು ಊಟ, ತಂಪು ಪಾನೀಯದ ವ್ಯವಸ್ಥೆಯಲ್ಲಿ ತೊಡಗಿರುತ್ತಾರೆ. ಮನೆಯವರೆಲ್ಲರೂ ತಮ್ಮ ಕುದುರೆ ಗಾಡಿಗಳಲ್ಲಿ ಈ ಕೆಲಸಕ್ಕೆ ಬೆಳಿಗ್ಗೆಯೆ ಬಂದುಬಿಡುತ್ತಾರೆ.
ಕೊಲೆಪಾತಕನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು!
ಕಳೆದ ವಾರದ ಲೇಖನದಲ್ಲಿ ವಿವರಿಸಿದಂತೆ ತಮ್ಮ ಐದು ಜನ ಕಂದಮ್ಮಗಳನ್ನು ಗುಂಡಿಟ್ಟು ಕೊಂದು ಮತ್ತೈವರನ್ನು ಗಾಯಗೊಳಿಸಿದ ನಾಲ್ಮಡಿ ಚಾರ್ಲ್ಸ್ ಕಾರ್ಲ್ ರಾಬರ್ಟ್ಸ್‌ನ ಅಂತ್ಯಕ್ರಿಯೆಯಲ್ಲಿ ಆಮಿಷ್ ಜನ ನಡೆದುಕೊಂಡ ರೀತಿ ಮಾತ್ರ ಬಹುಶಃ ಅವರು ಮಾತ್ರ ಮಾಡಲು ಸಾಧ್ಯವಾದದ್ದು. ರಾಬರ್ಟ್ಸ್‌ನ ಹೆಣ ಊಳುವ ಸಂದರ್ಭದಲ್ಲಿ ಹಾಜರಿದ್ದ ಸುಮಾರು 75 ಜನರಲ್ಲಿ ಅರ್ಧದಷ್ಟು ಜನ ಆಮಿಷ್ ಜನರಂತೆ! ಯಾವಾಗಲೂ ಶಾಂತಿ ಮತ್ತು ಅಹಿಂಸೆ ಪಾಲಿಸುವುದು ಹಾಗು ಎಂತಹುದೇ ಸಂದರ್ಭದಲ್ಲಿ ಪ್ರತಿಭಟನೆ ಮಾಡದಿರುವುದು ಆಮಿಷರ ಸಿದ್ಧಾಂತ. ಕೊಲೆಪಾತಕ ನಮ್ಮನ್ನು ಕೊಲ್ಲಲು ಬಂದಾಗಲೂ ನಾವು ಪ್ರತಿಭಟಿಸಬಾರದು, ಹಿಂಸೆಗೆ ಇಳಿಯಬಾರದು ಎನ್ನುತ್ತಾರೆ ಅವರು. ಯಾಕೆ ಎಂದು ಅವರು ಕೊಡುವ ಕಾರಣಗಳು ಇವು: ಕೊಲೆಗಾರ ನಮ್ಮ ಮೇಲೆ ಬಿದ್ದಾಗ ನಾವು ಬಲ ಉಪಯೋಗಿಸಿ ಎದುರಿಸಿದ ಮಾತ್ರಕ್ಕೆ ನಮ್ಮ ಜೀವ ಉಳಿಯುತ್ತದೆ ಎನ್ನುವ ಖಾತರಿ ಇಲ್ಲ. ಕೊಲೆಗಾರ ನಮ್ಮನ್ನು ಸಾಯಿಸಬಹುದಾದ ಪಕ್ಷದಲ್ಲಿ, ಸಾಯಿಸಲಿ ಬಿಡಿ. ಕ್ರಿಶ್ಚಿಯನ್ನರಿಗೆ ಸಾವಿನ ಹೆದರಿಕೆಯಿಲ್ಲ. ಕನಿಷ್ಠ ನಮ್ಮ ಅಹಿಂಸಾತ್ಮಕ ಪ್ರತಿಕ್ರಿಯೆಲ್ಲಾದರೂ ಕೊಲೆಗಾರನಿಗೆ ಕ್ರಿಸ್ತನ ಪ್ರೀತಿ ಕಾಣಿಸಲಿ.
ಆಮಿಷರ ಕೆಲವು ಆಚರಣೆ ಮತ್ತು ನಂಬಿಕೆಗಳು ಮೂಢನಂಬಿಕೆಗಳಿಗೆ ಹತ್ತಿರ ಮತ್ತು ಜಡ ಹಾಗು ಮತ್ತೆ ಕೆಲವು ಆಚರಣೆಗಳು ಆದರ್ಶ ಸಮಾಜದಲ್ಲಿ ಮಾತ್ರ ಪಾಲಿಸಲು ಸಾಧ್ಯ ಎಂಬ ವಾಸ್ತವವನ್ನು ಗ್ರಹಿಸುತ್ತ ಅವರ ಅಹಿಂಸೆ ಮತ್ತು ಸಮುದಾಯ ಸೇವೆಯನ್ನು ನಾವೆಲ್ಲರೂ ಅಭಿನಂದಿಸೋಣ. ಬಹುಜನರಿಗೆ ಮಾರಕವಲ್ಲದ ಅವರ ಮುಗ್ಧ ಜೀವನ ರೀತಿ ಹಾಗೆ ಉಳಿದುಕೊಂಡರೆ ಅದಕ್ಕಿಂತ ಇನ್ನೇನು ಬೇಕು. ಏನಂತೀರಿ?
No comments:
Post a Comment