(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 19, 2008 ರ ಸಂಚಿಕೆಯಲ್ಲಿನ ಲೇಖನ.)
ಅಮೆರಿಕ ಎಂದ ತಕ್ಷಣ ಎಷ್ಟೋ ಸಲ ಅದೊಂದು ಅಂಕೆಶಂಕೆಯಿಲ್ಲದ ಮಹಾನ್ ಲಿಬರಲ್ ದೇಶ ಎನ್ನುವ ಕಲ್ಪನೆ ತಾನೆತಾನಾಗಿ ಬಂದುಬಿಡುತ್ತದೆ. ವಿಚ್ಚೇದನಗಳು, ಮರುಮದುವೆಗಳು, half-sisterಗಳು, hlaf-brotherಗಳು, ಸಿಂಗಲ್ ಮಾಮ್‌ಗಳು, ಸಮಾನತೆಗೆ ಹೋರಾಡುವ ಜನರು, ಪ್ರಜಾಪ್ರಭುತ್ವವಾದಿಗಳು; ಇವೆಲ್ಲ ಅಮೆರಿಕದ ಸಮಾಜದ ಬಗ್ಗೆ ನಮ್ಮಂತಹ ವಿದೇಶಿಯರಲ್ಲಿ ತಕ್ಷಣ ಮೂಡುವ ಚಿತ್ರಗಳು. ಆದರೆ, ಈ ಮುಂದುವರೆದ ದೇಶದಲ್ಲಿ ಕೋಮುವಾದಂತಹ ಸಂಕುಚಿತತೆ ಯಾವ ಹಂತದಲ್ಲಿ ಜೀವಂತವಾಗಿದೆ ಎನ್ನುವುದನ್ನು ನಮ್ಮ ಓದುಗರಿಗೆ ಪರಿಚಯಿಸಲು ಈ ಲೇಖನ.
ಈ ದೇಶವನ್ನು, ವಿಶೇಷವಾಗಿ ಇಲ್ಲಿಯ ಅಧ್ಯಕ್ಷೀಯ ಚುನಾವಣೆಗಳನ್ನು ಗಮನಿಸಿದಾಗ ಈ ದೇಶದ ಕಠೋರ ಸಂಪ್ರದಾಯವಾದ ಮತ್ತು ಕ್ರಿಶ್ಚಿಯನ್ ಬಲಪಂಥೀಯತೆ ಎದ್ದು ಕಾಣಿಸುವ ಅಂಶ. ಈ ಸಲದ ಅಧ್ಯಕ್ಷೀಯ ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳ ಹಿನ್ನೆಲೆ ಮತ್ತು ಇಲ್ಲಿಯ ಜನ ಮತ್ತು ಮೀಡಿಯ ಅದಕ್ಕೆ ಸ್ಪಂದಿಸುತ್ತಿರುವ ರೀತಿಯನ್ನೆ ನೋಡಿ. ಕ್ರಿಶ್ಚಿಯನ್ supremacy ಗೆ ತೊಂದರೆಯಾಗದಂತಹ ಇಲ್ಲಿನ ಬಹುಸಂಖ್ಯಾತ ಜನತೆಯ ಬಯಕೆಯನ್ನು ಅದು ತೋರಿಸುತ್ತದೆ.
ಬರಾಕ್ ಒಬಾಮನ ತಂದೆ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ್ದರೂ ಇಸ್ಲಾಮಿನ ಆಚಾರಗಳನ್ನು ಪಾಲಿಸುವ ಕಟ್ಟರ್ ಮುಸಲ್ಮಾನನಾಗಿರಲಿಲ್ಲ. ಆತನಿಗೆ ಒಟ್ಟು ಮೂವರು ಹೆಂಡತಿಯರು ಮತ್ತು ಮದುವೆಯ ಹೊರಗಿನ ಇನ್ನೊಂದು ಸಂಬಂಧವೂ ಇತ್ತು. ಆ ನಾಲ್ವರೂ ಹೆಂಗಸರಿಂದ ಆತನಿಗೆ ಮಕ್ಕಳಿದ್ದವು. ಅವರಲ್ಲಿ ಇಬ್ಬರು ಬಿಳಿಯ ಕ್ರಿಶ್ಚಿಯನ್ ಹೆಂಗಸರು. ಅವರಲ್ಲೊಬ್ಬಾಕೆ ಒಬಾಮನ ತಾಯಿ. ಆಕೆಯೇನೂ Practising ಕ್ರಿಶ್ಚಿಯನ್ ಆಗಿರಲಿಲ್ಲ. ನಾಸ್ತಿಕಳಾಗಿದ್ದಳು. ಜೊತೆಗೆ ಆಕೆಯ ಎರಡನೆಯ ಗಂಡನೂ ಇಸ್ಲಾಮ್ ಮತಕ್ಕೆ ಸೇರಿದ್ದ ಇಂಡೋನೇಷ್ಯಾದ ವ್ಯಕ್ತಿ. ಅವರಿಬ್ಬರಿಗೂ ಇಂಡೋನೇಷ್ಯಾದಲ್ಲಿ ಹುಟ್ಟಿದ ಹೆಣ್ಣುಮಗುವಿನ ಹೆಸರು ಮಾಯಾ. ಮಾಯಾ ಈಗ ಬೌದ್ಧ ಮತಾನುಯಾಯಿ.
ಒಬಾಮನ ತಾಯಿ ನಾಸ್ತಿಕಳಾಗಿದ್ದರೂ ತನ್ನ ಮಕ್ಕಳಿಗೆ ಬೈಬಲ್, ಹಿಂದೂ ಉಪನಿಷತ್‌ಗಳು, ಬೌದ್ಧ ಸೂಕ್ತಿ ಮುಂತಾದ ಹಲವಾರು ಮತಗಳ ಧಾರ್ಮಿಕ ಗ್ರಂಧಗಳನ್ನು ಓದಲು ಪ್ರೇರೇಪಿಸುತ್ತಿದ್ದಳಂತೆ. ಇಂತಹ ಅಸಂಪ್ರದಾಯಿಕ ವಾತಾವರಣದಲ್ಲಿ ಬೆಳೆದ ಬರಾಕ್ ಒಬಾಮ್ ತನ್ನ ಮೊಟ್ಟಮೊದಲ ಕೆಲಸ ಆರಂಭಿಸಿದ್ದು ಕಪ್ಪು ಕ್ರಿಶ್ಚಿಯನ್ನರ ಚರ್ಚುಗಳು ನಡೆಸುತ್ತಿದ್ದ ಸಂಘಟನೆಗೆ ಕೆಲಸ ಮಾಡುವುದರ ಮೂಲಕ. ಬಹುಶಃ ಅಲ್ಲಿಂದಲೆ ಆತನಿಗೆ ಕ್ರಿಶ್ಚಿಯನ್ ಸಂಪ್ರದಾಯಗಳ ಪರಿಚಯ ಆಗಿದ್ದಿರಬೇಕು. ಇಂತಹ ವೈವಿಧ್ಯಮಯ ಹಿನ್ನೆಲೆ ಇರುವುದರಿಂದಲೆ ಒಬಾಮ ಇವತ್ತು ಅಮೆರಿಕದ ಜನರಿಗೆ ತನ್ನ ಕ್ರಿಶ್ಚಿಯನ್ ಮತ ಮತ್ತು ಆ ಮತಕ್ಕೆ ತನ್ನ ನಿಷ್ಠೆಯನ್ನು ಆಗಾಗ ಗಟ್ಟಿಯಾಗಿ ಹೇಳುತ್ತಿರಬೇಕು. ಹಾಗೆ ಹೇಳಿದರೆ ಮಾತ್ರ ಆತನಿಗೆ ಅಮೆರಿಕದ ಅಧ್ಯಕ್ಷನಾಗುವ ಅವಕಾಶ ಇದೆ. ಇಲ್ಲಿ ಸ್ವಲ್ಪ ಹೆಚ್ಚುಕಮ್ಮಿ ಆದರೂ ಅದು ಉಲ್ಟಾ ಹೊಡೆಯುವ ಸಂಭವವೇ ಹೆಚ್ಚು. ಆತನ ಅಪ್ಪನ ಹಿನ್ನೆಲೆಯಿಂದಾಗಿ ಈಗಾಗಲೆ ಆತನನ್ನು ಇಸ್ಲಾಮಿಗೆ ಮತ್ತು ಭಯೋತ್ಪಾದಕತೆಗೆ ಗಂಟು ಹಾಕುವ ಕೆಲಸ ಹಲವಾರು ಬಾರಿ ನಡೆದಿದೆ. ಕೆಲವು ಮತೀಯ ಬಲಪಂಥೀಯ ಮೀಡಿಯಾದ ಆಕ್ಟಿವಿಸ್ಟ್‌ಗಳು ಅದನ್ನು ಈಗಲೂ ಪ್ರಯತ್ನಿಸುತ್ತಿದ್ದಾರೆ.
ಹಾಗಾಗಿಯೆ ಈ ವಿಷಯದಲ್ಲಿ ಒಬಾಮ ಬಹಳ ಚಾಲಾಕಿತನದಿಂದ ನಡೆದುಕೊಳ್ಳುತ್ತಿದ್ದಾನೆ. ಆತನ ಚಾಲಾಕಿತನಕ್ಕೆ ಆತ ತನ್ನ ತಾಯಿಯ ಬಗ್ಗೆ ಹೇಳಿರುವ ಮಾತುಗಳೆ ಸಾಕ್ಷಿ. ಆತನ ತಾಯಿಯ ಸಹಪಾಠಿಗಳ ಪ್ರಕಾರ ಆಕೆ ಪಕ್ಕಾ ನಾಸ್ತಿಕಳಾಗಿದ್ದಳು. ಆಕೆಯ ಮಗಳಾದ ಮಾಯಾ (ಒಬಾಮನ ಅರ್ಧ-ತಂಗಿ) ತನ್ನ ತಾಯಿ ನಾಸ್ತಿಕಳಾಗಿದ್ದಳು ಅನ್ನುವುದಕ್ಕಿಂತ ಯಾವುದನ್ನೂ ನಿರಾಕರಿಸದ ಅಜ್ಞೇಯತಾವಾದಿ (ಅಗ್ನಾಸ್ಟಿಕ್) ಆಗಿದ್ದಳು ಎನ್ನುತ್ತಾಳೆ. ಆದರೆ ಒಬಾಮ ತನ್ನ ಕ್ರೈಸ್ತ ಮತ ನಿಷ್ಠೆಯನ್ನು ಸಾಬೀತು ಮಾಡಲು ಹೇಳುವುದೇ ಬೇರೆ. "ನನ್ನ ತಾಯಿ ಕ್ಯಾನ್ಸಾಸ್ ರಾಜ್ಯದ ಕ್ರೈಸ್ತ ಹೆಂಗಸು. ನನ್ನನ್ನು ಬೆಳೆಸಿದ್ದು ನನ್ನಮ್ಮ. ಹಾಗಾಗಿಯೆ ನಾನು ಮೊದಲಿನಿಂದಲೂ ಕ್ರೈಸ್ತನೆ." ಎನ್ನುತ್ತಾನೆ! ಆತ ಈಗ ಪ್ರಾಕ್ಟಿಸಿಂಗ್ ಕ್ರಿಶ್ಚಿಯನ್ ಆಗಿದ್ದರೂ ಮೇಲಿನ ಮಾತು ಆತ ರಾಜಕೀಯ ಕಾರಣಗಳಿಗಾಗಿ, ಅಂದರೆ ಬಹುಸಂಖ್ಯಾತ ಕ್ರಿಶ್ಚಿಯನ್ನರನ್ನು ತೃಪ್ತಿ ಪಡಿಸಲು ಹೇಳುವ ಮಾತು ಎಂದು ಸಂದೇಹಿಸಿದರೆ ತಪ್ಪೇನೂ ಆಗಲಾರದು.
ಇನ್ನು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜಾನ್ ಮೆಕೈನ್ ಸಹ ಹೇಳಿಕೊಳ್ಳುವಂತಹ ಕಟ್ಟರ್ ಕ್ರಿಶ್ಚಿಯನ್ ಆಗಲಿ, ಏಕಪತ್ನಿವ್ರತಸ್ಥನಾಗಲಿ ಅಲ್ಲ. ಯುದ್ಧಖೈದಿಯಾಗಿ ಬಿಡುಗಡೆಯಾದ ಮೇಲೆ ಆತ ತನ್ನ ಮೊದಲ ಹೆಂಡತಿಯಿದ್ದರೂ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದ. ಅದು ಮದುವೆಯ ಮೇಲೆ ಪರಿಣಾಮ ಬೀರಿತು. ನಂತರ ತನ್ನ ಈಗಿನ ಹೆಂಡತಿಯನ್ನು (ಆತನಿಗಿಂತ 18 ವರ್ಷ ಚಿಕ್ಕವಳು) ಡೇಟ್ ಮಾಡಲು ಆರಂಭಿಸಿದ. ಆಕೆಯನ್ನು ಮದುವೆಯಾಗಲೆಂದೆ ತನ್ನ ಮೊದಲ ಹೆಂಡತಿಯಿಂದ ಆತ ವಿಚ್ಚೇದನ ಪಡೆದದ್ದು. ಜೊತೆಗೆ ಜಾನ್ ಮೆಕೈನ್ ತನ್ನ ರಿಪಬ್ಲಿಕನ್ ಪಕ್ಷದ ಬಲಪಂಥೀಯ ಕ್ರಿಶ್ಚಿಯನ್ನರೊಡನೆ ಹಲವಾರು ವಿಷಯಗಳಿಗೆ ಸಹಮತ ಹೊಂದಿಲ್ಲ. ಇನ್ನು ಅಮೆರಿಕದ ಸಾಮಾನ್ಯ ಜನತೆ ವಿಚ್ಚೇದನಗೊಂಡಿರುವ ಅಧ್ಯಕ್ಷನನ್ನು ಬೆಂಬಲಿಸಲು ಹಿಂದೆಮುಂದೆ ನೋಡುತ್ತಾರೆ. ಕಳೆದ ಬಾರಿ ಜಾನ್ ಕೆರ್ರಿಗೆ ಅದೂ ಒಂದು ನೆಗೆಟಿವ್ ಅಂಶವಾಗಿತ್ತು. ಇದೆಲ್ಲದರ ಜೊತೆಗೆ, ಜಾನ್ ಮೆಕೈನ್ ಒಂದು ರೀತಿ ನಮ್ಮ ವಾಜಪೇಯಿ ಇದ್ದ ಹಾಗೆ. ತನ್ನ ಪಕ್ಷದ "ಸಂಘ ಪರಿವಾರ"ದ ಪೂರ್ಣಮನಸ್ಸಿನ ಬೆಂಬಲ ಈತನಿಗೆ ಇಲ್ಲ.
ಇಲ್ಲಿಯ ಕ್ರಿಶ್ಚಿಯನ್ ಸಂಘ ಪರಿವಾರದವರು ಗರ್ಭಿಣಿಯಾದ ಹೆಂಗಸು ಯಾವುದೇ ಕಾರಣಕ್ಕೂ ಗರ್ಭಪಾತ ಮಾಡಿಸಬಾರದು ಎನ್ನುತ್ತಾರೆ. ಅಪ್ರಾಪ್ತ ವಯಸ್ಸಿನ ಹುಡುಗಿ ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿ ಆಗಿಬಿಟ್ಟು ಆಕೆಗೆ ಗರ್ಭಪಾತ ಇಷ್ಟವಿದ್ದರೂ ಅಂತಹ ಗರ್ಭಪಾತಕ್ಕೂ ಅವಕಾಶ ಇರಬಾರದು ಎಂದು ವಾದಿಸುತ್ತಾರೆ ಅವರು. ಆದರೆ ಅದಕ್ಕೆ ಮೆಕೈನ್‌ನ ಪೂರ್ಣ ಬೆಂಬಲ ಇರಲಿಲ್ಲ. ಗರ್ಭವನ್ನು ಉಳಿಸಿಕೊಳ್ಳುವ ಇಲ್ಲವೆ ಇಳಿಸಿಕೊಳ್ಳುವ ಆಯ್ಕೆ ಹೆಂಗಸಿಗೆ ಇರಬೇಕು ಎಂಬುದರ ಪರ ಇರುವ ಡೆಮಾಕ್ರಾಟರಂತೆ ಜಾನ್ ಮೆಕೈನ್ ಸಹ. ಹಲವಾರು ಕಾಯಿಲೆಗಳಿಗೆ ಮದ್ದು ಹುಡುಕಬಹುದು ಎಂದು ಭಾವಿಸುವ ಭ್ರೂಣದ ಜೀವಕೋಶಗಳ ಸಂಶೋಧನೆ (embryonic stem cell research) ಸಹ ಚರ್ಚು ಪರಿವಾರದವರಿಗೆ ಇಷ್ಟವಾಗದ ವಿಷಯ. ಆದರೆ ಇದಕ್ಕೆ ಡೆಮಾಕ್ರಾಟರ ಮತ್ತು ಉದಾರವಾದಿಗಳ ಬೆಂಬಲ ಇದೆ. ಜಾನ್ ಮೆಕೈನ್‌ನದೂ ಸಹ.
ಈ ಚುನಾವಣೆಯ ಸಮಯದಲ್ಲಿ ತನಗೆ ಸಿಗದೆ ಹೋಗುತ್ತಿದ್ದ ಈ ಸಂಘ ಪರಿವಾರದ ಬೆಂಬಲ ಪಡೆಯಲು ಮೆಕೈನ್ ಮಾಡಿದ ಕೆಲಸ ಸ್ಯಾರಾ ಪೇಲಿನ್ ಎಂಬ ಐದು ಮಕ್ಕಳ ತಾಯಿಯನ್ನು ತನ್ನ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿಕೊಂಡಿದ್ದು. ಇದು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಯತ್ನ. ಒಂದು ಹಿಲ್ಲರಿ ಕ್ಲಿಂಟನ್‌ಳನ್ನು ಬೆಂಬಲಿಸುತ್ತಿದ್ದ ಸ್ತ್ರೀಯರನ್ನು ಸೆಳೆಯುವ ಪ್ರಯತ್ನವಾದರೆ ಮತ್ತೊಂದು ಸಂಪ್ರದಾಯವಾದಿಗಳನ್ನು ಸೆಳೆಯುವುದು. ಈಕೆಯ ಎರಡು ವೈಯಕ್ತಿಕ ಸಂಗತಿಗಳಂತೂ ಸಂಪ್ರದಾಯವಾದಿ, pro-life ಕ್ರೈಸ್ತ ಮೂಲಭೂತವಾದಿಗಳಲ್ಲಿ ರೋಮಾಂಚನ ಹುಟ್ಟಿಸಿಬಿಟ್ಟಿದೆ.
44 ವರ್ಷದ ಈ ಅಲಾಸ್ಕಾ ರಾಜ್ಯಪಾಲೆಗೆ ಕೇವಲ ಐದು ತಿಂಗಳ ಹಿಂದೆ ಗಂಡು ಮಗುವೊಂದು ಹುಟ್ಟಿತು. ಆ ಮಗು ಗರ್ಭದಲ್ಲಿದ್ದಾಗಲೆ ಅದಕ್ಕೆ ಡೌನ್ ಸಿಂಡ್ರೋಮ್ ಕಾಯಿಲೆ ಇದೆ ಎನ್ನುವುದು ಗೊತ್ತಾಗಿತ್ತು. ಡೌನ್ ಸಿಂಡ್ರೋಮ್ ಒಂದು ರೀತಿಯ ಮಾನಸಿಕ ಮತ್ತು ದೈಹಿಕ ವಿಕಲತೆಗಳ ಕಾಯಿಲೆ. ಸಾಮಾನ್ಯವಾಗಿ ನಲವತ್ತಕ್ಕಿಂತ ಹೆಚ್ಚಿನ ವಯಸ್ಸಾದ ಹೆಂಗಸರಿಗೆ ಹುಟ್ಟುವ ಮಕ್ಕಳಿಗೆ ಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚು. ಹುಟ್ಟಲಿರುವ ಮಗುವಿಗೆ ಆ ಕಾಯಿಲೆ ಇದೆಯೆ ಇಲ್ಲವೆ ಎನ್ನುವುದನ್ನು ಪರೀಕ್ಷೆಗಳ ಮೂಲಕ ತಿಳಿದುಕೊಳ್ಳಬಹುದು. ಅಂತಹ ಕಾಯಿಲೆ ಏನಾದರೂ ತಮಗೆ ಹುಟ್ಟಲಿರುವ ಮಗುವಿಗೆ ಇದೆ ಎಂದಾದರೆ ಗರ್ಭಪಾತ ಮಾಡಿಸಿಕೊಳ್ಳುವ ಅವಕಾಶ ಈ ದೇಶದಲ್ಲಿ ತಾಯಂದಿರಿಗೆ ಇದೆ. ಆದರೆ ಸ್ಯಾರಾ ಪೇಲಿನ್ ಗರ್ಭಪಾತ ಮಾಡಿಸಿಕೊಳ್ಳಲಿಲ್ಲ. ಆಕೆಯ ಈ ತೀರ್ಮಾನವೆ "ಜೀವ ದೇವರ ಸೃಷ್ಟಿ, ಅಮೂಲ್ಯ," ಎನ್ನುವ ಕ್ರಿಶ್ಚಿಯನ್ನರಲ್ಲಿ ರೋಮಾಂಚನ ಮೂಡಿಸಿರುವುದು. ಇದರ ಜೊತೆಗೆ ಆಕೆಯ 17 ವರ್ಷದ ಅಪ್ರಾಪ್ತ ವಯಸ್ಸಿನ ಮಗಳು ಗರ್ಭವತಿ ಆಗಿಬಿಟ್ಟಿರುವ ವಿಷಯವೂ ಆಕೆಗೆ ಅನುಕೂಲವಾಗಿ ಪರಿಣಮಿಸಿಬಿಟ್ಟಿದೆ. ತನ್ನ ಮಗಳು ಗರ್ಭಿಣಿ ಆಗಿದ್ದಾಳೆಂತಲೂ, ಆಕೆ ಗರ್ಭಪಾತ ಮಾಡಿಸಿಕೊಳ್ಳುವುದಿಲ್ಲ, ಬದಲಿಗೆ ಮಗುವಿನ ತಂದೆಯನ್ನು ಇಷ್ಟರಲ್ಲೆ ಮದುವೆಯಾಗಲಿದ್ದಾಳೆಯೆಂತಲೂ ಸ್ಯಾರಾ ಪೇಲಿನ್ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೇಲೆ ಬಹಿರಂಗ ಪಡಿಸಿದಳು. ಆಕೆಯ ಈ ಸದ್ಯದ ಸ್ಥಿತಿಯಲ್ಲಿ ಡೆಮೊಕ್ರಾಟರೇನಾದರೂ ಇದ್ದುಬಿಟ್ಟಿದ್ದರೆ ಸಂಪ್ರದಾಯವಾದಿಗಳು ಅವರನ್ನು ಇಷ್ಟೊತ್ತಿಗೆ ಮುಕ್ಕಿ ಬಿಡುತ್ತಿದ್ದರು. ಅದರೆ ಈಗ ಸ್ಯಾರಾ ಪೇಲಿನ್ ಹೇಳುವಂತೆ ಮಾಡುವವಳು, ತಮ್ಮ ನಂಬಿಕೆಗಳೆ ಅವಳವೂ ಸಹ, ಅದಕ್ಕೆ ಆಕೆಯ ಈ ತೀರ್ಮಾನಗಳೆ ಸಾಕ್ಷಿ ಎಂದು ಹೆಮ್ಮೆಯಿಂದ ಸಾರುತ್ತಿದ್ದಾರೆ!
ಅಮೆರಿಕವೆಂಬ ಮುಂದುವರೆದ ದೇಶದಲ್ಲಿ ಕೋಮುವಾದ ಮತ್ತು ಸಂಪ್ರದಾಯವಾದ ಜೀವಂತವಾಗಿರುವುದಕ್ಕೆ ಮತ್ತು ಅದು ಚುನಾವಣೆಗಳಲ್ಲಿ ಬೀರುವ ಪ್ರಭಾವಕ್ಕೆ ಇವೆಲ್ಲ ಕುರುಹುಗಳು.
ಮೀಡಿಯ ಮತ್ತು ಕೋಮುವಾದ :
ತಮಗೆ ಆಗುವ ಅನುಭವ ಹಾಗು ಹೆಚ್ಚಿನ ಹೊರಸಂಪರ್ಕದಿಂದಾಗಿ ಸಾಮಾನ್ಯವಾಗಿ ಮೀಡಿಯಾದವರು ತಮ್ಮ ಸಮಕಾಲೀನ ಸಮಾಜಕ್ಕಿಂತ ಮುಂದುವರೆದಿರುತ್ತಾರೆ. ಸ್ವಲ್ಪ ಹೆಚ್ಚಿಗೇ ಉದಾರವೂ ಪ್ರಗತಿಪರವೂ ಆಗಿರುತ್ತಾರೆ. ಆದರೆ ಎಲ್ಲ ಮೀಡಿಯಾದವರೂ ಹಾಗೆ ಅಲ್ಲ. ರೂಪರ್ಟ್ ಮುರ್ಡಾಕ್ ಎನ್ನುವ ಸಹಸ್ರಕೋಟ್ಯಾಧಿಪತಿ ನಡೆಸುವ ಫಾಕ್ಸ್ ನ್ಯೂಸ್ ಅಮೆರಿಕದ ಕ್ರೈಸ್ತ ಬಲಪಂಥೀಯರ "ಪಾಂಚಜನ್ಯ". ನಮ್ಮ ರಾಜ್ಯದ ಕೆಲವು ಮುರ್ಡಾಕ್ ಅಭಿಮಾನಿ ಪತ್ರಿಕೆಗಳಲ್ಲಿ ಕಾಣಿಸುವ ಹಿಂದೂ ಮತೀಯವಾದದಂತಹುದೆ ಮತೀಯವಾದ ಈ ಚಾನೆಲ್‌ನಲ್ಲಿ ಕಾಣಿಸುತ್ತದೆ. ತಮಗಾಗದ ಎಡಪಂಥೀಯ ಡೆಮಾಕ್ರಾಟರ ಬಗ್ಗೆ ಈ ಚಾನೆಲ್‌ನ ಆಂಕರ್‌ಗಳು ಬಳಸುವ ಭಾಷೆ ಮತ್ತು ಅವರು ಮಾಡುವ witch-hunt ಹೇಸಿಗೆ ಹುಟ್ಟಿಸುತ್ತದೆ. ಕಳೆದ ವಾರದಿಂದೀಚೆಗೆ ಈ ಚಾನೆಲ್‌ನಲ್ಲಿ ಕಾಣಿಸುವ ಕಟ್ಟರ್‌ಗಳೆಲ್ಲ ಆಡುತ್ತಿರುವ ಮಾತು, "ನಮ್ಮ ದೇಶದ ಲಿಬರಲ್ ಮೀಡಿಯ ಕಳೆದ ಒಂದೂವರೆ ವರ್ಷದಲ್ಲಿ ಬರಾಕ್ ಒಬಾಮನ ಬಗ್ಗೆ ಮಾಡಿರುವ ತನಿಖಾ ವರದಿಗಳಿಗಿಂತ ಹೆಚ್ಚಿನ ತನಿಖೆಯನ್ನು ಕೇವಲ ಒಂದು ವಾರದಲ್ಲೆ ಸ್ಯಾರಾ ಪೇಲಿನ್ ಬಗ್ಗೆ ಮಾಡಿಬಿಟ್ಟಿದ್ದಾರೆ. ನಾಚಿಕೆಗೇಡು. ಕೀಳುಮಟ್ಟ." ರಿಪಬ್ಲಿಕನ್ ಪಕ್ಷದ ಸಮಾವೇಶದಲ್ಲಂತೂ ಮೂಲಭೂತವಾದಿಗಳು ಮಾತುಮಾತಿಗೆ ಮಾಧ್ಯಮದವರನ್ನು ಹಂಗಿಸುತ್ತಿದ್ದರು.
ಈ ಫಾಕ್ಸ್ ನ್ಯೂಸ್ ಬಿಟ್ಟು ಇಲ್ಲಿಯ ಬಹುತೇಕ ಮುಖ್ಯವಾಹಿನಿ ಚಾನಲ್‌ಗಳು ಜಾತ್ಯತೀತತೆಗೆ ಮತ್ತು ಉದಾರವಾದಕ್ಕೆ ಒತ್ತು ಕೊಡುತ್ತವೆ. ಆ ಕಾರಣಕ್ಕಾಗಿಯೆ ಈ ಚುನಾವಣೆಯಲ್ಲಿ ಬಹುಪಾಲು ಚಾನೆಲ್‌ಗಳು ಒಬಾಮ ಪರ ಇರುವಂತೆ ಕಾಣಿಸುತ್ತವೆ. ಆದರೆ ಅವರು ಸಹ ಕೆಲವೊಮ್ಮೆ ಬಹಳ ಎಚ್ಚರಿಕೆ ತೆಗೆದುಕೊಳ್ಳುತ್ತಾರೆ. ಒಂದು ಲಿಬರಲ್ ಎನ್ನಬಹುದಾದ ಚಾನಲ್ ಸಹ ಒಬಾಮ ಇಂಡೋನೇಷ್ಯಾದಲ್ಲಿ ಒಂದೆರಡು ವರ್ಷ ಓದಿದ ಶಾಲೆಯನ್ನು ತೋರಿಸಿ, "ಇದು ಬಹುಪಾಲು ಮುಸಲ್ಮಾನರೆ ಬರುವ ಶಾಲೆ. ಆದರೆ ಇದು ಮುಲ್ಲಾಗಳು ನಡೆಸುವ ಮದರಸಾ ಅಲ್ಲ ಎನ್ನುವುದನ್ನು ನಾವು ಖಚಿತ ಪಡಿಸಿಕೊಂಡಿದ್ದೇವೆ!" ಎಂದು ವರದಿ ಮಾಡುತ್ತದೆ. ಈ ದೇಶದ ಬಹುಸಂಖ್ಯಾತ ಕ್ರೈಸ್ತರ ಹಮ್ಮಿಗೆ ಪೆಟ್ಟಾಗದಂತೆ ಅವರೂ ಎಷ್ಟು ಮುಂಜಾಗರೂಕತೆ ವಹಿಸುತ್ತಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ.
2 comments:
ಇದ್ಯಾಕೆ ಅಮೆರಿಕವನ್ನ, ಅಮೆರಿಕ ಜನರನ್ನ, ಅಮೆರಿಕಾ ರಾಜಕಾರಣವನ್ನ ಹಿಂಗೆ ಹೊತ್ಕೊಂಡು ತಿರುಗುತ್ತಾರೆ ಭಾರತೀಯರು ಅಂತ ತಿಳಿಯುತ್ತಿಲ್ಲ. ಅಮೆರಿಕ ಅಧ್ಯಕ್ಷ ಯಾರು ಅಂತ ಗೊತ್ತಿದ್ರೆ ಸಾಕು. ಅವರ ಜೀವನ ಗಾಥೆಯನ್ನೆಲ್ಲಾ ವೈಭವೀಕರಿಸುವ ಕೆಲಸವನ್ನು ನಮ್ಮ ಮಾಧ್ಯಮಗಳು ಬಿಡಬೇಕು. ಜನರಿಗೆ ಅನಗತ್ಯ ಸುದ್ದಿಗಳು ಇವೆಲ್ಲ.
ಅವನು ಅಧ್ಯಕ್ಷ ಆಗುವುದಕ್ಕಿಂತ ಮೊದಲೇ ಇಷ್ಟೇಲ್ಲಾ ಚರ್ಚೆಗಳು ಬೇಕಾ?
ಅಮೇರಿಕಾ ಹಿಂದೆ ಬೀಳುವುದನ್ನು ಇವರು ಯಾವತ್ತು ಬಿಡುತ್ತಾರೋ?
ನಿಮ್ಮ ಬರವಣಿಗೆಯನ್ನು ವಿಕ್ರಾಂತ್ ಕರ್ನಾಟಕದಲ್ಲಿ ಓದುತ್ತಿರುತ್ತೇನೆ.
ಶಿವು.ಕೆ
ಛಾಯಾಗ್ರಾಹಕರು ಬರಹಗಾರರು.
Post a Comment