Dec 30, 2006

ಇಬ್ಬರು ರಾಷ್ಟ್ರಾಧ್ಯಕ್ಷರ ಮರಣ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಜನವರಿ 12, 2007 ರ ಸಂಚಿಕೆಯಲ್ಲಿನ ಅಂಕಣ ಲೇಖನ)

93 ವರ್ಷದ ತುಂಬು ಜೀವನ ನಡೆಸಿದ ಮುದುಕನೊಬ್ಬ ಕಳೆದ ವಾರ ಅಮೇರಿಕದಲ್ಲಿ ತೀರಿಕೊಂಡ. 93 ವರ್ಷದ ಹಿಂದೆ, ಆ ಮನುಷ್ಯ ಹುಟ್ಟಿದ 16 ದಿನಕ್ಕೆಲ್ಲ ಆ ಮಗುವಿನ ಅಮ್ಮ ತನ್ನ ಗಂಡನನ್ನು ಬಿಟ್ಟು ತನ್ನ ತಂದೆಯ ಮನೆ ಸೇರಿಕೊಂಡಳು. ಕಾರಣ? ಆ ಮಗುವಿನ ಅಪ್ಪ ಮಹಾ ಕುಡುಕನಾಗಿದ್ದ. ಹೆಂಡತಿಯನ್ನು ಗರ್ಭಿಣಿ, ಬಾಣಂತಿ ಎನ್ನದೆ ಹೊಡೆಯುತ್ತಿದ್ದ. "ಮಗುವನ್ನು, ನಿನ್ನನ್ನು ಸಾಸಿಬಿಡುತ್ತೇನೆ" ಎಂದು ಮಾಂಸ ಕಡಿಯುವ ಕತ್ತಿ ಹಿಡಿದು ಮಗು ಹುಟ್ಟಿದ ನಾಲ್ಕಾರು ದಿನಕ್ಕೆಲ್ಲ ಅಬ್ಬರಿಸಿದ್ದ. ಹೀಗಾಗಿ ತನ್ನ ಅಪ್ಪನ ಮನೆ ಸೇರಿಕೊಂಡ ಆ ಹೆಂಗಸು ತನ್ನ ಮಗುವಿನ ತಂದೆಯನ್ನು ವುಚ್ಚೇದಿಸಿ, ಆರೇಳು ತಿಂಗಳ ನಂತರ ಜೆರಾಲ್ಡ್ ಫೋರ್ಡ್ ಎನ್ನುವನನ್ನು ಮದುವೆಯಾದಳು. ತನ್ನ ಹೊಸ ಗಂಡನ ಮೇಲಿನ ಪ್ರೀತಿಂದ, ನಂಬಿಕೆಯಿಂದ ತನ್ನ ಮೊದಲ ಮಗುವನ್ನೂ ಜೆರಾಲ್ಡ್ ಫೋರ್ಡ್ ಜೂನಿಯರ್ ಎಂದು ಕರೆಯಲಾರಂಭಿಸಿದಳು. ಆ ತಾಯಿ ಮತ್ತು ಮಲತಂದೆ ಆ ಮಗುವನ್ನು ಎಷ್ಟು ಚೆನ್ನಾಗಿ ನೋಡಿಕೊಂಡರೆಂದರೆ, ಅವನಿಗೆ 15 ವರ್ಷ ತುಂಬುವ ತನಕ ತನ್ನನ್ನು ಹುಟ್ಟಿಸಿದವನು ಬೇರೊಬ್ಬ ಎಂದೇ ಗೊತ್ತಿರಲಿಲ್ಲ.

ಕಾಲೇಜಿನಲ್ಲಿ ಓದುತ್ತಿದ್ದಾಗ ಫೋರ್ಡ್ ಒಳ್ಳೆಯ ಅಮೇರಿಕನ್ ಫುಟ್‌ಬಾಲ್ ಆಡುತ್ತಿದ್ದ. ನಂತರ ಯೇಲ್ ಲಾ ಸ್ಕೂಲ್‌ನಲ್ಲಿ ವಕೀಲಿಕೆ ಓದಲು ಆರಂಭಿಸಿದ. ಆಗ ಎರಡನೆ ವಿಶ್ವಯುದ್ದ ನಡೆಯುತ್ತಿತ್ತು. ಅಮೇರಿಕ ಅದರಲ್ಲಿ ಇನ್ನೂ ಭಾಗಿಯಾಗಿರಲಿಲ್ಲ. ಫೋರ್ಡ್ ತನ್ನ ಕೆಲವು ಸ್ನೇಹಿತರೊಡನೆ ಅಮೇರಿಕ ಯುದ್ದದಲ್ಲಿ ಭಾಗಿಯಾಗಬಾರದೆಂಬ ನಿವೇದನೆಯೊಂದಕ್ಕೆ ಸಹಿ ಹಾಕಿದ್ದ. ಆದರೆ ಯಾವಾಗ ಜಪಾನ್ ಅಮೇರಿಕಕ್ಕೆ ಸೇರಿದ ಹವಾಯಿ ದ್ವೀಪದ ಮುತ್ತಿನ ಬಂದರಿನ ಮೇಲೆ ದಾಳಿ ಮಾಡಿತೊ, ಅಮೇರಿಕದ ನೌಕಾದಳ ಸೇರಿಕೊಂಡ. ವಿಶ್ವಯುದ್ದದಲ್ಲಿ ಭಾಗಿಯಾಗಿ ತನ್ನ ಸೇವೆಗೆ ಅನೇಕ ಮೆಡಲ್‌ಗಳನ್ನು ಪಡೆದ.

ಯುದ್ದದಿಂದ ವಾಪಸ್ಸಾದ ಮೇಲೆ ಫೋರ್ಡ್ ರಾಷ್ಟ್ರೀಯ ಜನಪ್ರತಿನಿಧಿ ಸಭೆಗೆ ಸ್ಪರ್ಧಿಸಿದ. ಚುನಾವಣೆಯ ಸಮಯದಲ್ಲಿ, ತನ್ನನ್ನು ಆರಿಸಿದರೆ ನಿಮ್ಮ ಹೊಲಗಳಲ್ಲಿ ಬಂದು ದುಡಿಯುತ್ತೇನೆ ಮತ್ತು ನಿಮ್ಮ ಹಸುಗಳ ಹಾಲು ಕರೆಯುತ್ತೇನೆ ಎಂದು ತನ್ನ ಕ್ಷೇತ್ರದಲ್ಲಿ ಬಹುಸಂಖ್ಯೆಯಲ್ಲಿದ್ದ ರೈತರಿಗೆ ಆಶ್ವಾಸನೆ ಕೊಟ್ಟಿದ್ದ. ಗೆದ್ದ. ಎರಡು ವಾರಗಳ ಕಾಲ ರೈತರ ಮನೆಯಲ್ಲಿ ಹಾಲು ಕರೆದು ತನ್ನ ಮಾತು ಉಳಿಸಿಕೊಂಡ! 25 ವರ್ಷಗಳ ನಂತರ, ಅಮೇರಿಕದ ಇತಿಹಾಸದಲ್ಲಿ ಆಕಸ್ಮಿಕವೊಂದು ಸಂಭವಿಸುವ ತನಕ ಆ ಕ್ಷೇತ್ರದಿಂದ ಸತತವಾಗಿ ಆರಿಸಿ ಬರುತ್ತಿದ್ದ.

ಅದು 1973 ನೆ ಇಸವಿ. ನಿಕ್ಸನ್ ಆಗ ತಾನೆ ಎರಡನೆ ಬಾರಿಗೆ ರಾಷ್ಟ್ರಾಧ್ಯಕ್ಷರಾಗಿದ್ದರು. ಆದರೆ ಆ ಮರುಚುನಾವಣೆಯ ಸಮಯದಲ್ಲಿ ಅಲ್ಲಿಯತನಕ ಯಾವ ಅಮೇರಿಕನ್ ರಾಷ್ಟ್ರಾಧ್ಯಕ್ಷನೂ ಮಾಡದ ಅಪರಾಧವನ್ನು ನಿಕ್ಸನ್ ಎಸಗಿದ್ದರು. ಅವರದು ರಿಪಬ್ಲಿಕನ್ ಪಕ್ಷ. ಡೆಮೊಕ್ರಾಟ್ ಪಕ್ಷ ಅವರ ವಿರೋಧ ಪಕ್ಷ. ಡೆಮೊಕ್ರಾಟರ ಮುಖ್ಯಕಚೇರಿಯಿದ್ದದ್ದು ವಾಷಿಂಗ್‌ಟನ್ನಿನ ವಾಟರ್‌ಗೇಟ್ ಕಟ್ಟಡದಲ್ಲಿ. ಡೆಮೊಕ್ರಾಟರ ಕಚೇರಿಯಲ್ಲಿ ಅವರ ತಂತ್ರಗಳನ್ನು ತಿಳಿದುಕೊಳ್ಳಲು ಕೆಲವು ನಿಕ್ಸನ್ ನಿಕಟವರ್ತಿಗಳು ಕದ್ದಾಲಿಕೆ ಯಂತ್ರಗಳನ್ನು ಅಳವಡಿಸುತ್ತಿದ್ದಾಗ ಸಿಕ್ಕಿಹಾಕಿಕೊಂಡರು. ಇದ್ಯಾವುದೂ ತನಗೆ ಗೊತ್ತಿಲ್ಲ, ಅದರಲ್ಲಿ ತನ್ನ ಪಾತ್ರವಿಲ್ಲ ಎಂದ ನಿಕ್ಸನ್, ಮರುಚುನಾವಣೆಯಲ್ಲಿ ಅತ್ಯಧಿಕ ಬಹುಮತದಿಂದ ಗೆದ್ದರು. ಆದರೆ ವಾಟರ್‌ಗೇಟ್ ಹಗರಣದಲ್ಲಿ ನಿಕ್ಸನ್ ಪಾತ್ರವಿದೆ ಎಂದು ಒಂದೊಂದೆ ಬಯಲಾಗುತ್ತ ಬರುತ್ತಿತ್ತು. ಅದೇ ಸಮಯದಲ್ಲಿ ನಿಕ್ಸನ್‌ರ ಉಪಾಧ್ಯಕ್ಷನಾಗಿದ್ದ ಸ್ಪೈರೊ ಆಗ್ನ್ಯೂ ಲಂಚ ಮತ್ತು ತೆರಿಗೆಕಳ್ಳತನದ ತಪ್ಪಿಗೆ ಸಿಕ್ಕಿಹಾಕಿಕೊಂಡು ರಾಜಿನಾಮೆ ಕೊಡಬೇಕಾತು. ಆಗ ಎರಡೂ ಪಕ್ಷಗಳವರು ಉಪಾಧ್ಯಕ್ಶ ಸ್ಥಾನಕ್ಕೆ ನಿಕ್ಸನ್‌ಗೆ ಸೂಚಿಸಿದ ಹೆಸರು, ಜೆರಾಲ್ಡ್ ಫೋರ್ಡ್. ಅಂತಹದೊಂದು ಘಟನೆ ಅಮೇರಿಕದ ಇತಿಹಾಸದಲ್ಲಿ ನಡೆದದ್ದು ಅದೇ ಮೊದಲು.

ಮುಂದಿನ ಹತ್ತು ತಿಂಗಳಿಗೆಲ್ಲ ವಾಟರ್‌ಗೇಟ್ ಹಗರಣದಲ್ಲಿ ಅವರ ಪಾತ್ರ ಮತ್ತು ಅದನ್ನು ಮುಚ್ಚಿಹಾಕಲು ಅವರು ಪ್ರಯತ್ನಿಸಿದ್ದೆಲ್ಲ ಬಯಲಾಗಿ ನಿಕ್ಸನ್ ರಾಜಿನಾಮೆ ನೀಡಬೇಕಾತು. ಸಂವಿಧಾನದ ಪ್ರಕಾರ ಉಪಾಧ್ಯಕ್ಷ ಫೋರ್ಡ್ ಅಮೇರಿಕದ 38 ನೆ ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದೂ ಸಹ ಅಮೇರಿಕದ ರಾಜಕೀಯ ಇತಿಹಾಸದಲ್ಲಿ ಆಕಸ್ಮಿಕ. ಯಾಕೆಂದರೆ ಯಾವುದೆ ರಾಷ್ಟ್ರೀಯ ಚುನಾವಣೆಗೆ, ಅಂದರೆ ಉಪಾಧ್ಯಕ್ಷ ಅಥವ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ, ನೇರವಾಗಿ ಜನರಿಂದ ಚುನಾಯಿತನಾಗದೆ ಫೋರ್ಡ್ ಉಪಾಧ್ಯಕ್ಷ ಮತ್ತು ಅಧ್ಯಕ್ಷ ಎರಡೂ ಆಗಿಬಿಟ್ಟರು. ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಅಮೇರಿಕನ್ ಜನರನ್ನುದ್ದೇಶಿಸಿ ಮಾತನಾಡಿದ ಫೋರ್ಡ್ ಆಗ ಹೇಳಿದ್ದು, "ನನ್ನ ಸಹನಾಗರಿಕರೆ, ನಮ್ಮ ಸುದೀರ್ಘ ರಾಷ್ಟ್ರೀಯ ದುಸ್ವಪ್ನ ಕೊನೆಯಾಗಿದೆ," ಎಂದು. ಹಾಗೆಂದು ಹೇಳಿದ ಫೋರ್ಡ್ ಕೆಲವು ತಿಂಗಳುಗಳ ನಂತರ ನಿಕ್ಸನ್‌ಗೆ ಕ್ಷಮಾದಾನ ನೀಡಿದರು. ಅಮೇರಿಕದ ಗಾಯವನ್ನು ವಾಸಿಮಾಡಲು ಪ್ರಯತ್ನಿಸಿದರು. ಆದರೆ ನಿಕ್ಸನ್‌ಗೆ ನೀಡಿದ ಕ್ಷಮಾದಾನವನ್ನು ಜನತೆ ಕ್ಷಮಿಸಲಿಲ್ಲ. ಎರಡೂವರೆ ವರ್ಷದ ನಂತರ ಬಂದ ಚುನಾವಣೆಯಲ್ಲಿ ಫೋರ್ಡ್‌ರನ್ನು ಸೋಲಿಸಿ ಜನ ಜಿಮ್ಮಿ ಕಾರ್ಟರ್‌ರನ್ನು ಗೆಲ್ಲಿಸಿದರು. ಫೋರ್ಡ್ ಕ್ಷಮಾದಾನ ನೀಡಲು ಮುಖ್ಯ ಕಾರಣ, ಪದೆಪದೆ ಆ ವಿಷಯವನ್ನು ಕೆದಕದೆ, ಅದಕ್ಕೆ ಪೂರ್ಣವಿಶ್ರಾಂತಿ ನೀಡಿದಂತಾಗುತ್ತದೆ, ತಾನು ಅಧ್ಯಕ್ಷನಾಗಿ ಸಾಮಾನ್ಯ ಜನತೆಗೆ ಮುಖ್ಯವಾದ ವಿಷಯಗಳತ್ತ ಗಮನ ಕೊಡಲು ಸಾಧ್ಯವಾಗುತ್ತದೆ, ಎಂದು. ಆಗ ಜನ ಅದನ್ನು ಒಪ್ಪದಿದ್ದರೂ ಈಗ ಅದನ್ನು ಬಹುಜನರು ಒಪ್ಪುತ್ತಾರೆ.

ಇದೇ ವಾರ, ಈಗ ಅಮೇರಿಕದ ಸರ್ಕಾರ ಪ್ರತಿಕ್ಷಣವೂ ಕನವರಿಸುವ 'ಇರಾಕ್' ದೇಶದ ಮಾಜಿ ರಾಷ್ಟ್ರಾಧ್ಯಕ್ಷನೂ ಸತ್ತ. ಆದರೆ ಅದು ಸಹಜ ಸಾವಾಗಿರಲಿಲ್ಲ. ಎರಡು ವರ್ಷದ ಹಿಂದಷ್ಟೆ ಆಸ್ತಿತ್ವಕ್ಕೆ ಬಂದ ಇರಾಕಿನ ಹೊಸ ಸಂವಿಧಾನ, ಸರ್ಕಾರ, ನ್ಯಾಯವ್ಯವಸ್ಥೆ, ಅಮೇರಿಕದ ಪ್ರಭಾವ, ಎಲ್ಲದರ ಪರಿಣಾಮವಾಗಿ, ಇರಾಕಿನ ವಿಶೇಷ ನ್ಯಾಯಾಲಯ ಸದ್ದಾಮ್ ಹುಸೇನ್‌ಗೆ ಗಲ್ಲು ಶಿಕ್ಷೆ ವಿಧಿಸಿತು. ಕಾರಣ? ಇರಾಕಿನ ಹಳ್ಳಿಯೊಂದರ 148 ಷಿಯಾ ಮುಸ್ಲಿಮರನ್ನು ಕಗ್ಗೊಲೆ ಮಾಡಲು ನೇರವಾಗಿ ಆದೇಶ ನೀಡಿದ ಎಂಬ ಆಪಾದನೆ ರುಜುವಾತಾದದ್ದು. ಆದರೆ, ತನ್ನನ್ನು ಕೊಲ್ಲಲು ಹೊಂಚು ಹಾಕುತ್ತಿದ್ದವರನ್ನು ಯಮಸದನಕ್ಕೆ ಅಟ್ಟಲು ಹಾಗು ತನ್ನ ಮೇಲೆ ಎದ್ದ ದಂಗೆಗಳ ಹುಟ್ಟಡಗಿಸಲು ಸದ್ದಾಮ್ ಹುಸೇನರು ಕೊಂದದ್ದು ಕೇವಲ 148 ಜನ ಮಾತ್ರವಾಗಿರಲಿಲ್ಲ. ಬದಲಿಗೆ, ಇರಾಕಿನ ಲಕ್ಷಕ್ಕೂ ಮಿಗಿಲು ಖರ್ದಿಷ್ ಮತ್ತು ಷಿಯಾ ಮುಸ್ಲಿಮರನ್ನು. ಅಮೇರಿಕ ಇರಾಕಿನ ಮೇಲೆ ದಾಳಿ ಮಾಡಿದ್ದು ಸರಿಯೊ ತಪ್ಪೊ ಎನ್ನುವ ಪ್ರಶ್ನೆಯನ್ನು ಪಕ್ಕಕ್ಕಿಟ್ಟು ಯೋಚಿಸಿದರೆ ಸದ್ದಾಮರ ಹಿಂದಿನ ಪಾತಕಗಳಿಗೆ ಈಗ ಶಿಕ್ಷೆಯಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಇಲ್ಲದಿದ್ದರೆ ಸುಮ್ಮಸುಮ್ಮನೆ ಸಾವಿರಾರು ಜನ ಬಾಗ್ದಾದಿನ ಬೀದಿಗಳಲ್ಲಿ ಸದ್ದಾಮ್ ಸಾವನ್ನು ಸಂಭ್ರಮಿಸುತ್ತಿರಲಿಲ್ಲ. ಸದ್ದಾಮ್ ಕಾಲದಲ್ಲಿ ಇರಾಕಿನಲ್ಲಿ ಜನರಿಗೆ ಯಾವುದೆ ಮೂಲಭೂತ ಹಕ್ಕುಗಳಿರಲಿಲ್ಲ. ಇದ್ದಿದ್ದರೆ, ರಾಜದ್ರೋಹದ ಆಪಾದನೆಯ ಮೇಲೆ ಆ ಹಳ್ಳಿಯ ಜನರನ್ನು ಬಂಧಿಸಿ, ವಿಚಾರಣೆ ನಡೆಸಿ, ನಂತರ ಆಪಾದನೆ ರುಜುವಾತಾದರೆ ಗಲ್ಲಿಗೇರಿಸಬೇಕಿತ್ತೆ ಹೊರತು ನೇರವಾಗಿ ಅಧ್ಯಕ್ಷನೆ ಹೋಗಿ ಗುಂಡಿಟ್ಟು ಕೊಲ್ಲಿ ಎಂದು ಹೇಳುತ್ತಿರಲಿಲ್ಲ. ಪ್ರತಿ ವಿಷಯಕ್ಕೂ ಅಮೇರಿಕವನ್ನು ವಿರೋಧಿಸಬೇಕು ಎಂದುಕೊಳ್ಳುವವರು ಹಾಗು ಸದ್ದಾಮ್‌ರನ್ನು ಬೆಂಬಲಿಸಿದರೆ ಮುಸ್ಮಿಮರನ್ನು ಬೆಂಬಲಿಸಿದಂತೆ ಎಂದುಕೊಳ್ಳುವವರು ಈ ವಿಷಯವನ್ನು ಗಮನಿಸಬೇಕು. ಮೂಲಭೂತವಾದಿಗಳನ್ನು, ಸರ್ವಾಧಿಕಾರಿಗಳನ್ನು ಬೆಂಬಲಿಸಿದರೆ ಸಾಮಾನ್ಯ ಬಹುಸಂಖ್ಯಾತ ಮುಸ್ಲಿಮರನ್ನು ಬೆಂಬಲಿಸಿದಂತಾಗುವುದಿಲ್ಲ.
ಇಲ್ಲಿ, ನಿಕ್ಸನ್ ಮತ್ತು ಸದ್ದಾಮ್ ನಮ್ಮ ರಾಜಕಾರಣಿಗಳಿಗೂ ಒಂದು ಪಾಠ. ಅಧಿಕಾರವನ್ನು ಗಳಿಸಬೇಕೆಂಬ ಹಪಹಪಿಯಲ್ಲಿ, ಉಳಿಸಿಕೊಳ್ಳಬೇಕೆಂಬ ಹುಚ್ಚಿನಲ್ಲಿ ನಾವು ಮಾಡುವ ಅನ್ಯಾಯ, ಅಕ್ರಮಗಳನ್ನು ಯಾರೂ ಗಮನಿಸುವುದಿಲ್ಲ, ಎಂದಿಗೂ ಅದು ನಮ್ಮ ತಲೆಗೆ ಸುತ್ತಿಕೊಳ್ಳುವುದಿಲ್ಲ ಎಂದು ಯಾರೂ ಭಾವಿಸಬಾರದು. ಕಾಲ ಬದಲಾಗುತ್ತ ಇರುತ್ತದೆ. ಕಾನೂನು ಬದಲಾಗುತ್ತ ಇರುತ್ತದೆ. ಹೊಸಬರು ಬರುತ್ತಿರುತ್ತಾರೆ. ಹಳೆ ಪ್ರಕರಣಗಳನ್ನು ಯಾರೊ ಎಲ್ಲಿಯೊ ಧೂಳು ಹೊಡೆದು ಮೇಜಿನ ಮೇಲೆ ಇಡುತ್ತಾರೆ. ನಿಕ್ಸನ್, ಸದ್ದಾಮ್, ನರಸಿಂಹರಾವ್, ಶಿಬು ಸೊರೇನ್, ನವಜೋತ್ ಸಿದ್ಧು, ಜಯಲಲಿತ, ಇತ್ಯಾದಿಗಳು ಜೈಲು ಪಾಲಾಗುತ್ತಿರುತ್ತಾರೆ, ಇಲ್ಲವೆ ನೇಣಿಗೇರುತ್ತಿರುತ್ತಾರೆ, ಇಲ್ಲವೆ ಅವಮಾನದಲ್ಲಿ ಕೊಳೆಯುತ್ತ ಸಾಯುತ್ತಾರೆ. ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳುವುದು ಕಷ್ಟ. ಅಪರಾಧ ದೊಡ್ಡದಿದ್ದರಂತೂ ಇನ್ನೂ ಕಷ್ಟ. ಇದು ಬುಷ್ ವಿಚಾರಕ್ಕೂ ನಿಜವಾಗಬಹುದು, ನಮ್ಮ ಅಧಿಕಾರಸ್ಥರಿಗೂ ನಿಜವಾಗಬಹುದು. ಬೀಸುವ ದೊಣ್ಣೆಯನ್ನು ಒಂದು ಸಾರಿ ತಪ್ಪಿಸಿಕೊಂಡ ಮಾತ್ರಕ್ಕೆ ಪ್ರತಿಸಾರಿಯೂ ತಪ್ಪಿಸಿಕೊಳ್ಳಬಹುದು ಎಂದುಕೊಳ್ಳುವುದು ಮೂರ್ಖತನ!

No comments: