[ಇದು "ಮಾರ್ಥಾ ಸ್ಟುವರ್ಟಳೂ, ಕೃಷ್ಣಯ್ಯ ಶೆಟ್ಟಿಯೂ..." ಲೇಖನದ ಮುಂದುವರೆದ ಭಾಗ/ಟಿಪ್ಪಣಿ.]
ಈ ಸಲದ ವಿಧಾನಸಭಾ ಶಾಸಕರಲ್ಲಿ ಇರುವುದೆ ಮೂರು ಗುಂಪು. ಹಾಲಿ ಆಡಳಿತ ಪಕ್ಷದ ಬಿಜೆಪಿ ಒಂದು ಗುಂಪಾದರೆ ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಆಡಳಿತದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಇನ್ನೆರಡು ಗುಂಪುಗಳು. ಪಕ್ಷೇತರರಲ್ಲಿ ಐದು ಜನ ಬಿಜೆಪಿಯೊಂದಿಗಿದ್ದಾರೆ. ಇನ್ನೊಬ್ಬರನ್ನು ಸದ್ಯಕ್ಕೆ ಕಾಂಗ್ರೆಸ್‌ನೊಂದಿಗೇ ಗುರುತಿಸಬಹುದು. ಅಂದರೆ, ಇರುವ ಈ ಮೂರು ಗುಂಪುಗಳೂ ಕಳೆದ ಹತ್ತು ವರ್ಷಗಳಲ್ಲಿ ಒಂದಲ್ಲ ಒಂದು ಸಮಯದಲ್ಲಿ ಆಡಳಿತ ನಡೆಸಿದವರೆ. ಸಾಧ್ಯವಾದಾಗ ತಮ್ಮತಮ್ಮ ಸಮಯದಲ್ಲಿ ಬಾಚಲು ಪ್ರಯತ್ನಿಸಿದವರೆ ಮತ್ತು ತಕ್ಕಮಟ್ಟಿಗೆ ಯಶಸ್ವಿಯಾದವರೆ. ಅಧಿಕಾರವನ್ನು ತಮ್ಮ ಶಕ್ತ್ಯಾನುಸಾರ ಉಪಯೋಗ-ದುರುಪಯೋಗ ಮಾಡಿಕೊಂಡವರೆ. ಹಾಗಾಗಿ ಈಗ ಸದ್ಯದ ಸರ್ಕಾರದ ಯಾವ ಹಗರಣವನ್ನಾದರೂ ಶಾಸನಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪ್ರಸ್ತಾಪಿಸಲಿ, ಆಡಳಿತ ಪಕ್ಷದಿಂದ ಕೂಡಲೆ ಸಿದ್ಧ ಉತ್ತರ ಬರುತ್ತದೆ: "ನೀವೂ ಇದನ್ನೆ ಮಾಡಿದ್ದೀರ. ನಿಮ್ಮ ಕಡತಗಳನ್ನು, ಹಗರಣಗಳನ್ನು ತೆಗೆಯಬೇಕಾ?" ಅಂತಹ ಮಾತಿಗೆ ವಿರುದ್ಧವಾಗಿ ನೈತಿಕವಾಗಿ ಬಲವಾದ ವಾದವೊಂದನ್ನು ಮುಂದೊಡ್ಡುವ ಸ್ಥಿತಿಯಲ್ಲಿ ಇವತ್ತಿನ ಕಾಂಗ್ರೆಸ್-ಜೆಡಿಎಸ್ ನಾಯಕತ್ವ ಇಲ್ಲ.
ಈ ಮೂರೂ ಗುಂಪುಗಳಿಗೆ ಹೊರತಾಗಿ ಅಂತಹ ಯಾವೊಂದು ಕೃತ್ಯದಲ್ಲೂ ಭಾಗಿಯಾಗದ, ಇಲ್ಲಿಯವರೆಗೂ ಆಡಳಿತ ಪಕ್ಷವಾಗದೆ ಇದ್ದ ಪಕ್ಷವೊಂದರ ಒಬ್ಬನೇ ಒಬ್ಬ ಶಾಸಕ ವಿಧಾನಸಭೆಯಲ್ಲಿಲ್ಲ. ಹಾಗೆಯೆ, ಯಾವುದೆ ಅಮಿಷಕ್ಕೊಳಗಾಗದೆ ನೈತಿಕ ರಾಜಕಾರಣ ನಡೆಸಿದಂತಹ, ಹಾಗೂ ಹಗರಣವೊಂದನ್ನು ತಾರ್ಕಿಕ ಮಟ್ಟಕ್ಕೆ ಒಯ್ಯಬಲ್ಲವರಾಗಿದ್ದ ಸ್ವತಂತ್ರ ಮನೋಭಾವದ ಪಕ್ಷೇತರರೂ ಈ ಸಲ ಆರಿಸಿಬಂದಿಲ್ಲ. ಹೆಸರಿಗೆ ಮೂರು ಪಕ್ಷಗಳಾದರೂ ಎಲ್ಲರದೂ ಒಂದೇ ಗುಂಪು. ಅದೇ ಮನಸ್ಥಿತಿ. ಇಂತಹ ಸ್ಥಿತಿಯಲ್ಲಿ ಎಂತಹ ದೊಡ್ಡ ಹಗರಣ ಬಯಲಿಗೆ ಬಂದರೂ ಆಡಳಿತ ಪಕ್ಷದವರು ವಿರೋಧ ಪಕ್ಷಗಳ ಹಿಂದಿನ ಕೃತ್ಯಗಳನ್ನು ಮುಂದೊಡ್ಡಿ ಚರ್ಚೆಯನ್ನು ಮತ್ತು ತನಿಖೆಯನ್ನು ನಿಲ್ಲಿಸುತ್ತಿದ್ದಾರೆ ಮತ್ತು ಅವರ ಬಾಯಿ ಕಟ್ಟುತ್ತಿದ್ದಾರೆ. ಕರ್ನಾಟಕದ ರಾಜಕೀಯ ಮತ್ತು ಅದು ಸೃಷ್ಟಿಸುತ್ತಿರುವ ಹೊಸ ಸಾಮಾಜಿಕ ಮೌಲ್ಯಗಳು ಘನಘೋರ ಘಟ್ಟದಲ್ಲಿ ಬಂದು ನಿಂತಿದೆ.
Jul 30, 2009
ಅತಿ ದೌರ್ಭಾಗ್ಯದ ಹಾಲಿ ವಿಧಾನಸಭೆ
ಮಾರ್ಥಾ ಸ್ಟುವರ್ಟಳೂ, ಕೃಷ್ಣಯ್ಯ ಶೆಟ್ಟಿಯೂ...
[ಈ ಲೇಖನಕ್ಕೆ "ದೊಡ್ಡ ಹಗರಣಗಳಿಲ್ಲ; ಅಕ್ರಮವಾಗಿ ಶ್ರೀಮಂತರಾಗುತ್ತಿರುವ ರಾಜಕಾರಣಿಗಳಿಗೆ ಕಮ್ಮಿ ಇಲ್ಲ." ಎಂಬ ಶೀರ್ಷಿಕೆ ಕೊಟ್ಟಿದ್ದೆ. ಅದು ಅದೇ ಹೆಸರಿನಲ್ಲಿ ವಿಕ್ರಾಂತ ಕರ್ನಾಟಕದ ಆಗಸ್ಟ್ 7, 2009ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ವಿಷಯದ ಗಾಂಭೀರ್ಯಕ್ಕೆ ಅದು ಸೂಕ್ತವಾದ ಹೆಸರು. ಆದರೆ, ಈ ಶೀರ್ಷಿಕೆ ಸ್ವಲ್ಪ ಕ್ಯಾಚ್ಚಿ ಎನ್ನಿಸಿದ್ದರಿಂದ ಇಲ್ಲಿ ಬ್ಲಾಗ್‌ನಲ್ಲಿ ಬದಲಾಯಿಸಿದ್ದೇನೆ. - ರವಿ...]
ಕಳೆದ ಹತ್ತು ವರ್ಷಗಳಿಂದ ಕರ್ನಾಟಕ ಸರ್ಕಾರದ ಒಳಗೆ ಮತ್ತು ಅದರ ಸುತ್ತಮುತ್ತ ನಡೆದ ಹಗರಣಗಳನ್ನು ನೆನಪಿಸಿಕೊಳ್ಳಿ... ಹೇಗೆ ತಾನೆ ಅಷ್ಟು ಸುಲಭವಾಗಿ ನೆನಪಾದೀತು? ಇಲ್ಲ, ನಾನು Public memory is short ಎಂಬ ಗಾದೆಯ ಆಧಾರದ ಮೇಲೆ ನಿಮ್ಮನ್ನು ಚುಡಾಯಿಸುತ್ತಿಲ್ಲ. ನಿಜಕ್ಕೂ ನಮಗೆ ಗೊತ್ತಾದ, ಜನಮಾನಸಕ್ಕೆ ಗಂಭೀರ ಎನ್ನಿಸಿದಂತಹ, ಸರ್ಕಾರವೆ ಬೀಳುವಂತಹ ಹಗರಣಗಳು ನಡೆದದ್ದು ಕಮ್ಮಿಯೆ. ಛಾಪಾ ಕಾಗದದ ಹಗರಣ, ಅಕ್ಕಿ ಹಗರಣ,... ದೊಡ್ಡ ಹಗರಣಗಳನ್ನು ನೆನಪಿಸಿಕೊಳ್ಳುತ್ತ ನನ್ನ ನೆನಪೂ ಅಲ್ಲಿಗೇ ನಿಲ್ಲುತ್ತದೆ.
ಈಗ ಕಳೆದ ಹತ್ತೇ ವರ್ಷಗಳಲ್ಲಿ ಶ್ರೀಮಂತಿಕೆಯ ಅನೇಕ ಮಜಲುಗಳನ್ನು ದಾಟಿದ ಕರ್ನಾಟಕದ ರಾಜಕಾರಣಿಗಳ ವಿಚಾರಕ್ಕೆ ಬರೋಣ. ಇವತ್ತಿನ ಯಾವುದೆ ಪ್ರಸಿದ್ಧ ರಾಜಕಾರಣಿಯನ್ನು, ಶಾಸಕನನ್ನು, ಮಂತ್ರಿಯನ್ನು ತೆಗೆದುಕೊಂಡರೂ ಅವರು ತಾವು ರಾಜಕೀಯಕ್ಕೆ ಅಥವ ಅಧಿಕಾರಕ್ಕೆ ಬರುವ ಮೊದಲು ಇದ್ದ ಆರ್ಥಿಕ ಸ್ಥಿತಿಯಲ್ಲಿ ಇವತ್ತು ಇಲ್ಲ. ಇಲ್ಲಿ ಬೆರಳೆಣಿಕೆಯಷ್ಟು ಅಪವಾದಗಳಿರಬಹುದು. ಅವನ್ನು ಸದ್ಯದ ಚರ್ಚೆಯಲ್ಲಿ ಉಪೇಕ್ಷಿಸೋಣ. ಇವತ್ತು ಕನಿಷ್ಠ ಹತ್ತಿಪ್ಪತ್ತು ರಾಜಕಾರಣಿಗಳಾದರೂ ಒಬ್ಬೊಬ್ಬರೂ ಸಾವಿರ ಕೋಟಿಗಿಂತ ಬೆಲೆ ಬಾಳುತ್ತಾರೆ. ಒಂದಿಬ್ಬರು (ವ್ಯಕ್ತಿ ಅಥವ ಕುಟುಂಬಗಳು) ಡಾಲರ್ ಲೆಕ್ಕದಲ್ಲೂ ಬಿಲಿಯನೇರ್‌ಗಳಾಗಿರಬಹುದು (ಸುಮಾರು 5000 ಕೋಟಿ ರೂಪಾಯಿ.) ಇನ್ನು ರೂಪಾಯಿ ಬಿಲಿಯನೇರ್ (ಶತಕೋಟಿ) ಗಳಂತೂ ಸುಲಭವಾಗಿ ನೂರು ದಾಟಬಹುದು. ಇವರಲ್ಲಿ ಬಹುಪಾಲು ಜನ ಸಾಮಾನ್ಯ ಹಿನ್ನೆಲೆಯಿಂದ ಬಂದವರು. ಒಂದಷ್ಟು ಜನ ಆಗರ್ಭ ಶ್ರೀಮಂತರೂ ಇರಬಹುದು. ಆದರೆ ಅವರ ಉದ್ದಿಮೆ ಅಥವ ಆದಾಯಗಳು ನೂರಾರು ಕೋಟಿ ಮುಟ್ಟುವ ಹಾಗೇನೂ ಇದ್ದಿರಲಾರದು.
ಇಷ್ಟಾದರೂ, ಅದು ಹೇಗೆ ನಮ್ಮ ಹಾಲಿ-ಮಾಜಿ ಶಾಸಕರು, ಮಂತ್ರಿಗಳು, ಸಂಸದರು ಈ ಪರಿಯಲ್ಲಿ ಶ್ರೀಮಂತರಾದರು? ಆಗುತ್ತಿದ್ದಾರೆ? ಯಾವುದೊ ಸರ್ಕಾರಿ ಯೋಜನೆಯಲ್ಲಿ ಅಥವ ಇನ್ಯಾವುದೊ ಇಲಾಖೆಯಲ್ಲಿ ಜನರ ದುಡ್ಡಿಗೆ ಮೋಸ ಮಾಡಿದ್ದಾರೆ ಎಂದು ಹೇಳೋಣ ಎಂದರೆ, ಅಂತಹ ಹಗರಣಗಳೂ ಕಾಣಿಸುತ್ತಿಲ್ಲ. ಹಾಗಾದರೆ, ಇನ್ಯಾವ ಪವಾಡಗಳನ್ನು ಮಾಡಿ, ಜಾದೂ ಮಾಡಿ, ಇವರು ಇಷ್ಟು ಹಣ ಗಳಿಸಿದ್ದು, ಗಳಿಸುತ್ತಿರುವುದು?
ಮಾರ್ಥಾ ಸ್ಟುವರ್ಟ್ ಎನ್ನುವ ಅಮೆರಿಕನ್ ಮಹಿಳೆ ಇವತ್ತು ಸುಮಾರು 3000 ಕೋಟಿ ರೂಪಾಯಿಗೂ ಮೀರಿದ ಸಂಪತ್ತಿನ ಒಡತಿ. ಹಲವು ಪುಸ್ತಕಗಳನ್ನು ಬರೆದಿರುವ, ಟಿವಿಯಲ್ಲಿ ಟಾಕ್ ಷೋ ನಡೆಸುತ್ತಿದ್ದ, ಮ್ಯಾಗಝೀನ್ ಒಂದರ ಮತ್ತು ಹಲವಾರು ವ್ಯವಹಾರ-ಉದ್ದಿಮೆಗಳ ಒಡತಿಯೂ ಆಗಿರುವ ಈಕೆ ಅಮೆರಿಕದ ಪ್ರಸಿದ್ಧ ಹೆಂಗಸರಲ್ಲಿ ಒಬ್ಬಳು. ಫ್ಯಾಷನ್ ಉದ್ದಿಮೆಯಲ್ಲೂ ದೊಡ್ಡ ಹೆಸರು. 1999ರಲ್ಲಿ ಷೇರು ಮಾರುಕಟ್ಟೆಗೆ ಬಿಟ್ಟ ತನ್ನ ಕಂಪನಿಯ ಷೇರುಗಳ ಲೆಕ್ಕಾಚಾರದಲ್ಲಿ ರಾತ್ರೋರಾತ್ರಿ ಬಿಲಿಯನೇರ್ ಸಹ ಆಗಿದ್ದಳು. ಆದರೆ ನಾನು ಈಗ ಪ್ರಸ್ತಾಪಿಸಲಿರುವುದು ಆಕೆಯ ಸಾಧನೆ ಅಥವ ಯಶಸ್ಸುಗಳ ಕತೆಯನ್ನಲ್ಲ. ತನ್ನ ಯಶಸ್ಸಿನ ಉತ್ತುಂಗದಲ್ಲಿ, ಸಾವಿರಾರು ಕೋಟಿಗಳ ಒಡತಿಯಾಗಿದ್ದ ಸಮಯದಲ್ಲಿ, ಕೇವಲ 20 ಲಕ್ಷ ರೂಪಾಯಿಯ ನಷ್ಟ ಸರಿದೂಗಿಸಿಕೊಳ್ಳಲು ಆಕೆ ಒಂದು ತಪ್ಪು ಮಾಡಿದಳು. ಅದಕ್ಕಾಗಿ 2004 ರಲ್ಲಿ ಐದು ತಿಂಗಳು ಜೈಲಿನಲ್ಲಿದ್ದಳು. ಬಿಡುಗಡೆಯಾದ ನಂತರ ಮತ್ತೆ ಐದು ತಿಂಗಳು ತನ್ನದೆ ಮನೆಯಲ್ಲಿ ಗೃಹಬಂಧನದಲ್ಲಿದ್ದಳು ಮತ್ತು ಆ ಸಮಯದಲ್ಲಿ ಆಕೆಯ ಕಾಲಿಗೆ ಆಕೆ ಯಾವ ಸಮಯದಲ್ಲಿ ಎಲ್ಲಿ ಇದ್ದಾಳೆ ಎಂದು ಟ್ರ್ಯಾಕ್ ಮಾಡಬಲ್ಲ ಎಲೆಕ್ಟ್ರಾನಿಕ್ ತಾಯಿತವೊಂದನ್ನು ಕಟ್ಟಲಾಗಿತ್ತು. ಅದಾದ ನಂತರವೂ ಆಕೆ ಐದು ವರ್ಷಗಳ ಕಾಲ ಯಾವುದೆ ಕಂಪನಿಯ ಮುಖ್ಯಸ್ಥೆ ಆಗದಂತೆ ಅಥವ ಯಾವುದೆ ಕಂಪನಿಯ ನಿರ್ದೇಶಕ ಹುದ್ದೆ ಒಪ್ಪಿಕೊಳ್ಳಲಾಗದಂತೆ ನಿರ್ಬಂಧ ಹೇರಲಾಯಿತು. ಈಗಲೂ ಸುಮಾರು 3000 ಕೋಟಿ ರೂಪಾಯಿಗೂ ಮೀರಿದ ಆಸ್ತಿಯ ಒಡತಿಯಾಗಿರುವ ಈ ಪ್ರಸಿದ್ಧ ಮಹಿಳೆಗೆ ಕಳೆದ ವರ್ಷ ತಾನೆ ಬ್ರಿಟಿಷ್ ಸರ್ಕಾರ ತನ್ನ ದೇಶಕ್ಕೆ ವೀಸಾ ಸಹಾ ನಿರಾಕರಿಸಿತ್ತು.
ಇಷ್ಟಕ್ಕೂ ಆಕೆ ಮಾಡಿದ ತಪ್ಪಾದರೂ ಏನು?
ಷೇರು ಮಾರುಕಟ್ಟೆಯಲ್ಲಿರುವ ಸಾರ್ವಜನಿಕ ಕಂಪನಿಗಳು ತಮ್ಮ ಹಿರಿಯ ಅಧಿಕಾರಿಗಳಿಗೆ, ಮುಖ್ಯ ನೌಕರರಿಗೆ, ಮತ್ತು ನಿರ್ದೇಶಕ ಮಂಡಳಿಯ ನಿರ್ದೇಶಕರಿಗೆ ಕೇವಲ ಸಂಬಳವನ್ನಷ್ಟೆ ಅಲ್ಲದೆ ಬೋನಸ್ ರೀತಿಯಲ್ಲಿ ಒಂದಷ್ಟು ಷೇರುಗಳನ್ನೂ ನೀಡಿರುತ್ತದೆ. ಇದು ಸಾವಿರಗಳಿಂದ ಲಕ್ಷಗಳನ್ನು ದಾಟುತ್ತದೆ; ಅವರವರ ಯೋಗ್ಯತೆಯ ಮೇಲೆ. ತಮ್ಮದೇ ಕಂಪನಿಯ ಆ ಷೇರುಗಳನ್ನು ಕಂಪನಿಯ ಲಾಭನಷ್ಟದ ಬಗ್ಗೆ ಅರಿವಿರುವ ಹಿರಿಯ ಅಧಿಕಾರಿಗಳು ಮತ್ತು ನಿರ್ದೇಶಕರು ಯಾವಾಗಲೆಂದರೆ ಆಗ ಮಾರಾಟ ಮಾಡುವ ಹಾಗೆ ಇಲ್ಲ. ‘ಕಂಪನಿ ಈ ತ್ರೈಮಾಸಿಕದಲ್ಲಿ ಲಾಭ ಮಾಡಿದೆ, ಆ ವಿಚಾರ ಇನ್ನೂ ಹೊರಗಿನವರಿಗೆ ಗೊತ್ತಿಲ್ಲ, ಗೊತ್ತಾದ ನಂತರ ಷೇರುಗಳ ಬೆಲೆ ಮೇಲೆ ಹೋಗುತ್ತದೆ, ಲಾಭ ಮಾಡಿಕೊಳ್ಳಲು ಇದೇ ಸಮಯ, ಹಾಗಾಗಿ ಒಂದಷ್ಟು ಷೇರುಗಳನ್ನು ಈಗಿನ ಕಮ್ಮಿ ಬೆಲೆಗೆ ಕೊಂಡುಕೊಳ್ಳೋಣ,’ ಎಂದೆಲ್ಲ ಲೆಕ್ಕ ಹಾಕಿ ಅವರು ತಕ್ಷಣವೆ ಷೇರುಗಳನ್ನು ಕೊಳ್ಳುವ ಹಾಗೆ ಇಲ್ಲ. ಅದೇ ರೀತಿ ತಮ್ಮ ಕಂಪನಿ ನಷ್ಟದ ಹಾದಿಯಲ್ಲಿರುವ ಲಕ್ಷಣಗಳು ಗೊತ್ತ್ತಾದರೆ ಮತ್ತು ಅವರಿಗೆ ಗೊತ್ತಿರುವ ವಿಚಾರಗಳು ಬಹಿರಂಗವಾದ ಮೇಲೆ ಅವರ ಕಂಪನಿಯ ಷೇರಿನ ಬೆಲೆ ಇಳಿಯುತ್ತದೆ ಎನ್ನುವ ಸೂಕ್ಷ್ಮಗಳು ಗೊತ್ತಾದಾಗಲೂ ತಮ್ಮಲ್ಲಿರುವ ಷೇರುಗಳನ್ನು ಕೂಡಲೆ ಮಾರುವ ಹಾಗೂ ಇಲ್ಲ. ಅದು ಅನೈತಿಕ. ತಮ್ಮ ಸ್ಥಾನದ ಬಲದಿಂದ ತಮಗೆ ಗೊತ್ತಾದ ವಿಚಾರವೊಂದನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುವ ಹೀನ, ಮೌಲ್ಯರಹಿತ, ಅನೈತಿಕ ನಡವಳಿಕೆ (Unethical) ಅದು. ಕಂಪನಿಯೊಂದರ ಷೇರುಗಳನ್ನು ಕೊಂಡುಕೊಂಡಿರುವ ಸಾರ್ವಜನಿಕರಿಗೆ ಎಸಗುವ ಮಹಾವಂಚನೆ. ಅದನ್ನು ಬ್ಯುಸಿನೆಸ್ ಪ್ರಪಂಚದ ಪರಿಭಾಷೆಯಲ್ಲಿ Insider Trading ಎನ್ನುತ್ತಾರೆ. ಯಾರಾದರೂ ಹಾಗೆ ಮಾಡಿದ್ದು ಸಾಬೀತಾದರೆ ಅದೊಂದು ಕ್ರಿಮಿನಲ್ ಅಪರಾಧ. ಅದಕ್ಕೆ ಜೈಲು ಶಿಕ್ಷೆಯೂ ಆಗುತ್ತದೆ.
ಮಾರ್ಥಾ ಸ್ಟುವರ್ಟ್ ಎಸಗಿದ ಅಪರಾಧವೂ ಅದೇನೆ. 2001ನೇ ಇಸವಿಯ ಸುಮಾರಿನಲ್ಲಿ ಇಮ್ಕ್ಲೋನ್ ಎನ್ನುವ ಕಂಪನಿಯ ಬೋರ್ಡಿನಲ್ಲಿ ಆಕೆ ನಿರ್ದೇಶಕಿ ಆಗಿದ್ದಳು. ಅದೊಂದು ದಿನದ ಮೀಟಿಂಗ್‌ನಲ್ಲಿ ಆ ಕಂಪನಿಯ ವೈದ್ಯಕೀಯ ಉತ್ಪನ್ನವೊಂದಕ್ಕೆ ಸರ್ಕಾರದ ಪರವಾನಗಿ ಸಿಕ್ಕಿಲ್ಲ ಎಂಬ ವಿಚಾರ ಆಕೆಗೂ ಸೇರಿದಂತೆ ಆ ಕಂಪನಿಯ ಮುಖ್ಯ ಮಂದಿಗೆಲ್ಲ ಗೊತ್ತಾಯಿತು. ಅದರಲ್ಲಿ ಒಂದಷ್ಟು ಜನ ಅಂದೇ ತಮ್ಮ ಷೇರುಗಳನ್ನು ಮಾರಿಕೊಂಡರು. ತನಗೆ ಆಗಬಹುದಾಗಿದ್ದ 45 ಸಾವಿರ ಡಾಲರ್‌ಗಳ ನಷ್ಟವನ್ನು ನಿವಾರಿಸಿಕೊಳ್ಳಲು ಸ್ವತಃ ಬಿಲಿಯನೇರ್ ಆಗಿದ್ದ ಮಾರ್ಥಾಳೂ ಆ ಕಂಪನಿಯ ತನ್ನ ಷೇರುಗಳನ್ನು ಮಾರಿಬಿಡಲು ಕೂಡಲೆ ತನ್ನ ಏಜೆಂಟನಿಗೆ ತಿಳಿಸಿದಳು. ಮಾರನೆಯ ದಿನ ಆ ಕಂಪನಿಯ ಉತ್ಪನ್ನಕ್ಕೆ ಪರವಾನಗಿ ಸಿಕ್ಕಿಲ್ಲದ ವಿಚಾರ ಬಹಿರಂಗವಾಯಿತು. ಒಂದೇ ದಿನದಲ್ಲಿ ಆ ಕಂಪನಿಯ ಷೇರುಗಳ ಬೇಲೆ ಶೇ.18 ರಷ್ಟು ಬಿದ್ದು ಹೋಯಿತು. ಅಂದಿನ ಹಿಂದಿನ ದಿನ ಕೆಲವು Insiders ತಮ್ಮ ಷೇರುಗಳನ್ನು ಮಾರಾಟ ಮಾಡಿರುವ ವಿಚಾರ ನಂತರದ ದಿನಗಳಲ್ಲಿ ಬಯಲಿಗೆ ಬಂತು. ಮಾರ್ಥಾ ಏನೇನೊ ನಾಟಕ ಆಡಿದಳು. ಆದರೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಆಕೆಯಿಂದಾಗಲಿಲ್ಲ. ತನ್ನ ಆ ಅನೈತಿಕ ಕೃತ್ಯಕ್ಕೆ ಈಗಲೂ ಆಕೆ ಶಿಕ್ಷೆ ಅನುಭವಿಸುತ್ತಿದ್ದಾಳೆ. ದುಡ್ಡಿನ ವಿಚಾರದಲ್ಲಿ ಅದೊಂದು ಸಣ್ಣ ಮೊತ್ತದ ತಪ್ಪು. ಆದರೆ ಮೌಲ್ಯ, ನೀತಿ, ಮತ್ತು ನೈತಿಕತೆಯ ದೃಷ್ಟಿಯಿಂದ ಅದೊಂದು ಗಂಭೀರ ಅಪರಾಧ. ತಮ್ಮ ಸ್ಥಾನಬಲವನ್ನು ಸ್ವಂತಲಾಭಕ್ಕೆ ಬಳಸಿಕೊಳ್ಳುವ ಹೀನಾತಿಹೀನ ನಡವಳಿಕೆ. (ನಮ್ಮಲ್ಲಿ ಕೆಲವರಿಗೆ ಈ ಪದಬಳಕೆ ಮತ್ತು ಈ ಅಭಿಪ್ರಾಯ ಕಠೋರವೆಂದೂ, ಮಾರ್ಥಾ ಸ್ಟುವರ್ಟ್ ಮಾಡಿದ್ದು ಅಂತಹ ದೊಡ್ಡ ತಪ್ಪೇನೂ ಅಲ್ಲವೆಂದೂ ಅನ್ನಿಸಿದರೆ, ಹಾಗೆ ಅನ್ನಿಸುವುದು ಅಸಹಜ ಎಂದೇನೂ ನಾನು ಭಾವಿಸುವುದಿಲ್ಲ. ದುರದೃಷ್ಟಕರ ವಾತಾವರಣ ಇದು. ಅದಕ್ಕೆ ಕಾರಣಗಳನ್ನು ನ್ಯಾಯ-ಮೌಲ್ಯ-ನೈತಿಕತೆಯನ್ನು ನಮ್ಮಲ್ಲಿ ಪರಿಭಾವಿಸಿರಬಹುದಾದ ಮತ್ತು ಶಿಕ್ಷಣದ ಗುಣಮಟ್ಟದ ನೆಲೆಯಲ್ಲಿ ಗುರುತಿಸಬೇಕು.)
ಈಗ, ಮಾರ್ಥಾ ಸ್ಟುವರ್ಟ್‌ಳ ಹಗರಣವನ್ನು ಮೂಲವಾಗಿ ಇಟ್ಟುಕೊಂಡು ನಮ್ಮಲ್ಲಿ ಒಂದೆರಡು ವಾರದ ಹಿಂದೆ ತಾನೆ ಬಯಲಿಗೆ ಬಂದ ಕೃಷ್ಣಯ್ಯ ಶೆಟ್ಟಿ ಮತ್ತು ಶಿಡ್ಲಘಟ್ಟ ಭೂಹಗರಣವನ್ನು ವಿಶ್ಲೇಷಿಸೋಣ. ಸರ್ಕಾರದಲ್ಲಿ ಯಾವಯಾವ ಯೋಜನೆಗಳು ಯಾವಯಾವ ಸ್ಥಳದಲ್ಲಿ ಎಂತಹ ಸಮಯದಲ್ಲಿ ಅನುಷ್ಠಾನಕ್ಕೆ ಬರಲಿವೆ ಎನ್ನುವ ವಿಚಾರಗಳು ಕೆಲವು ಹಿರಿಯ ಅಧಿಕಾರಿಗಳಿಗೂ, ಮಂತ್ರಿಗಳಿಗೂ, ಮುಖ್ಯಮಂತ್ರಿಗಳಿಗೂ, ಅವರ ಹಿಂಬಾಲಕರಿಗೂ, ಮತ್ತು ಒಂದಷ್ಟು ಶಾಸಕರಿಗೂ ನಿಖರವಾಗಿ ಗೊತ್ತಾಗುತ್ತದೆ. ತಕ್ಷಣವೆ ಈ ಗುಂಪಿನಲ್ಲಿರುವ ಖದೀಮರು ಯೋಜನೆಯೊಂದು ಅನುಷ್ಠಾನಕ್ಕೆ ಬರಲಿರುವ ಸುತ್ತಮುತ್ತಲ ಸ್ಥಳವನ್ನು ತುಂಬ ಅಗ್ಗವಾಗಿ ರಾತ್ರೋರಾತ್ರಿ ತಮ್ಮ ಸಂಬಂಧಿಗಳ ಹೆಸರಿನಲ್ಲಿ, ಹಿಂಬಾಲಕರ ಹೆಸರಿನಲ್ಲಿ, ಬೇನಾಮಿ ಹೆಸರಿನಲ್ಲಿ, ಕೊಂಡುಕೊಂಡುಬಿಡುತ್ತಾರೆ. ನಂತರ ಅದೇ ಜಮೀನನ್ನು ತಮ್ಮದೆ ಸುಪರ್ದಿಯಲ್ಲಿರುವ ಸರ್ಕಾರಕ್ಕೆ ಅಸಹಜವಾದ ಬೆಲೆಗೆ, "ಮಾರುಕಟ್ಟೆ ಬೆಲೆ" ಎಂಬ ಹೆಸರಿನಲ್ಲಿ ಮಾರಿಬಿಡುತ್ತಾರೆ. ವಿಶ್ವವಿದ್ಯಾಲಯಗಳು, ವಿಮಾನ ನಿಲ್ದಾಣಗಳು, ಕೈಗಾರಿಕಾ ಪ್ರದೇಶಗಳು, ಗೃಹಮಂಡಳಿ ಭೂಸ್ವಾಧೀನಗಳ ಜಮೀನೆಲ್ಲ ಸ್ವಾಧೀನದ ಸಮಯಕ್ಕೆ ಈ ಖದೀಮ ಗುಂಪಿನವರದೇ ಆಗಿರುತ್ತದೆ. ಮತ್ತೆ ಎಷ್ಟೋ ಸಲ ಸರ್ಕಾರಿ ಯೋಜನೆಗಳು ಕಾರ್ಯರೂಪಕ್ಕೆ ಬರುವುದೆ ಕೆಲವು ಪಟ್ಟಭದ್ರರ ಜಮೀನು ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಇರುವ ಕಾರಣದಿಂದ. ಶಿಡ್ಲಘಟ್ಟದಲ್ಲಾಗಿದ್ದೂ ಇದೆ. ಅಣ್ಣನ ಇಲಾಖೆಗೆ ಜಮೀನು ಬೇಕಾದ ವಿವರ ತಮ್ಮನಿಗೆ ತಿಳಿಸಲಾಯಿತು ಅಥವ ಗೊತ್ತಾಯಿತು. ಮಂತ್ರಿಯ ತಮ್ಮ ಸ್ವತಃ ತಾನೇ ಹೋಗಿ ವ್ಯಾಪಾರಕ್ಕೆ ನಿಂತರು. ರೈತನಿಂದ ಆರು ಕಾಸಿಗೆ ಕೊಂಡು ಅರವತ್ತು ಕಾಸಿಗೆ ಅಣ್ಣನ ಇಲಾಖೆಗೆ ಮಾರಿದರು. ನೈತಿಕತೆ ಮತ್ತು ಅಧಿಕಾರದುರುಪಯೋಗದ ಹಿನ್ನೆಲೆಯಿಂದ ಇದನ್ನು ನೀವು ಗಮನಿಸದೆ ಹೋದರೆ ಈ ಇಡೀ ಪ್ರಕರಣದಲ್ಲಿ ತಪ್ಪಾದರೂ ಎಲ್ಲಿದೆ?
ಇಂತಹ ಅನೈತಿಕ ಕೆಲಸಗಳನ್ನು ಮಾಡುವ Insiderಗಳನ್ನು ದಾಖಲೆಯ ಸಮೇತ ಕಂಡುಹಿಡಿಯುವಂತಹ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಜೊತೆಗೆ, ಇಂತಹ ಕೃತ್ಯಗಳು ಅನೈತಿಕ ಹಾಗೂ ಶಿಕ್ಷಿಸಲು ಅರ್ಹವಾದವು ಎಂದು ನಮ್ಮ ಬಹುಸಂಖ್ಯಾತ ಸಮಾಜ ಇನ್ನೂ ಭಾವಿಸಿಲ್ಲ. ಹಾಗಾಗಿ ಇಂತಹುದೆ ಹಗಲುದರೋಡೆಗಳು ಕಳೆದ ಹತ್ತಿಪ್ಪತ್ತು ವರ್ಷಗಳ "ಅಭಿವೃದ್ಧಿ ಶಕೆ"ಯಲ್ಲಿ ನಿರ್ಬಾಧಿತವಾಗಿ ನಡೆದುಕೊಂಡು ಬರುತ್ತಿವೆ. ಈ ಭೂವ್ಯವಹಾರಗಳು ಅಧಿಕಾರಸ್ಥರು ಅಕ್ರಮವಾಗಿ ಹಣ ಮಾಡುವ ಒಂದು ಮಾರ್ಗವಷ್ಟೆ. ತಮ್ಮ ಸ್ಥಾನಬಲವನ್ನು Unethical ಆಗಿ ಬಳಸಿಕೊಂಡು ಕಾನೂನಿನ ಕೈಗೆ ಸಿಕ್ಕಿಹಾಕಿಕೊಳ್ಳದೆ ದುಡ್ಡು ಮಾಡುವ ಅನೇಕ ಮಾರ್ಗಗಳು ಸರ್ಕಾರದ ಒಳಗೆ ಮತ್ತು ಹೊರಗೆ ಇವೆ. ಹಾಗಾಗಿಯೆ, ಸಿಕ್ಕಿಹಾಕಿಕೊಳ್ಳುವಂತಹ ಹಗರಣಗಳನ್ನು ಮಾಡದೆ ಇವತ್ತಿನ ನಮ್ಮ ರಾಜಕಾರಣಿಗಳು ತಮ್ಮ ಅಧಿಕಾರ ದುರುಪಯೋಗದ ಖದೀಮತನದಿಂದ ಕೋಟ್ಯಾಂತರ ದುಡ್ಡು ಮಾಡುತ್ತಲೆ ಇದ್ದಾರೆ. ಅದೇ ದುಡ್ಡಿನ ಬಲದಿಂದ ಪ್ರಜಾಪ್ರಭುತ್ವವನ್ನು ಮತ್ತು ಸಮಾಜದ ಮೌಲ್ಯಗಳನ್ನು ದುರ್ಬಲಗೊಳಿಸುತ್ತಲೆ ಹೋಗುತ್ತಿದ್ದಾರೆ.
ವಿಪರ್ಯಾಸವೇನೆಂದರೆ, ಇದನ್ನೆಲ್ಲ ಘಟ್ಟಿಸಿ ಕೇಳಬೇಕಾದ, ಜನತೆಯನ್ನು Educate ಮಾಡಬೇಕಾದ ವಿರೋಧಪಕ್ಷದವರೂ ಅದೇ ಮಾರ್ಗದಲ್ಲಿ ಸಾಗಿ ಬಂದಿದ್ದಾರೆ!
ಇದೇ ಲೇಖನಕ್ಕೆ ಸಂಬಂಧಿಸಿದ ಟಿಪ್ಪಣಿ "ಅತಿ ದೌರ್ಭಾಗ್ಯದ ಹಾಲಿ ವಿಧಾನಸಭೆ",
ಬೇರೆಯದೇ ಲೇಖನವಾಗಿ ಇಲ್ಲಿ ಇದೆ.
Jul 16, 2009
ಗಾಂಧಿ ಜಯಂತಿ ಕಥಾಸ್ಪರ್ಧೆ- 2009
ಕಳೆದ ವರ್ಷ ವಿಕ್ರಾಂತ ಕರ್ನಾಟಕದ ಸಹಯೋಗದೊಂದಿಗೆ ಈ ಕಥಾಸ್ಪರ್ಧೆ ಪ್ರಾಯೋಜಿಸಿದ್ದೆ. ಇದು ಈ ವರ್ಷವೂ ಮುಂದುವರೆಯುತ್ತಿದೆ. ವಿವರಗಳು ಈ ಕೆಳಗಿನ ಚಿತ್ರದಲ್ಲಿದೆ. (ಅದನ್ನು ಕ್ಲಿಕ್ ಮಾಡಿದರೆ ಅದು ದೊಡ್ಡದಾಗಿ ತೆರೆದುಕೊಳ್ಳುತ್ತದೆ.) ಆಸಕ್ತರು ಮತ್ತು ಕತೆಗಾರರು ಗಮನಿಸಬೇಕಾಗಿ ವಿನಂತಿ.
ಕಳೆದ ವರ್ಷ ಈ ಪ್ರಯುಕ್ತ ಬರೆದಿದ್ದ ಬ್ಲಾಗ್ ಲೇಖನ ಇಲ್ಲಿದೆ:
ಗಾಂಧಿ ಜಯಂತಿ ಕಥಾಸ್ಪರ್ಧೆ - 2008
ಆ ಕಥಾಸ್ಪರ್ಧೆಯಲ್ಲಿ ಗೆದ್ದ ಕತೆಗಳು ಇಲ್ಲಿ (ವಿಚಾರಮಂಟಪ.ನೆಟ್) ಓದಲು ಲಭ್ಯವಿವೆ.
Jul 9, 2009
ಪ್ರತಿಭಾ ನಂದಕುಮಾರರ "ದೇವಿ" - ಹೊಡೆದು ಕೆಡವಿ ದಕ್ಕಿಸಿಕೊಳ್ಳಲಾರಿರಿ
ಪ್ರತಿಭಾ ನಂದಕುಮಾರ್ ಕನ್ನಡದ ಸಮಕಾಲೀನ ಕವಯತ್ರಿಯರಲ್ಲಿ ಪ್ರಮುಖರು. Firebrand ಕವಯತ್ರಿ ಪಟ್ಟದಿಂದ ಹಿರಿಯ ಕವಿ-ಲೇಖಕಿಯಾಗಿ ಅವರು ರೂಪಾಂತರಗೊಳ್ಳುತ್ತಿರುವ ಸಂದರ್ಭ ಇದು. ಪ್ರತಿಭಾ ಕೇವಲ ತಮ್ಮ ವೈಯಕ್ತಿಕ ಕಷ್ಟನಷ್ಟದ ಬಗ್ಗೆಯೇ ಬರೆದುಕೊಂಡವರಲ್ಲ. ಹಾಗೆಯೆ ಕೇವಲ ಕಾವ್ಯ, ರಸ, ರಸಾನುಭೂತಿ, ಮುಂತಾದ ಯಾರ ಉಸಾಬರಿಗೂ ಹೋಗದ ವಿಷಯಗಳಲ್ಲಿ ಮುಳುಗಿದವರೂ ಅಲ್ಲ. ಅವರು ಕಾಲಕಾಲಕ್ಕೆ ಸಮಕಾಲೀನ ಸಾಮಾಜಿಕ ಘಟನೆಗಳಿಗೆ ಸ್ಪಂದಿಸುತ್ತ ಬಂದಿದ್ದಾರೆ; ವಿಶೇಷವಾಗಿ ಹೆಣ್ಣು ಮತ್ತು ಅವಳ ಶೋಷಣೆಯ ಸುತ್ತಮುತ್ತಲ ವಿಷಯಗಳಿಗೆ. ಇನ್ನು ಪತ್ರಕರ್ತರಾಗಿಯೂ ಹಲವಾರು ವಿಷಯಗಳನ್ನು ದಿಟ್ಟವಾಗಿ ಎತ್ತಿಕೊಂಡವರವರು. ಕೆಲವು ಸತ್ಯಗಳ ಮೂಲ ಶೋಧಿಸಲು ತಾವೆ ಬಲಿಪಶು ಆಗಲು ಅಥವ ಖೆಡ್ಡಾಕ್ಕೆ ಕೆಡವುವ ಬೇಟೆಗಾರನಾಗಲೂ ಹಿಂಜರಿಯದವರು. ತಮ್ಮ ಸಹಲೇಖಕಿಯರಿಂದ ಪ್ರತಿಭಾರವರಷ್ಟು ಪ್ರೀತಿಸಲ್ಪಟ್ಟ ಅಥವ ದ್ವೇಷಿಸಲ್ಪಟ್ಟ ಮತ್ತೊಬ್ಬ ಕನ್ನಡದ ಲೇಖಕಿ ಇಲ್ಲ ಎಂದು ಹೇಳಿದರೆ ಅದು ತಪ್ಪಾಗುವುದಿಲ್ಲ ಎಂದುಕೊಳ್ಳುತ್ತೇನೆ. ಅದು ಅವರ ಸಾಮರ್ಥ್ಯವನ್ನಷ್ಟೇ ಅಲ್ಲದೆ ಅವರ ವೈವಿಧ್ಯಮಯ, ಚಲನಶೀಲ, ಪ್ರಯೋಗಶೀಲ, ವಿವಾದಾತ್ಮಕ, ನಿರ್ಭೀತ ವ್ಯಕ್ತಿತ್ವವನ್ನು ತೋರಿಸುತ್ತದೆ.
ಹಿಂದಿನ ಬ್ಲಾಗ್ ಲೇಖನದಲ್ಲಿ ಸುಗತ ರಾಜು ತಮ್ಮ ಇಂಗ್ಲಿಷ್ ಲೇಖನದಲ್ಲಿ ಕನ್ನಡದ ಎರಡು ಕವಿತೆಗಳನ್ನು ಪ್ರಸ್ತಾಪಿಸಿದ್ದಾರೆ ಎಂತಲೂ ಅದರಲ್ಲಿ ಒಂದು ಕವನ ಪ್ರತಿಭಾ ನಂದಕುಮಾರ್‌ರವರದು ಎಂತಲೂ ಬರೆದಿದ್ದೆ. ಆ ಲೇಖನದ ಬರೆದ ನಂತರ ಪ್ರತಿಭಾರವರ ಕವನವನ್ನೂ ಒಮ್ಮೆ ಓದಬೇಕೆನಿಸಿತು. ಹಾಗೆಯೆ ಸಾಧ್ಯವಾದರೆ ಅದನ್ನೂ ಕೇಳಬೇಕೆನಿಸಿತು. ಕೂಡಲೆ ಪ್ರತಿಭಾರವರಿಗೆ ಪತ್ರ ಬರೆದೆ. ಅವರು ತಮ್ಮ ಕವನ ಕಳುಹಿಸಿದರು. ಹಾಗೆಯೆ ತಮ್ಮ ಕವನದ ವಾಚನವನ್ನೂ ಇಷ್ಟರಲ್ಲೆ ಕಳುಹಿಸುವುದಾಗಿ ತಿಳಿಸಿದರು. ಈಗ ಅವರ ಕವನ ಮಾತ್ರ ಇಲ್ಲಿ ಕೊಡುತ್ತಿದ್ದೇನೆ. ಅವರ ವಾಚನದ ಆಡಿಯೋ ಬಂದನಂತರ ಅದರ ಲಿಂಕ್ ಸಹ ಇದೇ ಬ್ಲಾಗ್‌ನಲ್ಲಿ ಕೊಡುತ್ತೇನೆ.
"ದೇವಿ"
ಕವಿ: ಪ್ರತಿಭಾ ನಂದಕುಮಾರ್
ಅವಳು ಮಲವಿಲ್ಲದ ನಿರ್ಮಲೆ.
ಅವಳು ಲೋಲಾಕ್ಷಿಕಾಮರೂಪಿಣಿ
ಕಾಮಕ್ಕೆ ಯೋಗೇಶ್ವರಿ, ಕ್ರೋಧಕ್ಕೆ ಮಾಹೇಶ್ವರಿ
ಲೋಭಕ್ಕೆ ವೈಷ್ಣವಿ, ಮದಕ್ಕೆ ಬ್ರಹ್ಮಾಣಿ,
ಮೋಹಕ್ಕೆ ಸ್ವಯಂಭು ಕಲ್ಯಾಣಿ, ಮಾತ್ಸರ್ಯಕ್ಕೆ ಇಂದ್ರಜಾ
ಪೈಶುನ್ಯಕ್ಕೆ ಯಮದಂಡಭಧ್ರಾ, ಅಸೂಯೆಗೆ ವಾರಾಹೀ.
ದೇವಿಯೆಂದರೆ ಇಚ್ಚಾಶಕ್ತಿಜ್ಞಾನಶಕ್ತಿಕ್ರಿಯಾಶಕ್ತಿಸ್ವರೂಪಿಣಿ.
ಅವಳು ರುಧಿರಸ್ಥಿತಾ, ಮಾಂಸನಿಷ್ಠಾ, ಮಧುಪ್ರೀತಾ,
ಮಾಧ್ವೀಪಾನಾಲಸಾಮತ್ತಾ, ಬಲಿಪ್ರಿಯಾ, ಸುಖಾರಾಧ್ಯಾ,
ಲಾಸ್ಯಪ್ರಿಯಾ, ವಿಶೃಂಖಲಾ, ರತಿಪ್ರಿಯಾ, ಕಾಮಕೇಲಿತರಂಗಿತಾ
ಶಕ್ತಿ ದೇವಿಯ ಯೋಗವಿಲ್ಲದಿದ್ದರೆ
ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವರು
ಪ್ರೇತಗಳಂತೆ ನಿಶ್ಚಲರು
ಅವಳು ಅವರನ್ನೇರಿ ಕುಳಿತ ಪಂಚಪ್ರೇತಾಸನಾಸೀನಾ
ಅವನು ಶುದ್ಧಜ್ಞಾನಸ್ವರೂಪನಾದರೆ ಅವಳು ವಿಮರ್ಶಾಸ್ವರೂಪಳು.
ಅವಳು ಅಂತರ್ಮುಖಸಮಾರಾಧ್ಯಾ ಬಹಿರ್ಮುಖಸುದುರ್ಲಭಾ
ಅವಳು ಕಾಮೇಶಿ, ಕಾಮಿತಾರ್ಥದಾ, ಕಾಮಸಂಜೀವಿನೀ, ಕಾಮದಾಯಿನೀ
ಅವಳು ಲಬ್ಧಪತಿಃ ಲಬ್ಧಭೋಗಾ ಲಬ್ಧಸುಖಾ ಲಬ್ಧಕಾಮಾ
ತನ್ನಿಚ್ಚೆಯಂತೆ ಪತಿ, ಭೋಗ, ಸುಖ, ಕಾಮವನ್ನು ಹೊಂದಿದವಳು.
ಅವಳು ಕುಡಿಯಬಹುದು, ಕುಣಿಯಬಹುದು, ಕೇಳಿಯಲ್ಲಿ ಮುಳುಗಿ ತೇಲಬಹುದು
ಹಿಡಿಯಲಾರಿರಿ ನೀವು ಅವಳನ್ನು ಪಬ್ಬುಗಳಲ್ಲಿ
ಹೊಡೆದು ಕೆಡವಿ ದಕ್ಕಿಸಿಕೊಳ್ಳಲಾರಿರಿ
ಮಬ್ಬು ಬೆಳಕಲ್ಲಿ ಕಾಣಲಾರಿರಿ ನಿಮ್ಮ ಮಂಜುಕಣ್ಣುಗಳಲ್ಲಿ
ಎದ್ದುಬರುತ್ತಾಳೆ ನೂರು ನಾಲಿಗೆ ಚಾಚಿ ರಕ್ತ ಹೀರುತ್ತ
ಅವಳ ಬೊಗಸೆಯೊಳಗೆ ನೀವು ಆಪೋಶನ
ಸಿಂಧೂರ ಕೇಸರಿಗೆ ಅವಳೇ ಅಧಿದೇವತೆ
ನಿಮ್ಮದೆಲ್ಲ ಬರಿ ನೀರಿಗೆ ಕರಗುವ ಗುಲಾಲು
ಗಲ್ಲಿಯಲ್ಲಿ ನುಸುಳಿ ಕಂಬದ ಮರೆಯಿಂದ ಮುಲುಗುಡುವ
ನಿರ್ವೀರ್ಯರು ಬಲ್ಲಿರೇನಯ್ಯಾ ಅವಳ ಹುಟ್ಟಿನ ಕುಲವ
ಪೀಠಸ್ಥೆಯನ್ನು ಅರ್ಚಿಸಿ ಭಜಿಸಿ ನೈವೇದ್ಯ ಭುಜಿಸಿ ತಿಲಕ ಧರಿಸಿ
ಮಡದಿಯ ಕಾಡಿಗಟ್ಟಿದವನ ಹೆಸರಲ್ಲಿ ಕವಿದು ಬಿದ್ದರು
ಹರಿಯ ಚರಣದಲಿ ಹರನ ಸತಿಯ ಮರೆತು
ಕಲಿತು ಬನ್ನಿರಿ ಮೊದಲು ಕ್ಷರ ಅಕ್ಷರಗಳ
ಹ್ರಸ್ವ ದೀರ್ಘ ಒತ್ತಕ್ಷರ ಓತ್ವ ಅಲ್ಪ ಮಹಾಪ್ರಾಣಗಳ
ತೊಳೆದುಬನ್ನಿರಿ ಕಾಲು ಕಳೆದು ಹೊರಗಿನ ಮಲಗಳ
ಎರಗಿ ನಿಲ್ಲಿರಿ ಅಲ್ಲೇ ಬಾಗಿ ಮೈಕೈಗಳ
ಹೂಹಣ್ಣುಗಳ ಬಿಡಿ ಕಾಯಿ ಕರ್ಪೂರವೂ ಬೇಡಾ
ದಕ್ಷಿಣೆಯ ತಟ್ಟೆಗೆ ಬೀಳದಿದ್ದರು ಝಣಝಣ
ತೊದಲು ನಾಲಿಗೆಯಲ್ಲಿ ರಾತ್ರಿಯ ಇಳಿಯದ ನಶೆಯಲ್ಲಿ
ಮಂತ್ರ ಬಾರದು ಸ್ವಸ್ತಿ ಸರಾಗವಲ್ಲ ಅರ್ಚನೆಯ ಕುಂಕುಮ ಗಂಧವಿಲ್ಲ
ಆದರೂ ಒಲಿಯಬಹುದು ಅವಳು ಹೇಳಲಾಗದು
ನಿಮ್ಮ ಎದೆಯೊಳಗೆ ಇದ್ದರೆ ಪ್ರೇಮ
ಅರಿತರೆ ನೀವು ಅವಳು ಬರಿಯ ಬೊಂಬೆಯಲ್ಲ
ಹಾಡಿದರೆ ತಾಯಿ ಹರಸಿದರೆ ದೇವಿ.
ಒಲಿದರೆ ರತಿ ಕೆರಳಿದರೆ ಕಾಳಿ.
ಪೂರಕ ಓದಿಗೆ: ಹಿಂದೊಮ್ಮೆ (2004 ರಲ್ಲಿ ) "ಸಿಲ್ವಿಯಾ ಪ್ಲಾತ್ : ಬೆಂಕಿಯಲ್ಲಿ ಅರಳಿ ಶೈತ್ಯದಲ್ಲಿ ಕಮರಿದ ಹೂವು" ಎಂಬ ಲೇಖನ ಬರೆದಿದ್ದೆ. ಅದು ದಟ್ಸ್‌ಕನ್ನಡದಲ್ಲಿ ಪ್ರಕಟವಾಗಿತ್ತು. ಅದರಲ್ಲಿ ಪ್ರತಿಭಾರವರ ಬಗ್ಗೆಯೂ ಮತ್ತು ಖುಷ್‌ವಂತ್ ಸಿಂಗ್ ತಮ್ಮ ಅಂಕಣದಲ್ಲಿ ಅವರನ್ನು ಉಲ್ಲೇಖಿಸಿ ಬರೆದಿದ್ದರ ಬಗ್ಗೆಯೂ ಬರೆದಿದ್ದೆ.
Jul 1, 2009
ಓಂಕಾರ ಉರುಳಾಗಿ, ಅರ್ಧಚಂದ್ರ ಕತ್ತಿಯಾಗಿ, ಶಿಲುಬೆ ಬಡಿಗೆಯಾಗಿ...
ಇವತ್ತಿನ ಸುದ್ದಿ: ದ.ಕ, ಉಡುಪಿ: ವ್ಯಾಪಕ ಮಳೆ (ಪ್ರಜಾವಾಣಿ, ಜುಲೈ 2, 09)
ಎರಡುಮೂರು ವಾರದ ಹಿಂದೆ Outlook ಪತ್ರಿಕೆಯ ತಮ್ಮ "Bangalore Byte"ನಲ್ಲಿ ಸುಗತ ರಾಜು "A Poetic Implosion" ಎನ್ನುವ ಲೇಖನ ಬರೆದಿದ್ದರು. ಮಂಗಳೂರಿನಿನಲ್ಲಿ ಶ್ರೀರಾಮ ಸೇನೆ ಹೆಂಗಸರ ಮೇಲೆ ದಾಳಿ ಮಾಡಿದ್ದು ಚುನಾವಣೆಯಲ್ಲಿ ಯಾವುದೇ ತರಹದ ಕೋಪೋದ್ರಿಕ್ತ ಪ್ರತಿಕ್ರಿಯೆಯನ್ನು ತೋರಿಸದಿದ್ದರೂ ಕನಿಷ್ಟ ಎರಡು ಉತ್ತಮ ಕವನಗಳಿಗೆ ಜನ್ಮ ನೀಡಿತು ಎಂದು ಅದರಲ್ಲಿ ಅವರು ಬರೆದಿದ್ದರು. ಅದು ಎರಡು ಕನ್ನಡ ಕವನಗಳ ಬಗ್ಗೆ. ಅವರು ಉದಾಹರಿಸಿದ್ದ ಮೊದಲ ಕವನ ಕನ್ನಡದ ಪ್ರಸಿದ್ಧ ಕವಯತ್ರಿ ಪ್ರತಿಭಾ ನಂದಕುಮಾರ್‌ರದು. ಎರಡನೆಯ ಕವನ ಉದಯೋನ್ಮುಖ ಕವಯತ್ರಿ ಭಾರತಿ ದೇವಿಯವರದು.
ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಸಂವಹನ ಕಾರ್ಯಕ್ರಮದಲ್ಲಿ ಭಾರತಿಯವರನ್ನು ಭೇಟಿಯಾಗಿದ್ದೆ. ಅವರು ಕವಯತ್ರಿ ಎಂದು ಗೊತ್ತಿರಲಿಲ್ಲ. ಹಾಗಾಗಿ ಸುಗತ ಪ್ರಸ್ತಾಪಿಸಿದ್ದ ಭಾರತಿ ದೇವಿ ಯಾರು ಎಂದು ನನಗೆ ಖಚಿತವಾಗಿ ಹೊಳೆಯಲಿಲ್ಲ. ಅನುವಾದದ ವಿಷಯವೊಂದಕ್ಕೆ ನಾವಿಬ್ಬರೂ ಒಂದೆರಡು ಬಾರಿ ಇಮೇಲ್ ಸಂಪರ್ಕದಲ್ಲಿದ್ದರೂ ಅವರೆ ಈ ಕವಯತ್ರಿ ಎಂದು ಖಾತ್ರಿ ಇರಲಿಲ್ಲ. ಅವರ ಇಮೇಲ್ ಹೆಸರಿನಲ್ಲಿ "ದೇವಿ" ಇರಲಿಲ್ಲ!. ಖಾತ್ರಿಯಾದ ನಂತರ ಅವರ ಕವನ ಮತ್ತು ಅದರ ವಾಚನವನ್ನು ಕಳುಹಿಸಲು ಕೋರಿದ್ದೆ.
ಕವಯತ್ರಿ ಸವಿತಾ ನಾಗಭೂಷಣರ ಕವನ ವಾಚನದ ವಿಡಿಯೊ ಬಗ್ಗೆ ಬರೆಯುತ್ತ ಹಿಂದೊಮ್ಮೆ ನನ್ನ ಕವನಗ್ರಾಹ್ಯದ ಬಗ್ಗೆ ಬರೆದಿದ್ದೆ. ಮನಸ್ಸಿನಲ್ಲಿ ಕವನ ಓದಿಕೊಳ್ಳುವುದಕ್ಕಿಂತ ಅದರ ಗಟ್ಟಿ ಓದು ಅಥವ ಕವಿಗಳಿಂದಲೆ ಕೇಳುವ ಅದರ ವಾಚನ ನಿಜಕ್ಕೂ ಅದ್ಭುತ. ಇಲ್ಲಿ ಭಾರತಿ ದೇವಿಯವರ ಕವನ ಮತ್ತು ಅದರ ಆಡಿಯೊ ರೂಪ ಇದೆ. ಮಂಗಳೂರಿನ ಕನ್ನಡಿಗರ ವಿಭಿನ್ನ ಕನ್ನಡದ ಗತ್ತಿನಲ್ಲಿ ಸ್ವತಃ ಕವಿ ವಾಚಿಸಿದ್ದಾರೆ. ಓದಿ. ಕೇಳಿ.
ಅವಳಿಗೆ ನಗಲು ಅನುಮತಿ ಇಲ್ಲ, ಅಳಲು ಕಣ್ಣೀರಿಲ್ಲ...
ಕವಿ: ಭಾರತಿ ದೇವಿ
ನೇತ್ರಾವತಿಯ ನಗು ಬಂಡೆಗಳಿಗೆ ಬಡಿದೂ ಬಡಿದೂ
ಕೊನೆಗೊಮ್ಮೆ ಚಿಂದಿಯಾಗಿ ಇಲ್ಲವಾಯಿತು
ಅವಳು ಕಣ್ಣೀರು ಹರಿಸಿ ಹರಿಸಿ
ಬತ್ತಿಹೋಗಿದ್ದಾಳೆ...
ಅವಳ ಬೋಳು ಬಂಡೆಗಳ ಸಹಜ ಬೆತ್ತಲೆಗೆ
ಕೇಸರಿ ಬಟ್ಟೆ ಹೊದೆಸಲಾಗಿದೆ...
ನೇತ್ರಾವತಿಯ ತುಂಬಾ ಬಂಡೆಗಳು
ಅಲ್ಲಿ ಯಾವುದೂ ಸುರಳೀತ ಹರಿದುಹೋಗುವುದಿಲ್ಲ!
ಅವಳ ಮಕ್ಕಳು ಜೊತೆಗೆ ಕಿಲಿಕಿಲಿ ನಗುವಾಗ
ಕತ್ತಿ, ದೊಣ್ಣೆ, ಚೂರಿ ಹಿಡಿದ ’ಅವರು’ ಬರುತ್ತಾರೆ
ನೇತ್ರಾವತಿ ಬೆಚ್ಚಿ ’ಮಗಳನ್ನು’ ಚಿಂದಿಸೀರೆಯಡಿ
ಅಡಗಿಸಿ ಅತ್ತಿತ್ತ ನೋಡುತ್ತಾಳೆ
ಸ್ವಾತಂತ್ರ್ಯ ದೇವತೆಗೆ ಚರಮ ಗೀತೆ ಹಾಡುತ್ತಾಳೆ
ಅವಳೂರ ಯಾವ ಬಸ್ಸುಗಳೂ ಈಗ
ನಗು, ಮಾತುಗಳಿಂದ ಗಿಜಿಗುಡುವುದಿಲ್ಲ
ಅವಳೂರ ಅಂಗಡಿ ಕಟ್ಟೆಗಳಲ್ಲಿ ಈಗ
ಉಲ್ಲಾಸದ ಕಲರವವಿಲ್ಲ
ಜತೆಗೆ ಕುಳಿತವನ ಕಣ್ಣಲ್ಲೇ ಇರಿದು ಮಹಜರು ಮಾಡಿ
ಓಂಕಾರ ಉರುಳಾಗಿ, ಅರ್ಧಚಂದ್ರ ಕತ್ತಿಯಾಗಿ, ಶಿಲುಬೆ ಬಡಿಗೆಯಾಗಿ
ಎಲ್ಲೆಲ್ಲೂ ಹಸಿ ಹಸಿ ವಾಸನೆ
ಈಗೀಗ ಮಳೆಗಾಲ ಕಳೆದರೂ ನೇತ್ರಾವತಿಯ ಕೆಂಪು ನೀರು
ತಿಳಿಯಾಗುತ್ತಿಲ್ಲ...
ಎಲ್ಲರಿಗೂ ಜನ್ಮ ನೀಡಿ ಮಡಿಲಲ್ಲಿ ಸಾಕಿ ಸಲಹಿ ಪೊರೆದ
ತಾಯಿಯ ಒಡಲೆಲ್ಲ ಹುಣ್ಣಾಗಿ ಕೀವು ತುಂಬಿ
ಒಂದೇ ಮಗ್ಗುಲು ಸಾಕಾಗಿ ಹೊರಳಲು ಯತ್ನಿಸುತ್ತಾಳೆ
ನೆಲಕ್ಕಂಟಿದ ಆಕೆಗೆ ಹೊರಳುವುದೂ ಸುಲಭವಲ್ಲ
ತನ್ನ ಮೈಗಂಟಿದ ಈ ಕಲೆಯನ್ನೆಲ್ಲ ಕಳೆಯುವುದು ಹೇಗೆ?
ದುರ್ಗಂಧ ತೊಳೆಯುವುದು ಹೇಗೆ?
ತುಂಬಿ ಭೋರ್ಗರೆದು ಎಲ್ಲವನ್ನೂ ಕೊಚ್ಚಿಹಾಕಬಾರದೇಕೆ?
ಬತ್ತಿ ಬೇಯುತ್ತಿರುವ ತಾಯಿ ನೇತ್ರಾವತಿಗೀಗ
ಮುಂಗಾರಿನದೇ ಧ್ಯಾನ...
ಭಾರತಿ ದೇವಿಯವರಿಂದ ಇದರ ವಾಚನ:
ಇಲ್ಲಿಂದ .mp3 File ಅನ್ನು ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದು.
ಮತ್ತೆ ಇವತ್ತಿನ ಸುದ್ದಿಗೆ: ಈ ಒಂದೇ ಮುಂಗಾರು ನೇತ್ರಾವತಿಯ ಆಶಯವನ್ನು ಈಡೇರಿಸುತ್ತದೆಯೆ?