Jul 9, 2009

ಪ್ರತಿಭಾ ನಂದಕುಮಾರರ "ದೇವಿ" - ಹೊಡೆದು ಕೆಡವಿ ದಕ್ಕಿಸಿಕೊಳ್ಳಲಾರಿರಿ

ಪ್ರತಿಭಾ ನಂದಕುಮಾರ್ ಕನ್ನಡದ ಸಮಕಾಲೀನ ಕವಯತ್ರಿಯರಲ್ಲಿ ಪ್ರಮುಖರು. Firebrand ಕವಯತ್ರಿ ಪಟ್ಟದಿಂದ ಹಿರಿಯ ಕವಿ-ಲೇಖಕಿಯಾಗಿ ಅವರು ರೂಪಾಂತರಗೊಳ್ಳುತ್ತಿರುವ ಸಂದರ್ಭ ಇದು. ಪ್ರತಿಭಾ ಕೇವಲ ತಮ್ಮ ವೈಯಕ್ತಿಕ ಕಷ್ಟನಷ್ಟದ ಬಗ್ಗೆಯೇ ಬರೆದುಕೊಂಡವರಲ್ಲ. ಹಾಗೆಯೆ ಕೇವಲ ಕಾವ್ಯ, ರಸ, ರಸಾನುಭೂತಿ, ಮುಂತಾದ ಯಾರ ಉಸಾಬರಿಗೂ ಹೋಗದ ವಿಷಯಗಳಲ್ಲಿ ಮುಳುಗಿದವರೂ ಅಲ್ಲ. ಅವರು ಕಾಲಕಾಲಕ್ಕೆ ಸಮಕಾಲೀನ ಸಾಮಾಜಿಕ ಘಟನೆಗಳಿಗೆ ಸ್ಪಂದಿಸುತ್ತ ಬಂದಿದ್ದಾರೆ; ವಿಶೇಷವಾಗಿ ಹೆಣ್ಣು ಮತ್ತು ಅವಳ ಶೋಷಣೆಯ ಸುತ್ತಮುತ್ತಲ ವಿಷಯಗಳಿಗೆ. ಇನ್ನು ಪತ್ರಕರ್ತರಾಗಿಯೂ ಹಲವಾರು ವಿಷಯಗಳನ್ನು ದಿಟ್ಟವಾಗಿ ಎತ್ತಿಕೊಂಡವರವರು. ಕೆಲವು ಸತ್ಯಗಳ ಮೂಲ ಶೋಧಿಸಲು ತಾವೆ ಬಲಿಪಶು ಆಗಲು ಅಥವ ಖೆಡ್ಡಾಕ್ಕೆ ಕೆಡವುವ ಬೇಟೆಗಾರನಾಗಲೂ ಹಿಂಜರಿಯದವರು. ತಮ್ಮ ಸಹಲೇಖಕಿಯರಿಂದ ಪ್ರತಿಭಾರವರಷ್ಟು ಪ್ರೀತಿಸಲ್ಪಟ್ಟ ಅಥವ ದ್ವೇಷಿಸಲ್ಪಟ್ಟ ಮತ್ತೊಬ್ಬ ಕನ್ನಡದ ಲೇಖಕಿ ಇಲ್ಲ ಎಂದು ಹೇಳಿದರೆ ಅದು ತಪ್ಪಾಗುವುದಿಲ್ಲ ಎಂದುಕೊಳ್ಳುತ್ತೇನೆ. ಅದು ಅವರ ಸಾಮರ್ಥ್ಯವನ್ನಷ್ಟೇ ಅಲ್ಲದೆ ಅವರ ವೈವಿಧ್ಯಮಯ, ಚಲನಶೀಲ, ಪ್ರಯೋಗಶೀಲ, ವಿವಾದಾತ್ಮಕ, ನಿರ್ಭೀತ ವ್ಯಕ್ತಿತ್ವವನ್ನು ತೋರಿಸುತ್ತದೆ.

ಹಿಂದಿನ ಬ್ಲಾಗ್ ಲೇಖನದಲ್ಲಿ ಸುಗತ ರಾಜು ತಮ್ಮ ಇಂಗ್ಲಿಷ್ ಲೇಖನದಲ್ಲಿ ಕನ್ನಡದ ಎರಡು ಕವಿತೆಗಳನ್ನು ಪ್ರಸ್ತಾಪಿಸಿದ್ದಾರೆ ಎಂತಲೂ ಅದರಲ್ಲಿ ಒಂದು ಕವನ ಪ್ರತಿಭಾ ನಂದಕುಮಾರ್‌ರವರದು ಎಂತಲೂ ಬರೆದಿದ್ದೆ. ಆ ಲೇಖನದ ಬರೆದ ನಂತರ ಪ್ರತಿಭಾರವರ ಕವನವನ್ನೂ ಒಮ್ಮೆ ಓದಬೇಕೆನಿಸಿತು. ಹಾಗೆಯೆ ಸಾಧ್ಯವಾದರೆ ಅದನ್ನೂ ಕೇಳಬೇಕೆನಿಸಿತು. ಕೂಡಲೆ ಪ್ರತಿಭಾರವರಿಗೆ ಪತ್ರ ಬರೆದೆ. ಅವರು ತಮ್ಮ ಕವನ ಕಳುಹಿಸಿದರು. ಹಾಗೆಯೆ ತಮ್ಮ ಕವನದ ವಾಚನವನ್ನೂ ಇಷ್ಟರಲ್ಲೆ ಕಳುಹಿಸುವುದಾಗಿ ತಿಳಿಸಿದರು. ಈಗ ಅವರ ಕವನ ಮಾತ್ರ ಇಲ್ಲಿ ಕೊಡುತ್ತಿದ್ದೇನೆ. ಅವರ ವಾಚನದ ಆಡಿಯೋ ಬಂದನಂತರ ಅದರ ಲಿಂಕ್ ಸಹ ಇದೇ ಬ್ಲಾಗ್‌ನಲ್ಲಿ ಕೊಡುತ್ತೇನೆ.

"ದೇವಿ"
ಕವಿ: ಪ್ರತಿಭಾ ನಂದಕುಮಾರ್

ಅವಳು ಮಲವಿಲ್ಲದ ನಿರ್ಮಲೆ.
ಅವಳು ಲೋಲಾಕ್ಷಿಕಾಮರೂಪಿಣಿ

ಕಾಮಕ್ಕೆ ಯೋಗೇಶ್ವರಿ, ಕ್ರೋಧಕ್ಕೆ ಮಾಹೇಶ್ವರಿ
ಲೋಭಕ್ಕೆ ವೈಷ್ಣವಿ, ಮದಕ್ಕೆ ಬ್ರಹ್ಮಾಣಿ,
ಮೋಹಕ್ಕೆ ಸ್ವಯಂಭು ಕಲ್ಯಾಣಿ, ಮಾತ್ಸರ್ಯಕ್ಕೆ ಇಂದ್ರಜಾ
ಪೈಶುನ್ಯಕ್ಕೆ ಯಮದಂಡಭಧ್ರಾ, ಅಸೂಯೆಗೆ ವಾರಾಹೀ.

ದೇವಿಯೆಂದರೆ ಇಚ್ಚಾಶಕ್ತಿಜ್ಞಾನಶಕ್ತಿಕ್ರಿಯಾಶಕ್ತಿಸ್ವರೂಪಿಣಿ.

ಅವಳು ರುಧಿರಸ್ಥಿತಾ, ಮಾಂಸನಿಷ್ಠಾ, ಮಧುಪ್ರೀತಾ,
ಮಾಧ್ವೀಪಾನಾಲಸಾಮತ್ತಾ, ಬಲಿಪ್ರಿಯಾ, ಸುಖಾರಾಧ್ಯಾ,
ಲಾಸ್ಯಪ್ರಿಯಾ, ವಿಶೃಂಖಲಾ, ರತಿಪ್ರಿಯಾ, ಕಾಮಕೇಲಿತರಂಗಿತಾ

ಶಕ್ತಿ ದೇವಿಯ ಯೋಗವಿಲ್ಲದಿದ್ದರೆ
ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವರು
ಪ್ರೇತಗಳಂತೆ ನಿಶ್ಚಲರು
ಅವಳು ಅವರನ್ನೇರಿ ಕುಳಿತ ಪಂಚಪ್ರೇತಾಸನಾಸೀನಾ

ಅವನು ಶುದ್ಧಜ್ಞಾನಸ್ವರೂಪನಾದರೆ ಅವಳು ವಿಮರ್ಶಾಸ್ವರೂಪಳು.
ಅವಳು ಅಂತರ್ಮುಖಸಮಾರಾಧ್ಯಾ ಬಹಿರ್ಮುಖಸುದುರ್ಲಭಾ
ಅವಳು ಕಾಮೇಶಿ, ಕಾಮಿತಾರ್ಥದಾ, ಕಾಮಸಂಜೀವಿನೀ, ಕಾಮದಾಯಿನೀ
ಅವಳು ಲಬ್ಧಪತಿಃ ಲಬ್ಧಭೋಗಾ ಲಬ್ಧಸುಖಾ ಲಬ್ಧಕಾಮಾ
ತನ್ನಿಚ್ಚೆಯಂತೆ ಪತಿ, ಭೋಗ, ಸುಖ, ಕಾಮವನ್ನು ಹೊಂದಿದವಳು.

ಅವಳು ಕುಡಿಯಬಹುದು, ಕುಣಿಯಬಹುದು, ಕೇಳಿಯಲ್ಲಿ ಮುಳುಗಿ ತೇಲಬಹುದು
ಹಿಡಿಯಲಾರಿರಿ ನೀವು ಅವಳನ್ನು ಪಬ್ಬುಗಳಲ್ಲಿ
ಹೊಡೆದು ಕೆಡವಿ ದಕ್ಕಿಸಿಕೊಳ್ಳಲಾರಿರಿ
ಮಬ್ಬು ಬೆಳಕಲ್ಲಿ ಕಾಣಲಾರಿರಿ ನಿಮ್ಮ ಮಂಜುಕಣ್ಣುಗಳಲ್ಲಿ
ಎದ್ದುಬರುತ್ತಾಳೆ ನೂರು ನಾಲಿಗೆ ಚಾಚಿ ರಕ್ತ ಹೀರುತ್ತ
ಅವಳ ಬೊಗಸೆಯೊಳಗೆ ನೀವು ಆಪೋಶನ
ಸಿಂಧೂರ ಕೇಸರಿಗೆ ಅವಳೇ ಅಧಿದೇವತೆ
ನಿಮ್ಮದೆಲ್ಲ ಬರಿ ನೀರಿಗೆ ಕರಗುವ ಗುಲಾಲು
ಗಲ್ಲಿಯಲ್ಲಿ ನುಸುಳಿ ಕಂಬದ ಮರೆಯಿಂದ ಮುಲುಗುಡುವ
ನಿರ್ವೀರ್ಯರು ಬಲ್ಲಿರೇನಯ್ಯಾ ಅವಳ ಹುಟ್ಟಿನ ಕುಲವ
ಪೀಠಸ್ಥೆಯನ್ನು ಅರ್ಚಿಸಿ ಭಜಿಸಿ ನೈವೇದ್ಯ ಭುಜಿಸಿ ತಿಲಕ ಧರಿಸಿ
ಮಡದಿಯ ಕಾಡಿಗಟ್ಟಿದವನ ಹೆಸರಲ್ಲಿ ಕವಿದು ಬಿದ್ದರು
ಹರಿಯ ಚರಣದಲಿ ಹರನ ಸತಿಯ ಮರೆತು

ಕಲಿತು ಬನ್ನಿರಿ ಮೊದಲು ಕ್ಷರ ಅಕ್ಷರಗಳ
ಹ್ರಸ್ವ ದೀರ್ಘ ಒತ್ತಕ್ಷರ ಓತ್ವ ಅಲ್ಪ ಮಹಾಪ್ರಾಣಗಳ
ತೊಳೆದುಬನ್ನಿರಿ ಕಾಲು ಕಳೆದು ಹೊರಗಿನ ಮಲಗಳ
ಎರಗಿ ನಿಲ್ಲಿರಿ ಅಲ್ಲೇ ಬಾಗಿ ಮೈಕೈಗಳ
ಹೂಹಣ್ಣುಗಳ ಬಿಡಿ ಕಾಯಿ ಕರ್ಪೂರವೂ ಬೇಡಾ
ದಕ್ಷಿಣೆಯ ತಟ್ಟೆಗೆ ಬೀಳದಿದ್ದರು ಝಣಝಣ
ತೊದಲು ನಾಲಿಗೆಯಲ್ಲಿ ರಾತ್ರಿಯ ಇಳಿಯದ ನಶೆಯಲ್ಲಿ
ಮಂತ್ರ ಬಾರದು ಸ್ವಸ್ತಿ ಸರಾಗವಲ್ಲ ಅರ್ಚನೆಯ ಕುಂಕುಮ ಗಂಧವಿಲ್ಲ

ಆದರೂ ಒಲಿಯಬಹುದು ಅವಳು ಹೇಳಲಾಗದು
ನಿಮ್ಮ ಎದೆಯೊಳಗೆ ಇದ್ದರೆ ಪ್ರೇಮ
ಅರಿತರೆ ನೀವು ಅವಳು ಬರಿಯ ಬೊಂಬೆಯಲ್ಲ
ಹಾಡಿದರೆ ತಾಯಿ ಹರಸಿದರೆ ದೇವಿ.
ಒಲಿದರೆ ರತಿ ಕೆರಳಿದರೆ ಕಾಳಿ.


ಪೂರಕ ಓದಿಗೆ: ಹಿಂದೊಮ್ಮೆ (2004 ರಲ್ಲಿ ) "ಸಿಲ್ವಿಯಾ ಪ್ಲಾತ್‌ : ಬೆಂಕಿಯಲ್ಲಿ ಅರಳಿ ಶೈತ್ಯದಲ್ಲಿ ಕಮರಿದ ಹೂವು" ಎಂಬ ಲೇಖನ ಬರೆದಿದ್ದೆ. ಅದು ದಟ್ಸ್‌ಕನ್ನಡದಲ್ಲಿ ಪ್ರಕಟವಾಗಿತ್ತು. ಅದರಲ್ಲಿ ಪ್ರತಿಭಾರವರ ಬಗ್ಗೆಯೂ ಮತ್ತು ಖುಷ್‌ವಂತ್ ಸಿಂಗ್ ತಮ್ಮ ಅಂಕಣದಲ್ಲಿ ಅವರನ್ನು ಉಲ್ಲೇಖಿಸಿ ಬರೆದಿದ್ದರ ಬಗ್ಗೆಯೂ ಬರೆದಿದ್ದೆ.

3 comments:

Anonymous said...

ಈ ಪದ್ಯ ಅರ್ಥವಾಗಲಿಲ್ಲ, ರವಿ. ದಯವಿಟ್ಟು ಇದಕ್ಕೊಂದು ಭಾಷ್ಯ ಬರೆದು ನನ್ನಂತಹ ಓದುಗರಿಗೆ ಉಪಕಾರ ಮಾಡಿ.

Anonymous said...

ಇದು ಯಾಕೋ ವೈದಿಕ ಸಂಪ್ರದಾಯದವರು ಬರೆಯುವ ಸಂಸ್ಕೃತ ಭೂಯಿಷ್ಟ ದೇವಿ ಸ್ತೋತ್ರದ ಹಾಗೆ ಇದೆಯಲ್ಲ! ಸರಳವಾದ ಕನ್ನಡದಲ್ಲೇ ಬರೆದಿದ್ದರೆ ಎಲ್ಲರಿಗೂ ದಕ್ಕುತ್ತಿತ್ತಲ್ಲ!

Anonymous said...

ಮಾನ್ಯ ರವಿಯವರೆ, "ಕೇವಲ ಕಾವ್ಯ, ರಸ, ರಸಾನುಭೂತಿ, ಮುಂತಾದ ಯಾರ ಉಸಾಬರಿಗೂ ಹೋಗದ ವಿಷಯ" ಎಂದೆಲ್ಲಾ ಬರೆದಿದ್ದೀರಿ. ರಸ ಹಾಗೂ ರಸಾನುಭೂತಿ ಎಲ್ಲರ ಉಸಾಬರಿಗೆ ಹೋಗಿ ಬೇಳೆಬೇಯಿಸಿಕೊಳ್ಳುವ ಪುಢಾರಿಗಳಿಗೆ ಕನಿಷ್ಠವಾಗಿ ಕಂಡಿರಬಹುದು. ಆದರೆ ಸಾಹಿತ್ಯಪ್ರೇಮಿಗಳಾದ ನೀವು ಹೀಗೆಲ್ಲಾ ಬರೆಯುವುದು ಸರಿಯಲ್ಲ. ನೀವು ಬಹುವಾಗಿ ಮೆಚ್ಚುವ ಕುವೆಂಪು, ವೆಂಕಣ್ಣಯ್ಯ ಮೊದಲಾದ ದಿಗ್ಗಜರಿಗೂ ರಸಾನುಭವ ಕನಿಷ್ಟ ಎಂದು ಅನಿಸಿರಲಿಲ್ಲ. ರಸವಿಲ್ಲದೇ ಕಾವ್ಯವೇ ಇಲ್ಲ ಎಂದು ಅವರು ತಿಳಿದಿದ್ದರು. ಕಾವ್ಯಮೀಮಾಂಸೆ ಬಗ್ಗೆ ಸ್ವಲ್ಪವಾದರೂ ವಿನಯ ಗೌರವವನ್ನು ಬೆಳೆಸಿಕೊಳ್ಳುವುದು ಉತ್ತಮ. ಇಲ್ಲವಾದರೆ "ಸೊಕ್ಕು ಸಂಸ್ಕೃತಿ"ಯ ಕಾರಣದಿಂದ ಗೌರವವನ್ನು ಕಳೆದುಕೊಳ್ಳುತ್ತೀರಿ.