ಮೊದಲಿಗೆ ಸ್ವಲ್ಪ ಸ್ವವಿವರ; ಗೊತ್ತಿಲ್ಲದವರಿಗೆ. ನಾನು ಹಳ್ಳಿಯಿಂದ, ರೈತ ಕುಟುಂಬದಿಂದ ಬಂದವನು. ಹೊಲ-ಗದ್ದೆ-ತೋಟಗಳ ಉತ್ತು-ಬಿತ್ತು-ಬೆಳೆ-ಮಾರಾಟಗಳಲ್ಲಿ ಪಾಲ್ಗೊಂಡವನು. ಒಳ್ಳೆಯ ಬೀಜ ಮತ್ತು ಹಸುಗಳಿಂದ ರೈತನಿಗೆ ಆಗುವ ಲಾಭ ಕಂಡವನು. ಹಾಗೆಯೆ ಆತನ ಜೀವನದ ಅನಿಶ್ಚತೆಯನ್ನು, ಜೀವನದಲ್ಲಿನ ಜೂಜನ್ನು ಸ್ವತಃ ಅನುಭವಿಸಿ ಕಂಡವನು. ಇಂಜಿನಿಯರಿಂಗ್ ಓದುವಾಗ, ಮನೆಯಲ್ಲಿ ಬೇರೆ ಆದಾಯ ಇದ್ದರೂ ನನ್ನ ಹಾಸ್ಟೆಲ್-ಊಟ-ಮತ್ತಿತರ ತಿಂಗಳ ಖರ್ಚುಗಳನ್ನು ನನ್ನ ತಾಯಿ ತಾನು ಸಾಕಿದ್ದ ಸೀಮೆಹಸುವಿನ ಹಾಲು ಮಾರಿ ಬಂದ ಹಣದಿಂದ ನೋಡಿಕೊಳ್ಳುತ್ತಿದ್ದಳು. (ಆಕೆಯ ತಾಯಿ ಇನ್ನೂ ಗಟ್ಟಿಗಿತ್ತಿ. ತನ್ನದೇ ಎಂಟು ಮಕ್ಕಳಿದ್ದರೂ, ಹಿರಿಯವನಾದ ತನ್ನ ಸವತಿಯ ಮಗನನ್ನು ಆಕೆ ಇಂಜಿನಿಯರಿಂಗ್ ಮಾಡಿಸಿದ್ದೂ ಬಹುಶಃ ಅದೇ ರೀತಿ. ) ಅಮೆರಿಕದಲ್ಲಿ ಕುರಿ-ಕೋಳಿ-ದನ ಮುಂತಾದ ಮಾಂಸೋತ್ಪಾದನೆ ಉದ್ಯಮ ಮತ್ತು ಅದು ಪರಿಸರದ ಮೇಲೆ ಉಂಟುಮಾಡುವ ಒತ್ತಡವನ್ನು ಗಮನಿಸಿ ಸಸ್ಯಾಹಾರಿಯಾದವನು. ಇಲ್ಲಿ ಆದಷ್ಟು Organic ಹಾಲನ್ನು ಮತ್ತು ಸಾವಯವ ತರಕಾರಿಗಳನ್ನು (ದುಪ್ಪಟ್ಟಾಗಿದ್ದರೂ) ಬಳಸಲು ಪ್ರಯತ್ನಿಸುವವನು. ಮತ್ತು, ನಾನು ಕೆಲಸ ಮಾಡುತ್ತಿರುವುದು ಸೆಮಿಕಂಡಕ್ಟರ್ ಕಂಪನಿಯಲ್ಲಿ. GM/GE ಬೆಳೆಗಳ ಯಶಸ್ಸಿನಿಂದ ನನಗೆ ಯಾವ ವೈಯಕ್ತಿಕ ಲಾಭವೂ ಇಲ್ಲ.
ಇಷ್ಟು ಹೇಳಿ, ಬಿಟಿ ಬದನೆ ಬಗ್ಗೆ ಬರೆದ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಇದನ್ನು ವಾರದ ಹಿಂದೆಯೇ ಬರೆದಿದ್ದರೂ ಕಾರಣಾಂತರಗಳಿಂದ ಇಂದು ಹಾಕುತ್ತಿದ್ದೇನೆ. ಓದುಗರ ಅಭಿಪ್ರಾಯಗಳಿಗೆ ಸ್ವಾಗತ. ನಾನು ಅಂತರ್ಜಾಲದಲ್ಲಿನ ಚರ್ಚೆ/ಕಾಮೆಂಟುಗಳಿಗೆ ಸಾಮಾನ್ಯವಾಗಿ ಉತ್ತರಿಸುವುದಿಲ್ಲ. ಆದರೆ ಈ ವಿಷಯದ ಬಗ್ಗೆ ಉತ್ತಮವಾದ ಮತ್ತು ಅರ್ಹವಾದ ಕಾಮೆಂಟುಗಳು ಬಂದರೆ ಉತ್ತರಿಸುವ ಮನಸ್ಸಿದೆ.
ಬಿಟಿ ಬದನೆಯ ಬಗ್ಗೆ ನಾಡಿನಲ್ಲಿ ಇತ್ತೀಚೆಗೆ ಪರ-ವಿರೋಧ ಚರ್ಚೆ ಜೋರಾಗಿಯೆ ನಡೆಯುತ್ತಿದೆ. ಆ ಬೆಳೆಯನ್ನು ರಾಜ್ಯದಲ್ಲಿಯೂ ನಿಷೇಧಿಸುವ ಬಗ್ಗೆ ಸ್ವತಃ ಮುಖ್ಯಮಂತ್ರಿಯೆ ಆಶ್ವಾಸನೆ ಕೊಡುವುದರ ಮೂಲಕ ಸದ್ಯ ವಿರೋಧಿಗಳ ಪ್ರಭಾವವೆ ಕೆಲಸ ಮಾಡುತ್ತಿದೆ. ಅದೇ ಸಮಯದಲ್ಲಿ ರೈತರಲ್ಲದ ಜನರಲ್ಲಿ ಬಿಟಿ ಬೆಳೆಗಳ ಬಗ್ಗೆ ಭಯ ಬಿತ್ತುವ ಕೆಲಸವೂ ನಡೆಯುತ್ತಿದೆ. ಈ ಇಡೀ ಪ್ರಹಸನವೆ ಅಜ್ಞಾನ ಮತ್ತು ಅವೈಜ್ಞಾನಿಕ ಮನೋಭಾವನೆಯಿಂದ ಕೂಡಿರುವಂತಹುದು. ರೈತವಿರೋಧಿಯಾದದ್ದು. ಜಾಗತಿಕ ತಾಪಮಾನ ಮತ್ತಷ್ಟು ಏರಲು ಸಹಕರಿಸುವಂತಹುದು. ವರ್ತಮಾನ ಮತ್ತು ಭವಿಷ್ಯದ ಹಸಿವೆಯನ್ನು ತಡೆಗಟ್ಟಲು ಅಸಮರ್ಥವಾದದ್ದು. ಬಡವರು ಅಪೌಷ್ಠಿಕಾಂಶ ಆಹಾರ ಸೇವನೆಯಿಂದ ನರಳುವಂತೆ ಮಾಡುವಂತಹುದು. ಇಲ್ಲಿರುವ ಮೂಲಭೂತ ಪ್ರಶ್ನೆ ಇದಷ್ಟೆ ಆಗಲಿ, ಅಥವ ಬಿಟಿ ಬದನೆಯ ಪರ-ವಿರೋಧವಾಗಲಿ ಅಲ್ಲ. ಬದಲಿಗೆ ಜ್ಞಾನ ಮತ್ತು ವಿಜ್ಞಾನವನ್ನು ವಿರೋಧಿಸುವ ಮನೋಭಾವದ ಬಗ್ಗೆ. ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಅದು ತಂದೊಡ್ಡಲಿರುವ ಅಪಾಯಕಾರಿ ಪರಿಣಾಮಗಳ ಬಗ್ಗೆ.
ಬಿಟಿ ಬದನೆಯ ವಿರುದ್ಧ ಕರ್ನಾಟಕದಲ್ಲಿ ಧ್ವನಿಯೆತ್ತುತ್ತಿರುವವರಲ್ಲಿ ನಾವು ಒಂದು ಗಣನೀಯ ವಿಪರ್ಯಾಸ ನೋಡಬಹುದು. ಈ ಗುಂಪಿನವರಲ್ಲಿ ಒಂದಷ್ಟು ಜನ ಪರಿಸರವಾದಿಗಳಿದ್ದಾರೆ. ಸದ್ಯದ ರಾಸಾಯಾನಿಕ ಕೀಟನಾಶಕಗಳ ಕೃಷಿ ಪದ್ಧತಿ ಪರಿಸರಕ್ಕೆ ಹಾನಿಕಾರಕ ಎಂದು ಗೊತ್ತಿರುವವರು ಇವರು. ಬಿಟಿ ಬದನೆ, ಬಿಟಿ ಹತ್ತಿಯಂತಹ GM ಆಹಾರಬೆಳೆಗಳು ಕ್ರಿಮಿನಾಶಕಗಳ ಬಳಕೆಯನ್ನು ನಿಲ್ಲಿಸುತ್ತವೆ ಮತ್ತು ಆ ಮೂಲಕ ಪರಿಸರಕ್ಕೆ ಹಾನಿಯಾಗದಂತೆ ತಡೆಯುತ್ತದೆ ಎನ್ನುವುದು ಇವರಿಗೆ ಮುಖ್ಯವಾಗುತ್ತಿಲ್ಲ. ಇದೇ ಗುಂಪಿನಲ್ಲಿ ದೀನ-ದಲಿತ-ಬಡವರ ಪರ ಮಾತನಾಡುವವರೂ, ಹಸಿವಿನ ನಿರ್ಮೂಲನಕ್ಕೆ ಕರೆಕೊಡುವವರೂ ಇದ್ದಾರೆ. ಆದರೆ ಅವರಿಗೆ ಗೊತ್ತಿಲ್ಲದ್ದು ಏನೆಂದರೆ GM ಬೆಳೆಗಳ ಹಿಂದಿರುವ ಜೈವಿಕ ತಂತ್ರಜ್ಞಾನ ಹಸಿವೆಯನ್ನಷ್ಟೆ ಅಲ್ಲ, ಅಪೌಷ್ಠಿಕತೆಯನ್ನೂ ನಿವಾರಿಸಬಲ್ಲ ತಾಕತ್ತನ್ನು ಹೊಂದಿದೆ ಎನ್ನುವುದು; ಅದು A-ಅನ್ನಾಂಗದ ಕೊರತೆಯಿಂದ ಉಂಟಾಗುವ ಕುರುಡನ್ನು ಸುಲಭವಾಗಿ ಇಲ್ಲವಾಗಿಸುವ ಸಾಧ್ಯತೆಗಳನ್ನು ಹೊಂದಿದೆ ಎನ್ನುವುದು. ಇನ್ನು ಬಿಟಿ ವಿರುದ್ಧ ಕೆಲವು ರೈತಮುಖಂಡರೂ ಧ್ವನಿಯೆತ್ತಿದ್ದಾರೆ. ಅವರ ವಿರೋಧಕ್ಕೆ ಹಿನ್ನೆಲೆಯಾಗಿ ಬಹುರಾಷ್ಟ್ರೀಯ ಕಂಪನಿಗೆಳನ್ನು ವಿರೋಧಿಸುವ ತಾತ್ವಿಕ ವಿರೋಧವಾದರೂ ಇದ್ದಿದ್ದರೆ ಅದು ನಮ್ಮ ಸಂದರ್ಭದಲ್ಲಿ ತಕ್ಕಮಟ್ಟಿಗೆ ಸಮರ್ಥನೀಯವಾಗಿರುತ್ತಿತ್ತು. ಆದರೆ, ಬಿಟಿ ಬದನೆಯನ್ನು ವಿರೋಧಿಸುವ ಮೂಲಕ ಕರ್ನಾಟಕದ ರೈತರನ್ನು ತಾವು ಮತ್ತದೇ ಹೆಚ್ಚಿನ ಮಾನವಶ್ರಮ-ರಸಗೊಬ್ಬರ-ಕೀಟನಾಶಕಗಳನ್ನು ಬೇಡುವ, ಕಡಿಮೆ ಲಾಭದ ಕೃಷಿಪದ್ಧತಿಗೆ ದೂಡುತ್ತಿದ್ದೇವೆ ಎನ್ನುವುದು ಅವರಿಗೆ ಅರ್ಥವಾಗುತ್ತಿಲ್ಲ. ಹಾಗೆಯೆ, ಅಕಾಲಿಕ ಪ್ರವಾಹದಿಂದಾಗಿ ಎರಡುವಾರಗಳ ಕಾಲ ನೀರಿನಲ್ಲಿ ಮುಳುಗಿದ್ದರೂ ಭತ್ತದ ಬೆಳೆ ನಾಶವಾಗದ ಒಂದು ಅಸಾಮಾನ್ಯ ಸಾಧ್ಯತೆ ಈ ಜೈವಿಕ ವಿಜ್ಞಾನದ ಅಭಿವೃದ್ಧಿಯಿಂದಾಗಿ ಸಾಧ್ಯ ಎನ್ನುವ ವಿಷಯ ಅವರಿಗೆ ಗೊತ್ತಾಗಿಲ್ಲ. ಕೊನೆಯದಾಗಿ, ಈ ಗುಂಪಿನಲ್ಲಿ ಕೆಲವು ಮತೀಯ ಮೂಲಭೂತವಾದಿಗಳೂ ಇದ್ದಾರೆ. ವಿಜ್ಞಾನ ಮತ್ತು ಜೀವವಿಕಾಸದ ಅರಿವೇ ಇಲ್ಲದ ಇವರು ಗರಿಷ್ಠ ಕ್ಷಮೆಗೆ ಅರ್ಹರು!
ಅಮೆರಿಕದ ಸಿಲಿಕಾನ್ ಕಣಿವೆಯ ಕೊಲ್ಲಿ ಪ್ರದೇಶದಲ್ಲಿ ಒಬ್ಬ ಪರಿಸರವಾದಿ ಇದ್ದಾನೆ. ಆತ ಪರಿಸರವಿಜ್ಞಾನಿಯೂ ಹೌದು. ಅಮೆರಿಕದಲ್ಲಿ ಸಾವಯವ ಕೃಷಿ ಪದ್ಧತಿ ಜನಪ್ರಿಯವಾಗಲು ಆತನ ಕೊಡುಗೆಯೂ ಸ್ವಲ್ಪ ಇದೆ. ತಾನು ಬದುಕುವ ಬದುಕು ಪರಿಸರಹಾನಿಗೆ ಬಹಳ ಕಮ್ಮಿ ಕಾರಣವಾಗಬೇಕು ಎಂದು 73 ವರ್ಷದ ಈ ಹಿರಿಯ ಕಳೆದ 25 ವರ್ಷಗಳಿಂದ ಕೊಲ್ಲಿಯ ಸಮುದ್ರದಡದಲ್ಲಿ ಲಂಗರು ಹಾಕಿದ ಹಳೆಯ ಮೋಟಾರ್ದೋಣಿಯಲ್ಲಿ ವಾಸಿಸುತ್ತಿದ್ದಾನೆ. ಆತನ ಹೆಸರು ಸ್ಟ್ಯುವರ್ಟ್ ಬ್ರ್ಯಾಂಡ್. ಏರುತ್ತಿರುವ ಜಾಗತಿಕ ತಾಪಮಾನ, ಜಗತ್ತಿನ ಬಹುಸಂಖ್ಯಾತ ಬಡವರಿಗೆ ಲಭ್ಯವಿಲ್ಲದ ಆಹಾರ, ವಿದ್ಯುತ್ತು, ಸಮಾನತೆ, ಗೌರವಯುತ ಬದುಕುಗಳ ಬಗ್ಗೆ, ಹೆಚ್ಚಾಗುತ್ತಲೆ ಇರುವ ವಿಶ್ವದ ಜನ ಸಂಖ್ಯೆ ಮತ್ತು ಅದು ಪರಿಸರದ ಮೇಲೆ ಉಂಟುಮಾಡುತ್ತಿರುವ ಒತ್ತಡ, ಇವೆಲ್ಲವುಗಳ ಬಗ್ಗೆ ಈತ ಎಲ್ಲಾ ಉದಾರಶೀಲ ಪ್ರಜ್ಞಾವಂತರಂತೆ ತಲೆಕೆಡಿಸಿಕೊಂಡಿದ್ದಾನೆ. ಹಾಗೆಯೆ, ಈ ಎಲ್ಲಾ ಸಮಸ್ಯೆಗಳನ್ನು ಜಗತ್ತು ಹೇಗೆ ಪರಿಹರಿಸಿಕೊಳ್ಳಬಲ್ಲದು ಮತ್ತು ಪ್ರಗತಿಯ ಹಾದಿಯಲ್ಲಿ ಮಾನವ ಈ ಭೂಮಿಯನ್ನೂ ಹೇಗೆ ವಾಸಯೋಗ್ಯವಾಗಿಟ್ಟುಕೊಳ್ಳಬಹುದು ಎನ್ನುವುದರ ಬಗ್ಗೆ ಕೆಲವು ತಿಂಗಳ ಹಿಂದೆ ಒಂದು ಪುಸ್ತಕ ಬರೆದಿದ್ದಾನೆ. ಅದರ ಹೆಸರು "Whole Earth Discipline - ವಾಸ್ತವಪರಿಸರವಾದಿಯ ಪ್ರಣಾಳಿಕೆ." ಈ ಪುಸ್ತಕದಲ್ಲಿ ಎರಡು ಅಧ್ಯಾಯಗಳು ಜೆನೆಟಿಕ್ ಇಂಜಿನಿಯರಿಂಗ್ ಮತ್ತು ಜೈವಿಕ ತಂತ್ರಜ್ಞಾನದ ಕುರಿತೇ ಆಗಿದೆ. ಬಿಟಿ ಬದನೆಯನ್ನು ವಿರೋಧಿಸುತ್ತಿರುವ ನಮ್ಮ ’ಪರಿಸರವಾದಿಗಳು’, ’ರೈತಪರ ಹೋರಾಟಗಾರರು’, ’ಸಮಾನತಾವಾದಿಗಳು’, ತತ್ಕ್ಷಣವೆ ಓದಬೇಕಾದ ಪುಸ್ತಕ ಇದ್ದರೆ ಅದು ಇದೇನೆ.
1960 ರಲ್ಲಿ ಈ ಭೂಮಿಯಲ್ಲಿಯ ಜನಸಂಖ್ಯೆ ಸುಮಾರು 300 ಕೋಟಿ ಇತ್ತು. ಇವತ್ತು ಅದು ಸುಮಾರು 670 ಕೋಟಿ. ಹಸಿರು ಕ್ರಾಂತಿ, ರಾಸಾಯನಿಕ ಗೊಬ್ಬರಗಳು, ಕ್ರಿಮಿನಾಶಕಗಳು, ಜೈವಿಕ ತಂತ್ರಜ್ಞಾನ, ವಿಸ್ತಾರವಾದ ಕೃಷಿಭೂಮಿ ಮತ್ತು ನೀರಾವರಿ ಪ್ರದೇಶಗಳು, ಉತ್ತಮಗೊಂಡ ರಸ್ತೆಗಳು ಮತ್ತು ಸರಕು ಸಾಗಾಣಿಕೆ, ಚಲನಶೀಲವಾದ ಆರ್ಥಿಕತೆ, ಮುಂತಾದವುಗಳಿಂದಾಗಿ ಎಷ್ಟೆಲ್ಲ ಸಮಸ್ಯೆಗಳ ನಡುವೆಯೂ ಇಂದು ಮನುಷ್ಯ ಭೂಮಿಯ ಮೇಲಿನ ಎಲ್ಲರಿಗೂ ಸಾಕಾಗುವಷ್ಟು ಆಹಾರ ಬೆಳೆಯುತ್ತಿದ್ದಾನೆ. ಅದು ಎಲ್ಲರಿಗೂ ಲಭ್ಯವಿದೆಯೆ ಮತ್ತು ಸಾಕಷ್ಟು ಪೌಷ್ಠಿಕವಾದದ್ದೆ ಎನ್ನುವುದು ಬೇರೆ ವಿಷಯ. ಅದರೆ, ಇಷ್ಟು ಮಾತ್ರದ ಆಹಾರ ಉತ್ಪಾದನೆ ಭವಿಷ್ಯದಲ್ಲಿಯೂ ಸಾಧ್ಯವೆ ಎನ್ನುವುದು ಈಗ ಸದ್ಯ ವಿಶ್ವದ ಮುಂದಿರುವ ಒಂದು ಗಂಭೀರ ಪ್ರಶ್ನೆ. ಅದು ಸಾಧ್ಯವಾದರೂ ಅದು ಬೇಡುವ ಬೆಲೆ ಏನು, ಜೀವಜಗತ್ತಿನ ಮೇಲೆ ಅದರ ಪರಿಣಾಮ ಏನು ಎನ್ನುವುದು ಅದಕ್ಕಿಂತ ಗಂಭೀರ ಪ್ರಶ್ನೆ.
ಬಿಟಿ ಬದನೆಯ ಬಗ್ಗೆ ಭಯಪೀಡಿತರಾಗಿರುವ ನಮ್ಮ ಪರಿಸರವಾದಿಗಳಿಗೆ ಪೀಟರ್ ರ್ಯಾವೆನ್ ಎನ್ನುವ ಪ್ರಸಿದ್ಧ ಸಸ್ಯವಿಜ್ಞಾನಿ ಮತ್ತು ಪರಿಸರವಾದಿ ಗೊತ್ತಿರಬಹುದು. ಪ್ರಸಿದ್ಧ ಟೈಮ್ ಮ್ಯಾಗಜೈನ್ ಈ ವಿಜ್ಞಾನಿಯನ್ನು "Hero for the Planet" ಪಟ್ಟಿಯಲ್ಲಿ ಒಬ್ಬರನ್ನಾಗಿ ಗುರುತಿಸಿದೆ. ಈ ವಿಜ್ಞಾನಿ ಬರೆಯುತ್ತಾರೆ: "ಜಗತ್ತಿನ 630 ಕೋಟಿ ಜನರಿಗೆ ಉಣಿಸಲು ಸಾಧ್ಯವಾಗುವಂತೆ ಅಭಿವೃದ್ಧಿಪಡಿಸಲಾದ ಕೃಷಿಪದ್ಧತಿಯ ಹೊರತಾಗಿ ಬೇರ್ಯಾವುದೂ ಜಗತ್ತಿನ ಅನೇಕ ಜೀವಸಂಕುಲಗಳ ನಿರ್ನಾಮಕ್ಕೆ ಮತ್ತು ಹೆಚ್ಚಾದ ಪರಿಸರದ ಅಸಮತೋಲನಕ್ಕೆ ಕಾರಣವಾಗಿಲ್ಲ." ಬಹುಪಾಲು ಜನರಿಗೆ ಗೊತ್ತಿಲ್ಲದ್ದು ಏನೆಂದರೆ ಭೂಮಿಯ ಶೇ.40ರಷ್ಟು ನೆಲವನ್ನು ಆಹಾರ ಬೆಳೆಯಲು ಉಪಯೋಗಿಸಲಾಗುತ್ತದೆ ಎನ್ನುವುದು. ಬರಲಿರುವ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗಲಿದೆ. ಮತ್ತು, ಸಹಜವಾಗಿಯೆ, ಜಾಗತಿಕ ತಾಪಮಾನ ಏರಿಕೆಗೆ ಇದರ ಪಾಲೂ ಹೆಚ್ಚಾಗಲಿದೆ. ಜಾಗತಿಕ ತಾಪಮಾನ ಏರಿಕೆಯಲ್ಲಿ ಮತ್ತು ವಾತಾವರಣಕ್ಕೆ ಇಂಗಾಲ ಹೊರಚೆಲ್ಲುವುದರಲ್ಲಿ ತಮ್ಮ ಪಾತ್ರವಿಲ್ಲ ಎಂದುಕೊಳ್ಳುವ ರೈತರ ಮೊದಲ ಕೆಲಸವೆ ನೆಲದಲ್ಲಿ ಹುದುಗಿರುವ ಇಂಗಾಲವನ್ನು ವಾತಾವರಣಕ್ಕೆ ಬಿಡುವುದು. ಸಸ್ಯಗಳಲ್ಲಿರುವ ಮತ್ತು ವಾತಾವರಣದಲ್ಲಿರುವ ಒಟ್ಟು ಇಂಗಾಲಕ್ಕಿಂತ ಹೆಚ್ಚಿನ ಇಂಗಾಲ ನೆಲದಲ್ಲಿದೆ. ರೈತ ನೆಲವನ್ನು ಉತ್ತಾಗಲೆಲ್ಲ ಇಂಗಾಲ ಹೊರಬರುತ್ತದೆ. ಉಳುಮೆ ಕಡಿಮೆ ಮಾಡಿದಷ್ಟೂ ಅಷ್ಟು ಮಾತ್ರದ ಇಂಗಾಲ ಹೊರಚೆಲ್ಲುವಿಕೆ ಕಮ್ಮಿಯಾಗುತ್ತದೆ. ಮತ್ತು, ಜಗತ್ತಿನ ಶೇ.40 ರಷ್ಟು ಬೆಳೆ ಹೊಲಗದ್ದೆಗಳಲ್ಲಿನ ಕಳೆ ಮತ್ತು ಕೀಟಗಳಿಗೆ ಬಲಿಯಾಗುತ್ತದೆ. ಮತ್ತೂ ಇನ್ನೊಂದು ವಿಷಯ: ಜಗತ್ತಿನ ಶೇ.5 ರಷ್ಟು ತೈಲ ಕೃಷಿಗೆ ಬಳಕೆಯಾಗುತ್ತದೆ. ಅದರ ಬಹುಪಾಲು ಕಳೆ ಮತ್ತು ಕೀಟನಾಶಕಗಳ ತಯಾರಿಕೆಗೆ ಬಳಕೆಯಾಗುತ್ತದೆ. ಬಿಟಿ ಬದನೆಯಂತಹ GM ಬೆಳೆಗಳ ಹೆಚ್ಚುಗಾರಿಕೆ ಇರುವುದೆ ಅವುಗಳ ಕೀಟನಿರೋಧ ಮತ್ತು ಕಳೆನಿರೋಧದಲ್ಲಿ. ಇದು ಪರಿಸರವಾದಿಗಳು ಗಮನಿಸಬೇಕಾದ ಪ್ರಮುಖ ಅಂಶ.
ಕೃಷಿ ಬಹಳ ಕಷ್ಟದಾಯಕವಾದ, ಬೆನ್ನೆಲುಬು ಮುರಿದುಹೋಗುವ ಕೆಲಸ. ಈ ಕ್ಷೇತ್ರದಲ್ಲಿ ತೊಡಗಿಕೊಂಡವರ ಬಡತನ ನಿವಾರಣೆ ಆಗುವುದು ಬಹಳ ಅಪರೂಪ. ಬೇರೆ ಎಲ್ಲಾ ಕ್ಷೇತ್ರಗಳಿಗಿಂತ ಕಮ್ಮಿ ಕೂಲಿ ಕ್ಷೇತ್ರದ ಕೂಲಿಕಾರ್ಮಿಕರಿಗೆ ದೊರೆಯುತ್ತದೆ. ಮನುಷ್ಯನ ನಾಗರಿಕತೆಯುದ್ದಕ್ಕೂ ಹಳ್ಳಿಯಲ್ಲಿನ ಯುವಜನಾಂಗ ನಗರದತ್ತ ಒಂದು ಕಣ್ಣಿಟ್ಟೇ ನಡೆದುಬಂದ ಇತಿಹಾಸ ಇದೆ. ಹೀಗಿರುವಾಗ, ತಮ್ಮ ಪರಿಸರದಲ್ಲಿಯೇ ತಮ್ಮ ಜೀವನವನ್ನು ಉತ್ತಮಗೊಳಿಸಬಲ್ಲ ಸಾಧ್ಯತೆ ಇರುವ ಬಿಟಿ ತಂತ್ರಜ್ಜಾನವನ್ನು ಪ್ರಪಂಚದ ಅನೇಕ ಕಡೆಯ ರೈತರು ವಿರೋಧಿಸುತ್ತಿಲ್ಲ. ವಿರೋಧಿಸುತ್ತಿರುವವರಲ್ಲಿರುವ ಬಹುಪಾಲು ಜನ ಕೃಷಿಕ್ಷೇತ್ರದಿಂದ ಹೊರಗಿರುವವರೆ. ಅದಕ್ಕಿಲ್ಲಿದೆ ಎರಡು ಉದಾಹರಣೆಗಳು. 2000 ದ ಸಮಯದಲ್ಲಿ ಬಿಟಿ ಸೋಯಾಅವರೆ ಬೆಳೆಯುವುದು ಬ್ರೆಜಿಲ್ ದೇಶದಲ್ಲಿ ನಿಷಿದ್ಧವಾಗಿತ್ತು. ಆದರೆ ಪಕ್ಕದ ಅರ್ಜೆಂಟಿನಾದಲ್ಲಿ ಯಾವುದೆ ನಿಷೇಧ ಇರಲಿಲ್ಲ. ಅರ್ಜೆಂಟಿನಾದ ರೈತರು ತಮಗಿಂತ ಕಮ್ಮಿ ಖರ್ಚು ಮಾಡಿ ಹೆಚ್ಚಿನ ಇಳುವರಿಯನ್ನು ಪಡೆಯುತ್ತಿರುವುದನ್ನು ಕಂಡ ಬ್ರೆಜಿಲ್ ರೈತರು ಗಡಿಯಾಚೆಯಿಂದ ಬಿಟಿ ಅವರೆ ಬೀಜವನ್ನು ಕಳ್ಳಸಾಗಾಣಿಕೆ ಮಾಡಲು ಆರಂಭಿಸಿಬಿಟ್ಟರು. ಇದರಿಂದ ಎಚ್ಚೆತ್ತ ಬ್ರೆಜಿಲ್ ಸರ್ಕಾರ ನಿಷೇಧವನ್ನು ಹಿಂತೆಗೆದುಕೊಂಡಿತು. 2006 ರಲ್ಲಿ ಫ್ರಾನ್ಸ್ ದೇಶದ ಟೌಲೌಸ್ ಎಂಬ ಊರಿನ ಬಳಿ ಸುಮಾರು 200 ಜನ ಬಿಟಿ ವಿರೋಧಿ ಚಳವಳಿಕಾರರು ಸುಮಾರು 15 ಎಕರೆಯಲ್ಲಿ ಬೆಳೆದಿದ್ದ ಬಿಟಿ ಜೋಳವನ್ನು ನಾಶಮಾಡಿದರು. ಆದರೆ ಅದಕ್ಕೆ ಉತ್ತರವಾಗಿ 800 ರೈತರು ಮೆರವಣಿಗೆ ತೆಗೆದದ್ದೆ ಅಲ್ಲದೆ ಜೈವಿಕ ತಂತ್ರಜ್ಞಾನದ ಕ್ಷೇತ್ರದಲ್ಲಿನ ಸಂಶೋಧನೆಗಳನ್ನು ಬೆಂಬಲಿಸಲು ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದರು. ನಮ್ಮ ನಾಡಿನ ರೈತನಾಯಕರು ಇದನ್ನು ಗಮನಿಸಬೇಕು.
ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಅಸಾಮಾನ್ಯವಾದ ಸಂಶೋಧನೆಗಳು ಆಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಾರ್ಷಿಕ ಎರಡೂವರೆ ಲಕ್ಷದಿಂದ ಐದು ಲಕ್ಷದಷ್ಟು ಮಕ್ಕಳು A ಅನ್ನಾಂಗದ ಕೊರತೆಯಿಂದ ಅಂಧರಾಗುತ್ತಿದ್ದಾರೆ. ಅದರಲ್ಲಿ ಅರ್ಧದಷ್ಟು ಮಕ್ಕಳು ದೃಷ್ಟಿ ಕಳೆದುಕೊಂಡ ವರ್ಷದೊಳಗೇ ಸಾವನ್ನಪ್ಪುತ್ತಾರೆ. ಈಗ ಫಿಲಿಫ್ಫೀನ್ಸ್ನಲ್ಲಿ ಅಂತರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆ ’ಬಂಗಾರದ ಅಕ್ಕಿ’ಯ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದೆ. ಈ ’ಬಂಗಾರದ ಅಕ್ಕಿ’ಯ ಸೇವನೆ ದೈನಂದಿನ A ಅನ್ನಾಂಗದ ಕೊರತೆಯನ್ನು ನೀಗಲಿದೆ. ಇದು ಸಾಧ್ಯವಾಗಿರುವುದು ಹಳದಿಬಣ್ಣದ ಡ್ಯಾಫೊಡಿಲ್ ಹೂವಿನ ಎರಡು ಜೀನ್ ಮತ್ತು ಬ್ಯಾಕ್ಟೀರಿಯಾ ಒಂದರ ಒಂದು ಜೀನ್ ಅನ್ನು ಭತ್ತಕ್ಕೆ ಸೇರಿಸುವುದರ ಮೂಲಕ. ಇನ್ನೊಂದೆರಡು ವರ್ಷದಲ್ಲಿ ಎಲ್ಲರ ಬಳಕೆಗೆ ಲಭ್ಯವಾಗಲಿರುವ ಈ ಅಕ್ಕಿ ಕೇವಲ ಅನ್ನವನ್ನು ಮಾತ್ರ ಉಣ್ಣಲು ಸಾಧ್ಯವಿರುವ ತೃತೀಯ ಜಗತ್ತಿನ ಅನೇಕ ದೇಶಗಳ ಮಕ್ಕಳಿಗೆ ನೆರವಾಗಲಿದೆ. ಕೇವಲ ಒಂದೇ ಒಂದು ಜೀನ್ ಒಂದರ ಸಂಕರದಿಂದಾಗಿ ಎರಡು ವಾರಗಳ ಕಾಲ ನೀರಿನಲ್ಲಿ ಮುಳುಗಿದರೂ ಕೊಳೆಯದ ಭತ್ತದ ಬೆಳೆಯೊಂದರ ಅಭಿವೃದ್ಧಿ ಮತ್ತು ಪರೀಕ್ಷೆ ಭಾರತ, ಭಾಂಗ್ಲಾ, ಮತ್ತು ಲಾವೋಸ್ ದೇಶಗಳಲ್ಲಿ ನಡೆಯುತ್ತಿದೆ. ಮೂರ್ನಾಲ್ಕು ತಿಂಗಳುಗಳ ಹಿಂದೆ ಅಕಾಲಿಕ ಪ್ರವಾಹಕ್ಕೆ ತುತ್ತಾಗಿ ಸಾವಿರಾರು ಎಕರೆಗಳಲ್ಲಿನ ತಮ್ಮ ಭತ್ತದ ಬೆಳೆಯನ್ನು ಕಳೆದುಕೊಂಡ ಉತ್ತರಕರ್ನಾಟಕದ ರೈತರು ಇಂತಹ ಭತ್ತದ ತಳಿಯೊಂದನ್ನು ಯಾಕಾದರೂ ವಿರೋಧಿಸಿಯಾರು? ರೈತನಾಯಕರ ಮತ್ತು ದೀನದಲಿತರ ಪರ ಮಾತನಾಡುವ ಸಮಾನತವಾದಿಗಳ ಬೆಂಬಲ ಇರಬೇಕಾದದ್ದು ಇಂತಹ ವೈಜ್ಞಾನಿಕ ವಿಚಾರಗಳಿಗೆ.
ಇತ್ತೀಚೆಗೆ ಬಲ ಪಡೆದುಕೊಳ್ಳುತ್ತಿರುವ ಸಾವಯವ ಕೃಷಿ ನಾಡಿನ ಎಲ್ಲಾ ಜನತೆಗೂ ಆಹಾರ ನೀಡಬಲ್ಲ ಬಲ ಪಡೆದುಕೊಳ್ಳಬೇಕಾದರೆ ಅದು ಬಿಟಿ ತಂತ್ರಜ್ಞಾವನ್ನು ಬಳಸಿಕೊಂಡರೆ ಮಾತ್ರ ಸಾಧ್ಯವಾಗುತ್ತದೆ. ಇಲ್ಲವೆಂದರೆ ಅದು ಹೆಚ್ಚು ದುಡ್ಡು ತೆರಬಲ್ಲ ಶ್ರೀಮಂತರ ಆಹಾರವಾಗಿ, ನಾಡಿನ ಬಡಜನತೆ ಹಸಿವಿನಲ್ಲಿ ಬಳಲಬೇಕಾಗುತ್ತದೆ. ರೈತರು ನೆಲವನ್ನು ಮತ್ತೆಮತ್ತೆ ಕೆರೆಯುತ್ತ, ಕೀಟನಾಶಕ-ಕಳೆನಾಶಕ ಸಿಂಪಡಿಸುತ್ತ, ಬೆಳೆ ನಾಶವಾದಾಗ ಮತ್ತು ಬೆಲೆ ಇಲ್ಲವಾದಾಗ ನೇಣು ಹಾಕಿಕೊಳ್ಳುತ್ತ ಇರಬೇಕಾಗುತ್ತದೆ. ಇಂತಹ ಎಲ್ಲಾ ವಿಚಾರಗಳನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಸರ್ಕಾರವೊಂದು ಬಿಟಿ ಬದನೆಯಂತಹ ಬೆಳೆಯನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳಬೇಕೆ ಹೊರತು ಒತ್ತಡಗುಂಪುಗಳ ಒತ್ತಡಗಳಿಗೆ ಮಣಿದು ಅಲ್ಲ. "ಅಭಿವೃದ್ಧಿ"ಯ ಮಂತ್ರ ಜಪಿಸುವ ಸರ್ಕಾರಗಳು ಕೇವಲ ರಸ್ತೆ-ಕಟ್ಟಡಗಳ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿಯಾಗುತ್ತದೆ ಎಂದು ಭಾವಿಸಬಾರದು. ಅದು ಇಂತಹ ವಿಷಯಗಳಲ್ಲಿ ತನ್ನದೇ ಆದ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯೊಂದನ್ನು ಆರಂಭಿಸುವ ನಿಟ್ಟಿನಲ್ಲಿಯೂ ಕಾರ್ಯೋನ್ಮುಖವಾಗಬೇಕಾಗುತ್ತದೆ.
ರವಿ ಕೃಷ್ಣಾ ರೆಡ್ಡಿ
(ಜನವರಿ 28, 2010)
4 comments:
ರವಿ,
ನಮ್ಮ ರೈತರು ಬಿಟಿ ಬೆಳೆಗಳಿಗೆ ಹೆದರುತ್ತಿರಲು ಬೇರೊಂದು ಕಾರಣವಿದೆ. ಅದು ಸಂಪೂರ್ಣವಾಗಿ ವ್ಯಾಪಾರೀ ಕಾರಣ. ಸಾಂಪ್ರದಾಯಕ ಬೆಳೆಗಳ ಬೀಜಗಳನ್ನು ನಮ್ಮವರೇ ಹಿಡಿದಿಟ್ಟುಕೊಳ್ಳಬಹುದು, ಆದರೆ ಬಿಟಿ ಬೆಳೆಗಳನ್ನು ಒಮ್ಮೆ ಬೆಳೆದರೆ
ಸಾಕು, ನಿರಂತರವಾಗಿ ಈ ಬಿಟಿ ಕಂಪನಿಗಳನ್ನು ಬೀಜಗಳಿಗಾಗಿ ಅವಲಂಬಿಸಬೇಕಾಗುತ್ತದೆ. ಈ ಕಂಪನಿಗಳು ಕೆಲ ಕಾಲಾನಂತರ ಅಂದರೆ
ನಮ್ಮ ಸಾಂಪ್ರದಾಯಕ ಕೃಷಿಯ ನಷ್ಟದ ನಂತರ ನಮ್ಮನ್ನು ಶೋಷಿಸಲು ಪ್ರಾರಂಭಿಸುವರು ಎಂದು ಹೇಳಲಾಗುತ್ತಿದೆ. ಇದು ಸರಿ ಇರಬಹುದೆ?
ಬಿ.ಟಿ.ಬದನೆಯ ಬೀಜಗಳನ್ನು ಒಂದು ಸಾರಿ ಕೊಂಡರಾಯಿತು, ಮತ್ತೆ ಕೊಳ್ಳುವ ಅವಶ್ಯಕತೆಯಿಲ್ಲ. ಬದನೆಯ ಬೀಜಗಳ ಮರುಬಳಕೆ ಮಾಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಇಲ್ಲಿ ಎರಡು ಮುಖ್ಯ ಅಂಶಗಳಿವೆ,
೧. ಒಮ್ಮೆ ಜೀನನ್ನು ಬದಲಾಯಿಸಿ ಪ್ರಕೃತಿಯಲ್ಲಿ ಬಿಟ್ಟರೆ ಅದು ಮುಂದೆ ಅನಿಯಂತ್ರಿತವಾಗುತ್ತದೆ. ರಸಾಯನಿಕ ಗೊಬ್ಬರವನ್ನು ಹಾಕುವುದು ನಿಲ್ಲಿಸಿದರೆ ರಸಾಯನಿಕ ಗೊಬ್ಬರದ ಹಾನಿಯನ್ನು ತಡೆಯಬಹುದು. ಜೀನ್ ಬದಲಾದರೆ ಅದು ಶಾಶ್ವತ! ಅದರ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ಎಲ್ಲೇ ಚಿಕ್ಕ ತಪ್ಪಾಗಿದ್ದರೂ ಅದನ್ನು ಸರಿಪಡಿಸುವ ಪ್ರಮೇಯವೇ ಇರುವುದಿಲ್ಲ. It's a permanent blunder!
೨. ಒಂದೇ ಜಾತಿಯ ಬೇರೆ ಬೇರೆ ತಳಿಯ ಗಿಡಗಳ ನಡುವೆ ಜೀನ್ ಬದಲಾವಣೆ ಸಾಮಾನ್ಯ. ಆದರೆ ಬ್ಯಾಕ್ಟೀರಿಯಾ ಅಥವಾ ಪ್ರಾಣಿ ಸಸ್ಯಗಳ ನಡುವೆ ಜೀನ್ ಬದಲಾವಣೆ ಎಷ್ಟರ ಮಟ್ಟಿಗೆ ಸರಿ? Ethically how far it is correct? ಎಂಬುದೂ ಪ್ರಶ್ನೆ.
ಮೇಲಿನ ಪ್ರಶ್ನೆಗಳಿಗೆ ನನ್ನ ಅಭಿಪ್ರಾಯಗಳು:http://amerikadimdaravi.blogspot.com/2010/02/blog-post.html
namma dodda tondare chaluvali, ghoshane nadesuva janagaLige maahithi needuvudu.
D S Nagabhushanarige Swaminomics.org
K S Puttannayyarige Stewart Brand na TED Video
torisabeku.
Hege?
Post a Comment