Sep 25, 2009

ನಮ್ಮ ಬಡಮಕ್ಕಳಿಗೆ ಬೇಸಿಗೆ ರಜೆಗಳು ಬೇಕೆ?

[ವಿಕ್ರಾಂತ ಕರ್ನಾಟಕದ ಅಕ್ಟೋಬರ್ 2,2009 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.
ಲೇಖನ ಸರಣಿಯ ಹಿಂದಿನ ಲೇಖನಗಳು:
ಮೊದಲನೆಯ ಲೇಖನ: "ಹೊರಗಣವರು" - ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ!
ಎರಡನೆಯದು: ಹುಟ್ಟಿದ ಘಳಿಗೆ ಸರಿ ಇರಬೇಕು...
ಮೂರನೆಯದು: ದಶಸಹಸ್ರ ಗಂಟೆಯೆಂಬ ಪ್ರತಿಭಾ-ನಿಯಮ...
ನಾಲ್ಕನೆಯದು: ಯಾವುದಕ್ಕೂ "ಸಂಸ್ಕಾರ" ಇರಬೇಕ್ರಿ !
ಐದನೆಯದು: ವಿಮಾನ ಅಪಘಾತಗಳಲ್ಲಿ ಭಾಷೆ ಮತ್ತು ಪರಂಪರೆಯ ಪಾತ್ರ
ಆರನೆಯದು: ಗಣಿತಕ್ಕೂ ಭಾಷೆಗೂ, ಗಣಿತಕ್ಕೂ ಭತ್ತದ ಕೃಷಿಗೂ ಎಲ್ಲಿಂದೆಲ್ಲಿಯ ಸಂಬಂಧ?]


ವರ್ಷಕ್ಕೊಂದು ಸಾರಿ ನಮ್ಮ ರಾಜ್ಯದ ಶಾಲೆಗಳ ಮೌಲ್ಯಮಾಪನ ನಡೆಯುತ್ತದೆ. ಹಾಗೆಯೆ ಜಿಲ್ಲಾವಾರು ಶೈಕ್ಷಣಿಕ ಸಾಧನೆಯೂ. ಯಾವ ರೀತಿ? 7ನೇ ತರಗತಿಯ, ಅಥವ ಹತ್ತನೆ ತರಗತಿಯ, ಅಥವ ದ್ವಿತೀಯ ಪಿಯುಸಿಯ ಫಲಿತಾಂಶಗಳ ಮೂಲಕ. ಇವುಗಳಲ್ಲಿ ಹತ್ತನೆಯ ತರಗತಿಯ ಮತ್ತು ದ್ವಿತೀಯ ಪಿಯುಸಿಯ ಫಲಿತಾಂಶಗಳಂತೂ ಇದ್ದುದರಲ್ಲಿ ಉತ್ತಮವಾದ ಅಂಕಿಅಂಶಗಳನ್ನು ಒದಗಿಸುತ್ತವೆ. ಶಾಲೆ ಅಥವ ಕಾಲೇಜೊಂದು ರಾಜ್ಯಮಟ್ಟದ ಲೆಕ್ಕಾಚಾರದಲ್ಲಿ ಯಾವ ಸ್ಥಾನದಲ್ಲಿದೆ ಎನ್ನುವುದರ ಜೊತೆಗೆ, ಜಿಲ್ಲಾವಾರು ಮತ್ತು ನಗರ/ಗ್ರಾಮೀಣ ವಿದ್ಯಾರ್ಥಿಗಳ ಕಲಿಕಾಮಟ್ಟವನ್ನು ಈ ಪರೀಕ್ಷೆಗಳ ಅಂಕಿಅಂಶಗಳಿಂದ ತಿಳಿದುಕೊಳ್ಳಬಹುದು.

ಈ ಪರೀಕ್ಷೆಗಳಲ್ಲಿ ಪ್ರತಿವರ್ಷ ಕೆಲವೇ ಕೆಲವು ಶಾಲೆಗಳು ಅತಿಹೆಚ್ಚಿನ ರ್‍ಯಾಂಕ್ ಪಡೆಯುತ್ತವೆ. ಅವುಗಳಲ್ಲಿ ಖಾಸಗಿ ಶಾಲಾಕಾಲೇಜುಗಳೆ ಹೆಚ್ಚಿರುತ್ತವೆ ಮತ್ತು ಅವೆಲ್ಲ ನಗರಕೇಂದ್ರಿತವಾಗಿರುತ್ತವೆ. ಕೆಲವು ಸರ್ಕಾರಿ ಶಾಲಾಕಾಲೇಜುಗಳೂ ಈ ಪಟ್ಟಿಯಲ್ಲಿ ಅಪರೂಪಕ್ಕೆಂಬಂತೆ ಸ್ಥಾನ ಪಡೆಯುತ್ತವೆ. ಹಾಗೆಯೆ, ತಮ್ಮ ಶಾಲೆಯಲ್ಲಿ ಓದಿದ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಆ ವರ್ಷದ ಪರೀಕ್ಷೆಗಳಲ್ಲಿ ಉತ್ತೀರ್ಣನಾಗದ ಶೂನ್ಯಸಂಪಾದನೆಯನ್ನೂ ಕೆಲವು ಸರ್ಕಾರಿ/ಗ್ರಾಮೀಣ ಶಾಲೆಗಳು ದಾಖಲಿಸುತ್ತವೆ.

ಈ ಶೂನ್ಯಸಂಪಾದನೆ ಅಥವ ಕಳಪೆ ಸಾಧನೆ ಯಾಕಿರಬಹುದು? ಅಲ್ಲಿನ ಶಾಲೆಗಳಲ್ಲಿ ಉಪಾಧ್ಯಾಯರು ಸರಿಯಾಗಿ ಪಾಠ ಮಾಡುವುದಿಲ್ಲವೆ? ಆ ಶಾಲೆಯ ಸುತ್ತಮುತ್ತಲ ಊರುಗಳ ಮಕ್ಕಳು ಪಾಠ ಕಲಿಯಲುಬಾರದಷ್ಟು ಅಯೋಗ್ಯರೆ? ಅಥವ ಅವರು ಸಾಕಷ್ಟು ಅಭ್ಯಾಸ ಮಾಡುತ್ತಿಲ್ಲವೆ? ಆ ಮಕ್ಕಳ ಅಪ್ಪಅಮ್ಮಂದಿರಿಗೆ ಮಕ್ಕಳ ಬಗ್ಗೆ ಕಾಳಜಿ ಇಲ್ಲವೆ? ಅದಕ್ಕೆ ಪೂರಕವಾದ ವಾತಾವರಣ ಆ ಶಾಲೆಯ ಪರಿಸರದಲ್ಲಿ, ಆಯಾಯ ಜಿಲ್ಲೆಗಳಲ್ಲಿ ಇಲ್ಲವೆ? ಇಲ್ಲಿ ಜವಾಬ್ದಾರಿಯುತ ಸಮಾಜದ ಪಾತ್ರ ಏನೂ ಇಲ್ಲವೆ?

ಕಾರ್ಲ್ ಅಲೆಕ್ಸಾಂಡರ್ ಎನ್ನುವ ಸಮಾಜಶಾಸ್ತ್ರಜ್ಞನೊಬ್ಬ ಅಮೆರಿಕದ ಬಾಲ್ಟಿಮೋರ್ ನಗರದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಓದಿನ ಸಾಮರ್ಥ್ಯದ ಅಧ್ಯಯನ ಮಾಡಿದ. ಇಲ್ಲಿಯ ಮಕ್ಕಳ ಗಣಿತ ಮತ್ತು ಓದಿನ ಸಾಮರ್ಥ್ಯವನ್ನು ಪರೀಕ್ಷಿಸಲು 'ಕ್ಯಾಲಿಫೋರ್ನಿಯ ಅಚೀವ್‌ಮೆಂಟ್ ಟೆಸ್ಟ್' ಎನ್ನುವ ಪರೀಕ್ಷೆಯನ್ನು ನಡೆಸಲಾಗುತ್ತದೆ. ಬಾಲ್ಟಿಮೋರ್ ನಗರದ ವಿದ್ಯಾರ್ಥಿಗಳ ಆ ಟೆಸ್ಟಿನ ಫಲಿತಾಂಶಗಳನ್ನು ಹರಡಿಕೊಂಡು ಕೂತ ಆತ ಅದನ್ನು ಆಯಾ ಮಕ್ಕಳ ಸಾಮಾಜಿಕ-ಆರ್ಥಿಕ ವರ್ಗಗಳ ಅನುಸಾರವಾಗಿ ವಿಂಗಡಿಸಿ, ಸರಾಸರಿ ಆಧಾರದ ಮೇಲೆ ಒಂದು ಪಟ್ಟಿ ತಯಾರಿಸಿದ. ಇದು ಶಾಲಾವರ್ಷದ ಕೊನೆಯಲ್ಲಿ ನಡೆಸಿದ ಪರೀಕ್ಷೆಯ ಫಲಿತಾಂಶದ ವಿವರಗಳ ಪಟ್ಟಿ. ಇಲ್ಲಿ ಬೇರೆಬೇರೆ ವರ್ಗಗಳಿಗೆ ಸೇರಿದ ಮಕ್ಕಳಲ್ಲಿ ಕಾಣಿಸುವ ವ್ಯತ್ಯಾಸಗಳನ್ನು ಗಮನಿಸಿ.

ವರ್ಗಒಂದನೆ ತರಗತಿಎರಡನೆ ತರಗತಿಮೂರನೆ ತರಗತಿನಾಲ್ಕನೆ ತರಗತಿಐದನೆ ತರಗತಿ
ಬಡ/ಕೆಳ329375397433461
ಮಧ್ಯಮ348388425467497
ಶ್ರೀಮಂತ/ಮೇಲ್ವರ್ಗ361418460506534

ಮೊದಲಿಗೆ ಒಂದನೆ ತರಗತಿಯ ಮಕ್ಕಳ ಅಂಕಗಳನ್ನು ಗಮನಿಸೋಣ. ಆರಂಭದಲ್ಲಿ ಹಾಗೆ ಹೇಳಿಕೊಳ್ಳುವಂತಹ ವ್ಯತ್ಯಾಸಗಳೇನೂ ಕಾಣಿಸುವುದಿಲ್ಲ. ಇರುವ ವ್ಯತ್ಯಾಸಗಳು ಮಕ್ಕಳ ಕೌಟುಂಬಿಕ ಹಿನ್ನೆಲೆಯ ಕಾರಣಗಳಿಂದ ಸಹಜವಾದದ್ದು ಎಂತಲೆ ಹೇಳಬಹುದು. ಶ್ರೀಮಂತ ಮನೆಗಳಿಂದ ಬಂದ ಮಕ್ಕಳು ಬಡ ವರ್ಗದ ಮಕ್ಕಳಿಗಿಂತ ಸುಮಾರು 32 ಅಂಕಗಳಷ್ಟು ಮೇಲಿದ್ದಾರೆ. ಈ ವ್ಯತ್ಯಾಸವನ್ನು ಹಾಗೆಯೆ ಗಮನಿಸುತ್ತ ಹೋಗಿ. ಬರುಬರುತ್ತ ಅದು ಹಿಗ್ಗುತ್ತಾ ಹೋಗುತ್ತದೆ. ಐದನೆ ತರಗತಿಯ ಬಳಿಗೆ ಬರುವಷ್ಟರಲ್ಲಿ ಈ ವ್ಯತ್ಯಾಸ ಆರಂಭದ ಎರಡರಷ್ಟು ಆಗಿಬಿಟ್ಟಿದೆ. ಅಂದರೆ, ಐದನೆಯ ತರಗತಿಯ ಹೊತ್ತಿಗೆಲ್ಲ ಮೇಲ್ವರ್ಗದ ಮಕ್ಕಳು ಕೆಳವರ್ಗದ ಮಕ್ಕಳಿಗಿಂತ ಬಹಳ ಪಾಲು ಮುಂದಕ್ಕೆ ಹೋಗಿಬಿಟ್ಟಿದ್ದಾರೆ.

ಬಾಲ್ಟಿಮೋರ್ ನಗರದ ಶಾಲೆಗಳು ಮಕ್ಕಳಿಗೆ ಈ ಪರೀಕ್ಷೆಯನ್ನು ಶಾಲಾವರ್ಷದ ಕೊನೆಯಲ್ಲಿ ಮಾತ್ರವಲ್ಲದ ಬೇಸಿಗೆ ರಜಯ ನಂತರ ಆರಂಭವಾಗುವ ಶಾಲೆಯ ಆರಂಭದಲ್ಲೂ ಕೊಡುತ್ತದೆ. ಈ ಸಮಯದಲ್ಲಿ ನಡೆಸುವ ಪರೀಕ್ಷೆಯ ಫಲಿತಾಂಶಗಳು ಏನನ್ನು ಹೇಳುತ್ತವೆ ಎಂದರೆ, ಶಾಲೆಗೆ ಬೇಸಿಗೆ ರಜೆ ಇದ್ದ ಸಮಯದಲ್ಲಿ ಮಕ್ಕಳು ಎಷ್ಟನ್ನು ಕಲಿತಿರುತ್ತಾರೆ, ಅಥವ ಹಿಂದೆ ಕಲಿತದ್ದನ್ನು ಎಷ್ಟು ಉಳಿಸಿಕೊಂಡಿರುತ್ತಾರೆ ಎನ್ನುವುದನ್ನು. ಆ ವಿವರಗಳು ನಿಜಕ್ಕೂ ಆಘಾತಕಾರಿಯಾಗಿವೆ. ಆ ವಿವರಗಳನ್ನು ಗಮನಿಸುವ ಮೊದಲು, ಆ ಮಕ್ಕಳ ಯೋಗ್ಯತೆಯ ಬಗ್ಗೆ ಸ್ವಲ್ಪ ಯೋಚಿಸೋಣ. ಬಹುಶಃ ಈ ಬಡಮಕ್ಕಳು ನಿಜಕ್ಕೂ ಅಯೋಗ್ಯರೆ ಇರಬೇಕು. ಅವರಿಗೆ ಕಲಿಯುವ ಯೋಗ್ಯತೆ ಮತ್ತು ಶಿಸ್ತು ಇಲ್ಲದೆ ಇರಬೇಕು. ಸರಸ್ವತಿ ದೀನದಲಿತರಿಗೆಲ್ಲ ಒಲಿಯುವುದಿಲ್ಲ. ಅದು ಜನ್ಮಾಂತರದ ಕರ್ಮಫಲ... ಇಂತಹ ಒಂದು ಅಭಿಪ್ರಾಯಕ್ಕೆ ಬಂದುಬಿಡುವ ಮುನ್ನ ನಾವು ಈ ಕೆಳಗಿನ ಪಟ್ಟಿಯನ್ನು ನೋಡೋಣ. ಇದು ವರ್ಷದ ಶಾಲಾ ಸಮಯದಲ್ಲಿ ಮಕ್ಕಳು ಕಲಿತ ಪ್ರಮಾಣದ ಅಂಕಗಳು. ಅಂದರೆ, ವರ್ಷದ ಆರಂಭದಲ್ಲಿ ಇದ್ದ ಅಂಕಗಳು ಮತ್ತು ವರ್ಷದ ಅಂತ್ಯಕ್ಕೆ ಅವರು ಗಳಿಸಿದ ಅಂಕಗಳ ವ್ಯತ್ಯಾಸದ ಪಟ್ಟಿ ಇದು. ಮಕ್ಕಳ ಕಲಿಕಾ ಸಾಮರ್ಥ್ಯದಲ್ಲಿ ನಿಜಕ್ಕೂ ಇರಬಹುದಾದ ವ್ಯತ್ಯಾಸಗಳನ್ನು ಹೇಳುವ ಪಟ್ಟಿ ಇದೇನೆ.
ವರ್ಗಒಂದನೆ ತರಗತಿಎರಡನೆ ತರಗತಿಮೂರನೆ ತರಗತಿನಾಲ್ಕನೆ ತರಗತಿಐದನೆ ತರಗತಿಮೊತ್ತ
ಬಡ/ಕೆಳ5546303325189
ಮಧ್ಯಮ6943344127214
ಶ್ರೀಮಂತ/ಮೇಲ್ವರ್ಗ6039342823184

ಅರೆ! ಇಲ್ಲಿ ಯಾವ ವರ್ಗವೂ ಗಂಭೀರ ವ್ಯತ್ಯಾಸಗಳನ್ನೆ ತೋರಿಸುತ್ತಿಲ್ಲ. ಶಾಲಾ ಸಮಯದಲ್ಲಿ ಎಲ್ಲಾ ಮಕ್ಕಳೂ ಹೆಚ್ಚುಕಮ್ಮಿ ಒಂದೇ ಮಟ್ಟದಲ್ಲಿ ಕಲಿತಿದ್ದಾರೆ. ಸಮಾನವಾದ ಅಂಕಗಳನ್ನೆ ಪೇರಿಸಿದ್ದಾರೆ.

ಆದರೆ, ಮೊದಲ ಪಟ್ಟಿಯಲ್ಲಿ ಹಿಗ್ಗುತ್ತಾ ಹೋದ ವ್ಯತ್ಯಾಸವನ್ನು ಕಂಡೆವಲ್ಲ. ಅದು ಆದದ್ದು ಹೇಗೆ? ಹೇಗೆಂದರೆ, ಆ ವ್ಯತ್ಯಾಸ ಆರಂಭವಾಗುತ್ತಿದ್ದುದ್ದೆ ಶಾಲೆಯ ಆರಂಭದಲ್ಲಿ. ಅಂದರೆ, ಮಕ್ಕಳು ಬೇಸಿಗೆ ರಜೆಯ ಎರಡು-ಮೂರು ತಿಂಗಳುಗಳಲ್ಲಿ ಕಲಿತಿದ್ದರಲ್ಲಿ; ಬಿಟ್ಟದ್ದರಲ್ಲಿ.

ಇದು ಶಾಲೆಯ ಕೊನೆಯಲ್ಲಿ ತೆಗೆದುಕೊಂಡ ಪರೀಕ್ಷೆಗೂ, ಮತ್ತೆ ಶಾಲೆ ಆರಂಭವಾದ ಸಮಯದಲ್ಲಿ ತೆಗೆದುಕೊಂಡ ಪರೀಕ್ಷೆಯ ಅಂಕಗಳಿಗೂ ಇರುವ ವ್ಯತ್ಯಾಸದ ಪಟ್ಟಿ.
ವರ್ಗ1 ರ ನಂತರ2 ರ ನಂತರ3 ರ ನಂತರ4 ರ ನಂತರಮೊತ್ತ
ಬಡ/ಕೆಳ-3.67-1.72.742.890.26
ಮಧ್ಯಮ-3.114.183.682.347.09
ಶ್ರೀಮಂತ/ಮೇಲ್ವರ್ಗ15.389.2214.5113.3852.49

ಮೇಲಿನ ಮೂರೂ ಪಟ್ಟಿಯನ್ನು ಗಮನಿಸಿ ಒಟ್ಟಾರೆಯಾಗಿ ಹೇಳುವುದಾದರೆ, ಬಡಮಕ್ಕಳು ಶಾಲಾ ರಜೆಯ ಸಮಯದಲ್ಲಿ ಶಾಲೆಯ ಓದಿಗೆ ಪೂರಕವಾದ ಏನನ್ನೂ ಕಲಿಯುವುದಿಲ್ಲ. ಮಧ್ಯಮ ವರ್ಗದವರು ಒಂದಷ್ಟು ಹೆಚ್ಚಿಗೆ ಕಲಿಯುತ್ತಾರೆ. ಮೇಲ್ವರ್ಗದವರಂತೂ ಇತರೆಲ್ಲರಿಗಿಂತ ಹೆಚ್ಚು ಕಲಿತಿದ್ದಾರೆ! ಒಂದನೆ ತರಗತಿ ಮುಗಿಸಿದ ಶ್ರೀಮಂತರ ಮಕ್ಕಳು ಬೇಸಿಗೆ ರಜೆ ಮುಗಿಸಿಕೊಂಡು ಎರಡನೆ ತರಗತಿಗೆ ಶಾಲೆಗೆ ವಾಪಸು ಬರುವಷ್ಟರಲ್ಲಿ ತಮ್ಮ ಓದುವ ಸಾಮರ್ಥ್ಯವನ್ನು 15 ಅಂಕಗಳಷ್ಟು ಹೆಚ್ಚಿಸಿಕೊಂಡು ಬಂದಿದ್ದರೆ, ಅದೇ ಬಡಮಕ್ಕಳು ತಾವು ಶಾಲಾವರ್ಷದಲ್ಲಿ ರೂಢಿಸಿಕೊಂಡಿದ್ದ ಸಾಮರ್ಥ್ಯದಲ್ಲಿ 4 ಅಂಕಗಳಷ್ಟನ್ನು ಕಳೆದುಕೊಂಡು ಬಂದಿದ್ದಾರೆ. ಕೊನೆಯ ಲಂಬಸಾಲುವಿನ ಪ್ರಕಾರ ನಾಲ್ಕೂ ಬೇಸಿಗೆ ರಜೆಗಳ ಅವಧಿಯಲ್ಲಿ ಬಡಮಕ್ಕಳ ಓದಿನ ಸಾಮರ್ಥ 0.26 ರಷ್ಟು ಮಾತ್ರ ಹೆಚ್ಚಾಗಿದೆ. ಅದೇ ಉಳ್ಳವರ ಮಕ್ಕಳು 52.49 ಅಂಕಗಳಷ್ಟು ಸಾಮರ್ಥ್ಯವನ್ನು ಆ ರಜೆಗಳಲ್ಲಿಯೆ ಗಳಿಸಿಕೊಂಡಿದ್ದಾರೆ. ನಾವು ಮೊದಲ ಪಟ್ಟಿಯಲ್ಲಿ ನೋಡಿದ ಮೇಲ್ವರ್ಗದವರು ಕೆಳವರ್ಗದವರ ಮೇಲೆ ಸಾಧಿಸುತ್ತ ಹೋದ ಹಿರಿಮೆ ಸಾಧ್ಯವಾದದ್ದು ಅವರು ಶಾಲೆಗೆ ರಜೆ ಇದ್ದ ಸಮಯದಲ್ಲಿ ಕಲಿತ ಈ ವಿದ್ಯೆಯಿಂದಲೆ ಹೊರತು ಬೇರೆಯದರಿಂದಲ್ಲ.

ಈಗ ಮೇಲಿನ ಕೊನೆಯ ಎರಡು ಪಟ್ಟಿಗಳನ್ನು ಇಟ್ಟುಕೊಂಡು ಇದರಲ್ಲಿ ಕಾಣಿಸುತ್ತಿರುವ ಸಮಸ್ಯೆ ಮತ್ತು ಸಿಗಬಹುದಾದ ಪರಿಹಾರವನ್ನು ಗಮನಿಸೋಣ. ತಮ್ಮ ಕೌಟುಂಬಿಕ ಹಿನ್ನೆಲೆಯ ಹೊರತಾಗಿಯೂ ಶಾಲಾಕೋಣೆಯಲ್ಲಿ ಮಕ್ಕಳು ಕಲಿಯುತ್ತಾರೆ ಎಂದಾದರೆ, ಶಾಲೆ ತನ್ನ ಕೆಲಸವನ್ನು ನಿರ್ವಹಿಸುತ್ತಿದೆ ಎಂತಲೆ ಹೇಳಬೇಕು. ಆದರೆ ಓಳ್ಳೆಯ ಸಾಧನೆ ಮಾಡದ ಮಕ್ಕಳಿಗೂ ಈ ಹಾಲಿ ಶಾಲಾವ್ಯವಸ್ಥೆಗೂ ಇರುವ ಸಮಸ್ಯೆ ಏನೆಂದರೆ ಅವರಿಗೆ ಅಗತ್ಯವಾದಷ್ಟು ಕಾಲವೂ ಶಾಲಾಪಾಠಗಳು ಆಗುತ್ತಿಲ್ಲ. ಮಧ್ಯೆಮಧ್ಯೆ ಅನಗತ್ಯ ಬಿಡುವು-ರಜೆಗಳು ಬಂದು ಅವರ ಕಲಿಕಾ ಸಾಮರ್ಥ್ಯ ಶ್ರೀಮಂತರ ಮಕ್ಕಳಿಗಿಂತ ಕುಂಠಿತವಾಗುತ್ತಿವೆ.

ಹಾಗಿದ್ದರೆ, ಮಕ್ಕಳು ದೀರ್ಘಕಾಲೀನ ರಜೆಗಳಿಲ್ಲದೆ ವರ್ಷಪೂರ್ತಿ ಶಾಲೆಗೆ ಹೋದರೆ ಈ ಸಮಸ್ಯೆ ಪರಿಹಾರವಾಗಬಹುದೆ? ಈ ಮೇಲಿನ ಅಧ್ಯಯನಗಳನ್ನು ಕೈಗೊಂಡ ಸಮಾಜಶಾಸ್ತ್ರಜ್ಞ ಅಲೆಕ್ಸಾಂಡರ್ ಇದರ ಬಗ್ಗೆಯೂ ಅಧ್ಯಯನ ಮಾಡುತ್ತಾನೆ. ಆತನ ಪ್ರಕಾರ ಎಲ್ಲರೂ ವರ್ಷಪೂರ್ತಿ ಶಾಲೆಗೆ ಹೋದರೆ, ಪ್ರಾಥಮಿಕ ಶಾಲೆಯ ಅಂತ್ಯದ ವೇಳೆಗೆ ಕೆಳವರ್ಗದ ಮತ್ತು ಮೇಲ್ವರ್ಗದ ಮಕ್ಕಳಾದಿಯಾಗಿ ಎಲ್ಲರೂ ಗಣಿತದಲ್ಲಿ ಮತ್ತು ಓದುವ ಕೌಶಲದಲ್ಲಿ ಸರಿಸುಮಾರು ಸಮಾನ ಹಂತದಲ್ಲಿಯೆ ಇರುತ್ತಾರೆ.

KIPP (Knowledge Is Power Program) ಎನ್ನುವುದು ಅಮೆರಿಕದಲ್ಲಿಯ ಒಂದು ಅರೆ-ಸರ್ಕಾರಿ ಮಾಧ್ಯಮಿಕ ಶಾಲಾ ಅಕಾಡೆಮಿ. ಈ ಅಕಾಡೆಮಿ ದೇಶದಾದ್ಯಂತ ಸುಮಾರು 82 ಶಾಲೆಗಳನ್ನು ನಡೆಸುತ್ತದೆ ಮತ್ತು ಸುಮಾರು 20000 ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ಐದರಿಂದ ಎಂಟನೆಯ ತರಗತಿಯ ತನಕ ಕಲಿಯುತ್ತಿದ್ದಾರೆ. "ಹೊರಗಣವರು"ನಲ್ಲಿ ಈ ಮೇಲಿನ ವಿಷಯದ ಕುರಿತಾಗಿ ಚರ್ಚಿಸಲು ಗ್ಲಾಡ್‌ವೆಲ್ ಈ ಶಾಲೆಯನ್ನು ಉದಾಹರಣೆಯಾಗಿ ಆಯ್ದುಕೊಳ್ಳುತ್ತಾನೆ. ಈ ಶಾಲೆಯಲ್ಲಿ ಮಕ್ಕಳು “SSLANT” (smile, sit up, listen, ask questions, nod when being spoken to, track with your eyes) ಎನ್ನುವ ಶಿಷ್ಟಾಚಾರವನ್ನು ಪಾಲಿಸುತ್ತಾರೆ. ಶಾಲೆ ಬೆಳಿಗ್ಗೆ 7:25 ಕ್ಕೆಲ್ಲ ಆರಂಭವಾಗಿ ಸಂಜೆಯ ಐದರ ತನಕ ನಡೆಯುತ್ತದೆ. ಐದರ ನಂತರವೂ ಕೆಲವು ಮಕ್ಕಳು ಹೋಮ್‌ವರ್ಕ್ ಕ್ಲಬ್, ವಿಶೇಷಪಾಠ, ಕ್ರೀಡೆ ಎಂದುಕೊಂಡು ಶಾಲೆಯಲ್ಲಿಯೆ ಉಳಿಯುತ್ತಾರೆ. ಅಂದರೆ ಹಲವಾರು ಮಕ್ಕಳು ಬೆಳಿಗ್ಗೆ 7:25 ರಿಂದ ಸಂಜೆ 7 ರ ತನಕ ಶಾಲೆಯಲ್ಲಿಯೆ ಕಳೆಯುತ್ತಾರೆ. ಇದನ್ನೆ ಸರ್ಕಾರಿ ಶಾಲೆಯ ಮಕ್ಕಳಿಗೆ ಹೋಲಿಸಿದರೆ, ಈ ಶಾಲೆಯ ಮಕ್ಕಳು ಸುಮಾರು ಶೇ. 50 ರಿಂದ ಶೇ. 60 ರಷ್ಟು ಹೆಚ್ಚಿನ ಸಮಯವನ್ನು ಶಾಲೆಯಲ್ಲಿ ಕಳೆಯುತ್ತಾರೆ. ಹಾಗೆಯೆ ಫಲಿತಾಂಶಗಳಲ್ಲೂ ಹಲವಾರು ವಿಷಯಗಳಲ್ಲಿ ಮುಂದಿರುತ್ತಾರೆ. ಗಣಿತದಲ್ಲಂತೂ ಇವರ ಮಟ್ಟ ದೇಶದ ಶ್ರೀಮಂತ ಬಡಾವಣೆಗಳ ಮಕ್ಕಳ ಸಾಮರ್ಥ್ಯಕ್ಕೆ ಸಮಾನವಾಗಿ ಇರುತ್ತದೆ. ಎಂಟನೆ ತರಗತಿಯ ಅಂತ್ಯದ ವೇಳೆಗೆ ಈ ಶಾಲೆಯ ಶೇ. 84 ರಷ್ಟು ಮಕ್ಕಳು ತಮ್ಮ ತರಗತಿಯ ಮಟ್ಟಕ್ಕಿಂತ ಹೆಚ್ಚಿನ ಸಾಮರ್ಥ್ಯ ತೋರಿಸುತ್ತಾರೆ.

ಇಲ್ಲಿ ಎಲ್ಲಕ್ಕಿಂತ ಹೆಚ್ಚಿನ ವಿಶೇಷ ಇರುವುದು, ಈ ಶಾಲೆಯಲ್ಲಿ ಕಲಿಯುವ ಮಕ್ಕಳ ಹಿನ್ನೆಲೆಯಲ್ಲಿ. ಸುಮಾರು ಅರ್ಧದಷ್ಟು ಮಕ್ಕಳು ಆಫ್ರಿಕನ್ ಅಮೆರಿಕನ್ನರು (ಕರಿಯರು). ಮತ್ತೆ ಇನ್ನರ್ಧ ಲ್ಯಾಟಿನ್ ಅಮೆರಿಕ ಮೂಲದವರು. ಅಂದರೆ ಅಮೆರಿಕದ ಸಾಮಾಜಿಕ ಸಂದರ್ಭದಲ್ಲಿ ದಲಿತರು ಮತ್ತು ಹಿಂದುಳಿದವರು. ತೀರಾ ಬಡವರ ಮನೆಗಳಿಂದ ಬರುವ ಮಕ್ಕಳಿಗೆ ಇಲ್ಲಿ ಸರ್ಕಾರವೆ ಮಧ್ಯಾಹ್ನದ ಊಟವನ್ನು ಒದಗಿಸುತ್ತದೆ. ಈ ಶಾಲೆಯಲ್ಲಿ ಓದುವ ಶೇ. 75 ರಷ್ಟು ಮಕ್ಕಳು ಆ ಉಚಿತ ಮಧ್ಯಾಹ್ನದ ಊಟಕ್ಕೆ ಅರ್ಹರು. ಬಹುಪಾಲು ಮಕ್ಕಳ ಹೆತ್ತವರಿಗೆ ಕಾಲೇಜು ಶಿಕ್ಷಣ ಇರುವುದಿಲ್ಲ. ಮತ್ತು, ಈ ಶಾಲೆಗೆ ಮಕ್ಕಳನ್ನು ಲಾಟರಿ ವ್ಯವಸ್ಥೆಯ ಮೂಲಕ ಆರಿಸಲಾಗುತ್ತದೆ. ಇಲ್ಲಿ ಪ್ರವೇಶ ಪಡೆಯುವ ಮಕ್ಕಳು ಪ್ರವೇಶ ಪರೀಕ್ಷೆಯ ಮೂಲಕ ಆಯ್ದುಕೊಂಡ “Best and the Brightest” ಅಲ್ಲ. ಅಂದಹಾಗೆ, ಈ ಶಾಲೆಯಲ್ಲಿ ಬೇಸಿಗೆಯಲ್ಲೂ ಶಾಲೆ ಇರುತ್ತದೆ.

ಇದೆಲ್ಲ ಏನನ್ನು ಹೇಳುತ್ತದೆ ಎಂದರೆ, ಮಕ್ಕಳ ಹಿನ್ನೆಲೆ ಏನೇ ಇರಬಹುದು, ಅವರ ಪರಂಪರೆ ಮತ್ತು ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಪೂರಕವಾದ ಶೈಕ್ಷಣಿಕ ವಾತಾವರಣ ನಿರ್ಮಿಸಿದಾಗ ಎಂತಹ ಬಡಹಿನ್ನೆಲೆಯಿಂದ ಬಂದ ಮಕ್ಕಳೂ ಒಳ್ಳೆಯ ಸಾಧನೆ ತೋರಬಲ್ಲರು. ಇಂತಹ ಒಂದು ಆಲೋಚನೆಯಿಂದ ಪ್ರೇರಿತವಾದ ಶೈಕ್ಷಣಿಕ ವಾತಾವರಣವನ್ನು KIPP ಅಂತಹ ಕಾರ್ಯಕ್ರಮಗಳ ಮೂಲಕ ಅಮೆರಿಕದಲ್ಲಿ ನಿರ್ಮಿಸಲಾಗುತ್ತಿದೆ.

ಈಗ, ಗ್ಲಾಡ್‌ವೆಲ್ ತನ್ನ "ಹೊರಗಣವರು"ನಲ್ಲಿ ಪ್ರಸ್ತಾಪಿಸುವ ಈ ವಿಷಯಗಳನ್ನು ನಾವು ನಮ್ಮ ಸಂದರ್ಭಕ್ಕೇ ಅನ್ವಯಿಸಿಕೊಂಡು ನೋಡೋಣ. ನಮ್ಮಲ್ಲಿ ಮೇಲೆ ಪ್ರಸ್ತಾಪಿಸಿದಂತಹ ಅಧ್ಯಯನಗಳು ನಡೆಯದೆ ಇರಬಹುದು. ಆದರೆ, ಬಡವರ ಮಕ್ಕಳು ಮೇಲ್ವರ್ಗದ ಮಕ್ಕಳಿಗಿಂತ ಮೂಲಭೂತವಾಗಿಯೆ ಅಸಮರ್ಥರು ಎನ್ನುವ ವಾದವನ್ನು ನಿರಾಕರಿಸಲು ನಾವು ವಿಶೇಷವಾಗಿ ಇನ್ನೊಂದು ಅಧ್ಯಯನ ಮಾಡಬೇಕಾದ ಅವಶ್ಯಕತೆ ಏನೂ ಇಲ್ಲ. ನಮ್ಮ ಸಮಾಜ ಒಂದು ರೀತಿಯಲ್ಲಿ ಅಮೆರಿಕಕ್ಕಿಂತ ಹೆಚ್ಚಿನ ವಿಷಮಯ, ಅಸಮಾನ ಸಮಾಜ. ತಮ್ಮ ಬಡತನದ ಕಾರಣದಿಂದಾಗಿ, ಕೌಟುಂಬಿಕ ಸಮಸ್ಯೆಗಳಿಂದಾಗಿ, ಬೆಳಿಗ್ಗೆ ಏನೂ ತಿನ್ನದೆ ಅಥವ ಯಾವುದೊ ಒಂದು ಅಪೌಷ್ಟಿಕ ಆಹಾರ ತಿಂದು ಶಾಲೆಗೆ ಹೋಗುವ ಮಕ್ಕಳನ್ನು ಬೆಳಿಗ್ಗೆ ಪೌಷ್ಟಿಕವಾದ ಆಹಾರ ಉಂಡು, ಬೂಸ್ಟ್-ಹಾರ್ಲಿಕ್ಸ್ ಕುಡಿದುಕೊಂಡು ಶಾಲೆಗೆ ಹೋಗುವ ಮಕ್ಕಳ ಸಮಾನವಾಗಿ ಸ್ಪರ್ಧಿಸಲು ಬಿಡುತ್ತೇವೆ. ನಿರಕ್ಷರಕುಕ್ಷಿ ತಂದೆತಾಯಿಯರ ಮಕ್ಕಳನ್ನು ತಮ್ಮ ಮಕ್ಕಳ ಓದಿನಲ್ಲಿ ತೀವ್ರ ಆಸಕ್ತಿ ತೋರಿಸುವ, ಅವರ ಜೊತೆ ದಿನವೂ ಕುಳಿತು ಹೋಮ್‌ವರ್ಕ್ ಮಾಡಿಸುವ, ವಿಶೇಷವಾದ ಟ್ಯೂಷನ್‌ಗಳಿಗೆ ಕಳಿಸುವ, ಬೇರೆಬೇರೆ ತೆರನಾದ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವ ಪೋಷಕರ ಮಕ್ಕಳ ಎದುರಿಗೆ ನಿಲ್ಲಿಸುತ್ತೇವೆ. ಇಂತಹ ಅಸಮಾನ ವ್ಯವಸ್ಥೆಯಲ್ಲಿ ಸಮಾನ ಸ್ಪರ್ಧೆಯ ಬಗ್ಗೆ, ಮೇಧಾವಿತನದ ಬಗ್ಗೆ, ಮೆರಿಟ್ ಬಗ್ಗೆ, ಉಪದೇಶ ಕೊಡುತ್ತೇವೆ. ಕೆಳವರ್ಗದ ಮಕ್ಕಳಿಗೆ ಮತ್ತು ಗ್ರಾಮೀಣರಿಗೆ ಕೊಡುವ ಮಧ್ಯಾಹ್ನದ ಊಟ, ಉಚಿತ ಬಟ್ಟೆಗಳಂತಹ ಅಲ್ಪಸ್ವಲ್ಪ ಕೈಯಾಸರೆಯನ್ನು ಕೇವಲವಾಗಿ ಮಾತನಾಡುತ್ತೇವೆ. ಹಂಗಿಸುತ್ತೇವೆ. ಆ ವರ್ಗದ ಮಕ್ಕಳಲ್ಲಿ ಹಿಂಜರಿಕೆ, ದೈನ್ಯತೆ ಮತ್ತು Guilt ಬೇರೂರುವಂತೆ ಮಾಡುತ್ತೇವೆ. ಅದೇ ಸಂದರ್ಭದಲ್ಲಿ ನಮಗೆ ಮತ್ತು ನಮ್ಮ ಮಕ್ಕಳಿಗೆ ಇದ್ದ/ಇರುವ ಶೈಕ್ಷಣಿಕ/ಆರ್ಥಿಕ/ಸಾಂಸ್ಕೃತಿಕ/ಸಾಮಾಜಿಕ Advantages ಗಳನ್ನು ಮರೆಯುತ್ತೇವೆ.

ಈ ಹಿನ್ನೆಲೆಯಲ್ಲಿ ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳು ನಗರಪ್ರದೇಶದ ಮಕ್ಕಳಿಗಿಂತ, ಹಾಗೂ ಒಟ್ಟಾರೆಯಾಗಿ ಬಡಕುಟುಂಬಗಳಿಂದ ಬಂದ ಮಕ್ಕಳು ಮಧ್ಯಮವರ್ಗದ ಮತ್ತು ಸ್ಥಿತಿವಂತ ವರ್ಗದ ಮಕ್ಕಳಿಗಿಂತ ಓದಿನಲ್ಲಿ ಹಿಂದುಳಿಯದೆ ಇರಲು ಒಂದು ಜವಾಬ್ದಾರಿಯುತ ಸಮಾಜದ ಭಾಗವಾಗಿ ನಾವು ಮಾಡಬಹುದಾದ ಕೆಲಸವೇನು? ವಿಶೇಷವಾಗಿ, ಸರ್ಕಾರಿ ಶಾಲೆಗಳಲ್ಲಿ ಮತ್ತು ಗ್ರಾಮೀಣ ಶಾಲೆಗಳಲ್ಲಿ ಓದುವ ಮಕ್ಕಳು ತಾವು ಶಾಲಾವರ್ಷದ ಸಂದರ್ಭದಲ್ಲಿ ಕಲಿತ ಪಾಠಗಳನ್ನು ಬೇಸಿಗೆ ರಜೆಯಲ್ಲಿ ಮರೆಯದೆ ಇರುವಂತೆ ಮಾಡುವುದು ಹೇಗೆ? ಹಾಗೆಯೆ ಮಕ್ಕಳ ಅಸಮಾನ ಕಲಿಕೆಯನ್ನು ಸಮಾನ ಹಕ್ಕು-ನ್ಯಾಯ-ಅವಕಾಶದ ಹಿನ್ನೆಲೆಯಲ್ಲಿ ತಡೆಗಟ್ಟುವುದು ಹೇಗೆ?

ಖಾಸಗಿ ಶಾಲಾಮಟ್ಟದಲ್ಲಿ ಅಗತ್ಯವಿಲ್ಲದಿದ್ದರೂ, ಕನಿಷ್ಠ ಗ್ರಾಮೀಣ ಮಟ್ಟದ ಸರ್ಕಾರಿ ಶಾಲೆಗಳಲ್ಲಾದರೂ ಬೇಸಿಗೆ ರಜೆಯನ್ನು ಕಡಿತಗೊಳಿಸಿ, ಅಲ್ಲಿ ವರ್ಷಪೂರ್ತಿ ತರಗತಿಗಳನ್ನು ನಡೆಸುವುದರಿಂದ, ಅಥವ ಬೇಸಿಗೆ ರಜೆಯಲ್ಲಿ ಕನಿಷ್ಠ ಅರ್ಧದಿನದ ಶಾಲೆಯನ್ನಾದರೂ ಇಟ್ಟುಕೊಳ್ಳುವುದರಿಂದ, ನಮ್ಮ ಗ್ರಾಮೀಣ ಭಾಗದ ಶೈಕ್ಷಣಿಕ ಸ್ವರೂಪವನ್ನು ಬದಲಿಸಲು ಸಾಧ್ಯವೆ? 'ಸಂಬಂಧಪಟ್ಟವರು' ಆಲೋಚಿಸಬೇಕು...

(ಮುಂದುವರೆಯುವುದು...)


ಹೊರಗಣವರು ತಾವಾಗಿಯೆ ಮೂಡಿಬರುತ್ತಾರೆ ಎಂಬ ತಪ್ಪುಕಲ್ಪನೆ

"ನಾವು ಯಾರನ್ನು ಉತ್ತಮರು, ಬುದ್ಧಿವಂತರು ಮತ್ತು ಸ್ವಯಂಕೃಷಿಗಳೂ ಆದ ಹೊರಗಣವರು ಎಂದು ಭಾವಿಸುತ್ತೇವೆಯೊ ಅಂತಹವರು ಸಹಜವಾಗಿ ನೆಲದಿಂದ ಮೂಡಿಬರುತ್ತಾರೆ ಎನ್ನುವಂತಹ ತಪ್ಪುಕಲ್ಪನೆಯಲ್ಲಿ ಸಿಕ್ಕಿಕೊಂಡಿದ್ದೇವೆ. ಹುಡುಗನಾಗಿದ್ದ ಬಿಲ್ ಗೇಟ್ಸ್‌ನನ್ನು ನೆನೆಸಿಕೊಂಡು, ಹದಿಮೂರು ವರ್ಷದ ಬಾಲಕನೊಬ್ಬ ಯಶಸ್ವಿಯಾದ ಉದ್ಯಮಿಯಾಗಲು ಈ ಪ್ರಪಂಚ ಆಗಗೊಟ್ಟ ವಿಚಾರವನ್ನು ಕೌತುಕದಿಂದ ನೋಡುತ್ತೇವೆ. ಆದರೆ ಇದೊಂದು ತಪ್ಪು ಪಾಠ. ನಮ್ಮ ಪ್ರಪಂಚ ಕೇವಲ ಒಬ್ಬನೇ ಒಬ್ಬ ಹದಿಮೂರು ವರ್ಷದ ಬಾಲಕನಿಗೆ 1968 ರಲ್ಲಿ ಹಂಚಿಕೊಂಡು ಕೆಲಸ ಮಾಡಬೇಕಿದ್ದ ಕಂಪ್ಯೂಟರ್ ಅನ್ನು ಉಪಯೋಗಿಸಲು ಪರಿಮಿತಿಗಳಿಲ್ಲದ ಅನುಮತಿ ಮತ್ತು ಅವಕಾಶವನ್ನು ಕೊಟ್ಟಿತ್ತು. ಅಂತಹುದೇ ಅವಕಾಶವನ್ನು ಹತ್ತುಲಕ್ಷ ಹುಡುಗರಿಗೆ ಕೊಟ್ಟಿದ್ದರೆ ಇವತ್ತು ಅದೆಷ್ಟು ಮೈಕ್ರೋಸಾಫ್ಟ್‌ಗಳು ಇರುತ್ತಿದ್ದವು? ಉತ್ತಮವಾದ ಪ್ರಪಂಚವೊಂದನ್ನು ನಿರ್ಮಿಸಲು ಇವತ್ತಿನ ಯಶಸ್ಸನ್ನು ನಿರ್ಧರಿಸುವ ಅದೃಷ್ಟದ ಜನ್ಮದಿನಗಳು ಮತ್ತು ಇತಿಹಾಸದ ಆಕಸ್ಮಿಕಗಳಂತಹ ಆಗಾಗ ಸಂಭವಿಸುವ ಅದೃಷ್ಟವಕಾಶಗಳು ಮತ್ತು ಒಂದು ನಿಶ್ಚಿತ ಕ್ರಮವಿಲ್ಲದ ಅನುಕೂಲಗಳ ಸ್ಥಾನದಲ್ಲಿ ಎಲ್ಲರಿಗೂ ಅವಕಾಶಗಳನ್ನು ಕೊಡುವಂತಹ ಸಮಾಜ ಇರಬೇಕು. ಕೆನಡಾದಲ್ಲಿ ವರ್ಷದ ಕೊನೆಯಾರ್ಧದಲ್ಲಿ ಹುಟ್ಟಿದ ಮಕ್ಕಳಿಗಾಗಿಯೆ ಪ್ರತ್ಯೇಕವಾದ ಐಸ್-ಹಾಕಿ ತಂಡಗಳು ಇದ್ದಿದ್ದರೆ ಅಲ್ಲಿ ಇವತ್ತು ಇರುವ ಸಂಖ್ಯೆಯ ಎರಡರಷ್ಟು ಹಾಕಿ ಸ್ಟಾರ್‌ಗಳು ಇರುತ್ತಿದ್ದರು. ಈಗ ಇದನ್ನೆ ಪ್ರತಿಯೊಂದು ಕ್ಷೇತ್ರ ಮತ್ತು ವೃತ್ತಿಯಲ್ಲಿ ಹೀಗೆ ತತ್‌ಕ್ಷಣವೆ ಅರಳಬಹುದಾದ ಪ್ರತಿಭೆಗಳೊಂದಿಗೆ ಗುಣಿಸಿ. ಆಗ ಈ ಪ್ರಪಂಚ ಈಗ ಇರುವುದಕ್ಕಿಂತ ಹೆಚ್ಚು ಶ್ರೀಮಂತ ಪ್ರಪಂಚವಾಗಿರುತ್ತಿತ್ತು." ('Outliers' - ಪು. 268)"

ಮುಂದಿನ ವಾರ: 'ಹೊರಗಣವರು' - ಈ ವಾದ ಪರಿಪೂರ್ಣವೆ? ವಿಮರ್ಶೆಯ ಸುತ್ತಮುತ್ತ.

ಲೇಖನ ಸರಣಿಯ ಇದುವರೆಗಿನ ಲೇಖನಗಳು:

No comments: