Nov 30, 2008

ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...

ಕುವೆಂಪು ಮೂಢನಂಬಿಕೆಗಳ, ಜಾತೀಯತೆಯ, ಪುರೋಹಿತಶಾಯಿಯ ಕಡುವಿರೋಧಿಯಾಗಿದ್ದವರು; ಕರ್ನಾಟಕ ಕಂಡ ಮಹಾನ್ ದಾರ್ಶನಿಕರು. ನಮ್ಮಲ್ಲಿ ಯಾರಾದರೂ ಇಂತಹ ವಿಷಯಗಳ ಬಗೆಗೆ ತಮ್ಮ ವಿರೋಧ ವ್ಯಕ್ತಪಡಿಸಿದರೆ ತಕ್ಷಣವೆ ಆತ ಹಿಂದೂವಿರೋಧಿ ಅಥವ ಬ್ರಾಹ್ಮಣವಿರೋಧಿ ಎಂದು ಬ್ರ್ಯಾಂಡ್ ಮಾಡುವ ದುಷ್ಟಪರಂಪರೆ ಒಂದಿದೆ. ಕುವೆಂಪುರವರ ಬಗ್ಗೆಯೂ ಬ್ರಾಹ್ಮಣವಿರೋಧಿ ಎಂಬ ಆರೋಪವಿತ್ತು. ಈ ವಿಚಾರದಲ್ಲಿ ಕುವೆಂಪುರವರ ಅಭಿಪ್ರಾಯ ಏನಿತ್ತು ಎನ್ನುವುದಕ್ಕೆ ನೀವು ವಿಚಾರಮಂಟಪ.ನೆಟ್‌ ನಲ್ಲಿರುವ ಅವರ "ವಿಚಾರ ಕ್ರಾಂತಿಗೆ ಆಹ್ವಾನ"ದ ಲೇಖನಗಳನ್ನು ನೋಡಬಹುದು. ಅದರಲ್ಲಿ ತಾವು ಪೂಜಿಸುವ ಮತ್ತು ಗೌರವಿಸುವ ಇಬ್ಬರು ಮಹಾನ್ ವ್ಯಕ್ತಿಗಳು ಬ್ರಾಹ್ಮಣರಾಗಿದ್ದ ರಾಮಕೃಷ್ಣ ಪರಮಹಂಸರು ಮತ್ತು ಟಿ.ಎಸ್. ವೆಂಕಣ್ಣಯ್ಯನವರು ಎಂದು ಕುವೆಂಪು ಹೇಳುತ್ತಾರೆ.

ಟಿ.ಎಸ್. ವೆಂಕಣ್ಣಯ್ಯನವರು ಒಮ್ಮೆ ತಮ್ಮನಿಗೆ (ತ.ಸು. ಶಾಮರಾಯರಿಗೆ) ಹೇಳುತ್ತಾರಂತೆ:

"ಯಾರು ಪುಟ್ಟಪ್ಪನನ್ನು ಹಳಿಯುತ್ತಾರೋ ಅವರೆಲ್ಲ ಒಂದಲ್ಲ ಒಂದು ದಿನ ಅವರ ಸೇವಕರಾಗುತ್ತಾರೆ. ಪುಟ್ಟಪ್ಪ ಬಹುದೊಡ್ಡ ಕವಿ ಮಾತ್ರವೇ ಅಲ್ಲ, ಪ್ರಾಚ್ಯ, ಪಾಶ್ಚಾತ್ಯ ಮಹಾಗ್ರಂಥಗಳೆಲ್ಲವನ್ನೂ ಅರಗಿಸಿಕೊಡಿರುವ ಪ್ರತಿಭಾಶಾಲಿ. ಆತನ ಮುಂದೆ ಉಳಿದವರೆಲ್ಲರನ್ನು ಪುಟಕ್ಕೆ ಹಾಕಬೇಕು. Puttappa at his best excells all the other Kannada poets, whether ancient or modern." - ("ನಮನ"-ಪುಟ 110)
ತಮ್ಮ ಇಂತಹ ಗುರುಗಳ ಬಗ್ಗೆ ಕುವೆಂಪುರವರಿಗೆ ಇದ್ದ ಭಕ್ತಿ ಮತ್ತು ಗೌರವಗಳನ್ನು ಪ್ರಭುಶಂಕರರು "ಹೀಗಿದ್ದರು ಕುವೆಂಪು" ಲೇಖನದಲ್ಲಿ ಹೀಗೆ ವರ್ಣಿಸುತ್ತಾರೆ:
"(ಕುವೆಂಪು) ಅವರಿಗೆ ಅತ್ಯಂತ ಪ್ರಿಯರಾಗಿದ್ದವರು, ಗೌರವಕ್ಕೆ ಪಾತ್ರರಾಗಿದ್ದವರು, ಅವರನ್ನು ಆಳವಾಗಿ ಪ್ರೀತಿಸಿ, ಅವರಿಂದ ಭಕ್ತಿ ರೂಪದ ಪ್ರೀತಿಯನ್ನು ಪಡೆದಿದ್ದವರು ಅವರ ಗುರುಗಳಾದ ದಿವಂಗತ ಟಿ.ಎಸ್. ವೆಂಕಣ್ಣಯ್ಯನವರು. ತಮ್ಮ ಮಹಾಕಾವ್ಯವಾದ "ಶ್ರೀ ರಾಮಾಯಣ ದರ್ಶನಂ" ಕೃತಿಯನ್ನು ಕುವೆಂಪು ಆ ಗುರುವಿಗೆ ಅರ್ಪಿಸಿದ್ದಾರೆ. ನಾವು ಯಾವಾಗಲೇ ಆಗಲಿ ವೆಂಕಣ್ಣಯ್ಯನವರ ವಿಷಯ ಪ್ರಸ್ತಾಪಿಸಿದರೆ ಕುವೆಂಪು ತಮ್ಮ ಗುರುಗಳ ಗುಣಗಾನ ಮಡುತ್ತಿದ್ದರು. ಮಾತನಾಡುತ್ತ ಆಡುತ್ತ ಅವರ ಧ್ವನಿ ಭಾರವಾಗುತ್ತಿತ್ತು. ಗಂಟಲು ಕಟ್ಟುತ್ತಿತ್ತು. ಅನಂತರ ಕಣ್ಣು ನೀರಾಡುತ್ತಿತ್ತು. ಕಂಬನಿಗಳು ಉರುಳುತ್ತಿದ್ದುದೂ ಉಂಟು. ಮುಂದೆ ಮಾತು ನಿಂತು ಹೋಗುತ್ತಿತ್ತು. ಬಹಳ ಕಾಲ ಮೌನ. ತಮ್ಮ ಗುರುಗಳೊಡನೆ ಕಳೆದ ಕಾಲವನ್ನು ಮನಸ್ಸಿನಲ್ಲಿ ಮತ್ತೆ ಬಾಳುತ್ತಿದ್ದರೇನೋ." ("ನಮನ"-ಪುಟ 56)
ಟಿ.ಎಸ್. ವೆಂಕಣ್ಣಯ್ಯನವರು ಕುವೆಂಪುರವರ ಗುರುಗಳಾದರೆ ವೆಂಕಣ್ಣಯ್ಯನವರ ತಮ್ಮ ಟಿ.ಎಸ್. ಶಾಮರಾಯರಿಗೆ ಕುವೆಂಪು ಗುರುಗಳಾಗಿದ್ದವರು. ಹೆಚ್ಚುಕಮ್ಮಿ ಕುವೆಂಪುರವರ ವಯಸ್ಸಿನವರೇ ಆಗಿದ್ದ ತ.ಸು. ಶಾಮರಾಯರು ಮನೆಯಲ್ಲಿನ ಬಡತನದ ಕಾರಣವಾಗಿ ಒಂದಷ್ಟು ದಿನ ವಿದ್ಯಾಭ್ಯಾಸ, ಮತ್ತೊಂದಷ್ಟು ವರ್ಷ ದುಡಿಮೆ, ಮತ್ತೆ ವಿದ್ಯಾಭ್ಯಾಸ ಮುಂದುವರಿಕೆ, ಹೀಗೆ ಮಾಡಿದವರು. ಈ ರೀತಿಯಲ್ಲಿ ಪದವಿ ಓದುವಾಗ ಕುವೆಂಪುರವರ ಶಿಷ್ಯರಾದವರು. ಡಾ. ಪ್ರಭುಶಂಕರರು ಕುವೆಂಪುರವರಿಗೆ ಹತ್ತಿರವಾಗಿದ್ದಂತೆ ಶಾಮರಾಯರಿಗೂ ಹತ್ತಿರವಾಗಿದ್ದರು. ಅವರು ಶಾಮರಾಯರ ಬಗ್ಗೆ ಬರೆದಿರುವ "ಗುರುಬಂಧು ತ.ಸು. ಶಾಮರಾಯರು" ಲೇಖನದಲ್ಲಿ ತಳುಕಿನ ಅಣ್ಣತಮ್ಮಂದಿರ ಜಾತ್ಯತೀತತೆಯ ಬಗ್ಗೆ ಹೀಗೆ ಬರೆಯುತ್ತಾರೆ:
"ಮುಂದೆ ಅನೇಕ ವರ್ಷಗಳ ಕಾಲ ನಾನು ಶಾಮರಾಯರ ನಿಕಟವರ್ತಿಯಾಗಿದ್ದೆ. ಆದ್ದರಿಂದ ಅವರ ಒಂದು ಸಿದ್ಧಿಯನ್ನು ನಾನು ನಿರ್ಭಯವಾಗಿ ಘೋಷಿಸಬಲ್ಲೆ. ಅವರು ಹದಿನಾರಾಣೆ ಅಥವಾ ನೂರಕ್ಕೆ ನೂರು ಜಾತ್ಯತೀತ ವ್ಯಕ್ತಿ. ಶಾಮರಾಯರು ದೇವರ ಪೂಜೆ, ಪಾರಾಯಣ ಮುಂತಾದವುಗಳನ್ನೆಲ್ಲ ಕ್ರಮಬದ್ಧವಾಗಿ, ಮನಃಪೂರ್ವಕವಾಗಿಯೇ ಆಚರಿಸುತ್ತಿದ್ದರು. ಅಂತಹ ಹಿನ್ನೆಲೆಯಿದ್ದವರು ಹೀಗೆ ಜಾತಿ ಭಾವನೆಯಿಂದ ಮುಕ್ತರಾದದ್ದು ಹೇಗೆ ಎಂಬುದನ್ನು ಕುರಿತು ಯೋಚಿಸುತ್ತಾ ಅವರ ಅಣ್ಣಂದಿರಾದ ತಳುಕಿನ ವೆಂಕಣ್ಣಯ್ಯನವರ ಪ್ರಭಾವ ಇದಕ್ಕೆ ಕಾರಣವಾಗಿರಲೂ ಬಹುದು ಎಂದುಕೊಂಡಿದ್ದೆ. ಒಂದು ದಿನ ಶಾಮರಾಯರೊಡನೆ ಬೇರೆ ಯಾರದ್ದೋ ವಿಷಯ ಮಾತನಾಡುತ್ತಿರಬೇಕಾದರೆ ಶಾಮರಾಯರು ವೆಂಕಣ್ಣಯ್ಯನವರ ಜೀವನದ ಒಂದು ಘಟನೆಯನ್ನು ನಿರೂಪಿಸಿದರು.

ಒಂದು ದಿನ ವೆಂಕಣ್ಣಯ್ಯನವರು ದೇವರ ಪೂಜೆ ಮಡುತ್ತಿದ್ದರು. ಹಾಗೆ ಮಾಡುವಾಗ ಎಂದಿನಂತೆ ಮುಗುಟ ಉಟ್ಟುಕೊಂಡಿದ್ದರು. ಅಷ್ಟರಲ್ಲಿ ಉಪಾಧ್ಯಾಯರೊಬ್ಬರು ಅವರನ್ನು ಕಾಣಲು ಬಂದರು. ಆಗ ಅಲ್ಲಿ ಶಾಮರಾಯರೂ ಅವರ ತಮ್ಮ ಹನುಮಂತರಾಯರೂ ಇದ್ದರು. ಶಾಮರಾಯರು ದೇವರ ಮನೆಗೆ ಹೋಗಿ ವೆಂಕಣ್ಣಯ್ಯನವರಿಗೆ ಯಾರೋ ಬಂದಿದ್ದಾರೆ ಎಂದು ತಿಳಿಸಿದರು. ವೆಂಕಣ್ಣಯ್ಯನವರು ಹೊರಕ್ಕೆ ಬಂದರು. ಬಂದವರು ಒಬ್ಬ ಮೇಷ್ಟ್ರು. ಅವರು ವೆಂಕಣ್ಣಯ್ಯನವರಿಗೆ ಕೈಮುಗಿದು ತಮ್ಮ ಅಹವಾಲನ್ನು ಹೇಳಿಕೊಂಡರು. ಅದರ ಸಾರಾಂಶ ಇಷ್ಟು: ಬಂದವರು ಬಡವರು, ಬಹುಶಃ ಮಿಡ್ಲ್ ಸ್ಕೂಲ್ ಅಧ್ಯಾಪಕರು. ತುಂಬ ಕಷ್ಟದಲ್ಲಿದ್ದಾರೆ. ಒಂದು ಪುಸ್ತಕ ಬರೆದಿದ್ದಾರೆ. ಅದನ್ನು ಪಠ್ಯ ಮಾಡಿಸಿದರೆ ತುಂಬ ತುಂಬ ಸಹಾಯವಾಗುತ್ತದೆ. ವೆಂಕಣ್ಣಯ್ಯನವರು ಬಂದವರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡರು. ಕೊನೆಗೆ ಹೇಳಿದರು: "ಆಯಿತು, ಇಷ್ಟೆಲ್ಲ ಹೇಳಿದ್ದೀರಿ. ನಾನು ಖಂಡಿತವಾಗಿಯೂ ನಿಮಗೆ ಪ್ರಯೋಜನವಾಗುವಂತೆ ಮಾಡಲು ಪ್ರಯತ್ನಿಸುತ್ತೇನೆ. ಧೈರ್ಯವಾಗಿರಿ. ಬದುಕಿನಲ್ಲಿ ಕಷ್ಟಗಳು ಬರುತ್ತವೆ. ಅವನ್ನು ಎದುರಿಸದೆ ಬೇರೆ ಏನಿದೆ ದಾರಿ?" ಹೀಗೆ ಹೇಳಿ ಅವರ ಬೆನ್ನ ಮೇಲೆ ಕೈಯಾಡಿಸಿ ಕಳುಹಿಸಿಕೊಟ್ಟರು. ಹೊರಟವರ ಮುಖದಲ್ಲಿ ಧನ್ಯತಾಭಾವ ಮನೆಮಾಡಿತ್ತು.

ವೆಂಕಣ್ಣಯ್ಯನವರು ಇನ್ಣೇನು ಮತ್ತೆ ದೇವರ ಮನೆಯೊಳಕ್ಕೆ ಕಾಲಿಡಬೇಕು, ಅಷ್ಟರಲ್ಲಿ ಶಾಮರಾಯರು ಅಣ್ಣನನ್ನು ತಡೆದರು. ವೆಂಕಣ್ಣಯ್ಯನವರು 'ಏನು?' ಎಂಬರ್ಥದಲ್ಲಿ ತಮ್ಮನ ಕಡೆ ದೃಷ್ಟಿ ಹಾಯಿಸಿದರು. ಶಾಮರಾಯರು ಹೇಳಿದರು: 'ಈಗ ಬಂದುಹೋದರಲ್ಲ ಅವರು ಅಸ್ಪೃಶ್ಯರು'. ವೆಂಕಣ್ಣಯ್ಯನವರು ಕೇಳಿದರು, "ಆದರೇನಾಯಿತು?" 'ಅಲ್ಲ, ಅವರನ್ನು ಮುಟ್ಟಿ ದೇವರಪೂಜೆಗೆ ಹೋಗುತ್ತಿದ್ದೀರಲ್ಲ?' ವೆಂಕಣ್ಣಯ್ಯನವರು ತುಂಬ ಎತ್ತರದ ಆಳು. ಅವರದೇ ವಿಶಿಷ್ಟವಾದ ಶೈಲಿಯಲ್ಲಿ ನಿಂತು ಕತ್ತುಕೊಂಕಿಸಿ ತಮ್ಮ ತಮ್ಮಂದಿರ ಮೇಲೆ ಅನುಕಂಪೆಯ ದೃಷ್ಟಿ ಬೀರಿ ಹೇಳಿದ್ದು ಇಷ್ಟೇ: "ಅಜ್ಞಾನಿಗಳು, ಆಜ್ಞಾನಿಗಳು." ಇನ್ನೊಂದು ಮಾತನ್ನೂ ಆಡದೆ ದೇವರ ಮನೆಯನ್ನು ಹೊಕ್ಕು ಅವರು ಪೂಜೆಯನ್ನು ಮುಂದುವರೆಸಿದರು." ("ನಮನ" -ಪುಟ 102)
ಶಾಮರಾಯರ ಹೃದಯವೈಶಾಲ್ಯ ಮತ್ತು ಶಿಷ್ಯರನ್ನು ಎಲ್ಲಾ ರೀತಿಯಿಂದಲೂ Mentor ಮಾಡುತ್ತಿದ್ದ ರೀತಿಯನ್ನು ನಾವು ಅದೇ ಲೇಖನದ ಇನ್ನೊಂದು ಕಡೆ ನೋಡಬಹುದು.
"ಶಾಮರಾಯರ ಅಚ್ಚುಮೆಚ್ಚಿನ ಶಿಷ್ಯ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು. ಶಾಮರಾಯರು ಅವರನ್ನು ಗುರುತಿಸಿದ್ದು ಒಂದು ಸಂಕಟದ ಸಮಯದಲ್ಲೇ. ಬಡತನದಿಂದ ಈತ ಬೆಂಡಾಗಿದ್ದಾನೆ, ಊಟಕ್ಕೂ ತೊಂದರೆಯಾಗಿದೆ ಎಂಬುದನ್ನು ಗುರುಗಳು ತಮ್ಮ ಸೂಕ್ಷ್ಮ ಸಂವೇದನಾ ಶಕ್ತಿಯಿಂದ ಕಂಡುಹಿಡಿದುಕೊಂಡರು. ಮೊದಲು ತಾತ್ಕಾಲಿಕ ಪರಿಹಾರ, ಮುಂದಿನದು ಆಮೇಲೆ. ಮನೆಗೆ ಕರೆದುಕೊಂಡು ಹೋಗಿ ಊಟ ಹಾಕಿದರು. ಅನಂತರ ಇವರಿಗೆ ಮೊದಲೇ ಪರಿಚಿತರಾಗಿದ್ದ ಸುತ್ತೂರು ಜಗದ್ಗುರುಗಳಾದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಬಳಿ ಶಿಷ್ಯನನ್ನು ಕರೆದುಕೊಂಡು ಹೋದರು. ಶಿವರುದ್ರಪ್ಪನವರು ವಿಷಯವನ್ನು ವಿವರಿಸಿದರು. ಸ್ವಾಮೀಜಿಯವರು ತಮಾಷೆಗೆ ಹೇಳಿದರು. "ಏನು ಶಾಮರಾಯರೇ, ನೀವು ಬ್ರಾಹ್ಮಣರು. ಒಬ್ಬ ಲಿಂಗಾಯತ ಹುಡುಗನ ಬಗ್ಗೆ ಶಿಫಾರಸ್ಸು ಮಾಡಲು ಬಂದಿದ್ದೀರಲ್ಲ!" ಮೇಷ್ಟ್ರು ಅಷ್ಟಕ್ಕೆ ಕೆರಳಿದರು: "ಎಲ್ಲ ವಿದ್ಯಾರ್ಥಿಗಳೂ ನನ್ನ ಮಕ್ಕಳು. ಅವರಿಗೆ ಜಾತಿ ಗೀತಿ ಇಲ್ಲ." ಸ್ವಾಮಿಗಳು ನಕ್ಕು ಮೇಷ್ಟ್ರನ್ನು ಸಮಾಧಾನ ಪಡಿಸಿದರು. ಶಿವರುದ್ರಪ್ಪನವರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ಕೊಟ್ಟರು.

ಈ ಘಟನೆ ನಡೆದದ್ದು ಅರವತ್ತು ವರ್ಷಗಳ ಹಿಂದೆ, ಜಾತಿನೀತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಕಾಲದಲ್ಲಿ. ಆಗಲೇ ಶಾಮರಾಯರು ನಮ್ಮ ಕಣ್ಣಲ್ಲಿ ನೀತಿಗೊಮ್ಮಟರಾಗಿ ಕಾಣುತ್ತಿದ್ದುದ್ದಕ್ಕೆ ಕಾರಣ ಅವರು ಜಾತೀಯತೆಯನ್ನು ಮೀರಿ ನಿಂತದ್ದು." ("ನಮನ" -ಪುಟ 99)
ಇದೇ ಶಾಮರಾರು ತಮ್ಮ "ಜಾತಿಯಲ್ಲದ" ಶಿಷ್ಯ ಪ್ರಭುಶಂಕರರನ್ನು ಒಮ್ಮೆ ನಡೆಸಿಕೊಂಡ ರೀತಿ ನೋಡಿ:
"ಅರವತ್ತು ವರ್ಷಗಳ ಅನಂತರವೂ ನೆನೆದರೆ ಭಯವನ್ನೂ, ರೋಮಾಂಚನವನ್ನೂ, ಆಶ್ಚರ್ಯವನ್ನೂ ಉಂಟುಮಾಡುವ ಸಂಗತಿಯೊಂದು ನಡೆಯಿತು. 1947 ರ ಒಂದು ಸಂಜೆ ಶಾಮರಾಯರು ಮರುದಿನ ಬೆಳಗ್ಗೆ ಎಂಟು ಗಂಟೆಗೆ ಅವರ ಮನೆಗೆ, ಏನೂ ಆಹಾರ ಸ್ವೀಕರಿಸದೆ, ಬರುವಂತೆ ನನಗೆ ಅಪ್ಪಣೆ ಮಾಡಿದರು. ನಾನು ಹಾಗೆಯೇ ಮರುದಿನ ಬೆಳಗ್ಗೆ ಸಮಯಕ್ಕೆ ಸರಿಯಾಗಿ ಅವರ ಮನೆಗೆ ಹೋದೆ. ಅಲ್ಲಿ ನನಗೆ ಆಶ್ಚರ್ಯಕರವಾದ ದೃಶ್ಯವೊಂದು ಕಾದಿತ್ತು. ಒಂದು ಮಣೆ ಹಾಕಿ, ಅದರ ಮುಂದೆ ರಂಗೋಲಿ ಬಿಟ್ಟು, ದೀಪ ಹಚ್ಚಿಟ್ಟಿದ್ದರು. ಆ ಮಣೆಯ ಮೇಲೆ ಕೂರುವಂತೆ ಗುರುಗಳು ಹೇಳಿದರು. ಅದರ ಮುಂದೆ ಎಲೆ ಹಾಕಿ ಊಟ ಬಡಿಸಿದ್ದಾರೆ. ನಾನು ನಿಜವಾಗಿ ಮೂಕನಾದೆ. ಮುಂದಿನದನ್ನು ಬರೆಯಲು ಹನಿದುಂಬಿದ ಕಣ್ಣುಗಳು ಅವಕಾಶ ಕೊಡುತ್ತಿಲ್ಲ. ಗುರುಗಳು "ಇವತ್ತು ಸುಬ್ರಾಯನ ಷಷ್ಠಿ. ಬ್ರಾಹ್ಮಣ ವಟುವಿಗೆ ಊಟ ಹಾಕಬೇಕು ಅಂತ ಇವತ್ತಿನ ಶಾಸ್ತ್ರ. ಅದಕ್ಕೇ ನಿನ್ನನ್ನು ಕರೆದೆ, ಕೂತ್ಕೋ" ಎಂದರು. ನಾನು ತಕ್ಷಣ "ನಾನು ಬ್ರಾಹ್ಮಣ ಅಲ್ಲ" ಎಂದು ಹೇಳಿಬಿಟ್ಟೆ. ಅವರು "ನೀನು ನನ್ನ ವಿದ್ಯಾರ್ಥಿ. ಅಂದರೆ ನನ್ನ ಮಗ. ನೀನು ಬ್ರಾಹ್ಮಣ ಅಲ್ಲದಿದ್ದರೆ ಇನ್ನು ಯಾರು ಬ್ರಾಹ್ಮಣರು? ಸುಮ್ನೆ ಕುತ್ಕೋ" ಎಂದರು. ಅದು ಮುಖ್ಯವಲ್ಲ. ಅವರು ಬ್ರಾಹ್ಮಣ ಎಂದದ್ದರಿಂದ ನಾನು ಹೆಮ್ಮೆ ಪಡಲಿಲ್ಲ. ಆದರೆ ಅವರು, ಮಗುಟ ಉಟ್ಟು ಪೂಜೆಯ ವೇಷದಲ್ಲಿದ್ದವರು, ನನ್ನ ಕೈಹಿಡಿದು ಬಲವಂತವಾಗಿಯೇ ಎಂಬಂತೆ ಆ ಮಣೆಯ ಮೇಲೆ ನನ್ನನ್ನು ಕುಳ್ಳಿರಿಸಿದರು. ವಟುಪೂಜೆ ನಡೆಯಿತು. ಅಷ್ಟು ಬೆಳಗ್ಗೆ ಬೆಳಗ್ಗೆಯೇ ಅದೇ ಮಣೆಯ ಮೇಲೆ ನಾನು ಕುಳಿತಿದ್ದಂತೆಯೇ ಊಟಕ್ಕೂ ಬಡಿಸಿದರು. ಗುರುವಿನಿಂದ ಪೂಜಿತನಾದ ಶಿಷ್ಯ ನಾನಾದೆ! "ಎಲ್ಲಿಯ ಜಾತಿ, ಏನು ಕಥೆ" ಎಂದು ಅವರು ತಮ್ಮ ಅಣ್ಣ ವೆಂಕಣ್ಣಯ್ಯನವರಂತೆ ಎಷ್ಟೋ ಸಲ ಹೇಳುತ್ತಿದ್ದರು. ನುಡಿದಂತೆ ನಡೆದ ಮಹಾಂತರು ಅವರು." (ಡಾ. ಪ್ರಭುಶಂಕರರ "ನಮನ" -ಪುಟ 101)


ಪ್ರಶ್ನೆ: ಇದೆಲ್ಲ (ಈ ಬರಹ) ಈಗೇಕೆ?
ಉತ್ತರ: ತಲ್ಲಣದ ಸಮಯದಲ್ಲಿ ಸಜ್ಜನಿಕೆ ಮತ್ತು ಪ್ರೀತಿಯನ್ನು ಹುಡುಕುತ್ತಾ...

ಈ ಸರಣಿಯ ಎರಡನೆಯ ಲೇಖನ: ಈಗ ನೀವು ಓದಿದ್ದು .(?)

ಮೂರನೆಯದು: ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು

ನಾಲ್ಕನೆಯದು: ಕುವೆಂಪು ವಿರುದ್ಧ ದೇವುಡು ಪಿತೂರಿ ಮತ್ತು ಅಂತರ್ಜಾತಿ ವಿವಾಹ

1 comment:

Anonymous said...

ಮನಮುಟ್ಟುವ ಲೇಖನಕ್ಕಾಗಿ ಧನ್ಯವಾದಗಳು.
-ಬಾಲಕೃಷ್ಣ