Jun 3, 2007

ಆಂಧ್ರದ ಜಯಪ್ರಕಾಶ್ ನಾರಾಯಣ್, ಬೆಂಗಳೂರಿನ ರಮೇಶ್

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜೂನ್ 15, 2007 ರ ಸಂಚಿಕೆಯಲ್ಲಿನ ಲೇಖನ)

ಇಂದಿರಾ ಗಾಂಧಿಯ ಎಮರ್ಜೆನ್ಸಿ ಕಾಲ ಅದು. ಆ ಹುಡುಗ ಓದಿದ್ದು ಎಮ್.ಬಿ.ಬಿ.ಎಸ್. ಆಂಧ್ರದ ಗುಂಟೂರಿನ ಆ ಹುಡುಗನ ಸಹಪಾಠಿಗಳೆಲ್ಲ ಅಮೇರಿಕಕ್ಕೆ ಹೋಗಲು ತುದಿಗಾಲ ಮೇಲೆ ನಿಂತಿದ್ದರೆ, ಈತ ಐ.ಎ.ಎಸ್. ಬರೆಯಲು ಕುಳಿತ. 1980 ರಲ್ಲಿ ಇಡೀ ಭಾರತಕ್ಕೆ ನಾಲ್ಕನೆ ರ್‍ಯಾಂಕ್ ಪಡೆದು ಆಂಧ್ರ ಕೇಡರ್‌ನ ಐ.ಎ.ಎಸ್. ಅಧಿಕಾರಿಯಾಗಿ ಆಯ್ಕೆಯಾದ. ಆತನಿಗೆ ಹೆತ್ತವರು ಇಟ್ಟಿದ್ದ ಹೆಸರು ಸ್ವಾತಂತ್ರ್ಯ ಹೋರಾಟಗಾರ, ಲೋಕನಾಯಕ ಜಯಪ್ರಕಾಶ್ ನಾರಾಯಣ್‌ರದು.

ಡಾ. ಜೇಪಿ ಆಂಧ್ರದ ಅನೇಕ ಕಡೆ ಅನೇಕ ಹುದ್ದೆಗಳಲ್ಲಿ ಪರಿಣಾಮಕಾರಿ ಕೆಲಸ ಮಾಡಿದರು. ಆದರೆ 16 ವರ್ಷಗಳ ಸರ್ಕಾರಿ ಸೇವೆಯ ಅವಧಿಯಲ್ಲಿ ಅವರಿಗೆ ಒಂದು ವಿಷಯ ಸ್ಪಷ್ಟವಾಗುತ್ತ ಹೋಯಿತು: "ಭಾರತದಲ್ಲಿ ಈಗ ಬದಲಾಗಬೇಕಿರುವುದು ಆಟದ ನಿಯಮಗಳೆ ಹೊರತು, ಅದಲುಬದಲಾಗುವ ಆಟಗಾರರಲ್ಲ; ಒಳ್ಳೆಯ ರಾಜಕಾರಣಕ್ಕೆ ವ್ಯವಸ್ಥೆ ಅನುಕೂಲವಾಗಿಲ್ಲ." ಹೀಗೆ ಸ್ಪಷ್ಟವಾಗಿದ್ದೆ, 1996 ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಕೆಲವು ಸಮಾನಮನಸ್ಕರೊಡನೆ ಸೇರಿಕೊಂಡು ಲೋಕ್ ಸತ್ತಾ ಎಂಬ ಎನ್.ಜಿ.ಒ. ಒಂದನ್ನು ಸ್ಥಾಪಿಸಿದರು. ಅಲ್ಲಿಂದೀಚೆಗೆ ಆಂಧ್ರದಲ್ಲಿ ಮತ್ತು ಭಾರತದ ರಾಜಕಾರಣದಲ್ಲಿ ಅನೇಕ ಬದಲಾವಣೆಗಳಿಗೆ "ಲೋಕ್ ಸತ್ತಾ" ಸಂಸ್ಥೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣವಾಗಿದೆ. ಆದರೆ, ಕೇವಲ ಎನ್.ಜಿ.ಒ. ಸಂಸ್ಥೆಯಿಂದ ಸಂಪೂರ್ಣ ಬದಲಾವಣೆ ಅಸಾಧ್ಯ ಎಂದು ಭಾವಿಸಿ ಆರೇಳು ತಿಂಗಳುಗಳ ಹಿಂದೆ ಡಾ. ಜೇಪಿ ಲೋಕ್ ಸತ್ತಾ ಪಾರ್ಟಿ ಯನ್ನು ಸ್ಥಾಪಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಮೊದಲ ಜಯ ಲಭಿಸಿದೆ. ಮುಂಬಯಿ ಕಾರ್ಪೊರೇಷನ್ ಚುನಾವಣೆಯಲ್ಲಿ ಲೋಕ್ ಸತ್ತಾ ಪಾರ್ಟಿಯ ಅಭ್ಯರ್ಥಿಯೊಬ್ಬರು ಒಂದು ಲಕ್ಷಕ್ಕಿಂತ ಕಮ್ಮಿ ದುಡ್ಡಿನಲ್ಲಿ ಜಯ ಗಳಿಸಿದ್ದಾರೆ. ಆದರೆ ಕಾಂಗ್ರೆಸ್, ಬಿಜೆಪಿಗೆ ಸೇರಿದ ಒಬ್ಬೊಬ್ಬ ಎದುರಾಳಿ ಮಾಡಿದ ಖರ್ಚು 35-40 ಲಕ್ಷ ರೂಪಾಯಿಗಳು!

---X---

ಆ ಹುಡುಗ ಹುಡುಗಿ ಬೆಂಗಳೂರಿನಲ್ಲಿ ಭೇಟಿಯಾದಾಗ ಅವರಿಗೆ 18 ವರ್ಷ ವಯಸ್ಸು. ಪ್ರೇಮದಲ್ಲಿ ಬಿದ್ದರು. ಆತ ಬಹುಶಃ ತಮಿಳು ಮೂಲದ ಬೆಂಗಳೂರು ಹುಡುಗ. ಆಕೆ ಗುಜರಾತಿ ಮೂಲದವಳು. ಮನೆಯವರ ವಿರೋಧದ ನಡುವೆ ಅವರಿಬ್ಬರೂ ಮದುವೆಯಾದರು. ಬಿಟ್ಸ್ ಪಿಲಾನಿಯಲ್ಲಿ ಕೊನೆಯ ವರ್ಷದ ಓದಿಗೆ ನಮಸ್ಕಾರ ಹಾಕಿ ಆತ ಅಪ್ಪನ ಸ್ಟೀಲ್ ಮಾರಾಟದ ಧಂಧೆಯಲ್ಲಿ ದುಡಿಯಲು ಆರಂಭಿಸಿದ. ಆಕೆ ಇಂಟೀರಿಯರ್ ಡಿಸೈನ್ ಕೆಲಸದಲ್ಲಿ ತೊಡಗಿಕೊಂಡಳು. 3 ಲಕ್ಷ ರೂಪಾಯಿ ಹಣ ಕೂಡಿತು. ಮತ್ತೆ 3 ಲಕ್ಷ ಸಾಲ ಮಾಡಿ ಹುಡುಗ ಎಂ.ಬಿ.ಎ. ಮಾಡಲು ಅಮೇರಿಕಕ್ಕೆ ಹೊರಟ. ಹೆಂಡತಿಯೂ ಆತನೊಡನೆ ಹೊರಟಳು. ಆತ ಓದುತ್ತಿರಬೇಕಾದರೆ ಆಕೆ ಕಾಲೇಜಿನ ಕ್ಯಾಂಟಿನ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಎರಡು ವರ್ಷಗಳ ಓದಿನ ನಂತರ ಆತನಿಗೆ ಸಿಟಿ ಬ್ಯಾಂಕ್‌ನಲ್ಲಿ ಪೂರ್ಣಾವಧಿ ಉದ್ಯೋಗ ಸಿಕ್ಕಿತು. ವರ್ಷಕ್ಕೆ 65000 ಡಾಲರ್ ಸಂಬಳ ಮತ್ತು ಸ್ಟಾರ್ಟಿಂಗ್ ಬೋನಸ್ ಎಂದು 20000 ಡಾಲರ್!!! ಅಲ್ಲಿಂದ ಆ ದಂಪತಿಗಳು ಹಿಂದಿರುಗಿ ನೋಡಲಿಲ್ಲ. ಆತನ ಹೆಸರು ರಮೇಶ್ ರಾಮನಾಥನ್. ಆಕೆ ಸ್ವಾತಿ.

ರಮೇಶ್‌ರಿಗೆ 34 ವರ್ಷ ವಯಸ್ಸಾಗುವಷ್ಟರಲ್ಲಿ ಲಕ್ಷಾಂತರ ಕೋಟಿ ರೂಗಳ ಟರ್ನ್‌ಓವರ್ ಇರುವ ಸಿಟಿ ಬ್ಯಾಂಕಿನ ಮೊದಲ 150 ಅತ್ಯುನ್ನತ ಹುದ್ದೆಗಳಲ್ಲಿ ಇವರದೂ ಒಂದು. ಎಂದಾದರು ಸಿ.ಇ.ಓ. ಆಗಬಹುದಾದ ಯೋಗ್ಯತೆ ಇದ್ದ ಪ್ರತಿಭಾವಂತ. ಅಷ್ಟೊತ್ತಿಗೆ ಸಾಕಷ್ಟು ದುಡ್ಡೂ ಮಾಡಿದ್ದರು. ಒಂದು ದಿನ ಆ ಸಕ್ಸೆಸ್‌ಫ಼ುಲ್ ಕೆರಿಯರ್ ಬಿಟ್ಟು ಭಾರತಕ್ಕೆ ಬಂದು ಸಮಾಜ ಸೇವೆಯಲ್ಲಿ ತೊಡಗಲು ನಿರ್ಧಾರ. ಕೆಲಸಕ್ಕೆ ರಾಜೀನಾಮೆ ಇತ್ತು ಗಂಡ ಹೆಂಡತಿ ತಮ್ಮ ಇಬ್ಬರು ಮಕ್ಕಳೊಡನೆ ಬೆಂಗಳೂರಿಗೆ ವಾಪಸಾದರು. ಪಟ್ಟಣದ ಹುಡುಗನಿಗೆ ಭಾರತದ ಪಟ್ಟಣಗಳಲ್ಲಿನ ಅವ್ಯವಸ್ಥೆ, ಪ್ರಜಾಪ್ರಭುತ್ವದ ಅಣಕದಂತಿರುವ ಇಲ್ಲಿನ ರಾಜಕೀಯ ವ್ಯವಸ್ಥೆ, ವ್ಯವಸ್ಥೆಯಲ್ಲಿ ಪಾಲುದಾರರಾಗದೆ ಕೇವಲ ಪ್ರತಿಫಲ ಬಯಸುವ ಜನರ ಬಗ್ಗೆ ಯೋಚನೆ. 2001 ಡಿಸೆಂಬರ್‌ನಲ್ಲಿ "ನೀವು ಬಯಸುವ ಬದಲಾವಣೆ ನಿಮ್ಮಿಂದಲೆ ತೊಡಗಲಿ" ಎಂಬ ಧ್ಯೇಯ ವಾಕ್ಯದೊಡನೆ "ಜನಾಗ್ರಹ" ಎಂಬ ಎನ್.ಜಿ.ಒ. ಸ್ಥಾಪನೆ. ಅಲ್ಲಿಂದೀಚೆಗೆ ಹಲವಾರು ಎಡರುತೊಡರುಗಳ ನಡುವೆ, ಕೆಲವು ಅಪವಾದಗಳ ನಡುವೆಜನಾಗ್ರಹ ಭಾರತದ ಹಲವಾರು ನಗರಗಳಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗಿದೆ.ಸಿಲಿಕಾನ್ ಕಣಿವೆಯ ಇಂಡಿಯಾ ಕಮ್ಯುನಿಟಿ ಸೆಂಟರ್, "ಭಾರತದಲ್ಲಿನ ಪ್ರಜಾಪ್ರಭುತ್ವದ ಸ್ಥಿತಿ" ಎಂಬ ವಿಷಯದ ಮೇಲೆ ಜಯಪ್ರಕಾಶ್ ನಾರಾಯಣ್ ಮತ್ತು ರಮೇಶ್ ರಾಮನಾಥನ್‌ರಿಂದ ಕಳೆದ ವಾರ ಉಪನ್ಯಾಸ ಮತ್ತು ಪ್ರಶ್ನೋತ್ತರ ಏರ್ಪಡಿಸಿತ್ತು. ಮುಖ್ಯವಾಗಿ ಮಾತನಾಡಿದ್ದು ಜಯಪ್ರಕಾಶರೆ. ಜನರನ್ನು ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸಿ, ದುಡ್ಡು-ಹೆಂಡ ಹಂಚದೆ, ಚುನಾವಾಣಾ ಆಯೋಗ ನಿಗದಿ ಪಡಿಸಿರುವಷ್ಟೆ ಹಣ ಖರ್ಚು ಮಾಡಿ, ಕೇವಲ ಪ್ರಾಮಾಣಿಕತೆ, ಆದರ್ಶಗಳ ಮೂಲಕ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಅಧಿಕಾರ ಹಿಡಿಯುತ್ತೇವೆ ಎಂಬ ಘೋಷಣೆ ಅವರದು!! ಆದರೆ...

ಎನ್.ಟಿ.ಆರ್. ಎಂದರೆ ರಾಮಾರಾವೊ ಡ್ರಾಮಾರಾವೊ ಎಂಬ ಸಂದೇಹಕ್ಕೊಳಗಾಗುವ ಆಂಧ್ರ; "ಇಂದಿರಮ್ಮ ಪಾಲನ" ವಾಪಸ್ಸು ತರುತ್ತೇನೆ ಎನ್ನುವ ರಾಜಶೇಖರ ರೆಡ್ಡಿಯ ಆಂಧ್ರ; ಚಂದ್ರಬಾಬು ನಾಯ್ಡುವನ್ನು ನಂಬುವುದೊ ಬಿಡುವುದೊ ಗೊತ್ತಾಗುತ್ತಿಲ್ಲದ ಆಂಧ್ರ; ನಟ ಚಿರಂಜೀವಿ ರಾಜಕೀಯಕ್ಕೆ ಬರಲಿ ಎಂದು ಹಂಬಲಿಸುವ ಆಂಧ್ರ; ಗುಂಡು ಹಾರಿಸಿಯೂ ಜೈಲಿಗೆ ಹೋಗಿಲ್ಲದ ಇನ್ನೊಬ್ಬ ನಟ ಬಾಲಕೃಷ್ಣನಾದರೂ ರಾಜಕೀಯಕ್ಕೆ ಬರಬಾರದೆ ಎನ್ನುವವರ ಆಂಧ್ರ; ಪಾಳೆಯಗಾರಿಕೆಗೆ, ವಂಶ ವೈಷಮ್ಯಗಳಿಗೆ ಹೆಸರಾದ ರಾಯಲಸೀಮೆಯ ಆಂಧ್ರ; ಹಿಂದುಳಿದ, ನಕ್ಸಲೈಟ್ ಸಮಸ್ಯೆ ಅನುಭವಿಸುತ್ತಿರುವ ತೆಲಂಗಾಣದ ಆಂಧ್ರ; ಈ ಬಾರಿ ಕಮ್ಮ ಮುಖ್ಯಮಂತ್ರಿಯಾಗಿದ್ದರೆ ಮುಂದಿನ ಸಲ ರೆಡ್ಡಿಗಳೆಲ್ಲ ಒಂದಾಗಿ ತಮ್ಮವನನ್ನು ಮುಖ್ಯಮಂತ್ರಿ ಮಾಡುವ, ಅದರ ಮುಂದಿನ ಸಲ ಕಮ್ಮನನ್ನು ಮುಖ್ಯಮಂತ್ರಿ ಮಾಡುವ ಜಾತಿವಾದಿಗಳ ಆಂಧ್ರ...

ಜಾತಿ, ಹಣ, ದೈಹಿಕ ಬಲ, ಫ್ಯೂಡಲ್ ಮನಸ್ಥಿತಿಯ ರಾಜಕಾರಣವೆ ಹೆಚ್ಚಾಗಿರುವ ರಾಜ್ಯದಲ್ಲಿ ಕೇವಲ ಆದರ್ಶದ ಮಾತುಗಳನ್ನು ಆಡುತ್ತ, ಕನಿಷ್ಠ ಸಿನೆಮಾ ನಟ ಸಹ ಅಲ್ಲದ ಯಃಕಶ್ಚಿತ್ ಮಾಜಿ ಐ.ಎ.ಎಸ್. ವೋಟು ಕೇಳಿ ಗೆದ್ದು ಬಿಟ್ಟರೆ, ಓಹ್, ಅದು ನಿಜವಾದ ಕ್ರಾಂತಿ!!! ಆದರೆ ಹಾಗೇ ಆಗಲಿ ಎಂದು ಮನಸ್ಸು ಬಯಸಿದರೂ ಹಾಗೆಯೇ ಆಗುತ್ತದೆ ಎನ್ನುವುದು ವಾಸ್ತವಕ್ಕೆ ದೂರ ಎನಿಸುತ್ತದೆ. ಆದರೆ, ಜೇಪಿ ಹೇಳುವಂತೆ ಭಾರತದ ಮತದಾರರು ನಿಜವಾಗಲೂ ಪ್ರಬುದ್ಧರೆ ಆಗಿದ್ದರೆ ಈ ಆಕಸ್ಮಾತ್ ಈ ಸಲಕ್ಕಲ್ಲವಾದರೂ ಅದರ ಮುಂದಿನ ಸಲವಾದರೂ ಘಟಿಸಬಹುದು. ಇವರಂತೂ ಬೇರು ಮಟ್ಟದಲ್ಲಿ ಪ್ರಯತ್ನ ಆರಂಭಿಸಿದ್ದಾರೆ.

ಇನ್ನು, ರಮೇಶ್‌ರ ಜನಾಗ್ರಹ ನಗರಗಳಲ್ಲಿ ಬದಲಾವಾಣೆ ತರುವಲ್ಲಿ ಯಶಸ್ವಿಯಾದರೆ, ನಿಜವಾಗಲೂ ನಗರ ಭಾರತವೂ ಸುಂದರವಾಗಲು ಸಾಧ್ಯ. ಯಾರುಏನೇ ಹೇಳಲಿ, ಈಗಾಗಲೆ ನಡೆಯುತ್ತಿರುವ ವಲಸೆಯಿಂದಾಗಿ ಭವಿಷ್ಯದ ಒಂದೆರಡು ದಶಕಗಳಲ್ಲಿ ನಗರ ಜನತೆ ಗ್ರಾಮೀಣ ಜನತೆಯನ್ನು ಸಂಖ್ಯೆಯಲ್ಲಿ ಮೀರಿಸುವ ಸಾಧ್ಯತೆ ಇದೆ. ಅಂಥ ಸ್ಥಿತಿಯಲ್ಲಿ ನಗರಗಳಲ್ಲಿ ಈಗಿನದಕ್ಕಿಂತ ಹೆಚ್ಚಿನ ಸುವ್ಯವಸ್ಥೆ ಮುಖ್ಯ. ಅದಕ್ಕೆ ಬೇಕಾಗಿರುವುದು ರಾಜಕಾರಣಿಗಳಲ್ಲ. ರಮೇಶರಂತಹ ಮುಂದಾಲೋಚಕರು. ಇವರೆಲ್ಲರೂ ತಾವು ಕೈಗೊಂಡಿರುವ ಜನಪರ ಕಾರ್ಯಗಳಲ್ಲಿ ಯಶಸ್ವಿಯಾಗಲಿ ಎಂದು ಕೋರುವುದರಲ್ಲಿ, ಸಾಧ್ಯವಾದರೆ ಕೈಜೋಡಿಸುವುದರಲ್ಲಿ ನಮ್ಮೆಲ್ಲರ ಹಿತ ಅಡಗಿದೆ.

ಈ ಸಮಯದಲ್ಲಿ ಜೇಪಿಯಂತಹ ಒಬ್ಬನೇ ಒಬ್ಬ ಕನಸುಗಾರ ಕರ್ನಾಟಕದಲ್ಲಿ ನನಗೆ ಕಾಣಿಸುತ್ತಿಲ್ಲ. ನಿಮಗೆ ಯಾರಾದರೂ ಕಾಣಿಸಿದ್ದಾರೆಯೆ?

No comments: