- ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?
- ಜಯಪ್ರದ, ವಿಜಯಶಾಂತಿ, ರೋಜಾ, ಬಾಲಕೃಷ್ಣ
ಮೇಲಿನ ಲೇಖನಗಳಿಗೆ ಪೂರಕವಾಗಿ ಬರೆದ ಬರಹ ಇದು.
ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರು
ಕರ್ನಾಟಕಲ್ಲಿ ಕಾಣದ ಒಂದು ಸಂಸ್ಕೃತಿ ಆಂಧ್ರದಲ್ಲಿದೆ. ಅದೇನೆಂದರೆ, ಕುಟುಂಬಸಮೇತರಾಗಿ ಸಿನೆಮಾಗಳಿಗೆ ಹೋಗುವುದು. ಸಿನೆಮಾ ಹುಚ್ಚಿನ ಅಪ್ಪಅಮ್ಮಂದಿರು ಮಕ್ಕಳನ್ನೂ ಕರೆದುಕೊಂಡು ಸಿನೆಮಾ ಎಂಜಾಯ್ ಮಾಡಲು ಹೋಗುತ್ತಾರೆ. ವಾರಕ್ಕೆರಡು ಸಿನೆಮಾ ಬಿಡುಗಡೆ ಆಗುವ ತೆಲುಗು ಸಿನೆಮಾ ರಂಗದಲ್ಲಿ ಹೀಗಾಗಿಯೆ ಅನೇಕ ಸೂಪರ್‌ಸ್ಟಾರ್‌ಗಳು. ಈ ಎಲ್ಲಾ ಸೂಪರ್‌ಸ್ಟಾರ್‌ಗಳಿಗೂ ಪ್ರಕಾಶ್ ರಾಜ್ ಎಂಬ ನಟ ತಮ್ಮ ಚಿತ್ರದಲ್ಲಿ ವಿಲ್ಲನ್ ಆಗಿಯೊ, ಇಲ್ಲದಿದ್ದರೆ ಇನ್ಯಾವುದಾದರೂ ಮುಖ್ಯಪಾತ್ರದಲ್ಲಿಯೂ ಇರಲೇಬೇಕು. ಈ ಪ್ರಕಾಶ್ ರಾಜ್ ಮಹಾನ್ ಕಿರಿಕಿರಿ ಆಸಾಮಿ. ಅನೇಕ ಸಲ ಅಲ್ಲಿನ ಕಲಾವಿದರ ಒಕ್ಕೂಟದಲ್ಲಿ ನಿರ್ಮಾಪಕರು ಈತನ ಮೇಲೆ ದೂರು ಕೊಟ್ಟಿದ್ದಾರೆ. ಒಮ್ಮೆಯಂತೂ ಈತನನ್ನು ಆರು ತಿಂಗಳು ಸಿನೆಮಾದಲ್ಲಿ ನಟಿಸದಂತೆ ಬ್ಯಾನ್ ಮಾಡಲಾಗಿತ್ತು. ಸರಿಯಾಗಿ ಡೇಟ್ಸ್ ಕೊಡುವುದಿಲ್ಲ, ಯಾರ ಮೇಲೆಯೊ ಕೈಮಾಡಿದ್ದ, ಎಂದೆಲ್ಲ ದೂರು. ತಮಿಳಿನಲ್ಲಿಯೂ ಆತ ಬಹಳ ಬ್ಯುಸಿ ನಟ. ಇಷ್ಟಾದರೂ ತೆಲುಗಿನ ಸೂಪರ್‌ಸ್ಟಾರ್‌ಗಳಿಗೆ, ನಿರ್ಮಾಪಕರಿಗೆ ಈ ನಟ ಬೇಕೆ ಬೇಕು. ಯಾಕೆಂದರೆ, ಆತ ಅಂತಹ ಅಗಾಧ ಪ್ರತಿಭಾವಂತ. ತೆರೆಯ ಮೇಲೆ ಪಾತ್ರವನ್ನೆ ಜೀವಿಸಿಬಿಡುತ್ತಾನೆ. ಈ ಪ್ರಕಾಶ್ ರಾಜ್ ಬೇರಾರೂ ಅಲ್ಲ, ನಮ್ಮ ಕನ್ನಡದ ಪ್ರಕಾಶ್ ರೈ.
ತೆಲುಗು ಸಿನೆಮಾಗಳಲ್ಲಿ ನಾಯಕನಟನಾಗಿ ಹೆಸರು ಮಾಡಿದ ಕನ್ನಡಿಗರಲ್ಲಿ ಮೊದಲ ಹೆಸರು ಸುಮನ್. ಆತನ ಪೂರ್ಣ ಹೆಸರು ಮಂಗಳೂರು ಸುಮನ್ ತಲ್ವಾರ್. 80 ರ ದಶಕದಲ್ಲಿ ಭರವಸೆಯ ನಾಯಕನಟನಾಗಿ ಬೆಳೆಯುತ್ತಿದ್ದ ಈತ ಬ್ಲೂಫಿಲಮ್ ಕೇಸೊಂದರಲ್ಲಿ ಆರು ತಿಂಗಳು ಜೈಲುವಾಸ ಅನುಭವಿಸಿದ್ದ. ಅದಾದ ಮೇಲೆ ಹಲವಾರು ವರ್ಷಗಳ ಅಜ್ಞಾತವಾಸದ ನಂತರ ಮತ್ತೆ ಚಲಾವಣೆಗೆ ಬಂದ. "ಅನ್ನಮಯ್ಯ" ಎಂಬ ಪ್ರಸಿದ್ಧ ಚಲನಚಿತ್ರದಲ್ಲಿ ಈತ ತಿರುಪತಿ ವೆಂಕಟರಮಣನಾಗಿ ನಟಿಸಿದ್ದನ್ನು ಪ್ರೇಕ್ಷಕರು ಕೊಂಡಾಡಿಬಿಟ್ಟರು. ಮೊದಲಿಗೆ ಚಂದ್ರಬಾಬು ನಾಯ್ಡು ಪರ ಇದ್ದ ಈತ 2004 ರಲ್ಲಿ ಬಿ.ಜೆ.ಪಿ. ಸೇರಿದ. ಕಳೆದ ಸಾರಿಯ ಚುನಾವಣೆಯಲ್ಲಿ ಬಿ.ಜೆ.ಪಿ. ಒಂದು ಹೆಜ್ಜೆ ಹಿಂದೆ ಹೋಯಿತು!
ಸುಮನ್ ನಂತರ ತೆಲುಗಿನಲ್ಲಿ ಬೆಳೆಯಲು ಆರಂಭಿಸಿದ ಕನ್ನಡದ ನಟ ಎಂದರೆ ವಿನೋದ್ ಆಳ್ವ. ಆತ ಅಲ್ಲಿ ವಿನೋದ್ ಕುಮಾರ್. ವಿಜಯಶಾಂತಿಯ "ಕರ್ತವ್ಯಂ"ನಲ್ಲಿ ನಟಿಸಿದ್ದ ಈತ ಆಕೆಯ ನೆರಳಿನಲ್ಲಿ ಬೆಳೆಯಲು ಯತ್ನಿಸಿದ. ಒಂದಷ್ಟು ಚಿತ್ರಗಳು ಯಶಸ್ವಿಯೂ ಆದವು. ಆದರೂ, ಬಹಳ ದಿನ ನಿಲ್ಲಲಿಲ್ಲ. ಇದೇ ವಿಜಯಶಾಂತಿಗೆ ದೊಡ್ಡ ಬ್ರೇಕ್ ಕೊಟ್ಟ "ಪ್ರತಿಘಟನ"ದಲ್ಲಿ ಕೆಟ್ಟ ಅತ್ಯಾಚಾರಿ ವಿಲನ್ ಆಗಿ ನಟಿಸಿ ಬಹಳ ಕಾಲ ಅಂತಹುದೇ ಪಾತ್ರಗಳಲ್ಲಿ ನಟಿಸಿದ ಮತ್ತೊಬ್ಬ ಕನ್ನಡಿಗ ಚರಣ್ ರಾಜ್. ತೀರಾ ಇತ್ತೀಚಿನವರೆಗೂ ವಿಲ್ಲನ್ ಆಗಿ ತೆಲುಗು ಚಿತ್ರಗಳಲ್ಲಿ ಚಲಾವಣೆಯಲ್ಲಿ ಇದ್ದ ಈ ನಟ ಈ ನಡುವೆ ಹೆಚ್ಚಿಗೆ ಕಾಣಿಸುತ್ತಿಲ್ಲ.
ತೆಲುಗಿನಲ್ಲಿ ವಿಲ್ಲನ್‌ಗಳಾಗಿ ಮಿಂಚಿದ ಇನ್ನಿಬ್ಬರು ಕನ್ನಡ ನಟರೆಂದರೆ ಪ್ರಭಾಕರ್ ಮತ್ತು ದೇವರಾಜ್. ಅಲ್ಲಿ ಪ್ರಭಾಕರ್ ಕನ್ನಡ ಪ್ರಭಾಕರ್ ಎಂದೇ ಪ್ರಸಿದ್ಧ. ಚಿರಂಜೀವಿಯ ಒಂದು ಚಿತ್ರದಲ್ಲಿ ಪ್ರಭಾಕರ್ ಮತ್ತು ಜಯಮಾಲ ಇಬ್ಬರೂ ಜೊತೆಯಾಗಿ ನಟಿಸಿದ್ದರು. ಸ್ವಲ್ಪ ಕ್ರಾಂತಿಕಾರಿ ಸಂದೇಶವಿರುವ "ಎರ್ರ ಮಂದಾರಂ" (ಕೆಂಪು ತಾವರೆ) ಚಿತ್ರದಲ್ಲಿ ದೇವರಾಜ್ ಕ್ರೂರ ಜಮೀನ್ದಾರನ ಪಾತ್ರದಲ್ಲಿ ಜೀವಿಸಿ ಬಿಟ್ಟಿದ್ದರು. ಅದಾದ ಮೇಲೆ ಅನೇಕ ಚಿತ್ರಗಳಲ್ಲಿ ದೇವರಾಜ್ ಖಳನಾಗಿ ನಟಿಸಿದರು. ಇದು ಯಾವ ಮಟ್ಟ ತಲುಪಿತೆಂದರೆ, ಕನ್ನಡ ಚಿತ್ರಗಳಲ್ಲಿ ಪ್ರಾಮಾಣಿಕ, ಸತ್ಯನಿಷ್ಠ ಪೊಲಿಸ್ ಅಧಿಕಾರಿ ಪಾತ್ರದಲ್ಲಿ ನಟಿಸುವ ತನ್ನನ್ನು ತೆಲುಗಿನಲ್ಲಿ ಖಳನಾಗಿ ನೋಡುವುದನ್ನು ಕನ್ನಡದ ಪ್ರೇಕ್ಷಕರು ಇಷ್ಟಪಡುತ್ತಿಲ್ಲವಾದ್ದರಿಂದ ಇನ್ನು ಖಳನಾಗಿ ನಟಿಸುವುದಿಲ್ಲ ಎಂದು ದೇವರಾಜ್ ಹೇಳಿಕೆಯೊಂದನ್ನು ಕೊಟ್ಟಿದ್ದರು. ಅದನ್ನು ಎಷ್ಟು ಪಾಲಿಸಿದರೊ ಗೊತ್ತಾಗಲಿಲ್ಲ.
ಆದರೆ, ಎಲ್ಲರಿಗಿಂತ ಹೆಚ್ಚಿನ ಯಶಸ್ಸು ಪಡೆದ ನಟನೆಂದರೆ ಕೊಪ್ಪಳ ಜಿಲ್ಲೆಯ, ಗಂಗಾವತಿಯ ಹುಡುಗ ಶ್ರೀಕಾಂತ್. ಅದು ಹೇಗೊ ಹೈದರಾಬಾದ್ ಸೇರಿಕೊಂಡ ಈ ಹುಡುಗ ಮೊದಮೊದಲು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ. ಆದರೆ ಯಾವಾಗ ತೆಲುಗಿನ ಷೋಮ್ಯಾನ್ ರಾಘವೇಂದ್ರ ರಾವ್‌ರ "ಪೆಳ್ಳಿಸಂದಡಿ" ಸೂಪರ್‌ಹಿಟ್ ಆಗಿಬಿಟ್ಟಿತೊ, ಈತನ ನಸೀಬು ಬದಲಾಗಿ ಬಿಟ್ಟಿತು. ಅಲ್ಲಿಂದೀಚೆಗೆ ಒಮ್ಮೆ ಆರಕ್ಕೇಳಿ, ಮತ್ತೊಮ್ಮೆ ಮೂರಕ್ಕಿಳಿದು, ಮತ್ತೆ ಏರುತ್ತ, ಹೀಗೆ ಕಳೆದ ಹತ್ತು ವರ್ಷಗಳಿಂದಲೂ ಚಲಾವಣೆಯಲ್ಲಿದ್ದಾನೆ. ಈ ನಡುವೆ ಮುನ್ನಾಬಾಯಿಯ ತೆಲುಗು ರಿಮೇಕ್‌ಗಳಲ್ಲಿ ಚಿರಂಜೀವಿಯ ದೋಸ್ತ್ ಆಗಿ ನಟಿಸುತ್ತಿದ್ದಾನೆ. ಧಾರವಾಡದಲ್ಲಿ ಬಿ.ಕಾಮ್. ಮಾಡಿರುವ ಈತ, 2007 ರಲ್ಲಿ ರವಿಚಂದ್ರನ್ ಜೊತೆಗೆ "ಯುಗಾದಿ" ಎನ್ನುವ ಕನ್ನಡ ಚಿತ್ರದಲ್ಲಿಯೂ ನಟಿಸಿದ್ದ. ಅದು ತೆಲುಗಿನಲ್ಲಿ ಹಿಟ್ ಆಗಿದ್ದ ಚಿತ್ರವೊಂದರ ರಿಮೇಕ್. ಆದರೂ ಇಲ್ಲಿ ಅದು ಬೋರಲು ಬಿತ್ತು. ಇನ್ನು ಆತ ಕನ್ನಡಕ್ಕೆ ಬರುವುದು ಸಂದೇಹವೆ.
ಪೂರಕ ಓದಿಗೆ:
- ಕಾನೂನಿಗೆ ವಿರುದ್ಧವಾದರೂ ಇಬ್ಬರು ಹೆಂಡಿರು ಇರಲೇಬೇಕು
Aug 26, 2008
ತೆಲುಗು ಸಿನೆಮಾ ರಂಗದಲ್ಲಿ ಕನ್ನಡ ನಟರು
Subscribe to:
Post Comments (Atom)
No comments:
Post a Comment