Jul 9, 2009

ಪ್ರತಿಭಾ ನಂದಕುಮಾರರ "ದೇವಿ" - ಹೊಡೆದು ಕೆಡವಿ ದಕ್ಕಿಸಿಕೊಳ್ಳಲಾರಿರಿ

ಪ್ರತಿಭಾ ನಂದಕುಮಾರ್ ಕನ್ನಡದ ಸಮಕಾಲೀನ ಕವಯತ್ರಿಯರಲ್ಲಿ ಪ್ರಮುಖರು. Firebrand ಕವಯತ್ರಿ ಪಟ್ಟದಿಂದ ಹಿರಿಯ ಕವಿ-ಲೇಖಕಿಯಾಗಿ ಅವರು ರೂಪಾಂತರಗೊಳ್ಳುತ್ತಿರುವ ಸಂದರ್ಭ ಇದು. ಪ್ರತಿಭಾ ಕೇವಲ ತಮ್ಮ ವೈಯಕ್ತಿಕ ಕಷ್ಟನಷ್ಟದ ಬಗ್ಗೆಯೇ ಬರೆದುಕೊಂಡವರಲ್ಲ. ಹಾಗೆಯೆ ಕೇವಲ ಕಾವ್ಯ, ರಸ, ರಸಾನುಭೂತಿ, ಮುಂತಾದ ಯಾರ ಉಸಾಬರಿಗೂ ಹೋಗದ ವಿಷಯಗಳಲ್ಲಿ ಮುಳುಗಿದವರೂ ಅಲ್ಲ. ಅವರು ಕಾಲಕಾಲಕ್ಕೆ ಸಮಕಾಲೀನ ಸಾಮಾಜಿಕ ಘಟನೆಗಳಿಗೆ ಸ್ಪಂದಿಸುತ್ತ ಬಂದಿದ್ದಾರೆ; ವಿಶೇಷವಾಗಿ ಹೆಣ್ಣು ಮತ್ತು ಅವಳ ಶೋಷಣೆಯ ಸುತ್ತಮುತ್ತಲ ವಿಷಯಗಳಿಗೆ. ಇನ್ನು ಪತ್ರಕರ್ತರಾಗಿಯೂ ಹಲವಾರು ವಿಷಯಗಳನ್ನು ದಿಟ್ಟವಾಗಿ ಎತ್ತಿಕೊಂಡವರವರು. ಕೆಲವು ಸತ್ಯಗಳ ಮೂಲ ಶೋಧಿಸಲು ತಾವೆ ಬಲಿಪಶು ಆಗಲು ಅಥವ ಖೆಡ್ಡಾಕ್ಕೆ ಕೆಡವುವ ಬೇಟೆಗಾರನಾಗಲೂ ಹಿಂಜರಿಯದವರು. ತಮ್ಮ ಸಹಲೇಖಕಿಯರಿಂದ ಪ್ರತಿಭಾರವರಷ್ಟು ಪ್ರೀತಿಸಲ್ಪಟ್ಟ ಅಥವ ದ್ವೇಷಿಸಲ್ಪಟ್ಟ ಮತ್ತೊಬ್ಬ ಕನ್ನಡದ ಲೇಖಕಿ ಇಲ್ಲ ಎಂದು ಹೇಳಿದರೆ ಅದು ತಪ್ಪಾಗುವುದಿಲ್ಲ ಎಂದುಕೊಳ್ಳುತ್ತೇನೆ. ಅದು ಅವರ ಸಾಮರ್ಥ್ಯವನ್ನಷ್ಟೇ ಅಲ್ಲದೆ ಅವರ ವೈವಿಧ್ಯಮಯ, ಚಲನಶೀಲ, ಪ್ರಯೋಗಶೀಲ, ವಿವಾದಾತ್ಮಕ, ನಿರ್ಭೀತ ವ್ಯಕ್ತಿತ್ವವನ್ನು ತೋರಿಸುತ್ತದೆ.

ಹಿಂದಿನ ಬ್ಲಾಗ್ ಲೇಖನದಲ್ಲಿ ಸುಗತ ರಾಜು ತಮ್ಮ ಇಂಗ್ಲಿಷ್ ಲೇಖನದಲ್ಲಿ ಕನ್ನಡದ ಎರಡು ಕವಿತೆಗಳನ್ನು ಪ್ರಸ್ತಾಪಿಸಿದ್ದಾರೆ ಎಂತಲೂ ಅದರಲ್ಲಿ ಒಂದು ಕವನ ಪ್ರತಿಭಾ ನಂದಕುಮಾರ್‌ರವರದು ಎಂತಲೂ ಬರೆದಿದ್ದೆ. ಆ ಲೇಖನದ ಬರೆದ ನಂತರ ಪ್ರತಿಭಾರವರ ಕವನವನ್ನೂ ಒಮ್ಮೆ ಓದಬೇಕೆನಿಸಿತು. ಹಾಗೆಯೆ ಸಾಧ್ಯವಾದರೆ ಅದನ್ನೂ ಕೇಳಬೇಕೆನಿಸಿತು. ಕೂಡಲೆ ಪ್ರತಿಭಾರವರಿಗೆ ಪತ್ರ ಬರೆದೆ. ಅವರು ತಮ್ಮ ಕವನ ಕಳುಹಿಸಿದರು. ಹಾಗೆಯೆ ತಮ್ಮ ಕವನದ ವಾಚನವನ್ನೂ ಇಷ್ಟರಲ್ಲೆ ಕಳುಹಿಸುವುದಾಗಿ ತಿಳಿಸಿದರು. ಈಗ ಅವರ ಕವನ ಮಾತ್ರ ಇಲ್ಲಿ ಕೊಡುತ್ತಿದ್ದೇನೆ. ಅವರ ವಾಚನದ ಆಡಿಯೋ ಬಂದನಂತರ ಅದರ ಲಿಂಕ್ ಸಹ ಇದೇ ಬ್ಲಾಗ್‌ನಲ್ಲಿ ಕೊಡುತ್ತೇನೆ.

"ದೇವಿ"
ಕವಿ: ಪ್ರತಿಭಾ ನಂದಕುಮಾರ್

ಅವಳು ಮಲವಿಲ್ಲದ ನಿರ್ಮಲೆ.
ಅವಳು ಲೋಲಾಕ್ಷಿಕಾಮರೂಪಿಣಿ

ಕಾಮಕ್ಕೆ ಯೋಗೇಶ್ವರಿ, ಕ್ರೋಧಕ್ಕೆ ಮಾಹೇಶ್ವರಿ
ಲೋಭಕ್ಕೆ ವೈಷ್ಣವಿ, ಮದಕ್ಕೆ ಬ್ರಹ್ಮಾಣಿ,
ಮೋಹಕ್ಕೆ ಸ್ವಯಂಭು ಕಲ್ಯಾಣಿ, ಮಾತ್ಸರ್ಯಕ್ಕೆ ಇಂದ್ರಜಾ
ಪೈಶುನ್ಯಕ್ಕೆ ಯಮದಂಡಭಧ್ರಾ, ಅಸೂಯೆಗೆ ವಾರಾಹೀ.

ದೇವಿಯೆಂದರೆ ಇಚ್ಚಾಶಕ್ತಿಜ್ಞಾನಶಕ್ತಿಕ್ರಿಯಾಶಕ್ತಿಸ್ವರೂಪಿಣಿ.

ಅವಳು ರುಧಿರಸ್ಥಿತಾ, ಮಾಂಸನಿಷ್ಠಾ, ಮಧುಪ್ರೀತಾ,
ಮಾಧ್ವೀಪಾನಾಲಸಾಮತ್ತಾ, ಬಲಿಪ್ರಿಯಾ, ಸುಖಾರಾಧ್ಯಾ,
ಲಾಸ್ಯಪ್ರಿಯಾ, ವಿಶೃಂಖಲಾ, ರತಿಪ್ರಿಯಾ, ಕಾಮಕೇಲಿತರಂಗಿತಾ

ಶಕ್ತಿ ದೇವಿಯ ಯೋಗವಿಲ್ಲದಿದ್ದರೆ
ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವರು
ಪ್ರೇತಗಳಂತೆ ನಿಶ್ಚಲರು
ಅವಳು ಅವರನ್ನೇರಿ ಕುಳಿತ ಪಂಚಪ್ರೇತಾಸನಾಸೀನಾ

ಅವನು ಶುದ್ಧಜ್ಞಾನಸ್ವರೂಪನಾದರೆ ಅವಳು ವಿಮರ್ಶಾಸ್ವರೂಪಳು.
ಅವಳು ಅಂತರ್ಮುಖಸಮಾರಾಧ್ಯಾ ಬಹಿರ್ಮುಖಸುದುರ್ಲಭಾ
ಅವಳು ಕಾಮೇಶಿ, ಕಾಮಿತಾರ್ಥದಾ, ಕಾಮಸಂಜೀವಿನೀ, ಕಾಮದಾಯಿನೀ
ಅವಳು ಲಬ್ಧಪತಿಃ ಲಬ್ಧಭೋಗಾ ಲಬ್ಧಸುಖಾ ಲಬ್ಧಕಾಮಾ
ತನ್ನಿಚ್ಚೆಯಂತೆ ಪತಿ, ಭೋಗ, ಸುಖ, ಕಾಮವನ್ನು ಹೊಂದಿದವಳು.

ಅವಳು ಕುಡಿಯಬಹುದು, ಕುಣಿಯಬಹುದು, ಕೇಳಿಯಲ್ಲಿ ಮುಳುಗಿ ತೇಲಬಹುದು
ಹಿಡಿಯಲಾರಿರಿ ನೀವು ಅವಳನ್ನು ಪಬ್ಬುಗಳಲ್ಲಿ
ಹೊಡೆದು ಕೆಡವಿ ದಕ್ಕಿಸಿಕೊಳ್ಳಲಾರಿರಿ
ಮಬ್ಬು ಬೆಳಕಲ್ಲಿ ಕಾಣಲಾರಿರಿ ನಿಮ್ಮ ಮಂಜುಕಣ್ಣುಗಳಲ್ಲಿ
ಎದ್ದುಬರುತ್ತಾಳೆ ನೂರು ನಾಲಿಗೆ ಚಾಚಿ ರಕ್ತ ಹೀರುತ್ತ
ಅವಳ ಬೊಗಸೆಯೊಳಗೆ ನೀವು ಆಪೋಶನ
ಸಿಂಧೂರ ಕೇಸರಿಗೆ ಅವಳೇ ಅಧಿದೇವತೆ
ನಿಮ್ಮದೆಲ್ಲ ಬರಿ ನೀರಿಗೆ ಕರಗುವ ಗುಲಾಲು
ಗಲ್ಲಿಯಲ್ಲಿ ನುಸುಳಿ ಕಂಬದ ಮರೆಯಿಂದ ಮುಲುಗುಡುವ
ನಿರ್ವೀರ್ಯರು ಬಲ್ಲಿರೇನಯ್ಯಾ ಅವಳ ಹುಟ್ಟಿನ ಕುಲವ
ಪೀಠಸ್ಥೆಯನ್ನು ಅರ್ಚಿಸಿ ಭಜಿಸಿ ನೈವೇದ್ಯ ಭುಜಿಸಿ ತಿಲಕ ಧರಿಸಿ
ಮಡದಿಯ ಕಾಡಿಗಟ್ಟಿದವನ ಹೆಸರಲ್ಲಿ ಕವಿದು ಬಿದ್ದರು
ಹರಿಯ ಚರಣದಲಿ ಹರನ ಸತಿಯ ಮರೆತು

ಕಲಿತು ಬನ್ನಿರಿ ಮೊದಲು ಕ್ಷರ ಅಕ್ಷರಗಳ
ಹ್ರಸ್ವ ದೀರ್ಘ ಒತ್ತಕ್ಷರ ಓತ್ವ ಅಲ್ಪ ಮಹಾಪ್ರಾಣಗಳ
ತೊಳೆದುಬನ್ನಿರಿ ಕಾಲು ಕಳೆದು ಹೊರಗಿನ ಮಲಗಳ
ಎರಗಿ ನಿಲ್ಲಿರಿ ಅಲ್ಲೇ ಬಾಗಿ ಮೈಕೈಗಳ
ಹೂಹಣ್ಣುಗಳ ಬಿಡಿ ಕಾಯಿ ಕರ್ಪೂರವೂ ಬೇಡಾ
ದಕ್ಷಿಣೆಯ ತಟ್ಟೆಗೆ ಬೀಳದಿದ್ದರು ಝಣಝಣ
ತೊದಲು ನಾಲಿಗೆಯಲ್ಲಿ ರಾತ್ರಿಯ ಇಳಿಯದ ನಶೆಯಲ್ಲಿ
ಮಂತ್ರ ಬಾರದು ಸ್ವಸ್ತಿ ಸರಾಗವಲ್ಲ ಅರ್ಚನೆಯ ಕುಂಕುಮ ಗಂಧವಿಲ್ಲ

ಆದರೂ ಒಲಿಯಬಹುದು ಅವಳು ಹೇಳಲಾಗದು
ನಿಮ್ಮ ಎದೆಯೊಳಗೆ ಇದ್ದರೆ ಪ್ರೇಮ
ಅರಿತರೆ ನೀವು ಅವಳು ಬರಿಯ ಬೊಂಬೆಯಲ್ಲ
ಹಾಡಿದರೆ ತಾಯಿ ಹರಸಿದರೆ ದೇವಿ.
ಒಲಿದರೆ ರತಿ ಕೆರಳಿದರೆ ಕಾಳಿ.


ಪೂರಕ ಓದಿಗೆ: ಹಿಂದೊಮ್ಮೆ (2004 ರಲ್ಲಿ ) "ಸಿಲ್ವಿಯಾ ಪ್ಲಾತ್‌ : ಬೆಂಕಿಯಲ್ಲಿ ಅರಳಿ ಶೈತ್ಯದಲ್ಲಿ ಕಮರಿದ ಹೂವು" ಎಂಬ ಲೇಖನ ಬರೆದಿದ್ದೆ. ಅದು ದಟ್ಸ್‌ಕನ್ನಡದಲ್ಲಿ ಪ್ರಕಟವಾಗಿತ್ತು. ಅದರಲ್ಲಿ ಪ್ರತಿಭಾರವರ ಬಗ್ಗೆಯೂ ಮತ್ತು ಖುಷ್‌ವಂತ್ ಸಿಂಗ್ ತಮ್ಮ ಅಂಕಣದಲ್ಲಿ ಅವರನ್ನು ಉಲ್ಲೇಖಿಸಿ ಬರೆದಿದ್ದರ ಬಗ್ಗೆಯೂ ಬರೆದಿದ್ದೆ.

Jul 1, 2009

ಓಂಕಾರ ಉರುಳಾಗಿ, ಅರ್ಧಚಂದ್ರ ಕತ್ತಿಯಾಗಿ, ಶಿಲುಬೆ ಬಡಿಗೆಯಾಗಿ...

ಇವತ್ತಿನ ಸುದ್ದಿ: ದ.ಕ, ಉಡುಪಿ: ವ್ಯಾಪಕ ಮಳೆ (ಪ್ರಜಾವಾಣಿ, ಜುಲೈ 2, 09)

ಎರಡುಮೂರು ವಾರದ ಹಿಂದೆ Outlook ಪತ್ರಿಕೆಯ ತಮ್ಮ "Bangalore Byte"ನಲ್ಲಿ ಸುಗತ ರಾಜು "A Poetic Implosion" ಎನ್ನುವ ಲೇಖನ ಬರೆದಿದ್ದರು. ಮಂಗಳೂರಿನಿನಲ್ಲಿ ಶ್ರೀರಾಮ ಸೇನೆ ಹೆಂಗಸರ ಮೇಲೆ ದಾಳಿ ಮಾಡಿದ್ದು ಚುನಾವಣೆಯಲ್ಲಿ ಯಾವುದೇ ತರಹದ ಕೋಪೋದ್ರಿಕ್ತ ಪ್ರತಿಕ್ರಿಯೆಯನ್ನು ತೋರಿಸದಿದ್ದರೂ ಕನಿಷ್ಟ ಎರಡು ಉತ್ತಮ ಕವನಗಳಿಗೆ ಜನ್ಮ ನೀಡಿತು ಎಂದು ಅದರಲ್ಲಿ ಅವರು ಬರೆದಿದ್ದರು. ಅದು ಎರಡು ಕನ್ನಡ ಕವನಗಳ ಬಗ್ಗೆ. ಅವರು ಉದಾಹರಿಸಿದ್ದ ಮೊದಲ ಕವನ ಕನ್ನಡದ ಪ್ರಸಿದ್ಧ ಕವಯತ್ರಿ ಪ್ರತಿಭಾ ನಂದಕುಮಾರ್‌‍ರದು. ಎರಡನೆಯ ಕವನ ಉದಯೋನ್ಮುಖ ಕವಯತ್ರಿ ಭಾರತಿ ದೇವಿಯವರದು.

ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಸಂವಹನ ಕಾರ್ಯಕ್ರಮದಲ್ಲಿ ಭಾರತಿಯವರನ್ನು ಭೇಟಿಯಾಗಿದ್ದೆ. ಅವರು ಕವಯತ್ರಿ ಎಂದು ಗೊತ್ತಿರಲಿಲ್ಲ. ಹಾಗಾಗಿ ಸುಗತ ಪ್ರಸ್ತಾಪಿಸಿದ್ದ ಭಾರತಿ ದೇವಿ ಯಾರು ಎಂದು ನನಗೆ ಖಚಿತವಾಗಿ ಹೊಳೆಯಲಿಲ್ಲ. ಅನುವಾದದ ವಿಷಯವೊಂದಕ್ಕೆ ನಾವಿಬ್ಬರೂ ಒಂದೆರಡು ಬಾರಿ ಇಮೇಲ್ ಸಂಪರ್ಕದಲ್ಲಿದ್ದರೂ ಅವರೆ ಈ ಕವಯತ್ರಿ ಎಂದು ಖಾತ್ರಿ ಇರಲಿಲ್ಲ. ಅವರ ಇಮೇಲ್ ಹೆಸರಿನಲ್ಲಿ "ದೇವಿ" ಇರಲಿಲ್ಲ!. ಖಾತ್ರಿಯಾದ ನಂತರ ಅವರ ಕವನ ಮತ್ತು ಅದರ ವಾಚನವನ್ನು ಕಳುಹಿಸಲು ಕೋರಿದ್ದೆ.

ಕವಯತ್ರಿ ಸವಿತಾ ನಾಗಭೂಷಣರ ಕವನ ವಾಚನದ ವಿಡಿಯೊ ಬಗ್ಗೆ ಬರೆಯುತ್ತ ಹಿಂದೊಮ್ಮೆ ನನ್ನ ಕವನಗ್ರಾಹ್ಯದ ಬಗ್ಗೆ ಬರೆದಿದ್ದೆ. ಮನಸ್ಸಿನಲ್ಲಿ ಕವನ ಓದಿಕೊಳ್ಳುವುದಕ್ಕಿಂತ ಅದರ ಗಟ್ಟಿ ಓದು ಅಥವ ಕವಿಗಳಿಂದಲೆ ಕೇಳುವ ಅದರ ವಾಚನ ನಿಜಕ್ಕೂ ಅದ್ಭುತ. ಇಲ್ಲಿ ಭಾರತಿ ದೇವಿಯವರ ಕವನ ಮತ್ತು ಅದರ ಆಡಿಯೊ ರೂಪ ಇದೆ. ಮಂಗಳೂರಿನ ಕನ್ನಡಿಗರ ವಿಭಿನ್ನ ಕನ್ನಡದ ಗತ್ತಿನಲ್ಲಿ ಸ್ವತಃ ಕವಿ ವಾಚಿಸಿದ್ದಾರೆ. ಓದಿ. ಕೇಳಿ.

ಅವಳಿಗೆ ನಗಲು ಅನುಮತಿ ಇಲ್ಲ, ಅಳಲು ಕಣ್ಣೀರಿಲ್ಲ...
ಕವಿ: ಭಾರತಿ ದೇವಿ

ನೇತ್ರಾವತಿಯ ನಗು ಬಂಡೆಗಳಿಗೆ ಬಡಿದೂ ಬಡಿದೂ
ಕೊನೆಗೊಮ್ಮೆ ಚಿಂದಿಯಾಗಿ ಇಲ್ಲವಾಯಿತು
ಅವಳು ಕಣ್ಣೀರು ಹರಿಸಿ ಹರಿಸಿ
ಬತ್ತಿಹೋಗಿದ್ದಾಳೆ...
ಅವಳ ಬೋಳು ಬಂಡೆಗಳ ಸಹಜ ಬೆತ್ತಲೆಗೆ
ಕೇಸರಿ ಬಟ್ಟೆ ಹೊದೆಸಲಾಗಿದೆ...
ನೇತ್ರಾವತಿಯ ತುಂಬಾ ಬಂಡೆಗಳು
ಅಲ್ಲಿ ಯಾವುದೂ ಸುರಳೀತ ಹರಿದುಹೋಗುವುದಿಲ್ಲ!

ಅವಳ ಮಕ್ಕಳು ಜೊತೆಗೆ ಕಿಲಿಕಿಲಿ ನಗುವಾಗ
ಕತ್ತಿ, ದೊಣ್ಣೆ, ಚೂರಿ ಹಿಡಿದ ’ಅವರು’ ಬರುತ್ತಾರೆ
ನೇತ್ರಾವತಿ ಬೆಚ್ಚಿ ’ಮಗಳನ್ನು’ ಚಿಂದಿಸೀರೆಯಡಿ
ಅಡಗಿಸಿ ಅತ್ತಿತ್ತ ನೋಡುತ್ತಾಳೆ
ಸ್ವಾತಂತ್ರ್ಯ ದೇವತೆಗೆ ಚರಮ ಗೀತೆ ಹಾಡುತ್ತಾಳೆ

ಅವಳೂರ ಯಾವ ಬಸ್ಸುಗಳೂ ಈಗ
ನಗು, ಮಾತುಗಳಿಂದ ಗಿಜಿಗುಡುವುದಿಲ್ಲ
ಅವಳೂರ ಅಂಗಡಿ ಕಟ್ಟೆಗಳಲ್ಲಿ ಈಗ
ಉಲ್ಲಾಸದ ಕಲರವವಿಲ್ಲ
ಜತೆಗೆ ಕುಳಿತವನ ಕಣ್ಣಲ್ಲೇ ಇರಿದು ಮಹಜರು ಮಾಡಿ
ಓಂಕಾರ ಉರುಳಾಗಿ, ಅರ್ಧಚಂದ್ರ ಕತ್ತಿಯಾಗಿ, ಶಿಲುಬೆ ಬಡಿಗೆಯಾಗಿ
ಎಲ್ಲೆಲ್ಲೂ ಹಸಿ ಹಸಿ ವಾಸನೆ
ಈಗೀಗ ಮಳೆಗಾಲ ಕಳೆದರೂ ನೇತ್ರಾವತಿಯ ಕೆಂಪು ನೀರು
ತಿಳಿಯಾಗುತ್ತಿಲ್ಲ...

ಎಲ್ಲರಿಗೂ ಜನ್ಮ ನೀಡಿ ಮಡಿಲಲ್ಲಿ ಸಾಕಿ ಸಲಹಿ ಪೊರೆದ
ತಾಯಿಯ ಒಡಲೆಲ್ಲ ಹುಣ್ಣಾಗಿ ಕೀವು ತುಂಬಿ
ಒಂದೇ ಮಗ್ಗುಲು ಸಾಕಾಗಿ ಹೊರಳಲು ಯತ್ನಿಸುತ್ತಾಳೆ
ನೆಲಕ್ಕಂಟಿದ ಆಕೆಗೆ ಹೊರಳುವುದೂ ಸುಲಭವಲ್ಲ
ತನ್ನ ಮೈಗಂಟಿದ ಈ ಕಲೆಯನ್ನೆಲ್ಲ ಕಳೆಯುವುದು ಹೇಗೆ?
ದುರ್ಗಂಧ ತೊಳೆಯುವುದು ಹೇಗೆ?
ತುಂಬಿ ಭೋರ್ಗರೆದು ಎಲ್ಲವನ್ನೂ ಕೊಚ್ಚಿಹಾಕಬಾರದೇಕೆ?
ಬತ್ತಿ ಬೇಯುತ್ತಿರುವ ತಾಯಿ ನೇತ್ರಾವತಿಗೀಗ
ಮುಂಗಾರಿನದೇ ಧ್ಯಾನ...


ಭಾರತಿ ದೇವಿಯವರಿಂದ ಇದರ ವಾಚನ:



ಇಲ್ಲಿಂದ .mp3 File ಅನ್ನು ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದು.

ಮತ್ತೆ ಇವತ್ತಿನ ಸುದ್ದಿಗೆ: ಈ ಒಂದೇ ಮುಂಗಾರು ನೇತ್ರಾವತಿಯ ಆಶಯವನ್ನು ಈಡೇರಿಸುತ್ತದೆಯೆ?

Jun 22, 2009

ಗುಪ್ತರು, ನಾಮರಹಿತರು, ಹಂದಿ, ಮತ್ತು ಸಸ್ಯಾಹಾರ

ಈಗೊಂದು ತಿಂಗಳಿನಿಂದ ತುರಿಸಿಕೊಳ್ಳಲೂ ಬಿಡುವಿಲ್ಲ. ಬರೆಯುವುದಿರಲಿ, ಅದರ ಬಗ್ಗೆ ಯೋಚಿಸುವುದೂ ಸಾಧ್ಯವಾಗಿರಲಿಲ್ಲ. ಈ ಒಂದೇ ತಿಂಗಳಿನಲ್ಲಿ Windows 2000, Xp, Vista, 7, Windows CE, Appleನವರ OS X, Linux, QNX, ಹೀಗೆ ಇದ್ದಬದ್ದದ್ದರೆಲ್ಲ ಕೆಲವು ಪಿಸಿಐ ಮತ್ತು ಯುಎಸ್‌ಬಿ drivers ಬರೆಯುವ ಕೆಲಸ. ಇಷ್ಟಿದ್ದರೂ ನಾಲ್ಕು ವಾರದ ಹಿಂದೆ ಒಂದು ವಿಷಯದ ಬಗ್ಗೆ ಪ್ರತಿಕ್ರಿಯಿಸಲೇ ಬೇಕು ಎನ್ನಿಸಿತು. ಪ್ರಜಾವಾಣಿಯಲ್ಲಿ ದಿನೇಶ್ ಅಮೀನ್‌ಮಟ್ಟು ಮತ್ತು ಜಿ.ಕೆ.ಗೋವಿಂದ್‌ರಾವ್‌ರವರ ಲೇಖನಕ್ಕೆ ಪ್ರತಿಯಾಗಿ ಶಿವಸುಂದರ್ ಮತ್ತು ಅರವಿಂದ ಚೊಕ್ಕಾಡಿ ಪ್ರತಿಕ್ರಿಯಿಸಿದ್ದರು. ಶಿವಸುಂದರ್ ಬರೆದಾಗಲೆ ಅದಕ್ಕೆ ಪೂರಕವಾಗಿ ಬರೆಯಬೇಕೆನ್ನಿಸಿತ್ತು. ಆಗಿರಲಿಲ್ಲ. ಚೊಕ್ಕಾಡಿಯವರು ಪತ್ರ ಕಂಡ ತಕ್ಷಣ ಸ್ವಲ್ಪ ಬಿಡುವು ಮಾಡಿಕೊಂಡು ಬರೆದೆ. ಅದು "ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ" ಎಂದು ಪ್ರಕಟವಾಯಿತು.

ಇದೆಲ್ಲ ಇಲ್ಲಿ ಹೇಳಲು ಇನ್ನೊಂದು ಕಾರಣವಿದೆ. ಅದು ನನ್ನ ವ್ಯಸ್ತ ಸಮಯದ ಮತ್ತು ಬರವಣಿಗೆಯಿಂದ ದೂರವಿದ್ದ ವಿಷಯದ ಬಗ್ಗೆ. ಇದೇ ಸಮಯದಲ್ಲಿ ಈ ಬ್ಲಾಗಿನಲ್ಲಿ ಮೂರ್ನಾಲ್ಕು ಕಾಮೆಂಟುಗಳು "ಅವರು ನೀವೇನಾ? ಅವರು ನೀವೆ." ಎಂದು ಬಂದಿವೆ. ಈ ಬ್ಲಾಗು ನೋಡುವ ಓದುಗರಿಗೆ ಗೊತ್ತಿರುವಂತೆ ಇಂಟರ್ನೆಟ್‌ನ ಚರ್ಚೆ/ಪ್ರತಿಕ್ರಿಯೆಗಳಲ್ಲಿ ನಾನು ಪಾಲ್ಗೊಂಡಿರುವುದು ಅಪರೂಪ. ಯಾರು ಯಾರದೊ ಹೆಸರಿನಲ್ಲಿ, ಗುಪ್ತನಾಮದಲ್ಲಿ, ಅನಾಮಿಕವಾಗಿ ಎಲ್ಲ ಪ್ರತಿಕ್ರಿಯಿಸುವ ಸಾಧ್ಯತೆ ಇರುವ ಇಂಟರ್ನೆಟ್‌ನಲ್ಲಿ ಬೇರೆ ಕಡೆ ಪ್ರತಿಕ್ರಿಯಿಸುವಾಗಲೂ ಲಾಗಿನ್ ಆಗಿ ಮಾಡಬಹುದಾದ ಕಡೆ ಮಾತ್ರ ಇಲ್ಲಿಯವರೆಗೆ ನಾನು ಪ್ರತಿಕ್ರಿಯಿಸಿದ್ದೇನೆ. ಈ ಮುಖೇಡಿಗಳ ಸಹವಾಸ ನನ್ನಲ್ಲಿ ತೀವ್ರ ತಿರಸ್ಕಾರ ಮೂಡಿಸುತ್ತದೆ.

ತಿಂಗಳ ಹಿಂದೆ ಕೆಂಡಸಂಪಿಗೆಯ ಬಗ್ಗೆ ಒಂದು ಟಿಪ್ಪಣಿ ಇಲ್ಲಿ ಬರೆದಿದ್ದೆ. ಅದು ಅನಾಮಿಕತೆಯ ಕುರಿತಾದ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಇತ್ತು. ಅದೇ ತಾಣದಲ್ಲಿ ಯಾರೋ ಓದುಗರು "ವರಾಹ" ಎನ್ನುವ ಹೆಸರಿನಲ್ಲಿ ಕಾಮೆಂಟ್ ಮಾಡುತ್ತಾರೆ. ಅದು ನಾನೇ ಇರಬೇಕು ಎಂದು ಕೆಲಸವಿಲ್ಲದ ಮತ್ತೊಬ್ಬ ಅವಿವೇಕಿ ಬಡಗಿಯೊಬ್ಬನಿಗೆ ಹೊಳೆದು ಬಿಟ್ಟಿದೆ. ಇಲ್ಲಿ ಸ್ವಲ್ಪ ಖಾರವಾಗಿ ಬರೆಯುತ್ತೇನೆ. ಯಾಕೆಂದರೆ ಅದು ಅನಾಮಿಕವಾಗಿ ಬರೆಯುವವರ ಬಗ್ಗೆ ನನಗಿರುವ ತಿರಸ್ಕಾರ ಮತ್ತು ವಿರೋಧವನ್ನು ಸ್ಪಷ್ಟವಾಗಿಯೆ ತೋರಿಸಲಿ ಎಂದು.

ಸುಮಾರು ಎರಡೂವರೆ ವರ್ಷದ ಹಿಂದೆ ಬರೆದ "ಇಂಟರ್ನೆಟ್‌ನಲ್ಲಿ ನವಗ್ರಹ ಕಾಟ" ಲೇಖನದಲ್ಲಿ ಇಂತಹ ಗುಪ್ತ ಹೆಸರುಗಳನ್ನು ಇಟ್ಟುಕೊಂಡು ಏನೆಂದರದು ಬರೆಯುವ ಮತ್ತು ಚರ್ಚಿಸುವ ಜನರ ಬಗ್ಗೆ ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದೆ. ಕನ್ನಡದ ಬ್ಲಾಗು ಲೋಕದಲ್ಲಂತೂ ಗುಪ್ತನಾಮಗಳಿಂದ ಮತ್ತು ಅನಾಮಿಕ ಸೌಲಭ್ಯಗಳಿಂದ ಬರೆಯುವ ಮತ್ತು ಪ್ರತಿಕ್ರಿಯಿಸುವ ದೊಡ್ಡ ಪಡೆಯೇ ಇದೆ. ಕೆಲವು ಲೇಖಕರಿಗಂತೂ ಲಿಂಗಪರಿವರ್ತನೆ ತಲೆಮರೆಸಿಕೊಳ್ಳುವ ಸುಲಭೋಪಾಯ. ಇದರಲ್ಲಿ ಪತ್ರಕರ್ತರದೇ ದೊಡ್ಡ ಗುಂಪಿರಬೇಕು. ಅವರಿಗೆ ತಮ್ಮ ಕೆಲಸದ ಸ್ಥಳದ ಒತ್ತಡದಿಂದ ಮತ್ತು ನೌಕರಿಯ ಭದ್ರತೆಯ ದೃಷ್ಟಿಯಿಂದ ಅದು ಅವಶ್ಯಕವೂ ಆಗಿರಬಹುದು. ಆದರೆ ಅದು ಸರಿ ಆಗಿರಲೇಬೇಕು ಅಂತಿಲ್ಲ. "ಸರಿ" ಅಲ್ಲದ ಎಲ್ಲವನ್ನೂ ನಾನು ನಿರಾಕರಿಸ ಬಯಸುತ್ತೇನೆ.

ಎಲ್ಲಾ ವಿಷಯಗಳಿಗಿಂತ ಮುಖ್ಯವಾಗಿ ಸಾಮಾಜಿಕ ವಿಷಯಗಳ ಬಗ್ಗೆ ಗುಪ್ತವಾಗಿ ಬರೆಯುವ ಜನ ತಮ್ಮ ಬದ್ಧತೆಯ ಬಗ್ಗೆ ಪ್ರಾಮಾಣಿಕವಾಗಿಲ್ಲ ಎಂದು ನನ್ನ ಭಾವನೆ. ಅದು ಅವರ ಅಪ್ರಾಮಾಣಿಕತೆಯನ್ನು, ಹೇಡಿತನವನ್ನು, ಬೇಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಅವರು ಪ್ರಸ್ತಾಪಿಸುವ ವಿಷಯ ಎಷ್ಟೇ ಗಂಭೀರದ್ದಾಗಿರಲಿ ಅವರ ಗುಪ್ತತೆ ಮತ್ತು ಅನಾಮಿಕತೆ ಪ್ರಸ್ತಾಪಿಸಲ್ಪಟ್ಟ ವಿಷಯಕ್ಕೆ ಕೊನೆಗೆ ದ್ರೋಹವನ್ನೆ ಬಗೆಯುತ್ತದೆ. ಜನ ಪ್ರಬುದ್ಧರಾಗುತ್ತ ಹೋದ ಹಾಗೆ ಮುಕ್ತರಾಗುತ್ತ ಹೋಗಬೇಕೆ ಹೊರತು ಗುಪ್ತರಾಗುತ್ತ ಹೋಗಬಾರದು. ಗಾಂಧಿ ಆದರ್ಶವಾಗಿರುವ ಯಾರಿಗೂ ಮುಕ್ತವಾಗಿಲ್ಲದೆ ಗುಪ್ತವಾಗಿರಲು ಸಾಧ್ಯವಿಲ್ಲ.

ನನ್ನ ಬರವಣಿಗೆಯನ್ನು ಸೂಕ್ಷವಾಗಿ ಗಮನಿಸಿರುವ ಯಾರಿಗಾದರೂ ನನ್ನ ಅಭಿಪ್ರಾಯ ಹೀಗೆಯೆ ಇರಬಹುದು ಎಂದು ಗೊತ್ತಿರುತ್ತದೆ. ಆದರೆ ಅನಾಮಿಕವಾಗಿ "ಅವರು ನೀವೇನಾ?" ಎನ್ನುವ ಓದುಗರಿಗೆ ಆ ಸೂಕ್ಷ್ಮತೆ ಗೊತ್ತಾಗುವುದಿಲ್ಲ ಎನ್ನಿಸಿ ಒಮ್ಮೆ ಸ್ಪಷ್ಟವಾಗಿ ಹೇಳಿಬಿಡೋಣ ಎಂದು ಇಷ್ಟೆಲ್ಲ ಬರೆದಿದ್ದೇನೆ.




ಕಳೆದ ವರ್ಷಾಂತ್ಯದಲ್ಲಿ ಮಾಂಸದ mass production, ಅದಕ್ಕೆ ಬಳಕೆಯಾಗುವ ಸಂಪನ್ಮೂಲಗಳು, ನಿಸರ್ಗದ ಮೇಲಿನ ಅದರ ಒತ್ತಡ ಮತ್ತು ದುಷ್ಪರಿಣಾಮಗಳು, ಮುಂತಾದುವನ್ನು ಪ್ರಸ್ತಾಪಿಸುತ್ತ, ಅವನ್ನು ತಡೆಗಟ್ಟಲು ನಮ್ಮನಮ್ಮ ನೆಲೆಯಲ್ಲಿ ನಾವು ಸಸ್ಯಾಹಾರಿಗಳೂ, Locovoreಗಳೂ ಆಗಬೇಕಾದ ಅವಶ್ಯಕತೆಯ ಬಗ್ಗೆ ಬರೆದಿದ್ದೆ. ಆದರೆ ನಾನು ಸ್ವತಃ ಇಲ್ಲಿಯವರೆಗೆ ಪೂರ್ಣವಾಗಿ ಸಸ್ಯಾಹಾರಿಯಾಗಿರಲಿಲ್ಲ. ಅದಕ್ಕೆ ಕೆಲವೊಂದು ಕಾರಣಗಳನ್ನೂ ಆ ಲೇಖನದಲ್ಲಿ ಬರೆದಿದ್ದೆ. ಆದರೆ ಮನಸ್ಸಿನಲ್ಲಿ ಒತ್ತಡ ಹೆಚ್ಚುತ್ತಲೆ ಇತ್ತು. ಹಾಗೆಯೆ ಮೈಯ್ಯಲ್ಲಿ ಕೊಬ್ಬೂ. ವಾರಕ್ಕೊಂದು ಅಥವ ಎರಡು ದಿನ ತಿಂದರೂ ಮಿಕ್ಕೆಲ್ಲ ದಿನಗಳ ಸಂಯಮವನ್ನು ಅದು ಮೀರುತ್ತಿತ್ತು. ಈಗೊಂದು ತಿಂಗಳ ಹಿಂದೆ ಒಂದು ರೀತಿಯ ನಿರ್ವಿಕಾರದ ಹೊತ್ತಿನಲ್ಲಿ ತೀರ್ಮಾನಿಸಿದೆ. ಕೇಕಿನಲ್ಲಿ ಇರಬಹುದಾದ ಮೊಟ್ಟೆಯೊಂದನ್ನು ಬಿಟ್ಟು ಮಿಕ್ಕೆಲ್ಲ ರೀತಿಯ ಮಾಂಸವನ್ನೂ ಈ ದೇಶದಲ್ಲಿ ವರ್ಜಿಸಿದ್ದೇನೆ.

ಹೌದು. ಈ ದೇಶದಲ್ಲಿ ಮಾತ್ರ. ನನ್ನ ದೇಶದಲ್ಲೂ ಬಹುಪಾಲು ಮುಂದುವರೆಯುತ್ತದೆ. ಯಾವುದಾದರೂ ಹಳ್ಳಿಗೆ ಹೋದಾಗ, ಅದೇ ಹಳ್ಳಿಯ ಪರಿಸರದಲ್ಲಿ ಸಿಗುವ ಕೋಳಿ-ಮೀನು ಸಿಕ್ಕರೆ ಅದನ್ನು ತಿನ್ನುವ ಅವಕಾಶವನ್ನು ಮುಕ್ತವಾಗಿ ಇಟ್ಟುಕೊಂಡಿದ್ದೇನೆ. ಇಲ್ಲಿ "ವರಾಹ" ಎನ್ನುವುದು ಪ್ರಸ್ತಾಪವಾಗಿರುವುದರಿಂದ ಹಂದಿ ಮಾಂಸದ ಬಗ್ಗೆಯೂ ಬರೆಯೋಣ ಎಂದು ಬರೆಯುತ್ತಿದ್ದೇನೆ. ಇತ್ತಿಚೆಗೆ ತಾನೆ "ಕಾನೂರು ಹೆಗ್ಗಡಿತಿ" ಇನ್ನೊಮ್ಮೆ ಓದಿದೆ. ಮಲೆನಾಡಿನಲ್ಲಿ ಎಂತೆಂತಹ ಹಂದಿಗಳನ್ನೆಲ್ಲ ತಿನ್ನುತ್ತಿದ್ದರು ಎಂದರೆ ಆಶ್ಚರ್ಯವಾಗುತ್ತದೆ. ಕಾನೂರಿನ ಪುಟ್ಟಣ್ಣ ಮುಳ್ಳುಹಂದಿಯನ್ನು ಕೊಚ್ಚಿಕೊಚ್ಚಿ ಕೊಲ್ಲುವ ದೃಶ್ಯವನ್ನು ಕುವೆಂಪು ರಕ್ತಸಿಕ್ತವಾಗಿ ವರ್ಣಿಸಿದ್ದಾರೆ. ನಮ್ಮಲ್ಲಿ, ಕೊಡಗಿನಲ್ಲಿ, ಮಲೆನಾಡಿನಲ್ಲಿ (ಮೊನ್ನೆಮೊನ್ನೆ ತೀರ್ಥಹಳ್ಳಿಯ ಮಲೆನಾಡು ಕ್ಲಬ್ಬಿನಲ್ಲಿ), ಅಮೆರಿಕದಲ್ಲಿ ಸಿಗುವ ನಾನಾತರಹದ ಪೆಪ್ಪರೋನಿ/ಸಾಸೇಜ್, ಬಾಯಲ್ಲಿ ಇಟ್ಟುಕೊಂಡರೆ ಬೆಣ್ಣೆಯಂತೆ ಕರಗುವ ಸ್ಪೇನಿನ Aged Ham, smoked ham, ಮುಂತಾದುವನ್ನೆಲ್ಲ ತಿಂದಿರುವ ನಾನು ಬಹುಶಃ ಇನ್ನೆಂದೂ ಹಂದಿ ತಿನ್ನುವುದು ಅಸಾಧ್ಯ. ಯಾಕೆಂದರೆ ಅದರಷ್ಟು ಮಾಸ್-ಪ್ರೊಡ್ಯೂಸ್ಡ್ ಮಾಂಸ ಮತ್ತೊಂದಿಲ್ಲ ಮತ್ತು ಕಾಡುಹಂದಿ ನನಗೆ ಸಿಗುವುದಿಲ್ಲ.

ಹಾಗೆಯೆ, ಮಾಂಸಾಹಾರ ಮಾಡದವರು ಶ್ರೇಷ್ಠರು ಮತ್ತು ಸಾತ್ವಿಕರು, ಮಾಂಸಾಹಾರಿಗಳು ತಾಮಸಿಗಳು ಮತ್ತು ಎರಡನೆಯ ದರ್ಜೆಯವರು ಎನ್ನುವ ಯಾವೊಂದು ಜನಾಂಗೀಯ ವಾದವನ್ನು ನಾನು ನಿರಾಕರಿಸುತ್ತೇನೆ. ಅದಕ್ಕೆ ಪೂರಕವಾಗಿಯೆ ಮೇಲೆ ಹಂದಿಯ ಬಗ್ಗೆ ಬರೆದದ್ದು. ಸಸ್ಯಾಹಾರದ ಪರ ನನ್ನ ನಿಲುವು ಸಂಪೂರ್ಣವಾಗಿ Mass production ಗೆ, ಇತ್ತೀಚಿನ ಶತಮಾನಗಳ ಯಾಂತ್ರೀಕರಣಕ್ಕೆ, ಆಹಾರದ ವಿಚಾರದಲ್ಲಿ ಮನುಷ್ಯ ಕಳೆದುಕೊಳ್ಳುತ್ತ ಬಂದಿರುವ ಸ್ವಾವಲಂಬನೆಗೆ, ಪರಿಸರದ ಅಸಮತೋಲನಕ್ಕೆ, ನಿಸರ್ಗದ ಸಂಪನ್ಮೂಲಗಳ exploitationಗೆ ಸಂಬಂಧಪಟ್ಟದ್ದು. ಸಸ್ಯಾಹಾರದ ವಿಚಾರದಲ್ಲೂ ಈ ವಾದವನ್ನು ಮುಂದುವರೆಸಿದರೆ, ಸ್ಥಳೀಯವಾಗಿ ಬೆಳೆದದ್ದನ್ನಷ್ಟೆ ದೈನಂದಿನ ಊಟಕ್ಕೆ ಬಳಸಬೇಕು. ಸದ್ಯಕ್ಕೆ ಭಾರತಕ್ಕೆ ಹಿಂದಿರುಗುವ ತನಕ ಈ ವಿಚಾರದಲ್ಲಿ ನಾನು ಕಠಿಣವಾಗಲು ಸಾಧ್ಯವಿಲ್ಲ. ಮನೆಯಲ್ಲಿ ಸಮಸ್ಯೆ ಗಂಭೀರವಾಗಿಬಿಡಬಹುದು!


ವಾರದಿಂದೀಚೆಗಂತೂ ಇಡೀ ವಿಶ್ವ ಇರಾನಿನತ್ತ ನೋಡುತ್ತಿದೆ. ಜಾತ್ಯತೀತ ಪ್ರಜಾಪ್ರಭುತ್ವದತ್ತ ಇರಾನ್ ಮುಖಮಾಡಿದೆ ಎನ್ನಿಸುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಬಿಜೆಪಿ-ಸಂಘ-ಹಿಂದುತ್ವ-ಹಿಂದುಯಿಸಮ್-ರಾಷ್ಟ್ರೀಯತೆ ಮುಂತಾದ ಚರ್ಚೆಗಳೂ ಕುತೂಹಲಕಾರಿಯಾಗಿವೆ. Outlook ಮತ್ತು Tehelka ಗಳಲ್ಲಂತೂ ಉತ್ತಮ ಲೇಖನಗಳು ಬರುತ್ತಿವೆ. ಆದರೂ ಇತ್ತೀಚಿನ ಚುನಾವಣೆಯನ್ನು ಹಿಂದುತ್ವದ ನಿರಾಕರಣೆ, ಜಾತ್ಯತೀತತೆಯ ಎತ್ತಿಹಿಡಿಯುವಿಕೆ, ಎಂದೆಲ್ಲ ಕೆಲವು ಪ್ರಗತಿಪರರು overrated ಆಗಿ ಸಾರುತ್ತಿದ್ದಾರೆ ಎನ್ನಿಸುತ್ತದೆ. ಆದರೆ ಕೊನೆಗೆ ಇದೇ ಒಂದು ಜನಾಭಿಪ್ರಾಯ ರೂಪಿಸಬಲ್ಲದಾದರೆ ಮತ್ತು ಅದು ನೈತಿಕವಾಗಿ ಸರಿಯಾದುದೂ ಹೌದು ಎಂದು ಜನರಿಗೆ ಮನವರಿಕೆ ಮಾಡಿಕೊಡಬಹುದಾದರೆ ಅದು ಆಗಲೇಬೇಕು.

ಈ ನಡುವೆ ಏನನ್ನೂ ಬರೆಯುತ್ತಿಲ್ಲವಾದ್ದರಿಂದ ನಾನು ಓದಿದ ಕೆಲವು ಮುಖ್ಯ ಲೇಖನಗಳನ್ನು ಇಲ್ಲಿ ಪ್ರತಿವಾರ ಹಂಚಿಕೊಳ್ಳಲಿದ್ದೇನೆ. ಇಂದು ದೇಶದ ಪ್ರಸಿದ್ಧ ಚಿಂತಕ ಆಶಿಶ್ ನಂದಿಯವರ ಲೇಖನ ಓದಿದೆ, ತೆಹೆಲ್ಕಾದಲ್ಲಿ. ಕಳೆದ ಚುನಾವಣೆಯ ಫಲಿತಾಂಶ, ಗಾಂಧಿ, ಸಾವರ್ಕರ್, ಅನೇಕತೆ, ರಾಷ್ಟ್ರೀಯತೆ, ದೇಶ, ಅದರ ಬಗ್ಗೆ ಪಾಶ್ಚಾತ್ಯ ಕಲ್ಪನೆ, ಯೂರೋಪಿಯನ್ ಯೂನಿಯನ್ ಪರಿಕಲ್ಪನೆ, ರಸಹಿಂಡಿದ ಕಬ್ಬನ್ನು ಜಗಿಯುತ್ತಿರುವ ಚೀನಾ ಮತ್ತು ಭಾರತ ಮುಂತಾದ ಬಗ್ಗೆ ಅದ್ಭುತವಾಗಿ ಬರೆದಿದ್ದಾರೆ. ಅವರು ಚುನಾವಣೆಯ ಫಲಿತಾಂಶದ ಬಗ್ಗೆ ಹೇಳಿರುವುದನ್ನು ನನಗೆ ಒಪ್ಪಿಕೊಳ್ಳಲಾಗದಿದ್ದರೂ ಮಿಕ್ಕವನ್ನು ಒಪ್ಪಿಕೊಳ್ಳದೆ ಇರಲಾಗುತ್ತಿಲ್ಲ.

ಸುಗತ ಕರ್ನಾಟಕದ ರಾಜಕೀಯದ ಇತ್ತಿಚಿನ ಘಟನಾವಳಿಗಳ, ಒಳಸುಳಿಗಳ ಬಗ್ಗೆ ಬರೆದಿದ್ದಾರೆ. ಅಂತರ್ರಾಜ್ಯ ಆಯಾಮ ತೆಗೆದುಕೊಳ್ಳುತ್ತಿರುವ ರಾಜ್ಯ ರಾಜಕಾರಣ ನೈತಿಕ ರಾಜಕಾರಣದಿಂದ ದೂರ ಸಾಗುತ್ತಿದೆ. ಹಸಿದ ನರಿಗಳು ಅಧಿಕಾರಕ್ಕೆ ಕಾಯುತ್ತಿದ್ದಾರೆ. ಸ್ವಚ್ಚ ರಾಜಕಾರಣಕ್ಕಲ್ಲ. ಸಿದ್ಧಾಂತರಹಿತ ಪಕ್ಷಾಂತರವನ್ನು ಪ್ರೋತ್ಸಾಹಿಸದ ಮತ್ತು ಭ್ರಷ್ಟರನ್ನು ಪುರಸ್ಕರಿಸದ ರಾಜಕಾರಣದತ್ತ ರಾಜ್ಯದ ಕಾಂಗ್ರೆಸ್ ಗಮನ ನೀಡಬೇಕಿದೆ. ಅದೇ ಅವರ ಮತ್ತು ನಾಡಿನ ಭವಿಷ್ಯವನ್ನು ಚೆನ್ನಾಗಿಡುತ್ತದೆ.