Feb 25, 2007

ಸಲಿಂಗ ಕಾಮ ಮತ್ತು ಇತಿಹಾಸ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮಾರ್ಚ್ 9, 2007 ರ ಸಂಚಿಕೆಯಲ್ಲಿನ ಲೇಖನ)

ಬಹುಶಃ ಈ ಕಾಮ ಎನ್ನುವುದು ಎಷ್ಟು ಪುರಾತನವೊ ಅಷ್ಟೇ ಪುರಾತನವಾದದ್ದು ಇರಬೇಕು ಸಲಿಂಗ ಕಾಮವೂ. ಯಾವಾಗ ಜನ ಗುಂಪುಗಳಲ್ಲಿ ಜೀವಿಸಲು ಪ್ರಾರಂಭಿಸಿ, ಆಗಾಗ ಊರಿನ, ಬುಡಕಟ್ಟಿನ ಗಂಡುಗಳೆಲ್ಲ ಬೇಟೆಗೊ ಇನ್ನೊಂದಕ್ಕೊ ಹೊರಟು ಹೆಂಗಸರಿಂದ ಬಹಳ ದಿನ ಅಗಲಿ ಇದ್ದ ಸಮಯದಲ್ಲೆ ಇದೂ ಪ್ರಾರಂಭವಾಗಿರಬಹುದೇನೊ! ಯಾಕೆಂದರೆ, ಗ್ರೀಕರ ಕ್ರಿಸ್ತಪೂರ್ವ ಇತಿಹಾಸದಲ್ಲಿ ಗಂಡಸರ ನಡುವಿನ ಸಲಿಂಗಕಾಮ ಪ್ರಚಲಿತದಲ್ಲಿತ್ತು. ಅದಕ್ಕೆ ಮುಖ್ಯ ಕಾರಣ ಅವರಲ್ಲಿ ಬಹುಪಾಲು ಜನ ಸೈನಿಕರಾಗಿದ್ದದ್ದು ಹಾಗು ಯಾವಾಗಲೂ ಒಂದಲ್ಲ ಒಂದು ಯುದ್ಧದಲ್ಲಿ ತೊಡಗಿರುತ್ತಿದ್ದದ್ದು ಮತ್ತು ಕೆಲವು ಸೈನಿಕ ಪಡೆಗಳಲ್ಲಿ ಅದಕ್ಕಿದ್ದ ಸಮ್ಮತಿ ಮತ್ತು ಪ್ರೋತ್ಸಾಹ. ತನ್ನ ಜೊತೆಯಿರುವ ಇನ್ನೊಬ್ಬ ಯುವಕನೆಡೆಗಿನ ಪ್ರೇಮ ಸೈನಿಕರನ್ನು ವೀರಾವೇಷದಿಂದ ಹೋರಾಡಲು ಹುರಿದುಂಬಿಸುತ್ತದೆ ಎಂದು ಆಗ ಭಾವಿಸಲಾಗುತ್ತಿತ್ತಂತೆ.

ಒಂದು ವಾದದ ಇತಿಹಾಸಕಾರರನ್ನು ಉಲ್ಲೇಖಿಸಬಹುದಾದರೆ ಅಲೆಕ್ಸಾಂಡರ್ ಸಹ ಸಲಿಂಗಕಾಮಿಯಾಗಿದ್ದ. ಆದರೆ ಅವನು ದ್ವಿಲಿಂಗಕಾಮಿಯೂ ಆಗಿದ್ದ. ಯುದ್ಧಗಳನ್ನು ಗೆದ್ದ ಸಮಯದಲ್ಲಿ ಸೋತ ರಾಜನ ಮಗಳನ್ನು ಒಂದೆರಡು ಬಾರಿ ಅವನು ವಿವಾಹವೂ ಆಗಿದ್ದ. ಮಕ್ಕಳೂ ಇದ್ದರು. ಆದರೆ, ಆತ ದಾರ್ಶನಿಕ ಅರಿಸ್ಟಾಟಲ್‌ನ ಕೆಳಗೆ ಓದುತ್ತಿದ್ದಾಗ ಅವನ ಸಹಪಾಠಿಯಾಗಿದ್ದಿರಬಹುದು ಎಂದು ಭಾವಿಸಲಾಗುವ ಹೆಫ಼ಾಸ್ಟಿಯನ್‌ನೊಂದಿಗಿನ ಅವನ ಸ್ನೇಹ ಮತ್ತು ಪ್ರೇಮ ಬಹಳ ಪ್ರಸಿದ್ಧವಾದದ್ದು. ತನಗಿಂತ ಎಂಟು ತಿಂಗಳ ಮೊದಲೆ ಕಾಯಿಲೆಯಿಂದಾಗಿ ಸತ್ತ ತನ್ನ ಆ ಪ್ರಿಯಕರನಿಗಾಗಿ ಅಲೆಕ್ಸಾಂಡರ್ ತಲೆ ಬೋಳಿಸಿಕೊಂಡ, ಅವನಿಗಾಗಿ ಪಿರಮಿಡ್ ಸಹ ಕಟ್ಟಬೇಕು ಎಂದುಕೊಂಡಿದ್ದ ಎನ್ನುತ್ತಾರೆ! ಆದರೆ, ಸ್ನೇಹಿತ ಮರಣದ ಎಂಟು ತಿಂಗಳ ನಂತರ, ಪೂರ್ಣಗೊಳಿಸಲಾಗದೆ ಹೋದ ಭಾರತದ ಮೇಲಿನ ದಂಡಯಾತ್ರೆಯಿಂದ ಬೇಸತ್ತು ವಾಪಸು ಉರಿಗೆ ಮರಳುವ ದಾರಿಯಲ್ಲಿ ಸ್ವತಃ ತಾನೆ ಕಾಯಿಲೆ ಬಿದ್ದು ಅಲೆಕ್ಸಾಂಡರ್ ತನ್ನ 33 ನೆ ವಯಸ್ಸಿನಲ್ಲಿಯೆ ಸಾಯುತ್ತಾನೆ.

ಕ್ರಿಶ್ಚಿಯನ್ ಮತದ ಪ್ರಭಾವ ಹರಡುತ್ತ ಹೋದಂತೆಲ್ಲ ಯೂರೋಪಿನಲ್ಲಿ ಸಲಿಂಗಕಾಮಕ್ಕೆ ಬೆಂಬಲ ಕಮ್ಮಿಯಾಗುತ್ತ ಹೋಯಿತು. ಚರ್ಚ್ ಅದನ್ನು ಪಾಪವೆಂದು ಪರಿಗಣಿಸುತ್ತದೆ. ಅರೇಬಿಯನ್ ನೈಟ್ಸ್‌ನಲ್ಲಿ ಸಲಿಂಗಕಾಮದ ಬಗ್ಗೆ ಅನೇಕ ಉಲ್ಲೇಖಗಳಿದ್ದರೂ ಇಸ್ಲಾಮಿನ ಪ್ರಭಾವದಿಂದ ಅರಬ್ ದೇಶಗಳಲ್ಲಿಯೂ ಅದು ನಿಷಿದ್ದ. ಇಸ್ಲಾಮ್ ಮತದಲ್ಲಿಯೂ ಸಲಿಂಗ ಕಾಮಕ್ಕೆ ನಿಷೇಧವಿದೆ. ಚೈನಾದಲ್ಲಿನ ಸಲಿಂಗಕಾಮದ ಬಗ್ಗೆ ಕ್ರಿಸ್ತಪೂರ್ವ 600 ರಲ್ಲಿ ರಚಿತವಾದ ಸಾಹಿತ್ಯದಲ್ಲಿಯೆ ಕೆಲವು ಉಲ್ಲೇಖಗಳಿವೆ.

ಇನ್ನು ಭಾರತದ ಇತಿಹಾಸಕ್ಕೆ ಬಂದರೆ, ಇಲ್ಲಿ ಸಲಿಂಗಕಾಮವನ್ನು ಸಮಾಜ ಎಂದೂ ಒಪ್ಪಿಕೊಂಡಿರಲಿಲ್ಲ ಹಾಗೂ ಈಗಲೂ ಒಪ್ಪಿಕೊಂಡಿಲ್ಲ. ಭಾರತದಲ್ಲಿ ಸೆಕ್ಷನ್ 377 ರ ಅಡಿಯಲ್ಲಿ ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಹಾಗೆಂದ ಮಾತ್ರಕ್ಕೆ ಭಾರತದಲ್ಲಿ ಸಲಿಂಗಕಾಮ ಇರಲಿಲ್ಲ ಎಂದಲ್ಲ. ರುಥ್ ವನಿತ ಮತ್ತು ಸಲಿಂ ಕಿದ್ವಾಯಿ ಎಂಬ ಇಬ್ಬರು ಲೇಖಕರು ವೇದಗಳ ಕಾಲದಿಂದ ಇಲ್ಲಿಯವರೆಗಿನ ಭಾರತದ ಇತಿಹಾಸ ಮತ್ತು ಸಾಹಿತ್ಯದಲ್ಲಿನ ಆಧಾರಗಳ ಮೇಲೆ "Same-Sex Love in India: Readings from Literature and History" ಎಂಬ ಪುಸ್ತಕ ಬರೆದಿದ್ದಾರೆ.

ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದು ಎನ್ನಲಾಗುವ ಮನುಸ್ಮೃತಿಯಲ್ಲಿ ಸಲಿಂಗಕಾಮದ ಬಗ್ಗೆ ಉಲ್ಲೇಖಗಳಿವೆ ಎಂದರೆ ಆಶ್ಚರ್ಯವಾಗದೆ ಇರದು. ಮನುವಿನ ಪ್ರಕಾರ, ಗಂಡಸೊಬ್ಬನನ್ನು ಕಾಮಿಸುವ ದ್ವಿಜನ ಅಪರಾಧ, ಹೆಂಗಸನ್ನು ಚಲಿಸುತ್ತಿರುವ ಎತ್ತಿನ ಗಾಡಿಯಲ್ಲಿ ಕೂಡುವ, ಇಲ್ಲವೆ ನೀರಿನಲ್ಲಿ ಕೂಡುವ, ಅಥವ ಹಗಲು ಹೊತ್ತಿನಲ್ಲಿ ಕೂಡುವ ಅಪರಾಧಕ್ಕೆ ಸಮನಾದದ್ದು. ಇಂತಹ ಮಾಡಬಾರದ ಸಮಯದಲ್ಲಿ ಹೆಂಗಸೊಬ್ಬಳನ್ನು ಸಂಭೋಗಿಸುವ ದ್ವಿಜ ಅಥವ ಗಂಡಸನ್ನು ಸಂಭೋಗಿಸುವ ದ್ವಿಜ ತನ್ನ ತಪ್ಪಿನ ಪ್ರಾಯಶ್ಚಿತ್ತವಾಗಿ ಉಟ್ಟ ಬಟ್ಟೆಯಲ್ಲಿ ಸ್ನಾನ ಮಾಡಬೇಕು. ಅಷ್ಟೆ ಸಾಕು. [ಅಧ್ಯಾಯ 11, ಸೂತ್ರ 175]

ಇದಕ್ಕಿಂತ ಘೋರ ಶಿಕ್ಷೆ ಎಂದರೆ (ಅಬ್ರಾಹ್ಮಣನಾದವನಿಗೆ?) ಜಾತಿಯಿಂದ ಬಹಿಷ್ಕಾರ ಹಾಕುವುದು; ಅದಕ್ಕೆ ಯಾರು ಅರ್ಹರೆಂದರೆ, ಬ್ರಾಹ್ಮಣನನ್ನು ಗಾಯಗೊಳಿಸುವವನು, ಮದ್ಯವನ್ನು ಅಥವ ಮೂಸಬಾರದ್ದನ್ನು ಮೂಸುವವನು, ವಂಚಕ, ಹಾಗೂ ಅಸಹಜವಾಗಿ ಇನ್ನೊಬ್ಬ ಗಂಡಸನ್ನು ಕೂಡುವವನು. [ಅಧ್ಯಾಯ 11, ಸೂತ್ರ 68]

ಇದು ಗಂಡಸರಿಗೆ ಮನು ವಿಧಿಸುವ ಶಿಕ್ಷೆ. ಇನ್ನು ಹೆಂಗಸರಿಗೆ? ಮನು ಗಂಡಸು ಪಕ್ಷಪಾತಿ ಎಂಬ ಆರೋಪ ಬೇರೆ ಇದೆಯಲ್ಲ? ಹೌದು. ಇಲ್ಲಿಯೂ ಮನು ಹೆಂಗಸರಿಗೆ ಉಗ್ರವಾದ ಶಿಕ್ಷೆಯನ್ನೆ ಹೇರುತ್ತಾನೆ: ಕನ್ಯೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಹಿರಿಯ ಹೆಂಗಸಿನ ತಲೆಯನ್ನು ಕೂಡಲೆ ಬೋಳಿಸಿ, ಇಲ್ಲವೆ ಅವಳ ಎರಡು ಬೆರಳುಗಳನ್ನು ತುಂಡರಿಸಿ, ಕತ್ತೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಬೇಕು. [ಅಧ್ಯಾಯ 8, ಸೂತ್ರ 370]

ಕಳೆದ ಎರಡು ಸಾವಿರ ವರ್ಷಗಳಿಂದ ಹೆಚ್ಚುಕಮ್ಮಿ ವಿರಳವಾಗಿ, ಕದ್ದುಮುಚ್ಚಿ ಪ್ರಾಣಭಯದಿಂದ ನಡೆಯುತ್ತಿದ್ದ ಕ್ರಿಯೆ 19 ನೆ ಶತಮಾನದಿಂದೀಚೆಗೆ ಸ್ವಲ್ಪಸ್ವಲ್ಪವೆ ಬಯಲಿಗೆ ಬರುತ್ತಿದೆ. ಈ ನಡವಳಿಕೆಯ ಬಗ್ಗೆ ಸಮಾಜಗಳು ನಿಧಾನವಾಗಿ ಸಹಿಷ್ಣುವಾಗುತ್ತ ಹೋಗುತ್ತಿವೆ. ಸ್ಯಾನ್ ಫ಼್ರಾನ್ಸಿಸ್ಕೊ ಅಂತಹ ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಂಡಸರು ಗಂಡಸರಿಗೆ ಮುತ್ತಿಟ್ಟುಕೊಳ್ಳುವ, ಹೆಂಗಸರು ಹೆಂಗಸರಿಗೆ ಮುತ್ತಿಟ್ಟುಕೊಳ್ಳುವುದನ್ನು ಹಾಡುಹಗಲೆ ನೋಡಬಹುದು.

ನನಗೆ ಗೊತ್ತಿರುವ ಮಟ್ಟಿಗೆ, ಕನ್ನಡದ ಇಬ್ಬರು ಜ್ಞಾನಪೀಠ ಪ್ರಶಸ್ತಿ ವಿಜೇತರ ಕೃತಿಗಳಲ್ಲಿಯೂ ಸಲಿಂಗಕಾಮದ ಉಲ್ಲೇಖವಿದೆ. ಶಿವರಾಮ ಕಾರಂತರ 'ಮೂಕಜ್ಜಿಯ ಕನಸುಗಳು' ಕಾದಂಬರಿಯ ಕೊನೆಯಲ್ಲಿ ಸಲಿಂಗಕಾಮಿಯೊಬ್ಬನ ಮುಖವಾಡ ಮೂಕಜ್ಜಿಯ ನಿಷ್ಠುರ ಮಾತಿನಿಂದ ಬಯಲಾಗುತ್ತದೆ. ಇದೇನೊ ಕಾಲ್ಪನಿಕ ಕತೆ. ಹಾಗಾಗಿ, ಇದಕ್ಕಿಂತ ಆಘಾತಕಾರಿಯಾದದ್ದು ಕುವೆಂಪುರವರ ಆತ್ಮಕತೆಯಲ್ಲಿಯೆ ಬರುವ ಸಲಿಂಗಕಾಮದ ಉಲ್ಲೇಖ. 'ನೆನಪಿನ ದೋಣಿ'ಯಲ್ಲಿ ತಾವು ಮೈಸೂರಿನಲ್ಲಿ ಓದುತ್ತಿದ್ದಾಗ ತಮ್ಮ ರೂಮಿನ ಮುಂದೆ ಇಸ್ತ್ರಿ ಮಾಡುತ್ತಿದ್ದ ಮನುಷ್ಯನೊಬ್ಬನ ತಮ್ಮೆಡೆಗಿನ ಅನಪೇಕ್ಷಿತ, ಅಸಹಜ ನಡವಳಿಕೆಯ ಬಗ್ಗೆ ಕುವೆಂಪು ವಸ್ತುನಿಷ್ಠವಾಗಿ ಬರೆಯುತ್ತಾರೆ.

Feb 17, 2007

ಗಾಳಿಮಾತು ಮತ್ತು ಉದ್ಧೇಶಪೂರ್ವಕ ಸಂಚು

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮಾರ್ಚ್ 2, 2007 ರ ಸಂಚಿಕೆಯಲ್ಲಿನ ಲೇಖನ)

  • ಫರ್ನಿಚರ್ ಅಂಗಡಿಯಲ್ಲಿ ಹೆಂಗಸೊಬ್ಬಳು ಮಗುವನ್ನು ಎಡವಿ ತನ್ನ ಹಿಮ್ಮಡಿ ಮುರಿದುಕೊಳ್ಳುತ್ತಾಳೆ. ಇದಕ್ಕೆ ಅಂಗಡಿಯವರ ಬೇಜವಾಬ್ದಾರಿಯೆ ಕಾರಣ ಎಂದು ಅಂಗಡಿಯವರ ಮೇಲೆ ಕೇಸು ಹಾಕುತ್ತಾಳೆ. ಅವಳ ವಾದವನ್ನು ಪುರಸ್ಕರಿಸಿದ ಜ್ಯೂರಿ, ಅವಳಿಗೆ 7.8 ಲಕ್ಷ ಡಾಲರ್ ಪರಿಹಾರ ನೀಡಬೇಕೆಂದು ಅಂಗಡಿ ಮಾಲೀಕರಿಗೆ ಆದೇಶ ನೀಡುತ್ತದೆ. ಇಷ್ಟಕ್ಕೂ ತಾನು ಎಡವಿದ ಮಗು ಬೇರೆ ಯಾರದ್ದೂ ಆಗಿರದೆ ಆ ಹೆಂಗಸಿನದೆ ಆಗಿರುತ್ತದೆ!
  • ಲಾಸ್ ಏಂಜಲೀಸ್ ನಗರದಲ್ಲಿ ಒಬ್ಬ ಯುವಕ ತನ್ನ ಪಕ್ಕದ ಮನೆಯವನ ಕಾರಿನ ಚಕ್ರದ ಹಬ್‌ಕ್ಯಾಪ್ ಕದಿಯುತ್ತಿರುತ್ತಾನೆ. ಅದೇ ಸಮಯದಲ್ಲಿ ಹೊರಗೆ ಬಂದ ಕಾರಿನ ಮಾಲೀಕ ಕಾರನ್ನು ಸ್ಟಾರ್ಟ್ ಮಾಡಿ ಚಲಾಯಿಸಿ ಬಿಡುತ್ತಾನೆ. ಚಕ್ರ ಕಳ್ಳನ ಕೈ ಮೇಲೆ ಹರಿದುಬಿಡುತ್ತದೆ. ಕಳ್ಳ ಕೋರ್ಟಿಗೆ ಹೋಗುತ್ತಾನೆ. ಬೇಜವಾಬ್ದಾರಿಯಿಂದ ಕಾರನ್ನು ಓಡಿಸಿದ ಎಂದು ಹೇಳಿ, ಕಳ್ಳನ ವೈದ್ಯಕೀಯ ಚಿಕಿತ್ಸೆಗೆಂದು 74 ಸಾವಿರ ಪರಿಹಾರ ನೀಡಲು ಕೋರ್ಟು ಕಾರಿನ ಮಾಲೀಕನಿಗೆ ಆದೇಶಿಸುತ್ತದೆ!
  • ಮನೆಯೊಂದಕ್ಕೆ ನುಗ್ಗಿದ ಕಳ್ಳ, ತನಗೆ ಬೇಕಾದ್ದನ್ನು ದೋಚಿಕೊಂಡು ಗರಾಜಿನ ಬಾಗಿಲ ಮೂಲಕ ತಪ್ಪಿಸಿಕೊಂಡು ಹೋಗಲು ಗರಾಜಿನ ಷಟರ್ ಬಾಗಿಲನ್ನು ತೆರೆಯಲು ಪ್ರಯತ್ನಿಸುತ್ತಾನೆ. ಆದರೆ ಅದು ಏನೋ ರಿಪೇರಿಯಾಗಿ ತೆರೆಯುವುದಿಲ್ಲ. ಹೋಗಲಿ ಮನೆಯೊಳಗೆ ಹೋಗೋಣವೆಂದು ನೋಡಿದರೆ, ಅವನು ಒಳಗೆ ಬರುವಾಗ ಮನೆಯಿಂದ ಗರಾಜಿನೊಳಕ್ಕೆ ಪ್ರವೇಶವಿರುವ ಬಾಗಿಲನ್ನು ಎಳೆದುಕೊಂಡು ಬಂದಿದ್ದರಿಂದ ಅದೂ ಲಾಕ್ ಆಗಿಹೋಗಿರುತ್ತದೆ. ಕಳ್ಳ ಗರಾಜಿನಲ್ಲಿ ಬಂಧಿಯಾಗಿಬಿಡುತ್ತಾನೆ. ಪ್ರವಾಸ ಹೋಗಿದ್ದ ಮನೆಯವರು ಎಂಟು ದಿನಗಳ ನಂತರ ವಾಪಸಾಗುತ್ತಾರೆ. ಅಷ್ಟೂ ದಿನ ಆ ಕಳ್ಳ ಗರಾಜಿನಲ್ಲಿಟ್ಟಿದ್ದ ಪೆಪ್ಸಿ ಕುಡಿದುಕೊಂಡು, ಅಲ್ಲಿಯೆ ಇದ್ದ ನಾಯಿ-ತಿಂಡಿ ತಿಂದುಕೊಂಡು ಕಾಲ ಹಾಕುತ್ತಾನೆ. ಮನೆಯವರು ಬಂದು ಬಾಗಿಲು ತೆಗೆದ ಮೇಲೆ ಇವನು ಮನೆ ಮಾಲೀಕರ ಇನ್ಷೂರೆನ್ಸ್ ಕಂಪನಿಯ ವಿರುದ್ದ, ತಾನು ಹೀಗೆ ಸಿಕ್ಕಿಹಾಕಿಕೊಂಡು ಇರಬೇಕಾಗಿ ಬಂದಿದ್ದರಿಂದ ತನಗೆ ಮಾನಸಿಕವಾಗಿ ಅಘಾತವಾಗಿದೆ ಎಂದು ಕೇಸು ಹಾಕುತ್ತಾನೆ. ಅವನ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಅವನಿಗೆ 5 ಲಕ್ಷ ಡಾಲರ್ ಪರಿಹಾರ ಕೊಡಿಸುತ್ತದೆ!
  • ಒಬ್ಬ ತನ್ನ ನೆರೆಮನೆಯವನ ನಾಯಿಗೆ ತನ್ನ ಆಟಿಕೆ ಗನ್ನಿನಿಂದ ಆಟದ ಗೋಲಿಗಳನ್ನು ಹೊಡೆದು ರೇಗಿಸುತ್ತಿರುತ್ತಾನೆ. ನಾಯಿಯನ್ನು ಚೈನುಗಳಿಂದ ಬೇರೆ ಕಟ್ಟಿಹಾಕಿರುತ್ತಾರೆ. ಹಾಗಾಗಿ ಅದಕ್ಕೆ ತಪ್ಪಿಸಿಕೊಳ್ಳಲೂ ಆಗುವುದಿಲ್ಲ. ಇವನು ಹುಡುಗಾಟಿಕೆ ಮಾಡುತ್ತ ಅದರ ಹತ್ತಿರ ಹೋಗಿಬಿಟ್ಟಾಗ ಅದು ಅವನು ಕುಂಡಿಯನ್ನು ಕಚ್ಚಿ ಬಿಡುತ್ತದೆ. ಇವನು ಸೀದಾ ಕೋರ್ಟಿಗೆ ಹೋಗುತ್ತಾನೆ. ನ್ಯಾಯಾಲಯ ಅವನ ವೈದ್ಯಕೀಯ ವೆಚ್ಚಕ್ಕಾಗಿ 14500 ಡಾಲರ್ ನೀಡಲು ನಾಯಿಯ ಮಾಲೀಕನಿಗೆ ಆದೇಶ ನೀಡುತ್ತದೆ.
  • ಹೋಟೆಲಿನಲ್ಲಿ ಹೆಂಗಸೊಂದು ನೆಲದ ಮೇಲೆ ಚೆಲ್ಲಿದ್ದ ಕೂಲ್‌ಡ್ರಿಂಕ್‌ನ ಮೇಲೆ ಕಾಲು ಜಾರಿ ಬಿದ್ದು ತನ್ನ ಬೆನ್ನುಮೂಳೆ ಮುರಿದುಕೊಳ್ಳುತ್ತಾಳೆ. ಅದಕ್ಕೆ ಪರಿಹಾರವಾಗಿ ಅವಳಿಗೆ 1,13,500 ಡಾಲರ್ ನೀಡಲು ಹೋಟೆಲ್‌ಗೆ ನ್ಯಾಯಾಲಯ ಆದೇಶಿಸುತ್ತದೆ. ಇಷ್ಟಕ್ಕೂ ನೆಲ ಯಾಕೆ ಒದ್ದೆಯಾಗಿತ್ತು ಅಂದರೆ, ಅದೇ ಹೆಂಗಸು ತಾನು ಬೀಳುವುದಕ್ಕೆ ಅರ್ಧ ನಿಮಿಷದ ಮೊದಲು ತನ್ನ ಬಾಯ್‌ಫ಼್ರೆಂಡ್ ಜೊತೆ ವಾದ ಮಾಡುತ್ತ ಕುಳಿತಿದ್ದಾಗ ಕೋಪ ಬಂದು ತಾನು ಕುಡಿಯುತ್ತಿದ್ದ ಪಾನೀಯವನ್ನು ಅವನ ಮುಖಕ್ಕೆ ರಾಚಿರುತ್ತಾಳೆ!


ಮೊದಲೇ ಅಮೇರಿಕ ಅಂದರೆ ಅಸಾಧ್ಯದ ನಾಡು. ಇಲ್ಲಿ ಜನ ಒಬ್ಬರನ್ನೊಬ್ಬರು ಸೂ ಮಾಡುವ ಬಗ್ಗೆ ದಂತಕತೆಗಳೇ ಇವೆ. ನಂಬಲೂ ಆಗದ, ಬಿಡಲೂ ಆಗದ ಮೇಲಿನ ಘಟನೆಗಳನ್ನು ಯಾರಾದರೂ ಹೇಳಿದರೆ, ಅದೂ ಪತ್ರಿಕೆಗಳಲ್ಲಿಯೊ, ವೆಬ್‌ಸೈಟುಗಳಲ್ಲಿಯೊ ಬಂದುಬಿಟ್ಟರೆ, ನಂಬದೆ ಇರಲು ಸಾಧ್ಯವೇ ಇಲ್ಲ. ಅಮೇರಿಕದ ಮೂರನೆ ಅತಿ ದೊಡ್ಡ ವಾರಪತ್ರಿಕೆಯಾದ U.S. News & World Report ದ ಮಾಲೀಕನೂ ಹಾಗೂ ಸ್ವತಃ ಪತ್ರಕರ್ತನಾದ ಮಾರ್ಟ್ ಜ಼ುಕರ್ಮನ್ ಒಮ್ಮೆ ಜನ ಹೇಗೆ ಲಾಸೂಟ್‌ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂದು ಬರೆಯುತ್ತ, ಮೇಲಿನ ಜಾರಿಬಿದ್ದ ಹೆಂಗಸಿನ ಕತೆಯನ್ನು ಉಲ್ಲೇಖಿಸಿದ್ದ. ಆದರೆ ಮೇಲಿನ ಯಾವುವೂ ನಿಜವಲ್ಲ. ಎಲ್ಲಾ ಗಾಳಿಕತೆಗಳೆ. ಯಾರದೋ ತಮಾಷೆಗೆ ಹುಟ್ಟಿಕೊಂಡವು. ಆದರೆ, ಇವುಗಳ ಸತ್ಯಾಸತ್ಯತೆ ಗೊತ್ತಿಲ್ಲದೆ, ಹೌದೇನೋ ಎಂದು ನಂಬಿರುವ, ನಂಬುತ್ತಿರುವ, ಬರೆಯುತ್ತಿರುವ, ಈ ಕತೆಗಳನ್ನು ಇಮೇಯ್ಲ್‌ಗಳಲ್ಲಿ ಕಳುಹಿಸುತ್ತಿರುವ ಲಕ್ಷಾಂತರ ಜನರು ಇದ್ದಾರೆ.

ನಮ್ಮಲ್ಲಿಯೂ ಅನೇಕ ವಿಚಾರಗಳಿಗೆ ಎಲ್ಲೆಲ್ಲಿಯೊ ಎಂತಂತಹುದೊ ಗಾಳಿಸುದ್ದಿಗಳು ಹಬ್ಬಿಬಿಡುತ್ತವೆ. ಕೋಳಿಬಲಿ ಕೊಡದಿದ್ದರೆ ಮಗನೊಬ್ಬನಿಗೆ ಅಪಾಯ ಕಾದಿದೆ ಎಂಬ ಸುದ್ದಿ ಹಬ್ಬಿ ಮೈಸೂರಿನ ಕಡೆ ಗಂಡು ಮಕ್ಕಳಿರುವವರು ಕೋಳಿ ಬಲಿ ನೀಡುತ್ತಿದ್ದಾರೆ, ಹಾಗಾಗಿ ಕೋಳಿಗಳ ಬೆಲೆ ಗಗನಕ್ಕೇರಿದೆ ಎಂದು ಪತ್ರಿಕೆಯೊಂದು ಕಳೆದ ವಾರ ವರದಿ ಮಾಡಿತ್ತು. ಇದು ಯಾರೊ ಕುಚೇಷ್ಟೆ ಮಾಡುವವರ ಇಲ್ಲವೆ ಕೋಳಿ ಫಾರಂ ಮಾಲೀಕರ ತಂತ್ರ ಎಂದು ಭಾವಿಸಬಹುದು. ಆದರೆ, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಪತ್ರಕರ್ತರು, ಸಾಹಿತಿಗಳು ಸಹ ಇಂತಹವೆ ಗಾಳಿಸುದ್ದಿ ಹಬ್ಬಿಸಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಶೋಚನೀಯ.

ಎಸ್.ಎಲ್. ಭೈರಪ್ಪನವರು ಕನ್ನಡದ ಜನಪ್ರಿಯ ಕಾದಂಬರಿಕಾರರಲ್ಲೊಬ್ಬರು. ಅವರ ಇತ್ತೀಚಿನ ಕಾದಂಬರಿ "ಆವರಣ" ಎರಡು ವಾರಗಳ ಹಿಂದೆಯಷ್ಟೆ ಬಿಡುಗಡೆಯಾಗಿದೆ. ಅದು ಬಿಡುಗಡೆಯಾದ ಮೇಲೆ ಅದನ್ನು ಓದಿದ ಕೆಲವರು ಕೂಡಲೆ, "ಸರ್ಕಾರ ಇದನ್ನು ಬ್ಯಾನ್ ಮಾಡುವ ಸಾಧ್ಯತೆಗಳಿವೆ, ಹಾಗಾಗಿ ಈಗಾಗಲೆ ಅನೇಕ ಪ್ರತಿಗಳು ಸದ್ದಿಲ್ಲದೆ ಮಾರಾಟವಾಗಿ ಹೋಗಿವೆ, ಕಾವೇರಿಯ ಶಾಖ ಕಮ್ಮಿಯಾದ ಮೇಲೆ ಆವರಣದ ಶಾಖ ಹಬ್ಬುವ ಸಾಧ್ಯತೆಗಳಿವೆ, ಆವರಣಕ್ಕೆ ಬೇಲಿ ಬೀಳುವ ಮುನ್ನ ಓದಿ ಬಿಡಿ," ಎಂದೆಲ್ಲ ಬರೆಯುತ್ತ, ಅದನ್ನು ಪತ್ರಿಕೆಗಳಲ್ಲಿ, ವೆಬ್‌ಸೈಟುಗಳಲ್ಲಿ ಪ್ರಕಟಿಸುತ್ತ ಇಲ್ಲದ ಬೆಂಕಿಗೆ ಗಾಳಿ ಹಾಕಲು ಒದ್ದಾಡುತ್ತಿದ್ದಾರೆ! ಹೀಗೆ ಹೇಳುತ್ತಿರವವರೆಲ್ಲರೂ ಭೈರಪ್ಪನವರ ಅಭಿಮಾನಿಗಳೆ ಎಂಬುದು ಇಲ್ಲಿನ ವಿಚಿತ್ರ! ಅಥವ ಇದೂ ಒಂದು ತಂತ್ರವೆ? ಉದ್ಧೇಶಪೂರ್ವಕ ಸಂಚೆ? ಭೈರಪ್ಪ, ಮಾಸ್ತಿ, ಕೆ.ವಿ.ನಾರಾಯಣ, ಕಾರ್ನಾಡ್, ಯಾರಾದರೇನು? ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಒಂದೇ ಅಲ್ಲವೆ?

Feb 10, 2007

ನೌಕರರನ್ನು ಲಾಭಕ್ಕೆ ಮಾರಿಕೊಳ್ಳುತ್ತಿರುವ ಇನ್ಫೋಸಿಸ್, ವಿಪ್ರೊ!!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಫ಼ೆಬ್ರವರಿ 23, 2007 ರ ಸಂಚಿಕೆಯಲ್ಲಿನ ಲೇಖನ)

ಇವತ್ತು ಇನ್ಫೋಸಿಸ್, ಟಿಸಿಎಸ್, ವಿಪ್ರೊ, ಸತ್ಯಂ ಅಂತಹ ಭಾರತೀಯ ಕಂಪನಿಗಳು ಬಿ.ಪಿ.ಒ. ದಂತಹ ಕಾಲ್ ಸೆಂಟರ್, ಕಸ್ಟಮರ್ ಸರ್ವಿಸ್ ಕ್ಷೇತ್ರ ಬಿಟ್ಟು ಸಾಫ಼್ಟ್‌ವೇರ್ ರಂಗದಲ್ಲಿ ನಿಜವಾಗಲೂ ಏನು ಮಾಡುತ್ತಿವೆ ಎನ್ನುವುದರ ಬಗ್ಗೆ ಐಟಿ ರಂಗದ ಬಗ್ಗೆ ಅಷ್ಟೇನೂ ಚೆನ್ನಾಗಿ ಗೊತ್ತಿಲ್ಲದ ಓದುಗರಿಗೆ ಸುಲಭವಾಗಿ ಕೊಡಬಹುದಾದ ಹೋಲಿಕೆ ಎಂದರೆ, ಮನೆ ಕಾಂಟ್ರ್ಯಾಕ್ಟರ್‌ಗಳ ಕೆಲಸ ಮಾಡುತ್ತಿವೆ ಎಂದು! ಕಳೆದ ಇಪ್ಪತ್ತು-ಮುವ್ವತ್ತು ವರ್ಷಗಳಲ್ಲಿ ಬೆಂಗಳೂರಿನಂತಹ ನಗರಗಳಲ್ಲಿ ಮನೆ ಕಟ್ಟಿಸುವ ರೀತಿ-ರಿವಾಜು ಬದಲಾದದ್ದು ತಮಗೆಲ್ಲ ಗೊತ್ತಿರಬಹುದು. ಮನೆ ಕಟ್ಟಬೇಕೆಂದರೆ ಮೊದಲೆಲ್ಲ ಮಾಲೀಕ ಮನೆಯ ಪ್ಲಾನ್ ಮಾಡಿಸಿ, ಗುದ್ದಲಿ ಪೂಜೆಯಾದ ಮೇಲೆ ನಾಲ್ಕಾರು ಜನ ದಿನಗೂಲಿಗಳನ್ನು ಇಟ್ಟುಕೊಂಡು ಪಾಯ ಅಗೆಯುಸುತ್ತಿದ್ದ. ಅದು ಮುಗಿದ ಮೇಲೆ ಒಂದಿಬ್ಬರು ಗಾರೆಯವರನ್ನು ಇಟ್ಟುಕೊಂಡು ಕಲ್ಲಿನ ಪಾಯ ಹಾಕಿಸುತ್ತಿದ್ದ. ಅಷ್ಟೊತ್ತಿಗೆ ಬಡಗಿಯವರನ್ನು ಕರೆದುಕೊಂಡು ಹೋಗಿ ಮರದ ಸಾಮಾನು ತಂದು ಕಿಟಕಿ, ಬಾಗಿಲುಗಳನ್ನು ರೆಡಿ ಮಾಡಿಸುತ್ತಿದ್ದ. ಆಮೇಲೆ ಪಾಯದ ಬೆಡ್ ಮೇಲೆ ಬಾಗಿಲು ಇಟ್ಟು, ಇಟ್ಟಿಗೆಯ ಗೋಡೆ ಎಬ್ಬಿಸುತ್ತಿದ್ದ. ನಂತರ ಮೌಲ್ಡ್ ಹಾಕಿಸುವುದು, ಅದಕ್ಕೆ ಬೇಕಾದ ಕಂಬಿ, ಜಲ್ಲಿ, ಸಿಮೆಂಟ್ ತರಿಸುವುದು, ಅದಾದ ಮೇಲೆ ಪ್ಲಾಸ್ಟರ್ ಮಾಡಿಸುವುದು, ಆಮೇಲೆ ಪ್ಲೋರಿಂಗ್; ಪ್ಲಂಬರ್ ಇಟ್ಟುಕೊಂಡು ಬಚ್ಚಲು, ಟಾಯ್ಲೆಟ್ ಮಾಡಿಸುವುದು; ಎಲೆಕ್ಟ್ರಿಕಲ್ ಕೆಲಸ ಮಾಡುವವರನ್ನು ಇಟ್ಟುಕೊಂಡು ಮನೆಯೆಲ್ಲ ವೈರಿಂಗ್ ಮಾಡಿಸುವುದು; ಇತ್ಯಾದಿ. ಹೀಗೆ ಎಲ್ಲವನ್ನೂ ತಾನೆ ನಿಂತು, ಜನರನ್ನು ದಿನಗೂಲಿ ಲೆಕ್ಕದಲ್ಲಿ ಇಟ್ಟುಕೊಂಡು ಮಾಡಿಸುತ್ತಿದ್ದ. ಈ ಎಲ್ಲಾ ಸಮಯದಲ್ಲಿ, ಮನೆ ಕಟ್ಟಲು ಬೇಕಾದ ಕಲ್ಲು, ಜಲ್ಲಿ, ಇಟ್ಟಿಗೆ, ಸಿಮೆಂಟ್, ಮರಳು, ಮರದ ಸಾಮಾನು, ಎಲೆಕ್ಟ್ರಿಕ್ ಸಾಮಾನುಗಳು, ಮೊಸಾಯಿಕ್, ಮಾರ್ಬಲ್, ಸುಣ್ಣ-ಬಣ್ಣ ಹೀಗೆ ಪ್ರತಿಯೊಂದನ್ನೂ ಗಾರೆಯವರನ್ನೊ ಇಲ್ಲವೆ ಗೊತ್ತಿದ್ದವರನ್ನೊ ಕೇಳಿ ತಾನೇ ಕೊಂಡು ತರುತ್ತಿದ್ದ. ಯಾವುದೆ ಒಂದು ಕೆಲಸವನ್ನು ಗುತ್ತಿಗೆ ನೀಡುತ್ತಿದ್ದದ್ದು ಬಹಳ ಅಪರೂಪವಾಗಿತ್ತು. ಯಾಕೆಂದರೆ, ತಾನೆ ನಿಂತು ಮಾಡಿಸಿದರೆ ಒಂದಷ್ಟು ದುಡ್ಡು ಖಂಡಿತವಾಗಿ ಉಳಿತಾಯವಾಗುತ್ತಿತ್ತು. ಅಷ್ಟೂ ಬೇಕಾಗಿದ್ದರೆ, ಉಸ್ತುವಾರಿ ನೋಡಿಕೊಳ್ಳಲು ಒಬ್ಬ ಮೇಸ್ತ್ರಿಯನ್ನು ಇಟ್ಟುಕೊಳ್ಳುತ್ತಿದ್ದ. ಈ ಮೇಸ್ತ್ರಿಗಳು ಸಹ ಒಂದಲ್ಲ ಒಂದು ಸಮಯದಲ್ಲಿ ಗಾರೆ ಕೆಲಸ ಮಾಡಿ, ಈಗ ಮೇಸ್ತ್ರಿ ಪಟ್ಟಕ್ಕೆ ಬಡ್ತಿ ಪಡೆದವರೆ ಆಗಿರುತ್ತಿದ್ದರು.

ಆದರೆ ಕಳೆದ ಎರಡು ಮೂರು ದಶಕಗಳಲ್ಲಿ ಕಾಲ ಬಹಳ ಬದಲಾಯಿತು. ಸರಿಯಾಗಿ ವ್ಯವಹಾರ ಜ್ಞಾನ ಗೊತ್ತಿಲ್ಲದವರು ಅನೇಕ ಕಡೆ ಮೋಸ ಹೋಗುತ್ತಿದ್ದರು. ಗಾರೆಯವರನ್ನು, ಸಿಮೆಂಟ್ ಕಲಸುವವರನ್ನು, ಬಡಗಿಯನ್ನು, ಹೀಗೆ ಅಂದಿನ ಕೆಲಸಕ್ಕೆ ಬೇಕಾದವರನ್ನು ಹೊಂದಿಸುವುಷ್ಟರಲ್ಲಿ ಸಾಕಾಗಿಬಿಡುತ್ತಿತ್ತು. ಅದೇ ಸಮಯದಲ್ಲಿ, ಆತ ಉದ್ಯೋಗಸ್ಥನಾಗಿದ್ದರೆ ಬೆಳಿಗ್ಗೆಯಿಂದ ಸಾಯಂಕಾಲದ ತನಕ ಮನೆಯ ಮುಂದೆಯೆ ಇದ್ದು ಗುಣಮಟ್ಟದ ಕೆಲಸವಾಗುವಂತೆ ನೋಡಿಕೊಳ್ಳಲು, ಕೂಲಿಗಳು ಕಾಮ್ ಚೋರ್‌ಗಳಾಗದೆ ಕೆಲಸ ಮಾಡುವಂತೆ ಕಾಯುವುದು ಬಹಳ ಕಷ್ಟವಾಗುತ್ತಿತ್ತು. ಇಂತಹ ಕಷ್ಟದ ಸಮಯದಲ್ಲಿ ಹುಟ್ಟಿಕೊಂಡವರು ಈ ಮನೆ ಕಟ್ಟಿಸಿಕೊಡುವ ಕಾಂಟ್ರ್ಯಾಕ್ಟರ್‌ಗಳು ಮತ್ತು ಚದರದ ಲೆಕ್ಕದಲ್ಲಿ ಮನೆ ಕಟ್ಟಿಸುವ ಗುತ್ತಿಗೆ ಒಪ್ಪಂದಗಳು. ಇವರಲ್ಲಿ ಬಹಳಷ್ಟು ಜನ ಈ ಹಿಂದೆ ಮೇಸ್ತ್ರಿಗಳಾಗಿದ್ದವರೆ ಆಗಿರುತ್ತಿದ್ದರು. ಅವರು ಮನೆ ಕಟ್ಟುವ ಇಡೀ ವ್ಯವಹಾರದ ಒಳಹೊರಗನ್ನು ಚೆನ್ನಾಗಿ ತಿಳಿದವರಾಗಿರುತ್ತಿದ್ದರು. ಮನೆ ಕಟ್ಟಿಸಲು ನಿಂತ ಮಾಲೀಕನಿಗಿಂತ ಈ ಮೇಸ್ತ್ರಿಗಳಿಗೆ ಯಾವುದಕ್ಕೆ ಎಷ್ಟು ಖರ್ಚಾಗುತ್ತದೆ, ಯಾವ್ಯಾವ ಸಾಮಾನುಗಳನ್ನು ಎಲ್ಲಿಂದ ತರಿಸಬೇಕು, ಕೂಲಿ ಮಾಡುವವರು ಎಲ್ಲಿ ಸಿಗುತ್ತಾರೆ, ಯಾರಿಗೆ ಎಷ್ಟು ಕೂಲಿ ಎಂದೆಲ್ಲ ಚೆನ್ನಾಗಿ ಗೊತ್ತಿರುತ್ತಿತ್ತು.

ಇದರಿಂದ ಮನೆ ಕಟ್ಟಿಸುವವರಿಗೆ ಆದ ನಷ್ಟ ಏನೆಂದರೆ, ತಾವೆ ನಿಂತು ಮನೆ ಕಟ್ಟಿಸುವುದಕ್ಕಿಂತ ಸ್ವಲ್ಪ ಹೆಚ್ಚು ದುಡ್ಡು ಖರ್ಚಾಗುತ್ತಿತ್ತು. ಆದರೆ ಲಾಭ ಮಾತ್ರ ಬಹಳಷ್ಟು. ಅವರು ತಾವು ಮಾಡುತ್ತಿರುವ ಉದ್ಯೋಗಕ್ಕೆ ರಜೆ ಹಾಕುವ ಅವಶ್ಯಕತೆಯಿರುವುದಿಲ್ಲ; ಸಾಮಾನು ಹೊಂದಿಸುವ, ಗಾರೆ ಕೆಲಸದವರನ್ನು, ಕೂಲಿಗಳನ್ನು ಹೊಂದಿಸುವ ತಲೆಬಿಸಿ ಇಲ್ಲ. ಯಾವುದೊ ಸಾಮಾನು ತರಲು ಹೋಗಿ ಮೋಸಕ್ಕೆ ಒಳಗಾಗಿ ಮೈಪರಚಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲ. ಪ್ರತಿದಿನ ಸಾಯಂಕಾಲ ಅಂದಿನ ಕೆಲಸದ ಗುಣಮಟ್ಟವನ್ನು ಪರೀಕ್ಷಿಸಿ, ಆದ ಕೆಲಸಕ್ಕೆ ವಾರಕ್ಕೊಮ್ಮೆ ಬಟವಾಡೆ ಮಾಡಿ, ಮನೆ ಸಂಪೂರ್ಣವಾಗಿ ಮುಗಿದ ಮೇಲೆ ಮೊದಲೇ ಆದ ಒಪ್ಪಂದದಂತೆ ಲೆಕ್ಕ ಚುಕ್ತಾ ಮಾಡಿದರೆ ಅಲ್ಲಿಗೆ ಮನೆ ಕಟ್ಟಿಸುವ ಕೆಲಸ ಮುಗಿಯಿತು.

ನಮ್ಮ ಟಿಸಿಎಸ್, ಇನ್ಫೋಸಿಸ್, ವಿಪ್ರೊ, ಸತ್ಯಂ ಅಂತಹ ಕಂಪನಿಗಳು ಪ್ರಾರಂಭದಲ್ಲಿ ಮಾಡಲಾರಂಭಿಸಿದ್ದು ಈ ಕಾಂಟ್ರ್ಯಾಕ್ಟರ್‌ಗಳು ಮಾಡುವ ಕೆಲಸವನ್ನೆ. ಅಮೇರಿಕದ ದೊಡ್ಡದೊಡ್ಡ ಕಂಪನಿಗಳು ಯಾವಾಗ ತಮ್ಮ ಕೆಲವು ಸಣ್ಣಪುಟ್ಟ ಕೆಲಸಗಳನ್ನು ಬೇರೆಯವರಿಗೆ ಗುತ್ತಿಗೆ ಕೊಡಬಹುದು ಎಂದು ಭಾವಿಸಿದವೊ, ಆಗ ನಮ್ಮ ದೇಶದ ಐಟಿ ಕಂಪನಿಗಳು ಆ ಟೆಂಪರರಿ ಕೆಲಸಗಳನ್ನು ಮಾಡಿಕೊಡಲಾರಂಭಿಸಿದರು. ಈ ಕೆಲಸಗಳನ್ನು ನಮ್ಮವರು ಭಾರತದಲ್ಲಿ ಕುಳಿತೇ ಮಾಡಬಹುದಾದ್ದರಿಂದ ಖರ್ಚು ಬಹಳ ಕಮ್ಮಿ ಬೀಳುತ್ತಿತ್ತು. ಇದೇ ಕೆಲಸವನ್ನು ಅಮೇರಿಕದ ಕಂಪನಿಗಳು ತಮ್ಮ ದೇಶದಲ್ಲಿ ಮಾಡಿಸಬೇಕಿದ್ದರೆ ಅವರಿಗೆ ಹೆಚ್ಚಿನ ಖರ್ಚು ತಗುಲುತ್ತಿತ್ತು. ಏಕೆಂದರೆ, ಈ ಸಣ್ಣಪುಟ್ಟ ಕೆಲಸಗಳು ಬಹಳ ಮುಖ್ಯವಾದವುಗಳಾಗಿದ್ದರೂ ಅದಕ್ಕಾಗಿ ಅವರು ಫುಲ್‌ಟೈಮ್ ನೌಕರರನ್ನು ನೇಮಿಸಿಕೊಂಡರೆ ಅದು ಅನಗತ್ಯವಾಗಿ ಹೆಚ್ಚಿನ ಹೊರೆ; ಆ ಪ್ರಾಜೆಕ್ಟ್ ಮುಗಿದ ಮೇಲೆ ಇನ್ನೊಂದು ಪ್ರಾಜೆಕ್ಟ್ ಶುರುವಾಗುವ ತನಕವೂ ಹೊಸಬರನ್ನು ಸುಮ್ಮನೆ ಕೂರಿಸಿಕೊಂಡು ಸಂಬಳ ಕೊಡಬೇಕಾಗುತ್ತಿತ್ತು. ಆದರೆ, ಹೊರಗುತ್ತಿಗೆ ನೀಡುವುದರಿಂದ ಅವರಿಗೆ ಈ ಸಮಸ್ಯೆಗಳು ಇರುತ್ತಿರಲಿಲ್ಲ. ಹಾಗಾಗಿ, ಮಾಹಿತಿ ತಂತ್ರಜ್ಞಾನ ಬೆಳೆಯುತ್ತ ಹೋದಂತೆ ಭಾರತೀಯ ಕಂಪನಿಗಳಿಗೆ ಕಾಂಟ್ರ್ಯಾಕ್ಟ್‌ಗಳೂ, ಲಾಭವೂ ಹೆಚ್ಚುತ್ತ ಹೋಯಿತು.

ಈಗಲೂ ಭಾರತದ ಐಟಿ ಉದ್ದಿಮೆ ನಿಲ್ಲದೆ ಬೆಳೆಯುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಹೊರಗುತ್ತಿಗೆ ನೀಡುವುದರಿಂದ ಲಾಭವೇ ಇರುವುದರಿಂದ, ಹಾಗೂ ಅವರವೇ ದೇಶದ ಸರ್ವಿಸಸ್ ಕಂಪನಿಗಳು ಕೇಳುವುದಕ್ಕಿಂತ ಕಮ್ಮಿ ಬೆಲೆಗೆ ನಮ್ಮವರು ಮಾಡಿಕೊಡುವುದರಿಂದ, ಹಾಗೂ ನಮ್ಮವರು ಇಲ್ಲಿಯತನಕ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಸಾಬೀತು ಮಾಡಿ, ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡಿರುವುದರಿಂದ, ಅಮೇರಿಕ, ಬ್ರಿಟನ್‌ನಂತಹ ರಾಷ್ಟ್ರಗಳಲ್ಲಿ ನುರಿತ ಇಂಜಿನಿಯರ್‌ಗಳ ಕೊರತೆಯಿರುವುದರಿಂದ, ಈ ಹೊರಗುತ್ತಿಗೆ ಟ್ರೆಂಡ್ ಇನ್ನೂ ಐದಾರು ವರ್ಷ ಯಾವುದೆ ಅಡೆತಡೆ ಇಲ್ಲದೆ ನಡೆಯುವ ಸಾಧ್ಯತೆ ಇದ್ದೇ ಇದೆ. ಇದೇ ಸಮಯದಲ್ಲಿ ಕೆಲವು ಎಮ್‌ಎನ್‌ಸಿಗಳು ಇನ್ಫೋಸಿಸ್ ಮತ್ತು ವಿಪ್ರೋಗೆ ಪರ್ಯಾಯವಾಗಿ ತಾವೇ ಭಾರತದಲ್ಲಿ ಅಂತಹುದೆ ಸರ್ವಿಸಸ್ ಕಂಪನಿಗಳನ್ನು ತೆರೆಯುತ್ತ ಬಂದಿವೆ. ಭಾರತದಲ್ಲಿನ ತನ್ನ ಉದ್ಯೋಗಿಗಳ ಸಂಖ್ಯೆಯ ವಿಷಯದಲ್ಲಿ ಈಗಾಗಲೆ ಐಬಿಎಮ್ ಕಂಪನಿ ವಿಪ್ರೊ ಟೆಕ್ನಾಲಜೀಸ್‌ನ ಸಮಕ್ಕೆ ಬಂದು ನಿಂತಿದೆ.

ಇತ್ತೀಚಿನ ವರದಿಗಳ ಪ್ರಕಾರ ದೇಶದ ಅತಿ ದೊಡ್ಡ ಸಾಫ಼್ಟ್‌ವೇರ್ ಸರ್ವಿಸಸ್ ಕಂಪನಿಯಾದ ಟಿಸಿಎಸ್ ಪ್ರಪಂಚದಾದ್ಯಂತ 80000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ಅವರಲ್ಲಿ ಬಹುಪಾಲು ಭಾರತದಲ್ಲಿಯೆ ಇದ್ದಾರೆ. ಹಾಗೆಯೆ, ಇನ್ಫೋಸಿಸ್‌ನ ಒಟ್ಟು ನೌಕರರ ಸಂಖ್ಯೆ ಈಗ 69432 ಇದ್ದರೆ, ವಿಪ್ರೋ ಟೆಕ್ನಾಲಜೀಸ್‌ನ ವಿಶ್ವವ್ಯಾಪಿ ನೌಕರರ ಒಟ್ಟು ಸಂಖ್ಯೆ 53000 ಕ್ಕಿಂತ ಸ್ವಲ್ಪ ಹೆಚ್ಚು. ಆದರೆ ಇದೇ ಸಮಯದಲ್ಲಿ ಅಮೇರಿಕದ ಬಹುರಾಷ್ಟ್ರೀಯ ಕಂಪನಿ ಐಬಿಎಮ್‌ದ ಕೇವಲ ಭಾರತದಲ್ಲಿನ ಉದ್ಯೋಗಿಗಳ ಸಂಖ್ಯೆ 53000 ಮುಟ್ಟಿಕೊಂಡಿದೆ! ಆ ಲೆಕ್ಕದಲ್ಲಿ ಇಂದು ಐಬಿಎಮ್ ವಿಪ್ರೋ ಟೆಕ್ನಾಲಜೀಸ್‌ಗಿಂತ ಹೆಚ್ಚು ಭಾರತೀಯರಿಗೆ ಕೆಲಸ ನೀಡಿದೆ! ಇನ್ನು ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆ 1 ಲಕ್ಷ ಮುಟ್ಟಲಿದೆ ಎಂದು ಅಂದಾಜಿದ್ದು, ಈ ದೈತ್ಯ ಕಂಪನಿ 25000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಭಾರತದಲ್ಲಿ ಈ ಸಮಯದಲ್ಲಿ ತೊಡಗಿಸಲಿದೆ. ಹಾಗೆಯೆ, ಭಾರತದಲ್ಲಿ ಈಗಾಗಲೆ 27000 ನೌಕರರನ್ನು ಹೊಂದಿರುವ ಆಕ್ಸೆಂಚರ್ ಕಂಪನಿ ಇನ್ನು ಆರು ತಿಂಗಳಿನಲ್ಲಿ 35000 ಉದ್ಯೋಗಿಗಳನ್ನು ಹೊಂದಲಿದೆಯಂತೆ.

ಭಾರತದ ಮಾಹಿತಿ ತಂತ್ರಜ್ಞಾನ ಉದ್ದಿಮೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಿಗೂ ನಮ್ಮವೇ ಆದ ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಸತ್ಯಂಗಳಿಗೂ ಒಂದು ವ್ಯತ್ಯಾಸವಿದೆ. ಆಕ್ಸೆಂಚರ್, ಇಡಿಎಸ್ ನಂತಹ ಕೆಲವು ಸರ್ವಿಸಸ್ ಕಂಪನಿಗಳನ್ನು ಬಿಟ್ಟರೆ ಮಿಕ್ಕ ಐಬಿಎಮ್, ಎಚ್‌ಪಿ, ಡೆಲ್, ಮೈಕ್ರೋಸಾಫ಼್ಟ್, ಜಿಇ, ನಾವೆಲ್, ಸಿಸ್ಕೊ, ಇಂಟೆಲ್, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್, ಯಾಹೂ, ಗೂಗಲ್ ಮುಂತಾದವರು ತಮ್ಮದೇ ಆದ ಉತ್ಪನ್ನಗಳನ್ನು ಹೊಂದಿರುವವರು. ಇವರು ಭಾರತದಲ್ಲಿ ಮಾಡುವುದೆಲ್ಲವೂ ತಮ್ಮದೇ ಮಾತೃ ಕಂಪನಿಯ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸುವುದು (Product Development), ಅದನ್ನು ಟೆಸ್ಟ್ ಮಾಡುವುದು, ಕಸ್ಟಮರ್ ಸರ್ವಿಸ್ ನೀಡುವುದು, ಇತ್ಯಾದಿ. ಇವರೆಲ್ಲರೂ ಮೇಸ್ತ್ರಿಗಳನ್ನು ಇಟ್ಟುಕೊಂಡು ಸ್ವತಃ ತಾವೆ ನಿಂತು ಮನೆ ಕಟ್ಟಿಕೊಳ್ಳುತ್ತಿರುವವರು!

ಮೊದಲೆ ಹೇಳಿದಂತೆ, ಈ ಔಟ್‌ಸೋರ್ಸಿಂಗ್ ಟ್ರೆಂಡ್ ಇನ್ನೂ ಒಂದಷ್ಟು ವರ್ಷ ನಡೆಯುತ್ತದೆ. ಆದರೆ ಈಗಾಗಲೆ ಭಾರತೀಯ ಕಂಪನಿಗಳಿಗೆ ಸ್ಪರ್ಧೆ ಬಿರುಸಾಗುತ್ತಿದೆ. ಬರುಬರುತ್ತ ಅದು ಇನ್ನೂ ಕಠಿಣವಾಗಬಹುದು. ಬೇರೆ ದೇಶಗಳಲ್ಲಿಯೂ ಸ್ಪರ್ಧಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಹಾಗಾಗಿ ಕಳೆದ ಕೆಲವಾರು ವರ್ಷಗಳಿಂದ ಭಾರತದ ಬಹುಪಾಲು ಸರ್ವಿಸ್ ಕಂಪನಿಗಳ ಬಗ್ಗೆ, ಅವುಗಳು ಭವಿಷ್ಯದಲ್ಲಿ ಇನ್ನೂ ಬೆಳೆಯಲು, ಉಳಿಯಲು ಈಗಿನಿಂದಲೆ ಕೆಲಸ ಶುರು ಮಾಡುವುದರ ಬಗ್ಗೆ ಸಲಹೆ, ಆಕ್ಷೇಪಣೆಗಳು ಗಟ್ಟಿಯಾಗಿ ಕೇಳಿ ಬರುತ್ತಿವೆ. ಇದರಲ್ಲಿ ಮುಖ್ಯವಾದದ್ದು, ಭಾರತದ ದೈತ್ಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ತಾವೆ ಕೆಲವು ಪ್ರಾಡಕ್ಟ್ ಮಾಡಲು ಆರಂಭಿಸುವುದು.

ಈಗ ಮತ್ತೆ ಕಾಂಟ್ರ್ಯಾಕ್ಟರ್ ಹೋಲಿಕೆಗೆ ಬರೋಣ. ಮಹಾತ್ವಾಕಾಂಕ್ಷಿಯಾದ ಗಾರೆಯವನು ಮೇಸ್ತ್ರಿಯಾದ. ನಂತರ ಕಾಂಟ್ರ್ಯಾಕ್ಟರ್ ಆದ. ಒಂದಷ್ಟು ಮೇಸ್ತ್ರಿಗಳನ್ನಿಟ್ಟುಕೊಂಡು ಮೂರ್ನಾಲ್ಕು ಕಡೆ ಕಾಂಟ್ರ್ಯಾಕ್ಟ್ ತೆಗೆದುಕೊಳ್ಳುತ್ತಿದ್ದ. ಕಷ್ಟಪಟ್ಟು ಒಂದಷ್ಟು ಚೆನ್ನಾಗಿ ದುಡಿದ. ಅದಾದ ಮೇಲೆ ಈಗ ಅವನು ತನ್ನದೇ ಫೀಲ್ಡಿನಲ್ಲಿ ಬೆಳೆಯಲು ಏನು ಮಾಡಬೇಕು? ಅಚ್ಚುಕಟ್ಟಾದ ಸ್ಥಳದಲ್ಲಿ ಸ್ವಲ್ಪ ಜಾಗ ತೆಗೆದುಕೊಳ್ಳುತ್ತಾನೆ. ಅಲ್ಲಿ ಕೆಲವು ಕಮರ್ಷಿಯಲ್ ಬಿಲ್ಡಿಂಗ್ ಕಟ್ಟುತ್ತಾನೆ. ಕೆಲವನ್ನು ಮಾರುತ್ತಾನೆ, ಕೆಲವನ್ನು ಬಾಡಿಗೆಗೆ ಕೊಡುತ್ತಾನೆ. ಇದರಿಂದ ಒಳ್ಳೆಯ ಲಾಭ ಮಾಡುತ್ತಾನೆ. ಅದೇ ಸಮಯದಲ್ಲಿ ಕೆಲವು ಜನಕ್ಕೆ ಸುಲಭ ಬೆಲೆಗೆ ಮನೆ ಬೇಕಿರುವುದನ್ನು ಗಮನಿಸುತ್ತಾನೆ. ಮತ್ತೆ ಜಮೀನು ತೆಗೆದುಕೊಂಡು ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್ ಕಟ್ಟುತ್ತಾನೆ. ಮಾರುತ್ತಾನೆ. ಮೊದಲೆಲ್ಲ ಬೇರೆಯವರಿಗೆ ಕಟ್ಟಿಸಿಕೊಡುತ್ತಿದ್ದವನು ಈಗ ತಾನೆ ಕಟ್ಟಿಸಿ ತನ್ನ ಉತ್ಪನ್ನವನ್ನು ಬೇರೆಯವರಿಗೆ ಮಾರುತ್ತಿದ್ದಾನೆ. ಈ ಪಯಣದಲ್ಲಿ ಅವನು ತನ್ನಂತಹವರೆ ಆದ ಇತರ ಬಿಲ್ಡರ್ಸ್ ಜೊತೆ ಪಾಲುಗಾರಿಕೆ ಮಾಡಿಕೊಳ್ಳಬಹುದು. ಸಣ್ಣಪುಟ್ಟ ಬಿಲ್ಡರ್ ಕಂಪನಿಗಳನ್ನು ಕೊಂಡುಕೊಳ್ಳಬಹುದು. ಹೀಗೆ ಕಟ್ಟುತ್ತ, ಕೊಳ್ಳುತ್ತ, ಮಾರುತ್ತ, ಬೇರೆ ಊರುಗಳಿಗೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುತ್ತಾ, ಬೆಳೆಯುತ್ತಾ ಹೋಗುತ್ತಾನೆ.

ಈಗ ಇನ್ಫೋಸಿಸ್, ವಿಪ್ರೋಗಳು ಮಡಬೇಕಿರುವುದೂ ಇದನ್ನೆ. ಆದರೆ ಇಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಸರಿಯಾಗಿ ಮಾರ್ಕೆಟ್ ಸ್ಟಡಿ ಮಾಡಿಲ್ಲದೆ ಹೊದರೆ, ಎಕಾನಮಿ ಏರುಪೇರಾದರೆ, ಜನರ ಅಭಿರುಚಿ, ಅವಶ್ಯಕತೆಗಳು ಬದಲಾದರೆ, ಈಗಾಗಲೆ ಅಂತಹುದೇ ಉತ್ಪನ್ನಗಳನ್ನು ಕೊಡುತ್ತಿರುವವರಿಗಿಂತ ಕಮ್ಮಿ ಬೆಲೆಗೆ ಇನ್ನೂ ಉತ್ತಮವಾದದ್ದನ್ನು ಕೊಡಲಾರದೆ ಹೊದರೆ, ಹಾಕಿದ ದುಡ್ಡು ಬರದೇ ಹೋಗಬಹುದು. ಲಾಭ ಬರಲು ಬಹಳ ದಿನ ಕಾಯಬೇಕಾಗಬಹುದು. ಕಾಂಟ್ರ್ಯಾಕ್ಟ್ ಕೆಲಸದಲ್ಲಿ ಈ ಸಮಸ್ಯೆಗಳಿಲ್ಲ. ಇಂದಿನ ಕೆಲಸಕ್ಕೆ ಇಂದೇ ದುಡ್ಡು ಬರುತ್ತದೆ. ಬಂಡವಾಳ ಹೂಡುವ ಪ್ರಮೇಯವೇ ಬರುವುದಿಲ್ಲ. ಹಾಗಾಗಿ ನಷ್ಟವಾಗಬಹುದಾದ ಸಾಧ್ಯತೆಯೂ ಇರುವುದಿಲ್ಲ. ಬ್ಯುಸಿನೆಸ್ ಡೌನ್ ಆಗುತ್ತಿದ್ದ ಹಾಗೆ ಖರ್ಚು ಕಮ್ಮಿ ಮಾಡಿಕೊಳ್ಳಲು ನೌಕರರನ್ನು ತೆಗೆಯುತ್ತಾ ಹೋದರಾಯಿತು!

ಇಮೇಯ್ಲ್‌ಗಳಲ್ಲಿ ಮೊದಲು ಬಹಳ ಜನಪ್ರಿಯವಾದದ್ದು ಭಾರತೀಯನೇ ಆದ, ಬೆಂಗಳೂರಿನ ಸೇಂಟ್ ಜೋಸೆಫ್ಸ್‌ನಲ್ಲಿ ಓದಿದ ಸಬೀರ್ ಭಾಟಿಯಾರ ಹಾಟ್‌ಮೇಯ್ಲ್. 1996 ಜುಲೈನಲ್ಲಿ ಸುಮಾರು ಒಂದೂಕಾಲು ಕೋಟಿ ರೂಪಾಯಿ ಬಂಡವಾಳದಿಂದ ಆರಂಭವಾದ ಅವರ ಹಾಟ್‌ಮೇಯ್ಲ್ ಉತ್ಪನ್ನ ಎಷ್ಟು ವೇಗದಲ್ಲಿ ಜನಪ್ರಿಯವಾಯಿತೆಂದರೆ, 1997 ರ ಡಿಸೆಂಬರ್‌ನಲ್ಲಿ ಭಾಟಿಯಾ ಹಾಟ್‌ಮೇಯ್ಲ್ ಅನ್ನು 40 ಕೋಟಿ ಡಾಲರ್‌ಗೆ ಮೈಕ್ರೋಸಾಫ಼್ಟ್‌ಗೆ ಮಾರಿದರು! ಅದೇ ಸಮಯದಲ್ಲಿ, ಅಂದರೆ 1997 ರಲ್ಲಿ, ಇಡೀ ಇನ್ಫೋಸಿಸ್ ಕಂಪನಿಯ ವಾರ್ಷಿಕ ವರಮಾನ ಎಷ್ಟು ಗೊತ್ತೆ? ಕೇವಲ 6.5 ಕೋಟಿ ಡಾಲರ್!!

Product ಗಳ ಮೌಲ್ಯ ಮತ್ತು ಪ್ರಾಮುಖ್ಯತೆಯ ಬಗ್ಗೆ ಕೊಡಬಹುದಾದ ಮತ್ತೊಂದು ಉದಾಹರಣೆ, ಯೂಟ್ಯೂಬ್. 2005 ರ ಫೆಬ್ರವರಿಯಲ್ಲಿ ಕೇವಲ ಮೂರು ಜನರಿಂದ ಪ್ರ್ರಾರಂಭವಾದ Youtube ಅನ್ನು ಪ್ರಸಿದ್ಧ ಇಂಟರ್‌ನೆಟ್ ಕಂಪನಿ ಗೂಗ್ಲ್‌ನವರು 2006 ರ ಅಕ್ಟೋಬರ್‌ನಲ್ಲಿ 7400 ಕೋಟಿ ರೂಪಾಯಿಗೆ ಕೊಂಡುಕೊಂಡರು! ಅಷ್ಟು ಮೊತ್ತಕ್ಕೆ ಒಂದೂವರೆ ವರ್ಷದ ಕಂಪನಿಯನ್ನು ಗೂಗ್ಲ್‌ನವರು ಕೊಳ್ಳಲು ಕಾರಣ ಯೂಟ್ಯೂಬ್ ವೆಬ್‌ಸೈಟಿನಲ್ಲಿ ತಮ್ಮ ಉತ್ಪನ್ನಗಳಾದ ಜಾಹಿರಾತುಗಳನ್ನು ಮಾರುವ ಸೇವೆಯನ್ನು ಒದಗಿಸಲು. ಇಲ್ಲಿ ಯೂಟ್ಯೂಬ್ ಆಗಲಿ, ಗೂಗ್ಲ್ ಆಗಲಿ ಪ್ರಾಡಕ್ಟ್ ಕಂಪನಿಗಳೆ ಹೊರತು ವಿಪ್ರೊ, ಇನ್ಫೋಸಿಸ್ ನಂತಹ ಸರ್ವಿಸಸ್ ಕಂಪನಿಗಳಲ್ಲ. ಗುರಿ ಸರಿಯಾಗಿದ್ದಲ್ಲಿ ಪ್ರಾಡಕ್ಟ್ ಕಂಪನಿಗಳು ಬೆಳೆಯುವ ವೇಗ ಇನ್ಫೋಸಿಸ್ ಬೆಳೆಯುವ ವೇಗಕ್ಕಿಂತ ಅನೇಕ ಪಟ್ಟು ಹೆಚ್ಚು!

ಉತ್ಪನ್ನಗಳ ಮೌಲ್ಯ ಮತ್ತು ಅವು ಸೃಷ್ಟಿಸುವ ನೌಕರಿ ಮತ್ತು ಸಂಪತ್ತನ್ನು ಅರಿತಿರುವ 'ಹಾಟ್‌ಮೇಯ್ಲ್' ಭಾಟಿಯಾ, ನಮ್ಮ ಟಿಸಿಎಸ್-ಇನ್ಫೋಸಿಸ್-ವಿಪ್ರೋಗಳ ಬಗ್ಗೆ ಏನು ಹೇಳುತ್ತಾರೆ ಗೊತ್ತೆ?
"ಸಹಸ್ರಾರು ಕೋಟಿ ರೂಪಾಯಿಗಳಷ್ಟು ಕ್ಯಾಷ್ ಹೊಂದಿರುವ ಈ ಕಂಪನಿಗಳು ಆ ದುಡ್ಡಿನ ಮೇಲೆ ಕುಳಿತಿರುವುದನ್ನು ಬಿಟ್ಟರೆ ಮತ್ತೇನೂ ಮಾಡುತ್ತಿಲ್ಲ. R&D ಯಲ್ಲಿ ಅದನ್ನು ತೊಡಗಿಸುತ್ತಿಲ್ಲ. ಉತ್ಪನ್ನಗಳನ್ನು ಹೊರತರುತ್ತಿಲ್ಲ. ಅವರು ಮಾಡುತ್ತಿರುವುದೆಲ್ಲವೂ ನೌಕರರನ್ನು ಕೊಂಡುಕೊಂಡು ಅವರನ್ನು ಲಾಭಕ್ಕೆ ಮಾರಿಕೊಳ್ಳುವುದು ಮಾತ್ರ. They are doing nothing but labour arbitrage."

ಈಗ, ನಮ್ಮ ಪ್ರೀತಿಯ, ಮೆಚ್ಚಿನ ಈ ಕಾಂಟ್ರ್ಯಾಕ್ಟರ್‍ಗಳು ತಾವೇ ಮನೆ ಕಟ್ಟಿ ಮಾರುವುದು ಯಾವಾಗ? ಅವರು ಅದನ್ನು ಬೇಗ ಮಾಡದೆ ಹೋದರೆ ಎಕಾನಮಿ ಡೌನ್ ಆಗುತ್ತ ಹೋದ ಹಾಗೆ ಅವರಲ್ಲಿ ಕೆಲಸ ಮಾಡುತ್ತಿರುವವರು ಒಬ್ಬೊಬ್ಬರೆ ಕೆಲಸ ಕಳೆದುಕೊಳ್ಳುತ್ತ ಹೋಗುವುದು ಸಹಜ. ಷೇರ್ ಹೋಲ್ಡರ್ಸನ್ನು ತಕ್ಷಣಕ್ಕೆ ಸಂತೃಪ್ತಿ ಪಡಿಸಬೇಕೆಂದು R&D ಯಲ್ಲಿ ಹಣ ತೊಡಗಿಸದೆ ಹೋದರೆ, ಉತ್ಪನ್ನಗಳ ಬಗ್ಗೆ ಗಂಭೀರವಾಗಿ ಯೋಚಿಸದೆ ಹೋದರೆ ಭವಿಷ್ಯ ಆಶಾದಾಯಕವಾಗಿಲ್ಲ. ನಾಳೆ ಕೂಲಿ ಕೆಲಸಕ್ಕೆ ಯಾರೂ ಕರೆಯದೆ ಹೋದಾಗ ಇವರ ಪರಿಸ್ಥಿತಿ ಏನಾಗಬಹುದು? ಅದನ್ನೆಲ್ಲ ಯೋಚಿಸದಷ್ಟು ದಡ್ಡರು ಈ ಕಂಪನಿಗಳಲ್ಲಿ ಕೆಲಸ ಮಾಡುತ್ತಿಲ್ಲ. ಹಾಗಾಗಿ ಬರುವ ದಿನಗಳಲ್ಲಿ ಕೆಲವು ಬದಲಾವಣೆಗಳಾಗುವುದು ಸಹಜ. ಹಾಗಾದಲ್ಲಿ ಈ ಭಾರತೀಯ ಕಂಪನಿಗಳ ಭವಿಷ್ಯ ಇನ್ನೂ ಉಜ್ವಲವಾಗಿ ಬೆಳಗಬಹುದು.

Feb 4, 2007

ಕಂಪ್ಯೂಟರ್‌ನಲ್ಲಿ ಕನ್ನಡ - ಯಾಹೂ!!!!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಫ಼ೆಬ್ರವರಿ 16, 2007 ರ ಸಂಚಿಕೆಯಲ್ಲಿನ ಲೇಖನ)

ಜನವರಿ ತಿಂಗಳ ಕೊನೆಯ ಭಾಗದಲ್ಲಿ ಕನ್ನಡ ಸಾಫ಼್ಟ್‌ವೇರ್ ಕ್ಷೇತ್ರದಲ್ಲಿ ಕೆಲವು ಗಮನಾರ್ಹ ಬೆಳವಣಿಗಗಳಾದವು. ಮೊದಲನೆಯದಾಗಿ, ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ (DIT) "ಭಾರತೀಯ ಭಾಷೆಗಳಿಗಾಗಿ ತಂತ್ರಜ್ಞಾನ ಅಭಿವೃದ್ಧಿ" ಸಂಸ್ಥೆಯವರು ಹಲವಾರು ಉಚಿತ ಕನ್ನಡ ತಂತ್ರಾಂಶಗಳನ್ನು ಕನ್ನಡದ ಬಳಕೆದಾರರಿಗೆ ಬಿಡುಗಡೆ ಮಾಡಿದ್ದು. ಅನೇಕ ಕನ್ನಡ ಫಾಂಟ್‌ಗಳು, ಫೈರ್‌ಫ಼ಾಕ್ಸ್, ಥಂಡರ್‌ಬರ್ಡ್‌ನಂತಹ ಇಂಟರ್‌ನೆಟ್ ಬ್ರೌಸರ್, ಇಮೇಯ್ಲ್ ಕ್ಲೈಂಟ್ ತಂತ್ರಾಂಶಗಳಿಗೆ ಕನ್ನಡದ ಮೆನು ಅಳವಡಿಸಿ, ಹಲವಾರು ದೈನಂದಿನ ಕನ್ನಡ ಡಿಟಿಪಿ ತಂತ್ರಾಂಶಗಳನ್ನು ಒಂದೆ ಕಡೆ ಒದಗಿಸಿದ್ದಾರೆ. ಇತರ ಭಾರತೀಯ ಭಾಷೆಗಳಲ್ಲಿ ತಿಂಗಳು, ವರ್ಷಗಳ ಹಿಂದೆಯೆ ಈ ತಂತ್ರಾಂಶಗಳನ್ನು ಒದಗಿಸಿದ್ದ ಈ ಸಂಸ್ಥೆ ಅವುಗಳನ್ನೆ ಕನ್ನಡಕ್ಕೆ ತರಲು ಸುದೀರ್ಘ ಸಮಯವನ್ನೆ ತೆಗೆದುಕೊಂಡಿದೆ!!

ಈ ತಂತ್ರಾಂಶಗಳ ಉಚಿತ ಲಭ್ಯತೆ ಆರಂಭವಾದ ತಕ್ಷಣ, ಇಂತಹ ಕನ್ನಡ ಸಂಬಂಧಿ ತಂತ್ರಜ್ಞಾನದ ಬಗ್ಗೆ ಒಂದು ಗಮನವಿಟ್ಟಿರುವ ಪತ್ರಕರ್ತ ಬೇಳೂರು ಸುದರ್ಶನರು ಈ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿ, ಆದರೆ ಆ ವೆಬ್‌ಸೈಟಿನ ಕನ್ನಡ ಬರವಣಿಗೆಯ ಬಗ್ಗೆ ಸಮರ್ಥನೀಯವಾದ ಆಕ್ಷೇಪಣೆಯೊಂದಿಗೆ ಅವರ ತರಹವೆ ಕಂಪ್ಯೂಟರ್‌ನಲ್ಲಿ ಕನ್ನಡದ ಬೆಳವಣಿಗೆಯ ಬಗ್ಗೆ ಆಸಕ್ತಿಯಿರುವ ಮಿತ್ರರಿಗೆ ಇಮೇಯ್ಲ್ ಕಳುಹಿಸಿದ್ದರು. ಆಕ್ಷೇಪಣೆ ಯಾಕೆ ಸಮರ್ಥನೀಯ ಎಂದರೆ ಆ ವೆಬ್‌ಸೈಟಿನಲ್ಲಿ (www.ildc.in) ಕಾಣಿಸುವ ಮೊದಲ ಕನ್ನಡ ಸಾಲೆ ಭಾರತೀಯ ಭಾಷೆಗಳಿಗಾಗಿ ತಾಂತ್ರಿಕ ವಿಕಸನ..!!? ಅಲ್ಲಿನ 'ಪರಿಚಯ' ವಿಭಾಗದಲ್ಲಿ ಮೊದಲ ಸಾಲೇ ಹೀಗಿದೆ:

"ಅತೀ ಬಹುಮುಖಿ ಮಾನವ ವ್ಯವಹಾರ ಮಾದರಿಗಳಲ್ಲಿ ದೃಷ್ಯ ಹಾಗು ಶ್ರವಣ ನಮೂನೆಗಳೇ ಪ್ರಾಥಮಿಕ. ಪ್ರಸ್ತುತ ಕಾಲಘಟ್ಟದಲ್ಲಿ ಲಭ್ಯವಿರುವ ಮಾನವ ಯಂತ್ರ ಅಂತರ್ ವ್ಯವಹಾರಗಳಲ್ಲಿ ಕಂಡುಬರುವ ವಕ್ರಗತಿ ಮಾನವನಿಗಿಂತ ಯಂತ್ರಗಳಿಗೇ ಅನುಕೂಲಕರ....."
ಇಂಗ್ಲಿಷ್-ಕನ್ನಡ ನಿಘಂಟನ್ನು ಪಕ್ಕ ಇಟ್ಟುಕೊಂಡು, ಸಂದರ್ಭಕ್ಕೆ ಸೂಕ್ತವಾದ ಪದವನ್ನು ಆಯ್ಕೆ ಮಾಡದೆ ಇಂಗ್ಲಿಷ್ ಪಠ್ಯವನ್ನು ಕನ್ನಡಕ್ಕೆ ಅನುವಾದಿಸಿರುವ ಪರಿ ಇದು! ಕನ್ನಡದ ಮಟ್ಟಿಗಷ್ಟೆ ಆದ ದರಿದ್ರ, ಅಪಕ್ವ, ತಲೆಬುಡ ಅರ್ಥವಾಗದ ಅನುವಾದ. ಇದಕ್ಕೆ ಈಗಾಗಲೆ ಪವನಜ, ಶೇಖರ್‌ಪೂರ್ಣ, ನಾಗಭೂಷಣ ಸ್ವಾಮಿ ಮತ್ತಿತರ ಲೇಖಕರು ILDC ಗೆ ದೂರು ಸಲ್ಲಿಸಿದ್ದಾರೆ. ಅವರು ಇದನ್ನು ಆದಷ್ಟು ಬೇಗ ಸರಿಪಡಿಸಿ, ಅವರ ತಂತ್ರಾಂಶದಿಂದ ಏನೇನು ಮಾಡಬಹುದು ಎಂದು ಸರಳವಾಗಿ ವಿವರಿಸುತ್ತಾರೆ ಎಂದು ಆಶಿಸೋಣ.

ಕನ್ನಡ ಮತ್ತು ಕಂಪ್ಯೂಟರ್ ಎಂದಾಕ್ಷಣ ಬಹುಪಾಲು ಜನರಿಗೆ ತಕ್ಷಣ ನೆನಪಿಗೆ ಬರುವುದು ಬರಹ ತಂತ್ರಾಂಶ. ಇಂಗ್ಲಿಷ್ ಕೀಬೋರ್ಡ್ ಮತ್ತು ಆಪರೇಟಿಂಗ್ ಸಿಸ್ಟಮ್ ಇಟ್ಟುಕೊಂಡೆ ಸುಲಭವಾಗಿ ಕನ್ನಡವನ್ನು ಕಂಪ್ಯೂಟರ್‌ನಲ್ಲಿ ಟೈಪು ಮಾಡಬಹುದು ಎಂದು ತೋರಿಸಿ, ಕನ್ನಡ ಜನಸಾಮಾನ್ಯರನ್ನು ಕಂಪ್ಯೂಟರ್ ಬಳಿಗೆ ಕರೆತಂದವರು ಅದರ ಕರ್ತೃ ಶೇಷಾದ್ರಿವಾಸು. ಉಚಿತವಾದ ಅವರ ಬರಹ ತಂತ್ರಾಂಶ ಇಂದು ಕನ್ನಡಕ್ಕೆ ಮಾತ್ರ ಸೀಮಿತವಲ್ಲದೆ ಹಿಂದಿ (ದೇವನಾಗರಿ), ತಮಿಳು, ತೆಲುಗು, ಮಲಯಾಳಂ, ಗುಜರಾತಿ, ಪಂಜಾಬಿ, ಬೆಂಗಾಲಿ, ಮತ್ತು ಒರಿಯಾ ಭಾಷೆಗಳಲ್ಲೂ ಬಳಸಲಾಗುತ್ತಿದೆ. ಎರಡು ವಾರದ ಹಿಂದೆ ವಾಸುರವರು ಬರಹವನ್ನು ಮತ್ತೊಂದು ಮಜಲಿಗೆ ಏರಿಸಿದರು. ಈಗ ಯಾವುದೆ ಬರಹ ಫೈಲ್ ಅನ್ನು ಬ್ರೈಲ್ ಪ್ರಿಂಟರ್‌ಗೆ ಅನುಕೂಲವಾಗುವಂತೆ ಕನ್ವರ್ಟ್ ಮಾಡಬಹುದಾಗಿದೆ. ಮೊದಲೆಲ್ಲ ಕನ್ನಡವನ್ನು ಬ್ರೈಲ್ ಎಂಬಾಸ್ಸರ್‌ಗೆ ಒದಗಿಸಬೇಕಾಗಿದ್ದರೆ ಹಲವಾರು ತೊಂದರೆಗಳಿದ್ದವು. ಇನ್ನುಮೇಲೆ ಯಾವುದೆ ಲೇಖನ ಬ್ರೈಲ್‌ನಲ್ಲಿ ಬೇಕೆಂದರೆ, ಅದನ್ನು ಬರಹ, ನುಡಿಯಂತಹ ಉಚಿತ ತಂತ್ರಾಂಶದಲ್ಲಿ ಟೈಪ್ ಮಾಡಿ, ಅದನ್ನು ಬರಹ ತಂತ್ರಾಂಶದಿಂದ ಬ್ರೈಲ್‌ಗೆ ಎಕ್ಸ್‌ಫೋರ್ಟ್ ಮಾಡಿ, ಬ್ರೈಲ್ ಎಂಬಾಸ್ಸರ್ ಪ್ರಿಂಟರ್‌ಗೆ ಕೊಟ್ಟರಾಯಿತು. ಬ್ರೈಲ್ ಉಪಯೋಗಿಸುವ ಕಣ್ಣಿನ ಅಂಧತೆಯುಳ್ಳವರು ಕನ್ನಡ ಮತ್ತಿತರ ಭಾರತೀಯ ಭಾಷೆಗಳ ಬರಹಗಳನ್ನು ಪ್ರಿಂಟ್ ಮಾಡಿಕೊಳ್ಳುವುದು ಇನ್ನು ಮೇಲೆ ಮತ್ತಷ್ಟು ಸುಲಭ. ವಿನಯಿ ಮತ್ತು ಮಿತಭಾಷಿಕರಾದ ವಾಸುರವರನ್ನು ಮತ್ತೊಮ್ಮೆ ಅಭಿನಂದಿಸಬೇಕಾದ ಗಳಿಗೆ ಇದು.

ಬಹಳ ವರ್ಷಗಳಿಂದ ವೆಬ್‌ಸೈಟುಗಳಲ್ಲಿ ನಂಬರ್ ಒನ್ ಸ್ಥಾನ ಯಾಹೂ.ಕಾಮ್‌ನವರದೆ. ಮೈಕ್ರೊಸಾಫ್ಟ್‌ನವರ msn.com ಎರಡನೆ ಸ್ಥಾನದಲ್ಲಿದೆ. ಒಂದೆರಡು ತಿಂಗಳ ಹಿಂದೆ msn.com ನವರು ಕನ್ನಡದಲ್ಲೂ ತಮ್ಮ ನ್ಯೂಸ್ ವೆಬ್‌ಸೈಟ್ ಅನ್ನು ಹೊರತಂದರು. ಇಲ್ಲಿ ಕನ್ನಡ, ಕರ್ನಾಟಕಕ್ಕೆ ಸಂಬಂಧಿಸಿದ ವಾರ್ತೆಗಳಷ್ಟೆ ಅಲ್ಲದೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಸುದ್ದಿಗಳನ್ನೂ ಒದಗಿಸಲಾಗುತ್ತಿದೆ. ಈಗ ಯಾಹೂ.ಕಾಮ್‌ನವರೂ ಕಳೆದ ವಾರವಷ್ಟೆ ಇಂತಹುದೆ ಕನ್ನಡ ವೆಬ್‌ಸೈಟ್ ಅಣಿ ಮಾಡಿದ್ದಾರೆ. ವಾಣಿಜ್ಯ ಸ್ಪರ್ಧೆಯಿಂದಾಗಿ ಸ್ಥಳೀಯ ಬಾಷೆಗಳು ಹೇಗೆ ಬಹುಬೇಗ ಕಂಪ್ಯೂಟರ್‌ನಲ್ಲಿ ಸ್ಥಾನ ಪಡೆದುಕೊಳ್ಳುತ್ತವೆ ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕೆ? ಹಾಗೆಯೆ, ಇಂತಹ ಸಂಸ್ಥೆಗಳಲ್ಲಿ ಕನ್ನಡವೂ ಕೆಲಸ ಕೊಡಿಸುತ್ತದೆ ಎನ್ನುವುದೂ ಒಳ್ಳೆಯ ವಿಚಾರವೆ.

ಈ ಬಹುರಾಷ್ಟ್ರೀಯ ಕಂಪನಿಗಳು ಕನ್ನಡದ ವೆಬ್‌ಸೈಟ್‌ಗಳನ್ನು ಹೊರತರುವುದಕ್ಕೆ ಮುಂಚೆಯೆ ಕನ್ನಡದ ಪೋರ್ಟಲ್‌ಗಳು, ದಿನಪತ್ರಿಕೆಗಳು, ಬ್ಲಾಗ್‌ಗಳಿಂದಾಗಿ ಪ್ರತಿದಿನವೂ ಸಾವಿರಾರು ಕನ್ನಡದ ಪುಟಗಳು ಇಂಟರ್‌ನೆಟ್‌ಗೆ ಸೇರ್ಪಡೆಯಾಗುತ್ತಿದ್ದವು. ಇನ್ನು ಮೇಲೆ ಇನ್ನೂ ಹಲವು ಸ್ಥಳೀಯ/ವಿದೇಶಿ ಮಾಧ್ಯಮ ಕಂಪನಿಗಳು ಕಾಲಿಡುವುದರಿಂದ ಕನ್ನಡ ಪುಟಗಳ ಸಂಖ್ಯೆ ದುಪ್ಪಟ್ಟ, ಮುಪ್ಪಟ್ಟು ಆಗುವುದರಲ್ಲಿ ಸಂಶಯವಿಲ್ಲ. ಇದೇ ಸಮಯದಲ್ಲಿ, ಕೇವಲ ಸುದ್ದಿ, ವರದಿಯಂತಹುದೆ ಅಲ್ಲದೆ ಸಂಸ್ಕಾರ, ಸಿಂಗಾರೆವ್ವ ಮತ್ತು ಅರಮನೆ, ಗೃಹಭಂಗ, ಅಕ್ಕ, ಯಾಪಿಲ್ಲು, ದ್ವೀಪ, ಊರುಕೇರಿ, ನೂರು ವರ್ಷದ ಏಕಾಂತದಂತಹ ಮಹತ್ವದ ನೂರಾರು ಮೌಲ್ಯಯುತ ಕತೆಕವನಕಾದಂಬರಿಗಳನ್ನು ಉಚಿತವಾಗಿ ಅಂತರ್ಜಾಲದಲ್ಲಿ ಒದಗಿಸಿದ ಕನ್ನಡಸಾಹಿತ್ಯ.ಕಾಮ್‌ನ ಕನ್ನಡ ಸೇವೆಯನ್ನೂ ನೆನೆಯಬೇಕು. ಇದರ ಸ್ಥಾಪಕ ಸಂಪಾದಕರಾದ ಶೇಖರ್‌ಪೂರ್ಣರವರು ಡಿಜಿಟಲ್ ಡಿವೈಡ್ ಬಗ್ಗೆ ಕಾಳಜಿಯಿಂದ ಯೋಚಿಸುವ, ಕಂಪ್ಯೂಟರ್‌ನಲ್ಲಿ ಕನ್ನಡ ಸುಲಭವಾಗಿ ಎಟುಕುವಂತೆ ಮಾಡಬೇಕು ಎಂದು ಬಯಸುವ, ಆ ನಿಟ್ಟಿನಲ್ಲಿ ಕೆಲಸವನ್ನೂ ಮಾಡುತ್ತಿರುವ, ಚರ್ಚೆ ಹುಟ್ಟುಹಾಕುತ್ತಿರುವ ಶ್ರಮಜೀವಿ. ಇತ್ತೀಚೆಗೆ ತಾನೆ ಲಘುಹೃದಯಾಘಾತವಾಗಿ ಜಯದೇವದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶೇಖರ್‌ಪೂರ್ಣರವರು ಬೇಗ ಗುಣವಾಗಲಿ ಎಂದು ಹಾರೈಸೋಣ.

ಹಾಗೆಯೆ, ಸಂಪದ.ನೆಟ್ ಎಂಬ ಇನ್ನೊಂದು ವೆಬ್‌ಸೈಟ್ ಮತ್ತು ತಂಡದ ಬಗ್ಗೆಯೂ ಹೇಳಬೇಕು. ಇನ್ನೂ 25-30 ದಾಟದ ಚುರುಕು ಕನ್ನಡ ಹುಡುಗರ ಈ ಗುಂಪಿನಲ್ಲಿ ಅನೇಕ ಮೌಲ್ಯಯುತ ಬರಹಗಳು, ಚರ್ಚೆಗಳು, ಕಂಪ್ಯೂಟರ್‌ನಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿ ದಿಸೆಯಲ್ಲಿನ ಕೆಲಸಗಳು ನಡೆಯುತ್ತಿವೆ. ಕನ್ನಡ ಪಂಡಿತರಲ್ಲದ, ಮಡಿಮೈಲಿಗೆ ಇಲ್ಲದ, ಹೊಸವಿಚಾರಗಳಿಗೆ, ಪ್ರಯೋಗಗಳಿಗೆ ಮೈಯೊಡ್ಡಿಕೊಳ್ಳುವ ಇಂತಹ ಒಂದು ಸಕ್ರಿಯ ಗುಂಪು ಇದೆ ಎನ್ನುವುದೆ ಹೆಮ್ಮೆಯ ವಿಚಾರ. ಇಷ್ಟೆಲ್ಲಾ ಆದರೂ ಸಂಪೂರ್ಣವಾಗಿ ಕನ್ನಡಮಯ ಕಂಪ್ಯೂಟರ್ ಅನ್ನು ನೋಡುವ ದಿನ ಇನ್ನೂ ದೂರವಿದೆ. ಆದಾಗ್ಯೂ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ ಮಾಡಬೇಕಿರುವುದನ್ನು ವಾಸು, ಪವನಜ, ಶೇಖರ್‌ಪೂರ್ಣ, ನಾಡಿಗ್‌ರಂತಹ ವ್ಯಕ್ತಿಗಳು ಆ ದಿನ ದೂರವಾಗದಂತೆ ಶ್ರಮಿಸುತ್ತಿದ್ದಾರೆ ಎನ್ನುವುದೆ ಆಶಾದಾಯಕ; ಧನ್ಯವಾದಕ್ಕೆ ಅರ್ಹ.