Dec 2, 2008

ಕುವೆಂಪು ವಿರುದ್ಧ ದೇವುಡು "ಪಿತೂರಿ" ಮತ್ತು ಅಂತರ್ಜಾತಿ ವಿವಾಹ

ಡಾ. ಪ್ರಭುಶಂಕರರ "ಹೀಗಿದ್ದರು ಕುವೆಂಪು" ಲೇಖನದಲ್ಲಿನ ಈ ಕೆಳಗಿನ ಸಂದರ್ಭಕ್ಕೆ ಪೀಠಿಕೆ ಅಥವ ವಿವರಣೆ ಬೇಕಾಗಿಲ್ಲ, ಅಲ್ಲವೆ?

1967 ರ ಅಕ್ಟೋಬರ್. ಆ ವೇಳೆಗೆ ನಾನು ಕುವೆಂಪುರವರ ಮನೆಯವರಲ್ಲಿ ಒಬ್ಬನಾಗಿದ್ದೆ. ಒಂದು ಸಂಜೆ ನಾನು, ಕೆಲವೇ ವಾರಗಳಲ್ಲಿ ನನ್ನ ಪತ್ನಿಯಾಗಲಿದ್ದ ಡಾ. ಶಾಂತಾ ಅವರೊಡನೆ ಕುವೆಂಪು ಅವರ ಮನೆಗೆ ಹೋದೆ. ಶಾಂತಿಯು ಕುವೆಂಪು ಅವರ ಮಿತ್ರರಾಗಿದ್ದ ಶ್ರೀ. ಡಿ.ಆರ್. ಚನ್ನೇಗೌಡರ ಮಗಳು. ಮಗುವಾಗಿದ್ದಾಗಿನಿಂದ ಕುವೆಂಪು ದಂಪತಿ ಆಕೆಯನ್ನು ಬಲ್ಲರು. ನಾನು ಶಾಂತಿ ಕುವೆಂಪು ಅವರ ಕಾಲಿಗೆ ನಮಸ್ಕರಿಸಿ "ನಾವಿಬ್ಬರೂ ಮದುವೆ ಮಾಡಿಕೊಳ್ಳುತ್ತೇವೆ" ಎಂದೆವು. ಇಬ್ಬರದ್ದೂ ಸಾಮಾಜಿಕ ದೃಷ್ಟಿಯಿಂದ ಬೇರೆ ಬೇರೆ ಜಾತಿ. ಕುವೆಂಪು ಒಳಮನೆ ಕಡೆ ತಿರುಗಿ, ಅತ್ಯಂತ ಉತ್ತೇಜಿತರಾಗಿ ತಮ್ಮ ಶ್ರೀಮತಿಯವರನ್ನು ಕರದರು. ಶ್ರೀಮತಿ ಹೇಮಾವತಿ ತಾಯಿಯವರು, ಏನಾಯಿತೋ ಏನೋ ಎಂದು ಓಡುತ್ತಾ ಬಂದರು. ಆಗ ಕುವೆಂಪು ಉತ್ಸಾಹಿತರಾಗಿ ಎತ್ತರದ ದನಿಯಲ್ಲಿ ಹೇಳಿದರು: "ಪ್ರಭುಶಂಕರ-ಶಾಂತಿ ಮದುವೆಯಾಗುತ್ತಾರಂತೆ, ಪ್ರಭುಶಂಕರ-ಶಾಂತಿ ಮದುವೆಯಾಗುತ್ತಾರಂತೆ! ಜೈ ಗುರುದೇವ-ನಮಗೆ ತುಂಬ ಸಂತೋಷವಾಗಿದೆ." ಹೀಗೆ ಹೇಳುತ್ತಾ ಚಪ್ಪಾಳೆ ತಟ್ಟುತ್ತಾ ತಟ್ಟುತ್ತಾ ಬಹಳ ಹೊತ್ತು ಕಳೆದರು. ಹೇಮಾವತಿ ತಾಯಿಯವರು ತಮ್ಮದೇ ರೀತಿಯಲ್ಲಿ-ಮುಗುಳು ನಗೆ ನಕ್ಕು-ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಲೇ ಹೋದರು. ನಾವಿಬ್ಬರೂ ಅವರಿಗೆ ತುಂಬ ಗೊತ್ತಿದ್ದವರು, ತುಂಬ ಬೇಕಾದವರು ಎಂಬುದು ಮಾತ್ರವೇ ಅವರ ಸಂತೋಷಕ್ಕೆ ಕಾರಣವಾಗಿರಲಿಲ್ಲ. ನಾವಿಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರು ಎಂಬುದೂ ಅದಕ್ಕೆ ಕಾರಣವಾಗಿತ್ತು. ಕುವೆಂಪು ಜಾತಿ ಪದ್ಧತಿಯ ವಿರುದ್ಧ ಕೆಂಡ ಕಾರುತ್ತಿದ್ದರು. ನಾವು ಅದನ್ನು ಆಚರಿಸಿ ತೋರಿಸಿದೆವು. ("ನಮನ" - ಪುಟ 49-50)
ಈ ಕೆಳಗಿನ ಸಂದರ್ಭವಂತೂ (ದೇವುಡು ಮತ್ತು ಕುವೆಂಪು) ಕರ್ನಾಟಕದ ಕಳೆದ ಶತಮಾನದ ಪ್ರಮುಖ ಸಾಂಸ್ಕೃತಿಕ ಘಟನೆಗಳಲ್ಲಿ ಒಂದು. ನಾಡಿನ ಎಚ್ಚರವನ್ನು ಕಾಪಾಡಿಕೊಂಡ ಸಂದರ್ಭ. ಈ ವಿಷಯದಲ್ಲಿ ಟಿ.ಎಸ್. ವೆಂಕಣ್ಣಯ್ಯನವರ ಹಿರಿತನ ಮತ್ತು ಅವರು ಬಳಸಿರುವ ಭಾಷೆ ಮತ್ತು ಅದರಲ್ಲಿ ಧ್ವನಿಸಿರುವ ಕುವೆಂಪುರವರ ಸ್ಪಷ್ಟತೆ ಗಮನಿಸಿ. (ಇಲ್ಲಿ ದೇವುಡುರವರ ಬಗ್ಗೆ ಅಥವ ಈಗಲೂ ಮುಂದುವರೆದಿರುವ ಅಂತಹ ಮನಸ್ಥಿತಿಯ ಬಗ್ಗೆ ನನ್ನ ಕಟು ಅಭಿಪ್ರಾಯ ಬರೆಯಬೇಕೆಂದು ಅನ್ನಿಸುತ್ತದೆ. ಆದರೆ, ಈ ಉಲ್ಲೇಖ-ಸರಣಿಯ ಒಟ್ಟಂದಕ್ಕೆ ಅದು ಅಪಚಾರ ಮಾಡುತ್ತದೆ ಎಂದು ಸುಮ್ಮನಾಗುತ್ತೇನೆ. ಈ ಅಭಿಪ್ರಾಯವೂ ಬೇಕಾಗಿರಲಿಲ್ಲವೇನೊ? ಆದರೂ ಕೆಲವು ವಿಚಾರ ಮತ್ತು ವ್ಯಕ್ತಿಗಳೊಂದಿಗಿನ ನನ್ನ Displeasure ವ್ಯಕ್ತಪಡಿಸಲೇಬೇಕೆಂಬ ಉದ್ದೇಶಕ್ಕೆ ಬರೆದಿದ್ದೇನೆ.)
... ಕುವೆಂಪು ಒಂದು ದಿನ ನನ್ನನ್ನು ಕೇಳಿದರು: "ಕನ್ನಡ ಅಧ್ಯಾಪಕರ ಹುದ್ದೆಯೊಂದು ಖಾಲಿ ಇದೆ, ಅರ್ಹತೆ ಉಳ್ಳವರು ಅರ್ಜಿ ಹಾಕಬಹುದು ಎಂದು ಜಾಹೀರಾತು ಪ್ರಕಟವಾಗಿದೆ, ನೋಡಿದ್ದೀರಾ?" ನಾನು ನೋಡಿರಲಿಲ್ಲ. ಆದುದರಿಂದ ಕೇಳಿದೆ: "ಇಲ್ಲ. ಅದು ಎಲ್ಲಿ ಪ್ರಕಟವಾಗಿದೆ?" "ಸರ್ಕಾರದ ಗೆಜೆಟ್‍ನಲ್ಲಿ." ಆ ಕಾಲದಲ್ಲಿ ಇಂತಹ ಜಾಹೀರಾತುಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರಲಿಲ್ಲ. ಸರ್ಕಾರದ ಗೆಜೆಟ್‍ನಲ್ಲಿ ಮಾತ್ರ ಪ್ರಕಟವಾಗುತ್ತಿದ್ದವು. ನನಗೆ ಆಗ ಗೆಜೆಟ್ ಎಂಬುದೊಂದು ಇದೆ ಎಂಬುದೇ ಗೊತ್ತಿರಲಿಲ್ಲವಾಗಿ ನಾನು ಅದನ್ನು ನೋಡುವ ಸಂಭವವೇ ಇರಲಿಲ್ಲ. ಕುವೆಂಪು ಇನ್ನೂ ಏನೋ ಹೇಳಲಿದ್ದಾರೆ ಎಂದು ನಾನು ಸುಮ್ಮನೆ ನಿಂತೇ ಇದ್ದೆ. ಅವರು ಮಾತು ಮುಂದುವರೆಸಿದರು: "ನೋಡಿ, ನೀವು ಆ ಹುದ್ದೆಗೆ ಅರ್ಜಿ ಹಾಕಬೇಡಿ." ನನಗೆ ಆಶ್ಚರ್ಯವಾಯಿತು. ನಾನು ಏಕೆ ಅರ್ಜಿ ಹಾಕಕೂಡದು ಎಂದು ತಿಳಿಯಲಿಲ್ಲ. ಅವರನ್ನೇ ಕೇಳಿದೆ. ಅವರು ವಿವರಿಸಿದರು:

"ನೋಡಿ, ಈಗ ಸರ್ಕಾರಿ ಹುದ್ದೆಗಳಲ್ಲಿ (ಆಗ ಮೈಸೂರು ವಿಶ್ವವಿದ್ಯಾನಿಲಯವು ಸರ್ಕಾರದ ಒಂದು ಇಲಾಖೆಯಾಗಿತ್ತು) ಎ ವೇಕೆನ್ಸಿ, ಬಿ ವೇಕೆನ್ಸಿ ಎಂದು ಎರಡು ಭಾಗಗಳಿವೆ. ಎ ವೇಕೆನ್ಸಿಗೆ ಯಾರು ಬೇಕಾದರೂ ಅರ್ಜಿ ಹಾಕಬಹುದು. ಬಿ ವೇಕೆನ್ಸಿಗೆ ಬ್ರಾಹ್ಮಣೇತರರು ಮಾತ್ರ ಅರ್ಜಿ ಹಾಕಬಹುದು. ಒಂದು ಎ ವೇಕೆನ್ಸಿ ಭರ್ತಿಯಾದರೆ ಮುಂದೆ ಮೂರು ಹುದ್ದೆಗಳನ್ನು ಬಿ ವೇಕೆನ್ಸಿ ಎಂದು ಜಾಹೀರಾತು ಮಾಡುತ್ತಾರೆ. ಎಂದರೆ ಒಬ್ಬರು ಬ್ರಾಹ್ಮಣರಿಗೆ ಕೆಲಸ ಸಿಕ್ಕಿದರೆ ಮುಂದಿನ ಮೂರು ಬ್ರಾಹ್ಮಣೇತರರಿಗೆ ಮೀಸಲಾಗಿರುತ್ತದೆ. ಎ ವೇಕೆನ್ಸಿಗೂ ಬ್ರಾಹ್ಮಣೇತರರು ಅರ್ಜಿ ಹಾಕಬಹುದು. ಅಂಥ ಸಂದರ್ಭದಲ್ಲಿ ಬ್ರಾಹ್ಮಣ ಅಭ್ಯರ್ಥಿಗಿಂತ ಬ್ರಾಹ್ಮಣೇತರ ಅಭ್ಯರ್ಥಿ ಹೆಚ್ಚು ಪ್ರತಿಭಾಶಾಲಿಯಾಗಿದ್ದರೆ ಅವನಿಗೇ ಆ ಹುದ್ದೆ ಸಿಕ್ಕುತ್ತದೆ. ಬ್ರಾಹ್ಮಣ ಅಭ್ಯರ್ಥಿಯು ಮತ್ತೆ ಅನೇಕ ವರ್ಷಗಳ ಕಾಲ ಕಾಯಬೇಕಾಗುತ್ತದೆ." ಈ ಎ ವೇಕೆನ್ಸಿ, ಬಿ ವೇಕೆನ್ಸಿ, ಬ್ರಾಹ್ಮಣ, ಬ್ರಾಹ್ಮಣೇತರ ಯಾವ ಜಟಿಲತೆಗಳೂ ನನ್ನ ತಲೆಯನ್ನು ಪ್ರವೇಶಿಸಿರಲಿಲ್ಲ. ಇಷ್ಟಕ್ಕೂ ನನ್ನ ಗುರುಗಳು ಇದನ್ನೆಲ್ಲ ನನಗೆ ಏತಕ್ಕೆ ಹೇಳುತ್ತಿದ್ದಾರೆ ಎಂಬುದೇ ನನಗೆ ಹೊಳೆಯಲಿಲ್ಲ. ನನ್ನ ಮುಖದಲ್ಲಿ ಆ ಗೊಂದಲ ಎದ್ದು ಕಾಣುತ್ತಿತ್ತೆಂದು ತೋರುತ್ತದೆ. ಆದುದರಿಂದ ಅವರು ಮತ್ತೂ ಮುಂದುವರಿದು ಹೇಳಿದರು:

"ಶ್ರೀ ದೇ.ನ. ರಾಮು (ದೇವುಡು ನರಸಿಂಹ ಶಾಸ್ತ್ರಿಗಳ ಮಗ) ನಿಮ್ಮ ಮೇಷ್ಟ್ರು. ಅವರು 5-6 ವರ್ಷಗಳಿಂದಲೂ ಲೋಕಲ್ ಕ್ಯಾಂಡಿಡೇಟ್ (ಹಂಗಾಮಿ ಅಧ್ಯಾಪಕರು) ಆಗಿ ಕೆಲಸ ಮಾಡುತ್ತಿದ್ದಾರೆ. ಈಗ ಜಾಹೀರಾತಾಗಿರುವುದು ’ಎ’ ವೇಕೆನ್ಸಿ. ನೀವು ಅರ್ಜಿ ಹಾಕಿದರೆ, ಪ್ರತಿಭೆಯನ್ನು ಗಮನಿಸಿ ನಿಮಗೇ ಈ ಕೆಲಸ ಸಿಕ್ಕಿಬಿಡುತ್ತದೆ. ಶ್ರೀ ರಾಮು ಅವರಿಗೆ ತಪ್ಪಿಹೋಗುತ್ತದೆ. ಅವರು ಇನ್ನು ಎಷ್ಟು ವರ್ಷಗಳು ಕಾಯಂ ಹುದ್ದೆಗಾಗಿ ಕಾಯಬೇಕೋ ಗೊತ್ತಿಲ್ಲ. ಆದುದರಿಂದ ನೀವು ಅರ್ಜಿ ಹಾಕಬೇಡಿ. ಮುಂದೆ ನಿಮಗೆ ಬೇಕಾದಷ್ಟು ಅವಕಾಶಗಳು ಸಿಕ್ಕುತ್ತವೆ."

ವಿಷಯ ಅರ್ಥವಾದ ಕೂಡಲೇ ನನ್ನ ಹೃದಯ ತುಂಬಿ ಬಂತು. "ಇಲ್ಲ, ನಾನು ಅರ್ಜಿ ಹಾಕುವುದಿಲ್ಲ" ಎಂದು ಹೇಳಿ ಅವರ ಕೊಠಡಿಯಿಂದ ಹೊರಬಂದೆ. ಆ ವೇಳೆಗಾಗಲೇ ಅವರು ನನ್ನ ಆರಾಧ್ಯ ಮೂರ್ತಿಯಾಗಿದ್ದರು. ಈಗಂತೂ ಅವರ ಜಾತ್ಯತೀತ ಮನೋಭಾವವನ್ನೂ, ನ್ಯಾಯಪಕ್ಷಪಾತ ಬುದ್ಧಿಯನ್ನೂ ಕಂಡು ಅವರಲ್ಲಿ ನನಗಿದ್ದ ಗೌರವಕ್ಕೆ ಆಕಾಶವೂ ಕೂಡ ಮೇರೆ ಅಲ್ಲ ಎನ್ನಿಸಿತು. ಅದಕ್ಕೆ ಪೂರಕವಾದ ಮತ್ತೊಂದು ಸಂಗತಿಯನ್ನು ಹೇಳಿದರೆ ಈ ಸಂಗತಿ ಕೇವಲ ನನಗೆ ಸೀಮಿತವಾದುದಲ್ಲ ಎಂದು ತಿಳಿಯುವುದು ಮಾತ್ರವಲ್ಲದೆ ಕುವೆಂಪು ಏಕೆ ಸರ್ವತ್ರ ಪೂಜಿತರು ಎಂಬುದು ಅರ್ಥವಾಗುತ್ತದೆ.

ಕುವೆಂಪು ಅವರು ಒಮ್ಮೆ ಶ್ರೀರಂಗಪಟ್ಟಣದಲ್ಲಿ ಯುವಜನ ಸಮ್ಮೇಳನ ಸಂದರ್ಭದಲ್ಲಿ "ಯುವಕರು ನಿರಂಕುಶ ಮತಿಗಳಾಗಬೇಕು" ಎಂಬ ವಿಷಯವಾಗಿ ಭಾಷಣ ಮಾಡಿದರು. ಅಂದಿನ ಸಭೆಗೆ ಅಧ್ಯಕ್ಷರು ಪುಟ್ಟಪ್ಪನವರನ್ನು ಅತ್ಯಂತ ಆತ್ಮೀಯವಾಗಿ ನಡೆಸಿಕೊಳ್ಳುತ್ತಲೇ ಬಂದಿದ್ದ ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು. ಬಾಲ್ಯದಿಂದಲೇ ವೈಚಾರಿಕತೆಯ ಆರಾಧಕರಾಗಿದ್ದ ಕುವೆಂಪು ಅಂದಿನ ಉಪನ್ಯಾಸದಲ್ಲಿ, ಸಹಜವಾಗಿಯೇ, ಸಮಾಜದಲ್ಲಿ ಪ್ರಚುರವಾಗಿರುವ ಮೂಢ ನಂಬಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿದ್ದರು. ಮುಂದಾದುದನ್ನು ಕುವೆಂಪು ಅವರ ಮಾತುಗಳಲ್ಲಿಯೇ ಕೇಳಬಹುದು:

"ಪತ್ರಿಕೆಗಳಲ್ಲಿ ಕ್ರೋಧಯುಕ್ತವಾದ ಅನೇಕ ಟೀಕೆಗಳು ಬಂದು ಕೋಲಾಹಲವೆದ್ದಿತು. ದೂರು ವಿಶ್ವವಿದ್ಯಾಲಯಕ್ಕೂ ಹೋಯಿತು. ವಿಶ್ವವಿದ್ಯಾನಿಲಯ ತನಿಖೆ ನಡೆಸಲು ಇಲಾಖೆಯ ಮುಖ್ಯಸ್ಥರೂ ಪ್ರೊಫೆಸರರೂ ಆಗಿದ್ದ ವೆಂಕಣ್ಣಯ್ಯನವರನ್ನು ನೇಮಿಸಿತು. ಅವರು ಆ ಭಾಷಣದ ಪ್ರತಿ ತರಿಸಿಕೊಂಡು ಓದಿ ವಿಶ್ವವಿದ್ಯಾನಿಲಯಕ್ಕೆ ಬರೆದರಂತೆ: "ನನ್ನ ಮಗನಿಗೆ ಬುದ್ಧಿ ಹೇಳಬೇಕಾದರೆ ಇದಕ್ಕಿಂತಲೂ ಉತ್ತಮವಾಗಿ ಮತ್ತು ಸಮರ್ಥವಾಗಿ ನಾನು ಏನನ್ನೂ ಹೇಳಲಾರೆ."

ಶ್ರೀ ದೇವುಡು ನರಸಿಂಹ ಶಾಸ್ತ್ರಿಗಳ ಮಗ ದೇ.ನ. ರಾಮು ಅವರಿಗೆ, ನಾನು ಅರ್ಜಿ ಹಾಕುವುದನ್ನು ತಪ್ಪಿಸಿ ಹುದ್ದೆಯನ್ನು ಕಾಯಂ ಮಾಡಿಸಲು ಹೊರಟಿದ್ದ ಹೊತ್ತಿಗೆ ಕುವೆಂಪು ಅವರಿಗೆ, ಶ್ರೀರಂಗಪಟ್ಟಣದ ತಮ್ಮ ಭಾಷಣದ ವಿರುದ್ಧ ಕೋಲಾಹಲ ಎಬ್ಬಿಸಿ ಪತ್ರಿಕೆಗಳಿಗೂ ವಿಶ್ವವಿದ್ಯಾನಿಲಯಕ್ಕೂ ಬರೆದವರು ಸ್ವಯಂ ಶ್ರೀ ದೇವುಡು ನರಸಿಂಹ ಶಾಸ್ತ್ರಿಗಳು ಎಂಬುದು ಗೊತ್ತಿತ್ತು! ಹೀಗಾಗಿಯೂ ನ್ಯಾಯವಾದುದನ್ನು ಮಾಡಲು ಅವರು ಹಿಂಜರಿಯಲಿಲ್ಲ. ಶಾಸ್ತ್ರಿಗಳ ವಿಷಯದಲ್ಲಾಗಲೀ, ಅವರ ಮಗನ ವಿಷಯದಲ್ಲಾಗಲಿ ಅವರಿಗೆ ಕಿಂಚಿತ್ತೂ ಪೂರ್ವಗ್ರಹ ಉಳಿದಿರಲಿಲ್ಲ!

(ಕೃಪೆ: ಡಾ. ಪ್ರಭುಶಂಕರ, "ನಮನ" - ಪುಟ 43-45)ಪ್ರಶ್ನೆ: ಇದೆಲ್ಲ (ಈ ಬರಹ) ಈಗೇಕೆ?
ಉತ್ತರ: ತಲ್ಲಣದ ಸಮಯದಲ್ಲಿ ಸಜ್ಜನಿಕೆ ಮತ್ತು ಪ್ರೀತಿಯನ್ನು ಹುಡುಕುತ್ತಾ...

ಸರಣಿಯ ಎರಡನೆಯ ಲೇಖನ: ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...

ಮೂರನೆಯ ಲೇಖನ: ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು

No comments: