Sep 25, 2009

ನಮ್ಮ ಬಡಮಕ್ಕಳಿಗೆ ಬೇಸಿಗೆ ರಜೆಗಳು ಬೇಕೆ?

[ವಿಕ್ರಾಂತ ಕರ್ನಾಟಕದ ಅಕ್ಟೋಬರ್ 2,2009 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.
ಲೇಖನ ಸರಣಿಯ ಹಿಂದಿನ ಲೇಖನಗಳು:
ಮೊದಲನೆಯ ಲೇಖನ: "ಹೊರಗಣವರು" - ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ!
ಎರಡನೆಯದು: ಹುಟ್ಟಿದ ಘಳಿಗೆ ಸರಿ ಇರಬೇಕು...
ಮೂರನೆಯದು: ದಶಸಹಸ್ರ ಗಂಟೆಯೆಂಬ ಪ್ರತಿಭಾ-ನಿಯಮ...
ನಾಲ್ಕನೆಯದು: ಯಾವುದಕ್ಕೂ "ಸಂಸ್ಕಾರ" ಇರಬೇಕ್ರಿ !
ಐದನೆಯದು: ವಿಮಾನ ಅಪಘಾತಗಳಲ್ಲಿ ಭಾಷೆ ಮತ್ತು ಪರಂಪರೆಯ ಪಾತ್ರ
ಆರನೆಯದು: ಗಣಿತಕ್ಕೂ ಭಾಷೆಗೂ, ಗಣಿತಕ್ಕೂ ಭತ್ತದ ಕೃಷಿಗೂ ಎಲ್ಲಿಂದೆಲ್ಲಿಯ ಸಂಬಂಧ?]


ವರ್ಷಕ್ಕೊಂದು ಸಾರಿ ನಮ್ಮ ರಾಜ್ಯದ ಶಾಲೆಗಳ ಮೌಲ್ಯಮಾಪನ ನಡೆಯುತ್ತದೆ. ಹಾಗೆಯೆ ಜಿಲ್ಲಾವಾರು ಶೈಕ್ಷಣಿಕ ಸಾಧನೆಯೂ. ಯಾವ ರೀತಿ? 7ನೇ ತರಗತಿಯ, ಅಥವ ಹತ್ತನೆ ತರಗತಿಯ, ಅಥವ ದ್ವಿತೀಯ ಪಿಯುಸಿಯ ಫಲಿತಾಂಶಗಳ ಮೂಲಕ. ಇವುಗಳಲ್ಲಿ ಹತ್ತನೆಯ ತರಗತಿಯ ಮತ್ತು ದ್ವಿತೀಯ ಪಿಯುಸಿಯ ಫಲಿತಾಂಶಗಳಂತೂ ಇದ್ದುದರಲ್ಲಿ ಉತ್ತಮವಾದ ಅಂಕಿಅಂಶಗಳನ್ನು ಒದಗಿಸುತ್ತವೆ. ಶಾಲೆ ಅಥವ ಕಾಲೇಜೊಂದು ರಾಜ್ಯಮಟ್ಟದ ಲೆಕ್ಕಾಚಾರದಲ್ಲಿ ಯಾವ ಸ್ಥಾನದಲ್ಲಿದೆ ಎನ್ನುವುದರ ಜೊತೆಗೆ, ಜಿಲ್ಲಾವಾರು ಮತ್ತು ನಗರ/ಗ್ರಾಮೀಣ ವಿದ್ಯಾರ್ಥಿಗಳ ಕಲಿಕಾಮಟ್ಟವನ್ನು ಈ ಪರೀಕ್ಷೆಗಳ ಅಂಕಿಅಂಶಗಳಿಂದ ತಿಳಿದುಕೊಳ್ಳಬಹುದು.

ಈ ಪರೀಕ್ಷೆಗಳಲ್ಲಿ ಪ್ರತಿವರ್ಷ ಕೆಲವೇ ಕೆಲವು ಶಾಲೆಗಳು ಅತಿಹೆಚ್ಚಿನ ರ್‍ಯಾಂಕ್ ಪಡೆಯುತ್ತವೆ. ಅವುಗಳಲ್ಲಿ ಖಾಸಗಿ ಶಾಲಾಕಾಲೇಜುಗಳೆ ಹೆಚ್ಚಿರುತ್ತವೆ ಮತ್ತು ಅವೆಲ್ಲ ನಗರಕೇಂದ್ರಿತವಾಗಿರುತ್ತವೆ. ಕೆಲವು ಸರ್ಕಾರಿ ಶಾಲಾಕಾಲೇಜುಗಳೂ ಈ ಪಟ್ಟಿಯಲ್ಲಿ ಅಪರೂಪಕ್ಕೆಂಬಂತೆ ಸ್ಥಾನ ಪಡೆಯುತ್ತವೆ. ಹಾಗೆಯೆ, ತಮ್ಮ ಶಾಲೆಯಲ್ಲಿ ಓದಿದ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಆ ವರ್ಷದ ಪರೀಕ್ಷೆಗಳಲ್ಲಿ ಉತ್ತೀರ್ಣನಾಗದ ಶೂನ್ಯಸಂಪಾದನೆಯನ್ನೂ ಕೆಲವು ಸರ್ಕಾರಿ/ಗ್ರಾಮೀಣ ಶಾಲೆಗಳು ದಾಖಲಿಸುತ್ತವೆ.

ಈ ಶೂನ್ಯಸಂಪಾದನೆ ಅಥವ ಕಳಪೆ ಸಾಧನೆ ಯಾಕಿರಬಹುದು? ಅಲ್ಲಿನ ಶಾಲೆಗಳಲ್ಲಿ ಉಪಾಧ್ಯಾಯರು ಸರಿಯಾಗಿ ಪಾಠ ಮಾಡುವುದಿಲ್ಲವೆ? ಆ ಶಾಲೆಯ ಸುತ್ತಮುತ್ತಲ ಊರುಗಳ ಮಕ್ಕಳು ಪಾಠ ಕಲಿಯಲುಬಾರದಷ್ಟು ಅಯೋಗ್ಯರೆ? ಅಥವ ಅವರು ಸಾಕಷ್ಟು ಅಭ್ಯಾಸ ಮಾಡುತ್ತಿಲ್ಲವೆ? ಆ ಮಕ್ಕಳ ಅಪ್ಪಅಮ್ಮಂದಿರಿಗೆ ಮಕ್ಕಳ ಬಗ್ಗೆ ಕಾಳಜಿ ಇಲ್ಲವೆ? ಅದಕ್ಕೆ ಪೂರಕವಾದ ವಾತಾವರಣ ಆ ಶಾಲೆಯ ಪರಿಸರದಲ್ಲಿ, ಆಯಾಯ ಜಿಲ್ಲೆಗಳಲ್ಲಿ ಇಲ್ಲವೆ? ಇಲ್ಲಿ ಜವಾಬ್ದಾರಿಯುತ ಸಮಾಜದ ಪಾತ್ರ ಏನೂ ಇಲ್ಲವೆ?

ಕಾರ್ಲ್ ಅಲೆಕ್ಸಾಂಡರ್ ಎನ್ನುವ ಸಮಾಜಶಾಸ್ತ್ರಜ್ಞನೊಬ್ಬ ಅಮೆರಿಕದ ಬಾಲ್ಟಿಮೋರ್ ನಗರದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಓದಿನ ಸಾಮರ್ಥ್ಯದ ಅಧ್ಯಯನ ಮಾಡಿದ. ಇಲ್ಲಿಯ ಮಕ್ಕಳ ಗಣಿತ ಮತ್ತು ಓದಿನ ಸಾಮರ್ಥ್ಯವನ್ನು ಪರೀಕ್ಷಿಸಲು 'ಕ್ಯಾಲಿಫೋರ್ನಿಯ ಅಚೀವ್‌ಮೆಂಟ್ ಟೆಸ್ಟ್' ಎನ್ನುವ ಪರೀಕ್ಷೆಯನ್ನು ನಡೆಸಲಾಗುತ್ತದೆ. ಬಾಲ್ಟಿಮೋರ್ ನಗರದ ವಿದ್ಯಾರ್ಥಿಗಳ ಆ ಟೆಸ್ಟಿನ ಫಲಿತಾಂಶಗಳನ್ನು ಹರಡಿಕೊಂಡು ಕೂತ ಆತ ಅದನ್ನು ಆಯಾ ಮಕ್ಕಳ ಸಾಮಾಜಿಕ-ಆರ್ಥಿಕ ವರ್ಗಗಳ ಅನುಸಾರವಾಗಿ ವಿಂಗಡಿಸಿ, ಸರಾಸರಿ ಆಧಾರದ ಮೇಲೆ ಒಂದು ಪಟ್ಟಿ ತಯಾರಿಸಿದ. ಇದು ಶಾಲಾವರ್ಷದ ಕೊನೆಯಲ್ಲಿ ನಡೆಸಿದ ಪರೀಕ್ಷೆಯ ಫಲಿತಾಂಶದ ವಿವರಗಳ ಪಟ್ಟಿ. ಇಲ್ಲಿ ಬೇರೆಬೇರೆ ವರ್ಗಗಳಿಗೆ ಸೇರಿದ ಮಕ್ಕಳಲ್ಲಿ ಕಾಣಿಸುವ ವ್ಯತ್ಯಾಸಗಳನ್ನು ಗಮನಿಸಿ.

ವರ್ಗಒಂದನೆ ತರಗತಿಎರಡನೆ ತರಗತಿಮೂರನೆ ತರಗತಿನಾಲ್ಕನೆ ತರಗತಿಐದನೆ ತರಗತಿ
ಬಡ/ಕೆಳ329375397433461
ಮಧ್ಯಮ348388425467497
ಶ್ರೀಮಂತ/ಮೇಲ್ವರ್ಗ361418460506534

ಮೊದಲಿಗೆ ಒಂದನೆ ತರಗತಿಯ ಮಕ್ಕಳ ಅಂಕಗಳನ್ನು ಗಮನಿಸೋಣ. ಆರಂಭದಲ್ಲಿ ಹಾಗೆ ಹೇಳಿಕೊಳ್ಳುವಂತಹ ವ್ಯತ್ಯಾಸಗಳೇನೂ ಕಾಣಿಸುವುದಿಲ್ಲ. ಇರುವ ವ್ಯತ್ಯಾಸಗಳು ಮಕ್ಕಳ ಕೌಟುಂಬಿಕ ಹಿನ್ನೆಲೆಯ ಕಾರಣಗಳಿಂದ ಸಹಜವಾದದ್ದು ಎಂತಲೆ ಹೇಳಬಹುದು. ಶ್ರೀಮಂತ ಮನೆಗಳಿಂದ ಬಂದ ಮಕ್ಕಳು ಬಡ ವರ್ಗದ ಮಕ್ಕಳಿಗಿಂತ ಸುಮಾರು 32 ಅಂಕಗಳಷ್ಟು ಮೇಲಿದ್ದಾರೆ. ಈ ವ್ಯತ್ಯಾಸವನ್ನು ಹಾಗೆಯೆ ಗಮನಿಸುತ್ತ ಹೋಗಿ. ಬರುಬರುತ್ತ ಅದು ಹಿಗ್ಗುತ್ತಾ ಹೋಗುತ್ತದೆ. ಐದನೆ ತರಗತಿಯ ಬಳಿಗೆ ಬರುವಷ್ಟರಲ್ಲಿ ಈ ವ್ಯತ್ಯಾಸ ಆರಂಭದ ಎರಡರಷ್ಟು ಆಗಿಬಿಟ್ಟಿದೆ. ಅಂದರೆ, ಐದನೆಯ ತರಗತಿಯ ಹೊತ್ತಿಗೆಲ್ಲ ಮೇಲ್ವರ್ಗದ ಮಕ್ಕಳು ಕೆಳವರ್ಗದ ಮಕ್ಕಳಿಗಿಂತ ಬಹಳ ಪಾಲು ಮುಂದಕ್ಕೆ ಹೋಗಿಬಿಟ್ಟಿದ್ದಾರೆ.

ಬಾಲ್ಟಿಮೋರ್ ನಗರದ ಶಾಲೆಗಳು ಮಕ್ಕಳಿಗೆ ಈ ಪರೀಕ್ಷೆಯನ್ನು ಶಾಲಾವರ್ಷದ ಕೊನೆಯಲ್ಲಿ ಮಾತ್ರವಲ್ಲದ ಬೇಸಿಗೆ ರಜಯ ನಂತರ ಆರಂಭವಾಗುವ ಶಾಲೆಯ ಆರಂಭದಲ್ಲೂ ಕೊಡುತ್ತದೆ. ಈ ಸಮಯದಲ್ಲಿ ನಡೆಸುವ ಪರೀಕ್ಷೆಯ ಫಲಿತಾಂಶಗಳು ಏನನ್ನು ಹೇಳುತ್ತವೆ ಎಂದರೆ, ಶಾಲೆಗೆ ಬೇಸಿಗೆ ರಜೆ ಇದ್ದ ಸಮಯದಲ್ಲಿ ಮಕ್ಕಳು ಎಷ್ಟನ್ನು ಕಲಿತಿರುತ್ತಾರೆ, ಅಥವ ಹಿಂದೆ ಕಲಿತದ್ದನ್ನು ಎಷ್ಟು ಉಳಿಸಿಕೊಂಡಿರುತ್ತಾರೆ ಎನ್ನುವುದನ್ನು. ಆ ವಿವರಗಳು ನಿಜಕ್ಕೂ ಆಘಾತಕಾರಿಯಾಗಿವೆ. ಆ ವಿವರಗಳನ್ನು ಗಮನಿಸುವ ಮೊದಲು, ಆ ಮಕ್ಕಳ ಯೋಗ್ಯತೆಯ ಬಗ್ಗೆ ಸ್ವಲ್ಪ ಯೋಚಿಸೋಣ. ಬಹುಶಃ ಈ ಬಡಮಕ್ಕಳು ನಿಜಕ್ಕೂ ಅಯೋಗ್ಯರೆ ಇರಬೇಕು. ಅವರಿಗೆ ಕಲಿಯುವ ಯೋಗ್ಯತೆ ಮತ್ತು ಶಿಸ್ತು ಇಲ್ಲದೆ ಇರಬೇಕು. ಸರಸ್ವತಿ ದೀನದಲಿತರಿಗೆಲ್ಲ ಒಲಿಯುವುದಿಲ್ಲ. ಅದು ಜನ್ಮಾಂತರದ ಕರ್ಮಫಲ... ಇಂತಹ ಒಂದು ಅಭಿಪ್ರಾಯಕ್ಕೆ ಬಂದುಬಿಡುವ ಮುನ್ನ ನಾವು ಈ ಕೆಳಗಿನ ಪಟ್ಟಿಯನ್ನು ನೋಡೋಣ. ಇದು ವರ್ಷದ ಶಾಲಾ ಸಮಯದಲ್ಲಿ ಮಕ್ಕಳು ಕಲಿತ ಪ್ರಮಾಣದ ಅಂಕಗಳು. ಅಂದರೆ, ವರ್ಷದ ಆರಂಭದಲ್ಲಿ ಇದ್ದ ಅಂಕಗಳು ಮತ್ತು ವರ್ಷದ ಅಂತ್ಯಕ್ಕೆ ಅವರು ಗಳಿಸಿದ ಅಂಕಗಳ ವ್ಯತ್ಯಾಸದ ಪಟ್ಟಿ ಇದು. ಮಕ್ಕಳ ಕಲಿಕಾ ಸಾಮರ್ಥ್ಯದಲ್ಲಿ ನಿಜಕ್ಕೂ ಇರಬಹುದಾದ ವ್ಯತ್ಯಾಸಗಳನ್ನು ಹೇಳುವ ಪಟ್ಟಿ ಇದೇನೆ.
ವರ್ಗಒಂದನೆ ತರಗತಿಎರಡನೆ ತರಗತಿಮೂರನೆ ತರಗತಿನಾಲ್ಕನೆ ತರಗತಿಐದನೆ ತರಗತಿಮೊತ್ತ
ಬಡ/ಕೆಳ5546303325189
ಮಧ್ಯಮ6943344127214
ಶ್ರೀಮಂತ/ಮೇಲ್ವರ್ಗ6039342823184

ಅರೆ! ಇಲ್ಲಿ ಯಾವ ವರ್ಗವೂ ಗಂಭೀರ ವ್ಯತ್ಯಾಸಗಳನ್ನೆ ತೋರಿಸುತ್ತಿಲ್ಲ. ಶಾಲಾ ಸಮಯದಲ್ಲಿ ಎಲ್ಲಾ ಮಕ್ಕಳೂ ಹೆಚ್ಚುಕಮ್ಮಿ ಒಂದೇ ಮಟ್ಟದಲ್ಲಿ ಕಲಿತಿದ್ದಾರೆ. ಸಮಾನವಾದ ಅಂಕಗಳನ್ನೆ ಪೇರಿಸಿದ್ದಾರೆ.

ಆದರೆ, ಮೊದಲ ಪಟ್ಟಿಯಲ್ಲಿ ಹಿಗ್ಗುತ್ತಾ ಹೋದ ವ್ಯತ್ಯಾಸವನ್ನು ಕಂಡೆವಲ್ಲ. ಅದು ಆದದ್ದು ಹೇಗೆ? ಹೇಗೆಂದರೆ, ಆ ವ್ಯತ್ಯಾಸ ಆರಂಭವಾಗುತ್ತಿದ್ದುದ್ದೆ ಶಾಲೆಯ ಆರಂಭದಲ್ಲಿ. ಅಂದರೆ, ಮಕ್ಕಳು ಬೇಸಿಗೆ ರಜೆಯ ಎರಡು-ಮೂರು ತಿಂಗಳುಗಳಲ್ಲಿ ಕಲಿತಿದ್ದರಲ್ಲಿ; ಬಿಟ್ಟದ್ದರಲ್ಲಿ.

ಇದು ಶಾಲೆಯ ಕೊನೆಯಲ್ಲಿ ತೆಗೆದುಕೊಂಡ ಪರೀಕ್ಷೆಗೂ, ಮತ್ತೆ ಶಾಲೆ ಆರಂಭವಾದ ಸಮಯದಲ್ಲಿ ತೆಗೆದುಕೊಂಡ ಪರೀಕ್ಷೆಯ ಅಂಕಗಳಿಗೂ ಇರುವ ವ್ಯತ್ಯಾಸದ ಪಟ್ಟಿ.
ವರ್ಗ1 ರ ನಂತರ2 ರ ನಂತರ3 ರ ನಂತರ4 ರ ನಂತರಮೊತ್ತ
ಬಡ/ಕೆಳ-3.67-1.72.742.890.26
ಮಧ್ಯಮ-3.114.183.682.347.09
ಶ್ರೀಮಂತ/ಮೇಲ್ವರ್ಗ15.389.2214.5113.3852.49

ಮೇಲಿನ ಮೂರೂ ಪಟ್ಟಿಯನ್ನು ಗಮನಿಸಿ ಒಟ್ಟಾರೆಯಾಗಿ ಹೇಳುವುದಾದರೆ, ಬಡಮಕ್ಕಳು ಶಾಲಾ ರಜೆಯ ಸಮಯದಲ್ಲಿ ಶಾಲೆಯ ಓದಿಗೆ ಪೂರಕವಾದ ಏನನ್ನೂ ಕಲಿಯುವುದಿಲ್ಲ. ಮಧ್ಯಮ ವರ್ಗದವರು ಒಂದಷ್ಟು ಹೆಚ್ಚಿಗೆ ಕಲಿಯುತ್ತಾರೆ. ಮೇಲ್ವರ್ಗದವರಂತೂ ಇತರೆಲ್ಲರಿಗಿಂತ ಹೆಚ್ಚು ಕಲಿತಿದ್ದಾರೆ! ಒಂದನೆ ತರಗತಿ ಮುಗಿಸಿದ ಶ್ರೀಮಂತರ ಮಕ್ಕಳು ಬೇಸಿಗೆ ರಜೆ ಮುಗಿಸಿಕೊಂಡು ಎರಡನೆ ತರಗತಿಗೆ ಶಾಲೆಗೆ ವಾಪಸು ಬರುವಷ್ಟರಲ್ಲಿ ತಮ್ಮ ಓದುವ ಸಾಮರ್ಥ್ಯವನ್ನು 15 ಅಂಕಗಳಷ್ಟು ಹೆಚ್ಚಿಸಿಕೊಂಡು ಬಂದಿದ್ದರೆ, ಅದೇ ಬಡಮಕ್ಕಳು ತಾವು ಶಾಲಾವರ್ಷದಲ್ಲಿ ರೂಢಿಸಿಕೊಂಡಿದ್ದ ಸಾಮರ್ಥ್ಯದಲ್ಲಿ 4 ಅಂಕಗಳಷ್ಟನ್ನು ಕಳೆದುಕೊಂಡು ಬಂದಿದ್ದಾರೆ. ಕೊನೆಯ ಲಂಬಸಾಲುವಿನ ಪ್ರಕಾರ ನಾಲ್ಕೂ ಬೇಸಿಗೆ ರಜೆಗಳ ಅವಧಿಯಲ್ಲಿ ಬಡಮಕ್ಕಳ ಓದಿನ ಸಾಮರ್ಥ 0.26 ರಷ್ಟು ಮಾತ್ರ ಹೆಚ್ಚಾಗಿದೆ. ಅದೇ ಉಳ್ಳವರ ಮಕ್ಕಳು 52.49 ಅಂಕಗಳಷ್ಟು ಸಾಮರ್ಥ್ಯವನ್ನು ಆ ರಜೆಗಳಲ್ಲಿಯೆ ಗಳಿಸಿಕೊಂಡಿದ್ದಾರೆ. ನಾವು ಮೊದಲ ಪಟ್ಟಿಯಲ್ಲಿ ನೋಡಿದ ಮೇಲ್ವರ್ಗದವರು ಕೆಳವರ್ಗದವರ ಮೇಲೆ ಸಾಧಿಸುತ್ತ ಹೋದ ಹಿರಿಮೆ ಸಾಧ್ಯವಾದದ್ದು ಅವರು ಶಾಲೆಗೆ ರಜೆ ಇದ್ದ ಸಮಯದಲ್ಲಿ ಕಲಿತ ಈ ವಿದ್ಯೆಯಿಂದಲೆ ಹೊರತು ಬೇರೆಯದರಿಂದಲ್ಲ.

ಈಗ ಮೇಲಿನ ಕೊನೆಯ ಎರಡು ಪಟ್ಟಿಗಳನ್ನು ಇಟ್ಟುಕೊಂಡು ಇದರಲ್ಲಿ ಕಾಣಿಸುತ್ತಿರುವ ಸಮಸ್ಯೆ ಮತ್ತು ಸಿಗಬಹುದಾದ ಪರಿಹಾರವನ್ನು ಗಮನಿಸೋಣ. ತಮ್ಮ ಕೌಟುಂಬಿಕ ಹಿನ್ನೆಲೆಯ ಹೊರತಾಗಿಯೂ ಶಾಲಾಕೋಣೆಯಲ್ಲಿ ಮಕ್ಕಳು ಕಲಿಯುತ್ತಾರೆ ಎಂದಾದರೆ, ಶಾಲೆ ತನ್ನ ಕೆಲಸವನ್ನು ನಿರ್ವಹಿಸುತ್ತಿದೆ ಎಂತಲೆ ಹೇಳಬೇಕು. ಆದರೆ ಓಳ್ಳೆಯ ಸಾಧನೆ ಮಾಡದ ಮಕ್ಕಳಿಗೂ ಈ ಹಾಲಿ ಶಾಲಾವ್ಯವಸ್ಥೆಗೂ ಇರುವ ಸಮಸ್ಯೆ ಏನೆಂದರೆ ಅವರಿಗೆ ಅಗತ್ಯವಾದಷ್ಟು ಕಾಲವೂ ಶಾಲಾಪಾಠಗಳು ಆಗುತ್ತಿಲ್ಲ. ಮಧ್ಯೆಮಧ್ಯೆ ಅನಗತ್ಯ ಬಿಡುವು-ರಜೆಗಳು ಬಂದು ಅವರ ಕಲಿಕಾ ಸಾಮರ್ಥ್ಯ ಶ್ರೀಮಂತರ ಮಕ್ಕಳಿಗಿಂತ ಕುಂಠಿತವಾಗುತ್ತಿವೆ.

ಹಾಗಿದ್ದರೆ, ಮಕ್ಕಳು ದೀರ್ಘಕಾಲೀನ ರಜೆಗಳಿಲ್ಲದೆ ವರ್ಷಪೂರ್ತಿ ಶಾಲೆಗೆ ಹೋದರೆ ಈ ಸಮಸ್ಯೆ ಪರಿಹಾರವಾಗಬಹುದೆ? ಈ ಮೇಲಿನ ಅಧ್ಯಯನಗಳನ್ನು ಕೈಗೊಂಡ ಸಮಾಜಶಾಸ್ತ್ರಜ್ಞ ಅಲೆಕ್ಸಾಂಡರ್ ಇದರ ಬಗ್ಗೆಯೂ ಅಧ್ಯಯನ ಮಾಡುತ್ತಾನೆ. ಆತನ ಪ್ರಕಾರ ಎಲ್ಲರೂ ವರ್ಷಪೂರ್ತಿ ಶಾಲೆಗೆ ಹೋದರೆ, ಪ್ರಾಥಮಿಕ ಶಾಲೆಯ ಅಂತ್ಯದ ವೇಳೆಗೆ ಕೆಳವರ್ಗದ ಮತ್ತು ಮೇಲ್ವರ್ಗದ ಮಕ್ಕಳಾದಿಯಾಗಿ ಎಲ್ಲರೂ ಗಣಿತದಲ್ಲಿ ಮತ್ತು ಓದುವ ಕೌಶಲದಲ್ಲಿ ಸರಿಸುಮಾರು ಸಮಾನ ಹಂತದಲ್ಲಿಯೆ ಇರುತ್ತಾರೆ.

KIPP (Knowledge Is Power Program) ಎನ್ನುವುದು ಅಮೆರಿಕದಲ್ಲಿಯ ಒಂದು ಅರೆ-ಸರ್ಕಾರಿ ಮಾಧ್ಯಮಿಕ ಶಾಲಾ ಅಕಾಡೆಮಿ. ಈ ಅಕಾಡೆಮಿ ದೇಶದಾದ್ಯಂತ ಸುಮಾರು 82 ಶಾಲೆಗಳನ್ನು ನಡೆಸುತ್ತದೆ ಮತ್ತು ಸುಮಾರು 20000 ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ಐದರಿಂದ ಎಂಟನೆಯ ತರಗತಿಯ ತನಕ ಕಲಿಯುತ್ತಿದ್ದಾರೆ. "ಹೊರಗಣವರು"ನಲ್ಲಿ ಈ ಮೇಲಿನ ವಿಷಯದ ಕುರಿತಾಗಿ ಚರ್ಚಿಸಲು ಗ್ಲಾಡ್‌ವೆಲ್ ಈ ಶಾಲೆಯನ್ನು ಉದಾಹರಣೆಯಾಗಿ ಆಯ್ದುಕೊಳ್ಳುತ್ತಾನೆ. ಈ ಶಾಲೆಯಲ್ಲಿ ಮಕ್ಕಳು “SSLANT” (smile, sit up, listen, ask questions, nod when being spoken to, track with your eyes) ಎನ್ನುವ ಶಿಷ್ಟಾಚಾರವನ್ನು ಪಾಲಿಸುತ್ತಾರೆ. ಶಾಲೆ ಬೆಳಿಗ್ಗೆ 7:25 ಕ್ಕೆಲ್ಲ ಆರಂಭವಾಗಿ ಸಂಜೆಯ ಐದರ ತನಕ ನಡೆಯುತ್ತದೆ. ಐದರ ನಂತರವೂ ಕೆಲವು ಮಕ್ಕಳು ಹೋಮ್‌ವರ್ಕ್ ಕ್ಲಬ್, ವಿಶೇಷಪಾಠ, ಕ್ರೀಡೆ ಎಂದುಕೊಂಡು ಶಾಲೆಯಲ್ಲಿಯೆ ಉಳಿಯುತ್ತಾರೆ. ಅಂದರೆ ಹಲವಾರು ಮಕ್ಕಳು ಬೆಳಿಗ್ಗೆ 7:25 ರಿಂದ ಸಂಜೆ 7 ರ ತನಕ ಶಾಲೆಯಲ್ಲಿಯೆ ಕಳೆಯುತ್ತಾರೆ. ಇದನ್ನೆ ಸರ್ಕಾರಿ ಶಾಲೆಯ ಮಕ್ಕಳಿಗೆ ಹೋಲಿಸಿದರೆ, ಈ ಶಾಲೆಯ ಮಕ್ಕಳು ಸುಮಾರು ಶೇ. 50 ರಿಂದ ಶೇ. 60 ರಷ್ಟು ಹೆಚ್ಚಿನ ಸಮಯವನ್ನು ಶಾಲೆಯಲ್ಲಿ ಕಳೆಯುತ್ತಾರೆ. ಹಾಗೆಯೆ ಫಲಿತಾಂಶಗಳಲ್ಲೂ ಹಲವಾರು ವಿಷಯಗಳಲ್ಲಿ ಮುಂದಿರುತ್ತಾರೆ. ಗಣಿತದಲ್ಲಂತೂ ಇವರ ಮಟ್ಟ ದೇಶದ ಶ್ರೀಮಂತ ಬಡಾವಣೆಗಳ ಮಕ್ಕಳ ಸಾಮರ್ಥ್ಯಕ್ಕೆ ಸಮಾನವಾಗಿ ಇರುತ್ತದೆ. ಎಂಟನೆ ತರಗತಿಯ ಅಂತ್ಯದ ವೇಳೆಗೆ ಈ ಶಾಲೆಯ ಶೇ. 84 ರಷ್ಟು ಮಕ್ಕಳು ತಮ್ಮ ತರಗತಿಯ ಮಟ್ಟಕ್ಕಿಂತ ಹೆಚ್ಚಿನ ಸಾಮರ್ಥ್ಯ ತೋರಿಸುತ್ತಾರೆ.

ಇಲ್ಲಿ ಎಲ್ಲಕ್ಕಿಂತ ಹೆಚ್ಚಿನ ವಿಶೇಷ ಇರುವುದು, ಈ ಶಾಲೆಯಲ್ಲಿ ಕಲಿಯುವ ಮಕ್ಕಳ ಹಿನ್ನೆಲೆಯಲ್ಲಿ. ಸುಮಾರು ಅರ್ಧದಷ್ಟು ಮಕ್ಕಳು ಆಫ್ರಿಕನ್ ಅಮೆರಿಕನ್ನರು (ಕರಿಯರು). ಮತ್ತೆ ಇನ್ನರ್ಧ ಲ್ಯಾಟಿನ್ ಅಮೆರಿಕ ಮೂಲದವರು. ಅಂದರೆ ಅಮೆರಿಕದ ಸಾಮಾಜಿಕ ಸಂದರ್ಭದಲ್ಲಿ ದಲಿತರು ಮತ್ತು ಹಿಂದುಳಿದವರು. ತೀರಾ ಬಡವರ ಮನೆಗಳಿಂದ ಬರುವ ಮಕ್ಕಳಿಗೆ ಇಲ್ಲಿ ಸರ್ಕಾರವೆ ಮಧ್ಯಾಹ್ನದ ಊಟವನ್ನು ಒದಗಿಸುತ್ತದೆ. ಈ ಶಾಲೆಯಲ್ಲಿ ಓದುವ ಶೇ. 75 ರಷ್ಟು ಮಕ್ಕಳು ಆ ಉಚಿತ ಮಧ್ಯಾಹ್ನದ ಊಟಕ್ಕೆ ಅರ್ಹರು. ಬಹುಪಾಲು ಮಕ್ಕಳ ಹೆತ್ತವರಿಗೆ ಕಾಲೇಜು ಶಿಕ್ಷಣ ಇರುವುದಿಲ್ಲ. ಮತ್ತು, ಈ ಶಾಲೆಗೆ ಮಕ್ಕಳನ್ನು ಲಾಟರಿ ವ್ಯವಸ್ಥೆಯ ಮೂಲಕ ಆರಿಸಲಾಗುತ್ತದೆ. ಇಲ್ಲಿ ಪ್ರವೇಶ ಪಡೆಯುವ ಮಕ್ಕಳು ಪ್ರವೇಶ ಪರೀಕ್ಷೆಯ ಮೂಲಕ ಆಯ್ದುಕೊಂಡ “Best and the Brightest” ಅಲ್ಲ. ಅಂದಹಾಗೆ, ಈ ಶಾಲೆಯಲ್ಲಿ ಬೇಸಿಗೆಯಲ್ಲೂ ಶಾಲೆ ಇರುತ್ತದೆ.

ಇದೆಲ್ಲ ಏನನ್ನು ಹೇಳುತ್ತದೆ ಎಂದರೆ, ಮಕ್ಕಳ ಹಿನ್ನೆಲೆ ಏನೇ ಇರಬಹುದು, ಅವರ ಪರಂಪರೆ ಮತ್ತು ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಪೂರಕವಾದ ಶೈಕ್ಷಣಿಕ ವಾತಾವರಣ ನಿರ್ಮಿಸಿದಾಗ ಎಂತಹ ಬಡಹಿನ್ನೆಲೆಯಿಂದ ಬಂದ ಮಕ್ಕಳೂ ಒಳ್ಳೆಯ ಸಾಧನೆ ತೋರಬಲ್ಲರು. ಇಂತಹ ಒಂದು ಆಲೋಚನೆಯಿಂದ ಪ್ರೇರಿತವಾದ ಶೈಕ್ಷಣಿಕ ವಾತಾವರಣವನ್ನು KIPP ಅಂತಹ ಕಾರ್ಯಕ್ರಮಗಳ ಮೂಲಕ ಅಮೆರಿಕದಲ್ಲಿ ನಿರ್ಮಿಸಲಾಗುತ್ತಿದೆ.

ಈಗ, ಗ್ಲಾಡ್‌ವೆಲ್ ತನ್ನ "ಹೊರಗಣವರು"ನಲ್ಲಿ ಪ್ರಸ್ತಾಪಿಸುವ ಈ ವಿಷಯಗಳನ್ನು ನಾವು ನಮ್ಮ ಸಂದರ್ಭಕ್ಕೇ ಅನ್ವಯಿಸಿಕೊಂಡು ನೋಡೋಣ. ನಮ್ಮಲ್ಲಿ ಮೇಲೆ ಪ್ರಸ್ತಾಪಿಸಿದಂತಹ ಅಧ್ಯಯನಗಳು ನಡೆಯದೆ ಇರಬಹುದು. ಆದರೆ, ಬಡವರ ಮಕ್ಕಳು ಮೇಲ್ವರ್ಗದ ಮಕ್ಕಳಿಗಿಂತ ಮೂಲಭೂತವಾಗಿಯೆ ಅಸಮರ್ಥರು ಎನ್ನುವ ವಾದವನ್ನು ನಿರಾಕರಿಸಲು ನಾವು ವಿಶೇಷವಾಗಿ ಇನ್ನೊಂದು ಅಧ್ಯಯನ ಮಾಡಬೇಕಾದ ಅವಶ್ಯಕತೆ ಏನೂ ಇಲ್ಲ. ನಮ್ಮ ಸಮಾಜ ಒಂದು ರೀತಿಯಲ್ಲಿ ಅಮೆರಿಕಕ್ಕಿಂತ ಹೆಚ್ಚಿನ ವಿಷಮಯ, ಅಸಮಾನ ಸಮಾಜ. ತಮ್ಮ ಬಡತನದ ಕಾರಣದಿಂದಾಗಿ, ಕೌಟುಂಬಿಕ ಸಮಸ್ಯೆಗಳಿಂದಾಗಿ, ಬೆಳಿಗ್ಗೆ ಏನೂ ತಿನ್ನದೆ ಅಥವ ಯಾವುದೊ ಒಂದು ಅಪೌಷ್ಟಿಕ ಆಹಾರ ತಿಂದು ಶಾಲೆಗೆ ಹೋಗುವ ಮಕ್ಕಳನ್ನು ಬೆಳಿಗ್ಗೆ ಪೌಷ್ಟಿಕವಾದ ಆಹಾರ ಉಂಡು, ಬೂಸ್ಟ್-ಹಾರ್ಲಿಕ್ಸ್ ಕುಡಿದುಕೊಂಡು ಶಾಲೆಗೆ ಹೋಗುವ ಮಕ್ಕಳ ಸಮಾನವಾಗಿ ಸ್ಪರ್ಧಿಸಲು ಬಿಡುತ್ತೇವೆ. ನಿರಕ್ಷರಕುಕ್ಷಿ ತಂದೆತಾಯಿಯರ ಮಕ್ಕಳನ್ನು ತಮ್ಮ ಮಕ್ಕಳ ಓದಿನಲ್ಲಿ ತೀವ್ರ ಆಸಕ್ತಿ ತೋರಿಸುವ, ಅವರ ಜೊತೆ ದಿನವೂ ಕುಳಿತು ಹೋಮ್‌ವರ್ಕ್ ಮಾಡಿಸುವ, ವಿಶೇಷವಾದ ಟ್ಯೂಷನ್‌ಗಳಿಗೆ ಕಳಿಸುವ, ಬೇರೆಬೇರೆ ತೆರನಾದ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವ ಪೋಷಕರ ಮಕ್ಕಳ ಎದುರಿಗೆ ನಿಲ್ಲಿಸುತ್ತೇವೆ. ಇಂತಹ ಅಸಮಾನ ವ್ಯವಸ್ಥೆಯಲ್ಲಿ ಸಮಾನ ಸ್ಪರ್ಧೆಯ ಬಗ್ಗೆ, ಮೇಧಾವಿತನದ ಬಗ್ಗೆ, ಮೆರಿಟ್ ಬಗ್ಗೆ, ಉಪದೇಶ ಕೊಡುತ್ತೇವೆ. ಕೆಳವರ್ಗದ ಮಕ್ಕಳಿಗೆ ಮತ್ತು ಗ್ರಾಮೀಣರಿಗೆ ಕೊಡುವ ಮಧ್ಯಾಹ್ನದ ಊಟ, ಉಚಿತ ಬಟ್ಟೆಗಳಂತಹ ಅಲ್ಪಸ್ವಲ್ಪ ಕೈಯಾಸರೆಯನ್ನು ಕೇವಲವಾಗಿ ಮಾತನಾಡುತ್ತೇವೆ. ಹಂಗಿಸುತ್ತೇವೆ. ಆ ವರ್ಗದ ಮಕ್ಕಳಲ್ಲಿ ಹಿಂಜರಿಕೆ, ದೈನ್ಯತೆ ಮತ್ತು Guilt ಬೇರೂರುವಂತೆ ಮಾಡುತ್ತೇವೆ. ಅದೇ ಸಂದರ್ಭದಲ್ಲಿ ನಮಗೆ ಮತ್ತು ನಮ್ಮ ಮಕ್ಕಳಿಗೆ ಇದ್ದ/ಇರುವ ಶೈಕ್ಷಣಿಕ/ಆರ್ಥಿಕ/ಸಾಂಸ್ಕೃತಿಕ/ಸಾಮಾಜಿಕ Advantages ಗಳನ್ನು ಮರೆಯುತ್ತೇವೆ.

ಈ ಹಿನ್ನೆಲೆಯಲ್ಲಿ ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳು ನಗರಪ್ರದೇಶದ ಮಕ್ಕಳಿಗಿಂತ, ಹಾಗೂ ಒಟ್ಟಾರೆಯಾಗಿ ಬಡಕುಟುಂಬಗಳಿಂದ ಬಂದ ಮಕ್ಕಳು ಮಧ್ಯಮವರ್ಗದ ಮತ್ತು ಸ್ಥಿತಿವಂತ ವರ್ಗದ ಮಕ್ಕಳಿಗಿಂತ ಓದಿನಲ್ಲಿ ಹಿಂದುಳಿಯದೆ ಇರಲು ಒಂದು ಜವಾಬ್ದಾರಿಯುತ ಸಮಾಜದ ಭಾಗವಾಗಿ ನಾವು ಮಾಡಬಹುದಾದ ಕೆಲಸವೇನು? ವಿಶೇಷವಾಗಿ, ಸರ್ಕಾರಿ ಶಾಲೆಗಳಲ್ಲಿ ಮತ್ತು ಗ್ರಾಮೀಣ ಶಾಲೆಗಳಲ್ಲಿ ಓದುವ ಮಕ್ಕಳು ತಾವು ಶಾಲಾವರ್ಷದ ಸಂದರ್ಭದಲ್ಲಿ ಕಲಿತ ಪಾಠಗಳನ್ನು ಬೇಸಿಗೆ ರಜೆಯಲ್ಲಿ ಮರೆಯದೆ ಇರುವಂತೆ ಮಾಡುವುದು ಹೇಗೆ? ಹಾಗೆಯೆ ಮಕ್ಕಳ ಅಸಮಾನ ಕಲಿಕೆಯನ್ನು ಸಮಾನ ಹಕ್ಕು-ನ್ಯಾಯ-ಅವಕಾಶದ ಹಿನ್ನೆಲೆಯಲ್ಲಿ ತಡೆಗಟ್ಟುವುದು ಹೇಗೆ?

ಖಾಸಗಿ ಶಾಲಾಮಟ್ಟದಲ್ಲಿ ಅಗತ್ಯವಿಲ್ಲದಿದ್ದರೂ, ಕನಿಷ್ಠ ಗ್ರಾಮೀಣ ಮಟ್ಟದ ಸರ್ಕಾರಿ ಶಾಲೆಗಳಲ್ಲಾದರೂ ಬೇಸಿಗೆ ರಜೆಯನ್ನು ಕಡಿತಗೊಳಿಸಿ, ಅಲ್ಲಿ ವರ್ಷಪೂರ್ತಿ ತರಗತಿಗಳನ್ನು ನಡೆಸುವುದರಿಂದ, ಅಥವ ಬೇಸಿಗೆ ರಜೆಯಲ್ಲಿ ಕನಿಷ್ಠ ಅರ್ಧದಿನದ ಶಾಲೆಯನ್ನಾದರೂ ಇಟ್ಟುಕೊಳ್ಳುವುದರಿಂದ, ನಮ್ಮ ಗ್ರಾಮೀಣ ಭಾಗದ ಶೈಕ್ಷಣಿಕ ಸ್ವರೂಪವನ್ನು ಬದಲಿಸಲು ಸಾಧ್ಯವೆ? 'ಸಂಬಂಧಪಟ್ಟವರು' ಆಲೋಚಿಸಬೇಕು...

(ಮುಂದುವರೆಯುವುದು...)


ಹೊರಗಣವರು ತಾವಾಗಿಯೆ ಮೂಡಿಬರುತ್ತಾರೆ ಎಂಬ ತಪ್ಪುಕಲ್ಪನೆ

"ನಾವು ಯಾರನ್ನು ಉತ್ತಮರು, ಬುದ್ಧಿವಂತರು ಮತ್ತು ಸ್ವಯಂಕೃಷಿಗಳೂ ಆದ ಹೊರಗಣವರು ಎಂದು ಭಾವಿಸುತ್ತೇವೆಯೊ ಅಂತಹವರು ಸಹಜವಾಗಿ ನೆಲದಿಂದ ಮೂಡಿಬರುತ್ತಾರೆ ಎನ್ನುವಂತಹ ತಪ್ಪುಕಲ್ಪನೆಯಲ್ಲಿ ಸಿಕ್ಕಿಕೊಂಡಿದ್ದೇವೆ. ಹುಡುಗನಾಗಿದ್ದ ಬಿಲ್ ಗೇಟ್ಸ್‌ನನ್ನು ನೆನೆಸಿಕೊಂಡು, ಹದಿಮೂರು ವರ್ಷದ ಬಾಲಕನೊಬ್ಬ ಯಶಸ್ವಿಯಾದ ಉದ್ಯಮಿಯಾಗಲು ಈ ಪ್ರಪಂಚ ಆಗಗೊಟ್ಟ ವಿಚಾರವನ್ನು ಕೌತುಕದಿಂದ ನೋಡುತ್ತೇವೆ. ಆದರೆ ಇದೊಂದು ತಪ್ಪು ಪಾಠ. ನಮ್ಮ ಪ್ರಪಂಚ ಕೇವಲ ಒಬ್ಬನೇ ಒಬ್ಬ ಹದಿಮೂರು ವರ್ಷದ ಬಾಲಕನಿಗೆ 1968 ರಲ್ಲಿ ಹಂಚಿಕೊಂಡು ಕೆಲಸ ಮಾಡಬೇಕಿದ್ದ ಕಂಪ್ಯೂಟರ್ ಅನ್ನು ಉಪಯೋಗಿಸಲು ಪರಿಮಿತಿಗಳಿಲ್ಲದ ಅನುಮತಿ ಮತ್ತು ಅವಕಾಶವನ್ನು ಕೊಟ್ಟಿತ್ತು. ಅಂತಹುದೇ ಅವಕಾಶವನ್ನು ಹತ್ತುಲಕ್ಷ ಹುಡುಗರಿಗೆ ಕೊಟ್ಟಿದ್ದರೆ ಇವತ್ತು ಅದೆಷ್ಟು ಮೈಕ್ರೋಸಾಫ್ಟ್‌ಗಳು ಇರುತ್ತಿದ್ದವು? ಉತ್ತಮವಾದ ಪ್ರಪಂಚವೊಂದನ್ನು ನಿರ್ಮಿಸಲು ಇವತ್ತಿನ ಯಶಸ್ಸನ್ನು ನಿರ್ಧರಿಸುವ ಅದೃಷ್ಟದ ಜನ್ಮದಿನಗಳು ಮತ್ತು ಇತಿಹಾಸದ ಆಕಸ್ಮಿಕಗಳಂತಹ ಆಗಾಗ ಸಂಭವಿಸುವ ಅದೃಷ್ಟವಕಾಶಗಳು ಮತ್ತು ಒಂದು ನಿಶ್ಚಿತ ಕ್ರಮವಿಲ್ಲದ ಅನುಕೂಲಗಳ ಸ್ಥಾನದಲ್ಲಿ ಎಲ್ಲರಿಗೂ ಅವಕಾಶಗಳನ್ನು ಕೊಡುವಂತಹ ಸಮಾಜ ಇರಬೇಕು. ಕೆನಡಾದಲ್ಲಿ ವರ್ಷದ ಕೊನೆಯಾರ್ಧದಲ್ಲಿ ಹುಟ್ಟಿದ ಮಕ್ಕಳಿಗಾಗಿಯೆ ಪ್ರತ್ಯೇಕವಾದ ಐಸ್-ಹಾಕಿ ತಂಡಗಳು ಇದ್ದಿದ್ದರೆ ಅಲ್ಲಿ ಇವತ್ತು ಇರುವ ಸಂಖ್ಯೆಯ ಎರಡರಷ್ಟು ಹಾಕಿ ಸ್ಟಾರ್‌ಗಳು ಇರುತ್ತಿದ್ದರು. ಈಗ ಇದನ್ನೆ ಪ್ರತಿಯೊಂದು ಕ್ಷೇತ್ರ ಮತ್ತು ವೃತ್ತಿಯಲ್ಲಿ ಹೀಗೆ ತತ್‌ಕ್ಷಣವೆ ಅರಳಬಹುದಾದ ಪ್ರತಿಭೆಗಳೊಂದಿಗೆ ಗುಣಿಸಿ. ಆಗ ಈ ಪ್ರಪಂಚ ಈಗ ಇರುವುದಕ್ಕಿಂತ ಹೆಚ್ಚು ಶ್ರೀಮಂತ ಪ್ರಪಂಚವಾಗಿರುತ್ತಿತ್ತು." ('Outliers' - ಪು. 268)"

ಮುಂದಿನ ವಾರ: 'ಹೊರಗಣವರು' - ಈ ವಾದ ಪರಿಪೂರ್ಣವೆ? ವಿಮರ್ಶೆಯ ಸುತ್ತಮುತ್ತ.

ಲೇಖನ ಸರಣಿಯ ಇದುವರೆಗಿನ ಲೇಖನಗಳು:

Sep 17, 2009

ಗಣಿತಕ್ಕೂ ಭಾಷೆಗೂ, ಗಣಿತಕ್ಕೂ ಭತ್ತದ ಕೃಷಿಗೂ ಎಲ್ಲಿಂದೆಲ್ಲಿಯ ಸಂಬಂಧ?

[ವಿಕ್ರಾಂತ ಕರ್ನಾಟಕದ ಸೆಪ್ಟೆಂಬರ್ 25,2009 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.
ಲೇಖನ ಸರಣಿಯ ಹಿಂದಿನ ಲೇಖನಗಳು:
ಮೊದಲನೆಯ ಲೇಖನ: "ಹೊರಗಣವರು" - ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ!
ಎರಡನೆಯದು: ಹುಟ್ಟಿದ ಘಳಿಗೆ ಸರಿ ಇರಬೇಕು...]
ಮೂರನೆಯದು: ದಶಸಹಸ್ರ ಗಂಟೆಯೆಂಬ ಪ್ರತಿಭಾ-ನಿಯಮ...
ನಾಲ್ಕನೆಯದು: ಯಾವುದಕ್ಕೂ "ಸಂಸ್ಕಾರ" ಇರಬೇಕ್ರಿ !]
ಐದನೆಯದು: ವಿಮಾನ ಅಪಘಾತಗಳಲ್ಲಿ ಭಾಷೆ ಮತ್ತು ಪರಂಪರೆಯ ಪಾತ್ರ ]


ಕೆಲವೊಂದು ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡುವಲ್ಲಿ ಕೆಲವು ಸಂಪ್ರದಾಯಗಳು ಮತ್ತು ಭಾಷೆಗಳು ಹೇಗೆ ಅನಾನುಕೂಲ ಒಡ್ಡುತ್ತವೆ ಮತ್ತೆ ಕೆಲವೊಂದು ಹೇಗೆ ಗುಣಾತ್ಮಕವಾಗಿ ಪರಿಣಮಿಸುತ್ತವೆ ಎನ್ನುವುದನ್ನು ಹಿಂದಿನ ಲೇಖನದಲ್ಲಿ ನೋಡಿದೆವು. ಒಂದು ಸಮುದಾಯದ ಅಥವ ಮನುಷ್ಯರ ಯಶಸ್ಸಿನಲ್ಲಿ ಅವರ ಸಾಂಸ್ಕೃತಿಕ ಹಿನ್ನೆಲೆ ಯಾ ಪರಂಪರೆ ಎಷ್ಟೊಂದು ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವ ಒಂದು ಒಳನೋಟ ನಮಗೆ ಆ ಮೂಲಕ ಗೊತ್ತಾಯಿತು. ಇದೇ ಆಲೋಚನಾ ಸರಣಿಯನ್ನು ಗ್ಲಾಡ್‌ವೆಲ್ ತನ್ನ "ಹೊರಗಣವರು"ನಲ್ಲಿ ವಿಸ್ತರಿಸುತ್ತಾ, ಕೆಲವೊಂದು ಸಮುದಾಯಗಳು ಗಣಿತದಲ್ಲಿ ಇತರೆ ಸಮುದಾಯದವರಿಗಿಂತ ಹೆಚ್ಚಿನ ಅಥವ ಸುಲಭ ಸಾಧನೆ ಮಾಡುತ್ತಾರಲ್ಲ, ಯಾಕಿರಬಹುದು ಎಂದು ವಿಶ್ಲೇಷಿಸುತ್ತಾನೆ. ನಿಮಗೆ ಗೊತ್ತಿರಬಹುದು. ಏಷ್ಯನ್ನರು (ಅಂದರೆ ಚೀನಾದವರಂತೆ ಮುಖಚರ್ಯೆ ಇರುವ ಪೂರ್ವಏಷ್ಯನ್ನರು ಚೀನಾ, ಜಪಾನ್, ಕೊರಿಯ, ಸಿಂಗಪುರ್, ಇತ್ಯಾದಿ ದೇಶದವರು) ಸಾಮಾನ್ಯವಾಗಿ ಪ್ರಪಂಚದ ಬೇರೆಲ್ಲರಿಗಿಂತ ಗಣಿತದಲ್ಲಿ ಮುಂದು ಎನ್ನುವ ಒಂದು ಸಾಮಾನ್ಯ ನಂಬಿಕೆ ಜಾಗತಿಕ ವಲಯದಲ್ಲಿದೆ. ಅದನ್ನು ನಿರೂಪಿಸಲು ಅನೇಕ ಅಧ್ಯಯನಗಳೂ ಆಗಿವೆ. ಕೆಲವರು ಇದಕ್ಕೆ ಅವರ ಹೆಚ್ಚಿನ IQ ಕಾರಣ ಎನ್ನುತ್ತಾರೆ. ಮತ್ತೆ ಕೆಲವರು, ಈ ಏಷ್ಯನ್ನರ IQ ಇತರರಿಗಿಂತ ಹೇಳಿಕೊಳ್ಳುವಷ್ಟು ಹೆಚ್ಚೆನೂ ಅಲ್ಲ; ಆದರೆ ಅವರಿಗೆ ಗಣಿತ ಸುಲಭ ಎನ್ನುವುದು ನಿಜ, ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಮ್ಯಾಲ್ಕಮ್ ಗ್ಲಾಡ್‌ವೆಲ್ ಗಣಿತ ಮತ್ತು ಏಷ್ಯನ್ನರಿಗೆ ಇರುವ ಸಂಬಂಧವನ್ನು ಹುಡುಕುವುದು ಅವರ ವಂಶವಾಹಿನಿ ತಂತುಗಳಲ್ಲಿ ಅಥವ IQಗಳಲ್ಲಿ ಅಲ್ಲ. ಬದಲಿಗೆ ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ.

ಈಗ ಕೆಳಗಿನ ಅಂಕಿಗಳನ್ನು ಒಮ್ಮೆ ಗಮನಿಸಿ: 4, 8, 5, 3, 9, 7, 6. ಇವನ್ನು ಗಟ್ಟಿಯಾಗಿ ಓದಿ. ನಂತರ ಆ ಅಂಕಿಗಳತ್ತ ನೋಡದೆ ಬೇರೆಡೆ ನೊಡುತ್ತ ಈ ಅಂಕಿಗಳನ್ನು ಅದೇ ಅನುಕ್ರಮದಲ್ಲಿ ಮೌನವಾಗಿ ಬಾಯಿಪಾಠ ಮಾಡಿಕೊಳ್ಳಿ. ನಂತರ ಒಮ್ಮೆ ಜೋರಾಗಿ ಹೇಳಿ.

ಈ ಉದಾಹರಣೆ ಕೊಡುತ್ತ ಗ್ಲಾಡ್‌ವೆಲ್ ಹೇಳುತ್ತಾನೆ: "ನೀವು ಇಂಗ್ಲಿಷ್ ಮಾತನಾಡುವವರಾದರೆ, ಮೇಲಿನ ಅಂಕಿಗಳನ್ನು ಅದೇ ಅನುಕ್ರಮದಲ್ಲಿ ನೆನಪಿಟ್ಟುಕೊಳ್ಳುವ ಸಾಧ್ಯತೆ ಶೇಕಡ ೫೦. ಅದೇ ನೀವು ಚೀನೀ ಅದರೆ, ನಿಮಗಿದು ಪ್ರತಿಯೊಂದು ಬಾರಿಯೂ ಸಾಧ್ಯ. ಯಾಕಿರಬಹುದು? ಅಂಕಿಗಳು ಸುಮಾರು ಎರಡು ಸೆಕೆಂಡುಗಳಷ್ಟು ಅವಧಿಯ ಜ್ಞಾಪಕ ಸುರುಳಿಯಲ್ಲಿ ನಮ್ಮ ಮೆದುಳಿನಲ್ಲಿ ಸಂಗ್ರಹಿಸಲ್ಪಡುತ್ತವೆ. ಆ ಎರಡು ಸೆಕೆಂಡುಗಳ ಅವಧಿಯಲ್ಲಿ ಹೇಳಬಹುದಾದದ್ದನ್ನು ಅಥವ ಓದಿದ್ದನ್ನು ನಾವು ಬಹಳ ಯಶಸ್ವಿಯಾಗಿ ನೆನಪಿಟ್ಟುಕೊಳ್ಳಬಲ್ಲೆವು. ಚೀನೀ ಭಾಷಿಕರು ಆ ಮೇಲಿನ ಅಂಕಿಗಳನ್ನು ಪ್ರತಿ ಸಲವೂ ತಪ್ಪಿಲ್ಲದೆ ಹೇಳಲು ಕಾರಣ, ಆ ಎಲ್ಲಾ ಏಳು ಅಂಕಿಗಳನ್ನು ಎರಡು ಸೆಕೆಂಡುಗಳ ಕಾಲಾವಧಿಯಲ್ಲಿ ಹೇಳಲು ಅವರಿಗೆ ಅವರ ಭಾಷೆಯಲ್ಲಿ ಸಾಧ್ಯವಿದೆ. ಆದರೆ ಅದು ಇಂಗ್ಲಿಷ್ ಭಾಷೆಯಲ್ಲಿ ಸುಲಭವಲ್ಲ."

ಇಲ್ಲಿ ನಮ್ಮ ಕನ್ನಡವನ್ನೂ ನಾವು ಹೆಚ್ಚುಕಮ್ಮಿ ಇಂಗ್ಲಿಷ್‌ನೊಂದಿಗೆ ಸಮೀಕರಿಸಿಕೊಳ್ಳಬಹುದು. ನಮಗೂ ಮೇಲಿನ ಅಂಕಿಗಳನ್ನು ಒಂದೇ ಸಲಕ್ಕೆ ನೆನಪಿಟ್ಟುಕೊಳ್ಳುವುದು ಸುಲಭವಲ್ಲ. ನಮ್ಮಂತಲ್ಲದೆ, ಚೀನೀ ಅಂಕಿಗಳು ಬಹಳ ಸಣ್ಣ ಕಾಲಾವಧಿಯಲ್ಲಿ ಉಚ್ಚರಿಸಲ್ಪಡಬಲ್ಲವು. ಅವರ ಬಹುತೇಕ ಅಂಕಿಗಳು ಕಾಲು ಸೆಕೆಂಡಿನಲ್ಲಿ ಒಂದು ಅಂಕಿಯನ್ನು ಉಚ್ಚರಿಸುವಷ್ಟು ಸಣ್ಣ ಪದಗಳು. ನಮ್ಮ ಅಂಕಿಗಳ ಪದಗಳನ್ನು ಗಮನಿಸಿ: ಸೊನ್ನೆ, ಒಂದು, ಎರಡು, . . . ಒಂಬತ್ತು,... ಮಾತ್ರಾಗಣದ ಲೆಕ್ಕದಲ್ಲಿ ಹೇಳಬಹುದಾದರೆ ಸೊನ್ನೆಯಿಂದ ಒಂಬತ್ತರವರೆಗಿನ ಯಾವೊಂದು ಕನ್ನಡ ಅಂಕಿಯ ಮಾತ್ರೆ ಮೂರಕ್ಕಿಂತ ಕಮ್ಮಿ ಇಲ್ಲ. "ಒಂಬತ್ತು"ವಿನ ಮಾತ್ರಾಗಣ ಐದನ್ನು ಮುಟ್ಟುತ್ತದೆ. ಆದರೆ ಚೀನೀ ಭಾಷೆಯ ನಾಲ್ಕೈದು ಅಂಕಿಗಳ ಮಾತ್ರಾಗಣ ಒಂದಕ್ಕೇ ನಿಲ್ಲುತ್ತದೆ. ಹೆಚ್ಚೆಂದರೆ ಮೂರು. (ಉದಾ: 1 ಕ್ಕೆ 'ಈ', 4 ಕ್ಕೆ 'ಸಿ', 7 ಕ್ಕೆ 'ಕಿ', 9 ಕ್ಕೆ 'ಜ್ಯೊ',...) ನಮಗೂ ಮತ್ತು ಚೀನಾದವರೆಗೂ ಇರುವ ಜ್ಞಾಪಕಶಕ್ತಿಯ ವ್ಯತ್ಯಾಸ ಸಂಪೂರ್ಣವಾಗಿ ಈ ಅಂಕಿಗಳ ಉಚ್ಚಾರಣೆಯ ಕಾಲಾವಧಿಯ ಮೇಲೆ ತೀರ್ಮಾನವಾಗಿದೆ. ಅವರು ಅಂಕಿಗಳನ್ನು ಪ್ರಪಂಚದ ಇತರೆಲ್ಲರಿಗಿಂತ ಯಶಸ್ವಿಯಾಗಿ ನೆನಪಿಟ್ಟುಕೊಳ್ಳಬಲ್ಲರು.

ಇಷ್ಟೇ ಅಲ್ಲ. ಅವರಿಗೂ ಮತ್ತು ನಮಗೂ (ಹಾಗೆಯೆ ಇಂಗ್ಲಿಷಿಗೂ) ಇನ್ನೂ ಗಂಭೀರವಾದ ಭಿನ್ನತೆ ಒಂದಿದೆ. ಹತ್ತರ ನಂತರ ಹನ್ನೊಂದು, ಆಮೇಲೆ ಹನ್ನೆರಡು, ಆಮೇಲೆ? ಹದಿಮೂರು. ಯಾಕೆ ಅದು ಹನ್ಮೂರು ಅಲ್ಲ? ನಂತರ? ಹದಿನಾಲ್ಕು, ಹದಿನೈದು, ಹದಿನಾರು, ಹದಿನೇಳು, ಹದಿನೆಂಟು,... ಆಮೇಲೆ? ಹತ್ತೊಂಬತ್ತು. !? ಇಪ್ಪತ್ತರ ನಂತರ ಮಾತ್ರ ಒಂದು ಅನುಕ್ರಮ ಇದೆ. ಇಪ್ಪತ್ತೊಂದು, ಇಪ್ಪತ್ತೆರಡು, . . . ಇಪ್ಪತ್ತೊಂಬತ್ತು. ಆದರೆ ಹತ್ತರಿಂದ ಇಪ್ಪತ್ತರ ತನಕದ ಪದಗಳು ಒಂದು ರೀತಿಯಲ್ಲಿ ತರ್ಕವಿಲ್ಲದೆ ಹುಟ್ಟಿ ಹಾಕಿದ ಪದಗಳಂತಿವೆ. ನಾನು ಇಲ್ಲಿ ಪದಗಳ ಉತ್ಪತ್ತಿಯ ಬಗ್ಗೆ, ಅವುಗಳ ಮೇಲೆ ಆಗಿರಬಹುದಾದ ಇತರೆ ಭಾಷೆ-ಸಂಸ್ಕೃತಿಗಳ ಪ್ರಭಾವದ ಬಗ್ಗೆ ಚರ್ಚಿಸುತ್ತಿಲ್ಲ. ಈಗ ಬಳಕೆಯಲ್ಲಿ ಇರುವ ಪದಗಳ ಈಗಿನ ರೂಪದ ಬಗ್ಗೆ ಮಾತ್ರ. ಇಪ್ಪತ್ತರ ನಂತರ ಒಂದು ತರ್ಕದಲ್ಲಿ ಮುಂದುವರೆಯುವ ಸಂಖ್ಯೆಗಳು ಹತ್ತರಿಂದ ಇಪ್ಪತ್ತರ ತನಕ 'ಸೂಕ್ತವಲ್ಲದ' ರೂಪದಲ್ಲಿದ್ದಂತಿವೆ. ಹಾಗೆಯೆ, ನಲವತ್ತು, ಐವತ್ತು, ಅರವತ್ತರ ನಂತರ ಬರುವ ಪದಗಳು ಏಳತ್ತು, ಎಂಟತ್ತು, ಒಂಬತ್ತತ್ತು ಆಗಿಲ್ಲದೆ "ಎಪ್ಪತ್ತು", "ಎಂಬತ್ತು", "ತೊಂಬತ್ತು", ಆಗಿವೆ. ಇಂಗ್ಲಿಷ್‌ನಲ್ಲಿಯೂ ಸರಿಸುಮಾರು ಇದೇ ಸ್ಥಿತಿ ಇದೆ. ಅಲ್ಲಿಯೂ ಹತ್ತರಿಂದ ಇಪ್ಪತ್ತರ ತನಕ ನಮ್ಮದೆ ತರಹದ ವೈವಿಧ್ಯತೆ ಇದೆ. fourteen, sixteen, seventeen, eighteen, ಗಳ ಅಕ್ಕಪಕ್ಕದಲ್ಲಿ neteen, twoteen, threeteen, fiveteen ಗಳು ಇಲ್ಲ. ಹಾಗೆಯೆ twoty, threety, fivety ಗಳಿಲ್ಲ. forty ಗೂ fourty ಗೂ ಸಾಮ್ಯತೆ ಇದೆ ಎಂದುಕೊಂಡರೆ ಪರವಾಗಿಲ್ಲ. ಇಲ್ಲವಾದರೆ, ಅದೂ ಸೂಕ್ತವಲ್ಲ.

ಆದರೆ, ಮೇಲೆ ನಾವು 'ಅಸೂಕ್ತ' ಎಂದು ಭಾವಿಸಬಹುದಾದ ಯಾವೊಂದು ದ್ವಂದ್ವಗಳೂ ಚೀನೀ ಭಾಷೆಯಲ್ಲಿ ಇಲ್ಲ. ಹನ್ನೊಂದು ಅವರಿಗೆ ಹತ್ತು-ಒಂದು, ಹನ್ನೆರಡು ಹತ್ತು-ಎರಡು, ಹದಿಮೂರು ಹತ್ತು-ಮೂರು ಆಗುತ್ತದೆ. ಹೀಗೆ ದ್ವಂದ್ವವಿಲ್ಲದೆ ಅವರ ಸಂಖ್ಯೆಗಳು ಬೆಳೆಯುತ್ತವೆ. ಅಧ್ಯಯನಗಳ ಪ್ರಕಾರ ನಾಲ್ಕನೆ ವಯಸ್ಸಿನ ಚೀನಿ ಬಾಲಕ ನಲವತ್ತರ ತನಕ ಎಣಿಸಬಲ್ಲನಂತೆ. ಆದರೆ ಅಮೆರಿಕದ ಬಹುತೇಕ ಹುಡುಗರು ತಮ್ಮ ಐದನೆಯ ವಯಸ್ಸಿನ ತನಕ ಆ ಮಟ್ಟ ಮುಟ್ಟುವುದಿಲ್ಲವಂತೆ.

ಈಗ ಮೇಲಿನ "ಸಮಸ್ಯೆ"ಯ ಹಿನ್ನೆಲೆಯಲ್ಲಿ ಒಂದು ಸಣ್ಣ ಲೆಕ್ಕ. ನಾಲ್ಕನೆ ತರಗತಿಯಲ್ಲಿರುವ ನಮ್ಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೊಬ್ಬನನ್ನು 'ಮುವ್ವತ್ತೇಳು ಮತ್ತು ಇಪ್ಪತ್ತೆರಡು' ಇವುಗಳನ್ನು ಮನಸ್ಸಿನಲ್ಲಿಯೆ ಕೂಡಿ ಉತ್ತರ ಹೇಳು ಎಂದು ಕೇಳಿದರೆ ಆತ ಏನು ಮಾಡುತ್ತಾನೆ? ಮೊದಲಿಗೆ ಆ ಪದಗಳನ್ನು ಅಂಕಿಗಳಿಗೆ ಬದಲಾಯಿಸಿಕೊಳ್ಳುತ್ತಾನೆ. 37+22. ನಂತರ ಏಳು ಮತ್ತು ಎರಡನ್ನು ಕೂಡುತ್ತಾನೆ. ನಂತರ ದಶಮಾನ ಸ್ಥಾನದ ಮೂರು ಮತ್ತು ಎರಡನ್ನು ಕೂಡುತ್ತಾನೆ. ಕೊನೆಗೆ ಐವತ್ತೊಂಬತ್ತು ಎನ್ನುತ್ತಾನೆ. ಅದೇ, ಅವನದೇ ವಯಸ್ಸಿನ ಚೀನೀ ಬಾಲಕ? ಮೂರು-ಹತ್ತು-ಎರಡು ಮತ್ತು ಎರಡು-ಹತ್ತು-ಏಳು; ಅವನಿಗೆ ಸಮಸ್ಯೆಯಲ್ಲಿಯೆ ಉತ್ತರವೂ ಇದೆ.

ಸರಿ, ಚೀನೀ ಜನರ ಭಾಷೆ ಅವರಿಗೆ ಗಣಿತವನ್ನು ಚಿಕ್ಕಂದಿನಿಂದಲೆ ಸುಲಭವಾಗಿ ಕಲಿಯಲು ಸಹಾಯ ಮಾಡುತ್ತದೆ ಎಂದಾಯಿತು. ಆದರೆ ಅದೊಂದೆ ಸಾಕೆ? ಸಾಲದು. ಯಾಕೆಂದರೆ, 'ಗಣಿತಕ್ಕೂ ಸೋಮಾರಿಗಳಿಗೂ ಆಗಿಬರುವುದಿಲ್ಲ'. ಮತ್ತೆಮತ್ತೆ ಅಭ್ಯಾಸ ಮಾಡುವುದರಿಂದ ಮಾತ್ರ ಗಣಿತ ಒಲಿಯುತ್ತದೆ. ಒಂದು ಗಣಿತದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಒಂದು ಹಂತವನ್ನು ಯಶಸ್ವಿಯಾಗಿ-ತಪ್ಪಿಲ್ಲದೆ ಮುಗಿಸಿದರೆ ಮಾತ್ರ ನೀವು ಇನ್ನೊಂದು ಹಂತಕ್ಕೆ ತಪ್ಪಿಲ್ಲದೆ ಹೋಗಲು ಸಾಧ್ಯ. ಇಲ್ಲವೆಂದರೆ ನೀವು ಮತ್ತೆ ಮೊದಲಿನಿಂದ ಪ್ರಾರಂಭಿಸಬೇಕು. ಹಾಗೆ ತಪ್ಪಿಲ್ಲದೆ ಮಾಡುತ್ತ ಹೋಗುವುದು ಹೇಗೆ? ಏಕಾಗ್ರಚಿತ್ತದಿಂದ, ನಿರಂತರ ಅಭ್ಯಾಸದಿಂದ. ಗಣಿತದಲ್ಲಿ ಮುಂದಿರುವ ಚೀನೀ/ಜಪಾನಿ/ಕೊರಿಯನ್ನರು ತಮ್ಮ ಪರಂಪರೆಯಿಂದಲೆ ಕಠಿಣ ಪರಿಶ್ರಮಿಗಳು ಎನ್ನುತ್ತಾನೆ ಗ್ಲಾಡ್‌ವೆಲ್. ಅದಕ್ಕೆ ಆತ ಅವರ ಭತ್ತದ ಕೃಷಿಯಲ್ಲಿ, ಅವರ ಗಾದೆಗಳಲ್ಲಿ, ಅವರ ಜೀವನಕ್ರಮದಲ್ಲಿ ಆಧಾರ ಹುಡುಕುತ್ತಾನೆ.

ಭತ್ತದ ಕೃಷಿ? ಅದನ್ನು ಚರ್ಚಿಸುವುದಕ್ಕಿಂತ ಮೊದಲು ನಾವು ಕರ್ನಾಟಕದ ಮಳೆಯಾಧಾರಿತ ಬೇಸಾಯ ಮಾಡುವ ಬಯಲುಸೀಮೆಯತ್ತ ಒಮ್ಮೆ ನೋಡೋಣ. ನಮ್ಮ ಖುಷ್ಕಿ-ಹೊಲಗಳು ವರ್ಷಕ್ಕೆ ಎಷ್ಟು ಕಾಲ ಬೀಳು ಬಿದ್ದಿರುತ್ತವೆ? ಆರು ತಿಂಗಳಿಗೂ ಹೆಚ್ಚಿನ ಕಾಲ. ಅಂದರೆ, ಕೆರೆಗಳಿಲ್ಲದ, ನೀರಾವರಿ ಇಲ್ಲದ ಹಳ್ಳಿಗಳಲ್ಲಿ ಖುಷ್ಕಿ-ಬೇಸಾಯ ಮಾತ್ರ ಮಾಡುವ ಜನ ವರ್ಷದಲ್ಲಿ ಅರ್ಧಕ್ಕಿಂತ ಹೆಚ್ಚಿನ ದಿನಗಳನ್ನು ಕೆಲಸವಿಲ್ಲದೆ ಕಳೆಯುತ್ತಾರೆ. ಹಾಗೆಯೆ, ತಮ್ಮ ಐದಾರು ತಿಂಗಳ ಸೀಮಿತ ದುಡಿಮೆಯನ್ನು ವರ್ಷಪೂರ್ತಿ ಉಣ್ಣುತ್ತಾರೆ. ವರ್ಷಕ್ಕೆ ಆರು ತಿಂಗಳು ಕೆಲಸವಿಲ್ಲದೆ, ಅಂದರೆ "ಅವಕಾಶ"ಗಳಿಲ್ಲದೆ ಮಳೆಯನ್ನು ಕಾಯುತ್ತ ಕಳೆಯುವ ಜನ ಆರ್ಥಿಕವಾಗಿಯೂ ಹಿಂದುಳಿದಿರುವುದರಲ್ಲಿ ಆಶ್ಚರ್ಯ ಇದೆಯೆ?

ಈಗ ಭತ್ತದ ಕೃಷಿ ಮಾಡುವ ಮಲೆನಾಡು, ಕರಾವಳಿ, ಮತ್ತು ನೀರಾವರಿ ಸೌಲಭ್ಯ ಇರುವ ಬಯಲುಸೀಮೆ ಪ್ರದೇಶಗಳನ್ನು ನೋಡೋಣ. ಅಲ್ಲಿನ ಜನರ ಸರಾಸರಿ ಆದಾಯ ಖುಷ್ಕಿ ಬೇಸಾಯ ಮಾಡುವ ಬಯಲುಸೀಮೆಯವರಿಗಿಂತ ಹೆಚ್ಚು. ಮತ್ತೆ ಇನ್ನೇನು ಹೆಚ್ಚು? ಅವರ ಕೆಲಸದ ಅವಧಿ. ಮೈಮುರಿದು ದುಡಿಯುವುದಕ್ಕೆ ಅವರು ಕೊಡುವ ಪ್ರಾಮುಖ್ಯತೆ. ಸೂರ್ಯಪ್ರಿಯ ಬಯಲುಸೀಮೆಯ ಬಹುತೇಕ ಹಳ್ಳಿಗಳಲ್ಲಿ ಅರಳಿಕಟ್ಟೆಯ ಮೇಲೆ, ಪಂಚಾಯಿತಿ ಕಟ್ಟಡದ ಬಳಿ, ಟೀ ಅಂಗಡಿಯ ಬೆಂಚುಗಳ ಮೇಲೆ, ಸಿನೆಮಾ ಟೆಂಟುಗಳಲ್ಲಿ ಕಾಣುವಷ್ಟು ಸಂಖ್ಯೆಯ ರೈತರನ್ನು ನೀವು ಕರಾವಳಿ ಮತ್ತು ಮಲೆನಾಡಿನ ಹಳ್ಳಿಗಳಲ್ಲಿ ಕಾಣಲಾರಿರಿ. ಹಾಗೆಯೆ, ಬಯಲುಸೀಮೆಯ ಪಾಳೆಯಗಾರಿಕೆ ವ್ಯವಸ್ಥೆಯನ್ನೂ, ಅದರೆಲ್ಲ ಕರಾಳಮುಖಗಳನ್ನೂ ಸಹ.

ಈ ಖುಷ್ಕಿ ರೈತರಿಗೂ ಮತ್ತು ಕರಾವಳಿ-ಮಲೆನಾಡು-ನೀರಾವರಿ ಇರುವ ರೈತರಿಗೂ ಇರುವ ಪ್ರಮುಖ ವ್ಯತ್ಯಾಸ ಏನು? ಅದು ಅವರು ಬೆಳೆಯುವ ಬೆಳೆ. ಭತ್ತ. ದಕ್ಷಿಣ ಕರ್ನಾಟಕದ ಬಯಲುಸೀಮೆಯ ಬೆಳೆಗಳಾದ ರಾಗಿ ಮತ್ತು ಭತ್ತದ ಬೇಸಾಯ ಪದ್ಧತಿಗಳನ್ನು ನನ್ನ ಬಾಲ್ಯದಲ್ಲಿ ಕಂಡಿರುವುದರಿಂದ ಅವುಗಳನ್ನು ನನ್ನದೆ ಅನುಭವದ ಮೇಲೆ ವಿವರಿಸುತ್ತೇನೆ. ಹೊಲಗಳಲ್ಲಿ ಬೆಳೆಯುವ ರಾಗಿ ಸಂಪೂರ್ಣವಾಗಿ ಮಳೆಯಾಧಾರಿತ. ಮಳೆ ಸ್ವಲ್ಪ ಹೆಚ್ಚುಕಮ್ಮಿ ಆದರೂ ಬೆಳೆ ಒಂದಿಷ್ಟು ಕೈಗೂಡಬಹುದು. ಹಾಗೆಯೆ ಅದಕ್ಕೆ ತೀರಾ ಮುತುವರ್ಜಿ ಬೇಕಾಗಿಲ್ಲ. ಸಾಧ್ಯವಾದರೆ ಕೊಟ್ಟಿಗೆ ಗೊಬ್ಬರ, ಜೂನ್-ಜುಲೈನಲ್ಲಿ ಮಳೆ ಬಂದ ಮೇಲೆ ಒಮ್ಮೆ ಉತ್ತು ರಾಗಿ ಚೆಲ್ಲುವುದು, ಚೆಲ್ಲಿದ ರಾಗಿ ಮಣ್ಣಲ್ಲಿ ಬೆರೆಯಲು ಒಮ್ಮೆ ಹಲಗೆ. ಮೊಳಕೆಒಡೆದ ರಾಗಿಪೈರನ್ನು ತೆಳು ಮಾಡಲು ಒಮ್ಮೆ ಕುಂಟೆ, ಕಳೆ ಹೆಚ್ಚಾದರೆ ಕಳೆ ತೆಗೆಯುವುದು, ಒಂದೆರಡು ಸಲ ಮಳೆ ನೊಡಿಕೊಂಡು ರಾಸಾಯನಿಕ ಗೊಬ್ಬರ. ನಂತರ ಎಲ್ಲಾ ವರುಣನ ಕೃಪೆ. ಫಸಲು ಬಂದ ನಂತರ ಕಟಾವು. ಕಟಾವು ಆದ "ಒಂದೆರಡು ತಿಂಗಳ ನಂತರ" ಬಿಸಿಲು-ಗಾಳಿ ನೋಡಿಕೊಂಡು ಕಣ ಮಾಡುವುದು. ಅಬ್ಬಬ್ಬ ಎಂದರೆ ವರ್ಷಕ್ಕೆ ಇಪ್ಪತ್ತು-ಮುವ್ವತ್ತುದಿನ ಹೊಲದಲ್ಲಿ ಕೆಲಸ ಮಾಡಿದರೆ ಮುಗಿಯಿತು. ಎಲ್ಲೂ "ಕೈ ಕೆಸರಾಗುವುದಿಲ್ಲ". ಅಂದ ಹಾಗೆ, ಹೊಲ ಮಟ್ಟವಾಗಿಲ್ಲದಿದ್ದರೂ ನಡೆಯುತ್ತದೆ. ಏರುತಗ್ಗುಗಳಿದ್ದರೂ ಸಮಸ್ಯೆ ಇಲ್ಲ. ಮುಖ್ಯವಾಗಿ ಮಳೆ ನೀರು ಹೊಲದಲ್ಲಿ ನಿಲ್ಲಬಾರದು. ಅಷ್ಟೇ.

ಆದರೆ ಭತ್ತದ ಕೃಷಿ ಹಾಗಲ್ಲ. ಮಳೆಗಾಲದಲ್ಲಿ ಬೆಳೆಯುವ ಮಳೆಯಾಧಾರಿತ ಭತ್ತವಾದರೆ, ರಾಗಿ ಬೆಳೆಯುವ ಕೆಲಸಕ್ಕಿಂತ ಸ್ವಲ್ಪ ಜಾಸ್ತಿ ಮಾಡಬೇಕಾಗಬಹುದು. ಕೈಕಾಲುಗಳು "ಕೆಸರೂ ಆಗಬಹುದು". ಜೊತೆಗೆ, ಕಟಾವು ಸಮಯ ಹತ್ತಿರವಾದಂತೆ ಕಣ ಸಿದ್ಧ ಮಾಡಿಕೊಳ್ಳಬೇಕು. ಕಟಾವು ಆದ ಭತ್ತದ ಪೈರು ಮಾತ್ರ ನೇರ ಕಣಕ್ಕೆ ಬರಬೇಕು. ಅಲ್ಲಿಂದ ನಾಲ್ಕೈದು ದಿನಗಳ ಒಳಗೆ ಭತ್ತವನ್ನು ವಿಂಗಡಿಸಿ ಕಣಜ-ಗೋದಾಮುಗಳಿಗೆ ತುಂಬಬೇಕು.

ನೀರಾವರಿ ಇರುವ ಗದ್ದೆ ಆದರೆ, ರೈತನಿಗೆ ಮತ್ತೆ ಬಿಡುವಿಲ್ಲ. ನಿಜವಾದ ಕೆಲಸ ಆರಂಭವಾಗುವುದೆ ಆಗ. ತಮ್ಮ ಎಲ್ಲಾ ಗದ್ದೆಗಳಿಗಾಗುವಷ್ಟು ಪೈರುಗಳಿಗಾಗಿ ಕೂಡಲೆ ಭತ್ತದ ಮಡಿಗದ್ದೆ ಮಾಡಬೇಕು. ಮಡಿಕೆಯಲ್ಲಿ ನೆನಸಿಟ್ಟ ಭತ್ತ ಮೊಳಕೆ ಹೊಡೆದ ನಂತರ ಅದನ್ನು ಮಡಿಗದ್ದೆಯಲ್ಲಿ ಚೆಲ್ಲಬೇಕು. ಅದು ಚೆನ್ನಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು. ಅದೇ ಸಮಯದಲ್ಲಿ ಸೊಪ್ಪು-ಸದೆ-ಕೊಟ್ಟಿಗೆ ಗೊಬ್ಬರ ಎಲ್ಲವನ್ನೂ ಭತ್ತದ ಪೈರು ನಾಟಿ ಮಾಡಲಿರುವ ಗದ್ದೆಗಳಿಗೆ ಹಾಕಿ, ಅವುಗಳಲ್ಲಿ ನಾಲ್ಕೈದು ಅಂಗುಲ ನೀರು ನಿಲ್ಲಿಸಿ ಗದ್ದೆ ಉಳಬೇಕು. ಅದು ಗದ್ದೆಯನ್ನು "ಕೆಸರು ಗದ್ದೆ" ಮಾಡುವ ರೀತಿ. ಅದೇ ಸಮಯದಲ್ಲಿ ಗದ್ದೆಯ ನಾಲ್ಕೂ ಕಡೆ ಬದು ಸರಿಮಾಡಬೇಕು. ಕೆಸರು ಗದ್ದೆ ಸಂಪೂರ್ಣವಾಗಿ ಮಟ್ಟವಾಗಿರಬೇಕು. ಎಲ್ಲಾ ಕಡೆ ನೀರು ಸಮಾನವಾಗಿ ನಿಲ್ಲುವಂತಿರಬೇಕು. ಗದ್ದೆಗೆ ನೀರು ಹಾಯಿಸಲು ಇರುವ ಎಲ್ಲಾ ಕಾಲುವೆಗಳನ್ನೂ ಒಮ್ಮೆ ಹೂಳೆತ್ತಿ ಸರಿ ಮಾಡಿಕೊಳ್ಳಬೇಕು. ಅಷ್ಟರಲ್ಲಿ ಪೈರು ನಾಟಿಗೆ ಬಂದಿರುತ್ತದೆ. ಆಗ ಎಲ್ಲಾ ಗದ್ದೆಗಳಲ್ಲಿ "ಒಂದೊಂದೇ ಭತ್ತದ ಪೈರನ್ನು" ಸುಮಾರು ಅರ್ಧ ಅಡಿ ಅಂತರದಲ್ಲಿ ನಾಟುತ್ತ ಬರಬೇಕು. ನಂತರ ಒಂದಷ್ಟು ದಿನಗಳ ನಂತರ ಕಳೆ ತೆಗೆಯಬೇಕು. ಸಮಯಕ್ಕೆ ಸರಿಯಾಗಿ ರಾಸಾಯನಿಕ ಗೊಬ್ಬರವನ್ನು ಹಾಕುತ್ತಿರಬೇಕು. ಪೈರು ಬೆಳೆದು, ತೆನೆಹೊಡೆದು, ಕಾಳು ಗಟ್ಟಿಯಾಗಿ, ಪೈರು ಹಳದಿಬಣ್ಣಕ್ಕೆ ತಿರುಗುವ ತನಕದ ಎರಡು-ಮೂರು ತಿಂಗಳುಗಳ ಕಾಲ ಒಮ್ಮೆಯೂ ಗದ್ದೆಯಲ್ಲಿ ನೀರು ಕಮ್ಮಿಯಾಗದಂತೆ, ಯಾವಾಗಲೂ ಮೂರ್ನಾಲ್ಕು ಅಂಗುಲ ನೀರು ನಿಂತಿರುವಂತೆ ನೋಡಿಕೊಳ್ಳಬೇಕು. ಕಟಾವಿಗೆ ಬರುವ ಸಮಯಕ್ಕೆ ಕಣ ಸಿದ್ಧ ಮಾಡಿಕೊಳ್ಳಬೇಕು. ಕಟಾವು ಆದ ಪೈರು ನೇರ ಕಣಕ್ಕೆ ಬರಬೇಕು. ಒಂದೆರಡು ದಿನದಲ್ಲೇ ಕಣ ಮುಗಿಯಬೇಕು. ಇಲ್ಲದಿದ್ದರೆ ಪೈರಿನಲ್ಲಿಯ ಭತ್ತ ಮುಗ್ಗುಲು ಹಿಡಿಯುತ್ತದೆ. ಈ ಎಲ್ಲಾ ಸಮಯದಲ್ಲಿ ಏನಾದರು ಒಂದು ಹೆಚ್ಚುಕಮ್ಮಿ ಆದರೂ ಆ ಬೆಳೆ ಇಲ್ಲ. ಹಾಕಿದ ಎಲ್ಲಾ ಪರಿಶ್ರಮ, ದುಡ್ಡು, ದುಡಿಮೆ, ಎಲ್ಲವೂ ನಾಶ ವ್ಯರ್ಥ. ಗಣಿತದ ಸಮಸ್ಯೆಗಳನ್ನು ಬಿಡಿಸುವ ರೀತಿಯಲ್ಲಿಯೇ ಒಂದು ಹಂತವನ್ನು ಯಶಸ್ವಿಯಾಗಿ ದಾಟಿದರೆ ಮಾತ್ರ ಮುಂದಿನ ಹಂತಕ್ಕೆ ಪ್ರವೇಶ. ಅಂದ ಹಾಗೆ, ನಮ್ಮ ಈ ಕೆಸರುಗದ್ದೆಗಳ ಹೆಚ್ಚಿನಪಾಲು ಕೆಲಸ ಸಾಗುವುದೆ ಚಳಿಗಾಲದಲ್ಲಿ.

ಚೀಣೀಯರು ಮತ್ತು ಇತರೆ ಭತ್ತ ಬೆಳೆಯುವ ಏಷ್ಯನ್ನರೂ ವರ್ಷಕ್ಕೆ ಎರಡು "ಕೆಸರುಗದ್ದೆ" ಬೆಳೆಗಳನ್ನು ತೆಗೆಯುತ್ತಾರೆ. ಮೇಲೆ ಹೇಳಿದಂತೆ ಅಪಾರ ಪರಿಶ್ರಮದಿಂದ, ಲೆಕ್ಕಾಚಾರವಾಗಿ ಮಾಡಬೇಕಾದ ಕೆಲಸ ಅದು. ಇನ್ನು ಅವರ ಜೀವನದ ದೃಷ್ಟಿಕೋನವೂ ಹಾಗೆಯೆ ಇದೆ. ಅವರ ಗಾದೆಗಳನ್ನೆ ಗಮನಿಸಿ. ಯಾವುದನ್ನೂ ಅವರು ದೇವರ ಮೇಲೆ, ವಿಧಿಯ ಮೇಲೆ ಹಾಕುವುದಿಲ್ಲ.
"ನೆತ್ತರು ಮತ್ತು ಬೆವರು ಹರಿಸದೆ ಊಟ ಸಿಗುವುದಿಲ್ಲ."
"ಅನ್ನಕ್ಕಾಗಿ ದೇವರನ್ನು ಅವಲಂಬಿಸಬೇಡ. ಬದಲಿಗೆ ದುಡಿಯಬಲ್ಲ ನಿನ್ನೆರಡೂ ಕೈಗಳನ್ನು ಅವಲಂಬಿಸು."
"ಚಳಿಗಾಲದಲ್ಲಿ ಸೋಮಾರಿ ಮನುಷ್ಯ ಮರಗಟ್ಟಿ ಸಾಯುತ್ತಾನೆ."
"ಬೆಳೆಯ ಬಗ್ಗೆ ಮಾತನಾಡಿ ಪ್ರಯೋಜನ ಇಲ್ಲ. ಅದೆಲ್ಲವೂ ಕಠಿಣದುಡಿಮೆ ಮತ್ತು ಗೊಬ್ಬರದ ಮೇಲೆ ಅವಲಂಬಿತ."
"ಮನುಷ್ಯ ಕಷ್ಟಪಟ್ಟು ದುಡಿದರೆ ನೆಲ ಸೋಮಾರಿಯಾಗುವುದಿಲ್ಲ."

ಇದು ಎಲ್ಲಕ್ಕಿಂತ ಮುಖ್ಯವಾದದ್ದು:
"ಯಾರು ವರ್ಷಕ್ಕೆ ಮುನ್ನೂರ ಅರವತ್ತು ದಿನ ಸೂರ್ಯ ಹುಟ್ಟುವುದಕ್ಕೆ ಮೊದಲು ಏಳಬಲ್ಲನೊ, ಅವನು ತನ್ನ ಕುಟುಂಬವನ್ನು ಶ್ರೀಮಂತ ಮಾಡುವಲ್ಲಿ ಸೋಲುವುದಿಲ್ಲ."

ಇಂತಹ 'ಮುನ್ನೂರ ಅರವತ್ತು ದಿನಗಳೂ ದುಡಿಯುವ' ಶ್ರಮಜೀವಿಗಳ ಪರಂಪರೆಯಿಂದ ಪ್ರಭಾವಿಸಲ್ಪಟ್ಟ ಜನ ಅಪಾರ ಪರಿಶ್ರಮವನ್ನೂ, ನಿರಂತರ ಅಭ್ಯಾಸವನ್ನೂ, ಏಕಾಗ್ರತೆಯನ್ನೂ ಬಯಸುವ ಗಣಿತದಲ್ಲೂ ಮುಂದಿರುತ್ತಾರೆ. ಚೀನೀ ಮೂಲದ ಏಷ್ಯನ್ನರನ್ನು ನೋಡಿ. ನಮ್ಮದೇ ಭಾರತದ ಉದಾಹರಣೆ ಕೊಡಬಹುದಾದರೆ, ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೆ ತಿರುಚಿನಾಪಳ್ಳಿಯ ಬಳಿ ಕಾವೇರಿ ನದಿಗೆ ಅಡ್ಡವಾಗಿ "ಕಲ್ಲಣೆ" (ಕಲ್ಲಿನ ಅಣೆಕಟ್ಟು) ಕಟ್ಟಿಕೊಂಡು ವರ್ಷಪೂರ್ತಿ ಭತ್ತದ ಕೃಷಿ ಮಾಡುತ್ತ ಬಂದ ಕಾವೇರಿ ಮುಖಜ ಭೂಮಿಯ ತಮಿಳರನ್ನು ಮತ್ತು ಈಗ ದೇಶವಿದೇಶಗಳಲ್ಲಿ ಇರುವ ತಮಿಳು ಗಣಿತಜ್ಞರನ್ನು ನೋಡಿ. ಗಣಿತ ಕಬ್ಬಿಣದ ಕಡಲೆ ಆಗಿರುವ (ಅಥವ ಆಗಿದ್ದ) ನಮ್ಮ ಬಯಲುಸೀಮೆಯ ಮಳೆಯಾಧಾರಿತ ಕೃಷಿ-ಸಮುದಾಯಗಳನ್ನು, ಆಯಾಯ ಜಿಲ್ಲೆಗಳ ಶೈಕ್ಷಣಿಕ ಫಲಿತಾಂಶಗಳನ್ನು ನೋಡಿ. ಗ್ಲಾಡ್‌ವೆಲ್‌ನ ವಾದವನ್ನು ಒಪ್ಪದೇ ಇರಲು ನನಗೆ ಯಾವ ಕಾರಣಗಳೂ ಕಾಣಿಸುತ್ತಿಲ್ಲ.

(ಮುಂದುವರೆಯುವುದು...)


ನಮ್ಮ ಗದ್ದೆ ಕಂಡ ಕೊನೆಯ ಭತ್ತದ ಫಸಲು

ಕೆಸರು ಗದ್ದೆ ಮತ್ತು ಭತ್ತದ ಕೃಷಿಯ ಬಗ್ಗೆ ನನ್ನದೆ ಒಂದು ವೈಯಕ್ತಿಕ ಅನುಭವವನ್ನು ಹೇಳಬಯಸುತ್ತೇನೆ. ಸುಮಾರು ಹದಿನೈದು ವರ್ಷಗಳ ಹಿಂದೆ ನಮ್ಮ ಕುಟುಂಬವೂ ಇಲ್ಲಿ ಹೇಳಿರುವಂತಹುದೇ ಕೆಸರು ಗದ್ದೆಯ ಕೃಷಿ ಮಾಡಿತ್ತು. ಕೆರೆಯ ನೀರು ಕೊನೆಯದಾಗಿ ಬರುತ್ತಿದ್ದ ಕೊನೆಯಲ್ಲಿದ್ದ ಗದ್ದೆ ನಮ್ಮದು. ತಮ್ಮ ಗದ್ದೆಗಳು ತುಂಬಿದರೆ ಮಾತ್ರ ಮೇಲಿನವರು ಕೆಳಗಿನ ಗದ್ದೆಗಳಿಗೆ ನೀರು ಬಿಡುತ್ತಿದ್ದರು. ಆ ತಾಪತ್ರಯಗಳ ಮಧ್ಯೆಯೂ ನಮ್ಮ ಪೈರು ಚೆನ್ನಾಗಿ ಬಂದಿತ್ತು. ಸಮಸ್ಯೆ ಆರಂಭವಾಗಿದ್ದೆ ನೀರು ಇನ್ನು ಬೇಕಾಗಿರುವುದೆ ಏಳೆಂಟು ದಿನ ಎನ್ನುವ ಕೊನೆಯ ದಿನಗಳಲ್ಲಿ. ಅಷ್ಟೊತ್ತಿಗೆ ಕೆರೆಯಲ್ಲಿ ನೀರೂ ಮುಗಿಯುತ್ತ ಬಂದಿತ್ತು. ಕಾಲುವೆ ಬೇರೆ ನಮ್ಮ ಗದ್ದೆಗಿಂತ ತಗ್ಗಿನಲ್ಲಿ ಇತ್ತು. ಜೊತೆಗೆ ಅದು ಸ್ವಲ್ಪ ಅಗಲವಾದ, ಉದ್ದದ ಕಾಲುವೆ. ನೀರು ನಮ್ಮ ಗದ್ದೆಗೆ ಏರಬೇಕಾದರೆ ಮೇಲಿನಿಂದ ಹೊಸನೀರು ಹೆಚ್ಚಿನಮಟ್ಟದಲ್ಲಿ ಬರಬೇಕಿತ್ತು. ಬರಲಿಲ್ಲ. ಕೈಗೆಬಂದ ತುತ್ತು ಬಾಯಿಗಿಲ್ಲದ ಸ್ಥಿತಿ. ಸುಮಾರು ನಾಲ್ಕು ತಿಂಗಳ ದುಡಿಮೆ, ಬಂಡವಾಳ, ಕನಸು, ಖುಷಿ, ಸಂತೃಪ್ತಿ, ಎಲ್ಲವೂ ಒಣಗಿಹೋಗುವ ಸಂದರ್ಭ. ಆಗ ನನ್ನಣ್ಣ ಮತ್ತು ನಾನು ಕೈಯಲ್ಲಿ ಬಕೆಟ್ಟು ಮತ್ತು ಬಾಂಡ್ಲಿ ಹಿಡಿದುಕೊಂಡು ಕಾಲುವೆಗೆ ಇಳಿದೆವು. ಮುಂದಿನ ಮೂರ್ನಾಲ್ಕು ದಿನಗಳ ಕಾಲ ತಗ್ಗಿನಕಾಲುವೆಯಿಂದ ನೀರನ್ನು ನಮ್ಮ ಗದ್ದೆಯ ತೂಬಿಗೆ ಚಿಮ್ಮುವುದೆ ನಮ್ಮ ಕೆಲಸ. ಅದೊಂದು ಅಸಹಾಯಕ ಪರಿಸ್ಥಿತಿ. ಆದರೆ ನಮ್ಮ ಬೆಳೆಯನ್ನು ಕಾಪಾಡಿದ್ದೆ ನಾವು ಆ ಮುರ್ನಾಲ್ಕು ದಿನ ಒಣಗಲಾರಂಭಿಸಿದ್ದ ಗದ್ದೆಗೆ ಉಣಿಸಿದ ಹನಿಹನಿ ನೀರು. ಆ ಸಲ ಒಳ್ಳೆಯ ಫಸಲು ಬಂತು. ಅದು ಬಹುಶಃ ಆ ಗದ್ದೆಗಳು ಕಂಡ ಅತ್ಯುತ್ತಮ ಫಸಲೂ ಇರಬಹುದು. ಹಾಗೆಯೆ ಕೊನೆಯ ಫಸಲೂ ಸಹ. ಅದಾದ ನಂತರ ನಾವು ಆ ಗದ್ದೆಗಳನ್ನು ಉಳಲಿಲ್ಲ. ವಿರೋಧಾಭಾಸಗಳಿಂದ ಕೂಡಿದ ಬೇಸರದ ವಿಷಯ ಏನೆಂದರೆ ಆ ತೀರ್ಮಾನ ಒಳ್ಳೆಯ ತೀರ್ಮಾನವೂ ಆಗಿದ್ದು....

ಇಂದು ಅಲ್ಲಿ ಗದ್ದೆಯಿದ್ದ ಕುರುಹುಗಳೂ ಇಲ್ಲ. ಕೆರೆಯಿಂದ ನೀರೂ ಬರುತ್ತಿಲ್ಲ.

ಮುಂದಿನ ವಾರ: ನಮ್ಮ ಸರ್ಕಾರಿ ಶಾಲಾ ಮಕ್ಕಳಿಗೆ ಬೇಸಿಗೆ ರಜೆಗಳು ಬೇಕೆ?

ಲೇಖನ ಸರಣಿಯ ಇದುವರೆಗಿನ ಲೇಖನಗಳು:

Sep 10, 2009

ವಿಮಾನ ಅಪಘಾತಗಳಲ್ಲಿ ಭಾಷೆ ಮತ್ತು ಪರಂಪರೆಯ ಪಾತ್ರ

[ವಿಕ್ರಾಂತ ಕರ್ನಾಟಕದ ಸೆಪ್ಟೆಂಬರ್ 18,2009 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.
ಲೇಖನ ಸರಣಿಯ ಹಿಂದಿನ ಲೇಖನಗಳು:
ಮೊದಲನೆಯ ಲೇಖನ: "ಹೊರಗಣವರು" - ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ!
ಎರಡನೆಯದು: ಹುಟ್ಟಿದ ಘಳಿಗೆ ಸರಿ ಇರಬೇಕು...]
ಮೂರನೆಯದು: ದಶಸಹಸ್ರ ಗಂಟೆಯೆಂಬ ಪ್ರತಿಭಾ-ನಿಯಮ...
ನಾಲ್ಕನೆಯದು: ಯಾವುದಕ್ಕೂ "ಸಂಸ್ಕಾರ" ಇರಬೇಕ್ರಿ !]


ಅಡೆತಡೆಯಿಲ್ಲದೆ ಒಟ್ಟುಗೂಡುತ್ತ ಹೋಗುವ ಅವಕಾಶಗಳಿಂದಲೆ ಅಸಾಮಾನ್ಯ ಯಶಸ್ಸು ಹುಟ್ಟುತ್ತದೆ ಎನ್ನುವುದನ್ನು ಇಲ್ಲಿಯವರೆಗಿನ ಕೆಲವು ಉದಾಹರಣೆಗಳಿಂದ ನಾವು ನೋಡಿದ್ದೇವೆ. ಒಬ್ಬ ಮನುಷ್ಯ ಎಲ್ಲಿ ಮತ್ತು ಯಾವಾಗ ಹುಟ್ಟಿದ್ದು, ಆತನ ಹೆತ್ತವರು ಜೀವನೋಪಾಯಕ್ಕೆ ಮಾಡುತ್ತಿದ್ದ ಕೆಲಸ ಏನು, ಅವನು ಬೆಳೆದು ದೊಡ್ಡವನಾಗಿದ್ದು ಎಂತಹ ವಾತಾವರಣದಲ್ಲಿ ಎನ್ನುವಂತಹ ವಿವರಗಳು ಆತನ ಜೀವನದ ಯಶಸ್ಸಿನಲ್ಲಿ ಬಹಳ ಪ್ರಮುಖವಾದ ಪಾತ್ರ ವಹಿಸುತ್ತವೆ. ಇದೇ ವಾದವನ್ನು ಮುಂದುವರೆಸುತ್ತ ಮ್ಯಾಲ್ಕಮ್ ಗ್ಲಾಡ್‌ವೆಲ್ ಇನ್ನೊಂದು ಪ್ರಶ್ನೆಯನ್ನು ಹಾಕಿಕೊಳ್ಳುತ್ತಾನೆ. "ನಮ್ಮ ಪೂರ್ವಿಕರಿಂದ ನಾವು ವಂಶಪಾರಂಪರ್ಯವಾಗಿ ಪಡೆಯುವ ಸಂಪ್ರದಾಯಗಳು ಮತ್ತು ನಡವಳಿಕೆಗಳು ನಮ್ಮ ಯಶಸ್ಸಿನಲ್ಲಿ ಮೇಲಿನಂತಹುದೇ ಪ್ರಮುಖ ಪಾತ್ರವನ್ನು ವಹಿಸುತ್ತದೆಯೆ? ಜನ ಯಾಕೆ ಯಶಸ್ವಿಗಳಾಗುತ್ತಾರೆ ಎನ್ನುವುದನ್ನು ಈ ಸಾಂಸ್ಕೃತಿಕ ಪರಂಪರೆಯನ್ನು ಗಂಭೀರವಾಗಿ ತೆಗೆದುಕೊಂಡು ಅಧ್ಯಯನ ಮಾಡುವ ಮೂಲಕ ಕಂಡುಕೊಳ್ಳಲು ಸಾಧ್ಯವೆ? ಅದೇ ರೀತಿ, ತಮ್ಮ ಕೆಲಸವನ್ನು ಆ ಕೆಲಸಕ್ಕೆ ಯೋಗ್ಯವಾದ ರೀತಿಯಲ್ಲಿ ಮಾಡುವುದು ಹೇಗೆ ಎನ್ನುವ ವಿಚಾರಗಳನ್ನೂ ಈ ಮೂಲಕ ಅರಿತುಕೊಳ್ಳಲು ಸಾಧ್ಯವೆ?" "ಹೌದು," ಎನ್ನುತ್ತಾನೆ ಗ್ಲಾಡ್‌ವೆಲ್.

ನಮ್ಮಲ್ಲಿ ಒಂದು ಗಾದೆ ಇದೆ, "ಹುಟ್ಟುಗುಣ ಸುಟ್ಟರೂ ಹೋಗದು." ನಾನು ಇದನ್ನು ಪ್ರತಿಗಾಮಿ ಚಿಂತನೆಗೆ ಬಳಸಿಕೊಳ್ಳುವ ಅರ್ಥದಲ್ಲಿ, ಅಂದರೆ ಮನುಷ್ಯನ ಗುಣವನ್ನು ಆತನ ಜಾತಿ/ಸಮುದಾಯ/ಬಣ್ಣ ಮುಂತಾದುವಕ್ಕೆ ಹೊಂದಿಸಿ, ಒಬ್ಬರನ್ನು ಮೇಲುಕೀಳು ಮಾಡುವ, ಮತ್ತು ಆ ಮೂಲಕ ಅಸಮಾನ ವ್ಯವಸ್ಥೆಯನ್ನು ಹೇರುವ/ಪೋಷಿಸುವ ವಿಚಾರದ ಪರವಾಗಿ ಹೇಳುತ್ತಿಲ್ಲ. ಆದರೆ, ಆ ಗಾದೆ ಮಾತಿನಲ್ಲಿರುವ ಒಂದಂಶ ವಿಚಾರವನ್ನು, ಅಂದರೆ ’ಹುಟ್ಟುಗುಣ ಎನ್ನುವುದು ಇದೆ’ ಎನ್ನುವುದನ್ನು ಹೇಳಲಷ್ಟೆ ಇಲ್ಲಿ ಬಳಸುತ್ತಿದ್ದೇನೆ. ಈ ಹುಟ್ಟುಗುಣ ಎನ್ನುವುದೂ ಅಷ್ಟೆ, ನಮ್ಮ ಓದಿನಿಂದ, ವೈಯಕ್ತಿಕ ಅನುಭವದಿಂದ, ಜೀವನ ಕಲಿಸುವ ಪಾಠಗಳಿಂದ ಬದಲಾಗುತ್ತದೆ, ತೆಳುವಾಗುತ್ತದೆ, ಇಲ್ಲವೆ ಬಲವಾಗುತ್ತದೆ. ಆಗುವುದಿಲ್ಲ ಎನ್ನುವವರು ಮಾತ್ರ ಮೇಲಿನ ಗಾದೆಯನ್ನು ಪ್ರತಿಗಾಮಿ ಚಿಂತನೆಗೆ ಹಾಗು ಇನ್ನೊಬ್ಬರ ಅವಹೇಳನಕ್ಕೆ ಬಳಸುತ್ತಾರೆ.

’ನಮ್ಮ ಪರಂಪರೆಯಿಂದ ಅಥವ ಸಾಂಸ್ಕೃತಿಕ ಹಿನ್ನೆಲೆಯಿಂದ ಬರುವ ಕೆಲವು ನಡವಳಿಕೆಗಳು, ಹಾಗೆಯೆ ನಮ್ಮ ಪೂರ್ವಿಕರ ಭೌಗೋಳಿಕ ಪರಿಸರದಿಂದ ಪ್ರೇರಕವಾಗಿ ಬರುವ ಕೆಲವು ಮೂಲಪ್ರವೃತ್ತಿಗಳು ನಾವು ನಮ್ಮ ಪೂರ್ವಿಕರ ಪರಿಸರದಿಂದ ದೂರ ಇದ್ದರೂ ಅವು ಪ್ರಕಟವಾಗಬಹುದಾದ ಪರಿಸರದಲ್ಲಿ ಅಥವ ಸಮಯದಲ್ಲಿ ಪ್ರಕಟವಾಗುತ್ತವೆ,’ ಎನ್ನುವುದನ್ನು ಡೊವ್ ಕೊಹೆನ್ ಎನ್ನುವ ಮನೋವಿಜ್ಞಾನಿ ಅಧ್ಯಯನ ಮತ್ತು ಪ್ರಯೋಗದ ಮೂಲಕ ಸಾಬೀತು ಮಡುತ್ತಾನೆ. ಆ ಅಧ್ಯಯನವನ್ನು ಉಲ್ಲೇಖಿಸುತ್ತ ಗ್ಲಾಡ್‌ವೆಲ್ "ಹೊರಗಣವರು"ನಲ್ಲಿ ಬರೆಯುತ್ತಾನೆ: "ಸಾಂಸ್ಕೃತಿಕ ಸಂಪ್ರದಾಯಗಳು ಬಹಳ ಬಲಶಾಲಿಯಾದದ್ದು. ಅವುಗಳ ಬೇರು ಆಳವಾದದ್ದು ಮತ್ತು ಅವಕ್ಕೆ ಸುದೀರ್ಘವಾದ ಆಯಸ್ಸಿದೆ. ತಲೆಮಾರು ಕಳೆದು ತಲೆಮಾರು ಬಂದರೂ, ಆವು ತಲೆ ಎತ್ತಲು ಸಾಧ್ಯವಾಗಿದ್ದ ಆರ್ಥಿಕ, ಸಾಮಾಜಿಕ ಮತ್ತು ಜನಾಂಗೀಯ ಪರಿಸ್ಥಿತಿಗಳು ಈಗ ಇಲ್ಲದೇ ಹೋಗಿದ್ದರೂ, ಅವು ಬದುಕುಳಿಯುತ್ತವೆ. ಹಾಗೆಯೆ, ನಮ್ಮ ನಡವಳಿಕೆ ಮತ್ತು ಧೋರಣೆಗಳಲ್ಲಿ ಅವು ಎಷ್ಟು ಪ್ರಮುಖ ಪಾತ್ರ ವಹಿಸುತ್ತವೆ ಎಂದರೆ, ಅವನ್ನು ಅರ್ಥ ಮಾಡಿಕೊಳ್ಳದೆ ನಮಗೆ ನಮ್ಮ ಸುತ್ತಮುತ್ತಲ ಪ್ರಪಂಚ ಅರ್ಥವಾಗದು."

ವಿಮಾನಯಾನ ಇದ್ದುದರಲ್ಲಿಯೆ ಸುರಕ್ಷಿತ ಪ್ರಯಾಣ ಎನ್ನುತ್ತವೆ ಅಂಕಿಅಂಶಗಳು. ನನ್ನ ಬಳಿ ಭಾರತದ ಅಂಕಿಅಂಶಗಳು ಇಲ್ಲದೆ ಇರುವುದರಿಂದ ಇಲ್ಲಿ ಅಮೆರಿಕದ ಅಂಕಿಅಂಶಗಳನ್ನು ಕೊಡುತ್ತೇನೆ. 2007ನೆ ಇಸವಿಯಲ್ಲಿ ಸುಮಾರು 7.7 ಕೋಟಿ ಅಮೆರಿಕನ್ನರು ವಿಮಾನಯಾನ ಮಾಡಿದ್ದರು. ಆ ವರ್ಷದ ಒಟ್ಟು ಪ್ರಯಾಣಿಕ ವಿಮಾನ ಅಪಘಾತಗಳ ಸಂಖ್ಯೆ 62. ಸತ್ತವರು, 44 ಜನ. ಆದರೆ, ಅದೇ ವರ್ಷ ಅಲ್ಲಿ ರಸ್ತೆ ಅಪಘಾತಗಳಲ್ಲಿ ಸತ್ತವರ ಸಂಖ್ಯೆ 44,000. ಇದನ್ನು ನಾವು ಬೇರೆಬೇರೆ ಕೋನದಿಂದ ವಿಶ್ಲೇಷಿಸಬಹುದು ಅಥವ ಟೀಕಿಸಬಹುದು. ಆದರೆ, ಬಹಳ ಗಂಭಿರ, ಮುತುವರ್ಜಿಯಿಂದ ಕೂಡಿದ ಉಸ್ತುವಾರಿಯಲ್ಲಿ ನಡೆಯುವ ವಿಮಾನ ಹಾರಾಟಗಳು ಇದ್ದುದರಲ್ಲಿಯೆ ಸುರಕ್ಷಿತ ಎನ್ನುವುದನ್ನು ಯಾವುದೂ ಅಲ್ಲಗಳೆಯದು.

ಅಮೆರಿಕದ ಯುನೈಟೆಡ್ ಏರ್‌ಲೈನ್ಸ್ ಪ್ರಪಂಚದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಒಂದು. 1988 ರಿಂದ 1998 ರವರೆಗಿನ ಅವಧಿಯಲ್ಲಿ ಆ ಸಂಸ್ಥೆಯ ವಿಮಾನಗಳ ಅಪಘಾತದ ಅನುಪಾತ ಹೀಗಿದೆ: ನಲವತ್ತು ಲಕ್ಷ ಹಾರಾಟಗಳಿಗೆ ಒಂದು ಅಪಘಾತ. ಇದೇ ಅವಧಿಯಲ್ಲಿ ದಕ್ಷಿಣ ಕೊರಿಯಾ ದೇಶದ ಕೊರಿಯನ್ ಏರ್‌ಲೈನ್ಸ್‌ನ ಅಪಘಾತದ ಅನುಪಾತ, 2.3 ಲಕ್ಷ ಹಾರಾಟಗಳಿಗೆ ಒಂದು ಅಪಘಾತ. ಅಂದರೆ, ಯುನೈಟೆಡ್ ಏರ್‌ಲೈನ್ಸ್‌ನ 1 ಅಪಘಾತಕ್ಕೆ ಕೊರಿಯನ್ ಏರ್‌ಲೈನ್ಸ್ 17 ಅಪಘಾತಗಳನ್ನು ಕಾಣುತ್ತಿತ್ತು. 1999ರ ಸುಮಾರಿಗೆ ಕೊರಿಯನ್ ಏರ್‌ಲೈನ್ಸ್ ಯಾವ ಮಟ್ಟದ ಕುಖ್ಯಾತಿ ಪಡೆಯಿತೆಂದರೆ, ಹಲವು ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಕೊರಿಯನ್ ಏರ್‌ಲೈನ್ಸ್‌ನೊಂದಿಗಿನ ತಮ್ಮ ಪಾಲುದಾರಿಕೆಯನ್ನು ಕಡಿದುಕೊಂಡವು. ಕೊರಿಯಾದಲ್ಲಿ ಅಮೆರಿಕ ಸರ್ಕಾರದ ಮಿಲಿಟರಿ ನೆಲೆ ಇದ್ದು, ಸುಮಾರು 28 ಸಾವಿರ ಅಮೆರಿಕದ ಸೈನಿಕರು ಅಲ್ಲಿರುತ್ತಾರೆ. ಆ ಯಾವ ಸೈನಿಕರೂ ಕೊರಿಯನ್ ಏರ್‌ಲೈನ್ಸ್‌ನಲ್ಲಿ ಪ್ರಯಾಣಿಸದಂತೆ ಅಮೆರಿಕದ ಮಿಲಿಟರಿ ಆದೇಶ ಹೊರಡಿಸಿ ನಿರ್ಬಂಧಿಸಿಬಿಟ್ಟಿತು. ಕೆನಡ ದೇಶವಂತೂ ಆ ಏರ್‌ಲೈನ್ಸ್‌ಗೆ ತನ್ನ ದೇಶದ ವಾಯುಪ್ರದೇಶದ ಮೇಲೆ ಹಾರಲು ಕೊಟ್ಟಿರುವ ಅನುಮತಿಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿರುವುದಾಗಿ ತಿಳಿಸಿತು. ಸ್ವತಃ ದಕ್ಷಿಣ ಕೊರಿಯಾದ ಅಧ್ಯಕ್ಷ ತನ್ನ ಅಧ್ಯಕ್ಷೀಯ ವಿಮಾನವನ್ನು ಕೊರಿಯನ್ ಏರ್‌ಲೈನ್ಸ್‌ನಿಂದ ಅದರ ಪ್ರತಿಸ್ಪರ್ಧಿ ವಿಮಾನಯಾನ ಸಂಸ್ಥೆಗೆ ವರ್ಗಾಯಿಸಿಬಿಟ್ಟ.

ಈಗ? 2000 ದಿಂದೀಚೆಗೆ ಕೊರಿಯನ್ ಏರ್‌ಲೈನ್ಸ್ ಸುರಕ್ಷತೆಯ ವಿಚಾರದಲ್ಲಿ 180 ಡಿಗ್ರಿ ತಿರುವು ತೆಗೆದುಕೊಂಡಿದೆ. ಆ ವಿಚಾರದಲ್ಲಿ ಅದಕ್ಕೆ ಇತ್ತೀಚಿನ ವರ್ಷಗಳಲ್ಲಿ ಕೆಲವು ಪ್ರತಿಷ್ಠಿತ ಪ್ರಶಸ್ತಿಗಳೂ ಬಂದಿವೆ. ಇವತ್ತು ಇತರೆ ಯಾವುದೆ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ವಿಮಾನಯಾನದಷ್ಟೆ ಸುರಕ್ಷಿತ ಕೊರಿಯಾ ಏರ್‌ಲೈನ್ಸ್‌ನಲ್ಲಿಯ ವಿಮಾನಯಾನ. ಅರೆ! ಇಷ್ಟು ಬೇಗ ಅದು ಹೇಗೆ ಅದು ಅಷ್ಟೊಂದು ಒಳ್ಳೆಯ ಹೆಸರು ಪಡೆಯಿತು? ಉತ್ತರ, ಕೊರಿಯನ್ ಏರ್‌ಲೈನ್ಸ್‌ನ ಸಿಬ್ಬಂದಿ ಮಾತನಾಡುವ ಭಾಷೆಯಲ್ಲಿದೆ. ಈಗ ಆ ವಿಮಾನಯಾನ ಸಂಸ್ಥೆಯ ಕಾಕ್‌ಪಿಟ್‌ನಲ್ಲಿ ಕೊರಿಯ ಭಾಷೆ ವರ್ಜ್ಯ. ಅಲ್ಲಿ ಇಂಗ್ಲಿಷ್ ಮಾತ್ರವೆ ಹೃದ್ಯಂ. ಆ ಒಂದೇ ಬದಲಾವಣೆ ಕೊರಿಯನ್ ಏರ್‌ಲೈನ್ಸ್‌ನ ಭವಿಷ್ಯವನ್ನೆ ಬದಲಾಯಿಸಿತು.

ಕೊರಿಯ ಸ್ಥಾನದಲ್ಲಿ ಇಂಗ್ಲಿಷ್? ಯಾಕೆ? ಮತ್ತು, ಅದು ಅಪಘಾತಗಳನ್ನು ನಿಯಂತ್ರಿಸುತ್ತದೆ ಎನ್ನುವ ಅಭಿಪ್ರಾಯಕ್ಕೆ ಆ ವಿಮಾನಯಾನ ಸಂಸ್ಥೆ ಬಂದದ್ದಾದರೂ ಹೇಗೆ?

ಈಗ ನಾವು ನಮ್ಮ ಕನ್ನಡ ಭಾಷೆಯ ಸಂಬೋಧನಾ ರೀತಿಗಳ ಬಗ್ಗೆ ಸ್ವಲ್ಪ ನೋಡೋಣ, ಮನೆಯ ಬಾಗಿಲಿನಲ್ಲಿರುವ ಒಬ್ಬ ವ್ಯಕ್ತಿಯನ್ನು ನಾವು ಹೇಗೆ ಒಳಗೆ ಕರೆಯುತ್ತೇವೆ? "ದಯವಿಟ್ಟು ಒಳಗೆ ಬನ್ನಿ", "ಒಳಗೆ ಬನ್ನಿ", "ಒಳಗೆ ಬಾ", "ಬಾರೊ", "ಬಾರೋ ಲೇ",!!! ಹೊರಗಿರುವ ವ್ಯಕ್ತಿಯ ಸ್ಥಾನಮಾನ ಮತ್ತು ನಮ್ಮ ಸ್ಥಾನಮಾನ ಹಾಗು ಸಂಬಂಧದ ಮೇಲೆ ಇಬ್ಬರ ನಡುವೆ ಒಂದೆ ಕ್ರಿಯೆಗೆ ಬಳಸಲಾಗುವ ಪದಗಳು ಬದಲಾಗುತ್ತವೆ. ಕೊರಿಯ ಭಾಷೆಯಲ್ಲಿಯೂ ಹೀಗೆಯೆ. ಖಚಿತವಾಗಿ ಹೇಳಬೇಕೆಂದರೆ, ಇಬ್ಬರ ನಡುವಿನ ಮಾತುಕತೆಗೆ ಕೊರಿಯ ಭಾಷೆಯಲ್ಲಿ ಆರು ಸಂಬೋಧನಾ ರೀತಿಗಳಿವೆಯಂತೆ: ಔಪಚಾರಿಕ ಗೌರವ, ಅನೌಪಚಾರಿಕ ಗೌರವ, ಒರಟು, ಪರಿಚಿತ, ಸಲಿಗೆ, ಮತ್ತು ಸರಳ/ನೇರಮಾತು. ಇದರ ಜೊತೆಗೆ ಮೇಲುಕೀಳು, ದೊಡ್ಡವರು-ಚಿಕ್ಕವರು ಎನ್ನುವ ಅಂತರ ಕಾಯ್ದುಕೊಳ್ಳುವ, ತಗ್ಗಿಬಗ್ಗಿ ನಡೆಯುವ ಪಾಳೆಯಗಾರಿಕೆ ನಡವಳಿಕೆಯೂ ಇದೆ. ಇದನ್ನು ಕೊರಿಯಾದ ಭಾಷಾಶಾಸ್ತ್ರಜ್ಞ ಹೀಗೆ ವಿವರಿಸುತ್ತಾನೆ: "ಊಟಕ್ಕೆ ಕುಳಿತಾಗ ಹಿರಿಯ ಅಧಿಕಾರಿ ಕುಳಿತುಕೊಂಡು ಊಟ ಮಾಡಲು ಆರಂಭಿಸುವ ತನಕ ಕಿರಿಯ ಅಧಿಕಾರಿ ಕಾಯಬೇಕು. ಆದರೆ ಈ ನಿಯಮ ಹಿರಿಯ ಅಧಿಕಾರಿಗೆ ಅನ್ವಯಿಸುವುದಿಲ್ಲ. ಸಾಮಾಜಿಕವಾಗಿ ತನಗಿಂತ ಮೇಲಿರುವ ವ್ಯಕ್ತಿಯ ಮುಂದೆ ಕೆಳಗಿನವನು ಸಿಗರೇಟ್ ಸೇದುವ ಹಾಗಿಲ್ಲ. ಅದೇ ರೀತಿ, ತನಗಿಂತ ಮೇಲಿನವರ ಜೊತೆ ಮದ್ಯಪಾನಕ್ಕೆ ಕುಳಿತಾಗ ಕೆಳಗಿನ ವರ್ಗಕ್ಕೆ ಸೇರಿದ ವ್ಯಕ್ತಿ ತನ್ನ ಲೋಟವನ್ನು ಮುಚ್ಚಿಟ್ಟುಕೊಳ್ಳಬೇಕು ಮತ್ತು ಪಕ್ಕಕ್ಕೆ ತಿರುಗಿಕೊಂಡು ಕುಡಿಯಬೇಕು. ಮೇಲ್ವರ್ಗದವರನ್ನು ಎದುರುಗೊಂಡಾಗ ಬಾಗಿ ವಂದಿಸಬೇಕು. ಹಾಗೆಯೆ ತಾನಿರುವ ಸ್ಥಳದಲ್ಲಿ ಮೇಲಿನ ವರ್ಗಕ್ಕೆ ಸೇರಿದವನು ಕಾಣಿಸಿಕೊಂಡಾಗ ಎದ್ದು ನಿಲ್ಲಬೇಕು. ಅವರ ಮುಂದೆ ಹಾದುಹೋಗಬಾರದು. ಎಲ್ಲಾ ಸಾಮಾಜಿಕ ನಡವಳಿಕೆಗಳು ಹಿರಿತನ ಮತ್ತು ಸ್ಥಾನಮಾನಕ್ಕನುಗುಣವಾಗಿ ಜರುಗುತ್ತವೆ. ಕೊರಿಯಾದ ಗಾದೆಯೊಂದನ್ನು ಉದಾಹರಿಸುವುದಾದರೆ, ’ನೀರು ಕುಡಿಯಲು ಸಹ ರೀತಿನೀತಿಗಳಿವೆ’."

ಇಷ್ಟೇ ಅಲ್ಲ. ಅಂತರ ಕಾಯ್ದುಕೊಳ್ಳುವ ಕಾರಣದಿಂದಾಗಿ ಅವರ ಮಾತುಗಳು ಸಹ ಸ್ಪಷ್ಟವಾಗಿ, ಸರಳವಾಗಿ ಇರುವುದಿಲ್ಲ. ಉದಾಹರಣೆಗೆ, ಒಬ್ಬ ಮೇಲಧಿಕಾರಿ ತನ್ನ ಕೆಳಗಿನವನ ಜೊತೆ ಮಾತಾಡುವ ರೀತಿ ಮತ್ತು ಅವರ ಮಾತುಕತೆಯನ್ನು ನಾವು ಅರ್ಥೈಸಿಕೊಳ್ಳಬೇಕಾದ ಬಗೆಯನ್ನು ಗಮನಿಸಿ:
ಮೇಲಧಿಕಾರಿ/ಯಜಮಾನ: ಓಹ್, ತುಂಬಾ ಚಳಿ. ಜೊತೆಗೆ ನನಗೆ ಹಸಿವೂ ಆಗುತ್ತಿದೆ.
[ಅರ್ಥ: ನೀನು ಯಾಕೆ ನನಗೆ ಏನಾದರು ಕುಡಿಸಲು ಅಥವ ತಿನ್ನಿಸಲು ಕರೆದುಕೊಂಡು ಹೋಗಬಾರದು?]
ಕೆಳಾಧಿಕಾರಿ/ನೌಕರ: ಸ್ವಲ್ಪ ಮದ್ಯ ಏನಾದರು ತೆಗೆದುಕೊಳ್ಳುತ್ತೀರ?
[ಅರ್ಥ: ನಿಮಗೆ ನಾನು ಮದ್ಯಪಾನ ಮಾಡಿಸಲು ಕರೆದುಕೊಂಡು ಹೋಗಬಯಸುತ್ತೇನೆ.]
ಮೇ.: ಪರವಾಗಿಲ್ಲ. ತೊಂದರೆ ತಗೊಬೇಡ.
[ಅರ್ಥ: ನೀನು ಇದನ್ನೆ ಮತ್ತೊಮ್ಮೆ ಹೇಳಿದರೆ ಒಪ್ಪಿಕೊಳ್ಳುತ್ತೇನೆ.]
ಕೆ.: ನಿಮಗೆ ಹಸಿವೂ ಆಗಿರಬೇಕು. ಊಟಕ್ಕೆ ಹೊರಗೆ ಹೋಗೋಣವೆ?
[ಅರ್ಥ: ನೀವು ನನ್ನಿಂದ ತಿಂಡಿ-ಪಾನ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದೇನೆ.]
ಮೇ.: ಹಾಗೇ ಮಾಡ್ಲಾ?
[ಅರ್ಥ: ನನಗೆ ಒಪ್ಪಿಗೆ ಇದೆ. ಇನ್ನು ಹೊರಡೋಣ.]

ಇದು ಕೇವಲ ಕೊರಿಯಾದ ಕತೆ ಅಲ್ಲ. ನಮ್ಮದೂ ಸೇರಿದಂತೆ ಅನೇಕ ಏಷ್ಯಾ ದೇಶಗಳ ಕತೆಯೂ ಇದೇ. ಹೀಗೆ ವಿವಿಧ ಅಧಿಕಾರಿಕ/ಸಾಮಾಜಿಕ ವರ್ಗಗಳಲ್ಲಿ ಕಾಯ್ದುಕೊಳ್ಳಲಾಗುವ ಅಂತರವನ್ನು "ಅಧಿಕಾರ-ಅಂತರ ಸೂಚಿ" (Power-Distance Index) ಎಂದು ಗುರುತಿಸಲಾಗುತ್ತದೆ. ಗ್ಲಾಡ್‌ವೆಲ್ "ಹೊರಗಣವರು"ನಲ್ಲಿ ಕೊರಿಯಾದ ವಿಮಾನವೊಂದು ಅಪಘಾತಕ್ಕೀಡಾಗುವ ಕೊನೆಯ ಕ್ಷಣಗಳಲ್ಲಿ ಕಾಕ್‌ಪಿಟ್‌ನಲ್ಲಿ ದಾಖಲಾದ ಸಂಭಾಷಣೆಯನ್ನು ಈ PDI ಆಧಾರದ ಮೇಲೆ ವಿಶ್ಲೇಷಿಸುತ್ತಾನೆ. ಜೊತೆಗೆ ಕೊಲಂಬಿಯಾ ದೇಶದ ವಿಮಾನವೊಂದು ನ್ಯೂಯಾರ್ಕ್ ಬಳಿ ಅಪಘಾತಕ್ಕೀಡಾದ ಘಟನೆಯನ್ನೂ ವಿಶ್ಲೇಷಿಸುತ್ತಾನೆ. ಈ ಎರಡೂ ಸಂದರ್ಭಗಳಲ್ಲಿ ಕೆಳಗಿನ ಅಧಿಕಾರಿ ತನಗಿಂತ ಹಿರಿಯ ಅಧಿಕಾರ ಸ್ಥಾನದಲ್ಲಿರುವ ಪೈಲಟ್‌ಗೆ ನೇರವಾಗಿ ಮತ್ತು ಸ್ಪಷ್ಟವಾಗಿ ಮಾಹಿತಿ ಕೊಡದೆ ಆತನ ಜ್ಯೇಷ್ಟತೆಯನ್ನು ಗೌರವಿಸುವುದು ಕಾಣುತ್ತದೆ. ಕೊಲಂಬಿಯಾದ ಫ್ಲೈಟ್-ಇಂಜಿನಿಯರ್ ಅಂತೂ ತನ್ನ ವಿಮಾನದಲ್ಲಿ ಇಂಧನ ಕಾಲಿ ಆಗಿದ್ದರೂ ಅದನ್ನು ಸ್ಪಷ್ಟವಾಗಿ ಏರ್‌ಪೋರ್‍ಟ್‌ನ ನಿಯಂತ್ರಣ ಗೋಪುರಕ್ಕೆ ತಿಳಿಸದೆ ಹೋಗುತ್ತಾನೆ. ಅಮೆರಿಕ ಮತ್ತಿತರ ಕೆಲವು ದೇಶಗಳಲ್ಲಿ ಈ ಅಧಿಕಾರಿಕ ಅಂತರ ಕಮ್ಮಿ. ಆದರೆ ಏಷ್ಯಾದ ಹಲವಾರು ರಾಷ್ಟ್ರಗಳಲ್ಲಿ ಮತ್ತು ಕೊಲಂಬಿಯಾ ಒಳಗೊಂಡಂತೆ ತೃತೀಯ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಈ ಅಂತರ ಜಾಸ್ತಿ. ಈ ಅಂತರವೆ ವಿಮಾನ ಅಪಘಾತಗಳಂತಹ ತುರ್ತು ಪರಿಸ್ಥಿಗಳಲ್ಲಿ ನಿರ್ಣಾಯಕವಾಗಿ ಪರಿಣಮಿಸುತ್ತದೆ.

ಈಗ ಮತ್ತೊಮ್ಮೆ ಕೊರಿಯನ್ ಏರ್‌ಲೈನ್ಸ್‌ನ ವಿಚಾರಕ್ಕೆ ಬರೋಣ. ತನ್ನ ಕುಖ್ಯಾತಿಯನ್ನು ತೊಲಗಿಸಿಕೊಳ್ಳಲು ಮತ್ತು ಅಪಘಾತಗಳಾಗದ ಹಾಗೆ ನೋಡಿಕೊಳ್ಳಲು ಆ ಏರ್‌ಲೈನ್ಸ್ ೨೦೦೦ರಲ್ಲಿ ಒಬ್ಬ ಯೂರೋಪಿಯನ್ ಅಧಿಕಾರಿಯನ್ನು ತನ್ನ ವಿಮಾನ ಹಾರಾಟ ವಿಭಾಗದ ಉಸ್ತುವಾರಿಗೆ ನೇಮಿಸಿತು. ಕೊರಿಯನ್ನರ ಸಂಪ್ರದಾಯಗಳು ಮತ್ತು ಅವರು ಭಾಷೆಯಲ್ಲಿಯೂ ಅಂತರ ಕಾಯ್ದುಕೊಳ್ಳುವ ವಿಚಾರವನ್ನು ಆತ ಗಮನಿಸಿದ. ಕೊರಿಯ ಏರ್‌ಲೈನ್ಸ್‌ನ ಬಹುತೇಕ ಸಿಬ್ಬಂದಿ ಯೋಗ್ಯರೂ, ವೃತ್ತಿಪರರೂ ಆಗಿದ್ದರು. ಆದರೆ ಅವರ ಅಂತರ ಕಾಯ್ದುಕೊಳ್ಳುವ ಪರಂಪರೆ ಮತ್ತು ಅದಕ್ಕಿರುವ ಭಾಷೆಯ ಒತ್ತಾಸೆ ಆತನಿಗೆ ಮುಖ್ಯ ಲೋಪವಾಗಿ ಕಾಣಿಸಿತು. ಪೈಲಟ್‌ಗಳ ಮತ್ತು ವಿಮಾನಚಾಲನಾ ಸಿಬ್ಬಂದಿಯ ಕರ್ತವ್ಯ ತಮ್ಮ ಸಂಪ್ರದಾಯಗಳನ್ನು ಪಾಲಿಸುವುದಲ್ಲ. ಸುರಕ್ಷಿತವಾಗಿ ವಿಮಾನ ಚಾಲನೆ ಮಾಡುವುದು. ಅದಕ್ಕಾಗಿ ಆ ಯೂರೋಪಿಯನ್ ಅಧಿಕಾರಿ ಅಂದಿನಿಂದ ಕೊರಿಯನ್ ವಿಮಾನದೊಳಗಿನ ಭಾಷೆಯನ್ನು ಇಂಗ್ಲಿಷ್‌ಗೆ ಬದಲಾಯಿಸಿಬಿಟ್ಟ. ಅದನ್ನು ಸ್ಪಷ್ಟವಾಗಿ ಕಾರ್ಯಕ್ಕಿಳಿಸಿದ. ತಮ್ಮ ವೃತ್ತಿ ಒತ್ತಾಯಿಸುವ ರೀತಿನೀತಿಗಳನ್ನು ಪಾಲಿಸಲು ಆಗದಂತೆ ತಮಗೆ ತಡೆಯೊಡ್ಡುತ್ತಿದ್ದ ಆ ಪೈಲಟ್‌ಗಳ ದೇಸಿ-ಸಂಪ್ರದಾಯಗಳಿಂದ ಅವರನ್ನು ಆಚೆಗೆ ತಂದು ಸುರಕ್ಷಿತ ವಿಮಾನಚಾಲನೆಗೆ ಅಗತ್ಯವಾದ ಶಿಕ್ಷಣ ಕೊಟ್ಟ. ಒಂದು ರೀತಿಯಲ್ಲಿ ಅವರ ಸಂಪ್ರದಾಯಗಳನ್ನು ಮಾರ್ಪಡಿಸಿದ. ಅಲ್ಲಿಂದೀಚೆಗೆ ಆ ಏರ್‌ಲೈನ್ಸ್‌ನ ದಿಕ್ಕೆ ಬದಲಾಯಿಸಿತು. ಒಬ್ಬ ವ್ಯಕ್ತಿಯ ಸಾಂಸ್ಕೃತಿಕ ಹಿನ್ನೆಲೆಯನ್ನು, ಆತ ಬೆಳೆದುಬಂದಿರುವ ಪರಂಪರೆ ಮತ್ತು ಆತನ ಸುತ್ತಮುತ್ತಲ ಸಂಪ್ರದಾಯಗಳನ್ನು ಅರ್ಥ ಮಾಡಿಕೊಂಡರೆ ಆಗ ಆತ ಕೈಗೊಂಡಿರುವ ವೃತ್ತಿಗೆ ಅವಶ್ಯವಾಗಿ ಬೇಕಾದ ಮಾರ್ಪಾಡುಗಳನ್ನು ಕಲಿಸುವುದು ಸುಲಭವಾಗುತ್ತದೆ.

(ಮುಂದುವರೆಯುವುದು...)


ಅಧಿಕಾರದ ಮುಂದೆ ಸತ್ಯ ನುಡಿಯಲಾಗದ ಪರಂಪರೆ ನಮ್ಮದು!

ಆಂಧ್ರದಲ್ಲಿ ಕಳೆದ ವಾರ ಘಟಿಸಿದ ಹೆಲಿಕಾಪ್ಟರ್ ಅಪಘಾತ ಅಲ್ಲಿ ರಾಜಕೀಯ ಮತ್ತು ಸಾಮಾಜಿಕ ವಿಪ್ಲವವನ್ನೆ ಸೃಷಿಸ್ಟಿದೆ. ಈ ಹೆಲಿಕಾಪ್ಟರ್ ಅಥವ ಸಣ್ಣ ವಿಮಾನಗಳ ಅಪಘಾತಗಳು ನಮ್ಮಲ್ಲಿ ಅಪರೂಪದ ವಿದ್ಯಮಾನ ಅಲ್ಲ. ಪ್ರತಿ ವರ್ಷ ಇಂತಹವು ಆಗುತ್ತಲೆ ಇವೆ. ವಿಶೇಷವಾಗಿ ಪ್ರಭಾವಶಾಲಿಗಳ ವಿಮಾನಗಳೆ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಕ್ಕೀಡಾಗುತ್ತಿವೆ. ನನ್ನ ಪ್ರಕಾರ ಈ ಅಪಘಾತಗಳಲ್ಲಿ ದೋಷದ ಹೆಚ್ಚಿನ ಪಾಲು ಇರುವುದು ನಮ್ಮ ಸಂಸ್ಕೃತಿಯಲ್ಲ್ಲಿ. ಅದು, ಅಧಿಕಾರವನ್ನು ಎದುರಿಸಲಾಗದ ಮತ್ತು ಅದರ ಮುಂದೆ ಸತ್ಯವನ್ನು ನುಡಿಯಲಾಗದ ನಮ್ಮ ಅಸಾಮರ್ಥ್ಯದ ಪರಂಪರೆಯಲ್ಲಿ.

ಇಲ್ಲೊಂದು ಉತ್ಪ್ರೇಕ್ಷೆ ಎನ್ನಬಹುದಾದ ವಾಕ್ಯ ಬರೆಯುತ್ತೇನೆ. ಬಹುಶಃ ಅಮೆರಿಕದಲ್ಲಿ ಒಂದು ದಿನ ಎಷ್ಟು ವಿಮಾನಗಳು ಹಾರಾಡುತ್ತವೊ, ಭಾರತದಲ್ಲಿ ಇಡೀ ವರ್ಷಕ್ಕೆ ಅಷ್ಟೊಂದು ವಿಮಾನಗಳು ಹಾರಾಡಲಾರವು. ಅಂಕಿಅಂಶಗಳಿಲ್ಲದ ಕಾರಣ ಇದನ್ನು ಉತ್ಪ್ರೇಕ್ಷೆ ಎನ್ನುತ್ತಿದ್ದೇನೆಯೆ ಹೊರತು ನನ್ನ ಸಾಮಾನ್ಯ ಜ್ಞಾನದ ಪ್ರಕಾರ ಇದು ಉತ್ಪ್ರೇಕ್ಷೆ ಅಲ್ಲ ಎಂತಲೆ ಭಾವಿಸುತ್ತೇನೆ. ಆದರೆ, ಅಮೆರಿಕದಲ್ಲಿ ಆಗುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಮ್ಮಲ್ಲಿ ಅಪಘಾತಗಳಾಗುತ್ತಿವೆ. ನಮ್ಮ ಅಧಿಕಾರಸ್ಥರು, ಶ್ರೀಮಂತರು, ರಾಜಕಾರಣಿಗಳು, ಎಲ್ಲರಿಗೂ ತಮ್ಮ ಸ್ಥಾನಮಾನಕ್ಕನುಗುಣವಾಗಿ ಅಹಂಕಾರ ಆವರಿಸಿಕೊಂಡುಬಿಡುತ್ತದೆ. ಅವರ ಮರ್ಜಿಗೆ ಅನುಸಾರವಾಗಿ ಹವಾಮಾನ ಬಗಲಾಗಬೇಕೆಂದು, ನಿಯಮಗಳನ್ನು ಮುರಿಯಬಹುದೆಂದು, ವಿಮಾನಗಳು ಹಾರಾಡಬೇಕೆಂದು ಬಯಸುತ್ತಾರೆ. ಇನ್ನು ವಿಮಾನಯಾನ ಸಂಸ್ಥೆಗಳು ಮತ್ತು ಪೈಲಟ್‌ಗಳು ತಮ್ಮ ಹಣಗಳಿಕೆಯ ಸಂಬಂಧಗಳನ್ನು ಕೆಡಿಸಿಕೊಳ್ಳದೆ ಇರಲು ಮತ್ತು ಕೆಲಸ ಕಳೆದುಕೊಳ್ಳದೆ ಇರಲು ಪ್ರತಿಕೂಲ ಸ್ಥಿತಿಯಲೂ ಗುಲಾಮರಂತೆ ನಡೆದುಕೊಳ್ಳುತ್ತಾರೆ. ಅಧಿಕಾರ ಸ್ಥಾನದ ಮಹಿಮಾವಳಿಗೆ ಮತ್ತು ಹಾವಳಿಗೆ ಬೆದರಿ ಅವರ ಪ್ರಾಣವನ್ನೂ ಕಳೆಯುವುದಲ್ಲದೆ ತಮ್ಮ ಪ್ರಾಣವನ್ನೂ ಕಳೆದುಕೊಳ್ಳುತ್ತಾರೆ. ನಮಗೆ ಇಲ್ಲಿ ಭಾಷೆ ತೊಡಕಾಗಿದೆ ಎಂದು ನನಗನ್ನಿಸುತ್ತಿಲ್ಲ. ತೊಡಕಿರುವುದು, ಸತ್ಯವನ್ನು ನುಡಿಯುವ ನಮ್ಮ ಸಾಮರ್ಥ್ಯದಲ್ಲಿ. ಅಧಿಕಾರ ಸ್ಥಾನವನ್ನು ಎದುರಿಸಲಾಗದ ಭೀತ ಮನಸ್ಥಿತಿಯಲ್ಲಿ.


ಮುಂದಿನ ವಾರ: ಭತ್ತಕ್ಕೂ-ಗಣಿತಕ್ಕೂ ಏನು ಸಂಬಂಧ?

ಲೇಖನ ಸರಣಿಯ ಇದುವರೆಗಿನ ಲೇಖನಗಳು:

Sep 3, 2009

ಯಾವುದಕ್ಕೂ "ಸಂಸ್ಕಾರ" ಇರಬೇಕ್ರಿ !

[ವಿಕ್ರಾಂತ ಕರ್ನಾಟಕದ ಸೆಪ್ಟೆಂಬರ್ 11,2009 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.
ಲೇಖನ ಸರಣಿಯ ಹಿಂದಿನ ಲೇಖನಗಳು:
ಮೊದಲನೆಯ ಲೇಖನ: "ಹೊರಗಣವರು" - ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ!
ಎರಡನೆಯದು: ಹುಟ್ಟಿದ ಘಳಿಗೆ ಸರಿ ಇರಬೇಕು...]
ಮೂರನೆಯದು: ದಶಸಹಸ್ರ ಗಂಟೆಯೆಂಬ ಪ್ರತಿಭಾ-ನಿಯಮ... ]


ಒಬ್ಬ ಮನುಷ್ಯ ಎಷ್ಟೆಲ್ಲಾ ಗಂಟೆಗಳ ಅಭ್ಯಾಸದಿಂದ ಪ್ರತಿಭಾವಂತನಾಗಿ ಬದಲಾದರೂ ಆತನಿಗೆ "ಅವಕಾಶ" ಕೂಡಿಬರದಿದ್ದರೆ ಯಶಸ್ಸಿನ ಶಿಖರ ಏರುವುದು ಕಷ್ಟ ಎಂದು ಮ್ಯಾಲ್ಕಮ್ ಗ್ಲಾಡ್‌ವೆಲ್ "ಹೊರಗಣವರು"ನಲ್ಲಿ ಪ್ರತಿಪಾದಿಸುತ್ತಾನೆ. ಅಸಾಮಾನ್ಯ ಸಾಧನೆಯಲ್ಲಿ ಪ್ರತಿಭೆಯ ಪಾಲಿಗಿಂತ "ಅವಕಾಶ"ದ ಪಾಲೆ ಹೆಚ್ಚು. ಬಿಲ್ ಗೇಟ್ಸ್, ಬೀಟಲ್ಸ್‌ರಂತೆ ಅಸಾಮಾನ್ಯ ಯಶಸ್ಸು ಕಾಣಲು ಅವರ ಪ್ರತಿಭೆ ಒಂದು ಪ್ರಮುಖ ಅಂಶ. ಆದರೆ ಅದರಷ್ಟರಿಂದಲೆ ಅವರು ಯಶಸ್ವಿಗಳಾಗಲಿಲ್ಲ. ಹೇಳಬೇಕೆಂದರೆ, ಅವರು ಪ್ರತಿಭಾಶಾಲಿಗಳಾಗಿದ್ದು ಕೂಡ ಅವರಿಗೆ ಒದಗಿ ಬಂದ 'ಅವಕಾಶ'ಗಳಿಂದಾಗಿ, ಅಥವ ಅವರು ತಾವಾಗೇ ಒದಗಿಸಿಕೊಂಡ, ಹುಡುಕಿಕೊಂಡ ಅವಕಾಶಗಳಿಂದಾಗಿ.

ಇಷ್ಟಕ್ಕೂ ಈ ಅವಕಾಶಗಳು ಹೇಗೆ ಬರುತ್ತವೆ? ಅದು ಒಬ್ಬರ "ಅದೃಷ್ಟ"ವೆ? ಅವರ "ವಿಧಿ"ಯೇ? ನಾನು ಹಿಂದಿನ ಲೇಖನದ ಶೀರ್ಷಿಕೆಯೊಂದರಲ್ಲಿ ಬಳಸಿದ ಹಾಗೆ, ಅವರ "ಹುಟ್ಟಿದ ಗಳಿಗೆ/ಜಾತಕ"ವೆ? (ಇಲ್ಲಿ ಈ ಅದೃಷ್ಟ/ವಿಧಿ/ಜಾತಕ ಮುಂತಾದ ಪದಗಳನ್ನು ನಾನು ಬಳಸಿರುವುದನ್ನು ನೋಡಿ ಕೆಲವು ಓದುಗರು ಗ್ಲಾಡ್‌ವೆಲ್‌ನ ಪುಸ್ತಕದ ಬಗ್ಗೆ ಬೇರೆ ರೀತಿಯ ಅಭಿಪ್ರಾಯಕ್ಕೆ ಬರಬಾರದೆಂದು ಈ ಮೂಲಕ ಕೋರುತ್ತೇನೆ. ಯಾಕೆಂದರೆ "ಹೊರಗಣವರು" ಒಂದು ಪ್ರಖರ ವೈಚಾರಿಕತೆಯ, ವೈಜ್ಞಾನಿಕ ಮನೋಭಾವದ ಪುಸ್ತಕ. ಯಶಸ್ಸು-ಅವಕಾಶ-ದೇಶ-ಕಾಲ ಮುಂತಾದುವುಗಳ ಬಗ್ಗೆಯೇ ಚರ್ಚಿಸುವ ಸುಮಾರು 285 ಪುಟಗಳ ಆ ಪುಸ್ತಕದಲ್ಲಿ ಒಮ್ಮೆಯೂ 'ಅದೃಷ್ಟ' ಯಾ 'ವಿಧಿ' ಪದಗಳು ನುಸುಳಿಲ್ಲ ಎಂದರೆ ನಿಮಗೆ ಆ ಪುಸ್ತಕದ ವೈಚಾರಿಕತೆಯ ಪರಿಚಯವಾದೀತು ಎಂದು ಭಾವಿಸುತ್ತೇನೆ. ಈ ಲೇಖನ ಸರಣಿಯಲ್ಲಿ ನಾನು ಅಲ್ಲಲ್ಲಿ ಬಳಸಿರುವ ಈ "ಅಗ್ಗದ ಪದಗಳು" ಓದುಗರ ಮನಸ್ಸಿನಲ್ಲಿ ಒಂದಷ್ಟು ವಿರೋಧಾಭಾಸ ಮತ್ತು ಚಿಂತನೆ ಮೂಡಿಸಲಿ ಎನ್ನುವ ಕಾರಣಕ್ಕಾಗಿಯೆ ಹೊರತು ಬೇರೇನೂ ಅಲ್ಲ. ಅದು ಈ ಲೇಖನಗಳ ಸಂದರ್ಭದಲ್ಲಿ ಸಾಧ್ಯವಾಗಿಲ್ಲ ಎಂತಾದರೆ ಅದು ನನ್ನ ಬರಹದ ಅಸಾಮಾರ್ಥ್ಯವೆ ಹೊರತು "ಹೊರಗಣವರು" ಪ್ರತಿಪಾದಿಸುವ ವಿಚಾರವಲ್ಲ. - ರವಿ)

ಒಬ್ಬ ಮನುಷ್ಯನ ವಿಶ್ಲೇಷಣಾಜಾಣ್ಮೆ/ಬುದ್ಧಿವಂತಿಕೆ ಒಂದು ಹಂತದ ವರೆಗೆ ಆತನ ಅನುವಂಶಿಕತೆಯ ಮೇಲೆ ಅವಲಂಬಿತ ಎನ್ನುತ್ತಾರೆ ಸಂಶೋಧಕರು. ಹಾಗಾಗಿಯೆ ಕೆಲವು ಮನುಷ್ಯರು ಹುಟ್ಟಾ ಬುದ್ಧಿವಂತರಾಗಿ, ಮೇಧಾವಿಗಳಾಗಿ ಹುಟ್ಟುತ್ತಾರೆ. ಅವರ IQ (Intelligence Quotient/ಜಾಣ್ಮೆಯ ಪ್ರಮಾಣ) ಸಾಮಾನ್ಯವಾಗಿ ಇತರರಿಗಿಂತ ಹೆಚ್ಚಾಗಿರುತ್ತದೆ. ಆದರೆ ಒಬ್ಬ ಮನುಷ್ಯನ ಯಶಸ್ಸನ್ನು ಕೇವಲ ಆತನ IQ ಮಾತ್ರವೆ ನಿರ್ಧರಿಸುವುದಿಲ್ಲ. ಹಾಗೆಯೆ ಅತಿ ಹೆಚ್ಚು IQ ಇಲ್ಲ ಅಂದ ಮಾತ್ರಕ್ಕೆ ಅವರು ಜೀವನದಲ್ಲಿ ಯಶಸ್ವಿಗಳಾಗುವುದಿಲ್ಲ ಎನ್ನಲೂ ಆಗುವುದಿಲ್ಲ. ಇದನ್ನು ನಾವು ಟರ್ಮನ್ ಎನ್ನುವ ಮನಃಶಾಸ್ತ್ರಜ್ಞ ಮಾಡಿದ ಒಂದು IQ ಆಧಾರಿತ ಅಧ್ಯಯನವೊಂದರಿಂದ ಕಾಣಬಹುದು.

ಶತಮೂರ್ಖರು, ಮಾನಸಿಕ ಅಸ್ವಸ್ಥರು ಎನ್ನಬಹುದಾದವರ ವಿಶ್ಲೇಷಣಾ ಸಾಮರ್ಥ್ಯ ಅಥವ IQ 70 ಕ್ಕಿಂತ ಕಮ್ಮಿ ಇದ್ದರೆ, ಸಾಮಾನ್ಯ ಜನರ ಸರಾಸರಿ IQ 100. ಒಳ್ಳೆಯ ಕಾಲೇಜು ಪದವಿ ಪಡೆಯಲು ನಿಮಗೆ ಕನಿಷ್ಠ 115 IQ ಆದರೂ ಇರಬೇಕು. ಅತಿ ಬುದ್ಧಿವಂತ ಎನ್ನುವವರ IQ 140 ಕ್ಕಿಂತ ಮೇಲಿರುತ್ತದೆ. ವಿಶ್ವಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನನ IQ, 150.

ಸುಮಾರು 1920 ರ ಸುಮಾರಿನಲ್ಲಿ ಟರ್ಮನ್ ಕ್ಯಾಲಿಫೋರ್ನಿಯಾ ರಾಜ್ಯದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ IQ ಪರೀಕ್ಷೆ ಮಾಡುತ್ತಾನೆ. ಅದರಲ್ಲಿ 140 ರಿಂದ 200 ರವರೆಗಿನ IQ ಇದ್ದ ಹುಟ್ಟಾ-ಜಾಣ ಹುಡುಗರ ಪಟ್ಟಿ ಮಾಡುತ್ತಾನೆ. ಅಮೆರಿಕದ ಭವಿಷ್ಯದ ನೇತಾರರ, ಚಿಂತಕರ, ಕವಿಗಳ, ಸಾಧಕರ ಪಟ್ಟಿಯಲ್ಲಿ ತನ್ನ ಪಟ್ಟಿಯಲ್ಲಿಯ ಹುಡುಗರು ಕಾಣಿಸುತ್ತಾರೆ ಎಂದು ಭಾವಿಸುತ್ತಾನೆ. ಮುಂದಿನ ಐವತ್ತು ವರ್ಷಗಳ ಕಾಲ ಆ ಹುಡುಗರ ಜೀವನವನ್ನು, ಯಶಸ್ಸನ್ನು ದಾಖಲಿಸುತ್ತ ಹೋಗುತ್ತಾನೆ.

ಆರಂಭದಲ್ಲಿ ತನ್ನ ಪಟ್ಟಿಯಲ್ಲಿನ ಹುಡುಗರ ಕೆಲವು ಕೃತಿ/ಕಾರ್ಯಗಳನ್ನು ಹಿಂದಿನ ಪ್ರಸಿದ್ಧ ಜೀನಿಯಸ್‌ಗಳ ಆರಂಭದ ಕೃತಿ-ಕಾರ್ಯಗಳೊಂದಿಗೆ ಹೋಲಿಸುತ್ತಾನೆ. ಅದರ ಬಗ್ಗೆ ಕೆಲವು ವಿಮರ್ಶಕರ ಅಭಿಪ್ರಾಯವನ್ನು ಕೇಳುತ್ತಾನೆ. ಅವರೆಲ್ಲ ಈ ಹುಡುಗರ ಕೃತಿಗಳಿಗೂ, ಸಾಧಕರ ಆರಂಭಿಕ ಕೃತಿಗಳಿಗೂ ಇರುವ ಸಾಮ್ಯತೆಯನ್ನೂ, ಪ್ರಬುದ್ಧತೆಯನ್ನೂ ಗುರುತಿಸುತ್ತಾರೆ. ಆದರೆ ಆ ಹುಡುಗರು ವಯಸ್ಕರಾಗಿ, ಜೀವನದಲ್ಲಿ ನೆಲೆನಿಲ್ಲುವ ವಯಸ್ಸಿಗೆ ಬಂದಂತೆಲ್ಲ ಅವರ ಸಾಧನೆ/ಯಶಸ್ಸು ಹೇಳಿಕೊಳ್ಳುವ ಮಟ್ಟಕ್ಕೇನೂ ಮುಟ್ಟುವುದಿಲ್ಲ. ಆತನ ಪಟ್ಟಿಯಲ್ಲಿನ ಕನಿಷ್ಠ ಸಂಖ್ಯೆಯ ಜನ ಮಾತ್ರ ಇದ್ದುದರಲ್ಲಿ ಉತ್ತಮ ಎನ್ನುವ ಸ್ಥಾನಗಳಿಗೆ ಏರುತ್ತಾರೆ. ಬಹುಪಾಲು ಜನ ಸಾಮಾನ್ಯ ಎನ್ನಬಹುದಾದ ಹಂತದಲ್ಲಿಯೆ ನಿಂತುಬಿಡುತ್ತಾರೆ. ಕೆಳದರ್ಜೆಯ, ವಿಫಲ ಎನ್ನಬಹುದಾದ ಗುಂಪಿನಲ್ಲೂ ಒಂದಷ್ಟು ಜನ ಕಾಣಿಸುತ್ತಾರೆ. ಆದರೆ ಟರ್ಮನ್ ಕೊಟ್ಟಿದ್ದ IQ ಪರೀಕ್ಷೆಯನ್ನು ತೆಗೆದುಕೊಂಡು ಅದರಲ್ಲಿ ಉತ್ತಮ ಎನ್ನಬಹುದಾದ ಸಂಖ್ಯೆ ಪಡೆಯದೆ ಆತನ ಪಟ್ಟಿಯಲ್ಲಿ ಸ್ಥಾನ ಗಳಿಸದೆ ಹೋದ ಇಬ್ಬರು ಹುಡುಗರು ಮುಂದಕ್ಕೆ ನೊಬೆಲ್ ಪುರಸ್ಕೃತರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ!

ಅಂದರೆ, ಮನುಷ್ಯನ ಬುದ್ಧಿಮತ್ತೆಗೂ, ಆತ ಜೀವನದಲ್ಲಿ ಕಾಣುವ ಯಶಸ್ಸಿಗೂ ಗಂಟು ಹಾಕುವುದು ಅಸಂಬದ್ಧವಾಗುತ್ತದೆ. ಜೀವನದ ಅನೇಕ ಸಂದರ್ಭಗಳಲ್ಲಿ ಯಶಸ್ಯಿಯಾಗಲು ಬುದ್ಧಿಮತ್ತೆಯಷ್ಟೆ ಸಾಲದು, ಅದರ ಜೊತೆಗೆ ಫಲವತ್ತಾದ ಮನಸ್ಸೂ ಬೇಕಾಗುತ್ತದೆ. ಅದು ಸೃಜನಶೀಲವೂ, ನಾನಾ ಕೋನಗಳಲ್ಲಿ ವಿಶ್ಲೇಷಿಸುವಷ್ಟು ಕ್ರಿಯಾಶೀಲವೂ, ವಾಸ್ತವವನ್ನು ಅದು ಇದ್ದಂತೆ ಗ್ರಹಿಸುವ ಶಕ್ತಿಯುಳ್ಳದ್ದೂ ಆಗಿರಬೇಕಾಗುತ್ತದೆ. ಆದರೆ, ಬುದ್ಧಿಮತ್ತೆಯ ಹುಡುಗರನ್ನು, ಹಾಗೆಯೆ ಸಾಮಾನ್ಯ ಎನ್ನಬಹುದಾದ ಹುಡುಗರನ್ನು ಯಶಸ್ಸಿನ ದಾರಿಯತ್ತ ಕೊಂಡೊಯ್ಯುವ ಮಾರ್ಗವಾದರೂ ಯಾವುದು? ವಾಸ್ತವದ ಜೀವನವನ್ನು ಎದುರಿಸುವ ಉಪಾಯಗಳು ಮತ್ತು ನಡವಳಿಕೆಗಳು ಬರುವುದಾದರೂ ಎಲ್ಲಿಂದ ಮತ್ತು ತರಬೇತಿ ಕೊಡುವವರಾದರೂ ಯಾರು? ಇವೆಲ್ಲ ಒಬ್ಬರ "ಕೌಟುಂಬಿಕ ಹಿನ್ನೆಲೆಯಿಂದ" ಬರುತ್ತದೆ ಎನ್ನುತ್ತಾನೆ ಗ್ಲಾಡ್‌ವೆಲ್. ನಮ್ಮದೇ ದೇಸಿ ಭಾಷೆಯಲ್ಲಿ ಹೇಳಬೇಕೆಂದರೆ, ಮನೆಯಲ್ಲಿ 'ಸಂಸ್ಕಾರ' ಇದ್ದವರಿಗೆ ಜೀವನವನ್ನು ಎದುರಿಸುವುದು, ಅವಕಾಶಗಳನ್ನು ಹುಡುಕಿಕೊಳ್ಳುವುದು, ಸವಾಲುಗಳನ್ನು ತನ್ನ ಅನುಕೂಲಕ್ಕೆ ಮಾರ್ಪಡಿಸಿಕೊಳ್ಳುವುದು, ಪ್ರತಿಕೂಲ ಪರಿಸ್ಥಿತಿಯಿಂದ ಹೊರಬರುವುದು, ಇವೆಲ್ಲ ಸಾಧ್ಯವಾಗುತ್ತದೆ. ಸಾಕ್ಷಿ?

IQ ಮಾಪನದ ಪ್ರಕಾರ ಇವತ್ತಿನ ಅಮೆರಿಕದಲ್ಲಿ ಅತೀ-ಬುದ್ಧಿವಂತ ಎಂದರೆ ಕ್ರಿಸ್ ಲ್ಯಾಂಗನ್ ಎನ್ನುವವ. ಅತನ IQ ಸುಮಾರು 195 ಕ್ಕಿಂತ ಹೆಚ್ಚಿದೆ. ಆಲ್ಬರ್ಟ್ ಐನ್‌ಸ್ಟೀನನ IQ 150ರ ಸುಮಾರಿನಲ್ಲಿತ್ತು ಎನ್ನುವುದನ್ನು ಈ ಸಂದರ್ಭದಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳುವುದು ಒಳ್ಳೆಯದು. ಹಾಗೆಂದ ಮಾತ್ರಕ್ಕೆ ಕ್ರಿಸ್ ಲ್ಯಾಂಗನ್ ಮಹಾನ್ ಸಾಧಕ, ಹೆಸರುವಾಸಿ ಎಂದು ನಾವು ಭಾವಿಸಬಾರದು. ಆತ ತನ್ನ ಕಾಲೇಜು ವಿದ್ಯಾಭ್ಯಾಸವನ್ನೂ ಮುಗಿಸಲಾಗಲಿಲ್ಲ. ತನ್ನ ಜೀವನದ ಬಹುಪಾಲನ್ನು ಬಾರೊಂದರಲ್ಲಿ ಬೌನ್ಸರ್ (ದೈತ್ಯಗಾತ್ರದ ಭದ್ರತಾ ಸಿಬ್ಬಂದಿ) ಆಗಿ ಕಳೆದ ಲ್ಯಾಂಗನ್ ಈಗ ತನ್ನ 57ನೆಯ ವಯಸ್ಸಿನಲ್ಲಿ ಅಮೆರಿಕದ ಗ್ರಾಮಾಂತರ ಪ್ರದೇಶವೊಂದರಲ್ಲಿ ಪಶುಸಾಕಾಣಿಕೆ ಮಾಡುತ್ತ ಜೀವನವನ್ನು ನಡೆಸುತ್ತಿದ್ದಾನೆ. ಆದರೆ ಅಷ್ಟೆಲ್ಲ IQ ಇರುವ ಕ್ರಿಸ್ ಲ್ಯಾಂಗನ್ ತನ್ನ ಜೀವನದಲ್ಲಿ ಈ ಮಟ್ಟದ ವೈಫಲ್ಯ ಕಂಡದ್ದಾದರೂ ಹೇಗೆ?

ಅದಕ್ಕೆ ಉತ್ತರವನ್ನು ನಾವು ಕ್ರಿಸ್ ಲ್ಯಾಂಗನ್‌ನ ಜೀವನದಲ್ಲಿ ನಡೆದ ಘಟನೆಗಳಲ್ಲೂ ಮತ್ತು ಆತನ ಕೌಟುಂಬಿಕ ಹಿನ್ನೆಲೆಯಲ್ಲೂ ಹುಡುಕಬೇಕು. ಆತನ ಅಮ್ಮನ ಮೊದಲ ಗಂಡನಿಗೆ ಹುಟ್ಟಿದ ಮಗ ಈತ. ಇವನು ಹುಟ್ಟುವ ಮೊದಲೆ ಅವರಪ್ಪ ಅವರಮ್ಮನನ್ನು ತೊರೆದು ಓಡಿಹೋಗಿಬಿಡುತ್ತಾನೆ. ಇವನು ಹುಟ್ಟಿದ ನಂತರ ಕ್ರಿಸ್‌ನ ತಾಯಿ ಇನ್ನೊಂದು ಮದುವೆ ಆಗುತ್ತಾಳೆ. ಆತನಿಂದ ಇನ್ನೊಂದು ಮಗು. ಆ ಗಂಡ ಕೊಲೆಯಾಗುತ್ತಾನೆ. ಆಕೆ ಮತ್ತೊಂದು ಮದುವೆ ಆಗುತ್ತಾಳೆ. ಅವನಿಂದ ಮತ್ತೊಂದು ಮಗು. ಆ ಗಂಡ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಮತ್ತೆ ನಾಲ್ಕನೆ ಮದುವೆ ಮಾಡಿಕೊಳ್ಳುತ್ತಾಳೆ. ಆತನಿಂದ ನಾಲ್ಕನೆ ಮಗು. ಆ ನಾಲ್ಕನೆ ಗಂಡನೊ ಸರಿಯಾಗಿ ಆದಾಯವಿಲ್ಲದ, ಕುಡುಕ ಮತ್ತು ಬೇಜವಾಬ್ದಾರಿಯ ಪತ್ರಕರ್ತ. ಮಕ್ಕಳನ್ನು ಹಿಂಸಿಸುವುದರಲ್ಲಿ ಎತ್ತಿದ ಕೈ. ಅಪಾರ ಬಡತನದಲ್ಲಿ, ಅನೇಕ ಊರುಗಳಲ್ಲಿ, ಸ್ಲಮ್ಮುಗಳಂತಹ ಜಾಗಗಳಲ್ಲೆಲ್ಲ ಬಾಲ್ಯ ನೂಕಿದ ಕ್ರಿಸ್ ಲ್ಯಾಂಗನ್ ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ತನ್ನ ತಮ್ಮಂದಿರನ್ನು ಹಿಂಸಿಸುತ್ತಿದ್ದ ಚಿಕ್ಕಪ್ಪನನ್ನು ಹೊಡೆದು ಉರುಳಿಸುತ್ತಾನೆ. ಬಿದ್ದು ಎದ್ದ ಮಲತಂದೆ ಹೊರಹೊರಟವ ಮತ್ತೆಂದೂ ಹಿಂದಿರುಗುವುದಿಲ್ಲ. ಮೇಧಾವಿಯಾಗಿರುವುದೆ ತಪ್ಪು ಎನ್ನುವಂತಹ ಒರಟು ಪ್ರಪಂಚದಲ್ಲಿ ತನ್ನ ತಮ್ಮಂದಿರನ್ನೂ ರಕ್ಷಿಸಿಕೊಳ್ಳುತ್ತ, ಕೆಲಸ ಮಾಡುತ್ತ, ಓದುತ್ತ, ತನ್ನ ದೇಹದ ಮಾಂಸಖಂಡಗಳನ್ನು ಉರಿಗೊಳಿಸಿಕೊಳ್ಳುತ್ತ ಕ್ರಿಸ್ ಬೆಳೆಯುತ್ತಾನೆ.



ಇದೆಲ್ಲದರ ಮಧ್ಯೆ ಆತನ ಓದು ಮತ್ತು ಜ್ಞಾನದ ಹಸಿವೆಯೂ ತೀವ್ರವಾಗಿರುತ್ತದೆ. ಒಂದು ಸಲ ಓದಿದರೆ ಸಾಕು ಅದು ಆತನ ಮಸ್ತಕದಲ್ಲಿ ಸ್ಥಿರವಾಗಿ ನಿಂತುಬಿಡುತ್ತಿತ್ತು. ತರಗತಿಗಳ ಪರೀಕ್ಷೆಗಳನ್ನು ಸುಲಭವಾಗಿ, ಮೇಷ್ಟ್ರುಗಳನ್ನೆ ಲೇವಡಿ ಮಾಡುವ ರೀತಿಯಲ್ಲಿ ಪಾಸು ಮಾಡುತ್ತಿರುತ್ತಾನೆ. ಆದರೆ ಈತನ ಬುದ್ಧಿಮತ್ತೆಯನ್ನು ಗುರುತಿಸುವ ಮತ್ತು ಅದನ್ನು ಪೋಷಿಸುವ ಒಂದೇ ಒಂದು ಅವಕಾಶ ಈತನಿಗೆ ಒದಗಿಬರುವುದಿಲ್ಲ. ಒಮ್ಮೆ ತನ್ನ ತರಗತಿಯ ಗಣಿತದ ಮೇಷ್ಟ್ರು ವಿಷಯವೊಂದನ್ನು ಬಹಳ ನೀರಸವಾಗಿ ಬೋಧಿಸುವುದನ್ನು ಕಂಡು ಆ ಮೇಷ್ಟ್ರಿಗೆ ಹೋಗಿ ಇದನ್ನು ಏಕೆ ಹೀಗೆ ನೀರಸವಾಗಿ ಬೋಧಿಸುತ್ತೀರಿ ಎಂದು ಪ್ರಶ್ನಿಸುತ್ತಾನೆ. ಆದರೆ ಈತನ ಬುದ್ಧಿಮತ್ತೆಯನ್ನು ಗುರುತಿಸಲಾಗದ ಆ ಶಿಕ್ಷಕ ಈತನನ್ನೆ ಹಂಗಿಸಿ ಅವಮಾನಿಸಿ ಕಳುಹಿಸುತ್ತಾನೆ!

ಇಷ್ಟೆಲ್ಲ ಪ್ರತಿಕೂಲ ಪರಿಸ್ಥಿತಿ ಇದ್ದರೂ ಕಾಲೇಜು ವಿದ್ಯಾಭ್ಯಾಸಕ್ಕೆ ಅಮೆರಿಕದ ಎರಡು ಉತ್ತಮ ವಿಶ್ವವಿದ್ಯಾಲಯಗಳಲ್ಲಿ ಆತನಿಗೆ ಪೂರ್ಣಪ್ರಮಾಣದ ಸ್ಕಾಲರ್‌ಶಿಪ್‌ಗಳ ಸಹಿತ ಪ್ರವೇಶ ದೊರೆಯುತ್ತದೆ. ಮನೆಯವರಿಗೆ ಹತ್ತಿರವಿರುವ ಕಾರಣಕ್ಕೆ ಹತ್ತಿರದ ವಿಶ್ವವಿದ್ಯಾಲಯಕ್ಕೆ ದಾಖಲಾಗುತ್ತಾನೆ. ಸ್ಥಿತಿವಂತರ ಮಕ್ಕಳೆ ಹೆಚ್ಚಿಗೆ ಬರುವ ಕಾಲೇಜು ಅದು. ಆ ಶ್ರೀಮಂತ ನಗರವಾಸಿ ವಿದ್ಯಾರ್ಥಿಗಳ ಹೈಫೈ ನಡವಳಿಕೆ ಆತನಿಗೆ ಹೊಸದು. ಹೊರಗಿನದು. ಅವನಿಗೆ ಅದೊಂದು ಕಲ್ಚರಲ್ ಶಾಕ್. ಅಷ್ಟಿದ್ದರೂ ಮೊದಲ ವರ್ಷದ ಪರೀಕ್ಷೆಗಳಲ್ಲಿ ಎಲ್ಲದರಲ್ಲೂ ಉತ್ತಮವಾಗಿ ತೇರ್ಗಡೆಯಾಗುತ್ತಾನೆ. ಆದರೆ ಎರಡನೆಯ ವರ್ಷದಲ್ಲಿ ಆತನಿಗೆ ಸ್ಕಾಲರ್‌ಶಿಪ್ ತಪ್ಪಿಹೋಗುತ್ತದೆ. ಕಾರಣ? ಆತನ ತಾಯಿ ಅರ್ಜಿಯೊಂದಕ್ಕೆ ಸಹಿ ಮಾಡಿ ಕಳುಹಿಸದೆ ಉದಾಸೀನ ಮಾಡಿಬಿಟ್ಟಿರುತ್ತಾಳೆ! ಕಾಲೇಜಿನವರು ಸ್ಕಾಲರ್‌ಶಿಪ್ ಹಣವನ್ನೆಲ್ಲ ಬೇರೆಯವರಿಗೆ ಹಂಚಿಬಿಟ್ಟಿರುತ್ತಾರೆ. ಈತ ಹೋಗಿ ಕೇಳಿಕೊಂಡರೂ ಅವರು ಸಹಾಯ ಮಾಡುವುದಿಲ್ಲ. ಬೇರೆ ವಿಧಿಯಿಲ್ಲದೆ ಕ್ರಿಸ್ ಲ್ಯಾಂಗನ್ ಆ ವರ್ಷ ಕಾಲೇಜು ತೊರೆಯುತ್ತಾನೆ.

ಮತ್ತೆ ಅಲ್ಲಿಇಲ್ಲಿ ಕೆಲಸ ಮಾಡುತ್ತ ಒಂದಷ್ಟು ದುಡ್ಡು ಹೊಂದಿಸಿಕೊಂಡು ಮುಂದಿನ ಒಂದೆರಡು ವರ್ಷಗಳಲ್ಲಿ ಮತ್ತೊಂದು ಕಾಲೇಜು ಸೇರುತ್ತಾನೆ. ಅದು ಆತನಿರುವ ಊರಿಗಿಂತ ಇಪ್ಪತ್ತು ಕಿ.ಮಿ ದೂರವಿದ್ದ ಊರು. ಈತ ಕಾರಿನಲ್ಲಿಯೆ ಬರಬೇಕಿತ್ತು. ಒಮ್ಮೆ ಆ ಸಮಯದಲ್ಲಿ ಆತನ ಕಾರು ಕೆಟ್ಟುಹೋಗಿಬಿಡುತ್ತದೆ. ಅದರ ರಿಪೇರಿಗೆ ಆತನಲ್ಲಿ ಕಾಸಿರುವುದಿಲ್ಲ. ಆತನ ನೆರೆಯವನೊಬ್ಬ ದಿನ ಮಧ್ಯಾಹ್ನದ ಸಮಯಕ್ಕೆ ಆತನ ಕಾಲೇಜು ಬಳಿಗೆ ಡ್ರಾಪ್ ಕೊಡಲು ಮುಂದೆ ಬರುತ್ತಾನೆ. ಆದರೆ ಈತನ ಕ್ಲಾಸುಗಳಿರುವುದು ಬೆಳಿಗ್ಗೆಯ ಸಮಯದಲ್ಲಿ. ಅದನ್ನು ಮಧ್ಯಾಹ್ನದ ಸೆಷನ್‌ಗೆ ಬದಲಾಯಿಸಿಕೊಡುವಂತೆ ತನ್ನ ಪ್ರೊಫೆಸರ್‌ನನ್ನು ಹೋಗಿ ವಿನಂತಿಸುತ್ತಾನೆ. ಒರಟು ಸ್ವಭಾವದ ಆ ಮನುಷ್ಯ ಅದನ್ನು ವ್ಯಂಗ್ಯ ಮಾಡಿ ನಿರಾಕರಿಸುತ್ತಾನೆ. ಕ್ರಿಸ್ ಕೊನೆಗೆ ತನ್ನ ವಿಭಾಗದ ಡೀನ್ ಬಳಿಗೆ ಹೊಗುತ್ತಾನೆ. ಅವನೂ ಈತನ ವಿನಂತಿಯನ್ನು ಪುರಸ್ಕರಿಸುವುದಿಲ್ಲ. ಬೇಸತ್ತ ಕ್ರಿಸ್ ಕಾಲೇಜು ತೊರೆಯುತ್ತಾನೆ. ಅವನು ಮತ್ತೆಂದೂ ಅದರತ್ತ ಸುಳಿಯುವುದಿಲ್ಲ.

ಮ್ಯಾಲ್ಕಮ್ ಗ್ಲಾಡ್‌ವೆಲ್ ಕೊಡುವ ಮತ್ತೊಂದು ಉದಾಹರಣೆ ರಾಬರ್ಟ್ ಒಪ್ಪೆನ್‌ಹೀಮರ್ ಎಂಬ ಮೇಧಾವಿಯದು. ಆತ ಅಮೆರಿಕದ ಅಣುಬಾಂಬ್ ಉತ್ಪಾದನೆಯ ಉಸ್ತುವಾರಿ ಹೊತ್ತಿದ್ದ ಭೌತಶಾಸ್ತ್ರಜ್ಞ. ಆತನೂ ಹುಟ್ಟಾ ಮೇಧಾವಿ. ಮೂರನೆ ತರಗತಿಗೆಲ್ಲ ಪ್ರಯೋಗಶಾಲೆಯಲ್ಲಿ ಪ್ರಯೋಗಗಳನ್ನು ಮಾಡುತ್ತಿದ್ದ. ಚಿಕ್ಕವಯಸ್ಸಿಗೆ ಹಲವಾರು ಭಾಷೆಗಳನ್ನು ಕಲಿತಿದ್ದ. ತನ್ನ ಒಂಬತ್ತನೆಯ ವಯಸ್ಸಿನಲ್ಲಿ ಒಮ್ಮೆ ತನ್ನ ನೆಂಟನೊಬ್ಬನಿಗೆ, 'ನೀನು ಲ್ಯಾಟಿನ್‌ನಲ್ಲಿ ಪ್ರಶ್ನೆ ಕೇಳು, ನಾನದಕ್ಕೆ ಗ್ರೀಕ್ ಭಾಷೆಯಲ್ಲಿ ಉತ್ತರಿಸುತ್ತೇನೆ,' ಎಂದಿದ್ದನಂತೆ! (ಇದನ್ನೆ ನಮ್ಮ ಸಂದರ್ಭದಲ್ಲಿ ಹೇಳಬೇಕಾದರೆ, ಕನ್ನಡ ಮಾತೃಭಾಷೆಯ ಹುಡುಗನೊಬ್ಬ ತನ್ನ ಸ್ನೇಹಿತನನ್ನು 'ನೀನು ಸಂಸ್ಕೃತದಲ್ಲಿ ಪ್ರಶ್ನೆ ಕೇಳು, ನಾನದಕ್ಕೆ ಪ್ರಾಕೃತದಲ್ಲಿ ಉತ್ತರಿಸುತ್ತೇನೆ,' ಎಂದದ್ದಕ್ಕೆ ಸಮ.)

ಅಪಾರ ಬುದ್ಧಿಮತ್ತೆಯ ಒಪ್ಪೆನ್‌ಹೀಮರ್ ಹಾರ್ವರ್ಡ್, ಕೇಂಬ್ರಿಡ್ಜ್‌ಗಳಲ್ಲಿ ಭೌತಶಾಸ್ತ್ರದಲ್ಲಿ ಪದವಿ ಪಡೆಯುತ್ತಾನೆ. ಅದು ಆತ ಡಾಕ್ಟರೇಟ್ ಪದವಿಗೆ ಅಧ್ಯಯನ ಮಾಡುತ್ತಿದ್ದ ಸಮಯ. ತನ್ನ ಗೈಡ್ ತನಗೆ ಸೂಚಿಸಿದ್ದ ವಿಷಯದ ಬಗ್ಗೆ ನಿರಾಸಕ್ತಿ ಹೊಂದಿದ್ದ ಒಪ್ಪೆನ್‌ಹೀಮರ್ ನಿಧಾನಕ್ಕೆ ತನ್ನ ಗೈಡ್ ಬಗ್ಗೆ ಕೋಪಗೊಳ್ಳುತ್ತ ಹೋಗುತ್ತಾನೆ. ಆತನನ್ನು ಖಿನ್ನತೆ ಆವರಿಸುತ್ತದೆ. ಒಮ್ಮೆ ಆ ರೋಸಿಹೋದ ಮನಸ್ಥಿತಿಯಲ್ಲಿ ಪ್ರಯೋಗಶಾಲೆಯಿಂದ ಒಂದಷ್ಟು ರಾಸಾಯನಿಕಗಳನ್ನು ತೆಗೆದುಕೊಂಡು ಹೋಗಿ ತನ್ನ ಗೈಡ್‌ಗೆ ವಿಷಪ್ರಾಶನ ಮಾಡಿ ಕೊಲ್ಲಲು ಯತ್ನಿಸುತ್ತಾನೆ. ಆದರೆ ಏನೋ ಹೆಚ್ಚುಕಮ್ಮಿಯಾಗಿರುವ ವಾಸನೆ ಹಿಡಿಯುವ ಆ ಗೈಡ್ (ಪ್ಯಾಟ್ರಿಕ್ ಬ್ಲ್ಯಾಕೆಟ್ಟ್ 1948ರ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ) ಆ ವಿಷಪ್ರಾಶನದಿಂದ ಬಚಾವಾಗುತ್ತಾನೆ. ವಿಶ್ವವಿದ್ಯಾಲಯ ಒಪ್ಪೆನ್‌ಹೀಮರ್‌ನನ್ನು ವಿಚಾರಣೆಗೆ ಕರೆಯುತ್ತದೆ. ಶಿಕ್ಷೆ? ಮನೋವೈದ್ಯನನ್ನು ಕಾಣುವ ಅಪ್ಪಣೆ ಮತ್ತು ಆತನ ನಡವಳಿಕೆಯನ್ನು ಒಂದಷ್ಟು ದಿನಗಳ ಕಾಲ ಗಮನಿಸುವ ಪ್ರೊಬೇಶನ್!

ಅಮೆರಿಕದಲ್ಲಿ ಮೊಟ್ಟಮೊದಲ ಅಣುಬಾಂಬ್ ಉತ್ಪಾದಿಸುವ ಯೋಜನೆ 1942ರ ಸುಮಾರಿಗೆ ಮುಖ್ಯ ಹಂತ ತಲುಪುತ್ತದೆ. ಅದಕ್ಕೆ "ಮ್ಯಾನ್‌ಹ್ಯಾಟ್ಟನ್ ಪ್ರಾಜೆಕ್ಟ್" ಎಂದು ಹೆಸರು. ಆ ಯೋಜನೆಯ ಪ್ರಮುಖ ಹುದ್ದೆಯಾದ ವೈಜ್ಞಾನಿಕ ನಿರ್ದೇಶಕನ ಸ್ಥಾನಕ್ಕೆ ಸೂಕ್ತ ವ್ಯಕ್ತಿಗಾಗಿ ಅಮೆರಿಕದಾದ್ಯಂತ ವಿಜ್ಞಾನಿಗಳ ತಲಾಷೆ ನಡೆಯುತ್ತದೆ. ಅದಕ್ಕೆ ಆಯ್ಕೆಯಾಗುವವನು ಮಾತ್ರ 38 ವರ್ಷ ವಯಸ್ಸಿನ ರಾಬರ್ಟ್ ಒಪ್ಪೆನ್‌ಹೀಮರ್! ಆತ ನಿಭಾಯಿಸಬೇಕಾದ ಜನರಲ್ಲಿ ಬಹುಪಾಲು ಜನ ಈತನಿಗಿಂತ ಹಿರಿಯರು; ಹಲವಾರು ಲೆಕ್ಕದಲ್ಲಿ. ಅಲ್ಲಿಯವರೆಗೂ ಈತನಿಗೆ ಆಡಳಿತಾತ್ಮಕ ಅನುಭವವೂ ಇರುವುದಿಲ್ಲ. ಆದರೂ ಆತನಿಗೆ ಈ ಹುದ್ದೆ ದೊರೆಯುತ್ತದೆ. ಹೇಗೆ? ತನ್ನ ಜಾಣ್ಮೆಯಿಂದಾಗಿ. ಬೇರೆಯವರನ್ನು ಅವಲೋಕಿಸುವ, ಅವರನ್ನು ತನ್ನತ್ತ ಸೆಳೆದುಕೊಳ್ಳಬಲ್ಲ, ಅವರನ್ನು ಪ್ರಭಾವಿಸಬಲ್ಲ ಗುಣದಿಂದಾಗಿ. ಇತರರು ತನ್ನ ಅಭಿಪ್ರಾಯವನ್ನು ಮತ್ತು ಮೇಧಾವಿತನವನ್ನು ಗುರುತಿಸುವಂತೆ ಮಾಡುವುದು ಆತನಿಗೆ ಸಾಧ್ಯವಾಗುತ್ತಿತ್ತು. ತನ್ನ ಗೈಡನ್ನು ಸಾಯಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾಗಲೂ ಅದರಿಂದ ಹೊರಬರಲು ಆತನಿಗೆ ಸಾಧ್ಯವಾಗುವುದು ಈ ಹೆಚ್ಚುಗಾರಿಕೆಯಿಂದಾಗಿಯೆ!

ಕ್ರಿಸ್ ಲ್ಯಾಂಗನ್‌ಗೆ ಇಲ್ಲದ ಈ ಹೆಚ್ಚುಗಾರಿಕೆ ರಾಬರ್ಟ್ ಒಪ್ಪೆನ್‌ಹೀಮರ್‌ಗೆ ಸಾಧ್ಯವಾದದ್ದಾದರೂ ಹೇಗೆ? ಬಂದಿದ್ದಾದರೂ ಎಲ್ಲಿಂದ?

ಅದು ಅವರವರ ಕೌಟುಂಬಿಕ ಹಿನ್ನೆಲೆಯಿಂದಾಗಿ ಎನ್ನುತ್ತಾನೆ ಗ್ಲಾಡ್‌ವೆಲ್. ಈ ಮೊದಲೆ ಗಮನಿಸಿದಂತೆ ಕ್ರಿಸ್ ಲ್ಯಾಂಗನ್‌ಗೆ ಸರಿಯಾದ ಕೌಟುಂಬಿಕ ತಳಹದಿ ಇರಲಿಲ್ಲ. ತನಗಿಂತ ಮೇಲಿನವರ ಜೊತೆ, ಹಿರಿಯರ ಜೊತೆ, ಅಧಿಕಾರಸ್ಥರ ಜೊತೆ ಹೇಗೆ ಸಂವಾದಿಸಬೇಕು ಎನ್ನುವುದನ್ನು ಲ್ಯಾಂಗನ್‌ಗೆ ಯಾರೂ ಕಲಿಸಿರುವುದಿಲ್ಲ. ತಮ್ಮ ಬಡತನದಿಂದಾಗಿ, ಕೌಟುಂಬಿಕ ಸಮಸ್ಯೆಗಳಿಂದಾಗಿ, ಸುತ್ತಮುತ್ತಲ ವಾತಾವರಣದಿಂದಾಗಿ, ಅಧಿಕಾರಸ್ಥರನ್ನು ಉಪೇಕ್ಷೆಯಿಂದ ಕಾಣುವ, ಅವರನ್ನು ತಿರಸ್ಕರಿಸಲು ಪ್ರಯತ್ನಿಸುವ ಮನೋಭಾವ ಬಡವರಲ್ಲಿ ಸಾಮಾನ್ಯ. ಆದರೆ ಇದೇ ಮಾತನ್ನೆ ಒಪ್ಪೆನ್‌ಹೀಮರ್‌ನ ವಿಷಯದಲ್ಲಿ ಹೇಳಲಾಗುವುದಿಲ್ಲ. ಆತನ ಅಪ್ಪ ಹೆಸರುವಾಸಿ ಕಲಾವಿದ ಮತ್ತು ಗಾರ್ಮೆಂಟ್ ಉದ್ಯಮಿ. ಶ್ರೀಮಂತ. ಬೇರೆಬೇರೆ ಜನವರ್ಗದ ಜೊತೆ ಸಂವಾದಿಸುವ ಕಲೆಯನ್ನು, ಅವಕಾಶವನ್ನು ರಾಬರ್ಟ್‌ಗೆ ಚಿಕ್ಕಂದಿನಿಂದಲೆ ಒದಗಿಸಲಾಗಿರುತ್ತದೆ. ಆತ ಕಲಿತ ಶಾಲೆಗಳೆಲ್ಲ ಅತ್ಯುತ್ತಮ ಶಾಲೆಗಳೆ. ಆತನ ಪ್ರತಿಭೆಯನ್ನು ಗುರುತಿಸುವ, ಅದನ್ನು ಪ್ರೋತ್ಸಾಹಿಸುವ, ಇನ್ನೂ ಮುಂದಕ್ಕೆ ಒಯ್ಯಲು ಪ್ರೇರೇಪಿಸುವ ವಾತಾವರಣ ಆತನಿಗೆ ಮೊದಲಿನಿಂದಲೆ ಇತ್ತು. ಆತ ಕಲಿತ ಶಾಲೆಗಳಲ್ಲಿ ಅಲ್ಲಿಯ ಹುಡುಗರು ಭವಿಷ್ಯದ ರಾಷ್ಟ್ರನಿರ್ಮಾಪಕರು ಎನ್ನುವಂತಹ ವಿಚಾರವನ್ನು ಅವರ ತಲೆಯಲ್ಲಿ ತುಂಬುತ್ತಿದ್ದರು. ಆತ್ಮವಿಶ್ವಾಸವನ್ನು ಅವರಲ್ಲಿ ಪೂರ್ವಯೋಜಿತವಾಗಿ ಎಂಬಂತೆ ಬೆಳೆಸಲಾಗುತ್ತಿತ್ತು. ಆದರೆ ಇಂತಹ ಯಾವೊಂದು ಅವಕಾಶವಾಗಲಿ, ಸಹಾಯವಾಗಲಿ, ಕ್ರಿಸ್ ಲ್ಯಾಂಗನ್ನನಿಗೆ ಒದಗಲಿಲ್ಲ. ಕೈಹಿಡಿಯಬೇಕಾದ ಅಧ್ಯಾಪಕರೆ ಕೈಹಿಡಿಯಲಿಲ್ಲ. ಆತನದು ಈಗಲೂ ತಪ್ತ ಮನಸ್ಸು. ಅವನೊಬ್ಬ ಕಳೆದುಹೋದ ಪ್ರತಿಭೆ.

ಈ ಉದಾಹರಣೆಗಳಿಗೆ ಪೂರಕವಾಗಿಯೆ ಅಧ್ಯಯನವೊಂದರ ಸಾರಾಂಶವನ್ನು ಗ್ಲಾಡ್‌ವೆಲ್ "ಹೊರಗಣವರು"ನಲ್ಲಿ ಒದಗಿಸುತ್ತಾನೆ. ಅದು ಹಲವು ಕುಟುಂಬಗಳ ಅಧ್ಯಯನ. ಅದರಲ್ಲಿ ಮಧ್ಯಮವರ್ಗದ ಸ್ಥಿತಿವಂತರು ತಮ್ಮ ಮಕ್ಕಳಿಗೆ ಆತ್ಮವಿಶ್ವಾಸವನ್ನು ಕಲಿಸುವುದನ್ನು ನೋಡಬಹುದು. ಅವರನ್ನು ವಿವಿಧ ಅನುಭವ-ಪರಿಸರಗಳಿಗೆ ಪರಿಚಯಿಸುವುದನ್ನೂ ಕಾಣಬಹುದು. ಜೀವನದಲ್ಲಿ ಯಶಸ್ವಿಯಾಗಲು IQ ಯಂತಹ ವಿಶ್ಲೇಷಣಾತ್ಮಕ ಬುದ್ಧಿಮತ್ತೆ ಮಾತ್ರವೇ ಸಾಕಾಗುವುದಿಲ್ಲ್ಲ. ಅದರ ಜೊತೆಗೆ ಸಮಾಜವನ್ನು ಅರಿತುಕೊಳ್ಳಲು ಬೇಕಾದ "ಪ್ರಾಯೋಗಿಕ ಜಾಣತನ"ವೂ ಬೇಕಾಗುತ್ತದೆ. ಅದು ಬರುವುದು ಕ್ರಮಬದ್ಧವಾದ ಕಲಿಕೆಯಿಂದ. ಅಭ್ಯಾಸದಿಂದ. ರೂಢಿಸಿಕೊಳ್ಳುವುದರಿಂದ. ಈ ಅನುಭವಗಳನ್ನು, ಈ ಜ್ಞಾನವನ್ನು, ಮತ್ತು ಈ ವಿಚಾರದಲ್ಲಿ ತರಬೇತಿಯನ್ನು ಬಡವರಲ್ಲಿ, ಸಮಸ್ಯಾತ್ಮಕ ಕುಟುಂಬಗಳಲ್ಲಿ ಕಾಣವುದು ಕಷ್ಟ. ಅಲ್ಲಿ ಹುಟ್ಟುವ ಮೇಧಾವಿಗಳು ಸಹಜವಾಗಿಯೆ ನಂತರದ ದಿನಗಳಲ್ಲಿ ಜೀವನದಲ್ಲಿ ಸೋಲನ್ನು ಕಾಣುತ್ತ, ಅಲ್ಪತೃಪ್ತರಾಗುತ್ತ ಹೋಗುತ್ತಾರೆ. ಹಾಗಾಗಿ ಕೌಟುಂಬಿಕ ಹಿನ್ನೆಲೆ ಮತ್ತು ಅಲ್ಲಿ ಕೊಡಲ್ಪಡುವ Practical Intelligenceನ ತರಬೇತಿ (ಸಂಸ್ಕಾರ), ಆ ಮೂಲಕ ಸಿಗುವ ಈ ಹೊರಗಿನ ಸಹಾಯ ಮನುಷ್ಯನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ವಿಚಾರವಾಗಿ ಲೇಖಕ ಗ್ಲಾಡ್‌ವೆಲ್ ಹೇಳುವ ಈ ಮಾತು ಬಹಳ ಸುಂದರವಾದುದು, ಗಮನಾರ್ಹವಾದುದು:

"ಕ್ರಿಸ್ ಲ್ಯಾಂಗನ್ನನ ಮನಸ್ಸಿನ ಹೊರಗೆ ಆದ ಪ್ರತಿಯೊಂದು ವಾಸ್ತವ ಅನುಭವವೂ ನಿರಾಶೆಯಲ್ಲಿ, ಸೋಲಿನಲ್ಲಿ ಅಂತ್ಯವಾಗುತ್ತಿತ್ತು. ಈ ಪ್ರಪಂಚದಲ್ಲಿ ತೇಲಲು ತಾನು ಇನ್ನೂ ಉತ್ತಮ ರೀತಿಯಲ್ಲಿ ಹುಟ್ಟು ಹಾಕಬೇಕು ಎಂದು ಅತನಿಗೆ ಗೊತ್ತಿತ್ತು. ಆದರೆ ಅದು ಹೇಗೆ ಎಂದು ಗೊತ್ತಿರಲಿಲ್ಲ. ತನ್ನ ಶಾಲೆಯ ಅಧ್ಯಾಪಕನ ಜೊತೆ ಹೇಗೆ ಮಾತನಾಡಬೇಕು ಎನ್ನುವುದೇ ಆತನಿಗೆ ಗೊತ್ತಿರಲಿಲ್ಲ ಎನ್ನುವುದೆ ಇಲ್ಲಿ ಕನಿಕರನೀಯ. ಇಂತ ಸಣ್ಣ ವಿಷಯಗಳನ್ನೆಲ್ಲ ಅಷ್ಟೇನೂ ಬುದ್ಧಿವಂತರಲ್ಲದವರೂ ಕೂಡ ಚೆನ್ನಾಗಿ ಕಲಿತುಬಿಟ್ಟಿರುತ್ತಾರೆ. ಆದರೆ ಅದನ್ನು ಕಲಿಯಲು ಅವರಿಗೆ ಇತರರ ಸಹಾಯ ದೊರಕಿರುತ್ತದೆ. ಆದರೆ ಅದು ಕ್ರಿಸ್ ಲ್ಯಾಂಗನ್‌ಗೆ ಸಿಗಲಿಲ್ಲ. ಆತನಿಗೆ ಸಿಗಲಿಲ್ಲ ಎನ್ನುವುದು ಇಲ್ಲಿ ಸಬೂಬಿನ ಮಾತಲ್ಲ. ಅದು ಸತ್ಯಸಂಗತಿ. ಆತ ಏಕಾಂಗಿಯಾಗಿ ತನ್ನ ದಾರಿಯನ್ನು ಮಾಡಿಕೊಳ್ಳಬೇಕಿತ್ತು. ಮತ್ತು ಯಾರೊಬ್ಬರೂ--ಅವರು ರಾಕ್ ಸ್ಟಾರ್‌ಗಳಿರಬಹುದು, ದೊಡ್ಡ ಆಟಗಾರರಿರಬಹುದು, ಸಾಫ್ಟ್‌ವೇರ್ ಬಿಲಿಯನೇರ್‌ಗಳಿರಬಹುದು, ಅಥವ ಹುಟ್ಟಾ ಮೇಧಾವಿಗಳೆ ಇರಬಹುದು--ಯಾರೊಬ್ಬರೂ, ಒಬ್ಬರೆ ಏಕಾಂಗಿಯಾಗಿ ಜೀವನದಲ್ಲಿ ಮೇಲೇರಲಾರರು." (“Outliers” - ಪು. 115)

(ಮುಂದುವರೆಯುವುದು...)


ಮುಂದಿನ ವಾರ: ಪರಂಪರೆಯ ಪಾತ್ರ

ಲೇಖನ ಸರಣಿಯ ಇದುವರೆಗಿನ ಲೇಖನಗಳು: