Mar 4, 2007

ಗಿಡಿಯೆನ್ನನ ಕಹಳೆ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮಾರ್ಚ್ 16, 2007 ರ ಸಂಚಿಕೆಯಲ್ಲಿನ ಲೇಖನ)

ಯಹೂದಿಗಳ ಪೌರಾಣಿಕ ಕತೆಯಲ್ಲಿ ಗಿಡಿಯೆನ್ ಎನ್ನುವವನು ದೇವರ ಆದೇಶದ ಮೇಲೆ ದುಷ್ಟಸಂಹಾರ ಮಾಡುವವನು. ತನ್ನ ಸೈನಿಕರಿಗೆ ಮಣ್ಣಿನ ಮಡಕೆ, ದೊಂದಿ, ಮತ್ತು ಒಂದು ಕಹಳೆಕೊಂಬು ಕೊಟ್ಟು, ರಾತ್ರೋರಾತ್ರಿ ಶತೃಸೈನಿಕರಲ್ಲಿ ಗೊಂದಲವೆಬ್ಬಿಸಿ ಗಿಡಿಯೆನ್ ದುಷ್ಟರನ್ನು ಸೋಲಿಸುತ್ತಾನೆ. ಯಹೂದಿಗಳ ಹೀಬ್ರೂ ಭಾಷೆಯಲ್ಲಿ ಗಿಡಿಯೆನ್ ಎಂದರೆ ನಾಶ ಮಾಡುವವನು ಇಲ್ಲವೆ ಭೀಮಬಲದ ಸೈನಿಕ ಎಂಬ ಅರ್ಥವಿದೆ.

ಅಮೇರಿಕದಲ್ಲಿನ ಫ಼್ಲಾರಿಡಾ ರಾಜ್ಯದಲ್ಲಿ 1961 ಜೂನ್ 3 ರಂದು ಕ್ಲಾರೆನ್ಸ್ ಅರ್ಲ್ ಗಿಡಿಯೆನ್ ಎನ್ನುವವನನ್ನು ಬಾರ್ ಒಂದಕ್ಕೆ ನುಗ್ಗಿ ಕೆಲವು ಬಿಯರ್ ಮತ್ತು ಸೋಡಾ ಬಾಟಲ್‌ಗಳನ್ನು ಹಾಗೂ 5 ಡಾಲರ್ ಚಿಲ್ಲರೆ ಹಣವನ್ನು ಕದ್ದ ಅರೋಪದ ಮೇಲೆ ಪೋಲಿಸರು ಬಂಧಿಸುತ್ತಾರೆ. ಐವತ್ತು ವರ್ಷದ ಗಿಡಿಯೆನ್ ನಿಜವಾಗಲೂ ಬಡವ. ಆತನಿಗೆ ತನ್ನ ಪರವಾಗಿ ವಾದಿಸಲು ಲಾಯರ್ ಒಬ್ಬನನ್ನು ಇಟ್ಟುಕೊಳ್ಳುವ ತಾಕತ್ತಿರುವುದಿಲ್ಲ. ನಿನ್ನ ಕೇಸನ್ನು ನೀನೆ ವಾದಿಸಿಕೊ ಎಂದು ಕೋರ್ಟು ಸೂಚಿಸುತ್ತದೆ. ವೃತ್ತಿಪರ ಲಾಯರ್‌ಗಳ ಮುಂದೆ ಇವನದ್ಯಾವ ವಾದ? ಬಂಧನದ ಎರಡು ತಿಂಗಳ ನಂತರ ಜಡ್ಜು ಅವನಿಗೆ ಆ ತಪ್ಪಿಗೆ ಗರಿಷ್ಠಶಿಕ್ಷೆಯಾದ 5 ವರ್ಷಗಳ ಜೈಲುವಾಸ ವಿಧಿಸುತ್ತಾನೆ.

ಜೈಲಿನಲ್ಲಿ ಗಿಡಿಯೆನ್ ಸುಮ್ಮನೆ ಕೂರುವುದಿಲ್ಲ. ಅಮೇರಿಕದ ಕಾನೂನು ವ್ಯವಸ್ಥೆಯನ್ನು ಓದಲು ಪ್ರಾರಂಭಿಸುತ್ತಾನೆ. ಅದರಲ್ಲಿ ಅವನಿಗೆ ತನಗೆ ಶಿಕ್ಷೆ ವಿಧಿಸಿರುವ ಜಡ್ಜು ತನ್ನ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಿರುವುದು ಗೊತ್ತಾಗುತ್ತದೆ. ಕೂಡಲೆ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಎಫ಼್.ಬಿ.ಐ. ಗೆ ಮತ್ತು ರಾಜ್ಯದ ಹೈಕೋರ್ಟಿಗೆ ಪತ್ರ ಬರೆಯುತ್ತಾನೆ. ಅವರಿಂದ ಯಾವುದೆ ಉತ್ತರ ಬರುವುದಿಲ್ಲ. ಗಿಡಿಯೆನ್ ನೇರವಾಗಿ ಅಮೇರಿಕ ದೇಶದ ಸುಪ್ರೀಮ್‌ಕೋರ್ಟಿಗೇ ಐದು ಪುಟಗಳ ಕಾಗದ ಬರೆಯುತ್ತಾನೆ. ಜೈಲಿಗೆ ಬಂದ ನಾಲ್ಕು ತಿಂಗಳಿನಲ್ಲಿಯೆ ಇವೆಲ್ಲವನ್ನೂ ಮಾಡುತ್ತಾನೆ. ಕಾಗದ ನೋಡಿದ ಸುಪ್ರೀಮ್‌ಕೋರ್ಟು ಗಿಡಿಯೆನ್ನನ ವಾದವನ್ನು ಪರಿಶೀಲಿಸಲು ಒಪ್ಪಿಕೊಂಡು ವಿಚಾರಣೆಯನ್ನು ಒಂದು ವರ್ಷದ ನಂತರ ಆರಂಭಿಸುತ್ತದೆ. ಗಿಡಿಯೆನ್ನನ ಪರವಾಗಿ ವಾದಿಸಲು ವಕೀಲರನ್ನು ಕೋರ್ಟೆ ನೇಮಿಸುತ್ತದೆ. ವಾದ-ಪ್ರತಿವಾದದ ನಂತರ, ಗಿಡಿಯೆನ್ನನ ವಿರುದ್ಧದ ಮೊಕದ್ದಮೆಯಲ್ಲಿ ನ್ಯಾಯಾಲಯ ಆತನ ಪರವಾಗಿ ವಾದಿಸಲು ವಕೀಲನನ್ನು ನೇಮಿಸದೆ ಇರುವುದರಿಂದ ಆತನ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಸುಪ್ರೀಮ್ ಕೋರ್ಟಿನ ಒಂಬತ್ತೂ ನ್ಯಾಯಾಧೀಶರು ಸರ್ವಾನುಮತದಿಂದ ಒಪ್ಪಿಕೊಂಡು, ತನ್ನ ಪರವಾಗಿ ವಕೀಲನನ್ನು ಇಟ್ಟುಕೊಳ್ಳುವ ಆರ್ಥಿಕ ತ್ರಾಣವಿಲ್ಲದ ಪ್ರತಿಯೊಬ್ಬ ಕ್ರಿಮಿನಲ್ ಆರೋಪಿಗೂ ನ್ಯಾಯಾಲಯಗಳು ವಕೀಲನನ್ನು ಒದಗಿಸಬೇಕು ಎಂಬ ಆದೇಶ ನೀಡುತ್ತದೆ.

ಈ ತೀರ್ಪು ಅಮೇರಿಕದ ನ್ಯಾಯ ವ್ಯವಸ್ಥೆಯಲ್ಲಿ ಒಂದು ಮಹತ್ವದ ತೀರ್ಪು. ಹೀಗೆ ತೀರ್ಪು ಬಂದ ಕೂಡಲೆ ಫ಼್ಲಾರಿಡಾ ರಾಜ್ಯಸರ್ಕಾರ ಪುನರ್‌ವಿಚಾರಣೆಯ ಖರ್ಚು ಉಳಿಸಲು ಗಿಡಿಯೆನ್ನನ ತರಹವೆ ವಕೀಲನಿಲ್ಲದೆ ಶಿಕ್ಷೆಗೊಳಗಾಗಿದ್ದ 2000 ಕೈದಿಗಳನ್ನು ಬಿಡುಗಡೆ ಮಾಡಿಬಿಡುತ್ತದೆ. ಆದರೆ ಗಿಡಿಯೆನ್ ಬಿಡುಗಡೆಗೆ ಒಪ್ಪಿಕೊಳ್ಳುವುದಿಲ್ಲ. ಮತ್ತೆ ತನ್ನ ಕೇಸನ್ನು ವಿಚಾರಣೆ ಮಾಡಲು ಕೇಳಿಕೊಳ್ಳುತ್ತಾನೆ. ಈ ಸಲ ಕೋರ್ಟು ಆತನಿಗೆ ಸರ್ಕಾರಿ ವೆಚ್ಚದಲ್ಲಿ ವಕೀಲನನ್ನು ಒದಗಿಸುತ್ತದೆ. ಪೋಲಿಸರು ಮತ್ತು ಸರ್ಕಾರಿ ವಕೀಲರು ಅವನ ಕಳ್ಳತನ ಸಾಬೀತು ಮಾಡಲು ಈ ಬಾರಿ ವಿಫಲರಾಗುತ್ತಾರೆ. ವಾದಪ್ರತಿವಾದದ ನಂತರ ನ್ಯಾಯಮಂಡಳಿ ಕೇವಲ ಒಂದು ಗಂಟೆಯ ಸಮಾಲೋಚನೆಯಲ್ಲಿ ಗಿಡಿಯೆನ್ ನಿರಪರಾಧಿ ಎನ್ನುವ ತೀರ್ಮಾನಕ್ಕೆ ಬರುತ್ತದೆ. ಎರಡು ವರ್ಷಗಳ ಜೈಲು ವಾಸದ ನಂತರ ಗಿಡಿಯೆನ್ ನಿರಪರಾಧಿಯಾಗಿ ಹೊರಬರುತ್ತಾನೆ.

ಅಮೇರಿಕದ ಕಳೆದ ಅರ್ಧಶತಮಾನದ ರಾಜಕೀಯ ಇತಿಹಾಸವನ್ನು ತೆಗೆದುಕೊಂಡರೆ, ಈ ದೇಶದ ಬಹುಸಂಖ್ಯಾತ ಜನ ಕೇವಲ ಇಬ್ಬರು ರಾಜಕಾರಣಿಗಳ ಅನಿರೀಕ್ಷಿತ ಸಾವಿಗೆ ಮಮ್ಮಲಮರುಗಿ, ಅಕ್ಷರಶಃ ಗೋಳಾಡಿ ಕಣ್ಣೀರಿಟ್ಟಿದ್ದಾರೆ. ಅವರಿಬ್ಬರೂ ಸಹಸ್ರಾರು ಜನರ ಎದುರಿಗೆ ಐದು ವರ್ಷಗಳ ಅಂತರದಲ್ಲಿ ಕೊಲೆಯಾದವರು. ಇಬ್ಬರೂ ಅಣ್ಣತಮ್ಮಂದಿರು. ಅಣ್ಣ ಜಾನ್ ಕೆನ್ನೆಡಿ, ತಮ್ಮ ಬಾಬ್ಬಿ ಅಥವ ರಾಬರ್ಟ್ ಕೆನ್ನೆಡಿ. ಅಣ್ಣ ಅಮೇರಿಕದ ಅಧ್ಯಕ್ಷನಾಗಿದ್ದಾಗ ಕೊಲೆಯಾದರೆ, ತಮ್ಮ ಅಧ್ಯಕ್ಷ ಚುನಾವಣೆಗೆ ನಿಂತು, ಇನ್ನೇನು ಗೆಲ್ಲುವುದು ಖಡಾಖಂಡಿತ ಎನ್ನುವ ಪರಿಸ್ಥಿತಿಯಲ್ಲಿ ಕೊಲೆಯಾಗುತ್ತಾನೆ. ಸಾಯುವಾಗ ಅಣ್ಣನಿಗೆ 46 ವರ್ಷ ವಯಸ್ಸಾಗಿದ್ದರೆ ಬಾಬ್ಬಿಗೆ ಕೇವಲ 43 ವರ್ಷ ವಯಸ್ಸು. ಕಳೆದ ಅರ್ಧಶತಮಾನದ ಭಾರತದ ಇತಿಹಾಸವನ್ನು ಗಮನಿಸಿದರೆ ನಮಗೆ ಬಾಬ್ಬಿಯಂತಹ ಬುದ್ಧಿವಂತ, ನಿಷ್ಠುರ, ನೈತಿಕ ನಿಲುವುಗಳ ಪ್ರಾಮಾಣಿಕ ರಾಜಕಾರಣಿ ಕಾಣಸಿಗುವುದು ಅಪರೂಪ. ಕೇವಲ 35 ವರ್ಷ ವಯಸ್ಸಿಗೇ ಅಣ್ಣನ ಸರ್ಕಾರದಲ್ಲಿ ಅಮೇರಿಕದ ಕಾನೂನು ಮಂತ್ರಿಯಾಗುವ ಬಾಬ್ಬಿ, ಕೇವಲ 3 ವರ್ಷಗಳ ತನ್ನ ಅಧಿಕಾರವಧಿಯಲ್ಲಿ ದೊಡ್ಡದೊಡ್ಡ ಮಾಫ಼ಿಯಾಗಳನ್ನು, ಭೂಗತ ಲೋಕದ ವ್ಯವಸ್ಥಿತ ಅಪರಾಧಗಳನ್ನು ಮಟ್ಟ ಹಾಕಿದ್ದೆ ಅಲ್ಲದೆ, ಕಪ್ಪುಜನರ ನಾಗರಿಕ ಹಕ್ಕುಗಳ ಹೋರಾಟಕ್ಕೆ ಬೆಂಬಲ ಕೊಡುತ್ತಾನೆ.

ಗಿಡಿಯೆನ್ನನ ಬಿಡುಗಡೆಯ ನಂತರ ಬಾಬ್ಬಿ ಕೆನ್ನೆಡಿ ಈ ಕೇಸಿನ ಬಗ್ಗೆ ಹೀಗೆ ಹೇಳುತ್ತಾನೆ: "ಫ಼್ಲಾರಿಡಾದ ಕ್ಲಾರೆನ್ಸ್ ಗಿಡಿಯೆನ್ ಎಂಬ ಸಾಧಾರಣ ಆರೋಪಿ ಜೈಲಿನಲ್ಲಿ ಕುಳಿತು ಪೆನ್ನು ಮತ್ತು ಪೇಪರ್ ಹಿಡಿದು ಸುಪ್ರೀಮ್ ಕೋರ್ಟಿಗೆ ಒಂದು ಕಾಗದ ಬರೆಯದೆ ಹೋಗಿದ್ದರೆ, ಹಾಗೂ ತನಗೆ ಪ್ರತಿದಿನವೂ ಬರುವ ರಾಶಿರಾಶಿ ಕಾಗದಗಳಲ್ಲಿ ಆ ಕಾಗದದ ಪ್ರಾಮುಖ್ಯತೆಯನ್ನು ನೋಡುವ ತೊಂದರೆಯನ್ನು ಸುಪ್ರೀಮ್ ಕೋರ್ಟು ತೆಗೆದುಕೊಳ್ಳದೆ ಹೋಗಿದ್ದರೆ, ಅಮೇರಿಕದ ಬೃಹತ್ ಕಾನೂನು ವ್ಯವಸ್ಥೆ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಹೋಗುತ್ತಿತ್ತು. ಆದರೆ, ಗಿಡಿಯೆನ್ ಆ ಕಾಗದ ಬರೆದ; ಕೋರ್ಟು ಅದನ್ನು ನೋಡಿತು. ತಾನು ಮಾಡಿರದ ತಪ್ಪಿಗೆ ಎರಡು ವರ್ಷ ಜೈಲುವಾಸ ಅನುಭವಿಸಿ, ನಂತರ ಸಮರ್ಥ ವಕೀಲನ ಸಹಾಯದಿಂದ ಗಿಡಿಯೆನ್ ನಿರಪರಾಧಿ ಎಂದು ಸಾಬೀತಾಗಿ ಬಿಡುಗಡೆಯಾದ. ಹಾಗೂ, ಅಮೇರಿಕದ ಇಡೀ ನ್ಯಾಯಾಂಗ ಚರಿತ್ರೆಯ ದಿಕ್ಕೆ ಬದಲಾಯಿತು."


ಲೇಖನಿಯೆಂಬ ಆಧುನಿಕ ಕಾಲದ ಕಹಳೆಯನ್ನು ಮೊಳಗಿಸಿದ ಈ ಗಿಡಿಯೆನ್ನನ ಕೋರ್ಟು ಕತೆಯನ್ನು 1980 ರಲ್ಲಿ ಗಿಡಿಯೆನ್ನನ ಕಹಳೆ ಎಂಬ ಹೆಸರಿನಲ್ಲಿ ಸಿನೆಮಾ ಮಾಡಲಾಯಿತು. ಹಾಲಿವುಡ್ಡಿನ ಪ್ರತಿಭಾವಂತ, ಸಹಜನಟರಲ್ಲಿ ಒಬ್ಬನಾದ ಹೆನ್ರಿ ಫ಼ಾಂಡ ಈ ಚಿತ್ರದಲ್ಲಿ ಅಮೋಘವಾದ ಅಭಿನಯ ನೀಡಿದ್ದಾನೆ. ಈ ದೇಶ ತನ್ನ ದೇಶದ ಇತಿಹಾಸವನ್ನು, ತನ್ನ ಹೀರೋಗಳನ್ನು ಮುಂದಿನ ಜನಾಂಗಕ್ಕೆ ತಿಳಿಯಪಡಿಸುವುದು, ದಾಖಲು ಮಾಡುವುದು ಇಂತಹ ವಸ್ತುನಿಷ್ಠ ಐತಿಹಾಸಿಕ ಚಿತ್ರಗಳ ಮೂಲಕ.

No comments: