[ಮುಗಿದಿಲ್ಲದ, ಹೆಸರಿಟ್ಟಿಲ್ಲದ, ಪರಿಷ್ಕರಣಗೊಂಡಿಲ್ಲದ ಕತೆ-ಕಾದಂಬರಿಯೊಂದರ ಅಲ್ಲಲ್ಲಿಯ ಸಾಲುಗಳು.]
ಮೈಬಗ್ಗಿಸಿ ಕೆಲಸ ಮಾಡಲು ಗೊತ್ತಿಲ್ಲದ ಒಂದೆರಡು ಹಳೆಯ ಸ್ಥಿತಿವಂತ ಮನೆಗಳ ಹುಡುಗರು ಕಾರ್ಮಿಕ ಮುಖಂಡರಾಗಿ ಬೆಳೆದರು. ತಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಕೆಲವು ಕಾರ್ಖಾನೆಗಳ ಮಾಲೀಕರು ಇವರ ಸೇವೆಯನ್ನು ಬಳಸಿಕೊಳ್ಳುತ್ತಿದ್ದರು. ಇವರು ತಮ್ಮ ಗೂಂಡಾಗಿರಿಯನ್ನು ಉರಿಗೆ ಹೊಸಬರಾಗಿದ್ದವರ ಮೇಲೆ ತೋರಿಸುತ್ತಿದ್ದರೆ ಹೊರತು ಊರಿನವರ ಮೇಲೆ ತೋರಿಸುತ್ತಿರಲಿಲ್ಲ. ಊರಿನ ಬಹುತೇಕ ವಿಚಾರಗಳಲ್ಲಿ ಇನ್ನೂ ಹಳಬರ ಮತ್ತು ಹಿರಿಯರ ಮಾತೇ ನಡೆಯುತ್ತಿತ್ತು. ಆದರೆ ಕಾರ್ಖಾನೆಗಳ ಕಡೆ ಓಡಾಡಿಕೊಂಡು ರೌಡಿಸಂ ಮಾಡುತ್ತಿದ್ದ, ಮಾಲೀಕರನ್ನು ಮತ್ತು ನೌಕರರನ್ನು ಅನುಕೂಲಕ್ಕೆ ತಕ್ಕಂತೆ ಹೆದರಿಸಿ, ಸುಲಿಗೆ ಮಾಡಿಕೊಂಡು ಓಡಾಡುತ್ತಿದ್ದ ಯುವಕರಲ್ಲಿ ಒಂದಿಬ್ಬರು ಆಗಾಗ ಬಾಡಿಗೆ ಮನೆಗಳಲ್ಲಿದ್ದ ಹೆಂಗಸರನ್ನು ಬಲಾತ್ಕಾರ ಮಾಡುವುದು ಗೊತ್ತೂ ಗೊತ್ತಾಗದಂತೆ ನಡೆಯುತ್ತಿತ್ತು. ಬಾಡಿಗೆ ಮನೆಗಳಲ್ಲಿದ್ದ ಅನೇಕ ಕಾರ್ಮಿಕರು ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದುದ್ದರಿಂದ ಹಲವರ ಮನೆಗಳಲ್ಲಿ ಗಂಡನಿಲ್ಲದ ರಾತ್ರಿಗಳನ್ನು ಹೆಂಗಸರು ಕಳೆಯಬೇಕಿತ್ತು. ಹಾಗಾಗಿ ಅವರನ್ನು ಬಲಾತ್ಕಾರ ಮಾಡುವುದು ಪಡ್ಡೆ ಹುಡುಗರಿಗೆ ಕಷ್ಟವೇನೂ ಆಗಿರಲಿಲ್ಲ. ಆ ರೀತಿಯ ಅತ್ಯಾಚಾರಗಳಿಗೆ ಒಳಗಾದವರು ತಮ್ಮ ಸ್ಥಿತಿಗತಿಗಳಿಗೆ ಅನುಗುಣವಾಗಿ ಊರು ಖಾಲಿ ಮಾಡಿಕೊಂಡು ಹೋಗುತ್ತಿದ್ದರು ಇಲ್ಲವೆ ಪರಿಸ್ಥಿತಿಗೆ ಹೊಂದಿಕೊಂಡು ಬಿಡುತ್ತಿದ್ದರು.
ಬಾಡಿಗೆ ಮನೆಗಳಲ್ಲಿದ್ದ ಹೊರಊರಿನ ಹೆಣ್ಣುಮಕ್ಕಳಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಊರಿನ ಪುಂಡರಿಂದ ಅತ್ಯಾಚಾರಕ್ಕೆ ಒಳಗಾಗುತ್ತಿದ್ದ ಸಮಯದಲ್ಲಿ ಊರಿನ ಕೆಲವು ಬಡವರ ಹೆಣ್ಣುಮಕ್ಕಳ ಸ್ಥಿತಿಯೂ ಅಷ್ಟೇನು ಚೆನ್ನಾಗಿರಲಿಲ್ಲ. ಇದ್ದ ಸಣ್ಣಪುಟ್ಟ ಜಮೀನು ಕಳೆದುಕೊಂಡ ಸಣ್ಣ ರೈತರು ಒಂದೆರಡು ಎಮ್ಮೆ ಮತ್ತು ಹಸುಗಳಿಂದ ಜೀವನ ಮಾಡಬೇಕಿತ್ತು. ಹೊಲಗದ್ದೆಗಳು ಇಲ್ಲದ್ದರಿಂದ ಅವರು ತಮ್ಮ ಹಸುಗಳಿಗೆ ಪ್ರತಿದಿನವೂ ಹುಲ್ಲನ್ನು ಹೊಂದಿಸಬೇಕಿತ್ತು. ಒಂದು ಕಾಲದಲ್ಲಿ ಅವರದಾಗಿದ್ದ, ಆದರೆ ಇಂದು ಅವರದಲ್ಲದ ಜಮೀನುಗಳಲ್ಲಿ ಮಾತ್ರ ಹುಲ್ಲು ಧಂಡಿಯಾಗಿ ಬೆಳೆಯುತ್ತಿತ್ತು. ಕಾರ್ಖಾನೆಗಳ ಖಾಲಿ ಪ್ರದೇಶಗಳಲ್ಲಿ ಮಳೆಗಾಲದಲ್ಲಂತೂ ಹುಲ್ಲು ಆಳೆತ್ತರ ಬೆಳೆಯುತ್ತಿತ್ತು. ಆದರೆ ಕಾರ್ಖಾನೆಗಳಿಗೆಲ್ಲ ಮುಳ್ಳುತಂತಿಯ ಬೇಲಿಗಳಿದ್ದವು ಮತ್ತು ಪ್ರತಿ ಕಾರ್ಖಾನೆಗೂ ವಾಚ್‌ಮನ್‌ಗಳೆಂದು ಕರೆಸಿಕೊಳ್ಳುತ್ತಿದ್ದ ಕಾವಲುಗಾರರು ಇದ್ದರು. ಮನೆಗಳಲ್ಲಿ ಹಸುಗಳಿದ್ದ ಹೆಣ್ಣುಮಕ್ಕಳು ಇಂತಹ ಕಾರ್ಖಾನೆಗಳಿಗೆ ಬೆಳಿಗ್ಗೆ ನಸುಕಿನಲ್ಲೆ ಹುಲ್ಲು ಕೊಯ್ದುಕೊಂಡು ಬರಲು ಕುಡುಗೋಲಿನ ಸಮೇತ ಹೋಗುತ್ತಿದ್ದರು. ಕೆಲವು ವಾಚ್‌ಮನ್‌ಗಳು ಒಳ್ಳೆಯವರಿದ್ದು ಹುಲ್ಲು ಕೊಯ್ದುಕೊಳ್ಳಲು ಬಿಡುತ್ತಿದ್ದರೆ ಮತ್ತೆ ಕೆಲವರು ಬಿಟ್ಟಿಯಾಗಿ ಬಿಡುತ್ತಿರಲಿಲ್ಲ. ಹೆಣ್ಣುಮಕ್ಕಳ ದೇಹವನ್ನು ಆಗಾಗ ಶುಲ್ಕವಾಗಿ ಪಡೆಯುತ್ತಿದ್ದರು. ಹಲವಾರು ಮನೆಗಳಲ್ಲಿ ಅಪ್ಪಂದಿರಿಗೆ ಇದು ಗೊತ್ತಿತ್ತು. ಕೆಲವರು ಹೀಗಾಗದಂತೆ ಹುಷಾರಾಗಿ ನೋಡಿಕೊಂಡರು. ಮತ್ತೆ ಕೆಲವರು ಕುರುಡರಾದರು. ಅಭಿವೃದ್ಧಿಯ ಕಡೆ ಮುಖ ಮಾಡಿ ಬದಲಾಗುತ್ತಿರುವ ಹೊಸ ಪ್ರಪಂಚದಲ್ಲಿ ಅವರ ಜೀವನ ಈ ತಾಪತ್ರಯಗಳನ್ನು ಗಣಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅನಾನುಕೂಲಿಗಳು ಮತ್ತು ಅಬಲರು ಎರಡೂ ಕಡೆ ಶೋಷಿಸಲ್ಪಡುತ್ತಿದ್ದರು.
ಜಮೀನು ಕಳೆದುಕೊಂಡ ವಿಧವೆಯರದು ಇನ್ನೊಂದು ಕತೆ. ಮಕ್ಕಳಿಲ್ಲದೆ ಒಬ್ಬಂಟಿಯಾಗಿದ್ದ ವಿಧವೆಯರಿಗೆ ಮತ್ತು ಇನ್ನೂ ಅಪ್ರಾಪ್ತ ವಯಸ್ಸಿನ ಮಕ್ಕಳಿದ್ದ ವಿಧವೆಯರಿಗೆ ಪರಿಹಾರ ಕೊಡಿಸಲು ಹಾಗು ಕೋರ್ಟು-ಬ್ಯಾಂಕಿಗೆ ಕರೆದುಕೊಂಡು ಹೋಗಲು ಮೂರ್ನಾಲ್ಕು ಗಂಡಸರು ಪೈಪೋಟಿಯಲ್ಲಿ ಮುಂದಕ್ಕೆ ಬಂದರು. ಒಂದಿಬ್ಬರು ತಮ್ಮ ಭಾವಂದಿರ ಮತ್ತು ರಕ್ತಸಂಬಂಧಿಕರ ಮಾತು ಕೇಳಿ ಬಚಾವಾದರು. ಒಂದಿಬ್ಬರು ಗೊತ್ತಾಗದೆ ದುಡ್ಡನ್ನೆಲ್ಲ ಈ ಮುಂಡಾಮೋಚು ಜನರಿಗೆ ಕಳೆದುಕೊಂಡರು. ಮತ್ತೊಂದಿಬ್ಬರು ಹಾಗೆ ಸಹಾಯ ಮಾಡಲು ಬಂದವರಿಗೆ ದೈಹಿಕವಾಗಿಯೂ ಒಪ್ಪಿಸಿಕೊಂಡು ಒಂದಿಷ್ಟು ದುಡ್ಡೂ ಉಳಿಸಿಕೊಂಡು ಏನೂ ಆಗಿಲ್ಲದಂತೆ ಜೀವನ ಮುಂದುವರೆಸಿದರು. ಕೆಲವರು ಇದ್ದಕ್ಕಿದ್ದಂತೆ ಮೈತುಂಬಿಕೊಂಡು, ಬಿರಿದ ಟೊಮೆಟೊ ಹಣ್ಣಿನಂತೆ ಸ್ಥೂಲಕಾಯರಾದರು.
ಜಮೀನು ಕಿತ್ತುಕೊಂಡ ಸರ್ಕಾರ ಮತ್ತು ಅದರ ಸೀಮಿತ ದೃಷ್ಟಿಕೋನದ ದಡ್ಡ ಅಧಿಕಾರಿಗಳು ಪರಿಹಾರದ ಹಣ ಕೊಡುವುದರೊಂದಿಗೆ ತಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಂಡರು. ತಮ್ಮ ಪಾಲಿಗೆ ಬಂದ ದುಡ್ಡನ್ನು ಜನ ಬಳಸಬಹುದಾದ ರೀತಿಗಳನ್ನು ಮತ್ತು ಜೀವನೋಪಾಯಕ್ಕೆ ತೊಡಗಿಸಿಕೊಳ್ಳಲು ಇರಬಹುದಾದ ಮಾರ್ಗಗಳನ್ನು ಹಳ್ಳಿಯ ಮುಗ್ಧ ಜನತೆಗೆ ತಿಳಿಸುವ ಕಾರ್ಯವನ್ನು ಅವರು ಮಾಡಲಿಲ್ಲ.
ಯಾವುದು ನ್ಯಾಯ, ಯಾವುದು ಮೌಲ್ಯ, ಯಾವುದನ್ನು ಉಳಿಸಿಕೊಳ್ಳಬೇಕು, ಯಾವುದನ್ನು ತಡೆಯಬೇಕು, ಎನ್ನುವಂತಹ ಚಿಂತನೆ ಊರಿನ ಸಮಷ್ಟಿ ಮಾನಸದಲ್ಲಿ ಹುಟ್ಟಲಿಲ್ಲ. ಇದನ್ನೆಲ್ಲ ಯೋಚಿಸಿ ಮಾತನಾಡುವವರ ಮಾತಿಗೆ ಬೆಲೆ ಇಲ್ಲದ ಸಂದರ್ಭ ಅದು. ಊರಿನ ಅಧ:ಪತನವನ್ನು ಸಹಿಸಲಾಗದ ಹಲವು ಅನುಕೂಲಸ್ಥರು ತಮ್ಮ ಉಳಿದಿದ್ದ ಹೊಲದಲ್ಲಿ ಮನೆ ಮಾಡಿಕೊಂಡು ಊರಿನಿಂದ ಹೊರಗಾದರು.
No comments:
Post a Comment