Jun 24, 2007

ಕಾಲಕ್ಕಿಂತ ಮುಂದಿದ್ದ ದಾರ್ಶನಿಕರು...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜುಲೈ 6 , 2007 ರ ಸಂಚಿಕೆಯಲ್ಲಿನ ಲೇಖನ)

ಅವರನ್ನು ಭೇಟಿಯಾಗಿ, ಎರಡು-ಮೂರು ತಾಸು ಮಾತನಾಡಿ ಮೂರು ತಿಂಗಳೂ ಆಗಿರಲಿಲ್ಲ. ಅವತ್ತಿನ ಮಾತುಕತೆಯಲ್ಲಿ ಕರ್ನಾಟಕದಲ್ಲಿ ಇಲ್ಲವಾಗುತ್ತಿರುವ ಸಾಂಸ್ಕೃತಿಕ ನಾಯಕತ್ವದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ, ಸಾಮಾಜಿಕ ಸಾಮರಸ್ಯದ ಬಗ್ಗೆ ಮಾತನಾಡಿದ್ದೆವು. ತೇಜಸ್ವಿ, ಅನಂತಮೂರ್ತಿಯವರೆಲ್ಲ ಅಂದಿನ ಮಾತಿನಲ್ಲಿ ಬಂದಿದ್ದರು. ಅದಾದ ಒಂದು ವಾರಕ್ಕೆಲ್ಲ ತೇಜಸ್ವಿಯವರು ತೀರಿ ಹೋದರು. ಅನಂತಮೂರ್ತಿಯವರು ಒಂದು ರೀತಿಯಲ್ಲಿ liability ಆಗುತ್ತ ಹೋಗುತ್ತಿದ್ದಾರೆ. ಈಗ ರಾಮದಾಸರೂ ಇಲ್ಲ.

ಫ್ರೊ. ರಾಮದಾಸರ ಬಗ್ಗೆ ಬರೆಯುವುದಕ್ಕಿಂತ ಅವರು ಯಾವುದಕ್ಕೆ ಹೋರಾಡಿದರು, ಅವರ ಹೋರಾಟದ ಮುಂದುವರಿಕೆಗೆ ಇರುವ ಸವಾಲುಗಳು ಏನು ಎಂದು ಯೋಚಿಸುವುದೆ ಅವರಿಗೆ ಅರ್ಥಪೂರ್ಣ ನಮನ ಎನ್ನಿಸುತ್ತದೆ. ಕೆಲವೊಮ್ಮೆ ಎಲ್ಲವೂ ಕಾಕತಾಳೀಯ ಎನ್ನಿಸುತ್ತದೆ. ಅನೇಕ ಅಂತರ್ಜಾತಿ ವಿವಾಹಗಳನ್ನು ಮಾಡಿದ್ದ, ಆ ಪ್ರಾಮಾಣಿಕ, ಹಠವಾದಿ, ನಿಷ್ಠುರ, ಹಾಗು ನಾಡಿನ ನೈತಿಕ ಬಲವಾಗಿದ್ದ ರಾಮದಾಸರು ಮೈಸೂರಿನಲ್ಲಿ ಸತ್ತ ಸಮಯದಲ್ಲಿ ನಾನು ಇಲ್ಲಿ ನಮ್ಮ ಅಂತರ್ಜಾತಿ ವಿವಾಹದ ಅಮೇರಿಕ ರೂಪವಾದ ಕಪ್ಪು-ಬಿಳಿಯರ ಮಧ್ಯೆಯ ವಿವಾಹದ ಬಗ್ಗೆ ಬಂದಿರುವ ಅತ್ಯಪೂರ್ಣ ಸಿನೆಮಾ "Guess Who's Coming to Dinner" ನೋಡುತ್ತ ಕುಳಿತಿದ್ದೆ.

ನಮ್ಮಲ್ಲಿ ಜಾತಿ ಎನ್ನುವುದು ನಮ್ಮ ಬೇರುಗಳನ್ನು ಹುಡುಕಿಕೊಳ್ಳುವ, ನೀತಿಮೌಲ್ಯಗಳ ಆದರ್ಶ ವ್ಯವಸ್ಥೆ ಎಂದಿದ್ದರೆ ಜಾತಿವಾದವನ್ನು ಇರಲಿ ಎನ್ನಬಹುದಿತ್ತು. ಆದರೆ ಈ ಜಾತಿ ವ್ಯವಸ್ಥೆ ಒಬ್ಬ ಮನುಷ್ಯನಿಂದ "ನಾನು ಮೇಲು, ನೀನು ಕೀಳು" ಎಂದು ಅಹಂಕಾರದಿಂದ ಹೇಳಿಸಿದರೆ, ಮತ್ತೊಬ್ಬನಿಂದ "ಅಯ್ಯ, ತಾವು ಮೇಲು, ನಾನು ಕೀಳು" ಎಂದು ದೈನ್ಯದಿಂದ ಹೇಳುವಂತೆ ಮಾಡುತ್ತದೆ. ಭಾರತ ಆಂತರಿಕವಾಗಿ ಗಟ್ಟಿಯಾಗಬೇಕಾದರೆ, ಸಮಗ್ರವಾಗಿ ಮುಂದುವರಿಯಬೇಕಾದರೆ ಹುಟ್ಟಿನಿಂದ ಬರುವ ಜಾತಿ ವ್ಯವಸ್ಥೆಯನ್ನು ನಿರ್ಮೂಲ ಮಾಡುವುದು ಅತ್ಯವಶ್ಯ. ಹನ್ನೆರಡನೆ ಶತಮಾನದಲ್ಲಿ ಬಸವಣ್ಣನಿಂದಲೂ, ಕಳೆದ ಶತಮಾನದಲ್ಲಿ ಗಾಂಧಿಯಿಂದಲೂ ಅಂತರ್ಜಾತಿ ವಿವಾಹಕ್ಕೆ ಬಹಿರಂಗ ಬೆಂಬಲ ಸಿಗುತ್ತ ಬಂದಿದೆ. ಈ ಜಾತಿ ವಿನಾಶದತ್ತ ಒಂದು ಪ್ರಾಯೋಗಿಕ ಹೆಜ್ಜೆ ಅಂತರ್ಜಾತಿ ವಿವಾಹ. ಅದಕ್ಕೆ ಜಿಡ್ಡುಗಟ್ಟಿದ, ಕಂದಾಚಾರದ, ಸಣ್ಣ ಮನುಷ್ಯರಿಂದ ನಮ್ಮಲ್ಲಿ ವಿರೋಧವಿತ್ತೆ ವಿನಹ ಕಾನೂನಿನ ವಿರೋಧ ಎಂದೂ ಇರಲಿಲ್ಲ.

ನಮ್ಮ ಜಾತಿವ್ಯವಸ್ಥೆಯ ಪ್ರತಿರೂಪ ಅಮೇರಿಕದಲ್ಲಿನ ವರ್ಣಭೇದ. 1967 ರ ತನಕ ಇಲ್ಲಿನ ಅನೇಕ ರಾಜ್ಯಗಳಲ್ಲಿ ಅಂತರ್ವರ್ಣೀಯ ವಿವಾಹ ಕಾನೂನಿಗೆ ವಿರುದ್ಧವಾಗಿತ್ತು. ಅದೆ ವರ್ಷ ಬಂದ ಸಿನೆಮಾ "Guess Who's Coming to Dinner". ಹಾಲಿವುಡ್‌ನ ನಂಬರ್ 1ಶ್ರೇಷ್ಠ ನಟಿ ಕ್ಯಾಥರಿನ್ ಹೆಪ್‌ಬರ್ನ್, ಮತ್ತೊಬ್ಬ ಶ್ರೇಷ್ಠ ನಟ ಹಾಗೂ ನಿಜಜೀವನದಲ್ಲೂ ಆಕೆಯ ಸಂಗಾತಿಯಾಗಿದ್ದ ಸ್ಪೆನ್ಸರ್ ಟ್ರೇಸಿ, ಉತ್ತಮ ನಟನೆಗೆ ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಕಪ್ಪು ನಟ ಸಿಡ್ನಿ ಪಾಯಿಟೀರ್ ನಟಿಸಿರುವ ಚಿತ್ರ ಇದು. ಇದರಲ್ಲಿ ಕರಿಯ ಯುವಕ ಮತ್ತು ಬಿಳಿ ಯುವತಿ ಪರಸ್ಪರರನ್ನು ಪ್ರೇಮಿಸಿ, ವಿವಾಹವಾಗ ಬಯಸುತ್ತಾರೆ. ಬಿಳಿ ಹುಡುಗಿಯ ಅಪ್ಪಅಮ್ಮ ಉದಾರವಾದಿಗಳು; ತಮ್ಮ ಜೀವನ ಪರ್ಯಂತ ಪ್ರಗತಿಪರ ಮೌಲ್ಯಗಳಿಗೆ ಬದ್ದರಾಗಿದ್ದವರು. ತಾವು ಹೇಳುತ್ತಿದ್ದ ಥಿಯರಿ ತಮ್ಮ ಮನೆಯಲ್ಲಿಯೇ ಪ್ರಾಯೋಗಿಕವಾಗಿ ಆಚರಿಸಬೇಕಾಗಿ ಬಂದಾಗ ಅವರೇನು ಮಾಡುತ್ತಾರೆ ಎನ್ನುವುದು ಚಿತ್ರದ ಕಥೆ.

ಚಿತ್ರದ ಕೊನೆಗೆ ಎಲ್ಲಾ ವಿರೋಧಗಳ ನಡುವೆ ಈ ಅಂತರ್ವರ್ಣೀಯ ಮದುವೆಗೆ ಒಪ್ಪಿಗೆ ಕೊಡುತ್ತ ಹುಡುಗಿಯ ಅಪ್ಪ ಸಂಬಂಧಪಟ್ಟವರನ್ನೆಲ್ಲ ಕೂರಿಸಿಕೊಂಡು, ಯುವಪ್ರೇಮಿಗಳಿಗೆ ಹೇಳುವ ಮಾತಿದು:

"ಮದುವೆ ಆದ ಮೇಲೆ ನೀವು ಎದುರಿಸಲಿರುವ ಸಮಸ್ಯೆಗಳು ಕಲ್ಪನೆಗೂ ಮೀರಿದ್ದು. ಆದರೆ ನಿಮಗೆ ಎಂತೆಂತಹ ವಿರೋಧಗಳು ಬರಲಿವೆ ಎಂಬ ಅರಿವು ನಿಮಗಿದೆ ಎಂದು ನನಗೆ ಗೊತ್ತು. ಈ ಮದುವೆಯಿಂದ ಶಾಕ್ ಆಗುವ, ಕೋಪಗೊಳ್ಳುವ, ಗಾಬರಿಯಾಗುವ ಹತ್ತು ಕೋಟಿ ಜನ ಈ ದೇಶದಲ್ಲಿಯೆ ಇದ್ದಾರೆ. ನೀವು ನಿಮ್ಮ ಜೀವನದ ಕೊನೆಯತನಕವೂ ಪ್ರತಿದಿನವೂ ಇಂತಹ ವಿರೋಧವನ್ನು ಲೆಕ್ಕಿಸದೆ ಮುಂದಕ್ಕೆ ಸಾಗಬೇಕಷ್ಟೆ. ಈ ಜನರನ್ನು ನೀವು ನಿರ್ಲಕ್ಷಿಸಲು ಪ್ರಯತ್ನಿಸಬಹುದು ಇಲ್ಲವೆ ಅವರಿಗಾಗಿ ಹಾಗೂ ಅವರ ಪೂರ್ವಗ್ರಹಗಳಿಗಾಗಿ, ಅವರ ಮತಾಂಧತೆಗಾಗಿ, ಅವರ ಅಂಧ ದ್ವೇಷಕ್ಕಾಗಿ, ಅವರ ಮುಠ್ಠಾಳ ಭೀತಿಗಳಿಗಾಗಿ ನೀವು ವಿಷಾದ ತೋರಿಸಬಹುದು. ಈ ಮದುವೆಯ ವಿರುದ್ಧ ಯಾರು ಬೇಕಾದರೂ ಒಳ್ಳೆಯ ವಾದ ಮಂಡಿಸಬಹುದು, ಅದರಲ್ಲೂ ನಿರಾಕರಿಸಲು ಆಗದಂತಹ, ತಲೆಯ ಮೇಲೆ ಹೊಡೆದಂತಹ ವಾದ ಮಂಡಿಸಬಹುದು. ಯಾವನೋ ಒಬ್ಬ ಹಾದರಕ್ಕುಟ್ಟಿದವನು ನೀವು ಮದುವೆ ಮಾಡಿಕೊಳ್ಳುವುದು ಒಳ್ಳೆಯದಲ್ಲ ಎಂದು ವಾದ ಮಂಡಿಸಿದರೂ, ಒಳ್ಳೆಯವರಾದ, ಕಲ್ಮಶಗಳಿಲ್ಲದ, ಗಾಢವಾಗಿ ಪ್ಪರಸ್ಪರರನ್ನು ಪ್ರೀತಿಸುವ ನೀವು ಮದುವೆಯಾಗದೇ ಇರುವುದೆ ಅದೆಲ್ಲಕ್ಕಿಂತ ಕೆಟ್ಟದ್ದು. (no matter what kind of a case some bastard could make against your getting married, there would be only one thing worse, and that would be if - knowing what you two are and knowing what you two have and knowing what you two feel- you didn't get married.)"

ಇತ್ತೀಚೆಗೆ ಕನ್ನಡದ ಒಂದು ಇಂಟರ್ನೆಟ್ ಫೋರಮ್‌ನಲ್ಲಿ, ಅಂತರ್ಜಾತೀಯ ವಿವಾಹ ಮಾಡಿಕೊಳ್ಳಬಾರದು, ಅದರಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ, ಒಂದೊಂದು ಜಾತಿಯ ಆಚಾರ ವಿಚಾರಗಳು ಒಂದೊಂದು ತರಹ, ಯಾಕೆ ಬೇಕು ಅವೆಲ್ಲ, ಎನ್ನುವಂತಹುದನ್ನು ಒಂದು ಗುಂಪು ಸಾಧಿಸುತ್ತಿತ್ತು. ನನಗೆ ಅದಕ್ಕಿಂತ ಶಾಕ್ ಆಗಿದ್ದು ಯಾರೊ ಒಬ್ಬರು ಪುಣ್ಯಾತ್ಮರು ಅಂತರ್ಜಾತಿ ವಿವಾಹಗಳು ಯಶಸ್ವಿಯಾಗುವುದಿಲ್ಲ, ಯಾಕೆಂದರೆ ಅದರಲ್ಲಿ ಅನೇಕ ಸಮಸ್ಯೆಗಳಿವೆ, ಬೇಕಾದರೆ ಭೈರಪ್ಪನವರ ದಾಟು ಕಾದಂಬರಿ ಓದಿ ಎಂದಾಗ! ಈಗ ತಾನೆ ಮತ್ತೊಬ್ಬ ಭೈರಪ್ಪ ಭಕ್ತನ ಬ್ಲಾಗ್ ಒಂದರಲ್ಲಿ ನೋಡುತ್ತೇನೆ, "ಒಬ್ಬ ಬ್ರಾಹ್ಮಣ ಮತ್ತು ದಲಿತ ಹೆಣ್ಣುಮಕ್ಕಳಿಬ್ಬರ ಸ್ನೇಹ ಮುಂದುವರೆಯಲಿಲ್ಲ, ಏಕೆಂದರೆ ನಮ್ಮ ಆಚಾರ, ವಿಚಾರ, ಸಂಸ್ಕಾರಗಳೆ ಬೇರೆ," ಎಂಬ ಕತೆ! ಇದೆಲ್ಲ ಯಾರಿಂದ ಪ್ರೇರಿತವಾಗಿ ಬರುತ್ತಿದೆ ಎನ್ನುವುದಕ್ಕೆ ಭೂತಗನ್ನಡಿ ಬೇಕಿಲ್ಲ.

ಭೈರಪ್ಪನವರೇನೊ ಸಾಹಿತ್ಯದಿಂದ ಸಮಾಜ ಬದಲಾವಣೆ ಅಸಾಧ್ಯ ಎನ್ನುತ್ತಾರೆ. ಇದಕ್ಕಿಂತ ಬೇಜವಾಬ್ದಾರಿ ಮಾತನ್ನು ನಾನೆಲ್ಲೂ ಕೇಳಿಲ್ಲ. ಅಪ್ಪಟ ಜಾತಿವಾದಿಯಾದ ಭೈರಪ್ಪನವರಂತಹ ಚಾಣಾಕ್ಷರು ಮಾತ್ರ ಹಾಗೆ ಹೇಳಿ ದಾಟು, ಆವರಣದಂತಹ ಕಾದಂಬರಿ ರಚಿಸಿ, ಮುಗ್ಧ ಜನರಲ್ಲಿ ಕಂದಾಚಾರವೆ ಒಂದು ಉತ್ತಮ ಸಿದ್ದಾಂತ, ಜೀವನಪಥ ಎಂದೆಲ್ಲ ಹೇಳಿ, ಸಮಾಜದ ದಾರಿತಪ್ಪಿಸಿಯೂ ಬಚಾವಾಗಿ ಬಿಡುತ್ತಾರೆ. ಹಿಂದೂ ಸಮಾಜ ಸುಧಾರಣೆ ಆಗುವುದು ಸಮಾಜದ ಎಲ್ಲಾ ಸ್ತರದಲ್ಲಿ ಹೊಕ್ಕುಬಳಕೆ ಜಾಸ್ತಿಯಾದಾಗಲೆ ಹೊರತು ತಮ್ಮ ಜಾತಿ ದೊಡ್ಡದು ಎಂದು ಪರೋಕ್ಷವಾಗಿ ಸಾಧಿಸುವ, ತಮ್ಮ ಜಾತಿ ಸಂಘದಲ್ಲಿ ಪ್ರತ್ಯಕ್ಷವಾಗಿ ಕುಟುಂಬ ಪರಿವಾರ ಸಮೇತ ಭಾಗಿಯಾಗುವ ಭೈರಪ್ಪನಂತಹವರಿಂದ ಅಲ್ಲ. ಹೆತ್ತವರಿಗೆ ಬೇಸರವಾಗುತ್ತದೇನೋ ಎನ್ನುವ ಭಯ, ನೆಂಟರ ವಿರೋಧ, ಸ್ವಜಾತಿಯವರ ಧಾಂಧಲೆ, ಹೀಗೆ ಅನೇಕ ಕಾರಣಗಳು ಅಂತರ್ಜಾತಿ ವಿವಾಹಕ್ಕೆ ಅನುಕೂಲವಾಗಿಲ್ಲ. ಅವೆಲ್ಲವನ್ನೂ ಮೀರಿ ಭೈರಪ್ಪನಂತವರು ಹೇಳುವ, "ಅಯ್ಯೋ, ಜಾತಿಯನ್ನು ದಾಟಬೇಡ್ರಿ, ಅದರಿಂದ ಸಮಸ್ಯೆಗಳು ಬರುತ್ತವೆ ಕಣ್ರಿ," ಎಂಬ ಪ್ರೀತಿಯ ಅಂಶವೇ ಇಲ್ಲದ ಪಲಾಯನವಾದ ದೊಡ್ಡದಾಗಿ ಬಿಡಬಾರದು ಇಲ್ಲಿ.

40 ವರ್ಷಗಳ ಹಿಂದಿನ ಆ ಮೇಲಿನ ಸಿನೆಮಾದಲ್ಲಿ ತಮಾಷೆಯಾಗಿ ಒಂದು ಮಾತು ಬರುತ್ತದೆ. "ನಮಗೆ ಹುಟ್ಟುವ ಮಗು ಅಮೇರಿಕದ ಪ್ರೆಸಿಡೆಂಟ್ ಆಗಲಿ ಎಂದು ಬಯಸುತ್ತೇವಾದರೂ, ವಿದೇಶಾಂಗ ಸಚಿವರಾದರೂ ಪರವಾಗಿಲ್ಲ," ಎನ್ನುವ ಆಗಿನ ಕಾಲಕ್ಕೆ ಅವಾಸ್ತವ ಎನ್ನಿಸುವ ಮಾತನ್ನು ಹೇಳುತ್ತಾನೆ ಕರಿಯ ಪ್ರೇಮಿ. ಇವತ್ತು ನೋಡಿ, ಕಳೆದ ಆರು ವರ್ಷಗಳಿಂದ ಅಮೇರಿಕದ ವಿದೇಶಾಂಗ ಸಚಿವರಿಬ್ಬರೂ ಕರಿಯರೆ. ಈಗಿನವರಂತೂ ಕಪ್ಪುಮಹಿಳೆ. ಕರಿಯಗಂಡು, ಬಿಳಿಹೆಣ್ಣಿನ ಮಗನಾದ ಬರಾಕ್ ಹುಸೇನ್ ಒಬಾಮ ಎಂಬ ಸೆನೆಟರ್ ಮುಂದಿನ ಏಳೆಂಟು ವರ್ಷ ಅಂತಹ ದೊಡ್ಡ ತಪ್ಪುಗಳನ್ನು ಮಾಡದಿದ್ದರೆ ಈ ದೇಶದ ಅಧ್ಯಕ್ಷನೂ ಆಗಬಹುದು!

ಸುಂದರ ಭವಿಷ್ಯದ ಕನಸು ಕಂಡ ದಾರ್ಶನಿಕ ಫ್ರೊ. ರಾಮದಾಸರು ಬಿತ್ತಿದ ಬೀಜಗಳು, ನೆಟ್ಟ ಗಿಡಗಳು ಭೈರಪ್ಪನವರು ಬಿತ್ತಿರುವ ಕುಲಾಂತಕ ಪಾರ್ಥೇನಿಯಮ್ ಕಳೆಯ ಮಧ್ಯೆ ಈಗ ಸಬಲವಾಗಿ ಬೆಳೆಯಬೇಕಿದೆ.

Jun 16, 2007

ಸ್ವಾಮಿ ಮತ್ತು ಮಹಮ್ಮದ್ ಹಾಗೂ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳು

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜೂನ್ 29, 2007 ರ ಸಂಚಿಕೆಯಲ್ಲಿನ ಲೇಖನ)

ಕಳೆದ ಮೂರು ವರ್ಷಗಳಿಂದ ಆತ್ಮೀಯ ಸ್ನೇಹಿತರಲ್ಲೊಬ್ಬರಾಗಿದ್ದ, ಕನ್ನಡ, ಕರ್ನಾಟಕದ ಸ್ಥಿತಿಗತಿಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದ, ತಂತ್ರಜ್ಞಾನ ಕ್ಷೇತ್ರದಲ್ಲಿ ಪೇಟೆಂಟ್‌ಗಳನ್ನೂ ಗಳಿಸಿ ನಮ್ಮ ನಡುವೆಯ ಮೇಧಾವಿ ಎನಿಸಿದ್ದ ಆಪ್ತ ಸ್ನೇಹಿತ ಸ್ವಾಮಿ ಇದೇ ತಿಂಗಳು ಭಾರತಕ್ಕೆ ಹಿಂದಿರುಗುತ್ತಿದ್ದಾರೆ.

ಜನಾರ್ಧನ ಸ್ವಾಮಿ ನನ್ನ ಹಾಗೆಯೆ ಹಳ್ಳಿಯಿಂದ ಬಂದವರು. ದಾವಣಗೆರೆಯ ಹತ್ತಿರದ ಹಳ್ಳಿ ಅವರದು. ಹತ್ತನೆ ತರಗತಿಯ ತನಕ ಓದಿದ್ದೆಲ್ಲ ಹಳ್ಳಿಯಲ್ಲಿಯೆ. ದಾವಣಗೆರೆಯ BDT ಯಲ್ಲಿ B.E. ಮಾಡಿ, ಬೆಂಗಳೂರಿನ IISc ಯಲ್ಲಿ MTech ಮಾಡಿ, ಸುಮಾರು ಹತ್ತು ವರ್ಷಗಳ ಹಿಂದೆ ಅಮೇರಿಕಕ್ಕೆ ಬಂದು Sun Microsystems ನಲ್ಲಿ cutting-edge technology ಯ ಮೇಲೆ ಇಲ್ಲಿಯ ತನಕ ಕೆಲಸ ಮಾಡುತ್ತಿದ್ದವರು. ನಾಲ್ಕೈದು ವರ್ಷಗಳ ಹಿಂದೆ ಚಿಪ್ ಡಿಸೈನ್‌ನಲ್ಲಿ ಪೇಟೆಂಟ್ ಸಹ ಪಡೆದಿದ್ದಾರೆ. ಇಂತಹ ಸ್ವಾಮಿ ಕನ್ನಡ ಮೀಡಿಯಮ್ SSLC ಯಲ್ಲಿ ಪಾಸಾಗಿದ್ದು ಮಾತ್ರ ಸೆಕೆಂಡ್ ಕ್ಲಾಸ್‌ನಲ್ಲಿ ಎಂದರೆ ಯಾರಿಗೇ ಆಗಲಿ ಆಶ್ಚರ್ಯವಾಗದೇ ಇರದು! ಇನ್ನೂ ಆಶ್ಚರ್ಯವೆಂದರೆ, ಆ ಹಳ್ಳಿಯ ಶಾಲೆಯಲ್ಲಿ ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾದ ಇವರೇ ಟಾಪ್ ಸ್ಕೋರರ್!

ಇಲ್ಲಿನ ಸಿಲಿಕಾನ್ ಕಾಣಿವೆಯಲ್ಲಿ ಸ್ವಾಮಿಯವರ ತರಹವೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಧಾವಿಗಳಾಗಿರುವ ಅನೇಕ ಭಾರತೀಯರಿದ್ದಾರೆ. ಅದೇನೂ ಅಂತಹ ದೊಡ್ಡ ವಿಷಯವಲ್ಲ. ಆದರೆ ಸ್ವಾಮಿಯಂತಹ ಒಬ್ಬ ಉತ್ತಮ ವ್ಯಂಗಚಿತ್ರಕಾರ, ಅಷ್ಟೇ ಉತ್ತಮ ಕಂಪ್ಯೂಟರ್ ಗ್ರಾಫ಼ಿಕ್ಸ್ ಡಿಸೈನರ್, ರೈತರಿಗೆ ಯಾವ ಯಾವ ಸಾಧನ-ಸಲಕರಣೆ ಮಾಡಿದರೆ ಅವರ ದೈನಂದಿನ ಜೀವನ ಉತ್ತಮಗೊಳ್ಳುತ್ತದೆ, ಅವರ ಪ್ರೊಡಕ್ಟಿವಿಟಿ ಹೆಚ್ಚುತ್ತದೆ ಎಂದು ಆಲೋಚಿಸುವ ಕನ್ನಡ ಇಂಜಿನಿಯರ್ ವಿರಳಾತಿ ವಿರಳ. ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಗಲೆ ಅಲ್ಲಿನ ಸ್ಥಳೀಯ ಕನ್ನಡ ಪತ್ರಿಕೆಗಳಿಗೆ ಸ್ವಾಮಿ ಕಾರ್ಟೂನ್ ಬರೆಯುತ್ತಿದ್ದರು. ಅದೇ ಸಮಯದಲ್ಲಿ "Electronics For You" ಯಂತಹ ಟೆಕ್ನಾಲಜಿ ಸಂಬಂಧಿತ ಮ್ಯಾಗಜ಼ೈನ್‌ಗಳಿಗೂ ಇಂಗ್ಲಿಷ್‌ನಲ್ಲಿ ಕಾರ್ಟೂನ್ ಬರೆಯುತ್ತಿದ್ದರು. ಅವರೇ ಹೇಳುವ ಪ್ರಕಾರ, ಒಮ್ಮೊಮ್ಮೆ ಅವರ ಇಂಜಿನಿಯರಿಂಗ್ ಕಾಲೇಜಿನ ಲೆಕ್ಚರರ್‌ಗಳು ಗಳಿಸುತ್ತಿದ್ದಕ್ಕಿಂತ ಹೆಚ್ಚಿನ ದುಡ್ಡು ಈ ಕಾರ್ಟೂನ್ ಬರೆಯುವುದರಿಂದಲೆ ಇವರಿಗೆ ಬರುತ್ತಿತ್ತಂತೆ. ಈ ಮಧ್ಯೆ ಅವರ ವ್ಯಂಗ್ಯಚಿತ್ರ ಬರವಣಿಗೆ ಕಮ್ಮಿಯಾಗಿದೆಯಾದರೂ, ಪೂರ್ಣವಾಗಿ ನಿಂತಿಲ್ಲ. ಅವರ ವೆಬ್‌ಸೈಟ್ www.jswamy.com ನಲ್ಲಿ ಅವರ ನೂರಾರು ಕನ್ನಡ ಮತ್ತು ಇಂಗ್ಲಿಷ್ ಕಾರ್ಟೂನ್‌ಗಳಿವೆ.

ಈ ಸ್ವಾಮಿಯ ಜೊತೆಗೂಡಿ ಒಂದು ವರ್ಷಪೂರ್ತಿ ಕೆಲಸ ಮಾಡಿದ ಹೆಮ್ಮೆ ನನ್ನದು. ಅಮೇರಿಕಾದಲ್ಲಿಯ ದೊಡ್ಡ ಕನ್ನಡ ಕೂಟಗಳಲ್ಲಿ ಒಂದಾದ ಉತ್ತರ ಕ್ಯಾಲಿಫ಼ೋರ್ನಿಯ ಕನ್ನಡ ಕೂಟಕ್ಕೆ 2005 ರಲ್ಲಿ ನಾನು ಅಧ್ಯಕ್ಷನಾಗಿದ್ದೆ. ಸ್ವಾಮಿ ಉಪಾಧ್ಯಕ್ಷರಾಗಿದ್ದರು. ಅದರ ಜೊತೆಗೆ ಸಂಘದ ಆ ವರ್ಷದ ಸಾಹಿತ್ಯಕ ಸಂಚಿಕೆಯ ಮುಖ್ಯಸಂಪಾದಕರೂ ಅವರೆ. ಅವರ ಸಂಪಾದಕತ್ವದ ಸಮಿತಿಯಲ್ಲಿ ನಾನು ಉಪಸಂಪಾದಕ. ಆ ಸಮಯದಲ್ಲಿ ನಾನು ಅವರಿಂದ ಕಲಿತದ್ದು ಅಪಾರ. ಇಲ್ಲಿಯ ಕನ್ನಡದ ಕೆಲಸಕ್ಕೆ ಅನೇಕ ಹಗಲು-ರಾತ್ರಿಗಳನ್ನು ಅವರು ಕಂಪ್ಯೂಟರ್ ಮುಂದೆ ಕಳೆದಿದ್ದಾರೆ. ಅದೇ ರೀತಿ, ಅಕ್ಕ ವಿಶ್ವಕನ್ನಡ ಸಮ್ಮೇಳನದ ಬಹುಪಾಲು ಸ್ಮರಣ ಸಂಚಿಕೆಗಳ ಮುಖಪುಟ ವಿನ್ಯಾಸವೂ ಸ್ವಾಮಿಯವರದೆ.

ಎಮ್ಮೆ ಮೇಯಿಸುತ್ತ ಹಳ್ಳಿಯಲ್ಲಿ ಬೆಳೆದ ಸ್ವಾಮಿಯವರು ಕಳೆದ ವರ್ಷ ಬೆಂಗಳೂರಿಗೆ ಬಂದಿದ್ದಾಗ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಹೇಗೆ ಎಂಬ ವಿಷಯಕ್ಕೆ ಯಡಿಯೂರಪ್ಪನವರ ಜೊತೆಯೆಲ್ಲ ಮಾತನಾಡಿದರು. ಆದರೆ ಶಕ್ತಿರಾಜಕಾರಣದಲ್ಲಿ ಮುಳುಗಿ ಹೋದ ನಮ್ಮ ಸ್ವಾರ್ಥಿ ರಾಜಕಾರಣಿಗಳಿಗೆ ಇವರ ಭಾಷೆ ಅರ್ಥವಾಗುತ್ತದೆಯೆ ಎನ್ನುವ ಸಂಶಯ ನನ್ನದು. ಊರಿನಿಂದ ಇಷ್ಟು ದಿನ ದೂರವಿದ್ದ ಸ್ವಾಮಿ ಅಲ್ಲಿ ಏನೇನು ಮಾಡಬಹುದು ಎನ್ನುವ ಥಿಯರಿ ಪ್ರಪಂಚದಲ್ಲಿ ಮುಳುಗಿ ಬಿಟ್ಟಿದ್ದರು. ಈಗ ಅವರ ಥಿಯರಿಗಳನ್ನೆಲ್ಲ ಪ್ರಾಕ್ಟಿಕಲ್ಸ್‌ಗೆ ಪರಿವರ್ತಿಸುವ ಸಮಯ ಬಂದಿದೆ. ಅವರ ಪ್ರಾಕ್ಟಿಕಲ್ಸ್ ಯಶಸ್ವಿಯಾಗಲಿ ಎಂದು ಹಾರೈಸೋಣ. ಯಾಕೆಂದರೆ, ಅವರ ಸಾಧನೆಯಲ್ಲಿ ಸಮಾಜದ ಹಿತವೂ ಇರುತ್ತದೆ ಎನ್ನುವ ನಂಬಿಕೆ ನನ್ನದು.

ಭಾರತದ ಕಾರ್ಟೂನಿಸ್ಟ್‌ಗಳಲ್ಲಿ ಸ್ವಾಮಿಯವರಿಗೆ ಅತಿ ಹೆಚ್ಚು ಇಷ್ಟವಾದವರು ಆರ್.ಕೆ. ಲಕ್ಷಣ್ ಎಂದು ಹೇಳಲು ಅಷ್ಟೇನೂ ಊಹಿಸಬೇಕಿಲ್ಲ. ಕನ್ನಡದ ಕಾರ್ಟೂನಿಸ್ಟ್‌ಗಳಲ್ಲಿ ಅವರಿಗೆ ಹೆಚ್ಚು ಇಷ್ಟವಾದವರು ಪ್ರಜಾವಾಣಿಯ ಪಿ. ಮಹಮ್ಮದ್. ಸ್ವಾಮಿಯವರಿಗೇ ಏನು, ಬಹುಶಃ ಇವತ್ತು ಕರ್ನಾಟಕದ ಪ್ರಜ್ಞಾವಂತರ ಮೆಚ್ಚಿನ ಕಾರ್ಟೂನಿಸ್ಟ್ ಪಿ.ಮಹಮ್ಮದ್ದೆ. ಪತ್ರಿಕೆಯ ಕೆಲಸದಲ್ಲಿ ತೊಡಗಿಕೊಂಡಾಗಿನಿಂದ 'ಮಹಮ್ಮದ್‌ರ ಇವತ್ತಿನ ಕಾರ್ಟೂನ್ ನೋಡಿದಿರ?' ಎಂದು ಅನೇಕರು ಅನೇಕ ಸಲ ನನಗೆ ಕೇಳಿದ್ದಾರೆ, ಅನೇಕ ಸಲ ನಾನೆ ಇತರರನ್ನು ಕೇಳಿದ್ದೇನೆ. ಪ್ರಸ್ತುತ ವಿಷಯಗಳ ಬಗ್ಗೆ ಅಷ್ಟು ಪರಿಣಾಮಕಾರಿಯಾಗಿ, ಕಲಾತ್ಮಕತೆಯಿಂದ, ಜನಪರವಾಗಿ ಬರೆಯುವ ಮತ್ತೊಬ್ಬ ವ್ಯಂಗ್ಯಚಿತ್ರಕಾರ ಇವತ್ತು ಕರ್ನಾಟಕದಲ್ಲಿಲ್ಲ. ಆ ವಿಷಯಕ್ಕೆ ಬಂದರೆ, ಸ್ಟಾರ್ ವ್ಯಾಲ್ಯೂ ಇರುವ ಮೊದಲ ಕನ್ನಡ ವ್ಯಂಗ್ಯಚಿತ್ರಕಾರ ಪಿ. ಮಹಮ್ಮದ್.

ಪಿ. ಮಹಮ್ಮದ್ ಪ್ರಜಾವಾಣಿ ಬಿಟ್ಟು ಕನ್ನಡದ ಇನ್ಯಾವ ಪತ್ರಿಕೆಗೆ ಬರೆದಿದ್ದರೂ ನನಗೆ ಅವರ ಬಗ್ಗೆ ಇಷ್ಟು ಹೆಮ್ಮೆ ಅನ್ನಿಸುತ್ತಿರಲಿಲ್ಲ ಎನ್ನಿಸುತ್ತದೆ. ಬೇರೆ ಇನ್ಯಾವ ಪತ್ರಿಕೆಗೆ ಅವರು ಬರೆದರೂ ಆ ಪತ್ರಿಕೆಗಳ ಧ್ಯೇಯಧೋರಣೆಗಳೆ ಬೇರೆ ಇರುವುದರಿಂದ ಅವರು ಇಷ್ಟು ಮುಕ್ತವಾಗಿ, ಪರಿಣಾಮಕಾರಿಯಾಗಿ ಬರೆಯಲೂ ಸಾಧ್ಯವಿಲ್ಲ ಎನ್ನಿಸುತ್ತದೆ. ಇವತ್ತಿನ ಕನ್ನಡ ದಿನಪತ್ರಿಕೆಗಳಲ್ಲಿ ಬಹುಜನರ ಹಿತ ಬಯಸುವ ಪತ್ರಿಕೆ ಅಂದರೆ ಅದು ಪ್ರಜಾವಾಣಿಯೆ. ಯಾವುದೆ ಒಂದು ವಿಷಯದ ಬಗ್ಗೆ ಎರಡೂ ಕಡೆಯವರಿಗೂ ತಮ್ಮ ವಾದ ಮಂಡಿಸಲು ವೇದಿಕೆ ನಿಡುತ್ತಿರುವ ಪತ್ರಿಕೆಯೂ ಅದೆ. ಮಿಕ್ಕವು ಟ್ಯಾಬ್ಲಾಯ್ಡ್ ಹೆಡ್ಡಿಂಗುಗಳ, ಹಿಂಸಾವಿನೋದಿ, ಪಿತೂರಿಕೋರ, ಸೀಮಿತವರ್ಗವನ್ನು ಓಲೈಸುತ್ತ, ಅವರ ಅಹಂ ಅನ್ನು ತಣಿಸುತ್ತಿರುವ ಪತ್ರಿಕೆಗಳು.

ಇದೇ ಸಂಚಿಕೆಯಲ್ಲಿನ ತಮ್ಮ ಅಂಕಣದಲ್ಲಿ (ಪುಟ 21) ಅರವಿಂದ ಚೊಕ್ಕಾಡಿಯವರು ಹೀಗೆ ಬರೆಯುತ್ತಾರೆ:

"ನಮ್ಮ ಪತ್ರಿಕಾರಂಗ ಮೂರು ಅತಿರೇಕಗಳಲ್ಲಿದೆ. ಒಂದು ವರ್ಗ ಮತಾಂಧತೆಯನ್ನು ಪ್ರಚಾರ ಮಾಡುವುದನ್ನೇ ಪತ್ರಿಕೆಗಳ ಪವಿತ್ರ ಕರ್ತವ್ಯವನ್ನಾಗಿ ಮಾಡಿಕೊಂಡಿದೆ. ಇನ್ನೊಂದು ವರ್ಗ ಇನ್ಫೋಸಿಸ್ ನಾರಾಯಣ ಮೂರ್ತಿ, ಬಯೋಕಾನ್ ಕಿರಣ್ ಮಜುಮ್‌ದಾರ್‌ಗಳನ್ನು ರಾಮದಾಸ್‌ರಂತವರ ಸ್ಥಾನಕ್ಕೆ ತಂದು ಕೂರಿಸುವ ಪವಿತ್ರ ಕಾರ್ಯದಲ್ಲಿ ನಿರತವಾಗಿದೆ. ಮತ್ತೊಂದು ವರ್ಗಕ್ಕೆ ಸೆಕ್ಸ್-ಕ್ರೈಂ ವಿಜೃಂಭಣೆ ಮತ್ತು ಗಂಭೀರವಾದದ್ದನ್ನೆಲ್ಲ ಲಘುವಾಗಿ ಮಾಡುವುದೇ ಪತ್ರಕರ್ತನ ಕಾರ್ಯವಾಗಿದೆ. ಒಂದು ಪತ್ರಿಕೆ ಒಬ್ಬ ಸಾಹಿತಿಯ ತೇಜೋವಧೆ ಮಾಡುವ ಏಕೈಕ ಉದ್ದೇಶದಿಂದ ಕಾರ್ಯಪ್ರವೃತ್ತವಾಗುವ ನೀಚತನವನ್ನು ಪ್ರದರ್ಶಿಸುವ ಸಂದರ್ಭದಲ್ಲೇ..."
ಇಂತಹ ಸಂದರ್ಭದಲ್ಲಿ ದಿನಪತ್ರಿಕೆಗಳ ವಲಯದಲ್ಲಿ ಉಳಿದಿರುವ ಏಕೈಕ ಆಶಾಕಿರಣ ಎಂದರೆ ಅದು ಪ್ರಜಾವಾಣಿಯೆ.

ನಮ್ಮ ಪತ್ರಿಕೆ ಪ್ರಾರಂಭವಾಗುವುದಕ್ಕಿಂತ ಮುಂಚೆ ನಮ್ಮ ಪ್ರಕಾಶನದಿಂದ ಬೆಂಗಳೂರಿನಲ್ಲಿ ಒಂದು ಸಂವಾದ ಏರ್ಪಡಿಸಿದ್ದೆವು. ಅಂದಿನ ಸಂವಾದದಲ್ಲಿ ಕನ್ನಡಪ್ರಭದ ಸತ್ಯನಾರಾಯಣ, ಉದಯವಾಣಿಯ ಆರ್. ಪೂರ್ಣಿಮ, ಉಷಾಕಿರಣದ ವೆಂಕಟನಾರಾಯಣ, ಪ್ರಜಾವಾಣಿಯ ಪದ್ಮರಾಜ ದಂಡಾವತಿಯವರು "ಸಮಕಾಲೀನ ರಾಜಕೀಯ ಮತ್ತು ಕನ್ನಡ ಪತ್ರಿಕೋದ್ಯಮದ" ಬಗ್ಗೆ ಮಾತನಾಡಿದ್ದರು. ಆ ಸಂವಾದಕ್ಕೆ ಪ್ರಜಾವಾಣಿಯ ಅಂದಿನ ಸಂಪಾದಕರಾದ ಕೆ.ಎನ್. ಶಾಂತಕುಮಾರ್‌ರವರನ್ನು ಆಹ್ವಾನಿಸಲು ಹಿರಿಯ ಪತ್ರಕರ್ತ ಜಯರಾಮ ಅಡಿಗರೊಂದಿಗೆ ಹೋಗಿದ್ದೆ. ಕರ್ನಾಟಕದ ಪ್ರಜೆಯಾಗಿ, ಒಬ್ಬ ಓದುಗನಾಗಿ ಅವರನ್ನು ಅಂದು ನಾನು ಕೇಳಿಕೊಂಡದ್ದು ಇಷ್ಟೆ: "ಸಾರ್, ದಯವಿಟ್ಟು ಯಾವುದೇ ಕಾರಣಕ್ಕೂ ಪ್ರಜಾವಾಣಿಯ ಪ್ರಭಾವ ಕ್ಷೀಣಿಸದಂತೆ ನೋಡಿಕೊಳ್ಳಿ. ಇವತ್ತಿನ ದಿನ ಕರ್ನಾಟಕದ ಸಾಮಾಜಿಕ ಸಾಮರಸ್ಯಕ್ಕೆ, ಬಹುಜನರ ಹಿತಕ್ಕೆ ಪ್ರಜಾವಾಣಿ ಎಲ್ಲರಿಗಿಂತಲೂ ಮೇಲಿರಬೇಕು; ಅದು ಎಂದಿಗೂ ಸೋಲಬಾರದು." ಬಹುಶಃ ಅದು ನನ್ನೊಬ್ಬನದೆ ಆಗ್ರಹವಲ್ಲ, ಕನ್ನಡದ ಬಹುಪಾಲು ಪ್ರಜ್ಞಾವಂತರದೂ ಹೌದು.

ಕಳೆದ ಐದಾರು ತಿಂಗಳುಗಳಿಂದ ಎಸ್.ಎಲ್. ಭೈರಪ್ಪನವರ "ಆವರಣ" ಕಾದಂಬರಿಯ ಪರವಾಗಿ ಕೆಲವು ಕನ್ನಡ ಪತ್ರಿಕೆಗಳು ಮಾಡುತ್ತಿರುವ ಪ್ರಚೋದನೆಗಳು, ಪಿತೂರಿಗಳು, ಬಡಿದೆಬ್ಬಿಸುತ್ತಿರುವ ಭೂತಗಳು ಸುಸ್ಪಷ್ಟವಾಗಿದೆ. ಆವರಣ ಬಿಡುಗಡೆಯಾದ ತಕ್ಷಣ ಬ್ಯಾನ್ ಮಾಡಿಬಿಡುತ್ತಾರೆ, ಎಂಬಂತಹ ಸುದ್ದಿಗಳಿಂದ ಆರಂಭಿಸಿ, ಮೊದಲಿನಿಂದಲೂ ಬಹಳ ಪ್ರಜ್ಞಾಪೂರ್ವಕವಾಗಿ, ವ್ಯವಸ್ಥಿತವಾಗಿ, ಲೆಕ್ಕಾಚಾರವಾಗಿ ಮಾಡುತ್ತ ಬಂದಿದ್ದಾರೆ. ಉದಾರವಾದಿ, ಜನತಾಂತ್ರಿಕ ಮೌಲ್ಯಗಳನ್ನು ಗೌರವಿಸುವ, ಆಧುನಿಕ ಮನೋಭಾವದ ಕನ್ನಡಿಗರೇ ಇಲ್ಲ, ಎಲ್ಲರೂ ತಮ್ಮಂತೆಯೆ ಕೋಮುವಾದಿಗಳು ಎನ್ನುವಂತೆ ಬಿಂಬಿಸುತ್ತಿದ್ದಾರೆ. ಕಾಲಕ್ರಮೇಣ ತಮ್ಮೆಲ್ಲ ಭವಿಷ್ಯ, ಜ್ಯೋತಿಷ್ಯಗಳು ಸುಳ್ಳಾಗುತ್ತಿದ್ದಂತೆ ಹುತಾತ್ಮರಾಗಬೇಕೆಂದು ಬಯಸಿದ್ದ ಈ ಜನರು ಹತಾಶರಾಗಿ ಓಡಾಡುತ್ತಿದ್ದಾಗ ಕೆಲವು ಹಿರಿಯರು ವ್ಯವಸ್ಥಿತ ಪಿತೂರಿಗೆ ಬಲಿಯಾಗಿಬಿಟ್ಟು, ಇತ್ತೀಚೆಗೆ ತಾನೆ ಆ ಪುಣ್ಯಾತ್ಮರಿಗೆ ಒಂದಷ್ಟು ಗಂಗಾಜಲ ಕರುಣಿಸಿಬಿಟ್ಟರು.

ಅಂದ ಹಾಗೆ, ಈ ಸ್ವಘೋಷಿತ ಸತ್ಯ ಮತ್ತು ಸೌಂದರ್ಯೋಪಾಸಕರು ಭಾರತದ ಇತಿಹಾಸ ಪುಸ್ತಕಗಳು ಸುಳ್ಳು ಹೇಳುತ್ತವೆ ಎಂದು ಘೋಷಿಸುತ್ತಿದ್ದಾರಲ್ಲ, ಹೌದೆ? ನಾನು ಏಳನೆ ತರಗತಿಯ ತನಕ ಓದಿದ್ದು ನನ್ನ ಹಳ್ಳಿಯ ಸರ್ಕಾರಿ ಶಾಲೆಯ ಕನ್ನಡ ಮೀಡಿಯಮ್‌ನಲ್ಲಿ. ಹೈಸ್ಕೂಲ್‌ನಲ್ಲಿ ಓದಿದ್ದೂ ಕರ್ನಾಟಕ ಸರ್ಕಾರ ಸಿದ್ದಪಡಿಸಿದ್ದ ಸಿಲಬಸ್ ಅನ್ನೆ. ನಾನು ಓದಿದ ಯಾವುದೆ ಸಮಾಜ ಶಾಸ್ತ್ರದ ಪುಸ್ತಕದಲ್ಲಿ ಔರಂಗಜೇಬ ಪರಮತ ಸಹಿಷ್ಣು ಎಂದು ಇರಲಿಲ್ಲ. ಒಳ್ಳೆಯ ರಾಜ ಎಂದೂ ಇರಲಿಲ್ಲ. ಅವನ ಆಳ್ವಿಕೆಯಲ್ಲಿ ಹಿಂದೂಗಳಿಗೆ ಜೆಸ್ಸಿಯಾ ಅಂದರೆ ತಲೆಗಂದಾಯ ಇರಲಿಲ್ಲ ಎಂದೂ ಇರಲಿಲ್ಲ. ಖಿಲ್ಜಿಯ ದಂಡಯಾತ್ರೆಗಳ ಬಗ್ಗೆಯಾಗಲಿ, ವಿಗ್ರಹಾರಾಧನೆ ಕೂಡದೆಂದು ಮಲ್ಲಿಕ್ ಕಾಫರ್ ಮತ್ತು ಇತರ ಕೆಲವು ಮುಸ್ಲಿಮ್ ರಾಜರು ದೇವಾಲಯಗಳಲ್ಲಿ ವಿಗ್ರಹಗಳನ್ನು ಭಗ್ನಗೊಳಿಸಿದ ಬಗ್ಗೆಯಾಗಲಿ, ತುಘಲಕ್‌ನ ತಿಕ್ಕಲುತನಗಳಾಗಲಿ, ಮುಸ್ಲಿಮ್ ಅರಸರ ಆಟಾಟೋಪಕ್ಕೆ ವಿರುದ್ಧವಾಗಿಯೆ ಮೇಲೆದ್ದ ವಿಜಯನಗರ ಸಾಮ್ರಾಜ್ಯ, ಮರಾಠರ ಶಿವಾಜಿಯ ಬಗ್ಗೆಯಾಗಲಿ ಎಲ್ಲೂ ಮುಚ್ಚಿಟ್ಟಿರಲಿಲ್ಲ. ಇವನ್ನೆಲ್ಲ ಮುಚ್ಚಿಟ್ಟಿದ್ದಾರೆ ಎಂದು ಈ ನವಸತ್ಯಾಗ್ರಹಿಗಳು ಹುಯಿಲಿಡುತ್ತಿದ್ದಾರಲ್ಲ, ಯಾವ ದೇಶದ ಪಠ್ಯಪುಸ್ತಕದಲ್ಲಿ, ಸ್ವಾಮಿ?

ನನ್ನ ಮತವೇ ಶ್ರೇಷ್ಠ, ಎಲ್ಲಾ ಪರಮತಗಳೂ ಕೆಟ್ಟವು ಎನ್ನುವ ಮತಾಂಧರು ಜಾತಿವಾದಿಗಳೂ ಆಗಿರುತ್ತಾರೆ ಎನ್ನಲು ಈಗ ಚಲಾವಣೆಯಲ್ಲಿರುವ ಕೆಲವು ಸಾಹಿತಿಗಳೆ ಉದಾಹರಣೆ. ಮೂರು ತಿಂಗಳ ಹಿಂದೆ ಮೈಸೂರಿನಲ್ಲಿದ್ದಾಗ ಅಲ್ಲಿನ ಪರಿಚಿತರೊಬ್ಬರು ಒಂದು ವಿಷಯ ಹೇಳಿದರು. "ಹಿಂದೂಗಳೆಲ್ಲ ತಮ್ಮ ತಪ್ಪುಗಳನ್ನು ತಿದ್ದಿಕೊಂಡುಬಿಟ್ಟಿದ್ದಾರೆ, ಮುಸ್ಲಿಮರು ತಿದ್ದಿಕೊಳ್ಳುತ್ತಿಲ್ಲ, ಅವರನ್ನು ತಿದ್ದಬೇಕು," ಎಂದು ಹೇಳುತ್ತಿರುವ ಸಾಹಿತಿಯೊಬ್ಬರು ಅವರ ಜಾತಿಯ ಸಂಘದಲ್ಲಿ ಬಹಳ ಸಕ್ರಿಯವಾಗಿ ಇದ್ದಾರಂತೆ. ಕ್ಷಮಿಸಿ, ಜಾತಿಯದೂ ಅಲ್ಲ, ಜಾತಿಯಲ್ಲಿನ ಒಳಪಂಗಡದ ಸಂಸ್ಥೆ ಅದು. ಕರ್ನಾಟಕದ ಜಾತಿ ವ್ಯವಸ್ಥೆ ಗೊತ್ತಿರುವವರಿಗೆ ಜಾತಿಗಳಲ್ಲಿನ ಒಳಪಂಗಡಗಳ ಬಗ್ಗೆಯೂ ಗೊತ್ತಿರುತ್ತದೆ. ಲಿಂಗಾಯತರಲ್ಲಿ ಸಾದರ, ಬಣಜಿಗ, ಪಂಚಮಸಾಲಿ ಎಂದು ಇತ್ಯಾದಿ ಒಳಪಂಗಡಗಳಿದ್ದರೆ, ಕರ್ನಾಟಕದ ಬ್ರಾಹ್ಮಣರಲ್ಲಿ ಸ್ಮಾರ್ಥ, ಮಾಧ್ವ, ಶ್ರೀವೈಷ್ಣವ ಪಂಗಡಗಳಿವೆ. ಹಾಗೆಯೆ ಒಕ್ಕಲಿಗರಲ್ಲಿ ಕುಂಚಟಿಗ, ನಾಮಧಾರಿ, ದಾಸ, ಮರಸು, ಇತ್ಯಾದಿ. ಎಷ್ಟೋ ಸಲ ಈ ಒಳಪಂಗಡಗಳಲ್ಲಿ ಒಳಪಂಗಡಗಳಿವೆ. ಉದಾಹರಣೆಗೆ ಕರ್ನಾಟಕದ ಸ್ಮಾರ್ಥರಲ್ಲಿ ಹವ್ಯಕ, ಹೊಯ್ಸಳ ಕರ್ನಾಟಕ, ಬಬ್ಬೂರು ಕಮ್ಮೆ, ಸಂಕೇತಿ, ಕೋಟ, ಇತ್ಯಾದಿಯಾಗಿ ಮತ್ತೊಂದಷ್ಟಿವೆ. ಇಂತಹ ಒಳಪಂಗಡದಲ್ಲೊಂದು ಒಳಪಂಗಡದ ಜಾತಿ ಸಂಘದಲ್ಲಿ ಈ ಮಾನ್ಯರು ಕ್ರಿಯಾಶೀಲರಾಗಿದ್ದಾರಂತೆ. ಹಿಂದೂ ಒಂದು ಎಂದು ದೇಶಕ್ಕೆಲ್ಲ ಉಪದೇಶ ಬೋಧಿಸುವ ಇಂತಹವರು ಸಮಾಜವಿಭೇದದ ಮೂಲರೂಪವಾದ ಜಾತಿ ಸಂಘಗಳಲ್ಲಿ ಅದು ಹೇಗೆ ಕ್ರಿಯಾಶೀಲರಾಗಿರುತ್ತಾರೆ, ಅವರಿಗೆ ಕನಿಷ್ಠ ಸಂಕೋಚವೂ ಇಲ್ಲವೆ ಎನ್ನುವುದು ಇಲ್ಲಿಯ ಪ್ರಶ್ನೆ.

ಈ ಧರೆಗೆ ದೊಡ್ಡವರ ಮಕ್ಕಳು ತಮ್ಮ ಕಾಲೇಜು ದಿನಗಳಲ್ಲಿ "ರೌಡಿ" ಗಳಂತಿದ್ದರು ಎಂದು ಅವರ ಕಟ್ಟರ್ ಅಭಿಮಾನಿಯೊಬ್ಬರು ಗುಪ್ತನಾಮವೊಂದರಲ್ಲಿ ಗುಪ್ತಗುಪ್ತವಾಗಿ ಇತ್ತೀಚೆಗೆ ಬ್ಲಾಗೊಂದರಲ್ಲಿ ಬರೆದಿದ್ದಾರೆ. ಆ ಅಭಿಮಾನಿ ಹಾಗೆ ಬರೆಯಲು ನಮಗೆ ಮೈಸೂರಿನ ಪರಿಚಿತರು ಹೇಳಿದ ಘಟನೆಯೆ ಮೂಲಕಾರಣ ಎಂದು ನನ್ನ ಅಂದಾಜು. ಅದೇನೆಂದರೆ, ಈ ಸಾಹಿತಿಗಳ ಮಗ ತಮ್ಮ ಒಳಪಂಗಡದ ಸಂಸ್ಥೆಯ ಬೆಲೆಬಾಳುವ ಕಟ್ಟಡವನ್ನು ತನ್ನ ಹೆಸರಿಗೆ ಗುತ್ತಿಗೆ ಪಡೆಯಲೊ, ತನ್ನ ಕೈವಶ ಮಾಡಿಕೊಳ್ಳಲೊ ಅಪ್ಪನ ಮುಖಾಂತರ ಸಂಘದ ಮೇಲೆ ಒತ್ತಡ ಹಾಕುತ್ತಿದ್ದಾರಂತೆ. ಅದನ್ನು ಸಂಘದ ಹಿರಿಯರು ವಿರೋಧಿಸಿದ್ದಾರೆ. ಅದಕ್ಕೆ ಆ ಮಗ ವಿದೇಶದಿಂದಲೆ ಆ ಹಿರಿಯರಿಗೆಲ್ಲ ಧಮಕಿ ಹಾಕುತ್ತಿದ್ದಾನಂತೆ. ಇದು ದೇಶಕ್ಕೆಲ್ಲ ಬುದ್ಧಿ ಹೇಳಲು, ಇತಿಹಾಸ ಸರಿಪಡಿಸಲು ಓಡಾಡುತ್ತಿರುವವರ ವರ್ತಮಾನ! ಹಿಂದೂ ಸಮಾಜದಲ್ಲಿನ ಅಸಮಾನತೆಯನ್ನು, ಅಮಾನವೀಯತೆಯನ್ನು ತೊಡೆದು ಹಾಕಬೇಕು, ಎಲ್ಲರೂ ಒಂದೆ, ಹಿಂದೂ ಒಂದು ಎನ್ನುವ ಜನ ತಾವು ಬೆಂಬಲಿಸುತ್ತಿರುವುದು ಜಾತಿವಾದಿಗಳನ್ನು ಎನ್ನುವುದನ್ನು ಮೊದಲು ಗಮನಿಸಬೇಕು. ಅವರ ಮಾತು ಕೇಳಿದರೆ ಹಿಂದೂ ಸಮಾಜ ಸುಧಾರಣೆಯಾಗುವುದಿಲ್ಲ ಎನ್ನುವುದನ್ನು ಈ ಉಗ್ರ ದೇಶಪ್ರೇಮಿಗಳು ಬೇಗ ಗಮನಿಸಿದಷ್ಟೂ ದೇಶಕ್ಕೆ ಒಳ್ಳೆಯದು.

ಈ ಮತಾಂಧ, ಜಾತಿವಾದಿ ಜಾತ್ಯಂಧರು ಹೇಳುತ್ತಿರುವುದು ಇತಿಹಾಸದಲ್ಲಿನ ಸತ್ಯವನ್ನು ಹೇಳುತ್ತಿದ್ದೇವೆ ಎಂದು. ಕರ್ನಾಟಕದ ಅತಿ ಪ್ರಸಿದ್ಧ ಲೇಖಕನ ಅತಿ ಪ್ರಸಿದ್ಧ ಅಭಿಮಾನಿ ಬಾಲಲೇಖಕರೊಬ್ಬರು ಒಬ್ಬ ಸಾಹಿತಿಯ ಬಗ್ಗೆ ಮಾತನಾಡುತ್ತ ಅವರೇನು ಗಾಂಧಿಯ ಚಡ್ಡಿದೋಸ್ತಾ, ಗಾಂಧಿ ಹೀಗೆ ಹೇಳುತ್ತಿದ್ದರು ಎಂದು ಹೇಳುತ್ತಾರೆ, ಎಂದು ಸಾರ್ವಜನಿಕವಾಗಿ ಪ್ರಶ್ನಿಸಿದ್ದರು. ನಿಜವಾದ ಮಾತು. ಇತಿಹಾಸ ನಾನು ಹೇಳುವ ಹಾಗೆಯೆ ಇದೆ ಎನ್ನುತ್ತಿರುವವರು ಈ ಯುವ ಲೇಖಕರ ಮಾತನ್ನು ಗಂಭೀರವಾಗಿ ತೆಗೆದುಕೊಂಡು ತಮಗೇ ಅನ್ವಯಿಸಿಕೊಳ್ಳಬೇಕು. ತಾವು ನೋಡುವ ಇತಿಹಾಸವೂ ತಮ್ಮದೆ ಪೂರ್ವಾಗ್ರಹಗಳಿಂದ ಕೂಡಿದ್ದು, ತಾವು ಪ್ರತ್ಯಕ್ಷವಾಗಿ ನೋಡಿಲ್ಲದ, ಕೇವಲ ಇತಿಹಾಸ ಗ್ರಂಥಗಳ ಆಧಾರದ ಮೇಲೆ ಬರೆಯುವ ತಮ್ಮದೂ ಒಂದು ಕಟ್ಟು ಕತೆ ಯಾಕಾಗಿರಬಾರದು ಎನ್ನುವ ವಿನಯ ಬೆಳೆಸಿಕೊಳ್ಳಬೇಕು.

ಅಷ್ಟೇ ಅಲ್ಲ, ಇತಿಹಾಸವನ್ನು ಪ್ರತೀಕಾರದ ಮೂಲಕ ಸರಿಪಡಿಸಿಕೊಳ್ಳಬೇಕು ಎನ್ನುವ ರೀತಿಯಲ್ಲಿ ಹೇಳುವವರು ಸಮಾಜ ದ್ರೋಹಿಗಳೂ ಆಗುತ್ತಾರೆ. ಯಾಕೆಂದರೆ, ಅವರ ಕತೆಗಳನ್ನು ಓದಿ, ಮಂದಿರಮಸೀದಿಗಳನ್ನು ಉರುಳಿಸಲು ರಾತ್ರೋರಾತ್ರಿ ಯಾರೂ ಎದ್ದು ಓಡದಿದ್ದರೂ, ಮನಸ್ಸನ್ನು ವಿಷ ಮಾಡಲು, ಅಸಹಿಷ್ಣುತೆ ಬೆಳೆಸಲು ಆ ಓದು ಕಾರಣವಾಗುತ್ತದೆ. ಮುಂದಿನ ಬೆಂಕಿಗೆ ಈಗಿನ ಕಾವು ಅದು. ಜರ್ಮನ್ನರು ಹೋಲೊಕಾಸ್ಟ್ ನ ಅಪಚಾರವನ್ನು ಒಪ್ಪಿಕೊಂಡು ಅದನ್ನು ನಿರಾಕರಿಸಿದಂತೆ ಮೌಲ್ಯವಂತ ಭಾರತೀಯ ಸಮಾಜ ಇಂತಹ ಬರವಣಿಗೆಯನ್ನು ಸುಮ್ಮನೆ ನಿರಾಕರಿಸುತ್ತ ಹೋಗಬೇಕು. ಯಾರು ಎಷ್ಟೇ ಪ್ರಚೋದಿಸಿದರೂ ಪ್ರಚೋದನೆಗೊಳಗಾಗದ ಮೂಲಕವಷ್ಟೆ ಇಂತಹ ದುಷ್ಟತನವನ್ನು ನಾವು ಸೋಲಿಸಬೇಕಾಗಿರುವುದು.

ಇವತ್ತಿನ ಭಾರತ ಯುವ ಭಾರತ. ಶೇ. 35 ಭಾರತೀಯರು 15 ವರ್ಷಕ್ಕಿಂತ ಚಿಕ್ಕವರು ಎನ್ನುತ್ತದೆ ಒಂದು ವರದಿ. 54% ರಷ್ಟು ಭಾರತೀಯರು 25 ವರ್ಷಕ್ಕಿಂತ ಚಿಕ್ಕ ವಯಸ್ಸಿನವರು ಎನ್ನುತ್ತದೆ ಇನ್ನೊಂದು ವರದಿ. ಸಾಮರಸ್ಯದ, ಜೀವಪರ ಭಾರತದ ಭವಿಷ್ಯ ನಿಂತಿರುವುದೆ ಇವರ ಮೇಲೆ. ಇವರು ಹೇಗೆ ರೂಪುಗೊಳ್ಳುತ್ತಾರೆ ಎನ್ನುವುದರ ಮೇಲೆ ಇಡೀ ಭಾರತದ ಭವಿಷ್ಯ ನಿಂತಿದೆ. ಇನ್ನೊಬ್ಬರಿಂದ ಅತಿ ಎನ್ನುವಷ್ಟು ಪ್ರಭಾವಿತಗೊಳ್ಳುವ ವಯಸ್ಸುಹದಿವಯಸ್ಸು. ರೋಲ್‌ಮಾಡೆಲ್‌ಗಳನ್ನು, ಅದರಲ್ಲೂ ಗೆಲ್ಲುವ ರೋಲ್‌ಮಾಡೆಲ್‌ಗಳನ್ನು ಬಯಸುವ ವಯಸ್ಸಿದು. ಹಾಗಾಗಿ, ಸಮಾಜದ ಹಿತಬಯಸುವ, ಮೌಢ್ಯಕ್ಕೆ, ದ್ವೇಷಕ್ಕೆ ತಳ್ಳದ, ಸ್ವಾರ್ಥಿಗಳಲ್ಲದ ಜನರ ಗೆಲುವು ಹಿಂದೆಂದಿಗಿಂತಲೂ ಇಂದು ಅಗತ್ಯ. ಈ ಯುವ ಭಾರತೀಯ ಮನಸ್ಸುಗಳು ಫ್ಯಾಸಿಸ್ಟ್‌ಗಳಾಗದಂತೆ ನೋಡಿಕೊಳ್ಳುವ ಜರೂರು ಇವತ್ತಿನ ಪ್ರಜ್ಞಾವಂತ ಹಿರಿಯರ ಮೇಲಿದೆ. ತಮ್ಮೆಲ್ಲ ವೈಯಕ್ತಿಕ ಸ್ವಾರ್ಥಗಳನ್ನು, ಸಣ್ಣತನಗಳನ್ನು ಬಿಟ್ಟು ಸಮಷ್ಠಿಯ ಹಿತವನ್ನಷ್ಟೆ ಬಯಸಬೇಕಾದ ಸಮಯ ಇದು. ಆದರೆ ಇದು ಎಷ್ಟೋ ಜನರಿಗೆ ಅರ್ಥವಾಗುತ್ತಿಲ್ಲ ಎನ್ನುವುದು ಮಾತ್ರ ಸದ್ಯಕ್ಕೆ ಕೂರ ವಾಸ್ತವದಂತೆ ಕಾಣಿಸುತ್ತಿದೆ.

Jun 10, 2007

ಹತ್ತು ಸಾವಿರ ಜನರಲ್ಲಿ ಒಬ್ಬರೂ ಕೈಎತ್ತಿಲ್ಲ!!!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜೂನ್ 22, 2007 ರ ಸಂಚಿಕೆಯಲ್ಲಿನ ಲೇಖನ)

ಇತ್ತೀಚಿನ ದಿನಗಳಲ್ಲಿ ಬಹಳ ಚರ್ಚಿತವಾಗುತ್ತಿರುವ ಕನ್ನಡ ಪುಸ್ತಕಗಳಲ್ಲಿ ಡಾ. ಬಂಜಗೆರೆ ಜಯಪ್ರಕಾಶರ "ಆನು ದೇವಾ ಹೊರಗಣವನು" ಸಹ ಒಂದು. ಬಂಜಗೆರೆಯವರು "ಕನ್ನಡ ರಾಷ್ಟ್ರೀಯತೆ" ಎಂಬ ವಿಷಯಕ್ಕೆ ಹಂಪಿ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪಡೆದಿದ್ದಾರೆ. ಕರ್ನಾಟಕದಾದ್ಯಂತ ಅನೇಕ ಜನಪರ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಇವರು ಕವಿಯೂ ಹೌದು. ಕಳೆದ ವರ್ಷವೆ ಒಂದು ಕವನ ಸಂಕಲನವನ್ನೂ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ದಾವಣಗೆರೆ ಕಡೆಯವರಾದ ಬಂಜಗೆರೆ ನನ್ನ ಪಕ್ಕದ ತಾಲ್ಲೂಕಾದ ಕನಕಪುರವನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡು, "ಆಸರೆ" ಎಂಬ ಸೇವಾಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ನಾನು ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾಗ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯ ಅವರ ಮನೆಯಲ್ಲಿ ಡಾ. ಬಂಜಗೆರೆಯವರನ್ನು ಮೊದಲ ಸಲ ಭೇಟಿಯಾಗಿದ್ದು. ನಮ್ಮ ಹಳ್ಳಿಗಳ ಬಡಜನರಿಗೆ ಎಂತಹ ಸಾಲ ಕೊಟ್ಟರೆ ಅವರು ಸಾಲ ತೀರಿಸಿಯೂ ಬಚಾವಾಗುತ್ತಾರೆ ಎಂಬ ವಿಷಯದ ಮೇಲೆ ಅಂದು ಅವರು ನನಗೆ ಅದ್ಭುತವಾದ ಪಾಠ ಮಾಡಿದ್ದರು.

ಒಂದೆಕೆರೆ, ಎರಡೆಕೆರೆಯ ಮಳೆಯಾಧಾರಿತ ಕೃಷಿ ಭೂಮಿ ಇರುವ ರೈತರಿಗೆ ಕೊಳವೆ ಬಾವಿ ಕೊರೆಸಲು ಇಪ್ಪತ್ತು-ಮುವ್ವತ್ತು ಸಾವಿರ ಸಾಲ ನೀಡಿ, ಅದರಲ್ಲಿ ನೀರು ಬರದಿದ್ದರೂ ಸಾಲ ತೀರಿಸಲೇಬೇಕು ಎಂದರೆ ಹೇಗೆ? ಆಗ ಅವನಿಗಿರುವ ಒಂದೇ ದಾರಿ ತನ್ನ ಜಮೀನನ್ನೂ ಮಾರುವುದು ಇಲ್ಲವೆ ನೇಣು ಹಾಕಿಕೊಳ್ಳುವುದು! ಅದರ ಬದಲಿಗೆ ಆತನಿಗೊ ಆತನ ಮನೆಯ ಹೆಣ್ಣುಮಕ್ಕಳಿಗೊ ನಾಲ್ಕೈದು ಕುರಿಮರಿ ತೆಗೆದುಕೊಳ್ಳಲೊ, ಇಲ್ಲಾ ಹಾಲು ಕರೆಯುವ ಹಸುವನ್ನು ಕೊಳ್ಳಲೊ, ಇಲ್ಲವೆ ಒಂದು ಹೊಲಿಗೆ ಯಂತ್ರ ತೆಗೆದುಕೊಳ್ಳಲೊ ಸಣ್ಣ ಮೊತ್ತದ ಸಾಲ ಕೊಟ್ಟರೆ, ಅವರ ಜೀವನ ಸಲೀಸಾಗಿ ನಡೆದುಬಿಡುತ್ತದೆ. ಅಂತಹ ಸಣ್ಣ ಮೊತ್ತದ ಸಾಲಕ್ಕೆ ಡಿಫ಼ಾಲ್ಟರ್‌ಗಳೂ ಕಮ್ಮಿಯಿರುತ್ತಾರೆ. ನಮ್ಮ ಎಷ್ಟೋ ಬಡ ಕುಟುಂಬಗಳ ಸಮಸ್ಯೆಗಳು ಕೇವಲ ಐದಾರು ಸಾವಿರ ರೂಪಾಯಿಗಳ ಸಾಲದಿಂದ ಪರಿಹಾರವಾಗಿ ಬಿಡುತ್ತವೆ. ಹೀಗಾಗಿಯೆ ನಮ್ಮ ಹಳ್ಳಿಗಳಿಗೆ ಮೈಕ್ರೊಫ಼ೈನಾನ್ಸ್ ಬಹಳ ಮುಖ್ಯ,
ಎಂದು ಬಂಜಗೆರೆಯವರು ಅಂದು ಹೇಳಿದರು.

ಕಳೆದ ನಾಲ್ಕೈದು ದಿನಗಳಿಂದ ಅವರು ಅಂದು ಹೇಳಿದ್ದ ಈ ಮೈಕ್ರೊಫ಼ೈನಾನ್ಸ್ ಕುರಿತೇ ಯೋಚಿಸುತ್ತಿದ್ದೆ. ಅದಕ್ಕೆ ಕಾರಣ, ಕೀವ ಎನ್ನುವ ಸಂಸ್ಥೆಯ ಬಗ್ಗೆ ಗೊತ್ತಾಗಿದ್ದು. ಕೀವ ಎನ್ನುವುದು 2005 ರಲ್ಲಿ ಇಲ್ಲಿಯೆ ಅಮೇರಿಕದಲ್ಲಿ ಜನ್ಮ ತಳೆದ ಒಂದು ಲಾಭರಹಿತ ಸಂಸ್ಥೆ. ನಮ್ಮ ದೇಶದ ಬಡಜನರಷ್ಟೆ ಅಲ್ಲ, ತೃತೀಯ ಜಗತ್ತಿನ ಬಹುಪಾಲು ಬಡಜನರಿಗೆ ಐದು-ಹತ್ತು ಸಾವಿರ ರೂಪಾಯಿ ಸಾಲ ಸಿಕ್ಕಿದರೆ ಸಾಕು, ಅವರು ತಮ್ಮ ಜೀವನಕ್ಕೆ ಏನೋ ಒಂದು ದಾರಿ ಮಾಡಿಕೊಂಡು ಬಿಡುತ್ತಾರೆ. ಇಂತಹ ಮೈಕ್ರೊಫ಼ೈನಾನ್ಸ್ ಮಾಡಲು ನೊಬೆಲ್ ಪ್ರಶಸಿ ಪಡೆದಿರುವ ಬಾಂಗ್ಲಾದ ಯೂನುಸ್‌ರು ಹುಟ್ಟಿ ಹಾಕಿರುವ ಗ್ರಾಮೀಣ ಬ್ಯಾಂಕಿನಿಂದ ಹಿಡಿದು ಅನೇಕ ಸಂಘ-ಸಂಸ್ಥೆಗಳು ವಿಶ್ವದಾದ್ಯಂತ ಇವೆ. ಇಂತಹ ಸಂಸ್ಥೆಗಳು ಕೀವ ವೆಬ್‌ಸೈಟಿನಲ್ಲಿ ತಮ್ಮಲ್ಲಿ ಸಾಲ ಕೇಳಿ ಬಂದ ಅರ್ಜಿದಾರರ ವಿವರಗಳನ್ನು ಹಾಕಿ ಹಣ ಸಂಗ್ರಹಿಸಬಹುದು. ಪ್ರಪಂಚದ ಯಾವ ಮೂಲೆಯಲ್ಲಿರುವವರೆ ಆಗಲಿ ಕೀವ ವೆಬ್‌ಸೈಟ್ ಮೂಲಕ ತಮಗಿಷ್ಟ ಬಂದವರಿಗೆ ತಮ್ಮ ಕೈಲಾದಷ್ಟು ಸಾಲ ಕೊಡಬಹುದು.

ಹೀಗೆ ಒಂದು ಉದಾಹರಣೆ: ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಕದ್ರಿಪುರ ಗ್ರಾಮದ ಬಡರೈತ ಶಿವರಾಜು, ತನ್ನ ಹಳ್ಳಿಯಲ್ಲಿ ಕಿರಾಣಿ ಅಂಗಡಿ ತೆರೆಯಲು ತನಗೆ 12000 ರೂಪಾಯಿ ಸಾಲ ಬೇಕೆಂದು ಮುಳಬಾಗಿಲಿನ ಆಂಜನೇಯ ಗ್ರಾಮೀಣ ಸೇವಾಸಂಸ್ಥೆಗೆ ಅರ್ಜಿ ಸಲ್ಲಿಸುತ್ತಾನೆ. ಆ ಸಂಸ್ಥೆಯವರು ಆತನ ವಿವರಗಳನ್ನು ತೆಗೆದುಕೊಂಡು ಶಿವರಾಜುವಿಗೆ ಅಂಗಡಿ ಹಾಕಲು 300 ಡಾಲರ್ (ಅಂದರೆ 12000 ರೂಪಾಯಿ) ಸಾಲ ಬೇಕಾಗಿದೆ; ಆತನಿಗೆ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ; ಸಾಲವನ್ನು 12-18 ತಿಂಗಳುಗಳಲ್ಲಿ ತೀರಿಸುತ್ತಾನೆ; ಎಂಬಂತಹ ವಿವರಗಳನ್ನು ಆತನ ಫೋಟೊ ಸಹಿತ ಕೀವ.ಆರ್ಗ್‌ನಲ್ಲಿ ಹಾಕುತ್ತಾರೆ. ಆಗ ಪ್ರಪಂಚದಲ್ಲಿಯ ಯಾರು ಬೇಕಾದರೂ ಇಂಟರ್‌ನೆಟ್ ಮೂಲಕ ನಮ್ಮ ಶಿವರಾಜುವಿಗೆ ಸಾಲ ಕೊಡಬಹುದು.

ಶಿವರಾಜುವಿನ ಪ್ರೊಫ಼ೈಲ್ ಅನ್ನು ಅಮೇರಿಕದಲ್ಲಿಯ ಬಿಲ್ ಜಾಬ್ಸ್ ನೋಡುತ್ತಾನೆ. ತಕ್ಷಣ ತನ್ನ ಕ್ರೆಡಿಟ್ ಕಾರ್ಡಿನಿಂದ 75 ಡಾಲರ್ ಸಾಲ ಕೊಡುತ್ತಾನೆ. ಒಂದಷ್ಟು ದಿನಗಳ ನಂತರ ಇಂಗ್ಲೆಂಡ್‌ನ ಡೇವಿಡ್ ಮತ್ತು ಕುವೈತ್‌ನ ನಾಸೆರ್ ತಲಾ 100 ಡಾಲರ್ ಸಾಲ ಕೊಡುತ್ತಾರೆ. ನಾಲ್ಕೈದು ದಿನಗಳ ನಂತರ ಇದನ್ನು ಗಮನಿಸಿದ ದೆಹಲಿಯಲ್ಲಿಯ ಪ್ರೇಮಲ್ ಅದ್ವಾನಿ ಉಳಿದ 25 ಡಾಲರ್ ಸಾಲ ಕೊಡುತ್ತಾನೆ. ಅಲ್ಲಿಗೆ ಒಟ್ಟು 300 ಡಾಲರ್ ಆಯಿತು. ಕೀವ ದವರು ಆ ಮೊತ್ತವನ್ನು ಮುಳಬಾಗಿಲಿನ ಸೇವಾಸಂಸ್ಥೆಗೆ ನೇರವಾಗಿ ಆನ್‌ಲೈನ್ ಪೇಮೆಂಟ್ ವ್ಯವಸ್ಥೆ ಇರುವ ಪೇಪ್ಯಾಲ್ ಅಕೌಂಟ್ ಮೂಲಕ ತಲುಪಿಸುತ್ತಾರೆ. ಮುಳಬಾಗಿಲಿನ ಸಂಸ್ಥೆ ಅದನ್ನು ಬಹಳ ಕಡಿಮೆ ಬಡ್ಡಿದರಕ್ಕೆ ಶಿವರಾಜುವಿಗೆ ನೀಡುತ್ತದೆ. ಪ್ರತಿ ತಿಂಗಳೂ ಶಿವರಾಜುವಿನಿಂದ ಸಾಲ ವಸೂಲು ಮಾಡುವ, ಅದನ್ನು ಕೀವ.ಆರ್ಗ್‌ಗೆ ತಲುಪಿಸುವ ಜವಾಬ್ದಾರಿ ಈ ಫ಼ೀಲ್ಡ್ ಪಾರ್ಟ್‌ನರ್ ಸಂಸ್ಥೆಯದೆ. ಮರುಪಾವತಿ ಆಗುತ್ತಿದ್ದ ಹಾಗೆ ಕೀವ ಅದನ್ನು ಸಾಲ ಕೊಟ್ಟವರಿಗೆ ತೀರಿಸುತ್ತ ಹೋಗುತ್ತದೆ. ಶಿವರಾಜು ಮತ್ತು ಮುಳಬಾಗಿಲಿನ ಸಂಸ್ಥೆಯ ಮಧ್ಯೆ ನಡೆಯುವ ವ್ಯವಹಾರದ ಹೊರತಾಗಿ ಮಿಕ್ಕೆಲ್ಲವೂ ಯಾರದೆ ಮಧ್ಯಸ್ಥಿಕೆ ಇಲ್ಲದೆ ಇಂಟರ್‌ನೆಟ್‌ನಲ್ಲಿಯೆ ನಡೆದು ಹೋಗಿಬಿಡುತ್ತದೆ.

ಸಾಲ ಕೊಡುವವರಿಗೆ ಇಲ್ಲಿ ಯಾವುದೆ ಬಡ್ಡಿ ನೀಡಲಾಗುವುದಿಲ್ಲ. ಸಾಲಗಾರ ಕೊಟ್ಟಾಗ ಮಾತ್ರ ಸಾಲವನ್ನು ತೀರಿಸಲಾಗುತ್ತದೆ. ಬಡವರಿಗೆ ಸಹಾಯವಾಗಲಿ ಎನ್ನುವುದಷ್ಟೆ ಇಲ್ಲಿ ಸಾಲ ನೀಡುವವರ ಸದಾಶಯವಾಗಿರುತ್ತದೆ. ಈ ಜನೋಪಯೊಗಿ ಯೋಜನೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪೇಪ್ಯಾಲ್‌ನವರು ಯಾವುದೇ ರೀತಿಯ ಕಮಿಷನ್ ಅನ್ನು ಈ ಲೇವಾದೇವಿಯಲ್ಲಿ ಪಡೆಯುವುದಿಲ್ಲ. 100% ಹಣವನ್ನು ಕೀವದವರು ಅರ್ಜಿದಾರರಿಗೆ ಕೊಟ್ಟುಬಿಡುತ್ತಾರೆ. ಹಾಗಾದರೆ, ಕೀವ ಸಂಸ್ಥೆ ಮತ್ತು ಆ ವೆಬ್‌ಸೈಟ್ ಹೇಗೆ ನಡೆಯುತ್ತದೆ? ಸಾಲ ಕೊಟ್ಟವರು ಕೆಲವೊಮ್ಮೆ ಉದಾರ ಮನಸ್ಸಿನಿಂದ ಕೀವದವರು ಮಾಡುತ್ತಿರುವ ಕೆಲಸವನ್ನು ಮೆಚ್ಚಿಕೊಂಡು ಒಂದಿಷ್ಟು ಹಣವನ್ನು ದೇಣಿಗೆ ಕೊಡುತ್ತಾರೆ. ಹೀಗೆ ಅವರಿವರು ಕೊಡುವ ದೇಣಿಗೆಯಿಂದಲೆ ಈ ವೆಬ್‌ಸೈಟ್ ಮತ್ತು ಸಂಸ್ಥೆ ನಡೆಯುತ್ತಿದೆ. ಹಾಗಾಗಿ ಅದು ಒಂದೇ ಒಂದು ಪೈಸೆಯನ್ನು ಫ಼ೀಸ್ ಎಂದಾಗಲಿ, ಬಡ್ಡಿ ಎಂದಾಗಲಿ ಯಾರಿಂದಲೂ ಪಡೆಯುವುದಿಲ್ಲ.

ಪ್ರಾರಂಭವಾದ ಎರಡೇ ವರ್ಷಗಳಲ್ಲಿ ಪ್ರಪಂಚದಾದ್ಯಂತ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಕೀವ ವೆಬ್‌ಸೈಟ್ ಮುಖಾಂತರ ಈ ರೀತಿ ಮೈಕ್ರೊಸಾಲ ಒದಗಿಸಲಾಗಿದೆ. ಏಳೆಂಟು ಸಾವಿರದಿಂದ ಹಿಡಿದು 50 ಸಾವಿರದ ತನಕ ಸಾಲದ ಮೊತ್ತ ಇದೆ. ಕೊಟ್ಟವನು ಕೋಡಂಗಿ, ಈಸ್ಕೊಂಡೋನು ಈರಭದ್ರ ಎನ್ನುವ ಗಾದೆಯೆ ಇದೆಯಲ್ಲ? ಹಾಗಿದ್ದರೆ, ಎಷ್ಟು ಜನ ಸಾಲ ತೀರಿಸಲಾಗದೆ ಡೀಫ಼ಾಲ್ಟರ್‌ಗಳಾಗಿರಬಹುದು? ಎಷ್ಟು ಜನ ಕೈಯೆತ್ತಿ ಬಿಟ್ಟಿರಬಹುದು? ಇಲ್ಲಿಯತನಕ ಒಬ್ಬರೂ ಹಾಗೆ ಮಾಡಿಲ್ಲ ಎನ್ನುತ್ತದೆ ಅವರ ವೆಬ್‌ಸೈಟ್!!! To date, Kiva.org’s repayment rate is 100%.

ಅಂದ ಹಾಗೆ, ಕೀವ ದ ಆಡಳಿತ ಮಂಡಳಿಯಲ್ಲಿ ಹಲವರು ಭಾರತೀಯರೂ ಇದ್ದಾರೆ. ಸಂಸ್ಥೆಯ ಅಧ್ಯಕ್ಷ ಪ್ರೇಮಲ್ ಶಾ ಎಂಬ ಯುವ ಉದ್ಯಮಿ. ಭವಿಷ್ಯದ ದಿನಗಳಲ್ಲಿ ಕೀವ ಇನ್ನೂ ಬೆಳೆಯಲಿದೆ.

Jun 3, 2007

ಆಂಧ್ರದ ಜಯಪ್ರಕಾಶ್ ನಾರಾಯಣ್, ಬೆಂಗಳೂರಿನ ರಮೇಶ್

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜೂನ್ 15, 2007 ರ ಸಂಚಿಕೆಯಲ್ಲಿನ ಲೇಖನ)

ಇಂದಿರಾ ಗಾಂಧಿಯ ಎಮರ್ಜೆನ್ಸಿ ಕಾಲ ಅದು. ಆ ಹುಡುಗ ಓದಿದ್ದು ಎಮ್.ಬಿ.ಬಿ.ಎಸ್. ಆಂಧ್ರದ ಗುಂಟೂರಿನ ಆ ಹುಡುಗನ ಸಹಪಾಠಿಗಳೆಲ್ಲ ಅಮೇರಿಕಕ್ಕೆ ಹೋಗಲು ತುದಿಗಾಲ ಮೇಲೆ ನಿಂತಿದ್ದರೆ, ಈತ ಐ.ಎ.ಎಸ್. ಬರೆಯಲು ಕುಳಿತ. 1980 ರಲ್ಲಿ ಇಡೀ ಭಾರತಕ್ಕೆ ನಾಲ್ಕನೆ ರ್‍ಯಾಂಕ್ ಪಡೆದು ಆಂಧ್ರ ಕೇಡರ್‌ನ ಐ.ಎ.ಎಸ್. ಅಧಿಕಾರಿಯಾಗಿ ಆಯ್ಕೆಯಾದ. ಆತನಿಗೆ ಹೆತ್ತವರು ಇಟ್ಟಿದ್ದ ಹೆಸರು ಸ್ವಾತಂತ್ರ್ಯ ಹೋರಾಟಗಾರ, ಲೋಕನಾಯಕ ಜಯಪ್ರಕಾಶ್ ನಾರಾಯಣ್‌ರದು.

ಡಾ. ಜೇಪಿ ಆಂಧ್ರದ ಅನೇಕ ಕಡೆ ಅನೇಕ ಹುದ್ದೆಗಳಲ್ಲಿ ಪರಿಣಾಮಕಾರಿ ಕೆಲಸ ಮಾಡಿದರು. ಆದರೆ 16 ವರ್ಷಗಳ ಸರ್ಕಾರಿ ಸೇವೆಯ ಅವಧಿಯಲ್ಲಿ ಅವರಿಗೆ ಒಂದು ವಿಷಯ ಸ್ಪಷ್ಟವಾಗುತ್ತ ಹೋಯಿತು: "ಭಾರತದಲ್ಲಿ ಈಗ ಬದಲಾಗಬೇಕಿರುವುದು ಆಟದ ನಿಯಮಗಳೆ ಹೊರತು, ಅದಲುಬದಲಾಗುವ ಆಟಗಾರರಲ್ಲ; ಒಳ್ಳೆಯ ರಾಜಕಾರಣಕ್ಕೆ ವ್ಯವಸ್ಥೆ ಅನುಕೂಲವಾಗಿಲ್ಲ." ಹೀಗೆ ಸ್ಪಷ್ಟವಾಗಿದ್ದೆ, 1996 ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಕೆಲವು ಸಮಾನಮನಸ್ಕರೊಡನೆ ಸೇರಿಕೊಂಡು ಲೋಕ್ ಸತ್ತಾ ಎಂಬ ಎನ್.ಜಿ.ಒ. ಒಂದನ್ನು ಸ್ಥಾಪಿಸಿದರು. ಅಲ್ಲಿಂದೀಚೆಗೆ ಆಂಧ್ರದಲ್ಲಿ ಮತ್ತು ಭಾರತದ ರಾಜಕಾರಣದಲ್ಲಿ ಅನೇಕ ಬದಲಾವಣೆಗಳಿಗೆ "ಲೋಕ್ ಸತ್ತಾ" ಸಂಸ್ಥೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣವಾಗಿದೆ. ಆದರೆ, ಕೇವಲ ಎನ್.ಜಿ.ಒ. ಸಂಸ್ಥೆಯಿಂದ ಸಂಪೂರ್ಣ ಬದಲಾವಣೆ ಅಸಾಧ್ಯ ಎಂದು ಭಾವಿಸಿ ಆರೇಳು ತಿಂಗಳುಗಳ ಹಿಂದೆ ಡಾ. ಜೇಪಿ ಲೋಕ್ ಸತ್ತಾ ಪಾರ್ಟಿ ಯನ್ನು ಸ್ಥಾಪಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಮೊದಲ ಜಯ ಲಭಿಸಿದೆ. ಮುಂಬಯಿ ಕಾರ್ಪೊರೇಷನ್ ಚುನಾವಣೆಯಲ್ಲಿ ಲೋಕ್ ಸತ್ತಾ ಪಾರ್ಟಿಯ ಅಭ್ಯರ್ಥಿಯೊಬ್ಬರು ಒಂದು ಲಕ್ಷಕ್ಕಿಂತ ಕಮ್ಮಿ ದುಡ್ಡಿನಲ್ಲಿ ಜಯ ಗಳಿಸಿದ್ದಾರೆ. ಆದರೆ ಕಾಂಗ್ರೆಸ್, ಬಿಜೆಪಿಗೆ ಸೇರಿದ ಒಬ್ಬೊಬ್ಬ ಎದುರಾಳಿ ಮಾಡಿದ ಖರ್ಚು 35-40 ಲಕ್ಷ ರೂಪಾಯಿಗಳು!

---X---

ಆ ಹುಡುಗ ಹುಡುಗಿ ಬೆಂಗಳೂರಿನಲ್ಲಿ ಭೇಟಿಯಾದಾಗ ಅವರಿಗೆ 18 ವರ್ಷ ವಯಸ್ಸು. ಪ್ರೇಮದಲ್ಲಿ ಬಿದ್ದರು. ಆತ ಬಹುಶಃ ತಮಿಳು ಮೂಲದ ಬೆಂಗಳೂರು ಹುಡುಗ. ಆಕೆ ಗುಜರಾತಿ ಮೂಲದವಳು. ಮನೆಯವರ ವಿರೋಧದ ನಡುವೆ ಅವರಿಬ್ಬರೂ ಮದುವೆಯಾದರು. ಬಿಟ್ಸ್ ಪಿಲಾನಿಯಲ್ಲಿ ಕೊನೆಯ ವರ್ಷದ ಓದಿಗೆ ನಮಸ್ಕಾರ ಹಾಕಿ ಆತ ಅಪ್ಪನ ಸ್ಟೀಲ್ ಮಾರಾಟದ ಧಂಧೆಯಲ್ಲಿ ದುಡಿಯಲು ಆರಂಭಿಸಿದ. ಆಕೆ ಇಂಟೀರಿಯರ್ ಡಿಸೈನ್ ಕೆಲಸದಲ್ಲಿ ತೊಡಗಿಕೊಂಡಳು. 3 ಲಕ್ಷ ರೂಪಾಯಿ ಹಣ ಕೂಡಿತು. ಮತ್ತೆ 3 ಲಕ್ಷ ಸಾಲ ಮಾಡಿ ಹುಡುಗ ಎಂ.ಬಿ.ಎ. ಮಾಡಲು ಅಮೇರಿಕಕ್ಕೆ ಹೊರಟ. ಹೆಂಡತಿಯೂ ಆತನೊಡನೆ ಹೊರಟಳು. ಆತ ಓದುತ್ತಿರಬೇಕಾದರೆ ಆಕೆ ಕಾಲೇಜಿನ ಕ್ಯಾಂಟಿನ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಎರಡು ವರ್ಷಗಳ ಓದಿನ ನಂತರ ಆತನಿಗೆ ಸಿಟಿ ಬ್ಯಾಂಕ್‌ನಲ್ಲಿ ಪೂರ್ಣಾವಧಿ ಉದ್ಯೋಗ ಸಿಕ್ಕಿತು. ವರ್ಷಕ್ಕೆ 65000 ಡಾಲರ್ ಸಂಬಳ ಮತ್ತು ಸ್ಟಾರ್ಟಿಂಗ್ ಬೋನಸ್ ಎಂದು 20000 ಡಾಲರ್!!! ಅಲ್ಲಿಂದ ಆ ದಂಪತಿಗಳು ಹಿಂದಿರುಗಿ ನೋಡಲಿಲ್ಲ. ಆತನ ಹೆಸರು ರಮೇಶ್ ರಾಮನಾಥನ್. ಆಕೆ ಸ್ವಾತಿ.

ರಮೇಶ್‌ರಿಗೆ 34 ವರ್ಷ ವಯಸ್ಸಾಗುವಷ್ಟರಲ್ಲಿ ಲಕ್ಷಾಂತರ ಕೋಟಿ ರೂಗಳ ಟರ್ನ್‌ಓವರ್ ಇರುವ ಸಿಟಿ ಬ್ಯಾಂಕಿನ ಮೊದಲ 150 ಅತ್ಯುನ್ನತ ಹುದ್ದೆಗಳಲ್ಲಿ ಇವರದೂ ಒಂದು. ಎಂದಾದರು ಸಿ.ಇ.ಓ. ಆಗಬಹುದಾದ ಯೋಗ್ಯತೆ ಇದ್ದ ಪ್ರತಿಭಾವಂತ. ಅಷ್ಟೊತ್ತಿಗೆ ಸಾಕಷ್ಟು ದುಡ್ಡೂ ಮಾಡಿದ್ದರು. ಒಂದು ದಿನ ಆ ಸಕ್ಸೆಸ್‌ಫ಼ುಲ್ ಕೆರಿಯರ್ ಬಿಟ್ಟು ಭಾರತಕ್ಕೆ ಬಂದು ಸಮಾಜ ಸೇವೆಯಲ್ಲಿ ತೊಡಗಲು ನಿರ್ಧಾರ. ಕೆಲಸಕ್ಕೆ ರಾಜೀನಾಮೆ ಇತ್ತು ಗಂಡ ಹೆಂಡತಿ ತಮ್ಮ ಇಬ್ಬರು ಮಕ್ಕಳೊಡನೆ ಬೆಂಗಳೂರಿಗೆ ವಾಪಸಾದರು. ಪಟ್ಟಣದ ಹುಡುಗನಿಗೆ ಭಾರತದ ಪಟ್ಟಣಗಳಲ್ಲಿನ ಅವ್ಯವಸ್ಥೆ, ಪ್ರಜಾಪ್ರಭುತ್ವದ ಅಣಕದಂತಿರುವ ಇಲ್ಲಿನ ರಾಜಕೀಯ ವ್ಯವಸ್ಥೆ, ವ್ಯವಸ್ಥೆಯಲ್ಲಿ ಪಾಲುದಾರರಾಗದೆ ಕೇವಲ ಪ್ರತಿಫಲ ಬಯಸುವ ಜನರ ಬಗ್ಗೆ ಯೋಚನೆ. 2001 ಡಿಸೆಂಬರ್‌ನಲ್ಲಿ "ನೀವು ಬಯಸುವ ಬದಲಾವಣೆ ನಿಮ್ಮಿಂದಲೆ ತೊಡಗಲಿ" ಎಂಬ ಧ್ಯೇಯ ವಾಕ್ಯದೊಡನೆ "ಜನಾಗ್ರಹ" ಎಂಬ ಎನ್.ಜಿ.ಒ. ಸ್ಥಾಪನೆ. ಅಲ್ಲಿಂದೀಚೆಗೆ ಹಲವಾರು ಎಡರುತೊಡರುಗಳ ನಡುವೆ, ಕೆಲವು ಅಪವಾದಗಳ ನಡುವೆಜನಾಗ್ರಹ ಭಾರತದ ಹಲವಾರು ನಗರಗಳಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗಿದೆ.



ಸಿಲಿಕಾನ್ ಕಣಿವೆಯ ಇಂಡಿಯಾ ಕಮ್ಯುನಿಟಿ ಸೆಂಟರ್, "ಭಾರತದಲ್ಲಿನ ಪ್ರಜಾಪ್ರಭುತ್ವದ ಸ್ಥಿತಿ" ಎಂಬ ವಿಷಯದ ಮೇಲೆ ಜಯಪ್ರಕಾಶ್ ನಾರಾಯಣ್ ಮತ್ತು ರಮೇಶ್ ರಾಮನಾಥನ್‌ರಿಂದ ಕಳೆದ ವಾರ ಉಪನ್ಯಾಸ ಮತ್ತು ಪ್ರಶ್ನೋತ್ತರ ಏರ್ಪಡಿಸಿತ್ತು. ಮುಖ್ಯವಾಗಿ ಮಾತನಾಡಿದ್ದು ಜಯಪ್ರಕಾಶರೆ. ಜನರನ್ನು ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸಿ, ದುಡ್ಡು-ಹೆಂಡ ಹಂಚದೆ, ಚುನಾವಾಣಾ ಆಯೋಗ ನಿಗದಿ ಪಡಿಸಿರುವಷ್ಟೆ ಹಣ ಖರ್ಚು ಮಾಡಿ, ಕೇವಲ ಪ್ರಾಮಾಣಿಕತೆ, ಆದರ್ಶಗಳ ಮೂಲಕ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಅಧಿಕಾರ ಹಿಡಿಯುತ್ತೇವೆ ಎಂಬ ಘೋಷಣೆ ಅವರದು!! ಆದರೆ...

ಎನ್.ಟಿ.ಆರ್. ಎಂದರೆ ರಾಮಾರಾವೊ ಡ್ರಾಮಾರಾವೊ ಎಂಬ ಸಂದೇಹಕ್ಕೊಳಗಾಗುವ ಆಂಧ್ರ; "ಇಂದಿರಮ್ಮ ಪಾಲನ" ವಾಪಸ್ಸು ತರುತ್ತೇನೆ ಎನ್ನುವ ರಾಜಶೇಖರ ರೆಡ್ಡಿಯ ಆಂಧ್ರ; ಚಂದ್ರಬಾಬು ನಾಯ್ಡುವನ್ನು ನಂಬುವುದೊ ಬಿಡುವುದೊ ಗೊತ್ತಾಗುತ್ತಿಲ್ಲದ ಆಂಧ್ರ; ನಟ ಚಿರಂಜೀವಿ ರಾಜಕೀಯಕ್ಕೆ ಬರಲಿ ಎಂದು ಹಂಬಲಿಸುವ ಆಂಧ್ರ; ಗುಂಡು ಹಾರಿಸಿಯೂ ಜೈಲಿಗೆ ಹೋಗಿಲ್ಲದ ಇನ್ನೊಬ್ಬ ನಟ ಬಾಲಕೃಷ್ಣನಾದರೂ ರಾಜಕೀಯಕ್ಕೆ ಬರಬಾರದೆ ಎನ್ನುವವರ ಆಂಧ್ರ; ಪಾಳೆಯಗಾರಿಕೆಗೆ, ವಂಶ ವೈಷಮ್ಯಗಳಿಗೆ ಹೆಸರಾದ ರಾಯಲಸೀಮೆಯ ಆಂಧ್ರ; ಹಿಂದುಳಿದ, ನಕ್ಸಲೈಟ್ ಸಮಸ್ಯೆ ಅನುಭವಿಸುತ್ತಿರುವ ತೆಲಂಗಾಣದ ಆಂಧ್ರ; ಈ ಬಾರಿ ಕಮ್ಮ ಮುಖ್ಯಮಂತ್ರಿಯಾಗಿದ್ದರೆ ಮುಂದಿನ ಸಲ ರೆಡ್ಡಿಗಳೆಲ್ಲ ಒಂದಾಗಿ ತಮ್ಮವನನ್ನು ಮುಖ್ಯಮಂತ್ರಿ ಮಾಡುವ, ಅದರ ಮುಂದಿನ ಸಲ ಕಮ್ಮನನ್ನು ಮುಖ್ಯಮಂತ್ರಿ ಮಾಡುವ ಜಾತಿವಾದಿಗಳ ಆಂಧ್ರ...

ಜಾತಿ, ಹಣ, ದೈಹಿಕ ಬಲ, ಫ್ಯೂಡಲ್ ಮನಸ್ಥಿತಿಯ ರಾಜಕಾರಣವೆ ಹೆಚ್ಚಾಗಿರುವ ರಾಜ್ಯದಲ್ಲಿ ಕೇವಲ ಆದರ್ಶದ ಮಾತುಗಳನ್ನು ಆಡುತ್ತ, ಕನಿಷ್ಠ ಸಿನೆಮಾ ನಟ ಸಹ ಅಲ್ಲದ ಯಃಕಶ್ಚಿತ್ ಮಾಜಿ ಐ.ಎ.ಎಸ್. ವೋಟು ಕೇಳಿ ಗೆದ್ದು ಬಿಟ್ಟರೆ, ಓಹ್, ಅದು ನಿಜವಾದ ಕ್ರಾಂತಿ!!! ಆದರೆ ಹಾಗೇ ಆಗಲಿ ಎಂದು ಮನಸ್ಸು ಬಯಸಿದರೂ ಹಾಗೆಯೇ ಆಗುತ್ತದೆ ಎನ್ನುವುದು ವಾಸ್ತವಕ್ಕೆ ದೂರ ಎನಿಸುತ್ತದೆ. ಆದರೆ, ಜೇಪಿ ಹೇಳುವಂತೆ ಭಾರತದ ಮತದಾರರು ನಿಜವಾಗಲೂ ಪ್ರಬುದ್ಧರೆ ಆಗಿದ್ದರೆ ಈ ಆಕಸ್ಮಾತ್ ಈ ಸಲಕ್ಕಲ್ಲವಾದರೂ ಅದರ ಮುಂದಿನ ಸಲವಾದರೂ ಘಟಿಸಬಹುದು. ಇವರಂತೂ ಬೇರು ಮಟ್ಟದಲ್ಲಿ ಪ್ರಯತ್ನ ಆರಂಭಿಸಿದ್ದಾರೆ.

ಇನ್ನು, ರಮೇಶ್‌ರ ಜನಾಗ್ರಹ ನಗರಗಳಲ್ಲಿ ಬದಲಾವಾಣೆ ತರುವಲ್ಲಿ ಯಶಸ್ವಿಯಾದರೆ, ನಿಜವಾಗಲೂ ನಗರ ಭಾರತವೂ ಸುಂದರವಾಗಲು ಸಾಧ್ಯ. ಯಾರುಏನೇ ಹೇಳಲಿ, ಈಗಾಗಲೆ ನಡೆಯುತ್ತಿರುವ ವಲಸೆಯಿಂದಾಗಿ ಭವಿಷ್ಯದ ಒಂದೆರಡು ದಶಕಗಳಲ್ಲಿ ನಗರ ಜನತೆ ಗ್ರಾಮೀಣ ಜನತೆಯನ್ನು ಸಂಖ್ಯೆಯಲ್ಲಿ ಮೀರಿಸುವ ಸಾಧ್ಯತೆ ಇದೆ. ಅಂಥ ಸ್ಥಿತಿಯಲ್ಲಿ ನಗರಗಳಲ್ಲಿ ಈಗಿನದಕ್ಕಿಂತ ಹೆಚ್ಚಿನ ಸುವ್ಯವಸ್ಥೆ ಮುಖ್ಯ. ಅದಕ್ಕೆ ಬೇಕಾಗಿರುವುದು ರಾಜಕಾರಣಿಗಳಲ್ಲ. ರಮೇಶರಂತಹ ಮುಂದಾಲೋಚಕರು. ಇವರೆಲ್ಲರೂ ತಾವು ಕೈಗೊಂಡಿರುವ ಜನಪರ ಕಾರ್ಯಗಳಲ್ಲಿ ಯಶಸ್ವಿಯಾಗಲಿ ಎಂದು ಕೋರುವುದರಲ್ಲಿ, ಸಾಧ್ಯವಾದರೆ ಕೈಜೋಡಿಸುವುದರಲ್ಲಿ ನಮ್ಮೆಲ್ಲರ ಹಿತ ಅಡಗಿದೆ.

ಈ ಸಮಯದಲ್ಲಿ ಜೇಪಿಯಂತಹ ಒಬ್ಬನೇ ಒಬ್ಬ ಕನಸುಗಾರ ಕರ್ನಾಟಕದಲ್ಲಿ ನನಗೆ ಕಾಣಿಸುತ್ತಿಲ್ಲ. ನಿಮಗೆ ಯಾರಾದರೂ ಕಾಣಿಸಿದ್ದಾರೆಯೆ?