(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಫ಼ೆಬ್ರವರಿ 23, 2007 ರ ಸಂಚಿಕೆಯಲ್ಲಿನ ಲೇಖನ)
ಇವತ್ತು ಇನ್ಫೋಸಿಸ್, ಟಿಸಿಎಸ್, ವಿಪ್ರೊ, ಸತ್ಯಂ ಅಂತಹ ಭಾರತೀಯ ಕಂಪನಿಗಳು ಬಿ.ಪಿ.ಒ. ದಂತಹ ಕಾಲ್ ಸೆಂಟರ್, ಕಸ್ಟಮರ್ ಸರ್ವಿಸ್ ಕ್ಷೇತ್ರ ಬಿಟ್ಟು ಸಾಫ಼್ಟ್‌ವೇರ್ ರಂಗದಲ್ಲಿ ನಿಜವಾಗಲೂ ಏನು ಮಾಡುತ್ತಿವೆ ಎನ್ನುವುದರ ಬಗ್ಗೆ ಐಟಿ ರಂಗದ ಬಗ್ಗೆ ಅಷ್ಟೇನೂ ಚೆನ್ನಾಗಿ ಗೊತ್ತಿಲ್ಲದ ಓದುಗರಿಗೆ ಸುಲಭವಾಗಿ ಕೊಡಬಹುದಾದ ಹೋಲಿಕೆ ಎಂದರೆ, ಮನೆ ಕಾಂಟ್ರ್ಯಾಕ್ಟರ್‌ಗಳ ಕೆಲಸ ಮಾಡುತ್ತಿವೆ ಎಂದು! ಕಳೆದ ಇಪ್ಪತ್ತು-ಮುವ್ವತ್ತು ವರ್ಷಗಳಲ್ಲಿ ಬೆಂಗಳೂರಿನಂತಹ ನಗರಗಳಲ್ಲಿ ಮನೆ ಕಟ್ಟಿಸುವ ರೀತಿ-ರಿವಾಜು ಬದಲಾದದ್ದು ತಮಗೆಲ್ಲ ಗೊತ್ತಿರಬಹುದು. ಮನೆ ಕಟ್ಟಬೇಕೆಂದರೆ ಮೊದಲೆಲ್ಲ ಮಾಲೀಕ ಮನೆಯ ಪ್ಲಾನ್ ಮಾಡಿಸಿ, ಗುದ್ದಲಿ ಪೂಜೆಯಾದ ಮೇಲೆ ನಾಲ್ಕಾರು ಜನ ದಿನಗೂಲಿಗಳನ್ನು ಇಟ್ಟುಕೊಂಡು ಪಾಯ ಅಗೆಯುಸುತ್ತಿದ್ದ. ಅದು ಮುಗಿದ ಮೇಲೆ ಒಂದಿಬ್ಬರು ಗಾರೆಯವರನ್ನು ಇಟ್ಟುಕೊಂಡು ಕಲ್ಲಿನ ಪಾಯ ಹಾಕಿಸುತ್ತಿದ್ದ. ಅಷ್ಟೊತ್ತಿಗೆ ಬಡಗಿಯವರನ್ನು ಕರೆದುಕೊಂಡು ಹೋಗಿ ಮರದ ಸಾಮಾನು ತಂದು ಕಿಟಕಿ, ಬಾಗಿಲುಗಳನ್ನು ರೆಡಿ ಮಾಡಿಸುತ್ತಿದ್ದ. ಆಮೇಲೆ ಪಾಯದ ಬೆಡ್ ಮೇಲೆ ಬಾಗಿಲು ಇಟ್ಟು, ಇಟ್ಟಿಗೆಯ ಗೋಡೆ ಎಬ್ಬಿಸುತ್ತಿದ್ದ. ನಂತರ ಮೌಲ್ಡ್ ಹಾಕಿಸುವುದು, ಅದಕ್ಕೆ ಬೇಕಾದ ಕಂಬಿ, ಜಲ್ಲಿ, ಸಿಮೆಂಟ್ ತರಿಸುವುದು, ಅದಾದ ಮೇಲೆ ಪ್ಲಾಸ್ಟರ್ ಮಾಡಿಸುವುದು, ಆಮೇಲೆ ಪ್ಲೋರಿಂಗ್; ಪ್ಲಂಬರ್ ಇಟ್ಟುಕೊಂಡು ಬಚ್ಚಲು, ಟಾಯ್ಲೆಟ್ ಮಾಡಿಸುವುದು; ಎಲೆಕ್ಟ್ರಿಕಲ್ ಕೆಲಸ ಮಾಡುವವರನ್ನು ಇಟ್ಟುಕೊಂಡು ಮನೆಯೆಲ್ಲ ವೈರಿಂಗ್ ಮಾಡಿಸುವುದು; ಇತ್ಯಾದಿ. ಹೀಗೆ ಎಲ್ಲವನ್ನೂ ತಾನೆ ನಿಂತು, ಜನರನ್ನು ದಿನಗೂಲಿ ಲೆಕ್ಕದಲ್ಲಿ ಇಟ್ಟುಕೊಂಡು ಮಾಡಿಸುತ್ತಿದ್ದ. ಈ ಎಲ್ಲಾ ಸಮಯದಲ್ಲಿ, ಮನೆ ಕಟ್ಟಲು ಬೇಕಾದ ಕಲ್ಲು, ಜಲ್ಲಿ, ಇಟ್ಟಿಗೆ, ಸಿಮೆಂಟ್, ಮರಳು, ಮರದ ಸಾಮಾನು, ಎಲೆಕ್ಟ್ರಿಕ್ ಸಾಮಾನುಗಳು, ಮೊಸಾಯಿಕ್, ಮಾರ್ಬಲ್, ಸುಣ್ಣ-ಬಣ್ಣ ಹೀಗೆ ಪ್ರತಿಯೊಂದನ್ನೂ ಗಾರೆಯವರನ್ನೊ ಇಲ್ಲವೆ ಗೊತ್ತಿದ್ದವರನ್ನೊ ಕೇಳಿ ತಾನೇ ಕೊಂಡು ತರುತ್ತಿದ್ದ. ಯಾವುದೆ ಒಂದು ಕೆಲಸವನ್ನು ಗುತ್ತಿಗೆ ನೀಡುತ್ತಿದ್ದದ್ದು ಬಹಳ ಅಪರೂಪವಾಗಿತ್ತು. ಯಾಕೆಂದರೆ, ತಾನೆ ನಿಂತು ಮಾಡಿಸಿದರೆ ಒಂದಷ್ಟು ದುಡ್ಡು ಖಂಡಿತವಾಗಿ ಉಳಿತಾಯವಾಗುತ್ತಿತ್ತು. ಅಷ್ಟೂ ಬೇಕಾಗಿದ್ದರೆ, ಉಸ್ತುವಾರಿ ನೋಡಿಕೊಳ್ಳಲು ಒಬ್ಬ ಮೇಸ್ತ್ರಿಯನ್ನು ಇಟ್ಟುಕೊಳ್ಳುತ್ತಿದ್ದ. ಈ ಮೇಸ್ತ್ರಿಗಳು ಸಹ ಒಂದಲ್ಲ ಒಂದು ಸಮಯದಲ್ಲಿ ಗಾರೆ ಕೆಲಸ ಮಾಡಿ, ಈಗ ಮೇಸ್ತ್ರಿ ಪಟ್ಟಕ್ಕೆ ಬಡ್ತಿ ಪಡೆದವರೆ ಆಗಿರುತ್ತಿದ್ದರು.
ಆದರೆ ಕಳೆದ ಎರಡು ಮೂರು ದಶಕಗಳಲ್ಲಿ ಕಾಲ ಬಹಳ ಬದಲಾಯಿತು. ಸರಿಯಾಗಿ ವ್ಯವಹಾರ ಜ್ಞಾನ ಗೊತ್ತಿಲ್ಲದವರು ಅನೇಕ ಕಡೆ ಮೋಸ ಹೋಗುತ್ತಿದ್ದರು. ಗಾರೆಯವರನ್ನು, ಸಿಮೆಂಟ್ ಕಲಸುವವರನ್ನು, ಬಡಗಿಯನ್ನು, ಹೀಗೆ ಅಂದಿನ ಕೆಲಸಕ್ಕೆ ಬೇಕಾದವರನ್ನು ಹೊಂದಿಸುವುಷ್ಟರಲ್ಲಿ ಸಾಕಾಗಿಬಿಡುತ್ತಿತ್ತು. ಅದೇ ಸಮಯದಲ್ಲಿ, ಆತ ಉದ್ಯೋಗಸ್ಥನಾಗಿದ್ದರೆ ಬೆಳಿಗ್ಗೆಯಿಂದ ಸಾಯಂಕಾಲದ ತನಕ ಮನೆಯ ಮುಂದೆಯೆ ಇದ್ದು ಗುಣಮಟ್ಟದ ಕೆಲಸವಾಗುವಂತೆ ನೋಡಿಕೊಳ್ಳಲು, ಕೂಲಿಗಳು ಕಾಮ್ ಚೋರ್‌ಗಳಾಗದೆ ಕೆಲಸ ಮಾಡುವಂತೆ ಕಾಯುವುದು ಬಹಳ ಕಷ್ಟವಾಗುತ್ತಿತ್ತು. ಇಂತಹ ಕಷ್ಟದ ಸಮಯದಲ್ಲಿ ಹುಟ್ಟಿಕೊಂಡವರು ಈ ಮನೆ ಕಟ್ಟಿಸಿಕೊಡುವ ಕಾಂಟ್ರ್ಯಾಕ್ಟರ್‌ಗಳು ಮತ್ತು ಚದರದ ಲೆಕ್ಕದಲ್ಲಿ ಮನೆ ಕಟ್ಟಿಸುವ ಗುತ್ತಿಗೆ ಒಪ್ಪಂದಗಳು. ಇವರಲ್ಲಿ ಬಹಳಷ್ಟು ಜನ ಈ ಹಿಂದೆ ಮೇಸ್ತ್ರಿಗಳಾಗಿದ್ದವರೆ ಆಗಿರುತ್ತಿದ್ದರು. ಅವರು ಮನೆ ಕಟ್ಟುವ ಇಡೀ ವ್ಯವಹಾರದ ಒಳಹೊರಗನ್ನು ಚೆನ್ನಾಗಿ ತಿಳಿದವರಾಗಿರುತ್ತಿದ್ದರು. ಮನೆ ಕಟ್ಟಿಸಲು ನಿಂತ ಮಾಲೀಕನಿಗಿಂತ ಈ ಮೇಸ್ತ್ರಿಗಳಿಗೆ ಯಾವುದಕ್ಕೆ ಎಷ್ಟು ಖರ್ಚಾಗುತ್ತದೆ, ಯಾವ್ಯಾವ ಸಾಮಾನುಗಳನ್ನು ಎಲ್ಲಿಂದ ತರಿಸಬೇಕು, ಕೂಲಿ ಮಾಡುವವರು ಎಲ್ಲಿ ಸಿಗುತ್ತಾರೆ, ಯಾರಿಗೆ ಎಷ್ಟು ಕೂಲಿ ಎಂದೆಲ್ಲ ಚೆನ್ನಾಗಿ ಗೊತ್ತಿರುತ್ತಿತ್ತು.
ಇದರಿಂದ ಮನೆ ಕಟ್ಟಿಸುವವರಿಗೆ ಆದ ನಷ್ಟ ಏನೆಂದರೆ, ತಾವೆ ನಿಂತು ಮನೆ ಕಟ್ಟಿಸುವುದಕ್ಕಿಂತ ಸ್ವಲ್ಪ ಹೆಚ್ಚು ದುಡ್ಡು ಖರ್ಚಾಗುತ್ತಿತ್ತು. ಆದರೆ ಲಾಭ ಮಾತ್ರ ಬಹಳಷ್ಟು. ಅವರು ತಾವು ಮಾಡುತ್ತಿರುವ ಉದ್ಯೋಗಕ್ಕೆ ರಜೆ ಹಾಕುವ ಅವಶ್ಯಕತೆಯಿರುವುದಿಲ್ಲ; ಸಾಮಾನು ಹೊಂದಿಸುವ, ಗಾರೆ ಕೆಲಸದವರನ್ನು, ಕೂಲಿಗಳನ್ನು ಹೊಂದಿಸುವ ತಲೆಬಿಸಿ ಇಲ್ಲ. ಯಾವುದೊ ಸಾಮಾನು ತರಲು ಹೋಗಿ ಮೋಸಕ್ಕೆ ಒಳಗಾಗಿ ಮೈಪರಚಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲ. ಪ್ರತಿದಿನ ಸಾಯಂಕಾಲ ಅಂದಿನ ಕೆಲಸದ ಗುಣಮಟ್ಟವನ್ನು ಪರೀಕ್ಷಿಸಿ, ಆದ ಕೆಲಸಕ್ಕೆ ವಾರಕ್ಕೊಮ್ಮೆ ಬಟವಾಡೆ ಮಾಡಿ, ಮನೆ ಸಂಪೂರ್ಣವಾಗಿ ಮುಗಿದ ಮೇಲೆ ಮೊದಲೇ ಆದ ಒಪ್ಪಂದದಂತೆ ಲೆಕ್ಕ ಚುಕ್ತಾ ಮಾಡಿದರೆ ಅಲ್ಲಿಗೆ ಮನೆ ಕಟ್ಟಿಸುವ ಕೆಲಸ ಮುಗಿಯಿತು.
ನಮ್ಮ ಟಿಸಿಎಸ್, ಇನ್ಫೋಸಿಸ್, ವಿಪ್ರೊ, ಸತ್ಯಂ ಅಂತಹ ಕಂಪನಿಗಳು ಪ್ರಾರಂಭದಲ್ಲಿ ಮಾಡಲಾರಂಭಿಸಿದ್ದು ಈ ಕಾಂಟ್ರ್ಯಾಕ್ಟರ್‌ಗಳು ಮಾಡುವ ಕೆಲಸವನ್ನೆ. ಅಮೇರಿಕದ ದೊಡ್ಡದೊಡ್ಡ ಕಂಪನಿಗಳು ಯಾವಾಗ ತಮ್ಮ ಕೆಲವು ಸಣ್ಣಪುಟ್ಟ ಕೆಲಸಗಳನ್ನು ಬೇರೆಯವರಿಗೆ ಗುತ್ತಿಗೆ ಕೊಡಬಹುದು ಎಂದು ಭಾವಿಸಿದವೊ, ಆಗ ನಮ್ಮ ದೇಶದ ಐಟಿ ಕಂಪನಿಗಳು ಆ ಟೆಂಪರರಿ ಕೆಲಸಗಳನ್ನು ಮಾಡಿಕೊಡಲಾರಂಭಿಸಿದರು. ಈ ಕೆಲಸಗಳನ್ನು ನಮ್ಮವರು ಭಾರತದಲ್ಲಿ ಕುಳಿತೇ ಮಾಡಬಹುದಾದ್ದರಿಂದ ಖರ್ಚು ಬಹಳ ಕಮ್ಮಿ ಬೀಳುತ್ತಿತ್ತು. ಇದೇ ಕೆಲಸವನ್ನು ಅಮೇರಿಕದ ಕಂಪನಿಗಳು ತಮ್ಮ ದೇಶದಲ್ಲಿ ಮಾಡಿಸಬೇಕಿದ್ದರೆ ಅವರಿಗೆ ಹೆಚ್ಚಿನ ಖರ್ಚು ತಗುಲುತ್ತಿತ್ತು. ಏಕೆಂದರೆ, ಈ ಸಣ್ಣಪುಟ್ಟ ಕೆಲಸಗಳು ಬಹಳ ಮುಖ್ಯವಾದವುಗಳಾಗಿದ್ದರೂ ಅದಕ್ಕಾಗಿ ಅವರು ಫುಲ್‌ಟೈಮ್ ನೌಕರರನ್ನು ನೇಮಿಸಿಕೊಂಡರೆ ಅದು ಅನಗತ್ಯವಾಗಿ ಹೆಚ್ಚಿನ ಹೊರೆ; ಆ ಪ್ರಾಜೆಕ್ಟ್ ಮುಗಿದ ಮೇಲೆ ಇನ್ನೊಂದು ಪ್ರಾಜೆಕ್ಟ್ ಶುರುವಾಗುವ ತನಕವೂ ಹೊಸಬರನ್ನು ಸುಮ್ಮನೆ ಕೂರಿಸಿಕೊಂಡು ಸಂಬಳ ಕೊಡಬೇಕಾಗುತ್ತಿತ್ತು. ಆದರೆ, ಹೊರಗುತ್ತಿಗೆ ನೀಡುವುದರಿಂದ ಅವರಿಗೆ ಈ ಸಮಸ್ಯೆಗಳು ಇರುತ್ತಿರಲಿಲ್ಲ. ಹಾಗಾಗಿ, ಮಾಹಿತಿ ತಂತ್ರಜ್ಞಾನ ಬೆಳೆಯುತ್ತ ಹೋದಂತೆ ಭಾರತೀಯ ಕಂಪನಿಗಳಿಗೆ ಕಾಂಟ್ರ್ಯಾಕ್ಟ್‌ಗಳೂ, ಲಾಭವೂ ಹೆಚ್ಚುತ್ತ ಹೋಯಿತು.
ಈಗಲೂ ಭಾರತದ ಐಟಿ ಉದ್ದಿಮೆ ನಿಲ್ಲದೆ ಬೆಳೆಯುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಹೊರಗುತ್ತಿಗೆ ನೀಡುವುದರಿಂದ ಲಾಭವೇ ಇರುವುದರಿಂದ, ಹಾಗೂ ಅವರವೇ ದೇಶದ ಸರ್ವಿಸಸ್ ಕಂಪನಿಗಳು ಕೇಳುವುದಕ್ಕಿಂತ ಕಮ್ಮಿ ಬೆಲೆಗೆ ನಮ್ಮವರು ಮಾಡಿಕೊಡುವುದರಿಂದ, ಹಾಗೂ ನಮ್ಮವರು ಇಲ್ಲಿಯತನಕ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಸಾಬೀತು ಮಾಡಿ, ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡಿರುವುದರಿಂದ, ಅಮೇರಿಕ, ಬ್ರಿಟನ್‌ನಂತಹ ರಾಷ್ಟ್ರಗಳಲ್ಲಿ ನುರಿತ ಇಂಜಿನಿಯರ್‌ಗಳ ಕೊರತೆಯಿರುವುದರಿಂದ, ಈ ಹೊರಗುತ್ತಿಗೆ ಟ್ರೆಂಡ್ ಇನ್ನೂ ಐದಾರು ವರ್ಷ ಯಾವುದೆ ಅಡೆತಡೆ ಇಲ್ಲದೆ ನಡೆಯುವ ಸಾಧ್ಯತೆ ಇದ್ದೇ ಇದೆ. ಇದೇ ಸಮಯದಲ್ಲಿ ಕೆಲವು ಎಮ್‌ಎನ್‌ಸಿಗಳು ಇನ್ಫೋಸಿಸ್ ಮತ್ತು ವಿಪ್ರೋಗೆ ಪರ್ಯಾಯವಾಗಿ ತಾವೇ ಭಾರತದಲ್ಲಿ ಅಂತಹುದೆ ಸರ್ವಿಸಸ್ ಕಂಪನಿಗಳನ್ನು ತೆರೆಯುತ್ತ ಬಂದಿವೆ. ಭಾರತದಲ್ಲಿನ ತನ್ನ ಉದ್ಯೋಗಿಗಳ ಸಂಖ್ಯೆಯ ವಿಷಯದಲ್ಲಿ ಈಗಾಗಲೆ ಐಬಿಎಮ್ ಕಂಪನಿ ವಿಪ್ರೊ ಟೆಕ್ನಾಲಜೀಸ್‌ನ ಸಮಕ್ಕೆ ಬಂದು ನಿಂತಿದೆ.
ಇತ್ತೀಚಿನ ವರದಿಗಳ ಪ್ರಕಾರ ದೇಶದ ಅತಿ ದೊಡ್ಡ ಸಾಫ಼್ಟ್‌ವೇರ್ ಸರ್ವಿಸಸ್ ಕಂಪನಿಯಾದ ಟಿಸಿಎಸ್ ಪ್ರಪಂಚದಾದ್ಯಂತ 80000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ಅವರಲ್ಲಿ ಬಹುಪಾಲು ಭಾರತದಲ್ಲಿಯೆ ಇದ್ದಾರೆ. ಹಾಗೆಯೆ, ಇನ್ಫೋಸಿಸ್‌ನ ಒಟ್ಟು ನೌಕರರ ಸಂಖ್ಯೆ ಈಗ 69432 ಇದ್ದರೆ, ವಿಪ್ರೋ ಟೆಕ್ನಾಲಜೀಸ್‌ನ ವಿಶ್ವವ್ಯಾಪಿ ನೌಕರರ ಒಟ್ಟು ಸಂಖ್ಯೆ 53000 ಕ್ಕಿಂತ ಸ್ವಲ್ಪ ಹೆಚ್ಚು. ಆದರೆ ಇದೇ ಸಮಯದಲ್ಲಿ ಅಮೇರಿಕದ ಬಹುರಾಷ್ಟ್ರೀಯ ಕಂಪನಿ ಐಬಿಎಮ್‌ದ ಕೇವಲ ಭಾರತದಲ್ಲಿನ ಉದ್ಯೋಗಿಗಳ ಸಂಖ್ಯೆ 53000 ಮುಟ್ಟಿಕೊಂಡಿದೆ! ಆ ಲೆಕ್ಕದಲ್ಲಿ ಇಂದು ಐಬಿಎಮ್ ವಿಪ್ರೋ ಟೆಕ್ನಾಲಜೀಸ್‌ಗಿಂತ ಹೆಚ್ಚು ಭಾರತೀಯರಿಗೆ ಕೆಲಸ ನೀಡಿದೆ! ಇನ್ನು ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆ 1 ಲಕ್ಷ ಮುಟ್ಟಲಿದೆ ಎಂದು ಅಂದಾಜಿದ್ದು, ಈ ದೈತ್ಯ ಕಂಪನಿ 25000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಭಾರತದಲ್ಲಿ ಈ ಸಮಯದಲ್ಲಿ ತೊಡಗಿಸಲಿದೆ. ಹಾಗೆಯೆ, ಭಾರತದಲ್ಲಿ ಈಗಾಗಲೆ 27000 ನೌಕರರನ್ನು ಹೊಂದಿರುವ ಆಕ್ಸೆಂಚರ್ ಕಂಪನಿ ಇನ್ನು ಆರು ತಿಂಗಳಿನಲ್ಲಿ 35000 ಉದ್ಯೋಗಿಗಳನ್ನು ಹೊಂದಲಿದೆಯಂತೆ.
ಭಾರತದ ಮಾಹಿತಿ ತಂತ್ರಜ್ಞಾನ ಉದ್ದಿಮೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಿಗೂ ನಮ್ಮವೇ ಆದ ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಸತ್ಯಂಗಳಿಗೂ ಒಂದು ವ್ಯತ್ಯಾಸವಿದೆ. ಆಕ್ಸೆಂಚರ್, ಇಡಿಎಸ್ ನಂತಹ ಕೆಲವು ಸರ್ವಿಸಸ್ ಕಂಪನಿಗಳನ್ನು ಬಿಟ್ಟರೆ ಮಿಕ್ಕ ಐಬಿಎಮ್, ಎಚ್‌ಪಿ, ಡೆಲ್, ಮೈಕ್ರೋಸಾಫ಼್ಟ್, ಜಿಇ, ನಾವೆಲ್, ಸಿಸ್ಕೊ, ಇಂಟೆಲ್, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್, ಯಾಹೂ, ಗೂಗಲ್ ಮುಂತಾದವರು ತಮ್ಮದೇ ಆದ ಉತ್ಪನ್ನಗಳನ್ನು ಹೊಂದಿರುವವರು. ಇವರು ಭಾರತದಲ್ಲಿ ಮಾಡುವುದೆಲ್ಲವೂ ತಮ್ಮದೇ ಮಾತೃ ಕಂಪನಿಯ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸುವುದು (Product Development), ಅದನ್ನು ಟೆಸ್ಟ್ ಮಾಡುವುದು, ಕಸ್ಟಮರ್ ಸರ್ವಿಸ್ ನೀಡುವುದು, ಇತ್ಯಾದಿ. ಇವರೆಲ್ಲರೂ ಮೇಸ್ತ್ರಿಗಳನ್ನು ಇಟ್ಟುಕೊಂಡು ಸ್ವತಃ ತಾವೆ ನಿಂತು ಮನೆ ಕಟ್ಟಿಕೊಳ್ಳುತ್ತಿರುವವರು!
ಮೊದಲೆ ಹೇಳಿದಂತೆ, ಈ ಔಟ್‌ಸೋರ್ಸಿಂಗ್ ಟ್ರೆಂಡ್ ಇನ್ನೂ ಒಂದಷ್ಟು ವರ್ಷ ನಡೆಯುತ್ತದೆ. ಆದರೆ ಈಗಾಗಲೆ ಭಾರತೀಯ ಕಂಪನಿಗಳಿಗೆ ಸ್ಪರ್ಧೆ ಬಿರುಸಾಗುತ್ತಿದೆ. ಬರುಬರುತ್ತ ಅದು ಇನ್ನೂ ಕಠಿಣವಾಗಬಹುದು. ಬೇರೆ ದೇಶಗಳಲ್ಲಿಯೂ ಸ್ಪರ್ಧಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಹಾಗಾಗಿ ಕಳೆದ ಕೆಲವಾರು ವರ್ಷಗಳಿಂದ ಭಾರತದ ಬಹುಪಾಲು ಸರ್ವಿಸ್ ಕಂಪನಿಗಳ ಬಗ್ಗೆ, ಅವುಗಳು ಭವಿಷ್ಯದಲ್ಲಿ ಇನ್ನೂ ಬೆಳೆಯಲು, ಉಳಿಯಲು ಈಗಿನಿಂದಲೆ ಕೆಲಸ ಶುರು ಮಾಡುವುದರ ಬಗ್ಗೆ ಸಲಹೆ, ಆಕ್ಷೇಪಣೆಗಳು ಗಟ್ಟಿಯಾಗಿ ಕೇಳಿ ಬರುತ್ತಿವೆ. ಇದರಲ್ಲಿ ಮುಖ್ಯವಾದದ್ದು, ಭಾರತದ ದೈತ್ಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ತಾವೆ ಕೆಲವು ಪ್ರಾಡಕ್ಟ್ ಮಾಡಲು ಆರಂಭಿಸುವುದು.
ಈಗ ಮತ್ತೆ ಕಾಂಟ್ರ್ಯಾಕ್ಟರ್ ಹೋಲಿಕೆಗೆ ಬರೋಣ. ಮಹಾತ್ವಾಕಾಂಕ್ಷಿಯಾದ ಗಾರೆಯವನು ಮೇಸ್ತ್ರಿಯಾದ. ನಂತರ ಕಾಂಟ್ರ್ಯಾಕ್ಟರ್ ಆದ. ಒಂದಷ್ಟು ಮೇಸ್ತ್ರಿಗಳನ್ನಿಟ್ಟುಕೊಂಡು ಮೂರ್ನಾಲ್ಕು ಕಡೆ ಕಾಂಟ್ರ್ಯಾಕ್ಟ್ ತೆಗೆದುಕೊಳ್ಳುತ್ತಿದ್ದ. ಕಷ್ಟಪಟ್ಟು ಒಂದಷ್ಟು ಚೆನ್ನಾಗಿ ದುಡಿದ. ಅದಾದ ಮೇಲೆ ಈಗ ಅವನು ತನ್ನದೇ ಫೀಲ್ಡಿನಲ್ಲಿ ಬೆಳೆಯಲು ಏನು ಮಾಡಬೇಕು? ಅಚ್ಚುಕಟ್ಟಾದ ಸ್ಥಳದಲ್ಲಿ ಸ್ವಲ್ಪ ಜಾಗ ತೆಗೆದುಕೊಳ್ಳುತ್ತಾನೆ. ಅಲ್ಲಿ ಕೆಲವು ಕಮರ್ಷಿಯಲ್ ಬಿಲ್ಡಿಂಗ್ ಕಟ್ಟುತ್ತಾನೆ. ಕೆಲವನ್ನು ಮಾರುತ್ತಾನೆ, ಕೆಲವನ್ನು ಬಾಡಿಗೆಗೆ ಕೊಡುತ್ತಾನೆ. ಇದರಿಂದ ಒಳ್ಳೆಯ ಲಾಭ ಮಾಡುತ್ತಾನೆ. ಅದೇ ಸಮಯದಲ್ಲಿ ಕೆಲವು ಜನಕ್ಕೆ ಸುಲಭ ಬೆಲೆಗೆ ಮನೆ ಬೇಕಿರುವುದನ್ನು ಗಮನಿಸುತ್ತಾನೆ. ಮತ್ತೆ ಜಮೀನು ತೆಗೆದುಕೊಂಡು ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್ ಕಟ್ಟುತ್ತಾನೆ. ಮಾರುತ್ತಾನೆ. ಮೊದಲೆಲ್ಲ ಬೇರೆಯವರಿಗೆ ಕಟ್ಟಿಸಿಕೊಡುತ್ತಿದ್ದವನು ಈಗ ತಾನೆ ಕಟ್ಟಿಸಿ ತನ್ನ ಉತ್ಪನ್ನವನ್ನು ಬೇರೆಯವರಿಗೆ ಮಾರುತ್ತಿದ್ದಾನೆ. ಈ ಪಯಣದಲ್ಲಿ ಅವನು ತನ್ನಂತಹವರೆ ಆದ ಇತರ ಬಿಲ್ಡರ್ಸ್ ಜೊತೆ ಪಾಲುಗಾರಿಕೆ ಮಾಡಿಕೊಳ್ಳಬಹುದು. ಸಣ್ಣಪುಟ್ಟ ಬಿಲ್ಡರ್ ಕಂಪನಿಗಳನ್ನು ಕೊಂಡುಕೊಳ್ಳಬಹುದು. ಹೀಗೆ ಕಟ್ಟುತ್ತ, ಕೊಳ್ಳುತ್ತ, ಮಾರುತ್ತ, ಬೇರೆ ಊರುಗಳಿಗೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುತ್ತಾ, ಬೆಳೆಯುತ್ತಾ ಹೋಗುತ್ತಾನೆ.
ಈಗ ಇನ್ಫೋಸಿಸ್, ವಿಪ್ರೋಗಳು ಮಡಬೇಕಿರುವುದೂ ಇದನ್ನೆ. ಆದರೆ ಇಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಸರಿಯಾಗಿ ಮಾರ್ಕೆಟ್ ಸ್ಟಡಿ ಮಾಡಿಲ್ಲದೆ ಹೊದರೆ, ಎಕಾನಮಿ ಏರುಪೇರಾದರೆ, ಜನರ ಅಭಿರುಚಿ, ಅವಶ್ಯಕತೆಗಳು ಬದಲಾದರೆ, ಈಗಾಗಲೆ ಅಂತಹುದೇ ಉತ್ಪನ್ನಗಳನ್ನು ಕೊಡುತ್ತಿರುವವರಿಗಿಂತ ಕಮ್ಮಿ ಬೆಲೆಗೆ ಇನ್ನೂ ಉತ್ತಮವಾದದ್ದನ್ನು ಕೊಡಲಾರದೆ ಹೊದರೆ, ಹಾಕಿದ ದುಡ್ಡು ಬರದೇ ಹೋಗಬಹುದು. ಲಾಭ ಬರಲು ಬಹಳ ದಿನ ಕಾಯಬೇಕಾಗಬಹುದು. ಕಾಂಟ್ರ್ಯಾಕ್ಟ್ ಕೆಲಸದಲ್ಲಿ ಈ ಸಮಸ್ಯೆಗಳಿಲ್ಲ. ಇಂದಿನ ಕೆಲಸಕ್ಕೆ ಇಂದೇ ದುಡ್ಡು ಬರುತ್ತದೆ. ಬಂಡವಾಳ ಹೂಡುವ ಪ್ರಮೇಯವೇ ಬರುವುದಿಲ್ಲ. ಹಾಗಾಗಿ ನಷ್ಟವಾಗಬಹುದಾದ ಸಾಧ್ಯತೆಯೂ ಇರುವುದಿಲ್ಲ. ಬ್ಯುಸಿನೆಸ್ ಡೌನ್ ಆಗುತ್ತಿದ್ದ ಹಾಗೆ ಖರ್ಚು ಕಮ್ಮಿ ಮಾಡಿಕೊಳ್ಳಲು ನೌಕರರನ್ನು ತೆಗೆಯುತ್ತಾ ಹೋದರಾಯಿತು!
ಇಮೇಯ್ಲ್‌ಗಳಲ್ಲಿ ಮೊದಲು ಬಹಳ ಜನಪ್ರಿಯವಾದದ್ದು ಭಾರತೀಯನೇ ಆದ, ಬೆಂಗಳೂರಿನ ಸೇಂಟ್ ಜೋಸೆಫ್ಸ್‌ನಲ್ಲಿ ಓದಿದ ಸಬೀರ್ ಭಾಟಿಯಾರ ಹಾಟ್‌ಮೇಯ್ಲ್. 1996 ಜುಲೈನಲ್ಲಿ ಸುಮಾರು ಒಂದೂಕಾಲು ಕೋಟಿ ರೂಪಾಯಿ ಬಂಡವಾಳದಿಂದ ಆರಂಭವಾದ ಅವರ ಹಾಟ್‌ಮೇಯ್ಲ್ ಉತ್ಪನ್ನ ಎಷ್ಟು ವೇಗದಲ್ಲಿ ಜನಪ್ರಿಯವಾಯಿತೆಂದರೆ, 1997 ರ ಡಿಸೆಂಬರ್‌ನಲ್ಲಿ ಭಾಟಿಯಾ ಹಾಟ್‌ಮೇಯ್ಲ್ ಅನ್ನು 40 ಕೋಟಿ ಡಾಲರ್‌ಗೆ ಮೈಕ್ರೋಸಾಫ಼್ಟ್‌ಗೆ ಮಾರಿದರು! ಅದೇ ಸಮಯದಲ್ಲಿ, ಅಂದರೆ 1997 ರಲ್ಲಿ, ಇಡೀ ಇನ್ಫೋಸಿಸ್ ಕಂಪನಿಯ ವಾರ್ಷಿಕ ವರಮಾನ ಎಷ್ಟು ಗೊತ್ತೆ? ಕೇವಲ 6.5 ಕೋಟಿ ಡಾಲರ್!!
Product ಗಳ ಮೌಲ್ಯ ಮತ್ತು ಪ್ರಾಮುಖ್ಯತೆಯ ಬಗ್ಗೆ ಕೊಡಬಹುದಾದ ಮತ್ತೊಂದು ಉದಾಹರಣೆ, ಯೂಟ್ಯೂಬ್. 2005 ರ ಫೆಬ್ರವರಿಯಲ್ಲಿ ಕೇವಲ ಮೂರು ಜನರಿಂದ ಪ್ರ್ರಾರಂಭವಾದ Youtube ಅನ್ನು ಪ್ರಸಿದ್ಧ ಇಂಟರ್‌ನೆಟ್ ಕಂಪನಿ ಗೂಗ್ಲ್‌ನವರು 2006 ರ ಅಕ್ಟೋಬರ್‌ನಲ್ಲಿ 7400 ಕೋಟಿ ರೂಪಾಯಿಗೆ ಕೊಂಡುಕೊಂಡರು! ಅಷ್ಟು ಮೊತ್ತಕ್ಕೆ ಒಂದೂವರೆ ವರ್ಷದ ಕಂಪನಿಯನ್ನು ಗೂಗ್ಲ್‌ನವರು ಕೊಳ್ಳಲು ಕಾರಣ ಯೂಟ್ಯೂಬ್ ವೆಬ್‌ಸೈಟಿನಲ್ಲಿ ತಮ್ಮ ಉತ್ಪನ್ನಗಳಾದ ಜಾಹಿರಾತುಗಳನ್ನು ಮಾರುವ ಸೇವೆಯನ್ನು ಒದಗಿಸಲು. ಇಲ್ಲಿ ಯೂಟ್ಯೂಬ್ ಆಗಲಿ, ಗೂಗ್ಲ್ ಆಗಲಿ ಪ್ರಾಡಕ್ಟ್ ಕಂಪನಿಗಳೆ ಹೊರತು ವಿಪ್ರೊ, ಇನ್ಫೋಸಿಸ್ ನಂತಹ ಸರ್ವಿಸಸ್ ಕಂಪನಿಗಳಲ್ಲ. ಗುರಿ ಸರಿಯಾಗಿದ್ದಲ್ಲಿ ಪ್ರಾಡಕ್ಟ್ ಕಂಪನಿಗಳು ಬೆಳೆಯುವ ವೇಗ ಇನ್ಫೋಸಿಸ್ ಬೆಳೆಯುವ ವೇಗಕ್ಕಿಂತ ಅನೇಕ ಪಟ್ಟು ಹೆಚ್ಚು!
ಉತ್ಪನ್ನಗಳ ಮೌಲ್ಯ ಮತ್ತು ಅವು ಸೃಷ್ಟಿಸುವ ನೌಕರಿ ಮತ್ತು ಸಂಪತ್ತನ್ನು ಅರಿತಿರುವ 'ಹಾಟ್‌ಮೇಯ್ಲ್' ಭಾಟಿಯಾ, ನಮ್ಮ ಟಿಸಿಎಸ್-ಇನ್ಫೋಸಿಸ್-ವಿಪ್ರೋಗಳ ಬಗ್ಗೆ ಏನು ಹೇಳುತ್ತಾರೆ ಗೊತ್ತೆ?
"ಸಹಸ್ರಾರು ಕೋಟಿ ರೂಪಾಯಿಗಳಷ್ಟು ಕ್ಯಾಷ್ ಹೊಂದಿರುವ ಈ ಕಂಪನಿಗಳು ಆ ದುಡ್ಡಿನ ಮೇಲೆ ಕುಳಿತಿರುವುದನ್ನು ಬಿಟ್ಟರೆ ಮತ್ತೇನೂ ಮಾಡುತ್ತಿಲ್ಲ. R&D ಯಲ್ಲಿ ಅದನ್ನು ತೊಡಗಿಸುತ್ತಿಲ್ಲ. ಉತ್ಪನ್ನಗಳನ್ನು ಹೊರತರುತ್ತಿಲ್ಲ. ಅವರು ಮಾಡುತ್ತಿರುವುದೆಲ್ಲವೂ ನೌಕರರನ್ನು ಕೊಂಡುಕೊಂಡು ಅವರನ್ನು ಲಾಭಕ್ಕೆ ಮಾರಿಕೊಳ್ಳುವುದು ಮಾತ್ರ. They are doing nothing but labour arbitrage."
ಈಗ, ನಮ್ಮ ಪ್ರೀತಿಯ, ಮೆಚ್ಚಿನ ಈ ಕಾಂಟ್ರ್ಯಾಕ್ಟರ್‍ಗಳು ತಾವೇ ಮನೆ ಕಟ್ಟಿ ಮಾರುವುದು ಯಾವಾಗ? ಅವರು ಅದನ್ನು ಬೇಗ ಮಾಡದೆ ಹೋದರೆ ಎಕಾನಮಿ ಡೌನ್ ಆಗುತ್ತ ಹೋದ ಹಾಗೆ ಅವರಲ್ಲಿ ಕೆಲಸ ಮಾಡುತ್ತಿರುವವರು ಒಬ್ಬೊಬ್ಬರೆ ಕೆಲಸ ಕಳೆದುಕೊಳ್ಳುತ್ತ ಹೋಗುವುದು ಸಹಜ. ಷೇರ್ ಹೋಲ್ಡರ್ಸನ್ನು ತಕ್ಷಣಕ್ಕೆ ಸಂತೃಪ್ತಿ ಪಡಿಸಬೇಕೆಂದು R&D ಯಲ್ಲಿ ಹಣ ತೊಡಗಿಸದೆ ಹೋದರೆ, ಉತ್ಪನ್ನಗಳ ಬಗ್ಗೆ ಗಂಭೀರವಾಗಿ ಯೋಚಿಸದೆ ಹೋದರೆ ಭವಿಷ್ಯ ಆಶಾದಾಯಕವಾಗಿಲ್ಲ. ನಾಳೆ ಕೂಲಿ ಕೆಲಸಕ್ಕೆ ಯಾರೂ ಕರೆಯದೆ ಹೋದಾಗ ಇವರ ಪರಿಸ್ಥಿತಿ ಏನಾಗಬಹುದು? ಅದನ್ನೆಲ್ಲ ಯೋಚಿಸದಷ್ಟು ದಡ್ಡರು ಈ ಕಂಪನಿಗಳಲ್ಲಿ ಕೆಲಸ ಮಾಡುತ್ತಿಲ್ಲ. ಹಾಗಾಗಿ ಬರುವ ದಿನಗಳಲ್ಲಿ ಕೆಲವು ಬದಲಾವಣೆಗಳಾಗುವುದು ಸಹಜ. ಹಾಗಾದಲ್ಲಿ ಈ ಭಾರತೀಯ ಕಂಪನಿಗಳ ಭವಿಷ್ಯ ಇನ್ನೂ ಉಜ್ವಲವಾಗಿ ಬೆಳಗಬಹುದು.
No comments:
Post a Comment